"ಇದು ವಿಮರ್ಶೆಯಲ್ಲದ ಚಿಂತನ"

Wednesday, November 30, 2022

ಮಾತಿನ ಮಾಂತ್ರಿಕ ಶ್ರೀ ಕುಂಬಳೆ ಸುಂದರ್ ರಾವ್

      



          ಸಮುದ್ರ ಮಥನ ಪ್ರಸಂಗದ ಒಂದು ಸನ್ನಿವೇಶ. ದುರ್ವಾಸ ಶಾಪಗ್ರಸ್ಥನಾಗಿ ದೇವೇಂದ್ರ ಸರ್ವವನ್ನು ಕಳೆದುಕೊಂಡು ಶ್ರೀಹರಿಯ ಮೊರೆ ಹೋಗುತ್ತಾನೆ. ಬಹಳ ಸ್ವಾರಸ್ಯಕರ ಸಂಭಾಷಣೆ ನಡೆಯುತ್ತದೆ. ನೂರು ಯಾಗ ಮಾಡಿ ಪುಣ್ಯ ಸಂಪಾದನೆ ಮಾಡಿ ತ್ರಿಮೂರ್ತಿಗಳ ಅನುಗ್ರಹದಿಂದ ದಕ್ಕಿದ ಇಂದ್ರ ಪದವಿ ಹೀಗಾದರೆ ಪುಣ್ಯ ಸಂಚಯನದ ಅರ್ಥವೇನು? ತ್ರಿಮೂತ್ರಿಗಳ ಅನುಗ್ರಹಕ್ಕೆ ಏನು ಮೌಲ್ಯ?  ದೇವೆಂದ್ರ ಕೇಳಿದಾಗ ಮಹಾವಿಷ್ಣು ನಿಷ್ಠೂರವಾಗಿ ಒಂದು ಮಾತು ಹೇಳುತ್ತಾನೆ. 

        "ದೇವೇಂದ್ರ,  ಜಗತ್ತಿನಲ್ಲಿ ಮೌಲ್ಯ ಯುತವಾಗಿರುವುದು ಹಲವಿದೆ. ಎಲ್ಲದಕ್ಕೂ ಮೌಲ್ಯ ಕೊಡುವುದು ಅನಿವಾರ್ಯ ಅಲ್ಲದಿರಬಹುದು. ಆದರೆ ದುರಹಂಕಾರಕ್ಕೆ ಮೂರ್ಖತನಕ್ಕೆ  ಪ್ರತಿಯೊಬ್ಬನೂ ಮೌಲ್ಯ ನೀಡುವುದಕ್ಕೆ ಬದ್ದನಾಗಿರಬೇಕು. ಇಂದು ನಿನ್ನ ಸ್ಥಿತಿಯೂ ಇದೇ ಆಗಿರುತ್ತದೆ. ದುರಹಂಕಾರಕ್ಕೆ ನೀನು ಕೊಡಬೇಕಾದ ಮೌಲ್ಯ ಈ ಪದಚ್ಯುತಿ" 

        ಶ್ರೀ ಮಹಾವಿಷ್ಣುವಿನ ಇಂತಹ ಅರ್ಥಗಾರಿಕೆಯಲ್ಲಿ  ಸಂದಾಯವಾಗುವ ಒಂದು ಸಂದೇಶ ಅದೆಷ್ಟು ಮೌಲ್ಯ ಉಳ್ಳದ್ದು ಎಂದು ಅರ್ಥವಾಗುತ್ತದೆ. ಮಹಾವಿಷ್ಣುವಿನ ಪಾತ್ರಕ್ಕೆ ಔಚಿತ್ಯಪೂರ್ಣವೆನ್ನಿಸುವ ಈ ಅರ್ಥಾಗಾರಿಕೆ ಬಾಲ್ಯದಲ್ಲಿ ಕಂಡ ಈ ಪಾತ್ರವನ್ನು ಚಿರಸ್ಮರಣೀಯ ಎನ್ನುವಂತೆ ಮಾಡಿದೆ. ಇಲ್ಲಿ ದೇವೇಂದ್ರನಾಗಿ ಶ್ರೀ ಎಂಪೆಕೆಟ್ಟೆ ರಾಮ ರೈ ಆದರೆ ಮಹಾವಿಷ್ಣುವಾಗಿ ಮಾತಿನ ಮಾಂತ್ರಿಕ ಶ್ರೀ ಕುಂಬಳೆ ಸುಂದರ್ ರಾವ್.  ನಾನು ಮೊತ್ತಮೊದಲು ನೋಡಿದ ಕುಂಬಳೆ ಸುಂದರ್ ರಾವ್ ರವರ ಪಾತ್ರ ಆ ಅರಿವಿನ ಕೊರತೆಯಲ್ಲೂ ಮಂತ್ರ ಮುಗ್ಧನನಾಗಿಸಿತ್ತು. ಮುಂದೆ ಶ್ರೀಕೃಷ್ಣ ನಂತಹ ಪಾತ್ರಗಳು ಇದ್ದರೆ ಅದಕ್ಕೆ ಪ್ರತಿರೂಪವಾಗಿ ಮೊದಲು ಕಂಡು ಬರುತ್ತಿದ್ದ ವೇಷವೆಂದರೆ ಅದು ಕುಂಬಳೆಯವರ ವೇಷ. ವೇಷ ಎಷ್ಟು ಸುಂದರವೋ ಮಾತುಗಾರಿಕೆ ಅದಕ್ಕಿಂತಲು ಸುಂದರ. ಹೀಗೆ ಸುಂದರ ವೆಂದರೆ ಅದು ಸುಂದರವೇ ಆಗಿ ಯಕ್ಷಗಾನ ರಂಗಸ್ಥಳದ ಮಾತಿನ ಪ್ರಪಂಚವನ್ನು ಆಳ್ವಿಕೆ ನಡೆಸಿದ್ದು ಗತ ಇತಿಹಾಸ. ಸ್ವರಶುದ್ಧಿ, ಶ್ರುತಿ ಲಯ ಬದ್ಧ ಸನ್ನಿವೇಶಕ್ಕೆ ಹೊಂದಿಕೊಂಡ ಸಂಭಾಷಣೆ ಎಲ್ಲವೂ ಒಂದು ಕಡೆಯಲ್ಲಿ ಸೇರಿ ತೆಂಕು ತಿಟ್ಟು ಯಕ್ಷಗಾನಕ್ಕೆ ಅರ್ಥಗಾರಿಕೆಗೆ ಪ್ರಾತಿನಿಧಿಕ ಸೌಂದರ್ಯವನ್ನು ಕೊಟ್ಟದ್ದು ಇವರ ಕಾಲದಲ್ಲಿ. 

        ರಣ ವೀಳ್ಯ ಕರ್ಣ ಭೇದನ, ಸಂಗೀತಾ ಸಂಸ್ಥೆ ಹೊರತಂದ ಧ್ವನಿಸುರುಳಿಯನ್ನು ಕೇಳದ ಯಕ್ಷಗಾನ ರಸಿಕರು ಇರಲಾರರು. ಬಲಿಪ ನಾರಾಯಣ ಭಾಗವತರ ಸಾರಥ್ಯದಲ್ಲಿ ಮೂಡಿ ಬಂದ ಕಲಾಕೃತಿ ಆ ಕಾಲದಲ್ಲಿ ಅದ್ಭುತ ಸಂಚಲವನ್ನು ಸೃಷ್ಟಿಸಿತ್ತು. ಅದರಲ್ಲಿ ಕರ್ಣನಾಗಿ ಕುಂಬಳೆಯವರ ಅರ್ಥಗಾರಿಗೆ ಪ್ರಖರವಾಗಿ ಭಾವಾನಾತ್ಮಕವಾಗಿ ಪರಿಣಾಮ ಬೀರಿತ್ತು. ಕೊನೆಯಲ್ಲಿ ತಾಯಿಕುಂತಿಯಲ್ಲಿ ಕರ್ಣ ಹೇಳುವ ಮಾತಿದೆ....ಕಾಡ್ತಿಯಾ ತಾಯಿ, ಇದನ್ನು ಕೇಳುವಾಗ ಕಣ್ಣಂಚಿನಲ್ಲಿ ಕಂಬನಿ ಮಿಡಿಯುತ್ತದೆ.  ಇದು ಕುಂಬಳೆಯವರ ಅರ್ಥಗಾರಿಕೆಯ ಝಲಕ್ ಅಷ್ಟೆ. ಅದರ ಪೂರ್ಣ ಪ್ರತ್ಯಕ್ಷವಾಗಬೇಕಾದರೆ ರಂಗಸ್ಥಳದ ಮುಂದೆ ನಿಲ್ಲಬೇಕು. 

        ಮೊದಲು ಧರ್ಮಸ್ಥಳ ಮೇಳದ ಆಟಗಳಲ್ಲಿ ನನಗೆ ಮೊತ್ತ ಮೊದಲ ಆಕರ್ಷಣೆ ಎಂದರೆ ಕುಂಬಳೆ ರಾಯರ ವೇಷಗಳು. ಚಕ್ರವರ್ತಿ ದಶರಥದ, ದಶರಥನ ಪಾತ್ರ,  ಮಹಾರ್ಥಿ ಕರ್ಣದ ಕರ್ಣನ ಪಾತ್ರ, ಅಮರೇಂದ್ರ ಪಥ ವಿಜಯಿಯ ಸತ್ಯವೃತನ ಪಾತ್ರ ಹಾಗೆ ಸಾಮ್ರಾಟ್ ನಹುಷೇಂದ್ರದ ನಹುಷ್ಯ ಚಕ್ರವರ್ತಿಯ ಪಾತ್ರ , ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಹೆಗಡೆಯ ಪಾತ್ರ ಇವುಗಳೆಲ್ಲವೂ ನನಗೆ ಅವಿಸ್ಮರಣೀಯ ಅನುಭವವನ್ನು ಕೊಟ್ಟಿತ್ತು. ಈಗಲೂ ಈ ಪ್ರಸಂಗಗಳು ನೋಡುವಾಗ ಈ ಪಾತ್ರಗಳನ್ನು ಕುಂಬಳೆಯವರ ಪಾತ್ರದೊಂದಿಗೆ ತುಲನೆ ಮಾಡುತ್ತೇನೆ. 

        ಪ್ರಾಸ ಭರಿತ ಅರ್ಥಗಾರಿಕೆಗೆ ಸುಂದರ್ ರಾವ್ ಅವರು ಅನ್ವರ್ಥ. ಅದು ಹೇಗೆ ಎಲ್ಲಿಂದ ಪುಂಖಾನುಪುಂಖವಾಗಿ ಹರಿದು ಬರುತ್ತದೋ ಪ್ರೇಕ್ಷಕ ಗಾಬರಿಯಾಗುತ್ತಾನೆ. ಅದರಂತೆ ಭಾವನಾತ್ಮಕವಾದ ಮಾತುಗಾರಿಕೆಯಲ್ಲಿ ದಶರಥ ಕರ್ಣ ನಂತಹ ಪಾತ್ರಗಳು ಎದುರಿದ್ದ ಪ್ರೇಕ್ಷಕನ ಭಾವನಾತ್ಮಕ ಮನಸ್ಸಿನ ಆಳವನ್ನು ಪರೀಕ್ಷೆ ಮಾಡುತ್ತವೆ. ಇಲ್ಲಿ ಹೃದಯ ತುಂಬಿ ಕಂಬನಿ ಮಿಡಿಯದ ಪ್ರೇಕ್ಷಕ ಸಿಗುವುದು ಅಪರೂಪ. ಸಾಮಾನ್ಯವಾಗಿ ತುಂಬ ಮಾತನಾಡುವವರು ಬಂದಾಗ ತಲೆ ಹಣ್ಣಾಗದ ಪ್ರೇಕ್ಷಕ ಚಹ ಕುಡಿಯುವುದಕ್ಕೆ ಎದ್ದು ಹೋಗುವುದು ಸಾಮಾನ್ಯ. ಆದರೆ ಕುಂಬಳೆಯವರ ಪ್ರವೇಶ ಆದರೆ ಡೇರೆಯ ಹೊರಗಿದ್ದ ಪ್ರೇಕ್ಷಕ ಬಂದು ಕುಳಿತು ಬಿಡುತ್ತಾನೆ. ಮತ್ತವನು ಕದಲುವುದೇ ಇಲ್ಲ. ಇದು ಇವರ ಅರ್ಥಗಾರಿಕೆಯ ವೈಶಿಷ್ಟ್ಯ. ಪ್ರೇಕ್ಷಕನ ಭಾವನೆಗಳ ನಾಡಿ ಮಿಡಿತವನ್ನು ಬಲ್ಲವರು ಇವರು. 

        ಇಂತಹ ಮಹಾನ್ ಕಲಾವಿದ ಇಂದು ಅಗಲಿದ ವಾರ್ತೆ ಕೇಳಿದಾಗ ಇವರ ದಶರಥಾದಿ ಕರ್ಣನ ಪಾತ್ರಗಳು ಮತ್ತೆ ಕಣ್ಣ ಮುಂದೆ ಬಂದು ನಿಂತವು. ಸುಂದರ ಸುಸ್ವರದ ಆ ಅರ್ಥಗಾರಿಕೆ ಕಿವಿಯಲ್ಲಿ ಮಾರ್ದನಿ ಗೈದಂತೆ ಭಾಸವಾಯಿತು. ಬಾಲ್ಯದಲ್ಲಿ ಯಕ್ಷಗಾನದ ಬಗ್ಗೆ ಆಕರ್ಷಣೆ ಮೂಡಿಸುವಲ್ಲಿ ಇವರ ಪಾತ್ರಗಳು ಗಣನೀಯವಾಗಿ ಮನಸ್ಸಿಗೆ ಹತ್ತಿರವಾಗಿದೆ. ಇವರು ಇಲ್ಲ ಎಂದು ತಿಳಿಯುವುದೇ ಒಂದು ನಷ್ಟ. ಭಾವಾನೆಗಳ ಚಕ್ರವರ್ತಿಗೆ ಭಾವನಾತ್ಮಕ ಶ್ರಧ್ದಾಂಜಲಿ ಮನಸ್ಸು ತುಂಬಿ ಅರ್ಪಿಸೊಣ. ರಾಯರ ಆತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ. 




Sunday, November 20, 2022

ಸಂರಕ್ಷಣೆ

         ನನ್ನ‌ ಕಕ್ಷಿದಾರರೊಬ್ಬರು ನಮ್ಮ ಕಛೇರಿಗೆ ಬಂದವರು ನನ್ನ‌ ಯಕ್ಷಗಾನದ ಹವ್ಯಾಸವನ್ನು ಕಂಡು, ಅವರ ಯಾರೋ ಸಂಭಂದಿಗಳ ಮಕ್ಕಳು ಯಕ್ಷಗಾನದಲ್ಲಿ ವೇಷಹಾಕಿದ ಫೋಟೋ ವೀಡಿಯೋಗಳನ್ನು ತೋರಿಸಿದರು. ಬೆಂಗಳೂರಿನಲ್ಲಿ ಆದ ಕಾರ್ಯಕ್ರಮದಲ್ಲಿ ಅವರೆಲ್ಲ ಭಾಗಿಯಾದ ವಿಷಯಗಳನ್ನು ಖುಷಿಯಲ್ಲಿ‌‌ ಹಂಚಿಕೊಂಡರು. 

ಇದರಲ್ಲಿ ವೈಷಿಷ್ಟ್ಯವೇನೂ ಇರಲಿಲ್ಲ. ಆ ವ್ಯಕ್ತಿಯ ಹಿನ್ನೆಲೆ ಅಷ್ಟಾಗಿ ತಿಳಿದಿಲ್ಲ. ಅಗಾಗ ಕಛೇರಿಗೆ ಬರುವ ಅವರು ಯಕ್ಷಗಾನದ ಬಗ್ಗೆ ಮಾತನಾಡಿದ್ದೇ ವೈಷಿಷ್ಟ್ಯವಾಗಿತ್ತು.  ಅವರು ತೋರಿಸಿದ ಫೋಟೋಗಳನ್ನು ನೋಡುತ್ತಿದ್ದಂತೆ ಬಹಳ ನಿರಾಸಕ್ತಿ ನಿರುತ್ಸಾಹ ಒಮ್ಮಿಂದೊಮ್ಮೇಲೆ ಉಂಟಾಯಿತು. ಅವರು ಸಂಭ್ರಮದಿಂದ ತೋರಿಸುತ್ತಿದ್ದರೆ ನನಗೆ ಮಾತ್ರ ಅದನ್ನು ನೋಡುವ ಆಸಕ್ತಿ ಚಿಗುರಲೇ ಇಲ್ಲ. ಕಾರಣ ಇಷ್ಟೇ ತೆಂಕು ಬಡಗು ವೆತ್ಯಾಸವೇ ಇಲ್ಲದ ಯಕ್ಷಗಾನ ಪ್ರದರ್ಶನವದು. ಆದರೆ ಅವರಿಗೆ ಅದನ್ನು ಹೇಳಿದರೆ ತಿಳಿದುಕೊಳ್ಳುವ ಜ್ಞಾನವೂ ಇದ್ದಂತಿಲ್ಲ. ಒಂದು ಕಲೆ ಸಂಫೂರ್ಣ ಹಾದಿ ತಪ್ಪಿದೆ ಎಂಬುದಕ್ಕೆ ನಿದರ್ಶನವನ್ನು ಆ ವ್ಯಕ್ತಿಯಲ್ಲಿ ಕಾಣಬಹುದಿತ್ತು.

ತೆಂಕು ಬಡಗು ವೆತ್ಯಾಸ ತಿಳಿಯದೇ ಇದ್ದವರೂ ವೇಷ ಹಾಕುವುದನ್ನು ಕಾಣುವಾಗ  ಅದನ್ನು ನೋಡುವ ಪ್ರೇಕ್ಷಕನಿಗೂ ಇದರ ಅರಿವು ಇರಬೇಕು. ಅರಿವು ಇಲ್ಲದೇ ಇದ್ದರೆ ಪ್ರದರ್ಶಿಸುವ ಕಲಾವಿದನ ಜವಾಬ್ದಾರಿ ಹೆಚ್ಚು ಇರುತ್ತದೆ.  ಒಟ್ಟು ಯಕ್ಷಗಾನದ ವೇಷ ಹಾಕಿದರೆ ಅದೇ ಸಾಧನೆ ಎಂಬಂತೆ ಆ ಫೋಟೋಗಳು ಹೇಳುತ್ತಿದ್ದವು. ಯಾರೋ ಒಬ್ಬ ಎಲ್ಲೊ ಒಂದು ಕಡೆ ಹೀಗೆ ಮಾಡಿದರೆ ನಿರ್ಲಕ್ಷಿಸಬಹುದಾಗಿತ್ತು, ಆದರೆ ಇದೊಂದು ಪ್ರತಿಷ್ಠಿತ ಸಂಸ್ಥೆಯ ಕಾರ್ಯಕ್ರಮ. ಹಲವಾರು ಪ್ರಮುಖ ವ್ಯಕ್ತಿಗಳು ಅತಿಥಿಗಳಾಗಿದ್ದರು. ಇವರೆಲ್ಲರ ಮುಂದೆ ಇದುವೇ ಯಕ್ಷಗಾನ ಎಂದು ಬಿಂಬಿಸಿದ್ದು ನಿಜಕ್ಕೂ ವಿಷಾದನೀಯ. ಹೀಗೆ ಆಗುವುದು ಇದೇನು ಮೊದಲಲ್ಲ. ಹಲವು ಸಲ ಇಂತಹ  ಪ್ರವೃತ್ತಿ ಕಾಣಬಹುದು. ಒಂದಿಷ್ಟು ಅಭಿಮಾನ ಇದ್ದವರು ಆಭಾಸಗಳನ್ನು ನೋಡುವುದಕ್ಕಿಂತ ಸುಮ್ಮನಿರುವುದೇ ಲೇಸು ಅಂತ ಗೈರಾಗಿ ಮನಃ ಶಾಂತಿಗೆ ಮೊರೆ ಹೋಗುತ್ತಾರೆ.  ತೆಂಕು ಬಡಗು ಎಂಬ ಭೇದ ಎನಿದ್ದರೂ ನಾವು ಸಮಾನವಾಗಿ ಕಾಣಬೇಕು ನಿಜ. ಆದರೆ ಈ ರೀತಿ ಎರಡನ್ನೂ ವರ್ಣ ಸಂಕರ ಮಾಡಿ ನಮ್ಮ ಚಪಲಕ್ಕೆ ಅದರೆ ಮೂಲವನ್ನು ನಾಶ ಮಾಡುವ ಪ್ರವೃತ್ತಿ ಅದಕ್ಕೆ ಮಾಡುವ ದ್ರೋಹವಾಗುತ್ತದೆ. 

ತೆಂಕು ಬಡಗು ಮಿಶ್ರವಾಗಿ ಹೊಸ ತಳಿ ಬಿತ್ತನೆಯಾವುದು ಇಂದು ಮೊದಲಲ್ಲ. ಹಲವರ ಚಪಲಕ್ಕೆ  ಎರಡೂ ತಿಟ್ಟುಗಳ ಯಕ್ಷಗಾನ  ಬಲಿಯಾಗುವುದು ವಿಶೇಷವೇನೂ ಅಲ್ಲ. ಆದರೆ ಯಕ್ಷಗಾನ ಸೇವೆಯನ್ನೇ ಗುರಿಯಾಗಿಸಿಕೊಂಡ ಸಂಸ್ಥೆಗಳು ಹೀಗೆ ಮಾಡಿದಾಗ ಅಯ್ಯೋ ಪಾಪ ಎನಿಸುತ್ತದೆ. ಇವುಗಳಿಗೆ ತಮ್ಮದೇ ಆದ ಹಲವಾರು ಸ್ವಯಂ ಸಿದ್ದ ಸ್ಪಷ್ಟಿಕರಣಗಳು ಕಾರಣಗಳು ಯಥೇಚ್ಚವಾಗಿ ಮನಸ್ಸಿನ ಚಪಲದಂತೆ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಅತಿಥಿಗಳು ಮನೆಗ ಆಗಮಿಸಿದಾಗ ಅವರಿಗೆ ಬೇಕಾದದ್ದನ್ನು ಮಾಡಿ ಸತ್ಕರಿಸುವ ಪರಿಪಾಠ ಒಂದು ಕಾಲದಲ್ಲಿತ್ತು. ಈಗ ಅದು ಬದಲಾಗಿ ತಮಗೇನು ಇಷ್ಟವೋ ಅದನ್ನೇ ಸಲ್ಲಿಸುವ ಹೊಸ ರೀತಿ ಇದೆ. ಅದು ಇಲ್ಲೂ ಸಹ ಮುಂದುವರೆಯುತ್ತದೆ. ಮೂಲ ಯಕ್ಷಗಾನ ಹೇಗಿದ್ದರೇನು? ನಮಗೆ ಬೇಕಾದಂತೆ ನಾವು ತಿಂದು ಮುಕ್ಕಿದರೆ ಯಾರೂ ಕೇಳುವುದಕ್ಕಿಲ್ಲ ಎಂಬ ಮನೋಭಾವ. ತೆಂಕು ಅಥವಾ ಬಡಗೂ ಇಬ್ಬರಿಗೂ ಹೊಂದಿಕೊಂಡು ಬೇಸರವಾಗದಂತೆ ಹೊಸ ಒಂದು ಕ್ರಮ ಸ್ವತಃ ಜಾರಿ ಮಾಡುತ್ತಾರೆ. ಮೊದಲೇ  ಧರ್ಮಾರ್ಥವಾಗಿ ಉಚಿತವಾಗಿ ಸಿಗುವಂತಹ ಸೇವೆಗಳ ಗುಣ ಮಟ್ಟ ನಮ್ಮಲ್ಲಿ ಎಂದೋ ಶಿಥಿಲವಾಗಿ ಹೋಗಿದೆ. ಅದರಲ್ಲಿ ಯಕ್ಷಗಾನವೂ ಸೇರಿ ಹೋದರೆ ಅಚ್ಚರಿ ಇಲ್ಲ.  ಇದೆಲ್ಲದರ ನಡುವೆ ನಮ್ಮ ತೆಂಕು ಅಥವಾ ಬಡಗು ಯಾವುದೇ ಇರಲಿ, ಅದರಲ್ಲಿ ಹೀಗೆ ಒಂದು ದಾರಿದ್ರ್ಯ ವನ್ನು ಕಂಡುಕೊಂಡ ಈ ಅಭಿರುಚಿಗೆ  ಏನು ಅಂತ ಹೇಳಬೇಕು? ಇದು ತಿಟ್ಟುಗಳಲ್ಲಿರುವ ಸಂಪನ್ಮೂಲದ ಕೊರತೆಯಲ್ಲ. ಬದಲಿಗೆ ಬುದ್ದಿದಾರಿದ್ರ್ಯದ ಕೊರತೆ. 

ಇಲ್ಲಿ ಬಂದ ವ್ಯಕ್ತಿಗೆ ಯಕ್ಷಗಾನದ ಅರಿವಿಲ್ಲದೇ ಈ ಆಭಾಸವನ್ನೇ ಯಕ್ಷಗಾನ ಎಂದು ತಿಳಿದುಕೊಂಡ. ಅದನ್ನೇ ದೊಡ್ಡ ಸಾಧನೆ ಎಂಬ ಆತ್ಮ ತೃಪ್ತಿ ಅನುಭವಿಸಿದ. ಆದರೆ ನಿಜವಾದ ಯಕ್ಷಗಾನಕ್ಕೆ ಇಲ್ಲಿ ಒದಗಿಬಂದ ದ್ರೋಹ ಮನಟ್ಟಾಗಿವುದಿಲ್ಲ. ಆಭಾಸಗಳನ್ನು ಯಕ್ಷಗಾನದ ಮಹಾ ಸಾಧನೆ ಎಂದು ತೋರಿಸಿ ಅದನ್ನೆ ಯಕ್ಷಗಾನ ಎಂಬಂತೆ ಬಿಂಬಿಸಿದವರಿಗೂ ಈ ದುಷ್ಪರಿಣಾಮದ ಗಂಭೀರತೆಯ ಅರಿವಿಲ್ಲ. ಮುಂದೆ ಯಾವುದು ಯಕ್ಷಗಾನ ಎಂಬುದು ತಿಳಿಯದೇ ಯಾವುದೋ ಒಂದನ್ನು ಯಕ್ಷಗಾನ ಎಂದು ತಿಳಿದುಕೊಳ್ಳುವಾಗ, ಇವರು ಎಸಗಿದ ದ್ರೋಹದ ಅರಿವಾದರೂ ಆಗುವ ಸಾಧ್ಯತೆ ಇಲ್ಲ. ಇಷ್ಟಕ್ಕೂ ಇದರ ಆವಶಕತೆ ಇದೆಯೇ?  ವರ್ಷಕ್ಕೊಂದು ಕಾರ್ಯಕ್ರಮ ಮಾಡಿ ಅದರ ಫೋಟೋ ವಿಡಿಯೋ ತೋರಿಸಿ ಒಂದಷ್ಟು ಸರಕಾರದ ಅನುದಾನವನ್ನು ಗಿಟ್ಟಿಸಿಕೊಳ್ಳುವ ಹುನ್ನಾರ ಇದು. ಬಡಪಾಯಿ ಯಕ್ಷಗಾನ ಇದಕ್ಕೆ ಬಲಿಪಶುವಾಗುತ್ತಿದೆ. ಯಾಕೆಂದರೆ  ಇದನ್ನು ನಿಯಂತ್ರಿಸುವುದಕ್ಕೆ ನಮ್ಮಲ್ಲಿ ಯಾವ ವ್ಯಕ್ತಿಯೂ ಇಲ್ಲ . ಯಾವ ಶಕ್ತಿಯೂ ಇಲ್ಲ. ಆಕಾಡೆಮಿಗಳು ಸ್ವಾರ್ಥದ ಪರಿಧಿಯಲ್ಲಿ ಮೌನವಾಗಿಬಿಡುತ್ತವೆ. 

ಯಕ್ಷಗಾನವನ್ನು ಐವತ್ತರ ದಶಕದಲ್ಲಿ ಪುನರ್ನಿರ್ಮಿಸಿ ಅದರ ಪುನರುತ್ಥಾನ ಮಾಡಿದ್ದು ಕೇಳಿಯಾದರು ತಿಳಿಯಬೇಕು. ಅದರ ಹಿಂದೆ ಅದೆಷ್ಟು ಪರಿಶ್ರಮ ಇದ್ದಿರಬಹುದು ಎಂದು ಆತ್ಮಾವಲೋಕನ ಮಾಡಬೇಕು. ತಮ್ಮ ಸ್ವಾರ್ಥಕ್ಕೆ ಒಮ್ದು ಉತ್ತಮ ಕಲೆ ಬಲಿಯಾಗುವಾಗ ಉರಿದು ರೋಧಿಸುವ ಆತ್ಮಗಳು ಇವೆ ಎಂಬ ಪರಿಜ್ಞಾನವಾದರೂ ಇರಬೇಕು. ಮುಖ್ಯವಾಗಿ ನಮಗೆ ನಮ್ಮದು ಎಂಬ ಆತ್ಮಾಭಿಮಾನವಾದರೂ ಇರಬೇಕು.  ಯಕ್ಷಗಾನದ ಅರಿವಿಲ್ಲದವರಿಗೆ ನಿಜವಾದ ಯಕ್ಷಗಾನವನ್ನು ತೋರಿಸುವ ಒಂದಷ್ಟು ಪ್ರಾಮಾಣಿಕತೆಯ ಬದ್ದತೆಯನ್ನು ತೋರಿಸಬೇಕು. ನಮಗೆ ಅವಮಾನವಾದರೆ ಸಹಿಸಿಕೊಳ್ಳದ ನಾವು ಯಕ್ಷಗಾನಕ್ಕೆ ಆಗುವ ಅವಮಾನವನ್ನು ತಿಳಿಯುವ ಪ್ರಯತ್ನ ಮಡಬೇಕು. ಇಷ್ಟಕ್ಕೂ ಮಾನ ಎಂದರೆ ಏನು?  ಸಾಮಾನ್ಯವಾಗಿ ಮಾನ ಅವಮಾನದ ಬಗ್ಗೆ ತಿಳಿಯಬೇಕಾದರೆ ಮಾನ ಎಂದರೇನು ಎಂಬ ಖಚಿತ ಅರಿವು ಇರಬೇಕು.  ಹಾಗಾಗಿ ಇದು ಅವಮಾನ ಎಂದು ಅನಿಸುವುದೇ ಇಲ್ಲ. ಯಾವುದೋ ಒಂದು ಅದ್ಭುತ ಸಾಧನೆ ಎಂದು ತಮ್ಮ ತಲೆಗೆ ತಾವೇ ಗರಿಯನ್ನು ಅಲಂಕರಿಸುತ್ತಾರೆ. ನಮ್ಮ ಬಾಷೆ ಸಂಸ್ಕೃತಿ ಯಾರೋ ಹೊರಗಿನಿಂದ ಆಕ್ರಮಿಸಿ ನಾಶ ಮಾಡುವ ಹಾಗಿಲ್ಲ. ಅದರ ನಾಶದ ಮೂಲ ಬಿತ್ತನೆ ನಮ್ಮಲ್ಲೇ ಆಗಿರುತ್ತದೆ. ಯಕ್ಷಗಾನವೂ ಅದಕ್ಕೆ ಹೊರತಲ್ಲ. ಯಾವುದೋ ಟೀವಿ ಮಾಧ್ಯಮಗಳಲ್ಲಿ ಯಕ್ಷಗಾನವನ್ನು ಯಾವುದೋ ರೂಪದಲ್ಲಿ ತೋರಿಸಿದಾಗ ಅವಮಾನ ಎಂದುಕೊಂಡು ಪ್ರತಿಭಟನೆ ಮಾಡುವಾಗ ಒಂದು ಯೋಚಿಸಬೇಕು, ಮಾಧ್ಯಮಗಳಲ್ಲಿ ಯಕ್ಷಗಾನದ ಬಗ್ಗೆ ಸರಿಯಾದ ಅರಿವಿಲ್ಲದೇ ಅಗೌರವ ತೋರಬಹುದು. ಆದರೆ ಇಲ್ಲಿ ಸಂಘ ಸಂಸ್ಥೆಗಳು ಅದರ ಅರಿವಿದ್ದವರು ಹೀಗೆ ವರ್ತಿಸಿ ನಾಶ ಮಾಡಿದರೆ ಅದನ್ನು ಪ್ರತಿಭಟಿಸುವವರು ಯಾರು? ಪ್ರತಿಭಟನೆಗೆ ಒಂದಿಷ್ಟಾದರೂ ಆತ್ಮ ಸಾಕ್ಷಿ ಎಂಬುದಿದ್ದರೆ ಮೊದಲು ಇಂತಹ ಆಭಾಸಗಳು ಪ್ರತಿಭಟಿಸಲ್ಪಡಬೇಕು. ಇಲ್ಲವಾದರೆ ಪ್ರತಿಭಟನೆಗಳು ಪ್ರಾಮಾಣಿಕತನವನ್ನು ಕಳೆದುಕೊಳ್ಳುತ್ತವೆ.  ಯಕ್ಷಾಗಾನದ ಸೇವೆ ಅದರ ಪೋಷಣೆಯನ್ನು ಮಾಡಬೇಕು. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ ಅದನ್ನು ಉಳಿಸುವ ಕೆಲಸವಾದರೂ ಮಾಡಬೇಕು, ಕೊನೆ ಪಕ್ಷ ಅದನ್ನು ನಾಶವಾದರೂ ಮಾಡದೆ ಅದಕ್ಕೆ ಕೃತಜ್ಞತೆಯನ್ನು ತೋರಿಸಬೇಕು. ಇದು ಆತ್ಮ ಸಾಕ್ಷಿ. 

     ತೆಂಕು ಆಗಲಿ ಬಡಗು ಆಗಲಿ ಅಥವಾ ಯಾವುದೇ ಕಲೆಗಳಾಗಲಿ ಅದರಲ್ಲಿ ಸಾಕಷ್ಟು ಸಂಪನ್ಮೂಲಗಳಿರುತ್ತವೆ. ಅವುಗಳೆಂದೂ ದಾರಿದ್ರ್ಯವನ್ನು ಬಿಂಬಿಸುವುದಿಲ್ಲ. ದಾರಿದ್ರ್ಯವಿರುವುದ ಅದನ್ನು ಸರಿಯಾಗಿ ಗುರುತಿಸುವ ಮನೋಭಾವದಲ್ಲಿ. ಅದರ ಪೋಷಣೆಗಿಂತ ಅದರ ಸಂರಕ್ಷಣೆಗೆ ಹೆಚ್ಚು ಆದ್ಯತೆ ಒದಗಿಬರಬೇಕು. ಸಂಸ್ಥೆಗಳು ಯಾವುದೇ ಕಾರಣಕ್ಕೂ ಇದನ್ನು ಮರೆಯುವಂತಿಲ್ಲ. 



Tuesday, November 1, 2022

ವಿಲಕ್ಷಣ ಅರ್ಥಧಾರಿ ಶ್ರೀ ಎಂ, ಪ್ರಭಾಕರ ಜೋಷಿ

        ಯಕ್ಷಗಾನ ತಾಳ ಮದ್ದಲೆಯೊಂದರಲ್ಲಿ ಕರ್ಣನಿಗೆ ಅರ್ಜುನ ಛೇಡಿಸುವುದುಂಟು, "ಒಂದು ಕೋಣ ತನಗೂ ಆನೆಯಂತೆ ಎರಡು ಕೋಡು ಉಂಟು ಅಂತ ಆನೆಯಂತೆ ಮುಂದೆ ತಿವಿಯುವುದಕ್ಕೆ ಹೋಯಿತಂತೆ. ಆದರೆ ಮುಂದೆ ಹೋದನಂತರ ಅದಕ್ಕೆ ಗೊತ್ತಾಯಿತು ಆನೆಯ ಕೋಡು ಮುಂದಕ್ಕೆ ಉಂಟು ತನ್ನದು ಹಿಂದಕ್ಕೆ ಉಂಟು. ಕರ್ಣಾ, ಅರ್ಜುನನಿಗೆ ಸರಿಸಾಟಿ ಎಂದು ತಿಳಿದುಕೊಳ್ಳುವ ನಿನ್ನ ಅವಸ್ಥೆಯೂ ಇದೇ ರೀತಿ. ನಿನ್ನಲ್ಲಿ ಎಲ್ಲವೂ ಇದೆ ಆದರೆ ಒಂದೂ ಇರಬೇಕಾದ್ದಲ್ಲಿ ಇಲ್ಲ."

        ಇನ್ನೊಂದು ಕೌರವನಾಗಿ ಭೀಷ್ಮನಲ್ಲಿ " ಭೀಮ ನನ್ನ ಬದ್ದ ವೈರಿ ನನ್ನ ಮೇಲೆ ಆಕ್ಷೇಪಗಳು ಹಲಾವಿದೆ. ಭೀಮನಿಗೆ ವಿಷ ಹಾಕಿದ್ದೇನೆ. ವಿಷ ಹಾಕಿದ್ದರ ಬಗ್ಗೆ ನನಗೆ ಪಶ್ಛಾತ್ತಾಪವಿಲ್ಲ.  ನಾನು ಹಾಕಿದ್ದು ಕಡಿಮೆ ಆಯ್ತೋ ಎಂಬ ಆತಂಕ ಮಾತ್ರ" 

    " ಇಲ್ಲಿ ಸುಖವಾಗಿ ಇರಬೇಕೋ, ಅವನು ದೇವರನ್ನು ನಂಬುವುದನ್ನು ಬಿಡಬೇಕು. ಅದು ನನ್ನ ಜೀವನವನ್ನು ನೋಡಿ ಕಲಿಯಬೇಕು. ಅರಮನೆಯಲ್ಲೇ ಹುಟ್ಟಿ ಬೆಳೆದ ನಾನು ಇಂದು ಅರಮನೆಯಲ್ಲಿದ್ದೇನೆ. ದೇವರನ್ನೇ ನಂಬಿಕೊಂಡಿರುವ ಪಾಂಡವರು ಕಾಡಿನಲ್ಲಿ  ಹುಟ್ಟಿ ಈಗ ಕಾಡಿನಲ್ಲಿದ್ದಾರೆ. ಅಷ್ಟಾಗಿ ಚಕ್ರವರ್ತಿಯ ಮಕ್ಕಳು.  ಹೇಳಿ ದೇವರನ್ನು ನಂಬಬೇಕೋ ಬೇಡವೋ?  ಇನ್ನು ದ್ಯೂತದಲ್ಲಿ ನಾನು ಜೂಜಾಡುವುದಿಲ್ಲ. ನನಗೆ  ಆ ಕೆಟ್ಟ ಅಭ್ಯಾಸ ಇಲ್ಲ. ನಾನು ಜನ ಮಾಡಿ ಜೂಜಾಡುವುದು.   ಕೃಷ್ಣನ ಅನುಗ್ರಹ ಸದಾ ಉಂಟು ಅಂತ ಹೇಳ್ತಾರೆ, ಆದರೆ ದ್ಯೂತದಲ್ಲಿ ಕೃಷ್ಣನ ಅನುಗ್ರಹವಿದ್ದುಕೊಂಡು  ಒಂದು ಆಟ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ಎಂತಹವನೇ ಆಗಲಿ ಹತ್ತು ಸಲ ಸೋಲುವಾಗ ಒಂದು ಸಲ ಗೆದ್ದು ಬಿಡುತ್ತಾನೆ.   "

           ನಮಗೆ ತಾಪತ್ರಯ ಇರುವುದು ಮೂರೇ ಬಗೆಯಲ್ಲಿ, ಆದರೆ ಮನುಷ್ಯ ನನಗೆ ಸಾವಿರ ತಾಪತ್ರಯ ಮಾರಾಯರೆ ಅಂತ ಹೇಳಿ ಮೂರು ಇದ್ದದ್ದನ್ನು ಸಾವಿರ ಮಾಡಿ ಅದರೆ ಮುಳುಗಿಬಿಡುತ್ತಾನೆ. 

        ಕಂಸ ಎಷ್ಟು ಒಳ್ಳೆಯವ. ವಸುದೇವ ದೇವಕಿಯರನ್ನು ಸೆರೆಮನೆಯಲ್ಲಿ ಒಟ್ಟಿಗೆ ಹಾಕಿದ. ನಾನಾದರೆ ಬೇರೆ ಬೇರೆ ಹಾಕುತ್ತಿದ್ದೆ.  ಎಂಟನೆಯ ಮಗು ಬಿಡಿ ಒಂದನೆಯ ಮಗು ಹುಟ್ಟುತ್ತಿರಲಿಲ್ಲ.  ಕಂಸ ಒಳ್ಳೆಯವನಾದುದರಿಂದ ಅಷ್ಟಕ್ಕೆ ಅವಕಾಶ ಮಾಡಿಕೊಟ್ಟ. 

           ಕೃಷ್ಣ ಅನುಗ್ರಹ ಇದ್ದುಕೊಂಡೆ ಅವರು ಇದ್ದದ್ದು ಎಲ್ಲಿ? ಹನ್ನೆರಡು ವರ್ಷ ಕಾಡಿನಲ್ಲಿ . ನಾನು ಇಲ್ಲಿ ಅರಮನೆಯಲ್ಲಿ. ಹಂಸತೂಲಿಕಾ ತಲ್ಪದಲ್ಲಿ ಮಲಗಿದ್ದೇನೆ. ಏಳು ಹಾಸಿಗೆಯ ಅಡೀಗೆ ಒಂದು ಮುಳ್ಳು ಇದ್ರೆ ಮೇಲೆ ಮಲಗಿದಾಗ ಚುಚ್ಚುತ್ತದೆ. ಅಂತಹ ಹಾಸಿಗೆ. ಅವರು ರಾಜನ ಮಕ್ಕಳಾಗಿ ಮರದ ಬುಡದಲ್ಲಿ. ವನವಾಸ ಮುಗಿಸಿ ವಿರಾಟನಗರಿಯಲ್ಲಿದ್ದರು. ಚಕ್ರವರ್ತಿಯಾಗುವವನ ಹಣೆಬರಹ ನೋಡಬಾರದ. ಕಂಕ ಸನ್ಯಾಸಿ, ಇನ್ನೊಬ್ಬ ಭೀಮ ಹೇಳಬಾರದು, ಇನ್ನು ಅರ್ಜುನ ಅವನು ಯಾವಾಗ ನಾಟ್ಯ ಕಲಿತದ್ದು ಗೊತ್ತಿಲ್ಲ. ಇನ್ನು ನಕುಲ ಸಹದೇವರು, ಇಲ್ಲಿ ಒಂದು ಕಡ್ಡಿ ಆಚೆ ಈಚೆ ಎತ್ತಿ ಇಡುವುದಿಲ್ಲ. ಹೋ ನಾವು ಚಕ್ರವರ್ತಿ ಮಕ್ಕಳು. ಅಲ್ಲಿ ಮಾಡಿದ್ದೇನು ಕುದುರೆಯ ಮೈ ತಿಕ್ಕಿದ್ದು.  ನಾನು ಅರಸನಾಗಿಯೇ ಹುಟ್ಟಿದ್ದೇನೆ, ಸತ್ತರೂ ನಾನು ರಾಜನಾಗಿಯೇ ಸಾಯ್ತೇನೆ. ನಾನು ಸತ್ತರೆ ಇದು ರಾಜನ ಹೆಣ ಅಂತ ಹೇಳ್ತಾರೆ ಹೊರತು ರಾಜ ಹೆಣ ಅಂತ ಹೇಳುವುದಿಲ್ಲ. ಇನ್ನು ಧರ್ಮ ರಾಯ ಯಾವಾಗ ರಾಜನಾಗುವುದು? ಪ್ರಾಯ ಹೋದ ಮೇಲೆ ಕಡಲೆ ಸಿಕ್ಕಿ ಏನು ಪ್ರಯೋಜನ?  ಜಗಿಲಿಕ್ಕೆ ಹಲ್ಲು ಇಲ್ಲ.  ಧರ್ಮರಾಯನ ಅವಸ್ಥೆ ಅದು. 

        ಈ ಅರ್ಥಗಾರಿಕೆಯ ಶೈಲಿ ನೋಡಿದರೆ ಹೇಳಬಹುದು ಇದರ ಕರ್ತೃ ಯಾರು ಎಂದು. ಸದಾ ವಿಲಕ್ಷಣ ಪಾತ್ರ ಪ್ರಸ್ತುತಿಗೆ ಹೆಸರಾಗಿ  ಅದನ್ನೇ ವೈಶಿಷ್ಟ್ಯತೆಯನಾಗಿ ಮಾಡಿಕೊಂಡ ಶ್ರೇಷ್ಠ ಅರ್ಥಧಾರಿ ಶ್ರೀ ಎಂ. ಪ್ರಭಾಕರ ಜೋಷಿಯವರ ಅರ್ಥಗಾರಿಕೆಯ ತುಣುಕುಗಳು ಇದು. ಅವರೇ ಹೇಳುವಂತೆ ಸದಾ ಪೆದಂಬು ಪಾತ್ರಗಳೆಂದರೆ ಅವರು ಮೈದುಂಬಿ ಪಾತ್ರ ಪ್ರಸ್ತುತ ಪಡಿಸುತ್ತಾರೆ.   ಜೋಷಿಯವರ ಅರ್ಥಗಾರಿಕೆ ಬಹಳ ಸರಳವಾಗಿ ಸರಳವಾದ ವಾಕ್ಯಗಳಿಂದ ಉಪಮೆಗಳಿಂದ ಕೂಡಿರುತ್ತದೆ. ಪಾಮರನಿಗೂ ಅರ್ಥವಾಗುವ ಅರ್ಥಗಾರಿಕೆಯಾದರೂ ಅದರ ಭಾವವನ್ನು ತಿಳಿಯಬೇಕಾದರೆ ವಿದ್ವಾಂಸರಿಗೂ ಕಷ್ಟ. ಅಷ್ಟೂ ಗೂಢಾರ್ಥಗಳಿಂದ ಕೂಡಿರುತ್ತದೆ. ಬಹಳ ನಾಟಕೀಯವಾಗಿ ಸಂಭಾಷಣೆ ಬೆಳೆಸುತ್ತಾರೆ. ಅರ್ಥಗಾರಿಕೆ ಕೇಳುವಾಗ ನಾವು ಅರ್ಥ ಹೇಳಿಬಿಡಬಹುದೋ ಎನ್ನುವಷ್ಟು ಸರಳವಾಗಿರುತ್ತದೆ. ಗಾಯಕ ಜೇಸುದಾಸ್ ಹಾಡು ಹೇಳುವಂತೆ, ಎಷ್ಟು ಸುಲಭ ನಾವೂ ಹಾಡಬಹುದೇನೋ...ಆದರೆ ಹಾಡುವಾಗಲೇ ಗೊತ್ತಾಗುವುದು ಇದು ನಾವು ಹೆಜ್ಜೆ ಇಡುವ ಸಂಕ ಅಲ್ಲ ಎಂದು. ಅಷ್ಟು ಕಷ್ಟ. 

        ಯಕ್ಷಗಾನದಲ್ಲಿ ವಿದ್ವಾಂಸರೇ ತುಂಬಿರುವಾಗ ಯುವ ಹುಮ್ಮಸ್ಸಿನಿಂದ ಆ ಕ್ಷೇತ್ರಕ್ಕೆ ಬಂದವರು ಜೋಷಿಗಳು. ಇವರೂ ಘನ ವಿದ್ವಾಂಸರೆ, ಆದರೆ ಆ ಪ್ರವೃತ್ತಿಯಲ್ಲಿಇಲ್ಲ. ಅರ್ಥಗಾರಿಕೆಯನ್ನು ಸರಿಯಾಗಿ ಅಧ್ಯಯನ ಮಾಡಿ ಹಿಂಬಾಲಿಸಿದರೆ ಇವರ ವಿದ್ವತ್ ಅರಿವಾಗುತ್ತದೆ. ನೋಡುವುದಕ್ಕೆ ಸರಳ ಇಳಿದು ಹೋದಂತೆ ಗಂಭೀರವಾಗುತ್ತಾ ವಿಪುಲ ಅರ್ಥವಿಶಾಲತೆಯನ್ನು ಗಳಿಸುತ್ತದೆ. ಒಂದು ಪಾತ್ರ ಯಾಕೆ ಹಾಗೆ ವರ್ತಿಸುತ್ತದೆ ಎಂದು ಮೊದಲಿಗೆ ಆಶ್ಚರ್ಯವಾದರೂ ಆ ಪಾತ್ರದ ಅರ್ಥ ಕೇಳುತ್ತಾ ಹೋದಂತೆ ಅರ್ಥವಾಗುತ್ತದೆ ಇದಕ್ಕೆ ಇದೇ ಸರಿ. ಇದು ಜೋಷಿಯವರ ಶೈಲಿ. ಶೇಣಿ ಸಾಮಗ ಪೆರ್ಲ ತೆಕ್ಕಟ್ಟೆ ಹೀಗೆ ಘಟಾನುಗಟಿಗಳ ಜತೆಗಿನ ಇವರ ತಿಕ್ಕಾಟ ನೋಡಿದ್ದೇನೆ. ಅದು ಅದ್ಭುತ ರಮ್ಯ. ಹಲವು ಸಲ ಶೇಣಿ ಸಾಮಗರ ಅರ್ಥ ನಮಗೆ ಅರ್ಥವಾಗುವುದು ಬಹಳ ಕಷ್ಟವಾಗುತ್ತದೆ. ಆದರೆ ಪ್ರತಿವಾದಿಯಾಗಿ ಇವರು ಇದ್ದರೆ ಅವರ ಅರ್ಥ ಇವರಿಂದ ನಮಗೆ ಅರ್ಥವಾಗಬೇಕು. ಅವರ ಮಾತುಗಳಿಗೆ ಚಿಕ್ಕ ಪುಟ್ಟ ವ್ಯಂಜನಗಳು ಸೇರುತ್ತ ಇದ್ದರೆ ಯಕ್ಷಗಾನದ ರಸಿಕ ಅದನ್ನು  ಸವಿಯುತ್ತಾ ಮೈ ಮರೆಯುತ್ತಾನೆ. ಯಾಕೆಂದರೆ ಜೋಷಿಯವರ ಅರ್ಥಗಾರಿಕೆಯ ಶೈಲಿ ಹಾಗಿರುತ್ತದೆ. ಯಕ್ಷಗಾನ ತಾಳ ಮದ್ದಲೆಯ ಅರ್ಥಗಾರಿಕೆಯ ಸರಳೀಕೃತ ಗೊಳಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಮತ್ತೊಂದು ವೈಶಿಷ್ಟ್ಯವೆಂದರೆ ಅವರ ಅರ್ಥಗಾರಿಕೆಯನ್ನು ಕಲಿಯಬಹುದು, ಆದರೆ ಅದನ್ನು ಅನುಸರಿಸುವುದು ಕಷ್ಟ. ಹಾಗಾಗಿ ಶೇಣಿ ಸಾಮಗರ ಅನುಕರಣೆ ಇಲ್ಲಿ ಕಂಡರೂ ಜೋಷಿಯವರ ಅನುಕರಣೆ ಸಾಧ್ಯವೇ ಇಲ್ಲ. ಕೆಲವೊಮ್ಮೆ ಭಾವಾತ್ಮಕತೆ ತುತ್ತ ತುದಿಗೆ ಕೊಂಡೊಯ್ದರೆ ಇನ್ನೊಮ್ಮೆ ತೀರಾ ಸರಳವಾಗಿ ಧರೆಯ ಮೇಲೆ ಮಲಗಿಬಿಡುತ್ತದೆ. ಹಾಗಾಗಿಯೇ ನಾನು ಇವರನ್ನು ವಿಲಕ್ಷಣ ಅರ್ಥಧಾರಿ ಎಂದು ಹೇಳುವುದು. 

            ಸ್ವತಃ ರಸಿಕತನದ ಜೋಷಿಯವರು ನವರಸ ಭರಿತ ವ್ಯಕ್ತಿತ್ವ ಹೊಂದಿದವರು ಎಂದರೆ ತಪ್ಪಾಗಲಾರದು. ಯಾಕೆಂದರೆ ಅವರ ಕಾರ್ಯಬಾಹುಳ್ಯ ಕೇವಲ ಯಕ್ಷಗಾನಕ್ಕೆ ,ಮಾತ್ರ ಸೀಮಿತವಾಗಿಲ್ಲ. ಯಾವುದೇ ಕ್ಷೇತ್ರದ ಬಗ್ಗೆಯೂ ಪ್ರವಚನ ಕೊಡಬಲ್ಲರು.  ಒಂದು ಬಾರಿ ಹಿಂದುಸ್ಥಾನಿ ಸಂಗೀತದ ಬಗ್ಗೆ ಇವರ ಭಾಷಣ ಕೇಳಿ ಬೆರಗಾಗಿದ್ದೇನೆ. ಈ ಜ್ಞಾನ ತಲೆಯ ಯಾವ ಭಾಗದಲ್ಲಿ ಅವಿತುಕೊಂಡಿದೆ ?  ನಮ್ಮ ಬಗ್ಗೆ ಯಾರಿಗಾದರು ವಿವರಿಸಬೇಕಿದ್ದರೆ ಒಂದು ಸಣ್ಣ ತುಂಡು ಕಾಗದದಲ್ಲಿ ನಾಲ್ಕು ಶಬ್ದ ನಮ್ಮ ಬಗ್ಗೆ ಬರೆದು ಕೊಟ್ಟರೆ ಸಾಕು ಇವರು ತಾಸು ಹೊತ್ತು ಮಾತನಾಡಬಲ್ಲರು. ಅರೇ ನಮ್ಮ ಬಗ್ಗೆ ಇಷ್ಟೊಂದು ವಿಚಾರ ಇದೇಯಾ ಎಂದು ನಮಗೆ ಅಚ್ಚರಿಯಾಗಬೇಕು. ಆ ಮಾತುಗಳು ಕೇವಲ ಹುಂಬ ಬಡಾಯಿ ಹೊಗಳಿಕೆ ಅಲ್ಲ ಎಂಬುದು ಇಲ್ಲಿ ಗಮನಾರ್ಹ. ಹಾಗಾಗಿ ಯಾರಿಗಾದರೂ ಸನ್ಮಾನ ಅಭಿನಂದನೆಯಾದರೆ ಅಲ್ಲಿ ಅಭಿನಂದನಾ ಭಾಷಣ ಮಾಡುವುದಕ್ಕೆ ಜೋಷಿಯವರಷ್ಟು ಸೂಕ್ತ ವ್ಯಕ್ತಿ ಬೇರೊಬ್ಬರಿಲ್ಲ. ಇವರು ಮಾತಿಗೆ ತೊಡಗಿದರೆ ಅಲ್ಲಿ ಉತ್ಸಾಹ ಕುತೂಹಲ ಎಲ್ಲವೂ ಮೂಡಿ ಬರುತ್ತದೆ. ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ಈ ನಡುವೆ ಸಂಘಟಕನ ಒದ್ದಾಟ ಹಲವು ಸಲ ಹೇಳ ತೀರದು. ಮತ್ತೆ ಯಾರ ಭಾಷಣವನ್ನು  ಕಟ್ ಮಾಡಬೇಕು ಎಂದು ಆತನಿಗೆ ಧರ್ಮ ಸಂಕಟವಾಗಬೇಕು. ಆದರೂ ಕೇಳುಗ ಮಾತ್ರ ಇವರ ಭಾಷಣ ತನ್ಮಯತೆಯಲ್ಲಿ ಕೇಳುತ್ತಾನೆ. ಸಾಮಾನ್ಯವಾಗಿ ಯಕ್ಷಾಗನದಲ್ಲಿ ಸಭಾಕಾರ್ಯಕ್ರಮ ಭಾಷಣವಿದ್ದರೆ ಪ್ರೇಕ್ಷಕ ಚಹ ವಿರಾಮ ತೆಗೆದುಕೊಳ್ಳುವುದುಂಟು. ಆದರೆ ಇವರು ಮೈಕ್ ಮುಂದೆ ನಿಂತರೆ ಚಹದ ಸಮಯ ಮತ್ತೆ ದೂರ ಹೊಗುತ್ತದೆ. 

        ಜೋಷಿಯವರೊಂದಿಗೆ ನನ್ನ ಒಡನಾಟ ಅಷ್ಟಿಷ್ಟು ಇದೆ ಎಂಬುದೇ ನನ್ನ ಹಿರಿಮೆ. ಬೆಂಗಳೂರಿಗೆ ಬರುವಾಗಲೆಲ್ಲ ನನಗೆ ಒಂದು ಸಂದೇಶ ಕಳುಹಿಸುತ್ತಾರೆ. ಕೆಲವು ಸಲ ಇವರನ್ನು ಕಾಣುವುದಕ್ಕೆ ಹೋದದ್ದೂ ಇದ್ದೆ. ಯಾಕೆಂದರೆ ಇವರ ಸ್ನೇಹದ ಮಾತಿನಲ್ಲಿ ನಾನು ಕಿರಿಯ ಎಂಬುದನ್ನೂ ಮರೆಯುತ್ತೇನೆ. ಅಷ್ಟು ಆತ್ಮೀಯತೆ ಇರುತ್ತದೆ. ಒಂದು ಬಾರಿ ಹಿರಿಯ ಕಲಾವಿದ ಪಾತಾಳ ವೆಂಕಟ್ರಮಣ ಭಟ್ಟರಿಗೆ ನನ್ನನ್ನು ಪರಿಚಯಿಸಿದ ಬಗೆ ನೋಡಿದರೆ, ನಾನು ಸಂಕೋಚದ ಮುದ್ದೆಯಾದೆ. ಎಲ್ಲಿಯ ಜೋಷಿಯವರು ಎಲ್ಲಿಯ ಭಟ್ಟರು ಅವರ ನಡುವೆ ನಾನು ಎಲ್ಲಿಯವ? ಆದರೆ ಜೋಷಿಯವರ ಸರಳತೆ ಆತ್ಮೀಯತೆ ಎಲ್ಲವನ್ನು ಮೀರಿಸಿ ಬಿಡುತ್ತದೆ. 

        ಒಂದು ಬಾರಿ ನಾನು ಮಂಗಳೂರಿಗೆ ಹೋಗಿದ್ದಾಗ, ಅದನ್ನು ತಿಳಿದು ನನಗೆ ಖುದ್ದು ಕರೆ ಮಾಡಿ ಮನೆಗೆ ಬರುವಂತೆ ಆಮಂತ್ರಿಸಿದರು. ನಾನು ಇದ್ದಲ್ಲಿಗೆ ಕಾರಿನಲ್ಲಿ ಬಂದು ಕದ್ರಿಯಲ್ಲಿದ್ದ ತಮ್ಮ ಮನೆಗೆ ಕರೆದುಕೊಂಡು ಹೋಗಿ ಮನೆಯವರಿಗೆ ಪರಿಚಯಿಸಿ ಸತ್ಕರಿಸಿದರು. ತಾಸುಗಟ್ಟಲೆ ಮುಕ್ತವಾಗಿ ನನ್ನೊಡನೆ ಮಾತನಾಡಿದರು. ಕೊನೆಯಲ್ಲಿ ನನಗೆ ಶಾಲು ಹೋದಿಸಿ ಸ್ಮರಣಿಕೆ ನೀಡಿ ಹೃದಯ ತುಂಬಿ ಕಳುಹಿಸಿಕೊಟ್ಟರು. ಆ ಶಾಲಿನೊಳಗೆ ಹುದುಗಿ ಹೋಗದೇ ಇದ್ದದ್ದು ನನ್ನ ಪುಣ್ಯ. ಅವರೊಂದಿಗೆ ಕಳೆದ ಆ ಘಳಿಗೆಗಳು ನಿಜಕ್ಕೂ ಒಂದು ಅವಿಸ್ಮರಣೀಯ ಘಟನೆ. 

              ನನ್ನ ಯಕ್ಷಚಿಂತನ ಬ್ಲಾಗ್ ನಲ್ಲಿ  ನಾನು ಯಕ್ಷಗಾನದ ಬಗ್ಗೆ ಬರೆಯುತ್ತಿದ್ದ ಎಲ್ಲ ಲೇಖನಗಳನ್ನು ಓದಿ ಅದಕ್ಕೆ ಪ್ರತಿಕ್ರಿಯಿಸಿ ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಅವರೇ ನಿರ್ವಹಣೆ ಮಾಡುವ ಯಕ್ಷಗಾನದ ಅಂತರ್ಜಾಲದಲ್ಲಿ ಅದನ್ನು ಪ್ರಕಟಿಸಿದ್ದಾರೆ. ಮೇರು ವ್ಯಕ್ತಿತ್ವದ ಅವರ ಹೃದಯವಂತಿಕೆ ಪ್ರೋತ್ಸಾಹ ಎಂದಿಗೂ ಮರೆಯುವಂತಿಲ್ಲ. 

        ಇವತ್ತು ನಿನ್ನೆ ಕಂಡವರಲ್ಲು ಇವರು ಸಲುಗೆಯಿಂದ ವ್ಯವಹರಿಸಬಲ್ಲರು.  ಕೆಲವೊಮ್ಮೆ ಇದು ನಮಗೆ ವಿಚಿತ್ರ ಅನ್ನಿಸಬಹುದು. ಆದರೆ ಇದು ಅವರ ಆತ್ಮೀಯತೆಯ ಶೈಲಿ. ಆತ್ಮೀಯತೆಯಲ್ಲಿ ಒಂದಷ್ಟು ಸ್ವಾತಂತ್ರ್ಯ ಇದ್ದೇ ಇರುತ್ತದೆ. ಸೌಹಾರ್ದತೆ ಯಾವಾಗಲು ಸ್ವಾತಂತ್ರ್ಯವನ್ನು ನೀಡುತ್ತದೆ. ಭಾವ ಯಾವುದೇ ಇದ್ದರು ಅಲ್ಲಿ ಆತ್ಮೀಯತೆಯ ತಟ್ಟೇ ಭಾರವಾಗಿರುತ್ತದೆ ಎಂಬುದು ಗಮನಾರ್ಹ. 

        ಹಲವು ಕಲಾವಿದದರ ಸನ್ಮಾನವಾಗುವಾಗ ಬಲಿಪ್ಪರು ಶೇಣಿ ಸಾಮಗ ಪೆರ್ಲ  ಪದ್ಯಾಣ ಇವರೆಲ್ಲ ಸನ್ಮಾನವಾಗುವಾಗ ಇವರ ಅಭಿನಂದನಾ ಭಾಷಣ ಕೇಳಿದ್ದೇನೆ. ಮಿತ್ರ ಕಜೆ ಸುಬ್ರಹ್ಮಣ್ಯ ಭಟ್ಟರ ಮನೆಯಲ್ಲಿ ಬಲಿಪ್ಪರ ಐದು ದಿನದ ದೇವಿಮಹಾತ್ಮೆ ಪ್ರಸಂಗ ಪುಸ್ತಕದ  ಬಿಡುಗಡೆಯಾದಾಗಲೂ ಬಹಳ ಬಂದು  ಸುಂದರವಾಗಿ  ಭಾಷಣ ಮಾಡಿದ್ದರು.  ಎಲ್ಲರ ಅಭಿನಂದನ ಭಾಷಣ ಮಾಡಿದವರನ್ನು ಇದೀಗ ನಾವೇ ಅಭಿನಂದನೆ ಸಲ್ಲಿಸಬೇಕಾಗಿರುವುದು ನಮ್ಮ ಅವಾಕಾಶ. ಹಾಗಾಗಿ ಇಲ್ಲಿ ಬರೆದಿರುವ ಸಾಲುಗಳು ಅದು ಎಂದಿಗೂ ಅತಿಶಯವಲ್ಲ. ಅದೆಲ್ಲವೂ ಸೂಕ್ತ. 

            ಪ್ರಭಾಕರ ಜೋಷಿಯವರು ಯಕ್ಷಗಾನ ಕಲಾವಿದರು. ಎಲ್ಲೋ ಒಂದು ಕಡೆ ಇವರ ವೇಷವನ್ನು ನೋಡಿದ್ದೇನೆ.  ಆದರೆ ಇವರ ಕ್ಷೇತ್ರ ತಾಳಮದ್ದಲೆಯ ಅರ್ಥಗಾರಿಕೆ. ಯಕ್ಷಗಾನದಲ್ಲಿ ತಾಳಮದ್ದಲೆಗೂ  ಒಂದು ಆಢಳಿತಾತ್ಮಕ ಅಂಗೀಕಾರ ಜೋಷಿಯವರ ಮುಖಾಂತರ ಸಿಕ್ಕಂತಾಗಿದೆ.  ಆ ಮೂಲಕ  ಕರ್ನಾಟಕ ರಾಜ್ಯದ ಪ್ರಶಸ್ತಿಗೂ ಇವರು ಭಾಜನರಾಗಿರುವುದು ಬಹಳ ಸಂತಸ ತಂದಿದೆ. ಇದು ಎಂದೋ ಬರಬೇಕಿತ್ತು. ಇದೀಗ ತಡವಾಗಿಯಾದರೂ ಬಂದಿದೆ.  ಪ್ರಶಸ್ತಿಗೂ ಮೌಲ್ಯ ಬಂದಿದೆ.  ಅಭಿನಂದನೆಗಳು ಆತ್ಮೀಯ ಗೌರವಾನ್ವಿತ ವಿದ್ವಾಂಸ ಮಾಳ ಪ್ರಭಾಕರ ಜೋಷಿಯವರೆ, ಅಭಿನಂದನೆಗಳು. 









Sunday, September 11, 2022

ಕಾಯಬೇಕೀ ತರಳರೈವರ

 

      ಯಕ್ಷಗಾನದ ಭೀಷ್ಮ ಪರ್ವದಲ್ಲಿ ಭಾವ ಉತ್ಕಟತೆಯನ್ನು ಹೆಚ್ಚಿಸುವ ಹಲವಾರು ಸನ್ನಿವೇಶಗಳಿವೆ. ಅಸಾಮಾನ್ಯ ಪರಾಕ್ರಮಿ ವೃದ್ಧನಾಗಿ ವಿಜ್ರಂಭಿಸುವ ಸನ್ನಿವೇಶಗಳು. ದೀಪ ಎಣ್ಣೆ ಮುಗಿದ ನಂತರ ಜ್ವಾಜ್ವಲ್ಯ ಮಾನವಾಗಿ ತನ್ನಲ್ಲಿ ಎಲ್ಲಾ ಪ್ರಕಾಶವನ್ನು ಹೊರ ಹಾಗಿ ಉರಿದು ನಂದಿ ಹೋಗುವಂತೆ ಕೊನೆಯ ಹತ್ತು ದಿನಗಳು ಭೀಷ್ಮ ಮಹಾ ವಿಕ್ರಮಿಯಾಗಿ ಮೆರೆಯುತ್ತಾನೆ. ಎಲ್ಲವೂ ರಕ್ತದ ಬಿಸಿಯನ್ನು ಹೆಚ್ಚಿಸುವ ಪ್ರಸಂಗಗಳು. ಪ್ರಸಂಗದ ಕೊನೆಯ ಹಂತದಲ್ಲಿನ ಒಂದು ಸಂಭಾಷಣೆಯತ್ತ ನನಗೆ ಗಮನ ಹೋಗುತ್ತದೆ. ನಿಜಕ್ಕಾದರೆ ಭೀಷ್ಮ ಪರ್ವದಲ್ಲಿ ಅತ್ಯಂತ ಭಾವನಾತ್ಮಕ ಸನ್ನಿವೇಶ ಯಾವುದು ಕೇಳಿದರೆ, ಶ್ರೀ ಮನೋಹರ ಸ್ವಾಮಿ ಪರಾಕು....ಎಂದು ಭೀಷ್ಮ ಭಗವಂತನ ಕೈ ಹಿಡಿವ ಸನ್ನಿವೇಶ. ಆದರೂ ಒಂದು ತಾಳ ಮದ್ದಲೆಯಲ್ಲಿ ಇನ್ನೊಂದು ಸನ್ನಿವೇಶ ಮನಸ್ಸಿಗೆ ಬಹಳ ಹತ್ತಿರವಾಗುತ್ತದೆ. ಪ್ರಸಂಗದಲ್ಲಿನ ಅದುವರೆಗಿನ ಭಾವ ಉತ್ಕಟತೆ ಕಡಿಮೆಯಾಗಿ ಶಾಂತವಾಗುವಾಗ ಇನ್ನೇನು ಪ್ರಸಂಗ ಮುಗಿವ ಹಂತಕ್ಕೆ ಬರುತ್ತದೆ. ಈ ಸನ್ನಿವೇಶ ಸಮರ್ಥ ಅರ್ಥಧಾರಿಗಳು ಇದರಲ್ಲೂ ರಸಸೃಷ್ಟಿಯನ್ನು ಮಾಡಬಲ್ಲರು.


        ಒಂಭತ್ತು ದಿನದ ಯುದ್ದ ಮುಗಿದು ಹೋಗುತ್ತದೆ. ಯುದ್ದಕ್ಕೂ ಮೊದಲೆ ಪ್ರತಿಜ್ಞೆ ಮಾಡಿದ ಭೀಷ್ಮ ದಿನವೊಂದಕ್ಕೆ ಹತ್ತು ಸಾವಿರ ಮುಕುಟ ಮರ್ದನರ ತಲೆ ಕಡಿಯುತ್ತಾನೆ. ಭೀಷ್ಮ ಯಾರಿಗೂ ಸೋಲುವುದಿಲ್ಲ ಎನ್ನುವಾಗ ಧರ್ಮರಾಯ ಹತಾಶನಾಗುತ್ತಾನೆ. ಚಿಂತಾಕ್ರಾಂತನಾಗಿ ಮುಂದೇನು ಎಂದು ಭಗವಂತನಲ್ಲಿ ಮೊರೆ ಇಡುವಾಗ ರಾತ್ರಿ ಶ್ರೀಕೃಷ್ಣ ಪಾಂಡವರೈವರನ್ನು ಕರೆದುಕೊಂಡು ಭೀಷ್ಮನ ಬಿಡದಿಯತ್ತ ಸಾಗಿ ಬರುತ್ತಾನೆ. ಆತನಿಗೆ ತಿಳಿದಿದೆ ಉಳಿದಿರುವ ದಾರಿ ಅದೊಂದೇ. ಪಾಂಡವರೊಡನೆ ಬಂದ ಶ್ರೀಕೃಷ್ಣನನ್ನು ನೋಡುತ್ತಲೇ ಭೀಷ್ಮ ಬಂದನೇ ಮುರಹರನು, ಕೊಂದನೇ ಎನ್ನನು ಎಂದು ಭೀಷ್ಮ ಹಲುಬುತ್ತಾನೆ. ಶ್ರೀಕೃಷ್ಣ ಯಾಕೆ ಬಂದಿದ್ದಾನೆ ಎಂದು ಊಹಿಸಿಯೇ ಈ ಮಾತನ್ನು ಆಡುತ್ತಾನೆ. ಒಂದೋ ಆತ ಮಾತ್ರ ಬರಬಹುದಿತ್ತು, ಇಲ್ಲ ಪಾಂಡವರು ಮಾತ್ರ ಬರಬಹುದಿತ್ತು, ಆದರೆ ಹಾಗಲ್ಲ ಮಮ ಪ್ರಾಣಾಹಿ ಪಾಂಡವಾಹ ಎಂದ ಭಗವಂತ ಪ್ರಾಣವನ್ನೇ ಹೊತ್ತುಕೊಂಡು ತನ್ನಲ್ಲಿ ಸುಮ್ಮನೇ ಆಗಮಿಸುವುದಿಲ್ಲ ಎಂದು ಆತನಿಗೆ ತಿಳಿದು ಬಿಡುತ್ತದೆ. ಆ ಪ್ರಾಣಗಳನ್ನು ತನ್ನ ಪಾದ ತಲದಲ್ಲಿ ಇಡುವುದಕ್ಕೇ ತಂದಿದ್ದಾನೆ.

        ಬಂದ ಶ್ರೀಕೃಷ್ಣ ಪದೇ ಪದೇ ಪಾಂಡವರಿಗೆ ಆಜ್ಞಾಪಿಸುತ್ತಾನೆ, ಅಜ್ಜನ ಕಾಲು ಹಿಡಿಯಿರಿ. ನರಸಿಂಹಾವತಾರದ ಸಂದೇಶವದು. ಉಗ್ರರೂಪಿ ನರಸಿಂಹ ಪ್ರತ್ಯಕ್ಷವಾಗಿ ಹಿರಣ್ಯಕಶಿಪುವಿನ ಕೊರಳು ಬಗೆವ ಭೀಭತ್ಸವನ್ನು ತೋರಿದಾಗ ದೇವತೆಗಳೂ ನಡುಗಿಬಿಡುತ್ತಾರೆ, ಎಂತ ರೌದ್ರ ನರ್ತನ? ಶಾಂತ ಸ್ವರೂಪಿ ಶ್ರೀಮನ್ನಾರಾಯಣನ ಅವತಾರವೇ ಇದು ಎಂದು ಭಯ ವಿಹ್ವಲರಾಗುವಾಗ ದೇವತೆಗಳು ಪ್ರಹ್ಲಾದನ ಮೊರೆ ಹೋಗುತ್ತಾರೆ. ಆಗ ಪ್ರಹ್ಲಾದ ಹೇಳುವ ಮಾತಿದೆ, ನೀವು ಮುಖವನ್ನೇಕೆ ನೋಡಬೇಕು? ಭಗವಂತನ ಪಾದವನ್ನು ನೋಡಬೇಕು. ಶರಣಾಗಬೇಕು. ಈ ದಿವ್ಯ ಸಂದೇಶವನ್ನೇ ಶ್ರೀಕೃಷ್ಣ ಇಲ್ಲಿ ಸಾರುತ್ತಾನೆ. ಭೀಷ್ಮನ ಮುಖ ನೋಡಿದ್ದು ಸಾಕು ಇನ್ನು ಇದೇ ದಾರಿ.

        ಭೀಷ್ಮನಿಗೆ ಅರ್ಥವಾಗುತ್ತದೆ. ಕಾಯಬೇಕೀ ತರಳರೈವರ ಎಂದು ಶ್ರೀಕೃಷ್ಣ ಹೇಳುವಾಗ ಭೀಷ್ಮ ಹೇಳುತ್ತಾನೆ ಕಾಯ ಬೇಕು, ಅದು ನೀನು ಹೇಳುತ್ತಾ ಇರುವುದು. ಯಾವ ಕಾಯ ಬೇಕು? ನನ್ನ ಕಾಯ ಬೇಕಾದ್ದೋ? ಇಲ್ಲ ನಾನು ಕಾಯಬೇಕಾದ್ದೋ?
ನಾನು ಕಾಯಬೇಕಾದ್ದೋ? ಎಂಬುದು ಒತ್ತಿ ಕೇಳುತ್ತಾನೆ. ಇನ್ನೂ ಕಾಯಬೇಕೆ? ಶತಮಾನಗಳು ಕಳೆದವು ಈ ಕಾಯುವಿಕೆಗೆ. ನಿನ್ನೆಯ ದಿನ ಅದನ್ನೇ ಹೇಳಿದ್ದು. ಇಂದಿರೇಶ ನೋಡಲಾರೆ ಈ ಕಾಳಗವನ್ನು, ಎಂದಾದರೀ ಕಾಯ ಎರವಿನೊಡನೆ ಜೀಯ. ನಾನು ಇನ್ನೂ ಕಾಯಬೇಕೆ? ಇನ್ನೆಲ್ಲಿ ಮಾತಿನ ದಿಕ್ಕು ತಪ್ಪುವುದೋ ಎಂಬ ಆತಂಕದಲ್ಲಿ ಕೊನೆಯಲ್ಲಿ ಹೇಳಿಬಿಡುತ್ತಾನೆ, ಹೆಣ್ಣು ಅಲ್ಲದ ಗಂಡು ಅಲ್ಲದ ಒಂದು ಅದು ಉಂಟು. ಹೆಣ್ಣಿಗೆ ಭೀಷ್ಮ ಇದುವರೆಗೆ ಸೋಲಲಿಲ್ಲ. ಇನ್ನು ತನ್ನನ್ನು ಸೋಲಿಸುವ ಗಂಡು ಹುಟ್ಟಿ ಬರುವುದಕ್ಕೆ ಸಾಧ್ಯವಿಲ್ಲ. ಅತ್ತ ಗಂಡೂ ಅಲ್ಲದ ಇತ್ತ ಹೆಣ್ಣು ಅಲ್ಲದ ಅದು ಭೀಷ್ಮನ ಎದುರು ನಿಲ್ಲುವ ಕಾಲ ಬಂತು ಎಂದಾದರೆ ಈ ಭೀಷ್ಮನ ಕೈಯಲ್ಲಿ ಆಯುಧ ನಿಲ್ಲುವುದಿಲ್ಲ. ಗೊತ್ತಿದ್ದ ಬಹಿರಂಗ ರಹಸ್ಯ. ಆದರೂ ಭೀಷ್ಮನ ಬಾಯಿಯಿಂದಲೇ ಒಂದು ಟಿಪ್ಪಣಿ, ಮುದ್ರೆ ಅದಕ್ಕೆ ಸಿಕ್ಕಿದರೆ....? ಆಗ ಭೀಷ್ಮ ಹೇಳುವ ಮಾತಿದೆ, ಬೇರೆ ಯಾರು ಬಂದು ಕೇಳಿದರೂ ಇದನ್ನು ಹೇಳುತ್ತಿದ್ದೆನೋ ಇಲ್ಲವೋ ಆದರೆ ಶ್ರೀಕೃಷ್ಣ ನೀನು ಕೇಳುವ ರೀತಿ ಇದೆಯಲ್ಲ ಅದು ಎಲ್ಲವನ್ನು ನಿಯಂತ್ರಿಸಿಬಿಡುತ್ತದೆ. ಧರ್ಮ ಸಂಸ್ಥಾಪನಾರ್ಥಾಯ ...ಎಂಬ ನಿನ್ನ ಸಂಕಲ್ಪಕ್ಕೆ ಈ ಭೀಷ್ಮನೇ ಅಡ್ಡಗಾಲಾಗುತ್ತಿದ್ದಾನೆ. ಹಾಗಾಗಿ ಆ ಕಾಲನ್ನೇ ಇಂದು ಹಿಡಿಯುವುದಕ್ಕೆ ಪಾಂಡವರಿಗೆ ಆಜ್ಞೆ ಮಾಡುತ್ತಿದ್ದಿಯಾ? ಬೇರೆ ಯಾರು ಯಾವ ವಿಧದಲ್ಲಿ ಕೇಳಿದರೂ ನಾನು ಹೇಳುತ್ತಿರಲಿಲ್ಲ. ನಿನ್ನ ಕಾಳಜಿ ನಿನ್ನ ಮನದ ಇಂಗಿತ ಪಾಂಡವರನ್ನು ಎರಗುವಂತೆ ಮಾಡುತ್ತಿದೆ. ದೇವನಾದ ನೀನು ಕೈ ಹಿಡಿದಿರುವೆ. ಪಾಂಡವರನ್ನು ಕಾಲು ಹಿಡಿವಂತೆ ಹೇಳುತ್ತಿರುವೆ. ನಿನ್ನ ಉದ್ದೇಶ ಸ್ಪಷ್ಟವಾಗಿದೆ. ಇನ್ನು ನಾನು ಕಾಯ ಬೇಕಿಲ್ಲ. ನನ್ನ ಕಾಯ ಮಾತ್ರ ಬೇಕಿದೆ. ಕೊನೆಯಲ್ಲಿ ನಾನು ಹೇಳುತ್ತಿದ್ದೇನೆ ಕೃಷ್ಣ ಕಾಯಬೇಕೀ ತರಳರ.

        ಯಕ್ಷಗಾನ ಅರ್ಥಗಾರಿಕೆ ಅದು ಕೇವಲ ಗದ್ಯವಾಗುವುದಿಲ್ಲ. ಪಾತ್ರೋಚಿತ ಸ್ಪಂದನೆಗಳು ಜತೆಗೂಡಿದಾಗ ಅದು ಗದ್ಯವಾಗದೆ, ಕಾವ್ಯವಾಗುತ್ತದೆ.

Thursday, July 28, 2022

ಮಹಾರಥಿ ಕರ್ಣ....

             ಇಂದು ಸೂರ್ಯನನ್ನು ಕಾಣುವಾಗ ಈ ಕರ್ಣನಲ್ಲಿ ಹೊಸದೇನೋ ಅನುಭವ. ಈ ಸೂರ್ಯ ಭಗವಂತ ಎಂದಿನಂತಿಲ್ಲ, ಇಂದು ಅದೇನೋ ಪರಿ ನಗುವಂತೆ ಭಾಸವಾಗುತ್ತದೆ. ಅದೇನು ಅವಹೇಳನವೋ ಆತ್ಮೀಯ ಪ್ರೀತಿಯೋ ವ್ಯಕ್ತತೆಯ ಅರಿವಾಗುವುದಿಲ್ಲ. ಯಾಕೆ ಹೀಗೆ? ಕೈಯಲ್ಲಿ ಅರ್ಘ್ಯವನ್ನು ಹಿಡಿದು ತದೇಕ ಚಿತ್ತದಿಂದ ಸೂರ್ಯನನ್ನು ನೋಡುತ್ತೇನೆ ಯಾಕೋ ಎಂದಿನ ಮನೋಭಾವ ಸ್ಫುರಿಸುವುದಿಲ್ಲ. ಇಲ್ಲ, ಇಂದು ಸೂರ್ಯನನ್ನು ನೋಡುವಲ್ಲಿ ಆತ್ಮಸ್ಥೈರ್ಯ ಕುಗ್ಗುತ್ತಾ ಇದೆ.  ಸೂರ್ಯನಲ್ಲಿ ಎಂದಿನ ಭಕ್ತಿ ಏಕಾಗ್ರತೆ ಸಿದ್ದಿಸುವುದಿಲ್ಲ. ಮನಸ್ಸಿನ ವೈಶಾಲ್ಯತೆ ಹೃಸ್ವವಾಗುತ್ತದೆ. ಕರ್ಮದಲ್ಲಿ ವಿಶ್ವಾಸ ಕ್ಷೀಣವಾಗುತ್ತದೆ.  

ಹೌದು ನಿನ್ನೆ ತಾನೇ ಅಮ್ಮ ಬಂದಿದ್ದರು.  ಪ್ರತಿಯೊಬ್ಬರನ್ನೂ ಅಮ್ಮ ಎಂದು ಕಾಣುವ ನಾನು ಅಮ್ಮ ಬಂದಿದ್ದರು ಎಂದುಕೊಂಡರೆ ಅದು ಪರಿಪೂರ್ಣವಾಗುವುದಿಲ್ಲ. ಹೌದು ಒಂದು ಕಾಲದ ಮಹಾರಾಣಿ ಚಕ್ರವರ್ತಿಯ ವಾಮ ಭಾಗಿಣಿ ಕುಂತೀ ದೇವಿ ಬಂದಿದ್ದಳು. ಅಮ್ಮ ಬರುವುದಕ್ಕೆ ಮೊದಲೇ ಪೂರ್ವಭಾವಿಯಾಗಿ ಏನೋ ಸಿದ್ಧತೆ ಮಾಡಿಕೊಂಡೇ ಬಂದಿದ್ದಳು. ಇಲ್ಲವಾದರೆ ಸಂಧಾನಕ್ಕಾಗಿ ಬಂದಿದ್ದ ಶ್ರೀಕೃಷ್ಣ ಬರುವ ಉದ್ದೇಶವಾದರೂ ಏನಿತ್ತು? ಸಂಧಾನ ಎಂಬುದು ನನ್ನ ಪಾಲಿಗೆ ಪೂರ್ವಭಾವಿ ಸನ್ನಾಹವೇ ಆಗಿಬಿಟ್ಟಿತು. ಶ್ರೀಕೃಷ್ಣ ಬಂದವನು ಹೇಳಿದ, ಏರು ಎನ್ನಯ ರಥವನು, ಕೂರು ಎನ್ನ ತೊಡೆ ಸೋಂಕಿನಲ್ಲಿ. ಆದರೆ ಇದಕ್ಕೆ ಅರ್ಹತೆಯನ್ನು ಗಳಿಸುವಲ್ಲಿ ಈ ಸೂತ ಪುತ್ರನ ಆಯುಷ್ಯವೇ ಒತ್ತೆ ಇಟ್ಟಾಗಿ ಹೋಗಿತ್ತು. ಇನ್ನೇಕೆ? ಕರ್ಣಾ ನೀನು ರಾಧೇಯನಲ್ಲ, ನೀನು ಸೂತ ಪುತ್ರನಲ್ಲ. ನೀನು ಭಾಸ್ಕರ ತನಯ. ಭಾಸ್ಕರ ಜಗತ್ತಿಗೇ ತಂದೆ, ಇದರಲ್ಲಿ ಅತಿಯಶವೇನಿತ್ತು. ಆದರೆ ಹಾಗಲ್ಲ. ನೀನು ಆ  ಸೂರ್ಯನ  ಅನಂತರವನು. ಸೂರ್ಯನಂತೆ ಪ್ರಖರತೆಯಲ್ಲಿ ಮೆರೆಯಬೇಕಾದವನು. ಬಾ ಎನ್ನ ಬಳಿಗೆ. ರಥವನ್ನು ಏರು, ಜತೆಗೆ ಈ ಭೂಮಂಡಲದ ಚಕ್ರವರ್ತಿಯಾಗು.  ಆಹಾ ಎಂಥಹಾ ಯೋಗ್ಯತೆಯನ್ನು ಕಲ್ಪಿಸಿದ ಭಗವಂತ ?  ಭಗವಂತನ ಅಂಗೀಕಾರವೂ ಒಂದು ಹುನ್ನಾರವಾಗುತ್ತದೆ ಎಂದು  ಈಗ ಭಾಸವಾಗುತ್ತದೆ. ಮಾಹಾ ಪೂರದಂತೆ ಶ್ರೀಕೃಷ್ಣನ ಕೊಡುಗೆ ಹರಿದು ಬಂತು. ಆದರೆ ಅದಕ್ಕೆ ಒಂದು ನಿಬಂಧನೆ.....ನಾನು ಆತನ ಜತೆಗೆ ಹೋಗಬೇಕು. ಛೇ...ಎಂತಹಾ ವಿಪರ್ಯಾಸ. ಬದುಕಿನಾದ್ಯಂತ ಉದಯವಿಲ್ಲದ ದಿನವನ್ನು ಕಳೆದ ನಾನು. ಸುರ್ಯನ ಆಗಮನವಾದಲ್ಲೇಲ್ಲಾ ಪೂರ್ವ ಹುಟ್ಟಿದರೆ, ನನ್ನ ಪೂರ್ವಾಪರದ ಕಥೆಯೇ ವಿಚಿತ್ರವಾಗಿ ಹೋಯಿತು. ಹಿನ್ನೇಲೆ ಏನೋ ಸೂರ್ಯನ ಬಂಧವಿದ್ದರೆ ಬದುಕು ಸಂಪೂರ್ಣ ಕತ್ತಲೆಯಲ್ಲೇ ಕಳೆದವನು. ಎಲ್ಲರಿಗೂ ದಾರಿ ತೋರುವ ಭಗವಂತ ಈಗಲೂ ದಾರಿ ತೋರುತಿದ್ದಾನೆ ವಿಚಿತ್ರವೆಂದರೆ ಅದಕ್ಕೊಂದು ನಿಬಂಧನೆ ಇದೆ. ಇದೇ ಅಲ್ಲವೇ ತೊಡಕಾಗಿ ಬಿಟ್ಟದ್ದು. ಈ ತೊಡಕು ಅರಿತೇ ಭಗವಂತ ಪರೀಕ್ಷೆ ಇಟ್ಟುಬಿಟ್ಟ.   

ನನಗೂ ಅನುಮಾನವಿತ್ತು. ನನ್ನ ಭುಜಗಳಲ್ಲಿ ಉಕ್ಕಿ ಹರಿಯುವ ಚೈತನ್ಯ  ನನ್ನ ಜನ್ಮದ ಬುಡವನ್ನೇ ಅಲುಗಾಡಿಸಿದಂತೆ. ಹಲವು ಸಲ ಅತಿರಥನಲ್ಲಿ ಕೇಳಿದ್ದೆ. ವೃದ್ಧ......ಅವಿದ್ಯಾವಂತ. ಸಂಸ್ಕಾರ ಶೂನ್ಯ. ದೀಪವನ್ನು ಉರಿಸಿದ ಆದರೆ ಅದಕ್ಕೆ ಗೋಡೆ ಅಡ್ಡವಾಗಿಬಿಟ್ಟಿತು. ಅತಿರಥನನ್ನು ಸಂಸ್ಕಾರ ಶೂನ್ಯ ಅಂತ ನಾನು ಹೇಳಿದರೆ ನನ್ನ ಬದುಕಿಗೆ ಅರ್ಥವಿಲ್ಲ. ಆದರೆ ಸಮಾಜ ಇಂದು ಅದನ್ನೇ ತಾನೇ ಹೇಳಿದೆ. ಬದುಕಿನುದ್ದಕ್ಕೂ ಅದನ್ನೇ ಕೇಳಿ ಬೆಳೆದೆ. ಎಂತಹ ವಿಚಿತ್ರ, ಎಲ್ಲೋ ತೇಲಿ ಬಂದ ಮಗುವಿಗೆ ಅನ್ನಾಹಾರ ಕೊಟ್ಟ ಸಂಸ್ಕಾರ,  ನನ್ನ ಹೆತ್ತ ತಾಯಿಗೆ ಇಲ್ಲದೇ ಹೋಯಿತು.  ಅದೇ ಸಂಸ್ಕಾರ ಇಂದು ಅಕೆಯನ್ನು ನನ್ನ ಎದುರು ನಿಲ್ಲಿಸಿದೆ. 

ಸೂರ್ಯ ಯಾರಿಗೂ ನೆರಳನ್ನು ಕೊಟ್ಟ ದಾಖಲೆ ಇಲ್ಲ. ಆದರೆ ನನ್ನ ನೆರಳನ್ನು ಅಕ್ಷರಶಃ ಆತ ಕಸಿದೇ ಬಿಟ್ಟ. ಕುಂತಿ ಮಂತ್ರ ಹೇಳಿದಳು, ಈತ ಹಾದಿ ತಪ್ಪಿದ. ಮಂತ್ರವನ್ನು ಕೊಟ್ಟ ದುರ್ವಾಸರು ಕೇವಲ ಮಂತ್ರ ಮಾತ್ರ ಕೊಟ್ಟರು ಸಂಸ್ಕಾರ ಒದಗಿಸಲಿಲ್ಲ. ಇದೆಲ್ಲ ರಮ್ಯ ಕಥೆಯಾಗಿ ಕರ್ಣನ ಸುತ್ತಲೂ ಸುತ್ತುತ್ತಾ ಇದೆ. ಅದನ್ನು ನಂಬುವ ಸ್ಥಿತಿಯಲ್ಲಿ ಕರ್ಣ ಇಂದು ಇಲ್ಲ. ಅತಿರಥ  ಹೇಳಿದ ನನ್ನ ಮಗನಲ್ಲ. ಹೌದು ಅನುಮಾನ ಸತ್ಯ, ಆದರೆ ಅದಕ್ಕೆ ಸಿಕ್ಕಿದ ಉತ್ತರ ಮಾತ್ರ ಮತ್ತೊಂದು ಅಗ್ನಿ ಪರೀಕ್ಷೆಯನ್ನು ನೀಡಿದೆ. ಶ್ರೀಕೃಷ್ಣ ಏರು ಎನ್ನಯ ರಥವನು ಹೇಳಿದರೆ, ಹೆತ್ತ ತಾಯಿ ಕುಂತಿ ನನ್ನೈವರನ್ನು ಉಳಿಸು ಎಂದು ಬೇಡಿದಳು.....ಬೇಡಿದಳು ಎನ್ನುವುದಕ್ಕಿಂತ ಕಾಡಿದಳು ಎನ್ನುವುದೇ ಸೂಕ್ತ. ಶ್ರೀಕೃಷ್ಣ ಸ್ವಯಂ ಭಗವಾನ್.... ಆತನ ಮಾತನ್ನು ತಳ್ಳಿದೆ, ಆತ ನನಗಾಗಿ ಏನು ಮಾಡಿದ್ದಾನೆ. ಆದರೆ ಕುಂತಿ.....ಹಾಗಲ್ಲ ಜನ್ಮವನ್ನಾದರೂ ಕೊಟ್ಟಿದ್ದಾಳೆ. ಇಂದು ಆಕೆಯ ಮಾತು ತಳ್ಳಿಹಾಕುವಂತಿಲ್ಲ. ಅಂದರೆ ಐವರನ್ನು ನಾನು ಉಳಿಸಬೇಕು. ಮಮ ಪ್ರಾಣಾಹಿ ಪಾಂಡವಾಹ ಎನ್ನುವ ಕೃಷ್ಣನ ಮಾತಿಗೆ ವಿಶ್ವಾಸವನ್ನು ನಾನು ಒದಗಿಸಬೇಕು.  ಅತ್ತ ಕೂಳುಕೊಟ್ಟ ಕೌರವ, ಇತ್ತ ಜನ್ಮ ಕೊಟ್ಟ ತಾಯಿ, ಮತ್ತೊಂದು ಕಡೆ ಬದುಕು ಕೊಟ್ಟ ಅತಿರಥ ಇನ್ನೊಂದೆಡೆ ಈ ಎಲ್ಲ ದಾಳದ ಸೂತ್ರವನ್ನು ಹಿಡಿದ ಶ್ರೀಕೃಷ್ಣ....ಕರ್ಣ ತನ್ನ ಸ್ವಂತಿಕೆಯನ್ನು ಮಾರಾಟಕ್ಕಿಡುವಂತೆ ಮಾಡಿದೆ. ಅಂತ್ಯ ಕಾಲದಲ್ಲು ಸಿಗಬೇಕಾದ ಸಾಂತ್ವನ ಮರೀಚಿಕೆಯಾಗಿ ಹೋಗಿದೆ. ..... 

ಇದೆಲ್ಲ ಸ್ವಗತದ ಕರ್ಣನ ಮಾತುಗಳು. ಯಕ್ಷಗಾನದಲ್ಲಿ ಪಾತ್ರಧಾರಿ ಹೀಗೆ ಪಾತ್ರವನ್ನು ಕಟ್ಟಿಕೊಡುತ್ತಿದ್ದರೆ, ಪ್ರೇಕ್ಷಕ ತಾನೇ ಕರ್ಣ ಎಂಬಂತೆ ಭಾವ ಪರವಶನಾಗುತ್ತಾನೆ. ಕಂಬನಿ ಮಿಡಿಯುತ್ತಾನೆ. ಕರ್ಣ ಒಬ್ಬ ಕಥಾನಾಯಕನಾಗಿ ವಿಜ್ರಂಭಿಸುತ್ತಾನೆ. ನಾಯಕನಲ್ಲಿ ತನ್ನನ್ನು ಕಾಣುವ ಪ್ರೇಕ್ಷಕ ಭಾವ ಪರವಶತೆಗೆ ತನ್ನನ್ನು ಒಪ್ಪಿಸಿಬಿಡುತ್ತಾನೆ. 

ಕಥಾನಾಯಕ ಎಂದರೆ ಆತ ಆದರ್ಶ ಪುರುಷ. ಅಂದರೆ ಆತನದ್ದೆಲ್ಲವೂ ತಾನು ಅನುಸರಿಸಬೇಕು ಎಂಬ ಮನೋಭಾವ ಇರುತ್ತದೆ. ಆದರೆ ಕರ್ಣನ ವ್ಯಕ್ತಿತ್ವ ಹಾಗೆಂದು ಪೂರ್ಣವಾಗಿ ಒಪ್ಪಿಕೊಳ್ಳುವ ಹಾಗಿಲ್ಲ. ಆತ ಒಳ್ಳೆಯವನೋ ಕೆಟ್ಟವನೋ ಇಂದಿಗೂ ವಿಮರ್ಶೆಯಾಗಿಯೇ ಉಳಿದೆ. ಆದರೆ ಮೂಲ ಭಾರತದಲ್ಲಿ ಆತ ನಿರ್ದಿಷ್ಟವಾಗಿ ದುಷ್ಟನೇ ಆಗಿಬಿಟ್ಟಿದ್ದಾನೆ. ಆಗಿನಿಂದಲೂ ನಮ್ಮಲ್ಲಿ ಒಂದು ಮನೋಭಾವವಿದೆ. ನಾಯಕನನ್ನು ವಿಜ್ರಂಭಿಸುವುದು. ಯಾರನ್ನೋ ನಾಯಕನ ಸ್ಥಾನದಲ್ಲಿ ಕೂರಿಸಿ ಬಿಡುವುದು. ಕನ್ನಡದ ಆಗಿನಿಂದಲೇ  ಕವಿಗಳು ಇದನ್ನು ಯಥಾ ಪ್ರಕಾರ ಮಾಡಿದ್ದಾರೆ ಎಂದು ವಿದ್ವಾಂಸರು ವಿಮರ್ಶಿಸುತ್ತಾರೆ. ಇದರ ಸತ್ಯಾಸತ್ಯೆತೆಯ ಬಗ್ಗೆ ನಿರ್ಧರಿಸುವುದಕ್ಕಿಂತ ಒಂದಷ್ಟು ವಿಷಯಗಳನ್ನು ತಿಳಿಯುವುದು ಹೆಚ್ಚು ಸೂಕ್ತ.  ಈಗಲೂ ಯಕ್ಷಗಾನವಾಗಲಿ ಇನ್ನಿತರ ಮಾಧ್ಯಮವಾಗಲಿ ಯಾರೋ ಒಬ್ಬ ಹೇಗೋ ಕಥಾನಾಯಕನಾಗಿಬಿಡುತ್ತಾನೆ. ದುಷ್ಟ ದುರ್ಯೊಧನನೂ  ಕಥಾನಾಯಕ, ಹೆಚ್ಚೇಕೆ ದೇವಿ ಮಹಾತ್ಮೆಯಲ್ಲಿ ದುರುಳ ರಕ್ಕಸ ಮಹಿಷಾಸುರನೂ ಕಥಾನಾಯಕನಾಗುತ್ತಾನೆ. ಪ್ರತಿಯೊಬ್ಬರ ಹಿಂದೆಯೂ ಒಂದು ಕಥೆ ಇರುತ್ತದೆ. ಮತ್ತು ಆ ಕಥೆಗೆ ಅವರೇ ನಾಯಕರಾಗಿರುತ್ತಾರೆ. ಆ ನಿಟ್ಟಿನಲ್ಲಿ ಯಾರನ್ನು ಕಥಾನಾಯಕನಾಗಿ ಚಿತ್ರಿಸಬಹುದು. ಇದರ ನಡುವೆ ವಾಸ್ತವ ಮಾತ್ರ ಮರೆಯಾಗಬಾರದು.  ಒಂದು ವೇಳೆ ಸ್ವತಃ ನಾನೇ ಕರ್ಣನ ಪಾತ್ರ ಮಾಡಿ ಕಥೆ ಹೆಣೆಯುತ್ತಿದ್ದರೆ ಹೀಗೆ ಹೇಳಿ ಪಾತ್ರಕ್ಕೆ ಜೀವ ತುಂಬುವುದಕ್ಕೆ ಪ್ರಯತ್ನಿಸುತ್ತಿದ್ದೆ. ಯಾಕೆಂದರೆ ಪಾತ್ರ ಜೀವ ತಳೆಯಬೇಕಾಗಿರುವುದು ರಂಗದ ನಿಯಮ. ಆದರೂ ವಾಸ್ತವ ಮಾತ್ರ ಅರಿಯುವಂತಹ ಸಾಧನ. 

ಕರ್ಣ.....ಮೂಲದಲ್ಲಿ ಒಬ್ಬ ರಾಕ್ಷಸ, ದಂಬೋಧ್ಬವ ಅಥವಾ ಸಹಸ್ರ ಕವಚ. ಆ ಅಸುರೀ ಅಂಶ ಆತನಲ್ಲಿ ಇನ್ನೂ ಇತ್ತು ಎಂಬುದಕ್ಕೆ ಆತನ ವರ್ತನೆಯೇ ಸಾಕ್ಷಿ.   ಬದುಕಿನ ಪರ್ಯಂತ ಆತನ ವರ್ತನೆ ಇದಕ್ಕೆ ಸಾಕ್ಷ್ಯವನ್ನು ಒದಗಿಸುತ್ತಾ ಬರುತ್ತದೆ.  ಹಾಗಾಗಿ ಕರ್ಣ ಎಂದಿಗೂ ಉತ್ತಮ ವ್ಯಕ್ತಿತ್ವವನ್ನು ಹೊಂದಲಿಲ್ಲ. ಶ್ರೀಕೃಷ್ಣ ಆತನನ್ನು ಕರೆಯದೇ ಇದ್ದರೂ, ಆತ ಪಾಂಡವರ ಪಕ್ಷದಲ್ಲಿರುವ ಗುಣಗಳು ಒಂದೂ ಆತನಲ್ಲಿರಲಿಲ್ಲ. ಆತನ ದುಷ್ಟ ಪ್ರವೃತ್ತಿಯೇ ಆತನನ್ನು ಕೌರವನಲ್ಲಿ ಸೆಳೆಯುವಂತೆ ಮಾಡಿತ್ತು. ಸದಾ ಕೌರವನಿಗೆ ದುರ್ಬೋಧನೆಯನ್ನು ಮಾಡಿ, ದುಷ್ಟ ಪ್ರಚೋದನೆಯನ್ನು ಮಾಡುತ್ತಿದ್ದವನಲ್ಲಿ ಸನ್ಮನಸ್ಸು ಹೇಗೆ ಗುರುತಿಸುವುದಕ್ಕೆ ಸಾಧ್ಯ? ದ್ರೌಪದಿಯ ಮಾನಭಂಗ ಮಾಡುವುದರಲ್ಲಿ ಕರ್ಣನ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಆ ಪ್ರಚೋದನೆ ಆದನ ಕ್ಷುದ್ರ ಮನಸ್ಸಿಗೆ ಸಾಕ್ಷಿ. ಅಸುರೀ ಮನಸಿನಲ್ಲಿ ಸತ್ಪ್ರೇರಣೆ ಎಂದು ಮೂಡಲಾರದು. 


ಆತನ ಜನ್ಮದ ಪ್ರಮೇಯದಲ್ಲೇ ಅಸುರೀ ಶಕ್ತಿಯ ಪ್ರಭಾವವನ್ನು ಗುರುತಿಸಬಹುದು. ದುರ್ವಾಸ ಮುನಿಗಳಿಂದ ಉಪದೇಶಿಸಲ್ಪಟ್ಟ ಅಷ್ಟೂ ಮಂತ್ರಗಳಲ್ಲಿ ದೈವಾಂಶ ಸಂಭೂತರಾದ, ಧರ್ಮಿಷ್ಠರಾದ ಪಾಂಡವರು ಹುಟ್ಟಿಕೊಳ್ಳುತ್ತಾರೆ.  ಪರಿಶುದ್ದ ವಾದ ಪಾತ್ರೆಯಲ್ಲಿ ಅಮೃತಮಯ ಹಾಲು ಸುರಿದಂತೆ. ಆದರೆ ಕರ್ಣನ ಜನನ ಅನಿಷ್ಟ ಸಂಭವ. ಇದರ ಪ್ರಭಾವ ಸೂರ್ಯನ ಮೇಲೂ ಸಂಭವಿಸುತ್ತದೆ. ಜಗತ್ತಿನ ಕಣ್ಣಾಗಬೇಕಿದ್ದ ಸೂರ್ಯನೂ ಹಾದಿ ತಪ್ಪುವಂತೆ ಮಾಡುತ್ತದೆ. ಕನ್ಯೆಯಾಗಿದ್ದ ಕುಂತಿ ಮಂತ್ರದ ಪ್ರಭಾವದಿಂದ ಸೂರ್ಯನನ್ನು ಸಂಕಲ್ಪಿಸುತ್ತಾಳೆ. ಬಂದ ಸೂರ್ಯ ಕುಂತಿ ಕನ್ನಿಕೆ ಎಂದು ತಿಳಿದೂ ಶಿಶುವನ್ನು ಅನುಗ್ರಹಿಸುತ್ತಾನೆ. ಕನ್ಯೆಯಾದ ಕುಂತಿ ವಿವಾಹ ಮೊದಲು ತಾಯಿಯಾಗುವುದು ಅಪರಾಧವೆಂದು ಜಗತ್ತಿನ ಕಣ್ಣಾದ ಸೂರ್ಯ  ಹಿತವಚನ ಹೇಳಬಹುದಿತ್ತು. ಕುಂತಿಯ ಅಮಾಯಕತನವನ್ನು ಆತನು ಬಳಸಿಕೊಂಡ. ಅತನಿಗೂ ಒಂದು ವಿಧದ ಅಂಧತ್ವ ಆವರಿಸಿಕೊಂಡುಬಿಟ್ಟಿತು. ಅದಕ್ಕೆ ಕಾರಣ ಕರ್ಣನ ಜನನ. ಅದರ ಪ್ರಭಾವ ತಾಯಿ ತಂದೆಯರ ಮೇಲೆ ಆಗಿಯೇ  ಬಿಟ್ಟಿತು. 

ಮುಂದೆ ಆತನ ಅಸುರೀ ಗುಣಗಳು ಪರಶುರಾಮರಿಗೆ ಅರಿವಿಗೆ ಬಂದುದರಿಂದಲೇ ತಾವು ಉಪದೇಶಿಸಿದ ಧನುರ್ವಿದ್ಯೆ ಆತನಿಗೆ ಸಕಾಲದಲ್ಲಿ ಒದಗದಂತೆ ಶಾಪವನ್ನು ಕೊಟ್ಟಿದ್ದರು. ಒಂದು ವೇಳೆ ಆ ಶಾಪ ಆತನಿಗೆ  ಇರದಿದ್ದರೆ ಮುಂದಿನ ಪರಿಣಾಮ ಹೇಗಿರಬಹುದಿತ್ತು? ಲೋಕ ಕ್ಷೇಮಕ್ಕೆ ಭಗವಂತನೆ  ಕೆಲವೊಂದು ಉತ್ಪಾತರೂಪಿ ಅಸುರೀ  ಶಕ್ತಿಗಳಿಗೆ ನಿಯಂತ್ರಣ ವಿಧಿಸುತ್ತಾನೆ. ದುರ್ಯೋಧನನ ಮೇಲಿದ್ದ ಸ್ನೇಹವನ್ನು ಸ್ವಾಮಿ ಭಕ್ತಿಯನ್ನಾಗಿ ತೋರಿಸುತ್ತಾನೆ. ಇದು ಕೇವಲ ಆತನ ಸ್ವಾರ್ಥವಾಗಿರುತ್ತದೆ. ಅವಕಾಶವಾದವಾಗಿರುತ್ತದೆ. 

ಕರ್ಣನಲ್ಲಿದ್ದ ಒಂದು ದೊಡ್ಡಗುಣವೆ ದಾನಶೂರ ಕರ್ಣ ಎಂದು ಕರೆಸಿಕೊಂಡರೂ, ನಿತ್ಯ ಬ್ರಾಹ್ಮಣರಿಗೆ ಯಥೇಚ್ಛವಾಗಿ ದಾನ ಮಾಡುತ್ತಿದ್ದರೂ ಅದು ಪಾಂಡವರು ಮಾಡುತ್ತಿದ್ದ ಧಾನ ಧರ್ಮಕ್ಕೆ ಹೋಲಿಕೆಯಾಗುವುದಿಲ್ಲ. ಈತ ದುರ್ಯೋಧನನಿಂದ ಸಿಕ್ಕಿದ ಭಿಕ್ಷೆ  ಬ್ರಾಹ್ಮಣರಿಗೆ ಕರೆ ಕರೆದು ಕೊಡುತ್ತಿದ್ದ. ಆದರೆ ಧರ್ಮರಾಯ ಕಾಡಿನಲ್ಲಿದ್ದರೂ  ಬ್ರಾಹ್ಮಣರಿಗೆ ದಾನವನ್ನು ನೀಡುತ್ತಿದ್ದ. ವಾಸ್ತವದಲ್ಲಿ ಕರ್ಣನ ಪಾಪಕರ್ಮಗಳಿಗೆ ಪ್ರಾಯಶ್ಚಿತವಾಗಿಯೂ ಈ ದಾನ ಧರ್ಮಗಳು ಪರಿಗಣಿಸಲ್ಪಡಲಿಲ್ಲ. ಅಧರ್ಮದ ಸಂಪಾದನೆಯನ್ನು ದಾನ ಎಂದು ಪರಿಗಣಿಸುವ ಹಾಗಿಲ್ಲ. 

ಮೂಲ ಭಾರತದಲ್ಲಿ ಎಲ್ಲೂ ಆತನನ್ನು ಶ್ರೇಷ್ಠವ್ಯಕ್ತಿಯಾಗಿ ಗುರುತಿಸಲಿಲ್ಲ ಎಂದು ವಿದ್ವಾಂಸರ ಅಭಿಮತ. ಆದರೂ ಆತನನ್ನು ದುರಂತ ನಾಯಕನಾಗಿ ಕಾವ್ಯಗಳಲ್ಲಿ ಕಥೆಗಳಲ್ಲಿ ಚಿತ್ರಿಸಲಾಗಿದೆ. ಅದೇನು ತಪ್ಪಲ್ಲ, ಕಾಲಧರ್ಮದಂತೆ, ಅದೊಂದು ದೃಷ್ಟಿಕೋನ. ಆಕರ್ಷಣೆಗೋ ಯಾವುದೋ ಕಾರಣಕ್ಕೆ ಆತ ದುರಂತನಾಯಕನಾಗುತ್ತಾನೆ. ಹಲವು ಸಲ ಈ ದುರಂತಗಳು ದುಃಖ ದುಮ್ಮಾನಗಳು ನಮ್ಮ ಭಾವುಕ ಮನಸ್ಸಿಗೆ  ಆಪ್ಯಾಯಮಾನವಾಗುತ್ತದೆ.

 

 

 

 

 

Sunday, July 3, 2022

ಅರ್ಥಸ್ಯ ಪುರುಷೋ ಜಾತಃ

            ಕೃಷ್ಣ ಸಂಧಾನ ವಿಫಲವಾಗಿ ಯುದ್ಧವೇ ನಿರ್ಣಯವಾಗಿ ಕುರು ಪಾಂಡವ ಸೇನೆ ಕುರುಕ್ಷೇತ್ರದಲ್ಲಿ ಎದುರು ಬದುರಾಯಿತು. ಇನ್ನೇನು ಯುದ್ದ ಆರಂಭವಾಗುತ್ತದೆ. ಎಲ್ಲರೂ ಪರಸ್ಪರ ನೋಡುವುದರಲ್ಲೇ ಒಂದಷ್ಟು ಕ್ಷಣ ಕಳೆಯುತ್ತಾರೆ. ಶಂಖನಾದ ಮೊಳಗುತ್ತದೆ. ಆಗ ಕುರುಸೇನೆ ಒಂದು ದಿಗ್ಭ್ರಮೆಗೆ ಒಳಾಗಾಗುತ್ತದೆ. ಪಾಂಡವರಲ್ಲಿ ಹಿರಿಯನಾದ ಯುದ್ಧಿಷ್ಠಿರ ರಥದಿಂದ ಇಳಿದು ನೇರವಾಗಿ ಕುರುಸೇನೆಯತ್ತ ನಡೆದು ಬರುತ್ತಿದ್ದಾನೆ. ಎಲ್ಲರೀಗೂ ಕುತೂಹಲ. ಯುಧಿಷ್ಠಿರ ಧರ್ಮಾತ್ಮ. ಹಾಗಾಗಿಯೇ ಇನ್ನು ಯಾವ ಧಾರ್ಮಿಕ ವಿಧಿ ಬಾಕಿ ಉಳಿದಿದೆ ಎಂದು ಕುತೂಹಲ. ಆತ ನೇರವಾಗಿ ಭೀಷ್ಮನೆಡೆಗೆ ಬಂದು,  ಗುರು ಹಿರಿಯರಿಗೆ ಮೊದಲಾಗಿ ವಂದಿಸಿ ಅಜ್ಜಯ್ಯ ಯುದ್ದ ಆರಂಭಿಸುವುದಕ್ಕೆ ಅಪ್ಪಣೆ ಕೊಡಬೇಕು. ಎಂದು ಕೇಳುತ್ತಾನೆ. ಆಗ ಭೀಷ್ಮರು ಹೇಳುತ್ತಾರೆ, "ನೀನು ಯಾಕೆ ಬರಲಿಲ್ಲ ಎಂದು ಯೋಚಿಸುತ್ತಿದ್ದೆ.ಹೀಗೆ ನೀನು ಬರದೆ ಇದ್ದರೆ ನಾನು ಶಪಿಸುತ್ತಿದ್ದೆನೋ  ಏನೋ  ಈಗ ನೀನು ಬಂದಿದ್ದಿ. "  ಆ ಸೈನ್ಯ ಸಮೂಹದಲ್ಲಿ ದಿಗ್ಭ್ರಮೆಗೆ ಒಳಗಾಗದೇ ಉಳಿದವರೆಂದರೆ ಭೀಷ್ಮರೊಬ್ಬರೆ. ಅವರಿಗೆ ಧರ್ಮರಾಯನ ಆಂತರ್ಯ ಮಾತ್ರವಲ್ಲ ಧರ್ಮ ಎಂದರೆ ಏನು, ಅದನ್ನು ಧರ್ಮರಾಯ ಹೇಗೆ ಅನುಸರಿಸುತ್ತಿದ್ದಾನೆ ಎಂದು ಅರಿವಿತ್ತು. ಹಾಗಾಗಿ ಅವರಿಗೆ ಕೇವಲ ಧರ್ಮರಾಯನ ನಡೆ ನೊಡುವುದಷ್ಟೇ ಉಳಿದಿತ್ತು.  ಬರೀ ಹಗೆ ಶತ್ರುತ್ವವನ್ನೇ ತುಂಬಿಕೊಂಡಿದ್ದ ಉಳಿದ ಕೌರವಾದಿಗಳಿಗೆ ಧರ್ಮರಾಯನ ಇಂಗಿತವಾಗಲೀ ನಡೆಯಾಗಲೀ ಅರ್ಥವಾಗುವುದಿಲ್ಲ. ಹಾಗಾಗಿ ಅವರು ಗಾಬರಿಯಾಗಿದ್ದರು. 

        ಧರ್ಮರಾಯ ಹೇಳುತ್ತಾನೆ, "ಅಜ್ಜಯ್ಯ, ನೀವಿಂದು ವಿರೋಧಿ ಬಣದ ನಾಯಕನ ಸ್ಥಾನದಲ್ಲಿ ನಿಂತಿರುವಿರಿ. ಈಗಲೂ ಹೇಳಿ ನಿಮಗೆ ಇಷ್ಟವಿಲ್ಲದೇ ಇದ್ದರೆ ನಾವು ಈಗಲೂ ಕಾಡಿಗೆ ಹೋಗುತ್ತೇವೆ ನೀವು ಯುದ್ದ ಮಾಡದೇ ಉಳಿಯಬಹುದು ಎಂದು ತಿಳಿದಿದ್ದೆ"   ಆಗ  ಭೀಷ್ಮರು ಮೊದಲಿಗೆ ಯುಧಿಷ್ಠಿರನ ಧರ್ಮ ತತ್ಪರತೆಯನ್ನು ನೋಡಿ ಕಣ್ಣಿರು ಮಿಡಿಯುತ್ತಾರೆ. ನಂತರ  ತಾನೇಕೆ ವಿರೋಧಿ ಬಣದಲ್ಲಿದ್ದೇನೆ ಎಂಬುದಕ್ಕೆ ಹೇಳುತ್ತಾರೆ .   " ಅರ್ಥಸ್ಯ ಪುರುಷೋ ದಾಸಃ" ಹಣಕ್ಕೆ ಮನಸ್ಸು  ದಾಸವಾಗುತ್ತದೆ, ಆದರೆ ಹಣ ಯಾವುದಕ್ಕೂ ದಾಸನಲ್ಲ. ಇದನ್ನು ಅವರೂ ಒಪ್ಪಿಕೊಳ್ಳುತ್ತಾರೆ. ಪುರುಷನು ಅರ್ಥದ ದಾಸನಾಗಿರುತ್ತಾನೆ. ತಾನೂ ಇಂದು ಅದೇ ದಾಸನಾಗಿದ್ದೇನೆ. ಹಾಗಾಗಿ ಅನ್ನದ ಋಣ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ನಾನು  ದುರ್ಯೋಧನನ ಎಂಜಲು ತಿಂದಿದ್ದೇನೆ. ಅದಕ್ಕಾಗಿ ಅವನ ಕಡೆಗೆ ನಿಂತಿದ್ದೇನೆ. " ಭೀಷ್ಮನ ಆತ್ಮವಂಚನೆ ಇದು. ಜಗತ್ತು ಅರ್ಥದ ಹಿಂದೆಯೇ ಹೋಗಿದೆ ಧರ್ಮದ ಹಿಂದೆ ಹೋಗಿಲ್ಲ.ಇಂದು ಹಲವು ಸಿದ್ದಾಂತಗಳ ಸೋಲು ಇದರಿಂದಲೇ ಆಗಿದೆ. 

        ಒಂದು ಕಾಲದಲ್ಲಿ ರಾಜ್ಯ ಪರಿತ್ಯಾಗ ಮಾಡಿದವರು ಭೀಷ್ಮರು. ಅದೇ ರಾಜ್ಯವನ್ನು ಕೌರವ ಆಳುತ್ತಿದ್ದಾನೆ. ಭೀಷ್ಮರು ತಿಂದ ಎಂಜಲನ್ನೇ, ಭೀಷ್ಮರು ಬೇಡ ಎಂದು ಬಿಟ್ಟದ್ದನ್ನು  ಕೌರವ ತಿನ್ನುತ್ತಿದ್ದಾನೆ. ಮತ್ತೆ ಇಲ್ಲಿ ಋಣದ ಮಾತೆಲ್ಲಿಂದ ಬಂತು ? ಭೀಷ್ಮರು  ಎಂತಹಾ ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದಾರೆ.? 

        ಆಗ ಧರ್ಮರಾಯ ಒಂದು ಮಾರ್ಮಿಕವಾದ ಮಾತು ಹೇಳುತ್ತಾನೆ. " ಸರಿ, ನಿಮ್ಮನ್ನು ಸೋಲಿಸಿದಲ್ಲದೇ ನಮಗೆ ಜಯ ಸಿಗುವುದಿಲ್ಲ. ಈ ಯುದ್ದ ಜಯಿಸುವುದಕ್ಕೂ ಸಾಧ್ಯವಿಲ್ಲ. ನಿಮ್ಮನ್ನು ಹೇಗೆ ಸೋಲಿಸಬಹುದು. ಹೇಳಿಬಿಡಿ" 

               ಶತ್ರುವಿನಲ್ಲಿ ಆತನ ಸೋಲಿನ ಬಗ್ಗೆ ಕೇಳುವುದು ಹೇಗೆ ಸರಿಯಾಗುತ್ತದೆ? ಹೀಗೊಂದು ವಿಶ್ಲೇಷಣೆ ಇದೆ. ಆದರೆ  ಅಜ್ಜನಾದವನಲ್ಲಿ ಮೊಮ್ಮಗ ಕೇಳುವುದರಲ್ಲಿ ತಪ್ಪೇನಿದೆ. ಯುದ್ದರಂಗದಲ್ಲಿ ಸಂಬಂಧಗಳು ಗೌಣವಾಗಿರುತ್ತವೆ. ಕೇವಲ ಪ್ರತಿಸ್ಪರ್ಧಿ ಎನ್ನುವುದು ಮಾತ್ರ ಮುಖ್ಯವಾದರೂ,   ಧರ್ಮರಾಯ ರಥದಿಂದ ಇಳಿದು ಬಂದುದು ಶತ್ರುವಾಗಿ ಅಲ್ಲ. ಭೀಷ್ಮ ಹಿರಿಯ, ಪಿತಾಮಹ ಎನ್ನುವ ಕಾರಣಕ್ಕೆ. ಹಾಗಾಗಿಯೇ ಕೇಳಿಬಿಟ್ಟ.....ನಮ್ಮ ಜಯ ಹೇಗೆ? 

                   ಭೀಷ್ಮರು ಹೇಳುತ್ತಾರೆ  " ನನ್ನನ್ನು ಸೋಲಿಸುವವರು ಈ ರಣರಂಗದಲ್ಲಿ ಎರಡೂ ಕಡೆಯಲ್ಲಿ ಯಾರೂ ಇಲ್ಲ. ನಾನು ಸೋಲುವುದೂ ಇಲ್ಲ. ನಾನು ಇಚ್ಛಾಮರಣಿ.  ಅದರೆ ನಾನು ಗೆದ್ದರೆ ಧರ್ಮ ಗೆಲ್ಲಬಹುದೇ? " ಕೌರವನ ಸೋಲಿನ ಆರಂಭ ಇಲ್ಲೇ. ಮುಖ್ಯ ಸೇನಾಧಿಪತಿಯೇ ದ್ವಂದ್ವದಿಂದ ಬಂಧಿತನಾಗಿದ್ದಾನೆ. "    ಆಗ ಕಾಲ ಬಂದಾಗ ನನ್ನನ್ನು ಹೇಗೆ ಸೋಲಿಸಬಹುದು ಎಂದು ಹೇಳುತ್ತೇನೆ. ಆದರೂ ನಾನು ನಂಬಿದ ತತ್ವವಿದೆ, ಯಥೋ ಧರ್ಮಃ ತತೋ ಜಯಃ ಎಂದು ಮಾರ್ಮಿಕವಾಗಿ ಹೇಳುತ್ತಾರೆ. ತಾನು ಅಧರ್ಮದ ಹಾದಿಯಲ್ಲಿದ್ದರೂ ಧರ್ಮರಾಯನಿಗೆ ಧರ್ಮ ಬಿಡದಂತೆ ಪ್ರಚೋದಿಸುತ್ತಾರೆ. ಕೊನೆಯಲ್ಲಿ ಒಂದು ಸಲ ತನ್ನ ಸೋಲಿಗೆ ನಿಮಿತ್ತವನ್ನು ಹೇಳುತ್ತಾರೆ, ಎಲ್ಲಿ ಆಯುಧ ಇಲ್ಲದ ಯೋಧ ಎದುರು ಬರುತ್ತಾನೋ, ಹೆಣ್ಣಿನ ನಾಮದಲ್ಲಿ ಗಂಡು ಎದುರು ನಿಲ್ಲುತ್ತಾನೋ, ಎಲ್ಲಿ ಅಪಶಕುನ ಕಾಣುತ್ತದೋ ,  ಗಂಡೂ ಅಲ್ಲದ ಹೆಣ್ಣು ಅಲ್ಲದ ಅದು ಎದುರು ಬಂದು ನಿಂತರೆ ನಾನು ಯುದ್ಧ ಮಾಡುವುದಿಲ್ಲ. ಮತ್ತೆ ಪ್ರಪಂಚದಲ್ಲಿ ಯಾವ ಹೆಣ್ಣಿಗೂ ನಾನು ಸೋಲುವವ ಅಲ್ಲ ಅದು ನನ್ನ ಬದುಕಿನಿಂದ ವೇದ್ಯವಾಗಿದೆ. ಮತ್ತೆ ಇನ್ನು ಗಂಡಸು...? ಎರಡೂ ಅಲ್ಲದ ಶಿಖಂಡಿ ಬಂದು ನಿಲ್ಲಲಿ, ನಾನು ಆಯುಧ ಕೆಳಗೆ ಹಾಕುತ್ತೇನೆ." 

            ಇದು ಕೌರವನಿಗೆ ಮೊದಲೇ ತಿಳಿದಿತ್ತು. ಹಾಗಾಗಿ ತನ್ನವರಲ್ಲಿ ಆಂತರಂಗಿಕವಾಗಿ ಹೇಳುತ್ತಾನೆ. ಪಾಂಡವಸೇನೆ ಭೀಮನಿಂದ ರಕ್ಷಿಸಲ್ಪಟ್ಟರೆ, ಕೌರವ ಸೇನೆ ಭೀಷ್ಮನಿಂದ ರಕ್ಷಿಸಲ್ಪಡುತ್ತದೆ. ಆದರೂ ಇದು ಅಪರ್ಯಾಪ್ತವಾಗಿದೆ. ಧುರ್ಯೋಧನ ಭೀಮನಿಗೆ ಎಷ್ಟು ಭಯ ಪಡುವನೋ ಅಷ್ಟೇ ಭಯ ಶಿಖಂಡಿಯ ಬಗ್ಗೆಯೂ ಇರುವುದು ಒಂದು ವಿಡಂಬನೆ.  

    ಹಲವು ಕಡೆಯಲ್ಲಿ ವಿಶ್ಲೇಷಣೆ ಕಾಣಬಹುದು. ಭೀಷ್ಮರಲ್ಲಿ ಧರ್ಮರಾಯ ಅವರ ಸೋಲಿನ ಬಗೆಯನ್ನು ಕೇಳಿದ್ದು ಯುದ್ದ ಧರ್ಮಕ್ಕೆ ವಿಹಿತವಾಗಿದೆ. ಆದರೆ ಒಂದು ಯೋಚಿಸಬೇಕು. ಧರ್ಮರಾಯ ಎಲ್ಲರ ಎದುರಲ್ಲಿಯೇ ಕೇಳಿದ. ಅದಕ್ಕಾಗಿ ಬೇರೆ ಯಾವ ನಿಗೂಢವಾದ ತಂತ್ರಗಾರಿಕೆ ವಂಚನೆ ಮಾಡಲಿಲ್ಲ. ಮಾತ್ರವಲ್ಲ ಇಲ್ಲಿ ಭೀಷ್ಮರೇ ಹೇಳುತ್ತಾರೆ....ನನ್ನ ಸೋಲು ಇಲ್ಲಿದೆ. ಕದ್ದು ಮುಚ್ಚಿ ಅಲ್ಲ. ಹಾಗಾಗಿ ಧರ್ಮರಾಯನದ್ದು ವಂಚನೆ ಎಂದಾಗುವುದಿಲ್ಲ. 

        ಧರ್ಮರಾಯ ನಂತರ ದ್ರೋಣರ ಬಳಿಗೆ ಹೋಗಿ ವಂದಿಸುತ್ತಾನೆ. ದ್ರೋಣರೆ ಆಶೀರ್ವದಿಸಬೇಕು. ನಮಗೆ ಕಲಿಸಿದ ಗುರುವಿನನ್ನೇ ನಾವು ಎದುರಿಸಬೇಕಿದೆ. ಗುರುವಿನ ಸೋಲಿನಲ್ಲಿ ಶಿಷ್ಯನ ಉತ್ಕರ್ಷವಿದೆ. ನೀವು ಶಿಷ್ಯನನ್ನು ಸೋಲಿಸುವುದಕ್ಕೆ ಹಾತೊರೆಯುತ್ತಿದ್ದೀರಲ್ಲಾ?"

            ದ್ರೋಣರ ಉತ್ತರವೂ ಅದೇ " ಅರ್ಥಸ್ಯ ಪುರೋಷೋ ಜಾತಹ" ಅವರೂ ಈ ಬಂಧನದ ಸುಳಿಯಲ್ಲಿ ಸಿಲುಕಿದವರು.    ಕುರುಕ್ಷೇತ್ರದ ಯುದ್ದದಲ್ಲಿ ಹದಿನೈದು ದಿನ ಯುದ್ದ ಮಾಡಿದ ನಾಯಕರ ಪಾಡು ಇದಾದರೆ ಕೌರವನ ಸೋಲಿಗೆ ಬೇರೆ ಮುನ್ನುಡಿಬೇಕಾಗಿಲ್ಲ. ದ್ರೋಣನೂ ತನ್ನ ಸೋಲಿನ ಬಗೆಯನ್ನು ಹೇಳುತ್ತಾನೆ. ಅತ್ಯಂತ ಅಪ್ರಿಯವಾಗಿರುವ ವಿಷಯವನ್ನು ಯಾವಾಗ ಕೇಳುವೆನೋ ಆವಾಗ ನಾನು ಆಯುಧ ಕೆಳಗಿಡುತ್ತೇನೆ. ಮುಂದೆ ಅಶ್ವತ್ಥಾಮ ಸತ್ತ ಎಂಬ ವಾರ್ತೆ ಕೇಳಿ ಆತ ಶಸ್ತ್ರ ತ್ಯಾಗ ಮಾಡುತ್ತಾನೆ. ಅದಕ್ಕಿಂತ ಅಪ್ರಿಯವಾದ ಸುದ್ದಿ ಆತನಿಗೆ ಬೇರೆ ಯಾವುದೇ ಇರಲಿಲ್ಲ. 

        ಧರ್ಮಾಚರಣೆಯಲ್ಲೂ ಭೀಷ್ಮ ದ್ರೋಣರು ಹೇಗೆ ಅಧರ್ಮದ ಹಾದಿ ತುಳಿದರು ಎಂಬುದನ್ನು ಮಹಾಭಾರತದಲ್ಲಿ ಇದೊಂದು ವಿಶ್ಲೇಷಣೆ. ಅರ್ಥಸ್ಯ ಪುರುಷೋ ಜಾತಃ ಎಂಬುದು ತಮ್ಮ ಅಧರ್ಮಕ್ಕೆ ಹಿಡಿದ ಒಂದು ಮರೆಯಾಗಿರುತ್ತದೆ. ಭೀಷ್ಮರ ಮನಸ್ಸು ದ್ರೋಣರ ಮನಸ್ಸು ದುಗುಡವನ್ನು ಆವರಿಸಿತ್ತು. ಮಾಡುವುದು ತಪ್ಪು, ಅಧರ್ಮ ಎಂದು ಗೊತ್ತಿದ್ದೂ ಅದನ್ನೇ ಮಾಡುವುದು ಆತ್ಮ ವಂಚನೆಯಾಗಿರುತ್ತದೆ. ಗೊತ್ತಿಲ್ಲದೇ ಮಾಡುವ ಅಪರಾಧಕ್ಕಿಂತಲೂ ಇದು ಗಹನವಾಗಿದೆ.  ಹಾಗಾಗಿಯೇ ಶ್ರೀಕೃಷ್ಣ ಇವರಿಬ್ಬರನ್ನೂ ಕಟುವಾಗಿ ವಿಮರ್ಶಿಸುತ್ತಾನೆ. ಗುರು ಹಿರಿಯರು ಧರ್ಮದ ಹಾದಿ ಬಿಟ್ಟ ಮೇಲೆ ಅಲ್ಲಿ ಕ್ಷಮೆಗೆ ಅರ್ಹತೆಯೇ ಉಳಿಯುವುದಿಲ್ಲ. 

ಆಧಾರ : ಶ್ರೀ ಕೆ ಎಸ್ ನಾರಾಯಣ ಆಚಾರ್ಯ, ಮಹಾಭಾರತ ಪ್ರವಚನ



Monday, June 13, 2022

ಅಧರ್ಮದ ನೆರಳಲ್ಲಿ ಧರ್ಮ

 

    ಪ್ರತಿಷ್ಠಿತ ವ್ಯಕ್ತಿಗಳು  ಹಲವು ಸಲ  ಮತ್ತು ಕೆಲವು ಸಂದರ್ಭಗಳಲ್ಲಿ  ನಿಯಮದಿಂದ ಮುಕ್ತವಾಗಿರುತ್ತಾರೆ. ಸಾಮಾಜಿಕ ಕಾನೂನುಗಳು ನಿಯಮಗಳು ಕೇವಲ ಸಾಮಾನ್ಯರಿಗೆ ಮಾತ್ರ ಸೀಮಿತವಾಗಿರುತ್ತವೆ. ಪ್ರತಿಷ್ಠೆ ಎಂಬುದು ಅವರಿಗೆ ತಾವು ಎಸಗಿದ ಪ್ರಮಾದಗಳಿಂದ ಹೊರತಾಗಿರುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಇದು ಪಕ್ಷದಲ್ಲೂ ಜಾತಿ ಧರ್ಮಗಳಲ್ಲು ಸರ್ವೇ ಸಾಮಾನ್ಯ. ಒಬ್ಬ ಪ್ರತಿಷ್ಠಿತ ವ್ಯಕ್ತಿ ಮಾಡಿದ ತಪ್ಪನ್ನು ಪ್ರಶ್ನಿಸುವ ಹಕ್ಕು ಸಾಮಾನ್ಯನಿಗೆ ಇರುವುದಿಲ್ಲ. ಹಲವು ಸಲ ಆತ ಮಾಡಿದ ಒಳ್ಳೆಯ ಕೆಲಸಗಳನ್ನು ಹೇಳಿಯೋ ಮಾಡಿದ ಅನ್ಯಾಯಗಳನ್ನು ವಿರೋಧಿಸುವ ಅಥವಾ ಪ್ರಶ್ನಿಸುವ ಅರ್ಹತೆಯೂ ಉಳಿದವರಿಗಿರುವುದಿಲ್ಲ. ಎಲ್ಲಾ ಕಾನೂನುಗಳಿಗೆ ಅತೀತವಾಗಿರುವುದೇ ಪ್ರತಿಷ್ಠೆಯಾಗಿ ಪರಿಗಣಿಸುತ್ತಾರೆ. ಪ್ರತಿಷ್ಠೆ ಎಂದರೆ ನಿಯಮಗಳನ್ನು ಮೀರಿ ನಿಲ್ಲುವುದೇ ಆಗಿರುತ್ತದೆ. ಇದು ಕೇವಲ ಈಗಿನ ಕಾಲಕ್ಕೆ ಸೀಮಿತವಾಗಿರುವುದಲ್ಲ. ಮಹಾಭಾರತದಲ್ಲೂ ಇಂತಹ ಹಲವು ಘಟನೆಗಳನ್ನು ಕಾಣಬಹುದು. ಅದರಲ್ಲೂ ಧರ್ಮ ಸೂಕ್ಷ್ಮವನ್ನು ಅರಿತಂತಹ ಧರ್ಮಿಷ್ಠ ಎಂದು ಕರೆಸಿಕೊಂಡ ಭೀಷ್ಮ ದ್ರೋಣರಿಂದಲೂ  ಈ ತಪ್ಪುಗಳು ಆದಂತೆ ಭಾವಿಸಬಹುದು.  

            ದ್ಯೂತದಲ್ಲಿ ಧರ್ಮರಾಯ ತನ್ನದೆಲ್ಲವನ್ನೂ ಕಳೆದುಕೊಳ್ಳುತ್ತಾನೆ. ತುಂಬಿದ ಸಭೆಯ ಮಧ್ಯೆ ತನ್ನ ತಮ್ಮಂದಿರನ್ನೂ ಒತ್ತೆ ಇಟ್ಟು ಪಗಡೆಯಾಟದಲ್ಲಿ ಪರಾಜಿತನಾಗುತ್ತಾನೆ. ಕೊನೆಯಲ್ಲಿ   ವಿಚಿತ್ರವಾಗಿ ತನ್ನನ್ನು ತಾನು ಪಣವಾಗಿರಿಸಿ ಅಲ್ಲೂ ಸೋಲನುಭವಿಸುತ್ತಾನೆ. ಆನಂತರ ದ್ರೌಪದಿಯನ್ನೂ ಪಣವಾಗಿರಿಸಿ ಅಲ್ಲೂ ಸೋತುಹೋದಾಗ ದುರ್ಯೋಧನ ದ್ರೌಪದಿಯನ್ನು ಕರೆದು ತರುವಂತೆ ಪ್ರತಿಗಾಮಿಯನ್ನು ಕಳುಹಿಸುತ್ತಾನೆ. ಆಗ ಆಕೆ ಧರ್ಮ ಸೂಕ್ಷ್ಮದ  ಒಂದು ಪ್ರಶ್ನೆಯನ್ನು ಮುಂದಿಡುತ್ತಾಳೆ. ಧರ್ಮರಾಯ ಸ್ವತಃ  ಸೋತನಂತರ ತನ್ನನ್ನು ಅಂದರೆ ದ್ರೌಪದಿಯನ್ನು ಪಣವಾಗಿರಿಸಿದನೆ?  ಆತನಿಗೆ ತನ್ನನ್ನು ಪಣವಾಗಿರಿಸುವ ಹಕ್ಕು ಉಳಿದಿರುತ್ತದೆಯೆ? ಈ ಪ್ರಶ್ನೆಗೆ ಯಾರೂ ಉತ್ತರಿಸುವುದಿಲ್ಲ. ನಶೆ ಏರಿದವನ ಮುಂದೆ, ವ್ಯಸನಿಯ ಮುಂದೆ, ಮೂರ್ಖರ ಮುಂದೆ ಈ ಧರ್ಮಸೂಕ್ಷ್ಮದ ನ್ಯಾಯ ಅನ್ಯಾಯ ಕಾನೂನುಗಳ ಪ್ರಶ್ನೆ ಕೇಳುವುದೇ ಮೂರ್ಖತನ. ಅಲ್ಲೂ ಅದೇ ಸಂಭವಿಸುತ್ತದೆ. ಪ್ರತಿಗಾಮಿಯ ಮಾತಿಗೆ ದ್ರೌಪದಿ ಬರದೆ ಹೋದಾಗ ಕೌರವ ದುಶ್ಯಾಸನನ್ನು ಕಳುಹಿಸಿ ಆಕೆಯನ್ನು ಎಳೆದು ತರುವಂತೆ ಆಜ್ಞಾಪಿಸುತ್ತಾನೆ. ಯಾವುದೇ  ಹಿತವಚನ ಆತ ಕೇಳುವ ಸ್ಥಿತಿಯಲ್ಲಿ ಆತ ಇದ್ದಾನೋ ಇಲ್ಲವೋ ಬೇರೆ...ಆದರೆ ಅದಕ್ಕೆ ಭೀಷ್ಮ ದ್ರೋಣರೂ ಮೌನವಾಗಿ ಕೌರವಾದಿಗಳ ದುರ್ವರ್ತನೆಗೆ ಪರೋಕ್ಷವಾಗಿ ಬೆಂಬಲವನ್ನೇ ಸೂಚಿಸಿದಂತೆ ವರ್ತಿಸುತ್ತಾರೆ.  ಏಕಾಂಬರೆಯಾಗಿ ರಜಸ್ವಲೆಯಾಗಿದ್ದ ದ್ರೌಪದಿಯನ್ನು ಯಾವುದೇ ಪರಿಗಣೆನೆ ಇಲ್ಲದೆ  ಎಳೆದು ತರಲಾಗುತ್ತದೆ. ಪವಿತ್ರವಾದ ಆಕೆಯ ಮುಂದಲೆಯನ್ನುಎಳೆದು ತರುವುದನ್ನು ವಿವರಿಸುವುದಕ್ಕೆ ಮುಂದೆ ವೈಶಂಪಾಯನರಿಗೆ ಕೂಡ ಸಾಧ್ಯವಾಗುವುದಿಲ್ಲ. ಅಷ್ಟು ಭೀಭತ್ಸವಾಗಿರುತ್ತದೆ. ಹೀಗಿದ್ದರೂ......

        ಮುಂದೆ ದ್ರೌಪದಿ ಎಲ್ಲರ ಎದುರಲ್ಲಿ ಹಿರಿಯ ಭೀಷ್ಮರಿಂದ ನ್ಯಾಯ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಭೀಷ್ಮನೆಡೆಗೆ ನೋಡಿ ಅದೇ ಪ್ರಶ್ನೆ ಕೇಳುತ್ತಾಳೆ.  ಭೀಷ್ಮರು ತಮ್ಮ ಸ್ಥಾನ ಪ್ರಕಾರ ಅದನ್ನು ಪ್ರತಿಭಟಿಸಿ ಆಕ್ಷೇಪಿಸಬಹುದು ಎಂಬ ನಿರೀಕ್ಷೆ ಆಕೆಯಲ್ಲಿತ್ತು. ಆದರೆ ಅವರು ವರ್ತಿಸಿದ ರೀತಿಯೆ ಪ್ರಶ್ನಾರ್ಹವಾಗುತ್ತದೆ.  ದ್ರೌಪದಿಯ ಪ್ರಶ್ನೆಗೆ ಅವರು ಮೌನವಾಗಿದ್ದರು ಒಪ್ಪಿಕೊಳ್ಳಬಹುದಿತ್ತೋ ಏನೋ ಆದರೆ ಅವರು ಅದಕ್ಕೆ ಪ್ರತಿಕ್ರಿಯಿಸಿದ್ದು ಮತ್ತೊಂದು ಭೀಷ್ಮರು ಮಾಡಿದ ಪ್ರಮಾದಕ್ಕೆ ಸಾಕ್ಷಿಯಾಗುತ್ತದೆ. ಇದನ್ನುಮೂಲ ವ್ಯಾಸ ಭಾರತದಲ್ಲಿ ಹೇಳಿದ ರೀತಿಯನ್ನು ಹೀಗೆ ವಿಶ್ಲೇಷಿಸಲಾಗುತ್ತದೆ.

        ದ್ರೌಪದಿಯ ಪ್ರಶ್ನೆಗೆ ಭೀಷ್ಮರು ಎಷ್ಟು ಉಡಾಫೆಯಿಂದ ಉತ್ತರಿಸುತ್ತಾರೆ  ಎಂದರೆ,   ಈ ಪ್ರಶ್ನೆಗೆ ಉತ್ತರಿಸುವ ಶಕ್ತಿ ಇಲ್ಲ ಎಂದು ಮೊದಲೇ ಹೇಳುತ್ತಾರೆ.   ಆದರೂ ಮೌನವಾಗಿರದೆ, " ನಿನ್ನ ಯಜಮಾನ ಅಂದರೆ ಧರ್ಮರಾಯ ನಿನ್ನನ್ನು ಪಣವಾಗಿ ಒಡ್ಡುವ ಅಧಿಕಾರ ಇಲ್ಲದೇ ಇರುತ್ತಿದ್ದರೆ ಅವನು ಪಣವಾಗಿ ಒಡ್ಡುತ್ತಲಿರಲಿಲ್ಲ."  ಹಾಗಾಗಿ ಇದು ಸರಿ ಇದೆ. ಒಡ್ದಿದ್ದು ಸರಿ ಇದೆ ಎಂದು ಪರೋಕ್ಷವಾಗಿ ಹೇಳಿದಂತಾಯಿತು. ಒಂದು ವೇಳೆ ಅವರು ಮೌನವಾಗಿರುತ್ತಿದ್ದರೆ ಒಂದು ವಿಧದ ಅಸಮ್ಮತಿ ಎಂದು ತಿಳಿಯಬಹುದಾಗಿತ್ತೋ ಏನೋ..ಆದರೆ ಅವರು ಪರೋಕ್ಷವಾಗಿ ಸರಿ ಇದೆ ಎಂದು ಹೇಳಿದ್ದು ಕೌರವಾದಿಗಳ ದೌರ್ಜನ್ಯಕ್ಕೆ ಮತ್ತಷ್ಟು ಅವಕಾಶವನ್ನು ಒದಗಿಸಿಕೊಟ್ಟಂತಾಯಿತು.  ಭೀಷ್ಮರಿಂದ ಅಪಸ್ವರ ಬರಲಿಲ್ಲ ಎಂದಾಕ್ಷಣ ಕೌರವರ ತೋಳಿಗೆ ಮತ್ತಷ್ಟು ಶಕ್ತಿ ಬಂತು.  ಅವರು ಇಷ್ಟಕ್ಕೆ ನಿಲ್ಲಲಿಲ್ಲ ಮತ್ತೂ ವಿವರಿಸುತ್ತಾರೆ,  ಇದು ಬಹಳ ವಿಚಿತ್ರವಾಗಿದೆ, ಎಂಬುದನ್ನು ಗಮನಿಸಬೇಕು. "ಆತ್ಮನಃ ಪತ್ನಿ....."  ಪತ್ನಿಯಾದವಳು ಅರ್ಧಾಂಗಿ, ಎಂತಹ ಆಪತ್ಕಾಲದಲ್ಲೂ ಪತ್ನಿ ಆತ್ಮದ ಅರ್ಧ ಭಾಗ. ಒಂದು ಆತ್ಮದ ಅರ್ಧ ಭಾಗ ಸೋತ ಮೇಲೆ ಇನ್ನೊಂದು ಆತ್ಮದ ಅರ್ಧ ಭಾಗ ಇಡುವುದರಲ್ಲಿ ತಪ್ಪಿಲ್ಲ. ಯುಧಿಷ್ಠಿರನೇ ಸೋಲು ಅಂತ ಒಪ್ಪಿಕೊಂಡಮೇಲೆ ನಾನು ಏನು ಹೇಳಬಹುದು? 

        ವರ್ತಮಾನ ಕಾಲದಲ್ಲಿ ಚಂದ್ರವಂಶದಲ್ಲಿ ಯಾಕೆ ಭರತಖಂಡದಲ್ಲೇ ಭೀಷ್ಮರು ಅತ್ಯಂತ ಹಿರಿಯವ್ಯಕ್ತಿಗಳು. ಧರ್ಮ ಅಧರ್ಮಗಳನ್ನು ಅದರ ಸೂಕ್ಷ್ಮಗಳನ್ನು ಅವರು ಧರ್ಮರಾಯನಿಂದ ಮೊದಲೆ ಕಂಡವರು. ಅವರಿಂದ ನಂತರ ಎರಡು ತಲೆಮಾರಿನ ಧರ್ಮರಾಯನಿಗೆ ಧರ್ಮದ ನಿರ್ಣಯ ಬಿಟ್ಟುಬಿಟ್ಟು ಜವಾಬ್ದಾರಿ ಕಳೆದುಕೊಳ್ಳುತ್ತಾರೆ ಎಂದರೆ ಭೀಷ್ಮರಂತಹ ವ್ಯಕ್ತಿಗೆ ಸೂಕ್ತವೆನಿಸುವುದಿಲ್ಲ. ಹಸ್ತಿನಾವತಿಗೆ ಕಾಶೀರಾಜ ಅವಮಾನಿಸಿದ್ದಾನೆ ಎಂದು ಅಲ್ಲಿಗೆ ಹೋಗಿ ಕಾಶೀರಾಜನ ಪುತ್ರಿಯರನ್ನು ಕರೆದು ರಾಕ್ಷಸ ರೀತೆಯಲ್ಲೆ ಕರೆದು ತರುವ ಭೀಷ್ಮನಿಗೆ ಇಲ್ಲಿ ಹಸ್ತಿನಾವತಿಯ ಹೆಣ್ಣು ಮಗಳಿಗೆ ಅದ ಅವಮಾನಕ್ಕೆ ಹೀಗೆ ಪ್ರತಿಕ್ರಿಯಿಸುವುದು ವಿಚಿತ್ರವಾಗಿರುತ್ತದೆ.  ಒಂದು ವೇಳೆ ಅದನ್ನು ಪ್ರತಿಭಟಿಸುವ ಶಕ್ತಿ ಇಲ್ಲದೇ ಇದ್ದರೆ ಅದಕ್ಕೆ ಪ್ರೇಕ್ಷಕರಾಗಿ ಇರದೆ ಅಲ್ಲಿಂದ ಎದ್ದು ಹೋಗಬಹುದಿತ್ತು. ಆದರೆ ಭೀಷ್ಮ ದ್ರೋಣರು ಇಬ್ಬರೂ ಇದಕ್ಕೆ ಮೌನ ಪ್ರೇಕ್ಷಕರಾಗಿ ಉಳಿದುಕೊಂಡದ್ದು ಅವರು ಎಸಗಿದ ಮಹಾಪರಾಧವಾಗಿತ್ತು. ಇದನ್ನು ಮುಂದೆ ಶ್ರೀಕೃಷ್ಣ ತೀಕ್ಷ್ಣವಾಗಿ ವಿಮರ್ಶಿಸುತ್ತಾನೆ. ಭಗವದ್ಬೀತೆಯ ಸಂದರ್ಭದಲ್ಲಿ ಇದನ್ನೇ ಅರ್ಜುನನಿಗೆ ಹೇಳುತ್ತಾನೆ. ಇವರೆಲ್ಲ ಧರ್ಮದ ಶತ್ರುಗಳು. ಅವರನ್ನು ಎಂದೋ ಕೊಂದು ಹಾಕಿದ್ದೇನೆ. ನೀನು ಈಗ ನೆಪ ಮಾತ್ರ. ಹಸ್ತಿನವತಿಯ ಪ್ರತಿಷ್ಠೆಯನ್ನು ಉಳಿಸುವುದಕ್ಕೋಸ್ಕರ ಅಥವಾ ಕೌರವರನ್ನು ಎದುರು ಹಾಕಿಕೊಳ್ಳುವ ಮನಸ್ಸಿಲ್ಲದೇ ಭೀಷ್ಮ ದ್ರೋಣರು ಮೌನವಾಗಿದ್ದರು.  

        ನಿಯಮ ಎಂಬುದು ಕೆಲವು ವರ್ಗಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಇನ್ನು ಕೆಲವರು ನಿಯಮ ಪಾಲನೆ ತಮಗೆ ಸೇರಿದ್ದಲ್ಲ ಎಂದು ತಿಳಿದುಕೊಳ್ಳುವುದು ಮಹಾಭಾರತ ಕಾಲದಿಂದಲೂ ನಡೆದುಕೊಂಡು ಬಂದಿದೆ. ಒಂದು ಸಮಾಜದಲ್ಲಿ ಅಥವಾ ಜಾತಿಯಲ್ಲಿ ಪ್ರತಿಷ್ಠಿತ ವ್ಯಕ್ತಿಯನ್ನು ಪ್ರಶ್ನಿಸುವುದು ವಿಮರ್ಶಿಸುವುದು ಅಪರಾಧವಾಗಿ ಪರಿಣಮಿಸುವುದು ನಮ್ಮ ಬದುಕಿನಲ್ಲಿ ಹಲವು ಸಲ ಅನುಭವಕ್ಕೆ ಬರುತ್ತದೆ. ಮಹಾಭಾರತದಲ್ಲಿ ಭೀಷ್ಮ ದ್ರೋಣರೂ ಈ ಪಕ್ಷಪಾತಕ್ಕೆ ಒಳಗಾಗಿ ಹೋದದ್ದು ಮಹಾಭಾರತದ ದೊಡ್ಡ ದುರಂತಕ್ಕೆ ಕಾರಣವಾಯಿತು. 

ಕೃತಜ್ಞತೆಗಳೊಂದಿಗೆ  , ಆಧಾರ :  ಕೆ ಎಸ್ ನಾರಾಯಣ ಆಚಾರ್ಯ ಅವರ ಮಹಾಭಾರತ ಪ್ರವಚನ.