"ಇದು ವಿಮರ್ಶೆಯಲ್ಲದ ಚಿಂತನ"

Thursday, October 2, 2014

ಭೀಷ್ಮ ಪ್ರತಿಜ್ಞೆ



ಮಹಾಭಾರತದ ಅತ್ಯಂತ ಮಹಾ ಪಾತ್ರಗಳಲ್ಲಿ ಒಂದು ಭೀಷ್ಮನ ಪಾತ್ರ. ಈ ಮಹಾ ಪರಾಕ್ರಮಿ ಎಲ್ಲಿಯೂ  ಜೈತ್ರ ಯಾತ್ರೆ ಹೋದ ಉಲ್ಲೇಖವಿಲ್ಲ. ಎಲ್ಲಿಯೂ ಯುದ್ದ ಮಾಡಿದ ಸಂಭವವೂ ವ್ಯಕ್ತವಾಗುವುದಿಲ್ಲ.  ಆದರೂ ಭೀಷ್ಮ ಪ್ರವೇಶಮಾಡಿ ತನ್ನ ಪದಾಘಾತದೊಂದಿಗೆ  ಧನುಷ್ಠೇಂಕಾರ ಮಾಡಿದಾಗ ಎಲ್ಲೇ ಆಗಲಿ ಯುದ್ದ ಏಕಪಕ್ಷೀಯವಾಗಿ ಅಂತ್ಯಕಾಣುತ್ತಿತ್ತು . ತನ್ನ ಪ್ರವೇಶ ಮಾತ್ರದಿಂದಲೇ ಯುದ್ದ ಮಾಡದೇ ಯುದ್ದವನ್ನು ಜಯಿಸುವ ಏಕಮೇವ ಪರಾಕ್ರಮಿ ಭೀಷ್ಮ. ಜಗತ್ತಿನ ಕಣ್ಣಿಗೆ ಭೀಷ್ಮ ಒಂದು ನಿಗೂಢ ವಿಸ್ಮಯ. ಭೀಷ್ಮನಲ್ಲಿ ಏನುಂಟು ಅದು ಯಾರಿಗೂ ತಿಳಿದಿಲ್ಲ. ವಸಿಷ್ಠ ರಿಂದ ಬ್ರಹ್ಮ ಸೂತ್ರ,  ಶುಕ್ರನಿಂದ ದಂಡನೀತಿ,  ಬ್ರಹಸ್ಪತಿಯಿಂದ ರಾಜನೀತಿ ಅದರಂತೇ ಪರಶುರಾಮರಿಂದ ಧನುರ್ವೇದ,   ಹೀಗೆ ಜ್ಞಾನ ನಿಧಿಯಾಗಿ ಜಗತ್ತಿಗೆ ತೆರೆದುಕೊಳ್ಳುವ ಭೀಷ್ಮವ್ಯಕ್ತಿತ್ವವನ್ನು ಅಂದಾಜಿಸುವಲ್ಲಿ ಜಗತ್ತೂ  ಸೋಲುತ್ತದೆ.  ಭೀಷ್ಮನ ನಿಗೂಢತೆಯೇ ಅವನನ್ನು ಅಭೇದ್ಯವನ್ನಾಗಿಸುತ್ತದೆ. ಯಾವ ಯೋಧನೂ ಅತನನ್ನು ಪರೀಕ್ಷಿಸುವ ಸಾಹಸವನ್ನು ಮಾಡಲಿಲ್ಲ.   ಅಂಬಾ ಪ್ರಕರಣದ ಭೀಷ್ಮ ವಿಜಯ ಪ್ರಸಂಗದಲ್ಲಿ  ಸ್ವತಃ ಗುರುವಿನೊಂದಿಗೆ ಹೋರಾಡುತ್ತಾನೆ. ಗುರು,  ಮರಣವನ್ನೇ ಅರಿಯದ ಚಿರಂಜೀವಿಯಾದರೆ, ಶಿಷ್ಯ,  ಇಚ್ಛಾ ಮರಣಿ. ಸಮ ಬಲದ ಸಮರವಾದರೂ ಅಲ್ಲಿ ಭೀಷ್ಮ ವಿಜಯವೇ ನಿರ್ಣಯವಾಗಿಬಿಡುತ್ತದೆ. ಗುರು ಸಮ್ಮುಖದಲ್ಲಿ  ಭೀಷ್ಮನ ವ್ಯಕ್ತಿತ್ವವನ್ನು  ಒರೆಗೆ ಹಚ್ಚುವಂತಹ ಪ್ರಸಂಗವಿದು. ಧರ್ಮ ಸೂಕ್ಷ್ಮವನ್ನು ಅರಿತು ಪ್ರತಿಯೊಂದು ಹೆಜ್ಜೆಯನ್ನಿಡುವ ಭೀಷ್ಮ ,  ತಾತ್ವಿಕವಾಗಿ ಅಂಬೆಯ ವ್ಯಕ್ತಿತ್ವದ ಎದುರು ಗೆದ್ದರೂ ಅಂತರಂಗದಲ್ಲಿ ಪರಿತಪಿಸುತ್ತಾನೆ. ತನ್ನೆದುರೇ ಸುಟ್ಟುಹೋದ ಅಂಬೆಯ ಬದುಕನ್ನು ಕಂಡು ತನ್ನ ವಿಜಯದಲ್ಲೂ ಹತಾಶನಾಗಿ ಮರುಗುತ್ತಾನೆ ಭೀಷ್ಮ.

ರಾಗ ಕೇತಾರಗೌಳ ಅಷ್ಟತಾಳ
ಸುರನದೀಸುತ ಕೇಳು ವರಿಸದಿರಲು ಮಹ | ಧುರಧೀರನನು ತರುವೆ ||
ಕೊರಳಕೊಯಿಸುವೆನೆನ್ನ ಸ್ವೀಕರಿಸೆನ್ನಲು | ಕೆರಳುತ್ತಲಿಂತೆಂದನು ||
ತರುಣಿ ಭಸ್ಮೀಭೂತವಾಗಲು ಭೀಷ್ಮನು | ಕರಗಿ ತನ್ನಯ ಮನದಿ ||
ಅರರೆ ಸ್ತ್ರೀ ಹತ್ಯವಾಯಿತು ಮುಂದಕೆನ್ನಯ | ಕೊರಳ ಕೊಯಿಸುವಳೆನ್ನುತ

 ಯಾವ ಗಂಡಿನಿಂದಲೂ ಸೋಲಿಸಲಾಗದ ಭೀಷ್ಮ, ಯಾವ ಹೆಣ್ಣಿಗೂ ಸೋಲಲಾರದ ಭೀಷ್ಮ,  ಅವೆರಡೂ ಅಲ್ಲದೇ ಜನ್ಮತಾಳಿ ಪ್ರತೀಕಾರ ತೀರಿಸುತ್ತೇನೆ ಎಂದು ಶಪಥಗೈಯುವ ಅಂಬೆ ಪರಿಹಾರ್ಯವಲ್ಲದ ಪ್ರಶ್ನೆಯಾಗಿಯೇ ಭೀಷ್ಮನೆದುರು ಸುಳಿಯುವಾಗ,  ಹೆಣ್ಣು ಗಂಡು ಅಲ್ಲದೇ ಇರುವಲ್ಲಿ ಶಸ್ತ್ರವನ್ನು ಎತ್ತಲಾರೆ. ಸಶಸ್ತ್ರಕನಾಗುವುದಿಲ್ಲ ಎಂದು ಭೀಷ್ಮನೂ ಸಂಕಲ್ಪ ಮಾಡಿಕೊಳ್ಳುತ್ತಾನೆ.

ಭಾಮಿನಿ
ಸುರನದೀಸುತ ಚಿಂತಿಸುತ್ತಿರೆ |
ಭರದಿ ನಾರದ ಬಂದು ಪೇಳಿದ |
ತರುಣಿ ಮರು ಜನ್ಮದಲಿ ದ್ರುಪದನ ಸತಿಯೊಳುದಿಸುತ್ತ ||
ಬರುವಳೈ ನಾಮದಿ ಶಿಖಂಡಿಯು |
ಧುರಕೆ ಧನುವನೆ ಧರಿಸಿ ನಿನ್ನಯ |
ಸರಿಸಕೈತರೆ | ಬಿಡು ರಣಾಗ್ರವ ಪವಡಿಸಾದಿನದಿ ||

ಅತೀ ದೀರ್ಘ ಬದುಕನ್ನು ಕಂಡ ಭೀಷ್ಮ,  ಪರಾಕ್ರಮಿಯಾಗಿಯೂ ಧರ್ಮ ನಿಷ್ಠನಾಗಿಯೂ ಭಾಗವತೋತ್ತಮನಾಗಿಯೂ ಬಾಳಿದ ಭೀಷ್ಮ ಯಃಕಶ್ಚಿತ್ ಸಾಮಂತನೂ ಅಲ್ಲದ ಕ್ಷತ್ರಿಯನ ಮಗಳೊಬ್ಬಳ ಸವಾಲಿಗುತ್ತರವಾಗಿ ತನ್ನ ಇಚ್ಛಾ ಮರಣದ ಇಚ್ಚೆಯನ್ನು ಬರೆದಿಡುವುದೆಂದರೆ ಅದೊಂದು ವಿಪರ್ಯಾಸ.
ಅಂಬಾ ಪ್ರಕರಣ ಬಿಟ್ಟರೆ ಭೀಷ್ಮ ಪಾತ್ರ ವಿಜ್ರಂಭಿಸುವುದು ಕುರುಕ್ಷೇತ್ರದ ಯುದ್ದಾರಂಭದಲ್ಲಿ.

ಆರು ಸೇನಾಧೀಶರಹರು ನಮ್ಮಯ ಬಲದಿ | ಶೂರಾಗ್ರೇಸರರಾಗಿ ನಡೆಸುವರು ಪಡೆಯ ||
ಪಾರಮಾರ್ಥದೊಳರುಹಿ ಸೇನಾನಿ ಪಟ್ಟವನು | ಯಾರಿಗೀಯುವುದೀಗ ತೋರಿರೆನಲವರು ||   
ಹರಿಯ ಮಾಯವನುಳಿದು ಮೆರೆದು ಸೇನೆಗಳನ್ನು | ಪರಿಪಾಲಿಸುವನೊಬ್ಬ ಗಾಂಗೇಯ ಶೂರ |
ಧುರ ಪರಾಕ್ರಮಿಯವನ ಬಿಟ್ಟನ್ಯರಿಲ್ಲೆಂದು | ಕುರುರಾಯಗರುಹಿದರು ಸಕಲ ಧರಣಿಪರು ||  

ಸರಿಯೆನುತ ಕೌರವನು ಪೊರಟು ನಿಶಿಕಾಲದಲಿ | ತೆರಳಿದನು ಗಾಂಗೇಯನಿರುವ ಬಳಿಗಾಗಿ ||
ಹರಿಯ ನೆನೆಯುತ ಮಂಚದೊಳಗೆ ಮಲಗಿರೆ ಭೀಷ್ಮ | ಗೆರಗಿದನು ಕುರುರಾಯನೆತ್ತಿ ಮುದ್ದಿಸುತ ||

            ಇರುಳ ನಿಶಿಯಲ್ಲಿ ಕೌರವನ ಆಗಮನ ಭೀಷ್ಮನ ಬಿಡದಿಗೆ ಆಗುತ್ತದೆ. ಆ ರಾತ್ರಿಯಲ್ಲೂ ನಿದ್ದೆ ಬಾರದೆ ಭೀಷ್ಮ ಚಡಪಡಿಸುತ್ತಿದ್ದಾನೆ. ಈತ ಬ್ರಹ್ಮ ಚಾರಿಯಾದುದರಿಂದಲೋ ಏನೋ ನಿದ್ರಾಂಗನೇ ಎಂಬ ಹೆಣ್ಣು ಹತ್ತಿರವೇ ಸುಳಿಯುತ್ತಿಲ್ಲ.  ಗುರು ಆಶ್ರಮದಿಂದ ಹಸ್ತಿನೆಗೆ ಬಂದ ಮೇಲೆ ನಿದ್ದೆ ಬರುತ್ತಿದ್ದರೂ ಭೀಷ್ಮ ನಿದ್ದೆ ಮಾಡಲಾರದೇ ಹೋದ.  ಹಸ್ತಿನೆಗೆ ಸಮರ್ಥ ಹಾಗೂ ಪರಿಪೂರ್ಣ ಉತ್ತಾರಾಧಿಕಾರಿ ಸಿಗುವವರೆಗೆ ಸಿಂಹಾಸನದ ರಕ್ಷಣೆಯ ನಡುವೆ ವಿರಾಮವೆಲ್ಲಿ ಬಂತು?  ತಂದೆ ಶಂತನುವಿನಿಂದ ಪಡೆದುಕೊಂಡು ಬಂದ ಶುದ್ದರಾಯಸವದು.  ರಾಮದಾಸ ಸಾಮಗರು ಭೀಷ್ಮನಾಗಿ ಒಂದೆಡೆ ಹೇಳುತ್ತಾರೆ,  “  ಸಿಂಹಾಸನದ ರಕ್ಷಣೆ ! ವಿಚಿತ್ರವಾಗಿ ಕಾಣುತ್ತದೆ. ಯಾರಿಂದ ರಕ್ಷಿಸಬೇಕು? ಇದೇ ಸಿಂಹಾಸನದ ಕೆಳಗೆ ತಾನೇ ಚಂದ್ರವಂಶಕ್ಕೆ ಕಳಂಕ ತರುವಂತೆ ಆ ಘಟನೆ ನಡೆದು ಹೋದದ್ದು?  ಚಂದ್ರವಂಶಕ್ಕೆ ಸೇರಿದ ಒಂದು ಹೆಣ್ಣು ಮಗಳಿಗೆ ಸಿಂಹಾಸನದಿಂದ ರಕ್ಷಣೆ ಒದಗಿ ಬಂತೆ?  ಮಾನಾಛ್ಚಾದಿತವಾದ ಸೆರಗನ್ನು ಹಿಡಿದೆಳೆವಾಗ ಆ ಪಾಂಚಾಲಿ ಕೇಳಿದ್ದೇನು? ರಕ್ಷಣೆಯನ್ನಲ್ಲ.. ಆಕೆಗೆ ಅರಿವಿತ್ತೋ ಏನೂ ಅದು ಸಿಗುವುದಿಲ್ಲ ಎಂದು. ಭೀಷ್ಮರೇ , ಆಚಾರ್ಯ ದ್ರೋಣರೇ   ನನ್ನನ್ನು  ರಕ್ಷಿಸಿ...  ಎಂದು ಆಕೆ ಕೇಳಲಿಲ್ಲ.  ನನ್ನ ಮುಖ ನೋಡಿಯಲ್ಲವೇ ಆಕೆ ಕೇಳಿದ್ದು “ಭೀಷ್ಮರೇ ಇದು ನ್ಯಾಯವೇ?”   ಧೃತರಾಷ್ಟ್ರ ಕಾಣಲಿಲ್ಲ ಆದರೂ ಇದನ್ನು ಕೇಳಿರಬಹುದಲ್ಲ ? ಕ್ಷತ್ರಿಯಾಣಿ ಅವಳು. ಅವಳ ರಕ್ಷಣೆಯ ಬಗ್ಗೆ ಅರಿವಿದ್ದವಳು. ಆದರೂ ವರ್ತಮಾನದ ಮಾಹಾ ಮತ್ಸದ್ಧಿಗಳು ಪರಾಕ್ರಮಿಗಳೂ ಇದ್ದ ಆಸ್ಥಾನದಲ್ಲಿ ಆ ಘಟನೆ ನಡೆದೇ ಬಿಟ್ಟಿತಲ್ಲ?"

            ಪ್ರಪಂಚ ಈವರೆಗೆ ಭೀಷ್ಮನನ್ನು ಕಂಡದ್ದು ಹೇಗೆ?  ಒಂದು ಕಾಲದಲ್ಲಿ ಭೀಷ್ಮ ಸಭಾ ಪ್ರವೇಶ ಮಾಡಿ ಹೀಗಾಗ ತಕ್ಕದ್ದು ಎಂದು ಆಜ್ಞಾಪಿಸಿದರೆ ಅದನ್ನು ಇದಿರಿಸುವವರು ಇಲ್ಲ. ಆದರೆ ಇಂದು ಹಸ್ತಿನಾವತಿಯಲ್ಲಿ ಅದೂ ಅರಮನೆಯಲ್ಲಿ ತನ್ನ ಮೊಮ್ಮಕ್ಕಳು ಈ ಅಜ್ಜನ ಮಾತನ್ನೇ ಕೇಳುವುದಿಲ್ಲ. ಆ ಮೊಮ್ಮಕ್ಕಳಿಗೆ ಪ್ರತಿನಿಧಿಯಾದ ಸುಯೋಧನ ಬಾಗಿಲಲ್ಲಿ ನಿಂತಿದ್ದಾನೆ.   ಮಂಚದಲ್ಲಿ ಮಲಗಿದ ಭೀಷ್ಮ ಈ ಮೊಮ್ಮಗನ ಆಗಮನದ ಕಾರಣ ತಿಳಿಯುತ್ತಾನೆ. ತಮ್ಮಿಂದಲೂ ಮೊದಲೇ ಕುರುಧಾರಿಣಿಯಲ್ಲಿ ಪಾಂಡವರ ಸೇನೆ ಬೀಡುಬಿಟ್ಟಿದೆ. ಮತ್ತು ಅವರೇ ಯುದ್ದಾಕಾಂಕ್ಷಿಗಳಾಗಿ ಶಸ್ತ್ರ ಸನ್ನದ್ದರಾಗಿ “ ಮನಸ್ಸಿದ್ದರೆ ಯುದ್ದಕ್ಕೆ ಬರಬೇಕಂತೆ.....” ಎಂದು ಹಸ್ತಿನಾವತಿಗೆ ಹೇಳಿಕೆಯನ್ನು ಕಳುಹಿಸಿದ್ದಾರೆ.  

            ಕೌರವನ ಮನದ ಇಂಗಿತವನ್ನು ಭೀಷ್ಮ ಸಹಿಸುವುದಿಲ್ಲ. ಶೇಣಿಯವರು ಭೀಷ್ಮನಾಗಿ ಒಂದು ಕಡೆ  ಕೌರವನಿಗೆ ಹೇಳುತ್ತಾರೆ, ಇದು ನಮಗೆ ಸಂದ ’ಮೊದಲ ಅಪಜಯ’ !    ಭೀಷ್ಮನ ಮಾತಿನ ಅಂತರಾರ್ಥವನ್ನು ಕೆಲವು ಬಗೆಯಲ್ಲಿ ಗುರುತಿಸಬಹುದು. ಹಸ್ತಿನಾವತಿಯ ರಾಜ ಸಿಂಹಾಸನದ ಆಡಳಿತದ ಅಪಜಯವೋ ?  ಇಲ್ಲಿ “ನಮಗೆ ಅಪಜಯ” ಇಲ್ಲಿ ನಮಗೆ ಎಂಬುದು ಸಮಷ್ಟಿಯ ದ್ಯೋತಕ.  ದಾಯಾದಿ ಕಲಹಕ್ಕೆ ನಾಂದಿಯನ್ನು ಹಾಡಿದ, ಸಮಷ್ಟಿಯಲ್ಲಿ ಕೌರವ ಪಾಂಡವರನ್ನು ಕೂಡಿಕೊಂಡ ಸಮಸ್ತ ಹಸ್ತಿನಾವತಿಯ ರಾಜ ಕುಟುಂಬಕ್ಕೆ ಇದು ಅಪಜಯ.  ಹಾಗಾಗಿ ಭೀಷ್ಮ ವೈಯಕ್ತಿಕ ಎಂಬಂತೆ ಬಡಬಡಿಸುತ್ತಾನೆ ತಾನು ಕಂಡ ಚಂದ್ರವಂಶದ ಮೊದಲ ಅಪಜಯ. ಮಹತ್ವಾಕಾಂಕ್ಷೆಯಿಂದ ಹಸ್ತಿನಾವತಿಯ ರಾಜ ಸಿಂಹಾಸನ ಯುದ್ದವನ್ನು ಸಾರುತ್ತದೆ. ಆದರೆ ಸಿಂಹಾಸನದ ರಕ್ಷಕ ಎಂದು ತನ್ನನ್ನು ಅನ್ವರ್ಥವಾಗಿಸುವ ಸೇನಾನಿಯಾದ  ಭೀಷ್ಮ, ಈಗ  ಯುದ್ದ ನಿರ್ಣಯವಾದ ಮೇಲೆ  ವಿರೋಧಿ ಬಣದ ಅಹ್ವಾನದಲ್ಲಿ ತಮ್ಮ ಅಪಜಯವನ್ನು ಕಾಣುತ್ತಾನೆ! ವಿಚಿತ್ರ !!   ಇಲ್ಲಿ ಭೀಷ್ಮನ ಮಾನಸಿಕ ತಳಮಳ ವ್ಯಕ್ತವಾಗುತ್ತದೆ. ಯಾವಾಗ ದಾಯಾದಿ ಕಲಹ ಕಿಡಿ ಹತ್ತಿತೊ ಅಲ್ಲಿ ಕೌಟುಂಬಿಕ ಸಾಮರಸ್ಯ ಅರ್ಥ ಕೆಟ್ಟಿತು ಎಂದರ್ಥ.

            ಕುರುಕುಲಾನ್ವಯತಿಲಕ ಬಾ ಬಾ | ತರಳ ಬಾರೀ ನಿಶಿಥಕಾಲದಿ |
ತೆರಳಿ ಬಂದಿಹುದೇತಕೋರ್ವನೆ | ಪೇಳು ಪೇಳೈ ಮಾಜದೆ||

ಅದುವರೆಗೂ ಕೌರವನೊಡನೆ ಎಕಾಂತವನ್ನು ಕಾಣದೇ ಇದ್ದ ಭೀಷ್ಮ,  ಮೊಮ್ಮಗ ಕುರುಕುಲಾನ್ವಯ ತಿಲಕನಿಗೆ ಹಿತೋಪದೇಶ ಮಾಡುತ್ತಾನೆ. ಅನಭಿಷಿಕ್ತ ಚಕ್ರವರ್ತಿ ಮೊಮ್ಮಗನ ವೇಷವನ್ನು ತೊಟ್ಟು ಬಂದಿದ್ದಾನೆ. ಕೆಲವರು ಇದನ್ನು ವೇಷವೆಂದೇ ವ್ಯಾಖ್ಯಾನಿಸುವುದು. ಯಾಕೆ?. ಭೀಷ್ಮ ಮೊಮ್ಮಗನಾಗಿ ಬಂದರೂ ಅದರಲ್ಲಿ ಅವನ ರಾಜಾತಾಂತ್ರಿಕ ಬುದ್ದಿ ಇರುತ್ತದೆ. ಅದು ಕೌರವನ ನಿಜ ಬಣ್ಣ. ಇದು ಅರಿತೇ  ಭೀಷ್ಮ ಸಾರಿ ಹೇಳುತ್ತಾನೆ. ಕುರುಕುಲಾನ್ವಯ ತಿಲಕ,  ತಿಲಕ ಕೇವಲ ಹಣೆಗೆ ಮಾತ್ರವೇ ಇರಬೇಕು. ಆದರೆ ಅದು ಮುಖ ತುಂಬ ವ್ಯಾಪಿಸಿದ ಹಾಗೆ,  ಇದರ ಕಪ್ಪು ಇಡೀ  ಹಸ್ತಿನಾವತಿಯನ್ನೇ  ವ್ಯಾಪಿಸಿ ಬಿಟ್ಟಿದೆ. ಪಾಂಡವರಿಗೆ ಅನಿವಾರ್ಯವಾಗುವ ಯುದ್ದ ಕೌರವನಿಗೆ ಅನಿವಾರ್ಯವಲ್ಲ. ಅದನ್ನು ತಪ್ಪಿಸಬಹುದು. ಶ್ರೀ ಕೃಷ್ಣ ಬಂದು ಪಾಂಡವರಿಗಾಗಿ ಅರ್ಧ ರಾಜ್ಯವನ್ನು ಅಥವಾ ಒಂದು ಗ್ರಾಮವನ್ನು ಕೇಳುತ್ತಾನೆ, ಅಥವಾ ಶ್ರೀಕೃಷ್ಣ  ತನಗಾಗಿ ಅವನ ಮುಕುಟ ಮಣಿಯೋ ಮುದ್ರೆಯುಂಗುರವೋ ಇನ್ನೊಂದೋ ಕೇಳಲಿಲ್ಲ. ಕೇವಲ ಪಾಂಡವರಿಗಾಗಿ ಅವರದೇ ಆದ ಅರ್ಧ ರಾಜ್ಯ ಕೇಳುತ್ತಾನೆ. ನಿಜವಾಗಿಯೂ ಕೃಷ್ಣ ಶಾಂತಿ ದೂತನಾಗುತ್ತಾನೆ. ಆದರೆ ಅಲ್ಲಿ ಕಣ್ಣಿದ್ದೂ ಕುರುಡನಾಗುತ್ತಾನೆ ಕುರುಡನ ಮಗ.  ಕೊಡುವುದಿಲ್ಲ. ಬದಲಾಗಿ ಕೃಷ್ಣನಲ್ಲಿ ಹೇಳಿದ್ದೇನು ?  ಪಾಂಡವರನ್ನು ಯುದ್ದಕ್ಕೆ ಕರೆದು ತಾ. ಕೌರವನಿಗೆ ಬೇಕಾಗಿರುವುದು ಯುದ್ದ. ಪಾಂಡವರಿಗೆ ರಾಜ್ಯ ಕೊಡಲಾರ. ಬದಲಾಗಿ ರಾಜ್ಯದ ತುಂಡೊಂದನ್ನು ಯಾರೋ ಒಬ್ಬ ಅನಾಮಧೇಯ ಕರ್ಣನಿಗೆ ಕೊಡುತ್ತಾನೆ. ಹಾಗಾದರೆ ಆತನ ಬಯಕೆಯಾದರೂ ಏನು? ಈಗ ಪಾಂಡವರು ಕುರುಕ್ಷೇತ್ರಕ್ಕೆ ಬಂದಿದ್ದಾರೆ. ಇವನು ರಾತ್ರಿ ಎದ್ದುಕೊಂಡು ಭೀಷ್ಮನ ಬಿಡಾರ ಹುಡುಕಿಕೊಂಡು ಬಂದಿದ್ದಾನೆ. ಇಲ್ಲಿಯೂ ಭೀಷ್ಮ ಮರುಗುವುದು ಆ ಸತ್ಯ ಎದುರು ಬಂದು ನಿಂತಿತಲ್ಲ. ಹೌದು ಬಂದರೇ ಪಾಂಡವರು,  ಈ ವರೆಗೆ ಅನುಮಾನವಿತ್ತು.  ಈಗ ಯುದ್ದ ಸನ್ನದ್ದರಾಗಿ ಬಂದೇ ಬಿಟ್ಟರಲ್ಲ. ಯೌದ್ದವನ್ನು ವಾಸ್ತವದ ಹತ್ತಿರ ತಂದು ನಿಲ್ಲಿಸಿಬಿಟ್ಟರೇ ಪಾಂಡವರು.

“ಸುಯೋಧನ,  ಬಂದರೇ ಪಾಂಡವರು, ಇಂದು ಸಂತತಿಗೆ ಅರ್ಹರಲ್ಲವೇ?  ಅವರ ರಾಜ್ಯವನ್ನು ಅವರು ಪಡೀಲಿಕ್ಕೆ ಯುದ್ದ ಮಾಡಬೇಕಾದ ದುಸ್ಥಿತಿ ಬಂತಲ್ಲ? ಅವರು ಬಂದರೆ ಅಪರಾಧವೇ? ಅವರ ಮನೆಗೆ ಅವರು ಬಾರದಿದ್ದರೆ ಮತ್ತೆಲ್ಲಿಗೆ ಅವರು ಹೋಗುವುದು?“ 

ಯುದ್ದ ಅಂಗಳಕ್ಕೆ ಬಂದು ನಿಂತಿತಲ್ಲ ಎಂಬ ಭೀಷ್ಮನ ತಳಮಳ ಕೌರವನಿಗೆ ಅರ್ಥವಾಗುವುದಿಲ್ಲ. ಅರ್ಥವಾದರೂ ಭೀಷ್ಮನನ್ನು ಭಾವನಾತ್ಮಕವಾಗಿ ಕಟ್ಟಿಹಾಕುವ ಪ್ರಯತ್ನವೋ ಎನೋ ಕೌರವನದ್ದು.                ಈಗ ರಾತ್ರಿ ಬಂದು ಪಾಂಡವರು ಯುದ್ದಕ್ಕೆ ಸನ್ನದ್ಧರಾಗಿ  ಬಂದಿದ್ದಾರೆ ಅವರೊಂದಿಗೆ ಹರಿ ನಿಂತಿದ್ದಾನೆ. ಹರಿತಂತ್ರಕ್ಕೆ ಪ್ರತಿಯಾಗಿ ಇಂದು ಹಸ್ತಿನಾವತಿಯಲ್ಲಿ ನಿಲ್ಲಬಲ್ಲವರೆಂದರೆ ಅದು ನೀವು ಅಜ್ಜಾ   ಅದುದರಿಂದ ಅಜ್ಜಾ  ನೀವು ಕಾಯಬೇಕು  ಎಂದರೆ..,    ಭೀಷ್ಮ ಕೌರವನ ಭುಜಗಳ ಸುತ್ತಲಿರುವ ದುಷ್ಟ ಚತುಷ್ಟಯರನ್ನು ತೋರಿಸುತ್ತಾನೆ. 
ಎಲೆ ಮರುಳೆ ಕರ್ಣಾದಿ ದುಷ್ಟರ
ಬಳಸಿನಲಿ ಕೇಡಾದೆ ವಂಶಕೆ
ನಳಿನ ನೇತ್ರನ ಮುಂದೆ ಅಳವಿಗಾನುವರಾರುಂಟೆ ಲೋಕದಲಿ.

ಭೀಷ್ಮ ಸುಯೋಧನನ ಈವರೆಗಿನ ಸಹವರ್ತಿಗಳು ಯಾರು?  ಆ ಕರ್ಣ. ವೈಯಕ್ತಿಕವಾಗಿ ಆ ಕರ್ಣನ ದಾನ ಚೌಂಡತ್ವವೋ ಮತ್ತೋಂದೋ ಒಂದೂ ಕೌರವನಿಗೆ ನೆರವಿಗೆ ಬರಲಿಲ್ಲ. ಚಂದ್ರವಂಶಕ್ಕೆ ಸೇರಿದ ಹೆಣ್ಣುಮಗಳ ಸೀರೆಗೆ ಕೈಯಿಕ್ಕುವಂತೆ ಪ್ರಚೋದನೆ ಕೊಟ್ಟನಲ್ಲ?  ಇನ್ನು  ಆ ದು:ಶ್ಯಾಸನ  ಶಕುನಿ, ಸೈಂಧವ  ಇವರೇ ಹೆಚ್ಚಾಗಿ ಹೋದರು. ಇವರ ಬಳಸಿನಲಿ ಸುಯೋಧನ ಒಬ್ಬನೇ ಹಾಳಾದ್ದಲ್ಲ. ಈವರೆಗೆ ಯಾರೂ ಮೌಲ್ಯಮಾಪನ ಮಾಡದಂತೆ  ಚಂದ್ರವಂಶದ ಅರಸೊತ್ತಿಗೆಗೆ ದುಡಿದ ತನ್ನ ದುಡಿಮೆಯನ್ನೂ ಸಂಪೂರ್ಣ ನಾಶ ಮಾಡುವುದಕ್ಕೆ ಸುಯೋಧನನೆ ಪವಿತ್ರ ಪಾಣಿಯಾದನಲ್ಲ.
ಆದರೂ ಭೀಷ್ಮ ಮತ್ತೊಂದು ಆಶಾಭಾವ ವ್ಯಕ್ತಪಡಿಸುವುದುಂಟು. ಶೇಣಿಯವರು ಕುಚೋದ್ಯವೆಂಬಂತೆ ಇದನ್ನು ಹೇಳುತ್ತಾರೆ, “ ಮೊಮ್ಮಗನೇ  ಸರಿಯಾದ ಹಾದಿಗೆ ಬಂದಿ ನೀನು, ನನ್ನ ಮೊಮ್ಮಗ….,   ಈಗ ನಾನಿದ್ದೇನೆ ಹೆದರಬೇಡ. ರಣವೀಳ್ಯವನ್ನು ಕೊಟ್ಟರೇನಂತೆ . ಅದೇ ಏನು ಮಹಾ ಪ್ರಮಾಣವಲ್ಲ. ಕೃಷ್ಣನಲ್ಲಿ ನಾನು ಹೋಗಿ ಕೇಳ್ತೆನೆ. ಏನು ನಿನ್ನದು ಸಂಧಿ? ಕೌರವನಿಂದ ಅರ್ಧ ರಾಜ್ಯ ನಾನು ತೆಗೆಸಿಕೊಡ್ತೇನೆ.  ಕೃಷ್ಣ ಇಲ್ಲಾಂತ ಹೇಳಿಯಾನೋ” ಇಲ್ಲಿ ಯುದ್ದದ ಬಗೆಗೆ ಅದರಲ್ಲೂ ಮೊಮ್ಮಕ್ಕಳ ಯುದ್ದದ ಬಗ್ಗೆ ಭೀಷ್ಮನ ಒಳ ಮನಸ್ಸಿನ ತುಮುಲ ಅರ್ಥವಾಗುತ್ತದೆ. ನಡುವೆ ಒಂದು ಆಶಾಭಾವ ಯುದ್ದ ನಿಲ್ಲಬಹುದೇ?

 ಸುಯೋಧನ ತನ್ನ ಬರವಿನ ಉದ್ದೇಶವನ್ನು ವಿವರಿಸುತ್ತಾನೆ. ಪಾಂಡವ ಪಕ್ಷಪಾತಿ ಕೃಷ್ಣನ ತಂತ್ರಗಳಿಗೆ ಪಾರಮಾರ್ಥಿಕವಾಗಿಯೂ ಲೌಕಿಕವಾಗಿಯೂ ಪ್ರತಿಭಟನೆಯ ಅರ್ಹ ವ್ಯಕ್ತಿಗಳೆಂದರೆ ಅದು ಭೀಷ್ಮರು. ಪಾಂಡವರನ್ನು ಹರಿ ಕಾಯುತ್ತಿರುವಾಗ ನಮ್ಮನ್ನು ಕಾಯುವುದಕ್ಕೆ ಹರಿಯ ಸ್ಥಾನದಲ್ಲಿ ಭೀಷ್ಮರು ಬರಬೇಕು. ತನ್ನ ಹೋರಾಟ ಪಾಂಡವರಲ್ಲಿ ಅಲ್ಲ, ಬದಲಾಗಿ ಅವರನ್ನು ಆಯುಧಗಳನ್ನಾಗಿ ಮಾಡುವ ಕೃಷ್ಣನಲ್ಲಿ.  ಇಲ್ಲಿ ಕೌರವನ ತೀಕ್ಷ್ಣ ವಾದ ಮತ್ಸದ್ಧೀ ತನವೂ ಕೆಲಸ ಮಾಡುತ್ತದೆ. ಕೃಷ್ಣಸ್ತು ಭಗವಾನ್ ಸ್ವಯಂ ಎಂದು ನಂಬಿದ ಭಾಗವತೋತ್ತಮರನ್ನೇ ಕೃಷ್ಣರೆದುರು ನಿಲ್ಲಿಸಿದರೆ....ಸ್ವತಃ  ಇಚ್ಛಾಮರಣಿಯಾದಂತಹ ಭೀಷ್ಮ ತಾನು ಬಯಸಿದ್ದಲ್ಲದ್ದೆ ತಮ್ಮ ಮರಣವನ್ನು ತಂದುಕೊಳ್ಳಲಾರರು. ಭೀಷ್ಮರು ಎಲ್ಲಿಯವರೆಗೆ ಸೇನಾಪತಿಯಾಗಿರುತ್ತಾರೋ ಅಲ್ಲಿವರೆಗೆ ಕೌರವ ಸೇನೆ ಅಭೇದ್ಯವಾಗಿರುತ್ತದೆ. ಸೇನಾಪತಿಯಾದಂತಹ ಭೀಷ್ಮ ತಮ್ಮ ಸೋಲನ್ನು ತಾವು ಬಯಸಲಾರರು.  ವಿಪರ್ಯಾಸವೆಂದರೆ ಭೀಷ್ಮನ ಸೋಲು ಗೆಲುವಿನ ನಿಜವಾದ ಅರ್ಥವನ್ನು ಮಾಡಿಕೊಳ್ಳುವಲ್ಲಿ ಕೌರವ ವಿಫಲನಾಗುತ್ತಾನೆ. ಮಾನಸಿಕವಾಗಿ ಈ ಕೌಟುಂಬಿಕ ಕಲಹದಿಂದ ಭೀಷ್ಮರು ಹತಾಶರಾಗಿರುವುದು ಕೌರವನ ಗಮನಕ್ಕೆ ಬರುವುದೇ ಇಲ್ಲ!! ಭೀಷ್ಮರು ನಿಟ್ಟುಸಿರೊಂದನ್ನು ಎಳೆಯುತ್ತಾರೆ. (ಭೀಷ್ಮನಾಗಿ ಶೇಣಿಯವರು ಕೇವಲ ಈ ನಿಟ್ಟುಸಿರೊಂದರಲ್ಲೇ ಭೀಷ್ಮನ ಅಷ್ಟೂ ಭಾವವನ್ನು ತುಂಬಿಸಿಬಿಡುತ್ತಾರೆ...!!! )

ಎನೂ ಇಲ್ಲದ ಪಾಂಡವರು ರಾಜ್ಯದಾಶೆಯಿಂದ ಕೆಣಕುತ್ತ ಬರುವವರು ದಿನ ದಿನದಿ. ಇದೀಗ ತಾವೇ ಹೋರಾಟಕ್ಕೆ ಮುಂದಾಗಿ ಬರುತ್ತಾರೆ. ಅವರಿಗೆ ಇರುವ ರಕ್ಷಣೆಯಾದರೂ ಏನು?

          ಆದಿನಾರಯಣ ದುಷ್ಟ ಶಿಕ್ಷಣಕಾಗಿ ಮೋದದಿ ದೇವಕಿಗುದಿಸಿ
          ಸಾದರದೊಳು ಪಾಂಡು ಜಾತರ ಪೊರೆಯುವ ಛೇದಿಸಿಹನು ಕಂಸಾದಿಗಳ
          ಕೆಡುಕ ಯೋಚಿಸಬೇಡ ಸತ್ಯ ಮಾರ್ಗಗಳನ್ನು ಪಿಡಿದು ಪೋದರು ವನಕವರು
ಕೊಡದಿರೆ ಅರ್ಧರಾಜ್ಯವ ಕೃಷ್ಣ ಧುರದೊಳು ಬಿಡದೆ ಹೊಂದಿಪ ಜಯಗಳನು.

          ಅವರಿಗೆ ಹರಿ ರಕ್ಷಣೆ ಉಂಟು ಎಂದಾದರೆ,  ಪೊರೆಯುವರಾರು ಎಮ್ಮನು...?.ಕೌರವನ ಅಳಲಿಗೆ ಭೀಷ್ಮನ ಸಾಂತ್ವಾನವಿದು.
ಎಲ್ಲಿ ಪ್ರಶ್ನೆ ಉಳಿಯುವುದಿಲ್ಲವೋ ಅಲ್ಲಿವರೆಗೆ ಪ್ರಶ್ನಿಸಿಕೊಂಡು ಹೋದಾಗ ಅದು ಅನಾದಿ ಎನಿಸಲ್ಪಡುತ್ತದೆ. ಅವನ ಅಪ್ಪ ಯಾರು? ಅಪ್ಪನ ಅಪ್ಪ ಯಾರು?  ಅಜ್ಜನ ಅಜ್ಜ ಯಾರು ?  ಹೀಗೆ ಪ್ರಶ್ನಿಸುತ್ತಾ ಹೋದಾಗ ಈ ಪ್ರಶ್ನೆಯ ಪ್ರಶ್ನೆಯಲ್ಲಿ ಮತ್ತೊಂದು ಪ್ರಶ್ನೆ ಹುಟ್ಟುತ್ತದೆ. ಆದರೆ ಪ್ರಶ್ನೆಯೇ  ಇಲ್ಲದ ಒಂದು ಹಂತ ಇರುತ್ತದೆ. ಅದು ಅನಾದಿ..  ಮೊತ್ತ ಮೊದಲು ಇದ್ದ ಆ ವಸ್ತುವಿಗೆ ಆದಿ ವಸ್ತು...ಇಲ್ಲಿ ಆ ಅದಿಯನ್ನು ಆದಿನಾರಾಯಣ ಎಂದು ಗುರುತಿಸಿದ್ದು ಭಗವತ್ ಸ್ವರೂಪಿಯಾದ ಶ್ರೀಕೃಷ್ಣನಲ್ಲಿ. ಲಿಂಗಭೇದವೇ ಇಲ್ಲದ ಭಗವಂತ ನಾರಾಯಣಳು, ನಾರಾಯಣನು ಅಥವಾ ನಾರಾಯಣವೂ ಆಗಿ ನಾವು ಏನನ್ನು ಕಾಣಬಹುದೋ ಅವನು,  ಆತನ ಮೈಯಂತಿರುವ ಈ ಬ್ರಹ್ಮಾಂಡದಲ್ಲಿ ಹುಣ್ಣಾದರೆ ಅದನ್ನು ನಿವಾರಣೆ ಮಾಡಬೇಕಾಗುತ್ತದೆ, ಅಥವಾ ತನ್ನ ಕಣ್ಣಲ್ಲಿ ಕಸ ಬಿದ್ದಾಗ,  ಬಿದ್ದಿರುವ ಕಸ ತೆಗೆದು ಹಾಕಬೇಕಾಗುತ್ತದೆ. ಹಾಗೆ ಈ ಭೂಮಿಯಲ್ಲಿ ದುಷ್ಟ ಶಕ್ತಿ ಹೆಚ್ಚಾದಾಗ, ಸಂತ್ರಸ್ತೆಯಾದ ಭೂಮಿಯನ್ನು ರಕ್ಷಿಸುವಂತೆ, ಈ ಆದಿನಾರಾಯಣ ಅವತರಿಸುತ್ತಾನೆ. ಅವತರಿಸುವುದಕ್ಕೂ ಬೀಳುವುದಕ್ಕೂ ವೆತ್ಯಾಸವಿದೆ. ಒಬ್ಬಾತ ಆನೆಯ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದ ಅದು ಪತನ,, ಅರಸ ಆನೆಯಿಂದ ಕೆಳಗೆ ಇಳಿದು ಬಂದ, ಅದು ಅವತರಣ. ಹೀಗೆ ದುಷ್ಟ ದಮನಕ್ಕಾಗಿ ಅವತಾರ ಎತ್ತಿದವನು ಶ್ರೀಕೃಷ್ಣ.  ಕನ್ನಡಿಯಲ್ಲಿ ಕಂಡ ಪ್ರತಿಬಿಂಬದಂತೆ, ಅಲ್ಲಿ ನಾವು ನಕ್ಕರೆ ಅಥವಾ ಅತ್ತರೆ ಕನ್ನಡಿಯೊಳಗಿನ ಪ್ರತಿಬಿಂಬ ನಗುವಂತೆ ಅಥವಾ ಅಳುವಂತೆ ನಮಗೆ ಭಾಸವಾಗುತ್ತದೆ ಹೊರತು ಕನ್ನಡಿ ನಗುವುದೂ ಇಲ್ಲ ಅಳುವುದೂ ಇಲ್ಲ. ಭಂಗವಂತನ ಅವತಾರ ಎಂದರೆ ಹಾಗೆ.  ಮಾಯೆಯು ಅವನಾಗಿ ಅವನು ಮಾಯಿಯಾಗಿ ಇರುತ್ತಾನೆ.  ನಾವು ಮತ್ತು ನಮ್ಮ ನೆರಳು ಇಲ್ಲಿ ನೆರಳು ಇದಕ್ಕೆ ಅಸ್ತಿತ್ವ ಇರುವುದಿಲ್ಲ. ಬೆಳಕನ್ನು ತೆಗೆದುಕೊಂಡು ನೆರಳು ಎಲ್ಲಿ ಅಂತ ಹುಡುಕಿದರೆ ಕಾಣಸಿಗುವುದಿಲ್ಲ. ಆದರೂ ನೆರಳು ಇರುವುದು ಸುಳ್ಳಲ್ಲ.   ಹಾಗಾಗಿ ಕೃಷ್ಣನಲ್ಲಿ ಭಗವಂತನನ್ನು ಅರೋಪಿಸಿ ಕೃಷ್ಣನನ್ನೇ  ಆದಿನಾರಾಯಣನಾಗಿ ಕಾಣು.

          ಇದು ತಾಳ ಮದ್ದಲೆಯೊಂದರಲ್ಲಿ ಶ್ರೀ ರಾಮದಾಸ ಸಾಮಗರ ಅರ್ಥಗಾರಿಕೆಯ ಸ್ಥೂಲ ವಿವರಣೆ.  ಭಗವಂತನ ಅವತರಣಿಕೆಯನ್ನು ಇಲ್ಲಿ ಬಹಳ ಸರಳವಾಗಿ ವಿವರಿಸಿದ್ದಾರೆ. ಸುಯೋಧನ ಭಗವಂತನ ದೇಹದ ವೃಣವಾಗಕೂಡದು ಎಂದು ಪರೋಕ್ಷ ಸಂದೇಶ ಇದರಲ್ಲಿದೆ. ಅಂತಹ ಭಗವಂತ ಪಾಂಡವರ ಜತೆ ಸದಾ ಇದ್ದು ಅವರನ್ನು ಪೊರೆಯುತ್ತಾನೆ. ಧರ್ಮ ಎಲ್ಲಿದೆಯೋ ಅಲ್ಲಿ ಕೃಷ್ಣನಿದ್ದಾನೆ. ಕೃಷ್ಣನೆಲ್ಲಿದ್ದಾನೋ ಅಲ್ಲಿ ಧರ್ಮ ನೆಲೆಸುತ್ತದೆ. ಹಾಗಾಗಿ ಆ ಧರ್ಮದ ಜತೆ ನೀನು ಸೇರಿಕೋ. ಪಾಂಡವರಿಗೆ ಸಲ್ಲಬೇಕಾದ ರಾಜ್ಯವನ್ನು ಕೊಟ್ಟು ಧರ್ಮವನ್ನು ನಿನ್ನಲ್ಲೂ ನೆಲೆಸುವಂತೆ ಮಾಡಿ ಕೃಷ್ಣನ ಅನುಗ್ರಹಕ್ಕೆ ಪಾತ್ರನಾಗು.
          ಆರ್ತರನ್ನು ಧರ್ಮಾತ್ಮರನ್ನು ಪರಮಾತ್ಮ ರಕ್ಷಿಸುತ್ತಾನೆ ಎನ್ನುವುದಕ್ಕೆ ಸುಯೋಧನ ಆಕ್ಷೇಪ ಅಥವಾ ಪ್ರತಿವಾದವನ್ನು ಹೇಳುತ್ತಾನೆ. ಪಾಂಡವರ ಜೀವನದ ಮೂಲಕವೇ ಅದು ವ್ಯಕ್ತವಾಗುವುದನ್ನು ವಿವರಿಸುತ್ತಾನೆ. ಪಾಂಡವರನ್ನು ಪಾಲಿಸುತ್ತಾನೆ ಎಂದರೆ ಅದು ಸತ್ಯವೇ?

ಪೊರೆಯುವ ಮಹಿಮನು ವಿಪಿನಾಂತರಗಳ ಚಲಿಸುವ ಕಾಲದೊಳು
ಧರಣಿಯ ಕೊಡಿಸದೆ ಬಿಟ್ಟಿಹನೇತಕೆ ಸರ್ವಥಾ ಕೊಡೆನಿನ್ನು

          ಧರ್ಮ ಇದ್ದಕಡೆ ಕೃಷ್ಣನಿದ್ದಾನೆ, ಪಾಂಡವರು ಧರ್ಮಾತ್ಮರು. ಅವರು ಸದಾ ಪೊರೆಯುವವನು, ಪಾಂಡವರಿಗೆ ದ್ಯೂತದಲ್ಲಿ ರಕ್ಷಿಸಲಿಲ್ಲ. ಅವರು ವನಾಂತಾರಗಳಲ್ಲಿ ಮರದ ಅಡಿಯಲ್ಲೋ ಕಲ್ಲು ಬಂಡೆಯ ಮೇಲೋ ಮಲಗಿದರೆ ತಾನು ಹಂಸ ತೂಲಿಕಾ ತಲ್ಪದಲ್ಲಿ ನಿದ್ರಿಸುತ್ತೇನೆ, ನಿತ್ಯವು ಮೃಷ್ಟಾನ್ನ ಭೋಜನವನ್ನೇ ಸ್ವಿಕರಿಸುತ್ತೇನೆ.  ಹುಟ್ಟಿನಿಂದ ತಾನು ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದರೆ,  ಪಾಂಡವರು ವನವಾಸ ಅಜ್ಞಾತವಾಸ ಬಡತನ ಇವುಗಳಲ್ಲೇ ಜೀವಿಸುವಂತಾದರೆ ಇವರನ್ನು  ಭಗವಂತ ಪೊರೆಯುತ್ತಾನೆ ಎಂದರೆ ಹೇಗೆ? ಪಾಂಡವರ ಧರ್ಮದ ಹಾದಿಯಲ್ಲೂ ಕೊಂಕನ್ನು ಕಾಣುವ ಕೌರವನಿಗೆ ಭೀಷ್ಮರು ಹೇಳುತ್ತಾರೆ. ಕೆಡುಕ ಯೋಚಿಸಬೇಡ,
          ಕೆಡುಕ ಯೋಚಿಸಬೇಡ ಸತ್ಯ ಮಾರ್ಗಗಳನ್ನು ಪಿಡಿದು ಪೋದರು ವನಕವರು
            ಕೊಡದಿರೆ ಅರ್ಧ ರಾಜ್ಯವ ಕೃಷ್ಣ ಧುರದೊಳು ಬಿಡದೆ ಹೊಂದಿಪ ಜಯಗಳನು

            ಬಹಳ ಸರಳವಾದ ಉದಾಹರಣೆಯನ್ನು ಸಾಮಗರ ಭೀಷ್ಮ ನೀಡುತ್ತಾನೆ. ಒಬ್ಬ ಶ್ರೀಮಂತ  ಅಂತ ಇರ್ತಾನೆ. ಅವನು ಒಳ್ಳೆಯವನಾಗಿರುತ್ತಾನೋ, ಬಡವ ಒಬ್ಬ ಇರುತ್ತಾನೆ. ಅವನು ಕೆಟ್ಟವನೋ? ಶ್ರೀಮಂತರಲ್ಲೂ ಕೆಟ್ಟವರೂ ಇರುತ್ತಾರೆ ಒಳ್ಳೆಯವರೂ ಇರುತ್ತಾರೆ. ಅದೇ ರೀತಿ ಬಡವರಲ್ಲೂ. ಒಬ್ಬಾಕೆ ರೂಪದಲ್ಲಿ ಬಹಳ ಸುಂದರವಾಗಿರುತ್ತಾಳೆ. ಅವಳು ಒಳ್ಳೆಯವಳೇ ಆಗಿ ಇರಬೇಕೆಂದೇನೂ ಇಲ್ಲ. ಹಾಗೇ ಒಬ್ಬಾಕೆ ಕುರೂಪಿ ಅವಳು ಕೆಟ್ಟವಳೇ ಆಗಿರಬೇಕೆಂದೇನು ಇಲ್ಲ. ಹಾಗಾಗಿ ಒಳ್ಳೆಯದು ಕೆಟ್ಟದ್ದು ಹೊರ ಆವರಣದಿಂದ ನಿರ್ಧರಿಸ ತಕ್ಕದ್ದಲ್ಲ. ದಾರಿದ್ರ್ಯ ಎಂಬುದು ದೌಷ್ಟ್ಯವಲ್ಲ. ಧನಾಢ್ಯ,  ಸಂಪಧ್ಬರಿತತೆ ಅದಕ್ಕೆ ಸಜ್ಜನಿಕೆ ಎಂದೂ ಇರುವುದಿಲ್ಲ. ದಾರಿದ್ರ್ಯ ಎಂಬುದು ಲೌಕಿಕ ಸ್ಥಿತಿ. ಮೈಯಿಂದ ಬಡವನಾಗಿದ್ದವನು ಮನಸ್ಸಿನಿಂದ ಸಿರಿವಂತನಾಗಿರುತ್ತಾನೆ. ಮೈಯಿಂದ ಸಿರಿವಂತ ನಾದವನು ಮನಸ್ಸಿನಿಂದ ಬಡವನಾಗಿರುತ್ತಾನೆ. ಪಾಂಡವರಿಗೆ ಅನಾಥತೆ ಬಂತು. ಅದೊಂದು ಸ್ಥಿತಿ. ಅದು ಅಪರಾಧವಲ್ಲ. ಕುರೂಪತೆ ಎಂಬುದು ಅಪರಾಧವಲ್ಲ. ಆದರೂ ಅವರು ಹರಿಯ ಕರುಣೆಗೆ ಅರ್ಹರು. ಸುಖ ದುಃಖಗಳ ನಿರ್ಧಾರ ಎಲ್ಲಿ ಅದು ಮನಸ್ಸಿನಲ್ಲಿ. ಯಾರಲ್ಲಿ ಸಂಪತ್ತು ಹೆಚ್ಚು ಎಷ್ಟು ಉಂಟು. ಅವನು ಯಾವ ತಲ್ಪದಲ್ಲಿ ಮಲಗುತ್ತಾನೆ. ಅವನ ಶ್ರೀಮಂತಿಕೆಯ ಜೇವನದ ರೀತಿಯಿಂದ ಅಲ್ಲ ಸುಖವನ್ನು ನಿರ್ಣಯಿಸುವುದು. ಇಷ್ಟೆಲ್ಲ ಇದ್ದವನೂ ಮಾನಸಿಕ ಅಸಂತೃಪಿಯಿಂದಲೂ ನಿದ್ರಾಹೀನತೆಯಿಂದಲೂ ಬಳಲುದಿಲ್ಲವೋ?  ಹಂಸ ತೂಲಿಕಾ ತಲ್ಪದಲ್ಲಿ ಸುಯೋಧನ ಮಲಗಿದ್ದರೂ ಪಾಂಡವರ ಯೋಚನೆಯಲ್ಲೇ ನಿದ್ರಾಹೀನನಾಗಲಿಲ್ಲವೇ? ಮರದ ಬುಡದಲ್ಲಿ ಮಲಗಿದ್ದರೂ ಪಾಂಡವರು ನಿಶ್ಚಿಂತೆಯಿಂದ ನಿದ್ರಿಸಲಿಲ್ಲವೇ? ಹಾಗಾಗದರೆ ಸುಖ ನಿರ್ಧರಿಸುವುದು ಇಲ್ಲೇ. ಮಾನಸಿಕ ಸ್ಥಿತಿಯಲ್ಲಿ. ಕುಸ್ತಿಯ ಮಲ್ಲನಿಗೆ ಮರಳ ಮಣ್ಣನ್ನೇ ಅನುಕೂಲಿಸಿ ಕೊಡಬೇಕು. ಅವನಿಗೆ ಶ್ರೇಯಸ್ಸಿಗೆ ಅದುವೇ ಅನುಕೂಲ. ಹಾಗೆ ಪಾಂಡವರಿಗೆ ವನವಾಸ. ಹಾಗಾದುದರಿಂದ ಅವನಿಗೆ ಅಭಿಮುಖರಾಗಿರುವವರಿಗೆ ಭಗವಂತನು ಅಭಿಮುಖವಾಗಿಯೂ ವಿಮುಖವಾಗಿರುವವರಿಗೆ ವಿಮುಖನಾಗಿಯೂ ಇರುತ್ತಾನೆ. ಆದುದರಿಂದ್ ಅರ್ಧ ರಾಜ್ಯ ಕೊಡೆ ಎಂದು ಛಲ ಹಿಡಿಯಬೇಡ. ಅವನು ಅದನ್ನು ನಿನ್ನಿಂದ ಕಿತ್ತುಕೊಂಡಾದರೂ ಪಾಂಡವರಿಗೆ ನೀಡುತ್ತಾನೆ.
           
ಭೀಷ್ಮರು ಅಧೀರರಾಗುತ್ತಾರೆ. ಅದೂ ತನ್ನ ಮೊಮ್ಮಗನ ಆರೋಪದ ನುಡಿ ಭರ್ತ್ಸನೆ ಕೇಳಿ. “ ಅಜ್ಜಾ ಕೌರವರು ಪಾಂಡವರಲ್ಲಿ ನಿಮಗೆ ಭೇದವೆ?”  ಹೆತ್ತ ತಾಯಿ ಮೊದಲು ಅಲುಗುವ ಮಾತು, ಮಕ್ಕಳಿಂದ ಬಂದಾಗ  ಅದು, ’ಭೇದ ಮಾಡ್ತಿಯ ತಾಯಿ’  ಎಂಬ ಆರೋಪ ಕೇಳಿ ಬಂದಾಗ. ಯಾವುದೇ ಪ್ರಾಣಿಗೆ ತನ್ನ ದೇಹದ ಯಾವುದೇ ಭಾಗವಾದರೂ ಭೇದ ಮಾಡುವುದಕ್ಕೆ ಸಾಧ್ಯವಾಗ್ತದೆಯೇ? ಕೈಯಲ್ಲಿ ಐದೂ ಬೆರಳುಗಳು ಗಾತ್ರದಲ್ಲಿ ಸಣ್ಣದು ದೊಡ್ಡದು ಇರಬಹುದು. ಅದರ ಉಪಯೋಗದ ಆದ್ಯತೆ ಹೆಚ್ಚು ಕಡಿಮೆ  ಇರಬಹುದು ಹಾಗೆಂದು ಯಾವುದೇ ಬೆರಳಿಗೆ ನೋವಾದರೂ ಆ ಅನುಭವ ಆಗುವುದೆಲ್ಲಿಗೆ? ಕೌರವನದ್ದು ಬುದ್ದಿ ದಾರಿದ್ರ್ಯದ  ಪ್ರಶ್ನೇಯೇ?  ಭೀಷ್ಮ ಯೋಚಿಸುತ್ತಾನೆ.  ಖಂಡಿತ ಅಲ್ಲ. ಹೇಗಾದರೂ ಭೀಷ್ಮರನ್ನು ಪ್ರಚೋದಿಸಬೇಕು.ಹೊಡೆತ ತಿಂದಾಗಲೇ ಮೃದಂಗ ಶ್ರುತಿ ಸೇರಿಸುವುದು. ಪಳಗಿದ ವಾದನ ಪಟುವಿಗೆ ಅರಿವಿರುತ್ತದೆ. ಎಲ್ಲಿ ಹೊಡೆದರೆ ಶ್ರುತಿ ಹೊಂದಿಕೆಯಾಗ್ತದೆ ಎಂದು. ಪಳಗಿದ ವಾದಕನಂತೆ ಕೌರವನ ಮಾತು. ಇದೆಲ್ಲ ತಿಳಿದಿದ್ದರೂ ಭೀಷ್ಮರು ವಿಚಲಿತರಾದಂತೆ ಪ್ರತಿಜ್ಞಾವಾಕ್ಯ ಮೊಳಗಿಸುತ್ತಾರೆ. ಅಂತರಂಗದಲ್ಲಿ ಪರಮಾತ್ಮ ಶ್ರೀಕೃಷ್ಣನ ಬಗ್ಗೆ ಇದ್ದ ಅಲ್ಪ ಅಸಮಧಾನವೂ ಕಾರಣವಾಗಿರಬಹುದು.  

ಹಸ್ತಿನಾವತಿಯ ಸಿಂಹಾಸನದ ಹೊಣೆ ಶಂತನು ಚಕ್ರವರ್ತಿಯಿಂದ ಪಡೆದುಕೊಂಡದ್ದು. ಪರಿಪೂರ್ಣನಾದ ಒಬ್ಬ ಕ್ಷತ್ರಿಯ ಆ ಸಿಂಹಾಸನದಲ್ಲಿ ಏರಿದಾಗಲೇ ಈ ಹೊಣೆಗಾರಿಕೆಯ ಭಾರ ಇಳಿಸಬೇಕು. ಬಹುಶಃ ಭಗವಂತನ ನಿಯತಿಯೇ ಇದು ಇರಬೇಕು. ಪರಿ ಪರಿಯ ಬೇಡಿಕೆಗೆ ಕೌರವನ ಮೊಂಡುವಾದವೇ ಮುಂದಾಗುವುದಾದರೆ ಇದಕ್ಕಿಂತ ಬೇರೆ ಪುರಾವೆ ಬೇಕೆ. ಈ ಅಪೂರ್ಣ ಬದುಕಿನತ್ತ ಯೋಚಿಸುತ್ತಾರೆ. ಭೀಷ್ಮರದು ಅತ್ತ ಪೂರ್ಣ ಗೃಹಸ್ಥನಲ್ಲದ ಬದುಕು. ಇತ್ತ ಪೂರ್ಣ ಸನ್ಯಾಸಿ ಎನ್ನಿಸಿಕೊಳ್ಳದ ಬದುಕು. ಏಕಾಂಗಿಯಾಗಿ ಇದ್ದರೂ ಏಕಾಂತವನ್ನು ಅನುಭವಿಸದ ಬದುಕು. ಹಸ್ತಿನಾವತಿಯ ಅರಸನೂ ಅಲ್ಲ, ಹಾಗಂತ ಅರಸೊತ್ತಿಗೆ ಬಿಟ್ಟು ಹೋಗದಂತಹ ಸ್ಥಿತಿ. ಭಾಗವತೋತ್ತಮ ಎನಿಸಿಕೊಂಡರೂ ಭಗವದನುಗ್ರಹ ಮರೀಚೆಕೆಯಾದಂತಹ ಬದುಕು. ಹಾಗಾಗಿ ತನ್ನ ಬದುಕನ್ನು ಭಗವಂತನ ಎದುರು ಪಣಕ್ಕಿಡುವಂತೆ ಪ್ರತಿಜ್ಞೆಗೈಯುತ್ತಾರೆ.. ಭೀಷ್ಮ ಸೇನಾಧಿಪತ್ಯ  ಕೌರವ ತನ್ನ ಸಭೆಯ ಸರ್ವ ಸಮ್ಮತ ಏಕಾಭಿಪ್ರಾಯ ಎಂದು ಬಿಂಬಿಸ ಹೊರಟರೂ ವಯೋ ವೃದ್ಧ ಭೀಷ್ಮನಿಗೆ  ಪಟ್ಟ ಎಂದಾಗಲೇ ಕರ್ಣಾದಿಗಳು ಅಸಮಧಾನ ಸೂಚಿಸಿದ್ದರು. ಹಾಗಾದರೆ ಭೀಷ್ಮರ ಸಾಮಾರ್ಥ್ಯಕ್ಕೆ ಹಸ್ತಿನಾವತಿಯಲ್ಲೇ ಅಪಸ್ವರ ಇದೆ ಎಂದಾಯಿತು. ಇನ್ನು ಈ ಬದುಕಿನಲ್ಲಿ ಈ ಪ್ರಶ್ನೆಗೆ ಉತ್ತರಿಸುವ ಅವಕಾಶವೂ ಸಿಗದೇ ಹೋದೀತೆ?  ಅದೇ ಆವೇಶವೆಂಬಂತೆ ಪ್ರತಿಜ್ಞಾ ವಾಕ್ಯ ಮೊಳಗುತ್ತದೆ. “ ದಿನವೊಂದಕ್ಕೆ ಹತ್ತು ಸಾವಿರ ಮುಕುಟ ಮರ್ದನರ ತಲೆಯನ್ನು ಕತ್ತರಿಸುತ್ತೇನೆ,”  ಇಷ್ಟು ಸಾಲದೂ ಎಂಬಂತೆ ಭಗವಂತ ಶ್ರೀಕೃಷ್ಣನಿಗೆ ಒಂದು ಸವಾಲು ಬರೆದು ಬಿಡುತ್ತಾರೆ. “ಚಕ್ರ ಹಿಡಿಯುವುದಿಲ್ಲ ಎಂದು ಸಂಕಲ್ಪ ಮಾಡಿದ ಶ್ರೀಕೃಷ್ಣನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ. “  ಈ ಪ್ರತಿಜ್ಞೆ ಪರೋಕ್ಷವಾಗಿಯೂ ಪ್ರತ್ಯಕ್ಷವಾಗಿಯೂ ಭಗವಂತನಿಗೆ ಎಸೆದ ಸವಾಲುಗಳಾಗಿತ್ತು. ಭೀಷ್ಮರ ಕೊನೆಯ ಪ್ರತಿಜ್ಞೆಯೇ ಶ್ರೀ ಕೃಷ್ಣನಿಗೆ ಎದುರಾಗಿ ಎಂದರೆ ಅದೂ ಒಂದು ವಿಪರ್ಯಾಸ. 

Sunday, September 21, 2014

ಯಕ್ಷಬ್ರಹ್ಮ ಪದವಿಗೊಂದು ಪ್ರಶ್ನೆ

          ಮಹಾಭಾರತದಲ್ಲಿ ಪಾಂಡವರು ಕೌರವರಿಗೆ ಗುರುವಾದ ದ್ರೋಣ ಶಸ್ತ್ರಾಭ್ಯಾಸ ಮಾಡಿಸುತ್ತಾನೆ. ನೂರೈದು ಮಂದಿ ಶಿಷ್ಯರು ಶಸ್ತ್ರವಿದ್ಯೆಯಲ್ಲಿ ಪರಿಣತಿಯನ್ನುಗಳಿಸಿದ ಬಳಿಕ ಶಸ್ತ್ರ ಪರೀಕ್ಷೆಯನ್ನು ಭೀಷ್ಮ ಧೃತರಾಷ್ಟ್ರರ ಸಮ್ಮುಖದಲ್ಲಿ ದ್ರೋಣ ಏರ್ಪಡಿಸುತ್ತಾನೆ. ಶಸ್ತ್ರ ಪರೀಕ್ಷೆಯಲ್ಲಿ ನೈಪುಣ್ಯತೆಯನ್ನು ಪರೀಕ್ಷೆಗೊಳಪಡಿಸಿ ಆ ಮೂಲಕ ತನ್ನ ಗುರುತ್ವವನ್ನು ದ್ರೋಣ ಪುಷ್ಟೀಕರಿಸುತ್ತಾನೆ. ಆ ಪರೀಕ್ಷಾರಂಗದಲ್ಲಿ ಬಿಲ್ಲುವಿದ್ಯೆಯಲ್ಲಿ ಯಾರೂ ಇದಿರಿಲ್ಲದ ಸಾಮಾರ್ಥ್ಯವನ್ನು ಅರ್ಜುನ ನೀಡುತ್ತಾನೆ. ತನ್ನ ಪಟ್ಟ ಶಿಷ್ಯ ಅರ್ಜುನನಿಗೆ ದ್ರೋಣರು “ಪಾರ್ಥೋ ಏವ ಧನುರ್ಧರಃ”  ಎಂದು ಕೊಂಡಾಡಿದರೆ ಕುರುಕುಲ ವೃದ್ದ ಪಿತಾಮಹ ಭೀಷ್ಮ ಅಂಕಿತವನ್ನು ಎಳೆಯುತ್ತಾರೆ.

          ದ್ರೋಣ ಭೀಷ್ಮರಿಬ್ಬರಿಗೂ ಧನುರ್ವೇದವನ್ನು ಕಲಿಸಿದ ಗುರುಗಳು ಪರಶುರಾಮರು. ಇಬ್ಬರೂ ಧನುರ್ವಿದ್ಯೆಯಲ್ಲಿ ಅಸಾಮಾನ್ಯ ಪರಾಕ್ರಮವನ್ನು ಹೊಂದಿದವರು. ಅದರಲ್ಲೂ ಭೀಷ್ಮ ಸ್ವತಃ ಪರಾಕ್ರಮಿಗಳು. ತನ್ನ ಪ್ರವೇಶ ಮಾತ್ರದಿಂದಲೇ ಯುದ್ದವನ್ನು ಜಯಿಸಬಲ್ಲ ಅಖಂಡ ಪರಾಕ್ರಮಿ. ಆದರೂ ಇಲ್ಲಿ ಪರೀಕ್ಷಾರಂಗದಲ್ಲಿ ಪಾರ್ಥೋ ಏವ ಧನುರ್ಧರನಾದ. ಸ್ವತಃ ಭೀಷ್ಮನಾಗಲಿ ದ್ರೋಣರಾಗಲೀ ಸ್ಪರ್ಧಾಳುಗಳಾಗಿ ರಂಗಕ್ಕಿಳಿಯಲಿಲ್ಲ.

          ಯಕ್ಷಗಾನ ವಿಶ್ವಮಟ್ಟದಲ್ಲಿ ಹೆಸರನ್ನು ಗುರುತಿಸುವ ಹವಣಿಕೆಯಲ್ಲಿದೆ. ಇದು ಕೇವಲ ಒಂದೆರಡು ಕೆಲಸಗಳಿಂದ ಅಥವಾ ಒಂದಿಬ್ಬರ ಯತ್ನದಿಂದ ಆಗಿರುವುದಲ್ಲ. ಕಾಲ ಕಾಲಕ್ಕೆ ಜೀವಿಸಿದ ಮಹನೀಯರು ಅರಿತೋ ಅರಿಯದೆಯೋ ಇದರಲ್ಲಿ ತಮ್ಮದೇ ದೇಣಿಗೆ ನೀಡಿದ್ದಾರೆ. ಅದರಂತೆ ಇತ್ತೀಚೆಗೆ ಜಾಗತಿಕಟ್ಟದಲ್ಲಿ ಯಕ್ಷಗಾನ ಒಂದು ಸ್ಪರ್ಧಾರಂಗವಾಗಿ ಗುರುತಿಸಿ ಒಂದು ಉತ್ಸವವಾಗಿ  ಆಚರಣೆಯಲ್ಲಿದೆ. ಈ ಬೃಹತ್ ಸ್ಪರ್ಧಾಕಣದಲ್ಲಿ ಬಹಳಷ್ಟು ಹಿರಿಯ ಕಿರಿಯ ಕಲಾವಿದರು ವಯೋಭೇದವಿಲ್ಲದೆ  ತಮ್ಮನ್ನು ತಾವು ತೊಡಗಿಸಿಗೊಂಡು ಈ ಸ್ಪರ್ಧೆ ಮಾಹಾ ಸಂಭವ ಎಂಬಂತೆ ಬಿಂಬಿಸಲ್ಪಟ್ಟಿದೆ.  ಇದರಲ್ಲಿ ಎರಡು ಮಾತಿಲ್ಲ.  ಈ ಸ್ಪರ್ಧೆಯ ಆರಂಭ ರೇಖೆಯಲ್ಲಿ ನಿಂತ ಹುರಿಯಾಳುಗಳನ್ನು ಕಂಡಾಗ ಮೇಲಿನ ಪೌರಾಣಿಕ ಪ್ರಕರಣ ನೆನಪಿಗೆ ಬಂತು ಚಿಂತನೆಗೆ ಗ್ರಾಸವನ್ನೊದಗಿಸಿಬಿಟ್ಟಿತು.
          ಯಕ್ಷಗಾನ ಸ್ಪರ್ಧೆ ಆರಂಭದಲ್ಲೇ ಸಿದ್ದ ಪ್ರಸಿದ್ದ ಕಲಾವಿದರ ಪಟ್ಟಿಯೇ ಸ್ಪರ್ಧೆಗೆ ಇನ್ನಿಲ್ಲದ ಪ್ರಸಿದ್ಧಿಯನ್ನು ಪ್ರಕಾಶವನ್ನು ಕೊಟ್ಟದ್ದು ಯಕ್ಷಗಾನ ವಲಯದಲ್ಲಿ ಒಂದು ಸಂಚಲನವನ್ನು ಮೂಡಿಸಿತ್ತು. ಇದರ ಸಿದ್ದತೆಗಳು ಎಲ್ಲವೂ ಒಂದು ಕಲ್ಪನಾರಹಿತ ಭಾವನೆಯನ್ನು ಸೃಷ್ಟಿಸಿ,  ಒಂದು ದೊಡ್ಡ ವರ್ಷಧಾರೆಯ ಮೊದಲು ಕಟ್ಟುವ ದಟ್ಟ ಮೋಡವು ಮೇಘವರ್ಷದ ನಿರೀಕ್ಷೆಯನ್ನು ಮೂಡಿಸಿದಂತೆ ನಿರೀಕ್ಷೆಯನ್ನು ಹುಟ್ಟಿಸಿತು. ನಿಜಕ್ಕೂ ಇಲ್ಲಿ  ಬಹಳ ದೊಡ್ಡ ವರ್ಷಧಾರೆಯೇ ಸುರಿದುಬಿಟ್ಟಿತು. ಸುರಿದ ವರ್ಷಧಾರೆಯ ಸಾಧಬಾಧಕಳನ್ನು ಗುರುತಿಸಲು ಮಳೆ ಸ್ವಲ್ಪ ನಿಂತಾಗ ಒಂದು ಸಲ ಸುತ್ತಾಡಿ ಬಂದಂತೆ ಕಣ್ಣಿಗೆ ಕಂಡ ಒಂದು ವಿಷಯ.

          ಸ್ಪರ್ಧೆ ಆರಂಭವಾದಂದಿನಿಂದ ಹಲವರು ಇದರಲ್ಲಿ ತೊಡಗಿಸಿಕೊಂಡು ಒಂದು  ಗಂಭೀರ  ಮಜ್ಜನವನ್ನು ತಮ್ಮ ಶಕ್ತ್ಯಾನುಸಾರ ಅನುಭವಿಸಿದ್ದಾರೆ. ಆದರೆ ಸ್ಪರ್ಧಾಂಭದ ರೇಖೆಯಲ್ಲಿ ಯಕ್ಷಗಾನದ ಭೀಷ್ಮರೆಂದು ಗುರುತಿಸಿಕೊಳ್ಳುವ ಸಮಕಾಲೀನ ಮಾಹಾ ವ್ಯಕ್ತಿಗಳು ನಿಂತುಕೊಂಡು ಸ್ಪರ್ಧೆಯ ಓಟಕ್ಕೆ ತುದಿಗಾಲನ್ನು ಇಟ್ಟದ್ದು ಸ್ಪರ್ಧೆಯ ಒಂದು ವಿಡಂಬನೆಯಾಗಿ ಕಂಡಿತು.

          ಯಕ್ಷಗಾನ ಎಂದರೆ ಎಲ್ಲರಿಗೂ ತಿಳಿದ ಹಾಗೆ ಪರಂಪರೆಯಿಂದ ಹುಟ್ಟಿ ಅನುಭವಿಸಿಕೊಂಡು ಬಂದ ಕಲೆ. ಇದಕ್ಕೆ ಯಾವುದೇ ಶಾಸ್ತ್ರೀಯ ಚೌಕಟ್ಟು ಇಲ್ಲದಾಗ ಹಿರಿಯ ಕಲಾವಿದರ ನಿರ್ಣಯಗಳು ಅವರು ತಳೆದ ನಿಲುವು, ಅನುಸರಿಸಿದ ಮಾರ್ಗಗಳೇ ಶಾಸ್ತ್ರವಾಗಿ  ಆಚರಣೆಗೆ ಬಂತು. ಅದು ಇಂದಿಗೂ ಪ್ರಚಲಿತ. ಹಿರಿಯರು ಹಾಕಿಕೊಟ್ಟ ಪಂಕ್ತಿಯೇ ಎಲ್ಲರಿಗೂ ಅನುಸರಣೆಯೋ ಅನುಸರಣೆಯೋ ಆಗಿ ಕಲೆಬೆಳೆದು ಬಂತು. ಈ ಅನುಕರಣೆಗೆ ವರ್ತಮಾನದ ಹಿರಿಯ ಕಲಾವಿದರು ದಿಕ್ಸೂಚಕರೂ ನಿರ್ದೇಶಕರೂ ಆಗಿ ಇದಮಿತ್ಥಂ ಎಂಬ ನಿರ್ಣಯವನ್ನು ಮಂಡಿಸುವ ಸ್ಥಾನದಲ್ಲಿ ಗುರುತಿಸಲ್ಪಟ್ಟರು. ವರ್ತಮಾನದ ಈ ಜಾಗತಿಕ ಸ್ಪರ್ಧೆಯಲ್ಲಿ ಇಂತಹ ಗುರು ಸ್ಥಾನಿಗಳು ನಿರ್ಣಾಯಕರ ಲೇಖನಿಯ ಅಂಕಗಳಿಗೆ ತಮ್ಮ  ವಿದ್ವತ್ತನ್ನು ಬರೆದುಕೊಟ್ಟದ್ದು ವಿಪರ್ಯಾಸವಾಗಿ ಕಂಡು ಬರುತ್ತದೆ. ವಾಸ್ತವದಲ್ಲಿ ಸ್ಪರ್ಧಾಳುಗಳನ್ನು ಕಂಡಾಗ ನಿರ್ಣಾಯಕರ ಲೇಖನಿ ಕಂಪಿಸಬೇಕು. ಇಲ್ಲಿ ಅಂಕಗಳನ್ನು ಬಿತ್ತುವಲ್ಲಿ ಅವರು ಗುರುತಿಸಬಹುದಾದ ಮಾನದಂಡಗಳ ಬಗ್ಗೆ ವಿವೇಚನೆ ಹುಟ್ಟಬೇಕಿತ್ತು. ಆದರೆ ಹಾಗೆ ಆಗಲೇ ಇಲ್ಲ. ಸ್ಪರ್ಧಾಕಣದಲ್ಲಿ ಭೀಷ್ಮ ದ್ರೋಣರೂ ಬಿಲ್ಲು ಹಿಡಿದು  ಗುರಿಯತ್ತ ಬಾಣವನ್ನು ಎಸೆದರು. ನಿರ್ಣಾಯಕರು ಅದರ ಸಾಧಕ ಭಾದಕಗಳು ಅಳೆದು ಅಂಕಗಳನ್ನು ಬಿತ್ತುತ್ತಾ ಸಾಗಿದರು.
          ಕೆಲವು ಹಿರಿಯ ಕಲಾವಿದರ ಹೆಸರನ್ನು ಕೇಳಿದ ಮಾತ್ರಕ್ಕೆ ಕನಸಿನಲ್ಲೂ ಎಚ್ಚರದಲ್ಲೂ ಯಕ್ಷಗಾನದ ಸವಿಯನ್ನು ಅನುಭವಿಸುವಾಗ ಅಂತಹ ಕಲಾವಿದರು ಸ್ಪರ್ಧಿಗಳಾಗಿ ನಿಲ್ಲುವುದು ಸರಿಯೇ? ಈ ಹಿರಿಯ ಕಲಾವಿದರ ಕಲಾ ಸಾಮಾರ್ಥ್ಯವಾಗಲೀ ಅವರು ಆರ್ಜಿಸಿಕೊಂಡ ಕಲಾನೈಪುಣ್ಯತೆಯಾಗಲೀ ಅದಕ್ಕೆ ಮೌಲ್ಯವನ್ನು ಕಟ್ಟುವುದು ಸಾಧ್ಯವಿಲ್ಲವೆಂದೇ ಯಕ್ಷಗಾನದ ಅಭಿಮಾನಿಯ ಪ್ರಾಮಾಣಿಕ ಅಭಿಪ್ರಾಯ. ಇಂತಹ ಮಹನೀಯರ ಪ್ರತಿಭೆಗೆ,  ಸಾಮರ್ಥ್ಯಕ್ಕೆ,  ಅವರ ಜ್ಞಾನಕ್ಕೆ ತಕ್ಕಡಿಯನ್ನು ಹಿಡಿಯುವುದೆಂದರೆ ಅದು ಮೂಢತನದ ಕೆಲಸವಲ್ಲವೇ? ತನ್ನ ಸಾಮಾರ್ಥ್ಯದ ಅರಿವಿಲ್ಲದೇ ಇದ್ದ ಸಂದರ್ಭದಲ್ಲಿ ಆತನನ್ನು ಪ್ರಲೋಭನೆಗೆ ಒಡ್ಡಿ ಅದರಲ್ಲಿ ರಂಜನೆಯನ್ನು ಅನುಭವಿಸುವುದು ಅದು ಖಂಡನೀಯ. ಮುದ್ರೆಯನ್ನು ಒತ್ತಬೇಕಾದ ಕೈಗಳು ಸ್ಪರ್ಧೆಯಲ್ಲಿ ಮುಷ್ಠಿ ಬಿಗಿ ಹಿಡಿದು ನಿಂತರೆ ಪರೋಕ್ಷವಾಗಿ ಅದು ಯಕ್ಷಗಾನವನ್ನೇ ಲೇವಡಿ ಮಾಡಿ ವ್ಯವಸ್ಥೆಯನ್ನು ಅಣಕಿಸಿದಂತೆ ಭಾಸವಾಗುತ್ತದೆ.  

          ಹಿರಿಯ ಕಲವಿದರುಗಳಾದ ಬಲಿಪ್ಪರನ್ನು, ಗೋವಿಂದಣ್ಣನನ್ನು ನಾವು ಯಕ್ಷಭೀಷ್ಮರೆಂದು ಅನ್ವರ್ಥಗೊಳಿಸಿ  ಕೊಂಡಾಡುತ್ತ ಅವರನ್ನು ರಂಗದ ಮೇಲೆ ಕಂಡಾಗ ನನಗಂತೂ ಇದು ಮೌಲ್ಯವನ್ನು ಕಟ್ಟಲಾಗದ ವಸ್ತುವಾಗಿ ಭಾಸವಾಗುತ್ತದೆ. ಆದರೂ ಇಲ್ಲಿ ಅವರ ಪ್ರತಿಭೆಗೆ ಅಂಕವನ್ನು ಬರೆಯಲಾಗುತ್ತದೆ. ಇದು ವಿಪರ್ಯಾಸ.  ಯಾವುದನ್ನು ಉನ್ನತ ಸ್ಥಿತಿಯಲ್ಲಿ ಗುರುತಿಸಿ  ಆ ಉನ್ನತಿಯನ್ನು ನಿರ್ಣಯಿಸುವುದೆಂದರೆ ನನ್ನ ಯೋಚನೆಗೆ ಸಾಧ್ಯವಾಗದ ವಿಚಾರ. ಇಲ್ಲಿ ಗೆದ್ದವರು ಇವರಿಂದಲೂ ಶ್ರೇಷ್ಠರು ಎಂದು ಯೋಚಿಸುವುದು ನನಗಂತೂ ಸಾಧ್ಯವಿಲ್ಲ. ಆದರೂ ಇಲ್ಲಿ ಭೀಷ್ಮರಿಗೆ ಒಬ್ಬ ಸ್ಪರ್ಧಿಯನ್ನು ಮಾಡಿದ್ದೇವೆ ಎಂದ ಮೇಲೆ ಕಾಲಾಯ ತಸ್ಮೈ ನಮಃ ಎಂದು ನಿಟ್ಟುಸಿರು ಬಿಡುತ್ತೇನೆ.  ಇದು ಕೇವಲ ನನ್ನ ಅನಿಸಿಕೆ. ನನ್ನ ತಿಳುವಳಿಕೆ ಸೀಮಿತ. ಆದರೂ ಓದುಗರೇ ನಿಮಗೆ ಹೇಗೆ ಅನ್ನಿಸುತ್ತದೆ?
          

          

Friday, September 12, 2014

ಗಂಗಾ ತನಯ ಭೀಷ್ಮ


ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾಸೃಜಾಮೃಹಮ್||
ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಮ್||
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||

ಯಾವಾಗ ಧರ್ಮಕ್ಕೆ ಗ್ಲಾನಿಯುಂಟಾಗುತ್ತದೆಯೋ ಆವಾಗ ಧರ್ಮವನ್ನು ನೆಲೆಗೊಳಿಸುವುದಕ್ಕೊಸ್ಕರ ಯುಗ ಯುಗದಲ್ಲೂ ಜನ್ಮ ತಾಳುವೆನು..ಇದು ಭಗವಂತನ ಮಾತು.

ಮಹಾಭಾರತದ ಆದ್ಯಂತ ಧರ್ಮ ಸ್ಥಾಪನೆಗೋಸ್ಕರ ಶ್ರೀಕೃಷ್ಣ ಆಡಿದ ಆಟ ವ್ಯಕ್ತವಾಗುತ್ತಾ ಸಾಗುತ್ತದೆ. ಈ ಆಟದಲ್ಲಿ ಹಲವು ಪಾತ್ರಗಳು ಕಾಯಿಗಳಾಗಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಧರ್ಮ ಸಂಸ್ಥಾಪನೆಯಲ್ಲಿ ಭಗವಂತನಿಗೆ ತನ್ನ ಪಾಲನ್ನು ನೀಡುತ್ತಾ ಬಂದಿವೆ. ಅವುಗಳಲ್ಲಿ ಒಂದು ಪಾತ್ರ ದೇವವ್ರತ ಭೀಷ್ಮ. ಮಹಾಭಾರತದಲ್ಲಿ ಆರಂಭದಿಂದ ಅಂತ್ಯದವರೆಗೂ ಒಂದು ತತ್ವಕ್ಕಾಗಿ ಹೋರಾಡುವ ಈ ಪಾತ್ರ ಯಕ್ಷಗಾನದ ಹಲವು ಪ್ರಸಂಗಳಲ್ಲಿ ಕಥೆಯ ಮುಖ್ಯಪಾತ್ರವಾಗಿ ಬಿಂಬಿಸಲ್ಪಟ್ಟಿದೆ. ದೇವವೃತನಾಗಿ ಗಂಗೆಯ ಗರ್ಭದಲ್ಲಿ  ಶಂತನು ಚಕ್ರವರ್ತಿಯ ಪುತ್ರನಾಗಿ ಜನಿಸುತ್ತಾನೆ.  ತಂದೆಗಾಗಿ ಭೀಷಣವಾದ ಶಪಥ ಮಾಡಿ ಭೀಷ್ಮ ಎನಿಸಿಕೊಳ್ಳುತ್ತಾನೆ. ತನ್ನ ಮಾತು ಉಳಿಸುವುದಕ್ಕೊಸ್ಕರ ಧರ್ಮಕ್ಕಾಗಿ ಗುರುವಿನೊಡನೆ ಹೋರಾಟ ಮಾಡಿ ಜಯಿಸುತ್ತಾನೆ. ಭೀಷ್ಮ ಪರ್ವದಲ್ಲಿ  ಸ್ವ ಇಚ್ಛೆಯಿಂದ ಶರಶಯ್ಯೆಗೆ ಜಾರುತ್ತಾನೆ. ಧರ್ಮರಾಯನಿಗೆ ಉಪದೇಶವನ್ನು ಮಾಡಿ ತನ್ನ ಪ್ರಾಣವನ್ನು ತಾನೇ ನೀಗಿಕೊಳ್ಳುತ್ತಾನೆ.

ಯಕ್ಷಗಾನದಲ್ಲಿ ಈ ಪಾತ್ರವನ್ನು ಹಲವು ಕಲಾವಿದರು ಹಲವು ರೀತಿಯಲ್ಲಿ ಅದನ್ನು ಯಕ್ಷಗಾನಕ್ಕೆ ಸಂಬಂಧಿಸಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ. ಇದೇ ಕಾರಣಕ್ಕೆ ಯಕ್ಷಗಾನದ ಪ್ರೇಕ್ಷಕನಲ್ಲಿ  ಭೀಷ್ಮ ಎಂಬ ಪಾತ್ರದ ಮುದ್ರೆ ಬಲವಾಗಿ ಮುದ್ರಿಸಲ್ಪಟ್ಟಿರುತ್ತದೆ. ಆದುದರಿಂದ ಸಾಮಾನ್ಯ ಪ್ರೇಕ್ಷಕನೂ  ಇಲ್ಲಿ ಭೀಷ್ಮನ ವ್ಯಕ್ತಿತ್ವವನ್ನೂ, ಭೀಷ್ಮನ ತತ್ವ ಸಿದ್ದಾಂತದ ತಳಹದಿಯನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಬಲ್ಲ.
ಪರುಶುಧಾರಿಯೊಳಿತ್ತ ಚೌಷಷ್ಟಿವಿದ್ಯವ | ನರಿತು ಗಂಗಾತ್ಮಜನು |
ಇರಲೊಂದಿನದೊಳು ಮಾತೆಗೆ ಭಕ್ತಿಯೊ | ಳೆರಗುತ ಪೇಳಿದನು || 

ಜನಕನು ಪುರದೊಳಗನುವಿಂದೆನ್ನನು | ನೆನೆಯುತ ದುಃಖಿಪನು |
ಜನನಿಯೆ ನೇಮವ ಕೊಡು ನಾ ಪೋಗುವೆ | ನೆನುತಿಹ ಕುವರನನು || 

ಪಿಡಿದಪ್ಪುತ ಸುಕುಮಾರನೆ ಎನ್ನೆಡೆ | ಗಡಿಗಡಿಗೈತಹುದು |
ನಡೆ ನೀ ಬಂದುದು ಬಹು ದಿನವಾಯಿತು | ಸಡಗರದಿಂ ಪುರಕೆ ||

ದೇವವ್ರತ ಹುಟ್ಟಿದೊಡನೆ ಶಂತನುವಿನಿಂದ ವಿಚ್ಛೇದತಳಾಗಿ ಅತನನ್ನು ತಾಯಿ ಗಂಗಾ  ಮಾತೆ ತನ್ನೊಂದಿಗೆ ಒಯ್ಯುತ್ತಾಳೆ.  ನಂತರದಲ್ಲಿ ಆತನನ್ನು ಪರಶುರಾಮನಲ್ಲಿ ವಿದ್ಯಾರ್ಜನೆಗೆ ಕಳುಹಿಸುತ್ತಾಳೆ. ಆಕೆ ಶಂತನುವಿನಿಂದ ಬೇರ್ಪಟ್ಟನಂತರ ಭೀಷ್ಮನಿಗೆ ತಂದೆಯ ಮುಖ ಕಾಣುವ ಸೌಭಾಗ್ಯಸಿಗುವುದಿಲ್ಲ.  ಪರಶುರಾಮರಿಂದಲೂ ಬೃಹಸ್ಪತಿಯಿಂದಲೂ ವಿದ್ಯಾ ಪಾರಂಗತನಾಗಿ ಪ್ರಾಯ ಪ್ರಬುದ್ಧನಾಗಿ ಹಸ್ತಿನಾವತಿಗೆ ಬರುತ್ತಾನೆ. ತನ್ನ ಜನ್ಮದಲ್ಲಿ  ಮಾತಾ ಪಿತರು ವಿಚ್ಛೇದಗೊಳಕ್ಕಾದರು ಎಂಬ ವಿಷಾದ ಮನಸ್ಸಿನಲ್ಲಿರುತ್ತದೆ. ತೆಂದೆಗಾಗಿ ಏನಾದರೂ ಮಾಡಬೇಕು ಎಂಬ ತುಡಿತ ಹಸ್ತಿನಾವತಿಗೆ ಬರುವಾಗಲೇ ಕಾಡುತ್ತಿರುತತದೆ.  ದೇವವ್ರತನಾಗಿ ಅರ್ಥ ಹೇಳುವಾಗ ಇದನ್ನು ಮನಮುಟ್ಟುವಂತೆ ಕೆಲವರು ವಿವರಿಸುತ್ತಾರೆ. ಎದುರಾಗುವ ಸಂದರ್ಭಕ್ಕೆ ಪ್ರೇಕ್ಷಕನನ್ನು ಮೊದಲೇ ಸಜ್ಜುಗೊಳಿಸುವ ಬಗೆಯದು. ಚೌಷಷ್ಟಿ ವಿದ್ಯೆಯೆಲ್ಲವನ್ನೂ ಕಲಿತು ಬಂದ ದೇವವ್ರತನಿಗೆ ವಿದ್ಯೆ ಎಂಬುದು ತ್ಯಾಗವನ್ನೇ ಕಲಿಸುತ್ತದೆ. ಸಂಪೂರ್ಣವಾದ ವಿದ್ಯೆ ಎಂದರೆ ನಾನು ಎಂಬ ಅಹಂ ನ್ನು ಬಿಡುವುದು ಅರ್ಥಾತ್ ವಿದ್ಯೆ ತ್ಯಾಗವನ್ನೇ ಸೂಚಿಸುತ್ತದೆ. ದೇವವೃತನ ಈ ಯೋಚನೆ ನಿರ್ಧಾರಗಳು ಪಾತ್ರ ದೃಷ್ಟಿಕೋನದ ಜತೆಗೆ ಆ ವ್ಯಕ್ತಿತ್ವದ ನಡೆ ಹೇಗಿರುತ್ತದೆ ಎಂಬುದನ್ನು ಮುಂದಾಗಿ ಸೂಚಿಸುತ್ತದೆ.

ಕೇಳಿದ ಮಂತ್ರಿ ಸುನೀತಿಯ ಕರೆದು ಭೂ |
ಪಾಲನೆಲ್ಲಿಗೆ ಪೋದನು ||
ಓಲಗಕೀದಿನ ಬರಲಿಲ್ಲವ್ಯಾತಕೆ |
ಪೇಳೆನಲಿಂತೆಂದನು |

ತೆರಳಿದ ಯಮುನೆಯ ತಡಿಯಿಂದ ಬಂದಂತಃ |
ಪುರದೊಳು ಮಲಗಿರುವ ||
ತೆರಳಲ್ಲಿಗೆನಲಾಗಲೈತಂದು ಪರಿಕಿಸೆ |
ಧರಣಿಪನಿರೆ ಮಂಚದಿ

ರಾಜ್ಯಾಡಳಿತದಿಂದ ವಿಮುಖನಾಗಿ ದೂರವೇ ಉಳಿದ ತಂದೆ ಶಂತನುವಿನ ದುಃಖದ ಮೂಲ ತಿಳಿಯುತ್ತಾನೆ ದೇವವೃತ. ಅಷ್ಟಸೌಭಾಗ್ಯಗಳು ಎಲ್ಲವೂ ಇದ್ದರೂ ಸ್ತ್ರೀ ಸೌಭಾಗ್ಯದಿಂದ ವಂಚಿತನಾದ ತಂದೆ ಶಂತನುವಿನ ವಿರಕ್ತಿಯ ಮೂಲ ಇದೇ ಎಂದು ತಿಳಿಯುತ್ತಾನೆ.    ದಾಶರಾಜನ ಮಗಳು ಮತ್ಸ್ಯಗಂಧಿ, ಸತ್ಯವತಿಯಲ್ಲಿ ಮಹಾರಾಜ ಶಂತನು ಅನುರಕ್ತನಾಗಿ ಅದು ಫಲಿಸದೆ ವಿರಾಗಿಯಾಗಿ ಅಂತಃಪುರವನ್ನು ಸೇರಿರುತ್ತಾನೆ. ತಂದೆಯ ಬಯಕೆಯನ್ನು ಈಡೇರಿಸುವಲ್ಲಿ ವಿದ್ಯಾಸಂಪನ್ನತೆಯನ್ನೇ ದೇವವ್ರತ ಮೆರೆಯುತ್ತಾನೆ.  ತಂದೆಯ ಮಾತಿಗೆ ತಾಯಿಶಿರವನ್ನು ಧರೆಗುರುಳಿಸಿದ ಪರಶುರಾಮನನ್ನೇ ಗುರುವಾಗಿ ಪಡೆದವನಲ್ಲವೇ?

ತಾಳ ಮದ್ದಲೆಯೊಂದರಲ್ಲಿ  ಹಿರಿಯ  ಅರ್ಥ ಧಾರಿ ಶೇಣಿ ಗೋಪಾಲಕೃಷ್ಣ ಭಟ್ಟರ ಶಂತನುವಿನ ಪಾತ್ರ ಪೋಷಣೆ ತೊಡಗುವುದು ಹೀಗೆ.   ಗಾಲವರ ಅಪೇಕ್ಷೆಯಂತೆ ತಮಾಲಕೇತುವನ್ನು ಕೊಂದು ಶಂತನು ಪುನಃ ತನ್ನ ಅರಮನೆ ಕಡೆಗೆ ಬರುತ್ತಾನೆ. ಪ್ರಕೃತಿಯ ರಮಣಿಯತೆಯನ್ನು ಸವಿಯುತ್ತಾ ಗಂಗಾ ನದೀತೀರದಲ್ಲೇ ಬರುತ್ತಿರುವಾಗ ಹಿಂದಿನ ಗಂಗೆಯೊಂದಿಗೆ ಬೆಸೆದ ಬಾಂಧವ್ಯದ ಮಧುರ ಸ್ಮೃತಿಯ  ಸಿಂಚನವಾಗುತ್ತದೆ. ಬರುತ್ತಾ ಗಂಗಾ ಯಮುನ ಸಂಗಮ ಸ್ಥಳಕ್ಕೆ ಬರುತ್ತಿದ್ದಾನೆ. ಯಮುನೆಯ ಸಂಗಮ ಕಂಡವನು ಭಾವನಾತ್ಮಕವಾಗಿ ಚಿಂತಿಸ ತೊಡಗುತ್ತಾನೆ. ಮೊದಲೇ ಗಂಗೆಯ ವಿಯೋಗದ ವೇದನೆಯ ನೆನಪನ್ನು  ಗಂಗಾನದಿಯ ತೀರ ಮಾಡಿಕೊಟ್ಟಿರುತ್ತದೆ. ಯಮುನೆಯ ಸಂಗ ಕಂಡಾಗ ಇನ್ನೂ ಯಮುನೆಯ ಸಂಗಮವಾದರೇನೆ ಗಂಗೆ ಪರಿಪೂರ್ಣಳಾಗುವಳೋ ಎಂದು ಭಾವಿಸುತ್ತಾನೆ. ಗಂಗೆ ಯಮುನೆಯ ಸಂಗಮದಲ್ಲೇ ಭಾಗೀರಥಿ ಪರಿಪೂರ್ಣಳಾಗುವುದು. ಇದೊಂದು ರೀತಿ ಮುಂದಿನ ಘಟನೆಗೆ ಸೂಕ್ಷ್ಮವಾಗಿ ತಳಹದಿಯನ್ನು ನಿರ್ಮಿಸುವ ರೀತಿ. ಗಂಗೆ ಶಂತನುವಿನ ಬದುಕಲ್ಲಿ ಸಂಗಮಿಸಿ ಹರಿದು ಹೋಗಿರುತ್ತಾಳೆ. ಆ ಗಂಗೆ ಪರಿಪೂರ್ಣಳಾಗಬೇಕಾದರೆ ಇನ್ನು ಹರಿಯಬೇಕಾದ ಯಮುನೆ ಯಾರಾಗಿರಬಹುದು?

ಸೂರ್ಯನಿಗೆ ಅಭಿಮುಖವಾಗಿ ಸಾಗುವಾಗ ನೆರಳು ಹಿಂಬಾಲಿಸಿದಂತೆ  ಬದುಕಿನಲ್ಲಿ ಹೆಂಡತಿಯಾದವಳು ಆರಂಭದಲ್ಲಿ ಹಿಂದೇ ಹಿಂದೆ ನೆರಳಾಗಿ ಹಿಂಬಾಲಿಸುತ್ತಾಳೆ. ಬದುಕಿನ ಮಧ್ಯದ ಯೌವನದಲ್ಲಿ ಸೂರ್ಯ ನಡು ನೆತ್ತಿಗೆ ಬಂದಾಗ ಅದೇ ನೆರಳು ತನ್ನೊಳಗೆ ಐಕ್ಯವಾದಂತೆ ಹೆಂಡತಿ ತನ್ನೊಳಗೆ ಐಕ್ಯಳಾಗಿಬಿಡುತ್ತಾಳೆ. ನಂತರ ಬದುಕಿನ ಮುಸ್ಸಂಜೆಯಲ್ಲಿ ಸೂರ್ಯ ಹಿಂದೆ ಸರಿದಾಗ ಅದೇ ನೆರಳು ನೆಮ್ಮ ಮುಂದೆ ಚಲಿಸಿದರೆ ಅದೇ ನೆರಳನ್ನು ನಾವು ಹಿಂಬಾಲಿಸುತ್ತೇವೆ. ಅಂದರೆ ಬದುಕಿನ ಈಸಂಜೆಯಲ್ಲಿ ಹಿಂಬಾಲಿಸಬೇಕಾದ ಒಂದು ನೆರಳಿನ ಅವಶ್ಯಕತೆಯಿದೆ ಎಂದಾಯಿತಲ್ಲ.

ದಾಶರಾಜ ತನ್ನ ಮಗಳನ್ನು ಶಂತನುವಿಗೆ ಕೊಡುವುದಕ್ಕೆ ಆತಂಕವನ್ನು ನಿವೇದಿಸಿಕೊಂಡಿದ್ದ. ಸತ್ಯವತೀ ಶಂತನುವಿನ ಮಹಾರಾಣಿಯಾದರೂ ಆಕೆಯ ಮಕ್ಕಳು,  ತಂದೆಯ ನಂತರ ದೇವವೃತನಿರುತ್ತಾ ಪಟ್ಟವನ್ನೇರುವ ಹಾಗಿಲ್ಲ. ಒಂದುವೇಳೆ ಶಂತನು ಮಕ್ಕಳನ್ನು ಪಟ್ಟವನ್ನೇರಿಸಿದರೂ ದೇವವ್ರತ ಇರುತ್ತಾ ಅದು ಅವರಿಗೆ ಸ್ಥಿರವಾಗಿ ಉಳಿಯಲಾರದು ಎಂಬ ಆತಂಕ.

ಭಾಮಿನಿ
ಭರತಕುಲದರಸುಗಳು ಧರ್ಮವ |
ತೊರೆದು ಪೋಗುವರಲ್ಲವೆಂದಿಗು |
ಸುರರು ಮುನಿಗಳು ಸಿದ್ಧಸಾಧ್ಯರು ಕೇಳಲೀಕ್ಷಣದಿ ||
ಒರೆವೆನೆನ್ನಯ ಶಪಥ ಲಾಲಿಸು |
ಪರಮ ಸಿಂಹಾಸನವನೇರುತ |
ಧರೆಯ ಪಾಲಿಪನಲ್ಲ ತಪ್ಪಲು ಶಂತಸುತನಲ್ಲ||

ದಾಶರಾಜನ ಆತಂಕದಿಂದ ವಿಚಲಿತನಾಗದೇ ದೇವವೃತ ವಿದ್ಯೆಯನ್ನು ತ್ಯಾಗವೆಂದೇ ಭಾವಿಸುತ್ತಾನೆ. ಹಾಗಾಗಿ ಸಿಂಹಾಸನವನ್ನು ತ್ಯಾಗಮಾಡುತ್ತಾನೆ ಮಾತ್ರವಲ್ಲ  ತನ್ನ ಮಕ್ಕಳು ಪಟ್ಟವನ್ನು ಏರುವುದು ಅಸಂಭವವಾಗಬೇಕೆಂಬ ನಿಶ್ಚಯದಿಂದ ತಾನು ಅಜನ್ಮ ಅಖಂಡ ಬ್ರಹ್ಮಚಾರಿಯಾಗಿ ಉಳಿಯುವ ಭೀಷ್ಮ ಪ್ರತಿಜ್ಞೆಯನ್ನುಗೈದು ಭೀಷ್ಮ ಎಂದು ಕರೆಸಿಕೊಳ್ಳುತ್ತಾನೆ.

ಆದರಾಲಿಸು ಶಪಥ ಇನ್ನೊಂದಿದೆ |
ಖೇದಪಡದಿರು ನಿನ್ನ ಮನಸಿಗೆ | ಮೋದದಿಂದಲೆ ಪೇಳ್ವೆನು ||
ಸುರರು ಸಿದ್ಧರು ಸಾಧ್ಯಗಂಧರ್ವರು |
ಗರುಡಪನ್ನಗರೆಲ್ಲ ಕೇಳ್ವುದು | ಒರೆವೆನೆನ್ನಯ ಶಪಥವ ||
ಸುತವಿಹೀನಗೆ ಗತಿಯಿಲ್ಲವೆಂಬುವ |
ಶ್ರುತಿಯು ಜನಕನ ಕಾರ್ಯಕೋಸುಗ | ಗತಿಯ ಪಡೆದಪೆ ಮುಂದಕೆ ||
ಇಂದಿನಾರಭ್ಯ ಮರಣ ಪರ್ಯಂತರ |
ವೊಂದೆ ಮನದೊಳು ಬ್ರಹ್ಮಚರ್ಯವು | ಇಂದುಮುಖಿಯರ ಪೊಂದೆನು  ||


ಪುತ್ರನ ಪಿತೃಭಕ್ತಿಗೆ ಪ್ರತಿಫಲವೆಂಬಂತೆ ಶಂತನು ಇಚ್ಛಾಮರಣಿಯಾಗುವಂತೆ ವರವನ್ನು ಅನುಗ್ರಹಿಸುತ್ತಾನೆ. ತಾನು ಇಚ್ಚಿಸಿದಾಗ ತನ್ನ ಬದುಕನ್ನು ಕೊನೆಗೊಳಿಸುವಂತಹ ವರ. ಬದುಕೇ ಅಲ್ಲದ ಏಕಾಂಗಿ ಬದುಕದು. ಅದನ್ನು ಅಂದೇ ಕೊನೆಗೊಳಿಸುವಂತೆ ಭೀಷ್ಮ ಬಯಸಬಹುದಿತ್ತು. ಆದರೂ ಬಯಸಲಿಲ್ಲ. ವಿಪರ್ಯಾಸವೆಂದರೆ ಅದೆಷ್ಟೋ ತಲೆಮಾರುಗಳನ್ನು ಹಸ್ತಿನಾವತಿಯಲ್ಲಿ ಕಂಡು ಮತ್ತೂ ಬದುಕುಳಿಯುತ್ತಾನೆ ಭೀಷ್ಮ.  ಪ್ರಶ್ನಾತೀತವಾದ ಭೀಷ್ಮನ ನಿಷ್ಠೆ, ಪ್ರಶ್ನಾತೀತವಾದ ಅಖಂಡ ಬ್ರಹ್ಮಚಾರಿತ್ವ  ಆದರೂ ಬದುಕಿನ ಅಂತ್ಯದವರೆಗೂ  ಆತನಿಗೆ ಅದುವೇ ಪ್ರಶ್ನೆಯಾಗಿ ಕಾಡಿದ್ದು ಸುಳ್ಲಲ್ಲ.                 

Tuesday, September 2, 2014

ವ್ಯಸನವಾಗದಿರೆ ಕಲೆಯು


ವ್ಯಸನ ಮತ್ತು ಹವ್ಯಾಸ ಮನುಷ್ಯನ ಬದುಕಿನಲ್ಲಿ ಜೀವನಾಂಶವಲ್ಲದೆ ಪೂರಕವಾಗಿ ಬೆಳೆದು ಬಂದದ್ದು. ಇದರಲ್ಲಿ ಹವ್ಯಾಸ ಬದುಕನ್ನು ಅರಳಿಸಿದರೆ ವ್ಯಸನ ಬದುಕನ್ನು ಕಮರುವಂತೆ ಮಾಡುತ್ತದೆ. ಎರಡೂ ಬದುಕನ್ನು ಮೇಲ್ನೋಟಕ್ಕೆಸಮಾನ ಭಾವದಂತೆ ಕಂಡರೂ ಇದು ವಿಭಿನ್ನವಾಗಿ ಬದುಕನ್ನು ವ್ಯಾಪಿಸಿ ಬಿಟ್ಟಿವೆ. ಇದನ್ನು ಅಂಟಿಸಿಕೊಳ್ಳುವಲ್ಲಿಯೂ ಇದರ ವೆತ್ಯಾಸ ತಿಳಿಯದೆ ಹವ್ಯಾಸ ವ್ಯಸನವಾಗಿ ಬಿಟ್ಟು ಕೊನೆಗೆ ಹವ್ಯಾಸದ ಮೇಲೆಯೇ ಬಣ್ಣ ಲೇಪನವಾಗುತ್ತದೆ. ಹವ್ಯಾಸ ಹುಚ್ಚು ಎಂದು ಕರೆಸಲ್ಪಡುವುದು ಅವಾಗಲೇ.

          ಊರಲ್ಲಿ ಮೊದಲು ಟೆಂಟ್ ಮೇಳಗಳ ಯಕ್ಷಗಾನ ಬಯಲಾಟಗಳ ಭರಾಟೆ. ಒಂದು ಸಣ್ಣ ಹಳ್ಳಿಯಲ್ಲಿ ಒಂದು ಮೇಳ ಬಂದು ಡೇರೆ ಹಾಕಿತು ಎಂದಾಕ್ಷಣ ಪಾಮರಾದಿಗಳವರೆಗೂ ಸಂಚಲನ ಮೂಡಿಸಿಬಿಡುತ್ತದೆ. ಗೋಳಿಮರದ ಕಟ್ಟೆಗೋ ರಸ್ತೆ ಬದಿಯ ಗೋಡೆಗೋ ಆಟದ ಭಿತ್ತೀ ಪತ್ರ ಒಂದು ತಿಂಗಳ ಮೊದಲೇ ಲಗತ್ತಿಸುವಾಗ ಆಟದ ದಿನಕ್ಕೆ ಕೆಳಮುಖವಾದ ಎಣಿಕೆ ಅಲ್ಲಿಂದ ಆರಂಭವಾಗುತ್ತದೆ. ಆಟದ ದಿನವಂತೂ ಆಟದ ವಾಹನಗಳು ಬಂದು ಊರ ಬಯಲಲ್ಲಿ ಡೇರೆ ಮೇಲೆದ್ದು ನಿಲ್ಲುವಾಗ ಪ್ರಚಾರದ ಮೈಕು ಸದ್ದು ಕೇಳುವಾಗ ಊರ ಮಂದಿ ಅಂದಿನ ಕಾರ್ಯಕ್ರಮದ ಬಗ್ಗೆ ಸಂಭ್ರಮಿಸುತ್ತಾರೆ. ಆಟಕ್ಕೆ ಹೋಗುವವನು ಪ್ರತಿಕ್ಷಣವನ್ನು ಎದಿರುಗೊಂಡು ಸಂಭ್ರಮಿಸಿದರೆ ಹೋಗಲಿಕ್ಕಾಗದವನು ಹೇಗಾದರೂ ಹೋಗಿಬಿಡಬೇಕು ಎಂಬ ಹವಣಿಕೆಯಲ್ಲಿ ಬಾಕಿ ಉಳಿದ ಕೆಲಸಗಳನ್ನು ಮುಗಿಸಿಬಿಟ್ಟು ಮರುದಿನದ ರಜೆಗೆ ಸಿದ್ದತೆ ಮಾಡುತ್ತಾನೆ. ಕಾರ್ಮಿಕ ವರ್ಗದಲ್ಲಿ ಇದು ಬಹಳ ಹೆಚ್ಚು. ಹೇಗಾದರೂ ಹೋಗಿಯೇ ತೀರಬೇಕು ಎಂಬ ಹವಣಿಕೆಯಲ್ಲಿ ಆಟಕ್ಕೆ ಹೋಗುವ ಕೊನೇಯ ಬಸ್ಸಿನವರೆಗೂ ಪ್ರಯತ್ನ ಮಾಡುತ್ತಾ ಇರುತ್ತಾನೆ. ಅದಕ್ಕೆ ಮುಖ್ಯ ಕಾರಣ ಅಂದಿನ ದುಡಿಮೆ ಅಂದಿಗೆ ಮುಗಿಯುವಾಗ ಆಟಕ್ಕೆ ಹೋಗುವುದು ಅದೂ ಕುಟುಂಬ ಸಹಿತ ಹೋಗುವುದು ಕನಸಿನ ಮಾತೇ ಸರಿ. ಆದರೂ ಪ್ರಯತ್ನವಂತೂ ನಡೆದೇ ತೀರುತ್ತದೆ ಅಂತಹ ಸಮಯದಲ್ಲಿ ಅಲ್ಲಿ ಇಲ್ಲಿ ಸಿಕ್ಕುವ ಸಾಲವನ್ನು ಪಡೆದಾದರೂ ಆಟ ನೋಡಿಯೆಬಿಡುವ ತವಕ. ಎಲ್ಲೂ ಹುಟ್ಟಿಲ್ಲ ಅಂದರೆ ಮನೆಯಲ್ಲಿ ಅಡವಿಡುವಂತಹ ವಸ್ತುವನ್ನೋ ಅಥವಾ ತಿಂಗಳಿಗೊಮ್ಮೆ ಎತ್ತಬಹುದಾದ ಚಿಟ್ಟೀ (ಕುದಿ)  ಹಣವನ್ನು ಪಡೆದು ಆಟಕ್ಕೆ ಹೊರಟೇ ಬಿಡುತ್ತಾನೆ. ಇಂತಹ ಸಮಯದಲ್ಲೇ ಹವ್ಯಾಸ ಎಂಬುದು ವ್ಯಸನವಾಗಿ ಬದಲಾಗುತ್ತದೆ.  ಮರುದಿನದಿಂದ ಈ ಸಾಲದ ಶೂಲ ಇರಿಯಲು ಆರಂಭಿಸಿಬಿಡುತ್ತದೆ.

          ಇಲ್ಲಿ ಹಲವು ವಿಚಿತ್ರ ಅನುಭವಗಳನ್ನು ಕಾಣಬಹುದು. ಅದು ಕಲೆಯನ್ನು ಹವ್ಯಾಸವೆಂದು ವ್ಯಸನವಾಗಿಸಿದವರ ಅನುಭವಗಳು. ಜೀವನ ನಿರ್ವಹಣೆಯ ವ್ಯಾವಹಾರಿಕ ಬದುಕಿನ ಅನಿವಾರ್ಯತೆಯ ಬದಲಾವಣೆಗಾಗಿ ಒಂದಿಷ್ಟು ನಿರಾಳವಾಗಿರುವುದಕ್ಕೆ ಕೆಲವು ಹವ್ಯಾಸಗಳನ್ನು ಪ್ರವೃತ್ತಿಯನ್ನಾಗಿಸುವುದುಂಟು. ಕಲೆಗೆ ನೆಲೆಯಾಗುವುದೇ ಇಂತಹ ಹವ್ಯಾಸಗಳು. ಆದರೆ ವಿಪರ್ಯಾಸವೆಂದರೆ ವ್ಯಾವಹಾರಿಕ ಬದುಕು ಏನುಂಟೋ ಅದಕ್ಕಿಂತಲೂ ಈ ಹವ್ಯಾಸ ಯಾತನಾಮಯ ಬದುಕಾಗಿ  ಹಲವು ಸಲ ತೋರುವುದುಂಟು.
           
                ಯಕ್ಷಗಾನದ ಮರುಳು, ( ಮರುಳು ಎಂದು ಬಹಳ ಖೇದದಿಂದ ಉಚ್ಚರಿಸುತ್ತೇವೆ) ಹಚ್ಚಿಸಿಕೊಂಡ ನಾವು, ನಮ್ಮ ಅಭಿಮಾನವನ್ನು ತಪ್ಪಾಗಿ ವ್ಯಾಖ್ಯಾನ ಮಾಡುವುದನ್ನು ಕೇಳಿ ಕೇಳಿ ಈಗ ಹೊಗಳುವುದಿಲ್ಲ ಎಂಬ ಖಾತರಿಯಲ್ಲಿ ಅದನ್ನು ಕೇಳುವುದನ್ನೇ ಬಿಟ್ಟು ಬಿಟ್ಟಿದ್ದೇವೆ. ಬಹುಶಃ ಇದಕ್ಕೆ ಕಾರಣ ಹವ್ಯಾಸವನ್ನು ವ್ಯಸನವಾಗಿ ಕಂಡದ್ದೇ ಇರಬೇಕು. ಒಬ್ಬರ ಮನೆಗೆ  ಇನ್ನೊಬ್ಬರು ಹೋಗಿ ಅತಿಥೇಯ ಸ್ವೀಕರಿಸುವುದನ್ನು ಭಯದಿಂದಲೇ ಇಷ್ಟಪಡುತ್ತೇವೆ. ಭಯ ಯಾಕೆಂದರೆ ಅದೇ ಮರುಳು ಮನೆಯವರಿಂದ ಮಂತ್ರಿಸಿಕೊಳ್ಳಬೇಕಲ್ಲ? ಆದರೂ ಹೋಗುತ್ತೇವೆ.  ಇಲ್ಲಿ ಇಷ್ಟವಾಗುವುದು ಯಾಕೆಂದರೆ ಉಪಚಾರ ಸತ್ಕಾರ ಯಕ್ಷಗಾನದಿಂದಲೇ ಇಲ್ಲಿ ಆಗಿಬಿಡುತ್ತದೆ !!! ಆದರೆ ಹವ್ಯಾಸ ಮತ್ತು ವ್ಯಸನಗಳ ವ್ಯಾಖ್ಯಾನ   ಸ್ಪಷ್ಟವಾಗುವುದು ಇಂತಹ  ಸಂದರ್ಭಗಳಲ್ಲೇ.

          ನಮ್ಮ ಪ್ರೀತಿ ನಮ್ಮ ಅಭಿಮಾನ, ಅದು ಅಪವ್ಯಯ ಆಗಬಾರದೆಂದು ನಾವು ಬಹಳಷ್ಟು ಬಯಸುತ್ತೇವೆ. ಪ್ರೀತಿ ಅಭಿಮಾನವೆಂಬುದು ವ್ಯಯವಾದಷ್ಟೂ ಪುನಃ ಹುಟ್ಟಿಕೊಳ್ಳುವ ಸಾಧನ. ಇದು ವ್ಯಯಿಸಿದಷ್ಟು ಖಾಲಿಯಾಗುವುದಕ್ಕೆ ಸಾಧ್ಯವಿಲ್ಲ ಅಲ್ಲವೇ?  ಇದು ವ್ಯರ್ಥವಾಗಬಾರದೆಂಬ ಬಯಕೆ.  ಒಬ್ಬ ಭಿಕ್ಷುಕನಿಗೂ ನಾವು ಚಿಲ್ಲರೆ ದುಡ್ಡನ್ನು ಭಿಕ್ಷೆ ಹಾಕುವಾಗ ಗ್ರಹಿಸುತ್ತೇವೆ ಇದು ಅಪವ್ಯಯ ಆಗದಿರಲಿ ಎಂದು. ನಮ್ಮಿಂದ ಭಿಕ್ಷಾಹಣ ಪಡೆಯಲು ಒಬ್ಬ ಕುಡುಕ ತಂದೆ ಮತ್ತು ಮಗುವಿಗೆ ಮೊಲೆಯೂಡಿಸುವ ಆತನ ಹೆಂಡತಿ ಹರುಕು ಬಟ್ಟೆಯಲ್ಲಿ ನಿಂತಿರುತ್ತಾಳೆ. ಸಹಜವಾಗಿ ನಮ್ಮ ಭಿಕ್ಷೆ ನೀಡುವ ಕೈ ಆಕೆಯ ಬೊಗಸೆಯತ್ತಲೇ ಭಿಕ್ಷೆಯನ್ನು ಚೆಲ್ಲಿ ಬಿಡುತ್ತವೆ. ಯಾಕೆ? ಅಲ್ಲಿ ಅದು ಸದ್ವಿನಿಯೋಗವಾಗಬಹುದು ಎಂಬ ಭರವಸೆ ನಮ್ಮದು.  ಭಿಕ್ಷೆ ಕೊಟ್ಟ ಮೇಲೆ ಅದು ನಮ್ಮದಲ್ಲ ಆದರೂ ಅದು ಸೇರುವ ಸ್ಥಳ ಸುರಕ್ಷಿತವಾಗಬೇಕೆಂಬ ಬಯಕೆ. ಒಂದು ಚಿಲ್ಲರೆ ದುಡ್ಡಿಗೂ ಇಷ್ಟು ಯೋಚಿಸುವಾಗ  ಕಲೆಯನ್ನು ಪ್ರೋತ್ಸಾಹಿಸುವ ಪ್ರಾಯೋಜಕನಿಗೂ ಅದೇ ಮನೋಭಾವ ಇರಬಹುದಲ್ಲವೇ? ಯಕ್ಷಗಾನ ಕಲೆಗಂತೂ ಈಗ ಬಹಳಷ್ಟು ಪ್ರಾಯೋಜಕರು ಲಭಿಸುತ್ತಿದ್ದಾರೆ. ಅವರಿಂದ ಕಲೆಯ ಪೋಷಣೆಗಾಗಿ ಕೊಟ್ಟ ದಾನ, ಕುಡಿತ ಮೋಜು ಮಸ್ತಿಯಂತಹ ಕೀಳಭಿರುಚಿಗೆ ವ್ಯಯವಾದಲ್ಲಿ ಆ ದಾನದ ಉದ್ದೇಶ ಎಷ್ಟು ಸಾರ್ಥಕವಾದೀತು? ದಾನಿ ತನ್ನ ಸುಖವೊಂದಷ್ಟನ್ನು ಬದಿಗಿಟ್ಟು ಕೊಡುವಾಗ  ಪಡೆದುಕೊಂಡವರು ಆ ಮಟ್ಟಿಗೆ ಪ್ರಾಮಾಣಿಕರಾಗಿರಬೇಕಾದದ್ದು ಕಲೆಗೆ ಸಲ್ಲಿಸುವ ಗೌರವವಾಗುತ್ತದೆ.

          ಪ್ರಾಯೋಜಕತ್ವವನ್ನು ಪಡೆಯದ ಕೆಲವು ಅಭಿಮಾನ ಸ್ವಾಭಿಮಾನವಾಗಿ ವ್ಯಕ್ತವಾಗುವುದನ್ನು ಕಾಣಬಹುದು. ಯಾವ ಸಹಾಯವೂ ಇಲ್ಲದೇ ಯಕ್ಷಗಾನ ತಂಡ ಕಟ್ಟಿ ಕಾರ್ಯಕ್ರಮವನ್ನು ನೀಡುವ ಅಭಿಮಾನ ಹವ್ಯಾಸವಾಗಿ ಕಾಣುವಾಗ ಬಹಳ ಗೌರವ ಆದರ ಮೂಡುತ್ತದೆ. ಆದರೂ ಎಂತಹಾ ಅಭಿಮಾನವಿದು? ಇಲ್ಲಿ ಖೇದವಾಗುವುದು ಕಾರ್ಯಕ್ರಮ ಮಾಡಿ ಎಲ್ಲರಿಂದ ಪ್ರಶಂಸೆಯನ್ನು ಪಡೆದು ಮರುದಿನ ಬಾಧ್ಯತೆಗಳೆಲ್ಲಾ ಸಾಲವಾಗಿ ಬದಲಾದಾಗಿ ಶೂಲವಾದಾಗ,   ಇಲ್ಲಿ ಹವ್ಯಾಸವನ್ನು ವ್ಯಸನವೆನ್ನದೆ ವಿಧಿಯಿಲ್ಲ. ಯಕ್ಷಗಾನ ಅಭಿಮಾನದಿಂದ ಸಾಲಗಾರರಾದ ಹಲವರನ್ನು ಕಂಡಿದ್ದೇನೆ. ಮನೆಯಲ್ಲಿ ತಿಂದುಣ್ಣುವುದಕ್ಕೆ ಶ್ರಮ ಪಡುವಾಗ ಅಲ್ಲಿ ಸಾಲವೂ ಒಂದು ಮಣೆಹಾಕಿ ತನ್ನ ಪಾಲಿಗೆ ತಟ್ಟೆಯಿರಿಸಿ ಕುಳಿತುಕೊಂಡುಬಿಡುತ್ತದೆ.

          ಅಭಿಮಾನದ ಪರಮೋತ್ಕಟ ಸ್ಥಿತಿ ಎಂದರೆ ತಾನು ಕೆಳಬಿದ್ದರೂ ಕಲೆಯನ್ನು ಎತ್ತಿಹಿಡಿವಲ್ಲಿ ಕಾಣಬಹುದು. ತನ್ನ ದುಸ್ಥಿತಿಯನ್ನು ಮರೆತು ತನು ಮನ ಧನವನ್ನು ಅದಕ್ಕೆ ಅರ್ಪಿಸಿದಾಗ ಧನ್ಯತೆಯನ್ನು ಅನುಭವಿಸಬಹುದು. ಗಾಢವಾದ ಅಭಿಮಾನ ಅದನ್ನು ಮಾಡುವಂತೆಯೂ ಪ್ರೇರೆಪಿಸುತ್ತದೆ. ಕಲೆ ಅಭಿಮಾನದ ವೈಶಿಷ್ಟ್ಯವೇ ಅದು. ಆದರೂ ತಾರ್ಕಿಗವಾಗಿ ಯೋಚಿಸಿದಾಗ ಕಲೆ ಬದುಕು ಇವುಗಳ ಸಂಬಂಧ ಇಷ್ಟೇ ಅಲ್ಲ ಅಲ್ಲವೇ? ಹೊಟ್ಟೆ ಪಾಡಿಗೆ ಅಥವಾ ಇನ್ನವುದೋ ಅನಿವಾರ್ಯತೆಗೆ ವೃತ್ತಿಯನ್ನು ಅಂಟಿಸಿಕೊಂಡ ಏಕತಾನತೆಯ ಬದುಕಲ್ಲಿ ಅನಿವಾರ್ಯವಾಗಿ ಮನಸ್ಸು ಬಂಧಿಸಲ್ಪಡುತ್ತದೆ. ಆವಾಗ ಮನಸ್ಸು ನಿರಾಳವಾಗಿ ವಿಹರಿಸಬಲ್ಲ ಪರ್ಯಾಯ ಬದುಕಿನತ್ತ ಹರಿಯುತ್ತದೆ. ಕಲೆ ಸಾಹಿತ್ಯ ಇನ್ನಿತರ ಚಟುವಟಿಕೆಗಳ ಅನುಭವ ಮನಸ್ಸಿಗೆ ಒಂದು ರೀತಿಯ ಸ್ವಾತಂತ್ರ್ಯವನ್ನು ನೀಡುತ್ತದೆ. ದೈನಂದಿನ ಬದುಕಿನಲ್ಲಿರುವ ಯಾವುದೋ ಒಂದು ನೋವನ್ನು ಮರೆಯುವುದಕ್ಕಾಗಿ ಕಲೆಯನ್ನು ಅಂಟಿಸಿಕೊಂಡಾಗ ಅಲ್ಲಿ ಇನ್ನೊಂದು ನೋವು ಅಮರಿಕೊಂಡರೆ ಅಲ್ಲಿ ಭಿನ್ನವಾದ ಬದುಕು ಹೇಗೆ ಸಾಧ್ಯ.  ಕಲೆ ಬದುಕನ್ನು ಅರಳಿಸಬೇಕು ಅದು ಬದುಕನ್ನು ಕಮರುವಂತೆ ಮಾಡಬಾರದು. ಬದುಕು ಕಮರಿಕೊಂಡಲ್ಲಿ ಕಲೆಯ ಅಸ್ತಿತ್ವಕ್ಕೆ ನೈಜ ಮೌಲ್ಯ ಸಿದ್ದಿಸುವುದೇ ಇಲ್ಲ. ಕಲೆ ಹವ್ಯಾಸವಾದರೆ ಮನಸ್ಸನ್ನು ಅರಳಿಸುತ್ತದೆ ವ್ಯಸನವಾದರೆ ಬದುಕೂ ಅರಳುವುದಿಲ್ಲ ಕಲೆಯೂ ಅರಳುವುದಿಲ್ಲ.

          ಇಷ್ಟೆಲ್ಲಾ ಆದರೂ ಕಲೆಯನ್ನು ವೃತ್ತಿ ಎಂದು ಸ್ವೀಕರಿಸಿದವರಿದ್ದಾರೆ. ಅದರಲ್ಲೆ ಎಲ್ಲವನ್ನು ಆರ್ಜಿಸಿಕೊಂಡವರಿದ್ದಾರೆ. ಏಳು ಬೀಳಿನ ನಡುವೆ ಇದುವೇ ಬದುಕು ಎಂದು ಸರ್ವಸ್ವವನ್ನು ಕಂಡವರಿದ್ದಾರೆ. ಬದುಕು ಅರಳುವುದನ್ನು ಕಲೆ ಅರಳುವುದರಲ್ಲೇ ಕಂಡವರಿದ್ದಾರೆ. ಮಾತ್ರವಲ್ಲ ಸಾಧನೆಯಿಂದ ಕಲೆಯನ್ನು ಅರಳಿಸಿದವರಿದ್ದಾರೆ. ಏಳು ಬೀಳು ನಗು ಅಳು ಈ ದ್ವಂದ್ವಗಳು ಬದುಕನ್ನು ಹೇಗೆ ಆವರಿಸಿದೆಯೋ ಕಲೆಯನ್ನೂ ಆವರಿಸಿದೆ.  ಕಲೆಗೂ ಬದುಕಿಗೂ ಅವಿನಾಭಾವ ಸಂಬಂಧವಿದೆ ಅನ್ನಿಸುತ್ತದೆ. ಅದಕ್ಕೆ ಕಲೆಯನ್ನು ಸಹ ಬದುಕಾಗಿ ಕಂಡಿರುವುದು. ಆದರೂ ಕಲೆ ವ್ಯಸನವಾಗಿಸದೆ ಹಸನಾಗಿ ಅರಳಲಿ ಎಂದೇ ಕಲಾಭಿಮಾನಿಯಾಗಿ ಹಾರೈಸಬೇಕಲ್ಲವೇ?