ಹಲವು ವರ್ಷಗಳ ಹಿಂದಿನ ಒಂದು ಘಟನೆ. ನಮ್ಮೂರಿನಿಂದ ಮಹನೀಯರೊಬ್ಬರು ನಮ್ಮಲ್ಲಿಗೆ ಬಂದಿದ್ದರು. ಗುರು ಸಮಾನರು. ಅದಾವುದೋ ಕೆಲಸಕ್ಕೆ ಇಲ್ಲಿ ಬೆಂಗಳೂರಲ್ಲಿ ಹಲವು ಕಡೆಗಳಿಗೆ ಹೋಗುವ ಅನಿವಾರ್ಯತೆ ಅವರಿಗಿತ್ತು. ಅದಕ್ಕಾಗಿ ನನ್ನ ಸಹಾಯ ಕೇಳಿದ್ದರು. ಅದಾಗಲೇ ಅವರು ಬೆಂಗಳೂರಿಗೆ ಬಂದು ಕೆಲವು ದಿನಗಳಾಗಿತ್ತು. ಹಲವು ಕಡೆಗೆ ಹೋಗಿದ್ದರೂ ಕೊನೆಗೆ ನನ್ನ ಸಹಾಯ ಕೇಳಿದ್ದರು. ಮುಕ್ತ ಮನಸ್ಸಿನಿಂದ ಒಂದು ದಿನ ಪೂರ್ಣವಾಗಿ ಅವರೊಡನೆ ಕಳೆದೆ. ಅವರು ಹೇಳಿದೆಡೆಯೆಲ್ಲ ನನ್ನ ವಾಹನದಲ್ಲಿ ಕರೆದುಕೊಂಡು ಹೋದೆ. ಹಲವು ಮನೆಗಳಿಗೆ ಕಛೇರಿಗಳಿಗೆ ನಾವು ಜತೆಯಾಗಿ ಭೇಟಿಕೊಟ್ಟೆವು. ಸಾಯಂಕಾಲವಾಗುತ್ತಿದ್ದಂತೆ ಇನ್ನು ಒಂದೆರಡು ಕಡೆ ಬಾಕಿ ಇದೆ ಅಷ್ಟು ಮುಗಿಸಿ ನನ್ನನ್ನು ಮೆಜೆಸ್ಠಿಕ್ ಬಸ್ ಸ್ಟಾಂಡ್ ಗೆ ಬಿಡು ಅಂತ ಹೇಳಿದರು. ಸರಿ ಎಲ್ಲ ಭೇಟಿಯೂ ಮುಗಿದು ಇನ್ನೇನು ಮೆಜೆಸ್ಟಿಕ್ ಕಡೆಗೆ ನಾನು ಹೋಗಬೇಕಿತ್ತು. ಒತ್ತಾಯದಿಂದ ಮನೆಗೆ ಕರೆದುಕೊಂಡು ಹೋದೆ. ಒಂದಷ್ಟು ಬಿಸಿ ನೀರು ಮಾಡಿ ಸ್ನಾನದ ವ್ಯವಸ್ಥೆ ಮಾಡಿದೆ. ಬೆಚ್ಚಗೆ ಸ್ನಾನ ಮುಗಿಸಿದನಂತರ ನನ್ನಮ್ಮ ಊರಿನಿಂದ ತಂದ ಕೆಂಪು ಕುಚ್ಚಿಲಕ್ಕಿ ಗಂಜಿ ಸಿದ್ದ ಮಾಡಿಟ್ಟಿದ್ದರು. ನಾನು ಊಟ ಮಾಡುವುದಕ್ಕೆ ಒತ್ತಾಯ ಮಾಡಿದೆ. ಸ್ನಾನ ವಾಗುತ್ತಿದ್ದಂತೆ ದಣಿವು ಪರಿಹಾರವಾಗಿ ಹಸಿವಾಗಿರಬೇಕು. ಸರಿ ಎಂದು ಊಟಕ್ಕೆ ಕುಳಿತರು. ಕೆಂಪು ಕುಚ್ಚಿಲಕ್ಕಿಯ ಕೆಂಪು, ಹಾಗಲಕಾಯಿ ಚಟ್ನಿ. ಗುರುಗಳು ಹೊಟ್ಟೆತುಂಬಾ ಉಂಡರು. ಊಟವೇ ಬೇಡ ಎಂದು ಹೇಳಿದ ಗುರುಗಳು ಎರಡೆರಡು ಸಲ ತಟ್ಟೆ ತುಂಬ ಗಂಜಿ ಚಟ್ನಿ ಉಂಡು ತೃಪ್ತಿಯ ತೇಗು ಬಿಟ್ಟೆದ್ದರು. ಇದನ್ನೇ ಹೇಳುವುದು, ನಾಡೀ ಮಿಡಿತ. ನಂತರ ಮೆಜೆಸ್ಟಿಕ್ ತಂದು ಬಿಟ್ಟಾಗ ಅವರು ಹೇಳಿದ ಒಂದು ಮಾತು ಈಗಲೂ ನೆನಪಿದೆ.
” ಬಂದು ಇಷ್ಟು ದಿನ ಆಯ್ತು ಏನೇನೋ ರುಚಿ ಉಂಟು ಅಂತ ತಿಂದು ಹೊಟ್ಟೆ ಕೆಟ್ಟು ಹೋಗಿತ್ತು. ಆದರೆ ಇವತ್ತಿನ ಕುಚ್ಚಿಲಕ್ಕಿ ಗಂಜಿ ಮತ್ತು ಚಟ್ನಿ ಅದೆಲ್ಲವನ್ನೂ ಅಳಿಸಿ ಹಾಕಿತು. ಕೆಟ್ಟು ಹೋದ ಹೊಟ್ಟೆ ಸ್ವಲ್ಪ ಸುಧಾರಿಸಿತು.” ಇಂದಿಗೂ ಊರಿನಲ್ಲಿ ಇವರು ಸಿಕ್ಕಿದಾಗ ನಮ್ಮ ಮನೆಯ ಗಂಜಿ ಊಟ ನೆನಪಿಸುತ್ತಾರೆ. ಬೇರೆ ಹಿತೈಷಿಗಳು ಬಹಳ ಇರಬಹುದು. ಅವರೇನೆಲ್ಲ ವ್ಯಯ ಮಾಡಿ ಉತ್ಕೃಷ್ಟ ಅನ್ನಿಸುವ ಆಹಾರವನ್ನು ತಿನ್ನಿಸಿರಬಹುದು. ಅದು ನೆನಪಿದೆಯೋ ಇಲ್ಲವೊ ಅನುಮಾನ. ಆದರೆ ನಮ್ಮ ಮನೆಯ ಗಂಜಿ ಊಟ ಮರೆಯದಂತಹ ಅನುಭವವನ್ನು ಕೊಟ್ಟಿದೆ.
ಹಲವು ಸಲ ಮನೆ ಬಿಟ್ಟು ದೂರದೂರಿಗೆ ತೆರಳುತ್ತೇವೆ. ಹಸಿವು ನೀಗಿಸುವುದಕ್ಕೆ ಮಾತ್ರವಲ್ಲ ಬಾಯಿ ಚಪಲಕ್ಕೂ ಏನೇನೋ ತಿಂದು ತೇಗುತ್ತೇವೆ. ಆವಾಗ ಮನೆಯ ಗಂಜಿ ಮಜ್ಜಿಗೆ ನೆನಪಾಗುತ್ತದೆ. ಅದೆಂತಹ ತಿಂಡಿ ತಿನಿಸುಗಳು ಮನಸೆಳೆದರೂ ಮನೆಯ ಗಂಜಿರುಚಿ ಮರೆಯಲಾಗುತ್ತಿಲ್ಲ. ಗಂಜಿ ಮಜ್ಜಿಗೆಯ ಪರಂಪರೆಯ ಸೆಳೆತವದು. ಅದೇ ನಮ್ಮ ಪರಂಪರೆಯ ಬೇರು.
ಲೌಕಿಕ ವ್ಯವಹಾರಕ್ಕೆ ನಾವು ಅನಿವಾರ್ಯತೆಯಿಂದ ಯಾವುದನ್ನೋ ಅನುಸರಿಸಬಹುದು. ಆದರೆ ನಾವು ನಾವಾಗಿ ಹೋಗುವ ಅನುಭವವಾಗುವುದು ಪರಂಪರೆಯ ಹಾದಿಯಲ್ಲಿ ನಡೆದಾಗ. ಕಛೇರಿಯಲ್ಲೋ ನೌಕರಿಯಲ್ಲೋ ನಾವು ನಾವಾಗಿ ಇರದೇ ಯಾವುದೋ ಎರಕಕ್ಕೆ ಬದಲಾಗಿ ಹೋಗಬಹುದು. ಆದರೆ ಮನೆಗೆ ಬಂದು ತುಂಡು ಬೈರಾಸಲ್ಲಿ ಸಹಜವಾಗಿರುತ್ತೇವೆ. ಹೊರಗೆ ಯಾವುದೋ ವಸ್ತ್ರ ಧರಿಸಿ ಹೋರಲೋಕಕ್ಕೆ ಯಾವುದೋ ರೂಪವನ್ನು ತೋರಿಸಿದರೂ ಮನೆಗೆ ಹೋದಾಗ ಅದೇ ತುಂಡು ಬೈರಾಸು ಕೊಡುವ ಸ್ವಕೀಯ ಭಾವ ಕಳೆದು ಹೋಗುವ ನಮ್ಮತನವನ್ನು ಗುರುತಿಸುತ್ತದೆ.
ಯಕ್ಷಗಾನದ ವಿಚಾರಕ್ಕೆ ಬಂದಾಗ ಈ ತುಂಡು ಬೈರಾಸಿನ ಪರಂಪರೆ ಆವಾಗವಾಗ ಅನುಭವಕ್ಕೆ ಬರುತ್ತದೆ. ಮೊನ್ನೆ ತಾನೆ ಆಪ್ತ ಮಿತ್ರ ರಂಗನಾಥರು ಯಥಾ ಪ್ರಕಾರ ಹಿಮ್ಮೇಳ ದಾಖಲೀಕರಣವೊಂದನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟರು. ಯಕ್ಷಗಾನದ ಪರಂಪರೆಯ ಅಗರೀ ಶೈಲಿಯ ಹಾಡುಗಾರಿಕೆಯ ವಿಡಿಯೋ ಮುದ್ರಣವದು. ಅದನ್ನು ಕೇಳುತ್ತಿದ್ದಂತೆ ಪರಫರೆಯ ಗಾಢ ಅನುಭವವಾಗಿ ಯಕ್ಷಗಾನ ಪರಂಪರೆಯ ಮುಖ ಒಂದನ್ನು ನೋಡಿದಂತಾಯಿತು.
ಇಂದು ಯಕ್ಷಗಾನ ಯಾವ ರೀತಿಯಲ್ಲಿ ಬದಲಾಗಿ ಹೋಗಿದೆ ಎಂದು ಗುರುತಿಸುವುದು ಆಕಾಶದಲ್ಲಿ ನಕ್ಷತ್ರವನ್ನು ಎಣಿಸಿದಂತೆ. ಅಲ್ಲಿ ಪ್ರಭೆಗಳು ಎಷ್ಟಿದ್ದರೂ ಪ್ರಕಾಶವೇ ಇಲ್ಲ. ಯಾವುದನ್ನೋ ತೋರಿಸಿ ಇದೇ ಯಕ್ಷಗಾನ ಎಂದು ಬಿಂಬಿಸುವ ಮಿಥ್ಯಾ ಹಾದಿಯಲ್ಲಿ ಯಾವುದನ್ನೋ ಹಿಂಬಾಲಿಸುವಾಗ ಮೂಲ ಯಕ್ಷಗಾನದ ಅನುಭವ ಕೆಲವೊಮ್ಮೆ ಸಾಧ್ಯವಾಗುತ್ತದೆ. ಮೂಲ ಎಂದರೆ ಅದು ಮೌಲ್ಯಯುತವಾದದ್ದು ಎಂಬ ಅರಿವಾಗುತ್ತದೆ.
ಕೆಲವು ವಾರದ ಹಿಂದೆ ಯುವ ಮದ್ದಲೆವಾದಕ ಹಾಗೂ ಲೇಖಕ ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯರ ಲೇಖನ ಒಂದು ಬಹಳವಾಗಿ ಗಮನ ಸೆಳೆಯುತ್ತದೆ. ಹಿರಿಯ ಭಾಗವತ ಅಗರಿ ಶ್ರೀನಿವಾಸ ಭಾಗವತರ ನೇರ ಶಿಷ್ಯ ಶ್ರೀ ಗಜಂತೋಡಿ ಸುಬ್ರಾಯ ಭಟ್ಟರ ಬಗೆಗಿನ ಲೇಖನವದು. ಅಗರಿ ಪರಂಪರೆಯನ್ನು ಅನುಸರಿಸಿ ಬಂದಿರುವ ಗಜಂತೋಡಿಯವರ ಲೇಖನ ಬಹಳ ಮಾರ್ಮಿಕವಾಗಿ ಗಮನಸೆಳೆದಿದ್ದದ್ದು ಹಲವು ವಿಷಯಗಳಿಂದ. ಪೂರ್ಣವಾಗಿ ಪಳೆಯುಳಿಕೆಯಾದಂತೆ ಇದ್ದಒಂದು ಅದ್ಭುತ ಶೈಲಿಯೂ ಹಸಿ ಚಿಗುರನ್ನು ಉಳಿಸಿಕೊಂಡಿದೆ ಎಂದು ತಿಳಿದು ಆಶ್ಚರ್ಯವಾಯಿತು. ಇದನ್ನು ಯಥಾ ಪ್ರಕಾರ ಮಿತ್ರ ರಂಗನಾಥರಲ್ಲಿ ಹೇಳಿಕೊಂಡೆ. ಆದರೆ ಅದು ಇಷ್ಟು ಬೇಗ ಲಭ್ಯವಾಗುತ್ತದೆ ಎಂದು ಕಲ್ಪಿಸಿರಲಿಲ್ಲ.
ಗಜಂತೋಡಿಯರು ಸುಮಾರು ಐವತ್ತಕ್ಕೂ ಹೆಚ್ಚು ಪದಗಳನ್ನು ಅದೇ ಅಗರಿಶೈಲಿಯಲ್ಲಿ ಯಾವುದೇ ಮಾರ್ಪಾಟು ಇಲ್ಲದೇ ಹಾಡಿದ್ದಾರೆ. ಮುನಿವರರು ಲಾಲಿಸುವುದು.. ತ್ರಿವುಡೆ ನಾಟಿಯಲ್ಲಿ ಆರಂಭವಾಗುವ ಪದಗಳು ಅಗರಿ ಶೈಲಿಯ ನಿಜ ಅನುಭವವನ್ನು ಉಣಬಡಿಸುತ್ತಾ ಮುಂದೆ ಹೋಗುತ್ತದೆ. ಒಂದೊಂದು ಪದಗಳೂ ವಿಭಿನ್ನ ಅನುಭವವನ್ನು ಒದಗಿಸುತ್ತದೆ. ಗಜಂತೋಡಿಯವರ ಶ್ರದ್ದೇ ಸಮರ್ಪಣಾ ಮನೋಭಾವ ಸ್ಪಷ್ಟವಾಗಿ ಉಲ್ಲೇಖವಾಗುತ್ತದೆ. ಅದರಲ್ಲೂ ಭೀಂ ಪಲಾಸ್ ರೂಪಕ ದಲ್ಲಿ ಹಾಡಿದ ಸುರಥ ವೈಶ್ಯರು , ಅದೇ ರಾಗದಲ್ಲಿ ಹಾಡಿದ ದ್ವಾದಶಾದಿತ್ರ್ಯರೇ ಏಕಾದಶ ರುದ್ರರು ಎಂಬ ಪದ, ಪಂಚವಟಿಯ ನೋಡಿ ನಿರ್ಮಲ ಮುಂತಾದ ಪದಳು ಕೇಳುಗನಿಗೆ ಹೊಸ ಅನುಭವವನ್ನು ನೀಡುತ್ತದೆ. ಚರಣ ದಿ ಪೊಗಳುವ ತರುಣಿಯ ಪಿಡಿದೆತ್ತಿ ಅಗರಿ ಶೈಲಿಯ ವಿಶಿಷ್ಟತೆಯನ್ನು ತೋರಿಸುತ್ತವೆ. ಹಾಗೆ ನೋಡಿದರೆ ಪ್ರತಿಯೋಂದು ಪದವೂ ಸಹ ವಿಶೇಷವಾಗಿ ಗಮನಾರ್ಹವಾಗುತದೆ.
ಸಂದರ್ಶನಕ್ಕಾಗಿ ಇಲ್ಲಿ ನೋಡಿ
https://yaksharangabykateelusitla.blogspot.com/2018/09/blog-post_10.html
ಇದರಲ್ಲಿ ತುಂಬ ಗಮನಾರ್ಹವಾಗುವುದು ಒಂದು ಶೈಲಿಯ ಕ್ರಮದಲ್ಲಿ ಇರುವ ಬದ್ಧತೆ ಬಹಳ ಆಶ್ಚರ್ಯವಾಗುತ್ತದೆ. ಇಲ್ಲಿ ಬೇರಾವುದೇ ಪ್ರಭಾವಕ್ಕೆ ಒಳಗಾಗದೇ ಅಪ್ಪಟ ಅಪರಂಜೀ ಸ್ವಭಾವ ಇದೆಯಲ್ಲ ಅದು ಇರುವುದರಿಂದಲೇ ಇದು ಸಾಧ್ಯವಾಗುತ್ತದೆ. ಎಲ್ಲೋ ಕಾಡು ಗುಡ್ಡದಲ್ಲಿನ ಸಂಜೀವಿನಿ ಚಿಗುರಿನಂತೆ ಒಂದು ವಿಶಿಷ್ಟ ಅನುಭವವನ್ನು ಕೊಡುತ್ತದೆ. ಕೇಳುತ್ತಾ ಹೋದಂತೆ ಒಂದು ಆವರಣದಲ್ಲಿ ಸಿಲುಕಿದಂತೆ ಅಗರಿ ಶೈಲಿಯ ಒಂದಷ್ಟು ವಿಸ್ತೃತ ಸ್ವರೂಪವನ್ನು ನೋಡಿದ ಅನುಭವವಾಗುತ್ತದೆ.
ಯಕ್ಷಗಾನದಲ್ಲಿ ಅಗರಿ ಶೈಲಿ ಎಂಬುದು ಅಪ್ಪಟ ಯಕ್ಷಗಾನ ಪರಂಪರೆಯ ಶೈಲಿ. ಯಕ್ಷಗಾನದ ಜಾನಪದೀಯ ಗುಣಗಳಿಗೆ ಇದು ಹೊಂದಿಕೊಳ್ಳುತ್ತದೆ. ಇದಕ್ಕೆ ಕಾರಣ ಇದರಲ್ಲಿರುವ ಒಂದು ರಂಗಸಂಗೀತ ಗುಣ. ಪದಗಳನ್ನು ಕೇಳಿದಂತೆ ಒಂದು ರಂಗ ದೃಶ್ಯ ಕಣ್ಣೆದುರಿಗೆ ಬಂದು ನಿಂತಂತೆ ಭಾಸವಾಗುತ್ತದೆ. ರಂಗನಿಯಮಗಳು ಸರಳವಾಗಿ ಐಕ್ಯವಾಗುವುದರಿಂದಲೇ ಇದು ಸಾಧ್ಯವಾಗುತ್ತದೆ. ರಾಗವಾಗಲೀ ತಾಳವಾಗಲೀ ನೋಡುವುದಕ್ಕೆ ಕೇಳುವುದಕ್ಕೆ ಬಹಳ ಸರಳವಾಗಿ ಕಂಡರೂ ಅದರ ಆಂತರಾಳದಲ್ಲಿ ಒಂದು ಸ್ಪಷ್ಟವಾದ ಗಟ್ಟಿಯಾದ ಭಾವವಿದೆ. ಅದು ಇಲ್ಲಿ ಸುಲಭವಾಗಿ ವ್ಯಕ್ತವಾಗುತ್ತದೆ. ಹಾಗಾಗಿಯೇ ಇದು ಅಪ್ಪಟ ಅಗರಿ ಶೈಲಿಯಂತೆ ಭಾಸವಾಗುವುದು. ಆರಂಭವಾಗಿ ಕೆಲವು ಘಳಿಗೆಯಲ್ಲಿ ಮುಗಿದು ಹೋಗುವ ಪದ ಶೈಲಿ ಒಂದು ಬಗೆಯಾದರೆ, ಆ ಕ್ಷಣಗಳಲ್ಲಿ ಅದು ಸೃಷ್ಟಿಸುವ ಭಾವ ವೈವಿಧ್ಯ ಅತ್ಯಂತ ವಿಪುಲವಾಗಿರುತ್ತದೆ. ಪಳಗಿದ ಕಲಾವಿದ ಬಿಡಿ ಒಬ್ಬ ಸಾಮಾನ್ಯ ಮನುಷ್ಯನಾದರೂ ಕಲಾವಾಸನೆ ಲವ ಲೇಶವೂ ಇಲ್ಲದ ಪಾಮರನೇ ಆಗಲಿ ಪದ ಕೇಳೀದಂತೆ ತಾಳ ಲಯಕ್ಕೆ ಸ್ಪಂದಿಸತೊಡಗುತ್ತಾನೆ. ಇದು ರಂಗ ಸಂಗೀತದ ಗುಣ. ಇದರ ಭಾವ ವೈವಿಧ್ಯ ಅತ್ಯಂತ ವಿಶಿಷ್ಟ. ಕ್ಷಣಗಳಲ್ಲಿ ವೆತ್ಯಾಸವಾಗುವ ಭಾವ ವೆತ್ಯಾಸಗಳು ಒಬ್ಬ ಕಲಾವಿದನಿಗೆ ಇದು ಸವಾಲಿನಂತೆ ಭಾಸವಾದರೂ ಕಲಾವಿದನನ್ನು ಅದರಲ್ಲಿ ಲೀನವಾಗುವಂತೆ ಮಾಡಿ ತನ್ನೊಳಗಿನಿಂದ ಭಾವ ವೆತ್ಯಾಸಗಳಿಗೆ ಸ್ಪಂದನೆಯನ್ನು ಸ್ವತಃ ಒದಗಿಸುತ್ತದೆ, ಅಂದರೆ ಒಬ್ಬ ಕಲಾವಿದ ರಂಗದಲ್ಲಿರುವಾಗ ಪದ ಕೇಳಿದಾಗ ಆತನ ಕಾಲುಗಳು ಹೆಜ್ಜೆಹಾಕಿದರೆ ಕೈಗಳು ಮುದ್ರೆಯನ್ನೊದಗಿಸುತ್ತವೆ. ಅಂಗೋಪಾಂಗಗಳು ಸ್ಪಂದಿಸತೊಡಗುತ್ತದೆ. ಇದು ಯಾವುದೇ ಒಂದು ರಂಗ ಪ್ರಾಕಾರದ ಗುಣ. ಹಾಗಾಗಿಯೇ ಅಗರಿ ಶೈಲಿ ಯಕ್ಷಗಾನದಂತಹ ಒಂದು ಜಾನಪದೀಯ ಕಲೆಗೆ ಬಹಳ ಆಪ್ಯಾಯಮಾನವಾಗುತ್ತದೆ.
ಸರಳವಾಗಿ ಯಾರೂ ಸಹ ಹಿಂಬಾಲಿಸುವಂತಹ ಗುಣ ಇದ್ದರೂ ಅಗರಿ ಶೈಲಿ ತಾಳ ಲಯಕ್ಕೆ ನಿಬದ್ದವಾಗಿ ಒಂದು ಶಾಸ್ತ್ರೀಯ ಚೌಕಟ್ಟಿನಲ್ಲೇ ವ್ಯವಹರಿಸುತ್ತದೆ. ಒಬ್ಬ ಕಲಾವಿದನಿಗೆ ರಂಗದಲ್ಲಿ ಪದ ಕೇಳುವಾಗ ಸ್ವಯಂ ಭಾವ ಪ್ರಕಟನೆಗೆ ಪ್ರಚೋದಿಸುತ್ತದೆ. ಕೆಲವು ಕ್ಷಣಗಳಲ್ಲಿ ಮುಗಿಯುವ ಹಾಡುಗಾರಿಕೆಯಲ್ಲಿ ಭಾವ ವೆತ್ಯಾಸವನ್ನು ಕಲಾವಿದ ಕ್ಷಿಪ್ರವಾಗಿ ತೋರಿಸುತ್ತಾನೆ.
ಯಕ್ಷಗಾನ ಚಾಲುಕುಣಿತ ಮತ್ತು ದೀರ್ಘವಾದ ಭಾಗವತಿಕೆಯ ಭಾರದಿಂದ ಸುಸ್ತಾಗಿ ಹೋಗಿದೆ. ಅಗರಿ ಶೈಲಿಯಂತಹ ಒಂದೆರಡು ಘಳಿಗೆಯ ಪದಗಳು ಯಕ್ಷಗಾನ ಪರಂಪರೆಯನ್ನು ಗಾಢವಾಗಿ ಬಿಂಬಿಸಿದರೂ ಹೇಳ ಹೆಸರಿಲ್ಲದಂತಹ ಸ್ಥಿತಿ ಒದಗಿ ಬಂದಿದೆ. ಆದರೂ ಅಗರಿ ಶೈಲಿ ಇಂದು ಅನುಕರಣೆಯ ಧಾಳಿಗೆ ದಾರುಣವಾಗಿ ತುತ್ತಾಗಿದೆ ಎನ್ನಬಹುದು. ಈ ಧ್ವನಿ ಮುದ್ರಣದ ಪದಗಳು ಇದಕ್ಕೆ ಪೂರಕವಾದ ಸಾಕ್ಷ್ಯವನ್ನು ಒದಗಿಸುತ್ತವೆ. ಅದರ ಆಳ ಅಗಲದ ಅರಿವಿಲ್ಲ ಅದನ್ನು ಗುರು ಮುಖೇನ ಅಭ್ಯಾಸ ಮಾಡದೇ ಕೇವಲ ಅನುಕರಣೆಯಿಂದ ಆಗುವ ಪ್ರಮಾದವಿದು. ಗಜಂತೋಡಿಯವರ ಭಾಗವತಿಕೆಯಲ್ಲಿ ಬೇರೆ ಯಾವುದೇ ಗಿಮಿಕ್ ಕಸರತ್ತುಗಳಿಲ್ಲದೇ ಅದು ಕೇವಲ ಅಗರೀ ಶೈಲಿಗೆ ಮೀಸಲಾಗಿದೆ. ಹಾಗಾಗಿಯೇ ಅದರ ಗಟ್ಟಿತನ ವ್ಯಕ್ತವಾಗುತ್ತದೆ. ಒಬ್ಬ ಸಾಮಾನ್ಯ ಅಗರಿಶೈಲಿಯಂತೆ ಹಾಡಿದರೆ ಅದನ್ನು ಮಿಮಿಕ್ರಿ(ಅನುಕರಣೆ) ಪ್ರತಿಭೆ ಎಂದು ಪುರಸ್ಕರಿಸಬಹುದು. ಆದರೆ ಒಬ್ಬ ಭಾಗವತ ಅದನ್ನು ಅನುಕರಣೆ ಮಾಡಿದರೆ ಅದು ಮಿಮಿಕ್ರಿಯಾದರೂ ಅದು ಒಂದು ಶೈಲಿಗೆ ಗೈಯುವ ಅವಹೇಳನವಾಗುತ್ತದೆ. ಯಾಕೆಂದರೆ ರಾಗ ತಾಳ ಲಯ ಇದರ ಬಗ್ಗೆ ಜ್ಞಾನ ಹೊಂದಿರುವವರು ಎಚ್ಚರ ವಹಿಸಬೇಕಾದ ವಿಚಾರವಿದು. ಎಲ್ಲ ತಿಳಿದೂ ಅವರು ಅನುಕರಣೆಗಷ್ಟೆ ಬದ್ಧರಾಗುತ್ತಾರೆ ಎಂದಾದರೆ ಅದು ಅಕ್ಷಮ್ಯ ಅಪರಾಧ. ಇಂದು ಅಗರಿ ಶೈಲಿ ಅಂತ ಕೇಳಿ ಬರುವ ಪದಗಳು ಬಹಳಷ್ಟು ಅನುಕರಣೆಯೇ ಆಗಿರುವುದು ಮಾತ್ರ ವಿಪರ್ಯಾಸ ಎನ್ನಬೇಕು.
ಈ ದಾಖಲೀಕರಣದಲ್ಲಿ ಧ್ವನಿಮುದ್ರಣದಿಂದ ತೊಡಗಿ ಎಲ್ಲವೂ ಅಚ್ಚುಕಟ್ಟಾಗಿದೆ. ಕೆಲವೊಂದು ದೋಷಗಳಿದ್ದರೂ ಇರಬಹುದು. ಆದರೆ ಒಟ್ಟಿನಲ್ಲಿ ಪ್ರಯತ್ನ ಅತ್ಯಂತ ಸ್ತುತ್ಯರ್ಹವಾಗಿದೆ. ಕಳೆದೇ ಹೋಗಿದೆ ಎನೋ ಎಂದು ಅಂದುಕೊಂಡಿದ್ದಂತಹ ಗಿಡ ಮೂಲಿಕೆ ಬೇರು ಸಹಿತ ಸಿಕ್ಕಂತಹ ಅನುಭವವಾಗಿದೆ.ಮೌಲ್ಯಯುತವಾದ ಅಗರಿ ಶೈಲಿ ನಿಜಾರ್ಥದಲ್ಲಿಯೂ ಒಂದು ಮೂಲಿಕೆ. ಇದರಲ್ಲಿ ಮದ್ದಲೆವಾದನದಲ್ಲಿ ಸಹಕರಿಸಿದ ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯರೂ ಪ್ರಶಂಸನೀಯ ಕೆಲಸವನ್ನು ಯಥಾ ಪ್ರಕಾರ ಗೈದಿದ್ದಾರೆ.

