"ಇದು ವಿಮರ್ಶೆಯಲ್ಲದ ಚಿಂತನ"

Friday, June 29, 2018

ಯಕ್ಷಗಾನ ಮತ್ತು ವಿವಾದಗಳು



            ನಾನು ಸರಿ ಸುಮಾರು ನಾಲ್ಕು ದಶಕಗಳನ್ನೂ ಮಿಕ್ಕಿ ಯಕ್ಷಗಾನವನ್ನು ನೋಡಿದ್ದೇನೆ. ಈ ನಾಲ್ಕು ದಶಕಗಳಲ್ಲಿ ಯಕ್ಷಗಾನವೆಂಬ ಮಹಾನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಅದೆಷ್ಟೊ ಬಗೆಯ ಕಲಾವಿದರನ್ನೂ ಪ್ರೇಕ್ಷಕರನ್ನೂ ಮೇಳಗಳನ್ನು ಅವುಗಳ ವೈಖರಿಗಳನ್ನೂ ಕಂಡಿದ್ದೇನೆ. ಅಷ್ಟೂ ಸಮಯ ಯಕ್ಷಗಾನ, ಯಕ್ಷಗಾನಕ್ಕಾಗಿಯೇ ಸುದ್ದಿಯಲ್ಲಿರುತ್ತಿತ್ತು. ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ವಿಚಾರಗಳು ಬಿಟ್ಟರೆ ಯಕ್ಷಗಾನ ಒಂದು ತನ್ನ ಕಲೆಯಿಂದ ಚೀತೋಹಾರಿ ಅನುಭವವನ್ನು ಸಾಮಾನ್ಯ ಎಲ್ಲಾ ಪ್ರೇಕ್ಷಕನಿಗೆ ಒದಗಿಸುತ್ತಿತ್ತು, ಮಾತ್ರವಲ್ಲ ಪ್ರೇಕ್ಷಕ ಅದನ್ನು ಪಡೆದುಕೊಳ್ಳುತ್ತಿದ್ದ. ಈಗ ಕಾಲ ಬದಲಾಗಿದೆ. ಮೊದಲಿನಂತೆ ವರ್ಷಧಾರೆ ಹೇಗೆ ಸುರಿಯುವುದಿಲ್ಲವೋ ಅದೇ ರೀತಿ ವರ್ಷಧಾರೆ ಕಡಿಮೆಯಾಗಿ ಈ ಮಹಾನದಿ ಒಂದೋ ಬರಿದಾಗಿದೆ ಇಲ್ಲವಾದರೆ ಮಾಲಿನ್ಯವನ್ನು ಅನುಭವಿಸುತ್ತದೆ.  ಈ ಕಂಡ ನಾಲ್ಕು ದಶಕಗಳಲ್ಲಿ ಯಕ್ಷಗಾನ ಅತ್ಯಂತ ಜನಪ್ರಿಯವಾಗಿದ್ದೂ ಇತ್ತೀಚೆಗೆ ನಾಲ್ಕೈದು ವರ್ಷಗಳಲ್ಲಿ. ಒಂದು ಸಣ್ಣ ಗುಂಡು ಸೂಜಿಯಂತಹ ಸದ್ದಾದರೂ ವಿಶ್ವವ್ಯಾಪಿಯಾಗಿಬಿಡುವ ಇಂದಿನ ತಾಂತ್ರಿಕತೆಯಲ್ಲಿ ಅದು ವಿಶೇಷವಲ್ಲ. ಆದರೆ ಸುದ್ದಿಯಾಗಿದ್ದು ಹೆಚ್ಚು ವಿವಾದಗಳಿಂದ ಎಂದರೆ  ಅದು ಸಾತ್ವಿಕ ಪ್ರೇಕ್ಷಕನಿಗೆ ಬಹಳ ನೋವನ್ನು ತರುವ ಸಂಗತಿ.
           
ವಿವಾದಗಳು ಅಂದೂ ಇತ್ತು ಇಂದು ಇದೆ. ಆದರೆ ಇಂದು ಅದು ಬದಲಾಗುವ ಆಯಾಮ ಮಾತ್ರಾ ವಿಚಿತ್ರವಾಗಿದೆ. ವಿವಾದಗಳಿಂದಲೇ ಚಲಾವಣೆಯನ್ನು ಅನುಭವಿಸುವುದು ಒಂದು ರೀತಿಯ ದುರಂತ ಎನ್ನಬಹುದು.    ಶ್ರೀಮಂತ ಕಲೆಯ ಸಿರಿವಂತಿಕೆ ಬೇಕಾದಷ್ಟು ಇದೆ.  ಈ ಸಿರಿವಂತಿಕೆಯ ಬಗ್ಗೆ ಚರ್ಚೆಯಾಗುವುದಿಲ್ಲ. ಈ ಶ್ರೀಮಂತಿಕೆಯನ್ನು ಹೇಗೆ ರಕ್ಷಿಸಬೇಕು. ಆ ರಕ್ಷಣೆ ಹೇಗೆ ಸಾಧ್ಯ ಎಂಬುದರಬಗ್ಗೆಯೂ ಕಾಳಜಿ ಇಲ್ಲ. ಬದಲಿಗೆ ಅಸಹ್ಯವೆನಿಸುವ ವಿಚಾರಗಳು ವಿವಾದಗಳಾಗಿ ಯಕ್ಷಗಾನ ಮಹಾನದಿ ಮಲೀನವಾಗುತ್ತದೆ ಎಂಬುದಕ್ಕೆ ಸಂಶಯವಿಲ್ಲ. ಈಗಿನ ಮಾಧ್ಯಮಗಳೂ ಈ ವಿವಾದಗಳನ್ನು ಜೀವಂತವಾಗಿಡುವಲ್ಲಿ ಸಹಕಾರಿಯಾಗಿಯೂ ಪ್ರವರ್ತಿಸುತ್ತದೆ. ಒಂದು ಸಣ್ಣ ವಿವಾದವಾದರೂ ಅದನ್ನು ಹಿರಿದಾಗಿ ಹಿಗ್ಗಿಸಿ ಅದರ ಬಗ್ಗೆ ತಮ್ಮ ವಾಹಿನಿಯಲ್ಲಿ ಚರ್ಚೆಯನ್ನು ಅಭಿಪ್ರಾಯ ಕ್ರೋಢೀಕರಣವನ್ನೂ, ಮಂಡನೆಯನ್ನೂ ಮಾಡುತ್ತ ನಿರ್ಣಯವನ್ನೂ ಸಹ ಬೇಕಾದರೆ ಸಾರಿ ಬಿಡುತ್ತವೆ.  ವಿಚಿತ್ರವೆಂದರೆ,  ಯಕ್ಷಗಾನ ಕಲೆಯ ವೈಶಿಷ್ಟ್ಯತೆಗಳು, ಧನಾತ್ಮಕ ವಿಚಾರಗಳು ಬೇಕಾದಷ್ಟಿರುವಾಗ ಇತ್ತ ತಲೆ ಹಾಕದ ಮಾಧ್ಯಮಗಳು ಯಕ್ಷಗಾನದ ಅನಪೇಕ್ಷಿತ ವಿವಾದಗಳಾದಾಗ ಅದು ಹೇಗೆ ವಕ್ಕರಿಸುತ್ತವೆ?  ಒಂದು ಮನೆಯ ಜಗಳ ಬೀದಿಗೆ ಬಂದಾಗ ನೆರೆ ಹೊರೆಯವರು ನೋಡಿ ಮನರಂಜನೆಯನ್ನು ಅನುಭವಿಸಿದಂತೆ ತಮ್ಮ ಬೇಳೆಯನ್ನು ಬೇಯಿಸಿಕೊಂಡು ಜನಪ್ರಿಯತೆಯ ಬಾಲವನ್ನು ಹಿಡಿದು ಜಗ್ಗಾಡಿಸುತ್ತವೆ.  ಇಂದಿನ  ಜನ ಸಮೂಹ ಅದಕ್ಕೆಲ್ಲ ಮುಕ್ತ ಅವಕಾಶಗಳನ್ನು ತಮಗರಿವಿಲ್ಲದೇ ಒದಗಿಸುತ್ತದೆ. ಯಕ್ಷಗಾನ ಕಲೆಯ ಸೊಬಗಿನ ಬಗ್ಗೆ ಆ ಸೌಂದರ್ಯದ ಬಗ್ಗೆ ಚರ್ಚಿಸದ ಈ ಮಾಧ್ಯಮಗಳಿಗೆ  ಈ ವಿವಾದಗಳನ್ನು ಚರ್ಚಿಸುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದು ಇನ್ನೊಂದು ದುರಂತ.  ಟೀವಿಯವರು ಹೇಳಿದ್ದಾರೆ ಎಂದು ಅಭಿಪ್ರಾಯ ಕ್ರೋಢಿಕರಣಕ್ಕೆ ಹೋಗುವುದು  ಚರ್ಚೆಗೆ ಕುಳಿತುಕೊಳ್ಳುವುದು, ಟೀವಿಯಲ್ಲಿ ಮುಖ ತೋರಿಸುವ ಒಂದಷ್ಟು ಚಟಗಳನ್ನು ಈ ಮೂಲಕ ತೀರಿಸಿಕೊಳ್ಳುವುದು ಎಷ್ಟೊಂದು ಶೋಚನೀಯ.  ಇಂತಹ ಸಂದರ್ಭಗಳಲ್ಲಿ ಯಕ್ಷಗಾನದ ವಿಚಾರ ಗೊತ್ತಿರುವುದಕ್ಕಿಂತಲೂ ಹೆಚ್ಚು ಪ್ರಸ್ತುತ ವಿವಾದದ ಬಗ್ಗೆ ತಿಳಿದಿರುತ್ತದೆ. ಹೀಗಿರುವಾಗ ಯಕ್ಷಗಾನದ ಹಿಮ್ಮೇಳದ ಬಗ್ಗೆ ವೇಷಗಾರಿಕೆಯ ಬಗ್ಗೆ ಅರ್ಥಗಾರಿಕೆಯ ಬಗ್ಗೆ ಹೀಗೆ ವಿಸ್ತೃತವಾಗಿ ಚರ್ಚೆ ಮಾಡುವಲ್ಲಿ ಮಾಧ್ಯಮಗಳು ಇಷ್ಟೊಂದು ಆಸಕ್ತಿ ವಹಿಸಿದ ಉದಾಹರಣೆಗಳೇ ಇಲ್ಲ.
ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗದ ವಿವಾದ ಯಾವುದೂ ಇಲ್ಲ. ಬುದ್ಧಿವಂತರ ನಾಡಲ್ಲಿ ಇದು ಎಂದೋ ಆಗಬೇಕಿತ್ತು. ಆದರೆ ಸೌಹಾರ್ದತೆ ನೆಲೆ ನಿಲ್ಲುವುದು ಸ್ವ ಪ್ರತಿಷ್ಠೆ ಸ್ವಾರ್ಥ ಇಲ್ಲದೇ ಇರುವಲ್ಲಿಮಾತ್ರ.  ಕೆಟ್ಟ ರಾಜಕೀಯದ ಎದುರು ಸೌಹಾರ್ದತೆ ಅರ್ಥ ಕಳೆದುಕೊಳ್ಳುತ್ತದೆ. ಯಾಕೆಂದರೆ ಮನುಷ್ಯನಿಗೆ ಬುದ್ದಿಯ ಕೊರತೆಯಾದರೂ ಬುದ್ಧಿ ಅಧಿಕವಾದರೂ  ಪರಿಣಾಮ ಒಂದೇ. ಹೇಳಿ ಕೇಳಿ ಇದು ಅತಿ ಬುದ್ಧಿವಂತರ ಕ್ಷೇತ್ರ. ಹಾಗಾಗಿ ಒಬ್ಬರ ಕಾಲು ಮತ್ತೊಬ್ಬ ಎಳೆದು ತನ್ನ ನೆಲೆಯನ್ನು ಕಂಡುಕೊಳ್ಳುವುದು ಸರ್ವೇ ಸಾಮಾನ್ಯ. ಇದರಿಂದ ವಿವಾದ ಇಂತಹ ಕೊಳಚೆಯಲ್ಲಿನ ಸೊಳ್ಳೆಗಳಂತೆ  ತನ್ನ ಬಲವನ್ನು ಬೇಗ ವೃದ್ದಿಸಿಕೊಳ್ಳುತ್ತದೆ.
ಇನ್ನು ಸದ್ಯದ ವಿವಾದ, ವಿವೇಚನೆಯ ಕೊರತೆಯಿಂದ ಹುಟ್ಟಿರುವಂತಹುದು.. ಯಾವುದೋ ಭಾವಾವೇಶದ ಲಾಭವನ್ನೇ ಕೇಂದ್ರಿಕರಿಸಿ ವಾಸ್ತವದ ಸತ್ಯವನ್ನು ಅರಿಯದೇ ಇರುವುದು. ಯಾರೇ ಆಗಲೀ ದೇವರ ಎದುರು ಸಮಾನರು. ಪರಮ ಭಕ್ತರಲ್ಲದೇ ಇದ್ದರೂ ಪರಮಾತ್ಮನ ನಿಯತಿಗೆ ಬದ್ದರಾಗಿರುವವರು. ಇಂತಹ ಸಾಮಾನ್ಯ ಜ್ಞಾನವನ್ನಿಟ್ಟುಕೊಂಡು ವ್ಯವಹರಿಸುವುದು ಸೂಕ್ತವಾಗುತ್ತದೆ. ಶಿಕ್ಷೆ ರಕ್ಷೆಯನ್ನು ಆ ದೇವರ ಪಾದದಲ್ಲಿ ಅರ್ಪಿಸಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವುದು ಜಾಣತನ. ಯಾರೇ ಆಗಲಿ ಶಿಕ್ಷೆರಕ್ಷೆಗೆ ನಾವೇ ಕಾರಣ ಕರ್ತರು ಎಂಬ ಧೋರಣೆ ಒಳಗಿರುವ ಪರಮಾತ್ಮನ ಅಸ್ತಿತ್ವವನ್ನು ಪ್ರಶ್ನಿಸಿದಂತಾಗುತ್ತದೆ..  ಪರಮಾತ್ಮನ  ಅನುಗ್ರಹವನ್ನು ಪಡೆಯಬೇಕಿದ್ದರೆ ಯಾವುದೇ ಭಾವೋದ್ವೆಗಕ್ಕೆ ಒಳಗಾಗಬಾರದು. ಯಾಕೆಂದರೆ ಪರಮಾತ್ಮ ಅಂದರೆ ದೇವರು ಭಾವರಹಿತನಾದವನು. ಇದು ಶ್ರೀಕೃಷ್ಣ ಅರ್ಜುನನಿಗೆ ಹೇಳಿದ ಹಿತವಚನಗಳಲ್ಲಿ ಅಡಗಿದೆ. ಆದರೆ  ಇಲ್ಲಿ ಆದೇ ದೇವರ ವಿಚಾರದಲ್ಲಿ ತಮ್ಮ ಸ್ವಾರ್ಥ ಸಾಧನೆಗೆ ಭಾವೋದ್ವೇಗವನ್ನು ಸೃಷ್ಟಿಸಿ ವಾಸ್ತವದಿಂದ ಪಲಾಯನ ಮಾಡುವ ತಂತ್ರವೇ ಕಾಣುತ್ತದೆ.  

ಮುಜರಾಯಿ ಎಂದಾಕ್ಷಣ ಸರಕಾರವನ್ನು ತೆಗಳುವುದು ಸಾಮಾನ್ಯ. ಆದರೆ ವಾಸ್ತವದ ಕೆಲವು ವಿಚಾರಗಳ ಬಗ್ಗೆ ಯಾರೂ ಯೋಚಿಸುವುದಿಲ್ಲ. ಸಾರ್ವಜನಿಕವಾಗಿ ಹಣ ಅಥವಾ ಇನ್ನಿತರ ವಸ್ತುಗಳನ್ನು ದಾನ ರೂಪದಲ್ಲೋ ಆದಾಯದ ರೂಪದಲ್ಲೊ ಅದು ಕೇವಲ ಒಂದು ರೂಪಾಯಿಯಾಗಿದ್ದರೂ ಸಹ ಒಂದು ದೇವಸ್ಥಾನ ಸಂಗ್ರಹಿಸಿದರೆ ಅದು ಮುಜರಾಯಿ ಇಲಾಖೆಗೆ ಖಡ್ಡಾಯವಾಗಿ ಒಳಪಡಬೇಕು ಮತ್ತು ವಾರ್ಷಿಕ ಲೆಕ್ಕ ವರದಿಯನ್ನು ಸಂಬಂಧಿಸಿದ ಇಲಾಖೆಗಳಿಗೆ ಸಲ್ಲಿಸಬೇಕು. .ಕುಟುಂಬದಿಂದಲೋ ವ್ಯಕ್ತಿಯಿಂದಲೋ ನಡೆಯುವ ದೇವಸ್ಥಾನಕ್ಕೆ, ಸಾರ್ವಜನಿಕ ಸಂಗ್ರಹ ಇಲ್ಲದೇ ಇದ್ದಲ್ಲಿ ಈ ಕಾನೂನು ಅನ್ವಯವಾಗುವುದಿಲ್ಲಈ ಕಾನೂನು ಎಲ್ಲಾ ಮತಕ್ಕೂ ಅನ್ವಯವಾಗಬೇಕು,  ಸಮಾನ ಕಾನೂನು ಸಮಾನ ಹಕ್ಕು ಇದು ಜ್ಯಾರಿಯಾಗಬೇಕು ಎಂಬುದು ಸತ್ಯ. ಆದರೆ ಕೆಲವು ದೇವಸ್ಥಾನಗಳು ಸಾರ್ವಜನಿಕವಾಗಿ ಯಾವುದೇ ಆದಾಯವನ್ನು ಸಂಗ್ರಹಿಸದೇ ಇದ್ದರೂ ಮುಜರಾಯಿ ಇಲಾಖೆಗೆ ಸ್ವತಹ ಸೇರಿಸಿಕೊಳ್ಳುವುದುಂಟು. ಅದು ಸರಕಾರ ಕೊಡುವ ಸೌಲಭ್ಯಗಳಿಗಾಗಿ ಸೇರಿಸುತ್ತಾರೆ. ಮತ್ತು ಕಾನೂನು ರೀತ್ಯಾ ಯಾವುದೇ ದಾಖಲಾತಿಗಳನ್ನಾಗಲೀ ವರ್ಷಕ್ಕೊಮ್ಮೆ ಕರೆಯಲೇ ಬೇಕಾದ ಮಹಾಸಭೆಯನ್ನು ಕರೆಯದೇ ಇದ್ದು ಕೇವಲ ಸರಕಾರಿ ಸೌಲಭ್ಯವನ್ನು ಪಡೆದುಕೊಳ್ಳುವವರೂ ಇದ್ದಾರೆ. ಇದು ಬಹಳಷ್ಟು ಸಂಖ್ಯೆಯಲ್ಲಿ ಇರುವುದು ಚೋದ್ಯದ ವಿಚಾರ.  ಸ್ವತಃ ಲೆಕ್ಕ ಪರಿಶೋಧನೆಗೆ ದೇವಸ್ಥಾನ ಭೂತ ಸ್ಥಾನಗಳಿಗೆ ಭೇಟಿ ಕೊಟ್ಟಾಗ ಈ ಅಂಶ ಬಹಳಷ್ಟು ಗಮನಕ್ಕೆ ಬಂದಿದೆ. ಏನೂ ಆದಾಯವಿಲ್ಲದೇ ಇರುವ ದೇವಾಸ್ಥಾನಗಳು ಸ್ವಯಂಪ್ರೇರಿತವಾಗಿ ಮಜಾರಾಯಿ ಇಲಾಖೆಗೆ ಯಾಕೆ ಸೇರಿಕೊಳ್ಳಬೇಕು. ಈ ಸಂಕ್ಯೆ ಸಾಕಷ್ಟು ಇದೆ. ಹಾಗಾಗಿ ಮಜರಾಯಿ ಎಂಬ ವ್ಯವಸ್ಥೆಯನ್ನು ದೂಷಿಸುವುದು ಸರಿಯಲ್ಲ. ಆದರೆ ವಾಸ್ತಾವಂಶಗಳನ್ನು ಗಮನಿಸದೆ ವಿವೇಚಿಸದೆ ಏನಕ್ಕೇನು ಹೇಳುತ್ತಾ ಸರಕಾರದ ಮೇಲೆ ವ್ಯವಸ್ಥೆಯ ಮೇಲೆ ಗೂಬೆ ಕೂರಿಸುವುದು ಸಹ ಸರಿಯಲ್ಲ. ವ್ಯವಸ್ಥೆ ಸರಿಯೋ ತಪ್ಪೋ ಅದಕ್ಕೆ ಪರೋಕ್ಷವಾಗಿ ಪ್ರತ್ಯಕ್ಷವಾಗಿ ಜನರೇ ಕಾರಣರಾಗಿರುತ್ತಾರೆ. ವ್ಯವಸ್ಥೆ ಕಳುಷಿತವಾಗುವುದಕ್ಕೆ    ಪ್ರಾಮಾಣಿಕತೆಯ ಕೊರತೆಯೇ ಮೂಲ ಕಾರಣ.

 ಕೇವಲ ಹಿಂದೂ ದೇವಾಲಯಗಳಿಗೆ ಮಾತ್ರ ಕಾನೂನು ಲಗಾಯಿಸುವುದು ನಿಜಕ್ಕು ಆಕ್ಷೇಪಾರ್ಹ. ಇದಕ್ಕೆ ಕಾರಣ ಸ್ವಾತಂತ್ರ್ಯಾ ನಂತರದ ಎಪ್ಪತ್ತು ವರ್ಷದ ರಾಜಕೀಯ ಹಿತಾಸಕ್ತಿಗಳೇ ಕಾರಣ ಹೊರತು ಒಂದು ಸರಕಾರೀ ವ್ಯವಸ್ಥೆಯಲ್ಲ. ಜನರು ಮತ ಹಾಕುವಾಗ ಯಾವುದೋ ಸಮ್ಮೋಹಕ್ಕೆ ಒಳಗಾಗಿರುವುದೇ ಈ ವ್ಯವಸ್ಥೆ ಕಲುಷಿತವಾಗುವುದಕ್ಕೆ ಕಾರಣ.
ಇನ್ನೊಂದು ಮಗ್ಗುಲು ಸಾಮಾಜಿಕ ನ್ಯಾಯ. ಇದು ಅತ್ಯಂತ ಪ್ರಧಾನವಾದ ವಿಚಾರ. ನಾವು ಜನ ನಿಬಿಡವಾದ ರಸ್ತೆಯಲ್ಲಿ ವಾಹನ ಚಲಾಯಿಸುತ್ತೇವೆ. ರಸ್ತೆಯ ನಿಯಮಗಳ ಪ್ರಕಾರ ಸಂಚಾರ ಕಾನೂನಿನಂತೆ ವಾಹನ ಚಲಾಯಿಸುತ್ತಾ ಸಿಗ್ನಲ್ ಬಂದಾಗ ನಿಂತುಬಿಡುತ್ತೇವೆ. ಬಹಳಷ್ಟು ಹೊತ್ತು ನಾವು ನಿಂತಿರಬೇಕಾದರೆ ಬಹಳ ಹಿಂದೆ ಇರುವಾತ,  ಪಾದಾಚಾರಿ ರಸ್ತೆಯ ಮೇಲೆ ವಾಹನ ಹತ್ತಿಸಿ ನಮ್ಮನ್ನು ಹಿಂದಿಕ್ಕಿ ಮುಂದೆ ಹೋಗಿ ಕಾನೂನು ಉಲ್ಲಂಘನೆ ಮಾಡಿದರೆ ನಮಗೆಷ್ಟು ನೋವಾಗುವುದಿಲ್ಲ? ಸಮಾಜದಲ್ಲಿ ಹೀಗೆ ಅತಿ ಬುದ್ದಿವಂತರಂತೆ ವರ್ತಿಸುವವರು ವ್ಯವಸ್ಥೆ ಸರಿ ಇಲ್ಲ ಎಂದು ಹೇಳಿ ತಮ್ಮ ಕಾನೂನು ಭಂಗವನ್ನು ಸಮರ್ಥಿಸುವುದು, ಸಿಗ್ನಲ್ ನಲ್ಲಿ ಅಷ್ಟು ಹೊತ್ತು ಕಾನೂನಿಗೆ ಗೌರವ ಕೊಟ್ಟವನನ್ನು ಅವಮಾನಿಸುವುದು ಮಾತ್ರವಲ್ಲ ಹೀಯಾಳಿಸುವುದೂ ಆಗುತ್ತದೆ. ಹಾಗಾದರೆ ಕಾನುನು ಪಾಲನೆ ಎಂಬುದು ಅವಮಾನಕರವೇ  ಎಂಬುದು ಪ್ರಶ್ನೆಯಾಗುತ್ತದೆ.
            ಮಜರಾಯೀ ಅರ್ಥ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಾಗಲೀ  ಅಥವಾ ಸಂಘ ಸಂಸ್ಥೆಗಳಾಗಲೀ  ಅದು ಕೇವಲ ಒಂದು  ಪಂಗಡಕ್ಕೆ ಸೀಮಿತವಾಗಿಯಲ್ಲ ತಮ್ಮ ಆದಾಯದ ಲೆಕ್ಕವನ್ನು ಸರಕಾರಕ್ಕೆ ಕಾನೂನು ರೀತ್ಯಾ ಒಪ್ಪಿಸಲೇ ಬೇಕು. ಅದರಲ್ಲೂ ಸಂಘ ಸಂಸ್ಥೆಗಳು ಬಂದ ಆದಾಯಕ್ಕೆ ಲೆಕ್ಕವನ್ನು ಒಪ್ಪಿಸುವುದರ ಜತೆಗೆ ಆದಾಯ ತೆರಿಗೆಯನ್ನು ಸರಕಾರಕ್ಕೆ ಪಾವತಿಸಬೇಕು. ಇದು ಕಾನೂನು. ಹಾಗಾದಲ್ಲಿ ಸಂಸ್ಥೆ ಮಾನ್ಯತೆಯನ್ನೂ ಅಂಗೀಕಾರವನ್ನು ಪಡೆಯುತ್ತದೆ. ಮತ್ತು ಆ ಸಂಸ್ಥೆಯಲ್ಲಿ ಕೆಲಸ ಮಾಡುವವನ ಆದಾಯವವೂ ಅಂಗೀಕರಿಸಲ್ಪಡುತ್ತದೆ. ಯಜಮಾನನ ಅನಧಿಕೃತ  ಸಂಪಾದನೆ ನೌಕರನಿಗೂ ಅನಧಿಕೃತವಾಗಿಯೇ ಇರುತ್ತದೆ. ಮೂಗಿನ ತುದಿಗೆ ತುಪ್ಪ ಹಚ್ಚಿದಂತೆ ದುಡಿಮೆಯಲ್ಲದ ಆದಾಯವನ್ನು ತೋರಿಸುವುದು ಅದೂ ದೇವರ ಕೆಲಸದಲ್ಲಿ ಏನಿಲ್ಲವೆಂದರೂ ದೈವಾನುಗ್ರಹಕ್ಕೆ ದಾರಿ ಮಾಡಿಕೊಡುವುದಿಲ್ಲ.
            ಸಾಮಾನ್ಯವಾಗಿ ಭಾರತದಲ್ಲಿ ಅತಿ ಹೆಚ್ಚು ಆದಾಯ ತೆರಿಗೆಯನ್ನು ನ್ಯಾಯ ಯುತವಾಗಿ ಸಲ್ಲಿಸುವುದು ವೇತನ ಪಡೆಯುವ ನೌಕರವರ್ಗ. ಅವರಿಗೆ ಸಿಗುವ ವೇತನದಲ್ಲಿ ಆದಾಯ ತೆರಿಗೆ ಮೊದಲೇ ಕಡಿತ ಗೊಳಿಸಲಾಗುತ್ತದೆ. ಈಗ ಸಂಘ ಸಂಸ್ಥೆಗಳು ಆದಾಯ ವನ್ನು ಘೋಷಿಸದೇ ಲೆಕ್ಕ ಪತ್ರವನ್ನು ತೋರಿಸದೇ ಆದಾಯ ತೆರಿಗೆಯನ್ನೂ ಪಾವತಿಸದೇ ಇದ್ದು ಕಾನೂನು ಉಲ್ಲಂಘಿಸಿದರೆ, ಸರಿಯಾಗಿ ತೆರಿಗೆ ಪಾವತಿಸುವ ನೌಕರ ವರ್ಗಕ್ಕೆ ಅವಮಾನಿಸಿದಂತೆ ಮಾತ್ರವಲ್ಲ ಹೀಯಾಳೀಸಿದಂತೆಯೂ ಆಗುತ್ತದೆ. ಅಷ್ಟು ಹೊತ್ತು ಸಿಗ್ನಲ್ ನಲ್ಲಿ ನಿಂತವನನ್ನು ನೋಡುತ್ತಾ ಪುಟ್ ಪಾತ್ ಹತ್ತಿ ನಾನು ನಿನ್ನಿಂದ ಬುದ್ಧಿವಂತ ಅಂತ ಹೇಳಿಕೊಂಡು ಹೋದ ಹಾಗೆ ಸರಿಯಾಗಿ ಆದಾಯ ತೆರಿಗೆ ಪಾವತಿಸುವವನಿಗೆ ಮಾಡುವ ಘೋರ ಅವಮಾನವಾಗುತ್ತದೆ.  ನೋಟ್ ಬ್ಯಾನ್ ನಂತರ ಹೀಗೆ ಅದಾಯ ತೆರಿಗೆಯನ್ನು ಪಾವತಿಸದೇ ಅದಾಯಗಳಿಸುವ ಸಂಘ ಸಂಸ್ಥೆಗಳು ಸರಕಾರದ ಗಮನಕ್ಕೆ ಬಂದು ಬಹಳಷ್ಟು ತೊಂದರೆಯನ್ನು ಅನುಭವಿಸಿದ್ದು ಮಾತ್ರವಲ್ಲ, ತಮ್ಮ ಮಾನ್ಯತೆಯನ್ನು ಕಳೆದುಕೊಂಡಿವೆ. ಇದು ಒಂದು ವ್ಯವಸ್ಥೆಯನ್ನು ಹೇಗೆ ಸರಿ ಪಡಿಸಬಹುದು ಎಂಬುದರ ದಿಕ್ಸೂಚಿ. ಬುದ್ದಿವಂತರು ಇದನ್ನೂ ವಿರೋಧಿಸುತ್ತಾರೆ.  ಹಾಗಾಗಿ ಸಾರ್ವಜನಿಕ ಸಂಸ್ಥೆಗಳು ತಮ್ಮ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಹೊಂದಿರುವುದು ಆ ಸಂಸ್ಥೆಯ ಮೇಲೆ ನಂಬಿಕೆ ಕಡಿಮೆಯಾಗಿದೆ ಎಂದು ತಿಳಿಯಬೇಕಿಲ್ಲ. ಅಥವಾ ಆ ಸಂಸ್ಥೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತೆಯೂ ಇಲ್ಲ. ಪ್ರಾಮಾಣಿಕನಾಗಿದ್ದವನಿಗೆ ಎಲ್ಲಿ ನಿಲ್ಲುವುದಕ್ಕೂ ಭಯವೇನು? ಎಂತಿದ್ದರೂ ದೇವರ ಮುಂದೆ ಆತನಿಗಾಗಿಯಾದರೂ ಪ್ರಾಮಾಣಿಕನಾಗಿ ಇರಲೇ ಬೇಕಾಗುತ್ತದೆ.
            ಸಾರ್ವಜನಿಕ ಸಂಗ್ರಹದ ಹಣದಿಂದ ಆದಾಯಗಳಿಸುವ ಸಂಘ ಸಂಸ್ಥೆಗಳಾಗಲೀ ವ್ಯಕ್ತಿಯೇ ಆಗಲೀ ಆದಾಯ ತೆರಿಗೆ ಪಾವತಿಸಲೇ ಬೇಕು. ಇದು ಒಂದು ಸಾಮಾಜಿಕ ನ್ಯಾಯ.  ಸಾಮಾಜಿಕನ್ಯಾಯವನ್ನು ಅಂಗೀಕರಿಸುವುದಕ್ಕೆ ಹಿಂಜರಿಯುವುದೆಂದರೆ ವ್ಯವಸ್ಥೆಯ ವಿರುದ್ದ ಸಂಚರಿಸುವುದು ಎಂದರ್ಥ. ಸರಕಾರಿ ವ್ಯವಸ್ಥೆ ಕೊಡುವ ರಸ್ತೆ ವಿದ್ಯುತ್ ಮೊದಲಾದ ಸಾರ್ವಜನಿಕ ಸೌಲಭ್ಯಗಳನ್ನು ಉಪಯೋಗಿಸುವಾಗ ಸಾಮಾಜಿಕ ನ್ಯಾಯದಿಂದ ಪಲಾಯನವಾಗುವುದು ಸಾಧ್ಯವಾಗುವುದಿಲ್ಲ. ಸರಕಾರೀ ವ್ಯವಸ್ಥೆಯ ವಿರುದ್ಧ ಹೋಗುತ್ತಾ,   ನಮ್ಮದೇ ಸರಕಾರದ ವ್ಯವಸ್ಥೆಯಲ್ಲಿ ಈ ಉಪ್ಪಿನ ಸತ್ಯಾಗ್ರಹದ ಥಂಡೀಯಾತ್ರೆಯ ಅಗತ್ಯವಿದೆಯೇ?
            ಕೊನೆಯಲ್ಲಿ ಒಂದು ದೇವರ ಹೆಸರನ್ನು ಮುಂದಿಟ್ಟುಕೊಂಡು ವ್ಯವಹರಿಸುವಾಗ ತಪ್ಪು ಒಪ್ಪುಗಳು ಅಂತಿಮ ನಿರ್ಣಯ ದೇವರದ್ದೇ ಆಗಿರುತ್ತದೆ ಹೊರತು ಅಲ್ಲಿ ಮನುಷ್ಯನ ಹಸ್ತಕ್ಷೇಪ ಸಲ್ಲುವುದಿಲ್ಲ. ತಪ್ಪು ಮಾಡಿದವರು ಮನುಷ್ಯನಿಗೆ ಅಂಜದೇ ಇದ್ದರೂ ಪರಮಾತ್ಮನ ವ್ಯವಸ್ಥೆಗೆ ಗೌರವಿಸಲೇ ಬೇಕು.  ಅಂಬೆ ಎಷ್ಟು ಕೆಟ್ಟವಳಾದರೂ ಅವಳ ಶಾಪ ಭೀಷ್ಮನಿಗೆ ಬಾಧಕವಾಯಿತು.
            ಇವಿಷ್ಟು ಅಭಿಪ್ರಾಯಗಳು ಕೇವಲ ಇಲ್ಲಿಗಷ್ಟೇ ಸೀಮಿತ. ಕೇವಲ ಸೌಹಾರ್ದದ ದೃಷ್ಟಿಯಲ್ಲಿ ವೈರ ವೈಷಮ್ಯಗಳನ್ನು ಮರೆತು ಮಾನವೀಯತೆಯಿಂದ ಬದುಕುವುದಕ್ಕೆ ಕಿಂಚಿತ್ ಆದರೂ ಪ್ರಚೋದನೆಯನ್ನು ಒದಗಿಸಲಿ ಎಂಬ ಆಶಯ.  ಶ್ರೀಮಂತನಾದರೂ ಬಡವನಾದರು ಯಜಮಾನನಾದರೂ ನೌಕರನಾದರೂ ಜಾತಿ ಪಂಗಡದ ಸೀಮೆಯನ್ನು ದಾಟಿ ಪರಮಾತ್ಮನ ಎದುರು ಹೆಚ್ಚೇಕೆ ನಮ್ಮ ಅಮ್ಮನ ಎದುರು ಸಮಾನರೆ, ಮಕ್ಕಳಲ್ಲಿ ಭೇದ ಭಾವ  ಅಮ್ಮನಾದವಳು ಕಾಣುವುದಿಲ್ಲ. ಈ ವಿಶ್ವಾಸವಿದ್ದುಕೊಂಡು ನಮ್ಮ ವರ್ತನೆ ಇರಬೇಕು.  ಮಹಾಭಾರತ ಯುದ್ದವನ್ನು ತಪ್ಪಿಸುವುದಕ್ಕೆ ಶ್ರೀಕೃಷ್ಣ ಪರಮಾತ್ಮ ಕೊನೆಯವರೆಗೂ ಶ್ರಮಿಸುತ್ತಾನೆ. ಕೇವಲ ಸೌಹಾರ್ದ ನೆಲೆ ನಿಲ್ಲಲಿ ಎಂಬ ಆಶಯ. ಇಂದಿಗೆ ಆ ಪರಮಾತ್ಮ ಆಶಯವನ್ನು ನಾವು ಮರೆತಂತೆ ವರ್ತಿಸುವುದು ಸರಿಯಲ್ಲ.

Monday, June 18, 2018

ಹರಕೆಯಲ್ಲಿರುವ ಬೆರಕೆಗಳು



“ಬ್ರಾಹ್ಮಣರ ಶಾಪ, ಗುರುಗಳ ಕೋಪ, ತಾಯಿಯ ಪ್ರಲಾಪ,  ಶ್ರೀಕೃಷ್ಣನದ್ದಾದ ಮಮ ಪ್ರಾಣಾಹಿ ಪಾಂಡವಾಃ,  ಆ ಕಡೆಯಿಂದ ಇಂದ್ರ , ಛೇ  ಈ ಪ್ರಪಂಚದಲ್ಲಿ ಯಾರು ಯಾರು  ಒಬ್ಬ ಜೀವಾತ್ಮನ ಉತ್ಕರ್ಷಕ್ಕೆ ಮಂತ್ರಾಕ್ಷತೆಯನ್ನು ಹಾಕಬೇಕೋ  ಅವರೆಲ್ಲ ನನಗೆ ಮುನಿದರು, ಏನು ಮಾಡಲಿ? ಹಾಗಾದರೆ ಪ್ರಪಂಚದಲ್ಲಿ ನಾನು ಬದುಕುವುದು ದಿವ್ಯಶಕ್ತಿಗಳಿಗೆ ಸಹನೆಯಾಗುವುದಿಲ್ಲ.  ಆದರೂ ಬದುಕಿದೆ  ಹಟದಿಂದ. ಇದು ಸೂರ್ಯನ ಮಗನಾದ್ದರಿಂದ ನನಗೆ ಬಂದಂತಹ ಯೋಗ. ಎಲ್ಲವನ್ನೂ ಮರೆತು ಇನ್ನು ವಿಲಪಿಸದೆ  ಸೂರ್ಯನ ಉಪಾಸನೆ ಮಾಡಿದ್ದೇನೆ. ಆ ಸೂರ್ಯನ ಉಪಾಸನೆಯಿಂದ ನನಗೆ ಸಿಕ್ಕಿದ್ದು  ಧಿಯೋಯೋನಃ ಪ್ರಚೋದಯಾತ್. ಆ ಧೀಶಕ್ತಿ ಮಾತ್ರ. ಈಗ ಮರಣ ಕಾಲಕ್ಕೆ ಆ ಧೀಶಕ್ತಿಯನ್ನೇ ಉಪಯೋಗಿಸಿಕೊಂಡು ನಾನು ದೇಹವಲ್ಲ, ನಾನು ಮನಸ್ಸಲ್ಲ,  ನಾನು ಬುದ್ಧಿಯಲ್ಲ, ನಾನು ನಾನೇ ಎಂಬ ನಿರ್ವಿಕಲ್ಪ ಭಾವದಿಂದ ಕುಳಿತು ಬಿಡುತ್ತೇನೆ.” 

ರಣರಂಗದಲ್ಲಿ ಎಲ್ಲವನ್ನೂ ಕಳೆದು ಕೊಂಡ ಕರ್ಣ ಉಳಿದ ದೇಹವನ್ನೂ ಮನಸ್ಸನ್ನೂ ಭಗವಂತನಿಗೆ ಒಪ್ಪಿಸಿ ನಿರ್ವಿಕಲ್ಪ ಸ್ಥಿತಿಗೆ ಜಾರುವ ಕ್ಷಣ. ಯಕ್ಷಗಾನ ತಾಳ ಮದ್ದಲೆಯ ಚರಮ ಸನ್ನಿವೇಶದಲ್ಲಿ ಯಕ್ಷವಾಗ್ಮಿ ಹರಿದಾಸ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ಕರ್ಣನಾಗಿ ಆಡಿದ ಭಾವ ಸದೃಶ ಮಾತುಗಳಿವು. ದೇಹ ಮನಸ್ಸು ಯಾವುದೂ ಅಲ್ಲದ ಓರ್ವ ಮನುಷ್ಯನ ಕೊಟ್ಟ ಕೊನೆಯ ಸ್ಥಿತಿಯ ಚಿತ್ರಣ ಮಾತ್ರವಲ್ಲ ಮನುಷ್ಯನ ಬದುಕಿನ ನೈಜ ದರ್ಶನ. ಭಗವದ್ಗೀತೆಯ ಸಾರ ಈ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಯಕ್ಷಗಾನವೆಂದರೆ ಅದು ಕೇವಲ ರಂಜನೆಯಲ್ಲ, ಭಾವ ಪ್ರಕಟನೆಯೂ ಅಲ್ಲ. ಇವೆಲ್ಲವನ್ನು ಸೇರಿಸಿ ಇದಲ್ಲದ ಅದೇನೋ ಒಂದು ಅಲ್ಲಿದೆ. ಕಟು ಸತ್ಯವನ್ನು ಕಂಡಾಗ ಮನುಷ್ಯ ಕಣ್ಣು ಮುಚ್ಚುವಂತೆ ಈ ಸತ್ಯವನ್ನೂ ಅರಗಿಸಿಕೊಳ್ಳುವುದರಲ್ಲಿ ಯಕ್ಷಗಾನ ಲೋಕ ಕಣ್ಣು ಮುಚ್ಚುತ್ತದೆ.
ಮೇಲೆ ಹೇಳಿದ ದಿವ್ಯ ವಚನಗಳು ಯಕ್ಷಗಾನದಲ್ಲಿ ಯಥೇಚ್ಛವಾಗಿ ಲಭ್ಯವಾಗುತ್ತದೆ. ಆದರೆ ಅದರ ಬಗ್ಗೆ ಗಂಭೀರವಾದ ಚಿಂತನೆ ಇಲ್ಲ ಎಂಬುದಷ್ಟೇ ಸತ್ಯ. ಇಂತಹ ತಾತ್ವಿಕ ವಿಚಾರಗಳು ಚಿಂತನೆಗಳು ಯಕ್ಷಗಾನದಲ್ಲಿ ಸಿಗುವಷ್ಟು ವಿಪುಲವಾಗಿ ಬೇರೆ ಯಾವ ಸಾಹಿತ್ಯ ಲೋಕದಲ್ಲೂ ಸಿಗಲಾರದು. ಯಕ್ಷ ಸಾಹಿತ್ಯದ ಶ್ರೀಮಂತಿಕೆಯದು. ಗೀತೋಪದೇಶದ ತತ್ವಗಳು ಚಿಂತನೆಗಳು ಭಗವದ್ಗೀತೆಯನ್ನು ಓದದೇ ಇದ್ದರೂ ಸಹ ಯಕ್ಷಗಾನ ಪ್ರೇಕ್ಷಕನಿಗೆ ಚಿರ ಪರಿಚಿತವಾಗುತ್ತವೆ.  ಇದಕ್ಕೆ ಕಾರಣಗಳು ಹಲವು ಸಿಗಬಹುದು. ಆದರೆ ಯಕ್ಷಗಾನ ಲೋಕ ಈ ತಾತ್ವಿಕತೆಯನ್ನು ಎಷ್ಟು ಅರಗಿಸಿಕೊಂಡಿದೆ ಎಂದು ತಿಳಿದರೆ ವಿಷಾದವಾಗುತ್ತದೆ.
ಭಗವದ್ಗೀತೆಯಲ್ಲಿ  ಯಜ್ಞ ತಪಸ್ಸು ಪೂಜೆಯ ಬಗ್ಗೆ ಕೆಲವು ವಿವರಣೆಗಳಿವೆ. ಅದರಂತೆ, ಪೂಜೆಯಲ್ಲೂ     ಸಾತ್ವಿಕ,  ರಾಜಸ ಮತ್ತು ತಾಮಸ  ಹೀಗೆ ಮೂರು ವಿಧಗಳಿಂದ ವಿಂಗಡಿಸಲ್ಪಟ್ಟಿದೆ. ಐಹಿಕವಾದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಶ್ರದ್ಧೆಯಿಂದ ಮಾಡಿದ ತಪಸ್ಸು ಸಾತ್ವಿಕ ತಪಸ್ಸು. ಇದು ಪರಮಾತ್ಮನ ಸ್ಥಿರವಾದ ಶಾಶ್ವತವಾದ ಸಾನ್ನಿಧ್ಯವನ್ನು  ಕೊಡುತ್ತದೆ.  ಗೌರವ, ಪರಾಕರ್ಷಣೆ, ಫಲಾಪೇಕ್ಷೆ ಮತ್ತು ಸ್ವಾರ್ಥದಿಂದ ಕೂಡಿದ ಪೂಜೆಯನ್ನು ರಾಜಸ ತಪಸ್ಸು ಹಾಗೇನೆ ತನ್ನನ್ನೂ ಹಿಂಸಿಸುವುದು ಮಾತ್ರವಲ್ಲ ಪರರನ್ನು ಹಿಂಸಿಸಿ, ತೊಂದರೆಯನ್ನು ಕೊಟ್ಟು ಮಾಡುವ ತಪಸ್ಸು ಪೂಜೆಗಳು ತಾಮಸ ತಪಸ್ಸು ಅಂದರೆ ರಾಕ್ಷಸಿ ತಪಸ್ಸು ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಮೊದಲೆರಡು ವಿಧದ ತಪಸ್ಸನ್ನು ಸಹಿಸಿಕೊಳ್ಳಬಹುದು, ಆದರೆ ಕೊನೆಯ ತಾಮಸೀ ಸ್ವಭಾವವನ್ನು ಸಮಾಜ ಸಹಿಸಿಕೊಳ್ಳುವುದು ಹೇಗೆ? ಆದರೆ ಇಂದು ಆಗುತ್ತಿರುವುದೂ ಅದೇ.  ಇದು  ವಿಷಾದನೀಯ.
ನಿಜಕ್ಕಾದರೆ ಯಕ್ಷಗಾನದಲ್ಲಿ ಸಹಜವಾಗಿ ಸುಲಭವಾಗಿ ವಿಚಾರಧಾರೆಗಳು ಹರಿದು ವೈಚಾರಿಕ ಚಿಂತನೆಗಳು ಪ್ರಚೋದನೆಗೊಳ್ಳಬೇಕಿತ್ತು. ಆದರೆ ರಂಗದ ವೇಷಗಳಂತೆ ಕೇವಲ ರಂಗದಲ್ಲೇ ಗಿರಕಿ ಸುತ್ತುವ ವಿಚಾರಧಾರೆಗಳು ರಂಗದ ಹೊರಗೆ ಚಿಂತನೆಯನ್ನು ಉಂಟು ಮಾಡುವುದೇ ಇಲ್ಲ. ವೈಚಾರಿಕವಾಗಿ ಬಡತನವೂ ಅಲ್ಲದ  ಒಂದು ರೀತಿಯ ಔದಾಸಿನ್ಯ  ಆವರಿಸಿಕೊಳ್ಳುತ್ತದೆ.
ಹೆಚ್ಚಾಗಿ ಯಕ್ಷಗಾನವನ್ನು ಭಕ್ತಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಹಾಗಾಗಿಯೇ ಹರಕೆ ಮೇಳಗಳ ದೇವಿಮಹಾತ್ಮೆ ಅಧಿಕ ಸಂಖ್ಯೆಯಲ್ಲಿ ಪ್ರದರ್ಶನಗೊಳ್ಳುವುದು. ಆದರೆ ಕೇವಲ ಹರಕೆಯಾಗಿಯೇ ವ್ಯವಹಾರದಲ್ಲಿ ಉಳಿದು ಬಿಡುವ ಈ ಪ್ರದರ್ಶನದಲ್ಲಿ ಯಕ್ಷಗಾನಕ್ಕೆ ಎಷ್ಟು ಉಪಯೋಗವಿದೆ ಎಂಬುದು ಪ್ರಶ್ನಾರ್ಹವಾಗಿಯೇ ಉಳಿದು ಬಿಡುತ್ತದೆ. ದೇವಸ್ಥಾನಕ್ಕೆ ಒಂದಷ್ಟು ಆರ್ಥಿಕ ಆದಾಯ ಜತೆಯಲ್ಲಿ ಕಲಾವಿದರು ಮತ್ತದರ ಸಂಬಂಧೀ ವರ್ತುಲಗಳ ಒಳಗೆ ಆಗುವ ಆದಾಯ ಬಿಟ್ಟರೆ ಯಕ್ಷಗಾನಕ್ಕೆ ಯಾವ ಉಪಯೋಗವೂ ಇಲ್ಲ. ಯಕ್ಷಗಾನ ದೇವಿಗೆ ಪ್ರಿಯವಾದ ಸೇವೆ, ದೇವಿಯ ಅನುಗ್ರಹಕ್ಕೆ ಪಾತ್ರವಾಗುವ ಹರಕೆ ಸೇವೆ ಅಷ್ಟಕ್ಕೆ ಸೀಮಿತ. ದೇವಿಗೆ ಪ್ರಿಯವಾಗುವ ಸೇವೆಯಲ್ಲಿ ಯಕ್ಷಗಾನ ಎಷ್ಟು ಇದೆ ಎಂದು  ಸ್ವತಃ  ದೇವಿಯೇ ಭಕ್ತರ ಅನುಗ್ರಹಕ್ಕೋಸ್ಕರ  ಹುಡುಕುವಂತಹ ಸ್ಥಿತಿ ಬಂದಿದೆ. ಇದಕ್ಕೆ ಮನುಷ್ಯ ನಿರ್ಮಿತ ವ್ಯವಸ್ಥೆಯೇ  ಕಾರಣ .
ಒಂದು ಹರಕೆಯಾಟ ಆಡಿಸುವುದಿದ್ದರೆ ಅದರ ಅದ್ಧೂರಿಯ ಆಡಂಬರದ ಪ್ರದರ್ಶನ  ಶ್ರೀಮಂತಿಗೆ ನೋಡಿದರೆ ಆಶ್ಚರ್ಯವಾಗುತ್ತದೆ. ಇದು ಕೇವಲ ಭಕ್ತಿ ಪ್ರದರ್ಶನದ ಪ್ರಕಟನೆ. ದೇವಿಯ ಹರಕೆಗಾಗಿ ತಾನೆಷ್ಟು ವೆಚ್ಚಮಾಡುತ್ತೇನೆ ಎಂಬುದನ್ನು ತೋರಿಸಿ ವೈಭವೀಕರಿಸುವುದಷ್ಟೇ ಉದ್ದೇಶ.   ಭಕ್ತಿ ಎಂಬುದು ಅಂತರಗದ ವಿಷಯವಾಗಬೇಕೆ ಹೊರತು ಪ್ರದರ್ಶನದ ವಸ್ತುವಾದರೆ ಅದರ ಉದ್ದೇಶ ಫಲ ಸಿದ್ದಿಯಾಗಬಹುದೇ? ಗೀತೆಯಲ್ಲಿ ಹೇಳಿದಂತೆ ಇದು ರಾಜಸ ತಪಸ್ಸಾಗುತ್ತದೆ. ಇದು ಪರಮಾತ್ಮನ ಅನುಗ್ರಹಕ್ಕೆ ಪರ್ಯಾಪ್ತವಾಗುವುದಿಲ್ಲ. ಬೇರೆ ಯಾವುದೋ ಒಂದು ಕ್ಷೇತ್ರದಲ್ಲಿ ಹೀಗೆ ಅದ್ಧೂರಿಯ ಭಕ್ತಿ ಪ್ರದರ್ಶನ ತೋರಿದರೆ ಆಶ್ಚರ್ಯವಿಲ್ಲ, ಆದರೆ ಯಕ್ಷಗಾನದಲ್ಲಿ ಗೀತೆಯ ತತ್ವಗಳನ್ನು ಶ್ಲೋಕಗಳನ್ನು ಸೂಕ್ಷ್ಮಾತಿ ಸೂಕ್ಷ್ಮವಾಗಿ ವಿವರಿಸುವಾಗ ಭಕ್ತಿ ಪ್ರಕಟನೆ ಸರಳವಾಗಬೇಕಿತ್ತು. ಆದರೆ ಆಗಲಿಲ್ಲ. ಭಕ್ತಿ ಮಾತ್ರ ಮಾಲಿನ್ಯವಾಗುವುದಲ್ಲ. ಜತೆಯಲ್ಲಿ ಯಕ್ಷಗಾನವೂ ಮಾಲಿನ್ಯವಾಗುತ್ತದೆ.
ಶ್ರೀದೇವಿಗೆ ಯಕ್ಷಗಾನ ಪ್ರಿಯವಾದ ಕಲೆ. ದೇವಿಗೆ ಅರ್ಪಿಸುವ ಉಳಿದ ಹೂ ಹಣ್ಣು ಸುವಸ್ತುಗಳು ಕಲ ಬೆರಕೆಯಾದಂತೆ ಯಕ್ಷಗಾನವೂ ಕಲಬೆರಕೆಯಾಗಿದೆ. ಅಬ್ಬರದ ವೇಷ ಪ್ರವೇಶಕ್ಕೆ ಯುದ್ದ ಸನ್ನಿವವೇಶಗಳಿಗೆ ಚೆಂಡೆಯ ನಾದ ವೈವಿಧ್ಯ ಕೇಳುವುದೇ ಸೊಗಸು. ಇವುಗಳಿಂದಲೇ  ಯಕ್ಷಗಾನದ ನಿಜವಾದ ಅನುಭವ ಸಾಧ್ಯವಾಗುತ್ತದೆ. ಆದರೆ ಈಗ ಅಂತಹ ಮಧುರಾನುಭವ ಸಾಧ್ಯವಾಗುವುದಿಲ್ಲ. ಚೆಂಡೆಯ ಬಡಿತ ಕೇಳುವುದೇ ಬೇಡ ಎಂಬಂತೆ ಬ್ಯಾಂಡು ವಾದ್ಯಗಳ ಶಬ್ಧಗಳು ಯಕ್ಷಗಾನ ಹಿಮ್ಮೆಳವನ್ನು ಕಲಬೆರಕೆ ಮಾಡಿಬಿಡುತ್ತದೆ. ಮೊದಲು ಕೇವಲ ಹರಿಕೆ ಬಯಲಾಟಗಳಲ್ಲಿ ಮಾತ್ರವೇ ಬಳಸಲಾಗುತ್ತಿದ್ದ ಬ್ಯಾಂಡು ವಾದ್ಯಗಳು ಈಗ ಸಾಮಾನ್ಯ ಹವ್ಯಾಸಿ ಯಕ್ಷಗಾನಗಳಲ್ಲೂ ಬಳಕೆಗೆ ಬಂದಿರುವುದು ಖೇದನೀಯ. ಯಕ್ಷಗಾನದ ಅನಧಿಕೃತ ಪರಂಪರೆಯಂತೆ ಈ ಬ್ಯಾಂಡು ವಾದ್ಯ ಸುಡು ಮದ್ದು ಬೆಳೆದು ಬಂದಿವೆ.  ಯಕ್ಷಗಾನದ ಆಕರ್ಷಣೆಯ ಮೇಲೆ ವಿಶ್ವಾಸವಿಲ್ಲದೇ ಈ ಆಡಂಬರದ ಮೊರೆ ಹೋಗುವುದು ಯಕ್ಷಗಾನದ ಅವಹೇಳನೆವೇ ಆಗುತ್ತಿದೆ. ಯಕ್ಷಗಾನ ಪ್ರಿಯ ಶ್ರೀದೇವಿಯ ಅನುಗ್ರಹ ಇದರಿಂದ ಸಾಧ್ಯವಾಗಬಹುದೇ?  ಆಡಂಬರ ಅದ್ದೂರಿಗಳು ರಂಗದ ಹೊರಗಿನ ಚಟುವಟಿಕೆಗಿಂತ ರಂಗದ ಒಲಗಿನ ಚಟುವಟಿಕೆಯಾದಲ್ಲಿ ನೈಜ ಯಕ್ಷಗಾನ ಸೇವೆಯಾದಂತೆ.  ಆ ರೀತಿಯಲ್ಲಿ ಶ್ರೀ ದೇವಿಯನ್ನು ಪ್ರಸನ್ನೀಕರಿಸುವುದರಲ್ಲಿ ಒಪ್ಪಿಸುವ ಹರಕೆಗೂ ಅರ್ಥವಿದೆ.
ಆಡಂಬರದ ಭಕ್ತಿ ಪ್ರದರ್ಶನದಿಂದ ಯಕ್ಷಗಾನ ಕಲೆಗೂ ಪ್ರೇಕ್ಷಕನಿಗೂ ತೊಂದರೆ.  ಗೀತೆಯಲ್ಲಿ ಹೇಳಿದಂತೆ ಪರರಿಗೆ ತೊಂದರೆಯಾಗುವ ಪೂಜೆ ಪುನಸ್ಕಾರಗಳು ತಾಮಸ ಸ್ವಭಾವದವುಗಳಾಗುತ್ತವೆ. ಹಾಗಾಗಿ ಹರಕೆ ಬಯಲಾಟಗಳು ರಾಕ್ಷಸೀ ಸ್ವಭಾವವನ್ನೇ ಬಿಂಬಿಸುವುದರಿಂದ ಹರಕೆಯ ಫಲ ಪ್ರಾಪ್ತಿ ಸಾಧ್ಯವಾಗುತ್ತದೆಯೇ? ಹರಕೆ ಸಲ್ಲಿಸುವವರಿಗೆ ಅರ್ಥವಾಗದೇ ಇದ್ದರೆ ಹರಕೆ ಪಡೆಯುವವರಾದರೂ ಇಂತಹ ಕೆಟ್ಟ ಪರಂಪರೆಗೆ ನಿಷೇಧ ಹೇರಬೇಕು. ಆದರೆ ಅದು ಸಾಧ್ಯವಾಗುವುದಿಲ್ಲ. ಯಕ್ಷಗಾನದ ಬಯಲಾಟಕ್ಕಿಂತ ಹಣದ ಆಟವೇ ಪ್ರಧಾನವಾಗಿಬಿಡುತ್ತದೆ. ಇದು ಬಯಲಾಟದಂತೆ ಬಯಲಾದ ಸತ್ಯ.
ಗೀತೆಯಲ್ಲಿ ಹೇಳಿದ ವಾಕ್ಯಗಳು ಕೇವಲ ರಂಗದೊಳಗೇ ಸೀಮಿತವಾಗಿಬಿಡುತ್ತವೆ. ಇದೊಂದೇ ಅಲ್ಲ, ನಾನು ಎಂಬ ಅಹಂಭಾವವನ್ನು ಬಿಡು ಎಂದು. “ನಾನು “ ಎಂದರೇನು? ದೇಹದಿಂದಲೇ ? ಮನಸ್ಸಿನಿಂದಲೇ? ಆತ್ಮದಿಂದಲೇ? ಇದರ ಬಗ್ಗೆ ಬಹಳ ಸುಂದರ ವಿಶ್ಲೇಷಣೆಯನ್ನು ಯಕ್ಷಗಾನದಲ್ಲಿ ಕೇಳಿ ಆನಂದಿಸುತ್ತೇವೆ. ಪರಸ್ಪರ ವಾದ ಮಾಡಿ ಅರ್ಥಗಾರಿಕೆ ವಿಜ್ರಂಭಿಸುವಾಗ ಚಪ್ಪಾಳೆ ತಟ್ಟಿ ನಮ್ಮ ಯಕ್ಷಗಾನದ ಬಗ್ಗೆ ಹೆಮ್ಮೆ ಪಟ್ಟು ಕೊಳ್ಳುತ್ತೇವೆ. ನಾನು ಎಂಬ ಅಹಂಭಾವದ ಬಗ್ಗೆ ಅರ್ಥ ಹೇಳಿ ಚಪ್ಪಾಳೆ ಗಿಟ್ಟಿಸಿದವರೇ ದುರಹಂಕಾರ ಪ್ರವೃತ್ತಿಯಲ್ಲಿ ವ್ಯವಹರಿಸುವುದು ಕಾಣುತ್ತೇವೆ. ಎಲ್ಲಾ ತತ್ವಗಳು  ಆಚರಣೆಗೆ ಕಠಿಣವಾದವುಗಳೇ ಸಂಶಯವಿಲ್ಲ. ಆದರೆ ರಂಗದ ಮೇಲೆ ಏನು ಹೇಳಿರುವುದೋ ಅದನ್ನು ಅಣಕಿಸುವಂತೆ ವ್ಯವಹಾರವಾಗಬಾರದಲ್ಲ.?
ಬಾಲ್ಯದಲ್ಲಿ ಮನೆಯ ಹತ್ತಿರ ಆಟದ ಮೇಳ ಶಿಬಿರ ಹೂಡುವಾಗ ಅಜ್ಜ ಕೇಳುತ್ತಿದ್ದರು   “  “ಯಾವುದು ಪ್ರಸಂಗ? “   “ ದೇವಿ ಮಾಹಾತ್ಮೆ”...ಆಗ ಅಜ್ಜ ವ್ಯಂಗ್ಯವಾಗಿ ಹೇಳುತ್ತಿದ್ದರು...” ಈ ಆಟಕ್ಕೆ ಹೋಗುವುದಕ್ಕಿಂತ ಭೂತ ಕೋಲಕ್ಕೆ ಹೋದರೆ ಒಳ್ಳೆದು”
ಆಗ ಅಜ್ಜನ ಮಾತಿನ ಅಣಕ ಅರ್ಥವಾಗುತ್ತಿರಲಿಲ್ಲ. ಅಂದಿನಿಂದ ಇಂದಿನವರೆಗೂ  ದೇವಿ ಮಹಾತ್ಮೆ ಬಯಲಾಟದ ಬಗ್ಗೆ ಮನೋಭಾವ ಬದಲಾಗಿಲ್ಲ. ಭೂತಕೋಲದಂತೆ ಭಾಸವಾಗುವ ಬಯಲಾಟದಿಂದ ಯಕ್ಷಗಾನಕ್ಕೆ ಯಾವ ಪ್ರಯೋಜನವಿದೆ? ಆರಂಭದಲ್ಲಿ ಸ್ವಲ್ಪ ಸಂವಾದ ಬಿಟ್ಟರೆ ಮತ್ತೆ ಯಕ್ಷಗಾನ ಬೊಬ್ಬೆ ಆರ್ಭಟೆಯಲ್ಲಿ ಮುಗಿದು ಹೋಗುತ್ತದೆ. ಅದರಲ್ಲಿ ಸಿಗುವ ಯಕ್ಷಗಾನದ ಭಾಗವೆಷ್ಟು? ಹೋಗಲಿ  ಬ್ಯಾಂಡು ಗರ್ನಾಲುಗಳ ನಡುವೆ  ಲಕ್ಷಗಟ್ಟಲೆ ಸುರಿದು ಅಲಂಕರಿಸಿದ ರಂಗಸ್ಥಳದಲ್ಲಿ  ತೋರಿಸುವ ಅಲ್ಪ ಆಟದಲ್ಲಿ  ಯಕ್ಷಗಾನ ಎಷ್ಟು ಸಿಗುತ್ತದೆ ಎಂದು ಪರಿಶೀಲಿಸಿದರೆ ವಿಷಾದವಾಗುತ್ತದೆ. ರಂಗಸ್ಥಳದ ಅಲಂಕಾರಕ್ಕೆ ಲಕ್ಷಗಟ್ಟಲೆ ಹಣವನ್ನು ವ್ಯಯ ಮಾಡಿ ಉದ್ದೇಶ ಪೂರ್ವಕವಾಗಿ ಸುಂದರ ಯಕ್ಷಗಾನ ಪ್ರೇಕ್ಷಕನಿಗೆ ಸಿಗದಂತೆ ಮಾಡುತ್ತಾರೆ. ಈ ಅಲಂಕಾರದ ವಿನ್ಯಾಸದ ನಡುವೆ ಯಕ್ಷಗಾನದ ಯಾವ ಅಂಗ ನಿಚ್ಚಳವಾಗಿ ಕಾಣುತ್ತದೆ?  ಯಕ್ಷಗಾನವೇ  ಅಸ್ಪಷ್ಟವಾಗಿ ಕಾಣುವ  ಇದಕ್ಕೆ ಹೆಸರು ಯಕ್ಷಗಾನ ಸೇವೆ.  ಹರಕೆ ಆಟವೆಂದರೆ ಅದು ವಾಣಿಜ್ಯವಾಗಿ ಆರ್ಥಿಕವಾಗಿ ನಡೆಸುವ ಒಂದು ದೊಡ್ಡ ಉದ್ಯಮವಾಗಿ ಬದಲಾಗಿದೆ. ಇದರೊಳಗೆ ಒಂದಷ್ಟು ಅಧಿಕೃತ ಅನಧಿಕೃತ ವ್ಯವಹಾರಗಳು, ನಮಗೆ ಅರಿಯದೇ ಇರುವ ಭೂಗತ ಶಕ್ತಿಗಳು . ಒಟ್ಟಿನಲ್ಲಿ ಯಕ್ಷಗಾನ ಸೇವೆ ಎಂದರೆ ನಿಜಕ್ಕೂ ತಾಮಸೀ ಸೇವೆಯಾಗಿ ಬದಲಾಗಿ ಹೋಗಿರುವುದು ತೀರಾ ವಿಷಾದನೀಯ.
ಒಂದು ರಾತ್ರಿಯಲ್ಲಿ ಆಡಂಬರ ಅದ್ದೂರಿಗಾಗಿ ಅನಗತ್ಯ ವೆಚ್ಚ ಮಾಡುವುದನ್ನು ಯಕ್ಷಗಾನದ ಹಿತದೃಷ್ಟಿಯಲ್ಲಿಟ್ಟು ಕೊಂಡು ಯಕ್ಷಗಾನಕ್ಕಾಗಿ ವೆಚ್ಚ ಮಾಡಿದಲ್ಲಿ ಅದು ನಿಜವಾದ ಯಕ್ಷಗಾನ ಸೇವೆಯಾಗುತ್ತದೆ. ಬೇಡ ಇದನ್ನು ಹಲವು ಸಮಾಜ ಮುಖೀ ಕಾರ್ಯಕ್ರಮದಲ್ಲಿ ತೊಡಗಿಸಿದರೆ ನಿಜವಾಗಿಯೂ ಅದು ದೇವರ ಸೇವೆಯಾಗಬಹುದು. ಆದರೆ ತೀರಾ ಅಗತ್ಯ ಆವಶ್ಯವಿರುವುದನ್ನು ಮಾಡುವುದರಲ್ಲಿ ನಮ್ಮ ಸಮಾಜ ಯಾವತ್ತಿಗೂ ಆಸಕ್ತಿಯನ್ನು ತೋರುವುದಿಲ್ಲ.


Tuesday, May 22, 2018

ಸ್ಥಿತ್ಯಂತರ


ಸ್ಥಿತ್ಯಂತರ
ಭಾಗ - ೧
ಒಂದು ಕಥೆ ಹೇಳುವುದಕ್ಕೆ ಹೊರಟಾಗ ಮನಸ್ಸಿನಲ್ಲಿ ಗಂಟು ಹಾಕಿ ಹುದುಗಿಸಿಟ್ಟುದನ್ನು ಹೊರತಂದು ಬಿಚ್ಚಿದಂತೆ. ದೂರದಿಂದ ಹೊರೆಯೊಂದನ್ನು ಹೊತ್ತು ತಂದು ಇಳಿಸಿ ಬಿಚ್ಚಿ ಒಳಗಿನ ಕೌತುಕದ ವಸ್ತುವನ್ನು ತೋರಿಸಿದಂತೆ. ಒಂದು ನಿರಾಳ ಭಾವ. ಆ ವರೆಗಿನ ಆಯಾಸವೆಲ್ಲ ಪರಿಹಾರವಾದಂತೆ. ಕಥೆ ಅಂದರೆ ಅದನ್ನು ಸಂದರ್ಭಾನುಸಾರ ಹಲವು ರೀತಿಯಲ್ಲಿ ಉಪಯೋಗಿಸುವುದುಂಟು. ಸೂಚ್ಯಾರ್ಥವನ್ನು ಹೇಳುವುದಕ್ಕೆ. ಹೇಳಬೇಕಾದುದನ್ನು ನೇರವಾಗಿ ಹೇಳಲು ಅಸಾಧ್ಯಾವಾದಗ ಕಥಾ ಮೂಲಕ ಪರೋಕ್ಷವಾಗಿ ಹೇಳಿ ಉದ್ದೇಶ ಈಡೇರಿಸಿಕೊಳ್ಳುವುದಕ್ಕೆ,   ಕೆಲವೊಂದು ಸಲ ಮುಖಾಮುಖಿಯಾಗಿ ಹೇಳಲು ಮುಜುಗರ ಪಡುವಾಗ ಕಥೆಯನ್ನು ಉಪಯೋಗಿಸುವುದುಂಟು. ದೂರವಾಣಿ ಎಂಬ ಸಂಪರ್ಕಸಾಧನ ಬಂದಂತಹ ಸಮಯದಲ್ಲಿ ನಮ್ಮಲ್ಲಿ ಒಬ್ಬರು ಹೇಳುತ್ತಿದ್ದರು, “ಮುಖಾಮುಖಿಯಾಗಿ ಬೈದು ಹೇಳಲಿಕ್ಕೆ ಅಸಾಧ್ಯವಾದದನ್ನು ಸಾಧ್ಯ ಮಾಡುವಂತಹ ಸಂಪರ್ಕ ಸಾಧನ ಈ ದೂರವಾಣಿ ದೂರದಿಂದಲೆ ಬೈದು ಬಿಡಬಹುದು.”  ನಮ್ಮಲ್ಲಿ ಒಬ್ಬರು ಇದ್ದರು ಎದುರಿಗೆ ಕಂಡರೆ ಬಹಳ ಸೌಜನ್ಯದ  ಸಾಧು ಮನುಷ್ಯ. ಪರರು ಹೇಳಬೇಕಾದುದೆಲ್ಲವನ್ನು ಹೇಳಿದರೂ ತಾನು ಹೇಳಬೇಕಾದುದನ್ನು ಹೇಳಲು ಸಂಕೋಚ ಪಡುವ ಪಾಪದ ಮನುಷ್ಯ. ಆದರೆ ಈ ಫೋನು ಮಾಡುವಾಗ ಅದೆಲ್ಲಿ ಇರುತ್ತದೋ,  ಮುಖನೋಡಿ ಬೈಯಲಾಗದೇ ಇದ್ದುದನ್ನೆಲ್ಲ ಕಕ್ಕಿ ಮನಸ್ಸು ಹಗುರ ಮಾಡಿಕೊಳ್ಳುವ ಅವರ ಸ್ವಭಾವ. ಇಂದು ಫೋನಿನಲ್ಲಿ ವಾಚಾಮಗೋಚರವಾಗಿ ಬೈದು ಮರುದಿನ ಸಿಕ್ಕಿದಾಗ ಅದೇ ಮಾಮುಲೀ ಸಾಧು ಮನುಷ್ಯನಂತೆ ಮಾತನಾಡವುದನ್ನು ಕಂಡಾಗ ಅನ್ನಿಸುತ್ತದೆ, ಈ ಫೋನ್ ಎಂಬ ಸಾಧನ ಬಾರದಿರುತ್ತಿದ್ದರೆ ಈ ಮನುಷ್ಯ ಅತ್ಯಂತ ಸಂಭಾವಿತ ವ್ಯಕ್ತಿಯಾಗಿಬಿಡುತ್ತಿದ್ದರಲ್ಲ.! ಆದರೆ ಈ ಕಥೆಗೂ ಈ ಯಾವುದೇ ವಿಷಯಗಳಿಗೂ ಪರಸ್ಪರ ಸಂಬಂಧವೇ ಇಲ್ಲ. ಇದು ಕೇವಲ ಕಥೆ. ಕೆಡುಕಿಲ್ಲದ ವೈಷಮ್ಯವಿಲ್ಲದ ಲೋಕ ಕಲ್ಪನೆಗೆ ಮಾತ್ರ ಸರಿ. ವಾಸ್ತವದಲ್ಲಿ ಅದು ಅಸಂಭವ.ಅವಾಸ್ತವಿಕ ಎನ್ನಬಹುದು. ಆದರೆ ನಮ್ಮ ಕಲ್ಪನೆಯ ಕಥೆಯಲ್ಲಿ ವಾಸ್ತವವಲ್ಲವೇ? ಹಾಗಾಗಿ ಆ ಪ್ರಯತ್ನ ಇಲ್ಲೀಯೂ ಬರಿಸುವ ಯತ್ನ. ವೈಷಮ್ಯವಿಲ್ಲದ ಕೆಟ್ಟವರಿಲ್ಲದ ಕೆಟ್ಟ ಯೋಚನೆಗಳಿಲ್ಲದ ಲೋಕ. ಪ್ರಾರಭ್ದವಶಾತ್ ದೈವ ಚಿತ್ತ ಮಾತ್ರ ಕೆಡುಕಾಗಬಹುದು, ಮನುಷ್ಯಚಿತ್ತ ಕೆಡುಕಾಗಬಾರದು. ಕೆಟ್ಟ ದೇಹ...ಅಂಗವಿಹೀನ ದೇಹ ಅದು ದೈವ ಚಿತ್ತ. ಆದರೆ ಮನಸ್ಸಿನ ಯೋಚನೆಗಳು ಮನುಷ್ಯ ಚಿತ್ತ.
*****
ಈಚಣ್ಣ ತನ್ನ ಪಾತ್ರ ಮುಗಿಸಿ, ಚೌಕಿಯ ಒಂದು ಬದಿಯಲ್ಲಿ ಕಳಚಿಟ್ಟ ವೇಷದ ಒಂದೊಂದೇ ವಸ್ತುಗಳನ್ನು ಜೋಡಿಸಿಡುತ್ತಿದ್ದರು. ಇದೇನು ಕಥೆಯ ಆರಂಭದಲ್ಲೇ ಪಾತ್ರ ಮುಗಿಸಿ ವೇಷ ಕಳಚಿತೇ? ಹೌದು, ಯಕ್ಷಗಾನ ಕಲಾವಿದರ ನಿಜ ಕಥೆ ಆರಂಭವಾಗುವುದು ವೇಷ ಕಳಚಿದ ಮೇಲೆಯೆ. ರಂಗದ ಮೇಲಿನ ಪಾತ್ರಗಳು ಹಲವು ಸಲ ಹೃದಯದ ದ್ವನಿಯಾಗುತ್ತವೆಯೋ ಹೊರತು ಅದು ವಾಸ್ತವವಾಗುವುದಿಲ್ಲ. ಕನ್ನಡಿಯ ಒಳಗಿನ ವಸ್ತು ಅದೇನಿದ್ದರೂ ಮಿಥ್ಯ.  ಕೈಗೆ ಸಿಗದು. ಕನ್ನಡಿಯ ಒಳಗಿನ ವಸ್ತು ಸಿಗಬೇಕಾದರೆ ಅದಕ್ಕೆ ಅಭಿಮುಖವಾಗಿ ಪ್ರಯತ್ನಿಸಿದರೆ ಕೆಲವೊಮ್ಮೆ ಕೈಗೆ ಸಿಗಬಹುದೇನೋ. ಒಂದು ರೀತಿಯ ವಿರೋಧಾಭಾಸದ ಪಯಣವಾಗಬೇಕು.  ಯಕ್ಷಗಾನ ಕಲಾವಿದರ ಬದುಕು ಹಾಗೆ. ವಿರೋಧಾಭಾಸವೇ? ಅಲ್ಲಿ ತೆರೆದಾಗ ಇಲ್ಲಿ ಮುಚ್ಚಿತು. ಇಲ್ಲಿ ತೆರೆದಾಗ ಅಲ್ಲಿ ಮುಚ್ಚಿತು.  ಅಪರೂಪಕ್ಕೆ ಇದಕ್ಕೆ ತದ್ವಿರುದ್ದ ಎನಿಸಿದರು ಅದು ಸಹಜವಾಗುವುದಿಲ್ಲ. ಅದುವೇ ಕಲಾಜೀವನ.
ಎಲ್ಲರಂತೆ ಕಲಾವಿದರಾದ ಈಚಣ್ಣನದ್ದು ಇಲ್ಲಿ ಮುಚ್ಚಿತು ಎಂದು ಸುಮ್ಮನಿರುವ ಹಾಗಿಲ್ಲ. ಇದು ಮುಚ್ಚಿದ ಮೇಲೆ ತೆರೆದುಕೊಂಡ ಜಗತ್ತಿನಲ್ಲಿ ನಿಜ ಪಾತ್ರವನ್ನು ಅಭಿನಯಿಸಬೇಕು. ಇದು ಎಲ್ಲರಿಗೂ ಅನಿವಾರ್ಯ. ಆದರೂ ಕಥೆ, ಕಥೆಯಾಗಬೇಕಲ್ಲ? ಬಣ್ಣವೆಲ್ಲ ತೆಗೆದು,  ಹಾಗಿದ ಚಲ್ಲಣ ಕಳಚಿ, ಪಂಚೆ ಅಂಗಿ ತೊಟ್ಟು,  ತಾಂಬೂಲ ಹಾಕಿದರೆಂದರೆ ಯಕ್ಷಗಾನದ ಪಾತ್ರ ಮುಗಿಯಿತು ಮತ್ತೊಂದು ಆರಂಭವಾಯಿತು ಎಂದೇ ಅರ್ಥ. ಒಂದರ ಅಂತ್ಯದಲ್ಲಿ ಇನ್ನೊಂದರ ಆರಂಭ,  ಬಹುಷಃ ಇಲ್ಲಿಗೆ ಹೆಚ್ಚು ಸೂಕ್ತವೋ ಎನೋ?
ತಾಂಬೂಲ ಜಗಿದು ಜಗಿದು ಉಗುಳು ರಸ ಬಾಯಿತುಂಬಿ ಮೈ ಮನ ಚುರುಕಾದಂತೆ ಅನಿಸಿದಾಗ, ಚುರುಕಾಗುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಚಟುವಟಿಕೆಗೆ ವಿಶ್ರಾಂತಿಯೇ ಇಲ್ಲದ ಮೇಲೆ ಚುರುಕಾಗುವುದೇನು ಬಂತು. ಅಥವಾ ಎಲೆ ಅಡಿಕೆ ಹಾಕಿದರೆ ಚುರುಕಾಗುತ್ತದೆ ಎಂದಿಲ್ಲವಲ್ಲ. ಅವರರವ ಭಾವ ಅಷ್ಟೇ. ಬಾಯಿ ಒಂದು ಬದಿಯಲ್ಲಿ ತಾಂಬೂಲವನ್ನು ಸರಿಸಿ ಚೌಕಿಯಿಂದ ಒಂದಷ್ಟು ದೂರ ಹೋಗಿ ಬಾಯಿಯಲ್ಲೇ ಹಿಂಡಿದ ರಸವನ್ನು ಪಿಚಕ್ಕನೆ ಉಗಿದು ತಿರುಗಿದಾಗ ದೂರದಲ್ಲೇ ಬರುತ್ತಿರುವ ನಾರು ಭಟ್ಟರನ್ನು ಕಂಡು ಒಂದು ನಿಟ್ಟುಸಿರು ಬಿಟ್ಟರು. ನಾರು ಭಟ್ಟರ ಕುರಿತು ಹೇಳುವುದಿದ್ದರೆ ಅವರ ಪೂರ್ಣ ಹೆಸರು ಸಂತೇ ಮನೆ ನಾರಾಯಣ ಭಟ್ಟ ಅಂತ. ಅದನ್ನೇ ನಾರು ಅಂತ ಸಣ್ಣದು ಮಾಡುವುದಕ್ಕೂ ಒಂದು ಕಾರಣವಿದೆ. ಅವರ ಸ್ವಭಾವ ನಾರಿನಂತೆ ಅಂತ ಬಲ್ಲವರು ಹೇಳುವುದಿದ್ದರೂ ಆ ಸ್ವಭಾವಕ್ಕೆ ಸಹಜ ಎನ್ನುವಂತೆ ಅವರ ಒಂದೊಂದೇ ಕೆಲಸಗಳು. ಸಂತೇ ಮನೆ ಅವರ ಹಿರಿಯರಿಂದ ಬಂದ ಮನೆ. ಸ್ವಲ್ಪ ತೋಟ ಗುಡ್ಡೆ ಹೀಗೆ ಹಳ್ಳಿ ಜಮೀನು. ಆ ಊರಿಗೆ ಮೊತ್ತ ಮೊದಲಾಗಿ ರಬ್ಬರ್ ತಂದು ಅದರ ಕೃಷಿಮಾಡಿದವರು ಈ ನಾರು ಭಟ್ಟರು. ರಬ್ಬರಿನಂತಿರುವ ಅವರ  ಸ್ವಭಾವಕ್ಕೆ ಹೊಂದಿಕೊಂಡ ರಬ್ಬರು ಕೃಷಿ ಅವರಿಗೆ ಈ ಹೆಸರನ್ನು ತಂದಿದೆ ಅಂತ ಕೆಲವರ ಅಂಬೋಣ. ಕೆಲವು ವರ್ಷ ಮೊದಲು ಇದ್ದ ತೋಟ ಮನೆ ಮಾರಿ ಮಕ್ಕಳ ಸಂಪಾದನೆಯಲ್ಲಿ ಅಲ್ಲಿ ಇಲ್ಲಿ ಅಂತ ಜೀವನ ಸಾಗಿಸುತ್ತ ಇರುವಾಗ ಒಂದು ಸೈಡು ಬಿಸಿನೆಸ್ಸು ಅದುವೇ ಮದುವೇ ದಲ್ಲಾಳಿ. ಒಂದು ಸಲ ಗುರಿಯಿಟ್ಟು ಭಟ್ಟರು ಅಂಟಿಕೊಂಡರೆ ಅಲ್ಲಿಗೆ ಮುಗೀತು. ಸ್ವಭಾವ ಸಹಜದಂತೆ ಈ ನಾರು ಬೇಗನೇ ಬಿಡುವುದಿಲ್ಲ. ಕರಗುವುದೂ ಇಲ್ಲ.
ತನ್ನನ್ನೇ ಕಾಣಲು ಬರುವ ನಾರು ಭಟ್ಟರನ್ನು ಕಂಡ ಈಚಣ್ಣ ಚೌಕಿಯ ಒಳ ನಡೆಯುವ ಮನಸ್ಸು ಮಾಡಲಿಲ್ಲ. ಚೌಕಿಯ ಒಳಗೆ ಈ ನಾರು ಹಿಡಕೊಂಡರೆ ಉಳಿದವರು ಏನು ಕಥೆ ಅಂತ ಸಂಕಲನ ಶುರು ಮಾಡಿಬಿಡುತ್ತಾರೆ. ಹಾಗಾಗಿ ಮತ್ತೂ ಸ್ವಲ್ಪ ದೂರ ಹೋಗಿ ನಿಂತಾಗ ಊಹಿಸಿದಂತೆ ನಾರು ಅಲ್ಲಿಗೇ ಕಾಲೆಳೆದುಕೊಂಡು ಬಂದರು.
ಭಟ್ಟರು ಔಪಚಾರಿಕ ಮಾತುಗಳನ್ನು ಚುಟುಕಾಗಿ ಮುಗಿಸಿ ಹೇಳಿದರು “ ಕೂಸಿನ ಜಾತಕ ಸರಿ ಹೋಗ್ತದೆ...”  ಇನ್ನು ಮುಚ್ಚು ಮರೆ ಏಕೆ? ಈ ಭಟ್ಟರ ಆಗಮನದ ಮುಖ್ಯ ಕಾರಣವೇ ಅದು. ಈಚಣ್ಣನಿಗೆ ಪ್ರಾಯಕ್ಕೆ ಬಂದು ನಿಂತ ಮಗಳಿದ್ದಾಳೆ. ಒಬ್ಬಳೇ ಮಗಳು ಸುನಂದ. ಅವಳಿಂದ ನಂತರ ಮಗ ಒಬ್ಬ ಇದ್ದಾನೆ ಅವನಿನ್ನು ಸ್ವಲ್ಪ ಚಿಕ್ಕವನು. ಬಡತನದ ಜೀವನ ಏಂದೋ ಕಳೆದಿದ್ದರೂ ಈಚಣ್ಣನಿಗೆ ಈಗಲೂ ಬಹಳ ಅನುಕೂಲ ಎಂದು ಹೇಳುವ ಹಾಗಿಲ್ಲ. ಜೀವನ ಸಾಗುತ್ತದೆ. ಒಬ್ಬಳೇ ಮಗಳು.. ಇವಳು ಹುಟ್ಟುವ ಸಮಯದಲ್ಲಿ ಹೆಣ್ಣು ಮಗುವಾ.....  ಎಂದು ಗುಣು ಗುಣಿಸಿದವರೂ ಇದ್ದಾರೆ.  ಹಾಗೆಂದು ಇವರಿಗೆ ಅಧೀರತೆ ಎನೂ ಇರಲಿಲ್ಲ ಯಾವುದಾದರೇನು ಭ್ರೂಣ ಮಾಗಿ ಅವಯವ ತುಂಬಿ ಮನುಷ್ಯ ರೂಪ ಪಡೆದಿಲ್ಲವೇ?
ಈಚಣ್ಣ ಒಂದು ಕ್ಷಣ ಹೊತ್ತು ಕಣ್ಣು ಮುಚ್ಚಿ
“ ನಿಮಿಗೆ ಗೊತ್ತುಂಟಲ್ಲ ಈಗ ಬೇರೆ ಒಂದು ಕಡೆ ಕೊಟ್ಟಿದ್ದೇನೆ ಜಾತಕ, ಆ ಮಾಣಿ  ದೊಡ್ಡ ಕಂಪೆನಿಯಲ್ಲಿ  ಒಳ್ಳೆ ಕೆಲಸದಲ್ಲಿ   ಬೇರೆ ಇದ್ದಾನೆ. ಬಹುಷಃ ಅಸ್ಟ್ರೇಲಿಯ ಇಂಗ್ಲಂಡೊ ..ಅಲ್ಲಿದ್ದಾನ. ಬಹುಶಃ ಮಗಳು ಕೂಡ ಅದನ್ನೇ ನೋಡಿಯಾಳು.”
ಭಟ್ಟರಿಗೆ ಇದೆಲ್ಲ ಮಾಮೂಲಿ ಮಾತುಗಳು. ಬ್ರಾಹ್ಮಣರ ಹುಡುಗಿಯರಿಗೆ ಈ ಮಾದರಿ ಡಿಮಾಂಡು ಬಂದಮೇಲೆ ಅವರು ಹೇಳಿದ್ದೇ ಮಾತು. ತಾನು ತಂದ ಹುಡುಗ ನಾಗೇಶನಿಗೆ ಕೆಲಸ ಹೇಳುವಂತಹುದು ಏನೂ ಇಲ್ಲ. ಹಾಗೆಂದು ಅವನಿಗೆ ಕೆಲಸ ಮಾಡಿ ಬದುಕುವ ಅನಿವಾರ್ಯತೆಯೂ ಇಲ್ಲ.  ಹತ್ತಿರದ ನಗರದಲ್ಲಿ ಎರಡು ಫ್ಲಾಟ್ ಬಾಡಿಗೆ, ಒಂದು ವ್ಯಾಪಾರ   ಮನೆಯಲ್ಲಿ ತೋಟ ಅದು ಇದು ಅಂತ.. ಇರುವ ಒಬ್ಬನೇ ಮಗ. ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ಸಂಭಾವಿತ ಹುಡುಗ...
ಹೌದು ಹುಡುಗ ನಾಗೇಶನ ಬಗ್ಗೆ ಈಚಣ್ಣ ಚೆನ್ನಾಗಿ ಬಲ್ಲರು. ಬಹಳ ಸಾಧು. ತೀರ ಅಪರಿಚಿತ ಏನೂ ಅಲ್ಲ. ಆದರೂ ನಾನು ಸೋಲ ಬಾರದಲ್ಲ. ಸುನಂದ ಇತ್ತೀಚೆಗಷ್ಟೆ ಎಂ.ಬಿ. ಎ ಮುಗಿಸಿ ಇನ್ನೇನೋ ಕಲೀತಾ ಇದ್ದಾಳೆ. ಅವಳಿಗೂ ಆತುರ ಏನಿಲ್ಲ. ತನ್ನ ಕಾಲ ಮೇಲೆ ತಾನು ನಿಲ್ಲುವುದು ಮಾತ್ರವಲ್ಲ ಉತ್ತಮ ಭವಿಷ್ಯದ ಯೋಜನೆ ಹಾಕಿಬಿಟ್ಟಿದ್ದಾಳೆ. ಹಾಗೆ ಹೀಗೆ ಯೋಚಿಸುವ ಹುಡುಗಿಯಲ್ಲ. ತಾನು ಕಲಿತು ಕೆಲಸ ಹಿಡಿದು ತನ್ನ ವಿದ್ಯಾಭ್ಯಾಸಕ್ಕಾಗಿ ಅಪ್ಪ ಮಾಡಿದ ಸಾಲವನ್ನು ತೀರಿಸಿದ ನಂತರೆವೇ ಮದುವೆ ಬಗ್ಗೆ ಯೋಚನೆ ಮಾಡುವ ಅವಳ ಮನಸ್ಸು ಕಂಡಾಗ ಹೆಣ್ಣು ಮಗುವಾದರೇನಂತೆ ಎಷ್ಟೆಲ್ಲಾ ಯೋಚನೆ ಮಾಡ್ತಿದ್ದಾಳೆ. ಮದುವೆಯಾದ ಮೇಲೆ ತನ್ನ ಆದಾಯ ಅಪ್ಪನಿಗೆ ಸಲ್ಲಿಸುವಲ್ಲಿ ಅವಳಿಗೆ ವಿಶ್ವಾಸವಿರೆಲಿಲ್ಲ. ಇದನ್ನೆಲ್ಲ ಈ ಭಟ್ಟರಿಗೆ ಹೇಳುವುದಕ್ಕೆ ಆಗ್ತದೆಯೆ? ಆದರೂ ಭಟ್ಟರು ಬಿಡಲಾರರು. ಭಟ್ಟರು ಒಂದುವಾರದಿಂದ ಬೆನ್ನು ಹತ್ತಿ ಪೋನ್ ಮಾಡಿ ಇಂದಿನವರೆಗೆ ಕಾದಿದ್ದರು. ಇಂದು ಮೇಳದ ಆಟ ಇಲ್ಲಿ ಅಂತ ಗೊತ್ತಿದ್ದ ಕಾರಣ ಏನೂ ಹೇಳುವ ಹಾಗಿಲ್ಲ. ನಾಗೇಶನ ಮನೆ ಇರುವುದು ಇಲ್ಲೆ ಹತ್ತಿರ..!!!
ಪಂಚೆ ಎತ್ತಿ ಕಟ್ಟುತ್ತ ಭಟ್ಟರು ಹೊರಡುವ ಸೂಚನೆಯನ್ನು ತೋರಿಸಿದರು. ಈಚಣ್ಣನನ್ನೇ ನೋಡುವ ಮುಖಭಾವದಲ್ಲಿ ಹಲವಾರು ಭಾವ ಒಂದೇ ಸಲಕ್ಕೆ ಕಂಡ ಹಾಗಾಯಿತು. ನವರಸಗಳನ್ನೂ ರಂಗದಲ್ಲಿ ನಾಜೂಕಾಗಿ ಅಭಿವ್ಯಕ್ತಿಗೊಳಿಸುತ್ತಿದ್ದ ಈಚಣ್ಣನೂ ಆ ಭಾವ ಪ್ರಕಟನೆಗೆ ಬೆರಗಾಗಿ ಹೋದರು. ಅಂದು ಆಟ ಆಡಿಸಿದ ಶೆಟ್ಟರ ಮನೆಯ ಹಿಂದಿನ ಗುಡ್ಡ ಹತ್ತಿ ಇಳಿದು ಚಿಕ್ಕ ತೊರೆಯನ್ನು ಸಂಕವನ್ನು ದಾಟಿದರೆ ನಾಗೇಶನ ಮನೆಯ ಬೇಲಿಯ ದಣಪೆಯನ್ನು ದಾಟಬೇಕು. ಅಲ್ಲಿಂದ ಸ್ವಲ್ಪದೂರ ಅವರದೇ ತೋಟದ ಓಣಿಯಲ್ಲಿ ನಡೆದು ಆ ತುದಿಯಲ್ಲಿರುವ ದಣಪೆ ದಾಟಿದರೆ ಒಂದು ಮಣ್ಣಿನ ರಸ್ತೆ. ಇದು ಇತ್ತೀಚೆಗೆ ಆದ ರಸ್ತೆ. ರಸ್ತೆಯ ಕೂಗಳತೆಯಲ್ಲೆ ನಾಗೇಶನ ಮನೆ.
ಐದಾರುವರ್ಷ ಕೆಳಗೆ ತಂದೆ ವಾಸುಭಟ್ಟರು ತೀರಿ ಹೋದಮೇಲೆ ಒಬ್ಬನೇ ಮಗ ನಾಗೇಶನದ್ದೇ ಕಾರುಬಾರು. ಒಂದಷ್ಟು ತೋಟ ಕೃಷಿ ಹೈನು ಗಾರಿಕೆ ಹೀಗೆ ಸಾಕಷ್ಟು ಆದಾಯವಿತ್ತು.  ತಂದೆಗೆ ವಂಶಪಾರಂಪರ್ಯದಲ್ಲಿನ ಪಿತ್ರಾರ್ಜಿತ ಸಂಪತ್ತು ಸಾಕಷ್ಟು ಇದ್ದರೂ ನಾಗೇಶನಿಗೆ ಇದುವರೆಗೆ ಕೂಸು ದಕ್ಕಲಿಲ್ಲ.  ಒಂದಷ್ಟು ಸಮಯ ತಂದೆಯ ಅಗಲಿಕೆಯಲ್ಲಿ ಎಲ್ಲವನ್ನೂ ಸರಿದೂಗಿಸಿಕೊಳ್ಳುವುದಕ್ಕೆ ಸರಿಹೋದರೆ ಮತ್ತಷ್ಟು ಸಮಯ ಹೆಣ್ಣಿನ ಹುಡುಕಾಟಕ್ಕೆ ಸಂದಿತು. ಕಾಲದ ಪ್ರಭಾವವೋ ಬ್ರಾಹ್ಮಣ ಹುಡುಗಿಯರು ಬೆಂಗಳೂರು ಮುಂತಾದ ನಗರಕ್ಕೆ ಮುಖಮಾಡಿಯಾದ ಮೇಲೆ ನಾಗೇಶನಂತಹವರು ಆಯಾಚಿತವಾಗಿ ಬ್ರಹ್ಮಚರ್ಯಕ್ಕೆ ಮೊರೆ ಹೋಗುವಂತಹ ಅನಿವಾರ್ಯ ಸನ್ನಿವೇಶದಿಂದ ನಾಗೇಶನೂ ಬಂದದ್ದನ್ನು ಸ್ವೀಕರಿಸುವ ಮನೋಭಾವಕ್ಕೆ ಶರಣಾದ ಎನ್ನಬೇಕು. ಆದರೂ ಪ್ರಯತ್ನ ಬಿಡುವ ಹಾಗಿಲ್ಲ.
ಇಬ್ಬರೂ ತೋಟವನ್ನು ಹಾದು ದಣಪೆ ದಾಟಿ ಮಣ್ಣರಸ್ತೆಗೆ ಇಬ್ಬರೂ ಬಂದರು. ದೂರದಲ್ಲಿ  ನಾಗೇಶನ ಮನೆಯ ಗೇಟು ಆ ಬದಿಗೆ ನಿಂತ ಕಾರು ಕಂಡಿತು. ಕಾರಿನ ಪಕ್ಕವೇ ಹೊಸ ಬೈಕು ಕಂಡಿತು. ಇದು ರಸ್ತೆಗೆ ತೆರೆದು ಕಾಣುವಂತೆ ಇದ್ದಹಾಗೆ ಭಾಸವಾಯಿತು. ಅದಕ್ಕೆ ಕಾರಣವಿಲ್ಲದಿಲ್ಲ. ಮದುವೆ ಪ್ರಾಯದ ಗಂಡು ಮಗ ಬ್ರಾಹ್ಮಣರ ಮನೆಯಲ್ಲಿದ್ದರೆ ಆ ಮನೆಯ ಸಿರಿವಂತಿಕೆ ಅಲ್ಪ ಸ್ವಲ್ಪ ಹೊರಗೆ ಪ್ರದರ್ಶನವಾಗದಿದ್ದರೆ ಹೇಗೆ? ಗೇಟು ತೆರೆದು ಸೂಕ್ಷ್ಮವಾದ ದೃಷ್ಟಿಯನ್ನು ಬೀರುತ್ತ ನಿಧಾನವಾಗಿ ಮನೆಯ ಅಂಗಳಕ್ಕೆ ಬಂದು ನಿಂತಾಗ ಈಚಣ್ಣ ದಂಗಾಗಿ ಬಿಟ್ಟರು.
    
ಭಾಗ - ೨
ಪದವಿಲ್ಲದೇ ಅರ್ಥ ಹೇಳಿದಂತೆ ಮಾತಿನ ಮಲ್ಲ...ಮಾತೇ ಇಲ್ಲ ಎಂಬಂತಾಗಿಬಿಟ್ಟಿತು. ಹಳೆಯ ಜೀವನ ಚರಿತ್ರೆ ಪುಟಗಳು  ಧೂಳು ಕೊಡವಿಕೊಂಡು ಅಕ್ಷರಗಳು ಸ್ಪುಟವಾಗಿ ಗೋಚರಿಸತೊಡಗಿದವು. ಹೌದು, ಸುಮಂಗಲ ಒಂದು ಕಾಲದ ರೋಮಾಂಚನ ತುಂಬುವ ಅಕ್ಷರಗಳು ಈಗ ಆ ರೋಮಾಂಚನವನ್ನು ನೆನಪಿಗೆ ತಂದವು. .ಸ್ನಾನ ಮಾಡಿ ಒದ್ದೆ ಕೂದಲಿಗೆ ಬಿಳಿ ಬೈರಾಸನ್ನು ಬಿಗಿಯಾಗಿ ಕಟ್ಟಿ ಶುಭ್ರ ಮುಖದಲ್ಲಿ ಪ್ರಸನ್ನ ಭಾವದಿಂದ ಅಚ್ಹರಿಯ ಕಣ್ಣುಗಳಿಂದ ತನ್ನನ್ನೇ ನೋಡುತ್ತಿದ್ದಾಳೆ..ಫಳ ಫಳ ಹೊಳೆಯುವ ಕಣ್ಣಿನ ಹೊಳಪು  ಇನ್ನೂ ಹಾಗೆ ಇದೇ ..ಹೊಳಪಲ್ಲೂ ಸೂರ್ಯಕಿರಣಗಳು ಮಿಂಚುತ್ತಿವೆಯೇ? ತೇವಗೊಂಡ ಕಣ್ಣುಗಳ ತೇವ ಇನ್ನೂ ಆರಿಲ್ಲವೇ? ಎಲ್ಲವೂ ಕ್ಷಣ ಚಿತ್ತದ ಭಾವಗಳು. ಆದರೆ  ಈಗ ಆ ಮನೋಭಾವದ ಕಿಂಚಿತ್ ಆದರೂ ಮುಖದಲ್ಲಿ ವ್ಯಕ್ತವಾದರೆ ಅಸಭ್ಯ ಎನಿಸಲಾರದೆ? ಯಾವ ವಿಪರೀತ  ಕಲ್ಪನೆಯೂ ಇಲ್ಲದ ಒಂದು ಸಾಮಾನ್ಯ ಭಾವ...ಸಂಸ್ಕೃತರಿಗೆ ಮಾತ್ರ ಸಾಧುವೇನೋ?  ಹಾಗಾಗಿ  ಪರಿಚಯದ ನಗೆ ನಕ್ಕು  ಪಡಸಾಲೆಯ ಕುರ್ಚಿಯಲ್ಲಿ ಕುಳತುಕೊಳ್ಳಲು ಅಣಿಯಾದಾಗ ಇಲ್ಲಿ ಬೇಡ ಒಳಗೆ ಬನ್ನಿ ಎಂದು ಅತ್ಮೀಯ ಭಾವದಿಂದ ಒಳಗೆ ಕರೆದ ಸುಮಂಗಲಳನ್ನು ಹಿಂಬಾಲಿಸಿ  ಮನೆಯ ಒಳಗೆ ನಡೆದರು. ಅದು ಹೌದು ಭಾವಗಳು ಸಂಸ್ಕಾರದ ಅಚ್ಚಿನಲ್ಲಿ ಎರಕ ಹೊಯ್ಯಲ್ಪಡುತ್ತವೆ. ಅಸಹಜವೇ ಸಹಜವಾಗಿರುವ ಸಂಸ್ಕಾರವೇ ಇದಕ್ಕೆ ನಿದರ್ಶನ. ಬಹಿರಂಗವಾಗುವ ಭಾವ ಹೇಗೆ ಸಂಸ್ಕಾರವನ್ನು ಅವಲಂಭಿಸದೇಯೋ ಅಂತರಂಗದ ಭಾವವೂ ಅದನ್ನೆ ಅವಲಂಬಿಸಿದೆ. ಕೆಲವೆಲ್ಲ ಕಲ್ಪಿಸುವುದೂ ಅಪರಾಧ ಎಂದು ಅನಿಸುತ್ತದೆ.  ತಾಯಿಯಲ್ಲಿ ಕಲ್ಪಿಸಲಾಗದೇ ಇದ್ದದ್ದನ್ನು ಸಹಧರ್ಮಿಣಿಯಲ್ಲಿ ಕಲ್ಪಿಸಿದ ಹಾಗೆ. ಮನಸ್ಸನ್ನು ರೂಪಿಸುವ ಸಂಸ್ಕಾರದ ನಿಯಂತ್ರಣ ವಿಚಿತ್ರ ಎನಿಸಲ್ಪಡುತ್ತದೆ. ನಿತ್ಯವೂ ರಾತ್ರಿಯಾಗುತ್ತಿದ್ದಂತೆ ನಶೆ ಏರಿಸುತ್ತಿದ್ದ ತಮ್ಮ ಸಹವರ್ತಿಗೆ ಒಂದು ಸಲ ಉಪದೇಶ ಮಾಡಿ ಹೇಳಿದ್ದು ವಿಚಿತ್ರ ಆದರೂ ಪರಿಣಾಮಕಾರಿಯಾಗಿತ್ತು. ಸಾಯಂಕಾಲದ ಹೊತ್ತು ಸ್ನಾನ ಮಾಡಿ ಶುಚಿಯಾಗಿ .ಬಿಳಿ ಪಂಚೆಯನ್ನು ಧರಿಸು.... ಸ್ನಾನ ಮಾಡಿ ಶುಚಿಯಾದ ದೇಹ ಮನಸ್ಸಿಗೆ ಮುದವನ್ನು ನೀಡಿದರೆ ಆ ಮುದವನ್ನು ಬಿಳಿ ವಸ್ತ್ರ ಕಾಪಿಡುತ್ತದೆ. ಮಾತ್ರವಲ್ಲ ಬಿಳಿ ವಸ್ತ್ರ ಉಟ್ಟು ಹೆಂಡದಂಗಡಿ ಹೊಕ್ಕುವುದು ಅಸಹಜವೆನ್ನಿಸುತ್ತದೆ. ಅಥವ ಶುಭ್ರವಾದ ನಂತರ ತೂರಾಡುವುದು ಒಂದು ರೀತಿಯಲ್ಲಿ ಕಿರಿ ಕಿರಿಯೇ ಅನ್ನಿಸಿಬಿಡುತ್ತದೆ. ಶುಭ್ರವಾಗಿ ಆದ ಮುದವಾದ ಅನುಭವ ಮತ್ತೆ ಬಿಳಿವಸ್ತ್ರ ಅದರಿಂದ ಹೊರ ಬಾರದ ಇಕ್ಕಟ್ಟಿಗೆ ತಂದು ಸಿಲುಕಿಸುತ್ತದೆ. ಈ ದ್ವಂದ್ವದಲ್ಲಿ ಆ ಸಮಯ ಕಳೆಯುತ್ತದೆ... ಮತ್ತೆ ಬೇರೆ ಇನ್ನೆನಾಗಬೇಕು ಸಂಸ್ಕಾರ ರೂಪುಗೊಳ್ಳುವ ಬಗೆ ಅದು.
     ಛೇ ಘಳಿಗೆಯೊಳಗೆ ಮನಸ್ಸು ಯಾವೆಲ್ಲ ಯೋಚನೆ ಮಾಡಿತಲ್ಲ. ಅಷ್ಟರಲ್ಲಾಗಲೇ ಒಳಗೆ ಬಂದಾಗಿತ್ತು. ಅದು ಅಡುಗೇ ಮನೆಯ ಪಕ್ಕದ ಹಜಾರ.  ಬಹುಷಃ  ತೀರ ಆತ್ಮೀಯ ಬಂಧುಗಳಿಗೆ ಮಾತ್ರ ಅಂತರಂಗದ ಗೃಹದ ಒಳಗೆ ಪ್ರವೇಶ.  ಈಚಣ್ಣ ಬಂಧು ಎಂಬ ಅಂಗೀಕಾರವೇ? ಈಚಣ್ಣನಿಗೆ ಹಾಗೆ ಅಂದುಕೊಳ್ಳುವುದಕ್ಕೆ ಕಾರಣವಿತ್ತಲ್ಲ?

     ಆಗಿನ್ನು ಹದಿ ಹರಯವನ್ನು ಮೀರಿದ ವಯಸ್ಸು. ಶಾಲೆಯಲ್ಲಿದ್ದಾಗಲೇ ಸಾಕಷ್ಟು ಯಕ್ಷಗಾನ ತರಬೇತಿಯಾಗಿದ್ದ ತಾನು ಬಾಲಕರಲ್ಲಾಗಲೇ ಪ್ರಸಿದ್ದ ಕಲಾವಿದನಂತಾಗಿದ್ದದ್ದು. ಶಾಲೆಯ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತನ್ನ ಅಂಗ ಪ್ರಾಧಾನ್ಯತೆಯನ್ನು ಪಡೆದದ್ದು.... ನೆರೆಕೆರೆ, ನಿತ್ಯ ಪರಿಚಿತರಂತಹ ಮನೆಯಿಂದ ತಾನು ಮತ್ತು ಸುಮಂಗಲ ಒಂದೇ ಹಾದಿಯಲ್ಲಿ ಶಾಲೆಯ ಹಾದಿಯಲ್ಲಿ ಪಯಣಿಗರಾಗಿ ಅದು ಹೇಗೋ ಆತ್ಮೀಯತೆ,  ಸಲುಗೆ ಬೆಳೆದದ್ದು. ಅಷ್ಟಿಷ್ಟು ಯಕ್ಷಗಾನದ ಅಭಿರುಚಿ ಆಕೆಯಲ್ಲಿ ತರಿಸಿ ಆಕೆಗೆ ಪ್ರಾಥಮಿಕ ಗುರುವಾದದ್ದು, ಅದು ಬಾಲ್ಯದ ದಿನಗಳಾದರೂ ಅದಕ್ಕೂ ಒಂದು ಅರ್ಥವಿದೆ ಎಂದು ಹಲವು ಸಲ ಅನ್ನಿಸಿದ್ದಿದೆ. ಅವಾಗ ಅಲ್ಲದಿದ್ದರೂ ಹದಿ ಹರಯ ದಾಟಿದ ನಂತರ ವಯೋಸಹಜವಾಗಿ ಆತ್ಮೀಯತೆ ಸಲುಗೆಯ ರೂಪವೇ ಬದಲಾಗಿ ಹೋದದ್ದು ಎಲ್ಲ ನಿಮಿತ್ತದಂತೆ ಆಗ ಅನಿಸಿತ್ತು.

     ಹೈಸ್ಕೂಲು ಮುಗಿಸಿ ಆಕೆ ಮುಂದಿನ ಶಿಕ್ಷಣಕ್ಕೆ ಇನ್ನೂ ಪ್ರೌಢೆಯಾಗಿ ಕಾಲೇಜು ಹೋಗ ತೊಡಗಿದರೂ ತಾನು ಹೈಸ್ಕೂಲು ಫೇಲ್ ಆಗಿ.. ಮುಂದೆ ಯಕ್ಷಗಾನವನ್ನೇ ಗಟ್ಟಿ ಮಾಡಿಕೊಂಡದ್ದು ಬಾಲ್ಯದ ಕನಸುಗಳೆಲ್ಲ ಯಕ್ಷಗಾನದ ವೇಷಗಳಂತೆ ಭಾಸವಾಗತೊಡಗಿತು. ಹೌದಲ್ಲ? ತಮ್ಮ ನಡುವಿನ ಪ್ರೀತಿಯಲ್ಲಿ ಅರ್ಥವಿತ್ತು.. ಆದರೆ ತನ್ನ ಜೇಬು ಎಂದೂ ಅರ್ಥವಿಲ್ಲದೇ ಜೀವನ ಅರ್ಥವನ್ನು ಮನವರಿಕೆ ಮಾಡಿಸುತ್ತಿತ್ತು. ಯಕ್ಷಗಾನದಲ್ಲಿ ಸಹಜವಾಗಿ ಒಂದೊಂದಾಗಿ ಸಿದ್ಧಿ ಸಾಧನೆಗಳು ರಂಗಸ್ಥಳದ ಒಡ್ಡೋಲಗದಂತೆ ಕಳೆ ಕಟ್ಟತೊಡಗಿದರೂ. ಭಲ್ಲಿರೇನಯ್ಯಾ ಎಂದು ತೊಡಗಿಸುವ ಮಾತು ನಿಜ ಜೀವನದಲ್ಲಿ ಅರ್ಥವನ್ನೇ ತರಲಿಲ್ಲ. ಯಕ್ಷಗಾನದಲ್ಲೂ ಹಾಗೆ ಕೆಲವು ಪದಗಳಿಗೆ ಅರ್ಥವೇ ಇಲ್ಲ!! ಅರ್ಥ ಎಂದರೆ ಅಲ್ಲಿ ಅರ್ಥ ಹೇಳುವುದಕ್ಕಿಲ್ಲ. ಸಂದರ್ಭೋತವಾಗಿ ಪದವನ್ನು  ಮಾತ್ರ ಭಾಗವತರು ಹಾಡಿ ಮುಂದಿನ ಹಂತಕ್ಕೆ ದಾಟಿಸುತ್ತಾರೆ.  ಒಂದು ವೇಳೆ ಅರ್ಥವನ್ನು ಹೇಳಿದರೂ ಅದು ಅಭಾಸವಾಗಿಬಿಡುತ್ತದೆ. ಅರ್ಥವೇ ಅರ್ಥವನ್ನು ಕಳೆದುಕೊಳ್ಳುತ್ತದಲ್ಲ ಎಂದು ಸಲ ವಿಡಂಬನೆಯಿಂದ ಸಂವಾದಿಸಿದ್ದು ಉಂಟು. ಆದರೆ ಅರ್ಥವಿಲ್ಲದ ಪದಗಳು ಅರ್ಥವಿಲ್ಲದೇ ಸಂದರ್ಭಕ್ಕೆ ಮತ್ತು ಕಥೆಗೆ ಅರ್ಥವನ್ನು ಕೊಡುತ್ತಿತ್ತು. ಅಲ್ಲಿ ಶೂನ್ಯಾರ್ಥವಾಗಿ ಅರ್ಥವನ್ನು ಕೊಡುತ್ತಿದ್ದದ್ದು ನಿಜ ಜೀವನದಲ್ಲಿ ಮಾತ್ರ ವಿಪರ್ಯಾಸವನ್ನೇ ಬಿಂಬಿಸತೊಡಗಿತ್ತು.  ಕೈಯಲ್ಲಿ ಅರ್ಥವಿಲ್ಲದಿದ್ದರೂ ಅರ್ಥಪೂರ್ಣ ಪ್ರೀತಿಗೆ ಕೊರತೆ ಇರಲಿಲ್ಲ. ಆದರೂ ಇಲ್ಲಿ ಇದ್ದ ಶೂನ್ಯಾರ್ಥ ಮತ್ತೂ ಶೂನ್ಯತೆಯನ್ನೇ ಬಿಂಬಿಸುವುದು ವಿಪರ್ಯಾಸವಲ್ಲವೇ.?
  ಬಹುಶಃ ಪ್ರೀತಿ ಗಾಢವಾಗುವುದು ಅಂತಹ ಸಂದಿಗ್ಧಾವಸ್ಥೆಯಲ್ಲೇ ಇರಬೇಕು. ಅನನುಕೂಲ,  ಪ್ರತಿಕೂಲ , ಪ್ರತಿರೋಧ ಇದ್ದಾಗಲೇ ನಮ್ಮೊಳಗಿನ ಕಥಾ ನಾಯಕತ್ವ ಆವೇಶಗೊಳ್ಳುವುದು. ಪ್ರತಿಯೊಬ್ಬರೂ ಅವರವರ ಬದುಕಿನ ಕಥೆಗೆ ಅವರೇ ನಾಯಕನೋ ನಾಯಕಿಯೋ ಆಗಿರುತ್ತಾರಲ್ಲ?  ಅತ್ಯಂತ ಉತ್ಕಟವಾದ ಪ್ರೇಮಾಚರಣೆಯಲ್ಲಿ ನಾವುಗಳು ಒಂದಾಗಿದ್ದೇವೆ ಭ್ರಮೆ ಆವರಿಸಿಕೊಳ್ಳುವುದು. ಎಲ್ಲ ವಯೋಸಹಜವಾದ ಮೌಢ್ಯ ಎಂದು ಈಗ, ಇಷ್ಟು ದೂರ ಸಾಗಿ ಬಂದ ಮೇಲೆ ಅನ್ನಿಸುವುದಿದೆ. ಹಸಿವೆಯಲ್ಲೋ, ಹೊಟ್ಟೆತುಂಬಿಯೋ ದುಃಖದಲ್ಲೋ ಸಂತಸದಲ್ಲೋ ಅಂತು ದಿನದ ಪ್ರತಿ ಘಳಿಗೆಯೂ ಸ್ವಲ್ಪ ಸ್ವಲ್ಪವಾಗಿ ಕಳೆದು ಹೋಗುತ್ತಿರುವಾಗ ಆನುಭವಿಸುವ ವರ್ತಮಾನದ ಸಮಯದ ಮೌಲ್ಯ ಅರಿವಾಗುವುದಿಲ್ಲ. ಇದ್ದ ಸ್ಥಿತಿಯೇ ಸ್ಥಾಯೀಭಾವವಾಗಿಬಿಡುತ್ತದೆ.

     ಹೌದಲ್ಲ..?  ತಾನು ಚಿಂತಿಸುವಾಗಲೂ ಯಕ್ಷಗಾನದ ಪಾತ್ರವಾಗುತ್ತಿದೇನೆಯೇ? ಮನದೊಳಗೇ ನಕ್ಕರು ಈಚಣ್ಣ.   ಆದರೆ ತನ್ನ ಪ್ರೇಮ ಸಂಪೂರ್ಣವಾಗಿ ಅರ್ಥವನ್ನು ಕಳೆದುಕೊಂಡದ್ದು ತಾನೊಬ್ಬ ಯಕ್ಷಗಾನ ಕಲಾವಿದನಾಗಿ ರೂಪುಗೊಂಡ ಕಾರಣ, ಆಟದವನಿಗೆ ಕೂಸನ್ನು ಕೊಡಲಾರೆ ಎಂದು ಸುಮಂಗಲಳ ಅಪ್ಪ ಛಲತೊಟ್ಟಾಗ ಬಹಳಷ್ಟು ಭ್ರಮನಿರಸನ ಗೊಂಡಿದ್ದರು. ಆವರೆಗೆ ತಪಸ್ಸು ಎಂದು ತಿಳಿದ ಯಕ್ಷಗಾನದ ಹಾದಿಯೂ ವೈಫಲ್ಯದ ದರ್ಶನವನ್ನೇ ಮಾಡಿಸಿತಲ್ಲ? ಯಕ್ಷಗಾನದ ವೇಷ ಭೂಷಣಗಳು ಕಳಚಿ ಬಿಚ್ಚಿಟ್ಟರೂ ಸಹ ಮತ್ತೂ ಅದು ಮತ್ತೊಂದು ರೂಪದಲ್ಲಿ  ಮೈಗೆ ಅಂಟಿಕೊಂಡು ಅಣಕಿಸಿದಂತೆ ಭಾಸವಾಗಿತ್ತು. ರಂಗಸ್ಥಳದಿಂದ ದೂರವಾದಾಗ ಬಣ್ಣ ಕಳೆದುಕೊಂಡ ವೇಷದಂತೆ, ವಜ್ರ ವೈಢೂರ್ಯ ಅಭರಣಗಳು ಹೊಳಪನ್ನು ಕಳೆದುಕೊಂಡಂತೆ ಬದುಕೂ ವೇಷ ಕಳಚಿ ನಿಂತು ಬಿಟ್ಟಿತಲ್ಲ?  ಸಂಸಾರಿಕ ಬದುಕಿಗೆ ಆಟದವನು ಸಲ್ಲುವುದಿಲ್ಲವೇ? ಆಟದವನೆಂದರೆ ವೇಷವೂ ಇಲ್ಲ ಪಾತ್ರೆವೂ ಇಲ್ಲ.  ಬರೀ ಆಟದ ನೋಟಿಸಿನಲ್ಲಿ ಮುದ್ರಿಸಿದ ಹೆಸರು ಮಾತ್ರವೇ ಆಗಿಹೋಯಿತು. ಸುಮಂಗಲ ಅನ್ಯರಿಗೆ ಮಂಗಲವಾಗಿ ಪರಿಣಮಿಸಿ ಅರ್ಥಹೀನತೆಯೇ ಬದುಕಿನ ಅರ್ಥ ಎಂದು ತೋರಿಕೊಟ್ಟ ಮೇಲೆ  ವಿಶ್ವಾಮಿತ್ರ ತಪಸ್ಸಿಗೆ ಕುಳಿತಂತೆ ಈಚಣ್ಣ ಸ್ತಿತ ಪ್ರಜ್ಞರಾಗಿರಾಗಿಬಿಟ್ಟರು. ಸುಮಂಗಲ ಎಂತಿದ್ದರೂ ಪರಕೀಯಳೇ. ವೈರಾಗ್ಯವೋ ಮತ್ಸರವೋ ಆಕೆಯ ಗಂಡನ ಹೆಸರೂ ಸಹ ಅಪರಿಚಿತವಾಗಿಯೇ ಉಳಿದುಕೊಂಡಿತು.  
ಭಾಗ – ೩

     ಅಕ್ಷರಶಃ ಸತ್ಯವಾಗಿದ್ದದ್ದು ಮನಸ್ಸನ್ನು ಉಲ್ಲಸಿತಗೊಳಿಸಿತ್ತು. ಹೌದು,  ಅಂದು ನೇಪಥ್ಯಕ್ಕೆ ಸರಿದು ಚೌಕಿಗೆ ಸೇರಿ ಮರೆಯಾದ ಪಾತ್ರ ಇಂದು ವೇಷ ಕಳಚದೇ  ಪ್ರತ್ಯಕ್ಷವಾಗಿಬಿಟ್ಟಿತ್ತು. ಇನ್ನೂ ತನ್ನ ಬಗ್ಗೆ ನೆನಪನ್ನೂ ಆ ಮಧುರ ಸ್ಮೃತಿಯನ್ನು ಹೃದಯದ ಅಂಚಿನಲ್ಲಿ ಇಟ್ಟಿರಬಹುದೇ? ಹಾಗಾಗಿಯೇ ಈಚಣ್ಣ ಅಂದುಕೊಂಡರು ವೇಷ ಇನ್ನೂ ಕಳಚಿಲ್ಲ. ಪಾತ್ರ ಬದಲಾಗಿಲ್ಲ. ಮಧುರಸ್ಮೃತಿ...!! ತೆಲೆ ಕೊಡವಿಕೊಂಡರು ಈಚಣ್ಣ. ತಪ್ಪು ಇದು, ಈಗ ಅದು ಮಧುರ ಸ್ಮೃತಿ ಎನ್ನಲಾಗದು. ಒಂದೇ ಪ್ರಸಂಗದ ಬದಲಾದ ವೇಷದಂತೆ ತನ್ನ ದೃಷ್ಠಿಕೋನವನ್ನು   ಬದಲಿಸಿಕೊಳ್ಳಬೇಕು. ನಿರ್ವಿಕಾರದಿಂದ ಕುಳಿತುಬಿಟ್ಟರು.
     ಆದರಿಸಿ ಉಪಚರಿಸುತ್ತಾ ಮಾತಿನ ಮಧ್ಯೆ ಅನೌಪಚಾರಿಕ ಎಂಬಂತೆ ಸುಮಂಗಲ ವಸ್ತುಸ್ಥಿತಿಯನ್ನು ವಿವರಿಸತೊಡಗಿದಳು. ಹಾಗೆ ನೋಡಿದರೆ ಈಕೆಯ ಮಗ ನಾಗೇಶನ ಬಗ್ಗೆ ಅಲ್ಪ ಸ್ವಲ್ಪ ಅರಿವಿದ್ದರೂ ಅದು ಈಕೆಯ ಮಗನೆಂಬ ಅರಿವಿರಲಿಲ್ಲ. ಬ್ರಾಹ್ಮಣರಲ್ಲಿ ಗಂಡು ಹೆತ್ತ ತಂದೆ ತಾಯಿಗಳ ಸಾಮಾನ್ಯ ಸಮಸ್ಯೆಯೇ ಅವಳದ್ದಾಗಿತ್ತು. ಲೋಕಕ್ಕೆ ಸಾಮಾನ್ಯವಾದರೂ ಅದರ ಗಂಭೀರತೆಯ ಅರಿವಾಗುವುದು ಅದು ಅನುಭವಕ್ಕೆ ಬಂದ ಮೇಲೆ. ಗಂಡು ಮಗ ಬೆಳೆದು ಬೆಳೆದು ವೃದ್ದ ಬ್ರಹ್ಮಚಾರಿಯಾಗುವ ಎಲ್ಲಾ ಲಕ್ಷಣಗಳು ಇರುವಾಗ ಹೆತ್ತವರ ಮುಖದಲ್ಲಿ ಹತಾಶೆಯ ರೇಖೆಗಳು ಒಂದೊಂದಾಗಿ ಎಳೆಯಲ್ಪಡುತ್ತವೆ.   ಹೆಣ್ಣು ಹೆತ್ತವರು ಮಾತ್ರವಲ್ಲ ಹೆಣ್ಣುಗಳು ಕೂಡ ನಗರದ ಹಾದಿಯನ್ನೇ ಇದಿರು ನೋಡಿದರೆ ಮೊದಲೇ ವೃದ್ಧಾಶ್ರಮ ಸದೃಶವಾದ ಹಳ್ಳಿಯಲ್ಲಿ ಕೌಟುಂಬಿಕ ವಾತಾವರಣದ ಆ ತಂಗಾಳಿ ಒಣಹವೆಯಾಗಿಯೇ ಬಿಸುಸುಯ್ಯಲಾರದೇ? ಹಳ್ಳಿಯಲ್ಲಿ ಅರಳಿದ ಹೂವಿಗೆ ಗಂಧವಿದ್ದರೂ ದುಂಬಿಬಾರದೆ, ದೂರದ ನಗರದ ಕೃತಕ ಹೂವಿಗೆ ಮುತ್ತಿಕ್ಕತೊಡಗಿವೆ. ನಗರದಲ್ಲಿ ಇದೇ ದುಂಬಿಗೆ ಮತ್ತೆ ನೊಣದ ಬದುಕಾದರೂ ಅಡ್ದಿಲ್ಲ ಊರು ಬೇಡವಾಗಿದೆ.
     ಈಚಣ್ಣ ಒಂದು ಕ್ಷಣ ವಿಚಲಿತರಾದರು. ಏನು ಪ್ರತಿಕ್ರಿಯಿಸಲಿ? ಹೆಣ್ಣು ಹೆತ್ತವರ ಬಗ್ಗೆ ಸಾರ್ವತ್ರಿಕ ಅಭಿಪ್ರಾಯವನ್ನು ವಿಮರ್ಶಿಸುವ ಅಗತ್ಯ ಕಾಣಲಿಲ್ಲ. ಇದು ಒಂದು ರೀತಿಯ ಸ್ಥಿತ್ಯಂತರ ಅಷ್ಟೇ. ಒಂದು ಕಾಲದಲ್ಲಿ ಗಂಡು ಮಕ್ಕಳ ಮಾತಾಪಿತೃಗಳೂ ಇದೇ ರೀತಿ ನಡೆದಿಲ್ಲವೆ? ತಾನಾದರೂ ಏನು ಹೇಳಬಹುದು? ಅವರ ಮನಸ್ಸು ಎಂದೂ ಇಷ್ಟು ಆಳಕ್ಕೆ ಚಿಂತಿಸಿರಲಿಲ್ಲ. ಹುಡುಗ ಯಾರಾದರೇನು? ತನ್ನ ಮಗಳ ಹೆಣೆಯಲ್ಲಿ ಚಿಂತೆಯ ನೆರಿಗೆಗಳು ಮೂಡದೇ ಆಕೆ ಸುಖಿಯಾಗಿದ್ದರೆ ಸಾಕು.ಇದನ್ನು ತೋರಿಕೊಡುವುದಾದರೂ ಹೇಗೆ?
            ಈಚಣ್ಣನ್ನಲ್ಲಿ ಈ ಭಟ್ರ ಹೆಂಗಸು ಹೀಗೆ ಮಾತನಾಡುವುದು ನಾರು ಭಟ್ಟರಿಗೆ ಆಚ್ಚರಿ ತಂದರೂ ಮತ್ತೆ ಅಂದುಕೊಂಡರು ಆಟದವರು ಎಲ್ಲಿ ಹೋದರೂ ತುಂಬ ಫೇಮಸ್ಸು.
 ಬಿಸಿ ಬಿಸಿ ದಪ್ಪ ಹಾಲಿನಲ್ಲಿ ಮಾಡಿದ ಚಹವನ್ನು ಕಂಚಿನ ಲೋಟದ ಜತೆಗೆ ಇನ್ನೊಂದು ಲೋಟದಲ್ಲಿ ತಂದಿಟ್ಟ ಸುಮಂಗಲ ಬಿಸಿ ಇದೆ ಆರಿಸಿಕೊಳ್ಳಿ ಎಂದು ಸೊಂಟದ ಮೇಲೆ ಕೈಯಿಟ್ಟು ದೂರ ನಿಂತುಕೊಂಡಳು.  ಚಹದ ಮಧುರ ಪರಿಮಳ. ಮೂಗಿಗೆ ಬಡಿಯಿತು. ಬಿಸಿ ಬಿಸಿ ಚಹ ಸೇರುತ್ತಿದ್ದಂತೆ ನಾರು ಭಟ್ಟರು ನಾಗೇಶನನ್ನು ವಿಚಾರಿಸತೊಡಗಿದರು. ಆದರೆ ಸುಮಂಗಲ ಅದಕ್ಕೆ ಗಮನ ಕೊಡದೆ ಈಚಣ್ಣನ ಸಂಸಾರ ಚರಿತ್ರೆಯೊಂದಿಗೆ ವಂಶ ಪರಂಪರೆಯ ಬಗ್ಗೆ ಮಾತನಾಡ ತೊಡಗಿದಳು. ತಾಯಿ ಅಕ್ಕ ನಾದಿನಿ ಹೀಗೆ ತನ್ನ ಓರಗೆಯವರಾಗಿದ್ದ ವ್ಯಕ್ತಿಗಳ ವಿಚಾರದತ್ತವೇ ಮಾತುಕತೆ ಗಿರಕಿಯಾಡಿದಾಗ ನಾರು ಭಟ್ಟರು ಪುನಃ ನಾಗೇಶನ ಬಗ್ಗೆ ಕೇಳಿದರು. ಅವರಿಗಾಗಲೇ ಗಾಬರಿಯಾಗಿಬಿಟ್ಟಿತ್ತು. ಇವರು ಇಷ್ಟು ಪರಿಚಿತರಾದರೆ ತಮ್ಮ ದಲ್ಲಾಳಿ ಕಮೀಷನ್ ಗೆ ಡಿಸ್ಕೌಂಟು ಮಾಡಬೇಕಾದಿತೋ ಏನೋ?
ಅಷ್ಟರಲ್ಲಾಗಲೇ ಡೈರಿಗೆ ಹಾಲು ಹಾಕಲು ಹೋಗಿದ್ದ ನಾಗೇಶ ಬಂದು ಬಿಟ್ಟ. ಎತ್ತರ ದೃಢಕಾಯದದ ನಾಗೇಶ ಅದಾಗಲೇ ಸ್ನಾನ ಮಾಡಿದ ದ್ಯೋತಕವೆಂಬಂತೆ ಮುಖದಲ್ಲಿ ಗೋಪೀಚಂದನದ ಬೊಟ್ಟು ವಿರಾಜಿಸುತ್ತಿತ್ತು. ಅವನ ಆಗಮನದೊಂದಿಗೆ ವಿಚಾರಗಳ ಮಹಾ ಪ್ರವಾಹವೇ ಬಂದಂತಾಯಿತು. ರಾಜಯಕೀಯ ಯಕ್ಷಗಾನ  ಕ್ರೀಡೆ ಹೀಗೆ ಉದಯವಾಣಿ ಪುಟಗಳನ್ನು ತಿರುಗಿಸಿದಂತಾಯಿತು. ಈ ನಡುವೆ ಶುಭ್ರವಾದ ಬೈರಾಸು ಪಂಚೆಯನ್ನು ಸುಮಂಗಲ ಹತ್ತಿರ ತಂದಿಟ್ಟು ಸ್ನಾನದ ಅವಕಾಶವನ್ನೂ ಉಪಚಾರದಲ್ಲಿ ಸೇರಿಸಿಬಿಟ್ಟಳು. ನಾರು ಭಟ್ಟರು ಒಂದು ರೀತಿ ತಳ ಮಳ ಅನುಭವಿಸುವುದನ್ನು ಕಂಡ ಸುಮಂಗಲ ಈಚಣ್ಣನಲ್ಲಿ ಹೇಳಿಯೇ ಬಿಟ್ಟಳು ಇವತ್ತು ಮಧ್ಯಾಹ್ನದ ಊಟ ಕೊಟ್ಟೇ  ನಿಮ್ಮನ್ನು ಬಿಡುವುದು ಎಂದು.
ಸುಮಂಗಲನ ಉಪಚಾರ ಎಂದ ಮೇಲೆ ಈಚಣ್ಣನ ದಾಕ್ಷಿಣ್ಯ ತುಸು ಹಾರಿಹೋದಂತಾಯಿತು. ಬೈರಾಸು ಪಂಚೆ ತೆಗೆದುಕೊಂಡು ಬಚ್ಚಲು ಎಲ್ಲಿ?  ಎಂದು ಕೇಳಿದಾಗ ಸಂಭಾಷಣೆಯ ಪ್ರವಾಹದ ವೇಗ ಕಡಿಮೆಯಾಯಿತು.
ಹಳ್ಳಿಯ ತೋಟದ ಮನೆಯಾದರೂ ಸ್ನಾನ ಮನೆ ಬಹಳ ಅಚ್ಚುಕಟ್ಟಾಗಿ ಶುಭ್ರವಾಗಿತ್ತು. ಬಿಸಿನೀರು ತಣ್ಣೀರು ಹೀಗೆ ವಿಶಾಲವಾದ ಸ್ನಾನದ ಕೋಣೆ ನೋಡಿ ಸ್ನಾನ ಒಂದಷ್ಟು ಹಿತಕರವಾಗಿಯೇ ಇತ್ತು. ಸ್ನಾನ ಮುಗಿಸಿ ದೇವರಕೊಣೆಯಲ್ಲಿ ಒಂದಷ್ಟು ಆಚಮನ ಮುಗಿಸಿ ಬಂದಾಗ ತುಂಡು ಬಾಳೆ ಎಲೆ ಮತ್ತು ಮಣೆ ಇಟ್ಟು ಸುಮಂಗಲ ತಿಂಡಿಗಾಗಿ ಕಾಯುತ್ತಿದ್ದಳು.  ಅವಲಕ್ಕಿ ಉಪ್ಪುಕರಿ  ಮತ್ತು ಮೊಸರು. ಒಂದೆರಡು ಕದಳಿ ಬಾಳೆ ಹಣ್ಣು. ...ನಾರು ಭಟ್ಟರು ಅದಾಗಲೆ ಕುಳಿತು ಶುರು ಹಚ್ಚಿಯಾಗಿತ್ತು.  ಕೆಂಪು ಕಂಪು ಅವಲಕ್ಕಿ ಉಪ್ಪುಕರಿ ನೋಡುತ್ತಿದ್ದಂತೆ ಬಾಲ್ಯದ ಸುಮಂಗಲನ ಬುತ್ತಿಪಾತ್ರೆ ಮತ್ತೆ ನೆನಪಾಯಿತು. ಬಹುಶಃ ಅದೇ ಬುತ್ತಿ ಪಾತ್ರೆಯ ಉಪ್ಪುಕರಿಯಾಗಿರಬಹುದೋ ಎಂಬ ಸಂದೇಹ.  ಶಾಲೆಗೆ ಹೋಗುವ ದಾರಿ ಮಧ್ಯೆ ಆಕೆಯಲ್ಲಿ ಗೋಗರೆದು ರುಚಿನೋಡುತ್ತಿದ್ದದ್ದು ನನಪಾಗಿ ಉಪ್ಪುಕರಿಯ ರುಚಿನೋಡುವುದಕ್ಕೆ ಉತ್ಸಾಹ ಮೂಡಿಬಂತು.
ಹುಳಿ ಮೊಸರು ಮತ್ತುಉಪ್ಪುಕರಿಯ ರುಚಿ ನೋಡುತ್ತಿದ್ದಂತೆ ತುಸು ದೂರದಲ್ಲಿ ನೆಲದ ಮೇಲೇನೆ ಕುಳಿತುಬಿಟ್ಟಳು ಸುಮಂಗಲ. ತನ್ನ ಹುಳಿ ಮಜ್ಜಿಗೆ ಮೊಸರಿನ ಪ್ರೀತಿ ಈಕೆಗೆ ಈಗಲೂ ನೆನಪಿದೆ ಎಂದುಕೊಂಡರು.   ತನ್ನ ಗಂಡನ ಕುಟುಂಬ ವೃತ್ತಿ ಬಂಧು ಬಳಗ ಹೀಗೆ ಹಲವು ಸುತ್ತಿ ಬಳಸಿದ ಕಥೆಗಳು ಹೇಳುತ್ತಾ ಸಾಗಿದಳು. ಗಂಡನ ಅಗಲಿಕೆಯ ನಂತರ ಒಬ್ಬನೇ ಮಗ ಯಾವುದೇ ಕೆಟ್ಟ ಬುದ್ಧಿ ಇಲ್ಲದೇ ಇದ್ದರೂ ಕಾಲವೇ ಕೆಟ್ಟು ಹೋದರೆ ಮಾಡುವುದೇನು?  ಮಗನ ಮದುವೆಯ ನಿರೀಕ್ಷೆ ಕ್ಷೀಣಿಸುತ್ತಾ ಕ್ಷೀಣಿಸುತ್ತಾ  ಇನ್ನು ಸಾಧ್ಯವೇ ಇಲ್ಲವೇನೋ ಎಂಬಂತಹ ಪರಿಸ್ಥಿತಿ.
  ಜೀವನದ ಹಲವು ಪುಟಗಳನ್ನು ಯಥಾವತ್ತಾಗಿ ತೆರೆದಿಡುತ್ತಾ ಸಾಗಿದಾಗ ಮಧ್ಯೆ ಮಧ್ಯೆ ಈಚಣ್ಣ ತನ್ನ ಪುಟಗಳನ್ನು ಒಂದಷ್ಟು ಬಿಡಿಸಿ ಇಡುತ್ತಿದ್ದರೂ ಸುಮಂಗಲನ ಮಾತಿಗೆ ಕಿವಿಯಾಗುವುದರಲ್ಲೇ ಈಚಣ್ಣ ಸುಖವನ್ನು ಕಂಡರು. ಈ ನಡುವೇ ನಾರು ಭಟ್ಟರು “ ನೀವು ವಿಶ್ರಾಂತಿ ತೆಕ್ಕೊಳ್ಳಿ ನಾನು ಈಗ ಬಂದೆ”  ಎಂದು ಹೊರ ಹೋದರು. ಸುಮಂಗಲನ ಮಾತಿನ ಪ್ರವಾಹದಲ್ಲಿ ಅದಾವುದೂ ಅಷ್ಟು ಗಮನಾರ್ಹವಾಗಲೇ ಇಲ್ಲ.  ಗಂಡನ ಮನೆಯ ಸಾಂಸಾರಿಕ ಜೀವನ ಅದು ಸುಖವಿತ್ತೋ ಕಷ್ಟವಿತ್ತೋ ಸುಮಂಗಲನ ಧ್ವನಿಯಲ್ಲಿ ಪ್ರತ್ಯೇಕಿಸುವುದು ಕಷ್ಟವಾಯಿತು. ಅವಳ ಮುಖದಲ್ಲೂ ಅದನ್ನು ಗುರುತಿಸುವುದು ಈಚಣ್ಣನಿಗೆ ಸಾಧ್ಯವೂ ಇರಲಿಲ್ಲ. ಮೊದಲಿನಿಂದಲೂ ಹಾಗೆ ಸುಮಂಗಲ ಹಲವು ವಿಚಾರಗಳಲ್ಲಿ ಬಹಳ ಗಟ್ಟಿಗಿತ್ತಿ. ಏನು ಬಂದರೂ ಎದುರಿಸಿ ನಿಲ್ಲುವ ಗಡಸುತನ.
ಹಲವು ಘಟನೆಗಳು ಕಥೆಗಳು ಮಾತಿನಲ್ಲಿ ಸುಳಿದರೂ ನಮ್ಮ ಸ್ನೇಹದ ವಿಚಾರ ಎಲ್ಲಿಯೂ ಸುಳಿಯಲಿಲ್ಲ. ಅದೆಷ್ಟು ಮರೆಯಲಾರದ ಘಟನೆಗಳು ಇದ್ದರೂ ಆಕೆ ಅದು ಮರೆತು ಬಿಟ್ಟಳೇನೋ ಅನ್ನಿಸಿತು. ಪ್ರಾಯಶಃ ಈಚಣ್ಣನಿಗೆ  ವರ್ತಮಾನದಲ್ಲಿ ಅದರ ನೆನಪಾಗುವುದೂ ಔಚಿತ್ಯ ಅಲ್ಲವೇನೋ ಎನಿಸಿತು. ಆದರೂ ಒಂದು ಮಾತ್ರ ಅಂದಿನಿಂದ ಇಂದಿನವರೆಗೂ ಹಾಗೇ ಉಳಿದು ಬಿಟ್ಟಿತ್ತು. ಅದು ಆ ಮುಗ್ಧ ಸ್ನೇಹ. ಮುಖದಲ್ಲೂ ಕಣ್ಣಿನಲ್ಲೂ ಮಾತಿನಲ್ಲೂ ವ್ಯಕ್ತವಾಗುವ ಆ ಆತ್ಮೀಯತೆ ತಾನಿನ್ನೂ ಪರಕೀಯನಲ್ಲವೆಂಬ ಭಾವನೆ ತರುತ್ತಿತ್ತು.
ಬೆಳಗಿನ ಉಪಾಹಾರವಾದ ಮೇಲೆ ಈಚಣ್ಣ ಹೊರಡುವ ಸೂಚನೆ ಕೊಟ್ಟರೂ ಸುಮಂಗಲ ಬಿಡುವ ಲಕ್ಷಣ ಕಾಣಲಿಲ್ಲ. ಮಧ್ಯಾಹ್ನದ ಊಟಕ್ಕೆ ಸಿದ್ಧ ಮಾಡುವ ತವಕ. ವಿಶ್ರಾಂತಿಗೋಸ್ಕರ ತಲೆದಿಂಬು ಚಾಪೆ ಚಾದರವನ್ನು ಹೊರ ವರಾಂಡಲ್ಲಿ ಹಾಸಿ ಕೊಟ್ಟಳು. ಈಚಣ್ಣ ಮತ್ತೇನೂ ಯೋಚಿಸುವ ಹಮ್ಮು ತೋರಲಿಲ್ಲ. ವಾಡಿಕೆಯಂತೆ  ಸ್ವಲ್ಪ ನಿದ್ದೆ ಮಾಡಲೇ ಬೇಕಿತ್ತು. ಇವತ್ತು ರಾತ್ರಿಯ ಆಟಕ್ಕೆ ತೊಂದರೆಯಾಗಬಾರದಲ್ಲ? ಒಂದಷ್ಟು ತಾಂಬೂಲ ಹಾಕಿ ಮತ್ತೆ ನಿಧಾನಕ್ಕೆ ಅಡ್ದವಾದರೆ ಅದಾವಗ ನಿದ್ದೆ ಹತ್ತಿತೋ ಆ ನೀರವತೆಯಲ್ಲಿ ಅವರ ಗೊರಕೆ ತನ್ನ ಇರವವನ್ನು ಸಾರುತ್ತಿತ್ತು.
ನಿಶ್ಯಬ್ಧ  ನೀರವ ಮೌನದಲ್ಲಿ ನಿದ್ದೆಯ  ಆನಂತರ ಅಪರೂಪದ ಸ್ವಾದಿಷ್ಟ ಭೋಜನ ಸವಿದು ಹೊತ್ತು ಸರಿಯುತ್ತಿದ್ದಂತೆ ಈಚಣ್ಣ ಹೊರಟು ನಿಂತರು. ಒಂದಷ್ಟು ಎಲೆ ಅಡಿಕೆಯನ್ನು ಕೈಚೀಲದ ಪೆಟ್ಟಿಗೆಯಲ್ಲಿ ಅದಾಗಲೇ ಸಿದ್ದಪಡಿಸಿಯಾಗಿತ್ತು.  ಪಂಚೆಯನ್ನು ಎತ್ತಿಕಟ್ಟಿ ಕೈಚೀಲ ಹೆಗಲಿಗೇರಿಸಿ ಹೊರಜಗಲಿಗೆ ಬಂದರು. ಹಿಂದೆಯೇ ಸುಮಂಗಲ ಬಂದಳು. ಅದುವರೆಗೆ ಸಂಕ್ಷಿಪ್ತವಾಗಿ ನಾಗೇಶನ ಬದುಕಿನ ಬಗೆಗಿನ ಕಳವಳವನ್ನು ಹೇಳಿದ್ದರೂ, ಹೇಳದೇ ಉಳಿದ ಸಂಗತಿಗಳು ವಿಶಾಲ ಅರ್ಥವನ್ನು ಈಚಣ್ಣನ ಮನಸ್ಸಿಗೆ ರವಾನಿಸಿದ್ದಳು. ತಾನಾದರೂ ಒಂಟಿ ಹೆಂಗಸು ಹೇಗೆ ಅವನ ಭವಿಷ್ಯವನ್ನು ಕಟ್ಟಿಕೊಟ್ಟೇನು? ಪ್ರತಿಕ್ಷಣವೂ ಅನುಭವಿಸುವ ಆತಂಕ ಆಕೆಯ ಮುಖದ ಕನ್ನಡಿ ಬಗೆ ಬಗೆಯಲ್ಲಿ ಭಟ್ಟರಿಗೆ ತಿಳಿಸಿತ್ತು.
ಗಂಟಲಲ್ಲಿ ಎದ್ದ ನಿಟ್ಟುಸಿರ ಭಾವ ಅಲ್ಲಿಯೇ ಹುದುಗಿಬಿಟ್ಟಿತು. ಅದು ಹೊರಬಂದರೆ ಅರ್ಥ ಕೆಡಬಹುದೇ ಎಂಬ ಸಂದೇಹ ಈಚಣ್ಣನಿಗೆ. ಮೌನವಾಗಿ ಹೊರ ಜಗಲಿಯ ಅಂಚಿಗೆ ಬಂದು ತಿರುಗಿನೋಡಿದರು. ಸುಮಂಗಲನ ಮುಖ ಮುಗುಳು ನಗೆಯನ್ನೇನೋ ಸೂಸಿತ್ತು. ಆದರೆ ಅಂತರಂಗದ ಅಳು ಅರ್ಥವಿಸದಷ್ಟು ನಿಷ್ಠೂರತೆ ಅವರಲ್ಲಿಲ್ಲ.   “ ಇದು ಬಿಟ್ಟರೆ ಬೇರೆ ಇನ್ನು ಹೆಣ್ಣ ಅರಸುವ ಚೈತನ್ಯ ತನಗಿಲ್ಲ”  ಅದೇ ದೈನ್ಯತೆ ಈಚಣ್ಣನ ಹೃದಯವನ್ನು ಇರಿಯತೊಡಗಿತು. ಆದರೆ ಅಂದು ತನಗೆ ಸಿಕ್ಕಿದ ನಿರಾಕರಣೆ ಬೇಡವೆಂದರೂ ನಾಲಗೆಗೆ ಕಹಿಯನ್ನು ಸವರಿದಂತೆ ನೆನಪಿಗೆ ಬರತೊಡಗಿತು. ಅದನ್ನು ಅರ್ಥವಿಸಿಕೊಂಡಂತೆ ಸುಮಂಗಲ ಮತ್ತಷ್ಟು ದೀನತೆಯಲ್ಲಿ ಸೊರಗಿದಳು.  ನೆರಿಗಟ್ಟಿದ ಹಣೆ ಮೌನದಲ್ಲೇ ಕಳವಳವನ್ನು ವ್ಯಕ್ತಪಡಿಸಿದರೂ ಮುಖದ ಮೇಲ ಮುಂಗುರುಳು ಅದನ್ನು ಮುಚ್ಚುವ ಸಾಹಸ ಮಾಡುತ್ತಿತ್ತು. ಆದರೆ.  ಹೃದ್ಗತವಾದ ಹೃದಯದ ಮಾತುಗಳನ್ನು ನಾಲಗೆ ಹೇಳುವುದಿಲ್ಲ. ಮುಖವೇ ಹೇಳಿಬಿಡುತ್ತದೆ. ಆದರೆ ಆತ್ಮೀಯತೆಯಲ್ಲಿ  ಮುಖವೂ ಹೇಳುವ ಅವಶ್ಯಕತೆ ಇರುವುದಿಲ್ಲ. ಸಂವೇದನೆಯೆ ಎಲ್ಲವನ್ನು ಮನವರಿಕೆ ಮಾಡಿಬಿಡುತ್ತದೆ.
ಈಚಣ್ಣ ಅಂಗಳಕ್ಕೆ ಇಳಿದನಂತರ ಮತ್ತೊಮ್ಮೆ ತಿರುಗಿ ನೋಡಿದಾಗ ಅದೇಭಾವ  ಮನಸ್ಸಿನಲ್ಲಿ ಮುದ್ರೆಯನ್ನೊತ್ತಿ ಅಂತರಂಗದ ಯೋಚನೆಗೆ  ಮತ್ತಷ್ಟು ಗ್ರಾಸವನ್ನೊದಗಿಸಿತು. ಹಾಗೆ ನಡೆದು ನಡೆದು ಮಣ್ಣಿನ ರಸ್ತೆಯ ಮಧ್ಯೆದಲ್ಲಿ ನಿಂತು ಮುಂದೊಮ್ಮೆ ಹಿಂದೊಮ್ಮೆ ದೃಷ್ಟಿಯನ್ನು ಬೀರಿದರು.  ಬದುಕಿನ ಅವಲೋಕನದಲ್ಲಿ ರಸ್ತೆಯಂತೆ ಬದುಕು ಹಾಸಿ ಮಲಗಿದರೆ ಅದರೆ ಏರು ತಗ್ಗುಗಳು ಬದುಕಿನ ಸ್ಥಿತ್ಯಂತರವನ್ನು ಸಾರಿ ಹೇಳುತ್ತಿತ್ತು.  ಈಗ ತನ್ನ ಮನಸ್ಸು ಸಂದು ಹೋದ ವೈಫಲ್ಯವನ್ನು ಲೆಕ್ಕ ಹಾಕುವುದೇ? ಇಲ್ಲ . ಒಡಲ ಬಳ್ಳಿಯ ಹೊಸ ಚಿಗುರ ನೆಲೆಯನ್ನು ಅರಿಯಬೇಕು.  ನಾಗೇಶನೇನು ಈಗ ಪರಕೀಯನೆಂದು ಅನಿಸುವುದಿಲ್ಲ. ಸುನಂದೆ ನನ್ನ ಯೋಚನೆಯನ್ನು ತಳ್ಳಿಹಾಕುವಳಲ್ಲ.  ಯೋಚಿಸುತ್ತ ಯೋಚಿಸುತ್ತಾ ಈಚಣ್ಣ ಒಂದರ ಮೇಲೊಂದು ಹೆಜ್ಜೆ ಊರುತ್ತಾ ಮುನ್ನಡೆದರು.