"ಇದು ವಿಮರ್ಶೆಯಲ್ಲದ ಚಿಂತನ"

Sunday, December 23, 2018

ವ್ಯರ್ಥವಾಗುವ ಗುರುಸ್ಥಾನ


ವ್ಯರ್ಥವಾಗುವ ಗುರುಸ್ಥಾನ

ಹೇಳಿಕೇಳಿ ಅದು ಶಿವಮೊಗ್ಗದ ರೈಲು ನಿಲ್ದಾಣ. ಯಕ್ಷಗಾನ ತೀರ ಅಪರಿಚಿತವಲ್ಲದೇ ಇದ್ದರೂ ಅಲ್ಲಿದ್ದ ಜನ ಜಂಗುಳಿಯಲ್ಲಿ  ಯಕ್ಷಗಾನದ ಬಗ್ಗೆ ತಿಳಿದವರು ಇರಲಾರದು ಎಂದೇ ನನ್ನ ಅನಿಸಿಕೆಯಾಗಿತ್ತು. ಈ ಅನಿಸಿಕೆಯನ್ನು ಸುಳ್ಳಾಗಿಸುವಂತೆ ಹತ್ತಿರದಲ್ಲಿ ಕುಳಿತಿದ್ದ ವಯೋ ವೃದ್ಧರು ಕೇಳಿದರು ಅದು “ ಶೇಣಿಯವರ ಪುಸ್ತಕನಾ? “  

ಶೇಣಿ ಭಾರತವನ್ನು ಓದುತ್ತಿದ್ದ ನಾನು ಒಂದು ಸಲ ಅವಾಕ್ಕಾಗಿ ಅವರ ಮುಖನೋಡಿ ಒಂದಷ್ಟು ಹೊತ್ತು ದಿಗ್ಮೂಢನಾದೆ. ನಂತರ ಹೂಂ ಹೌದೆಂದು ತಲೆಯಾಡಿಸಿದೆ. .
ಹೀಗೆ ಮೊನ್ನೆ ಮಧ್ಯಾಹ್ನ  ಶಿವಮೊಗ್ಗದ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾದು ಕುಳಿತಿದ್ದೆ. ಕಾರಣಾಂತರದಿಂದ  ಬೆಂಗಳೂರಿನಿಂದ ರೈಲು ಬರುವ ವೇಳೆ ಬಹಳ ವಿಳಂಬಿಸಿತ್ತು. ಅದರ ಪ್ರಕಟಣೆ ನಿಲ್ದಾಣ ತುಂಬೆಲ್ಲ ವ್ಯಾಪಿಸಿತ್ತು.  ತಡವಾದ ರೈಲಿಗೆ ಕಾಯುವುದೆಂದರೆ ಅದು ಒಂದು ಯಾತನೆಯೇ ಸರಿ.  ರೈಲು ನಿಲ್ದಾಣ ಬಹಳಷ್ಟು ತುಂಬಿ ಕುಳಿತುಕೊಳ್ಳುವುದಕ್ಕೆ ಜಾಗವೇ ಇರಲಿಲ್ಲ.  ಕೊನೆಗೆ ಬೆಂಚೊಂದರಲ್ಲಿ ಕುಳಿತಿದ್ದ ವೃದ್ಧರೊಬ್ಬರು ಸ್ವಲ್ಪ ಸರಿದು ಕುಳಿತುಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟರು. ಸಮಯವಿದೆಯಲ್ಲ,  ಎಂದು ಕೊಂಡು ತಂದಿದ್ದ ಅತ್ಯಂತ ಹಳೆಯ ಪುಸ್ತಕವನ್ನು ಮಡಿಲಲ್ಲಿರಿಸಿ ಓದುವುದಕ್ಕಾರಂಭಿಸಿದೆ. ಯಕ್ಷಗಾನ ಮೇಧಾವಿ ವಾಗ್ಮಿ ಸರಸ್ವತೀ ಸಂಜಾತ ಹರಿದಾಸ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರ ಅರ್ಥಗಾರಿಕೆಯ ಕುರಿತಾದ ಬ್ರಹತ್ ಗ್ರಂಥವದು!!!  ಶೇಣಿಯವರ ಮುಖಚಿತ್ರ ಪುಸ್ತಕದ ಮೇಲಿತ್ತು.
ಒಂದು ಸಲ ನನ್ನಿಂದ ಆ ಪುಸ್ತಕವನ್ನು  ಕೊಂಡು ನೋಡಿದರು. ನಂತರ ಕೆಲವು ಅನಿಸಿಕೆಗಳನ್ನು  ಹೇಳಿದರು . ಯಥಾವತ್ ಆ ಅನಿಸಿಕೆಗಳು ಇಲ್ಲಿ ವ್ಯಕ್ತವಾಗಿವೆ.  ಶಬ್ದಗಳು ವೆತ್ಯಾಸವಾದರೂ ಆ ಭಾವಗಳು ಸಾಧ್ಯವಾದಷ್ಟು ವ್ಯಕ್ತವಾಗಿವೆ. ಬಹಳಷ್ಟು ವಿಚಾರಗಳು ಬಂದರೂ ಒಂದು ವಿಚಾರ ನನಗೆ ಗಮನಾರ್ಹ ಎನಿಸಿತು.
“ ಶೇಣಿಯವರು ಬಹಳ ದೊಡ್ಡ ಕಲಾವಿದರು. ಅವರ ಅರ್ಥ ಕೇಳುವುದಕ್ಕಾಗಿಯೇ ಮೈಲುಗಟ್ಟಲೆ ರಾತ್ರಿ ಹಗಲು ವೆತ್ಯಾಸ ವಿಲ್ಲದೇ ನಡೆದು ಹೋಗಿದ್ದೇವೆ.  ಅದೊಂದು ಕಾಲವಿತ್ತು. ಅವರ  ರಾವಣ ಕೇಳಿ ಹೀಗೂ ಉಂಟೆ ಅಂತ ಆಶ್ವರ್ಯವಾಗಿತ್ತಿತ್ತು.   ಅದನ್ನು ನಮ್ಮ ಮಾತಿನಲ್ಲಿ ಹೇಳುವುದು ಕಷ್ಟ. ಒಂದೆರಡು ಘಂಟೆಯ ಅರ್ಥ ಕೇಳಿ ದಿನವಿಡೀ ಅದರ ಬಗ್ಗೆ ಯೋಚಿಸುವಂತಾಗುತ್ತಿತ್ತು. ಕೇವಲ ಅವರ ನಾಲಿಗೆಯಲ್ಲಿ ನಲಿದದ್ದು ನೋಡಿ ಪುಸ್ತಕವಾಗಿದೆ.   “
ಅದು ಹೌದು, ಶೇಣಿಯವರು ಮಾತನಾಡಿದ್ದು ನೆನಪಾಗಿ ಉಳಿಯುತ್ತಿತ್ತು. ಅ ಅರ್ಥಗಳು ತಲೆಯಲ್ಲಿ ಹಿಡಿಸಲಾರದಷ್ಟು ವಿಪುಲ ವಿಚಾರಗಳನ್ನು ಹೊಂದಿದ್ದರೆ ಇನ್ನು ಕೆಲವು ಹೊಸ ಚಿಂತನೆಗೆ ಪ್ರಚೋದನೆ ಕೊಡುತ್ತಿತ್ತು.  ಅವರ ವಿದ್ವತ್ತು  ಅರ್ಥಗಾರಿಕೆಯಲ್ಲಿ ವಿದ್ಯುತ್ಸಂಚಾರ ಮಾಡಿ ವಿಹರಿಸುತ್ತಿತ್ತು.. ಅದೊಂದು ಶತಮಾನದ ವೈಚಿತ್ರ.  ಮೈಲು ಗಟ್ಟಲೆ ನಡೆದು ಹೋಗುವಂತಹ ಸೆಳೆತವನ್ನು ಒಂದು ನಾಲಗೆ ಸೃಷ್ಟಿಸುವುದೆಂದರೆ ಅದು ಪ್ರವಚನವಲ್ಲ, ಭಾಷಣವಲ್ಲ, ವೇದಾಂಗ ಉಪನಿಷತ್ತು ಯಾವುದೂ ಅಲ್ಲ. ಆದರೆ ಅದೆಲ್ಲವೂ ಆಗಿ ಆ ಸೆಳೆತ ಸೃಷ್ಟಿಯಾಗುತ್ತಿತ್ತು. ವಾಙ್ಮಯ ಪ್ರಪಂಚದ ವಿಸ್ತಾರವನ್ನು ಕಂಡು ಬೆರಗಾಗುತ್ತಿದ್ದೆವು.  
ಇದೀಗ ವಯೋವೃದ್ದರ ಅನಿಸಿಕೆಗಳಲ್ಲಿ ಅತಿಶಯಗಳಿಲ್ಲ.
“ ಶೇಣಿಯವರು ಅರ್ಥಗಾರಿಕೆಗೆ ಒಂದು ಆಯಾಮವನ್ನು ಸೃಷ್ಟಿ ಮಾಡಿದವರು. ಯಕ್ಷಗಾನ ಪಾತ್ರಗಳು ಎಂದರೆ ಅದು ಹೀಗೆ  ಅಂತ ನಮಗೆ ಅನ್ನಿಸಿದ್ದು ಅವರ ಅರ್ಥ ಗಾರಿಕೆ ಕೇಳಿ. ಆದರೆ ಆ ಅಯಾಮಗಳೆಲ್ಲ ಈಗ ಆಕಾರವನ್ನು ಕಳೆದುಕೊಂಡಿದೆ. ಅವರ ಅರ್ಥಗಾರಿಕೆಯಲ್ಲಿ ವಿದ್ವತ್ತು ಇತ್ತು ಈಗ ಎಂತದು. ಅವರನ್ನು ಅನುಕರಿಸುತ್ತಾರೆ. ಅದು ಸರಿಯಾದ ಅನುಕರಣೆಯೂ ಅಲ್ಲ ಎಂಥದೋ ಒಂದು ಒಟ್ಟು ಅವರನ್ನು ಗೇಲಿ ಮಾಡಿದಂತೆ ”
“ ಈಗ ತಂಡ ಕಟ್ಟಿಕೊಂಡು ಯಕ್ಷಗಾನ ಎಲ್ಲ ಮಾಡ್ತಾರೆ. ಅದರಲ್ಲಿ ಎಂಥದು ಉಂಟು ಅಂತ ಬೇಸರ ಆಗ್ತದೆ.  ಇನ್ನು ಕೆಲವರ ಅರ್ಥ ಕೇಳಿದರೆ ಎಲ್ಲ ಎಂಜಲು ಎಲೆಯ ಮೇಲಿನ ಕಾಗೆ ನೆನಪಾಗ್ತದೆ. ಬರೇ ಕ್ಯಾಸೆಟ್ ಸಿಡಿ ಕೇಳಿ ನೋಡಿ ರಂಗಸ್ಥಳ ಹತ್ತುತ್ತಾರೆ. ಕ್ಯಾಸೆಟ್ ಕೇಳಿ ಅರ್ಥ ಹೇಳುವುದಕ್ಕೆ ಕಲಿತರೆ ಬೇರೇನು ಆಗಬಹುದು? ಈಗಿನವರಿಗೆ ಗುರುಗಳ ಅಗತ್ಯ ಇಲ್ಲ. ಎಲ್ಲ ಏಕಲವ್ಯ ಸಂತಾನದವರು. ಅರ್ಥ ಧ್ವಂಸಿಗಳು, ಕೇವಲ ಅರ್ಥಗಾರಿಕೆಯಲ್ಲ ಇಡೀ ಯಕ್ಷಗಾನವೇ ಹಾಗಾಗಿ ಹೋಗಿದೆ.”

ಕೇವಲ ಶೇಣಿಯವರ ಚಿತ್ರ ಒಂದು ಇಷ್ಟು ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ ಪ್ರಚೋದಿಸುತ್ತಿದ್ದರೆ  ಶೇಣಿಯವರ ಪಾತ್ರಗಳ ಹಿನ್ನೆಲೆಯದು ಯಾವ ತರಹ ಇರಬಹುದು?

ಎಲ್ಲವನ್ನು ಹೋಲಿಸಿ ನೋಡುವುದು ಸರಿಯಲ್ಲ. ಆದರೂ ಶೇಣಿಯವರು ನಿರ್ಮಿಸಿದ ಅರ್ಥಗಾರಿಕೆಯ ಪ್ರಪಂಚ ವಿಸ್ತಾರ ಅತಿ ದೊಡ್ಡದು. ಅದರೊಳಗಿನ ವಿಹಾರ ಕಂಡವನೇ ಬಲ್ಲ. ಆ ಪ್ರಪಂಚವನ್ನು  ಅಂಗೈಯಲ್ಲಿ ಹಿಡಿದಂತೆ ಕ್ಯಾಸೆಟ್ ಸಿಡಿಗಳು. ಹಾಗಿದ್ದರೂ ಅದರ ಶಿಷ್ಯತ್ವ ಅಂಗೀಕರಿಸಿ ವೇದಿಕೆ ಏರುತ್ತಾರೆ ಎಂದರೆ ಯಕ್ಷಗಾನ ಅಷ್ಟು ಸರಳ ವಸ್ತುವಾಗಿ ಬದಲಾಯಿತೆ ಎಂದು ಅಚ್ಚರಿಯಾಗುತ್ತದೆ.

ಹೀಗೆ ಇರುವ ಸ್ವಲ್ಪ ಹೊತ್ತಿನಲ್ಲಿ ಬಹಳಷ್ಟು ವಿಚಾರಗಳನ್ನು ಹಂಚಿಕೊಂಡರು. ಶೇಣಿಯ ಸಮಕಾಲೀನ ಕಲಾವಿದರ ಬಗ್ಗೆ ಅಪಾರವಾದ ಗೌರವನ್ನು ಇಟ್ಟುಕೊಂಡಿದ್ದರು.  ವಸ್ತು ಸ್ಥಿತಿಯ ಚಿತ್ರಣಗಳು ಸಿಗಬೇಕಾಗದರೆ ಹೀಗೆ ಅಂದಿನ ಪ್ರೇಕ್ಷಕರ ಮನಸ್ಸನ್ನು ತಿಳಿಯಬೇಕು.  ಆದರೆ ಇಂದು ಆ ಪ್ರೇಕ್ಷಕ ವರ್ಗ ದೂರವಾಗುತ್ತದೆ.  ಈಗ ಕೆಲವರಾದರೂ  ಗತಕಾಲದ ನೆನಪಿಗೆ ಸಾಕ್ಷ್ಯವಾಗಿದ್ದಾರೆ. ಅದೆಷ್ಟು ಸಮಯ? ಆ ನಂತರ ಸಾಕ್ಷ್ಯವೂ ಲಭ್ಯವಾಗುವುದಿಲ್ಲ. ಪರಂಪರೆಗಳು ನಾಶವಾದಂತೆ ಸಾಕ್ಷ್ಯಗಳೂ ಇಲ್ಲವಾಗಿ  ಇಂದು ಅದೇನು ಕಾಣುತ್ತದೆಯೋ ಅದೆ ಸತ್ಯವಾಗಿ ಮುಂದಿನ ಪೀಳಿಗೆಗೆ ರವಾನೆಯಾಗುತ್ತಿದೆ.

ಈಗ ನಮ್ಮ ನಡುವೆ ವರ್ಷಗಟ್ಟಲೆ ಗುರು ಸೇವೆ ಮಾಡಿ ವಿದ್ಯೆ ಕಲಿತ ಕಲಾವಿದರು ಇಂದಿಗೂ ಇದ್ದಾರೆ. ಗುರು ಮುಖೇನೆ ಕಲಿತ ವಿದ್ಯೆಯ ಬೆಲೆ ಅಂತಹ ಕಲಾವಿದರಿಂದಲೇ ಕೇಳಿ ತಿಳಿಯಬೇಕು. ಇಂದು ಆ ಗುರು ಪರಂಪರೆ ಕೇವಲ ತಾಂತ್ರಿಕತೆಗೆ ಇಳಿದು ಬಿಟ್ಟಿದೆ.  ಸುಲಭದಲ್ಲಿ ಲಭ್ಯವಾಗುವ ತತ್ರಾಂಶಗಳೇ ಗುರುಗಳು. ಯಕ್ಷಗಾನದ ಪ್ರತಿಯೊಂದು ಅಂಗಕ್ಕೂ ಒಂದೊಂದು ಗುರು ಪರಂಪರೆಯಿದೆ. ವೇಷ ಭೂಷಣದಿಂದ ತೊಡಗಿ ರಂಗ ವಿನ್ಯಾಸದವೆರೆಗೂ ಗುರು ಸ್ಥಾನವಿದೆ. ಆದರೆ ಮಹತ್ವದ ವಿಚಾರಗಳಿಗೆ ಗುರು ದೂರವಾಗಿಬಿಡುತ್ತಾನೆ. ಕ್ಯಾಸೆಟ್ ಕೇಳಿ ಜಾಗಟೆ ತಾಳ ಹಿಡಿದು ಭಾಗವತನಾಗುತ್ತಾನೆ. ಏಲ್ಲೋ ಒಂದು ಕ್ಯಾಸೆಟ್ ನಲ್ಲಿ ಕೇಳಿದ ಪದವನ್ನು ಹಾಗೇ ಉರು ಹೊಡೆದು ಒಪ್ಪಿಸಿಬಿಡುತ್ತಾನೆ. ಚಪ್ಪಾಳೆಯ ಜೊತೆಗೆ ಮತ್ತಷ್ಟು ಕಾರ್ಯಕ್ರಮವನ್ನು ಗಿಟ್ಟಿಸುತ್ತಾನೆ. ಎಲ್ಲವನ್ನೂ ಮಾಡಿದರೂ ಆತ್ಮ ವಿಮರ್ಶೆ ಒಂದನ್ನು ಬಿಟ್ಟು ಬಿಡುತ್ತಾನೆ.  ಕ್ಸಾಸೆಟ್ ಅರ್ಥ ಕೇಳಿ ತಾಳಮದ್ದಲೆಯಲ್ಲಿ ಮೈಕ್ ಮುಂದೆ ಮುಖ ಹಿಡಿಯುತ್ತಾನೆ.  ಶಲ್ಯ ಜುಬ್ಬದ  ಹೊರಾವರಣ ಭರ್ಜರಿಯಾಗಿರುತ್ತದೆ. ಒಳಗೆಲ್ಲ ಶೂನ್ಯ. ಇದ್ದರೂ ಈ ಕ್ಯಾಸೆಟ್ ಗಳ ಒಂದಷ್ಟು ಸುರುಳಿಗಳಷ್ಟೇ.

ಇಲ್ಲಿ  ವರ್ಷಗಟ್ಟಲೆ ಗುರು ಸೇವೆ ಮಾಡಿ ಕಲಿತ ವಿಚಾರಗಳು ಕೇವಲ ಯಃಕಶ್ಚಿತ್ ವಿಚಾರಗಳಾಗಿ ಭಾಸವಾಗುತ್ತದೆ. ಗುರುವಿಲ್ಲದೇ ಕಲಿಯುವಷ್ಟು ಸುಲಭವಾಗಿಬಿಟ್ಟಿತೇ ಯಕ್ಷಗಾನ?  ಶುದ್ದವಾದ ಪರಂಪರೆಯ ಕಲೆ ಯಕ್ಷಗಾನ. ಅದೇ ಶುದ್ದ ಪರಂಪರೆಯಿಂದ ಯಕ್ಷಗಾನ ದೂರವಾಗುವುದಕ್ಕೆ ಇಂತಹ ಶಿಷ್ಯೋತ್ತಮ ರೂವಾರಿಗಳೂ ಕಾರಣವಾಗುತ್ತಾರೆ. ಯಕ್ಷಗಾನವೆಂದರೆ ಕೇವಲ ಅರ್ಥಗಾರಿಕೆಯೂ ಅಲ್ಲ,  ಕೇವಲ ಹಾಡುಗಾರಿಕೆಯೂ ಅಲ್ಲ. ಆದರ ವ್ಯಾಪಕತ್ವವನ್ನು ತಿಳಿಯದೇ ತಾನೋಬ್ಬ ಅದರ ಕಲಾವಿದ ಎಂದು ಸಾರ್ವಜನಿಕವಾಗಿ ಬಿಂಬಿಸಿಕೊಳ್ಳುವುದು ಕೇವಲ ಹೆಸರು ಮಾಡಬೇಕೆಂಬ ಸ್ವಾರ್ಥವನ್ನಷ್ಟೇ ಬಿಂಬಿಸುತ್ತದೆ ಹೊರತು ಅದರಲ್ಲಿ ಯಕ್ಷಗಾನ ಅಭಿಮಾನ ಕಾಣುವುದಿಲ್ಲ. . ಅಷ್ಟಕ್ಕೂ ಯಕ್ಷಗಾನದ ಬಗ್ಗೆ ಲವ ಲೇಶವಾದ ಅಭಿಮಾನ ಗೌರವ ಇದ್ದರೆ ಕ್ಯಾಸೆಟ್ ಸಿಡಿಗಳು ಕೇವಲ ಪ್ರೇರಣೆಯ ಮೂಲವಾಗಬೇಕೆ ಹೊರತು ಅದುವೇ ಪರಿಪೂರ್ಣವಾಗಬಾರದು. ಆದರೆ ಹೆಸರು ಗಳಿಸುವ ತವಕದಲ್ಲಿ ಈ ಚಿಂತನೆಗಳು ಹೊಳೆಯುವುದೇ ಇಲ್ಲ. ಪ್ರೇಕ್ಷಕನ ದುರ್ದೈವವೋ ಯಕ್ಷಗಾನದ ದುರ್ದೈವವೋ ತಿಳಿಯುವುದಿಲ್ಲ.

ನಮ್ಮಲ್ಲಿ ಶ್ರೇಷ್ಠವಾದ ಪರಂಪರೆ ಇದೆ. ಅದು ಸುಮ್ಮನೇ ಹುಟ್ಟಿ ಬೆಳೆದದ್ದಲ್ಲ. ಅದರ ಬೇರುಗಳಲ್ಲಿ ಮಹತ್ಸಾಧನೆಯ ಜೀವಜಲ ಇನ್ನೂ ಜೀವಂತವಾಗಿದೆ. ಸಿ. ಡಿ ಕ್ಯಾಸೆಟ್ ನೋಡಿ ಯಕ್ಷಗಾನ ಕಲಾವಿದರಾಗಿ ಅದು ಸಾಧನೆ ಎಂದು ಸಾರ್ವಜನಿಕವಾಗಿ  ಬಿಂಬಿಸುವಲ್ಲಿ ಮೂರ್ಖತನದ ಮನೋಭಾವವಿದೆ. ಸ್ವ ಹವ್ಯಾಸಕ್ಕಾಗಿ ಕೇಳಬಹುದು. ಕಲಿಯಬಹುದು. ಆದರೆ ಅದನ್ನು ಸಾರ್ವಜನಿಕವಾಗಿ ಬಿಂಬಿಸುವಾಗ ಶುದ್ದ ಗುರು ಪರಂಪರೆಯನ್ನು ಅವಹೇಳಿಸಿದಂತೆ.  ದ್ರೋಣರು ಬೆರಳನ್ನು ಕಿತ್ತುಕೊಂಡಂತೆ ಇಂದು ಗುರು ತನ್ನ ಹಕ್ಕು ಸ್ವಾಮ್ಯವನ್ನು ಸ್ಥಾಪಿಸುವ ಪ್ರಮೇಯ  ಇರುವುದಿಲ್ಲ. ಯಾಕೆಂದರೆ ವಾಸ್ತವದಲ್ಲಿ ಎಲ್ಲ ನಿರ್ಜೀವ ವಸ್ತುಗಳಲ್ಲವೇ?

ವರ್ಷಗಳ ಹಿಂದೆ ಹವ್ಯಾಸಿ ಅಭಿಮಾನಿಯೊಬ್ಬರು ರಾತ್ರಿ ಹತ್ತು ಘಂಟೆಗೆ ಕರೆ ಮಾಡಿ ಅದಾವುದೋ ಪ್ರಸಂಗದ  ಧ್ವನಿ ಮುದ್ರಣ(ಆಡಿಯೋ) ಇದೆಯಾ ಎಂದು ಕೇಳಿದರು. ಇದೆ ಎಂದಾಗ ಈಗ ಬರುತ್ತೇನೆ ಕೊಡಬಹುದಾ? ಎಂದು ವಿನಂತಿಸಿಕೊಂಡರು. ಅದಾಗಲೇ ರಾತ್ರಿ ತಡವಾಗಿದ್ದರು ಆದೀತು ಬೇಗ ಬನ್ನಿ ಅಂತ ಹೇಳಿದೆ. ಹಾಗೆ ಹೀಗೆ ಹನ್ನೊಂದರ ಸುಮಾರಿಗೆ ಬಂದು ಅವರಿಗೆ ಬೇಕಾದ ಯಕ್ಷಗಾನ ಧ್ವನಿ ಮುದ್ರಣವನ್ನು ಮೊಬೈಲ್ ಗೆ ಏರಿಸಿಕೊಂಡರು. ಈ ರಾತ್ರಿಯಲ್ಲಿ ಅದರ ಆವಶ್ಯಕತೆ ಏನು ವಿಚಾರಿಸಿದಾಗ ತಿಳಿದದ್ದು ಇಷ್ಟೆ. ಯಾವುದೋ ತಾಳ ಮದ್ದಲೆಯಲ್ಲಿ ಅರ್ಥ ಹೇಳುವುದಕ್ಕೆ ಪರಿಕರವಾಗಿ ಇದನ್ನು ಪಡೆದುಕೊಂಡಿದ್ದರು. ಮುಂದೆ ಅವರು ಅದನ್ನು ಹೇಗೆ ಉಪಯೋಗಿಸಿಕೊಂಡರು ಎಂದು ತಿಳಿಯದು. ಆದರೆ ಹೀಗೆ ಕ್ಯಾಸೆಟ್ ಕೂಡ ಗುರುಸ್ಥಾನವನ್ನು ಅಲಂಕರಿಸುವುದು ವಿಡಂಬನೆಯ ಸಂಗತಿ.  ಆ ತಡ ರಾತ್ರಿಯಲ್ಲಿ ಬಂದು ತೆಗೆದುಕೊಂಡು ಹೋಗಿದ್ದರೂ ಆನಂತರ ನನ್ನ ಯಕ್ಷಗಾನ ಸಂಗ್ರಹದ ಬಗ್ಗೆ ಯಾರಿಗೂ ಹಂಚಿಕೊಳ್ಳದಿರುವುದು ಇರುವುದಾದರೂ ಯಾಕೆ ಎಂದು ಅವಹೇಳನವಾಗಿ ಪ್ರತಿಕ್ರಿಯಿಸಿದ್ದರು.   ಯಾವುದೇ ವಸ್ತುವನ್ನು ಉಪಯೋಗಿಸುವುದರಲ್ಲಿ ಶುದ್ದವಾದ ಮನೋಭಾವ ಸತ್ ಸಂಕಲ್ಪ ಅತೀ ಅಗತ್ಯ. ಕಲೆ ವಿದ್ಯೆ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ ಎಂದು ಶೇಣಿಯವರು ಎಲ್ಲೋ ಹೇಳಿದ್ದು ಇಲ್ಲಿ ಅಣಕಿಸುವಂತೆ ಭಾಸವಾಗುತ್ತದೆ.

ಯಕ್ಷಗಾನವಾಗಲೀ ಅಥವಾ ಇನ್ನಿತರ ಯಾವುದೇ ಕಲೆಯಾಗಲಿ ಅದನ್ನು ನೋಡಿ ಕೇಳಿ ಕಲಿಯುವುದು ಅಭಿರುಚಿಯನ್ನು ಅವಲಂಬಿಸಿರುತ್ತದೆ. ಆದರೆ ಅದನ್ನು ಪರಿಪೂರ್ಣವೆಂದು ತಿಳಿದು ತನಗೆ ತಾನೆ ಕಲಾವಿದ ಸ್ಥಾನಮಾನವನ್ನು ತಂದುಕೊಳ್ಳುವುದು ಮೂರ್ಖತನ. ಗುರು ಸೇವೆ ಮಾಡಿ ತಮ್ಮ ಜೀವನ ಬಹುಪಾಲನ್ನು ವಿನಿಯೋಗಿಸಿ ಅದನ್ನು ಕಲಿತು ತಪಸ್ಸಾಗಿ ಕಂಡವರ ಮಾರ್ಗ ವ್ಯರ್ಥ ಎಂದಾಗಬಾರದು. ಹೊಸ ತಲೆಮಾರಿನ ವಕ್ರಮಾರ್ಗದಲ್ಲಿ ಪರಂಪರೆಯ ಅವಹೇಳನವಾಗಬಾರದು.  ಪೂರ್ಣ ಜೀವನವನ್ನು ಅನುಭವಿಸಿ ಮೋಕ್ಷವನ್ನು ಪಡೆಯುವುದಕ್ಕೂ  ನದಿಗೆ ಹಾರಿ ಕೈಲಾಸ ಕಾಣುವುದಕ್ಕೂ ವೆತ್ಯಾಸವಿದೆ.



Monday, December 3, 2018

ನಿಟ್ಟುಸಿರ ನೆನಪುಗಳು



ಆಡುಗೆ ರುಚಿಯಾದರೂ ಘಮ ಘಮಿಸುತ್ತದೆ. ಕೆಟ್ಟು ಹೋದರೂ ಪರಿಮಳ ಬರುತ್ತದೆ. ಪರಿಮಳ ಅಥವಾ ವಾಸನೆ ಎಂಬುದು ಅನಿವಾರ್ಯ.  ಹೆಸರುವಾಸಿಯಾಗುವುದು, ಖ್ಯಾತಿಗಳಿಸುವುದು ಇದೂ ಸಹ ಹಾಗೇ , ಒಳ್ಳೆಯದಾದರೂ ಕೆಟ್ಟು ಹೋದರೂ ಹೆಸರಂತೂ ಬಂದೇ ಬರುತ್ತದೆ. ಪತ್ರಿಕೆಯ ಪುಟಗಳಲ್ಲಿ ದೂರದರ್ಶನ ಮಾಧ್ಯಮಗಳಲ್ಲಿ  ಹೆಸರು ಮುಖ ಜಾಗ ಪಡೆವಲ್ಲಿ ಎರಡೂ ಕಾರಣವಾಗಿರುತ್ತದೆ. ಮನುಷ್ಯ ದೇಹದಿಂದಲೂ ಗಳಿಸಿದ ಸಂಪತ್ತಿನಿಂದಲೂ ಶ್ವಾಶ್ವತವಾಗಿ ಉಳಿಯುವುದಿಲ್ಲ. ಅಥವಾ ದೇಹವಾಗಲೀ ಸಂಪತ್ತಾಗಲಿ ಅವನು ತನ್ನದು ಎಂದು ಏನನ್ನು ತಿಳಿದುಕೊಂಡಿರುತ್ತಾನೋ ಅದು ಎಂದಿಗೂ ಅವನದಾಗಿ ಶಾಶ್ವತವಾಗಿ ಉಳಿಯುವುದಿಲ್ಲ.  ಈ ಜಗತ್ತಿನಲ್ಲಿ ಶ್ವಾಶ್ವತವಾಗಿ ಸ್ಮರಣೆಯಲ್ಲಿ ಉಳಿಯುವುದಿದ್ದರೆ ಅದು ಆತನ ವ್ಯಕ್ತಿತ್ವ ಮಾತ್ರ. ಬೇರೆ ಯಾರಿಂದಲೂ ಅದನ್ನು ಅನುಭವಿಸುವುದಕ್ಕೆ ಸಾಧ್ಯವಿಲ್ಲ. ನಂತರದ ಆತನ ಸ್ಮಾರಕಗಳು ಇವುಗಳಿಗೆ ಪ್ರತೀಕಗಳಾಗಿ ಕೇವಲ ಸ್ಮರಣೆಯನ್ನು ಪ್ರಚೋದಿಸುತ್ತಿರುತ್ತವೆ.


ಇಂತಹ ಚಿಂತನೆಗಳು ನನಗೆ ಪ್ರಚೋದಿಸಲ್ಪಟ್ಟಿದ್ದರೆ ಅದಕ್ಕೆ ಕಾರಣ ಬಾಲ್ಯದಿಂದಲೇ ಅಂಟಿಕೊಂಡ ಯಕ್ಷಗಾನದ ಆಸ್ವಾದನೆ. ಅದರಲ್ಲೂ ಯಕ್ಷಗಾನ ಲೋಕ ಕಂಡ ಅದ್ಬುತ ಕಲಾವಿದ ಹರಿದಾಸ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರ ಅರ್ಥಗಾರಿಕೆ ಕೇಳುತ್ತಲೇ ಬೆಳೆದ ನನಗೆ ಇಂತಹ ಚಿಂತನೆಗಳು ಯೋಚನೆಗಳು ಅತಿಶಯವೆಂದೆನಿಸುವುದಿಲ್ಲ. ಈ ಅನಿಸಿಕೆಗಳಲ್ಲೂ ಬರವಣಿಗೆಯಲ್ಲಿಯೂ ಮಾತ್ರವಲ್ಲ ಬರವಣಿಗೆ ಶೈಲಿಯಲ್ಲೂ ಶೇಣಿಯವರ ದಟ್ಟವಾದ ಪ್ರಭಾವ ತಿಳಿದೋ ತಿಳಿಯದೆಯೋ ಘಾಢವಾಗಿ ಅಂಟಿಕೊಂಡಿದೆ.  ಇದು ಕೇವಲ ಪ್ರಾಮಾಣಿಕ ಅನಿಸಿಕೆ.  ಅಂತಹ ಶೇಣಿಯವರು ಶತಮಾನಕ್ಕೊಬ್ಬನೇ ಎಂಬ ಪ್ರತಿಭೆಯಿಂದ  ಜನಮಾನಸದಲ್ಲಿ ಜನ ಮಾಧ್ಯಮಗಳಲ್ಲಿ ಉನ್ನತ ಸ್ಥಾನವನ್ನು ಪಡೆದವರು. ವಿಚಿತ್ರವೆಂದರೆ ಶೇಣಿಯವರನ್ನು ಕರಾವಳಿ ಜನತೆ, ಯಕ್ಷಗಾನ ಪ್ರೇಕ್ಷಕ ಇಂದು ಸ್ಮರಿಸುವುದಿದ್ದರೆ ಅವರ ಸ್ಮಾರಕವನ್ನು ನೋಡಿಯಂತೂ  ಅಲ್ಲವೇ ಅಲ್ಲ.  ಅವರ  ಸ್ಮಾರಕ ಇದೆಯೋ ಇಲ್ಲವೋ ತಿಳಿದಿಲ್ಲ. ಆದರೂ ಅವರ ಸ್ಮರಣೆ ಚಿರ ಸ್ಥಾಯಿಯಾಗಿರುವುದಕ್ಕೆ ಸ್ಮಾರಕ ಕಾರಣವಲ್ಲ. ಎಂದಿನವರೆಗೆ ಅವರ ಸಾಧನೆ ಜನಸ್ಮರಣೆಯಲ್ಲಿ ಸ್ಥಿರವಾಗಿದೆಯೋ ಅಲ್ಲಿವರೆಗೆ ಶೇಣಿಯವರನ್ನು ನೆನಪಿಸುವುದಕ್ಕೆ ಸ್ಮಾರಕದ ಆವಶ್ಯಕತೆ ಇರುವುದಿಲ್ಲ.  ಒಂದು ವೇಳೆ ಸ್ಮಾರಕಗಳು ಇದ್ದರೂ ಒಂದು ಖಂಡಿತವಾಗಿ ಹೇಳಬಲ್ಲೆ ಅದರಲ್ಲಿ ಸರಕಾರದ ಅನುದಾನ ಇರುವುದಕ್ಕೆ ಸಾಧ್ಯವಿಲ್ಲ.  ಇಂದು ಸ್ಮಾರಕಗಳು ಮಧುರ ಸ್ಮರಣೆಗಿಂತಲೂ ಪ್ರತಿಷ್ಠೆಯ ಸ್ಮರಣೆಗಾಗಿಯೇ ಸ್ಥಾಪಿತವಾಗುತ್ತಿದೆ. ವಾಸ್ತವದಲ್ಲಿ ಸ್ಮಾರಕಗಳು ಉಸಿರಾಡುವುದಕ್ಕೆ ಮೊದಲೇ ಸದ್ದು ಮಾಡುತ್ತಿವೆ. ಮಾತ್ರವಲ್ಲ ಸ್ಥಾಪನೆಗೆ ಮೊದಲೇ ಸುದ್ದಿಮಾಡುತ್ತವೆ ಮತ್ತು ವಿವಾದಗಳನ್ನು ಸೃಷ್ಟಿಸುತ್ತವೆ.  ವಿವಾದ ಹಲವು ಸಲ ಎಷ್ಟು ಭೀಕರವಾಗಿ ಕ್ರೂರವಾಗಿ ಇರುತ್ತದೆ ಎಂದರೆ ಸತ್ತವನಿಗೆ ಸಾವು ನಿಜವಾಗಿ ಶಿಕ್ಷೆಯಂತೆ ಭಾಸವಾಗಿ ತಾನೇಕೆ ಸತ್ತು ಹೋದೆನೋ ಎಂದು ಅನಿಸಬೇಕು.

ಇಂದು ಜಗತ್ತು ಸ್ವಾಮೀ ವಿವೇಕಾನಂದರನ್ನು ಸ್ಮರಿಸುತ್ತದೆ. ಶತಮಾನ ಕಳೆದರೂ ವಿವೇಕಾನಂದರ ವ್ಯಕ್ತಿತ್ವ ಗಾಢವಾಗಿ ಅಚ್ಚೊತ್ತಿದೆ. ಗಾಂಧೀಜಿ ಸುಭಾಸ್ ಚಂದ್ರ ಭೋಸ್,  ನೆಲ್ಸನ್ ಮಂಡೇಲ ...ಛೇ ಜಗತ್ತು ಅದೆಷ್ಟು ಶ್ರೇಷ್ಠ ವ್ಯಕ್ತಿಗಳನ್ನು ಕಂಡಿದೆಯೋ ಇವರ ನೆನಪುಗಳು ಯಾವುದೇ ಸ್ಮಾರಕಗಳಿಂದ ಉಳಿದಿಲ್ಲ. ಕೇವಲ ಕನ್ಯಾಕುಮಾರಿಗೆ ಭೇಟಿ ಕೊಟ್ಟವರಿಗಷ್ಟೇ ವಿವೇಕಾನಂದರು ಸ್ಮರಣೆಗೆ ಬರುವುದಲ್ಲ.  ಹಾಗೆ ನೋಡಿದರೆ ಹಿಟ್ಲರ್ ನನ್ನು ನೆಪೋಲಿಯನನ್ನು ಜಗತ್ತು ಮರೆಯಲಿಲ್ಲ.  ಹೆಚ್ಚೇಕೆ ಘಜನಿಯನ್ನೂ ಭಾರತವೂ ಮರೆಯಲಿಲ್ಲ. ಕೇವಲ ಸ್ಮಾರಕ ಇರುವುದರಿಂದ   ಮಾತ್ರವೇ ಒಬ್ಬ ಮನುಷ್ಯ ನೆನಪಿಗೆ ಬರುತ್ತಾನೆ ಎಂದರೆ ಆತನ ಸಾಧನೆ ಪರಿಪೂರ್ಣವಲ್ಲ ಎಂದೇ ತಿಳಿಯಬೇಕು.  ಹಾಗಾದರೆ ಸ್ಮಾರಕ ನಿರ್ಮಾಣ ಯಾವುದರ ಪ್ರತೀಕ?

ಕಲೆ ಕಲಾವಿದ ಪ್ರತಿಭೆ ಇವುಗಳು ಮನುಷ್ಯನೊಬ್ಬನ ಸ್ಮರಣೆಗೆ ಕಾರಣವಾಗುತ್ತವೆ ಎಂದುಕೊಂಡರೆ, ವಾಸ್ತವದಲ್ಲಿ  ಕಲಾವಿದನಿಗೆ ತನ್ನ ಪ್ರತಿಭೆಯ ಮೇಲೆಯೇ ವಿಶ್ವಾಸವಿರುವುದಿಲ್ಲ. ಯಾಕೆಂದರೆ ಕಲಾವಿದ ಎಂದನಿಸಿಕೊಂಡ ಮೇಲೆ,  ಆತ ನೆಲೆ ನಿಂತು ತನ್ನ ಸ್ಥಾನವನ್ನು ಗುರುತಿಸುಕೊಳ್ಳುವುದಕ್ಕೆ ತನ್ನಲ್ಲಿರುವ ಪ್ರತಿಭೆಗಿಂತಲೂ ಬೇರೆ ವಿಚಾರಗಳಲ್ಲೆ ವಿಶ್ವಾಸ ತಳೆಯುತ್ತಾನೆ. ಹಾಗಾಗಿ ವಶೀಲಿ ರಾಜಕೀಯ ಮತ್ತೊಂದು ಮಾಡಿ ತನ್ನ ಅಸ್ತಿತ್ವ ಉಳಿಸುವಲ್ಲಿ ಯತ್ನಿಸುತ್ತಾನೆ. ಎಲ್ಲಾ  ಕಲಾವಿದರೂ ಹೀಗೆ ಎನ್ನುವುದು ಸಮಂಜಸವಲ್ಲ. ಆದರೆ ಇಂದಿನ ಪ್ರಪಂಚ ಅಸ್ತಿತ್ವದ ಹೋರಾಟಕ್ಕೆ  ಬಹಳಷ್ಟು ಪುಷ್ಟಿಯನ್ನು ಒದಗಿಸುತ್ತದೆ ಎನ್ನುವುದು ಸುಳ್ಳಲ್ಲ. ಕಲಾವಿದನಿಗೆ ತನ್ನ ಪ್ರತಿಭೆಯಲ್ಲೇ ಸ್ವತಃ  ವಿಶ್ವಾಸವಿಲ್ಲ. ತನ್ನ ಪ್ರತಿಭೆಯಲ್ಲಿ ಆತನಿಗೆ ದಟ್ಟವಾದ ಗಾಢವಾದ ವಿಶ್ವಾಸವಿದ್ದಲ್ಲಿ ಅದು ಅವನನ್ನು ಪ್ರಕಾಶಿಸದೇ ಬಿಡುವುದಿಲ್ಲ. ಎಲೆಯ ಮರೆಯ ಕಾಯಿಯಾದರೂ ಹಣ್ಣಾದಾಗ ಪರಿಮಳ ಬಂದಂತೆ ಪ್ರತಿಭೆ ಅದಾಗಿಯೆ ಹೊರಹೊಮ್ಮಿ ಪ್ರಕಾಶಿಸುವಾಗ ಅದಕ್ಕೆ ತೂಕ ಹೆಚ್ಚು. ಇಂದು ಪ್ರತಿಭೆ ಕಲಾವಿದ ಈ ಮಾನದಂಡ ಯಾವುದನ್ನು ಲೆಕ್ಕ ಹಾಕಿ ನಿರ್ಣಯವಾಗುತ್ತದೋ ಅರಿವಾಗುವುದಿಲ್ಲ. ಈಗ ಕಲಾವಿದ ಪ್ರಕಾಶಿಸುವುದಕ್ಕೆ ಕೇವಲ ಪ್ರತಿಭೆಯೊಂದೇ ಕಾರಣವಾಗಿಲ್ಲ. ಹಾಗಾಗಿ   ಹಿಂಬಾಲಕರಿದ್ದಲ್ಲಿ ನನಗೂ ನಿಮಗೂ ಸ್ಮಾರಕ ನಿರ್ಮಾಣವಾಗಬಹುದು ಎಂದು ಅನ್ನಿಸಿಬಿಡುತ್ತದೆ. ಸಿನಿಮಾದಲ್ಲೇ ಆಗಲಿ ಯಕ್ಷಗಾನದಲ್ಲೇ ಆಗಲಿ ಯಾವುದೇ ಕಲಾ ಪ್ರಕಾರಗಳಲ್ಲೇ ಆಗಲಿ ಕಲಾವಿದ ತನ್ನ ಪ್ರತಿಭೆಯಿಂದ ಗುರುತಿಸಿಕೊಳ್ಳ ಬೇಕಾದದ್ದು ನ್ಯಾಯ.
ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರು,  ಯಕ್ಷಗಾನದಲ್ಲಿ ದಂತಕತೆಯಾಗಿ ತನ್ನದೇ ವ್ಯಕ್ತಿತ್ವವನ್ನು ಛಾಪನ್ನೂ ಮೂಡಿಸಿದ ಮಹಾತ್ಮರು. ಬಯಲಾಟದ ಕರಪತ್ರಗಳಲ್ಲಿ, ಗೋಡೆಯ ಮೇಲಿನ ಭಿತ್ತಿ ಪತ್ರಗಳಲ್ಲಿ “ಇಂದು ಹರಿದಾಸ್ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರ ಇಂತಹ ಪಾತ್ರವನ್ನು ನೋಡಲು ಮರೆಯದಿರಿ” ಎಂದು ಬರೆದಿದ್ದರೆ ಸಂಶಯ ಬೇಡ ಅಂದು ಯಕ್ಷಗಾನ ಸಭೆ ತುಂಬಿ ತುಳುಕುತ್ತದೆ ಕಟ್ಟಿದ ಟೆಂಟ್ ಹರಿದುಹೋಗುವಷ್ಟು ಜನ ಸೇರುತ್ತದೆ. ರಾತ್ರಿಯಿಡೀ ನಿದ್ದೆಯನ್ನು ಮರೆಯುವುದಕ್ಕೆ ಸಿದ್ದವಾಗಿಯೇ ಪ್ರೇಕ್ಷಕ ಸೇರಿಬಿಡುತ್ತಾನೆ. ಶೇಣಿಯವರು ವೇಷ ತೊಟ್ಟು  ಎರಡು ಮೂರನೆಯ ಜಾವದಲ್ಲಿ  ಮೂರು ನಾಲ್ಕು ಘಂಟೆಗೆ  ರಂಗಕ್ಕೆ ಬರುವುದಿದ್ದರೂ ಒಂಭತ್ತು ಘಂಟೆಗೇ  ಅಸನಗಳಲ್ಲಿ ಕುಳಿತು ಶೇಣಿಯವರ ವೇಷವನ್ನು ನೋಡುವುದಕ್ಕೆ ಪ್ರೇಕ್ಷಕ ಕಾದು ಕುಳಿತಿರುತ್ತಾನೆ. ಹಾಗೆ ಕುಳಿಕೊಳ್ಳುತ್ತಿದ್ದುದು ಕೇಕೆ ಹಾಕಿ ಚಪ್ಪಾಳೆ ತಟ್ಟಿ ಶಿಳ್ಳೆ ಹಾಕುವ  ಕೇವಲ ಸಾಮಾನ್ಯ ಪ್ರೇಕ್ಷಕನಲ್ಲ.  ಪ್ರಬುದ್ದ ಪ್ರಜ್ಞಾವಂತ ಪ್ರೇಕ್ಷಕ.  ರಾತ್ರಿ ಒಂಭತ್ತರಿಂದ ಬೆಳಗಿನ ಜಾವದವರೆಗೂ ಕುಳಿತಲ್ಲೆ ಕುಳಿತುಬಿಡುವ ಆಕರ್ಷಣೆ ಅದೊಂದೇ, ಬೇರೆ ಏನಲ್ಲ.  ಅದು ಶೇಣಿಯವರ  ಮೋಡಿ ಮಾಡಿ ಬಿಡುವ ಪಾತ್ರಗಳು.  ವಾಲಿ ರಾವಣ, ದುರ್ಯೋಧನ ಭೀಷ್ಮ... ಒಂದೆ ಎರಡೆ...ಛೇ ಆ ಅಭಿವ್ಯಕ್ತಿಗಳಿಗೆ ಸೀಮೆ ಪ್ರೇಕ್ಷಕರ ಮನಸ್ಸು.  ಅಲ್ಲಿಂದಾಚೆಗೆ ಅವುಗಳು ಕದಲುವುದಿಲ್ಲ.  ಯಕ್ಷಗಾನದ ಪಾತ್ರಗಳ ವ್ಯಕ್ತಿತ್ವವನ್ನು ತೋರಿಸಿ ನಿರೂಪಿಸಿ ತಾರಾಮೌಲ್ಯವನ್ನು ನಿಸ್ಸಂಶಯವಾಗಿ ಗಳಿಸಿದ ಕಲಾವಿದರಿವರು.   ಭೀಷ್ಮನ ಕತೆ ಯಾವುದರಲ್ಲೇ ಓದಲಿ, ಅಥವಾ ಯಾವುದರಲ್ಲೇ ಕೇಳಲಿ ಮೊದಲು ಸ್ಮೃತಿಗೆ ಬರುವುದು ಶೇಣಿಯವರ ಭೀಷ್ಮ. ಇಂತಹ ಗಾಢವಾದ ಪ್ರಭಾವವನ್ನು ತನ್ನ ಪಾತ್ರಗಳಿಂದ ಮಾಡಿ, ಆ ಪಾತ್ರಗಳೇ ಇಂದು ಸ್ಮಾರಕಗಳಾಗಿ ಸ್ಥಿರವಾಗಿ ಕುಳಿತಿದೆ. ಕೇವಲ ಯಕ್ಷಗಾನ ವೇಷಗಾರಿಕೆಯಲ್ಲ. ಒಂದು ಪ್ರವಚನ ಭಾಷಣವಾದರು ಸರಿಯೇ ಕೇಳುಗ ಸದ್ದಿಲ್ಲದೇ ಕಲ್ಲಿನಂತೆ ನಿಶ್ಚಲನಾಗಿ ಬಿಡುತ್ತಾನೆ.

ಇದು ಒಂದು ಶೇಣಿಯ ಕಥೆಯಾದರೆ ಹಲವು ಬಗೆಯಲ್ಲಿ ಯಕ್ಷಗಾನದ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡು ಸ್ಥಾನ ಭದ್ರಗೊಳಿಸಿದ ಕಲಾವಿದರು ಹಲವರಿದ್ದಾರೆ. ಅಗರಿ ಬಲಿಪ ಭಾಗವತರ ಸ್ವರ ಕಿವಿಗೆ ಬಿದ್ದ ಕೂಡಲೇ ನಿಂತು ನಿಮಿರಿಕೊಂಡು ಕೇಳುವ ಕೇಳುಗರೆಷ್ಟಿದ್ದಾರೆ. ನಿದ್ದೆಬಿಟ್ಟು ಸೇರುವ ಜನವೆಷ್ಟು?  ಇದೆಲ್ಲ ಅಪ್ಪಟ ಲೈವ್ ಪ್ರತಿಭೆಗಳು. ಯಥಾವತ್ ಆಗಿ ರಂಗದಲ್ಲೆ ಆಗಿಂದಾಗೆ ತೆರೆದುಕೊಳ್ಳುವ ದೈತ್ಯ ಪ್ರತಿಭೆಗಳು.  ಒಂದು ವೇಳೆ ಅವರ ಸ್ಮಾರಕಗಳು ಇದ್ದರೂ ಇರಬಹುದು, ಅವುಗಳೆಲ್ಲವೂ ಅಪ್ಪಟ ಕಲಾವಂತಿಕೆಯನ್ನು ಮೆರೆದವುಗಳು. ಕೇವಲ ಪರಿಶ್ರಮದ ಸಂಕೇತಗಳು. ಯಾವ ಅನುದಾನಕ್ಕೂ ಕಾಯದ ಪ್ರತೀಕಗಳು.  ಒಂದೆರಡು ವರ್ಷದ ಮೊದಲು ಯಕ್ಷಗಾನ ಭಾಗವತ ಭೀಷ್ಮ ಶ್ರೀ ಬಲಿಪ ನಾರಾಯಣ ಭಾಗವತರ ಸ್ಮರಣೆಯಲ್ಲಿ ಅವರ ಮನೆಯ ಹತ್ತಿರವೇ ಸ್ಮಾರಕ ಒಂದು ನಿರ್ಮಾಣವಾಯಿತು. ಇದು ಕೇವಲ ಯಕ್ಷಗಾನದ ಅಭಿಮಾನದಿಂದ ಒಂದು ಭ್ಯವ್ಯ ವ್ಯಕ್ತಿತ್ವದ ಪ್ರತೀಕವಾಗಿ ನಿರ್ಮಾಣಗೊಂಡಿತು. ಇದರಲ್ಲಿ ಕೇವಲ ಯಕ್ಷಗಾನ ಪ್ರೇಕ್ಷಕನ ಪರಿಶ್ರಮವಷ್ಟೇ    ವಿನಿಯೋಗವಾಯಿತು.

ಇಂದು ದಿನ ಬೆಳಗಾದರೆ ಸ್ಮಾರಕಗಳು ವಿವಾದವನ್ನು ಸೃಷ್ಟಿಸುವುದನ್ನು ನೋಡಿದರೆ ಈ ವಿಚಾರಗಳೆಲ್ಲವೂ ಮಂಥನಕ್ಕೆ ಸಿಕ್ಕಿಬಿಡುತ್ತವೆ. ಸಿನಿಮಾ ನಟರ ಸ್ಮರಣೆಗಾಗಿ ಅತ್ಯಮೂಲ್ಯವಾದ ಎಕರೆಗಟ್ಟಲೆ ಸರಕಾರೀ ಭೂಮಿ ಇದಕ್ಕೆ ವಿನಿಯೋಗವಾಗುತ್ತದೆ. ಪ್ರಜೆಗಳ ಶ್ರಮದ ತೆರಿಗೆ ಹಣ ಇದಕ್ಕೆ ಬಳಕೆಯಾಗುತ್ತದೆ.  ಹೋಗಲಿ, ಅವರವರ ನಂಬಿಕೆ ವಿಶ್ವಾಸಗಳು ದೊಡ್ಡದು. ಅದನ್ನು ಒಂದರೊಡನೆ ಇನ್ನೊಂದು ಹೋಲಿಸುವುದು ಮೂರ್ಖತನವಾದೀತು. ಆದರೂ ಸಹ ಸ್ಮಾರಕಗಳು ಕೇವಲ ಸ್ಮರಣೆಯ ಪ್ರತೀಕಗಳಾಗಬೇಕು. ಪ್ರತಿಷ್ಠೆಯ ಅನುಕರಣೆಯ ವಿಚಾರವಾಗಬಾರದು. ಆದರೂ ಇಂದು ಅಭಿಮಾನವೂ ಒಂದು ಅನುಕರಣೆಯ ವಿಷಯವಾಗಿದೆ. ಇನ್ನೊಂದು ರಾಜ್ಯದಲ್ಲಿ ಅಭಿಮಾನ ಯಾವ ರೂಪದಿಂದ ಹೇಗೆ ಪ್ರಕಟವಾಗುವುದೋ ಅದೇ ಮತ್ತೊಂದು ಭಾಗದಲ್ಲೂ ಅನುಕರಣೆಯಾಗುತ್ತದೆ. ಅಭಿಮಾನ ವ್ಯಕ್ತ ಪಡಿಸುವುದರಲ್ಲೇ  ಒಂದು ಸ್ಪರ್ಧೆ.!!  ಸ್ಮಾರಕ ನಿರ್ಮಾಣದಲ್ಲೂ ಅದೇ ಸ್ಪರ್ಧೆ ಮುಂದುವರೆದಿದೆ.

ಇದು ಸರಿ ತಪ್ಪುಗಳ ವಿಶ್ಲೇಷಣೆಯಲ್ಲ. ಆದರೆ ಕೇವಲ ಸಿನಿಮಾ ನಟ ಮಾತ್ರ ಕಲಾವಿದನೇ?  ಹೆಸಾರಂತ ನಟ ವಿಷ್ಣು ವರ್ಧನ್ ಒಂದು ಸಲ ಇದೇ ಶೇಣಿಯವರ ಪಾತ್ರವನ್ನು ಕಂಡು ಸಾಷ್ಟಾಂಗ ನಮಸ್ಕರಿಸಿದ್ದರಂತೆ, “ಸ್ವಾಮಿ, ನಾವು ಯಾರೋ ಬರೆದುಕೊಟ್ಟ ಡೈಲಾಗ್ ನ್ನು ತೆರೆಯ ಮೇಲೆ ಹೇಳುತ್ತೇವೆ. ಅದು ಪ್ರತಿಭೆಯೇ ಅಲ್ಲ.  ನಿಮ್ಮದು  ನಿಜವಾದ ಪ್ರತಿಭೆ”. ಪ್ರತಿಭೆಯ ತುಲನೆ ಹೋಲಿಕೆ ಸಲ್ಲದು. ಆದರೂ ಕಲಾವಿದನ ಸ್ಮಾರಕಕ್ಕೆ ಜನಪ್ರೀಯತೆಯೇ ಮಾನದಂಡವಾಗುವಾಗ ಪ್ರತಿಭೆ ಪುರಸ್ಕಾರವಾದಂತೆ ಅನಿಸುವುದಿಲ್ಲ.

ಸಿನಿಮಾದಲ್ಲೇ ಆಗಲಿ ಯಕ್ಷಗಾನದಲ್ಲೇ ಆಗಲಿ ಕಲಾವಿದ ತನ್ನ ಪ್ರತಿಭೆಯಿಂದ ಗುರುತಿಸಿಕೊಳ್ಳಬೇಕು.  ಪ್ರತಿಭೆಯಿಂದ ಅಂಗೀಕರಿಸಲ್ಪಟ್ಟ ವ್ಯಕ್ತಿತ್ವ ಎಂದಿಗೂ ಅಳಿಸಲ್ಪಡುವುದಿಲ್ಲ. ದಾಖಲೆ ಇಲ್ಲದೇ ಉಳಿಯುವ ಪ್ರತಿಭೆ ಅದು ನಿಜವಾದ ಪ್ರತಿಭೆ. ಸ್ಮಾರಕಗಳಿಗಾಗಿ ಈ ವಿವಾದ ಹೋರಾಟ ಎಲ್ಲವನ್ನು ನೋಡುವಾಗ  ನಿರ್ಮಿಸುವ ಸ್ಮಾರಕ ದಿವ್ಯ ಸ್ಮರಣೆಯನ್ನು ಒದಗಿಸುವ ಬದಲಾಗಿ ಬರೀ ನಿಟ್ಟುಸಿರ ನೆನಪಾಗಬಾರದು.


Saturday, October 27, 2018

ಶ್ರೀ ಸೂರಿಕುಮೇರಿ ಗೋವಿಂದ ಭಟ್ ನಾನು ಕಂಡಂತೆ.....



ಶ್ರೀ ಕಟೀಲು ಸಿತ್ಲ ರಂಗನಾಥ ರಾವ್ ರವರು 
ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು ಇದರ ಸಹಭಾಗಿತ್ವದಲ್ಲಿ ಮಾಡಿದ ಸಂದರ್ಶನಗಳಲ್ಲಿ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರ ಸಂದರ್ಶನವನ್ನು (ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರ ಸಾಕ್ಷ್ಯ ಚಿತ್ರ) ಮಾಡಿದ್ದರು. ಆ ಸಂದರ್ಶನಕ್ಕೆ ಶ್ರೀ ಗೋವಿಂದ ಭಟ್ಟರ ಪರಿಚಯ ಲೇಖನವನ್ನು ಬರೆಯುವಂತೆ ನನ್ನಲ್ಲಿ ವಿನಂತಿಸಿದ್ದರು, ಅವರು ನೀಡಿದ ಅವಕಾಶದಂತೆ ಈ ಲೇಖನವನ್ನು ನನ್ನ ಅನಿಸಿಕೆ ಎಂಬಂತೆ ಬರೆದಿದ್ದೇನೆ. ಇದೇ ಲೇಖನವನ್ನು ಶ್ರಿ ಭಟ್ಟರ ಸಂದರ್ಶನದ ವಿಡಿಯೋದಲ್ಲಿ ಉಪಯೋಗಿಸಿಕೊಂಡಿದ್ದರು. ಅದನ್ನು ಧನ್ಯತಾ ಪೂರ್ವಕವಾಗಿ ಇಲ್ಲಿ ಹಾಕಿರುತ್ತೇನೆ. 

ಸಂದರ್ಶನ ವೀಡಿಯೋಗಾಗಿ ಈ ಲಿಂಕ್ ಉಪಯೋಗಿಸಿ.


ಹಸಿವು ಇದು ವ್ಯಾವಹಾರಿಕ ಪ್ರಪಂಚದ ಅಸ್ತಿತ್ವದ ಸಂಕೇತ. ಎಷ್ಟೆ ದೊಡ್ಡ ಖಜಾನೆಯನ್ನಾದರೂ ತುಂಬಿಸಿ ಸಂಗ್ರಹಿಸಿ ಇಡಬಹುದು. ಆದರೆ ಹೊಟ್ಟೆಯನ್ನು ತುಂಬಿಸಿ ಇಡುವುದು ಸಾಧ್ಯವಿಲ್ಲ. ಹಸಿವು ಯಾವುದೇ ಪ್ರಾಣಿ ಹುಟ್ಟಿದಾಕ್ಷಣ ಜತೆಯಾಗುವ ಪ್ರವೃತ್ತಿ. ಹಸಿವು...ಹಸಿವು ಇದು ಜೀವ ಜಗತ್ತಿನ ಆರೋಗ್ಯದ ಲಕ್ಷಣ. ಹಾಗಾಗಿ ವ್ಯಾವಹಾರಿಕ ಪ್ರಪಂಚದ ಮೂಲ ಇರುವುದೇ ಹಸಿವಿನಲ್ಲಿ. ಈ ಹಸಿವಿನ ಪರಿಮಾರ್ಜನೆಯೇ ಎಲ್ಲ ಪ್ರವೃತ್ತಿಗೂ ಮೂಲ ಕಾರಣ. ಹಸಿವು ಎಂದಿನ ವರೆಗೆ ಇರುತ್ತದೋ ಅಂದಿನವರೆಗೆ ಪ್ರಪಂಚ ಚಲನ ಶೀಲವಾಗಿರುತ್ತದೆ. ಮನುಷ್ಯ ಪ್ರಾಣಿಗಳೂ  ಹಾಗೆ ಹಸಿವು ಇರುವ ತನಕ ಸದಾ ಪ್ರವೃತ್ತಿಯಲ್ಲಿರುತ್ತವೆ. ಅಥವಾ ಹಸಿವು ಎಲ್ಲವನ್ನೂ ಜೀವಂತವಾಗಿರುಸುತ್ತದೆ. ಇದು ವ್ಯಾವಹಾರಿಕ ಪ್ರಪಂಚದ ಸತ್ಯ. ಈ ಸತ್ಯದ ಬೆನ್ನಟ್ಟಿ ಹೋದ   ಹಲವರು  ಇಂದು ನಮ್ಮ ನಡುವೆ ಮಹಾನ್ ವ್ಯಕ್ತಿಗಳಾಗಿ ಈ ಪ್ರಪಂಚದ ಸತ್ಯವನ್ನು ತೆರೆದು ತೋರಿಸುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಶ್ರೀ ಸೂರಿಕುಮೇರಿ ಗೋವಿಂದ ಭಟ್.

ಸೂರಿಕುಮೇರಿ ಎಂದಾಗ ಯಕ್ಷಗಾನ ಲೋಕದಲ್ಲಿ ಒಂದು ಸ್ಪಷ್ಟ ಕಲ್ಪನೆ ಮೂಡುತ್ತದೆ. ಸೂರಿಕುಮೇರಿ ಎಂಬ ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮ ಎಲ್ಲಿದೆಯೋ ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ. ಆದರೆ ಸೂರಿಕುಮೇರಿ ಜತೆಗೆ ಗೋವಿಂದ ಭಟ್ಟರ ಹೆಸರು ತಳುಕು ಹಾಕಿಕೊಂಡಾಗ ಸ್ಪಷ್ಟ ಮುಖವೊಂದು ಮನಸ್ಸಿನಲ್ಲಿ ತೇಲಿ ಬರುತ್ತದೆ. ಅದೇ ಪ್ರಶಾಂತ ಮುಖ. ರಂಗದ ಮೇಲೆ ನವರಸಗಳನ್ನು ಕ್ಷಣದಲ್ಲೇ ಚಿಮ್ಮಿಸಬಲ್ಲ ಅದೇ ಮುಖ.  ಯಕ್ಷಗಾನ ಲೋಕದ ಅತ್ಯಂತ ಜನಪ್ರಿಯ ವ್ಯಕ್ತಿ ಸೂರಿಕುಮೇರಿ ಗೋವಿಂದ ಭಟ್.

ಬಡ ಪುರೋಹಿತ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಶ್ರೀ ಭಟ್ಟರ ಜನ್ಮದಿಂದಲೇ ಬಡತನ ಬೆಂಬತ್ತಿ ಬಂದಿತ್ತು. ಕೌಟುಂಬಿಕ ಸಾಮಾಜಿಕ ಹೀಗೆ ಹಲವು ಕಾರಣಗಳಿದ್ದರೂ ಜೀವನದ ಹಲವು ಪರೀಕ್ಷೆಗಳಿಗೆ ಎಳವೆಯಲ್ಲೇ ತನಗರಿವಿಲ್ಲದೇ ಎದೆಯೊಡ್ಡಿದವರು. ತನಗರಿವಿಲ್ಲದೇ ಎಂದು ಹೇಳುವುದಕ್ಕೆ ಕಾರಣವಿದೆ. ಬಾಲ್ಯದಲ್ಲಿ ಅವರನ್ನು ಬಾಧಿಸಿದ್ದು ಎಂದರೆ ಹಸಿವು. ಹಸಿದವನಿಗೆ ಮೊದಲ ಸಮಸ್ಯೆಯೇ ಹಸಿವು. ಅದು ಪರಿಹರಿಸುವವರೆಗೂ ಬೇರೇ ಯಾವ ದುರಿತಗಳೂ ಕಣ್ಣಿಗೆ ಕಾಣಿಸುವುದಿಲ್ಲ. ಆ ಹಸಿವಿನ ಪರಿಹಾರಕ್ಕಾಗಿ ಇವರು ಜೀವನದ ಹಲವು ಸಮಸ್ಯೆಗಳನ್ನು ದಾಟುವ ಪ್ರಯತ್ನ ಅನಿವಾರ್ಯವಾಗಿ ಮಾಡಲೇ ಬೇಕಾಯಿತು. ಹಾಗಾಗಿ ಹಸಿವು ಅವರನ್ನು ಎಲ್ಲೆಲ್ಲೆ ಕರೆದುಕೊಂಡು ಹೋಯಿತೋ ಅಲ್ಲೆಲ್ಲ ಗೋವಿನಂತೆ ಗೋವಿಂದ ಭಟ್ಟರು ಸಂಚರಿಸಿದರು. ಈ ಸಂಚಾರದ ದಿಕ್ಸೂಚಿ ಯಕ್ಷಗಾನ ರಂಗಸ್ಥಳವನ್ನೇ ತೋರಿಸಿದ್ದು ಯಕ್ಷಗಾನದ ಜನಪ್ರಿಯ ಕಲಾವಿದನ ಸೃಷ್ಟಿಗೆ ಕಾರಣವಾಯಿತು. ಇದನ್ನು ಗೋವಿಂದ ಭಟ್ಟರು ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಾರೆ.


ಸಾಮಾನ್ಯವಾಗಿ ಹಸಿವಿನಲ್ಲಿ ಕ್ರಿಯಾಶೀಲವಾಗುವ ಮನಸ್ಸು ಹೊಟ್ಟೆ ತುಂಬಿದಾಗ ಆಲಸ್ಯವನ್ನು ಅನುಭವಿಸುತ್ತದೆ. ಹೊಟ್ಟೆ ಹಸಿವು ಎಂದು ಬೇಡಿಕೊಂಡು ಬರುವ ಭಿಕ್ಷುಕ ಅಥವಾ ಇನ್ನಾರೋ ಅನ್ನ ಹಾಕುವವರೆಗೆ ಬೇಕಾದದ್ದನ್ನು ಮಾಡುವ ಮನಸ್ಸು ಮಾಡುತ್ತಾನೆ. ಹೊಟ್ಟೆ ತುಂಬಿತೋ ಆನಂತರ ಮಾಡಬೇಕಾದ ಕೆಲಸದಲ್ಲಿ ಔದಾಸಿನ್ಯ ಅರಿವಿಲ್ಲದೇ ಬಂದು ಬಿಡುತ್ತದೆ. ಆದರೆ ಗೋವಿಂದ ಭಟ್ಟರು ಯಾವ ಹಸಿವಿಗಾಗಿ ರಂಗಸ್ಥಳವೇರಿದರೋ ಹಸಿವು ನೀಗಿ ಹೊಟ್ಟೆ ತುಂಬಿದಾಗ ಆಲಸಿಗಳಾಗಲಿಲ್ಲ. ಅನ್ನ ಕೊಟ್ಟ ಕಸುಬಿಗೆ ಪ್ರಾಮಾಣಿಕತೆಯನ್ನು ತೋರಿಸಿದರು. ಅದಕ್ಕಾಗಿ ಸಹಜ ಕಲಾವಿದನಿಗಿಂತಲೂ ಅಧಿಕ ತಾದಾತ್ಮ್ಯವನ್ನು ತೋರಿಸಿದರು.  ಈ ಪ್ರಾಮಾಣಿಕತೆ ಅರ್ಪಣಾ ಭಾವ ಭಟ್ಟರನ್ನು ಯಕ್ಷಗಾನ ರಂಗದ ಅದ್ವಿತೀಯ ಕಲಾವಿದನನ್ನಾಗಿಸಿದೆ. ಇಂದಿಂಗೂ ಗೋವಿಂದ ಭಟ್ಟರು ಅದೇ ಭಾವದಿಂದ ರಂಗದಲ್ಲಿ ಕ್ರಿಯಾ ಶೀಲರಾಗಿದ್ದಾರೆ ಎಂದರೆ ವೃತ್ತಿಯಲ್ಲಿ ಅವರ ಬದ್ದತೆಯನ್ನು ತೋರಿಸುತ್ತದೆ. ಇಷ್ಟಾಗಿಯೂ ಅವರು ಹೇಳುವ ಮಾತು ಒಂದೇ “ನಾನು ಕಲಾಪ್ರೇಮದಿಂಡ ಯಕ್ಷಗಾನದ ಹುಚ್ಚಿನಿಂದ ವೇಷ ಹಾಕಿದವನಲ್ಲ. ಜೀವನದ ಪಾಠವೇ ನನಗೆ ಬಣ್ಣವನ್ನು ಬಳಿಯಿತು.”  ಅದೆಂತಹಾ ಪ್ರಾಮಾಣಿಕತೆ?

ಯಕ್ಷಗಾನ ಲೋಕ ಕೊಟ್ಟ ಅನ್ನವನ್ನು ಅವರೆಂದೂ ಮರೆಯಲಿಲ್ಲ. ಹಾಗಾಗಿಯೇ ಅವರ ಮುಖದಲ್ಲಿ ಅಳಿಯದ ಪ್ರಸನ್ನತಾ ಭಾವ ಸದಾ ಹಸಿರಾಗಿರುತ್ತದೆ. ಇಂದಿಗೂ ಇಷ್ಟು ದೀರ್ಘವಾದ ಕಲಾ ಜೀವನವನ್ನು ಜತೆಗೆ ವಾಸ್ತವ ಬದುಕನ್ನು ಕಂಡ ಅವರಲ್ಲಿ ಸಂತೃಪ್ತಿಯ ಭಾವವಿದೆ. ಮನುಷ್ಯನಿಗೆ ಸಂತೃಪ್ತಿ ಮೂಡವುದು ಭಗವಂತನಲ್ಲಿ  ವಿಶ್ವಾಸವಿರಿಸಿದಾಗ ಮಾತ್ರ. ಭಗವಂತನಲ್ಲಿ ವಿಶ್ವಾಸ ಅಚಲವಾಗಿ ಉಳಿಯಬೇಕಾದರೆ ಆತ ನಿತ್ಯಾಹ್ನಿಕಗಳನ್ನು, ಕರ್ಮ ಅನುಷ್ಠಾನಗಳನ್ನು ಪಾಲಿಸಬೇಕು.  ಇವುಗಳು ಯಾವುದೇ ಫಲಾಫಲದ ನಿರೀಕ್ಷೆಯಿಲ್ಲದೇ ಸಂಕಲ್ಪಿಸುವ ಪರಮಾತ್ಮ ಸ್ಮರಣೆಗಳು. ಕರ್ಮಾನುಷ್ಠಾನಗಳಲ್ಲಿ ಅಚಲವಾದ ನಿಷ್ಠೆಯನ್ನು ಪಾಲಿಸುವ ಇವರು ಯಾವತ್ತೂ ಸ್ಥಿರಮಾನಸ ಚಿತ್ತರಾಗಿ ವ್ಯವಹರಸುತ್ತಾರೆ. ವಾಸ್ತವದ ಬದುಕಿನ ಬಗ್ಗೆ ನಿರ್ದಿಷ್ಟವಾಗಿ ಯೋಚಿಸುತ್ತಾರೆ. ಹಾಗಾಗಿ ನಿತ್ಯ ಶಾಂತರಾಗಿ ಬಾಸವಾಗುತ್ತಾರೆ.  ಯಾವ ಉದ್ವೇಗವಿದ್ದರೂ ಇವರ ಮುಖವನ್ನು ನೋಡಿದರೆ ಆ ಉದ್ವೇಗ ಪರಿಹರಿಸಲ್ಪಡುತ್ತದೆ.

ಇವರ ಬಗ್ಗೆ ನನಗಿಂತಲೂ ಹೆಚ್ಚು ತಿಳಿದವರು ಬಹಳಷ್ಟು ಇದ್ದಾರೆ. ಆದುದರಿಂದ ನಾನು ಹೇಳುವ ಈ ಪರಿಚಯ ಲೇಖನ ನನ್ನ ಅರಿವಿಗಷ್ಟೆ ಸೀಮಿತ. ನನಗರಿಯದ ಗೋವಿಂದ ಭಟ್ಟರ ಪುಸ್ತಕದ ಪುಟಗಳು ಇನ್ನೂ ಬಹಳಷ್ಟಿವೆ.

ಯಕ್ಷಗಾನದ ಹಲವು ದಿಗ್ಗಜರ ವಿದ್ವಾಂಸರ ಸಂದರ್ಶನವನ್ನು ದಾಖಲಿಸಿದ ಮಿತ್ರ ರಂಗಣ್ಣನಿಗೆ ಗೋವಿಂದ ಭಟ್ಟರ ಸಂದರ್ಶನ ಮಾಡಬೇಕೆಂಬ ಬಯಕೆ ಮೊದಲಿನಿಂದಲೇ ಇತ್ತು. ನನ್ನಿಂದ ಅದಕ್ಕೆ ಚಿಕ್ಕ ಮಟ್ಟಿನ ಪ್ರೋತ್ಸಾಹವೂ ದೊರಕಿದಾಗ ರಂಗನಾಥರು ಹತ್ಯಾರ ಹೆಗಲಿಗೇರಿಸಿ ಹೊರಟೇ ಬಿಟ್ಟರು. ಸಾಮಾನ್ಯವಾಗಿ ಸಂದರ್ಶನಕ್ಕೆ ಹೋಗುವಾಗ ಒಂದಲ್ಲ ಸಾವಿರ ಕುತೂಹಲ ವಿರುತ್ತದೆ. ಇಂತಿಂತಹ ಪ್ರಶ್ನೆಗಳಿಗೆ ಹೇಗೆ ಉತ್ತರ ಸಿಗಬಹುದು? ಯಾವ ಪ್ರತಿಕ್ರಿಯೆ ಇರಬಹುದು? ಇದು ಸಹಜ. ಆದರೆ ಗೋವಿಂದ ಭಟ್ಟರ ಸಂದರ್ಶನಕ್ಕೆ ಇವರು ಹೊರಟು ನಿಂತಾಗ ಪ್ರಶ್ನೆಗಳು ಅದಕ್ಕೆ ಉತ್ತರವೂ ನಮ್ಮ ಕೈಯಲ್ಲಿತ್ತು. ಅಂದರೆ ಯಾವುದೇ ಪ್ರಶ್ನೆಗಳಿಗೂ ಗೋವಿಂದ ಭಟ್ಟರ ಉತ್ತರ ಹೀಗೆ ಇರುತ್ತದೆ ಎಂಬ ಖಚಿತ ನಿಲುವು ಅಲ್ಲಿತ್ತು. ಯಾಕೆಂದರೆ ಭಟ್ಟರ ವ್ಯಕ್ತಿತ್ವ ಆ ರೀತಿಯದ್ದು. ಅಲ್ಲಿ ಆಷಾಢ ಭೂತಿ ತನವಿಲ್ಲ. ರಂಗದ ಮೇಲಿರುವ ಅಭಿನಯ ಅಲ್ಲಿ ಇಲ್ಲ. ಎಲ್ಲವೂ ನೇರ ಸ್ಪಷ್ಟ. ಖಚಿತವಾದವುಗಳು. ಹಾಗಾಗಿ ಸಂದರ್ಶನ ಮಾಡಿದ ಸಾಧನೆಯ ತೃಪ್ತಿ ಮಾತ್ರ ಇಲ್ಲಿರುತ್ತದೆ. ಅಂದಿನಿಂದ ಇಂದಿನವರೆಗೂ ಗೋವಿಂದ ಭಟ್ಟರ ನಿಲುವು ಬದಲಾದದ್ದನ್ನು ನಾನು ನೋಡಿಲ್ಲ. ಯಾವುದೇ ಪ್ರಶ್ನೆಗೆ ಹೀಗೆ ಉತ್ತರಿಸುತ್ತಾರೆ ಎಂಬ ಸ್ಪಷ್ಟ ನಂಬಿಕೆ ನನಗಿತ್ತು. ಅದು ಪರಮ ಸತ್ಯವಾದ ವಿಚಾರ. ಇದೊಂದು ಭಟ್ಟರ ವ್ಯಕ್ತಿತ್ವದ ವೈಶಿಷ್ಟ್ಯತೆ.

ಗೋವಿಂದ ಭಟ್ಟರಲ್ಲಿ ನಾನು ಕಂಡದ್ದು ಜೀವನದ ವಾಸ್ತವಿಕ ಸತ್ಯಗಳನ್ನು. ಅವರೊಂದಿಗೆ ಹೃದ್ಯವಾಗಿ ಮಾತಿಗಿಳಿದರೆ ಇದು ಅರ್ಥವಾಗುತ್ತದೆ. ಹಾಗಾಗಿ ಅವರು ಯಕ್ಷಗಾನವನ್ನು ಕೇವಲ ಕಲೆಯಾಗಿ ಕಾಣಲಿಲ್ಲ. ತನ್ನ ಜೀವನದ ಸತ್ಯಗಳಿಗೆ ಉತ್ತರವಾಗಿ ಅದನ್ನು ಕಂಡರು.  ಆ ಸತ್ಯಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಿದರು. ಅದುದರಿಂದಲೇ  ಒಬ್ಬ ಕಲಾವಿದನಾಗಿ ಭಟ್ಟರು ಬಹಳ ಸ್ವಾವಲಂಬಿಗಳು. ಚೌಕಿಯಲ್ಲಿ ಇದನ್ನು ಕಾಣಬಹುದು.  ಅವರ ವೇಷ ಭೂಷಣಗಳನ್ನು ಸ್ವತಃ ಅವರೇ ಮಡಚಿ ಒಪ್ಪವಾಗಿ ಇಡುತ್ತಾರೆ. ವೃತ್ತಿಯಲ್ಲಿ ಶ್ರದ್ದೆ.   ಅದಕ್ಕೆ ಕಾರಣ ಅನ್ನ ಕೊಟ್ಟು ಹಸಿವು ನೀಗಿದ ಕೈಗಳು. ಹಾಗಾಗಿ ಇನ್ನೂ ವಿರಮಿಸದ ಪ್ರವೃತ್ತಿ. ಹೊಟ್ಟೆ ಹಸಿವು ನೀಗಿದರೂ ಈಗಿನ ಹಸಿವಿನ ರೂಪ ಬೇರೆಯೇ ಇರಬಹುದು.

ಗೋವಿಂದ ಭಟ್ಟರ ಜತೆ ಒಂದಷ್ಟು ಸಮಯವನ್ನು ಹಲವು ಸಲ ಕಳೆದಿದ್ದೇನೆ. ಆದರೆ ಅಷ್ಟೂ ಹೊತ್ತು ನಾನು ಯಕ್ಷಗಾನದ ಬಗ್ಗೆ ಅವರ ಕಲಾಜೀವನದ ಬಗ್ಗೆ ಮಾತನಾಡಿದ್ದು ಕಡಿಮೆ. ಯಾಕೆಂದರೆ ಜೀವನದ ವ್ಯಾವಹಾರಿಕ ಸತ್ಯಗಳು ಅವರನ್ನು ಕಂಡಾಗ ಯೋಚನೆಗೆ ಬರುತ್ತವೆ. ಅದರ ಬಗ್ಗೆ ಮಾತನಾಡಿದಾಗ ಅವರು ಪ್ರಾಮಾಣಿಕವಾಗಿ ಬಿಡುತ್ತಾರೆ. ಮನಸ್ಸಿನ ಅನಿಸಿಕೆಗಳನ್ನು ಸರಳವಾಗಿ ಹೇಳಿಬಿಡುತ್ತಾರೆ. ಕೇಳುವವರು ಏನೇ ತಿಳಿಯಲಿ ತನ್ನ ಜೀವನದಲ್ಲಿ ಕಂಡ ಸತ್ಯಗಳ ಬಗ್ಗೆಅವರು ನಿಷ್ಠೂರರಾಗಿ ಬಿಡುತ್ತಾರೆ. ತತ್ವ ಸಿದ್ದಾಂತಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಜಾಯಮಾನವಿಲ್ಲ. ಅವರು ಕಂಡುಕೊಂಡ ಜೀವನ ಸತ್ಯಗಳಲ್ಲಿ ಅಚಲವಾದ ವಿಶ್ವಾಸ. ಅದನ್ನು ಅಲ್ಲಗಳೆಯುವ ಅನುಭವ ನಮ್ಮದಲ್ಲ.

ಇವರು ಎಂದಿಗೂ ತನ್ನ ಬಗ್ಗೆ ಹೇಳಿಕೊಂಡವರಲ್ಲ. ಹಾಗಾದುದರಿಂದಲೇ ರಂಗನಾಥರು ಸಂದರ್ಶನ ಮಾಡಿ  ಇವರ ಸ್ವ ಪರಿಚಯ ( ಬಯೋಡಾಟ)  ವನ್ನು ಕೇಳಿದರು. ಅದಕ್ಕವರು ಮತ್ತೆ ಯೋಚಿಸದೆ ಒಂದೇ ಮಾತು ಅದನ್ನು ರಾಜಕುಮಾರ ನಲ್ಲೇ ಕೇಳಿಬಿಡಿ. ಎಲ್ಲಾ ವಿವರ ಸಿಗುತ್ತದೆ. ತಮ್ಮ ಸಮೀಪ ವರ್ತಿಗಳಲ್ಲಿ ಅದೊಂದು ವಿಶ್ವಾಸ. ನಾನೇನು ಹೇಳಿಯೇನು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಇಂತಹ ವಿಚಾರಗಳಲ್ಲಿ ತಮ್ಮದಲ್ಲದೇ ಇದ್ದದ್ದನ್ನು ಸೇರಿಸಿ ಹೇಳುವವರೇ ಅಧಿಕ. ಹಾಗಿರುವಾಗ ತಾವೇನೂ ಆಡದೆ ಅದನ್ನು ನನ್ನ ತಲೆಗೆ ರವಾನಿಸಿಬಿಟ್ಟರು.

ಇವರಲ್ಲಿ ನಾನು ಕಂಡ ಅತ್ಯಂತ ಶ್ರೇಷ್ಠ ಗುಣವೆಂದರೆ, ಬ್ರಾಹ್ಮಣನಾಗಿ ಇವರು ಕರ್ಮ ನಿಷ್ಠರಾಗಿ ಅನುಷ್ಠಾನವನ್ನು ಸದಾ ಕಾಯ್ದುಕೊಂಡಿರುವುದು.  ಇವರ ವೃತ್ತಿ ಪ್ರವೃತ್ತಿ ನಿತ್ಯಾಹ್ನಿಕಗಳನ್ನು ಬಾಧಿಸುವುದಿಲ್ಲ. ವ್ಯಾವಹಾರಿಕ ಪ್ರಪಂಚದ ವಾಸ್ತವಗಳೊಂದಿಗೆ ಸದಾ ಸ್ಪಂದಿಸುತ್ತಾರೆ.  ಯಕ್ಷಗಾನವಲ್ಲದೇ ಇದ್ದರೆ ಪೌರೋ ಹಿತ್ಯವನ್ನೂ ಮಾಡಬಲ್ಲರು, ಪಾಜಕರಾಗಿ ಸೌಟನ್ನೂ ಹಿಡಿಯಬಲ್ಲರು. ವ್ಯಾವಹಾರಿಕ ಜೀವನದ ಪ್ರವೃತ್ತಿಯನ್ನು ಎಂದಿಗೂ ಬಿಡದ ಚಲನ ಶೀಲ ವ್ಯಕ್ತಿತ್ವ. ಜೀವನಕ್ಕೆ ಯಾವುದನ್ನಾದರೂ ದುಡಿಯಬೇಕು. ಅದರಲ್ಲಿ ಇರುವ ಶ್ರದ್ದೆ. ಬಹುಶಃ ಬಾಲ್ಯದ ಬವಣೆಗಳು ಇದನ್ನು ಕಲಿಸಿರುತ್ತದೆ.

ವ್ಯಾವಹಾರಿಕ ಪ್ರಪಂಚದ ಪರಮ ಸತ್ಯವನ್ನು ಚೆನ್ನಾಗಿ ಅರಿತವರು. ಹಾಗಾಗಿ ಇವರು ನಿರ್ಲಿಪ್ತರಾಗಿಯೂ ಇರಬಲ್ಲರು. ಅವರ ಪ್ರವೃತ್ತಿಯಲ್ಲಿ ಇದು ಅವರಿಗೆ ಪ್ರಿಯವಾದ ನಿಲುವು.. ಬಹಳಷ್ಟು ಯೋಚಿಸಿ ಮಥಿಸಿ ಪ್ರಪಂಚವನ್ನು ಅವಲೋಕಿಸಿ ಅವರು ತನ್ನ ನಿಲುಮೆಯನ್ನು ತಳೆಯುತ್ತಾರೆ. ಯಾರೇನೇ ಹೇಳಿದರೂ ತನ್ನ ನಿಲುಮೆಯ ಬಗ್ಗೆ ಅಚಲವಾದ ವಿಶ್ವಾಸ. ಸೌಮ್ಯವಾಗಿಯೇ ಪರಿಣಾಮವನ್ನೂ ಬೀರ ಬಲ್ಲ ವ್ಯಕ್ತಿತ್ವ
.
ಇಂದಿನ ಯುವಕರನ್ನೂ ನಾಚಿಸಬಲ್ಲ ಚಲನ ಶೀಲತೆ. ಚಟುವಟಿಕೆ. ರಂಗದ ಮೇಲಿನ ಪ್ರವೃತ್ತಿ, ಇದೆಲ್ಲವೂ ಅವರಿಗೆ ಒಲಿದದ್ದು ಅವರ ಯೋಗಾಭ್ಯಾಸದಿಂದ. ಅದರಿಂದ ಇನ್ನೊಬ್ಬರಿಗೆ ಸ್ಫೂರ್ತಿಯಾಗಬಲ್ಲರು. ಯಕ್ಷಗಾನದಲ್ಲಿ ಹಲವಾರು ಶಿಷ್ಯವರ್ಗವನ್ನು  ಹೊಂದಿದವರು ಇವರು.

ಬಹಳ ಸರಳ ಮತ್ತು ನೇರ ವ್ಯಕ್ತಿತ್ವ. ಶಾಂತ ಸ್ವಭಾವವಾದರೂ ಇವರ ತೀಕ್ಷ್ಣ ಅವಲೋಕನ ಸದಾ ಹಿಂಬಾಲಿಸುತ್ತಿರುತ್ತದೆ.  ಬಹಳ ಬೇಗನೇ ಆತ್ಮೀಯರಾಗಿ ಬಿಡುತ್ತಾರೆ.  ಕಲಾಜೀವನದಲ್ಲಿ ಗೌರವವನ್ನು ಕಾಯ್ದುಕೊಂಡವರು. ನಿರ್ಭಿಡೆಯ ನಡೆ. ಅದಕ್ಕೆ ಅವರದ್ದೆ ಆದ ಕಾರಣಗಳನ್ನು ನಿದರ್ಶನಗಳನ್ನು ಸುಲಭವಾಗಿ ಒದಗಿಸಬಲ್ಲರು. ವ್ಯಯಕ್ತಿವಾಗಿ ಸದ್ಭಾವನೆ ಸಹಕರಣ ಇದೆಲ್ಲದಕ್ಕೂ ಪ್ರತೀಕವಾಗಬಲ್ಲರು. ಒಂದು ಸಲ ಯಕ್ಷಗಾನ ತಾಳ ಮದ್ದಲೆಗೆ ಆಹ್ವಾನಿಸುವ ಅವಕಾಶ ನನಗೆ ಒದಗಿ ಬಂತು. ಕರೆ ಮಾಡಿದೆ. ದಿನ ವಿವರ ಎಲ್ಲ ಕೇಳಿದ ಮೇಲೆ ಬರುತ್ತೇನೆ ಎಂದಷ್ಟೇ ಹೇಳಿ ದಿನಚರಿಯಲ್ಲಿ ಗುರುತು ಮಾಡಿಕೊಂಡರು.  ಬರುತ್ತೇನೆ ಎಂದಷ್ಟೇ ಹೇಳಿದವರು ಮತ್ತೆ ಯಾವ ವಿವರವನ್ನು ಕೇಳಲಿಲ್ಲ. ಸಾಮಾನ್ಯವಾಗಿ ತಾಳ ಮದ್ದಲೆಗೋ ಆಟಕ್ಕೊ ಕರೆದಾಗ ಕಲಾವಿದರು, ಅದರಲ್ಲೂ ತಾರಾಮೌಲ್ಯ ಇದ್ದವರು ಬಹಳಷ್ಟು ಚೌಕಾಶಿಗೆ ಇಳಿಯುವುದುಂಟು. ತಮಗೆ ಇಂತಹುದೇ ಪಾತ್ರವಾಗಬೇಕು, ಇಲ್ಲ ಇಂತಹವರೇ ಪ್ರತಿ ಪ್ರಾತ್ರದಲ್ಲಿ ಇರಬೇಕು. ಇಷ್ಟೇ ಸಂಭಾವನೆ ಸಿಗಬೇಕು. ಇದನ್ನೆಲ್ಲ ಮೊದಲೇ ಮಾತನಾಡಿ ನಿರ್ಧರಿಸಿ ಬಿಡುವ ತವಕ. ಆದರೆ ಗೋವಿಂದ ಭಟ್ಟರು ಎಷ್ಟೇ ವ್ಯಾವಹಾರಿಕವಾಗಿ ಚಿಂತಿಸುವುದಿದ್ದರು ಬರುತ್ತೇನೆ ಎಂಬ ಒಂದು ಒಪ್ಪಿಗೆ ಬಿಟ್ಟರೆ ಬೇರೆ ಮಾತಿಲ್ಲ. ಚೌಕಾಶಿ ಇಲ್ಲ. ಸಂಭಾವನೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕರೆದ ನನ್ನ ಬಗ್ಗೆ ವಿಶ್ವಾಸವೋ ಇಲ್ಲ ಅವರ ಪ್ರವೃತ್ತಿಯೇ ಆ ರೀತಿಯೋ ನನಗೆ ಇಂದಿಗೂ ಕೌತುಕವಾಗಿಯೇ ಉಳಿದಿದೆ. ಕೊನೆಗೆ ನಾನೇ ಕೇಳಿದೆ ಇಂತಹ ಪಾತ್ರ ಮಾಡಬಹುದೇ?  ಆಗ ಶಾಂತವಾದ ಸ್ವರದಲ್ಲಿಯೇ ಹೇಳಿದರು,

“ ನನಗೆಂಥದ್ದೋ? ಎಂಥದ್ದೂ ಅದೀತು? ಯಾವ ಪ್ರಸಂಗವೂ ಯಾವ ಪಾತ್ರವೂ ಅಲ್ಲಿ ಬಂದಾಗ ಹೇಳೀದರೂ ತೊಂದರೆ ಇಲ್ಲ. ಯಾವದೂ ಅದೀತು. “

ಯಕ್ಷಗಾನ ಸಂಘಟಕರಿಗೆ ಇಂತಹ ಕಲಾವಿದರ ಆವಶ್ಯಕತೆ ಈಗ ಬಹಳಷ್ಟಿದೆ ಎನ್ನಿಸಿತು. ಇಷ್ಟು ಹೊಂದಿಕೊಳ್ಳುವ ಕಲಾವಿದರು ಇಂದು ಯಕ್ಷಗಾನದಲ್ಲಿ ಬೆರಳೆಣಿಕೆಯಷ್ಟೇ ಇರುವುದು. ಅಗಾಧವಾದ ಅನುಭವ ಯಾವುದನ್ನೂ ಮಾಡಬಲ್ಲೆ ಎಂಬ ಆತ್ಮ ವಿಶ್ವಾಸ ಇದು ಯಕ್ಷಗಾನ ಅಲ್ಲ ಅವರಿಗೆ ಬದುಕು ಕಲಿಸಿದ ಪಾಠಗಳು. ಅದು ಯಕ್ಷಗಾನದಲ್ಲೂ ವ್ಯಕ್ತವಾಯಿತು.  ಯಕ್ಷಗಾನ ರಂಗದ ಮೇಲೆ ಇವರ ಬದುಕು ಅತೀ ದೀರ್ಘ ಬದುಕು, ಇಷ್ಟು ದೀರ್ಘ ಬದುಕು ಅತ್ಯಂತ ವಿರಳಾತಿ ವಿರಳ ಎನ್ನಬಹುದು. ವಿಶೇಷವೆಂದರೆ ಇವರ ಶಿಷ್ಯಂದಿರು ನಿವೃತ್ತಿ ಪಡೆದುಕೊಂಡು ಮೇಳ ಬಿಟ್ಟು ಹೊರನಡೆದರೂ ಗುರುಗಳಾದ ಇವರು ಇನ್ನೂ ರಂಗದಲ್ಲಿ ಪ್ರವೃತ್ತರಾಗಿಯೇ ಇದ್ದಾರೆ.

ಯಕ್ಷಗಾನದ ವೃತ್ತಿ ಬದುಕಿನಲ್ಲಿ ಇವರು  ಪ್ರವರ್ತಕ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಾರೆ. ಅದಕ್ಕೆ ಅವರದೇ ಆದ ತಾತ್ವಿಕ ಆಧಾರಗಳನ್ನೂ ಸರಳವಾಗಿ ಒದಗಿಸುತ್ತಾರೆ.  ಶ್ರೀ ಕಡತೋಕ ಮಂಜುನಾಥ ಭಾಗವತರ ಸಾರಥ್ಯದಲ್ಲಿ ಗೋವಿಂದಣ್ಣನ ನೈಜ ಪ್ರತಿಭೆ ಪ್ರಕಾಶಕ್ಕೆ ಬಂತು. ಯಾವಾಗ ಕಲಾವಿದನಾದವನು ಪಾತ್ರಕ್ಕೆ ಮಾದರಿಯಾಗುತ್ತಾನೋ ವೃತ್ತಿಜೀವನದ ಪರಮೋತ್ಕರ್ಷ ಸ್ಥಾನವನ್ನು ತಲುಪಿದ ಎಂದೇ ಆಗುತ್ತದೆ.. ಆ ಕಾಲಾದಲ್ಲಿ ಶ್ರೀ ಧರ್ಮಸ್ಥಳ ಮೇಳದ ಗಜ ಪಡೆಯಲ್ಲಿ ಒಂದು ಸೇನಾನಿಯಾಗುವುದು ಮಾತ್ರವಲ್ಲ ಸೇನಾಪತಿ ಸ್ಥಾನಕ್ಕೆ ಸ್ಪರ್ಧಿಯಾಗುವುದು ಸಾಮಾನ್ಯ ಮಾತಲ್ಲ. ಅದರಲ್ಲೂ ಕಡತೋಕ ಭಾಗವತರಾಗಲೀ ಮೇಳಕ್ಕೆ  ಅನೇಕ ಯಶಸ್ವೀ ಪ್ರಸಂಗವನ್ನು ರಚಿಸಿದ ಶ್ರೀ ಅಮೃತ ಸೋಮೇಶ್ವರರಾಗಲೀ ಇವರನ್ನು ಗಮನಿಸಿಯೇ ಪ್ರಸಂಗ ನಡೆ ರೂಪಿಸಲ್ಪಡುತ್ತಿತ್ತು. ಆಗ ಮೇಳದಲ್ಲಿ ಮೂರು ಜನ ಅಗ್ರಗಣ್ಯ ಕಲಾವಿದರು. ಒಬ್ಬರು ಶ್ರೀ ಕುಂಬಳೆ ಸುಂದರ್ ರಾವ್, ಇನ್ನೊಬ್ಬರು ಪುತ್ತೂರು ಶ್ರೀ ನಾರಾಯಣ ಹೆಗ್ಗಡೆಯವರು, ಮತ್ತೊಬ್ಬರು ಇವರು ಶ್ರೀ ಗೋವಿಂದ ಭಟ್ಟರು. ಇಡೀ ರಾತ್ರಿಯ ಪ್ರಸಂಗದಲ್ಲಿ  ಈ ಮೂವರಲ್ಲಿ ಯಾರಾದರೊಬ್ಬರು ರಂಗದಲ್ಲಿ ಇರುವಂತೆ ಪ್ರಸಂಗ ಸಂಯೋಜನೆಯಾಗುತ್ತಿತ್ತು. ಈ ಮೂರು ಜನರಲ್ಲಿ ಒಬ್ಬರಲ್ಲ ಒಬ್ಬರು ರಂಗಸ್ಥಳದಲ್ಲಿದ್ದರೆ ಪ್ರೇಕ್ಷಕನನ್ನು ಹಿಡಿದುಕೊಳ್ಳುವುದು ಕಷ್ಟವಲ್ಲ. ಇದು ಕಡತೋಕರ ತಂತ್ರಗಾರಿಕೆ. ಪ್ರಸಂಗಗಳು ಯಶಸ್ವಿಯಾಗುವುದಕ್ಕೆ ಇದೂ ಒಂದು ಪ್ರಧಾನ ಕಾರಣವಾಗಿತ್ತು.  ಸಮರ್ಥ ನಿರ್ದೇಶನಕ್ಕೆ ಗೋವಿಂದ ಭಟ್ಟರೂ ಸಾಕ್ಷಿಯಾಗಿದ್ದು ಆ ಕಾಲದಲ್ಲಿ ಯುವಕ ಭಟ್ಟರ ಸಾಧನೆ ಎನ್ನಬೇಕು. ಇವರು ನಿರ್ವಹಿಸಿದ ಪಾತ್ರಗಳನ್ನು ಇವರ ಗೈರು ಹಾಜರಿಯಲ್ಲಿ ಮತ್ತೊಬ್ಬನಿಗೆ ನಿರ್ವಹಿಸುವುದು ಅತ್ಯಂತ ದೊಡ್ಡ ಸವಾಲಾಗಿತ್ತು. ಸವಾಲಾಗಿತ್ತು ಮಾತ್ರವಲ್ಲ ಅದು ಅಸಾಧ್ಯವೂ ಆಗಿತ್ತು.

 ಅದೇನಿದ್ದರೂ ಯಕ್ಷಗಾನದ ವಿಚಾರಕ್ಕೆ ಬಂದಾಗ  ನಾನು ಇವರನ್ನು ಕೆಲವು ಪಾತ್ರವಾಗಿಯೇ ಕಾಣುತ್ತೇನೆ.. ಮಹಾ ಬ್ರಾಹ್ಮಣದ ಕೌಶಿಕ ಅಥವಾ ವಿಶ್ವಾ ಮಿತ್ರನಾಗಿರಬಹುದು, ಪಾದುಕಾ ಪ್ರದಾನದ ಶ್ರೀ ರಾಮನಾಗಿರಬಹುದು ಚಕ್ರವರ್ತಿ ದಶರಥದ ವಾಲ್ಮೀಕಿಯಾಗಿರಬಹುದು ಇಂತಹ ಯುಗ ಪ್ರವರ್ತಕ ಪಾತ್ರಗಳಲ್ಲಿ ಗೋವಿಂದ ಭಟ್ಟರ ಅಂತಃ ಸತ್ವ ಅವರಿಗೆ ಅರಿವಿದ್ದೋ ಇಲ್ಲದೆಯೋ ಅದು ಪ್ರಕಟವಾಗುತ್ತದೆ. ಅದರಲ್ಲೂ ಮಹಾಬ್ರಾಹ್ಮಣದ ಕೌಶಿಕನ ಪಾತ್ರದ ಕಸುವು ಅದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಮೊದಲಿಗೆ ರಾಜವೇಷದ ಕೌಶಿಕ ಆನಂತರ ತ್ರಿಶಂಕು ಪ್ರಕರಣದ ವಿಶ್ವಾಮಿತ್ರ ಇವೆರಡನ್ನೂ ಒಂದೇ ಎಸೆತಕ್ಕೆ ನಿರ್ವಹಿಸುತ್ತಿದ್ದ ಇವರ ಚೈತನ್ಯ ಅದ್ಭುತ. ರಂಗಸ್ಥಳವನ್ನು ವಿಶ್ವಾಮಿತ್ರನಾಗಿ ಇವರು ಆಕ್ರಮಿಸಿದ ರೀತಿ ನಂತರ ಆ ಪಾತ್ರವನ್ನು ಮುಂದುವರೆಸುವುದೂ ದೊಡ್ಡ ಸವಾಲಾಗಿತ್ತು. ಪ್ರೇಕ್ಷಕ ವಿಶ್ವಾಮಿತ್ರನ ಗುಂಗಿನಿಂದ ಹೊರಬರುವುದು ಸಾಧ್ಯವಿಲ್ಲದ ಮಾತು.   ಬಹುಶಃ ನಿತ್ಯ ಅನುಷ್ಠಾನದ ಪ್ರಭಾವ ಇರಬಹುದು, ಜತೆಗೆ ಸಂಸ್ಕ್ರತ ಭಾಷಾ ಪರಿಣತಿ ಆ ಮೂಲಕ  ಗಳಿಸಿದ ಜ್ಞಾನದ ಸತ್ವವೂ ಇರಬಹುದು, ಇದರಿಂದ  ಈ ಪಾತ್ರಗಳಾಗಿ ಗೋವಿಂದ ಭಟ್ಟರು ರಂಗವೇರಿದಾಗ ಅವರ ಅಂತರಂಗದ ಮುಖ ಅಲ್ಲಿ ತೆರೆದುಕೊಳ್ಳುತ್ತದೆ. ಅದು ಕೇವಲ ಪಾತ್ರವೂ ಆಗುವುದಿಲ್ಲ, ಕೇವಲ ಗೋವಿಂದಣ್ಣನೂ ಆಗುವುದಿಲ್ಲ. ಅಲ್ಲಿ ಇನ್ನೇನೋ ವಸ್ತು ಅಂತರ್ಧಾರೆಯಾಗಿ ಪ್ರವಹಿಸಿದಂತೆ ಭಾಸವಾಗುತ್ತದೆ. ಇಲ್ಲಿ ಕಂಡುಬರುವ ಈ ಅವ್ಯಕ್ತ ಹರಿವು ಏನಿದೆಯೋ  ಅದು ಇವರ ಕೌರವ, ಋತುಪರ್ಣ ತಾಮ್ರಧ್ವಜಂತಹ ರಾಜಸ ಪಾತ್ರಗಳಲ್ಲಿ ಕಂಡುಬರುವುದಿಲ್ಲ. ಹಾಗಿದ್ದರು ಇವರ ರಾಜವೇಷಗಳು ತೆಂಕುತಿಟ್ಟು ಯಕ್ಷಗಾನದ ಮಾದರೀ ವೇಷಗಳಂತೆ ವಿಜ್ರಂಭಿಸುವುದು ಇವರ ಪ್ರವರ್ತಕ ಗುಣಗಳಿಂದಲೇ. ಅಲ್ಲಿ ಪ್ರತೀ ಸಲವೂ ಸೂಕ್ಷವಾಗಿಯಾದರೂ ಒಂದು ಅವಿಷ್ಕಾರ ಕಂಡುಬರುತ್ತದೆ.

 ದೇವಿ ಮಾಹಾತ್ಮೆ ಎಂಬ ಪ್ರಸಂಗದಲ್ಲಿ ಇವರು ಮಾಡದೇ ಇದ್ದ ಪಾತ್ರಗಳೇ ಇಲ್ಲ ಮತ್ತು  ರಾಮಾಯಣದ ಯಕ್ಷಗಾನ ಪ್ರಸಂಗಗಳಲ್ಲಿ ಇವರು ಎಲ್ಲಾ ಪಾತ್ರಗಳನ್ನು ನಿರ್ವಹಿಸಿದವರಿದ್ದಾರೆ. ಅದು ವೃತ್ತಿ ಬದುಕಿನಲ್ಲಿ ಅನಿವಾರ್ಯವಾಗಿತ್ತೇ ಹೊರತು ಅದೊಂದು ಸಾಧನೆ ಎಂದು ಪರಿಗಣಿಸುವ ಹಾಗಿಲ್ಲ ಎಂದು ಪ್ರಾಮಾಣಿಕವಾಗಿ ಹೇಳುತ್ತಾರೆ.

ಯಕ್ಷಗಾನವನ್ನು ಇವರು ಕಲೆಯಾಗಿ ಕಂಡು ಮೋಹಿಸಿದವರಲ್ಲ. ವ್ಯವಸ್ಥಿತ ವಿವಾಹದ ರೀತಿಯಂತೆ ವಿವಾಹವಾದ ಮೇಲೆ ಸಹಧರ್ಮಿಣಿಯನ್ನು ಪ್ರೀತಿಸಿದಂತೆ , ಆ ಪ್ರೀತಿಗೆ ಬದ್ಧರಾಗಿ ಕೌಟುಂಬಿಕ ಜೀವನ ವ್ಯವಸ್ಥಿತವಾಗಿ ನಡೆಸುವಂತೆ ಯಕ್ಷಗಾನದೊಂದಿಗೆ ತಾದಾತ್ಯ್ಮವನ್ನು ತೋರಿದವರು. ಯಕ್ಷಗಾನದಲ್ಲಿ ಅನ್ನ ಬ್ರಹ್ಮನನ್ನೇ ಕಂಡ ಇವರು ಅಲ್ಲಿ ಉಂಡ ಅನ್ನದಿಂದ ತಣಿದ ಹಸಿವವನ್ನು ಎಂದಿಗೂ ಮರೆಯಲಿಲ್ಲ. ಆ ಕಾರಣಕ್ಕೆ ಈಗಲೂ ರಂಗದಲ್ಲಿ ಸದಾ ಪ್ರವೃತ್ತರು. ಆ ಅನಿಟ್ಟಿನಲ್ಲಿ ಈಗಲೂ  ಅವರ ಹಸಿವು ಇಂಗಿದಂತೆ ಭಾಸವಾಗುವುದಿಲ್ಲ. 

                ಯಾರನ್ನೇ ಆಗಲಿ ಅವರು ನಿಕೃಷ್ಟವಾಗಿ ಕಾಣುವುದಿಲ್ಲ. ಬಾಲ್ಯದಲ್ಲಿ ತಾನು ಅನುಭವಿಸಿದ ಭರ್ತ್ಸನೆ ಅವಹೇಳನೆ ಹಿಂಸೆ ಇವುಗಳೆಲ್ಲದ ಪರಿಣಾಮ ಅನುಭವ ಮಾಗಿದಾಗ ಅವರ ವ್ಯಕ್ತಿತ್ವದಲ್ಲೂ ಪಕ್ವತೆಯನ್ನು ತಂದಿದೆ. ತಾತ್ವಿಕವಾಗಿ ಸೈದ್ದಾಂತಿಕವಾಗಿ ತನ್ನದೇ ವೆತ್ಯಸ್ತ ಸಿದ್ಧಾಂತವನ್ನು ಹೊಂದಿದ್ದರೂ ಮನಸ್ಸಿನಿಂದ ಯಾರಲ್ಲೂ ವೈಷಮ್ಯವನ್ನು ತೋರಿದವರಲ್ಲ. ಸಿದ್ದಾಂತ ಬೇರೆ, ವಾಸ್ತವದ ಜೀವನ ಧರ್ಮ ಬೇರೆ. ಆದರೆ ಇಂದು ಬಾಹ್ಯ ಜಗತ್ತಿನಲ್ಲಿ ಸಿದ್ದಾಂತವನ್ನು ವಿರೋಧಿಸಿದವನು ಎಲ್ಲದರಲ್ಲೂ ಜನ್ಮ ವಿರೋಧಿಯಾಗಿ ಕಾಣುವುದೇ ಹೆಚ್ಚು. ಇಲ್ಲಿ ಬರುವ ತತ್ವ ಭೇದವಾಗಲಿ ಸಿದ್ದಾಂತ ವೆತ್ಯಾಸಗಳಾಗಲಿ ಇವರಿಗೆ ಅರ್ಥವಾಗುತ್ತದೆ. ಆದರೆ ಕಲಾವಿದನ ತತ್ವ ಸಿದ್ದಾಂತಗಳೇನೆ ಇರಲಿ ಅದನ್ನು ವ್ಯಯಕ್ತಿಕ ನೆಲೆಗೆ ತಳುಕು ಹಾಕಿ ನೋಡುವುದೇ ಅಧಿಕ. ಹಾಗಾಗಿ ಕಲಾವಿದನ ಮೇಲೆ ಅಂಧಾಭಿಮಾನ ಬೆಳೆಯುತ್ತದೆ. ಅಲ್ಲಿ ತತ್ವ ಸಿದ್ದಾಂತಗಳ ಬಗ್ಗೆ ಗಮನವೇ ಇರುವುದಿಲ್ಲ. ಅವುಗಳನ್ನು ಅರ್ಥೈಸಿಕೊಳ್ಳುವ ಮನೋಭಾವವೇ ಇರುವುದಿಲ್ಲ. ಕೇವಲ ಅಭಿಮಾನ. ಈ ಅಭಿಮಾನಕ್ಕೆ ಸ್ಪಷ್ಟ ರೂಪು ರೇಷೆ ಏನು ಇರುವುದಿಲ್ಲ. ಈ ಅಭಿಮಾನ ಆಕ್ಷೇಪಗಳನ್ನು ಸಹಿಸುವುದಿಲ್ಲ. ಆದರೆ ಅಭಿಮಾನವೋ ಪ್ರೀತಿಯೋ ಗೋವಿಂದ ಭಟ್ಟರು ಯಾವುದಕ್ಕೂ ತಲೆ ಕೆಡಿಸಿಕೊಂಡವರಲ್ಲ. ತಾನು ನಡೆವ ಹಾದಿ ತಾನು ತಳೆವ ನಿಲುವು ಎಲ್ಲದರಲ್ಲೂ ಪ್ರಾಮಾಣಿಕವಾಗಿ ವ್ಯವಹರಿಸಿದವರು.

                ಸಂದರ್ಶನಕ್ಕಾಗಿ ನಾನು ಕರೆ ಮಾಡಿದಾಗ ಅದಕ್ಕೊಂದು ಅವಧಿಯನ್ನು ನಿರ್ಣಯಿಸಿ ತಿಳಿಸಿದರು. ಇಂತಹವರು ಈ ಅವಧಿಯಲ್ಲಿ ಸಂಪರ್ಕಿಸುತ್ತಾರೆ ಎಂದು ರಂಗನಾಥನ ಹೆಸರನ್ನು ಸೂಚಿಸಿದ್ದೆ. ಮೊದಲು ರಂಗನಾಥರು ಯಾರೋ ಅಂತ ಆತಂಕ ಕೌತುಕವನ್ನು ತೋರಿದರೂ ರಂಗನಾಥರನ್ನು ಕಂಡ ಮೇಲೆ ಹೋ ಇವನು ನಮ್ಮವನೇ ಅಂತ ಆತ್ಮಿಯತೆಯನ್ನು ತೋರಿ ಸಹಕರಿಸಿದರು. ಆನಂತರ ಅವರು ಪ್ರಶಸ್ತಿ ಸ್ವೀಕಾರಕ್ಕೆ ದೆಹಲಿಗೆ ಹೋಗುವವರಿದ್ದರು. ಆದರೆ ನನಗೆ ಆಶ್ಚರ್ಯವಾದದ್ದು ಇದು ಕಳೆದು ಸುಮಾರು ಹತ್ತು ದಿನಗಳಾದ ಮೇಲೆ ಗೋವಿಂದ ಭಟ್ಟರು ನನಗೆ ಕರೆ ಮಾಡಿ ನಡೆದ ಸಂದರ್ಶನದ ವಿವರಗಳನ್ನು ಕೇಳಿ  “ಹೇಗಾಯಿತೋ ಏನೋ ಅವರಿಗೆ ಸಮಾಧಾನವಾದರೆ ಸಾಕು”  ದೆಹಲಿಯಿಂದ ಊರಿಗೆ ಬಂದೊಡನೆ ನೆನಪಿಟ್ಟು ನನಗೆ ಕರೆ ಮಾಡಿ ವಿಚಾರಿಸಬೇಕಿದ್ದರೆ ಅದರ ಗಂಭೀರತೆ ಅವರು ಸಲ್ಲಿಸಿದ ಗೌರವ ನಿಜಕ್ಕೂ ಆಶ್ಚರ್ಯ ತಂದಿತು.  ಈ ಒಂದು ಕಾರ್ಯಕ್ಕೆ ಅವರು ಕೊಟ್ಟ ಗೌರವ ಆದರ ಅದು ಗೋವಿಂದಣ್ಣನೆಂಬ ವ್ಯಕ್ತಿತ್ವದ ರೂಪವಾಗಿ ಕಂಡಿತ್ತು. ರಂಗಸ್ಥಳದಲ್ಲಿ ಕಿವಿಯನ್ನು ಸೀಳಿ ಮನಸ್ಸಿಗೆ ನಾಟುವ ಇವರ ಹರಿತ ಸ್ವರ ಶಾರೀರ ಹೀಗೆ ಮಾತನಾಡಿದಾಗ ಮಂದ ಮಂದ ಶಾಂತ ಸ್ವರವಾಗುತ್ತದೆ. ಆ ಶಾಂತ ಸ್ವರದಲ್ಲಿ ನಮಸ್ಕಾರ ಎಂದು ಕೇಳುವಾಗ ಮನಸ್ಸು ಭಾರವಾಗುತ್ತದೆ. ಆ ಒಂದು ಘಳಿಗೆ ಒಂದು ಧನ್ಯತಾಭಾವ ಆವರಿಸಿಬಿಡುತ್ತದೆ.