"ಇದು ವಿಮರ್ಶೆಯಲ್ಲದ ಚಿಂತನ"

Sunday, August 25, 2019

ಭಾವ ಅಭಿವ್ಯಕ್ತ ಸ್ವರೂಪ



ಅದೊಂದು ಯಕ್ಷಗಾನ ಬಯಲಾಟ. ಪ್ರಸಂಗ ಮಾಗಧವಧೆ. ವಿಶಿಷ್ಟವಾದ ಶರೀರಗಾತ್ರದ ಮೂಲಕ ಪಾತ್ರದಿಂದ ರಂಗ ತುಂಬಿಸುತ್ತಿದ್ದ ಪ್ರಸಿದ್ಧ ಕಲಾವಿದರ ಮಾಗಧನ ಪಾತ್ರ. ಯಕ್ಷಗಾನದಲ್ಲಿ ಶರೀರ ಭಾಷೆ, ಅದು ನಾಟಕ ಸಿನಿಮಾದಂತೆ ಅಲ್ಲ. ಅಲ್ಲೊಂದು ವಿಶಿಷ್ಟವಾದ ಅಭಿವ್ಯಕ್ತ ಸ್ವರೂಪವಿದೆ. ನಾಟ್ಯ ಮಾತುಗಾರಿಕೆ ಯಾವುದೂ ಅಲ್ಲದ ಒಂದು ವಿಶಿಷ್ಯ ಮ್ಯಾನರಿಸಂ ಅನ್ನಬಹುದೇನೋ ಅದುವೇ  ಹಲವು ಸಲ ಪ್ರಧಾನವಾಗುವುದುಂಟು. ಯಾಕೆಂದರೆ, ಕುಣಿಯಲು ಸಾಧ್ಯವಾಗದವರೂ  ಈ ವೈಶಿಷ್ಟ್ಯದಿಂದಲೇ ಪಾತ್ರಕ್ಕೆ ಜೀವಕಳೆ ತುಂಬಿಬಿಡುತ್ತಾರೆ. ಕೇವಲ ಮೂಲ ಪ್ರತಿಯ ಶೈಲಿಯನ್ನು ಅನುಕರಿಸಿ ಅವಲಂಬಿಸುವವನೂ ಇದಕ್ಕೆ ಎದುರಾಡದೇ ತಲೆ ಬಾಗುತ್ತಾನೆ. ಕಾರಣ, ಯಕ್ಷಗಾನದ ಪರಂಪರೆಯ ಚೌಕಟ್ಟಿನಲ್ಲೆ ಪಾತ್ರ ಅಲ್ಲಿ ವಿಜೃಂಭಿಸುತ್ತದೆ. ಅದನ್ನೆ ಕಲಾವಿದ ಪ್ರತಿಭೆ ಎನ್ನುವುದು. ಇದನ್ನೇ ವಿದ್ವಾಂಸರು ರಂಗಭಾಷೆ ಎನ್ನುತ್ತಾರೆ. ಆಯಾಯ ಕಲೆಗೆ ಅದರದ್ದೇ ಆದ ರಂಗಭಾಷೆಯಿದೆ. ಅದೇ ಭಾಷೆಯಲ್ಲಿ ಕಲಾಭಿವ್ಯಕ್ತಿಗೊಂಡಾಗ ಮಾತ್ರವೇ ಆ ಪ್ರಸ್ತುತಿ ಪ್ರೇಕ್ಷಕರನ್ನು ಅದೇ ಭಾಷೆಯಿಂದ ತಲುಪುತ್ತದೆ. ಕಲೆಯ ಬಗ್ಗೆ ಶ್ರದ್ಧೆ ಆಳವಾದ ಅಧ್ಯಯನ ಇವುಗಳಿಂದ ಮಾತ್ರವೇ ಇದು ಸಾಧ್ಯವಾಗುವುದು. 

ಮಾಗಧವಧೆ, ಅದೊಂದು ವಿಶಿಷ್ಟವಾದ ಯಕ್ಷಗಾನ ಪ್ರಸಂಗ. ಇದು ಕೆಲವೇ ಕೆಲವು ಪಾತ್ರಗಳ ಪ್ರಸಂಗ. ಅದರಲ್ಲೂ ಪ್ರಧಾನವಾಗಿ ಎರಡೇ ಎರಡು ಪಾತ್ರಗಳು. ಉಳಿದವುಗಳು ಕೇವಲ ಕಥೆಯ ಅವಶ್ಯಕತೆಗೆ ಮಾತ್ರ ಅಸ್ತಿತ್ವದಲ್ಲಿರುತ್ತವೆ.  ಪೋಷಕ ಪಾತ್ರಗಳು ಎಂದಿಟ್ಟುಕೊಳ್ಳೋಣ. ಪೋಷಕ ಪಾತ್ರಗಳು ಈ ಪ್ರಮುಖ ಪಾತ್ರಗಳನ್ನು ಪೋಷಿಸಬೇಕು. ಮೇಲ್ನೋಟಕ್ಕೆ ಪ್ರಧಾನ ಪಾತ್ರಗಳು ಮಾಗಧ ಮತ್ತು ಶ್ರೀಕೃಷ್ಣ ಎಂದು ಕಂಡು ಬಂದರೂ ಸಹ ಶ್ರೀಕೃಷ್ಣನ ಪಾತ್ರಕ್ಕೆ ಮಾಗಧನ ಪಾತ್ರದಷ್ಟು ರಂಗದಲ್ಲಿ ಅವಕಾಶವಿರುವುದಿಲ್ಲ. ಹಾಗಾಗಿ ಶ್ರೀಕೃಷ್ಣ ಪಾತ್ರವೂ ಪೋಷಕವೇ ಆಗಿ ರಂಗದಲ್ಲಿ ಮೂಡಿ ಬರುತ್ತದೆ. ಮಾಗಧ ಅಥವಾ ಜರಾಸಂಧನ ಪಾತ್ರ ರಂಗವನ್ನು ತುಂಬು ಗಾಂಭೀರ್ಯದಿಂದ ತುಂಬಲೇ ಬೇಕು. ಇಲ್ಲವಾದರೆ ಪ್ರದರ್ಶನ ಪೇಲವವಾಗಿ ಬಿಡುತ್ತದೆ. ಕಲಾವಿದನಾದವನು ಕೇವಲ ಪಾತ್ರದ ಜವಾಬ್ದಾರಿ ಮಾತ್ರವಲ್ಲ ರಂಗದ ಜವಾಬ್ದಾರಿಯನ್ನು ಪರೋಕ್ಷವಾಗಿ ಹೊರಬೇಕಾಗುತ್ತದೆ. ಈ ಅರಿವಿನಲ್ಲೇ ಆತ ಪಾತ್ರ ನಿರ್ವಹಿಸಬೇಕಾಗುತ್ತದೆ. ಈ ಪ್ರಕ್ರಿಯೆಯೇ ರಂಗಭಾಷೆಯ ಸ್ವರೂಪ.

ಭೇರಿತ್ರಯಗಳ ಭೇದನದೊಂದಿಗೆ ಮಾಗಧನ ಪ್ರವೇಶವಾಗುತ್ತದೆ.  ಅವಮಾನ, ಅನುಮಾನ ಎಲ್ಲವನ್ನೂ ಮೀರಿಸಿ ಭಯವನ್ನು ಆವರಿಸಿದ ಜರಾಸಂಧ ಆರ್ಭಟಿಸುತ್ತಾನೆ. ತಾಮಸ ಸ್ವಭಾವದ ಜರಾಸಂಧನಿಗೆ ಈ ಎಲ್ಲದರಿಂದಲೂ ಹೊರಬರುವ ಅಸಹನೆಯ ತುಡಿತ. ಆದರೆ ಅದು ಸಾಧ್ಯವಾಗದೇ ಆ ಅಸಹನೆಯೇ ಆರ್ಭಟವಾಗಿ ಪ್ರಕಟವಾಗುತ್ತದೆ. ಹೆಚ್ಚು ಕುಣಿತವಿಲ್ಲ. ವಿಪರೀತ ಎನ್ನುವಂತಹ ಅಂಗಾಭಿನಯವಿಲ್ಲ.  ಕೇವಲ ಕೆಲ ಆಂಗಿಕ ಸಂಕೇತಗಳೇ ಅಲ್ಲಿ ಭಾವವನ್ನು ಪ್ರೇಕ್ಷಕನಿಗೆ ತಲಪಿಸಬೇಕು. ಬಂದವನು ಶ್ರೀಕೃಷ್ಣ ಎಂದು ತಿಳಿದಾಗ ಒಳಗೇ ಜೀವಭಯದ ಆತಂಕ. ಹದಿನೆಂಟು ಬಾರಿಯೂ ಪಲಾಯನ ಮಾಡಿದ ಶ್ರೀಕೃಷ್ಣ ಪುನಃ ಬಂದ.  ಶ್ರೀಕೃಷ್ಣನ ಜತೆಯಲ್ಲಿರುವ ಭೀಮಾರ್ಜುನರ ಆತ್ಮ ವಿಶ್ವಾಸ ಕಂಡು ಮಾಗಧ ಧೃತಿಗೆಡುತ್ತಾನೆ. ಬೋನಿನಲ್ಲಿ ಸಿಕ್ಕ ಸಿಂಹದಂತೆ ಕ್ರೋಧ ಉಕ್ಕಿ ಹತಾಶೆಯ ರೂಪದಲ್ಲಿ ಹೊರ ಪ್ರಕಟವಾಗುತ್ತದೆ.  ದೈತ್ಯ ಕಲಾವಿದರ ದೈತ್ಯ ಮಾಗಧ ಸ್ಮರಣೆಯಲ್ಲಿ ಉಳಿದುಬಿಡುತ್ತದೆ.
          
ಇನ್ನೊಂದು ಪ್ರಸಂಗ ವಾಲಿ ಸುಗ್ರೀವ ಕಾಳಗ. ಹೆಸರೇ ಸೂಚಿಸುಂತೆ ಇದೂ ಕ್ರೋಧ ವೀರಾವೇಶ ಎಲ್ಲವೂ ಪ್ರಕಟಗೊಳ್ಳುವ ಪ್ರಸಂಗ. ಮೇಲೆ ಹೇಳಿದ ಅದೇ ಕಲಾವಿದರ ವಾಲಿ. 

ಭಾನುತನುಜ ಭಳಿರೆಯನುಜ | ಬಂದೆಯಾ ಮಮ |
ಏನು ಧೈರ್ಯದಿಂದ ಕರೆದೆ | ಎಲೊ ಪರಾಕ್ರಮ ||

ಬಾ ಯುದ್ದಕ್ಕೆ ಎಂದು ತಮ್ಮ ಸುಗ್ರೀವನ ಧ್ವನಿಗೆ ಭೂಮಿಯೇ ನಡುಗುವಂತೆ ಬರುವ ವಾಲಿ. ತನ್ನಿದಿರು ಯಃಕಶ್ಚಿತ್ ತೃಣಸಮಾನವಾಗಿರುವ ಸುಗ್ರೀವನನ್ನು ಕಂಡಾಗ ಉಕ್ಕುವ ಕ್ರೋಧ ಕೇವಲ ನಿಂತ ಭಂಗಿಯಲ್ಲೇ ವ್ಯಕ್ತವಾಗುತ್ತದೆ. ಉಬ್ಬಿದ ಪುಟಿಯುವ ತೋಳುಗಳು,  ತೆರೆದುಕೊಳ್ಳುವ ಬಾಹುಗಳು, ಘನ ಗಂಭೀರದ ಗಜನಡಿಗೆ ವಾಲಿ ತನ್ನ ಪರಾಕ್ರಮದಲ್ಲಿ ಎಷ್ಟು ಅಹಂಕಾರ ಉಳ್ಳವನು ಎಂಬುದನ್ನು ಕೇವಲ ಒಂದೆರಡು ಹೆಜ್ಜೆಯಲ್ಲೇ ಮನಗವರಿಕೆಯಾಗುತ್ತದೆ. ಸುಗ್ರೀವನೇನು ಜಗತ್ತಿನ ಯಾವ ಶಕ್ತಿಯೂ ತನಗೆಣೆಯಲ್ಲ ಎಂಬುದು ಸಾಂಕೇತಿಕವಾದ ಅಭಿನಯದಿಂದಲೇ ವ್ಯಕ್ತವಾಗುತ್ತದೆ. ಇದೆಲ್ಲದಕ್ಕೂ ಜತೆಯಾಗಿರುವ ಗಡಸು ವ್ಯಾಘ್ರ ಧ್ವನಿ…..ಅಬ್ಬಾ….ಅಭಿನವ ವಾಲಿ ರಂಗವನ್ನು ಆಕ್ರಮಿಸುವ ಪರಿಗೆ ಪ್ರೇಕ್ಷಕ  ಬೆರಗಾಗಿಬಿಡುತ್ತಾನೆ.

ವಾಲಿಯನ್ನೋ ಮಾಗಧನನ್ನೋ ತಿಳಿಯದ ಯಾವ ಪ್ರೇಕ್ಷಕನೂ  ಅಲ್ಲಿರುವುದಿಲ್ಲ. ಆದರೂ ತಲ್ಲೀನನಾಗುವ ಪ್ರೇಕ್ಷಕ ಅಷ್ಟರಲ್ಲೆ ತ್ರೇತಾಯುಗಕ್ಕೊ  ದ್ವಾಪರಕ್ಕೋ ಜಾರಿಬಿಡುತ್ತಾನೆ. ಇಲ್ಲಿ ಮಾಗಧನಾಗಿ ವಾಲಿಯಾಗಿ ರಂಗವನ್ನು ಆಕ್ರಮಿಸಿ ವಿಜ್ರಂಭಿಸಿದ ಕಲಾವಿದ ಬೇರೆ ಯಾರೂ ಅಲ್ಲ. ತೆಂಕು ತಿಟ್ಟಿನ ದೈತ್ಯ ವೇಷಧಾರಿ ಎಂದೆನಿಸಲ್ಪಟ್ಟ ದಿವಂಗತ ಶ್ರೀ ಪುತ್ತೂರು ನಾರಾಯಣ ಹೆಗಡೆಯವರು.

ಶ್ರೀ ಹೆಗಡೆಯವರದು ಯಾವ ಪಾತ್ರವೇ ಆಗಲೀ. ಅತಿಯಾದ ಅಭಿನಯವೂ ಇಲ್ಲ. ಅತಿಯಾದ ಮಾತುಗಾಗರಿಕೆಯೂ ಇಲ್ಲ. ಅತಿಯಾದ ಕುಣಿತವಂತೂ ಇರಲೇ ಇಲ್ಲ. ಆದರೂ ಪಾತ್ರ ಅಭಿವ್ಯಕ್ತಿ ಸ್ವರೂಪ, ಭಾವಾಭಿನಯ ಪ್ರೇಕ್ಷಕನನ್ನು ತೃಣ ಸೂಕ್ಷ್ಮವೂ ಕದಲದಂತೆ ಮಾಡಿಬಿಡುತ್ತಿತ್ತು.  ಅದೆಷ್ಟು ಪ್ರಭಾವ ಬೀರುತ್ತದೆ ಎಂದರೆ ಇಂದಿಗೂ ವಾಲಿ ಮಾಗಧನ ಪಾತ್ರಗಳಲ್ಲಿ ಬೇರೆಯದನ್ನು ಕಲ್ಪಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಯಕ್ಷಗಾನದ ಭಾವಾಭಿನಯ ಅದು ಕುಣಿತದಲ್ಲಿ ಇಲ್ಲ. ಹಾರಾಟ ಚೀರಾಟದಲ್ಲಿ ಇಲ್ಲ. ಕೇವಲ ಯಕ್ಷಗಾನದ ಮೂಲ ಸೊಗಡಿನ  ಸೂಕ್ಷ್ಮ  ಸಂಕೇತಗಳೇನಿವೆಯೋ ಅಷ್ಟರಲ್ಲೇ  ಅಲ್ಲಿ ಭಾವೋತ್ಕರ್ಷವನ್ನು  ಪಡೆಯುತ್ತವೆ. ಪ್ರತಿಯೊಂದನ್ನೂ ಬಿಡಿಸಿ ಸಂಧಿವಿಂಗಡಿಸಿ ವಿವರಿಸುವ ಆವಶ್ಯಕತೆ ಇರುವುದಿಲ್ಲ. ಹಲವು ಸಲ ಒಂದು ಕಾವ್ಯವನ್ನು ವಿಂಗಡಿಸಿ ವಿಂಗಡಿಸಿ ವಿವರಿಸುತ್ತಾ ಹೋಗುವಾಗ ಮೂಲ ಕಾವ್ಯವೇ  ಮರೆತು ಹೋಗುವಂತೆ ಅತಿಯಾದ ಅಭಿನಯ ಪಾತ್ರದ ಭಾವವನ್ನೇ ಸಂಹರಿಸಿಬಿಡುತ್ತದೆ. ಎಲ್ಲವನ್ನೂ ಅಂಗಾಭಿನಯದಿಂದ ಭಾವಾಭಿನಯದ ಮೂಲಕ ಹೇಳುವುದಾದರೆ ಯಕ್ಷಗಾನದಲ್ಲಿ ಅರ್ಥಗಾರಿಕೆ ಮತ್ತು ಆಹಾರ್ಯದ ಆವಶ್ಯಕತೆಯೇ ಇರುವುದಿಲ್ಲ.

ಇಂದು ಭಾವಾಭಿನಯ ಯಕ್ಷಗಾನದಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವ ಅಂಗ. ಯಕ್ಷಗಾನದಲ್ಲಿ  ಈ ಭಾವಾಭಿನಯದ ಕೊರತೆಯನ್ನು ಯಾಕೆ ಕಂಡುಕೊಂಡರೋ ಎಂದು ಆಶ್ಚರ್ಯವಾಗುತ್ತದೆ.  ತೆಂಕು ತಿಟ್ಟಿನಲ್ಲಿ ಪೂರ್ವಾಗ್ರಹದಿಂದ ಕೊರತೆಯನ್ನೇ ಕಾಣುವ ಕೆಲವು ಮನಸ್ಸುಗಳು ಇದರಲ್ಲಿ ಭಾವಾಭಿನಯದ ಹೆಸರಲ್ಲಿ ಏನೆನೋ ಬಳಕೆಗೆ ತಂದು ಯಕ್ಷಗಾನವನ್ನು ನಾಟ್ಯರೂಪಕಕ್ಕೆ ಇಳಿಸಿಬಿಡುತ್ತಾರೆ. ಇವರೆದುರು ಈ ವರೆಗಿನ ಪರಂಪರೆಯ ಯಕ್ಷಗಾನ ಯಾಕೆ ಬಡವಾಗಿ ಕಂಡಿತೋ ಆಶ್ಚರ್ಯವಾಗುತ್ತದೆ. ಮೇಲಿನ ಎರಡು ಉದಾಹರಣೆಗಳು ಕೇವಲ ಸಂಕೇತ ಮಾತ್ರ. ಆದರೆ ಬದಲಾವಣೆಯ ಕ್ರಾಂತಿಯಲ್ಲಿ ಯಕ್ಷಗಾನ ನಾಟ್ಯರೂಪಕವಾಗಿ ಬದಲಾವಣೆಯದದ್ದು ವಿಷಾದನೀಯ ಎನ್ನಬೇಕು.

“ಭಾವಾಭಿನಯ” ಇದರ ಅತಿರೇಕವಿಲ್ಲದೇ ಯಕ್ಷಗಾನ ವಿಜೃಂಭಿಸುತ್ತಿದ್ದ ಕಾಲವಿತ್ತು. ದುಡ್ಡಿಲ್ಲದ ಸಮಯದಲ್ಲೂ ನೂರು ಇನ್ನೂರು ಸಾವಿರ ಖರ್ಚು ಮಾಡಿಕೊಂಡು ದೂರದೂರಿಗೆ ಗಾಡಿ ಮಾಡಿಕೊಂಡು ಆಟ ನೋಡುತ್ತಿದ್ದ ಪ್ರೇಕ್ಷಕವರ್ಗವನ್ನು ಕಂಡಿದ್ದೇನೆ. ಇಂದು ಮನೆಗೆ ಬಾಗಿಲಿಗೆ ಆಮಂತ್ರಣದೊಂದಿಗೆ ಉಚಿತ ಪಾಸ್ ಇಟ್ಟರೂ ಆ ಪ್ರೇಕ್ಷಕ ವರ್ಗ ರಂಗದ ಹತ್ತಿರ ಸುಳಿಯುವುದಿಲ್ಲ. ಕಾರಣ ಅತಿಯಾಗುವ ಈ ಭಾವಾಭಿನಯದಂತಹ ಇತರ ಪ್ರಯೋಗಗಳು.  ವಿಶೇಷವಾದುದನ್ನೇ ಪ್ರತಿಬಾರಿಯೂ ನೀಡುವ ಚಟದಿಂದ ಹೊಸತನ್ನು ಪ್ರಯೋಗಿಸುತ್ತಿರುವಾಗ,  ಪ್ರೇಕ್ಷಕ ಪ್ರತಿಬಾರಿಯೂ ಹೊಸತರ ತವಕದಲ್ಲೇ ಇರುತ್ತಾನೆ. ಅದು ಇಲ್ಲ ಎಂದಾದಾಗ ವಿಮುಖನಾಗುತ್ತಾನೆ.

                ಭಾವಾಭಿನಯ ಎಂದು ಭಾವ ವ್ಯತ್ಯಾಸವನ್ನೇ ತಿಳಿಯದವರು ಅಭಿವ್ಯಕ್ತಗೊಳಿಸುವುದನ್ನು ಕಾಣುವಾಗ ಭಾವಾಭಿನಯದ ಆವಶ್ಯಕತೆಯಾದರೂ ಏನು ಎಂಬ ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ. ಅದಕ್ಕಾಗಿಯೆ ಮಾಗಧ, ವಾಲಿಯ ನಿದರ್ಶನ ಕಣ್ಣ ಮುಂದೆ ಬರುತ್ತದೆ. ಒಂದು ಸಿಂಹದ ಸಿಟ್ಟಿಗೂ ಮದವೇರಿದ ಆನೆಯ ಸಿಟ್ಟಿಗೂ ಹೋಗಲಿ ಒಂದು ಕತ್ತೆಯ ಸಿಟ್ಟಿಗೂ ವ್ಯತ್ಯಾಸವಿರುತ್ತದೆ. ಗಾಯಗೊಂಡ ಸಿಂಹ ಸಿಟ್ಟಿನಲ್ಲಿ ಆ ಗಾಯದಿಂದ ರೋದಿಸುವುದಿಲ್ಲ ಬದಲು ಮತ್ತಷ್ಟು ಘರ್ಜಿಸುತ್ತದೆ. ತಡೆಯಲಾರದ ವೇದನೆಯನ್ನು ಅದು ತನ್ನ ಕ್ರೊಧದಿಂದಲೇ ತಡೆದುಕೊಳ್ಳುವ ಪ್ರಯತ್ನ ಮಾಡುತ್ತದೆ.  ನೋವು ಹೆಚ್ಚಾದಂತೆ ಸಿಂಹ ಅಳುವುದಿಲ್ಲ. ಮತ್ತಷ್ಟೂ ಅರಚುತ್ತದೆ. ಅದೇ ಆನೆಯಾದರೆ ಇನ್ನೊಂದು ಬಗೆ.  ಹಾಗೆ ಈ ಭಾವವ್ಯತ್ಯಾಸಗಳು ಪಾತ್ರಗಳಲ್ಲೂ ಇರುತ್ತದೆ. ಮಾಗಧನ ಕ್ರೋಧಕ್ಕೂ ವಾಲಿಯ ಕ್ರೋಧಕ್ಕೂ ವ್ಯತ್ಯಾಸವನ್ನು ಗುರುತಿಸಬೇಕು. ಯಾಕೆಂದರೆ  ಪ್ರೇಕ್ಷಕನಿಗೆ ಈ ಎರಡು ಪಾತ್ರಗಳ ಬಗ್ಗೆ ಚೆನ್ನಾಗಿ ಅರಿವಿರುತ್ತದೆ. ಶ್ರೀ ರಾಮನ ಕ್ರೋಧಕ್ಕೂ ಶ್ರೀಕೃಷ್ಣನ ಸಿಟ್ಟಿಗೂ ವೆತ್ಯಾಸವಿದೆ. ಎರಡೂ ಒಬ್ಬನದೇ ಅವತಾರಗಳು.  ದುರಂತವೆಂದರೆ ಕಲಾವಿದ ಇದರ ಬಗ್ಗೆ ಗಂಭೀರವಾಗಿ ಚಿಂತಿಸದಿರುವುದು. ಏರು ಪದ ಬಂದ ತಕ್ಷಣ ಒಟ್ಟು ರಂಗಸ್ಥಳ ಪುಡಿಗಟ್ಟುವಂತೆ ಕುಣಿದು ಬಿಡುವುದು.  ಇಂದು ಎಲ್ಲ ಪಾತ್ರಗಳ ಏರು ಪದಗಳು ಸಾಮಾನ್ಯವೆಂಬಂತೆ ಕಂಡುಬರುತ್ತದೆ. ಹರುಷ, ಕ್ರೋಧ, ವೀರ ಮುಂತಾದ ಭಾವ ಪ್ರಕಟಣೆಗಳು ಪಾತ್ರದಿಂದ ಪಾತ್ರಕ್ಕೆ ವ್ಯತ್ಯಾಸವೇ ಇರುವುದಿಲ್ಲ. ಇದಕ್ಕೆ ಮೂಲ ಯಕ್ಷಗಾನದ ಅಧ್ಯಯನದ ಕೊರತೆಯೇ ಕಾರಣ.

                ಯಕ್ಷಗಾನದ ಇಂತಹ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳು ಸುಲಭದಲ್ಲಿ ಅಧ್ಯಯನಕ್ಕೆ ಲಭ್ಯವಿರುವುದಿಲ್ಲ.  ಹಿರಿಯ ಕಲಾವಿದರೂ ಶಿಕ್ಷಕರು ಸಂಪನ್ಮೂಲವಾಗಿ ಇದ್ದರೂ ಅವರನ್ನು ಅವಗಣಿಸಿ ಮಾಸಾಶನ ಕೊಟ್ಟು ಮೂಲೆಗಿರಿಸಿ ಕಾಲ ಎಷ್ಟೋ ಕಳೆದಿದೆ. ಕೇವಲ ಗಂಧದ ಹಾರಕ್ಕಷ್ಟೇ ಸೀಮಿತವಾಗಿಸುವ ಅವರ ಜ್ಞಾನ ಪ್ರಸ್ತುತದಲ್ಲಿ ಬೇಕು ಎಂದು ಅನ್ನಿಸುವುದಿಲ್ಲ.

                ಯಕ್ಷಗಾನದ ಕುಣಿತ ಅಭಿನಯಗಳನ್ನು ಯಕ್ಷಗಾನವಾಗಿಯೇ ಕಲಿಯುವ ಅರ್ಪಣಾಭಾವ ಇಲ್ಲ. ಭರತನಾಟ್ಯವಾದರೂ ಅಮೂಲಾಗ್ರವಾಗಿ ಕಲಿಯುವುದಕ್ಕೆ ವರ್ಷಗಳ ಸಾಧನೆ ಬೇಕು. ಜೀವಮಾನದ ಸಾಧನೆ ಮಾಡಿದವರೂ ಇನ್ನೂ ಕಲಿಯಲಿಕ್ಕಿದೆ ಎಂಬ ಹಪಹಪಿಕೆಯಲ್ಲಿದ್ದರೆ, ಇಲ್ಲಿ ಯಕ್ಷಗಾನದ ಅವಗಣನೆ ಎಷ್ಟು ಎಂದರೆ, ಒಂದು ವಾರದ ತರಗತಿಯ ನಂತರ ಆತ ರಂಗಸ್ಥಳವೇರಿ ಪ್ರದರ್ಶನ ನೀಡಲು ಅರ್ಹನಾಗುತ್ತಾನೆ. ವಿಚಿತ್ರವೆನಿಸುತ್ತದೆ.  ಯಕ್ಷಗಾನದ ಸೂಕ್ಷಾತಿಸೂಕ್ಷ್ಮ ವಿಚಾರಗಳನ್ನು ಕೇವಲ ಜ್ಞಾನಾರ್ಜನೆಗಾದರೂ ತಿಳಿದುಕೊಳ್ಳುವ ಮನೋಭಾವದ ಕೊರತೆ ಕಾಣುತ್ತಿದೆ.  ಅವರವರ ಭಾವಕ್ಕೆ ತಕ್ಕಂತೆ ಯಕ್ಷಗಾನ ಕೆಲವೊಮ್ಮೆ ನಾಟಕವಾಗುತ್ತದೆ, ಭರತನಾಟ್ಯವಾಗುತ್ತದೆ, ಸಂಗೀತ ಕಛೇರಿಯಾಗುತ್ತದೆ, ನಾಟ್ಯ ರೂಪಕವಾಗುತ್ತದೆ. ಆದರೆ ಯಕ್ಷಗಾನ ಮಾತ್ರ ಆಗದೇ ಉಳಿಯುತ್ತದೆ. ಯಕ್ಷಗಾನ ಹೇಗೆ ಎಂಬ ಸ್ಪಷ್ಟ ತಿಳುವಳಿಕೆಯೇ ಇಲ್ಲದಿರುವುದು ಇದ್ದರೂ ಅದರ ಅವಗಣನೆ ಮನುಷ್ಯ ಸ್ವಾರ್ಥದ ಸಂಕೇತವಾಗಿ ಭಾಸವಾಗುತ್ತದೆ.

                ಯಕ್ಷಗಾನದಲ್ಲಿ ಪಾತ್ರದ ಸ್ವಭಾವದ ಅನಾವರಣ ಮುಖ್ಯವಾಗಿ ಮುಖವರ್ಣಿಕೆಯ ಬಣ್ಣಗಳು ಮತ್ತು ಆಹಾರ್ಯದಿಂದ ವ್ಯಕ್ತಗೊಳ್ಳುತ್ತದೆ. ಪಾತ್ರದ ಸ್ವಭಾವ ಇಂಥದ್ದು ಎಂದು ಮುಖವರ್ಣಿಕೆ ಮತ್ತು ಆಹಾರ್ಯದ ಮೂಲಕ ತಿಳಿಸಿದ ಮೇಲೆ ಭಾವಪ್ರತಿಪಾದನೆಯೆನ್ನುವುದು ಒಂದು Finishing Touch ಕೊಟ್ಟಷ್ಟು ಇದ್ದರೆ ಸಾಕಾಗುತ್ತದೆ. ಉದಾಹರಣೆಗೆ ಮಾಗಧ, ವಾಲಿ ಮೊದಲಾದವುಗಳು ಕೇಸರಿ ತಟ್ಟಿಯ ಬಣ್ಣದ ವೇಷಗಳು. ಇಲ್ಲಿ ಮುಖವರ್ಣಿಕೆಯ ಬಣ್ಣದ ಮೂಲಕ ಮತ್ತು ಆಹಾರ್ಯದ ಮೂಲಕವೇ ಪಾತ್ರದ ಸ್ವಭಾವ ಚಿತ್ರಣ ದೊರಕುತ್ತದೆ. ಮುಂದೆ ಗಂಭೀರವಾಗಿ ಅದನ್ನು ಅಭಿವ್ಯಕ್ತಿಗೊಳಿಸಿದರೆ ಆಯಿತು. ಕಥಕಳಿಯಲ್ಲಿಯೂ ಕೂಡ ಇಂಥದೇ ವರ್ಗದ ವೇಷಗಳಿವೆ. ಆದರೆ ಅಲ್ಲಿ ಕಣ್ಣಿನಿಂದ ಭಾವನೆಗಳನ್ನು ತೋರಿಸುತ್ತಾರಾದರೂ ಯಕ್ಷಗಾನ ರಂಗಸ್ಥಳದಲ್ಲಿನ ಪ್ರದರ್ಶನದಂತೆಯೇ ಕಥಕಳಿಯೂ ಪ್ರದರ್ಶನವಾಗುವುದರ ಕಾರಣ ಕಥಕಳಿಯ ಕಣ್ಣಿನ ಚಲನೆಗಳು ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ಪ್ರೇಕ್ಷಕರಿಗೆ ಕಾಣಿಸುವುದಿಲ್ಲವೆಂದು ಆ ವೈಶಿಷ್ಟ್ಯವನ್ನವರು ಬಿಡದೇ ಕಾಪಿಟ್ಟು ಬಂದ ಕಾರಣ ಇಂದಿನ ವಿದ್ಯುನ್ಮಾನ ಯುಗದಲ್ಲಿ ವೀಡಿಯೋ ಚಿತ್ರೀಕರಣದ ಸಮಯದಲ್ಲಿ ಮುಖಕ್ಕೆ ಫ಼ೋಕಸ್ ಮಾಡಿ ತೋರಿಸುವಾಗ ಆ ಭಾವನೆಗಳು ವಿಶೇಷ ಪರಿಣಾಮವನ್ನು ನೀಡುತ್ತದೆ. ಯಕ್ಷಗಾನದಲ್ಲಿ ಪ್ರೇಕ್ಷಕನಿಗೆ ತಿಳಿಯುವುದಿಲ್ಲ, ಕಾಣಿಸುವುದಿಲ್ಲ ಎಂದು ಅನೇಕ ವಿಚಾರಗಳನ್ನು ಕೈಬಿಡುತ್ತ ಬಂದು ಯಕ್ಷಗಾನದ ವೈಶಿಷ್ಟ್ಯತೆಯೇನು ಎಂದು ಇತರರು ಕೇಳುವಂತಹ ಸಂದರ್ಭದ ಸೃಷ್ಟಿಗೆ ನಾವು ಕಾರಣರಾಗಿದ್ದೇವೆ. ಪರಂಪರೆಯನ್ನು, ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.

                ವೈಶಿಷ್ಟವನ್ನು ಗಮನಿಸುವುದಾದರೆ ಬಲಿಯ ಪಾತ್ರ ಬಣ್ಣದ ವೇಷ. ಆತನಲ್ಲಿ ಸಾತ್ವಿಕತೆಯಿದ್ದರೂ ಕೂಡ ತಾಮಸಿ ಗುಣವೂ ಇತ್ತು. ಅದರಿಂದಲೇ ಅಲ್ಲವೇ ದೂರ್ವಾಸನ ಶಾಪದಿಂದ ಸರ್ವವನ್ನು ಕಳೆದುಕೊಂಡ ಸ್ವರ್ಗಲೋಕವನ್ನಾದರೂ ಆತ ಯುದ್ಧದ ಮೂಲಕ ಸ್ವಾಧೀನ ಮಾಡಿಕೊಂಡದ್ದು. ಅವನಿಗಿರಬಾರದು ಎನ್ನುವ ಭಾವ ಆತನಲ್ಲಿದ್ದುದರ ದ್ಯೋತಕ ಮತ್ತು ರಾಕ್ಷಸ ಸಹಜವಾದ ದೇಹದಾರ್ಢ್ಯತೆಯ ದ್ಯೋತಕದ ರೂಪದಲ್ಲಿ ಯಕ್ಷಗಾನದಲ್ಲಿ ಬಲಿಯ ಪಾತ್ರ ಬಣ್ಣದ ವೇಷದ್ದು. ಪ್ರಹ್ಲಾದ ರಾಕ್ಷಸನಾದರೂ ಸಹ ಆತನಲ್ಲಿ ತಾಮಸ ಗುಣವೇ ಇರಲಿಲ್ಲ. ಶುದ್ಧ ಸಾತ್ವಿಕ ಗುಣದ ಪ್ರತಿಪಾದನೆಗಾಗಿ ಮತ್ತು ಪುಟ್ಟ ಮಗು ಎನ್ನುವುದರ ದ್ಯೋತಕವಾಗಿ ಪ್ರಹ್ಲಾದನ ವೇಷ ರಾಕ್ಷಸ ವೇಷದಂತಿಲ್ಲ.

                ಭಾವಾಭಿನಯ ಎಂದ ಕೂಡಲೇ ಕರುಣರಸ ಮಾತ್ರ ಹೆಚ್ಚಿನವರಿಗೆ ಗೋಚರಿಸುತ್ತದೆ. ಅದನ್ನೇ ರಂಗದಲ್ಲಿ ಪಡಿಮೂಡಿಸಲು ಪ್ರಯತ್ನಿಸುತ್ತಾರೆ. ಶ್ರೀರಾಮನ ಸೀತಾವಿಯೋಗ ಅಥವಾ ಶ್ರೀರಾಮನ ದುಃಖವೆಂದರೆ ಬಾಯಿಬಡಿದುಕೊಂಡು ಅಳುವುದಲ್ಲ. ಅದನ್ನು ಗಂಭೀರವಾಗಿ ಹಾ ಸೀತಾ ಎನ್ನುವ ಒಂದು ಉದ್ಗಾರ ಮಾತ್ರದಲ್ಲಿ ಗಂಭೀರವಾಗಿ ಪ್ರತಿಪಾದಿಸಲ್ಪಡಬೇಕು. ಅರಸನ ದುಃಖಕ್ಕೂ ಸಾಮಾನ್ಯನ ದುಃಖಕ್ಕೂ ಬಹಳ ವ್ಯತ್ಯಾಸವಿದೆ. ದುಃಖ ಎಲ್ಲರಿಗೂ ಒಂದೇ ಆದರೂ ಅಭಿವ್ಯಕ್ತಿಸುವಲ್ಲಿ ವಿಧಗಳಿವೆ ಎನ್ನುವುದೂ ಅಷ್ಟೇ ಸತ್ಯವಲ್ಲವೇ? ಅದೇ ರೀತಿಯಲ್ಲದು ವ್ಯಕ್ತವಾಗಬೇಕು. ಒಟ್ಟು ನವರಸಗಳಾದ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ ಇವುಅಳ ವ್ಯತ್ಯಾಸವನ್ನು ರಂಗದಲ್ಲಿ ಆಯಾಯ ರಂಗಭಾಷೆಯ ಮೂಲಕ ತೋರಿ ಕೊಡಬೇಕು. ಹಾಸ್ಯವೆಂದರೆ ಅದು ಅಪಹಾಸ್ಯವೋ, ಕುಚೇಷ್ಟೆಯೋ ಆಗಿ ಬಿಡಬಾರದು. ದೇವದೂತನ ಹಾಸ್ಯಕ್ಕೂ, ರಕ್ಕಸದೂತನ ಹಾಸ್ಯಕ್ಕೂ ತಾತ್ವಿಕ ವ್ಯತ್ಯಾಸಗಳಿರುವುದನ್ನು ತೋರಿಸಿಕೊಡಬೇಕು. Stand-up comidian ರೀತಿ ಎಲ್ಲಕ್ಕೂ ಒಂದೇ ಬಗೆಯಲ್ಲ ಎನ್ನುವ ತಿಳುವಳಿಕೆ ಕಲಾವಿದನಷ್ಟೇ ಆಸ್ವಾದಿಸುವ ಪ್ರೇಕ್ಷಕನಿಗೂ ಇರಬೇಕು. ರೌದ್ರ, ವೀರ, ಭಯಾನಕ, ಭೀಭತ್ಸ ರಸಗಳ ಅಭಿವ್ಯಕ್ತಿಗಳಲ್ಲಿ ಎಳ್ಳಿನಷ್ಟೂ ವ್ಯತ್ಯಾಸವಿರದೇ ಎಲ್ಲವುದಕ್ಕೂ ಒಂದೇ ರೀತಿ ಧೀಂಗಿಣ ಹಾರುವುದು ಅಂತಾಗಿ ಬಿಡಬಾರದು. ವೀರರಸದಲ್ಲಿ ಉತ್ಸಾಹ ಸ್ಥಾಯೀ ಭಾವದಲ್ಲಿದ್ದರೆ, ರೌದ್ರದಲ್ಲಿ ಕೋಪ, ಭೀಭತ್ಸದಲ್ಲಿ ಸಂದರ್ಭಾನುಸಾರ ಕ್ರೌರ್ಯ ಇರಬೇಕು.

                ಆಯಾಯ ಕಲಾಪ್ರಕಾರದ ರಂಗಭಾಷೆ ಈ ಎಲ್ಲವನ್ನೂ ಅಂದರೆ ಆಹಾರ್ಯ, ಮುಖವರ್ಣಿಕೆಯ ಬಣ್ಣ, ಮಾತುಗಾರಿಕೆ ಮತ್ತು ಆಂಗಿಕಾಭಿನಯಗಳನ್ನು ಒಳಗೊಂಡಿರಬೇಕು. ಯಕ್ಷಗಾನದಲ್ಲಿ ಈ ರಂಗಭಾಷೆ ವಿಭಿನ್ನ ಕಾರಣಗಳಿದ್ದರೂ ಒಟ್ಟಾರೆಯಾಗಿ ಯಕ್ಷಗಾನದ ಪರಂಪರೆ, ಸಂಪ್ರದಾಯದ ಬಗೆಗಿನ ತಾತ್ಸಾರ ಭಾವ ಮತ್ತು ತಮ್ಮ ದೇಣಿಗೆಯ ಬಗೆಗಿನ ವಿಪರೀತ ತುಡಿತದ ಕಾರಣದಿಂದ ನೇಪಥ್ಯಕ್ಕೆ ಸರಿದಿದೆ. ಯಕ್ಷಗಾನದ ರಂಗಭಾಷೆ ಇತರನೇಕ ಸೋದರ ಕಲೆಗಳ ರಂಗಭಾಷೆಗಳನ್ನೂ ಒಳಗೊಂಡು ಪ್ರದರ್ಶಿಸಲ್ಪಡುತ್ತಿರುವುದರಿಂದ ಪ್ರೇಕ್ಷಕರಿಗೂ ಈ ಸಂಕರ ಅರ್ಥವಾಗುತ್ತಿಲ್ಲ. ಒಳ್ಳೆಯದಾಯಿತು, ಚಂದವಾಯಿತು ಎನ್ನುವುದರಲಷ್ಟೇ ಎಲ್ಲರ ಚಿತ್ತ ಕೇಂದ್ರೀಕರಿಸಲ್ಪಟ್ಟಿದೆ. ಒಳ್ಳೆಯದಾಯಿತು, ಚಂದವಾಯಿತು ಸರಿ, ಸರಿಯಾಯಿತೇ ಎಂದು ಯಾರೂ ಯೋಚಿಸುತ್ತಿಲ್ಲ. ಸರಿಯಾದ ರೀತಿಯಲ್ಲಿ ಒಳ್ಳೆಯದಾಗಬೇಕಲ್ಲ. ಉದಾಹರಣೆಗೆ Traffic Jump ಮಾಡಿ ಪೋಲೀಸರಿಗೆ ಸಿಗದೇ ಇರುವುದರಿಂದ ಒಳ್ಳೆಯದಾಗುತ್ತದೆ ಅಂದರೆ ಹಣ ಉಳಿಯುತ್ತದೆ. ಆದರೆ ಅದು ಸರಿಯೆನಿಸುತ್ತದೆಯೇ? ಒಳ್ಳೆಯದಾಗುವುದೆಲ್ಲ ಪಥ್ಯವೆಂದೆಣಿಸುವುದಿಲ್ಲ.

ಕೊರತೆ ಇದೆ ಎಂದು ಒಂದು ಕಲೆಯ‌ಬಗ್ಗೆ  ಸಂಪೂರ್ಣ ತಳಿಯದೇ ಏನೆಲ್ಲ ತಮಗೆ ತೋಚಿದಂತೆ ಪ್ರಯೋಗಿಸುವುದು ಆ ಕಲೆಗೆ ನ್ಯಾಯ ಸಲ್ಲಿಸಿದ ಹಾಗೆ ಆಗುವುದಿಲ್ಲ. ತಲೆಯಲ್ಲಾದ ಗಾಯಕ್ಕೆ ಕಾಲಿಗೆ ವಸ್ತ್ರ ಬಿಗಿದಂತೆ. ಯಕ್ಷಗಾನದ ವೇಷಗಳು ಕಷ್ಟ ಒದಗಿದಾಗ ಹೇ ದೇವಾ ಎಂದು ತಲೆ ಮೇಲೆ ಕೈಯಿರಿಸುವುದಿದೆ. (ಇದು ಈಗೀಗ ಮಾಯಾವಾಗಿದೆ.)   ಕೈ ಇರಿಸುವುದೆಂದರೆ ಜನ ಸಾಮಾನ್ಯ ತಲೆ ಬಡಿದುಕೊಂಡಂತೆ ಅಲ್ಲ. ಅದು ಕೇವಲ ಸಂಕೇತ.  ಇಲ್ಲಿ ಅಭಿನಯಗಳು ಕೇವಲ ಸಂಕೇತಕ್ಕೆ ಮಾತ್ರ ಸೀಮಿತವಾಗಬೇಕು. ಉಳಿದವುಗಳು ಬಣ್ಣಗಾರಿಕೆ  ಮತ್ತು ವೇಷ ಭೂಷಣಗಳು ಪ್ರತಿಪಾದಿಸುತ್ತವೆ.   ಯಕ್ಷಗಾನದ ವೇಷಗಳು ಅದು ಸ್ತ್ರೀವೇಷವಾದರೂ    ಸಮಷ್ಟಿಯಲ್ಲಿ ಪುರುಷತ್ವವನ್ನೆ ಪಾಲಿಸುತ್ತದೆ.,  ಎದೆಯುಬ್ಬಿಸಿ ತಲೆ ನಿಮಿರಿಸಿ ಗಂಭೀರತೆಯನ್ನು ಪ್ರತಿಪಾದಿಸುತ್ತದೆ.  ಹಾಗಾಗಿ ಯಾವ ಭಾವ ಪ್ರಕಟನೆಯಲ್ಲೂ ಈ ಗಾಂಭೀರ್ಯವನ್ನು ಉಳಿಸುವುದು ಅನಿವಾರ್ಯ. ಅದು ಕಲೆಯ ಸಹಜಗುಣ. ಶೃಂಗಾರವಿರಲಿ ಹಾಸ್ಯವಿರಲಿ ದುಃಖವಿರಲಿ ಈ ಗಾಂಭೀರ್ಯವನ್ನು ಇರಿಸಿಕೊಂಡೇ ಪ್ರತಿಪಾದಿಸುತ್ತಿರಬೇಕು.

                ಭಾವಾಭಿನಯದ ಭ್ರಮೆಯಲ್ಲಿ ಯಕ್ಷಗಾನದ ಪರಂಪರೆಯ ಅಂಶಗಳು, ಬಣ್ಣಗಾರಿಕೆ, ನಾಟ್ಯ, ಪ್ರಸಂಗ ನಡೆ ಇವುಗಳ ಮೇಲಿನ ಮಾರಕ ಧಾಳಿ ಕೊನೆಯಾಗಬೇಕು. ಯಕ್ಷಗಾನ ನಾಟ್ಯ ರೂಪಕವಾಗದೆ ಪರಿಶುದ್ದ ಯಕ್ಷಗಾನವಾಗಿಯೇ ಉಳಿಯಬೇಕು.  ಯಕ್ಷಗಾನ,  ಅದನ್ನು ಯಕ್ಷಗಾನ ಎಂದು ಯಾಕೆ ಕರೆಯುತ್ತಾರೆ ಎಂಬ ಪರಿಜ್ಞಾನವಾದರೂ ಉಳಿಯಬೇಕು.
ಜಂಟಿ ಲೇಖಕರು – ರಾಜಕುಮಾರ್ ಎಂ ಪೈವಳಿಕೆ, ಬೆಂಗಳೂರು ಮತ್ತು ಕಟೀಲು ಸಿತ್ಲ ರಂಗನಾಥ ರಾವ್


Friday, June 21, 2019

ಮಹಾ ಮುತ್ಸದ್ಧಿ......ಶ್ರೀ (ಗೋಪಾಲ) ಕೃಷ್ಣ!!!


“ಯುದ್ದ, ಎಂದಿಗೂ ಸಮಸ್ಯೆಯನ್ನು ನಿವಾರಣೆ ಮಾಡೋದೇ ಇಲ್ಲ. ಯುದ್ದ ಮತ್ತೊಂದು ಸಮಸ್ಯೆಯನ್ನು ಹುಟ್ಟಿಸ್ತದೆ”  
ಇದು ಶ್ರೀಕೃಷ್ಣ ಧರ್ಮರಾಯನಿಗೆ ಹೇಳುವ ಮಾತು. 

(ಈ ಲೇಖನದ ಸಂಪನ್ಮೂಲ " ಶೇಣಿ ಭಾರತ" ಲೇಖಕರು  ಶ್ರೀ ಡಾ. ಗೋಪಾಲ ಕೃಷ್ಣ ಎಲ್ ಹೆಗಡೆ. ಅನಂತಾನಂತ ಕೃತಜ್ಞತೆಯ ಸ್ಮರಣೆಯೊಂದಿಗೆ. )


ಹನ್ನೆರಡು ವರ್ಷ ವನವಾಸವನ್ನು ಒಂದು ವರ್ಷ ಅಜ್ಞಾತವಾಸವನ್ನೂ ಪೂರೈಸಿದ ಮೇಲೆ ಒಪ್ಪಂದಂತೆ ದಾಯಭಾಗವನ್ನು ಸಾಮದಲ್ಲಿ ಪಡೆಯುವಲ್ಲಿ ಶ್ರೀಕೃಷ್ಣನನ್ನು ಸಂಧಾನಕ್ಕಾಗಿ ಹೋಗುವಂತೆ ಧರ್ಮರಾಯ ಬೇಡಿಕೊಳ್ಳುತ್ತಾನೆ.

ನೀತಿಯೇ ಕರುಣಾಳು ನಿನಗೆ ವಿ |
ಘಾತ ವೆಣಿಸಿದ ದುಷ್ಟನೋಳು ಸಂ|
ಪ್ರೀತಿಯೇ ಸಂಧಾನಕನುವಾಗುವರೆ ಹೇಳೆನಲು||
ಖ್ಯಾತ ಧರ್ಮಜ ನುಡಿದನಿಬರ |
ಪಾತಕವು ಮಗುಳವರ ಹೊದ್ದಿರ|
ಲಾತನಲಿ ಸಂಧಿ ಪ್ರಯತ್ನವ ಮಾಡಿಬಹುದೆಂದ ||

            ಶ್ರೀಕೃಷ್ಣನ ಧ್ವನಿಯೂ ಧರ್ಮಜನ ಇರಾದೆಯೂ ಒಂದೇ ಪದದಲ್ಲಿ ವ್ಯಕ್ತವಾಗುವ ಭಾವದ ಶ್ರೀ ಕೃಷ್ಣ ಸಂಧಾನ ಪ್ರಸಂಗದ  ಭಾಮಿನಿ ಷಟ್ಪದಿಯಲ್ಲಿನ ಈ ಪದಕ್ಕೆ ಶ್ರೀಕೃಷ್ಣನಾಗಿ ಯಕ್ಷ ವಾಚಸ್ಪತಿ  ಹರಿದಾಸ ಶ್ರೀ ಶೇಣಿಗೋಪಾಲ ಕೃಷ್ಣ ಭಟ್ಟರು ಹೇಳುವ ಅರ್ಥಗಾರಿಕೆಯಲ್ಲಿನ ಮೇಲೇ ಉದ್ದರಿಸಿದ ವಾಕ್ಯ ಒಂದು ಶ್ರೀಕೃಷ್ಣನ ಆತ್ಮವನ್ನೇ ತೆರೆದು ಬಿಟ್ಟಂತೆ ಭಾಸವಾಯಿತು. ಯುದ್ದ ಒಂದು ಪರಿಹರಿಸಿದ ಸಮಸ್ಯೆಗಳು ಯಾವುದಾದರು ಇದೆಯೇ?   ಒಂದು ಭಾಮಿನಿ ಷಟ್ಪದಿಯ ಪದದಲ್ಲಿ ಇಷ್ಟು ವಿಚಾರಗಳನ್ನು ತುಂಬಿಸಿ ಧಾರೆ ಎರೆದು ಬಿಡಬಹುದಲ್ಲ ಎಂದು ಆಶ್ಚರ್ಯವಾಗುತ್ತದೆ. 

ಯಕ್ಷಗಾನದಲ್ಲಿ ಶ್ರೀಕೃಷ್ಣ ಪಾತ್ರ ಎಂಬುದು ಯಾವ ಪ್ರಸಂಗದಲ್ಲೇ ಆಗಲಿ ಅದರ ಅರ್ಥಗಾರಿಕೆ ಬಹಳ ವಿಶಿಷ್ಟವಾಗಿರುತ್ತದೆ. ದೇವನಾಗಿಯೂ ಜ್ಞಾನಿಯಾಗಿಯೂ ನಂತರ ಯಾದವನಾಗಿಯೂ ಅರ್ಥ ಹೇಳುವಾಗ ವ್ಯಕ್ತಿತ್ವ ದರ್ಶನ ಪ್ರಾಮುಖ್ಯವಾಗುತ್ತದೆ. ಈ ಪ್ರಸಂಗದ ಶ್ರೀ ಕೃಷ್ಣನಾಗಿ ಶೇಣಿಯವರು ಹೊಸತೊಂದು ಶ್ರೀಕೃಷ್ಣನನ್ನು ತೋರಿಸಿಕೊಟ್ಟಾಗ ನಮ್ಮ ವಿಚಾರ ಲಹರಿಯನ್ನೂ ಮಸೆದ ಅನುಭವವಾಗುತ್ತದೆ. ಶ್ರೀಕೃಷ್ಣನ ನಿಲುವಿನ ಜತೆಯಲ್ಲಿ ಶೇಣಿಯವರ ಅರ್ಥಗಾರಿಕೆಯ ವೈಖರಿಯೂ ಇಲ್ಲಿ ಗಮನಾರ್ಹವಾಗಿದೆ.

ನೀತಿಯೇ ಕರುಣಾಳು...ಎಂದು ಧರ್ಮರಾಯನಂತಹ ಧರ್ಮಜ್ಞನಲ್ಲಿ ಪ್ರಶ್ನಿಸುವ ಶ್ರೀಕೃಷ್ಣ ಇಲ್ಲಿ ವಿಶ್ಲೇಷಿಸುವುದು ಧರ್ಮರಾಯನನ್ನೂ ಅಲ್ಲ, ದುರ್ಯೋಧನನ್ನೂ ಅಲ್ಲ ಬದಲಿಗೆ ಭೀಷ್ಮನನ್ನು.!! ಹೀಗೆ ಮತೂಂದು ಪಾತ್ರದ ವಿಶ್ಲೇಷಣೆಯನ್ನು ಮಾಡುತ್ತಾ ಪ್ರಸಂಗ ಚಿತ್ರಣವನ್ನು ಒದಗಿಸುವುದು ಬಹಳ ವಿಶಿಷ್ಟವಾಗಿ ಗಮನ ಸೆಳೆಯುತ್ತದೆ.

ನೀತಿ ಎಂಬುದು ಕಾಲಕ್ಕೆ ತಕ್ಕಂತೆ  ಬದಲಾಗುತ್ತದೆ. ’ಸೂರ್ಯೋದಯಕ್ಕಿಂತ ಮೊದಲು ತಣ್ಣೀರಿನಲ್ಲಿ ಸ್ನಾನ ಮಾಡಬೇಕು’  ಯಾವನಾದರೊಬ್ಬ ಯಾವುದೋ ಒಂದು ಪರದೇಶಕ್ಕೆ ಹೋದರೆ, ಅಲ್ಲಿ ಮಧ್ಯಾಹ್ನಕ್ಕಾದರೂ ಬಿಸಿ ನೀರಿನಲ್ಲೇ ಸ್ನಾನ ಮಾಡಿದರೆ ಮೂರು ದಿವಸ ಇದ್ದಾನು ಅಂತ ಆದ್ರೆ, ಅಲ್ಲಿಗೆ ಹೋಗುವಾಗ ಸೂರ್ಯೋದಯಕ್ಕಿಂತ ಮೊದಲ ತಣ್ಣೀರ ಸ್ನಾನ ಎಂಬ ನೀತಿ ಬದಲಾಗೋದಿಲ್ವೇ?  ಹಾಗಾದರೆ ನೀತಿ ಎಂಬುದು ಸ್ಥಾಯಿಯಲ್ಲ.

ಮಿಕ್ಕವರೆಲ್ಲ ಯುದ್ಧವೇ ಬೇಕು ಅಂತ ಹೇಳುವಾಗ, ಧರ್ಮರಾಯ ಒಬ್ಬ ಯುದ್ದ ಬೇಡ ಸಾಮದಲ್ಲೇ ನೋಡುವ ಎನ್ನುತ್ತಾನೆ. ಇದನ್ನು ಶ್ರೀ ಕೃಷ್ಣ ಸರ್ವಾಧಿಕಾರಿ ಮನೋವೃತ್ತಿ ಅಂತ ಹೇಳುತ್ತಾನೆ.  ಸರ್ವಾಧಿಕಾರಿ ಮನೋ ಪ್ರವೃತ್ತಿ ನೀತಿಯೇ? ಕೌರವ ಏನೇ ಹೇಳಲಿ . ಅವನು  ದುಷ್ಟ ಎಂದರೆ ನೂರು ಸಲ ಹೇಳಿ ಎನ್ನುವವ. ಯಾರ ಮಾತನ್ನೂ ಕೇಳದವನು. ತನ್ನದೇನುಂಟು ಅಂತ ಹೇಳದವನು. ಹೋಗಲಿ. ಆದರೆ  ನೀನು ಧರ್ಮರಾಯ ನಿನ್ನವರು ಏನು ಹೇಳುತ್ತಿದ್ದಾರೆ ಎಂಬುದನ್ನು ನೋಡದಿರುವುದು ನೀತಿಯೇ?  ಧರ್ಮರಾಯ, ಧರ್ಮ ಸೂಕ್ಷ್ಮವನ್ನು ಅರಿತವನು ಅನುಸರಿಸುವ ನೀತಿಯನ್ನೇ ಪ್ರಶ್ನಿಸುತ್ತಾನೆ.  

ಕೌಟುಂಬಿಕವಾಗಿ ಧರ್ಮರಾಯ ಯೋಚಿಸಬೇಕು. ಅದಕ್ಕೆ ರಾಮನ  ಒಂದು ಉದಾಹರಣೆಯನ್ನು ಕೊಡುತ್ತಾರೆ, “ ಶ್ರೀರಾಮ ದೇವರಿಂದ ನಾವು ಕಲೀಬೇಕಾಗ್ತದೆ. ’ರಾಮೋ ದುರ್ನಾಭಿಭಾಷತೇ’ ರಾಮನೇ ಹೇಳಿದ್ದು ನಾನು ಎರಡಾಡುವುದಿಲ್ಲ ಅಂತ. ಭರತ ಬಂದಾವಾಗ ,  ಬರ್ತೇನೆ   ಹದಿನಾಲ್ಕು ವರ್ಷ ಕಳೆದು ರಾಜ್ಯ ಆಳುತ್ತೇನೆ ಅಂತ ಹೇಳಿದ. ಕುರುಹಾಗಿ ತನ್ನ ಪಾದುಕೆಯನ್ನೇ ಕೊಟ್ಟ. ಒಬ್ಬ ಬುದ್ಧಿವಂತ ಹೇಳ್ಯಾನೊ     ’ ರಾಮ ಕಾಲು ಜಾರಿದ ’ ಅಂತ.    ಒಂದು ಕುಟುಂಬ ವ್ಯವಸ್ಥೆಯಲ್ಲಿ ಇದೆಲ್ಲ ಸಹಜ. ಹೊಂದಾಣಿಕೆ ಮಾಡಿಕೊಳ್ಳಬೇಕಾಗ್ತದೆ.

ನಂತರ ವಿಚಾರಧಾರೆ ಕೌರವನ ಕಡೆಗೆ ಹೊರಳಿ ಭೀಷ್ಮನಲ್ಲಿ ಕೇಂದ್ರೀಕರಿಸುತ್ತದೆ. ಇಲ್ಲಿ ಶ್ರೀ ಕೃಷ್ಣ ಭೀಷ್ಮನನ್ನು ನೋಡುವ ದೃಷ್ಟಿಕೋನವೇ ಬೇರೆ. ಹೇಳಿ ಕೇಳಿ ಭೀಷ್ಮ ಭಾಗವತೋತ್ತಮ. ಆದರೂ ಭೀಷ್ಮನ ನಿರ್ಧಾರ ಕಾಲುಜಾರಿದಂತೆ ಕಂಡು ಬರುತ್ತದೆ.   ಚಂದ್ರವಂಶದ ಹಿರಿಯ ಭೀಷ್ಮನ  ನಡೆಯನ್ನು ವಿಮರ್ಷಿಸುತ್ತಾ ಪರೋಕ್ಷವಾಗಿ ಕೃಷ್ಣ ತನ್ನ ಮನೋಗತವನ್ನು ತನ್ನ ದಾರಿಯನ್ನೂ ತಿಳಿಸುವ ಪರಿ ವಿಚಿತ್ರ. ಬಹುಷಃ ಸ್ವತಃ ಪಾತ್ರವಾದರೂ ಆಗಬಹುದು. ಆದರೆ ತದ್ರೂಪಿ  ಪಾತ್ರ ನಿರ್ಮಾಣ,  ಅದೂ ಕೇವಲ ಮಾತಿನ ಚಮತ್ಕಾರದಲ್ಲಿ, ಅದುವೇ ಅದ್ಭುತ. ಶೇಣಿ ವೈಶಿಷ್ಟ್ಯ ಇರುವುದೇ ಇಲ್ಲಿ. ಪಾತ್ರದಿಂದ ಪಾತ್ರಕ್ಕೆ ಈ ವೈವಿಧ್ಯ ಬದಲಾಗುತ್ತಾ ಹೋಗುತ್ತದೆ. ಸ್ವ ವ್ಯಕ್ತಿತ್ವವನ್ನು ವಿವರಿಸುವುದು ಸುಲಭ.  ಮತ್ತೊಂದು ವ್ಯಕ್ತಿತ್ವದಿಂದ ವಿವರಿಸುವುದು ಕಷ್ಟ.

ನಿಮ್ಮಜ್ಜ, ಎಂಥದೋ ವಿಷ ಘಳಿಗೆಯಲ್ಲಿ ಹೇಳಿದ ’ಸಿಂಹಾಸನ ಏರೋದಿಲ್ಲ. ಮದ್ವೆ ಆಗೋದಿಲ್ಲ’  ಆಗ ದೊಡ್ಡ ಕೊಡುಗೆ ಅದು. ಆದರೆ ಒಂದು,  ರಾಮನಿಗಾದದ್ದು ಭೀಷ್ಮನಿಗೆ ಅಗಲಿಲ್ಲ. ಭೀಷ್ಮ ಏನು ಯೋಚಿಸಿದ, ತನ್ನ ಉಳಿವಿಗಾಗಿ ಅಪ್ಪ ಅಮ್ಮನನ್ನೇ ಬಿಟ್ಟು ಬದುಕಿದ. ಆ ಅಪ್ಪನಿಗಾಗಿ ಏನು ಮಾಡಿದರೂ ಕಡಿಮೆಯೇ. ಪಿತೃ ಋಣ ತೀರಿಸುವ ಹಂಬಲ. ವಾಸ್ತವದಲ್ಲಿ ಅದು ಸತ್ಯ. ಆದರೂ ಏನಾಗಿ ಹೋಯಿತು?  ಸಂತಾನವೇ ಮುತ್ತಿತು. ಸಂತತಿಯೇ ಇಲ್ಲದ ಮೇಲೆ ಅಧಿಕಾರ ಯಾರಿಗೆ? ಸತ್ಯವತಿಯ ಸಂತಾನಕ್ಕೆ ರಾಜ್ಯ ಸಿಕ್ಕಿತೆ? ಸತ್ಯವತಿ ಹೇಳ್ತಾಳೇ, ನೀನೆ ಯೋಗ್ಯತಾವಂತ. ದೇವರ ಸಂಕಲ್ಪವೂ ಅದೇ. ಸಿಂಹಾಸನ ಏರು. ಭೀಷ್ಮ ಕೇಳಲಿಲ್ಲ. ಸನ್ಯಾಸಿಯಾಗೇ ಇದ್ದ. ಆದರೆ ಒಂದು ಸನ್ಯಾಸಿಯಾದವನು ಯಾಕೆ ಬದರಿಕಾಶ್ರಮಕ್ಕೆ ಹೋಗಲಿಲ್ಲ.? ಮತ್ತೂ ಹಸ್ತಿನಾವತಿಯಲ್ಲೇ ಉಳಿದ.  ಶ್ರೀ ಕೃಷ್ಣನ ದೃಷ್ಟಿಯಲ್ಲಿ ಭೀಷ್ಮನ ತ್ಯಾಗದ ಉದ್ದೇಶವೇ ವ್ಯರ್ಥವಾಗುತ್ತದೆ.

ಇಲ್ಲೊಂದು ಉದಾಹರಣೆ, ಮನೆಯಲ್ಲಿದ್ದ ಧಾನ್ಯದ ಬಗ್ಗೂ ಆಸೆ , ನೆಂಟ್ರ ಬಗ್ಗೆಯೂ ಪ್ರೀತಿ. ಪರಿಣಾಮ? ನೆಂಟ್ರಿಗೆ ಇಕ್ಕ್ಲಿಕ್ಕೆ ಮನಸ್ಸಿಲ್ಲ.  ಅದಕ್ಕವನು  ಬಂದವರಿಗೆ ಹೇಳ್ತಾನೆ  ” ಒಳ್ಳೆ ದಿವಸ ನೋಡಿ ಬಂದ್ರಲ್ಲ. ಇವತ್ತು ಏಕಾದಶಿ”   ಆಗ ಒಳಗೆ ಇದ್ದದ್ದನ್ನೂ ಊಟ ಮಾಡದೇ ಇರೋದು.  ಬಂದವರಿಗೂ ಇಲ್ಲ. ತನಗೂ ಇಲ್ಲ. ಭೀಷ್ಮನಿಗೆ  ಬಂದ ದೌರ್ಬಲ್ಯ ಅದೇ ಅಗಿಬಿಟ್ಟಿತು.

ಹೆಣ್ಣನ್ನು ತಂದ. ಮದ್ವೆ ಆಗಬಹುದಿತ್ತು. ಆಗ್ಲಿಲ್ಲ. ಕೊನೆಗೆ ನಾದಿನಿಯರಿಗೆ  ಭೀಷ್ಮನಲ್ಲೇ ನಿಯೋಗ ಮಾಡುವಂತೆ ಸತ್ಯವತಿ ಹೇಳ್ತಾಳೆ. ಭೀಷ್ಮ ತನ್ನ ಮಾತಿಗೆ ಅಚಲನಾಗಿದ್ದುದು ಎಂತಹ ದುರಂತಗಳಿಗೆ ಕಾರಣವಾಗುತ್ತದೆ.? ಶ್ರೀರಾಮನಿಗೂ ಇದ್ದದ್ದು ಪಿತೃವಾಕ್ಯ. ಭೀಷ್ಮನಿಗೂ ಅದೇ,  ತಂದೆಗಿತ್ತೆನು ಭಾಷೆಯ. ಏನು ಹೇಳಿದ? ನಿಯೋಗ ಅಂದ್ರೆ ಅದು ವ್ಯಭಿಚಾರ. ಬ್ರಹ್ಮ ಚರ್ಯ ಭಂಗವಾಗ್ತದೆ. ಆದರೆ ಇವನಿಗೆ ಮಾಡಲಾಗದೇ ಇದ್ದದ್ದು ವ್ಯಾಸರಿಗೆ ಆಗಬಹುದಂತೆ. ಕ್ಷತ್ರಿಯನಾದ ಭೀಷ್ಮನಿಗೆ ಆಗದೇ ಇದ್ದದ್ದು ವ್ಯಾಸರಿಗೆ ಆಗಬಹುದು.  ಇಲ್ಲಿ ವ್ಯಾಸರನ್ನು ನಾವು ವಿಚಾರಣೆಗೆ ಗುರಿ ಪಡಿಸಬೇಡವೇ?

ಇನ್ನು ಆ ಹೆಂಗಸರು, ಮದುವೆ ಆಗದೇ ಇದ್ದರೆ ಏನು?  ಈಗ ನಿಯೋಗವಾದರೂ ಸಾಧ್ಯವಾಗುತ್ತದಲ್ಲ.  ಭಾವ ಬರ್ತಾನೆ ಅಂತ ತಿಳ್ಕೊಂಡ್ರು.  ನಿಜವಾಗಿಯೂ ಹುಡುಗಿಯರು ಮನಸಾ ಮೆಚ್ಚಿದ್ದು ಭೀಷ್ಮನನ್ನೇ.!! ನಿಯೋಗ ಆದರೂ ಮಾಡಬಹುದಲ್ಲ? ತಾವು ಕಣ್ಣಿಟ್ಟ ಭಾವನಿಂದಲೇ ಸಂತಾನೋತ್ಪತ್ತಿಯಾಗುತ್ತದೆ. ಎಲ್ಲ ಅಲಂಕಾರ ತಯಾರಾಗಿ ಬಂದ್ರೆ ....ಬಂದ ಜನ ಯಾರು? !!

ಶ್ರೀಕೃಷ್ಣ ಹೇಳ್ತಾನೆ ’ಭೀಷ್ಮಜ್ಜ ಸಿಕ್ಕಿದರೆ ನಾನು ಕೇಳ್ತೇನೆ.’   . ವ್ಯಾಸನಿಂದ ನಿಯೋಗ ಹೇಗಾಯ್ತು? ವ್ಯಾಸ ಯಾರು? ಸತ್ಯವತಿ ದೇವಿಗೆ ಯಾರಿಂದಲೋ ಹುಟ್ಟಿದ ಕಾನೀನ ಸಂತಾನ. ಚಂದ್ರವಂಶದ ಅಭಿವೃದ್ದಿಗೆ ಅವನಿಗೇನು ಅಧಿಕಾರ.  ಹಾಗಾಗಿ ಭಾಲವಿಧವೆಯರ ಆಶೆಯೂ ಭಂಗವಾಯಿತು. ಭೀಷ್ಮನಂತಹ ರಾಜಕುಮಾರ, ಕ್ಷತ್ರಿಯನನ್ನು ನಿರೀಕ್ಷಿಸಿ ಕುಳಿತಿದ್ದ ಈ ಹೆಂಗಸು, ಈ ಅವಧೂತ ವೇಷದ ಸ್ನಾನ ಇಲ್ಲದ  ಮೈ ದುರ್ಗಂಧದದ ಇವನನ್ನು ನೋಡಿ  ಕಣ್ಣು ಮುಚ್ಚದೇ ಏನು ಮಾಡಿಯಾಳು??

ಈ ಎಲ್ಲ ದುರಂತಕ್ಕೂ ಭೀಷ್ಮನೇ ಕಾರಣ.

ಭೀಷ್ಮ ತನ್ನ ಸಂಸಾರದೊಂದಿಗಿನ ಸಂಬಂಧವೇ ಎಲ್ಲದಕ್ಕೂ ಮೂಲ ಕಾರಣವಾಗಿಬಿಟ್ಟಿತು. ಎಲ್ಲವನ್ನೂ ಬೇಡ ಅಂತ ಹೇಳಿದವನು ಕಾಡಿಗೆ ಹೋಗಬೇಕಿತ್ತು. ಹೋಗಲಿಲ್ಲ. ಎಲ್ಲವೂ ಬೇಕು ಎನ್ನುವ ಹಾಗೆ ನೋಡುತ್ತಾ ಕುಳಿತ. ಜಗಳವೇ ಬೇಡ ಎಂದು ತಟಸ್ಥವಾಗಿ ದೂರದಲ್ಲಿ ಕುಳಿತವನೂ ಕೆಲವೊಮ್ಮೆ ಜಗಗಳಕ್ಕೆ ಕಾರಣನಾಗುತ್ತಾನೆ. ಏನಾದರೂ ನಂತರ ಅವನೇ ಹೇಳಬೇಕು. ಜಗಳವಾಡಿದವರು ಅಲ್ಲಿ ಇರುವುದಿಲ್ಲ.

ಭೀಷ್ಮ ಪ್ರೇಕ್ಷಕನೂ ಅಲ್ಲ, ನಟನೂ ಅಲ್ಲ. ಆದರೆ ಇಲ್ಲಿ ಅವಿಭಾಜ್ಯವಾಗಿ ತನ್ನನ್ನು ತಾನು ಗುರುತಸಿಕೊಂಡ.

ಭೀಷ್ಮ ವಂಶದ ಬಗ್ಗೆ ಔದಾರ್ಯ ತೋರಬೇಕಿತ್ತು. “ಏನಾದ್ರೂ ಆಗ್ಲಿ ಯಾರಿಂದ ಬೇಕಾದರೂ ಸಂತಾನ ಹುಟ್ಲಿ. ಹಾಗಂತ ನನ್ಗೆ ಬಿಟ್ಟು ಹೋಗ್ಲಿಕ್ಕೂ ಉಪಾಯ ಇಲ್ಲ. “ ಇಲ್ಲಿಂದ ಆರಂಭವಾಯಿತು ಭೀಷ್ಮನ ಪತನ !. ಅವನಿಗಿದ್ದ ಮನಸ್ಸಿನ ಸಂಕಟ ಅವನಿಗೂ ಅವನ ದೇವ್ರಿಗೂ ಗೊತ್ತು. ಇನ್ನೊಬ್ರಿಗೆ ಗೊತ್ತಿಲ್ಲ. ಎಷ್ಟು ಎತ್ತರಕ್ಕೆ ಬೆಳೆದ ಭೀಷ್ಮ?  ಈಗ ಈ ಮೊಮ್ಮಕ್ಕಳ ಕಾಲಕ್ಕಾಗುವಾಗ ಸಾಯ್ಲಿಕ್ಕೆ ಉಪಾಯ ಇಲ್ಲವಲ್ಲ?  ಅಂತ ಬದುಕುವ ಪರಿಸ್ಥಿತಿಗೆ ಬಂದರೆ ಏನು ದುರಂತ ಅದು. ಹಾಗಾಗಿ ರಾಮನೇ ಸರಿ ಸಂದರ್ಭಕ್ಕೆ ಸರಿಯಾಗಿ ರಾಜಿ ಮಾಡಿಕೊಂಡ. ಭೀಷ್ಮ ಆ ಮಟ್ಟಿಗೆ ವರಟ.!  ಬೆಳೆದ ಬೆಳೆದ ದೊಡ್ಡ ಅಲದ ಮರದ ಹಾಗೆ ಬೆಳೆದ. ಊರಲ್ಲಿ ಎಲ್ಲಾ ಕೀರ್ತಿಯೂ ಭೀಷ್ಮನದ್ದು. ಆದರೆ ಕುಟುಂಬದಲ್ಲಿ?  ಈಗೊಂದು ತೋಟ ಮಾಡುವಾಗ ಒಂದೇ ಮರ ಉದ್ದಕ್ಕೂ ಅಗಲಕ್ಕೂ ಬೆಳೆದರೆ ಅದು ತೋಟವಾಗುತ್ತದಾ? ಭೀಷ್ಮ ಬೆಳೆದ ರೀತಿಯದು.

ಧರ್ಮರಾಯನಿಗೆ ಕೇಳ್ತಾನೆ    “ಒಂದು ವೇಳೆ ಭೀಷ್ಮ ನಿಯೋಗ ಮಾಡುತ್ತಿದ್ದರೆ, ಎಂಥವ್ರು ಹುಟ್ಟುತ್ತಿದ್ದರು ಭಾವ? ನಿಮ್ಮ ಅಪ್ಪನ ಹಾಗಿದ್ದವನೋ ಅಲ್ಲ ನಿಮ್ಮ ದೊಡ್ಡಪ್ಪನ ಹಾಗಿದ್ದವನೋ? ಹೋಗ್ಲಿ ಮತ್ತೊಬ್ಬಳು ಬಂದ್ಲು ದಾಸಿ. ಎಲ್ಲದಕ್ಕೂ ಸಿದ್ಧವಾಗಿಯೇ ಅವಳು ಬಂದದ್ದು. ಇವರು ರಾಜ ಕುಮಾರಿಯರು ಮೈಯ ಬಿಸಿ ಇದ್ದವರು. ವಿಲಾಸಿನಿಯರು. ಆಕೆಯೋ   ದಾಸಿ. ಶ್ರಧ್ದಾ ಭಕ್ತಿಯಿಂದ ಉಪಚರಿಸಿದಳು. ಹುಟ್ಟಿದವ ಎಂಥವನು? ಮಹಾ ಜ್ಞಾನಿ. ಆದರೆ ಪ್ರಯೋಜನ ಏನು? ಅವನಿಗೆ ಕ್ಷೇತ್ರ ದೋಷ. ಉಳಿದವರಿಗೆ ಭೀಜ ದೋಷ. ಇದನ್ನೆಲ್ಲ ಮೂಕ ಸಾಕ್ಷಿಯಾಗಿ ಭೀಷ್ಮ ನೋಡಿದ್ದನಲ್ಲವೇ? ನಾನು ಮತ್ತೆ ಭೀಷ್ಮನ ಜಾಗದಲ್ಲಿ ಇರುತ್ತಿದ್ದರೆ,  ವಿಷಯವೇ ಬೇರೆ. ಆದರೆ ಒಂದು ಹೇಳಿಬಿಡ್ತೇನೆ, ಭೀಷ್ಮನನ್ನು ತಿದ್ದುವವರು ಈ ಪ್ರಪಂಚದಲ್ಲಿ ಯಾರೂ ಇಲ್ಲ.

ಎಂತಹಾ ವಿಶ್ಲೇಷಣೆ.  ಸಂಧಾನದ ಯತ್ನದಲ್ಲಿ ಶ್ರೀಕೃಷ್ಣ ಚಂದ್ರವಂಶದ ಕುಟುಂಬದ ವಸ್ತುಸ್ಥಿತಿಯನ್ನು ತೆರೆದು ಕೊಡುತ್ತಾನೆ.  ಭೀಷ್ಮನ ವ್ಯಕ್ತಿತ್ವ ಹೇಳುವಾಗ ಶೇಣಿಯವರು ಹೆಚ್ಚು ಹೆಚ್ಚು ಆಳವಾಗುತ್ತಾರೆ. ಪ್ರತೀ  ಸಲವೂ ಭೀಷ್ಮನ ಪಾತ್ರದಲ್ಲಿ ಅವರು ಏನೋ ಒಂದು ತಾದಾತ್ಮ್ಯವನ್ನು ಅನುಭವಿಸುವುದು ಇಲ್ಲೂ ಅನುಭವವಕ್ಕೆ ಬರುತ್ತದೆ.  ಇದು ಅವರ ಹಲವು ಭೀಷ್ಮನ ಅರ್ಥಗಾರಿಕೆ ಕೇಳಿದ ಅನುಭವವಾಗಿರಬಹುದು.

ಧರ್ಮರಾಯನಿಗೆ ಒಂದು ಅರಿವಿನ ಕೊರತೆ ಇದೆ. ಎಲ್ಲಾ ಧರ್ಮ ಸೂಕ್ಷ್ಮವನ್ನೂ ತಿಳಿದವನಿಗೆ ಅವನಲ್ಲಿ ಆ ಅರಿವನ್ನು ಮೂಡಿಸುವುದು ಶ್ರೀ ಕೃಷ್ಣನ ಕಾಳಜಿಯಾಗಿರುತ್ತದೆ. ಅದಕ್ಕಾಗಿಯೆ ಕೃಷ್ಣ ಹೇಳುವುದು, “ ಧರ್ಮರಾಯ ಕರುಣಾಳು ನೀನು. ಕರುಣಾಳು ಎಂಬುದಕ್ಕೆ ಸ್ವರೂಪ ಬೇರೆ ಬೇರೆ ಉಂಟು. ಶತ್ರುವಾದರೂ ಬದುಕಲಿ ಅಂತ ಬಯಸಬಹುದು, ಆದರೆ ಬದುಕಬೇಕಾದರೆ ಶರ್ತ ಇಡುವವರು ನಾವಾಗಬೇಕು. ಆದರೆ ಇಲ್ಲಿ ಹಾಗ, ಅರ್ಧ ರಾಜ್ಯ ಬೇಡ ಐದು ಗ್ರಾಮವನ್ನಾದರು ಅವ ಕೊಟ್ಟರೆ,!!!  ಆತ ಕೊಡಲೇ ಬೇಕು ಕೊಡತಕ್ಕದ್ದು ಎಂಬುದಲ್ಲ. ಐದು ಗ್ರಾಮಕ್ಕಾದರೂ ಕೃಷ್ಣ ಸಂಧಾನವನ್ನು ಮಾಡಿ ಬರಬೇಕು. ನಿಜಕ್ಕಾದರೆ, ಈ ಹೊತ್ತಿನಲ್ಲಿ ಬದುಕಬೇಕಾದರೆ ಸಂಧಾನ ಮಾಡಬೇಕಾದವನು ಕೌರವ!!! ಗ್ರಾಮ ಕೇಳುವುದಕ್ಕೆ ಪಾಂಡುವಿನ ಮಕ್ಕಳು ಗ್ರಾಮಾಧಿಕಾರಿಗಳೋ? ಅಲ್ಲ ರಾಜ್ಯಾಧಿಕಾರಿಗಳೋ? ಇದನ್ನು ಕೌರವ ಕೇಳಿದರೆ ಉತ್ತರ ಹೇಳಬೇಕಲ್ಲ?

  ಕೊನೆಗೊಮ್ಮೆ  ಕೃಷ್ಣ ಅಂಗಲಾಚುತ್ತಾನೆ, ಧರ್ಮರಾಯ, ಹೆಚ್ಚು ಬೇಡ, ನಮಗೆ ಹಕ್ಕು ಉಂಟು ಅಂತ ಒಪ್ಪಿಕೋ ಮಾರಾಯ. ಶ್ರೀಕೃಷ್ಣ ಕುಟಿಲನಿರಬಹುದು, ತಂತ್ರಗಾರಿಕೆಯವನಿರಬಹುದು. ಒಂದು ಕಡೆಯಲ್ಲಿ ಕೃಷ್ಣನೇ ಹೇಳುತ್ತಾನೆ. ನೂರು ಶಕುನಿಯರೂ ಒಬ್ಬ ಕೃಷ್ಣನಿಗೆ ಸಮನಾಗಲಾರರು. ಆದರೆ ಇಲ್ಲಿ ಧರ್ಮರಾಯನಿಗೆ ನೀತಿ ಬೋಧೆ ಮಾಡುವ ಕೃಷ್ಣನ ವ್ಯಕ್ತಿತ್ವ ಅದ್ಭುತವಾಗಿ ಅನಾವರಣವಾಗುತ್ತದೆ.

ಕೃಷ್ಣ ಪರಿ ಪರಿಯಾಗಿ ಬೇಡುತ್ತಾನೆ, ಧರ್ಮರಾಯ ಅರ್ಧರಾಜ್ಯದ ಹಕ್ಕು ಇದೆ. ಒಪ್ಪಿಕೋ. ಕರುಣಾಳು ನೀನು. ಆದರೆ ನೀನು ನಿನ್ನ ಕರುಣೆಯನ್ನು ಕೌರವನಲ್ಲಿ ಅಲ್ಲ ತೋರಬೇಕಾದ್ದು. ಕರುಣೆಯನ್ನು ಎಲ್ಲಿ ವ್ಯಯ ಮಾಡಬೇಕೋ ಅಲ್ಲಿ ವ್ಯಯಮಾಡು. ನಿನ್ನ ತಮ್ಮಂದಿರು, ನಿನ್ನ ಬಗ್ಗೆ ಸಂಕಟ ಪಟ್ಟವರು, ಹದಿ ಮೂರು ವರ್ಷ ತಾಳ್ಮೆಯನ್ನು ತೆಕ್ಕೊಂಡವರ ಬಗ್ಗೆ ಕರುಣೆಯನ್ನು ತಾಳು

ಶ್ರೀ ಕೃಷ್ಣ ಇಷ್ಟು ಹೇಳಿದರೂ ಆತ ಸಂಧಾನಕ್ಕೆ ಮತ್ತೂ ಹೋಗುತ್ತಾನೆ ಎಂದರೆ, ಶ್ರೀಕೃಷ್ಣನನ್ನು ಶಾಂತಿದೂತ ಅಂತ  ಭೀಷ್ಮ ಹೇಳುವುದನ್ನು ಕೇಳಿದ್ದರಲ್ಲಿ ಅತಿಶಯವಿಲ್ಲ ಎಂದನಿಸುತ್ತದೆ.  ಒಂದು ಪಾತ್ರ ನಿರ್ವಹಣೆಯಲ್ಲಿ ಕೇವಲ ಪಾತ್ರದ ಮುಖೇನ ದೃಷ್ಟಿಕೋನವಿದ್ದರೆ ಸಾಲದು. ಒಟ್ಟು ಸ್ಥೂಲವಾಗಿ ಸಮಗ್ರವಾಗಿ ಒಟ್ಟು ಪ್ರಸಂಗದ ಅಥವಾ ಕಥೆಯ ಮೇಲೆ ಚಿಂತನೆ ಅತೀ ಅವ್ಯಶ್ಯ.  ಈ ಅರ್ಥಗಾರಿಕೆಯಲ್ಲಿ ಅದೂ ಸಹ ಗಮನಾರ್ಹವಾಗುತ್ತದೆ.

ಅದರಲ್ಲೂ ಕೊನೆಯ ಕೆಲವು ಚಿಂತನೆಗಳು ಮತ್ತಷ್ಟೂ ಗಹನವಾಗಿ ಕಾಣುತ್ತದೆ. ಇದು ಕೇವಲ ಶ್ರೀ ಕೃಷ್ಣನ ಮಾತ್ರ ಚಿಂತನೆ ಎಂದನಿಸುವುದಿಲ್ಲ.

 ಒಂದು ರಾಜ್ಯ ದಂಡೆತ್ತಿ ಗೆಲ್ಲುವಾಗ,  ನಮಗೆ ಆಗದೇ ಇದ್ದದ್ದನ್ನು ಮಾತ್ರ ಇಲ್ಲವಾಗಿಸುವ ಹಂಬಲ ಇರುತ್ತದೆಯೇ?   ಆ ರಾಜ್ಯದ ಯಾವುದನ್ನು ನಾವು ಬಯಸುತ್ತೇವೆ? ರಾಜ ಸಾಯುವುದನ್ನೋ? ಸೈನಿಕರು ನಾಶವಾಗುವುದನ್ನೋ ? ಪ್ರಜೆಗಳು ಸಂಪತ್ತು ಇಲ್ಲವಾಗುವುದನ್ನೋ? ಎಲ್ಲವನ್ನೂ ನಾಶ ಮಾಡುವುದಾದರೆ ಅಲ್ಲಿ ಮತ್ತೆ ರಾಜ್ಯ ಕಟ್ಟುವುದಕ್ಕೆ ನಮ್ಮ ಸ್ವಂತ ರಾಜ್ಯದಿಂದ ತೆಗೆದುಕೊಂಡು ಹೋಗುವುದೋ?

ಭಾವಯ್ಯ, ಯುದ್ದವೆಂಬಂಥ ಒಬ್ಬ ಕಳ್ಳನನ್ನು ನಾವು ಹೊರ ಹಾಕುವಾಗ, ದೊಡ್ಡ ಕಳ್ಳನನ್ನು ಮನೆಗೆ ಹೊಕ್ಕಲು ಬಿಡಬಾರದಲ್ಲ?

“ಯುದ್ದ, ಎಂದಿಗೂ ಸಮಸ್ಯೆಯನ್ನು ನಿವಾರಣೆ ಮಾಡೋದೇ ಇಲ್ಲ. ಯುದ್ದ ಮತ್ತೊಂದು ಸಮಸ್ಯೆಯನ್ನು ಹುಟ್ಟಿಸ್ತದೆ”  

ಯುದ್ಧ ಸಾರಿದವನೂ ಸೋತ, ಯುದ್ಧ ಇದಿರಿಸಿದವನೂ ಸೋತ. ಅವರಿಬ್ಬರೂ ಸೋತರೆ ನಂತರ ಆ ರಾಜ್ಯದ ಪ್ರಜೆಗಳೂ ಸೋಲುತ್ತಾರೆ. ಹಾಗಾಗಿ ಸಾಮ ಮಾಡುವಾಗ ನಮ್ಮ ಅಂತಸ್ತಿಗೆ ಕಳಂಕ ಬರಬಾದು. ನಾವು ಬಿಡ್ವ. ಅವನು ಅರ್ಧ ರಾಜ್ಯ ಕೊಟ್ಟ ಮೇಲೆ ನಾವೇ ಐದನ್ನು ಬಿಡ್ವ.

ಯುದ್ದ ಪ್ರಿಯನಲ್ಲ ಎಂದರೆ ಯುದ್ದಕ್ಕೆ ಹೆದರುವವನು ಅಂತಲ್ಲ. ಜೀವನ ಯುದ್ದದ ಹೋರಾಟದಲ್ಲಿ ಆಜೇಯ. ಒಂದು ರೀತಿಯ ನಿಸ್ಪೃಹ ಮನೋವೃತ್ತಿಯ ಸ್ಥಿತಪ್ರಜ್ಞ ಯುಧಿಷ್ಠಿರ. ಸ್ಥಿರತೆ ಅಲುಗಾಡುವುದಿಲ್ಲ. ಹೆದರುವುದಿಲ್ಲ. ಈ ಹೆದರುವುದಿಲ್ಲ ಎನ್ನುವುದು ಯುದ್ಧಕ್ಕಿದ್ದ ಅಧಿಕಾರವಲ್ಲ. ಅದು ಕೌರವಂದು, ನಾನು ಯಾರಿಗೂ ಹೇದರೋದಿಲ್ಲ. ಹಾಗಂತ ಪಟ್ಟಕಟ್ಟುವುದಕ್ಕೆ ಸಾಧ್ಯವೇ? ಯುದ್ದಕ್ಕೆ ಹೆದರುವುದಿಲ್ಲ, ಆದರೆ ಸಂಧಾನದ  ಶರ್ತ ಸರಿಯೋ? ಸಂಧಾನ ಎನ್ನುವುದು ವ್ಯಕ್ತಿ ಧರ್ಮವಾಗಬಾರದು. ಪಕ್ಷಧರ್ಮವಾಗಬೇಕು.

ಇದು ನೀತಿಯೇ? ಯುದ್ದ ಇಲ್ಲ ಎಂದ ಮೇಲೆ ಕೌರವನಿಗೆ ಶಿಕ್ಷೆ ಇಲ್ಲಾ ಅಂತಲೋ?  ದೊಡ್ಡ ಬ್ರಾಹ್ಮಣನಾಗಿ ಹುಟ್ಟಬೇಕಾದವ, ನೀನು ಕುಂತಿಯ ಹೊಟ್ಟಿ ನಮ್ಮಂಥವರ ತಲೆ ಬಿಸಿ ಮಾಡಿದೆ. ಅದು ಸಂಕಲ್ಪ ದೂರ್ವಾಸರದ್ದು. ನಿನಗೆ ವಿಘಾತನೆಣಿಸಿದ ದುಷ್ಟನಲಿ ಸಂಪ್ರೀತಿಯೇ?

ಶ್ರೀಕೃಷ್ಣ ಹೀಗೆ ಮತ್ತೂ ಮತ್ತು ಹೇಳುವುದಕ್ಕೆ ಒಂದು ಕಾರಣವಿರುತ್ತದೆ.,  ಕೌರವ ಭೀಮನಿಗೆ ವಿಷ ಹಾಕಲಿ, ಅರ್ಜುನನ್ನು  ಮನೆಒಳಗೆ ಸುಡಲಿ, ಇಷ್ಟೆಲ್ಲ ಯೋಚಿಸುವ ಧರ್ಮರಾಯನಿಗು ಅವನು ಹೀಗೆ ಅವನ ವ್ಯವಹಾರ. ಹಾಗಿರುವಾಗ ಯಾವ ನಾಣ್ಯ ಅವನಲ್ಲಿ ಚಲಾವಣೆ ಇಲ್ಲವೋ ಅದನ್ನು ತೆಗೆದುಕೊಂಡು ಹೋಗಿ ಇದರ ಬದಲು ಬೇರೆ ಕೊಡು ಅಂತ ಹೇಳುವುದರಲ್ಲಿ ಯಾವ ಪ್ರಯೋಜನವೂ ಇಲ್ಲ.  ಬಹುಶಃ ಹಾಗಾಗಿಯೇ ಖಡುಗವಾಗಲಿ,  ನೀತಿಯಾಗಲಿ, ಒಡೆಯ ಲಕ್ಷ್ಮೀ ರಮಣನೈತಹ ಅಂತ ಹೇಳಿದ್ದಿರಬೇಕು.

ಶ್ರೀಕೃಷ್ಣನ ಪಾತ್ರ ವೈಖರಿಯನ್ನು ಕೇಳುವಾಗ, ಶ್ರೀಕೃಷ್ಣ ಕಳ್ಳನಲ್ಲ, ಶಕುನಿಯಲ್ಲ ಯಾವುದೂ ಅಲ್ಲ. ಆದರೂ ಶ್ರೀಕೃಷ್ಣ ಎಲ್ಲವೂ ಆಗಿರುವ ಮಹಾ ಮುತ್ಸದ್ಧಿ. ರಾಜ ನೀತಿಜ್ಞ   ಎಂದನಿಸುವುದು.  ಕಳ್ಳ ಶಕುನಿಯರು ತಮ್ಮ ಮೇಲಿನ ಅವಿಶ್ವಾಸದಿಂದ ಅದನ್ನು ಅವನಲ್ಲಿ ಕಂಡರೆ, ಅವನ ರಾಜನೀತಿ ಕಾಣಬೇಕಿದ್ದರೆ ಆ ದೃಷ್ಟಿಕೋನದ ಚಿಂತನೆ ಅತ್ಯವಶ್ಯ.


Thursday, May 30, 2019

ವೇಷ ಕಳಚಿದ ದೇವಕಾನ



ದಶಕಗಳ ಹಿಂದೆ  ಯಾವುದೋ ಪುಸ್ತಕವನ್ನು ಕೊಂಡುಕೊಳ್ಳಲು ಪೈವಳಿಕೆಯ ನಗರದಲ್ಲಿರುವ  ಸರಕಾರಿ ಪ್ರಾಥಮಿಕ ಶಾಲೆಗೆ ಹೋಗಿದ್ದೆ.  ಅಂದು ಈಗಿನಂತೆ ದೊಡ್ಡ ಶಾಲಾ ಕಟ್ಟಡಗಳಿರಲಿಲ್ಲ. ಎರಡು ಮೂರು ಹಂಚಿನ ಕಟ್ಟಡವಿದ್ದ ಅತ್ಯಂತ ಹಳೆಯ ಶಾಲೆಯದು. ಶಿಥಿಲವಾದ ಹಳೆಯ ಗೋಡೆ, ಹಂಚು, ಬಾಗಿಲು ಇಲ್ಲದ ಕಿಟಿಕಿಗಳು, ಹೀಗೆ ಒಂದು ಹಳ್ಳಿಯ ಸರಕಾರೀ ಶಾಲೆ ಅಂದು ಹೇಗಿರಬೇಕಿತ್ತೋ ಹಾಗಿತ್ತು. ಹೀಗೆ ಶಾಲಾ ವಠಾರಕ್ಕೆ ಕಾಲಿಡಬೇಕಾದರೆ ಸುಶ್ರಾವ್ಯವಾಗಿ ಇಂಪಾದ ಗಡಸು ಸ್ವರದಲ್ಲಿ  ರಾಘವಾಂಕನ ಕಾವ್ಯದ ಪದ್ಯವೊಂದು ಅಲೆ ಅಲೆಯಾಗಿ ಶಾಲಾವಠಾರವೆಲ್ಲ ಮೊಳಗುತ್ತಿತ್ತು. ಬೇರೆ ಹಲವು ತರಗತಿಗಳಲ್ಲಿ ವಿವಿಧ ಪಾಠಗಳು ಚಟುವಟಿಕೆಗಳು ನಡೆಯುತ್ತಿದ್ದರೂ ಈ ತರಗತಿಯ ರಾಘವಾಂಕನ ಕಾವ್ಯ ಪಠನ ಮೌನವಾಗಿ ಒಂದು ಸಲ ಕಿವಿಕೊಡುವಂತೆ ಮಾಡಿದ್ದು ಸುಳ್ಳಲ್ಲ. ಜಗಲಿಯಲ್ಲಿ ಹೆಜ್ಜೆ ಇಡುತ್ತಿರಬೇಕಾದರೆ ತರಗತಿಯ ಕಿಟಿಕಿಯೊಳಗಡೆ ಒಂದು ಸಲ ಆಯಾಚಿತವಾಗಿ ಧ್ವನಿ ಬಂದೆಡೆ ಇಣುಕಿದೆ. ಉದ್ದ ಜುಬ್ಬಾ, ಕಪ್ಪನೆಯ ದಪ್ಪ ಕನ್ನಡಕದ ಆಜಾನು ಬಾಹು ಎಂಬ ವ್ಯಕ್ತಿತ್ವದ ಆಧ್ಯಾಪಕರೊಬ್ಬರು ಪಾಠ ಮಾಡುತ್ತಿದ್ದರು. ಅವರ ಅಂಗಭಂಗಿ, ಮಕ್ಕಳ ಶಾಂತ ಮೌನ ಎಲ್ಲವನ್ನೂ ನೋಡುತ್ತಿದ್ದರೆ ರಾಘವಾಂಕ ನಿಜಕ್ಕೂ ಮೋಡಿ ಮಾಡಿದಂತಿತ್ತು.

ಅಂದು ಕನ್ನಡ ಕಾವ್ಯದ  ಪಾಠ ಮಾಡುತ್ತಿದ್ದ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ನಮ್ಮ ಗ್ರಾಮ ಮಾತ್ರವಲ್ಲ ಸುತ್ತ ಹತ್ತೂರಿನಲ್ಲೂ ಜನಪ್ರಿಯ ಗುರುಗಳಾದ  ಶ್ರೀ ದೇವಕಾನ ಕೃಷ್ಣ ಭಟ್ಟರು. ಅತ್ಯಂತ ಸರಳ ವ್ಯಕ್ತಿತ್ವದ ಅಷ್ಟೇ ಗಾಂಭೀರ್ಯ ನಡೆಯ ದೇವಕಾನದವರು ಇದ್ದಲ್ಲಿ ಯಕ್ಷಗಾನದ ದೇವ ಕಾನನವೇ ಬಂದು ನಿಂತ ಅನುಭವವಾಗುತ್ತಿತ್ತು.  ಇಂದು ಆ ದೇವ ಕಾನನ ನಿಜಕ್ಕೂ ಮೌನದಲ್ಲಿ ಲೀನವಾಗಿದೆ.

 ಹಗಲಿನಲ್ಲಿ ಶಾಲಾ ಅಧ್ಯಾಪನದಲ್ಲಿ ಎಷ್ಟು ತಲ್ಲೀನರಾಗಿ ಒಂದರ್ಥದಲ್ಲಿ ಪುರುಸೊತ್ತಿಲ್ಲದ ಚಟುವಟಿಕೆಯಲ್ಲಿ ಇರುತ್ತಿದ್ದರೋ ಅದೇ ರೀತಿ ರಾತ್ರಿ ಊರ ಹತ್ತು ಹಲವು ಸಮಾರಂಭಗಳಲ್ಲಿ ಚಟುವಟಿಕೆಯ ಚಿಲುಮೆಯಾಗುತ್ತಿದ್ದ ಕೃಷ್ಣ  ಮಾಸ್ಟ್ರು ವೃತ್ತಿಯಿಂದಲೂ ಪ್ರವೃತ್ತಿಯಿಂದಲೂ ಸದಾ ಕಾರ್ಯಶೀಲ ವ್ಯಕ್ತಿಯಾಗಿದ್ದರು.  ಹಗಲಿನಲ್ಲಿ ಶಾಲೆಯ ಅಧ್ಯಾಪನ,  ರಾತ್ರಿ ಯಕ್ಷಗಾನ, ವೇಷ ಭೂಷಣ.

ನಮ್ಮೂರಿನ ಹಲವು ಶಾಲೆಗಳ ವಾರ್ಷಿಕೋತ್ಸವಗಳಲ್ಲಿ ಇವರ ವೇಷ ಭೂಷಣಗಳು ಮೆರುಗದೇ ಇದ್ದರೆ ರಾತ್ರಿ ಬೆಳಗಾಗುವುದಿಲ್ಲ.  ಸ್ವತಃ ವೇಷಧಾರಿಯಾಗಿದ್ದರೂ ಇವರು ವೇಷ ಹಾಕಿ ರಂಗವೇರುತ್ತಿದ್ದುದು. ಅಪರೂಪ. ನನ್ನ ತೀರಾ ಬಾಲ್ಯದಲ್ಲಿ ಇವರ ಕೆಲವು ವೇಷಗಳನ್ನಷ್ಟೇ ನೋಡಿದ ನೆನಪು, ಮಿಕ್ಕೆಲ್ಲ ಇವರೆಂದಿಗೂ ಹಿನ್ನೆಲೆಯ ಚಕ್ರವರ್ತಿಯಾಗಿಯೇ ಮೆರೆದವರು. ಊರಲ್ಲಿ ಎಲ್ಲೇ ನಾಟಕ ಯಕ್ಷಗಾನ ಆದರೂ ಚೌಕಿಗೆ ಹೋದರೆ, ತಲೆಗೆ ಒಂದು ಮುಂಡಾಸು, ಮುಖದಲ್ಲಿ ಒಂದು ಕನ್ನಡಕ  ಹಿಂಗೈಗೆ ಮೆತ್ತಿದ ಒಂದಿಷ್ಟು ಬಣ್ಣಗಳು, ಕೈಯಲ್ಲೊಂದು ಕುಂಚ ಹಿಡಿದ ಭಟ್ಟರನ್ನು ಕಾಣದೇ ಬರುವುದು ಸಾಧ್ಯವಿಲ್ಲ. ದೂರದಲ್ಲಿ ನಮ್ಮನ್ನು ನೋಡಿದರೂ ಹತ್ತಿರ ಕರೆದು ಕುಶಲವನ್ನು ವಿಚಾರಿಸುವ ಕೃಷ್ಣ ಭಟ್ಟರ  ಸ್ನೇಹ ಆತ್ಮೀಯತೆ  ಮರೆಯುವುದು ಸಾಧ್ಯವಿಲ್ಲದ ಮಾತು.

ಯಕ್ಷಗಾನವೆಂದರೆ ನಾನು ಕೇವಲ ಪ್ರೇಕ್ಷಕನಾದವನು. ಆದರೂ ಬಾಲ್ಯ ಪ್ರೇಕ್ಷಕತ್ವ ಏನಿದೆ,  ಅದರ ಪರಿಚಯವಾದದ್ದು ಶಾಲಾ ಕಾರ್ಯಕ್ರಮದಲ್ಲಿನ ಮಾಸ್ತರ ವೇಷವನ್ನು ನೋಡಿ. ಒಂದರ್ಥದಲ್ಲಿ ಯಕ್ಷಗಾನದ ಆದ್ಯಾಕ್ಷರದಂತೆ ಯಕ್ಷಗಾನದ ಪರಿಚಯವೂ ಸಹ ಕೃಷ್ಣ ಭಟ್ಟರ ವೇಷದಿಂದಲೇ ಆಗಿತ್ತು. ಮೊದ ಮೊದಲು ವೇಷದಲ್ಲಿ ಕಾಣುತ್ತಿದ್ದವರು, ಯಕ್ಷಗಾನ ವಲಯ ಕೊರತೆಯನ್ನು ಅನುಭವಿಸುತ್ತಿದ್ದ ಹಿನ್ನೆಲೆಯಾದ ಆಹಾರ್ಯದ ಬೆಳೆಗೆ ಕೈ ಹಾಕಿ ಶ್ರೀ ಗಣೇಶ ಕಲಾವೃಂದ ಪೈವಳಿಕೆಯನ್ನು ಕಟ್ಟಿ ಬೆಳೆಸಿದರು. ಇಂದಿಗೂ ದೇವಕಾನದ ವೇಷ ಭೂಷಣವೆಂದರೆ ಅಚ್ಚುಕಟ್ಟಾದ ಶಿಸ್ತಿನ ಝಗ ಝಗಿಸುವ ವೇಷ ಭೂಷಣಗಳೆಂದು ಪ್ರಸಿದ್ಧಿಯನ್ನು ಪಡೆದಿವೆ. ಹಲವು ಮೇಳಗಳಿಗೆ ಬೇಕಾಗುವಷ್ಟು ವೇಷಭೂಷಣಗಳನ್ನು ಹೊಂದಿರುವ ಈ ಸಂಸ್ಥೆ ಬೆಳೆದು ಬಂದಿರುವುದು ಅಚ್ಚರಿ ಎನಿಸಿತ್ತದೆ. ಇದರ ಹಿಂದೆ ದೇವಕಾನದವರ ಕರ್ತೃತ್ವ ಶಕ್ತಿ ಅಗಾಧವಾದುದು. ಇಂದು ಯಕ್ಷಗಾನ ಕ್ಷೇತ್ರ ಇದನ್ನು ಕೃತಜ್ಞತೆಯಿಂದ ಸ್ಮರಿಸುತ್ತದೆ. ಇಂದು ದೇವಕಾನದವರ ವೇಷ ಭೂಷಣವನ್ನು ತೊಡದ ಯಕ್ಷಗಾನ ಕಲಾವಿದರೂ ಇಲ್ಲ, ಕುಣಿಯದ ರಂಗಸ್ಥಳವೂ ಇಲ್ಲ. ಯಕ್ಷಗಾನದ ಪ್ರತೀ ಮೇಳಕ್ಕೂ ಒಂದು ಚೌಕಿ ಇದ್ದೇ ಇರುತ್ತದೆ. ಆದರೆ ಸಮಗ್ರ ಯಕ್ಷಗಾನಕ್ಕೆ ಚೌಕಿ ಎಂಬುದು ಇದ್ದರೆ ಅದು ದೇವಕಾನದವರ ಚೌಕಿ.  ಇದು ವಿಪುಲವಾಗಿ ವಿಶಾಲವಾಗಿ ಯಕ್ಷಗಾನದ ಅನಿವಾರ್ಯ ಅಂಗವಾಗಿ ಬೆಳೆದು ನಿಂತಿದೆ.  ಯಕ್ಷಗಾನದಲ್ಲಿ ನೇಪಥ್ಯ ಕಲಾವಿದರಿಗೂ ಒಂದು ಸೂಕ್ತ ಸ್ಥಾನಮಾನವನ್ನೂ ಒದಗಿಸಿದ ಇವರ ಕಾರ್ಯಶೀಲತೆ ಯಕ್ಷಗಾನದಲ್ಲಿ ನೇಪಥ್ಯವೂ ಹೇಗೆ ಪ್ರಧಾನವಾಗುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ. ಅತ್ಯಂತ ಶಿಸ್ತು ಬದ್ದ ಚೌಕಿಯ ವ್ಯವಸ್ಥೆಗಳು, ಸುಂದರವಾದ ಶುಭ್ರವಾದ ವೇಷ ಭೂಷಣಗಳು ವಾಸ್ತವದಲ್ಲಿ ಯಕ್ಷಗಾನದ ಚೌಕಿ ಪರಿಕರಗಳು ಹೇಗಿರಬೇಕು ಎಂಬುದಕ್ಕೆ ನಿದರ್ಶನವಾಗಿ ವ್ಯವಸ್ಥಿತವಾಗಿರುತ್ತಿತ್ತು. ಇಂದಿಗೂ ಪೈವಳಿಕೆ ಬಸ್ ಸ್ಟಾಪ್ ನ ಎದುರಿನ ಖಾಲಿಜಾಗವನ್ನು ಕಂಡಾಗ ಇವರ ನೆನಪು ಒತ್ತಿ ಬರುತ್ತದೆ.  ಇಂದ್ರನೋ, ಪಾರ್ಥನೋ ಆಗಿ ರಂಗದಲ್ಲಿ ಮೆರೆದಾಡಿದ ವೇಷ ಭೂಷಣಗಳು ಸೂರ್ಯನ ಬಿಸಿಲಿಗೆ ಮೈಯೊಡ್ದಿ ಪುಳಕಗೊಳ್ಳುತ್ತಿದ್ದವು.    ಅದು ಇನ್ನೆಂದಿಗೂ ನೆನಪಿನ ಪುಟಗಳಿಗೇ ಸೀಮಿತ.   ವೇಷತೊಟ್ಟ ನಂತರ ಕಲಾವಿದ ಅದು ಯಾರೇ ಆಗಿರಲಿ ಇವರ ಸೊತ್ತಾಗಿ ಪರಿಗಣನೆಯಾಗುತ್ತಿತ್ತು.  ವೇಷತೊಟ್ಟವರಿಗೆ ಕುಳಿತುಕೊಳ್ಳುವುದಕ್ಕಾಗಿಯೇ ಒಂದು ಬೆಂಚನ್ನು ಇಟ್ಟು ವೇಷಧಾರಿಗಳು ಯಾರೇ ಇರಲಿ ಅಲ್ಲೇ ಕುಳಿತುಕೊಳ್ಳುವಂತೆ ನಿರ್ಬಂಧಿಸುತ್ತಿದ್ದರು.  ಒಂದು ರೀತಿಯಲ್ಲಿ ಯಕ್ಷಗಾನದ ವೇಷಗಾರಿಕೆಗೆ ಇದು ಗೌರವವನ್ನು ತಂದುಕೊಡುತ್ತಿತ್ತು.

ಶಾಲಾ ಕಾಲೆಜುಗಳ ಯಕ್ಷಗಾನ ಕಾರ್ಯಕ್ರಮಗಳಿರಲಿ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿರಲಿ, ವ್ಯವಸಾಯಿ ಅಥವಾ ಹವ್ಯಾಸಿ ಕಲಾವಿದರಿರಲಿ,  ಇವರಿಂದ ಯಕ್ಷಗಾನದ ತಕ ಧಿಮಿ ತಾ ಕುಣಿತವನ್ನು ಕಲಿತವರು ಹಲವರು. ಎಲ್ಲಾ ಕ್ಷೇತ್ರಗಳಲ್ಲೂ ಗುರು ಸಮಾನ ವ್ಯಕ್ತಿತ್ವ ಹೊಂದುವುದು ಎಂದರೆ ಅದು ವ್ಯಕ್ತಿಗತವಾಗಿ ಗಳಿಸುವ ಅರ್ಹತೆ.  ಅದು ದೇವಕಾನ ಕೃಷ್ಣ ಭಟ್ಟರ ಹೆಗ್ಗಳಿಕೆ.

ಬಿಡುವಿನವೇಳೆಯಲ್ಲೂ ಇವರಿಗೆ ಯಕ್ಷಗಾನದ ಕಲೆಯ ಮೇಲೆ ಇರುವ ಕಾಳಜಿ ಗಮನಾರ್ಹವೆನಿಸುತ್ತದೆ. ಅದಿಲ್ಲವಾದರೆ ಯಕ್ಷಗಾನದ ವೇಷ ಭೂಷಣಗಳು ಈ ರೀತಿ ವೈಭವೀಕರಿಸುತ್ತಿರಲಿಲ್ಲ. ಶಾಲೆಯಲ್ಲಿದ್ದಾಗಲು ಸದಾ ಯಕ್ಷಗಾನ ಪದಗಳನ್ನು ಗುನು ಗುನಿಸುತ್ತಿದ್ದ ಇವರು ತಮ್ಮೊಳಗೆ ಯಕ್ಷಗಾನ ಪ್ರಚೋದನೆಯನ್ನು ಸದಾ ಜೀವಂತವಾಗಿರಿಸುತ್ತಿದ್ದರು.

ಯಕ್ಷಗಾನ  ಚೌಕಿಯ ಪ್ರೇರಕ ಶಕ್ತಿ ದೇವಕಾನ ಕೃಷ್ಣ ಭಟ್ಟರು ಬದುಕಿನ ವೇಷ ಕಳಚಿ  ನಿಜ ಜೀವನದ  ಚೌಕಿಗೆ ಸೇರಿ ಹೋದರು. ಯಕ್ಷಗಾನದಲ್ಲಿ ದೇವಕಾನಕ್ಕ್ಕೂ ಒಂದು ಖ್ಯಾತಿಯನ್ನು ತಂದು ಕೊಟ್ಟ ಇವರ ಕಾರ್ಯಶೈಲಿ ಯಕ್ಷಗಾನ ಇರುವವರೆಗೂ ಚಿರಸ್ಥಾಯಿಯಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ.  ಕಳಚಿದ ವೇಷ ಇನ್ನೊಂದು ಪಾತ್ರವಾಗಿಯೋ ವೇಷವಾಗಿಯೋ ರಂಗಸ್ಥಳ ಏರುವುದು ಸಾಮಾನ್ಯ. ಅಂತೇ ದೇವಕಾನ ಕೃಷ್ಣ ಭಟ್ಟರು, ದೈಹಿಕವಾಗಿ ನಮ್ಮೊಡನೇ ಇಲ್ಲದೇ ಇದ್ದರೂ ಯಾವುದೋ ಒಂದು ರೂಪದ ವೇಷವಾಗಿಯೋ ನಮ್ಮ ನಡುವೆ ಇದ್ದಂತೆ ಭಾಸವಾಗುತ್ತದೆ. ಗತಿಸಿದ ಮಹನೀಯರ ಜೀವಂತಿಕೆಯ ದ್ಯೋತಕವದು. ಇವರ ಒಡನಾಡಿಗಳಿಗೂ , ಬಂಧು ಮಿತ್ರರಿಗೂ ಇವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ದಯಪಾಲಿಸುತ್ತಾ ಇವರ ಆತ್ಮಕ್ಕೆ ಚಿರಶಾಂತಿಯನ್ನು ಕಲ್ಪಿಸಲಿ ಎಂಬ ಪಾರ್ಥನೆ ಇದು.
. 

Friday, May 10, 2019

ಸತ್ವ ಪರೀಕ್ಷೆ ಅಥವಾ ಊರ್ವಶೀ ಶಾಪ


"ಹೋಗಿ ಬನ್ನಿ ಭೂಲೋಕಕ್ಕೆ. ಯಾವನೋ ಒಬ್ಬ ಬಾಲಕ ತಪಸ್ಸಿಗೆ ಕುಳಿತಿದ್ದಾನೆ. ಐದು ವರ್ಷದ ಬಾಲಕನ ತಪಸ್ಸನ್ನು ಕೆಡಿಸಿ...ನಿಮ್ಮ ಸ್ತ್ರೀತ್ವ  ಆ ಬಾಲಕನ ಮುಂದೆ ಏನು ಪರಿಣಾಮವನ್ನು ಉಂಟು ಮಾಡೀತು ?  ಆತ ಇನ್ನೂ ಐದು ಹರಯದ ಬಾಲಕ.!”  ತಾನಿದ್ದಲ್ಲಿಗೆ ಬಂದ ಊರ್ವಶಿಯೊಡನೆ ಅರ್ಜುನ ಹೇಳುವ ಮಾತಿದು.  

ಹೀಗೆ  ಹೇಳಿ ಒಲಿದು ಬಂದ ಅಪ್ಸರೆ ಎದುರು ಬಾಲಕನಾಗುವ ಮೂರು ಲೋಕದ ಗಂಡ ಅರ್ಜುನ ದೇವಲೋಕಕ್ಕೂ  ಮರ್ತ್ಯ ಲೋಕಕ್ಕೂ  ಇರುವ ವೆತ್ಯಾಸವನ್ನು ನಿಗೂಢವಾಗಿ ಅರುಹುತ್ತಾನೆ.  ಈ ದೇಹದಿಂದ  ಅನುಭವಿಸಲಾಗದೇ ಇದ್ದ ಸ್ವರ್ಗ ಸುಖವನ್ನು  ತಂದ ಊರ್ವಶಿಯನ್ನು ಕೇವಲ ದೇಹದಿಂದ ಮಾತ್ರವಲ್ಲ ತನ್ನ ಮನೋವ್ಯವಹಾರದಿಂದಲೂ  ದೂರವಿಡುತ್ತಾನೆ. ಅರ್ಜುನ ಎಂಬ ವ್ಯಕ್ತಿತ್ವದ ಮತ್ತೊಂದು ಮುಖ ಸ್ವರ್ಗದಲ್ಲಿ ಅನಾವರಣಗೊಳ್ಳುತ್ತದೆ. ಎಲ್ಲಾ ಜೀವಿಗಳಲ್ಲೂ ನರ ಇದ್ದೇ ಇರುತ್ತದೆ. ಆದರೂ ಪ್ರಾಣಿಗಳಲ್ಲಿ ನರ ಅಂತ ಹೇಳುವುದು ಮನುಷ್ಯನನ್ನು ಮಾತ್ರ. ಹೀಗಿದ್ದರೂ  ಪುರಾಣದಲ್ಲಿ ನರ ಎಂದು ಪರಿಗಣಿಸುವುದು ಅರ್ಜುನನ್ನು ಮಾತ್ರ. ಭಗವಂತನ ಜತೆಯಲ್ಲಿ ನರ ನಾರಾಯಣನಾಗುವ ಪಾರ್ಥನ ವ್ಯಕ್ತಿತ್ವ ಪರ್ವತವಾಗುವ ಪ್ರಸಂಗವೇ  ಊರ್ವಶೀ ಜತೆಗಿನ ಮುಖಾಮುಖಿ . ಕಿರೀಟಿಯಾದ ಅರ್ಜುನನ ಕಿರೀಟ ಇಲ್ಲಿ ಮತ್ತಷ್ಟು ಭದ್ರವಾಗುತ್ತದೆ.  ಇದು ಯಕ್ಷಗಾನ ತಾಳಮದ್ದಲೆಯೊಂದರ ಅಧ್ಬುತ ಪಾತ್ರ ಚಿತ್ರಣ ಎನ್ನಬಹುದು.

’ ಸತ್ವ ಪರೀಕ್ಷೆ ಅಥವಾ ಊರ್ವಶೀ ಶಾಪ’ ಯಕ್ಷಗಾನದ ಅಪರೂಪದ ಪ್ರಸಂಗ. ಅರ್ಜುನ ಮತ್ತು ಊರ್ವಶಿ  ಈ ಪ್ರಸಂಗದ ಮುಖ್ಯ ಪಾತ್ರಗಳು.  ಸಾಮಾನ್ಯವಾಗಿ ಯಕ್ಷಗಾನ ಪ್ರಸಂಗಗಳಲ್ಲಿ ಅರ್ಜುನ ಪಾತ್ರದ ಚಿತ್ರಣ ಒಂದು ರೀತಿಯಲ್ಲಿ ವಿಚಿತ್ರವಾಗಿ ಇರುತ್ತದೆ. ಮೂರುಲೊಕದ ಗಂಡ ಅರ್ಜುನ ಹೆಚ್ಚಿನ ಎಲ್ಲಾ ಪ್ರಸಂಗಳಲ್ಲಿ ಮೊದಲು ಸೋಲುತ್ತಾ ಕೊನೆಯಲ್ಲಿ ಶ್ರೀಕೃಷ್ಣಾನುಗ್ರಹದಿಂದ ಗೆಲ್ಲುತ್ತಾನೆ.  ಮೂರು ಲೋಕವನ್ನು ಗೆಲ್ಲುವ ಶಕ್ತಿ ಸಾಮಾರ್ಥ್ಯ ಇದ್ದರೂ ಏಕಾಂಗಿಯಾಗಿ ಪಾರ್ಥ ವಿಕ್ರಮಿಯಾಗುವ ಚಿತ್ರಣ ಯಕ್ಷಗಾನದಲ್ಲಿ ಬಹಳ ಅಪರೂಪ ಎನ್ನಬಹುದು. ಎಲ್ಲೂ ಪಾರ್ಥ ನಾಯಕತ್ವದ ಚಿತ್ರಣ ಇರುವುದಿಲ್ಲ. ಯಕ್ಷಗಾನ ಪ್ರೇಕ್ಷಕ ಕಾಣುವುದು ಬರೀ ಸೋಲುವ ನಾಯಕನನ್ನು. ಈ ಕಲ್ಪನೆಗಳಿಗೆ ತದ್ವಿರುದ್ದವಾಗಿ ಊರ್ವಶೀ ಶಾಪ ಪ್ರಸಂಗದಲ್ಲಿ ಅರ್ಜುನನ ಪಾತ್ರವ್ಯಕ್ತಿತ್ವ ಮಹೋನ್ನತ ಸ್ಥಾನವನ್ನು ಪಡೆಯುತ್ತದೆ.

ಯಕ್ಷಗಾನದಲ್ಲಿ ಅಪರೂಪ ಎನ್ನಬಹುದಾದ ಪ್ರಸಂಗದ ಈ ತಾಳಮದ್ದಲೆಯಲ್ಲಿ ಯಕ್ಷಗಾನ ಅರ್ಥ ಚಕ್ರವರ್ತಿ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರ ಅರ್ಜುನನ ಪಾತ್ರ, ಅಲ್ಲಿ ಪಾರ್ಥನ ಪಾತ್ರದಲ್ಲಿರಬಹುದಾದ  ಅದ್ಭುತ ಆಯಾಮ ವಿಶ್ಲೇಷಣೆಯಾಗುತ್ತದೆ.. ಅಥವಾ ಪಾರ್ಥನ ವ್ಯಕ್ತಿತ್ವದ ಆಯಮಾಗಳನ್ನು ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರು ಅರ್ಜುನನಾಗಿ ತೆರೆದಿಡುತ್ತಾ ಸಾಗುತ್ತಾರೆ.  ಇಲ್ಲಿ ಊರ್ವಶಿಯ ನರ್ತನವನ್ನು ಕಂಡ ಅರ್ಜುನನಾಗಿ ಶೇಣಿಯವರು ಹೇಳುವುದುಂಟು,  “ ಅವಳು ಕಲೆಯನ್ನು ಅಭಿವ್ಯಕ್ತಿಸಿದ್ದಲ್ಲ, ಕಲೆಯೇ ತನ್ನ ಸ್ವರೂಪವನ್ನು ಊರ್ವಶಿ ಎಂಬ ಮಾಧ್ಯಮದ ಮೂಲಕವಾಗಿ ನನ್ನ ಮುಂದೆ ಪ್ರದರ್ಶಿಸಿತು. “ ಇಲ್ಲೂ ಅದೇ ರೀತಿ ಅರ್ಜುನ ವ್ಯಕ್ತಿತ್ವ ಶೇಣಿ ಎಂಬ ಮಾಧ್ಯಮದ ಮೂಲಕ ವೇದ್ಯವಾಗುತ್ತದೆ.
ಶಿವನ ಕುರಿತಾದ ಘೋರ ತಪಸ್ಸು , ಕಿರಾತನೊಡನೆ ಹೋರಾಟ ಪಾಶುಪತ ಶರಾನುಗ್ರಹವಾದ ನಂತರ ದೇವೆಂದ್ರ,  ತನ್ನ ಮಗನಾದ ಪಾರ್ಥನನ್ನು ತನ್ನ ರಥದಲ್ಲೇ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾನೆ.  ಶೇಣಿಯವರೇ ಹೇಳುವಂತೆ  ಸಾಗರದಲ್ಲೇ ಹುಟ್ಟುವ ಚಂದ್ರನ ಉತ್ಕರ್ಷದಲ್ಲಿ  ಮಗನ ಉತ್ಕರ್ಷಕ್ಕೆ ಉಬ್ಬುವ ಸಾಗರದಂತೆ,  ತನ್ನ ಮಗನ ಉತ್ಕರ್ಷದಲ್ಲಿ ದೇವೇಂದ್ರ ಹಿಗ್ಗುತ್ತಾನೆ. ಸ್ವರ್ಗದಲ್ಲಿ ತನ್ನ ಸಿಂಹಾಸನದ ಅರ್ಥ ಭಾಗದ ದಾಯಿತ್ವವನ್ನು ಕೊಡುವುದು ಮಾತ್ರವಲ್ಲ ಕಿರೀಟವನ್ನು ಇರಿಸಿ ಹರಸುತ್ತಾನೆ. ಸಾಗರ ಮತ್ತು ಚಂದ್ರನಲ್ಲಿ ಕಾಣುವ ತಂದೆ ಮಗನ ಬಾಂಧವ್ಯ ಒಂದು ಅದ್ಭುತ ಕಲ್ಪನೆ.  ಹಾಗೆ ದೇವೇಂದ್ರ  ಆತನಿಗಾಗಿ ದೇವಾಂಗನೆಯರ ನಾಟ್ಯವನ್ನೂ ಏರ್ಪಡಿಸುತ್ತಾನೆ.  ಆ  ನರ್ತನವನ್ನು ನೋಡಿದ ಅರ್ಜುನ ಊರ್ವಶಿಯ ನರ್ತನದ ಬಗ್ಗೆ ಚಿಂತಿಸುವಲ್ಲಿಂದ ಪ್ರಸಂಗ ಆರಂಭವಾಗುತ್ತದೆ. ಆರಂಭದಲ್ಲಿ ಅರ್ಜುನನ ಪೀಠಿಕೆ.
ಆರಂಭದಿಂದಲೇ ಊರ್ವಶಿಯಿಂದ ಆಕರ್ಷಿಸಲ್ಪಟ್ಟ ಅರ್ಜುನನಾದರೂ ಆ  ಆಕರ್ಷಣೆಗೆ ದೈವೀ ರೂಪವನ್ನು ಶೇಣಿಯವರು ಒದಗಿಸಿ ಕೊಡುತ್ತಾ ಅರ್ಜುನನ  ಪಾತ್ರದ ದೃಷ್ಟಿಕೋನವನ್ನು ಪೀಠಿಕೆಯಲ್ಲೇ ತೋರಿಸುತ್ತಾರೆ.   ತನ್ನ ಶಿವ ಧ್ಯಾನದಲ್ಲಿ ಆ ಪರಶಿವನು ಇಳಿದು ಬರುವಂತೆ ಮಾಡಿದಂತಹ ಅರ್ಜುನ,    ಊರ್ವಶಿಯ ಯೋಚನೆಯಲ್ಲೇ ಇದ್ದಾಗ  ಆತನ ಎದುರು ಆ ಊರ್ವಶಿ ಬರುತ್ತಾಳೆ. ಶಿವನಂತೆ  ಊರ್ವಶಿಯನ್ನು ಕಾಣುವ ದೃಷ್ಟಿಕೋನವದು. 
“ ಗೆಜ್ಜೆ ಕಟ್ಟಿದಾಗ ಕುಣಿಯುವುದಕ್ಕೆ ಎಂಬ ಸಂಕಲ್ಪ ಇದ್ದುದರಿಂದ ಕೆಲವರು ಕುಣಿಯುತ್ತಾರೆ.ಆದರೆ ಅಭಿಜಾತ ಕಲಾವಿದೆ, ಊರ್ವಶಿ ಹೆಜ್ಜೆ ಇಡುವುದೂ ಕೂಡ ನಾಟ್ಯ ಶಾಸ್ತ್ರವೇ ಆಗಿರುತ್ತದೆ. ಅದಕ್ಕೆ ಕಾರಣ ಅವಳು ಕಲೆಯೇ ಆಗಿರುವುದರಿಂದ. ಆಕೆಗೆ ಗೆಜ್ಜೆ ಕಟ್ಟಬೇಕೆಂದಿಲ್ಲ, ರಂಗ ನಿರ್ಮಾಣದ ಆವಶ್ಯಕತೆ ಇರುವುದಿಲ್ಲ. ಹೆಜ್ಜೆಗೂ ನಾಟ್ಯವಾಗಿ ಕಾಣುತ್ತಾಳೆ”
ರಾಮನನ್ನು ವಶೀಕರಿಸುವುದಕ್ಕಾಗಿ ರಾವಣನ ತಂಗಿ ಏನೇನೋ ಅಲಂಕಾರವನ್ನೆಲ್ಲ ಮಾಡಿಕೊಂಡರೂ ಕೂಡ ಪೂರ್ಣವ್ಯಕ್ತಿತ್ವ ಉಳ್ಳ ರಾಮನಿಂದ ತಾನು ಆಕರ್ಷಿಸಲ್ಪಡಲಿಕ್ಕಿಲ್ಲವೆಂಬ ಸಂದೇಹದಿಂದ ಕೊನೆಗೆ ಅವಳು ಶೃಂಗಾರವಾಗಿ ಮತ್ತವಳು ಶೃಂಗಾರವೇ ಆಗಿ…ಎಂಬ ಕವಿವಾಣಿ ನೆನಪಿಗೆ ಬರುತ್ತದೆ. ಊರ್ವಶಿ ಹೆಜ್ಜೆ ಇಟ್ಟಲ್ಲಿ ಅದು ನಾಟ್ಯವೇ ಆಗುತ್ತದೆ. ರಾಮನು ಮೆಟ್ಟಿದಲ್ಲೆಲ್ಲ ಅಯೋಧ್ಯೆಯ ಕ್ಷೇತ್ರ ಮಾಡುತ್ತಿದ್ದನಂತೆ, ಹಾಗೇ ಊರ್ವಶಿಯ ಆಗಮನವಾಗಿದೆ. ಹೀಗೆ ದೈವೀ ಭಾವದ ಪರಾಕಾಷ್ಥೆಯನ್ನು ತಲಪುವ ಅರ್ಜುನನನ್ನು ಕಾಣುತ್ತೇವೆ. ತನ್ನ ಮಂಚದ ಬಳಿಗೆ ಬರುವುದಕ್ಕಿಂತ ಮೊದಲೇ ಎದ್ದು  ಒಮ್ಮೆ ಅವಳ ಪಾದ ಮುಟ್ಟಿ ನಮಸ್ಕರಿಸಬೇಕು,. ಹೀಗೆ ದೈವೀ ಭಾವದಿಂದ ಕಾಣುವ ಅರ್ಜುನನ ಚಿಂತನೆಯನ್ನು ಅದ್ಭುತ ರೂಪದಲ್ಲಿ ಶೇಣಿಯವರು ಚಿತ್ರಿಸುತ್ತಾರೆ.  ಹಾಗೇ “ಅಮ್ಮಾ’  ಎಂದು ಉದ್ಗರಿಸುತ್ತಾರೆ.
ಆ ಸಂದರ್ಭದಲ್ಲಿನ ’ಅಮ್ಮಾ’ ಎಂಬ ಕರೆಗೆ ಅವರು ಕೊಡುವ ಕಾರಣ ಹೀಗಿದೆ.   ಕೇವಲ ಹೆತ್ತವಳನ್ನು ಮಾತ್ರ ಅಮ್ಮ ಎಂದು ಕರೆಯುವುದಿಲ್ಲ. ತನಗೆ ಹುಟ್ಟಿದವಳನ್ನೂ ಅಮ್ಮಾ ಎಂದು ಕರೆಯುತ್ತೇವೆ, ಮೊಮ್ಮಗಳನ್ನೂ ಅಮ್ಮಾ ಎಂದು ಕರೆಯುತ್ತೇವ. ಹೀಗೆ ಎಲ್ಲರನ್ನು ಅಮ್ಮಾ ಎಂದು ಕರೆದರೂ  ಗೃಹಸ್ಥಾಶ್ರಮದಲ್ಲಿ ಅವಳನ್ನು ಮಾತ್ರ ಅಮ್ಮ ಎಂದು ಕರೆಯುವುದಿಲ್ಲ.  ಅಂದರೆ ಇಲ್ಲಿ ಊರ್ವಶಿಯನ್ನು ಅಮ್ಮಾ ಎಂದು ಕರೆಯುವ ಅರ್ಜುನ…ಆಕೆಯಲ್ಲಿ ಅರೋಪಿಸುವ ಭಾವನೆ ಎಂತಹದ್ದು ಎಂಬುದನ್ನು ತೋರಿಸಿಬಿಡುತ್ತಾರೆ. ಅಲ್ಲಿಗೆ ಒಂದು ಪಾತ್ರದ  ಅಸ್ಥಿವಾರ ಗಟ್ಟಿಯಾಗಿ  ಬಿಡುತ್ತದೆ.  ಈ ರೀತಿಯ ಪರೋಕ್ಷವಾಗಿ ಪಾತ್ರದ ವ್ಯಕ್ತಿತ್ವವನ್ನು ಸನ್ನಿವೇಶವನ್ನೂ ಚಿತ್ರಿಸುವ ಅರ್ಥ ಗಾರಿಕೆ ಪರಬ್ರಹ್ಮನ ಮರುಸೃಷ್ಟಿಯನ್ನೇ  ನೆನಪಿಗೆ ತರುತ್ತದೆ. 
ಎಲ್ಲವೂ ಸರಿ ಎನ್ನುವಾಗ ಊರ್ವಶಿಯ ಆಗಮನದ ಕಾರಣ ತಿಳಿದುಬಿಡುತ್ತಾನೆ. ತಾನು ಭ್ರಮೆಗೋಳಗಾದೆನೆ?,  ಎಂಬ ಅರ್ಜುನನ ಕಳವಳ,   ಹೃದ್ಯವಾದ ಮಾತುಗಳಲ್ಲಿ ವ್ಯಕ್ತವಾಗುತ್ತದೆ. “ ನಾನು ಕ್ರಿಯಾಲೋಪ ಉಂಟು ಮಾಡಿದೆನೇ? ದೇವಲೋಕದ ಭಾಷೆಗೂ ಭಾಷಾವೆತ್ಯಾಸ ಇದ್ದರೂ ,   ಒಳಗಿನ ಭಾವ ವೆತ್ಯಾಸ ಇರಲಿಕ್ಕಿಲ್ಲ”  ಅರ್ಜುನನ ಕಳವಳ ಮುಂದಿನ ಮಾತುಗಳಲ್ಲಿ ಅಕ್ಷರಶಃ ವ್ಯಕ್ತವಾಗುತ್ತದೆ. “ ಊರ್ವಶಿಗೆ.....ಕಾಮ ! ಅವನೀಗ ಸುಡುವುದಕ್ಕೆ ತೊಡಗಿದ್ದಾನೆ. ದೇವೇಂದ್ರನ ಆಜ್ಞೆಯಂತೆ ನೀನು, ನನ್ನ ಸೇವೆಗೆ ಅಂತ ನಿಯೋಜಿಸಲ್ಪಟ್ಟವಳು. ಮಹನೀಯನಾದಂತಹ ದೇವೇಂದ್ರನಿಗೆ ಈ ಅರ್ಜುನನಿಗೆ ಹೋದಲ್ಲಿ ಬಂದಲ್ಲಿ ಹೀಗಿದ್ದವರು ಬೇಕು ಅಂತ ಕಲ್ಪನೆ ಹೇಗೆ ಬಂತೋ?”
ಕಾಮನನ್ನು ಸುಟ್ಟು  ಹಾಕಿದ ಶಿವನಲ್ಲಿ ಹೋರಾಟ ಮಾಡಿ ಪ್ರಸಾದವನ್ನು ಶಿರದಲ್ಲಿ ಧರಿಸಿ ಬಂದವನಿಗೆ ಇದೆಂತಹ ಕಾಮ ಪರೀಕ್ಷೆ? ದೇವಲೋಕದ ಯಾವೊಬ್ಬ ಸ್ತ್ರೀಯು ತಾವಾಗಿ ಮತ್ತೊಬ್ಬನನ್ನು ಕಾಮಿಸಿ ಹೋಗುವಂತಹ ಪದ್ದತಿ ಈ ವರೆಗೆ ಇರಲಿಲ್ಲ.
ಈ ವರೆಗೆ ಅರ್ಜುನನಿಗೆ  ಊರ್ವಶಿ  ಪರೀಕ್ಷಿಸುತ್ತಿದ್ದಾಳೋ ಎಂಬ ಅನುಮಾನ ಬಂದಿತ್ತು, ಅಮ್ಮನಾಗುವುದಕ್ಕೆ ಅರಿಯದವಳೇ ಈಕೆ? ದೇವೇಂದ್ರನ ಅರ್ಧಾಸನದಲ್ಲಿ ಸ್ಥಾನ ದಕ್ಕುವಾಗ ಈ ಪಾರ್ಥ ಉನ್ಮತ್ತನಾದನೇ ಎಂಬ ಭಾವವೇ? ಅಕೆಯ ಮೇಲೆ ಪೂಜ್ಯ ಭಾವ ಮೂಡುವುದಕ್ಕೆ ತನ್ನಲ್ಲಿದ್ದ ಸಂಸ್ಕಾರವನ್ನು ಅರ್ಥವಿಸದೇ ಹೋದಳೇ? ಇಂದ್ರನಿಗೆ ಊರ್ವಶಿ  ಹೇಗೆಯೋ ಹಾಗೇ ಇಂದ್ರಾಸನದಲ್ಲಿ ಅರ್ಧವನ್ನು ದಕ್ಕಿಸಿಕೊಂಡ ಪಾರ್ಥನಿಗೂ ಊರ್ವಶಿ.....ಆಗ ತನ್ನ ಸಂಸ್ಕಾರದ ಪ್ರಚೋದನೆಯ ಕಾರಣವನ್ನು ಹೇಳುತ್ತಾನೆ. “ ಅಮ್ಮ ನೀನು ಪುರೂರವನ ಅರಸಿಯಾಗಿದ್ದವಳು. ಅವನ ಅರಸಿಯಾಗಿ ನಹುಷನನ್ನು ಹೆಡೆದವಳಲ್ಲವೇ? ವಸಿಷ್ಠರು ಯಾವುದೋ ಕಾರಣಕ್ಕೆ ನಿನ್ನ ಗರ್ಭದಿಂದಲೇ ಭೂಮಿಗೆ ಇಳಿದವರಂತೆ. ವಸಿಷ್ಠರೂ ನಿನಗೆ ಮಗನಾದ ಹಾಗಾಯ್ತು. ವಸಿಷ್ಠರ ಮಗ ಪರಾಶರ, ಆ ಪರಾಶರರ ಪುತ್ರ ವೇದವ್ಯಾಸ.....”  ಹೀಗೆ ತನ್ನ ಹಿರಿಯರ ವೃತ್ತಾಂತವನ್ನು ಹೇಳಿ ಊರ್ವಶಿಯ ಸ್ಥಾನದ ಅರಿವನ್ನು ಉಂಟು ಮಾಡುವುದಕ್ಕೆ ಯತ್ನಿಸುತ್ತಾರೆ.

ನಾರಾಯಣ ಋಷಿಗಳು ತನ್ನ ಎಡ ತೊಡೆಯನ್ನು ತಿಕ್ಕಿಕೊಂಡಾಗ ಊರ್ವಶಿ ಹುಟ್ಟಿದಳು. ಊರ್ವಶಿ ಜನ್ಮ ಕಥೆಯನ್ನು ಹೇಳುತ್ತಾ ಇನ್ನೊಂದು ವಿಶ್ಲೇಷಣೆಯನ್ನು ಮುಂದಿಡುವ ರೀತಿ ಬಹಳ ಅರ್ಥಗರ್ಭಿತವಾಗಿದೆ.
“ ಕಾಮದಿಂದ  ಹುಟ್ಟಿದ, ಯಾವತ್ತೂ ಕಾಮಿನಿಯರಾದಂತಹ ಅಪ್ಸರ ಸ್ತ್ರೀಯರಿಗೆ, ನೀನು ಪತ್ಯಸ್ತ್ರವಾಗಿ ಹುಟ್ಟಿದವಳು. ಕಾಮ ಇಲ್ಲದೇ ಇದ್ದಂತಹ, ಕಾಮದಿಂದ ವಿಕಾರಗೊಳ್ಳದೇ ಇದ್ದಂತಹ ನರ ನಾರಾಯಣ ಋಷಿಗಳ ಸನ್ನಿಧಾನದಲ್ಲಿ, ತ್ಯಾಗ ರೂಪವಾದ, ನಿಯಂತ್ರಣ ರೂಪವಾದಂತಹ, ಇಂದ್ರಿಯ ನಿಗ್ರಹ ರೂಪವಾದಂತಹ ನಾರಾಯಣ ಋಷಿಗಳ ಬಲ ತೊಡೆಯಿಂದ ಹುಟ್ಟಿದಂಹ ನೀನು ಈಗ ’ಕಾಮದ ಊರಿಗೆ ಅಧೀನಳಾಗಿದ್ದೇನೆ’ ಅಂತ ಹೇಳಿದ್ರೆ ಬಹುಶಃ ವ್ಯಕ್ತಿತ್ವದಿಂದ, ಈ ದೇವಲೊಕದ ಸಹವಾಸದಿಂದ ನಿನಗುಂಟಾದಂತಹ ಒಂದು ಪರಿಸರದ ದುರ್ಗಂಧ ಅಂತ ನಾನು ತರ್ಕಿಸಿಕೊಂಡು ನಾನು ವಿಮರ್ಶಿಸಲಿಕ್ಕೆ ಹೋಗುವುದಿಲ್ಲ. ನನಗಂತೂ ನೀನು ಯಾವಾಗಲೂ ಪೂಜ್ಯಳೇ, ಯಾವಗಲೂ ವಂದನಾರ್ಹಳೇ. “
ಊರ್ವಶಿ ಒಂದೇ ಹೇಳುತ್ತಾಳೆ, ನಾವು ಗಣಿಕೆಯರು ನನ್ನ ಸಹಮತ ಇದೆ.   ಅಗ ಗಣಿಕಾ ಧರ್ಮವನ್ನು ಸುಂದರವಾಗಿ ವಿವರಿಸುತ್ತಾರೆ.   ಗಂಡಕೀ ಅಂತ ಒಬ್ಬಾಕೆ ದೇವದಾಸಿ ಇದ್ದಳಂತೆ, ಆಕೆ ’ನಿತ್ಯ ಪತಿವೃತೆ’. ನಿತ್ಯ ಪತಿವೃತೆಯರು ಆ ದಿನ ಯಾವನನ್ನು ವರನಾಗಿ ಸ್ವೀಕರಿಸುತ್ತಾಳೋ,  ಆನಂತರ ಮಹಾರಾಜನೇ ಬರಲಿ ಆಕೆಯ ಮನೆಯ ಬಾಗಿಲು ತೆರೆಯಲ್ಪಡುವುದಿಲ್ಲ.  ಅವಳ ಧರ್ಮಕ್ಕೆ ಒಲಿದು ನಾರಾಯಣನೇ ಅವಳಲ್ಲಿ ಹುಟ್ಟಿ ಬಂದ. ಮುಂದೆ ಸಾಲಿಗ್ರಾಮದ ಉತ್ಪತ್ತಿಗೂ ಇದೇ ಗಂಡಕೀ ಅಥವಾ ಗಂಡಕೀ ನದಿ ಕಾರಣವಾಗುತ್ತದೆ.  ನೀನು ಗಣಿಕೆಯಾಗು, ನಿನ್ನನ್ನು ಮೆಚ್ಚಿ ಬಂದವರಿಗೆ ನೀನು ಸೆರಗು ಹಾಸು. ಹೊರತು ತಾಯೀ.... ತಾಯಿ..ನೀನು ವಿಟನನ್ನು ಹುಡುಕುತ್ತಾ ಹೋಗ ಕೂಡದು. (ಇಲ್ಲಿ ಗಂಭೀರತೆಯನ್ನು ಗಮನಿಸುವಂಥದ್ದು)
ದೇವತಾ ಸ್ತ್ರೀಯರು ಸಂತಾನಾರ್ಥಿಯಾಗಿ ಯಾವ ಪುರುಷನನ್ನೂ ಸಮೀಪಿಸುವುದಿಲ್ಲ. ಆದ್ದರಿಂದ ತಾಯಿಯೆಂದು ಪೂಜಾರ್ಹಳಾಗಿ ನೀನು ಉಳಿಯುವುದಿದ್ದರೆ ಒಂದು ಘಳಿಗೆಯಲ್ಲ ಇಡೀ ರಾತ್ರಿಯಲ್ಲ ನಾಳೆಯೂ ಇರಬಹುದು.  ಪುತ್ರ ನಾನು ನಿನ್ನನ್ನು ಸೇವಿಸ್ತೇನೆ. ಅದಲ್ಲ ನೀನು ಕಾಮಾರ್ಥಿಯಾಗಿ ಬಂದು ಕೇಳಿದರೆ  ಆಗದದು. ಆಗದು. 
ಇಷ್ಟೆಲ್ಲ ವಾದ ತರ್ಕಗಳನ್ನು ಹೇಳುವಾಗ ಊರ್ವಶಿಯ ಒಂದು ಪ್ರಶ್ನೆ ಬಹಳ ಮಾರ್ಮಿಕವಾಗಿರುತ್ತದೆ.  “ದ್ರೌಪದಿ ಒಬ್ಬಳನ್ನು ಐದು ಜನ ಭೋಗಿಸುತ್ತಿದ್ದೀರಲ್ಲ” ದರ್ಮಸೂಕ್ಷ್ಮದ ಜಿಜ್ಞಾಸೆಯ ಪ್ರಶ್ನೆ ಇದು.  ಇದಕ್ಕೆ ಉತ್ತರಿಸಬೇಕಾದರೆ ಕೇವಲ ಪಾತ್ರವಾಗಿ ಇದ್ದರೂ ಸಾಲದು.  ಐವರು ಹಂಚಿಕೊಳ್ಳಿ ಎಂಬ ಮಾತೃವಚನವೇ ಕಾರಣವಾಗಿ ದ್ರೌಪದಿ ಐವರ ಸತಿಯಾಗುತ್ತಾಳೆ. ಏಕ ಕಾಲದಲ್ಲಿ ಆಕೆ ಐವರ ಸತಿಯಾಗುವುದಿಲ್ಲ. ಪರ್ಯಾಯವಾಗಿ ಪಾಂಡವರು ಆಕೆಯ ಪತಿಯಾಗುತ್ತಾರೆ. ಒಬ್ಬಾಕೆ ಗಣಿಕೆಯಾದರೂ ನೂರು ಮಂದಿ ಕಾಯ್ತಾ ಇದ್ದರೂ ಅವಳ ದರ್ಶನವನ್ನೋ ಸ್ಪರ್ಶವನ್ನೋ ಏಕ ಕಾಲದಲ್ಲಿ ಅವಳು ಅನೇಕರಿಗೆ ಏನನ್ನೂ ಹಂಚುವುದಕ್ಕೆ ಸಾಧ್ಯ ಇಲ್ವಲ್ಲ. ?  ಹಾಗಾದರೆ ದ್ರೌಪತಿಯಾದವಳಿಗೆ, ಪತಿಯಾಗಿ ಅಂಗೀಕರಿಸಲ್ಪಡುವಾಗ ಐವರಲ್ಲಿ ಯಾವನೋ ಒಬ್ಬನಲ್ವೋ? ಐವರೂ ಅಲ್ಲವಲ್ಲ?
ಅಲ್ಲಿ ಒಂದಾಗುವುದಕ್ಕೆ ಮಾತೃ ವಚನ ಕಾರಣವಾದರೆ ಇಲ್ಲಿ ಒಂದಾಗುವುದಕ್ಕೆ ಪಿತೃವಚನ ಯಾಕೆ ಕಾರಣವಾಗುವುದಿಲ್ಲ? ಇಷ್ಟೇ,  ಅರ್ಜುನನಿಗೆ  ಪಿತೃ ಅಂದರೆ ದೇವೇಂದ್ರನಿಗೆ,  ತನಗೆ ಸತಿಯಾದಂತೆ ದೇವೆಂದ್ರನಿಗೆ ಸೊಸೆಯಾಗಬಲ್ಲೇಯಾ?  ಇವರಡೂ ಆಗದು. ಯಾವಾಗ ತಂದೆಗೆ ಸೊಸೆಯಾಗುವುದಿಲ್ಲವೋ ಆವಾಗ ಪಿತೃ ವಚನ ಎಂಬುದಕ್ಕೆ ಅರ್ಹತೆಯೇ ಲಭ್ಯವಾಗುವುದಿಲ್ಲ. ದೇವೆಂದ್ರ ವಚನ ಅದು ನನಗೆ ವಚನವಾಗುವುದಿಲ್ಲ. ಅದು ನಿರ್ದೇಶನವಾಗುತ್ತದೆ. ಇಂದ್ರ ಅರ್ಜುನನಿಗೋ ಪಾಂಡವರಿಗೋ ಪಿತೃಸ್ಥಾನದಲ್ಲಿರುವವನಲ್ಲ. ದೇವಲೋಕದಿಂದ ನಾವು ಏನಾದರೂ ಪಡೆಯಬೇಕಾದರೆ ನಾವು ಆ ವೈದಿಕ ಮಾರ್ಗವನ್ನೇ ಅವಲಂಬಿಸಿ ಇಂದ್ರ ಪ್ರಸಾದವನ್ನು ಪಡೆಯಬೇಕಾಗುತ್ತದೆ.  ಪಿತೃ ಸಂಬಂಧ ಎಲ್ಲಿ ಬರುತ್ತದೆ?
ಇನ್ನೊಂದು ವಿವರಣೆಯಲ್ಲಿ ಅರ್ಜುನನ ನಿಲುವು ಇನ್ನೂ ಭದ್ರವಾಗಿ ಗೋಚರವಾಗುತ್ತದೆ. “ ನೀನು ದೇವೇಂದ್ರನ ಆಣತಿಯಂತೆ , ನಿನ್ನನ್ನು ಬೇರೊಬ್ಬರಿಗೂ ಸಮರ್ಪಿಸಿಕೊಳ್ಳಬಲ್ಲೆ. ಒಟ್ಟು ಅರ್ಥ ಏನು ಸ್ವಂತಿಕೆ ಇಲ್ಲದವಳು.”  (ಸ್ವಂತಿಕೆ ಇಲ್ಲದವಳ ಬಯಕೆಯೂ ಸ್ವಂತದ್ದಲ್ಲ. ಇಂದ್ರನ ಆಣತಿಯಂತೆ ಆಕೆಯ ಕಾಮ ವ್ಯಕ್ತವಾಗುತ್ತದೆ. ಒಂದು ವೇಳೆ ಊರ್ವಶಿಯ ಬದಲ್ಲು ರಂಭೆಯನ್ನೋ ಮೇನಕೆಯನ್ನೋ ಕಳುಹಿಸುರ್ತ್ತಿದ್ದರೆ....ಈಕೆಯ ಬಯಕೆ ಹೇಗಿರುತ್ತಿತ್ತು? ) ಹೋಗಿ ಭೂಲೋಕಕ್ಕೆ , ಐದು ವರ್ಷದ ಹುಡುಗನ ತಪಸ್ಸನ್ನು ಕೆಡಿಸಿ ಬನ್ನಿ. ಅಂತ ದೇವೇಂದ್ರ ಹೇಳಿದರೂ ನೀವು ಹೆಂಗಸರಾಗಿ ನಿಮ್ಮ ಸ್ತ್ರೀತ್ವದ ಪ್ರದರ್ಶನಕ್ಕೆ ಏನೂ ಉಪಯೋಗ ಇಲ್ಲ ಅಂತ ಗೊತ್ತಿದ್ರೂ ....ಧ್ರುವನ ತಪ್ಪಸ್ಸಿಗೆ ...ನೀವೆಲ್ಲ ಇಂದ್ರ ಆಜ್ಞಾನು ವರ್ತಿಗಳು. ದೇವೇಂದ್ರನ ಆಯುಧಗಳು ಅಂತ ಅರ್ಥ. ದೇವೇಂದ್ರನನ್ನು ಪೂಜಿಸುವ ನಮಗೆ ದೇವೇಂದ್ರನ ಆಯುಧಗಳೂ ಪೂಜ್ಯವಸ್ತುವೇ.”
ಹೀಗೆ ಸಾರಾಸಗಟಾಗಿ ತಳ್ಳಿ ಹಾಕುತ್ತಾನೆ. ಮಾತೃ ಭಾವದ ಸ್ಥಾಯೀ ಭಾವವನ್ನು ಅರ್ಜುನ ವ್ಯಕ್ತ ಪಡಿಸುತ್ತಾನೆ. 
“ಒಲಿದು ಬಂದ ನನ್ನಂತಹ ಹೆಣ್ಣನ್ನೂ ಸಹ ತಿರಸ್ಕರಿಸುವ ನೀನು ಷಂಡ.” ಎಂದು ಊರ್ವಶಿ ಹೇಳುತ್ತಾಳೆ.
ಈ ಮಾತಿಗೆ ಅರ್ಜುನನ ಪ್ರತಿಕ್ರಿಯೆ ಹೀಗಿರುತ್ತದೆ, ಇದು ತೀರ್ಮಾನವಾಗ ಬೇಕಿದ್ದರೆ ಮರು ವಿಮರ್ಶೆಯಾಗಬೇಕು..  ಗಂಡಸು ಷಂಡ ಅಂತ ಹೆಣ್ಣು ತೀರ್ಮಾನಿಸುವುದಕ್ಕೆ ಅಧಿಕಾರಿಣಿಯಾಗಬೇಕಿದ್ದರೆ ಅವಳ ಇಷ್ಟಾನುವರ್ತಿಯಾಗಿ ಇವ ವ್ಯವಹರಿಸಿದ ಮೇಲೆ, ಇದಕ್ಕಿಂತ ಹೆಚ್ಚು ಬಿಚ್ಚಿ ಹೇಳಲಾರೆ. (ಯಕ್ಷಗಾನ ಸುಸಂಸ್ಕೃತ ಭಾಷಾ ಪ್ರಯೋಗ ಎಂದರೆ ಹೀಗೆ ಇರಬಹುದು).  ಒಂದು ಪ್ರಶ್ನೆ, ಅಮ್ಮಾ ಹೆಣ್ಣಿನ ಹಿಂದೆ ಹೋಗುವವ ಪುರುಷನೋ ಅಲ್ಲ, ಹೆಣ್ಣು ಹಿಂಬಾಲಿಸುವಂತೆ ಮಾಡುವವ ಪುರುಷನೋ?   ಒಬ್ಬನ ಪುರುಷತ್ವವನ್ನು ಅಳೆಯುವುದಕ್ಕೆ ಅದು ಮಾನದಂಡವಲ್ಲ. ಹಿಂದೆ ಹೋಗುವುದು ದಾಸ್ಯ ಭಾವದಿಂದ. ಆತ ಮುಂದೆ ಹೋಗುವವನ ಸೇವಕನಾಗಿರುತ್ತಾನೆ. ಭಗವಂತ ತನ್ನ ಮಾಯೆ, ತನ್ನನ್ನೂ ಅನುಸರಿಸಬೇಕು ಅಂತ ಅಪ್ಪಣೆ ಮಾಡಿ ಅವಳನ್ನು ಹಿಂದೆ ನಿಲ್ಲಿಸಿ ತಾನು ಮುಂದೆ ಹೋಗುತ್ತಾನೆ. ಮಾಯೆಗೆ ಅಧೀನನಾಗುವುದಿಲ್ಲ. ಅವನಿಗೆ ಅಧೀನವಾಗಿ ಮಾಯೆ ಹಿಂದೆ ಹೋಗುತ್ತಾಳೆ.  ಗಂಡಸಾದವನು ಹೆಂಗಸಿನ ಹಿಂದೆ ಹೋಗುವುದಿಲ್ಲ. ಶ್ರೀಮಂತನಾದವ ಮತ್ತೊಬ್ಬ ಶ್ರೀಮಂತನ ಹಿಂದೆ ಹೋಗುವುದಿಲ್ಲ. ಪೂರ್ಣನಾದವ ಮತ್ತೊಂದು ಪೂರ್ಣನಾದವನನ್ನು ಹುಡುಕಿಕೊಂಡು ಹೋಗುವುದಿಲ್ಲ. ಪೂರ್ಣವಾದ ಗಂಡಸಿನ ಯೋಗ್ಯತೆ ಏನು? ಅವನನ್ನು ಹುಡುಕಿ ಹೆಂಗಸರು ಹಿಂದೆ ಬರಬೇಕು. ಶೂರ್ಪನಖಿ ರಾಮನಿಂದ ಆಕರ್ಷಿತಳಾದಳೇ ಹೊರತು ರಾಮನನ್ನು ಯಾವ ಹೆಣ್ಣೂ ಆಕರ್ಷಿಸಲಿಲ್ಲ. ನಾನು ನಿಜವಾದ ಗಂಡಸು ಹಾಗಾಗಿಯೇ ನಿನ್ನಿಂದ ಆಕರ್ಷಿತನಾಗಲಿಲ್ಲ. “
ತನ್ನ ಸೌಂದರ್ಯಕ್ಕೆ ಯಾವುದೇ ರೀತಿ ವಿಕಾರ ಭರಿತನಾಗದೇ ಇರುವ ಅರ್ಜುನನನ್ನು ನೋಡಿ ಆತನಲ್ಲಿ ನಪುಂಸಕತ್ವವನ್ನು ಆರೋಪಿಸುತ್ತಾಳೆ. ಇದನ್ನು ತೀರ್ಮಾನಿಸುವುದಕ್ಕೆ ಅವರೊಳಗಿನ ವ್ಯವಹಾರ ಸಾಕ್ಶಿಯಾಗುವುದಿಲ್ಲ . ಇದನ್ನು ಪರಿ ಪರಿಯಾಗಿ ವಿವರಿಸಿದರೂ ಸಂವತ್ಸರ ಒಂದಕ್ಕೆ  ಷಂಡನಾಗು ಎಂದು ಶಪಿಸಿಬಿಡುತ್ತಾಳೆ. ಆಕೆ ತಾಯಿಯಾಗುವುದಿಲ್ಲ. ಹೆಂಡತಿಯಾಗುವುದಿಲ್ಲ. ವ್ಯವಹಾರ ಫಲಕಾರಿಯಾಗದ ಹತಾಶೆಯ, ಮೊದಲು ಹೇಳಿದ ಕೇವಲ ಗಣಿಕಾ ಸ್ತ್ರೀಯಾಗಿಯೆ ವ್ಯವಹರಿಸಿ ಬಿಡುತ್ತಾಳೆ. 
ಅರ್ಜುನ ಚಿಂತಿಸುತ್ತಾನೆ. ಮೂರು ಲೋಕದ ಗಂಡನನ್ನು ಆಕೆ ಷಂಡ ಅಂತ ಹೇಳ್ತಾಳೆ. ಎರಡನೇ ಹೇಳ್ತಾಳೆ ನರಗುರಿಯೆ. ಒಂದು ವೇಳೆ ಆಕೆಯ ಇಚ್ಛೆಯಂತೆ ಅರ್ಜುನ ನಡೆದುಕೊಂಡಿದ್ದರೆ, ನರಗುರಿಯೇ ಎಂಬುದಕ್ಕೆ ಅರ್ಥ ಒದಗುತ್ತಿತ್ತು. ಈ ಅರ್ಜುನ ಬಲಿಯಾದ್ದಾನೋ? ಅಲ್ಲ ಅರ್ಜುನನನ್ನು  ಆಕೆಗೆ ಬಲಿಕೊಡಲು ಜಗತ್ತಿನಲ್ಲಿ ಯಾವುದದರು ಒಂದು ಶಕ್ತಿಗೆ ಸಾಧ್ಯವಿದೆಯೇ? ಸ್ವರ್ಗದಲ್ಲಿ ಸತ್ಕರಿಸಲ್ಪಟ್ಟು ಶಪಿಸಲ್ಪಟ್ಟೂ ಆಯ್ತು. ಒಮ್ದು ವರ್ಷ ಷಂಡನಾಗಿರಬೇಕಂತೆ.  ಮೂರು ಲೋಕದ ಗಂಡ ಅರ್ಜುನ ಒಂದು ವರ್ಷವಲ್ಲ ಒಂದು ಘಳಿಗೆಯಾದರೂ ಷಂಡನಾಗಿ ಬದುಕುವುದಕ್ಕೆ ಸಾಧ್ಯವೇ? ಸಹೋದರರ ಮುಂದೆ ಹೆಂಡತಿ ಸುಭದ್ರೆಯ ಮುಂದೆ ದ್ರೌಪದಿಯ ಮುಂದೆ ಷಂಡ ನಾಗಿ ಹೇಗೆ ನಿಲ್ಲಲ್ಲಿ?  ಈ ಕ್ಲೈಬ್ಯವನ್ನು ಹೇಗೆ ನಿರ್ವಹಿಸಲಿ?
ಭೂಲೋಕಕ್ಕೆ ಹೋಗದೇ ಇಲ್ಲೆ ಉಳಿಯಲೇ. ಎಲ್ಲಿಯವರೆಗೆ ದೇವೆಂದ್ರನ ರಕ್ಷಾಕವಚ ಇರುವುದೋ ಅಲ್ಲಿಯ ತನಕ ಈ ದೇಹ ಇಲ್ಲಿಯ ವಾತಾವರಣವನ್ನು ಸಹಿಸಿಕೊಳ್ಳಬಹುದು. ಅವನಿಂದ ತಿರಸ್ಕರಿಸಲ್ಪಟ್ಟರೆ ಒಂದು  ನಿಮಿಷವೂ ಇಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. “ ನೀರಲ್ಲಿ ಹುಟ್ಟಿದ ಮೀನು ಬದುಕಬೇಕಾದರೆ ಪುನಃ ನೀರನ್ನೇ ಅಶ್ರಯಿಸಬೇಕು. ಯಾರಾದರೂ ನೀರು ಬೇಡ ಹಾಲಿನಲ್ಲಿರು , ಹಾಲು ಉತ್ತಮವಾದದ್ದು ಅಂದರೆ ನೀರಿನ ಮೀನಿಗೆ ಹಾಲು ವಿಷವಾಗುತ್ತದೆ. ನಾನು ಇಲ್ಲಿಗೆ ಅತಿಥಿ. ಪ್ರವಾಸಿ. ಇಲ್ಲಿ ಉಳಿಯುವ ಹಾಗೂ ಇಲ್ಲ. ಮರ್ತ್ಯಲೋಕಕ್ಕೆ ಹೋಗುವ ಹಾಗೂ ಇಲ್ಲ. ಅಭಿನವ ತ್ರಿಶಂಕುವಾದೆನಲ್ಲಾ?
ಅರ್ಜುನನ ಪಾಪವನ್ನು ತಿದ್ದುವುದಕ್ಕೆ ಸ್ವರ್ಗಲೋಕದ ಪುಣ್ಯವೂ ಪರ್ಯಾಪ್ತವಲ್ಲ.
ಇಂದ್ರನಲ್ಲೂ ತನ್ನ ದುಃಖವನ್ನು ತೋಡಿಕೊಳ್ಳುತ್ತಾನೆ. ಭೂಲೋಕದಲ್ಲಿ ಒಂದು ವರ್ಷ ಷಂಡನಾಗುವುದು. ನನ್ನಂಥವನಿಗೆ ಒಂದು ವರ್ಷವೇನು ಒಂದು ನಿಮಿಷವಾದರೂ... ಅದು ಕಳೆದು ಪುನಃ ನಾನು ಪುರುಷ ಅಂಥ ಸ್ಥಾಪಿಸುವುದಕ್ಕೆ ಯಾವ ಧನ್ವಂತರಿಯನ್ನು ಹುಡುಕಲಿ? ಭೂಲೋಕದಲ್ಲಿ ಈ ಷಂಡತ್ವದಿಂದ ನನಗೆ ಎನು ಪ್ರಯೋಜನ?
ದೇವೆಂದ್ರ ಮಗನಿಗೆ ಸಾಂತ್ವನದ ನುಡಿಗಳನ್ನು ಹೇಳುತ್ತಾನೆ. ಮುಂದೊಂದು ದಿನ ಈ ಷಂಡತನ ಅಜ್ಞಾತವಾಗಿ ಇರಲು ಉಪಯೋಗಕ್ಕೆ ಬರುತ್ತದೆ. ಅರ್ಜುನನಂತಹ ಘನ ವಿಕ್ರಮಿ, ಮೂರು ಲೋಕದ ಗಂಡ ಅಜ್ಞಾತವಾಗಿ ಇರುವುದಕ್ಕೆ ಸಾಧ್ಯವೇ? ಜನಪ್ರಿಯ ಕಲಾವಿದ ಯಾವ ವೇಷದಲ್ಲಿ ಬಂದರೂ ಪ್ರೇಕ್ಷಕ ಗುರುತು ಹಿಡಿಯುವಂತೆ ಅರ್ಜುನ ಜಗತ್ತು ಕಂಡ ವ್ಯಕ್ತಿತ್ವ. ಆತನಿಗೆ ಸುಲಭದಲ್ಲಿ ಅಜ್ಞಾತವಾಗಿ ಇರುವುದಕ್ಕೆ ಸಾಧ್ಯವಿಲ್ಲ. ಅಂತಹ ಅರ್ಜುನ ಗಂಡೂ ಅಲ್ಲದ ಹೆಣ್ಣು ಅಲ್ಲದ ರೂಪದಲ್ಲಿ ಇದ್ದರೆ, ಯಾರಿಂದಲೂ ಗುರುತು ಹಿಡಿಯುವುದಕ್ಕೆ ಸಾಧ್ಯವಿಲ್ಲ. ಒಂದರ್ಥದಲ್ಲಿ ಊರ್ವಶಿಯ ಶಾಪವೂ ವರವಾಗುತ್ತದೆ.
ಕಲೆ ಒಂದು ಅವಧಿಗೆ ಮಾತ್ರ ಸೀಮಿತವಾಗಿ ಪ್ರದರ್ಶನ ಗೊಳ್ಳುತ್ತದೆ. ಆದರೆ ಅದರ ಪ್ರಭಾವ ಅದು ನಿರಂತರವಾಗಿ ಜೀವನ ಪರ್ಯಂತ ನಮ್ಮೊಡನಿರುತ್ತದೆ. ಹಾಗೆ ಈ ಪಾತ್ರ ಚಿತ್ರಣ ಒಂದು ಸಲ ಕಂಡೆವು ಎಂದಾದರೆ ಅದರ ಪ್ರಭಾವ ದಟ್ಟವಾಗಿ ಮನಸ್ಸಿಗೆ ಉಂಟುಮಾಡುವುದರಲ್ಲಿ ಅನುಮಾನವಿಲ್ಲ. ಮನುಷ್ಯ ಸಾಹಿತ್ಯಾಸಕ್ತನಾದಷ್ಟು ಆತ ಪ್ರಬುದ್ಧನಾಗುತ್ತಾನೆ.  ಸಾಹಿತ್ಯ ಆಸ್ವಾದನೆ ಮನಸ್ಸಿನ ಸಂಚಲನಕ್ಕೆ ಕಾರಣವಾಗುತ್ತದೆ.  ಸಾಹಿತ್ಯಾಸ್ವಾದನೆ  ಮನಸ್ಸಿನ ಜೀವ ಚೈತ್ಯನ್ಯಕ್ಕೆ ಕಾರಣವಾಗುತ್ತದೆ.   ಮನಸ್ಸಿನಲ್ಲಿ ಸಂಚಲನ ಉಂಟಾದಾಗ ನಿಂತ ನೀರಲ್ಲಿ ಸಂಚಲನೆಯ ಅಲೆಯು ಸೃಷ್ಟಿಯಾದಂತೆ ಮನಸ್ಸಿನ ಉಸಿರಾಟಕ್ಕೆ ಕಾರಣವಾಗುತ್ತದೆ.  ಸಾಹಿತ್ಯಾ ಸಕ್ತಿ ಇಲ್ಲದೇ ಇದ್ದ ಮನಸ್ಸು ನಿಂತ ನೀರಂತೆ  ರೋಗ ರುಜಿನವನ್ನು ಸೃಷ್ಟಿಸುತ್ತದೆ.  ಯಾವ ಮನಸ್ಸಿನಲ್ಲಿ ಚಿಂತನೆಗಳು ಮೊಳೆಯುವುದಿಲ್ಲವೋ ಅದು ಜೀವಂತಿಕೆಯನ್ನು ತೋರಿಸಲಾರದು.  ಜ್ಞಾನದ ರಹದಾರಿಯೇ ಸಾಹಿತ್ಯ.
ಕೇವಲ ಯಕ್ಷಗಾನದಲ್ಲಿ ಮಾತ್ರ ಸಾಧ್ಯವಾಗುವ ಈ ಪಾತ್ರ ವೈಭವ ಅನುಭವಿಸುವುದಕ್ಕೆ ನಾವು ಪಳಗಿದ ಪ್ರೇಕ್ಷಕರಾಗಬೇಕು. ನಭೂತೋ ನಭವಿಷ್ಯತಿ ಎಂಬಂತೆ ಶೇಣಿ ಗೋಪಾಲ ಕೃಷ್ಣ ಭಟ್ಟರಂತಹ ಕಲಾವಿದರ ಸಮಕಾಲೀನರು ನಾವಾಗಿದ್ದೇವೆ. ಕಣ್ಣಾರೆ ಇದನ್ನು ಕಂಡು ಕೇಳಿ ಮರೆಯಲಾಗದ ಅನುಭವವನ್ನು ಪಡೆದುಕೊಂಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. 
ಕಲಾವಿದ ತಾನು ಕಲೆಯನ್ನು ತಿಳಿದಿದ್ದೇನೆ ಎನ್ನುವುದಕ್ಕಿಂತ ಕಲೆ ಅವನನ್ನು ಎಷ್ಟು ತಿಳಿದುಕೊಂಡಿದೆ ಎಂಬುದು ಮುಖ್ಯವಾಗುತ್ತದೆ.    ಶೇಣಿಯವರು ಕಲಾವಿದನಾಗಿ ಎಷ್ಟು ಮಹಾತ್ಮರೋ ಅದಕ್ಕಿಂತ ಮಿಗಿಲಾಗಿ ಅವರಲ್ಲಿರುವ ಕಲೆಯನ್ನು ಈ ಯಕ್ಷಗಾನ ಕಲೆ ತಿಳಿದುಕೊಂಡಿದೆ.  ಈ ಅರ್ಥ ವೈಭವವನ್ನು ಮತ್ತೊಮ್ಮೆ ಸಾದ್ಯಂತವಾಗಿ ಅನುಭವಿಸುವುದಕ್ಕೆ ಸಹಕಾರಿಯಾದದ್ದು ಹಲವು ವರ್ಷಗಳ ಕೆಳಗೆ ಪ್ರಕಾಶನ ಗೊಂಡ ಡಾ. ಶ್ರೀ ಗೋಪಾಲಕೃಷ್ಣ ಎಲ್ ಹೆಗಡೆಯವರಿಂದ ರಚಿಸಲ್ಪಟ್ಟ “ ಶೇಣಿ ಭಾರತ” ಎಂಬ ಪುಸ್ತಕ. ಇದನ್ನು ಒದಗಿಸಿದ ಮಹನೀಯರಿಗೆ ಮತ್ತೊಮ್ಮೆ ಪ್ರಣಾಮಗಳನ್ನು ಅರ್ಪಿಸುತ್ತೇನೆ.  ಶೇಣಿಯವರ ಅರ್ಜುನ ಸುರಿಸಿದ ಶರ ವರ್ಷದ ನೆನಪಲ್ಲಿ   ಮತ್ತಷ್ಟು ಮಿಂದೇಳುವ ಆಶೆ.





Wednesday, April 3, 2019

ಕಂಸ ವೃತ್ತಾಂತ....



ಕಂಸ ವೃತ್ತಾಂತ....
[ ಹರಿದಾಸ ಶ್ರೀ ಶೇಣಿ ಗೋಪಾಲ ಕೃಷ್ಣ  ಭಟ್ಟರು ಯಕ್ಷಗಾನ ಲೋಕ ಕಂಡ ಅದ್ಭುತ ಕಲಾವಿದ ಶ್ರೇಷ್ಠ. ತಮ್ಮ ಮಾತುಗಾರಿಕೆಯಿಂದಲೇ ಪಾತ್ರಗಳನ್ನು ಚಿತ್ರಿಸುತ್ತಾರೆ ಎಂದಾದರೆ, ಆ ಪಾತ್ರಗಳು ಮತ್ತೊಮ್ಮೆ ಜೀವ ತಳೆದು ಬಂದ ಅನುಭವವಾಗುತ್ತದೆ. ಪ್ರಕೃತಿಯಲ್ಲಿ ಮನುಷ್ಯನಿಗೆ ಮಾತ್ರವೇ ಮಾತನಾಡುವ ಯೋಗ್ಯತೆ ಭಗವಂತ ಕಲ್ಪಿಸಿದ್ದಾನೆ. ಆದರೆ ಭಗವಂತನ ಈ ಅನುಗ್ರಹವನ್ನು ಸಾರ್ಥಕಗೊಳಿಸಿದ ಶ್ರೇಯಸ್ಸು ಯಕ್ಷಗಾನ ಲೋಕಕ್ಕೆ ಸಂದರೆ,  ಅದರಲ್ಲಿ ಬಹುಪಾಲು ಶತಮಾನಕ್ಕೊಬ್ಬ ಶೇಣಿ ಎಂಬ ಖ್ಯಾತಿಗೆ ಕಾರಣರಾದ ಶ್ರೀ ಶೇಣಿ ಗೋಪಾಲ ಕೃಷ್ನ ಭಟ್ಟರಿಗೆ ಸಲ್ಲುತ್ತದೆ. ಕಣ್ಣು ತೆರೆದು ಪಾತ್ರಗಳನ್ನು ಕಾಣುವುದಕ್ಕಿಂತಲೂ ಕೇಳುವುದರಲ್ಲೇ ಅದರ ಪೂರ್ಣಾನುಭವವನ್ನು ಕೊಡುವ ಭಟ್ಟರ ಮಾತುಗಾರಿಕೆ ಯಕ್ಷಗಾನದ ಅದ್ಭುತ ರಮ್ಯ ಚರಿತ್ರೆಯ ಭಾಗವಾಗುತ್ತದೆ. ಈ ಮಾತಿನ ವೈಖರಿಯಲ್ಲಿ ಜೀವ ತಳೆದ ಒಂದು ಪಾತ್ರ ಕಂಸ. ಶ್ರೀಕೃಷ್ಣ ಜನ್ಮ  ಎಂಬ ಕಥಾಭಾಗದ  ಒಂದು ಅರ್ಥಗಾರಿಕೆ ಕೇಳುತ್ತಿರಬೇಕಾದರೆ ಹತ್ತು ಹಲವು ಚಿಂತನೆಯ ಅನುಭವ ಕೇಳುಗನಿಗೂ ಸಾಧ್ಯವಾಗುತ್ತದೆ. ಆ ಅರ್ಥಗಾರಿಕೆಯ ಸಂಕ್ಷೇಪ ರೂಪದೊಂದಿಗೆ ಹಲವು ಚಿಂತನೆಗಳು ರೂಪಗೊಂಡ ಸ್ವ ಅನುಭವ ಇಲ್ಲಿದೆ. ಭಾವನೆಗಳು ವಿಮರ್ಶಾತೀತವಾಗುತ್ತದೆ ಎಂಬ ಭಾವನೆ ನನ್ನದು. ಅದು ಸರಿ ಇರಬಹುದು ತಪ್ಪಿರಬಹುದು. ಅದು ಕೇವಲ ಭಾವನೆಗಳಷ್ಟಕ್ಕೆ ಸೀಮಿತ.  ಹುಚ್ಚು ಮನಸ್ಸಿನ ಕಲ್ಪನೆಗಳಂತೆ ಅನುಭವಗಳಲ್ಲಿ ನ್ಯೂನ್ಯತೆಗಳಿದ್ದರೆ ಅದನ್ನು ಮನ್ನಿಸುತ್ತ ಅನುಭವಿಸಬೇಕು. ]

ಕಂಸನ ಸ್ವಗತ....


            ಎಂಟಾಗಬೇಕಾದರೆ ಏಳು ಕಳೆಯಲೇ ಬೇಕಲ್ಲ?  ಏಳರವರೆಗೆ ಸಂದದೇ ಇದ್ದರೆ ಎಂಟು ಹೇಗೆ ಉಂಟಾದೀತ?. ವಸುದೇವ ಹುಟ್ಟಿದ ಏಳು ಮಕ್ಕಳನ್ನೂ ಕಂಸನಿಗೆ ತಂದು ಒಪ್ಪಿಸಿದ. ಯಾಕೆ? ಎಂಟನೆಯದ್ದು ಹುಟ್ಟುವುದಕ್ಕೆ ಅವಕಾಶ ಒದಗಿಬರಬೇಕಲ್ಲ? ಏಳು ಕಳೆಯದೇ ಇದ್ದರೆ, ಏಳು ಹೆಜ್ಜೆ ಇಡದೇ ಇದ್ದಲ್ಲಿ ಎಂಟನೆಯ ಹೆಜ್ಜೆಯ ಸ್ಥಾನ ಒದಗುವುದಾದರೂ ಹೇಗೆ? ಹೀಗೆ ಎಂಟರ ನಂಟಿನ ಮರ್ಮವನ್ನು ಬಿಚ್ಚಿಕೊಳ್ಳುತ್ತಾ ಸಾಗುವ ಕಂಸ ವೃತ್ತಾಂತ ಪರಮಾತ್ಮ ಸಂಕಲ್ಪಕ್ಕಿಂತ ಮಿಗಿಲಾದುದು ಇಲ್ಲ ಎಂಬುದನ್ನು ತೋರಿಸುತ್ತಾ ಸಾಗುತ್ತದೆ.  ಆದರೆ ಕಂಸ ಪ್ರಯತ್ನ ಎಂಬುದು ಪರಮಾತ್ಮನಿಗೆ ಸವಾಲೆಸೆಯುತ್ತಾ ಸಾಗುತ್ತದೆ. ಕಂಸ ಪರಮಾತ್ಮನೊಡನೆ ಸಂಘರ್ಷಕ್ಕಿಳಿಯುವುದು ಹೀಗೆ. ಪರಮಾತ್ಮನಿಗೆ ತೊಡಗುವ ಎಂಟರ ನಂಟಿನ ಅನುಬಂಧವನ್ನು ವಿವರಿಸುತ್ತಾ ಸಾಗುವ ಯಕ್ಷಗಾನ ತಾಳ ಮದ್ದಲೆ ಇದು. ಯಕ್ಷಗಾನದ ವಾಕ್ ಪ್ರಪಂಚದ ಯುಗ ಪುರುಷ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಕಂಸನ ಪಾತ್ರ ಲೌಕಿಕ ಮತ್ತು ಅಧ್ಯಾತ್ಮದ ಜೀವನವನ್ನು ತೆರೆದಿಡುತ್ತಾ ಸಾಗುತ್ತದೆ.   

            ಭಾವ ವಸುದೇವ ತಂಗಿ ದೇವಕಿಯನ್ನು ವೈಭವೋಪೇತವಾಗಿ ಕರೆದುಕೊಂಡು ಹೋಗುವಾಗ ಕೇಳುವ ಅಶರೀರವಾಣಿ, ದೇವರ ಅಸ್ತಿತ್ವವನ್ನು  ನಂಬದ ಕಂಸನಿಗೆ ಅನುಮಾನವನ್ನು ಹುಟ್ಟುಹಾಕಿಸುತ್ತದೆ. ಮೃತ್ಯುವನ್ನು  ತನ್ನ ಕಂಕುಳಲ್ಲೇ ಇಟ್ಟುಕೊಂಡು ಸಾಗುವ  ಕಂಸನಿಗೆ ಸಾವು ಹತ್ತಿರವಾದ ಅನುಭವ. ಆದರೂ ದೇವರು ತನಗೆ ಎಂಟರವರೆಗೆ ಸಮಯವನ್ನು ಕೊಟ್ಟಿದ್ದಾನಲ್ಲ ಎಂದು ತಿಳಿಯದೇ ಹೋದ. ನಾಳೆಯೋ ಮರುಕ್ಷಣವೋ ಹೀಗೆ ಸಾವಿನ ಬಗ್ಗೆ ಖಚಿತವಾಗಿ ತಿಳಿಯದೇ ಇರುವವನಿಗೆ ಎಂಟರವರೆಗಾದರೂ ಸಮಯವಿದೆಯಲ್ಲ ಎಂದು ಕಂಸ ಭಾವಿಸುವುದಿಲ್ಲ. ಬದಲಾಗಿ ಎಂಟರ ನಂತರವಾದರೂ  ಬರುವ ಮರಣಕ್ಕೆ ಅಂಜಿಬಿಡುತ್ತಾನೆ.  ಆಧ್ಯಾತ್ಮ ಮತ್ತು ಲೌಕಿಕದ ಮುಖದರ್ಶನವಾಗುವುದು ಹೀಗೆ.

            ಮಹಾ ಜ್ಞಾನಿಗಳಿಗೂ ತಮ್ಮ ಮರಣದ ಬಗ್ಗೆ ತಿಳಿಯುವುದಿಲ್ಲ. ಆದರೆ ಕಂಸನಿಗೆ ಅಶರೀರವಾಣಿ ಬಂದು ಮೊಳಗುತ್ತದೆ. ಶರೀರವಿಲ್ಲದ ಶಾರೀರ ಧ್ವನಿ ತೋರಿಸಿದ ಅಶಾಶ್ವತ ಶರೀರ ಸಂಬಂಧವನ್ನು ಕಂಸ ತಿಳಿಯದೇ ಹೋದ. ಒಂದಲ್ಲ ಎರಡಲ್ಲ ಎಂಟು ಸಲ ದೇವಕಿ ತಾಯಿಯಾಗಬೇಕು.  ಯೋಚಿಸುತ್ತಾನೆ ಕಂಸ, ಮಹಾ ಜ್ಞಾನಿಗಳು ಎಷ್ಟು ಯತ್ನಿಸಿದರೂ ತಿಳಿಯದ ರಹಸ್ಯವನ್ನು ತನಗೆ ಪರಮಾತ್ಮ ಏಕೆ ಹೇಳಿದ? ಮತ್ತೇನೂ ಅಲ್ಲ. ಇದು ದೇವಕಿಯ ದುರ್ದೈವ. ದುರಾದೃಷ್ಟ. ಮಹಾರಾಜನ ಮುದ್ದಿನ ತಂಗಿ, ಹೇಗೆ ಬದುಕನ್ನು ಸಾಗಿಸಬಹುದಿತ್ತು. ದುರ್ದೈವವಲ್ಲದೇ ಮತ್ತೇನು?  ದೇವಕಿಯ ದುರ್ದೈವ ತನಗಿಂದು ಸದೈವವಾಗಿ ಪರಿಣಮಿಸಿದೆ.  ಬರಬಹುದಾದ ವ್ಯಾಧಿಯನ್ನು ಮೊದಲೇ  ತಿಳಿದಾಗಿದೆ. ಇನ್ನು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಸಾವನ್ನು ಮೊದಲಾಗಿ ತಿಳಿದ ನಾನು ಅದೃಷ್ಟವಂತ. ಅಶರೀರವಾಣಿ ರೂಪದಲ್ಲಿ   ಪರಮಾತ್ಮ  ನಾನು ಸಾಯಲಿ ಎಂದು ಬಯಸಿ ಹೇಳಿದ್ದಲ್ಲ. ಬದಲಿಗೆ ಎಚ್ಚರಿಸಿದ್ದಾನೆ. ಜಾಗರೂಕನಾಗಬೇಕಿದೆ. ಹೀಗೆ ಮರಣವನ್ನು ಅಥವಾ ವಿಧಿಯನ್ನು ಎದುರಿಸುವುದಕ್ಕೆ ಕಂಸ ಪ್ರಯತ್ನಿಸುತ್ತಾನೆ.

            ಎಲ್ಲ ತರ್ಕಗಳ ಭರವಸೆ ಇದ್ದರೂ ಕಂಸ ಕೊಂಚ ಅಧೀರನಾಗುತ್ತಾನೆ.  ಬದುಕಲ್ಲಿ ಮೊದಲಾಗಿ ಮರಣ ಭಯ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಆತ ವಸುದೇವನೆದುರಿಗೆ ದಯನೀಯ ಭಾವದಿಂದ ವರ್ತಿಸುತ್ತಾನೆ. ಯಾಕೆಂದರೆ ಇಡೀ ಜಗತ್ತಿನಲ್ಲಿ ಯಾವ ದೇವರು ರಕ್ಷಿಸಲಾರ. ವಸುದೇವ ....ಈ ವಸುದೇವ ಪ್ರಾಮಾಣಿಕವಾಗಿ  ಮನಸ್ಸು ಮಾಡಿದರೆ ಕಂಸನಿಗೆ ಮರಣ ಭಯ ಇನ್ನಿಲ್ಲವಾಗುತ್ತದೆ.  ಇನ್ನು ಕಂಸ ಮರಣದ ಬಗ್ಗೆ ಯೋಚಿಸುವ ಅಗತ್ಯವೇ ಇಲ್ಲ.  ಆದರೆ ವಸುದೇವ ಮನಸ್ಸು ಮಾಡಬೇಕಲ್ಲ? ಕಾಲಿಗೆ ಮುಳ್ಳು ತಾಗಿದ್ದಕ್ಕೆ ಕಾಡಲ್ಲಿದ್ದ ಮುಳ್ಳಿಗೆ ಬೆಂಕಿ ಕೊಡಬೇಕಾದ ಅಗತ್ಯವಿಲ್ಲ. ಕಾಲಿಗೆ ಚಿಕಿತ್ಸೆ ಮಾದಿದರಾಯಿತು. ಹೌದು ವಸುದೇವನಿಂದಲೇ ತೊಡಗಬೇಕು.  ಮತ್ತೊಮ್ಮೆ ದಯನೀಯ ಭಾವದಿಂದ ವಸುದೇವನಲ್ಲಿ ಬೇಡಿಕೊಳ್ಳುತ್ತಾನೆ . ದಯನೀಯವಾಗಿ ಹೇಳುವ ’ಭಾವಯ್ಯ’   ಎನ್ನುವ ಆ  ದೀನ ಸ್ಥಿತಿ , ಶೇಣಿಯವರ ಕಂಸ ನಿಜಕ್ಕೂ ಪರಕಾಯ ಪ್ರವೇಶದ ಅನುಭವವನ್ನು ಕೊಡುತ್ತದೆ. ಕಂಸನಿಗೆ   ಅರಿಯದೇ ಆವರಿಸಿದ  ಮರಣಭಯಕ್ಕೆ ಅದು ಸಾಕ್ಷಿಯಾಗುತ್ತದೆ.  ವಸುದೇವನಲ್ಲಿ  ಮತ್ತೂ ಮತ್ತೂ ಕೇಳುತ್ತಾನೆ "ಭಾವ ನಿನಗೆ ಮನಸ್ಸುಂಟ ನಾನು ಸಾಯ್ಲಿ ಅಂತ?" ಎಂತಹ ಮಾರ್ಮಿಕ ಪ್ರಶ್ನೆ ಇದು.  ಒಂದು ಘಳಿಗೆ ಮರಣ ದಂಡನೆಯನ್ನು ವಿಧಿಸುವ ಯಮರೂಪಿಯಾಗಿ ವಸುದೇವ ಕಂಡು ಬರುತ್ತಾನೆ.

ಅದುವೆರೆಗೆ ತಂಗಿ ದೇವಕಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಕಂಸ.  ಹಾಗಾಗಿ ಭಾವನೊಂದಿಗೆ ಒಡಂಬಡಿಕೆಯೊಂದಕ್ಕೆ ಮನಸ್ಸು ಮಾಡಿದ್ದು.  ತಂಗಿಯನ್ನು ಅತಿಯಾಗಿ ಪ್ರೀತಿಸಿದ್ದ. ಅದು ಕಂಸನ ತಪ್ಪಲ್ಲ. ಭಾವನನ್ನು ಗೌರವದಲ್ಲಿ ಕಂಡಿದ್ದ. ಅದೂ ತಪ್ಪಲ್ಲ.  ಕೇವಲ ಮರಣ ಭಯಕ್ಕೆ ವಶವಾದದ್ದು...!!! ಕಂಸನ ಅಪರಾಧವೆಂದರೆ ಅದು ಮರಣ ಭಯ. ಅಷ್ಟಾಗಿಯೂ ಈತನಲ್ಲಿ ಮರಣ ಭಯವನ್ನು ಹುಟ್ಟಿಸಿದ ವಿಧಿಯ ಮರ್ಮ ಏನೋ?


 ಕೊನೆಯಲ್ಲಿ ವಸುದೇವನ ಬೇಡಿಕೆಯಂತೆ ಒಂದು ಒಪ್ಪಂದಕ್ಕೆ ಬರುತ್ತಾರೆ. ಹುಟ್ಟಿದ ಅಷ್ಟೂ ಮಕ್ಕಳನ್ನು ತಂದು ಕಂಸನಿಗೆ ಒಪ್ಪಿಸುವುದು. ಹುಟ್ಟಿದ ಎಂಟು ಮಕ್ಕಳನ್ನೂ ಕೊಡುವುದಕ್ಕೆ ವಸುದೇವ ಒಪ್ಪಿಕೊಂಡ. ಕೊನೆಯಲ್ಲಿ ಕಂಸ ಹೇಳುತ್ತಾನೆ,  ಈ ಎಳನ್ನು ಕೊಡದೇ ಇದ್ದರೆ ಎಂಟನೆಯದನ್ನು ಹುಟ್ಟುವುದಕ್ಕೇ ಕಂಸ ಬಿಡಲಾರ.!  ಎಂತಹ ವಿಚಿತ್ರ ತರ್ಕ? ಇದು ತನ್ನ ಅತ್ಮವಿಶ್ವಾಸವನ್ನು ಕಂಸ ವ್ಯಕ್ತ ಪಡಿಸುವ ರೀತಿ.  ಮನದಲ್ಲೇ ಕಂಸ ಲೆಕ್ಕ ಹಾಕುತ್ತಾನೆ. ಒಂದರಿಂದ ಏಳು ಪರ್ಯಂತ ನನಗೆ ತೊಂದರೆ ಇಲ್ಲ. ಎಂಟನೆಯದ್ದು. ಒಬ್ಬ ಮನುಷ್ಯನಿಗೆ ಎಂಟು ಮಕ್ಕಳು ಬೇಕೇ ಬೇಕು ಎಂಬ ನಿಯಮವೇನೂ ಇಲ್ಲವಲ್ಲ. ಅಕ್ಕರೆಯ ತಂಗಿ ಪ್ರೀತಿಯ ಭಾವ ಎಲ್ಲ ಇದ್ದೂ ಎಂಟನೆಯದ್ದನ್ನು ಬಯುಸುತ್ತಾರೆ ಎಂದಾದರೆ, ವಿಚಿತ್ರ ಸಂಕಟದಲ್ಲಿ ಕಂಸ ಸಿಲುಕಿದ.

ಎಂಟನೆಯ ಜನ್ಮಕ್ಕಾಗಿ ಕಾದು ಕುಳಿತ ಕಂಸ. ಇಷ್ಟಕ್ಕೇ ವಿಧಿಯಾಟ ನಿಲ್ಲುವುದಿಲ್ಲ. ನಾರದ  ಬರುತ್ತಾನೆ. ಲೆಕ್ಕದ ಮರ್ಮವನ್ನು ತಿಳಿಸುತ್ತಾನೆ. ಸುರುಳಿ ಸುತ್ತಿದ ಎರಡು ಶೂನ್ಯದ ಎಂಟರ ಮಹತ್ವ ಹೇಳಿಬಿಡುತ್ತಾನೆ.  ಸಪ್ತಸ್ವರ,   ಸಪ್ತ ಸಾಗರ,   ಸಪ್ತ ಲೋಕ,  ಸಪ್ತ ಋಷಿ  ಹೀಗೆ ಸೃಷ್ಟಿಯ ಏಳರ ಆಚೆಗಿನ ಪರಮಾತ್ಮ ಎಂಬುದನ್ನು  ಎಂಟರಲ್ಲಿ ತೋರಿಸುತ್ತಾನೆ. ಎಂಟನೆಯದರ ಹುಡುಕಾಟ ಆರಂಭವಾಗುತ್ತದೆ. ಎಂಟನೆಯದ್ದು ಎಲ್ಲಿ ಅಡಗಿದೆ? ಎರಡು ಶೂನ್ಯವನ್ನು ಸುತ್ತಿಕೊಂಡ ಎಂಟು ಅಧ್ಯಾತ್ಮಿಕ ಲೌಕಿಕದಲ್ಲಿರುವ ಶೂನ್ಯತೆಯನ್ನೇ ಬಿಂಬಿಸುತ್ತದೆ. ನಾರದರ ರಹಸ್ಯ ಭೇದನದ ಮರ್ಮ ಕಂಸ ತಿಳಿಯುವುದಿಲ್ಲ. ಎಂಟು ಅದು,   ಈ ಏಳರಲ್ಲಿ ಎಲ್ಲಿ ಬೇಕಾದರೂ ಇರಬಹುದು.  ಒಂದು ಎರಡು...ಹೀಗೆ ಯವುದೂ ಎಂಟಾಗಬಹುದು.  ಎಂಟರ ಶೂನ್ಯದಂತೆ ಅದು ವರ್ತುಲಾಕಾರವಾಗಿ ಎಲ್ಲವೂ ಆಯೋಮಯವಾಗಿಬಿಡುತ್ತದೆ.  ಪ್ರಾಮಾಣಿಕವಾಗಿ ಹೇಳುವುದಿದ್ದರೆ, ನಾರದ ಬಂದದ್ದು ಆತನಲ್ಲಿದ್ದ ಮರಣ ಭಯವನ್ನು ದೂರಿಕರಿಸುವುದಕ್ಕೆ. ಪ್ರಾಪಂಚಿಕ ವ್ಯವಹಾರದ ಆಚೆಗಿನ ಸಂಭಂಧವನ್ನು ವಿವರಿಸುವ ಅವಶ್ಯಕತೆಯೇ ಒದಗುವುದಿಲ್ಲ. ಮೊದಲೆ ಭಯಗೊಂಡವನು ಹಗ್ಗವನ್ನು ತುಳಿದು ಹಾವೆಂದು ಭಯಗೊಂಡಂತಾಗುತ್ತದೆ. ಕಂಸ ಮತ್ತಷ್ಟು ಹತಾಶನಾಗುತ್ತಾನೆ,  ವ್ಯಗ್ರನಾಗುತ್ತಾನೆ. ಮಗಳ ಕೈ ಹಿಡಿದ ಅಳಿಯನನ್ನು ಮಾವ ದೇವರಾಗಿ ಕಾಣುತ್ತಾನೆ. ಅದರೆ ಭಗವಂತ ಅಳಿಯನಾಗಿ ಹುಟ್ಟಿದರೂ ಕಂಸ ದೇವರಾಗಿ ಕಾಣಲೇ ಇಲ್ಲ. ವಸುದೇವ ದೇವಕಿಯರಿಗೆ ಸೆರೆಮನೆಯೇ ಅಂತಃಪುರವಾಗಿಬಿಡುತ್ತದೆ.

ದೇವಕಿ ನನ್ನ ಸಹೋದರಿ, ವಸುದೇವ ತನ್ನ ಭಾವ ಇಬ್ಬರೂ ತನ್ನ ವಶದಲ್ಲಿದ್ದರೂ ಕಂಸನಿಗೆ ತಾನು ಗೆದ್ದೇ ಬಿಡುವ ವಿಶ್ವಾಸ ಇರುವುದಿಲ್ಲ. ಮೃತ್ಯು ಭಯ ತನ್ನವರನ್ನೂ ಸಹ ನಂಬದಂತಹ ಕತ್ತಲೆಗೆ ಆತನನ್ನು  ತಳ್ಳಿಬಿಡುತ್ತದೆ. ಕತ್ತಲೆಯ ಕೋಣೆಯಲ್ಲಿದ್ದರೂ ವಸುದೇವ ದೇವಕಿಯರು ಬೆಳಕನ್ನು ಕಂಡರೂ ಕಂಸ ತನಗಾವರಿಸಿದ ಕತ್ತಲಿಂದ ಹೊರಬರಲಾಗುವುದೇ ಇಲ್ಲ. ಒಂದು ಸುಮೂಹುರ್ತದಲ್ಲಿ ಶ್ರೀಕೃಷ್ಣ ಜನನವಾಗುತ್ತದೆ. ಭಗವಂತನ ಅಪೇಕ್ಶೆಯಂತೆ ಶಿಶು ರೂಪದ ಪರಮಾತ್ಮನನ್ನು ವಸುದೇವ ನಂದಗೋಕುಲಕ್ಕೆ ಹೊತ್ತೊಯ್ಯುತ್ತಾನೆ. ಎಂಟನೆಯ ಜನ್ಮವಾಗಿ ಹೆಣ್ಣು ಮಗುವನ್ನು ಕಾಣುವಾಗ ಕಂಸ ತನ್ನ ಸ್ಥಿಮಿತವನ್ನು ಕಳೆದುಕೊಳ್ಳುತ್ತಾನೆ. ತನ್ನನ್ನು ಕೊಲ್ಲುವ ಶಿಶು ನಂದಗೋಕುಲದಲ್ಲಿ ಬೆಳೆಯುತ್ತಿದೆ. ಕಂಸ ಹತಾಶನಾಗುತ್ತನೆ.    ಮೊದಲೊಮ್ಮೆ ಮೊಳಗಿದ ಅಶರೀರವಾಣಿ ಸಾವಿನ ಭೀತಿಯನ್ನು ತಂದು ಭಯವನ್ನು ಹುಟ್ಟಿಸಿದ್ದರೆ ನಂತರ ಬಂದ ನಾರದರು ಮತ್ತಷ್ಟು ಗೊಂದಲವನ್ನು ಸೃಷ್ಟಿಸಿ ಬಿಡುತ್ತಾರೆ. ಇದೀಗ ಕೊನೆಯಲ್ಲಂತೂ ವಿಧಿಯ ಅಟ್ಟ ಹಾಸದ ಸದ್ದಿಗೆ ಬೆರಗಾಗುತ್ತಾನೆ. ಮೂರು ಬಾರಿಯೂ ವಿಧಿ ಆತನ ಮರಣದ ನಿಮಿತ್ತವನ್ನು ಮೊದಲಾಗಿ  ತಿಳಿಸಿದರೂ ಕಂಸ ಅಸಹಾಯಕನಾಗುತ್ತಾನೆ.  ನಂತರವೂ ವಿಧಿಗೆ ಸಡ್ಡು ಹೊಡೆಯುವಲ್ಲಿಆತನ ಮನಸ್ಸು  ಪೂತನಿಯ ಕುರಿತು ಚಿಂತಿಸುತ್ತದೆ. ಅಲ್ಲಿಯೂ ಕಂಸ ಯೋಚಿಸುವುದು...ಒಂದೋ ವಿಷ ಹೀರಿ ಮಗು ಸಾಯಬೇಕು, ಇಲ್ಲಾ ಈಕೆಯ ನಂಜಾದರೂ ಖಾಲಿಯಾಗಬೇಕು. ಆದರೆ ನಂಜಲ್ಲದೇ ಪೂತನಿಯಲ್ಲಿ ಏನೂ ಇಲ್ಲ ಎಂಬುದು ವಿಪರ್ಯಾಸ.

ಕೃಷ್ಣಜನ್ಮ ಕಥಾನಕ ಮಂಗಳವಾದರೂ ಕಂಸನ ಹತಾಶ ಮುಖ ಸ್ಮೃತಿಯಿಂದ ಮಾಸುವುದೇ ಇಲ್ಲ.