"ಇದು ವಿಮರ್ಶೆಯಲ್ಲದ ಚಿಂತನ"

Friday, August 30, 2013

ದುರ್ಬಲ ಪ್ರಸಂಗ

“ಕಣ್ಣಿದ್ದೂ ಕುರುಡಾಗಿ ಕಿವಿಯಿದ್ದೂ ಕಿವುಡಾಗಿ ಬಾಯಿ ಇದ್ದೂ ಮೂಕನಾಗಿ ನೋಡಬೇಕಾದ್ದು ಜಗತ್ತಿನಲ್ಲಿ ಬಹಳವಿದೆ.”

ಬಹಳ ಹಿಂದೆ ನನ್ನ ಬಾಲ್ಯದಲ್ಲಿ ಒಂದು ಆಟಕ್ಕೆ ಹೋದ ನೆನಪು. ಅದು ಮಂಗಳೂರಿನ ದೇರೇಬೈಲು ಪರಿಸರದಲ್ಲಿ ಎಲ್ಲೋ ಆದ ಆಟ. ಪ್ರಸಂಗ ದೇವಿ ಮಹಾತ್ಮೆ. ಊರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಊರಿನವರೇ ಆಡುವ ಆಟವದು. ಅಟ ಬಹಳ ಅಧ್ಹೂರಿಯಲ್ಲಿ ಆಗುತ್ತಿತ್ತು .ಸಭೆಯೂ ಹಾಗೆ..ಆಟ ಅಡುತ್ತಿದ್ದ ಗದ್ದೆಯ ತುಂಬ ಸೇರಿತ್ತು.  ಮಹಿಷಾಸುರ ಪ್ರವೇಶವೂ ಯಥಾ ಪ್ರಕಾರ ಅದ್ಧೂರಿಯಲ್ಲಿ ಆಯಿತು. ಮಕ್ಕಳು ನಾವೆಲ್ಲ ಬೆರಗುಗಣ್ನುಗಳಿಂದ ನೋಡುತ್ತಿದ್ದೆವು. ಸಭೆಯಲ್ಲಿ ಧೂಳೆಬ್ಬಿಸಿ ಎಲ್ಲ ಧೂಳೀಪಟವಾದಮೇಲೆ ರಂಗಸ್ಥಳಕ್ಕೆ ಒಂದು ಸುತ್ತು ಬಂದ ಮಹಿಷ ಮತ್ತೆ ರಂಗಸ್ಥಳ ಪ್ರವೇಶ ಮಾಡಿದ. ಚೆಂಡೆಯವರ ಪಕ್ಕದಲ್ಲೇ ಓಡೋಡಿ ಬಂದವನು  ವೇಗವಾಗಿ ಬಂದು ಜೋಲು ಹೊಡೆದು ಕೆರೆಗೆ ಹಾರಿದ ಹಾಗೆ ಮುಂದೆ ಬಂದು ರಂಗಸ್ಥಳದ ಕೆಳಗೆ ಬಿದ್ದು ಬಿಟ್ಟ. ದೊಂದಿ ರಾಳದವರು ಅಧರಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಧೊಪ್ಪನೇ ಬಿದ್ದವನು ಸ್ವಲ್ಪ ಹೊತ್ತು ಅಲ್ಲೇ ಹೊಲದ ಮಣ್ಣಿನಲ್ಲೇ ಬಿದ್ದು ಬಿಟ್ಟಿದ್ದಾನೆ. ಆರಂಭದಲ್ಲಿ ನಾವೆಲ್ಲ ಇದು ಕುಣಿತದ ಒಂದು ಕ್ರಮ ಎಂದು ತಿಳಿದುಕೊಂಡರೂ ಮರುಕ್ಷಣದಲ್ಲೇ ಅರಿವಾಯಿತು ಇದು ಕಥೆ ಬೇರೆ ಅಂತ. ಮಹಿಷಾಸುರ ನಿಜಕ್ಕೂ ಜೋರಾಗಿಯೇ ಸುರಾಪಾನ ಮಾಡಿ ಹುಚ್ಚು ಕಟ್ಟಿದ್ದ. ಸ್ವಲ್ಪ ಹೊತ್ತು ತಡೆದು ಸಾವರಿಸಿ ಎದ್ದು ನಿಂತರೂ ನಿಲ್ಲುವುದಕ್ಕಾಗದೇ ಇರುವಾಗ ಕೆಲವರು ಹಿಡಿದು ನಿಲ್ಲಿಸಿ ರಂಗಸ್ಥಳಕ್ಕೆ ಹತ್ತಿಸಿಬಿಟ್ಟರು. ಮತ್ತೆ ಅದು ಯಾವುದೋ ರೀತಿಯಲ್ಲಿ ಕುಣಿದು ಅಂತು ಆಟ ಮುಂದುವರೆಯಿತು.  ಬಿದ್ದು ಮೈಯೆಲ್ಲ ಇದ್ದ ಧೂಳನ್ನು ನೋಡಿದರೆ ನಿಜಕ್ಕೂ ಮಹಿಷಾಸುರನ ಸಹಜಾಭಿನಯ ಎಂದು ಪ್ರಶಸ್ತಿಯನ್ನು ಕೊಡುತ್ತಿದ್ದರೋ ಏನೋ? ಹಾಗೂ  ಅಲ್ಲಲ್ಲಿ ಮೆತ್ತಿಕೊಂಡ ಧೂಳು ಕೊಡವಿಕೊಂಡು ಮಹಿಷ ಕುಣಿದ.

ಕಲಾವಿದ ಯಾರೋ ಒಂದೂ ಈಗ ಜ್ಞಾಪಕವಿಲ್ಲ. ಮಹಿಷಾಸುರ ರೈಸು ಬೇಕು ಅಂತ ಯಾರೋ ಒಂದಷ್ಟು ಅಮೃತ ಸೇವೆಯನ್ನು ಮಾಡಿಸಿದ್ದು ಅದು ಸರ್ವಾಂಗ ಸೇವೆಯೇ ಅಗಿಬಿಟ್ಟಿತು. ಎಂತಹ ಆಭಾಸ ? ಆದರೂ ಸಹಜವೋ ಎಂಬಂತೆ ಆಟ ಮುಂದುವರೆಯಿತು. ಜೋಲುತ್ತಾ ವಾಲುತ್ತ ಮಹಿಷ ಕೆಲವೊಮ್ಮೆ ಕುಣಿವಾಗ ಈಗ ಬಿದ್ದು ಬಿಡುತ್ತಾನೆ ಎಂದು ನಾವೆಲ್ಲ ಮಕ್ಕಳು ತಮಾಷೆಗೆ ಪಂಥ ಕಟ್ಟಿದ್ದು ಈಗಲೂ ನೆನಪಿದೆ ಆದರೆ ಈಗ ಅದರ ಗಂಭೀರತೆ ಅರಿವಾಗುತ್ತದೆ.

ಇದು ಹೀಗಾಗದರೆ ಆನಂತರ ಒಂದು ಸಲ ರಂಗಸ್ಥಳದ ಹಿಂದೆ ಹೋದಾಗ ಇನ್ನೊಂದು ಕೌತುಕ ಕಾದಿತ್ತು ದೇವಿಯ ಪಾತ್ರಧಾರಿ ಬೆಂಚಿಮೇಲೆ ಕುಳಿತು ಬೀಡಿ ಸೇದುವುದು…ಮತ್ತೆ ಗಡಿಬಿಡಿಯಲ್ಲಿ ಹೊಗೆಯುಗುಳುತ್ತ ಪ್ರವೇಶ ಮಾಡುವಾಗ ಹೋಗೆಯುಗುಳುವ ದೇವಿ  ಆ ಸನ್ನಿವೇಶಕ್ಕೆ ನಿಜಕ್ಕು ಸಹಜ ಅಭಿನಯ ಅಂತ ಅನ್ನಿಸಬೇಕು.

ಈ ಎರಡು ಸನ್ನಿವೇಶಗಳಲ್ಲಿ ದೌರ್ಬಲ್ಯ ಹೇಗೆ ಒಂದು ಪತನಕ್ಕೆ ಹೇತುವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಯಿತು. . ಸಾರ್ವಜನಿಕ ಜೀವನದಲ್ಲಿ ಇರುವವರು ಒಂದು ದೌರ್ಬಲ್ಯಕ್ಕೆ ಅಂಟಿಕೊಂಡಾಗ ಆ ದೌರ್ಬಲ್ಯ ಕೇವಲ ವೈಯಕ್ತಿಕ ವಿಚಾರವಾಗಿ ಉಳಿಯುವುದಿಲ್ಲ. ಅವರು ಪ್ರತಿನಿಧಿಸುವ ಸಾರ್ವಜನಿಕ ರಂಗಕ್ಕೂ ಅದು ಬಾಧಕವಾಗುತ್ತದೆ. ಅದರೆ ಬಾಧಕವಾಗುವುದೆಲ್ಲ ಅಸಡ್ಡೆಯಿಂದ ಗಮನಿಸಲ್ಪಡುವುದಿಲ್ಲ. ಸಾಮಾನ್ಯ ಘಟನೆ ಎಂಬಂತೆ ಅದು ಕಳೆದು ಬಿಡುತ್ತದೆ. ನಮ್ಮ ಕುಟುಂಬದ ಮನೆಯ ಸದಸ್ಯರು ಅಥವಾ ಒಡನಾಡಿಗಳು ಸಾರ್ವಜನಿಕವಾಗಿ ದೌರ್ಬಲ್ಯದಿಂದ ನಗೆಪಾಟಲಿಗೀಡಾಗುವಾಗ ಅಗುವ ನೋವು ಮುಜುಗರ ಕೊನೆಯಲ್ಲಿ ಹತಾಶೆ ಅನುಭವಕ್ಕೆ ಬರಬೇಕೆಂದರೆ  ಆತ ಖಂಡಿತವಾಗಿಯೂ ದೌರ್ಬಲ್ಯದಿಂದ ದೂರವಿದ್ದವನಾಗಿರಬೇಕು.

ಕಲಾವಿದ ಎಂದ ಮೇಲೆ ಒಂದಲ್ಲ ಒಂದು ಗಂಭೀರವಾದ ದೌರ್ಬಲ್ಯ ಹೊಂದಿರಬೇಕೆಂಬ ಸಹಜ ನಿಯಮವಿದೆ. ಕಲೆಯೇ ಒಂದು ದೌರ್ಬಲ್ಯವಾಗಿ ಅದಕ್ಕೆ ಸಮಾನಾಂತರವಾಗಿ ಇನ್ನೊಂದು ದೌರ್ಬಲ್ಯ ಜತೆಯಲ್ಲೇ ಇದ್ದು ಕೊಂಡು ಇನ್ನೊಂದು ಸಮಾನಾಂತರದ ಹಾದಿಯನ್ನು ಕ್ರಮಿಸದಂತೆ ಪ್ರೇರೇಪಿಸುತ್ತದೆ. ಇದು ಅರಿವಿದ್ದೂ ಅನಿವಾರ್ಯವೆಂಬಂತೆ ಅಪ್ಪಿಕೊಳ್ಳುವುದು ಮನಸ್ಸಿನ ದಾಸ್ಯವನ್ನು ಬಿಂಬಿಸುತ್ತದೆ. ಯಾವುದೇ ದೌರ್ಬಲ್ಯವೆಂದು ಪರಿಗಣಿಸಲ್ಪಡುತ್ತದೋ ಅದು ಎಂದು ಮುಖ್ಯ ಕ್ರಿಯೆಗೆ ಪೂರಕವಾಗಿರುವುದಕ್ಕೆ ಸಾಧ್ಯವೇ ಇಲ್ಲ. ಎಣ್ಣಿ ಬತ್ತಿದ ದೀಪ ತಾನಾಗಿ ಆರಿಹೋದ ಮೇಲೆ ಅದಕ್ಕೆ ಎಣ್ಣೆಯ ಬದಲು ನೀರು ಹಾಕಿದರೂ ಅಲ್ಲಿದ್ದ ಎಣ್ಣೆ ಸತ್ವವನ್ನು ಹೀರಿ ಮೊದಲಿನ ಪ್ರಭೆಯಲ್ಲೇ ಕ್ಷಣ ಹೊತ್ತು ಉರಿಯುತ್ತದೆ. ಆ ದೀಪದ ಅಳಿದುಳಿದ ಎಲ್ಲಾ ಸತ್ವವನ್ನು ಹೀರಿ ಉರಿದು ಆರಿದ ನಂತರ,  ಆ ದೀಪ  ಮತ್ತೆಂದೂ ಬೆಳಗಲಾರದು. ಅದರಂತೆ ಮನುಷ್ಯನ ದೇಹ ದೌರ್ಬಲ್ಯದ ವಶವಾದರೆ  ದೀಪ ನೀರಿನಿಂದ ಚೈತನ್ಯವನ್ನು ಪಡೆದಂತೆ ಒಮ್ಮೆಗೆ ಪ್ರಜ್ವಲಿಸಬಹುದು. ಆದರೆ ಜೀವ ಸೆಲೆಯನ್ನೇ ಸೆಳೆದು ಉರಿವ ದೀಪ ಮತ್ತೆಂದೂ ಉರಿಯದ ನಗ್ನ ಸ್ಥಿತಿಗೆ ತಲುಪಿದಂತೆ ದೇಹವೂ ತನ್ನೆಲ್ಲ ಚೈತನ್ಯವನ್ನು ಬತ್ತಿಸಿಕೊಂಡು ಶುಷ್ಕಾವಸ್ಥೆಗೆ ಬಂದು ಬಿಡುತ್ತದೆ. ಆದರೂ ಮನುಷ್ಯ ದೌರ್ಬಲ್ಯದ ವಶವಾಗುತ್ತಾನೆ ಎಂದರೆ ಅದು ಪ್ರಾರಭ್ದವಲ್ಲ ಆಹ್ವಾನಿಸುವ ದುರಂತ ಎನ್ನಬೇಕು.

ಯಕ್ಷಗಾನದ ಕಲಾವಿದ ತನ್ನೆಲ್ಲ ಕುಟುಂಬದಿಂದ ಪರಿವಾರದಿಂದ ದೂರವಿದ್ದು ಹಲವು ಸಮಯ ಜೀವನ ಮಾಡುವ ಅನಿವಾರ್ಯತೆ ಇರುತ್ತದೆ. ವೃತ ನಿಷ್ಠನಂತೆ ಸನ್ಯಾಸೀ ಮನೋಭಾವದಿಂದ ಅತ್ಮ ಸಂಯಮ ಹೊಂದಿರುವುದು ವಿದ್ಯಾಸಂಪನ್ನರಿಗೇ  ಸಾಧ್ಯವಾಗುತ್ತಿಲ್ಲ. ಹಾಗಾಗೀ ಅಷ್ಟೋ ಇಷ್ಟೋ ವಿದ್ಯೆ ಕಲಿತವನಿಗೆ ಇದರ ಈ ಸಂಯಮದ ಗಂಭೀರತೆ ಅರಿವಾಗುವುದು ಹೇಗೆ? ಏನು ಪ್ರಾರಭ್ಧವೋ ಅಂಟಿಕೊಂಡು ಬಿಟ್ಟಿದೆ ಎನ್ನುವುದು ಸುಲಭ. ಆದರೆ ಪ್ರಾರಬ್ಧ ಅವನದಾಗಿರದೆ ಅದನ್ನು ಅವಲಂಬಿಸಿದ ಉಳಿದ ಅಂಗಗಳದ್ದಾಗಿರುತ್ತದೆ.

ನಾವು ಒಂದು ಉತ್ತಮವಾದ ಉಡುಗೆಯನ್ನು ತೊಡುತ್ತೇವೆ. ಒಂದಷ್ಟು ಸಂಭ್ರಮದಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ಒಂದು ಸಲ ಯೋಚಿಸುವ ನಿರ್ಜೀವವಾದ ಉಡುಗೆ ಏನುಂಟೋ ಅದಕ್ಕೆ ಜೀವವಿದ್ದು ಒಂದು ಮನಸ್ಸಿನ ಸ್ಪಂದನವಿದ್ದರೆ ಅದನ್ನು ಧರಿಸಿದವನ ಸಂಭ್ರಮದಲ್ಲಿ ಅದು ಒಂದಾಗಲಾರದೇ? ಹಾಗೇ ಆ ಉಡುಗೆಯನ್ನು ಧರಿಸಿದವನು ಕಂಠ ಪೂರ್ತಿ ಕುಡಿದು ಕೆಸರಲ್ಲಿ ಬಿದ್ದು ಹೊರಳಾಡಿದಾಗ,  ಆ ಉಡುಗೆಯ ಮನೋಭಾವ ಹೇಗಿರಬಹುದು?  “ಛೇ ಇವನು ನನ್ನನ್ನು ಆಯ್ಕೆ ಮಾಡದೆ ಇರುತ್ತಿದ್ದರೆ ಈ ದುಸ್ಥಿತಿ ಬರುತ್ತಿರಲಿಲ್ಲ “ ಎಂದು  ಮರುಗಲಾರದೇ? ಕುಡುಕನ ದೇಹಕ್ಕಂಟಿದ ಉಡುಗೆಯೂ ಕುಡುಕನಾಗಿಬಿಟ್ಟಿತು.  ಹಾಗಾಗಿ ಜ್ಞಾನಿಗಳು ದೇಹವನ್ನು ಉಡುಗೆಗೆ ಹೋಲಿಸಿರಬೇಕು. ನಮ್ಮ ಆತ್ಮ ಮನಸ್ಸು ಸುಂದರವಾಗಿದ್ದರೆ ನಮ್ಮ ದೇಹವು ಸುಂದರವಾಗಿರುತ್ತದೆ. ಅದು ಬಾಹ್ಯ ಸೌಂದರ್ಯವೇ ಅಗಬೇಕೆಂದೇನೂ ಇಲ್ಲ. ಅಂತರಂಗದ ಚೈತನ್ಯ ಏನಿದೆಯೋ ಅದುವೇ ಸೌಂದರ್ಯದ ಪ್ರತೀಕವಾಗಿರುತ್ತದೆ. ಕಲುಷಿತ ವ್ಯಕ್ತಿಯ ಉಡುಪು ಕಲುಷಿತವಾದಂತೆ ಕಲುಷಿತ ಮನಸ್ಸಿನ ದೇಹವೂ ಕಲುಷಿತವಾದಂತಾಗುತ್ತದೆ.

 ಮನುಷ್ಯನಿಗೆ ದೌರ್ಬಲ್ಯ ಇರುವುದು ಸಾಮಾನ್ಯ.ಕುಡುಕನಾಗಿಯಾಗಿಯೋ ಧೂಮ ವ್ಯಸನಿಯಾಗಿಯೋ ಅಥವಾ ಇನ್ನಿತರ ದೌರ್ಬಲ್ಯ ಏನಿದೆಯೋ ಅದಕ್ಕೆ ವಶವಾಗುವುದು ಸಹಜ. ಅಡಿಕೆ ಮರಕ್ಕೆ ಕೊಳೆರೋಗ ಬಂದಂತೆ ಪ್ರಕೃತಿ ಸಹಜವಾಗಿ ಅದು ಅಂಟಿಕೊಂಡುಬಿಡುತ್ತದೆ. ಆದರೆ ಅದನ್ನು ಮೆಟ್ಟಿ ನಿಂತು ತೊರೆದು ಬರುವುದಿದೆಯಲ್ಲ ಅದನ್ನು ಮನಸ್ಥೈರ್ಯ ಎನ್ನಬಹುದು.

ದುರ್ವ್ಯಸನಗಳೂ ಕೂಡ ಆವಿಷ್ಕರಿಸಲ್ಪಟ್ಟಿದೆ. ಈಗಿರುವ ಚಟಗಳು ಮೊದಲಿಲ್ಲ.ಮೊದಲಿದ್ದದ್ದು ಈಗ ಕಂಡೂ ಬರುವುದಿಲ್ಲ. ಕಾಲಭೇದವಿಲ್ಲದೇ ಯಾವುದೇ ವ್ಯಸನವಾದರು ಅದು ಕಲಾ ಬದುಕಿಗೆ ಮಾರಕವಾಗಿ ಜತೆಗೆ ಬೆಳೆಯುತ್ತ ಬೆಳೆಯುತ್ತ ಮತ್ತೆ ಅದೆ ಸರ್ವವ್ಯಾಪಿಯಾಗಿ ಎಲ್ಲವನ್ನೂ ನುಂಗಿ ಹಾಕುತ್ತದೆ.  ಇತ್ತೀಚೆಗೆ ಹಲವರಿಗೆ ಅಂಟಿಕೊಂಡ ಜನಪ್ರಿಯ ವ್ಯಸನ ಗುಟ್ಕ.  ಇದರ ವ್ಯಸನಿಗಳಿಗೆ,  ವೇಷತೊಡುವಾಗಲೇ..ವೇಷ ಭೂಷಣದ ಯಜಮಾನ ಹೇಳುತ್ತಾನೆ “ ಉಗುಳು ಹಾಕಬೇಡಿ..” ಎಂತಹ ದುರ್ದೈವ? ತುಟಿಯೆಡೆಯಲ್ಲಿ ಗುಟ್ಕ ಇರಿಸಿದನೋ ರಂಗಸ್ಥಳದಲ್ಲಿ ಸ್ಪಷ್ಟ ಉಚ್ಚಾರವಿಲ್ಲದೆ ಅಭಾಸವಾಗುತ್ತದೆ. ಕನ್ನಡ ಭಾಷೆ ಇಂದು ಜೀವಂತ ಉಳಿದಿದ್ದರೆ ಅದು ಯಕ್ಷಗಾನದಲ್ಲಿ ಅಂತ ನಾವು ಬೀಗಬಹುದು. ಆದರೆ ಉಚ್ಚಾರ ಶುದ್ದಿಯಿಲ್ಲದ ಭಾಷೇ ಉಳಿದು ಏನು ಪಲ?

ಒಂದು ಸಲ ನಮ್ಮ ಮಿತ್ರರೊಬ್ಬರು ರಾತ್ರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದ ಘಟನೆ ಕೇಳಿದಾಗ ಬಹಳಷ್ಟು ಖೇದವೆನಿಸಿತು. ಕಂಠಪೂರ್ತಿ ಏರಿಸಿ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಪ್ರೋತ್ಸಾಹಕರೆಂಬ ಹಿಂಬಾಲಕರು, ಹೇಗೋ ಬಸ್ಸು ಹತ್ತಿಸಿ ಕಳುಹಿಸಿದ್ದರು. ಒಂದಷ್ಟು ಹೊತ್ತು ಬಸ್ಸಿನಲ್ಲಿದ್ದ ಇತರರು “ ಅವು ಆಟದ ಜನ.. ಆಟದಾಯೆ” ಎಂದು ಪರಿಚಯ ವಿನಿಮಯ ಮಾಡಿಕೊಂಡರು. ಆದರೆ ಇಲ್ಲಿ ಪ್ರಾಮಾಣಿಕ ಕಲಾಭಿಮಾನ ಇದ್ದವನ ಮನಸ್ಸು ಹೇಗಾದೀತು. ಕಲಾವಿದನೂ ಊಹಿಸಲಾರ ಹಿಂಬಾಲಿಸುವ ಚೇಲಾಗಳು ಹೇಳಲಾರರು. ದೊಡ್ದ ಕಲಾಸೇವೆ ಮಾಡಿದಂತೆ ಆತನನ್ನು ಹತ್ತಿಸಿ ಆ ಹಿಂಬಾಲಕರು ಕೃತಾರ್ಥರಾಗುತ್ತಾರೆ.

ಇಂದು ಈ ಇಳಿವಯಸ್ಸಿನಲ್ಲೂ ರಂಗಸ್ಥಳದಲ್ಲಿ ದಣಿವರಿಯದೆ ಕುಣಿಯುವ ಗೋವಿಂದಣ್ಣ ಯಾರಿಗೆ ಗೊತ್ತಿಲ್ಲ ಹೇಳಿ.. ಅವರ ದೀರ್ಘಾವಧಿಯ ಕಲಾಜೀವನಕ್ಕೆ ಕಾರಣ ಅವರ ದೌರ್ಬಲ್ಯ ರಹಿತ ಜೀವನ ಶೈಲಿ. ಗೋವಿಂದಣ್ಣನಿಂದ ಪ್ರೇರೇಪಿತರಾಗಿ ಕಿರೀಟ ತೊಟ್ಟು ಅನುಕರಿಸುವವರು  ಹಲವರಿರಬಹುದು ಆದರೆ ಅವರ ಪರಿಶುದ್ದ ಜೀವನ ಶೈಲಿ ಪ್ರೇರೇಪಿಸಲ್ಪಡುವುದೇ ಇಲ್ಲ. ಬಲಿಪ್ಪಜ್ಜ ಅರುವತ್ತು ಸಂವತ್ಸರದ ಅವಧಿ ತನ್ನ ಕಂಠಸಿರಿಯನ್ನು ಮೆರೆಯಿಸಿದ್ದರೆ ಅದಕ್ಕೆ ದೌರ್ಬಲ್ಯ ರಹಿತ ಜೀವನ ಶೈಲಿಯೇ ಕಾರಣ.   

ದೌರ್ಬಲ್ಯ ಎಂಬುದು ಸಮಯಕ್ಕೊದಗದ ಬಲರಾಮನ ಬಲದಂತೆ. ಯಾದವ ಸೇನೆಯೊಂದಿಗೆ ಬಲರಾಮ ದುರ್ಯೋಧನನ ಪಕ್ಷಕ್ಕೆ ಬಂದರೂ ಕೌರವನ ಪಾಲಿಗೆ ಸಮಯಕ್ಕೊದಗದೆ ದುರ್ಬಲನೇ ಆಗಿಬಿಡುತ್ತಾನೆ. ಯಾಕೆಂದರೆ ಕೌರವನ ಕಡೆಯಲ್ಲಿ ಇರುವುದು ದುರ್ಯೋಧನ, ದುಶ್ಯಾಸನ , ದುರ್ದರ್ಶ.. ಹೀಗೆ ದುರ್ ಗಳೆ ತುಂಬಿದ ಕಾರಣ ಬಲರಾಮನೂ ದುರ್ಬಲರಾಮನಾಗಿಬಿಡುತ್ತಾನೆ. ಎಷ್ಟು ಬಲವಿದ್ದರೂ ದುರ್ಬಲದೊಟ್ಟಿಗೆ ಸೇರಿದರೆ ಆ ಬಲ ಸಿಗಬೇಕಾದಲ್ಲಿ ಇರಬೇಕಾದಲ್ಲಿ ಇರುವುದೇ ಇಲ್ಲ.

ದೌರ್ಬಲ್ಯಗಳನ್ನೇ ಭಂಡವಾಳವಾಗಿಸುವ ಪ್ರೋತ್ಸಾಹಕರೂ ಇಲ್ಲದಿಲ್ಲ. ನಾಳೆಯ ಕಲಾವಿದನ ಭವಿಷ್ಯ ಜತೆಗೆ ಯಕ್ಷಗಾನದ ಭವಿಷ್ಯ ಪರಿಗಣಿಸದೆ ಇಂದಿನ ದೀಪ ಉರಿದರೆ ಸಾಕು ಎಂದು ಬಯಸುವ ಕಲಾಪೋಷಕರೂ ಇದ್ದಾರೆ. ಆಟ ಶುರುವಾಗುವ ಮೊದಲು ನಂತರ ಮರುದಿನದವರೆಗೂ  ಚೌಕಿ ಈ ದೌರ್ಬಲ್ಯಗಳ ಕುರುಹನ್ನು ಢಾಳಾಗಿ ಪ್ರದರ್ಶಿಸುತ್ತದೆ. ಇದರಿಂದಾಗಿ ಬೆಂಗಳೂರಿನ ಕಾಲೇಜ್ ಸಭಾಭವನ ಒಂದರಲ್ಲಿ ಯಕ್ಷಗಾನಕ್ಕೆ ಸಭಾಂಗಣ ಲಭ್ಯವಿಲ್ಲ ಎಂದು ನೇರವಾಗಿ ಹೇಳಿಬಿಡುತ್ತಾರೆ. ಛೇ ನಮ್ಮ ಊರಿನವರು ಈ ಮಟ್ಟಕ್ಕೆ ಇಳಿದು ಬಿಟ್ಟರೇ ಯಾರನ್ನು ಹೇಳುವುದು? ಸಾರ್ವಜನಿಕವಾಗಿ ನಮ್ಮ ಬಂಧು ಒಬ್ಬ ನಗೆಪಾಟಲಿಗೀಡಾದಾಗ ಹೆಚ್ಚೇಕೆ.. ನಮ್ಮ ಅಪ್ಪ ಕಂಠ ಪೂರ್ತಿ ಕುಡಿದು ರಸ್ತೆ ಬದಿ ಬಿದ್ದರೆ ಆಗುವ ಮುಜುಗರ ಹೇಗಾಗುತ್ತದೋ ಆದೆ ಅನುಭವವಾಗಿಬಿಡುತ್ತದೆ. ಆದರೂ ಈ ಜ್ವಲಂತ ಸಮಸ್ಯೆಯ ಬಗ್ಗೆ ಗಮನ ಹರಿಯುವುದೇ ಇಲ್ಲ. ನಾವು ಕಾಲಮಿತಿ ಯಕ್ಷಗಾನದ ಬಗ್ಗೆ ಚರ್ಚಿಸುವುದಕ್ಕಿಂತಲೂ  ಇಂತಹ ವಿಚಾರಗಳಿಗೆ  ಗಮನ ಕೊಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಕಲಾವಿದ ಮತ್ತು ಇವನನ್ನು ಪ್ರೇರೇಪಿಸುವವರು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ.







Wednesday, August 21, 2013

ಅಂತರಂಗ ರಾವಣ ಭಾಗ ೬


ಪುರಾಣ ಗರ್ಭದಲ್ಲಿ ಬರುವ ಅಸುರೀ ಪಾತ್ರಗಳು ಭಗವಂತನ ಜತೆ ಸಂಘರ್ಷಕ್ಕೇ ಇಳಿದುಬಿಡುತ್ತವೆ. ಜೀವನ ಅಂತ್ಯದವರೆಗೆ ಪರೋಕ್ಷವಾಗಿ ಮೋಕ್ಷಗಮ್ಯದತ್ತವೇ ಸಾಗುತ್ತದೆ. ಸಾಯುವತನಕವೂ ಅಸಹನೀಯತೆಯನ್ನೇ ಅನುಭವಿಸುತ್ತ, ಕ್ರೌರ್ಯವನ್ನೇ ತೋರುತ್ತ ಒಂದು ಬಿಂದುವಿನಲ್ಲಿ ಅದಾವ ಪರಿಯೋ  ಭಗವಂತನೊಡನೆ ಮುಖಾಮುಖಿಯಾಗಿ ಅಸಹನೀಯತೆಯಲ್ಲೇ ಅಂತ್ಯವನ್ನು ಕಾಣುತ್ತದೆ.  ಈ ಮಧ್ಯೆ ಕ್ರೌರ್ಯದ ಪರಮಾವಧಿಯಲ್ಲಿ ತಾವೆಷ್ಟು ಮೋಕ್ಷಕ್ಕೆ ಹತ್ತಿರವಾಗುತ್ತೇವೆ ಎಂಬುದನ್ನೂ ತೋರಿಸುತ್ತವೆ. ಬಹಳಷ್ಟು ಅಸುರೀ ವ್ಯಕ್ತಿತ್ವಗಳು ಸಂಘರ್ಷದ ಮೂಲ ಕಾರಣವೇನೆಂದು ತಿಳಿಯದೆ ಬದುಕಿನ ಕೊನೇ ಹಂತದಲ್ಲಿ ಜ್ಞಾನೋದಯವನ್ನು ಪಡೆಯುತ್ತದೆ. ಆದರೆ ರಾವಣನಿಗೆ ತನ್ನ ದಾರಿಯಬಗ್ಗೆ ಸ್ಪಷ್ಟ ನಿಲುವು ಇತ್ತು ಅಂತ ಅನ್ನಿಸುತ್ತದೆ. ಯಕ್ಷಗಾನದ ಈ ಪ್ರಸಂಗದಲ್ಲಿ ಅದು ಅಲ್ಲಲ್ಲಿ ವ್ಯಕ್ತವಾಗುತ್ತ ಸಾಗುತ್ತದೆ.

ಮಂಡೋದರಿಯೊಂದಿಗಿನ ಸಂವಾದ ರಾವಣನಿಗೆ ತನ್ನಾಂತರ್ಯವನ್ನೆಲ್ಲವನ್ನೂ ಬಿಚ್ಚಿಡುವ ವೇದಿಕೆಯಂತಾಗುತ್ತದೆ.

ಪತಿವಿಯೋಗದಿಂದ ಶೂರ್ಪನಖಿ ಅಣ್ಣನೊಡನೆ ದ್ವೇಷವನ್ನು ತಾಳುತ್ತಾಳೆ ಮಾತ್ಸರ್ಯದಿಂದ ಅವನ ನೆಮ್ಮದಿಯನ್ನೇ ಹಾಳು ಮಾಡುವಾಗ ತಾನು  ಪರಿಹಾರಕ್ಕಾಗಿ ಪರ್ಯಾಯ ಮಾರ್ಗವನ್ನು ಅನುಸರಿಸಬೇಕಾದ ಅನಿವಾರ್ಯತೆಯನ್ನು ಹೇಳುತ್ತಾನೆ. ಆ ಸಂದರ್ಭವನ್ನು ಅದೆಷ್ಟು ಮಾರ್ಮಿಕವಾಗಿ ಮಾತಿನಲ್ಲೇ  ಚಿತ್ರಿಸುವ ಪರಿಯನ್ನು ನೋಡೋಣ.

ಯಾವುದೇ ರೂಪವಿಲ್ಲ ಕೇವಲ ಸ್ತ್ರೀತ್ವದ ಸಂಕೇತದಿಂದ ಮಾತ್ರ ಸ್ತ್ರೀ ಎಂದು ಗುರುತಿಸಬಹುದಾಂತಹ ಕ್ಷುದ್ರ ಹೆಣ್ಣು ಶೂರ್ಪನಖಿ. ಅಕಾಲದಲ್ಲಿ ಪತಿವಿಯೋಗವನ್ನು ಅನುಭವಿಸುತ್ತಿದ್ದಾಳೆ.
ಮುಂದೆ ರಾವಣ ಹೇಳುತ್ತಾನೆ, ಶೂರ್ಪನಖಾ ಕಲ್ಯಾಣವನ್ನು.

“ ಮಂಡೋದರಿ, ಏನನ್ನು ನೋಡಿ ಅವಳನ್ನು ಮದುವೆಯಾಗುವುದು. ಕೊನೆಗೆ ಕನ್ನಡಿಯನ್ನು ತೋರಿಸಿ ಮದುವೆ ಮಾಡುವಲ್ಲಿಗೆ ಮುಟ್ಟಿತು. ಅಕಾಲದಲ್ಲಿ ವೈಧವ್ಯ ಬಂತು, ಆಗ ಮತ್ಸರ ಹುಟ್ಟಿತು ನಮ್ಮನ್ನು ನಿದ್ರಿಸಿಲಿಕ್ಕೆ ಬಿಡ್ತಿರಲಿಲ್ಲ..ಹಲವು ಸಲ ತಲೆಯೇ ಕಡಿದು ಬಿಡೋಣ ಅನ್ನಿಸಿತ್ತು ಆದರೆ ತಾಯಿ ಬದುಕಿದ್ದಾಳಲ್ಲ. ಅವಳು ಬಯಸಿ ಬಯಸಿ ಹೆಣ್ಣು ಮಗಳನ್ನು ಪಡೆದದ್ದು. ಅಕಾಲದಲ್ಲಿ ನಮ್ಮ ಅಮ್ಮನಿಗೆ ಸ್ವಜಾತಿಯ ಪ್ರೇಮ ಬಂದು ಬಿಟ್ಟದ್ದು, ಆಯ್ತು ಕೊನೆಗೆ ನಮಗೆ ಈ ರಗಳೆ ಬೇಡ ಅಂದುಕೊಂಡು ಅಲ್ಲಿದೆಯಲ್ಲಾ ನಮ್ಮ ಉತ್ತರದಗಡಿ.,   ನಮಗದು ಉತ್ತರದ ಗಡಿ. ಉತ್ತರದವರಿಗೆ ಅದು ದಕ್ಷಿಣದ ಗಡಿ. ದಂಡಕಾರಣ್ಯ. ನಮ್ಮವರೇ ತಾನೇ ಅಲ್ಲಿರೋದು. ನನ್ನ ಚಿಕ್ಕಮ್ಮನ ಮಕ್ಕಳು. ಖರ ದೂಷಣ ಇತ್ಯಾದಿಗಳು.”

“ನಮ್ಮ ಪ್ರದೇಶವನ್ನು ರಕ್ಷಿಸಿಲಿಕ್ಕೆ ನಮ್ಮವರನ್ನು ಅಲ್ಲಿಟ್ಟಿದ್ದಲ್ಲವೆ?”

“ ಅದೂ ಹೌದು, ನನ್ನ ರಾಜಕೀಯವೂ ಹೌದು. ನನ್ನ ಚಿಕ್ಕತಾಯಿ ಮಕ್ಕಳು ಅವರು. ನನ್ನ ಜ್ಞಾತಿಗಳು. ದೂರವೇ ಇರ್ಲಿ ಅಂತ ಮಾಡಿದ್ದು. ಇಲ್ಲಿ ಇದ್ರೆ ಈ ಅಧಿಕಾರದಲ್ಲಿ ಸ್ವಲ್ಪ ಸ್ವಲ್ಪವೇ ಕೈ ಕಾಲು ತೂರಿಸಿ ...ಯಾವ ಅಧಿಕಾರಿಯೂ ಜ್ಞಾತಿಯನ್ನು  ದಾಯಾದಿಗಳನ್ನು ಬಯುಸುವುದಿಲ್ಲ. ದೂರವೇ ಇರಿಸುತ್ತಾನೆ, ಹಾಗೇ...............ಶೂರ್ಪನಖಿ ಅಲ್ಲಿಗೆ ಹೋಗು, ಅವಳು ಅಲ್ಲಿ ಏನು ಮಾಡ್ತಾ ಇದ್ದಳು ಅಂತ ನನಗೆ ವರದಿ ಬಂದಿದೆ.  ಕೇಳ್ತಾ ಇದ್ದೇನೆ. ಋಷಿಮುನಿಗಳನ್ನು ಮಂತ್ರ ಹೇಳುವುದಕ್ಕೆ ಬಿಡ್ತಿರಲಿಲ್ಲ. ಅವಳಿಗೆ ಅದನ್ನು ಕೇಳುವುದಕ್ಕೆ ಆಗ್ತಿರಲಿಲ್ಲ. ಹಾಗಾಗಿ ಇದ್ದ ಅಷ್ಟು ರಕ್ಕಸರಿಗೆ ಇವಳ ಅಪ್ಪಣೆ ಹೋಗಿ ಬೊಬ್ಬೆ ಹಾಕಿ.  ಮೊದಲೇ ರಾಕ್ಷಸರು ಭೋರ್ಗರೆವ ರಕ್ಕಸರು. ಅವರ ಹುಟ್ಟುಗುಣ ಅದು.       ಯಾಕೆ ಈ ದೊಡ್ದ ಬೊಬ್ಬೆಯಲ್ಲಿ ಋಷಿಗಳದ್ದು ಎಲ್ಲವೂ ಅಡಗಬೇಕು. ಜತೆಯಲ್ಲಿ ಇವಳದ್ದು..ನಿರ್ಘೋಷದ ಅಬ್ಬರ. ಈ ನಿರ್ಘೋಷದ ಅಬ್ಬರ ಅಂದ್ರೆ ಎಂತದ್ದು? ಪತನದಿಂದ ಉಂಟಾಗುವ ಶಬ್ದ ಅದು. ದೊಡ್ಡದಾದ ಬಂಡೆಕಲ್ಲನ್ನು ಮೇಲೆ ಕೊಂಡು ಹೋಗಿ ಪ್ರಪಾತಕ್ಕೆ ತಳ್ಳಿದರೆ ಪ್ರಪಾತಕ್ಕೆ ಬಿದ್ದಾವಾಗ ಶಬ್ದ ಉಂಟಾಗ್ತದೆ. ಅದು ನಿರ್ಘೋಷದ ಅಬ್ಬರ. ಪತನದಿಂದ ಉಂಟಾಗುವದ್ದು.  ಹಾಗಾಗಿ ನಿರ್ಘೋಷದ ಅಬ್ಬರದ ಶೂರ್ಪನಖಿ ಕಾನನಕೆ ಬಂದಳು... ಅದು ಕುಲಗೇಡಿಯಾಗಿ. ತಿರುಗುತ್ತಿದ್ದಳು ಅಂತ ನನಗೆ ಸುದ್ದು ಉಂಟು”
         
          “ ಆದರೆ ಈಗಲೂ ಕುಲಗೇಡಿಯೇ ಅದ್ಲಲ್ಲ..?”
 “ ಆಗಲಿ. ಇವಳು ಕುಲಗೇಡಿಯೇ ಆಗಲಿ  ನನ್ನ ಪ್ರಶ್ನೆ ರಾಮನಲ್ಲಿ.  ಹಾಗೆ ಹೋದ್ಲು. ನೀನು ಹೇಳಿದ್ದು ಸತ್ಯ. ರಾಮನನ್ನು ನೋಡಿದ್ಲಂತೆ. ನೋಡಿ ಮಾತಾಡಿದ್ಲಂತೆ. ಇವನ ಕೊಂಡು ಪೋಗಿ ಗಂಡನಾಗಿ ಮಾಡ್ಪೆ,  ಅವಳ ಉದ್ದೇಶ ಅರ್ಥ ಆಗ್ತದೆ ನನಗೆ. ಒಂದು ರಾಮನಂತಹ ಸೂರ್ಯವಂಶದ ರಾಜನಾದವನು ಗಂಡನಾದ. ಮೈಯ ಸುಖ ಮನದ ಸುಖ. ಇನ್ನೊಂದು...ಅಂತಹ ರಾಮನನ್ನು ಗಂಡನಾಗಿ ಮಾಡಿ, ಅವಳ ಗಂಡನನ್ನು ಕೊಂದ ನನ್ನನ್ನು..ಅರ್ಥ ಆಯ್ತಲ್ಲ?  ಅದಕ್ಕೆ ನಾನು ಪ್ರಾಮಾಣಿಕವಾಗಿ ಹೇಳುದು, ತಂಗಿಯೇ ಕುಲಕೆ ಕೇಡಾದಳು....”

          “ಮಗನನ್ನು ಬೆಳೆಸ್ತಿದ್ದಳಂತೆ...ಹೇಳ್ತಾ ಇದ್ದರು.”

          “ಇರಲಿ..ನಿನ್ನದ್ದೂ ನನ್ನದ್ದೂ ಆದ ಅಭಿಪ್ರಾಯ ಇಲ್ಲಿಗೆ ಕೂಡಿ ಬಂತು. ಆದರೆ ರಾಮ ಯಾಕೆ ಇದಕ್ಕೆ ಪರಿಹಾರ ಮಾಡ್ಲಿಕ್ಕೆ ಹೊರಟದ್ದು? ನನ್ನ ಪ್ರಶ್ನೆ ಅವನಲ್ಲಿ. ಹಂದಿ ಮರಿ ಕೊಳಚೆ ಬೀದಿಯಲ್ಲೇ ಹೋಗ್ಲಿ. ಅದು ಹುಟ್ಟಿದ್ದೇ ನಮ್ಮಲ್ಲಿ .  ಅದು ಅಲ್ಲಿ ಹೋಗ್ಲಿಕ್ಕೆ ಇದ್ದದ್ದು ಅಂತ ನಮಗೆ ಗೊತ್ತುಂಟು. ನಿತ್ಯ ಪೂಜೆ ಮಾದುವ ಗೋಮಾತೆ ಅದು ಯಾಕೆ ಆ ಕೊಳಚೆ ಬೀದಿಯಲ್ಲಿ ಹೋಯ್ತು? ಆವಾಗ ನಮ್ಮಂಥವರಿಗೆ ಸಿಟ್ಟು ಬರುವುದು. ಅದು ಹೋಗ್ಲಿ ಹಂದಿ. “ದನವೇ ನೀನ್ಯಾಕೆ ಅಲ್ಲಿಗೆ ಹೋದಿ?’ ಎರಡು ಏಟು ಬಿಗಿಯುದು ಗೂಟಕ್ಕೆ ಕಟ್ಟುದು. ರಾಮನಲ್ಲಿ ನನಗೆ ಬಂದ ಸಿಟ್ಟು ಅದು. ಹೌದಲ್ಲ?  ತಣ್ಣೀರನ್ನಾದರೂ ತಣಿಸಿಕುಡಿವ ಜನ ರಾಮ.ಯಾರಲ್ಲ ಅಂತ ಹೇಳಿದ್ರು? ನಡೆಯಲ್ಲಿ ನುಡಿಯಲ್ಲಿ ಆದರ್ಶ ಆದರ್ಶ...ರಾಮನ ಜಾಗದಲ್ಲಿ ನಾನಿದ್ರೆ.. ಯಾವ ತಮ್ಮನಿಗೆ ಬೇಕಾಗಿಯೂ ಯಾವ ಅಪ್ಪ ಹೇಳಿದ್ರು ಅಂತ ಪಟ್ಟ ಬಿಟ್ಟು ಕೊಟ್ಟು,  ಊರಿನಲ್ಲಿ ತಿರುಗಾಡಲಿಕ್ಕೆ ಬರ್ತಿರಲಿಲ್ಲ.   ಯಾರಲ್ಲಾ ಅಂತ ಹೇಳಿದ್ರು. ಅಂಥಂವಾ...ಒಬ್ಬನಲ್ಲಿ ತಪ್ಪಿ ನಡೆವಾಗ ಅವನಿಗೆ ಬರುವ ಸಂಕಟ.  ಎಲಾ ಊರೆಲ್ಲ ಶುದ್ದ ಮಾಡ್ಲಿಕ್ಕೆ ನಿಂಗೆ ಕೂಡ್ತದೆ, ನನ್ನಲ್ಲಿ ಆಗುವಾಗ ಅಶುದ್ದವನ್ನೇ ಯಾಕೆ ಮುಂದಿಟ್ಟೆ? ಇದನ್ನು ಬಗೆಹರಿಸ್ಲಿಕ್ಕೆ ಬೇರೆನೂ ಮಾರ್ಗ ಸಿಕ್ಕಿಲಿಲ್ವ ರಾಮನಿಗೆ. ಈ ಸುಟ್ಟವಳು ಈ ಸುಟ್ಟ ಮುಖ ತೆಕ್ಕೊಂಡು ಹೋಗಿ ಕಾಮ ಸನ್ನಿಭ ಅಂತ ಹೇಳುವಾಗ ರಾಮನಿಗೆ ಯಾಕೆ ಹಾಸ್ಯಪ್ರವೃತ್ತಿ ಬರಬೇಕು.? ಪತಿತೆಯಾದಂತಹ  ಅಹಲ್ಯೆಯನ್ನು  ಸಕಲ ಶಾಸ್ತ್ರ ಕೋವಿದ ಸ್ಮೃತಿಕಾರನಾದಂತಹ ಗೌತಮನೇ ತಿರಸ್ಕರಿಸಿದ್ರೆ ಅಂತಹ ಒಡೆದ ದಾಂಪತ್ಯವನ್ನು ಕೂಡಿಸುವುದಕ್ಕೆ ರಾಮನಿಗೆ ಔದಾರ್ಯ ಉಂಟು. ರಾವಣನ ತಂಗಿ ದಾರಿ ತಪ್ಪಿದ್ರೆ ..,,” ತಂಗಿ ಇದೆಲ್ಲ ಹೇಸಿಗೆ. ದೊಡ್ಡ ಮನೆತನದವರಿಗೆ ಹೇಳಿಸಿದ್ದಲ್ಲ. ನೀನಾಗಿ ಮರ್ಯಾದೆಯಲ್ಲಿ ಹೋಗ್ತಿಯೋ ಅಲ್ಲ ನಿನ್ನ ಬಗ್ಗೆ ಅಣ್ಣನಿಗೆ ಹೇಳಿಸಲೋ? ಒಂದು ಮಾತು ಅವನು ನನ್ನ ಬಗ್ಗೆ ಮರ್ಯಾದಿಯಾಗಿ ಆಡ್ಲಿಲ್ಲ. ಅವನು ಹಾಸ್ಯ ಪ್ರವೃತ್ತಿಯನ್ನೇ  ಮಾಡಿದನಂತೆ. ಹೇಳಿ ಕೇಳಿ ಅಹಾ ಏಕಪತ್ನೀ ವೃತಸ್ಥ ನಾನು ಯಾಕೆ ಅವಳ ಮುಂದೆ ಅವನು ಯಾರು ಅಂತ ಒಪ್ಪಿಸ್ಬೇಕೊ? ’ ಏಕ ಪತ್ನೀ ವೃತಸ್ಥ. ಆವಾಗ ಇವಳು ಸ್ವಾಭವಿಕವಾಗಿ ಹೇಳಿದ್ಲು.. ’ ಹೌದಾ ಒಂದು ಆಗ್ಯದಲ್ವೋ? . ಅವಳನ್ನು ನಾನು ತಿಂದು ಬಿಡ್ತೇನೆ. ಆವಾಗ ಸೀತೆ ಬೊಬ್ಬೆ ಹೊಡೆದ್ಲು ರಾಮ ಲಕ್ಷ್ಮಣನಿಗೆ ಕಣ್ಣಸನ್ನೆ ಮಾಡಿದ ಲಕ್ಷ್ಮಣ ಬಂದು ಕರ್ಣ ನಾಸಾಚ್ಛೇದನ ಮಾಡಿದ. ಇಷ್ಟು ಹೌದೋ? ಇದರಿಂದ ನಾನು ಅರ್ಥ ಮಾಡಿಕೊಂಡದ್ದು ಹೀಗೆ. ಇದು ಕೇವಲ ಶೂರ್ಪನಖಿಗೆ ಅವನು ಮಾಡಿದ ಅವಮಾನವಲ್ಲ. ಇದು ಮುಸುಕಿನ ಗುದ್ದು ತ್ರಿದಶದಲ್ಲಣನಾದಂತಹ ರಾವಣನಿಗೆ. ಆದರೂ ಶೂರ್ಪನಖಿ ಹೇಳಿದ ಮಾತಿಗೆ ಮರುಕ್ಷಣದಲ್ಲಿ ಹುಚ್ಚುಕಟ್ಟಿ ಸೀತಾಪಹಾರ ಮಾಡಿದ್ದೇನೋ ನಾನು. ನಿನ್ನಲ್ಲಿ ಕೇಳಿದ್ದು ಹೌದಲ್ಲ. ಮಾವ ಮಾರಿಚನ ಬಳಿಗೆ ಮೂರು ಸಲ ಹೋದದ್ದ ಹೌದಲ್ಲ. ಪ್ರತೀಸಲ ಹೋಗುವಾಗ ಮಾವ ಹೇಳುವುದು  ಏನೇ ಆಗ್ಲಿ ದೊಡ್ದವ ನೀನು. ಇಂತಹ ಸಣ್ನ ಕೆಲಸ ಮಾಡಬಾರದು. ರಾಮನು ಬಲವಂತ, ಬರ್ಲಿಲ್ವೋ? ಮೂರು ಸಲ ಹೋಗಿ ಬಂದೆ. ನಾಲ್ಕನೇ ಸಲ ಇವಳು ಏನು ಮಾಡಿದ್ಲು. “ಹಾ ಇನ್ನೂ ಬದುಕಿ ಬಂದಿದ್ದಿಯಾ ಇನ್ನೂ ಮೀಸೆ ಬೆಳೆಸು...” ನಾನು ಸಾಯ್ಬೇಕ ಬದುಕುಬೇಕಾ ಹೇಳು. ಬದುಕಿದ್ರೆ ಗಂಡಸಾಗಿ ಬದುಕಬೇಕು. ಸತ್ರೆ ಗಂಡುಸಾಗಿ ಸಾಯ್ಬೇಕು. ಹೀಗೆ ಪರಿಸರದ ಒತ್ತಡಕ್ಕೆ ಸಿಲುಕಿ ಏನಾದ್ರು ಮಾಡೋಣ ಅಂತ ನನ್ನ ಛಲವನ್ನು ಸಾಧಿಸ್ಲಿಕ್ಕೆ ತೊಡಗಿದ್ದು. ಸೀತಾಪಹಾರ ಮಾಡಿದ್ದು. ಆದ್ರು ಒಂದು ಹೇಳ್ತೇನೆ ಇದು ನನ್ನ ಸ್ವಕೀಯ ಅಂತರಂಗ. ಸೀತೆಯನ್ನು ಕದ್ದು ತಂದದ್ದು ತಪ್ಪು. ಮೊತ್ತೊಬ್ಬನ  ಹೆಂಡತಿಯನ್ನು ಕದ್ದು ತರುದು ಸರಿ ಅಂತಾದ್ರೆ ನನ್ನ ಹೆಂಡತಿಯನ್ನು ಕದ್ದುಕೊಂಡು ಹೋದ್ರೆ  ನಾನು ಬಯಿ ಮುಚ್ಚಿ ಸುಮ್ನೆ ಕುಳಿತುಕೊಳ್ಳಬೇಕಾಗ್ತದೆ. ಈ ಲಂಕೆಯಲ್ಲಿ ಹಾಗೆ ಒಬ್ಬ ಮಾಡಿದ ಅಂತಾದ್ರೆ ಅವನಿಗೆ ವಿಚಾರಣೆ ಇಲ್ಲದೆ ತಲೆ ಕಡಿವ ಶಾಸನ ನನ್ನದು. ಆದ್ರೆ ಉಪಾಯ ಇಲ್ಲದ್ದಕ್ಕೆ  ನಾನು ಹಾಗೆ ಮಾಡಬೇಕಾಯಿತು. “

“ ರಾಮನಿಗೆ ನನ್ನಲ್ಲಿ ಛಲ ಉಂಟು ಅಂತ ಹೇಳುವುದಕ್ಕೆ ಒಂದು ಸಣ್ನ ನಿದರ್ಶನ ಹೇಳ್ತೇನೆ..ಸೀತೆಯನ್ನು ತಂದು ಅಶೋಕವನದಲ್ಲಿ ಇಟ್ಟೇನೋ..ಅಲ್ಲಿಗೆ ಆ ಬುದ್ದಿವಂತ ಹನುಮಂತ ಬಂದನೋ. ಬಂದವನು ಹೇಳಿದ ..ಅಮ್ಮ ನೀವು ಹೂಂ ಅಂತ ಹೇಳಿ ಈಗಲೇ ನಿಮ್ಮನ್ನು ಹೆಗಲಿಗೇರಿಸಿ ರಾಮನ ಎದುರು ತಂದು ನಿಲ್ಲಿಸ್ತೇನೆ. ಆವಾಗ ಸೀತೆ ಏನು ಹೇಳೀದ್ಲು? ನಾನು ಕ್ಷತ್ರಿಯರಮಣೀ. ನನ್ನ ಗಂಡ ಕ್ಷಾತ್ರ ಯೋಚಿತ ರೀತಿಯಲ್ಲೇ ಕರೆದು ಕೊಂಡು ಹೋಗ್ಲಿ. ಇಲ್ಲದೇ ಇದ್ರೆ ನಾನು ಕುಳಿತಲ್ಲಿ ಕದಲುವುದಿಲ್ಲ. ಇಷ್ಟು ಉಂಟಂತೆ ಆ ಮೂರು ಸಂಕ್ರಮಣ ದಾಟದ ಹುಡುಗಿಗೆ. ನನಗೆ ಅಷ್ಟೂ ಇಲ್ವೇನೆ . ಇದು ನನ್ನ ಛಲ..ಇದು ಅಚಲ. “
ತನ್ನ ಪತಿ ಛಲವನ್ನು ಬಿಡದಾದಾಗ ಮಂಡೋದರಿ ಮತ್ತಷ್ಟು ಕಂಗಾಲಾಗುತ್ತಾಳೆ. ಯಕ್ಷಗಾನ ತಾಳಮದ್ದಲೆಯಲ್ಲಿ ನಾಟಕದಂತೆ ದೃಶ್ಯಗಳು ಬದಲಾಗುವುದಿಲ್ಲ. ಮುಂದಿನ ದೃಶ್ಯ ಏನು ಎಂಬ ಕುತೂಹಲವೂ ಇರುವುದಿಲ್ಲ. ಕಥಾಭಾಗ ಮುಂದೆ ಹೋಗುವುದಿಲ್ಲವಲ್ಲ ಎಂಬ ತುಡಿತವನ್ನು ಹೊಂದುವ ಹಾಗಿಲ್ಲ. ಇಲ್ಲಿ ಸಂವಾದವೇ ಪ್ರಧಾನ. ಅದನ್ನು ಕಥೆಗೆ ಹೊಂದುವ ರೀತಿಯಲ್ಲಿ ಬೆಳೆಸಿಕೊಂಡು ಹೋಗುವುದೇ ಪ್ರಧಾನ. ಹಾಗಾಗಿ ರಾವಣ ಮಂಡೋದರಿ ಸಂವಾದ ಮತ್ತು ಮುಂದೆ ಹೋಗುತ್ತದೆ.  ಮಂಡೋದರಿ  ಸುಲಭದಲ್ಲೇ ಗಂಡನನ್ನು ಒಡಂಬಡಿಸಬಹುದೆಂಬ ನಿರೀಕ್ಷೆ ಇಟ್ಟವಳು ಈಗ ಆಕೆ ತನ್ನ ಛಲವನ್ನು ಬಿಡದೆ ಮತ್ತಷ್ಟು ಗೋಗರೆಯುತ್ತಾ ಮುಂದಿನ ಪದ..

“ಇನ್ನು ಬಿಡು ಬಿಡು ಛಲವನೀಗ   ಎನ್ನ ನುಡಿಯ ಮನ್ನಿಸಿ ರಾಘವನ ಪದಕೆರಗು ಮುನ್ನ....ಸಾಕೋರ್ವ ಮಗ ವಿರೂಪಾಕ್ಷ ...”

“ ಛಲಕ್ಕಾಗಿ ಈರೀತಿ ಮಾಡ್ತೇನೆ ಅಂತ ಹೇಳ್ತೀರಿ. ಶೂರ್ಪನಖಿಯಂತೂ  ಕುಲಗೇಡಿ.   ನೀವು ಮಾಡಿದ ಕ್ರಿಯೆಯಂತೂ ಕೆಟ್ಟದ್ದೆ. ಇಷ್ಟಕ್ಕೆಲ್ಲ ಬಂದು ಈಗ ಛಲ ಅಂತ ಹೇಳ್ತಾ ಇದ್ದೀರಿ. “

“ ಹೌದು ಚಲವೇ  ಹಗುರವಾದ ಉಧಾಹರಣೆ ಹೇಳಲಾ...ಪ್ರಬಲರಾದ ವ್ಯಕ್ತಿಗಳು ಅಕ್ಕ ಪಕ್ಕದಲ್ಲಿ, ಗಡಿಯಲ್ಲಿ ಕಟ್ಟಿಗೆಗೂ ಆಗದೇ ಇದ್ದಂತಹ ಒಂದು ಮರ ಅಂತಿಟ್ಟುಕೋ,  ಅದು ನನ್ನದು ನನ್ನದೂ ಅಂತ ಇಬ್ರೂ ವಾದಕ್ಕೆ ಹೊರಟರೆ,  ಆ ಒಂದು ಮರ ಇವರ ಎರಡೂ ಆಸ್ತಿಯನ್ನು ಮುಗಿಸ್ತದೆ ಯಾಕೆ?”

“ಅದು ಛಲಕ್ಕಾಗಿ ಹಟಕ್ಕಾಗಿ..”

“ ವಿಷಯ ಸಣ್ಣದು ಮರ.. ಆದರೆ ಜನಗಳು ಇಬ್ಬರೂ  ದೊಡ್ಡವರು. ಉತ್ತರದಲ್ಲಿ ರಾಮ ದೊಡ್ದವ.., ದಕ್ಷಿಣದಲ್ಲಿ ನಿನ್ನ ಗಂಡ ರಾವಣ ದೊಡ್ಡವ. ಶೂರ್ಪನಖಿ ಒಂದು ಕುಂಬು ಮರವೇ. ಎನು ಮಾಡುವ ಹೇಳು? ಈಗ ಯಾರು ಇದರಲ್ಲಿ ಹಿಂದೆ ಬಿಡುವುದು? ಮೊದಲು ಯಾರು ಕೈ ಹಿಂದೆ ತೆಗಿಯುದು? ರಾಮನೋ?”

“ಯಾರು ಹಿಂದೆ ತೆಗಿಯುದು ಅಂತ ನಾನು ಹೇಳಿದ್ರೆ ತಮಗೆ ಸಿಟ್ಟಾದಿತು...ಒಂದು ವಿಚಾರ ಹೇಳ್ತೇನೆ. ಈಗ ಸೀತೆಯನ್ನು ತಂದದ್ದು ನಾವು ತಪ್ಪೂ ಅಂತ ನಮಗೆ ಅನ್ನಿಸ್ತದೆ ಅಂತಾದ್ರೆ,  ಈ ಸೀತೆಗಾಗಿ ನಾವು ಹೋರಾಟ ಮಾಡುವಾಗ ತಪ್ಪನ್ನು ಸಾಧಿಸುವಕ್ಕೆ ಮತ್ತೂ ತಪ್ಪೇ ಮಾಡಿದಂತೇ ಅಲ್ಲವೇ? “

“ಸೀತೆಯನ್ನು ತಂದ ತಪ್ಪು ಆದದ್ದು ರಾಮ ಮಾಡಿದ ತಪ್ಪಿನ ಮೂಲಕ. ಅದನ್ಯಾಕೆ ಮರೆಸ್ತಿ? ತಪ್ಪೂ ಮೊದಲು ರಾಮನಿಂದ ಆಯಿತು. ಶೂರ್ಪನಖಿಯಿಂದ ಆಯಿತು ಅಂತ ನಾನು ಹೇಳುವುದಿಲ್ಲ.”
          
“ವಿಶ್ಲೇಷಣೆ ಪುನಃ ಹಿಂದಕ್ಕೆ ಹೋಗಬೇಕಾದೀತು ಹಾಗಾದರೆ”

“ ಬೇಡ, ರಾಮನಿಗಿಂತ ಮೊದಲು ನಮ್ಮಿಂದ ಆಕಡೆಗೆ ತಪ್ಪಾದದ್ದು ಉಂಟಾ? ಇಲ್ವಲ್ಲ? ’”

“ ಉಂಟೋ ಏನೋ? “”
“ ಸದ್ಯ ತಿಳಿದ ಹಾಗೆ. ಮತ್ತೆ ಹಾಗೆ ಏನುಂಟು ಅಂತ ಅವನು ಕಂಡಾಗ ಕೇಳ್ಬೇಕು. ಈ ರೋಗ ನಿಮ್ಮ ಕುಟುಂಬದ್ದೋ ಅಲ್ಲ ಹುಟ್ಟಿದ ಮೇಲೆಯೋ. ಸದ್ಯ ತಿಳಿದಂತೆ ರಾವಣ ಸೀತೆಯನ್ನು ತಂದ ಮೇಲೆ ಅಲ್ವೋ ರಾವಣನಲ್ಲಿ ಶತ್ರುತ್ವ? “

“ ಅಲ್ಲಿಂದಲೇ ತೊಡಗುವುದಾದ್ರೂ ನನಗೆ ಕಾಣಿಸುವುದು ಇಷ್ಟು. ಬಹಳಷ್ಟು ಕಾಮಾತುರೆಯಾದ ಶೂರ್ಪನಖಾ ಹೋದಾಗ, ಶ್ರೀರಾಮ ಹೇಳಿದನಂತಲ್ಲ, ನಿನಗೆ ಸವತಿಯೊಬ್ಬಳು ಇರಬಾರದು. ನನಗೆ ಮೊದಲೇ ಮದುವೆಯಾಗಿದೆ. ಆದುದರಿಂದ ನನ್ನನ್ನು ನೀನು ಬಯಸುಬೇಡಾಂತ. ಹಾಗೆ ಇವಳು ಮತ್ತೆ ಮತ್ತೆ ಕೇಳಿದುದಕ್ಕೆ ಅಲ್ವ ತಮ್ಮನನ್ನು ತೋರಿಸಿದ್ದು?” 

“ಹಾಗೆ ಹೇಳಿದುದೇ ಅಪದ್ದ ಅಂತಲ್ವ ನಾನು ಹೇಳುದು. ನೋಡು ವಿಷಯ ಗ್ರಹಿಸು. ರಾಮನಂಥವನು ಹಾಗೆ ಹೇಳಬೇಕಾದ್ದೋ? ಶೂರ್ಪನಖಿಯಲ್ಲ.. ಅಥವಾ ಇನ್ನೊಬ್ಬಳು. ಆಗದಿರುವುದನ್ನು ಆಗಿಸುವುದಕ್ಕೋಸ್ಕರವಾಗಿ ಸಂಭಾವಿತನಾದ ರಾಮನಲ್ಲಿಗೆ ಬರುತ್ತಾಳೆ. ಸಂಭಾವಿತನಾದವನಾದರೆ ಏನು ಹೇಳಬೇಕು? ಹೆಣ್ಣೇ ನಿನ್ನ ಕೃತಿಯೇ ಸರಿಯಲ್ಲ. ಹಾಗೆ ಹೇಳಿದನೋ ರಾಮ? ಹಾಗೆ ಹೇಳಿ ಅಲ್ಲಿಂದಲ್ಲಿಗೆ ಅದನ್ನು ಮುರೀಬೇಕೋ? ಅದು ಬಿಟ್ಟು ನಾನು ಏಕಪತ್ನಿ ವೃತಸ್ಥ. ಆಗ ಅವಳಿಗೆ ತೋರಿತು ಏಕ ಪತ್ನಿ ವೃತ ಇಲ್ಲದಿದ್ದರೆ ನನ್ನು ಸ್ವೀಕರಿಸಲಿಕ್ಕೆ ತಯಾರಾಗ್ತಾನೋ ಏನೋ? ಆದರೆ ಹುಚ್ಚಿಗೆ ಔಷಧಿ ಕೊಡೋದು ಮತ್ತಷ್ಟು ಮತ್ತೇರಿಸುವಂತಹದ್ದಲ್ಲ. ಹೌದಲ್ಲ. ಆದಕಾರಣ ನನಗೆ ತೋರುವುದು. ಸಂಭಾವಿತನಾದ ರಾಮ – ತಂಗೀ .... ಹೀಗೆಲ್ಲ ಮಾಡಬಾರದು. ಇಲ್ಲಿ ನಿನಗೆ ಅವಕಾಶ ಇಲ್ಲಾಂತ ಹೇಳ್ಬೇಕೋ? ಮತ್ತೆ ಕೆಲವರೆಲ್ಲ ಹೇಳಿದ್ರು. ಮದನನ ಪಟ್ಟದಾನೆ ನೀ ಮೊದಲೆ ಬಂದುದಿಲ್ಲ?  ಚದುರೆ ಸಣ್ಣವಳೊಬ್ಬಳ ಮದುವೆಯಾದೆನಲ್ಲ.? ಆವಾಗ ನನಗೂ ಪ್ರಶ್ನೆ ಹುಟ್ಟುವುದು, “ ಅಯ್ಯಾ ರಾಮ ಚಂದ್ರನೇ, ನನ್ನ ತಂಗಿ ಮೊದಲೇ ಬಂದುದಿಲ್ಲ ಹೌದು. ಮೊದಲೇ ಬರ್ತಿದ್ರೆ ನೀನವಳಿಗೆ ತಾಳಿ ಕಟ್ಟುತ್ತಿದ್ದಿಯೋ?” ಅಂತ ಕೇಳ್ಬೇಕು. ಆವಾಗ ಅವನು ಮೊದಲೂ ಶೂರ್ಪನಖೀ ಮದುವೆಗೆ ತಯಾರಾದವನಲ್ಲ. ಇಂತಹ ಸಂದರ್ಭದಲ್ಲಿ ಎಲ್ಲ ಅರಸು ಮಕ್ಕಳು ತಮ್ಮ ನಿಲುಮೆಯನ್ನು ಹೇಗೆ ಹೇಳ್ಬೇಕು. ಟ ಠ ಡ ಢ ಣ...ಅಂತ. ಅಲ್ಲಿ ಕಾವ್ಯ ಯಾಕೆ?  ಆಗ ಅವನು ಲಕ್ಷ್ಮಣನಲ್ಲಿ ಹೇಳಿದ್ದನಂತೆ,  ಏನೇ ಹೇಳು, ಈ ಅನಾಗರಿಕರಲ್ಲಿ ಅಸಭ್ಯರಲ್ಲಿ ಈ ಹಾಸ್ಯ ಪ್ರವೃತ್ತಿ ಸುಖಕ್ಕೆ ಇದ್ದದ್ದಲ್ಲ. ಹಾಗಾದರೇ ಅವನೇ ಒಪ್ಪಿಕೊಂಡ ಹಾಗಾಯಿತು. ಅದನ್ನೇ ಅವನು ಪ್ರತ್ಯಕ್ಷ ನನ್ನಲ್ಲಿ ಹೇಳಿಬಿಡಲಿ. ಅಲ್ಲಿ ಅವನತ್ರ ಹೇಳುವುದು ಬೇಡ. “ ಏನೋ ರಾವಣೇಶ್ವರ..ಏನೋ ಹುಡುಗಾಟಿಕೆ ನಾನು ಸ್ವಲ್ಪ ಹುಚ್ಚು ಕಟ್ಟಿದೆ ಹೌದು. ನಿನ್ನ ತಂಗಿಯ ಕುರಿತಾಗಿ”  ಹೀಗೆ ಹೇಳಿದ್ರೆ ಏನು ಮಾಡಬೇಕೋ ಮತ್ತೆ ಅಲೋಚನೆ ಮಾಡ್ತಿದ್ದೆ. ಈಗಲೂ ಅದನ್ನು ಅವನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ. ತಾನು ಮಾಡಿದ್ದೇ ಸರಿ. ಅದು ಎಲ್ಲಿವರೆಗೆ ಬಂದಿದೆ ಗೊತ್ತೋ?   ಶೂರ್ಪನಖಿ ಪುರುಷಾತಿಕ್ರಮಣ ಮಾಡಿದ್ಲು. ನಿನ್ನಲ್ಲಿ ನಾನು ಕೇಳುವುದು ಪುರುಷಾತಿಕ್ರಮಣ ಮಾಡಿದ್ದಾಳೋ??”

“ ಮಾಡುವುದಕ್ಕೆ ಮನ ಮಾಡಿದ್ದಾಳೆ ಅಂತ ಹೇಳಬಹುದು...”

“ ಕೊಲೆ ಮಾಡುವುದಕ್ಕೆ ಮನ ಮಾಡಿದವರಿಗೂ ಕೊಲೆ ಮಾಡಿದವರಿಗೂ ಒಂದೇ ಶಿಕ್ಷೆಯೋ ರಾಮ ರಾಜ್ಯದಲ್ಲಿ. ? ಪ್ರಶ್ನೆ ಅದು. ಪುರುಷಾತಿಕ್ರಮಣ ಮಾಡಿದರೆ...ಮಾಡಿದರೆ ಕರ್ಣನಾಸಾಚ್ಛೇದನ ಒಪ್ಪಿಕೊಳ್ಳೋಣ. ಮಾಡುವುದಕ್ಕೆ ಪ್ರಯತ್ನ ಪಟ್ಟರೆ ಕರ್ಣನಾಸಾಚ್ಛೇದನ ಮಾಡ್ತಾನೆ ಅಂತಾದ್ರೆ, ನಿನ್ನಲ್ಲಿ ಹೇಳ್ತೇನೆ ನನ್ನ ತಂಗಿ ದಾರಿಯಲ್ಲಿ ಬಿದ್ದಬಳು ಅಂತ ಪ್ರಚಾರ ಮಾಡುವ ಒಂದು ದುರ್ಬುದ್ಧಿ ಆ ಉದ್ದೇಶವೂ ಉಂಟವನಿಗೆ. ವ್ಯಭಿಚಾರ ಮಾಡದೇ ಒಬ್ಬಳಿಗೆ ವ್ಯಭಿಚಾರದ ಶಿಕ್ಷೆ ಕೊಡಕೂಡದು. ಈಗ ಆಯ್ತಲ್ಲ ಕರ್ಣನಾಸಾಚ್ಛೇದನ ಮಾಡಿದಮೇಲೆ ಪುರುಷಾತಿಕ್ರಮಣ ಮಾಡಿದ್ದಾಳೆ ಅಂತ ಆಯ್ತಲ್ಲ? ಬಹುಷಃ ರಾಮನಲ್ಲಿ ಅಲ್ಲ, ಲಕ್ಷ್ಮಣನಲ್ಲಿ ಅಲ್ಲ, ಬೇರೆ ಧಾರಾಳ ಮಾಡಿದ್ದಾಳೆ ಅಂತ ಆಯ್ತಲ್ಲ?  ನನ್ನ ಮನೆತನದಲ್ಲಿ ಹುಟ್ಟಿದ ನನ್ನ ತಂಗಿಯನ್ನು ಹಾಗೆ ಪ್ರಪಂಚ ಮುಖಕ್ಕೆ ಎತ್ತಿ ತೋರಿಸುವಾಗ, ಅವನ ಹೆಂಡತಿ ಎಷ್ಟರ ಮಟ್ಟಿಗಿನ ಮಡಿವಂತಿಕೆಯವಳು? ಅಂತ ನಾನೂ ನೋಡಬೇಕಾಗ್ತದಲ್ಲ? ಇದೆಲ್ಲ ನನಗೆ ಅವನೇ ಕಲಿಸಿದ್ದು.

“ ಆದ್ರೆ ಒಂದಾಗ್ತದಲ್ಲ...? ಆ ಶೂರ್ಪನಖ ಇಷ್ಟನ್ನೆಲ್ಲ ಹೊತ್ತುಕೊಂಡು ಖರಾಸುರನಲ್ಲಿ ಹೋಗಿ ಹೇಳಿದಳಲ್ಲ. ಖರಾಸುರ ನೇರಾಗಿ ಹೋಗಿ ವಿಚಾರಿಸಿದನಂತಲ್ಲ? ಅದು ಅವನ ಎದೆಗಾರಿಕೆ. ನೇರಾಗಿ ಎದುರಿಸಿದ ಖರಾಸುರನನ್ನು ಇವತ್ತು ಜಗತ್ತು ಅವಹೇಳನ ದೃಷ್ತಿಯಿಂದ ಕಾಣ್ತಾ ಇಲ್ಲ. ಅವನು ವೀರಾಗ್ರಣಿಯಾಗಿ ಹೋರಾಡಿದ ಅಂತ ಹೇಳ್ತದೆ. ಆದ್ರೆ ನಿಮ್ಮನ್ನು ಹಾಗೆ ಹೇಳ್ತದ? ಅವಹೇಳನ ದೃಷ್ಟಿಯಿಂದ ಕಾಣುವುದಲ್ವ?”  ಸೀತೆಯನ್ನು ಮಾಯದಿಂದ ಅಪಹರಿಸಿ ತಂದುದನ್ನು ಉದ್ದೇಶೀಸಿಯೇ ಮಂಡೋದರಿ ಈ ಮಾತನ್ನು ಹೇಳುತ್ತಾಳೆ.  ಖರದೂಷಣಾದಿಗಳು ಹತರಾದಾಗ ರಾವಣ ನೇರಾಗಿ ದಂಡೆತ್ತಿ ಹೋಗಬೇಕಿತ್ತು. ಯಾಕೆ ಹೋಗಲಿಲ್ಲ? ರಾಮನಿಗೆ ಹೆದರಿ ವಂಚನೆಯೇ ಎಸಗಿಬಿಟ್ಟ. ಪರೋಕ್ಷವಾಗಿ ರಾಮನ ಬಗ್ಗೆ ಇರುವ ಆ ಭಯ ಈಗಲೂ ಇದ್ದಲ್ಲಿ ಶರಣಾಗತಿ ಅತ್ಯಂತ ಸೂಕ್ತ ಅಂತ ಎಚ್ಚರಿಸುವುದೇ ಇದರ ತಾತ್ಪರ್ಯ.

ಆದರೆ ರಾವಣ ಇದನ್ನು ಸಮರ್ಥಿಸುವುದೇ ಬೇರೆ ರೀತಿಯಲ್ಲಿ.

“ ಹಾಗೆ ಹೇಳುವುದಿದ್ದರೆ ಈ ನಿನ್ನ ಶೂರ್ಪನಖಿಯ ಒಟ್ಟಿಗೆ ಅವರೂ ಅಧಿಕ ಪ್ರಸಂಗ ಮಾಡಿದರು. ಶೂರ್ಪನಖಾ ಪ್ರಕರಣವನ್ನು ವಿಚಾರಿಸುವುದಕ್ಕೆ ಖರ ದೂಷಣಾದಿಗಳು ಹೋದರು. ಹೋಗಿ ಸತ್ತರು. ಆವಾಗ ಮತ್ತಷ್ಟೂ ನನ್ನ ಅಭಿಮಾನಕ್ಕೊಂದು ಸವಾಲಾಯಿತೋ ಇಲ್ವೊ? ಮತ್ತೆ ನಾನು ಸುಮ್ಮನೆ ಕೂತುಕೊಳ್ಳುವುದಕ್ಕೆ ಸಾಧ್ಯವೋ? ಮತ್ತೆ ನೀನು ಹೇಳ್ತಿ ನೇರಾಗಿ ದಂಡೆತ್ತಿ ಹೋಗಬಹುದಿತ್ತಲ್ಲ? ನಾನು ರಾಜ ಪುರುಷ. ನನ್ನ ಯೋಜನೆ ತಯಾರಿಸಬೇಕಿದ್ದರೆ ಹಿಂದೆ ಮುಂದೆ ಆಲೋಚನೆ ಮಾಡಬೇಕಾಗುತ್ತದೆ. ಖರದೂಷಣಾದಿಗಳಿಗೆ ಏನು? ಅದಕ್ಕಾಗಿ ಆಲೋಚಿಸಿದೆ. ಆಲೋಚಿಸುವಾಗ ನಮ್ಮದ್ದಾದ ಜಾಗದಲ್ಲಿ ಈಗ ರಾಮ ಪ್ರಬಲನಾಗಿದ್ದಾನೆ. ಅಕಂಪನಂತಹ ವರದಿಗಾರರು ಹೇಳಿದ್ದಿದು. ಇನ್ನೂ ಒಂದು ಉಂಟು. ಪಿತೃ ವಾಕ್ಯ ಪರಿಪಾಲನೆಗಾಗಿ ಅಧಿಕಾರವನ್ನು ಬಿಟ್ಟು ದಂಡಕಾರಣ್ಯಕ್ಕೆ ರಾಮ ಬಂದರೂ ಅಪ್ಪ ಸತ್ತಮೇಲೆ ಭರತ ಬಂದು ಒಡಂಬಡಿಕೆಯಲ್ಲಿ ಅವನೇ ಅಯೋಧ್ಯೆಯ ರಾಜ. ನಾಮ ಮಾತ್ರಕ್ಕೆ ಭರತ. ಆಢಳಿತಕ್ಕೆ ರಾಮನೇ. ಇದರ ದ್ಯೋತಕವಾಗಿ ಪಾದುಕಾ. ಇಷ್ಟಾದ್ರೆ ರಾಮನ ಮೇಲೆ ನಾವು ದಂಡೆತ್ತಿ ಹೋಗ್ತೇವೆ ಅಂತಾದ್ರೆ, ಅಯೋಧ್ಯೆಯಿಂದ ಸೈನ್ಯವೂ ಬಂದರೆ, ಏನಾದೀತು?”

“ಆ ಕ್ಷೇತ್ರದಲ್ಲಿ ದೊಡ್ದ ಹೋರಾಟವೇ ನಡಿದೀತು”

“ಹೆಚ್ಚು ನಷ್ಟ ನಮಗೂ ಆದೀತು. ಅದು ಕೈಬಿಟ್ಟು ಹೋದ ಸ್ಥಳ. ಅದಕ್ಕಿಂತ, ಆದದ್ದಾಯ್ತಲ್ಲ. ನಿದ್ದೆಗಣ್ಣಿನಲ್ಲಿ ಏನೋ ಅಗಿ ಹೋಯಿತು ಇನ್ನು ನಾವು ಜಾಗೃತರಾಗಬೇಕು. ಆದಕಾರಣ ಒಂದು ಗಾದೆ ಮಾತು ಉಂಟು, ಮೊಸಳೆಗೆ ನೀರಿನಲ್ಲಿ ಶಕ್ತಿ, ಆನೆಗೆ ನೆಲದಲ್ಲಿ ಶಕ್ತಿ. ಆನೆ ನೀರು ಕುಡಿಲಿಕ್ಕೆ ಬರಲಿ. ಇದಕ್ಕೆ ಏನಾದರೂ ಸಂವಿಧಾನವನ್ನು ತಯಾರಿಸೋಣ ಎನ್ನುವ ಮೊಸಳೆಯ ರಾಜಕೀಯದಂತೆ ಸೀತೆಯನ್ನು ತರುವ. ರಾಮ ಇಲ್ಲಿಗೆ ಬರಲಿ. ಮತ್ತೆ ಅವನ ಅಪ್ಪನದ್ದು ಅಯೋಧ್ಯೆಯಿಂದ ಎಷ್ಟು ಬರುತ್ತದೆ ನೋಡುವ. ಯೋಜನೆಯಲ್ಲಿ ತಪ್ಪಿ ಬೀಳಿಲ್ಲ. ಮತ್ತೇನಾಯಿತು....ಕೆಲವು ಸಲ ಯೋಜನೆ ಫಲಕಾರಿಯಾಗ್ತದೆ. ಫಲಪೂರ್ತಿಯಾಗೋದಿಲ್ಲ. ನೀರಿಲ್ಲದೇ ಇದ್ದಲ್ಲಿ ಎಲ್ಲರಿಗೂ ನೀರು ಉಣಿಸೋಣ ಅಂತ, ಎನನ್ನಾದರೂ ನಾವು ತಯಾರಿಸಬಹುದು ಜಲಾಶಯ. ಆದರೆ, ಜಲಾಶಯ ತಯಾರಿಯಾಗಿ ಹನ್ನೆರಡುವರ್ಷ ಗುಡುಗದೇ ಇದ್ದರೆ? ಮಳೆ ಸುದ್ದಿ ಬಿಡು. ಯೋಜನೆಯ ದೋಷ ಅಂತ ಹೇಳ್ಳಿಕ್ಕೆ ಬರ್ತದಾ? ಆದುದರಿಂದ ಹೀಗೆಲ್ಲ ಯೋಜನೆ ಹಾಕಿ ಸೀತೆಯನ್ನು ತಂದದ್ದಾಯಿತು. ರಾಮನು ಸ್ತ್ರೀಮೂಲದಿಂದಲೇ ತೊಡಗಿದ್ದು ಯುದ್ದ. ನಾವು ಸ್ತ್ರೀ ಮೂಲದಿಂದಲೇ ಯುದ್ದಕ್ಕೆ ಆಹ್ವಾನ ಕೊಟ್ಟದ್ದು. “

“ ಹಾಗಾದರೆ ರಾಮ ಸಮರ್ಥ ಎಂಬ ಕಾರಣಕ್ಕಾಗಿ ರಾವಣನ ತಂಗಿಯನ್ನು ತಿರಸ್ಕರಿಸಿದ್ದಿರಬೇಕು.”

“ಆವಾಗಲೇ  ನನಗೆ ಬಂದದ್ದು ನೀನು ಸಮರ್ಥ ಎಲ್ಲಿ? ರಾವಣ ಇಲ್ಲದೇ ಇದ್ದ ಜಾಗದಲ್ಲಿ ಅಲ್ವ? ಇದ್ದಲ್ಲಿಗೆ ಬಾ ತಪ್ಪೇನು?”

“ಆದರೂ ಇಲ್ಲಿಗೆ ಬಂತಲ್ಲ.? ಈಗ  ಎಲ್ಲರೂ ತೀರಿದರಲ್ಲ. ಇನ್ನು ಹೀಗೆ ಮುಂದುವರೆಸಿದರೆ ನಮ್ಮದೂ ಮುಗೀತದಲ್ಲ? ಒಬ್ಬ ಮಗ ಇದ್ದಾನೆ ಕರುಳ ಕುಡಿ ವಿರೂಪಾಕ್ಷ. ಅವನಿಗಾಗಿಯಾದರೂ. ಅವನೊಬ್ಬನಾದರೂ ಉಳಿದರೆ ಅವನಿಂದ ದಾನವ ಸಾಮ್ರಾಜ್ಯ ಮತ್ತೆ ಚಿಗುರೊಡೆದು ನಳ ನಳಿಸುವುದಕ್ಕೆ ಸಾಧ್ಯವಿದೆ.” ಇದು ಮಂಡೋದರಿಯ ಕೊನೆಯ ಅಸ್ತ್ರ. ಇಂದ್ರಜಿತು ಹೋದ. ಇರುವ ಒಬ್ಬ ಮಗ ವಿರೂಪಾಕ್ಷನ ಮೇಲೆ ಮಮತೆ. ಆದರೆ ಇದೆಲ್ಲದರಿಂದ ಅತೀತವಾಗಿ ರಾವಣನ ಚಿಂತನೆ ಹರಿಯುತ್ತಿರುವುದು ಅವಳ ಗಮನಕ್ಕೆ ಬಂದಂತಿಲ್ಲ,

ರಾವಣ ಹೇಳ್ತಾನೆ...,

“ಓ ಮಂಡೋದರೀ ಇಂದ್ರಜಿತುವಿನಂತಹ ಮಗನನ್ನು ಹೆತ್ತ ವೀರಗರ್ಭೆ ಆಡುವ ಮಾತೇನೆ ಇದು.?ಇಂದ್ರಜಿತುವಿನ ತಮ್ಮ ವಿರೂಪಾಕ್ಷನಿಗಾಗಿ ನೀನು ಭಿಕ್ಷೆ ಬೇಡುವುದೇನೆ? ಅವನನ್ನಾದರೂ ಉಳಿಸೋಣ. ಉಳಿಯುವುದಕ್ಕು ಅಳಿಯುವುದಕ್ಕೂ ಅವನಿಗುಂಟು ಸ್ವಾತಂತ್ರ್ಯ. ಮೀಸೆ ಬಂದ ಮಗ ಅವನು. ನಿನಗೆ ಸೊಸೆ ಬಂದಿದ್ದಾಳೆ ಅವನ ಹೆಸರಿನಲ್ಲಿಅವನಿಗಾಗಿ ಬೇಡ್ತಾ ಇದ್ದೀಯಲ್ಲ? ಹಾಗಾಗಿ ಅವನ ಪರವಾಗಿ ನೀನಿಲ್ಲಿ ಒಬ್ಬ ಮಗನನ್ನು ಉಳಿಸೋಣ ಅಂತ ಅಂದ್ರೆ ಅವನಿಗೆ ಅಪಮಾನ ಅಲ್ವೇನೆ? ಪ್ರಾಯ ಬಂದ ಮಗನಿಗಾಗಿ ನೀನು ಪ್ರಾರ್ಥಿಸುವುದೇನೆ. ಇಷ್ಟು ದೊಡ್ಡ ರಾಮಾಯಣ ಆದದ್ದೇ  ನಿನ್ನ ಹಾಗೆ ಒಂದು ಹೆಣ್ಣಿಗೆ ಮೀಸೆ ಬಂದ ತನ್ನ ಮಗನ ಮೇಲೆ ಬಂದ ವ್ಯಾಮೋಹದಿಂದ. ಭರತ ಮೀಸೆ ಬಂದ ಮಗ. ಒಂದು ಮದುವೆಯಾದವನು. ಆ ಮಗನಿಗಾಗಿ ಗಂಡ ದಶರಥನಲ್ಲಿ ರಾಜ್ಯವನ್ನು ಬೇಡಿದಳು.   ಉತ್ತರದಲ್ಲಿ ಒಂದು ಹೆಣ್ಣಿಗೆ ತನ್ನ ಮಗ ಪಟ್ಟಕ್ಕೇರಬೇಕೆಂಬ ಆಲೋಚನೆ ಇಷ್ಟು ಜನರ ಪಟ್ಟ ಅಲುಗಾಡಿಸಿತು ನೋಡು. ಅದೇ ಅಗ್ಬೇಕಾ ಇಲ್ಲಿ?”

ಮಂಡೋದರಿಯ ಬೇಡಿಕೆಯನ್ನು ತಿರಸ್ಕರಿಸುವ ರಾವಣ ಕೊನೆಯಲ್ಲಿ ಕೇಳುತ್ತಾನೆ. ಮಗನಿಗಾಗಿ ಕೇಳುವುದನ್ನು ಬಿಟ್ಟು ತನಗಾಗಿ ಏನಾದರೂ ಕೇಳು. ಸಾವಿರಾರು ಸವತಿಯರನ್ನು ನಿರ್ಮಾಣ ಮಾಡಿದರೂ ಪತಿಯ ಬಗ್ಗೆ ಚಕಾರವೆತ್ತದ ಮಂಡೋದರಿಯ ಪತಿ ಭಕ್ತಿಯ ಬಗ್ಗೆ ಅಭಿಮಾನವ್ಯಕ್ತವಾಗುತ್ತದೆ ರಾವಣನಿಗೆ.

Thursday, August 15, 2013

“ಅಭಿಮಾನಂ ದಂತ ಭಗ್ನಂ “

“ಕಲಾವಿದ” ಎಂದರೆ ಕಲೆಯನ್ನು ತನ್ನೊಳಗೆ ಆವಾಹಿಸುವವನು ಎಂದು ಕರೆಸಲ್ಪಡುತ್ತಾನೆ. ಪ್ರಕೃತಿ ಸಹಜವಲ್ಲದ, ಇತರರಿಗಿಲ್ಲದ  ಗುಣಗಳನ್ನು ವಿಶಿಷ್ಟ ರೂಪದಲ್ಲಿ ತನ್ನಲ್ಲಿ ಹೊಂದಿಕೊಂಡು ಇರುವ ಗುಣಗಳು ಕಲೆ ಎನಿಸಲ್ಪಡುತ್ತದೆ. ತನ್ನಲ್ಲಿರುವ ಗುಣ ಯಾವುದೇ ಆದರೂ ಕಲೆ ಎನಿಸಿಕೊಳ್ಳಬೇಕಿದ್ದರೆ ಅದರ ವೈಶಿಷ್ಟ್ಯತೆಯನ್ನು ಅನುಭವಿಸುವರಿರಬೇಕು. ಇಲ್ಲಿ ಕಲಾವಿದ ಮತ್ತು ಪ್ರೇಕ್ಷಕ ಒಂದು ತಕ್ಕಡಿಯ ತಟ್ಟೆಗಳಿದ್ದಂತೆ. ಇವುಗಳು ಸಮಾನ ಮಟ್ಟದಲ್ಲಿದ್ದರೆ ಅದು ಸಂತುಲನೆಯನ್ನು ಕಾಯ್ದುಕೊಳ್ಳುತ್ತದೆ. ಆದರೆ ಇದರಲ್ಲಿ ಒಂದು ಪರಿಮಿತಿಯನ್ನು ದಾಟಿದಾಗ ಅಸಹಜವಾಗಿ ಸಂತುಲನೆಯನ್ನು ಕಳೆದುಕೊಂಡು ಕಲೆ ಎಂಬುದು ಯಾವುದರಿಂದ ಗುರುತಿಸಲ್ಪಡಬೇಕೋ ಅಲ್ಲಿ ಅದು ಅದಾಗಿರುವುದೇ ಇಲ್ಲ. ಕಲಾವಿದ ಮತ್ತು ಕಲಾಭಿಮಾನಿ ಕಲೆಯ ಬಗ್ಗೆ ಒಂದೇ ಬಗೆಯ ತಾದಾತ್ಮ್ಯವನ್ನು ಹೊಂದಿದ್ದರೆ ಕಲೆ ವೇದಿಕೆಯ ಮೇಲೆ ಆಕರ್ಷಣೆಯನ್ನು ಪಡೆಯುತ್ತದೆ. ಆದರೆ ಇಲ್ಲಿ ಯಾವಾಗ ಸಂತುಲನೆ ನಷ್ಟವಾಯಿತೋ ಆವಾಗ ಕಲೆ ಅದೇ ವೇದಿಕೆಯ ಒಂದೊಂದೇ ಮೆಟ್ಟಿಲಿಂದ ಕೆಳಕ್ಕೆ ಕೆಳಕ್ಕೆ ಇಳಿದು ಬಿಡುತ್ತದೆ. ಇದರ ಸ್ಥಾನದಲ್ಲಿ ವೈಯಕ್ತಿ ಪ್ರತಿಷ್ಠೆಗಳು ಕಲೆಯ ನೆಲೆಯನ್ನು ಮೀರಿ ವೈಭವೀಕರಿಸಲ್ಪಡುತ್ತದೆ. ಇದು ಕಲಾವಿದನಿಗೆ ಎಷ್ಟು ಅನ್ವಯವೋ ಪ್ರೇಕ್ಷಕನಿಗೂ ಅಷ್ಟೇ ಅನ್ವಯ. ಒಂದು ಕಲೆ ಸುಸಂಸ್ಕೃತವಾಗಿ ಬೆಳೆಯಬೇಕೆಂದರೆ ಇವರಡೂ ಅಂಗಗಳೂ ಸುಸಂಸ್ಕೃತವಾಗಿರುವುದು ಅನಿವಾರ್ಯವಾಗುತ್ತದೆ. ಕಲೆಯ ಹಿರಿಮೆಯಿಂದ ಇವುಗಳು ಮೀರಿದೆ ಎಂದಾದರೆ ಅಲ್ಲಿ ಕಲೆಗೆ ಸ್ಥಾನವಿಲ್ಲ ಎಂದೇ ಅರ್ಥವಲ್ಲವೇ?

ಕಲೆಯನ್ನು ಸಹಜವಾಗಿ ಅನುಭವಿಸಬೇಕೆಂದರೆ ಅದಕ್ಕೆ ಅನುಕೂಲ ಪರಿಸ್ಥಿತಿಗಳಿರುತ್ತವೆ. ಅದಕ್ಕೆ ಅದರದ್ದೇ ಆದ ಸ್ಥಾನಗಳು ಆ ನೆಲೆಯಲ್ಲಿದ್ದರೇನೆ ಸಾಧ್ಯ. ರಂಗದ ಮೇಲಿನ ನಾಟಕದ ಕಲಾವಿದ ಪಾತ್ರವಾಗಿರುವಾಗ ಪಾತ್ರವಾಗಿ ಪ್ರೇಕ್ಷಕನೊಂದಿಗೆ ಬೆರೆತರೆ ಅಲ್ಲಿ ನಾಟಕ ನಾಟಕವಾಗಿ ಅನುಭವಿಸಲ್ಪಡುವುದಿಲ್ಲ. ನಾಟಕದ ಹಿನ್ನೆಯಲೆಯ ಗಾಯಕ ಸಭೆಯಲ್ಲಿ ಬಂದು ಹಾಡಿದರೆ ರಂಗದ ಮೇಲಿನ ಗಮನ ಜಾರಿ ಇವನ ಮೇಲೆ ಬೀಳುವುದು ಮಾತ್ರವಲ್ಲ ಅಸಹಜತೆ ನಿರ್ಮಣವಾಗುತ್ತದೆ. ಅದಕ್ಕಾಗಿ ಕಲೆ ಕಲೆಯಾಗಿ ರೂಪುಗೊಳ್ಳುವಾಗ ಅದರ ಒಂದೊಂದು ಅಂಗಗಳಿಗೂ ಒಂದೊಂದು ಸ್ಥಾನ ಸಹಜವಾಗಿ ನಿರ್ಣಯಿಸಲ್ಪಡುತ್ತದೆ. ಕಲೆಗೆ ಪೂರಕವಾಗಬೇಕಾದ ಅಂಗಗಳು ಕೆಲವೇ ಆದರೂ ಅವುಗಳು ಮಾರಕವಾಗುವಾಗ ಕಲೆಯ ಸದ್ಬಾವನೆಗೆ ಯಾವ ವೇದನೆ ಯಾಗುತ್ತದೆ ಎಂಬುದನ್ನು ಅರಿಯದಿರುವುದೇ  ಇಂದಿನ ದುರಂತ. ಆದರೆ ಈ ದುರಂತ ಸಂಭವನಿಯವಾಗುವುದು ನಮ್ಮ ಯಕ್ಷಗಾನ ಕಲೆಯಲ್ಲಿ ಎಂದು ಹೇಳುವಾಗ ಮನಸ್ಸೂ ವೇದನೆಯನ್ನ ಅನುಭವಿಸುತ್ತದೆ.

ಇತ್ತೀಚೆ ಹಲವು ನಿಯತಕಾಲಿಕೆಗಳ ಪುಟಗಳಲ್ಲಿ ಬಂದ ವಾರ್ತೆಗಳು ಯಾವ ರೀತಿಯ ನೋವನ್ನು ಉಂಟು ಮಾಡಿದೆ ಎಂದರೆ,  ಯಕ್ಷಗಾನ ಕಲೆ ಸುಂಸಂಸ್ಕೃತರ ಸುಸಂಸ್ಕೃತ ಕಲೆ ಎಂದು ಅಭಿಮಾನದಿಂದ ಹೇಳುವವರಿಗೆ ಕಪಾಳ ಮೋಕ್ಷಮಾಡಿದಂತಿದೆ. ಇದಕ್ಕೆ ಕಾರಣೀಭೂರಾದವರಿಗೆ ಇದರ ಗಂಭೀರತೆಯ ಅರಿವಾಗುವುದಿಲ್ಲ. ಆದರೆ ಒಂದು ಕಲೆಯನ್ನು  ಅದೇ ರೂಪದಲ್ಲಿ ಅನುಭವಿಸುವವರಿಗೆ ಆ ಅನುಭವವನ್ನು ಹಂಚಿಕೊಂಡು ತನ್ಮಯರಾಗುವವರಿಗೆ ಯಕ್ಷಗಾನ ಅಭಿಮಾನ ಉತ್ತರವಿಲ್ಲದ ಪ್ರಶ್ನೆಗಳಾಗುತ್ತವೆ.  ಯೋಚಿಸಿ ಹೊಸದಾಗಿ ಒಬ್ಬ ಪ್ರೇಕ್ಷಕ ಇಲ್ಲಿಗೆ ಬಂದಲ್ಲಿ  ಈ ಯಕ್ಷಗಾನವನ್ನು ಅವನು ಯಾವ ರೀತಿ ಸ್ವೀಕರಿಸಬೇಕು.? ಘಟನೆಯ ಬಗ್ಗೆ ಸ್ಪಷ್ಟೀಕರಣವೋ ಲೇಖನವೋ ಕೊಡುವುದು ಸುಲಭ ಆದರೆ ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸುವಾಗ ಮೈತುಂಬ ಧರಿಸಿದ ಯಕ್ಷಗಾನದ ವೇಷವೀದ್ದರೂ ಇವರು ದಿಗಂಬರರಾಗುತ್ತಾರೆ ಎಂಬುದೇಕೆ ಹೊಳೆಯುವುದಿಲ್ಲ?

ಮನಸ್ಸಿಗೆ ಘಾಸಿಯಾಗುವ ವಿದ್ಯಮಾನಗಳನ್ನು ಓದಿ ಕೇಳಿ ತಿಳಿದಾಗ “ ಛೇ ....” ಎಂಬ ಒಂದೇ ಉದ್ಗಾರ ಮೊದಲಿಗೆ ಬಂದರೂ ಇಷ್ಟಕ್ಕೇ ಅದರ ಪರಿಣಾಮ ಸೀಮಿತಗೊಳ್ಳುವುದಿಲ್ಲ. ಯಕ್ಷಗಾನದ ಒಂದು ಪದ ಗುನು ಗುನಿಸಿ ಸಂತಸ ಪಡುವಾಗಲೂ ಈ ಘಟನಾವಳಿಯ ರಾಕ್ಷಸ ರೂಪದ ರೌದ್ರತೆ ದರ್ಶನವಾದ ಹಾಗೆ ಬೇಡ ಬೇಡವೆಂದರೂ ಆಗುತ್ತದೆ.ಕಲೆಯಿಂದ ಅತೀತವಾಗಿ ಮನಸ್ಸು ಚಿಂತಿಸುತ್ತಿರುವುದೇ ಇಂದಿನ ದುರಂತಗಳಿಗೆ ಮೂಲ ಕಾರಣ. ದ್ವೇಷದಿಂದಲೋ ವೈಮನಸ್ಸಿನಿಂದಲೋ ವ್ಯಕ್ತಿಗತವಾದ ಅಭಿಪ್ರಾಯ ವೆತ್ಯಾಸಗಳ ಪ್ರಭಾವಕ್ಕೆ ಗುಲಾಮರಾಗಿ ಪ್ರವೃತ್ತರಾಗುವಾಗ,  ಒಂದು ಘಳಿಗೆಯೂ ಕಲೆಯ ಬಗ್ಗೆ ಯೋಚಿಸದ ಮನೋಭಾವಕ್ಕೆ ಏನೆನ್ನಬೇಕು? ವೈಯಕ್ತಿಕ ಭಾವನೆಗಳೇ ಕಲೆಯಿಂದ ಮುಖ್ಯ ಎನಿಸಲ್ಪಡುತ್ತದೆ.  ಸೌಮ್ಯ ಪಾತ್ರದ ಪಾತ್ರಧಾರಿಗಳು ರಂಗದ ಮೇಲೆ ದ್ವೇಷದಿಂದ ಹೊಡೆದಾಟಕ್ಕಿಳಿದರೆ ಇದು ವಿಡಂಬನೆಯಲ್ಲದೆ ಮತ್ತೇನು?
ಕಲೆ ಕಲಾವಿದ ಇಲ್ಲಿ ಮಾತ್ರವಲ್ಲ  ನಮ್ಮ ಸಹಜ ಜೀವನದಲ್ಲೂ  ದ್ವೇಷ ವೈಷಮ್ಯ ಮಾತ್ಸರ್ಯಗಳು  ನಮ್ಮ ಜೀವನದ ಅಮೂಲ್ಯಘಳಿಗೆಗಳನ್ನು ಕತ್ತಲಾಗಿಸುತ್ತವೆ ಎಂಬುದನ್ನು ಯೋಚಿಸಬೇಕು. ನೀರಿನ ತೇವಕ್ಕೆ ಭೀಜ ಮೊಳಕೆಯೊಡೆದಂತೆ ದ್ವೇಷ ಸುಲಭದಲ್ಲಿ ಹುಟ್ಟಿಕೊಳ್ಳುತ್ತವೆ. ಆದರೆ ಬೀಜ ಮರವಾಗುವಾ ಅದೇ ತೇವ ಅದಕ್ಕೆ ಸಾಕಾಗುವುದಿಲ್ಲ. ಹಾಗೆ ದ್ವೇಷ. ಅದರ ಹುಟ್ಟಿಗೆ ಸಣ್ಣ ವಿಷಯವೇ ಕಾರಣವಾದರೂ ಅ ದ್ವೇಷ ಸಾಧನೆಗೆ ಬಹಳಷ್ಟು ಕಷ್ಟಪಡಬೇಕಾಗುತ್ತದೆ. ದ್ವೇಷ, ಶತ್ರುತ್ವ ಇಲ್ಲದಿದ್ದರೆ ಸ್ವಯಂ ರಕ್ಷಣೆಯ ಅಗತ್ಯವೇ ಬೀಳುವುದಿಲ್ಲ. ನಿಜ ಜೀವನದಲ್ಲಿ  ಇದರ ಅರ್ಥ ನಮಗೆ ಯಾಕೆ ಅಗುದಿಲ್ಲವೋ ಆಶ್ಚರ್ಯವಾಗುತ್ತದೆ.
ದ್ವೇಷ ವೈಷಮ್ಯ ಬಿಟ್ಟು ಸ್ನೇಹ ಸಧ್ಬಾವನೆಯಿಂದ ಜೀವನದ ಘಳಿಗೆಗಳನ್ನು ಮಧುರವಾಗಿಸಬೇಕೇಂದು ಹೇಳುವುದು ವೇದಾಂತವಾಗಿಬಿಡುತ್ತದೆ. ಈ ವೇದಾಂತವನ್ನೇ ರಂಗದ ಮೇಲೆ ಬಡಿಸುವ ನಮಗೇ ಯಾಕೆ ಇದರ ಗಂಭೀರತೆಯ ಅರಿವಾಗುವುದಿಲ್ಲ? ಸನ್ಮಾರ್ಗದ ಮಾರ್ಗ ಸೂಚಿ ಫಲಕಗಳಂತೆ ಕೇವಲ ಫಲಕಗಳಾಗಿ ಮಾರ್ಗದ ಬದಿ ಸ್ಥಿರವಾದರೆ ಸಾಕೇ? ನಾವೇಕೆ ಆ ಮಾರ್ಗದ ಯಾತ್ರಿಕರಾಗಬಾರದು?

ನಮ್ಮ ಮನೆಯ ಕುಟುಂಬದ ಸದಸ್ಯನೊಬ್ಬ ಹೊರಗೆ ಪೆಟ್ಟು ತಿಂದು ಅವಮಾನಗೊಂಡರೆ ಆ ಕುಟುಂಬದ ಅಂಗವಾಗಿರುವ ನಮಗೂ ಅವಮಾನವಾದಂತಲ್ಲವೇ? ಸಮಷ್ಟಿಯ ಈ ಭಾವನೆಯಾಕೆ ಸ್ಫುರಿಸುವುದಿಲ್ಲ. ಮನೆಯ ಮಕ್ಕಳೊ ಅಥವಾ ಇನ್ನಿರರು ಜಗಳವಾಡಿ ಬಡಿದಾಡಿಕೊಂಡರೆ ಮನೆಯ ಹಿರಿಯನಾದವನಿಗೆ ಹೇಗಾಗಬೇಡ? ಮನೆಯ ಹಿರಿಯ ಬಿಡಿ ಆ ಅಮನೆಗೆ ಪ್ರೀತಿ ಅಭಿಮಾನದಿಂದ ಬರುವ ಅತಿಥಿಯಾದರೂ ಅದನ್ನು ಹೇಗೆ ಸ್ವಿಕರಿಸಬೇಕು? ಇಂತಹ ಸರಳ ತತ್ವಗಳು ಇದಕ್ಕೆ ಉದ್ಯುಕ್ತರಾಗುವಾಗ ಹೊಳೆಯುವುದಿಲ್ಲ ಯಾಕೆ?  ಸಮಸ್ಯೆಗಳನ್ನೆಲ್ಲ ಯಕ್ಷಗಾನ ರಂಗದಲ್ಲೆ  ಇತ್ಯರ್ಥ ಮಾಡುವುದಕ್ಕೆ ಹೊರಟರೆ ಯಕ್ಷಗಾನಕ್ಕೆ ಪರ್ಯಾಯ ಪದ ಯಾವುದಾಗಬಹುದು? ಯೋಚಿಸಿದಾಗ ಬಹಳ ಖೇದವಾಗುತ್ತದೆ. ಯಕ್ಷಗಾನ ಒಂದು ಸುಸಂಸ್ಕೃತರ ಸುಸಂಸ್ಕೃತ ಕಲೆ ಎಂದು ಹೇಳಿಕೊಳ್ಳುವುದು ಒಂದು ಅಸಹನೀಯ ಅನುಭವಾಗುತ್ತದೆ ಎಂದಾದರೆ,   ತಮ್ಮ ಸಂಸ್ಕೃತಿ ದರ್ಶನಕ್ಕೆ ಬೇರೆ ಯಾವುದಾದರೂ ಕಲಾ ಮಾಧ್ಯಮವನ್ನು ನೋಡಿ ಕೊಳ್ಳಬಹುದು. ಕಲಾಭಿಮಾನಿಯಾಗಿ ಬೇರೊಂದು ಕಲೆ ಹಾಳಾಗಲೀ ಎಂಬ ಉದ್ದೇಶವಲ್ಲ. ಹೀಗೆ ಕಲ್ಪಿಸುವುದು ತಪ್ಪ್ಪು. ಆದರೂ ನೋವಿನ ಕಲ್ಪನೆ ಇದು. ಯಕ್ಷಗಾನ ಅಭಿಮಾನಿ ಅಂತ ಹೇಳಿಕೊಳ್ಳುವುದು ಒಂದು ಅಭಿಮಾನದ ಸಂಕೇತ. ಮುಂದೇ ಅದೇ ಒಂದು ಅವಮಾನ ಎಂದು ಎನಿಸಲ್ಪಡುತ್ತದೆ ಎಂದಾದರೆ ಅದಕ್ಕಿಂತ ಬೇರೆ ದುರಂತವಿಲ್ಲ. ಕಪಾಲ ಇದ್ದರೆ ತಾನೇ ಕಪಾಳ ಮೋಕ್ಷದ ಅರಿವಾಗುವುದು? ಹಾಗಾಗಿ ಅಭಿಮಾನ ಇರುವುದರಿಂದ  ಯಕ್ಷಗಾನ ಅಭಿಮಾನಕ್ಕೆ ದಂತಭಗ್ನವಾದಂತಾಗಿದೆ.

ಮನುಷ್ಯನಾದವನು ಕ್ರೋಧ ಮದ ಮೋಹ ಮುಂತಾದ ಷಡ್ವೈರವನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡರೆ ಅದರಿಂದ ಸಮಾಜದ ಹಿತ ಕಾಪಾಡಿದ ಹಾಗೂ ಆಗುತ್ತದೆ. ಮನುಷ್ಯ ದೌರ್ಬಲ್ಯಗಳನ್ನು ಹೊಂದಿರುವುದು ಸಹಜವೇ ಆದರೆ,  ಅದರಿಂದ ಅನ್ಯರಿಗೆ ಘಾಸಿಯಾಗಬಾರದು ಎಂಬ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು. ಇದು ಸಧ್ಭಾವನೆ ಎನಿಸಲ್ಪಡುತ್ತದೆ. ಎಂತಿದ್ದರೂ,  ತಮ್ಮ ದೌರ್ಬಲ್ಯ ರಂಗಸ್ಥಳದ ಚೌಕಟ್ಟಿನ ಹೊರಗಿರುವಂತೆ ನೋಡಬೇಕಾದದ್ದು ಕಲೆಗೆ ಸಂಬಂಧಿಸಿದ ಪ್ರತಿಯೊಬ್ಬರ ಕರ್ತವ್ಯ.  ಇಲ್ಲವಾದರೆ ಅದರ ಅಸ್ತಿತ್ವವನ್ನೇ ಪ್ರಶ್ನಿಸಿದ ಹಾಗಾಗುತ್ತದೆ.  ಕಲಾವಿದನಾಗಲೀ ಪ್ರೇಕ್ಷಕನಾಗಲಿ ಶಿಷ್ಟಾಚಾರ ಹೊಂದಿರುವುದು ಪರೋಕ್ಷವಾಗಿ ಕಲಾಸೇವೆ ಮಾಡಿದಂತೆ . ಇಲ್ಲವಾದರೆ “ಅಭಿಮಾನಂ ದಂತ ಭಗ್ನಂ “ ಎಂದು ವಿಷಾದಿಸಬೇಕಾಗುತ್ತದೆ.





Tuesday, July 30, 2013

ಅಂತರಂಗದ ರಾವಣ ಭಾಗ ೫




ಯಾವುದೇ ವಸ್ತುವಿನ ಮೌಲ್ಯ ವೃದ್ಧಿಯಾಗುವುದು ಅದರ ಬೇಡಿಕೆ ಮತ್ತು ಜನಪ್ರಿಯತೆಗನುಸಾರ.  ಕಲೆಯ ಬಗ್ಗೆ ಅರಿವನ್ನು ಮೂಡಿಸಿ ಅದರ ಸ್ವಾದವನ್ನು ಅನುಭವಿಸುವಂತೆ ಮಾಡುವ ಪ್ರಚೋದನೆಯನ್ನು ಸೃಷ್ಟಿ ಮಾಡಬೇಕು ಕೇವಲ ಒಂದು ಆಟ ಒಂದು ತಾಳ ಮದ್ದಲೆ ಎಂಬಲ್ಲಿಗೆ ಇದು ಸೀಮಿತವಾಗದೆ ಅದರ ಅಸ್ವಾದನೆಯನ್ನು ತೋರಿಸಿಕೊಡಬೇಕು. ಅಸ್ವಾದಕರು ಆಸ್ವಾದನೆಯನ್ನು ಕಲಿತರೆ ಕಲೆ ತಾನಾಗಿ ಬೇಡಿಕೆಯನ್ನು ಜನಪ್ರಿಯತೆಯನ್ನೂ ವೃದ್ಧಿಸುತ್ತದೆ. ಒಂದು ಹೊಸದಾದ ಖಾದ್ಯ ಭಕ್ಷ್ಯವನ್ನು ಮಾಡಿದಾಗ ಅದರ ಅಸ್ವಾದನೆಯನ್ನು ತಿನ್ನುವ ಕ್ರಮವನ್ನು ಹೇಳಿಕೊಡುತ್ತಾರೆ. ಹೊಸತಾದ ಒಂದು ವಸ್ತು ಮಾರುಕಟ್ಟೆಗೆ ಬಿಡುವಾಗ ಅದರ ಬಳಕೆಯ ಬಗ್ಗೆಯೂ ತರಬೇತಿ ಕೊಡುತ್ತಾರೆ. ಒಂದು ವಸ್ತುವಿನ ಪೂರ್ಣ ಬಳಕೆಯ ಅರಿವಾದರೇ ಮಾತ್ರ ಆ ವಸ್ತು ಜನಪ್ರಿಯವಾಗಲು ಸಾಧ್ಯ. ಅಂತೇ ಯಕ್ಷಗಾನ ಕಲೆಯ ಅಸ್ವಾದನೆಯನ್ನೂ ತಿಳಿಸುವಂತಾಗಬೇಕು. 
‘ಮಗ ಮೇಘನಾದನ ಮರಣ‘ ಯೋಗ್ಯತಾವಂತ ಪುತ್ರನ ಮರಣ, ಅರಗಿಸಿಕೊಳ್ಳದಾದ ರಾವಣ.ಪರಾಜಯವನ್ನು ಮನಸ್ಸು ಸಾರಿಹೇಳಿದರೂ ಹಿಡಿದ ಛಲ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಮತ್ತೂ ಕ್ರೋಧಾವಿಷ್ಟನಾಗುತ್ತಾನೆ. ಇಂದ್ರಜಿತುವಿನ ಮರಣವನ್ನು  ಕಾಣುವ ರೀತಿ ಆ ದೃಷ್ಟಿ ಕೋನವೇ ಬೇರೆ.
“ ಆ ರಾಮ ಲಕ್ಷಣರ ಸಹಿತ......”
“ ಸೇಡು ಸೇಡು...ರಾಮಲಕ್ಷ್ಮಣರು ಇಬ್ಬರಲ್ಲಿ  ಆವಿರ್ಭವಿಸಿದ್ದು ಅಂದು. ಬೇಡದೇ ಇದ್ದ ಉದ್ಯೋಗ ಇದು ಅವರಿಗೆ. ಏನೇ ಆಗಲಿ ನನಗೆ ನೋವನ್ನುಂಟು ಮಾಡಿದರು. ನನ್ನ ಅಭಿಮಾನಕ್ಕೆ ಅವರು ಪ್ರತಿಸ್ಪರ್ಥಿಗಳಾದರು.ರೂಢಿಯ ಭಾಷೆಯಲ್ಲಿ ಹೇಳ್ತೇನೆ, ನನಗೆ ಪಂಥಾಹ್ವಾನವನ್ನು ಕೊಟ್ಟರು. ನನಗೆ ಸವಾಲಯಿತು ರಾಮಲಕ್ಷ್ಮಣರ ಕೃತಿ. ಅದನ್ನು ಸವಾಲನ್ನಾಗಿಯೇ ಸ್ವೀಕರಿಸಿದ್ದೇನೆ.ಆದರೇನಾದಿತು? ನನಗೆ ಗೊತ್ತುಂಟು ಪ್ರಪಂಚದಲ್ಲಿ ಇಬ್ಬರು ಸ್ಪರ್ಧಿಗಳಲ್ಲಿ ಇಬ್ಬರೂ ಜಯಿಸುವುದಿಲ್ಲ. ಜಯಿಸುವುದು ಯಾರಾದರೊಬ್ಬ. ನಾನು ಅದನ್ನು ಉದ್ದೇಶಿಸಿದವನಲ್ಲ. ಜಯ ಅಪಜಯವಲ್ಲ. ಯಾರು ಬದುಕುತ್ತಾರೆ ಯಾರು ಸಾಯ್ತಾರೆ ನೋಡುವ. ನೇರ ಯುದ್ದ,  ಸತ್ರೆ ಸತ್ತೇನು”

          “ಈಗ ನನಗೆ ತೋರ್ತದೆ ಏನೋ ಒಂದು ಕಾಣದ ಕೈಯ ಆಟ ಇದೆ ಇದರಲ್ಲಿ. ನೀನು ಆಲೋಚನೆ ಮಾಡು, ಸೀತೆಯರನ್ನು ರಘುವರರಿಗಿತ್ತು....ರಾಮನಿಗೆ ಸೀತೆಯನ್ನು ಕೊಡುವ ಮಾತು ಬಿಡು.. ಈ ಸೀತೆಯನ್ನು ತಾರದೇ ಇದ್ದರೂ ಈ ಯುದ್ದ ನಡೀತಿತ್ತು ಅಂತ ನನಗೆ ಈಗ ಅನ್ನಿಸ್ತದೆ.  ಇಂದ್ರಜಿತುವಿನ ಮರಣ ಕಂಡದ್ದರಿಂದ. ಈಗ ಸೀತೆಯನ್ನು ತಂದ ಮೇಲೆ ಇಂದ್ರಜಿತುವಿಗೆ ಮೃತ್ಯು ತಯಾರಾದದ್ದೇ? ಆದರೆ ಸರಿ ನೀನು ಹೇಳುವುದು. “ 
         
          ಮಂಡೋದರಿಯ ವಿನಂತಿ ಏನಿತ್ತು?   ಸೀತೆಯನ್ನು ಬಿಟ್ಟು ಕೊಟ್ಟು ಕಾಲಿಗೆ ಬಿದ್ದು ಶರಣಾದರೆ ಎಲ್ಲವೂ ಪರಿಹಾರವಾಗುತ್ತದೆ. ಸೀತೆಯನ್ನು ಒಪ್ಪಿಸು  ರಾಮನಿಗೆ ಶರಣಾಗು. ಇದನ್ನೆ ಇಲ್ಲಿ ಅಕ್ಷೇಪಿಸಿ ವಿಶ್ಲೇಷಿಸುತ್ತಾರೆ..  ಸೀತೆಗಾಗಿ ಈ ಯುದ್ದವಲ್ಲ. ಅದು ಹೇಗೆ?
“ಇಂದ್ರಾರಿಯ ಮರಣ ಯಾರಿಂದಾಗಬೇಕು? ಹನ್ನೆರಡು ವರ್ಷ ನಿದ್ರೆ ಆಹಾರ ಸತಿ ಸಂಗವನ್ನು ಬಿಟ್ಟವನಾಗಿರಬೇಕು. ಹೌದಲ್ಲ? ಇಂದ್ರಾರಿ...ಸತ್ತದ್ದು ಹೌದು. ಲಕ್ಷ್ಮಣನ ಕೈಯಿಂದ...ಹಾಗಾದರೆ ಅವನು ಹನ್ನೆರಡು ವರ್ಷ ಅನ್ನ ಬಿಟ್ಟದ್ದು ಯಾಕೆ?’

         ಸೀತೆಯನ್ನು ತರುವ ಮೊದಲೇ ಲಕ್ಷ್ಮಣ ನಿದ್ರಾಹಾರ ತೋರೆಯಬೇಕಾದರೆ ಅದಕ್ಕೆ ಪ್ರೇರಣೆ ಯಾರು?
 
“ ಲಕ್ಷ್ಮಣ ನಿದ್ರೆ ಬಿಟ್ಟದ್ದು ಯಾಕೆ? ಹೆಂಡತಿಯನ್ನು ಅಯೋಧ್ಯೆಯಲ್ಲಿ ಬಿಟ್ಟು ಬಂದದ್ದು ಯಾಕೆ? ಇಂದ್ರಜಿತುವನ್ನು ಕೊಲ್ಲುವುದಕ್ಕೆ ಬೇಕಾಗಿಯೋ?  ಏನು ಅಲ್ಲ...ಹಾಗಾದರೆ ಹಾಗೆ ಒಬ್ಬ ತಯಾರಾದ್ದಕ್ಕೆ ಅವನಿಗೆ ಗೊತ್ತಿಲ್ಲ ಉತ್ತರ ಹೇಳ್ಳಿಕ್ಕೆ..ಆಗ ನಾವು ಸನಾತನಿಗಳು ಆಸ್ತಿಕರು ಒಪ್ಪಿಕೊಳ್ಳುವುದು ವಿಧಿನಿರ್ಣಯವನ್ನು. ಸೀತೆಯನ್ನು ತಾರದೇ ಇದ್ದರೂ  ಇದು ಅನಿವಾರ್ಯ ತಾನೆ?”
ಲಕ್ಷ್ಮಣ ನಿದ್ರಾಹಾರ ಬಿಟ್ಟು ಹಲವು ವರ್ಷ ಕಳೆದ ಮೇಲೆ ಸೀತಾಪಹಾರ  ಯಾಕಾಯಿತು? ಸೀತೆಯಿಂದ ರಾವಣ ದಂಡಿಸಲ್ಪಟ್ಟ... ಸೀತೆಗಾಗಿ ಯುದ್ದ ಒಪ್ಪತಕ್ಕದ್ದೇ?         
“ಸೀತೆಯನ್ನು ನಾನು ತಂದದ್ದರಿಂದ..ಮಗನನ್ನು ಬಲಿಯಾಗಿ ಕೊಟ್ಟೆ ಅಂತ ಯಾರಾದರೂ ಹೇಳಿದರೆ ಅವರು ಪೂರ್ಣ ಜ್ಞಾನಿಗಳಲ್ಲ...ಸರಿ, ಇಂದ್ರಾರಿ ಸತ್ತ. ಯಾವುದೋ ದೈವದ ಕೈವಾಡ ಉಂಟು ಅಂತ ಗೊತ್ತಾಯಿತು. ನಾವೇನು ದೈವ ಎತ್ತಿ ಆಡಿದ ಕೈಗೂಸಾಗಿಯೇ ಕೊನೇ ಉಸಿರನ್ನು ಬಿಡೋಣವೇ?”
“ಆದರೂ ಪ್ರತೀಕಾರ ಸಾಧ್ಯವಾದೀತೆ ಸ್ವಾಮೀ?”
“ಕೊಲುವೆನೆಂಬ ಪ್ರತಿಜ್ಞೆ ದೈವಕ್ಕಿರಲಿ. ಗೆಲುವೆನೆಂಬ ಪ್ರತಿಜ್ಞೆ ಜೀವನಿಗೆ ಇದ್ರೆ ಅವನು ಪುರುಷ. ವೇದಾಂತದಲ್ಲಿ ಪುರುಷ ಶಭ್ದ ಉಂಟು. ಪುರುಷ ಅಂದ್ರೆ ಅದು ಚೇತನ. ರೂಢಿಯಲ್ಲಿ ಪುರುಷ,  ಸ್ತ್ರೀ ಅಂತ ದೇಹವನ್ನು ನೋಡಿ ಹೇಳುವುದು. ಒಳಗಿನ ಚೇತನ ಅದಕ್ಕೆ ಪುರುಷ ಅಂತ ಹೇಳುವುದು. ಆ ಪುರುಷ ಸಾಧಿಸಬೇಕಾದ್ದಕ್ಕೆ ಹೆಣ್ಣು ಶರೀರದಿಂದಾಗಲೀ ಅಥವಾ ಗಂಡು ದೇಹದಿಂದಾಗಲೀ ಪುರುಷಾರ್ಥಗಳು ಅಂತಲೇ ಹೇಳುದು. ಧರ್ಮ, ಅರ್ಥ, ಕಾಮ, ಮೋಕ್ಷ ಹೀಗೆ ಚತುರ್ವಿಧ ಪುರುಷಾರ್ಥಗಳು ಇದು ಹೆಣ್ಣಿಗೂ ಪುರುಷಾರ್ಥವೇ. ಗಂಡಿಗೂ ಪುರುಷಾರ್ಥವೇ. ಪುರುಷಾಯತ್ತ ಸಿದ್ಧಿ ಅಂದ್ರೆ ಅದು. ದೈವ ಏನು ಮಾಡಿತು? ದೈವ ಈ ಪೌರುಷದ ಮುಂದೆ ಸೋತೇ ತೀರಬೇಕು. ಸೋತು..... ಈ ಪುರುಷತ್ವಕ್ಕೆ ಅದು ಅಧೀನವಾಗಬೇಕು. ಇಲ್ಲದಿದ್ದರೆ ನಮ್ಮಲ್ಲಿ ಹೇಳುತ್ತಿಲ್ಲವ ಶಾಸ್ತ್ರದ ಮೋಕ್ಷಕ್ಕೆ ಅರ್ಥವೇ ಇಲ್ಲ. ಮೋಕ್ಷ ಪ್ರಾಪ್ತಿ. ಮೋಕ್ಷ ಸಿದ್ಧಿ. ಮೋಕ್ಷದಾನವಲ್ಲ ಮೋಕ್ಷವನ್ನು ಯಾರದರು ದಾನ ಮಾಡಿ ಪಡಕೊಳ್ಳುವದ್ದಲ್ಲ ಮೋಕ್ಷ ಸಿದ್ಧಿ. ಯಾರು ಕೊಡುವಂಥದ್ದಲ್ಲ ದೇವರೇ ಕೊಡುವಂಥದ್ದಾಗಿದ್ದರೆ ಮೋಕ್ಷ ಎಂಬುದು ಪುರುಷಾರ್ಥದ ಪಟ್ಟಿಯಿಂದ ಬಿದ್ದು ಹೋಗುತ್ತಿತ್ತು. ಧರ್ಮಾರ್ಥಕಾಮ....ಮೂರೇ ಪುರುಷಾರ್ಥ ಅಂತ..ಚತುರ್ವಿಧ ಪುರುಷಾರ್ಥ ಎಂಬುದು ಸತ್ಯ ಎಂದಾದರೆ..ದೈವವೋ, ವಿಧಿಯೋ , ಇನ್ನೊಂದೋ ಅದರ ಹಂಗ್ಯಾಕೆ. ಆದಕಾರಣ ಅದನ್ನು ಬದಿಗೊತ್ತಿ ನಾನು ಬೆಳೆಸಿಕೊಂಡು ಬಂಧಂತಹಾ ಯಾವ ಶಕ್ತಿವಿಶೇಷವಿದೆಯೋ. ....ಸಾಗಿ ಬಂದು ಆಗಿಹೋಯ್ತೇನೇ ನಿಮಗೆಲ್ಲ ಇದು ಹೇಳಿದ್ರೆ ತಲೆಗೆ ಹೋಗುವುದಿಲ್ಲ. ಒಬ್ಬ ಜೀವನದ ಯಾತ್ರೆಯಲ್ಲಿ ಬಹಳಷ್ಟು ಮುಂದೆ ಬಂದಾದ ಮೇಲೆ,  ಎಡವದೇ ತಡವದೇ.   ತನ್ನ ಮಾರ್ಗವನ್ನು ತಾನು ರೂಪಿಸಿಕೊಂಡು ಹೋದಮೇಲೆ, ಇನ್ನು ಮರಳಿ ಹಿಂದೆ ಬಾ.  ದಾರಿ ಬೇರೆ ಮಾಡು....ಅಂತ ಹೇಳುವವರಿಗೆ ದಾರಿಯ ಪರಿಚಯವೇ ಇಲ್ಲಾಂತ ಅರ್ಥ. ಇಲ್ಲಿಯವರೆಗೆ ಸಾಗಿ ಬಂದಿದ್ದೇನೆ.  ಸಾಗಿ ಬಂದ ನಾನು ಇನ್ನು ಹಿಂದೆ ಬರುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಒಂದುಂಟು ಬಗ್ಗುವ ಜಾತಿಯೇ ಅಲ್ಲ.  
 ಕಠಿಣವಾದದ್ದರಲ್ಲಿ ಎರಡು ಉಂಟು. ಒಂದು ಲೋಹ..ಇನ್ನೊಂದು ವಜ್ರ...ಅಥವಾ ಕಲ್ಲು ಪಾಷಾಣ..ಆದರೆ ಲೋಹಕ್ಕೆ ಒಂದು ಸ್ವಭಾವ ಉಂಟು ಬಿಸಿತಾಗಿದ್ರೆ ಮಿದುವಾಗ್ತದೆ  ಬಗ್ಗೀತು.. ಅದರೆ ಇದು ಬಿಸಿತಾಗಿದ್ರೂ ಮಾರ್ದವತೆ ಬಂದೀತು ಅಂತ ತಿಳ್ಕೊಳ್ಬೇಡ. ಇದನ್ನು ಯಾರಾದರೂ ಮುರೀಬೇಕು ಬಗ್ಗಿಸಿಬೇಕು ಅಂತ ಹೊರಟ್ರೆ.  ಅದ್ರೆ ಇದು ತುಂಡಾದೀತು. ಹೊರತು ಬಗ್ಗಲಾರದು.ರಾವಣನ ವ್ಯಕ್ತಿತ್ವ ಆ ತರಹದ್ದು. ತುಂಡಾದೀತು..ಆದರೆ ಬಿಸಿಯಾಗುವಾಗ ಕಾಠಿಣ್ಯವನ್ನ ಬಿಟ್ಟು ಕೊಟ್ಟು ಮಿದುವಾಗುವುದು.. ತಣ್ಣಗಾಗುವಾಗ ಕಾಠಿಣ್ಯವನ್ನು ತಾಳುವುದು..ಈ ಬಗೆಯ ದ್ವಂದ್ವ ರಾವಣನ ಜೀವನದಲ್ಲಿ ಇಲ್ಲ. ಆದಕಾರಣ ರಾಮಲಕ್ಷ್ಮಣರ ಸಹಿತ...ಆ ಕಪಿಭಟ ಸ್ತೋಮವನ್ನು ಗೆಲಿದು ...ಮತ್ತೆ ಆ ಕಥೆ ಬಿಡು..”
ಗೆಲ್ಲುತ್ತೇನೆ ಎನ್ನುವ ಆತ್ಮ ವಿಶ್ವಾಸದ ನುಡಿ ಕೇಳಿ ಮಂಡೋದರಿ ಕೇಳ್ತಾಳೆ..
.” ಅವರನ್ನೆಲ್ಲ ಗೆದ್ರು ಕೂಡ ಇವರು ಬರ್ತಾರ ಸ್ವಾಮಿ?”
“ ಯಾರು ಬರ್ಬೇಕು ನಿನಗೆ?”
“ ನಮ್ಮ ಮಕ್ಕಳಿಲ್ಲ ಸೇನಾ ಪತಿಗಳಿಲ್ಲ ಮಂತ್ರಿಗಳಿಲ್ಲ ...ಯಾರೂ ಬದುಕುಳಿದಿಲ್ಲ ನಮ್ಮಲ್ಲಿ..”
ಆದರೂ ರಾವಣನ ಅತ್ಮ ವಿಶ್ವಾಸ ...ಸತ್ತವರನ್ನೂ ಬದುಕಿಸಿಯೇನು...ಇಂದ್ರಾರಿ ಮಾಯಾಸೀತೆಯನ್ನು ಸೃಷ್ಟಿಸಿದ ಹಾಗೆ.. ಆದರೂ ಬಿಡಲಾರದ ಈ ಸಂಘರ್ಷದ ಒಳ ಮರ್ಮವೇನು? ರಾವಣ ಅದರ ಮರ್ಮವನ್ನು ಬಿಚ್ಚಿಡುತ್ತಾನೆ...
“ ನಮ್ಮಲ್ಲಿ  ವಿದ್ಯುಜ್ಜಿಂಹ ಇವನ ಮೂಲಕವಾಗಿ ರಾಮ ಲಕ್ಷ್ಮಣರ ತಲೆಯನ್ನು ಕೃತಕವಾಗಿ ನಿರ್ಮಿಸಿ ಸೀತೆಯ ಎದುರು ಎಸೆದಾಗ ಸೀತೆ ಆತ್ಮಹತ್ಯೆಗೆ ಹೊರಟಿದ್ದಳು. ನಾನು ಪರೀಕ್ಷೆ ಮಾಡದೆ ಯಾರಬಗ್ಗೆಯೂ ಏನೂ ಹೇಳುವವನಲ್ಲ.  ಆ ಕಡೆಗೆ ರಾಮ ಈ ಕಡೆಗೆ ಸೀತೆ...ಸಾಯದೆ ಉಳಿದ್ರು. ಆ ಮಾತು ಬೇರೆ. ಏನು ಮಾಡುದೂ..? ನಮ್ಮ ಒಬ್ಬ ರಾಮನ ಪಕ್ಶಕ್ಕೆ ಸಿಗದೇ ಇರುತ್ತಿದ್ದರೆ..ರಾಮಾಯಣದ ಅಧ್ಯಾಯ ಆ ಕಾಂಡಕ್ಕೆ ಮುಗಿದು ಮುಂದಿನ ಕಾಂಡ ರಾವಣಾಯಣ ಆಗಿಹೋಗುತ್ತಿತ್ತು. ಅಷ್ಟು ಮಂತ್ರಶಕ್ತಿಯಿದ್ದವನು ನಿನ್ನ ಗಂಡ ರಾವಣ. ರಾಮ ಲಕ್ಷ್ಮಣರನ್ನು ಗೆಲಿದ ಮೇಲೆ, ಈ ಗ್ರಹಣ ಇದೆಯಲ್ಲ ಇದು ಸರೀತದೆ..ಈ ಚಂದ್ರನಿಗೆ.  ಮತ್ತೊಮ್ಮೆ ಪೂರ್ಣ ಚಂದ್ರನಾಗಿ ರಾರಾಜಿಸಿ..ಸೃಷ್ಟಿಸಿಯೇನು...ಎಲ್ಲವನ್ನು ಸೃಷ್ಟಿಸಿಯೇನು ...ಆದರೂ...ಇಂದ್ರಜಿತುವಿನಂತಹ ಮಗನನ್ನು ಪಡೆದೇನೆ? ಅನುಮಾನ. ಮತ್ತೆ ದಶರಥನ ಹಾಗೆ ಪುತ್ರಕಾಮೇಷ್ಠಿ ಮಾಡಿ ಯಾರಿಗೊ ಹುಟ್ಟಿದವನಿಗೆ ಅಪ್ಪ ಆಗುವವ ನಾನಲ್ಲ. ಇಂದ್ರಜಿತುವನ್ನು ಸೃಷ್ಟಿಸಿದ್ದೇನೆ...ನನ್ನ ಮಗ ಅಂತ ತೋರಿಸಿಕೊಟ್ಟಿದ್ದೇನೆ..ಜನ ಮೆಚ್ಚಿದ್ದಾರೆ ಈ ಅಪ್ಪನಿಗೆ ಈ ಮಗ ಸರಿ. ಮಂಡೋದರಿ,  ಇದು ನೋವನ್ನು ಮರೆಯಿಸ್ಲಿಕ್ಕೆ ಈ ವಿಡಂಬನಾ ಶೈಲಿಯನ್ನು ಅನುಸರಿಸಿದ್ದು. ಏನು ಮಾಡಿದರೂ ಆ ನೋವು ಹೋಗುವುದಿಲ್ಲ.ನನ್ನ ಮಗ ಇಂದ್ರಾರಿ ಎಲ್ಲಿ ಮಣ್ಣಿಗೆ ಮಣ್ಣಾಗಿ ಹೋದ ಅಲ್ಲೇ ಮಣ್ಣಾಗಿ ಹೋದೇನು ಆದರೂ ಸೀತೆಯನ್ನಿತ್ತು ಶರಣಾಗು ಅಂತ ಮಾತ್ರ  ಹೇಳದಿರು.”
          ಇದು ಶೇಣಿಯವರ ಯೋಜನಾಬದ್ಧ ಅರ್ಥಗಾರಿಕೆ. ರಾವಣನನ್ನು ಪದರು ಪದರಾಗಿ ಬಿಚ್ಚಿಡುವಪರಿ. ಪ್ರಸಂಗ ಪಾತ್ರದ ಮೊದಲ ಪದದಿಂದಲೇ ಹೀಗೆ ಈ ಪಾತ್ರ ಅಭಿವ್ಯಕ್ತವಾಗುತ್ತದೆ ಎಂಬ ಕಲ್ಪನೆಯಿಂದಲೇ ತೊಡಗಿಸುತ್ತಾರೆ. ದೊಡ್ಡದಾದ ಹಣ್ಣನ್ನು ತುಂಡು ತುಂಡಾಗಿ ಕತ್ತರಿಸಿ ತಿನ್ನಲು ಕೊಟ್ಟಂತೆ... ಮೊದಲು ಹಣ್ಣಿನ ಮಧ್ಯಭಾಗವೇ ಆದರೂ ಆಗಬಹುದು.. ಕೆಳಭಾಗವಾದರೂ ಆಗಬಹುದು..ಹಣ್ಣಿನೆ ತೊಟ್ಟಿರುವ ಭಾಗವಾದರೂ ಆಗ ಬಹುದು. ಒಟ್ಟಿನಲ್ಲಿ ಆ ಪೂರ್ಣ ಹಣ್ಣಿನ ರಸಾಸ್ವಾದನೆಯನ್ನು ತೋರಿಸುವ ಯತ್ನ..ಬೇರೆ ಬೇರೆ ವಿಧದಲ್ಲಿ ತಿಂದು ಸವಿದ ಮೇಲೆ ಬೇರೆ ಬೇರೆ ಅನುಭವವಾಗುತ್ತದೆ. ಚಿತ್ರಕಥೆ ಸಂಭಾಷಣೆಯ ಕಡತವಿಲ್ಲದ ಈ ಅರ್ಥಗಾರಿಕೆ ಸಾಹಿತ್ಯ ಅದು ಯಕ್ಷಗಾನ ತಾಳ ಮದ್ದಲೆಯ ವೈಶಿಷ್ಟ್ಯ. ಮೊದಲ ಹಂತದಿಂದಲೇ ನಾವು ಕಂಡು ಅರಗಿಸಿದ ಪಾತ್ರದಲ್ಲೇ ನಿಗೂಢತೆಯನ್ನು ಸೃಷ್ಟಿಸಿ ಅದನ್ನು ಎಸಳೆಸಳಾಗಿ ಬಿಚ್ಚಿಡುವ ಕಲೆ, ಅದನ್ನು ಅಸ್ವಾದಿಸಿಯೇ ತಿಳಿಯಬೇಕು.
ಇಷ್ಟಾದರೂ ರಾವಣನ ಅಂತರಂಗ ಪೂರ್ಣವಾಗಿ ಬಹಿರಂಗವಾಗುವುದಿಲ್ಲ.
ರಾವಣ ಏನು ಹೇಳಿದರೂ ಮಂಡೋದರಿ ತನ್ನ ಯತ್ನ ಮುಂದುವರೆಸುತ್ತಾಳೆ. ರಾವಣ ಮಂಡೋದರಿ ಸಂಭಾಷಣೆ ಮುಂದುವರೆಯುತ್ತದೆ.
“ದೋಷೀ ನಿನ್ನಯ ಭಗಿನಿ...ರಕ್ಕಸ ಕುಲಘಾಸಿಗೈದಳು ತರುಣಿ.....”
“ಸ್ವಾಮೀ ತಾವು ಹೇಳುತ್ತಿದ್ದ ಈ ವಾದ ಸರಣಿಯನ್ನು ಕೇಳಿದಾಗ ನನಗೂ ಹೌದೇನೋ ಅನ್ನಿಸ್ತಾ ಇದೆ..ಆದರೆ ಈ ಪರಿಸ್ಥಿತಿ ನಮ್ಮ ಲಂಕಾರಾಷ್ಟ್ರಕ್ಕೆ ಬಂತಲ್ಲ? .ಯಾಕೆ? “
“ರಾಮನ ದೋಷದಿಂದ..”
“ಅಲ್ಲ ನನಗೆ ಹಾಗನ್ನಿಸುವುದಿಲ್ಲ...ಈ ಬಗ್ಗೆ ನನ್ನ ಮುಖ ಬೇರೆ ಅಂತ ತಾವು ಕೋಪಿಸಿಕೊಳ್ಳಬಾರದು.” ಮಂಡೋದರಿ ಅನುಮಾನಿಸುವಾಗ ರಾವಣ ಹೇಳ್ತಾನೆ...
“ರಾಮ ಎಷ್ಟೋ ದೂರದಲ್ಲಿದ್ದುಕೊಂಡು ನನ್ನ ಹೃದಯಕ್ಕೇ ನೋವು ಮಾಡಿದ. ನಿರಪರಾಧಿನಿಯಾದ ಹೆಣ್ಣಾದ ವಿವ್ಹಲೆಯಾದ ಗತಿಗೆಟ್ಟ..ನನ್ನ ತಂಗಿಯನ್ನು ಉಪಾಧಿಯಾಗಿ ಉಪಯೋಗಿಸಿಕೊಂಡ.”
“ಸ್ವಾಮೀ ಅವಳೇ ನಿಮ್ಮ ಕುಟುಂಬದವಳು, ನಿಮ್ಮ ತಂಗಿ. ಈ ಲಂಕಾರಾಷ್ಟ್ರದ ದುಸ್ಥಿತಿಗೆ ಅವಳೇ ಕಾರಣ. ನಾನೇನು ನಾದಿನಿಎಂಬ ದುರುದ್ದೇಶದಿಂದ ಮಾತ್ಸರಿಕ ದೃಷ್ಟಿಯಿಂದ ಹೇಳ್ತೇನೆ ಅಂತ ತಿಳೀಬಾರದು. ಏನುಂಟು ಅವಳಲ್ಲಿ ತುದಿಯೂ ಇಲ್ಲ ಬುಡವೂ ಇಲ್ಲ.ನನಗೆ ಅವಳ ಬಗ್ಗೆ ಯಾವುದೇ ಮತ್ಸರ ಇಲ್ಲ. ಸ್ವಾಮೀ ನನಗೆ ಅನ್ನಿಸ್ತದೆ ಈ ನಮ್ಮ ಲಂಕಾರಾಷ್ಟ್ರದ ದುರ್ಗತಿಗೆ ಅವಳೇ ದೋಷಿ. ಯಾಕೆಂದರೆ ಈಗ ರಾಮನಿಂದಾಗಿ ಇಷ್ಟೆಲ್ಲ ಆಯಿತು ಅಂತ ದೂಷಿಸಿತ್ತೀರಿ. ಅದರೆ ನನಗೆ ಅನ್ನಿಸ್ತದೆ ರಾಮನ ಬಳಿಗೆ ಹೋಗಿ , ರಾಮನಲ್ಲಿ ತನ್ನ ಅಲ್ಲ ಸಲ್ಲದ ವ್ಯವಹಾರವನ್ನು ಮುಂದಿಟ್ಟು ಆ ಬಳಿಕ ರಾಮನಿಂದ ಶಾಸ್ತಿಯನ್ನು ಪಡೆಯಬೇಕಾದ ಪರಿಸ್ಥಿತಿಯನ್ನು ತಂದ ಶೂರ್ಪನಖ ಕೃತ್ಯವೇ ದೋಷಪೂರ್ಣ ಅಂತ ನನಗನ್ನಿಸ್ತದೆ.”
“ ಅದು ಹೌದು, ಅದು ಒಂದು ಮುಖದ ವಾದ. ಅಷ್ಟು ತಿಳಿಯದೇ ಇದ್ದವನಲ್ಲ ನಾನು.ನಾನೇ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಿದ್ಡೆನಲ್ಲ...”ತಂಗಿಯೇ ಕುಲಕೆ ಕೇಡಾದಳು.. ನೀನು ಬರುವುದಕ್ಕೆ ಮೊದಲು ನಾನು ಅದನ್ನೇ ಮೆಲುಕು ಹಾಕ್ತಾ ಇದ್ದೆ. ತಂಗಿಯ ಸವಿ ಮಾತಿಗೆ ಹಂಗಿಗನಾದುದರಿಂದಲೇ ಭಂಗ ಪಡುವುದಾಯಿತೇ? ನಾನವಳನ್ನು ಮರೀಲಿಲ್ಲ. ನನಗೆ ಗೊತ್ತುಂಟು.  ಈಗ ಅವಳು ನನ್ನ ಉದ್ಧಾರಕ್ಕೋಸ್ಕರವಾಗಿ ಆ ಜನಸ್ಥಾನದಲ್ಲಿ ದುಡೀತಾ ಇದ್ದಾಳೆ ಅಂತ ನಾನು ಸ್ವಪ್ನದಲ್ಲಿಯೂ ಊಹಿಸಿದವನಲ್ಲ. ಅವಳನ್ನು ಇಲ್ಲಿಂದ ಅಲ್ಲಿಗೆ ಕಳುಹಿಸಿದರ ಹಿನ್ನೆಲೆ ಗೊತ್ತಿದ್ದವಳು ನೀನು. ಏನು ಮಾಡೋಣ ಅವಳ ಗಂಡ ನನ್ನ ಕೈಯಿಂದ ಸಾಯಬೇಕಾಯಿತು. ಕಾಲಕೇಯರನ್ನು ನಾನು ಗೆಲುವುದಕ್ಕೆ ಹೋದಾಗ ಇವನಿಗೂ ಬಂತು ವಂಶಾಭಿಮಾನ.ಇಲ್ಲಿ ಮನೆಯಳಿಯನಾಗಿದ್ದ. ನನಗೆ ಹಿಂದಿನಿಂದ ಚೂರಿ ಹಾಕುವುದಕ್ಕೆ ಯತ್ನಿಸಿದ. ನಾನವನಿಗೆ ತಂಗಿಯನ್ನು ಮದುವೆ ಮಾಡಿಕೊಡುವವರೆಗೆ ಅವನಿಗೆ ಅವನ ಊರಿನಲ್ಲಿ ಜಾಗವಿರಲಿಲ್ಲ. ಹಾಗಾದರೆ ಸ್ವಾಭಿಮಾನ ದೇಶಾಭಿಮಾನ...ಮೆಚ್ಚೋಣ ತಂಗಿಯ ಗಂಡ ಅಂತ ನೋಡದೆ ತಲೆಕತ್ತರಿಸಿದೆ. ಇವಳಿಗಾದ ನೋವನ್ನೂ ನಾನು ಅರ್ಥಮಾಡಿಕೊಳ್ಳಬಲ್ಲೆ. ಬಹುಕಾಲ ದಾಟಿದ ಮೇಲೆ ಅವಳಿಗೊಂದು ಪತಿಯೋಗವನ್ನು ಒದಗಿಸಿಕೊಡುವುದಕ್ಕೆ ಸಾಧ್ಯವಾದದ್ದು ನನಗೆ. ನಮ್ಮ ದೂರದ ಸಂಬಂಧಿ ಮಾವ ಮಾರೀಚ ಆಮಟ್ಟಿಗೆ ಚೆನ್ನಾಗಿ ದುಡಿದಿದ್ದಾನೆ. ನಿನಗೆ ಗೊತ್ತುಂಟು. ಏನನ್ನು ನೋಡಿ ಅವಳನ್ನು ಗಂಡಸರು ಮದುವೆಯಾಗುವುದು. ಸೌಂದರ್ಯವಾ? ಸ್ವಭಾವವೋ? ಏನಾದರೂ ಒಂದು ಬೇಕಲ್ಲ ಹೆಣ್ಣಿನಲ್ಲಿದ್ದದ್ದು. “
“ಯಾವೂದೇ ಸೌಂದರ್ಯ ಇಲ್ಲದ ಶೂರ್ಪನಖಿ ನನ್ನ ಅನುಗ್ರಹದಿಂದ ವಿವಾಹವಾದಳು. ಆದರೆ ದಾಪಂತ್ಯ ಜೀವನ ಅನುಭವಕ್ಕೆ ಬಾರದೆ ಅಕಾಲದಲ್ಲಿ ವೈಧವ್ಯ ಬಂತು. ನನ್ನಲ್ಲಿ ಹಗೆ ಹುಟ್ಟಿತು.
ಶೂರ್ಪನಖಿಯನ್ನು ದೋಷಿ ಎಂದು ಜರೆವ ಮಂಡೋದರಿಯ ಮಾತಿಗೆ ಒತ್ತು ಕೊಡುವಂತೆ ಶೂರ್ಪನಖಿಯ ವೃತ್ತಾಂತದೊಂದಿಗೆ ತನ್ನ ಅಂತರಂಗವನ್ನು ರಾವಣ ತೋರುವುದಕ್ಕೆ ಪ್ರಯತ್ನಿಸುತ್ತಾನೆ. ಈ ಸನ್ನಿವೇಶ ಬಹಳ ಸುಂದರವಾಗಿ ಸಾಂದರ್ಭಿಕವಾಗಿ ಪ್ರಸಂಗದಲ್ಲಿ ಹೆಣೆಯಲ್ಪಟ್ಟಿದೆ.  ರಾವಣನಿಂದ ರಾಮನನ್ನು ಕಾಣಬೇಕಾದರೆ ರಾವಣನ್ನು ಪೂರ್ಣವಾಗಿ ಅರಿಯದಿದ್ದರೆ ಹೇಗೆ?  ರಾಮ ಹುಟ್ಟುವ ಮೊದಲೇ ರಾಮನಾಮದ ಮೂಲಕ ಅವನನ್ನು  ತಿಳಿದರೂ, ರಾಮನೇನು ಎಂದು ರಾವಣ ಮೂಲಕ ತಿಳಿವಾಗ ಆ ಜ್ಞಾನಕ್ಕೆ ಹೆಚ್ಚು ಅರ್ಥ ಬರುತ್ತದೆ. ದನವನ್ನು ಕಂಡಾಗ ಎಳೆ ಕರು ಹೌ ಹಾರಿ ಹೋದ ಹಾಗೆ..ಹೋಗಿ ತಾಯಿದನದ ಕೆಚ್ಚಲನ್ನು ಕುಟ್ಟಿ ಕುಟ್ಟಿ ಹಾಲು ಕುಡಿದಂತೆ, ಇಲ್ಲಿ ತನಗೆ ಬೇಕಾದ ಅಮೃತ ಪಡೆಯಲು ತಾಯಿಯನ್ನು ಹಿಂಸಿಸಿ ನೋವನ್ನು ಕೊಡುತ್ತದೆ. ಕೊನೆಗೆ ತನಗೆ ಬೇಕಾದ್ದನ್ನು ತನಗೆ ಅರ್ಹವಾದುದನ್ನು ಪಡೆಯುತ್ತದೆ. ಆದರೂ ದನ ಆ ನೋವಿನಲ್ಲು ಸುಖವನ್ನು ಅನುಭವಿಸುತ್ತದೆ. ನೋವು ನಲಿವನ್ನು ಸಮನಾಗಿ ಕಾಣುವ ಬಗೆ ಹೀಗೆ. ರಾಮನನ್ನು ಹಿಂಸಿಸಿ ತನಗೆ ಬೇಕಾದುದನ್ನು ಪಡೆವದು ರಾವಣನ ಧೋರಣೆ.ಹಾಗಾಗಿಯೇ ರಾಮನೊಡನೆ ಸಂಘರ್ಷ.