"ಇದು ವಿಮರ್ಶೆಯಲ್ಲದ ಚಿಂತನ"

Sunday, May 16, 2021

ವಿದ್ಯಾಭ್ಯಾಸ ನಿರಂತರ


“ಯಾವುದಕ್ಕಾದರೂ ಪರಿಪೂರ್ಣತೆ ಬರಬಹುದು, ಆದರೆ ವಿದ್ಯೆಗೆ ಪರಿಪೂರ್ಣತೆ ಸಾಧ್ಯವಿಲ್ಲ. ಮನುಷ್ಯನ ಜೀವನವೇ ಒಂದು ವಿದ್ಯಾರ್ಥಿ ಜೀವನ. ಇಲ್ಲಿ ಸಾಧನೆ ನಿರಂತರ. ಅಭ್ಯಾಸ ನಿರಂತರ. “ ಇದು ಖ್ಯಾತ ಗಾಯಕ  ಶ್ರೀ ಜೇಸುದಾಸ್ ಅವರು ಶಾಸ್ತ್ರೀಯ ಸಂಗೀತದ ಕಛೇರಿಯಲ್ಲಿ ಹೇಳಿದ ಮಾತುಗಳು. ಕನಕಾಂಗಿ ರಾಗದ ಪ್ರಸ್ತುತಿಯ ಮುನ್ನುಡಿಯಾಗಿ ದಾಸೇಟ್ಟನ್ ಹೀಗೆ ಹೇಳುತ್ತಾ ಕನಕಾಂಗಿ ರಾಗದ ವಿಶೇಷತೆಗಳನ್ನು ಹೇಳಿ ತಾನು ಈಗಲೂ ನಿಯಮಿತವಾಗಿ ರಾಗಗಳನ್ನು ಅಭ್ಯಾಸ ಮಾಡುತ್ತಿದ್ದೇನೆ. ಯಾಕೆಂದರೆ ವಿದ್ಯಾಸರಸ್ವತಿ ನಮ್ಮಲ್ಲಿ ನೆಲೆ ನಿಲ್ಲಬೇಕಾದರೆ ಆಕೆಯನ್ನು ಈ ಅಭ್ಯಾಸದ ಮೂಲಕವೇ  ಸಂಪ್ರೀತಿಗೊಳಿಸಬೇಕು. ಸಾಧನೆ ಅಭ್ಯಾಸ ಇಲ್ಲದೆಡೆ ಸರಸ್ವತಿ ನೆಲೆ ನಿಲ್ಲುವುದಿಲ್ಲ.

ಎಪ್ಪತ್ತೈದರ  ಹರಯದ ಜನಪ್ರಿಯ ಸಂಗೀತ ಚಕ್ರವರ್ತಿ ಈಗಲೂ ಅಭ್ಯಾಸ ಮಾಡುತ್ತಿದ್ದಾರೆ  ಎಂದರೆ ಆಶ್ಚರ್ಯವಾಗುತ್ತದೆ. ಆ ಸಾಧನೆಯ ಗುರಿ ಉದ್ದೇಶ ಏನಿರಬಹುದು? ಜೇಸುದಾಸ್ ಹೇಳಿ ಕೇಳಿ ಖ್ಯಾತ ಗಾಯಕ. ಹಾಡದಿದ್ದ ಪ್ರಾಕಾರಗಳಿಲ್ಲ. ಭಾರತದ ಹಲವು ಭಾಷೆಗಳಲ್ಲಿ ಹಾಡಿದ ಮಹಾನ್ ಸಾಧಕ. ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಸಿನಿಮಾ ಕ್ಷೇತ್ರ ಹೀಗೆ ಎಲ್ಲ ಕ್ಷೇತ್ರದಲ್ಲಿ ತಮ್ಮ ಅದ್ವಿತೀಯ ಪ್ರತಿಭೆಯನ್ನು ಜನಪ್ರಿಯಗೊಳಿಸಿದ ಅಪ್ರತಿಮ ಕಲಾವಿದರು. ಇನ್ನು ಉನ್ನತಿಯಲ್ಲಿ ಅವರು ಏರಬೇಕಾಗಿರುವ ಪದವಿ ಏನಿರಬಹುದು? ಏನೂ ಇಲ್ಲ. ಒಬ್ಬ ಕಲಾವಿದ ಬಯಸುವ ಎಲ್ಲಾ ಬಯಕೆಗಳನ್ನು ಈಡೆರಿಸಿಕೊಂಡವನಿಗೆ ಅಭ್ಯಾಸ ಸಾಧನೆಯ ಹಾದಿ ಇನ್ನೂ ಇದೆ ಎಂದರೆ ಆಶ್ಚರ್ಯವಾಗುತ್ತದೆ.

ಯಕ್ಷಗಾನದ ಹಿರಿಯ ಭಾಗವತ ಶ್ರೀ ಬಲಿಪ್ಪ ನಾರಾಯಣ ಭಾಗವತರು, ಒಂದು ಸಲ ಮಾತನಲ್ಲಿ ಹೇಳುತ್ತಾರೆ, ಮನುಷ್ಯನಿಗೆ ಕಲಿತು ಮುಗಿಯುವುದಿಲ್ಲ. ನಿತ್ಯ ಅಭ್ಯಾಸ ಮಾಡಬೇಕು. ಆಗ ಕಲಿತ ವಿದ್ಯೆ ಉಳಿಯುತ್ತದೆ. ಯಕ್ಷಗಾನದಲ್ಲಿ ಅದು ಇಂದು ಯಾರಿಗೂ ಬೇಡ. ಸ್ವಲ್ಪ ಕಲಿತು ರಂಗಸ್ಥಳ ಹತ್ತಿದ ನಂತರ ಮತ್ತೆ ಅಧ್ಯಯನ ಕಲಿಯುವ ನಿರಂತರ ಸಾಧಿಸುವ ಮನಸ್ಸು ಬರುವುದಿಲ್ಲ. ಅಧ್ಯಯನ ಕೊರತೆ ಇಂದು ಹೆಚ್ಚಿನವರಿಗೆ ಇದೆ. ತಲೆಯಲ್ಲಿ ನಾವು ಕಲಿತಾಯಿತು ಎಂಬ ಅಹಂ ಬೆಳೆದು ಬಿಟ್ಟರೆ ಮತ್ತೆ ಆತನಲ್ಲಿ ವಿದ್ಯೆಯ ಚಿಗುರು ಅರಳುವುದಿಲ್ಲ. ಇಂಥವರಿಂದ ಯಕ್ಷಗಾನ ಉಳಿಯುವುದಾದರೂ ಹೇಗೆ?

ಕಲಾವಿದನ ಅಪೂರ್ಣ ಜ್ಞಾನ ಅದು ಅವನನ್ನು ಮಾತ್ರ ಬಾಧಿಸುವುದಲ್ಲ. ಪರೋಕ್ಷವಾಗಿ ಕಲೆಯನ್ನೂ ಬಾಧಿಸುತ್ತದೆ. ಒಂದು ಸಲ ರಂಗಸ್ಥಳ ಹತ್ತಿ ಸಂಭಾವನೆಯ ರುಚಿ ಹತ್ತಿತೋ ಮತ್ತೆ ಕಲಿಯುವ ಮನೋಭಾವ ಬರುವುದಿಲ್ಲ. ಸಿಗುವ ಸಂಭಾವನೆ ಸ್ಥಾನಮಾನ ಉಳಿಯುವುದಕ್ಕೆ ಏನೆಲ್ಲ ವಕ್ರ ಹಾದಿಗಳಿರುತ್ತವೆಯೋ ಅವುಗಳನ್ನು ಹುಡುಕುತ್ತಾ ಹೋಗುತ್ತಾನೆ. ಅದಲ್ಲೆ ಆತನೇ ಕಂಡುಕೊಳ್ಳುವ ಮಾರ್ಗವೆಂದರೆ ಹೊಸತನ. ತನ್ನ ನೆಲೆ ಕಾಯುವುದಕ್ಕಷ್ಟೇ ಮಹತ್ವ.  ಬದಲಿಗೆ ಯಕ್ಷಗಾನದಲ್ಲಿ ಏನುಂಟು? ಅದರ ಸಂಪನ್ಮೂಲದ ಹಾದಿ ಯಾವುದುಂಟು ? ಅ ಆಧ್ಯಯನಕ್ಕೆ ತೊಡಗುವುದಿಲ್ಲ. ಕಲಾವಿದ ಒಮ್ಮೆ ರಂಗ ಎರಿದನೋ ಬಾಳೆ ಗೊನೆ ಹಾಕಿದಂತೆ ಮತ್ತೆ ಅಲ್ಲಿ ಪುನಃ ಚಿಗುರು ಹುಟ್ಟುವುದಿಲ್ಲ.  ಆ ಬಾಳೆ ಮರ ಇರುವವರೆಗೆ ಅಲ್ಲಿ ಮತ್ತೊಂದು ಬಾಳೆ ಪರಿಪೂರ್ಣವಗಿ ಬೆಳೆಯುವುದೂ ಇಲ್ಲ.  ಅಧ್ಯಯನ ಶೀಲವಿಲ್ಲದ ಕಲಾವಿದ ಎಷ್ಟೇ ದೊಡ್ಡ ಸ್ಥಾನಮಾನ ಇದ್ದರೂ ಆತ ಯಕ್ಷಗಾನಕ್ಕೆ ಕಲೆಗೆ ಮಾರಕವಾಗುತ್ತಾನೆ.

            ಪ್ರಸಿದ್ಧ ಮದ್ದಲೆಗಾರ ಶ್ರೀ ಕುದ್ರೆಕೊಡ್ಲು  ರಾಮ ಭಟ್ (ಕುದ್ರೆಕೊಡ್ಲು ರಾಮಮೂರ್ತಿಯವರ ತಂದೆಯವರು) ನಮ್ಮ ಮಂಗಳೂರಿನಲ್ಲಿರುವ ಮಾವನ ಮನೆಗೆ ಆಗಾಗ ಬರುತ್ತಿದ್ದರು. ನನ್ನ ಮಾವ ಅಜ್ಜ ಹೀಗೆ ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದರು. ನಮ್ಮ ಮನೆಗೆ ಬಂದರೆ ಒಂದೆರಡು ದಿನ ತಂಗಿ ಹೋಗುತ್ತಿದ್ದರು. ಅದೇ ಸಮಯದಲ್ಲಿ ಸುತ್ತಮುತ್ತಲು ಕಾರ್ಯಕ್ರಮ ಇದ್ದರೆ ಅದು ಮುಗಿಸಿ ನಮ್ಮಲ್ಲೇ ಮೊಕ್ಕಾಂ ಹೂಡುತ್ತಿದ್ದರು.  ಸುಮ್ಮನೇ ಇದ್ದಾಗ ಚಾಪೆಯಲ್ಲಿ ಕುಳಿತು ಚೆಂಡೆ ಕೋಲಿನಿಂದ ಚಾಪೆಗೆ ಅಂದರೆ ನೆಲಕ್ಕೆ ಬಡಿದು ಚೆಂಡೆ ಅಭ್ಯಾಸ ಮಾಡುತ್ತಿದ್ದರು. ಪ್ರತೀ ದಿನ ಒಂದಷ್ಟು ಹೊತ್ತು ಸಮಯ ಇದ್ದಾಗಲೆಲ್ಲಾ ಹೀಗೆ ಚೆಂಡೆ (ಚಾಪೆ) ಬಾರಿಸುತ್ತಿದ್ದರು. ಒಂದು ಸಲ ನಾನು ಕೇಳಿದ್ದೆ ಚೆಂಡೆ ತಂದು ಬಾರಿಸುವುದಿಲ್ಲ ಯಾಕೆ ಅಂತ? ಆದರೆ ಒಂದು ಸಲವೂ ಅವರು ಚೆಂಡೆ ತಂದವರಲ್ಲ. ಆದರೆ ಬಂದಾಗಲೆಲ್ಲ  ಹೀಗೆ ಚಾಪೆಗೆ ಬಡಿಯುತ್ತಿದ್ದರು. ಚೆಂಡೆ ಹೀಗೆ ಅಭ್ಯಾಸ ಮಾಡಬೇಕು. ನಿತ್ಯ ಅಭ್ಯಾಸ ಮಾಡಿದರೆ ಒಳ್ಳೆದು ಅಂತ ನಮಗೆಲ್ಲ ಹೇಳುತ್ತಿದ್ದರು.

            ಪ್ರಸಿದ್ಧ ಮದ್ದಲೆಗಾರರಾಗಿ ಮೇಳದಲ್ಲಿ ವೃತ್ತಿನಿರತರಾಗಿದ್ದರೂ ಹೀಗೆ ನಿತ್ಯ ಅಭ್ಯಾಸ ಮಾಡುತ್ತಿದ್ದ ಅವರನ್ನು ಈಗ ನೆನಪಿಸುತ್ತಿದ್ದೇನೆ. ಅಂತಹ ವೃತ್ತಿ ಪರತೆ ಈಗ ಕಾಣುವುದಕ್ಕಿಲ್ಲ. ಚೆಂಡೆ ಇಲ್ಲದೇ ಇದ್ದರೂ ಚಾಪೆಗೆ ಬಡಿದು ಅಭ್ಯಾಸ ಮಾಡುತ್ತಿದ್ದ ಅವರ ಕಾಳಜಿ ತನ್ಮಯತೆ ಸ್ಮರಣೀಯ. ಮೇಳದಲ್ಲಿದ್ದರೇನು, ಇನ್ನೂ ಅಭ್ಯಾಸ ಶೀಲವಾಗಿರುವ ಆ ಪ್ರವೃತ್ತಿ ಇಂದಿನವರು ಬೆಳೆಸಿಕೊಳ್ಳಬೇಕು. ಅಧ್ಯಯನ ಮತ್ತು ಅಭ್ಯಾಸ ಇಲ್ಲದೇ ಇದ್ದರೆ ಯಾವ ಪ್ರತಿಭೆಗೂ ವಿದ್ಯೆಗೂ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಅದು ನಿಂತ ನೀರಾಗುತ್ತದೆ. ಕಲೆ ನಿಂತ ನೀರಾಗಬಾರದು ಅಂತ ಏನೇನೋ ಸೇರಿಸುತ್ತಾರೆ. ಅದಕ್ಕೆ ಸೃಜನ ಶೀಲತೆ ಅಂತ ಕರೆಯುತ್ತಾರೆ. ಸೃಜನ ಶೀಲತೆ ಎಂದರೆ ಮೂಲ ಕಲೆಯನ್ನು ಬದಲಿಸುವುದಲ್ಲ. ರೂಪ ವಿಕಾರ ಮಾಡುವುದಲ್ಲ. ಮೂಲ ರೂಪದಲ್ಲೇ ಅದಕ್ಕೆ ನಾವಿನ್ಯತೆಯನ್ನು ಮೆರುಗನ್ನು ಕೊಡಬೇಕು. ಅದಕ್ಕೆ ನಿತ್ಯ ಅಧ್ಯಯನ ಇರಬೇಕು.

ನಾನು ಬಾಲ್ಯದಲ್ಲಿರುವಾಗ ಒಂದೆರಡು ವರ್ಷ ನನ್ನಜ್ಜನ ಬಳಿಯಲ್ಲಿ ವೇದ ಪಾಠ ಅಭ್ಯಾಸ ಮಾಡುತ್ತಿದ್ದೆ. ವೇದ ಪಾಠದಲ್ಲಿ ನಿರಂತರವಾದ ಒಂದು ಸಾಧನೆ ಎಂದರೆ ಅದು ವರ್ಗಸಂತೆ, ವಿದ್ಯಾರ್ಥಿಗೆ ಉಪದೇಶವಾದ ಮಂತ್ರಗಳನ್ನು ಆತ ವರ್ಗಸಂತೆ , ಅಂದರೆ ನಿರಂತರ ಪಠಣದ ಮೂಲಕ ಕಲಿಯಬೇಕು. ಪ್ರತಿಯೊಂದು ಮಂತ್ರಕ್ಕೂ  ಇಷ್ಟು ವರ್ಗ ಸಂತೆ ಎಂದಿದ್ದರೂ ನಿರಂತರ ಪಠಣಕ್ಕೆ ಕೊನೆ ಇಲ್ಲ. ನಿತ್ಯ ಅಭ್ಯಾಸದ ಸಾಧನೆ ಇದ್ದಲ್ಲಿ ಆರ್ಜಿಸಿದ ವಿದ್ಯೆ ನೆಲೆನಿಲ್ಲುತ್ತದೆ. ಕಲಿತ ಮಂತ್ರ ನಾಲಗೆಯಲ್ಲಿರುತ್ತದೆ. ಹೀಗಾಗಿ ಬ್ರಾಹ್ಮಣನಾದವನಿಗೆ ವೇದ ಪಾರಾಯಣವೆಂಬುದು ನಿತ್ಯ ವಿಧಿಯಾಗುತ್ತದೆ. ಬ್ರಹ್ಮೋಪದೇಶದಿಂದ ಸ್ನಾತಕ ವೃತಧಾರಿಯಾಗುವವನ ಮುಂದೆ ಬ್ರಹ್ಮತ್ವದ ಸಾಧನೆ ಇರುತ್ತದೆ. ಈ ಸಾಧನೆಗೆ ಈ ಪಾರಾಯಣ ಸಾಧನೆಯ ಹಾದಿಯಾಗುತ್ತದೆ. ಹಾಗಾಗಿ ವಿದ್ಯೆ ಸಾಧನೆಯ ಹಾದಿಯನ್ನು ತೋರಿಸುತ್ತದೆ. ಸಾಧನೆಯ ಶಿಕರ ಮಾತ್ರ ಇನ್ನೂ ಬೆಳೆಯುತ್ತಾ ಸಾಗುತ್ತದೆ. ಅದಕ್ಕೆ ಸೀಮೆ ಎಂಬುದಿಲ್ಲ.

ವಿದ್ಯೆ ಅಮೃತವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅಫೂರ್ಣ ವಿದ್ಯೆ ಅದು ಅವಸಾನದತ್ತ ಸೆಳೆಯುತ್ತದೆ.  

 

 

 

 


Saturday, April 24, 2021

ವಿದ್ಯಯಾಮೃತ ಮಶ್ನುತೇ

             ಬಾಲ್ಯದಲ್ಲಿ ನಮ್ಮಲ್ಲಿ ಕೇಳುವ ಒಂದು ಪ್ರಶ್ನೆ ದೊಡ್ಡವನಾದ ಮೇಲೆ ಏನಾಗುತ್ತಿಯಾ? ಇದು ಬಹುತೇಕ ಎಲ್ಲ ಮಕ್ಕಳಲ್ಲೂ ಕೇಳುವ ಸಾಮಾನ್ಯ ಪ್ರಶ್ನೆ. ಈ ಪ್ರಶ್ನೆಯನ್ನು ಗಂಡು ಮಕ್ಕಳಲ್ಲಿ ಕೇಳಿದರೆ, ಹೆಚ್ಚಿನ ಮಕ್ಕಳು ಹೇಳುವ ಉತ್ತರ, ದೊಡ್ಡೋನಾದ ಮೇಲೇ ನಾನು ಬಸ್ ಡ್ರೈವರ್ ಆಗ್ತೇನೆ. ಮಕ್ಕಳಿಗೆ ಡ್ರೈವರ್ ಕೆಲಸ ಎಂದರೆ ಒಂದು ಕನಸು. ಬಾಲ್ಯದಲ್ಲಿ ಬಸ್ಸು ಬಿಡದ ಮಕ್ಕಳಿರಲಾರರು. ಈಗ ಆಟದ ಶೈಲಿ ಬದಲಾಗಿದೆ.  ಆದರೆ ಚಾಲಕ ವಿದ್ಯೆ ಅದೆಷ್ಟು ಗಹನವಾದದ್ದು ಎಂದರೆ ಆಶ್ಚರ್ಯವಾಗುತ್ತದೆ.  ಹಲವಾರು ಜನರ ಜೀವ ಕೈಯಲ್ಲಿ ಹಿಡಿದು ಕೊಂಡು ಹೋಗುವ ಕೆಲಸ.

ನಮ್ಮ ಪೈವಳಿಕೆಯಲ್ಲಿ ಓಡುವ ಎಲ್ಲಾ ಬಸ್ಸುಗಳ ಡ್ರೈವರ್ಗಳು ಒಂದು ಕಾಲದಲ್ಲಿ ನನಗೆ ತೀರ ಪರಿಚಿತರಾಗಿದ್ದರು. ಅದರಲ್ಲಿ ಕೆಲರು ಅತ್ಯಂತ ಆತ್ಮೀಯರಾಗಿದ್ದರು. ಕಿಸೆಯಲ್ಲಿ ದುಡ್ಡು ಇಲ್ಲದೇ ಇದ್ದರೂ ಬಸ್ಸಿನಲ್ಲಿ ಓಡಾಡಬಹುದಿತ್ತು. ಆಗ ತಲಪಾಡಿ ಬಸ್ಸಿನ ಚಾಲಕಮಿತ್ರನೊಬ್ಬ ಇದ್ದ. ಅವಿದ್ಯಾವಂತ,  ಆದರೆ ಡ್ರೈವಿಂಗ್ ಮಾತ್ರ ಸುಂದರ ಕಾವ್ಯಮಯ. ಆತನಲ್ಲಿ ಸಲುಗೆಯಿಂದಲೆ ಒಂದು ಸಲ ಕೇಳಿದ್ದೆ. “ ಎಂಕ್ ಡ್ರೈವಿಂಗ್ ಪಂಡ್ ದ್ ಕೊರ್ಪಾರಾ?” ( ನನಗೆ ಡ್ರೈವಿಂಗ್ ಹೇಳಿ ಕೊಡುವಿರ?) ನಾನು ಕೇಳಿದ್ದು ಏಕ್ ದಂ ಬಸ್ ಡ್ರೈವಿಂಗ್ ಕಲಿಸುವುದಕ್ಕೆ.  ಆತ, ಆ ಅವಿದ್ಯಾವಂತ ಡ್ರೈವರ್ ಹೇಳಿದ ಮಾತು ಈಗಲೂ ನನಗೆ ನೆನಪಿದೆ. ಅಣ್ಣೆರೆ, ಗುರುಸೇವೆ ಮಲ್ತ್ ಕಲ್ತ್ ದೇ. ಗುರುವೆರ್ ನ  ಅಡಿವಸ್ತ್ರಲಾ ದೆಕ್ಕ್ ದ್ ಕಲ್ತಿನ ವಿದ್ಯೆ ಉಂದು. ಆತ್ ಕಷ್ಟ ಉಂಡಣ್ಣ. ಗಾಡಿ ಏರ್ಲ ಬಲಿಪ್ಪಾವೇರ್ ಆಂಡ ನಿಜವಾಯಿನ ಡ್ರೈವಿಂಗ್ ಅವು ಕಲ್ತ್ ದೇ ಬರೋಡು. ಪೊಕ್ಕಡೇ ಬರ್ಪುಜ್ಜಿ. (ಅಣ್ಣಾ, ಗುರು ಸೇವೆ ಮಾಡಿ ಕಲಿತಿರುವೆ. ಗುರುಗಳ ಅಡಿವಸ್ತ್ರವನ್ನೂ ತೊಳೆದು ಕಲಿತ ವಿದ್ಯೆ ಇದು.  ಅಷ್ಟು ಕಷ್ಟವಿದೆ. ಗಾಡಿ ಯಾರೂ ಓಡಿಸಿಯಾರು,  ಆದರೆ ನಿಜವಾದ ಡ್ರೈವಿಂಗ್ ಅದು ಕಲಿತೇ ಬರಬೇಕು. ಸುಮ್ಮನೇ ಬರಲಾರದು). 

ವಿದ್ಯೆ ಹಲವು ವಿಧ ಇರಬಹುದು. ಆದರೆ ಪ್ರಪಂಚದ ಅಸ್ತಿವಾರವೇ ವಿದ್ಯೆ. ಎಲ್ಲದರ ಅಡಿಗಲ್ಲು ಈ ವಿದ್ಯೆ. ಅದು ತಪಸ್ಸಿನಂತೆ ತಿಳಿದೋ ತಿಳಿಯದೇಯೊ ಅದನ್ನು ಅನುಸರಿಸಿ ಅದರಿಂದಲೇ  ಭವಿಷ್ಯ ಕಟ್ಟುವುದು.

ಪರಿಪೂರ್ಣ ವಿದ್ಯಾರ್ಥಿ ಮಾತ್ರವೇ ವಿದ್ಯೆಯ ಬಗ್ಗೆ ಪೂರ್ಣ ಅಧಿಕಾರವನ್ನು ಹೊಂದಿರುತ್ತಾನೆ.  ಅದು ಲಭ್ಯವಾಗುವುದು ಪೂರ್ಣ ಅಧ್ಯಯನದಿಂದ ಮತ್ತು ಯೋಗ್ಯಗುರುವಿನಿಂದ.  ವಿದ್ಯಾರ್ಥಿ ಹುದ್ದೆ ವಿದ್ಯಾ ಪಯಣವೆಂದರೆ ಅದು ನಿತ್ಯವೂ ಅನಂತ. ಜೀವನ ಪರ್ಯಂತ.

ವಾಹನ ಚಾಲನೆ ಅಥವಾ ಡ್ರೈವಿಂಗ್ ಇದನ್ನು ಹವ್ಯಾಸ ಮಾಡಿಕೊಂಡವರ ಸಂಖ್ಯೆ ಬಹಳವಿದೆ. ಅದರಲ್ಲೂ ಬೈಕ್ ಕಾರ್ ಡ್ರೈವಿಂಗ್ ಕಲಿತ ಆರಂಭದಲ್ಲಿ ಅವುಗಳನ್ನು ಓಡಿಸುವುದು ಎಂದರೆ ನೋವು ಹಸಿವು ಎಲ್ಲವನ್ನು ಮರೆಸುತ್ತದೆ. ನಾನು ಮೊದಲು ಸೈಕಲ್ ಕಲಿತು  ಆನಂತರ ಒಬ್ಬನೇ ಪೈವಳಿಕೆ ಶಾಲಾ ಮೈದಾನದಲ್ಲಿ ಸೈಕಲ್ ಓಡಿಸಿದ ಅನುಭವ ಮರೆಯಲಾರೆ. ಹಾಗೇ ಕಾರ್ ಡ್ರೈವಿಂಗ್ ಕಲಿತು ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ದೊಡ್ಡ ಬಳ್ಳಾಪುರದಿಂದ ಬೆಂಗಳೂರು ತನಕ ಮೂದಲ ಬಾರಿಗೆ  ಕಾರು ಒಬ್ಬನೇ ಸ್ವತಂತ್ರವಾಗಿ ಓಡಿಸಿದ್ದು ಮರೆಯಲಾರೆ.  ವಾಹನ ಚಾಲನೆ,  ಅದೊಂದು ಕಲೆ.

 ಹಿಂದೊಮ್ಮೆ ಮಿತ್ರರೊಬ್ಬರ ಜತೆಗೆ ಮಿಲಿಟರಿ ಚಾಲಕ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದೆ. ಮಿಲಿಟರಿ ಪೋಲೀಸ್ ಇಲಾಖೆಗಳ ಚಾಲಕ ಸಿಬ್ಬಂದಿಗಳಿಗೆ ಅಲ್ಲಿ ಪರೀಕ್ಷೆ ಮಾಡಿ ಆಯ್ಕೆ ಮಡುತ್ತಿದ್ದರು. ಕ್ಯಾಂಪ್ ಒಳಗಡೆ ವಿಶಾಲವಾದ ಮೈದಾನ ಮತ್ತು ಹೊರಗೆ ಇರುವಂತೆ ರಸ್ತೆಗಳು ಸೂಚನಾ ಫಲಕಗಳು, ಬಸ್ ತಂಗುದಾಣ, ರೈಲ್ವೇ ಹಳಿ ಹೀಗೆ ಪರೀಕ್ಷೆಯ ಸಕಲ ಅಂಗಗಳೂ ಅಲ್ಲಿದ್ದವು. ಅಲ್ಲಿದ್ದ ಇನ್ಸ್ ಪೆಕ್ಟರ್ ಒಬ್ಬರು ವಾಹನ ಚಾಲನೆಯ ಬಗ್ಗೆ ಹೇಳುವಾಗ ನಿಜಕ್ಕೂ ವಾಹನ ಚಲಾಯಿಸುವ ವಿದ್ಯೆ ಅಷ್ಟೊಂದು ವಿಶೇಷವೇ ಅಂತ ಅನ್ನಿಸದೇ ಇರಲಾರದು. ಹೌದು ವಾಹನ ಚಾಲನೆ ಕೇವಲ ವಾಹನವನ್ನು ಓಡಿಸುವುದಲ್ಲ. ಅದರಲ್ಲಿ ಹಲವು ಸಂಗತಿಗಳಿವೆ ಅದನ್ನು ಅರಿತರೆ ಮಾತ್ರ ಆತ ಪೂರ್ಣ ಪ್ರಮಾಣದಲ್ಲಿ ಚಾಲಕನಾಗಬಲ್ಲ. ರಸ್ತೆಯಲ್ಲಿ ವಾಹನ ಓಡಿಸಬೇಕಿದ್ದರೆ ಚಾಲಕನಿಗೆ ಯಾವೆಲ್ಲ ಅರ್ಹತೆಗಳಿರಬೇಕು ಇದನ್ನು ತಿಳಿದರೆ ಇಂದು ಶೇಕಡ ಎಪ್ಪತ್ತೈದು ಮಂದಿ ವಾಹನ ಓಡಿಸುವಂತಿಲ್ಲ. ಡ್ರೈವಿಂಗ್ ಕೇವಲ ವಿದ್ಯೆಯಲ್ಲ. ಅದೊಂದು ಕಲೆ. ಡ್ರೈವರ್ ಎಂದರೆ ಒಂದು ಗೌರವಾನ್ವಿತ ಹುದ್ದೆ. ಆತ ಅದರ ಬಗ್ಗೆ ಎಷ್ಟು ಅಭ್ಯಾಸ ಮಾಡಿದ್ದಾನೆ ಎಂಬುದರಲ್ಲಿ ಚಾಲನೆ ಗೌರವಾನ್ವಿತ  ಅಂತ ಅನ್ನಿಸಿಕೊಳ್ಳುವುದು. ಚಾಲಕನಾದವನು ತಾನು ಓಡಿಸುವ ವಾಹನದ ಪ್ರತಿಯೊಂದು ಭಾಗವನ್ನು ಅರಿತಿರಬೇಕು. ಆಗಲೇ ಆತ ಚಾಲಕನಾಗುವುದು.

ಒಂದು ವಾರದಲ್ಲಿ ಡ್ರೈವಿಂಗ್ ಕಲಿತು ರಸ್ತೆಯಲ್ಲಿ ರಾಜ ಠೀವಿಯಲ್ಲಿ ಹೋಗುವುದನ್ನು ಕಾಣುವಾಗ ಡ್ರೈವರ್ ಎರಡು ವರ್ಷ ಕಲಿತಿರುವ ಡ್ರೈವಿಂಗ್ ಆದರೂ ಯಾವುದು? ಅದನ್ನೇ ವಿದ್ಯೆ ಎನ್ನುವುದು.ಒಂದು ವಾರದಲ್ಲಿ ಕಲಿಯುವುದಕ್ಕೂ ಎರಡುವರ್ಷ ಕಲಿತಿರುವುದಕ್ಕೂ ವೆತ್ಯಾಸವಿಲ್ಲವೇ? ಇದೆ, ಅದರ ಮೌಲ್ಯದಿಂದ ಗುರುತಿಸಬೇಕು. ಇಂದಿನ ಕ್ಷಿಪ್ರಯುಗದಲ್ಲಿ ಕಲಿಯುವವರಿಗೆ ಈ ಮೌಲ್ಯ ಅರ್ಥವಾಗುವುದಿಲ್ಲ.

 

ವಿದ್ಯಯಾಮೃತ ಮಶ್ನುತೆ, ಎಂದು ಜ್ಞಾನಿಗಳು ಹೇಳುತ್ತಾರೆ. ಪ್ರಪಂಚದ ಇರುವಿಕೆಯ ಕುರುಹಾದ ಜ್ಞಾನದ ರಹದಾರಿಯೇ ವಿದ್ಯೆ. ಆ ವಿದ್ಯೆ ಅಮೃತ ಸದೃಶ. ಗುರು ವಿದ್ಯಾದಾನವನ್ನು ಮಾಡುವಾಗ ಅದು ಶಿಷ್ಯನಲ್ಲಿ ಅಮೃತವಾಗಿ ನಿಕ್ಷೇಪಿಸಲ್ಪಡಬೇಕು. ಆ ಮೌಲ್ಯವನ್ನು ಶಿಷ್ಯನೂ ಅರ್ಥವಿಸಬೇಕು. ಆಗಲೇ ವಿದ್ಯೆ ಅದೇ ರೀತಿಯಲ್ಲಿ ಶಿಷ್ಯನಲ್ಲಿ ನಿಕ್ಷೇಪವಾಗುತ್ತದೆ.  ಆವಾಗಲೇ ವಿದ್ಯೆ ಅಮೃತವಾಗುತ್ತದೆ.

ಒಬ್ಬ ಸಾಮಾನ್ಯ ಚಾಲಕನಲ್ಲಿದ್ದ ಪ್ರಜ್ಞೆ ಇಂದು ಅತಿ ವಿದ್ಯಾವಂತರಲ್ಲೇ ನಾಶವಾಗಿದೆ. ಹಾಗಾಗಿಯೇ ಪರಂಪರಾಗತವಾಗಿ ಗುರುವಿನಿಂದ ಬಂದದ್ದು ಮೂಲ ಆಶಯವನ್ನು ಮರೆತು ಹೊಸ ಆವಿಷ್ಕಾರದಲ್ಲಿ ಬದಲಾವಣೆಯಾಗಿದೆ.  ತನ್ನ ಗುರುವಿನಿಂದ ಉಪದೇಶಿಸಲ್ಪಟ್ಟ ವಿದ್ಯೆಯನ್ನು ಗುರುವಿನ ಅನುಮತಿ ಇಲ್ಲದೇ ಬದಲಾಯಿಸುವುದಕ್ಕೆ ಅಧಿಕಾರವಿಲ್ಲ. ಒಂದು ವಿದ್ಯೆಯನ್ನು ಸಂಪೂರ್ಣವಾಗಿ ಅರಿತವನು ಅದನ್ನು ಬದಲಾಯಿಸುವುದಕ್ಕೆ ಮನಸ್ಸು ಮಾಡುವುದೂ ಇಲ್ಲ. ಈ ಮೌಲ್ಯದ ಅರಿವಿಲ್ಲದೇ ಇಂದು ಪರಂಪರೆ ಸಾಂಪ್ರದಾಯಿಕ ವಿಚಾರಗಳು ಬದಲಾಗಿವೆ.  ಕಲೆ ಕಲಾವಿದ ಬದಲಾಗುತ್ತಾನೆ. ಅಪೂರ್ಣವಾದ ಜ್ಞಾನದಿಂದಲೇ ಅದನ್ನು ಬದಲಿಸುತ್ತಾನೆ. ಅದಕ್ಕೆ ಹಲವು ಸ್ವಯಂ ನಿರ್ಮಿತ ಕಾರಣಗಳನ್ನು ಕೊಡುತ್ತಾನೆ. ಅದರಲ್ಲೇನೂ ಇಲ್ಲ ಎಂಬ ಬೇಜವಾಬ್ದಾರೀ  ಚಿಂತನೆಗಳು ಹಿರಿಯರ ಹೆಜ್ಜೆಗಳನ್ನು ಅಳಿಸಿಹಾಕಿವೆ.  ಗುರು ಹಿರಿಯರು ಕೇವಲ ಅಲಂಕಾರಿಕ ವಸ್ತುಗಳಾಗುವಾಗ ಇವುಗಳೆಲ್ಲ ಸಹಜ.  ಪರಮಾತ್ಮನ ಮೇಲೆ ಭಕ್ತಿಯೂ ಇಲ್ಲ,  ಇದ್ದರೂ  ಅದರ ಹಾದಿ ಕ್ರಮಿಸುವ ಇಚ್ಛಾಶಕ್ತಿ ಇಲ್ಲ.

ಯಾವುದೇ ವಸ್ತುವಿನಲ್ಲಿ ಬದಲಾವಣೆ ಅವಶ್ಯವಾದರೆ ಅದರಲ್ಲಿ ನ್ಯೂನ್ಯತೆ ಇರಬೇಕು. ಇದು ಅರಿವಾಗಬೇಕಾದರೆ ಅದರ ಬಗ್ಗೆ ಸರಿಯಾದ ಮಾಹಿತಿ ಅರಿತಿರಬೇಕು. ಇಲ್ಲವಾದರೆ ಅದರಲ್ಲಿ ಕಾಣುವ ನ್ಯೂನ್ಯತೆ ಅಥವಾ ಕೊರತೆ ಅದು ನಮ್ಮದೇ ಕೊರತೆಯಾಗಿರುತ್ತದೆ.  ಅದರ ಪರಿಪೂರ್ಣ ಜ್ಞಾನ ಗಳಿಸದೇ ಇರುವುದು ನಮ್ಮ ತಪ್ಪಾಗಿರುತ್ತದೆ. ನಮ್ಮ ಸಮಸ್ಯೆಗಳನ್ನೇ ಅದರ ಹೇರಿ ಮೇಲೆ ಹೇರಿ ತಾವು ನಿರಪರಾಧಿಗಳಂತೆ ಮುಖವಾಡ ಹಾಕುತ್ತೇವೆ.  ನಮ್ಮ ತಪ್ಪನ್ನು ವಸ್ತುವಿನಲ್ಲಿ ಹೇರಿದರೆ ನಾವು ಆತ್ಮವನ್ನು ವಂಚಿಸಿದಂತೆ. ವಿದ್ಯೆಯನ್ನು ಸರಿಯಾಗಿ ತಿಳಿಯದೆ, ಅದರ ಪರಿಪೂರ್ಣತೆ ಸಾಧ್ಯವಾಗದಿದ್ದರೆ ಅದರಲ್ಲಿ ಬದಲಾವಣೆಯನ್ನು ಬಯಸುವ ಅಧಿಕಾರ ಯಾರಿಗೂ ಇಲ್ಲ. ಆದರೂ ಸುಡುವ ಬಿಸಿಲಿಗೆ  ಅಜ್ಜನೆಟ್ಟ ಆಲದ ಮರದ ನೆರಳನ್ನೇ ಹುಡುಕುವಾಗ ಅಜ್ಜನ ನೆನಪಾಗುವುದಿಲ್ಲ.  ತಾವು ಸುರಕ್ಷಿತರಾದರೆ ಸಾಕು ಎಂಬ ಸ್ವಾರ್ಥ.  ಆದರೆ ದುರಂತಗಳು ಅನಾಹುತಗಳು ಎದುರಾಗುವಾಗ ಅದನ್ನು ಅನುಭವಿಸುವುದಕ್ಕೆ ತಾವಿರುವುದಿಲ್ಲ. ನಮ್ಮ ಮುಂದಿನ ಜನಾಂಗಕ್ಕೆ ನಾವು ನಿರ್ಮಿಸಿಕೊಡುವ ಪರಂಪರೆ ದುರಂತವನ್ನೇ ತಂದಿಡುತ್ತವೆ ಎಂಬುದನ್ನು ಮರೆಯಬಾರದು.


Monday, January 25, 2021

ಸಂಗೀತ ದಹನ

ಸಂಗೀತ ದಹನ

ಸತ್ಯ ನ್ಯಾಯ ಎಲ್ಲರಿಗೂ ಒಂದೇ  ಆದರೂ ನಮ್ಮಿಂದ ಇನ್ನೊಬ್ಬರಿಗೆ ಅದು ಬೇರಾಗಿ ಬದಲಾಗುತ್ತದೆ. ನಮ್ಮ‌ ಹಾದಿ ಇನ್ನೊಬ್ಬರು ಕಡಿಸಿದರು ಅಂತ ನಾವು ಅಂದುಕೊಂಡರೆ,ನಮ್ಮ ಹಾದಿಯಲ್ಲಿ ಬಂದು ಅವರು ಕೆಟ್ಟರು ಎಂದಾಗಿರುತ್ತದೆ. ನನಗೊಬ್ಬ ಮಲಯಾಳಿ ಮಿತ್ರನಿದ್ದಾನೆ ಕೇರಳದ ತ್ರಿಶೂರ್ ನವನು.. ಮಿತ್ರ ಎನ್ನುವುದಕ್ಕಿಂತ ಕಕ್ಷೀದಾರ ಎನ್ನಬಹುದು. ನನ್ನ ಬಳಿಗೆ ಬಂದರೆ ನನ್ನ ಸಂಗ್ರಹದ ಶಾಸ್ತ್ರೀಯ ಸಂಗೀತ ಒಂದಷ್ಟು ಆಸ್ವಾದಿಸಿ ಒಂದಷ್ಟು ಹರಟೆ ಹೊಡೆಯುದು ವಾಡಿಕೆ. ಹಾಗೆ ನೋಡಿದರೆ ಅದ್ಭುತ ಮನುಷ್ಯ ಎ‌ನ್ನಬೇಕು. ಶಾಸ್ತ್ರೀಯ ಸಂಗೀತದ ಹವ್ಯಾಸದಂತೆ ಅದರ ಬಗ್ಗೆ ಅದ್ಭುತ ಜ್ಞಾನವಿದೆ. ಸ್ವರ ಲಯದ ಬಗ್ಗೆ ಅಪಾರವಾದ ಅರಿವಿದೆ. ಖ್ಯಾತ ಗಾಯಕ ದಾಸೇಟ್ಟನ ಪರಮ ಅಭಿಮಾನಿ. ಮತ್ತೆ ಕೇಳಬೇಕೆ? ಸಂಗೀತದ ಬಗ್ಗೆ ಅಲ್ಪಸ್ವಲ್ಪ ನನ್ನ ಕುತೂಹಲವೂ ರಸಭರಿತವಾಗಿ ಬಿಡುತ್ತದೆ. ಯಾವುದೇ ಹಾಡಿನ ರಾಗ ಭಾವವನ್ನು ತಟ್ಟನೇ ಹೇಳಿಬಿಡುವ ಈತನ ಹವ್ಯಾಸ ಮನೋರಮಣೀಯ.

          ಬರೀ ಸಂಗೀತವಾದರೇನು ಸ್ವಾರಸ್ಯ? ಜತೆಯಲ್ಲಿ ಕಥಕ್ಕಳಿ ಚೆಂಡ ಮೇಳ ಇದರ ಬಗ್ಗೆಯೂ ಹರಟುತ್ತಾನೆ. ಸಂಗೀತ ರಸಿಕತನವೆಂದರೆ ಹಾಗೆ ಅದಿದ್ದರೆ ಕಾಲಯಾಪನೆ ಎಂಬುದಿಲ್ಲ ಅಂತ ನನ್ನ ಭಾವನೆ. ಯಾಪನೆಗೆ ಇಲ್ಲಿ ಕಾಲವೇ ಇರುವುದಿಲ್ಲ. ಒಂದು ಸಲ ಇಲ್ಲಿನ ಯಕ್ಷಗಾನಕ್ಕೆ ನನ್ನ ಒತ್ತಾಯಕ್ಕೆ ಬಂದಿದ್ದ. ಆನಂತರ ನಮ್ಮ ಭೇಟಿಯಾಗಿರಲಿಲ್ಲ. ಮೊನ್ನೆ ಮೊನ್ನೆ ಬಂದವನು ಒಂದಷ್ಟು ಗಂಭೀರ ಚಿಂತನೆಯನ್ನು ಒದಗಿಸಿಯೇ ಬಿಟ್ಟ.

ನಾನು ಕೇಳಿದೆ. “ಎಂಙನೆ ಇಂಡಾಯಿರುನ್ನು ಕಳಿ?  (ಹೇಗಿತ್ತು ಆಟ)”

ಆತ ಹೇಳಿದ ಅಭಿಪ್ರಾಯ ನಿಜಕ್ಕೂ ಸ್ವಾರಸ್ಯವಾಗಿತ್ತು. ಹಾಗೆ ಹೇಳುವುದಕ್ಕೂ ಒಂದು ಮಾನಸಿಕ ಹಿಂಜರಿಕೆ. “ಎಂದೊರು ಪಾಡಾ...?(ಎಂಥಾ ಅವಸ್ಥೆ ?)”

ಶಾಸ್ತ್ರೀಯ ಸಂಗೀತವನ್ನು ಕರಾರುವಾಕ್ಕಾಗಿ ಹೇಳುವ ಆತ ಹಾಗೆ ಹೇಳಿದ್ದು ಅಚ್ಚರಿ ಎನಿಸಲಿಲ್ಲ.

ಆತ ಹೇಳುವಂತೆ ಶಾಸ್ತ್ರೀಯ ಸಂಗೀತವನ್ನು ಸಿನಿಮಾದವರು ಒಂದಷ್ಟು  ಕೆಡಿಸಿದರು.  ಅದರ ಬಗ್ಗೆ ಅಜ್ಞಾನದಿಂದ ಹಲವು ರೂಪದಲ್ಲಿ ಅದನ್ನು ಕೆಡಿಸಿದರು. ಇಲ್ಲಿ ನಿಮ್ಮ ಯಕ್ಷಗಾನವೂ ಸಂಗೀತವನ್ನು ಕೆಡಿಸುತ್ತಾ ಇದೆ. ಯಾಕೆ ಹೀಗೆ?  ಅದೊಂದು ಆನಂದ ಭೈರವಿ ರಾಗ ಹಾಡಿದರು, ಎಂತಹಾ  ಅವಸ್ಥೆ,  ಸಾಂಪ್ರದಾಯಿಕ ಕಲೆಗಳಲ್ಲೂ  ಸಂಗೀತವನ್ನು ಕೊಲ್ಲಲಾಗುತ್ತದೆ.  ಯಕ್ಷಗಾನದಂತಹ ಒಂದು ಪ್ರಾಚೀನ  ಕಲೆಯಲ್ಲಿ  ಈ ರೂಪದಲ್ಲೂ  ಅದು ಬಳಕೆಯಾಗ್ತಾ ಇದೆ.  ಆತ ಹೇಳಿದ್ದರಲ್ಲಿ ಎಷ್ಟು ಸತ್ಯಾಂಶವಿದೆಯೋ ಅದನ್ನು ವಿಶ್ಲೇಶಿಸುವಷ್ಟು ಸಂಗೀತ ಜ್ಞಾನ ನನಗೂ ಇಲ್ಲ.  ಇದು ಆತ ಹೇಳಿದ್ದರ ಸಾರಾಂಶ ಅಷ್ಟೇ. ಸಂಗೀತವನ್ನು ಕೆಡಿಸುವುದಕ್ಕೆ ಯಕ್ಷಗಾನವೂ ತನ್ನ ದೇಣಿಗೆಯನ್ನು ಸಲ್ಲಿಸುತ್ತಾ ಇದೆ.

ಯಕ್ಷಗಾನದಲ್ಲಿ ಸಂಗೀತದ ಅನುಸರಣೆಯಲ್ಲ, ಅನುಕರಣೆ ಇರುವುದು.  ಒಂದು ಕಲೆಯ ಅನುಕರಣೆ ಮಾಡುವುದೆಂದರೆ ಅದನ್ನು ಅಗೌರವಿಸಿ ಲೇವಡಿಯಾಡಿದಂತೆ.  ನನ್ನ ಆ ಕಕ್ಷೀದಾರ ಮತ್ತೊಂದು ಗಂಭೀರವಾದ ಮಾತು ಹೇಳಿದ ಜೇಸುದಾಸ್ ಆಗಲಿ ಬಾಲಮುರಳಿಯಾಗಲೀ ಅಂತಹ ಅತಿಶ್ರೇಷ್ಠ ಗಾಯಕರಾಗಲಿ ರಾತ್ರಿ ಬೆಳಗಾಗುವುದರಲ್ಲಿ ಗಾಯಕರಾಗಿದ್ದಲ್ಲ. ಸಂಗೀತದ ಹಿಂದೆ ಅವರ ಜೀವಿತಾವಧಿಯ ಪರಿಶ್ರಮ ಇದೆ. ಸತತ ಅಭ್ಯಾಸ ಇದೆ.  ಸಂಗೀತವೆಂದರೆ ಹಾಗೆ. ಅದನ್ನು ಅನುಕರಿವುದು ಅದು ಅಗೌರವ ತೋರಿದಂತೆ.  ಇಲ್ಲಿ ಒಂದು ರಾಗದಿಂದ ತೊಡಗಿ ವಿಳಾಸವಿಲ್ಲದೇ ಅಲೆಯುವಂತೆ ನೋಡುವಾಗ ಅಯ್ಯೋ ಸಂಗೀತದ ಅವಸ್ಥೆಯೇ ಅಂತ ಅನ್ನಿಸುತ್ತದೆ

ಸಂಗೀತ ಬಂದು ನಮ್ಮ ಯಕ್ಷಗಾನ ಸಂಪ್ರದಾಯದಿಂದ ದೂರ ಸರಿದು ಕೆಟ್ಟು ಹೋಗುತ್ತದೆ ಎಂದು ನಾವಂದುಕೊಂಡರೆ ಆತ ಯಕ್ಷಗಾನದಿಂದ ಸಂಗೀತ ಕೆಟ್ಟು ಹೋಯಿತು ಅಂತ ಹೇಳುತ್ತಿದ್ದಾನೆ.  ಸಂಗೀತವೆಂದರೆ ಶುಭ್ರವಾದ ವಸ್ತ್ರದಂತೆ ಯಾವ ನೀರಲ್ಲಿ ಅದ್ದಿ ತೆಗೆಯುತ್ತೇ ವೋ ಆ ನೀರಿನ ಗುಣವನ್ನು ತೋರಿಸುತ್ತದೆ. ಶುಭ್ರವಾದ ನೀರಲ್ಲಿ ಅದ್ದಿದರೆ ಅದು ಮತ್ತಷ್ಟು ಶುಭ್ರವಾಗಿ ನಳ ನಳಿಸುತ್ತದೆ. ನೀರು ಮಲಿನವಾದರೆ...??   ಸಂಗೀತ ಯಕ್ಷಗಾನದಲ್ಲಿ ಅದ್ದಿದಾಗ...? .ಮತ್ತೆ ಹೇಳಬೇಕಿಲ್ಲ.  ಮಾತಿಗೆ ಮಾತು ಎಸೆದು ಚರ್ಚಿಸಿ ಆತನ ವಾದವನ್ನು ಅಲ್ಲಗಳೆಯುವ ಸಾಮರ್ಥ್ಯ ನಮ್ಮ ವಿಕಟ ಮನಸ್ಸಿಗೆ ಹೊಳೆಯಬಹುದು. ಆದರೆ ಸತ್ಯ ಬೆನ್ನಟ್ಟಿ ಬರುತ್ತ ಇದೆ ಎಂಬುದು ತಿಳಿದಿರಬೇಕು.

ಯಕ್ಷಗಾನದಲ್ಲಿ ಮೂಲಭೂತವಾಗಿರುವ ಸಂಗತಿಗಳು ಅದೆಷ್ಟೋ ಇವೆ. ಅದರ ಬಗ್ಗೆ ಆಧ್ಯಯನ ಬೇಡ ಆಸಕ್ತಿಯೂ ಇರುವುದಿಲ್ಲ. ಹೀಗಿತ್ತು ಇದು ಅದಲ್ಲ ಎಂಬ ಸಾಮಾನ್ಯ ಜ್ಞಾನದತ್ತವೂ ಚಿತ್ತ ಸಂಚರಿಸುವುದಿಲ್ಲ. ಬದಲಾಗಿ ಅಪೂರ್ಣವಾಗಿ ಸಂಗೀತ ತಿಳಿದು ಅದನ್ನು ಮತ್ತಷ್ಟು ಕೆಡಿಸುವತ್ತ ಹಪ ಹಪಿಕೆ ಸದಾ ಇರುತ್ತದೆ. ಅತ್ತ ಸಂಗೀತವೂ ಇಲ್ಲ. ಇತ್ತ ಯಕ್ಷಗಾನವೂ ಇಲ್ಲ. ಕತ್ತಲೆಯಲ್ಲಿ ಕಣ್ಣು ಮುಚ್ಚಿ ಸಂಚರಿಸುವ ಪ್ರಾಮಾಣಿಕರು ನಾವು.

 ವಸ್ತ್ರವೇನು  ಯಾವ ನೀರಲ್ಲಿಯೂ ಅದ್ದಿ ತೆಗೆವ ಸ್ವಾತಂತ್ರ್ಯ ನಮಗಿದೆ. ನಮ್ಮ ಅಭಿರುಚಿ. ಆದರೆ ವಸ್ತ್ರ ನಮ್ಮದಾಗಿರಬೇಕು. ಯಾವುದೋ ವಸ್ತ್ರ ನಮ್ಮಂತೆ ಇನ್ನೊಬ್ಬರು ಧರಿಸುವಂತಿದ್ದರೆ ಅದನ್ನು ಮಲೀನಗೊಳಿಸುವ ಅಧಿಕಾರ ನಮಗೂ ಇಲ್ಲ.

ಸಂಗೀತದಂತೆ ಯಕ್ಷಗಾನವೂ ಪ್ರಾಚೀನ ಕಲೆ.  ಅದಕ್ಕೆ ಇರುವ ಶಾಸ್ತ್ರೀಯ ಗುಣ ಯಕ್ಷಗಾನಕ್ಕೂ ಇದೆ. ಅದನ್ನು  ಗೌರವದಿಂದ ಅನುಸರಿಸುವ ಬದ್ದತೆ ನಮ್ಮಲಿರಬೇಕಿತ್ತು. ಅದಿಲ್ಲ ಎಂದರೆ ಅದಕ್ಕೆ ನಾವೇ ಹೊಣೆಗಾರರು ಹೊರತು ಪ್ರಾಚೀನದಿಂದ ಹರಿದು ಬಂದ ಯಕ್ಷಗಾನ ಕಾರಣವಾಗುವುದಿಲ್ಲ.   ಯಕ್ಷಗಾನದಲ್ಲಿ ಶಾಸ್ತ್ರಿಯತೆ ಇಲ್ಲ ಅಂತ ಅದನ್ನು ಕೆಡಿಸುವ ಮನಸ್ಥಿತಿ  ನಮಗೆ ಬರಬಾರದು.  ಯಾವುದನ್ನೋ ಅನುಕರಿಸಿ ಯಕ್ಷಗಾನ ಉಳಿದ ಕಲೆಯನ್ನು ಹಾಳು ಮಾಡುವಂತಹ ಪ್ರಮೇಯ ಉಂಟಾಗಬಾರದು. ಯಾಕೆಂದರೆ, ಯಕ್ಷಗಾನಕ್ಕೆ ಸ್ವಂತವಾದ ಗುಣಗಳಿವೆ.    ಪರಂಪರೆಯಲ್ಲಿ ಅದು ದಾಖಲಾಗಿ ಹೋಗಿದೆ. ಅದನ್ನು ಅಳಿಸಿ ಕಸಿಕಟ್ಟಿ ಹೊಸ ಪ್ರಭೇದ ಸೃಷ್ಟಿಸುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಸಾಧ್ಯವಾದರೆ ಅದಕ್ಕೊಂದು ಶಾಸ್ತ್ರಿಯ ಬದ್ಧತೆಯನ್ನು ಒದಗಿಸಿ ಅದನ್ನು ಸುರಕ್ಷಿತಗೊಳಿಸಬೇಕು. ಯಾವುದೇ ಕಲೆಯ ಎರವಲು ಇಲ್ಲದೆ ಅದನ್ನು ಸ್ವತಂತ್ರವಾಗಿ ಬೆಳೆಸಬೇಕು. ಈ ನೀರು ಶುಭ್ರವಾಗಿದೆ. ಬೇರೆ ಯಾವುದೋ ವಸ್ತ್ರವನ್ನು ಇದರಲ್ಲಿ ಅದ್ಧಿ ಈ ನೀರನ್ನು ಮಲಿನ ಗೊಳಿಸದೇ ಶುಭ್ರವಾಗಿ ನಮಗಲ್ಲ ನಮ್ಮ ಮುಂದಿನ ಪೀಳಿಗೆಗೆ ಅದನ್ನು ಉಳಿಸಬೇಕು.

 ಈಗ ಯಕ್ಷಗಾನದಿಂದ ಸಂಗೀತ ಕೆಟ್ಟಿತು ಎಂಬ ಧ್ವನಿಯೊಂದಿಗೆ ಮತ್ತೂ ಒಂದಷ್ಟು ಕಲೆಗಳ ಧ್ವನಿಯೂ ಸೇರಿಕೊಳ್ಳಬಹುದು. ಯಕ್ಷಗಾನಕ್ಕೆ  ಈ ಹಂಗಿನ ಅವಶ್ಯಕತೆ ಖಂಡಿತಾ ಇರುವುದಿಲ್ಲ.. ಅದೊಂದು ಸ್ವತಂತ್ರ ಹಾಗೂ ಭವ್ಯವಾದ ಶ್ರೀಮಂತ ಕಲೆ. ಅದು ಹಾಗೇ ಉಳಿಯಲಿ.