ಎಳೆದು
ಬಿಗಿದ ಮದ್ದಲೆಯ ನಾದ ಪುಟ್ಟ ಸಭಾಂಗಣದ ತುಂಬೆಲ್ಲ ಪ್ರತಿಧ್ವನಿಸುತ್ತಿತ್ತು. ಧ್ವನಿವರ್ಧಕದ
ಆವಶ್ಯಕತೆಯೇ ತನಗಿಲ್ಲ ಎಂಬಂತೆ ತನ್ನ ಮೇಲಾಗುವ ಕೈ ಬೆರಳ ನರ್ತನಕ್ಕೆ ಮದ್ದಲೆ ಮನೋಹರವಾಗಿ
ಸ್ಪಂದಿಸುತ್ತಾ ತನ್ನ ಇರವನ್ನು ಆ ಪರಿಸರಕ್ಕೆ ಉಂಟು ಮಾಡುತ್ತಿತ್ತು. ಹೊರಗಡೆ ಚುಮು ಚುಮು
ಮಳೆಯಾದರೆ ಒಳಗಡೆ ಈ ಮದ್ದಲೆಯ ಅಬ್ಬರದ ನಾದ. ಆಅ ನಾದಕ್ಕೆ ಸೂರು ಕಿತ್ತು ಹಾರಿ ಹೋಯಿತೇನೋ ಎಂಬ
ಭ್ರಮೆ. ಹೊರಗೆ ಸಿಡಿಲೋ ಮಳೆಯೂ ಒಂದೂ ಪರಿವೆ ಇಲ್ಲದಂತೆ ಈ ಮದ್ದಲೆಯ ನಾದ ಪ್ರಕೃತಿ ಮಯವಾಗಿ
ವ್ಯಾಪಿಸಿತ್ತು. ಅಕ್ಷರಶಃ ಮದ್ದಲೆ ಕುಣಿದು
ಕುಪ್ಪಳಿಸಿತ್ತಿತ್ತು. ಇದು ಭ್ರಮೆಯಲ್ಲ. ವಾಸ್ತವ
ಎಂಬ ಅರಿವಾಗುವಾಗ ಯಕ್ಷಗಾನ ಹಿಮ್ಮೇಳದ ಔತಣವನ್ನು ಚಪ್ಪರಿಸಿಯಾಗಿಹೋಗಿತ್ತು. ಮದ್ದಲೆ ಹರುಷದಿಂದ
ಕುಣಿದಂತೆ ಬಾಸಾವಾಗುತ್ತಿತ್ತು. ಯಾಕೆಂದರೆ ಅಪರೂಪವೆಂಬಂತೆ ಇದು ಈ ಮದ್ದಲೆವಾದನಕ್ಕೆ ಏರ್ಪಡಿಸಿದ
ಯಕ್ಷಗಾನ ತಾಳಮದ್ದಲೆಯ ಕಾರ್ಯಕ್ರಮ. ಕುಣಿಸುವ ಮದ್ದಲೆ ಇಲ್ಲಿ ತಾನೇ ಕುಣಿದಂತೆ ಭಾಸವಾಗುತ್ತಿತ್ತು. ಆಶ್ಚರ್ಯವಾಗಬಹುದು. ಒಬ್ಬ ಭಾಗವತರಿಗಾಗಿ ಅಥವಾ
ಅರ್ಥಧಾರಿಗಾಗಿ ಒಂದು ತಾಳ ಮದ್ದಲೆ ಆಯೋಜನೆಗೊಳ್ಳುವುದು ಸ್ವಾಭಾವಿಕ. ಆದರೆ ಇಲ್ಲಿ
ಕಥಾನಾಯಕನಾಗಿರುವುದು ಮದ್ದಲೆ ಎಂದರೆ ಅತಿಶಯವಲ್ಲ. ಕುತೂಹಲ ಎನಿಸುತ್ತದೆಯಲ್ಲ? ಒಬ್ಬ
ಪ್ರಸಿದ್ಧ ಮದ್ದಲೆವಾದಕರ ಸ್ಮರಣೆಯಲ್ಲಿ ಅವರ ವಾದನದ ಸ್ಮೃತಿಯನ್ನು ಮತ್ತೆ ತರುವುದಕ್ಕಾಗಿಯೇ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಯಕ್ಷಗಾನದಲ್ಲಿ ಮದ್ದಲೆಯ ವಾದನವೂ
ಇಷ್ಟು ಗಮನಾರ್ಹವಾಗಿ ಕಂಡು ಬಂದದ್ದು ಅದೇ ದಿನ. ಅಂದು ಒಬ್ಬ ಮದ್ದಲೆ ವಾದಕ ತಾರಾ ಮೌಲ್ಯವನ್ನು
ಗಳಿಸಿಕೊಂಡು ಬಿಟ್ಟಿದ್ದ. ಚೆಂಡೆಯೊಂದೇ
ಯಕ್ಷಗಾನವನ್ನು ಪ್ರತಿನಿಧಿಸುತ್ತದೆ ಎಂದು ತಿಳಿದವರಿಗೆ ಇದೊಂದು ಮದ್ದಲೆಯ ಅಹವಾಲು ಎಂದರೆ
ತಪ್ಪಲ್ಲ. ಅಂದಿನ ಮದ್ದಲೆಯ ವೈಭವ ಮತ್ತೆಂದೂ ಮರೆಯದ ವೈಭವವಾಗಿತ್ತು.
 |
| ಮದ್ದಲೆಯ ಮೋಡಿಗಾರ ಕೆಮ್ಮಣ್ಣು ನಾರಣಪ್ಪಯ ಪುಸ್ತ್ಕಕದ ಮುಖಚಿತ್ರ |
ವಿಶೇಷವೆಂದರೆ
ಆಂದಿನ ತಾಲಮದ್ದಲೆಗೆ ಟಿಕೇಟ್
ಇರಿಸಲಾಗಿತ್ತು. ಅದು ಬಯಲಾಟವಲ್ಲ, ಈ ತಾಳಮದ್ದಲೆಯನ್ನೂ ಟಿಕೇಟ್ ಪಡೆದು ನೋಡುವುದೆಂದರೆ ಈಗ ವಿಚಿತ್ರ
ಅನ್ನಿಸಬಹುದು. ವಾಹನ ಕಳುಹಿಸಿ ನಮ್ಮ ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆಯುವಂತಹ ಈಗಿನ ಸನ್ನಿವೇಶದಲ್ಲಿ ಟಿಕೇಟು ಪಡೆದು ತಾಳ ಮದ್ದಲೆ
ನೋಡುವುದೆಂದರೆ ಆಶ್ಚರ್ಯವೆನಿಸುತ್ತದೆ. ತಾಳ ಮದ್ದಲೆ ಆ ಮಟ್ಟದ ಆಕರ್ಷಣೆಯನ್ನು ಹೊಂದಿತ್ತು
ಎಂಬುದಕ್ಕೆ ಇದೊಂದು ನಿದರ್ಶನ. ತಾಳಮದ್ದಲೆಗೆ
ಬನ್ನಿ ಎಂದು ವಾಹನ ಕಳಿಸಿದರೂ ಬೇಡ ಮಳೆ ಬರುತ್ತಿದೆ ಎಂದು ಇಲ್ಲದ ಕೆಲಸವನ್ನು
ನೆನಪಿಸಿಕೊಳ್ಳುತ್ತಾರೆ. ಏನಿದ್ದರೂ ಅಂದಿನ ತಾಳ
ಮದ್ದಲೆ ಹಲವು ವಿಚಾರಗಳಿಂದ ಸ್ಮರಣೆಯಲ್ಲಿ ಉಳಿಯುವಂತಾದದ್ದು ಅದು ಸೃಷ್ಟಿಸಿದ ರೋಚಕತೆಗೆ ಸಾಕ್ಷಿ.
ಅಂದು ಮಳೆಗಾಲದ ಒಂದು ದಿನ. ಮಂಗಳೂರಿನ ಬಲ್ಲಾಳ್ ಭಾಗ್
ನ ಪಾಲ್ಕೆ ಹಾಲ್ ನಲ್ಲಿ ಈ ತಾಳ ಮದ್ದಲೆ. ಆ ದಿನದ
ಉದಯವಾಣಿ ಪತ್ರಿಕೆಯ ಕೊನೆಯ ಪುಟದಲ್ಲಿ ಇದರ ಬಗ್ಗೆ ಜಾಹೀರಾತು ಸಹ ಬಂದಾಗಿತ್ತು. ಹಾಗಾಗಿಯೇ ನಮ್ಮ
ಗಮನ ಅತ್ತ ಹೋದದ್ದು. ಈ ತಾಳಮದ್ದಲೆಯ ವೈಶಿಷ್ಟ್ಯ
ಬಹಳ ವಿಚಿತ್ರವೆನಿಸ ಬಹುದಾದ್ದು. ಅದೂ ಈ ಕಾಲದಲ್ಲಿ ಅದನ್ನು ಕಲ್ಪಿಸಿದರೆ ನಿಜಕ್ಕೂ ಅತ್ಯಂತ
ವಿಶಿಷ್ಟ ಎಂದೆನಿಸುತ್ತದೆ. “ಪ್ರಸಿದ್ಧ ಮದ್ದಲೆವಾದಕ ಶ್ರೀ ಕೆಮ್ಮಣ್ಣು ನಾರಣಪ್ಪಯ್ಯ ಶೈಲಿಯ ಮದ್ದಲೆವಾದನ ಕೇಳಲು ಮರೆಯದಿರಿ” ಎಂಬ ಶಿರೋನಾಮೆಯೊಂದಿಗೆ ಪ್ರಸಿದ್ಧ ಭಾಗವತರಾದ ಬಲಿಪ
ನಾರಾಯಣ ಭಾಗವತ ಮತ್ತು ಶೇಣಿ ಪೆರ್ಲ ವಿಟ್ಲ ಜೋಷಿ ಮುಂತಾದವರ ಘಟಾನುಘಟಿ ಕಲಾವಿದರು ಒಡಗೂಡಿದ ಘನ
ಗಂಭೀರ ತೆಂಕು ತಿಟ್ಟಿನ ತಾಳ ಮದ್ದಲೆ
ಕಾರ್ಯಕ್ರಮ.
ಯಕ್ಷಗಾನದಲ್ಲಿ ಮದ್ದಲೆವಾದನ ಎಂದರೆ ಅದು ಪರಂಪರೆಯ
ಒಂದು ಭಾಗ. ಈಗಿನಂತೆ ಅದು ಮೃದಂಗವಾದನವಲ್ಲ ಎಂಬುದು ಗಮನಾರ್ಹ. ಮದ್ದಲೆಯ ಕಂಪನದ ಝೇಂಕಾರದ ನಾದ ಕೇಳುವಾಗಲೇ ಯಕ್ಷಗಾನದ
ನೈಜ ಲೋಕ ತೆರೆದುಕೊಳ್ಳುತ್ತದೆ. ಒಂದೆರಡು ಛಾಪು ಪೆಟ್ಟುಗಳನ್ನು ಭಾರಿಸಿ ಮದ್ದಲೆಗಾರ ಬೆನ್ನು
ಚಪ್ಪರಿಸಿದ ಎಂದರೆ ಯಕ್ಷಲೋಕದ ಬಾಗಿಲು ತೆರೆದಂತೆ ಭಾಸವಾಗುತ್ತದೆ. ಇಂತಹ ಎದೆಬಿರಿಯುವ
ಛಾಪುಗಳಿಗೆ ಹೆಸರಾದವರು ಶ್ರೀ ಕೆಮ್ಮಣ್ಣು ನಾರಣಪ್ಪಯ್ಯ ಎಂಬ ದೈತ್ಯ ಪ್ರತಿಭೆಯ ಮದ್ದಲೆಗಾರ. ಈಗ
ಕಲ್ಪಿಸಿದರೆ ಕಲ್ಪನೆಗೆ ನಿಲುಕದ ಪ್ರತಿಭೆ. ಇದು ನಮ್ಮ ಹಿರಿಯರ ಮಾತು. ಈ ಕೆಮ್ಮಣ್ಣು
ಶೈಲಿಯನ್ನು ಯಥಾವತ್ ತೋರಿಸಿಕೊಟ್ಟವರು ಶ್ರೀ
ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು. ಅಂದು
ಕೆಮ್ಮಣ್ಣು ಶೈಲಿ ಎಂದರೆ ಏನೆಂಬ ಒಂದು ಕಿರು
ಪರಿಚಯವಾಗಿಬಿಟ್ಟಿತು.
ಈ ಮದ್ದಲೆಯ ರಣ ಭಯಂಕರ ನಾದಕ್ಕೆ ಪ್ರಚೋದನೆಗೊಂಡು ತಾಳ
ಮದ್ದಲೆ ಪ್ರಸಂಗದ ಸುಧನ್ವನಾಗಿದ್ದ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರು ಇಲ್ಲಿ ಪ್ರಭಾವತಿಗೆ ಹೇಳಿದ
ಮಾತು ಈಗಲು ನೆನಪಿದೆ. ಪ್ರಭಾವತಿ, ಚಂಪಕಾವತಿ ಯುದ್ದಕ್ಕೆ ಸನ್ನದ್ದವಾಗಿದೆ. ಅದೋ ರಣಭೇರಿ
ಕೇಳುತ್ತಿದೆಯಲ್ಲ. ಎಂದು ಇಲ್ಲದ ಹೊಸ ಉತ್ಸಾಹದ ಭೇರಿಯ ಸದ್ದದು. ಪುಟಿದೇಳುವ ಮದ್ದಲೆಯ ನಾದ ಉಂಟು ಮಾಡಿದ ಪ್ರಚೋದನೆ
ಇದು. ಅಂದು ಬಲ್ಲಾಳರು ತಮ್ಮ ಸಹಜ ಶೈಲಿಯನ್ನು
ಬಿಟ್ಟು ಈ ಕೆಮ್ಮಣ್ಣು ಶೈಲಿಯನ್ನು ತೋರಿಸಿದರು.
ಈಗ
ಕೆಮ್ಮಣ್ಣು ನಾರಣಪ್ಪಯ್ಯ ಶೈಲಿ ಏನು ಎಂದು ವಿಶ್ಲೇಷಿಸುವುದಾದರೆ ಈ ಶೈಲಿ ಯಕ್ಷಗಾನದಲ್ಲಿ ಅತ್ಯಂತ ವಿಶಿಷ್ಟ ಶೈಲಿ. ಅಂದು ಬಲ್ಲಾಳರು ಅದನ್ನು ಅನುಕರಿಸಿ ಬಾರಿಸುವುದಷ್ಟಕ್ಕೆ
ಸಾಧ್ಯವಾಯಿತು. ಕೆಮ್ಮಣ್ಣು ನಾರಣಪ್ಪಯ್ಯನ ವಾದನ ವೈಖರಿಯ ವೈಶಿಷ್ಟ್ಯತೆ ಇಷ್ಟಕ್ಕೆ ಸೀಮಿತವಾಗಿ ನಿಲ್ಲುವುದಲ್ಲ. ಇಂದು ಅದರ
ಸಂಪನ್ಮೂಲಗಳು ಇದ್ದರೆ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪಡೆಯಬಹುದು. ಆ ತಾಳ ಮದ್ದಲೆಯಲ್ಲಿ
ಅದರ ಸೂಕ್ಷ್ಮ ವನ್ನಷ್ಟೇ ಕಾಣುವುದಷ್ಟೆ ಸಾಧ್ಯವಾಯಿತು. ಕೇವಲ ಒಂದು ಪ್ರದರ್ಶನದಿಂದ ಅದರ ಆಳ
ವಿಸ್ತಾರ ತಿಳಿಯುವುದು ಸಾಧ್ಯವಿಲ್ಲದ ಮಾತು. ಇಂದು
ಅದನ್ನು ಪರಿಪೂರ್ಣವಾಗಿ
ತಿಳಿಯಬೇಕಿದ್ದರೂ ಸಾಧ್ಯವಿಲ್ಲ. ಯಾಕೆಂದರೆ ಆ ಶೈಲಿ ಇಂದು
ತೀರ ನೇಪಥ್ಯಕ್ಕೆ ಸರಿದು ಹೋಗಿದೆ. ಇಂದು ಬೆರಳೆಣಿಕೆಯ ಮಂದಿಯೂ ಇದರ ಬಗ್ಗೆ ಹೇಳುವುದಕ್ಕೆ
ಸಿಗಲಾರರು. ಯಕ್ಷಗಾನದಲ್ಲಿ ಕಳೆದು ಹೋದ
ವಿಚಾರಗಳನ್ನು ಉಲ್ಲೇಖಿಸುತ್ತಾ ಹೋದರೆ ಅದರಲ್ಲಿ ಈ ಶೈಲಿಯೂ ಅತ್ಯಂತ ಅವಶ್ಯವಾಗಿ ಸೇರಿಸಲ್ಪಡುತ್ತದೆ. ಹಾಗಾಗಿ ಈ ಕೆಮ್ಮಣ್ಣು ಶೈಲಿಯ ಸೀಮಿತ ವಿಶ್ಲೇಷಣೆ ಈಗ
ಅವಶ್ಯ ಎಂದನಿಸುತ್ತದೆ.
ಕೆಮ್ಮಣ್ಣು ನಾರಣಪ್ಪಯ್ಯ ಮದ್ದಲೆಗಾರರೆಂದರೆ, ಭಾಗವತರೂ ಸಹ ತಮ್ಮ ತಾಳ ಲಯವನ್ನು
ಪರೀಕ್ಷೆ ಒಡ್ಡಿದ ಅನುಭವವನ್ನು ಪಡೆದುಕೊಳ್ಳುತ್ತಿದ್ದರು. ಪ್ರಸಿದ್ದ ಭಾಗವತರೊಬ್ಬರು ತಮ್ಮ
ಭಾಗವತಿಕೆ ಮುಗಿಸಿ ಕುಳಿತಾಗ ಇವರು ಥೋಂ ಥೋಂ ಎಂದು ಏಕ ಪ್ರಕಾರವಾಗಿ ಬಾರಿಸುತ್ತಲೇ ಇದ್ದರು. ವಾಸ್ತವದಲ್ಲಿ
ನಿನ್ನ ಪದ ಮುಗಿಯಲೇ ಇಲ್ಲ ಎಂಬಂತೆ ತಮ್ಮ ವಾದನದಲ್ಲೇ
ಭಾಗವತರಿಗೆ ಸೂಚಿಸಿದ್ದರು. ತಾಳ ಲಯ
ಗಟ್ಟಿಯಿಲ್ಲದ ಭಾಗವತರು ಇವರ ಮದ್ದಲೆ ವಾದನಕ್ಕೆ ಪದ ಹೇಳುವುದಕ್ಕೆ ಅಂಜಿಕೊಳ್ಳುತ್ತಿದ್ದರು.
ನೀಳವಾದ ಕೈಬರೆಳುಗಳು ಮದ್ದಲೆಯನ್ನು ಪೂರ್ಣವಾಗಿ ಆವರಿಸಿಕೊಂಡು ಪ್ರಹಾರವನ್ನೇ ಮಾಡುತ್ತಿದ್ದವು. ಎಲ್ಲವೂ ಘಾತ ಪೆಟ್ಟುಗಳು! ಕೆಮ್ಮಣ್ಣು ಮದ್ದಲೆಗೆ ಎಂದರೆ
ಒಂದೆರಡು ಮದ್ದಲೆ ಹರಿದು ಒಡೆದು ಹೋಗುವುದು ಸಾಮಾನ್ಯದ ಮಾತಾಗಿತ್ತು. ಮದ್ದಲೆ ಒಡೆದು
ಹೋಗಬೇಕೆಂದು ಬಾರಿಸುವ ಪೆಟ್ಟುಗಳಲ್ಲ. ಮದ್ದಲೆವಾದಕ ಆವೇಶಗೊಂಡು ಮೈಮರೆಯುವ ಅದ್ಬುತ ಶೈಲಿ. ಮದ್ದಲೆ
ತನ್ನ ಸಾಮಾರ್ಥ್ಯವನ್ನು ಪೂರ್ಣವಾಗಿ ಪಣಕ್ಕಿಟ್ಟಂತೆ ಭಾಸವಾಗುತ್ತದೆ. ಮದ್ದಲೆಯ ಛಳಿ ಬಿಡಿಸುವಂತಹ
ಪೆಟ್ಟುಗಳು ಎನ್ನುವುದಕ್ಕಿಂತ ಕಲಾವಿದನ ಮೈ ಛಳಿ ದೂರಾಗಿಸಿ ಮೈ ಮನ ಬೆಚ್ಚಗಾಗಿಸುವ ಮದ್ದಲೆಯ
ವೈಭವವದು. ಮದ್ದಲೆಗಾರ ಈ ವಾದನವನ್ನು ತಪಸ್ಸೆಂದು ತಿಳಿದು ಒಂದಾಗಿ ಹೋಗುವ ರಸಘಳಿಗೆ. ವಿಶೇಷ ಎಂದರೆ ಈ ಪೆಟ್ಟುಗಳಿಗೆ ಮದ್ದಲೆ ಒಡೆದು ಹೋದರೂ
ಎದೆಯೇ ಬಿರಿಯುವಂತಹ ಪೆಟ್ಟುಗಳಿಗೆ ಪ್ರೆಕ್ಷಕನ ಹೃದಯ ಒಡೆಯುವುದಿಲ್ಲ. ಬದಲಾಗಿ ಆನಂದದಿಂದ ಹೃದಯ ತುಂಬಿ ಹೋಗುತ್ತದೆ. ಒಂದು ವೇಳೆ ಹೃದಯ
ಒಡೆದುಕೊಂಡರೂ ಅದು ಇನ್ನಷ್ಟು ನಾದ ತರಂಗಗಳನ್ನು
ತನ್ನೊಳಗೆ ತುಂಬಿಸಿಕೊಂಡು ಬಚ್ಚಿಡುವುದಕ್ಕೆ
ತೆರೆದಿದೆ ಎನ್ನಬೇಕು. ಪ್ರೇಕ್ಷಕನನ್ನು
ಎತ್ತಲಿಂದ ಎತ್ತಲೋ ಒಯ್ಯುವ ಈ ನಾದ ಚಮತ್ಕಾರ ಒಂದು ವಿಸ್ಮಯ ಚರಿತ್ರೆಯನ್ನು ಸೃಷ್ಟಿಸುತ್ತಿತ್ತು.
ಇವುಗಳೆಲ್ಲ ನಮ್ಮ ಹಿರಿಯರು ಅನುಭವಿಸಿದ ರಸ ಚಮತ್ಕಾರದ
ಘಳಿಗೆಳು. ಅದನ್ನು ಅವರಿಂದ ಕೇಳುವಾಗಲೇ ಪುರಾಣದ ಯಾವುದೋ ಲೋಕಕ್ಕೆ ಹೋದ ಅನುಭವವಾಗುತ್ತದೆ.
ಇನ್ನು ಸ್ವತಃ ಅನುಭವಿಸಿದರೆ ಮತ್ತೆ ಕೇಳಬೇಕೆ?
ಕೆಮ್ಮಣ್ಣು ನಾರಣಪ್ಪಯ್ಯನವರು ಹೀಗೆ ವಿಶಿಷ್ಟ ಮದ್ದಲೆವಾದನಕ್ಕೆ ಹೆಸರಾದವರು. ಇದು
ಕೇವಲ ಎದೆ ಬಿರಿಯುವ ಪ್ರಹಾರ ಎಂದುಕೊಂಡರೆ ಅದು ತಪ್ಪಾಗುತ್ತದೆ. ಅದು ಪ್ರಹಾರವಲ್ಲ. ಯಕ್ಷಗಾನದ
ಲಯ ವಿನ್ಯಾಸದ ಚಿತ್ರಗಳು. ಮದ್ದಲೆಯನ್ನು ಶ್ರುತಿಬರಿಸುವಾಗಲೇ ವಿಶೇಷವಾಗಿ ಅದನ್ನು ಸಿದ್ದ
ಪಡಿಸುತ್ತಾರೆ. ಒಂದೆರಡು ಮದ್ದಲೆ ತಲೆ
ಒಡೆದುಕೊಂಡರೂ ಯಾರೂ ಆ ಬಗ್ಗೆ ಗಾಬರಿಯಾಗುವುದಿಲ್ಲ. ಅದೆಲ್ಲವನ್ನು ಸಹಜವಾಗಿ ಸ್ವೀಕರಿಸಿ ಮತ್ತೆ
ಮತ್ತೊಂದು ಮದ್ದಲೆಯ ನಾದಕ್ಕೆ ಕಿವಿಯಗಲಿಸುತ್ತಾರೆ. ಕೆಮ್ಮಣ್ಣು ನಾರಣಪ್ಪಯ್ಯ ಇವರ ವಾದನ ಶೈಲಿ
ಎಂದರೆ, ಇವರು ಮದ್ದಲೆಯೊಂದಿಗೆ ಭಾಗವತರ ಜತೆಗೆ ನಾದ
ಸಂವಾದವನ್ನು ಮಾಡಿಬಿಡುತ್ತಾರೆ. ಇದನ್ನು ಹಿರಿಯರೊಬ್ಬರು ಸ್ವಾರಸ್ಯಕರವಾಗಿ
ವಿವರಿಸುತ್ತಾರೆ. “ನಿನ್ನದು
ಹಾಗಾದರೆ ತಗೋ ನನ್ನದು ಹೀಗೆ” ಎಂಬಂತೆ
ಇರುವ ನಾದ ಸಂವಾದದವನ್ನು ಪ್ರೇಕ್ಷಕ ಅರ್ಥವಿಸಿಕೊಂಡರೆ ಪ್ರೇಕ್ಷಕನಿಗೆ ದಿವ್ಯ ರಸಾನುಭವ
ಸಾಧ್ಯವಾಗುತ್ತದೆ. ನಿಜವಾದ ರಸಿಕತೆ ಎಂದರೆ ಇದೇ ತಾನೇ? ಈ ನಾದ ಸಂವಾದದ ಜುಗಲ್ಪಂದಿ, ಕೆಲವೊಮ್ಮೆ
ಸ್ಪರ್ಧೆಯಾದರೆ, ಕೆಲವೊಮ್ಮೆ ದ್ವಂದ್ವ ಯುದ್ಧವಾಗುತ್ತದೆ, ಇನ್ನು ಕೆಲವೊಮ್ಮೆ ಸರಸ
ಸಂಭಾಷಣೆಯಾಗಿಬಿಡುತ್ತದೆ. ಮದ್ದಲೆಯ ಪೆಟ್ಟುಗಳು ಹೇಗೆ ವಿಸ್ಮಯ ಪ್ರಪಂಚವನ್ನು ಸೃಷ್ಟಿ
ಮಾಡುತ್ತದೆ ಎಂದರೆ, ಈ ಕೈಬೆರೆಳುಗಳಿಂದ ಮದ್ದಲೆ ಆ ನಾದವನ್ನು ಹೊರಡಿಸುವುದಕ್ಕೆ ಸಾದ್ಯವೇ ಎಂದು
ಅಚ್ಚರಿಯಾಗುತ್ತದೆ. ಪಟ್ ಪಟ್ ಅಂತ ಪ್ರಹಾರದ ಸರಮಾಲೆ ತಾಳ ಲಯಕ್ಕೆ ತಕ್ಕಂತೆ ಮದ್ದಲೆಯ ಮೇಲೆ
ಆಗುತ್ತಿದ್ದರೆ ಅದನ್ನು ಅನುಭವಿಸುವ ಪ್ರೇಕ್ಷಕನ ಸ್ಥಿತಿ ಹೇಗಾಗಬಹುದು? ಈ ಅನುಭವಗಳನ್ನು ನಾದ ವೈಖರಿಗಳನ್ನು ಅಕ್ಷರ ರೂಪದಲ್ಲಿ
ಕೊಡುವುದು ಸಾಧ್ಯವಿಲ್ಲದ ಮಾತು. ಆದರೂ ಹೀಗೊಂದು ವಿಸ್ಮಯ ಪ್ರಪಂಚ ಯಕ್ಷಗಾನದಲ್ಲಿ ಇತ್ತು
ಎನ್ನುವುದನ್ನು ತೋರಿಸುವ ಅಗತ್ಯವಿದೆ. ಹೀಗೆ
ಹಿಮ್ಮೇಳವು ಪ್ರೇಕ್ಷಕನನ್ನು ಮೋಡಿ ಮಾಡಿಬಿಡುತ್ತದೆ ಎಂದರೆ ಆ ನಾದೋಪಾಸನೆ ಹೇಗಿರಬೇಡ.? ನಿಜವಾಗಿ
ಮದ್ದಲೆ ಮಾತನಾಡುವುದು ಎಂದರೆ ಇದುವೇ ಆಗಿದೆ. ಹಲವು ಸಲ ಮುಮ್ಮೇಳದ ವಾದ ವಾಗ್ವಾದಗಳಿಗಿಂತಲೂ ಈ
ಹಿಮ್ಮೇಳದ ವಾದ ಸಂವಾದಕ್ಕೆ ಪ್ರೇಕ್ಷಕ ಕಾದು ಕುಳಿತುಕೊಳ್ಳುತ್ತಾನೆ. ಹೀಗಿದ್ದಾಗಲೇ ಯಕ್ಷಗಾನ ಸರ್ವಾಂಗೀಣ ಕಲೆ ಎನಿಸುವುದು.
ಯಕ್ಷಗಾನ ಹಿಮ್ಮೇಳದಲ್ಲಿ ಮದ್ದಲೆಗಾರ ಎಂದರೆ
ಭಾಗವತರಿಗೆ ಸಮದಂಡಿಯಾಗಿರಬೇಕಾದ ಕಲಾವಿದ. ಭಾಗವತರಿಂದಲೂ ಒಂದಿಷ್ಟು ಅಧಿಕ ಈತನಿಗೆ
ತಿಳಿದಿರಬೇಕು. ಒಬ್ಬ ಸಮರ್ಥ ಮದ್ದಲೆಗಾರ ಭಾಗವತನನ್ನು ಎತ್ತರಕ್ಕೆ ಏರಿಸಬಲ್ಲ. ಅಥವಾ ಮದ್ದಲೆ
ಕಳಪೆಯಾದಲ್ಲಿ ಭಾಗವತನೂ ಅದರ ಪರಿಣಾಮವನ್ನು ಅನುಭಸಿ ಕಳಪೆಯಾಗುತ್ತಾನೆ. ಭಾಗವತನ ಪದವನ್ನು ಮೇಲೆ
ಹಾಕುವುದು ಅಥವಾ ಕೆಳಗೆ ಮಾಡುವುದು ಮದ್ದಲೆಗಾರನಿಗೆ ಸಾಧ್ಯ. ಇದನ್ನು ಸಂದರ್ಶನ ಒಂದರಲ್ಲಿ ಕುರಿಯ
ಗಣಪತಿ ಶಾಸ್ತ್ರಿಗಳು ಹೇಳುತ್ತಾರೆ. ಒಬ್ಬ ಮದ್ದಲೆಗಾರ.
ಭಾಗವತ ಮನೋಧರ್ಮ ಅರಿತಿರಬೇಕು. ಭಾಗವತನ
ತಾಳ ಜ್ಞಾನ ಗಟ್ಟಿ ಇದ್ದಲ್ಲಿ ಮದ್ದಲೆಗಾರ ಬಹಳಷ್ಟು ಸ್ವಾತಂತ್ರ್ಯವನ್ನು ಅನುಭವಿಸುತ್ತಾನೆ.
ತನ್ನ ತಂತ್ರಗಾರಿಕೆ ಪ್ರಶಸ್ತ ಅವಕಾಶವನ್ನು ಹುಡುಕುತ್ತಾ ಇರುತ್ತಾನೆ. ಹಾಗಿದ್ದಲ್ಲಿ ಮಾತ್ರವೇ ಆತ ನಿಜವಾದ ಯಕ್ಷಗಾನದ
ಮದ್ದಲೆಗಾರನಾಗುವುದಕ್ಕೆ ಸಾಧ್ಯ. ತಾಳ ಲಯ ಮತ್ತು ಭಾಗವತಿಕೆಯಲ್ಲೂ ಪರಿಪೂರ್ಣತೆ ಇದ್ದರೆ ಮಾತ್ರ
ಆತ ಮದ್ದಲೆಗಾರನಾಗುತ್ತಾನೆ. ಭಾಗವತನ ನಾಡಿ ಮಿಡಿತವನ್ನು ಗಮನಿಸುವ ತಜ್ಞನಂತೆ ಯಕ್ಷಗಾನದಲ್ಲಿ
ಮದ್ದಲೆಯ ವಾದಕನಾಗಿಬೇಕು. ಭಾಗವತನ ಅತ್ಯಂತ
ಹತ್ತಿರದ ಜತೆಗಾರನಾಗಿ, ಭಾಗವತನ ಆತ್ಮವೇ ಆಗಿ ರಂಗದಲ್ಲಿ ವ್ಯವಹರಿಸಬೇಕಾಗುತ್ತದೆ. ಭಾಗವತ
ಸಂಚರಿಸುತ್ತಿದ್ದರೆ ಮದ್ದಲೆಗಾರ ಹಾದಿಯನ್ನು ಮಾಡಿಕೊಡುತ್ತಾ ಸಾಗಬೇಕು. ಒಂದರ್ಥದಲ್ಲಿ ಭಾಗವತ
ಸಾಗುವ ಹಾದಿಯನ್ನು ಮೊದಲೆ ಗ್ರಹಿಸಿ ಅದಕ್ಕೆ ಅನುವು ಮಾಡಿಕೊಡಬೇಕು. ಹಾಗಾಗಿ ಕೆಮ್ಮಣ್ಣು ಶೈಲಿಗೆ
ಪದ ಹೇಳುವುದೇ ಒಂದು ಅರ್ಹತೆ ಎಂಬಂತೆ ಪರಿಗಣಿಸಲ್ಪಡುತ್ತಿತ್ತು. ಅಲ್ಲಿ ಮಾನ್ಯತೆ ಗಳಿಸಿಕೊಂಡರೆ ಮತ್ತೆ ಭಾಗವತನಿಗೆ ಬೇರೆ
ಅಂಗೀಕಾರದ ಅವಶ್ಯಕತೆ ಇಲ್ಲ. ಎಲ್ಲ ನಿಯಂತ್ರಣವೂ
ಭಾಗವತನದ್ದೇ ಆದರೂ ಭಾಗವತನ ಶ್ರುತಿ ಲಯದ ಬಗ್ಗೆ ಮದ್ದಲೆಗಾರ ಎಚ್ಚರವಹಿಸುತ್ತಾನೆ. ಮತ್ತದಕ್ಕೆ
ಒಂದು ಕಾಲ್ಪನಿಕ ರೇಖೆಯನ್ನು ಎಳೆಯುತ್ತಾನೆ. ಅದನ್ನೇ ಹಾದಿ ಮಾಡಿಕೊಡುವುದು ಎನ್ನುವುದು. ಇದು
ನಾರಣಪ್ಪನವರಲ್ಲಿ ಇತ್ತು. ಹಾಗಾಗಿಯೇ ಭಾಗವತ ಮತ್ತು ವಾದಕನ ಸಂವಾದ ಜತೆಗೆ ಒಂದಿಷ್ಟು ಸಮರ
ನಡೆಯುವುದು.
ಕೆಮ್ಮಣ್ಣು ನಾರಣಪ್ಪಯ್ಯ ಶೈಲಿಯ ಬಗ್ಗೆ ಹಿರಿಯ ವಿದ್ವಾಂಸ ಶ್ರೀ ರಾಘವ ನಂಬಿಯಾರರಲ್ಲಿ ಕೇಳಿದಾಗ
ಬಹಳಷ್ಟು ವೈಶಿಷ್ಟ್ಯಗಳನ್ನು ಸ್ಮರಿಸಿಕೊಂಡರು. ಹೆಚ್ಚಾಗಿ ಹಿರಿಯ ದೊಡ್ಡ ಬಲಿಪರ ಏರು ಸ್ವರಗಳಿಗೆ
ಮತ್ತು ಅವರ ಶೈಲಿಗೆ ಪರಸ್ಪರ ಮಾಡಿಸಿದಂತೆ ಹೊಂದಿಕೆ ಯಾಗುತ್ತಿತ್ತು. ಏರು ಸ್ಥಾಯಿಯ ಬಲಿಪ್ಪರ
ಸ್ವರಕ್ಕೆ ಇವರ ಮದ್ದಲೆ ವಾದನ ಆ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಎರಡೂ ಮದಗಜದ ತುಮುಲ ಹೋರಾಟದಂತೆ ಪ್ರೇಕ್ಷಕ ಅದನ್ನು
ಅನುಭವಿಸುತ್ತಿದ್ದ. ಮದ್ದಲೆಯಿಂದ ಹೊರಡುವ ಆ ನಾದ
ಇಂದಿನ ಮೃದಂಗದಲ್ಲಿ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಮದಗಜಗಳ ತುಮುಲ ತುರುಸು ಮುರಿಸಿನ
ಹೋರಾಟದಲ್ಲಿ ಜಯಾಪಜಯಗಳ ಲೆಕ್ಕವಿಲ್ಲ. ಕೇವಲ ಜ್ಞಾನ ಸಂಘರ್ಷವಿರುತ್ತಿತ್ತು. ಈ ಸಂಘರ್ಷ
ಪರಾಕಾಷ್ಠೆಗೆ ಮುಟ್ಟುವುದನ್ನೇ ಪ್ರೇಕ್ಷಕ ಕಾದಿರುತ್ತಿದ್ದ. ಸಿನಿಮಾ ನಾಟಕದಲ್ಲಿರುವ ಲಿಖಿತ
ಸಂಭಾಷಣೆ (scripted dialogue) ಇಲ್ಲಿರುವುದಿಲ್ಲ. ಎಲ್ಲವೂ ಸಾಂದರ್ಭಿಕ ಸೃಷ್ಟಿಯಾಗಿರುತ್ತಿತ್ತು. ಹೀಗಾಗಿ
ಬಲಿಪ್ಪ ಮತ್ತು ನಾರಣಪ್ಪರ ಜತೆಗಾರಿಗೆ ಅದು ಅತ್ಯಂತ ಜನಪ್ರಿಯ ಜತೆಗಾರಿಕೆಯಾಗಿ ಹೆಸರು
ಮಾಡಿತ್ತು. ಗಜಕಾಳಗ ಎಂದರೆ ಅದರ ರೋಚಕತೆಯ ಪರಾಕಾಷ್ಠೆ ಯಾವ ರೀತಿಯದ್ದಾಗಿರಬಹುದು? ಮುಮ್ಮೇಳದ ವಾದ ಸಂವಾದದ ರೋಚಕತೆಯಂತೆ ಇದೂ ಅತ್ಯಂತ ರೋಚಕ
ಸ್ಥಿತಿಯನ್ನು ತಲುಪುತ್ತಿತ್ತು. ಇದು ಅನುಭವಿಗಳು ಹೇಳುವ ಮಾತು. ಅದನ್ನು ಈಗ ಕಲ್ಪಿಸಿದರೆ
ರೋಮಾಂಚನವಾಗುತ್ತದೆ. ಅದು ಯಕ್ಷಗಾನದ ನಿಜವಾದ ಸಂಪತ್ತು. ವಾದಕನ ಮುಂದೆ ಮಂಡಿಯೂರುವ ಮದ್ದಲೆ
ಕುಣಿದು ಕುಪ್ಪಳಿಸುತ್ತದೆ ಎನ್ನುವುದಕ್ಕಿಂತಲೂ ಅದು ತನ್ನೆಲ್ಲ ಸಾಮಾರ್ಥ್ಯವನ್ನು ವಾದಕನಿಗೆ
ಒಪ್ಪಿಸಿ ಉಪಯೋಗಿಸುವ ಹಕ್ಕನ್ನು ನೀಡಿದಂತೆ ಭಾಸವಾಗುತ್ತಿತ್ತು.
ಕೆಮ್ಮಣ್ಣು ಶೈಲಿಯ ಬಗ್ಗೆ ವಿಚಾರ
ವಿಮರ್ಷೆಯನ್ನು ಮಾಡಿದಾಗ ಮಿತ್ರ ಶ್ರೀ ಕಟೀಲು ಸಿತ್ಲ ರಂಗನಾಥ ರಾವ್ ಈ ಪುಸ್ತಕವನ್ನು ಒದಗಿಸಿದರು. ಶ್ರೀ ಕೆಮ್ಮಣ್ಣು ನಾರಣಪ್ಪಯ್ಯ ರವರ ಬಗ್ಗೆ
ಇತೀಚೆಗೆ ಪ್ರಕಾಶನಗೊಂಡ “ಮದ್ದಳೆಯ ಮೋಡಿಗಾರ ಕೆಮ್ಮಣ್ಣು
ನಾರಣಪ್ಪಯ್ಯ” ಎಂಬ ಈ ಪುಸ್ತಕದಲ್ಲಿ ಉಲ್ಲೇಖಿಸಿದಂತೆ ೧೮೯೬ ರಿಂದ ೧೯೭೬ ರ
ತನಕ. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ
ಶ್ಯಾನುಭೋಗರ ವೃತ್ತಿಯಲ್ಲಿದ್ದರು. ಇವರ ಬಗ್ಗೆ ಪ್ರಕಾಶಗೊಂಡ ಏಕಮಾತ್ರ ಪುಸ್ತಕವಿದು. ನಾರಣಪ್ಪನವರ
ಬಗ್ಗೆ ಬಹಳಷ್ಟು ಮಾಹಿತಿಗಳು ಈ ಪುಸ್ತಕದಲ್ಲಿ ಲಭ್ಯವಿದೆ.
ಡಾ. ಯೋಗೀಶ್ ಕೈರೋಡಿ ಲೇಖಕರಾಗಿರುವ ಈ ಪುಸ್ತಕದ ಪ್ರಕಾಶನವನ್ನು ಕನ್ನಡ ಸಂಘ
ಕಾಂತಾವರ(ರಿ) ಮಾಡಿದೆ. ಇದರಲ್ಲಿ ಇವರು ಬರೆದ
ಎರಡು ಪ್ರಸಂಗಗಳೂ ಈ ಪುಸ್ತಕದಲ್ಲಿ ಮುದ್ರಿಸಲ್ಪಟ್ಟಿದೆ. ಈಗಿನ ಉಡುಪಿ ಜಿಲ್ಲೆಯ ಕಾರ್ಕಳ
ತಾಲೂಕಿನ ಕೆಮ್ಮಣ್ಣು(ನಿಟ್ಟೆ)ಯಲ್ಲಿದ್ದ ಶ್ರೀನಿವಾಸಯ್ಯ ಮತ್ತು ಭವಾನಿಯಮ್ಮ ದಂಪತಿಗಳ
ಸುಪುತ್ರರು. ಬಾಲ್ಯದಲ್ಲೇ ಯಕ್ಷಗಾನದ ವಾತಾವರಣವಿದ್ದ
ಮನೆ. ತಂದೆಯವರು ಸ್ವತಃ ಭಾಗವತರಾಗಿದ್ದರು.
ಯಾವುದೇ ಮೇಳದಲ್ಲಿ ವೃತ್ತಿಪರ ಕಲಾವಿದರಾಗಿರದೇ ಹವ್ಯಾಸಿ ಕಲಾವಿದರಾಗಿದ್ದರು. ಹಲವು
ಹಿರಿಯರು ಒಡನಾಡಿಗಳು ನಾರಣಪ್ಪಯ್ಯ ನವರ ನೆನಪುಗಳನ್ನು ಈ ಪುಸ್ತಕದಲ್ಲಿ ಸ್ಮರಿಸಿರುತ್ತಾರೆ.
ಸದ್ಯದಲ್ಲಿ ಇದು ನಾರಣಪ್ಪನವರ ಬಗೆಗಿರುವ ಏಕ
ಮಾತ್ರ ದಾಖಲೆ. ಇಂತಹ ದೈತ್ಯ ಪ್ರತಿಭೆಗಳಿದ್ದರೂ ನಾರಣಪ್ಪನವರು ಯಾವುದೇ ಮೇಳದ ತಿರುಗಾಟ ಮಾಡಲಿಲ್ಲ.
ಹವ್ಯಾಸಿ ಕಲಾವಿದರಾಗಿಯೇ ಇದ್ದವರು. ಅಂದು ಕಠಿಣವಾದ ಶಾನುಭೋಗ ವೃತ್ತಿಯಲ್ಲಿದ್ದುಕೊಂಡು ಊರೂರು
ತಿರುಗುತ್ತಿದ್ದರೂ ತಮ್ಮಲ್ಲಿದ್ದ ಯಕ್ಷಗಾನ
ಆಸಕ್ತಿಯನ್ನು ಬೆಳೆಸಿಕೊಂಡು ಬಂದವರು. ಒಂದು ವಿಶಿಷ್ಟ ಶೈಲಿಗೆ ಹರಿಕಾರರಾಗಿ ಬದುಕಿದವರು. ಚೆಂಡೆ
ಮದ್ದಲೆ ವಾದಕರಾಗಿಯೂ ಭಾಗವತರಾಗಿ ಪ್ರಸಂಗ ಕರ್ತರಾಗಿ ತಮ್ಮ ಕಲಾಜೀವನವನ್ನು ಸಲ್ಲಿಸಿದವರು.
ಭಾಗವತ ಬ್ರಹ್ಮ ದಿವಂಗತ ಹಿರಿಯ ಬಲಿಪ ನಾರಾಯಣ ಭಾಗವತರನ್ನು ಮತ್ತು ಸುಬ್ಬಣ್ಣಿ ಮದ್ಲೆಗಾರರನ್ನು
ಗುರು ಸ್ಥಾನದಲ್ಲಿ ಕಂಡುಕೊಂಡವರು. ಆರ್ಥಿಕ ಫಲಾಪೇಕ್ಷೆಯ ಹಿಂದೆ ಹೋಗದೆ ಕೇವಲ ಹವ್ಯಾಸಿಗಳಾಗಿ
ಅಪ್ರತಿಮ ಸಾಧನೆ ಮಾಡಿದವರು. ಮದ್ದಲೆ ವಾದನಕ್ಕೆ
ತನ್ನ ವಿಶಿಷ್ಟ ಶೈಲಿಯಿಂದ ಸ್ಟಾರ್ ವಾಲ್ಯು (ತಾರಮೌಲ್ಯ)ವನ್ನು ಒದಗಿಸಿದವರು. ನೆಡ್ಲೆಯಂತಹ ಹಲವು ಹಿರಿಯ ಕಲಾವಿದರು ಇವರ ಶಿಷ್ಯವರ್ಗದಲ್ಲಿದ್ದರು.
ಮದ್ದಲೆಯ ಮೇಲೆ ಪ್ರಹಾರವನ್ನೇ ಮಾಡುವಂತಹ ಈ ವಿಶಿಷ್ಟ ಶೈಲಿ ಯಕ್ಷಗಾನ ಲೋಕದ ಒಂದು ಅದ್ಭುತ ವಿಷಯವೆಂದರೆ ತಪ್ಪಲ್ಲ. ಮದ್ದಲೆಯ ವಾದನಕ್ಕೆ ಪಠ್ಯ ಪುಸ್ತಕವೇನಾದರೂ
ರಚಿಸಲ್ಪಟ್ಟರೆ ಅದರ ಮಹತ್ವದ ಪುಟಗಳು ಕೆಮ್ಮಣ್ಣು ನಾರಣಪ್ಪ ಶೈಲಿಗೆ ಮೀಸಲಿರಿಸಬೇಕಾಗಬಹುದು. ಆದರೆ
ಆ ಪಾಠವನ್ನು ಬರೆಯುವವರು ಯಾರು ಎಂಬುದೇ ಪ್ರಶ್ನೆ. ಇಂತಹ ತಾರಾಮೌಲ್ಯದ ಸಾಧಕನ ಸ್ಮರಣೆಯನ್ನೇ
ಯಕ್ಷಗಾನ ಪ್ರಪಂಚ ಅಷ್ಟಾಗಿ ಉಳಿಸಿಕೊಂಡಿಲ್ಲ ಎಂದರೆ ಈ ಜನಾಂಗದ ಅನುಸರಣೆಯ ಮಟ್ಟ ಎಷ್ಟು ಕುಸಿದು
ಹೋಗಿದೆ ಎಂದು ಅರ್ಥವಾಗುತ್ತದೆ.
ಇಂದು
ಈ ಶೈಲಿಯ ಬಗ್ಗೆ ಬಹಳ ವಿರಳವಾಗಿ ತಿಳಿದುಕೊಂಡಿರುವಲ್ಲಿ,
ಈ ಶೈಲಿಯನ್ನು ನುಡಿಸುವ ಬಗ್ಗೆ ತಿಳಿದಿರಬಹುದಾದ
ಪ್ರೆಮೇಯವಂತೂ ಬಹಳ ಕಡಿಮೆ ಎನ್ನಬೇಕು. ಮೂಲ ಯಕ್ಷಗಾನದ
ಶೈಲಿಯಿಂದ ಬಹುತೇಕ ದೂರವಾಗಿರುವ ಇಂದಿನ
ಯಕ್ಷಗಾನದ ಹಿಮ್ಮೇಳದ ನಡುವೆ ಈ ಶೈಲಿ ಅರಿವಿಲ್ಲದೇ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ತಾಳ
ಲಯದಿಂದ ಕೂಡಿದ ಯಕ್ಷಗಾನ ಪರಂಪರೆ ಎಂಬುದು ಕರ್ನಾಟಕ ಸಂಗೀತದ ರಾಗ ಧಾಳಿ ಇನ್ನಿಲ್ಲದಂತೆ ನಾಶವಾಗಿ
ಹೋಗಿದೆ. ಛಂದಸ್ಸು ತಾಳ ಲಯ ಇವೆಲ್ಲವನ್ನೂ
ಕಳೆದುಕೊಂಡು ಯಕ್ಶಗಾನ ಹಿಮ್ಮೇಳ ಯಾವಾಗ ರಾಗದ ಪ್ರಭಾವಕ್ಕೆ ಒಳಗಾಗಿ ತನ್ನ ಸಹಜ ಸೌಂದರ್ಯವನ್ನು
ಕಳೆದುಕೊಂಡಿತೋ ಅಂದಿನಿಂದ ಈ ಮದ್ದಲೆಯ ಶೈಲಿ ದೂರವಾಗಿ ಬಿಟ್ಟಿತು. ಅತ್ತ ಕರ್ನಾಟಕ ಸಂಗೀತವೂ
ಅಲ್ಲದ ಇತ್ತ ಯಕ್ಷಗಾನವೂ ಅಲ್ಲದ ಇದು ಒಂದು ರೀತಿಯ, ಯಕ್ಷಗಾನವೆಂಬ ಗಂಡು ಕಲೆಯ ಗಂಡೂ ಅಲ್ಲದ ಹೆಣ್ಣು ಅಲ್ಲದಂತಹ ಸ್ಥಿತಿ. ಈ ಮದ್ದಲೆ ವಾದನದ ಸ್ಮರಣೆ ಇದ್ದವನಿಗೆ ಮಾತ್ರವೇ ಇದು ಅರ್ಥವಾಗಲು ಸಾಧ್ಯ.
ಕ್ರಮೇಣ ಈ ಶೈಲಿ ಯಕ್ಷಗಾನ ಕ್ಷೇತ್ರದಿಂದ ದೂರವಾಯಿತು.
ಇಂದು ನೆನಪಿನಲ್ಲೇ ಇಲ್ಲದಂತೆ ಅಳಿಸಿಹೋಗಿದೆ. ಇದಕ್ಕೆ ಕಾರಣವನ್ನು ವಿಶ್ಲೇಷಿಸುತ್ತಾ ಹೋದರೆ
ಹಲವು ಕಾರಣಗಳು ಸಿಗುತ್ತವೆ. ಯಕ್ಷಗಾನ ಹಿಮ್ಮೇಳದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಳಕೆ
ಯಾವಾಗಿನಿಂದ ಆರಂಭವಾಯಿತೋ ಅಂದಿನಿಂದ ಇದರ ಅಳಿವಿಗೆ ಮುನ್ನುಡಿ ಬರೆದಾಗಿತ್ತು. ಭಾಗವತ ಹೇಗಿರುತ್ತಾನೋ
ಹಾಗೆ ಮದ್ದಲೆಗಾರ ಇರುವುದು ಸಾಮಾನ್ಯ. ರಾಗ ವೈವಿಧ್ಯಗಳ ನಡುವೆ ಯಕ್ಷಗಾನದ ಶಾಸ್ತ್ರೀಯ ಮಟ್ಟುಗಳು
ಗೌಣವಾಗತೊಡಗಿತು. ಛಂದಸ್ಸು ತಾಳ ಲಯದಿಂದ ತೊಡಗಬೇಕಾದಲ್ಲಿ ರಾಗದ ಅನ್ವೇಷಣೆ ಸಂಶೋಧನೆ
ಅಲವಡಿಕೆಗಳು ತೊಡಗಿ ಮದ್ದಲೆಯ ಕೌಶಲ್ಯವಾದನ ಬದಿಗೆ ಸರಿದು ಅದನ್ನೇ ಅನುಸರಿಸುವ ಕಲಾವಿದ
ಮೂಲೆಗುಂಪಾಗಿ ಅವಜ್ಞೆಗೆ ಒಳಗಾದ. ಇದು ಕೆಮ್ಮಣ್ಣು ಶೈಲಿ
ಎಂಬ ಶುದ್ದ ಯಕ್ಷಗಾನ ಶೈಲಿ ಕರ್ನಾಟಕ ಸಂಗೀತಕ್ಕೆ ಹೊಂದಿಕೊಳ್ಳದಾಯಿತು. ಅಥವಾ ಯಾವುದೇ
ಭಾಗವತನೂ ಅದನ್ನು ಅವಲಂಬಿಸದೇ ಹೋದ. ಜನಪ್ರಿಯತೆಯ ದಾಹ ಇದಕ್ಕೆ ಕಾರಣ. ಬದಲಾದ ಪರಿಸ್ಥಿತಿಯಲ್ಲಿ ಮದ್ದಲೆಯ ಪೆಟ್ಟುಗಳನ್ನು
ಮರೆತು ಹೊಸಯುಗಕ್ಕೆ ಹೊಂದಿಕೊಂಡ ಕಲಾವಿದನಷ್ಟೇ ಚಲಾವಣೆಯ ನಾಣ್ಯವಾಗಿ ಯಕ್ಷಗಾನದ ಜೇಬಿನಲ್ಲಿ
ಸ್ಥಾನ ಪಡೆದುಕೊಂಡ. ಇಂದಿಗೂ ಕಿರಿಯ ಬಲಿಪ್ಪರು
ಹೇಳುವುದಿದೆ ನಾನು ಕರ್ನಾಟಕ ಸಂಗೀತ ಕಲಿಯಲಿಲ್ಲ. ಕೇವಲ ಯಕ್ಷಗಾನ ಮಾತ್ರ ಕಲಿತದ್ದು. ಹಾಗಾಗಿ
ಅವರು ರಾಷ್ಟ್ರಗೀತೆ ಜನಗಣ ಮನವನ್ನು ಹಾಡಿದರೂ ಅದು ಯಕ್ಷಗಾನದ ಪದವಾಗಿಯೇ ಭಾಸವಾಗುತ್ತದೆ.
ನಾರಣಪ್ಪನವರ ಶೈಲಿಯೂ ಅದೇ ಆಗಿತ್ತು ಎಂಬುದಕ್ಕೆ ಇದು ಸೂಕ್ತ ನಿದರ್ಶನ. ಇಂತಹ ಸನ್ನಿವೇಶದಲ್ಲೂ
ಮಂಡೆಚ್ಚರ ಹಾಡುಗಾರಿಕೆ ನೆನಪಾಗುತ್ತದೆ. ಸಂಗೀತವನ್ನು ಅಲವಡಿಸಿದರೂ ಅವರೆಂದೂ ಕಿರುಚಿಕೊಂಡದ್ದು
ನಾನು ಕೇಳಲಿಲ್ಲ. ಆ ಸಂಗೀತ ಶೈಲಿ ಯಕ್ಷಗಾನದ
ರಂಗತಂತ್ರದಿಂದ ದೂರಾಗಿ ನಿಲ್ಲಲಿಲ್ಲ. ಯಕ್ಷಗಾನ
ಸಂಗೀತವೆಂದರೆ ಬರೀ ಕಿರುಚಾಟ ಎಂಬಂತಾಗಿದೆ. ಯಕ್ಷಗಾನವನ್ನು ಹೊಸದಾಗಿ ನೋಡಿದ ಕರ್ನಾಟಕ ಸಂಗೀತದ
ರಸಿಕರೊಬ್ಬರು ನನ್ನಲ್ಲಿ ಕೇಳಿದ್ದರು ಯಕ್ಷಗಾನದಲ್ಲಿ ಅದೇಕೆ ಕಿರುಚಿ ಹಾಡುತ್ತಾರೆ? ಅದಕ್ಕೆ ಸರಿಯಾದ ಉತ್ತರ ಕೊಡುವಲ್ಲಿ ನಾನು
ಅಸಮರ್ಥನಾಗುತ್ತೇನೆ. ಚಪಾತಿ ಬೇಕೆಂದು ಕೇಳಿದರೆ ಗೋಧಿ ದೋಸೆ ಕೊಡುವ ಪ್ರಮೇಯ ವಿದು. ಎರಡರಲ್ಲೂ
ಹಿಟ್ಟು ಒಂದೇ. ವೆತ್ಯಾಸದ ಅರಿವಿದ್ದವನಿಗೆ ಮಾತ್ರ ಹೇಳುವುದಕ್ಕೆ ಸಾಧ್ಯ.
ದಾಹಜಲದ ಮೂಲದಂತೆ ಮೂಲ ನಾಶವಾಗುತ್ತದೆ. ಹೀಗೆ ಪುರಾತನ
ಶೈಲಿಗಳು ಅಳಿವಿನಂಚಿಗೆ ಸರಿಯುತ್ತಿದೆ. ಮನುಷ್ಯನ ದಾಹ ಮಾತ್ರ ತಣಿಯುತ್ತಿಲ್ಲ. ಇಂದು ರಾಗ ವೈವಿಧ್ಯದ ಹಿಂದೆ ಹೋಗುವುದಲ್ಲದೆ ಯಕ್ಷಗಾನದ
ಹಿಂದೆ ಹೋಗುವುದಿಲ್ಲ. ತಾಳ ಲಯ ಛಂದಸ್ಸಿನಿಂದ ತೊಡಗಿ ಆಮೇಲೆ ಆವಶ್ಯವಿದ್ದರೆ ಮಾತ್ರ ರಾಗದತ್ತ
ಸುಳಿಯುತ್ತಿದ್ದರು. ಈಗ ರಾಗದಿಂದಲೇ ತೊಡಗಿ
ತಾಳವನ್ನು ಹುಡುಕುತ್ತಾರೆ. ಇನ್ನು ಛಂದಸ್ಸು ಅದು ಬೇಡವೇ ಬೇಡ. ವರ್ತಮಾನ ಪತ್ರಿಕೆಯನ್ನು ಓದಿ
ಅದನ್ನೇ ಪದವಾಗಿ ಹಾಡ ಬಲ್ಲರು. ಹೀಗಿರುವಾಗ ಕೆಮ್ಮಣ್ಣು ಶೈಲಿ ಎಂದರೆ ಹಾಸ್ಯಾಸ್ಪದವಾಗಿ ಕಂಡರೆ
ಅಚ್ಚರಿಯಿಲ್ಲ. ಒಂದು ವೇಳೆ ಅಲ್ಲೋ ಇಲ್ಲೋ ಒಬ್ಬನೇ ಒಬ್ಬ ಈ ಶೈಲಿಯ ಮದ್ದಲೆಗಾರ ಇದ್ದರೂ ಅವರನ್ನು
ಅವಕಾಶ ವಂಚಿತರಾಗುವ ಪ್ರಮೇಯವೇ ಅಧಿಕ. ಕಲಿಯುಗದಲ್ಲಿ ದೇವರು ನಿಜವಾಗಿ ಪ್ರತ್ಯಕ್ಷವಾದರೂ ಯಾರೂ
ನಂಬುವುದಿಲ್ಲ. ಕಲ್ಲು ಹೊಡೆದು ಬಿಟ್ಟಾರು. ತಮ್ಮ ಮನಸ್ಸನ್ನು ಹೊಂದಿಸಿಕೊಳ್ಳಲಾರರು.
ಈ ನಡುವೆ ಹಿರಿಯರು ಹೇಳಿದ ಘಟನೆಯೊಂದು ನೆನಪಾಗುತ್ತದೆ.
ಅದು ಕಾಳಿಂಗ ನಾವುಡರ ಪ್ರವರ್ಧಮಾನದ ಕಾಲ. ಅವರ ಹಾಡುಗಾರಿಕೆ ಯಕ್ಷಗಾನದಲ್ಲಿ ತಿಟ್ಟು ಭೇದವಿಲ್ಲದೇ
ಕ್ರಾಂತಿಯನ್ನೇ ಉಂಟು ಮಾಡಿತ್ತು. ಅದನ್ನು ಎಲ್ಲರೂ ಹಿಂಬಾಲಿಸಿದರು. ಇಂತಹ ಸನ್ನಿವೇಶದಲ್ಲೂ
ಮಂಗಳೂರು ಪುರಭವನದಲ್ಲಿ ಯಕ್ಷಗಾನ ಬಯಲಾಟ ನಡೆಯಿತು. ಆಟದ ಪೂರ್ವಾಧದ ವರೆಗೆ ಶ್ರೀ ಕಾಳಿಂಗ
ನಾವುಡರ ಭಾಗವತಿಕೆಗೆ ಕಿಕ್ಕಿರಿದ ಜನಸ್ತೋಮ
ಸಂಪೂರ್ಣ ವಶವಾಗಿ ಬಿಟ್ಟಿತು. ಆ ಅವರಣದಿಂದ ಪ್ರೇಕ್ಷಕ ಹೊರಬರಲಾರನೋ ಎಂಬ ಭ್ರಮೆ ಆವರಿಸಿತ್ತು.
ಆನಂತರ ಬಹುಶಃ ಕರ್ಣ ಪರ್ವ ಪ್ರಸಂಗ ಇರಬೇಕು. ಹಿರಿಯ ಅಗರಿ ಶ್ರೀನಿವಾಸ ಭಾಗವತರು ಭಾಗವತಿಕೆ
ಮಾಡಿದರು. ಅಂದಿನ ಆ ಭಾಗವತಿಕೆ ಹೇಗಿತ್ತು ಎಂದರೆ ಅದುವರೆಗೆ ನಾವುಡರು ನಿರ್ಮಿಸಿದ್ದ ಆ ಭ್ರಮಾ
ಲೋಕವನ್ನು ಅಗರಿಯವರು ಭೇದಿಸಿ ಬಿಟ್ಟಿದ್ದರು. ಇದು ಪರಸ್ಪರ ಹೋಲಿಕೆಯಲ್ಲ. ಅಗರಿ ಎಂಬ ಯಕ್ಷಗಾನದ
ಮಟ್ಟು ಇದಕ್ಕೆ ಕಾರಣ. ಇಂದು ಅಗರಿ ಶೈಲಿಯ ಕಥೆಯು ವಾಸ್ತವದ ಕನ್ನಡಿಯಾಗಬಹುದು.
ಪರಿಪೂರ್ಣ ಘಾತ ಪೆಟ್ಟುಗಳಿಂದಲೇ ಅನುರಣೆ ಗೊಳ್ಳುವ ಈ
ವಿಶಿಷ್ಟ ಮದ್ದಲೆ ವಾದನವನ್ನು ಅಂದು ಚಿಪ್ಪಾರು ಬಲ್ಲಾಳರು ಅಧ್ಬುತವಾಗಿ ನುಡಿಸಿದ್ದರು. ಕೇವಲ
ಬಲ್ಲಾಳರ ಅನುಕರಣೆಯೇ ನಮ್ಮಲ್ಲಿ ಅಷ್ಟೊಂದು
ಪ್ರಭಾವವನ್ನು ಬೀರಿದ್ದರೆ ಅದರ ನೈಜ ಅನುಭವ ಪಡೆದರೆ ಹೇಗಾಗಬೇಡ. ಅಂದು ಅಷ್ಟಾದರು ಸ್ಮರಣೆಯಲ್ಲಿದ್ದದ್ದು ಇಂದು ಆ ನೆನಪು
ಸಹ ಅಳಿಸಿ ಹೋಗಿದೆ. ಅಂದು
ನಾರಣಪ್ಪನವರಂತೆ ಬಲ್ಲಾಳರು ಪೂರ್ಣ ಅವಧಿಯಲ್ಲಿ
ರಾತ್ರಿಯಿಂದ ಬೆಳಗಿನ ತನಕ ನಡೆದ ಆ ತಾಳ ಮದ್ದಲೆಯಲ್ಲಿ ಬಲಿಪ್ಪರೊಂದಿಗೆ ವಿರಾಮ ವಿಲ್ಲದೆ ಕೈ
ಬದಲಿಸದೇ ಏಕಾಂಗಿಯಾಗಿ ಬಲ್ಲಾಳರು ಮದ್ದಲೆ ನುಡಿಸಿದ್ದರು. ಚೆಂಡೆ ವಾದಕಾರಾಗಿ ಅಂದು ಶ್ರೀ ಕಡಬ ನಾರಾಯಣ ಆಚಾರ್ಯ
ಇವರು ಭಾಗವಹಿಸಿದ್ದರು. ಬೆಳಗಿನ ತನಕ ಬಲ್ಲಾಳರು ಏಕ ಮಾತ್ರರಾಗಿ ಮದ್ದಲೆ ನುಡಿಸಿದ್ದು ನನಗಂತೂ
ಅದ್ಭುತ ಎನಿಸಿ ಮರೆಯಲಾರದ ಅನುಭವವನ್ನು ಒದಗಿಸಿತ್ತು.
ಮದ್ದಲೆಯ ಝೇಂಕಾರದ ನಾದದ ಸುಳಿಯಲ್ಲಿ ಪ್ರೇಕ್ಷಕ ಮಿಂದೆದ್ದರೆ ಒಂದಿಷ್ಟೂ ಕಣ್ಣು ಮಿಟುಕಿಸದೇ ಉತ್ಸಾಹದಿಂದ ದಣಿವರಿಯದೆ
ಬಲ್ಲಾಳರು ಎಂದಿನಂತೆ ತಮ್ಮ ನಿರ್ವಿಕಲ್ಪ ಭಾವದಿಂದ
ಬೆಳಗಿನ ತನಕ ಮದ್ದಲೆ ಬಡಿದು ತೋರಿಸಿದ್ದರು. ಅಂದಿನ
ಕಲಾವಿದರ ಕಸುವು ಆ ತಾದಾತ್ಮ್ಯ ಮನೋಭಾವ ಇಂದು ಬಹಳ ಅಪರೂಪ ಎನ್ನಬೇಕು.
ಭಾಗವತರು ವೇಷಧಾರಿಗಳು ಸನ್ಮಾನವನ್ನುಗಳಿಸುವಾಗ
ಹಿಮ್ಮೇಳ ವಾದಕನೂ ಸಹ ಸನ್ಮಾನವನ್ನು ಅಪೇಕ್ಷಿಸುವುದು ತಪ್ಪಲ್ಲ. ಅಪೇಕ್ಷೆಯ ಕೂಗಿನ ನಡುವೆ ಹೀಗೆ
ಮದ್ದಲೆ ವಾದನಕ್ಕೂ ತಾರಮೌಲ್ಯವನ್ನು ಒದಗಿಸಿಕೊಟ್ಟು
ಆ ಮದ್ದಲೆ ವಾದನಕ್ಕೆ ಕಾರ್ಯಕ್ರಮಮವನ್ನು
ಏರ್ಪಡಿಸುವಲ್ಲಿಗೆ ಹಿಮ್ಮೇಳದ ಹಿರಿಮೆಯನ್ನು ಎತ್ತಿ ಹಿಡಿದ ನಾರಣಪ್ಪರಂತಹ ಕಲಾವಿದರ ಸಾಧನೆ
ಸ್ಮರಣೆಗೆ ಬರಬೇಕು. ನಾವು ಏನು
ಕಳೆದುಕೊಂಡಿದ್ದೇವೆ ಎಂಬುದರ ಮೌಲ್ಯದ ತುಲನೆಯಲ್ಲಿ ಇಂದು ಗಳಿಸಿರುವುದನ್ನು ಲೆಕ್ಕ ಹಾಕಬೇಕು. ಕಳೆದು ಹೋದ ಇಂತಹ ಶೈಲಿಯ ಅಧ್ಯಯನ ಮಾಡಿ ಅದನ್ನು
ಅನುಸರಿಸಿ ಉಳಿಸಿರುತ್ತಿದ್ದರೆ ಬಯಸುವ
ಅಪೇಕ್ಷೆಗೆ ನ್ಯಾಯವನ್ನು ತೋರಿಸಿದಂತಾಗುತ್ತಿತ್ತು. ಯಾವುದೇ ಫಲಾಪೇಕ್ಷೆ ಇಲ್ಲದೇ ಕೇವಲ
ಹವ್ಯಾಸದಿಂದ ಕಲೆಯ ದಾಹವನ್ನು ತಣಿಸುವುದಕ್ಕೆ ನಿಸ್ವಾರ್ಥದಿಂದ ದುಡಿದ ಮಹನೀಯರ ಆದರ್ಶ ನಮ್ಮ
ಮುಂದಿರುವಾಗ, ವಾಣಿಜ್ಯ ಉದ್ದೇಶದ ಇಂದಿನ ಸನ್ಮಾನಗಳು ಅಂಗೀಕಾರಗಳು ಕ್ಷುಲ್ಲಕ ಎಂದೆನಿಸುತ್ತದೆ.
ಇಂದು ಯಕ್ಷಗಾನದ ಮದ್ದಲೆಯ ಬಗ್ಗೆ ವಿಚಾರ ಮಂಥನ
ಮಾಡುವಾಗ ಕೆಮ್ಮಣ್ಣು ಶೈಲಿಯನ್ನು ಮರೆತು ಮಾತನಾಡುವುದಕ್ಕೆ ಸಾಧ್ಯವಿಲ್ಲ. ಕೆಮ್ಮಣ್ಣುವಿನ ಸೌಂದರ್ಯದಂತೆ ಆ ನಾದ ಝೇಂಕಾರ ಇನ್ನೂ ಹೃದಯದಲ್ಲಿ
ಪುಟಿದೇಳುತ್ತಾ ಇದೆ. ಇದು ಆ ಕಾಲದ ಯಕ್ಷಗಾನ ರಸಿಕರ ಮನದಾಳದ ಮಾತು.