"ಇದು ವಿಮರ್ಶೆಯಲ್ಲದ ಚಿಂತನ"

Friday, June 22, 2012

ಯಕ್ಷ ಸಂಭ್ರಮ




("ಕಲಾ ಕೌಶಿಕ" ಎಂಬ ಬಿರುದು ಲೇಖನದ ಕಲ್ಪನೆಯೂ ಜತೆಯಾದದ್ದು ಒಂದು ಅಭಿಮಾನಕ್ಕೆ ಅರ್ಥವನ್ನು ತಂದುಕೊಟ್ಟಿತ್ತು)
ಎಲ್ಲ ಪ್ರತಿರೋಧಗಳಿಗೂ ಸಡ್ಡು ಹೊಡೆದು ಜೀವಿತಾವಧಿಯಲ್ಲಿ ಗುರಿಸಾಧನೆಯ ಹಾದಿಯನ್ನು ಉಪಕ್ರಮಿಸಲು ಹೋರಾಟವನ್ನೇ ಅನಿವಾರ್ಯವಾಗಿಸುವ ವ್ಯಕ್ತಿತ್ವ ಹಲವು ಸಲ ಗೋಚರಿಸಬಹುದು. ತಾನು ಉನ್ನತಿಯಲ್ಲಿದ್ದರೂ  ಜೇವನದಲ್ಲಿ ಅತ್ಯುನ್ನತಿ ಎಂಬುದು ಇನ್ನೊಂದಿದೆ ಎಂಬುದರ ಅರಿವಾಗುವಾಗ ಅದರ ಬೆನ್ನತ್ತಿ ಹೋಗಿ, ಅದನ್ನು ವಶವಾಗಿಸುವಲ್ಲಿ ತನ್ನ ಅರ್ಹತೆಯನ್ನು ಸರಿದೂಗಿಸಿ ಪರಿಸ್ಥಿತಿಯನ್ನು ಎಲ್ಲಾ ಪ್ರತಿರೋಧದ ನಡುವೆ ಗೆಲ್ಲುವ ಛಲ ಇದು ಮಹತ್ತರ ಸಾಧನೆಗೆ ನಿಮಿತ್ತವಾಗುತ್ತದೆ. ಪೌರಾಣಿಕದಲ್ಲಿ ಬರುವ ರಾಜಾ ಕೌಶಿಕನ ವ್ಯಕ್ತಿತ್ವ ಆ ಬಗೆಯದು. ಬ್ರಹ್ಮಋಷಿ  ಪದವಿ ಎಂಬುದೊಂದು ಇದೆ ಎಂದು ಅರಿವಾದಾಗ ಅದನ್ನು ಹೊಂದಿಕೊಳ್ಳಲು ಕಠಿಣ ಸಾಧನೆಗೆ ಉಪಕ್ರಮಿಸುವ ಕೌಶಿಕ ವಿಶ್ವಾಮಿತ್ರನಾಗಿ ಬ್ರಹ್ಮಋಷಿಯಾಗುವ ಹಾದಿ ಆ ವ್ಯಕ್ತಿತ್ವದ ಸತ್ವವನ್ನು ಬಹಿರಂಗಗೊಳಿಸುತ್ತದೆ.
YAKSHAGANA FILE INDEX

ಅದೇಬಗೆಯಲ್ಲಿ ಯಕ್ಷಗಾನದಲ್ಲಿ ಕೌಶಿಕನಾಗಿ ಮೆರೆದವರು ನಮ್ಮ ಗೋವಿಂದಣ್ಣ. ಧರ್ಮಸ್ಥಳ ಮೇಳದ  ಮಹಾಬ್ರಾಹ್ಮಣ ಪ್ರಸಂಗದ ರಾಜಾ ಕೌಶಿಕನ ಪಾತ್ರದಂತೆ,  ನಿಜ ಬದುಕಿನ ಹಾದಿಯಲ್ಲೂ ಕೌಶಿಕನ ಛಲವನ್ನು ತೋರಿದವರು ಇಂದಿಗೂ ರಾಜಾ ಕೌಶಿಕನಾಗಿ ಯಾವುದೇ ಎಗ್ಗಿಲ್ಲದೆ ರಂಗಸ್ಥಳವನ್ನೇರುವ ಗೋವಿಂದಣ್ಣನ ರಂಗಸ್ಥಳದ ಆ ನಿಲುಮೇ ಮತ್ತು ಅತಿ ದೀರ್ಘ ಬದುಕು ಸಾಮಾನ್ಯರಿಗೆ ಕೈಗೆಟುಕದ ರೀತಿಯದ್ದು.

ಇಂತಹ ಗೋವಿಂದಣ್ಣನ ಅರ್ಥಪೂರ್ಣ ಸಂಭ್ರಮ ಎಂದು ಕೇಳಿದಾಗ ಆ ಕೌಶಿಕನ ಛಲದ ಹಾದಿಯೇ ಕಾಣಿಸುವುದು. ಅದಕ್ಕಾಗಿಯೋ ಏನೋ ನನ್ನ ಮಟ್ಟಿಗೆ ಗೋವಿಂದಣ್ಣನ ರಾಜಾ ಕೌಶಿಕ ಜೀವಿತಶ್ರೇಷ್ಠ ಪಾತ್ರ. ಒಬ್ಬ ಕಲಾವಿದನ ಪ್ರತಿಭೇ ಕೇವಲ ಒಂದು ಪಾತ್ರದ  ಕರಂಡಕದಲ್ಲಿ ಮಾತ್ರವೇ ತುಂಬಿಸಿಡುವುದಲ್ಲ. ಆದುದರಿಂದಲೇ ಗೋವಿಂದಣ್ನ ನಿರ್ವಹಿಸದ ಪಾತ್ರವೇ ಇಲ್ಲ ಎನ್ನಬಹುದು. ಪಾತ್ರ ಇಲ್ಲದಿರುವುದು ಇಲ್ಲಿ ವಿಶೇಷವೆಂದಿನಿಸುವುದಿಲ್ಲ. ಬದಲಾಗಿ ಹಸುರು ಮಾಸದ ಆ ಹುರುಪು ಆಶ್ಚರ್ಯವೆನಿಸಲ್ಪಡುತ್ತದೆ. ಇಂದಿಗೂ ಯಾವುದೇ ಪಾತ್ರವಾದರೂ ಸೈ.. ತೊಡುವ ಕೆಲವು ಕ್ಷಣ ಮೊದಲು ಹೇಳಿದರು ಯಾವುದೇ ಬಿಗುಮಾನವಿಲ್ಲದೆ ಗೋವಿಂದಣ್ಣ ತಲೆಗೆ ಪಟ್ಟಿ ಕಟ್ಟಿ ಬಣ್ಣ ಬಳಿಯಲು ಅಣಿಯಾಗುತ್ತಾರೆ. ಬಾಲ್ಯದಲ್ಲಿ ರಂಗಸ್ಥಳದಲ್ಲಿ ನಾನು ನೋಡಿದ ಗೋವಿಂದಣ್ಣನ ವೇಷಕ್ಕೂ   ಈಗ ನೋಡುವ ವೇಷಕ್ಕೂ,  ಕುಣಿತದಲ್ಲಾಗಲಿ ಪಾತ್ರ ನಿರ್ವಹಣೆಯಲ್ಲಾಗಲೀ ವೆತ್ಯಾಸವನ್ನು ಗುರುತಿಸುವಲ್ಲಿ ನಾನು ಅಭಿಮಾನದಿಂದಲೇ ಸೋಲುತ್ತೇನೆ. ಪ್ರತೀ ಹಂತದಲ್ಲೂ ಗೋವಿಂದಣ್ಣನ ಪಾತ್ರಗೆಲ್ಲುತ್ತದೆ ನಾನು ಸೋಲುತ್ತೇನೆ. ಮೊದಲು ಈಸಿ ಚೆಯರಿನ ತುದಿಯಲ್ಲಿ ಕುಳಿತು (ಇಲ್ಲವಾದರೆ ಕಾಣುವುದಿಲ್ಲ) ಗೋವಿಂದಣ್ಣನ ಪ್ರವೇಶ ನೋಡುತ್ತಿದ್ದವನು, ದೈಹಿಕವಾಗಿ ನನ್ನಲ್ಲಿ ಬದಲಾವಣೆಯಾಗಿದೆಯೇ ಹೊರತು ಅಣ್ಣನ ರಂಗಸ್ಥಳದ ಪ್ರವೇಶದಲ್ಲಿ ಬದಲಾವಣೇಯೇ ಇಲ್ಲ. ಅದೇ ರಭಸ.. ಅ ರಭಸಕ್ಕೆ ಕುಳಿತಲ್ಲೇ ನನ್ನ ದೇಹವನ್ನು ನಿಮಿರಿಸುವ ಶಕ್ತಿ ಈಗಲೂ ಇದೆ. ವಿಚಿತ್ರ ಎನಿಸುವುದಿಲ್ಲವೆ?

ಇವರ ಪಾತ್ರದಲ್ಲಾಗಲೀ ವ್ಯಕ್ತಿತ್ವದಲ್ಲಾಗಲೀ  ವಿಶೇಷಗಳನ್ನು ಹುಡುಕುವ ಅವಶ್ಯಕತೆ ಬರುವುದಿಲ್ಲ. ಅದು ತನ್ನಿಂತಾನಾಗಿ ಅನಾವರಣಗೊಳ್ಳುವ ಶಕ್ತಿಯನ್ನು ಹೊಂದಿದೆ. ಒಬ್ಬೊಬ್ಬರ ದೃಷ್ಟಿಗೆ ಒಂದೊಂದು ಗೋಚರಿಸಬಹುದು. ಆ ಬಗೆಯಲ್ಲಿ ನಾನು ಕಂಡದ್ದು ಕೆಲವು.

ಮುಖ್ಯವಾಗಿ ಅತ್ಯಂತ ಖಚಿತವಾದ ಮತ್ತು ಸುಲಭವಾದ ಶಾರೀರಿಕ ಭಾಷೆ. ಬಹುಶಃ ಭರತ ನಾಟ್ಯದ ಮೂಲಕ ಅದನ್ನು ಒಲಿಸಿರಬೇಕು. ಇದರಿಂದಾಗಿ ಪಾತ್ರಕುಣಿತದೊಂದಿಗೆ ರಂಗಸ್ಥಳಕ್ಕೇ ಒಂದು ಚಲನ ಶಕ್ತಿ ಆವೇಶಗೊಂಡ ಹಾಗೆ ಅನಿಸುತ್ತದೆ. ಒಂದು ಪದಕ್ಕಾಗಲೀ ಅಥವ ಅದರ ಕುಣಿತಕ್ಕಾಗಲೀ  ಶ್ರುತಿ ಮೀಟುವ ಕುಣಿತ ಇವರದ್ದು.ಅನಾವಶ್ಯಕ ಕುಣಿವ ಜಾಯಮಾನ ಕಂಡುಬರುವುದೇ ಇಲ್ಲ. ಆದರೆ ಕುಣಿದದ್ದು ಮಾತ್ರ ಆ ಸಂದರ್ಭಕ್ಕೆ ಅತ್ಯಂತ ಸೂಕ್ತ ಯಾವಾಗ ಅನ್ನಿಸುತ್ತದೋ ಆವಾಗ ಕುಣಿದು ಬಿಡುತ್ತಾರೆ. ಇದೇ ಶ್ರುತಿ ಮೀಟುವ ಕುಣಿತ ಅಂತ ನನ್ನ ಅನಿಸಿಕೆ. ಕುಣಿತ ಮತ್ತು ನಿಲುವು ಹತ್ತಾರು ಭಂಗಿಯ ಭಾವ ಒಂದರಲ್ಲೇ ತರುವ ಪ್ರಯತ್ನ, ನೋಡುಗರಿಗೆ ಅನಿಸುವುದುಂಟು,  ಎಲಾ,   ಯಕ್ಷಗಾನ ಕುಣಿತ ಇಷ್ಟೂ ಸುಲಭವೇ? ಗೋವಿಂದಣ್ಣನ ಕುಣಿತ ಅದು ದ್ವಾಪರದ ಗೋವಿಂದನ ಕುಣಿತ.
ಬಹಳ  ಆಸಕ್ತಿಪೂರ್ಣ ವಿಚಾರಗಳು ಕೇಳುತ್ತಾ ಹೋದರೆ ಹಲವರಲ್ಲಿ ಇರಬಹುದು ಹಲವಾರು ಸಿಗಬಹುದು.  ಹಾಗೆ ನೋಡಿದರೆ ಯಕ್ಷಗಾನ ಗರ್ಭದಲ್ಲಿ ಪ್ರತೀ ಕಲಾವಿದರ ವಿಶೇಷತೆಗಳೂ ವಿಶಿಷ್ಟವಾಗಿರುತ್ತದೆ. ಅಪಾರ ಪ್ರತಿಭಾವಂತರ ಕಲೆ ಇದು. ಹೊರ ಪ್ರಪಂಚ ಯೋಚಿಸುವುದಕ್ಕೂ ಸಾಧ್ಯವಿಲ್ಲದಂತಹ ಸಾಮಾರ್ಥ್ಯ ವಿಶೇಷಗಳು ಹಲವಾರು ಕಾಣ ಸಿಗುತ್ತದೆ. ಇಂತಹ ಶ್ರೀಮಂತ ಕಲಾಸಾಮ್ರಾಜ್ಯದಲ್ಲಿ ಜೀವಿಸುವ ಶ್ರೀಮಂತ ಧನಿಕನ ಹಾಗೇ ಗೋವಿಂದಣ್ಣ. ಅವರ  ವೈಶಿಷ್ಟ್ಯಗಳನ್ನೇ ಸಾಕಷ್ಟು ಹೇಳುತ್ತಾ ಹೋಗಬಹುದು. ಇದು ಪ್ರತಿಭಾ ಶ್ರೀಮಂತಿಕೆ.

ಯಾವುದೇ ಪ್ರತಿಭೆಯಾಗಲೀ ಅದು ಅರ್ಹರಿಗೆ ಒಲಿದಲ್ಲಿ ಅದರ ಬೆಳವಣಿಗೆ ಪರಿಣಾಮಕಾರಿಯಾಗಿರುತ್ತದೆ. ಸೂಕ್ತ ವಾತಾವರಣದಲ್ಲಿ ಮೊಳೆಕೆಯೊಡೆದ ಬೀಜದಂತೆ. ಬಹಳ ಬೇಗನೇ ಗಗನವನ್ನು ಚುಂಬಿಸುವ ಪ್ರಯತ್ನ ಗೈಯ್ಯುತ್ತಾ ಬೆಳೆದು ನಿಂತು ಹೆಮ್ಮರವಾಗಿ ಫಲ ಪುಷ್ಪವನ್ನು ನೀಡುತ್ತದೆ. ಗೋವಿಂದಣ್ಣನ ಬಗ್ಗೆ ಹೇಳಿದರೆ ಇದನ್ನೂ ಹೇಳಬೇಕಾಗುತ್ತದೆ. ಯಕ್ಷಗಾನ ಕಲೆ ಗೋವಿಂದಣ್ಣನಿಗೆ ಆ ಬಗೆಯಲ್ಲಿ ಒಲಿದಿದೆ ಮಾತ್ರವಲ್ಲ ಅದು ಮತ್ತು ಬೆಳೆಯುತ್ತಾ.. ಬೆಳೆಯುತ್ತಾ ಇನ್ನೂ ಗಗನವನ್ನು ಚುಂಬಿಸುತ್ತಾ ಇದೆ.
ಇಂದಿಗೂ ಇವರ ರಾಜ ಠೀವಿಯ ರಂಗಸ್ಥಳ  ಪ್ರವೇಶವನ್ನು ನೋಡುವುದು ಒಂದು ಬಗೆಯ ಸಂಭ್ರಮ. ಪ್ರವೇಶದಲ್ಲೇ ಸರಳವಾಗಿ ಕುಣಿದು ಭಲ್ಲಿರೇನಯ್ಯಾ.. ಎಂದು ತೊಡಗುವಾಗ ಯಕ್ಷಗಾನ ಒಂದು ನಿಜ ವೇಷ ಅನಾವರಣಗೊಂಡ ಅನುಭವವಾಗುತ್ತದೆ.ಯಕ್ಷಗಾನ ವೇಷವೆಂದರೆ ನನಗೆ ಗೋವಿಂದಣ್ಣನ ಮುಖದ ವೇಷವೇ ಮೊದಲಿಗೆ ನೆನಪಿಗೆ ಬರುವುದು. ಇದು ಇವರಲ್ಲಿ ಯಕ್ಷಗಾನ ಕಲೆ ಆವಾಹನೆಗೊಂಡ ಪರಿ.
ಇನ್ನೋಂದು ಬಹಳವಾಗಿ ನಾನು  ಗಮನಿಸಿದ ಮಾತ್ರವಲ್ಲ ಕೌತುಕದ ವಿಚಾರವೆಂದರೆ, ಇಷ್ಟು ವರ್ಷದ ದೀರ್ಘವಾದ  ರಂಗ ಪರಂಪರೆಯಿರುವ ಗೋವಿಂದಣ್ಣ ರಂಗಸ್ಥಳದಲ್ಲಿ ಸುಸ್ತಾದವರಂತೆ ಕುಳಿತದ್ದು ಯಾರಾದರೂ ಕಂಡಿದ್ದಿರಾ? ಇದು ಅವರ ದೈಹಿಕ ಕ್ಷಮತೆ. ಒಂದು ವಿಧದ ದಣಿವರಿಯದ ಕಲಾವಿದ. ಕುಣಿ ಕುಣಿದು ಏದುಸಿರು ಬಿಡುವ ಇಂದಿನ ಯುವ ಕಲಾವಿದರೆಲ್ಲಿ ಎಪ್ಪತ್ತರ ಹರಯದ ಇವರೆಲ್ಲಿ... ಇದು ಗೋವಿಂದಣ್ಣ ಸಾಧಿಸಿದ ಅದ್ಭುತ ಮಾತ್ರವಲ್ಲ ಆ ಬಗೆಯಲ್ಲಿ ಯಕ್ಷಗಾನ ಕಲೆಯೇ ಬಚ್ಚಿಟ್ಟುಕೊಂಡ ಅದ್ಭುತ. ಸುಮಾರು ಮೂವತ್ತು ವರ್ಷಕ್ಕೂ ಹಿಂದಿನಿಂದ ಗೋವಿಂದಣ್ಣನ ವೇಷ ನೋಡುತ್ತಾ ಬರುತ್ತಿದ್ದೇನೆ. ಗೋವಿಂದಣ್ಣನ ತೀಕ್ಷ್ಣವಾದ ಕಂಠಸ್ವರ ಹೇಗೋ ಕುಣಿವೂ ಅಷ್ಟೇ ಒಂದು ಬಗೆಯ ಹರಿತ.. ಒಂದು ಪರಿಪೂರ್ಣತೆ. ಅಂದಿನಿಂದ ಇಂದಿನವರೆಗೂ ಗೋವಿಂದಣ್ಣ ರಂಗದಲ್ಲಿ ಸುಸ್ತಾಗಿ ಕುಳಿತದ್ದನ್ನು ನಾನು ಕಂಡಿಲ್ಲ.  ಧೂಳಿಪಟಗೊಳ್ಳುವಂತೆ ಕುಣಿವ ಹಲವು ಕಲಾವಿದರೂ ತಮ್ಮ ಪ್ರತಿಭೆಗೆ ಒರೆ ಹಚ್ಚಿದ ಆ ಕುಣಿತಕ್ಕಿಂತಲೂ  ಗೋವಿಂದಣ್ಣನ ರಂಗ ತುಂಬುವ ಆ ಸರಳ ನರ್ತನ ಶೈಲಿಗೂ ಒಂದು ಸಿರಿವಂತಿಕೆ ಇದೆ.
 ಇಷ್ಟು ದೀರ್ಘವಾದ ಇವರ ಕಲಾಜೀವನ ಬೆರಗು ಹುಟ್ಟಿಸುತ್ತದೆ. ಆದರೆ ಒಂದು ಸಲ ಇವರ ಜೀವನ ಶೈಲಿಯನ್ನು ಗಮನಿಸಿದರೆ ಅಚ್ಚರಿ ಪಡುವ ಹಾಗಿಲ್ಲ. ಯೋಗಾಭ್ಯಾಸದಿಂದ ಕಾಪಾಡಿಕೊಂಡು ಬಂದ ಶರೀರ ಮತ್ತು ಶಾರೀರ ಸಂಪತ್ತು,  ಸಾತ್ವಿಕ ಜೀವನ ಶೈಲಿ, ಯಾವ ದುರ್ವ್ಯಸನವನ್ನು ಹತ್ತಿರವೂ ಬಿಡದ ಮಾನಸಿಕ ಸ್ಥಿರತೆ ಎಲ್ಲವೂ ಯಶಸ್ವೀ ಜೀವನಕ್ಕೆ ಪೂರಕವಾಗಿದೆ. ಇಂದಿಗೂ ಇವರದ್ದಾಗಲೀ ಇವರಂತೆ ಬಲಿಪ್ಪರದ್ದಾಗಲೀ.. ಮುಖದ ಗಾಂಭೀರ್ಯ ಆ ಓಜಸ್ಸು ಧೀಮತಿಕೆಯ ಕಳೆ ಖಂಡಿತ ಸುಲಭದಲ್ಲಿ ಒಲಿದದ್ದಲ್ಲ. ಅದು ಪರಿಶುದ್ದ ಜೀವನ ಶೈಲಿಯ ಸಂಕೇತ.  ವೇಷಗಾರಿಕೆ ತೊಡಗುವ ಮೊದಲೇ ಹಲವಾರು ದುರ್ವ್ಯಸನ ದುಶ್ಚಟವನ್ನು ಅಂಟಿಸುವ ಕಲಾವಿದರು ಒಮ್ಮೆ ಇವರ ಜೀವನ ಶೈಲಿಯನ್ನು ಗಮನಿಸಬೇಕು. ಇದು ಇವರು ಕೃತಿಯ ಮೂಲಕ ಸಾಗಿಬಂದು ನೀಡಿದ ಸಂದೇಶ.
ಈಗ ಉಡುಪಿಯ ಗೋವಿಂದನ ಮಡಿಲಲ್ಲಿ ಈ ಗೋವಿಂದನ ಯಕ್ಷಸಂಭ್ರಮ. ಅದು ಕೇವಲ ಗೋವಿಂದ ಸಂಭ್ರಮವಲ್ಲ.. ಅದು ಯಾವುದೇ ಕಲಾವಿದನ ಕಲಾಸಂಭ್ರಮ . ಯಕ್ಷಗಾನದ ಯಕ್ಷ ಸಂಭ್ರಮ.  






Saturday, June 16, 2012

ಸಂಗೀತಾ ನೆನಪಿನ ಯಕ್ಷಗಾನ ಸುರುಳಿಗಳು



“ಕಂಡು ನಮಿಸಿದ ತಾಯಿಯಂಘ್ರಿಗೇ ....”  ಈ ಪದ ಕೇಳಿದಾಗ ಒಂದು ಸನ್ನಿವೇಶ ಕಣ್ಣಮುಂದೆ ಕಟ್ಟಿದಂತೆ ಇರುತ್ತದೆ. ಕರ್ಣ ಅರ್ಘ್ಯವನ್ನು ಹಿಡಿದಿದ್ದಾನೆ. ಭಾಸ್ಕರನನ್ನು ನೋಡುತ್ತಾ.. ನೋಡುತ್ತ ತನ್ನನ್ನೇ ಮರೆಯುತ್ತಾನೆ. ಅದಾಗಲೇ ಆತನಿಗೆ ತನ್ನ ಜನ್ಮದಾತ ಯಾರೆಂಬ ಅರಿವಾಗಿದೆ. ಸೂತ ಪುತ್ರನೆಂಬ ಭಾವನೆಯ ತಿರುಳು ಬದಲಾಗಿರುತ್ತದೆ. ಯಾಕೆಂದರೆ ಲೋಕದವರ ಕಣ್ಣಿನಲ್ಲಿ ಆತನಿನ್ನೂ ರಾಧೇಯ ಸೂತನ ಮಗ. ಸೂತಪುತ್ರನ ಆ ಒಂದು ಹೊರಕವಚ ಹಾಗೇ ಉಳಿದಿರುತ್ತದೆ.  ಆಗ ನಿಧಾನವಾಗಿ ಬಂದ ತಾಯಿ ಕುಂತಿ ದೂರದಿಂದಲೇ ಕರ್ಣನನ್ನು ನೋಡುತ್ತಾಳೆ. ಕರ್ಣನ ಹಿಂಭಾಗವಷ್ಟೇ ಗೋಚರಿಸುತ್ತಿತ್ತು.
“  ಮಗನೇ ಕರ್ಣ” ಎಂದು ಭಾವಪೂರ್ಣವಾಗಿ ಕರೆಯುತ್ತಾಳೆ. ಬಂದ ಕಾರಣವನ್ನೂ ಹೇಳಿ ಐವರು ಮಕ್ಕಳ ಪ್ರಾಣವನ್ನು ಉಳಿಸಿಕೊಡೆಂದು ಬೇಡುತ್ತಾಳೆ, ಜೀವನದಲ್ಲಿ ಮೊದಲ ಬಾರಿ ನೋಡಿದ ಅಮ್ಮನ ಆಶೆಯನ್ನು ಈಡೇರಿಸಿ ಐದು ಮಕ್ಕಳ ಲೆಕ್ಕವನ್ನು ಬಿಡಿಸಿ ಹೇಳುತ್ತಾನೆ. ಅರ್ಜುನನ್ನು ಬಿಟ್ಟುಳಿದ ಅಭಯದ ತನ್ನ ಅಚಲವಾದ ನಿರ್ಧಾರವನ್ನು ಹೇಳುತ್ತಾನೆ. ತಾಯಿ ಕುಂತಿ ಅಧೀರಳಾಗುತ್ತಾಳೆ..ತನ್ನ ಕಣ್ಣೀರಿಗೆ ಮೌಲ್ಯವಿಲ್ಲವೇ ಎಂದು ಕೇಳಿದಾಗ ತುಸು ನಿಧಾನವಾಗಿ ಕರ್ಣ ಕೇಳುವ ಮಾತು  “ ಕಾಡ್ತಿಯಾ ತಾಯಿ?”
          ಆಳದಿಂದ ದುಮ್ಮಾನವನ್ನು ಹೊತ್ತು ಬರುವ ಕರ್ಣನ ದನ್ಯವಾದ ಮಾತು  ಕೇಳುವಾಗ  ನಮ್ಮ ಕಣ್ಣಂಚು ತೇವಗೊಳ್ಳದೇ ಇರಲು ಸಾಧ್ಯವೇ?

          ಇದು ಬಹಳ ಹಳೆಯ ಯಕ್ಷಗಾನ ಧ್ವನಿಸುರುಳಿಯಾದ ರಣವೀಳ್ಯ ಕರ್ಣಭೇದನದ  ಒಂದು ಭಾಗ. ಸಂಗೀತ ಕ್ಯಾಸೆಟ್ ಬಳಗ ಹೊರತಂದ ಹಲವು ಯಕ್ಷಗಾನ ಧ್ವನಿಸುರುಳಿಯಲ್ಲಿ ಇದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬಹುದು. ಹಾಗೇನೇ ಇನ್ನು ಹಲವು ಶ್ರೇಷ್ಠ ಸುರುಳಿಗಳನ್ನ ಇದೇ ಸಂಸ್ಥೆಯವರು ನಮ್ಮ ಮುಂದೆ ಬಿಚ್ಚಿ ಇಟ್ಟು ಬಹಳ ಕಾಲ ಸಂದಿತು.

ಇತ್ತೀಚೇಗೆ ಸಂಗೀತಾ ಸಂಸ್ಥೆ ತನ್ನ  ಅಂತರ್ಜಾಲ ತಾಣದಲ್ಲಿ  ತನ್ನ ಎಲ್ಲ ಯಕ್ಷಗಾನ  ಸಂಗ್ರಹವನ್ನು ಪುನಃ  ಕೇಳುಗರಿಗೆ ತೆರೆದಿಟ್ಟಿತು.. ಇದರ ಸದುಪಯೋಗ ಒಂದು ರೀತಿಯಲ್ಲಿ ನನಗಾಗಿದೆ. ಎಲ್ಲಾ ಧ್ವನಿ ಸುರುಳಿ ನನ್ನ ಸಂಗ್ರಹದಲ್ಲಿದ್ದರೂ ಭೀಷ್ಮ ವಿಜಯ ಎಂಬ ಪ್ರಸಂಗದ ಸುರುಳಿ ಅರಸುತ್ತಿದ್ದವನಿಗೆ ಇದರಲ್ಲಿ ಸಿಕ್ಕಿಬಿಟ್ಟಿತು.
ಹೀಗೆ ರಣ ವೀಳ್ಯ ಕರ್ಣ ಬೇದನ ಮತ್ತು ಭೀಷ್ಮ ವಿಜಯ ಎರಡು ಧ್ವನಿ ಮುದ್ರಣವನ್ನು ಕೊಂಡು ಹಿಂದಿನ ಕಾಲದತ್ತ ಒಂದು ಬಾರಿ ಹೋಗಿ ಬಂದೆ. ಈ ಎರಡು ಕ್ಯಾಸೆಟ್ ನಾನು ಮೊತ್ತ ಮೊದಲು ಕೊಂಡುಕೊಂಡ ಯಕ್ಷಗಾನ ಕ್ಯಾಸೆಟ್ ಗಳು. ಎಂಭತ್ತರ ದಶಕದ ಕೊನೆಯ ಅವಧಿಯದು. ಅದು ಯಕ್ಷಗಾನದ ಸುವರ್ಣ ಯುಗ ಎಂಬಂತಹ ಕಾಲ. ಯಕ್ಷಗಾನ ಧ್ವನಿ ಸುರುಳಿಗಳು ಇತರ ವರ್ಗದ ಧ್ವನಿ ಸುರುಳಿಗಳಿಗೆ ಸಡ್ಡು ಹೊಡೆವಷ್ಟು ಬಿಡುಗಡೆಯಾಗುತ್ತಿದ್ದವು.  ಆಗ ಬಂದ ರಣವೀಳ್ಯ ಮತ್ತು ಭೀಷ್ಮ ವಿಜಯ ಇವುಗಳು ಮಾತ್ರವಲ್ಲ ಸಂಗೀತದವರೇ ಹೊರಡಿಸಿದ ವಾಲಿಮೋಕ್ಷ , ಅಂಗದ ಸಂಧಾನ್, ಅಶ್ವಥಾಮ, ಶಲ್ಯ ಹೀಗೆ ಕೆಲವು ಕ್ಯಾಸೆಟಗಳ ಕಲಾವಿದರುಗಳು ಒಂದೇ ತಂಡದಂತೆ ಇದ್ದು,  ಹಿಮ್ಮೇಳದಲ್ಲಿ, ಬಲಿಪ್ಪರು, ನಿಡ್ಲೆ, ಚಿಪ್ಪಾರು, ಹಾಗೆ ಮುಮ್ಮೇಳದಲ್ಲಿ ಕುಂಬಳೆ, ಉಡುವೆಕೋಡಿ, ಕೋಳ್ಯೂರು, ಪ್ರಭಾಕರ ಜೋಷಿ ಈ ಜತೆಗಾರಿಕೆಯಲ್ಲಿ ಬಿಡುಗಡೆಯಾದ ಕ್ಯಾಸೆಟ್ಗಳಲ್ಲಿ ನನಗೆ ಅತಿ ಹೆಚ್ಚು ಪ್ರಿಯವಾದದ್ದು ರಣವೀಳ್ಯ ಕರ್ಣ ಭೇದನ ಮತ್ತು ಭೀಷ್ಮ ವಿಜಯ.
ರಣವೀಳ್ಯದಲ್ಲಿ ಭಾಗವತರಾಗಿ ಬಲಿಪ ನಾರಾಯಣ ಭಾಗವತ, ಮದ್ದಲೆವಾದಕರಾಗಿ ಚಿಪ್ಪಾರು ಕೃಷ್ಣಯ್ಯ ಬಲ್ಲಾಲ್, ಚೆಂಡೆಯಲ್ಲಿ ನಿಡ್ಲೆ ನರಸಿಂಹ ಭಟ್  ಇನ್ನು ಶ್ರೀ ಕೃಷ್ಣನಾಗಿ ಎಂ ಪ್ರಭಾಕರ ಜೋಷಿ, ಕೌರವನಾಗಿ ಉಡುವೆಕೋಡಿ ಸುಬ್ಬಪ್ಪಯ್ಯ, ಕರ್ಣನಾಗಿ ಕುಂಬಳೆ ಸುಂದರ್ ರಾವ್, ಕುಂತಿಯಾಗಿ ಕೋಳ್ಯೂರು ರಾಮಚಂದ್ರ ರಾವ್, ಹೀಗೆ ಸೀಮಿತ ಪರಿಧಿಯಲ್ಲಿ ಮುದ್ರಿಸಿದ ಈ ಪ್ರಸಂಗ ಅದ್ಭುತ ಸಂಯೋಜನೆಯಾಗಿತ್ತು. ಹಲವು ಸಲ ಈ ಸೀಮಿತ ಅವಧಿಯೊಳಗೆ ಮಾಡುವ ಯಕ್ಷಗಾನದಲ್ಲಿ ನಾಟಕೀಯತೆ ಹೆಚ್ಚಾಗಿ ಸುಳಿಯುತ್ತದೆ, ಪದವೇ ಇಲ್ಲದೆ ಸಂಭಾಷಣೆಯನ್ನು ರೂಪಿಸಿ ಸನ್ನಿವೇಶವನ್ನು ನಿರ್ಮಿಸಬೇಕಾಗುತ್ತದೆ. ಆದರೆ ಈ ರಣವೀಳ್ಯ ಕರ್ಣ ಭೇದನದಲ್ಲಿ ಅದ್ಯಾವ ನಾಟಕೀಯತೆ ಸುಳಿಯದೆ ಒಂದು ಅಚ್ಚು ಕಟ್ಟಿನ ಸಂಯೋಜನೆಯಾಗಿದೆ. ಆರಂಭದಲ್ಲಿ ಬರು ಕೌರವ ಕೃಷ್ಣರ ಸಂಭಾಷಣೆ ಚುಟುಕಾಗಿದ್ದರೂ ಮಾರ್ಮಿಕವಾಗಿ ಮತ್ತು ಅಷ್ಟೇ ವೇಗದಲ್ಲಿ ಬರುತ್ತಿರುವಾಗ ಒಂದು ರೀತಿಯ ಆವೇಶ ಕೇಳುಗನಿಗೂ ಆಗುತ್ತದೆ. ಉಡುವೆಕೋಡಿಯವರ ಕೌರವನಂತೂ ಕಿಡಿ ಉರಿಸಿದಂತೆ ಮಿಂಚಿನ ವೇಗದಲ್ಲಿ ಕೌರವನ ಅರ್ಥವನ್ನು ಹೇಳುವಾಗ ಇಂದಿಗೂ ಸಂಧಾನದ ಕೌರವನೆಂದರೆ ಅದೇ ನೆನಪಿಗೆ ಬರುವಂತಿರುತ್ತದೆ. ಶ್ರೀಕೃಷ್ಣ ನಾಗಿ ಜೋಷಿಯವರೂ  ಬಹಳ ಹಿತಮಿತವಾಗಿ ಅತ್ಯಂತ ಸ್ವಾರಸ್ಯಭರಿತ ಮಾತುಗಾರಿಕೆಯನ್ನು ಒಪ್ಪಿಸಿಬಿಟ್ಟಿದ್ದಾರೆ. ಕೌರವನ ಸನ್ನಿವೇಶದಲ್ಲಿ ಮಾತ್ರವಲ್ಲ ಮುಂದೆ ಕರ್ಣನ ಜತೆಗಿನ ಸಂಭಾಷಣೆಯಲ್ಲೂ ಸನ್ನಿವೇಶ ಸೃಷ್ಟಿಯಲ್ಲಿ ಜೋಷಿಯವರ ಚಿನಕುರುಳಿಯಂತಹ ಚುರುಕಿನ ಮಾತುಗಾರಿಕೆ ಅಧ್ಬುತ. ಇಡೀ ಧ್ವನಿಸುರುಳಿಯ ಮತ್ತೊಂದು ವಿಶೇಷತೆಯೆಂದರೆ ಕುಂಬಳೆಯವರ ಕರ್ಣ. ಧರ್ಮಸ್ಥಳ ಮೇಳದ ಆ ಕಾಲದ ಪ್ರಸಿದ್ಧ ಪ್ರಸಂಗ ಮಹಾರಥಿಕರ್ಣ ್ದ ಅದೇ ಪಾತ್ರ ಸಂಭಾಷಣೆಯ ಭಾಗವನ್ನು ಕುಂಬಳೆಯವರು ನಿರ್ವಹಿಸಿದ್ದು ಮಾತ್ರವಲ್ಲ ಆನಂತರದ ಈ ಪ್ರಸಂಗದ ತಾಳ ಮದ್ದಲೆಗಳಲ್ಲಿ ಇದನ್ನೇ ಒಂದು ಮಾದರಿಯಾಗಿ ಅನುಕರಿಸುವಂತೆ ಅಗಿದ್ದು ಮಾತ್ರ ಇತಿಹಾಸ.
ಕರ್ಣನ ಜನ್ಮ ವೃತ್ತಾಂತವನ್ನು ಅವನಿಗೆ ಅರುಹುದಕ್ಕಾಗಿ ಶ್ರೀಕೃಷ್ಣ ತನ್ನೊಂದಿಗೆ ಕರೆದೊಯ್ಯುತ್ತಾ ಆ ಸಂಭಾಷಣೆ ಪದಕ್ಕೆ ಅನುಸಾರವಾಗಿ ಬೆಳೆಸಿಕೊಂಡು ಹೋಗುವ ರೀತಿ ಕೇಳುಗನನ್ನು ಸಮ್ಮೋಹನ ಮಾಡುತ್ತದೆ. ಸರಸವಾಡುವಂತೆ ಛೇಡಿಸುತ್ತಾ .. ಕೃಷ್ಣ ಕರ್ಣನನ್ನು ಅತ್ತೆಯಮಗ ಎಂದು ಸಂಬೋಧಿಸುತ್ತಾನೆ ಆಗ ಕರ್ಣ ಹೇಳುವ ಮಾತು “ ಯಾವ ಅತ್ತೆಯ ಮಗೆ? ನಿನಗೆಷ್ಟು ಅತ್ತೆಯರುಂಟು ಎಂದು ಲೆಕ್ಕ ಇಟ್ಟವರಾರು? ನಿನ್ನ ಅತ್ತೆಯರ ಕೂಟದಲ್ಲಿ ನನ್ನ ತಾಯಿ ಪತ್ತೆ ಆಗಬೇಕೋ ಬೇಡ್ವೋ?” ಇಂತಹ ಮಾರ್ಮಿಕ ಸಂಭಾಷಣೆಯನ್ನು ಇಂದಿಗೂ ಕೇಳುಗರು ಜ್ಞಾಪಿಸಿಕೊಳ್ಳುತ್ತಾರೆ. ಮುಂದಿನ ಸನ್ನಿವೇಶ ಕುಂತಿ ಮತ್ತು ಕರ್ಣನ ಭೇಟಿ. ಭಾವನಾತ್ಮಕವಾಗಿ ಬಿಂಬಿಸಲ್ಪಟ್ಟರೂ ಕೃಷ್ಣ ಆದೇಶದಂತೆ ಬರುವ ಕುಂತಿ ಆ ಭಾವಾವೇಶವನ್ನು ತೋರಿಸುವುದು ಕಡಿಮೆಯಾದರೂ ಕರ್ಣ ಮಾತ್ರ ತಾಯಿಯನ್ನು ಕಂಡು ಬಹಳ ಭಾವುಕನಾಗಿಬಿಡುತ್ತಾನೆ. ಚುರುಕು ಸಂಭಾಷಣೆಯೊಂದಿಗೆ ಬಲಿಪ್ಪರ “ಚಿನ್ನಾ ಕೇಳೆನಗೆ ಹಿರಿಯ ನಂದನಾಗಿ....” ಎಂಬ ಪದ ಸನ್ನಿವೇಶವನ್ನೂ ಗಂಬೀರತೆಗೆ ತಳ್ಳಿಬಿಡುತ್ತದೆ.
ಎಕಾಂತ ಮತ್ತು ನಿಶ್ಯಬ್ಧ ಪರಿಸರದಲ್ಲಿ ಈ ಯಕ್ಷಗಾನ ಒಂದಲ್ಲ ಹಲವು ಸಲ ಕೇಳಿದರೂ ಮನಸ್ಸಿಗೆ ತಟ್ಟುತ್ತದೆ. ಪರಿಸ್ಥಿತಿ ತನ್ನ ನಿಯಂತ್ರಣದಲ್ಲಿದೆ ಎಂದು ಭಾವಿಸುವ ಕೌರವ ನಿಯಂತ್ರಣದ ವಾಘೆಯ ತುದಿ ಕೃಷ್ಣ ನ ಕೈಯಲ್ಲಿರುವುದನ್ನು ತಿಳಿಯದೇ ಹೋಗುತ್ತಾನೆ. ಅತ್ಯಂತ ಯೋಜನಾಬದ್ಧವಾಗಿ ರಚಿಸಿದ ಈ ಪ್ರಸಂಗ ಅದೆಷ್ಟು ಸಹಜವಾಗಿ ಒಂದು ಘಂಟೆಯ ಧ್ವನಿ ಸುರುಳಿಗೆ ಹೊಂದಿಕೊಳ್ಳುತ್ತದೆ ಎಂದರೆ ಎಲ್ಲಿಯೂ ಅದು ಸಂಕಲನ ಗೊಂಡಿದೆ ಎಂದನಿಸುವುದಿಲ್ಲ. ಇದರಲ್ಲಿ ಇನ್ನೊಂದು ಅಂಶ ನನಗೆ ಅಪ್ಯಾಯಮಾನವಾಗಿ ಪರಿಣಮಿಸಿದ್ದು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಲೆ.ಪ್ರತೀ ಯೊಂದು ಪೆಟ್ಟುಗಳು ನೆನಪಿನ ಪುಸ್ತಕದ ಪುಟಗಳಿಗೆ ಒತ್ತಿದ ಮುದ್ರೆಯಂತೆ ಭಾಸವಾಗುತದೆ. ಆ ಮೃದಂಗದಿಂದ ಬರೆದ ಕಾವ್ಯ  ಅದ್ಭುತ.
ಇದೇ ಯಕ್ಷಗಾನದೊಂದಿಗೆ ಕೊಂಡುಕೊಂಡ ಇನ್ನೊಂದು ಯಕ್ಷಗಾನ ಭೀಷ್ಮ ವಿಜಯ... ಇದೇ ತಂಡದ ಒಂದು ಸುಂದರ ಯಕ್ಷಗಾನ. ಇದರಲ್ಲಿ ಬಲಿಪ್ಪ ,ನಿಡ್ಲೆ, ಮತ್ತು ಚಿಪ್ಪಾರು ಹಿಮ್ಮೇಳದಲ್ಲಿದ್ದರೆ, ಭೀಷ್ಮನಾಗಿ ಕುಂಬಳೆ  , ಸಾಲ್ವನಾಗಿ ಉಡುವೆಕೋಡಿ, ಪರಶುರಾಮನಾಗಿ ಜೋಷಿ ಹಾಗು ಅಂಬೆಯಾಗಿ ಕೋಳ್ಯೂರು. ನಿಡ್ಲೆ ನರಸಿಂಹ ಭಟ್ ರವರ ಮದ್ದಲೆ ವಾದನ ಬಹಳ ಅಪರೂಪ. ಹದವಾದ ನಿಡ್ಲೆ ಶೈಲಿ ಪ್ರತಿಯೋಂದು ಪದವನ್ನೂ ಬಿಡದೆ ಆಲಿಸುವಂತೆ ಮಾಡುತ್ತದೆ. “ ಎನುತಲಾಜ್ಞೆಯನಿಂತು ಕಾಶೀ ಜನಪ...” ಒಡ್ಡೋಲಗದ ಪದ, “ ಸರಸಿಜಾನನೆ  ಕೇಳು ಪೇಳುವೆನು.. ...” “ ವಸುಧೇಶ ಕೇಳಯ್ಯ...” ಮುಂತಾದ ಪದಗಳು ಕೇಳಿ ಮುಗಿಸಿದಾಗ ಮತ್ತಿನ ಪದಕೇಳಲು ಅರ್ಥ ಯಾವಗ ಮುಗಿಯುತ್ತದೆ ಎಂದು ತವಕದಿಂದ ಕಾಯುವ ಹಾಗೆ ಮಾಡುತ್ತದೆ. ಎರಡೂ ಕ್ಯಾಸೆಟ್ ನಲ್ಲಿ ಹಿಮ್ಮೇಳವೂ ಮುಮ್ಮೇಳವೂ ಸಮ ತೂಕದಿಂದ ಕೂಡಿದ್ದು ಯಕ್ಷಗಾನದ ಹೂರಣದ ತುಣೂಕನ್ನು ಸವಿದ ಅನುಭವವಾಗುತ್ತದೆ.
ಸಹಸ್ರ ಸಹಸ್ರ ಸಂಖ್ಯಯಲ್ಲಿ ಯಕ್ಷಗಾನ ಧ್ವನಿ ಸುರುಳಿಗಳು ಮಾರುಕಟ್ಟೆಗೆ ಬಂದಿದ್ದರೂ ಅದರಲ್ಲಿ ಗುಣಮಟ್ಟವನ್ನು ಗಮನಿಸಿದರೆ ಇವುಗಳು ಅಗ್ರಪಂಕ್ತಿಯಲ್ಲಿ ವರ್ಗೀಕರಿಸಲ್ಪಡುತ್ತದೆ.ಯಕ್ಷಗಾನಕ್ಕೆ ಅನುಕೂಲವಾಗುವಂತೆ  ಈ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡದ್ದನ್ನು ಈ ಮೂಲಕ ಕಾಣಬಹುದು.ಇಂದು ಯಕ್ಷಗಾನ ಸಂಗ್ರಹದಲ್ಲಿ ಅತಿ ಹೆಚ್ಚು ಭಾಗವನ್ನು ಕ್ಯಾಸೆಟ್ ಮೂಲಕವೆ ಇದ್ದು ಅವುಗಳಲ್ಲಿ ಇಂತಹ ಹಲವು ಕ್ಯಾಸೆಟ್ ಗಳು ಅರ್ಥಪೂರ್ಣ ದಾಖಲೀಕರಣ ಎನ್ನಬಹುದು. ಬಲಿಪ್ಪ ನಿಡ್ಲೆ ಚಿಪ್ಪಾರು ಜತೆಗಾರಿಕೆಯ ಯಕ್ಷಗಾನ ಪದಗಳು ಕೇಳಬೇಕೆಂದರೆ ಇಂದು ಇವುಗಳ ಮೊರೆ ಹೋಗಬೇಕು. ಮುಂದಿನ ಜನಾಂಗಕ್ಕೆ ಇವರುಗಳ ಶೈಲಿಯನ್ನು ಪರಿಚಯಿಸಬೇಕಿದ್ದರೆ  ಇವುಗಳು ಸೂಕ್ತ ಉದಾಹರಣೆಯಾಗಬಲ್ಲುದು.
ಯಾವುದೇ ಯಕ್ಷಗಾನ ಕೇಳುವಂತಾಗಬೇಕಾದರೆ ಅವುಗಳ ಧ್ವನಿ ಮುದ್ರಣದ ಪಾಲು ಮಹತ್ವವೆನಿಸುತ್ತದೆ. ಯಕ್ಷಗಾನಕ್ಕೂ ಅನ್ಯ ಪ್ರಾಕಾರಕ್ಕೂ ಧ್ವನಿ ಮುದ್ರಣ ರೀತಿಯಲ್ಲಿ ಬಹಳವೆತ್ಯಾಸವಿದೆ. ದ್ವನಿ ಮುದ್ರಣ ಸ್ಪಷ್ಟವಾಗಿ ಆಗದೇ ಇದ್ದಲ್ಲಿ ಚೆಂಡೆ ಮದ್ದಲೆ ಪೆಟ್ಟುಗಳಾಗಲೀ ಹಾರ್ಮೋನಿಯಂ ಶೃತಿಯಾಗಲೀ ಸಹಜವಾಗಿ ಕೇಳಿಸದೇ ಇನ್ನಾವುದೋ ದ್ವನಿ ತಂರಂಗಗಳನ್ನು ಹೊಮ್ಮಿಸಿ ಸಹಜ ಯಕ್ಷಗಾನದ ಸೊಗಡನ್ನು ಬಿಂಬಿಸುವುದಿಲ್ಲ.

 ಸಂಗೀತದವರ ದ್ವನಿ ಮುದ್ರಣದಲ್ಲಿ ಸ್ಪಷ್ಟ ಹಾಗು ಶುಭ್ರ ದ್ವನಿ ಮುದ್ರಣ. ಚೆಂಡೆ ಮದ್ದಲೆ ಪೆಟ್ಟುಗಳು ಸಹಜವಾಗಿ ಮುದ್ರಣಗೊಂಡಿರುತ್ತದೆ.ಅತ್ಯುತ್ತಮ ಮಟ್ಟದ ದ್ವನಿ ಮುದ್ರಣ ಕರ್ಣಾನಂದಕರವಾಗಿದ್ದು ಕೇಳುವಲ್ಲಿ ತಲ್ಲೀನರಾಗಿ ಆಲೀಸಬಹುದು.ಸಂಗೀತಾ ಕಂಪೆನಿಯವರು ತಮ್ಮ ಹಳೆಯ ಕಡತಗಳನ್ನು ತೆರೆದು ಪುನಃ ಬಹಿರಂಗ ಪ್ರಪಂಚಕ್ಕೆ ತೆರೆದಿಟ್ಟದ್ದು ಯಕ್ಷಗಾನ ಕೇಳುಗರಿಗೆ ಅತ್ಯಂತ ಸಹಕಾರಿಯಾಗಬಲ್ಲುದು. ಸ್ಮರಣೀಯ ಎನ್ನಬಹುದಾದ ಹಲವು ಯಕ್ಷಗಾನಗಳು ಇಲ್ಲಿ ಲಭ್ಯ. ಅವರ ಅಂತರ್ಜಾಲ ತಾಣಕ್ಕೆ ಭೇಟಿ ಕೊಟ್ಟು ಅದರಲ್ಲಿ ನೋಂದಾಯಿಸಿಕೊಂಡು ತಮಗೆ ಇಷ್ಟವಾದುದನ್ನು ಪಡೆಯಬಹುದು. ಒಂದು ಸಲ ಬೇಡಿಕೆ ಸಲ್ಲಿಸುವಾಗ ಕಡಿಮೆ ಎಂದರೆ ನೂರು ರೂಪಾಯಿಗಲ ಮೌಲ್ಯಕ್ಕೆ ಬೇಡಿಕೆ ಸಲ್ಲಿಸಬೇಕು. ಹಣ ಪಾವತಿಯಾದ ಕೆಲವೇ ಕ್ಷಣಗಳಲ್ಲಿ ನಮ್ಮ ಬಯಕೆಯ ಯಕ್ಷಗಾನ ಅಲ್ಲಿ ಲಭ್ಯವಿರುತ್ತದೆ. ಯಕ್ಷಗಾನ ಕೇಳುಗರು ಇವನ್ನು ತಮ್ಮ ಅಭಿರುಚಿಗೆ ತಕ್ಕಂತೆ ಉಪಯೋಗಿಸಿಕೊಳ್ಳಬಹುದು.  


Thursday, May 31, 2012

ಅನುದಾನ ಮತ್ತು ಯಕ್ಷಗಾನ




ಚಿತ್ರಕೃಪೆ : ಶ್ರೀ ಉಲ್ಲಾಸ್
ಮಹಾಭಾರತದಲ್ಲಿ ಬರುವ ಅತ್ಯಂತ ವೈಶಿಷ್ಟ್ಯ ಪಾತ್ರಗಳಲ್ಲಿ ಒಂದು ಕರ್ಣನ ಪಾತ್ರ. ಸ್ವಂತಿಕೆ ಇಲ್ಲದ ಈ ಪಾತ್ರವನ್ನು ತಮ್ಮ ಸ್ವಂತ ಚಿಂತನೆಗಳಿಂದ ಹಲವು ವಿಧದಲ್ಲಿ ಕಟ್ಟಿ ಬೆಳೆಸಿದ್ದುದನ್ನು  ಯಕ್ಷಗಾನದಲ್ಲಿ ಬಹಳಷ್ಟು ಕಾಣಬಹುದು. ಯಕ್ಷಗಾನದ ವೈಷಿಷ್ಟ್ಯ ಉಲ್ಲೇಖಿಸಲ್ಪಡುವುದೇ ಇಂತಹ ಹಲವು ಅಂಶಗಳಿಂದ. ಸ್ವಂತ ಚಿಂತನೆ ಇಲ್ಲದ ಪಾತ್ರಗಳಲ್ಲಿ ಇದು ಒಂದು ಅಂತ ಹೇಳುವುದಕ್ಕೆ ಬಲವಾದ ಕಾರಣ ಆರಂಭದಿಂದ ಅಂತ್ಯದ ವರೆಗೂ ಕರ್ಣನ ಬದುಕು ಕೌರವನ ಪ್ರಾಯೋಜಕತ್ವದಲ್ಲಿ ಸಾಗುತ್ತದೆ. ಕೌರವನ ಈ ಹಂಗಿನ ಉರುಳು ಅದು ಕೌರವ ಬಿಗಿಯದೇ ಇದ್ದರೂ ಪರೋಕ್ಷವಾಗಿ ಬಿಗಿಸಿಕೊಳ್ಳುತ್ತಾ ಸಾಗುತ್ತದೆ. ಕೌರವನ ಮನಸ್ಸಿನ ಭಾವನೆಗೆ ಅನುಸಾರವಾಗಿ ಕರ್ಣನ ಕಲ್ಪನೆಗಳು ಅರಳಿಕೊಳ್ಳುತ್ತವೆ. ಕರ್ಣನಲ್ಲಿ ಒಂದು ಸ್ವಂತ ವ್ಯಕ್ತಿತ್ವ ಇದ್ದರೂ ಅದು ಕೌರವನಿಂದಲೇ ರೂಪೀಕರಿಸಿದಂತೆ ಸಾಗುತ್ತದೆ. ಕರ್ಣನ ಧ್ವನಿ ಅವನದ್ದಾಗಿದ್ರೆ ಅದರ ಭಾವ ಕೌರವನದ್ದು.
ಇತ್ತೀಚೆಗೆ ಒಂದು ಬ್ಲಾಗ್ ಪುಟಗಳಲ್ಲಿ ಬಂದ ಲೇಖನ ಈ ಕರ್ಣನ ಬದುಕನ್ನು ನೆನಪಿಗೆ ಬರುವಂತೆ ಮಾಡಿಬಿಟ್ಟಿತು. ಯಕ್ಷಗಾನದ ಬಗ್ಗೆ ಹಲವಾರು ಟೀಕೆಯೊಂದಿಗೆ ಕೆಲವೊಂದು ಅಂಶಗಳನ್ನು ವಿಮರ್ಶಿಸಿ ಬರೆಯಲಾಗಿತ್ತು.  ಆ ಲೇಖನ ಹೇಗೇ ಇರಲಿ ಅದರ ಬಗೆಗಿನ ವಿಮರ್ಶೆಯಾಗಲೀ ಅಭಿಪ್ರಾಯವಾಗಲೀ ಈ ಚಿಂತನದ ಉದ್ದೇಶವಲ್ಲ. ಬದಲಾಗಿ ಹೀಗೊಂದು ದೃಷ್ಟಿಕೋನದತ್ತ ಹರಿದ ಚಿಂತನೆಯ  ಹೊಲಬುಗಳು ಮಾತ್ರವನ್ನಷ್ಟೆ ತೋರಿಸುವ ಪ್ರಯತ್ನ. ಒಂದು ರೀತಿಯಲ್ಲಿ ವಾಸ್ತವದಲ್ಲಿ ವಿಡಂಬನೆಯೆಂಬುದು ಪ್ರತಿಯೊಂದು ವಿಷಯಗಳಲ್ಲೂ ಅಡಕವಾಗಿರುತ್ತದೆ ಎಂಬುದಷ್ಟೆ ಭಾವ.
ಇಂದು ಯಕ್ಷಗಾನ ಪ್ರದರ್ಶನಗಳು ಅದರಲ್ಲೂ ತೆಂಕುತಿಟ್ಟು ವ್ಯಾಪಾರಿ ಉದ್ಯಮದಂತೆ ಉಳಿದಿಲ್ಲ. ವ್ಯವಸಾಯೀ ಮೇಳಗಳು.. ತಮ್ಮ ಡೇರೆಯನ್ನು ಎಂದೋ ಸುರುಳಿ ಸುತ್ತಿ ಆಗಿ ಹೋಗಿದೆ. ಆಡೇರೆಯ ಧೂಳಿನ ಕಣಗಳು ಇತಿಹಾಸದ ಗರ್ಭಕ್ಕೆ ಸೇರಿ ಆಗಿಹೋಗಿದೆ. ಹಾಗಾಗಿ ಇಂದು ಅದನ್ನು ಒಂದು ಕಾಲದಲ್ಲಿದ್ದಂತೆ ಉದ್ಯಮ ಎಂದು ಗುರುತಿಸಿಕೊಳ್ಳುವುದು ಕಷ್ಟವಾಗುತ್ತದೆ. ಬಡಗುತಿಟ್ಟಿಗೆ ಇದು ಅನ್ವಯವಾಗುತ್ತದೆಯೋ ಎಂದು ಅನುಮಾನ. ಯಾಕಂದರೆ ಅಲ್ಲಿ ಇನ್ನೂ ಅಲ್ಪ ಸ್ವಲ್ಪ ಉದ್ಯದ ರೂಪದಲ್ಲಿ ಇದು ಉಳಿದುಕೊಂಡಿದೆ ಅಂತ ನನ್ನ ಭಾವನೆ. ಅದಾವುದು ಇಲ್ಲಿನ ವಿಚಾರವಲ್ಲ. ಬದಲಾಗಿ ಯಕ್ಷಗಾನ ಎಂಬುದರಿಂದ ಆದಾಯದ ಮೂಲ ಹೇಗೆ ಕಳಚಿಕೊಂಡಿತೊ ಯಕ್ಷಗಾನದ ಅಸ್ತಿತ್ವ ಬೇರೆ ಮೂಲಾಧರವನ್ನೇ ಅಶ್ರಯಿಸ ತೊಡಗಿತು. ಮುಖ್ಯವಾಗಿ ಹಲವಾರು ಕಡೆ ( ಇದು ಬೆಂಗಳೂರಲ್ಲಿ ಅತ್ಯಂತ ವಾಸ್ತವದ ಸಂಗತಿ.)  ಇದು ರಾಜ್ಯದ ಕಲೆ ಎಂಬ ಲೇಬಲ್ ನಲ್ಲಿ ಪ್ರಾಯೋಜಕತ್ವ ಅರಸುವಂತೆ ಮಾಡಿತು. ಹಲವು ಸಲ ರಾಜ್ಯದ ಕಲೆ ಎಂಬ ಈ ಗೌರವ ಅದು ಕಲೆಯ ಮೇಲಿನ ಅಭಿಮಾನದಿಂದಲ್ಲ, ಅದರಲ್ಲೂ ಒಂದು ಜಾಹೀರಾತಿನ ವಾಸನೆಯನ್ನು ಕಾಣಬಹುದು. ದೇವರಿಗೆ ಜಾಹೀರಾತು ಕೊಟ್ಟು ಹರಕೆ ಪೂಜೆ ಒಪ್ಪಿಸಿದಂತೆ,,, ಜಾತ್ರ ಉತ್ಸವದ ಫಲಕಗಳಲ್ಲಿ ದೇವರ ಪ್ರತಿಮೆಗಿಂತ ಮುಖ್ಯವಾಗಿ ತಮ್ಮ ಚಿತ್ರವನ್ನು ಅಚ್ಚು ಹಾಕುವಂತೆ ಇದು ಒಂದು ಕಲಾಸೇವೆ ರೂಪದಲ್ಲಿ ಕ್ರಿಯಾತ್ಮಕವಾಗುವುದುಂಟು. ಹಾಗಾಗಿ ಯಕ್ಷಗಾನ ಒಂದು ರೀತಿಯಲ್ಲಿ ಪ್ರಾಯೋಜಕತ್ವದಡಿಯಲ್ಲೇ ಉಸಿರಾಡುವಂತೆ ಭಾಸವಾಗುತ್ತದೆ.
ಮೊದಲೆಲ್ಲ ಹಲವು ಕಲೆಗಳು ಕಲಾವಿದರು ಬದುಕುತ್ತಿದ್ದದ್ದು ರಾಜಾಶ್ರಯದಿಂದಲೇ ಆದರೂ ಇಂದು ಇದು ಇನ್ನೊಂದು ರೂಪದಲ್ಲಿ ಮುಂದುವರೆಯುತ್ತಿದೆ ಎಂದು ಭಾವಿಸಿ ತೃಪ್ತರಾಗಬೇಕಷ್ಟೆ. ಆದರೆ ವಾಸ್ತವ ಅದು ಇನ್ನೊಂದು ಚಿಂತನೆಗೆ ತೆರೆದುಕೂಳ್ಳುವಂತೆ ಮಾಡುತ್ತದೆ. ಯಕ್ಷಗಾನದ ಮೇಲೆ ಅಭಿಮಾನದಿಂದ ಗೌರವ ಪ್ರೀತಿಯಿಂದ ಅದಕ್ಕೆ ಪ್ರಾಯೋಜಕತ್ವ ಇದ್ದರೆ ಅದು ಯಕ್ಷಗಾನ ಕಲೆಗೆ ಪೂರಕವಾಗಿಯೇ ಉಪಯೋಗವಾಗುತ್ತದೆ. ಆದರೆ ಅದರ ಗಂಭೀರತೆಯ ಅರಿವಿಲ್ಲದೆ ಹರಿದು ಬರುವ ಸಹಾಯದ ಪರಿಣಾಮ ಅದು ಹಾಗೇ  ಪೂರಕವಾಗುತ್ತದೆ ಎಂದು ಹೇಳಬಹುದೇ?
ಇಂದು ಒಂದು ಸಂಘ ಸಂಸ್ಥೆ ಕಟ್ಟಿ ಅದನ್ನು ನೋಂದಾಯಿಸಿ ಅದರ ಆಶ್ರಯದಲ್ಲಿ ಕಲಾಸೇವೆಯನ್ನು ಮಾಡುತ್ತ ತಾವು ಮಾಡಿದ ಸೇವೆಗೆ ಸಹಾಯವಾಗಿ ಸರಕಾರದಿಂದ ಅನುದಾನವನ್ನು ಪಡೆಯುತ್ತಾರೆ. ಸರಕಾರದಿಂದ ಸಿಗುವ ಈ ಸಹಾಯಕ್ಕೆ ಸದ್ಯದಲ್ಲಿ ನಿಯಮ ನಿಬಂಧನೆಗಳು ಅಷ್ಟೊಂದು ಕಠಿಣವಾಗಿಲ್ಲದೇ ಇರಬಹುದು. ಆದರೆ ಮುಂದೊಂದು ದಿನ ಅದು ಬರಲಾರದು ಎನ್ನಲಾದೀತೆ? ಸರಕಾರೀ ಕೃಪಾಪೋಷಿತರಾಗುವುದು ಇನ್ನಿನ್ನು ಹಲವು ಸಮಸ್ಯೆಗಳನ್ನೂ ಗೊಂದಲಗಳನ್ನು ಸೃಷ್ಟಿಸಬಹುದು.  ಈಗಲಂತು ಯಕ್ಷಗಾನಕ್ಕೆ ಒಂದು ಪ್ರತ್ಯೇಕ ಅಕಾಡೆಮಿ ರೂಪುಗೊಂಡ ಮೇಲೆ ಮುಚ್ಚಿದ್ದ ಕಣ್ಣುಗಳು ಅರೆತೆರೆದು ನಿಧಾನವಾಗಿ ಅರಳಿಕೊಂಡದ್ದು ಮಾತ್ರವಲ್ಲ ಅದು ತಿಕ್ಕಿ ತಿಕ್ಕಿ ಕೆಂಪಗಾಗುತ್ತಿವೆ. ಕಾರಣಗಳು ಏನೇ ಇರಲಿ ಮುಂದಾಗುವ ಪರಿಣಾಮಗಳು ಯೋಚಿಸುವಂತೆ ಮಾಡುವುದರಲ್ಲಿ ಅನುಮಾನವಿಲ್ಲ.
          ಆರಾಧನಾ ಸ್ಥಳಗಳು ರಾಷ್ಟ್ರೀಕರಣಗೊಂಡ ಮೇಲೆ ಮನಸ್ಸು ತೆರೆದು ಕಣ್ಣು ಮುಚ್ಚಿ  ಪ್ರಾರ್ಥನೆ ಮಾಡುವುದಕ್ಕೂ ನಿಬಂಧನೆಗಳು ನಿಯಮಗಳು ಬಂದಿವೆ. ಈ ನಿಯಮಗಳಿಗೆ ಭಗವಂತನೂ ಒಗ್ಗಿಕೊಂಡ ಮೇಲೆ ನ್ಯಾಯ ನಿಬಂಧನೆಯ ಬಾಹುಗಳು ಭಗವಂತನ ಸುತ್ತಲು ಬಿಗಿಯತೊಡಗಿವೆ. ಪ್ರತಿಯೊಂದು ಹೆಜ್ಜೆಗಳನ್ನು ಯೋಚಿಸಿಯೇ ಮುಂದಡಿಯಿಡಬೇಕಾದಂತಹ ಅನಿವಾರ್ಯತೆಯನ್ನು ಮನುಷ್ಯನೇ ನಿರ್ಮಿಸಿಕೊಂಡು ಮಾನವೀಯತೆಯ ಆತ್ಮೀಯತೆಯ ಕವಚವನ್ನು ಎಂದೋ ಕಳಚಿಟ್ಟಾಗಿದೆ.  ಆ ಕವಚ ಕೈಗೆ ಸಿಗದಷ್ಟು ಮರೆಯಲ್ಲಿ ಈಗ ಅಡಗಿ ಕುಳಿತಿದೆ. ಎಲ್ಲವು ಮನುಷ್ಯ ನಿರ್ಮಾಣ ಇದರಲ್ಲಿ ಭಗವಂತ ನಿಸ್ಸಹಾಯೀ ಅಂತ  ಹೇಳಬಹುದೇ?
           
          ಯಕ್ಷಗಾನಕ್ಕೊಂದು ಅಕಾಡೆಮಿ ಹಲವು ದಿನದ ಕನಸು ನನಸಾಗಿದೆ. ಯಕ್ಷಗಾನದ ಬೆಳವಣಿಗೆ ಇದರಿಂದ ಬಹಳ ಅನುಕೂಲವಾಗಬಹುದು ಎಂದು ಬಹಳ ಅಭಿಮಾನಿಗಳ ನಿರೀಕ್ಷೆ. ಇದು ಸುಳ್ಳಲ್ಲ.  ಯಕ್ಷಗಾನದಂತಹ ಕಲೆಗೆ ಇದು ಎಂದೋ ಆಗಬೇಕಿತ್ತು. ಎಲ್ಲ ಅನುಕೂಲಗಳು ಒದಗಿ ಯಕ್ಷಗಾನ ಯಕ್ಷಗಾನವಾಗಿಯೇ ಉಳಿಯಲಿ ಎಂದು ಹಾರೈಸಬಹುದು. ಎಲ್ಲ ಅನುದಾನವು ಪೂರಕವಾಗಿದ್ದಲ್ಲಿ ಇದು ನಿಜವಾಗಿಯೂ ಅನುಕೂಲವಾಗಬಹುದು. ಅನುದಾನದೊಂದಿಗೆ ನಿಯಂತ್ರಣದ ವಾಘೆಯೂ ಬಂಧಿಸಲ್ಪಟ್ಟರೆ ... ಹಲವು ವಿಧದ ಅವಿಷ್ಕಾರ ಕಾದುಕುಳಿತಂತೆ ಬಳಕೆಗೆ ಬರಬಹುದು. ಪ್ರತಿಯೊಂದು ಹೆಜ್ಜೆಗೂ ಎಚ್ಚರಿಕೆವಹಿಸಬೇಕಾದ ಅನಿವಾರ್ಯತೆ ಬರಬಹುದು. ಹಲವು ಜಿಜ್ಞಾಸೆಗಳು ಪ್ರಶ್ನೆಗಳು ಹುಟ್ಟಿಕೊಳ್ಳಬಹುದು.  ಯಕ್ಷಗಾನ ಮನು ಮಹರ್ಷಿಯ ಸಿದ್ದಾಂತವನ್ನು ಪ್ರತಿಪಾದಿಸುತ್ತಿದೆ ಅದು ಸರಿಯಲ್ಲ ಅದನ್ನು ಬದಲಾಯಿಸಬೇಕು. ಕೋಮುವಾದ ರಾಜಕೀಯ ಕಾರಣಗಳಿಂದ ಅರ್ಥಗಾರಿಕೆಗೆ ಸೆನ್ಸಾರ್ ಹಾಕುವ ಅನಿವಾರ್ಯತೆ ಬರಬಹುದು. ಕರ್ಣನನ್ನು “ ಸೂತನ ಮಗ ...” ಎಂದು ಕರೆದರೆ ಅದು ಜಾತಿ ನಿಂದನೆಯಾಗಬಹುದು. “ದುಷ್ಯಾಸನ ವಧೆ” ಅತ್ಯಂತ ಭೀಭತ್ಸ ಪ್ರಸಂಗ ಎನಿಸಿ ಅದು ರಂಗದಿಂದ ಮಾಯವಾಗಬಹುದು.  ಪ್ರತಿ ಅರ್ಥವಿಲ್ಲದ ಬದಲಾವಣೆಗಳು ಬಳಕೆಗೆ ಬರಬಹುದು. ಹೀಗೆ ಯೋಚಿಸಿದಾಗ ಎಲ್ಲ ಅನುದಾನವನ್ನು ಪಡೆದುಕೊಂಡ ನಂತರ ಹೇಗಿರಬಹುದು? ಕೃತಕ ಗೊಬ್ಬರ ಹಾಕಿ ಕಸಿ ಮಾಡಿ ಬೆಳೆಸಿದ ಮಾವಿನ ಮರದಂತೆಯೋ ಇನ್ನಾವುದೊ ಸಸಿಯಂತೆ ಕಂಗೊಳಿಸಬಹುದು. ಅನುದಾನ ಮೂಗಿಗೆ ಹಚ್ಚಿದ ತುಪ್ಪದಂತೆ ಆಗದೇ ಉಳಿದರೆ ಅದು ಭಾಗ್ಯ ಎಂದೇ ತಿಳಿಯಬೇಕು. ನಮ್ಮ ಮನೆಯ ಸಮಾರಂಭ ಅದು ನಮ್ಮೊಳಗಿನ ಅತ್ಮಾಭಿಮಾನದ ವಿಷಯವಾಗಿ  ಹೇಗೆ ಕಾಣಬಲ್ಲೇವೊ ಹಾಗೆ ನಮ್ಮ ಸಂಸ್ಕೃತಿಯ ಕಲೆ. ಅದು ಅಭಿಮಾನದ ಸಂಕೇತವಾಗಬೇಕು. ನಮ್ಮ ಅಭಿಮಾನದಲ್ಲಿ ದೂಷಣೆ ಶೋಷಣೆ ಕಲೆಯಲ್ಲಿ ಸುಳಿಯದೆ ಅದು ಭವ್ಯ ಸಂಸ್ಕೃತಿಯ ಕಲೆಯಾಗಿಯೇ ಉಳಿಯಬೇಕು.
          ಆದರೂ ಒಂದು ಆಶಯ ಯಕ್ಷಗಾನ ಬೆಳಗಬೇಕು. ಅದು ಪ್ರಾಮಾಣಿಕ ಅಭಿಮಾನದಿಂದ ಬೆಳಗಿದರೆ ಆ ಬೆಳಕಿನ ಪ್ರಬೆಯೂ ಹೆಚ್ಚು. ಅನುದಾನದ ಅಥವಾ ಇನ್ನಿತರ ಸಹಾಯ ನಿರೀಕ್ಷೆಯಿಂದ ಅದು ಬೆಳೆಯುವಂತಾಗಬಾರದು. ನಿಸ್ವಾರ್ಥ ಸೇವೆ ಲಭ್ಯವಾದಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಪೂರ್ಣ ಪ್ರಮಾಣದಲ್ಲಿ ನೈಜ ರೂಪದಲ್ಲೇ ಕಲೆ ಅರಳಬಹುದು.  
         







Saturday, May 12, 2012

ಪ್ರವೃತ್ತಿ ಮತ್ತು ನಿವೃತ್ತಿ

          ಪಾತ್ರಧಾರಣೆ ಮುಗಿಸಿ ರಂಗ ಬಿಟ್ಟು ಚೌಕಿ ಸೇರಿದಾಗ ತಿರುವಿ ತಿರುವಿ ಕುಣಿದು ಕುಣಿದು ಕುತ್ತು ಹಾರಿದ ಪರಿಣಾಮ, ಅಂಗಾಂಗಗದಲ್ಲೆಲ್ಲ ಉಸಿರ ಬಿಸಿಗೆ ಬಿಸಿಯಾದ ರಕ್ತ ಹರಿದಾಡಿ ಬೆವರಾಗಿ ಚರ್ಮಕ್ಕಂಟಿದ ಅನುಭವ. ಅವಸರವಸರವಾಗಿ ಧರಿಸಿದ ವೇಷದ ಉಡುಗೆಗಳನ್ನು ಕಿತ್ತೊಗೆಯುತ್ತಿರುವಾಗಲೂ ಕಿಕ್ಕಿರಿದ ಪ್ರೇಕ್ಷಕರ ಕರತಾಡನದ ಘೋ ಎಂಬ ಶಭ್ದದಲ್ಲಿ ಅಂತ್ಯವಾಗುವ ಸದ್ದಿಗೆ ದಣಿವಿನ ಅರಿವಾಗುವುದಿಲ್ಲ. ಅದು ಅರಿವಾಗಬೇಕಾದರೆ ಈ ಕಲಾವಾತಾವರಣದಿಂದ ಕ್ಷಣ ಹೊತ್ತಾದರೂ ದೂರವಾಗಬೇಕು. ಕಡಲ ಕಿನಾರೆಯಲ್ಲಿ ಬಹು ಹೊತ್ತು ನಡೆದಾಡಿ ಸಮುದ್ರ ಘೋಷದ ಸದ್ದನ್ನು ಮನಸ್ಸಿನಲ್ಲಿ ಮಾರ್ದನಿಸಿ ಕಿನಾರೆ ಬಿಟ್ಟು ದೂರ ಬಂದಾಗ ಅ ಧ್ವನಿ ತಂರಂಗಗಳು ಮನಸ್ಸಿನಲ್ಲಿ ಬಹು ಹೊತ್ತು ಶಭ್ದ ಮಾಡುತ್ತಿರುತ್ತವಂತೆ ಈ ಪ್ರೇಕ್ಷಕರ ಕರತಾಡನ. ರಂಗದ ಮೇಲೆ ಕುಣಿಯುತ್ತಿರಬೇಕಾದರೆ ಸಮುದ್ರದಲ್ಲಿ ಇಳಿದು ಸಮುದ್ರದ ಅಲೆಗಳೊಂದಿಗೆ ಚೆಲ್ಲಾಟವಾಡಿದ ಅನುಭವವಾದರೆ ಚೌಕಿಗೆ ಬಂದು ನಿಂತಾಗ ಸಮುದ್ರ ಬದಿಯಲ್ಲಿ ನಿಂತ ಅನುಭವ. ಈ ಪರಿಸರದಿಂದ ದೂರವಾಗಿ ಹೋದರೂ ಸಮುದ್ರ ಘರ್ಜನೆಯಂತೆ ಈ ಕರತಾಡನ ಮತ್ತೂ ಮತ್ತೂ ಮಾರ್ದನಿಸುತ್ತಿರುತ್ತದೆ. ಆಗ ಮುಷ್ಠಿಯೊಳಗಿದ್ದ ಸಂಭಾವನೆಗಿಂತ ಅತ್ಮದಲ್ಲಿ ತುಂಬಿದ ತೃಪ್ತಿಯೇ ಹಿರಿದಾಗುತ್ತದೆ. ದೈಹಿಕವಾದ ನೋವು ದಣಿವು ಎಲ್ಲವೂ ತೃಣಮಾತ್ರವಾದ ಅನುಭವ.

          ಬಹುಷಃ ಯಕ್ಷಗಾನದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬ ವೇಷಧಾರಿಯ ಅದರಲ್ಲೂ ಪುಂಡುವೇಷಧಾರಿಯ ಅನುಭವ ಇದಕ್ಕಿಂತ ಭಿನ್ನವಾಗಿರುವುದು ಅಸಾಧ್ಯ. ಬದುಕಿ ಜೀವನಕ್ಕೆ ಅನಿವಾರ್ಯವೋ ಅಥವಾ ಬದುಕಿನ ಅರ್ಥದ ಒಂದು ಪರಿಯೋ ಈ ರಂಗವನ್ನು ಅಂಟಿಸಿಕೊಂಡು ಅದರಲ್ಲಿ ಲೀನವಾದ ಬದುಕು ಮೆತ್ತನೆಯ ಪಲ್ಲಂಗವಾಗುವುದು ಸಾಧ್ಯವೇ ಇಲ್ಲ ಎಂಬ ಅನುಭವವಾಗಿರುವಾಗ, ವಾಸ್ತವದಲ್ಲಿ ಎಲ್ಲೆಂದರಲ್ಲಿ ಒರಗಿಕೊಂಡು ಸಮಯ ಕಳೆದು ನಂತರ ರಂಗಕ್ಕೆ ಸಜ್ಜಾಗುವ ನಡುವಿನ ಜೀವನದಲ್ಲಿ ಪಲ್ಲಂಗ ಎಂತಿದ್ದರೂ ಕನಸೇ ಸರಿ. ಮನೆ, ಕುಟುಂಬ, ಸಂಸಾರ ವಂಚಿತವಾದ ಜೀವನದ ಅಂಗಗಳು ಹಲವಾರು.ಆದರೂ ಕಲಾ ಜೀವನದ ಹಾದಿಯಲ್ಲಿ ಕಂಡ ನಿಲುಮೆ ಎಂತಹುದು ಎಂದು ಯೋಚಿಸುತ್ತ ಹೋದರೆ ಅದ್ಭುತ ಎನ್ನಿಸುತ್ತದೆ.



          ಆದರೂ ಇಲ್ಲಿ ಅಧೀರನಾಗುವ ಹಂತ ಎಂದರೆ ನಿವೃತ್ತಿ. ಸಹಜವಾಗಿ ಇದು ಮನುಷ್ಯ ಜೀವನದ ಒಂದು ಗತಿ, ಪ್ರವೃತ್ತಿ... ಪ್ರವೃತ್ತಿ ..ಹೀಗೆ ಒಂದು ಹಂತದ ಅತ್ಯುನ್ನತಿಗೆ ಏರಿದ ನಂತರ ಮತ್ತೆ ನಿವೃತ್ತಿ. ಕೆಲವೊಂದು ಸಲ ಸ್ವತಃ ಮನುಷ್ಯ ಇದನ್ನು ಅರಗಿಸಿಕೊಳ್ಳುವುದಕ್ಕೆ ಮತ್ತು ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳುವುದಕ್ಕೆ ಕಷ್ಟಪಡುತ್ತಾನೆ. ಹೇಗಿದ್ದರೂ ಪ್ರಕೃತಿ ಮಾತ್ರ ಅದನ್ನು ಅನಿವಾರ್ಯವಾಗಿಸುತ್ತದೆ ಇದು ಪರಮ ಸತ್ಯ. ಮಾತ್ರವಲ್ಲ ಅದು ಪ್ರಕೃತಿ ಧರ್ಮವೂ ಹೌದು.ಕೇವಲ ವೈಯಕ್ತಿಕ ಬದುಕನ್ನು ಮಾತ್ರವೇ ಅವಲಂಬಿಸಿರುವವನಿಗೆ ಈ ನಿವೃತ್ತಿ ಎಂಬುದು ಕೇವಲ ವೈಯಕ್ತಿಕವಾಗಿ ಸೀಮಿತವಾಗಿದ್ದರೆ ಈ ಸಾರ್ವಜನಿಕ ಜೀವನವನ್ನು ಅವಲಂಬಿಸುವವರಿಗೆ ಹಾಗಲ್ಲ ಸಾರ್ವಜನಿಕವಾಗಿ ಒಂದನ್ನೊಂದು ಅವಲಂಬಿಸಿರುವಾಗ ಈ ನಿವೃತ್ತಿ ಎಂಬುದು ಹಲವು ಕಡೆ ಸಂಚಲನವನ್ನು ಉಂಟುಮಾಡುತ್ತದೆ. ವೈಯಕ್ತಿಕವಾದ ಚಿಂತನೆ ಅನಿಸಿಕೆ ಹೇಗೂ ಇರಲಿ ಆದರೆ, ಸಾರ್ವಜನಿಕ ಬದುಕು ಮತ್ತು ಆ ಪರಿಸರ ಪ್ರವೃತ್ತಿಯಿಂದ ಆಚೆಗಿನ ಬದುಕನ್ನು ಯೋಚಿಸುವುದಕ್ಕೆ ಬಿಡುವುದಿಲ್ಲ. ಆವಾಗ ವಸ್ತುಸ್ಥಿತಿಯನ್ನು ಸರಿಯಾಗಿ ಗ್ರಹಿಸಿ ಆ ಬಗೆಯಲ್ಲಿ ಪ್ರಾಮಾಣಿಕವಾಗಿ ನಡಕೊಂಡವನು ಪರಿಸ್ಥಿತಿಗೆ ಬೇಗನೇ ಹೊಂದಿಕೊಳ್ಳುತ್ತಾನೆ. ಇದನ್ನೇ ಅನಿವಾರ್ಯ ಎಂದು ಒಪ್ಪಿಕೊಳ್ಳುತ್ತಾನೆ. ನಿವೃತ್ತಿಯೆಂದರೆ ರೈಲು ಬಂಡಿಯಿಂದ ಭೋಗಿಯೊಂದನ್ನು ಕಳಚಿ ದೂರ ಇಟ್ಟ ಹಾಗೆ. ಅಲ್ಲಿಯ ತನಕ ಎಲ್ಲ ಭೋಗಿಯ ಜತೆ ಒಂದಾಗಿ ಚಲಿಸುತ್ತಿದ್ದ ಭೋಗಿಯೊಂದು ಕಳಚಿ ದೂರ ಇಟ್ಟಾಗ ಮಿಕ್ಕುಳಿದ ಭೋಗಿಗಳು ನಿಂತಿರಲು ಸಾಧ್ಯವೇ . ನಿಧಾನವಾಗಿ ತಮ್ಮ ಚಲನೆಯನ್ನು ಆರಂಭಿಸುತ್ತದೆ. ಆದರೆ ಹಳಿಯಿಂದ ಸರಿದು ನಿಲ್ಲುವ ಅನಿವಾರ್ಯತೆ ಪ್ರತಿಯೊಂದು ಭೋಗಿಗೂ ಇರುತ್ತದೆ. ಹಳಿಯಿಂದ ಸರಿದು ನಿಂತ ಭೋಗಿ ಉಳಿದ ಭೋಗಿಯ ಚಲನೆಯನ್ನಷ್ಟೇ ನೋಡಲು ಸಾಧ್ಯ.

           ಇದೆಲ್ಲ ಪ್ರಕೃತಿ ಸಹಜವಾಗಿ ನಡೆದು ಹೋದರೆ ಎಲ್ಲ ಅನಿವಾರ್ಯತೆ ಎಂದು ಒಪ್ಪಿಕೊಳ್ಳಬಹುದು. ವಯೋಮಾನಕ್ಕೆ ಅನುಗುಣವಾಗಿ ಮನಸ್ಥಿತಿಯು ಬದಲಾಗಿಬಿಡುತ್ತದೆ. ಆದರೆ ಇದು ಅನೀರೀಕ್ಷಿತವಾದಾಗ ಮಾತ್ರಾ ನಿಜ ಬದುಕನ್ನು ಒಪ್ಪಿಕೊಳ್ಳುವಲ್ಲಿ ಹೆಣಗಾಡಬೇಕಾಗುತ್ತದೆ.



          ಸಾರ್ವಜನಿಕ ಬದುಕನ್ನು ಅನುಭವಿಸುವ ಒಬ್ಬ ಕ್ರೀಡಾಳು ಇರಬಹುದು ಅಥವಾ ಕಲಾವಿದ ಇರಬಹುದು ಆತ ಅತನಿಗಾಗಿ ಮಾತ್ರ ಬದುಕುವುದಲ್ಲ. ಆತನ ಏರು ಪೇರು ಅವಲಂಬಿಸಿಕೊಂಡು ಸಾರ್ವಜನಿಕ ಪ್ರಪಂಚ ಇರುತ್ತದೆ. ಜೀವನದ ಗತಿಯನ್ನು ನಿರ್ಧರಿಸುವುದೇ ಈ ಪ್ರಪಂಚ. ಆದರೆ ಒಬ್ಬ ಕ್ರೀಡಾಳುವಿಗೆ ಆತನ ಕ್ರೀಡಾಜೀವನವನ್ನು ನಿರ್ವಶಿಸುವುದಕ್ಕೆ ಯುಕ್ತವಾಗುವಂತೆ ತರಬೇತುದಾರ ಒಬ್ಬ ಜತೆಗೇ ಇರುತ್ತಾನೆ. ದೈಹಿಕವಾಗಿ, ಮಾನಸಿಕವಾಗಿ, ಸಾಂಸಾರಿಕವಾಗಿ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಸಲಹೆ ಸೂಚನೆಗಳನ್ನಿತ್ತು ಆತನ ಕ್ರೀಡಾ ಜೀವನವನ್ನು ಸುಲಭವಾಗಿ ಮಾಡುವುದು ಮಾತ್ರವಲ್ಲ ಕ್ರೀಡಾ ಜೀವಿತದ ಅವಧಿಯನ್ನು ವಿಸ್ತರಿಸುವುದಕ್ಕು ಕಾರಣೀಭೂತನಾಗಿರುತ್ತಾನೆ. ಕ್ರೀಡಾಳುವಿನ ಸಂಪೂರ್ಣ ದಿನಚರಿಗೆ ಒಂದು ರೂಪು ರೇಷೇಯನ್ನು ಕೊಡುತ್ತಾ... ಆಟಗಾರ ಎಷ್ಟು ಹೊತ್ತು ಅಡಬಹುದು.. ಯಾವಾಗ ತರಬೇತಿ ತಾಲೀಮು ನಡೆಸಬಹುದು...ಯಾವುದು ಬದ್ಧ ಯಾವುದು ನಿಷಿದ್ದ..ಹೀಗೆ ಎಲ್ಲದರಲ್ಲು ಸಲಹೆ ಸೂಚನೆಯನ್ನು ಕೊಡುತ್ತ ಕ್ರೀಡಾಳು ಏಕಾಂಗಿ ಎಂಬ ಭಾವನೆ ಬಾರದಂತೆ ನೋಡಿಕೊಳ್ಳುತ್ತಾನೆ. ಕೆಲವೊಂದು ವಿಭಾಗದ ಕಲಾವಿದರೀಗೂ ಈ ಬಗೆಯ ಸೌಕರ್ಯಗಳಿರುತ್ತದೆ. ಈ ಬಗೆಯ ಯಾವುದೇ ಸೌಕರ್ಯಗಳಾಗಲೀ ತರಬೇತಿಯಾಗಲೀ ಆತನ ವಿದ್ಯಾರ್ಥಿ ಜೀವನದಲ್ಲಿ ಆವಶ್ಯಕವೆನಿಸುವುದಿಲ್ಲ. ಬದಲಾಗಿ ವೃತ್ತಿ ಜೀವನವಾಗಿ ಆ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಸ್ವತಂತ್ರನಾಗಿ ಪ್ರವೃತ್ತನಾದಾಗ ಇದು ಅವಶ್ಯವೆನಿಸಲ್ಪಡುತ್ತದೆ. ಶಿಕ್ಷಣ ಮತ್ತು ಶಿಸ್ತು ಬದ್ದ ಜೀವನ ಆಯಾಚಿತವಾಗಿ ರೂಢಿಗೆ ಬರುತ್ತದೆ.



          ಸಾಮಾನ್ಯವಾಗಿ ಎಲ್ಲಾ ಕಲಾವಿದರ ಜೀವನ ಬಹಳ ದುರ್ಭರವಾಗಿರುತ್ತದೆ. ಕಲೆಗೆ ಸಂಬಂಧಿಸಿ ಎಲ್ಲಾ ಸಾಮಾರ್ಥ್ಯಗಳಿದ್ದರೂ ವ್ಯವಹಾರ ಚಾತುರ್ಯ ಬೇಕಾದಷ್ಟಿರುವುದಿಲ್ಲ. ಯೋಜನಾಬದ್ಧವಾದ ಜೀವನ ಎಂದರೇನೆಂದೇ ಅರಿವಿಲ್ಲದಿರುವಾಗ ಕಲಾ ಜೀವನ ಕೇವಲ ಕಲಾ ಜೀವನವಾಗಿಯೇ ಉಳಿಯುತ್ತದೆ. ಕಲಾಸಾಧನೆಯೇ ಎಲ್ಲಕ್ಕಿಂತ ಹಿರಿದಾಗಿ ಕಂಡರು ಅದು ಕೇವಲ ತಾತ್ವಿಕ ಯಶಸ್ಸಾಗಿಯಷ್ಟೇ ಉಳಿಯುತ್ತದೆ. ನಿಜ ಜೀವನದ ವಾಸ್ತವಕ್ಕೆ ಇಳಿದಾಗ ಯಾವ ಸಾಧನೆಯತ್ತ ನೋಡಬೇಕು ಎಂಬುದೇ ಗೊಂದಲ. ರಂಗದ ಮೇಲೆ ದಿನಕ್ಕೊಂದು ಬಗೆಯಲ್ಲಿ ಕಲೆಯನ್ನು ಪ್ರದರ್ಶಿಸುವಾಗ ದೈಹಿಕ ಶ್ರಮ ಮತ್ತು ಸಮಯ ಹೀಗೆ ಸ್ವರ್ವಸ್ವವನ್ನೂ ವಿನಿಯೋಗಿಸಿದರೂ ಆದಿನದ ಪ್ರದರ್ಶನ ಆದಿನದ ಕಲಾಜೀವನಕ್ಕೆ ಮಾತ್ರ ಮೀಸಲಾಗಿರುತ್ತದೆ. ಅಂದರೆ ಕಳೆದು ಹೋದ ಅಂದಿನ ಪ್ರದರ್ಶನವನ್ನು ಪುನಃ ತೋರಿಸುವುದಕ್ಕಾಗುವುದಿಲ್ಲವಲ್ಲ. ಒಂದು ವೇಳೆ ತೋರಿಸಿದರೂ ಅದು ಜೀವಂತ ಪ್ರದರ್ಶನದ ಮಹತ್ವವನ್ನು ಉಳಿಸಿಕೊಂಡಿರುವುದಿಲ್ಲ. ಹೀಗಾಗಿ ಯಕ್ಷಗಾನದ ಒಂದು ದಿನದ ಪ್ರದರ್ಶನವಾದರೂ ಅದು ನಿತ್ಯ ನೂತನ ದರ್ಶನವೇ ಆಗಿರುತ್ತದೆ. ಒಂದೊಂದು ಪ್ರದರ್ಶನವೂ ಸಿನಿಮಾದಂತೆ ಕಂಪ್ಯೂಟರ್ ಕಾಪಿ ಯಾಗಿರದೆ ಪರಿಶ್ರಮದ ಕೈಬರಹದ ಹಾರ್ಡ್ ಕಾಪಿಯೇ ಆಗಿರುತ್ತದೆ. ಇದು ಕಲಾವಿದನ ಬದುಕಿನಲ್ಲೂ ಪರಿಣಾಮ ಬೀರುತ್ತದೆ. ಅದರಲ್ಲು ರಾತ್ರಿಯನ್ನು ಹಗಲಾಗಿಸುವ ಈ ಕಲಾಜೀವನ ಒಂದು ರೀತಿಯಲ್ಲಿ ಪ್ರಕೃತಿ ವಿಧಾನ ವಿರುದ್ದವಾಗಿರುತ್ತ ಒಟ್ಟಿನಲ್ಲಿ ಕಲಾವಿದನ ಜೀವನವನ್ನು ಆಯ್ಕೆ ಮಾಡಬೇಕಿದ್ದರೆ ಅತ್ಯಂತ ಕಲಾಬದ್ದತೆ ಅತ್ಯವಶ್ಯ. ಇಲ್ಲಿ ಪ್ರವೃತ್ತಿ ಯಾಗಲೀ ನಿವೃತ್ತಿಯಾಗಲೀ ತೀರ ಭಿನ್ನ. ಅದು ಅನಿರೀಕ್ಷೀತ ಸ್ಥಿತಿಯಾದಲ್ಲಿ ಜೀವನ ಕಲಿಸುವ ಪಾಠವನ್ನು ಕಲಿಯುವುದಕ್ಕೇ ಸಾಧ್ಯವಿಲ್ಲ.



           ಯಕ್ಷಗಾನದಲ್ಲಿ ವಯೋಮಾನದ ಪ್ರಭಾವ ಪಾತ್ರಗಳಲ್ಲಿ ಆಗುತ್ತಿದ್ದರು ಕೆಲವೊಮ್ಮೆ ಅದಕ್ಕೆ ವ್ಯತಿರಿಕ್ತವಾದುದು ಕಂಡುಬಾರದೆ ಇರುವುದಿಲ್ಲ. ಯಾರೂ ಯಾವುದೇ ಪಾತ್ರವನ್ನು ಮಾಡಲು ಸಾಧ್ಯವಿರುವ ಒಂದು ಕಲೆ. ವಯಸ್ಸಿನ ಭೇದವಿಲ್ಲದೇ ಯಾರೂ ಯಾವುದೇ ಬಗೆಯ ಪಾತ್ರ ಮಾಡಬಹುದಾದ ಒಂದು ಸ್ಠಿತ್ಯಂತರದ ವೈಶಿಷ್ಟ್ಯ ಈ ಕಲೆಯಲ್ಲಿದೆ. ಇದರ ವೇಷಗಾರಿಕೆ ವರ್ಣ ವೈವಿಧ್ಯತೆ ಇವುಗಳೆಲ್ಲದರಿಂದ ಅಸಲೀ ವೇಷದೊಳಗಿನ ವ್ಯಕ್ತಿ ಯಾರು ಎಂದು ಪತ್ತೆ ಹಚ್ಚುವುದು ಸುಲಭವಲ್ಲ. ಹಾಗಾಗಿ ವಯೋ ಮಾನಕ್ಕೆ ವ್ಯತಿರಿಕ್ತವಾಗಿ ಪಾತ್ರವನ್ನು ನಿಭಾಯಿಸುವುದು ಸರ್ವೇ ಸಾಮನ್ಯ. ಗಂಡು ನಿಜ ಹೆಣ್ಣಿಗಿಂತ ಚೆನ್ನಾಗಿ ಬಳುಕುತ್ತ ನರ್ತಿಸುವುದು,, ಅತಿ ಸೌಮ್ಯ ವ್ಯಕ್ತಿ ಭಯಂಕರ ರಕ್ಕಸನಾಗಿ ಅಬ್ಬರಿಸುವುದು,, ಇಲ್ಲಿ ದೇಹಕ್ಕೂ ವಯಸ್ಸಿಗೂ ಮಾಡುವ ವೇಷಕ್ಕೂ ಸಂಬಂಧವೇ ಇರುವುದಿಲ್ಲ. ತನ್ನ ಸಾಮಾರ್ಥ್ಯಕ್ಕನುಗುಣವಾಗಿ ವೇಷಧಾರಿ ರಂಗಸ್ಥಳ ಏರುತ್ತಾನೆ. ಅತ್ಯಂತ ಸಕ್ರಿಯನಾಗಿ ರಂಗದಲ್ಲಿ ವ್ಯಹರಿಸುವ ವ್ಯಕ್ತಿ ಒಮ್ಮಿಂದೊಮ್ಮೆಗೆ ಸಹಜ ಪ್ರವೃತ್ತಿಯಿಂದ ನಿವೃತ್ತನಾಗಿ ರಂಗದಿಂದ ದೂರ ಉಳಿಯುವಾಗ ಮಾತ್ರ ಎಲ್ಲ ಕಡೆ ಒಂದು ಶೂನ್ಯತೆ ಕವಿದ ಹಾಗೆ. ಕಲಾವಿದನ ಮನಸ್ಸು ಸಮುದ್ರದಡ ದಿಂದ ದೂರ ಬಂದು ನಿಂತ ಅನುಭವ. ಆ ಘೋಷ ಅದರ ರೋಮಾಂಚನದಲ್ಲಿ ವಾಸ್ತವಕ್ಕೆ ಹೊಂದಿಕೊಳ್ಳಲು ಬಹಳ ಮಾನಸಿಕ ಸ್ಥಿರತೆಯನ್ನು ತಂದುಕೊಳ್ಳಬೇಕಾಗುತ್ತದೆ.



           ಕಲಾವಿದ ತನ್ನ ಜೀವನವನ್ನು ಯೋಜನಾಬದ್ದವಾಗಿ ರೂಪಿಸಿಕೊಳ್ಳುವಲ್ಲಿ ವ್ಯವಹಾರ ಕುಶಲಿಯಾಗದೇ ಇರುವುದೇ ಕೆಲವೊಂದು ಸಲ ಕಾರಣವೇ ಅಂತ ಅನ್ನಿಸುವುದುಂಟು. ಮಿತಿಮೀರಿದ ಪ್ರೇರೇಪಣೆಯಿಂದ ದಣಿವರಿಯದ ಕುಣಿತ, ವಯಸ್ಸನ್ನು ಕಾಲವನ್ನು ಮೀರಿ ರಂಗದಲ್ಲಿ ಕುಣಿಯುವಾಗ ಆತನಿಗರಿಯದೇ ದೇಹ ಆಂತರಿಕವಾಗಿ ಸೊರಗಿ ಹೋಗುತ್ತದೆ. ಯಾವ ಭದ್ರತೆಯೂ ಇಲ್ಲದ ಜೀವನ ದಿನಳಿಗೊಂದು ದಿನವನ್ನು ಸೇರಿಸುತ್ತಾ ಕಳೆದು ಹೋಗುತ್ತದೆ. ಆದರೂ ಕಲಾವಿದನ ಕಲೆಗೆ ಅಂಟಿಕೊಂಡು ಕಲೆಗಾಗಿ ತನ್ನ ಜೀವನವನ್ನೇ ಮೌಲ್ಯವಾಗಿಸುವ ಆ ನಿಲುಮೆ ಭಾವನಾತ್ಮಕವಾಗಿ ಚಿಂತಿಸುವಾಗ ಮಾತ್ರವೇ ಅರಿಯಲು ಸಾಧ್ಯ.

Wednesday, April 25, 2012

ವಿಚಾರ ಗಮನ








"ಇದು ವಿಮರ್ಶೆಯಲ್ಲದ ಚಿಂತನ"








“ಭಗವಂತ ಮತ್ತು ಮಾಯೆ ಎಂಬುದು ಮನುಷ್ಯ ಮತ್ತು ನೆರಳಿನಂತೆ. ಒಂದು ಅವಿನಾಭಾವ ಸಂಬಂಧಂತೆ. ಮಾಯೆ ಎಂದರೆ ಭಗವಂತನೇ ಮಾಯೆಯೋ? ಅಲ್ಲ ಭಗವಂತನೊಳಗೆ ಮಾಯೆಯೋ.?”
ಎಂಬ ಕೌರವನ ಪ್ರಶ್ನೆಗೆ ಭೀಷ್ಮನ ಪಾತ್ರಧಾರಿ ಸರಳವಾದ ಉಧಾಹರಣೆಯ ಮೂಲಕ ಅತ್ಯಂತ  ಸ್ವಾರಸ್ಯವಾಗಿ ಉತ್ತರಿಸುತ್ತಾ- “ಮಾಯೆ ಎಂದರೆ ಮನುಷ್ಯನ ನೆರಳು ಹೇಗೋ ಹಾಗೆ. ಬೆಳಕು ಬಿದ್ದಾಗ ಆ ನೆರಳಿನ ಅಸ್ತಿತ್ವವೇ ಇಲ್ಲವಾಗುತ್ತದೆ. ಆ ವರೆಗೆ ಅದು ಅವನ ನೆರಳು..ಅದರ ಉದ್ದ ಅಳತೆ ಅಳಿಯಲು ಬೆಳಕನ್ನು ಹಿಡಿದಾಗ ಅದು ಇಲ್ಲವಾಗುತ್ತದೆ. ಮೊದಲು ದೃಶ್ಯವಾದ ನೆರಳು ಮತ್ತೆ ಬೆಳಕು ಬಂದಾಗ ಅದೃಶ್ಯವಾಗುವ ಹಾಗೆ. ಮಾಯೆ ಎಂದರೆ ಭಗವಂತನ ಅವಿಭಾಜ್ಯ ಅಂಗ... ಒಬ್ಬ ಸಂಗೀತಗಾರ ಹಾಡುತ್ತಾನೆ. ಹಾಡುವುದು ಅವನೆಯೋ ಅಥವಾ ಅವನೊಳಗಿನ ಶಕ್ತಿಯೋ.. ಅವನೊಳಗಿನ ಶಕ್ತಿಯಾದರೆ, ಅವನು ಬೇಡ ಅವನೊಳಗಿನ ಶಕ್ತಿಮಾತ್ರ ಸಾಕು ನಮಗೆ .. ಅದು ಸಾಧ್ಯವೋ? ಅವನು ಮತ್ತು ಅವನ ಶಕ್ತಿ ಎಂಬಲ್ಲಿಗೆ ಒಂದು ಅವಿನಾಭಾವ ಸಂಬಂಧ ಅಂದರೆ ಅವಿನಾದ್ವೈತ ಸಂಬಂಧ ಎಂಬುದು ಅದು” . ಭಗವಂತ ಮತ್ತು ಮಾಯೆ ..ಎಂಬುದಕ್ಕೆ ಸರಳವಾದ ವ್ಯಖ್ಯಾನವನ್ನು ನೀಡುತ್ತಾರೆ.

ಯಕ್ಷಗಾನ ತಾಳಮದ್ದಲೆಯಲ್ಲಿ ಇಂತಹ ಸನ್ನಿವೇಶ ಚಿತ್ರಣಗಳದ್ದೇ ಒಂದು ವಿಶೇಷತೆ ಇದೆ. ತಾಳ ಮದ್ದಲೆ ಯಕ್ಷಗಾನದ ಹೂರಣ ಇದ್ದಂತೆ. ಇದು ಕೇವಲ ಭಾಗವತರ ಹಾಡಿನ ಶಬ್ದಾರ್ಥ ಹೇಳುವುದು ಎಂದರೆ ತಪ್ಪಾಗುತ್ತದೆ. ಹಾಗೆಂದು ಪಾತ್ರಗಳ ನಡುವಿನ ನಾಟಕೀಯ ಸಂಭಾಷಣೆ ಎಂದರೂ ತಪ್ಪಾಗುತ್ತದೆ. ತಾಳ ಮದ್ದಲೆಯ ವಿಶೇಷತೆ ಇಷ್ಟಕ್ಕೆ ಸೀಮಿತವಾಗಿಲ್ಲ. ತಾಳ ಮದ್ದಲೆ ಒಂದು ರೀತಿಯ ವಿದ್ವಜ್ಜನರ ಸಮ್ಮೇಳನ ಇದ್ದಂತೆ. ಯಕ್ಷಗಾನದ ಸರಳ ರೂಪವೇ ಇದು ಎಂದು ತೋರಿದರು ಇದರ ವೈಶಾಲ್ಯದ ಅರಿವು ಅದನ್ನು ಸವಿದೇ ಅರಿಯಬೇಕು. ನನ್ನ ಅನಿಸಿಕೆಯಂತೆ... ಯಕ್ಷಗಾನ ಬಯಲಾಟ ಎಂದರೆ ಅದು ಹಾಲು ಹಾಕಿದ ಕ್ರಮಬದ್ಧ ಚಹದಂತೆ. ತಾಳ ಮದ್ದಲೆ ಎಂದರೆ ಕೇವಲ ಚಹದ ಮೂಲ ಸ್ವಾದವನ್ನು ಕೊಡುವ ಕಣ್ಣ ಚಹ (ಕಪ್ಪು ಚಹ) ಇದ್ದಂತೆ. ಇದಕ್ಕೆ ಕೆಲವೊಂದು ಸಲ ಕೇವಲ ನೀರು ಮತ್ತು ಚಹಪುಡಿ ಮಾತ್ರವೇ ಆದರೂ ಅದನ್ನು ಸವಿಯುವ ರೀತಿ ಗೊತ್ತಿದ್ದರೆ ಅದರ ಅನುಭವವೇ ಬೇರೆ. ರುಚಿಯಲ್ಲಿ ಮೇಲ್ನೋಟಕ್ಕೆ ಒಂದೇ ಕಂಡರು ಅದರ ಅನುಭವ ಮತ್ತು ಆ ಅನುಭವವನ್ನು ಗಂಟಲಲ್ಲಿ ಉಳಿಸುವ ಅವಧಿ ಎಲ್ಲವೂ ವೆತ್ಯಾಸವಿದೆ. ಸರಳತೆಯಲ್ಲೂ ವೈಭವವನ್ನು ಗುರುತಿಸುವ ಅರಿವು ಇರಬೇಕು ಅಷ್ಟೇ. ಚಹದ ಗಾಢವಾದ ರುಚಿಯನ್ನು ಅಷ್ಟಕ್ಕೇ ಬಯಸುವವನು ಯಾವಾಗಲೂ ಬಯಸುವುದು ಕಣ್ಣ ಚಹವನ್ನು. ಇದಕ್ಕೆ ಮೇಲ್ನೋಟಕ್ಕೆ ಬಡತನ ಕಾರಣವಾಗಿದ್ದರೂ ಅದು ಅಂತ ಒಪ್ಪುವುದು ಮಾತ್ರ ಕಷ್ಟ. ಹಾಲು ಹಾಕಿದ ಕ್ರಮಬದ್ಧ ಚಹಕ್ಕೆ ಬೆಳಗಾಗುವ ತನಕ ಮತ್ತು ದನ ಇದ್ದರೂ ದನ ಹಾಲು ಕೊಡುವ ತನಕ  ಕಾಯಬೇಕು. ಮಾತ್ರವಲ್ಲ ಅದಕ್ಕೆ ಬಹಳ ಸಿದ್ದತೆಯ ಅವಶ್ಯಕತೆಯೂ ಅಗತ್ಯವಿದೆ. ಆದರೆ ಕಣ್ಣ ಚಹಕ್ಕೆ ಕೇವಲ ಚಹ ಪುಡಿಸಿಕ್ಕಿದರೂ ಸರಳವಾಗಿ ಪೂರ್ಣ ಚಹದ ಅನುಭವವನ್ನು ಪಡೆಯುವ ಅವಕಾಶ ಇರುತ್ತದೆ. ಹಾಗಾಗಿ ಸರಳವಾಗಿ ನಡೆಯುವ ಯಕ್ಷಗಾನ ತಾಳ ಮದ್ದಲೆ ಮೇಲ್ನೋಟಕ್ಕೆ ಬಡವಾಗಿ ಕಂಡರೂ ಇದರಲ್ಲಿ ಇಲ್ಲದ ಶ್ರೀಮಂತಿಕೆ ಅದರಲ್ಲಿ ಇದೆ. ಅನುಭವಿಸುವ ಮನೋಭಾವ ಇರಬೇಕು ಅಷ್ಟೆ.

 ಇತ್ತೀಚೆಗೆ ಕರ್ಮಬಂಧ ಎಂಬ ಹಳೆಯ ತಾಳ ಮದ್ದಲೆಯ ಧ್ವನಿ ಮುದ್ರಣವೊಂದು ಸಿಕ್ಕಿ ಅದನ್ನು ಕೇಳಿದಾಗ ಗರಿಗೆದರಿದ ಕಲ್ಪನೆಗಳು ಹಲವು. ನೆಬ್ಬೂರು ಮತ್ತು ಕಡತೋಕರ ಭಾಗವತಿಕೆಯ ಅತ್ಯಂತ ಹಳೆಯ ತಾಲಮದ್ದಲೆಯದು. ಭೀಷ್ಮನಾಗಿ ರಾಮದಾಸ ಸಾಮಗರು, ಕೌರವನಾಗಿ ಎಂ ಪ್ರಭಾಕರ ಜೋಶಿಯವರು, ಕೊನೆಯುಲ್ಲಿ ಕೃಷ್ಣನಾಗಿ ಗುರು ಪೆರ್ಲ ಕೃಷ್ಣ ಭಟ್ ರವರು ಸೇರಿ ನಡೆಸಿಕೊಟ್ಟ ಅದ್ಭುತ ತಾಳ ಮದ್ದಲೆಯದು.  ಕರ್ಮ ಬಂಧ ಎಂಬ ಪ್ರಸಂಗ ಕುರುಕ್ಷೇತ್ರ ಯುದ್ದದ ಆರಂಭದಲ್ಲೇ ಬಂದು ಬಿಡುತ್ತದೆ. ಪ್ರಸಂಗದ ಆರಂಭದಲ್ಲಿ ಕೌರವನ ಜಿಜ್ಞಾಸೆಗೆಳಿಗೆ ಉತ್ತರಿಸುವ ಭೀಷ್ಮ ಉತ್ತರಾರ್ಧಲ್ಲಿ ಶ್ರೀ ಕೃಷ್ಣನಲ್ಲೇ ಹಲವು ಜಿಜ್ಞಾಸೆಗೆ ಉತ್ತರವನ್ನು ಬಯಸುತ್ತಾನೆ. ಯುದ್ದ ಸನ್ನಿವೇಶದಲ್ಲಿ ಕೇವಲ ವಿಚಾರ ಸಂಘರ್ಷವನ್ನು ತೋರಿಸುವ ಅತ್ಯಂತ ವಿಶಿಷ್ಟ ಪ್ರಸಂಗವಿದು. ದ್ವಂದ್ವದಿಂದ ಕೂಡಿದ ಭೀಷ್ಮನ ಪಾತ್ರ ನಿರ್ವಹಿಸುವುದು ಬಹಳ ಕಷ್ಟವಾಗಿ ಕಂಡರೂ ಮಿಕ್ಕ ಪಾತ್ರಗಳು ಕೂಡ ಕಬ್ಬಿಣದ ಕಡಲೆಯೇ. ಇದು ಯಕ್ಷಗಾನ ತಾಳ ಮದ್ದಲೆಯ ವೈಶಿಷ್ಟ್ಯ. ಯುದ್ದ ಆರಂಭ ಯಾವಾಗ ಅಗುತ್ತದೆ? ಚೆಂಡೆ ಪೆಟ್ಟು ಯಾವಾಗ ಕೇಳಬಹುದು?   ಎಂದು ಇಲ್ಲಿ ಕಾಯುವ ಹಾಗಿಲ್ಲ. ಸನ್ನಿವೇಶ ಚಿತ್ರಣ ದರ್ಶನವಾಗುವುದೇ  ವಿಚಾರ ಸಂಘರ್ಷಮಯವಾಗಿ  ಮತ್ತು ಹಲವು ಜಿಜ್ಞಾಸೆಗಳನ್ನು ಮೂಡಿಸಿ ಅದರಲ್ಲೇ ಅವುಗಳಿಗೆ ಪರಿಹಾರವನ್ನು ನೀಡುತ್ತದೆ. ಕಥಾ ಹಂದರಕ್ಕೆ ಮಹತ್ವ ಇದ್ದರೂ ಸನ್ನಿವೇಶದಲ್ಲಿ ಅದು  ಬಹಳ ಸೂಕ್ಷ್ಯವಾಗಿಯೇ ಚಿತ್ರಿತವಾಗುತ್ತದೆ.  ಮಾತಿನಲ್ಲಿ ವಿಚಾರ ಸಂಘರ್ಷಕ್ಕೆ ಹೆಚ್ಚು ಒತ್ತು.

ಈ ಪ್ರಸಂಗದ ಪ್ರಥಮಾರ್ಧದಲ್ಲಿ ಭೀಷ್ಮ ಕೌರವನ ಸಂಭಾಷಣೆಯಲ್ಲಿ ಒಂದು ರೀತಿಯ ವಿಚಾರ ಮಂಥನ ನಡೆದರೆ ಉತ್ತರಾರ್ಧದ ಭೀಷ್ಮ ಕೃಷ್ಣರ ಸಂಭಾಷಣೆಯಲ್ಲಿ ಬೇರೊಂದು ರೀತಿಯ ವಿಚಾರ ಮಂಥನ. “ಪಂಕಜಾಕ್ಷ ಭೇದವೇಕೋ ಕಿಂಕರನಲ್ಲವೇ ನಾನು..”  ಎಂದು ಭೀಷ್ಮ ಪರಮಾತ್ಮನ ಭೇದವನ್ನು ಪ್ರಶ್ನಿಸುತ್ತಾನೆ. ಅರ್ಜುನನಲ್ಲಿ ಭಕ್ತನೆಂದು ತೋರುವ ಪರಿಗಣನೆ ತನಗೇಕೆ ಇಲ್ಲ? ಪಾರ್ಥಸಾರಥಿಯಾದವನು ಭೀಷ್ಮ ಸಾರಥಿ ಯಾಕೆ ಆಗುವುದಿಲ್ಲ? ಈ ಜಿಜ್ಞಾಸೆಗೆ ಕೃಷ್ಣ ಕೊಡುವ ಉತ್ತರ ಅಷ್ಟೇ ಮಾರ್ಮಿಕವಾಗಿರುತ್ತದೆ. ಉತ್ತಮ ಉದಾಹರಣೆಯ ಮೂಲಕ ಅದಕ್ಕೆ ಉತ್ತರವನ್ನು ತೋರಿಸುವ ರೀತಿ ಬಹಳ ಸ್ವಾರಸ್ಯವಾಗಿರುತ್ತದೆ. ಯಕ್ಷಗಾನದ ಅರ್ಥಗಾರಿಕೆಯಲ್ಲಿ ಬರುವ ಈ ಉದಾಹರಣೆಗಳೇ ಹಲವು ಸಲ ನಮ್ಮ ಜ್ಞಾನ ಪರೀಕ್ಷೆಯನ್ನು ಮಾಡುತ್ತವೆ. ಬಹಳ ಸರಳ ಉಧಾಹರಣೆಗಳು ಉದ್ದರಿಸಲ್ಪಡುವಾಗ ಯಕ್ಷಗಾನದ ವಾಙ್ಮಯ ಪ್ರಪಂಚದ ವೈಶಾಲ್ಯತೆಗೆ ಬೆರಗಾಗುವ ಹಾಗೆ ಅಗುತ್ತದೆ. ಒಬ್ಬಾಕೆ ತಾಯಿಗೆ ನಾಲ್ಕು ಮಕ್ಕಳಿರುವಾಗ  ಹಿರಿ ಮಗನಿಗೆ ಮೀಸೆ ಬಂದಿರುತ್ತದೆ.ಅತ್ಯಂತ ಸಣ್ಣ ಮಗುವಿಗೆ ಇನ್ನೂ ಸ್ತನ್ಯಪಾನವನ್ನು  ತಾಯಿ ಕೊಡುತ್ತಿದ್ದಾಳೆ. ನಾಲ್ಕು ಮಕ್ಕಳನ್ನೂ ಸಮಾನ ಪ್ರೀತಿಯಲ್ಲಿ ಕಾಣುವ ತಾಯಿ, ಕಿರಿಯ ಮಗುವಿಗೆ ಮಾತ್ರ ಮೊಲೆಹಾಲನ್ನು ಕೊಡುವುದನ್ನು  ಹಿರಿ ಮಗ   ಭೇದ ಮಾಡುವುದೆಂದು ಪ್ರಶ್ನಿಸಬಹುದೇ? ಸಮಾನತೆ ಎಂಬುದು ಶಬ್ದ ಒಂದೇ.ಆಂತರಿಕ ಸಮಾನತೆ ಬಾಹ್ಯ ಭಿನ್ನತೆ. ತಾಯಿಯ ಅಂತರಂಗದ ಭಾವನೆಯಲ್ಲಿ ಸಮಾನತೆ ಇದ್ದರೂ ಬಾಹ್ಯ ಪ್ರಪಂಚದ ವ್ಯವಹಾರದಲ್ಲಿ ಭಿನ್ನತೆ ಇರಲೇ ಬೇಕಾಗುತ್ತದೆ.

ಇಂತಹ ಹಲವು ವಿಚಾರಗಳು ತೆರೆದ ಪುಸ್ತಕದ ಬರಹದಂತೆ ಇಲ್ಲಿ ಸಿಗುತ್ತದೆ. ಕಬ್ಬಿಣದ ಕಡಲೆಯಾದ ಚಿಂತನೆಗಳು ರುಚಿಯಾದ ಗೋಡಂಬಿಯಂತೆ ಬಾಯಿಯೊಳಗೆ ಹಾಕಲ್ಪಡುತ್ತದೆ. ತಾಳ ಮದ್ದಲೆಯ ಮಹತ್ವ ಇಂತಹುದರಲ್ಲಿ ಮತ್ತು ಇಂತಹ ಹಲವು ಪ್ರಸಂಗಗಳಲ್ಲಿ. ಮನುಷ್ಯನ ಚಿಂತನೆಗೆ ಸರಿಯಾದ ದಿಶೆಯನ್ನು ಮಾರ್ಗಸೂಚಿಯನ್ನು ಕೊಡುವ ಈ ವಿಚಾರ ಸಂಘರ್ಷಗಳು ಇಷ್ಟೊಂದು ಸರಳವೇ ಎಂದು ಬೆರಗಾಗುವಂತೆ ಮಾಡುತ್ತದೆ.

ಆದರೂ, ಈ ತಾಳಮದ್ದಲೆಯನ್ನು ಕೇಳುತ್ತಿದ್ದಂತೆ ವಾಸ್ತವದ ಯಕ್ಷಗಾನ ತಾಳ ಮದ್ದಲೆಯ ಸ್ಥಿತಿಗತಿಗಳನ್ನು ಯೋಚಿಸುವಂತೆ ಮಾಡಿತು. ಸದ್ಯ ಕೇಳಿದ ಕರ್ಮ ಬಂಧದಂತೆ ಇನ್ನೋಂದು ಪ್ರಸಂಗ ರುಕ್ಮಾಂಗದ ಚರಿತ್ರೆ. ಇದರಲ್ಲಿ ಶೇಣಿಯವರ ರುಕ್ಮಾಂಗದ,  ಗೋವಿಂದ ಭಟ್ಟರ ಜಗನ್ಮೋಹಿನಿ ಅದ್ಭುತವಾಗಿ ಮೂಡಿ ಬಂದಿತ್ತು. ಕೇಳುತ್ತ ಹೋದಂತೆ ಈಗಿನ ತಾಳಮದ್ದಲೆಯ ವಾಸ್ತವವನ್ನು ಚಿಂತಿಸುವಂತೆ ಮಾಡಿದ್ದು ಸುಳ್ಳಲ್ಲ. ಈ ಎರಡು ಪ್ರಸಂಗಗಳನ್ನು ಗಮನಿಸಿದಾಗ ಇಂತಹ ಪ್ರಸಂಗವನ್ನು ಈಗ ಪ್ರಸ್ತುತ ಪಡಿಸುತ್ತಿದ್ದರೆ,  ಸದ್ಯ ಅದನ್ನು ನಿರ್ವಹಿಸಬಲ್ಲ ಸಮರ್ಥ ಕಲಾವಿದರನ್ನು ಗಮನಿಸುತ್ತ ಹೋದರೆ,  ಹಲವು ಹಿರಿಯ ಕಲಾವಿದರನ್ನು ಬಿಟ್ಟರೆ ಇಂದಿನ  ಹೊಸ ತಲೆಮಾರಿನ ಕಲಾವಿದರಿಗೆ ಇಂತಹ ಪ್ರಸಂಗಗಳು ಸವಾಲಾಗಿಯೇ ಇದೆ. ಪ್ರಸ್ತುತ ಯುವ ತಲೆಮಾರಿಗೆ ವೈಚಾರಿಕ ಬಡತನ ಬಂದಿರುವುದು ಇದರಿಂದ ಸ್ಪಷ್ಟವಾಗಿ ಗೋಚರವಾಗುತ್ತದೆ. ಹಾಗಾಗಿ ವಾಲಿವಧೆ, ಕರ್ಣಾವಸಾನ, ಜಾಂಬವತಿ ಕಲ್ಯಾಣ, ಸಮರ ಸನ್ನಾಹ ಇಂತಹ ಪ್ರಸಂಗಗಳೇ ಪುನರಾವರ್ತನೆಯಾಗುತ್ತಿರುವುದು. ಈ ಪ್ರಸಂಗಗಳು ವಿಚಾರಪ್ರದವಾಗಿಲ್ಲ ಎಂದು ಅರ್ಥವಲ್ಲ, ಆದರೆ ಆ ಸಂಘರ್ಷಗಳಿಗೆ ಹೆಚ್ಚು ಒತ್ತುಕೊಡದೆ ಇದನ್ನು ಪ್ರಸ್ತುತ ಪಡಿಸುವುದು ಸಾಧ್ಯವಾಗುತ್ತದೆ. ಇದರಲ್ಲಿ ರಂಜನೆಗೆ, ಆಕರ್ಷಣೆಗೆ  ಬೇರೆ ಹಲವು ವಿಷಯಗಳು ಇರುವುದೇ ಕಾರಣವಾಗುತ್ತದೆ. ಒಂದೆರಡು ಕಲಾವಿದರನ್ನು ಬಿಟ್ಟರೆ ಕರ್ಮ ಬಂಧ, ಗೀತೋಪದೇಶ ದಂತಹ ಪ್ರಸಂಗಗಳನ್ನು ಒಪ್ಪಿಕೊಳ್ಳುವ ಕಲಾವಿದರು ಇಲ್ಲವಲ್ಲ? ಈ ವೈಚಾರಿಕ ಬಡತನ ಗಮನಕ್ಕೆ ಬಾರದ ವಿಚಾರವಾಗಿದೆ.

ಯಕ್ಷಗಾನದ ಬಯಲಾಟದಲ್ಲಿ ಮಹಿಷಾಸುರನ ಅರ್ಧ ತಾಸಿನ ಅವಧಿಯ ಪ್ರವೇಶ,  ಅಷ್ಟು ಸಭೆಯನ್ನು ಚೆಲ್ಲಾಪಿಲ್ಲಿ ಮಾಡಿ ರಂಜನೆ ಉಂಟುಮಾಡಿದಲ್ಲಿ ಯಕ್ಷಗಾನ ಸೇವೆಯ ಕೃತಾರ್ಥತೆಯನ್ನು ಕಾಣುತ್ತ, ಅರ್ಥ ಗಂಟೇ ಒಂದೇ ಪದಕ್ಕೆ ಕುಣಿದು  ಬೆವರು ಸುರಿಸಿದಲ್ಲಿ ಯಕ್ಷಗಾನ ಭಾವಾಭಿನಯ ಅಭಿವ್ಯಕ್ತಗೊಳ್ಳುವ ಪರಿ ಯಕ್ಷಗಾನದಲ್ಲಿದ್ದರೆ, ತಾಳ ಮದ್ದಲೆಯ ಇಂತಹ ಜ್ವಲಂತ ಸಮಸ್ಯೆಗಳು ಅದರಿಂದಲೂ ಹಲವರನ್ನು ವಿಮುಖರನ್ನಾಗಿಸುವುದು ಸುಳ್ಳಲ್ಲ. ಹಲವಾರು ತತ್ವಾದರ್ಶಗಳ ದರ್ಶನದೊಂದಿಗೆ ವಿಚಾರ ಸಂಘರ್ಷಗಳನ್ನು , ಸನಾತನ ಅಧ್ಯಾತ್ಮಿಕ ವಿಚಾರಗಳನ್ನು ಸರಳವಾಗಿ ಅಷ್ಟೇ ಮಾರ್ಮಿಕವಾಗಿ ಅರ್ಥ ಮಾಡಿಕೊಡುವ ತಾಳಮದ್ದಲೆಗಳು ಜನ ಮುಖದಿಂದ ದೂರವಾಗುತ್ತಿವೆ. ಇದ್ದರು, ಬಹಳ ನೀರಸವಾಗಿ ಯಾಂತ್ರಿಕ ಕಾರ್ಯಕ್ರಮವಾಗಿ ಭಾಸವಾಗುತ್ತಿದೆ. ಗಹನವಾದ ವಿಚಾರಗಳನ್ನು ಚರ್ಚಿಸುತ್ತಿದ್ದರೆ ಪ್ರೇಕ್ಷಕರಿಗೆ ಅದು ಬೇಡವಾಗುತ್ತ ಗಮನದ ಹಾದಿ ಬದಲಾಗುತ್ತಿದೆ. ವಿಚಾರ ಸಂಘರ್ಷ ಚರ್ಚೆಗಳು ಪ್ರತಿಸ್ಪರ್ಧಿಯನ್ನು ಸೋಲಿಸುವ ಗುರಿಯನ್ನು ಮಾತ್ರವೇ ಹೊಂದಿ ಸಂಘರ್ಷ ಕೇವಲ ಸಂಘರ್ಷವೇ ಅಗುತ್ತಿದೆ. ಇದಕ್ಕೆ ಕಾರಣಗಳು ಹಲವಿದೆ.ಮಾತ್ರವಲ್ಲ  ಬಹುಮಂದಿಗೆ ಇದರ ಅರಿವೂ ಇದೆ. ಆದರೆ ಆ ಸಮಸ್ಯೆಯ ಬಗ್ಗೆ ಗಂಭೀರತೆ ಇಲ್ಲ. ಒಂದು ಕಾರ್ಯಕ್ರಮ ಆರಂಭಿಸಿ ಜನರಂಜನೆಯನ್ನು ಗಳಿಸಿದರೆ ಸಾಕು ಎಂಬ ಭಾವ. ಅದಕ್ಕಾಗಿ ಅನಾವಶ್ಯಕ ಪ್ರಯೋಗಗಳ ಜತೆ ಹೊಸತನ ಆವಿಷ್ಕಾರಗಳು.ಆದರೆ ಇವುಗಳು ಯಾವುದು ಇಂದಿನ ತಲೆಮಾರಿನ ಅಧ್ಯಯನ ಶೀಲದ ಕೊರತೆಯನ್ನು ನೀಗಿಸುವುದಿಲ್ಲ. ಗಹನವಾದ ವಿಚಾರಗಳ ಬಗ್ಗೆ ಉತ್ತಮ ಅಧ್ಯಯನದ ಅವಶ್ಯಕತೆ ಇದೆ ಅದಕ್ಕೆ ಅಗತ್ಯವಾದ ಮಾಹಿತಿ ಮತ್ತು ಸೌಕರ್ಯಗಳು ಸುಲಭವಾಗಿ ಲಬ್ಯವಾಗಬೇಕಿದೆ. ಸೋಲಿಸುವ ಸ್ಪರ್ಧೆಗಿಂತ ಉತ್ತಮವಾದುದನ್ನು ಕೊಡುವಲ್ಲಿ ಸ್ಪರ್ಧಾ ಮನೋಭಾವವನ್ನು ಬೆಳೆಸುವಂತಾಗಬೇಕು. ಆ ಮೂಲಕ ತಾಳ ಮದ್ದಲೆಯ ಸತ್ವ ಸಂಪೂರ್ಣ ಅನಾವರಣಗೊಳ್ಳಬೇಕು.
ಯಕ್ಷಗಾನಂ ಗೆಲ್ಗೆ




Sunday, April 15, 2012

ನಾದ ಬ್ರಹ್ಮನ ಸೆಳೆತ


ಸೆಳೆತವೆಂದರೆ ಹಾಗೆ. ಅದು ಆಕರ್ಷಿಸುತ್ತಾ ಹೋಗುತ್ತದೆ. ಬೇಡವೆಂದು ಔದಾಸಿನ್ಯ ತಾಳಿದರೂ ಮನಸ್ಸಿನ ಮೂಲೆಯಲ್ಲಿದ್ದ ಬಯಕೆ ತನ್ನ ನೆರಳನ್ನು ಕ್ರಮೇಣವಾಗಿ ವ್ಯಾಪಿಸುವಂತೆ ಮಾಡಿ ಮಿಕ್ಕೆಲ್ಲ ಯೋಚನೆಯನ್ನು ಮುಸುಕಿನೊಳಗೆ ಅಮರಿಸಿಬಿಡುತ್ತದೆ. ಆ ಸೆಳೆತವೆಂಬ ಮೋಹಿನಿಯ  ಬಾಹುಗಳು ವಿಶಾಲವಾದಂತೆ ಭಾಸವಾಗಿ ಬೇಡವೆಂದು ಇದ್ದ ಔದಾಸಿನ್ಯ ಜಡತ್ವ ಸೆಳೆತದ ಬಲಕ್ಕೆ ಪ್ರೇರಣೆಯನ್ನೆ ಒದಗಿಸುತ್ತದೆ. ಆ ಮೋಹಕ ಸೆಳೆತದ ಅನುಭವ ಒಂದಿಒಲ್ಲೊಂದು ಬಗೆಯಲ್ಲಿ ಬಾರದೆ ಇದ್ದವರು ಇರಲಾರರು.


 ಈ ಬಾರಿಯ ಎಡನೀರು ಮೇಳದ ಆಟಗಳತ್ತ  ಸೆಳೆತ ಮೊಳೆತದ್ದು ಆ ಬಗೆಯಲ್ಲಿ. ಬಿಡುವಿಲ್ಲದ ದಿನದ ಕೆಲಸಗಳ ಚಿಂತನೆಯಲ್ಲಿ ಯಾವುದೂ ಬೇಡ, ಒಂದು ಆಟ ನೋಡಿ ಅಷ್ಟಿಷ್ಟು ಸಂತೃಪ್ತವಾಗಿದ್ದ ಮನಸ್ಸಿನ ಆ ತೃಪ್ತಿ ಮರೆಯಾಗಿ ಸಾಯಂಕಾಲ ವಾಗುತ್ತಿದ್ದಂತೆ ಸೆಳೆತದ ಹಸಿವು ಜಾಸ್ತಿಯಾಗಿ  ಮನಸ್ಸಿನ ತುಂಬ ವ್ಯಾಪಿಸುತ್ತ ಮತ್ತದರ ಕಡೆಗೆ ಮುಖಮಾಡುವಂತೆ ಮಾಡಿದ್ದು ವಿಚಿತ್ರ.  ಸಮಯ ಮೀರಿದಂತೆ ಔದಾಸಿನ್ಯ  ಕಡಿಮೆಯಾಗಿ ಚಿತ್ತ ಅತ್ತ ಕಡೆಯೇ ಸೆಳೆದುಬಿಟ್ಟಿತಲ್ಲ? ಒಂದು ಆಟ ನೋಡಿ ಈ ಬಾರಿಗೆ ಇಷ್ಟು ಸಾಕು ಎಂದು ಬಲವಂತವಾಗಿ ಅದುಮಿ ಹಿಡಿದ ಮನಸ್ಸು ಸಾಯಂಕಾಲವಾಗುತ್ತಿದ್ದಂತೆ ಮೆಲ್ಲಗೆ ಆ ಸೆಳೆತ ಸುಳಿಗೆ ಇಣುಕಿ ನೋಡ ಹತ್ತಿತು. ಇಂದು ಯಾವ ಪ್ರಸಂಗ, ಅದು ಹೇಗೆ ಇರಬಹುದು? ಹೀಗೆ ಮಂಡಿಗೆಯ ರುಚಿಯನ್ನು ಸವಿಯತೊಡಗಿತು.


ಇಷ್ಟಕ್ಕೂ ಅಂತಹ ಸೆಳೆತ ಉಂಟಾದ ಕಾರಣವಾದರೂ ಏನು? ಒಂದೆರಡಲ್ಲ ಯೋಚಿಸುತ್ತ ಹೋದಂತೆ  ಹಲವಿದೆ ಅಂತ ನಂತರ ಹೊಳೆದದ್ದು. ಕಳೆದ ಒಂದೆರಡು ಬಾರಿ ಮೇಳದ ಆಟವನ್ನು ನೋಡುವುದು ಸಾಧ್ಯವಾಗಲಿಲ್ಲ. ಆದೇನು ವಿಶೇಷವಲ್ಲ. ಆದರೆ  ಕೊನೆಯದಾಗಿ ನೋಡಿದ ಕೋರಮಂಗಲದ ಎಡನೀರು ಮೇಳದ ಆಟದ ನೆನಪು ಮಾತ್ರ ಮತ್ತು ಮತ್ತು ಮರುಕಳಿಸಿದ್ದು ಸುಳ್ಳಲ್ಲ. ಎರಡು ವರ್ಷದ ಹಿಂದೆ ಇದೇ ರಂಗಸ್ಥಳದಲ್ಲಿ ಮಹಾನ್ ಚೆಂಡೆ ಮದ್ದಲೆ ವಾದಕರಾದ ಚಿಪ್ಪಾರು ಬಲ್ಲಾಳರನ್ನು ಕೊನೆಯದಾಗಿ ನೊಡಿದ್ದ ನೆನಪು ರಂಗ ಸ್ಥಳದ ಮೂಲೆಯನ್ನು ನೋಡುತ್ತಿದ್ದಂತೆ ಮರುಕಳಿಸಿತು. ಕೇವಲ ಅಷ್ಟಕ್ಕೇ ಆ ಪ್ರೇರಣೆ ಉಂಟಾದದ್ದಲ್ಲ. ಅದಕ್ಕೆ ಆದಿನದ ಆ ಯುವಕಲಾವಿದರ ಮದ್ದಲೆ ವಾದನವೂ ಸ್ವಲ್ಪ ಪ್ರೇರಣೆಯಾಗಿತ್ತು. ಯುವ ಕಲಾವಿದರಾದ ಕಡಬ ಶ್ರೀನಿವಾಸ ನಿಜಕ್ಕೂ ಪ್ರಭಾವ ಬೀರಿದರು.  ಅಮ್ಮಣ್ಣಾಯರ ಜತೆ ವಾದನದ ಸುಖವನ್ನು ತನ್ಮಯರಾಗಿ ಸ್ವತಃ ಅನುಭವಿಸುತ್ತ ಬಡಿಯುತ್ತಿದ್ದ ರೀತಿ ಬಹಳ ಪ್ರಭಾವ ಬೀರಿತು ಮಾತ್ರವಲ್ಲ, ನಂತರ ಮುಖತಃ ಭೇಟಿಯಾಗಿ ಆ ಬಗ್ಗೆ ಪ್ರಾಮಾಣಿಕ ಅಭಿನಂದನೆ ಸಲ್ಲಿಸಿದ್ದೆ.

ಅಂದು ಹಲವು ವಿಧದಲ್ಲಿ ಬಲ್ಲಾಳರ ನೆನಪು ಕಾಡಿತು. ೨೦೦೯ ರ ಎಪ್ರಿಲ್ ತಿಂಗಳ ಎಡನೀರು ಮೇಳದ ಪ್ರವಾಸ ಮರೆಯದ ನೆನಪನ್ನು ಆ ಬಗೆಯಲ್ಲಿ ತರುವಂತಾದದ್ದು ಮಾತ್ರ ವಿಷಾದನೀಯ. ಆ ನೆನಪಿನ ಸೆಲೆ ಎಂಬಂತೆ ಮೊನ್ನೆಯೂ ಮೇಳದ ಆಟವಾದಾಗ ಒತ್ತೊತ್ತಿದ ಬಲ್ಲಾಳರ ಛಾಪುಗಳು ಸ್ವರ ಎಬ್ಬಿಸಿ ಅವರ ಅಸ್ತಿತ್ವವನ್ನು ಅನುಮಾನಿಸುವಂತೆ ಮಾಡಿದವು. ನಿರ್ಲಿಪ್ತ ಭಾವದ ನಿಲುಮೆ ಕಣ್ಣಿಗೆ ಕಂಡರೆ  ಆ ರಾಜ ಗಾಂಭೀರ್ಯದ ಮೌನ ಹರಿದು  ಆವ್ಯಕ್ತ ಭಾವಗಳು ಮದ್ದಲೆಯಲ್ಲಿ ಮಾರ್ದನಿಗೊಳಿಸುವ ಬಲ್ಲಾಳ ಶೈಲಿ ಮರೆಯಲಾಗದೆ,  ಅರಿಯದ ಒಂದು ಸೆಳೆತ ಮನದ ಮೂಲೆಯಿಂದ ಆ ಕಡೆಗೇ ಸೆಳೆಯುತ್ತಿತ್ತು. ಮತ್ತೆ ಕನವರಕೆ ಕರಗಿ ವಾಸ್ತವಕ್ಕೆ ಬಂದಾಗ ವಿಷಾದದ ದುಮ್ಮಾನ ಮಾತ್ರ ವ್ಯಕ್ತವಾಗಿಬಿಟ್ಟಿತು. ಯಕ್ಷರಂಗ ಕಳೆದು ಕೊಂಡ ರತ್ನದ ಮೌಲ್ಯ ತುಲನೆ ಮಾಡುವುದು ಅಸಾಧ್ಯವಾದದ್ದು. ಆ ಚೆಂಡೆ ಮದ್ದಲೆಗಳ ಧ್ವನಿ ಮೊಳಗಿ ಮತ್ತೆ ಮೌನ ಆವರಿಸಿರಬಹುದು. ಆದರೆ ಅವುಗಳು ಹೃದಯದಲ್ಲಿ ಎಬ್ಬಿಸಿದ ಆ ನಾದ ತರಂಗದ ಅಲೆಗಳು ಇನ್ನೂ ಹೃದಯದ ಆವರಣಕ್ಕೆ ಮೆತ್ತಗೆ ತಟ್ಟುತ್ತಾ ಇದೆ. ಮರಯ ಬಹುದೇ ಆ ಪೆಟ್ಟುಗಳು? ಇನ್ನು ಆ ತರಂಗಗಳ ಹೊಸ ಉತ್ಪತ್ತಿಯಾಗಬಹುದೇ? ಇನ್ನು ಹಳೆಯ ದ್ವನಿ ಸಂಗ್ರಹದಿಂದ ಆ ಮಧುರ ಸ್ಮರಣಿಕೆಯನ್ನು ಮತ್ತೆ ಮತ್ತೆ ನನಪಿನ ಪೆಟ್ಟಿಗೆಯೊಳಗಿನಿಂದ ತೆಗೆದು ಹೃದಯಕ್ಕೆ ಅಲೆಗಳ ಕಂಪನಗಳನ್ನು ಸೋಕುವಂತೆ ಮಾಡುವುದು ಮಾತ್ರ ಸಾಧ್ಯ. ತಾಯಿ  ಜೋಗುಳದ ಕರತಟ್ಟುವಿಕೆಯ ಬಡಿತಕ್ಕೆ ಮುದುರಿ ಮಲಗಿದ ನಿದ್ರಿಸಿದ ಮಗು,  ಕರ ತಟ್ಟುವಿಕೆ ನಿಲ್ಲಿಸಿದಾಗ ಅರೆ ನಿದ್ರೆಯಲ್ಲಿ ಮಿಸುಕಾಡಿ ಪುನಃ ಆ ಬಡಿತವನ್ನು ಬಯಸುವಂತೆ ಬಲ್ಲಾಳರ ಕರಸ್ಪರ್ಶಕ್ಕೆ ಮಗುವಾಗುವ ಬಯಕೆ. ಆ ಮಟ್ಟಿಗೆ ತಬ್ಬಲಿಯಾದ ಅನುಭವ ಆದರೂ ತಬ್ಬಲಿ ಮನಸ್ಸು ಆ ಧ್ವನಿಯನ್ನೆ ತಬ್ಬಲಿ ಎಂದು ಮನಸ್ಸು ಹಂಬಲಿಸುತ್ತಿರುವುದು ಸುಳ್ಳಲ್ಲ. ಹಂಬಲಿಸಿದ ಮನಸ್ಸಿನ ಸೆಳೆತ ಏನೆಂದು ಅರಿವಾದದ್ದು  ಆನಂತರವವೇ.

ಇದೊಂದು ಬಗೆಯ ನೆನಪಾದರೆ ಎಡನೀರು ಮೇಳದ ಮದ್ದಲೆ ಎಂದರೆ ನೆನಪಾಗುವುದು ಪ್ರಭಾಕರ ಗೋರೆಯವರ ಮುಖ. ಇದು ಹಿಮ್ಮೇಳದ ಆ ಮೂಲೆಯನ್ನು ಅಲಂಕರಿಸಿ ಮನಸ್ಸಿಗೆ  ಒತ್ತಿದ ಅ ಮುದ್ರೆ ಅಚ್ಚಳಿಯದೆ ಇನ್ನೂ ಹಾಗೆ ಉಳಿದಿದೆ. ವೇದಿಕೆಯ ತುದಿಯಂಚಿನಿಂದ ಬರುವ ಧ್ವನಿ ತರಂಗಗಳು ಅಲ್ಲಿಂದ ಅಲೆಯೆಬ್ಬಿಸುವುದನ್ನು ನಿಲ್ಲಿಸಿದರೂ ಆ ನೆನಪಿನ ತರಂಗಗಳು ಇನ್ನೂ ಮಾಸಿಲ್ಲ. ಭಾಗವತರ ಗಾಯನಕ್ಕೆ ಹಿಂಬಾಲಿಸುತ್ತ ಸಾಗಿ ಭಾವತರು ಎಲ್ಲಿ ಅವಕಾಶ ನೀಡುತ್ತಾರೋ .. ಎಲ್ಲಿ ಬಿಡಿತವನ್ನು ನೀಡುತ್ತಾರೋ ಎಂದು ಕಾದು ಆ ಘಳಿಗೆಯಲ್ಲಿ ಮದ್ದಲೆಯ ಮುಖವನ್ನು ಕರದಿಂದ ಸ್ಪರ್ಶಿಸಿ ಬಿಡಿತವನ್ನು ಕಲಾತ್ಮಕ ಗೊಳಿಸುವ ಗೋರೆ ಶೈಲಿ ಮರೆಯಲಾಗದು. ಸ್ವಯಂಚಾಲಿತ ಯಂತ್ರದಂತೆ  ಭಾಗವತರ ಶ್ರುತಿಗೆ ಜತೆಯಾಗಿ ಔದಾಸಿನ್ಯ ಭಾವದಲ್ಲಿ ಬರಿದೇ ನೀಡುವ ಬಲವಾದ ಛಾಪಿನಲ್ಲೂ ಒಂದು ಕಲಾತ್ಮಕತೆ. ಅಲ್ಲಿ ಯಾರು ಬಡಿದರೇನಂತೆ ಅಂದು ನೆನಪಾಗಿ ಕಾಡಿ ಸೆಳೆದದ್ದು ಗೋರೆಯ ಮದ್ದಲೆಯ ನೆನಪುಗಳು. ಅವರು ವಿಶೇಷವಾಗಿ ಬಳಸುತ್ತಿದ್ದ ಆ ತಬಲದ ನೆನಪು. ಈಗ ಅನ್ನಿಸುವುದಿಲ್ಲವೇ ಆ ತಬಲ ಈಗ ಎಲ್ಲಿರಬಹುದು? ಹೇಗಿರಬಹುದು?


ಅಂದು ಯುವ ಮದ್ದಲೆವಾದಕ ಸೆಳೆದ ಪರಿಯೇ ಹಾಗೆ. ಕೆಲವೊಮ್ಮೆ ಅನ್ನಿಸಿದ್ದಿದೆ ಆ ಮೂಲೆಯಲ್ಲಿ ಯಾರು ಕುಳಿತು ಬಡಿದರೂ ಆ ಬಗೆಯ ನಾದ ಹೊರಡುವುದೇ?  ಅದು ಆ ಸ್ಥಾನದ ಮಹಿಮೆ. ಯುವ ಕಲಾವಿದರಲ್ಲಿ ವಿಚಾರಿಸಿದಾಗಲೂ ಇದೇ ಪ್ರತಿಕ್ರಿಯೆ. ನಿಜವಾಗಿ ಆ ಸ್ಥಾನ ವಿಶೇಷವಾದದ್ದು. ಯಾವ ಮದ್ದಲೆಗಾರನೂ ಅನುಭವಿಸಿ ಬಾರಿಸ ಬಹುದಾದ ಭಾಗವತಿಕೆ ಅಮ್ಮಣ್ಣಾಯರದು. ಮದ್ದಲೆಗಾರ ಸ್ವತಃ ತನ್ನೆಲ್ಲ ಕಸುವನ್ನು ತೋರಿಸಲು ಮುಕ್ತ ಅವಕಾಶ ಆಗ ಸಿಗುತ್ತದೆ. ಅತಿ ಬಲವಾದ ಪೆಟ್ಟುಗಳಂತೆ ಮೆತ್ತಗೆ ಸೂಕ್ಷ್ಮವಾಗಿ ಕೇಳುವ ಪೆಟ್ಟುಗಳಿಗೂ ಸಮಾನ ಅವಕಾಶ ಕೊಡುವುದು ಅಮ್ಮಣ್ಣಾಯರು ಮಾತ್ರ. ಅವರ ಜತೆ ಮದ್ದಲೆ ಬಾರಿಸುವುದನ್ನು ಕಲಾವಿದ ಸ್ವತಹ ಅನುಭವಿಸಿ ಸುಖಿಸಬಹುದು.  ಇದನ್ನು ಕೇಳಿದಾಗ ಗೋರೆ ಅಮ್ಮಣ್ಣಾಯ ಜತೆಗಾರಿಕ್  ಯಾಕೆ ಅಪ್ಯಾಯಮಾನ ವಾಗುತ್ತದೆ ಎಂದು ಅರಿವಾಗುತ್ತದೆ. ಸ್ವತಹ ಕಲಾವಿದನೇ ಸುಖಿಸುವಾಗ ಪ್ರೇಕ್ಷಕ ಆ ಸುಖದಲ್ಲಿ ಪಾಲುಗಾರನಾಗದೇ ಇರಲು ಸಾಧ್ಯವೇ?



ಒಂದೆಡೆ ಬಲ್ಲಾಳರು ಅಗಲಿದ ನೋವು ಇನ್ನೊಂದೆಡೆ ಬರಿ ನೆನಪು ಮಾತ್ರವೇ ಅಗಿ ಹೋದ ಗೋರೆ. ಈ ಸಲದ ಎಡನೀರು ಮೇಳದ ಆಟ ಆ ಬಗೆಯಲ್ಲೂ ಒಂದು ವಿಧದ ಸೆಳೆತವನ್ನು ಉಂಟು ಮಾಡಿದೇಯೇ ಎಂಬ ಅನುಮಾನ ಕಾಡುತ್ತಿದೆ. ಕಳೆದ ಬರವಣಿಗೆಯಲ್ಲಿ ಹೇಳಿದ್ದೆ  ಇನ್ನಿಲ್ಲವಾದ ಗೋರೆಯ ಸ್ಮೃತಿ ಮೌನದಲ್ಲಿ ಅಮ್ಮಣ್ಣಾಯರ ವಿಷಾದ ಭಾವ ಸ್ಪುರಿಸುತ್ತಿದೇಯೇ? ಅಲ್ಲವಾದಲ್ಲಿ  ಮನಸ್ಸನ್ನು ಆ ಬಗೆಯಲ್ಲಿ ಎಳೆದು  ಎಳೆದು ಕಟ್ಟಿ ಹಾಕುವ ಅನುಭವವಾದರೂ ಯಾಕೆ? ಇದು ಕೇವಲ ಅನಿಸಿಕೆಯೆ? ಅಮ್ಮಣ್ಣಾಯರ ಆ ಗಾನದ ಸೆಳೆತ,   ಛೇ ಈ ಬಾರಿ ಒಂದು ಆಟ ನೋಡಿ ಮತ್ತೊಂದಕ್ಕೆ ಸೆಳೆದ ಆ ಸೆಳೆತಕ್ಕೆ ಕಾರಣಗಳು,  ಹುಡುಕುತ್ತ ಹೋದಂತೆ ಹಲವು ಸಿಗುತ್ತವೆ. ಅಮ್ಮಣ್ಣಾಯರು ಯಕ್ಷಗಾನ ಕಲೆಗಾಗಿ ಮಾತ್ರವೇ ಸ್ವತಹ ಮೈದುಂಬಿದ ಕಲಾವಿದಾನಾಗಿ ಹಾಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ. ಇಲ್ಲಿ ಯಾವುದೇ ಪ್ರತಿಫಲದ ಬಯಕೆ ಇದೆ ಎಂದು ಅನ್ನಿಸುವುದಿಲ್ಲ. ಈಗ ಅವರು ದಿವಸಕ್ಕೆ ಒಂದು ಕಾರ್ಯಕ್ರಮವನ್ನು ಮಾತ್ರವೇ ಒಪ್ಪುಕೊಳ್ಳುವುದು. ಅದರಲ್ಲಿ ಮೈದುಂಬಿ ಹಾಡುವುದು.  ಭಾವತುಂಬಿದ ಕಂಠದಿಂದ ರಾಗ ಭಾವಗಳು ಹೊರ ಹೊಮ್ಮುವ ಪರಿಯನ್ನೊಮ್ಮೆ  ಸ್ವತಃ ಅನುಭವಿಸಿದಾಗ ಅದು ಅರಿವಿಗೆ ಬರುತ್ತದೆ. ಸಮಯವಾಗುತ್ತಿದ್ದಂತೆ ದನದ ಕರು ಹಾಲಿಗಾಗಿ ಕರೆದಂತೆ ತನ್ನಮ್ಮ ಬಳಿಗೆ ಬಂದಾಗ ಅಮ್ಮನ ಕೆಚ್ಚಲಿಗೆ ಬಾಯಿ ಹಾಕಿದಂತೆ ಸಮಯವಾಗುತ್ತಿದ್ದಂತೆ ಆಗುವ ಆ ಸೆಳೆತದ ಅನುಭವ ಇಲ್ಲಿಯೂ ಅದದ್ದು ಯಾಕೋ? ಅದು ಈಗ ಸಹಜ ಎಂದು ತೋರುತ್ತದೆ. ಆ ಸೆಳೆತ ಅನುಭವಿಸ ಬೇಕಿದ್ದರೆ ಒಂದು ಸಲ ಮೇಳದ ಆಟ ನೋಡಿ. ಎಡನೀರು ಮೇಳ ಪುನಃ ಬರುತ್ತಿದೆ. ಅಮ್ಮಣ್ಣಾಯರು ಪುನಃ ಬರುತ್ತಿದ್ದಾರೆ. ಆ ಸೆಳೆತದ ಸುಳಿಯಲ್ಲಿ ಸಿಲುಕಲು ನಾವು ಪುನಃ ಕಾಯುತ್ತಿದ್ದೇವೆ. 

Wednesday, March 21, 2012

ಎಡನೀರು ಮೇಳದ ಗಂದರ್ವ ಗಾಯಕ


“ ದಾನವಾಂತಕ ನೀ ಎನಗೆ.......”  ಮಧುರವಾದ ಕಂಠದಿಂದ ಪ್ರಸಂಗ ಪದ ಪರಿಸರ ತುಂಬ ಯಕ್ಷತರಂಗಗಳನ್ನು ಉಂಟು ಮಾಡುತ್ತಿದ್ದಂತೆ ಗಂಧರ್ವ ಗಾಯಕನ ಗಾಯನಕ್ಕೆ ಇರವನ್ನು ಮರೆತು ತನು ಮನ  ಸ್ಪಂದನೆಯ ರಾಗವನ್ನು ಹೊರಡಿಸಿತು. ಕೃಷ್ಣ ಲೀಲೆಯ ಉತ್ತರಾರ್ಧದ ಭಾಗದಲ್ಲಿ ಬರುವ ಅಕ್ರೂರ ಮತ್ತು ಶ್ರೀಕೃಷ್ಣರ ನಡುವಿನ ಸಂಭಾಷಣೆಯ ಸನ್ನಿವೇಶ ಅದು. ಭಾವ ಪೂರ್ಣ ಪದಕ್ಕೆ ಅಕ್ರೂರ ಭಾವುಕನಾಗಿ ಬಿಡುವ ಸನ್ನಿವೇಶ. ಅದೇನು ಗಾನ ಮಾಧುರ್ಯ. ಮೂಗಿನ ತುದಿಯ ಕನ್ನಡಕವನ್ನು ಸರಿಸಿ ನೋಡುತ್ತ ರಂಗದ ಮೇಲಿನ ಕಲಾವಿದರನ್ನು ಉತ್ತೇಜಿಸುವ ನೋಟ, ಕಣ್ಣನ್ನು ಕಿರಿದಾಗಿಸಿ ಹುಬ್ಬುಗಂಟಿಕ್ಕಿ ಆ ಸಂಗೀತದ ಲಯದೊಂದಿಗೆ ಲೀನವಾಗುವ ಭಂಗಿ.. ಭಲೇ ಅಮ್ಮಣ್ಣಾಯರೇ ನಾವು ಧನ್ಯರಾಗಿಬಿಟ್ಟೆವು ಅಂದು. ಬೇಸಗೆಯ ಬಿಸಿ ತನುವಿಗಾದರೆ ಹೃದಯಕ್ಕಾದ ಆ ಅಮೃತ ಸಿಂಚನ  ಛೇ!!!    ಸ್ಪುರಿಸುವ ಭಾವಕ್ಕೆ ನೋಡಿ,  ಅಕ್ಷರಗಳೇ ಇಲ್ಲವಲ್ಲ? ಅಮ್ಮಣ್ಣಾಯರ ಪದಗಳೆಂದರೆ ಹಾಗೆ, ಸ್ವತಹ ಭಾವ ತುಂಬಿ ಆಲಾಪಿಸಿದಾಗ ಕಲಾವಿದರೂ ಭಾವ ಪರವಶರಾದರೆ .. ಪ್ರೇಕ್ಷಕರೂ ಭಾವುಕರಾಗಿಬಿಡುತ್ತಾರೆ. ರಾಗ ಯಾವುದೋ, ತಾಳ ಯಾವುದೋ,  ಪ್ರಸಂಗ ಯಾವೂದೋ, ಪದಯಾವುದೋ ಅದು ಅರಿವಿಗೆ ಬರುವುದಿಲ್ಲ. ಕೇವಲ ಗಾನ ಮಾಧುರ್ಯ ಮಾತ್ರ ಸ್ಥಾಯಿಯಾಗಿ ಬಿಡುತ್ತದೆ. ಅಲ್ಲಿ ಕಲೆಯೊಂದಿಗಿನ ತಾದಾತ್ಮ್ಯ ಭಾವ ಒಂದೇ ಗೋಚರವಾಗಿಬಿಡುತ್ತದೆ.ಅದರ  ಪ್ರಭಾವ ಎಷ್ಟೆಂದರೆ ಎಡನೀರು ಮೇಳವೆಂದರೆ  ಮೊದಲು ಮನಸ್ಸಿನಲ್ಲಿ ಸುಳಿಯುವ ಮುಖ ಅಮ್ಮಣ್ಣಾಯರದ್ದು...!!! ಮತ್ತೊಂದು ಗೋರೆಯದ್ದು !!! ವಿಷಾದನೀಯವೆಂದರೆ ಗೋರೆ ಪ್ರಭಾಕರರು ನೆನಪನ್ನು ಉಳಿಸಿ ಅಸ್ತಮಿಸಿದ್ದಾರೆ. ಆ ಇರುಳ  ವಿಷಾದ  ಇಲ್ಲಿ ಸ್ಫುರಿಸುತ್ತಿದೆಯೆ? ಕಲೆಯೊಳಗಿನ ಈ ಬಂಧಗಳ ಅರಿವು ನಮಗಿಲ್ಲ. ಆದರೆ  ಅಂದು ಕಿಂಚಿತ್ ಆದರೂ ಮನಸ್ಸು ಸಾಂತ್ವನಗೊಂಡಿತು ಅದು ಎಡನೀರು ಮೇಳದ ಆಟದಲ್ಲಿ.
ಸರಳವಾದ ಕಾರ್ಯಕ್ರಮಗಳು ಹೃದಯಸ್ಪರ್ಶಿಯಾಗಿರುತ್ತದೆ. ಮತ್ತು ಮನಸ್ಸಿಗೆ ಹತ್ತಿರವಾಗುತ್ತದೆ ಎಂಬ ನಂಬಿಕೆಗೆ ಅನ್ವಯವಾಗುವಂತಹ ರೀತಿಯಲ್ಲಿ ಜರಗುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಎಡನೀರು ಮೇಳದ ಯಕ್ಷಗಾನ ಬಯಲಾಟಗಳು ನಡೆಯುತ್ತಿರುವುದು. ಅಲಿಖಿತ ವಾಡಿಕೆಯೆಂಬಂತೆ ಬೇಸಗೆಯ ಅಂತ್ಯದಲ್ಲಿ ಎಡನೀರು ಮೇಳ ಕೆಲವು ಪ್ರದರ್ಶನಗಳಿಗಾಗಿ ಬೆಂಗಳೂರಿಗೆ ಬಂದಿದೆ. ಮೇಲ್ನೋಟಕ್ಕೆ ಅದ್ಧೂರಿಯ ಜಾಹೀರಾತುಗಳಾವುದೂ ಇಲ್ಲದೆ ಕೇವಲ ಅಭಿಮಾನೀ  ಬಳಗದ ಒಳಗಿನ ಸಂವಹನವೇ ದೊಡ್ಡ  ಮಾಧ್ಯಮವಾಗಿ ಹೆಚ್ಚಿನ ಎಲ್ಲರಿಗೂ ಎಡನೀರು ಮೇಳದ ಆಟದ ಬಗ್ಗೆ ಅರಿವಾಗಿದೆ. ಹಲವರು ಅವರ ಅನುಕೂಲವನ್ನು ಹೊಂದಿಕೊಂಡು ಯಕ್ಷಗಾನವನ್ನು ಸವಿಯುತ್ತಿದ್ದಾರೆ.   ಹಾಗೆ ನನ್ನ ಅನುಕೂಲವನ್ನ ಹೊಂದಿಸಿಕೊಂಡು ಶನಿವಾರದಂದು ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಸವಿದು ಅದರ  ಅಚ್ಚುಕಟ್ಟುತನ ಅಪ್ಯಾಯಮಾನವಾಯಿತು. ಅತ್ಯಂತ ಸರಳವಾದರೂ ಕೆಲವು ವಿಧದಲ್ಲಿ ಅದೇ ಅದ್ಧೂರಿಯಾಗಿ ಭಾಸವಾಗುತ್ತದೆ.

ಎಡನೀರು ಮೇಳವೆಂದರೆ ಮೊದಲು ಕಲ್ಪನೆಗೆ ಬರುವುದು ಅದರ ಶ್ರೀಮಂತ ಹಿಮ್ಮೇಳ. ಬಹುಷಃ ನನ್ನ ಮನಸ್ಸು ಆಕರ್ಷಣೆಗೆ ಒಳಗಾದ ರೀತಿಯೇ ಅದು. ಒಂದೆರಡಾದರೂ ಅಮ್ಮಣ್ಣಾಯರ ಪದಗಳನ್ನು ಕೇಳುವ ಬಯಕೆ. ನನಗಂತು ಅದು ಅಸಂಭವನೀಯ ಬಯಕೆಗಳಾಗಿಬಿಟ್ಟಿವೆ. ಹಾಗಾಗಿ  ಅವಕಾಶ ಇರುವಷ್ಟು ಹೊತ್ತು ಆ ಮಧುರ ಗಾನಾಮೃತವನ್ನು ಸವಿಯುವ ಬಯಕೆಯಿಂದಲೇ ಎಡನೀರು ಮೇಳದ ಆಟಗಳನ್ನು ನಿರೀಕ್ಷಿಸಿ ಶನಿವಾರದಂದು ತಡವಾಗಿಯಾದರೂ ಹೋಗಿದ್ದೆ. ಅತಿ ಸಾಮಾನ್ಯ ಎನಿಸಬಹುದಾಂತಹ ಕೃಷ್ಣ ಲೀಲೆ ಪ್ರಸಂಗ. ತಡವಾಗಿ ಹೋದಕಾರಣ ಮೊದಲು ಕುಳಿತ ಅಮ್ಮಣ್ಣಾಯರ ಕೆಲವು ಪದಗಳಿಂದ ವಂಚಿತನಾಗಿದ್ದೆ. ಆದರೂ ಆನಂತರದ ಕೆಲವು ಪದಗಳು ಮೊದಲು ಹೇಳಿದಂತೆ  ನನ್ನಿರವನ್ನೇ  ಮರೆಸಿಬಿಟ್ಟಿದ್ದವು!!

ಅತ್ಯಂತ ಸೀಮಿತ ಕಲಾವಿದರು ಇರುವ ಮೇಳ. ಕಾಲಮಿತಿಯ ಯಕ್ಷಗಾನಕ್ಕೆ ಮೇಳದ ರೂಪ ಹೀಗೆ ಇದ್ದರೆನೇ ಸೂಕ್ತ. ಅರ್ಧ ಘಂಟೆ ಅರ್ಥವಿಲ್ಲದ ಭಂಗಿಯಲ್ಲಿ ಕುಣಿದು ತಾನು ಮಾತ್ರವಲ್ಲ ಪ್ರೇಕ್ಷಕರನ್ನೂ ದಣಿಸುವ ಪ್ರಮೇಯ ಇಲ್ಲಿ ಬರಬಾರದು. ಯಾವ ಭಾಗ ಎಲ್ಲಿ ಮೀಟಬೇಕೋ ಅಷ್ಟನ್ನೇ ಮೀಟಬೇಕು. ಶ್ರುತಿ ಬರಿಸುವುಕ್ಕೂ ನಿಗದಿತ ಸಮಯಾವಧಿ.ಕಲಾವಿದರೂ ಹಾಗೆ ಮಿತಿಯೊಳಗೆ ವ್ಯವಹರಿಸಿಕೊಳ್ಳಬೇಕಾದುದು ಅನಿವಾರ್ಯವಾಗಿಬಿಡುತ್ತದೆ. ಹಸಿದು ಊಟಕ್ಕೆ ಕುಳಿತವನಿಗೆ ಹಸ್ತೋದಕದ ಭೋಜನವಿಧಿ ಅರ್ಧತಾಸು ತೆಗೆದು ಕೊಂಡರೆ ಹೇಗೆ? ಶಾಸ್ತ್ರಗಳು ಹೇಗೆ ಇರಲಿ ಹಸಿವೇ ಪ್ರಧಾನವಾಗಿಬಿಡುತ್ತದೆ.  ಕೆಲವೊಂದು ಸಲ ಈ ಕಟ್ಟು ಪಾಡುಗಳೂ ಈ ಕಾಲಮಾನದಲ್ಲಿ ಉಪಯುಕ್ತವೆನಿಸುತ್ತದೆ. ಕಾಲಮಿತಿಯೋ,  ಮತ್ತೋಂದೋ,  ಒಂದೆರಡು ಪದಗಳನ್ನು ಕೇಳಿದ ಆ ಘಳಿಗೆ ಮಾತ್ರ ಸ್ಮರಣೀಯವಾಗಿ ಬಿಟ್ಟಿತು. ಅಮ್ಮಣ್ಣಾಯಾರ ರಾಗಾಲಾಪನೆಯ   ತಂಗಾಳಿಗೆ ನಸುಬಿರಿದ  ಹೂವಿನ ಎಸಳು ಕಂಪಿಸಿ ಆ ಸ್ಪರ್ಶ ಸುಖವನ್ನು ಅನುಭವಿಸಿದ ಹಾಗೆ  ಮನಸ್ಸಿನ ಕೋಮಲ ಎಸಳುಗಳು ಕಂಪಿಸುತ್ತಿವೆ. ಭಾವ ಪರವಶವಾಗಿ ಸ್ಪಂದಿಸುತ್ತಾ ಆ ಅಲಾಪನೆಯ ತನ್ನ ಅರಿವಿನಂತೆ ಮೆಲುವಾಗಿ ಪ್ರತಿಧ್ವನಿಸುತ್ತವೆ. ಆ ಅಲಾಪನೆಯ ಸೆಳೆತದ ಬಗೆ ಹೇಗೆಂದರೆ,  ಮಾಧುರ್ಯ ಮನಸ್ಸಿನ ಬರಿದಾದ ಕೊಡದಲ್ಲಿ ತುಂಬುವಷ್ಟು ತುಂಬಿಸಿ ತುಳುಕಾಡದೆ ಜೋಪಾನವಾಗಿಸುವ ಕಾಳಜಿ.,  ಆದರೂ ಈ ಗಡಿಬಿಡಿಯ ಕೆಲಸಭಾರದ ನಡುವೆಯೂ ಒಂದೆರಡು ಹನಿ ಈ ರೂಪದಲ್ಲಿ ಸಿಂಪಡಿಸಿ ಧನ್ಯರಾಗುವಾಗ  ಆಗುವ ಅತ್ಮ ಸಂತೃಪ್ತಿ ಅನನ್ಯ.