"ಹರನೇ ಶಂಕರನೇ ಶಂಕರ ಪಾರ್ವತಿ ವರನೇ .....ಧುರದೊಳು ರಕ್ಕಸ ಸೇನೆಯು ಬರಿದಾಯಿತೆ ಶಿವನೇ"
ರಾವಣ ಏಕಾಂಗಿಯಾಗಿ ಅಂತಃ ಪುರದಲ್ಲಿ ರೋಧಿಸುತ್ತಿದ್ದಾನೆ. ಕಳೆದೂ ಕಳೆದೂ ಕೊನೆಗೆ ಯಃಕಶ್ಚಿತ್ ದೂತ ಪರಿಚಾರಕ "ಗೂಢ ಬ್ರಹ್ಮನೊಳು ಹಗೆ ಮಾಡಿ ಕೆಡದಿರು..." ಉಪದೇಶಿಸುತ್ತಾನೆ. ಇದರಲ್ಲಿ ಪರೋಕ್ಷವಾಗಿರುವ ಲಂಕಾ ಪ್ರಜೆಗಳ ಧ್ವನಿಯನ್ನು ಗುರುತಿಸುತ್ತಾನೆ. ಸ್ವಾಯತ್ತವಾದ ಸರ್ವಾಧಿಕಾರ ಏನೂ ಇಲ್ಲದೇ ಇದ್ದ ರಕ್ಕಸ ಗಡನಕ್ಕೆ ಬುದ್ಧಿಮತ್ತೆಯಲ್ಲಿ ದಶಶಿರನಾಗಿ , ಧ್ವನಿಯಲ್ಲಿ ದಶಕಂಠನಾಗಿ ರಾವಣೋ ಏಕರಾವಣನಾಗಿ ಮೆರೆದವನು ಇಂದು ಎಲ್ಲವನ್ನು ಕಳೆದು ಕೊಂಡು ರೋಧಿಸುತ್ತಿದ್ದಾನೆ. ದಶಮುಖನಾಗಿ ದಶದಿಕ್ಕುಗಳ ಸುಖವನ್ನು ಕಂಡ ರಾವಣ, ರಕ್ಕಸರಿಗೆ ರಾಷ್ಟ್ರವಾಗಿ ಅಧಿಕಾರಿಯಾಗಿ ಮೆರೆದ ಮೇಲೆ ರಕ್ಕಸರ ಇಚ್ಛಾ ಕ್ರಿಯಾ ಜ್ಞಾನ ಎಲ್ಲವೂ ಆದ ರಾವಣ ಲಂಕಾ ಪ್ರಜೆಗಳಿಗೆ ಎಲ್ಲವನ್ನೂ ಕೊಟ್ಟ... ಪ್ರಜಾಯತ್ತವಾದದ್ದು ಯಾವುದೂ ಇಲ್ಲ. ಆದರೆ ಇಂದು ಅದೇ ಪ್ರಜೆಗಳು ರಾವಣನ ಉಚ್ಛ್ರಾಯಸ್ಥಿತಿಯಲ್ಲಿ ಬದುಕಿಗೆ ಭರವಸೆಯನ್ನು ಕಲ್ಪಿಸಿದವರು, ಅದಿಲ್ಲದೇ ಆಗುವಾಗ ತನ್ನ ಮಕ್ಕಳೆಲ್ಲಿ... ತನ್ನ ಗಂಡನೆಲ್ಲಿ ಅಣ್ಣ ನೆಲ್ಲಿ ತಮ್ಮನೆಲ್ಲಿ ಎಂಬ ಪ್ರಜೆಗಳ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಅನಿವಾರ್ಯತೆಯಲ್ಲಿ ಸಿಕ್ಕಿಕೊಂಡನೇ? ಶೂನ್ಯವಾಗಿದ್ದ ಲಂಕೆಯಲ್ಲಿ ಸುವರ್ಣ ಲಂಕೆಯನ್ನೇ ರೂಪಿಸಿದಾಗ ಎಲ್ಲವನ್ನು ಅನುಭವಿಸಿದ ಪ್ರಜೆಗಳು ಇಂದು ಗೂಢ ಬ್ರಹ್ಮನನ್ನು ತೋರಿಸುತ್ತಿದ್ದಾರೆ ಎಂದ ಮೇಲೆ, ಹರನೇ ,,,,,,,,,, ಎಂಬುದು ಈಗ ದಶ ಕಂಠದ ದ್ವನಿಯಾಗಿಬಿಟ್ಟಿತೇ?
" ಹೌದು ನನ್ನನ್ನು ಆಕ್ಷೇಪಿಸುವವರ ಮತಕ್ಕೆ ಕೆಲವು ಪುಷ್ಟಿ ಉಂಟು. ಇದೇನು ಗತಕಾಲದ ವರದಿಯೋ? ಮೊನ್ನೆ ಮೊನ್ನೆ ವರೆಗೆ ಪ್ರತ್ಯಕ್ಷ ಜನ ಕಂಡದ್ದು. ತುಂಬಿದಂತಹ ರಾಜಸಭೆ. ಆ ಸಭೆಯಲ್ಲಿ ಎಂತೆಂಥವರು? ಬೃಹಸ್ಪತಿಯನ್ನು ನಾಚಿಸುವ ಅಥವಾ ಇತರೆ ಇತರೆ ವಿದ್ವಾಂಸರನ್ನು ಕೂಡಾ ತಲೆ ಬಾಗುವಂತೆ ಮಾಡುವ ಅರ್ಥ ಶಾಸ್ತ್ರವೋ ? ಧರ್ಮ ಶಾಸ್ತ್ರವೋ.? ಯಾವ ಶಾಸ್ತ್ರ ಬೇಕು ಹೇಳುವ ಘನವಿದ್ವಾಂಸರ ಬಳಗವೇ ಒಂದು ಕಡೆ ಇತ್ತು. ಮತ್ತೊಂದು ಕಡೆ ಮೃತ್ಯುದೇವತೆಯ ಕೋರೆ ದಾಡೆಯನ್ನು ಕಿತ್ತು ತಂದು ಕೊಡಬೇಕೆ? ದಂಡಧಾರಿಯಾದ ಯಮನ ದಂಡವನ್ನು ಅವನು ಕೊಡುವ ದಂಡ ಸಮೇತ ನಿಮ್ಮ ಪಾದದ ಬುಡಕ್ಕೆ.......ಎಂದು ಹೇಳುವವರಿದ್ದರು. ಆದರೆ ಹೀಗೆ ಹೇಳುವವರು ಪ್ರಪಂಚದಲ್ಲಿ ಧಾರಾಳ ಸಿಗಬಹುದು. ಕೇಳುವವರು ಅವರಿಗಿಂತ ಸಣ್ಣವರಾದರೆ. ಆದರೆ ರಾವಣನ ಮುಂದೆ ಹೇಳುವವರು ಧೈರ್ಯ ಇಲ್ಲದಿದ್ದರೆ ಹೇಳಿಯಾರ? ಕೇವಲ ಈ ಹುಂಬತನದ ಅಟ್ಟಹಾಸವನ್ನೆಲ್ಲಾ ಕೇಳಿ ತಲೆದೂಗುವವನಲ್ಲ ದಶಕಂಠ ರಾವಣ ಅಂತ ಇವರಿಗೆ ನನ್ನ ಜೀವನದ ಇತಿವೃತ್ತದಿಂದ ಗೊತ್ತುಂಟು. ಆದಕಾರಣ ಯಾರು ಯಾರು ಇಂತಹ ಆ ವೀರಶ್ರೀರಾದಿತ ಗಾತ್ರವಾದ ದೇಹಕಾಂತಿಯಿಂದಲೂ, ಮುಖ ಕಾಂತಿಯಿಂದಲೂ, ಅಲ್ಲ ಅರ್ಥ ಪುಷ್ಟಿಯಿಂದಲೂ ಜೀವಂತವಾದಂತಹ ಒಂದು ದರ್ಶನವನ್ನು ಕೊಡುತ್ತ ಇದ್ದರೋ ಅಂಥವರು ಇರಬೇಕಾದಂತಹ ಸಾಲಿನಲ್ಲಿ.. ಅಮೇಲೆ ಸಂಗೀತವೋ ನರ್ತನವೋ .. ಬಹಳ ಮಾತ್ಯಾಕೆ.. ರಾವಣೇಶ್ವರನ ರಾಜಸಭೆಯಲ್ಲಿ ರಾವಣಾನಾಳುತ್ತಿರುವ ರಾಜ್ಯದಲ್ಲಿ ಏನುಂಟು ಅಂತ ಒಬ್ಬನೂ ಕೇಳುತ್ತಿರಲಿಲ್ಲ. ಅಲ್ಲಿ ಏನಿಲ್ಲ? ಇಲ್ಲಿ ಇಲ್ಲದ್ದು ಸ್ವರ್ಗದಲ್ಲೂ ಇಲ್ಲ. ಇಲ್ಲಿ ಇಲ್ಲದ್ದು ಮತ್ತೆಲ್ಲಿಯೂ ಇಲ್ಲ. ಹೀಗಿತ್ತಲ್ಲ? ಆದಕಾರಣ ಶೂನ್ಯ ಕಾಣುವುದು ಯಾರಿಗೆ? ನನ್ನನ್ನು ಆಕ್ಷೇಪಿಸುವವರಿಗೆ. ಇಲ್ಲದಿದ್ದರೆ ಈಗ ಇದ್ದದ್ದು ವರ್ತಮಾನಕಾಲದಲ್ಲಿ ಪ್ರಪಂಚದಲ್ಲಿ ಒಬ್ಬ ರಾಜಶ್ರೇಷ್ಠನಿದ್ದರೆ ಅವನಲ್ಲಿ ಇರುವುದಕ್ಕಿಂತ ಹೆಚ್ಚಿಗೆ ಉಂಟು. ಈ ಜನರ ಕಣ್ಣಿಗೆ ಕಾಣುವುದು ಹಾಗಲ್ವ? ಏಳು ಮಾಳಿಗೆ ಇದ್ದದ್ದು ಕುಸಿದು ಮೂರು ಮಾಳಿಗೆ ಅಗುವಾಗ ಬಡವನಾದದ್ದು. ಒಂದೇ ಮಾಳಿಗೆ ಇದ್ದವ ಇನ್ನೂ ಶ್ರೀಮಂತನಾಗಿ ಕಾಣುತ್ತಾನೆ. ಆದರೆ.. ಏಳು ಮಾಳಿಗೆ ಇದ್ದದ್ದು ಕುಸಿದದ್ದು ಹೌದಲ್ಲ? ಬರಿದಾದದ್ದು ಹೌದಲ್ಲ.?" ರಾವಣ ಉತ್ತುಂಗದಿಂದ ಕುಸಿದದ್ದನ್ನು ಮಥನ ಮಾಡುತ್ತಾನೆ. ಕಳೆದು ಹೋದ ಘನತೆ ವರ್ಚಸ್ಸು ಕಳೆಯಿತಲ್ಲಾ ಎಂದು ವ್ಯಾಕುಲನಾದರೂ ಆ ಉತ್ತುಂಗ ಶಿಖರವನ್ನು ಏರಿದುದನ್ನು ಮತ್ತೊಮ್ಮೆ ನೆನಪಿಸುತ್ತಾ ವಿಶ್ಲೇಷಿಸುತ್ತಾನೆ.
ಇವತ್ತು ಯಾರಾದ್ರು ರಾಕ್ಷಸ ಶಬ್ಧಕ್ಕೆ ಅರ್ಥ ಏನು ಅಂತ ಕೇಳಿ? ಹೊಸ ಭಾಷಾಶಾಸ್ತ್ರಾ ಪಂಡಿತರು ಏನು ಹೇಳ್ತಾರೆ? ರಾಕ್ಷಸರು ಅಂತ ಅಂದ್ರೆ ಕೆಟ್ಟವರು. ದುರಾಚಾರಿಗಳು. ಆ ಶಬ್ದದ ಅರ್ಥವೇ ವೆತ್ಯಾಸವಾಯಿತು. ನಮ್ಮವರೇ ಮಾಡಿದ್ದು ಬೇರೆ ಯಾರೂ ಮಾಡಿದ್ದಲ್ಲ. ಇನ್ನೊಬ್ಬರು ನಮ್ಮನ್ನು ಹೇಗೆ ಕೆಳಕ್ಕೆ ತಳ್ಳಿಯಾರು? ನಾವು ದುರ್ಬಲರು ಅಲ್ಲದೇ ಇದ್ದರೆ. ನಮ್ಮ ಸ್ಥಾನದಲ್ಲಿ ನಾವು ಇದ್ದರೆ. ಇನ್ನೊಬ್ಬರ ಒತ್ತಡದಿಂದ ಏನೂ ಅಗೋದಿಲ್ಲ. ಹಾಗಾಗಿ ಜಗತ್ತನ್ನೇ ರಕ್ಷಿಸುತ್ತೇವೆ ಅಂತ ಪ್ರಮಾಣ ಮಾಡಿ ಸಕಲ ಧರ್ಮವನ್ನು ಶಾಸ್ತ್ರವನ್ನು ಜ್ಞಾನ ವಿಜ್ಞಾನಗಳನ್ನು ತಮ್ಮ ಕೈಯಲ್ಲಿ ಹಿಡಕೊಂಡವರೇ ಅದರ ಭಕ್ಷಕರಾದರಂತೆ. ಹಾಗಾಗಿ ನಾವು ಕಥೆ ಕೇಳ್ತೇವೆ 'ವೇದವ ಕದ್ದೊಯ್ದ.... ಆದಿರಾಕ್ಷಸ'. ಕದ್ದು ಎಲ್ಲಿಗೆ ತೆಕ್ಕೊಂಡು ಹೋಗುದು.. ಅದನ್ನು ನಾಶ ಮಾಡಿದ..ನೀರಿನಲ್ಲಿ ಮುಳುಗಿಸಿದ..ಆ ಕಾಲಕ್ಕೆ ವೇದ ಪುರುಷ ವೇದಾನುದ್ದರತೆ, ಅವನನ್ನು ಕೊಂದು ವೇದವನ್ನು ರಕ್ಷಿಸಿದ. ಈ ವರ್ಗದವರೇ ದುರಾಚಾರಿಗಳು ಅಂತ ಪಟ್ಟಕಟ್ಟಿದ. ಇವರ ಕೈಯಲ್ಲಿ ಆಢಳಿತ ಕೊಟ್ಟರೆ ಹೀಗೆ ಮಾಡ್ತಾರೆ ನ್ಯಾಯಾಂಗ ಧರ್ಮಾಂಗ ತಿಂದು ಹಾಕ್ತಾರೆ. ಹೀಗಿರುವಾಗಲೇ ಆದಿತೇಯರಿಗೆ ಹಕ್ಕನ್ನು ಕೊಟ್ಟ. ಹೀಗೆ ಅದಿತೇಯರ ಕೈಯಲ್ಲಿ ಲೋಕರಕ್ಷಣೆಯ ಹಕ್ಕನ್ನು ನಮ್ಮವರೇ ನಮ್ಮ ದೌರ್ಬಲ್ಯದಿಂದ ನಿಕ್ಶೇಪಿಸಿದರು. ಅವರು ಅವರ ಸ್ಥಾನದಲ್ಲೇ ಇರ್ತಿದ್ದರೆ ಇದು ಹೋಗುತ್ತಿತ್ತೋ..? ಹೀಗೆ ಆಲೋಚನೆ ಮಾಡಿದಂತಹ ನಾನು ಮತ್ತೊಮ್ಮೆ..ಅದೇ ಎತ್ತರಕ್ಕೆ ನಾನೂ ಬೆಳೆಯುವುದರ ಜತೆಗೆ ನನ್ನ ಸಮಾಜವನ್ನು ಬೆಳೆಸಬೇಕು ಅಂತ ಯತ್ನಿಸಿದೆ. ನನ್ನ ತಾಯಿಯಂತೂ ಅದಕ್ಕಾಗಿ ಬಲು ದೊಡ್ಡದಾದ ತ್ಯಾಗವನ್ನೇ ಮಾಡಿದಳು. ವಿಶ್ರವಸು ಬ್ರಹ್ಮನ ಮನಸ್ಸೊಲಿಸಿ, ಆತನ ಕೃಪಾ ಭಿಕ್ಷಾರೂಪವಾಗಿ ವಂಶೋದ್ದಾರಕನಾದ ಸತ್ಪುತ್ರನನ್ನು ಕರುಣಿಸಬೇಕು. ಒಂದು ವ್ಯಕ್ತಿಯಲ್ಲಿ ಹತ್ತುವ್ಯಕ್ತಿಯ ಶಕ್ತಿಬೇಕು. ಅಂತ ಕೇಳಿದ್ದರಿಂದ ಉದಾರಚಿತ್ತರಾದಂತಹ ವಿಶ್ರವಸು ಬ್ರಹ್ಮರು ನನ್ನ ಅಮ್ಮನಿಗೆ ನನ್ನ ಮೂಲಕವಾಗಿ ತೃಪ್ತಿಯನ್ನು ತಂದರಂತೆ. ಅಂದು ನನ್ನ ತಾಯಿ ಹೇಳಿದ ಮಾತು. ಮಗನೇ ಮೊದಲು ರಾಕ್ಷಸ ಕುಲದ ಉದ್ದಾರ. ಆಮೇಲೆ ನಿನಗೆ ವಿಶ್ರಾಂತಿ. ಅಂದು ನಾನು ಪ್ರತಿಜ್ಞಾಬದ್ಧನಾದದ್ದು. ತಾಯಿ, `ಸುರನರಭುಜಂಗಮ ಭುವನದಲ್ಲಣ' ಅಂತ ಹೇಳಿಸಿದ ಮೇಲೆ ನಿನ್ನ ಮುಖಕಂಡೇನು. ಯಾರಿಗೆ ಗೊತ್ತಿಲ್ಲ? ಪ್ರಾಯದ ಕಾಲದಲ್ಲಿ ಒಂದು ದಿನ ಸುಖವೆಂಬ ಶಬ್ದದ ಅನುಭವ ಬಿಡಿ ಶ್ರವಣ ನಾನು ಮಾಡ್ಲಿಲ್ಲ. ನಾನು ನೀರಿನಲ್ಲಿ ಮುಳುಗಿದ್ದು ಎಷ್ಟು ಸಾವಿರ ವರ್ಷವಾದೀತು? ಪಂಚಾಗ್ನಿ ಮಧ್ಯದಲ್ಲಿ ನಿಂತು ನಾನು ಮಾಡಿದ ತಪಸ್ಸಿಗೆ ಎಷ್ಟು ಶತಮಾನ ಶತಮಾನವಾದೀತು. ಇಷ್ಟು ಸಾಧಿಸಿದೆ.ತಾಯಿಗೆ ಸಂತೋಷವಾಯಿತು. ಗಂಡು ಮಗನ ಹೆಡೆದ ತಾಯಿ ಅಂತ ನಮ್ಮ ಅಮ್ಮ ಹೆಮ್ಮೆ ಪಟ್ಟಳು. ಜತೆಗೆ ತಮ್ಮಂದಿರೂ ಇದ್ದರು. ಆದರೆ ತಮ್ಮಂದಿರ ತಲೆಯ ಮೇಲೆ ಹತ್ತನೇ ಒಂದು ಅಂಶ ಭಾರವನ್ನು ಹೊರಿಸಿದ ಅಣ್ಣ ಅಲ್ಲ ನಾನು. ಯಾಕೆ? ದುಡಿಯುವುದಕ್ಕೆ ನನಗೆ ಸಾಧ್ಯಇದೆ ಅಂತ ನಂಬಿದವನು ನಾನು. ಮೈ ನನಗೂ ತಮ್ಮಂದಿರಿಗೂ ಒಂದೊಂದೇ? ಆದರೆ ಒಂದು ಮೈಗೆ ಎರಡು ಕೈಯಂತೆ ಒಂದು ತಲೆ ಅವರಿಗೆ ಇದ್ದಿತ್ತು. ನನ್ನ ಒಂದು ಮೈಗೆ ಹದಿನೆಂಟು ಹೆಚ್ಚು ಕೈ ಉಂಟು.. ಒಂಭತ್ತು ಹೆಚ್ಚಿಗೆ ತಲೆ ಉಂಟು. ಹತ್ತು ತಲೆಗೆ ನನ್ನ ನಿಲುಮೆಗೆ ಇದ್ದದ್ದು ಕಾಲು ಎರಡೇ. ಯಾಕೆಂದರೆ ರಾವಣನ ನಿಲುಮೇ ಒಂದೇ. ಸ್ಥಿರವಾದದ್ದು. ಆದರೆ ಈ ಕಾಲಕ್ಕೆ ಏನಾಗಿಬಿಟ್ಟಿತು? ಅಹಾ ಸಕಲ ಸಂಪದ್ಭರಿತವಾದಂತಹ ಸುವರ್ಣ ಲಂಕೆಯಾಯಿತು. ಇದನ್ನು ನೋಡಿದೆ ನಾನು ಸಹಭಾಗಿಯಾದೆ. ಸಂತೋಷಗೊಂಡೆ. ಬಹುಶಃ ಈ ಮಾತು ಸತ್ಯವೋ ಏನೋ. ಅತ್ಯುನ್ನತಿ ಪತನ ಹೇತುಃ. ಬಹಳ ಎತ್ತರಕ್ಕೆ ಏರುವುದು ಬೀಳುವ ಭಯವನ್ನು ಇಟ್ಟುಕೊಂಡೆ. ಆದರೆ ಆ ಭಯ ನನಗಿರಲಿಲ್ಲ. ಆದರೆ ಆದರೆ ಆ ಭಯ ಬಂತಲ್ಲ... ಬಂತಲ್ಲ ಮೊನ್ನೆ. ನನ್ನ ತಂಗೀ..ನನ್ನ ತಂಗಿ.....
" ತಂಗಿಯ ಸವಿ ಮಾತಿಗೆ ನಾ ಹಂಗಿಗನಾದುದರಿಂದಲೀ.."
ಅದೇ ಅದೇ ಶೂರ್ಪನಖ ಬಂದಳು. ಕರ್ಣನಾಸಾಚ್ಹೇದನವಾದ ಬಳಿಕ ಆ ವಿಚಿತ್ರತರವಾದಂತಹ ಭೀಭತ್ಸದ ಚಿತ್ರಣವನ್ನೇ ನನ್ನ ಮುಂದೆ ಉದ್ಘಾಟಿಸಿದಳು. ಏನು ಮಾಡಲಿ? ವೈಭವದ ಒಡ್ಡೋಲಗದಲ್ಲಿ ನಾನಿದ್ದಾಗ ಶೂರ್ಪನಖಿ ಸಭಾ ಪ್ರವೇಶ ಮಾಡಿ ತನ್ನ ಕರ್ಣನಾಸಾಚ್ಹೇದನದ ವೃತ್ತಾಂತವನ್ನು ಹೇಳುತ್ತ, ನನ್ನ ಅಭಿಮಾನದ ಗೌರವದ ಮುಖಕ್ಕೆ ಕನ್ನಡಿಯನ್ನು ಕೊಟ್ಟಳು. ನಿನ್ನ ಮುಖದಲ್ಲಿ ಮೂಗು ಉಂಟಾ ನೋಡು? ಕಾಲಾಯ ತಸ್ಮೈ ನಮಃ.ಎನ್ನುವುದೋ? ಅಲ್ಲ ತಸ್ಮೈ ನಮಃ ಕರ್ಮಣೆ ಎನ್ನುವುದೋ? ಸಿಕ್ಕಿಬಿದ್ದೆ ನಾನು. ಸುದ್ದಿ ಅಕಂಪನದ್ವಾರ ನಮಗೆ ಮೊದಲೇ ಬಂದಿತ್ತು. ಅಯೋಧ್ಯೆಯ ರಘುವರನಾದಂತಹ ರಾಮ ಪಂಚವಟಿ ಕ್ಷೇತ್ರದಲ್ಲಿ ಇದ್ದಾನೆ. ಜತೆಗೆ ಅವನಿಗೊಬ್ಬಳು ಹೆಂಡತಿ, ಮತ್ತೊಬ್ಬ ತಮ್ಮ, ಅಲ್ಲಿ ಹೀಗೀಗೆ ನಡಿಸುತ್ತಿದ್ದಾರೆ ಅಂತ ಸುದ್ದಿ ಸಿಕ್ಕಿತ್ತು. ಏನು ಮಾಡೋಣಾಂತಲೂ ಆಲೋಚಿಸುತ್ತಲೂ ಇದ್ದೆ. ಶೂರ್ಪನಖ ಪ್ರವೇಶ ಆದ ಬಳಿಕ ಬಹಿರಂಗವಾಗಿ ಸಭೆಯಲ್ಲಿ ಅವಳು ಹೇಳಿದಾಗ ಸಾರ್ವಜನಿಕರ ದೃಷ್ಟಿಯಲ್ಲಿ ಎತ್ತರಕ್ಕೆ ಇದ್ದಂತಹ ಮಾನಧನನಾದಂತಹ ಲಂಕೇಶ್ವರ ನಾನು ಹೇಳಬೇಕಾಗಿತ್ತು. ಈಗ ಅನನಗೆ ಅನಿಸುವುದು ಈ ದೊಡ್ಡಸ್ಥಿಕೆ ನನಗೆ ಬೇಡವಾಗಿತ್ತು. ಆ ಮೊದಲಿನ ಬಡತನದಲ್ಲೇ ನಾನಿರುತ್ತಿದ್ದರೆ ಇಷ್ಟು ಸುಲಭದಲ್ಲಿ ಎಲ್ಲ ಹೋಗುವ ಮರ್ಯಾದೆ ಅಗ ಇರಲಿಲ್ಲ ಆ ಕಾಲದಲ್ಲಿ. ಹೊಟ್ಟೆ ಹಸಿವಿಗೆ ಬೇಕಾಗಿ ಋಷಿ ಮುನಿಗಳು ಊಟ ಮಾಡಿದ ಉಚ್ಚಿಷ್ಟಕ್ಕಾಗಿ ಕಾದವ. ನಾನು ಅಂತ ಏನು ನನ್ನ ತಮ್ಮ, ತಮ್ಮಂದಿರು ಅಂತ ಏನು ನನ್ನ ಅಮ್ಮ.ನು ಎಲ್ಲಾದರೂ ಕುಳಿತುಕೊಳ್ಳಬೇಕಾಗಿದ್ದರೆ ಬಂಡೆ ಕಲ್ಲೇ. ಮಲಗಬೇಕಾಗಿದ್ದರೆ ಹಸಿ ಹುಲ್ಲೇ ಹೀಗೆ ನನ್ನ ಬಾಲ್ಯ ಸಂದದೆ. ಆ ಅವಸ್ಥೆಯಲ್ಲಿ ನನ್ನ ತಂಗಿಯ ಕಿವಿ ಹೋಗಲಿ, ಮೂಗು ಹೋಗಲಿ, ಜೀವವೇ ಹೋಗಲಿ ಅಣ್ಣ ನೀನೆನು ಮಾಡುತ್ತಿ ಅಂತ ಕೇಳುವ ತಂಗಿ ಆಗಿದ್ದಿರಲಿಕ್ಕಿಲ್ಲ.
ರಾವಣಾಂತರ್ಯದ ಸುಂದರ ವಿಶ್ಲೇಷಣೆ. ತಂಗಿ ಶೂರ್ಪನಖಿಯ ಪ್ರಚೋದನೆಗೆ ಪರಿಸ್ಥಿತಿ ಎಷ್ಟು ಕಾರಣವಾಗುತ್ತದೆ ಎಂಬುದನ್ನು ತೋರಿಸುತ್ತದೆ. ಮನುಷ್ಯ ಎಲ್ಲವೂ ಗಳಿಸಿದಾಗ ಗಳಿಸಿದ್ದರ ಬಗ್ಗೆ ಚಿಂತಿಸುತ್ತಾನೆ ಎಂಬುದಕ್ಕೆ ನಿದರ್ಶನ. ರಾವಣ ಉನ್ನತಿಗೆ ಏರಿದ್ದರಿಂದಲೇ ಶೂರ್ಪನಖಿ ಅವನ ಉನ್ನತಿಯನ್ನು ಪ್ರಶ್ನಿಸುವಂತೆ ಮಾಡಿ ತನ್ನ ಸ್ವಾರ್ಥವನ್ನು ಮುಚ್ಚಿಡುತ್ತಾ ಎಲ್ಲದಕ್ಕೂ ಅವಳೇ ನಿಮಿತ್ತವಾಗಿಬಿಡುತ್ತಾಳೆ. ಮೇಲ್ನೋಟಕ್ಕೆ ಇದು ನಿಮಿತ್ತ ಎಂದು ಕಂಡರೂ ರಾವಣ ಒಳ ಆಂತರ್ಯದ ಭಾವನೆಯತ್ತ ಶೇಣಿಯವರು ಬೆಳಕು ಚೆಲ್ಲುತ್ತಾರೆ. ಇದು ಕೇವಲ ಯಕ್ಷಗಾನ ತಾಳ ಮದ್ದಲೆಯಲ್ಲಷ್ಟೇ ಕಾಣಬಹುದು. ಈ ಪ್ರಸಂಗದಲ್ಲಿ ಪ್ರತಿ ಹಂತದಲ್ಲೂ ಅದು ಗಮನಕ್ಕೆ ಬರುತ್ತದೆ. ಇಲ್ಲಿ ಸಿಕ್ಕಿಬಿದ್ದೆ ನಾನು ಅಂತ ರಾವಣ ಅಲವತ್ತು ಕೊಂಡರೂ ಕಾಲಾಯ ತಸ್ಮೈ ನಮಃ ಅಂತ ಆತ ಹೇಳುವುದು ಅದಕ್ಕೆ. ರಾವಣನ ಅನಿವಾರ್ಯತೆಯನ್ನು ತೋರುವುದು ಮಾತ್ರವಲ್ಲ ಅದೇ ಅನಿವಾರ್ಯ ಅಂತ ಅದನ್ನೇ ಅಪ್ಪಿಕೊಳ್ಳುವ ಹಾಗೆ ಮಾಡುತ್ತದೆ. ರಾಮನನ್ನು ಬರುವ ಹಾಗೆ ಮಾಡಬೇಕು ರಾಮ ಬರಬೇಕು ಆ ರಾಮನಿಗೆ ರಾವಣ ಅಂದರೆ ಏನು? ಯಾಕಾಗಿ ಬರುವ ಹಾಗೆ ಮಾಡಿದ? ಮೂಲ ಗೂಢಾರ್ಥದ ಸ್ಥಾಯೀ ಭಾವನನ್ನು ವ್ಯಕ್ತ ಪಡಿಸುತ್ತದೆ. ರಾವಣ ವಧೆ ಕೇವಲ ರಾವಣ ಸಂಹಾರವಲ್ಲ ಎಂಬುದನ್ನು ಪ್ರತಿಪಾದಿಸುವ ತಂತ್ರ ಬಹಳ ಅದ್ಭುತವಾಗಿರುತ್ತದೆ.
ಶೂರ್ಪನಖ ಪ್ರಸಂಗದಲ್ಲಿ ರಾಮ ತನ್ನ ಕೃತಿಯ ಮೂಲಕ ಎಚ್ಚರಿಕೆಯನ್ನು ಕೊಡುತ್ತಾನೆ. ತ್ರಿಶಿರಾದಿ ಹದಿನಾಲ್ಕು ಸಾವಿರ ದಾನವರ ಶಿರಗಳನ್ನು ನಿಂತ ನಿಲುವಿನಲ್ಲೇ ಕತ್ತರಿಸಿ ನಂತರ ಬೆವರೋರೆಸುತ್ತಾನೆ. ಅಕಂಪನನ ವರದಿ ರಾವಣನಿಗೆ ಇದನ್ನು ಸ್ಪಷ್ಟವಾಗಿ ಮನವರಿಗೆ ಮಾಡುತ್ತದೆ. ಹಾಗಾಗಿ ರಾವಣ ತನ್ನ ಹಲವು ತಂತ್ರಗಳಿಗೆ ತನ್ನ ನಿಲುಮೆಯ ಸಹಾಯವನ್ನು ಮೂಡಿಸುತ್ತಾನೆ. ಶೂರ್ಪನಖ ಪ್ರಕರಣಕ್ಕೆ ಪ್ರತಿಕಾರ ತೋರುವುದು ಹೇಗೆ ಅನಿವಾರ್ಯವಾಗುತ್ತದೋ ಅದನ್ನು ರಾಮನಿರುವಲ್ಲಿಗೆ ಹೋಗಿ ತೋರುವುದು ಅಸಾಧ್ಯ ಎಂದು ರಾವಣನಿಗೆ ಮನವರಿಕೆಯಾಗುತ್ತದೆ. ಅದಕ್ಕಾಗಿ ರಾಮನನ್ನು ಬರಿಸಬೇಕು.ಅದಕ್ಕೆ ರಾಮನ ಸರ್ವಸ್ವವೇ ಆಗಿರುವ ಸೀತೆಯನ್ನು ಕರೆತರಬೇಕು. ಅರ್ಥಾತ್ ಸೀತೆಯ ಮೂಲಕ ರಾಮನನ್ನು ಕಾಣಬೇಕು. ಪರೋಕ್ಷವಾಗಿ ಸೀತೆ ರಾಮದರ್ಶನಕ್ಕೆ ಕಾರಣವಾಗಬೇಕು. ಸೀತೆಯ ಅಪಹಾರವಾಗುತ್ತದೆ. ಈಗ ರಾಮದರ್ಶನ ಸನ್ನಿಹಿತವಾಗಿದೆ. ರಾವಣ ಭಾವುಕನಾಗುತ್ತಾನೆ. ಪಲ್ಲಂಗದಲ್ಲಿ ಪವಡಿಸಿದರೂ ನಿದ್ದೆ ಬಾರದೆ ಅನ್ನುವುದಕ್ಕಿಂತ ನಿದ್ದೆ ಮಾಡದೆ ಪರಿತಪಿಸುತ್ತಾನೆ.
