ಒಬ್ಬ ಪಳಗಿದ ಓಟಗಾರ ದೂರಗಮನವನ್ನುಆರಂಭಿಸುವಾಗ
ನಿಧಾನವಾಗಿ ಆರಂಭಿಸಿ ನಂತರ ವೇಗವನ್ನು ಹೆಚ್ಚಿಸಿಕೊಂಡು ಇನ್ನೇನು ಗಮ್ಯ ಹತ್ತಿರವಿದ್ದು ಓಟ
ಮುಕ್ತಾಯ ಹಂತಕ್ಕೆ ಬರುತ್ತಿರಬೇಕಾದರೆ ವೇಗ ಗರಿಷ್ಠವಾಗಿ ಒಂದು ರೀತಿಯ ತುರ್ಯಾವಸ್ಥೆಗೆ ಬಂದು
ತಲುಪಿರುತ್ತದೆ. ಸಹಜವಾದ ಮತ್ತು ಸಾಂಪ್ರದಾಯಿಕ ಬೆಳವಣಿಗೆ ಎಂದರೆ ಇದುವೇ. ಆರಂಭದ ವೇಗವನ್ನು
ಕೊನೆಯ ಹಂತದವರೆಗೂ ಕಾಯ್ದುಕೊಳ್ಳಲು ಬಹಳಷ್ಟು ಶ್ರಮಿಸಬೇಕಾಗುತ್ತದೆಆದುದರಿಂದ
ನಿಧಾನವಾಗಿ ತೊಡಗಿ ಎಲ್ಲವೂ ಒಂದು ಹಂತಕ್ಕೆ ಬಂದಾಗ ನಂತರ ಹಂತ ಹಂತವಾಗಿ ವೇಗವನ್ನು
ಪಡೆದುಕೊಳ್ಳುವುದು, ಇದು ಸಾಂಪ್ರದಾಯಿಕ ನಡೆ. ಹೀಗೆ ನಿಧಾನವಾದ ಚಲನೆ ಭದ್ರವಾಗುತ್ತ ಹೋಗುತ್ತದೆ.
ಪಂಚಾಗದ ಮೇಲೆ ಕಟ್ಟಿದ ಗೋಡೆಯಂತೆ. ಮೊದಲೆಲ್ಲ ಮಣ್ಣಿನ ಗೋಡೆಯ ಕಾಲ. ಆವಾಗ ಮಣ್ಣಿನ ಗೋಡೆ
ಕಟ್ಟಬೇಕೆಂದರೆ ಸ್ವಲ್ಪವೇ ಸ್ವಲ್ಪವೇ ಗೋಡೆಯನ್ನು ಕಟ್ಟುವುದು. ಮೊದಲ ಗೋಡೆಯ ಹಸಿ ಮಣ್ಣು ಒಣಗಿ
ಗಟ್ಟಿಯಾದ ಮೇಲೆ, ಅಷ್ಟರಲ್ಲೇ ಹೊಡಿ ಮಣೆಯಿಂದ
ಪೆಟ್ಟು ತಿಂದು ಆ ಗೋಡೆ ಬಹಳಷ್ಟು ಗಡುಸಾಗಿರುತ್ತದೆ
ಗೋಡೆ. ಹೀಗೆ ಗಡುಸಾದ ಗೋಡೆಯ ಮೇಲೆ ನಂತರದ ಗೋಡೆ ಕಟ್ಟುತ್ತಾರೆ.ಒದ್ದೆ ಮಣ್ಣಿನ ಮೇಲೆಯೇ
ಅವಸರವಸರವಾಗಿ ಗೋಡೆ ಕಟ್ಟುವಂತಿಲ್ಲ. ಹೀಗೆ
ನಿಧಾನವಾಗಿ ಹಂತ ಹಂತವಾಗಿ ಏರುವ ಗೋಡೆ ಎಂತಹ ಜಡಿ ಮಳೆ ಬಂದರೂ ಕರಗದ ನಿದರ್ಶನ ಕಣ್ಣ ಮುಂದೇ ಇದೆ.
ಈ ರೀತಿಯ ನಡೆಗಳು ಇಂದಿನ ಪೀಳಿಗೆಯಲ್ಲಿ ಕಂಡು ಬರುವುದು ತೀರ ವಿರಳ. ಸಾಂಪ್ರದಾಯಿಕ ಕಲೆಯಾದ
ಯಕ್ಷಗಾನದಲ್ಲಿ ಇಂತಹ ಸಾಂಪ್ರದಾಯಿಕ ನಡೆಗಳು ಅನಿವಾರ್ಯವಾದರೂ ಅದು ಅನುಸರಿಸುವುದು
ವಿರಳವಾಗುತ್ತಿದೆಯೇ?
ಇತ್ತೀಚೆಗೆ ಅವಸರದ
ಬಿಡುವಿಲ್ಲದ ಸಮಯದ ನಡುವೆ ಒಂದು ವೀಡಿಯೋವನ್ನು ನೋಡುವ ಅವಕಾಶ ಸಿಕ್ಕಿತು. ಒಟ್ಟು ಕಾರ್ಯಕ್ರಮ
ಶಿಸ್ತುಬದ್ದವಾಗಿ ಸುಂದರವಾಗಿ ಮೂಡಿಬಂದಿತ್ತು. ಯುವ ಭಾಗವತರುಗಳ ಗಾನವೈಭವ. ಪಟ್ಲ ಸತೀಶ್,
ರವಿಚಂದ್ರ ಕನ್ನಡಿ ಕಟ್ಟೆ, ಬಲಿಪ ಶಿವಶಂಕರ ಮತ್ತು ಪ್ರಪುಲ್ಲ ಚಂದ್ರ ಈ ಯುವ ಪ್ರತಿಭಾವಂತರು
ಭಾಗವಹಿಸಿದ ಕಾರ್ಯಕ್ರಮ ಬಹಳ ಸುಂದರವಾಗಿ ಅಚ್ಚು ಕಟ್ಟಾಗಿ ಮೂಡಿ ಬಂದಿತ್ತು. ಕೊನೆಯವರೆಗೂ
ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಬಹಳ ಯಶಸ್ವಿಯಾಯಿತೆಂದೇ ಹೇಳಬಹುದು. ಹೊರನೊಟಕ್ಕೆ ಯಶಸ್ವೀ
ಕಾರ್ಯಕ್ರಮ ನಿಜವಾದರೂ ಕೆಲವೊಂದು ಜಿಜ್ಞಾಸೆಗಳು ಮೂಡಿಬಂದದ್ದು ಸುಳ್ಳಲ್ಲ.
ಎಲ್ಲರೂ ಬಿಸಿರಕ್ತದ
ಯುವ ಕಲಾವಿದರು. ಪ್ರೇಕ್ಷಕರಲ್ಲೂ ನಿರೀಕ್ಷೇ ಕುತೂಹಲ ಬಹಳಷ್ಟಿರಬಹುದು. ಸ್ವತಹ ಯುವಕಲಾವಿದರಲ್ಲೂ
ಇದು ತುಂಬಿಕೊಂಡು ನಿರೀಕ್ಷೆ ಕುತೂಹಲ ನಂತರ ಉದ್ವೇಗಕ್ಕೆ ತಿರುಗಿರಲೂ ಬಹುದು. ಆ ಉದ್ವೇಗ ಆರಂಭದ
ಪಲ್ಲವಿಯಲ್ಲೇ ಹೊರಹೊಮ್ಮಿದ್ದು ವಿಶೇಷ. ಮೊದಲ ಹಂತದ ಪ್ರತಿ ಪದದ ಚರಣದಲ್ಲೂ ಅದು ಪ್ರಕಟಗೊಂಡು
ಸ್ಪರ್ಧಾತ್ಮಕತೆಯನ್ನು ಗುರಿಯಾಗಿಸಿ ಅದನ್ನೇ ಅವಾಹನೆ ಮಾಡಿಕೊಂಡಂತೆ ಹಾಡತೊಡಗಿದರು. ಸಹಜವಾಗಿ
ಬಹಳ ಮೇಲಿನ ಶೃತಿಯಿಂದಲೇ ತೊಡಗಿದಾಗ ಧ್ವನಿವರ್ಧಕದ ಸ್ವರವೇ ಅಧಿಕವಾಯಿತೋ ಎಂಬ ಭ್ರಮೆ. ಆದರೆ ಈ
ಲೋಕದಿಂದ ಹೊರಬರಲು ಹೆಚ್ಚು ವೇಳೆ ಬೇಕಾಗಲಿಲ್ಲ... ಮೊದಲ ಹಂತ ಎರಡು ಪದ ಕಳೆದಾಗ ದೊಡ್ಡ ಮಳೆ
ಬಂದು ನಿಂತು ಬಿಸಿಲು ಬಂದಂತಾದ ಅನುಭವ.
ಇದ್ದುದರಲ್ಲಿ
ಕನ್ನಡಿಕಟ್ಟೆ ಆ ವೇಗವನ್ನು ಆ ರಭಸವನ್ನು ಕೊನೆಯ ವರೆಗೂ ಬಹಳ ಶ್ರಮವಹಿಸಿ ಸಮರ್ಥವಾಗಿ
ಕಾಪಾಡಿಕೊಂಡು ಬಂದರೆ ಪಟ್ಲ ಮತ್ತು ಪ್ರಪುಲ್ಲರು
ಮೊದಲ ಎರಡು ಪದ ಬಹಳ ಸುಂದರವಾಗಿ ಮುಕ್ತಾಯಗೊಳಿಸಿದರೂ ನಂತರ ಅದನ್ನು ಮುಂದುವರಿಸುವಲ್ಲಿ
ಎಡವಿದಂತೆ ಅನಿಸಿತು.ಆರಂಭದ ಕ್ಷಮತೆ ಮತ್ತೆ ಕಡಿಮೆಯಾಗುತ್ತ ಹೋಯಿತು.ಹಾಗೆಂದು ಕಳಪೆಯೆಂದು
ಪರಿಗಣಿಸುವ ಹಾಗಿಲ್ಲ. ಆದರೂ ಆ ಪ್ರಭಾವ ಮತ್ತೆ ತೋರಿಬರಲಿಲ್ಲ. ಸ್ಪರ್ದಾತ್ಮಕ ಮನೋಭಾವವನ್ನು
ಗಂಭೀರವಾಗಿ ಪರಿಗಣಿಸಿದಂತೆ ಭಾಸವಾಯಿತು. ಸ್ಪರ್ಧೆಯ ಫಲಾಫಲಗಳ ಬಗ್ಗೆ ಇದ್ದ ಗಮನ ಅಸ್ತಿತ್ವದತ್ತ
ಸರಿಯದೇ ಹೋಯಿತು.ಅಸ್ತಿತ್ವ ಗಟ್ಟಿಯಾದಮೇಲೆ ಬೆಳವಣಿಗೆಯತ್ತ ನೋಡಬೇಕು. ಆ ಮನೋಭಾವ ಗೋಚರಿಸದೆ
ರಭಸದಿಂದ ಬಿದ್ದ ಮಳೆ ಭೂಮಿಯಲ್ಲಿ ಇಂಗುವ ಮೊದಲೇ ರಭಸದಿಂದ ಹರಿದು ಹೋದಂತೆ ಮಳೆಯೇನೋ ಬಂತು ಆದರೆ
ಪರಿಣಾಮ ಮಾತ್ರ ಪ್ರಶ್ನಾರ್ಥಕವಾಯಿತು.
ಉಳಿದಂತೆ ಬಲಿಪ ಶಿವ
ಶಂಕರ ನಿಧಾನವಾಗಿ ತೊಡಗಿದುದರಿಂದ ಈ ಸಮಸ್ಯೆ ಅವರ ಗೊಡವೆಗೆ ಬಂದಂತೆ ಇರಲಿಲ್ಲ.
ಸಾಂಪ್ರದಾಯಿಕವಾಗಿ ನಿಧಾನವಾಗಿ ಹಾಡುತ್ತಾ ಬಡಿದಿಟ್ಟ ಒಂದೊಂದೇ ಮೊಳೆ ಆಳವಾಗಿ ಭದ್ರವಾಗಿ
ನೆಲೆಯೂರಿತು.
ಆರಂಭದ ಹಂತದಲ್ಲಿ
ಪಟ್ಲ ಸತೀಶರು ಹಾಡಿದ “ ಆವಲ್ಲಿಗೆ ಪಯಣವಯ್ಯ ಪ್ರಾಣ ಕಾಂತ....” ಸುಧನ್ವ ಮೋಕ್ಷ ಪ್ರಸಂಗದ ಈ ಪದ
ಸುಂದರವಾಗಿ ಮೂಡಿ ಬಂತು ಉತ್ತಮ ಹಿಮ್ಮೇಳ ಉತ್ತಮ ಸಹಕಾರಿಯಾಗಿತ್ತು. “ ಕರುಣದಿ ಪೊರೆದೆನ್ನ...”
ಪ್ರಪುಲ್ಲಚಂದ್ರ ಸುಂದರವಾಗಿ ಹಾಡಿದರೆ... ಕನ್ನಡಿಕಟ್ಟೆ ರವಿಚಂದ್ರ ಹೇಳಿದ ಹೆಚ್ಚಿನ ಎಲ್ಲ
ಹಾಡುಗಳನ್ನು ಉತ್ತಮವಾಗಿ ಪ್ರಸ್ತುತಪಡಿಸಿದರೂ “ಸತಿ ಶಿರೋಮಣಿ ಪ್ರಭಾವತಿ...” ಉತ್ತಮವಾಗಿತ್ತು.
ಬಲಿಪ ಶಿವ ಶಂಕರ ಹಾಡಿದ ಅಪರೂಪದ ಪದ “ ಶ್ರೀಕರ ಶತಮುಖನುತ ತ್ರದಶಾ” ಬಹಳ ಉತ್ತಮವಾಗಿತ್ತು.
ಕಷ್ಟಕರ ಚಂದಸ್ಸು ರಾಗಬದ್ಧವಾಗಿ ಮೂಡಿಬಂತು.
ಅತ್ಯಂತ ಪ್ರಸಿದ್ದ
ಪದಗಳನ್ನೇ ಆಯ್ಕೆ ಮಾಡುವುದರ ಬದಲಾಗಿ ಇಂತಹ ಕಾರ್ಯಕ್ರಮದಲ್ಲಿ ಅಪರೂಪದ ಪದಗಳನ್ನು ಬಹಳಷ್ಟಾದರೂ
ಸೇರಿಸಿಕೊಳ್ಳಬೇಕು. ಕಾರ್ಯಕ್ರಮದ ರಂಜನೆಗೆ ಪ್ರಸಿದ್ದ ಪದಗಳ ಆಯ್ಕೆ ತಪ್ಪಲ್ಲ. ಆದರೆ ಅಪರೂಪದ
ಪದಗಳನ್ನು ಹೇಳಿ ಅದರಲ್ಲಿ ತನ್ನ ಪ್ರತಿಭೆಯನ್ನು ತೋರಿಸುವುದು ಕಲಾವಿದನ ನಿಜವಾದ
ಸವಾಲಾಗಿರುತ್ತದೆ. ಪ್ರಸಿದ್ದ ಪದಗಳನ್ನು ಹೇಳಿ ಪ್ರಶಂಸೆಗಳಿಸುವುದು ಸಾಮಾನ್ಯ
ವಿಷಯವಾಗಿರುತ್ತದೆ. ನಳ ಮಹಾರಾಜ ಬಡಕಲು ಕುದುರೆಯನ್ನು ಆಯ್ಕೆ ಮಾಡಿದಂತೆ ಯಾರೂ ಗಮನ ಹರಿಸದ
ಪದಗಳನ್ನು ಹೇಳಿ ಅದರಲ್ಲಿ ಯಶಸ್ಸನ್ನು ಕಾಣುವುದು ಪ್ರತಿಭಾವಂತನ ಲಕ್ಷಣ.
ಯಕ್ಷಗಾನದ ಇಂದಿನ ಯುವ ಕಲಾವಿದರಲ್ಲಿ ಅಪಾರವಾದ ಪ್ರತಿಭೆಯಿದೆ. ಹಲವರು ಒಂದಲ್ಲ ಒಂದು ವಿಧದಲ್ಲಿ ಪ್ರತಿಭಾವಂತರು. ಬಹುಶಃ ಬೇರಾವುದೇ ಕಲೆಯಲ್ಲೂ ಕಂಡುಬಾರದ ಅನರ್ಘ್ಯ ಸಂಪತ್ತು ಯಕ್ಷಗಾನ ಕಲೆಯಲ್ಲಿದೆ. ಅದು ಸರಿಯಾದ ದಿಶೆಯಲ್ಲಿ ಪ್ರಕಾಶಿಸಬೇಕು. ಹಿಡಿದ ಕೈದೀಪ ಪ್ರಖರವಾಗಿ ಉರಿದರೆ ಸಾಕೆ? ಅದರ ಪ್ರಖರತೆ ಅಂಧಕಾರದತ್ತ ಹರಿದರೆ ಅದರ ಪ್ರಕಾಶ ಮತ್ತೂ ಪ್ರಕಾಶಮಾನವಾಗುತ್ತದೆ. ಈ ಹಿಂದೆ ಹೇಳಿದಂತೆ ಗುರು ಪಾಠದನಂತರ ಸರಿಯಾದ ಮಾರ್ಗದರ್ಶನಕ್ಕೆ ಯುವ ಮನಸ್ಸು ತೆರೆದುಕೊಂಡು ಪ್ರತಿಭೆಯಗಂಧ
ಹರಡುವಂತಾಗಬೇಕು. ಉದ್ವೇಗರಹಿತ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡಾಗ ಜ್ಞಾನದ ಪ್ರಪಂಚವೂ ತೆರದುಕೊಳ್ಳುತ್ತದೆ.
ಚಿಂತನೆಗಳನ್ನು ಕಲೆಗೆ ಪೂರಕವಾಗುವ ಅನಿವಾರ್ಯತೆಯನ್ನು ಬೆಳೆಸಿಕೊಳ್ಳಬೇಕು.
ಕಲೆಯಲ್ಲಿ
ಸ್ಪರ್ಧೆ ಇರಬೇಕು ಅದು ಗುರಿಮುಟ್ಟುವುದಕ್ಕೆ ಮಾತ್ರ ಇರಬೇಕು ಹಿಂದಿಕ್ಕುವುದಕ್ಕಲ್ಲ. ಯಾಕಂದರೆ
ಸೋಲು ಗೆಲುವು ಅದು ಕಲಾವಿದನ ಸ್ವಂತ ಸೊತ್ತಲ್ಲ ಅದು ಕಲೆಯ ಸೊತ್ತು. ಕಲಾವಿದನ ಸೋಲು ಗೆಲುವೆಂದರೆ
ಅದು ಪರೋಕ್ಷವಾಗಿ ಕಲೆಯೇ ಆಗಿರುತ್ತದೆ. ಕಲಾವಿದ ಗೆದ್ದರೆ ಪ್ರದರ್ಶನ ಗೆದ್ದ ಹಾಗೆ, ಪ್ರದರ್ಶನ
ಗೆದ್ದರೆ ಕಲೆಯೇ ಗೆದ್ದ ಹಾಗಲ್ಲವೆ?







