"ಇದು ವಿಮರ್ಶೆಯಲ್ಲದ ಚಿಂತನ"

Sunday, August 24, 2014

ಶ್ರೀರಾಮನಿರ್ಯಾಣ ಎಂಬ ಪ್ರಸಂಗ



ಈ ಪ್ರಪಂಚವೇ ರಂಗಸ್ಥಳ, ಇಲ್ಲಿ ಇರುವುದೆಲ್ಲ ವೇಷಗಳು ಆವೇಷಗಳನ್ನು ಸುತ್ತಿಕೊಂಡು ಕ
ಥೆಗಳು ! ಜಗವೇ ನಾಟರಂಗ !! ಎಂದು ಇದನ್ನೇ ಕವಿಗಳು ಹಾಡಿದರೆ,,,ಈ ರಂಗಸ್ಥಳಕ್ಕೆ ’ ಬಣ್ಣದ ಕೋಣೆ ’ ಅಂದರೆ ಚೌಕಿ ಯಾವುದು? ಇಲ್ಲಿ ನಿಜವನ್ನು ಮರೆಸಿ ಸುಳ್ಳಿನ ಒಳಗೆ ಸೇರಿಕೊಳ್ಳುವುದು ಎಂದು ಕೆಲವೊಂದುಸಲ ಬಣ್ಣದ ಮನೆಯನ್ನು ಕಂಡಾಗ ಅನಿಸುವುದುಂಟು. ಚೌಕಿಯಲ್ಲಿನ ರೂಪ ನಿಜವೇ ಅಲ್ಲ ರಂಗದ ಮೇಲಿನ ಭಾವ ನಿಜವೇ? ಚೌಕಿಯಿಂದ ರಂಗಕ್ಕಿರುವ ಅಂತರದ ಸಂಬಂಧವೇನು?  ತ್ರೇತಾಯುಗದ ರಾಮ ಮರೆತ ಚೌಕಿಯ ನೆನಪು ಕಾಲಾತೀತವೇ? ಯಕ್ಷಗಾನದ ಅಪೂರ್ವ ಪ್ರಸಂಗವೇ ’ಶ್ರೀ ರಾಮ ನಿರ್ಯಾಣ ಅಥವಾ ಶ್ರೀರಾಮ ಪರಂಧಾಮ’ 
ರಾಮಾಯಣ ಎಂದೊಡನೆ ಸುಂದರ ಸೌಮ್ಯತೆಯ ಭಾವ ನಮ್ಮಲ್ಲಿ ಮೂಡುತ್ತದೆ.  ಅದರಲ್ಲಿ ಬರುವ ಹಲಾವಾರು ಸನ್ನಿವೇಶಗಳು ಅದರಂತೇ ಭಾವ ಸ್ಪಂದನವನ್ನುಂಟು ಮಾಡುವ ಹಲವಾರು ಪಾತ್ರಗಳು ನಮ್ಮ ಸ್ಮೃತಿ ಪಟದಲದಲ್ಲಿ ಓಡಾಡುತ್ತವೆ. ಯಾಕಂದರೆ ರಾಮಾಯಣ ಭಾವನಾತ್ಮಕ ಘಟನೆಗಳ ಒಂದು ಸಮುಚ್ಚಯ. ಪ್ರತಿಯೊಂದೂ ಸಹ ಭಾವೋತ್ಕಟನೆಯನ್ನು ತೋರಿಸಿ ಆ ಭಾವವನ್ನು ನಮ್ಮಲ್ಲಿ ಮೂಡಿಸಿಬಿಡುತ್ತದೆ. ಇಂತಹ ಘಟನೆಗಳನ್ನು  ಯಕ್ಷಗಾನದಲ್ಲಿ ಬಹಳ ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಆರಂಭದಲ್ಲಿ ಬರುವ ಅದರಲ್ಲೂ ಪಾದುಕಾ ಪ್ರದಾನ, ಶಬರೀ ಮೋಕ್ಷ  ಕೊನೆಯಲ್ಲಿ ರಾಮ ನಿರ್ಯಾಣ ಇವುಗಳೆಲ್ಲ  ಅತ್ಯಂತ ಭಾವಸ್ಪಂದನವನ್ನುಂಟು ಮಾಡುತ್ತವೆ. ಅರ್ಥಗಾರಿಕೆಯಿಂದಲೂ ಹಾಡುಗಾರಿಕೆಯಿಂದಲೂ ನೃತ್ಯಾಭಿನಯದಿಂದಲೂ ಕಥೆ ಸನ್ನಿವೇಶ ಪಾತ್ರ ಚಿತ್ರಣವನ್ನು ತೋರಿಸಿ ಕಥೆಯ ಗಂಭೀರ ಸ್ವರೂಪದೊಂದಿಗೆ ಪಾತ್ರಗಳ ವ್ಯಕ್ತಿತ್ವವನ್ನು ಸ್ಥಾಪಿಸಿ ಒಂದಿಷ್ಟು ಚಿಂತನೆಗೆ ಪ್ರಚೋದನೆ ಕೊಡುತ್ತವೆ.

ರಾಮ ನಿರ್ಯಾಣ,  ರಾಮಾಯಣದ  ಸಂಪೂರ್ಣ ಸಾರವನ್ನು ಸತ್ವವನ್ನೂ ಒಂದೇ ಪ್ರಸಂಗದಲ್ಲಿ ತೋರುವಂತಹ ಪ್ರಸಂಗ. ರಾಮ ರಾಜ್ಯದ ಸಂಕಲ್ಪ ಪೂರ್ಣಗೊಂಡ ನಂತರದಲ್ಲಿ ರಾಮ ಎಂಬ ಆವರಣಕ್ಕೆ ಈ ಪ್ರಸಂಗ ಅಂತಿಮ ರೂಪವನ್ನು ಕೊಡುತ್ತದೆ. ರಾಮ ಅವತರಿಸುವ ಮೊದಲೇ ರಾಮ ನಾಮ ಎಂಬುದು ಸೃಷ್ಟಿಯಾಗಿ ಆವರಣ ಆಲಿಂದಲೇ ಆರಂಭವಾಗುತ್ತದೆ. ಆ ಆವರಣದ ಒಳಗೇ ರಾಮ ಜನನ ಆ ನಾಮ ರೂಪಕ್ಕೆ ಪ್ರತ್ಯಕ್ಷದಲ್ಲಿ ಒಂದು ಚಿತ್ರವನ್ನು ನಿರ್ಮಿಸಿ ರಾಮನಿರ್ಯಾಣದಲ್ಲಿ ಆ ಆವರಣ ಪೂರ್ಣಗೊಳ್ಳುತ್ತದೆ.
’ಧರ್ಮೋಹಿ ಪರಮೋ ಲೋಕೆ ಧರ್ಮೇ ಸತ್ಯಂ ಪ್ರತಿಷ್ಠಿತಂ.’ ಈ ವಾಕ್ಯವನ್ನೇ ಆದರ್ಶವನ್ನಾಗಿಸಿ ರಾಮ ತನ್ನ ಮೂಲಕ ತೋರಿಸಿಕೊಡುತ್ತಾನೆ. ಮನುಷ್ಯನಾದವನು ಇತರ ಎಲ್ಲ ವಿಷಯಗಳಿಗಿಂತ ಧರ್ಮವನ್ನು ಪರಿಪಾಲಿಸಬೇಕಾದದ್ದು ಅತೀ ಮುಖ್ಯ. ರಾಮ ತನ್ನ ಬದುಕಿನುದ್ದಕ್ಕೂ ಇದನ್ನು ಪ್ರತಿಪಾದಿಸಿಕೊಂಡೇ ಬದುಕಿ ತೋರಿಸುತ್ತಾನೆ. ಹಾಗಾಗಿಯೇ ಆತ ಮರ್ಯಾದಾ ಪುರುಷೋತ್ತಮ ಎನಿಕೊಳ್ಳುತ್ತಾನೆ. ತಂದೆಗೆ ಮಗನಾಗಿ ಏನು ಮಾಡಬೇಕೋ ಅದನ್ನು ಮಾಡಿ ಪುತ್ರಧರ್ಮವನ್ನು ಪಾಲಿಸುತ್ತಾನೆ. ಸಹೋದರರಿಗೆ ಅಣ್ಣನಾಗಿ ಭಾತೃ ಧರ್ಮವನ್ನು ಪಾಲಿಸುತ್ತಾನೆ. ರಾವಣನನ್ನು ಸಂಹರಿಸಿ ಸೀತೆಯನ್ನು ರಕ್ಷಿಸಿ ಪತಿ ಧರ್ಮವನ್ನೂ ಪಾಲಿಸುತ್ತಾನೆ. ಬದುಕಿನ ಪ್ರತಿಹಂತದಲ್ಲೂ ಸಂಕೀರ್ಣ ಪರಿಸ್ಥಿತಿಯಲ್ಲೀಯೂ ಧರ್ಮವನ್ನು ಕೈ ಬಿಡದೆ ಕೊನೆಯಲ್ಲಿ ಸೂರ್ಯವಂಶದ ಚಕ್ರವರ್ತಿಯಾಗಿ, ಪ್ರಜಾ ರಂಜಕನಾಗಿ ರಾಮ ರಾಜ್ಯವೆಂಬ ಆದರ್ಶಮಯ ರಾಜ್ಯವನ್ನು ಸ್ಥಾಪಿಸಿ ರಾಜಧರ್ಮವನ್ನು ಪಾಲಿಸುತ್ತಾನೆ. ರಾಮ ರಾಜ್ಯದಲ್ಲಿ ಕ್ಷಾಮ ಡಾಮರಗಳಿಲ್ಲ. ರೋಗ ರುಜಿನಗಳಿಲ್ಲ, ಬಡತನ ಹಿಂಸೆ ಮೋಸ ವಂಚನೆ ಇದಾವುದೂ ಇಲ್ಲದ ಒಂದು ಸುಖೀರಾಜ್ಯ, ಆ ರಾಜ್ಯದಲ್ಲಿ ಕಾಲ ಕಾಲಕ್ಕೆ ಏನು ಹೇಗೆ ಸಂಭವಿಸಬೇಕೋ ಅದು ಸಂಭವಿಸುತ್ತದೆ. ಅಕಾಲಿಕ ಮರಣಗಳಿಲ್ಲ, ಹೀಗೆ ಸತ್ಯ ಧರ್ಮ ನ್ಯಾಯ ನೀತಿ ಪ್ರತಿಯೊಂದು ಸಮಾನವಾಗಿದ್ದು ಒಂದು ಸಂತೃಪ್ತ ಬದುಕನ್ನು ಪೂರ್ಣ ರೀತಿಯಲ್ಲಿ ಅನುಭವಿಸಿದ ರಾಮ ಅದರ್ಶಮಯ ವ್ಯಕ್ತಿತ್ವವನ್ನು ಸ್ಥಾಪಿಸುವಲ್ಲಿ ಒಂದನ್ನು ಮರೆಯುತ್ತಾನೆ. ಅಲ್ಲಿಂದಲೇ ಈ ಪ್ರಸಂಗ ಆರಂಭವಾಗುತ್ತದೆ.
ಮನುಷ್ಯನಾದವನು ಹೇಗೆ ಬದಕಬೇಕೋ ಹಾಗೆ ಬದುಕಿ ತೋರಿಸುವ ರಾಮ, ಧರ್ಮಕ್ಕಾಗಿ ಕಾಡಿಗೆ ಹೋಗುತ್ತಾನೆ, ಧರ್ಮಕ್ಕಾಗಿ ಸೀತೆಯನ್ನು ತ್ಯಜಿಸುತ್ತಾನೆ. ಹೆಜ್ಜೆ ಹೆಜ್ಜೆಗೂ ಧರ್ಮವನ್ನು ಪರಿಪಾಲಿಸುತ್ತಾ ರಾಮ, ಕಾಲಧರ್ಮಕ್ಕನುಸಾರವಾಗಿ ರಾಮ ರಾಜ್ಯ ಸ್ಥಾಪಿಸಿ ಕಾಲಕ್ಕೆ ಅನುಗುಣವಾಗಿ ರಾಮ ರಾಜ್ಯ ನಿರ್ಮಾಣ ಮಾಡಿದರೆ, ರಾಮನನ್ನು ಎಚ್ಚರಿಸುವುದಕ್ಕೆ, ಕಾಲ ಪ್ರಜ್ಞೆಯನ್ನು ಪ್ರಚೋದಿಸುವುದಕ್ಕೆ ಕಾಲಪುರುಷನೇ ಬರಬೇಕಾಗುತ್ತದೆ. ಒಂದು ಸಂತೃಪ್ತ ಆದರ್ಶಮಯ ರಾಮ ರಾಜ್ಯ ಅತ್ಯುನ್ನತಿಯಲ್ಲಿ ಒಂದು ದಿನ ಕಾಲ ಪುರುಷ  ಅಂದರೆ ಯಮಧರ್ಮನ ಆಗಮನವಾಗುತ್ತದೆ. ಆತ ಧರ್ಮ ದೇವತೆಯಲ್ಲವೇ?.
ದುಷ್ಟ ಸಂಹಾರ ಧರ್ಮ ಸಂರಕ್ಷಣೆಗಾಗಿ ವೈಕುಂಠವಾಸಿ ಶ್ರೀಮನ್ನಾರಾಯಣ ರಾಮನಾಗಿ ಮಾನವನಾಗಿ ಅವತಾರವೆತ್ತಿ ತನ್ನ ಕಾರ್ಯದ ಪರಿಪೂರ್ಣಗೊಳಿಸುತ್ತಾನೆ. ಆನಂತರ ತನ್ನ ಸ್ವಕ್ಷೇತ್ರವಾದ ವೈಕುಂಠಕ್ಕೆ ಬರಬೇಕಾದ ಮಹಾವಿಷ್ಣು ಬಾರದೇ ಭೂಮಿಯಲ್ಲಿ ರಾಮನಾಗಿಯೇ ಮುಂದುವರೆಯುತ್ತಾನೆ. ಅವತಾರದಿಂದ ಮನುಷ್ಯನಾಗಿ  ಸಹಜವಾಗಿ ಕಾಲಧರ್ಮವನ್ನು ಮರೆತುಬಿಡುತ್ತಾನೆ.  ಅದಾಗಲೇ  ಸಿರಿಯಾದ ಸೀತಾದೇವಿ ತನ್ನ ಅವತಾರವನ್ನು ಸಮಾಪ್ತಿಗೊಳಿಸಿ ವೈಕುಂಠವನ್ನು ಸೇರಿಯಾಗಿರುತ್ತದೆ. ವಿಷ್ಣುವಿಲ್ಲದ ವೈಕುಂಠಕ್ಕೆ ಪುನಃ ವಿಷ್ಣುವನ್ನು ಸೇರುವಂತೆ ಎಚ್ಚರಿಸುವಂತೆ ದೇವೇಂದ್ರನೇ ಕಾಲ ಪುರುಷನಿಗೆ ಎಚ್ಚರಿಸುತ್ತಾನೆ.   ರಾಮ ರಾಜ್ಯದ ಸೊಗಸಿನಲ್ಲಿ ಬಹುಷಃ ಕಾಲನೂ ತನ್ನ ಪ್ರಭಾವವನ್ನು ಮರೆತಿರುವಂತೆ ಭಾಸವಾಗುತ್ತದೆ.
ಇದಿರೆದ್ದು ಬಂದು ಮನ್ನಿಸಿ ಕರೆದೊಯ್ದಾಗ | ಮುದದಿಂದ ಪೀಠವಿತ್ತು
ಪದಕೆರಗುತಲೆಂದ ಧರ್ಮ ದೇವನೇ ನೀ ಬಂದುದಕೆ ಸಂತೋಷವಾಯ್ತೂ
ದಿವ್ಯ ಪ್ರಭೆಯೊಂದು ಬಂದು ಅಯೋಧ್ಯೆಯ ಬಾಗಿಲಲ್ಲಿ ಗೋಚರವಾದುದನ್ನು ರಾಮ ಕಾಣುತ್ತಾನೆ. ಕಾಲ ಪುರುಷ ಬಂದುದನ್ನು ತಿಳಿದು ಸತ್ಕರಿಸಿ ಅವನ ಭಿನ್ನಹವನ್ನು ಕೇಳುತ್ತಾನೆ.
ಪರಮ ಪುರುಷ ಕೇಳು ಭವಿತ ರಹಸ್ಯ ಮಾತಿರುವುದು ನಿನ್ನೊಳೊಂದು
ಅರಸ ಏಕಾಂತ ಸಮ್ಮಿಲನಕೆ ಸಮಯವು ದೊರೆವುದೇ ಪೇಳು ನೀನು.
 ತನ್ನೊಡನೆಯ ಸಮಾಲೋಚನೆಗೆ ಏಕಾಂತವನ್ನು ಕಾಲ ಪುರುಷ ಬಯಸುತ್ತಾನೆ. ಅದಕ್ಕಾಗಿ ಅಂತರಂಗ ಭವನ ಆವಶ್ಯಕತೆಯನ್ನು ಮುಂದಿಡುತ್ತಾನೆ.   ಮಾತ್ರವಲ್ಲ ಮಂತ್ರಾಲೋಚನೆಯ ನಡುವೆ ಯಾರೂ ಒಳ ಬಾರದಂತೆ ಅತಿಕ್ರಮಿಸಿ ಬಂದರೆ ಅವರಿಗೆ ರಾಜದಂಡನೆಯನ್ನು ವಿಧಿಸುವ ಅಪೇಕ್ಷೆಯನ್ನು ಮುಂದಿಡುತ್ತಾನೆ.
ಬಂದವನು ಕಾಲಪುರುಷ. ಅವನ ಅಪೇಕ್ಷೇ ಅದೂ ಸಕಲರ ಅಪೇಕ್ಷೆಯನ್ನು ಪೂರೈಸಬಲ್ಲ  ಶ್ರೀರಾಮನಲ್ಲಿ. ಅಯೋಧ್ಯೆ, ಅಂತರಂಗ ಬಹಿರಂಗ ಎಂಬ ಭೇದವಿಲ್ಲದೇ ಇದ್ದ ಒಂದು ರಾಮ ರಾಜ್ಯ. ಅಲ್ಲಿ ಕಾಲ ಪುರುಷ ಅಂತರಂಗವನ್ನು ಬಯಸುತ್ತಾನೆ. ಎಂದರೆ ರಾಮ ರಾಜ್ಯಕ್ಕೂ ಮನುಷ್ಯನಿಗೂ ಅತೀತವಾದ ಒಂದು ದೇವ ರಹಸ್ಯವನ್ನು ಕಾಲಾತೀತನಾದ ರಾಮನಿಗೆ ಹೇಳಿ ಕಾಲಪ್ರಜ್ಞೆಯನ್ನು ಮೂಡಿಸುವುದಕ್ಕೆ ಕಾಲಪುರುಷ, ಧರ್ಮದೇವತೆ  ಬಯಸುತ್ತಾನೆ. ಪಾತ್ರದ ಅವಧಿ ಮುಗಿದಾಗ ಪ್ರೇಕ್ಷಕ ಬೇಕು ಎಂದಾಗ ಪಾತ್ರ ಲಂಬಿಸುವುದಕ್ಕೆ ಸಾಧ್ಯವೇ? ಅದಕ್ಕಾಗಿಯೇ ರಹಸ್ಯ ಮಂತ್ರಾಲೋಚನೆ ಇರಬೇಕು. ಪಾತ್ರ ಬೇಕು ಎನ್ನುವ ಪ್ರೇಕ್ಷಕನಿಗೆ ಪಾತ್ರದ ಮುಕ್ತಾಯ ಮೊದಲೇ ಅರಿವಾಗಬಾರದಲ್ಲ?
ಕಾಲಾಯ ತಸ್ಮೈ ನಮಃ
“ಲಕ್ಷ್ಮಣ ನೀಬೇಗ ಗೌಪ್ಯದ ರಕ್ಷಣೆಗೆ ಈಗ ಇಚ್ಛೆಯಿದೆನುತಲೆ ಭಾವಿಸು ಅತಿಥಿಯ ಪೇಕ್ಷೆಯ ಸಲಿಸುವ ಹೊಣೆ ನಮಗೊದಗಿದೆ “
ಬಹು ಮುಖ್ಯವಾದ ಕೆಲಸ ಒಂದಿದ್ದರೆ ರಾಮ ವಿಶ್ವಾಸ ತಳೆಯುವುದು ಲಕ್ಷ್ಮಣನಲ್ಲಿ. ರಾಮನ ಭಾವವನ್ನು ಸಂಪೂರ್ಣನಾಗಿ ಅರಿಯುವುದಿದ್ದರೆ ಅದು ಲಕ್ಷ್ಮಣ. ಹಾಗಾಗಿ ಬೇರೆ ಯಾರಿಗೆ ತಾನೇ ಹೇಳಲು ಸಾಧ್ಯ? ಲಕ್ಷ್ಮಣನಿಗೆ ಆಜ್ಞೆ ಮಾಡುತ್ತಾನೆ. ತಮಗಾಗಿ ರಹಸ್ಯ ಸ್ಥಳವೊಂದನ್ನು ಏರ್ಪಡಿಸುವುದಕ್ಕೆ. ಆಲ್ಲಿಗೆ ಅವನನ್ನೇ ಕಾವಲುಗಾರನನ್ನಾಗಿ ನಿಯಮಿಸುತ್ತಾನೆ. ಯಾರನ್ನು ಎಂತಹುದೇ ಸಂದರ್ಭದಲ್ಲೂ ಒಳ ಪ್ರವೇಶಿಸದಂತೆ ಅಪ್ಪಣೆ ಕೊಡುತ್ತಾನೆ. ಆಜ್ಞೆ ಉಲ್ಲಂಘನೆಯಾದರೆ ಅಪರಾಧಿಯ ಶಿರಚ್ಛೇದನದ ಶಿಕ್ಷೆಯಾಗುವುದು. 
 ಪ್ರತಿಯೊಂದು ಘಟನೆಗೂ ಕಾಲ ಉತ್ತರ ಕೊಡುತ್ತ ಹೋಗುತ್ತದೆ. ಅಥವಾ ಅಂತಿಮ ಉತ್ತರ ಕಾಲಗರ್ಭದಲ್ಲಿ ಅಡಗಿ ಕುಳಿತಿದೆ ಎನ್ನಬಹುದು.
ಭಾವಿಸದೆಮ್ಮಯ ತೋಷವ ಸೂಚಿಸು ದೇವ ರಹಸ್ಯವನು | ಈವರೆಗೊದಗದ ಸಂದರ್ಶನದೀ ಪ್ರಭಾವಿತನಾಗಿಹೆನು. 
ರಹಸ್ಯ ಸ್ಥಳದಲ್ಲಿ ರಾಮ ಮತ್ತು ಕಾಲಪುರುಷನ ಗೌಪ್ಯ ಸಂಭಾಷಣೆ.  ರಾಮ ತನ್ನಿಂದಾದ ಚ್ಯುತಿ ಇದ್ದರೆ ಅರುಹುವಂತೆ ಧರ್ಮದೇವತೆಯಲ್ಲಿ ಭಿನ್ನವಿಸಿಕೊಳ್ಳುತ್ತಾನೆ.
ಇನಕುಲ ಸಂಜಾತ ಶ್ರೀರಾಮನಲ್ಲಿ ಇನಪುತ್ರ ಯಮಧರ್ಮರಾಯ ಅರ್ಥಾತ್  ಕಾಲ ಪುರುಷ ತಾನು ಬಂದ ರಹಸ್ಯ ದೌತ್ಯವನ್ನು ವಿವರಿಸುತ್ತಾನೆ.
ರಾಮ,  ಸ್ವರ್ಗ ವಾಸಿಗಳಾದ ದೇವತೆಗಳ ಹುಯ್ಯಲನ್ನು ಕೇಳಿ ಅವತಾರ ಎತ್ತಿದವನು ನೀನು.  ಮನುಷ್ಯಾವತಾರ ತಾಳಿ ರಾವಣಾದಿ ದುಷ್ಟರ ಸಂಹಾರವನ್ನು ಮಾಡಿದೆ. ಧರ್ಮವು ಜ್ಯುತಿಯಾಗದಂತೆ ನೋಡಿಕೊಂಡೆ. ಸಾಕೇತದ ಅಧಿಕಾರಿಯಾಗಿ ಅಧಿಕಾರವನ್ನು ಆದರ್ಶಮಯವಾಗಿ ಮಾಡಿದೆ,   ತಮ್ಮನಿಗೆ ಯೋಗ್ಯ ಅಣ್ಣನಾಗಿ, ಸತಿಗೆ ಪತಿಯಾಗಿ, ಪಿತನಿಗೆ ಮಗನಾಗಿ, ಗುರುವಿಗೆ ಶಿಷ್ಯನಾಗಿ ಪ್ರಜೆಗಳಿಗೆ ಪ್ರಭುವಾಗಿ ಒಟ್ಟಿನಲ್ಲಿ ಮರ್ಯಾದಾ ಪುರುಷೋತ್ತಮನಾಗಿ, ಆದರ್ಶಮಯವಾಗಿ ಬದುಕಿದವನು ನೀನು. ಆದರೆ ವೈಕುಂಠದಲ್ಲಿ ನಿನ್ನ ಪೂರ್ಣವಾದ ಅಂಶ ಇಲ್ಲದೆ ಕಾಲ ಹಲವು ಸಂದಿತು. ಬಂದ ಕರ್ತವ್ಯವನ್ನು ಎಲ್ಲವನ್ನೂ ಪೂರೈಸಿದ ಮೇಲೂ ವೈಕುಂಠವನ್ನು ಮರೆತು ಇಲ್ಲಿರುವುದು ಶಕ್ಯವೇ? ಪಾತ್ರ ಮುಗಿದು ನೇಪಥ್ಯಕ್ಕೆ ಸರಿದು ವೇಷ ಕಳಚಬೇಡವೇ?  ಹಾಗಾಗಿ ದೇವತೆಗಳು ಎಲ್ಲರೂ ಕಳವಳಗೊಂಡಿದ್ದಾರೆ. ಹಾಗಾಗಿ ಕಾಲ ಪ್ರಜ್ಞೆಯನ್ನು ಮೂಡಿಸುವುದಕ್ಕಾಗಿ ಬಂದವನು ನಾನು. ಈ ಸ್ಥಾನವನ್ನು ಬಿಟ್ಟು ಅಲ್ಲಿಗೆ ಸೇರುವಂತಹ ಕಾಲ ಸನ್ನಿಹಿತವಾಗಿದೆ.
ಕಾಲ ಪುರುಷನ ದೌತ್ಯವನ್ನು ರಾಮ ಅರ್ಥವಿಸಿಕೊಳ್ಳುತ್ತಾನೆ.  ಅದರೂ ಹೇಳುತ್ತಾನೆ “ ಕಾಲ ಪುರುಷ ವೇಷ ಮುಗಿದ ಅನುಭವವೇ ಅಗುತ್ತಿಲ್ಲವಲ್ಲ. ಒಬ್ಬ ಒಳ್ಳೆಯ ನಟ ಭೂಮಿಕೆಯಲ್ಲಿ ಜನರ ಸಮಕ್ಷಮ  ಪ್ರವೇಶಿಸಿದ ಮೇಲೆ ಈ ಪಾತ್ರ, ಅಭಿನಯ ಸಾಕು ಎಂಬ ಅನಾಸಕ್ತಿ ಅವನಲ್ಲಿ ಹುಟ್ಟಿಕೊಳ್ಳಬೇಡವೇ? ಅದು ಇನ್ನು ರಾಮನಲ್ಲಿ ಹುಟ್ಟಲಿಲ್ಲ. ಇಲ್ಲಿ ರಾಮ ಇನ್ನೂ ಜಾಗ್ರತನಾಗಿದ್ದಾನೆ.  ಹಲವು ಸಲ ಕಲಾವಿದ ತಾನು ವೇಷವಾಗಿ ಅದರಲ್ಲೆ ಲೀನನಾಗಿಬಿಡುತ್ತಾನೆ. ಇದು ಅಪರಾಧವುಅಲ್ಲ ಅಪಚಾರವೂ ಅಲ್ಲ.
ನಾಟಕ ಮುಗಿದ ಮೇಲೂ ನೇಪಥ್ಯಕ್ಕೆ ಸರಿದ ಮೇಲೂ ವೇಷವನ್ನು ಕಳಚದೇ ಇದ್ದರೆ ಅದು ಹಾಸ್ಯಾಸ್ಪದವಾಗುತ್ತದೆ. ರಾಮನ ವೇಷ ಅದಾಗಲೇ ನೇಪಥ್ಯಕ್ಕೆ ಸರಿದಾಗಿದೆ. ಅದನ್ನು ಕಾಲ ಪುರುಷ ಎಚ್ಚರಿಸುತ್ತಾನೆ. ರಾಮ ಎಂಬ ಪರಿಪೂರ್ಣ ಪಾತ್ರಕ್ಕೆ ಕಾಲ ಪುರುಷ ಎಚ್ಚರಿಸುವ ಅನಿವಾರ್ಯತೆಯನ್ನೂ ತಿಳಿಸುತ್ತಾನೆ.
ಯೋಚಿಸೋಣ ಎಂಬ ಆಶ್ವಾಸನೆಯನ್ನು ರಾಮ ನೀಡಿ ಅಭಯವನ್ನು ನೀಡುತ್ತಾನೆ. ದೇವತೆಗಳು ಕಳವಳ ಪಡದಿರುವಂತೆ ಹೇಳುತ್ತಾನೆ. ಸದ್ಯದಲ್ಲೇ ಈ ಮನುಷ್ಯವತಾರವನ್ನು ಪೂರೈಸಿ ಲೋಕಾಂತರವನ್ನು ಕೈಗೊಳ್ಳುತ್ತೇನೆ ಎಂದು ಅಭಯವನ್ನು ನೀಡುತ್ತಾನೆ.  ಇನ್ನೇನು ಮಂತ್ರಾಲೋಚನೆಯಲ್ಲೇ ಇರುವಂತಹ ಸಮಯದಲ್ಲಿ ಮಹಾ ಋಷಿ ದೂರ್ವಾಸರ ಅಗಮನವಾಗುತ್ತದೆ. ರಾಮನ ಆಶ್ವಾಸನೆ ಭರವಸೆಯಲ್ಲೇ ಕಾಲ ತನ್ನ ಪ್ರಭಾವವನ್ನು ಬೀರತೊಡಗಿದ. 
 ರಾಮ ಮನುಷ್ಯನಾಗಿ ಬಂದವನು. ಇಂತಹ ಒಂದು ಭವ್ಯವಾದ ಪಾತ್ರ ನೇಪಥ್ಯಕ್ಕೆ ಸರಿಯುವಾಗ ಅದಕ್ಕೆ ಅನುಯೋಜ್ಯವಾದ ಸಮಯ ಸಂದರ್ಭವೂ ಸೃಷ್ಟಿಯಾಗಬೇಕಲ್ಲ. ಈ ಮಾನವ ವೃಕ್ಷಕ್ಕೆ ಹುಟ್ಟಿಕೊಂಡ ಬೇರುಗಳನ್ನು ಒಂದೊಂದಾಗಿ ಕತ್ತರಿಸಿ ಈ ಅವತಾರ ನಿರ್ಯಾಣವಾಗಬೇಕು. ಅಂದರೆ ಅಸ್ತಿತ್ವ ಇಲ್ಲವಾಗಬೇಕು. ಬಂದ ದೂರ್ವಾಸರ ಆಗಮನ ಆ ನಿಮಿತ್ತವನ್ನೇ ಸಾರಿಬಿಟ್ಟಿತು.
ದೂರ್ವಾಸನ ಆಗಮನ ಎಲ್ಲಿ ಅಗುತ್ತದೋ ಅಲ್ಲಿ ಅಘಟಿತ ಘಟನೆ ನಡೆಯುತ್ತದೆ. ಇತಿಹಾಸ ನಿರ್ಮಾಣವಾಗುತ್ತದೆ. ಅತಿ ದೀರ್ಘ ಕಾಲ ತಪಸ್ಸಿನಲ್ಲೇ ಕಳೆದ ದೂರ್ವಾಸನಿಗೆ ಅಯೋಧ್ಯೆಯ ರಾಜ್ಯಭಾರ ಬದಲಾದದ್ದೇ ತಿಳಿಯದಾಗುತ್ತದೆ. ಅತೀ ದೀರ್ಘಾವಧಿಯ ನಿರಾಹಾರ ಸ್ಥಿತಿಯಲ್ಲೇ ಬಂದ ದೂರ್ವಾಸ ಮೊದಲೇ ತನ್ನ ಸ್ವಭಾವಕ್ಕನುಗುಣವಾಗಿ ಉದ್ರೇಕಿತನಾಗಿಯೇ ವ್ಯವಹರಿಸುತ್ತಾನೆ. ತಾನು ರಾಮನಲ್ಲಿ ಮಾತ್ರ ವ್ಯವಹರಿಸುವ ಇಚ್ಛೆಯನ್ನು ವ್ಯಕ್ತಪಡಿಸುವುದಲ್ಲದೆ ಆತನನ್ನು ಕಾಣುವುದಕ್ಕೆ ರಹಸ್ಯ ಸ್ಥಾನಕ್ಕೆ ಪ್ರವೇಶಿಸುವುದಕ್ಕೆ ಯತ್ನಿಸುತ್ತಾನೆ. ಆದರೆ ಲಕ್ಷ್ಮಣ ತಡೆಯುತ್ತಾನೆ. ತಾನು ರಾಮನ ಹಾಗೂ ಅರಸನ ಪ್ರತಿನಿಧಿಯಾಗಿ ಮಹರ್ಷಿಯ ಆವಶ್ಯಕತೆಗಳನ್ನು ಪೂರೈಸುವುದಕ್ಕೆ ಶಕ್ಯನು ಎಂದು ಹೇಳುತ್ತಾನೆ. ದೂರ್ವಾಸ ಲಕ್ಷ್ಮಣನ ಮನ್ನಣೆಯನ್ನಾಗಲಿ ಆತಿಥ್ಯ ಉಪಚಾರವನ್ನು ಸ್ವೀಕರಿಸುವುದಕ್ಕೆ ಸಿದ್ದನಾಗುವುದಿಲ್ಲ. ಬದಲಾಗಿ ಮತ್ತಷ್ಟು ಕ್ರೋಧೋನ್ಮತ್ತನಾಗುತ್ತಾನೆ.
ಎನುತ ಘರ್ಜಿಸೆ ಸರ್ವನಾಶವಪ್ಪುದರಿಂದ |
ಎನಗಾಗ ಮರಣ ಲೇಸೆಂದ |
ಮುನಿಯ ಹೋಗಲೊಳಗೆ ಬರೆನುಡಿಯ ತಡೆದು ಸೌಮಿತ್ರಿ ಯೋಚಿಸಿದ ||
ಮೊದಲೇ ದೂರ್ವಾಸ, ಇನ್ನು ಕ್ರೋಧಗೊಂಡರೆ ಕೇಳಬೇಕೆ. ತನ್ನನ್ನು ನಿರ್ಬಂಧಿಸಿದರೆ ತನ್ನ ಶಾಪದಿಂದ ಅಯೋಧ್ಯೆಯನ್ನೇ ಸುಟ್ಟು ಬಿಡುತ್ತೇನೆ. ದೂರ್ವಾಸ ಶಾಪದಿಂದ ಸೂರ್ಯವಂಶವೇ ಭಾಧಿತವಾಗುವಂತೆ ಮಾಡುವ ಭಯವನ್ನು ಹುಟ್ಟಿಸುತ್ತಾನೆ. ಲಕ್ಷ್ಮಣ ಕಂಗಾಲಾಗಿ ಬಿಡುತ್ತಾನೆ. ಯಾರನ್ನೂ ಒಳ ಬಿಡದಂತಹ ಅಣ್ಣನಾಜ್ಞೆ ಮಾತ್ರವಲ್ಲ ರಾಜಾಜ್ಞೆ.ಈ ಮಹನೀಯನನ್ನು ತಡೆದನೆಂದಾದರೆ ಇಡಿ ಸೂರ್ಯವಂಶವೇ ದೂರ್ವಾಸ ಶಾಪಕ್ಕೆ ಬಲಿಯಾಗುತ್ತದೆ. ಅಯೋಧ್ಯೆ ಸುಟ್ಟು ಹೋಗಬಲ್ಲುದು. ಈಗ ಲಕ್ಷ್ಮಣ ದೃಢನಿರ್ಧಾರಕ್ಕೆ ಬಂದು ಬಿಡುತ್ತಾನೆ. ಆ ನಿರ್ಧಾರವೇ ರಾಮ ನಿರ್ಯಾಣಕ್ಕೆ ನಿಮಿತ್ತವಾಗಿಬಿಡುತ್ತದೆ.
ದೂರ್ವಾಸ ಶಾಪದಿ ತನ್ನ ವಂಶವನ್ನೂ ಅಯೋಧ್ಯೆಯನ್ನು ರಕ್ಷಿಸುವುದು ಲಕ್ಷ್ಮಣನಿಗೆ ರಾಜಾಜ್ಞೆಗಿಂತಲೂ ತನ್ನ ಶಿರಸ್ಸಿಗಿಂತಲೂ ಮುಖ್ಯವಾಗಿ ಕಾಣುತ್ತದೆ. ತನ್ನ ತಲೆ ಹೋದರೆ ಹೋಗಲಿ ಅಯೋಧ್ಯೆ ಉಳಿಯಲಿ ಸೂರ್ಯವಂಶದ ಘನತೆ ಉಳಿಯಲಿ.  ಯೋಚಿಸಿದ ಸೌಮಿತ್ರಿ,  ದೂರ್ವಾಸರನ್ನು ತಾನೆ ಕರೆದುಕೊಂಡು ಒಳಗೆ ನಿಧಾನವಾಗಿ ಪ್ರವೇಶಿಸಿ ಬಿಡುತ್ತಾನೆ. ರಾಮ ತಬ್ಬಿಬ್ಬಾಗುತ್ತಾನೆ. ಲಕ್ಷ್ಮಣ ರಾಜದ್ರೋಹಿಯಾಗಿ ಎದುರು ನಿಂತನೇ?  
 ಏಕಾಂತ ಭಂಗವಾದುದನ್ನು ನಿಮಿತ್ತವಾಗಿ ಕಾಲ ಪುರುಷ ಎದ್ದು ಹೊರಡಲನುವಾಗುತ್ತಾನೆ. ಲಕ್ಷ್ಮಣನ ಅತಿಕ್ರಮವಾದ ಪ್ರವೇಶ ನೋಡಿ ರಾಮ ಕಾಲ ಪುರುಷನಲ್ಲಿ ಸೂಚ್ಯವಾಗಿ ಹೇಳುತ್ತಾನೆ?  “ಮಾತಿನಿಂದ ಆಗದೇ ಇದ್ದದ್ದನ್ನು ಕೃತಿಯಿಂದ ಮಾಡಿದೆಯಲ್ಲಾ ಕಾಲ ಪುರುಷನೇ? ”   ರಾಮನ ಅಂತರಂಗದಲ್ಲಿ ಕಂಪನ ಆರಂಭವಾಗುತ್ತದೆ. ಲಕ್ಷ್ಮಣ ರಾಜ ದ್ರೋಹಿಯಾಗಿಬಿಟ್ಟನಲ್ಲ?
ಆದರೆ ಅನಿರೀಕ್ಷಿತವಾಗಿ ಆಗಮಿಸಿದ ದೂರ್ವಾಸರನ್ನು ಯಥೋಚಿತ ಉಪಚಾರ ಗೈದು ರಾಮ ಬಂದ ಕಾರ್ಯವನ್ನು ವಿಚಾರಿಸುತ್ತಾನೆ. ಹೊತ್ತಿ ಉರಿಯುತ್ತಿರುವ ಉದರಾಗ್ನಿಯನ್ನು ಶಮನ ಮಾಡುವುದಕ್ಕೋಸ್ಕರ ದೂರ್ವಾಸ ಬಂದಿರುತ್ತಾನೆ. ಅತೀ ದೀರ್ಘಾವಧಿಯ ಉಪವಾಸ ಕೊನೆಗೊಳಿಸಬೇಕೆಂದಿದ್ದರೆ ಅದಕ್ಕೆ ಯೋಗ್ಯವ್ಯಕ್ತಿಗಳ ಹಸ್ತೋದಕವೇ ಯುಕ್ತ. ಇಲ್ಲಿ ರಾಮನಿಗಿಂತ ಮಿಗಿಲಾದ ಯೋಗ್ಯವ್ಯಕ್ತಿ ಇರುವುದಕ್ಕೆ ಸಾಧ್ಯವೇ? ರಾಮನಿಂದ ಹಸ್ತೋದಕ ಕೈಗೊಂಡು ಪುಷ್ಕಳ ಭೋಜನವನ್ನುಂಡು ತೇಗುತ್ತಾ ದೂರ್ವಾಸ ನಿರ್ಗಮಿಸಿದರೆ ರಾಜಾಜ್ಞೆಗೆ ರಾಮ ರಾಜದಂಡವನ್ನು ಕೈಗೆತ್ತಿಗೊಳ್ಳುತ್ತಾನೆ.
ಬಂದ ತಮ್ಮನ ರಾಮ ಕಂಡೇನೆಂದೆನಲು ತಪ್ಪಿದೆ ತವಾಜ್ಞೆಯ........ರಾಮ ಮರುಗುತ್ತಾನೆ. ಇದೇನಾಗಿ ಹೋಯಿತು?
ರಾಮನ ಹೃದಯವೇ ಆಗಿದ್ದ ಲಕ್ಷ್ಮಣ. ರಾಮನ ಚಿತ್ತದುಮ್ಮಳವನ್ನು ಸರಿಯಾಗಿ ಅರ್ಥವಿಸಬಲ್ಲನೆಂದರೆ ಅದು ಲಕ್ಷ್ಮಣ. ಲಕ್ಷ್ಮಣ ಹೇಳುತ್ತಾನೆ, ದೂರ್ವಾಸರ ಆಗಮನವಾಯಿತು, ಅದರ ಜತೆಯಲ್ಲೇ ರಾಮನನ್ನು ಕಾಣಲೇಬೇಕೆಂಬ ಅವರ ತೀವ್ರತೆಯನ್ನೂ ಹೇಳುತ್ತಾನೆ.  ರಾಜಾಜ್ಞೆಯಂತೆ ಅವರನ್ನು ದ್ವಾರದಲ್ಲಿ ತಡೆದರೆ ಇಡೀ ಅಯೋಧ್ಯೆಯನ್ನೇ ಸುಟ್ಟು ಬಿಡುವಂತೆ ಶಪಿಸುವ ಬೆದರಿಕೆ. ಅಯೋಧ್ಯೆಗಿಂತ ತನ್ನ ತಲೆ ಅಮೂಲ್ಯವಲ್ಲ. ಹಾಗಾಗಿ ರುದ್ರ ರೂಪಿಯಾದ ದೂರ್ವಾಸನಿಗೆ  ಎಕಾಂತ ವಲಯದ ದ್ವಾರವನ್ನು ತೆರೆದುಬಿಡುತ್ತಾನೆ. ರಾಮ ಮೌನಿಯಾಗುತ್ತಾನೆ. ಕಾಲದ ಪ್ರಭಾವಕ್ಕೆ ಒಳಗಾಗದೆ ವಿಧಿಯಿಲ್ಲ.
ಅಣ್ಣನ ತಳಮಳವನ್ನು ಅರ್ಥವಿಸಿದ ಲಕ್ಷ್ಮಣ ಮತ್ತೂ  ಹೇಳುತ್ತಾನೆ
 “ ಅಣ್ಣಾ ಈ ರಾಜದ್ರೋಹಿಯನ್ನು ಶಿಕ್ಷಿಸು, ಶಿಕ್ಷಿಸು. ನಾನು ದೇಹತ್ಯಾಗ ಮಾಡುತ್ತೇನೆ ಅಪ್ಪಣೆಕೊಡು ರಾಮನ ಮಾತು ಅದೆಂದಿಗೂ ಸುಳ್ಳಾಗ ಕೂಡದು.ದಂಡನೆಯನ್ನು ವಿದಿಸು  ”  
ಲಕ್ಷ್ಮಣ ಸ್ವಯಂ ಅಪರಾಧೀ ಭಾವದಲ್ಲಿ ತಲೆ ತಗ್ಗಿಸುತ್ತಾನೆ. ಈಮುಖವನ್ನು ತೋರಲಾರೆ ಎಂಬ ಭಾವದಿಂದ ರಾಮ ಪಾದವನ್ನೇ ದಿಟ್ಟಿಸುತ್ತಾನೆ. ಪಾದವೇ ಮುಖವೆಂದು ಹಲವು ಬಾರಿ ತಿಳಿದವನು ಲಕ್ಷ್ಮಣ. ದಂಡಿಸುವ ಮೊದಲು ತಮ್ಮಾ ಲಕ್ಷ್ಮಣ ಒಂದು ಬಾರಿ ಒಂದು ಬಾರಿ ತಬ್ಬಿ ಹಿಡಿಯುತ್ತೇನೆ ಎನ್ನುವ ರಾಮ. ಕೆಲವು ಘಳಿಗೆಯ ಹಿರಿತನವನ್ನು ಒಪ್ಪಿಕೊಂಡು ಜನ್ಮ ಪರ್ಯಂತ ಸೇವೆ ಮಾಡಿದ ಆ ದೇಹ ಭುಜಗಳನ್ನು ತನ್ನ ಭುಜಗಳಿಂದ ಆಲಿಂಗಿಸಿಕೊಳ್ಳುತ್ತಾನೆ ಶ್ರೀರಾಮ.
  ಆಗ  ಶ್ರೀ ಶೇಣಿಯವರ  ಶ್ರೀರಾಮ ಸಂತೈಸುವುದು ಹೀಗೆ.
“ತಮ್ಮ ಲಕ್ಷ್ಮಣಾ ಚಕ್ರವರ್ತೀ ಪುತ್ರರಾಗಿ ಹುಟ್ಟಿದವರು ನಾವು. ಆದರೆ ಚಕ್ರವರ್ತೀ ಪುತ್ರರಾಗಿ ವ್ಯಷ್ಟಿಯಿಂದ ನಾವು ಎಷ್ಟು ಸುಖೋಪಭೋಗಗಳನ್ನು ಅನುಭವಿಸಬೇಕೋ ಅದೆಲ್ಲವನ್ನು ನಾವು ಸಮಷ್ಟಿಗೆ ಹಂಚಿಕೊಟ್ಟು ಸಮಷ್ಠಿಯ ಕ್ಲೇಷಗಳನ್ನು ನಮ್ಮದೆಂದು ತಿಳಿದು ಬಾಳಿ ಬದುಕಿದೆವು. ಸೂರ್ಯವಂಶದ ರಕ್ತ ಇದನ್ನು ಆಚರಿಸಿ ತೋರಿಸಿತು. ಎಲ್ಲಿಯ ರಾವಣ ? ಎಲ್ಲಿಯ ದಂಡಕಾರಣ್ಯ? ಎಲ್ಲಿಯ ಸೀತೆ? ಎಲ್ಲಿಯ ಮಾರೀಚ? ಅದಕ್ಕಿಂತ ಆಚೆಗೆ ಹೋದರೆ ಎಲ್ಲಿಯ ಮಂಥರೆ ಎಲ್ಲಿಯ ಅಯೋಧ್ಯೆಯ ಆಡಳಿತ? ಯಾವುದೋ ಒಂದು ಕಾಣದ ಕೈ ಪ್ರಪಂಚದಲ್ಲಿ ನಮ್ಮ  ಮನೆತನವನ್ನೇ ಅಲುಗಾಡಿಸುತ್ತಾ ಇದೆ ಎಂದು ಹಲವು ಸಲ ಹೇಳಿದ್ದೇನಲ್ಲ? ಈಗಲೂ ಒಳಗೆ ಬಂದವನು ಬ್ರಾಹ್ಮಣ ರೂಪಿ ಯಾರು? ಕಾಲ ಪುರುಷ. ಹೌದು ಅವನೇ ಹೇಳಿದನಲ್ಲ ಇಷ್ಟಕ್ಕೆಲ್ಲ ಕಾರಣ ಪುರುಷ ಅವನೇ ಅವನೇ. ಇಲ್ಲವಾದರೆ ಭೂಜಾತೆಯಾದ ಸೀತೆಗೆ ಬಂಗಾರದ ಮೈಬಣ್ಣದ ಮೃಗದ ವಾಂಛೆಯಾದರೂ ಯಾಕೆ ಬರಬೇಕು. ( ಹೌದಲ್ಲ ಭೂಮಿ ಹಿರಣ್ಯಗರ್ಭೆ..!!)  ಅವಳು ಏನೋ ಕೆಡು ನುಡಿಯನ್ನಾಡಿದಳು ಎಂದು ಸಿಟ್ಟು ಮಾಡಿಕೊಂಡು ರೇಖೆಯೆಳೆದು ಹೋದವನು ಲಕ್ಷ್ಮಣನೇನು? ಇದೆಲ್ಲ ಹೇಗೆ ಅಂತ ಅಂದರೆ ರಾವಾಣಾದಿಗಳ ಸಂಹಾರಕ್ಕೆ ಒಂದು ನಿಮಿತ್ತ. ಇದೆಲ್ಲ ದೈವ ಸಂಕಲ್ಪ ಆಮೇಲೆ ಋಷಿಗಳ ಸಂಕಲ್ಪ. ಹೀಗೊಂದು ಅವತಾರವಾಗಲಿ. ವಿಷ್ಣುವಿನ ಚತುರ್ಭುಜಗಳಂತೆ ನಾಲ್ಕು ಮಂದಿ ಹುಟ್ಟಿಕೊಳ್ಳಲಿ. ಹಾಗಾಗಿ ದೇವತೆಗಳ ನೇತಾರನಾಗಿ ಒಬ್ಬ ಬ್ರಾಹ್ಮಣ . ಋಷಿಗಳ ನೇತಾರನಾಗಿ ಒಬ್ಬ ಋಷಿ ಮುನಿ. ಏಕಕಾಲದಲ್ಲಿ ಅಯೋಧ್ಯೆಯಲ್ಲಿ ಇವರಿಬ್ಬರೂ ಕಾಣಿಸಿಕೊಂಡರಲ್ಲ? ಬಂದ ಬ್ರಾಹ್ಮಣ ಸಾಕ್ಷಾತ್ ಕಾಲ ಪುರುಷ, ಯಮ ಧರ್ಮ  ಕೇಳುತ್ತಾನೆ ಎಷ್ಟುದಿನ ಈ ಬಣ್ಣದ ಬದುಕು? ವೇಷ ಕಳಚುವಂತೆ ಬೇಡಿಕೊಳ್ಳುತ್ತಾನೆ. ಒಳಗಿನಿಂದ ಪ್ರಚೋದನೆ ಆಯ್ತು ಯೋಚಿಸುತ್ತೇನೆ ಎಂದೆ.  ಆಗಲೇ ಈ ಘಟನೆ ಘಟಿಸಿ ಹೋಯಿತು ನೋಡು.”
ಸಾಕ್ಷಾತ್ ಶ್ರೀಮನ್ನಾರಾಯಣನೇ ಶ್ರೀರಾಮ, ವೈಕುಂಠದಲ್ಲಿ ತಲ್ಪವಾದ ಆದಿಶೇಷನೇ ಲಕ್ಷ್ಮಣ. ಲಕ್ಷ್ಮಣನಿಗೆ ಪ್ರಜ್ಞೆಯಾಗುತ್ತದೆ. ವೈಕುಂಠಕ್ಕೆ ಅಣ್ಣ ಹೊರಟಿದ್ದಾನೆ. ಮೊದಲಾಗಿ ತಾನು ಹೋಗಿ ಅವನಿಗೆ ಹಾಸಿಗೆಯಾಗಬೇಕು. ಲಕ್ಷ್ಮಣ  ತನ್ನ ಅವತಾರವನ್ನು ಕೊನೆಗೊಳಿಸುವುದಕ್ಕೋಸ್ಕರ ಮಡದಿಯೊಂದಿಗೆ ಗಂಗಾ ತಟದಲ್ಲಿ ಧ್ಯಾನ ಮಗ್ನನಾಗಿ ಆದಿಶೇಷನ ರೂಪವನ್ನು ತಾಳಿ ಗಂಗಾನದಿಯಲ್ಲಿ ಲೀನವಾಗಿ ವೈಕುಂಠ ಸೇರುತ್ತಾನೆ. ಸೂರ್ಯವಂಶದ ಒಂದು ಸ್ತಂಭ ಈ ರೂಪದಲ್ಲಿ ಕಳಚಿದರೆ ಭರತ ಶತ್ರುಘ್ನರು ರಾಮ ವಿಯೋಗದಿಂದ ನಂತರ ಮುಂದುವರೆಯುವರೆ? ರಾಮ ವನಾಂತರಕ್ಕೆ ಹೋದವನೆಂದಾಗ ಇದಕ್ಕೆ ಕಾರಣಳಾದ ಹೆತ್ತವ್ವೆ ಕೈಕೇಯಿಯ ಶಿರವನ್ನೇ ಕಡಿಯುವೆನೆಂದ ಭರತ ರಾಮನ ಹಿಂದೆ ಬಾರದಿರುವನೇ?
ಹಾಗಾಗಿ ಇಬ್ಬರೂ ಸಹೋದರರನ್ನು ರಾಮ ಹತ್ತಿರ ಕರೆದು ನಾವು ಅವತಾರ ಪುರುಷರು ನಮ್ಮ ಅವತಾರದ ಕೊನೆಯ ಹಂತಕ್ಕೆ ಬಂದು ತಲುಪಿದ್ದೇವೆ ಎಂದು ತಿಳಿಯ ಹೇಳಿ ದೇಹತ್ಯಾಗ ಮಾಡುವಂತೆ ಹೇಳುತ್ತಾನೆ. ಇನ್ನು  ಏಕ ಚಕ್ರಾಧಿಪತ್ಯ ಅಯೋಧ್ಯೆಯಲ್ಲಿ ಇನ್ನು ಮೂಂದೆ ಸೂಕ್ತವಲ್ಲ. ಹಾಗಾಗಿ ರಾಜ್ಯವನ್ನು  ನಾಲ್ಕು  ವಿಭಾಗಗಳಾಗಿ ವಿಂಗಡಿಸಿ ಎಲ್ಲರಿಗೂ ಹಂಚಿಬಿಡುತ್ತಾನೆ. ಆ ಮೂಲಕ ಕಳಚಿಹೋದ ರಾಜ್ಯದ ನಾಲ್ಕು ಸ್ಥಂಭಗಳನ್ನು ಪರ್ಯಾಯವಾಗಿ ರಾಮ ಸ್ಥಾಪಿಸಿ ಬಿಡುತ್ತಾನೆ.
ಲಕ್ಷ್ಮಣ ಯಾರಿಗೂ ಅರಿವಿರದಂತೆ ಆದಿಶೇಷನಾಗಿ ಅದೃಶ್ಯನಾದರೆ ಭರತ ಶತ್ರುಘ್ನರು ಗಂಗಾತೀರದಲ್ಲಿ ಹೋಗಿ ಪ್ರಾಯೋಪವೇಶ ಮಾಡಿಕೊಂಡು ತಮ್ಮನ್ನು ತಾವೇ ಸಮರ್ಪಿಸಿಕೊಂಡರು. ಮುಂದೆ ಎಲ್ಲ ವಿಧಿ ವಿಧಾನದಿಂದ ಜನರ ಮುಂದೆಯೇ ದೇಹತ್ಯಾಗಕ್ಕೆ ಸಿದ್ದನಾಗುತ್ತಾನೆ ರಾಮ. ವಸಿಷ್ಠಾದಿಗಳ ಆಶಯವೂ ಅದೇ ಅಗಿತ್ತು. ಮಹಾಪುರುಷನಾದ ಶ್ರೀರಾಮ, ಹುಟ್ಟಿನಿಂದಲೂ ಚರಿತ್ರೆಯನ್ನು ನಿರ್ಮಿಸಿದವನು  ಬದುಕಿನಲ್ಲೂ ಚರಿತ್ರೆಯನ್ನು ಸೃಷ್ಟಿಸಿ, ಬಲು ದೊಡ್ಡ ಬೆಳಕನ್ನು ಸಮಾಜಕ್ಕೆ ಕೊಟ್ಟವನು, ಆತನ ನಿರ್ಯಾಣವೂ ಮಹಾ ಪುರುಷರಿಗೆ ಆದರ್ಶ ಮಯವಾಗಬೇಕು. ಹೀಗೆ ವಸಿಷ್ಠರ ಮಾರ್ಗದರ್ಶನಂತೆ ಮಂತ್ರೋಕ್ತವಾಗಿ ತನ್ನ ಪರಂಧಾಮ ಪ್ರಯಾಣಕ್ಕೆ ಸಿದ್ದನಾಗುತ್ತಾನೆ. ಇನ್ನೇನು ನದಿಗೆ ಇಳಿಯಬೇಕೆಂಬಾಗ ದೂರದಲ್ಲಿ ಕಣ್ಣೀರು ಮಿಡಿಯುವ ಹನುಮಂತನನ್ನು ಕಾಣುತ್ತಾನೆ ಶ್ರೀರಾಮ.
ಹನುಮನನ್ನು ಹತ್ತಿರ ಕರೆಯುತ್ತಾನೆ. ಬಳಿ ಬಂದ ಹನುಮ ಹೇಳ್ತಾನೆ.
 ”ರಾಮ ನಿನಗಿದು ಲೀಲೆಯಾಗಬಹುದು. ಹೊರಮನೆಯಿಂದ ಒಳ ಮನೆಗೆ ಹೋದಂತೆ ಹೊರಟು ನಿಂತಿರುವೆ. ಆದರೆ ಚಿರಂಜೀವಿತ್ವ ಇಂತಹ ಸನ್ನಿವೇಶದಲ್ಲಿ ನನಗೆ ಶಾಪವಾಯಿತೇ? ರಾಮನ ಅಸ್ತಿತ್ವ ಇಲ್ಲವಾದಲ್ಲಿ ಹನುಮನ ಇರವು ಸಾಧ್ಯವುಂಟೆ? “
ಅಂತಿಮವಾಗಿ ರಾಮನಾಡುವ ಮಾತುಗಳು, ( ಶೇಣಿಯವರ ರಾಮನ ಭಾವಾನುವಾದ)  “ ಹನುಮ , ಈ ದೇಹದಲ್ಲಿ ಮಾತ್ರವೇ ನೀನು ರಾಮನನ್ನು ಕಾಣುತ್ತಿರುವುದು? ನೀನು ಮನೋಧರ್ಮದಲ್ಲೂ ಕಾಣ ಬಲ್ಲೆ. ಎಲ್ಲೆಲ್ಲಿಯೂ ರಾಮ ದರ್ಶನವನ್ನು ಮಾಡುವ ನಿನಗೆ ದೈಹಿಕವಾದ ರಾಮನ ಅಸ್ತಿತ್ವದ ಅಗತ್ಯ ಇದೆಯೇ? ನಿನ್ನಂತಹ ಜ್ಞಾನಿಗಳು ಋಷಿ ಮುನಿಗಳು ರಾಮನನ್ನು ಮೊದಲು ಗುರುತಿಸಿದ್ದು ಕೇವಲ ಶಬ್ದ ಮಾತ್ರದಿಂದ. ಹಿಂದೆ ಅಂಜನಾ ದೇವಿ ಬಾಲ್ಯದೊಳು ಮುಂದೆ ರಾಮನೆಂಬವನ ದರ್ಶನವಾಗುತ್ತದೆ. ಆಮೂಲಕ ಜೀವನ ಪಾವನವಾಗುತ್ತದೆ ಎಂದು ಹೇಳುವಾಗ ಮೊತ್ತ ಮೊದಲು ನಿನ್ನ  ಚಿತ್ತಭಿತ್ತಿಯಲ್ಲಿ ಈ ರೂಪ ಪ್ರತಿಷ್ಠಾಪಿಸಲ್ಪಟ್ಟಿತ್ತಲ್ಲವೇ?  ಹೃದಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಆ ವಿಗ್ರಹ ಮುಂದೆ ಪಂಪಾತೀರದಲ್ಲಿ ಮೈಒಡೆದು ಬಂದಾಗ ಆ ರೂಪವೇ ನಿನಗೆ ಗೋಚರಿಸಿತ್ತಲ್ಲವೇ? ಎಚ್ಚರದಲ್ಲಿ ರಾಮ ದಾಸನಾಗುವ ನೀನು, ಧ್ಯಾನದಲ್ಲಿ ರಾಮನೇ ಆಗಿಬಿಡುವೆಯಲ್ಲ? ಇಲ್ಲಿ ರಾಮನಿಗೂ ಹನುಮನಿಗೂ ವೆತ್ಯಾಸವೇ ಇಲ್ಲ.”

ಆದರೂ ರಾಮ ಹನುಮನ ಇಚ್ಚೆಯಂತೆ ಮುಂದೆ ದ್ವಾಪರದಲ್ಲಿ ರಾಮದರ್ಶನವನ್ನು ಕರುಣಿಸುತ್ತೇನೆ ಎಂದು ಆಶ್ವಾಸನೆಯನ್ನು ನೀಡುತ್ತಾನೆ. ರಾಮನ ಜೀವನಕ್ಕೆ ಸಾಕ್ಷಿಯಾದಂತೆ ರಾಮನ ನಿರ್ಯಾಣಕ್ಕೂ ಹನುಮ ಸಾಕ್ಷಿಯಾಗುತ್ತಾನೆ. ಭಗವಾನ್ ವಸಿಷ್ಠರು ಮಂತ್ರೋಪದೇಶ ಮಾಡಿದಂತೆ ಹರಿಯುತ್ತಿರುವ ಸರಯೂ ನದಿಯಲ್ಲಿ ರಾಮ ಲೀನನಾಗಿ ನಿರ್ಯಾಣವಾಗಿ ಬಿಡುತ್ತಾನೆ. ರಾಮ ನಿರ್ಯಾಣವಾಗುತ್ತದೆ.
ಜೈ ಶ್ರೀರಾಮ

Wednesday, August 6, 2014

ಯಕ್ಷೋಪಾಸಕನ ಜತೆಯಲ್ಲಿ


ನೋಡಿರಿ ಧರ್ಮಜ ಫಲುಗುಣಾದಿಗಳು |
ರೂಢಿಯೊಳನಿಲಜ ಬಿದ್ದ ಚಂದಗಳು      ||
ಕಪಟನಾಟಕ ರಂಗ | ಗುಪಿತವೇನೊ ನಿನ್ನಂಗ |
ನಿಪುಣ ಭೀಮನ ನೋಡು | ಚಪಳತ್ವದಿ ಮಾತಾಡು || ನೋಡಿರಿ ||


ಛಾಯಾ ಚಿತ್ರ: ಶ್ರೀ ಉಲ್ಲಾಸ್

ಇದು ಗಧಾಪರ್ವ ಪ್ರಸಂಗದ ಪದ.  ತಮ್ಮ ಕೌರವನ ಪಾತ್ರದಿಂದ ಈ ಪದಕ್ಕೆ ಹೊಸ ಒಂದು ಆಕರ್ಷಣೆಯನ್ನು ತಂದುಕೊಟ್ಟವರು  ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರು. ಕೌರವವನ ವಿರಾಟ್ ಸ್ವರೂಪವನ್ನು ಬಗೆ ಬಗೆಯಲ್ಲಿ ಬಹಳಷ್ಟು ಪ್ರಸಂಗಗಳಲ್ಲಿ ತೆರೆದಿಟ್ಟ ಮಹಾನ್ ಕಲಾವಿದ. ಕೌರವನ ಮತ್ಸದ್ಧೀ ತನವನ್ನು ತನ್ನ ರಾಜವೇಷದಲ್ಲಿ ಬಹಳ ಸಹಜವಾಗಿ ರಂಗದಲ್ಲಿ ತರುತ್ತಿದ್ದ ಅಭಿಜಾತ ಕಲಾವಿದ. ಕುರು ಸಾಮ್ರಾಜ್ಯದ ಅನಭಿಷಿಕ್ತ ಚಕ್ರವರ್ತಿ ಎಂದು ಕರೆಸಲ್ಪಟ್ಟವ ಕೌರವ. ಆ ಅನಭಿಷಿಕ್ತ ಚಕ್ರವರ್ತಿಯನ್ನು ಯಕ್ಷ ಚಕ್ರವರ್ತಿಯಂತೆ ರಂಗದ ಮೇಲೆ ಮೆರೆಸಿದ ಆ ವೈಭವ ಯಕ್ಷರಂಗ ಮರೆಯುವುದುಂಟೆ. ಅದೆಂತಹ ಗಾಂಭೀರ್ಯದ ರಾಜವೇಷ.!
 ರಾಜ ವೇಷ.....!!
ಛಾಯಾ ಚಿತ್ರ: ಶ್ರೀ ಉಲ್ಲಾಸ್

ಯಕ್ಷಗಾನದಲ್ಲಿ ಅದರಲ್ಲೂ ತೆಂಕುತಿಟ್ಟು ಯಕ್ಷಗಾನದಲ್ಲಿ ರಾಜವೇಷಕ್ಕೆ ಅದರದ್ದೇ ವೈಶಿಷ್ಟ್ಯ,  ಗಾಂಭೀರ್ಯವಿದೆ. ಯಕ್ಷಗಾನದ ರಾಜವೇಶದಲ್ಲಿ ಬಹಳಷ್ಟು ಹಿರಿಯ ಕಲಾವಿದರು ತಮ್ಮದೇ ಛಾಪನ್ನು ಒತ್ತಿ ಇದನ್ನು ಸಾರಿದ್ದಾರೆ. ಅಂತೆಯೇ ಯಕ್ಷಗಾನದ ರಾಜವೇಶಕ್ಕೆ ಒಂದು ಆಯಾಮವನ್ನು ಸೃಷ್ಟಿಸಿದವರು ಶ್ರೀ ಸೂರಿಕುಮೇರಿ ಗೋವಿಂದ  ಭಟ್ಟರು. ಯಕ್ಷಗಾನದ ರಾಜವೇಶದ ಕಲ್ಪನೆ ಬಂದಾಗ ಇಂದಿಗೂ ಚಿತ್ತಭಿತ್ತಿಯಲ್ಲಿ ಸುಳಿಯುವ ಮೊದಲ ಮುಖ ಗೋವಿಂದಣ್ಣನದ್ದು. ಅಚ್ಚುಕಟ್ಟಾದ ಸಮ ಆಯದ ವೇಷ ಅದು. ರಂಗ ತುಂಬುವ ನಡೆ, ಹರಿತವಾಗಿ ಹರಿಯುವ ಮಾತುಗಾರಿಕೆ, ಕ್ಷಣ ಕ್ಷಣವೂ ಭಿನ್ನವಾಗಿ ಪ್ರಕಟಗೊಳ್ಳುವ ತುಡಿತ ಇದೆಲ್ಲ ಇವರ ಬಗ್ಗೆ ಧ್ವನಿಯಾಗುವ ಸಹಜ ಮಾತುಗಳು. ಒಂದೇ ವೇದಿಕೆಯಲ್ಲಿ ಹತ್ತು ಬಗೆಯ ಕೌರವನಾದ ಆ ಹುಮ್ಮಸ್ಸು ಇಂದಿಗೂ ಉಳಿದುಕೊಂಡಿದೆ. ಇತ್ತೀಚೆಗೆ ಇವರೊಡನೆ ಕಳೆದ ಒಂದೆರಡು ಘಳಿಗೆಯ ಭಾವ ಚಿತ್ರಣವಿದು.
ಇತ್ತೀಚೆಗೆ ತಾಳ ಮದ್ದಲೆಯ ಕಾರ್ಯಕ್ರಮವೊಂದರಲ್ಲಿ ಈ ಕಲಾ ಮಹನೀಯ ವ್ಯಕ್ತಿ ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರನ್ನು ಬೇಟಿಯಾಗುವ ಅವಕಾಶ ಒದಗಿಬಂತು.  ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಕಾರ್ಯಕ್ರಮವದು. ಬಸವನಗುಡಿ ಎಂದರೆ ಬೆಂಗಳೂರಿನ ಸುಶಿಕ್ಷಿತ ಮತ್ತು ಸುಸಂಸ್ಕೃತ ಬಡಾವಣೆ. ನಾನು ಹೋದಾಗ ಅಲ್ಲಿ ಶಾಂತರೀತಿಯಲ್ಲಿ ತಾಳ ಮದ್ದಲೆ ನಡೆಯುತ್ತಿತ್ತು. ಗೋವಿಂದ ಭಟ್ಟರು ವೇದಿಕೆ ಏರುವ ಸನ್ಹಾಹದಲ್ಲಿ ಒಂದು ಬದಿಯಲ್ಲಿ ಸಹಜವಾಗಿ ತಣ್ಣಗೇ ಕುಳಿತಿದ್ದರು.  ಗೋವಿಂದಣ್ಣನದ್ದು ಒಂದು ಸೆಳೆಯುವ ವಿಶಿಷ್ಟ ವ್ಯಕ್ತಿತ್ವ. ಅನುಭವದಿಂದ ಮಾಗಿದ ಕೂದಲು, ಸದಾ ಪ್ರಜ್ವಲಿಸುವಂತಿರುವ ಕಣ್ಣುಗಳು. ಪ್ರಸನ್ನವಾಗಿ ಸ್ವ ಪ್ರಭೆಯಿಂದ ಬೆಳಗುತ್ತಿರುವ ಮುಖ. ಇದು ಗೋವಿಂದಣ್ಣನನ್ನು ತೀರಾ ಅಪರಿಚಿತರೂ ಗ್ರಹಿಸುವಂತಹ ಒಂದು ವ್ಯಕ್ತಿ ಚಿತ್ರಣ. ದೂರದದ ಪ್ರಯಾಣದ ಕಾರಣವೋ ತಿಳಿಯದು ಬಹಳಷ್ಟು ಬಸವಳಿದ ಹಾಗೆ ಕಂಡರು. ಆದರೂ ವೇದಿಕೆ ಏರಿದ ಮೇಲೆ ತಮ್ಮ ಉಳಿದ ಅಲ್ಪ ಅವಧಿಯಲ್ಲಿ ಎಂದಿನ ಶಾರೀರತೆಯಿಂದ ಆದಿನ ಕರ್ಣನನ್ನು ಮೆರೆದಾಡಿಸಿಬಿಟ್ಟರು.
ಪ್ರಸಂಗ ಮುಗಿದು ಸಂಘಟಕರು ಕೃತಜ್ಞತೆ ಸೂಚಿಸಿ ಭಾಗವತರು ಮಂಗಳ ಹಾಡಿದರೂ ಗೋವಿಂದಣ್ಣ ಅದೇ ಜಾಗದಲ್ಲಿ ಕುಳಿತೇ ಇದ್ದರು. ಆಸನ ಬಿಟ್ಟು ಎದ್ದು ಹೋಗುವ ಮಂದಿ, ಚೆಂಡೆ ಮದ್ದಲೆಯ ಮುಸುಕನ್ನು ಬಿಗಿಯುವ ಹಿಮ್ಮೇಳ ಕಲಾವಿದರು ಇವರನ್ನೆಲ್ಲ ಕುಳಿತಲ್ಲಿಂದಲೇ ನಿರ್ವಿಕಾರ ಭಾವದಲ್ಲಿ ಗಮನಿಸುತ್ತಾ ಇದ್ದರು. ಹಿಂದೆ ಕುಳಿತಿದ್ದ ನಾನು ನಿಧಾನವಾಗಿ ಹೋಗಿ ಮೆಲು ದನಿಯಲ್ಲಿ ’ನಮಸ್ಕಾರ’ ಎಂದೆ, ಕತ್ತೆತ್ತಿ ತಿರುಗಿ ನನ್ನತ್ತ ನೋಡಿದವರೇ ಅದೇ ಮಂದಹಾಸ ಮುಖತುಂಬ ಅರಳಿಸಿದರು. ಹತ್ತಿರ ಕರೆದು ಹೆಗಲಿಗೆ ಕೈ ಇಕ್ಕಿ ಕುಶಲ ವಿಚಾರಿಸಿದರು. ನಾನು ಅಲ್ಲೇ ಕರಗಿ ಹೋದೆ. ಅವರ ಕ್ಷೇಮದ ಬಗ್ಗೆ ಕೇಳುವ ನನ್ನ ಸ್ವರ ಗಂಟಲಿನ ಮೂಲೆಯಲ್ಲಿ ಎಲ್ಲೋ ಅಡಗಿ ಕುಳಿತಿತ್ತು. ಎಲ್ಲ ಬಾರಿಯಂತಲ್ಲ ಈ ಬಾರಿ ಗೋವಿಂದಣ್ಣ ವಯೋ ಭಾರದಿಂದಲೂ ಸ್ವಲ್ಪ ಬಸವಳಿದಿದ್ದರು ಎಂದೇ ಹೇಳಬಹುದು. ಸರಿ ಸುಮಾರು ಎಪ್ಪತ್ತೈದು ಅಲ್ಲವೇ? ಕಳೆದು ಹೋದ ಕಾಲವನ್ನು ಚಿಂತಿಸ ಬಾರದು ಆದರೂ ಇಂತಹ ವ್ಯಕ್ತಿತ್ವ ಕಣ್ಣೆದುರು ನಿಂತಾಗ ನಾವೆಂತಹ ದಿನಗಳನ್ನು ದಾಟಿ ಬಂದಿದ್ದೇವೆ ಎಂದು ಅನಿಸದೇ ಇರಲು ಸಾಧ್ಯವೇ? ಗೋವಿಂದಣ್ಣ ನನ್ನ ಕೈ ಹಿಡಿದಾಗ ಯಕ್ಷಗಾನದ ರಾಜವೇಶ ನನ್ನ ಕೈತಡವಿದ ಅನುಭವ. ರಂಗವೆಲ್ಲ ತುಂಬಿಕೊಂಡ ಯಕ್ಷಗಾನದ ಕೆಚ್ಚನ್ನು ಅಂಗಾಂಗಗಳಲ್ಲಿ ತುಂಬಿಕೊಂಡ ರಾಜವೇಷವದು. ಎಂದಿಗೂ ಅದುವೇ  ಸೂಕ್ಷ್ಮ ರೋಮಾಂಚನ !! ಆದರೆ ಕೈ ಪ್ರಾಯದ ಭಾರವನ್ನು ಹೇಳುತ್ತಿತ್ತು. ಆ ಭಾರಕ್ಕೆ ನಿಜಕ್ಕೂ ಭಾರವಾದದ್ದು ನನ್ನ ಮನಸ್ಸು ಛೇ ಗೋವಿಂದಣ್ಣನಿಗೆ ಪ್ರಾಯವಾಯಿತಲ್ಲ…?
ಎರಡು ದಿನ ಬಿಟ್ಟು ಮಲ್ಲೆಶ್ವರಂನ ಮನೆಯೊಂದರಲ್ಲಿ ತಾಳ ಮದ್ದಲೆ.  ಗ. ನಾ . ಭಟ್ಟರ ಯಕ್ಷಕೌಮುದಿ ಟ್ರಸ್ಟ್ ನ ಯಕ್ಷ ಸಂಚಾರದ ತಾಳ ಮದ್ದಲೆಯದು. ಅದಿನ ಪ್ರಸಂಗ ಶ್ರೀರಾಮ ನಿರ್ಯಾಣ.  ಬಹಳ ಭಾವನಾತ್ಮಕ ಪ್ರಸಂಗದ ಶ್ರೀರಾಮನ ಪಾತ್ರದಲ್ಲಿ ಅದಾಗಲೇ ತುಸು ಅವೇಶಗೊಂಡಿದ್ದರು ಗೋವಿಂದಣ್ಣ.  ಕೊನೆಯ ಲಕ್ಷ್ಮಣನೊಡನೆ ಭಾವನಾತ್ಮಕ ಸನ್ನಿವೇಶವದು. ಬಹುಶಃ ಇಡೀ ರಾಮಾಯಣದಲ್ಲೇ ಇಂತಹ ಸನ್ನಿವೇಶ ಸಿಗಲಾರದೋ ಏನೋ? ತನ್ನ ತಮ್ಮನಿಗೆ ರಾಜ್ಯ ಬಹಿಷ್ಕಾರ ವಿಧಿಸುತ್ತಾನೆ ಶ್ರೀರಾಮ. ಆತನ ಮುಖವನ್ನೂ ತನಗೆ ತೋರಿಸದಂತೆಯೂ ರಾಜ ದಂಡನೆಯನ್ನು ವಿಧಿಸುತ್ತಾನೆ. ಆದರೆ  ಲಕ್ಷ್ಮಣ ಅಲ್ಲಿಂದ ತೆರಳುವಾಗ ರಾಮ ಕುಳಿತಲ್ಲಿಂದ ಎದ್ದು ಹೊರಗೆ ಬಂದು ಲಕ್ಷ್ಮಣನ್ನು ಎರಡೂ ಕೈಗಳಿಂದ ತಬ್ಬಿ ಹಿಡಿಯುತ್ತಾನೆ. ರಾಮ ದುಃಖತಪ್ತನಾಗುತ್ತಾನೆ. ಆಗಲೂರ್ ಮುಖ ತೋರಿಸಲಾಗದ ಲಕ್ಷ್ಮಣನ ಕಣ್ಣುಗಳು ರಾಮನ ಪಾದಗಳನ್ನೇ ನೋಡುತ್ತಿರುತ್ತದೆ. ಅರ್ಥ ಸನ್ನಿವೇಶ ವಿಶ್ಲೇಷಿಸುತ್ತಿದಂತೆ ಗೋವಿಂದಣ್ಣನ ಸ್ವರ ಗದ್ಗದವಾಗುತ್ತದೆ. ಆ ದಿನದ ಕೊನೇಯ ಒಂದೆರಡು ಪದಗಳ ರಾಮ ನಾನಂತೂ ಮರೆಯುವಂಥದ್ದಲ್ಲ.
ತಾಳ ಮದ್ದಲೆ ಮುಗಿದು ಮಂಗಳ ಹಾಡುವಾಗ ಗೋವಿಂದಣ್ಣ ಕುಳಿತಲ್ಲಿಗೆ ಹೋಗಿ ನಮಸ್ಕಾರ ಹೇಳಿದೆ. ತಾಂಬೂಲದ ಪೆಟ್ಟಿಗೆಯ ಮುಚ್ಚಳವೆಳೆದು ನನ್ನಲ್ಲಿ ಕುರ್ಚಿ ಎಳೆದುಕೊಂಡು ಅವರ ಬಳಿಯಲ್ಲೇ ಕೂರುವಂತೆ ಹೇಳೀದರು. ಅವರ ಬಳಿ ಕುಳಿತಾಗ ಎಂದಿನಂತೆ ಒಂದು ಆತ್ಮೀಯತೆಯ ವಲಯವೊಂದು ನಿರ್ಮಾಣವಾಗುತ್ತದೆ. ಅದರೊಳಗೆ ತನ್ಮಯವಾಗಿಬಿಡುವ ಕ್ಷಣ. ಅದಾಗಲೇ ಸಂಘಟಕರು ಊಟದ ವ್ಯವಸ್ಥೆ ಮಾಡುತ್ತಿದ್ದರು. ಗೋವಿಂದಣ್ನ ಅದಾರೋ ಮಹನೀಯರೊಬ್ಬರಿಗೆ ನನ್ನನ್ನು ಪರಿಚಯಿಸಿದರು.  ಮತ್ತೂ ಇನ್ನೇನೋ ಅತಿಶಯದ ಮಾತುಗಳಾಡುತ್ತಿದ್ದಂತೆ ನನ್ನ  ದೇಹ ಹಿಡಿಯಷ್ಟಾಗಿ ಮನಸ್ಸು ಆಕಾಶವಾಯಿತು.
ಊಟ ಮಾಡುತ್ತಿದ್ದಂತೆ ಕೇಳಿದೆ “ ಈಗ ಹೇಗೆ ವೇಷ ಮಾಡುವುದಕ್ಕೆ ಸಾಧ್ಯವಾಗುತ್ತದೆಯೇ?” 
“ಆಗ್ತದೆ. ಹಾಗೇನೂ ಇಲ್ಲ, ಮೇಳ ಬಿಡುವ ಬಗ್ಗೆ ಯೋಚಿಸುತ್ತಿದ್ದೇನೆ. ಸ್ವಲ್ಪ ಕಷ್ಟವಾಗ್ತದೆ. ಅರ್ಧ ಗಂಟೆ ವೇಷ ಮಾಡಿದರೂ ಸಾಕು... ಆದರೂ ಬಿಡುವ ಯೋಚನೆ.   ಕಣ್ಣಿಗೆ ರಂಗ ಸ್ಥಳದ ಅ ಬದಿಯಲ್ಲಿ ನಿಂತವರನ್ನು ಕಾಣಿಸುವುದಿಲ್ಲ. ಲೈಟಿನ ಬೆಳಕು ನೋಡಿ ನೋಡಿ ಸಾಕಾಗ್ತದೆ.”
ಮಹಾನ್ ಕಲಾವಿದರ ಅಂತರಂಗದ ಧ್ವನಿಯಿದು. ಇರುಳಿಡೀ ಪ್ರಖರವಾದ ಬೆಳಕಿನಲ್ಲಿ ದುಡಿದ ಪರಿಣಾಮವಿದು   ರಂಗಸ್ಥಳದ ಪ್ರಖರತೆ ಗಾಢವಾದಂತೆ ಕಲಾವಿದರ ಬಾಳ ಸಂಜೆಯ ದಿನಗಳು ಪ್ರಖರತೆಯನ್ನು ಕಳೆದುಕೊಳ್ಳುತ್ತದೆ. ಅವೈಜ್ಞಾನಿಕ ರೀತಿಯಲ್ಲಿ  ಏನೇನೂ ಯೋಚಿಸದೆ ರಂಗಸ್ಥಳದಲ್ಲಿ ಗಾಢವಾದ ವಿದ್ಯುದ್ದೀಪಗಳನ್ನು ಬೆಳಗಿಸುವಾಗ ಇದನ್ನು ಯೋಚಿಸುವುದೇ ಇಲ್ಲ  ಇದರ ಪರಿಣಾಮ ಕಲಾವಿದರಲ್ಲಿ ಪರೋಕ್ಷವಾಗಿ ಆಗುತ್ತಿದ್ದು,  ಕಲಾವಿದರ ಬದುಕನ್ನು ಒಂದು ರೀತಿಯ ಅಂಧತ್ವಕ್ಕೆ ತಳ್ಳುವುದನ್ನು ಕಾಣುವಲ್ಲಿ ನಾವು ಕಣ್ಣಿದ್ದೂ ಅಂಧರಾಗಿಬಿಡುತ್ತೇವೆ. ಹೀಗಿದ್ದರೂ ಯಕ್ಷಗಾನಕ್ಕೆ ಇಂತಹ ಪ್ರಖರವಾದ ಬೆಳಕಿನ ಆವಶ್ಯಕತೆ ಇಲ್ಲದೇ ಇರುವಾಗ ರಂಗಸ್ಥಳವನ್ನು ವೈಭವೀಕರಿಸುವಲ್ಲಿ ವಾಸ್ತವದ ಪರಿಣಾಮವನ್ನು ಕಡೆಗಣಿಸುತ್ತೇವೆ.
ಛಾಯಾ ಚಿತ್ರ: ಶ್ರೀ ಉಲ್ಲಾಸ್
ಯಕ್ಷರಂಗದ ಸುಯೋಧನ ಇದೀಗ ನನ್ನ ಪಕ್ಕ ಕುಳಿತ್ತಿದ್ದಾರೆ. ನನ್ನೊಂದಿಗೆ ಅದೂ ಇದು ಮಾತನಾಡುತ್ತಾರೆ. ಕೆಲವರಿಗೆ ನನ್ನ ಪರಿಚಯವನ್ನು ಮಾಡಿಸುತ್ತಾರೆ. ನನ್ನ ತಂದೆಯವರ ಬಗ್ಗೆ ಹೇಳುತ್ತಾರೆ.  ನನ್ನ ಯಕ್ಷಗಾನದ ಬಗ್ಗೆ ವಿಶೇಷವಾಗಿ ನನ್ನ ಯಕ್ಷಗಾನ ಸಂಗ್ರಹದ ಬಗ್ಗೆ ಹೇಳುತ್ತಾರೆ. ಈ ಸರಳ ಸಜ್ಜನಿಕೆಯನ್ನು ಕಂಡಾಗ ನನ್ನ ಕೈ ನನ್ನ ಎದೆಯನ್ನು ತಾನೆ ನೇವರಿಸುತ್ತದೆ. ಹೃದಯದ ಧನ್ಯತೆಯ ಭಾವ ವ್ಯಕ್ತವಾಗುವುದು ಹೀಗೇ ಇರಬೇಕು.
          ಕಾರ್ಯಕ್ರಮದ ಮುಕ್ತಾಯದ ಸಹಜತೆಯಂತೆ ಒಬ್ಬೊಬ್ಬರೇ ವಿದಾಯ ಹೇಳಲಾರಂಭಿಸಿದರು. ಗೋವಿಂದಣ್ಣನೂ ತಮ್ಮ ತಾಂಬೂಲ ಪೆಟ್ಟಿಗೆಯನ್ನು ಕೈಚೀಲಕ್ಕೆ ಸೇರಿಸಿ ಸಿದ್ಧರಾದರು.  ಸಂಘಟಕರು ವ್ಯವಸ್ಥೆ ಮಾಡಿದ ವಾಹನದಲ್ಲಿ ನಿಧಾನವಾಗಿ ಏರಿ ಹೋದಾಗ ಕಿರು ನಗಿವಿನಲ್ಲೇ ವಿದಾಯ ಹೇಳಿದರು.  ನಾನು ನನ್ನ ಮನೆಕಡೆ ತಿರುಗಿದೆ. ಮನಸ್ಸು ಹೇಳಿತು “ ಒಂದು ರೀತಿಯಲ್ಲಿ ಈ ದಿನ ಒಂದು ಚೆನ್ನಾಗಿ ಕಳೆದೆ ಸಂಶಯವಿಲ್ಲ ”  ಗಧಾಯುದ್ಧ ನೋಡಿ ಕೌರವನ ಹಾವ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡು ಹೋಗುವ ಯಕ್ಷಗಾನ ಅಭಿಮಾನಿಯಂತೆ,  ವಾಸ್ತವದ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಮನಸ್ಸಿನಲ್ಲಿ ಅಚ್ಚೊತ್ತಿಕೊಂಡ ಅನುಭವ ನನ್ನದು.

                    



Monday, July 28, 2014

ಯಕ್ಷಗಾನ ಲೋಕದ ಬಾಲ ಹೆಜ್ಜೆಗಳು


ಜಿಜ್ಞಾಸು... ಕೇಳಬೇಕು  ಎಂಬ ಹಂಬಲ ಯಾರಲ್ಲಿ ಇರುತ್ತದೆಯೋ ಅಂಥವನಿಗೆ ಹೇಳುವ ಮಾತು ಇದು, ’ಜಿಜ್ಞಾಸು’. ಮೊದಲಾಗಿ ಹೆಜ್ಜೆ ಇಡುವವನು ಒಂದು ರೀತಿಯಲ್ಲಿ ಇದೇ ಭಾವದಲ್ಲಿ ಹೆಜ್ಜೆ ಇಡುತ್ತಾನೆ. ಎಲ್ಲಿ ಜಾರುತ್ತದೋ? ಎಲ್ಲಿ ಎಡವುತ್ತದೋ ಎಂಬ ಆತಂಕ ಒಂದೆಡೆಯಾದರೆ, ಎಲ್ಲಿ ಮೃದು ಸ್ಪರ್ಶ ಹಿತವಾಗಿ ಸುಖ ಕೊಡಬಲ್ಲುದೋ ಎಂಬ ನಿರೀಕ್ಷೆ. ಹೀಗೆ ಮೊದಲಾಗಿ ಹಾದಿ ಕ್ರಮಿಸುವವನು ಆ ಹಾದಿಯ ಬಗ್ಗೆ ಒಂದು ರೀತಿಯಲ್ಲಿ ಜಿಜ್ಞಾಸುವಾಗಿಯೇ ಇರಬೇಕು. ಮೊದಲ ಅಡಿ ಇಡುವಾಗ ಚಿಕಿತ್ಸಕ ದೃಷ್ಟಿ ಬೇರೆ, ಜಿಜ್ಞಾಸೂ ಪ್ರವೃತ್ತಿ ಬೇರೆ. ಚಿಕಿತ್ಸಕ ದೃಷ್ಟಿಯಲ್ಲಿ ಗ್ರಾಹ್ಯ ಮನೋಭಾವಾವ ಅಪರೂಪ. ಜಿಜ್ಞಾಸೂ ಎನಿಸಬೇಕಾದರೆ ಗ್ರಾಹ್ಯ ಮನೋಭಾವ ಅತೀ ಅಗತ್ಯ.

ನಮ್ಮ ಯಕ್ಷಗಾನ ಮಿತ್ರಕೂಟದ ಒಂದಿಷ್ಟು ಮಂದಿ ಪುರುಸೊತ್ತಾದಾಗ ಅಲ್ಲಿ ಇಲ್ಲಿ ಅಂತ ಸೇರಿ ಕೊಂಡು ಒಂದಿಷ್ಟು ಘಳಿಗೆಯನ್ನು ಯಕ್ಷಗಾನ ಮಯವಾಗಿ ಮಾಡಿಕೊಳ್ಳುತ್ತಾರೆ. ಏಕ ಅಭಿರುಚಿಯ  ಇದಕ್ಕೆ ಯಾವುದೇ ನಿಬಂಧನೆ ಇಲ್ಲದ ಮುಕ್ತ ವಾತಾವರಣ. ಇಲ್ಲಿ ಬಂದರೆ ಮೊದಲು ಬೀಸುವ ತಂಗಾಳಿ ಎಂದರೆ ಅದು ಯಕ್ಷಗಾನದ ಬಗೆಗಿರುವ ನಿಸ್ವಾರ್ಥ  ಅಭಿಮಾನ. ನಿಸ್ವಾರ್ಥದ ಆಳ ಪರಿಧಿ ಎಷ್ಟು ಎಂದು ಹೋರನೋಟದಿಂದ ತುಲನೆ ಮಾಡಲು ಸಾಧ್ಯವಿಲ್ಲ. ಅದರ ಗಾಢ ಸ್ಪರ್ಶದ ಅನುಭವವಾಗಬೇಕಿದ್ದರೆ ಒಳಗೆ ಹೊಕ್ಕು ಅನುಭವಿಸಬೇಕು. ಹಾಗೆಂದು ಇದು ದೊಡ್ಡ ದೊಡ್ಡ ಕಲ್ಪನೆಗೆ ತುಲನೆ ಮಾಡುವಂತದ್ದಲ್ಲ. ಇದು ಬಹಳ ಸರಳವಾದ ಅಭಿಮಾನ ಎಂದರೆ ಬಹಳ ಸೂಕ್ತ. ಇಲ್ಲಿ ಬಹಳಷ್ಟು ಮಂದಿಯಲ್ಲಿ ಈ ಜಿಜ್ಞಾಸೂ ಪ್ರವೃತ್ತಿ ಕಂಡಿದ್ದೇನೆ.  ಎಲ್ಲರಿಗೂ ಕೇಳಬೇಕು ಅರಿಯಬೇಕು ಎಂಬ ತವಕ ಎಂದು ಹೇಳುವುದಕ್ಕಿಂತ ಉತ್ಸಾಹ ಎನ್ನಬಹುದು. ಇದನ್ನು ಮತ್ತಷ್ಟು ವಿವರಿಸಿದರೆ ನಮ್ಮ ಬೆನ್ನು ನಾವು ತಟ್ಟಿಯೇ ದಪ್ಪಗಾಗಬಹುದು. ಆದರೂ ಆಗುವ ವಿಲಕ್ಷಣ ಅನುಭವ ವ್ಯಕ್ತಪಡಿಸುವುದು ಸಹಜ ಎಂದುಕೊಳ್ಳಬೇಕು.


ಮನುಷ್ಯನಲ್ಲಿ ವೃತ್ತಿ ಮಾತು ಪ್ರವೃತ್ತಿ ಇದ್ದೇ ಇರಬೇಕು. ವೃತ್ತಿ,  ಅದು ಜೀವನ ನಿರ್ವಹಣೆಗೆ ಆದರೆ ಪ್ರವೃತ್ತಿ,  ವೃತ್ತಿಯಲ್ಲಿ ಆಗುವ ಏರಿಳಿತವನ್ನು ಗೊಂದಲಗಳನ್ನು ಮರೆಯುವುದಕ್ಕೆ. ವೃತ್ತಿಯಲ್ಲಿ ಮನಸ್ಸು ಒಪ್ಪದಿದೇ ಇದ್ದರೂ ಹಲವು ಸಲ ಸ್ವಾರ್ಥ ರಾಜಕೀಯ  ಅನಿವಾರ್ಯವಾಗುತ್ತದೆ. ಯಾಕೆಂದರೆ ಅದು ಹೊಟ್ಟೆ ಪಾಡು. ಆದರೆ ಪ್ರವೃತ್ತಿಯಲ್ಲಿ ಅಂತಹ ಯಾವ ನಿಬಂಧನೆಯೂ ಇರದೆ ವೃತ್ತಿಯಲ್ಲಿ ಉಂಟಾಗುವ ಗೊಂದಲಗಳಿಗೆ ಹಲವು ಸಲ ಇಲ್ಲಿ ನಿವಾರಣೆ ಸಿಗುತ್ತದೆ. ವಿಪರ್ಯಾಸವೆಂದರೆ ಇಂದು ಪ್ರವೃತ್ತಿಯಲ್ಲಿ ಸ್ವಾರ್ಥ, ಮತ್ಸರ ಮುಂತಾದವುಗಳನ್ನು ತುಂಬಿಕೊಂಡು ಪ್ರವೃತ್ತಿಯಲ್ಲಿಯೂ ಗೊಂದಲಗಳನ್ನೇ ಕಾಣುತ್ತೇವೆ. ಇದು ವಿಚಿತ್ರ. ಕಲೆ ಸಾಹಿತ್ಯ ಅಭಿರುಚಿಗಳು ಮನಸ್ಸನ್ನು ಮುದಗೊಳಿಸುವುದಕ್ಕೆ ಬಳಕೆಯಾಗಬೇಕು. ಸ್ವಪ್ರತಿಷ್ಠೆ, ಮತ್ಸರ ಸ್ವಾರ್ಥಗಳಿಂದ ಅದನ್ನು ಕಲುಷಿತಗೊಳಿಸಿದ್ದಲ್ಲಿ ಇದನ್ನು ಪ್ರವೃತ್ತಿ ಎಂದು ಸ್ವೀಕರಿಸುವ ಅನಿವಾರ್ಯತೆಯಾದರೂ ಯಾಕೆ?
           ಇದು ನಮ್ಮೊಳಗಿನ ಕಲಾಭಿಮಾನ,  ಅದು ಸರಳವಾಗಿ ಸಂತೃಪ್ತವಾಗಬೇಕು. ಢಾಂಬಿಕತನದ ಆಡಂಬರವಿಲ್ಲದೆ ಇರುವ ಒಂದಷ್ಟು ಹೊತ್ತು ಮನಸ್ಸು ಮುದಗೊಳ್ಳಬೇಕು. ನಮ್ಮ ಒಲೆಯಲ್ಲಿ ನಮ್ಮ ಪಾತ್ರೆಯಲ್ಲಿ ನಾವೇ ಬೇಯಿಸಿದ ಅನ್ನ ಉಣ್ಣುವಾಗ ಅದು ನಮಗೆ ಪಕ್ವಾನ್ನವಾಗಿಯೇ ತೋರುತ್ತದೆ. ಹಾಗೆಂದು ಅದು ಅತಿಥಿ ಸತ್ಕಾರಕ್ಕೆ ಇದ್ದದ್ದು ಅಲ್ಲ. ಅದು ಅತ್ಯಂತ ಖಾಸಗೀತನ.  ಕೇವಲ ಈ ಖಾಸಗೀತನದ ಅಂತರಂಗದಲ್ಲಿ ಹುಟ್ಟಿಕೊಂಡಿತು ನಮ್ಮ ಮಿತ್ರಕೂಟ. ಅಪರೂಪಕ್ಕೆ ಯಾರಾದರೂ ಅತಿಥಿಗಳು ಬಂದಲ್ಲಿ ಬಂದವರಿಗೆ ಅದೇ ಪಕ್ವಾನ್ನದ ಸತ್ಕಾರ.   ಅಂದು ಮಿತ್ರ ರಂಗನಾಥನ ಮನೆಯಲ್ಲಿ ಲಕ್ಷ್ಮೀನಾರಾಯಣ (ಲಾ. ನಾ) ನೊಂದಿಗೆ  ತೊಡಗಿಕೊಂಡ ಈ ಮಿತ್ರ ಕೂಟ ಆಗಲೋ ಈಗಲೋ ನಮ್ಮ ಅವಿಭಾಜ್ಯ ಅಂಗವಾಗಿ ಒಂದಿಷ್ಟು ಧನ್ಯತೆಯ ಭಾವವನ್ನು ಮನಸ್ಸಿಗೆ ತುಂಬಿಸಿ ಕೊಟ್ಟಿದೆ.  
          ಆರಂಭದಲ್ಲಿ ಗಾಯನಕ್ಕಷ್ಟೇ ಸೀಮಿತವಾಗಿದ್ದ ಮಿತ್ರಕೂಟ ಮೊನ್ನೆ ಸ್ವಲ್ಪ ಧೈರ್ಯದಿಂದಲೂ ಉತ್ಸಾಹದಿಂದಲೂ ತಾಳ ಮದ್ದಲೆಯನ್ನು ಮಾಡಿಯೇಬಿಟ್ಟೆವು. ಇಲ್ಲಿಯೇ ಪ್ರತಿಯೊಬ್ಬರ ಜಿಜ್ಞಾಸೂ ಪ್ರವೃತ್ತಿ ಕಾಣುವುದಕ್ಕಾದದ್ದು. ಕೇವಲ ಆತ್ಮಾನಂದವನ್ನಷ್ಟೇ  ಅಪೇಕ್ಷಿಸಿ ಮಾಡಿದ ಕರ್ಮ. ಫಲಾಪೇಕ್ಷೆ ಇಲ್ಲದ ಕರ್ಮ ಭಗವಂತನ ಹತ್ತಿರಕ್ಕೆ ಒಯ್ಯುವಲ್ಲಿ ಸಹಕಾರಿಯಾಗುತ್ತದೆ ಎಂಬ ಮಾತಿದೆ. ಅದರಂತೆ ಇದು ಆ ಮಟ್ಟಿಗೆ ಸಾಕ್ಷಾತ್ಕಾರವನ್ನು ಒದಗಿಸಬಲ್ಲುದು ಎಂಬು ನಮ್ಮ ನಿರೀಕ್ಷೆ.
ಪಂಚವಟಿಯ ರಾಮ ನನ್ನ ಮೊದಲ ಹೆಜ್ಜೆಯಾದದ್ದು ಒಂದು ರೀತಿಯ ಸಂತಸವನ್ನು ಕೊಟ್ಟಿತು. ಪಂಚವಟಿ ಪ್ರಸಂಗ ಯಕ್ಷಗಾನದ ಅಭಿಮಾನಿಗಳಿಗೆ  ಚಿರ ಪರಿಚಿತ ಪ್ರಸಂಗ. ಹಾಗಾಗಿ ನಾನು ಪಂಚವಟಿಯನ್ನು ಅಭ್ಯಾಸ ಮಾಡುವ ಬದಲಾಗಿ ಅದರಿಂದ ಮೊದಲ ಪ್ರಸಂಗಗಳನ್ನು ಸಿಲುಕುವಷ್ಟು ಅವಲೋಕಿಸಿದೆ. ಪುತ್ರಕಾಮೇಷ್ಠಿ, ಯಜ್ಞ ಸಂರಕ್ಷಣೆ,  ಭರತಾಗಮನ ಹೀಗೆ. ಹಲವು ಪ್ರಸಂಗಗಳು ರಾಮನಾಗುವಲ್ಲಿ ಸಹಕರಿಸಿತು. ಅದು ಹೇಗಾಯಿತೋ ಎನ್ನುವುದಕ್ಕಿಂತ ಮನಸ್ಸಿಗಾದ ಒಂದು ಅನುಭವ ಅತ್ಯಂತ ವಿಶಿಷ್ಟ. ಆದರೂ ಬರೆದಷ್ಟು ಸುಲಭವಲ್ಲ ಪ್ರವಚಿಸುವುದು. ಇದು ಅರಿವಿದ್ದು ಬಹಳಷ್ಟು ಭಯ ಆವರಿಸಿಕೊಂಡಿದೆ. ಅದರಿಂದ ನಿಧಾನವಾಗಿ ಹೊರಬರುವ ಪ್ರಯತ್ನ ಮಾತ್ರ ಮುಂದುವರೆಯುತ್ತದೆ. ಅದರಲ್ಲಿ ಎಷ್ಟು ಯಶಸ್ಸು ಸಿಗುತ್ತದೋ ಅದರ ಅರಿವಿಲ್ಲ. ಆದರೂ ಇದು ಒಂದು ಪ್ರವೃತ್ತಿ. ಹಾಗಾಗಿ ಇದನ್ನು ಯಾವುದೇ ಗೊಂದಲವಿಲ್ಲದೆ ಅನುಭವಿಸುವುದಕ್ಕೆ ಮನಸ್ಸು ಪಯಸುತ್ತದೆ.   ಅದರ ಪ್ರತಿ ಫಲನವೋ ಎಂಬಂತೆ ಪ್ರತಿಯೊಬ್ಬರ ಮುಖದಲ್ಲೂ ಮಂದಹಾಸ ತೇಲುತ್ತಿತ್ತು. ಮಿತ್ರಕೂಟದ ಸಾರ್ಥಕದ ಕ್ಷಣಗಳಲ್ಲಿ ಇದೂ ಒಂದು. ಕೇಳುವವನು ಇದ್ದಲ್ಲಿ ಹೇಳುವವನ ಮಾತು ಬೆಲೆಬಾಳುತ್ತದೆ. ಇದು ಸತ್ಯ. ಆದರೆ ಇಲ್ಲಿ ಎಲ್ಲರೂ ಕೇಳುವವರೇ. ಅದು ಎಲ್ಲಿಂದ ಕೇಳಿದರೂ ಕಿವಿ ತೆರೆದುಕೊಳ್ಳುತ್ತದೆ. ಆದರೆ ವಾಸ್ತವದ ದುರಂತವೆಂದರೆ ಹೇಳುವವರೇ ಅಧಿಕವಾಗಿ ಕೇಳುವವರು ಇಲ್ಲವಾಗಿದೆ. ಈ ಭಯ ಇಲ್ಲಿ ಇಲ್ಲ ಎಂಬ ಸಮಾಧಾನ ಒಂದು ರೀತಿಯ ನೆಮ್ಮದಿಯನ್ನು ಕೊಡುತ್ತದೆ.

ಒಂದೆರಡು ಹೆಜ್ಜೆಯಿಂದ ಮುಂದಿನ ಜಾಡನ್ನು ಊಹಿಸುವುದು ಹುಂಬತನ. ಆದರೂ ಕನಸು ಬೇಡದೇ ಇದ್ದರೂ ಮೊಳೆಯುತ್ತದೆ. ಈ ಲೇಖನ ಬರೆಯುವಷ್ಟರಲ್ಲಿ ಮಿತ್ರಕೂಟದ ಎರಡನೇ ಕಾರ್ಯಕ್ರಮವು ನಮಗೆ ತೃಪ್ತಿಕರವಾಗಿ ನಡೆದುಬಿಟ್ಟಿತು. ಹೊಸ ಅನುಭವ ಒಂದು ಇನ್ನಷ್ಟು ಪಕ್ವವಾಗಿದೆ ಎನ್ನಬಹುದು.
ಮಿತ್ರಕೂಟದ ಮುಖ್ಯವಾದ ಸಂವಹನ ಇರುವುದು ನಾನು ಕಂಡಂತೆ ಪ್ರತಿಯೊಬ್ಬರಲ್ಲೂ ಅಡಗಿದ ನಿಸ್ವಾರ್ಥ ಗುಣ. ಇದು ವ್ಯಕ್ತವಾಗುವಲ್ಲಿ ಪರಸ್ಪರ ಸ್ಪರ್ಧೆ ಇದ್ದಂತೆ ಭಾಸವಾಗುತ್ತದೆ. ಎಲ್ಲಿಯೂ ಸ್ವಾರ್ಥದ ಬಣ್ಣ ಕಾಣಿಸುವುದಿಲ್ಲ. ಈ ನಿಸ್ವಾರ್ಥ ಗುಣವೇ ಇಲ್ಲಿನ ಬಹು ಮುಖ್ಯ ಪ್ರೇರಕ ಶಕ್ತಿ.  ಇದು ಎಲ್ಲರನ್ನೂ ಒಂದು ಮುಷ್ಹಿಯೊಳಗೆ ಹಿಡಿದಿಡುತ್ತದೆ. ಮಾತ್ರವಲ್ಲ ಪ್ರತಿಯೊಬ್ಬರ ಆಶಯವೂ ಇದೇ ಆಗಿರುತ್ತದೆ. ಆದುದರಿಂದಲೇ ಇದರೊಳಗೆ ಹೊಕ್ಕ ನಂತರದ ಇಲ್ಲಿಯ ಸಂಚಾರ ಮನಸ್ಸಿಗೆ ಮುದವನ್ನು ನೀಡುತ್ತದೆ. ಇದು ಆರಂಭವಾದ ರಂಗನಾಥರ ಮನೆ ಮತ್ತು ಅವರ ಯೋಚನೆ ಅದು ಈ ರೂಪ ಪಡೆದುಕೊಂಡದ್ದು ಒಂದು ಬಗೆಯ ವಿಚಿತ್ರ ಅನುಭವವನ್ನು ಉಂಟುಮಾಡುವುದಂತೂ ಸತ್ಯ.
ನಿನ್ನೆಯ ಕಾರ್ಯಕ್ರಮ ಮುಗಿಸಿ ಮಲ್ಲೇಶ್ವರದಲ್ಲಿ ಇನ್ನೊಂದು ಯಕ್ಷಗಾನ ತಾಳ ಮದ್ದಲೆಗೆ ಹೋಗಿದ್ದೆ. ರಾಮ ನಿರ್ಯಾಣದ ರಾಮ ನಾಗಿ ಸೂರಿಕುಮೇರಿ ಗೋವಿಂದಣ್ಣ ಭಾವುಕರಾಗಿದ್ದರು. ಕಾರ್ಯಕ್ರಮದ ನಂತರ ನಾನು ಹೇಳಿದೆ “ ನಾನೂ ಒಂದು ತಾಳ ಮದ್ದಲೆ ಮುಗಿಸಿ ಬಂದದ್ದು” ಅವರು ಕಿರುನಗುವಿನಲ್ಲೇ ಹುಬ್ಬೇರಿಸಿ ಮಂದಹಾಸದಿಂದ ಹರಸಿದರು. ಯಕ್ಷಗಾನಕ್ಕಾಗಿ ಸರ್ವಸ್ವವನ್ನು ಮುಡುಪಿಟ್ಟ ಯಕ್ಷ ಋಷಿಯ ಮುಂದೆ ಮಂಡಿಯೂರುವ ಭಾವ ನನ್ನದಾಗಿತ್ತು.

ಇನ್ನೂ ಬಹಳಷ್ಟು ಯೋಜನೆಗಳು ಮುಂದಿದೆ ಎಂದನಿಸುತ್ತದೆ. ಮೊನ್ನೆ ತಾನೇ ಬಸವನಗುಡಿಯ ತಾಳ ಮದ್ದಲೆಯನ್ನು ಕಂಡಾಗ ನಮ್ಮ ಹಾದಿ ತೋರಿದಂತೆ ಭಾಸವಾಯಿತು. ಬೆಂಗಳೂರಲ್ಲಿ ಯಕ್ಷಗಾನದ ಬಗ್ಗೆ ಬಹಳಷ್ಟು ಅಪರಿಚಿತರೇ ಇರುತ್ತಾರೆ. ಅದರಲ್ಲೂ ಯಕ್ಷಗಾನವೆಂದರೆ ಬಣ್ಣ ಬಣ್ಣದ ವೇಷ ಆರ್ಭಟ ಕುಣಿತ ಎಂದಷ್ಟೇ ತಿಳಿದವರಿಗೆ ತಾಳ ಮದ್ದಲೆ ಎಂಬ ಅಧ್ಬುತ ವಾಕ್ ಪ್ರಪಂಚದ ಅರಿವೇ ಇರುವುದಿಲ್ಲ.  ಹಾಗಾಗಿ ಮುಂದೆ ಇಡುವ ಹೆಜ್ಜೆಯ ಹೊಲಬು ಹೇಗಿರಬೇಕೆಂಬ ಒಂದು ಅನುಭವ ಸೂಕ್ಷ್ಮವಾಗಿ ಅರಿವಾಗಿದೆ. ತಳ ಮಟ್ಟದ ಚಿಕ್ಕ ಚಿಕ್ಕ ಕಾರ್ಯಕ್ರಮಗಳನ್ನು ಸರಳವಾಗಿ ಅಯೋಜಿಸುವುದು. ಅಪರಿಚರಲ್ಲಿ ಈ ಮೂಲಕ ಸಾಧ್ಯವಾದಷ್ಟು ಅರಿವನ್ನು ಮೂಡಿಸುವುದು. ಇಲ್ಲಿಯೂ ಇದರ ಬಗ್ಗೆ ತಪ್ಪು ಕಲ್ಪನೆಗಳಾಗದಂತೆ ಎಚ್ಚರದಿಂದ ಹೆಜ್ಜೆ ಇರಿಸಬೇಕಾಗುತ್ತದೆ. ಎಲ್ಲದಕ್ಕೂ ನಿಸ್ವಾರ್ಥವಾಗಿರುವ ಒಂದೆ ಮನಸ್ಸಿನ ಮಂದಿಗಳು ಜತೆಯಾಗುತ್ತಾರೆ ಅದೇ ಸಂತಸ.
ಈಗ ಗುರಿ ಸ್ಪಷ್ಟವಾಗಿದೆ ಎಂದು ಹೇಳುವಷ್ಟು ಧೈರ್ಯವಿಲ್ಲ. ಆ ಅಹಂಕಾರವೂ ಸರಿಯಲ್ಲ.  ಗುರಿ ಎಂಬುದು ಒಂದು ಪರಿಪೂರ್ಣತೆಯ ಸಂಕೇತವಾದುದರಿಂದ ಇಲ್ಲಿ ಅದನ್ನು ನಿರ್ಣಯಿಸುವುದೂ ಶಕ್ಯವಲ್ಲ. ಆದರೆ ದಾರಿ ಮಾತ್ರ ನಿಚ್ಚಳವಾಗಿದೆ. ಅ ಹಾದಿಯ ಕಂಪು ಅದು ಗುರಿಯತ್ತ ಒಯ್ಯುತ್ತದೆ ಎಂಬ ವಿಶ್ವಾಸ ನಮ್ಮದು. ಇದರಲ್ಲಿ ನಾವು ಹೇಗೆ ಹೆಜ್ಜೆ ಇಡುತ್ತೇವೆ ಎಂಬ ನಿರೀಕ್ಷೆಯ ಜತೆಗೆ ಆತಂಕ ಮತ್ತು ಭಯ ಇವೆರಡೂ ಇದೆ.
ಯಕ್ಷಗಾನ ಅರಳಲಿ ಮಿತ್ರಗಾನ ಮೊಳಗಲಿ.


Tuesday, July 15, 2014

ಶೇಣೀ ಪಾತ್ರ ವೈಶಿಷ್ಟ್ಯ


ವಾಲೀ ಮೋಕ್ಷ ತಾಳ ಮದ್ದಲೆಯ ಕರಪತ್ರದಲ್ಲಿ ಹರಿದಾಸ್  ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರ  ಹೆಸರು ಕಂಡರೆ ಮೊದಲು ಕಲ್ಪನೆಗೆ ಅಥವಾ ನಮ್ಮ ಊಹನೆಗೆ ಸಿಗುವ ವಿಷಯವೆಂದರೆ ಶೇಣಿಯವರ ವಾಲಿ ಪಾತ್ರ. ಶೇಣಿಯವರ ಅತಿ ಶ್ರೇಷ್ಠ ಪಾತ್ರಗಳಲ್ಲಿ ವಾಲಿಯ ಪಾತ್ರವೂ ಒಂದು. ಆ ಪಾತ್ರಕ್ಕೆ ಅವರು ಹಾಕಿಕೊಟ್ಟ ಆಯಾಮಗಳು ಯಕ್ಷಗಾನದಲ್ಲಿ ಬಹಳ ಪ್ರಚಲಿತ.  ಆದರೂ ಈ ಪ್ರಸಂಗದ ಇತರ ವೈವಿಧ್ಯಮಯ ಪಾತ್ರ ಪ್ರಸ್ತುತಿಯಲ್ಲಿ ಶೇಣಿಯವರು ತಮ್ಮದೇ ಅದ ವೈಶಿಷ್ಟ್ಯವನ್ನು ಮೆರೆದಿದ್ದಾರೆ. ಹೀಗೆ ಹಳೆಯ ಧ್ವನಿ ಮುದ್ರಣದಲ್ಲಿ ದೊರಕಿದ ಈ ಅಮೂಲ್ಯ ತುಣುಕುಗಳು ಯಕ್ಷಗಾನ ಸಂಗ್ರಹದ ಮೌಲ್ಯವನ್ನು ಹೆಚ್ಚಿಸಿದೆ.

ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಅಥವಾ ನಿರೀಕ್ಷೆಯನ್ನು ತಬ್ಬಿಬ್ಬು ಗೊಳಿಸುವಂತೆ ಶೇಣಿಯವರು ಹಲವು ಪ್ರಸಂಗಳಲ್ಲಿ ತಮ್ಮ ಪಾತ್ರ ನಿರ್ವಹಣೆ ಮಾಡುತ್ತಿದ್ದರೇ ಎಂಬ ಕೌತುಕದ ವಿಚಾರವೂ ಇರಬಹುದು. ನಮ್ಮೂರಲ್ಲಿ ಒಂದು ಸಲ ಜರಗಿದ ಕರ್ಣಪರ್ವ ಪ್ರಸಂಗ, ಇಲ್ಲಿ ಶೇಣಿಯವರ ಕರ್ಣನನ್ನು ನಿರೀಕ್ಷಿಸಿ ಹೋದವರಿಗೆ ಆದಿನ ಶೇಣಿಯವರ ಅಧ್ಬುತವಾದ ಶ್ರಿಕೃಷ್ಣನ ಪಾತ್ರ ಕಾಣುವಂತಾದದ್ದು ಇತಿಹಾಸ. ಅದರಂತೆ ಈ ತಾಳ ಮದ್ದಲೆಯ ವಾಲೀ ಮೋಕ್ಷ ಪ್ರಸಂಗದ ವೈಶಿಷ್ಟ್ಯವೆ ಈ ಪಾತ್ರವೈವಿಧ್ಯವಾಗಿರುತ್ತದೆ. ಇಲ್ಲಿ ವಾಲಿ ಸುಗ್ರೀವ ಕಾಳಗದ ಅಂತಿಮ ಹಂತ.  ವಾಲಿಯಾಗಿ ಪ್ರಸಿದ್ಧ ಅರ್ಥಧಾರಿ ವಾಗ್ಮಿ ವಿದ್ವಾನ್ ಶ್ರೀ ಕೆರೆಕ್ಕಾಯಿ ಕೃಷ್ಣ ಭಟ್ಟರು ವಾಕ್ ವಿದ್ವತ್ತನ್ನು ಮೆರೆದರೆ ವಾಲಿಗೆ ಪ್ರತಿದ್ವಂದ್ವಿಯಾಗಿ ಸುಗ್ರೀವನಾಗಿ ಶ್ರೀ ಶೇಣಿಯವರು ಸಡ್ಡು ಹೊಡೆಯುತ್ತಾರೆ.
ಪುರವಮುತ್ತಿರೆ ವೈರಿಸೇನೆಯು
ಶರಭಶತಬಲಿ ಗಜಗವಯ ಸಂ
ಗರ ಭಯಂಕರ ಸುಮುಖ ದುರ್ಮುಖ ಗಂಧಮಾದನರ |
ಜರಿಯಗೆಡಹುತ ಅಂಗದನ ಪುರ
ಕಿರಿಸಿ ಭೀಕರಗಜ ಸುಷೇಣರ
ನೆರವಿಯಲಿ ನಡೆತಂದು ರವಿಜನ ತಡೆದನಾ ವಾಲಿ ||
ಎಂಬ ಭಾಮಿನಿಯಲ್ಲಿ ಇಲ್ಲಿ ಪ್ರಸಂಗ ಆರಂಭವಾಗುತ್ತದೆ. ನಾಳೆನೋಡಿಕೊಂಬ ಯುದ್ದ ಎಂಬ ತಾರೆಯನ್ನು ಸಾಂತ್ವಾನ ಪಡಿಸಿ ಒಂದು ರೀತಿಯ ಆತಂಕಮನನಾಗಿ ವಾಲಿಯ ಪ್ರವೇಶ. ಅಣಕವಲ್ಲ ಮೊದಲಿನಂತೆ ಎಂದು ಹಿಂದೆ ಸುಗ್ರೀವನ ಎಚ್ಚರಿಕೆ ನುಡಿ ಸಂದೇಹವನ್ನು ಹೆಚ್ಚಿಸುತ್ತದೆ. ಜತೆಗೆ ದ್ವೇಷವನ್ನೂ ಹೆಚ್ಚಿಸುತ್ತದೆ.  ಹಾಗಾಗಿ ಕ್ರೋಧೋನ್ಮತ್ತನಾಗಿ ಪುರವ ಮುತ್ತಿದ ಸೈನ್ಯವನ್ನು ಎದುರಿಸುವುದಕ್ಕಾಗಿ ಬಂದ ವಾಲಿ ಆಣ್ಣಾ ಎಂದು ಕರೆದ ಸುಗ್ರೀವನೆದುರು ದಾರ್ಷ್ಟ್ಯದಿಂದಲೇ  ಬಂದು ನಿಲ್ಲುತ್ತಾನೆ.
          ಮತ್ತು ಮತ್ತೆನ್ನೊಡನೆ ನಿಂತುಕೊಂಡಿ ರಣದೀ....ಮತ್ತೂ ಮತ್ತೂ ಮತ್ತೇರಿದವನಂತೆ ಏರಿ ಬರುವ ಸುಗ್ರಿವನ ಬಗ್ಗೆ ಅಚ್ಚರಿಯಾಗುತ್ತದೆ. ಈತನಿಗೆ ಕೇವಲ ಮತ್ತಲ್ಲ. ವಾಲಿಗೆ ಉತ್ತರಿಸುವ ಈತನಿಗೆ ಉತ್ತರದವರ ಬಲುಹು ಇದೆ ಎಂಬುದು ಈಗ ನಿಸಂಶಯ. ಇದರಿಂದ ಮತ್ತಷ್ಟು ಉದ್ರಿಕ್ತನಾಗಿ ಸುಗ್ರೀವನಲ್ಲಿ ಕೇಳುತ್ತಾನೆ. ಉತ್ತರವಕೊಡುವೆಯಾ ಬಲು ಧೂರ್ತ ಸುಗ್ರೀವ?
ಪ್ರತಿಯಾಗಿ ಸುಗ್ರೀವ ಉತ್ತರಿಸುವ ರೀತಿ ಹೀಗಿದೆ. “ ಮತ್ತೂ ಮತ್ತೂ ...ಇದು ಮತ್ತು ಮತ್ತೂ ಇದೆ. ಯಾವಾಗಿನವರೆಗೆ? ನೀನು ನನ್ನ ಹೆಂಡತಿ ರುಮೆಯನ್ನು ಬಿಟ್ಟುಕೊಡುವವರೆಗೆ. ಯಾವಾಗಿನ ವರೆಗೆ ಈ ಸಮಸ್ಯೆಯನ್ನು ಪರಿಹರಿಸುವುದಿಲ್ಲವೋ ಆವಾಗಿನ ವರೆಗೆ ಮತ್ತೂ ಇದೆ. ಉತ್ತರವ ಕೊಡುವುದು ಮಾತ್ರವಲ್ಲ ಉತ್ತರ ಕ್ರಿಯೆಯನ್ನು ಮಾಡಿಯೇನು. ನನ್ನ ಹೆಂಡತಿಯನ್ನು ಇಟ್ಟುಕೊಂಡವ ನೀನು. ಮತ್ತೆ ನಾನು ಹೇಗೆ ಧೂರ್ತನಾದೇನು? ನಿನಗೆ ರಕ್ತದ ಮದ. ರಕ್ತದ ಉರಿ. ರಕ್ತದ ಒತ್ತಡ. ಇದು ಒಳ್ಳೇದಕ್ಕಲ್ಲ.”
  ರಕ್ತದ ಮದ ಎಂಬ ವಿಷಯವನ್ನೇ ಅಧರಿಸಿ ವಾಲಿ ಪ್ರತ್ಯುತ್ತರಿಸುತ್ತಾನೆ.
 “ ರಕ್ತದ ಮದ, ಅದು ನನಗೊಬ್ಬನಿಗೆ ಹ್ಯಾಗೋ?. ಒಂದೇ ರಕ್ತ ಹಂಚಿಕೊಂಡು ಬೆಳೆದವರು ನಾವು. ನನಗೆ ಒಂದು ಹಣ್ಣು ಸಿಕ್ಕಿದರೆ ಅದರಲ್ಲಿ ಅರ್ಥ ಹಂಚಿಕೊಟ್ಟವನು ನಾನು.  ನನ್ನ ವೈರಿಯೇ ನಿನ್ನ ವೈರಿ ನಿನ್ನ ವೈರಿಯೇ ನನ್ನ ವೈರಿ. ಹೀಗೆ ಇದ್ದವರಲ್ಲವೇ?  ನಾನು ಉಣ್ಣುವ ಅಹಾರದಲ್ಲಿ ಅರ್ಧ ನಿನಗೆ ಕೊಟ್ಟಿದ್ದೆನೆ. ನಿನ್ನ ಬೆನ್ನಹಿಂದೆ ಇದ್ದು ನಿನ್ನ ರಕ್ಷಣೆಯನ್ನು ಮಾಡಿದ್ದೇನೆ. ಹೀಗೆ ನನಗೊಬ್ಬನಿಗೆ ಮಾತ್ರ ರಕ್ತ ಮದ ಹ್ಯಾಗೋ? ಉತ್ತರಕ್ರಿಯೆ ಮಾಡಿಯೇನು ಎಂದು ಹೇಳುವವ ನೀನು ಉತ್ತರಕ್ರಿಯೆಯನ್ನು ಮಾಡಿದವನು.  ಉತ್ತರ ಕ್ರಿಯೆ ಅದು ಇನ್ನು ನಾನು ಮಾಡಬೇಕಾದವನು ಇಷ್ಟು ಸಮಯ ಬಿಟ್ಟದ್ದು ಯಾಕೆ ಗೊತ್ತೋ ... ತಮ್ಮ ಎಂಬ ಮೋಹದಿಂದ. ಇನ್ನು ಈ ಮೋಹ ಇಲ್ಲ. ಉತ್ತರ ಕ್ರಿಯೆ ಮಾಡುವವನು ನಾನು.” 
ವಾಲಿಯ ಮಾತಿನ ತಮ್ಮನೆಂಬ ಭಾವ ಇದನ್ನು ಮುಖ್ಯವಾಗಿ ತೆಗೆದುಕೊಂಡು ಸುಗ್ರೀವ ಹೇಳುವ ಮಾತು, ಅಣ್ಣನಿಗೆ ಸ್ವಲ್ಪ ಮಾನವೀಯತೆಯಿಂದ ಮಾತನಾಡಿ ವ್ಯವಹರಿಸುವಂತೆ ಹೇಳುತ್ತಾನೆ. ತಮ್ಮನಾಗಿ ತಾನು ನಿರ್ವಹಿಸಿದ ಕರ್ತವ್ಯದ ಬಗೆಯನ್ನೂ ವಿವರಿಸುತ್ತಾ,
“ಸತ್ತವನು ಹಾಳಾಗಿ ಹೋದ ಉಳಿದವರು ಸುಖದಲ್ಲಿ ಬದುಕಬೇಕು ಎಂಬ ಭಾವದಲ್ಲಿ ನಾನು ಬರಲಿಲ್ಲ. ಸೂತಿಕ ಅಚರಿಸಿದ್ದೇನೆ. ಸ್ವಲ್ಪ ಹೃದಯ ಬೇಕಣ್ಣ. ನೀನು ಸತ್ತಿರುವೆ ಎಂಬ ಭ್ರಮೆಯಿಂದ, ಅನಾಥತ್ವದ ಭ್ರಮೆಯಿಂದ ಅರಮನೆಗೂ ಬಾರದೆ ಕಾಡಿನಲ್ಲಿ ತಿರುಗಾಡಿಕೊಂಡಿದ್ದವನು ನಾನು. ಕಣ್ಣೀರ ತಿಲಾಂಜಲಿಯನ್ನೂ ಬಿಟ್ಟಿದ್ದೇನೆ, ಶಾಸ್ತ್ರೀಯವಾದಂತಹ ತಿಲಾಂಜಲಿಯನ್ನೂ ಬಿಟ್ಟಿದ್ದೇನೆ. ನಿನ್ನ ಮಗನ ಕೈಯಿಂದ ಮಾಡಿಸಿದ್ದೇನೋ? ಅಣ್ಣಾ ಎಂಬ ಭಕ್ತಿ ನನಗೆ,  ಇದನ್ನು ನೀನು ಅರ್ಥೈಸಿಕೊಳ್ಳದೇ, ಹಿಂದೆ ನಾವು ಕಳೆದ ದಿನಗಳನ್ನು ನೆನಸಿಕೊಳ್ಳದೇ, ಕೇವಲ ಒಂದು ಅಪಶಕುನದ ಪ್ರಭಾವದಿಂದ ಉಂಟಾದ್ದು ಎಂದು ತಿಳಿಯದೆ ಮಾನಸಿಕ ವಿದ್ವೇಷದಿಂದ ನಡೆದುಕೊಳ್ಳುತ್ತಿದ್ದಿಯಲ್ಲ?  ಈಗ ಏನು ತಮ್ಮನೆಂಬುದರಿಂದ,  ಎನು ತಮ್ಮನ ಬಗ್ಗೆ ನಿನಗೆ ಕರುಣೆ ಉಂಟಾ? ತಮ್ಮ ಎಂಬುದರಿಂದ ಪ್ರಾಣ ಬಿಟ್ಟಿದ್ದೇನೆ ಅಂತ ನೀನು ಹೇಳುವುದು, ತಮ್ಮ ಎಂಬುದನ್ನು ಅಕ್ಷರಾರ್ಥದಲ್ಲಿ ಅಣ್ಣನಾಗಿ ನೀನು ಸ್ವೀಕರಿಸುವೆ ಎಂತಾದರೆ, ತಮ್ಮನದ್ದಾದದ್ದು ಎಲ್ಲವನ್ನೂ ನೀನು ಬಿಟ್ಟುಕೊಡಬೇಕೋ ಬೇಡ್ವೋ ಹೇಳು.ಮೊದಲು ಒಳ್ಳೆಯ ಅಣ್ಣನಾಗು. ಆಮೇಲೆ ಒಳ್ಳೆಯ ತಮ್ಮನನ್ನು ತಿದ್ದುಪಡಿ ಮಾಡು.”
ಪ್ರತಿವಾದಿ ಹೇಳಿದ ’ತಮ್ಮನೆಂಬುದರಿಂದ’ ಎಂಬ ಶಭ್ದವನ್ನು ಮೂಲವಾಗಿ ಇಟ್ಟುಕೊಂಡು ತನ್ನ ಮುಂದಿನ ಮಾತನ್ನು ಅರ್ಥಗಾರಿಕೆಯನ್ನು ಸುಲಭವಾಗಿ ಇಲ್ಲಿ ಶೇಣಿಯವರು ಹೆಣಿದಿದ್ದಾರೆ.  ಅನಿರೀಕ್ಷಿತವಾದ ಶಬ್ಧಗಳು ಅದರ ಹಿಂದಿನ ಭಾವನೆಗಳನ್ನು ಹಿಡಿದು ತನ್ನ ಮಾತುಕಾರಿಕೆಯನ್ನು ಕಟ್ಟುವುದು ಬಹಳ ಅಧ್ಬುತವಾಗಿ ಗೋಚರಿಸುತ್ತದೆ.
“ಯಾವ ವ್ಯಕ್ತಿಯೇ ಆಗಲಿ ನಾನು ಎಂಬುದು ವ್ಯಾಪಕವಾಗಿ ಬೆಳೆದು ಬಿಟ್ಟರೆ, ಆ ವ್ಯಾಪಕವಾದ ನಾನಿನ ಸ್ವರೂಪವನ್ನು ನೋಡುತ್ತಾ ಹೋದರೆ,  ಅವನಲ್ಲಿ ತನ್ನಷ್ಟಕ್ಕೇ ತಾನೆ ಸಣ್ಣತನವು ಆರೋಪಿಸಲ್ಪಡುತ್ತದೆ. ಅದು ನೆರಳನ್ನು ನೋಡಿದ ಹಾಗೆ ನೆರಳನ್ನು ನೋಡಿ ಅದು ನಾನು ಎಂದರೆ, ನೆರಳು ಉದ್ದವಾಗಿ ದಪ್ಪವಾಗಿ ತೋರುತ್ತದೆ. ಅದೇ ನಾನು ಅಂತ ತಿಳಿದುಕೊಂಡಾವಾಗ ಸ್ವಾಸ್ಥ್ಯ ಮರೆತುಹೋಗುತ್ತದೆ. ಹೆಮ್ಮೆ ಎಂದರೆ ಅದು. ನಿನಗೆ ಪ್ರಪಂಚ ಇದಿರಲ್ಲ. ನೀನು ಏನು ಮಾಡಿದರು ಯಾಕೆ ಮಾಡಿದೆ ಅಂತ ಕೇಳುವವರಿಲ್ಲ. ಯಾರೂ ಒಬ್ಬ ವ್ಯಕ್ತಿಯನ್ನು ಪ್ರಶ್ನಿಸುವುದಿಲ್ಲ ಎಂಬುದರಿಂದ ಅವನು ಪ್ರಶ್ನಾತೀತನಾಗ್ತಾನೆ ಎಂದು ಒಂದು ಮುಖದಿಂದ ವಾದಿಸಬಹುದಾದರೂ ಪ್ರಶ್ನಾತೀತವಾದುದು ಕೆಲವೊಮ್ಮೆ ನಿಕೃಷ್ಟವಾಗಿರುವುದೂ ಉಂಟು. ನೀನು ಊರಿನ ರಾಜ. ನಿನ್ನ ಊರಿನಲ್ಲೇ ಒಬ್ಬನ ಹೆಂಡತಿಯನ್ನು ಇನ್ನೊಬ್ಬ ಎಳಕೊಂಡು ಹೋದರೆ ಸಹಿಸ್ತಿಯೋ  ನೀನು? ತಾರೆ ಅಂಗದನಿಗಾಗಿ ಸಿಂಹಾಸನದಲ್ಲಿ ನನ್ನ ಜತೆ ಕುಳಿತಳು. ಹೋಗಲಿ ನೀನು ಒಂದು ಬಾರಿಯಾದರು ತಾರೆಯಲ್ಲಿ ಕೇಳಿದ್ದಿಯಾ? ಸುಗ್ರೀವ ಏನಾದರೂ ಒತ್ತಡ ಹೇರಿದ್ದನೋ ಇಲ್ಲ ಮಗನಿಗಾಗಿ ನಿನ್ನ ದೇಹವನ್ನು ಸುಗ್ರೀವನ ಸೇವೆಗೆ ಒಪ್ಪಿಸಿಕೊಂಡೆಯೋ ಅದೊಂದೂ ವಿಚಾರಿಸಲಿಲ್ಲ. ತಾರೆಯ ಮೇಲೆ ಏನೂ ಅಪಾದನೆ ಇಲ್ಲ ನಿನಗೆ. ಇಲ್ಲದೇ ಇದ್ದ ಅಪಾದನೆ ನನ್ನ ಮೇಲೆ ಮಾಡಿದ್ದಿಯಲ್ಲ? ಏನು ತಾರೆಯನ್ನು ನೀನು ಸತ್ತಿದ್ದೀ ಅಂತ ಸುದ್ದಿ ಹಬ್ಬಿಸಿದ ಮೇಲೆ ನೋಡಿದೆನೋ ನಾನು. ಅದಕ್ಕಿಂತ ಮೊದಲು ತಾರೆಯನ್ನು ತಾಯಿಯಂತೆ ಗೌರವಿಸಿದ್ದು ಬಿಟ್ಟಿಯೋ? ಇದನ್ನೆಲ್ಲ ಮರೆತು ನಿನಗೆ ಒಂದು ನಿಮಿಷ ತಲೆಕೆಟ್ಟದ್ದಕ್ಕೆ ನನಗೆ ಈ ಶಿಕ್ಷೆ. ನನ್ನ ತಪ್ಪಿಗೆ ಯಾವ ಪುರಾವೆಯೂ ಇಲ್ಲ. ನನ್ನ ಹೆಂಡತಿಯೇ ಬೇಕೂಂತ ನಿನಗೆ ಇದ್ದರೆ, ಅವಳನ್ನು ನನಗೆ ಮದುವೆ ಮಾಡಿಸಿದ್ದು ಯಾಕೆ?”
ವಾಲಿ ಸುಗ್ರೀವರ ರೋಚಕ ಸಂವಾದದ ಅಂಶವನ್ನಷ್ಟೇ ಇಲ್ಲಿ ಹೇಳಿದ್ದೇನೆ.
ಇನ್ನೊಂದು ವಾಲಿ ಸುಗ್ರೀವ ಪ್ರಸಂಗದಲ್ಲಿ ಶೇಣಿಯವರ ಶ್ರೀರಾಮನ ಪಾತ್ರ. ರಾಮ ಸುಗ್ರೀವರ ಸಂಭಾಷಣೆ ಮಾತ್ರವೇ ಇಲ್ಲಿ ದಾಖಲಾಗಿದೆ. ವಾಲಿಯೊಂದಿಗಿನ ಯುದ್ದದಲ್ಲಿ ಸುಗ್ರೀವನಿಗೆ ಸಹಾಯ ಹಸ್ತ ನೀಡುತ್ತೇನೆ ಎಂದು ಹೇಳಿದ ರಾಮ,  ತುಲ್ಯಾರಿ ಮಿತ್ರತ್ವ ಭಾವದಲ್ಲಿ ಸುಗ್ರೀವನೊಂದಿಗೆ ಸಖ್ಯವನ್ನು ಗಳಿಸುತ್ತಾನೆ. ರಾಮನ ಬಲ ಸ್ಫೂರ್ತಿಯಿಂದ ಸುಗ್ರೀವ ವಾಲಿಯನ್ನು ಯುದ್ದಕ್ಕೆ ಕರೆದು, ವಾಲಿಯೊಂದಿಗಿನ ಯುದ್ದದಲ್ಲಿ ಸೋಲುಂಡು ಪೆಟ್ಟು ತಿನ್ನುತ್ತಾನೆ. ತನ್ನ ಸೋಲಿನ ಸಂದರ್ಭದಲ್ಲಿ ರಾಮ ಸಹಾಯ ಲಭ್ಯವಾಗದೇ ಇದ್ದಾವಾಗ ಸುಗ್ರೀವ ರಾಮನನ್ನು ನಿಂದಿಸಿ ಛೇಡಿಸುತ್ತಾನೆ. ಆಗ ಶ್ರೀರಾಮ ಸುಗ್ರೀವನಿಗೆ ಸಾಂತ್ವಾನವನ್ನು ಹೇಳುವ ಸನ್ನಿವೇಶವಿದು. ಇಲ್ಲಿ ಸುಗ್ರೀವನಾಗಿ ಶ್ರೀರಾಮದಾಸ ಸಾಮಗ ಮಲ್ಪೆ ಅರ್ಥ ಹೇಳಿದ್ದಾರೆ.
“ ಲೋಕ ಸಂಬಂಧಿಯಾದಂತಹ ಪ್ರದೇಶಕ್ಕೆ ದೇವನಾದರೂ ಇಳಿದರೆ ಅಪ್ರಾಕೃತಿಕವಾದ,  ಅಲೌಕಿಕವಾದ  ಕೃತಿಯನ್ನು ಪ್ರತ್ಯಕ್ಷವಾಗಿ ಪ್ರಕಟಪಡಿಸಲಾಗದು. ಅವನಾದರೋ ಅಪ್ರತ್ಯಕ್ಷವಾದಂತಹ ಅಲೌಕಿಕವಾದಂತಹ ತೇಜಸ್ಸು ಓಜಸ್ಸು ಶಕ್ತಿಯನ್ನು  ಪ್ರಕಟಿಸಿದ್ದಾನೆ. ಪ್ರಕಟಿಸಬಹುದು. ಈ ಧರ್ಮಕ್ಕೆ ಕಟ್ಟು ಒಡೆದಂತಹ  ಸೂರ್ಯ ವಂಶದ ರಾಜಕುಮಾರ ನಾನು , ವಿದ್ಯೆ ಇನ್ನೂ ಇದೆಯಲ್ಲಾ?  ಪ್ರಯೋಗಕ್ಕಿದ್ದ ಸಂಪತ್ತು ಮತ್ತೂ ಇದೆಯಲ್ಲ? ಅವಸರ ಯಾಕೆ ? ಅಂತ ಆಲೋಚಿಸಿ ಸಂದೇಹಕ್ಕೆಅಧೀನನಾದ್ದರಿಂದ ಬಾಣ ಪ್ರಯೋಗಕ್ಕೆ ಮನಸ್ಸು ಮಾಡ್ಲಿಲ್ಲ. ಪ್ರಮಾದ ನನಗೂ ಉಂಟಾಗ್ತದೆ ಆದ್ರೆ ಪ್ರಮಾದ ಅನ್ನುವುದು ದೊಡ್ಡ ದೋಷ ಅಲ್ಲ. ಬಂದು ಬಿಡ್ತದೆ. ಈ ಪ್ರಮಾದದಿಂದ ನಾನು ಬಾಣ ಬಿಟ್ಟದ್ದು ವಾಲಿಯ ಮೈಗೆ ಅಲ್ಲದೆ ಸುಗ್ರೀವನ ಮೈಗೆ ಆದರೆ??? ಆಲೋಚಿಸು. ಸುಗ್ರೀವ ನನ್ನ ರಕ್ಷೆಗೆ ಕಕ್ಷೆಗೆ ಒಳಪಟ್ಟವ. ವಾಲಿ ವಧಾರ್ಹಕ್ಕೆ ಒಳಪಟ್ಟವ, ಕೊಲ್ಲುವುದು ಯಾವಾಗಲೂ ಆದೀತು. ರಕ್ಷಿಸುವುದು ಶಿಕ್ಷಿಸಿದ ಮೇಲೆ ಆದೀತೆ? ಆದುದರಿಂದ ಸ್ವಲ್ಪ ಸಾವಧಾನ ಮಾಡಿದೆ. ವಾಲಿ ಯಾರೂ ಅಂತ ಗೊತ್ತಾಗಲಿ. ಸುಗ್ರೀವ ಯಾರು ಅಂತ ವ್ಯಕ್ತವಾಗಲಿ. ಅಂತ ಕಾದೆ. ಹೋಗುವವ ವಾಲಿ ಅಂತ ಗೊತ್ತುಂಟು. ಬೆನ್ನಟ್ಟಿ ಹೊಡೀಬಾರದು ನೋಡು. ಅದು ಬೇಟೆಯಾಗ್ತದೆ. ನಾನು ವಾಲಿಯನ್ನು ಆ ದೃಷ್ಟಿಯಿಂದ ಕಾಣುವುದಿಲ್ಲ. ವಾಲಿ ಶಿಕ್ಷಾರ್ಹ ಎಂದು ಹೇಳಿದ್ದೇ ಅವನು ಪಶು ಅಲ್ಲ ಎಂಬರ್ಥದಲ್ಲಿ. ಬರೀ ಪಶು ಪ್ರಾಣಿ ಅಂತಾದರೆ ಶಿಕ್ಷೆ ಏನು? ರಕ್ಷೆ ಎನು? ನಾನು ಬೇಟೆಗಾರನಾಗುವುದಿಲ್ಲ ವಾಲಿಯನ್ನುದ್ದೇಶಿಸಿ. ವಾಲಿ ಕಿಷ್ಕಿಂಧೆಯ ರಾಜ.”
“ಕೊಲ್ಲುವುದು ಯಾವಾಗಲೂ ಅದೀತು ರಕ್ಷಿಸುವುದು ಶಿಕ್ಷಿಸಿದ ಮೇಲೆ ಆದೀತೆ? “  ಎಂತಹ ಮಾರ್ಮಿಕವಾದ ಮಾತು ಇದು. ರಕ್ಷಣೆ ಮೊದಲು ಆಗಬೇಕು. ಆಮೇಲೆ ಶಿಕ್ಷಣ. ಹಾಗೆಯೇ ವಾಲಿಯನ್ನು ಬೇಟೆಯಾಗಿ ಕಾಣುವುದಿಲ್ಲ. ಎಂಬ ಸೂಚ್ಯಾರ್ಥವನ್ನು ಆಡಿಬಿಡುತ್ತಾರೆ. ಇದು ಮುಂದಿನ ಪ್ರಶ್ನೆಗೆ ಇಲ್ಲೇ ಉತ್ತರ ಕೊಟ್ಟಂತೆ. ಪ್ರಸಂಗದ ಕೊನೆಯ ಕ್ಷಣದಲ್ಲಿ ವಾಲಿ ರಾಮನಿಗೆ ನಿಂದಿಸುವ ವಾಕ್ಯದಲ್ಲಿ ರಾಮನನ್ನು ಬೇಟೆಗಾರನೇ ಎಂದು ನಿಂದಿಸುತ್ತಾನೆ. ಹೀಗಿದ್ದರೂ ರಾಮ ಕೊನೆಯಲ್ಲಿ ಮರೆಯಲ್ಲೇ ನಿಂತು ಬಾಣ ಬಿಡುತ್ತಾನೆ.
ಇಲ್ಲಿಯೂ ಹಾಗೆ ಸುಗ್ರೀವನ ದೂಷಣೆಗೆ ಸಮರ್ಪಕ ಸಾಂತ್ವಾನವನ್ನು ಸಮಜಯಿಷಿಕೆಯನ್ನು ಹೇಳಿದನಂತರ ಸುಗ್ರೀವನನ್ನು ಹೋರಾಟಕ್ಕೆ ಹುರಿದುಂಬಿಸುತ್ತಾನೆ ರಾಮ. ರಾಮನಿಂದಲೂ ಮೋಸವಾದಾಗ ತನಗೆ ಯೋಗವಿಲ್ಲ ಇನ್ನು ಹೋರಾಟವೇ ಬೇಡ ಎಂಬಂತಿದ್ದ ಸುಗ್ರೀವನನ್ನು ರಾಮ ಪುನಃ ಯುದ್ದಕ್ಕಾಗಿ ಪ್ರೇರೇಪಿಸುತ್ತಾನೆ.
“ ಕಪಿರಾಜ, ನೀನು ಹೋರಾಟ ಮಾಡಿಯೇ ಪಡೆಯಬೇಕು. ನಿರಾಶೆಯಲ್ಲಿ ನೀನೇನು ಹೇಳಿದೆ. ಯೋಗ ಇದ್ರೆ ಸಿಕ್ಕೀತು. ಇರ್ಲಿ. ಕಪಿರಾಜ ವಾಲಿಯಲ್ಲಿ ಇರ್ಲಿ. ಏನಾಗಿ ಇರ್ಲಿ? ಆಲೋಚಿಸಿದಿಯಾ? ವಾಲಿಯ ಹೆಂಡತಿಯಾಗಿ ಇರ್ತಾಳೋ ಇರ್ಲಿ. ಸುಗ್ರೀವನ ಹೆಂಡತಿಯಾಗಿ ವಾಲಿಯಲ್ಲಿ ಇದ್ದರೆ? ನಾನೂ ಹಾಗೆ ನೀನು ಹಾಗೆ. ನಾವು ನಿಜವಾದ ಗಂಡಂದಿರು ಎಂದಾದರೆ ಹೋರಾಟ ಮಾಡಿಯೇ ಪಡೆಯಬೇಕು. ನಾವು ಗಂಡುಸರಾಗಿಯೇ ಮತ್ತೊಮ್ಮೆ ನಮ್ಮ ಹೆಂಡತಿಯರನ್ನು ನಾವು ಸ್ವೀಕರಿಸಬೇಕಾಗುತ್ತದೆ. ಅದಕ್ಕಾಗಿಯೇ ನಾನು ವಾಲಿಯನ್ನು ಯುದ್ದಕ್ಕೆ ಕರೆಯಲಿಲ್ಲ. ನಾನು ಹೊಡೆದು ನಿನ್ನ ಹೆಂಡತಿಯನ್ನು ನಾನು ಕೊಡಿಸಿದೆ ಎಂತಾಗಕೂಡದು. ನೀನು ಹೋರಾಟ ಮಾಡಿ ಪಡೆದೆ ಎಂದಾಗಬೇಕು. ಪಡೆದದ್ದು ಹೇಗೆ ರಾಮನ ಸಹಾಯದಿಂದ ಎಂದಾಗಬೇಕು. ರಾಮನ ಸಹಾಯದಿಂದ, ರಾಮನ ಹೋರಾಟದಿಂದ ಅಲ್ಲ. ಸಹಾಯ ಒಬ್ಬನಿಂದ ಒಬ್ಬನಿಗೆ ಯಾಜಿಸುವುದು ತಪ್ಪಲ್ಲ. ಹೀಗೆ ಇಲ್ಲಿ ನೀನು ನಾಯಕ. ಮುಂದೆ ರಾವಣನನ್ನು ಕಂಡಾಗ ನಾಯಕ ನಾನು. ಇದು ತುಲ್ಯಾರಿ ಮಿತ್ರತ್ವ.”
“ಈಗ ತಮ್ಮನಿಗೊಂದು ಆಜ್ಞೆ ಮಾಡ್ತೇನೆ. ಈ ಪ್ರದೇಶದಲ್ಲಿ ಎಲ್ಲ ಬೆಳದದೆಯಲ್ಲ ಒಂದು ಪ್ರಾದೇಶಿಕ ಪುಷ್ಮ. ಅದಕ್ಕೆ ಗಜ ಪುಷ್ಪ ಅಂತ ಹೇಳ್ತಾರೆ. ಎಷ್ಟು ದೂರಕ್ಕೂ ಆ ಹೂವು ಗೋಚರಿಸುತ್ತದೆ. ಮಾತ್ರವಲ್ಲ ಬಣ್ಣದಿಂದಲೂ ಗೋಚರಿಸುತ್ತದೆ. ಅದರ ಮಾಲೆಯೊಂದನ್ನು ಲಕ್ಷ್ಮಣ ತಯಾರಿಸುತ್ತಾನೆ. ನಿನ್ನ ಕುತ್ತಿಗೆ ಹಾಕ್ತಾನೆ. ಮಧ್ಯರಾತ್ರಿಯೇ ಆಗಿರಲಿ ಮೊದಲಿನ ಸೂಕ್ಷ್ಮ ದೃಷ್ಟಿಗೆ ಬಿದ್ದ ಪ್ರಕಾರ ಆ ಮಾಲೆಯನ್ನು ಧರಿಸಿದವನು ಸುಗ್ರೀವ”
ಮಾಲೆಯನ್ನು ಧರಿಸಿದ ಸುಗ್ರೀವ ಹೊಸ ಹುರುಪು ಪಡೆದುಕೊಳ್ಳುತ್ತಾನೆ.
“ರಾಮ ಈ ಮಾಲಿಕೆಯಲ್ಲಿ ನೀನು ಹೇಳುವ ವಾಸನೆ ವರ್ಣ ಯಾವುದೇ ಇರಲಿ, ನನಗೊಂದು ಧೈರ್ಯ ಮನಸ್ಸಿನಲ್ಲಿ ತುಂಬಿ ಬಂತು. ಇಂತಹ ಮಾಲೆಯೊಂದು ವಾಲಿಯ ಕುತ್ತಿಗೆಯಲ್ಲಿ ಇಲ್ಲ. ಹಾಗೆ ಯಾವನ ಕುತ್ತಿಗೆಯಲ್ಲಿ ಇಂತಹ ಮಾಲೆ ಇಲ್ಲವೋ ಅವನು ಸುಗ್ರೀವ ಅಲ್ಲ ಅಂತ ಗುರುತಿಸುವುದಕ್ಕೆ ನಿನಗೆ ಒಂದು ಅನುಕೂಲತೆ. “  ಸುಗ್ರೀವ ಸಮಾಧಾನ ಗೊಂಡು ಹೇಳುತ್ತಾನೆ. ವಾಲಿಯ ಒದೆತ ತಿಂದ ನೋವು ಆತನನ್ನು ಹೀಗೆ ಮಾತನಾಡಿಸಿತು. ಅದಕ್ಕಾಗಿ ಪರಿತಪಿಸುತ್ತಾನೆ.
ಆಗ ರಾಮ ಹೇಳುತ್ತಾನೆ. “ ಕೆಲವರು ಹೇಳುವುದು ಕೇಳಿದ್ದೇನೆ, ಗುದ್ದಿದ್ದೇನೆ, ಗುದ್ದಿಸಿ ಕೊಂಡಿದ್ದೇನೆ. ನಿಜವಾಗಿ ಅದರಿಂದ ಅವರಿಗೆ ಏನಾಗಿದೆ?  ಗುದ್ದಿದವರಿಗೆ ಮುಷ್ಠಿ ಬೆಳೆದದೆ. ಗುದ್ದಿಸಿಕೊಂಡವರಿಗೆ ಮೈ ಹದ ಆಗಿದೆ.:
“ ಓಡಿದವನಿಗೆ ಆದಷ್ಟೇ ಆಯಾಸ ಓಡಿಸುವವನಿಗೂ ಆಗುತ್ತದೆ.”
“ ಹಾಗಾಗಿ ವಾಲಿಯನ್ನು ನೀನು ಗುದ್ದಿದ್ದರಿಂದ ನಿನ್ನ ಮುಷ್ಠಿ ಏನೂ ದುರ್ಬಲ ಆಗಲಿಲ್ಲ.”
ಸುಗ್ರೀವ ಹೇಳ್ತಾನೆ.
“ ನಾನು ಆದದ್ದರಿಂದ ಉಳಿದಿದ್ದೇನೆ.”
ಅದಕ್ಕೆ ರಾಮ ಹೇಳ್ತಾನೆ “ ನೀನು ಆದದ್ದಕ್ಕೆ  ವಾಲಿ ಬಿಟ್ಟಿದ್ದಾನೆ. ಅದೂ ಒಂದು ಧ್ವನಿ ಇದೆ ಅದರಲ್ಲಿ.”
ಸುಗ್ರೀವ “ ಅದು ಹೌದು ಇನ್ನೂ ಒಂದು ನಾನು ಹೇಳಿಬಿಡ್ತೇನೆ. ನೀನು ಬಂದು ಆಶ್ವಾಸನೆ ಕೋಡುವುದಕ್ಕಿಂತ ಮೊದಲು ಅದೆಷ್ಟು ಬಾರಿ ನಾನು ಹೋಗಿ ಕೇಳಿಲ್ವ. ಆವಾಗ ರಾಮ ಬಂದು ಆಶ್ವಾಸನೆ ಕೊಟ್ಟದ್ದೋ. “
ರಾಮ:” ಆದ್ದರಿಂದ ಅವನು ಹೇಳಲಿ, ತಮ್ಮ ಆದದ್ದರಿಂದ ಬಿಟ್ಟಿದ್ದೇನೆ ಅಂತ. ತಮ್ಮ ಆದದ್ದರಿಂದ ಬಿಟ್ಟಿದ್ದೇನೆ ಹೇಳುವಾಗ, ತಮ್ಮ ಆದದ್ದರಿಂದ ಹೆಂಡತಿಯನ್ನು ಕೊಟ್ಟಿದ್ದೇನೆ ಅಂತ ಹೇಳ್ತಾನೋ? ಇಲ್ಲ. ಹಾಗಾಗಿ ಎರಡೂ ಸುಳ್ಳೇ. ಯಾಕೆ? ತಮ್ಮ ಅದದ್ದರಿಂದ ತಮ್ಮನನ್ನು ಬಿಡುವ ಅಣ್ಣ ಹೆಂಡತಿಯನ್ನು ಬಿಡದೆ ಹೋಗ್ತಾನೊ? ಅಲ್ಲಿ ತಮ್ಮ ಆಗದೇ ಹೋಗ್ತಾನೋ? ಕ್ರೋಧ ನಿವಾರಣೆಗೆ ಅವನಿಗೆ ಬೇರೆ ಯಾವ ಮಾರ್ಗವೂ ಇಲ್ಲ. ನಿನ್ನ ಅಂತಃ ಪುರದ ಬೀಗವನ್ನೇ ಅವನು ಬದಲಾಯಿಸಿದ್ದಷ್ಟೇ. ಈಗ ನಿನ್ನನ್ನು ಇದಿರಿಸಿ ನಿನಗೆ ನೋವನ್ನುಂಟು ಮಾಡ್ಲಿಕ್ಕೆ ಅವನಿಗೆ ಮಾರ್ಗ ಇಲ್ವೋ ಬೇರೆ? ಈಗ ಈ ಪರ್ವತಕ್ಕೆ ನೀನು ಬಂದ ಮೇಲೆ ಅವನಿಗೆ ದಿಗ್ಬಂಧನ ಇರುವುದು,  ನಿರ್ಬಂಧ. ಇಲ್ಲಿನ್ ಬಂದು ವಸತಿಯನ್ನು ಹೂಡುವುದಕ್ಕು ಮೊದಲು ನೀನು ಅವನಿಗೂ ಸ್ವಾತಂತ್ರ್ಯ ಇದ್ದ ಪ್ರದೇಶದಲ್ಲಿ ಇರ್ಲಿಲ್ವೋ. ಆಗ ಏನು ಮಾಡಿದ ಏನೂ ಮಾಡಿಲ್ಲ. ನಿನ್ನ ಹಣದ ಗಂಟಿಗೆ ಅವನು ಬೀಗ ಹಾಕಿದ. ಅವನ ಸಂಪಾದನೆ ಏನೂ ಅಲ್ಲ. ಆದ್ದರಿಂದ ಈ ಹೂವಿನ ಮಾಲೆ ಹಾಕಿದ್ದೇನೆ. ಮಧ್ಯ ರಾತ್ರೆ ಅಗ್ತ ಉಂಟು. ಬೆಳಗೆ ಆಗುವಾಗ ಅಧ್ಯಾಯವನ್ನು ಮುಕ್ತಾಯ ಮಾಡುವ ಉತ್ಸಾಹ ನನಿಗೆ ಉಂಟು.
ಅಂತೂ ಕೊನೆಗೆ ಸುಗ್ರೀವ ಮತ್ತೊಮ್ಮೆ ವಾಲಿಯನ್ನು ಯುದ್ದಕ್ಕೆ ಕರೆಯುತ್ತಾನೆ, ಇಲ್ಲಿಗೆ ಈ ಸನ್ನಿವೇಶ ಮುಕ್ತಾಯವಾಗುತ್ತದೆ.
ಯಕ್ಷಗಾನ ಅರ್ಥಗಾರಿಕೆಯಿಂದ ಪಾತ್ರದ ಮರುಸೃಷ್ಟಿ ಮಾಡುವಾಗ  ಶೇಣಿಯವರು ಬಹಳಷ್ಟು ವೈಶಿಷ್ಟ್ಯವನ್ನು ಮೆರೆದಿದ್ದಾರೆ. ಆದರೆ ಇಲ್ಲಿ ಪಾತ್ರದ ಆಯ್ಕೆಯಲ್ಲೂ ವೈಶಿಷ್ಟ್ಯತೆಯನ್ನು ಗುರುತಿಸಬಹುದು. ಪ್ರತಿ ಪಾತ್ರಧಾರಿ ಕೊಟ್ಟ ಶಬ್ದಗಳನ್ನೋ ವಿಷಯಗಳನ್ನೋ ಹಿಡಿದು ಅದರಲ್ಲೇ ತಮ್ಮ ಪಾತ್ರವನ್ನು ಇವರು ಕಟ್ಟುವ ರೀತಿ ಅಮೋಘವಾಗಿರುತ್ತದೆ. ಸಾಮಾನ್ಯವಾಗಿ ಒಂದಷ್ಟು ಪೂರ್ವ ತಯಾರಿಯಲ್ಲೇ ರಂಗವೇರುವ ಕಲಾವಿದರೂ ರಂಗದ ಮೇಲೆ ನಿರೀಕ್ಷಿತ ಯಶಸ್ಸನ್ನು ಗಳಿಸುವಲ್ಲಿ ವಿಫಲರಾಗುವಾಗ,  ಇವರು ಪ್ರತಿ ಪಾತ್ರಧಾರಿ ಎಸೆದ ಹೂವನ್ನು ಹೊಸೆದು ಮಾಲೆ ಮಾಡುವುದನ್ನು ಹಲವು ಕಡೆ ಕಾಣಬಹುದು. ಇದು ತಾನು ಸಾಗಿದಲ್ಲೇ ದಾರಿ ನಿರ್ಮಾಣ ಮಾಡುವ ಸಾಮಾರ್ಥ್ಯ ಅಂತಲೇ ಹೇಳಬಹುದು.


Thursday, July 3, 2014

ಒಂದು ಯುಗಾಂತ್ಯ ಕಥನ

                
ಸ್ಥಿತ ಪ್ರಜ್ಞತೆ ಮನುಷ್ಯನ ಪರಿಪಕ್ವತೆಯನ್ನು ತೋರಿಸುತ್ತದೆ. ಹರುಷಕ್ಕೆ ಹಿಗ್ಗದ ದುಃಖಕ್ಕೆ ಬಗ್ಗದ, ನೋವು ನಲಿವಿಗೆ ಸ್ಥಿರವಾಗಿ ನಿಲ್ಲುವವನನ್ನು ಸ್ಥಿತ ಪ್ರಜ್ಞ ಎಂದು ಹೇಳಬಹುದು. ಈ ಪರಿಪಕ್ವತೆ ಸುಲಭವಾಗಿ ಸಿದ್ಧಿಸುವುದಿಲ್ಲ. ಜೀವನಾನುಭವದ ರಸಭಾವವನ್ನು ಹೀರಿ ಸ್ವೀಕರಿಸಿದ ರೀತಿಯಲ್ಲಿ ಈ ಸಾಧನೆಯ ಗುರಿ ಅಡಗಿದೆ. ಬೆಂಕಿಯೆಂದು ತಿಳಿಯದೆ ಪತಂಗ ಹಾರುವುದುಂಟು. ಮನುಷ್ಯ ಮಾತ್ರ ಬೆಂಕಿ ಎಂದು ತಿಳಿದು, ಆ ಸುಡುವ ಅನುಭವವಾದರೂ ಅದೇ ಬೆಂಕಿಗೆ ಹಾರುವಲ್ಲಿ ಸ್ವಾರ್ಥಿಯಾಗಿಬಿಡುತ್ತಾನೆ. ಪರಿಣಾಮ ಅರಿತಿದ್ದರೂ ಸ್ವಾರ್ಥ ಅಳಿಸುವುದಿಲ್ಲ. ಇದು ಬದುಕಿನ ವಾಸ್ತವ ದರ್ಶನ ಅಂತ ಹೇಳಬಹುದಾದರೂ ಇದನ್ನೆಲ್ಲ ಮೀರಿ ನಿಂತ ವ್ಯಕ್ತಿತ್ವದ ದರ್ಶನ ಮತ್ತದರ ಅನುಭವವಾಯಿತು. ಇದು ಮಧುರ ಅನುಭವವೋ ಅಲ್ಲ ವಾಸ್ತವದ ಅರಿವೋ ನನ್ನ ಮನಸ್ಸು ಗೊಂದಲದಲ್ಲಿ ಮುಳುಗುತ್ತದೆ.
          ಮೊನ್ನೆಯ ಒಂದು ಸುಂದರ ಭಾನುವಾರ. ಮಿತ್ರ ಸುಬ್ಬಣ್ಣ ,  ಅದಮ್ಯ ಹುರುಪಿನಲ್ಲೇ ಭಾಗವತರಾದ ಇಂದಿನ ಹಿರಿಯ ಬಲಿಪ್ಪ ಭಾಗವತರಲ್ಲಿಗೆ ಕರೆದುಕೊಂಡು ಹೋದರು. ಬಹಳ ದಿನಗಳಿಂದ ನಾನು ಮುಂದೂಡುತ್ತಿದ್ದ ಘಳಿಗೆ ಬಂದೇ ಬಿಟ್ಟಿತು. ಬಲಿಪ್ಪರ ಮನೆಗೆ ಹೋಗುವುದು ನನ್ನ ಬಹಳ ದಿನಗಳ ಬಯಕೆಯಾಗಿತ್ತು.  ಆದಿನ ಬಲಿಪ್ಪರ ಮನೆಯ ಅಂಗಳದಲ್ಲಿ ಕಾಲಿಟ್ಟಾಗ  ಮನೆಯ ಬಾಗಿಲಲ್ಲೇ ಬಲಿಪ್ಪರು ನಿಂತಿದ್ದರು. ಬಹಳ ಹಳೆಯದಾದ ಮನೆ. ಜಗಲಿಯ ಭಾಗಕ್ಕೆ ಸಿಮೇಂಟ್ ಶೀಟ್ ಹಾಕಿ ಮನೆಯನ್ನು ಇನ್ನಷ್ಟು ದೊಡ್ಡದು ಮಾಡಿದ್ದರು.  ಅಲ್ಲಿ ಇರಿಸಿದ್ದ ಕುರ್ಚಿಯನ್ನು ತೋರಿಸಿ ಕುಳ್ಳಿರಿಸಿ ಪ್ರಾಥಮಿಕ ಉಪಚಾರ ಮಾಡಿದರು. ಅಷ್ಟರಲ್ಲಾಗಲೇ ಮನೆಯವರು ಹಲವರು ಬಂದರು. ಬಲಿಪ್ಪಜ್ಜ ಮತ್ತೋಂದು ಕುರ್ಚಿ ಎಳೆದು ನಮ್ಮೊಂದಿಗೆ ಮಾತನಾಡಲು ಕುಳಿತರು. ಅದೇ ಕಿರು ನಗುವಿನ ಮಗು ಮುಖ.  ಈ ಮುಖದಲ್ಲೇ ನಾನು ಸ್ಥಿತ ಪ್ರಜ್ಞತೆಯನ್ನು ಪ್ರತೀ ಬಾರಿ ಕಾಣುತ್ತೇನೆ. ಬಲಿಪ್ಪರು ಅತಿಯಾಗಿ ನಕ್ಕದ್ದನ್ನು ಅಥವಾ ಅತ್ತದ್ದನ್ನು ಯಾರಾದರೂ ನೋಡಿರಬಹುದೇ? ಎಂದು ಅನುಮಾನಿಸುತ್ತೇನೆ. ಕಿರು ನಗುವೊಂದು ಆ ಮುಖದ ಶಾಶ್ವತ ಬಣ್ಣ. ಅದು ಮನಸ್ಸಿನ ಕನ್ನಡಿಯ ನಗುವಲ್ಲ. ಅದೇಕೋ ಬಲಿಪ್ಪರನ್ನು ಮುಗ್ಧ ಅಂತ ಒಪ್ಪಿಕೊಳ್ಳುವಲ್ಲಿ ನನ್ನ ಮನಸ್ಸು ಪ್ರತಿಬಾರಿಯೂ ಹಟ ಮಾಡುತ್ತದೆ. ಅವರ  ಜೀವನಾನುಭವದ ಪರಿಪಕ್ವ ಮಾತುಗಳ ಆ ಭಾವದಲ್ಲಿ ಮುಗ್ಧತೆ ಗುರುತಿಸಲಾಗುವುದಿಲ್ಲ. ಮುಗ್ಧತೆ ಅದು ಆ ಜೀವನದ ಶೈಲಿ ಆಗಿರಬಹುದಲ್ಲ? ಅದು ಹೋಗಲಿ, ಇದು ಇಲ್ಲಿ ವಿಮರ್ಶೆಯಲ್ಲ. ಬಲಿಪ್ಪರ ಮುಂದಿನ ಮಾತುಕತೆಗೆ ಇದು ಸಣ್ಣ ಪೀಠಿಕೆ ಆಷ್ಟೇ.


          ಹೋದ ನಮ್ಮೊಡನೆ ಬಲಿಪ್ಪರು ಮಾತಿಗೆ ತೊಡಗಿದರು. ಯಾತಾರ್ಥ್ಯಕ್ಕಾದರೆ ಅಂದು ಬಲಿಪ್ಪರಲ್ಲಿ ಒಂದಿಷ್ಟು ಸಂವಾದ ಮಾಡಿ ಅದನ್ನು ದಾಖಲಿಸಿಕೊಳ್ಳುವ ಉದ್ದೇಶ ಇದ್ದರೂ, ನಮ್ಮ ಕ್ಯಾಮೆರ ಬುಕ್ಕು ಸಿದ್ಧವಾಗುವ ಮೊದಲೇ ಬಲಿಪ್ಪಜ್ಜ ಅಜ್ಜನ  ಕಥೆ ಹೇಳಲಾರಂಭಿಸಿದರು.  ಅದು ನಮ್ಮ ಬೇಡಿಕೆಗಾಗಿ ಆಡಿದ ಮಾತುಗಳಲ್ಲ. ಮನದಾಳ ಅನಿಸಿಕೆ ಅತ್ಮೀಯವಾಗಿ ವ್ಯಕ್ತವಾಯಿತು. ನಾವು ಏನನ್ನು ಕೇಳದೇ ಇದ್ದರೂ ಅದೇನು ಕಂಡಿತೋ ಮಾತು ಮುತ್ತಾಗಿ ಚೆಲ್ಲಿಕೊಂಡಿತು.  ಅದೆಂತಹ ಕಥೆ? ಬಲಿಪ್ಪರು ಕ್ಯಾಮೆರಾ ಮುಂದೆ ಹೀಗೆ ಮಾತನಾಡುವುದೇ ಇಲ್ಲ. ಇಂತಹ ಮಾತುಗಳು ಯಾವಾಗ ಯಾವಗಲೋ ನಿರೀಕ್ಷೆಯಿಲ್ಲದೇ ಹೊರಬೀಳುತ್ತವೆ. ನಾವು ಕ್ಯಾಮೆರ ಪುಸ್ತಕ ಹಿಡಿದು ಕುಳಿತರೆ ಈ ಬಗೆಯ ಕಥೆಗಳು ನೆನಪಿಗೇ ಬರುವುದಿಲ್ಲವೋ ಏನೋ? ಕೊನೆಗೊಮ್ಮೆ  ನಾವು ಏನೂ ಸಿದ್ಧವಾಗಿಲ್ಲದಾಗ ಹೊರಬೀಳುತ್ತವೆ. ಪಂಚಗವ್ಯಮಾಡುವ ಸಮಯದಲ್ಲಿ ನಮ್ಮಜ್ಜ, ಹಟ್ಟಿಯಲ್ಲಿ ದನದ ಹಿಂದೆ, ಗೋ ಅರ್ಕಕ್ಕೆ ಕವಳಿಗೆ ಹಿಡಿದು ನಿಂತಹಾಗೆ, ಊಹೂಂ ದನ ಸ್ಪಂದನೆಯಿಲ್ಲದೆ ನಿಂತು ಬಿಡುತ್ತದೆ. ಅಜ್ಜ ಒಂದಷ್ಟು ನುಸಿ ಕಡಿತ ಅನುಭವಿಸಬೇಕು.  ನಾವೂ ಅಷ್ಟೇ ನಮ್ಮ ಸಂಗ್ರಹದ ಕವಳಿಗೆ ತುಂಬಿಸುವುದಕ್ಕೆ ನಿಂತರೆ ಬಲಿಪ್ಪರಿಗೆ ಇಂತಹ ಕಥೆಗಳ ಪ್ರೇರೇಪಣೆ ಆಗುವುದೇ ಇಲ್ಲ. ಆದರೂ ಬಲಿಪ್ಪಜ್ಜ ಎಂತಹ ಕಥೆ ಹೇಳಿಬಿಟ್ಟರು. ಅದನ್ನು ಹಾಗೇ ಒಪ್ಪಿಸೋಣವೇ ನನಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ನನ್ನ ಭಾವನೆಗಳ ಮೂಲಕವೇ ಹೇಳಿಬಿಡುತ್ತೇನೆ.
         “         ನನಗೀಗ ವರುಷ ಎಪ್ಪತ್ತೇಳು ಆಯಿತು. ಈಗ ಯಾರ ಆಮಂತ್ರಣವನ್ನೂ ಒಪ್ಪಿಕೊಳ್ಳುವುದಿಲ್ಲ. (ಆಟದ ಆಮಂತ್ರಣ). “  ಗೋಡೆಯ ಮೇಲೆ ನೇತು ಹಾಕಿದ ಅಜ್ಜ ಬಲಿಪ್ಪರ ದೊಡ್ಡ ಫೋಟೋವನ್ನು ಒಂದು ಸಲ ತಲೆ ಎತ್ತಿ ನೋಡಿದರು.
“ಅಜ್ಜ ಸಾಯುವಾಗ ಅವರಿಗೆ ಎಪ್ಪತ್ತೈದು. ಅದಕ್ಕಿಂತ ಒಂದು ವರ್ಷ ಮೊದಲೇ ಪದ ಹೇಳುವುದನ್ನು ನಿಲ್ಲಿಸಿದ್ದರು. ನಾನು ಇನ್ನೂ ಹೇಳ್ತಾ ಇದ್ದೇನೆ. ಯಾಕೆಂತ ಗೊತ್ತಿಲ್ಲ. ಅವರಿಂದಲೂ ಎರಡು ವರ್ಷ ಜಾಸ್ತಿ.” ( ಪ್ರಾಯ ಜಾಸ್ತಿಯೋ? ಪದಹೇಳಿದ್ದು ಜಾಸ್ತಿಯೋ? ನನ್ನ ಅನುಮಾನ ಅಷ್ಟೇ ) ಯಾರು ಕರೆದರೂ ಅಜ್ಜ ಹೋಗುತ್ತಿರಲಿಲ್ಲ. ಪದ ಹೇಳುವುದಿಲ್ಲ ಅಂತ ವಾಪಾಸು ಕಳಿಸ್ತಿದ್ರು. ಆದರೆ ಒಂದು ದಿನ ಕೊನೆಯ ನಿರ್ಧಾರಕ್ಕೆ ಬಂದ್ರು. ಒಂದು ದಿನ ಮಲ್ಲ ದೇವಸ್ಥಾನದಲ್ಲಿ ಪದ ಹೇಳಿಬಿಡುವ.”


ಆ ಹಿರಿಯ ಚೇತನ ಹಾಗೇಕೆ ನಿರ್ಧರಿಸಿತೋ.? ಕೊನೆಗೆ ಒಪ್ಪಿದರಲ್ಲ. ಎಲ್ಲವೂ ಸಿದ್ಧತೆಯಾಗಿಬಿಟ್ಟಿತು. ಪ್ರಸಂಗ,  ಅಜ್ಜ ಬಲಿಪ್ಪರ ಇಷ್ಟದಂತೆ ’ಪಂಚವಟಿ’. ಪಾರ್ತಿಸುಬ್ಬನ ಪ್ರಸಂಗ. ಬಲಿಪ್ಪ ಶೈಲಿಯ ಮೊಹರು ಒತ್ತಿದಂತಹ ಪ್ರಸಂಗ. ಅಜ್ಜರು ಹೇಳಿದರಂತೆ ಪಂಚವಟಿಯ ಎಲ್ಲಾ ಪದಗಳನ್ನು ಹಾಕಬೇಕು. ಸ್ತುತಿಯಿಂದ ತೊಡಗಿ ಮಂಗಳದವರೆಗೆ ಒಂದೂ ಪದವನ್ನು ಬಿಡದೆ ಈ ತಾಳ ಮದ್ದಲೆ ನಡೆಯಬೇಕು. ( ಇಲ್ಲಿ,  ತಾಳ ಮದ್ದಲೆಯೋ ಬಯಲಾಟವೋ ಆ ಗಂಭೀರ ಸನ್ನಿವೇಶದಲ್ಲಿ ಯಾವುದು ಎಂದು ಕೇಳುವುದರತ್ತವೂ ನನ್ನ ಗಮನ ಹೋಗಲಿಲ್ಲ. ತಾಳಮದ್ದಲೆಯೇ ಆಗಿರಬೇಕು)  ಒಂದೂ ಪದ ಬಿಡದ ಆ ಪಂಚವಟಿ ಪ್ರಸಂಗ ಅದು ಹೇಗಿರಬಹುದು? ನಮಗೆ ಕಲ್ಪಿಸುವಾಗಲೇ ರೋಮಾಂಚನವಾಗಿಬಿಡುತ್ತದೆ. ಇನ್ನು ಅನುಭವ?

“ಪಂಚವಟಿಯ ಎಲ್ಲಾ ಪದ ಹಾಕಬೇಕು. ಆದರೆ ನನ್ನಿಂದ ಒಬ್ಬನಿಂದಲೇ ಸಾಧ್ಯವಿಲ್ಲ. ಜೋಯಿಸರನ್ನೂ ಕರೆಯಿರಿ” ಹಾಗೆ ಅವರು ಜೋಯಿಸರನ್ನು ಕರೆಯಿರಿ ಎಂದು ಹೇಳಿದ್ದು ಬೇರೆ ಯಾರನ್ನೂ ಅಲ್ಲ, ಮತ್ತೋಬ್ಬ ಹಿರಿಯ ಭಾಗವತ, ಶ್ರೀ ಪುತ್ತಿಗೆ ರಾಮಕೃಷ್ಣ ಜೋಯಿಸರನ್ನು. ಈ ಇಬ್ಬರೂ ಯಕ್ಷಗಾನದ ಬೃಹತ್ ಮರದ ಮೊದಲ ಎರಡು ರೆಂಬೆಯಂತೆ.  ಅಜ್ಜ ಹೀಗೆ ಹೇಳಿದುದರ ಮುನ್ಸೂಚನೆಯಾದರೂ ಏನಿರಬಹುದು? ಅದಾಗ ತಾನೇ ಔಷಧ ಬಲದಿಂದಲೇ ಬದುಕುವಾಗ ಹೀಗೆ ಹೇಳಿದುದರ ಬಗ್ಗೆ ಯಾರೂ ಯೋಚಿಸುವುದಿಲ್ಲ.

ಅಜ್ಜ ಬಲಿಪ್ಪರಿಗೆ ಒಂದು ವರ್ಷ ಮೊದಲೇ ವೈದ್ಯರು ಎಚ್ಚರಿಕೆ ಕೊಟ್ಟಿದ್ದರು. ಇನ್ನು ನೀವು ಭಾಗವತಿಕೆ ಮಾಡಬಾರದು ಅಂತ. ಆದರೆ ಕಲಾವಿದನ ಮನಸ್ಸು,  ಅದೂ ಉಚ್ಛ್ರಾಯ ಪದದಲ್ಲಿ ಇರುವ ಕಲಾವಿದ ವೈದ್ಯರ ಮಾತು ಕೇಳುವ ಸ್ಥಿತಿಯಲ್ಲಿರಲು ಸಾಧ್ಯವೇ? ತನ್ನ ಬಗ್ಗೆ ಒಂದು ಆತ್ಮವಿಶ್ವಾಸ ಇರುತ್ತದೆ. ಆ ವಿಶ್ವಾಸ ವೈದರನ್ನೂ ಸೋಲಿಸಿಬಿಡುತ್ತದೆ !  ಲಯ ಬದ್ಧ ಶ್ರುತಿ ಮೀಟುವಾಗ ಒಂದೆರಡು ಪದ ಅಂತ ತೊಡಗಿದರೆ ಮತ್ತೆ ಅದು ನಿಲ್ಲುವುದಿಲ್ಲ. ಪಂಚವಟೀ ಪ್ರಸಂಗ ಆರಂಭವಾಯಿತು. ಅಜ್ಜ ಬಲಿಪ್ಪರು ಆದಿನ ಅದ್ಭುತವಾಗಿ ಹಾಡಿದರಂತೆ. ಇದು ಎಣ್ಣೆ ಆರಿದ ದೀಪ ಕೊನೆಯದಾಗಿ ಸಂಪೂರ್ಣ ಪ್ರಭೆಯಿಂದ ಒಮ್ಮೆ ಉರಿದಂತೆ ಎಂದು ಯಾರು ಭಾವಿಸಿದ್ದರು?
ಅಜ್ಜ ಬಲಿಪ್ಪರು ಹಾಡಿದರು, ಹಾಡಿದರು ಯಕ್ಷಬ್ರಹ್ಮನ ಗಾಯನ ಸುತ್ತಮುತ್ತಲು ಪ್ರತಿಧ್ವನಿಸುತ್ತಿದ್ದಹಾಗೇ  ಆ ಒಂದು ಪದ   “ ಎನುತ ನಿಜ ಮನದೊಳಗೆ ಯೋಚನೆಯ ಮಾಡಿ.....”  ಭಾಗವತರ ಪ್ರಸಂಗದ ಕೊನೆಯ ಅಕ್ಷರವನ್ನೇ ಸಾರಿಬಿಟ್ಟಿತು. ಸ್ವ ನಿಯಂತ್ರಣವನ್ನು ಕಳೆದು ಕೊಂಡ ಶರೀರ ಹಿಂದಕ್ಕೊರಗಿತು. ಕೈಯಲ್ಲಿದ್ದ ಜಾಗಟೆ ಕೋಲು ಸದ್ದಿಲ್ಲದೇ ಸುಮ್ಮನಾಯಿತು.  ಬಲಿಪ್ಪರು ಬಸವಳಿದು ಅಲ್ಲೇ ಕುಸಿದು ಒರಗಿಕೊಂಡರು. ಅಷ್ಟೂ ಹೊತ್ತು ಯಕ್ಷಗಾನ ಪದಗಳನ್ನು ಹೇಳುತ್ತಿದ್ದ ಕಂಠ ಒಂದೇ ಸವನೆ ರಕ್ತವನ್ನು ಚಿಮ್ಮಿಸತೊಡಗಿತು. ಮಾತ್ರವಲ್ಲ ಬಹಿರ್ದೆಶೆಯ ವಿಸರ್ಜನೆಯೂ ನಿಯಂತ್ರಣವಿಲ್ಲದೇ ಇದ್ದುದನ್ನು ತೋರಿಸಿತು. ಕೂಡಲೇ ವೈದ್ಯರನ್ನು ಹುಡುಕಲಾರಂಭಿಸಿದರು. ಕೊನೆಗೆ ಮುಳಿಯದ ಡಾಕ್ಟರ್ ಬಂದರು ನಾಡಿ ಮುಟ್ಟಿ ನೋಡಿದರು. ಕೂಡಲೇ ಆಸ್ಪತ್ರೆಗೆ ಸಾಗಿಸುವಂತೆ ಹೇಳಿದರು. ಹಾಗೂ ಕೊನೆಗೆ ಹೇಳಿದರು...”ಇಲ್ಲ ಇದು ಇನ್ನು ನಾಳೆಯವರೆಗೆ ಮಾತ್ರ. “ 

ಮತ್ತೆ ಎರಡುದಿನ ಆಸ್ಪತ್ರೆಯಲ್ಲೇ ನರಳಿದ ಯಕ್ಷಗಾನದ ಭಾಗವತ ಬ್ರಹ್ಮ, ಯಕ್ಷಗಾನಕ್ಕೆ ಶಾಸನದ ಗ್ರಂಥವಾದ ಬಲಿಪ್ಪಜ್ಜ ಕೊನೇಯ ಪುಟವನ್ನು ತೋರಿಸಿ  ಮರಳಿ ಬಾರದ ಲೋಕಕ್ಕೆ ತಮ್ಮ ಪಯಣವನ್ನು ಮುಂದುವರೆಸಿದರು. ಪಂಚವಟಿ ಪ್ರಸಂಗದ ಪದಗಳಲ್ಲಿ ಅದೇನು ಮೋಹವೋ ಈ ಭಾಗವತರಿಗೆ. ಅದನ್ನೇ ಚರಮ ಮಂತ್ರವನ್ನಾಗಿಸಿಕೊಂಡರು.

ನನ್ನೆದುರು ಕುಳಿತ ಈ ಕಿರಿಯ ಬಲಿಪ್ಪರು ನಿರ್ವಿಕಲ್ಪ ಭಾವದಿಂದ ಅಂದಿನ ಘಟನೆಯನ್ನು ಸ್ಮರಿಸಿದರು. ಮೌನವಾದ ನಿಟ್ಟುಸಿರು ಬೇಡವೆಂದರೂ ಬಿಟ್ಟು ಬಿಟ್ಟೇ. ಆಮೇಲೆ ಬಲಿಪ್ಪರ ಮುಖವನ್ನು ನೋಡಿದೆ. ಯಾವ ಭಾವವಿದೆ ಆ ಮುಖದಲ್ಲಿ?  ಓದುವುದಕ್ಕೆ ನನಗೆ ಸಾಧ್ಯವಿಲ್ಲ. ಒಂದು ಅರ್ಥಗರ್ಭಿತ ತೀಕ್ಷ್ಣ ಮಂದಹಾಸ ಮಾತ್ರ ಕಾಣುತ್ತಿದ್ದೇನೆ.  ಅದೀಗಲೂ ಅಚ್ಚಳಿಯದೆ ನನ್ನೆದೆಯಲ್ಲಿ ಹಾಗೇ ಉಳಿದುಕೊಂಡುಬಿಟ್ಟಿದೆ.  

Sunday, June 15, 2014

ಮೂಡಣದ ಪ್ರೇರಕ ಶಕ್ತಿ ಮೂಡಂಬೈಲು


ಯಕ್ಷಗಾನದಂತಹ ಒಂದು ಪಾರಂಪರಿಕ ಕಲೆ ಬೆಳೆದು ಬರಬೇಕೆಂದರೆ ಅದಕ್ಕೆ ಪರಂಪರೆಯೇ ತೆರೆದು ನಿಲ್ಲಿಸಿದ ಒಂದು ಹಾದಿ ಮುಖ್ಯವಾಗುತ್ತದೆ. ಎಳೆಯ  ಕರು ಭೂಮಿಗೆ ತಾಯಿ ಒಡಲಿಂದ  ಬಿದ್ದಾಗ ಅದರ ಮುಂದಿನ ಪ್ರವೃತ್ತಿಗೆ ಯಾವುದೇ ಶಾಸ್ತ್ರ ಸಮ್ಮತವಾದ ಜೀವನ ಕ್ರಮ ಸಿದ್ಧವಾಗಿರುವುದಿಲ್ಲ. ತಾಯಿ ಹಸು ಬಿದ್ದ ಕರುವನ್ನು ಸ್ವಪ್ರಚೋದನೆಯಿಂದಲೆ ತಡವುತ್ತದೆ, ಮತ್ತು ಆಮುಖೇನ ಆ ಕಂದ ಕರುವಿಗೆ ಅತ್ಯಂತ ಪ್ರಾಥಮಿಕವಾಗಿ ಸಿಗಬೇಕಾದ ಆರೈಕೆಯ ಅವಶ್ಯಕತೆಯನ್ನು ಬಾಹ್ಯ ಪ್ರಚೋದನೆ ಇಲ್ಲದೇನೆ ಅದು ನೀಡುತ್ತದೆ. ಕಂದ ಕರುವು ತೀರಾ ಅಪರಿಚಿತ ಕ್ಷೇತ್ರಕ್ಕೆ ಬಂದ ಒಡನೆ ಕರುವು ಎದ್ದು ನಿಲ್ಲುವುದಕ್ಕೆಪ್ರಯತ್ನಿಸಿ ಎದ್ದು ನಿಂತೊಡನೆ ತಾಯಿ ಕೆಚ್ಚಲನ್ನು ಅರಸಿ ಬಾಯಿ ಹಾಕಿ ಬಿಡುತ್ತದೆ. ಈತೆರನ ಅಲಿಖಿತ ನಿಯಮದಂತೆ ಯಕ್ಷಗಾನದಲ್ಲಿ ವರ್ತಮಾನದ ಹಾದಿ ತೆರೆದುಕೊಳ್ಳುವುದು ಭೂತಕಾಲದ ಅನುಭವದಿಂದ. ಇದಕ್ಕೆ ಶಾಸ್ತ್ರೀಯ ಕ್ರಮ ಇಲ್ಲದೇ ಇದ್ದರೂ ಪರಂಪರೆಯ ತಳಹದಿಯಲ್ಲಿ  ನಿರ್ಮಿಸಿದ ಒಂದು ಸ್ತಂಭಗಳ ಚೌಕಟ್ಟು ಇದೆ. ಆ ನಡುವೆ ಯಕ್ಷಗಾನದ ಒಂದೊಂದು ಕಲ್ಲುಗಳು ಇಡಲ್ಪಟ್ಟು ಮುಂದೆ ಇಡಬಹುದಾದಂತ ಕಲ್ಲುಗಳಿಗೆ ಒಂದು ನಿರ್ದಿಷ್ಟವಾದ ಜಾಗ ನಿಗದಿಯಾಗಿರುತ್ತದೆ. ಇದರ ಅರಿವಾಗಬೇಕಾದರೆ ಸ್ಥಿರವಾಗಿ ನಿಂತಕಲ್ಲು ತನ್ನ ಆಯವನ್ನು ಕಂಡುಕೊಳ್ಳಬೇಕು.  ಈ ಆಯವನ್ನು ಅರಿತುಕೊಳ್ಳುವುದಕ್ಕೆ ಇಂದು ನಮ್ಮ ಮುಂದಿರುವುದು ಹಿಂದಿನವರು ನಮ್ಮ ಮುಂದೆ ಬಿಟ್ಟು ಹೋದ ಹೆಜ್ಜೆಯ ಪಡಿಯಚ್ಚುಗಳು ಮಾತ್ರ. ಆ ಹೆಜ್ಜೆಗಳನ್ನು ಗುರುತಿಸಿ ಮುಂದಿನ ಆಯಾಮವನ್ನು ಪಡೆದುಕೊಳ್ಳಬೇಕಾಗುತ್ತದೆ.

ಇಂದು ಯಕ್ಷಗಾನ ಬಯಲಾಟವನ್ನೋ ತಾಳಮದ್ದಲೆಯನ್ನೋ ನಮ್ಮ ಕ್ರಿಯಾ ಶಕ್ತಿಗೋ ಇಚ್ಛಾಶಕ್ತಿಗೋ ಅನುಸಾರವಾಗಿ ಮಾಡಿ ಆ ಮೂಲಕ ತಮ್ಮ  ಮಟ್ಟಿಗಿನ ಕಲಾಸೇವೆಯನ್ನು ನಾವು ಮಾಡಿ ತೃಪ್ತಿಯನ್ನು ಕಾಣಬಹುದು. ಆದರೂ ಇಲ್ಲೆಲ್ಲೋ ಯಾವುದೋ ತಂತು ಕಳೆದು ಹೋದ ಅನುಭವ ಆಗುವುದಲ್ಲವೇ?  ಮುತ್ತಿನ ಮಣಿಯ ಮಾಲೆಯನ್ನು ಬೆಸೆವ ದಾರ ಕಳಚಿ ಕಳೆದು ಹೋದಮೇಲೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಮುತ್ತುಗಳ ಹಾಗೆ ಎಲ್ಲವೂ ಇದೆ.  ಆದರೆ ಎಲ್ಲೋ ಯಾವುದೋ ಕಳೆದು ಹೋಗಿದೆ. ಹಲವು ಸಲ ಕಳೆದು ಹೋದದ್ದು ಏನು ಎಂಬ ಅರಿವೇ ನಮಗೆ ಸಾಧ್ಯವಾಗುವುದಿಲ್ಲ.
ಯಕ್ಷಗಾನ ಅದು ಬಯಲಾಟವಾಗಲೀ ತಾಳ ಮದ್ದಲೆಯಾಗಲೀ ಇಂದು ಕಳೆದ ಹಳೆಯ ನೆನಪುಗಳನ್ನೇ ಮೆಲುಕು ಹಾಕುತ್ತಾ ಆ ನೆನಪಿನ ಸುಳಿಯಿಂದ ಹೊರಬರಲಾರದೇ ಅಂದಿನ ಆಕಾಲಕ್ಕೂ ಈ ಕಾಲದ ಯಕ್ಷಗಾನಕ್ಕೂ ಹೋಲಿಕೆ ಮಾಡುವ ಸ್ಥಿತಿ ಇಂದು. ಅನುಭದಿಂದ ಕಲಿಯುವಂತಹ ಪರಿಸ್ಥಿತಿ ಕಾಣದೇ ಇದ್ದರೂ ಅವುಗಳನ್ನು ನೆನಪಿನ ಬುತ್ತಿಯಲ್ಲಿ ಕಟ್ಟಿಡುವುದನ್ನು ಬಿಡುವುದಿಲ್ಲ. ಇಂದು ಆ ಅನುಭವಗಳು ಬೇಕೆಂದರೂ ಲಭ್ಯವಿಲ್ಲ. ಬರೀ ನೆನಪಿನ ಬುತ್ತಿಯಲ್ಲಿ ಕಟ್ಟಿಟ್ಟ ಆ ಮುತ್ತುಗಳು ಸೂಕ್ತ ದಾಖಲೀಕರಣವಿಲ್ಲದೆ ಚದುರಿದ ಚಿತ್ರಗಳಂತೆ, ಆಕಾಶದ ನಕ್ಷತ್ರಗಳಂತೆ ಕೈಗೆ ಸಿಗುವುದಿಲ್ಲ. ಎಲ್ಲೋ ಇತ್ತು, ಅದು ಹೀಗಿರಬಹುದೇ ಎಂಬ ಊಹನೆ ಮಾತ್ರ.
ಸರಿದು ಹೋದ ಅನುಭವಗಳು ಭವಿಷ್ಯತ್ತನ್ನು ರೂಪಿಸುತ್ತವೆ. ಭವಿಷ್ಯತ್ತಿನ ಕವಲು ದಾರಿಗಳಲ್ಲಿ ಸಂದೇಹ ಉಂಟಾದಾಗ ಗತಿಸಿದ ಅನುಭವಗಳು ಸಂದೇಹ ನಿವಾರಣೆಯನ್ನು ಮಾಡಬಲ್ಲುದು. ಅದೇ ದಾರಿಯನ್ನೂ ಅದೇ ಸಮಸ್ಯೆಗಳನ್ನು ಎದುರಿಸಿದ ಹಿರಿಯರ ಅನುಭವ ಇಲ್ಲಿ ಉಪಯುಕ್ತವಾಗುತ್ತದೆ. ಈ ಅನುಭವಗಳ ಮೌಲ್ಯಗಳನ್ನು ಗುರುತಿಸಿ ಅದನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ವೇಣೂರಿನ ಮಿತ್ರ ಕಜೆ ಸುಬ್ರಹ್ಮಣ್ಯ ಭಟ್ಟರು ಸರಳವಾದ ಕ್ರಿಯಾತ್ಮಕ ಪ್ರವೃತ್ತಿಯನ್ನು ತೋರ್ಪಡಿಸಿದರು. ಅದು ಯಕ್ಷಗಾನದ ಹಿರಿಯ ಅರ್ಥಧಾರಿ ಮಹಾನ್ ಮೇಧಾವಿ ಶ್ರೀಯುತ ಮೂಡಂಬೈಲು ಗೋಪಾಲ ಕೃಷ್ಣ ಶಾಸ್ತ್ರಿಗಳ ಅನುಭವಗಳನ್ನು ಸಂಗ್ರಹಿಸುವ ಕಾರ್ಯ. ಇವರ ಕ್ಯಾಮರ  ಕಣ್ಣೆದುರು ಶಾಸ್ತ್ರಿಗಳು ತಮ್ಮ ಅನುಭವಗಳ ಸಿಂಚನವನ್ನು ಸಿಂಪಡಿಸಿ ಯಕ್ಷಗಾನದ ಮೌಲ್ಯವನ್ನು ನನಪಿಸುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದು.   
ಮೂಡಂಬೈಲು ಇವರ ಬಗ್ಗೆ ಯಕ್ಷಗಾನ ವಲಯದಲ್ಲಿ ಅರಿಯದವರು ಇಲ್ಲ. ವರ್ತಮಾನದ ಅತ್ಯಂತ ಹಿರಿಯ ತಾಳಮದ್ದಲೆಯ  ಅರ್ಥಧಾರಿಗಳು,  ವಿದ್ವಾಂಸರು , ತಮ್ಮ ಪ್ರೌಢಿಮೆ ಮತ್ತು ಪಾಂಡಿತ್ಯದಿಂದ ನಿಜಾರ್ಥದಲ್ಲಿಯೂ ಯಕ್ಷಗಾನದ ’ಅರ್ಥ’ ಧಾರಿಗಳು. ಅಮೋಘವಾದ ಪಾಂಡಿತ್ಯದಿಂದ ಕೂಡಿದ ಮತ್ತು ಅದನ್ನು ನಿರರ್ಗಳವಾಗಿ ಮತ್ತು ಸರಳವಾಗಿ ಮಂಡಿಸುವ ಮೂಡಂಬೈಲು ಶಾಸ್ತ್ರಿಗಳ ಅರ್ಥಗಾರಿಕೆ ವಿದ್ವತ್ ಸಂಚಾರವಾದಂತೆ. ಪುರಾಣ ವ್ಯಾಕರಣ ಉಪನಿಷತ್ ಹೀಗೆ ಯಾವುದೇ ಆಗಲಿ ಮೂಡಂಬೈಲು ಅರ್ಥಗಾರಿಕೆಯಲ್ಲಿ ಇವುಗಳು ನಿಜ ಅರ್ಥವನ್ನೇ ಬಿಂಬಿಸುತ್ತದೆ. ಅರ್ಥಾತ್, ಒಂದು ಮೌಲ್ಯ ಯುತ ಅರ್ಥಗಾರಿಕೆ ಮೂಡಂಬೈಲುರವರದ್ದು. ಪೌರಾಣಿಕ ಪ್ರಸಂಗಗಳ ಯಾವುದೇ ಸಂದರ್ಭವಾದರೂ ಸರಿಯೇ ಅದರ ಬಗ್ಗೆ ತನ್ನದೆ ಆದ ವಿಶ್ಲೇಷಣೆಯನ್ನು ವಿಶೇಷತೆಯನ್ನು ನಿರರ್ಗಳವಾಗಿ ಉಪಮೇ ಸಹಿತ ಅರ್ಥವಾಗುವಂತೆ ಮಂಡಿಸಬಲ್ಲರು. ಮೂಡಂಬೈಲಿನ  ಒಂದು ಪಯಣದ ಅನುಭವ ಮೂಡಣದ ಹೊಂಗಿರಣದಂತೆ,  ಹೊಸ ವಿಚಾರಗಳ ದರ್ಶನವನ್ನು ಮಾಡಿಸುತ್ತದೆ.

ನೀವು ಮೆಚ್ಚುವ ಕಲಾವಿದರು ಯಾರು? ನಿಮ್ಮ ಮೆಚ್ಚಿನ ಪ್ರಸಂಗ ಯಾ ಪಾತ್ರ ಯಾವುದು? ಹೀಗೆ ಸಾಮಾನ್ಯವಾಗಿ ಕಲಾವಿದರುಗಳ ಸಂದರ್ಶನದಲ್ಲಿ ಕಲೆಗಿಂತಲೂ ವೈಯಕ್ತಿಕ ವಿಚಾರಗಳು ಹೆಚ್ಚು ಪ್ರಾಮುಖ್ಯತೆಯನ್ನು ಗಳಿಸುತ್ತವೆ. ಇದು ಒಂದುರೀತಿಯ ವ್ಯಕ್ತಿ ಪೂಜೆಯಂತೆ. ಕಲೆಗಿಂತಲೂ ವ್ಯಕ್ತಿ ದೊಡ್ಡವನು ಎಂಬ ಭಾವ ಮನದ ಮೂಲೆಯಲ್ಲಿರುವುದೇ ಇದಕ್ಕೆ ಕಾರಣ. ವೈಶಿಷ್ಟ್ಯವೆಂದರೆ ಈ ಸಂದರ್ಶನದ  ಪ್ರಶ್ನೆಗಳಲ್ಲಿ,  ಜಿಜ್ಞಾಸೆಗಳಲ್ಲಿ  ಇಂತಹ ಪ್ರವೃತ್ತಿ ಎಲ್ಲಿಯೂ ಕಾಣುವುದಿಲ್ಲ. ವೈಯಕ್ತಿಕ ವಿಚಾರಗಳತ್ತ ಸುಳಿಯದೇ  ಸಮಗ್ರವಾಗಿ ಯಕ್ಷಗಾನ ಮತ್ತು ತಾಳಮದ್ದಲೆಯ ವಿಚಾರಗಳು ಹೆಚ್ಚು ಮಥಿಸಲ್ಪಟ್ಟಿವೆ. ಈ ಒಂದು ವಿಶೇಷತೆಯಿಂದಲೇ ಈ ಸಂದರ್ಶನದ ಆಶಯವನ್ನು ಸ್ಪಷ್ಟವಾಗಿ ಗುರುತಿಸಬಹುದು. ಇಲ್ಲಿ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳ ಸಂಕ್ಷಿಪ್ತ ಭಾವ ವಿಶ್ಲೇಷಣೆಯನ್ನು ತಕ್ಕ ಮಟ್ಟಿಗೆ ಮಂಡಿಸುವ ಯತ್ನವಿದು.

ಯಕ್ಷಗಾನ ತಾಳ ಮದಲೆಯಲ್ಲಿ ಪಾತ್ರ ಚಿತ್ರಣ ಹೇಗಿರಬೇಕು ?

  ಅರ್ಥಗಾರಿಕೆಯಲ್ಲಿ ಲೌಕಿಕವಾದ ವಿಚಾರಗಳನ್ನು ಬಳಸಬಾರದು. ವಿಚಾರಗಳು ಪೌರಾಣಿಕವಾಗಿ,  ಪೌರಾಣಿಕ ಕ್ರಮದಲ್ಲೇ ಇರಬೇಕು. ಸ್ವಾಭಾವಿಕ ಕ್ರಮ ಎಂಬ ಸಾಮಾಜಿಕ ಪದ್ದತಿಯಲ್ಲಿರಬಾರದು. ಪೌರಾಣಿಕ ಕ್ರಮದಲ್ಲಿ ಇಲ್ಲದಿದ್ದರೆ ಅವುಗಳು ಔಚಿತ್ಯವನ್ನು ಪಡೆಯುವುದಿಲ್ಲ.  ಆವಾಗ ಅರ್ಥಗಾರಿಕೆ ಅರ್ಥ ಪೂರ್ಣವಾಗಿರುತ್ತದೆ. ಸಮಕಾಲೀನ ವಿಚಾರಗಳು ಬಂದಾಗ ಅಸಹಜತೆ ಕಾಣಿಸಿಕೊಳ್ಳುವುದಲ್ಲದೆ ಉಂಟು ಮಾಡಬೇಕಾದ ಪ್ರಭಾವದಲ್ಲಿ ಕೊರತೆಯಾಗುತ್ತದೆ. ಲೌಕಿಕ ವಿಚಾರಗಳು ನಮ್ಮನ್ನು ಈ ಲೋಕದಲ್ಲೇ ಸ್ಥಿರವಾಗಿಸುತ್ತವೆ, ಹೊರತು ಅದು ಪೌರಾಣಿಕ ಲೋಕಕ್ಕೆ ಒಯ್ಯುವುದಿಲ್ಲ.
ಇಲ್ಲಿ ಪ್ರೇಕ್ಷಕ ಎರಡು ಕಾಲಗಳ ಮಧ್ಯೆ ಕಾಲ್ಪನಿಕವಾಗಿ ಸಂಚರಿಸುವಾಗ ಅದು ಅಸ್ವಾಭಾವಿಕವಾಗಿ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇದು ಪಾತ್ರಗಳ ನಿಲುಮೆಯಲ್ಲೂ ವೆತ್ಯಾಸವನ್ನುಂಟುಮಾಡುತ್ತದೆ. ಹಾಗಾಗಿ ಇದೆಲ್ಲ  ಪೌರಾಣಿಕ ಸನ್ನಿವೇಶದ  ಒಟ್ಟು ಚಿತ್ರಣದಲ್ಲಿ ಅಸಹಜತೆಯನ್ನು ಬಿಂಬಿಸುತ್ತದೆ.

ಸಾಮಾನ್ಯವಾಗಿ ಪಾತ್ರಧಾರಿಗಳು ಪಾತ್ರವನ್ನು ನಿರ್ವಹಿಸುವಾಗ ಅವರು ಪ್ರಸಂಗಕ್ಕೆ ನಿಷ್ಠರಾಗಿರಬೇಕೋ?  ಅಥವಾ ಮೂಲ ಕಾವ್ಯಕ್ಕೆ ನಿಷ್ಠರಾಗಿರಬೇಕೋ? ಹಲವು ಸಲ ಮೂಲ ಕಾವ್ಯಕ್ಕೂ ಪ್ರಸಂಗ ಚಿತ್ರಣಕ್ಕೂ ಬಹಳ ವೆತ್ಯಾಸವಿರುತ್ತದೆ. ಆವಾಗ ಯಾವುದನ್ನು ಆಧಾರವಾಗಿಟ್ಟುಕೊಳ್ಳಬೇಕು?

          ಮೂಲವಾಗಿ ಪ್ರಸಂಗಕ್ಕೆ ಆದ್ಯತೆಯನ್ನು ನೀಡಬೇಕು. ಇಲ್ಲವಾದಲ್ಲಿ ಆ ಪ್ರಸಂಗದಲ್ಲಿ ಬರುವ ಎಲ್ಲಾ ಪಾತ್ರಗಳಲ್ಲಿ ಅದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಒಬ್ಬ ಪ್ರಸಂಗ ಬಿಟ್ಟು  ಮೂಲ ಆಕರವನ್ನು ಆಧರಿಸಿ ಮಾತನಾಡಿದರೆ ಅದು ಪ್ರಸಂಗಕ್ಕೆ ವಿರುದ್ಧವಾಗಿದ್ದರೆ ಆಗ ಮತ್ತೊಬ್ಬ ಮಾತನಾಡುವುದು ಹೇಗೆ?  ಆಗ ಪಾತ್ರಗಳ ನಡುವೆ ಪ್ರಸಂಗದಲ್ಲಿ ತದ್ವಿರುದ್ಧವಾದ ಹೇಳಿಕೆಗಳು ಕೊಡಲ್ಪಡುತ್ತವೆ. ಇದಕ್ಕೆ ಸುಧನ್ವ ಕಾಳಗದ ಉದಾಹರಣೆಯನ್ನು ಶಾಸ್ತ್ರಿಗಳು ಉದ್ದರಿಸುತ್ತಾರೆ. ಈ ಪ್ರಸಂಗದಲ್ಲಿ  ಸುಧನ್ವನನ್ನು ಕೊಲ್ಲಿಸುವ ಸಂದರ್ಭದಲ್ಲಿ ಪ್ರಸಂಗವನ್ನು ಆಧರಿಸಿ,  ಶ್ರೀಕೃಷ್ಣ,   ಅರ್ಜುನ ಬಿಡುವ ಬಾಣಕ್ಕೆ ತುದಿಯಲ್ಲಿ ಲಯಕಾರಕ ಈಶ್ವರ, ಮಧ್ಯದಲ್ಲಿ ವಿಷ್ಣು, ಬುಡದಲ್ಲಿ ಜಯಕಾರಕನಾದಂತಹ ಬ್ರಹ್ಮ ಹೀಗೆ ತ್ರಿಮೂರ್ತಿಗಳನ್ನು ಆವಾಹಿಸುತ್ತಾನೆ.  ಆದರೆ ಮೂಲ ಜೈಮಿನಿ ಭಾರತಲ್ಲಿ,  ಬಾಣದ ತುದಿಯಲ್ಲಿಯೇ ವಿಷ್ಣುವನ್ನೇ ಅವಾಹಿಸಿಬಿಡುತ್ತಾನೆ. ಇಲ್ಲಿ ಶ್ರೀಕೃಷ್ಣ ಹೇಳುವುದೊಂದು ಸುಧನ್ವ ಅದಕ್ಕೆ ವ್ಯಾಖ್ಯಾನ ಮಾಡುವುದು ಇನ್ನೊಂದೋ  ಆದರೆ ಪ್ರೇಕ್ಷಕ ಗೊಂದಲದಲ್ಲಿ ಸಿಕ್ಕಿಬಿಡುತ್ತಾನೆ. ಇಲ್ಲಿ ಪ್ರಸಂಗದ ಅಶಯವೇ ಪ್ರಧಾನ. ಹಾಗಾಗಿ ಮೂಲ ಕಾವ್ಯವಸ್ತು ಪ್ರಸಂಗಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು.
ಆದರೆ ಜೈಮಿನಿ ಭಾರತದಂತಹ ಮೂಲ ಆಕರವನ್ನು ಇಂದಿನ ಯುವ ಅರ್ಥಧಾರಿಗಳು ಎಷ್ಟು ಅಭ್ಯಾಸ ಮಾಡಿದ್ದಾರೆ ಮತ್ತು, ಅದರ ಬಗ್ಗೆ ಎಷ್ಟು ತಿಳಿದು ಕೊಂಡಿದ್ದಾರೆ ಎಂಬ ವಿಚಾರ ಕೂಡ ಈ ಮಧ್ಯೆ ಗಮನಾರ್ಹವಾಗಿಬಿಡುತ್ತದೆ.  ಹಿಂದಿನ ತಾಳ ಮದ್ದಲೆಗಳ ಧ್ವನಿ ಮುದ್ರಣವನ್ನಷ್ಟೇ ಕೇಳಿ ಅದನ್ನು ಯಾಥಾವತ್ ವರದಿ ಒಪ್ಪಿಸುವಲ್ಲಿ, ಈ ಪ್ರಶ್ನೆಯ ಉತ್ತರದ ಒಳ ಆಶಯ ಮತ್ತು ಗಂಭೀರತೆಯನ್ನು ಮನಗಾಣಬೇಕು.  

ತಾಳ ಮದ್ದಲೆ ಅರ್ಥಗಾರಿಕೆಯಲ್ಲಿ ವೈಚಾರಿಕತೆ ಇರಬೇಕೆ? ಇದ್ದರೆ ಎಷ್ಟಿರಬೇಕು?

ತಾಳಮದ್ದಲೆ ಅರ್ಥಗಾರಿಕೆಯಲ್ಲಿ ವೈಚಾರಿಕತೆ ತಕ್ಕ ಮಟ್ಟಿಗೆ ಇರಲೇಬೇಕು. ಯಾಕೆಂದರೆ ಇದು ಬಯಲಾಟದ ಹಾಗೆ ಅಲ್ಲ. ಬಯಲಾಟದಲ್ಲಿ ಕುಣಿತ ಆಂಗಿಕ ಅಭಿನಯ ಬಣ್ಣಗಾರಿಕೆ ವೇಷಗಳೇ ಪ್ರಾಮುಖ್ಯ. ಇಲ್ಲಿ ಮಾತುಗಾರಿಕೆಯೇ ಪ್ರಾಮುಖ್ಯ. ಇಲ್ಲಿ ಪಾತ್ರಧಾರಿ ಮಾತು ಸಂಭಾಷಣೆಯಿಂದಲೇ ಪಾತ್ರವನ್ನು ದೃಶ್ಯವನ್ನು ಕಟ್ಟಬೇಕು. ವಿಚಾರಾತ್ಮಕವಾದ ವಿಮರ್ಶೆ,  ಸಂಭಾಷಣೆ ಇಲ್ಲಿ ಅನಿವಾರ್ಯ. ಆದರೆ ಇವುಗಳು ಕಾಲಮಿತಿಯನ್ನು ಅನುಸರಿಸಿ ಇರಬೇಕು. ಪಾತ್ರಗಳ ವ್ಯವಹಾರ ಪೌರಾಣಿಕ ಕಾಲದಲ್ಲೇ ಇರಬೇಕು. ಅದು ಈಗಿನ ಕಾಲಕ್ಕೆ ಬರಬಾರದು. ಈ ಕಾಲಕ್ಕೆ ಬಂದಲ್ಲಿ ಅದು ತಾತ್ಕಾಲಿಕವಾದ ರಾಜಕೀಯ ಸಾಮಾಜಿಕ ವಿಮರ್ಷೆಗಳೇ ಬಂದುಬಿಡುತ್ತದೆ.ಇದನ್ನು ಕೇಳುವುದಕ್ಕೆ ತಾಳಮದ್ದಲೆಗೆ ಹೋಗಬೇಕೆಂದಿಲ್ಲ. ತಾಳಮದ್ದಲೆ ಯಾಕೆ ಇರುವುದು? ಆಗಿನ ಕಾಲದ ಚಿತ್ರಣಕ್ಕೆ. ನಮ್ಮನ್ನು ಪೌರಾಣಿಕ ಕಾಲಕ್ಕೆ ತೆದುಕೊಂಡು ಹೋಗುವ ಹಾಗಿರಬೇಕು ಹೊರತು ಪೌರಾಣಿಕ ಪಾತ್ರ ಸಂದರ್ಭಗಳನ್ನು ಈಗಿನ ಕಾಲಕ್ಕೆ ಎಳೆದು ತರುವುದಲ್ಲ.  ಈಗಿನ ಯಕ್ಷಗಾನದಲ್ಲಿ ಈ ವೆತ್ಯಾಸವನ್ನು ಬಹಳಷ್ಟು ಗುರುತಿಸಬಹುದು. ಉದಾಹರಣೆಗೆ ಶೂರ್ಪನಖಿಯ ಪಾತ್ರಧಾರಿ ತನ್ನ ಸೌಂದರ್ಯ ಹೇಗಿರಬೇಕೆಂದು ಕಲ್ಪಿಸಿ ಮಾತನಾಡುವಾಗ ಎರಡು ಜಡೆ ಹಾಕುವುದು ಮುಂತಾದ ವರ್ತಮಾನದ ವಿಚಾರಗಳನ್ನು ಸೇರಿಸುವಾಗ ಆ ಕಾಲದಲ್ಲಿ ಹಾಗಿತ್ತೇ ಎಂದು ಯೋಚಿಸಬೇಕಾಗುತ್ತದೆ. ಇದು ಪ್ರಸಂಗಕ್ಕೆ ಅಸಹಜತೆಯನ್ನೇ ಕೊಡುತ್ತದೆ.

ತಾಳ ಮದ್ದಲೆ ಎಂದ ಕೂಡಲೇ ಅದು ನಮ್ಮ ವಿದ್ವತ್ ಪ್ರದರ್ಶನಕ್ಕೆ ಅವಕಾಶ ಎಂದು ಹೆಚ್ಚಿನವರು ತಿಳಿದುಕೊಳ್ಳುತ್ತಾರೆ. ಕೆಲವೊಂದು ಪ್ರಸಂಗಗಳೂ ಹಾಗೆ ಅತ್ಯಂತ ಗಂಭೀರವಾದ ಚರ್ಚೆಯನ್ನು ಬಯಸುತ್ತದೆ. ಇಲ್ಲಿ ನಮ್ಮ ವಿದ್ವತ್ ಪ್ರದರ್ಶನ ಎಷ್ಟು ಮಾಡಬೇಕು? ಎದುರು ಅರ್ಥಧಾರಿ ತಮ್ಮ ಮಟ್ಟಕ್ಕೆ ಇಲ್ಲ ಎಂದಾಗ ನಮ್ಮ ವಿದ್ವತ್ ನ್ನೇ ಪ್ರದರ್ಶಿಸುವುದು ಸರಿಯೋ?

ನಮ್ಮ ವಿದ್ವತ್ ನ್ನೇ ನಾವು ಪ್ರದರ್ಶಿಸಿ ಇದಿರಾಳಿಯನ್ನು ಖಂಡಿಸುವುದಂತೂ ಅಲ್ಲವೇ ಅಲ್ಲ. ಬದಲಾಗಿ ನಮ್ಮ ವಿದ್ವತ್ ನ್ನು ಪ್ರದರ್ಶಿಸುತ್ತಾ ಇದಿರಾಳಿ ಚಿಕ್ಕ ಅರ್ಥದವನೇ ಆಗಿದ್ದರೂ ಅವನನ್ನು ಎತ್ತಿಕೊಂಡು ಹೋಗುವುದೇ ತಾಳ ಮದ್ದಲೆಯ ಸಹಜ ಸ್ವಭಾವ ಗುಣ. ಪಾತ್ರದ ಅರ್ಥ ಸಣ್ಣದೇ ಆದರೂ ಅದು ಈ ಪಾತ್ರವನ್ನು ಬೆಳೆಸುವುದಕ್ಕೆ ಅತ್ಯಂತ ಅವಶ್ಯ. ಕರ್ಣಪರ್ವದ ಕರ್ಣ ಪಾತ್ರಧಾರಿ ಉದ್ದುದ್ದ ಮಾತನಾಡಬಹುದು. ಆದರೆ ಎದುರು ಸರ್ಪಾಸ್ತ್ರದ ಪಾತ್ರಧಾರಿಗೆ ಮಾತಾನಾಡುವುದಕ್ಕೆ ಅನುವು ಮಾಡಿಕೊಡಬೇಕು. ಅದು ಪ್ರಸಂಗದ ಆಶಯ. ಆಲ್ಲಿ ಎದುರು ಪಾತ್ರದ ದಮನ ಖಂಡಿತಾ ಸಲ್ಲದು.
ಪಾತ್ರ ದಮನಿಸಲ್ಪಟ್ಟರೆ ಪ್ರಸಂಗ ದಮನವಾಗುತ್ತದೆ.  ಪ್ರಸಂಗ ದಮನವಾದರೆ ತಾಳಮದ್ದಲೆಯೇ ಅರ್ಥಹೀನವಾಗುತ್ತದೆ. ಇಲ್ಲಿ ಹಿರಿಯ ಅರ್ಥ ಧಾರಿಯ ವಿಚಾರಗಳು ಗೆಲುವನ್ನು ಪಡೆದರು ತಾಳಮದ್ದಲೆ ಸಂಪೂರ್ಣ ವೈಫಲ್ಯವನ್ನು ಅನುಭವಿಸುತ್ತದೆ. ಸರ್ಪಾಸ್ತ್ರದ ಎರಡು ಪದದ ಅರ್ಥವಾದರೂ ಅದು ಸರಿಯಾಗಿ ಹೊಂದಿಕೊಂಡು ಬಾರದಿದ್ದಲ್ಲಿ ಕರ್ಣ ಏನು ಮಾಡಬಹುದು? ಇಲ್ಲಿ ಕರ್ಣನ ಪಾತ್ರ ಬೆಳೆಯಬೇಕಾದರೆ ಸರ್ಪಾಸ್ತ್ರದ ಗೆಲುವು ಅನಿವಾರ್ಯ.

ತಾಳಮದ್ದಲೆಯನ್ನು ವಿದ್ಯಾರ್ಥೀ ದೆಸೆಯಲ್ಲಿ ಕಲಿಯುವಾಗ ವಿದ್ಯಾರ್ಥಿಗಳಿಗೆ ಹೇಳುತ್ತೇವೆ, ತಾಳಮದ್ದಲೆ ಭಾಷಾ ಶುದ್ದತೆಯನ್ನು ನೀಡುತ್ತದೆ. ಮಾತು ಸಭಾ ಕಂಪನವನ್ನು ನೀಗಿಸುತ್ತದೆ. ನಮ್ಮನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಹಾಯಕವಾಗುತ್ತದೆ. ಹೀಗಾಗಿ ಇದನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳ ಬಹುದು?

ಪ್ರಾಥಮಿಕ ಹಂತದಲ್ಲಿ ಚಿಕ್ಕವರಿಗೆ ಆದರೂ ದೊಡ್ಡವರಿಗೇ ಆದರು ತಮಗಿರುವ ವೇದಿಕೆಯ ಭಯವನ್ನು ನಿವಾರಣೆ ಮಾಡುವುದಕ್ಕೆ ಸರಳವಾಕ್ಯವನ್ನು ಅನುಸರಿಸಿ ಪ್ರಾರಂಭಿಸಬೇಕು. ಪ್ರಾರಂಭಕ್ಕೆ ಚರ್ಚೆ ಮಾಡುವುದನ್ನೋ ಅಥವಾ ಬಹಳ ದೊಡ್ಡ ವಾಕ್ಯವನ್ನು ಕಲಿತು ಬಾಯಿ ಪಾಠ ಹೊಡೆದು ಅದನ್ನೆ ಅಲ್ಲಿ ಹೇಳುವುದನ್ನು ಮಾಡಬಾರದು. ಬಾಯಿ ಪಾಠಕಲಿತ ವಾಕ್ಯಗಳು ಸ್ವಲ್ಪ ಭಯವಾದರೂ  ತಪ್ಪಿಹೋಗುವ ಭೀತಿ ಉಂಟು. ಸರಳವಾದ ಸ್ವಂತ ವಾಕ್ಯಗಳು ಒಪ್ಪಿಸಿದಲ್ಲಿ ಅದು ನಿರರ್ಗಳವಾಗಿ ಬರುತ್ತದೆ. ಸ್ವಲ್ಪವೇ ಹೇಳಿಬಿಟ್ಟರೆ ಆದಿನಕ್ಕೆ ಅವನಿಗೆ ಬಹಳಷ್ಟು ಧೈರ್ಯ ಬರುತ್ತದೆ.   ಇನ್ನೊಂದು ಸಲಕ್ಕೆ ಅದು ಹೆಚ್ಚು ಆತ್ಮ ಸ್ಥೈರ್ಯವನ್ನು ಕೊಡುತ್ತದೆ. ಆಗ ವೇದಿಕೆಯ ಭಯ ತಾನೇತಾನಾಗಿ ಹೊರಟು ಹೋಗುತ್ತದೆ. ಆರಂಭಿಕ ಹಂತಗಳಲ್ಲಿ ಕೆಲವಷ್ಟೇ ವಿಚಾರಗಳನ್ನು ಸೇರಿಸುತ್ತ ಮತ್ತೆ ಮತ್ತೆ ಅದಕ್ಕೆ ಸೇರಿಸುತ್ತಾ ಹೋಗಬೇಕು.

ತಾಳಮದ್ದಲೆಯಲ್ಲಿ ವಾದವಿವಾದಗಳು ಸ್ವಾಭಾವಿಕ. ಈ ಕಾರಣಕ್ಕೆ ಎಷ್ಟೋ ತಾಲಮದ್ದಲೆಗಳೂ ಅರ್ಧದಲ್ಲೇ ನಿಂತಿವೆ. ಒಣ ಪ್ರತಿಷ್ಠೆಯಿಂದಲೋ ಗೆಲ್ಲಲೇ ಬೇಕೆಂಬ ಛಲದಿಂದಲೋ ಅಥವಾ ವಾದವನ್ನು ನಿರ್ವಹಿಸಲಾಗದೆಯೋ ಏಷ್ಟೋ ತಾಲಮದ್ದಲೆಗಳೂ ಅರ್ಧದಲ್ಲೇ ನಿಂತಿದೆ. ತಾಳಮದ್ದಲೆಯ ನಿಜವಾದ ಉದ್ದೇಶ ರಸವನ್ನು ಆವಿಷ್ಕರಿಸುವುದು. ಯಕ್ಷಗಾನ ಆಟಗಳಲ್ಲಿ ವೇಷ ಭೂಷಣ ಅಭಿನಯದಿಂದ ರಸಾವಿಷ್ಕಾರವಾಗುತ್ತದೆ. ಅದರಂತೆ ತಾಳಮದ್ದಲೆಯಲ್ಲಿ ರಸಾವಿಷ್ಕಾರ ಹೇಗೆ ಮಾಡಬಹುದು?

ವಾದವಿವಾದಗಳಿಂದ ತಾಳಮದ್ದಲೆ ನಿಲ್ಲುವುದಕ್ಕೆ ಕಾರಣ ಒಣ ಪ್ರತಿಷ್ಠೆ. ತಾಳಮದ್ದಲೆಗೆ ಬಂದು ಕೂತವರು  ಗೆಲ್ಲತಕ್ಕದ್ದು ಎಂಬ ಮಾನಸಿಕ ಧೋರಣೆ ಇಲ್ಲಿ ತಾಳ ಮದ್ದಲೆ ಗೆಲ್ಲುವುದಲ್ಲ ವ್ಯಕ್ತಿ ಗೆಲ್ಲುವುದು. ವಾಸ್ತವದಲ್ಲಿ ತಾಳಮದ್ದಲೆ ಗೆಲ್ಲಬೇಕು. ತಾಳಮದ್ದಲೆ ಎಂಬುದು ಒಂದು ಸಾಮೂಹಿಕ ಕಲೆ.  ಯಾವುದಾದರೂ ಒಂದು ಪಾತ್ರವೋ ಹಾಡುಗಾರಿಕೆ ಪದವೋ ಗೆದ್ದಲ್ಲಿ ತಾಳ ಮದ್ದಲೆ ಗೆದ್ದಂತಾಗುವುದಿಲ್ಲ. ಇನ್ನು ತಾಳ ಮದ್ದಲೆಯಲ್ಲಿ ರಸಾವಿಷ್ಕಾರ ಹೇಗೆ? ತಾಳಮದ್ದಲೆಯಲ್ಲೂ ಎಲ್ಲಾ ಬಗೆಯ ರಸಾವಿಷ್ಕಾರ ಸಾಧ್ಯವಿದೆ. ಅದನ್ನು ಮಾಡಬೇಕು. ಒಂದು ಕಾಲದಲ್ಲಿ ರಸಾವಿಷ್ಕಾರ ಇತ್ತು. ಆನಂತರ ವೈಚಾರಿಕತೆ ಹೆಚ್ಚಾದಂತೆ ರಸಾವಿಷ್ಕಾರ ಕುಂಠಿತಗೊಂಡಿತು. ರಸಾವಿಷ್ಕಾರಗೊಂಡರೆ ಮಾತ್ರ ತಾಳಮದ್ದಲೆ ಯಶಸ್ವಿಯಾದೀತು. ಸಾಮಾನ್ಯವಾಗಿ ವೀರರಸಗಳಲ್ಲಿ ವಾಕ್ಯಗಳೆಲ್ಲ ಗಿಡ್ದಗಿಡ್ಡವಾಗಿರಬೇಕು. ಸ್ವರವೂ ಏರುತ್ತಾ ಹೋಗಬೇಕು..  ಉದ್ದ ವಾಕ್ಯಗಳಲ್ಲಿ ವೇಗವು ಸಾಧ್ಯವಾಗುವುದಿಲ್ಲ. ಸ್ವರವೂ ಸಾಕಾಗುವುದಿಲ್ಲ.  ಆದರೆ ಸೌಮ್ಯ ರಸಗಳಿಗೆ ಉದ್ದ ವಾಕ್ಯ ಅಡ್ಡಿಯಿಲ್ಲ.
ಎಲ್ಲಿ ವಾಕ್ಯಗಳಲ್ಲಿ ಭಾವವನ್ನು ವಾಕ್ಯದ ಮುಕ್ತಾಯದವರೆಗೆ ಹಿಡಿದಿಡುವುದಕ್ಕೆ ಸಾಧ್ಯವೋ ಅಲ್ಲಿ ರಸ ಭಾವ ಉಳಿದುಕೊಳ್ಳುತ್ತದೆ. ವೀರ ರಸಕ್ಕೆ ಸ್ವರ ಏರುಗತಿಯಲ್ಲಿರುವಾಗ ಆ ಸ್ವರವನ್ನು ವಾಕ್ಯದ ಅಂತ್ಯದವರೆಗೂ ಹಿಡಿದಿಡುವುದು ಅಸಾಧ್ಯ. ಸೌಮ್ಯ ರಸಗಳಲ್ಲಿ ಇದು ಸಾಧ್ಯವಾಗುತ್ತದೆ. ಈಗ ತಾಳ ಮದ್ದಲೆಯಲ್ಲಿ ಸ್ತ್ರೀ ಪಾತ್ರದ ಅರ್ಥ ಹೇಳುವವರ ಕೊರತೆ ಕಂಡುಬರುತ್ತದೆ. ಅದಕ್ಕೆ ಕಾರಣ ಅವರಲ್ಲಿ ಸ್ವರ ವೈವಿಧ್ಯ ಇಲ್ಲದಿರುವುದು. ರಸೋತ್ಪಾದನೆಗೆ ಸ್ವರ ವೈವಿಧ್ಯ ಅತ್ಯವಶ್ಯ. ವಿದುರನಾದವ ಕೃಷ್ಣ ಎದುರು ಶಾಂತ ಭಾವದಿಂದ ಭಕ್ತಿಭಾವದಿಂದ ಮಾತನಾಡಿದರೆ ಕೌರವನ ಎದುರು ವೀರ ರಸದಿಂದಲೇ ಮಾತನಾಡಬೇಕು.
ಶರಸೇತುವಿನ ಹನುಮಂತನ ಪಾತ್ರ, ಇದು ಆರಂಭದಲ್ಲಿ ಶಾಂತವಾಗಿದ್ದರೆ, ಆನಂತರ ಸ್ವಲ್ಪ ಸಾವರಿಸಿಕೊಂಡು ಉತ್ತರಿಸುತ್ತಾನೆ, ಆನಂತರ ವೀರರಸವನ್ನೇ ತೋರಿಸಬೇಕು ಕೊನೆಯಲ್ಲಿ ರಾಮ ಪ್ರತ್ಯಕ್ಷನಾಗುವಾಗ ಭಕ್ತಿ ರಸವನ್ನು ತೋರಬೇಕು ಹೀಗೆ ಒಂದೇ ಪಾತ್ರದಲ್ಲಿ ವೈವಿಧ್ಯಮಯ ರಸಾವಿಷ್ಕಾರ ಸಾಧ್ಯವಾಗಬೇಕು. ಇದೆಲ್ಲಾ  ಒಂದೇ ಆದರೆ ಅದು ಏನೂ ಪ್ರಭಾವ ಬೀರಲಾರದು. ಬೇಸರದ ಸಂಗತಿ ಎಂದರೆ ಈಗಿನ ತಾಳ ಮದ್ದಲೆಗಳಲ್ಲಿ ಈ ರಸೋತ್ಪಾದನೆ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಕರುಣಾ ರಸ ಶೃಂಗಾರ ರಸ ಕಡೆಗಣಿಸಲ್ಪಟ್ಟಿದೆ. ಸುಧನ್ವ ಪ್ರಸಂಗದ ಪ್ರಭಾವತಿ ಸುಧನ್ವ ಸನ್ನಿವೇಶದಿಂದಾಗಿ ಆ ಪ್ರಸಂಗವನ್ನೇ ಬೇಡ ಎಂದು ಹೇಳುತ್ತಾರೆ. ಇಲ್ಲಿ ಸುಧನ್ವ ಪ್ರಭಾವತಿ ಸಂಭಾಷಣೆಯಲ್ಲಿ ಶೃಂಗಾರ ರಸ ಅತ್ಯವಶ್ಯ. ಹಾಗಾಗಿ ಪ್ರಭಾವತಿ ಮಾಡುವುದಕ್ಕೆ ಜನವೇ ಸಿಗಲಾರದ ಪರಿಸ್ಥಿತಿ.

ತಾಳ ಮದ್ದಲೆಗಳಲ್ಲಿ ಭಕ್ತಿರಸವನ್ನು ಪ್ರತಿಪಾದಿಸುವಂತಹ ಪಾತ್ರಗಳು, ಗೋಚರಿಸುವಂತಹ ಪ್ರಧಾನ ಮೂರು ಪಾತ್ರಗಳು. ಒಂದು ಭೀಷ್ಮ ಇನ್ನೊಂದು ವಿದುರ ಮತ್ತೊಂದು ಸುಧನ್ವ. ಈ ಮೂರು ಜನ ಕೂಡ ಕೃಷ್ಣನ ಭಕ್ತರೆ. ಇವರು ಅಪ್ರತಿಮ ಭಕ್ತರಾದರೂ ಇವರ ಭಕ್ತಿಯ ವಿಧಾನ ಬೇರೆ ಬೇರೆ. ತಾಳಮದ್ದಲೆಯಲ್ಲಿ ಅದನ್ನು ಹೇಗೆ ಪ್ರತಿಪಾದಿಸಬಹುದು?

ಭಕ್ತಿಯಲ್ಲಿ ಶ್ರೀಕೃಷ್ಣ ಹೇಳಿದ ಹಾಗೆ ನಾಲ್ಕು ವಿಧ. ಜ್ಞಾನ,  ಆಶೆ ಇಟ್ಟುಕೊಂಡು ಇರಿಸುವ ಭಕ್ತಿ ಆರ್ತ, ಮತ್ತೆ ಜಿಜ್ಞಾಸು ಮತ್ತು ಅರ್ಥಾರ್ಥಿ. ಇಲ್ಲಿ ಭೀಷ್ಮ ಜ್ಞಾನಿ, ಅವನು ಜ್ಞಾನಿ ಭಕ್ತ.  ವಿದುರ ಆರ್ತ ಭಕ್ತನೇ, ಅವನ ಭಕ್ತಿಯಲ್ಲಿ ಏನು ಆಶೆಗಳಿಲ್ಲ. ಅರ್ಥಾರ್ಥಿಯೂ ಅಲ್ಲ ಅವನು. ಆದರೆ ಸುಧನ್ವ ಆರ್ತ ಭಕ್ತನೇ ಆದರೂ ಸುಧನ್ವ ವೀರ ವೈಷ್ಣವ. ವೀರ ಎಂದರೆ ಇಲ್ಲಿ ಪರಾಕ್ರಮಿ ಎಂಬ ಅರ್ಥ ಮಾತ್ರವಲ್ಲ. ಅದರ ಮತ್ತೊಂದು ಭಾವ, ತಾನು ವಿಕಾರಗೊಳ್ಳದೆ, ಬೇರೆಯವರನ್ನು ವಿಕಾರಗೊಳಿಸದವನು. ವಿಕಾರಗೊಳ್ಳದ ಅವಿಕಾರೀ ಭಕ್ತ. ಅವನದ್ದು ಕೃಷ್ಣನಿಗೆ ಅರ್ಪಿಸಲ್ಪಟ್ಟ ಭಕ್ತಿ ಅವನದ್ದು. ಅವನ ಮಾತಿನಲ್ಲಿ ಎಲ್ಲಿಯೂ ಸ್ವಾರ್ಥ ಕಾಣಬಾರದು. “ತಿಳಿದೆನು ನಿನ್ನಯ ಚಿತ್ತದುಮ್ಮಳಿಕೆಯ ನಿಜವ....” ಎಂಬ ಕೊನೆಯ ಪದದಲ್ಲಿ ಸುಧನ್ವನ ಭಕ್ತಿ ರೂಪ ತಿಳಿಯುವುದಕ್ಕೆ ಬರ್ತದೆ. ಶ್ರೀಕೃಷ್ಣ ಯಾರನ್ನು ಉಳಿಸಬೇಕು ಎಂಬ ಸಂದಿಗ್ಧದಲ್ಲಿರುವಾಗ ಆತ ತನ್ನನ್ನು ಕೃಷ್ಣನಿಗೆ ಅರ್ಪಿಸಿ ಮಾತನಾಡುತ್ತಾನೆ. ಅರ್ಜುನನ್ನು ಉಳಿಸು ಎಂದು ಅವನೇ ಕೇಳಿಕೊಳ್ಳುತ್ತಾನೆ. ಯಾಕೆ ಅರ್ಜುನನ್ನು ಉಳಿಸಿದರೆ ಶ್ರೀಕೃಷ್ಣನ ಧರ್ಮ ಸಂಸ್ಥಾಪನೆಗೆ ಅನುಕೂಲವಾಗುತ್ತದೆ. ಹೀಗೆ ಭಾವ ಪರವಶನಾಗಿ ಸುಧನ್ವ ಹೇಳಬೇಕು.
ಇನ್ನು ಭೀಷ್ಮ ಆತ ಹೇಳುತ್ತಾ ಹೋಗುವಾಗ, ಶ್ರೀಕೃಷ್ಣನ ಭಗವದ್ಗೀತೆಯ ಉಪದೇಶವನ್ನೆಲ್ಲಾ ಕೇಳಿದ ಅರ್ಜುನ, ಅವನಿಗೆ ಇನ್ನೂ ಪ್ರಪಂಚದಲ್ಲಿ ಏನನ್ನೆಲ್ಲ ಸಾಧಿಸಬೇಕೋ  ಅದನ್ನು ಕೃಷ್ಣ ಹೇಳುತ್ತಾನೆ. ಅವನಿಂದ ಮಾಡಿಸ್ತುತ್ತಾನೆ. ಆದರೆ ತನಗೆ ಇನ್ನು ಏನಾಗಲಿದೆ? ಹಾಗಾಗಿ ಭೀಷ್ಮ ಯಾಕೆ ಹೀಗಾದ ಎಂಬುದಕ್ಕೆ ಅವನಲ್ಲಿ ಸಮರ್ಥನೆ ಉಂಟು. ಅದಲ್ಲವಾದರೆ ಆತ ಕೌರವನ ಪಕ್ಷಕ್ಕೆ ಹೋದದ್ದು ಅಪರಾಧವಾಗುತ್ತದೆ. ಭೀಷ್ಮ ಅದು ಯಾಕೆ ಅಪರಾಧವಲ್ಲ ಎಂಬುದಾಗಿ ಪ್ರತಿಪಾದಿಸಬೇಕಾಗುತ್ತದೆ.

ಇನ್ನು ವಿದುರ ಜ್ಞಾನಿಯೇ ಆದರೂ ಆತನ ಮನಸ್ಸು ಕೃಷ್ನನ ಕಡೆಗೆ ಬದಲಾಗಿ ಹೋಗುತ್ತದೆ. ಕೃಶ್ಣನನ್ನು ಕಂಡಾಗ ಅನಂದಾತಿರೇಕದಿಂದ ಭಾವೋದ್ವೇಗಕ್ಕೆ ಒಳಗಾಗುತ್ತಾನೆ. ತನ್ನಲ್ಲಿ ಏನಿದ್ದರು ಕೃಷ್ಣನಿಗೆ ಕೊಟ್ಟು ಬಿಡುವ ತನ್ನಲ್ಲಿ ಏನೂ ಬೇಡ. ಕೃಷ್ಣ ಮನೆಗೆ ಬಂದ ಮೇಲೆ ಎಲ್ಲವೂ ಆಯಿತು ಎಂದು ಸರ್ವ ಸಪರ್ಪಣಾ ಭಾವದ ಭಕ್ತಿ ಅವನದ್ದು.
ಹೀಗೆ ಒಂದಿಷ್ಟು ಸಾರ್ಥಕ ಘಳಿಗೆಯ ಸಂದರ್ಶನವಿದು. ಇಲ್ಲಿ ಅಪ್ಪಟ ಪರಂಪರೆಯ ಬಗೆಗಿನ ಪ್ರಾಮಾಣಿಕ ಕಾಳಜಿಯನ್ನು ಕಾಣಬಹುದು. ಆಡಂಬರವಿಲ್ಲ. ಕಿರಿ ಕಿರಿಯಾಗುವ ಪ್ರಶ್ನೆಗಳಿಲ್ಲ. ಬೃಹತ್ ಜಾಲದ ಮಾಧ್ಯಮವಂತೂ ಇಲ್ಲವೇಇಲ್ಲ. ಸಾಮಾನ್ಯವಾಗಿ ದೊಡ್ಡ ಮಾಧ್ಯಮವಿದ್ದರೆ ಮಾತ್ರ ಕಲಾವಿದರು ತಮ್ಮನ್ನು ಉಧ್ಘಾಟಿಸುತ್ತಾರೆ. ಆದರೆ ಇಲ್ಲಿ ಮೂಂಡಬೈಲು ಶಾಸ್ತ್ರಿಗಳು ಆ ರೀತಿಯ ಯಾವ ಬಿಗುಮಾನವನ್ನು ತೋರಲಿಲ್ಲ. ಬಹುಶಃ ಇದು ಶಾಸ್ತ್ರಿಗಳಂತ ಸರಳ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಮಾತ್ರವೇ ಸಾಧ್ಯ.
ಮಾಧ್ಯಮದ ಬಗ್ಗೆ ಸುಬ್ಬಣ್ಣ ತೆಲೆಕೆಡಿಸುವುದಿಲ್ಲ. ತಮ್ಮ ಆತ್ಮಕ್ಕೆ ಏನು ಬೇಕೋ ಎಷ್ಟು ಸಾಧ್ಯವೋ ಅಷ್ಟನ್ನು ಮಾಡಿದ್ದಾರೆ. ಮೂಡಣದ ಬೈಲಿನ ಮಾತುಗಳಿಗೆ ಕಿವಿಯಾಗುತ್ತಾ ತಾವೇ ಮಾಧ್ಯಮವಾಗಿದ್ದಾರೆ. ಇಲ್ಲಿ ಸಹೃದಯ ಮಿತ್ರಬಳಗದ ಮಾಧ್ಯಮ ವಿಶಾಲವಾಗಿ ತೆರೆದುಕೊಳ್ಳುತ್ತದೆ ಅದಷ್ಟು ಧಾರಾಳ. ಮಾತಿಗಿಳಿದ ಸುಬ್ಬಣ್ಣನಿಗೂ ಮಾತುಗಾರ ಮೂಡಂಬೈಲು ಶಾಸ್ತ್ರಿಗಳಿಗೂ ಹೃತ್ಪೂರ್ವಕ ಕೃತಜ್ಞತೆಗಳು
ಯಕ್ಷಗಾನಂ ಗೆಲ್ಗೆ