[ ಸೀತಾಪಹಾರ ಯಕ್ಷಗಾನದ ಒಂದು ಶ್ರೇಷ್ಠ ಪ್ರಸಂಗ. ಪಾರ್ತಿಸುಬ್ಬನಿಂದ
ರಚಿತವಾದ ಇದು ಯಕ್ಷಗಾನದಲ್ಲಿ ತನ್ನದೇ ಆಯಾಮವನ್ನು ಪಡೆದುಕೊಂಡಿದೆ. ತಾಳ ಮದ್ದಲೆಗೂ ಯಕ್ಷಗಾನ
ಬಯಲಾಟಕ್ಕೂ ಸಹಜವಾಗಿ ಸೂಕ್ತವಾಗುವಂತಹ ಕಥಾನಕವಿದು. ಯಕ್ಷಗಾನ ತಾಳ ಮದ್ದಲೆಯ ಆಧಾರದೊಂದಿಗೆ
ಪಾತ್ರವಿನ್ಯಾಸದ ಚಿತ್ರಣವನ್ನು ಬಿಂಬಿಸುವ ಪ್ರಯತ್ನ ಇಲ್ಲಿದೆ. ಇದು ಎಷ್ಟು ಪ್ರಭಾವ
ಶಾಲಿಯಾಗುತ್ತದೆಯೊ ಅರಿವಿಲ್ಲ. ಆದರೆ ಯಕ್ಷಗಾನದ ವಾಕ್ ಪ್ರಪಂಚದಲ್ಲಿನ ವೈಶಿಷ್ಟ್ಯವೆಂದರೆ ಅದು ಅದ್ಭುತರಮ್ಯ. ಕೇವಲ
ಧ್ವನಿ ಮಾತ್ರದಿಂದಲೇ ಯಕ್ಷಲೋಕದ ರಸಸೃಷ್ಟಿಯಾಗಿ ಕಣ್ಣೆದುರಿಗೇ ರಸವೃಷ್ಟಿಯಾದ ಅನುಭವವಾಗುತ್ತದೆ.
ಈ ವಾಙ್ಮಯ ಪ್ರಪಂಚದ ಪರಿಧಿ ಯಕ್ಷಗಾನದ ಸೀಮೆಯನ್ನು ದಾಟಿ ಮುಂದೆ ಹೋಗಲೆಂಬ ಆಶಯವಿದು. ಯಕ್ಷಗಾನದ
ಶ್ರೇಷ್ಠ ಅರ್ಥಧಾರಿಗಳಾದ ಶ್ರೀ ಶೇಣಿ ಗೋಪಾಲ ಕೃಷ್ಣಭಟ್ಟರ ರಾವಣನ ಅರ್ಥಗಾರಿಕೆ ಯ ಸ್ಥೂಲ ಪರಿಚಯ ಇಲ್ಲಿದೆ. ಅದನ್ನು ಬರಹ ರೂಪಕ್ಕೆ ಇಳಿಸುವುದು ಒಂದು ಬೃಹತ್
ಸಾಹಸದಂತೆ ಭಾಸವಾಗುತ್ತದೆ. ]
ದಂಡಕಾರಣ್ಯದಲ್ಲಿನ
ಒಂದು ಶೃಂಗಾರ ಕಥೆ ಶೂರ್ಪನಖಿಯ ಪಾಲಿಗೆ
ಅಂತ್ಯವಾಗುವುದು ದುಃಖಾಂತದಲ್ಲಿ. ತನ್ನ ಕಪಟ ವಂಚನೆಯ ಹಾದಿ ಹೀಗೆ ದುರಂತವನ್ನು ಕಂಡು
ಆಕೆಯಲ್ಲಿ ಹತಾಶೆ ಭುಗಿಲೇಳುತ್ತದೆ. ಆಗ
ಆಕೆಯೊಂದು ಮಾತು ಹೇಳುತ್ತಾಳೆ,
“ ಈ
ಕಥೆ ಸುಖಾಂತದಲ್ಲಿ ಅಂತ್ಯ ಕಂಡು ಸುಖವನ್ನು ಕಾಣಬೇಕು ಅಂದುಕೊಂಡೆ, ಆದರೆ ಅದು ಹಾಗಾಗಲಿಲ್ಲ,
ಮತ್ತೆ ದುಃಖಾಂತ್ಯದಲ್ಲಿ ನಾನು ಸುಖ ಕಾಣಬೇಕಿದೆ. ಆದರೆ ಆ
ದುಃಖಾಂತ ಹೀಗಲ್ಲ ಅದು ರಾಮನ ಪಾಲಿಗೆ ದುಃಖಾಂತ್ಯವವಾಗಬೇಕು. ಇಲ್ಲಾ ನನ್ನಣ್ಣ ರಾವಣನ
ಪಾಲಿಗಾದರೂ ಆದೀತು”
ಹೀಗೆ ಎರಡು ಬಗೆಯ ದುಃಖಾಂತದಲ್ಲಿ ಸುಖವನ್ನು ಕಾಣುವ
ಹಂಚಿಕೆ ಆಕೆಯದ್ದು. ಹಾಗಾಗಿ ಕರ್ಣ ನಾಸಗಳನ್ನು ಕಳೆದುಕೊಂಡ ಧೂರ್ತೆ ಲಂಕೆಯನ್ನು
ಪ್ರವೇಶಿಸುತ್ತಾಳೆ.
ಯಕ್ಷಗಾನದ ಅತ್ಯಂತ ಜನಪ್ರಿಯ ಪ್ರಸಂಗ ’ ಸೀತಾಪಹಾರ ’
ಆರಂಭವಾಗುವುದು ಇಲ್ಲಿಂದ. ಪಾರ್ತಿಸುಬ್ಬನ ಈ ಪ್ರಸಂಗ ಹಲವು ಬಗೆಯಲ್ಲಿ ಹಿತವಾಗುತ್ತದೆ. ಅದರ
ಸನ್ನಿವೇಶ ಚಿತ್ರಣ, ಪಾತ್ರ ಚಿತ್ರಣ ಅದಕ್ಕೆ ಒಪ್ಪುವಂತಹ ಹೃದ್ಯವಾಗುವ ಮಧುರ ಛಂದಸ್ಸಿನ ಪದಗಳು ಯಕ್ಷಗಾನಕ್ಕೆ ಭದ್ರ ಅಡಿಪಾಯವನ್ನು
ನಿರ್ಮಿಸುವಲ್ಲಿ ಸಹಾಯವಾಗಿದೆ ಎನ್ನಬಹುದು.
ರಾವಣನಿಗೆ ತನ್ನ ಕರ್ಣ ನಾಸಾಛ್ಚೇದಿತ ಮುಖವನ್ನು
ತೋರಿಸುತ್ತಾಳೆ. ಇಂತಹ ಸನ್ನಿವೇಶವೊಂದರಲ್ಲಿ ರಾವಣನಾಗಿ ಶೇಣಿ ಗೋಪಾಲ ಕೃಷ್ಣ ಭಟ್ಟರು ಆತಂಕವನ್ನು
ತೋರಿಸುವ ರೀತಿ ಬಹಳ ವಿಚಿತ್ರವಾಗಿದೆ. ಅದರಲ್ಲಿ ಎರಡು ಬಗೆಯ ಭಾವಗಳನ್ನು ತೋರಿಸುತ್ತಾರೆ. ಬಹಳಷ್ಟು
ವ್ಯಂಗ್ಯಭಾವವೇ ಇಲ್ಲಿ ವ್ಯಕ್ತವಾಗುತ್ತದೆ. ಗಂಡ ವಿದ್ಯುಜ್ಜೀವ ತನ್ನಿಂದ ಹತನಾದ, ಇನ್ನು ತನ್ನ
ಮುಖ್ಯವಾದ ಅಂಗಗಗಳನ್ನು ಸ್ವತಃ ಇವಳೇ ಕಳೆದುಕೊಂಡಳು. ಯಾಕಾದರೂ ಕಳೆದು ಹೋಯಿತು? ರಾವಣ ಇಲ್ಲಿ ಅಭಿವ್ಯಕ್ತಿಸುವ ಭಾವ ಬಹಳ
ವಿಶಿಷ್ಟವಾಗುತ್ತದೆ. “ ನಿನ್ನ ಮೂಗು ಹೋದ ಮುಖನೋಡಿದರೆ ಮೂಗು ಇದ್ದವರು ಸುಮ್ಮನೆ ಕುಳಿತಾರ
ಹೇಳು? ಒಂದೊ ತನ್ನ ಮೂಗು ಹಿಡಿಬೇಕು, ಇಲ್ಲಾ ಮುಖತೋರಿಸದೇ ಇರಬೇಕು” ಕನಿಕರವೋ ವ್ಯಂಗ್ಯವೋ ಅಥವಾ ಹರುಷವೋ ರಾವಣನ
ವ್ಯಕ್ಕ್ತಿತ್ವವೇ ಹಾಗಿರುತ್ತದೆ. ಆದರೆ ತಂಗಿ
ಇದನ್ನು ಅರಿಯದವಳೇನಲ್ಲ. ಅದಕ್ಕಾಗಿ ತನ್ನ ದಯನೀಯಾವಸ್ಥೆಯನ್ನು
ರಾವಣನ ಅಂತಃ ಪುರದ ದೌರ್ಬಲ್ಯದ ಪ್ರಚೋದನೆಗೆ
ಉಪಯೋಗಿಸುತ್ತಾಳೆ. ಈ ಹಂಚಿಕೆಯಲ್ಲೇ ಆಕೆಯ
ಲಂಕಾಪ್ರವೇಶವಾಗಿರುತ್ತದೆ.
ರಾಜಕೀಯವಾಗಿಯೂ ಸಾಂಸಾರಿಕವಾಗಿಯೂ ದೂರವಿಡಬೇಕೆಂದು
ಬಯಸಿದ್ದು ಪುನಃ ಎದುರಿಗೇ ಪ್ರತ್ಯಕ್ಷವಾದಾಗ ರಾವಣ ಅಸಹ್ಯ ಪಟ್ಟರೂ ಮತ್ತಷ್ಟೂ ಅಸಹ್ಯವಾಗುವುದು
ತಂಗಿಯ ಮುಖ ಎದೆಯನ್ನು ಕಂಡಾಗ. ಹಾಗಾಗಿಯೇ ತಾತ್ಸಾರದಲ್ಲೇ ಕೇಳುತ್ತಾನೆ ಏನು ಬಡಿಯಿತು ಮಾರಿ
ನಿನಗೆ?
ಏನು ಹೊಡೆಯಿತು ಮಾರಿ ತಂಗಿ ನಿನಗೆನುತ
ದಾನವರ ಅರಸ ಬೆಸಗೊಂಡ ನಸುನಗುತ
ಊನವನು ತಂದೆ ಖಳವಂಶಕ್ಕೆ ನೀನು
ಮಾನಭಂಗವನೆಸಗಿದವನ ಪೆಸರೇನು
ಕಿವಿ ಮೂಗು ಹೋದದ್ದು ಬಹಿರಂಗದಲ್ಲಿಯಾದರೂ ಆ ಕಥೆ, ಅದನ್ನು
ಬಹಿರಂಗದಲ್ಲಿ ಕೇಳುವಂತಿಲ್ಲ. ಹಾಗಾಗಿ ಅಂತರಂಗದಲ್ಲಿ ಕೇಳುವ ಎಂದು ತಂಗಿಯನ್ನು ಒಳಗೆ ಕರೀತಾನೆ. ರಾವಣ
ಆಕಂಪನ ನಿಂದ ಮೊದಲೇ ವಾರ್ತೆಯನ್ನು ಕೇಳಿ ತಿಳಿದಿದ್ದರೂ ತಂಗಿಯಿಂದ ಇನ್ನೂ ಕೇಳುವ ಬಯಕೆ.
ಪಂಚವಟಿಯಲ್ಲಿ ಇಬ್ಬರು
ಹುಡುಗರು, ನೋಡಲಿವರು ಬಾಲಕರು ಆದರೆ ಅಸಮ ಸಾಹಸಿಗರು. ಇವರು
ದಶರಥನ ಮಕ್ಕಳು ರಾಮಲಕ್ಷ್ಮಣರೆಂಬ ಇವರಿಗೆ
ಭೂಮಿಯೊಳಗೆ ಸರಿಸಮಾನರು ಯಾರೂ ಇಲ್ಲ. ಅಂತಹ ಪರಾಕ್ರಮಿಗಳು. ಪರಾಕ್ರಮಿಗಳ ಬಳಿಗೆ ದಶಕಂಠನ ತಂಗಿ ಹೋಗುವ ಉದ್ದೇಶವಾದರೂ ಏನು? ರಾವಣ ಕುತೂಹಲದಿಂದಲೇ
ಆಲಿಸುತ್ತಾನೆ. ರಾಜಕಾರಣದ ಕುಟಿಲತೆಯೇ , ಅಥವಾ ಸಹಜವಾದ ರಾಕ್ಷಸೀ ಚಾಂಚಲ್ಯವೇ? ಮಂಡೋದರಿಯಂತಹ ಸತಿಯಿದ್ದೂ ಪ್ರಪಂಚದ ಸುಂದರಿಯರು
ತನ್ನವರಾಗಬೇಕೆಂಬ ಚಪಲ ತನಗಿದ್ದರೆ, ಪತಿಯಿಲ್ಲದ ತಂಗಿ ವೀರ ಜವ್ವನಿಗರ ಬಳಿಗೆ ಹೋದ ಉದ್ದೇಶ
ಅರಿಯದ ಮೂಢನಲ್ಲ. ತಂಗಿಯೂ ತನ್ನಣ್ಣನ ಚಾಪಲ್ಯವನ್ನು ತನ್ನ ಹಂಚಿಕೆಗೆ ಅಡಿಪಾಯವನ್ನಾಗಿಸುತ್ತಾಳೆ.
ಶೇಣಿಯವರು ಒಂದು
ಕಡೆಯಲ್ಲಿ ರಾವಣನಾಗಿ ತಂಗಿಯ ಗಮನಕ್ಕೆ ಹೀಗೆ ಸಂದೇಹವನ್ನು ವ್ಯಕ್ತಪಡಿಸುತ್ತಾರೆ. ಉತ್ತರದ
ಸೀಮೆಯಲ್ಲಿ ಖರದೂಷಣಾದಿಗಳನ್ನು ಬಿಟ್ಟದ್ದು ಗಡಿಭದ್ರತೆಗೆ. ಹಾಗಿದ್ದರೂ ರಾಮ ಲಕ್ಷ್ಮಣರು ಬಂದು
ಬಿಡಾರ ಹೂಡಿದ್ರು. ಹೋಗಲಿ ನಿನ್ನನ್ನುಅಲ್ಲಿಗೆ ಬಿಟ್ಟದ್ದು ಯಾಕೆ? ಅಣ್ಣಕೊಟ್ಟ ಸ್ವಾತಂತ್ರ್ಯ
ಸ್ವೇಚ್ಛೇಯಾಗಿ ಉಪಯೋಗಿಸುವಂತೆ ಪ್ರೇರೆಪಿಸಿದರೇ? ಎಷ್ಟೆಂದರೂ ಖರದೂಷಣಾದಿಗಳು ಚಿಕ್ಕಮ್ಮನ ಮಕ್ಕಳು. ಜ್ಞಾತಿಗಳು.
ಶೂರರಾದ ರಾಮ ಲಕ್ಷ್ಮಣರನ್ನು ಸೇರಿಕೊಂಡು ಈ ರಾವಣನ ಪಟ್ಟಕ್ಕೆ ಬೆಲೆ ಕೇಳುವ ಹುನ್ನಾರವೇ?
ಇಲ್ಲವಾದರೆ ಹೆಂಗಸಾದ ನಿನಗೇನಲ್ಲಿ ಕೆಲಸ? ರಾವಣನ ಮತ್ಸದ್ಧೀತನವನ್ನು ತೋರಿಸುವ ಪ್ರಯತ್ನ.
ಮತ್ತಿನ
ವಿಶ್ಲೇಷಣೆ ಇನ್ನೂ ವಿಶಿಷ್ಟವಾಗಿದೆ. ತಂಗಿ ಶೂರ್ಪನಖಿ ಹೇಳುತ್ತಾಳೆ. ಸುಂದರಿಯಾದ ಸೀತೆಯನ್ನು ಕಂಡು
ತಾನಲ್ಲಿಗೆ ಹೋದೆ. ಆ ಸೌಂದರ್ಯವತಿ ಕಾಡು ಪಾಲಾದ ರಾಮನೊಡನೆ ಕಾಡಿನಲ್ಲಿರುವುದಕ್ಕಿಂತಲೂ ಅಣ್ಣ
ರಾವಣನ ಬಳಿಯಿರುವುದು ಲೇಸೆಂದು ತೋರಿತು. ಆದರೆ
ರಾವನ ಹೀಗೂ ಯೋಚಿಸುತ್ತಾನೆ. ಸುಂದರಿಯಾದ ಸೀತೆಗಿಂತಲೂ ಗಂಡುಸಾದ ರಾಮನನ್ನು ಕಂಡು ಹೋದಳೇ? ಸೀತೆ
ಕಾಮನರಗಿಣಿಯಂತೆ ಎಂದು ಹೇಳುತ್ತಾಳೆ. ಕಾಮನನ್ನು ಕಂಡಿರಬಹುದೇ ಕಾಮ ದರ್ಶನದಿಂದ ಆಕೆ ಕಾಮಿನಿಯಾಗಿ
ಗೋಚರಿಸಿದಳೇ? ಹೋಗಲಿ ಸೀತೆ ಕಾಮನರಗಿಣಿ ರಾಮ
ಹೇಗೆ? ರಾಮ ಕಾಮನ ಹಾಗಿಲ್ಲ. ಹಾಗದರೆ ಅದನ್ನೂ ಪರೀಕ್ಷೆ ಮಾಡಿದಳೆ? ಇದೊಂದು ರೀತಿ ರಾವಣನಾಗಿ
ಶೂರ್ಪನಖಿಯ ಪಾತ್ರ ವಿಶ್ಲೇಷಣೆ ಮಾಡುವ ರೀತಿ. ಶೂರ್ಪನಖಿಯ ಉದ್ದೇಶ ಯಾರಿಗೆ
ತಿಳಿದಿಲ್ಲ? ಆದರೂ ಒಂದು ಚೌಕಟ್ಟಿನೊಳಗೆ ಸತ್ಯದ ಕದವನ್ನು ಸ್ಪರ್ಶಿಸುವ
ಈ ವಿಶ್ಲೇಷಣೆಯ ಪರಿ ಅದ್ಬುತ.
ಶೂರ್ಪನಖಿ
ಹೇಳುವಂತೆ ರಾವಣನಿಗಾಗಿ ಸೀತೆಯ ಮೇಲೆ ಕೈಯಿಕ್ಕಿದೆ., ಶೂರ್ಪನಖಿಯನ್ನು ಇದೇ ಕೆಲಸಕ್ಕೆ ರಾವಣ ನೇಮಿಸಿದ್ದಾನೆ ಎಂದು ಲೋಕ ಹೇಳದೇ ಇದ್ದೀತೆ? ಇದು
ರಾವಣನ ಯೋಚನೆಯ ಹೊಲಬು. ಇದರ ಅಂತರಾರ್ಥ ಬಹಳ
ಗಹನವಾಗಿರುತ್ತದೆ. ಪರೋಕ್ಷವಾಗಿ ಇಲ್ಲಿ ತಂಗಿಯ
ಉದ್ದೇಶವನ್ನು ವ್ಯಂಗ್ಯವಾಗಿ ಕಾಣುವುದು ಸ್ಪಷ್ಟವಾಗುತ್ತದೆ. ತ್ರಿಶಿರಾದಿಗಳು ಸತ್ತರು. ಈಕೆ ಅರ್ಧ ಸತ್ತು ರಾವಣನ್ನು
ಜೀವಚ್ಚವ ಮಾಡಿಬಿಟ್ಟಳು. ಇದು ಎಲ್ಲ ಅರ್ಥದಲ್ಲೂ
ರಾವಣ ಜೀವಚ್ಚವ ಆದ ಪರಿಯನ್ನು ಹೇಳುವ ಪ್ರಯತ್ನ. ಸ್ರೀಮೂಲದಿಂದ ರಾವಣನ ಮಾನ ತೆಗೆದ ರಾಮ, ಈಗ ತಾನೂ ಅಷ್ಟೇ ಅದೇ ಸ್ತ್ರೀ ಮೂಲವನ್ನು ಹಿಡಿದು ಬಿಡಬೇಕು. ಹತ್ತಕ್ಕಿಂತ ಹೆಚ್ಚು ವರ್ಷ ಪರ್ಣಕುಟಿಯಲ್ಲಿದ್ದ
ರಾಮ ಈವರೆಗೆ ಯಾಕೆ ಸುಮ್ಮನಿದ್ದ? ಹಾಗಾದರೆ ಇದು ರಾಜ ತಾಂತ್ರಿಕತೆ.
ಮತ್ಸದ್ದೀತನ. ಬಿಡಬಹುದೇ? ಅದಲ್ಲವಾದರೆ
ಶೂರ್ಪನಖಿಯ ಮೂಗು ಮೊಲೆಯನ್ನಷ್ಟೇ ಏಕೆ ಕತ್ತರಿಸಿದ, ತಲೆಯನ್ನೇ ಕತ್ತರಿಸಬಹುದಿತ್ತಲ್ಲ? ಹಾಗಾದರೆ
ರಾವಣನಿಗೆ ಪರೋಕ್ಷ ಸಂದೇಶ. ಈ ಬೌದ್ಧಿಕವಾದ ಪಂಥಾಹ್ವಾನಕ್ಕೆ ನನ್ನದೂ ಅದೇ ರೀತಿಯ ಪ್ರತಿಕ್ರಿಯೆ
ಕೊಡಬೇಕಲ್ಲ? ಹಾಗಾಗಿ ಅವನ ಹೆಣ್ಣನ್ನು ತರಬೇಕು. ಆ ಹೆಣ್ಣ ನೆವನದಿಂದ ಆತ ನನ್ನ ಬಳಿ ಬರಬೇಕು. ಮೂಗು
ಹಿಡೆದೆಳೆದರೆ ಮೈ ಬರ್ತದೆ. ಈಗ ಅದೇ ಅಲ್ವ ಅವನು ಮಾಡಿದ್ದು. ಈಗ ಅವನ ಮೂಗು ನಾನು
ಹಿಡಿದೆಳೆಯಬೇಕು. ಆಗ ಅವನು ಬರ್ತಾನೋ ಇಲ್ವೊ ನೋಡೋಣ.
ರಾವಣ
ಸಕಲ ಶಾಸ್ತ್ರ ಪಾರಂಗತ ಆದರೆ, ಹಲವು ದೌರ್ಬಲ್ಯ ಇಲ್ಲ, ಇರುವುದು ಒಂದೆರಡಾದರೂ ಅದಷ್ಟು ಸಾಕು. ಹೆಣ್ಣಿನ
ವಿಷಯಕ್ಕೆ ಬಂದಾಗ ಉಳಿದೆಲ್ಲವನ್ನೂ ಮರೆತು ಬಿಡುತ್ತಾನೆ. ಇದಕ್ಕೆ ರಾವಣ ಕೊಡುವ ವಿಶ್ಲೇಷಣೆ
ಹೀಗೆ. ಹಸಿವಾದವನಿಗೆ ತಾನೆ ಊಟ ರುಚಿಸುವುದು.
ಹೌದು ರಾವಣನಿಗೆ ಈ ವಯಸ್ಸಿನಲ್ಲೂ ಆರೋಗ್ಯ ಉಂಟು. ಹೊಟ್ಟೆಯಲ್ಲಿ ಹಸಿವಿಲ್ಲದೇ ಅಗ್ನಿಮಾಂದಿ
ಪೀಡಿತನಿಗೆ ಊಟ ಬೇಕು ಅಂತ ಆದೀತೋ. ಅದೇ
ಹಸಿವನ್ನು ಇಲ್ಲಿ ಉಪಯೋಗಿಸುತ್ತಾನೆ.
ಸೀತೆ,
ರಾಮನೇ ಸರ್ವಸ್ವ ಎಂದು ರಾಮನನ್ನು ಕಾಣುವವಳು. ರಾಮನಲ್ಲದೇ ಬೇರೆ ಇಲ್ಲ. ಹಾಗಾದರೆ ಇಲ್ಲಿ ಅದೇ
ಪ್ರಶ್ನಾರ್ಹವಾಗಬೇಕು. ಸರ್ವಸ್ವ ಎಂಬಲ್ಲಿಂದ ಅಲುಗಾಡಬೇಕು. ಅವಳ ಚಿತ್ತವೃತ್ತಿಯನ್ನು ಬದಲಿಸಬೇಕು. ರಾಮ
ಪರಿಪೂರ್ಣನಲ್ಲ. ಎಂದು ಆಕೆ ತೋರಿದರೆ ಆ
ಸ್ಥಾನಕ್ಕೆ ಅವಳು ನಮ್ಮತ್ತ ಯೋಚಿಸುವ ಹಾಗೆ ಆಗ್ತದೆ. ಈಗ ರಾವಣನಿಗೆ ನೆನಪಾಗುವುದು ತಪಸ್ಸಿಗೆ
ಕುಳಿತ ತನ್ನ ಮಾವ ಮಾರೀಚನದ್ದು. ಹಾಗಾಗಿ ಮಾರಾಂಗ ಶರೀರಿ ಎಂದು ಮಾರೀಚನ ಬಿಡದಿಗೆ ಬಂದು
ಸೇರುತ್ತಾನೆ.
ಮಾರೀಚನಿಶಾಚರ
ಸಂತತ | ವೀರಮನೋಹರ ವಿಕ್ರಮಶೌರ್ಯ ||
ಮಾರಾಂಗಶರೀರಮನೋಹರ
| ಕಾರುಣ್ಯ ಸಮುದ್ರಗಂಭೀರ||
ಪುಷ್ಕಳ ಭೋಜನವನ್ನು ಹೊಟ್ಟೆತುಂಬ ಸೇವಿಸಿದವನಿಗೆ ರಸಬಾಳೆಯನ್ನು ತಂದು ಎದುರಿಟ್ಟರೆ
ಸೇವಿಸದೆ ಇರುತ್ತಾನೆಯೇ? ರಾವಣನ ಅವಸ್ಥೆ ಹಾಗಾಗಿದೆ.
ಮಂಡೋದರಿಯಂತಹ ಸುಂದರಿ ಹೆಂಡತಿ ಇರುವಾಗ
ಮತ್ತೊಂದು ಹೆಣ್ಣ ಮೇಲೆ ಬಯಕೆ ಹುಟ್ಟಿದೆ. ಈಗ ರಸಬಾಳೆ ಹಣ್ಣು ಎದುರಿಗೆ ತಂದಿಟ್ಟಾಗಿದೆ. ಹೀಗೆ
ರಾವಣ ಮಾರೀಚನಿಗೆ ತನ್ನ ಆಗಮನದ ಉದ್ದೇಶವನ್ನು
ತಿಳೀಸುತ್ತಾನೆ. ಶೂರ್ಪನಖಿಗೆ ಕಂಡ ಸೌಂದರ್ಯವೇ ರಾವಣನಿಗೆ ಕಾಣಬೇಕೆಂದಿಲ್ಲವಲ್ಲ? ಇನ್ನೂ ಏನೋ
ವಿಶಿಷ್ಟವಾದದ್ದು ಅಲ್ಲಿದೆ. ಹಾಗಾಗಿ ಹಿಂದೆಯೂ ಇಲ್ಲದ ಮುಂದೆಯೂ ಇಲ್ಲದ ಒಂದು ಮಾಯೆ ಕೇವಲ ಮಾಯೆ
ವರ್ತಮಾನದಲ್ಲಿ ಸೃಷ್ಟಿಯಾಗಬೇಕು. ಅದು ಕೈಗೆ ಸಿಕ್ಕಿಯೂ ಸಿಗದಂತೆ ಇರಬೇಕು. ಅಂತಹ ಒಂದು ಮಾಯಾಜಿಂಕೆ ಮಾವ ಮಾರೀಚನಾಗಬೇಕು. ಆಗ ಸೀತೆಗೆ ಅದರಲ್ಲಿ ಮೋಹ ಹೆಚ್ಚಾಗುತ್ತದೆ.
ಆಕೆಯ ಬಯಕೆ ಪೂರೈಸುವುದಕ್ಕೆ ರಾಮ ಲಕ್ಷ್ಮಣರು ಮುಂದಾಗುತ್ತಾರೆ. ಆಗ ಸೀತೆಯನ್ನು ಅಪಹರಿಸಿಬಿಡುತ್ತೇನೆ. ರಾಮನಂತಹ ಪರಿಪೂರ್ಣನಿದ್ದೂ
ಸೀತೆಗೆ ಮತ್ತೊಂದನ್ನು ಕಾಣುವಾಗ ಬೇಕು ಅಂತಾಗುತ್ತದೆ ಎಂದಾದರೆ ರಾವಣನಿಗೆ ಬಯಕೆ ಹುಟ್ಟುವುದರಲ್ಲಿ
ತಪ್ಪೆನು? ಇದು ರಾವಣನ ಸಮರ್ಥನೆ.
ರಾವಣನ
ಮನಸ್ಸು ದುಷ್ಟ ಪ್ರಚೋದನೆಗೆ ಒಳಗಾಗಿರುವುದೇ ದೇವತೆಗಳ ಷಡ್ಯಂತ್ರದಿಂದ. ಇದನ್ನು ಮಾರೀಚ
ಮನಗಾಣುತ್ತಾನೆ. ಹಿಂದೆ ಮಾಹೆಂದ್ರ ಲೋಕವನ್ನು ಕೈವಶ ಇಟ್ಟ ಶೂರಪದ್ಮನಿಗೂ ಇದೇ ಆಗಿರುತ್ತದೆ. ಈಗ
ಮೂರುಲೋಕವನ್ನೂ ಗೆದ್ದ ರಾವಣನಿಗೂ ಇದೇ. ಹಾಗಾಗಿ ಮಾರೀಚ ನಿರಾಕರಿಸುತ್ತಾನೆ. ಪರರ ಪತ್ನಿಯನ್ನು
ಬಯಸುವುದು ತಪ್ಪು. ಮಾತ್ರವಲ್ಲ ರಾಮ ಬಹಳ ಪರಾಕ್ರಮಿ, ತಾಟಕಿಯನ್ನು ಕೊಂದಂತಹ ರಾಮ , ತನ್ನನ್ನೂ
ಬಿಡದ ಸ್ವಾನುಭವವವನ್ನು ಹೇಳುತ್ತಾನೆ. ಎಲ್ಲಕ್ಕಿಂತ
ಮಿಗಿಲಾಗಿ, ಶ್ರೀಮನ್ನಾರಾಯಣನೇ ಭೂಮಿಗಿಳಿದು ಬಂದಂತಹ ಭಗವಂತನ ಅವತಾರ. ರಾಮ ನಾರಾಯಣನಾದರೆ ಸೀತೆ
ಯಾರು? ಹಾಗಾಗಿ ಈ ಪವೃತ್ತಿಯಿಂದ ದೂರ ಸರಿಯುವುದು ಒಳ್ಳೆಯದಲ್ಲವೆ?
ಪ್ರತಿಯಾಗಿ ರಾವಣನ ತರ್ಕ ಹೀಗಿದೆ. ರಾಮ ತಾಟಕಿಯನ್ನು ಸಂಹರಿಸಿರಬಹುದು. ಅಸೀಮ
ಪರಾಕ್ರಮಿ ಇರಬಹುದು. ಅದನ್ನು ತಿಳಿದೇ ಆತನಿಗೆ ಎದೆಯೊಡ್ಡಿಸಿ ನಿಲ್ಲುವುದರ ಬದಲಾಗಿ ತಮಗೆ ಸರಿ
ಎನಿಸಿದ ಮಾಯಾವಿದ್ಯೆಯ ಪ್ರಯೋಗ. ಇದು ನಮ್ಮ ತಂತ್ರ. ಇನ್ನು ಪರ ಪತ್ನಿಯನ್ನು ಬಯಸುವುದು ಅಪರಾಧ,
ಇದು ರಾಮನಿಗೆ ಸಂಬಂಧಿಸಿ ಸರಿ ಎಂದನಿಸುವುದಿಲ್ಲ. ಮತ್ತೊಬ್ಬರ ಹೆಂಡತಿಯನ್ನು ಕೂಡಬಹುದು ಎಂದು
ತೋರಿಸಿಕೊಟ್ಟ ದೇವೆಂದ್ರನನ್ನೇ ಆರಾಧನೆ ಮಾಡಿ ವರರೂಪವಾಗಿ ಹುಟ್ಟಿದ ಮಗ ರಾಮ, ಅಂಥವರನ್ನು ದೇವರೂ ಎಂದು ಪೂಜೆಮಾಡುವ ಜನಕ್ಕೆ
ಮತ್ತೊಬ್ಬನ ಹೆಂಡತಿಯನ್ನು ಮುಟ್ಟಬಾರದು ಎಂಬ ನ್ಯಾಯ ಸರಿಯೆ? ದೇವೇಂದ್ರ, ಗೌತಮನ ಆಶ್ರಮಕ್ಕೆ ಹೋದ. ನಾನು ಸೀತೆಯನ್ನು ಇಲ್ಲಿಗೇ
ತೆಕ್ಕೊಂಡು ಬರುತ್ತೇನೆ. ಈ ತತ್ವ ರಾಮನಿಗೂ ಒಪ್ಪಿಗೆ ಇದೆ. ಹೇಗೆ? ದೇವೆಂದ್ರ ಕೆಡಿಸಿದರೂ, ಆಕೆ ಕೆಡಲಿಲ್ಲ ಪರಮ ಪವಿತ್ರಳು ಎಂದು ಮಾಡಿ ತೋರಿಸಿ
ಮತ್ತೆ ಮುದುಕ ಮುದುಕಿಯರನ್ನು ಜತೆ ಸೇರಿಸಲಿಲ್ಲವೆ? ನಾರಾಯಣ ರಾಮನಾಗಿ ಭೂಮಿಗಿಳಿದು ಬಂದ.
ಅಂದರೆ, ನಾನು ನನ್ನ ಅರಮನೆ ಬಿಟ್ಟು ಹೀಗೆ ಸಂಚಾರಕ್ಕೆ ಇಳಿದ ಹಾಗೆ. ತಿರುಗಾಟ ಎಂದಮೇಲೆ
ಅಷ್ಟಿಷ್ಟು ಸಂಗ್ರಹ ಆಗ್ತದೆ. ಹಾಗೆ, ರಾವಣನಿಗೆ ಬಹಳಷ್ಟು ಸಂಗ್ರಹ ಆಗಿದೆ.
ರಾಮನಿಗೂ ಹಾಗೆ, ನಾರಾಯಣ ಹುಟ್ಟಿ ಬರಲಿ, ಆದರೆ ಅವನಿಗೆ
ಜನ್ಮವನ್ನು ಕೊಟ್ಟಂತಹ ದಶರಥ ಮೊದಲೇ ವೈಕುಂಠದಿಂದಲೋ ಕೈಲಾಸದಿಂದಲೋ ಇಳಿದುದಲ್ಲವಲ್ಲ? ಇಲ್ಲಿ ಬಂದ ಮೇಲೆ ರಾಮನಿಗೆ ಹೆಂಡತಿಯಾದಳು ಸೀತೆ. ಅವಳೂ ಹಾಗೆ ರಾಮನಿಗೆ ಸಂಚಾರ ಕಾಲದಲ್ಲಿ ಸಿಕ್ಕಿದ ಒಂದು
ಸಂಗ್ರಹ.
ಸಾಕೆಲವೊ
ಬಲ್ಲೆನು ನಾನು | ಏಕವರನು ಕೊಂಡಾಡುವೆಯಾ ||
ನಾ ಕೊಲ್ಲುವೆ
ನೀ ಪೋಗದಿರೆ | ಎನೆ | ತಾ ಕೈಮುಗಿದೈದುವೆನೆಂದ||
ಮಾರೀಚನನ್ನು
ಮರುಳು ಮಾತುಗಳಲ್ಲಿ ಒಪ್ಪಿಸುವುದಕ್ಕೆ ನೋಡುತ್ತಾನೆ. ಮಾರೀಚ ಆಕ್ಷೇಪಿಸಿದಾಗ ಮತ್ತೆ ರಾಜಾಜ್ಜೆಯ
ಬೆದರಿಕೆ ಹಾಕುತ್ತಾನೆ. ಹೋಗದೇ ಇದ್ದಲ್ಲಿ ತಲೆ
ಕಡಿಯುತ್ತೇನೆ. ಎಂದು ಆರ್ಭಟಿಸುತ್ತಾನೆ.
“ಪೋಗುವೇ ದಮ್ಮಯ್ಯ
ನಿನ್ನಯ ಕೈಲಿ ಪೆಟ್ಟು ತಿಂದು ಸಾವುದಕಿಂತ...” ಎಂದು ಮಾರೀಚ ಸ್ವರ್ಣ ಜಿಂಕೆಯಾಗಿ
ನರ್ತಿಸಲು ಅಣಿಯಾಗುತ್ತಾನೆ. ರಾವಣನ ಕೈಯಲ್ಲಿ ಶಿವಾನುಗ್ರಹದ ಚಂದ್ರಹಾಸ ವಿದ್ದರೂ ಅದರಿಂದ
ಸಾಯುವುದಕ್ಕಿಂತ ರಾಮನ ಬಾಣದಲ್ಲಿ ಹತನಾಗಿ ಸಾಯುಜ್ಯವನ್ನು ಸೇರುವುದು ಒಳಿತು. ರಾವಣನ ಕೈಯಲ್ಲಿ
ಸತ್ತರೆ ಮತ್ತೂ ನರಕಕ್ಕೆ ಹೋಗಬೇಕಾದೀತು. ಇಲ್ಲಿ ಆಯುಧ ಮುಖ್ಯವಲ್ಲ ಅದನ್ನು ಪ್ರಯೋಗಿಸುವ
ವ್ಯಕ್ತಿ ಮುಖ್ಯನಾಗುತ್ತಾನೆ. ಮಾರೀಚ ರಾವಣನ ಯೋಗ್ಯತೆಯನ್ನು
ಮೊದಲೇ ಅಳೆದುಬಿಡುತ್ತಾನೆ. ಮಾರೀಚಂ ಮೃಗವಾಗಿ ಪಂಚವಟಿಗಂ ಬಂದಾಗಲೋಲಾಡಲುಂ
ಸೌರಮ್ಯಾತಿಶಯಪ್ರಧಾನಕರಮಂ ಕಂಡಾಗಳಾ ಜಾನಕೀ |
ಚೋರತ್ವಂಗಳ ಮಾಯದಾಕೃತಿಯಿದೆಂದಾಕಾಂತೆ ತಾ ಕಾಣದೆ
ಭೂರೀ ವಿಸ್ಮಿತೆಯಾಗಿ ಕಾಂತನೊಡನಂ ತಾ ದೈನ್ಯದಿಂತೆಂದಳು |
ತಮ್ಮ
ಪರ್ಣಕುಟಿಯ ಎದುರು ತನ್ನಂಗ ದಿನ್ನಂಗ ಎಂದು ಹಾಡಿ ಕುಣಿಯುವ ಮೃಗವನ್ನು ನೋಡಿ ಸೀತೆ
ಮರುಳಾಗುತ್ತಾಳೆ. ಎಂದೂ ರಾಮನಲ್ಲದೇ ಬೇರೇನನ್ನೂ
ಬಯಸದ ಸೀತೆ ಇಲ್ಲಿ ಮೃಗವನ್ನು ಬಯಸುತ್ತಾಳೆ. ಅದು ರಾಕ್ಷಸ ಮಾಯೆ ಎಂದು ರಾಮ ಹೇಳಿದರೂ ಆಕೆ
ತೃಪ್ತಳಾಗುವುದಿಲ್ಲ. ರಾಮ ಹೇಳುತ್ತಾನೆ. “
ನಿನ್ನ ಎಣಿಕೆಯಂತೆ ಅದು ಸ್ವರ್ಣ ಚಿಂಕೆ. ನನ್ನೆ ಊಹನೆಯಂತೆ ಅದು ರಾಕ್ಷಸರ ಮಾಯೆ. ರಾಕ್ಷಸರ ಮಾಯೆ
ಎಂದು ತಿಳಿದ ನಾನು, ಆಸ್ವರ್ಣ ಜಿಂಕೆಗೆ ಬಾಣ
ಬಿಟ್ಟರೆ ಅದು ಸತ್ತರೆ, ಆದರೂ ಆ ಜಿಂಕೆ ಬೇಕಾ?”
ಕೆಟ್ಟ
ಮೇಲೇ ಬುದ್ಧಿ ಬರುವುದು ನೀ ಗಂಟ | ಕಟ್ಟಿಕೊ ಸೆರಗಿನಲಿ ||
ದಿಟ್ಟೆ
ಹೆಂಗುಸು ಇವಳಾಡುವ ಮಾತಿಗೆ | ಲಕ್ಷ್ಮಣ ಸಾಕ್ಷಿ ನೀನು||
ಸೀತೆಯ
ಮನದಿಂಗಿತದ ಆಳವನ್ನು ತಿಳಿಯುವ ಹಂಚಿಕೆ ಶ್ರೀರಾಮನದ್ದು. ಮತ್ತು ಆ ಹಂಬಲ ಸೀತೆಯಲ್ಲಿ
ಉಂಟಾಗಬೇಕಾದರೆ ಕಾರಣವೇನು? ಕಾಲದ ಪ್ರಭಾವವೇ? ಉದಿಸುವ ಸೂರ್ಯನು ನಮ್ಮಲ್ಲೆಲ್ಲ ಹೊಸ
ಭಾವನೆಗಳನ್ನು ಹುರಪನ್ನು ತಂದರೂ ಗೂಬೆ, ಅದಕ್ಕೆ ಸೂರ್ಯ ಉದಿಸುವುದು ಬೇಕಾಗಿಲ್ಲ. ಅದು
ಕತ್ತಲನ್ನೇ ಬಯಸುತ್ತದೆ . ಅಂದರೆ ಕಾಲ ನಮ್ಮಲ್ಲಿ ಒಂದು ಪ್ರಭಾವ ಬೀರಿದರೆ ಗೂಬೆಯ ಮೇಲೆ
ಇನ್ನೊಂದು ಪ್ರಭಾವವನ್ನು ಬೀರುತ್ತದೆ. ಜೀವ ಸಹಿತ
ತರಲು ಆಸಾಧ್ಯವಾದಲ್ಲಿ ಸೀತೆ ಅದನ್ನು ಬಯಸಿಯಾಳೆ.? ಒಂದು ವೇಳೆ ಬಯಸದೇ ಇದ್ದಲ್ಲಿ, ರಾಕ್ಷಸರ
ಮಾಯೆ ವ್ಯರ್ಥವಾಗುತ್ತದೆ. ಆದರೂ ರಾಮನಂದಂತೆ
ಕಾಲದ ಪ್ರಭಾವ ಹೇಗಿರುತ್ತದೆ. ಸೀತೆಯ ಬಯಕೆಯನ್ನು ಕೇಳಿ ಆಶ್ಚರ್ಯವಾಗುತ್ತದೆ. ಸತ್ತರೂ
ಸರಿಯೇ ತನಗೆ ಆ ಜಿಂಕೆ ಬೇಕು ಎನ್ನುತ್ತಾಳೆ. ಅದರ ಚರ್ಮದ ಕಂಚುಕವನ್ನು ಮಾಡಿ ಧರಿಸುತ್ತೇನೆ
ಎನ್ನುತ್ತಾಳೆ. ಆಶ್ಚರ್ಯವಾಗುತ್ತದೆ.
ಸೀತೆಯ ಬಯಕೆ ಅದೆಷ್ಟು ಕಾಲಪ್ರಭಾವಕ್ಕೆ
ಒಳಗಾಗಿರುತ್ತದೆ ಎಂದರೆ ಸೀತೆಯಂತಹ ಸೌಮ್ಯ
ಹೆಣ್ಣು, ಹಿಂಸಾ ಪ್ರವೃತ್ತಿಯೊಂದು ಆಕೆಯ ಮನೋಭಾವದಲ್ಲಿ ಕಾಣುತ್ತದೆ. ಜೀವ
ಹೋದರೂ ಆ ಸತ್ತ ಜಿಂಕೆಯಾದರೂ ಹಂಬಲಿಸುತ್ತಾಳೆ . ರಾಮ ಬಾಣ ಪ್ರಯೋಗಿಸಿ ಮೃಗ ಸತ್ತರೂ ಶಕ್ಯವಿಲ್ಲ. ತನಗೆ ಆ ಜಿಂಕೆ ಬೇಕೆ ಬೇಕು. ಪಂಚ ಬಾಣನ ಪಿತನ ಕೇಳು ಎನ್ನುತ್ತಾ ಓಲೈಸುತ್ತಾಳೆ,
ಮುನಿಯುತ್ತಾಳೆ ಕೊನೆಗೆ ಸೀತೆಯನ್ನು ಸಂಪೂರ್ಣ
ಬಲ್ಲ ರಾಮನಿಗೆ ಆಶ್ಚರ್ಯವಾಗುತ್ತದೆ. ಕಾಲದ ಪ್ರಭಾವವೇ ಇರಬೇಕು. ಹಾಗಾಗಿ ಲಕ್ಷ್ಮಣನನ್ನು
ಕಾಯುವಂತೆ ಹೇಳಿ ಸ್ವರ್ಣ ಮೃಗದ ಜಾಡು ಹಿಡಿಯುತ್ತಾನೆ.
ರಾಮನಿಗೆ
ರಾಕ್ಷಸರ ಮಾಯೆ ಎಂಬ ಅರಿವಿದ್ದರೂ ಸ್ವರ್ಣ ಮೃಗದ ಹಿಂದೆ ನಡೆಯುತ್ತಾನೆ. ಸೀತೆಯ ಜಿಂಕೆಯ ತುಡಿತ ಅತಿಯಾದಂತೆ ರಾಮ ಕೇವಲ ಮನುಷ್ಯನಾಗಿಯೇ ವ್ಯವಹರಿಸುತ್ತಾನೆ. ತನ್ನ ಬಾಣ ಮಾಯೆಯನ್ನು ಗೆಲ್ಲಬಹುದು ಎಂಬ ಆತ್ಮವಿಶ್ವಾಸ. ಆದರೆ
ಮಾಯೆಯ ಹೊಲಬು ಅರಿಯಲಾರದೇ ಹೋಗುತ್ತಾನೆ. ಹಾ ...!!! ಲಕ್ಶ್ಮಣಾ .....ಎಂಬ ಕೂಗಿನ ಮರ್ಮವನ್ನೇ
ತಿಳಿಯುವುದಿಲ್ಲ. ಒಂದು ವೇಳೆ ಈ ಕೂಗಿನ ಮರ್ಮ ಅರಿಯುತ್ತಿದ್ದರೆ .......ಲಕ್ಷ್ಮಣ ಸೀತೆಯ
ರಕ್ಷಣೆಗೆ ರೇಖೆಯನ್ನು ಎಳೆಯುವ ಆವಶ್ಯಕತೆ ಎದುರಾಗುತ್ತಿರಲಿಲ್ಲವೋ ಏನೋ? ಎಲ್ಲವೂ ಕಾಲದ
ಪ್ರಭಾವಕ್ಕೆ ಶರಣಾಗುತ್ತವೆ.
ತನ್ನಣ್ಣನ
ಮೇಲೆ ಅದಮ್ಯ ವಿಶ್ವಾಸ ಲಕ್ಷ್ಮಣನಿಗೆ. ಇದನ್ನು ಅತ್ತಿಗೆಯಲ್ಲಿ ಸಾರಿ ಸಾರಿ ಹೇಳುತ್ತಾನೆ. ಆದರೆ
ಆ ಅರ್ತಾನಾದ ಸೀತೆಯನ್ನು ವ್ಯಾಕುಲತೆಗೆ ತಳ್ಳುತ್ತದೆ. ಬಹುಶಃ ಕಾಲದ ಪ್ರಭಾವ ಹೀಗೂ ಆಗುತ್ತದೆ.
ಎಂದೂ ಪತಿಯ ಆತ್ಮದಂತಿರುವ ಲಕ್ಷ್ಮಣನ ಮೇಲೆ ಹರಿ
ಹಾಯದ, ಸಹನೆಗೆ ಅನ್ವರ್ಥವಾದ ಭೂಮಿಯ ಮಗಳಾಗಿ ಸೀತೆ ಭರ್ತ್ಸನೆಯ ಮಾತುಗಳನ್ನಾಡುತ್ತಾಳೆ ಎಂದರೆ
ಕಾಲದ ಪ್ರಭಾವ ಗಾಢವಾಗಿರುತ್ತದೆ.
ಬಾಲಕ ನಿನ್ನ | ಭಾವವೇನಯ್ಯ |
ಶ್ರೀಲಲಾಮ ತಾ | ನಳಿದ ಮೇಲೆನ್ನ ||
ಆಳುವೆನೆಂಬ | ಆಸೆಯಿಂದಲಿ |
ಆಲಸ್ಯದಿಂದ | ನೀ | ಕುಳಿತೆ ನಿಶ್ಚಯ ||
ರಾಕ್ಷಸರ ಮಾಯೆಯ
ಎದುರು ರಾಮನೂ ಸೋಲುತ್ತಾನೆ ಎನ್ನುವುದಕ್ಕಿಂತ ಕಾಲದ ಪ್ರಭಾವವೇ ಮಾಯೆಯನ್ನು ಗೆಲ್ಲಿಸುತ್ತದೆ. ಮಾಯೆ ಎಂದರೆ ಇಂದ್ರಜಾಲ.
ಅದು ಕ್ಷಣಿಕ. ಅದರಂತೆ ಕಾಲವೂ ಕ್ಷಣ ಕ್ಷಣಕ್ಕೂ ಬದಲಾಗುತ್ತದೆ.
ಸೀತೆಯ
ಏಕಾಂತದಲ್ಲಿ ಸನ್ಯಾಸಿಯ ಪ್ರವೇಶವಾಗುತ್ತದೆ.
ರಾವಣನಿಗೆ ತನ್ನ ತಂತ್ರದ ಬಗ್ಗೆ ಅನುಮಾನವಿತ್ತು. ಆದರೂ ಒಂದು ವಿಶ್ವಾಸ, ದಶರಥನ
ಮಕ್ಕಳು, ಹೇಗಿದ್ದರೂ ಕೊನೆ ಘಳಿಗೆಯಲ್ಲಿ ಹೆಂಡತಿ ಮಾತಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ದಶರಥನೂ
ಹಾಗೆ....ಈಗ ರಾಮನೂ ಹಾಗೆ. ಅದೇ ಅಪ್ಪನ ಮಕ್ಕಳು. ರಾಮ ಏನು ಹೇಳಿದ ರಾಕ್ಷಸರ ಮಾಯ ಕಾಣೇ...ಕೊನೆಗೆ
ಅವಳ ಮಾತಿಗೆ ಕಟ್ಟು ಬಿದ್ದು ಹೊರಟು ನಿಂತ. ಬುದ್ದಿವಂತೆ ಆಕೆ. ಲಕ್ಷ್ಮಣನನ್ನೂ ಕಳುಹಿಸಿದಳು.
ಅಯೋಧ್ಯೆ ಬಿಡುವಾಗ ತಾಯಿ ಏನು ಹೇಳಿದಳು, ಲಕ್ಷ್ಮಣಾ ರಾಮ ಎಲ್ಲಿ ಹೋಗ್ತಾನೋ ಅಲ್ಲಿ ಹಿಂಬಾಲಿಸು.
ಸೀತೆಯನ್ನು ತಾಯಿಯ ಹಾಗೆ ಕಂಡ ಸೀತೆಯೂ ಹೇಳಿದ್ದು ಹಾಗೆ, ರಾಮನನ್ನು ಹಿಂಬಾಲಿಸಿ ಹೋಗು.
ಕಾವಿ ವಸನದ ಕೈಯ ಜಪಸರ | ಕೋವಿ ದಂಡ ಕಮಂಡಲುಗಳಿಂ |
ರಾವಣನು ಸನ್ಯಾಸಿವೇಷವ | ತಾಳಿ ಬಂದ ||
ಮರದ ಮರೆಯಲ್ಲಿ
ಎಲ್ಲವನ್ನೂ ನೋಡುತ್ತಿದ್ದಾನೆ ರಾವಣ. ಸೀತೆಯನ್ನು
ನೋಡಿದ ನಂತರ ರಾವಣ ಬೆರಗಾಗಿಬಿಡುತ್ತಾನೆ. ಈ ಸೌಂದರ್ಯ ಕಾಮಸಕ್ತನನ್ನಾಗಿಸುವುದು ಮಾತ್ರವಲ್ಲ
ಕಾಮಮುಕನನ್ನಾಗಿಸಿ ಚರಮ ಲಕ್ಷ್ಯವನ್ನು ನೀಡುವಂತೆ
ಭಾಸವಾಗುತ್ತದೆ. ಉಳಿದ ಎಲ್ಲದರಲ್ಲೂ ಅನಾಸಕ್ತಿ ಜಾಗ್ರತವಾಗುತ್ತದೆ. ಒಂದು ರೀತಿಯಲ್ಲಿ
ಮೋಕ್ಷಲಕ್ಷ್ಮಿಯ ದರ್ಶನ. ಮನಸ್ಸಿನಲ್ಲಿ
ಎಲ್ಲವನ್ನು ಬಿಟ್ಟ ಒಂದು ಸನ್ಯಾಸ ಭಾವ, ಆ ಲಂಕೆ
ಏನು? ಲಂಕೆಯ ವೈಭವವೇನು? ಎಲ್ಲವೂ ತೃಣ
ಸಮಾನವಾಗಿ ಕಾಣುತ್ತದೆ.? ಅದೆಲ್ಲವನ್ನು ಬಿಟ್ಟು ಬಿಡಬೇಕು? ಆ ಸನ್ಯಾಸ ಭಾವದಲ್ಲೇ ಸನ್ಯಾಸಿಯಾಗಿ
ಅವಳೆದುರು ಪ್ರಕಟವಾಗುತ್ತಾನೆ.
“ ಭಿಕ್ಷೆಯ ನೀಡೇ ದೇವಿ
| ಸನ್ಯಾಸಿಗೆ ಭಿಕ್ಷೆಯ ನೀಡೆ ದೇವಿ | “ ದೈನ್ಯತೆ
ರಾವಣನ ಧ್ವನಿ. ಎಲ್ಲವನ್ನು ಬಿಟ್ಟ ಸನ್ಯಾಸಿಗೆ, ಹಸಿವು...... ....ಈ ಹಸಿವು ಬಿಡುವುದಿಲ್ಲ. ಹಾಗಾಗಿ ಅಮ್ಮಾ ಭಿಕ್ಷೆ ಹಾಕಮ್ಮ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೆಣ್ಣೋಬ್ಬಳು ಏಕಾಂಗಿಯಾಗಿರುವಾಗ ಭಿಕ್ಷಾರ್ಥಿಯಾಗಿ ಬಂದಿದ್ದಾನೆ.
ಗಂಡಸರು ಇದ್ದರೆ, ದಂಪತಿಗಳಿಂದ ದಾನ
ತೆಕ್ಕೊಳ್ಳುವವನೂ ಗೃಹಸ್ಥನಾಗಿರಬೇಕಲ್ಲ? ಹಾಗಾಗಿ ಇದು ಭಿಕ್ಷೆ. ಭವತಿ ಭಿಕ್ಷಾಂದೇಹಿ ಎಂದು
ಗೋಗರೆಯುತ್ತಾನೆ. ಪ್ರತಿಯೊಂದು ಸನ್ನಿವೆಶಕ್ಕೂ
ಇಲ್ಲಿ ಅರ್ಥಕಲ್ಪಿತವಾಗುತ್ತದೆ.
“ ಲೇಸಾಯಿತಯ್ಯ
ಸನ್ಯಾಸಿಯೆ ನಿನ್ನ ಚರಣಕ್ಕೆ ಸಾಸಿರ ಶರಣೆಂಬೆ
ನಾನು ” ಸೀತೆ ದುಗಡದಲ್ಲೇ
ಎಕಾಂಗಿಯಾಗಿರುವಾಗ ಬಂದಿದ್ದಾನೆ ಸನ್ಯಾಸಿಯೋರ್ವ.
ಮುನಿ ಸನ್ಯಾಸಿಗಳೆಂದರೆ ಸಹಜವಾಗಿ ಗೌರವ ಹೊಂದಿರುವ ಸಾಧ್ವೀ ಮಣಿ ಸೀತೆ. ಆದರೆ
ಗುಡಿಸಲಿನಲ್ಲಿ ಆಕೆಯೊಬ್ಬಳೆ ಇರುವ ಅಸಹಾಯಕತೆ ಒಂದೆಡೆ. ಆದರೆ ಈ ಕಾಡಿನೊಳಗೆ ಅದೂ ಈ ಗುಡಿಸಲಿಗೆ
ಭಿಕ್ಷಾರ್ಥಿಯಾಗಿ ಬಂದಿದ್ದಾನಲ್ಲ, ಅದರ ಹಿನ್ನೆಲೆ ಆಕೆ ಅರಿಯುವ ಯೋಚನೆಗೆ ಹೋಗುವುದಿಲ್ಲ. ದೂರದಿಂದಲೇ
ನಮಸ್ಕರಿಸಿ ಬಿಡುತ್ತಾಳೆ.
ಸನ್ಯಾಸಿ,
ಇಲ್ಲಿ ಏಕಾಕಿಯಾಗಿರುವ ಸೀತೆಯ ಪರಿಚಯ ಕೇಳುತ್ತಾನೆ.
ಕಂಡೊಂದು
ಮೃಗವನಾ ಬಯಸಿದಡದನಿನ್ನು | ಕೊಂಡುಬರಲು ರಾಮ ಪೋದ ||
ಪುಂಡರೀಕಾಕ್ಷ
ಬಾರದೆ ಹೊತ್ತಾದುದರಿಂದ |ಅಂಡಲೆಯುತ ತಮ್ಮ ನಡೆದ ||
ದೂರದ ಅಯೋಧ್ಯಾ ದೇಶದ ವಾಸಿಗಳು ನಾವು. ಅಲ್ಲಿಯ
ಸೂರ್ಯವಂಶದ ಅರಸರು ನಾವು. ಶ್ರೀರಾಮ ನನ್ನ ಗಂಡ.
ಪಿತೃವಾಕ್ಯ ಪರಿಪಾಲನೆಗಾಗಿ ಅವರಿಗೆ
ಕಾಡಿಗೆ ಬರಬೇಕಾಯಿತು. ಅವರ ಪತ್ನಿಯಾದ ನಾನು ಅವರನ್ನು ಹಿಂಬಾಲಿಸಿ ಇಲ್ಲಿವರೆಗೂ ಬರಬೇಕಾಯಿತು.
ಈಗ ತನ್ನ ಗಂಡನಾದ ಶ್ರೀರಾಮ ನನ್ನಾಶೆಯನ್ನು ಈಡೇರಿಸುವುದಕ್ಕಾಗಿ ಬಂಗಾರದ ಜಿಂಕೆಯನ್ನು
ಹಿಂಬಾಲಿಸಿಕೊಂಡು ಹೋದ. ಆತನನ್ನು ಹಿಂಬಾಲಿಸಿಕೊಂಡು ನನ್ನ ಮೈದುನನಾದ ಲಕ್ಷ್ಮಣನೂ
ಹೋಗಬೇಕಾಯಿತು. ಹಾಗಾಗಿ ಈಗ ಭಿಕ್ಷೆಯನ್ನು
ಈಯುವುದು ಸಾಧ್ಯವಿಲ್ಲ.
ಅಡುಗೆ ಊಟಗಳೆಂಬ
ಗೊಡವೆಯು ನಮಗಿಲ್ಲ.... ಬರೀ ಅಡವಿಯ ಫಲವಸ್ತುಗಳಲ್ಲೇ ಹಸಿವನ್ನು ನೀಗುತ್ತಾ ಇದ್ದೇವೆ. ಮತ್ತೆ
ನಿನಗೆಲ್ಲಿ ಭಿಕ್ಷೆಯಿಕ್ಕಲಿ ಎಂದು ಗೋಗರೆಯುತ್ತಾಳೆ.
ಪಲವಸ್ತುಗಳನ್ನೇ ನೀಡು ಹಸಿದಿದ್ದೇನೆ ಎಂದರೂ ಸೀತೆ ಕದಲುವುದಿಲ್ಲ. ಲಕ್ಷ್ಮಣ ಎಳೆದಂತಹ
ರೇಖೆಯನ್ನು ಮೀರಿ ಬರುವುದಕ್ಕೆ ಸಾಧ್ಯವಿಲ್ಲ ಎಂದು ನಿರಾಕರಿಸಿಬಿಡುತ್ತಾಳೆ.
ನೆವನ ಹೇಳುವುದೇತಕೆ | ನಾ ದೇಹಿಯೆಂ | ದರೆ ನಾಸ್ತಿಯೆನಬಹುದೆ ||
ಶಿವನಾಣೆ ಮೂರು ದಿನದೊಳೇನೊಂದಾಹಾ | ರವಗೊಳ್ಳದಿಲ್ಲಿಗಿಂದೇ |ಹಸಿದು ಬಂದೆ ||
ಸನ್ಯಾಸಿ
ಸೀತೆಯನ್ನು ಹೊರಗೆ ಬರುವಂತೆ ಪ್ರೇರೇಪಿಸುತ್ತಾನೆ. ಆದರೆ ಆಕೆ ಹೊರಬಲು ಸರ್ವಥಾ ಒಪ್ಪುವುದಿಲ್ಲ.
ರಾಕ್ಷಸರ ಕಾಟ ಈ ಹಿಂದೆ ಶೂರ್ಪನಖಾ ಪ್ರಕರಣದ ಅನುಭವವನ್ನು ಆಕೆ ಮರೆಯಲಾರಳು. ಮುನಿ ಪತ್ನಿಯರು
ತನ್ನಲ್ಲಿ ಹೇಳಿದ ಮಾತಿನಂತೆ, ಈ ಕಾಡಲ್ಲಿ ದೂರದ ದಶಕಂಠನೆಂಬ ದಾನವನ ಪರಿವಾರದವರು
ಅಲೆದಾಡುತ್ತಿದ್ದಾರೆ. ಒಂದು ವೇಳೆ ದಶಕಂಠನಾದ ರಾವಣನ ಕಣ್ಣಿಗೆ ಹೆಣ್ಣುಗಳು ಬಿದ್ದಲ್ಲಿ ಆತ
ಸುಮ್ಮನುಳಿಯುವವನಲ್ಲ. ಹಾಗಾಗಿ ಹೊರಗೆ ಬರಲಾರೆ ಎಂದು ಹೇಳುತ್ತಾಳೆ. ಆದರೆ ಸನ್ಯಾಸಿ ತನ್ನ
ಉದ್ದೇಶ ಸಿದ್ದಿಗಾಗಿ ಶತಾಯ ಗತಾಯ ಪ್ರಯತ್ನಿಸುತ್ತಾನೆ.
ಮರ್ಮವಿಡಿದು ನಾವು ಶಪಿಸಿ ಪೋದರೆ ವಂಶ |
ನಿರ್ಮೂಲವಹುದು ಕಾಣೆ | ಈಶ್ವರನಾಣೆ
ರಾವಣ ಈಗ ನಿಜವಾಗಿಯೂ ಧೃತಿಗೆಡುತ್ತಾನೆ. ಆ ರೇಖೆ
ಸೀಮೆಯನ್ನುಗುರುತಿಸಿರುವುದು ಕೇವಲ ಸೀತೆಗಾಗಿ ಮಾತ್ರವಲ್ಲ ತನಗೂ ಅದನ್ನು ಮೀರುವುದು ಸಾಧ್ಯವಿಲ್ಲ
ಎಂಬ ಅರಿವಿರುತ್ತದೆ. ಹಾಗಾಗಿ ಕ್ರೋಧಗೊಳ್ಳುತ್ತಾನೆ.
ನಂತರ ಶಪಿಸುತ್ತೇನೆ ಎಂದು ಹೂಂಕರಿಸಿದಾಗ ವಿಧಿಯಿಲ್ಲದೇ ಸೀತೆ ಭಿಕ್ಷೆಯನ್ನು
ನೀಡುವುದಕ್ಕಾಗಿ ಮುಂದಡಿಯಿಡುತ್ತಾಳೆ. ಲಕ್ಷ್ಮಣ ಎಳೆದ ರೇಖೆಯನ್ನು ಕ್ರಮಿಸಿ ಸೀತೆ ಪದ
ಊರುತ್ತಿದ್ದಂತೆ ರಾವಣ ತನ್ನ ಕಪಟರೂಪವನ್ನು ಕಳಚಿ ನಿಜ ರಾವಣನಾಗಿ ಕಾಣಿಸಿಕೊಳ್ಳುತ್ತಾನೆ. ಸೀತೆ
ತನ್ನ ಕೈವಶವಾಗುತ್ತಿದ್ದಂತೆ ಪುಷ್ಪಕ ವಿಮಾನದಲ್ಲಿ ಕುಳ್ಳಿರಿಸಿ ನಭಕ್ಕೆ ವಿಮಾನವನ್ನು
ಹಾರಿಸುತ್ತಾನೆ. ತಾನು ವಂಚನೆಗೆ ಒಳಗಾದದ್ದು ಸೀತೆಗೆ ಅರಿವಾಗುತ್ತದೆ. ಆದರೆ ಸಮಯವದು
ಮೀರಿಹೋಗಿರುತ್ತದೆ. ಶ್ರೀರಾಮನ ಕೋದಂಡ, ಲಕ್ಷ್ಮಣನ ರೇಖೆ ಇದೆಲ್ಲವೂ ಸೀತೆಯ ಪಾಲಿಗೆ ಕಾಲಪ್ರಭಾವದ
ದ್ರವ್ಯಗಳಾಗಿಬಿಟ್ಟಿತು. ರಾವಣನ ಅಟ್ಟ ಹಾಸದ ನಡುವೆ ತನ್ನ ರೋದನವೂ ಕರಗುತ್ತಿದೆಯಲ್ಲ ಎಂಬ
ಆತಂಕದಲ್ಲಿ ಸೀತೆಯ ಕಂಬನಿ ಕರಗುತ್ತಲಿತ್ತು.