"ಇದು ವಿಮರ್ಶೆಯಲ್ಲದ ಚಿಂತನ"

Monday, November 30, 2015

ಯಕ್ಷ ಸಿಂಚನದ ನಿಷ್ಕಾಮ ಕರ್ಮ ಫಲ


ಅಂದು ಕಾರಣಾಂತರದಿಂದ ರಾತ್ರಿ ನಿದ್ದೆಗೆ ಜಾರುವಾಗ ಬಹಳ ತಡವಾಗಿಬಿಟ್ಟಿತು.  ಮಲಗುವ ಮೊದಲೊಮ್ಮೆ ಶವರ್ ಗೆ ತಲೆಕೊಟ್ಟು ಚುಟುಕು ಸ್ನಾನ ಮಾಡಿ ಮಲಗುವ ಅಭ್ಯಾಸ ನನಗೆ. ಹಾಗೆ ಮೊಬೈಲ್ ನ್ನು ಹಾಸಿಗೆ ಪಕ್ಕದಲ್ಲೇ ಎಸೆದು, ಸ್ನಾನ ಪೂರೈಸಿದೆ. ನಂತರ ಮಲಗಿ ಇನ್ನೇನು ನಿದ್ದೆಗೆ ಜಾರಬೇಕು ಎನ್ನುವಾಗ ಮೊಬೈಲ್ ಕುಂಯ್ ಗುಟ್ಟಿ ಸುಮ್ಮನಾಯಿತು. ಅಷ್ಟೇ ಅನಾವಶ್ಯವಾಗಿ ಹುಳುವೊಂದು ಮೆದುಳನ್ನು ಹೊಕ್ಕ ಅನುಭವವಾಯಿತು. ಯಾವುದೋ ಸಂದೇಶದ ನಾದವದು.  ಏನಿರಬಹುದು?   ಕುತೂಹಲ ತಡೆಯದೆ ಮೊಬೈಲ್ ಕೈಯಲ್ಲಿ ಹಿಡಿದು ಬೆಳಗಿಸಿ ನೋಡಿದೆ. ವಾಟ್ಸ್ ಆಪ್ ಗ್ರೂಪ್ ನ ಬಿಂದುವೊಂದು ಹೊಸ ಸಂದೇಶ ದಾಖಲಾಗಿರುವುದನ್ನು ತೋರಿಸುತ್ತಿತ್ತು.  ತೆರೆಯೋಣವೇ ಬೇಡವೇ ಎಂಬ ಸಂದಿಗ್ಧತೆಯಲ್ಲಿ ಒಂದಷ್ಟು ಹೊತ್ತು ಕಳೆದು ಹೋಯಿತು ಅದರ ಬೆನ್ನಿಗೆ ಮತ್ತಷ್ಟು ಕುಂಯ್ ಗುಟ್ಟುವಿಕೆ ಜೋರಾದಾಗ  ಇನ್ನು ಈ ಹುಳು ನಿದ್ದೆಗೆ ತೊಂದರೆ ತರುತ್ತದೆ ಎಂದುಕೊಂಡು ತೆರೆದು ನೋಡಿದೆ.  ಯಕ್ಷಗಾನದ ಗ್ರೂಪ್ ನ  ಪುಟ ತೆರೆದುಕೊಂಡಿತು.  ಹಿರಿಯ ಭಾಗವತರೊಬ್ಬರ ಹೆಸರಿನೊಂದಿಗೆ ಯಕ್ಷಗಾನ ಪದವೊಂದು ಬಾಲವನ್ನು ಹರಡಿಸಿದಂತೆ ಕಂಡಿತು. ಅದನ್ನು ತಡವಿದಾಗ ಭಾಗವತರ ಮಧುರ ಧ್ವನಿಯೊಂದಿಗೆ ಹಾಡು ಅಲೆ ಅಲೆಯಾಗಿ  ಬಿತ್ತರಿಸುತ್ತಾ ಸಾಗಿತು. ಆದರೆ ಆ ಪದವನ್ನು  ಕೇಳುತ್ತಿದ್ದಂತೆ ಹೊಸ ಸಂವೇದನೆ ಹುಟ್ಟಲೇ ಇಲ್ಲ. ಸಹಜವಾಗಿ ಹೊಸ ಯಕ್ಷಗಾನದ ಹಾಡು ಕೇಳುವಾಗ ಒಂದು ಕೂತೂಹಲದ ಅನುಭವ ಜತೆಯಲ್ಲೇ ಒಂದು ನವಿರುತನದ ಅನುಭವವೂ ಉಂಟಾಗುತ್ತದೆ. ಆದರೆ ಇಲ್ಲಿ ಅನುಭವದ ನವಿರುತನದ ಬದಲಿಗೆ ಹೊಸ ಚಿಂತನೆಯನ್ನು ಹುಟ್ಟುಹಾಕಿತು. 

ಯಾವುದೇ ಹೊಸತಾದ ಅಪರೂಪದ ಯಕ್ಷಗಾನದ ಪದಗಳು,  ಅಂದರೆ ಈವರೆಗೆ ಕೇಳದೇ ಇರುವಂಥಹುದು ಕೇಳಿದಾಗ ಮಧುರ ನಾದ ಕಿವಿಗೆ ಕೇಳಿದಂತೆ ಮನಸ್ಸಿನಲ್ಲೂ ಆ ನಾದದ ತರಂಗಗಳು ಸೃಷ್ಟಿಯಾಗುತ್ತದೆ. ಇಲ್ಲಿ ಆ ಅನುಭವ ಇಲ್ಲದೇ ಕೇವಲ ಒಂದು ಯಕ್ಷಗಾನದ ಝೇಂಕಾರವಷ್ಟೇ ಕೇಳಿದಂತಾಯಿತು. ಕಾರಣವಿಷ್ಟೆ...  ಅದಾಗಲೇ .ಆ ಮಧುರ ಅನುಭವ ನನ್ನ ಮಟ್ಟಿಗೆ ಹಳೆಯದಾಗಿತ್ತು. ಯಾವುದೇ ಹಾಡನ್ನು ಕೇಳಿದಂತೆ ಮನಸ್ಸು ನನ್ನ ಸಂಗ್ರಹದ ಸುತ್ತ ಒಂದು ಪರ್ಯಟವನ್ನು ಮನಸ್ಸಿನಲ್ಲೇ ಸುತ್ತುತ್ತದೆ. ಒಂದೆರಡು ಕ್ಷಣದಲ್ಲಿ ಅನುಮಾನ ಬೆಳೆದು ಆಗಲೇ ಪರಿಹಾರವಾಗುವುದೂ ಇದೆ. ಆದರೆ ಇದು ಕೇಳಿದ ಕ್ಷಣದಲ್ಲೇ  ಅದರ ಆಮೂಲಾಗ್ರ ವಿವರಗಳನ್ನು  ಮನಸ್ಸು ನೆನಪಿಗೆ ತಂದುದಾಯಿತು.

ಒಂದು ಬಹಳ ಹಳೆಯ ಕಾಲದ ತಾಳಮದ್ದಲೆಯೊಂದರ ಧ್ವನಿ ಮುದ್ರಣದಿಂದ ಕಿತ್ತು ಹರಡಿಸಿದ ಪದವದು. ವಾಸ್ತವದಲ್ಲಿ ಇಂತಹ ಪದಗಳ ಜಾಡು ಹಿಡಿದು ಅದರ ವಿವರಗಳನ್ನು ಗ್ರಹಿಸುವುದು ಬಹಳ ಕಠಿಣ. ಆದರೆ ಇಲ್ಲಿ  ಇದರ ಗ್ರಹಿಕೆ ಕಷ್ಟವಾಗಲಿಲ್ಲ. ಯಾಕೆಂದರೆ ಅದನ್ನು ತತ್ರಾಂಶಕ್ಕೆ ಪರಿವರ್ತಿಸುವಲ್ಲಿ  ನಾನು ಪಟ್ಟ ಪರಿಶ್ರಮ ಆ ಅರೆನಿದ್ರಾಸ್ಥಿತಿಯಲ್ಲೂ ಅಂದಿನ ನೆನಪಿನ ಪುಟಗಳನ್ನು ತೆರೆದುಬಿಟ್ಟಿತು.

ಬಹಳ ಹಳೆಯ ಕಾಲದ ತಾಳಮದ್ದಲೆಯೊಂದರ ಧ್ವನಿ ಮುದ್ರಣದ ಕೆಲವು ಧ್ವನಿ ಸುರುಳಿ (ಕ್ಯಾಸೆಟ್) ಗಳನ್ನ ಮಿತ್ರರೊಬ್ಬರು ಕೊಟ್ಟಿದ್ದರು. ಅದನ್ನು ತತ್ರಾಂಶ(MP3)  ರೂಪಕ್ಕೆ ಪರಿವರ್ತಿಸುವುದಕ್ಕಾಗಿ ಸಂಗ್ರಹಿಸಿದ್ದೆ. ಬಹಳಷ್ಟು ಹಳೆಯದಾಗಿ ಬೂಸುರು ಮೆತ್ತಿಕೊಂಡ ಕ್ಯಾಸೆಟ್ ಸರಿಯಾಗಿ ತಿರುಗಿ ಜೀವತಳೆಯುವುದಕ್ಕೆ ಒಂದೆರಡು ದಿನದ ಶ್ರಮವನ್ನು ತೆಗೆದುಕೊಂಡಿತು. ಹಲವುಸಲ ಇಂತಹ ಸಂದರ್ಭದಲ್ಲಿ ಸಹನೆಯೇ ಮೂಲ ಮಂತ್ರವಾಗಬೇಕು. ಸುತ್ತಿಕೊಂಡ ಸುರುಳಿಗೆ ಮೆತ್ತಿದ ಬೂಸುರನ್ನು ತೆಗೆದು ಅದನ್ನು ಪುನಃ ಸುಸ್ಥಿತಿಗೆ ತರುವಲ್ಲಿ ಅಪಾರವಾದ ಸಹನೆ ಪರಿಶ್ರಮದ ಅವಶ್ಯಕತೆ ಇರುತ್ತದೆ. ಜತೆಯಲ್ಲಿ ಮೊಳೆಯುವ ಕುತೂಹಲ ಇದನ್ನೆಲ್ಲವನ್ನು ಒದಗಿಸಬೇಕು.  ಒಂದು ಸಲ ಒಂದು ಧ್ವನಿ ಸುರುಳಿಯನ್ನು ಬಿಚ್ಚಿ ಶುಭ್ರಗೊಳಿಸುವ ಕೆಲಸಕ್ಕೆ ತೊಡಗಿಕೊಂಡರೆ ನಂತರ ಅದನ್ನು ಪೂರ್ಣ ಗೊಳಿಸಿ ಪುನಃ ಜೋಡಿಸುವವ ವರೆಗೆ ಬೇರೆ ಕೆಲಸಕ್ಕೆ ತೊಡಗುವ ಹಾಗಿಲ್ಲ. ಹಾಗಾಗಿ ಕುತೂಹಲಕ್ಕೆ ಸಾಯಂಕಾಲದ ಹೊತ್ತು ತೊಡಗಿದರೆ ರಾತ್ರಿ ಬಹಳ ಹೊತ್ತಿನವರೆಗೂ ಆ ಕೆಲಸ ಲಂಬಿಸುತ್ತದೆ.  ರಾತ್ರಿ ಹತ್ತು ಹನ್ನೊಂದರ ವೇಳೆಯಲ್ಲಿ  ಹಲವು ಸಲ ತುಂಡಾದ ಟೇಪ್ ನ್ನು ಕೈಯಲ್ಲಿ ಹಿಡಿದಾಗ ಆ ಇರುಳಲ್ಲಿ ನನ್ನ ಮನಸ್ಸು ಮರುಳು ಬುದ್ದಿಯ ಬಗ್ಗೆ ಯೋಚಿಸುತ್ತದೆ. ಹಲವು ಸಲ ಮನೆಯವರು ಇದನ್ನೆಲ್ಲ ಕಂಡು ನನ್ನ ಹುಚ್ಚುತನಕ್ಕೆ ಮರುಗಿರಬೇಕು. ಬೇರೆ ಕೆಲಸ ಇಲ್ಲ ಇವರಿಗೆ ಅಂದು ಕೊಂಡಿರಬಹುದು.  ನನಗಾಗಿ ಮೌನಿಯಾಗುವವರು ಅವರು. ಆದರೆ ಮೌಲ್ಯ ಅರ್ಥವಾಗುವ ಸಂದರ್ಭಗಳೇ ಬೇರೆ.ಇ ಷ್ಟೆಲ್ಲಾ ಆದರೂ  ಹಲವು ಸಲ ಹೀಗೂ ಆಗುವುದುಂಟು.  ಎಲ್ಲವನ್ನು ಶುಭ್ರಗೊಳಿಸಿ ಸಜ್ಜುಗೊಳಿಸಿ  ಇನ್ನೇನು ಅಪರೂಪದ ಧ್ವನಿಯ ನಿರೀಕ್ಷೆಯಲ್ಲಿರುವಾಗ  ಯಾವುದೋ  ಸಿನಿಮಾ ಹಾಡು ಬಂದುಬಿಡುತ್ತದೆ  ಅದನ್ನು  ಆ ರಾತ್ರಿಯಲ್ಲಿ ಕೇಳಿದಾಗ ಆಗುವ ಭ್ರಮನಿರಸನ ಹೇಳುವುದಕ್ಕಿಲ್ಲ.  ಇದೊಂದು ರೀತಿಯಾದರೆ,  ಅಧ್ಬುತವಾದ ಪದಗಳನ್ನೋ ಅರ್ಥಗಾರಿಕೆಯನ್ನೊ ಹಿಮ್ಮೇಳವಾದನವನ್ನೋ ಕೇಳಿ ಒಬ್ಬನೇ ಚಪ್ಪಾಳೆ ತಟ್ಟಿ ಕೇಕೆ ಹಾಕಿ ಕುಣಿದದ್ದು ಇದೆ.  ಇದು ಮರುಳು ಎಂದರೂ, ಹಾಗೆ ಅನ್ನಿಸಿಕೊಳ್ಳುವುದರಲ್ಲಿ ಒಂದು ಸಂತೃಪ್ತಿ ಇರುತ್ತದೆ.

 ಪ್ರಸ್ತುತ ಈಗ ಕೇಳಿದ ಪದವನ್ನು ಹಲವು ಸಲ ಕೇಳಿದ ನೆನಪು ಇನ್ನೂ ಇದೆ. ಕ್ಯಾಸೆಟ್ ನಿಂದ ಕಂಪ್ಯೂಟರ್ ಗೆ ಏರಿಸಿದ ಮೇಲೆ ಅದನ್ನು ಮೊಬೈಲ್ ಗೆ ವರ್ಗಾಯಿಸಿ ಒಂದಷ್ಟು ಸಲ ಕೇಳಿದ ನಂತರವೇ ಆದಿನ ನಿದ್ದೆ ಹತ್ತುವುದು. ಈಗ ಈ ಪದ ಆ ನೆನಪನ್ನು ಮಾತ್ರವೇ ತಂದುಕೊಟ್ಟಿತು. ಪದವನ್ನು ಪುನಃ ಪುನರಾವರ್ತನೆಯಲ್ಲಿ ಕೇಳಿದೆ. ಅದಾಗಲೇ ಒಂದಷ್ಟು ಲೈಕುಗಳು ಥಾಂಕ್ಸ್ ಗಳು..ಜೈಕಾರ ಚಿಹ್ನೆಗಳು  ಆ ವಾಟ್ಸಪ್ ಸಂದೇಶಕ್ಕೆ ಉತ್ತರವಾಗಿ ಬಂದಾಗಿತ್ತು.  ಯೋಚಿಸಿದೆ ಶೇರ್ ಮಾಡಿದವರು ಮೀಸೆಯಲ್ಲಿ ಬೆರಳಾಡಿಸುತ್ತಿರಬಹುದೇ?  ಒಂದುಸಲ ನನ್ನ ಮೀಸೆಯಕೆಳಗೆ  ಮೆದುವಾಗಿ ನಗು ಹರಡಿತು. ಅಡುಗೆ ಮಾಡಿದ ಭಟ್ಟರು ಅಡುಗೆ ಕೋಣೆಯಲ್ಲಿ ಹೊಗೆಯ ನಡುವೆ ಸೊಂಟದಲ್ಲಿ ಕೈ ಹಿಡಿದು ಮಾಡಿದ ಭಕ್ಷ್ಯದ ಮಧ್ಯೆ ಕೃತಾರ್ಥತೆಯಿಂದಲೋ ಜಂಭದಿಂದಲೋ ನಿಂತುಕೊಂಡಿದ್ದರೆ, ಹೊರಗೆ ಅದನ್ನು ಬಡಿಸುವವ ಆ ಭ್ಯಕ್ಷಗಳ ಮೇಲಿನ  ಲೈಕುಗಳನ್ನು ಸ್ವೀಕರಿಸುತ್ತಿರುತ್ತಾನೆ.  ಇದು ಸಹಜ.  ಆದರೂ ಜ್ಞಾನಿಯಾದವ ಆಡುಗೆ ಕೋಣೆಯತ್ತ ಒಂದು ದೃಷ್ಟಿ ಹರಿಸದೇ ಇರುವುದಿಲ್ಲ.  ಇಲ್ಲಿ ಜ್ಞಾನದ ಅರಿವಾಗುವುದು ಕತ್ತಲೆಯ ಕೊಣೆಯಲ್ಲಿ ಜ್ಯೋತಿ ಬೆಳಗಿದಾಗ ಮಾತ್ರವೇ   ಆಜ್ಞಾನ,  ಅರಿವಿಗೆ ಬರುತ್ತದೆ.



ಮಾಧ್ಯಮಗಳು ಅತಿಯಾದಂತೆ ಪ್ರಪಂಚ ಕಿರಿದಾಗುತ್ತಾ ಬರುತ್ತದೆ. ಪ್ರಪಂಚ ನಮ್ಮ ಅಂಗೈಯಲ್ಲಿ ಕಾಣುವಾಗ  ನಮ್ಮ ಅಂಗೈಯನ್ನು ಮಾತ್ರಾ ನಾವು ಕಾಣುವುದೇ ಇಲ್ಲ. ಅರ್ಥಾತ್ ನಮ್ಮ ಅಸ್ತಿತ್ವ ಕಾಣದಾಗಿ ಸದಾ ಕಂಪಿಸುತ್ತಿರುತ್ತದೆ.  ಇಲ್ಲಿ ಮಾಧ್ಯಮ ಬೆಳೆದ ಪರಿ ಗಾಬರಿ ಹುಟ್ಟಿಸಿದರೂ   ಕೆಲವು ಸಲ ತವಕದಿಂದ ಅವಲೋಕಿಸುವ ಹಾಗೆ ಮಾಡಿಬಿಡುತ್ತದೆ. ಯಕ್ಷಗಾನಕ್ಕೆ ಬಂದಾಗ  ಎಲ್ಲೋ ಅವ್ಯಕ್ತವಾಗಿ ಧ್ವನಿ ಸುರುಳಿಯ ಸುಳಿಯ ನಡುವೆ ಅವಿತಿದ್ದ  ಧ್ವನಿ ಯ ತರಂಗಗಳನ್ನು ಎಬ್ಬಿಸಿ ಅದನ್ನು ಹರಿಯಬಿಟ್ಟಾಗಿದೆ. ಧ್ವನಿಗೆ ಕಿವಿಯಾಗುವಾಗ,  ಹಲವನ್ನು  ಕಂಡು ಕಾಣದಂತಹ ಜಾಣ ಕುರುಡು ಎನ್ನಬಹುದೋ  ಅಂತೂ ಕಣ್ಣು ಅರೆತೆರೆದ ನಯನವಾಗುತ್ತದೆ. ಇದು ಆ  ಧ್ವನಿಯ ಮಾಧುರ್ಯಕ್ಕೆ ವಶವಾಗಿ ಎನ್ನಬಹುದೇ? ಅನುಮಾನ.  ಎಲ್ಲವನ್ನು ಕ್ಷಣಮಾತ್ರದಲ್ಲಿ ಬದಿಗೆ ಸರಿಸುವ ಶಕ್ತಿ ಆ ಧ್ವನಿಯಲ್ಲಿರುತ್ತದೆ.

ಇಲ್ಲಿ ಅನಾಮಧೇಯವಾಗಿದ್ದು ಸ್ಮರಣೀಯವಾಗುವ ಹಲವು ಶಕ್ತಿಗಳಿರುತ್ತವೆ.  ಸಾಮಾನ್ಯವಾಗಿ ಯಕ್ಷಗಾನದ ಧ್ವನಿ ಸುರುಳಿಯಲ್ಲಿ ಭಾಗವತ ಮತ್ತು ಅರ್ಥಧಾರಿಗಳು ಬೇಗನೆ ಸ್ಮರಣೆಗೆ ಬಂದರೆ  ಇತರ ಹಿಮ್ಮೇಳಕಲಾವಿದರು ಅನಾಮಧೇಯರಾಗಿ ಉಳಿದುಬಿಡುತ್ತಾರೆ. ಈ ರೀತಿ ಅನಾಮಧೇಯವಾಗಿ ಉಳಿಯುವಾಗ ಆ ಧ್ವನಿ ಸುರುಳಿಯ ನಿರ್ಮಾಪಕನೂ ಅನಾಮಾಧೇಯನಾಗಿ ಬಿಡುತ್ತಾನೆ. ಹೀಗೆ ಅದರ ಯಶಸ್ಸಿಗೆ ಮೂಲಾಧಾರವಾದ ಶ್ರಮಜೀವಿಗಳು ಮತ್ತುಅ ಪ್ರತಿಭೆಗಳು ನಿರೀಕ್ಷಿತ ಮನ್ನಣೆಯನ್ನು ಕಳೆದುಕೊಳ್ಳುವಾಗ ಅದನ್ನು ತತ್ರಾಂಶಕ್ಕೆ ಪರಿವರ್ತನೆಗೋಳಿಸಿದವರ ಶ್ರಮವು ನಿರರ್ಥಕ ಕಥೆಯನ್ನೇ ಹೇಳುತ್ತದೆ. ಎಲೆ ಮರೆಯ ಕಾಯಿಯನ್ನು ಅಜ್ಞಾತವಾಗಿರಿಸಿ ಹಣ್ಣಾಗಿಸಿ ರುಚಿನೋಡುವ ಮನೋಭಾವ ಇಂದು ನಿನ್ನೆಯದಲ್ಲ.  ಅದಕ್ಕೆ ಮೌಲ್ಯವನ್ನು ಅಂಗೀಕಾರವನ್ನು ನೀಡುವ ಮನೋಭಾವ ಬೆಳೆದುಬರಬೇಕು.  

ಆದರು ಎಲ್ಲೋ ನಶಿಸಿ ನಾಮಾವಶೇಷವಾಗಿ ಹೋಗಬಹುದಾಗಿದ್ದ ಯಕ್ಷಗಾನದ ಧ್ವನಿಮುದ್ರಣವನ್ನು ನೀರೆರೆದು ಚಿಗುರಿಸಿ ಜೀವ ಬರಿಸಿದ ಸಾರ್ಥಕತೆಯ ತೃಪ್ತಿ ಅದು ಎಲ್ಲವನ್ನೂ ಮೀರಿಸಿಬಿಡುತ್ತದೆ. ಯಾರ ಕೃತಜ್ಜತೆಗೋ ಕಿರುನಗುವಿನ ಲೈಕ್ ಗಳಿಗೂ ಸರಿದೂಗಿಸಲಾಗದ ಅನಂತ ತೃಪ್ತಿಯದು. ಹೀಗೆ ಒಂದು ಸಲ ಒಂದು ಹಳತಾಗಿ ಧೂಳು ಹಿಡಿದು ಹೋದ ಧ್ವನಿ ಸುರುಳಿಯೊಂದು ಕೈಗೆ ಸಿಗುತ್ತದೆ. ಒಂದ ಷ್ಟು ವಿಶಿಷ್ಟ ಕ್ಯಾಸೆಟ್ ಗಳಲ್ಲಿ ಇದೊಂದು ಬಹಳ ಗಮನ ಸೆಳೆಯುತ್ತದೆ. ಹೊರ ಕವಚವಿಲ್ಲದ ಕೈಯಲ್ಲಿ ಸ್ಪರ್ಶಿಸಲೂ  ಹಿಂಜರಿಕೆ ಮೂಡಿಸುವಷ್ಟು ಕೊಳೆಯನ್ನು ತುಂಬಿದ ಕ್ಯಾಸೆಟ್ ಅದು. ತನ್ನೊಳಗಿನ ಜೀವಸೆಲೆಯ ಧ್ವನಿಯ ಸೆಲೆಯನ್ನು ಬತ್ತಿಸಿ ಅದಾವಾಗ ಕೊನೆಯ ಬಾರಿ ಹಾಡಿತ್ತೋ ಅರಿಯದು. ಬಹುಶಃ ಕೆಲವು ದಶಕಗಳಷ್ಟಾದರೂ ವರ್ಷ ಸಂದಿರಬೇಕು. ಅಷ್ಟು ಜೀರ್ಣಾವಸ್ಠೆಯ ಅದನ್ನು ಕೈಯಲ್ಲಿ ಹಿಡಿದು ಕುತೂಹಲದಿಂದ ಒಂದು ಸಲ ಹಾಡಿಸಿದೆ. ಅದ್ಭುತ  ಸ್ವರಭಾರದ ಧ್ವನಿ ಒಂದು ಸಲ ಹೊರಹೊಮ್ಮಿತು.  ಅಷ್ಟೆ ಕೆಲವು ಘಳಿಗೆಯಲ್ಲೇ  ತನ್ನಿಂದಾಗದೂ ಎಂದು ಉಸಿರು ಗಟ್ಟಿ ಸುಮ್ಮನಾಯಿತು. ಮೆತ್ತಿದ ಧೂಳು, ಬೂಸುರು ಇನ್ನೇನೋ ಅದರ ಚಲನೆಯನ್ನು ಸಹಿಸಲಿಲ್ಲ ಕಾಣಬೇಕು. ಆಗ ಮನಸ್ಸಿನ ಕುತೂಹಲ ಹೆಚ್ಚಾಯಿತು. ಶಿಥಿಲವಾದ ಕ್ಯಾಸೆಟ್ ನ ಹೊರಕವಚವನ್ನು ತೆಗೆದೆ. ಧೂಳು ಹಿಡಿದು ದಪ್ಪಗಾದ ಧ್ವನಿ ಸುರುಳಿಯನ್ನು ಮೆದುವಾಗಿ ತಡವಿ ಸ್ವಚ್ಛಗೊಳಿಸಿದೆ. ಶಿಥಿಲವಾದ ಕವಚದ ಬದಲು ಬೇರೆ ಹೊಸತಾದ ಕವಚವನ್ನು ಜೋಡಿಸಿ ಆತ್ಮ ಹೊಸ ಶರಿರವನ್ನು ಸೇರಿ ಮರುಜನ್ಮ ಪಡೆದಂತೆ ಕ್ಯಾಸೆಟ್ ಜೀವತಳೆದಾಗ   ನಿಟ್ಟುಸಿರೊಂದು ಬಂದು ಬಿಟ್ಟಿತು. ಆ ನಿಟ್ಟುಸಿರ  ಸಂತೃಪ್ತಿಯ ಭಾವ ಅಲ್ಲಿಯ ಯಕ್ಷಗಾನದ ಪದವನ್ನು ಕೇಳಿದಾಗ ತಾನೇ ತಾನಾಗಿ ಹರ್ಷೋದ್ಗಾರ ಪರಿವರ್ತನೆಯಾಯಿತು. ಹೀರೆ ರಾತ್ರಿ ಹತ್ತುಘಂಟೆಯ ಹೊತ್ತಿಗೆ ಈ ರೋಮಾಂಚನವನ್ನು ಅನುಭವಿಸುತ್ತೇನೆ ಎಂದರೆ ಅದು ಎಂತಹ ಯಕ್ಷಗಾನದ ಮಾಧುರ್ಯವಾಗಿರಬಹುದು? ಹೌದು ಬಹಳ ಅದ್ಭುತವಾದ ಧ್ವನಿ ಸಿರಿಯದು. ಎಲ್ಲೊ ಆದ ಕರ್ಣಪರ್ವ   ತಾಳಮದ್ದಲೆಯ ಭಾಗವದು.  ಅ ಭಾಗವತ ವರೇಣ್ಯರ ಕಂಠ ಸಿರಿಯ ಆ ಮಧುರ ಅನುಭವ ಮರೆಯುವುದಕ್ಕೆ ಸಾಧ್ಯವಿಲ್ಲ.  ಸಾಮಾನ್ಯವಾಗಿ ಇಂತಹ ಪದಗಳನ್ನು ಕೇಳಿದಾಗ ಅದನ್ನು ಒಂದು ಪದವಾಗಿ ತುಂಡರಿಸಿ  ಅಂತರ್ಜಾಲ ಮಿತ್ರರಿಗೆ ಹಂಚಿ ಸಂತಸ ಪಡುವುದು ಒಂದು ಅನುಭವ. ಆದರೆ ಅದನ್ನು ಅಂದು ಹಾಗೆ ಉಳಿಸಿ ಮರುದಿನ ಯಕ್ಷಚಿಂತನದ ಬ್ಲಾಗ್ ಗೆ ಏರಿಸಿದೆ.  ಬ್ಲಾಗ್ ತೆರೆಯಬೇಕೆಂದರೆ ಈ ಪದಗಲ ರಸಧಾರೆಯ ರಸವೃಷ್ಟಿಯಾಗಿಬಿಟ್ಟಿತು.  ಮಿತ್ರರೊಬ್ಬರು  ಅದೇ ಪದಗಳನ್ನು ಅದೇ ಭಾಗವತರಿಗೆ ಕೇಳಿಸಿ ಪ್ರತಿಕ್ರಿಯೆ ಕೇಳೀದಾಗ ಸ್ವತಃ ಭಾಗವತರೇ ಆ ಸ್ವರವನ್ನು ಗುರುತಿಸುವುದಕ್ಕೆ ಅನುಮಾನಿಸಿದರು. ಅಂತಹ ಅದ್ಭುತ ಸ್ವರ ಧಾರೆ ತನ್ನದೆಂದು ಅವರಿಗೆ ವಿಶ್ವಾಸವಿಲ್ಲ  ....!!! 

ಇಂತಹ ವಿಶಿಷ್ಟ ಧ್ವನಿ ಸುರುಳಿ ಇನ್ನಿಲ್ಲದೇ ಎಲ್ಲೋ ನಾಶವಾಗಿಬಿಡುತ್ತಿತ್ತು. ಅದಕ್ಕೆ ಮರುಜನ್ಮ ನೀಡಿದ ಈ ಕೈಗಳು ಧನ್ಯತೆಯನ್ನು ಅನುಭವಿಸಿದೆ ಎಂದರೆ ಅದು ಆತ್ಮ ತೃಪ್ತಿಯ ಸಂಕೇತವಲ್ಲವೇ? ಮನಸ್ಸು ಹೇಳುತ್ತಿರುತ್ತದೆ.  ಇಂದು ಎಲ್ಲಿಂದಲೋ ವಾಟ್ಸ ಪ್ ಗ್ರೂಪ್ ನಲ್ಲಿ ಸಿಕ್ಕಿ ಕೇಳಿದಾಗ ಇಂತಹ ಅಜ್ಞಾತ ಅನಾಮಧೆಯ ಕರ್ಮಕ್ಕೆ ಕೃತಜ್ಞತೆಯನ್ನು ತೋರದೇ ಇರಬಹುದು. ಆದರೆ ಮರುಜೀವಗೊಂಡ ಅಧ್ವನಿ ಅವ್ಯಕ್ತವಾದ ಕೃತಜ್ಞತೆಯನ್ನು ಪ್ರತಿ ಬಾರಿಯೂ ಸಲ್ಲಿಸಿದ ಅನುಭವವಾಗುತ್ತದೆ. .  ಆ ಅನುಭವ ಒಂದೇ ಸಾಕಲ್ಲವೇ? ಮತ್ತೂ ಒಂದು,  ಯಾವುದೇ ಕೃತಜ್ಞತೆಗೋ, ಅಥವಾ ಹೊಗಳಿಕೆಯನ್ನು ಪಡೆಯುವುದಕ್ಕೊ, ಇನ್ನಾವೂದೋ ಸ್ವಾರ್ಥಕ್ಕೆ ಅದನ್ನು ಮರುಜೀವಗೊಳಿಸಿದ್ದಲ್ಲ.    ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅದೊಂದು ಪರಿಪೂರ್ಣ ನಿಷ್ಕಾಮ ಕರ್ಮ.  ಹಾಗಾಗಿಯೇ ಹಲವು ಮಿತ್ರರು ಬಂದು ಕೇಳಿದಾಗ ಸಂತೋಷದಿಂದ ಹಂಚಿಕೊಂಡಿದ್ದೇನೆ. ಬಹುಶಃ ಪಡೆದವರ ಮನೋಭಾವ  ಗುರುತಿಸುವಲ್ಲಿ ನಾನು ಸೋತಿರಬಹುದು. ಆದರೂ ನನ್ನ ನಿಷ್ಕಾಮ ಕರ್ಮದ ಗೆಲುವು ನಿಸ್ವಾರ್ಥ ಹೃದಯಕ್ಕೆ ಮಾತ್ರವೇ ಅರ್ಥವಾಗಬಹುದು.  ಹೀಗೆ ಯಾವುದೇ ಸ್ವಾರ್ಥವಿಲ್ಲದ ಒಂದು ಸೇವೆ ಮಾಡುವ ಅವಕಾಶ ಒದಗಿತಲ್ಲ ಎಂಬ ಆತ್ಮ ತೃಪ್ತಿ ಸದಾ ಆವರಿಸಿರುತ್ತದೆ.  ಇದೊಂದು “ಪರಿಪೂರ್ಣ ಯಕ್ಷ ಸಿಂಚನದ   ನಿಷ್ಕಾಮ ಕರ್ಮ ಫಲ”  ಎನ್ನುವುದಕ್ಕೆ ಯಾವುದೇ ಬಿಗುಮಾನದ ಹಂಗಿಲ್ಲ.


ಯಕ್ಷಗಾನಂ ಗೆಲ್ಗೆ. 

Tuesday, November 17, 2015

ತೆಂಕಣದ ಚಂಪಕಾವತಿ (ಸುಧನ್ವ ಮೋಕ್ಷವೆಂಬ ತೆಂಕುತಿಟ್ಟಿನ ಪ್ರಸಂಗ)

ಗೋಪುರದ ತುದಿಯಲ್ಲಿರುವ ಬೃಹದ್ಗಾತ್ರದ  ಘಂಟೆಯಿಂದ ನಾದ ಹೊರಡಿಸಬೇಕಿದ್ದರೆ ಅದನ್ನು ಬಾರಿಸುವವನಿಗೂ ಅಷ್ಟೇ ಯೋಗ್ಯತೆ ಅಂದರೆ ಶಕ್ತಿ ಇರಬೇಕಾಗುತ್ತದೆ. ಹಾಗೆಂದು ಆ ಘಂಟೆ ಯಾವುದೇ ಸದ್ದು ಮಾಡದೇ ಸುಮ್ಮನಿದ್ದರೆ ಅದು ಘಂಟೆಯ ತೊಂದರೆಯೂ ಅಲ್ಲ. ಅದರ ಯೋಗ್ಯತೆಯನ್ನು ಅಷ್ಟಕ್ಕೆ ಸೀಮಿತವಾಗಿಸುವುದಕ್ಕೆ ಸಾಧ್ಯವಾಗುವುದೂ ಇಲ್ಲ. ಬಾರಿಸುವ ಯೋಗ್ಯರು ಇಲ್ಲದಾಗ ಘಂಟೆಯೂ ತನ್ನ ಯೋಗ್ಯತೆಯನ್ನು ಪ್ರಕಟಿಸುವುದಿಲ್ಲ ಅಷ್ಟೆ.  ಗೋಪುರದ ತುದಿಯಂಚಿನಲ್ಲಿ ಘಂಟೆಯೊಂದು ಮೌನವಾಗಿದೆ ಎಂದಾದರೆ ಅದನ್ನು ಬಾರಿಸುವವನು ಅಥವಾ ಎಳೆದು ಅಲುಗಾಡಿಸುವವನು ಇಲ್ಲವೆಂದೇ ತಿಳಿಯಬೇಕು.

ಹೀಗೆ ಮೌನವಾಗುವ ಘಂಟೆಯ ಮೌನ ಗಾನದಂತೆ ಯಕ್ಷಗಾನದ ಹಲವು ಯೋಗ್ಯತೆಗಳು ಗುಣಗಳು ಇಂದು ಸುಮ್ಮನಾಗುತ್ತವೆ.  ಅದರಲ್ಲೊಂದು ಯಕ್ಷಗಾನ ಪ್ರಸಂಗ ಸಾಹಿತ್ಯಗಳು. ಹಲವು ಯಕ್ಷಗಾನ ಪ್ರಸಂಗ ಕಾವ್ಯಗಳು ಯಕ್ಷಗಾನ ಪ್ರಪಂಚದ ಹೊರಗೆ ಅಪರಿಚಿತವಾಗಿದ್ದರೆ ಇನ್ನು ಕೆಲವು ಯಕ್ಷಗಾನಲೋಕದಲ್ಲೇ ತಮ್ಮ ಮೌನಗಾನವನ್ನು ಜಪಿಸುತ್ತಿವೆ ಎಂದರೆ ತಪ್ಪಾಗಲಾರದು. ಚಲಾವಣೆಯಾಗದ ವಾಹನದಂತೆ ಸುಮ್ಮನಿದ್ದರೆ ಅದರ ಚಾಲಕನಿಲ್ಲವೆಂದು ತಿಳಿಯಬೇಕೆ ಹೊರತು ಅದು ಚಲನಾಶಿಲವನ್ನು ಕಳೆದುಕೊಂಡಿದೆ ಎಂದು ಅರ್ಥವಲ್ಲ.  ಅಂತಹ ಒಂದು ಮೌನದಲ್ಲಿ ಹುದುಗಿಹೋದ ಪ್ರಸಂಗ ಎಂದರೆ ಸುಧನ್ವ ಕಾಳಗವೆಂಬ ಅಪ್ಪಟ ತೆಂಕುತಿಟ್ಟಿನ ಪ್ರಸಂಗ. ಇಲ್ಲಿ ತೆಂಕುತಿಟ್ಟಿನ ಪ್ರಸಂಗವೆಂದು ಉಲ್ಲೆಖಿಸುವುದಕ್ಕೆ ಕಾರಣವಿದೆ. ಸುಧನ್ವ ಕಾಳಗವೆಂಬ ಪ್ರಸಂಗ ಎರಡು ತಿಟ್ಟಿನಲ್ಲೂ  ಪ್ರಚಲಿತದಲ್ಲಿರುವ ಒಂದು ಪ್ರಸಂಗ. ಇಂದು ಎರಡು ತಿಟ್ಟಿನಲ್ಲಿ ಬಹುಜನಪ್ರಿಯವಾಗಿ ಆಡುತ್ತಿರುವ ಪ್ರಸಂಗ. ಇಂದು ಆಡುತ್ತಿರುವ ಈ ಪ್ರಸಂಗ ವಾಸ್ತವದಲ್ಲಿ  ಮೂಲತಃ ಬಡಗು ತಿಟ್ಟಿನಲ್ಲಿ ಆಡುತ್ತಿದ್ದಂತಹ ಪ್ರಸಂಗ ಆನಂತರ ಅದು ತೆಂಕುತಿಟ್ಟಿನಲ್ಲೂ ಬಹಳ ಜನಪ್ರಿಯವಾಯಿತು.  ಅತ್ಯಂತ ಸುಂದರವಾದ ಪ್ರಸಂಗ ನಡೆಯಿಂದಲೂ,  ಹಾಡುಗಳಿಂದಲೂ ಕೂಡಿರುವ ಈ ದೃಶ್ಯಕಾವ್ಯ ತಾಳ ಮದ್ದಲೆಗೂ ಬಯಲಾಟಕ್ಕೂ ಒಂದೇರೀತಿ ಹೊಂದಿಕೊಳ್ಳುವ ಒಂದು  ವಿಶಿಷ್ಟ ಪ್ರಸಂಗ. ಇಂದು ಜನಪ್ರಿಯವಾಗಿರುವ ಈ ಪ್ರಸಂಗ ಬಡಗಿನಿಂದ ತೆಂಕಿಗೆ ಬಂದ ಪ್ರಸಂಗ. ಇದರ ಲೇಖಕರು ಶ್ರೀ ವೆಂಕಟೇಶ ಭಕ್ತ ಮುಲ್ಕಿ. ಸುಧನ್ವ ಕಾಳಗವೆಂಬ ಈ ಪ್ರಸಂಗದ ಘಂಟೆಯ ಝೇಂಕಾರ ತೆಂಕು ಬಡಗು ಎಂಬ ಭೇದವಿಲ್ಲದೆ ಮೊಳಗುತ್ತದೆ. ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ಸುಧನ್ವ ಮೋಕ್ಷವೆಂಬ ಇನ್ನೋಂದು ಪ್ರಸಂಗ. ಇದು ಅಪ್ಪಟ ತೆಂಕುತಿಟ್ಟಿನಲ್ಲಿ ಬಳಕೆಯಲ್ಲಿದ್ದಂತಹ ಪ್ರಸಂಗ. ಆದರೆ ಈ ಘಂಟೆಯ ಝೇಂಕಾರ ಮೊಳಗುವುದೇ ಇಲ್ಲ ಎನ್ನಬಹುದು.

ತೆಂಕು ತಿಟ್ಟಿನ ಈ ಪ್ರಸ್ತುತ ಪ್ರಸಂಗ. ಪಾಂಡವರ ಒಡ್ಡೋಲಗದೊಂದಿಗೆ ಆರಂಭವಾಗುವ ಅಶ್ವಮೇಧದ ಪ್ರಸಂಗವಿದು. ಅಶ್ವಮೇಧದ ಸಿದ್ಧತೆಯಲ್ಲಿ ಧರ್ಮರಾಯನು ಭೀಮನನ್ನು ದ್ವಾರಕೆಗೆ ಕಳುಹಿಸುವಲ್ಲಿಂದ ಕಥಾಭಾಗ ಆರಂಭವಾಗುತ್ತದೆ.  ಅದಾಗಲೇ ಕುರುಕೇತ್ರ ಸಂಗ್ರಾಮವು ಮುಗಿದಿರುತ್ತದೆ. ಒಂದು ದಿನ ಬಂದ ವ್ಯಾಸ ಮುನಿಗಳು  ಸ್ವಗೋತ್ರವಧೆಯ ದೋಷ ಪರಿಹಾರಾರ್ಥವಾಗಿ ಅಶ್ವಮೇಧವನ್ನು ನಡೆಸುವಂತೆ ಹೇಳುತ್ತಾರೆ. ಅದರಂತೆ ಧರ್ಮರಾಯ ಭೀಮನನ್ನು ದ್ವಾರಕೆಗೆ ಕಳುಹಿಸುವಲ್ಲಿಂದ ಪ್ರಸಂಗ ಕಥೆ ತೆರೆದುಕೊಳ್ಳುತ್ತದೆ.

ನೀ ಕರತಾರೋ ಭೀಮ ಆ ಕಮಲಾಕ್ಷನ ||ಪ|| ಮಖವು ಸಮೀಪಕೆ  ಬಂದುದೆಂದು | ರುಕುಮಿಣಿಯರಸಗೆ ತಿಳಹು ಬೇಗಿಂದು | ಹರುಷದಿ ದ್ವಾರಕೆ ನಗರಕೆ  ಪೋಗಿ || ೨ ||  ತಡೆಯದೆ ಬಂದೆಮ್ಮ ಮೇಲತಿ ದಯದಿಂದ | ನಡೆಸಿಕೊಡಬೇಕೆಂದು ಮಖವನ್ನು ಭರದಿ || ೩ ||

ಮುಂದಿನ ಹಂತದಲ್ಲಿ ಅನುಸಾಲ್ವ ಪ್ರಕರಣ ಬಹಳ ರಂಜನೀಯವಾಗಿ ಹೆಣೆಯಲ್ಪಟ್ಟಿದೆ. ಅನುಸಾಲ್ವ ಪೂರ್ವ ಹಗೆತನದಿಂದ ಪಾಂಡವರ ಕುದುರೆಯನ್ನು ಅಪಹರಿಸುವುದು. ಅದನ್ನು ಬಿಡಿಸಿ ತರುವುದಕ್ಕಾಗಿ ಹಲವಾರು ವೀರಾಧಿ ವೀರರು ತೆರಳಿ ಸೋಲೊಪ್ಪಿಕೊಂಡಾಗ ಸ್ವತಃ ಶ್ರೀಕೃಷ್ಣ ಬಂದಾಗ ಅನುಸಾಲ್ವ ಸೋತು ಶರಣಾಗಿ ತನ್ನ ಸೇವೆಯನ್ನು ಪಾಂಡವರ ಪಕ್ಷಕ್ಕೆ ಮೀಸಲಾಗಿರಿಸುವನು,  ಅಲ್ಲಿಂದ ನಂತರ ಅರ್ಜುನ ದಿಗ್ವಿಜಯದಲ್ಲಿ ಅನುಸಾಲ್ವನ ಸಾನಿಧ್ಯವೂ ಇರುತ್ತದೆ.

ಕಂದ
          ಬಿಗಿದಪ್ಪಿ ಸಂತಸದಿಂ || ಖಗಪತಿವಾಹನ ತಾನತಿಕಾರುಣ್ಯದೊಳು|| ಪಗೆ ಬಿಟ್ಟನುಸಾಲ್ವನು ಕರ || ಕರಯುಗಳವ ಜೋಡಿಸಿ ಹರಿಪದಕೆರಗುತ ನುಡಿದನಂ ||
        

  ಸಾವೇರಿ ತ್ರಿವುಡೆ
          ರಕ್ಷಿಸೋ ಎನ್ನ ನೀನು |  ಮಮತೆಯಿಂದ | ರಕ್ಷಿಸೋ ಎನ್ನ ನೀನು||ಪ||  ರಕ್ಷಿಸು ಕರುಣ ಕಟಾಕ್ಷದಿ ಪಾಂಡವ | ಪಕ್ಷವನೊಲಿದೆನ್ನ | ರಕ್ಷಿಸು ಕರುಣದಿ ||೧||  ಪಕ್ಷಿವಾಹನ ವನಜಾಕ್ಷ ಸೇವಕ ಜನ || ರಕ್ಷದಾನವ ಕುಲಶಿಕ್ಷ ದೇವರ ದೇವ ||೨|| ಅರಿಯದೆ ನಾನಿಂಥ ದುರುಳ ಸ್ವಭಾವದಿ | ಮರುಳುಗೊಂಡೆನು ದೇವ ಶರಣು ಸಂಜೀವ ||೩||

ಬಡಗುತಿಟ್ಟಿನ  ಸುಧನ್ವಕಾಳಗದ ಈ ಸಂದರ್ಭದ ಭೈರವೀ ರಾಗ ಝಂಪೆ ತಾಳದಲ್ಲಿ ಪದ ಹೀಗಿದೆ.

ಕಂದೆರೆದನು ದಾನವನು | ಹರಿ | ಗೊಂದನೆಯ ಮಾಡಿದನು ||
ಬಂದುದು ನಿರ್ಮಲ ಮತಿಯ | ಗೋ | ವಿಂದಗೊಪ್ಪಿಸ್ಸಿದನು ಸ್ಥಿತಿಯ ||
ಇಂದಿರೆಯರಸೆನ್ನಿಂದ | ಅ | ಯ್ತಂದಪ ಕೃತಿ ಕ್ಷಮಿಸೆಂದ ||
ಎಂದಗೆಡಹಿದ ತನುವ  | ಮು | ಮುಕುಂದನೊಳಿಟ್ಟನು ಮನವ ||

ಶ್ರೀಕೃಷ್ಣನ ಕೃಪೆಯಲ್ಲಿ ವ್ಯಾಸರ ಆದೇಶದಂತೆ ಅಶ್ವ ಮೇಧದ ಸಕಲ ಸಿದ್ಧತೆಯೂ ಆಗಿ ಅಶ್ವ ವನ್ನು ಸಿಂಗರಿಸಿ ದಿಗ್ವಿಜಯಕ್ಕೆ ಸಿದ್ಧಪಡಿಸುತ್ತಾರೆ.

ಶಂಕರಾಭರಣ  ತ್ರಿವುಡೆ ತಾಳ
ಪನ್ನೀರಿನಿಂದಲಿ ಮೀಸಿ ಮೈಯಿಗೆ | ಕಮ್ಮೆಣ್ಣೆಗಳನು ಪೂಸಿ ಕಾಲಿಗೆ | ರನ್ನ ಗೆಜ್ಜೆಯ ಚೆಲುವ ಕಡಗಗಳನು ಬಿಗಿದು || ೧ || ಭರದಿ ಮುತ್ತಿನ ರತ್ನ ಸರವನು | ಕೊರಳಿಗಿಟ್ಟು ಪತ್ರಿಕೆ ಬರೆಸಿ || ಕರಣಿಕರೊಡೆನೆ ಕುದುರೆಯ ಫಣೆಯೊಳಿಟ್ಟ || ೨ || ಎಸೆವ ಕಸ್ತುರಿ ಗಂಧ ಅಕ್ಷತೆ ಸುಮಗಳಿಂದಾ ತೋಷಿಸಿ || ವಸುಮತೀಪತಿ ಪೂಜಿಸಿದನತಿ ಕುಶಲದಿಂದ || ೩ ||

          ಎಲ್ಲ ಸಿದ್ಧತೆಯನ್ನು ಮಾಡಿ ಅರ್ಜುನನಿಗೆ ಅಶ್ವ ರಕ್ಷಣೆಯ ಭಾರವನ್ನು ಹೊರಿಸಿ ಸಕಲ ಸೇನಾ ಸನ್ನಾಹಗಳೊಂದಿಗೆ ದಿಗ್ವಿಜಯಕ್ಕೆ ಅರ್ಜುನನನ್ನು ಹರಸಿ ಕಳುಹಿಸಿಕೊಡುತ್ತಾರೆ. ಹೀಗೆ ಸಕಲ ಸೇನಾ ಸನ್ನಾಹದೊಂದಿಗೆ ಅರ್ಜುನ ಕುದುರೆಯ ರಕ್ಷಣೆಯ ಭಾರಹೋತ್ತು ಮುನ್ನಡೆಯುತ್ತಾನೆ. ಹೀಗೆ ಬರುತ್ತಿರುವಾಗ ಶಬರಿ ಮುನಿಯ ಆಶ್ರಮಕ್ಕೆ ಹೊಕ್ಕು ಮುನಿಪನ ಅಶೀರ್ವಾದವನ್ನು ಬೇಡುತ್ತನೆ. ಆವಾಗ ಮುನಿಯು ಹೇಳುವ ಮಾತು ಬಹಳ ಮಾರ್ಮಿಕವಾಗಿರುತ್ತದೆ. ಮನೆಯಲ್ಲಿ ಕಾಮಧೆನುವನ್ನು ಕಟ್ಟಿ ಕಾಡಿನ ಹೆಬ್ಬುಲಿಯನ್ನು ಹುಡುಕುವಂತೆ ಮನೆಯಂಗಳದಲ್ಲಿ ಕಲ್ಪವೃಕ್ಷವು ಇರಲು ಬನ್ನಿಯ ಮರವನ್ನು ತಂದಂತೆ ವನಜಾಕ್ಷನಾದ ಶ್ರೀಕೃಷ್ಣನ ಕೃಪೆ ಇರಲು ಯಜ್ಜವನ್ನು ಮಾಡುವ ಮೌಢ್ಯ ಧರ್ಮರಾಯನಿಗೆ ಬಂತಲ್ಲ. ಶ್ರೀಕೃಷ್ಣ ಆಜ್ಞೆಯಿಂದಲೇ ಈ ಯಾಗವನ್ನು ಕೈಗೊಂಡಿರುವುದಾಗಿ ಮುನಿಪನಿಗೆ ತಿಳಿಸಿ ಕಾಲಿಗೆರಗುತ್ತಾನೆ. ಆಗ ಮುನಿಯು ಶಾಪಗ್ರಸ್ಥಳಾದ ಚಂಡಿ ಎಂಬ ಹಟಮಾರಿ ಹೆಂಗಸಿನ ಕಥೆಯನ್ನು ಹೇಳುತ್ತಾನೆ. ಈಗೆ ಶಾಪವಿಮೋಚನೆಗಾಗಿ ಅರ್ಜುನನ ಆಗಮನವನ್ನೇ ಎದುರು ನೋಡುತ್ತಿರುತ್ತಾಳೆ. ಪರೋಕ್ಷವಾಗಿ ಅರ್ಜುನನ ಆಗಮನವು ದೈವ ಸಂಕಲ್ಪ ಎಂಬುದಾಗಿ ಮುನಿಪ ಹೇಳುತ್ತಾನೆ.

            ನಂತರ ಚಂಡಿಯ ವಿಶಾಪವಾಗಿ ಯಜ್ಞಾಶ್ವವು ಚಂಪಕಾಪುರವನ್ನು ಪ್ರವೇಶಿಸುತ್ತದೆ. ಚಂಪಕಾ ಪುರದ ಅರಸ ಹಂಸಕೇತ ಆತನಿಗೆ ಆತ ಧರ್ಮಾತ್ಮನೂ ಭಗವದ್ಭಗ್ತನೂ ಆದ  ವೀರವೈಷ್ಣವ ಪಂಥದವನು. ಅತ್ಯಂತ ಭಾಗ್ಯವಂತನಾದ ಈತನು ಏಕ ಪತ್ನೀವೃತಸ್ಥನಾಗಿ ನಾಲ್ಕು ಮಕ್ಕಳೊಂದಿಗೆ ಪ್ರಜೆಗಳನ್ನು ಪೊರೆಯುತ್ತಿದ್ದನು.  ಹೀಗಿರಲು ಪಾಂಡವಾಶ್ವವು  ಚಂಪಕಾವತಿಯ ಉದ್ಯಾನವನಕ್ಕೆ ಪ್ರವೇಶಿಸುತ್ತದೆ. ಕಾವಲುಭಟರು ಅರಸ ಹಂಸಕೇತನಿಗೆ ವರದಿ ಒಪ್ಪಿಸುತ್ತಾರೆ. “ ದೇವ ಬಂದಿದೆ ಯಶ್ವತಾವುದ್ಯಾವನದೊಳು..ಕರಿತುರಗ ರಥದಂತಿ ಸಂಕುಲದಿಂದ”  ಯಜ್ಞಾಶ್ವವು ಪ್ರವೇಶ ಮಾಡಿದೆ. 

            ಚಾರರಿತ್ತ ಸುದ್ದಿಯನ್ನು ಕೇಳಿ ಹಂಸಕೇತ ಎಲ್ಲವನ್ನು ಪರಿಕಿಸಿ ಕುದುರೆಯ ಮೇಲೆ ಬರೆದ ಫಲಕವನ್ನು ಕಾಣುತ್ತಾನೆ.
            ಕೇದಾರಗೌಳ : ಝಂಪೆ ತಾಳ.

ಹಸ್ತಿನಾಪುರದರಸನು | ಅರಿನೃಪರ | ಮಸ್ತಕಾಂಕಿತ ಶೂರನು || ಪೃಥ್ವಿಯೊಳಗತಿ ಧೀರೆನು | ಪುಂಡರಿಕ ಮಿತ್ರಜಾತನ ತನಯನು || ೧ || ಬಿಟ್ಟು ಹಯವನು ಮಖಕೆ | ಕಪ್ಪವನು ಕೊಟ್ಟು ಬರುವುದು ಸಹಯಕೆ || ದಿಟ್ಟರಾದವರು ದುರದಿ | ಅಶ್ವವನು | ಕಟ್ಟಿ ನಿಲುವುದು ಸಮರದಿ ||
ತಂದೆಯ ಮನದಿಂಗಿತವನ್ನು ಅರಿತು ಮಗ ಸುಧನ್ವ ನ ವೀರರಸದ ನುಡಿಗಳು ಹೀಗಿದೆ.
ಮಾರವಿ : ಅಷ್ಟತಾಳ
ಬರಿದೆ ಚಿಂತಿಪುದ್ಯಾಕೆ |  ಅಪ್ಪಯ್ಯ ಈ | ತುರಗ ಕಟ್ಟಿ ಸುವುದಕ್ಕೆ || ಗರುವದೊಳೆಮ್ಮಯ ಪುರಕೆ ಬಂದಿರುವಂಥ| ಅರಿಗಳ ಪಡೆಯನ್ನು ಸವರುವೆ ನಿಮಿಷದಿ ||
ಮುರಿವೆ ಪಾರ್ಥನ ಬಿಂಕವ | ಸಂಗ್ರಾಮದಿ ಮೆರೆವೆ ಕಟ್ಟಿಸು ಅಶ್ವವ || ಹರಿಬಕೊದಗಿ ಬಂದರಾ ಕೃಷ್ಣರಾಯನ | ಚರಣಕಮಲ ಮೆಚ್ಚಿಸುವೆ ನಾನೀಕ್ಷಣದಿ ||

            ಮಗನ ಪೌರುಷದ ನುಡಿಗೆ ಹಂಸಕೇತ ಸಂತಸಪಡುತ್ತಾನೆ.
ಮಧುಮಾಧವಿ ಯ ಏಕತಾಳದ ಪದ ಹೀಗಿದೆ.

ವರಮಂತ್ರಿಗಳು ಕೇಳಿ ಧರೆಯ ಭಾರವನು | ಪರಿ | ಹರಿಸಲು ಕ್ಷೀರ ಶಯನ ತಾನು |
ಧರೆಯೊಳಗವತರಿಸುವನೆಂಬರು | ಶ್ರೀ | ಯರಸನ ದರುಶನ ನಮಗಿಲ್ಲವಲ್ಲ ||
ಈ ಕುದುರೆಯ ಕಟ್ಟಿಕೊಂಡೀಗ ರಣದಿ | ಆ ಕುಂತೀಶಯನ ದಣಿಸಲು ಭರದಿ ||
ಆಕಳು ಕರು ಹುಡುಕುವ ತೆರದಿಂದಲಿ | ಗೋಕುಲ ಪತಿ ಬಹನೀ ಕ್ಷಣದಲ್ಲಿ ||
ರೂಢಿಯೊಳಿಷ್ಟು ದಿವಸವನ್ನು ಬರಿದೆ | ಮೂಢತನದೊಳಲ್ಪ ಭಾಗ್ಯದಿ ಮೆರೆದೆ ||
ಗಾಢದೊಳೈದಿ ಲಾಯದಿ ಕಟ್ಟು ಹಯವ | ನೋಡಬಹುದು ಕೃಷ್ಣರಾಯನ ಪದವ ||

ಮ ತ್ತೊಂದು ಪ್ರಸಂಗದ ರಾಗ ಪಂತುವರಾಳಿ ಅಷ್ಟತಾಳದ ಪದ ಹೀಗಿದೆ

ಮಂತ್ರಿಗಳಿರ ಕೇಳಿರೀಗ | ಶ್ರೀ | ಕಾಂತನ ಕಾಣುವ ಯೋಗ ||
ಬಂತು ಮತ್ಪುಣ್ಯವನೇನೆಂಬೆ ವಹಿಲದಿ |
ಕುಂತಿಸುತನಧ್ವರದ ಹಯ ತ | ನ್ನಂತ್ಗೆ ತಾನೇ ಬಂದುದಿಲ್ಲಿಗೆ ||

            ವೀರ ವೈಷ್ಟವನಾದ ಹಂಸಧ್ವಜ ನೃಪಾಲನ ಚಿಂತನೆಯಲ್ಲಿ ವೈಷ್ಣವ ಪಂಥದ ಚಿಂತನೆಯನ್ನು ಪ್ರಸಂಗದಲ್ಲಿ ಸ್ಥೂಲವಾಗಿ ಅಳವಡಿಸಲಾಗಿದೆ ಎನ್ನಬಹುದು. ಈ ಪದಗಳು ಜೀವನ ಸಾರವನ್ನು ಬಿಂಬಿಸುವಲ್ಲಿ ಬೆಳಕನ್ನು ಚೆಲ್ಲುತ್ತದೆ. ವೈಷ್ಣವನಾದವನಿಗೆ ಎಲ್ಲವನ್ನೂ ಮೀರಿದ ಬದುಕಿನ ಒಂದು ಹಂತವೆಂಬುದು ಇದ್ದರೆ ಅದು ಶ್ರೀಕೃಷ್ಣ ದರ್ಶನ. ಅದನ್ನೇ ಪರಮ ಪದ ಎಂದು ಕರೆಯುವುದು. ವೈಷ್ಣವನಾಗಿ ಜನ್ಮ ತಳೆದ ಮೇಲೆ ಆ ಬದುಕಿಗೆ ಬಾಲ್ಯದ ಆಶೆಗಳಾಗಲೀ ಯೌವ್ವನದ ಸುಖಭೋಗದ ಬಯಕೆಗಳಾಗಲೀ ಮುಖ್ಯವಾಗುವುದಿಲ್ಲ. ಪ್ರಾಪಂಚಿಕ ಬದುಕಿನ ಎಲ್ಲ ವಿಷಯಗಳ ಅಂತ್ಯವನ್ನು ಕಾಣುವುದು ಶ್ರೀಹರಿ ಎಂಬ ಪರಮ ಪದದಲ್ಲಿ. ಆ ಪರಮ ಪದ ಸಿದ್ಧಿಯಾದರೆ ಮತ್ತೆ ಈ ಐಹಿಕ ಬದುಕಿನ ಅಗತ್ಯವಿಲ್ಲ ಎಂದೇ ಬಗೆದಂತೆ ಈ ಪ್ರಸಂಗ ಸನ್ನಿವೇಶ ಕಾಣುತ್ತದೆ.
            ಅಶ್ವಮೇಧದ ಕುದುರೆ ರಾಜ್ಯವನ್ನು ಹೊಕ್ಕಾಗ ಭಗವನ್ ಸಾನ್ನಿಧ್ಯದ ಮೋಕ್ಷಪದ ಹಾದಿಯನ್ನೇ ಇಲ್ಲಿ ಕಾಣುತ್ತಾರೆ. ಹಾದಿಯಲ್ಲಿ ಸಾಗುವುದಕ್ಕೆ ಬೆಳಕಾಗಿ ಈ ಕುದುರೆಯನ್ನು ಕಂಡು,  ಮಿಡುಕುಳ್ಳವರು ಕಾಧುವುದು ಎಂಬ ಉಕ್ತಿಯನ್ನು ಕೇವಲ ದೈಹಿಕ ಶಕ್ತಿಯಾಗಿ ಹಂಸಧ್ವಜ ಗುರುತಿಸುವುದಿಲ್ಲ. ಬದಲಾಗಿ ಮಿಡುಕು ಎಂಬುದು ತನ್ನೊಳಗಿನ ಅಂತಃ ಶಕ್ತಿಯ ಪರೀಕ್ಷೆ ಎಂಬುದಾಗಿ ತಿಳಿದು ಅಶ್ವಮೇಧ ಎಂಬುದು ಅದರ ಪಣವಾಗಿ ಪರಿಗಣಿಸುತ್ತಾನೆ. ಈ ಚಿಂತನೆಯಿಂದಲೇ ಢಂಗುರ ಸಾರುತ್ತಾನೆ. ಆಕಳು ಬಾರದಾಗ ಕರುವನ್ನು ಎತ್ತಿಕೊಂಡು ಒಯ್ದು ಕಟ್ಟಿದಂತೆ ಕರುವನ್ನು ಕಟ್ಟುವ ಪ್ರಯತ್ನ ಮಾಡಿಬಿಡುತ್ತಾನೆ. ಕರು ಕರೆದಾಗ ಅಕಳು ಬರಲೇಬೇಕಲ್ಲ? ಅರ್ಜುನನ ವ್ಯಕ್ತಿತ್ವದಲ್ಲಿ ಸ್ವತಃ ಅರ್ಜುನ ಕಾಣದದ ವಸ್ತುವೊಂದನ್ನು ಹಂಸಧ್ವಜ ಗುರುತಿಸುತ್ತಾನೆ. ಆದುದರಿಂದಲೇ ಅತ್ಯಂತ ಕಠಿಣವಾದ ರಾಜಾಜ್ಞೆಯನ್ನು ಹೊರಡಿಸುತ್ತಾನೆ. ಯಾರು ಹಿಂದುಳಿಯುತ್ತಾರೋ ಅವರನ್ನು ಕಾದ ಎಣ್ಣೆಯ ಕೊಪ್ಪರಿಗೆಗೆ ಎಸೆಯಲಾಗುತ್ತದೆ.  ತಾತ್ಪರ್ಯ ಇಷ್ಟೆ, ಭಗವಂತನನ್ನು ಕಾಣುವಲ್ಲಿ ಯಾರು ಔದಾಸಿನ್ಯವನ್ನು ತೋರಿಸುತ್ತಾರೋ ಅವರು ಆ ರಾಜ್ಯದಲ್ಲಿ ಯಾಕೇ ಈ ಭೂಮಿಯ ಮೇಲೆ ಬದುಕುವ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಈ ಭೂಮಿಯ ಮೇಲಿನ ಬದುಕು ಎಂಬುದು ಶ್ರೀಕೃಷ್ಣನ ಪರಮ ಪದದ ಲಕ್ಷ್ಯವೆಂದೇ ಪರಿಗಣಿಸಲ್ಪಡುತ್ತದೆ. ಯಾರ ಸಾವನ್ನೂ ಸಹ  ಸಾವು ಅಥವಾ ಅಂತ್ಯ ಎಂದು ಬಗೆಯುವುದಿಲ್ಲ.
            ಅತ್ಯಂತ ಉದಾತ್ತವಾದ ತತ್ವವನ್ನು ಸರಳರೀತಿಯಲ್ಲಿ ಈ ಪ್ರಸಂಗದಲ್ಲಿ ಚಿತ್ರಿಸಲಾಗಿದೆ.
            ಮುಂದೆ ಸುಧನ್ವ ತನ್ನ ತಾಯಿಯಲ್ಲಿ ಧುರಕ್ಕಾಗಿ ಅಪ್ಪಣೆಯನ್ನು ಕೇಳುವ ಪದ್ಯ.
          
  ಘಂಟಾರವ ಏಕ ತಾಳ :

ಕರುಣಿಸು ತಾಯೆ ನೀ ಎನ್ನ ಭಿನ್ನಪವನ್ನು | ನರನೊಳು ದುರಕೆನ್ನ ಬೇಗ || ಹರುಷದಿ ಕಳುಹಿಸು ಹರಸಿ ಎನಲು ಕೇಳಿ ತರಳನೊಳೆಂದಳಾ ಮಾತೆ||
ಕಂದ ಕೇಳೆಲೊ ಇಂದ್ರ ತನಯನೊಳನುವರ | ಒಂದೆ ಮನಸಿನೊಳು ಗಯ್ಯೋ || ಇಂದಿರೆಯರಸನ ನೋಡಬಹುದು ನೀನೀ | ಗೊಂದಳಾತ್ಮಜನೊಳು ಜನನಿ ||

ತಾಯಿ ಹೆತ್ತ ಒಡಲನ್ನು ಮರೆತು ಮಗನನ್ನು ಗೆದ್ದು ಬಾ ಎಂದು ಬೀಳ್ಕೊಡುತ್ತಾಳೆ. ಗೆಲುವು ಎಂಬು ಪಾರ್ಥನವಿರುದ್ದ ಅಲ್ಲ. ಅದು ಐಹಿಕ ಬದುಕಿನ ವಿರುದ್ದದ ಗೆಲುವು ಎಂದು ಸಾರಿ ಹೇಳುತ್ತಾಳೆ. ಪರಮೋನ್ನತಿಯ ಶಿಖರದ ಮೆಟ್ಟಲಾಗಿ ಈಗ ಅರ್ಜುನನಿದ್ದಾನೆ.

ತಾಯಿ ಮತ್ತು ಸಹೋದರಿಯರ ಹಾರೈಕೆಗಳನ್ನು ಸ್ವೀಕರಿಸಿದ ನಂತರ ಪ್ರಸಂಗದ ಅತ್ಯಂತ ಮುಖ್ಯ ಸನ್ನಿವೇಶಗಳಲ್ಲಿ ಒಂದು ಸತಿ ಪ್ರಭಾವತಿ ಜತೆಗಿನ ಸಮಾಗಮ. ಸರ್ವಾಲಂಕರ ಭೂಷಿತೆಯಾಗಿ ಪತಿಯಾಗಮನವನ್ನೇ ಕಾಯುತ್ತಿರುವಾಗ ಶಸ್ತ್ರ ಸನ್ನದ್ಧನಾಗಿ ಬಂದ ಸುಧನ್ವನನನ್ನು ಕಂಡಾಗ ಅಚ್ಚರಿಯಿಂದ ಕೇಳುತ್ತಾಳೆ.

ಕೇದಾರಗೌಳ ಅಷ್ಟ ತಾಳ
ನಲ್ಲ ನೀನಿಷ್ಟುಗ್ರ ಕೋಪದಿ ಪೋಗುವು | ದೆಲ್ಲಿಗೆ ಪಯಣವಿದು || ಸೊಲ್ಲಿಸಬೇಕು ತನ್ನೊಡನೆಂದು ಪ್ರೀತಿಯೊಳ್ | ಪ್ರಫುಲ್ಲ ಲೋಚನೆ ಪೇಳ್ದಳು ||  ಎಲೆಗೆ ಕೇಳೆನ್ನಯ ನರನ ವಾಜಿಯ ಕಟ್ಟಿ | ಕಲಹಕೊದಗಲಿಕಾನು || ಛಲದೆಣಿಕೆಯನುಂಟು ಮಾಡಿಯೆ ಕಾದಿ | ಫಲುಗುಣನೊಡನೆ ನಾನು || ೨ || ರಮಣ ನೀ ಲಾಲಿಸು ಆ ಸವ್ಯ ಸಾಚಿಗೆ | ಕಮಲ ನಾಭನು ಮಿತ್ರನು || ಸಮರದೊಳಪಜಯವದು ಸೋಂಕಲರಿಯದು | ಅಮರೇಂದ್ರ ತನಯನಿಗೆ ||

ಶ್ರೀ ಹರಿಗೆ ಪ್ರಿಯನಾದ  ಪಾರ್ಥನ ಎದುರು ಹೋರಾಡಿ ತನ್ನ ಪತಿ ಗೆಲುವುದಕ್ಕುಂಟೆ?  ಮಡದಿಯ ಆತಂಕದಿಂದ ಸುಧನ್ವ ಆವೇಶ ಭರಿತನಾಗುತ್ತಾನೆ.

ಮಾರವಿ : ಏಕತಾಳ
ಬಿಡು ಬಿಡು ಮಾನಿನಿ ನುಡಿಯದಿರಾತನ | ಸಡಗರವೆನ್ನೊಡನೆ || ಕಡಿದು ರಥಾಶ್ವವ ಬಡಿವೆನು ಸೇನೆಯ | ಮಡದಿ ಕೇಳೀ ಕ್ಷಣದಿ || ೧ || ಬಿಟ್ಟಂಬುಗಳನು ಕುಟ್ಟಿ ಮುರಿದು ನಾ ದಿಟ್ಟ ಪಾರ್ಥನ ಧುರದಿ | ಥಟ್ಟನೆ ಮುರಿದು ಶ್ರೀಕೃಷ್ಣನ ಕರೆಸದೆ | ಬಿಟ್ಟರೆ ಮೀಸೆಯಿದೆ || ೨ ||

ಸುಧನ್ವ ಪ್ರಭಾವತಿಯ ಸಂಭಾಷಣೆ ಇಲ್ಲಿಯೂ ರಸವತ್ತಾಗಿ ಹೆಣೆಯಲ್ಪಟ್ಟಿದೆ. ಇಲ್ಲಿ ಪ್ರಸಂಗದ ಓಘಕ್ಕೆ ಅಡ್ಡಿಯಾಗಬಾರದು. ಪ್ರಭಾವತಿಯದ್ದು ಇಲ್ಲಿ ಮೂರು ಬಗೆಯ ಅಭಿವ್ಯಕ್ತಿಯ ಪಾತ್ರ. ಆರಂಭದಲ್ಲಿ ಸಹಜವಾಗಿ ಲಜ್ಜೆಯಿಂದಲೂ ಅಲ್ಪ ಶೃಂಗಾರದಿಂದಲೂ ಗಂಡನನ್ನು ಎದುರುಗೊಂಡರೆ ಆನಂತರ ಗಂಡನನ್ನು ಕಂಡಾಗ ಆತಂಕ ಮನಳಾಗುತ್ತಾಳೆ. ಶಸ್ತ್ರ ಸನ್ನದ್ಧನಾಗಿ ವೀರ ಕ್ಷತ್ರಿಯನಂತೆ ಯುದ್ಧಕ್ಕೆ ಹೊರಟ ಕಾರಣದಿಂದ ಆಕೆಗೆ ಆತಂಕವಾಗುವುದಿಲ್ಲ.  ಕ್ಷತ್ರಿಯರಿಗೆ ಯುದ್ದವೆಂಬುದು ಶಿರದ ತಿಲಕದಂತೆ. ವೀರ ಕ್ಷತ್ರಿಯಾಣಿ,  ಮೇಲಾಗಿ ವೀರ ವೈಷ್ಣವ ವನಿತೆ. ಯುದ್ದ ಎಂದಿಗೂ ಆತಂಕದ ವಿಚಾರವಾಗುವುದಿಲ್ಲ. ಆದರೆ ಇಂದು ಯುದ್ದದಲ್ಲಿ ಪ್ರತಿಭಟನಾಗಿರುವುದು ವೀರ ಪಾರ್ಥ. ಶ್ರೀಕೃಷ್ಣನ ಪರಮ ಆಪ್ತ. ಇಲ್ಲಿ ಗಂಡ ಗೆದ್ದು ಬರುವುದಕ್ಕೆ ಸಾಧ್ಯವೇ? ಹಾಗಾದರೆ? ಅಪೂರ್ಣವಾಗುವ ತನ್ನ ಬದುಕಿನ ಬಗ್ಗೆ ಆತಂಕ ಪಡುತ್ತಾಳೆ.
ಸಹಜವಾಗಿ ಬಹುತೇಕ ಪ್ರಸಂಗಗಳಲ್ಲಿ ಗಂಡನಾದನು ಯುದ್ದಕ್ಕೆ ಹೊರಡುವುದು ಹೆಂಡತಿ ಅಥವಾ ತಾಯಿ ಬಂದು ತಡೆಯುವುದು.ಸಾಮಾನ್ಯ. ಆದರೆ ಈ ಪ್ರಸಂಗ ವಿಶಿಷ್ಟ ಅನ್ನಿಸಿಕೊಳ್ಳುವುದು ಇದೇ ಕಾರಣದಿಂದ. ಪಾತ್ರಧಾರಿಯಾದವನು ಇದರ ಆಳ ಅಗಲವನ್ನು ಅರ್ಥ ಮಾಡಿಕೊಂಡಲ್ಲಿ ಮಾತ್ರವೇ ಪ್ರಸಂಗಕ್ಕೆ ಕವಿಯ ಆಶಯಕ್ಕೆ ನ್ಯಾಯ ಒದಗಿಸುವುದಕ್ಕೆ ಸಾಧ್ಯವಾಗುತ್ತದೆ. ಗಂಡ ಯುದ್ದಕ್ಕೆ ಹೋಗಿ ಸತ್ತರೆ ತಾನು ವಿಧವೆಯಾಗುತ್ತೇನೆ ಎಂಬ ದುಗುಡವಿಲ್ಲ. ಆದರೂ ಆಕೆಗೆ ಆತಂಕ. ಇದನ್ನೇ ಪ್ರಸಿದ್ಧ ಕಲಾವಿದ ಶ್ರೀ ಕೋಳ್ಯೂರು ರಾಮಚಂದ್ರರಾವ್ ಸಂವಾದವೊಂದರಲ್ಲಿ ಹೇಳಿರುತ್ತಾರೆ.
ಪ್ರಭಾವತಿಯ ಪಾತ್ರ ವಿಶಿಷ್ಟವಾದ ಪಾತ್ರ. ಆ ಪಾತ್ರದಲ್ಲಿ ಶೃಂಗಾರವಿಲ್ಲ. ಆ ಪಾತ್ರದ ಒಳ ತುಡಿತವನ್ನು ಅರ್ಥ ಮಾಡಿಕೊಂಡು ಅದನ್ನು ರಂಗದಲ್ಲಿ ಅಳವಡಿಸಿಕೊಳ್ಳಬೇಕು. ಯುದ್ದಕ್ಕೆ ಹೊರಟು ನಿಂತ ಗಂಡನನ್ನು ಸಮಾಗಮಕ್ಕೆ ಆಹ್ವಾನಿಸುತ್ತಾಳೆ. ಅದು ಶೃಂಗಾರದಿಂದಲೋ ವಿರಹ ವೇದನೆಯಿಂದಲೋ ಅಥವಾ ಇನ್ನಾವುದೋ ವಾಂಛೆ ಬಯಕೆಗಳಿಂದ ಅಲ್ಲ. ಪರಮ ವೈಷ್ಣವನಾದವನ ಬದುಕಿನ ಪರಮ ಲಕ್ಷ್ಯವೇನು? ಅದನ್ನು ತಂತುವಾಗಿರಿಸಿಕೊಂಡು ಇಲ್ಲಿ ಬರುವ ಪ್ರತಿಪಾತ್ರಗಳು ಹೆಣೆಯಲ್ಪಟ್ಟಿದ್ದೆ. ಪ್ರತಿಯೊಂದು ಪಾತ್ರದ ಸ್ಪಂದನೆಯ ಮುಖ  ಆ ಪರಮ ಲಕ್ಷ್ಯದೆಡೆಗೆ ಇರುತ್ತದೆ. ಏನು ಆ ಲಕ್ಶ್ಯ?  ಮೋಕ್ಷ್ಯ ಪ್ರಾಪ್ತಿ. ಭಗವಂತನ ದರ್ಶನವೇ ಮೋಕ್ಷ. ಅದುವೇ ಪರಮ ಲಕ್ಷ್ಯ.  ಆ ತುಡಿತ ಪ್ರಭಾವತಿಯಲ್ಲೂ ವ್ಯಕ್ತವಾಗುತ್ತದೆ.
ಚರಮದಲ್ಲಿ ಸಿದ್ದಿಸುವ ಪರಮ ಪದದಿಂದ ಸುಧನ್ವನಿಗೆ ಯಾವುದೇ ದೈಹಿಕ ಬಯಕೆಗಳು ಇರುವುದಿಲ್ಲ. ಆ ಎಲ್ಲ ಬಯಕೆಗಳು ಅಲ್ಲಿ ಇರದೆ ಇರುವುದರಿಂದಲೇ ಸುಧನ್ವ ಸಂದಿಘ್ದವನ್ನು ಅನುಭವಿಸುವಂತಾಗುತ್ತದೆ. ವೀರ ವೈಷ್ಣವನಾದವನಿಗೆ ಪರಮಲಕ್ಷ್ಯವಾದ ಭಗವಂತನ ದರ್ಶನದ ಅವಕಾಶ ಸಿದ್ದಿಯಾಗುವಾಗ ಉಳಿದ ಪ್ರಾಪಂಚಿಕ ಸುಖಾಭೋಗಗಳು ಗೌಣವಾಗುತ್ತದೆ. ಶ್ರೀ ಕೃಷ್ಣ ದರ್ಶನವಾದ ಮೇಲೆ ಬದುಕಿನಲ್ಲಿ ಮತ್ತೆ ಸಾಧಿಸುವುದಕ್ಕೆ ಏನೂ ಉಳಿದಿರುವುದಿಲ್ಲ. ಅದುವೇ ಪರಮ ಪದ. ಇದನ್ನು ಅರಿತಿದ್ದ ಪ್ರಭಾವತಿಯಾಗಲೀ ತಾಯಿ ಅಥವಾ ಸಹೋದರಿಯೇ ಆಗಲಿ ಯುದ್ಧಕ್ಕೆ ಹೋಗುವಂತೇ  ಪ್ರೇರೇಪಿಸುತ್ತಾರೆ. ತಾಯಿಯಂತೂ ಹೇಳಿಯೇ ಬಿಡುತ್ತಾಳೆ ಸೋತು ಹಿಂದಿರುಗದಿರು. ಅಂದರೆ ಅಲ್ಲಿ ವೀರ ಮರಣವನ್ನು ಅಪ್ಪಿದರೂ ಅದು ಮೋಕ್ಷಸಿದ್ದಿಯಾದಂತೆ. ಅದುದರಿಂದಲೇ ಇಲ್ಲಿ ಪ್ರಭಾವತಿಯ ಬೇಡಿಕೆ ಅತಿ ಮಹತ್ವವನ್ನು ಪಡೆಯುತ್ತದೆ. ಅಕೆಗೆ ಅರಿವಿದೆ. ಈ ಯುದ್ದದಲ್ಲಿ ಗೆದ್ದರೂ ಭಗವಂತನ ದರ್ಶನದಿಂದಲೇ ಮೋಕ್ಷ ಸಿದ್ಧಿಯಾಗುತ್ತದೆ. ಆದರ ತನ್ನ ಬದುಕಿನ ಮೋಕ್ಷ ಯಾವುದರಿಂದ?  ಇನ್ನೂ  ಪುತ್ರವತಿಯಾಗದ ಆಕೆ ತನ್ನ ಬದುಕಿನ ಗಮ್ಯವನ್ನು ಯೋಚಿಸುತ್ತಾಳೆ.  
ಯಕ್ಷಗಾನ ಮತ್ತು ಕಲಾವಿದನಿಂದ ಹೀಗೆ ಪಾತ್ರಗಳ ಅಂತರಂಗ ಅಭಿವ್ಯಕ್ತವಾಗುವುದಾದರೆ ಅಂತಹ ಕಲೆಯನ್ನು ಅನುಭವಿಸುವ ಧನ್ಯತೆ ನಮ್ಮಲ್ಲಿರಬೇಕು. ಹಲವಾರು ಗ್ರಂಥ ಓದುವುದರಿಂದಲೂ ಯಕ್ಷಗಾನ ಒಂದು ಅಧ್ಯಯನ ಮಾಡಿದರೆ ಸಾಕು ಜ್ಞಾನದ ವಿಪುಲತೆ ಅವಾಗ ಸಾಧ್ಯವಾಗುತ್ತದೆ.
ಇಂತಹ ಧರ್ಮ ಸಂಕಟದಲ್ಲಿ ಸುಧನ್ವ ಸ್ವಗತವಾಗಿ ವಿವೇಚಿಸುವ ಪದ  “ ಸತಿಗೆ ಷೋಡಷದ ಋತು ಸಮಯ....”. ಆದರೆ ಈ ಪ್ರಸಂಗದಲ್ಲಿ ಇದಕ್ಕೆ ಸಮಾನಾಂತರವಾಗಿ ಭಾಮಿನೀ ಪದ ಹೀಗಿದೆ.  

ಭಾಮಿನಿ :
ಇನಿತು ದೈನ್ಯದಿ ಹೇಳಿಕೊಳಲಾ |
ಜನಪ ಪಿತೃದಿವಸವಾದರು |
ವನಿತೆಯರ ಋತುಕಾಲ ಸಮಯದಿ ನೆರೆಯಬಹುದೆನುತ ||
ಘನ ವಿವೇಕದ ನೆಲೆಯ ಮನದೊಳ |
ಗನುಕರಿಸಿ ದಶ ಕೂಟದಿಂದಲಿ |
ವಿನಯದಿಂ ತನ್ನರಸಿಯನು ಕೂಡಿರೆ ವಿಲಾಸದಲಿ ||
           
            ಪತ್ನಿಯ ಬೇಡಿಕೆಯನ್ನು ಅಂಗೀಕರಿಸಿದ ಸುಧನ್ವ ಪತ್ನಿಯೊಂದಿಗೆ ಕಳೆಯುತ್ತಾನೆ. ಆತ್ತ ಇದನ್ನು ತಿಳಿದ ಹಂಸಧ್ವಜ,   ಮಡದಿ ಮನೆಯೊಳು ರತಿಕಲಾಪದಿ ಸಡಗರದೊಳಿಹ ವರ ಸುಧನ್ವನ  ಬಂಧಿಸಿ ಕರೆದು ತರುವಂತೆ ಆಜ್ಞಾಪಿಸುತ್ತಾನೆ. ಮಂತ್ರಿ ಅರಸನನ್ನು ಬೇಡಿಕೊಳ್ಳುತ್ತಾನೆ. ಏಕವಚನ ವಿಖ್ಯಾತನೆಂದೆ ಅತಿಸಂಭೋಧಿಸಿ, ಅಂಗನೆಯ ಋತುಕಾಲವೆಂದು ತಡೆದಾತನಲ್ಲ. ಸಂಗರಕಂಜುವನೇ ನಿನ್ನ ವೀರ ಕುವರ? ಆದರೆ ರಾಜನಿಗೆ ಇದು  ಸಂದೇಹಕ್ಕೆ ಏಡೆಯಾಗುತ್ತದೆ.  ಆಗ ವಿಪ್ರರಾದ ಶಂಖಲಿಖಿತರನ್ನು ಕರೆಸಿ ಸಂದೇಹವನ್ನು ಭಿನ್ನವಿಸುತ್ತಾನೆ. ಆದರೆ ಅವರು ಅರಸನನ್ನು ಮೂದಲಿಸುತ್ತಾರೆ, ಏಕವಚನ ಈತಗುಂಟೆಂದು ಈ ರಾಜ್ಯದಲ್ಲ ಕಳೆದರೆ  ಇವನ ಗುಣವೀಗ ಬಯಲಾಯಿತು. ಇಂತಹ ವಚನ ಭ್ರಷ್ಟರಲ್ಲಿ ಉಳಿಯುವುದರಲ್ಲಿ ಅರ್ಥವಿಲ್ಲ.  ಅರಸಾ ಕೊಡು ಎಮಗಪ್ಪಣೆ.  ಅರಸಾ ತನಯನ ಮೇಲಣಾಶೆಯಿಂದ ಮಾತು ತಪ್ಪಿದೆ ನೀನು. ಇನ್ನು ಚಂಪಕಾ ಪುರದೊಳಿಪ್ಪುದಿಲ್ಲ ನಾವು.
          
  ಈಗ ಅರಸ ಮಂತ್ರಿಗೆ ಕಟ್ಟಪ್ಪಣೆಯನ್ನು ಮಾಡಿಬಿಡುತ್ತಾನೆ. 

ಮಧುಮಾಧವಿ ಆದಿರಾಗದ ಪದ
           
ಹಾಕಿಸಿರೀತನ ತೈಲ ಕಟಾಹದಿ | ಸಾಕು ನಿಮ್ಮಯ ಬುದ್ಧಿ ಮಂತ್ರಿಯೀ ಕ್ಷಣದಿ || ೧ ||  ಮಗನಾದರೀತನು ಹಗೆಯರವರಿತು ತನ್ನ | ಮುಗುದೆಯೊಳೊಡಗೂಡಿ ಸೊಗಸಿಂದಿರುವನೆ || ೨ || ಇಷ್ಟು ದಿವಸ ನಮಗೇಕೆ ವಚನವೆಂದು | ಸೃಷ್ಟಿಯೊಳೆಲ್ಲರು ಅರಿತಿಹರು || ೩ || ಭ್ರಷ್ಟವಾಗುವುದಿನ್ನು ಉಳಿಸಿದರಿವನನ್ನು| ಕಟ್ತಿ ಕೈಕಾಲನ್ನು ಕಟಹದೊಳಿರಿಸು || ೪ ||

            ಇಲ್ಲಿ ಸುಧನ್ವ ಭಕ್ತಿ ಪರೀಕ್ಷೆಯಾಗುತ್ತದೆ.  ಹರಿಧ್ಯಾನದಿಂದ ಸ್ಥಿತಪ್ರಜ್ಞನಾಗಿ ತೈಲ ಕಟಾಹದಲ್ಲಿಸುಧನ್ವ ಕುಳಿತು ಬಿಡುತ್ತಾನೆ. ಇದನ್ನು ಕಂಡು ಶಂಕಲಿಖಿತರು ಹುಡುಗ ಶ್ರೀಶ ಪರಮ ಭಕ್ತನು ಬಿಡದೆ ದ್ರೋಹವು ಕೆಡಿಸಿತಲ್ಲವೆ ತಡೆಯದೆಮಗೆ ಎಂದು ಯೋಚಿಸಿ ತನುವಿನಾಶೆಯ ತ್ಯಜಿಸಿ ತೈಲಕಟಾಹಕ್ಕಿ ಧುಮುಕಿಬಿಡುತ್ತಾರೆ. ಕುವರನ ಸಂಗದಿ ಉಳಿದರು ಶಂಖಲಿಖಿತರು. ಸಭೆಯೇ ಬೆಕ್ಕಸ ಬೆರಗಾಗುತ್ತದೆ. ಹೀಗೆ ಹರಿಭಕ್ತಿ ಪಾರಮ್ಯದಲ್ಲಿ ಮಿಂದು ಸುಧನ್ವನು ಹೊಸ ಹುಮ್ಮಸ್ಸಿನಿಂದ ನಿರ್ಧಾರವನ್ನು ಮತ್ತಷ್ಟು ಸ್ಥಿರವಾಗಿಸಿ  ರಣರಂಗಕ್ಕೆ ಬರುತ್ತಾನೆ.
           
ಮುಂದಿನ ಪ್ರಧಾನ ಭಾಗ ಅರ್ಜುನ ಸುಧನ್ವರ ಕಾಳಗ.

ಶಂಕರಾಭರಣ ಮಟ್ಟೆ ತಾಳದ ಪದ
ಎಲವೊ ಹಂಸಕೇತ ಜಾತ ಕಲಹಕೆನ್ನೊಳು | ತಳುವುದೀಗ ನಿನ್ನ ಪಿತನ ಕಳುಹು ಭರದೊಳು ||
 ಕೊಲುವರಲ್ಲ ನಾವು ನಿನ್ನ ತರಳತನದಲಿ | ಸುಲಭದಿಂದ ಮನೆಗೆ ನಡೆ ವಿವೇಕದಿಂದಲಿ || ೧ ||  

ಅರ್ಜುನ ಹುಡುಗನ ಆತ್ಮಸ್ಥೈರ್ಯವನ್ನು ಕೆಣಕಿ ಕುಂದಿಸುವ ಪ್ರಯತ್ನ ಮಾಡುತ್ತಾನೆ. ಕೊಲುವರಲ್ಲ ನಾವು ಎಂದು ತನ್ನ ಹಿರಿಮೆಯನ್ನು ಪ್ರದರ್ಶಿಸುತ್ತಾನೆ. ವಿಚಲಿತನಾಗದ ಸುಧನ್ವನ ಉತ್ತರದ ಪದ ಹೀಗಿದೆ.

ಎಲವೊ ಪಾರ್ಥ ಜಗುಲಿ ಹಾರಿ ಗಗನ ಬಯಸಿಕೋ |  ಜಲಜನೇತ್ರನನ್ನು ಬೆಂಬಲಕೆ ಕರೆಸಿಕೋ ||
 ಸುಲಭವಲ್ಲ ಸಮರದಾಯಾಸ ಬೇಡವು | ತಳುವದಿಂದ ಪುರಕೆ ತೆರಳುವುದು ವಿವೇಕವು ||
          ಜಲಜ ನೇತ್ರನಾದ ಶ್ರೀಕೃಷ್ಣನನ್ನು ಕರೆಸುವಂತೆ ಸುಧನ್ವ ಹೇಳುತ್ತಾನೆ. ವೃಥಾ ಸಮಯಹಾಳು ಮಾಡದೇ ಹಿಂದಿರುಗಿ ಹೋಗು ಎಂಬಂತೆ ಲೇವಡಿಯಾಡುತ್ತಾನೆ. ಯುದ್ದ ಇನ್ನೂ ತೀವ್ರವಾಗುತ್ತದೆ. ಯುದ್ದದ ಸನ್ನಿವೇಶದ ಪದಗಳನ್ನು ಬಹಳ ಸುಂದರವಾಗಿ ಸರಳವಾಗಿ ಅರ್ಥವಾಗುವುಂತೆ ಚಿತ್ರಿಸಲಾಗಿದೆ. ಕಿರ್ರೆಂದು ಸ್ಯಂದನದ ಗಾಲಿಗಳ ಕೀಲುಗಳು ಫರ್ರೆಂದು ಕಳಚಿದವು, ಅಶ್ವಗಳು ಕೂಗಿದವು.
            ಅದ್ಭುತ ಪರಾಕ್ರಮಿ ವೀರ ಬಾಲಕ ಸುಧನ್ವನನ್ನು ಸೋಲಿಸುವುದು ಅರ್ಜುನನಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಮಂತ್ರಾಸ್ತ್ರ ಪಯೋಗವನ್ನು ಆರಂಭಿಸುತ್ತಾನೆ. ಆದಕ್ಕೆ ಅಂಜದ ಸುಧನ್ವ ಬಾಣ ಪ್ರಯೋಗದಿಂದ ಅರ್ಜುನನ ಸಾರಥಿಯನ್ನು ಕೊಂದುಬಿಡುತ್ತಾನೆ.  ತರುಣನೆದುರು ಪಾರ್ಥನಿ ಸೋಲಿನ ಅನುಭವವೇ ಆಗಿಬಿಡುತ್ತದೆ. ಸಾರಥಿಯಿಲ್ಲದ ರಥವಾಯಿತು ಅರ್ಜುನನ ರಥ. ಸುಧನ್ವ ಮೂದಲಿಸುವ ಪದ ಹೀಗಿದೆ.

            ವಾರ್ಧಿಕ
ಗೌರಿಯರಸನ ಕೂಡೆ ಕಾದಿದ ಪರಾಕ್ರಮದ | ಸೌರಂಭಮಿಂತುಟೆ ನಿವಾತ ಕವಚರನಿರಿದ | ಗೌರವಮಿದೀಗಲೇ ಭೀಷ್ಮ ಕರ್ಣದ್ರೋಣ ಮಾದ್ರಪತಿ ಮೊದಲಾಗಿಹ || ಕೌರವ ಬಲದೊಳಖಿಲ ವೀರ ಭಟರಂ ಗೆಲ್ದ | ಪೌರುಷಮಿನಿತೆ ಸಾಕು ಬರಿದೆ ಬಳಲಿಸಬೇಡ | ಶೌರಿಯಂ ಕರೆಸೆನುತ ಕಣೆಗಳಂ ಕಡಿದೆಚ್ಚನಾ ಸುಧನ್ವಂನದನನು||

ಸಾರಥಿಯ ಸ್ಥಾನ ಬರಿದಾಗಿದೆ. ಶಿವನೊಡನೆ ಕಾದಿದ ಪರಾಕ್ರಮ, ನಿವಾತ ಕವಚರನ್ನು ಮಲಗಿಸಿದ ಶೌರ್ಯ ಭೀಷ್ಮ ಕರ್ಣಾದಿಗಳನ್ನು

ಸೋಲಿಸಿದ ಬಲ ಪೌರುಷ ಇಲ್ಲಿಗೇ  ಸಾಕು,  ಬರಿದೆ ಬಳಲದೆ ಶ್ರೀಕೃಷ್ಣನನ್ನು ಕರೆ.
            ಅರ್ಜುನನನ್ನು ಸೋಲಿಸುವ ಉದ್ದೇಶ ಸುಧನ್ವನಲ್ಲಿ ಇಲ್ಲ. ಬದಲಾಗಿ ಶ್ರೀಕೃಷ್ಣ ದರುಶನದ ಅದಮ್ಯ ಉತ್ಸಾಹ ಪಾರ್ಥನೊಡನೆಯ ಯುದ್ದವನ್ನು ಮೀರಿ ನಿಂತುಬಿಡುತ್ತದೆ. ಅದಕ್ಕಾಗಿ ಸಾರಥಿಯ ಸ್ಥಾನವನ್ನು ಬರಿದಾಗಿಸಿ ಭಗವಂತನ ಪೀಠವನ್ನು ಕಾದಿರಿಸುತ್ತಾನೆ. ಪ್ರತಿ ಹಂತದಲ್ಲೂ “ಕರೆ ಶ್ರೀಕೃಷ್ಣನನ್ನು” ಎಂದು ಕೃಷ್ಣನ ನೆನಪನ್ನು ಮಾಡುತ್ತಾನೆ. ಬಹುಶಃ ಸ್ವತಃ ಅರ್ಜುನನೂ ಶ್ರೀಕೃಷ್ಣನನ್ನು ಮರೆತನೋ ಎಂದು ಜ್ಞಾಪಿಸುವ ಕಾಯಕ ಸುಧನ್ವನದು.

          ಸಾರಥಿಯ ಮರಣದಿಂದ ಪಾರ್ಥ ಸೋಲಿನ ಮುಖವನ್ನು ಕಾಣುತ್ತಾನೆ. ಯಃಕಶ್ಚಿತ್ ಅಂಗೈಯಗಲದ ರಾಜ್ಯದ ಬೆರಳ ನೀಳದ ಕುವರನೆದುರು ಸೋಲಾಯಿತೇ? ಪಾರ್ಥ ಮರುಗಿ ಕೃಷ್ಣನನು ಕರೆಯತ್ತಾನೆ.  ಮತ್ತೆ ಇವನೊಳು ಕಾದುವ ಭಟರು ಧಾರುಣಿಯೊಳ್ಯಾರಿರಲ್ಲ, ವಾರಿಜಾಕ್ಷನೆ ಬಲ್ಲ ಯಾರಿಗೆ ಪೇಳುವೆ ನಿನ್ನ ಬಾಣವಾರಿಧಿ ತುಂಬಿದನಿವನು. ವೀರಾಧಿವೀರಗೆಲಿದ. ಸೇನೆಯನ್ನು ಯಮನೂರಿಗಟ್ಟಿದ, ಇವನಿಗೆ ಸರಿಮಿಗಿಲು ಯಾರು? ಈ ವಾರ್ತೆಯನ್ನು ಹಸ್ತಿನೆಗೆ ಅರುಹುವರು ಯಾರು?

            ಪಾರ್ಥನ ಕರೆ ಹಸ್ತಿನೆಯಲ್ಲಿದ್ದ ವಾಸುದೇವನ ಅರಿವಿಗೆ ಬರುತ್ತದೆ. ಕರೆಗೆ ಓಗೊಟ್ಟು ಸ್ವಶ್ಯಾಲಕನ ರಥಾಗ್ರಕೆ ಪೂರ್ಣ ಸ್ಕಂಧದಿ ಮುರಹರನು ತಾನಿಳಿದನು. ಪಾರ್ಥ ಮುರಹರನ ಪಾದಕ್ಕೆ ಸಾಷ್ಟಾಂಗವೆರಗುತ್ತಾನೆ.  ಹರಿ ಪಾರ್ಥನ ಮೈದಡವಿ ಕುಳ್ಳಿರಿಸಿ ಕುದುರೆಯ ವಾಘೆಯನ್ನು ಹಿಡಿಯುತ್ತಾನೆ.  ವರ ಸುಧನ್ವನು ಪಾರ್ಥ ಸಾರಥಿಯನ್ನು ಕಾಣುತ್ತಾನೆ. ಪುಳಕ ಗೊಳ್ಳುತ್ತಾನೆ.
            ಕೇದಾರಗೌಳ ಅಷ್ಟತಾಳ
            ವಾರಿಜಾಕ್ಷನೆ ನಿನ್ನ ಪಾದಕಾಣಬೇಕೆಂಬಾ | ತುರದೊಳಿರ್ದೆ ನಾನು || ಸೇರಿ ನರನೊಳಿಷ್ಟು ಯುದ್ಧಗೈದರು ನಿನ್ನ | ತೋರಿಸುವವರಾರಿನ್ನು ||  ಕಾಣದೆ ಬಳಲಿದುವರೆಗೆ ಧೇನುವು ತನ್ನ ಸೂನುವ ಹುಡುಕುವಂತೆ || ನೀನಿಲ್ಲಿಗೈತಂದು ಎನಗೆ ಕಾಣಿಸಿಕೊಂಡು | ದ್ದೇನುಪಕಾರ ಮತ್ತೆ ||

            ಜನನಿಯೊಳರಿಹಿದ ಭಾಷೇ ಇಂದು ಕೈಗೂಡಿತು.  ಹರಿಯದರ್ಶನವಾಯಿತು.  ಪರಮ ಸಾಯುಜ್ಯ ಪದವನ್ನು ಕಂಡುಕೊಂಡ ಸುಧನ್ವ ಪಾರ್ಥನಿಗೆ ಹೇಳುತ್ತಾನೆ.

            “ನರನೆ ನೀ ಕೇಳಾನು ನುಡಿದ      ಪ್ರತಿಜ್ಞೆಗೆ  ಪರಿಕಿಸು ಕೃಷ್ಣನನು  ಅರುಹು ಬೇಗ ದೊಳಿಂದು ಭಾಷೆ”   ಹೀಗೆ ಪಾರ್ಥನನ್ನು ಪ್ರತಿಜ್ಞಾಬದ್ಧನಾಗಿ ಯುದ್ಢ ಮಾಡುವಂತೆ ಪ್ರಚೋದಿಸುತ್ತಾನೆ.  ಪ್ರತಿಜ್ಞೆ ಎಂದೊಡನೆ ಪಾರ್ಥ ಕೆರಳುತ್ತಾನೆ.

            ರೂಢಿಯೊಳಗೆ ನಿನ್ನ ತಲೆಯ ಮೂರ್ಬಾಣದಿ ಗಾಢದಿಂದಿಳುಹುವೆನು | ಕೂಡದಿರಗ್ನಿಯ  ಹೋಗುವೆನೆಂದೆನುತಲಿ ನೋಡಿದಾತನನು|
          
  ಮೂರು ಬಾಣಗಳಿಂದ ಸುಧನ್ವನ ತಲೆ ಕತ್ತರಿಸಿಬಿಡುವೆನು, ಪಾರ್ಥನ ಪ್ರತಿಜ್ಞೆಯದು. ಸುಧನ್ವ ತನ್ನ ಹರಿಭಕ್ತಿಯನ್ನೆ ಅದಕ್ಕೆ ಪಣವಾಗಿರಿಸಿ ಮರು ಪ್ರತಿಜ್ಞೆಯನ್ನು ಗೈಯುತ್ತಾನೆ.  “ಸರ್ವಶಕ್ತಿಯೊಳೆಸೆದ ಮೂರು ಬಾಣಂಗಳಂ ನಡುವೆ ಖಂಡಿಸದಿರ್ದೊಡೇ  ಉರ್ವಿಯೊಳ್ ಪಾತಕಿಗಳಾಗಿರ್ದವರ ಗತಿಗಡರ್ವೆನೆಂದಾ”
            ಈರ್ವರ ಶಪಥ ಕಂಡು ಶ್ರೀಕೃಷ್ಣ ತಳಮಳಿಸುತ್ತಾನೆ. ಆಗ ಸುಧನ್ವ ಹೇಳುವ ಪದ ಹೀಗಿದೆ.
           
ಘಂಟಾರವ  : ಝಂಪೆ ತಾಳ
ಲೋಕ ನಾಯಕ ನೀನು| ಯಾಕೀ ಮಾತುಗಳೊರೆವೆ | ಸಾಕು ಬಲ್ಲೆನು ನೀ ಲೋಕೈಕನೆಂಬುದನು || ೧ ||  ಶೇಷ ಶಯನನೆ ನಿನ್ನ ಮೈದುನನಿಂದಿನಲಿ | ಪೋಷಿಸುವೆ ನೀಭರಿತ ತೋಷದೊಳಗೆನುತ || ೨ || ಅರಿತು ನಾ ಬಂದಿಹೆನು | ದೃಢ ದೊಳಿಂದಿಲಿ ನಿನ್ನ | ಚರಣ ಕಮಲಕೆ ಎನ್ನ | ಹರಣ ಗಾಣಿಕೆಯ || ೩ ||  ಮುನ್ನ ನಿನ್ನ ಕಟಾಕ್ಷವಿಲ್ಲದಿರೆ ರಣದಲ್ಲಿ | ಕರ್ಣಮುಖ್ಯರ ಗೆಲಿದ | ಕುನ್ನಿಯೇ ಇವನು ||೪|| ಅಳುಕಿದರೆ ನಾನಿನ್ನ ಚರಣ ಸೇವಕನಲ್ಲ | ತಳುವದಿಂದಿಗೆ ಕಾರ್ಯ ಪರಿಕಿಸೆಂದೆನುತ || ೫||

            ಶ್ರೀಕೃಷ್ಣನ ಸಂಧಿಗ್ಧತೆಗೆ ಪರಿಹಾರ್ಯವಾಗಿ ಈ ಪದ ಮೂಡಿ ಬರುತ್ತದೆ.  ಪಾರ್ಥನ ಎದುರಿನ ಸಮರವನ್ನು ಸುಧನ್ವ ಕಾಣುವ ದೃಷ್ಠಿಕೋನವನ್ನು ಇಲ್ಲಿ ಕಾಣಬಹುದು.  ಪ್ರಾಪಂಚಿಕ ವ್ಯವಹಾರಕ್ಕೆ ಅತೀತವಾಗಿ ಪರಿಗಣಿಸಿ ಭಗವಂತನ ಸಾನ್ನಿಧ್ಯದ ಪರಮ ಪದವನ್ನು ಗಳಿಸುವ ಸಮರವಾಗಿ ಇದನ್ನು ಕಾಣುತ್ತಾನೆ.  ಆದುದರಿಂದಲೇ ಭಗವಂತನ ಸಂದಿಗ್ಧವನ್ನು ಈ ರೀತಿಯಲ್ಲಿ ದೂರಮಾಡಲು ಪ್ರಯತ್ನಿಸುತ್ತಾನೆ.  ಪಾರ್ಥನಿಗೆ ಬೇಕಾದ ಲೌಕಿಕ ಜಯವನ್ನು ಅವನಿಗೆ ಕರುಣಿಸು, ಅಲೌಕಿಕವಾದ ನಿನ್ನ ಸಾನ್ನಿಧ್ಯದ ಜಯದ ಬಾಗಿಲನ್ನು ನನಗೋಸ್ಕರ ತೆಗೆದು ಆ ಲೋಕದ ಸ್ಥಾನವನ್ನು ಕಲ್ಪಿಸು.
           
            ಭಾಮಿನಿ
ಪೃಥ್ವಿಯೊಳ್ ಕೃಷ್ಣಾವತಾರ ದೊ | ಳುತ್ತಮರ ಪಾಲಿಸಿದ ಪುಣ್ಯವ | ನಿತ್ತ ಶ್ರೀಹರಿಯೊಡನೆ ಬಂದು ಸುಧನ್ವನಿಂತೆಂದ || ಚಿತ್ತವಿಸು ಎಲೆದೇವ ಈ | ಶರ ಕತ್ತರಿಸದಿರೆ ನಡುವೆ ಶ್ರೀಹರಿ | ಭೃತ್ಯರನು ಹರಿದಿವಸ ಕೊಂದಾ ದೋಷ ತನಗೆಂದ ||೧ ||

            ಪಾರ್ಥ ಶಪಥದಂತೆ ಮೂರು ಬಾಣಗಳನ್ನು ಮುಂದೆ ಪಾರ್ಥ ಪ್ರಯೋಗಿಸುತ್ತಾನೆ. ಶ್ರೀ ಕೃಷ್ಣ  ಆ ಬಾಣಗಳಲ್ಲಿ ವಿಷೇಷ ಶಕ್ತಿಯನ್ನು ಸಂಚಯನ ಗೊಳಿಸುತ್ತಾನೆ. ಗೋವರ್ಧನ ಗಿರಿಯನ್ನೆತ್ತಿ ಜಗವನ್ನು ರಕ್ಷಿಸಿದ ಪುಣ್ಯ ಶಕ್ತಿಯನ್ನು ಮೊದಲ ಬಾಣದಲ್ಲಿ ಸಂಚಯನಗೊಂಡರೆ,  ಸುಧನ್ವ ಅದನ್ನು ಖಂಡಿಸಿ ಆ ಸಂಚಯನವನ್ನು ಹೊಂದುವ ಶಪಥವನ್ನು ಮಾಡಿ ಪೂರೈಸಿಕೊಳ್ಳುತ್ತಾನೆ.  ಎರಡನೇ ಬಾಣದಲ್ಲಿ ಕೃಷ್ಣಾವತಾರದ ಪುಣ್ಯ ಸಂಚಯನವಾದರೆ ಕೊನೆಯ ಬಾಣದಲ್ಲಿ ರಾಮಾವತಾರದ ಪುಣ್ಯ ಆವಾಹನೆಯಾಗುತ್ತದೆ.  ಕೊನೆಯ ಬಾಣ ಖಂಡನೆಯಾದರೂ ಅದರಲ್ಲಿ ಸುಧನ್ವನ ಶಿರಸ್ಸು ಕತ್ತರಿಸಲ್ಪಡುತ್ತದೆ.        ಹೀಗೆ ಮೂರು ಬಾಣಗಳಲ್ಲಿ ಪಾರ್ಥ ಬಯಸಿದ್ದು ಪಾರ್ಥನಿಗೆ ಸುಧನ್ವ ಬಯಸಿದ್ದು ಸುಧನ್ವನಿಗೆ ಕಲ್ಪಿತವಾಗಿ ಸುಧನ್ವ ಮೋಕ್ಷ ಪ್ರಾಪ್ತಿಯಾಗುತ್ತದೆ.
          

  ಮಂಗಳಂ