"ಇದು ವಿಮರ್ಶೆಯಲ್ಲದ ಚಿಂತನ"

Saturday, August 18, 2018

“’ವಾರೀಜಾನನೇ ಬಾರೆ ಮೋಹನಾಂಗಿಯೇ ಬಾರೆ...”



“’ವಾರೀಜಾನನೇ ಬಾರೆ ಮೋಹನಾಂಗಿಯೇ ಬಾರೆ...”

ಯಕ್ಷಗಾನದ ಪೂರ್ವರಂಗದ ಪದಕ್ಕೆ ಚಪ್ಪರ ಮಂಚದ ಕಲಾವಿದ ನಡುವಿಗೆ ಕಟ್ಟಿದ ಚಪ್ಪರ ಮಂಚದೊಂದಿಗೆ ರಂಗತುಂಬಿಸಿ ಕುಣಿಯುತ್ತಿದ್ದ. ಪೂರ್ವರಂಗದ ಅತಿ ವಿಶಿಷ್ಟ ಪ್ರಕಾರವೊಂದನ್ನು ನೆನಪಿಸುವ ಪ್ರಾತ್ಯಕ್ಷಿಕೆಯದು. ಬಹಳ ಆಸಕ್ತಿಯಿಂದ ನಾವೆಲ್ಲ ನೋಡುತ್ತಿದ್ದೆವು. ಪ್ರಸಿದ್ಧರಾದ ಹಿರಿಯ ಯಕ್ಷಗಾನ ಕಲಾವಿದರೊಬ್ಬರು ನಮ್ಮೊಂದಿಗೆ ಬಹಳ ಆಸಕ್ತಿಯಿಂದ ಗಂಭೀರವಾಗಿ ರಂಗವನ್ನು ಗಮನಿಸುತ್ತಿದ್ದರು. ಸಾಮಾನ್ಯವಾಗಿ ವಾಡಿಕೆಯಲ್ಲಿ ಪೂರ್ವರಂಗವೆಂದರೆ ಯಕ್ಷಗಾನದಲ್ಲಿ ಪ್ರಾಥಮಿಕ ಹಂತದ ಕಲಾವಿದರಿಂದ ನಿರ್ವಹಿಸಲ್ಪಡುವ ಅಂಗ. ಪ್ರಸಂಗದ ಕುತೂಹಲದಲ್ಲಿ ಅದರತ್ತ ಗಮನ ಹರಿಸುವುದು ಬಹಳ ಕಡಿಮೆ. ಆದರೂ ಮೊದಲೆಲ್ಲ ಯಕ್ಷಗಾನದ ವಾತಾವರಣವನ್ನುಹದವಾಗಿ ಉಂಟುಮಾಡುವುದಕ್ಕೆ, ಯಕ್ಷಗಾನದ ಪ್ರಭಾವಕ್ಕೆ ನಮ್ಮನ್ನು ಸೆಳೆಯುವುದಕ್ಕೆ ಇದು ಪ್ರಭಾವವನ್ನು ಬೀರುತ್ತಿತ್ತು. ಹಂತ ಹಂತವಾಗಿ ಪ್ರೇಕ್ಷಕ ಯಕ್ಷ ಪ್ರಭಾವಕ್ಕೆ ಸೆಳೆಯಲ್ಪಡುತ್ತಿದ್ದ. ಕ್ರಮೇಣ ಪೂರ್ವರಂಗ ಪೂರ್ವದಲ್ಲೇ ಉಳಿದು ಕೇವಲ ಪ್ರಸಂಗದ ವರ್ತಮಾನವಷ್ಟೇ ಬಳಕೆಯಾಗತೊಡಗಿತು. ಪೂರ್ವರಂಗದ ವೈಶಿಷ್ಟ್ಯಗಳೆಲ್ಲ ರಂಗದ ಪರಿಚಯವೇ ಇಲ್ಲದಂತೆ ಮೂಲೆ ಸೇರಿತು. ಹಲವು ಸಲ ಹಳೆಯ ಬಟ್ಟೆಯನ್ನೋ ಆಭರಣವನ್ನೋ ನಾವು ಪೆಟ್ಟಿಗೆಯೊಳಗಿನಿಂದ ತೆಗೆದು ಧರಿಸದೇ ಇದ್ದರೂ ಕೈಯಲ್ಲಿ ಹಿಡಿದು ಅದು ನಮ್ಮ ಕೈಸೇರಿದ ಸನ್ನಿವೇಶದ ನೆನಪನ್ನು ಸ್ಮರಿಸುವುದಿದೆ. ಅದರಂತೆ ಇಂದು ಪೂರ್ವರಂಗದ ಕೆಲವೊಂದು ಬಗೆಗಳು ಪ್ರಸಂಗಗಳಿಗಿಂತ ಪ್ರಧಾನವಾಗಿ ಪ್ರದರ್ಶಿಸಲ್ಪಡುತ್ತದೆ.

ಈ ನಡುವೆ ರಂಗವನ್ನೇ ಗಮನಿಸುತ್ತಿದ್ದ ಹಿರಿಯ ಕಲಾವಿದರ ಆಸಕ್ತಿಯನ್ನು ಕಂಡು ಬಹಳ ಆಶ್ಚರ್ಯವಾಯಿತು. ಪೂರ್ವರಂಗವೆಂದರೆ ಯಕ್ಷಗಾನ ಕಲಿಕೆಯ ಒಂದು ಹಂತ. ಯಕ್ಷಗಾನವನ್ನು ಕಲಿತು ರಂಗದಲ್ಲಿ ಹತ್ತು ಮೂವತ್ತು ವರ್ಷ ಅಗ್ರಮಾನ್ಯ ಕಲಾವಿದರಾಗಿ ಪ್ರವೃತ್ತರಾದಂತಹ ಕಲಾವಿದರೂ ಸಹ ಇದರಲ್ಲಿ ಆಸಕ್ತಿ ವಹಿಸಿದ್ದಾರೆ ಎಂದರೆ ಅದು ಸ್ವಲ್ಪ ವಿಶೇಷವಾಗಿ ಕಂಡಿದ್ದು ಸುಳ್ಳಲ್ಲ. ಆದರೂ ಕೆಲವೊಮ್ಮೆ ಹಿರಿಯ ಕಲಾವಿದರು ಮಾಡುವುದಕ್ಕೆ ಬೇರೆ ಕೆಲಸವಿಲ್ಲದೇ ಸಮಯ ಕಳೆಯುವುದಕ್ಕೆ ರಂಗದ ಗೌರವವಕ್ಕೆ ಅದಕ್ಕೆ ಪ್ರೇಕ್ಷಕರಾಗುವ ಸಂದರ್ಭ ಇಲ್ಲದಿಲ್ಲ. ನಾವು ಹಾಗೇ ಭಾವಿಸಿಕೊಂಡಿದ್ದೆವು.  ಆದರೆ ನಮ್ಮ ಅನಿಸಿಕೆ ಸುಳ್ಳೆಂಬಂತೆ ಆ ಹಿರಿಯ ಕಲಾವಿದರು ನಗುತ್ತಾ ಹೇಳಿದರು...

”ರಂಗಕ್ಕೆ ಬಂದು ಮೂವತ್ತು ವರ್ಷ ಆಯಿತು. ನಾನು ಇದನ್ನು  ಇವತ್ತು ಶುರೂ ನೋಡುತ್ತಿರುವುದು.”

ಹಿರಿಯ ಕಲಾವಿದರೊಬ್ಬರ ಪ್ರಾಮಾಣಿಕ ಅನಿಸಿಕೆ ಯೋಚಿಸುತ್ತಾ ಹೋದಂತೆ ಒಂದು ರೀತಿಯಲ್ಲಿ ದಿಗ್ಭ್ರಮೆಯನ್ನು ತರಿಸಬಲ್ಲ ಗಂಭೀರ ವಿಚಾರವಾಗಿತ್ತು.  ಇಷ್ಟು ವರ್ಷ ರಂಗದಲ್ಲಿ ಪ್ರವೃತ್ತರಾದ ಹಿರಿಯ ಕಲಾವಿದರಿಗೆ ಈ ಒಂದು ಪ್ರಕಾರ ಅಪರಿಚಿತವಾಗಿ ಉಳಿಯಬೇಕಿದ್ದರೆ ಯಕ್ಷಗಾನ ಅಧ್ಯಯನ ಪದ್ದತಿ ಯಾವ ರೀತಿಯಲ್ಲಿ ಸಾಗಿ ಬಂದಿದೆ ಎಂದು ಆಶ್ಚರ್ಯವಾಗುತ್ತದೆ. ಇದು ಕಲಾವಿನೊಬ್ಬನ ತಪ್ಪಲ್ಲ ವ್ಯವಸ್ಥೆಯಲ್ಲೂ ಕೆಲವು ದೋಷಗಳಿವೆ.  ಆ ಕಲಾವಿದರು ನೋಡುವುದಿಲ್ಲ ಅಥವಾ ಕಲಿಯುವುದಿಲ್ಲ ಎಂದು ಖಂಡಿತಾ ಸುಮ್ಮನೆ ಉಳಿದದ್ದಲ್ಲ. ಯಕ್ಷಗಾನ ಅಧ್ಯಯನದಲ್ಲಿ ಅದೊಂದು ಅಂಗವಾಗಿಯೇ ಇರಲಿಲ್ಲ ಎಂಬುದು ಪ್ರಮುಖ ವಿಚಾರ. ಪೂರ್ವರಂಗದತ್ತ ಹೆಜ್ಜೆ ಹಾಕದೇ ಇದ್ದರೂ ಯಕ್ಷಗಾನದಲ್ಲಿ ಕಲಾವಿದನಾಗುವುದಕ್ಕೆ ಸಾಧ್ಯವಿದೆ ಎಂಬುದನ್ನು ಇದು ತೋರಿಸಿಕೊಡುತ್ತದೆ. ಇಲ್ಲಿ ಹಿರಿಯ ಕಲಾವಿದರಿಗೆ ಅದರ ಬಗ್ಗೆ ಆಸಕ್ತಿ ಇತ್ತು. ಅದನ್ನು ತಿಳಿಯಬೇಕೆಂಬ ಕುತೂಹಲವೂ ಇತ್ತು. ಆದರೆ ಅವರು ಕಲಿತ ಶಿಕ್ಷಣ ಪದ್ದತಿಯಲ್ಲಿ ಅದು ಅಪರಿಚಿತವಾಗಿಯೇ ಉಳಿದದ್ದರಲ್ಲಿ  ವ್ಯವಸ್ಥೆಯಲ್ಲೇ ತಪ್ಪಿದೆ.  ವ್ಯವಸ್ಥೆಯ ಒಂದು ಅಂಗವಿದು.  ಶಿಕ್ಷಣ  ಮತ್ತು ಶಿಕ್ಷಣ ರೀತಿ ಅಲ್ಲದೇ ಶಿಕ್ಷಕ ಎಲ್ಲವೂ ಇಲ್ಲಿ ಪ್ರಶ್ನಾರ್ಹವಾಗಿದೆ.  ಮೂರು ದಶಕಗಳನ್ನು ಕಳೆದ ಕೇವಲ ಒಬ್ಬ ಕಲಾವಿದನ ಅನುಭವವಲ್ಲ. ಬಹುತೇಕ ಹಲವರ ಅನುಭವವೂ ಇದಾಗಿದ್ದರೆ ಆಶ್ಚರ್ಯವಿಲ್ಲ. ಇವರು ಪ್ರಾಮಾಣಿಕವಾಗಿ ತೆರೆದು ಹೇಳಿದ್ದಾರೆ. ಇಂದು ಕಲಿಸುವಂತಹ ಗುರುಗಳಿಗೇ ತಿಳಿದಿರುವ ಸಂಭಾವ್ಯತೆ ಕಡಿಮೆ ಇರುವಾಗ ಅದು  ಅದನ್ನು ಅನುಸರಿಸುವ ಉಳಿದವರಿಗೆ ತಿಳಿದಿಲ್ಲ ಎಂದರೆ ಆಶ್ಚರ್ಯವನಿಸುವುದಿಲ್ಲ. ಬದಲಾಗಿ ಹೀಗೆ ಇಲ್ಲಿ ಹೇಳುವುದೇ ಆಶ್ಚರ್ಯವಾಗಿಬಿಡಬಹುದು.  ಹಾಗಾಗಿ ಯಕ್ಷಗಾನಕ್ಕೆ ಒಂದು ಲಾಕ್ಷಣಿಕ ಗ್ರಂಥದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ. ಯಕ್ಷಗಾನದ ಆದ್ಯಾಕ್ಷರಗಳೇ ಮಸುಕಾಗಿ ಬಣ್ಣ ಕಳೆದುಕೊಂಡು ಮಸುಕಾಗಿದೆ.

ಆರನೇ ಕ್ಲಾಸು ಕಲಿತು ಬ್ರಹ್ಮೋಪದೇಶವಾಗಿ ವೇದ ಕಲಿಯುವುದಕ್ಕೆ ನಾನು ನನ್ನಜ್ಜನ ಎದುರು ಕುಳಿತಾಗ ಅವರು  ನನಗೆ ಮಂತ್ರ ಹೇಳಿಕೊಡುವ ಮೊದಲು ಆ ಆ ಇ ಈ....ಎಂದು ಅಕ್ಷರಮಾಲೆ ಯಿಂದ ತೊಡಗಿಸಿದ್ದರು. ಅದಾಗಲೇ ಬರೆಯುವುದು ಓದುವುದು ಕಲಿತ ಆರನೇ ಕ್ಲಾಸಿನ ಹುಡುಗನಿಗೆ ಇದೊಂದು ವಿಚಿತ್ರವಾಗಿ ಕಂಡಿತು. ಹಾಗಿದ್ದರೂ ನಾನು ಅಕ್ಷರಮಾಲೆಯನ್ನು ಉಚ್ಚರಿಸುವಾಗ ಬಹಳಷ್ಟು ತಪ್ಪುಗಳಾಗಿ ಕೇವಲ ಅಕ್ಷರ ಮಾಲೆಯನ್ನು ಸರಿಯಾಗಿ ಉಚ್ಚರಿಸುವುದಕ್ಕೆ ಹಲವುದಿನಗಳ ಕಲಿಕೆ ಬೇಕಾಗಿತ್ತು. ಆವಾಗ ಅಜ್ಜ ಹೇಳುತ್ತಿದ್ದರು ಮಂತ್ರ ಕಲಿಯ ಬೇಕಿದ್ದರೆ ಸರಿಯಾದ ಉಚ್ಚಾರ ಅತ್ಯಂತ ಮುಖ್ಯ. ಸರಿಯಾಗಿ ಅಕ್ಷರಗಳನ್ನು ಉಚ್ಚರಿಸದೇ ಇದ್ದು ನಾಲಿಗೆ ಹೊರಳದೇ ಇದ್ದರೆ ಮಂತ್ರ ಅಭ್ಯಾಸ ಸಾಧ್ಯವಿಲ್ಲ. ಸ್ಪಷ್ಟ ಉಚ್ಚಾರ ಮಂತ್ರ ಉಚ್ಚಾರದ ಮೊದಲ ಲಕ್ಷಣ. ಹಾಗಾಗಿ ಒಂದೆರಡು ವಾರ ಬರೀ ಉಚ್ಚಾರ ಶುದ್ದಿಗೆ ಗಮನ ಹರಿಸುವಂತಾಯಿತು. ಇಂದಿಗೂ ಮಂತ್ರಗಳನ್ನು ಮಾತ್ರವಲ್ಲ ಯಾವುದನ್ನೇ ಆಗಲಿ ಸ್ಪಷ್ಟವಾಗಿ ಹೇಳುವಾಗ ನನ್ನಜ್ಜನ ನೆನಪಾಗುತ್ತದೆ. ಹಾಗಾಗಿ ಕೆಲವೊಮ್ಮೆ ಭಾರತ ಎಂದು ಸರಿಯಾಗಿ ಪ್ರಾಣಾಕ್ಷರ ಉಚ್ಚರಿಸಲಿಕ್ಕಾಗದೇ ಇರುವವರು ದೇಶ ಪ್ರೇಮದ ಬಗ್ಗೆ ಆಡುವಾಗ ವಿಚಿತ್ರವಾಗಿ ಕಾಣುತ್ತದೆ. ಇದು ಪ್ರಾಥಮಿಕ ವಿದ್ಯಾಭ್ಯಾಸದ ಮಹತ್ವವನ್ನು ಹೇಳುತ್ತದೆ.

ಯಾವುದೇ ವಿದ್ಯೆಯಾಗಲೀ ಅದರ ಪ್ರಾಥಮಿಕ ಹಂತ ಅತ್ಯಂತ ಪ್ರಧಾನವಾಗಿಬಿಡುತ್ತದೆ.  ಬಿಸಿ ಬಿಸಿಯಾದ ಅನ್ನವನ್ನು ಎಲೆಯಲ್ಲಿ ಹಾಕಿದಾಗ ಒಂದೇ ಬಾರಿ ಮಧ್ಯದಲ್ಲಿ ಕೈ ಹಾಕಿದರೆ ನಾವೇ ತಿನ್ನುವ ಅನ್ನವಾದರೂ ಅದು ನಮ್ಮನ್ನು ಸುಡುತ್ತದೆ. ಇಂದಿನ ವೇಗದ ಯುಗದಲ್ಲಿ ಸಹನೆ ತಾಳ್ಮೆ ನಮಗಿಲ್ಲ. ಹಸಿವೆಯಾದರೂ ಸರಿ, ವ್ಯಾಧಿಯಾದರೂ ಸರಿ ಬೇಗನೇ ಶಮನವಾಗಬೇಕು. ಗಬ ಗಬನೇ ತಿಂದು ಆರೋಗ್ಯ ಕೆಡಿಸಿಕೊಂಡರೂ ಅಡ್ಡಿ ಇಲ್ಲ ತಿಂದು ತೇಗುವ ತವಕ!  ಇದು ನಾವು ಕಲಿಯುವ ವಿದ್ಯೆಗೆ ಅನ್ವಯವಾಗುತ್ತದೆ. ಬಿಸಿಯಾದ ಅನ್ನವನ್ನು ಚೂರು ಚೂರೇ ಬದಿಯಿಂದ ನಿಧಾನವಾಗಿ ತಿನ್ನುತ್ತಾ ಬಂದರೆ ಅದೇ ಅನ್ನ ನಮ್ಮ ಉದರ ಸೇರಿ ದಹನವಾಗಿ ಬಿಡುತ್ತದೆ. ವಿದ್ಯೆ ಅಮೃತ ಸಮಾನವಾದುದು. ಹಾಗಿದ್ದಲ್ಲಿ ಅದು ಅಸ್ತಿತ್ವವನ್ನು ಉಳಿಸುತ್ತದೆ. ಯಕ್ಷಗಾನದ ಅಕ್ಷರಮಾಲೆಗೆ  ಯಕ್ಷಗಾನ ಲೋಕವೇ ಮೌಲ್ಯವನ್ನು ಕೊಟ್ಟಿಲ್ಲ. ಆಸಕ್ತಿ ಇದ್ದಲ್ಲಿ ಮಾತ್ರವೇ ಅದನ್ನು ಕಲಿಯಬಹುದು ಎಂಬ ಉದಾರತೆಯನ್ನು ತೋರಿಸಿತು. ಹಾಗಾಗಿ ಅಮೂಲ್ಯವಾಗಿರುವಂತಹುದು ಹಾಗೇ ಮರೆಯಲ್ಲಿ ಯಾರೂ ಸ್ಪರ್ಶಿಸದೇ ಉಳಿದು ಬಿಟ್ಟಿತು. ಕೊನೇ ಪಕ್ಷ ಕಲಿಸುವ ಗುರುವಾದರೂ ತೋರಿಸಿಕೊಡಬೇಕು. ಆದರೆ ಎಷ್ಟು ಜನ ಗುರುಗಳಿಗೆ ಅರಿವಿದೆ ಎಂದು ಕೇಳದಿರುವುದೇ ವಾಸಿ. ಯಕ್ಷಗಾನ ಕಲಿಕೆಗೆ ಗುರುವಿಗೆ  ಒಂದು ಮಾನದಂಡ ಇಲ್ಲದೇ ಇರುವುದೇ ಇದಕ್ಕೆ ಕಾರಣ. ನ..ಣ. ಶ ಷ ಸ....ಉಚ್ಚಾರದ ವೆತ್ಯಾಸ ಗೊತ್ತಿಲ್ಲದವರೂ ಅರ್ಥ ಹೇಳಿ ಅರ್ಥ ಅನರ್ಥವಾಗಿಸಿದರೂ ಪರವಾಗಿಲ್ಲ ಅರ್ಥಧಾರಿ ಯಾಗುವ ಅವಕಾಶವಿದೆ.

ಯೋಚನೆ ಮಾಡಿ ಉಗ್ಗುವಿಕೆಯಿಂದ ತೊದಲುವವನಲ್ಲಿ ಮೊಬೈಲ್ ನಂಬರ್ ಕೇಳಿದಂತೆ ಇದು.  
ಯಕ್ಷಗಾನ ಶಿಕ್ಷಣಕ್ಕೂ ಒಂದು ನಿಯಮ ಅನ್ವಯವಾಗಬೇಕು. ಕಲಿಸುವ ಗುರುವಿಗೂ ಒಂದು ಅರ್ಹತೆ ನಿರ್ಣಯವಾಗಬೇಕು. ಮಾನ್ಯತೆಯ ಶಿಕ್ಷಣದಲ್ಲಿ ಅಂಗೀಕೃತವಾಗದೇ ಒಬ್ಬ ಕಲಾವಿದ ರಂಗವನ್ನೇರುವುದಕ್ಕೆ ಅವಕಾಶವನ್ನು ಒದಗಿಸಬಾರದು. ಪಕ್ಕದ ಕಥಕ್ಕಳಿಯಲ್ಲಿ ಇಂತಹ ನಿಯಮವಿದೆ. ತಪ್ಪಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೆ ಇಲ್ಲಿ  ವಾಸ್ತವದಲ್ಲಿ ಇಂತಹ ವಿಚಾರಗಳಲ್ಲಿ ಗಂಭೀರ ಚಿಂತನೆಯೇ ಇರುವುದಿಲ್ಲ. ಒಂದು ಕಾರ್ಯಕ್ರಮದ ಲೆಕ್ಕಕಷ್ಟೇ ಯಕ್ಷಗಾನ ಸೀಮಿತವಾಗುವಾಗ ಶಿಕ್ಷಣದ ಅನಿವಾರ್ಯತೆಯನ್ನು ಯಕ್ಷಗಾನ ಲೋಕ ಕಂಡುಕೊಂಡಿಲ್ಲ. ನಮ್ಮ ಮಕ್ಕಳು ಯಕ್ಷಗಾನ ಅಭ್ಯಾಸ ಮಾಡದೇ ಇದ್ದರೂ ಪರವಾಗಿಲ್ಲ ರಂಗಸ್ಥಳ ಏರಿ ಒಂದಷ್ಟು ಫೋಟೋ ವಿಡಿಯೋ ಮಾಡಿ ಅಂತರ್ಜಾಲಕ್ಕೇ ರಿಸಿ ಮಿತ್ರರಿಂದ ಲೈಕ್ ಗಿಟ್ಟಿಸಿಕೊಂಡರೆ ಸಾಕು ಎಂಬ ಭಾವನೆ ಇದೆ.  ತಮ್ಮ ಮಕ್ಕಳ ವೇಷವನ್ನಷ್ಟೇ ನೋಡುವುದಕ್ಕೆ ಕ್ಯಾಮೆರ ಹಿಡಿದು ವೇದಿಕೆ ಎದುರು ನಿಲ್ಲುವ ಅಪ್ಪ ಅಮ್ಮಂದಿರು ಯಕ್ಷಗಾನದ ಬಗ್ಗೆ ಯೋಚಿಸುವುದಿಲ್ಲ. ಮಕ್ಕಳನ್ನು ಹೀಗೆ ಕೋಲ ಕಟ್ಟಿಸಿ ರಂಗವೇರಿಸುವ ಇವರ ಹೆಗ್ಗಣ ಮುದ್ದಿಗೆ ಯಕ್ಷಗಾನ ಬಲಿಯಾಗುತ್ತದೆ ಎಂಬ ಅರಿವೇ ಇಲ್ಲ.  ಅರಿವಿದ್ದರೂ ನಮ್ಮ ಒಬ್ಬರಿಂದ ಇದು ಕೆಡುವುದಿಲ್ಲ ಎಂಬ ಔದಾಸಿನ್ಯ.  ಇದನ್ನೂ ಯಕ್ಷಗಾನ ಅಭಿಮಾನ ಎನ್ನುವುದಕ್ಕಿಂತ ಮೂರ್ಖತನ ಎನ್ನಬೇಕು. ಯಕ್ಷಗಾನವನ್ನು ನಿಧಾನವಿಷ ನೀಡಿ ಜೀವ ಹಿಂಡುವ ಪೃವೃತ್ತಿ ಇದು.

 ಬಹಳ ಸಂಖ್ಯೆಯಲ್ಲಿ ಯಕ್ಷಗಾನ ಪ್ರದರ್ಶನವಾಗುತ್ತದೆ. ಇದರಲ್ಲಿ ಬಹುಪಾಲು ದೇವಿ ಮಹಾತ್ಮೆ. ಯಾಕೆಂದರೆ ಬೇರೆ ತಿಳಿದಿಲ್ಲ. ಹವ್ಯಾಸಿಗಳ ಅತಿ ಪ್ರಿಯವಾದ ಪ್ರಸಂಗ. ಹೆಚ್ಚು ತಯಾರಿ ಏನೂ ಬೇಡ.  ಇದನ್ನೇ ಮಾಡಿ ದೊಡ್ಡ ಸಾಧನೆಯೆಂಬಂತೆ ಉದ್ದ ಲೇಖನ ಬರೆದು ಕೊರೆದು ಬಿಡುತ್ತಾರೆ. ಆದರೆ ನಿಜವಾದ ಯಕ್ಷಗಾನದ ಆಳದ ಅರಿವಿಲ್ಲದೇ ತೊದಲುವ ಮಾತುಗಳಂತೆ ಇದು.   ಯಕ್ಷಗಾನದ ಅತೀ ಕನಿಷ್ಠ ಗುಣವಿರುವ ಈ ಪ್ರಸಂಗ ಯಕ್ಷಗಾನದಿಂದ ದೂರವಾದರೆ ಯಕ್ಷಗಾನ ಉಳಿದಂತೆ.  ಅದೆಷ್ಟು ವರ್ಷಗಳಿಂದ ಅದೆಷ್ಟು ದೇವಿ ಮಹಾತ್ಮೆ ನೋಡಿದ್ದೇನೋ ಗೊತ್ತಿಲ್ಲ. ಆದರೆ ಒಂದು ದೇವಿಮಹಾತ್ಮೆಯೂ ನಿಜವಾದ ಯಕ್ಷಗಾನದ ಅನುಭವವನ್ನು ಈವರೆಗೆ ನನಗೆ ಕೊಟ್ಟಿಲ್ಲ ಎಂಬುದು ಪರಮ ಸತ್ಯ. ಇಂದು ಹವ್ಯಾಸಿಗಳೂ ಬಹಳ ಇಷ್ಟ ಪಟ್ಟು ಆಡುವ ಪ್ರಸಂಗ ಎಂದರೆ ಅದು ಈ ಮಹಾತ್ಮೆ. ಹೀಗೆ ವಿಪರೀತ ದೈವ ಭಕ್ತಿಯೂ ಯಕ್ಷಗಾನಕ್ಕೆ ಮಾರಕವಾಗಿರುವುದು ವಿಪರ್ಯಾಸವೇ ಸರಿ.  ದೇವಿ ಮಹಾತ್ಮೆ ಜನಪ್ರಿಯವಾಗುವುದಕ್ಕೆ ಒಂದು ಕಾರಣ ಇದಕ್ಕೆ ಹೆಚ್ಚಿನ ಶಿಕ್ಷಣದ ಅರಿವೇ ಬೇಡ. ಒಂದಷ್ಟು ಗಿರಕಿ ಹೊಡೆಯಲು ತಿಳಿದರೆ ಸಾಕು. ರಂಗವೇರಬಹುದು.  ಹರಕೇ ಮೇಳದ ಹರಕೆ ಆಟ ಎಲ್ಲಕಡೆಯೂ ಹರಕೆ ಯಾಗುವುದು ದುರಂತ ಎನ್ನಬೇಕು.

ಯಕ್ಷಗಾನದ ಕಲಾವಿದನಾಗುವುದು ಹೇಗೆ ಸುಲಭವೋ ಗುರುವಾಗುವುದೂ ಅಷ್ಟೇ ಸುಲಭ. ಇದಕ್ಕೊಂದು ಮಾನದಂಡವಿದೆ ಎಂದು ಯಕ್ಷಗಾನವನ್ನು ಪ್ರಥಮವಾಗಿ ನೋಡುವವನಿಗೂ ಅನಿಸುವುದಿಲ್ಲ.  ಹತ್ತಿಪ್ಪತ್ತು ಸುಧನ್ವ, ಒಂದಷ್ಟು ಅಭಿಮನ್ಯು ಮಾಡಿದವರೂ ಸಹ ಗುರುವಾಗಿ ಗುರು ನಮನ ಸ್ವೀಕರಿಸಬಹುದು. ಹೀಗೆ ಒಂದೆರಡು ಪಾತ್ರ ಮಾಡಿದಲ್ಲಿ ಯಕ್ಷಗಾನ ಆಮೂಲಾಗ್ರ ಬಿಡಿ ಒಂದಿಷ್ಟಾದರೂ ತಿಳುವಳಿಕೆ ಸಾಧ್ಯವಿಲ್ಲ.  ಯಕ್ಷಗಾನ ಗುರುವಾಗುವುದಕ್ಕೆ ಇರುವ ಮಾನದಂಡವಾದರು ಏನು? ಒಂದು ಸುಧನ್ವ ಅಥವಾ ಬಬ್ರುವಾಹನ ಮಾತ್ರ ತಿಳಿದಲ್ಲಿ ಆತ ಕಲಿಸುವ ಶಿಕ್ಷಣವೂ ಅಷ್ಟಕ್ಕೇ ಸೀಮಿತವಾಗುತ್ತದೆ. ಗುರುವಿಗೂ ಒಂದು ಮಾನದಂಡ ಅತ್ಯವಶ್ಯ.   ಒಬ್ಬ ಗುರುವಿನ ವಿದ್ಯೆಯ ಪರಿಣತಿ ಎಷ್ಟು ತಿಳಿದರೆ ಶಿಷ್ಯನೂ ಅದಕ್ಕಿಂತಲೂ  ಕಡಿಮೆಗೆ ಪರಿಮಿತಿಗೊಳ್ಳುವುದು ಮಾತ್ರವಲ್ಲ ಇಷ್ಟಾದರೂ ಸಾಕಲ್ಲ ಎಂಬ ಭಾವನೆಯಲ್ಲೇ ಇರುತ್ತಾನೆ.  ಕಲಿಯುವಾಗಲೇ ಈ ಪಾತ್ರಕ್ಕೆ ಇಷ್ಟು ನಾಟ್ಯ . ಈ ಪದಕ್ಕೆ ಹೀಗೆ ಕುಣಿತ ಹೀಗೆ ಪರಿಮಿತಿಯೊಳಗೇ ಪಾತ್ರಕ್ಕೆ ತಕ್ಕ ಕಲಿತು ರಂಗವೇರುವುದನ್ನು ಯಕ್ಷಗಾನ ಎನ್ನುವುದಕ್ಕೆ ಮನಸ್ಸೊಪ್ಪುವುದಿಲ್ಲ. ಕೇವಲ ಉರು ಹೊಡೆದು ಪರೀಕ್ಶೆಗೆ ಬರೆದಂತೆ.  ಆ  ಯಕ್ಷಗಾನದ  ನಮ್ಮ ಅನುಭವ ಪರಿಪೂರ್ಣತೆಯನ್ನು ಅನುಭವಿಸುವುದೇ ಇಲ್ಲ.  ಹಾಗಾಗಿ ಗುರುವಾದವನಿಗೆ ಹಲವಾರು ಅರ್ಹತೆಗಳು ಇರಲೇಬೇಕು. ಮೇಳದತಿರುಗಾಟದಲ್ಲಿ ದೀರ್ಘ ಸಮಯದ ಅನುಭವವಿರಬೇಕು. ಪ್ರಸಂಗನಡೆ ಬಣ್ಣಗಾರಿಕೆ ಅರ್ಥಗಾರಿಕೆ ಹಿಮ್ಮೇಳ ಪ್ರತಿಯೊಂದು ಅಂಗದ ಕನಿಷ್ಠ ಪರಿಜ್ಞಾನವಾದರೂ ಇರಲೇಬೇಕು. ಪಾತ್ರ ಪಾತ್ರಗಳ ನಡುವಿನ ಅಭಿವ್ಯಕ್ತಿಯ ವೆತ್ಯಾಸದ ಅರಿವಿರಲೇ ಬೇಕು.  ಗುರು ಎಂಬುದರ ವಿಸ್ತಾರ ಸ್ವತಃ ಅರಿತಿರಬೇಕು.

’ಯಕ್ಷಗಾನವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇವೆ.’  ಈ ವಾಕ್ಯ ಬಹಳ ಭಾವನಾತ್ಮಕವಾಗಿ ಸುಂದರವಾಗಿದೆ. ಪ್ರಯಾಣಿಕನಾಗಿ ಸಾರ್ವಜನಿಕ ವಾಹನದಲ್ಲಿ ಸಂಚರಿಸುವಾಗ ವಾಹನ ಚಲಾಯಿಸುವ ಚಾಲಕ ಸಂಫೂರ್ಣ ಚಾಲನೆಯನ್ನು ಕಲಿಯದೇ ಇದ್ದದ್ದು ತಿಳಿದರೆ ಜೀವ ಭಯ ಇರುವವನು ಆ ವಾಹನವನ್ನೇರುವ ಸಾಹಸ ಮಾಡಿಯಾನೇ?  ಹಾಗಿದ್ದರೆ ಅಲ್ಲಿ ನಾವು ನಮ್ಮ ಪ್ರಾಣ ಭಯಕ್ಕೆ ಚಾಲಕನ ಪರಿಪೂರ್ಣ ಶಿಕ್ಷಣವನ್ನೇ ಅಪೇಕ್ಷಿಸುತ್ತೇವೆ. ಆದರೆ ಪ್ರಾಣಕ್ಕಿಂತ ಹೆಚ್ಚು ಎನ್ನುವ ಯಕ್ಷಗಾನದಲ್ಲಿ ಹೀಗೆ ಅರೆಬೆಂದ ಕಾಳುಗಳನ್ನು ತಿನ್ನಿಸುತ್ತೇವೆ.  

ಯಕ್ಷಗಾನಕ್ಕೆ ಒಂದು ಲಾಕ್ಷಣಿಕ ಗ್ರಂಥವಾಗಬೇಕು. ಒಂದು ಭರಣ ಘಟನೆ ಸಿದ್ದವಾಗಬೇಕು.  ಯಕ್ಷಗಾನ ಶಿಕ್ಷಣ ಪ್ರದರ್ಶನ ಎಲ್ಲದಕ್ಕೂ ಈ ನಿಯಮ ಅನ್ವಯವಾಗಬೇಕು.  ಇದೆಲ್ಲ ಬಹಳ ಕ್ಲಿಷ್ಟವೆನಿಸಬಹುದು.  ಸದ್ಯದಲ್ಲಿ ಅದು ಆಸಾಧ್ಯವಾಗಿಬಿಡಬಹುದು.  ಆದರೂ ಕೆಲವೊಂದು ಮಾನದಂಡಗಳು  ಕಲಿತು ಕಲಾವಿದನಾಗುವ ಶಿಷ್ಯನಿಗೂ ಕಲಿಸುವ ಗುರುವಿಗೂ ಅತೀ ಅವಶ್ಯ. ಸರಿಯಾಗಿ ಪೂರ್ವರಂಗದ ವೈವಿಧ್ಯವನ್ನು ತಿಳಿಯದ ಗುರುಗಳನ್ನು ಗುರು ಎಂದು ಒಪ್ಪಿಕೊಳ್ಳುವ ಬಡತನ ಯಕ್ಷಗಾನಕ್ಕೆ ಇಲ್ಲ.  ಗುರುವಾಗಿ ತನ್ನನ್ನು ತಾನು ಅರ್ಹವಾಗಿಸುವುದು ಕೇವಲ ಯಕ್ಷಗಾನದಲ್ಲಷ್ಟೇ ಸಾಧ್ಯ. ಅದೇ ರೀತಿ ಕಲಾವಿದನಾಗಿಯೂ ತನ್ನ ಶ್ರೇಣಿಯನ್ನು ತಾನೇ ನಿರ್ಣಯಿಸುವುದು. ಕೇವಲ ಒಂದೆರಡು ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಅದು ಯಕ್ಷಗಾನವಾಗುವುದಿಲ್ಲ. ಒಂದು ಪಾತ್ರಕ್ಕೆ ಮಾತ್ರ ತಾನು ಗುರು ಎಂದು ಹೇಳಿಕೊಳ್ಳುವುದೂ ಸಾಧ್ಯವಿಲ್ಲ.  ಕೇವಲ ಅಷ್ಟಕ್ಕೆ ಮಾತ್ರ ಕಾದುಕುಳಿತುಕೊಂಡು ಯಕ್ಷಗಾನವೂ ಸೀಮಿತವಾಗುವುದಿಲ್ಲ.

ಯಕ್ಷಗಾನದಲ್ಲಿ ಕೇವಲ ಕುಣಿತಕ್ಕೆ ಮಾತ್ರಾ ಯಕ್ಷಗಾನ ಶಿಕ್ಷಣ ಸೀಮಿತವಾಗುತ್ತದೆ. ಒಬ್ಬ ಕಲಾವಿದನಾದವನಿಗೆ ಹಿಮ್ಮೇಳದ ಜ್ಞಾನವೂ ಅತ್ಯವಶ್ಯ. ಇಂದು ಹಿಮ್ಮೇಳದ ಶ್ರುತಿಯ ಬಗ್ಗೆ ಎಷ್ಟು ಜನರಿಗೆ ಅರಿವಿದೆ? ಶ್ರುತಿ ಬೇಕು ಎನ್ನುವುದೇ ಚರ್ಚಾಸ್ಪದವಾಗುತ್ತದೆ. ಹಿಮ್ಮೇಳ ಮುಮ್ಮೇಳದ ಬಗ್ಗೆ ಸರಿಯಾದ ಜ್ಞಾನವಿದ್ದಲ್ಲಿ ಮಾತ್ರವೇ ರಂಗಸ್ಥಳದ ಅಂಗೀಕಾರ ಸಿಗುವಂತಾಗಬೇಕು. ಕೇವಲ ತಿಂಗಳ ತರಬೇತಿಯ ತಿತ್ತಿಥೈಯಲ್ಲಿ ರಂಗಪ್ರವೇಶ ಮಾಡುವುದೆಂದರೆ ಅದು ಯಕ್ಷಗಾನದಂತಹ ವಿಪುಲ ಕಲೆಗೆ ಸೂಕ್ತವೂ ಅಲ್ಲ.  

ದೇವದಾಸಿಯರು ಆಡುತ್ತಿದ್ದ ಯಕ್ಷಗಾನವನ್ನು ಅದಕ್ಕೆ ಒಂದಷ್ಟು ಸಂಸ್ಕಾರವನ್ನು ಕೊಟ್ಟು ಯಾವುದೇ ಶಾಸ್ತ್ರೀಯ ಕಲೆಗೆ ಕಡಿಮೆಯಿಲ್ಲದಂತೆ ಕಟ್ಟಿದರು. ಕೆಲವೊಮ್ಮೆಇತ್ತೀಚಿನ ಯಕ್ಷಗಾನಗಳನ್ನು ನೋಡುತ್ತಿರುವಾಗ  ನಾವು ಪುನಃ ಅದೇ ಪೂರ್ವಾವಸ್ಥೆಗೆ ತೆರಳುತ್ತಿದ್ದೇವೆ ಅನ್ನಿಸುತ್ತದೆ. ಈ ಎಲ್ಲ ಅನಿಸಿಕೆಗಳು ಕೇವಲ ಯಕ್ಷಗಾನದ ಪ್ರೇಕ್ಷಕನ  ಅನುಭವದ ನೆಲೆಯಲ್ಲಿ ವ್ಯಕ್ತವಾದವುಗಳು. ಹಲವು ವಿದ್ವಾಂಸರ ವಿಚಾರಗಳಿಂದ ಪ್ರೇರಿತವಾದಂತವುಗಳು.  ಅನುಭವಿಸುವ ಪ್ರೇಕ್ಷಕ ಮಾತ್ರವಲ್ಲ ಇಲ್ಲಿ ಪಳಗಿದ ಕಲಾವಿದನು ಅನುಭವದಿಂದ ವಂಚಿತನಾಗಿರುವುದು ಯಕ್ಷಗಾನದ ಮಟ್ಟಿಗೆ ವಿಪರ್ಯಾಸವೇ ಸರಿ.


Saturday, July 28, 2018

ಯಕ್ಷಗಾನ ಅವಲೋಕನ



“ಹೊಸದನ್ನು ನಾವು ಮೌಲ್ಯ ಕೊಟ್ಟು ಕೊಂಡುಕೊಳ್ಳುವಾಗ ನೆನಪುಗಳು,  ಕಳೆದುಕೊಂಡ ಹಳೆಯದರ ಮೌಲ್ಯವನ್ನು ನೆನಪಿಸುತ್ತವೆ.”
 ಮನುಷ್ಯ ಭಾವನಾರಹಿತನಾಗಿ ಬದುಕುವುದಕ್ಕೆ ಸಾಧ್ಯವಿಲ್ಲ. ಭಾವನೆಗಳು ಅಸ್ತಿತ್ವದ ಸಂಕೇತಗಳಾಗಿವೆ.  

ಹರಿಪದಗಳ ಹೊಸ್ತಿಲಲ್ಲಿ ನಿಂತ ಬಲಿ ಚಕ್ರವರ್ತಿ ತಲೆಯನ್ನು ಒಡ್ಡಿ ಹರಿಯ ಮೂರನೇ ಪಾದದ ಧೂಳನ್ನು ಸೋಕಿಸಿ ಪದ ಭಾರವನ್ನು ಹೊರುವುದಕ್ಕೆ ಸಿದ್ದನಾಗುತ್ತಾನೆ. ಶರಣನಾಗಿ ಶ್ರೀ ಹರಿಯಲ್ಲಿ ಕೇಳುತ್ತಾನೆ ತಾನು ಪಾತಾಳದ ಆಳಕ್ಕೆ ತಳ್ಳಲ್ಪಟ್ಟರೂ ಈ ಭೂಮಿಯ ಕಿಂಚಿತ್ ಮೋಹ ಇನ್ನು ಉಳಿದುಕೊಂಡಿದೇಯೋ ಎಂಬ ಅನುಮಾನ, ಹಾಗಾಗಿ  ಸಂವತ್ಸರದ ಒಂದು ದಿನ ಈ ಭೂಮಿಯನ್ನು ನೋಡುವಂತೆ ಅನುಗ್ರಹಿಸು. ಪರಮಾತ್ಮ ಸುಪ್ರೀತನಾಗಿ ಅನುಗ್ರಹಿಸುತ್ತಾನೆ. ಆನಂತರ ಬಲಿ ಚಕ್ರವರ್ತಿ ಕಾರ್ತಿಕ ಮಾಸದ ಶುದ್ದ ಪಾಡ್ಯದಿನ ಭೂಮಿ ವೀಕ್ಷಣೆಗೆ ಬರುತ್ತಾನೆ. ಆತನಿಗೆ ಪ್ರಜೆಗಳು ಹೇಗೆ ಪರಮಾತ್ಮನ ಉಪಾಸಕರಾಗಿರುತ್ತಾರೋ ಎಂದು ಕಾಣುವ ತವಕ.

ಆದರೆ ನಮ್ಮ ಆಚಾರ ವಿಚಾರಗಳು ಬದಲಾಗಿವೆ. ಆಚರಣೆಗಳಿಗೆ ಅರ್ಥ ಹುಡುಕಿ ಚೌಕಾಶಿ ಮಾಡಿ ಆಚರಿಸುವಾಗ ಬದಲಾವಣೆ ಸಹಜ.  

ಬದಲಾದ ಕಾಲಘಟ್ಟದಲ್ಲಿ ಈಗೀಗ ಬಲಿ ಚಕ್ರವರ್ತಿ ಬಂದು ಪ್ರಜೆಗಳನ್ನು ನೋಡುವ ತವಕ ವಿದ್ದರೆ, ಪ್ರಜೆಗಳು ತುಸುವಾದರೂ ಬದಲಾಗಿದ್ದಾರೋ ಎಂದು ಕಾಣುವ ಹಂಬಲವಿರಬಹುದು. ಯಾಕೆಂದರೆ  ಮನುಷ್ಯ ಪರಂಪರೆಯ ಆಚಾರ ವಿಚಾರಗಳನ್ನು ಕೇವಲ ಪರಂಪರೆ ಎಂಬ ಕಾರಣಕ್ಕೆ ಅದನ್ನುಕಡೆಗಣಿಸಿಬಿಟ್ಟಿದ್ದಾನೆ. ಜನ ಬದಲಾಗಿದ್ದಾರೆ ಎಂದು ನೋಡುವುದಕ್ಕಿಂತ ಜನ ಜೀವನದಲ್ಲಿ ಪರಂಪರೆ ಎಷ್ಟು ಉಳಿದುಕೊಂಡಿದೆ ಎಂದು ನೋಡಬೇಕು. ಬಹುಷಃ ಸಂವತ್ಸರಕ್ಕೆ ಒಂದು ದಿನ ಬರುವ ಬಲಿ ಚಕ್ರವರ್ತಿ ಇನ್ನು ಅರುವತ್ತು ಸಂವತ್ಸರಗಳ ಒಂದು ಆವರ್ತನ ಮುಗಿಯುವವರೆಗೂ ತನ್ನ ಬರುವ ಅವಧಿಯನ್ನು ವಿಸ್ತರಿಸಿಬಿಡಬಹುದು.

ಪರಂಪರೆಯ ಬಗ್ಗೆ ಹೇಳುವಾಗ ನಿರಾಶೆ ಮೂಡುವುದು ಸಹಜ. ಬೇಡ ಬೇಡವೆಂದರೂ ಪರಂಪರೆ ಅಷ್ಟೋ ಇಷ್ಟೋ ಉಳಿಯುತ್ತಿದ್ದರೆ, ಅದಕ್ಕೆ ಪರಂಪರೆಯಲ್ಲಿರುವ ಗಟ್ಟಿತನವೇ ಕಾರಣ. ಇಲ್ಲವಾದರೆ ಅಷ್ಟೂ ಬೇಡವಾದರೂ ಸಹ ಪರಂಪರೆ ಮತ್ತೂ ಸಹ ಜೀವ ಸೆಲೆಯನ್ನು ಉಳಿಸಿ ಉಸಿರಾಡುವುದಾದರೂ ಯಾಕೆ?

ಈತ್ತೀಚೆಗೆ ಆತ್ಮೀಯ  ಮಿತ್ರ ರಂಗಣ್ಣ ( ಕಟೀಲು  ಸಿತ್ಲ ರಂಗನಾಥ ರಾವ್) ಯಕ್ಷಗಾನ ತಾಳ ಮದ್ದಲೆಯ  ಸಂಪೂರ್ಣ ವೀಡಿಯೋ ಒಂದನ್ನು ಅಂತರ್ಜಾಲಕ್ಕೇರಿಸಿದರು.  ವಾಸ್ತವದಲ್ಲಿ ಅದನ್ನು ನನ್ನಿಂದಲೇ ಪಡೆದುಕೊಂಡಿದ್ದರು. ಅದು ನನ್ನ ಇನ್ನೋರ್ವ  ಆತ್ಮೀಯ ಮಿತ್ರ ವೇಣೂರು ಸುಬ್ಬಣ್ಣನ  ಮನೆಯ ತಾಳಮದ್ದಲೆಯ ವೀಡಿಯೋ. ಕೆಲವು ವರ್ಷಗಳ ಹಿಂದಿನ ಹಳೆಯ ತಾಳ ಮದ್ದಲೆಯ ಕಾರ್ಯಕ್ರಮವದು.  ಈ ಮೊದಲು ಹಲವು ಸಲ ಅದನ್ನು ನೋಡಿದರೂ  ಅಂತರ್ಜಾಲದಲ್ಲಿ ಒಂದು ಸಲ ನೋಡಿದೆ. ಅದರಲ್ಲಿ  ಆರಂಭದ ಸ್ತುತಿ ಪದ್ಯದ ಮೊದಲಿಗೆ ಗೂಂಯ್ ಎನ್ನುವ ಹಾರ್ಮೋನಿಯಂ ಶ್ರುತಿ ಕೇಳಿಯೇ ನೆನಪುಗಳು ಗರಿಗೆದರುತ್ತವೆ. ಇದಕ್ಕೆ ಕಾರಣಗಳು ಹಲವಿರಬಹುದು. ಆದರೆ ಅತಿ ಗಂಭೀರ ವಿಷಯವೆಂದರೆ ಬದಲಾದ ಕಾಲಘಟ್ಟದಲ್ಲಿ ಬದಲಾಗಿ ಹೋದ ಕಲಾ ಸ್ವರೂಪ,   ತುಮುಲದಿಂದ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವಂತೆ ಮಾಡಿತು.  ಯಾವೂದೊ ಹಳೆಯ ಯಕ್ಷಗಾನ ಪದವನ್ನು ಮಿತ್ರಬಳಗದಲ್ಲಿ ಹಂಚಿಕೊಂಡಾಗ ಮಿತ್ರರೊಬ್ಬರು ಹೇಳಿದ್ದರು, ಹಾರ್ಮೋನಿಯಂ ಶ್ರುತಿಯಲ್ಲಿ ಬಲಿಪ್ಪಜ್ಜನ ಪದಕೇಳುವುದರಲ್ಲಿ ಒಂದು ಸುಖವಿದೆ.  ಮಿತ್ರರ ಮಾತು ಸತ್ಯ ಎಂಬುದಕ್ಕೆ ಪುರಾವೆ ಎಂಬಂತೆ ಆ ಶ್ರುತಿ ಗುಂಯ್ ಎನ್ನುತ್ತಾ ಸುತ್ತಿಕೊಂಡು ಆ ಸುಳಿಗೆ ಸಿಕ್ಕಿಸಿಕೊಳ್ಳುವ  ಹಾಗೆ ಮಾಡಿತು.

ಕೇವಲ ಒಂದು ಶ್ರುತಿಯ ನಾದವೇ ಬದಲಾಗಿಹೋದ ನೋವುಗಳ ಕಥೆಯನ್ನು ಹೇಳುವುದಾದರೆ ಹೇಳದೆ ಉಳಿವ ಕಥೆಗಳೆಷ್ಟಿರಬಹುದು?   ಲೆಕ್ಕ ಹಾಕಿ. ಮನೆಯಲ್ಲಿ ತಾಳ ಮದ್ದಲೆಯೋ ಯಕ್ಷಗಾನ ಬಯಲಾಟವೋ ಆದರೆ ಅಲ್ಲಿ ಹಾರ್ಮೋನಿಯಂ ಕದ ಎಳೆಯುವುದಕ್ಕೆ ಹುಡುಗರಲ್ಲಿ ಸ್ಪರ್ಧೆ ಇರುತ್ತಿತ್ತು. ಭಾಗವತರ ಹಿಂದಿನ ಒಂದು ಪ್ರೇರಣೆ ಶಕ್ತಿಯಂತೆ  ಇದ್ದ  ಅತ್ಯಂತ ಸೂಕ್ಷ್ಮ ಸ್ಥಾನ  ಇಂದು  ಶ್ರುತಿ ಪೆಟ್ಟಿಗೆಯ ಎಕತಾನತೆಯ ಧ್ವನಿಗೆ ಶೂನ್ಯವಾಗಿ ಹೋಗಿದೆ.  ಈಗಲೂ ಆ ಶ್ರುತಿಯ ನಾದ ಕೇಳುವಾಗ ಯಕ್ಷಗಾನ ಲೋಕಕ್ಕೆ ಜಾರಿ ಬೀಳುವ ಅನುಭವವಾಗುತ್ತದೆ.  ಅದನ್ನೆ ಯಕ್ಷಾಕರ್ಷಣೆ ಎನ್ನುವುದು.  ಇಂದಿನ  ಯಕ್ಷಗಾನದಲ್ಲಿ ಅದು ಇಲ್ಲವಾಗಿ ಹೋಗಿದೆ.

 ಪ್ರಾಪಂಚಿಕ ವ್ಯವಹಾರಗಳೇ ಹಾಗೆ ಕೆಲವೊಮ್ಮೆ ತೀರ ಪ್ರಾಪಂಚಿಕವಾಗಿ ವ್ಯಾವಹಾರಿಕವಾಗಿಬಿಡುತ್ತದೆ. ಆ ವ್ಯವಹಾರಗಳೇ ನೆನೆಪಿನ ಮೌಲ್ಯವನ್ನು ಅಲ್ಲಲ್ಲಿ ನೆನಪಿಸುತ್ತವೆ. ಕೆಲವು ವರ್ಷದಿಂದ ಹಿಂದಿನ ನೆನಪುಗಳೇ ಹೀಗೆ ಬಹಳ ಹಿಂದೆ ಹೋದಂತೆ ಭಾಸವಾದರೆ ಯಕ್ಷಗಾನ ಬದಲಾಗುವ ವೇಗ ಗಾಬರಿಹುಟ್ಟಿಸುತ್ತದೆ. ಹಾಗಾದರೆ ದಶಕ ಶತಕಗಳ ಹಿಂದಿನ ಯಕ್ಷಗಾನ ಹೇಗಿರಬಹುದು? ನಾವು ಕಲೆಗೆ ಹೊಸ ಮೌಲ್ಯವನ್ನು ಕಟ್ಟಿಕೊಡಬಹುದು. ಆದರೆ ಹಳೆಯ ಮೌಲ್ಯದಿಂದ ಅದನ್ನು ಕಳೆಯುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಹಳೆಯ ಮೌಲ್ಯದ ಗಾತ್ರ ಅಷ್ಟು ದೊಡ್ಡದಿರುತ್ತದೆ. ಪರಂಪರೆ ಎನ್ನುವುದೇ ಅದಕ್ಕೆ. ವಿಚಿತ್ರವೆಂದರೆ ನಾವು ಅದನ್ನೇ ಕೆತ್ತಿ ಕೆತ್ತಿ ಗಾತ್ರ ಚಿಕ್ಕದಾಗಿಸಿ ಅದರಿಂದಲೇ ಹೊಸದನ್ನು ಕಳೆಯುವ ಯತ್ನ ಮಾಡುತ್ತೇವೆ ಎನಿಸುತ್ತದೆ. ಯಕ್ಷಗಾನ ಅಷ್ಟೊಂದು ಬದಲಾಗಿ ಹೋಗಿ  ಈಗ ಎಷ್ಟು ಹಳೆಯದು ಎಷ್ಟು ಉಳಿದುಕೊಂಡಿದೆ ಎಂದು ಅಗಾಗ ಬಲಿ ಚಕ್ರವರ್ತಿಯಂತೆ ಹೋಗಿ ನೋಡಬೇಕಾಗಿದೆ.
 
ಸದ್ಯ ಊರಿಗೆ ಹೋಗಿದ್ದಾಗ ಮಿತ್ರರೊಬ್ಬರು ಹೇಳಿದ ಮಾತು  ವಸ್ತುಸ್ಥಿತಿಯ ಸತ್ಯದಂತೆ ಭಾಸವಾಗಿತ್ತು. ಆಟಕ್ಕೆ ಹೋಗಿದ್ದಿರಾ? ಎಂದು ಕೇಳಿದ್ದಕ್ಕೆ ಅವರ ಉತ್ತರ ನನಗೆ ಆಶ್ಚರ್ಯವನ್ನು ತಂದಿಲ್ಲ....!!! ಯಾಕೆ ತಂದಿಲ್ಲ? ಅವರು ಹೇಳಿದರು, ಇಲ್ಲಣ್ಣ ಈಗ ಹೋಗುವುದಕ್ಕೆ ಸಮಯವೂ ಇಲ್ಲ. ಮತ್ತೆ ಇಲ್ಲದ ಸಮಯ ಉಂಟು ಮಾಡಿ ಹೋಗುವಷ್ಟು ಸೆಳೆತವೂ ಉಂಟಾಗುವುದಿಲ್ಲ?  ಏನು ಉಳಿದಿದೆ ಅಂತ ಒಂದು ಸಲ ಇಣುಕಿದಂತೆ,   ವರ್ಷಕ್ಕೆ ಒಮ್ಮೆ ಹೋಗುವುದು ಹೇಗಿದೆ ಅಂತ ನೋಡುವುದು ?. ಆದರೆ  ಏನೂ ಉಳಿದಿಲ್ಲ ಅಂತ ಗಾಬರಿಯಾಗುತ್ತದೆ.  ಆಗ ಬಲಿ ಚಕ್ರವರ್ತಿಯ ಕಥೆ ನೆನಪಾಯಿತು.  ಸಾಕಷ್ಟು ನನ್ನ ಮನಸ್ಥಿತಿಗೆ ಅವರು ಕನ್ನಡಿ ಹಿಡಿದು ನಿಂತ ಹಾಗೆ ಭಾಸವಾಯಿತು.  ಕೇವಲ ಹಾರ್ಮೊನಿಯಂ ಶ್ರುತಿಯೇ ಈ ಕಥೆಗಳಿಗೆ ಸಾಕ್ಷ್ಯವನ್ನು ಒದಗಿಸುತ್ತದೆ ಎಂದಾದರೆ ಘನವಾದ ಸಾಕ್ಷ್ಯಗಳು ಅದೆಷ್ಟು ಸಿಗಲಾರದು?

ಯಕ್ಷಗಾನ ಬದಲಾಗಿದೆ. ಬದಲಾವಣೆಗಳು ಅನಿವಾರ್ಯವೋ ಎಂಬುದನ್ನು ವಿವೇಚಿಸುವುದಕ್ಕೆ ಸಮಯವಿಲ್ಲದಂತೆ ಮಾಡಿ ಬದಲಾಗುತ್ತದೆ. ಯಕ್ಷಗಾನ ಜನಪ್ರಿಯವಾಗಿದೆ. ನೋಡುಗರ ಆಡುಗರ ಸಂಖ್ಯೆ ಹೆಚ್ಚಿದೆ. ಆದರೆ ಏನನ್ನು ನೋಡುತ್ತಾರೆ? ಏನನ್ನು ಆಡುತ್ತಾರೆ ಎಂಬುದನ್ನು ಅರ್ಥವಾಗದ ಪ್ರೇಕ್ಷಕನೂ ಇದರ ನಡುವೆ ಎಡತಾಕಿಕೊಂಡಿರುತ್ತಾನೆ ಎಂಬುದು ಗೊತ್ತೇ ಇರುವುದಿಲ್ಲ.

ಅತ್ಯಂತ ಶ್ರೀಮಂತ ಕಲೆ ಯಕ್ಷಗಾನ. ಕೆಲವೇ ಮಂದಿ ಇದ್ದರೂ ಹಲವು ಮಂದಿ ಇದ್ದರೂ ಹೀಗೆ ಹೊಂದಿಕೊಳ್ಳುವ ಕಲೆ ಮತ್ತೊಂದಿರಲಾರದು. ಬೀದಿಯಲ್ಲೇ ಆಗಲಿ ಮನೆಯ ಪಡಸಾಲೆಯಲ್ಲೇ  ಆಗಲಿ ಯಕ್ಷಗಾನ ನಮಗೆ ಬೇಕಾದಂತೆ ಹೊಂದಿಕೊಳ್ಳುತ್ತದೆ. ಆದರೆ ನಾವು ಅದಕ್ಕೆ ಹೊಂದಿಕೊಳ್ಳದೇ ಅದನ್ನು ಮತ್ತಷ್ಟು ಕೆಡಿಸಿಬಿಡುತ್ತೇವೆ. ಬದಲಾವಣೆ ಅನಿವಾರ್ಯವಾದರೂ ಬದಲಾಗದೇ ಇರುವುದನ್ನು ಬದಲಿಸುವುದು ಮೂರ್ಖತನವಾಗುತ್ತದೆ. ದುರಹಂಕಾರವೆಂದರೆ ಏನೂ ಬದಲಾಗಿಲ್ಲ ಎಂಬ ವೇಷ ತೊಟ್ಟು ಆಷಾಢ ಭೂತಿತನವನ್ನು ತೋರುವುದು.

ಹಲವು ಮಿತ್ರರು ತಮ್ಮ ಯಕ್ಷಗಾನ  ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕಳುಹಿಸಿ ಗೌರವ ಪ್ರೀತಿಯಿಂದ ಕರೆಯುತ್ತಾರೆ.  ಇನ್ನೇಲ್ಲೋ ಇದ್ದರೆ ಬನ್ನಿ ಹೋಗುವ ಎಂದು ಸಹಯಾತ್ರೆಗೆ ಆಹ್ವಾನಿಸುತ್ತಾರೆ. ಹೋಗೋಣವೆಂದು ಅನಿಸಿದರೂ ಆಕರ್ಷಣೆ ಎಂಬುದು ಒಂದು ಇದ್ದರೆ ಹೋಗುವ ಹೆಜ್ಜೆಗಳು ಮುಂದಡಿಯಿಡುತ್ತವೆ.  ಕೊರತೆ ಇರುವುದು ಅಲ್ಲೇ.  ಆದರೂ ಕೆಲವೊಮ್ಮೆ ಸಮಯ ಹೊಂದಿಸಿಕೊಂಡು ಹೋಗುವುದಿದೆ. ಹೀಗೆ ಹೋದನಂತರ ಮಿತ್ರರು ಕೇಳುತ್ತಾರೆ ಹೇಗಿತ್ತು. ಆಗ ಅಹಿತವಾಗಿರುವಂತಹುದು ಹೇಳುವುದಕ್ಕೆ ದಾಕ್ಷಿಣ್ಯವೋ ಮತ್ತೆಂತಹುದೋ ಅಡ್ಡಬಂದರೆ,  ಒಳ್ಳೆಯದು ಹಿತವಾಗಿರುವಂತಹುದು ಸಿಗದೆ ತಡವರಿಸುವಂತಾಗಿ ಆತ್ಮ ಸಾಕ್ಷಿಗೆ ವಿರುದ್ದದ ಪ್ರವೃತ್ತಿ ಎದುರಾಗುತ್ತದೆ.  ಕರೆದವರಿಗೂ ಹಾಗೇ ಬಂದರೆ ಕಾರ್ಯಕ್ರಮದ ಬಗ್ಗೆ ಒಂದಷ್ಟು ವಿಚಾರಗಳು ಅಂತರ್ಜಾಲದಲ್ಲಿ ಹೊರಹಾಕಬಹುದು ಎಂದು ಮನಸ್ಸಿನಲ್ಲಿರುತ್ತದೆ.  ಹಲವು ಸಲ ಕಾರ್ಯಕ್ರಮಕ್ಕೆ ಹೋಗುವಾಗ ಇರುವ ಉತ್ಸಾಹ ಹೊರಟು ಬರುವಾಗ ಇರುವುದಿಲ್ಲ. ಮಾತ್ರವಲ್ಲ ಮನಸ್ಸು ಕಳವಳಿಸಿ ಹೋಗುತ್ತದೆ. ಈ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಹೋಗಿರುವಾಗ ಬಿಟ್ಟು ಬಂದ ಕೆಲಸಗಳನ್ನು ನೆನಸಿ ಮನಸ್ಸು ಮತ್ತಷ್ಟು ಖಿನ್ನವಾಗುತ್ತದೆ. ಇದನ್ನು ನೋಡುವುದಕ್ಕೆ ಅಷ್ಟೆಲ್ಲ ಬಿಟ್ಟು ಬರುವ ಅವಶ್ಯಕತೆ ಇತ್ತೇ?

ನಮ್ಮ ಸಮಯಕ್ಕೆ ಬೆಲೆ ಇರುವ ಪ್ರವೃತ್ತಿಯೇ ನಮ್ಮದಾಗಬೇಕು. ಹಾಗಾಗಿ ಸಮಯವನ್ನು ವ್ಯಯಿಸುವ ಕಾರ್ಯಕ್ರಮಗಳೂ ಸಹ ಯಾವುದಾದರೂ ಒಂದು ರೀತಿಯಲ್ಲಿ ಬೆಲೆಯನ್ನು ತರುವಂತಹುದಾಗಿರಬೇಕು. ಆದರೆ ಹೋದ ಮೇಲೆ ಮನಸ್ಸಿಗೆ ಹಿತವಾಗದೇ ಇದ್ದದ್ದು ಅನುಭವಿಸುವಂತಾಗುವಾಗ ಸಮಯದ ಅಪಮೌಲ್ಯ ಮನಸ್ಸನ್ನು ಇರಿಯುತ್ತದೆ. ಯಾವಾಗಲಾದರೊಮ್ಮೆ ಹೀಗೆ ಅಂತ ಸಮಾಧಾನ ಪಟ್ಟುಕೊಂಡರೂ ಸಹ ಕೆಲವೊಮ್ಮೆ ನಮ್ಮ ಅನುಭವಗಳು ಪ್ರತಿಕ್ರಿಯೆಯಾಗಿ ಹೊರಗೆ ಬರುತ್ತವೆ. ಅದಕ್ಕೆ ವಿಮರ್ಶೆ ಎಂಬ ಅನಧಿಕೃತವಾದ ಸ್ಥಾನವನ್ನೂ ನೀಡುತ್ತಾರೆ.  ವಾಸ್ತವದಲ್ಲಿ ಅದು ವಿಮರ್ಶೆಯಲ್ಲ. ಅನಿಸಿಕೆ ಮಾತ್ರ. ವಿಮರ್ಶೆಯಲ್ಲಿ ಸರಿ ತಪ್ಪುಗಳ ಸಮತೂಕವಿರುತ್ತದೆ. ಅನಿಸಿಕೆಯಲ್ಲಿ ಆ ಪರಿಧಿ ಇರುವುದಿಲ್ಲ. ಅದು ಕೇವಲ ಅಭಿರುಚಿ. ಹೀಗಿದ್ದರೂ ಇಲ್ಲೊಂದು ವಿಚಿತ್ರ ಪ್ರವೃತ್ತಿ ವಿಡಂಬನೆಯನ್ನು ಬಿಂಬಿಸುತ್ತದೆ.

ಹಲವು ಸಲ ಪುಕ್ಕಟೆ ಒಂದಿಷ್ಟು ಪ್ರಚಾರದ ಹಂಬಲದಿಂದ ಕರೆಯುತ್ತಾರೆ. ಪ್ರಚಾರದಂತಹ ಸ್ವಾರ್ಥವಿದ್ದಲ್ಲಿ ಸರಿ ತಪ್ಪುಗಳ ಪರಾಮರ್ಶೆ ಇರುವುದಿಲ್ಲ. ಕೇವಲ ಹೊಗಳುವಿಕೆಯ ನಿರೀಕ್ಷೆಮಾತ್ರವೇ ಇದ್ದು ತಪ್ಪುಗಳನ್ನು ಹೇಳಿದಾಗ ಪ್ರತಿಕೂಲ ಪರಿಣಾಮವನ್ನೂ ಅನುಭವಿಸುವ ಹಾಗಾಗುತ್ತದೆ. ಹಾಗಾಗಿ ಹೋಗಿ ಹೊಗಳು ಭಟ್ಟರ ಉದ್ಯೋಗಮಾಡುವುದಕ್ಕಿಂತ ಹೋಗದಿರುವುದರಲ್ಲೇ ಹೆಚ್ಚು ಸೌಕರ್ಯವನ್ನು ಮನಸ್ಸು ಅನುಭವಿಸುತ್ತದೆ.

ಒಂದು ಸಲ ಓರ್ವ ಮಹಾನುಭಾವರೊಬ್ಬರು ತಮ್ಮ ಕಾರ್ಯಕ್ರಮದ ವೀಡಿಯೋವೊಂದರನ್ನು  ಯೂ ಟ್ಯೂಬ್ ಲಿಂಕ್ ಕೊಟ್ಟು ನೋಡುವಂತೆ ಬಲವಂತ ಪಡಿಸಿದಿದರು. ನೋಡಿ ಅಭಿಪ್ರಾಯ ಸೂಚಿಸುವಂತೆ ಪರಿ ಪರಿಯಾಗಿ ಕೇಳಿಕೊಂಡರು. ನಾನು ನಯವಾಗಿ ನಿರಾಕರಿಸಿದೆ. ಇಲ್ಲ ನನಗೆ ಅದರಲ್ಲಿ ಆಸಕ್ತಿ ಇಲ್ಲ. ಸಮಯವಾದಾಗ ನೋಡುತ್ತೇನೆ ಎಂದರೂ ಕೇಳದೆ ಪದೇ ಪದೇ ನೋಡಿದಿರಾ ಎಂದು ಕೆಣಕುವುದಕ್ಕೆ ತೊಡಗಿದರು. ನಾನು ಅದನ್ನು ನೋಡಿ ಲೇಖನ ಬರೆಯಬಹುದು ಎಂಬ ನಿರೀಕ್ಷೆ ಅವರದ್ದು. ನಾನು ಕೇವಲ ನನ್ನ ಮನಸ್ಸಿಗಾಗಿ ಲೇಖನ ಬರೆಯುತ್ತೇನೆಯೆ ಹೊರತು ಇನ್ನೊಬ್ಬರಿಗಾಗಿ ಅವರಿಚ್ಛೆಯಂತೆ ಬರೆದು ಪ್ರಚಾರಗಿಟ್ಟಿಸುವ ಆಸಕ್ತಿ ಲವ ಲೇಶವನ್ನೂ ಹೊಂದಿಲ್ಲ.  ಎಷ್ಟೊ ಸಲ ಹಲವು ಮಿತ್ರರೂ ಲೇಖನಗಳನ್ನು ಪತ್ರಿಕೆಗೆ ಕಳುಹಿಸುವಂತೆ ಒತ್ತಾಯಿಸಿದರೂ ನಾನು ಯಾವುದೇ ಪ್ರಚಾರದ ಉದ್ದೇಶ ಇರದೇ ಇದ್ದುದರಿಂದ ನನ್ನ ಪರಿಧಿಯಲ್ಲೇ ಅದನ್ನೇ ಬ್ಲಾಗುಗಳಲ್ಲಿ ಪ್ರಕಟಿಸುತ್ತಾ ಅದರಲ್ಲೇ ತುಂಬು ತೃಪ್ತಿಯನ್ನು ಅನುಭವಿಸುತ್ತಿದ್ದೆ. ಆದರೆ ಇಂತಹ ಉದಾತ್ತ ಧ್ಯೇಯಗಳು ಹಲವರಿಗೆ ಅರ್ಥವಾಗುವುದಿಲ್ಲ. ಪ್ರತಿಯೊಂದು ಕಾರ್ಯಗಳಲ್ಲೂ ಮಾಡಿರುವುದಕ್ಕಿಂತ ಅಧಿಕ ಪ್ರಚಾರವನ್ನೇ ಧ್ಯೇಯವಾಗಿಸುವವರಿಗೆ ಬದುಕಿನ ಸರಳ ತತ್ವಗಳು ಅದರ ಅನಿವಾರ್ಯತೆಗಳು ಅರ್ಥವಾಗಲಾರವು. ಪರಿ ಪರಿಯಾಗಿ ಸಲ್ಲಿಸಿದ ಬೇಡಿಕೆಯಲ್ಲಿ ಪ್ರಸ್ತುತ ಈ ಮಹಾನುಭಾವನ ಕಿರಿ ಕಿರಿಯನ್ನು ತಾಳದೇ ದಾಕ್ಷಿಣ್ಯದಿಂದ ಯೂಟ್ಯೂಬ್ ತೆರೆದು ಆತನ ವಿಡೀಯೊವನ್ನು ನೋಡಿದೆ. ಮನಸ್ಸು ಬಹಳಷ್ಟು ತಳಮಳವನ್ನು ಅನುಭವಿಸಿ ನನ್ನ ನಿಜವಾದ ಅನಿಸಿಕೆಯನ್ನು ಲೇಖನ ಬರೆದು ಪ್ರಕಟಿಸಿದೆ.  ನನ್ನ ಲೇಖನ ಬಹಳಷ್ಟು ತೀಕ್ಷ್ಣವಾಗಿಯೇ ಇತ್ತು. ಮನಸ್ಸು ಅನುಭವಿಸಿದ ಹಿಂಸೆ ಅಲ್ಪ ಸ್ವಲ್ಪ ಅದರಲ್ಲಿ ವ್ಯಕ್ತವಾಗಿತ್ತು. ಬೇಡವೆಂದರೆ ಕೇಳದೆ ನನ್ನನ್ನು ಬಲವಂತ ಪಡಿಸಿದ ನೋವು ಒಂದೆಡೆ. ಒಂದೆಡೆಯಿಂದ ಕಲೆಯ ಔನ್ನತ್ಯವನ್ನು ಗೇಲಿ ಮಾಡುವಂತಹ ಪ್ರವೃತ್ತಿ ಮನಸ್ಸು ಬಹಳಷ್ಟು ತೊಂದರೆ ಅನುಭವಿಸುವಂತೆ ಮಾಡಿತ್ತು. ಪರಿಣಾಮ ಅಷ್ಟರವರೆಗೆ ಕೇವಲ ಕಲೆಯ ಬಗ್ಗೆ ಮಾತ್ರ ಸೀಮಿತವಾಗಿ   ನಮ್ಮ ನಡುವೆ ಇರುತ್ತಿದ್ದ ವಿಚಾರ ಬಿಟ್ಟು ಆತ ಏಕಾ ಏಕಿ ವೈಯಕ್ತಿಕ ಅವಹೇಳನಕ್ಕೆ ತೋಡಗಿದ. ಹಾಗಾಗಿ ಅನಾವಶ್ಯಕ ತೊಂದರೆ ಅನುಭವಿಸುವುದರಿಂದ ಇಂತಹ ವಸ್ತುಗಳ ಸಹವಾಸಕ್ಕೆ ಹೋಗದಿರುವುದರಲ್ಲೇ ಹೆಚ್ಚು ಕ್ಷೇಮವಿದೆ.  ಎಷ್ಟು ಸಂಭಾವಿತರೂ ಸಹ ಸತ್ಯವಾದ ವಿಮರ್ಶೆಯ ಕತ್ತಿಗೆ ಕೊರಳೊಡ್ಡುವುದಿಲ್ಲ.

ಯಾವುದೇ ಅಭಿರುಚಿಯಲ್ಲಿ ಪ್ರತಿಕ್ರಿಯೆ ಅನಿವಾರ್ಯ. ಯಾಕೆಂದರೆ ಜೀವಂತಿಗೆಯ ಲಕ್ಷಣವೇ ಪ್ರತ್ರಿಕ್ರಿಯೆ. ಊಟವಾದ ಮೇಲೆ ಉಪ್ಪು ಜಾಸ್ತಿಯಾಯಿತು ಹುಳಿ ಹಿತವಾಗಿತ್ತು. ಸಿಹಿ ಇನ್ನೂ ಬೇಕಿತ್ತು. ಇಂತ ಪ್ರತಿಕ್ರಿಯೆ ನೀಡದೇ ಇದ್ದರೆ ಹಾಕಿದ ಊಟಕ್ಕೆ ಜೀವ ಕಳೆ ಬರುವುದಕ್ಕೆ ಸಾಧ್ಯವೇ. ಮನುಷ್ಯ ಪ್ರಾಣಿಗಿಂತ ಭಿನ್ನವಾಗಬೇಕು. ನಾಯಿಯೋ ಹಸುವೋ ಹಾಕಿದರೆ ಸಿಹಿಯಾದರೂ ಹುಳಿಯಾದರೂ ಅದರ ಪ್ರತಿಕ್ರಿಯೆ ಇರುವುದಿಲ್ಲ.  ಮನುಷ್ಯ ತನ್ನ ಅನುಭವವನ್ನು ಹೋರ ಹಾಕಬೇಕು ಅದುವೇ ಆತನ ಜೀವಂತಿಕೆಯ ಅಸ್ತಿತ್ವದ ಲಕ್ಷಣ. ಆದರೆ ಇಲ್ಲಿ ವಿಮರ್ಶಕ ಎಂಬ ಪಟ್ಟ ಸಿಕ್ಕಿದಹಾಗೆ ಪ್ರತಿಕ್ರಿಯೆಗೆ ಆ ಮಾನದಂಡ ಸಿಗುವಿದಿಲ್ಲ. ಮೊದಲಾಗಿ ಹೀಗೆ ವಿಮರ್ಶಕ ಅನಿಸಿಕೊಳ್ಳುವುದರಲ್ಲೇ ಒಂದು ಅವ್ಯಕ್ತ ಅಸಮಾಧಾನವಿರುತ್ತದೆ. ವ್ಯಂಗ್ಯ ಬೇಡದೇ ಇದ್ದರು ಸುಪ್ತವಾಗಿರುತ್ತದೆ. ಇಷ್ಟೆಲ್ಲ ಕಂಡು ಬರೆಯುವಾಗ ಇಂತಹ ಸೂಕ್ಷ್ಮ ವಿಚಾರಗಳು ಅರ್ಥವಾಗದ್ದೇನಲ್ಲ.

ಹಲವುಸಲ ಅಂತರ್ಜಾಲದಲ್ಲಿ ವೀಡಿಯೋ ನೋಡಿ ವಿಮರ್ಶೆ ಬರೆಯಬೇಡಿ ಎಂಬ ಅಹವಾಲು ಬೇರೆ ಇರುತ್ತದೆ. ಫೆಸ್ ಬುಕ್ ಆಗಲಿ ಮತ್ತೊಂದೇ ಆಗಲಿ ನಮ್ಮ ಕಣ್ಣೆದುರು ಬರುವ ಅವಶ್ಯಕತೆಯಾದರೂ ಏನು? ನಮ್ಮ ಮನೆಯಗಂಗಳಕ್ಕೆ ಬಂದ ಮೆರವಣೆಗೆಯಬಗ್ಗೆ ಅನಿಸಿಕೆ ವ್ಯಕ್ತ ಪಡಿಸಬಾರದು ಎಂದರೆ ಆ   ನ್ಯಾಯದ ಸ್ವರೂಪವೇ ಅರ್ಥವಾಗುವುದಿಲ್ಲ. ಕೇವಲ ಹೊಗಳಿಕೆಯನ್ನಷ್ಟೆ ಬಯಸುವ ಇಂತಹ ಪ್ರವೃತ್ತಿ ಅದು ಮೂರ್ಖತನ ಮತ್ತು ತೀರ ಬಾಲಿಶವಾದ ಪ್ರವೃತ್ತಿಯಾಗಿರುತ್ತದೆ. ಸಾರ್ವಜನಿಕ ಜೀವನವೆಂದರೆ ಅದು ಗಾಜಿನ ಮನೆಯಲ್ಲಿದ್ದಂತೆ. ಇದರ ಬಗ್ಗೆ ಪರಿಜ್ಞಾನವಿರಿಸಿ ಸಾರ್ವಜನಿಕ ವೃತ್ತಿಯನ್ನು ತೊಡಗಿಸಬೇಕು. ಸಾರ್ವಜನಿಕವಾಗಿ ತೆರೆದು ಕೊಂಡಾಗ ಪರ ವಿರೋಧ ಎಲ್ಲವೂ ಸಹಜ. ಹಲವು ಸಲ ಪರವಾಗಿದ್ದ ಪ್ರತಿಕ್ರಿಯಗಳು  ಕಣ್ಣೆದುರು ಬಾರದೇ ಹಾಗೇ ಉಳಿಯುತ್ತವೆ. ಹಾಗೇಯೇ ವಿರೋಧವಾಗಿದ್ದ ಪ್ರತಿಕಿಯೆಗಳೂ ಸಹ ಬೇಡದೇ ಇದ್ದರೂ ಕಣ್ಣೆದುರಿಗೆ ಬಂದು ಬಿಡುತ್ತವೆ. ಪರ ವಿರೋಧ ಅವಿಭಾಜ್ಯವಾಗಿ ಸ್ವೀಕರಿಸುವಾಗ  ಯಾವ ತೊಂದರೆಯೂ ಇರುವುದಿಲ್ಲ. ಮಾತ್ರವಲ್ಲ ಕಲಾವಿದನಾದವನು ಮೊದಲು ಅಳವಡಿಸಿಕೊಳ್ಳಬೇಕಾದ ಗುಣವಿದು.     ಈಗ ನನ್ನ ಲೇಖನಗಳೇ ಆದರೂ ಸಹ ಯಾರೂ ಹೊಗಳಿದರೂ ತೆಗಳಿದರೂ ನನ್ನ ಪ್ರತಿಕ್ರಿಯೇ ಒಂದೇ. ಯಾಕೆಂದರೆ ಅದರ ಇತಿಮಿತಿಗಳು ಅದು ನನಗಷ್ಟೇ ಸೀಮಿತವಾಗಿರುತ್ತವೆ.   ನನಗೆ ತಿಳಿಯದೇ ಅದನ್ನು ವಿರೋಧಿಸುವವರೂ ಇರಬಹುದು. ಸಾರ್ವಜನಿಕವಾಗಿ ಅದು ಪ್ರಕಟವಾದಾಗ ಇದೆಲ್ಲ ಸಹಜ. ಹಾಗಿರುವಾಗ ಪರವಾಗಿ ಹೊಗಳಿ ಬರೆದಾಗ ಮಾತ್ರ  ಮುಖ ಅಗಲ ಮಾಡಿ ಸ್ವೀಕರಿಸುವ ಮನೋಭಾವ ಅವರಲ್ಲಿರುವ ಸಂಕುಚಿತ ಬುದ್ದಿಯನ್ನು ತೋರಿಸುತ್ತದೆ.

ವ್ಯಕ್ತಿ ಪರವಾದ ಆಕ್ಷೇಪ ದೂರುಗಳಿದ್ದರೆ ಖಾಸಗಿಯಾಗಿ ವೈಯಕ್ತಿಕವಾಗಿ  ಕಂಡು ಹೇಳಬೇಕು. ಯಕ್ಷಗಾನದ ಬಗ್ಗೆ  ಇರುವುದಿದ್ದರೆ ಅದನ್ನು ಸಾರ್ವಜನಿಕವಾಗಿ ಹೇಳಿದರೂ ಪರವಾಗಿಲ್ಲ. ಇದೊಂದು ವಿಚಿತ್ರ ನ್ಯಾಯ. ಯಕ್ಷಗಾನದ ಮಾನ  ಸಾರ್ವಜನಿಕವಾಗಿ ಹರಾಜಾದರೂ ಪರವಾಗಿಲ್ಲ ವ್ಯಯಕ್ತಿಕವಾಗಿದ್ದದ್ದು ಅದನ್ನು ಖಾಸಗಿಯಾಗಿ ರಹಸ್ಯವಾಗಿಯೇ ಹೇಳಬೇಕು.  ಮಳೆಗೆ ಮನೆಯ ಸೂರು ಸೋರುತ್ತಿದ್ದರೂ ಒಳಗೆ ಹವಾನಿಯಂತ್ರಿತ ಜೋಡಿಸಿ ದೊಡ್ದ ಟೀವಿಯನ್ನು ಹಾಕಿ ನೋಡಿದಂತೆ. ಮನೆ ದುರಸ್ತಿಗೊಳಿಸುವುದಕ್ಕೆ ಹಣವಿಲ್ಲದವನಿಗೆ ಬೇರೆಲ್ಲಾ ಐಷಾರಾಮಿ ವಸ್ತುವನ್ನು ಅನುಭವಿಸುವ ತವಕ. ಕಲೆ ಉಳಿದರೆ ಕಲಾವಿದನಿಗೆ ಉಳಿಗಾಲ ಎಂಬ ಸಾಮಾನ್ಯ ಜ್ಞಾನದ ಕೊರತೆ.  ಇದನ್ನು ವಿಶ್ಲೇಷಿಸುವುದಕ್ಕೆ ಘನವಿದ್ವತ್ತಿನ ಅಗತ್ಯವಿಲ್ಲ. ಬದುಕಿನ ಸಾಮಾನ್ಯ ಜ್ಞಾನ ಸಾಕು.  ವೈಯಕ್ತಿಕವಾದ ತಪ್ಪುಗಳನ್ನು ವ್ಯಕ್ತಿ ಗತವಾಗಿ ಅರಸಿ ಹೇಳುವಷ್ಟು ಕೆಲಸವನ್ನು ಪ್ರೇಕ್ಷಕನಿಗೆ ಕೊಡಬೇಕೆ? ತಮ್ಮ ತಪ್ಪುಗಳು ಹೇಗೆ ಸಿಕ್ಕಿದರೂ ಹೆಕ್ಕಿಕೊಳ್ಳುವವನಿಗೆ ತಿದ್ದುವುದಕ್ಕೆ ಹಲವು ಅವಕಾಶಗಳು ಸಿಗುತ್ತವೆ. ಸಾರ್ವಜನಿಕವಾಗಿ ಪ್ರಾಮಾಣಿಕನಾಗಿ ಇರುವವನು ಯಾವ ಆಕ್ಷೇಪಗಳಿಗೂ ತಲ್ಲಣಿಸುವುದಿಲ್ಲ. ತಪುಗಳನ್ನು ಆಕ್ಷೇಪಗಳನ್ನು ಮುಕ್ತಮನಸ್ಸಿನಿಂದ ಸ್ವೀಕರಿಸುವಾಗ ಸಿಗುವ ನೆಮ್ಮದಿ ಅದನ್ನು ಅಡಗಿಸಿಟ್ಟು ತೋರಿಕೆಯ ಮುಖವಾಡದಲ್ಲಿ ಸಿಗುವುದಿಲ್ಲ. ಅದು ಮತ್ತಷ್ಟು ಅಧೀರನನ್ನಾಗಿಸಿ ಭಯಭೀತರನ್ನಾಗುವಂತ ಮಾಡುತ್ತದೆ.

ಮನುಷ್ಯ ಸಾರ್ವಜನಿಕ ಜೀವನದಲ್ಲಿ ಪ್ರವೃತ್ತಿಯನ್ನು ತೋರಿಸುವುದು ಆಸಕ್ತಿಯನ್ನು ತೋರಿಸುವುದು ಖಾಸಗೀ ಜೀವನದ ಏಕತಾನತೆಯನ್ನೋ ಬೇಸರವನ್ನೋ ಮರೆಸುವುದಕ್ಕೆ.  ತಲೆಯಲ್ಲಿ ಬೇಕಾದಷ್ಟು ಮಂಡೆ ಬಿಸಿಗಳು ಇರುವಾಗ ಒಂದಷ್ಟು ನಿರಾಳವಾಗುವ  ಎಂದು ಇಂತಹ ಸಾರ್ವಜನಿಕ ಕಾರ್ಯಕ್ರಮ,  ಸಾರ್ವಜನಿಕ ಚಟುವಟಿಕೆಗಳತ್ತ ಮನಸ್ಸು ಮಾಡುವುದು. ಇಲ್ಲಿ ಬಂದಾಗ ಬೇರೊಂದು ಬಿಸಿ ಮನಸ್ಸಿಗೆ ತಟ್ಟಿದರೆ ಮತ್ತೆ ಇವುಗಳ ಅವಶ್ಯಕತೆಯಾದರೂ ಏನು? ಕಾರ್ಯಕ್ರಮ ಮುಗಿಸಿಯೋ ಅರ್ಧದಲ್ಲೋ ಎದ್ದು ಬರುವಾಗ ಈ ಎಲ್ಲ ಯೋಚನೆಗಳು ಮನಸ್ಸನ್ನು ವ್ಯಗ್ರವಾಗಿಸುತ್ತವೆ. ಕೆಲವು ಸಲ ಅದು ಪ್ರತಿಕ್ರಿಯೆಯಾಗಿ ಲೇಖನಗಳಲ್ಲಿ ಹೊರ ಹೊಮ್ಮಿಬಿಡುತ್ತವೆ.  ಅದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಿ ಇರುವ ನೆಮ್ಮದಿ ಮತ್ತಷ್ಟು ಕೆಡಿಸಿಕೊಳ್ಳುವ ಪ್ರಮೇಯವೇ ಹೆಚ್ಚು.  ಹಾಗಾಗಿ ಯಕ್ಷಗಾನ ಯಾವಾಗಲಾದರೋ ಒಮ್ಮೆ ನೋಡಿ ಬಿಡುವ ಸಾಧನವಾಗಿ ಬಲಿ ಚಕ್ರವರ್ತಿಯಂತೆ ಈಗ ಹೇಗಿದೆ ಎಂದು ನೋಡುವ ತವಕವಷ್ಟೇ ಉಳಿದುಕೊಂಡಿದೆ.  



Thursday, July 5, 2018

ನಂಬಿಯಾರರು ಮಾಡಿಸಿದ ಸತ್ಯದರ್ಶನ




ಯಕ್ಷಗಾನ ಕಲಾವಿದ ಅನ್ಯ ಕಲೆಗಳ ದಾಸ್ಯಕ್ಕೆ ಒಳಗಾಗಿರುವನೆ? ಅಥವಾ ಯಕ್ಷಗಾನ ದಾಸ್ಯಕ್ಕೆ ತಳ್ಳಲ್ಪಡುತ್ತಿದೆಯೇ? ಹೀಗೊಂದು ಭಾವನೆ ಅನುಮಾನ ಮೂಡುತ್ತದೆ. ಕೇಳುವುದಕ್ಕೆ ನೋವಾದರೂ ಇದು ವಾಸ್ತವ ಎಂದನಿಸುತ್ತದೆ.  ಇತ್ತೀಚೆಗೆ ಯಕ್ಷಗಾನ ಚಿಂತಕ ಡಾ|  ಶ್ರೀ ರಾಘವ ನಂಬಿಯಾರರ ಸಂದರ್ಶನಗಳನ್ನು ನೋಡುವಾಗ ಅನಿಸಿದ್ದು. ಹೀಗೆ ಅನ್ನಿಸುವುದಿದ್ದರೆ ಅದು ವಿಷಾದನೀಯ ಎಂದೇ ಹೇಳಬೇಕಾಗುತ್ತದೆ.  ನಂಬಿಯಾರ ಪ್ರತಿಪಾದನೆಗಳ ಸತ್ಯದರ್ಶನವನ್ನು ಕೇಳುವಾಗ ದ್ಯೂತದಲ್ಲಿ ಸೋತು ತನ್ನದೆಲ್ಲವನ್ನೂ ಕಳೆದುಕೊಂಡ  ನಳ ಮಹಾರಾಜನಂತೆ ಯಾವುದೋ ಗ್ರಹಬಾಧೆ ಶುರುವಾದ ಹಾಗೆ ಅನ್ನಿಸುತ್ತದೆ. ಯಾಕೆಂದರೆ ಯಕ್ಷಗಾನ ಚಕ್ರವರ್ತಿ ನಳ ಮಹಾರಾಜನಂತೆ ಸರ್ವ ಸುಂದರ ಕಲೆ. ಇಂತಹ ಕಲೆಗೆ ಆಮದಾಗುತ್ತಿರುವ ಸರಕುಗಳನ್ನು ಕಂಡಾಗ ನಿಜಕ್ಕೂ ಯಕ್ಷಗಾನ ಬಡವಾಗಿದೆ ಎಂದನಿಸುವುದಲ್ಲ. ನಳ ಮಹಾರಾಜನ ಅವಸ್ಥೆಯೇ ಬಂದೊದಗಿದಂತೆ ಅನ್ನಿಸುತ್ತದೆ.

 ವಾಸ್ತವದಲ್ಲಿ ಯಕ್ಷಗಾನ ಕಲೆಯ ಬಡತನವಲ್ಲ. ಕಲೆಯ ಬೆಗೆಗಿನ ಕೀಳರಿಮೆಯೇ ಇದನ್ನು ನಿರ್ಣಯಿಸುತ್ತದೆ. ಇಲ್ಲಿ ದಾಸ್ಯ ಎಂದು ತೀಕ್ಷ್ಣವಾಗಿ ಹೇಳುವುದಕ್ಕೆ ಕಾರಣವಿದೆ. ಇದೇ ಸಂದರ್ಶನದಲ್ಲಿ ನಂಬಿಯಾರರು ಸ್ವಾತಂತ್ರ ಸಮರ ಮತ್ತದರ ಮಹತ್ವದ ಕುರಿತಾಗಿ ಉಲ್ಲೇಖಿಸುತ್ತಾರೆ. ಒಂದು ಸನಾತನ ಜೀವನ ಕ್ರಮವಿದ್ದ ಭಾರತದಲ್ಲಿ ಆಂಗ್ಲ ಧಾಳಿಯಿಂದ ಆ ಪರಂಪರೆ ಹೇಗೆ ಭಾಧೆಗೆ ಒಳಗಾಯಿತು. ಇದರಿಂದ ಸನಾತನ ಪರಂಪರೆಯನ್ನು ಒತ್ತೆ ಇಟ್ಟು ದಾಸ್ಯದ ಜೀವನ ನಡೆಸಬೇಕಾಯಿತು. ಇದುವೇ ಸ್ವಾತಂತ್ರ್ಯ ಸಮರದ ಮೂಲ ಹೇತು. ಇಂದು ಆಗುತ್ತಿರುವುದು ಅದೇ ಅಲ್ಲವೆ? ಸತ್ಯ ಸಮತ್ವ ಸ್ವಾತಂತ್ರ್ಯ ಇವು ಮೂರೂ ಪರಸ್ಪರ ಸಂಬಂಧಿಗಳು. ಇಂದು ಪರಂಪರೆಯ ಸತ್ಯವನ್ನು ಬಿಟ್ಟು ಸಮತ್ವವನ್ನು ಬಿಟ್ಟು ಅದೇ ದಾಸ್ಯದ ಸುಳಿಗೆ ಸಿಲುಕುತ್ತಿದ್ದೇವೆ.


ಯಕ್ಷಗಾನದ ಸಾಮಾನ್ಯ ಪ್ರೇಕ್ಷಕ ಲಘುವಾಗಿ  ಅವಲೋಕನ ಮಾಡಿದರೂ ಯಕ್ಷಗಾನ ಇತ್ತೀಚೆಗಿನ ದಶಕಗಳಲ್ಲಿ ಬದಲಾದ ಪರಿಯನ್ನು ಅರ್ಥೈಸಿಕೊಳ್ಳಬಹುದು. ಆದರೂ ಹೀಗೆಯೇ  ಬದಲಾಗಿದೆ ಎಂದು ನಿರ್ಣಯಿಸುವುದು ಕಷ್ಟವಾಗುತ್ತದೆ. ಮೇಲಿಂದ ಮೇಲೆ ನೋಡಿದರೆ ಬದಲಾವಣೆ ಅಷ್ಟೇನೂ ಗಂಭೀರವಲ್ಲ ಅಂತನ್ನಿಸಿದರೂ ಒಂದು ಕೊರತೆ ಅನುಭವಕ್ಕೆ ಬರುತ್ತದೆ. ಆ  ಸೆಳೆತದ ಕೊರತೆ ಏನೆಂದು ಗುರುತಿಸುವುದೇ ಕಷ್ಟವಾಗುತ್ತದೆ. ಅದೇ ಕಾರಣಕ್ಕೆ ನಂಬಿಯಾರರ ಮಾತುಕತೆಯನ್ನು ಸತ್ಯದರ್ಶನ ಅಂತ ಉಲ್ಲೇಖಿಸುತ್ತಿರುವುದು. ಬಹಳ ಸರಳವಾಗಿ ಅಷ್ಟೇ ಮಾರ್ಮಿಕವಾಗಿ ವಿವರಿಸಿದ್ದಾರೆ.  ಮಾರ್ಮಿಕತೆ ಇರುವುದೇ ಅಲ್ಲಿ. ಕಳೆದುಕೊಂಡದ್ದು ಏನು ? ಕಳೆದುಕೊಂಡ ಆಯಾಮ ಅದೆಂತಹುದು? ಇದು ಅರ್ಥವಾಗಬೇಕಾದರೆ ನಂಬಿಯಾರರ ವಿಚಾರಗಳನ್ನು ಅವರದೇ ಮಾತುಗಳಲ್ಲಿ ಕೇಳಬೇಕು. ನಮ್ಮ ಅನುಭವದ ಕಾರಣದ ರೂಪ ಹೊಳಹು ತಿಳಿಯಲು ನಂಬಿಯಾರರ ವಿಚಾರಗಳನ್ನು ತಿಳಿದರೆ ಸಾಕು. ಮುಖ್ಯವಾಗಿ ಇದು ನನ್ನ ಆಕರ್ಷಿಸಿದ ವಿಷಯಗಳು. ಅಲ್ಲಿಂದ ನಂತರ ನಾನೇನು ಅನುಭವಿಸುತ್ತಿದ್ದೇನೆ? ಅದರ ಕಾರಣ ಏನು ಎಂದು ಅರಿವಿಗೆ ಬಂದದ್ದು ಇದನ್ನು ಕೇಳಿದಾಗಲೇ. ಯಕ್ಷಗಾನದ ಪೂರ್ಣಾನುಭವ ಸಾಧ್ಯವಾಗುವುದಿಲ್ಲ ಯಾಕೆ? ಇದು ಸಾಮಾನ್ಯ ಪ್ರೇಕ್ಷಕನಾದ ನನಗೆ ತಕ್ಕ ಮಟ್ಟಿಗೆ ಮನವರಿಕೆಯಾಯಿತು.

ಎರಡು ಭಾಗಗಳಲ್ಲಿರುವ ಸಂದರ್ಶನ ಹೇಳುವುದಕ್ಕಿಂತಲೂ ಮಾತು ಕತೆ ಎನ್ನುವುದೇ ಸೂಕ್ತ. ಅದಕ್ಕಿಂತ ಮೇಲೆ ಇದನ್ನು ನಂಬಿಯಾರರ ಪ್ರವಚನ ಎನ್ನಬಹುದು. ಮೊದಲ ಹಂತದಲ್ಲಿ ಯಕ್ಷಗಾನ ಅಂದರೆ ಏನು? ಯಕ್ಷಗಾನ ಹಿಮ್ಮೇಳದ ಬಗ್ಗೆ ಹೇಳುತ್ತಾ  ಪದ ಅಂದರೆ ಹಾಡುಗಾರಿಕೆ ಅದು ಹೇಗಿರಬೇಕು? ಪದಗಳು ರಾಗ ಮತ್ತು ತಾಳಕ್ಕೆ ನಿಬದ್ದವಾಗಿರುತ್ತವೆ. ಅವುಗಳು ಛಂದೋಬದ್ದವಾಗಿರುತ್ತವೆ. ಹೀಗೆ ಇದ್ದಾಗ ಅವುಗಳು ಅರ್ಥವನ್ನು ಭಾವವನ್ನೂ ಉಳಿಸಿಕೊಳ್ಳುತ್ತವೆ. ಪದದ ಮೂಲ ಛಂದಸ್ಸು ಏನಿದೆ ಅದರಲ್ಲೇ ಭಾಗವತ ಹಾಡುವಂತಾಗಬೇಕು. ಇಂದು ಅದು ಬದಲಾವಣೆಯಗುವುದಕ್ಕೆ ಕಾರಣ ಬದಲಾಗುತ್ತಿರುವ ಗುರು ಪರಂಪರೆ. ಒಂದು ಶುದ್ದ ಪರಂಪರೆಯಲ್ಲಿ ಮೌಖಿಕವಾಗಿ ಇದು ಶಿಷ್ಯನಿಗೆ ರವಾನಿಸಲ್ಪಟ್ಟರೆ ಈಗ ಎಲ್ಲವೂ ಪುಸ್ತಕ ಅಥವಾ ಬರಹ ರೂಪದಲ್ಲಿರುತ್ತವೆ. ಇದರಿಂದ ಅದರಲ್ಲಿ ಶ್ರದ್ದೆ ಪ್ರಾಮಾಣಿಕತೆಯ ಮಟ್ಟ ಕುಸಿಯುತ್ತಿದೆ. ಇಂದು ಯಕ್ಷಗಾನ ಪದಗಳನ್ನು ಹಾಡುವರೀತಿ ಅವುಗಳನ್ನು ಬಳಸಿಕೊಳ್ಳುವ ರೀತಿ ನೋಡಿದರೆ ಈ ಮಾತು ಎಷ್ಟು ಸತ್ಯವಾದದ್ದು ಎಂದು ಮನವರಿಕೆಯಾಗುತ್ತದೆ. ಹಾಗೆ ಮನವರಿಕೆಯಾಗಬೇಕಾದರೆ ಹಳೆಯ ಪರಂಪರೆ ಹೇಗಿತ್ತು ಎಂದು ತಿಳಿದಿರಬೇಡವೇ? ಅದಕ್ಕೆ ಕಾರಣ ಸಂಪನ್ಮೂಲದ ಕೊರತೆ. ಇಂದು ಯಕ್ಷಗಾನ ಸಂಪನ್ಮೂಲದ ಕೊರತೆಯನ್ನು ದಯನೀಯವಾಗಿ ಅನುಭವಿಸುತ್ತಿದೆ.   ಹೀಗಾಗಿಯೇ ಮೇಲೆ ಹೇಳಿದ ದಾಸ್ಯ ಎಂಬುದನ್ನು ಅರ್ಥೈಸುವುದಕ್ಕೆ ಸಾಧ್ಯವಾಗಬಹುದು.

ಈ ಸಂವಾದದಲ್ಲಿ ಮನದಾಳದ ಮಾತುಗಳಳನ್ನು ಹೇಳಿದರು ಅದು ಯಕ್ಷಗಾನದ ಅಂತರಂಗದ ಮಾತಿನಂತೆ ಭಾಸವಾಗುತ್ತದೆ. ಅದಕ್ಕೆ ಕಾರಣ ನಂಬಿಯಾರರು ಯಕ್ಷಗಾನದ ಬಗ್ಗೆ ಇರಿಸಿದ ಆಸಕ್ತಿ ಮಾತ್ರವಲ್ಲ ಅದರ ಅಂಗೋಪಾಂಗಗಳ  ಸಮಗ್ರ ಅಧ್ಯಯನ ಮತ್ತು ಸಂಶೋಧನೆಯ ಧ್ವನಿ ಅಲ್ಲಿದೆ
.
ಯಕ್ಷಗಾನ ಪದಗಳ ಛಂದಸ್ಸು ರಾಗ ತಾಳಗಳು ಭಾಗವತನಂತೆ ಪ್ರಸಂಗ ಕರ್ತನಿಗೂ ಅದರ ಪರಿಜ್ಞಾನವಿರಬೇಕಾದದ್ದು ಅನಿವಾರ್ಯ. ಆದರೆ ಇಂದು ಅದಾವುದೂ ಇಬ್ಬರ ನಿಯಂತ್ರಣದಲ್ಲೂ ಇರುವುದಿಲ್ಲ. ಒಂದು ಪದ ಹಾಡಿದ ರೀತಿ ಬಳಸಿಕೊಂಡ ರೀತಿ ಜನಪ್ರಿಯವಾದರೆ ಅದು ಇನ್ನಾವುದೋ ಪ್ರಸಂಗಕ್ಕೆ ಯಥಾವತ್ತಾಗಿ ಬಳಕೆಯಾಗುತ್ತದೆ. ಇದಕ್ಕೊಂದು ಉದಾಹರಣೆ ದೇವೆಂದ್ರನ ಒಡ್ಡೋಲಗ. ಪ್ರಸಂಗ ಯಾವುದೇ ಆಗಿರಲಿ ದೇವೇಂದ್ರನ ಒಡ್ಡೋಲಗಕ್ಕಿರುವ ಪದ ಅದೊಂದೇ.ಯಾಕೆಂದರೆ ಭಾಗವತನಿಗೆ ಅದರ ಜ್ಞಾನ ಇದೆಯೋ ಅಲ್ಲ ಕಲಾವಿದ ತಂತ್ರಗಳೋ ಅಂತೂ ಇಂತದ್ದೊಂದು ಪರಂಪರೆ ಬೆಳೆದು ಅದೇ ಪರಂಪರೆಯಾಗಿಹೋಗಿದೆ. ಈ ಏಕತಾನತೆಯಿಂದಲೋ ಏನೋ ಇಂದು ಅಸುರೀ ಪಾತ್ರಗಳು ಜನಪ್ರಿಯವಾಗಿ ವಿಂಜ್ರಭಿಸಲ್ಪಡುವುದು.

ಯಕ್ಷಗಾನ ಹಾಡುಗಾರಿಕೆ ಅಥವಾ ಭಾಗವತಿಕೆ ಎಂದು ಹೇಳಿದಾಕ್ಷಣ ಇಂದು ಗಮನಕ್ಕೆ ಬರುವುದು. ಸಂಗೀತ. ವಿವಿಧ ರಾಗ ತಾಳಗಳ ತಂತ್ರಗಳು. ಆದರೆ ಯಕ್ಷಗಾನದಲ್ಲಿ ಕಛೇರಿಯ ಸಂಗೀತ ಅವಶ್ಯಕತೆಯಿಲ್ಲ. ಅಲ್ಲಿರುವುದು  ಕೇವಲ ರಂಗ ಸಂಗೀತ. ಸಂಗೀತಕ್ಕೊಸ್ಕರ ತಾಳವಲ್ಲ. ತಾಳದೊಂದಿಗೆ ಸಂಗೀತವಿರಬೇಕು. ಯಾಕೆಂದರೆ ತಾಳದೊಂದಿಗೆ ಛಂದಸ್ಸು ಇರುತ್ತದೆ. ಛಂದಸ್ಸನ್ನು ಬೆಸೆದುಕೊಂಡು ಭಾವವಿರುತ್ತದೆ. ಹಾಗಾಗಿ ಸಂಗೀತ ಪ್ರಧಾನವಾದಾಗ ಇದೆಲ್ಲ ಮರೆಯಾಗಿ ಅಭಾಸವಾಗುತ್ತದೆ. ರಂಗ ನಿಯಮದ ವಿಡಂಬನೆಯಾಗುತ್ತದೆ. ಭಾಗವತ ಸಂಗೀತದ ಪ್ರಸ್ತಾರದ ಬಗ್ಗೆ ಯೋಚಿಸುತ್ತಾನೆ. ಛಂದಸ್ಸಿನ ಬಗ್ಗೆ ಯೋಚಿಸುವುದಿಲ್ಲ. ಯಾವುದೇ ಸಂಗೀತದಲ್ಲಿ ಸಾಹಿತ್ಯಕ್ಕೆ ಪ್ರಾಧಾನ್ಯತೆ ಕಡಿಮೆ. ರಾಗ ಲಯ ಪ್ರಸ್ತಾರ ಇದೇ ಪ್ರಧಾನವಾಗುತ್ತದೆ. ಯಕ್ಷಗಾನ ಭಾಗವತಿಕೆಯ ಜೀವಾಳವಿರುವುದೇ ರಂಗ ಸಂಗೀತ ಕ್ರಮದಲ್ಲಿ. ಅಲ್ಲಿ ಸಾಹಿತ್ಯ,  ಛಂದಸ್ಸು ಪ್ರಧಾನವಾಗುತ್ತದೆ.

ಯಕ್ಷಗಾನ ಶಾಸ್ತ್ರಿಯ ಕಲೆಯಲ್ಲ. ಹೀಗೆ ಹೇಳಬಹುದು. ಅದರ ಸತ್ಯಾಸತ್ಯತೆಯ ವಿಶ್ಲೇಷಣೆಗಿಂತ ಯಕ್ಷಗಾನ ಪದಗಳ ರಾಗ ತಾಳ ಛಂದಸ್ಸು ಅವುಗಳು ಬೆಳೆದು ಬಂದರೀತಿ ಶುದ್ದ ಶಾಸ್ತ್ರೀಯತೆಯ ಅನುಭವವನ್ನು ಕೊಡುವುದಿಲ್ಲವೇ? ಇಲ್ಲಿ ಯಕ್ಷಗಾನ ಶೈಲಿಯಲ್ಲಿ ಬಳಕೆಯಾಗುವ ಸಂಗೀತದ ರಾಗಗಳು ನರ್ತನ ಶೈಲಿಗಳು ಯಕ್ಷಗಾನಕ್ಕಾಗುವಾಗ ಬೇರೆಯೇ ರೂಪವನ್ನು ಪಡೆದುಕೊಂಡಿದೆ.

ನಂಬಿಯಾರರು ಹಲವು ವಿಚಾರಗಳನ್ನು ಸರಳವಾಗಿ ವಿವರಿಸುತ್ತಾ ಚಿಂತನೆಯ ಹೊಸ ಬಿತ್ತನೆಯನ್ನು ಬಿತ್ತುತ್ತಾರೆ ಎಂದನಿಸುತ್ತದೆ. ರಾಮಾಯಣದ ಕತ ತಿಳಿದಿದ್ದರೂ ಯಕ್ಷಗಾನವನ್ನೋ ನಾಟಕವನ್ನೋ ನೋಡುವ ಕುತೂಹಲವೇಕೆ? ಅಲ್ಲಿ ಕಥೆಯನ್ನು ತಿಳಿಯುವ ಉದ್ದೇಶವಿರುವುದಿಲ್ಲ. ಕಾದಂಬರಿಯನ್ನೋ ಕಥೆಯನ್ನೋ ಸಿನಿಮಾ ಅಥವಾ ನಾಟಕವಾಗಿ ರಂಗದ ಮೇಲೆ ತರುವಾಗ ಮೂಲ ಕಥೆಯಂತೆ ಅಲ್ಲಿ ಚಿತ್ರಿತವಾಗುತ್ತದೆಯೇ? ಇಲ್ಲ. ರಂಗಕ್ಕನುಸಾರವಾಗಿ ಅಲ್ಲಿ ಬದಲಾವಣೆ ಕಾಣಬೇಕಾಗುತ್ತದೆ. ಅಲ್ಲಿ ಅಸ್ವಾದಿಸಬಲ್ಲ ರಸಾನುಭವವೇ ಪ್ರಧಾನವಾಗುತ್ತದೆ. ಕಥೆ ಓದುವಾಗ ಆಗುವ ರಸೋತ್ಪತ್ತಿಗೂ ಕಥೆ ರಂಗದ ಮೇಲೆ ಕಾಣುವಾಗ ಆಗುವ ರಸೋತ್ಪತ್ತಿಗೂ ವೆತ್ಯಾಸ ಇರುತ್ತದೆ. ಇದು ಒಂದು ಕಲೆ ಮತ್ತು ಅದರ ಆಸ್ವಾದನೆ ಹೇಗಿರುತ್ತದೆ ಎಂಬುದರ ಅಧ್ಯಯನದ ವಿಶ್ಲೇಶಣೆ.

ನಂಬಿಯಾರರ ವಿಚಾರಧಾರೆಗಳನ್ನು ಕೇಳಿದಾಗ ಹಲವು ವಿಚಾರಗಳಲ್ಲಿ ಅವರು ಕಲೆಯನ್ನು ಕಂಡುಕೊಂಡ ರೀತಿ ಅದರ ಆಳವಾದ ಜ್ಜಾನ ಅರಿವಿಗೆ ಬರುತ್ತದೆ. ಪ್ರತಿಯೊಂದು ವಿಚಾರಗಳಿಗೂ ತಾತ್ವಿಕವಾದ ತರ್ಕಬದ್ಧ ವಿವರಣೆಯನ್ನು ನೀಡುತ್ತಾರೆ. ಯಕ್ಷಗಾನದಲ್ಲಿ ಕೇವಲ ಪರಂಪರೆ ಎಂದು ಹೇಳಿ ಅಡ್ಡಗೋಡೆಯ ದೀಪ ಉರಿಸುವುದಲ್ಲ. ಪರಂಪರೆಯಲ್ಲಿ ಅದು ಯಾಕಾಗಿ ಬಳಕೆ ಬಂತು?  ಅದರ ನಿಜವಾದ ಕಾರಣಗಳೇನು? ಇದನ್ನೆಲ್ಲ ವಿವರಿಸುವಾಗ ಯಕ್ಷಗಾನವನ್ನು ನಾವು ಕಾಣಬೇಕಾದ ದೃಷ್ಟಿಕೋನವೇ ಬದಲಾಗಿಬಿಡುತ್ತದೆ. ಅದು ಬದಲಾಗರ್ರ್ಬೇಕಾದ ಅನಿವಾರ್ಯತೆಯೂ ಇದೆ. ಯಾಕೆಂದರೆ ಇಲ್ಲಿ ಪ್ರತಿಪಾದಿತವಾಗುವ ವಿಚಾರಗಳು ಅಷ್ಟೂ ಆಳವಾದ ಅಧ್ಯಯನದಿಂದ ಹುಟ್ಟಿದವುಗಳು.

ಯಕ್ಷಗಾನದಲ್ಲಿ ಹಲವು ವೇಷಗಳು, ಅದು ದೇವೆಂದ್ರನೋ ಅರ್ಜುನನೋ ರಾಮನೋ ಇನ್ನಾವುದೆ ಪೌರಾಣಿಕ ಪಾತ್ರಗಳಿಗೆ ಒಂದು ಚೌಕಟ್ಟು ಇರುತ್ತದೆ. ಅದರ ಪ್ರವೇಶ ಕುಣಿತ ಎಲ್ಲವೂ ಒಂದು ನಿಯಮದ ಆಧೀನದಲ್ಲಿರುತ್ತದೆ. ನಿಯಮಮದಂತೆ ರಂಗವೇರಿ ನಿಯಮವನ್ನು ಅನುಸರಿಸಿದಾಗ ಮಾತ್ರ ಅದರ ಪಾತ್ರೋಚಿತ ಆಶಯ ಯಕ್ಷಗಾನದೊಂದಿಗೆ ಅದು ವ್ಯಕ್ತವಾಗುತ್ತದೆ.  ಅದನ್ನು ಬೇರೆ ಕಲಾ ರೂಪದಲ್ಲಿ ತೋರಿಸುವುದಕ್ಕೆ ಹೋದರೆ ಭರತ ನಾಟ್ಯವೋ ನಾಟಕವೋ ಮತ್ತೊಂದೋ ಮಗುದೊಂದೊ ರೂಪದಲ್ಲಿ ತೋರುವುದಕ್ಕೆ ಹೋದಾಗ ರಂಗದಲ್ಲೂ ಅದು ಯಕ್ಷಗಾನದಿಂದ ಪ್ರತ್ಯೇಕವಾಗಿ ಉಳಿಯುತ್ತದೆ. ಅದು ಯಕ್ಷಗಾನವಾಗುವುದಿಲ್ಲ. ಪರಂಪರೆ ಸಹಾಯಕ್ಕೆ ಬರುವುದು ಇಲ್ಲೇ.  ಪರಂಪರೆಯ ಆಧಾರವಿದ್ದಾಗ ವೇಷವಾಗಲೀ ಯಕ್ಷಗಾನವೇ ಆಗಲಿ ತೋರಿಸುವುದಕ್ಕೆ ಸುಲಭವಾಗುತ್ತದೆ. ಪರಂಪರೆ ಇರುವುದು ಕಲೆಯನ್ನು ಸುಲಭವಾಗಿಸುವುದಕ್ಕೆ. ಇದು ಅನುಭವಕ್ಕೆ ಬರೆಬೇಕಾದರೆ ಯಕ್ಷಗಾನವನ್ನು ತೀರಾ ಅಪರಿಚಿತ ಜಾಗದಲ್ಲಿ ಪ್ರದರ್ಶಿಸಬೇಕು. ಅಲ್ಲಿ ಯಕ್ಷಗಾನದೊಂದಿಗೆ ನಾಟಕವನ್ನೋ ಇನ್ನಾವುದನ್ನೋ ಮಿಶ್ರ ಮಾಡಿ ತೋರಿಸಿದಾಗ ಪ್ರೇಕ್ಷಕ  ಪರಸ್ಪರ ಹೋಲಿಸುವುದಕ್ಕೆ ಆಸ್ಪದವಿರುತ್ತದೆ. ಆ ಹೋಲಿಕೆಯಲ್ಲಿ  ಮೂಲ ಯಕ್ಷಗಾನದ ಅನುಭವ ಇಲ್ಲದೇ ಇರುವುದರಿಂದ ಯಕ್ಷಗಾನಕ್ಕೆ ಇದರಿಂದ ಯಾವ ಪ್ರಯೋಜನವೂ ಇಲ್ಲ ಬದಲಾಗಿ ಹಾನಿಯೇ ಆಗುತ್ತದೆ. ಅದೇ ಜಾಗದಲ್ಲಿ ಕೇವಲ ಪರಂಪರೆಯ ಶುದ್ದ ಯಕ್ಷಗಾನವನ್ನು ಮಾತ್ರ ತೋರಿಸಿದಾಗ ಆತನಿಗೆ ಹೋಲಿಸುವುದಕ್ಕೆ ಅಲ್ಲಿ ಸುಲಭವಾಗುವುದಿಲ್ಲ. ಆತ ನೋಡುವ ದೃಷ್ಟಿಕೋನವೇ ಬದಲಾಗಿಬಿಡುತ್ತದೆ. ಮತ್ತು ಯಕ್ಷಗಾನದ ಬಗೆಗಿನ ಕೌತುಕ ಜಾಗ್ರತವಾಗುತ್ತದೆ. ಯಕ್ಷಗಾನಕ್ಕೂ ಉಳಿದ ರಂಗಗಳಿಗೂ ವೆತ್ಯಾಸ ತಿಳಿಯದವರು ರಂಗಸ್ಥಳವನ್ನು ಏರುವುದೇ ಅಭಾಸಕರ. ಹೀಗಾಗಿಯೇ ಯಕ್ಷಗಾನಕ್ಕೆ ಸಲ್ಲಬೇಕಾದ ಮೌಲ್ಯ ಸಲ್ಲುವುದಿಲ್ಲ. ಕೇವಲ ಕರ್ನಾಟಕದ ರಾಜ್ಯ ಕಲೆಯಾಗಬೇಕು ಎನ್ನುವ ಕೂಗು ಮೊಳಗಿಸಿದರೆ ಯಕ್ಷಗಾನ ಅಭಿಮಾನವಾಗುವುದಿಲ್ಲ. ಕಥಕ್ಕಳಿಗೆ ಕೇರಳದಲ್ಲಿ ರಾಜ ಮಾನ್ಯತೆ ಸಿಗಬೇಕಾದರೆ ಕಥಕ್ಕಳಿಯ ಆ ಗುಣಗಳನ್ನು ನಿಯಮಗಳ ಪಾಲನೆಯೆ ಕಾರಣ. ಇಲ್ಲಿ ಅದಾವ ನಿಯಮವೂ ಇಲ್ಲ. ಅದರ ಬಗ್ಗೆ ಗಂಭೀರ ಚಿಂತನೆಯೂ ಇಲ್ಲ ಗೌರವವೂ ಇಲ್ಲ.

      ಎರಡನೇ ಭಾಗದ ಸಂವಾದದಲ್ಲಿ ಯಕ್ಷಗಾನ ಬದಲಾದ ಬಗ್ಗೆ ಹೆಚ್ಚು ಗಹನವಾದ ವಿಚಾರಗಳಿವೆ. ಈಗ ಹಲವು ಬದಲಾವಣೆಗಳು ಆವಿಷ್ಕಾರಗಳು ಆಗಿವೆ ಮತ್ತು ಆಗುತ್ತಿವೆ. ಆದರೆ ಬದಲಾವಣೆ ಮಾಡುವವರಿಗೆ ಬದಲಾವಣೆ ಬಯಸುವವರಿ ಯಕ್ಷಗಾನದ ಪ್ರಾಚೀನ ಮೌಲ್ಯದ ಅರಿವಿಲ್ಲ. ಅಜ್ಜ ಸಾಕಿದ ಆಲದ ಮರದ ಕಾರಣವನ್ನೇ ಬದಲಾವಣೆ ಬಯಸುವವರು ಮುಂದಿಡುತ್ತಾರೆ. ಆದರೆ ಇದು ತಮ್ಮ ಸ್ವಾರ್ಥಕ್ಕೆ ತೆವಲಿಗೆ ಬಳಸಿಕೊಳ್ಳುವ ಮಾತು. ಯಕ್ಷಗಾನದಲ್ಲಿ ಏನುಂಟು ಅದನ್ನು ಪೂರ್ಣವಾಗಿ ನೋಡದೇ ಬದಲಾವಣೆ ಮಾಡುತ್ತಾ ಹೋದರೆ ಅದರ ಪ್ರಾಚೀನ ಮೌಲ್ಯ ಉಳಿಯುವುದಾದರು ಯಾವುದರಲ್ಲಿ? ಇದು ಆಭಾಸ. ಯಕ್ಷಗಾನದ ಮೌಲ್ಯಗಳನ್ನು ನಾಶಮಾಡಿ ಬದಲಾವಣೆ ಮಾಡುವಂತಹುದು ಯಾವ ಬಗೆಯಲ್ಲೂ ಒಪ್ಪಿಕೊಳ್ಳತಕ್ಕದ್ದಲ್ಲ. ಇದನ್ನು ನಂಬಿಯಾರರು ಅಧಿಕಾರಯುತವಾಗಿ ಹೇಳುವ ಸ್ಥಾನವನ್ನು ಹಕ್ಕನ್ನು ಪಡೆದಿದ್ದಾರೆ. ಯಾಕಂದರೆ ಯಕ್ಷಗಾನದ ಪುನರ್ನವೀಕರಣದಲ್ಲಿ  ಪ್ರಧಾನ ಅಂಗವಾಗಿ ಕಾರ್ಯವೆಸಗಿದವರು. ಈಗ ಯಕ್ಷಗಾನ ಅಮೇರಿಕದ ವರ್ಲ್ಡ್ ಟ್ರೇಡ್ ಬಹು ಮಹಡಿ ಕುಸಿದಂತೆ ಯಕ್ಷಗಾನದ ಮೌಲ್ಯಗಳು ಕುಸಿಯುತ್ತಿದೆ.
     
      ಯಕ್ಷಗಾನ ಪ್ರೇಕ್ಷಕನ ಕಲ್ಪನಾ ಸಾಮಾರ್ಥ್ಯವನ್ನು ಹೆಚ್ಚಿಸುತ್ತದೆ. ಸಿನಿಮಾದಲ್ಲೋ ನಾಟಕದಲ್ಲೋ ನೈಜತೆಗೆ ಒತ್ತು ಕೊಟ್ಟು ನಡೇಯುವಂತಹ ಕಥೆಗಳನ್ನೇ ಯಕ್ಷಗಾನದಲ್ಲಿ ಪ್ರೇಕ್ಷಕ ಅಲ್ಲಿಗಿಂತಲು ಹೆಚ್ಚು ಸುಖವಾಗಿ ಆಸ್ವಾದಿಸುತ್ತಾನೆ. ದೇವೆಂದ್ರನ ಒಡ್ಡೋಲಗ ನಾಲ್ಕು ಕಂಬದ ನಡುವೆ ನಡೆದರೂ ಅದನ್ನು ಸ್ವರ್ಗ ಎಂದು ಕಲ್ಪಿಸಿಕೊಂಡು ಉಳಿದ ಭಾಗವನ್ನು ಕಂಡು ಭ್ರಮಾಧೀನ ನಾಗುತ್ತಾನೆ. ಹಸ್ತಿನಾವತಿಯ ಸಭೆಯಲ್ಲಿ ತಾನೂ ಒಬ್ಬನಾಗಬಲ್ಲ.  ಕಲೆ ಎಂದರೆ ಅದುವೇ ಅಲ್ಲವೆ. ಮನಸ್ಸು ಭ್ರಾಮಕ ಲೋಕದಲ್ಲಿ ವಿಹರಿಸುವುದಕ್ಕೆ ಸಹಾಯ ಮಾಡುವುದು. ಯಕ್ಷಗಾನ ಉಳಿದೆಲ್ಲ ಪ್ರಕಾರಗಳಿಗಿಂತ ಸುಲಭವಾಗಿ ಸರಳವಾಗಿ ಈ ಕೆಲಸವನ್ನು ಮಾಡುತ್ತದೆ.
     
      ಈ ಭಾಗದ ಸಂವಾದಗಳಲ್ಲಿ ಯಕ್ಷಗಾನದ ಪ್ರಾಚೀನ ಮೌಲ್ಯಗಳೇನಿವೆಯೋ ಅವುಗಳನ್ನು ಪನರುಜ್ಜೀವನಗೊಳಿಸುವ ಕಾರ್ಯ ಹೇಗೆ ನಡೆಯಿತು ಎಂಬುದನ್ನು ಹೆಚ್ಚು ವಿವರಿಸುತ್ತಾರೆ. ಅತೀ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳನ್ನು ಕೂಡ ಅಧ್ಯಯನ ಮಾಡಿ ಸಂಶೋಧನೆ ಮಾಡಿ ಅದನ್ನು ಪುನರ್ ನಿರ್ಮಿಸಲಾಗಿತ್ತು. ಆದರೆ ಅವರ ಅಂತರಾಳದ ಧ್ವನಿಯ ವೇದನೆ ಅದು ಮೌನವಾಗಿಯೇ ನಮ್ಮ ಮನಸ್ಸನ್ನು ಇರಿಯುತ್ತದೆ. ಬದವಾಣೆಗಳಿಗೆ ಹಲವು ಕ್ಷುಲ್ಲಕ ಕಾರಣ ಕೊಟ್ಟು ತೋಚಿದಂತೆ ಪ್ರಯೋಗಿಸಿ  ಅದನ್ನು ಕುಲಗೆಡಿಸುವವರು ಈ ನೋವನ್ನು ಅರ್ಥವಿಸಿಕೊಳ್ಳಬೇಕು.

 ಪರಿಶ್ರಮದಿಂದ ಯಕ್ಷಗಾನವನ್ನು ಪುನರುಜ್ಜೀವನ ಮಾಡಿದನ್ನು ಗಮನಿಸಿದರೆ ಯಕ್ಷಗಾನ ಇನ್ನೂ ಅದೇ ಪುರಾತನ ಲಯಕ್ಕೆ ತರಬಹುದು. ಯಕ್ಷಗಾನವೆಂದರೆ ಅದು ಕೇವಲ ಕಲೆಯಲ್ಲ. ಅದು ಜ್ಞಾನದ ಮಾಧ್ಯಮ. ಅದೊಂದು ವಿದ್ಯೆ.  ಮೇಲೆ ಹೇಳಿದ ಉದಾಹರಣೆಯಲ್ಲಿ ನಳ ಮಹಾರಾಜನಿಗೆ ತಾನು ಬದಲಾಗುತ್ತೇನೆ ಎಂಬ ವಿಶ್ವಾಸ ಇದ್ದಿರಲಿಕ್ಕಿಲ್ಲ. ಅಷ್ಟು ವಿರೂಪವಾಗಿ ಸ್ಥಾನ ಭ್ರಷ್ಠನಾಗಿ ಸಮಾಜದಲ್ಲಿ ತನ್ನ ಮೌಲ್ಯಗಳನ್ನು ಕಳೆದುಕೊಂಡನಂತರ ಅದನ್ನು ಪುನಃ ಗಳಿಸುತ್ತೇನೆಂಬ ವಿಶ್ವಾಸ ಆತನಿಗಿರಲಿಲ್ಲ. ಆದರೆ ಇಲ್ಲಿ ಆ ವಿಶ್ವಾಸ ತಳೆಯಬಹುದು. ತಳೆಯಲೇ ಬೇಕು. ಯಾಕೆಂದರೆ ಯಕ್ಷಗಾನ ಅದು ಕೇವಲ ಯಕ್ಷಗಾನವಲ್ಲ.
(ಇತ್ತೀಚೆಗೆ  ಯಕ್ಷರಂಗ ಕಟೀಲು ಸಿತ್ಲ ಪೌಂಡೇಶನ್ (ರಿ)  ಇವರಿಂದ  ಪ್ರಕಾಶನಗೊಂಡ  ’ರಂಗವಿಚಿಕಿತ್ಸೆ’ ಎಂಬ ಪುಸ್ತಕದಲ್ಲಿ ಪ್ರಕಟವಾದ ನನ್ನ ಲೇಖನ.)




Friday, June 29, 2018

ಯಕ್ಷಗಾನ ಮತ್ತು ವಿವಾದಗಳು



            ನಾನು ಸರಿ ಸುಮಾರು ನಾಲ್ಕು ದಶಕಗಳನ್ನೂ ಮಿಕ್ಕಿ ಯಕ್ಷಗಾನವನ್ನು ನೋಡಿದ್ದೇನೆ. ಈ ನಾಲ್ಕು ದಶಕಗಳಲ್ಲಿ ಯಕ್ಷಗಾನವೆಂಬ ಮಹಾನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಅದೆಷ್ಟೊ ಬಗೆಯ ಕಲಾವಿದರನ್ನೂ ಪ್ರೇಕ್ಷಕರನ್ನೂ ಮೇಳಗಳನ್ನು ಅವುಗಳ ವೈಖರಿಗಳನ್ನೂ ಕಂಡಿದ್ದೇನೆ. ಅಷ್ಟೂ ಸಮಯ ಯಕ್ಷಗಾನ, ಯಕ್ಷಗಾನಕ್ಕಾಗಿಯೇ ಸುದ್ದಿಯಲ್ಲಿರುತ್ತಿತ್ತು. ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ವಿಚಾರಗಳು ಬಿಟ್ಟರೆ ಯಕ್ಷಗಾನ ಒಂದು ತನ್ನ ಕಲೆಯಿಂದ ಚೀತೋಹಾರಿ ಅನುಭವವನ್ನು ಸಾಮಾನ್ಯ ಎಲ್ಲಾ ಪ್ರೇಕ್ಷಕನಿಗೆ ಒದಗಿಸುತ್ತಿತ್ತು, ಮಾತ್ರವಲ್ಲ ಪ್ರೇಕ್ಷಕ ಅದನ್ನು ಪಡೆದುಕೊಳ್ಳುತ್ತಿದ್ದ. ಈಗ ಕಾಲ ಬದಲಾಗಿದೆ. ಮೊದಲಿನಂತೆ ವರ್ಷಧಾರೆ ಹೇಗೆ ಸುರಿಯುವುದಿಲ್ಲವೋ ಅದೇ ರೀತಿ ವರ್ಷಧಾರೆ ಕಡಿಮೆಯಾಗಿ ಈ ಮಹಾನದಿ ಒಂದೋ ಬರಿದಾಗಿದೆ ಇಲ್ಲವಾದರೆ ಮಾಲಿನ್ಯವನ್ನು ಅನುಭವಿಸುತ್ತದೆ.  ಈ ಕಂಡ ನಾಲ್ಕು ದಶಕಗಳಲ್ಲಿ ಯಕ್ಷಗಾನ ಅತ್ಯಂತ ಜನಪ್ರಿಯವಾಗಿದ್ದೂ ಇತ್ತೀಚೆಗೆ ನಾಲ್ಕೈದು ವರ್ಷಗಳಲ್ಲಿ. ಒಂದು ಸಣ್ಣ ಗುಂಡು ಸೂಜಿಯಂತಹ ಸದ್ದಾದರೂ ವಿಶ್ವವ್ಯಾಪಿಯಾಗಿಬಿಡುವ ಇಂದಿನ ತಾಂತ್ರಿಕತೆಯಲ್ಲಿ ಅದು ವಿಶೇಷವಲ್ಲ. ಆದರೆ ಸುದ್ದಿಯಾಗಿದ್ದು ಹೆಚ್ಚು ವಿವಾದಗಳಿಂದ ಎಂದರೆ  ಅದು ಸಾತ್ವಿಕ ಪ್ರೇಕ್ಷಕನಿಗೆ ಬಹಳ ನೋವನ್ನು ತರುವ ಸಂಗತಿ.
           
ವಿವಾದಗಳು ಅಂದೂ ಇತ್ತು ಇಂದು ಇದೆ. ಆದರೆ ಇಂದು ಅದು ಬದಲಾಗುವ ಆಯಾಮ ಮಾತ್ರಾ ವಿಚಿತ್ರವಾಗಿದೆ. ವಿವಾದಗಳಿಂದಲೇ ಚಲಾವಣೆಯನ್ನು ಅನುಭವಿಸುವುದು ಒಂದು ರೀತಿಯ ದುರಂತ ಎನ್ನಬಹುದು.    ಶ್ರೀಮಂತ ಕಲೆಯ ಸಿರಿವಂತಿಕೆ ಬೇಕಾದಷ್ಟು ಇದೆ.  ಈ ಸಿರಿವಂತಿಕೆಯ ಬಗ್ಗೆ ಚರ್ಚೆಯಾಗುವುದಿಲ್ಲ. ಈ ಶ್ರೀಮಂತಿಕೆಯನ್ನು ಹೇಗೆ ರಕ್ಷಿಸಬೇಕು. ಆ ರಕ್ಷಣೆ ಹೇಗೆ ಸಾಧ್ಯ ಎಂಬುದರಬಗ್ಗೆಯೂ ಕಾಳಜಿ ಇಲ್ಲ. ಬದಲಿಗೆ ಅಸಹ್ಯವೆನಿಸುವ ವಿಚಾರಗಳು ವಿವಾದಗಳಾಗಿ ಯಕ್ಷಗಾನ ಮಹಾನದಿ ಮಲೀನವಾಗುತ್ತದೆ ಎಂಬುದಕ್ಕೆ ಸಂಶಯವಿಲ್ಲ. ಈಗಿನ ಮಾಧ್ಯಮಗಳೂ ಈ ವಿವಾದಗಳನ್ನು ಜೀವಂತವಾಗಿಡುವಲ್ಲಿ ಸಹಕಾರಿಯಾಗಿಯೂ ಪ್ರವರ್ತಿಸುತ್ತದೆ. ಒಂದು ಸಣ್ಣ ವಿವಾದವಾದರೂ ಅದನ್ನು ಹಿರಿದಾಗಿ ಹಿಗ್ಗಿಸಿ ಅದರ ಬಗ್ಗೆ ತಮ್ಮ ವಾಹಿನಿಯಲ್ಲಿ ಚರ್ಚೆಯನ್ನು ಅಭಿಪ್ರಾಯ ಕ್ರೋಢೀಕರಣವನ್ನೂ, ಮಂಡನೆಯನ್ನೂ ಮಾಡುತ್ತ ನಿರ್ಣಯವನ್ನೂ ಸಹ ಬೇಕಾದರೆ ಸಾರಿ ಬಿಡುತ್ತವೆ.  ವಿಚಿತ್ರವೆಂದರೆ,  ಯಕ್ಷಗಾನ ಕಲೆಯ ವೈಶಿಷ್ಟ್ಯತೆಗಳು, ಧನಾತ್ಮಕ ವಿಚಾರಗಳು ಬೇಕಾದಷ್ಟಿರುವಾಗ ಇತ್ತ ತಲೆ ಹಾಕದ ಮಾಧ್ಯಮಗಳು ಯಕ್ಷಗಾನದ ಅನಪೇಕ್ಷಿತ ವಿವಾದಗಳಾದಾಗ ಅದು ಹೇಗೆ ವಕ್ಕರಿಸುತ್ತವೆ?  ಒಂದು ಮನೆಯ ಜಗಳ ಬೀದಿಗೆ ಬಂದಾಗ ನೆರೆ ಹೊರೆಯವರು ನೋಡಿ ಮನರಂಜನೆಯನ್ನು ಅನುಭವಿಸಿದಂತೆ ತಮ್ಮ ಬೇಳೆಯನ್ನು ಬೇಯಿಸಿಕೊಂಡು ಜನಪ್ರಿಯತೆಯ ಬಾಲವನ್ನು ಹಿಡಿದು ಜಗ್ಗಾಡಿಸುತ್ತವೆ.  ಇಂದಿನ  ಜನ ಸಮೂಹ ಅದಕ್ಕೆಲ್ಲ ಮುಕ್ತ ಅವಕಾಶಗಳನ್ನು ತಮಗರಿವಿಲ್ಲದೇ ಒದಗಿಸುತ್ತದೆ. ಯಕ್ಷಗಾನ ಕಲೆಯ ಸೊಬಗಿನ ಬಗ್ಗೆ ಆ ಸೌಂದರ್ಯದ ಬಗ್ಗೆ ಚರ್ಚಿಸದ ಈ ಮಾಧ್ಯಮಗಳಿಗೆ  ಈ ವಿವಾದಗಳನ್ನು ಚರ್ಚಿಸುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದು ಇನ್ನೊಂದು ದುರಂತ.  ಟೀವಿಯವರು ಹೇಳಿದ್ದಾರೆ ಎಂದು ಅಭಿಪ್ರಾಯ ಕ್ರೋಢಿಕರಣಕ್ಕೆ ಹೋಗುವುದು  ಚರ್ಚೆಗೆ ಕುಳಿತುಕೊಳ್ಳುವುದು, ಟೀವಿಯಲ್ಲಿ ಮುಖ ತೋರಿಸುವ ಒಂದಷ್ಟು ಚಟಗಳನ್ನು ಈ ಮೂಲಕ ತೀರಿಸಿಕೊಳ್ಳುವುದು ಎಷ್ಟೊಂದು ಶೋಚನೀಯ.  ಇಂತಹ ಸಂದರ್ಭಗಳಲ್ಲಿ ಯಕ್ಷಗಾನದ ವಿಚಾರ ಗೊತ್ತಿರುವುದಕ್ಕಿಂತಲೂ ಹೆಚ್ಚು ಪ್ರಸ್ತುತ ವಿವಾದದ ಬಗ್ಗೆ ತಿಳಿದಿರುತ್ತದೆ. ಹೀಗಿರುವಾಗ ಯಕ್ಷಗಾನದ ಹಿಮ್ಮೇಳದ ಬಗ್ಗೆ ವೇಷಗಾರಿಕೆಯ ಬಗ್ಗೆ ಅರ್ಥಗಾರಿಕೆಯ ಬಗ್ಗೆ ಹೀಗೆ ವಿಸ್ತೃತವಾಗಿ ಚರ್ಚೆ ಮಾಡುವಲ್ಲಿ ಮಾಧ್ಯಮಗಳು ಇಷ್ಟೊಂದು ಆಸಕ್ತಿ ವಹಿಸಿದ ಉದಾಹರಣೆಗಳೇ ಇಲ್ಲ.
ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗದ ವಿವಾದ ಯಾವುದೂ ಇಲ್ಲ. ಬುದ್ಧಿವಂತರ ನಾಡಲ್ಲಿ ಇದು ಎಂದೋ ಆಗಬೇಕಿತ್ತು. ಆದರೆ ಸೌಹಾರ್ದತೆ ನೆಲೆ ನಿಲ್ಲುವುದು ಸ್ವ ಪ್ರತಿಷ್ಠೆ ಸ್ವಾರ್ಥ ಇಲ್ಲದೇ ಇರುವಲ್ಲಿಮಾತ್ರ.  ಕೆಟ್ಟ ರಾಜಕೀಯದ ಎದುರು ಸೌಹಾರ್ದತೆ ಅರ್ಥ ಕಳೆದುಕೊಳ್ಳುತ್ತದೆ. ಯಾಕೆಂದರೆ ಮನುಷ್ಯನಿಗೆ ಬುದ್ದಿಯ ಕೊರತೆಯಾದರೂ ಬುದ್ಧಿ ಅಧಿಕವಾದರೂ  ಪರಿಣಾಮ ಒಂದೇ. ಹೇಳಿ ಕೇಳಿ ಇದು ಅತಿ ಬುದ್ಧಿವಂತರ ಕ್ಷೇತ್ರ. ಹಾಗಾಗಿ ಒಬ್ಬರ ಕಾಲು ಮತ್ತೊಬ್ಬ ಎಳೆದು ತನ್ನ ನೆಲೆಯನ್ನು ಕಂಡುಕೊಳ್ಳುವುದು ಸರ್ವೇ ಸಾಮಾನ್ಯ. ಇದರಿಂದ ವಿವಾದ ಇಂತಹ ಕೊಳಚೆಯಲ್ಲಿನ ಸೊಳ್ಳೆಗಳಂತೆ  ತನ್ನ ಬಲವನ್ನು ಬೇಗ ವೃದ್ದಿಸಿಕೊಳ್ಳುತ್ತದೆ.
ಇನ್ನು ಸದ್ಯದ ವಿವಾದ, ವಿವೇಚನೆಯ ಕೊರತೆಯಿಂದ ಹುಟ್ಟಿರುವಂತಹುದು.. ಯಾವುದೋ ಭಾವಾವೇಶದ ಲಾಭವನ್ನೇ ಕೇಂದ್ರಿಕರಿಸಿ ವಾಸ್ತವದ ಸತ್ಯವನ್ನು ಅರಿಯದೇ ಇರುವುದು. ಯಾರೇ ಆಗಲೀ ದೇವರ ಎದುರು ಸಮಾನರು. ಪರಮ ಭಕ್ತರಲ್ಲದೇ ಇದ್ದರೂ ಪರಮಾತ್ಮನ ನಿಯತಿಗೆ ಬದ್ದರಾಗಿರುವವರು. ಇಂತಹ ಸಾಮಾನ್ಯ ಜ್ಞಾನವನ್ನಿಟ್ಟುಕೊಂಡು ವ್ಯವಹರಿಸುವುದು ಸೂಕ್ತವಾಗುತ್ತದೆ. ಶಿಕ್ಷೆ ರಕ್ಷೆಯನ್ನು ಆ ದೇವರ ಪಾದದಲ್ಲಿ ಅರ್ಪಿಸಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವುದು ಜಾಣತನ. ಯಾರೇ ಆಗಲಿ ಶಿಕ್ಷೆರಕ್ಷೆಗೆ ನಾವೇ ಕಾರಣ ಕರ್ತರು ಎಂಬ ಧೋರಣೆ ಒಳಗಿರುವ ಪರಮಾತ್ಮನ ಅಸ್ತಿತ್ವವನ್ನು ಪ್ರಶ್ನಿಸಿದಂತಾಗುತ್ತದೆ..  ಪರಮಾತ್ಮನ  ಅನುಗ್ರಹವನ್ನು ಪಡೆಯಬೇಕಿದ್ದರೆ ಯಾವುದೇ ಭಾವೋದ್ವೆಗಕ್ಕೆ ಒಳಗಾಗಬಾರದು. ಯಾಕೆಂದರೆ ಪರಮಾತ್ಮ ಅಂದರೆ ದೇವರು ಭಾವರಹಿತನಾದವನು. ಇದು ಶ್ರೀಕೃಷ್ಣ ಅರ್ಜುನನಿಗೆ ಹೇಳಿದ ಹಿತವಚನಗಳಲ್ಲಿ ಅಡಗಿದೆ. ಆದರೆ  ಇಲ್ಲಿ ಆದೇ ದೇವರ ವಿಚಾರದಲ್ಲಿ ತಮ್ಮ ಸ್ವಾರ್ಥ ಸಾಧನೆಗೆ ಭಾವೋದ್ವೇಗವನ್ನು ಸೃಷ್ಟಿಸಿ ವಾಸ್ತವದಿಂದ ಪಲಾಯನ ಮಾಡುವ ತಂತ್ರವೇ ಕಾಣುತ್ತದೆ.  

ಮುಜರಾಯಿ ಎಂದಾಕ್ಷಣ ಸರಕಾರವನ್ನು ತೆಗಳುವುದು ಸಾಮಾನ್ಯ. ಆದರೆ ವಾಸ್ತವದ ಕೆಲವು ವಿಚಾರಗಳ ಬಗ್ಗೆ ಯಾರೂ ಯೋಚಿಸುವುದಿಲ್ಲ. ಸಾರ್ವಜನಿಕವಾಗಿ ಹಣ ಅಥವಾ ಇನ್ನಿತರ ವಸ್ತುಗಳನ್ನು ದಾನ ರೂಪದಲ್ಲೋ ಆದಾಯದ ರೂಪದಲ್ಲೊ ಅದು ಕೇವಲ ಒಂದು ರೂಪಾಯಿಯಾಗಿದ್ದರೂ ಸಹ ಒಂದು ದೇವಸ್ಥಾನ ಸಂಗ್ರಹಿಸಿದರೆ ಅದು ಮುಜರಾಯಿ ಇಲಾಖೆಗೆ ಖಡ್ಡಾಯವಾಗಿ ಒಳಪಡಬೇಕು ಮತ್ತು ವಾರ್ಷಿಕ ಲೆಕ್ಕ ವರದಿಯನ್ನು ಸಂಬಂಧಿಸಿದ ಇಲಾಖೆಗಳಿಗೆ ಸಲ್ಲಿಸಬೇಕು. .ಕುಟುಂಬದಿಂದಲೋ ವ್ಯಕ್ತಿಯಿಂದಲೋ ನಡೆಯುವ ದೇವಸ್ಥಾನಕ್ಕೆ, ಸಾರ್ವಜನಿಕ ಸಂಗ್ರಹ ಇಲ್ಲದೇ ಇದ್ದಲ್ಲಿ ಈ ಕಾನೂನು ಅನ್ವಯವಾಗುವುದಿಲ್ಲಈ ಕಾನೂನು ಎಲ್ಲಾ ಮತಕ್ಕೂ ಅನ್ವಯವಾಗಬೇಕು,  ಸಮಾನ ಕಾನೂನು ಸಮಾನ ಹಕ್ಕು ಇದು ಜ್ಯಾರಿಯಾಗಬೇಕು ಎಂಬುದು ಸತ್ಯ. ಆದರೆ ಕೆಲವು ದೇವಸ್ಥಾನಗಳು ಸಾರ್ವಜನಿಕವಾಗಿ ಯಾವುದೇ ಆದಾಯವನ್ನು ಸಂಗ್ರಹಿಸದೇ ಇದ್ದರೂ ಮುಜರಾಯಿ ಇಲಾಖೆಗೆ ಸ್ವತಹ ಸೇರಿಸಿಕೊಳ್ಳುವುದುಂಟು. ಅದು ಸರಕಾರ ಕೊಡುವ ಸೌಲಭ್ಯಗಳಿಗಾಗಿ ಸೇರಿಸುತ್ತಾರೆ. ಮತ್ತು ಕಾನೂನು ರೀತ್ಯಾ ಯಾವುದೇ ದಾಖಲಾತಿಗಳನ್ನಾಗಲೀ ವರ್ಷಕ್ಕೊಮ್ಮೆ ಕರೆಯಲೇ ಬೇಕಾದ ಮಹಾಸಭೆಯನ್ನು ಕರೆಯದೇ ಇದ್ದು ಕೇವಲ ಸರಕಾರಿ ಸೌಲಭ್ಯವನ್ನು ಪಡೆದುಕೊಳ್ಳುವವರೂ ಇದ್ದಾರೆ. ಇದು ಬಹಳಷ್ಟು ಸಂಖ್ಯೆಯಲ್ಲಿ ಇರುವುದು ಚೋದ್ಯದ ವಿಚಾರ.  ಸ್ವತಃ ಲೆಕ್ಕ ಪರಿಶೋಧನೆಗೆ ದೇವಸ್ಥಾನ ಭೂತ ಸ್ಥಾನಗಳಿಗೆ ಭೇಟಿ ಕೊಟ್ಟಾಗ ಈ ಅಂಶ ಬಹಳಷ್ಟು ಗಮನಕ್ಕೆ ಬಂದಿದೆ. ಏನೂ ಆದಾಯವಿಲ್ಲದೇ ಇರುವ ದೇವಾಸ್ಥಾನಗಳು ಸ್ವಯಂಪ್ರೇರಿತವಾಗಿ ಮಜಾರಾಯಿ ಇಲಾಖೆಗೆ ಯಾಕೆ ಸೇರಿಕೊಳ್ಳಬೇಕು. ಈ ಸಂಕ್ಯೆ ಸಾಕಷ್ಟು ಇದೆ. ಹಾಗಾಗಿ ಮಜರಾಯಿ ಎಂಬ ವ್ಯವಸ್ಥೆಯನ್ನು ದೂಷಿಸುವುದು ಸರಿಯಲ್ಲ. ಆದರೆ ವಾಸ್ತಾವಂಶಗಳನ್ನು ಗಮನಿಸದೆ ವಿವೇಚಿಸದೆ ಏನಕ್ಕೇನು ಹೇಳುತ್ತಾ ಸರಕಾರದ ಮೇಲೆ ವ್ಯವಸ್ಥೆಯ ಮೇಲೆ ಗೂಬೆ ಕೂರಿಸುವುದು ಸಹ ಸರಿಯಲ್ಲ. ವ್ಯವಸ್ಥೆ ಸರಿಯೋ ತಪ್ಪೋ ಅದಕ್ಕೆ ಪರೋಕ್ಷವಾಗಿ ಪ್ರತ್ಯಕ್ಷವಾಗಿ ಜನರೇ ಕಾರಣರಾಗಿರುತ್ತಾರೆ. ವ್ಯವಸ್ಥೆ ಕಳುಷಿತವಾಗುವುದಕ್ಕೆ    ಪ್ರಾಮಾಣಿಕತೆಯ ಕೊರತೆಯೇ ಮೂಲ ಕಾರಣ.

 ಕೇವಲ ಹಿಂದೂ ದೇವಾಲಯಗಳಿಗೆ ಮಾತ್ರ ಕಾನೂನು ಲಗಾಯಿಸುವುದು ನಿಜಕ್ಕು ಆಕ್ಷೇಪಾರ್ಹ. ಇದಕ್ಕೆ ಕಾರಣ ಸ್ವಾತಂತ್ರ್ಯಾ ನಂತರದ ಎಪ್ಪತ್ತು ವರ್ಷದ ರಾಜಕೀಯ ಹಿತಾಸಕ್ತಿಗಳೇ ಕಾರಣ ಹೊರತು ಒಂದು ಸರಕಾರೀ ವ್ಯವಸ್ಥೆಯಲ್ಲ. ಜನರು ಮತ ಹಾಕುವಾಗ ಯಾವುದೋ ಸಮ್ಮೋಹಕ್ಕೆ ಒಳಗಾಗಿರುವುದೇ ಈ ವ್ಯವಸ್ಥೆ ಕಲುಷಿತವಾಗುವುದಕ್ಕೆ ಕಾರಣ.
ಇನ್ನೊಂದು ಮಗ್ಗುಲು ಸಾಮಾಜಿಕ ನ್ಯಾಯ. ಇದು ಅತ್ಯಂತ ಪ್ರಧಾನವಾದ ವಿಚಾರ. ನಾವು ಜನ ನಿಬಿಡವಾದ ರಸ್ತೆಯಲ್ಲಿ ವಾಹನ ಚಲಾಯಿಸುತ್ತೇವೆ. ರಸ್ತೆಯ ನಿಯಮಗಳ ಪ್ರಕಾರ ಸಂಚಾರ ಕಾನೂನಿನಂತೆ ವಾಹನ ಚಲಾಯಿಸುತ್ತಾ ಸಿಗ್ನಲ್ ಬಂದಾಗ ನಿಂತುಬಿಡುತ್ತೇವೆ. ಬಹಳಷ್ಟು ಹೊತ್ತು ನಾವು ನಿಂತಿರಬೇಕಾದರೆ ಬಹಳ ಹಿಂದೆ ಇರುವಾತ,  ಪಾದಾಚಾರಿ ರಸ್ತೆಯ ಮೇಲೆ ವಾಹನ ಹತ್ತಿಸಿ ನಮ್ಮನ್ನು ಹಿಂದಿಕ್ಕಿ ಮುಂದೆ ಹೋಗಿ ಕಾನೂನು ಉಲ್ಲಂಘನೆ ಮಾಡಿದರೆ ನಮಗೆಷ್ಟು ನೋವಾಗುವುದಿಲ್ಲ? ಸಮಾಜದಲ್ಲಿ ಹೀಗೆ ಅತಿ ಬುದ್ದಿವಂತರಂತೆ ವರ್ತಿಸುವವರು ವ್ಯವಸ್ಥೆ ಸರಿ ಇಲ್ಲ ಎಂದು ಹೇಳಿ ತಮ್ಮ ಕಾನೂನು ಭಂಗವನ್ನು ಸಮರ್ಥಿಸುವುದು, ಸಿಗ್ನಲ್ ನಲ್ಲಿ ಅಷ್ಟು ಹೊತ್ತು ಕಾನೂನಿಗೆ ಗೌರವ ಕೊಟ್ಟವನನ್ನು ಅವಮಾನಿಸುವುದು ಮಾತ್ರವಲ್ಲ ಹೀಯಾಳಿಸುವುದೂ ಆಗುತ್ತದೆ. ಹಾಗಾದರೆ ಕಾನುನು ಪಾಲನೆ ಎಂಬುದು ಅವಮಾನಕರವೇ  ಎಂಬುದು ಪ್ರಶ್ನೆಯಾಗುತ್ತದೆ.
            ಮಜರಾಯೀ ಅರ್ಥ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಾಗಲೀ  ಅಥವಾ ಸಂಘ ಸಂಸ್ಥೆಗಳಾಗಲೀ  ಅದು ಕೇವಲ ಒಂದು  ಪಂಗಡಕ್ಕೆ ಸೀಮಿತವಾಗಿಯಲ್ಲ ತಮ್ಮ ಆದಾಯದ ಲೆಕ್ಕವನ್ನು ಸರಕಾರಕ್ಕೆ ಕಾನೂನು ರೀತ್ಯಾ ಒಪ್ಪಿಸಲೇ ಬೇಕು. ಅದರಲ್ಲೂ ಸಂಘ ಸಂಸ್ಥೆಗಳು ಬಂದ ಆದಾಯಕ್ಕೆ ಲೆಕ್ಕವನ್ನು ಒಪ್ಪಿಸುವುದರ ಜತೆಗೆ ಆದಾಯ ತೆರಿಗೆಯನ್ನು ಸರಕಾರಕ್ಕೆ ಪಾವತಿಸಬೇಕು. ಇದು ಕಾನೂನು. ಹಾಗಾದಲ್ಲಿ ಸಂಸ್ಥೆ ಮಾನ್ಯತೆಯನ್ನೂ ಅಂಗೀಕಾರವನ್ನು ಪಡೆಯುತ್ತದೆ. ಮತ್ತು ಆ ಸಂಸ್ಥೆಯಲ್ಲಿ ಕೆಲಸ ಮಾಡುವವನ ಆದಾಯವವೂ ಅಂಗೀಕರಿಸಲ್ಪಡುತ್ತದೆ. ಯಜಮಾನನ ಅನಧಿಕೃತ  ಸಂಪಾದನೆ ನೌಕರನಿಗೂ ಅನಧಿಕೃತವಾಗಿಯೇ ಇರುತ್ತದೆ. ಮೂಗಿನ ತುದಿಗೆ ತುಪ್ಪ ಹಚ್ಚಿದಂತೆ ದುಡಿಮೆಯಲ್ಲದ ಆದಾಯವನ್ನು ತೋರಿಸುವುದು ಅದೂ ದೇವರ ಕೆಲಸದಲ್ಲಿ ಏನಿಲ್ಲವೆಂದರೂ ದೈವಾನುಗ್ರಹಕ್ಕೆ ದಾರಿ ಮಾಡಿಕೊಡುವುದಿಲ್ಲ.
            ಸಾಮಾನ್ಯವಾಗಿ ಭಾರತದಲ್ಲಿ ಅತಿ ಹೆಚ್ಚು ಆದಾಯ ತೆರಿಗೆಯನ್ನು ನ್ಯಾಯ ಯುತವಾಗಿ ಸಲ್ಲಿಸುವುದು ವೇತನ ಪಡೆಯುವ ನೌಕರವರ್ಗ. ಅವರಿಗೆ ಸಿಗುವ ವೇತನದಲ್ಲಿ ಆದಾಯ ತೆರಿಗೆ ಮೊದಲೇ ಕಡಿತ ಗೊಳಿಸಲಾಗುತ್ತದೆ. ಈಗ ಸಂಘ ಸಂಸ್ಥೆಗಳು ಆದಾಯ ವನ್ನು ಘೋಷಿಸದೇ ಲೆಕ್ಕ ಪತ್ರವನ್ನು ತೋರಿಸದೇ ಆದಾಯ ತೆರಿಗೆಯನ್ನೂ ಪಾವತಿಸದೇ ಇದ್ದು ಕಾನೂನು ಉಲ್ಲಂಘಿಸಿದರೆ, ಸರಿಯಾಗಿ ತೆರಿಗೆ ಪಾವತಿಸುವ ನೌಕರ ವರ್ಗಕ್ಕೆ ಅವಮಾನಿಸಿದಂತೆ ಮಾತ್ರವಲ್ಲ ಹೀಯಾಳೀಸಿದಂತೆಯೂ ಆಗುತ್ತದೆ. ಅಷ್ಟು ಹೊತ್ತು ಸಿಗ್ನಲ್ ನಲ್ಲಿ ನಿಂತವನನ್ನು ನೋಡುತ್ತಾ ಪುಟ್ ಪಾತ್ ಹತ್ತಿ ನಾನು ನಿನ್ನಿಂದ ಬುದ್ಧಿವಂತ ಅಂತ ಹೇಳಿಕೊಂಡು ಹೋದ ಹಾಗೆ ಸರಿಯಾಗಿ ಆದಾಯ ತೆರಿಗೆ ಪಾವತಿಸುವವನಿಗೆ ಮಾಡುವ ಘೋರ ಅವಮಾನವಾಗುತ್ತದೆ.  ನೋಟ್ ಬ್ಯಾನ್ ನಂತರ ಹೀಗೆ ಅದಾಯ ತೆರಿಗೆಯನ್ನು ಪಾವತಿಸದೇ ಅದಾಯಗಳಿಸುವ ಸಂಘ ಸಂಸ್ಥೆಗಳು ಸರಕಾರದ ಗಮನಕ್ಕೆ ಬಂದು ಬಹಳಷ್ಟು ತೊಂದರೆಯನ್ನು ಅನುಭವಿಸಿದ್ದು ಮಾತ್ರವಲ್ಲ, ತಮ್ಮ ಮಾನ್ಯತೆಯನ್ನು ಕಳೆದುಕೊಂಡಿವೆ. ಇದು ಒಂದು ವ್ಯವಸ್ಥೆಯನ್ನು ಹೇಗೆ ಸರಿ ಪಡಿಸಬಹುದು ಎಂಬುದರ ದಿಕ್ಸೂಚಿ. ಬುದ್ದಿವಂತರು ಇದನ್ನೂ ವಿರೋಧಿಸುತ್ತಾರೆ.  ಹಾಗಾಗಿ ಸಾರ್ವಜನಿಕ ಸಂಸ್ಥೆಗಳು ತಮ್ಮ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಹೊಂದಿರುವುದು ಆ ಸಂಸ್ಥೆಯ ಮೇಲೆ ನಂಬಿಕೆ ಕಡಿಮೆಯಾಗಿದೆ ಎಂದು ತಿಳಿಯಬೇಕಿಲ್ಲ. ಅಥವಾ ಆ ಸಂಸ್ಥೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತೆಯೂ ಇಲ್ಲ. ಪ್ರಾಮಾಣಿಕನಾಗಿದ್ದವನಿಗೆ ಎಲ್ಲಿ ನಿಲ್ಲುವುದಕ್ಕೂ ಭಯವೇನು? ಎಂತಿದ್ದರೂ ದೇವರ ಮುಂದೆ ಆತನಿಗಾಗಿಯಾದರೂ ಪ್ರಾಮಾಣಿಕನಾಗಿ ಇರಲೇ ಬೇಕಾಗುತ್ತದೆ.
            ಸಾರ್ವಜನಿಕ ಸಂಗ್ರಹದ ಹಣದಿಂದ ಆದಾಯಗಳಿಸುವ ಸಂಘ ಸಂಸ್ಥೆಗಳಾಗಲೀ ವ್ಯಕ್ತಿಯೇ ಆಗಲೀ ಆದಾಯ ತೆರಿಗೆ ಪಾವತಿಸಲೇ ಬೇಕು. ಇದು ಒಂದು ಸಾಮಾಜಿಕ ನ್ಯಾಯ.  ಸಾಮಾಜಿಕನ್ಯಾಯವನ್ನು ಅಂಗೀಕರಿಸುವುದಕ್ಕೆ ಹಿಂಜರಿಯುವುದೆಂದರೆ ವ್ಯವಸ್ಥೆಯ ವಿರುದ್ದ ಸಂಚರಿಸುವುದು ಎಂದರ್ಥ. ಸರಕಾರಿ ವ್ಯವಸ್ಥೆ ಕೊಡುವ ರಸ್ತೆ ವಿದ್ಯುತ್ ಮೊದಲಾದ ಸಾರ್ವಜನಿಕ ಸೌಲಭ್ಯಗಳನ್ನು ಉಪಯೋಗಿಸುವಾಗ ಸಾಮಾಜಿಕ ನ್ಯಾಯದಿಂದ ಪಲಾಯನವಾಗುವುದು ಸಾಧ್ಯವಾಗುವುದಿಲ್ಲ. ಸರಕಾರೀ ವ್ಯವಸ್ಥೆಯ ವಿರುದ್ಧ ಹೋಗುತ್ತಾ,   ನಮ್ಮದೇ ಸರಕಾರದ ವ್ಯವಸ್ಥೆಯಲ್ಲಿ ಈ ಉಪ್ಪಿನ ಸತ್ಯಾಗ್ರಹದ ಥಂಡೀಯಾತ್ರೆಯ ಅಗತ್ಯವಿದೆಯೇ?
            ಕೊನೆಯಲ್ಲಿ ಒಂದು ದೇವರ ಹೆಸರನ್ನು ಮುಂದಿಟ್ಟುಕೊಂಡು ವ್ಯವಹರಿಸುವಾಗ ತಪ್ಪು ಒಪ್ಪುಗಳು ಅಂತಿಮ ನಿರ್ಣಯ ದೇವರದ್ದೇ ಆಗಿರುತ್ತದೆ ಹೊರತು ಅಲ್ಲಿ ಮನುಷ್ಯನ ಹಸ್ತಕ್ಷೇಪ ಸಲ್ಲುವುದಿಲ್ಲ. ತಪ್ಪು ಮಾಡಿದವರು ಮನುಷ್ಯನಿಗೆ ಅಂಜದೇ ಇದ್ದರೂ ಪರಮಾತ್ಮನ ವ್ಯವಸ್ಥೆಗೆ ಗೌರವಿಸಲೇ ಬೇಕು.  ಅಂಬೆ ಎಷ್ಟು ಕೆಟ್ಟವಳಾದರೂ ಅವಳ ಶಾಪ ಭೀಷ್ಮನಿಗೆ ಬಾಧಕವಾಯಿತು.
            ಇವಿಷ್ಟು ಅಭಿಪ್ರಾಯಗಳು ಕೇವಲ ಇಲ್ಲಿಗಷ್ಟೇ ಸೀಮಿತ. ಕೇವಲ ಸೌಹಾರ್ದದ ದೃಷ್ಟಿಯಲ್ಲಿ ವೈರ ವೈಷಮ್ಯಗಳನ್ನು ಮರೆತು ಮಾನವೀಯತೆಯಿಂದ ಬದುಕುವುದಕ್ಕೆ ಕಿಂಚಿತ್ ಆದರೂ ಪ್ರಚೋದನೆಯನ್ನು ಒದಗಿಸಲಿ ಎಂಬ ಆಶಯ.  ಶ್ರೀಮಂತನಾದರೂ ಬಡವನಾದರು ಯಜಮಾನನಾದರೂ ನೌಕರನಾದರೂ ಜಾತಿ ಪಂಗಡದ ಸೀಮೆಯನ್ನು ದಾಟಿ ಪರಮಾತ್ಮನ ಎದುರು ಹೆಚ್ಚೇಕೆ ನಮ್ಮ ಅಮ್ಮನ ಎದುರು ಸಮಾನರೆ, ಮಕ್ಕಳಲ್ಲಿ ಭೇದ ಭಾವ  ಅಮ್ಮನಾದವಳು ಕಾಣುವುದಿಲ್ಲ. ಈ ವಿಶ್ವಾಸವಿದ್ದುಕೊಂಡು ನಮ್ಮ ವರ್ತನೆ ಇರಬೇಕು.  ಮಹಾಭಾರತ ಯುದ್ದವನ್ನು ತಪ್ಪಿಸುವುದಕ್ಕೆ ಶ್ರೀಕೃಷ್ಣ ಪರಮಾತ್ಮ ಕೊನೆಯವರೆಗೂ ಶ್ರಮಿಸುತ್ತಾನೆ. ಕೇವಲ ಸೌಹಾರ್ದ ನೆಲೆ ನಿಲ್ಲಲಿ ಎಂಬ ಆಶಯ. ಇಂದಿಗೆ ಆ ಪರಮಾತ್ಮ ಆಶಯವನ್ನು ನಾವು ಮರೆತಂತೆ ವರ್ತಿಸುವುದು ಸರಿಯಲ್ಲ.