"ಇದು ವಿಮರ್ಶೆಯಲ್ಲದ ಚಿಂತನ"

Sunday, September 22, 2019

ಯಕ್ಷಗಾನ ಮಾಹಾಯಜ್ಞ


ಯಕ್ಷಗಾನ ಮಾಹಾಯಜ್ಞ

(ತೆಂಕುತಿಟ್ಟು ಹಿತರಕ್ಶಣಾ ವೇದಿಕೆ ಸುಳ್ಯ. ಇವರು ಕೆಲವು ವರ್ಷಗಳ ಕೆಳಗೆ ಆಯೋಜಿಸಿದ  ಮಹಾಭಾರತ ಪ್ರಸಂಗದ ಬಗೆಗಿನ  ಅನಿಸಿಕೆಗಳು )

ಪ್ರಸಂಗ : ಶ್ರೀಕೃಷ್ಣ ಪರಂಧಾಮ – ಪಾಂಡವ ಸರ್ಗಾರೋಹಣ

ನಡ ನಡುಗುತಿಹ ಭೀಮ ಸೇನನ ಕೈ ಹಿಡಿದು ಓಲೈಸುತ್ತಾ ಒರೆದನು, ಬಿಡು ಮನದ ಶೋಕವನು. ಅದೋ  ಅದೋ ಸುರಪುರ ಬಂತು ನೋಡೆನುತ.
 ಕುಸಿದು ಕುಳಿತ ಭೀಮಸೇನನಿಗೆ ಅಣ್ಣ ಯುಧಿಷ್ಠಿರ ಧರ್ಮರಾಯ ಹೇಳುವ ಮಾತು,   ಅದು ವರೆಗೂ ಎಲ್ಲ ಅಡೆತಡೆಗಳನ್ನು ಮೀರಿ ಕಳೆದು ಹೋದ ಸತಿ ಸಹೋದರರನ್ನು ಲೆಕ್ಕಿಸದೆ ಸ್ಥಿರ ಚಿತ್ತದಿಂದ  ಮುಂದೆ ಹೋಗುತ್ತಿದ್ದರೆ , ಹಿಂದೆಯೇ ಹೆಜ್ಜೆ ಹಾಕುತ್ತಿದ್ದ ಭೀಮಸೇನನ ರೋದನ ಬಹಳ ಹಿಂದಿನಿಂದ ಕೇಳುತ್ತದೆ. ದ್ರೌಪದಿ ನಕುಲ ಸಹದೇವ ಹೆಚ್ಚೇಕೆ ಮಹಾ ವಿಕ್ರಮಿಯಾದ ಅರ್ಜುನ ಸತ್ತು ಬಿದ್ದಾಗಲೂ ವಿಚಲಿತನಾಗದ ಧರ್ಮರಾಯ ಹಿಂದಿರುಗಿ ನೋಡುತ್ತಾನೆ. ಶತಗಜತ್ರಾಣಿ ನಿತ್ರಾಣಿಯಾಗಿ ನೆಲಕ್ಕೊರಗಿದ್ದಾನೆ. ಸರಿದು ಭೀಮ ಸೇನನ ಕೈಹಿಡಿದು ಧರ್ಮರಾಯ ಹೇಳುವ ಆ  ಸನ್ನಿವೇಶ ಮಹಾಭಾರತದ ಅಂತ್ಯದ ದುರಂತದ ಚಿತ್ರಣವನ್ನು ಯಥಾವತ್ತಾಗಿ ಚಿತ್ರಿಸುತ್ತದೆ.

 ನೂರು ಚದರಡಿಯ ರಂಗಸ್ಥಳದ  ಒಳಗೆ ಒಂದು ಪೌರಾಣಿಕ ಲೋಕವನ್ನು ಸ್ಥೂಲವಾಗಿ ತೋರಿಸುತ್ತಿದ್ದರೆ,  ಯಕ್ಷಗಾನದ ಪರಂಪರೆಯ ಅಗಾಧತೆಗೆ ಮನಸ್ಸು ಭಾರವಾಗುತ್ತದೆ. ಅತಿರೇಕದ ಭಾವಾಭಿನಯವಿಲ್ಲ. ದೇಹದಂಡನೆಯ ಗುರಿಯಾಗುವ ಕುಣಿತವಿಲ್ಲ. ಸಂಗೀತ ಕಛೇರಿಯನ್ನು ಮೀರಿ ವಿರಾಮ ಎಲ್ಲಿ ಎಂದು ತಿಳಿಯದ ಆಲಾಪನೆ ಇಲ್ಲ. ಇಲ್ಲಿನ ಹಿತ ಮಿತವಾದ ಭಾಗವತರ ಭಾಮಿನಿಯ ಆಲಾಪನೆ, ನಮ್ಮನ್ನು ಸನ್ನಿವೇಶದ ಆಳಕ್ಕೆ ಮತ್ತಷ್ಟು ಸೆಳೆಯುತ್ತಾ ಸಾಗುತ್ತದೆ.  ಅಣ್ಣಾ,  ಎನ್ನುವ  ಆರ್ತನಾದದ ಭೀಮನ ಕರೆ ಅದುವರೆಗಿನ ಪಾಂಡವ ಸಾಹೋದರ್ಯವನ್ನು ತೋರಿಸುತ್ತದೆ.   ಕೇವಲ ಸಂಕೇತಗಳೆಂಬಂತೆ ಈ ದುರಂತ ಚಿತ್ರಣವನ್ನು ಕೊಡುವಾಗ, ರಂಗಸ್ಥಳದಲ್ಲಿ ನೋಡಿದುದಕ್ಕಿಂತಲೂ ಹೆಚ್ಚು ಮನಸ್ಸು ಕಲ್ಪಿಸುತ್ತದೆ.  ಯಕ್ಷಗಾನ ಎಂದರೆ ಪ್ರೇಕ್ಷಕ ಕಲ್ಪನೆಗೂ ಮುಖವಾಗುವಾ ಒಂದು ಕಲೆ. ಪಾಂಡವರ ಮಹಾ ಪ್ರಸ್ಥಾನವನ್ನು ಕಲ್ಪಿಸುತ್ತಾ ಮನಸ್ಸಿನಲ್ಲೇ ಆ ಚಿತ್ರಣವನ್ನು ಚಿತ್ರಿಸುತ್ತದೆ. ರಂಗಸ್ಥಳದ ಕೆಲವು ಅಡಿಯೊಳಗೇ ಕೇವಲ ಸಂಕೇತವಾಗುವ ಯಕ್ಷಗಾನ, ತನ್ನೊಳಗೆ ಅವ್ಯಕ್ತವಾಗಿರುವ ಕಲ್ಪನೆಗಳನ್ನು ತೋಳೆರಡರಲ್ಲಿ ಎತ್ತಿ ಕೊಟ್ಟ ಅನುಭವ. ಪರಂಪರೆಯ ಯಕ್ಷಗಾನವೆಂದರೆ ಇದು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ  ಹೆಸರಿಗೊಪ್ಪುವಂತೆ ತೆಂಕುತಿಟ್ಟು ಮಾತ್ರವಲ್ಲ ಸಮಗ್ರಯಕ್ಷಗಾನದ ಹಿತಕ್ಕೆ ಒಂದು ಅವಕಾಶವನ್ನು ಕಲ್ಪಿಸಿದೆ ಎಂದುಕೊಂಡರೆ ಅತಿಶಯವಾಗಲಾರದು. ಕೇವಲ ವಿಡೀಯೋವನ್ನು ನೋಡಿದರೂ ಅವ್ಯಕ್ತವಾಗುವ ಭಾವನೆಗಳಿಗೆ ಅಂತ್ಯವವೇ ಇಲ್ಲದಂತೆ ಒಂದು ಯಕ್ಷಗಾನ ಕೇವಲ ಯಕ್ಷಗಾನವಾಗಿ ಹೇಗೆ ಮನಸ್ಸನ್ನು ಆವರಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗುತ್ತದೆ.

ತೆಂಕುತಿಟ್ಟು ಯಕ್ಷಗಾನದ ಪರಂಪರೆಯ ಮಾರ್ಗಸೂಚಿ ಯಾವುದು ಎಂದು ತಿಳಿಯದೆ ಇಂದಿನ ತಲೆಮಾರಿನ ಪ್ರೇಕ್ಷಕ ಯಾವುದೋ ಒಂದು ವಿಕಲ್ಪವನ್ನು ಯಕ್ಷಗಾನ ಎಂಬಂತೆ ತಿಳಿದು ಹಾದಿ ತಪ್ಪುವಾಗ ದಾಖಲಾಗುವ ಇಂತಹ ಪ್ರಯತ್ನಗಳು ನಿಜಕ್ಕೂ ದಾರಿ ಸೂಚಕವಾಗಿ ಪರಂಪರೆಯ ಯಕ್ಷಗಾನ ಲೋಕದ ಹಾದಿ ಇದು ಅಂತ ತೋರಿಸುತ್ತದೆ. ವರ್ತಮಾನದ ಸಂಕ್ರಮಣದಲ್ಲಿ ಇದು ಅತ್ಯಂತ ಶ್ಲಾಘನೀಯ ಕರ್ಯ. ಹಾಗೆ ನೋಡಿದರೆ ಎರಡು ಮೂರುವರ್ಷಗಳ ಹಿಂದಿನ ಚಿತ್ರಣವಷ್ಟೇ ಇದು. ಆದರೂ ಸಾರ್ವಕಾಲಿಕ ಸತ್ಯವನ್ನು ತೋರಿಸುತ್ತದೆ.

ತೆಂಕು ತಿಟ್ಟು ಹಿತರಕ್ಷಣಾ ವೇದಿಕೆ ಸುಳ್ಯ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಯೋಗದಲ್ಲಿ ಸುಮಾರು ಇಪ್ಪತ್ತು ಮಹಾಭಾರತದ  ಯಕ್ಷಗಾನ ಪ್ರಸಂಗಳನ್ನು ಶುದ್ದ ಪರಂಪರೆಯ ಆವರಣದಲ್ಲಿ  ಇಲ್ಲಿ ಚಿತ್ರಿಸಿ ದಾಖಲೆಗೆ ಸೇರಿಸಲಾಗಿದೆ. ಇದಕ್ಕೆ ಯಕ್ಷಗಾನದ ಅತ್ಯಂತ ಹಿರಿಯ ಕಲಾವಿದರ ಸಹಕಾರವು ಅತ್ಯಂತ ಶ್ಲಾಘನೀಯ. ಹೀಗೊಂದು ಇದೆ ಅಂತ ಸಾಕ್ಷೀಕರಿಸುವುದಕ್ಕೆ ಇದು ಒಂದು ಪ್ರಬಲ ಮಾಧ್ಯಮವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.  ಇಷ್ಟೆಲ್ಲ ಪ್ರಸಂಗಳು ಚಿತ್ರಣಗೊಂಡರೂ ಈಗ ನೋಡುವುದಕ್ಕೆ ಸಾಧ್ಯವಾಗಿದ್ದು ಎರಡು ಮಾತ್ರ ಶ್ರೀಕೃಷ್ಣ ಪರಂಧಾಮ ಮತ್ತು ಪಾಂಡವ ಸರ್ಗಾರೋಹಣ. ಮುಂದಿನದ್ದು ಇನ್ನೂ ನೋಡಬೇಕಿದ್ದರೂ ಅವಕಾಶವಂತೂ ವಿಪುಲವಾಗಿ ಇದೆ.



ಶ್ರೀಕೃಷ್ಣ ಪರಂಧಾಮದ ಶ್ರೀಕೃಷ್ಣನಾಗಿ ಯಕ್ಷಗಾನದ ಹಿರಿಯ ಕಲಾವಿದ ಶ್ರೀ ಕೈರಂಗಳ ಕೃಷ್ಣ ಮೂಲ್ಯ ಯಕ್ಷಗಾನ ಪರಂಪರೆಯ ಕೃಷ್ಣನ ಮೂಲಕ ಪರಂಧಾಮದ ಶ್ರೀಕೃಷ್ಣ ಹೇಗಿದ್ದ ಎಂಬುದನ್ನು ತೋರಿಸಿಕೊಂಡುತ್ತಾರೆ.  ಅತ್ಯಂತ ಚುರುಕಿನ ಚಲನೆಯ ಪಾತ್ರ ಪ್ರಸ್ತುತಿ ಸಂಕ್ಷೇಪವಾಗಿ ಮನ ಮುಟ್ಟುತ್ತದೆ. ಧರ್ಮರಾಯನಾಗಿ ವಾಟೆಪಡ್ಪು ಶ್ರೀ ವಿಷ್ಣು ಶರ್ಮರು ಗಮನಸೆಳೆಯುತ್ತಾರೆ. ಪರೀಕ್ಷಿತನನಾಗಿ ಹಿರಿಯ ಕಲಾವಿದ ಶ್ರೀ ಶೀನಪ್ಪ ರೈ ಸಂಪಾಜೆಯವರು ಮಾರ್ಗದರ್ಶಿಯಂತೆ ಗಮನ ಸೆಳೆಯುತ್ತಾರೆ.  ಅಂತೆಯೇ ಭೀಮನ ಪಾತ್ರ ನಿರ್ವಹಿಸಿದ ಶ್ರೀ ಬಾಲಕೃಷ್ಣ ಗೌಡ ಮಿಜಾರು ಇವರು ಗಮನಾರ್ಹ ಪ್ರದರ್ಶನವನ್ನು ಕೊಟ್ಟಿದ್ದಾರೆ.  ಮುಂಚೂಣಿಯ ಪಾತ್ರಗಳು ವೈಭವೀಕರಿಸುವಲ್ಲಿ ಪೊಷಕ ಪಾತ್ರಗಳದ್ದು ಸ್ಥಾನ ಮಹತ್ವವೆನಿಸುತ್ತದೆ. ಇಲ್ಲಿ ಪೋಷಕ ಪಾತ್ರಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿವೆ.

ಶ್ರೀ ಕೃಷ್ಣ ಪರಂಧಾಮ ಪಾಂಡವ ಸ್ವರ್ಗಾರೋಹಣ, ಎರಡೂ ಒಂದು ರೀತಿಯ ಸೌಮ್ಯ ಪ್ರಸಂಗಗಳು. ಹಾಸ್ಯಕ್ಕೆ ಅವಕಾಶವೇ ಇಲ್ಲ. ಹಾಗೂ ಇದರಲ್ಲಿ ತಮ್ಮ ಚಟಕ್ಕೆ ಹಾಸ್ಯವನ್ನು ಸೇರಿಸಿದರೆ ಪ್ರಸಂಗದ ರಸಾಭಿವ್ಯಕ್ತಿಗೂ ರಸಾಸ್ವಾದನೆಗೂ ಗಂಭೀರವಾದ ಊನ ಬರುತ್ತದೆ. ಇಂದಿನ ಬಯಲಾಟಗಳನ್ನು ನೋಡುವಾಗ ಇದು ಆಡಬಲ್ಲ ಪ್ರಸಂಗವೇ ಅಲ್ಲ. ಅಂತಹ ಪ್ರಸಂಗವನ್ನೂ ಸಹ ಪರಂಪರೆಯ ದಾರದಲ್ಲಿ ಸುಂದರವಾಗಿ ಪೋಣಿಸಲಾಗಿದೆ. ಇದಕ್ಕೆ ಕಾರಣ ಇಲ್ಲಿಯ ಸಮರ್ಥ ಹಿಮ್ಮೆಳ ಮತ್ತು ದಕ್ಷ ನಿರ್ದೇಶನ.  ಚೆಂಡೆ ಮದ್ದಲೆಗಳಂತೂ ತಮ್ಮ ಝೇಂಕಾರವನ್ನು ನಿರಂತರವಾಗಿ ಒದಗಿಸುವುದು ಮಾತ್ರವಲ್ಲ ಅದರ ಗುಂಗಿನಿಂದ ನಮಗೆ ಹೊರಬರುವುದು ಸಾಧ್ಯವಾಗುವುದಿಲ್ಲ. ಹಿರಿಯ ಭಾಗವತ ಶ್ರೀ ಬಲಿಪ ನಾರಾಯಣ ಭಾಗವತ ಮತ್ತು ಶ್ರೀ ಪುಂಡಿಕೈ ಗೋಪಾಲ ಕೃಷ್ಣ ಭಟ್ ಇವರ ಭಾಗವತಿಕೆ  ಅಪರೂಪವೆಂಬಂತಹ ಪ್ರಸಂಗಗಳನ್ನು ಸುಲಲಿತವಾಗಿ ಪರಂಪರೆಯ ನೆರಳಲ್ಲಿ ಪ್ರದರ್ಶನ ಕಾಣುವಲ್ಲಿ ಹಿಮ್ಮೇಳದ ಮುನ್ನೆಲೆಗೆ ಬಂದು ನಿಲ್ಲುತ್ತವೆ. ಮೈನವಿರೇಳಿಸುವ ಭಾಗವತಿಕೆ ಇಡೀ ಪ್ರಸಂಗದ ಜೀವಾಳ.

ಎರಡೂ ಪ್ರಸಂಗಗಳು ಅಪರೂಪ ಮಾತ್ರವಲ್ಲ ಇದುವರೆಗೂ ತೀರಾ ವಿರಳ ಪ್ರದರ್ಶನವನ್ನುಕಂಡಿದೆ.  ಅದಕ್ಕೆ ಕಾರಣಗಳು ಹಲವಿರಬಹುದು. ಅದರೆ ಅದನ್ನು ಇಲ್ಲಿ ಸಮರ್ಥವಾಗಿ ಪ್ರದರ್ಶಿಸಿ ದಾಖಲೆಯ ಪುಟಕ್ಕೆ ಸೇರಿಸಿದ್ದಾರೆ. ತೆಂಕು ತಿಟ್ಟಿನಲ್ಲಿ ಕೇವಲ ಚೆಂಡೆಗೆ ಮಾತ್ರಾ ಅವಕಾಶ. ಗಿರಿಕಿ ಹೊಡೆಯುವುದು ಕುತ್ತು ಹಾರುವುದು ಬಿಟ್ಟರೆ ತೆಂಕಿನಲ್ಲಿ ಏನು ಇಲ್ಲ ಎಂದು ಮಾಹಾತ್ಮೆಯಂತಹ ಪ್ರಸಂಗ ನೋಡಿ ಮೂಗು ಮುರಿಯುವರು ಕನಿಷ್ಠ ಪಕ್ಷ ಈ ವಿಡಿಯೋವನ್ನು ನೋಡುವುದು ಸೂಕ್ತ. ಪರಂಪರೆಯ ಕಾಠಿಣ್ಯತೆಯೇ ಇದಕ್ಕೆ ಕಾರಣ. ಪರಂಪರೆಯ ಯಕ್ಷಗಾನ ಹೇಗಿರುತ್ತದೆ ಎಂಬುಕ್ಕೆ ಈ ಯಕ್ಷಗಾನವನ್ನು ನೋಡಲೇ ಬೇಕು.  ಇಂದು ಯಕ್ಷಗಾನಕ್ಕೆ ಅನಿವಾರ್ಯವಾಗುವುದು, ಪ್ರದರ್ಶನವೊಂದಕ್ಕೆ ಸಾವಿರ ಸಾವಿರ ಸಂಭಾವನೆ ಪಡೆಯುವ  ತಾರಾಮೌಲ್ಯದ ಕಲಾವಿದರಲ್ಲ. ಪರಂಪರೆಯ ಆಳವಾದ ಜ್ಞಾನ ಮಾಹಿತಿ ಇರುವ ಕಲಾವಿದರು ಎಂಬುದು ಇದನ್ನು ನೋಡುವಾಗ ಸ್ಪಷ್ಟವಾಗುತ್ತದೆ.

ಇಂದಿನ ವರ್ತಮಾನದ ಯಕ್ಷಗಾನ ಪ್ರದರ್ಶನಗಳಲ್ಲಿ ಪರಂಪರೆಯ ಬಲು ಮುಖ್ಯ ಅಂಶಗಳೇ ಮಾಯವಾಗಿಬಿಟ್ಟಿವೆ. ಹಾಸ್ಯ ಅಪಹಾಸ್ಯದ ವೆತ್ಯಾಸವೇ ತಿಳಿಯದ ಹಾಸ್ಯ ಪ್ರಜ್ಞೆ, ಕೇವಲ ದೇಹದಂಡನೆ ಕಂಠ ಶೋಷಣೆಗೆ ಸೀಮಿತವಾಗುವ ಕುಣಿತ ಇಷ್ಟಕ್ಕೇ ಯಕ್ಷಗಾನ ಸೀಮಿತವಾಗಿದೆ. ಕುಣಿದರೂ ಹಾಡಿದರೂ ಅದರಲ್ಲಿ ಯಕ್ಷಗಾನ ಪರಂಪರೆ ಎಲ್ಲಿದೆ ಅಂತ ಹುಡುಕುವಂತಾಗಿದೆ. ರಂಗದಲ್ಲಿ ಪಾತ್ರ ಮಾಡುವವರಿಗಂತು ಸ್ವಯಂ ಕೃತ ಅಪರಾಧವೆಂಬಂತೆ ಪರಂಪರೆಯ ಬಗ್ಗೆ ತಿಳಿದಿಲ್ಲ. ಇನ್ನು ಪ್ರೇಕ್ಷಕ ಇದನ್ನೇ ಪರಂಪರೆ ಎಂದು ತಿಳಿದು ಮನೋರಂಜನೆಗೆ ವಶವಾಗುತ್ತಾನೆ.  ಹೀಗಿದ್ದರೂ ಕೆಲವು ಲೇಖಕರು ತಮ್ಮ ಸ್ವಾರ್ಥಕ್ಕೆ ಪತ್ರಿಕೆಯಲ್ಲಿ ಪಾರಂಪರಿಕೆ ಕಲೆ ಅಂತ ಇಂತಹ ಯಕ್ಷಗಾನವನ್ನು ಬರೆಯುವುದನ್ನು ಕಾಣಬಹುದು. ಹೀಗೆ ಬರೆಯಬೇಕಾದರೆ ಯಕ್ಷಗಾನದ ಪರಂಪರೆಯ ಖಚಿತ ಮತ್ತು ಸ್ಪಷ್ಟ ಅರಿವು ಇರಬೇಕಾದದ್ದು ಅತೀ ಅವಶ್ಯ.  ಇಲ್ಲವಾದರೆ ಮುಂದಿನ ಪೀಳಿಗೆಗೆ ಮಾಡುವ ಘೋರ ವಂಚನೆಯಾಗುತ್ತದೆ., ಪತ್ರಿಕೆಯಲ್ಲಿ ತಮ್ಮ ಲೇಖನ ಬರಬೇಕೆಂಬ ಸ್ವಾರ್ಥಕ್ಕೆ  ಒಂದು ಶುದ್ದ ಪರಂಪರೆಯನ್ನು ಅವಮಾನಿಸುವುದು ಸರಿಯಲ್ಲ. ಪರಂಪರೆಯ ಅಶಂಶಗಳನ್ನು ಸಾರಾಸಗಟಾಗಿ ಅಳಿಸಿ ಹಾಕಿದ ಯಕ್ಷಗಾನಗಳು ಪಾರಂಪರಿಕ ಅಂತ ಹೆಸರಿಸುವುದು ತಮ್ಮ ಅರಿವಿನ ಕೊರತೆಯನ್ನು ತೋರಿಸುವುದು ಮಾತ್ರವಲ್ಲ ತಮ್ಮ ಮೂರ್ಖತನ ಪ್ರದರ್ಶಿಸುವುದು ಆತಿರುತ್ತದೆ.

ಇಲ್ಲಿ ದಾಖಲಾದ ಈ ಪ್ರಸಂಗದ ಭಾಗವತಿಕೆಯನ್ನು ಒಂದು ಸಲ ಗಮನಿಸಿದರೆ ಪರಂಪರೆಯ ಗಟ್ಟಿತನ ಅರಿವಾಗುತ್ತದೆ. ಯಾವುದೇ ಪದವನ್ನು ಕೇಳಿ ಅದರ ರಾಗ ಯಾವುದು ಎಂದು ರಾಗದ ಬೆನ್ನು ಹತ್ತಿದರೆ ಅದನ್ನು ತಿಳಿಯುವುದಕ್ಕೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಇಲ್ಲಿ ಹಾಡುವ ಪದಗಳು ಯಕ್ಷಗಾನದ ಮಟ್ಟು ಇದನ್ನೇ ಆಧರಿಸಿವೆ. ಇದೇ ಪರಂಪರೆಯ ಯಕ್ಷಗಾನ.   ಸಾಮಾನ್ಯವಾಗಿ ಇಂದು ಭಾಗವತ ಪದ ಹೇಳಿದೊಡನೆ ಅದರ ರಾಗ ವೈಖರಿಯ ಬಗ್ಗೆ ಚರ್ಚೆಯಾಗುತ್ತದೆ. ಹೀಗೆ ರಾಗಾಧಾರಿತ ಯಕ್ಷಗಾನ ಅದು ನವೀಕರಣ ಲೇಪನದ ಯಕ್ಷಗಾನವೇ ಹೊರತು ಅದು ಪರಂಪರೆಯ ಯಕ್ಷಗಾನವಲ್ಲ. ಇದರ ಸ್ಪಷ್ಟ ಅರಿವಿರದೆ ಯಕ್ಷಗಾನದ ಬಗ್ಗೆ ಬರೆದು ಪರಂಪರೆಯನ್ನು ಮತ್ತಷ್ಠು ಕತ್ತಲಲ್ಲಿಡುವ ಮೂರ್ಖ ಪ್ರಯತ್ನ ನಡೆಯುತ್ತಲೇ ಇದೆ.

ಇಂತಹ ವೈರುಧ್ಯಗಳ ನಡುವೆ ಇಂತಹ ಒಂದು ಘನಕಾರ್ಯ ಸದ್ದಿಲ್ಲದಂತೆ ನಡೆದು ಹೋಗಿದೆ.
 ವರ್ಷದಲ್ಲಿ ಕೆಲವಾದರೂ ಇಂತಹ ಪ್ರದರ್ಶನಗಳು ಯಾವುದೇ ಸ್ವಾರ್ಥವಿಲ್ಲದೇ ಪ್ರದರ್ಶನಗೊಳ್ಳಗೇಕು. ಆಗ ಪರಂಪರೆಯ ಅರಿವು ಉಂಟಾಗಿ ಅದರ ಜೀವ ಸತ್ವವನ್ನು ಶಾಶ್ವತವಾಗಿಸುವುದಕ್ಕೆ ಸಾಧ್ಯವಿದೆ.  ಆ ನಿಟ್ಟಿನಲ್ಲಿ ಇದು ಸ್ತುತ್ಯರ್ಹ ಕಾರ್ಯ.  ತೆಂಕುತಿಟ್ಟು ಹಿತರಕ್ಷಣವೇದಿಕೆಯ ಈ ಕಾರ್ಯ ಇತಿಹಾಸದ ಮಹತ್ವ  ಪುಟಗಳಲ್ಲಿ ದಾಖಲಾರ್ಹವಾಗಿದೆ.  

ಶ್ರೀ ಚಂದ್ರ ಶೇಖರ ದಾಮ್ಲೆ ಮತ್ತವರ ಬಳಗದ ಅವಿರತ ಶ್ರಮದಿಂದ ಇಂತಹ ಒಂದು ’ಯಕ್ಷಗಾನದ ಮಹಾಯಜ್ಞ’ ನೆರವೇರಿದೆ.  ಯಾವುದೇ ಕಾರ್ಯಗಳಾಲಿ ಅದು ಸುಲಲಿತವಾಗಿ ನೆರವೇರುವುದು ಅದಕ್ಕೆ ಸಹಾಯವಾಗಿ ಪ್ರಾಯೋಜಕತ್ವ ಲಭಿಸಿದಾಗ.  ಹಾಗಾಗಿ ಇಲ್ಲಿ ಬೆಂಗಳೂರು ಕನ್ನಡ ಪ್ರಾಧಿಕಾರದ ಪ್ರಾಯೋಜಕತ್ವವನ್ನು ಪ್ರತ್ಯೇಕವಾಗಿ ಸ್ಮರಿಸಬೇಕಾಗುತ್ತದೆ. ಯಾವುದೇ ಕಾರ್ಯವಿರಲಿ ಇಂದು ಪ್ರಾಯೋಜನ ಕೊಡುವವರು ಅನಾವಶ್ಯಕ ಮೂಗು ತೂರಿಸಿ ಒಟ್ಟು ಕಾರ್ಯದಲ್ಲಿ ಮಾಲಿನ್ಯವನ್ನು ಸೃಷ್ಟಿಸುತ್ತಾರೆ.   ಪ್ರದರ್ಶನ ನಡೆಸುವ ಯಜಮಾನ ತನ್ನ ಮಗ ಎನ್ನುವ ಮೋಹದಿಂದ ಸಣ್ಣದಾದರೂ ಒಂದು ವೇಷ ಹಾಕಿ ರಂಗಸ್ಥಳ ಏರಲಿ ಎಂದು ಬಯಸುವುದು ತಾವು ಮಾಡುವ ಯಕ್ಷಗಾನ ಸೇವೆಗೆ ಅಪಚಾರ ಎಸಗಿದಂತೆ.  ಯಕ್ಷಗಾನ ಕೆಟ್ಟರು ಪರವಾಗಿಲ್ಲ ತನ್ನ ಮಗ ವೇಷ ಹಾಕಿ ಕುಣಿಬೇಕು.  ಆದರೆ ಅಂತಹ ಯಾವುದೇ ಆಭಾಸಗಳು ಇಲ್ಲಿ ನೆರವೇರದೆ ಸಂಘಟಕರ ಆಶಯ ಬಹಳಷ್ಟು ನೆರವೇರಿದೆ ಎಂದು ಈ ಪ್ರದರ್ಶನವನ್ನು ನೋಡಿಯೇ ಕಲ್ಪಿಸಬಹುದಾಗಿದೆ. ಏನಿದ್ದರೂ ಮುಂದೆ ಯಕ್ಷಗಾನದ ಪರಂಪರೆಯ ಉಳಿವಿಗೆ ಇದು ಪ್ರೇರಕವಾಗಲಿ.

ಸುಮಾರು ಐದಾರು ವರ್ಷಗಳ ಹಿಂದೆ ನಡೆದ ಈ ಘನವಾದ ಕಾರ್ಯ ಹಾಗೇ ಸುಪ್ತವಾಗಿತ್ತು. ಆದರೆ ಅದನ್ನು ಯೂಟ್ಯುಬ್ ಮಾಧ್ಯಮದಲ್ಲಿ ಬಿತ್ತರಿಸಿ ಆಸಕ್ತ ಪ್ರೇಕ್ಷಕನ ಮಡಿಲಿಗೆ ತಲುಪಿಸುವಲ್ಲಿ ಮಿತ್ರ ಶ್ರೀ  ಕಟೀಲು ಸಿತ್ಲ ರಂಗನಾಥರು ದಾಖಲೀಕರಣಕ್ಕಾಗಿ ಸ್ಥಾಪಿಸಿದ ಯಕ್ಷರಂಗ ಕಟೀಲು ಸಿತ್ಲ ಪೌಂಡೇಶನ್ (ರಿ) ಕಾರಣವಾಯಿತು.  ವಿಡಿಯೋವನ್ನು ಸಂಕಲಿಸಿ ಅದನ್ನು ಅಂತರ್ಜಾಲಕ್ಕೆ ಹರಿದು ಎಲ್ಲ ಪ್ರೇಕ್ಷಕನಿಗೂ ಸುಲಭದಲ್ಲಿ ಸಿಗುವಂತೆ ಮಾಡಿದ ಈ ಕಾರ್ಯಕ್ಕೆ ಪ್ರತ್ಯೇಕ ಧನ್ಯವಾದಗಳು ಸಲ್ಲಬೇಕು.
ಯಕ್ಷಗಾನಂ ಗೆಲ್ಗೆ.

Sunday, September 15, 2019

ಸತ್ಯ ಕಹಿಯಾಗುವಾಗ


            ಸತ್ಯಕ್ಕೆ ವಿಭಿನ್ನ ಮುಖವಿದೆ ಅಂತ ಕೆಲವರ ಅನಿಸಿಕೆ. ಆದರೆ ಸತ್ಯಕ್ಕೆ ಇರುವ ಮುಖ ಒಂದೇ, ಕಾಣುವ ದೃಷ್ಟಿಯೇ ಭಿನ್ನ. ಜ್ವರ ಬಂದು ಖಾಯಿಲೆ ಮಲಗಿದವನನ್ನು ಎಬ್ಬಿಸಿ ಬಿಸಿ ಬಿಸಿ ತುಪ್ಪ ಗಂಜಿ ಕಲಸಿಕೊಟ್ಟರೂ ಅದು ಕಹಿಯಾಗಿಯೇ ಇರುತ್ತದೆ. ಅದು ತುಪ್ಪ ಗಂಜಿಯ ಕಹಿ ಅಂತ ಹೇಳುವುದಕ್ಕೆ ಸಾಧ್ಯ ಉಂಟೇ? ಆತನ ಬಾಯಿ ನಾಲಗೆ ಕೆಟ್ಟಿರುವುದಕ್ಕೆ ತುಪ್ಪ ಗಂಜಿಯನ್ನು ಕಹಿಯಾಗಿಯೇ ಕಂಡರೆ ತನ್ನ ಖಾಯಿಲೆ ಮುಚ್ಚಿ ಹೋಗುತ್ತದೆ ಎಂಬ ಭ್ರಮೆ ಆವರಿಸಿರುವುದೇ ಕಾರಣ. ಹಾಗಾಗಿ ಸತ್ಯವನ್ನೂ ಕಹಿ ಸತ್ಯ ಕಟು ಸತ್ಯ ಅಂತ ತಮ್ಮ ದೌರ್ಬಲ್ಯವನ್ನು ಸತ್ಯದ ಮೇಲೆ ಆರೋಪಿಸುವುದುಂಟು. ಇದನ್ನೇ ಪಲಾಯನವಾದ ಅಂತ ವ್ಯಾಖ್ಯಾನಿಸಲೂ ಬಹುದು.  ಸತ್ಯ ಕಹಿಯಾದರೆ ಸುಳ್ಳು ಸಿಹಿಯೇ? ಅಥವಾ ಈಗ ಅನುಭವಿಸುವ ಸಿಹಿ ಏನಿದೆಯೋ ಅದು ಭ್ರಮೆ ಎಂದು ಅಂದುಕೊಳ್ಳುವುದೇ?

            ಸತ್ಯ ಕಹಿಯೋ ಸಿಹಿಯೋ ಅಂತ ಕನ್ನಡಿಯ ಪ್ರತಿಫಲನದಂತೆ  ವರ್ತನೆಯೇ ಹೇಳಿಬಿಡುತ್ತದೆ.

            ಹಿಂದೆ ನಾನು ಚಿಕ್ಕವನಿರುವಾಗ ಊರಲ್ಲಿ ಒಂದು ಸ್ಥಳೀಯ ಪತ್ರಿಕೆ ಬರುತ್ತಿತ್ತು. ಸೀಮಿತ ಪರಿಧಿಯಲ್ಲಿ ಈ ಫೇಸ್ ಬುಕ್ ಮುಂತಾದ ಮಾಧ್ಯಮಗಳೇನು ಮಾಡುತ್ತವೆಯೋ ಅದನ್ನು ಅದೇ ಪತ್ರಿಕೆ ಮಾಡುತ್ತಿತ್ತು. ಈಗಿನ  ಅಂತರ್ಜಾಲದ ದೊಡ್ಡ ಬಡಬಾಗ್ನಿಯ ಮುಂದೆ ಅದು ಮಂದ ಬೆಳಕಾದರೂ ಅದೂ ಈಗಲು ನೆನಪಿನಲ್ಲಿರುವುದಕ್ಕೆ ಮಂದವಾಗಿ ಉರಿದುಕೊಂಡು ಅದು ಮಾಡಿದ ಕೆಲಸವೇ ಕಾರಣ.  ಆ ಪತ್ರಿಕೆಯ ಹೆಸರು ಅಮೃತ ವಾರ ಪತ್ರಿಕೆ. ಅದು ವಾರ ಪತ್ರಿಕೆಯೋ ಮಾಸಿಕವೋ ನೆನಪಿಲ್ಲ. ಆದರೆ ಕೈಯಗಲದ ಆ ಪುಟ್ಟ ಪತ್ರಿಕೆ ಹೇಳಿದ ಸತ್ಯಗಳು ಅಂದು ಕಹಿಯಾಗಿ ಕಂಡರೂ ಇಂದು ಸಿಹಿಯ ಅನುಭವವನ್ನು ನೀಡುತ್ತದೆ. ಬಹುಶ ಈಗ ಬಂದ ಪ್ರೌಢತೆಯಿಂದ ಬಂದ ಜ್ವರ ಈಗ ವಾಸಿಯಾಗಿದೆ ಅಂತ ತಿಳಿಯಬೇಕು.

            ಆಗ ಯಕ್ಷಗಾನದಲ್ಲಿ ತುಳು ಯಕ್ಷಗಾನಗಳ ಮತ್ತು ಡೇರೆ ಮೇಳಗಳ ಪರ್ವಕಾಲ. ಊರೆಲ್ಲಾ ಸಡಗರವನ್ನು ದಿನವೂ ಹಂಚುವ ಈ ಮೇಳಗಳು ಅಂದು ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಸಿನಿಮಾ ಲೋಕ ಗ್ರಾಮಗಳಲ್ಲಿ ಅಷ್ಟಾಗಿ ಪರಿಚಯವಿಲ್ಲದಿರುವುದರಿಂದ ಈಗಿನಂತೆ ಸಿನಿಮಾ ವಿಚಾರಗಳು ಅಂದು ವ್ಯಾಪಕವಾಗಿ ಇರಲಿಲ್ಲ. ಹಾಗಾಗಿ ಜನರಿಗೆ ಈ ಯಕ್ಷಗಾನದ ಒಳ ಒರಗಿನ ವಿಚಾರಗಳೇ ಇಂದಿನ ಸಿನಿಮಾ ಅನುಭವದ ಚಿತೋಹಾರಿಯನ್ನುಒದಗಿಸುತ್ತಿದ್ದುದು ಅಪ್ಪಟ ಸತ್ಯ.

ಡೇರೆ ಮೇಳದ ಯಕ್ಷಗಾನ  ಬಹಳಷ್ಟು ವಾಣಿಜ್ಯ ಪರವಾಗಿ ಇದ್ದು ಹಲವಾರು ಕಲಾವಿದರ ಜೀವನಾಧಾರವಾಗಿದ್ದದ್ದು ಸುಳ್ಳಲ್ಲವಾದರೂ ಆಟದ ಜನಪ್ರೀಯತೆಯನ್ನು ಉಳಿಸುಕೊಳ್ಳುವಲ್ಲಿ ಮೇಳಗಳು ವಕ್ರಹಾದಿಯನ್ನು ತುಳಿಯುತ್ತಿದ್ದುದು ಅಷ್ಟೇ ಸತ್ಯ. ಹೊಸ ಪ್ರಸಂಗಗಳು ಅದರಲ್ಲೂ ತುಳು ಪ್ರಸಂಗಗಳು ( ಹೆಸರುಗಳು ಇಲ್ಲಿ ಅಪ್ರಸ್ತುತ)  ಪ್ರತೀ ವರ್ಷವೂ ಹೊಸದಾಗಿ ಪ್ರಯೋಗಕ್ಕೆ ಬರುತ್ತಿತ್ತು. ಹಲವಾರು ಪ್ರಸಂಗಗಳು ಇನ್ನಿಲ್ಲದ ಜನಪ್ರಿಯತೆಯನ್ನು ಮೇಳದ ಖ್ಯಾತಿಯನ್ನು ಕಲಾವಿದರ ಖ್ಯಾತಿಯನ್ನು ಹೆಚ್ಚಿಸಿದ್ದು ಒಂದು ಇತಿಹಾಸ. ಈ ಸಮಯದಲ್ಲಿ ಈ ತುಳು ಪ್ರಸಂಗಗಳ ವಿಮರ್ಷಾ ಲೇಖನಗಳು  ಈ ಅಮೃತ ಪತ್ರಿಕೆಯಲ್ಲಿ ಬರುತ್ತಿದ್ದವು. ಯಾವುದೇ ಹೊಸ ಪ್ರಸಂಗ ಆಡಿದಾಗ ಅದರ ಬಗ್ಗೆ ಕಟು ವಿಮರ್ಷೆಗಳು ಅದರಲ್ಲಿರುತ್ತಿದ್ದುವು. ನಾವು ಸಂಭ್ರಮಿಸಿ ನೋಡಿ ಸಂತಸ ಪಟ್ಟ ಪ್ರಸಂಗಗಳ ಬಗ್ಗೆ ಅದರಲ್ಲಿ ಕಟುವಾದ ಲೇಖನಗಳು ಬಂದಾಗ  ನಮಗೆ ಖೇದವೆನಿಸುತ್ತಿತ್ತು. ಛೇ..ಇಷ್ಟು ಒಳ್ಳೆಯ ಆಟದ ಬಗ್ಗೆ ಅದರಲ್ಲಿ ಹೀಗೆ ಬರೆದಿದೆಯಲ್ಲ?  ಆಗ ಅದರ ಬಗ್ಗೆ ಅಸಮಾಧಾನವಾದರೂ ಈಗ ಅನ್ನಿಸುತ್ತದೆ ಸುಂಟರಗಾಳಿಯ ವಿರುದ್ಧ ಸಿಳ್ಳೆ ಹೊಡಿವ ಕೆಲಸ ಆಗಲೂ ಆಗುತ್ತಿತ್ತು.

ಒಂದು ಸಲ ಪತ್ರಿಕೆಯಲ್ಲಿ ತುಳು ಪ್ರಸಂಗಗಳ ಮತ್ತದರ ಖ್ಯಾತಿಯ ಬಗ್ಗೆ ಬರೆದ ಒಂದು ವಾಕ್ಯ ಈಗಲೂ ನೆನಪಿದೆ. ಯಕ್ಷಗಾನದಲ್ಲಿ ರಾಮ ರಾವಣ ಕುಂಭಕರ್ಣ ಅರ್ಜುನ ಕೃಷ್ಣ ಕರ್ಣ...ಹೀಗೆ ಇರುವ ಪಾತ್ರಗಳ ಬದಲು ಇಂದು ಅಬ್ಬು ಸೇಕು, ಪುರುಬು ಚೋಮ ಚೋಂಕ್ರ  ಪಾತ್ರಗಳೇ ಹೆಚ್ಚು ಖ್ಯಾತಿಯನ್ನು ಗಳಿಸುತ್ತವೆ.  ಯಕ್ಷಗಾನ ಪುರಾಣದಿಂದ ಹೇಗೆ ದೂರಾಗುತ್ತದೆ ಎಂಬುದರ ಬಗ್ಗೆ ಬಂದ ಲೇಖನವದು.ಇದರ ಸತ್ಯಾಸತ್ಯತೇ ವಿಮರ್ಷೆ ಏನೇ ಇರಲಿ ಆದರೆ ವರ್ತಮಾನದ ಯಕ್ಷಗಾನದ ಬಗ್ಗೆ ಆಗಲೂ ಕಿಂಚಿತ್ ಪ್ರತಿಕ್ರಿಯೆ ಅಲ್ಲೀ ವ್ಯಕ್ತವಾಗಿತ್ತು.

ಅದರಲ್ಲೂ ಪತ್ರಿಕೆಗಳು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಪಾದಿಸುವುದು ಸಾಮಾನ್ಯ. ನೇರವಾದ ಆಪಾದನೆ ಅರೋಪ ವಿಮರ್ಶೆಗಳಿಂದ ದೂರ ಉಳಿದು ಒಂದು ರೀತಿಯ ಮಡಿವಂತಿಕೆಯ ಅಭಿಪ್ರಾಯಗಳನ್ನಷ್ಟೆ ಮಂಡಿಸಿ  ಸುರಕ್ಷಿತವಾಗಿ ಇರುತ್ತಿದ್ದವು.  ಇಂದೂ ಸಹ ಮುಂಚೂಣಿಯ ಪತ್ರಿಕೆಗಳು ಅದನ್ನೇ ಮಾಡುವುದನ್ನು ಗಮನಿಸಬಹುದು.  ಆದರೆ ಅಂದಿಗೂ ಇಂದಿಗೂ ಇರುವ ವೆತ್ಯಾಸ ಮಾತ್ರ ಆಗಾಧ ಅಂತಲೇ ಹೇಳಬೇಕು. ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಬರುವ ಅಂದಿನ ಪ್ರತಿಕ್ರಿಯೆಗೂ ಈಗ ಒಂದೆಡೇ ಆಟ ಆಗುತ್ತಿರಬೇಕಾದರೆ ಮತ್ತೊಂದು ಕಡೆ ಅದರ ಪರ ವಿರುದ್ಧ ಪ್ರತಿಕ್ರಿಯೆಗಳು ಬಂದು ಜಗಳ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪುತ್ತದೆ. ರಂಗಸ್ಥಳದಲ್ಲಿ ವೇಷ ಹಾಕಿದ ಕಲಾವಿದ ಅಲ್ಲಿ ಸಭೆಯಲ್ಲಿ ಎಷ್ಟು ಚಪ್ಪಾಳೆ ಬಿತ್ತು ಎಂದು ಎಣಿಸುವುದಕ್ಕಿಂತ ಮೊದಲು ಚೌಕಿಗೆ ಹೋಗಿ ಫೇಸ್ ಬುಕ್ ನೋಡಿಬಿಡುತ್ತಾನೆ. ವಿಪರ್ಯಾಸವೆಂದರೆ ನೋಡುವುದಕ್ಕೆ ಎಷ್ಟು ಕುತೂಹಲವಿದೆಯೋ ಅಲ್ಲಿ ಬಂದ ಪತ್ರಿಕ್ರಿಯೆಯನ್ನು ಸಮಚಿತ್ತದಿಂದ ಸ್ವೀಕರಿಸುವುದಕ್ಕೆ ಸಿದ್ಧನಿರುವುದಿಲ್ಲ. ಅಂದು ಅಮೃತ ಹೇಗೆ ಕಹಿಯಾಗಿ ಭಾಸವಾಗುತ್ತಿತ್ತೋ ಇಂದು ಅಂತರ್ಜಾಲ ಮೂಷಿಕದ ಎದುರಿನ ಮಾರ್ಜಾಲದಂತೆ ಭಾಸವಾಗುತ್ತದೆ.

ಯಕ್ಷಗಾನದ ಪ್ರೇಕ್ಷಕ ಜಗತ್ತಿನ ಅಪಸ್ವರಗಳು ಇಂದು ಮಾತ್ರವಲ್ಲ ಅಂದೂ ಇತ್ತು. ಅಂದು ಕೆಲವು ಸಲ ಪರಿಣಾಮ ಬೀರಿದರೂ ಯಕ್ಷಗಾನ ರಂಗಸ್ಥಳ ಅದರ ಬಗ್ಗೆ ಗಂಭೀರವಾಗಿದ್ದದ್ದು ಕಡಿಮೆ ಅಂತಲೇ ಹೇಳಬೇಕು. ಬಹುಶಃ ನೇರಾ ನೇರ ಪ್ರತಿಕ್ರಿಯೆಗೆ ಮಾತ್ರ ಯಕ್ಷಗಾನದ ಚೌಕಿಯಲ್ಲಿ ಕಿವಿ ತೆರೆಯುತ್ತಿತ್ತೋ ಏನೋ. ಅಂದಿನ ಬಗ್ಗೆ ಅಷ್ಟು ತಿಳಿಯದು. ಆದರೆ ಇಂದು ಯಕ್ಷಗಾನ ರಂಗ ನೇರಾನೇರ ಪ್ರತಿಕ್ರಿಯೆಗೆ ಕಾದು ಕುಳಿತಂತಿದೆ ! ವಿಚಿತ್ರ ಎಂದರೆ  ನೇರವಾಗಿ ಮುಖಾಮುಖಿಯಲ್ಲಿ ಪ್ರತಿಕೂಲ ಅಭಿಪ್ರಾಯಗಳನ್ನು ಹೇಳುವುದಕ್ಕೆ ಎಂತಹ ವಿಶ್ವಾಮಿತ್ರನೂ ಸಿದ್ದವಾಗಲಾರ. ಇಂತಹ ಸಮಯದಲ್ಲಿ ಅಂತರ್ಜಾಲದ ವಿಪುಲ ಅವಕಾಶವನ್ನು ಅಸ್ತ್ರವನ್ನಾಗಿ ಪ್ರೇಕ್ಷಕ ಸ್ವೀಕರಿಸಿದ್ದರೆ ಕಲಾವಿದ ಅದನ್ನು ಸ್ವೀಕರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾದ್ದು ಅನಿವಾರ್ಯ. ಯಾಕೆಂದರೆ ತಿಂದವನಿಗೆ ಉಗುಳುವ ಅವಕಾಶ ಇದ್ದೇ ಇರುತ್ತದೆ. ಮೊದಲು ತಿಂಗಳವರೆಗೆ ಕಾಯಬೇಕಾದರೆ ಇಂದು ಮರುಘಳಿಗೆಯೇ ಪ್ರತಿಕ್ರಿಯೆ ಸಾರ್ವಜನಿಕವಾಗಿ ಪ್ರಕಾಶಕ್ಕೆ ಬರುತ್ತದೆ.

ಇಂದು ಫೇಸ್ ಬುಕ್ ಎಂಬ ಮುಖದಿಂದ ತೊಡಗಿ ಬ್ಲಾಗುಗಳು ಅಂತರ್ಜಾಲದ ಇನ್ನಿತರ ಮಾಧ್ಯಮಗಳು ಬಹು ಸಂಖ್ಯೆಯ ಲೇಖಕರನ್ನು ಸೃಷ್ಟಿಸಿವೆ. ಅದರಲ್ಲಿ ಸತ್ವಯುತವಾದದ್ದು ಎಷ್ಟು?  ಹಾಗೆ ಎಸೆದು ಬಿಡುವ ಜಳ್ಳುಗಳೆಷ್ಟು?  ಎಂಬುದು ಓದುಗನ ಮನಸ್ಥಿತಿಯನ್ನು ಹೊಂದಿಕೊಂಡು ಇದೆ. ಇಲ್ಲಿಯೂ ಹೊಗಳಿ ಹೊಗಳಿ ವ್ಯಕ್ತಿಪೂಜೆಯ ಪರಾಕಾಷ್ಠೆಯನ್ನು ತೋರಿಸಿ ಚಮಚಾಗಿರಿಯ ಸ್ವಾರ್ಥವನ್ನು ಮೆರೆಸುವವರು ಇದ್ದಾರೆ.   ಅಪಸ್ವರಗಳು ಅಂದರೆ ವಿರುದ್ಧವಾದ ಪ್ರತಿಕ್ರಿಯೆಗಳು ಕಡಿಮೆ ಸಂಖ್ಯೆಯಲ್ಲಿ ಎಲ್ಲೊ ಒಂದೆರಡರಂತೆ ಇದ್ದರೂ ಈಗೀಗ ಅಪಸ್ವರಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸುಳ್ಳಲ್ಲ. ಆದರೆ ಯಕ್ಷಗಾನ ಲೋಕ ಅದನ್ನು ಸ್ವೀಕರಿಸುವ ರೀತಿ ನೋಡುವಾಗ ವಿಡಂಬನೆ ಎನಿಸುತ್ತದೆ. ತಪ್ಪಾದುದನ್ನು ಪ್ರಾಮಾಣಿಕವಾಗಿ ಒಪ್ಪಿ ಪ್ರೇಕ್ಷಕ ಕಲಾವಿದ ಎಂಬ ಸೌಹಾರ್ದ ಸಂಬಂಧ ಬೆಸೆಯಲು ಸಾಧ್ಯವಿದ್ದರೂ  ಅದನ್ನು ಮಾಡಲಾಗದ ಸ್ವಾರ್ಥ ಸಾಧನೆ ಇದೆ. ತುತ್ತು ಅನ್ನ ತಿನ್ನುವಾಗ ಉಪ್ಪೋ ಖಾರವೋ ಜಾಸ್ತಿಯಾದಾಗ ಅನ್ನವೆಂದರೆ ಏನೆಂದು ತಿಳಿಯದ ಮಗುವು ಅನ್ನದ ಗುಣಾವಗುಣಗಳನ್ನು ಹೇಳಿಬಿಡುತ್ತದೆ. ಆದರೆ ಯಕ್ಷಗಾನದಲ್ಲಿ ಕೇವಲ ಹೊಗಳಿಕೆ ಮಾತ್ರ ಸ್ವಾಗತವಿರುತ್ತದೆ. ಅವಗುಣಗಳನ್ನು ಹೇಳುವ ಪ್ರತಿಪಾದಿಸುವ ಅಧಿಕಾರ ಪ್ರೇಕ್ಷಕನಿಗೆ ಇಲ್ಲ.

ಒಂದು ಯಕ್ಷಗಾನ ಪ್ರದರ್ಶನವಾದಾಗ ಬಂದ ಪ್ರೇಕ್ಷಕ ಚೌಕಿಗೆ ಬಂದು ನೇರ ಕಲಾವಿದನಲ್ಲೇ ಪ್ರತಿಕ್ರಿಯೆನ್ನು ನೀಡಬೇಕು ಎಂದು ಕಲಾವಿದ ಬಯಸುತ್ತಾನೆ. ನ್ಯೂನ್ಯತೆ ಏನಿದ್ದರೂ ಸಾರ್ವಜನಿಕವಾಗಿ ಅದು ಪ್ರಚಾರವಾಗುವುದು ಇಷ್ಟವಿರುವುದಿಲ್ಲ. ಕಲಾವಿದ ಸದಾ ಚಲಾವಣೆಯಲ್ಲಿರುವುದನ್ನು ಬಯಸುವುದು ಸಹಜ. ಅಪಸ್ವರಗಳು ವಿರುದ್ದ ಪ್ರತ್ರಿಕ್ರಿಯೆಗಳು ಸಾರ್ವಜನಿಕವಾಗಿ ವ್ಯಕ್ತವಾಗುವಾಗ ಇಲ್ಲಿ ಚಲಾವಣೆಯ ನಾಣ್ಯ,  ಪೆಟ್ಟಿಗೆಯ ತಳಭಾಗಕ್ಕೆ ಸೇರುವ ಭಯ. ಎಲ್ಲವೂ ನ್ಯಾಯಯುತವಾದರೂ ಸಮಷ್ಟಿಯ ನ್ಯಾಯ ನೋಡುವಾಗ ಸಾರ್ವಜನಿಕವಾಗಿ ಬರೆದು ಪ್ರತಿಕ್ರಿಯೆಯನ್ನು ನೀಡುವ ಪ್ರೇಕ್ಷಕನಿಗೆ ನೇರ ಪ್ರತಿಕ್ರಿಯೆಗೆ ಹಲವಾರು ತೊಂದರೆಗಳಿವೆ ಎಂಬುದು ಅಷ್ಟೇ ಸತ್ಯ.

ಒಂದೆಡೆ ಯಕ್ಷಗಾನಕ್ಕೆ ಉತ್ತಮ  ಪ್ರೇಕ್ಷಕವರ್ಗ ಇಲ್ಲ ಎಂಬ ಮಾತಿದೆ. ಆದರೆ ಬಂದ ಪ್ರೇಕ್ಷಕರ ಧ್ವನಿಯನ್ನು ಕೇಳುವ ಮನಸ್ಥಿತಿಯನ್ನೂ ತೋರುವ ಮನೋಬಲವೂ ಇಲ್ಲ. ಧ್ವನಿ ಬಂದ ಕಡೆ, ಆ ಧ್ವನಿಯ ಅರ್ಹತೆಯ ಹಿನ್ನೆಲೆಯನ್ನು ನೋಡುವ ದೃಷ್ಟಿಯಲ್ಲಿ,  ಪ್ರತಿಕ್ರಿಯೆ, ಅಭಿಪ್ರಾಯ,  ವಿಮರ್ಷೆಗಳ,  ವೆತ್ಯಾಸವೇ ತಿಳಿಯದೆ ಅವುಗಳನ್ನು ವಿಮರ್ಷೆಯ ಪಟ್ಟ ಕಟ್ಟಿ ಹೇಳಿದವನ ಯೋಗ್ಯತೆಯನ್ನು ಅಳೆಯುತ್ತಾರೆ. ಈ ನಡುವೆ ಕಳೆದುಕೊಳ್ಳುವ ತನ್ನಯೋಗ್ಯತೆಯನ್ನು ಚಿಂತಿಸುವುದಿಲ್ಲ. ಒಂದು ಸತ್ಯವನ್ನು ಒಪ್ಪಿಕೊಳ್ಳದ ಸ್ವಾರ್ಥ ಹೆಡೆಯಾಡುತ್ತದೆ.  ಸಾರ್ವಜನಿಕವಾದ ಒಂದು ಪ್ರದರ್ಶನದ ಬಗ್ಗೆ ಸಾರ್ವಜನಿಕವಾಗಿಯೋ ಖಾಸಗಿಯಾಗಿ ಪ್ರತಿಕ್ರಿಯೆಯನ್ನು ನೀಡುವ  ಹಕ್ಕು ಪ್ರೇಕ್ಷಕನಿಗಿರುತ್ತದೆ. ಈ ಸಾಮಾನ್ಯ ಜ್ಞಾನವೂ ಇಂದು ಕಂಡುಬರುವುದಿಲ್ಲ.  ಪ್ರತಿಕ್ರಿಯೆ ಸ್ವೀಕರಿಸುವ ಮನಸ್ಸಿಲ್ಲದೇ ಇದ್ದಲ್ಲಿ ಕಲ್ಲು ಗೋಡೆಯ ಎದುರು ಪ್ರದರ್ಶನ ನೀಡುವುದೇ ಸೂಕ್ತ.  ಸಾರ್ವಜನಿಕವಾಗಿ ನೀಡುವ ಯಾವುದೇ ಪ್ರದರ್ಶನಕ್ಕೆ ಬೀದಿ ಬದಿಯಲ್ಲಿ ಹೋಗುವವನು ಪ್ರಕ್ರಿಯೆ ನೀಡುತ್ತಾನೆ. ಆದರೆ ಯಕ್ಷಗಾನದ ಒಬ್ಬ ಸ್ಥಿರ ಪ್ರೇಕ್ಷಕ ಪ್ರತಿಕ್ರಿಯಿಸಿದ್ದಲ್ಲಿ ಅದು ಮಹಾಪರಾಧವಾಗಿ ಆತನ ನಿತ್ಯ ಜೀವನವನ್ನು ಬಲಿತೆಗೆದುಕೊಳ್ಳುವ ಹಂತಕ್ಕೆ ತಲಪಿಸುತ್ತದೆ.  ಯಕ್ಷಗಾನ ಸಮಾಜ ಅಷ್ಟೊಂದು ಅಮಾನವೀಯತೆಯನ್ನು ಬೆಳೆಸಿದೆಯೇ ಎಂದು ಆಶ್ಚರ್ಯವಾಗುತ್ತದೆ. ಯಾಕೆ ಇಲ್ಲಿ ಸೌಹಾರ್ದತೆಯ ಸ್ನೇಹದ ವ್ಯವಹಾರ ಸಾಧ್ಯವಾಗುವುದಿಲ್ಲ. ಕಾರಣ ಇಷ್ಟೆ,  ಕಲೆಯಿಂದಲೂ ಕಲಾವಿದ ದೊಡ್ಡವನಾಗಿದ್ದಾನೆ.

ತನ್ನ ಸಮಯವನ್ನು ವ್ಯರ್ಥವಾಗಿ ಕಳೆಯುವುದಕ್ಕೆ ಯಾರೂ ಬಯಸುವುದಿಲ್ಲ. ಅದರಲ್ಲೂ ಇಂದಿನ ಜೀವನ ಕ್ರಮದಲ್ಲಿ ಸಮಯವೆಂಬುದು ವ್ಯರ್ಥವಾಗಿ ಕಳೆಯುವುದಕ್ಕಿಲ್ಲ. ಹಾಗೂ ಸಮಯ ಉಳಿಸಿ ಒಂದು ಬಯಲಾಟವನ್ನು ನೋಡುವ ಮನಸ್ಸಾಗುತ್ತದೆ. ಕೆಲವು ಸಲ ಸಮಯದ ಸದುಪಯೋಗವಾದರೂ ಎಲ್ಲ ಸಂದರ್ಭ ಅದೇ ರೀತಿಯಾಗಿರುವುದಿಲ್ಲ.  ಆಟ ನೋಡಿ ಬರುವಾಗ ಇಲ್ಲದ ಸಮಯ ಉಳಿಸಿ ಹಣ ಖರ್ಚು ಮಾಡಿ ಇದಕ್ಕೆ ಬರಬೇಕಿತ್ತೆ ಎಂದು ಅನ್ನಿಸಿದರೆ ಅದು ಆತನ ಅಪರಾಧವಾಗುವುದಿಲ್ಲ. ತನಗನಿಸಿದ ಅನಿಸಿಕೆಯನ್ನು ನೇರವಾಗಿ ಹೋಗಿ ಹೇಳುವನೋ ಪರೋಕ್ಷವಾಗಿ ಹೇಳಿದರೆ ಕಣ್ಣು ಕೆಂಪಗೆ ಪೃಷ್ಠ ಸುಡುವಂತೆ ವರ್ತಿಸುವವರು  ಇನ್ನು ನೇರವಾಗಿ ಹೇಳಿದರೆ ಒಂದೋ ಗೇಲಿ ಮಾಡಿ  ತಮ್ಮ ಅನಿಸಿಕೆಯೆನ್ನೇ ಲೇವಡಿ ಮಾಡಿಬಿಡುತ್ತಾರೆ. ಇಲ್ಲ ಜನ ಸೇರಿಸಿ ತಮ್ಮ ಬಾಹುಬಲದ ಪ್ರದರ್ಶನ ಮಾಡಿಬಿಡುತ್ತಾರೆ. ಇಂದು ಸಾರ್ವಜನಿಕ ಮಾಧ್ಯಮ ತಮ್ಮ ಅನಿಸಿಕೆಯೆನ್ನು ಹೇಳುವುದಕ್ಕೆ ಸಾಕಷ್ಟು ಅವಕಾಶವನ್ನು ಒದಗಿಸಿವೆ. ಹಾಗೆ ಹೇಳಿಕೊಳ್ಳುವುದು ಈ ಪ್ರಜಾ ಪ್ರಭುತ್ವದಲ್ಲಿ ಆತನ ಹಕ್ಕು ಆಗಿರುತ್ತದೆ.  ತಮ್ಮ ಹಣ ಸಮಯ ವ್ಯರ್ಥವಾದಾಗ ಅದರ ನೋವಿನಲ್ಲಿ ಸಾರ್ವಜನಿಕ ಮಾದ್ಯಮ ಬೆರಳ ತುದಿಯಲ್ಲಿರುವಾಗ ಅಲ್ಲೇ ತನ್ನ ಅಸಮಾಧಾನವನ್ನು ಹೊರ ಹಾಕಿಬಿಡುತ್ತಾನೆ. ತನಗಿಷ್ಟವಾಗದೇ ಇದ್ದದ್ದನ್ನು ಅದು ತಪ್ಪಾದರೂ ಅದನ್ನು ಹೇಳುವ ಸ್ವಾತಂತ್ರ್ಯ ಅವನಿಗೆ ಇದೆ.  ಅಷ್ಟಕ್ಕೆ ಆತನಿಗೆ ಬೆದರಿಕೆ ಕರೆಗಳು ಬಂದು ಬಿಡುತ್ತವೆ. ಸ್ವತಃ ಕಲಾವಿದರೇ ಕರೆ ಮಾಡಿದರೆ ಒಂದು ರೀತಿಯಲ್ಲಿ ನ್ಯಾಯ ಎನ್ನಬಹುದೇನೋ, ಆದರೆ ಚೇಲಾಗಳು ಚಮಚಾಗಿರಿ ಮಾಡುವವರು ಯಾರನ್ನೋ ಓಲೈಸಿ ತಮ್ಮ ಸ್ವಾರ್ಥ ಸಾಧಿಸುವುದಕ್ಕೆ ಬರೆದವನಿಗೆ ಕರೆ ಮಾಡಿ ದಮನ ಮಾಡುವುದು ಸಮಾಜದ ಅನಾಗರಿಕ ಮುಖದ ಲಕ್ಷಣ ಇದು. ಮಾನಸಿಕ ಗುಲಾಮರಿಗೆ ಸ್ವ ಚಿಂತನೆ ಇರುವುದಿಲ್ಲ. ಸ್ವ ಪ್ರವೃತ್ತಿ ಇರುವುದಿಲ್ಲ. ಕಲಾವಿದರಿಗೆ ಅಭಿಮಾನಿಗಳು ಯಜಮಾನರು ಇರುವುದು ಈ ದಮನ ಕಾರ್ಯಕ್ಕೆ ಅಂತ ಆನಿಸಿಬಿಡುತ್ತದೆ. ಯಕ್ಷಗಾನದಂತ ಸುಸಂಸ್ಕೃತ ಕಲೆಯ ಪ್ರತಿನಿಧಿಗಳು ನಾವುಗಳು ಎಂಬುದನ್ನು ಮರೆತು ವ್ಯವಹರಿಸುತ್ತಾರೆ.  ತಾವು ಎಸಗಿದ್ದು ತಪ್ಪು ಎಂಬ ಅಪರಾಧೀ ಭಾವ ಆತ್ಮದೊಳಗೆ ಕಾಡುವುದೇ ಇದಕ್ಕೆ ಕಾರಣ. ಹಾಗಿದ್ದು ಇವರಿಗೆ ಆತ್ಮ ಎಂಬುದು ಇದೆ ಅಂತ ಅನ್ನಿಸುವುದಿಲ್ಲ.

ನಾನು ಪ್ರತಿ ಬಾರಿಯೂ ಲೇಖನ ಬರೆಯುವಾಗ ಒಂದು ವಿಷಯವನ್ನು ಸದಾ ಜ್ಙಾಪಿಸುತ್ತೇನೆ. ಜೀವನ ಪರ್ಯಂತ ಯಕ್ಷಗಾನದ ವಿಚಾರದಲ್ಲಿ ಸಂಶೋಧನೆ ಮಾಡಿ ಗ್ರಂಥಗಳನ್ನು ಬರೆದವರ ವೇದವಾಕ್ಯಗಳನ್ನೇ ಕೇಳದೇ ಮೂಲೆಗೆ ತಳ್ಳಿದವರು ಇನ್ನು ನನ್ನ ಲೇಖನ ಗಮನಿಸಬಹುದೇ?

ಅಭಿಪ್ರಾಯಗಳನ್ನು ದಮನರೀತಿಯಲ್ಲಿ ಹತ್ತಿಕ್ಕುವುದು ಸಮುದ್ರಕ್ಕೆ ವಸ್ತುವನ್ನು ಎಸೆದಂತೆ. ಎಂದಾದರೊಂದು ದಿನ ಅದು ದಡಕ್ಕೆ ಅಪ್ಪಳಿಸಿಯೇ ಬಿಡುತ್ತದೆ. 

ಸಾವಿರಾರು ಜನರ ಮುಂದೆ ಯಕ್ಷಗಾನದ ಮಾನ ಹರಾಜಾದರು ತಕರಾರಿಲ್ಲ. ತಮ್ಮ ಪ್ರತಿಷ್ಠೆಗೆ ಧಕ್ಕೆ ಬಂದಾಗ ಯಕ್ಷಗಾನದ ಮರ್ಯಾದೆಗಿಂತಲೂ ತಮ್ಮ ಮರ್ಯಾದೆಯೇ ಹಿರಿದಾಗಿ ತೇಜೋವಧೆಯಾಯಿತು ಅಂತ ಹುಯಿಲೆಬ್ಬಿಸಿಬಿಡುತ್ತಾರೆ. ಖಾಸಗಿಯಾಗಿ ಹೋಗಿ,  ಅವರ ಸಮಯಾವಕಾಶ ನೋಡಿ,   ತಮಗೆ ತಮ್ಮ ಅನಿಸಿಕೆ ತಿಳಿಸಲೇ ಬೇಕು ಎಂಬ ಚಟವಿದ್ದಲ್ಲಿ ಹೇಳಿಬಿಡಬೇಕು.   ಅಷ್ಟಕ್ಕೂ ಬರೆದವನ ಬರಹದಲ್ಲಿ ಸತ್ಯವಿಲ್ಲ ಎಂದಾದರೆ ಸಾರ್ವಜನಿಕರು ಏನೂ ಮೂರ್ಖರೆ? ಸತ್ಯ ಯಾವುದು ?ಸುಳ್ಳು ಯಾವುದು?  ಎಂದು ನಿರ್ಧರಿಸಿ ಬರೆದವನದ್ದೇ ತಪ್ಪು ಎಂದಾದರೆ ಮೂರ್ಖ ಪ್ರಲಾಪ ಅಂತ ಬದಿಗೆ ತಳ್ಳಿಬಿಡುತ್ತಾರೆ.  ನೀವು ಪದೆ ಪದೇ ಮುಖತಃ ಭೇಟಿಯಾಗಿ ಅಭಿಪ್ರಾಯ ಮಂಡಿಸಿದರೆ ನಿಮ್ಮ ಮುಖವನ್ನು ನೋಡುವುದಕ್ಕೆ ಅವರಿಗೆ ಸಮಯ ಒದಗಿಬರುತ್ತದೆ ಎಂಬ ಭರವಸೆ ಇಲ್ಲ.  ಹಾಗಿದ್ದೂ ಸಾರ್ವಜನಿಕವಾಗಿ ಹೇಳಿದರೆ  ತಮ್ಮ ಅನುಯಾಯಿಗಳಿಂದ ಕರೆ ಮಾಡಿಸಿ ಬೆದರಿಸುವಷ್ಟು ಪ್ರಾಮುಖ್ಯತೆ ಆ ಬರಹ ಲೇಖನಕ್ಕೆ ಕೊಡುತ್ತಾರೆ ಎಂದಾದರೆ ಆ ಲೇಖನ ವಸ್ತು ಸ್ಥಿತಿಯ ಸತ್ಯವನ್ನು ತೋರಿಸಿರುತ್ತದೆ. ಸುಳ್ಳಾದರೆ ಇವರಿಗಷ್ಟು ಸಿಟ್ಟು ಬರುವ ಅವಶ್ಯಕತೆಯೇ ಇರುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಇವುಗಳೆಲ್ಲ ಸಾಮಾನ್ಯ. ಅದನ್ನು ಯಥಾ ಪ್ರಕಾರ ಸ್ವೀಕರಿಸುವ ಮನೋಭಾವ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ರಂಗಸ್ಥಳದಲ್ಲಿ ಕುಣಿವ ಬದಲು ಮನೆಯ ಅಂಗಳದಲ್ಲಿ ಕುಣಿದು ಬಿಡಬಹುದು. ಯಾರೂ ಪ್ರಶ್ನಿಸುವ ಹಾಗಿಲ್ಲ.  ಇಲ್ಲಿ ಬೇಕಾದಂತೆ ಕುಣಿವ ಸ್ವಾತಂತ್ರ್ಯ ಇದೆ ಎಂದಾದರೆ ಅದನ್ನು ವಿಮರ್ಶಿಸುವ ಪ್ರತಿಕ್ರಿಯೆಯನ್ನು ಹೇಗೆ ಬೇಕೋ ಹಾಗೆ ನೀಡುವ ಸ್ವಾತಂತ್ರ್ಯ ಅದಕ್ಕಿಂತಲೂ ಮಿಗಿಲಾಗಿ ಸಾರ್ವಜನಿಕರಿಗೆ ಇರುತ್ತದೆ.  ಇದುವರೆಗೆ ಯಕ್ಷಗಾನ ಬಲ್ಲವ ಮಾತ್ರ ಪ್ರತಿಕ್ರಿಯೆ ಕೊಡುತ್ತಿದ್ದ. ಇನ್ನು ಯಕ್ಷಗಾನಕ್ಕೆ ಸಂಭಂಧ ಪಡದವರೂ  ಅದನ್ನು ತಿಳಿಯದವರೂ ಸಹ ಯಕ್ಷಗಾನದ ಬಗ್ಗೆ ಬರೆಯುವ ವಿಮರ್ಶಿಸುವ ಹಂತ ಬರಬಹುದು.

            ನಾವು ಹೇಳಿದ್ದು ಸತ್ಯ ಅಂತ ನಿರೂಪಿಸುವುದಕ್ಕೆ ಸಾಕ್ಷ್ಯ ಬೇಕಾಗಿ ಬರುವುದಿಲ್ಲ. ನಾವು ಹೇಳಿದ್ದು ಸತ್ಯವೋ ಸುಳ್ಳೋ ಎಂಬುದನ್ನು,   ಆ ಸತ್ಯವನ್ನು ಕೇಳಿದವನ ವರ್ತನೆಯೇ ಹೇಳಿಬಿಡುತ್ತದೆ.  ಈ ಸಾಕ್ಷಿ ಇದು ಕೇವಲ ಆತ್ಮ ಸಾಕ್ಷಿಗೆ ಸಂಭಂಧಿಸಿರುತ್ತದೆ.
             
            ಅಂದಿನ ಕೈಯಗಲದ ಪತ್ರಿಕೆಯೇ  ಇಂದು ಬೃಹದಾಕಾರವಾಗಿ ಅಂತರ್ಜಾಲದ ರೂಪದಲ್ಲಿ ಬೆಳೆದು ನಿಂತಿದೆ.  ಸಾಗರದ ನೀರಿನಂತೆ ಅದನ್ನು ಅನುಭವಿಸುವ ಹಕ್ಕು ಪ್ರತಿಯೊಬ್ಬನಿಗೂ ಇರುತ್ತದೆ. ಯಕ್ಷಗಾನ ಸರ್ವ ಭಕ್ತರಿಗೂ ಸಮಾನವಾಗಿ ಸಿಗುವ ಪ್ರಸಾದವಾಗಲಿ.
 

x

Sunday, August 25, 2019

ಭಾವ ಅಭಿವ್ಯಕ್ತ ಸ್ವರೂಪ



ಅದೊಂದು ಯಕ್ಷಗಾನ ಬಯಲಾಟ. ಪ್ರಸಂಗ ಮಾಗಧವಧೆ. ವಿಶಿಷ್ಟವಾದ ಶರೀರಗಾತ್ರದ ಮೂಲಕ ಪಾತ್ರದಿಂದ ರಂಗ ತುಂಬಿಸುತ್ತಿದ್ದ ಪ್ರಸಿದ್ಧ ಕಲಾವಿದರ ಮಾಗಧನ ಪಾತ್ರ. ಯಕ್ಷಗಾನದಲ್ಲಿ ಶರೀರ ಭಾಷೆ, ಅದು ನಾಟಕ ಸಿನಿಮಾದಂತೆ ಅಲ್ಲ. ಅಲ್ಲೊಂದು ವಿಶಿಷ್ಟವಾದ ಅಭಿವ್ಯಕ್ತ ಸ್ವರೂಪವಿದೆ. ನಾಟ್ಯ ಮಾತುಗಾರಿಕೆ ಯಾವುದೂ ಅಲ್ಲದ ಒಂದು ವಿಶಿಷ್ಯ ಮ್ಯಾನರಿಸಂ ಅನ್ನಬಹುದೇನೋ ಅದುವೇ  ಹಲವು ಸಲ ಪ್ರಧಾನವಾಗುವುದುಂಟು. ಯಾಕೆಂದರೆ, ಕುಣಿಯಲು ಸಾಧ್ಯವಾಗದವರೂ  ಈ ವೈಶಿಷ್ಟ್ಯದಿಂದಲೇ ಪಾತ್ರಕ್ಕೆ ಜೀವಕಳೆ ತುಂಬಿಬಿಡುತ್ತಾರೆ. ಕೇವಲ ಮೂಲ ಪ್ರತಿಯ ಶೈಲಿಯನ್ನು ಅನುಕರಿಸಿ ಅವಲಂಬಿಸುವವನೂ ಇದಕ್ಕೆ ಎದುರಾಡದೇ ತಲೆ ಬಾಗುತ್ತಾನೆ. ಕಾರಣ, ಯಕ್ಷಗಾನದ ಪರಂಪರೆಯ ಚೌಕಟ್ಟಿನಲ್ಲೆ ಪಾತ್ರ ಅಲ್ಲಿ ವಿಜೃಂಭಿಸುತ್ತದೆ. ಅದನ್ನೆ ಕಲಾವಿದ ಪ್ರತಿಭೆ ಎನ್ನುವುದು. ಇದನ್ನೇ ವಿದ್ವಾಂಸರು ರಂಗಭಾಷೆ ಎನ್ನುತ್ತಾರೆ. ಆಯಾಯ ಕಲೆಗೆ ಅದರದ್ದೇ ಆದ ರಂಗಭಾಷೆಯಿದೆ. ಅದೇ ಭಾಷೆಯಲ್ಲಿ ಕಲಾಭಿವ್ಯಕ್ತಿಗೊಂಡಾಗ ಮಾತ್ರವೇ ಆ ಪ್ರಸ್ತುತಿ ಪ್ರೇಕ್ಷಕರನ್ನು ಅದೇ ಭಾಷೆಯಿಂದ ತಲುಪುತ್ತದೆ. ಕಲೆಯ ಬಗ್ಗೆ ಶ್ರದ್ಧೆ ಆಳವಾದ ಅಧ್ಯಯನ ಇವುಗಳಿಂದ ಮಾತ್ರವೇ ಇದು ಸಾಧ್ಯವಾಗುವುದು. 

ಮಾಗಧವಧೆ, ಅದೊಂದು ವಿಶಿಷ್ಟವಾದ ಯಕ್ಷಗಾನ ಪ್ರಸಂಗ. ಇದು ಕೆಲವೇ ಕೆಲವು ಪಾತ್ರಗಳ ಪ್ರಸಂಗ. ಅದರಲ್ಲೂ ಪ್ರಧಾನವಾಗಿ ಎರಡೇ ಎರಡು ಪಾತ್ರಗಳು. ಉಳಿದವುಗಳು ಕೇವಲ ಕಥೆಯ ಅವಶ್ಯಕತೆಗೆ ಮಾತ್ರ ಅಸ್ತಿತ್ವದಲ್ಲಿರುತ್ತವೆ.  ಪೋಷಕ ಪಾತ್ರಗಳು ಎಂದಿಟ್ಟುಕೊಳ್ಳೋಣ. ಪೋಷಕ ಪಾತ್ರಗಳು ಈ ಪ್ರಮುಖ ಪಾತ್ರಗಳನ್ನು ಪೋಷಿಸಬೇಕು. ಮೇಲ್ನೋಟಕ್ಕೆ ಪ್ರಧಾನ ಪಾತ್ರಗಳು ಮಾಗಧ ಮತ್ತು ಶ್ರೀಕೃಷ್ಣ ಎಂದು ಕಂಡು ಬಂದರೂ ಸಹ ಶ್ರೀಕೃಷ್ಣನ ಪಾತ್ರಕ್ಕೆ ಮಾಗಧನ ಪಾತ್ರದಷ್ಟು ರಂಗದಲ್ಲಿ ಅವಕಾಶವಿರುವುದಿಲ್ಲ. ಹಾಗಾಗಿ ಶ್ರೀಕೃಷ್ಣ ಪಾತ್ರವೂ ಪೋಷಕವೇ ಆಗಿ ರಂಗದಲ್ಲಿ ಮೂಡಿ ಬರುತ್ತದೆ. ಮಾಗಧ ಅಥವಾ ಜರಾಸಂಧನ ಪಾತ್ರ ರಂಗವನ್ನು ತುಂಬು ಗಾಂಭೀರ್ಯದಿಂದ ತುಂಬಲೇ ಬೇಕು. ಇಲ್ಲವಾದರೆ ಪ್ರದರ್ಶನ ಪೇಲವವಾಗಿ ಬಿಡುತ್ತದೆ. ಕಲಾವಿದನಾದವನು ಕೇವಲ ಪಾತ್ರದ ಜವಾಬ್ದಾರಿ ಮಾತ್ರವಲ್ಲ ರಂಗದ ಜವಾಬ್ದಾರಿಯನ್ನು ಪರೋಕ್ಷವಾಗಿ ಹೊರಬೇಕಾಗುತ್ತದೆ. ಈ ಅರಿವಿನಲ್ಲೇ ಆತ ಪಾತ್ರ ನಿರ್ವಹಿಸಬೇಕಾಗುತ್ತದೆ. ಈ ಪ್ರಕ್ರಿಯೆಯೇ ರಂಗಭಾಷೆಯ ಸ್ವರೂಪ.

ಭೇರಿತ್ರಯಗಳ ಭೇದನದೊಂದಿಗೆ ಮಾಗಧನ ಪ್ರವೇಶವಾಗುತ್ತದೆ.  ಅವಮಾನ, ಅನುಮಾನ ಎಲ್ಲವನ್ನೂ ಮೀರಿಸಿ ಭಯವನ್ನು ಆವರಿಸಿದ ಜರಾಸಂಧ ಆರ್ಭಟಿಸುತ್ತಾನೆ. ತಾಮಸ ಸ್ವಭಾವದ ಜರಾಸಂಧನಿಗೆ ಈ ಎಲ್ಲದರಿಂದಲೂ ಹೊರಬರುವ ಅಸಹನೆಯ ತುಡಿತ. ಆದರೆ ಅದು ಸಾಧ್ಯವಾಗದೇ ಆ ಅಸಹನೆಯೇ ಆರ್ಭಟವಾಗಿ ಪ್ರಕಟವಾಗುತ್ತದೆ. ಹೆಚ್ಚು ಕುಣಿತವಿಲ್ಲ. ವಿಪರೀತ ಎನ್ನುವಂತಹ ಅಂಗಾಭಿನಯವಿಲ್ಲ.  ಕೇವಲ ಕೆಲ ಆಂಗಿಕ ಸಂಕೇತಗಳೇ ಅಲ್ಲಿ ಭಾವವನ್ನು ಪ್ರೇಕ್ಷಕನಿಗೆ ತಲಪಿಸಬೇಕು. ಬಂದವನು ಶ್ರೀಕೃಷ್ಣ ಎಂದು ತಿಳಿದಾಗ ಒಳಗೇ ಜೀವಭಯದ ಆತಂಕ. ಹದಿನೆಂಟು ಬಾರಿಯೂ ಪಲಾಯನ ಮಾಡಿದ ಶ್ರೀಕೃಷ್ಣ ಪುನಃ ಬಂದ.  ಶ್ರೀಕೃಷ್ಣನ ಜತೆಯಲ್ಲಿರುವ ಭೀಮಾರ್ಜುನರ ಆತ್ಮ ವಿಶ್ವಾಸ ಕಂಡು ಮಾಗಧ ಧೃತಿಗೆಡುತ್ತಾನೆ. ಬೋನಿನಲ್ಲಿ ಸಿಕ್ಕ ಸಿಂಹದಂತೆ ಕ್ರೋಧ ಉಕ್ಕಿ ಹತಾಶೆಯ ರೂಪದಲ್ಲಿ ಹೊರ ಪ್ರಕಟವಾಗುತ್ತದೆ.  ದೈತ್ಯ ಕಲಾವಿದರ ದೈತ್ಯ ಮಾಗಧ ಸ್ಮರಣೆಯಲ್ಲಿ ಉಳಿದುಬಿಡುತ್ತದೆ.
          
ಇನ್ನೊಂದು ಪ್ರಸಂಗ ವಾಲಿ ಸುಗ್ರೀವ ಕಾಳಗ. ಹೆಸರೇ ಸೂಚಿಸುಂತೆ ಇದೂ ಕ್ರೋಧ ವೀರಾವೇಶ ಎಲ್ಲವೂ ಪ್ರಕಟಗೊಳ್ಳುವ ಪ್ರಸಂಗ. ಮೇಲೆ ಹೇಳಿದ ಅದೇ ಕಲಾವಿದರ ವಾಲಿ. 

ಭಾನುತನುಜ ಭಳಿರೆಯನುಜ | ಬಂದೆಯಾ ಮಮ |
ಏನು ಧೈರ್ಯದಿಂದ ಕರೆದೆ | ಎಲೊ ಪರಾಕ್ರಮ ||

ಬಾ ಯುದ್ದಕ್ಕೆ ಎಂದು ತಮ್ಮ ಸುಗ್ರೀವನ ಧ್ವನಿಗೆ ಭೂಮಿಯೇ ನಡುಗುವಂತೆ ಬರುವ ವಾಲಿ. ತನ್ನಿದಿರು ಯಃಕಶ್ಚಿತ್ ತೃಣಸಮಾನವಾಗಿರುವ ಸುಗ್ರೀವನನ್ನು ಕಂಡಾಗ ಉಕ್ಕುವ ಕ್ರೋಧ ಕೇವಲ ನಿಂತ ಭಂಗಿಯಲ್ಲೇ ವ್ಯಕ್ತವಾಗುತ್ತದೆ. ಉಬ್ಬಿದ ಪುಟಿಯುವ ತೋಳುಗಳು,  ತೆರೆದುಕೊಳ್ಳುವ ಬಾಹುಗಳು, ಘನ ಗಂಭೀರದ ಗಜನಡಿಗೆ ವಾಲಿ ತನ್ನ ಪರಾಕ್ರಮದಲ್ಲಿ ಎಷ್ಟು ಅಹಂಕಾರ ಉಳ್ಳವನು ಎಂಬುದನ್ನು ಕೇವಲ ಒಂದೆರಡು ಹೆಜ್ಜೆಯಲ್ಲೇ ಮನಗವರಿಕೆಯಾಗುತ್ತದೆ. ಸುಗ್ರೀವನೇನು ಜಗತ್ತಿನ ಯಾವ ಶಕ್ತಿಯೂ ತನಗೆಣೆಯಲ್ಲ ಎಂಬುದು ಸಾಂಕೇತಿಕವಾದ ಅಭಿನಯದಿಂದಲೇ ವ್ಯಕ್ತವಾಗುತ್ತದೆ. ಇದೆಲ್ಲದಕ್ಕೂ ಜತೆಯಾಗಿರುವ ಗಡಸು ವ್ಯಾಘ್ರ ಧ್ವನಿ…..ಅಬ್ಬಾ….ಅಭಿನವ ವಾಲಿ ರಂಗವನ್ನು ಆಕ್ರಮಿಸುವ ಪರಿಗೆ ಪ್ರೇಕ್ಷಕ  ಬೆರಗಾಗಿಬಿಡುತ್ತಾನೆ.

ವಾಲಿಯನ್ನೋ ಮಾಗಧನನ್ನೋ ತಿಳಿಯದ ಯಾವ ಪ್ರೇಕ್ಷಕನೂ  ಅಲ್ಲಿರುವುದಿಲ್ಲ. ಆದರೂ ತಲ್ಲೀನನಾಗುವ ಪ್ರೇಕ್ಷಕ ಅಷ್ಟರಲ್ಲೆ ತ್ರೇತಾಯುಗಕ್ಕೊ  ದ್ವಾಪರಕ್ಕೋ ಜಾರಿಬಿಡುತ್ತಾನೆ. ಇಲ್ಲಿ ಮಾಗಧನಾಗಿ ವಾಲಿಯಾಗಿ ರಂಗವನ್ನು ಆಕ್ರಮಿಸಿ ವಿಜ್ರಂಭಿಸಿದ ಕಲಾವಿದ ಬೇರೆ ಯಾರೂ ಅಲ್ಲ. ತೆಂಕು ತಿಟ್ಟಿನ ದೈತ್ಯ ವೇಷಧಾರಿ ಎಂದೆನಿಸಲ್ಪಟ್ಟ ದಿವಂಗತ ಶ್ರೀ ಪುತ್ತೂರು ನಾರಾಯಣ ಹೆಗಡೆಯವರು.

ಶ್ರೀ ಹೆಗಡೆಯವರದು ಯಾವ ಪಾತ್ರವೇ ಆಗಲೀ. ಅತಿಯಾದ ಅಭಿನಯವೂ ಇಲ್ಲ. ಅತಿಯಾದ ಮಾತುಗಾಗರಿಕೆಯೂ ಇಲ್ಲ. ಅತಿಯಾದ ಕುಣಿತವಂತೂ ಇರಲೇ ಇಲ್ಲ. ಆದರೂ ಪಾತ್ರ ಅಭಿವ್ಯಕ್ತಿ ಸ್ವರೂಪ, ಭಾವಾಭಿನಯ ಪ್ರೇಕ್ಷಕನನ್ನು ತೃಣ ಸೂಕ್ಷ್ಮವೂ ಕದಲದಂತೆ ಮಾಡಿಬಿಡುತ್ತಿತ್ತು.  ಅದೆಷ್ಟು ಪ್ರಭಾವ ಬೀರುತ್ತದೆ ಎಂದರೆ ಇಂದಿಗೂ ವಾಲಿ ಮಾಗಧನ ಪಾತ್ರಗಳಲ್ಲಿ ಬೇರೆಯದನ್ನು ಕಲ್ಪಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಯಕ್ಷಗಾನದ ಭಾವಾಭಿನಯ ಅದು ಕುಣಿತದಲ್ಲಿ ಇಲ್ಲ. ಹಾರಾಟ ಚೀರಾಟದಲ್ಲಿ ಇಲ್ಲ. ಕೇವಲ ಯಕ್ಷಗಾನದ ಮೂಲ ಸೊಗಡಿನ  ಸೂಕ್ಷ್ಮ  ಸಂಕೇತಗಳೇನಿವೆಯೋ ಅಷ್ಟರಲ್ಲೇ  ಅಲ್ಲಿ ಭಾವೋತ್ಕರ್ಷವನ್ನು  ಪಡೆಯುತ್ತವೆ. ಪ್ರತಿಯೊಂದನ್ನೂ ಬಿಡಿಸಿ ಸಂಧಿವಿಂಗಡಿಸಿ ವಿವರಿಸುವ ಆವಶ್ಯಕತೆ ಇರುವುದಿಲ್ಲ. ಹಲವು ಸಲ ಒಂದು ಕಾವ್ಯವನ್ನು ವಿಂಗಡಿಸಿ ವಿಂಗಡಿಸಿ ವಿವರಿಸುತ್ತಾ ಹೋಗುವಾಗ ಮೂಲ ಕಾವ್ಯವೇ  ಮರೆತು ಹೋಗುವಂತೆ ಅತಿಯಾದ ಅಭಿನಯ ಪಾತ್ರದ ಭಾವವನ್ನೇ ಸಂಹರಿಸಿಬಿಡುತ್ತದೆ. ಎಲ್ಲವನ್ನೂ ಅಂಗಾಭಿನಯದಿಂದ ಭಾವಾಭಿನಯದ ಮೂಲಕ ಹೇಳುವುದಾದರೆ ಯಕ್ಷಗಾನದಲ್ಲಿ ಅರ್ಥಗಾರಿಕೆ ಮತ್ತು ಆಹಾರ್ಯದ ಆವಶ್ಯಕತೆಯೇ ಇರುವುದಿಲ್ಲ.

ಇಂದು ಭಾವಾಭಿನಯ ಯಕ್ಷಗಾನದಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವ ಅಂಗ. ಯಕ್ಷಗಾನದಲ್ಲಿ  ಈ ಭಾವಾಭಿನಯದ ಕೊರತೆಯನ್ನು ಯಾಕೆ ಕಂಡುಕೊಂಡರೋ ಎಂದು ಆಶ್ಚರ್ಯವಾಗುತ್ತದೆ.  ತೆಂಕು ತಿಟ್ಟಿನಲ್ಲಿ ಪೂರ್ವಾಗ್ರಹದಿಂದ ಕೊರತೆಯನ್ನೇ ಕಾಣುವ ಕೆಲವು ಮನಸ್ಸುಗಳು ಇದರಲ್ಲಿ ಭಾವಾಭಿನಯದ ಹೆಸರಲ್ಲಿ ಏನೆನೋ ಬಳಕೆಗೆ ತಂದು ಯಕ್ಷಗಾನವನ್ನು ನಾಟ್ಯರೂಪಕಕ್ಕೆ ಇಳಿಸಿಬಿಡುತ್ತಾರೆ. ಇವರೆದುರು ಈ ವರೆಗಿನ ಪರಂಪರೆಯ ಯಕ್ಷಗಾನ ಯಾಕೆ ಬಡವಾಗಿ ಕಂಡಿತೋ ಆಶ್ಚರ್ಯವಾಗುತ್ತದೆ. ಮೇಲಿನ ಎರಡು ಉದಾಹರಣೆಗಳು ಕೇವಲ ಸಂಕೇತ ಮಾತ್ರ. ಆದರೆ ಬದಲಾವಣೆಯ ಕ್ರಾಂತಿಯಲ್ಲಿ ಯಕ್ಷಗಾನ ನಾಟ್ಯರೂಪಕವಾಗಿ ಬದಲಾವಣೆಯದದ್ದು ವಿಷಾದನೀಯ ಎನ್ನಬೇಕು.

“ಭಾವಾಭಿನಯ” ಇದರ ಅತಿರೇಕವಿಲ್ಲದೇ ಯಕ್ಷಗಾನ ವಿಜೃಂಭಿಸುತ್ತಿದ್ದ ಕಾಲವಿತ್ತು. ದುಡ್ಡಿಲ್ಲದ ಸಮಯದಲ್ಲೂ ನೂರು ಇನ್ನೂರು ಸಾವಿರ ಖರ್ಚು ಮಾಡಿಕೊಂಡು ದೂರದೂರಿಗೆ ಗಾಡಿ ಮಾಡಿಕೊಂಡು ಆಟ ನೋಡುತ್ತಿದ್ದ ಪ್ರೇಕ್ಷಕವರ್ಗವನ್ನು ಕಂಡಿದ್ದೇನೆ. ಇಂದು ಮನೆಗೆ ಬಾಗಿಲಿಗೆ ಆಮಂತ್ರಣದೊಂದಿಗೆ ಉಚಿತ ಪಾಸ್ ಇಟ್ಟರೂ ಆ ಪ್ರೇಕ್ಷಕ ವರ್ಗ ರಂಗದ ಹತ್ತಿರ ಸುಳಿಯುವುದಿಲ್ಲ. ಕಾರಣ ಅತಿಯಾಗುವ ಈ ಭಾವಾಭಿನಯದಂತಹ ಇತರ ಪ್ರಯೋಗಗಳು.  ವಿಶೇಷವಾದುದನ್ನೇ ಪ್ರತಿಬಾರಿಯೂ ನೀಡುವ ಚಟದಿಂದ ಹೊಸತನ್ನು ಪ್ರಯೋಗಿಸುತ್ತಿರುವಾಗ,  ಪ್ರೇಕ್ಷಕ ಪ್ರತಿಬಾರಿಯೂ ಹೊಸತರ ತವಕದಲ್ಲೇ ಇರುತ್ತಾನೆ. ಅದು ಇಲ್ಲ ಎಂದಾದಾಗ ವಿಮುಖನಾಗುತ್ತಾನೆ.

                ಭಾವಾಭಿನಯ ಎಂದು ಭಾವ ವ್ಯತ್ಯಾಸವನ್ನೇ ತಿಳಿಯದವರು ಅಭಿವ್ಯಕ್ತಗೊಳಿಸುವುದನ್ನು ಕಾಣುವಾಗ ಭಾವಾಭಿನಯದ ಆವಶ್ಯಕತೆಯಾದರೂ ಏನು ಎಂಬ ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ. ಅದಕ್ಕಾಗಿಯೆ ಮಾಗಧ, ವಾಲಿಯ ನಿದರ್ಶನ ಕಣ್ಣ ಮುಂದೆ ಬರುತ್ತದೆ. ಒಂದು ಸಿಂಹದ ಸಿಟ್ಟಿಗೂ ಮದವೇರಿದ ಆನೆಯ ಸಿಟ್ಟಿಗೂ ಹೋಗಲಿ ಒಂದು ಕತ್ತೆಯ ಸಿಟ್ಟಿಗೂ ವ್ಯತ್ಯಾಸವಿರುತ್ತದೆ. ಗಾಯಗೊಂಡ ಸಿಂಹ ಸಿಟ್ಟಿನಲ್ಲಿ ಆ ಗಾಯದಿಂದ ರೋದಿಸುವುದಿಲ್ಲ ಬದಲು ಮತ್ತಷ್ಟು ಘರ್ಜಿಸುತ್ತದೆ. ತಡೆಯಲಾರದ ವೇದನೆಯನ್ನು ಅದು ತನ್ನ ಕ್ರೊಧದಿಂದಲೇ ತಡೆದುಕೊಳ್ಳುವ ಪ್ರಯತ್ನ ಮಾಡುತ್ತದೆ.  ನೋವು ಹೆಚ್ಚಾದಂತೆ ಸಿಂಹ ಅಳುವುದಿಲ್ಲ. ಮತ್ತಷ್ಟೂ ಅರಚುತ್ತದೆ. ಅದೇ ಆನೆಯಾದರೆ ಇನ್ನೊಂದು ಬಗೆ.  ಹಾಗೆ ಈ ಭಾವವ್ಯತ್ಯಾಸಗಳು ಪಾತ್ರಗಳಲ್ಲೂ ಇರುತ್ತದೆ. ಮಾಗಧನ ಕ್ರೋಧಕ್ಕೂ ವಾಲಿಯ ಕ್ರೋಧಕ್ಕೂ ವ್ಯತ್ಯಾಸವನ್ನು ಗುರುತಿಸಬೇಕು. ಯಾಕೆಂದರೆ  ಪ್ರೇಕ್ಷಕನಿಗೆ ಈ ಎರಡು ಪಾತ್ರಗಳ ಬಗ್ಗೆ ಚೆನ್ನಾಗಿ ಅರಿವಿರುತ್ತದೆ. ಶ್ರೀ ರಾಮನ ಕ್ರೋಧಕ್ಕೂ ಶ್ರೀಕೃಷ್ಣನ ಸಿಟ್ಟಿಗೂ ವೆತ್ಯಾಸವಿದೆ. ಎರಡೂ ಒಬ್ಬನದೇ ಅವತಾರಗಳು.  ದುರಂತವೆಂದರೆ ಕಲಾವಿದ ಇದರ ಬಗ್ಗೆ ಗಂಭೀರವಾಗಿ ಚಿಂತಿಸದಿರುವುದು. ಏರು ಪದ ಬಂದ ತಕ್ಷಣ ಒಟ್ಟು ರಂಗಸ್ಥಳ ಪುಡಿಗಟ್ಟುವಂತೆ ಕುಣಿದು ಬಿಡುವುದು.  ಇಂದು ಎಲ್ಲ ಪಾತ್ರಗಳ ಏರು ಪದಗಳು ಸಾಮಾನ್ಯವೆಂಬಂತೆ ಕಂಡುಬರುತ್ತದೆ. ಹರುಷ, ಕ್ರೋಧ, ವೀರ ಮುಂತಾದ ಭಾವ ಪ್ರಕಟಣೆಗಳು ಪಾತ್ರದಿಂದ ಪಾತ್ರಕ್ಕೆ ವ್ಯತ್ಯಾಸವೇ ಇರುವುದಿಲ್ಲ. ಇದಕ್ಕೆ ಮೂಲ ಯಕ್ಷಗಾನದ ಅಧ್ಯಯನದ ಕೊರತೆಯೇ ಕಾರಣ.

                ಯಕ್ಷಗಾನದ ಇಂತಹ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳು ಸುಲಭದಲ್ಲಿ ಅಧ್ಯಯನಕ್ಕೆ ಲಭ್ಯವಿರುವುದಿಲ್ಲ.  ಹಿರಿಯ ಕಲಾವಿದರೂ ಶಿಕ್ಷಕರು ಸಂಪನ್ಮೂಲವಾಗಿ ಇದ್ದರೂ ಅವರನ್ನು ಅವಗಣಿಸಿ ಮಾಸಾಶನ ಕೊಟ್ಟು ಮೂಲೆಗಿರಿಸಿ ಕಾಲ ಎಷ್ಟೋ ಕಳೆದಿದೆ. ಕೇವಲ ಗಂಧದ ಹಾರಕ್ಕಷ್ಟೇ ಸೀಮಿತವಾಗಿಸುವ ಅವರ ಜ್ಞಾನ ಪ್ರಸ್ತುತದಲ್ಲಿ ಬೇಕು ಎಂದು ಅನ್ನಿಸುವುದಿಲ್ಲ.

                ಯಕ್ಷಗಾನದ ಕುಣಿತ ಅಭಿನಯಗಳನ್ನು ಯಕ್ಷಗಾನವಾಗಿಯೇ ಕಲಿಯುವ ಅರ್ಪಣಾಭಾವ ಇಲ್ಲ. ಭರತನಾಟ್ಯವಾದರೂ ಅಮೂಲಾಗ್ರವಾಗಿ ಕಲಿಯುವುದಕ್ಕೆ ವರ್ಷಗಳ ಸಾಧನೆ ಬೇಕು. ಜೀವಮಾನದ ಸಾಧನೆ ಮಾಡಿದವರೂ ಇನ್ನೂ ಕಲಿಯಲಿಕ್ಕಿದೆ ಎಂಬ ಹಪಹಪಿಕೆಯಲ್ಲಿದ್ದರೆ, ಇಲ್ಲಿ ಯಕ್ಷಗಾನದ ಅವಗಣನೆ ಎಷ್ಟು ಎಂದರೆ, ಒಂದು ವಾರದ ತರಗತಿಯ ನಂತರ ಆತ ರಂಗಸ್ಥಳವೇರಿ ಪ್ರದರ್ಶನ ನೀಡಲು ಅರ್ಹನಾಗುತ್ತಾನೆ. ವಿಚಿತ್ರವೆನಿಸುತ್ತದೆ.  ಯಕ್ಷಗಾನದ ಸೂಕ್ಷಾತಿಸೂಕ್ಷ್ಮ ವಿಚಾರಗಳನ್ನು ಕೇವಲ ಜ್ಞಾನಾರ್ಜನೆಗಾದರೂ ತಿಳಿದುಕೊಳ್ಳುವ ಮನೋಭಾವದ ಕೊರತೆ ಕಾಣುತ್ತಿದೆ.  ಅವರವರ ಭಾವಕ್ಕೆ ತಕ್ಕಂತೆ ಯಕ್ಷಗಾನ ಕೆಲವೊಮ್ಮೆ ನಾಟಕವಾಗುತ್ತದೆ, ಭರತನಾಟ್ಯವಾಗುತ್ತದೆ, ಸಂಗೀತ ಕಛೇರಿಯಾಗುತ್ತದೆ, ನಾಟ್ಯ ರೂಪಕವಾಗುತ್ತದೆ. ಆದರೆ ಯಕ್ಷಗಾನ ಮಾತ್ರ ಆಗದೇ ಉಳಿಯುತ್ತದೆ. ಯಕ್ಷಗಾನ ಹೇಗೆ ಎಂಬ ಸ್ಪಷ್ಟ ತಿಳುವಳಿಕೆಯೇ ಇಲ್ಲದಿರುವುದು ಇದ್ದರೂ ಅದರ ಅವಗಣನೆ ಮನುಷ್ಯ ಸ್ವಾರ್ಥದ ಸಂಕೇತವಾಗಿ ಭಾಸವಾಗುತ್ತದೆ.

                ಯಕ್ಷಗಾನದಲ್ಲಿ ಪಾತ್ರದ ಸ್ವಭಾವದ ಅನಾವರಣ ಮುಖ್ಯವಾಗಿ ಮುಖವರ್ಣಿಕೆಯ ಬಣ್ಣಗಳು ಮತ್ತು ಆಹಾರ್ಯದಿಂದ ವ್ಯಕ್ತಗೊಳ್ಳುತ್ತದೆ. ಪಾತ್ರದ ಸ್ವಭಾವ ಇಂಥದ್ದು ಎಂದು ಮುಖವರ್ಣಿಕೆ ಮತ್ತು ಆಹಾರ್ಯದ ಮೂಲಕ ತಿಳಿಸಿದ ಮೇಲೆ ಭಾವಪ್ರತಿಪಾದನೆಯೆನ್ನುವುದು ಒಂದು Finishing Touch ಕೊಟ್ಟಷ್ಟು ಇದ್ದರೆ ಸಾಕಾಗುತ್ತದೆ. ಉದಾಹರಣೆಗೆ ಮಾಗಧ, ವಾಲಿ ಮೊದಲಾದವುಗಳು ಕೇಸರಿ ತಟ್ಟಿಯ ಬಣ್ಣದ ವೇಷಗಳು. ಇಲ್ಲಿ ಮುಖವರ್ಣಿಕೆಯ ಬಣ್ಣದ ಮೂಲಕ ಮತ್ತು ಆಹಾರ್ಯದ ಮೂಲಕವೇ ಪಾತ್ರದ ಸ್ವಭಾವ ಚಿತ್ರಣ ದೊರಕುತ್ತದೆ. ಮುಂದೆ ಗಂಭೀರವಾಗಿ ಅದನ್ನು ಅಭಿವ್ಯಕ್ತಿಗೊಳಿಸಿದರೆ ಆಯಿತು. ಕಥಕಳಿಯಲ್ಲಿಯೂ ಕೂಡ ಇಂಥದೇ ವರ್ಗದ ವೇಷಗಳಿವೆ. ಆದರೆ ಅಲ್ಲಿ ಕಣ್ಣಿನಿಂದ ಭಾವನೆಗಳನ್ನು ತೋರಿಸುತ್ತಾರಾದರೂ ಯಕ್ಷಗಾನ ರಂಗಸ್ಥಳದಲ್ಲಿನ ಪ್ರದರ್ಶನದಂತೆಯೇ ಕಥಕಳಿಯೂ ಪ್ರದರ್ಶನವಾಗುವುದರ ಕಾರಣ ಕಥಕಳಿಯ ಕಣ್ಣಿನ ಚಲನೆಗಳು ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ಪ್ರೇಕ್ಷಕರಿಗೆ ಕಾಣಿಸುವುದಿಲ್ಲವೆಂದು ಆ ವೈಶಿಷ್ಟ್ಯವನ್ನವರು ಬಿಡದೇ ಕಾಪಿಟ್ಟು ಬಂದ ಕಾರಣ ಇಂದಿನ ವಿದ್ಯುನ್ಮಾನ ಯುಗದಲ್ಲಿ ವೀಡಿಯೋ ಚಿತ್ರೀಕರಣದ ಸಮಯದಲ್ಲಿ ಮುಖಕ್ಕೆ ಫ಼ೋಕಸ್ ಮಾಡಿ ತೋರಿಸುವಾಗ ಆ ಭಾವನೆಗಳು ವಿಶೇಷ ಪರಿಣಾಮವನ್ನು ನೀಡುತ್ತದೆ. ಯಕ್ಷಗಾನದಲ್ಲಿ ಪ್ರೇಕ್ಷಕನಿಗೆ ತಿಳಿಯುವುದಿಲ್ಲ, ಕಾಣಿಸುವುದಿಲ್ಲ ಎಂದು ಅನೇಕ ವಿಚಾರಗಳನ್ನು ಕೈಬಿಡುತ್ತ ಬಂದು ಯಕ್ಷಗಾನದ ವೈಶಿಷ್ಟ್ಯತೆಯೇನು ಎಂದು ಇತರರು ಕೇಳುವಂತಹ ಸಂದರ್ಭದ ಸೃಷ್ಟಿಗೆ ನಾವು ಕಾರಣರಾಗಿದ್ದೇವೆ. ಪರಂಪರೆಯನ್ನು, ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.

                ವೈಶಿಷ್ಟವನ್ನು ಗಮನಿಸುವುದಾದರೆ ಬಲಿಯ ಪಾತ್ರ ಬಣ್ಣದ ವೇಷ. ಆತನಲ್ಲಿ ಸಾತ್ವಿಕತೆಯಿದ್ದರೂ ಕೂಡ ತಾಮಸಿ ಗುಣವೂ ಇತ್ತು. ಅದರಿಂದಲೇ ಅಲ್ಲವೇ ದೂರ್ವಾಸನ ಶಾಪದಿಂದ ಸರ್ವವನ್ನು ಕಳೆದುಕೊಂಡ ಸ್ವರ್ಗಲೋಕವನ್ನಾದರೂ ಆತ ಯುದ್ಧದ ಮೂಲಕ ಸ್ವಾಧೀನ ಮಾಡಿಕೊಂಡದ್ದು. ಅವನಿಗಿರಬಾರದು ಎನ್ನುವ ಭಾವ ಆತನಲ್ಲಿದ್ದುದರ ದ್ಯೋತಕ ಮತ್ತು ರಾಕ್ಷಸ ಸಹಜವಾದ ದೇಹದಾರ್ಢ್ಯತೆಯ ದ್ಯೋತಕದ ರೂಪದಲ್ಲಿ ಯಕ್ಷಗಾನದಲ್ಲಿ ಬಲಿಯ ಪಾತ್ರ ಬಣ್ಣದ ವೇಷದ್ದು. ಪ್ರಹ್ಲಾದ ರಾಕ್ಷಸನಾದರೂ ಸಹ ಆತನಲ್ಲಿ ತಾಮಸ ಗುಣವೇ ಇರಲಿಲ್ಲ. ಶುದ್ಧ ಸಾತ್ವಿಕ ಗುಣದ ಪ್ರತಿಪಾದನೆಗಾಗಿ ಮತ್ತು ಪುಟ್ಟ ಮಗು ಎನ್ನುವುದರ ದ್ಯೋತಕವಾಗಿ ಪ್ರಹ್ಲಾದನ ವೇಷ ರಾಕ್ಷಸ ವೇಷದಂತಿಲ್ಲ.

                ಭಾವಾಭಿನಯ ಎಂದ ಕೂಡಲೇ ಕರುಣರಸ ಮಾತ್ರ ಹೆಚ್ಚಿನವರಿಗೆ ಗೋಚರಿಸುತ್ತದೆ. ಅದನ್ನೇ ರಂಗದಲ್ಲಿ ಪಡಿಮೂಡಿಸಲು ಪ್ರಯತ್ನಿಸುತ್ತಾರೆ. ಶ್ರೀರಾಮನ ಸೀತಾವಿಯೋಗ ಅಥವಾ ಶ್ರೀರಾಮನ ದುಃಖವೆಂದರೆ ಬಾಯಿಬಡಿದುಕೊಂಡು ಅಳುವುದಲ್ಲ. ಅದನ್ನು ಗಂಭೀರವಾಗಿ ಹಾ ಸೀತಾ ಎನ್ನುವ ಒಂದು ಉದ್ಗಾರ ಮಾತ್ರದಲ್ಲಿ ಗಂಭೀರವಾಗಿ ಪ್ರತಿಪಾದಿಸಲ್ಪಡಬೇಕು. ಅರಸನ ದುಃಖಕ್ಕೂ ಸಾಮಾನ್ಯನ ದುಃಖಕ್ಕೂ ಬಹಳ ವ್ಯತ್ಯಾಸವಿದೆ. ದುಃಖ ಎಲ್ಲರಿಗೂ ಒಂದೇ ಆದರೂ ಅಭಿವ್ಯಕ್ತಿಸುವಲ್ಲಿ ವಿಧಗಳಿವೆ ಎನ್ನುವುದೂ ಅಷ್ಟೇ ಸತ್ಯವಲ್ಲವೇ? ಅದೇ ರೀತಿಯಲ್ಲದು ವ್ಯಕ್ತವಾಗಬೇಕು. ಒಟ್ಟು ನವರಸಗಳಾದ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ ಇವುಅಳ ವ್ಯತ್ಯಾಸವನ್ನು ರಂಗದಲ್ಲಿ ಆಯಾಯ ರಂಗಭಾಷೆಯ ಮೂಲಕ ತೋರಿ ಕೊಡಬೇಕು. ಹಾಸ್ಯವೆಂದರೆ ಅದು ಅಪಹಾಸ್ಯವೋ, ಕುಚೇಷ್ಟೆಯೋ ಆಗಿ ಬಿಡಬಾರದು. ದೇವದೂತನ ಹಾಸ್ಯಕ್ಕೂ, ರಕ್ಕಸದೂತನ ಹಾಸ್ಯಕ್ಕೂ ತಾತ್ವಿಕ ವ್ಯತ್ಯಾಸಗಳಿರುವುದನ್ನು ತೋರಿಸಿಕೊಡಬೇಕು. Stand-up comidian ರೀತಿ ಎಲ್ಲಕ್ಕೂ ಒಂದೇ ಬಗೆಯಲ್ಲ ಎನ್ನುವ ತಿಳುವಳಿಕೆ ಕಲಾವಿದನಷ್ಟೇ ಆಸ್ವಾದಿಸುವ ಪ್ರೇಕ್ಷಕನಿಗೂ ಇರಬೇಕು. ರೌದ್ರ, ವೀರ, ಭಯಾನಕ, ಭೀಭತ್ಸ ರಸಗಳ ಅಭಿವ್ಯಕ್ತಿಗಳಲ್ಲಿ ಎಳ್ಳಿನಷ್ಟೂ ವ್ಯತ್ಯಾಸವಿರದೇ ಎಲ್ಲವುದಕ್ಕೂ ಒಂದೇ ರೀತಿ ಧೀಂಗಿಣ ಹಾರುವುದು ಅಂತಾಗಿ ಬಿಡಬಾರದು. ವೀರರಸದಲ್ಲಿ ಉತ್ಸಾಹ ಸ್ಥಾಯೀ ಭಾವದಲ್ಲಿದ್ದರೆ, ರೌದ್ರದಲ್ಲಿ ಕೋಪ, ಭೀಭತ್ಸದಲ್ಲಿ ಸಂದರ್ಭಾನುಸಾರ ಕ್ರೌರ್ಯ ಇರಬೇಕು.

                ಆಯಾಯ ಕಲಾಪ್ರಕಾರದ ರಂಗಭಾಷೆ ಈ ಎಲ್ಲವನ್ನೂ ಅಂದರೆ ಆಹಾರ್ಯ, ಮುಖವರ್ಣಿಕೆಯ ಬಣ್ಣ, ಮಾತುಗಾರಿಕೆ ಮತ್ತು ಆಂಗಿಕಾಭಿನಯಗಳನ್ನು ಒಳಗೊಂಡಿರಬೇಕು. ಯಕ್ಷಗಾನದಲ್ಲಿ ಈ ರಂಗಭಾಷೆ ವಿಭಿನ್ನ ಕಾರಣಗಳಿದ್ದರೂ ಒಟ್ಟಾರೆಯಾಗಿ ಯಕ್ಷಗಾನದ ಪರಂಪರೆ, ಸಂಪ್ರದಾಯದ ಬಗೆಗಿನ ತಾತ್ಸಾರ ಭಾವ ಮತ್ತು ತಮ್ಮ ದೇಣಿಗೆಯ ಬಗೆಗಿನ ವಿಪರೀತ ತುಡಿತದ ಕಾರಣದಿಂದ ನೇಪಥ್ಯಕ್ಕೆ ಸರಿದಿದೆ. ಯಕ್ಷಗಾನದ ರಂಗಭಾಷೆ ಇತರನೇಕ ಸೋದರ ಕಲೆಗಳ ರಂಗಭಾಷೆಗಳನ್ನೂ ಒಳಗೊಂಡು ಪ್ರದರ್ಶಿಸಲ್ಪಡುತ್ತಿರುವುದರಿಂದ ಪ್ರೇಕ್ಷಕರಿಗೂ ಈ ಸಂಕರ ಅರ್ಥವಾಗುತ್ತಿಲ್ಲ. ಒಳ್ಳೆಯದಾಯಿತು, ಚಂದವಾಯಿತು ಎನ್ನುವುದರಲಷ್ಟೇ ಎಲ್ಲರ ಚಿತ್ತ ಕೇಂದ್ರೀಕರಿಸಲ್ಪಟ್ಟಿದೆ. ಒಳ್ಳೆಯದಾಯಿತು, ಚಂದವಾಯಿತು ಸರಿ, ಸರಿಯಾಯಿತೇ ಎಂದು ಯಾರೂ ಯೋಚಿಸುತ್ತಿಲ್ಲ. ಸರಿಯಾದ ರೀತಿಯಲ್ಲಿ ಒಳ್ಳೆಯದಾಗಬೇಕಲ್ಲ. ಉದಾಹರಣೆಗೆ Traffic Jump ಮಾಡಿ ಪೋಲೀಸರಿಗೆ ಸಿಗದೇ ಇರುವುದರಿಂದ ಒಳ್ಳೆಯದಾಗುತ್ತದೆ ಅಂದರೆ ಹಣ ಉಳಿಯುತ್ತದೆ. ಆದರೆ ಅದು ಸರಿಯೆನಿಸುತ್ತದೆಯೇ? ಒಳ್ಳೆಯದಾಗುವುದೆಲ್ಲ ಪಥ್ಯವೆಂದೆಣಿಸುವುದಿಲ್ಲ.

ಕೊರತೆ ಇದೆ ಎಂದು ಒಂದು ಕಲೆಯ‌ಬಗ್ಗೆ  ಸಂಪೂರ್ಣ ತಳಿಯದೇ ಏನೆಲ್ಲ ತಮಗೆ ತೋಚಿದಂತೆ ಪ್ರಯೋಗಿಸುವುದು ಆ ಕಲೆಗೆ ನ್ಯಾಯ ಸಲ್ಲಿಸಿದ ಹಾಗೆ ಆಗುವುದಿಲ್ಲ. ತಲೆಯಲ್ಲಾದ ಗಾಯಕ್ಕೆ ಕಾಲಿಗೆ ವಸ್ತ್ರ ಬಿಗಿದಂತೆ. ಯಕ್ಷಗಾನದ ವೇಷಗಳು ಕಷ್ಟ ಒದಗಿದಾಗ ಹೇ ದೇವಾ ಎಂದು ತಲೆ ಮೇಲೆ ಕೈಯಿರಿಸುವುದಿದೆ. (ಇದು ಈಗೀಗ ಮಾಯಾವಾಗಿದೆ.)   ಕೈ ಇರಿಸುವುದೆಂದರೆ ಜನ ಸಾಮಾನ್ಯ ತಲೆ ಬಡಿದುಕೊಂಡಂತೆ ಅಲ್ಲ. ಅದು ಕೇವಲ ಸಂಕೇತ.  ಇಲ್ಲಿ ಅಭಿನಯಗಳು ಕೇವಲ ಸಂಕೇತಕ್ಕೆ ಮಾತ್ರ ಸೀಮಿತವಾಗಬೇಕು. ಉಳಿದವುಗಳು ಬಣ್ಣಗಾರಿಕೆ  ಮತ್ತು ವೇಷ ಭೂಷಣಗಳು ಪ್ರತಿಪಾದಿಸುತ್ತವೆ.   ಯಕ್ಷಗಾನದ ವೇಷಗಳು ಅದು ಸ್ತ್ರೀವೇಷವಾದರೂ    ಸಮಷ್ಟಿಯಲ್ಲಿ ಪುರುಷತ್ವವನ್ನೆ ಪಾಲಿಸುತ್ತದೆ.,  ಎದೆಯುಬ್ಬಿಸಿ ತಲೆ ನಿಮಿರಿಸಿ ಗಂಭೀರತೆಯನ್ನು ಪ್ರತಿಪಾದಿಸುತ್ತದೆ.  ಹಾಗಾಗಿ ಯಾವ ಭಾವ ಪ್ರಕಟನೆಯಲ್ಲೂ ಈ ಗಾಂಭೀರ್ಯವನ್ನು ಉಳಿಸುವುದು ಅನಿವಾರ್ಯ. ಅದು ಕಲೆಯ ಸಹಜಗುಣ. ಶೃಂಗಾರವಿರಲಿ ಹಾಸ್ಯವಿರಲಿ ದುಃಖವಿರಲಿ ಈ ಗಾಂಭೀರ್ಯವನ್ನು ಇರಿಸಿಕೊಂಡೇ ಪ್ರತಿಪಾದಿಸುತ್ತಿರಬೇಕು.

                ಭಾವಾಭಿನಯದ ಭ್ರಮೆಯಲ್ಲಿ ಯಕ್ಷಗಾನದ ಪರಂಪರೆಯ ಅಂಶಗಳು, ಬಣ್ಣಗಾರಿಕೆ, ನಾಟ್ಯ, ಪ್ರಸಂಗ ನಡೆ ಇವುಗಳ ಮೇಲಿನ ಮಾರಕ ಧಾಳಿ ಕೊನೆಯಾಗಬೇಕು. ಯಕ್ಷಗಾನ ನಾಟ್ಯ ರೂಪಕವಾಗದೆ ಪರಿಶುದ್ದ ಯಕ್ಷಗಾನವಾಗಿಯೇ ಉಳಿಯಬೇಕು.  ಯಕ್ಷಗಾನ,  ಅದನ್ನು ಯಕ್ಷಗಾನ ಎಂದು ಯಾಕೆ ಕರೆಯುತ್ತಾರೆ ಎಂಬ ಪರಿಜ್ಞಾನವಾದರೂ ಉಳಿಯಬೇಕು.
ಜಂಟಿ ಲೇಖಕರು – ರಾಜಕುಮಾರ್ ಎಂ ಪೈವಳಿಕೆ, ಬೆಂಗಳೂರು ಮತ್ತು ಕಟೀಲು ಸಿತ್ಲ ರಂಗನಾಥ ರಾವ್