"ಇದು ವಿಮರ್ಶೆಯಲ್ಲದ ಚಿಂತನ"

Sunday, June 15, 2014

ಮೂಡಣದ ಪ್ರೇರಕ ಶಕ್ತಿ ಮೂಡಂಬೈಲು


ಯಕ್ಷಗಾನದಂತಹ ಒಂದು ಪಾರಂಪರಿಕ ಕಲೆ ಬೆಳೆದು ಬರಬೇಕೆಂದರೆ ಅದಕ್ಕೆ ಪರಂಪರೆಯೇ ತೆರೆದು ನಿಲ್ಲಿಸಿದ ಒಂದು ಹಾದಿ ಮುಖ್ಯವಾಗುತ್ತದೆ. ಎಳೆಯ  ಕರು ಭೂಮಿಗೆ ತಾಯಿ ಒಡಲಿಂದ  ಬಿದ್ದಾಗ ಅದರ ಮುಂದಿನ ಪ್ರವೃತ್ತಿಗೆ ಯಾವುದೇ ಶಾಸ್ತ್ರ ಸಮ್ಮತವಾದ ಜೀವನ ಕ್ರಮ ಸಿದ್ಧವಾಗಿರುವುದಿಲ್ಲ. ತಾಯಿ ಹಸು ಬಿದ್ದ ಕರುವನ್ನು ಸ್ವಪ್ರಚೋದನೆಯಿಂದಲೆ ತಡವುತ್ತದೆ, ಮತ್ತು ಆಮುಖೇನ ಆ ಕಂದ ಕರುವಿಗೆ ಅತ್ಯಂತ ಪ್ರಾಥಮಿಕವಾಗಿ ಸಿಗಬೇಕಾದ ಆರೈಕೆಯ ಅವಶ್ಯಕತೆಯನ್ನು ಬಾಹ್ಯ ಪ್ರಚೋದನೆ ಇಲ್ಲದೇನೆ ಅದು ನೀಡುತ್ತದೆ. ಕಂದ ಕರುವು ತೀರಾ ಅಪರಿಚಿತ ಕ್ಷೇತ್ರಕ್ಕೆ ಬಂದ ಒಡನೆ ಕರುವು ಎದ್ದು ನಿಲ್ಲುವುದಕ್ಕೆಪ್ರಯತ್ನಿಸಿ ಎದ್ದು ನಿಂತೊಡನೆ ತಾಯಿ ಕೆಚ್ಚಲನ್ನು ಅರಸಿ ಬಾಯಿ ಹಾಕಿ ಬಿಡುತ್ತದೆ. ಈತೆರನ ಅಲಿಖಿತ ನಿಯಮದಂತೆ ಯಕ್ಷಗಾನದಲ್ಲಿ ವರ್ತಮಾನದ ಹಾದಿ ತೆರೆದುಕೊಳ್ಳುವುದು ಭೂತಕಾಲದ ಅನುಭವದಿಂದ. ಇದಕ್ಕೆ ಶಾಸ್ತ್ರೀಯ ಕ್ರಮ ಇಲ್ಲದೇ ಇದ್ದರೂ ಪರಂಪರೆಯ ತಳಹದಿಯಲ್ಲಿ  ನಿರ್ಮಿಸಿದ ಒಂದು ಸ್ತಂಭಗಳ ಚೌಕಟ್ಟು ಇದೆ. ಆ ನಡುವೆ ಯಕ್ಷಗಾನದ ಒಂದೊಂದು ಕಲ್ಲುಗಳು ಇಡಲ್ಪಟ್ಟು ಮುಂದೆ ಇಡಬಹುದಾದಂತ ಕಲ್ಲುಗಳಿಗೆ ಒಂದು ನಿರ್ದಿಷ್ಟವಾದ ಜಾಗ ನಿಗದಿಯಾಗಿರುತ್ತದೆ. ಇದರ ಅರಿವಾಗಬೇಕಾದರೆ ಸ್ಥಿರವಾಗಿ ನಿಂತಕಲ್ಲು ತನ್ನ ಆಯವನ್ನು ಕಂಡುಕೊಳ್ಳಬೇಕು.  ಈ ಆಯವನ್ನು ಅರಿತುಕೊಳ್ಳುವುದಕ್ಕೆ ಇಂದು ನಮ್ಮ ಮುಂದಿರುವುದು ಹಿಂದಿನವರು ನಮ್ಮ ಮುಂದೆ ಬಿಟ್ಟು ಹೋದ ಹೆಜ್ಜೆಯ ಪಡಿಯಚ್ಚುಗಳು ಮಾತ್ರ. ಆ ಹೆಜ್ಜೆಗಳನ್ನು ಗುರುತಿಸಿ ಮುಂದಿನ ಆಯಾಮವನ್ನು ಪಡೆದುಕೊಳ್ಳಬೇಕಾಗುತ್ತದೆ.

ಇಂದು ಯಕ್ಷಗಾನ ಬಯಲಾಟವನ್ನೋ ತಾಳಮದ್ದಲೆಯನ್ನೋ ನಮ್ಮ ಕ್ರಿಯಾ ಶಕ್ತಿಗೋ ಇಚ್ಛಾಶಕ್ತಿಗೋ ಅನುಸಾರವಾಗಿ ಮಾಡಿ ಆ ಮೂಲಕ ತಮ್ಮ  ಮಟ್ಟಿಗಿನ ಕಲಾಸೇವೆಯನ್ನು ನಾವು ಮಾಡಿ ತೃಪ್ತಿಯನ್ನು ಕಾಣಬಹುದು. ಆದರೂ ಇಲ್ಲೆಲ್ಲೋ ಯಾವುದೋ ತಂತು ಕಳೆದು ಹೋದ ಅನುಭವ ಆಗುವುದಲ್ಲವೇ?  ಮುತ್ತಿನ ಮಣಿಯ ಮಾಲೆಯನ್ನು ಬೆಸೆವ ದಾರ ಕಳಚಿ ಕಳೆದು ಹೋದಮೇಲೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಮುತ್ತುಗಳ ಹಾಗೆ ಎಲ್ಲವೂ ಇದೆ.  ಆದರೆ ಎಲ್ಲೋ ಯಾವುದೋ ಕಳೆದು ಹೋಗಿದೆ. ಹಲವು ಸಲ ಕಳೆದು ಹೋದದ್ದು ಏನು ಎಂಬ ಅರಿವೇ ನಮಗೆ ಸಾಧ್ಯವಾಗುವುದಿಲ್ಲ.
ಯಕ್ಷಗಾನ ಅದು ಬಯಲಾಟವಾಗಲೀ ತಾಳ ಮದ್ದಲೆಯಾಗಲೀ ಇಂದು ಕಳೆದ ಹಳೆಯ ನೆನಪುಗಳನ್ನೇ ಮೆಲುಕು ಹಾಕುತ್ತಾ ಆ ನೆನಪಿನ ಸುಳಿಯಿಂದ ಹೊರಬರಲಾರದೇ ಅಂದಿನ ಆಕಾಲಕ್ಕೂ ಈ ಕಾಲದ ಯಕ್ಷಗಾನಕ್ಕೂ ಹೋಲಿಕೆ ಮಾಡುವ ಸ್ಥಿತಿ ಇಂದು. ಅನುಭದಿಂದ ಕಲಿಯುವಂತಹ ಪರಿಸ್ಥಿತಿ ಕಾಣದೇ ಇದ್ದರೂ ಅವುಗಳನ್ನು ನೆನಪಿನ ಬುತ್ತಿಯಲ್ಲಿ ಕಟ್ಟಿಡುವುದನ್ನು ಬಿಡುವುದಿಲ್ಲ. ಇಂದು ಆ ಅನುಭವಗಳು ಬೇಕೆಂದರೂ ಲಭ್ಯವಿಲ್ಲ. ಬರೀ ನೆನಪಿನ ಬುತ್ತಿಯಲ್ಲಿ ಕಟ್ಟಿಟ್ಟ ಆ ಮುತ್ತುಗಳು ಸೂಕ್ತ ದಾಖಲೀಕರಣವಿಲ್ಲದೆ ಚದುರಿದ ಚಿತ್ರಗಳಂತೆ, ಆಕಾಶದ ನಕ್ಷತ್ರಗಳಂತೆ ಕೈಗೆ ಸಿಗುವುದಿಲ್ಲ. ಎಲ್ಲೋ ಇತ್ತು, ಅದು ಹೀಗಿರಬಹುದೇ ಎಂಬ ಊಹನೆ ಮಾತ್ರ.
ಸರಿದು ಹೋದ ಅನುಭವಗಳು ಭವಿಷ್ಯತ್ತನ್ನು ರೂಪಿಸುತ್ತವೆ. ಭವಿಷ್ಯತ್ತಿನ ಕವಲು ದಾರಿಗಳಲ್ಲಿ ಸಂದೇಹ ಉಂಟಾದಾಗ ಗತಿಸಿದ ಅನುಭವಗಳು ಸಂದೇಹ ನಿವಾರಣೆಯನ್ನು ಮಾಡಬಲ್ಲುದು. ಅದೇ ದಾರಿಯನ್ನೂ ಅದೇ ಸಮಸ್ಯೆಗಳನ್ನು ಎದುರಿಸಿದ ಹಿರಿಯರ ಅನುಭವ ಇಲ್ಲಿ ಉಪಯುಕ್ತವಾಗುತ್ತದೆ. ಈ ಅನುಭವಗಳ ಮೌಲ್ಯಗಳನ್ನು ಗುರುತಿಸಿ ಅದನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ವೇಣೂರಿನ ಮಿತ್ರ ಕಜೆ ಸುಬ್ರಹ್ಮಣ್ಯ ಭಟ್ಟರು ಸರಳವಾದ ಕ್ರಿಯಾತ್ಮಕ ಪ್ರವೃತ್ತಿಯನ್ನು ತೋರ್ಪಡಿಸಿದರು. ಅದು ಯಕ್ಷಗಾನದ ಹಿರಿಯ ಅರ್ಥಧಾರಿ ಮಹಾನ್ ಮೇಧಾವಿ ಶ್ರೀಯುತ ಮೂಡಂಬೈಲು ಗೋಪಾಲ ಕೃಷ್ಣ ಶಾಸ್ತ್ರಿಗಳ ಅನುಭವಗಳನ್ನು ಸಂಗ್ರಹಿಸುವ ಕಾರ್ಯ. ಇವರ ಕ್ಯಾಮರ  ಕಣ್ಣೆದುರು ಶಾಸ್ತ್ರಿಗಳು ತಮ್ಮ ಅನುಭವಗಳ ಸಿಂಚನವನ್ನು ಸಿಂಪಡಿಸಿ ಯಕ್ಷಗಾನದ ಮೌಲ್ಯವನ್ನು ನನಪಿಸುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದು.   
ಮೂಡಂಬೈಲು ಇವರ ಬಗ್ಗೆ ಯಕ್ಷಗಾನ ವಲಯದಲ್ಲಿ ಅರಿಯದವರು ಇಲ್ಲ. ವರ್ತಮಾನದ ಅತ್ಯಂತ ಹಿರಿಯ ತಾಳಮದ್ದಲೆಯ  ಅರ್ಥಧಾರಿಗಳು,  ವಿದ್ವಾಂಸರು , ತಮ್ಮ ಪ್ರೌಢಿಮೆ ಮತ್ತು ಪಾಂಡಿತ್ಯದಿಂದ ನಿಜಾರ್ಥದಲ್ಲಿಯೂ ಯಕ್ಷಗಾನದ ’ಅರ್ಥ’ ಧಾರಿಗಳು. ಅಮೋಘವಾದ ಪಾಂಡಿತ್ಯದಿಂದ ಕೂಡಿದ ಮತ್ತು ಅದನ್ನು ನಿರರ್ಗಳವಾಗಿ ಮತ್ತು ಸರಳವಾಗಿ ಮಂಡಿಸುವ ಮೂಡಂಬೈಲು ಶಾಸ್ತ್ರಿಗಳ ಅರ್ಥಗಾರಿಕೆ ವಿದ್ವತ್ ಸಂಚಾರವಾದಂತೆ. ಪುರಾಣ ವ್ಯಾಕರಣ ಉಪನಿಷತ್ ಹೀಗೆ ಯಾವುದೇ ಆಗಲಿ ಮೂಡಂಬೈಲು ಅರ್ಥಗಾರಿಕೆಯಲ್ಲಿ ಇವುಗಳು ನಿಜ ಅರ್ಥವನ್ನೇ ಬಿಂಬಿಸುತ್ತದೆ. ಅರ್ಥಾತ್, ಒಂದು ಮೌಲ್ಯ ಯುತ ಅರ್ಥಗಾರಿಕೆ ಮೂಡಂಬೈಲುರವರದ್ದು. ಪೌರಾಣಿಕ ಪ್ರಸಂಗಗಳ ಯಾವುದೇ ಸಂದರ್ಭವಾದರೂ ಸರಿಯೇ ಅದರ ಬಗ್ಗೆ ತನ್ನದೆ ಆದ ವಿಶ್ಲೇಷಣೆಯನ್ನು ವಿಶೇಷತೆಯನ್ನು ನಿರರ್ಗಳವಾಗಿ ಉಪಮೇ ಸಹಿತ ಅರ್ಥವಾಗುವಂತೆ ಮಂಡಿಸಬಲ್ಲರು. ಮೂಡಂಬೈಲಿನ  ಒಂದು ಪಯಣದ ಅನುಭವ ಮೂಡಣದ ಹೊಂಗಿರಣದಂತೆ,  ಹೊಸ ವಿಚಾರಗಳ ದರ್ಶನವನ್ನು ಮಾಡಿಸುತ್ತದೆ.

ನೀವು ಮೆಚ್ಚುವ ಕಲಾವಿದರು ಯಾರು? ನಿಮ್ಮ ಮೆಚ್ಚಿನ ಪ್ರಸಂಗ ಯಾ ಪಾತ್ರ ಯಾವುದು? ಹೀಗೆ ಸಾಮಾನ್ಯವಾಗಿ ಕಲಾವಿದರುಗಳ ಸಂದರ್ಶನದಲ್ಲಿ ಕಲೆಗಿಂತಲೂ ವೈಯಕ್ತಿಕ ವಿಚಾರಗಳು ಹೆಚ್ಚು ಪ್ರಾಮುಖ್ಯತೆಯನ್ನು ಗಳಿಸುತ್ತವೆ. ಇದು ಒಂದುರೀತಿಯ ವ್ಯಕ್ತಿ ಪೂಜೆಯಂತೆ. ಕಲೆಗಿಂತಲೂ ವ್ಯಕ್ತಿ ದೊಡ್ಡವನು ಎಂಬ ಭಾವ ಮನದ ಮೂಲೆಯಲ್ಲಿರುವುದೇ ಇದಕ್ಕೆ ಕಾರಣ. ವೈಶಿಷ್ಟ್ಯವೆಂದರೆ ಈ ಸಂದರ್ಶನದ  ಪ್ರಶ್ನೆಗಳಲ್ಲಿ,  ಜಿಜ್ಞಾಸೆಗಳಲ್ಲಿ  ಇಂತಹ ಪ್ರವೃತ್ತಿ ಎಲ್ಲಿಯೂ ಕಾಣುವುದಿಲ್ಲ. ವೈಯಕ್ತಿಕ ವಿಚಾರಗಳತ್ತ ಸುಳಿಯದೇ  ಸಮಗ್ರವಾಗಿ ಯಕ್ಷಗಾನ ಮತ್ತು ತಾಳಮದ್ದಲೆಯ ವಿಚಾರಗಳು ಹೆಚ್ಚು ಮಥಿಸಲ್ಪಟ್ಟಿವೆ. ಈ ಒಂದು ವಿಶೇಷತೆಯಿಂದಲೇ ಈ ಸಂದರ್ಶನದ ಆಶಯವನ್ನು ಸ್ಪಷ್ಟವಾಗಿ ಗುರುತಿಸಬಹುದು. ಇಲ್ಲಿ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳ ಸಂಕ್ಷಿಪ್ತ ಭಾವ ವಿಶ್ಲೇಷಣೆಯನ್ನು ತಕ್ಕ ಮಟ್ಟಿಗೆ ಮಂಡಿಸುವ ಯತ್ನವಿದು.

ಯಕ್ಷಗಾನ ತಾಳ ಮದಲೆಯಲ್ಲಿ ಪಾತ್ರ ಚಿತ್ರಣ ಹೇಗಿರಬೇಕು ?

  ಅರ್ಥಗಾರಿಕೆಯಲ್ಲಿ ಲೌಕಿಕವಾದ ವಿಚಾರಗಳನ್ನು ಬಳಸಬಾರದು. ವಿಚಾರಗಳು ಪೌರಾಣಿಕವಾಗಿ,  ಪೌರಾಣಿಕ ಕ್ರಮದಲ್ಲೇ ಇರಬೇಕು. ಸ್ವಾಭಾವಿಕ ಕ್ರಮ ಎಂಬ ಸಾಮಾಜಿಕ ಪದ್ದತಿಯಲ್ಲಿರಬಾರದು. ಪೌರಾಣಿಕ ಕ್ರಮದಲ್ಲಿ ಇಲ್ಲದಿದ್ದರೆ ಅವುಗಳು ಔಚಿತ್ಯವನ್ನು ಪಡೆಯುವುದಿಲ್ಲ.  ಆವಾಗ ಅರ್ಥಗಾರಿಕೆ ಅರ್ಥ ಪೂರ್ಣವಾಗಿರುತ್ತದೆ. ಸಮಕಾಲೀನ ವಿಚಾರಗಳು ಬಂದಾಗ ಅಸಹಜತೆ ಕಾಣಿಸಿಕೊಳ್ಳುವುದಲ್ಲದೆ ಉಂಟು ಮಾಡಬೇಕಾದ ಪ್ರಭಾವದಲ್ಲಿ ಕೊರತೆಯಾಗುತ್ತದೆ. ಲೌಕಿಕ ವಿಚಾರಗಳು ನಮ್ಮನ್ನು ಈ ಲೋಕದಲ್ಲೇ ಸ್ಥಿರವಾಗಿಸುತ್ತವೆ, ಹೊರತು ಅದು ಪೌರಾಣಿಕ ಲೋಕಕ್ಕೆ ಒಯ್ಯುವುದಿಲ್ಲ.
ಇಲ್ಲಿ ಪ್ರೇಕ್ಷಕ ಎರಡು ಕಾಲಗಳ ಮಧ್ಯೆ ಕಾಲ್ಪನಿಕವಾಗಿ ಸಂಚರಿಸುವಾಗ ಅದು ಅಸ್ವಾಭಾವಿಕವಾಗಿ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇದು ಪಾತ್ರಗಳ ನಿಲುಮೆಯಲ್ಲೂ ವೆತ್ಯಾಸವನ್ನುಂಟುಮಾಡುತ್ತದೆ. ಹಾಗಾಗಿ ಇದೆಲ್ಲ  ಪೌರಾಣಿಕ ಸನ್ನಿವೇಶದ  ಒಟ್ಟು ಚಿತ್ರಣದಲ್ಲಿ ಅಸಹಜತೆಯನ್ನು ಬಿಂಬಿಸುತ್ತದೆ.

ಸಾಮಾನ್ಯವಾಗಿ ಪಾತ್ರಧಾರಿಗಳು ಪಾತ್ರವನ್ನು ನಿರ್ವಹಿಸುವಾಗ ಅವರು ಪ್ರಸಂಗಕ್ಕೆ ನಿಷ್ಠರಾಗಿರಬೇಕೋ?  ಅಥವಾ ಮೂಲ ಕಾವ್ಯಕ್ಕೆ ನಿಷ್ಠರಾಗಿರಬೇಕೋ? ಹಲವು ಸಲ ಮೂಲ ಕಾವ್ಯಕ್ಕೂ ಪ್ರಸಂಗ ಚಿತ್ರಣಕ್ಕೂ ಬಹಳ ವೆತ್ಯಾಸವಿರುತ್ತದೆ. ಆವಾಗ ಯಾವುದನ್ನು ಆಧಾರವಾಗಿಟ್ಟುಕೊಳ್ಳಬೇಕು?

          ಮೂಲವಾಗಿ ಪ್ರಸಂಗಕ್ಕೆ ಆದ್ಯತೆಯನ್ನು ನೀಡಬೇಕು. ಇಲ್ಲವಾದಲ್ಲಿ ಆ ಪ್ರಸಂಗದಲ್ಲಿ ಬರುವ ಎಲ್ಲಾ ಪಾತ್ರಗಳಲ್ಲಿ ಅದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಒಬ್ಬ ಪ್ರಸಂಗ ಬಿಟ್ಟು  ಮೂಲ ಆಕರವನ್ನು ಆಧರಿಸಿ ಮಾತನಾಡಿದರೆ ಅದು ಪ್ರಸಂಗಕ್ಕೆ ವಿರುದ್ಧವಾಗಿದ್ದರೆ ಆಗ ಮತ್ತೊಬ್ಬ ಮಾತನಾಡುವುದು ಹೇಗೆ?  ಆಗ ಪಾತ್ರಗಳ ನಡುವೆ ಪ್ರಸಂಗದಲ್ಲಿ ತದ್ವಿರುದ್ಧವಾದ ಹೇಳಿಕೆಗಳು ಕೊಡಲ್ಪಡುತ್ತವೆ. ಇದಕ್ಕೆ ಸುಧನ್ವ ಕಾಳಗದ ಉದಾಹರಣೆಯನ್ನು ಶಾಸ್ತ್ರಿಗಳು ಉದ್ದರಿಸುತ್ತಾರೆ. ಈ ಪ್ರಸಂಗದಲ್ಲಿ  ಸುಧನ್ವನನ್ನು ಕೊಲ್ಲಿಸುವ ಸಂದರ್ಭದಲ್ಲಿ ಪ್ರಸಂಗವನ್ನು ಆಧರಿಸಿ,  ಶ್ರೀಕೃಷ್ಣ,   ಅರ್ಜುನ ಬಿಡುವ ಬಾಣಕ್ಕೆ ತುದಿಯಲ್ಲಿ ಲಯಕಾರಕ ಈಶ್ವರ, ಮಧ್ಯದಲ್ಲಿ ವಿಷ್ಣು, ಬುಡದಲ್ಲಿ ಜಯಕಾರಕನಾದಂತಹ ಬ್ರಹ್ಮ ಹೀಗೆ ತ್ರಿಮೂರ್ತಿಗಳನ್ನು ಆವಾಹಿಸುತ್ತಾನೆ.  ಆದರೆ ಮೂಲ ಜೈಮಿನಿ ಭಾರತಲ್ಲಿ,  ಬಾಣದ ತುದಿಯಲ್ಲಿಯೇ ವಿಷ್ಣುವನ್ನೇ ಅವಾಹಿಸಿಬಿಡುತ್ತಾನೆ. ಇಲ್ಲಿ ಶ್ರೀಕೃಷ್ಣ ಹೇಳುವುದೊಂದು ಸುಧನ್ವ ಅದಕ್ಕೆ ವ್ಯಾಖ್ಯಾನ ಮಾಡುವುದು ಇನ್ನೊಂದೋ  ಆದರೆ ಪ್ರೇಕ್ಷಕ ಗೊಂದಲದಲ್ಲಿ ಸಿಕ್ಕಿಬಿಡುತ್ತಾನೆ. ಇಲ್ಲಿ ಪ್ರಸಂಗದ ಅಶಯವೇ ಪ್ರಧಾನ. ಹಾಗಾಗಿ ಮೂಲ ಕಾವ್ಯವಸ್ತು ಪ್ರಸಂಗಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು.
ಆದರೆ ಜೈಮಿನಿ ಭಾರತದಂತಹ ಮೂಲ ಆಕರವನ್ನು ಇಂದಿನ ಯುವ ಅರ್ಥಧಾರಿಗಳು ಎಷ್ಟು ಅಭ್ಯಾಸ ಮಾಡಿದ್ದಾರೆ ಮತ್ತು, ಅದರ ಬಗ್ಗೆ ಎಷ್ಟು ತಿಳಿದು ಕೊಂಡಿದ್ದಾರೆ ಎಂಬ ವಿಚಾರ ಕೂಡ ಈ ಮಧ್ಯೆ ಗಮನಾರ್ಹವಾಗಿಬಿಡುತ್ತದೆ.  ಹಿಂದಿನ ತಾಳ ಮದ್ದಲೆಗಳ ಧ್ವನಿ ಮುದ್ರಣವನ್ನಷ್ಟೇ ಕೇಳಿ ಅದನ್ನು ಯಾಥಾವತ್ ವರದಿ ಒಪ್ಪಿಸುವಲ್ಲಿ, ಈ ಪ್ರಶ್ನೆಯ ಉತ್ತರದ ಒಳ ಆಶಯ ಮತ್ತು ಗಂಭೀರತೆಯನ್ನು ಮನಗಾಣಬೇಕು.  

ತಾಳ ಮದ್ದಲೆ ಅರ್ಥಗಾರಿಕೆಯಲ್ಲಿ ವೈಚಾರಿಕತೆ ಇರಬೇಕೆ? ಇದ್ದರೆ ಎಷ್ಟಿರಬೇಕು?

ತಾಳಮದ್ದಲೆ ಅರ್ಥಗಾರಿಕೆಯಲ್ಲಿ ವೈಚಾರಿಕತೆ ತಕ್ಕ ಮಟ್ಟಿಗೆ ಇರಲೇಬೇಕು. ಯಾಕೆಂದರೆ ಇದು ಬಯಲಾಟದ ಹಾಗೆ ಅಲ್ಲ. ಬಯಲಾಟದಲ್ಲಿ ಕುಣಿತ ಆಂಗಿಕ ಅಭಿನಯ ಬಣ್ಣಗಾರಿಕೆ ವೇಷಗಳೇ ಪ್ರಾಮುಖ್ಯ. ಇಲ್ಲಿ ಮಾತುಗಾರಿಕೆಯೇ ಪ್ರಾಮುಖ್ಯ. ಇಲ್ಲಿ ಪಾತ್ರಧಾರಿ ಮಾತು ಸಂಭಾಷಣೆಯಿಂದಲೇ ಪಾತ್ರವನ್ನು ದೃಶ್ಯವನ್ನು ಕಟ್ಟಬೇಕು. ವಿಚಾರಾತ್ಮಕವಾದ ವಿಮರ್ಶೆ,  ಸಂಭಾಷಣೆ ಇಲ್ಲಿ ಅನಿವಾರ್ಯ. ಆದರೆ ಇವುಗಳು ಕಾಲಮಿತಿಯನ್ನು ಅನುಸರಿಸಿ ಇರಬೇಕು. ಪಾತ್ರಗಳ ವ್ಯವಹಾರ ಪೌರಾಣಿಕ ಕಾಲದಲ್ಲೇ ಇರಬೇಕು. ಅದು ಈಗಿನ ಕಾಲಕ್ಕೆ ಬರಬಾರದು. ಈ ಕಾಲಕ್ಕೆ ಬಂದಲ್ಲಿ ಅದು ತಾತ್ಕಾಲಿಕವಾದ ರಾಜಕೀಯ ಸಾಮಾಜಿಕ ವಿಮರ್ಷೆಗಳೇ ಬಂದುಬಿಡುತ್ತದೆ.ಇದನ್ನು ಕೇಳುವುದಕ್ಕೆ ತಾಳಮದ್ದಲೆಗೆ ಹೋಗಬೇಕೆಂದಿಲ್ಲ. ತಾಳಮದ್ದಲೆ ಯಾಕೆ ಇರುವುದು? ಆಗಿನ ಕಾಲದ ಚಿತ್ರಣಕ್ಕೆ. ನಮ್ಮನ್ನು ಪೌರಾಣಿಕ ಕಾಲಕ್ಕೆ ತೆದುಕೊಂಡು ಹೋಗುವ ಹಾಗಿರಬೇಕು ಹೊರತು ಪೌರಾಣಿಕ ಪಾತ್ರ ಸಂದರ್ಭಗಳನ್ನು ಈಗಿನ ಕಾಲಕ್ಕೆ ಎಳೆದು ತರುವುದಲ್ಲ.  ಈಗಿನ ಯಕ್ಷಗಾನದಲ್ಲಿ ಈ ವೆತ್ಯಾಸವನ್ನು ಬಹಳಷ್ಟು ಗುರುತಿಸಬಹುದು. ಉದಾಹರಣೆಗೆ ಶೂರ್ಪನಖಿಯ ಪಾತ್ರಧಾರಿ ತನ್ನ ಸೌಂದರ್ಯ ಹೇಗಿರಬೇಕೆಂದು ಕಲ್ಪಿಸಿ ಮಾತನಾಡುವಾಗ ಎರಡು ಜಡೆ ಹಾಕುವುದು ಮುಂತಾದ ವರ್ತಮಾನದ ವಿಚಾರಗಳನ್ನು ಸೇರಿಸುವಾಗ ಆ ಕಾಲದಲ್ಲಿ ಹಾಗಿತ್ತೇ ಎಂದು ಯೋಚಿಸಬೇಕಾಗುತ್ತದೆ. ಇದು ಪ್ರಸಂಗಕ್ಕೆ ಅಸಹಜತೆಯನ್ನೇ ಕೊಡುತ್ತದೆ.

ತಾಳ ಮದ್ದಲೆ ಎಂದ ಕೂಡಲೇ ಅದು ನಮ್ಮ ವಿದ್ವತ್ ಪ್ರದರ್ಶನಕ್ಕೆ ಅವಕಾಶ ಎಂದು ಹೆಚ್ಚಿನವರು ತಿಳಿದುಕೊಳ್ಳುತ್ತಾರೆ. ಕೆಲವೊಂದು ಪ್ರಸಂಗಗಳೂ ಹಾಗೆ ಅತ್ಯಂತ ಗಂಭೀರವಾದ ಚರ್ಚೆಯನ್ನು ಬಯಸುತ್ತದೆ. ಇಲ್ಲಿ ನಮ್ಮ ವಿದ್ವತ್ ಪ್ರದರ್ಶನ ಎಷ್ಟು ಮಾಡಬೇಕು? ಎದುರು ಅರ್ಥಧಾರಿ ತಮ್ಮ ಮಟ್ಟಕ್ಕೆ ಇಲ್ಲ ಎಂದಾಗ ನಮ್ಮ ವಿದ್ವತ್ ನ್ನೇ ಪ್ರದರ್ಶಿಸುವುದು ಸರಿಯೋ?

ನಮ್ಮ ವಿದ್ವತ್ ನ್ನೇ ನಾವು ಪ್ರದರ್ಶಿಸಿ ಇದಿರಾಳಿಯನ್ನು ಖಂಡಿಸುವುದಂತೂ ಅಲ್ಲವೇ ಅಲ್ಲ. ಬದಲಾಗಿ ನಮ್ಮ ವಿದ್ವತ್ ನ್ನು ಪ್ರದರ್ಶಿಸುತ್ತಾ ಇದಿರಾಳಿ ಚಿಕ್ಕ ಅರ್ಥದವನೇ ಆಗಿದ್ದರೂ ಅವನನ್ನು ಎತ್ತಿಕೊಂಡು ಹೋಗುವುದೇ ತಾಳ ಮದ್ದಲೆಯ ಸಹಜ ಸ್ವಭಾವ ಗುಣ. ಪಾತ್ರದ ಅರ್ಥ ಸಣ್ಣದೇ ಆದರೂ ಅದು ಈ ಪಾತ್ರವನ್ನು ಬೆಳೆಸುವುದಕ್ಕೆ ಅತ್ಯಂತ ಅವಶ್ಯ. ಕರ್ಣಪರ್ವದ ಕರ್ಣ ಪಾತ್ರಧಾರಿ ಉದ್ದುದ್ದ ಮಾತನಾಡಬಹುದು. ಆದರೆ ಎದುರು ಸರ್ಪಾಸ್ತ್ರದ ಪಾತ್ರಧಾರಿಗೆ ಮಾತಾನಾಡುವುದಕ್ಕೆ ಅನುವು ಮಾಡಿಕೊಡಬೇಕು. ಅದು ಪ್ರಸಂಗದ ಆಶಯ. ಆಲ್ಲಿ ಎದುರು ಪಾತ್ರದ ದಮನ ಖಂಡಿತಾ ಸಲ್ಲದು.
ಪಾತ್ರ ದಮನಿಸಲ್ಪಟ್ಟರೆ ಪ್ರಸಂಗ ದಮನವಾಗುತ್ತದೆ.  ಪ್ರಸಂಗ ದಮನವಾದರೆ ತಾಳಮದ್ದಲೆಯೇ ಅರ್ಥಹೀನವಾಗುತ್ತದೆ. ಇಲ್ಲಿ ಹಿರಿಯ ಅರ್ಥ ಧಾರಿಯ ವಿಚಾರಗಳು ಗೆಲುವನ್ನು ಪಡೆದರು ತಾಳಮದ್ದಲೆ ಸಂಪೂರ್ಣ ವೈಫಲ್ಯವನ್ನು ಅನುಭವಿಸುತ್ತದೆ. ಸರ್ಪಾಸ್ತ್ರದ ಎರಡು ಪದದ ಅರ್ಥವಾದರೂ ಅದು ಸರಿಯಾಗಿ ಹೊಂದಿಕೊಂಡು ಬಾರದಿದ್ದಲ್ಲಿ ಕರ್ಣ ಏನು ಮಾಡಬಹುದು? ಇಲ್ಲಿ ಕರ್ಣನ ಪಾತ್ರ ಬೆಳೆಯಬೇಕಾದರೆ ಸರ್ಪಾಸ್ತ್ರದ ಗೆಲುವು ಅನಿವಾರ್ಯ.

ತಾಳಮದ್ದಲೆಯನ್ನು ವಿದ್ಯಾರ್ಥೀ ದೆಸೆಯಲ್ಲಿ ಕಲಿಯುವಾಗ ವಿದ್ಯಾರ್ಥಿಗಳಿಗೆ ಹೇಳುತ್ತೇವೆ, ತಾಳಮದ್ದಲೆ ಭಾಷಾ ಶುದ್ದತೆಯನ್ನು ನೀಡುತ್ತದೆ. ಮಾತು ಸಭಾ ಕಂಪನವನ್ನು ನೀಗಿಸುತ್ತದೆ. ನಮ್ಮನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಹಾಯಕವಾಗುತ್ತದೆ. ಹೀಗಾಗಿ ಇದನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳ ಬಹುದು?

ಪ್ರಾಥಮಿಕ ಹಂತದಲ್ಲಿ ಚಿಕ್ಕವರಿಗೆ ಆದರೂ ದೊಡ್ಡವರಿಗೇ ಆದರು ತಮಗಿರುವ ವೇದಿಕೆಯ ಭಯವನ್ನು ನಿವಾರಣೆ ಮಾಡುವುದಕ್ಕೆ ಸರಳವಾಕ್ಯವನ್ನು ಅನುಸರಿಸಿ ಪ್ರಾರಂಭಿಸಬೇಕು. ಪ್ರಾರಂಭಕ್ಕೆ ಚರ್ಚೆ ಮಾಡುವುದನ್ನೋ ಅಥವಾ ಬಹಳ ದೊಡ್ಡ ವಾಕ್ಯವನ್ನು ಕಲಿತು ಬಾಯಿ ಪಾಠ ಹೊಡೆದು ಅದನ್ನೆ ಅಲ್ಲಿ ಹೇಳುವುದನ್ನು ಮಾಡಬಾರದು. ಬಾಯಿ ಪಾಠಕಲಿತ ವಾಕ್ಯಗಳು ಸ್ವಲ್ಪ ಭಯವಾದರೂ  ತಪ್ಪಿಹೋಗುವ ಭೀತಿ ಉಂಟು. ಸರಳವಾದ ಸ್ವಂತ ವಾಕ್ಯಗಳು ಒಪ್ಪಿಸಿದಲ್ಲಿ ಅದು ನಿರರ್ಗಳವಾಗಿ ಬರುತ್ತದೆ. ಸ್ವಲ್ಪವೇ ಹೇಳಿಬಿಟ್ಟರೆ ಆದಿನಕ್ಕೆ ಅವನಿಗೆ ಬಹಳಷ್ಟು ಧೈರ್ಯ ಬರುತ್ತದೆ.   ಇನ್ನೊಂದು ಸಲಕ್ಕೆ ಅದು ಹೆಚ್ಚು ಆತ್ಮ ಸ್ಥೈರ್ಯವನ್ನು ಕೊಡುತ್ತದೆ. ಆಗ ವೇದಿಕೆಯ ಭಯ ತಾನೇತಾನಾಗಿ ಹೊರಟು ಹೋಗುತ್ತದೆ. ಆರಂಭಿಕ ಹಂತಗಳಲ್ಲಿ ಕೆಲವಷ್ಟೇ ವಿಚಾರಗಳನ್ನು ಸೇರಿಸುತ್ತ ಮತ್ತೆ ಮತ್ತೆ ಅದಕ್ಕೆ ಸೇರಿಸುತ್ತಾ ಹೋಗಬೇಕು.

ತಾಳಮದ್ದಲೆಯಲ್ಲಿ ವಾದವಿವಾದಗಳು ಸ್ವಾಭಾವಿಕ. ಈ ಕಾರಣಕ್ಕೆ ಎಷ್ಟೋ ತಾಲಮದ್ದಲೆಗಳೂ ಅರ್ಧದಲ್ಲೇ ನಿಂತಿವೆ. ಒಣ ಪ್ರತಿಷ್ಠೆಯಿಂದಲೋ ಗೆಲ್ಲಲೇ ಬೇಕೆಂಬ ಛಲದಿಂದಲೋ ಅಥವಾ ವಾದವನ್ನು ನಿರ್ವಹಿಸಲಾಗದೆಯೋ ಏಷ್ಟೋ ತಾಲಮದ್ದಲೆಗಳೂ ಅರ್ಧದಲ್ಲೇ ನಿಂತಿದೆ. ತಾಳಮದ್ದಲೆಯ ನಿಜವಾದ ಉದ್ದೇಶ ರಸವನ್ನು ಆವಿಷ್ಕರಿಸುವುದು. ಯಕ್ಷಗಾನ ಆಟಗಳಲ್ಲಿ ವೇಷ ಭೂಷಣ ಅಭಿನಯದಿಂದ ರಸಾವಿಷ್ಕಾರವಾಗುತ್ತದೆ. ಅದರಂತೆ ತಾಳಮದ್ದಲೆಯಲ್ಲಿ ರಸಾವಿಷ್ಕಾರ ಹೇಗೆ ಮಾಡಬಹುದು?

ವಾದವಿವಾದಗಳಿಂದ ತಾಳಮದ್ದಲೆ ನಿಲ್ಲುವುದಕ್ಕೆ ಕಾರಣ ಒಣ ಪ್ರತಿಷ್ಠೆ. ತಾಳಮದ್ದಲೆಗೆ ಬಂದು ಕೂತವರು  ಗೆಲ್ಲತಕ್ಕದ್ದು ಎಂಬ ಮಾನಸಿಕ ಧೋರಣೆ ಇಲ್ಲಿ ತಾಳ ಮದ್ದಲೆ ಗೆಲ್ಲುವುದಲ್ಲ ವ್ಯಕ್ತಿ ಗೆಲ್ಲುವುದು. ವಾಸ್ತವದಲ್ಲಿ ತಾಳಮದ್ದಲೆ ಗೆಲ್ಲಬೇಕು. ತಾಳಮದ್ದಲೆ ಎಂಬುದು ಒಂದು ಸಾಮೂಹಿಕ ಕಲೆ.  ಯಾವುದಾದರೂ ಒಂದು ಪಾತ್ರವೋ ಹಾಡುಗಾರಿಕೆ ಪದವೋ ಗೆದ್ದಲ್ಲಿ ತಾಳ ಮದ್ದಲೆ ಗೆದ್ದಂತಾಗುವುದಿಲ್ಲ. ಇನ್ನು ತಾಳ ಮದ್ದಲೆಯಲ್ಲಿ ರಸಾವಿಷ್ಕಾರ ಹೇಗೆ? ತಾಳಮದ್ದಲೆಯಲ್ಲೂ ಎಲ್ಲಾ ಬಗೆಯ ರಸಾವಿಷ್ಕಾರ ಸಾಧ್ಯವಿದೆ. ಅದನ್ನು ಮಾಡಬೇಕು. ಒಂದು ಕಾಲದಲ್ಲಿ ರಸಾವಿಷ್ಕಾರ ಇತ್ತು. ಆನಂತರ ವೈಚಾರಿಕತೆ ಹೆಚ್ಚಾದಂತೆ ರಸಾವಿಷ್ಕಾರ ಕುಂಠಿತಗೊಂಡಿತು. ರಸಾವಿಷ್ಕಾರಗೊಂಡರೆ ಮಾತ್ರ ತಾಳಮದ್ದಲೆ ಯಶಸ್ವಿಯಾದೀತು. ಸಾಮಾನ್ಯವಾಗಿ ವೀರರಸಗಳಲ್ಲಿ ವಾಕ್ಯಗಳೆಲ್ಲ ಗಿಡ್ದಗಿಡ್ಡವಾಗಿರಬೇಕು. ಸ್ವರವೂ ಏರುತ್ತಾ ಹೋಗಬೇಕು..  ಉದ್ದ ವಾಕ್ಯಗಳಲ್ಲಿ ವೇಗವು ಸಾಧ್ಯವಾಗುವುದಿಲ್ಲ. ಸ್ವರವೂ ಸಾಕಾಗುವುದಿಲ್ಲ.  ಆದರೆ ಸೌಮ್ಯ ರಸಗಳಿಗೆ ಉದ್ದ ವಾಕ್ಯ ಅಡ್ಡಿಯಿಲ್ಲ.
ಎಲ್ಲಿ ವಾಕ್ಯಗಳಲ್ಲಿ ಭಾವವನ್ನು ವಾಕ್ಯದ ಮುಕ್ತಾಯದವರೆಗೆ ಹಿಡಿದಿಡುವುದಕ್ಕೆ ಸಾಧ್ಯವೋ ಅಲ್ಲಿ ರಸ ಭಾವ ಉಳಿದುಕೊಳ್ಳುತ್ತದೆ. ವೀರ ರಸಕ್ಕೆ ಸ್ವರ ಏರುಗತಿಯಲ್ಲಿರುವಾಗ ಆ ಸ್ವರವನ್ನು ವಾಕ್ಯದ ಅಂತ್ಯದವರೆಗೂ ಹಿಡಿದಿಡುವುದು ಅಸಾಧ್ಯ. ಸೌಮ್ಯ ರಸಗಳಲ್ಲಿ ಇದು ಸಾಧ್ಯವಾಗುತ್ತದೆ. ಈಗ ತಾಳ ಮದ್ದಲೆಯಲ್ಲಿ ಸ್ತ್ರೀ ಪಾತ್ರದ ಅರ್ಥ ಹೇಳುವವರ ಕೊರತೆ ಕಂಡುಬರುತ್ತದೆ. ಅದಕ್ಕೆ ಕಾರಣ ಅವರಲ್ಲಿ ಸ್ವರ ವೈವಿಧ್ಯ ಇಲ್ಲದಿರುವುದು. ರಸೋತ್ಪಾದನೆಗೆ ಸ್ವರ ವೈವಿಧ್ಯ ಅತ್ಯವಶ್ಯ. ವಿದುರನಾದವ ಕೃಷ್ಣ ಎದುರು ಶಾಂತ ಭಾವದಿಂದ ಭಕ್ತಿಭಾವದಿಂದ ಮಾತನಾಡಿದರೆ ಕೌರವನ ಎದುರು ವೀರ ರಸದಿಂದಲೇ ಮಾತನಾಡಬೇಕು.
ಶರಸೇತುವಿನ ಹನುಮಂತನ ಪಾತ್ರ, ಇದು ಆರಂಭದಲ್ಲಿ ಶಾಂತವಾಗಿದ್ದರೆ, ಆನಂತರ ಸ್ವಲ್ಪ ಸಾವರಿಸಿಕೊಂಡು ಉತ್ತರಿಸುತ್ತಾನೆ, ಆನಂತರ ವೀರರಸವನ್ನೇ ತೋರಿಸಬೇಕು ಕೊನೆಯಲ್ಲಿ ರಾಮ ಪ್ರತ್ಯಕ್ಷನಾಗುವಾಗ ಭಕ್ತಿ ರಸವನ್ನು ತೋರಬೇಕು ಹೀಗೆ ಒಂದೇ ಪಾತ್ರದಲ್ಲಿ ವೈವಿಧ್ಯಮಯ ರಸಾವಿಷ್ಕಾರ ಸಾಧ್ಯವಾಗಬೇಕು. ಇದೆಲ್ಲಾ  ಒಂದೇ ಆದರೆ ಅದು ಏನೂ ಪ್ರಭಾವ ಬೀರಲಾರದು. ಬೇಸರದ ಸಂಗತಿ ಎಂದರೆ ಈಗಿನ ತಾಳ ಮದ್ದಲೆಗಳಲ್ಲಿ ಈ ರಸೋತ್ಪಾದನೆ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಕರುಣಾ ರಸ ಶೃಂಗಾರ ರಸ ಕಡೆಗಣಿಸಲ್ಪಟ್ಟಿದೆ. ಸುಧನ್ವ ಪ್ರಸಂಗದ ಪ್ರಭಾವತಿ ಸುಧನ್ವ ಸನ್ನಿವೇಶದಿಂದಾಗಿ ಆ ಪ್ರಸಂಗವನ್ನೇ ಬೇಡ ಎಂದು ಹೇಳುತ್ತಾರೆ. ಇಲ್ಲಿ ಸುಧನ್ವ ಪ್ರಭಾವತಿ ಸಂಭಾಷಣೆಯಲ್ಲಿ ಶೃಂಗಾರ ರಸ ಅತ್ಯವಶ್ಯ. ಹಾಗಾಗಿ ಪ್ರಭಾವತಿ ಮಾಡುವುದಕ್ಕೆ ಜನವೇ ಸಿಗಲಾರದ ಪರಿಸ್ಥಿತಿ.

ತಾಳ ಮದ್ದಲೆಗಳಲ್ಲಿ ಭಕ್ತಿರಸವನ್ನು ಪ್ರತಿಪಾದಿಸುವಂತಹ ಪಾತ್ರಗಳು, ಗೋಚರಿಸುವಂತಹ ಪ್ರಧಾನ ಮೂರು ಪಾತ್ರಗಳು. ಒಂದು ಭೀಷ್ಮ ಇನ್ನೊಂದು ವಿದುರ ಮತ್ತೊಂದು ಸುಧನ್ವ. ಈ ಮೂರು ಜನ ಕೂಡ ಕೃಷ್ಣನ ಭಕ್ತರೆ. ಇವರು ಅಪ್ರತಿಮ ಭಕ್ತರಾದರೂ ಇವರ ಭಕ್ತಿಯ ವಿಧಾನ ಬೇರೆ ಬೇರೆ. ತಾಳಮದ್ದಲೆಯಲ್ಲಿ ಅದನ್ನು ಹೇಗೆ ಪ್ರತಿಪಾದಿಸಬಹುದು?

ಭಕ್ತಿಯಲ್ಲಿ ಶ್ರೀಕೃಷ್ಣ ಹೇಳಿದ ಹಾಗೆ ನಾಲ್ಕು ವಿಧ. ಜ್ಞಾನ,  ಆಶೆ ಇಟ್ಟುಕೊಂಡು ಇರಿಸುವ ಭಕ್ತಿ ಆರ್ತ, ಮತ್ತೆ ಜಿಜ್ಞಾಸು ಮತ್ತು ಅರ್ಥಾರ್ಥಿ. ಇಲ್ಲಿ ಭೀಷ್ಮ ಜ್ಞಾನಿ, ಅವನು ಜ್ಞಾನಿ ಭಕ್ತ.  ವಿದುರ ಆರ್ತ ಭಕ್ತನೇ, ಅವನ ಭಕ್ತಿಯಲ್ಲಿ ಏನು ಆಶೆಗಳಿಲ್ಲ. ಅರ್ಥಾರ್ಥಿಯೂ ಅಲ್ಲ ಅವನು. ಆದರೆ ಸುಧನ್ವ ಆರ್ತ ಭಕ್ತನೇ ಆದರೂ ಸುಧನ್ವ ವೀರ ವೈಷ್ಣವ. ವೀರ ಎಂದರೆ ಇಲ್ಲಿ ಪರಾಕ್ರಮಿ ಎಂಬ ಅರ್ಥ ಮಾತ್ರವಲ್ಲ. ಅದರ ಮತ್ತೊಂದು ಭಾವ, ತಾನು ವಿಕಾರಗೊಳ್ಳದೆ, ಬೇರೆಯವರನ್ನು ವಿಕಾರಗೊಳಿಸದವನು. ವಿಕಾರಗೊಳ್ಳದ ಅವಿಕಾರೀ ಭಕ್ತ. ಅವನದ್ದು ಕೃಷ್ಣನಿಗೆ ಅರ್ಪಿಸಲ್ಪಟ್ಟ ಭಕ್ತಿ ಅವನದ್ದು. ಅವನ ಮಾತಿನಲ್ಲಿ ಎಲ್ಲಿಯೂ ಸ್ವಾರ್ಥ ಕಾಣಬಾರದು. “ತಿಳಿದೆನು ನಿನ್ನಯ ಚಿತ್ತದುಮ್ಮಳಿಕೆಯ ನಿಜವ....” ಎಂಬ ಕೊನೆಯ ಪದದಲ್ಲಿ ಸುಧನ್ವನ ಭಕ್ತಿ ರೂಪ ತಿಳಿಯುವುದಕ್ಕೆ ಬರ್ತದೆ. ಶ್ರೀಕೃಷ್ಣ ಯಾರನ್ನು ಉಳಿಸಬೇಕು ಎಂಬ ಸಂದಿಗ್ಧದಲ್ಲಿರುವಾಗ ಆತ ತನ್ನನ್ನು ಕೃಷ್ಣನಿಗೆ ಅರ್ಪಿಸಿ ಮಾತನಾಡುತ್ತಾನೆ. ಅರ್ಜುನನ್ನು ಉಳಿಸು ಎಂದು ಅವನೇ ಕೇಳಿಕೊಳ್ಳುತ್ತಾನೆ. ಯಾಕೆ ಅರ್ಜುನನ್ನು ಉಳಿಸಿದರೆ ಶ್ರೀಕೃಷ್ಣನ ಧರ್ಮ ಸಂಸ್ಥಾಪನೆಗೆ ಅನುಕೂಲವಾಗುತ್ತದೆ. ಹೀಗೆ ಭಾವ ಪರವಶನಾಗಿ ಸುಧನ್ವ ಹೇಳಬೇಕು.
ಇನ್ನು ಭೀಷ್ಮ ಆತ ಹೇಳುತ್ತಾ ಹೋಗುವಾಗ, ಶ್ರೀಕೃಷ್ಣನ ಭಗವದ್ಗೀತೆಯ ಉಪದೇಶವನ್ನೆಲ್ಲಾ ಕೇಳಿದ ಅರ್ಜುನ, ಅವನಿಗೆ ಇನ್ನೂ ಪ್ರಪಂಚದಲ್ಲಿ ಏನನ್ನೆಲ್ಲ ಸಾಧಿಸಬೇಕೋ  ಅದನ್ನು ಕೃಷ್ಣ ಹೇಳುತ್ತಾನೆ. ಅವನಿಂದ ಮಾಡಿಸ್ತುತ್ತಾನೆ. ಆದರೆ ತನಗೆ ಇನ್ನು ಏನಾಗಲಿದೆ? ಹಾಗಾಗಿ ಭೀಷ್ಮ ಯಾಕೆ ಹೀಗಾದ ಎಂಬುದಕ್ಕೆ ಅವನಲ್ಲಿ ಸಮರ್ಥನೆ ಉಂಟು. ಅದಲ್ಲವಾದರೆ ಆತ ಕೌರವನ ಪಕ್ಷಕ್ಕೆ ಹೋದದ್ದು ಅಪರಾಧವಾಗುತ್ತದೆ. ಭೀಷ್ಮ ಅದು ಯಾಕೆ ಅಪರಾಧವಲ್ಲ ಎಂಬುದಾಗಿ ಪ್ರತಿಪಾದಿಸಬೇಕಾಗುತ್ತದೆ.

ಇನ್ನು ವಿದುರ ಜ್ಞಾನಿಯೇ ಆದರೂ ಆತನ ಮನಸ್ಸು ಕೃಷ್ನನ ಕಡೆಗೆ ಬದಲಾಗಿ ಹೋಗುತ್ತದೆ. ಕೃಶ್ಣನನ್ನು ಕಂಡಾಗ ಅನಂದಾತಿರೇಕದಿಂದ ಭಾವೋದ್ವೇಗಕ್ಕೆ ಒಳಗಾಗುತ್ತಾನೆ. ತನ್ನಲ್ಲಿ ಏನಿದ್ದರು ಕೃಷ್ಣನಿಗೆ ಕೊಟ್ಟು ಬಿಡುವ ತನ್ನಲ್ಲಿ ಏನೂ ಬೇಡ. ಕೃಷ್ಣ ಮನೆಗೆ ಬಂದ ಮೇಲೆ ಎಲ್ಲವೂ ಆಯಿತು ಎಂದು ಸರ್ವ ಸಪರ್ಪಣಾ ಭಾವದ ಭಕ್ತಿ ಅವನದ್ದು.
ಹೀಗೆ ಒಂದಿಷ್ಟು ಸಾರ್ಥಕ ಘಳಿಗೆಯ ಸಂದರ್ಶನವಿದು. ಇಲ್ಲಿ ಅಪ್ಪಟ ಪರಂಪರೆಯ ಬಗೆಗಿನ ಪ್ರಾಮಾಣಿಕ ಕಾಳಜಿಯನ್ನು ಕಾಣಬಹುದು. ಆಡಂಬರವಿಲ್ಲ. ಕಿರಿ ಕಿರಿಯಾಗುವ ಪ್ರಶ್ನೆಗಳಿಲ್ಲ. ಬೃಹತ್ ಜಾಲದ ಮಾಧ್ಯಮವಂತೂ ಇಲ್ಲವೇಇಲ್ಲ. ಸಾಮಾನ್ಯವಾಗಿ ದೊಡ್ಡ ಮಾಧ್ಯಮವಿದ್ದರೆ ಮಾತ್ರ ಕಲಾವಿದರು ತಮ್ಮನ್ನು ಉಧ್ಘಾಟಿಸುತ್ತಾರೆ. ಆದರೆ ಇಲ್ಲಿ ಮೂಂಡಬೈಲು ಶಾಸ್ತ್ರಿಗಳು ಆ ರೀತಿಯ ಯಾವ ಬಿಗುಮಾನವನ್ನು ತೋರಲಿಲ್ಲ. ಬಹುಶಃ ಇದು ಶಾಸ್ತ್ರಿಗಳಂತ ಸರಳ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಮಾತ್ರವೇ ಸಾಧ್ಯ.
ಮಾಧ್ಯಮದ ಬಗ್ಗೆ ಸುಬ್ಬಣ್ಣ ತೆಲೆಕೆಡಿಸುವುದಿಲ್ಲ. ತಮ್ಮ ಆತ್ಮಕ್ಕೆ ಏನು ಬೇಕೋ ಎಷ್ಟು ಸಾಧ್ಯವೋ ಅಷ್ಟನ್ನು ಮಾಡಿದ್ದಾರೆ. ಮೂಡಣದ ಬೈಲಿನ ಮಾತುಗಳಿಗೆ ಕಿವಿಯಾಗುತ್ತಾ ತಾವೇ ಮಾಧ್ಯಮವಾಗಿದ್ದಾರೆ. ಇಲ್ಲಿ ಸಹೃದಯ ಮಿತ್ರಬಳಗದ ಮಾಧ್ಯಮ ವಿಶಾಲವಾಗಿ ತೆರೆದುಕೊಳ್ಳುತ್ತದೆ ಅದಷ್ಟು ಧಾರಾಳ. ಮಾತಿಗಿಳಿದ ಸುಬ್ಬಣ್ಣನಿಗೂ ಮಾತುಗಾರ ಮೂಡಂಬೈಲು ಶಾಸ್ತ್ರಿಗಳಿಗೂ ಹೃತ್ಪೂರ್ವಕ ಕೃತಜ್ಞತೆಗಳು
ಯಕ್ಷಗಾನಂ ಗೆಲ್ಗೆ



Wednesday, June 4, 2014

ಕೀರಿಕ್ಕಾಡು ಸ್ಮರಣೆಯಲ್ಲಿ


ಅಣ್ಣ ನೀವ್ ಮೂವರಾರಣ್ಯದೊಳಿರುವಾಗ |
ಬಣ್ಣವೆ ತನಗೆ ರಾಜ್ಯ ||
ಪುಣ್ಯಪುರುಷ ನಿನ್ನ ಪಾದವ ಬಿಡೆನೆಂದು |
ಕಣ್ಣನೀರನು ತುಂಬಿದ ||

ಇದು ಭರತಾಗಮನ ಪ್ರಸಂಗದ ಅತ್ಯಂತ ಭಾವನಾತ್ಮಕ ಪದಗಳಲ್ಲಿ ಒಂದು. ರಾಮಾಯಣ ಪ್ರಸಂಗಗಳೇ ಭಾವನಾತ್ಮಕ ಘಟನೆಗಳ ಚಿತ್ರಣ. ಭರತಾಗಮನ ಅದಕ್ಕೆ ಒಂದು ಮುನ್ನುಡಿಯಾಗಿ ಕಂಡುಬರುತ್ತದೆ. ಸಾಹೋದರ್ಯ ಕೇಳಿ ಸಿಗುವಂತಹುದಲ್ಲ. ಅದು ಹುಟ್ಟಿನಿಂದಲೇ ಬರುವಂತಹುದು.  ತಮ್ಮ ಜೀವ ಪರ್ಯಂತ ಭಾವನಾತ್ಮಕವಾಗಿ ಜತೆಯಾಗುವ,   ಗಂಡನಾಗಿಯೋ ಹೆಂಡತಿಯಾಗಿಯೋ ಜತೆಯಲ್ಲೇ ಕಳೆಯುವ ಒಂದು ಜೀವಕ್ಕೆ ನಾವು ಬಹಳ ಗಂಭೀರವಾಗಿ ಚಿಂತಿಸಿ ಆಯ್ಕೆ ಮಾಡಿ ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ಕಾಣಬಹುದು. ಆದರೆ ತಾವು ಜೀವತಳೆದು ಆಸರೆಯಾಗಿ ಪಡೆದ ಗರ್ಭಾಶಯವನ್ನು ಹಂಚಿಕೊಂಡ ಮೇಲೆ ಜತೆಯಲ್ಲಿ ಹುಟ್ಟಿಕೊಳ್ಳುವ ಈ ಸಾಹೋದರ್ಯದ ಸಂಬಂಧ ಗಂಡಾಗಲೀ ಹೆಣ್ಣಾಗಲೀ ಅದು ಸಂಪೂರ್ಣವಾಗಿಯೂ ದೈವಸಂಕಲ್ಪ. ಯಾವ ಪೂರ್ವ ನಿರ್ಧರಿತ ಯೋಚೆನೆ ಇದಕ್ಕೆ ಅನ್ವಯವಾಗುವುದಿಲ್ಲ. ಹಾಗಾಗಿಯೆ ನಮ್ಮ ಸಂಸ್ಕೃತಿಯಲ್ಲಿ ಸಾಹೋದರ್ಯ ಎಂಬುದು  ಕೌಟುಂಬಿಕ ಬಂಧನದ ಆಳವನ್ನು ಬಿಂಬಿಸುವ ಪ್ತಧಾನ ಅಂಗ. ಹುಟ್ಟಿನಿಂದ ಬರುವ ಈ ಸಂಬಂಧ ಸಮ ವಾಗಿಯೋ ವಿಷಮವಾಗಿಯೋ ಜೀವನದ ಎರಡು ದ್ವಂದ್ವಮಯ ಮುಖಗಳನ್ನು ತೋರಿಸುತ್ತಾ ಮನುಷ್ಯ ಜೀವನವನ್ನೇ ಕಣ್ಣೆದುರು ನಿಲ್ಲಿಸುತ್ತದೆ.
ಛಾಯಾ ಚಿತ್ರ ಕೃಪೆ: ಶ್ರೀ ಲಕ್ಷ್ಮೀನಾರಾಯಣ (ಲಾ. ನಾ)

ಸಾಹೋದರ್ಯದ ದ್ವಂದ್ವ ಮುಖವನ್ನು ತೋರಿಸುವ ರಾಮಾಯಣ ಮತ್ತು  ಮಹಾಭಾರತದ ಪ್ರಸಂಗವನ್ನು ಯಕ್ಷಗಾನ ತಾಳ ಮದ್ದಲೆಯ ರೂಪದಲ್ಲಿ ಕಾಣುವ ಒಂದು ಅವಕಾಶ ಒದಗಿಬಂದದ್ದು ಬೆಂಗಳೂರಿನ ಜಯನಗರದ ಶಿವರಾತ್ರೀಶ್ವರ ಮಂದಿರದಲ್ಲಿ. “ಭರತಾಗಮನ, ಕೃಷ್ಣ ಸಂಧಾನ”  ಈ ಎರಡು ಪ್ರಸಂಗಳಲ್ಲಿ ಕಂಡು ಬರುವ ಸಾಹೋದರ್ಯದ ಎರಡು ಮುಖಗಳು ಅತ್ಯಂತ ವಿಶಿಷ್ಟವಾಗಿದೆ. ರಾಮಾಯಣದ ಭಾವನಾತ್ಮಕ ಉತ್ಕಟ ಸಂವೇದನೆಯನ್ನು ವ್ಯಕ್ತಪಡಿಸುವ ’ಭರತಾಗಮನ’  ಒಂದಾದರೆ ಇನ್ನೊಂದು ಎಲ್ಲ ಘಟನೆಗಳಿಗೂ ವಿಷಮ ಸಾಹೋದರ್ಯವೇ  ಕಾರಣೀಭೂತವಾಗುತ್ತದೆ. ಜಗತ್ತಿನ ಎಲ್ಲವನ್ನು ಸಾಹೋದರ್ಯದ ಭಾವನಾತ್ಮಕ ಸಂಬಂಧದಲ್ಲಿ ಕಾಣುವ ವ್ಯಕ್ತಿತ್ವಗಳು ಒಂದೆಡೆಯಾದರೆ ಇನ್ನೊಂದೆಡೆ. ಯಾವುದೇ ಕಾರಣಕ್ಕೂ ಸಾಹೋದರ್ಯಕ್ಕೆ ಮಾರಿಕೊಳ್ಳುವಂತಹುದಲ್ಲ ಎಂಬುದು ಇನ್ನೊಂದೆಡೆ.  ಒಂದೆಡೆ ಅಣ್ಣನಿಗೆ ಇಲ್ಲದ ರಾಜ್ಯ ನನಗೇಕೆ ಎನ್ನುವ ತಮ್ಮ ಸಹೋದರರಿಗೆ ಇಲ್ಲದೇ ಇದ್ದದ್ದು ನನಗೂ ಬೇಡ ಎನ್ನುವ ಅಣ್ಣ. ಇನ್ನೊಂದೆಡೆ ನನ್ನದೆಲ್ಲ ನನ್ನದು ನಿನ್ನದೂ ನನ್ನದು ಎನ್ನುವ ದಾಯಾದಿ ಕಲಹಿ ಛಲವಾದಿ ಸಹೋದರ. ಈ ವಿಭ್ಹಿನ್ನ ಸಾಹೋದರ್ಯದ  ಪ್ರಸಂಗಗಳು ಒಂದೇ ದಿನ ಕಾಣುವಂತೆ ಆದದ್ದು ವಿಪರ್ಯಾಸ ಎನ್ನಬೇಕು.  ಈ ದ್ವಂದ್ವ ನಿಲುವಿನ ತಾಳಮದ್ದಲೆ ಒಂದು ಉತ್ತಮ ಕಾರ್ಯಕ್ರಮಕ್ಕೆ ಪುರಾವೆಯನ್ನು ಒದಗಿಸಿತು. 

ಎಲ್ಲರ ನಿರೀಕ್ಷೆಯಂತೆ ಮುಂಜಾನೆಯ ತಣ್ಣನೆಯ ವಾತಾವರಣಕ್ಕೆ ತಣ್ಣನೆಯ ಪ್ರಸಂಗ ಭರತಾಗಮನ,    ಉತ್ತಮ ಸಮನ್ವಯದ ನಿರೂಪಣೆಯನ್ನು ಸಾಧಿಸಿತು. ಅನೀರೀಕ್ಷಿತವಾದ ಕುಲ ಪುರೋಹಿತ ವಸಿಷ್ಠರ ನಿರೂಪದಿಂದ ಆತಂಕದಲ್ಲೇ ಬರುವ ಭರತ ಸ್ಮಶಾನ ಸದೃಶ ನೀರವ ಮೌನದ ಅಯೋಧ್ಯ್ಯಯನ್ನು ಕಂಡು ದಂಗಾಗುತ್ತಾನೆ. ಮಗನೇ ಎಂದು ತೋಳ್ತೆರೆದು ಕರೆವ ಪಿತನ ಕಾಣದೆ. ಒಂದೇ ಮಡಿಲನ್ನು ಹಂಚಿಕೊಂಡ ಅಣ್ಣನಿಲ್ಲದೆ, ವಸಿಷ್ಠನಿಂದ ವೃತ್ತಾಂತವನ್ನೇಲ್ಲ ಕೇಳುತ್ತಾನೆ ಭರತ. ವಸಿಷ್ಠನಾಗಿ ಶ್ರೀ ಪಕಳಕುಂಜ ಶ್ಯಾಂ ಭಟ್ ನಿರ್ವಹಿಸಿದ್ದರು. ರಾಮನ ಪಟ್ಠಾಭಿಷೇಕದ ನಡುವೇ ಅಮ್ಮ ಕೈಕಾ ಮಾತೆ ತಂದೆ ದಶರಥ ಚಕ್ರವರ್ತಿಯಲ್ಲಿ ಕೇಳಿಕೊಂಡ ವರ,  ರಾಮನಿಗೆ ವನವಾಸ. ಭರತನಿಗೆ ಪಟ್ಟಾಭಿಷೇಕ. ತಂದೆ ತಾಯಿಗೆ ಕೊಟ್ಟ ಮಾತನ್ನು ಉಳಿಸುವುದಕ್ಕೊಸ್ಕರ ರಾಮ ವನಾಭಿಗಮನನಾಗುವುದು. ಜತೆಯ ಸೀತೆ ಲಕ್ಷ್ಮಣ ತೆರಳುವುದು. ತಂದೆ ರಾಮನ ಅಗಲಿಕೆಯನ್ನು ತಾಳದೆ ಇಹಲೋಕ ತ್ಯಜಿಸುವುದು..” ಭರತ ವಿಲಪಿಸುತ್ತಾನೆ. “ಪ್ರಳಯಕಾಲದ ರುದ್ರನಂತೆ ಆರ್ಭಟಿಸುತ್ತಾನೆ  ತಿಳಿಯದೇ ಈ ಷಡ್ಯಂತ್ರದಲ್ಲಿ ನಾನು ಅಪರಾಧಿಯಾದೆನಲ್ಲಾ.. “ ಎನಗಾಗಿ ಶ್ರೀರಾಮ ವನಕೆ ತೆರಳಿದ ಮೇಲೆ.....” ಭರತ ಮರುಗುತಾನೆ.   ವಸಿಷ್ಠ ಸುಮಂತ್ರಾದಿಗಳಿದ್ದೂ ಈ ಅನಾಹುತವಾಯಿತಲ್ಲ.  ನಾಲ್ಕು ದಿವಸ ಮೊದಲು ಇಲ್ಲಿ ನಾನಿರುತ್ತಿದ್ದರೆ. ಇಲ್ಲಿನ ಚಿತ್ರಣವನ್ನೇ ಬದಲಿಸಬಹುದಾಗಿತ್ತು. ಈಗ ದಾನವಾಂತಕನಾದ ರಾಮನ ಪಾಲಿಗೆ ದಾನವ ನಾನೇ ಅಗಿಬಿಟ್ಟೆ. ಭರತನ ವಿಲಾಪದಲ್ಲಿ ಪ್ರೇಕ್ಷಕನೂ ಭಾಗಿಯಾಗಿಬಿಡುವ ಸನ್ನಿವೇಶ.
ಛಾಯಾ ಚಿತ್ರ ಕೃಪೆ: ಶ್ರೀ ಲಕ್ಷ್ಮೀನಾರಾಯಣ (ಲಾ. ನಾ)

ಭರತನ ಅಭಿಪ್ರಾಯಗಳಿಗೆ ಈಗ ಕಿವಿಗಳಿಲ್ಲ. ತಳಮಳ ಅರ್ಥವಿಸುವವರಿಲ್ಲ..ತಾಯಿಯನ್ನು ಶಿಕ್ಷಿಸಲಾಗಾದೆ ತನ್ನ ದೇಹತ್ಯಾಗಕ್ಕೆ ಮುಂದಾಗುತ್ತಾನೆ. ತನ್ನ ದೇಹವನ್ನು ಅಗ್ನಿಗೆ ಅರ್ಪಿಸುತ್ತೇನೆ ಎನ್ನುವ ಭರತನಿಗೆ ವಸಿಷ್ಠರು ಹೇಳುವ ಮಾತು ಅರ್ಥ ಪೂರ್ಣ “ಈಗ ನಿನ್ನ ದೇಹವಲ್ಲ ಅಗ್ನಿಗೆ ಅರ್ಪಿಸಲ್ಪಡಬೇಕಾದ್ದು. ಅಲ್ಲಿ ಅಪ್ಪ ದಶರಥನ ದೇಹಕ್ಕೆ ಅಗ್ನಿಸ್ಪರ್ಶವಾಗಬೇಕು. ಯಾಕೆಂದರೆ ಇನ್ನೂ ಅಂತ್ಯಕ್ರಿಯೆಯೇ ನಡೆದಿಲ್ಲ”
ರಾಮನೆಡೆಗೆ ಬಂದ ಭರತನನ್ನು ದೂರದಿಂದ ಕಂಡು ಲಕ್ಷ್ಮಣ ಸಿಡಿಯುತ್ತಾನೆ. ರಾಮನನ್ನು ಕಾಡಿಗೆ ಅಟ್ಟು ಷಡ್ಯಂತ್ರದಲ್ಲಿ ಭರತನ ಪಾಲೂ ಇದೆ ಎಂದು ಲಕ್ಷ್ಮಣ ಆರೋಪಿಸುತ್ತಾನೆ.  ಶ್ರೀ ಜಿ. ಕೆ. ಭಟ್ ಸೇರಾಜೆ ಲಕ್ಷ್ಮಣನಾಗಿ ಅರ್ಥ ಹೇಳಿದ್ದರು.  ಈ ಮಧ್ಯೆ ಲಕ್ಷ್ಮಣನಿಗೆ ಧರ್ಮದ ಮುಖಗಳ ವಿವರಣೆಯನ್ನು ಶಾಸ್ತ್ರಿಗಳು ಸುಂದರವಾಗಿ ಮಂಡಿಸುತ್ತಾರೆ
ಧೃತಿ: ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹ: |
ಧೀರ್ವಿದ್ಯಾ ಸತ್ಯಮಕ್ರೋಧ: ದಶಕಂ ಧರ್ಮ ಲಕ್ಷಣಮ್||
ಈ ಹತ್ತು ಗುಣಗಳನ್ನು ಧರ್ಮ ಲಕ್ಷಣಗಳನ್ನು  ಹೊಂದಿದ್ದರೆ ಆತ ಧರ್ಮಾತ್ಮ. ಧರ್ಮದಲ್ಲಿದ್ದಾನೆ ಎಂಬಂತೆ.ಮಾತ್ರವಲ್ಲ ಧರ್ಮದ ದಶಗುಣಗಳನ್ನು ವಿವರಿಸುತ್ತಾರೆ. ಇಂಥ ವಿಚಾರಗಳಿಗೆ ಯಕ್ಷಗಾನದ ಅರ್ಥಗಾರಿಕೆಯ ಬಾಹುಳ್ಯಕ್ಕೆ ಬೆರಗಾಗುತ್ತೇವೆ. ಎಲ್ಲೋ ಪುಸ್ತಕದ ಮಧ್ಯೆ ಹುದುಗಿದ್ದ ಶ್ಲೋಕ ಅದೂ ಅರ್ಥ ಸಹಿತವಾಗಿ ಧುತ್ತನೆ ಸ್ವ ಪ್ರೇರಣೆಯಿಂದ ಎದುರು ಬಂದು ನಿಲ್ಲುತ್ತದೆ.
ಬಂದೆಯಾ ಇನವಂಶವಾರಿಧಿ | ಚಂದ್ರ ನಾ ಬರುವಾಗ ನಿನ್ನೊಡ | ನೆಂದುದಿಲ್ಲವೆನುತ್ತ ಮನದಲಿ | ನೊಂದೆಯೇನೈ ||
ಪ್ರಸಂಗ ಮತ್ತೆ ಭಾವನಾತ್ಮಕವಾಗಿ ಗಾಢವಾದ ಪ್ರಭಾವವನ್ನು  ಬೀರುವುದು ಈ ಪದದ  ರಾಮ ಭರತ ಸಮಾಗಮದಲ್ಲಿ. ಹಲವು ದಿನ ಸಂದಾಗಿದೆ. ತಮ್ಮ ಬಂದಿದ್ದಾನೆ. ರಾಮನ ಹೃದಯ ಕಮಲ ಅರಳುತ್ತದೆ. ಬಂದೆಯಾ ಇನವಂಶವಾರಿಧಿ ಚಂದ್ರ. ಎಂದು ಸೂರ್ಯವಂಶದ ಚಂದ್ರನನ್ನು ಬಿಗಿದಪ್ಪುತ್ತಾನೆ ರಾಮ. ಬಿಗಿ ತಪ್ಪದೇ ಇರಲಿ ಎಂದು ಭರತ ರಾಮನ ಬಿಗಿಯಲ್ಲಿ ಕರಗಲು ಯತ್ನಿಸುತ್ತಾನೆ.ಇಲ್ಲಿ ವಿಚಿತ್ರವೆಂದರೆ ಇನವಂಶವಾರಿಧಿ ಚಂದ್ರ ಎಂದು,   ಸೂರ್ಯವಂಶದವನಲ್ಲಿ ಚಂದ್ರನನ್ನು ಕಾಣುವುದು, ಇಲ್ಲಿ ಕವಿಯ ಆಶಯದಂತೆ ಭಾವನಾತ್ಮಕ ಅರ್ಥಗಾರಿಕೆ ರಾಮನ ಪಾತ್ರಧಾರಿ ಮೂಡಂಬೈಲು ಶಾಸ್ತ್ರಿಗಳಿಂದ, ಮುಂದೆ ಪ್ರೇಕ್ಷಕನ ಹೃದಯದಲ್ಲಿ ಭಾವನೆಗಳ ಭಾರ ಅಧಿಕವಾಗುತ್ತ ಹೋಗುತ್ತದೆ.  
ಛಾಯಾ ಚಿತ್ರ ಕೃಪೆ: ಶ್ರೀ ಲಕ್ಷ್ಮೀನಾರಾಯಣ (ಲಾ. ನಾ)

ಅಶ್ರಿತಪೋಶ ರಾಮ ಎಂದು ರಾಮನನ್ನು ಕೊಂಡಾಡುತ್ತ ಭರತ ರಾಮನನ್ನು ಅಯೋಧ್ಯೆಗೆ ಬರುವಂತೆ ಗೋಗರೆಯುತ್ತಾನೆ. ಎಲ್ಲೋ ತಂದೆ ಹೆಂಡತಿಗೆ ಕೊಟ್ಟ ಮಾತು ಉಳಿಸುವ ಅನಿವಾರ್ಯತೆ ಇಲ್ಲ. ಬಗೆ ಬಗೆಯಾಗಿ ಕೇಳುತ್ತಾನೆ. ನಿಜಕ್ಕೂ ಇಲ್ಲಿ ಉದುವೆಕೋಡಿಯವರು ಭಾವನಾತ್ಮಕವಾಗಿ  ಪಾತ್ರದಲ್ಲಿ ಕರಗಿಬಿಡುತ್ತಾರೆ.  ಅಪ್ಪ ಅಮ್ಮನಿಗೆ ಕೊಟ್ಟ,  ಚಕ್ರವರ್ತಿ ಪ್ರಜೆಗೆ ಕೊಟ್ಟ ವರ ಪಾಲಿಸಬೇಕಾದ್ದು  ತಾಂತ್ರಿಕವಾಗಿ ಸರಿ. ಆದರೆ ನೈತಿಕವಾಗಿ ಅದು ಸರಿಯೇ?

 ತಂದೆಯ ಮಾತು ಉಳಿಸಬೇಕಾದದ್ದು ಮಗನಾದವನ ಕರ್ತವ್ಯ.  ತಂದೆ ತಾಯಿಗೆ ಕೊಟ್ಟ ಮಾತು. ಅದು ಮಗನಾದವನು ಪಾಲಿಸತಕ್ಕದ್ದು. ಇನವಂಶದ ಕುಲತಿಲಕ ತಂದೆ ದಶರಥ ಚಕ್ರವರ್ತಿ ಕೊಟ್ಟ ಮಾತನ್ನು ಉಳಿಸದೇ ಹೋದ ಎಂದಾದರೆ, ಒಂದು ಕಾಲದಲ್ಲಿ ನ್ಯಾಸಭೂತವಾಗಿ ಕೊಟ್ಟವರನ್ನು ಹಿಂದೆ ತೆಗೆದುಕೊಳ್ಳುವ ಹಾಗಿಲ್ಲ.   ಹಾಗಾಗಿ ಅಯೋಧ್ಯೆಗೆ ಬರುವ ಪ್ರಶ್ನೆಯೇ ಇಲ್ಲ ಎಂದು ಬಿಡುತ್ತಾನೆ ರಾಮ.

ರಾಮ ಭರತರ ಹೃದಯಸ್ಪರ್ಶೀ ಸಂಬಾಷಣೆ ಬಹುಶಃ ಇಡೀ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಉಲ್ಲೇಖಿಸಲ್ಪಡಬೇಕಾದದ್ದು ಅಷ್ಟು ಸುಂದರವಾಗಿ ಅದು ಪ್ರಸ್ತುತವಾಯಿತು. ಭರತಾಗಮನ ಎಂದರೆ ಭಾವನೆಗಳ ಭರತ ಉಕ್ಕಿ ಬಂದಂತೆ ಆಗಮನವಾದಂತೆ ಭಾಸವಾಯಿತು. ವಿಚಿತ್ರ ಕಾಕತಾಳೀಯವೋ ತಾಳಮದ್ದಲೆಯ ಆದಿನ ಪುನರ್ವಸು ನಕ್ಷತ್ರ.

ಸಮರ ಸನ್ನಾಹದ ದ್ರೌಪದೀ ಭೀಮ ಸಂವಾದ ಬಹಳ ವಿಶಿಷ್ಟತೆಯನ್ನೇನೂ ಬಿಂಬಿಸದೇ ಇದ್ದರೂ ಉತ್ತಮವಾಗಿತ್ತು. ದ್ರೌಪದಿಯಾಗಿ ನಾರಾಯಣ ಯಾಜಿ ಹಾಗಿ ಭೀಮನಾಗಿ ಅಪ್ಪುನಾಯಕ್ ಅತ್ರಾಡಿ ಭಾಗವಹಿಸಿದ್ದರು.

ನಂತರ ನಡೆದ ಕೃಷ್ಣ ಸಂಧಾನ ಅರಕ್ಕೇರದೆ ಮೂರಕ್ಕಿಳಿಯದೆ ಮಧ್ಯಮ ಹಂತದಲ್ಲೆ ಪ್ರಸ್ತುತವಾಯಿತು. ಸಮರ ಸನ್ನಾಹ, ವಿದುರಾತಿಥ್ಯ ಕೃಶ್ಣ ಸಂಧಾನ ಅನಂತರ ಕರ್ಣ ಭೇದನ. ಇಲ್ಲಿ ಇವುಗಳ ವರದಿಯನ್ನು ನೀಡುವುದಕ್ಕಿಂತ ಅನಿಸಿಕೆಗಳನ್ನು ವಿನಿಯೋಗಿಸುವುದೇ ಸೂಕ್ತ ಎಂದು ಅನಿಸುತ್ತದೆ. ಮುಖ್ಯವಾಗಿ ವಿದುರಾತಿಥ್ಯ. ಭಕ್ತಿ ಪರವಶತೆಯ ಅದಮ್ಯ ಭಾವನೆಯ ಅಭಿವ್ಯಕ್ತಿ ಎಲ್ಲೂ ಉಂಟಾಗಲಿಲ್ಲ.  ವಿದುರನ ಭಾವನಾತ್ಮಕ ಭಕ್ತಿಯ ದರ್ಶನ ನಿರೀಕ್ಷೆಯಷ್ಟು ಆಗಲಿಲ್ಲ.  ವೈಶಿಷ್ಟ್ಯವಿರದ ಒಂದು ತಾಳಮದ್ದಲೆಯಾಗಿ ಮಾತ್ರವೇ ಮೂಡಿಬಂತು. ನಂತರದ ಕೃಷ್ಣ ಕೌರವ ಸಂವಾದ ಬಹಳ ರಂಜನೆಯನ್ನು ಕೊಟ್ಟಿದ್ದು. ಆದರೂ ಲಂಬಿಸಿದ್ದು ಅತಿಯಾಗಿಬಿಟ್ಟಿತು. ಇಲ್ಲಿ ಕೌರವನಾದವರು ಶ್ರೀ ಉಜಿರೆ ಅಶೋಕ ಭಟ್.  ಕೌರವನ ಅಬ್ಬರ ಅತಿಯಾದಂತೆ ಭಾಸವಾದರೂ ಪುಂಖಾನು ಪುಂಖವಾಗಿ ವಿಚಾರಗಳು ಸಪುರವಾದ ನಳಿಕೆಯಲ್ಲಿ ರಭಸವಾಗಿ ನೀರು ಚಿಮ್ಮಿದಂತೆ ಭಾಸವಾಯಿತು. ತುಂಬಿದ ಕೊಡಕ್ಕೆ ಮತ್ತು ಮತ್ತು ತುಂಬಿ ಸುತ್ತಲೆಲ್ಲ ಚೆಲ್ಲಾಡಿದಂತೆ ಕೌರವನ ದೃಷ್ಟಿಕೋನಗಳು ಆಶ್ಚರ್ಯವಾಗುವ ರೀತಿಯಲ್ಲಿ ಮಂಡನೆಯಾಯಿತು.  ಅರಸ ಕೇಳಾ ದಿನದ ಕುರುಭೂ | ವರನ ಒಡ್ಡೋಲಗದ ಘನಸಿರಿ | ಮೆರೆವ ಸಭೆಗೇನೆಂಬೆ ಸುರಪನ ಸಭೆಯ ನಿಂದಿಸಿತು ||  ಎಂಬ ಪ್ರಥಮ ಪದದ ಅರ್ಥ ಮಂಡನೆ ಸರಿ ಸುಮಾರು ಅರ್ಧ ಘಂಟೆಗೂ ಮೀರಿ ಲಂಬಿಸಿರಬಹುದು.
ಛಾಯಾ ಚಿತ್ರ ಕೃಪೆ: ಶ್ರೀ ಲಕ್ಷ್ಮೀನಾರಾಯಣ (ಲಾ. ನಾ)

ಭೀಷ್ಮ ದ್ರೋಣ ಮಾತ್ರವಲ್ಲ ಕೃಷ್ಣ ದ್ವೈಪಾಯನ ಹೀಗೆ ಎಲ್ಲರೂ ಕೌರವನ ಚಕ್ರವರ್ತಿತ್ವವನ್ನು ಮೊದಲೇ ಗುರುತಿಸಿಕೊಂಡವರು. ನಾಶವಾಗಿ ಹೋಗಬೇಕಾದ ಭ್ರೂಣವನ್ನು ಭೀಷ್ಮ ಸಂರಕ್ಷಿಸಿ ಚಕ್ರವರ್ತಿತ್ವವನ್ನು ಕಂಡ, ವ್ಯಾಸರು ಆ ಪಿಂಡಕ್ಕೆ ಮಂತ್ರಾವಹನೆ ಮಾಡಿ ಭಾವೀ ಚಕ್ರವರ್ತಿಯನ್ನು ಕಾಪಾಡಿದರು ಹೀಗೆ ದ್ರೋಣ ಕೃಪರು ಒಂದೊಂದು ರೀತಿಯಲ್ಲಿ ಕೌರವನ ಚಕ್ತ್ರವರ್ತಿತ್ವವನ್ನು ಮೊದಲಾಗಿ ಗುರುತಿಸಿಕೊಂಡರು. ಭೀಷ್ಮರು ಚಕ್ರವರ್ತಿಯಾಗುವುದಕ್ಕೇ ಬೆಳೆಸಿದರು. ಅಲ್ಲಾಂತಾದರೆ ಅದನ್ನು ಮೊದಲೆ ಇಲ್ಲವಾಗಿಸಬಹುದಿತ್ತಲ್ಲಾ?  ಈ ಬಗೆಯ ಕೌರವನ ದೃಷ್ಟಿಕೋನ ಉಜಿರೆ ಯವರ ಕೌರವನಿಂದ ಸಮರ್ಥವಾಗಿ ಮಂಡನೆಯಾಯಿತು. ಬಹಳಷ್ಟು ಹೊಸ ವಿಚಾರಗಳ ಅನಾವರಣವಾಯಿತು. ಯುದ್ಧಕ್ಕಾಗಿ ತನ್ನ ಸಂಗ್ರಹ ಎಷ್ಟಿದೆ ಇದನ್ನು ಶ್ರೀಕೃಷ್ಣನಿಗೆ ಮನವರಿಕೆ ಮಾಡಿಕೊಡಬೇಕಾದದ್ದು ಕೌರುವನ ಇರಾದೆ. ಅದಕ್ಕಾಗಿಯೇ ಅವನಿದ್ದಲ್ಲಿಗೆ ತನ್ನ ಅಯುಧಗಳನ್ನೋ ಶಸ್ತ್ರಗಳನ್ನೋ ತೋರಿಸುವ ಬದಲು ಶ್ರೀಕೃಷ್ಣನನ್ನು ತಾನಿದ್ದಲ್ಲಿ ಕರೆಸಿಕೊಂಡು ತೋರಿಸುವುದು ಅವನ ಉದ್ದೇಶ. ಸಮಕಾಲೀನ ಘಟನೆಗೆ ಪೂರಕವೆನಿಸುವಂತೆ ಉಜಿರೆಯವರು ಕಲ್ಪನೆಯನ್ನು ಹರಿಯ ಬಿಟ್ಟರು. ಒಬ್ಬ ಕೌರವನೊಡನೆ ಹೋರಾಡುವುದಕ್ಕೋಸ್ಕರ ಅರ್ಜುನ ಶಿವನೊಡನೆ ಹೋರಾಡಿದ ಏನೇನೋ ಶಸ್ತ್ರ ಸಂಗ್ರಹವನ್ನು ಗಳಿಸಿಕೊಂಡ. ಹಾಗಾದಲ್ಲಿ ಈಗ ಕೃಷ್ಣನ ಸಂಧಾನದ ಉದ್ದೇಶವಾದರೂ ಏನು?

ಕೌರವನ ಎದುರು ಸಂಧಾನದ ಶ್ರೀಕೃಷ್ಣನಾಗಿ ಅರ್ಥ ಹೇಳಿದವರು ಶ್ರೀ ಪ್ರಭಾಕರ ಜೋಷಿಯವರು. ಕೃಷ್ಣ ಸಂಧಾನ ಪ್ರಸಂಗದ ಪ್ರತೀ ಶಬ್ಧದ ಸಮಗ್ರ ಪರಿಚಯ ಹೊಂದಿರುವ ಹಿರಿಯ ವಿದ್ವಾಂಸರೂ,  ಅರ್ಥಧಾರಿಗಳು. ಪ್ರಸಂಗಕ್ಕೆ ಹೊಂದಿಕೊಂಡಂತೆ ಹಿತ ಮಿತವಾದ ಅರ್ಥಗಾರಿಕೆ. ಜೋಷಿಯವರಿಗೆ ಸಂಭಂಧಿಸಿ ಅದು ವೈಶಿಷ್ಟ್ಯವೇನೂ ಅಲ್ಲ. ಅದು ಸಹಜವಾದ ಅರ್ಥಗಾರಿಕೆ, ಆದರೆ ಕೌರವನಿಗೆ ಸಂಬಂಧಿಸಿ ಶ್ರೀಕೃಷ್ಣ ಬಹಳಷ್ಟು  ಮೃದು ಧೋರಣೆ ಅನುಸರಿಸಿದನೋ ಎಂಬಂತೆ ಭಾಸವಾಯಿತು.  ಶ್ರೀಕೃಷ್ಣನ ಬಗ್ಗೆ ಪಾಂಡವರ ಬಗ್ಗೆ ಮತ್ತು ತನ್ನ ದುಷ್ಟತನಗಳ ಬಗ್ಗೆ ಸುಯೋಧನ ಅಷ್ಟೆಲ್ಲ ಮೊಂಡುತನದ ಸಮರ್ಥನೆಯನ್ನು ನೀಡುವಾಗ ಎಲ್ಲವನ್ನೂ ಹಗುರವಾಗಿ ಸ್ವೀಕರಿಸಿದ ಕಾರಣವೇನೋ ತಿಳಿಯದು. ಕೌರವನ ಪ್ರತೀಯೊಂದು ವಾದ ಮಂಡನೆಗೆ ಜೋಷಿಯವರ ಶ್ರೀಕೃಷ್ಣನಿಂದ ಪ್ರತಿವಾದದ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕನಿಗೆ ಅದು ಎಲ್ಲಿಯೂ  ಕಾಣುವಂತಾಗಲಿಲ್ಲ.  ವಾಸ್ತವದಲ್ಲಿ ಶ್ರೀಕೃಷ್ಣನ ಉದ್ದೇಶ ಪ್ರಸಂಗಕ್ಕೆ ಅನುಸರಿಸಿ ಸಾಮ ಮಾರ್ಗವೇ ಆಗಿದ್ದರೂ ಕೌರವನ ವಾದಗಳಿಗೆ ಪ್ರತಿವಾದವನ್ನೋ ವಿಶ್ಲೇಷಣೆಯನ್ನೋ ಮಂಡಿಸುವುದು ವಾಡಿಕೆ. ಶ್ರೀಕೃಷ್ಣನನ್ನು ಅಷ್ಟು ಕೆಣಕಿದ್ದರೂ ಕೃಷ್ಣ ಸಾಂತ್ವನ ಚಿತ್ತನಾಗಿ ಒಂದರ್ಥದಲ್ಲಿ ನಿಜ ಕೃಷ್ಣನೇ ಆಗಿಬಿಟ್ಟ. ಆದರೂ ಕೃಶ್ಣನ ಅರ್ಥಗಾರಿಗೆ ಹಿತಮಿತವಾಗಿ ರಂಜನೆಯನ್ನು ಒದಗಿಸಿತು.
ಛಾಯಾ ಚಿತ್ರ ಕೃಪೆ: ಶ್ರೀ ಲಕ್ಷ್ಮೀನಾರಾಯಣ (ಲಾ. ನಾ)

ಬೆಳಗ್ಗಿನಿಂದ ರಾತ್ರಿಯತನಕದ ದೀರ್ಘಕಾಲದ ತಾಳ ಮದ್ದಲೆಯಲ್ಲಿ ಅತ್ಯಂತ ಗಮನ ಸೆಳೆದದ್ದು ಯುವ ಮದ್ದಲೆಗಾರ ಶ್ರೀ ಕೃಷ್ಣ ಪ್ರಸಾದ್ ಉಳಿತ್ತಾಯರ ಮದ್ದಲೆವಾದನ. ಬಹಳ ಕೌಶಲ್ಯಭರಿತ ಮದ್ದಲೆವಾದನ. ನಿಖರ ಮತ್ತು ಶುದ್ದ ಒಂದು ರೀತಿಯ ಪರಿಪಕ್ವ ಪೆಟ್ಟುಗಳು ಬೆಳಗ್ಗಿನಿಂದ ರಾತ್ರಿಯತನಕ ಮಾರ್ದನಿಸಿತ್ತು. ಧ್ವನಿ ವರ್ಧಕದ ಶಬ್ಧ ಹೆಚ್ಚಾದುದರಿಂದಲೋ ಏನೋ ಕೆಲವೊಮ್ಮೆ ಅಬ್ಬರ ಜಾಸ್ತಿಯಾದಂತೆ ಭಾಸವಾದರೂ ಪೆಟ್ಟುಗಳ ನಿಖರತೆ ಮತ್ತು ಲಾಲಿತ್ಯದಿಂದ ಅದು ಅಷ್ಟು ಅಹಿತಕರವಾಗಿ ಅನಿಸುವುದಿಲ್ಲ. ಆದರು ಈ ಬಗ್ಗೆ ಒಂದಿಷ್ಟು ಗಮನ ಇದ್ದರೆ ಅಂತ ಅನ್ನಿಸುತ್ತದೆ. ಇಲ್ಲವಾದರೆ ಏಕತಾನತೆ ಬರುವ ಸಂಭವವಿರುತ್ತದೆ. ಮೊದಲ ಪದದಿಂದಲೇ ಗಮನ ಸೆಳೆದ ಮದ್ದಲೆ ವಾದನ, ಒಂದು ಪದ ಮುಕ್ತಾಯವಾದಾಗ ಭಾಗವತರು ಮುಂದಿನ ಪದ ಭಾಮಿನಿಯಲ್ಲಿ ಹಾಡದಿರಲಿ ಎಂದುಕೊಳ್ಳುವ ಮಟ್ಟಿಗೆ ಮದ್ದಲೆವಾದನ ಮನಸೂರೆಗೊಂಡಿತು. ಮದ್ದಲೆಯ ಮೇಲೆ ಕೈಬೆರಳ ನರ್ತನ ಮನಮೋಹಕವಾಗಿತ್ತು.

ಒಟ್ಟಿನಲ್ಲಿ ಒಂದು ಯಶಸ್ವೀ ಕಾರ್ಯಕ್ರಮ. ಅಚ್ಚುಕಟ್ಟಾದ ವ್ಯವಸ್ಥೆ. ಊಟ ಪಾನೀಯದ ಮುತುವರ್ಜಿ ಶ್ಲಾಘನೀಯ. ಹಿರಿಯ ಯಕ್ಷಗಾನ ಅರ್ಥಧಾರಿ, ಪ್ರಸಂಗ ಕರ್ತ , ಯುಗ ಪ್ರವರ್ತಕ ಶ್ರೀ ಕೀರಿಕ್ಕಾಡು ವಿಷ್ಣು ಮಾಸ್ತರ್ ಜನ್ಮ ಶತಮಾನೋತ್ಸವದ ಸ್ಮರಣೆಯಲ್ಲಿ ಒಂದು ಅರ್ಥ ಪೂರ್ಣ ಕಾರ್ಯಕ್ರಮ. ಹಿರಿಯ ಸಾಹಿತಿ ಶ್ರೀ ಜಿ. ವೆಂಕಟ ಸುಬ್ಬಯ್ಯ ಹಾಗೂ ಹಿರಿಯ ಯಕ್ಷಗಾನ ಅರ್ಥಧಾರಿ ಕಲಾವಿದ ಶ್ರೀಕರ ಭಟ್ ರವರಿಗೆ ಈ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ಸನ್ಮಾನಿಸಿ ಶತಮಾನೋತ್ಸವದ ಸ್ಮರಣೆಯನ್ನು ಸ್ಮರಣೀಯವನ್ನಾಗಿಸಿದರು. ಈ ಮಧ್ಯೆ ಕೀರಿಕ್ಕಾಡು ಮಾಸ್ತರ್ ರವರ ಕೃತಿಗಳು, ಪ್ರಸಂಗ ಪುಸ್ತಕಗಳು  ಅಥವಾ ಅವರ ಸಾಧನೆಯನ್ನು  ತಿಳಿಸುವಂತಹ ವಸ್ತುಗಳ ಚಿಕ್ಕ ಪ್ರದರ್ಶನವನ್ನೂ ಏರ್ಪಡಿಸುತ್ತಿದ್ದರೆ ಈ ಸ್ಮರಣೆ ಬಹಳಷ್ಟು ಅರ್ಥಪೂರ್ಣವಾಗಿಬಿಡುತ್ತಿತ್ತು. ಶೇಣಿಗಿಂತಲೂ ಮೊದಲಿನ ತಲೆ ಮಾರು ಎಂದಾಕ್ಷಣ ಈಗಿನ ಯುವ ಜನಾಂಗ ತಿಳಿಯದೆ ತಲೆಕೆರೆದುಕೊಳ್ಳುವಾಗ ಆಸಕ್ತಿವಂತರಿಗೆ ಒಂದು ಅಧ್ಯಯನಕ್ಕೆ  ಆಕರವಾಗುತ್ತಿತ್ತು. ಯಾವುದೆ ಸ್ಮರಣೆಗೆ ಪರಿಚಯವೂ ಅತ್ಯವಶ್ಯ ಹೀಗಿದ್ದರೂ ಈ ನಗರದ ಮಟ್ಟಿಗೆ ಇದು  ಒಂದು ಅಚ್ಚು ಕಟ್ಟಾದ ಕಾರ್ಯಕ್ರಮ.  ಆಯೊಜಿಸಿದ ಆಯೋಜಕ ಶ್ರೀ ಎಸ್. ಎನ್. ಪಂಜಾಜೆಯವರಿಗೆ ಮತ್ತು ಸಹಕರಿಸಿದ ಸಹವರ್ತಿಗಳಿಗೆ  ವಿಶೇಷ ಕೃತಜ್ಜತೆಯನ್ನು ಸಲ್ಲಿಸಬೇಕು





Friday, May 23, 2014

ಅಂತರಂಗದ ರಾವಣ ಭಾಗ ೯ ರಾವಣ ಮೋಕ್ಷ



ಜೀವ ಭಾವದ ಮಮಕಾರ ಅಹಂಕಾರವಾಗಿ ಗುರುತಿಸಲ್ಪಡುತ್ತದೆ. ನಾನು ನನ್ನದು ಎಂಬ ಅಹಂ ಅತಿಯಾಗಿ ರಾವಣ ದರ್ಪದಿಂದ ಗಹಗಹಿಸುತ್ತಿದ್ದ. ತನ್ನೆತ್ತರವನ್ನು ತಾನೇ ಏರಿಸಿದಂತೆ ದುರಹಂಕಾರದಿಂದ ರಾಮನಿಗೆ ಸವಾಲೆಂಬಂತೆ ಬಿಂಬಿತವಾಗುತ್ತಿದ್ದ. ’ಲಾಲಿಸು ಮಯತನುಜೆ..’ ಎಂದು ತನ್ನ ಜನ್ಮ ವೃತ್ತಾಂತವನ್ನು  ಮಂಡೋದರಿಯೊಂದಿಗೆ ಹಂಚಿಕೊಂಡ ರಾವಣ ಈಗ ಈ ದುರಹಂಕಾರದಿಂದ ಮದೋನ್ಮತ್ತತೆಯನ್ನು ಪ್ರದರ್ಶಿಸುವುದು ವಿಪರ್ಯಾಸವಾಗಿ ಕಂಡುಬರುತ್ತದೆ.   ಕಡಿದಷ್ಟು ಚಿಗುರೊಡೆಯುತ್ತಿದ್ದ ಶಿರಸ್ಸು ರಾಮನ ಬಾಣಕ್ಕೆ ಅಂತ್ಯಕಾಣದ ಪ್ರಶ್ನೆಯಾಗಿ ಪರಿಣಮಿಸುತ್ತಿದ್ದರೆ  ರಾಮ ಹತಾಶನಾಗುತ್ತಾನೆ. ಆದರೆ ಪ್ರತಿಯೊಂದೂ ನಿರ್ದಿಷ್ಟ  ಸಂಕಲ್ಪದ ಚೌಕಟ್ಟಿನ ಒಳಗಿನ ಘಟನೆಗಳಂತೆ ಭಾಸವಾಗುತ್ತದೆ. ನಾಟಕದ ನಿರ್ದೇಶಕ ಅಥವಾ ಸೂತ್ರಧಾರಿ  ಸ್ವತಃ  ಪಾತ್ರವಾಗಿ ರಂಗದಲ್ಲಿ ಕಾಣಿಸಿಕೊಂಡರೆ, ಆ ಪಾತ್ರದಲ್ಲಿ ಸಹಜತೆಯನ್ನೂ ನೈಜತೆಯನ್ನು ಬಿಂಬಿಸಿ ನಾಟಕಕ್ಕೂ ರಂಗ ಧರ್ಮಕ್ಕೂ ನ್ಯಾಯ ಒದಗಿಸುವಲ್ಲಿ ತನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಾನೆ.  ರಾಮನೂ ಇಲ್ಲಿ ಸೂತ್ರಧಾರನಾಗುವುದಿಲ್ಲ ಒಬ್ಬ ನಟನಾಗಿ ತನ್ನ ಅಸ್ತಿತ್ವಕ್ಕೆ ನ್ಯಾಯವನ್ನು ಒದಗಿಸುತ್ತಾನೆ. ಹಾಗಾಗಿ ರಾಮ ಬಾಣವೂ ಉತ್ತರವಿಲ್ಲದೇ ಅಭಿನಯದ ಪರಿಕರಗಳಾಗುತ್ತವೆ. ರಾವಣನ ವಿಜ್ರಂಭಣೆ ರಾಮನ ಹತಾಶ ಭಾವ ಅದು ಇನ್ನಷ್ಟು ಪರಿಣಾಮಕಾರಿ ಚಿತ್ರಣಕ್ಕೆ ಸಾಕ್ಷಿಯಾಗುತ್ತದೆ. ರಾಮ ಪಾತ್ರವಾಗಿ ಭಾವ ಪರವಶನಾಗುತ್ತಾನೆ. ಎಲ್ಲವನ್ನು ಮರೆಯುತ್ತಾನೆ. ರಂಗದ ಪಾತ್ರ ಗಾಢವಾಗುತ್ತಾ ಸಾಗಿದಂತೆ ದೇವತೆಗಳು ಸುಮ್ಮನಿರಬಹುದೇ? ಹಾಗಾಗಿ ಇಂದ್ರ ಪ್ರತಿನಿಧಿಯಾದ ಸಾರಥಿ ಮಾತಲಿ ಎಚ್ಚರಗೊಳ್ಲುತ್ತಾನೆ.  ರಾಮ ನಾಟಕದ ಪಾತ್ರವಾಗಿ ಭುವಿಗೆ ಇಳಿದು ಬಂದರೆ ಆ ನಿಬಂಧನೆಗಳು ಮಾತಲಿಗೆ ಇರುವುದಿಲ್ಲ. ಅಲ್ಲಿಯೂ ಇಲ್ಲಿಯೂ ಆತ ಸುರಪನ ಸಾರಥಿ. ಹಾಗಾಗಿ ವಾಸ್ತವವನ್ನು ಅರಿತ ಪ್ರೇಕ್ಷಕನಂತೆ ರಾಮನನ್ನು ಎಚ್ಚರಿಸುತ್ತಾನೆ. ಪಾತ್ರ ಪ್ರಜ್ಞೆಯೊಂದಿಗೆ ನಿರ್ಣಯಾತ್ಮಕವಾದ ಹಂತವನ್ನು ದಾಟಬೇಕಲ್ಲ?


ಮಾತಲಿಯೆ ನಾನೆಂಬ | ಮಾತ ನೀ ಕೇಳು ||
ಯಾತುಧಾನನೊಳು ಕೈ | ಸೋತುದಿಂದಿನೊಳು || ಪಲ್ಲವಿ ||

ನೂಕಿದೆವು ಶರಗಳ ಸ | ಮೀಕ ಬಾಹಿರನೆಡೆಗೆ |
ಛೀಕರಿಸಿದಳು ಮತ್ಯು | ಈ ಕಡುಗಲಿಯೊಳು |
ಯಾಕೆ ಜಯದಭಿಲಾಷೆ | ಸಾಕು ಬಳಲಿದೆಬರಿದೆ |
ನಾಕೇಶನೆಡೆಗೆ ಸುವಿ | ವೇಕದಿಂ ತೆರಳು |||

ಬಲ್ಲೆ ದೇವ ನಿನ್ನ ಚರಿತ | ಇದ |
ನೆಲ್ಲ ತೋರಿಸಲ್ಯಾಕೊ ಶ್ರೀ ರಘುನಾಥ ||
ಮಲ್ಲ ಮಾಯಾವಿ ನೀನೆನುತ | ನರ |
ನಲ್ಲ ನೀ ಪುಲ್ಲಲೋಚನ ನೆಂಬಮಾತ | ಬಲ್ಲೆ |||  

ಈ ಹಿಂದಿನ ಲೇಖನಗಳ ಪುಟಗಳು ಈ ಕೆಳಗೆ ತೆರೆದುಕೊಳ್ಳುತ್ತವೆ.


            ರಾಮನ ವೈರಾಗ್ಯ ಮಾತಲಿಗೆ ಅರ್ಥವಾಗಿಬಿಡುತ್ತದೆ. ಯುದ್ದವೂ ಬೇಡ ರಾಜ್ಯವೂ ಬೇಡ ಯಾವುದೂ ಬೇಡ ಬದರಿಕಾಶ್ರಮಕ್ಕೆ ಹೋಗಿ ಇನ್ನುಳಿದ ಬದುಕನ್ನು ಕಳೆಯುತ್ತೇನೆ. ರಾವಣನನ್ನು ಸೋಲಿಸಲಾಗದ ರಾಮ ಇದ್ದೇನು ಪ್ರಯೋಜನ.ವ್ಯಾಕುಲ ಚಿತ್ತನಾಗಿ ಭ್ರಮಾಧೀನನಾದ ರಾಮನನ್ನು ಕಂಡು ಮಾತಲಿ ಯಾವ ಭಾವಕ್ಕೂ ಬದಲಾಗದೇ ಸ್ಥಿತ ಪ್ರಜ್ಞನಾಗಿ ರಾಮನನ್ನು ಎಚ್ಚರಿಸುತ್ತಾನೆ.

            ರಾವಣ ವಧೆ ಪ್ರಸಂಗದಲ್ಲಿ ಮಾತಲಿ ಎಂಬ ಪಾತ್ರ ಕೇವಲ ಸಾಂದರ್ಭಿಕ ಪಾತ್ರ. ವಾಡಿಕೆಯಲ್ಲಿ ಸಾಮಾನ್ಯ ಕಲಾವಿದ ನಿರ್ವಹಿಸುವ ಪಾತ್ರ. ಪ್ರಾಮುಖ್ಯತೆ ಬಹಳ ಕಡಿಮೆ. ಆದರೆ ಒಬ್ಬ ಪ್ರತಿಭಾವಂತ ವಾಗ್ಮಿಯ ಕೈಗೆ ಇದೇ  ಪಾತ್ರ ಸಿಕ್ಕಿದಾಗ ಇಂತಹ ಪಾತ್ರಗಳೂ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಮಾತಲಿಯಾಗಿ ತೆಕ್ಕಟ್ಟೆ ಆನಂದ ಮಾಸ್ತರ್ ತಮ್ಮ ಸಹಜವಾದ ವಿಡಂಬನಾ ಶೈಲಿಯಲ್ಲಿ ಪ್ರಖರವಾದ ಮಾತಿನ ಮೂಲಕ ಪಾತ್ರವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಯಕ್ಷಗಾನ ಅರ್ಥ ಸಾಹಿತ್ಯ ಒಂದು ಬೆರಗುಗೊಳಿಸುವ ಪ್ರಪಂಚ. ವ್ಯಕ್ತಿಯಿಂದ ವ್ಯಕ್ತಿಗೆ ಪಾತ್ರದಿಂದ ಪಾತ್ರಕ್ಕೆ ಇಲ್ಲಿ ವಿಭಿನ್ನ ವಿಚಿತ್ರ ದೃಷ್ಟಿಕೋನಗಳು ಕಂಡುಬರುತ್ತವೆ.  ವಾದಗಳು,  ಅವುಗಳನ್ನು ಪುಷ್ಟೀಕರಿಸುವ ತರ್ಕ ಮಂಡನೆಗಳು ಇದರ ಬೆಂಬತ್ತಿ ಹೋದ ಹಾಗೆ ಚಿಂತನೆಯ ಅಲಗು ಮತ್ತಷ್ಟು ಹರಿತವಾಗುತ್ತದೆ. ಯಕ್ಷಗಾನ ಅರ್ಥ ಸಾಹಿತ್ಯದ ವಿಪುಲ ಪ್ರಪಂಚ ದಿಗಂತದ ಸೀಮೆಯಂತೆ ಹೋದಷ್ಟೂ ಮತ್ತೂ ತೆರೆದುಕೊಂಡು ವಿಸ್ಮಯವನ್ನುಂಟು ಮಾಡುತ್ತದೆ.
            ರಾಮಾಯಣದ ಒಂದು ಚಿಕ್ಕ ಸನ್ನಿವೇಶದ ಚಿಕ್ಕ ಪಾತ್ರ ಮಾತಲಿಯ ದೃಷ್ಟಿಕೋನ ರಾಮಾಯಣದ ವೈಶಾಲ್ಯತೆಯನ್ನು ತೋರಿಸುತ್ತದೆ.

             ಇಲ್ಲಿ ಉಳಿದವರೆಲ್ಲ  ಕಣ್ಣೀರು ಸುರಿಸಿ ಕಂಗಾಲಾಗಬಹುದು. ಆದರೆ ಮಾತಲಿ ಯಾವುದೇ ಭಾವಾವೇಶ ತೋರದೆ ತಟಸ್ಥವಾಗಿರುವುದಕ್ಕೆ ಕಾರಣ ಈ ಮಾತಲಿ ಚೌಕಿಯಿಂದ ಬಂದವನು. ಪ್ರೇಕ್ಷಕರು ವೇಷದವನ ಪರಿಚಯ ಸಿಗದೇ ತಬ್ಬಿಬ್ಬಾಗಬಹುದು. ಆದರೆ ಚೌಕಿಯಲ್ಲಿ ವೇಷಕ್ಕೆ ಪರಿಕರವನ್ನು ಒದಗಿಸಿದವನು ತಬ್ಭಿಬ್ಬಾಗುವುದಕ್ಕೆ ಸಾಧ್ಯವೇ? ಅರ್ಥಧಾರಿಗಳು ಇಲ್ಲಿ ಮೇಲಿನ ಲೋಕವನ್ನು ಚೌಕಿಯನ್ನಾಗಿ ಬಿಂಬಿಸುತ್ತಾರೆ. ಬಹಳ ಸುಂದರ ಕಲ್ಪನೆ. ವೇಷ ಹಾಕಿ ಬಂದವರನ್ನು ಕೆಲವರು ಗುರುತು ಹಿಡಿಯದೇ ತಬ್ಬಿಬ್ಬಾದರೆ, ಕೆಲವರು ಇಂದು ಇಂಥವನೇ ಎಂದು ಗುರುತು ಹಿಡಿಯುತ್ತಾರೆ. ಆದರೆ ಚೌಕಿಯಲ್ಲಿದ್ದವರು ಯಾವ ವೇಷದವರನ್ನೂ ಗುರುತು ಹಿಡಿದು ಬಿಡುತ್ತಾರೆ. ಯಾಕೆ ಎಲ್ಲವನ್ನೂ ಕೊಟ್ಟು ಕಳುಹಿಸುವುದು ಅವರೇ ಅಲ್ಲವೇ?

            ಎಲ್ಲವೂ ನಾಟಕವೆಂದು ಭಾಸವಾದರೂ ಅದನ್ನೇ ನೈಜ ಎಂದು ತಿಳಿದು ಭಾವಾವೇಶವಾಗುತ್ತಾರೆ. ನಾಟಕವೆಂದು ತಿಳಿದರೂ ಅದನ್ನು ನೋಡುವ ಕಾರಣವಾದರೂ ಏನು? ಅದರಿಂದ ಸಿಗುವ ರಂಜನೆ. ಅದರಿಂದ ಸಿಗುವ ಸ್ವಾರಸ್ಯಕಾಗಿಯೇ ಬರುತ್ತಾರೆ.  ನಿದ್ದೆ ಕೆಟ್ಟು ದುಡ್ಡುಕೊಟ್ಟು ಆಟ ನೋಡುವವರು ಇದ್ದಾರೆ. ಅವರನ್ನು ಭಾವಾವೇಶಕ್ಕೆ ಒಳಪಡಿಸಿ ವಂಚಿಸಿದರೂ ತನ್ನನ್ನು ರಾಮ ವಂಚಿಸುವ ಕಾರಣವಾದರೂ ಏನು? ರಾಮ ಎಲ್ಲವನ್ನೂ ಬಿಟ್ಟು ಬದರಿಕಾಶ್ರಮಕ್ಕೆ ಹೋಗಬಹುದು. ಆದರೆ ಜೀವನಕ್ಕೆ ಹೆದರಿ ಕೈಸೋತು ಹೋಗುವವರಿಗೆ ಬದರಿಕಾಶ್ರಮದಲ್ಲಿ ಜಾಗ ಉಂಟು ಅಂತ ಯಾವ ಪುಸ್ತಕದಲ್ಲಿ ಬರೆದಿದೆ? ಇಲ್ಲಿ ಸಲ್ಲುವವನು ಮಾತ್ರ ಅಲ್ಲಿ ಸಲ್ಲುವುದು. ರಾಮ ಇಂತಹ ಮಾತುಗಳನ್ನು ಮಂಗಗಳ ಮಧ್ಯೆ ಹೇಳಬಹುದು. ಅವುಗಳು ಭಾವಾವೇಶ ಗೊಳ್ಳಬಹುದು. ಆದರೆ ಮಾತಲಿ ಹಾಗೋ?

            ರಾಮ ಬಳಲಿದೆ ಬಸವಳಿದೇ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ಬಲ ಅತಿಬಲ ಎಂಬ ಮಂತ್ರೋಪದೇಶವನ್ನು ವಿಶ್ವಾಮಿತ್ರನಿಂದ ಪಡೆದ ರಾಮನಿಗೆ ಬಳಲಿಕೆ ಉಂಟು ಎಂದರೆ ನಂಬಲು ಸಾಧ್ಯವೇ? ಕೈ ಸೋತೆ ಅಂತ ಅಂತ ರಾಮ ಹೇಳಬಹುದು. ಸೋತದ್ದು ಕೈ ಮಾತ್ರ ರಾಮ ಅಲ್ಲವಲ್ಲ?  ಹಾಗಾದರೆ ಇದೆಲ್ಲ ಅಭಿನಯ. ರಾಮನ ಬಾಣ ವ್ಯರ್ಥವಾಯಿತು. ಉದ್ದೇಶ ಸಿದ್ದಿ ಮಾಡಲಿಲ್ಲ ಎಂದುಕೊಳ್ಳುವುದೇಕೆ. ರಾಮ ಬಿಟ್ಟ ಬಾಣದಲ್ಲಿ ರಾವಣನ ಶಿರಸ್ಸು ಕತ್ತರಿಸಲ್ಪಟ್ಟಿದೆ. ಆದರೆ ಮತ್ತೆ ಚಿಗುರಿಕೊಂಡದ್ದು ಬಾಣದ ತಪ್ಪು ಹೇಗಾಗುತ್ತದೆ?  ಬಾಣ ಪ್ರಯೋಗದ ಸಂಕಲ್ಪ ಸಿದ್ಧಿಯಾಗಿದೆ. ರಾವಣನ ಪ್ರಾಣ ನಾಶವಾಗಲಿಲ್ಲ. ಅದಕ್ಕೆ ಕಾರಣ ಹುಡುಕಬೇಕು. ರಾವಣ ಎಲ್ಲ ರಕ್ಕಸರಂತಲ್ಲ. ಬ್ರಾಹ್ಮಣ ವಂಶಜ. ಯಾತುಧಾನರ. ಇದೆಲ್ಲ ಮೊದಲೇ ಸಂಕಲ್ಪವಾದ ನಿರ್ಣಯ. ಹಾಗಾಗಿಯೇ ಅಂತಹ ರಾವಣನ ಸಂಹಾರಕ್ಕೆ ಇಂದ್ರ ಪಾಯಸದ ರೂಪವಾಗಿ ದಶರಥನ ಸುತನಾಗಿ ಬರುತ್ತೇನೆ ಅಂತ ರಾವಣನನ್ನು ಮೊದಲು ವೇಷಮಾಡುವುದಕ್ಕೆ ಕಳುಹಿಸಿದ್ದಲ್ಲವೇ? ನೀನು ಮೊದಲು ಹೋಗು ಸಮಯಕ್ಕಾಗುವಾಗ ಆಮೇಲೆ ನಾನು ಬರುತ್ತೇನೆ.

            ರಾವಣನ ಮಹತ್ವದಂತೆ ರಾಮನ ಮಹಿಮೆಯನ್ನು ಪರೋಕ್ಷವಾಗಿ ಹೇಳುವುದು ಇಲ್ಲಿನ ಮೂಲ ಆಶಯ. ಯಕ್ಷಗಾನದಲ್ಲಿ ಅದನ್ನು ಸುಂದರವಾಗಿ ಹೆಣೆಯಲಾಗಿದೆ. ಕಲಾವಿದ ಆ ಅಶಯವನ್ನು ಅರಸಿ ಅರ್ಥವಿಸಿ ನಿರ್ವಹಿಸಿದರೆ ಅಡಕವಾದ ಸಂದೇಶವನ್ನು ಅನಾವರಣ ಗೊಳಿಸುವ ಉದ್ದೇಶ ಸಫಲವಾಗುತ್ತದೆ.

ಎನಗೆ ಹೊಸಬ ನೇನಲ್ಲಾ | ನಿನ್ನ |
ಘನ ಮಾಯೆಯನು ಇವರರಿತವರಲ್ಲ ||
ಚಿನುಮಯಾತ್ಮಕ ನಿನ್ನ ನಿಜವ | ನಾನು |
ಮನದಿ ನಿಶ್ಚಯಿಸಿಹೆ ತೆಗೆಧನುಶರವ || ಬಲ್ಲೆ ||

ರಾಮ ಏನು ಎಂದು ಇಲ್ಲಿನ ಇತರರಿಗೆ ಅದರ ಅರಿವಿಲ್ಲ. ಓದಿದವನಾದರು ಮಂಗ ಮಂಗನೇ ಅಲ್ವ? ಹಾಗಾಗಿ ರಾಮನ ಮಾಯೆಯನ್ನು ಅರಿತವನು ಮಾತಲಿ. ರಾಮ ಲಂಕೆಗೆ ಆಗಮಿಸಿದ್ದು. ಸೀತೆಗಾಗಿ ಮಾತ್ರವಲ್ಲ, ಅಥವಾ ಅನರಣ್ಯಕನನ್ನು ಕೊಂದ ಸೇಡು ತೀರಿಸಿಕೊಳ್ಳುವುದಕ್ಕಾಗಿ ಮಾತ್ರವೂ ಅಲ್ಲ, ಅಥವಾ ಅಯೋಧ್ಯೆಯ ರಾಜ ಸಿಂಹಾಸನದ ಮೇಲೆ ಬೆಳಗುತ್ತಿರುವ ಬೆಳ್ಗೊಡೆ ರಾವಣನಿಂದ ಭಗ್ನಗೊಂಡಿದೆ ಎಂಬ ವಿರೋಧಕ್ಕಾಗಿ ರಾಮ ಬಂದವನು ಎಂದಾದರೆ ರಾಮನಿಗೆ ಜಯದ ಅಭಿಲಾಷೆ ಬೇಕಿತ್ತು. ಹಾಗಾದರೆ ಇವಿಷ್ಟೇ ಭಾವನೆಯಲ್ಲ. ವಿಭೀಷಣ ಶರಣನಾಗಿ ಬಂದಾಗ ಅವನಿಗೆ ಅಭಯವನ್ನು ದಯಪಾಲಿಸುವ ದ್ವಾರ  ಲಂಕೆಯ ಅಧಿಪತ್ಯವನ್ನು ಆತನಿಗೆ ಬಿಟ್ಟ ಮೇಲೆ,  ಆಗ ಜ್ಞಾನಿಯಾದ ಹನುಮ ಸಂದೇಹದಲ್ಲಿ ಒಂದು ಪ್ರಶ್ನೆ ಕೇಳಿದ, ಒಂದು ವೇಳೆ ತನ್ನ ತಪ್ಪನ್ನು ಅರಿತು ರಾವಣ ಶರಣನಾಗಿ ಬಂದನೆಂದರೆ, ಲಂಕೆಯನ್ನು ವಿಭೀಷಣನಿಗೆ ಕೊಟ್ಟರೆ ರಾವಣನಿಗೆ ಸಿಗುವ  ಪ್ರಾಪ್ತಿ ಯಾವುದು? ಆವಾಗ ರಾಮ ಹೇಳಿದ್ದ, ವಿಭೀಷಣನಿಗಿತ್ತ ಲಂಕೆ ಅದು ವಿಭೀಷಣನಿಗೇ, ಬದಲಾಗಿ  ರಾಮ ತನ್ನದ್ದಾದ ಅಯೋಧ್ಯೆಯನ್ನು ರಾವಣನಿಗೆ ಬಿಟ್ಟುಕೊಡುವುದಾಗಿ ಮಾತ್ರವಲ್ಲ, ಅಯೋಧ್ಯೆಗೆ ತಾತ್ಕಾಲಿಕವಾಗಿ ಮತ್ತು ಆಗಾಮಿಯಾಗಿ ಅಧಿಕಾರವುಳ್ಳ ಭರತನಿಗೆ ವೈಕುಂಠ ಪದವಿಯನ್ನು ಇತ್ತೇನು.  ಅಯೋಧ್ಯೆ ಮತ್ತು ಲಂಕೆ ಸೂರ್ಯವಂಶದ ಆಡಳಿತಕ್ಕೆ ಒಳ ಪಟ್ಟಿದ್ದರೆ, ವೈಕುಂಠಕ್ಕೆ ಸೂರ್ಯವಂಶದ ಪಾರುಪತ್ಯಇಲ್ಲವಲ್ಲ. ಹಾಗಾದರೆ ಆ ಮಾತಿನ ಮರ್ಮ ಏನು? ವೈಕುಂಠಕ್ಕೇ ಸೇರಬೇಕಾದರೆ ವೈಕುಂಠನೇ ಆಗಬೇಕಲ್ಲ.
 “ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವೃತಂ ಮಮಃ” ಅಂದರೆ “ಯಾರು ನನ್ನಲ್ಲಿ ಶರಣು ಕೋರಿ ಬರುತ್ತಾರೋ ಅವರಿಗೆ ಜಗತ್ತಿನಿಂದ ರಕ್ಷಣೆ ಕೊಡುವುದು ನನ್ನ ಕರ್ತವ್ಯ”  ಹೀಗೆ ಹೇಳಿದ ರಾಮ ಯಾರು ಏನು ಎಂದು ಮಾತಲಿ ಅರಿತೇ ಈ ಮಾತುಗಳನ್ನಾಡುತ್ತಾನೆ.  ಅಗಸ್ತ್ಯರು ಕೊಟ್ಟಂತಹ  ಶಾರ್ಙ ಧನುಸ್ಸು, ಇದನ್ನು ದೇವೇಂದ್ರನೇ ಅಗಸ್ತ್ಯರಿಗೆ ಕೊಟ್ಟು ರಾಮನಿಗೆ ಪ್ರದಾನ ಮಾಡುವಂತೆ ಕೇಳಿಕೊಂಡಿದ್ದ.  ಆ ಧನುಸ್ಸನ್ನು ಕೈಗೆ  ತೆಗೆದುಕೋ ರಾವಣನನ್ನು ವಧಿಸಿಬಿಡು.

ಮೆರೆವ ಶಾರ್ಙ್ಗಮಹಾಶರವ ಕರ |
ಸರಸಿರುಹದಲಿ ಪಿಡಿದ ಧನುವಿಗೆ |
ಗುರಿವಿಡಿಯಲನಿತರೊಳು ವಿಶ್ವಾಕಾರ ತಾನಾದ ||
ಹರಪಿತಾಮಹ ಸುರಪ ಮನುಮುನಿ |
ವರರನುರೆ ಬ್ರಹ್ಮಾಂಡಕೋಟಿಯ |
ಧರಿಸಿರುವ ಶ್ರೀ ವಿಮಲ ಮೂರ್ತಿಯ ಕಂಡನಸುರೇಂದ್ರ ||



ಕಂಡನು ದಶವದನ | ಕೋದಂಡರಾಮನ   ||
ಪುಂಡರೀಕಾಂಬಕನ ಜಗದೋ |
ದ್ದಂಡರೂಪನ ಖಂಡಬಲ ಬ್ರ |
ಹ್ಮಾಂಡಕೋಟಿಯ ತಂಡಗಳ ಕಪೆ |
ಗೊಂಡು ಸಲಹುವ ಜಾಂಡಧೀಶನ ||

ಶಾರ್ಙ ಧನುಸ್ಸು ಹಿಡಿದು ವಿಶ್ವಾಕಾರದಲ್ಲಿ ನಿಂತ ರಾಮನನ್ನು ನೋಡಿ ರಾವಣ ದಿಗ್ಭ್ರಮೆಗೊಳ್ಳುತ್ತಾನೆ. ಆವರೆಗೆ ತನ್ನ ನಿಯತಿಯೇ ಅಂತಿಮ ಎಂದುಕೊಂಡ ರಾವಣ ಎಲ್ಲ ಪ್ರಶ್ನೆಗಳಿಗೂ ಅಂತಿಮ ಪ್ರತಿಕ್ರಿಯೆಯಾಗಿ ನಿಂತ ರಾಮನ ವಿಶ್ವರೂಪವನ್ನು ಕಂಡು ಬೆರಗಾಗಿ ಮಂಡಿಯೂರಿಬಿಡುತ್ತಾನೆ.  ಇಲ್ಲಿ ಪುರಾಣದಲ್ಲಿ ಮತ್ತು ಪ್ರಸಂಗದಲ್ಲಿರುವ ರಾವಣನ ದ್ವಂದ್ವ ವ್ಯಕ್ತಿತ್ವವನ್ನು ಅಭಿವ್ಯಕ್ತಿಗೊಳಿಸುವ ಪ್ರಯತ್ನ ಈ ಪದದ ಅರ್ಥಗಾರಿಕೆಯಲ್ಲಿ ಕಾಣಬಹುದು.

“ ನನ್ನ ಛಲ ಸಿದ್ಧಿಯಾಯಿತು. ಇದನ್ನೆ ನಾನು ರಾಮನಲ್ಲಿ ಹೇಳಿದ್ದೆ.  ಇದೂ ಸಾಲದು. ಅದೂ ಸಾಲದು. ಮತ್ತೂ ಬೇಕಾದೀತು. ನಾನು ಕಂಡೆ ಅಂತ ಅಂದ್ರೆ ಪ್ರಪಂಚದಲ್ಲಿ ಅನೇಕರು ಒಪ್ಪಲಿಕ್ಕಿಲ್ಲ.  ಯಾಕೆ ಅಂದ್ರೆ ನಾನು ಕಂಡದ್ದನ್ನು ನಾನು ಹೇಳಿದರೆ ಅವರು ಕಂಡಿದ್ದಾರೋ?  ಇಲ್ಲಿ ಹಿಂದೆ ಒಂದು ಹಿಮ್ಮೇಳ ಉಂಟು.  ನಾನು ಮೊದಲು ಅದನ್ನೇ ಹೇಳಿದ್ದು.  ಲಾಲಿಸು ಮಯ ತನುಜೆ, ರಾಮನಲ್ಲಿಯೂ ಹೇಳಿದ್ದು ಅದೇ.  ನಮ್ಮೊಳಗೆ ಹೀಗೆ ತಾಗಿಸಿ ಹಾಕುವ ಉದ್ದೇಶವೇ ಕೆಲವರಿಗೆ ಉಂಟು ಅಂತ. ಈಗ ಆವರೇ ಅಲ್ವ ಹೇಳುವುದು ಅಲ್ಲಿಂದ ಕರೆದು. “ಕಂಡನು ದಶವದನ” ನಿನ್ನೆಯವರೆಗೆ ಇವರು ಎನು ಹೇಳ್ತಿದ್ರು?  “ಮಂದ ಮತಿ ರಾವಣನು ಐತಂದು ಇತ್ತನೋಲಗವ”  ಅವರ ಬಾಯಿಯಿಂದಲೇ ಈ ಹೊತ್ತು ಏನು ಹೇಳ್ತಾರೆ?  ಕಂಡನೂ ದಶವದನ. ಏನು ಈ ದಶವದನ ಕಂಡದ್ದು ಏನನ್ನು???  ಕೋದಂಡ ರಾಮನನು,    ಇದು ರಾವಣತ್ವ.  ಎಂತಹಾ ರಾಮನನ್ನು ಕಂಡೆ ನಾನು. ಕೋದಂಡರಾಮನನ್ನು.  ಕೋದಂಡರಾಮ ಅಂತಂದ್ರೆ ದಶರಥ ರಾಮನೂ ಹೌದು.  ಅಲ್ಲಾಂತ ಅಲ್ಲ. ಆದರೆ ಕೋದಂಡರಾಮ ತತ್ವಕ್ಕೆ ಈ ಕೋದಂಡರಾಮ ಪ್ರತಿಮೆ ಅಷ್ಟೆ.  ಈ ರಾಮ ಮಂತ್ರ ದೇವತೆ. ದಶರಥನ ಮಗ ರಾಮ ನಾಮ ದೇವತೆ.  ( ಅತ್ಯಂತ ವಿಶಿಷ್ಟ ನಿರೂಪಣೆ ಇದು)  ಅಲ್ಲಿ ರಾಮ ನಾಮ, ಇಲ್ಲಿ ರಾಮ ಮಂತ್ರ. ( ಮೊದಲು ಮಾತಲಿ ಮಂಡಿಸಿದ ಜಿಜ್ಞಾಸೆಗೆ ಹೀಗೂ ಒಂದು ರೂಪವನ್ನು ಕಲ್ಪಿಸುವ ಯತ್ನ)  ಇದನ್ನು ಮೊದಲು ಕಂಡವರು ಅವರು. ಸಪ್ತ ಋಷಿಗಳು. ಅವರು ಪ್ರಪಂಚದಲ್ಲಿ ಇದನ್ನು ಬಿತ್ತಿದರು.  ಆದ್ದರಿಂದ ಯಾವನೋ ಒಬ್ಬ ಕಿರಾತ, ದಸ್ಯು ಅವನು ಪರಮ ಋಷಿಯಾದದ್ದು.  ನಮ್ಮ ರಾಕ್ಷಸರೂ ಈಗ ಸತ್ತು ಮೋಕ್ಷ ಪಡೆದದ್ದು ಆ ಮಂತ್ರ ದೇವತೆಯನ್ನು ಕಂಡು.  ಹಾಗಾಗಿ ಅಲ್ವ, ಆ ಬಡತಾಯಿ ಮಗ, ಏನೂ ಗೊತ್ತಿಲ್ಲದವ,  ಯುದ್ದದಲ್ಲಿ ಏನಾಯಿತೋ ನೋಡಿ ಬಾ  ಎಂಬ ಉದ್ಯೋಗಕ್ಕೆ ನಾನು ನೇಮಿಸಿದವ,  ಏನು ಹೇಳಿದ ’ ಗೂಢ ಬ್ರಹ್ಮನಲಿ ಹಗೆ ಮಾಡಿ ಕೆಡದಿರು’  ಅವನಿಗೆ ಯಾರು ಉಪದೇಶ ಮಾಡಿದ್ದು?  ರಾವಣ ಏನು ಮಾಡಿದ್ದಾನೆ ಲಂಕೆಯಲ್ಲಿ?  ನೋಡಿ ಇಷ್ಟು ಮಾಡಿದ್ದಾನೆ. ಇಷ್ಟು ವರ್ಷ ಅಯೋಧ್ಯೆಯಲ್ಲಿ ದಶರಥಾದಿಗಳು ಏನು ಮಾಡಿದ್ದಾರೆ?  ನನ್ನ ಮಗ ರಾಮ...ನನ್ನ ಮಗ. ನನ್ನ ಸೊಸೆ ಸೀತೆ. ಹುಟ್ಟಿಸಿದ ಅಪ್ಪನೇ ಕಂಡದ್ದು ರಾಮನನ್ನು ಹಾಗೆ.  ಮತ್ತೆ ಅವರಿಬ್ಬರು ಗಡ್ಡದ ಋಷಿಗಳು ... ಅವರು ಕಂಡದ್ದು ದೊಡ್ಡದಲ್ಲ.  ದಶರಥ ಈ ರಾಮನ ಕುರಿತಾಗಿ ಕಣ್ಣೀರು ಹಾಕುವಾಗ ಆ ವಿಶ್ವಾಮಿತ್ರ ಹೇಳಿದ್ದಾನಂತೆ,  ಅಹಂ ವೇದ್ಮಿ ಮಹತ್ಮಾನಂ ರಾಮಂ ಸತ್ಯಪರಾಕ್ರಮಂ,   ವಸಿಷ್ಠನಿಗೆ ಗೊತ್ತುಂಟು  ನಿನ್ನ ಮಗ  ಏನುಂತ. ನನಿಗೂ ಸ್ವಲ್ಪ ಗೊತ್ತುಂಟು. ನಿಮಗೆಲ್ಲ ಏನೂ ಗೊತ್ತಿಲ್ಲ.  ಆಲ್ಲ ರಾಮನನ್ನು ಗೊತ್ತುಂಟು ಅಂತ ಎದೆ ತಟ್ಟಿ ಹೇಳಿದವರು ಇಬ್ಬರು ಮಾತ್ರ. ಇಲ್ಲಿ ನನ್ನ ಚಾಕರಿಯವ ಗೊತ್ತುಂಟು ಅಂತ ಧೈರ್ಯವಾಗಿ ಹೇಳಿದನಲ್ಲ. ಗೂಢ ಬ್ರಹ್ಮ.  ಮತ್ತೆ ಏನಾಗಬೇಕು? ಸಂಸ್ಕಾರ ವಿದ್ಯೆ ಅಂತಂದ್ರೆ.  ನಮ್ಮ ಜಾತಿಯವರು..,, ಎದ್ದಾದರೂ ಕುಡಿದರು, ಬಿದ್ದಾಗ ಕುಡಿದದ್ದನ್ನು ವಾಂತಿ ಮಾಡಿಕೊಂಡರು.  ರಾಕ್ಷಸ ಆದದ್ದಷ್ಟೇ,  ನನ್ನ ತಾಯಿ ನನಗೊಂದು ಆಶೀರ್ವಾದ ಮಾಡಿದಳು, ಮಗನೇ  ವಂಶೋದ್ಧಾರಕನಾಗಬೇಕು.  ಹೇಳಿಸಬೇಕು ಹಿಂದಿನಿಂದ ಭಳಿರೇ ರಾಕ್ಷಸ ಕುಲೋಧ್ಧಾರಕ.  ಇದೂ ಒಂದು ತರಹದ ಉದ್ದಾರ ಮಾರ್ಗವೇ ಅಲ್ವ?  ಅಯೋಧ್ಯೆಯಲ್ಲಿ ಇನ್ನು ಪ್ರಚಾರ ಆಗಬೇಕಷ್ಟೇ , ರಾಮ ಪುರುಷೋತ್ತಮ ಅಂತ.  ಪುರುಷೋತ್ತಮ ಅಂದ್ರೆ ನಾನು ಹೇಳುವ ಪುರುಷೋತ್ತಮ ಬೇರೆ. ಓಂ ಸಹಸ್ರ ಶೀರ್ಷಾಪುರುಷಃ . ಆ ಪುರುಷೋತ್ತಮ. ಈ ಪುರುಷೋತ್ತಮನಾದ ಕೋದಂಡರಾಮನನ್ನು ಈಗ ನಾನು ಕಂಡದ್ದು. ಆದ್ದರಿಂದ ಅಲ್ವ ಅವರೆಲ್ಲ ಧೈರ್ಯವಾಗಿ ಹೇಳಿದ್ದು. ಬ್ರಹ್ಮಾಂಡ ನಾಯಕನ. ಅವರು ಹೇಳಿದ್ದನ್ನೆ ನಾನು ಕಂಡದ್ದಾಗುವಾಗ ನಾನು ಕಂಡದ್ದು ಕನಸಲ್ಲ ಅಂತ ಅಯಿತಲ್ಲ. ಹೀಗೆ ಪರಮ ಜ್ಞಾನಿಗಳು ದೇವತೆಗಳು ಎಲ್ಲ ರಾವಣನಿಗೆ ವಿಶ್ವರೂಪದ ದರ್ಶನವಯಿತು ಎಂದು ಹೇಳುವಾಗ,  ಈಗ ಪಶ್ಚಾತ್ತಾಪ ಪಡೀಲಿಕ್ಕಿಲ್ಲವ , ರಾವಣ ಚರಿತ್ರೆಯನ್ನು ಈ ಮೊದಲೇ ಬರೆದು ಉದ್ಘಾಟಿಸಿದವರು?  ಯಕೆ? ಯಾವುದೇ ಚಿತ್ರವನ್ನು ಬರೆದು ಅವಸರವಸರವಾಗಿ ಉದ್ಘಾಟನೆ ಮಾಡಿದ್ರೆ ಹೀಗಾಗುವುದು.  ಅವನು ಹೇಳ್ಬೇಕು. ನನ್ನ ಚಿತ್ರ ಮುಗೀತು. ಇನ್ನು ವಿಮರ್ಶೆ ಮಾಡಿ.  ಜೀವನದ ಕೊನೆಗೆ ಜನ ಹೇಳುವುದು ಪ್ರಾಮಾಣಿಕವಾಗಿ, ಇದು ರಾವಣನ ಪೂರ್ಣ ಜೀವನ.  ಈ ಪೂರ್ಣ ಜೀವನ ಈ ಮೋಕ್ಷ, ಈ ಅನಂದ ಈ ವಿಶ್ವರೂಪ ದರ್ಶನ ನನಗೆ ಆಗ್ಯದೆ ಅಂತ ಹೇಳಿದ ಈ ಸರ್ವಸಾಕ್ಷೀ ಸ್ವರೂಪರಾಗಿ ಇದ್ದವರು,  ರಾವಣ ಅಧರ್ಮಿ ಅಂತ ಇನ್ನು ಹೇಳಿಯಾರ?  ಅಧರ್ಮ ಮಾಡಿದವನಿಗೆ ಇದು ಸಿಗ್ತದಾ?  ಸಿಕ್ಕೂದಿಲ್ಲ. ಕೇವಲ ಕಾಮದಾಸ ಅಂತ ಹೇಳಿಯಾರೋ?  ಅರ್ಥ ದಾಸ ಅಂತ ಹೇಳಿಯಾರ? ಹೇಳ್ಳಿಕ್ಕಿಲ್ಲ.  ತನ್ನ ಅರ್ಥವನ್ನೂ,  ತನ್ನ ಕಾಮವನ್ನೂ, ತನ್ನದ್ದಾದ ಧರ್ಮವನ್ನೂ ಇದಕ್ಕಾಗಿ ಸಂಪೂರ್ಣ ವಿನಿಯೋಗಿಸಿದಾ.. ಎಲ್ಲರಿಗೂ ಸಾಧ್ಯವಲ್ಲ ಅದು. ರಾವಣನಿಗೆ ಸಾಧ್ಯವಾಯಿತು. ಆದಕಾರಣ ಪೂರ್ಣ ವಿಕಾಸಗೊಂಡಮೇಲೆ ಮತ್ತೆ ಮರಳಿ ಈ ಮಣ್ಣಿಗೆ ಬರಕೂಡದು. ಕಂಡಿದ್ದೇನ, ಸಂತೋಷ ಪಟ್ಟಿದ್ದೇನೆ. ರಾಮಚಂದ್ರಾ.... ಇದಕ್ಕೇ ಕಾದದ್ದು ನಾನು. ದಶರಥನ ಮಗ ರಾಮನ ಅಭಿನಯ ಸೋತಿತು. ತಪ್ಪ ತಿಳ್ಕೊಳ್ಳಬೇಡ.  ಸೀತೆಯ ವ್ಯಾಜ್ಯಕ್ಕಾಗಿ ರಾವಣನಿಗೂ ರಾಮನಿಗೂ ಜಗಳವಾಯಿತು ಎನ್ನುವ ವರದಿಯೂ  ಸುಳ್ಳಾಯಿತು.  ಇದು ಸತ್ಯ ಆಯಿತು. ಆದರೆ ನೀನು ದಶರಥನ ಮಗ ರಾಮನೇ ಆಗಬೇಕು.  ಆ ಸಣ್ಣ ಪ್ರಾಯದ ಹುಡುಗಿಗೆ ದಾಂಪತ್ಯವನ್ನು ಇಲ್ಲಿಗೇ ಮುಗಿಸಬೇಕು ಅಂತ ಹಟತೊಡುವ ಸಂಸಾರವಂದಿಗ ಅಲ್ಲ ನಾನು.  ಸೀತೆಗೆ ಗಂಡನಾಗಿ,  ಮಕ್ಕಳಿಗೆ ತಂದೆಯಾಗಿ,  ಮತ್ತೆ ಬೇಕಾದರೆ ನಿಜಧಾಮವನ್ನು ನೀನು ಸೇರು. ನನಗಾಗಿ ಆದಂತಹ ಈ ಪೂರ್ಣ ಮನುಷ್ಯ ಸ್ವರೂಪ ಏನಿದೆಯಲ್ಲ ಅದನ್ನು ನನಗಾಗಿಯೇ ವಿನಿಯೋಗಿಸು.  ನಿನ್ನ ವಿಶ್ವಾಮಿತ್ರ ಕೊಟ್ಟ ಅಸ್ತ್ರವೂ ಉಪಯೋಗವಿಲ್ಲ.  ಆಮೇಲೆ ನೀನು ಸಂಗ್ರಹಿಸಿದ್ದೂ ಪ್ರಯೋಜನ ಇಲ್ಲ. ಆದುದರಿಂದಲೇ ನಾನು ಹೇಳಿದ್ದು ಇದೆಲ್ಲ ಸಾಕೋ ಅಂತ. ನನಗೆ ಏನು ಬೇಕು? ಅದೋ ಅಗಸ್ತ್ಯ ದತ್ತವಾದಂತಹ ಬಿಲ್ಲು,   ಈಗ ನಿನ್ನ ವಿಶ್ವರೂಪ ದರ್ಶನಕ್ಕೆ ಪೂರಕವಾಗಿ ಅಗಸ್ತ್ಯರು ಉಪದೇಶಿಸಿದ ಮಂತ್ರ,  ನಮ್ಮ ಈ ದಕ್ಷಿಣಾ ಪಥದಲ್ಲಿ ಬ್ರಹ್ಮ ಋಷಿಯೂ,  ಆಚಾರ್ಯನೂ ಎಲ್ಲವೂ  ಅಗಸ್ತ್ಯರೇ. ನಿಮ್ಮ ವಸಿಷ್ಠ ಎಲ್ಲ ಅಲ್ಲಿ ಊರಿನಲ್ಲಿ. ಈ ಬದಿಗೆ ಬೆಳೆದದ್ದೆಲ್ಲಾ ಅಗಸ್ತ್ಯನದ್ದು.  ಹಾಗಾಗಿ ಪರಮ ಗುರು ಆದಂತಹ ಅಗಸ್ತ್ಯ ನಿನ್ನನ್ನು ಈ ದಕ್ಷಿಣಾ ಪಥದಲ್ಲಿ ಮೆರೆಸುವದಕ್ಕಾಗಿ ಕೊಟ್ಟಂತಹ ಅನುಗ್ರಹ ರೂಪ ಅದು.  ಅಗಸ್ತ್ಯ ದತ್ತ ಬಿಲ್ಲು. ಅಗಸ್ತ್ಯರೇ ಕೊಟ್ಟ ಬ್ರಹ್ಮಾಸ್ತ್ರ. ಇದರಿಂದ ನಿನಗೂ ಕಾರ್ಯ ಸಾಧನೆಯಾಗ್ತದೆ.  ರಾವಣನಿಗೂ ಉತ್ಕರ್ಷವಾಗ್ತದೆ.  ಅಲ್ಲಿಯವರೆಗೂ ನನ್ನದೊಂದು ಹಟ. ನಮ್ಮ ಮಣ್ಣಿನ ಬೆಳೆಯಿಂದಲೇ ನಮಗಾಗಬೇಕು ಪೂರ್ತಿ. ನನ್ನ ನಂತರ ಬೇಕಾದರೆ ದಕ್ಷಿಣೊತ್ತರ ಒಂದಾಗಲಿ. ವಿಭೀಷಣ ಇದ್ದಾನೆ,  ಒಂದು ತತ್ವಕ್ಕಾಗಿ ಹೋರಾಟ ಮಾಡಿದ್ದೇನೆ. ಮನುಷ್ಯನಾಗಿ ನಿನ್ನ ಕಾಲಲ್ಲೇ ನೀನು ನಿಲ್ಲು. ಅದೋ ಬ್ರಹ್ಮಾಸ್ತ್ರವನ್ನು ಹೂಡು.  ರಾವಣ ಆತ್ಮ ನಿವೇದನೆ ಮಾಡ್ತಾನೆ. ರಾಮನಿಗಲ್ಲ. ಬ್ರಹ್ಮಾಸ್ತ್ರಕ್ಕೆ. ನಾನು ಸಾಧಿಸಿದಂತಹ ಏನು ಸಂಪತ್ತು ಉಂಟು,  ಇದನ್ನು ಭಾವೀ  ರಾಕ್ಷಸರ ಸಾಮ್ರಾಜ್ಯಕ್ಕೆ ಅಸ್ತಿವಾರವಾಗಿ  ಈ ಮಣ್ಣಿನಿಂದ ಬೆಳೆದ ಈ ಮಣ್ಣಿನ ಮಗನ ಮೈ  ಮಣ್ಣಿನಲ್ಲಿ ಸೇರಿ ಹೋಗಿ ಸೂಕ್ತವಾದಂತಹ ಪ್ರಚೋದನ ಮುಂದೆ ನನ್ನ ಜನಾಂಗಕ್ಕೆ ನಾನು ಕೊಡ್ತೇನೆ. ಇದರಿಂದ ಇಹವನ್ನು ನಾನು ಚೆನ್ನಾಗಿ ಸಾಧಿಸಿದೆ. ಪರವೂ ನನ್ನ ಕೈಬಿಟ್ಟು ಹೋಗ್ಲಿಲ್ಲ. ರಾಮನಿಗೂ ಪ್ರತಿಸ್ಪರ್ಧಿ ಇನ್ನು ಮಂದೆಯೂ ಇಂಥವ ಸಿಕ್ಕೂದಿಲ್ಲ. ರಾಮಾವತಾರದ ಭೂಷಣಕ್ಕೆ ಈ ರಾವಣನಿಲ್ಲದಿದ್ದರೆ ಕಿರಟವೇ ಇಲ್ಲ. ರಾಮ ರಾವಣ ಅಂತಂದ್ರೆ ಹಾಗೆ.  ಇಂತಹ ಒಂದು ನೆನಪು ಭಾವಿ ಜನಾಂಗಕ್ಕೆ ಸ್ಫೂರ್ತಿ ದಾಯಕವಾಗಲಿ. ರಾಮಾ ರಾಮ ಬಿಡು ಬಿಡು ಬ್ರಹ್ಮಾಸ್ತ್ರ..... ರಾಮಾ ರಾಮಾ...

ಮಂಗಳಂ



ಕೇವಲ ಯಕ್ಷಗಾನ ಅರ್ಥ ಸಾಹಿತ್ಯದೊಳಗಿನ ಕೆಲವು ದೃಷ್ಟಿಕೋನಗಳನ್ನು ತೋರಿಸುವುದಷ್ಟೇ ಇಲ್ಲಿನ ಪ್ರಯತ್ನ. ಈ ಸಾಹಿತ್ಯ ಪ್ರಪಂಚದಲ್ಲಿ ಹೀಗೆ ಒಮ್ಮೆ ವಿಹರಿಸುವ ಮನಸ್ಸಾದಲ್ಲಿ ಈ ಶ್ರಮ ಸಾರ್ಥಕತೆಯನ್ನು ಪಡೆಯುತ್ತದೆ. ಯಕ್ಷಗಾನದ ಅತ್ಯಮೂಲ್ಯ ಮತ್ತು ಬಹು ಪ್ರಧಾನವಾದ ಈ ಅಂಗ ಬಾಹ್ಯ ಪ್ರಪಂಚ ಇಂದಿಗೂ ಗುರುತಿಸುವುದಿಲ್ಲ. ಯಕ್ಷಗಾನ ಎಂಬ ತಿಳುವಳಿಕೆ ಬಗೆ ಬಗೆಯ ವೇಷ ಕುಣಿತ ಇಷ್ಟಕ್ಕೇ ಸೀಮಿತವಾಗಿಬಿಟ್ಟಿದೆ. ಯಕ್ಷಗಾನಕ್ಕೆ ತನ್ನದೇ ಆದ ಆಯಾಮವನ್ನು ತಂದು ಕೊಟ್ಟ ಈ ಮಾತಿನ ಪ್ರಾಕಾರ ಇನ್ನಷ್ಟು ವೈಭವಯುತವಾಗಿ ಬೆಳೆಯಲಿ, ಮಾತ್ರವಲ್ಲ  ಆ ಬೆಳೆಗೆ ಈ ಬಗೆಯಲ್ಲಿ ಒಂದು ಪೂರಕ ದೇಣಿಗೆಯಾಗಲಿ ಎಂಬ ಆಶಯದೊಂದಿಗೆ ಅಂತರಂಗದ ರಾವಣ ಎಂಬ ಲೇಖನ ಮಾಲೆ ಇಲ್ಲಿಗೆ ಪೂರ್ಣವಾಗುತ್ತದೆ. 
"ಯಕ್ಷಗಾನಂ ಗೆಲ್ಗೆ"