ರಾಮಾಯಣದಲ್ಲಿ ಬಹು ಮುಖ್ಯವಾಗಿ ಎರಡು ಪುರುಷ ಪಾತ್ರಗಳು ಎಷ್ಟು
ಪ್ರಾಮುಖ್ಯವಾಗಿದೆಯೋ ಹಾಗೇ ಎರಡು ಸ್ತ್ರೀ ಪಾತ್ರಗಳು. ಸೀತಾ ಮತ್ತು ಮಂಡೋದರಿ. ಇಬ್ಬರೂ ಪತಿವೃತಾ
ಸಾಧ್ವಿಯರು. ರಾಮ ಮರ್ಯಾದಾ ಪುರುಷೋತ್ತಮನಾಗಿ ಅದರ್ಶಗಳನ್ನೇ ಪ್ರತಿಪಾದಿಸಿದ ವ್ಯಕ್ತಿತ್ವವಾದರೆ
ರಾವಣನ ತದ್ವಿರುದ್ಧ ವ್ಯಕ್ತಿತ್ವದಿಂದ ದ್ವಂದ್ವ ಸಂಘರ್ಷವನ್ನೇ ಮಾಡುತ್ತ ಇದ್ದರೆ ಈ ವಿಭಿನ್ನ
ವ್ಯಕ್ತಿತ್ವದ ನೆರಳಾಗಿ ಈ ಸ್ತ್ರೀ ವ್ಯಕ್ತಿತ್ವಗಳು ಈ ಘರ್ಷಣೆಯ ಉರಿಗೆ ಸಿಕ್ಕಿಬೀಳುತ್ತವೆ.
ರಾವಣ ದುರುಳನಾದರೂ ಪತಿವೃತಾ ಮಂಡೋದರಿಯನ್ನು ಹೊಂದಿದವನು. ತನ್ನ ಪತ್ನಿ ಪತಿವೃತೆಯಾದರೂ ತನ್ನ
ವ್ಯಕ್ತಿತ್ವವನ್ನು ಇದಕ್ಕೆ ತದ್ವಿರುದ್ದವಾಗಿ ರೂಢಿಸಿಕೊಂಡವನು. ಬಹಳಷ್ಟು ಹೆಣ್ಣು ಮಕ್ಕಳನ್ನು
ಬಲವಂತವಾಗಿ ದಮನಿಸಿ, ದಾರ್ಷ್ಟ್ಯತನದಿಂದ ತನ್ನಾಧೀನ ಇರಿಸಿಕೊಂಡವನು. ಇಂತಹ ದುರುಳ ರಾವಣನಿಗೆ
ಮಂಡೋದರಿಯಂತಹ ಪತಿವೃತೆ ಇದು ವಿಪರ್ಯಾಸ.
ತನ್ನಾಧೀನ ಬಹಳಷ್ಟು ಹೆಣ್ಣುಗಳಿದ್ದರೂ ಮನಸ್ಸು ವ್ಯಾಕುಲಗೊಂಡಾಗ ಅಲ್ಲೆಲ್ಲೂ ಸಿಗದೇ
ಇರುವದ್ದನ್ನು ಮಂಡೋದರಿಯ ಅಂತಃ ಪುರದಲ್ಲಿ ಅರಸಿ ಬರುತ್ತಾನೆ. ರಾವಣ ಪರಮ ಶಿವಭಕ್ತ, ಬ್ರಾಹ್ಮಣನೂ ಹೌದು ರಾಕ್ಷಸನೂ ಹೌದು. ವಿಭಿನ್ನ
ವ್ಯಕ್ತಿತ್ವದ ದ್ವಂದ್ವಗಳನ್ನೆಲ್ಲಾ ತನ್ನೊಳಗೆ ಗೂಢವಾಗಿಸಿದ ರಾವಣನ ಅಂತರಂಗ ಇನ್ನೂ ಗೂಢವಾಗಿ
ಅದು ಅವನ ಅರಿವಿಗೇ ಬಂದಿರುತ್ತದೆ. ಈ ರಾವಣನ ಅಂತರಂಗ ತೆರೆದುಕೊಳ್ಳುವುದೇ ಮಂಡೋದರಿಯ ಅಂತಃ
ಪುರದಲ್ಲಿ. ರಾವಣ ವಧೆ ಅಥವ ರಾವಣ ಮೋಕ್ಷ
ಪ್ರಸಂಗದ ಬಹು ಮುಖ್ಯ ಸನ್ನಿವೇಶ ಇದು. ಯಕ್ಷಗಾನ ಬಯಲಾಟದಲ್ಲೂ ತಾಳ ಮದ್ದಲೆಯಲ್ಲೂ ಇದಕ್ಕೆ ಬಹಳ
ಮಹತ್ವ. ಆದರೂ ತಾಳಮದ್ದಲೆಯಲ್ಲಿ ಈ ಸನ್ನಿವೇಶ
ವಿಸ್ತರಿಸಿದಷ್ಟು ಯಕ್ಷಗಾನ ಬಯಲಾಟದಲ್ಲಿ ತೆರೆದುಕೊಳ್ಳುವುದಿಲ್ಲ. ಮುಂದಿನ ಸನ್ನಿವೇಶ ಮಂಡೋದರಿಯ ಅಂತಃ ಪುರದಲ್ಲಿ
ಏಕಾಂಗಿಯಾಗಿ ತಳಮಳಿಸುತ್ತಾ ಇದ್ದರೆ, ಮಂಡೋದರಿ
ತನ್ನ ಪತಿ ತನ್ನ ಅಂತಃಪುರದಲ್ಲಿ ಏಕಾಂಗಿಯಾಗಿದ್ದಾನೆ ಎಂದು ತಿಳಿದು ಬರುತ್ತಾಳೆ. ಎಂದು ಇಲ್ಲದ
ರಾವಣನ ದುಗುಡ ಇಂದು ಬಹಿರಂಗವಾಗಿ ಕಾಣುತ್ತಾಳೆ.
ಮೂಡಂಬೈಲು ಶಾಸ್ತ್ರಿಗಳು ಮಂಡೋದರಿಯ ವ್ಯಕ್ತಿತ್ವವನ್ನು ಸಾದರ ಪಡಿಸುವ ರೀತಿ ಬಹಳ ಅದ್ಭುತವಾಗಿದೆ.
“ ದುರುಳ ನೀ ತೆರದೊಳು ತರಹರ ಗೊಳುತಿರೆ........”
“ಶಿವ ಶಿವಾ ನಮ್ಮ ಮನೆಯಲ್ಲಿ ನಮ್ಮಲ್ಲೇ ಈ ರೀತಿಯಾದ ಅಪಶಬ್ದವನ್ನು ನಾನು ಈ
ಕಿವಿಯಿಂದ ಕೇಳಿಯೇನು ಅಂತ ಭಾವಿಸಿರಲಿಲ್ಲ. ಅದೋ ದಾಸಿಯರು ಈಗಿಂದೀಗ ಹೇಳುವ ಮಾತೇನು. ಅಂತಃ ಪುರದ
ಕಡೆಗೇ ಅರಸರು ಬಂದಿದ್ದಾರೆ. ಬಹಳಷ್ಟು ತರಹರ ಗೊಳ್ಳುತ್ತಿದ್ದಾರೆ. ಮನಶ್ಯಾಂತಿ ಸ್ವಲ್ಪವೂ
ಇಲ್ಲದೆ ಅಶಾಂತಿಯಿಂದ ಏನೋ ಕೊರಗುತ್ತಾ ಅಲ್ಲಿ ಬಸವಳಿದು ತನ್ನ ಮನಸ್ಸಿನಲ್ಲೇ ಏನೋ ಚಿಂತಿಸುತ್ತಿದ್ದಾರೆ.
ಜತೆಯಲ್ಲೇ ಹೇಳಿದರು ನಮ್ಮಲ್ಲಿ ರಾವಣನನ್ನು ದುರುಳ ಅಂತ ಹೇಳುವುದಕ್ಕೆ ತೊಡಗಿದ್ದಾರೆ. ಅಯ್ಯೋ
ರಾವಣೇಶ್ವರ ಮಹಾ ಪ್ರಭುಗಳು ! ಈ ರೀತಿಯ ಕೆಟ್ಟ
ಶಬ್ದಗಳು !! ಅದನ್ನು ನಾನು ಕೇಳುವಂತಾಯಿತಲ್ಲ? ಒಬ್ಬ ಪತಿವೃತೆಯಾದ ಸ್ತ್ರೀ ಯಾವುದನ್ನು ಕಿವಿಗಳಿಂದ
ಕೇಳಬಾರದೋ ಅಂತಹ ಒಂದು ಧ್ವನಿ, ಒಂದು ಶಬ್ಧ,
ಇತ್ತೀಚಿನ ದಿನಗಳಲ್ಲಿ ನಮ್ಮವರು ಬಹಳಷ್ಟು ಮಾನಸಿಕ ಯಾತನೆಯಲ್ಲಿದ್ದಾರೆ ಅಂತ ನಮಗೆ
ಅರ್ಥವಾಗಿದೆ. ಆದರೆ ಬಹಿರಂಗಗೊಳಿಸುತ್ತಿರಲಲ್ಲ. ಏನೋ ಮೊನ್ನೆ ಮೊನ್ನೆ ಮಕರಾಕ್ಷ ಮಡಿದಾಗ
ಸಭೆಯಲ್ಲೇ ಒಮ್ಮೆ ದುಃಖ ಪಟ್ಟಿದ್ದರಂತೆ. ನಮ್ಮಲ್ಲಿ ಹೇಳಿದ್ದರು ದಶಮುಖ ಧೈರ್ಯಗುಂದಿ ಕ್ಲೇಶತಾಳಿ
ತರಹರಿಸುತ್ತಾ ಅಲ್ಲೇ ಒರಗಿದ್ದರು ಅಂತ. ಆದರೆ ಅಂತಃ ಪುರಕ್ಕೆ ಬರಲಿಲ್ಲ ಆ ದುಃಖ. ಅವರು ಮನಸ್ಸು ಮಾಡ್ಲಿಲ್ಲ. ಪತ್ನಿಯಲ್ಲ ಇದನ್ನು
ತೋರ್ಪಡಿಸಬಾರದು ಅಂತ ಇದ್ದಿರಬೇಕು. ನಾನೂ ಹಾಗೆ ಇತ್ತೀಚೆಗೆ ಅವರನ್ನು ಸಾಕಷ್ಟು ಪ್ರಾಮಾಣಿಕವಾದ ವ್ಯವಹಾರದಿಂದ ಅವರ ಮನಸ್ಸಿಗೆ
ಒಂದಿಷ್ಟು ನೋವಾಗದ ಹಾಗೆ ನೋಡಿಕೊಳ್ಳಬೇಕು ಅಂತ ಬಯಸ್ತಿದ್ದದ್ದು. ಇಂದಿನ ದಿನಗಳಲ್ಲಾದರೆ ನಾನೊಬ್ಬಳೇ ಅಲ್ಲ, ಹಲವಾರು
ಮಂದಿ ರಾಣಿಯರು ರಾವಣೇಶ್ವರನ ಸುಖಕ್ಕೋಸ್ಕರವಾಗಿ ಸಾಕಷ್ಟು ಶ್ರಮಿಸ್ತಾ ಇದ್ದರು. ಆದರೆ ಈಗೀಗ
ಅಂತು ಆದಿನ ಕಳೆದು ಹೋಗಿದೆ ಅಂತ ಅನ್ನಿಸ್ತಾ ಇದೆ. ಕೆಲವರಂತು ಮಕ್ಕಳು ಸತ್ತು ಹೋಗಿದ್ದಾರೆ ಅಂತ
ಅಳುತ್ತಿದ್ದಾರೆ. ಕೆಲವರಂತೂ ಇನ್ನೇನು ಈ ಪ್ರಪಂಚದಲ್ಲಿ ಉಳಿದದ್ದಿಲ್ಲ. ನಾವು ರಾವಣೇಶ್ವರನ ಜತೆ
ಓಡಿ ಬಂದದ್ದೇ ತಪ್ಪಾಯ್ತು ಅಂತ ಹೇಳ್ತಿದ್ದಾರೆ. ಕೆಲವರಂತೂ ತಂದ ಒತ್ತಾಯಕ್ಕೆ ಕಟ್ಟು ಬಿದ್ದು
ನಾವು ಒಲಿದೆವಲ್ಲಾ ? ಇನ್ನು ನಮಗೆ ಯಾರಿದ್ದಾರೆ ಅಂತ ಅಳುತ್ತಿದ್ದಾರೆ. ಆದರೆ ನಾನು ಹಾಗಲ್ಲ.
ನಾನು ಕಟ್ಟೊತ್ತಾಯಕ್ಕೆ ಬಂದವಳಲ್ಲ. ಪತಿಯನ್ನು ಪ್ರಾಮಾಣಿಕವಾಗಿ ಸ್ವೀಕರಿಸಿ, ನನ್ನ ಅಪ್ಪನಿಂದ ಧಾರಾದತ್ತವಾಗಿ ಕೊಡಲ್ಪಟ್ಟು, ರಾವಣೇಶ್ವರನೇ ಸರ್ವಸ್ವ ಅಂತ ತಿಳಿದು ಮನೆ ಹೊಕ್ಕವಳು ನಾನು. ರಾವಣೇಶ್ವರನ
ಪ್ರಥಮ ಪಟ್ಟ ಮಹಿಷಿ. ಆದ್ದರಿಂದ ಎಂದೂ ಇವರ ಆಗು ಹೋಗುಗಳು ನನ್ನ ಆಗು ಹೋಗುಗಳೇ. ಆದುದರಿಂದ
ಶ್ವೇತ ಕಾಕೀಯ ಎಂದು ಹಿರಿಯರು ಹೇಳಿದ ನೀತಿ ಉಂಟು. ಶ್ವ ಅಂದರೆ ಶ್ವಾನದಂತೆ ನಾಯಿಯಂತೆ ಬಹಳಷ್ಟು ಜಾಗರೂಕತೆಯಿಂದ ಪತಿಯ ಸೇವೆ
ಮಾಡುತ್ತ ಬಂದವಳು. ಏತ ಅಂದರೆ ಜಿಂಕೆಯಂತೆ ಭಯದ ಆಶಂಕೆಯಿಂದ ಪತಿಯ ಇಂಗಿತವನ್ನರಿತು ಬೇಕಾದಂತೆ
ಮಾಡಿದವಳು. ಹಾಗೆ ಕಾಕ, ಕಾಗೆಯಂತೆ ಗಂಡನಿಗೆ ಹೇಗೆ ಬೇಕೋ ಹಾಗೆ, ಅವರ ಅಂತರ್ಭಾವವನ್ನು ಊಹಿಸಿಯೇ ಬೇಕಾದಂತೆ ನಡೆದು
ಕೊಂಡು ಬಂದವಳು. ಈಗಂತೂ ಅದನ್ನು ಚಾಚೂ ತಪ್ಪದೇ ಅನುಸರಿಸುತ್ತಾ ಬಂದವಳು. ಅವರು ಈ ಪರಿಸ್ಥಿತಿಯಲ್ಲಿ ಇದ್ದಾರೆ ಅಂತ ಹೇಳುವಾಗ ನಾನು ಹೀಗೆ ಇರುವುದಕ್ಕಾಗುತ್ತದೆಯೇ? ಅಂತಃ ಪುರ
ಬಿಟ್ಟು ಹೊರಗೆ ಬಂದದ್ದು ಅಷ್ಟಕ್ಕೇಯೇ. ಈಗೀಗ, ಈಗೀಗ... ನಮ್ಮ ಆಚೆ ಈಚೆ ಏನು ನಡೆಯುತಾ ಇದೆ
ಅಂತ. ಹೊರಗಲ್ಲ ಇವತ್ತು ನಮ್ಮ ಒಳಗೇ , ವೈರಿಗಳ ಸುಳಿವು ಯಾವರೀತಿಯಾಗಿ ನಮ್ಮ ಅಂತಃಪುರದ ಒಳಗಿರುವ
ಗುಟ್ಟನ್ನು ರಟ್ಟು ಮಾಡ್ತಾ ಇದೆ. ಹೇಳುವುದಕ್ಕೆ ಕಷ್ಟವಾಗಿದೆ. ಇಂದೋ ನಾಳೆಯೋ ನಮ್ಮ ಲಂಕಾ
ರಾಷ್ಟ್ರದ ಈ ಅರಮನೆಯ ಒಳಗೆ ಏನಾದೀತು ಊಹಿಸುವುದಕ್ಕೂ ಬರುವುದಿಲ್ಲ. ತ್ರಿಕೂಟಾಚಲ ಲಂಕೆಯ
ಲಂಬಾಚಲವೂ ಇಲ್ಲ, ನಿಕುಂಬಿಳಾಚಲವೂ ಇಲ್ಲ ಎಲ್ಲ ವೈರಿಗಳ ಪಾಲಾಗಿದೆ. ಇವತ್ತು ನಮ್ಮ ಅರಮನೆಯ
ಪ್ರದೇಶ ಮಾತ್ರ ನಮ್ಮಲ್ಲಿದೆ ಅಂತ ಮಾತ್ರ ಹೇಳಬಹುದು. ಅಲ್ಲಿಗೂ ಇನ್ನು ಕೊಳ್ಳಿ ಯಾವಾಗ ಇಡ್ತಾರೋ
ಗೊತ್ತಿಲ್ಲ. ಆದ್ದರಿಂದ ನನಗೆ ತಿಳಿದಷ್ಟಾದರೂ ಏನಾದರೂ ಸಂಗ್ರಹ ಮಾಡಿ ನಮ್ಮ ಪತಿಯನ್ನು
ಸಕಾಲಕ್ಕೆ ಎಚ್ಚರಿಸೋಣ ಅಂತ ನಾನು ಪ್ರಯತ್ನ ಪಟ್ಟದ್ದು. ಆಗಲಿ ಈ ಕಾಲ ಪತಿದೇವನಲ್ಲಿ ಹೋಗಿ ಕಾಡಿ
ಬೇಡಿ ನನ್ನ ಮಾನಸಿಕವಾದಂತಹ ಆ ತೊಳಲಾಟವನ್ನು ಹೇಳಿಕೊಂಡು, ನನ್ನ ಆಂತರಿಕವಾದಂತಹ ಬಹಳ ದೊಡ್ಡ
ದುಃಖವನ್ನು ಅವರ ಮುಂದೆ ಇಟ್ಟಾಗ ಅವರೇನು ಅನ್ನುತ್ತಾರೋ ಅಂತ ನೋಡ್ಬೇಕು. ನನ್ನ ಪತಿದೇವನ ಅಂತಃ
ಕರಣವನ್ನು ಬಹಿಂರಂಗ ಪಡಿಸುವುದಕ್ಕೆ ಯಾರಿಗೂ ಸಾಧ್ಯವಾಗಲಿಲ್ಲ. ಅವರ ತಮ್ಮ ಸಾಕಷ್ಟು ಹೇಳಿದ್ದ
ಆದರೆ ರಾಜ್ಯವನ್ನೇ ಬಿಡಬೇಕಾಯಿತು. ಜತೆಗೆ ಅಮ್ಮ ಸಾಕಷ್ಟು ನೀತಿಯನ್ನು ಅವನಿಗೆ ಒರೆದರೂ ಈ
ಕುಟಿಲತನ ಬೇಡ ಅಂತ ಸಾಕಷ್ಟು ಸಾರಿದರು. ಆಗಲಿಲ್ಲ. ತನ್ನ ಅಂತಃ ಕರಣದಲ್ಲಿದ್ದ ಗುಟ್ಟನ್ನು
ಪತ್ನಿಯಲ್ಲಾದರೂ ಹೇಳಲಾರರೇ? ಕೆಲವೊಂದು ಮಾತುಗಳು, ಇತ್ತೀಚೆಗೆ ನನಗ್ಯಾಕೋ ವಿಚಿತ್ರ ಕಾಣಿಸ್ತಾ
ಇದೆ. ಮೊನ್ನೆ ಮೊನ್ನೆ ಯುದ್ದ ಪ್ರಾರಂಭದಲ್ಲಿ ಶುಕ
ಸಾರಣರು ಬಂದು ಹೇಳಿದಾಗ ಒಂದ ಧ್ವನ್ಯಾತ್ಮಕವಾದ ಮಾತು ಅವರ ಬಾಯಿಂದ ಬಂದಿತ್ತು. ಮರುಳಾದೆಯೇನೋ
ಅಂತ, ಬೇರ ಬಲ್ಲವನಿಗೆ ಮರದೆಲೆಯನ ತಂದು ತೋರಲೇತಕೋ? ಮರದೆಲೆಯೇ ತೋರುತ್ತಿದ್ದಾರೆ ಬೇರೇ ನನಗೆ ಗೊತ್ತುಂಟು,
ರಾಮನ ಬೇರೋ? ವ್ಯಾಜ್ಯದ ಬೇರೋ ? ಸೀತೆಯ ಮೂಲವೋ?
ಅಲ್ಲ ತಾನು ಮಾಡುವ ಕ್ರಿಯೆಯ ಅಂತರಾರ್ಥವೋ? ನಿನಗೇನು ಗೊತ್ತುಂಟೋ ? ಹಾಗಾದರೆ ಈ ಮಾತಿನ
ಸುಳಿವು ಏನು? ಏನು ಇದರ ಅಂತರಾರ್ಥ? ಏನೂ ತಿಳಿಯದವರ ನಮ್ಮವರಲ್ಲ. ಹತ್ತು ಮುಖದಲ್ಲಿ ಹತ್ತು
ವ್ಯಕ್ತಿತ್ವವೂ ನಮ್ಮ ರಾವಣೇಶ್ವರನಿಗಿದೆ. ಅಂತಾ ವ್ಯಕ್ತಿತ್ವದಲ್ಲಿ ಪರಮೇಶ್ವರನನ್ನು ಕುಣಿಸುವ
ವ್ಯಕ್ತಿತ್ವವೂ ಇದೆ. ವೇದ ಗಾನವನ್ನು ಮಾಡುವಂತಹ ವ್ಯಕ್ತಿತ್ವವೂ ಅವರಲ್ಲಿದೆ. ಹಾಗಾದರೆ ಇದೆಲ್ಲ
ಯಾಕೆ? ಗೊತ್ತಿಲ್ಲದೆ ಮಾಡುವಂತದ್ದಲ್ಲ. ಹಾಗಾದರೆ ನನ್ನಲ್ಲಾದರೂ ಹೇಳಲಾರರೇ? ಅಂತಃ ಪುರಕ್ಕೆ
ಹೋಗ್ತೇನೆ ಮೊದಲಾಗಿ ಅವರನ್ನು ಕೊರಗಿಸ್ತೇನೆ. ಕರಕರೆಯ ಮಾತುಗಳನ್ನಾದರೂ ಹೇಳ್ತೇನೆ ಕಾಡ್ತೇನೆ
ಬೇಡ್ತೇನೆ. ಅಂತರಂಗದ ಮಾತುಗಳನ್ನು ಹೇಳ್ತಾರೋ ನೋಡೋಣ....”
“ಚಿಂತಿಸುವದ್ಯಾತಕಿಂತೂ ಪ್ರಾಣ ಕಾಂತಾ.... “ ಮಂಡೋದರಿ ಕರೆ ಕರೆಯ ಮಾತುಗಳು
ಆರಂಭವಾಗುತ್ತದೆ.
“ ಪ್ರಾಣ ಕಾಂತ ಬಹಳಷ್ಟು ದುಃಖದಿಂದ, ಯಾವುದೋ ಗಹನವಾದ ವಿಚಾರವನ್ನು ಯೋಚಿಸುತ್ತಾ
ದುಃಖಿಸುತ್ತಿದ್ದೀರಲ್ಲ. ಈ ಚಿಂತೆಯ ಕಾರಣವಾದರೂ ಏನೂ? ಹೀಗೆ ಸಜೀವವಾಗಿ ಸುಡುತ್ತಿರುವ ಚಿಂತೆ
ಅದು ನಿಮಗೆ ಮಾತ್ರವಲ್ಲ. ನಮಗೆಲ್ಲರಿಗೆ ಕೂಡಾ ನೋವನ್ನು ತರುತ್ತಿದೆ.. ನಿಮ್ಮ ಶ್ರೇಯಸ್ಸು
ಲಂಕಾರಾಷ್ಟ್ರದ ಶ್ರೇಯಸ್ಸು. ನೀವು ತಲೆಯೆತ್ತಿ
ತಿರುಗಾಡಿದರೆ ಲಂಕಾರಾಷ್ಟ್ರವೇ ತಲೆ ಎತ್ತಿ ತಿರುಗಾಡಿದಂತೆ. ಅಂತಹ ನೀವು ಹೀಗೆ ದುಃಖಸುತ್ತಿದ್ದರಲ್ಲ?
ಯಾರೋ ಒಬ್ಬ ಸಾಮಾನ್ಯ ದಾನವನೋ ಹೀಗ
ದುಃಖಿಸಬಹುದಾಗಿತ್ತು. ಆದರೆ ತಾವು ಸಾಮಾನ್ಯ ದಾನವನಾಗಿದ್ದರೆ ತನ್ನ ದುಸ್ಥಿತಿಗೆ
ಮರುಗಬಹುದಾಗಿತ್ತು. ಆದರೆ ತಮ್ಮಂಥವರು ರಾವಣ ಪ್ರಭುಗಳು ಅಸಾಮಾನ್ಯ ಪರಾಕ್ರಮಿಗಳು ಹೀಗ ದುಃಖಿಸುವುದಂದರೆ, ಈ ದುಸ್ಥಿತಿಗೆ ಇಳಿಯುವುದೆಂದರೆ ಬಹಳ ವಿಚಿತ್ರ ಕಾಣುತ್ತಿದೆ. ಹೀಗೆ ನಿಮ್ಮ ಮೇಲೆ
ಆಗಬೇಕಿದ್ದರೆ ಯಾರ ಪ್ರಭಾವ ಇದು? ನಿಮಗಾದ ಈ ಪರಿಭವ ಅದರ ಕಾರಣವಾದರೂ ಏನು? ಇದಕ್ಕೆಲ್ಲ ಕಾರಣ ಅ
ಸೀತಾಕಾಂತನೇ ಆಗಿರಬೇಕು. ಈ ತನಕದ ಯುದ್ದದ ಪರಿಭವವನ್ನು ಗ್ರಹಿಸುವುದಾದರೆ, ತನ್ನ
ಕಾಲಿಗೆರಗಿ ಸೀತೆಯನ್ನು ಒಪ್ಪಿಸುತ್ತಿಯಾ ಅಂತ ಬಲವಂತವಾಗಿ ನಿಮ್ಮನ್ನು ಬಗ್ಗಿಸುತ್ತಿರಬೇಕು. ಅದಲ್ಲವಾದರೆ
ಅತ್ಯಂತ ಬಲಶಾಲಿಗಳಾದ ನಿಮಗೆ ಈ ದುಸ್ಥಿತಿ ಬಂದೀತೇ ಸ್ವಾಮೀ? ಒಂದು ಕಾಲದಲ್ಲಿ ನೀವೇ ಹೇಳಿದ
ಮಾತುಂಟು. ಧನುಜರ ಸೈನ್ಯವಿದೆ. ತಮ್ಮ ಕುಂಭಶ್ರವಣನಿದ್ದಾನೆ. ಈರೇಳು ಜಗದ ಒಡೆತನ ನಮಗುಂಟು. ಮಾರ
ವೈರಿಯ ಅನುಗ್ರಹವುಂಟು, ದಿಕ್ಪಾಲಕರು ನನ್ನ ಪದತಲದಲ್ಲಿದ್ದಾರೆ ಅಂತ ಹೇಳ್ತಾ ಇದ್ದಿರಿ.
ಅದೆಂತೆಂಥಹ ರಾಕ್ಷಸ ವೀರರಿದ್ದರು ಎಲ್ಲ ಏನಾಗಿಬಿಟ್ಟಿತು? ಒಂದು ವೇಳೆ ರಾಮ ಪಾಳಯ ಬಂದರೂ
ಏನಾದೀತು ಅಂತ ಇದ್ದಿರಿ. ಈಗೇನಾಯಿತು.? ಈಗ
ಅದೆಲ್ಲ ಕ್ಷೀಣಿಸಿತು ಅಂತ ದುಃಖವೋ? ಇದಕ್ಕೆಲ್ಲ
ಕಾರಣ ಹಿರಿಯರ ಅನುಗ್ರಹ ಇಲ್ಲ.
“ ಹಿರಿಯರೆಂದಾ ಮಾತ ಮೀರಿ ಪ್ರಾಣಕಾಂತ.......”
“ಎಲ್ಲಿ ಹಿರಿಯರ ಅನುಗ್ರಹ ಇಲ್ಲವೋ ಅಲ್ಲಿ ಆ ಕಾರ್ಯ ಸಫಲವಾಗುವುದಿಲ್ಲ.
ಹೀಗಿದ್ದರೂ ನಿಮ್ಮ ಸೀತಾ ಅಪಹರಣದ ಒಂದು ಕಾರ್ಯ ಹಿರಿಯರ ಅನುಗ್ರಹದಿಂದ ವಿರಹಿತವೆ. ಯಾಕೆಂದರೆ
ಹಿರಿಯರ ಮಾತುಗಳನ್ನು ನೀವು ಹೆಜ್ಜೆ ಹೆಜ್ಜೆಗೂ ಉಲ್ಲಂಘಿಸಿದಿರಿ. ಸೀತಾಪಹಾರಕ್ಕಾಗಿ ಹೋದಾಗ
ಮಾರೀಚ ಮಾವ ಹಲವು ಬಗೆಯಲ್ಲಿ ಹೇಳಿದರೂ ಅವನನ್ನೇ ತಲೆ ಕಡಿತೇನೆ ಅಂತ ಉಲ್ಲಂಘಿಸಿದಿರಿ
ಮತ್ತೆಲ್ಲಿಗೆ ಹಿಡಿದ ಕಾರ್ಯ ಸಫಲವಾದೀತು? ಆ ಕ್ರಿಯೆ ಆದರೂ ಮತ್ತೆ ಕೂಡಾ ಹೆತ್ತ ತಾಯಿ
ತಮ್ಮನನ್ನು ಬಿಡಬೇಡ..ಸೀತೆ ಬೇಡ ನಮಗೆ ಬಿಟ್ಟು ಬಿಡು ಅಂತ ಸಾರಿ ಸಾರಿ ಹೇಳಿದರು. ಇದು ತಾನೇ
ತಾನು ಗರ್ವದಿಂದ ಮೆರೆದುದರ ಪಲವಲ್ಲವೇ? ಇನ್ನು ಮರುಗಿ ಫಲವೇನು? ಇನ್ನು ಕೊನೆಗಾಲಕ್ಕಾದರೂ ಮಾಡಿದ್ದು ತಪ್ಪು ಅಂತ
ತಿಳಿದುಕೊಂಡು ಯಾಕೆ ತಗ್ಗಿಕೊಳ್ಳಬಾರದು? ಆ
ಶ್ರೀರಾಮನ ಪದಕ್ಕೆರಗಿದರೆ ಆಗದೇ? ಈಗ ಎಲ್ಲವನ್ನು ಕಳೆದುಕೊಂಡಿದ್ದೇವೆ. ಯಾವ ಸೈನ್ಯವೂ ಇಲ್ಲ ಏನೂ
ಇಲ್ಲ. ಆಗದೇ ಸ್ವಾಮೀ”
ಮಂಡೋದರಿ ಇಷ್ಟೆಲ್ಲ ಹೇಳಿದರೂ ರಾವಣನ ಮೇಲೆ ಯಾವುದೇ ಪ್ರಭಾವವಾಗುವುದಿಲ್ಲ ಅದು
ಕೇವಲ ಒಂದು ಮಾತಿನಿಂದ ವ್ಯಕ್ತವಾಗುತ್ತದೆ.
“ ಸದ್ಯ ನೀನು ಹೇಳುವುದಕ್ಕೆ ಉದ್ದೇಶಿಸಿದ್ದೇಲ್ಲ ಮುಗಿಯಿತೋ ಅಲ್ಲ ಇನ್ನೂ
ಉಂಟೋ...ಮುಗಿಯಿತೂ ಅಂತಾದರೆ ಮತ್ತೆ ನಾನು ನಿದ್ದೆ ಮಾಡಬಹುದಲ್ಲ?”
“ಮಂಡೋದರೀ... ಒಂದು ಮಾತು ಹೇಳ್ತೇನೆ...ಕಾರ್ಯವನ್ನು ಕಂಡು, ಕಾರಣವನ್ನು
ತಿಳಿಯದೆ, ಪರಿಹಾರಮಾರ್ಗವನ್ನು ಸೂಚಿಸಬಾರದು. ಈಗ ನೀನು ಇದು ಮೂರನ್ನೂ ಮಾಡಿಯಾಯ್ತಲ್ಲ? ನನ್ನ ದುಃಖವನ್ನು
ಕಂಡೆ. ಕಾರಣವನ್ನು ಊಹಿಸಿದೆ, ಪರಿಹಾರವನ್ನು ಹೇಳಿದೆ. ಇನ್ನು ನಾನು ಏನು ಹೇಳುವುದಕ್ಕುಂಟು.? ಮಂಡೋದರಿ ಆಲೋಚಿಸು ಎಲ್ಲವರಂಥಲ್ಲ ನೀನು. ಊರಿನವರೆಲ್ಲ
ಹೇಳಲಿ, ‘ದುರುಳ’ ರಾವಣ ಅಂತ. ನಾನು ಅವರ ಹೊಗಳಿಕೆ ಬೇಕಾಗಿ
ಹುಟ್ಟಿಕೊಂಡವನೇ ಅಲ್ಲ. ಸರ್ವಸ್ವವನ್ನು ಕಳೆದುಕೊಂಡ ನನ್ನ ಸಂಪಾದನೆ ದೇವರಾಣೆಗೂ ಇವರ
ಕೊಡುಗೆಯಲ್ಲ. ಆದಕಾರಣ, ಜನ ನನ್ನನ್ನು ಏನು ಹೇಳ್ತಾರೆ ಅಂತ ನಾನು ಆಕಡೆಗೆ ಕಿವಿ ಹಾಕಿದವನೇ
ಅಲ್ಲ. ಸ್ತುತಿಗೆ ಹಿಗ್ಗುವವ, ನಿಂದನೆಗೆ ಕುಗ್ಗುವವ ಈ ಸ್ಥಾನಕ್ಕೆ ಆಗ್ಲಿಕ್ಕಿಲ್ಲ.
“ನನಗೊಂದು ಧ್ಯೇಯವಿದೆ. ಒಂದು ಲಕ್ಷ್ಯವಿದೆ. ನಿನಗೆ ಗೊತ್ತುಂಟು. ಹೌದಲ್ಲ ನೀನಿಗ
ಒಂದು ಮಾತು ನನ್ನಲ್ಲಿ ಹೇಳ್ಬೇಕು. ಮದುವೆಯಾದ ತರುಣದಲ್ಲಿ ಸರ್ವೇ ಸಾಮಾನ್ಯ ಪ್ರಪಂಚದಲ್ಲಿ
ನನ್ನಂತಹ ಆರೋಗ್ಯ ಇದ್ದ ಪುರುಷನಿಗೆ ಹೆಂಡತಿಯಲ್ಲಿ ಮಾತಾಡುವುದೇ ಬೇಡ ಅಂತ ತೋರಿ ತಪಸ್ಸಿಗೆ
ಹೋಗುವ ಸ್ವಭಾವ ಎಲ್ಲಿಯಾದರೂ ಉಂಟಾ? ಶಾರೀರಿಕ ಸುಖವನ್ನು ಭೋಗವನ್ನು ಅನುಭವಿಸಬೇಕಾದ ಕಾಲದಲ್ಲಿ
ನನ್ನ ಮಂಡೋದರಿ ನೀನೆಲ್ಲಿ.. ನೀನು ಇಲ್ಲೇ ನಾನು ಎಲ್ಲಿ? ಎಲ್ಲೆಲ್ಲಿಯೋ. ಹೌದಲ್ಲ. ಮಕ್ಕಳನ್ನು
ಹೆತ್ತ ತಾಯಿ ನೀನು ಮೊಮ್ಮಕ್ಕಳಿಗೆ ಜೋಗುಳ ಹಾಡಿದ ಅಜ್ಜಿನೀನು. ಆ ಪ್ರಾಯಕ್ಕೆ ನನಗಿಲ್ಲದೇ
ಇದ್ದಂತಹ ಹುಚ್ಚು, ಈ ಪ್ರಾಯಕ್ಕೆ ಬಂತು ಅಂತ
ಹೇಳಿದ್ರೆ, ನೀನು ಒಪ್ತಿಯಾ ಅಂತ ನಾನು ಕೇಳುವುದು”
“ಬರ್ಲಿಕ್ಕೆ ಸಾಧ್ಯವೂ ಇಲ್ಲ ಒಪ್ಪುವುದೂ ಕಷ್ಟ”
“ಬಂತು ಅಂತ ನಿನಗೆ ಯಾರು ಉಪದೇಶ ಮಾಡಿದ್ದು?. ಆದುದರಿಂದ , ಆದ್ದರಿಂದ ಓ ಮಂಡೋದರಿ ವಿಚಾರಿಸಿ ಖೂಳನನು ಮಾಡೆನ್ನ. ವಿಚಾರಿಸಿ
ಅಂದ್ರೆ ನನ್ನನ್ನು ವಿಚಾರಣೆಗೆ ಗುರಿಪಡಿಸಿ ಅಂತ ಅಲ್ಲ, ನಿನ್ನ ಮನದಲ್ಲೇ ವಿಚಾರಿಸಿ...ಆದದ್ದೇನು
ಎಂಬುದರ ಕಡೆಗೆ ದೃಷ್ಟಿಯನ್ನು ಹರಿಯಿಸಿ ನಿನ್ನದ್ದೇ ಅದಂಥ ಮನಸ್ಸಿನಲ್ಲಿ ಮಂಥನ ಮಾಡಿ, ವಿವೇಕದ
ಬೆಳಕಿನಲ್ಲಿ, ಸತ್ಯವನ್ನು ಕಂಡುಕೊಳ್ಳುವುದಕ್ಕೆ ಯತ್ನಿಸಿ, ಹೊರತು ಹಿರಿಯರೆಂದ ಮಾತ ಮೀರಿ
....ಹೀಗಾಯಿತೋ... ರಘುನಾಥ ನಿನಗೇನು ಮಾಡಿದ..? ಅವನೇನು ಮಾಡಿದ ಅವನ ಅಪ್ಪ ಏನು ಮಾಡಿದ.?
ಇದೆಲ್ಲ ಮಾತೇನೇ? ಒಬ್ಬ ನನ್ನ ನ್ನು ಏನಾದರೂ ಮಾಡಿಬಿಟ್ಟಾನು ಅಂತ ಇದ್ರೆ ನಾನು ಮನೆಯೊಳಗೆ ಎರಡು
ಚಿಲಕ ಹಾಕಿ ಮಲಗುದಿಲ್ವಾ? ಯಾರು ಯಾರು ಏನೇನು ಮಾಡ್ತಾರೆ ಅಂತ ಬಹಳ ಸಣ್ಣ ವಯಸ್ಸಿನಿಂದಲೇ
ಹೋರಾಟಕ್ಕೆ ಇಳಿದ ಜೀವ ಇದು. ಕೈಲಾಸವನ್ನೆ ಎತ್ತುತ್ತೇನೆ ಅಂತ ಒಬ್ಬ ಹೊರಡ್ತಾನೆ.... ಅಂತ ಆದ್ರೆ
ಅವನು ಮನೆಗೆ ಪುನಃ ಬರ್ತಾನೆ ಅಂತ ಹೊರಡುವುದೋ? ಐರಾವತವನ್ನೇ ಮುಷ್ಠಿ ಘಾತದಿಂದ ಮಂಡಿ ಊರಿಸ್ತೇನೆ
ಅಂತ ಹೊರಟವ ಮತ್ತೊಮ್ಮೆ ಹೆಂಡ್ತಿ ಮಕ್ಕಳ ಮುಖ ಕಂಡೇನು ಅಂತ ಎಣಿಸಿ ಹೋಗೋದಿಲ್ಲ. ನನ್ನ ಸ್ವಭಾವವೇ
ಹಾಗೆ, ನಿನಗೆ ಗೊತ್ತುಂಟು. ಯಾರೋ ಅಸಾಧ್ಯ ಅಂತ ಹೇಳ್ತಾರೆ ಅವರಲ್ಲಿ ಸಾಧ್ಯ ಅಂತ ಹಟ
ಮಾಡುವುದಕ್ಕೆ ನಾನು ಹೋಗುವುದಿಲ್ಲ. ಅದನ್ನು ಕೇಳಿದ ಮಾತ್ರಕ್ಕೆ ಹೌದೋ ಅಂತ ಮಾಡಿ ತೋರಿಸುವವ ನಾನು. ಹೀಗೆ ಸಾಹಸವೇ ಜೀವನದ ಜೀವಾಳವಾಗಿ,
ಹೋರಾಟವೇ ಜೀವನದ ಭದ್ರ ಬುನಾದಿಯಾಗಿ ಹೊರಟ ದೊಡ್ಡ ಚರಿತ್ರೆ ಇದ್ದವ ನಿನ್ನ ಗಂಡ. ಇಷ್ಟು
ಗೊತ್ತಿದ್ದು ನೀನು, ರಾಮ ಏನಾದ್ರೂ ಮಾಡಿದ ಅಂತಾದ್ರೆ , ನಾನು ಬಂದು ಹೆಂಡತಿ ಎಲ್ಲಿದ್ದಾಳೆ ಅಂತ
ಕೋಣೆಗೆ ಬಂದು ಮುಸುಕು ಹಾಕಿ ಕಣ್ಣೀರು ಇಳಿಸುವ ಷಂಡ ಭಂಡನೋ? ನಿನ್ನ ಗಂಡ?”
ಬಹಳ ಸ್ಪಷ್ಟವಾದ ರಾವಣ ವ್ಯಕ್ತಿತ್ವದ ಸ್ಥಾಪನೆ. ರಾವಣನ ಹತ್ತು ಮುಖದ ಕಲ್ಪನೆ
ಏನು? ರಾವಣ ಅಂದರೆ ಏನು ಅದರ ಸೂಕ್ಷ್ಮವಾದ ಪ್ರತಿಪಾದನೆ ಶೇಣಿಯವರದ್ದು. ರಾವಣನ ಪ್ರತಿ ಹೆಜ್ಜೆ
ಹೆಜ್ಜೆಯೂ ಕಂಡು ಕೊಂಡ ರೀತಿ ಆ ದೃಷ್ಟಿಕೋನ ಅದ್ಭುತ. ಊಹನೆಗೆ ನಿಲುಕ ರಾವಣನ ದುಗುಡವನ್ನು ಆತನ
ಕಣ್ಣೀರ ಹನಿ ಹನಿಗೆ ಅರ್ಥ ಕಟ್ಟುವ ಪರಿ ಅದು ಇಲ್ಲಿ ಮಾತ್ರ ಸಾಧ್ಯ. ಮಹಾಕಾವ್ಯವನ್ನು ಸುಲಭವಾಗಿ ಬಹಳ ಸರಳ ವಾಕ್ಯಗಳಿಂದ
ವ್ಯಾಖ್ಯಾನಿಸಿ ಬಿಡುತ್ತಾರೆ.
