ಹಸ್ತಿನಾವತಿಯ
ರಾಜಸಭೆಯಲ್ಲಿ ದುಶ್ಯಾಸನನ ಧಾಳಿಗೆ ನಲುಗಿದ ದ್ರೌಪದಿ ಅವಮಾನದಿಂದ ಬೆಂದು ಯಾಚನೆಯ ದೃಷ್ಟಿಯಿಂದ
ಸಭೆಯನ್ನು ದಿಟ್ಟಿಸುತ್ತಾಳೆ. ತಲೆ ತಗ್ಗಿಸಿ ಕುಳಿತ ತನ್ನ ಐವರು ಗಂಡಂದಿರ ಮುಖ ಕಾಣಿಸುವುದಿಲ್ಲ.
ಭೀಷ್ಮ ಧೃತರಾಷ್ಟ್ರ ದ್ರೋಣ....ಹೀಗೆ ಹಸ್ತಿನೆಯ ಸಮಸ್ತ ಹಿರಿಯರನ್ನು ಕಾಡುತ್ತಾಳೆ ಬೇಡುತ್ತಾಳೆ.
ಎಲ್ಲವೂ ಮೌನವಾದಾಗ ಕೈಯಲ್ಲಿ ಬಿಗಿಯಾಗಿ ಹಿಡಿದ ಸೀರೆ, ತೊಟ್ಟಿಕ್ಕುವ ಕಣ್ಣೀರು .ಸುತ್ತಲೂ ನೋಡುವ ಆ ದ್ರೌಪದಿಯ ಹತಾಶೆಯನೋಟ ಏನೂ ಮಾಡಲೂ
ತೋಚದೆ ದಯನೀಯ ಸ್ಥಿತಿಯ ಅನಾವರಣವಾಗುತ್ತಿದ್ದಂತೆ ಸ್ತಬ್ಧವಾದ ನಿಶ್ಯಬ್ದ ಸಭೆ ಹಸ್ತಿನಾವತಿಯ
ಸಭೆಯಲ್ಲಿ ತಮ್ಮನ್ನು ಅವಾಹಿಸಿಕೊಂಡು ಮೈಮರೆಯುವ ಸನ್ನಿವೇಶ... ಹಿನ್ನೆಲೆಯಲ್ಲಿ ಭಾಗವತರ ಪದ “ಕರುಣದಿ ಕಾಯೋ ಗೋವಿಂದ...ನಿನ್ನ ಮೊರೆಯ ಹೊಕ್ಕೆನು
ವಸುದೇವ ಕಂದ..” ಭಗವಂತನ ಮೊರೆಯಿಡುವ ದಯನೀಯ ಸ್ಥಿತಿಯ ಪಾಂಚಾಲಿ ತನ್ನೆರಡುಕೈಯನ್ನು ಬಿಟ್ಟಾಗ
ಇಡೀ ಸಭೆಯೇ ಸ್ತಬ್ದ... ಇದು ಕರ್ನಾಟಕ ಮೇಳದ
ದಶಕಗಳ ಹಿಂದಿನ ಒಂದು ಪ್ರಸಂಗದ ಸನ್ನಿವೇಶ.
ಅಲ್ಲಿ ಬಂದವರಿಗೆ
ಅದೆಷ್ಟನೇ ಸಲವೋ ಅಕ್ಷಯಾಂಬರ ವಿಲಾಸ ಪ್ರಸಂಗ ದರ್ಶನವಾಗುತ್ತಿರುವುದು, ಮಹಾಭಾರತ ಕಥೆಯ ಪ್ರತಿ
ಸನ್ನಿವೇಶ ಅರಿವಿದ್ದವರೂ ನಿಂತಲ್ಲೇ ಕುಳಿತಲ್ಲೇ ಗಲ್ಲಕ್ಕೆ ಕೈ ಊರಿ ಕಲ್ಲಾಗುವ ದೃಶ್ಯ, ಪ್ರತಿಸಲವೂ ಹಸ್ತಿನಾವತಿಯ ರಾಜಸಭೆಯ ಅಂಗ ತಾವಾದಂತೆ
ಬೆಕ್ಕಸ ಬೆರಗಾಗಿ ತನ್ಮಯರಾಗುವ ಅನುಭವಿದೆಯಲ್ಲ? ಅದು ಯಕ್ಷಗಾನದ ಅಂತರಂಗದ ಸತ್ವ. ದ್ರೌಪದೀ
ವಸ್ತ್ರಾಪಹಾರ ಕಥೆ ತಿಳಿಯದವರು ಯಾರು? ಆದರೂ ರಂಗಸ್ಥಳಕ್ಕೆ ಅನುರೂಪವಾಗಿ ಸಭೆಯ ಈ ಉತ್ಕಟ
ಭಾವಾವೇಶ ಯಾಕೆ? ಇದೆಲ್ಲವೂ ಸಹಜ ಅನ್ನಿಸುವುದು ಕೋಳ್ಯೂರು ರಾಯರ ಅಗ್ನಿಸಂಭವೇ ದ್ರೌಪದಿ
ರಂಗಸ್ಥಳದಲ್ಲಿ ಭಾವಾವೇಶಗೊಂಡಾಗ.
ಯಕ್ಷಗಾನ ಅದರಲ್ಲೂ
ತೆಂಕುತಿಟ್ಟು ಯಕ್ಷಗಾನ ವೀರರಸಭರಿತ ಇದರಲ್ಲಿ ಅಬ್ಬರದ ವೀರಾವೇಶದ ಗಂಡು ವೇಷಗಳಿಗೇ ಮಹತ್ವ.
ಹಲವಾರು ಪ್ರಸಂಗಗಳು ಇಂತಹ ಪಾತ್ರಗಳೊಂದಿಗೆ ಗಿರಕಿ ಹೊಡೆಯುವುದನ್ನು ಕಾಣಬಹುದು. ದೇವಿ
ಮಹಾತ್ಮೆಯಲ್ಲಿ ದೇವಿ ಯಾರು ಎನ್ನುವುದು ಮಹತ್ವವನ್ನು ಕಾಣುವುದಿಲ್ಲ. ಬದಲ್ಲಗಿ ಮಹಿಷ. ಚಂಡ
ಮುಂಡ, ರಕ್ತಬೀಜ ಈ ವೇಷಗಳ ಬಗ್ಗೆ ಕುತೂಹಲ. ಇವುಗಳ ಪ್ರವೇಶವಾಗುವಾಗ ಆಸನದ ತುದಿಗೆ ಪೃಷ್ಠವನ್ನು
ತಂದು ನೆಟ್ಟಗಾಗುವವರು ಎಷ್ಟು? ಇಂತಹ ವೀರ, ರೌದ್ರಾವತಾರದ ವೇಷಗಳೊಂದಿಗೆ ಸಡ್ಡು ಹೊಡೆಯುತ್ತ
ಸೀತೆಯೋ ಮಂಡೋದರಿಯೋ ಸೈರಂಧ್ರಿಯೋ ಆಗಿ ರಾಯರು ವಿಜ್ರಂಭಿಸಿದರೆ ಅದು ರಾಯರ ಅಂತಸತ್ವ
ದರ್ಶನವಾದಂತೆ.
ಹೀಗೇ ಕೋಳ್ಯೂರು
ರಾಮಚಂದ್ರ ರಾಯರ ಗತಕಾಲದ ವೈಭವಗಳ ನೆನಪುಗಳು ಅಂದು ಯುವನಿಕ ರಂಗಮಂದಿರವನ್ನು ಬಿಡುವಾಗ ಮನಸ್ಸಿನ
ತುಂಬ ವ್ಯಾಪಿಸಿತ್ತು. ಅಂದು ಬೆಂಗಳೂರಿನ ಯುವನಿಕ ಸಭಾಂಗಣದಲ್ಲಿ ಕೋಳ್ಯೂರರಿಗೆ ಸನ್ಮಾನವನ್ನು
ಕಂಡು ಹೊರಬರುತ್ತಿದ್ದಂತೆ ಕೋಳ್ಯೂರು ಎಂಬ ಮಹಾನ್ ಕಲಾವಿದರಿಗೆ ಅರ್ಥಪೂರ್ಣ ಸನ್ಮಾನವಯಿತಲ್ಲ ಎಂಬ
ತೃಪ್ತಿಯ ಭಾವ ಹೃದಯದಲ್ಲಿ ತುಂಬಿತ್ತು. ಪ್ರಶಸ್ತಿ ಸ್ವೀಕರಿಸಿ ಕೋಳ್ಯೂರರಿಗೆ ಆಗಬೇಕಾದ್ದೇನೂ
ಇಲ್ಲ. ಆದರೆ ನೆರವೇರಿಸಿದ ಯಕ್ಷಪ್ರಭ ಸಂಘದ ಭಾರವಾಹಿಗಳು ಅಂದು ಸಂತೋಷದಲ್ಲಿ ನಿದ್ರಿಸಿರಲಾರರು.
ಉತ್ತಮ ಶಿಸ್ತುಬದ್ದ ಕಾರ್ಯಕ್ರಮ .. ಬಹುಶಃ ಇದಕ್ಕೂ ಕೋಳ್ಯೂರರ ವ್ಯಕ್ತಿತ್ವವೇ ಕಾರಣವಿರಬಹುದು. ಅರ್ಥ
ಪೂರ್ಣ ಕಾರ್ಯಕ್ರಮ, ಅದು ಕೋಳ್ಯೂರರ ಹಿರಿಯ ಒಡನಾಡಿಗಳ ಸ್ಮರಣೆಯೊಂದಿಗೆ ಎಂಬುದು ಇನ್ನೂ ಹೆಚ್ಚು
ಅರ್ಥವನ್ನು ಕಂಡುಕೊಳ್ಳುತ್ತದೆ.
ಹಿರಿಯ
ಕಲಾವಿದರಾದ ಬೋಳಾರ ನಾರಾಯಣ ಶೆಟ್ಟಿ ಮತ್ತು
ಮಲ್ಪೆ ರಾಮದಾಸ ಸಾಮಗ, ಇವರ ಸ್ಮರಣೆಯಲ್ಲಿ ಈ ಪ್ರಶಸ್ತಿ ಕೋಳ್ಯೂರರ ಮುಡಿಗೇರಿದ್ದು ಬಹಳ
ಅರ್ಥವನ್ನು ತರುತ್ತದೆ. ಬೋಳಾರರು ರಾವಣ, ಕಂಸ,
ಹಿರಣ್ಯಕಶಿಪು ಮುಂತಾದ ಖಳ ಪಾತ್ರಗಳಿಗೆ ಹೆಸರಾದರೆ, ಸಾಮಗರು ರಾಮ ಕೃಷ್ಣ... ಪರಮೇಶ್ವರನಂತಹ
ದೈವೀ ಸ್ವಭಾವದ ಪಾತ್ರಗಳಿಗೆ ಹೆಸರಾದವರು. ಹೀಗೆ ಪೌರಾಣಿಕ ಪ್ರಸಂಗದಲ್ಲಿ ಸಹಜವಾಗಿ ಸುರಾಸುರ
ಸ್ವಭಾವದ ಮಧ್ಯೆ ಬರುವ ಸ್ತ್ರೀ ಪಾತ್ರವನ್ನು ಎರಡು ಬದಿಯಿಂದ ಕಟ್ಟಿ ಬೆಳೆಸುವಂತೆ ಹಿರಿಯ ಸಮರ್ಥ ಕಲಾವಿದರು ಮಾಡಿದ್ದರೆ ಅವರನ್ನು
ಸ್ಮರಿಸುವುದು ಮತ್ತು ಆ ನಿಟ್ಟಿನಲ್ಲಿ ಕೋಳ್ಯೂರನ್ನು ಸ್ಮರಿಸುವುದು ಅದರ ಔಚಿತ್ಯದ
ಔನ್ನತ್ಯವನ್ನು ತೋರಿಸುತ್ತದೆ. ಈಗೀಗ ಇಂತಹ ಸದ್ಭಾವನೆ ಪ್ರಚೋದಿಸಲ್ಪಡುವ ವ್ಯಕ್ತಿಗಳಿಗೇ ಪ್ರಶಸ್ತಿಯನ್ನು ಕೊಡುವುದು ಸೂಕ್ತ ಅನ್ನಿಸಬಹುದು.
ಯಾಕೆಂದರೆ ಪ್ರಪಂಚದಲ್ಲಿ ಪ್ರಶಸ್ತಿ ತನ್ನ ಮೌಲ್ಯವನ್ನೇ
ಕಳೆದುಕೊಂಡಿದೆ. ಆದರೆ ಇಲ್ಲಿ ಈ ಅಯ್ಕೆಯಿಂದ ಈ ಪ್ರಶಸ್ತಿಗೇ ಸ್ ಮೌಲ್ಯ ಬಂದಿದೆ ಅನ್ನಿಸುತ್ತದೆ.
ಸಮಾರಂಭದಲ್ಲಿ ಹಲವು
ಗಣ್ಯರು ಹಿರಿಯ ಕಲಾವಿದರನ್ನು ಮತ್ತು ಅವರ ವಿಶೇಷತೆಗಳನ್ನು ಸ್ಮರಿಸಿದರು. ಸಾಮಗರ ಹತ್ತು ಹಲವು
ವಿಶೇಷತೆಗಳನ್ನು ಬಹಳ ಸುಂದರವಾಗಿ ಶ್ರೀ ವಸಂತ ಭಾರಧ್ವಾಜರು ಹೇಳಿದರೆ ಬೋಳಾರರ ಬಗ್ಗೆ ಶ್ರೀ
ಭಾಸ್ಕರ ರೈ ಕುಕ್ಕುವಳ್ಳಿಯವರು ಸ್ಮರಿಸಿದರು.
ಕೋಳ್ಯೂರರು ಪ್ರಶಸ್ತಿ
ಸ್ವೀಕರಿಸಿ ತಮ್ಮ ಹಲವು ಅನುಭವಗಳನ್ನು ಹಂಚಿಕೊಂಡರು. ಯಕ್ಷಗಾನದಲ್ಲಿ ಬೋಳಾರರಂತಹ ಸದ್ಗುಣ
ಸಂಪನ್ನ ವ್ಯಕ್ತಿ ಬರಲೆ ಇಲ್ಲ ಎಂಬುದನ್ನು ಹಲವು ಸಲ ಹೇಳಿದರು. ಅವರೊಂದಿಗಿನ ರಂಗ ಸ್ಥಳ ಚೌಕಿ
ಮತ್ತು ಮೇಳದ ಬಿಡಾರದ ( ಈ ಮೂರೂ ಯಕ್ಷಗಾನ ಕಲಾವಿದ ಯಾವಾಗಲೂ ಇರುವ ಮೂರು ಮನೆಗಳು. ಅದು
ಬಿಟ್ಟರೆ ಕಲಾವಿದನಿಗೆ ಬೇರೆ ಇಲ್ಲ) ಜೀವನವನ್ನುಅತ್ಯಂತ ಭಾವುಕವಾಗಿ ಹೇಳಿದರು. ಹಾಗೇ
ತಮ್ಮೊಂದಿಗೆ ಯಕ್ಷದಂಪತಿಯ ಅನ್ವರ್ಥಕ್ಕೆ ಕಾರಣರಾದ ಹಿರಿಯ ಕಲಾವಿದರಾದ ಸಾಮಗರನ್ನು ಕಳೆದುಕೊಂಡ
ಮೇಲೆ ಗಂಡನಿಲ್ಲದ ಹೆಂಡತಿಯಂತಾಗಿದ್ದೇನೆ ಎಂದು ಹೇಳಿದರು. ಯಾವುದೂ ಅತಿಶಯವೆಂದು ಅನ್ನಿಸಲೇ
ಇಲ್ಲ.
ಕೋಳ್ಯೂರು ತಾವು
ಬೆಳೆದು ಬಂದ ಯಕ್ಷಗಾನದ ಅಂಗಳ ಇಂದು ಎಷ್ಟು ಕೊಳಕಾಗಿದೆ ಎಂದು ನೋವಿನಿಂದ ಹೇಳಿ..ಯಕ್ಷಗಾನದಲ್ಲಿ
ಅಭಾಸಗಳು ನಿಯಂತ್ರಣ ವಾಗಬೇಕಾದರೆ ಪ್ರೇಕ್ಷಕ ಮನಸ್ಸು ಮಾಡಿ ಪ್ರತಿಭಟಿಸಬೇಕು. ರಂಗಸ್ಥಳದಲ್ಲಿ
ಯಕ್ಷಗಾನ ಚೌಕಟ್ಟನ್ನು ಮೀರುತ್ತದೆ. ರಾಮಾಯಣ ಮಹಾಭಾರತ ಮುಂತಾದ ಪೌರಾಣಿಕ ಕಥೆಗಳನ್ನೊಳಗೊಂಡ
ಪ್ರಸಂಗಗಳು ಆಯಾಯ ಕಾಲವನ್ನೇ ತೋರಿಸಬೇಕು. ಕಲಿಕಾಲಕ್ಕೆ ಯಕ್ಷಗಾನ ಬರಬಾರದು. ಅಂದರೆ ವರ್ತಮಾನಸ
ಸಂಗತಿಗಳು ರಂಗಸ್ಥಳದಲ್ಲಿ ಬರಬಾರದು. ಕಲಾವಿದ ರಂಗಸ್ಥಳ ತ್ರೇತಾ ದ್ವಾಪರ.ಯುಗಗಳನ್ನು ಬಿಟ್ಟು
ವ್ಯವರಿಸಿದರೆ ಅದು ಅಭಾಸವಾಗುತ್ತದೆ. ಹೀಗೆ ಯಕ್ಷಗಾನ ಹಾದಿ ತಪ್ಪುವಾಗ ಚಪ್ಪಾಳೆ ಬಡಿವ ಬದಲು
ಕಲ್ಲು ಬಡಿಯಬೇಕು. ಇದು ಅವರು ಬಹಳ ನೋವಿನಿಂದ ಹೇಳಿದಂತಹ ಮಾತು.
ಹೌದಲ್ಲವೇ? ಇಂದು
ಯಕ್ಷಗಾನ ರಂಗಸ್ಠಳವನ್ನು ಬಿಟ್ಟು ಸಭೆಯನ್ನೇ ಅತಿಕ್ರಮಿಸ ತೊಡಗಿದೆ. ರಂಗಸ್ಥಳವನ್ನು ಬಿಟ್ಟ ಅಟ
ಅದು ಯಕ್ಷಗಾನವಲ್ಲ. ಸಿಡಿ ಮದ್ದು ಪಟಾಕಿಯೊಂದಿಗೆ ವಾದ್ಯದ ಸದ್ದಿಗೆ ಬರುವ ಮಹಿಷ ಮುಂತಾದ ವೇಷಗಳು ರಂಗಸ್ಥಳವನ್ನು ಬಿಟ್ಟೇ
ವ್ಯವಹರಿಸುತ್ತಿವೆ. ಇಂದಿನ ಹವ್ಯಾಸಿಗಳಾಗಲಿ ವೃತ್ತಿಪರರಾಗಲೀ ಅದುವೇ ಯಕ್ಷಗಾನ ಎಂದು
ಬಿಂಬಿಸಿಕೊಳ್ಳುತ್ತಾರೆ. ಹೀಗೆ ಸಾಗಿದರೆ ಯಕ್ಷಗಾನದ ರೂಪ ಯಾವರೀತಿಯಲ್ಲಿ ಬದಲಾಗಬಹುದು?
ರಂಗಸ್ಥಳವನ್ನು
ಬಿಟ್ಟ ಯಕ್ಷಗಾನದ ಬಗ್ಗೆ ಸ್ವಾರಸ್ಯವಾದ ಘಟನೆಯೊಂದು ಮೊನ್ನೆ ಸ್ಮರಣೆಗೆ ಬಂದು. ಬ್ರಹ್ಮ ಕಪಾಲ
ಪ್ರಸಂಗದ ಈಶ್ವರನಾದ ಸಾಮಗರು.., ಈಶ್ವರ ಬೇಡುತ್ತಾ ಸಾಗುವ ಸನ್ನಿವೇಶದಲ್ಲಿ ಸಭೆಯಲ್ಲಿ ತಟ್ಟೆ
ಹಿಡಿದುಕೊಂಡು ಹೋದಾಗ ಸಭೆಯಲ್ಲಿ ಇದ್ದ ಹಿರಿಯ ಕಲಾವಿದರಾದ ದೇರಾಜೆಯವರು ಕೈಲ್ಲಿದ್ದ ಸಿಗರೇಟ್
ತುಂಡನ್ನೇ ತಟ್ಟೆಗೆ ಹಾಕಿದರಂತೆ. ಸಾಮಗರು ಕಾರಣ ಕೇಳಿದಾಗ... ದೇರಾಜೆಯವರು ಹೇಳಿದ ಮಾತು ಶಿವ
ಅದು ರಂಗಸ್ಥಳದಲ್ಲಿದ್ದಾಗ ಮಾತ್ರ... ಸಭೆಗೆ ಬಂದರೆ ಬರೀ ಸಾಮಗ..ರಂಗಸ್ಥಳವನ್ನು ಬಿಟ್ಟು ವೇಶ
ಬರಬಾರದು ಬಂದು ವ್ಯಹರಿಸಬಾರದು. ಅಂದಿನಿಂದ ಸಾಮಗರು ಆ ರೀತಿ ಸಭೆಯಲ್ಲಿ ಹೋಗುವುದನ್ನು
ನಿಲ್ಲಿಸಿದರಂತೆ. ಗಮನಿಸಿ..ಬ್ರಹ್ಮ ಕಪಾಲದದ ಈಶ್ವರ ಎಂದರೆ ಸಾಮಗರ ಅತ್ಯುತ್ಕೃಷ್ಟ ವೇಷಗಳಲ್ಲಿ
ಒಂದು. ಅಂತಹ ವೇಶ ರಂಗಸ್ಥಳ ಬಿಟ್ಟು ಬಂದಾಗ ಆ ರೀತಿಯ ಪ್ರತಿಕ್ರಿಯೆಯನ್ನು ಹಿರಿಯ ಕಲಾವಿದರು
ಮಾಡಬೇಕಿದ್ದರೆ ವಿಷಯದ ಗಾಂಭೀರ್ಯದ ಅರಿವಾಗಬಹುದು. ಯಕ್ಷಗಾನ ರಂಗಸ್ಥಳದ ಚೌಕಟ್ಟಿನೊಳಗೇ ಇರಬೇಕು.
ಯಕ್ಷಗಾನದಲ್ಲಿ
ಕೋಳ್ಯೂರರ ಯಾವುದೇ ಪಾತ್ರವಾಗಿರಲಿ ಅದನ್ನು ಅಷ್ಟು ಮುತುವರ್ಜಿಯಿಂದ ಕಟ್ಟಿ ಬೆಳೆಸುತ್ತಾರೆ.
ಸ್ತ್ರೀಪಾತ್ರದ ಯಾವುದೇ ಸ್ವಭಾವಗಾಗಲೀ.. ಸೀತೆಯ ಕರುಣಾರಸ, ದ್ರೌಪದಿ ಪಾತ್ರದ ವಿಭಿನ್ನ
ಸ್ವಬಾವಗಳು.. ಪ್ರಭಾವತಿಯಾಗಿ ದಾಕ್ಷಾಯಿಣಿಯಾಗಿ ವೀರ ಸ್ತ್ರೀ ವೇಷಗಳಾದ ಶಶಿಪ್ರಭೆ ಪ್ರಮೀಳೇ
ಹೀಗೆ ಯಾವುದೇ ಪಾತ್ರಗಳನ್ನು ಅಷ್ಟು ಸಮರ್ಥವಾಗಿ ಭಾವ ತುಂಬಿ ಅಭಿನಯಿಸುವ ಕಲಾವಿದರನ್ನು ನಾನು
ಕಾಣಲಿಲ್ಲ. ಇಂದು ಸ್ತ್ರೀವೇಶವೆಂದರೆ ಬರೀ ಶೃಂಗಾರಕ್ಕೆ ಮತ್ತು ಅವಧಿ ಮೀರಿದ ನಾಟ್ಯಕ್ಕೇ
ಸೀಮಿತಗೊಂಡಿದ್ದರೆ ಕೋಳ್ಯೂರರಂತೆ ಬಹುಮುಖ ವ್ಯಕ್ತಿತ್ವದ ಸ್ತ್ರೀಪಾತ್ರ ದರ್ಶನ ತೆಂಕು ಬಡಗು
ಎರಡರಲ್ಲೀ ಎಲ್ಲೂ ಕಾಣುವುದಕ್ಕೆ ಸಿಗದು. ಅದು ಕೋಳ್ಯೂರರ ಕಲಾವಂತಿಕೆ. ಯಾವುದೇ ಪಾತ್ರವನ್ನು
ಇಂದಿಗೂ ಪಾತ್ರವಾಗಿ ಅದರ ಒಳ ಹೊಕ್ಕು ಅಭಿನಯಿಸುತ್ತಾರೆ. ಭಾವಾವೇಶಕ್ಕೆ ಒಳಗಾಗಿಬಿಡುತ್ತಾರೆ.
ಇತ್ತೀಚೆಗೆ ತಾಳಮದ್ದಲೆಯೊಂದರಲ್ಲಿ ಕೀಚಕ ವಧೆಯ ಸೈರಂಧ್ರಿಯನ್ನು ನೋಡುವ ಭಾಗ್ಯ ನನ್ನದಾಯಿತು.
ಅಂದು ಕೋಳ್ಯೂರರ ಸೈರಂಧ್ರಿ ಭಾವಾವೇಶದಿಂದ ಕಣ್ಣೀರ್ಗರೆದು ನೆರೆದವರನ್ನು ಅಳುವಂತೆ ಮಾಡಿದ್ದು
ಇಂದಿಗೂ ಕೋಳ್ಯೂರರ ಕಸುವು ಏಷ್ಟು ಕಠಿಣವಾಗಿದೆ ಎಂದು ತೋರಿಸುತ್ತದೆ. ಮಂಡೋದರಿಯಾಗಿ ಅತ್ತು
ಬಿಡುತ್ತಾರೆ, ದ್ರೌಪದಿಯಾಗಿ ವೀರಾವೇಶ ತಾಳುತ್ತಾರೆ. ಯಾವುದೇ ಪಾತ್ರವಾಗಲೀ ಸಮಾನವಾಗಿ ಅದಕ್ಕೆ
ನ್ಯಾಯ ಒದಗಿಸುವಲ್ಲಿ ಕೋಳ್ಯೂರರಿಗೆ ಸರಿ ಸಾಟಿ ಖಂಡಿತ ಯಾರು ಇಲ್ಲ
.
ಕೋಳ್ಯೂರರು
ಪೌರಾಣಿಕ ಪ್ರಸಂಗಗಳಂತೆ ತುಳು ಪ್ರಸಂಗಗಳಲ್ಲೂ ಪಾತ್ರಗಳನ್ನು ಕಟ್ಟಿ ಬೆಳೆಸಿದ್ದಾರೆ. ಅದು ಸಿರಿ
ಮಹಾತ್ಮೆಯ ಸಿರಿಯಾಗಿರಬಹುದು, ಕಾಡ ಮಲ್ಲಿಗೆಯ ಬೊಮ್ಮಕ್ಕೆಯಾಗಿರಬಹುದು ಅದನ್ನು ಇನ್ನೊಬ್ಬರು
ನಿರ್ವಹಿಸುವುದು ಅಸಾಧ್ಯ. ಆದರೂ ಅವರ ಪೌರಾಣಿಕ ಪಾತ್ರಗಳ ಆ ಹಿರಿಮೆ ತುಳು ಪಾತ್ರಗಳಿಗೆ
ಬರುವುದಕ್ಕೆ ಸಾಧ್ಯವೇ ಇಲ್ಲ. ದುರಂತ ಎಂದರೆ,
ಇಂದು ಕೋಳ್ಯೂರರನ್ನು ನೆನಪಿಸುವಾಗ ಅವರ ಬೊಮ್ಮಕ್ಕನ ಪಾತ್ರವನ್ನು ಬೇಗನೇ ನೆನಪು ಮಾಡಿಕೊಂಡು
ಹೇಳತೊಡಗುತ್ತಾರೆ. ಆದರೆ ಅದಕ್ಕಿಂತಲೂ ಶ್ರೇಷ್ಠ ಪೌರಾಣಿಕ ಪಾತ್ರಗಳು ನೆನಪಿಗೆ ಬರುವುದೇ ಇಲ್ಲ.
ಮನುಷ್ಯನ ಅಭಿರುಚಿಯ ಮಟ್ಟವನ್ನು ಇದು ತೋರಿಸುತ್ತದೆ. ನಿಜಕ್ಕೂ ಅಂತಹ ಪಾತ್ರಗಳಿಗೆ ಪೌರಾಣಿಕ
ಪಾತ್ರಗಳ ಹಿನ್ನೆಲೆ ಇರುವುದಿಲ್ಲ. ಒಂದು ಸೀತೆ, ಕೈಕೇ, ಮಂಥರೆ, ದ್ರೌಪದಿ ಅಥವಾ ಮಂಡೊದರಿ ಇಲ್ಲ
ದಾಕ್ಷಾಯಿಣಿ ಅಥವಾ ಅಂಬೆ ಮುಂತಾದ ಹಲವು ಪಾತ್ರಗಳಿಗೆ ಪೂರಕವಾಗಿ ಹಲಾವರು
ಉಪಕಥಗಳು ಪಾತ್ರಗಳು ಸುತ್ತಿಕೊಂಡಿರುತ್ತವೆ. ಬೊಮ್ಮಕ್ಕೆಯಾಗಲಿ ಮಗುದೊಂದಾಗಲಿ ಅದಕ್ಕೆ ಅದೇ
ಎಂಬಲ್ಲಿಗೆ ಸೀಮಿತ. ಇಲ್ಲಿ ಕೋಳ್ಯೂರ ಕಲಾವಂತಿಕೆ ಪೌರಾಣಿಕ ಪಾತ್ರಗಳಂತೆ ಉಪಯೋಗಿಸಲ್ಪಡಲಿಲ್ಲ
ಅಂತ ಹೇಳಬಹುದು. ಅವರ ಭಾವಾವೇಶದ ದರ್ಶನ ಆಗುವುದು ಪೌರಾಣಿಕ ಪಾತ್ರಗಳಲ್ಲಿ. ಆದರೆ ಇಂದು ಬೊಮ್ಮಕ್ಕೆಯಾಗಿ
ಕೋಳ್ಯೂರರನ್ನು ನೆನೆಸುವುದನ್ನು ಕಂಡಾಗ ನಿಜವಾದ
ಯಕ್ಷಗಾನ ಅಭಿಮಾನಿ ನೋವನ್ನು ಅನುಭವಿಸುತ್ತಾನೆ.
ಇಂದು ಸ್ತ್ರಿ
ಪಾತ್ರವೆಂದರೆ ಅದು ಮಿತಿ ಮೀರಿದ ರೂಪವಿಲ್ಲದ ಕುಣಿತವಾಗಿಬಿಟ್ಟಿದೆ. ನೆಲದಲ್ಲಿ ಇಡುವ ಹೆಜ್ಜೆ
ತಟ್ಟೆಯ ಮೇಲೆ ಬಂದು ನಿಂತು ಸರ್ಕಸ್ ಮಾಡುತ್ತಿದೆ. ಅದನ್ನು ಪ್ರೋತ್ಸಾಹಿಸುವ ಪ್ರೇಕ್ಷಕವರ್ಗ
ಬೇರೆ. ಗಂಟೆ ಕಟ್ಟಲೆ ಕುಣಿತ ಅಭಿನಯವೂ ಇಲ್ಲ
ನಂತರ ಅರ್ಥಗಾರಿಕೆಯೂ ಇಲ್ಲ. ಏನು ಪ್ರದರ್ಶಿಸುವುದಕ್ಕೆ ರಂಗವೇರುತ್ತಾರೆ ಎಂದು ಸ್ವತಃ
ಪಾತ್ರಧಾರಿಗೇ ಅರಿವಿರುವುದಿಲ್ಲ. ಜತೆಗೇ ಇದನ್ನು ಯಕ್ಷಗಾನ ಎಂದು ಬಿಂಬಿಸುವ ಪ್ರಯತ್ನ.
ಕೋಳ್ಯೂರರ ಸ್ತ್ರೀ ಪಾತ್ರ ಔಚಿತ್ಯ ಮೀರಿ ಕುಣಿಯುವುದಿಲ್ಲ. ಎಲ್ಲೆ ಮೀರಿ ವರ್ತಿಸುವುದಿಲ್ಲ. ವೇಷ
ಪಾತ್ರವಾಗಿಯೇ ಮೈತಳೆಯುತ್ತದೆ.ಅವರ ವೇಷ ಮಿತಿಮೀರಿ ಕುಣಿದದ್ದನ್ನು ಅಥವ ಮಾತಾಡಿದ್ದನ್ನು
ಕಂಡವರಿಲ್ಲ. ಅಪ್ಪಟ ಯಕ್ಷಗಾನ ಶೈಲಿಯ ಹಾವಭಾವಗಳು ಕುಣಿತ ಶೈಲಿಗಳು.
ಯಕ್ಷಗಾನದಲ್ಲಿ
ಸ್ತ್ರೀಪಾತ್ರಕ್ಕೆ ಒಂದು ವ್ಯಕ್ತಿತ್ವ ಇದೆ ಒಂದು ಆಯಾಮ ಇದೆ ಎಂದು ತೋರಿಸಿಕೊಟ್ಟವರು
ಕೋಳ್ಯೂರರು. ಅದು ಯಾವ ರೀತಿಯ ಯಾವ ಬಗೆಯ ಪಾತ್ರವೇ ಆಗಲಿ ಕೋಳ್ಯೂರರಿಗೆ ಅವರೇ ಸಾಟಿ. ಹರಿತವಾದ
ಧ್ವನಿ ಸಂಪತ್ತು. ಅಭಿನಯಕ್ಕೆ ಒತ್ತು ಕೊಡುವ ಅಂಗಾಂಗ ಚಲನೆ. ಯಾವ ಭಾವವನ್ನೂ ಅತಿ ಸುಲಭವಾಗಿ ತೋರಿಸುವ
ಆ ಮುಖಭಾವ .. ಕಲಾವಿದ ಎನ್ನುವುದು ಇದಕ್ಕೆ ಅಲ್ಲವೇ.? ಯಾವುದೇ ಪ್ರಸಂಗವಾಗಲಿ ಒಂದು ಸ್ತ್ರೀ
ಪಾತ್ರ ಪ್ರವೇಶವಾದಾಗ ಪ್ರಸಂಗದ ವೇಗ ಕಡಿಮೆಯಾಯಿತು..ಇನ್ನು ಪ್ರಸಂಗ
ಚಪ್ಪೆಗುದ್ದುತ್ತದೆ ಅಂತ
ಅನ್ನಿಸುವಾಗ ಕೋಳ್ಯೂರರ ಸ್ತ್ರೀ ಪ್ರವೇಶ ಒಂದು ಮಿಂಚಿನ ಸಂಚಾರವನ್ನುಂಟು ಮಾಡುತ್ತದೆ.
ಕೇವಲ ಯಕ್ಷಗಾನ
ಬಯಲಾಟಕ್ಕೆ ಸೀಮಿತವಲ್ಲ ಕೋಳ್ಯೂರರು ತಾಳಮದ್ದಲೆಯಲ್ಲೂ ಅಷ್ಟೇ ನಿರರ್ಗಳವಾಗಿ ಮಾತಾಡಬಲ್ಲರು,
ಎದುರಾಳಿಯ ಬೆವರಿಳಿಸಬಲ್ಲರು. ಅರ್ಥಗಾರಿಕೆಯಲ್ಲಿ ಅವರ ಜ್ಞಾನ ಅಪಾರ. ಅದು ಅಂಬೆಯಾಗಿಬರಬಹುದು
ಮಂಡೋದರಿಯಾಗಿರಬಹುದು, ವಾಲಿವಧೆಯ ತಾರೆಯಾಗಿರಬಹುದು. ಯಾವುದೇ ಆದರೂ ಕೋಳ್ಯೂರರು ನಿರ್ವಹಿಸುವಾಗ
ಇವರು ಯಕ್ಷಗಾನದ ಸ್ತ್ರೀ ಪಾತ್ರಧಾರಿಯೇ ಎಂಬ ಅನುಮಾನ ಯಾಕೆಂದರೆ ಯಕ್ಷಗಾನದ ಸ್ತ್ರೀ
ನಿರರ್ಗಳವಾಗಿ ಮಾತಾಡುವುದು ಬಹಳ ಕಡಿಮೆ. ಇಷ್ಟಾದರೂ ಕೋಳ್ಯೂರರದು ಚೌಕಟ್ಟು ಮೀರದ ಪರಿಶುದ್ದ
ಯಕ್ಷಗಾನದ ಪಾತ್ರ ಪೋಷಣೆ.
ಕೋಳ್ಯೂರರ ತಾಳಮದ್ದಲೆಯ ಅರ್ಥಗಾರಿಕೆ ಇಲ್ಲಿದೆ
ನನಗೆ ನಿಜಕ್ಕೂ
ಮೊನ್ನೆ ಯಕ್ಷಗಾನವಿಲ್ಲದ ಒಂದು ಯಕ್ಷಗಾನಕ್ಕೆ ಸಂಬಂಧಿಸಿದ ಕಾರ್ಯಕ್ರಮವಾಗಿಬಿಟ್ಟಿತು. ಮಕ್ಕಳ
ಯಕ್ಷಗಾನ ಇದ್ದರೂ ನಾನು ಆವರೆಗೆ ಅಲ್ಲಿರಲಿಲ್ಲ. ಯಕ್ಷಗಾನಕ್ಕೆ ಉಳಿಯದೆ ಕೇವಲ ಸಭಾಕಾರ್ಯಕ್ರಮ
ಮುಗಿದಾಗ ಸಂತೃಪ್ತಿಯಿಂದ ಬಂದದ್ದು ಇದೇ ಮೊದಲಿರಬೇಕು. ಇದಕ್ಕಾಗಿ ಎದ್ದು ಬರುವಾಗ ಅನಿಸಿದ್ದು
ಇದು ಒಂದು ಅರ್ಥ ಪೂರ್ಣ ಕಾರ್ಯಕ್ರಮ, ಇದನ್ನು ನೆರವೇರಿಸಿದ ಯಕ್ಷಪ್ರಭದ ಭಾರವಾಹಿಗಳು ಪ್ರಶಂಸಾರ್ಹರು
ಮತ್ತೆ ಇನ್ನು ಕೋಳ್ಯೂರರ
ಬಗ್ಗೆ ಅವರ ಪಾತ್ರಗಳ ಬಗ್ಗೆ ನನ್ನಂತಹವರು ಹೇಳುವುದು ಅದು ಪರ್ಯಾಪ್ತ ಎನಿಸದು. ಒಂದು ದೊಡ್ಡ
ಕೊಪ್ಪರಿಗೆಯಲ್ಲಿದ್ದ ಹಾಲನ್ನು ಅಳೆಯುವುದಕ್ಕೆ ಕೆಲವರು ಸೇರನ್ನೋ , ಕುಡುತೆಯನ್ನೋ
ಉಪಯೋಗಿಸಿದರೆ..ಇವರ ಬಗ್ಗೆ ನಾನು ಹೇಳಿದರೆ ಸಣ್ಣ ಸೌಟಿನಿಂದ ಅಳೆದಂತಾದೀತು. ನಮ್ಮ ತಿಳುವಳಿಕೆ
ತೀರ ಅಲ್ಪವಾಗಿಬಿಡುತ್ತದೆ. ಅದರೂ ನನ್ನಿಂದಾದಷ್ಟು ಮೊಗೆದು ನೋಡುವ ಆಶೆ. ಸನ್ಮಾನ ಎಂದರೆ ಅದುವೆ.
ಸತ್ ಮಾನ.. ಎಂದರೆ ಅಳೆಯಲಿಕ್ಕಾಗದ ಮಾನ.. ಅದೂ
ಒಂದು ಮಾನದಂಡ.
ಅವರು ಹಲವಾರು ಪಾತ್ರ ಮಾಡಿರಬಹುದು. ಬಹುಶಃ ಪೌರಾಣಿಕದ ಎಲ್ಲಾ ಬಗೆಯ ಸ್ತ್ರೀಪಾತ್ರಗಳನ್ನು
ಯಶಸ್ವಿಯಾಗಿ ಮಾಡಬಲ್ಲ ಪರಿಪೂರ್ಣ ಕಲಾವಿದರು. ಅದು ಸೀತೆ, ಮಂಡೋದರಿ, ದಾಕ್ಷಾಯಿಣಿ, ಅಂಬೆ,
ದ್ರೌಪದಿ, ಮಾಯಾ ಹಿಡಿಂಬೆ, ಮಾಯಾ ಶೂರ್ಪನಖಿ.. ಹೀಗೆ ವೈವಿಧ್ಯಮಯ ಪಾತ್ರ ಚಿತ್ರಣಗಳು ಅವರ
ನೈಪುಣ್ಯತೆಗೆ ಸಾಕ್ಷಿಯಾಗಿದೆ. ಬರೀ ಸ್ತ್ರೀಪಾತ್ರವಾಗಿರದೇ ಆರಂಭದಲ್ಲಿ ಅವರು ಮಾಡುತ್ತಿದ್ದ
ಪುಂಡುವೇಷಗಳನ್ನು ಸ್ಮರಿಸುವವರಿದ್ದಾರೆ. ಚಕ್ರವ್ಯೂಹದ ಅಭಿಮನ್ಯು ಒಂದು ಕಾಲದಲ್ಲಿ ಹೆಸರಾಂತ
ಪಾತ್ರವಾಗಿತ್ತಂತೆ. ಅದೇನಿದ್ದರೂ ಮಹಾಭಾರತದ ದ್ರೌಪದಿಯಂತೆ ... ವಿವಿಧ ರೂಪದ ಸ್ತ್ರೀ ಸಂಕೇತ
ಅವಳು ಮಹಾಸಾಧ್ವಿಯಾಗಿ ಪತಿವೃತೆಯಾಗಿ ಒಲಿದರೆ ನಾರಿಯಾಗಿ ಮುನಿದರೆ ಮಹಾ ಚಂಡಿಕೆಯಾಗಿ ಬಗೆ ಬಗೆಯ
ರೂಪಿನಿಂದ ಕಂಡಂತೆ ಕೋಳ್ಯೂರರು ರಂಗದಲ್ಲಿ ಬಗೆ ಬಗೆಯ ರೂಪದಲ್ಲಿ ಕಂಡ ಪಾಂಚಾಲಿಯಂತೆ. ಸಂಫೂರ್ಣ ಯಕ್ಷ
ಪಾಂಚಾಲಿ ಎಂದರೆ ಅದು ಕೋಳ್ಯೂರು ರಾಮಚಂದ್ರ ರಾಯರು.






