"ಇದು ವಿಮರ್ಶೆಯಲ್ಲದ ಚಿಂತನ"

Saturday, November 7, 2020

ಮಾತು ಮೌನವಾಗಿದೆ

 

ನಾಲಗೆ ಇದ್ದರೆ ಮಗ ಬದುಕಿಯಾನು ಎಂಬ ನಾಣ್ಣುಡಿ ಇದೆ. ಮಾತು ಎಂಬುದು ಮನುಷ್ಯನನ್ನು ಭೂಮಿಯ ಉಳಿದ ಜೀವ ಜಾಲಗಳಿಂದ   ಪ್ರತ್ಯೇಕಿಸುತ್ತದೆ. ಮನುಷ್ಯನಿಗಲ್ಲದೆ ಬೇರೆ ಯಾವುದಕ್ಕೂ ಈ ಗುಣ  ಇರುವುದಿಲ್ಲ ಮಾತು ಕೆಟ್ಟರೆ ದೇಶ‌ ಕೆಟ್ಟಿತು. ಹೀಗೆ ಮಾತು ಎಂಬುದು ಮನುಷ್ಯನ ಜೀವ ಅಸ್ತಿತ್ವದ ಅಂಗ.  ಅದರಲ್ಲೂ ಕರಾವಳಿ ಜನಗಳಿಗೆ ಇದು ಸಹಜ ಧರ್ಮ ಎನ್ನಬೇಕು. ಹಾಗಾಗಿಯೇ ಯಕ್ಷಗಾನ ಎಂಬುದು ಅವಿಭಾಜ್ಯ ಅಂಗವಾಯಿತು. ಯಾಕೆಂದರೆ ಈ ’ಮಾತು’ ಎಂಬುದು  ಯಕ್ಷಗಾನದ ಜೀವಭಾವ ಎಂದರೂ ತಪ್ಪಾಗಲಾರದು. ಹೊರ ಜಗತ್ತಿಗೆ ಈ ಕಲೆ ತೋರಿಸಿದ್ದು ಒಂದಾದರೆ ಇದರಲ್ಲಿ ಅಡಕವಾಗಿರುವುದೇ ಇನ್ನೊಂದು. ಅದರಲ್ಲಿ  ಹೇಳಬಹುದಾದ್ದು ಎಂದರೆ ಮತ್ತದೇ ಮಾತು.  ಹಾಗಾಗಿಯೇ ಇಲ್ಲಿ ಅವ್ಯಕ್ತವಾಗಿ ಭಾಸವಾಗುವುದು ಬಾಯಿ ಇದ್ದರೆ ಮಗ ಬದುಕಿಯಾನು.


ಯಕ್ಷಗಾನವೆಂದರೆ ಬಣ್ಣದ ವೇಷ ಕುಣಿತ  ಗಾಯನ ಹೀಗೆ ಹೊರ ಪ್ರಪಂಚಕಂಡುಕೊಂಡರೆ ಯಕ್ಷಗಾನದ ನಿಜವಾದ ಆಸ್ವಾದನೆಯ ರಸಿಕನ ಕಥೆಯೇ ಬೇರೆ. ಆತ ಇಲ್ಲಿ ಕಂಡುಕೊಂಡದ್ದು ಮಾತಿನ ಮಂಟಪವನ್ನು. ಈ ಮಾತಿನ ಮಂಟಪದ ಅದ್ಭುತವಾದ ಶಿಲ್ಪಿಗಳು ಕಟ್ಟಿ ಬೆಳೆಸಿದ ಪರಂಪರೆಯೇ ಯಕ್ಷಗಾನದ ಅರ್ಥಗಾರಿಕೆ. ಒಬ್ಬಬ್ಬರೂ ಕಟ್ಟಿದ ಮಾತಿನ ಮಂಟಪವೇನು ಜಗತ್ತನ್ನೇ ಇಲ್ಲಿ ಸೃಷ್ಟಿ ಮಾಡಿದರು. ರಸಿಕನ ಕಣ್ಣ ಕಾಣಲಾಗದೇ ಇದ್ದದ್ದನ್ನು, ಮನಸ್ಸು ಕಲ್ಪಿಸಲಾಗದೇ ಇದ್ದದ್ದನ್ನು ಇಲ್ಲಿ ಸೃಷ್ಟಿ ಮಾಡಿ ತೋರಿಸಿದರು. ಅದರಲ್ಲಿ ಖ್ಯಾತ ನಾಮರಾಗಿ ತನ್ನದೇ ವ್ಯಕ್ತಿ ವಿಶೇಷವನ್ನು ಹೊಂದಿ ರಸಿಕರ ಮನಗೆದ್ದವರು ಇತ್ತೀಚೆಗೆ ನಮ್ಮನ್ನಗಲಿದ  ಮಲ್ಪೆ ವಾಸುದೇವ ಸಾಮಗರು.

 

ಸಾಮಗರ ವೇಷಗಳನ್ನು ಪಾತ್ರಗಳನ್ನು ಅರ್ಥಗಾರಿಕೆಯನ್ನು ಅನುಭವಿಸುವಾಗ ಆ ವಾಕ್ ಚಾತುರ್ಯಕ್ಕೆ ಶಬ್ದ ವಿನ್ಯಾಸಗಳನ್ನು ಕಂಡಾಗ ನಾನು ಹೇಳಿಕೊಂಡದ್ದಿದೆ , ಬಾಯಿ ಇದ್ದರೆ ಮಗ ಬದುಕಿಯಾನು. ಇದು ಅವರೇ ಹೇಳುವ ಅರ್ಥಗಾರಿಕೆಯ ಶೈಲಿಯ ವಾಕ್ಯ. ಎಂತಹಾ ಮಾತುಗಾರಿಕೆ. ಶಬ್ದಗಳು ಇವರ ಅರ್ಥಗಾರಿಕೆಗೆ ಸೃಷ್ಟಿಯಾದಂತೆ ಅದರ ಸೂಕ್ತ ಬಳಕೆ. ಪಾತ್ರದ ಮಂಡನೆ ರಸಿಕರ ಚಿಂತನೆಗೆ ಕಿಚ್ಚು ಹಚ್ಚಿಸಿ ಆ ಬೆಳಕನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡುವ ಒಂದು ರೀತಿ ಮಿಂಚಿನ ಅರ್ಥಗಾರಿಕೆ ಸಾಮಗರದ್ದು.

 

ಯಕ್ಷಗಾನದಲ್ಲಿ ಮಾತಿನ ಪರಂಪರೆಗೆ ಮತ್ತೊಂದು ಅನ್ವರ್ಥ ಪರಂಪರೆಯನ್ನು ಸೃಷ್ಟಿಸಿದ್ದು ಸಾಮಗ ಪರಂಪರೆ. ಇದರಲ್ಲಿ ಹಲವರು ಯಕ್ಷಗಾನದ ಅರ್ಥಾಗಾರಿಕೆಯಲ್ಲೂ ಪಾತ್ರ ವೈಖರಿಯಲ್ಲೂ ತಮ್ಮದೇ ಸ್ಥಾನವನ್ನು ನಿರ್ಮಿಸಿದವರು. ಆ ಸಾಮಗ ಪರಂಪರೆ ಯಕ್ಷಗಾನದ ಅನಿವಾರ್ಯ ಅಂಗವೆಂಬಂತೆ ಅವಿನಾಭಾವ ಸಂಬಂಧವನ್ನು ಬೆಳೆಸಿ ಯಕ್ಷಗಾನಕ್ಕೆ ತಮ್ಮ ಪರಂಪರೆಯ ದೇಣಿಗೆಯನ್ನು ಸಲ್ಲಿಸಿದೆ. ಇಂದು ಯಕ್ಷಗಾನದ ಅರ್ಥಗಾರಿಕೆಯ ಪ್ರಪಂಚ ವಿಶಿಷ್ಟವಾಗಿರುವುದಕ್ಕೆ ಒಂದು ಕಾರಣವೇ ಈ ಸಾಮಗ ಪರಂಪರೆ. ಯಕ್ಷಗಾನದ ಅರ್ಥಗಾರಿಕೆಯ ಅಂಗಿಯ ಒಂದು ಗುಂಡಿ ಕಳಚಿ ಬಿದ್ದಿದೆ. ಮೊನ್ನೆ ಮೊನ್ನೆ ವರೆಗೂ ಭದ್ರವಾಗಿ ಯಕ್ಷಗಾನವನ್ನುಅಲಂಕರಿಸಿದ್ದ ಈ ಅಮೂಲ್ಯ ವಸ್ತು ಇಂದು ಇಲ್ಲ ಎಂದಾಗಬೇಕಾಗಿದ್ದರೆ ನಂಬುದುವುದಕ್ಕೆ ಸಾಧ್ಯವಿಲ್ಲ.

ನಾನು ಸಾಮಗರ ವೇಷವನ್ನು ಮೊದಲು ನೋಡಿದ್ದು ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಗೋವಿಂದ ಭಟ್ಟರ ಪಾತ್ರದಲ್ಲಿ. ಆವಾಗ ನಿಜಕ್ಕೂ ಬೆರಗಾಗಿದ್ದೇನೆ. ಇಂದು ಆ ಪಾತ್ರದಲ್ಲಿ ಹಲವರನ್ನು ಕಂಡಿದ್ದೇನೆ. ಆದರೆ ವಾಸುದೇವ ಸಾಮಗರ ಭಟ್ಟರು ಎಂದರೆ ಅದು ಅದ್ವಿತೀಯ. ಆ ಪಾತ್ರದ ವ್ಯಕ್ತಿತ್ವದ ಸಂಪೂರ್ಣ ಅಭಿವ್ಯಕ್ತಿಯನ್ನು ಇವರಂತೆ ಬಿಂಬಿಸಿದವರಿಲ್ಲ ಅಂತ ನನ್ನ ಭಾವನೆ.  ಆನಂತರ ಬೇಡರ ಕಣ್ಣಪ್ಪದ ಕೈಲಾಸ ಶಾಸ್ತ್ರಿ, ಕಾಯ ಕಲ್ಪದ ಅಶ್ವಿನಿ ದೇವತೆ...ಇದೆಲ್ಲ ಹಳೆಯ ಚರಿತ್ರೆಯ ಕಥೆಗಳು. ಬಯಲಾಟದಲ್ಲಿ ನೋಡಿದಕ್ಕಿಂತಲೂ ಹೆಚ್ಚು ತಾಳಮದ್ದಲೆಯಲ್ಲಿ ಕಂಡ ಪಾತ್ರಗಳೇ ಹೆಚ್ಚು. ಉತ್ತರನ ಪೌರುಷ ಪ್ರಸಂಗ ಇವರಿಗಾಗಿಯೇ ರಚಿಸಲ್ಪಟ್ಟಿತೇ ಎಂದು ಭಾಸವಾಗಬೇಕು. ಉತ್ತರನ ಪಾತ್ರ ಪ್ರಸ್ತುತಿಯದು.   ಏಕ ಮಾತ್ರ ವ್ಯಕ್ತಿಯಾಗಿ ಆ ಪ್ರಸಂಗವನ್ನು ಮೆರೆಸುವ ಪರಿ ಅದು ಸಹಜ ಸಾಮಗ ಶೈಲಿ ಅಂತ ಹೇಳಬೇಕು.  ದಮಯಂತಿ ಸ್ವಯಂವರ, ನಿಜಕ್ಕೂ ಯಕ್ಷಗಾನದ ಸಹಜ ಗದ್ದಲವಿಲ್ಲದ ಸೌಮ್ಯ ಪ್ರಸಂಗ. ಹಲವರು ಇದನ್ನು ಸಪ್ಪೆ ಪ್ರಸಂಗ ಅಂತ ಭಾವಿಸುತ್ತಾರೆ. ಸುರತ್ಕಲ್ ಮೇಳದ ಆಟದ ಇದೇ ಪ್ರಸಂಗದಲ್ಲಿ ಕೆಲವು ನಿಮಿಷಗಳ ಪುಷ್ಕಳನ ಪಾತ್ರ ನಿರ್ವಹಣೆ ಈಗಲೂ ನೆನಪಿಗೆ ಬರುತ್ತದೆ. ಅಚ್ಚುಕಟ್ಟಿನ ಪಾತ್ರ ನಿರ್ವಹಣೆ. ಸಪ್ಪೆ ಎನಿಸುವ ಪ್ರಸಂಗಕ್ಕೂ ಇವರ ಪುಷ್ಕರ ಕಿಚ್ಚು ಹತ್ತಿಸಿಬಿಡುತ್ತಾನೆ.

 

ಯಾವುದೇ ಪಾತ್ರವಾದರೂ ಆ ಪಾತ್ರದ ಮನೋಭಾವಕ್ಕೆ ಲಗ್ಗೆ ಇಡುವ ಪಾತ್ರ ನಿರ್ವಹಣೆ ಸಾಮಗರ ವೈಶಿಷ್ಟ್ಯ ಎನ್ನಬೇಕು. ತೆಂಕು ಬಡಗು ಎಂಬ ವೆತ್ಯಾಸವೇ ಇಲ್ಲದಂತೆ ಇವರ ಪಾತ್ರಗಳು ವಿಜ್ರಂಭಿಸುತ್ತವೆ. ಇವರ ವಾದಗಳಲ್ಲಿ ವಿತಂಡವಾದ ಮೊಂಡುತನ ಧಾರಾಳವಾಗಿ ಕಾಣಬಹುದು. ಬಹಳ ಅಪರೂಪ ಎನ್ನಿಸುವ ಶಬ್ದಗಳನ್ನು ಸಹಜ ಎಂಬಂತೆ ಪ್ರಯೋಗಕ್ಕೆ ತರುವ ಕ್ಷಮತೆ ನಿತ್ಯ ತೋರುತ್ತಾರೆ. ತಾಳ ಮದ್ದಲೆಗಳಲ್ಲಿ ಇವರು ಪಾತ್ರವನ್ನು ಕಟ್ಟುವ ಪರಿ ಅದ್ಭುತವಾಗಿರುತ್ತದೆ. ಹೆಚ್ಚಾಗಿ ರಾಮದಾಸ ಸಾಮಗರಂತೆ ಭಾವೋತ್ಕರ್ಷಕ್ಕೆ ಒಳಗಾಗುತ್ತಾರೆ. ಅರ್ಥಗಾರಿಕೆ ಕೇವಲ ವಿಚಾರ ಮಂಡನೆಯಾಗಬಾರದು. ಕೇವಲ ವಾದ ತರ್ಕಕ್ಕೆ ಸೀಮಿತವಾಗಬಾರದು. ಪ್ರತಿಸ್ಪರ್ಧಿಯ ಜತೆ ಸೀಮಿತವಾಗಿ ಸ್ಪರ್ಧಿಸಬೇಕು. ಹೆಚ್ಚಾಗಿ ಪ್ರತಿವಾದಿಯಲ್ಲಿ ಘರ್ಷಣೆಗೆ ಇಳಿದಾಗ ತನ್ನ ಪಾತ್ರದ ನಿಜವಾದ ವ್ಯಕ್ತಿತ್ವವನ್ನೂ ಸ್ವಭಾವವನ್ನು ಹಲವರು ಮರೆತು ಬಿಡುತ್ತಾರೆ. ಆದರೆ ಇವರ ಅರ್ಥಗಾರಿಕೆಯ ವೈಶಿಷ್ಟ್ಯವೇ ಎಂತಹಾ ವಾದವಿರಲಿ ಪಾತ್ರಕ್ಕೆ ಹೊಂದಿಕೊಂಡು ಸಂವಾದವಾಗುತ್ತದೆ. ಪಾತ್ರದ ಚೌಕಟ್ಟಿನೊಳಗೆ ಸಾಕಷ್ಟು ಸರ್ಕಸ್ ಮಾಡುವ ಅರ್ಥಗಾರಿಕೆ

 

ಸಾಮರ ವೈಶಿಷ್ಟ್ಯ ಕೇವಲ ಒಂದೆರಡು ವಾಕ್ಯದ ಪುಟ್ಟ ಅಂಕಣಕ್ಕೆ ಸೀಮಿತವಾಗುವಂಥದ್ದಲ್ಲ. ಅದೊಂದು ವಿಶಾಲವಾದ ಸಾಮ್ರಾಜ್ಯ. ವಾಸುದೇವ ಸಾಮಗರು ಇದ್ದಾರೆ ಎಂದರೆ ಅಲ್ಲಿ ಮಾತು...ಬರೇ ಮಾತು. ಹೀಗಿದ್ದರೂ ಮಾತುಗಾರಿಕೆಗೆ ಇವರು ಕೊಟ್ಟಿರುವ ಆಯಾಮ ಮಾತ್ರ ಅದ್ಭುತ. ತಾಳಮದ್ದಲೆಗೂ ಒಂದು ಮೇಳವನ್ನು ಕಟ್ಟಿಕೊಂಡು ಸಂಯಮದಿಂದ ತಿರುಗಾಟ ಮಾಡಿ ಮಾತಿನ ಅರಮನೆಗೆ ಕಲ್ಲು ಜೋಡಿಸಿದ ಕಾಯಕ ಪುರುಷ.  

 

ಮಾತುಗಾರಿಕೆಯ ಪಾತ್ರಗಳು ಇಂದು ಮೌನಕ್ಕೆ ಸರಿದು ರೋಧಿಸಿದ ಅನುಭವವಾಗುತ್ತದೆ. ಇನ್ನು ತಮ್ಮ ಪಾತ್ರಗಳು ವ್ಯಂಜನವಿಲ್ಲದ ಭೋಜನವಾದೀತೆ ಎಂದು ಆತಂಕ ಪಡುತ್ತವೆ.

 

ರಂಗದ ಮಟ್ಟಿಗೆ ಪಾತ್ರಗಳು ಕೇವಲ ರಂಗದ ಅಂಗವಾಗಿರಬಹುದು. ಆದರೆ ಒಬ್ಬ ಸಾಮಗರಂತಹ ಒಬ್ಬ ಅರ್ಥಧಾರಿ ಕಲಾವಿದನಿಗೆ ಅಷ್ಟಕ್ಕೇ ಸೀಮಿತವಾಗುವುದಿಲ್ಲ. ಅದರ ಹಿನ್ನೆಲೆಯಲ್ಲಿ ಸಾಕಷ್ಟು ಅಧ್ಯಯನ ಸಾಧನೆ ಬೇಕಾಗುತ್ತದೆ. ಇವೆಲ್ಲವೂ ಅವರ ಅರ್ಥಗಾರಿಕೆಯಲ್ಲಿ ವ್ಯಕ್ತವಾಗುತ್ತದೆ.

 

ಅದ್ಭುತ ಮಾತುಗಾರ ಈಗ ಮೌನಕ್ಕೆ ಜಾರಿದ್ದಾನೆ. ಪ್ರೇಕ್ಷಕ ಆ ಮೌನದಲ್ಲಿ ಮಾತನ್ನು ಹುಡುಕಬಹುದು. ಯಾಕೆಂದರೆ ಸಾಮಗರ ಪ್ರತಿಬೆ ಆ ರೀತಿಯದು. ಇದುವರೆಗು ಭೀಷ್ಮ ಪರಶುರಾಮರನ್ನು ಮೆರೆಸಿದ ನಾಲಗೆ ಇಂದು ಮೌನಕ್ಕೆ ಜಾರಿದೆ. ಇನ್ನು ಎಲ್ಲವೂ ನೆನಪು ಮಾತ್ರ.

 

ಮೃತರ ಆತ್ಮಕ್ಕೆ ಸದ್ಗತಿಯನ್ನು ಮೌನವಾಗಿ ಪ್ರಾರ್ಥಿಸುವುದಷ್ಟೇ ಉಳಿದಿದೆ. 

 

 

 

 

 

 

Sunday, September 27, 2020

ಮರೆಯಲಾಗದ ತೆಂಕಬೈಲು ಗಾನಮಾಧುರ್ಯ

            ಸುಮಾರು ಎಪ್ಪತ್ತರದ  ದಶಕದ ಸಮಯವದು. ಮಂಗಳೂರಿನ ಉರ್ವಸ್ಟೋರ್ ನಲ್ಲಿ ಒಂದು ಯಕ್ಷಗಾನ ಬಯಲಾಟ. ಯಾವುದೋ ಆಯ್ಯಪ್ಪ ಸೇವಾ ಸಮಿತಿಯವರು ಪೂಜೆಯ ಸಮಯದಲ್ಲಿ ಆಯೋಜಿಸಿದ್ದ ಬಯಲಾಟವದು. ಮಂಗಳೂರಿನ ಸುತ್ತ ಮುತ್ತ ಆಗ ಬಯಲಾಟವೆಂದರೆ ಸಾವಿರಕ್ಕಿಂತಲೂ ಕಡಿಮೆ ಸಭೆ ಇರುತ್ತಿರಲಿಲ್ಲ. ವ್ಯವಸಾಯಿ ಮೇಳಗಳ ಆಟ ನಾವೆಲ್ಲ ನೋಡುವ ಅವಕಾಶ ಬಹಳ ಕಡಿಮೆ. ಇದು ಬಯಲಾಟ. ಅಯ್ಯಪ್ಪ ಭಕ್ತರೂ ಜತೆಗೆ ಆಟದ ಹುಚ್ಚಿನವರು ಅಂತೂ ಸಭೆ ತುಂಬಾ ಸೇರಿತ್ತು. ಸಹಜವಾಗಿ ಆಟದ ಗದ್ದಲಕ್ಕಿ ಉಳಿದ ಗದ್ದಲವೇ ಹೆಚ್ಚಾಗಿತ್ತು. ಅಂತೂ ಕೊನೆಗೆ ಚೆಂಡೆ ಪೆಟ್ಟು ಶುರುವಾಗಿ ಆಟ ಶುರುವಾಯಿತು. ಆದರೂ ಗದ್ದಲ ಕಡಿಮೆಯಾಗಲಿಲ್ಲ. ಪೂರ್ವ ರಂಗ ಮುಗಿದ ಕೂಡಲೇ ಮುಖ್ಯ ಭಾಗವತರ ಪ್ರವೇಶ.  ಭಾಗವತರಾಗಿ ಬಂದ ವ್ಯಕ್ತಿಯನ್ನು ಹಲವರು ಅಚ್ಚರಿಗೊಂಡರು. ಅಪ್ಪಟ ಬಿಳಿ ಬಣ್ಣದ  ಭಾಗವತರನ್ನು ನೋಡಿ ಫಾರಿನ್ ಭಾಗವತ ಅಂತ ಹೇಳುವುದಕ್ಕೆ ತೊಡಗಿದರು. ನಮಗೂ ಅಷ್ಟೆ ತೀರ ಅಪರಿಚಿತರಾಗಿದ್ದ ಭಾಗವತರು.  ಗದ್ದಲದ ನಡುವೆ ಆಟದತ್ತ ಗಮನ ಅಷ್ಟಕ್ಕಷ್ಟೇ. ಒಂದು ರೀತಿಯ ಜಾತ್ರೆಯ ವಾತಾವರಣ. ಸರಿ ನಡು ರಾತ್ರಿ ಕಳೆಯಬೇಕಾದರೆ ಭಾಗವತರ ಹಾಡು ಮಾಧುರ್ಯವನ್ನು ಪ್ರಖರವಾಗಿಸುತ್ತಾ ಹೋಯಿತು. ಅದುವರೆಗೆ ಗದ್ದಲವಷ್ಟೇ ಕೇಳುತ್ತಿದ್ದ ಅಷ್ಟು ದೊಡ್ಡ ಸಭೆ ಶಾಂತವಾಯಿತು. ಫಾರಿನ್ ಭಾಗವತ ಅಂತ ತಾತ್ಸಾರದಿಂದ ಕಂಡವರು ಎಲ್ಲವನ್ನೂ ಮರೆತು ಭಾಗವತರ ಗಾನ ಮಾಧುರ್ಯಕ್ಕೆ ಶರಣಾಗಿಬಿಟ್ಟರು. ಸಭೆ ಶಾಂತವಾಗಿ ಆ ಗಾನ ಮಾಧುರ್ಯದಲ್ಲಿ ಮಿಂದು ಮೈಮರೆತಂತೆ ಇತ್ತು. 



        ಹೀಗೆ ಪ್ರೇಕ್ಷಕನನ್ನು ಮಂತ್ರಮುಗ್ಧ ಗೊಳಿಸಿದ ಗಾರುಡಿಗ ಬೇರೆ ಯಾರೂ ಅಲ್ಲ. ಯಕ್ಷಗಾನ ವಲಯದಲ್ಲಿ ತನ್ನ ಶ್ವೇತವರ್ಣದಿಂದ ಫಾರಿನ್ ಭಾಗವತ ಅಂತ ಕರೆಸಿಕೊಳ್ಳುತ್ತಿದ್ದ  ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು.  ನಾನು ಅಷ್ಟೇ ಬಾಲಕನಾಗಿದ್ದರೂ ಈ ಹೊಸ ಭಾಗವತರ ಭಾಗವತಿಕೆ ಪರಿಚಯ ನನಗೂ ಆಗಿತ್ತು. ನಿಜಕ್ಕಾದರೆ ಅವರು ಬಾಯಾರು ಪೈವಳಿಕೆ ಸುತ್ತಮುತ್ತ ಸಣ್ಣ ಪುಟ್ಟ ಆಟ ಕೂಟಗಳಿಗೆ ಪದ ಹೇಳುವುದಕ್ಕೆ ಹೋಗುತ್ತಿದ್ದ ಭಾಗವತರು. ಹಾಗಾಗಿ ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಮಗೂ ಒಂದು ರೀತಿಯ ತಾತ್ಸಾರ ಇದ್ದದ್ದು ಸುಳ್ಳಲ್ಲ. ಆದರೆ ಅವನ್ನೆಲ್ಲವನ್ನು ಮರೆಸುವಂತೆ ಅಂದು ಶಾಸ್ತ್ರಿಗಳು ವಿಜ್ರಂಭಿಸಿದ ರೀತಿ ಅದ್ಭುತವಾಗಿತ್ತು. ಕೇವಲ ಬಲಿಪ್ಪ ಕುಂಡಚ್ಚ ಭಾಗವತರ ಕಟೀಲು ಮೇಳದ ಆಟದ ಭಾಗವತಿಕೆ ಕೇಳಿದ್ದ ನಮಗೆ ನಿಜಕ್ಕು ಹೊಸ ಅನುಭವದು. 


        ತೆಂಕ ಬೈಲು ಈ ಹೆಸರು ಕೇಳಿದರೆ ಅತ್ಯಂತ ವಿಲಕ್ಷಣ ಅನುಭವವಾಗುತ್ತದೆ. ಯಾವ ಇಸಂ ಗೂ ಹೋಲಿಸಲಾಗದ ಒಂದು ವಿಶಿಷ್ಟ ಗಾನ ಮಾಧುರ್ಯ ಈ ಹೆಸರಿಗೆ ಅಂಟಿಕೊಂಡು ಬಿಟ್ಟಿದೆ. ವಾಸ್ತವದಲ್ಲಿ ತೆಂಕ ಬೈಲು ಭಾಗವತರು ಪ್ರೀತಿಯಿಂದ ಬೊಳ್ಳೆ ಭಾಗವತರು ಅಂತ ಕರೆಸಿಕೊಳ್ಳುತ್ತಿದ್ದ ಇವರು ತನ್ನ ಜೀವಿತಾವಧಿಯ ರಂಗಸ್ಥಳದಲ್ಲಿ ಹವ್ಯಾಸಿಯಾಗಿಯೇ ಜನಪ್ರಿಯರಾದವರು. ನಮ್ಮೂರು ಪೈವಳಿಕೆ ಬಾಯಾರು ಕನ್ಯಾನ ಆಸು ಪಾಸು ಶಾಲೆಯ ಸ್ಕೂಲ್ ಡೇ ಆಟಗಳಿಗೆ ಭಾಗವತರಾಗುತ್ತಿದ್ದ ಇವರಿಗೆ ಸ್ವತಃ  ಇವರ ಪ್ರತಿಭೆಯ ಗಾತ್ರದ ಅರಿವಿಲ್ಲ. ಅದಕ್ಕೆ ಕಾರಣ ಇವರ ವಿಲಕ್ಷಣ ವ್ಯಕ್ತಿತ್ವ. ಯಾವುದೇ ಸ್ವಾರ್ಥಕ್ಕೂ ಒಳಗಾಗದ ಭಾಗವತರು. ತನ್ನದು ಏನೂ ಅಲ್ಲ ಎಂಬ ಭಾವನೆ ಮೊನ್ನೆ ಮೊನ್ನೆಯವರೆಗೂ ಅವರಲ್ಲಿ ಕಂಡಿದ್ದೇನೆ. ಆದರೆ ಆನೆಗೆ ಅದರ ಗಾತ್ರದ ಅರಿವಿಲ್ಲದಂತೆ ಇವರ ಪ್ರತಿಭೆಯ ಎತ್ತರ ಯಾರಿಂದಲೂ ಲೆಕ್ಕಹಾಕುವುದು ಸಾಧ್ಯವಿಲ್ಲದ ಮಾತು. 


ಏಷ್ಟೇ ದೊಡ್ಡ ಕೂಟ ಇರಲಿ ಸಣ್ಣ ಕೂಟ ಇರಲಿ ತೆಂಕಬೈಲು ಶಾಸ್ತ್ರಿಗಳಿಗೆ ಎಲ್ಲವೂ ಒಂದೇ. ತಾನು ಸಹಜ ಗಾಯಕನಂತೆ ಹಾಡಿ ಬಿಡುತ್ತಾರೆ. ಅದು ಹೇಗಾಯಿತು ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಮುಖ ಕೆಂಪಗಾಗಿಸಿ ತನ್ಮಯರಾಗಿ ಹಾಡುವುದಷ್ಟೇ  ಅವರ ಸಹಜತೆ.  ಯಕ್ಷಗಾನ ಲೋಕ ಒಂದು ರೀತಿಯಲ್ಲಿ ಇವರನ್ನು ಗಣನೆಗೆ ತೆಗೆದುಕೊಂಡದ್ದು ಕಡಿಮೆಯೆ. ಅನಧೀ ಕೃತ ಭಾಗವತರನ್ನಾಗಿ ಇವರನ್ನು ಕಂಡದ್ದೇ ಹೆಚ್ಚು. ಆದರೆ ಅದಾವುದಕ್ಕೂ ಇವರು ತಲೆಕೆಡಿಸಿಕೊಂಡವರಲ್ಲ. ಹಿಮ್ಮೇಳದಲ್ಲಿ ಎಷ್ಟೇ ದೊಡ್ಡ ವ್ಯಕ್ತಿ ಇದ್ದರು ಇವರಿಗೆ ಅದು ಲೆಕ್ಕಕ್ಕೆ ಇಲ್ಲ. ಇವರು ಸಹಜ ಹಕ್ಕಿಯಾಗಿ ಹಾಡಿಬಿಡುತ್ತಾರೆ. ಹತ್ತು ಸಲ ಸ್ವಲ್ಪ ಕಳಪೆಯಾದರೂ ಒಂದು ಸಲ ಅದ್ಭುತವಾಗಿ ಹಾಡಿಬಿಡುತ್ತಾರೆ. ಆದರೆ ಜನ ಹುಚ್ಚರಂತೆ ಒಂದು ಸಲ ಇಂದೇಕೆ ಆಗಬಾರದು ಎಂಬ ತವಕದಲ್ಲಿ ಇವರ ಭಾಗವತಿಕೆ ಕೇಳುವುದಕ್ಕೆ ಸೇರಿ ಬಿಡುತ್ತಾರೆ.  ಆ ಒಂದು ದಿನದ ಭಾಗವತಿಕೆಗಾಗಿ ಉಳಿದೆಲ್ಲ ವೈಫಲ್ಯಗಳನ್ನು ಮರೆಯುತ್ತಿದ್ದ ಪ್ರೇಕ್ಷಕ ಇದ್ದರೆ ಅದು ತೆಂಕಬೈಲು ಭಾಗವತರಿಗೆ ಮಾತ್ರ. ಇದೇ ಅವರ ವಿಲಕ್ಷಣ ಶೈಲಿ.  ವಿಚಿತ್ರವೆಂದರೆ ಹಲವರು ಇದನ್ನು ಅನುಕರಿಸಿ ಎಡವಿ ಬಿದ್ದದ್ದು ಇದೆ. ಅದು ನಿಜವಾದ ತೆಂಕಬೈಲು ಮಾಧುರ್ಯ. 


        ಕರ್ಣ ಪರ್ವ, ಜಾಂಬವತಿ ಕಲ್ಯಾಣ, ಲಲಿತೋಪಖ್ಯಾನ ಈ ಪ್ರಸಂಗದ ಪದಗಳನ್ನು ತೆಂಕಬೈಲು ಕಂಠದಲ್ಲಿ ಕೇಳುವುದೆಂದರೆ ಅದೊಂದು ವಿಸ್ಮಯ ಅನುಭವವನ್ನು ಕೊಡುತ್ತದೆ. ಕೇಳುಗರನ್ನು ಮಂತ್ರಮುಗ್ಧವಾಗಿಸುವ ಆ ಇಂಪು ಯಾವುದಕ್ಕೂ ಹೋಲಿಸುವುದು ಸಾಧ್ಯವಿಲ್ಲ. ರಾಗದ ವೈವಿಧ್ಯ ಇವರಿಗಾಗಿಯೇ ಶಾಸ್ತ್ರಿಯತೆಯನ್ನು ಬದಲಿಸಿಕೊಳ್ಳುತ್ತದೆ. ಯಕ್ಷಗಾನ ಮಾತ್ರವಲ್ಲ ಸಂಗೀತದಲ್ಲೂ ಇವರ ಜ್ಞಾನ ಅಪಾರ. ಆದರೆ ಇವರಿಗೆ ಇವರ ಪ್ರತಿಭೆಯಬಗ್ಗೆ ಗಂಭೀರ ಚಿಂತನೆ ಇದ್ದಂತೆ ಭಾಸವಾಗುವುದಿಲ್ಲ. ಯಾವುದೇ ಸ್ಟಂಟ್ ಮಾಡದೆ ಅತಿ ಸಾಮಾನ್ಯರಂತೆ ಮುಗ್ಧತೆಯಿಂದಲೇ ವ್ಯವಹರಿಸುತ್ತಾರೆ. ಇವರ ಪ್ರತಿಭೇ ಬೇರೆಯಾರಿಗೆ ಇದ್ದರೂ ಅದನ್ನು ನಗದೀಕರಿಸುವ ವ್ಯವಹಾರ ಕುಶಲತೆಯನ್ನು ತೋರುತ್ತಿದ್ದರು. ಆದರೆ ಅತ್ಯಂತ ಮುಗ್ಧರಾದ ಇವರು ಕೊನೆಯ ಕಾಲದಲ್ಲೂ ಸರಳವಾಗಿ ಏನೂ ಅರಿಯದವರಂತೆ ಇದ್ದು ಬಿಟ್ಟರು. ಯಾವುದೇ ಮೇಳಕ್ಕೂ ಒತ್ತೆ ಇಟ್ಟುಕೊಳ್ಳದೆ ಬಹುತೇಕ ಹವ್ಯಾಸಿಯಾಗಿ ವೃತ್ತಿಪರರಿಗಿಂತಲೂ ಹೆಚ್ಚಿನ ಪ್ರತಿಭೆಯನ್ನು ತೋರಿಸಿದವರು.  ಒಂದೆರಡು ರಾಗ ಕಲಿತು ಜಾಗಟೆ ಹಿಡಿದು ರಂಗಸ್ಥಳ ಏರಿ ಜನಪ್ರಿಯತೆಯ ಸ್ವಾರ್ಥದ ಹಿಂದೆ ಹೋಗುವ ಇಂದಿನ ಭಾಗವತರುಗಳು ಇವರ ಪ್ರತಿಭೆಯನ್ನು ಗಮನಿಸಬೇಕು. 


    ಯಕ್ಷಗಾನ ಲೋಕ ಅದ್ಭುತವಾದ ಗಾನ ಗಾರುಡಿಗನನ್ನು ಕಳೆದುಕೊಂಡಿದೆ. ಅವರ ಸ್ಥಾನ ಯಾರಿಂದಲೂ ತುಂಬುವುದಕ್ಕೆ ಸಾಧ್ಯವಿಲ್ಲ. ಇವರು ನಮ್ಮನ್ನಗಲಿದರೂ ಇವರ ಅದ್ಭುತ ಶೈಲಿಯ ಇಂಪಾದ ಸ್ವರ ನಮಗೆ ಸ್ಮರಣೆಯಾಗಿ ಉಳಿದಿದೆ. ಹೆಸರಿಗೆ ತಕ್ಕಂತೆ ತೆಂಕ ಬೈಲಿನ ಗಾನ ಮಾಧುರ್ಯವನ್ನು ಯಕ್ಷಗಾನ ರಸಿಕ ಮರೆಯುವುದಕ್ಕಿಲ್ಲ. ಮತ್ತೂ ಮತ್ತೂ ನೆನಪಾಗುತ್ತಾರೆ. ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ಕರುಣಿಸಲಿ. 

Thursday, September 3, 2020

ಲಾಕ್ ಡೌನ್ ನ ಅತಿಥಿಗಳು!!!

  ಎಲ್ಲರೂ ಮಲಗಿದಾಗ ಆಟದವನು ಎದ್ದ.  ಅಂತ ನಮ್ಮ ಹಿರಿಯರು ಯಕ್ಷಗಾನದವರನ್ನು ಹೇಳುತ್ತಿದ್ದರು.  ಆದರೆ ಯಕ್ಷಗಾನದವರು ಎದ್ದು ಕುಳಿತರೆ ಊರಿಗೆ ಊರೆ ಎದ್ದು ಕುಳಿತಿತ್ತು ಅನ್ನೋದು ಬೇರೆ ವಿಷಯ.  ದೇಶವೇ ಕೋರೋನ ಪ್ರಭಾವಕ್ಕೆ ದಂಗಾಗಿ ಸ್ಥಭ್ದವಾಗಿತ್ತು. ಮುಷ್ಕರದ ಅಮಲಿನಲ್ಲಿ ರಸ್ತೆ ಮಲಗಿರುವಂತೆ ಕೋರೋನಕ್ಕೆ ಶರಣಾಗಿ ರಸ್ತೆ ಖಾಲಿ ಖಾಲಿಯಾಗಿ ಉದ್ದಕ್ಕೆ ದೇಶಾದ್ಯಂತ ಮಲಗಿತ್ತು. ಮುಷ್ಕರವಾದರೆ ಬೆಳಗ್ಗೆ ಆರಂಭವಾದರೆ ಮಧ್ಯಾಹ್ನ ನಂತರ ಮಿಸುಕಾಡುವುದಕ್ಕೆ ತೊಡಗುತ್ತಿತ್ತು. ಆದರೆ ಈ ಕೊರೋನದ ಸ್ತಭ್ಧತೆ  ಮಾತ್ರ ಸ್ಮೃತಿಗೆಟ್ಟಂತೆ ಮಾಡಿದ್ದು ಸುಳ್ಳಲ್ಲ. ಆಷಾಢದ ಮಳೆಯಂತೆ ಯಾವಾಗ ನಿಲ್ಲುವುದೊ ಎಂದು ಭರವಸೆ ಇಲ್ಲದೇ ದೇಶಕ್ಕೆ ದೇಶವೇ ಸುಮ್ಮನೆ ಕುಳಿತಿತ್ತು. ಎಲ್ಲ ಕಡೆ ಲಾಕ್ ಡೌನ್ ಆದರೆ ಎಲ್ಲಾ ಮನೆಯ ಅಡುಗೆ ಕೋಣೆ ಎಂದು ಇಲ್ಲದ ಚಟುವಟಿಕೆಯನ್ನು    ಸಕ್ರಿಯವಾಗಿ  ಕೊರೋನ ಕಾಲದಲ್ಲಿ ತೋರಿಸುತ್ತಿದ್ದುದು ಸುಳ್ಳಲ್ಲ. ಮಾಡುವುದಕ್ಕೆ ಬೇರೆ ಕೆಲಸ ಬೇಕಲ್ಲ. ಲಾಕ್ ಡೌನ್ ಕಾಲದಲ್ಲಿ ಸಿಕ್ಕಿದ್ದೆಲ್ಲವನ್ನೂ ಮಾಡಿ ತಿಂದು ಸುಮ್ಮನೇ ಕುಳಿತು ಹೊಟ್ಟೆಯನ್ನು ಹೊರಗೂ ಇಲ್ಲ ಒಳಗೂ ಇಲ್ಲ ಎಂಬಂತೆ ಸೀಲ್ ಡೌನ್  ಮಾಡಿ ಕುಳಿತದ್ದು ಮರೆಯುವ ಹಾಗಿಲ್ಲ. ಇದೇ ಸಮಯ ಒಂದಷ್ಟು ಚಟುವಟಿಕೆ ಗರಿಗೆದರುವಂತೆ ಆದದ್ದು ನನ್ನಲ್ಲಿಗೆ ಬಂದ ಅತಿಥಿಗಳಿಂದ.  ಲಾಕ್ ಡೌನ್ ನ ಅತಿಥಿಗಳು...! ಅಚ್ಚರಿಯಾಗಬಹುದು. ಬೇರೆ ಯಾರು ಅಲ್ಲ ...ಅತ್ಯಂತ ಹಳೆಯದು ಎನ್ನಬಹುದಾದ ಯಕ್ಷಗಾನ ಧ್ವನಿ ಸುರುಳಿಗಳನ್ನು ಮಿತ್ರರೊಬ್ಬರು ತಂದು ಕೊಟ್ಟರು.  





ಸರಿ ಶುರುವಾಯಿತು. ನನ್ನ ಕ್ಯಾಸೆಟ್ ಪ್ಲೇಯರ್ ದುರಸ್ತಿಯಾಗಬೇಕಿತ್ತು. ಆದರೆ ಅದರ ಬಿಡಿ ಭಾಗವೊಂದು ಸಿಗುತ್ತಿಲ್ಲ. ಸಾಮಾನ್ಯವಾಗಿ ಎರಡು ಮೂರು ರೂಪಾಯಿಗೆ ಸಿಗಬಹುದಾದ ಚಿಕ್ಕ ರಬ್ಬರ್ ಬೆಲ್ಟ್  ತುಂಡಾಗಿ ಟೇಪ್ ರೆಕಾರ್ಡರ್ ಸದ್ದು ಮಾಡುವಂತಿರಲಿಲ್ಲ. ಬೆಂಗಳೂರಿನ ಎಸ್ ಪಿ ರಸ್ತೆ ಸುತ್ತಾಡಿದರು ಸಿಗದಾಗ ಅಮೆಜಾನ್ ಮೊರೆ ಹೋಗಿ ಕೊನೆಗೆ ಅಲ್ಲಿ ನಾಲ್ಕು ನೂರು ಕೊಟ್ಟು ಖರಿದಿಸಬೇಕಾಯಿತು. ಅಂತೂ ಕಷ್ಟದಲ್ಲಿ ಟೇಪ್ ರೆಕಾರ್ಡರ್ ದುರಸ್ಥಿಯಾಗಿ ಈ ಕೊರೋನ ಕಾಲದಲ್ಲೇ ಬಂದು ಬಿಟ್ಟಿತು. 


ಕ್ಯಾಸೆಟ್ ಪರಿವರ್ತನೆ ನಿಜಕ್ಕೂ ತಪಸ್ಸಿನಂತೆ. ಹಲವು ಸಲ ಕೈಗೆ ಬಂದ ತುತ್ತು ಬಾಯಿಗಿಲ್ಲದಂತೆ ಆಗಿಬಿಡುತ್ತದೆ. ಹೊರಗಿನ ವಿವರ ನೋಡಿ ಟೇಪ್ ರೇಕಾರ್ಡರ್ ಒಳಗೆ ತುರುಕಿದರೆ ಅದು ಇನ್ನಾವುದೋ ಧ್ವನಿ ಹೊರಡಿಸಿ ಹತಾಶೆಗೊಳಿಸುತ್ತದೆ. ಚಿತ್ರವಿಚಿತ್ರ ಸದ್ದು ಕೇಳಿಸುತ್ತದೆ. ಸಾಕಪ್ಪ ಅಂತ ಹೊರತೆಗೆದರೆ ಟೇಪ್ ಸುತ್ತು ಹಾಕಿರುತ್ತದೆ. ಎಲ್ಲ ತೆಗೆದು ನೋಡಿದರ ರಬ್ಬರ್ ಹೆಡ್ ಗೆ ದಪ್ಪ ಧೂಳು ಅಂಟಿರುತ್ತದೆ. ಅದನ್ನು ಸ್ವಚ್ಛಗೊಳಿಸುವುದೇ ಒಂದು ಕೆಲಸ. ಹಲವು ಸಲ ಅರ್ಧದವರೆಗೆ ತಿರುಗಿ ಮತ್ತೆ ಮುಂದೆ ಮಾತನಾಡದೆ ಹಟ ಮಾಡುತ್ತದೆ. ಆಗ ಅತ್ಯಂತ ಸಹನೆ ಅತ್ಯಗತ್ಯ. ಕೆಲವೊಂದನ್ನು ಬಿಚ್ಚಿ ಒಂದಷ್ಟು ಸ್ವಚ್ಛಗೊಳಿಸಿ ಬೇರೆ ಕ್ಯಾಸೆಟ್ ಬಿಡಿಭಾಗ ಸೇರಿಸಿದರೆ ಸರಿಯಾಗುತ್ತದೆ. ಇದರ ಹೃದಯ ತೆಗೆದು ಮತ್ತೊಂದಕ್ಕೆ ಜೋಡಿಸಿದಂತೆ. ಹಟಕ್ಕೆ ಬಿದ್ದು ಮಧ್ಯರಾತ್ರಿಯವರೆಗೆ ಇದನ್ನು ಮಾಡಿದ್ದು ಇದೆ. ಯಾಕೆಂದರೆ ಯಕ್ಷಗಾನದ ಹುಚ್ಚು ಎಂದರೆ ಅದು. ಅಷ್ಟು ಮಾಡಿ ಒಂದು ಸಲ ಕಂಪ್ಯೂಟರ್ಗೆ ವರ್ಗಾಯಿಸಿ ಮೊಬೈಲ್ ಗೆ ಏರಿಸಿ ಹೆಡ್ ಸೆಟ್ ಹಾಕಿ ಕೇಳಿದರೆ ಸ್ವರ್ಗಕ್ಕೆ ಮೂರೇ ಗೇಣು. 


ಈ ಬಾರಿ ಸುಮಾರು ಎಪ್ಪತ್ತು- ಎಂಭತ್ತು ಕ್ಯಾಸೆಟ್ ಗಳು ಬಂದಿದ್ದವು. ಎಲ್ಲವೂ ಯಕ್ಷಗಾನ ತಾಳ ಮದ್ದಲೆಯ ಯಥಾವತ್ ಧ್ವನಿ ಮುದ್ರಣಗಳು. ಸಮಗ್ರ ಶೇಣಿ ಪ್ರವರ ಎಂದರೂ ಸರಿಯೇ. ಧುರ ವೀಳ್ಯ, ಉರು ಭಂಗ ಕೃಷ್ಣ ಸಂಧಾನ, ವಾಲೀ ಮೋಕ್ಷ ಹೀಗೆ ಮಾಮೂಲಿ ಪ್ರಸಂಗಗಳಾದರೂ ಕೇಳುತ್ತಿರಬೇಕಾದರೆ ಅದ್ಭುತ ಚಿಂತನಾ ಲೋಕಕ್ಕೆ ಎಳೆದುಕೊಂಡು ಹೋಗುತ್ತಿದ್ದವು. ಮಂಡೆಚ್ಚ ಭಾಗವತರ ಅದ್ಭುತ ರಮ್ಯ ಎನಿಸುವ ಪದಗಳು ಪದ್ಯಾಣ, ಅಗರಿ ಅಮ್ಮಣ್ಣಾಯರ ಸ್ವರ ವರ್ಣಗಳು ಆ ಹಳೆಯ ಕಾಲಕ್ಕೆ ಎಳೆದುಕೊಂಡು ಹೋದಂತೆ ಭಾಸವಾಯಿತು.


ಧುರವೀಳ್ಯದ ಕೌರವ, ಗಧಾಯುದ್ದದ ಕೌರವ, ಕುರುಕ್ಷೇತ್ರ ಎಲ್ಲೂ ಇಲ್ಲ ನನ್ನಮೊಬೈಲ್ ನ ಒಳಗೆ ಇದೆ ಅಂತ ಭಾವಿಸುವಂತೆ ಮಾಡಿತು. ಕೌರವ ಯಾರು ಅಂತ ಬೇರೆ ಹೇಳಬೇಕಿಲ್ಲ. ಅದೇ ಶತಮಾನಕ್ಕೊಬ್ಬ ಶೇಣಿ.  ಸಾಮಗರ ಅತಿಕಾಯ ಕೇಳಿ ಕಣ್ಣು ತೇವವಾಗಿದ್ದು ಸುಳ್ಳಲ್ಲ. ಸಾಮಗರ ಅರ್ಥಗಾರಿಕೆಯ ಮಾರ್ದವತೆ ಅದು. ತಾಳ ಮದ್ದಲೆಯ ಅರ್ಥಗಾರಿಕೆ ಹೇಗಿರುತ್ತದೆ ಎಂಬುದಕ್ಕೆ ಪಠ್ಯವಾಗುವ ಯೋಗ್ಯತೆಯ ತಾಳಮದ್ದಲೆಗಳು.  ಈಗೀಗ ಯಕ್ಷಗಾನದಲ್ಲೂ,   ನಡೆಯುವ  ತಾಳಮದ್ದಲೆಯಲ್ಲೂ ಆಸಕ್ತಿಯೇ ಹೊರಟು ಹೋಗಿದೆ. ರಸವಿಲ್ಲದ  ಸೊಪ್ಪಿನಂತೆ ಯಾಕೋ ಅಭಿರುಚಿಯ ಹೊಂದಿಕೆ ಸಾಧ್ಯವಾಗುತ್ತಿಲ್ಲ. ಆದರೆ ಈ ಕ್ಯಾಸೆಟ್ ಗಳು ಮತ್ತೊಮ್ಮೆ ಚೆಂಡೆ ಮದ್ದಲೆಯ ಧ್ವನಿಗೆ ತಲೆ ಆಡಿಸುವಂತೆ ಮಾಡಿದ್ದು ಸುಳ್ಳಲ್ಲ. ಚಿಪ್ಪಾರು ಬಲ್ಲಾಳರು,  ಕುರುಪ್  ಇವರ ಕೈ ಚಳಕ ಯಕ್ಷಗಾನದ ಹಿಮ್ಮೇಳ ಹೇಗಿರುತ್ತದೆ ಮತ್ತು ಹೇಗಿರಬೇಕು ಎಂಬುದನ್ನು ತೋರಿಸಿಕೊಡುತ್ತವೆ. ಇಂದು ಪರಂಪರೆ ಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಯಕ್ಷಗಾನಕ್ಕೆ ಅವ್ಯಾಹತವಾಗಿ ಬದಲಾವಣೆಯ ಧಾಳಿ ಆಗುತ್ತದೆ. ಪರಂಪರೆಯೋ ಮತ್ತೊಂದೋ ಯಾವುದೂ ಅಲ್ಲ. ಯಕ್ಷಗಾನದಲ್ಲಿ ಸಹಜವಾಗಿ ಇರುತ್ತಿದ್ದ ಝೇಂಕಾರ  ಇಂದು ಇಲ್ಲವಾಗಿದೆ. ಪಾತ್ರ ಪೋಷಣೆಯಲ್ಲಿ ಇರುತ್ತಿದ್ದ ಅಧ್ಯಯನ ಇಂದು ಮರೆಯಾಗಿದೆ.  ಮುಖ್ಯವಾಗಿ ಯಕ್ಷಗಾನ ಕೇಳಿದರೆ ಅದು ಯಕ್ಷಗಾನದಂತೆ ಅನ್ನಿಸುವುದೇ ಇಲ್ಲ. 


ಎಲ್ಲವನ್ನೂ ಶ್ರಮ ವಹಿಸಿ ಕಂಪ್ಯೂಟರ್ ಗೆ ಏರಿಸಿಯಾಗಿದೆ.  ಈಗ ಎರಡು ಮೂರು ಸಲ ಕೇಳಿ ಲಾಕ್ ಡೌನ್ ಸಾರ್ಥಕ ಪಡಿಸಿಕೊಂಡೆ.  ಯಕ್ಷಗಾನದ ಈ  ಅದ್ಭುತ ರಮ್ಯತೆಯನ್ನು ಹಂಚಿಕೊಳ್ಳುವ ಯೋಜನೆ, ಮತ್ತು ಯೋಚನೆ ರೂಪಿಸುತ್ತಿದ್ದೇನೆ. ನೋಡಬೇಕು. ಏನಿದ್ದರು ಅದನ್ನು ಕಷ್ಟ ಪಟ್ಟು ಶ್ರಮವಹಿಸಿ ನನ್ನ ಕೈಗೆ ಕೊಡುವಲ್ಲಿ ಹಲವು ಮಿತ್ರರ ಪರಿಶ್ರಮವಿದೆ. ಅದನ್ನು ಮರೆಯುವಂತಿಲ್ಲ. ಎಲ್ಲಕ್ಕೂ ಮಿಗಿಲಾಗಿ ಮೂವತ್ತು ವರ್ಷಕ್ಕೂ ಮೇಲ್ಪಟ್ಟು ಆ ಕ್ಯಾಸೆಟ್ ನ್ನು ಜೋಪಾನವಾಗಿ ಕಾಯ್ದಿರಿಸಿ ಒದಗಿಸಿದ ಕಾರ್ಕಳದ ಅರ್ ಕೆ ಭಟ್ಟರಿಗೆ ದೊಡ್ಡ ನಮಸ್ಕಾರ. ಅತ್ಯಂತ ಶ್ರಮವಹಿಸಿ ಕಾರ್ಯಕ್ರಮವನ್ನು ಧ್ವನಿ ಮುದ್ರಿಸಿ ಈ ವರೆಗೆ ಅದನ್ನು ಕಾಯ್ದಿರಿಸಬೇಕೆಂದರೆ ಅದು ಸಾಮಾನ್ಯ ಮಾತಲ್ಲ. ಇಷ್ಟೆಲ್ಲವಾದರೂ ಅವರನ್ನು ಸಂಪರ್ಕಿಸಿ ಅದನ್ನು ಜೋಪಾನದಲ್ಲಿ ನನ್ನ ಕೈಗೆ ತಲುಪಿಸಿದ ಮಿತ್ರ ಶ್ರೀ ರಘು ರಾಮಣ್ಣನಿಗೆ ಹೃತ್ಪೂರ್ವ ಧನ್ಯವಾದಗಳು.  


Thursday, August 20, 2020

ಶ್ರೀ ಕೃಷ್ಣ ಸಂಧಾನ ಒಂದು ಪುರಾತನ ಕಥನ

 


ಶ್ರೀಕೃಷ್ಣ ಸಂಧಾನ ’ತಾಳದ’ ಮದ್ದಲೆ,  ಹೀಗೆ ವಿಶಿಷ್ಟ ರೀತಿಯಲ್ಲಿ ಕರೆಯುವುದಕ್ಕೆ ಒಂದು ಮುಖ್ಯ ಕಾರಣ ಇದೊಂದು ಹಳೆಯ ತಾಳ ಮದ್ದಲೆ ಬಗೆಗಿನ ಅನಿಸಿಕೆಗಳು.  ಸಾಮಾನ್ಯವಾಗಿ ಹದಗೆಟ್ಟ ಸ್ಥಿತಿಗೆ, ನಿಯತಿಯನ್ನು ಮೀರಿದ ನಿಯಂತ್ರಣವಿಲ್ಲದ ಸ್ಥಿತಿಗೆ ತಾಳ ತಪ್ಪಿದೆ ಅಂತ ಹೇಳುವುದಿದೆ. ಪ್ರಪಂಚದ ಸರ್ವ ಸ್ವರಗಳೂ ಸಂಗೀತದ ಪ್ರತಿನಿಧಿತ್ವವನ್ನು ಹೊಂದಿದೆ ಅಂತ ಸಂಗೀತ ಬಲ್ಲವನು ಹೇಳುವ ಮಾತು. ಹಾಗಾಗಿ ಬದುಕಿನ ಅಸ್ತಿತ್ವವೂ ಒಂದು ತಾಳದ ರೇಖೆಯಲ್ಲಿದೆ ಅಂತ ಹೇಳಬಹುದು. ಈ ತಾಳಮದ್ದಲೆ ಹೆಸರಿಗೆ ಅನ್ವರ್ಥವಾಗುವಂತೆ ತಾಳದಿಂದ ಕಿಂಚಿತ್  ಕದಲದೆ ಸ್ಥಿರವಾದ ಲಾಲಿತ್ಯದ ಸೌಂದರ್ಯವನ್ನು ನೀಡುತ್ತದೆ.  ಇದೊಂದು ತಾಳ ಮದ್ದಲೆ ಆಲಿಸುತ್ತಾ ಹೋದಂತೆ ಮೊದಲ ಅನಿಸಿಕೆ ತಾಳ ಲಯ ವಿನ್ಯಾಸದ ಆ ಹಿಮ್ಮೇಳದ ಬಗೆಗೆ ಆಗಿರುತ್ತದೆ. ಈ ಅನಿಸಿಕೆಗಳಿಗೆ  ಮುಖ್ಯ  ಆಕರ್ಷಣೆಯನ್ನು  ಈ ತಾಳವೇ ಒದಗಿಸಿದೆ. ಪ್ರತೀ ಅಂಗುಲ ಅಂಗುಲವೂ ಯಕ್ಷಗಾನದ ಮೂಲ ಧಾತುವಿನಿಂದ ಕದಲದೆ ಆ ಗಂಭೀರತೆಯ ಹೆಜ್ಜೆಯನ್ನು ಇಡುತ್ತಾ ಸಾಗುತ್ತದೆ. ಸಂಪೂರ್ಣ ಯಕ್ಷಗಾನಕ್ಕೆ ಬದ್ಧವಾಗಿ ಸ್ಥಿರತೆಯಿಂದ ಸಂತುಲಿತ ದರ್ಶನವನ್ನು ನೀಡುವ ಇದೊಂದು ಹಳೆಯ ಅದ್ಭುತ ಯಕ್ಷಗಾನ ತಾಳ ಮದ್ದಲೆ.  ಇದು ಆಕರ್ಷಣೀಯವಾಗಿ ತೋರಲು ಮುಖ್ಯ ಕಾರಣ ಹಲವಾರು ದಶಕದ ಮೊದಲು ಈ ತಾಳ ಮದ್ದಲೆಗೆ ನಾನೂ ಪ್ರತ್ಯಕ್ಷದರ್ಶಿಯಾಗಿದ್ದೆ. ಆಗಿನ ಆಸ್ವಾದನೆಯ ಮಟ್ಟ ಈಗ ಸಂಪೂರ್ಣವಾಗಿ ಬದಲಾಗಿ ಆಗ ಕಾಣದೇ ಇದ್ದ ಯಕ್ಷಗಾನದ ಸಂದುಗೊಂದಿಗಳು ಈಗ ಸ್ಪಷ್ಟವಾಗಿ ಕಾಣುವಂತಾಗಿದೆ.  ಹೀಗಿದ್ದರೂ ಇದೊಂದು ಸಾಂಕೇತಿಕ ತಾಳ ಮದ್ದಲೆ ಅಂತ ಸಂಘಟಕರು ಮೊದಲಾಗಿ ಹೇಳುವಲ್ಲಿ ವಿಸ್ತೃತವಾದದ್ದು ಇನ್ನೂ ಇದೆ ಎಂದು ಮನಗಾಣಬೇಕು.

ಬಹಳ ವರ್ಷಗಳ ಹಿಂದೆ ಮಂಗಳೂರು ಪುರಭವನದಲ್ಲಿ ಅದ್ಧೂರಿಯಾಗಿ ನಡೆದ ತಾಳ ಮದ್ದಲೆ ಇದು.  ಇದರ ಸಂಪೂರ್ಣ ಕಲಾವಿದರ ವಿವರ ಈ ಕೆಳಗೆ ಇದೆ. 

ಹಿಮ್ಮೇಳದಲ್ಲಿ  ಭಾಗವತರು ಶ್ರೀ ಅಗರಿ ಶ್ರೀನಿವಾಸ ರಾಯರು,  ಚೆಂಡೆ ಮದ್ದಲೆ : ಶ್ರೀ ದಿವಾಣ ಭೀಮ ಭಟ್   ಮತ್ತು ಶ್ರೀ  ನೆಡ್ಲೆ ನರಸಿಂಹ ಭಟ್

ಕೌರವ                         ೧. ಶ್ರೀ  ಮಟ್ಟಿ ಸುಬ್ಬರಾವ್  ೨. ಶ್ರೀ  ಕೋಟ ಕುಞಿ ನಾರಾಯಣ ಶೆಟ್ಟಿ

ವಿದುರ                        ಶ್ರೀಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್

ಶ್ರೀ ಕೃಷ್ಣ                    ಶ್ರೀಮಲ್ಪೆ ಶಂಕರನಾರಾಯಣ ಸಾಮಗ

ಭೀಮ                         ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್

ದ್ರೌಪದಿ                       ಶ್ರೀ  ಪ್ರೋ ಎಂ ಆರ್ ಶಾಸ್ತ್ರಿ.

ಧರ್ಮರಾಯ              ೧. ಶ್ರೀ  ಸೀತಾನದಿ ಗಣಪಯ್ಯ ಶೆಟ್ಟಿ    ೨. ಶ್ರೀ ಕೋರಕ್ಕೋಡು ಭವಾನಿ ಶಂಕರ ರಾಯ                                   

ದ್ರೋಣ                      ಶ್ರೀ ದೇರಾಜೆ ಸೀತರಾಮಯ್ಯ

              ಈ ತಾಳಮದ್ದಲೆಯಲ್ಲಿ ಭಾಗವಹಿಸಿದ ಬಹುತೇಕ ಎಲ್ಲಾ ಕಲಾವಿದರು ಆ ಕಾಲದ ಹಿರಿಯರಲ್ಲಿ ಹಿರಿಯರಾಗಿದ್ದವರು. ಈಗಿನ ಪ್ರೇಕ್ಷಕವರ್ಗವೇನಿದೆ, ಅಲ್ಲಿ ಶೇಣಿಯವರು ಕೂಡ ಪೂರ್ಣವಾಗಿ ಪರಿಚಿತರಲ್ಲ.  ಇಂದಿನ ಪ್ರೇಕ್ಷಕರಲ್ಲಿ ಹಿರಿಯ ಪ್ರೇಕ್ಷಕರು ಶೇಣಿಯವರ ಅರ್ಥಗಾರಿಕೆಯನ್ನು ಕಣ್ಣಾರೆ ಕಂಡವರು. ಇಂದು ಶೇಣಿಯವರ ಅರ್ಥಗಾರಿಕೆಯನ್ನು ಕಂಡು ಕೇಳಿದ  ಇಂದಿನ ಪ್ರೇಕ್ಷಕನನ್ನು ಕಾಣುವುದು ಸಾಧ್ಯವಿಲ್ಲ.  ಕೇವಲ ಧ್ವನಿ ಸುರುಳಿಗಳಿಂದ ಶೇಣಿಯವರ ಅರ್ಥಗಾರಿಕೆಯನ್ನು ಅನುಭವಿಸಿರಬಹುದು. ವೈಶಿಷ್ಟ್ಯವೆಂದರೆ ಈ ತಾಳಮದ್ದಲೆಯಲ್ಲಿ ಶೇಣಿಯವರು ಅತ್ಯಂತ ಕಿರಿಯ ಅರ್ಥಧಾರಿ...! ಹೀಗೆ ಆ ಕಾಲದಲ್ಲೇ ಹಲವು ವೈಶಿಷ್ಟ್ಯಗಳಿಂದ ಹಲವರ ಪರಿಶ್ರಮದಿಂದ ಈ ಕಾರ್ಯಕ್ರಮ ಅಧ್ದೂರಿಯಾಗಿ ನಡೆದಿತ್ತು.  ಈಗಲೂ ಹಲವು ಹಿರಿಯರಲ್ಲಿ ಕೇಳಿದರೆ ಅದನ್ನು ಮೆಲುಕು ಹಾಕಬಲ್ಲರು.

 

            ಅರಸ ಕೇಳಿತ್ತಲಸುಯೋಧನ...ಎಂಬ ಪದದಲ್ಲಿ ಆರಂಭವಾಗುವ ಕೃಷ್ಣಸಂಧಾನದಲ್ಲಿ ಮೊದಲ ಕೌರವನಾಗಿ ಶ್ರೀ ಮಟ್ಟಿ ಸುಬ್ಬರಾಯರ ಕೌರವನ ಪಾತ್ರ ಕೌರವನ ಛಲವನ್ನು ಯಥಾವತ್ತಾಗಿ ಚಿತ್ರಿಸಿತ್ತು. ಕೊಡೆ, ಬಿಡೆ ಎನ್ನುವ ಕೌರವ,  ತನ್ನ ಪಾಂಡವರ ಮೇಲಿನ ಹಗೆತನವನ್ನು ಸರಳ ಮಾತುಗಳಲ್ಲೇ  ಮುಂದಿಡುತ್ತಾನೆ. ರಾಜನಾದವನು ರಾಜ್ಯವನ್ನು ಯಾವರೂಪದಲ್ಲೂ ಗೆಲ್ಲಬಹುದು, ಯುದ್ದ ಮಾಡಿಯೂ ಗೆಲ್ಲಬಹುದು, ದ್ಯೂತವಾಡಿಯೂ ಗೆಲ್ಲಬಹುದು. ಯಾವ ರಕ್ತವೂ ಚೆಲ್ಲದೆ  ದ್ಯೂತದಲ್ಲಿ ಪಾಂಡವರನ್ನು ಸೋಲಿಸಿದ್ದೇನೆ.  ವಿರಾಟನಗರಿಯಲ್ಲಿ ಪಾಂಡವರು ಏನು ಮಾಡಿದ್ದರೋ ಅದನ್ನೆ ಹಸ್ತಿನಾವತಿಯಲ್ಲಿ ಒದಗಿಸಬಹುದು, ಧರ್ಮ ರಾಯನಿಗೆ ಪಂಚಾಗವನ್ನು, ಭೀಮನಿಗೆ ಅಡುಗೆ ಕೆಲಸವನ್ನು, ಅರ್ಜುನನಿಗೆ ನಾಟ್ಯ ಶಾಲೆಯನ್ನು ನಕುಲ ಸಹದೇವರಿಗೆ ಕುದುರೆ ಸಾಕುವ ಕೆಲಸವನ್ನು ಕೊಡಬಹುದು. ಇಷ್ಟು ಮಾಡದೇ ಇದ್ರೆ , ಈ  ಕೌರವನ ಮುಖದಲ್ಲಿ ಮೀಸೆ ಇದ್ದರೂ ಅದು ಮೀಸೆಯಲ್ಲ.

 ಪಾಂಡವರಿಗೆ ರಾಜ್ಯವನ್ನು ಕೊಡಲಾರೆ ಎನ್ನುವ ಕೌರವನ ಛಲದ ದುರಹಂಕಾರದ ಮಾತುಗಳಿಗೆ ಅಷ್ಟೇ ಸಮರ್ಥ ರೀತಿಯ ಗುರುವಾದ ಕೃಪಾಚಾರ್ಯ ಪ್ರತಿಕ್ರಿಯೆಯನ್ನು ನೀಡುವನು ದ್ರೋಣನಾಗಿ ದೇರಾಜೆಯವರದ್ದು ಹಿತಮಿತವಾದ ಗಹನವಾದ ಅರ್ಥ.

ಸುಯೋಧನನ ಬಗ್ಗೆ ಹೇಳುವ ಮಾತು “ ಮೀಸೆ ಮೇಲೆ ಕೈಯಾಡಿಸ್ತಾನೆ. ಅವನದ್ದೇ ಮೀಸೆ ಅವನದ್ದೇ ಮುಖ.  ಇವನು ಗಂಡುಗಲಿಯಂತೆ, ನಾವು ಕೊಂಡಾಟದಲ್ಲಿ ಹೇಳಬಹುದು. ಆದರೆ ಇವನಿಗೆ ಶಸ್ತ್ರ ವಿದ್ಯಾಭ್ಯಾಸ ಮಾಡಿಸಿದ ನನಗೆ ಗೊತ್ತುಂಟು ಇವನ ನಾಡಿ ಬಡಿತ ಹೇಗೆ ಅಂತ. ಏಲ್ಲೋ ಇದ್ದ ಪಾಂಡವರನ್ನು ಇಲ್ಲಿಗೆ ಕರೆದುಕೊಂಡು ಬಂದು ರಾಜ್ಯ ಕೊಟ್ಟಾಯಿತು. ಅಲ್ಲಿಗೆ ಇಲ್ಲಿಯ ಪೌರತ್ವಕೊಟ್ಟ ಹಾಗಾಯಿತು. ಪೌರತ್ವ ಕೊಟ್ಟ ಮೇಲೆ ಅವರು ಇಲ್ಲಿನವರೆ  ಆದ ಮೇಲೆ, ಈಗ ಅವರನ್ನು ಕೊಲ್ಲುವುದಕ್ಕೆ ಸೈನ್ಯದ ಸಿದ್ಧತೆ ಇಲ್ಲಿ ನಡೆದಿದೆ. ಹಾಗಾದರೆ ಅವರು ಮತ್ತೆ ಎಲ್ಲಿಗೆ ಹೋಗಬೇಕು?

ಎಲೆ ಭೂಪ ಕೇಳ್ ಪಾಂಡುಜಾತರೊಡನೆ ನೀನು ಬೆಳೆಸದಿರಹಿತವನು ಎಂದು ಕೌರವ ಕೇಳುವವನಲ್ಲ, ಆದರೂ ತಾನು ಹೇಳಲಿಲ್ಲ ಎಂದಾಗಬಾರದಲ್ಲ? ಹಾಗಾಗಿ ದ್ರೋಣ ಹಿತವಚನ ಹೇಳುತ್ತಾನೆ.

ಉರಗ ಕೇತನ ದುರ್ಯೋಧನ, ಅಂದರೆ ಕೌರವನ ಧ್ವಜದಲ್ಲಿ ಉರಗವಿದೆ. ಅದೇ ಪಾಂಡವರನ್ನು ಯಾರು ರಕ್ಷಿಸುವನೋ ಅವನು, ಶ್ರೀಕೃಷ್ಣ ಅವನದ್ದು ಗರುಡ ಧ್ವಜ. ಗರುಡನ ರಕ್ಷಣೆಯಲ್ಲಿರುವವರಿಗೆ ಉರಗದ ರಕ್ಷಣೆಯಲ್ಲಿರುವವರು ಏನು ಮಾಡುವುದಕ್ಕೆ ಸಾಧ್ಯ? ಹಾಗಿರುವಾಗ  ಕೌರವ ಪಾಂಡವರಲ್ಲಿ ಹೋರಾಡಿದರೆ ಏನು ಫಲ?  ಪರಸ್ಪರ ವಿರೋಧವುಳ್ಳಂತಹ ಪ್ರಾಣಿಗಳು ಸಾನ್ನಿಧ್ಯ ಒಳ್ಳೆಯದಿದ್ದಲ್ಲಿ ಒಂದಾಗಿ ಇರುವಂತೆ ಕೌರವ ಪಾಂಡವರು ಹಸ್ತಿನಾವತಿಯಲ್ಲಿ ಒಂದಾಗಿ ಇರಬೇಕು.

ಕಂಡ ಕಂಡವರ ಮಾತು ಕೇಳುವ ಕೌರವನಿಗೆ ದೇಹವೆಲ್ಲ ಚಿನ್ನ  ಆದರೆ ಕಿವಿಯ ಹತ್ತಿರಬರುವಾಗ ಹಿತ್ತಾಳೆ ಆಗಿಹೋಯಿತು.  ಕರ್ಣಾದಿ ಸಹವರ್ತಿಗಳ ದುರ್ಬೋಧೆಯಿಂದ ಕೌರವ ಹಾಳಾಗುತ್ತಾನೆ.

ಹೀಗೆ ದುರ್ಯೋಧನನಿಗೆ ಹಿತವಚನ ಹೇಳುವ ದ್ರೋಣನಾಗಿ ದೇರಾಜೆಯವರದ್ದು ಅರ್ಥಗರ್ಭಿತ ಮಾತುಗಾರಿಕೆ.

 ಇದಕ್ಕೆ ಪ್ರತಿಯಾಗಿ ಒಂದೋ ಪಾಂಡವರು ಇರಬೇಕು ಇಲ್ಲ ಕೌರವ ಇರಬೇಕು. ಇಲ್ಲಿ ಇಬ್ಬರಿಗೂ ಜಾಗವಿಲ್ಲ ಎಂದು ಮೊಂಡುತನ ತೋರುವ ಕೌರವ ಉತ್ತಮ ಪಾತ್ರ ಪ್ರಸ್ತುತಿ.

ಇನ್ನು ಪ್ರಸಂಗದ ಇನ್ನೊಂದು ಪ್ರಧಾನ ಭಾಗವೆಂದರೆ ಭೀಮ ದ್ರೌಪದಿ ಸಂವಾದ. ಭೀಮನಾಗಿ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ ಶ್ರೋತೃ ಲಕ್ಷ್ಯವನ್ನು ಗಮನಾರ್ಹವಾಗಿ ಸೆಳೆಯುತ್ತಾರೆ. ದ್ರೌಪದಿಯಾಗಿ ಶ್ರೀ ಎಂ ಆರ್ ಶಾಸ್ತ್ರಿಯವರ ಭಾವನಾತ್ಮಕ ಮಾತುಗಾರಿಕೆ ಒಂದೆಡೆಯಾದರೆ ಶೇಣಿಯವರ ಭೀಮ ಅತ್ಯುತ್ತಮ ಮಾತುಗಾರಿಕೆಯಾಗಿತ್ತು. ಸಡಗರದಿಂದ ಬಂದ ದ್ರೌಪದಿಯನ್ನು ಕಂಡು ಭೀಮ ಹೇಳುವ ಕೆಲವು ಮಾತುಗಳು ಸ್ವಾರಸ್ಯವಾಗಿದೆ.

“ ಅಹಾ, ಬಹುಕಾಲದಿಂದ ನಿರೀಕ್ಷಿಸ್ತಾ ಇದ್ದೆ. ಮತ್ತೊಮ್ಮೆ ಈ ಅಲಂಕಾರದಿಂದ ಕಂಡೆನೆ? ನಾರುಡೆಯಂತಹ ಬಟ್ಟೆಯುಟ್ಟು ಹೂ ಮುಡೀಬೇಕು ಅಂತ ಆಸೆಯಾದರೂ ಮುಡಿಬಾರದು ಅಂತ ವೃತದ ಕಟ್ಟಿನೊಳಗಿದ್ದ ಪಾಂಚಾಲಿಯ ಚಿತ್ರ, ನನ್ನ ಕಣ್ಣಿಗೆ ಕಸವಾಗಿತ್ತು. ಇದಾದರೆ ಸರಿ. ಇನ್ನು ಏನುಂಟು? ಪಟ್ಟೆ ಪೀತಾಂಬರ ಧರಿಸಿ ಹೀಗೆ ಬಂದೆಯಲ್ಲಾ? ನಾಳೆ ನಾನು ಸನ್ಯಾಸಿಯಾದರೂ ಚಿಂತೆ ಇಲ್ಲ. “

“ಸ್ವಾಮೀ ಈ ವರೆಗೆ, ಇಷ್ಟು ಪ್ರಾಯ ಆಗಿ , ನಮ್ಮ ಈ ರಾಜಕೀಯದಲ್ಲಿ ಮತದಾನದ ಹಕ್ಕು ನನಗೆ ಸಿಕ್ಕಿದ್ದೂ ಇಲ್ಲ. ನಾನು ಕೇಳಿದ್ದೂ ಇಲ್ಲ.” ಸಂಧಾನದ ಬಗ್ಗೆ ಅಭಿಪ್ರಾಯ ಕೇಳಿದಾಗ ಶ್ರೀಕೃಷ್ಣನಲ್ಲಿ ಹೀಗೆ  ಎನ್ನುವ ಭೀಮ ಅಣ್ಣನಿಗೆ ನೀತಿಯಾದರೆ, ನಿನ್ನ ಮನಕೊಪ್ಪಿದರೆ  ನನ್ನದು ಸರ್ವಾನುಮತವಿದೆ ಅಂತ ವ್ಯಂಗ್ಯವಾಗಿಯೇ ಹೇಳುತ್ತಾನೆ. “

            “ಕುರು ಭೂಪಾಲ, ಅವಕೊಟ್ಟರೆ, ಯುದ್ದ ಯಾಕೆ ಬೇಕು? ಅಂತ ಒಂದು ತೀರ್ಮಾನಕ್ಕೆ ಬಂದು ಒಂದು ಜನ ಹೊರಡ್ಲಿಕ್ಕೆ ತಯಾರಾಗಿ ನಿಂತದೆ.”

            “ ಕಳುಹಿಸುವವನು ನಮ್ಮಣ್ಣನಾದರೆ... ಹೋಗುವವನು ನಿಮ್ಮಣ್ಣ!”

ಸಂಧಿಯೇ ಕಲಿ ಭೀಮ ನಿನಗಾನಂದವೇ ಕುರುಭೂಪನಲಿ ... ಎನ್ನುವ ಪದಕ್ಕೆ ದ್ರೌಪದಿ ಹೇಳುವ ಭಾವನಾತ್ಮಕ ಮಾತುಗಳು ಬಹಳ ಹೃದ್ಯವಾಗುತ್ತದೆ.

“ಕೇಸರೀಯ ಕಂಠದಿಂದ ಸಿಂಹನಾದವೇ ಹೊರಟಿತಲ್ಲದೇ ಇಲಿಯ ಚಿಲಿಪಿಲಿ ಹೊರಟೀತೆ?  ದಿಗ್ದಿಗಂತಗಳಲ್ಲಿ ಮಾರ್ದನಿಗಳ್ಳುವ ನಿಮ್ಮ ಕಂಠದಿಂದ ಸಂಧಿ ಎನ್ನುವ ಮಾತೇ? “

“ತನ್ನನ್ನು ಸಭೆಯಲ್ಲಿ ನಿಂದಿಸಿದ ಎಂದ ಶಿಶುಪಾಲನ ಶಿರವನ್ನು ಕತ್ತರಿಸಿದ ಶ್ರೀಕೃಷ್ಣನಿಗೆ ಈ ಸಂಧಿಯ ಮಾತನ್ನು ಹೇಳಿ ಕೊಟ್ಟಿರಾ?”

“ವಿಷದ ಹಾವುಗಳಿಂದ ಕಚ್ಚಿಸಿ, ವಿಷದ ಲಡ್ದುಗೆ ಗಳನ್ನು ತಿನ್ನಿಸಿ ನಿಮ್ಮನ್ನು ಕೊಲ್ಲುವುದಕ್ಕೆ ಪ್ರಯತ್ನ ಮಾಡಿದವನು. ಅರಗಿನ ಮನೆಯಲ್ಲಿ ಎಲ್ಲರನ್ನೂ ಸುಡುವುದಕ್ಕೆ ಪ್ರಯತ್ನ ಮಾಡಲಿಲ್ಲವೇ? ಸುಡಲಿಲ್ಲ. ಹೀಗೆ ಹೆಂಡತಿಯನ್ನು ಸಭೆಗ ಎಳೆದು ತಂದು ಸೆರಗನ್ನು ಎಳೆಯಲಿಲ್ಲವೇ? ಇಂತಹ ದುಷ್ಟನನ್ನು ಸಹೋದರ ಎಂದು ಭಾವಿಸುವುದು, ಒಡಹುಟ್ಟು ಎಂಬ ಕನಿಕರ ಬರುವುದಕ್ಕೆ ಕಾರಣವೇನು? ಶರೀರದಲ್ಲಿಯೇ ಹುಟ್ಟಿದ್ದು ಒಂದು ರೋಗ, ಅದನ್ನು ಒಡಹುಟ್ಟು ಎಂದು ಬೆಳೆಸ್ತಾರೆಯೇ?”

               ಅತ್ಯಂತ ಭಾವನಾತ್ಮಕ ದ್ರೌಪದಿ ಪಾತ್ರ ಚಿತ್ರಣ.

ಶ್ರೀರಮಣ ದಯವಾದ ನಮಗೆ ಎನ್ನುವ ವಿದುರನಾಗಿ ಶ್ರೀ ಕೀರಿಕ್ಕಾಡು ವಿಷ್ಣು ಮಾಸ್ತರ್, ಇವರೆಲ್ಲ ಯುಗ ಪುರುಷರು ಎನ್ನುವ ಮಾತಿಗೆ ಸಾರ್ಥಕತೆಯನ್ನು ಒದಗಿಸಿದಂತೆ ಇತ್ತು. ವಯೋಸಹಜ ತೊಂದರೆ ಬಿಟ್ಟರೆ ಇಳಿ ವಯಸ್ಸಿನಲ್ಲು ಯಕ್ಷಗಾನದ ನಿಜ ಹುಮ್ಮಸ್ಸು ಬೆರಗು ಹುಟ್ಟಿಸುತ್ತದೆ.  ಕಡಲೇ ಉಕ್ಕಿ ಬಂದಂತೆ ಹಾಲು ಉಕ್ಕಿ ಹರಿದು ಬಂದು ಹೋಗಿ ಅದು ಕೌರವನ ಹೃದಯ ಸೇರಲಿ ಎಂಬ ಅನಿಸಿಕೆಯೋ ಏನೋ ಎನ್ನುವ ವಿದುರನ ಹೃದಯ ದರ್ಶನ  ಅತ್ಯಂತ ಸಂಕ್ಷಿಪ್ತ ಅಷ್ಟೇ ಪರಿಣಾಮಕಾರಿ ಮಾತುಗಳು. ವಿದುರ ನಿಜಕ್ಕೂ  ದೈನ್ಯತೆಯ ಹಸ್ತಿನೆಯ ವಿದುರನೇ ಆಗಿಬಿಟ್ಟ.

            ಸಂಪೂರ್ಣ ತಾಳಮದ್ದಲೆಯಲ್ಲಿ ಶ್ರೀ ಕೃಷ್ಣ ಹೆಸರಿಗೆ ತಕ್ಕಂತೆ ವಿಜ್ರಂಭಿಸಿದೆ. ಬರಿದೆ ಮಾತನಾಡಿ ಪೆಟ್ಟು ತಿನ್ನಬೇಕಾದೀತು ಎನ್ನುವ ಕೌರವನಿಗೆ, ಶ್ರೀಕೃಷ್ಣ ಹೇಳುತ್ತಾನೆ, ಪೆಟ್ಟು ತಿನ್ನುವುದಕ್ಕೆ  ನಾನು ಸಿದ್ದ ಅಪಾಂಡವರಿಗೆ ಸಹಾಯವಗುವುದಿದ್ದರೆ ಇಂತಹ ಸೂಕ್ಷ್ಮ ಮಾತುಗಾರಿಕೆಯ  ಹಿರಿಯ ಸಾಮಗರ ನಿರರ್ಗಳ ಹರಿತ ಮಾತುಗಾರಿಕೆ ತಾಳಮದ್ದಲೆಯ ಸುಸ್ವರೂಪವೇ ಪ್ರತ್ಯಕ್ಷವಾದಂತೆ ಭಾಸವಾಗುತ್ತದೆ. ಎಲ್ಲದಕ್ಕೂ ಮಿಕ್ಕಿ ಅದನ್ನು ಪ್ರತ್ಯಕ್ಷವಾಗಿ ಅನುಭವಿಸಿದ ಅಂದಿನ ಪ್ರೇಕ್ಷಕವರ್ಗದಲ್ಲಿ ಒಂದು ಧನ್ಯತೆ ಬಂದಿರಬಹುದು.  ಸಾಮಾನ್ಯವಾಗಿ ತಾಳ ಮದ್ದಲೆ ಎಂದರೆ ಕೂದಲು ಬೆಳ್ಳಗಾದವರಿಗೆ ಅಂತ ಮಾತಿದೆ. ಇಲ್ಲಿ ಪ್ರೇಕ್ಷಕ ಮಾತ್ರವಲ್ಲ ವೇದಿಕೆಯ ಮೇಲೂ ವಯೋ ವೃದ್ಧಿಯ ಬೆಳ್ಳಿಕೂದಲುಗಳು. ಹೇಗಿರಬಹುದು?  ವಯೋ ಸಹಜ ದೌರ್ಬಲ್ಯವನ್ನು ಮೆಟ್ಟಿ ನಿಂತ ಆ ಹುಮ್ಮಸ್ಸು ನಿಜಕ್ಕೂ ರೋಮಾಂಚನವಾಗಬೇಕು.

            ಈ ತಾಳ ಮದ್ದಲೆಯ ಅತ್ಯಂತ ಪ್ರಮುಖ ಅಂಶವೆಂದರೆ, ಘನವಾದ ಹಿಮ್ಮೇಳ. ಅದಕ್ಕೆ ಚುಕ್ಕಾಣಿ ಹಿಡಿದವರು ಹಿರಿಯ ಭಾಗವತರಾದ ಶ್ರೀ ಅಗರಿ ಶ್ರೀನಿವಾಸ ಭಾಗವತರು,  ಅಪ್ಪಟ ಅಗರಿ ಶೈಲಿ ಹೇಗಿರುತ್ತದೆ ಎಂಬುದನ್ನು ಇಂತಹ ಪದಗಳನ್ನು ನೋಡಿ ಕೇಳಿ ಅಧ್ಯಯನ ಮಾಡಬೇಕು. ಈಗ ಅಗರಿ ಶೈಲಿ ಎಂದು ಏನು ಹಾಡುತ್ತಾರೋ ಅದಕ್ಕೂ ಮೂಲ ಅಗರಿ ಶೈಲಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಇಲ್ಲಿನ ಅಗರಿಯ ಪದಗಳನ್ನು ಕೇಳಿದಾಗ ತಿಳಿಯಬಹುದು.  ಅಗರಿ ಶೈಲಿಯ ಬಗ್ಗೆ ಅಷ್ಟು ಅಭಿಮಾನವಿದ್ದಲ್ಲಿ, ಅದರ ಬಗ್ಗೆ ಅಷ್ಟು ಆಸಕ್ತಿ ಕಾಳಜಿ ಇದ್ದಲ್ಲಿ ಅದನ್ನು ಸರಿಯಾಗಿ ಅಧ್ಯಯನ ಮಾಡಿದರೆ ಉತ್ತಮ.  ಈಗ ಅದಕ್ಕೆ ಸಾಕಷ್ಟು ಸಂಪನ್ಮೂಲ ಸಿಗಬಹುದು.  ಇಲ್ಲಿಯ ಪದಗಳನ್ನು ಕೇಳುವಾಗ ಮೊದಲು ಅನ್ನಿಸುವ ಅನಿಸಿಕೆ ಇದು.  ನಾವೇನು ಕಳೆದುಕೊಂಡಿದ್ದೇವೆ ಎಂಬುದು ಅರಿವಿಗೆ ಬರಬೇಕಾದರೆ ಆ ವಸ್ತುವನ್ನು ಹೊಂದಿರಬೇಕು. ಮತ್ತು ಅದರ ಮೌಲ್ಯ ತಿಳಿದಿರಬೇಕು. ಈ ಯಕ್ಷಗಾನ ತಾಳ ಮದ್ದಲೆ ಕೇಳುವಾಗ ನಾವು ಕಳೆದುಕೊಂಡದ್ದು ಬಹಳಷ್ಟಿದೆ ಅಂತ ಅನ್ನಿಸುತ್ತದೆ. ಸುಮ್ಮನೇ ಹಿರಿಯ ಕಲಾವಿದರ ಹೆಸರನ್ನು ಹೇಳಿ ಅಭಿಮಾನ ಗೌರವ ತೋರಿಸುತ್ತೇವೆ. ಆದರೆ ಅದೆಲ್ಲ ಢಾಂಭಿಕತನ ಎಂದನಿಸುತ್ತದೆ. ಒಂದಿಷ್ಟಾದರೂ ಇದ್ದರೆ ಈ ಮೌಲ್ಯಗಳನ್ನು ಯಥಾವತ್ ಉಳಿಸುವ ಪ್ರಯತ್ನವಾದರು ಮಾಡಬೇಕು. ಅಧ್ಯಯನ ಮಾಡದೆ ಮಾನಸಿಕವಾಗಿ ಪರವಾನಿಗೆ ಪಡೆಯದೆ ಯಾವುದನ್ನೇ ಆದರೂ ಉಪಯೋಗಿಸುವುದು ಹಿರಿಯ ತಲೆಮಾರಿಗೆ ಮಾಡುವ ಘೋರ ವಂಚನೆಯಾಗುತ್ತದೆ.

  ಚೆಂಡೆ ಮದ್ದಲೆಯಲ್ಲಿ  ಶ್ರೀ  ದಿವಾಣ ಭೀಮ ಭಟ್, ಮತ್ತು ನೆಡ್ಲೆ ಶ್ರೀ ನರಸಿಂಹ ಭಟ್ ಇಬ್ಬರ ಜತೆಗಾರಿಗೆ ಅದ್ಭುತವಾಗಿತ್ತು.  ಸಮ ವಿಷಮ ವಾದನದ ಹದವಾದ ಪಾಕ. ಇಂದಿನ ಪ್ರೇಕ್ಷಕ ಯಾವುದು ಪರಂಪರೆ ಯಾವುದು ಸಂಪ್ರದಾಯ ಈ ಗೊಂದಲದಲ್ಲೇ ಯಕ್ಷಗಾನ ಕಾಣುತ್ತಾನೆ. ತಾನು ಕಂಡದ್ದು ಎಷ್ಟು ಪರಿಪೂರ್ಣ ಎಷ್ಟು ಪರಿಶುದ್ದ ಎಂಬ ಸಂದೇಹ ಮನಸ್ಸಿನಲ್ಲಿ ಉಳಿದು ಬಿಡುತ್ತದೆ. ಧ್ವನಿ ರೂಪವಾದರೂ ಇಲ್ಲಿ ಹಲವು ಸಂದೇಹಗಳಿಗೆ ಸ್ಪಷ್ಟ ಉತ್ತರಗಳಿವೆ. ಅದನ್ನು ಗಮನಿಸಿ ನೋಡುವ ದೃಷ್ಟಿಕೋನವಿರಬೇಕು. ಕೃಷ್ಣ ಸಂಧಾನದ ನಾಲ್ಕು ತಾಸಿನ ತಾಳ ಮದ್ದಲೆಯಲ್ಲಿ ಹೆಚ್ಚೆಂದರೆ ಒಂದು ನಿಮಿಷಕ್ಕಿಂತ ಹೆಚ್ಚು ಯಾವ ಪದಗಳೂ ಇರಲಿಲ್ಲ. ಇಂದು ಅದನ್ನು ಕನಸಿನಲ್ಲೂ ಊಹಿಸುವುದು ಕಷ್ಟ. ಅದಕ್ಕೆ ಸಮತೂಕ ಎನ್ನುವಂತ ಅರ್ಥಗಾರಿಕೆ. ದೀರ್ಘವಾದ ಉಪನ್ಯಾಸಗಳಿಲ್ಲದ ಹದವಾದ ಸ್ಪರ್ಧಾತ್ಮಕ ಅರ್ಥಗಾರಿಕೆ. ಹಿಮ್ಮೇಳಕ್ಕೂ ಮುಮ್ಮೇಳಕ್ಕು ಮಾದರಿಯಾಗಬಲ್ಲ, ಪಠ್ಯವಿಷಯವಾಗಬಲ್ಲ ತಾಳಮದ್ದಲೆ ಎಂಬುದರಲ್ಲಿ ಸಂಶಯವಿಲ್ಲ. ಯಕ್ಷಗಾನ ಪರಂಪರೆ ಏನು ಎಂದು ತಿಳಿಯಲು ಯಾವ ಚರ್ಚಾಕೂಟಗಳಾಗಲೀ ವಿಚಾರ ಸಂಕಿರಣವಾಗಲೀ ಅವಶ್ಯಕತೆ ಇಲ್ಲ. ಇಂತಹ ಯಕ್ಷಗಾನದ ಮಟ್ಟುಗಳನ್ನು ವಿಶಾಲ ಮತ್ತು ಶಾಂತ ಚಿತ್ತದಿಂದ ಆಲಿಸುವುದನ್ನು ಕಲಿಯಬೇಕು. ಯಕ್ಷಗಾನದಲ್ಲಿ ಮೂಲ ಜೀವಾಳ ಇರುವುದು ಹಿಮ್ಮೇಳದಲ್ಲಿ. ದೂರದಲ್ಲಿ ಯಕ್ಷಗಾನ ಪದ ಕೇಳುತ್ತಿದ್ದರೆ ಯಕ್ಷಗಾನದ ಗಂಧ ಹರಡಿದಂತೆ ಭಾಸವಾದರೆ ಇದೇ ಕಾರಣ. ಪರಂಪರೆ ಎಂದರೆ ಅದಕ್ಕೊಂದಷ್ಟು ಇತಿಹಾಸವಿರುತ್ತದೆ. ಗಟ್ಟಿ ತಳಹದಿ ಇರುತ್ತದೆ. ಅದಕ್ಕೊಂದು ದೀರ್ಘ  ಬದುಕು ಇರುತ್ತದೆ. ಆ  ಬದುಕನ್ನು ಹರಣಮಾಡಿ,  ನವೀಕರಣದ ಹೊಸತನ್ನು ಸೇರಿಸುವಾಗ ಇದನ್ನು ಮರೆತಿರುವುದು ಇಲ್ಲಿ ಅನುಭವಕ್ಕೆ  ಬರುತ್ತದೆ. ಅದಕ್ಕೆ ಒಂದಿಷ್ಟು ಅರಿವಿರಬೇಕು. ಈ ಅಜ್ಞಾನವಿದ್ದರೆ ಅದರ ಬಗ್ಗೆ ಹೇಳಿಕೊಳ್ಳುವ ಹಕ್ಕನ್ನು ನಾವು ಕಳೆದುಕೊಳ್ಳುತ್ತೇವೆ.  ಯಕ್ಷಗಾನದ ಪರಂಪರೆಯ ಅಗರಿ ಶೈಲಿ ಯಥಾ ರೂಪದಲ್ಲಿ ಉಳಿಯಬೇಕು, ಅದನ್ನು ಇನ್ನೂ ಅಸ್ವಾದಿಸಬೇಕು ಎಂಬ ಆಶಯವನ್ನು ಈ ಯಕ್ಷಗಾನ ತಾಳಮದ್ದಲೆ ಉಂಟು ಮಾಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.  

ಈ ಕಾರ್ಯಕ್ರಮವನ್ನು ಏರ್ಪಡಿಸಿದ ಸಂಘಟಕರಿಗೆ ಧನ್ಯವಾದಗಳು. ಅವರ ಪರಿಶ್ರಮ ಇಲ್ಲದೇ ಇರುತ್ತಿದ್ದರೆ ಇದು ಇಂದು ನಾವು ಕೇಳುವುದಕ್ಕಿಲ್ಲ. ಹಾಗೇ ಇದನ್ನು ಧ್ವನಿ ಮುದ್ರಣಗೊಳಿಸಿ ಈ ಕಾಲಕ್ಕೂ ಮುಡಿಪಾಗಿಟ್ಟ ಯಕ್ಷಗಾನ ಕಲಾಭಿಮಾನಿಗಳಿಗೆ ಹಾರ್ಧಿಕ ಧನ್ಯವಾದಗಳು

 ಅತ್ಯಂತ ಹಿರಿಯ ಮೇರು ವ್ಯಕ್ತಿತ್ವಗಳ ಸಹಭಾಗಿತ್ವದಲ್ಲಿ ಇಂತಹ ಒಂದು ಕಾರ್ಯಕ್ರಮ ಏರ್ಪಡಿಸುವುದು ಇತಿಹಾಸವನ್ನು ದಾಖಲಿಸಿದಂತೆ.  ಆ ದಾಖಲೀಕರಣದ ದರ್ಶನವಾದಂತಾಯಿತು..  ಅದಕ್ಕೆ ಯಕ್ಷಗಾನ ಪ್ರಸಂಗಗಳಿಗೆ ಸೂಕ್ತ ಮಾದರಿ ಎನ್ನಿಸಿದ ಶ್ರೀಕೃಷ್ಣ ಸಂಧಾನವನ್ನೇ ಆಯ್ಕೆ ಮಾಡಿದ್ದು ಅತ್ಯಂತ ಸೂಕ್ತವೆನ್ನಿಸಿತು.  ಇಳಿ ವಯಸ್ಸಿನಲ್ಲೂ ಯಕ್ಷಗಾನದ ಪ್ರೇಮ ಯುವ ಹುಮ್ಮಸ್ಸಿನಂತೆ ಇಲ್ಲಿ ವ್ಯಕ್ತವಾಗಿದೆ. ವಯೋ ವೃದ್ಧರ ಈ ಶ್ರದ್ದೆಯನ್ನು ಕಂಡರೆ ಇವರೆಲ್ಲರ ಅಸ್ತಿತ್ವ ಪ್ರತ್ಯಕ್ಷದಲ್ಲೂ  ಪರೋಕ್ಷದಲ್ಲೂ ಯಕ್ಷಗಾನ ಕ್ಷೇತ್ರದಲ್ಲಿ ನಿತ್ಯ ಚೇತನವಾಗಿ ಇರಬೇಕು.  ಯಾಕೆಂದರೆ ಯಕ್ಷಗಾನ ಪರಂಪರೆ ಇವರನ್ನೇ ಸುತ್ತಿಕೊಂಡಿದೆ.  ಆದನ್ನು ಉಳಿಸುವ ಮಹತ್ತರ ಜವಾಬ್ದಾರಿ ಇಂದಿನ ಜನಾಂಗ  ಅನಿವಾರ್ಯವಾಗಿ ಹೊರಲೇ ಬೇಕು. ಅದೇ ನಮ್ಮ ಹೃದಯಾಂತರಾಳದ ನಮನವಾಗಲಿ.

                       

 

 

 

Saturday, May 9, 2020

ಹಾಸ್ಯ ಪ್ರಭೇದಗಳು


       ಒಂದು ತಳಿ ವೈಜ್ಞಾನಿಕವಾಗಿ ವಿಕಸನಗೊಂಡು ಹಲವು ಪ್ರಭೇದಗಳು ಹುಟ್ಟುವುದು ಆಧುನಿಕ ಜನಜೀವನದ ಪ್ರತೀಕ ಎನ್ನಬಹುದು. ಇಂದು ಒಂದು ಇದ್ದುದನ್ನು ನಾಳೆ ಹನ್ನೊಂದಾಗಿ ಪರಿವರ್ತಿಸುವ ಮಾನವನ ಹಪಹಪಿಕೆ ಆ ಮೂಲ ಗುಣಗಳನ್ನ ಕಡಿಮೆ ಮಾಡುತ್ತದೆ, ಅಥವಾ ಸಂಪೂರ್ಣ ನಾಶ ಮಾಡುತ್ತದೆ. ಈ ಹಪ ಹಪಿಕೆಯ  ಒಂದು ರೀತಿಯ ಜಾಗತೀಕರಣ ಯಕ್ಷಗಾನದಲ್ಲೂ ಕಾಣಬಹುದು. ಒಂದು ಕಿರೀಟ ಕಟ್ಟಿ ಝಗ ಝಗಿಸುವ ವೇಷ ಧರಿಸಿ ಬಂದರೆ, ಅದನ್ನು ಪರಂಪರೆಯ ಕಲೆ ಯಕ್ಷಗಾನ ಅಂತ ತುತ್ತೂರಿ ಬಾರಿಸುತ್ತಾ ಪರಂಪರೆಯ ಅಭಿಮಾನವನ್ನು ತೋರಿಸುವುದನ್ನು ಕಾಣಬಹುದು,  ಯಥೇಚ್ಛವಾಗಿ ಕಾಣಬಹುದು. ಯಕ್ಷಗಾನ  ಮನಸೋ ಇಚ್ಛೆ  ವಿಕಸನಗೊಂಡು ಯಕ್ಷಗಾನದ ಮೂಲ ಗುಣಗಳೇನಿದೆಯೋ ಅದರ ಛಾಯೆಯನ್ನೂ ಉಳಿಸದೇ ಇದ್ದರೂ ಅದನ್ನು ಶುದ್ದ ಪರಂಪರೆ ಅಂತ ಸ್ವತಹ ಬೆನ್ನು ತಟ್ಟಿಕೊಳ್ಳುತ್ತಾರೆ. ಯಾವುದೋ ಯಕ್ಷಗಾನಕ್ಕೆ ಚಪ್ಪಾಳೆ ಬಡಿದು ನಾವು ಸನಾತನ ಸಂಸ್ಕೃತಿಯನ್ನು ಅನುಸರಿಸುತ್ತಿದ್ದೇವೆ ಅಂತ ಆತ್ಮ ತೃಪ್ತಿ ಪಟ್ಟುಕೊಳ್ಳುವ ಭ್ರಮೆಯಲ್ಲಿ ಇಂದಿನ ಯುವ ಜನಾಂಗವಿದೆ.  ನಿಜವಾಗಿಯೂ ಇದು ಹಾದಿ ತಪ್ಪಿ ವಿಳಾಸ ಕಳೆದು ಹೋಗಿ ಬೀದಿ ಬೀದಿ ಅಲೆದಾಡಿದಂತೆ, ಮೂಲ ಯಕ್ಷಗಾನ ಏನು ಅಂತ ತಿಳಿಯದೇ ಇರುವ ಅತಂತ್ರ ಸ್ಥಿತಿ. 

         ಮೊನ್ನೆ ಹೀಗೆ ಒಬ್ಬರಲ್ಲಿ ವಿಚಾರ ವಿನಿಮಯ ಮಾಡುವಾಗ ಒಂದು ಪ್ರಶ್ನೆ ಬಂತು, ಈಗ ಯಾವ ಯಕ್ಷಗಾನ ಕೇಳಿದರೂ ನೋಡಿದರೂ ಸಂಪ್ರದಾಯವಾದಿಗಳು (ನನ್ನಂತೆ...ಮತ್ತು ನನ್ನನ್ನೇ ಉದ್ದೇಶಿಸಿ ಅವರು ಹೇಳಿದ್ದರು) ಇದು ಯಕ್ಷಗಾನದ ಶುದ್ದ ಪರಂಪರೆ ಅಲ್ಲ ಅಂತ ಹೇಳುತ್ತಾರೆ. ಯಾಕೆ? ಹಾಗಾದರೆ ಯಕ್ಷಗಾನದ ಶುದ್ದ ಪರಂಪರೆ ಯಾವುದು?”  ಅವರು ಅಂತ ಅಲ್ಲ ಎಲ್ಲರೂ ಕೇಳುವ ಪ್ರಶ್ನೆ. ಕೆಲವರು ಕೇಳುವುದಿಲ್ಲ. ಇದ್ದದ್ದನ್ನೇ ಪರಂಪರೆ ಅಂತ ಚಪ್ಪಾಳೆ ತಟ್ಟಿ ಆತ್ಮ ತೃಪ್ತಿ ಪಟ್ಟುಕೊಳ್ಳುತ್ತಾರೆ. ಮೊದಲು ಪರಂಪರೆ ಅಂತ ಕೇಳಿದರೆ ಈಗ ಅದಕ್ಕೂ ಶುದ್ದ ಪರಂಪರೆ ಅಂತ ಸೇರಿಸುವುದೂ ಆರಂಭವಾಗಿದೆ. ಇದು ಕಲಬೆರಕೆ ಯಾವ ರೂಪದಲ್ಲಿ ಆಗಿದೆ ಅಂತ ತೋರಿಸಿ ಕೊಡುತ್ತದೆ.  ಇರಲಿ, ಹಾಗಾದರೆ ಪರಂಪರೆಯ ಯಕ್ಷಗಾನ ಯಾವುದು? ಕೈತೊಳೆಯುವ ಸಾಬೂನಿಗೇ ಕೊಳೆ ಹಿಡಿದರೆ ಅದನ್ನು ಸ್ವಚ್ಛ ಮಾಡುವುದಕ್ಕೆ ಇನ್ನೊಂದನ್ನು ತರಬೇಕು!!
ನನ್ನ ಉತ್ತರ ಬಹಳ ಸರಳವಾಗಿತ್ತು. ಯಾಕೆಂದರೆ ನನ್ನ ಅನುಭವವನ್ನಷ್ಟೇ ನಾನು ಹೇಳಿದೆ. ನಾನು ಸರಳತೆಯನ್ನು ಅವಲಂಬಿಸಿರುವುದರಿಂದ ಉತ್ತರವೂ ಸರಳವಾಗಿತ್ತು. “ ಚೆಂಡೆ ಮದ್ದಲೆ ಕೊನೆಯಲ್ಲಿ ಶ್ರುತಿ ಇವು ಯಾವುದೂ ಕೂಡ ಇಲ್ಲದೆ ಒಂದು ಯಕ್ಷಗಾನ ಪದ ಹಾಡುವುದನ್ನು ಕೇಳುವಾಗ ಮನಸ್ಸಿಗೆ ಯಕ್ಷಗಾನದ ಅನುಭವ ಆಗುತ್ತದೆಯೋ ಅದು ಪರಂಪರೆಯ ಯಕ್ಷಗಾನ ಅಂತ ಸ್ಥೂಲವಾಗಿ ಹೇಳಬಹುದು.” ಇದು ಸಿದ್ದಾಂತ ಅಲ್ಲ. ಕೇವಲ ನನ್ನ ಅನುಭವ. ಯಾಕೆಂದರೆ ಈಗಿನ ಯಕ್ಷಗಾನ ಭಾಗವತಿಕೆ ತಳಿ ವಿಕಸನಗೊಂಡಿದ್ದರ ಪ್ರಭಾವ ಇದು. ಇಂದು ಚೆಂಡೆ ಮದ್ದಲೆ ಶ್ರುತಿ ಜತೆಯಲ್ಲಿ  ಇಲ್ಲವಾದರೆ ಅದನ್ನು ಯಕ್ಷಗಾನ ಪದ ಅಂತ ಹೇಳುವುದಕ್ಕೆ ಗುರುತಿಸುವುದಕ್ಕ ಸಾಧ್ಯವಿಲ್ಲ.

ಬಲಿಪ್ಪಜ್ಜ ನಮ್ಮ ಮನೆಯಲ್ಲಿ ಹೀಗೆ ಒಂದು ಸಲ ವಿಚಾರ ವಿಮರ್ಶೆ ಮಾಡುವಾಗ ಅವರು ಸುಮ್ಮನೆ ಎರಡು ಪದ ಹೇಳಿದರು. ಶ್ರುತಿಯೂ ಇಲ್ಲ ತಾಳವೂ ಇಲ್ಲ ಚೆಂಡೆ ಮದ್ದಲೆಯಂತೂ ಇಲ್ಲವೇ ಇಲ್ಲ. ಆ ಪದ ಹೇಗಿತ್ತೆಂದರೆ ಕೇಳಿದರೆ ಕೇಳುವಾಗಲೇ  ಕಣ್ಣೆದುರು ಆ ಯಕ್ಷಗಾನ ವೇಷಗಳು ಕುಣಿದ ಅನುಭವ ನೀಡಿತ್ತು. ಎತ್ತುಗಡೆ ಆಲಾಪನೆ ಕೊನೆಯಲ್ಲಿ ನಿಲುಗಡೇ...ಛೇ ಅವರ್ಣನೀಯ ಅನುಭವಗಳು. ಪರಂಪರೆಯ ಅನುಭವ ಎಂದರೆ ಅದು. ಇದು ಕೇವಲ ಭಾಗವತಿಕೆಗೆ ಸೀಮಿತವಲ್ಲ. ಚೆಂಡೆ ಮದ್ದಲೆಯ ನಾದ ಕೇಳುವಾಗಲೂ ಹಾಗೆ ಯಕ್ಷಗಾನದ ಅನುಭವ ಎಂದರೆ ಅದು ಭಿನ್ನವಾಗಿರುತ್ತದೆ. ಅದನ್ನು ಹೀಗೆ ಅಂತ ಭಾವನೆಯನ್ನು ವಿವರಿಸುವುದು ಕಷ್ಟ. ಇವುಗಳೆಲ್ಲಾ ಇದ್ದರೂ ಅದನ್ನು ಯಕ್ಷಗಾನ ಅಂತ ಹೇಳುವುದಕ್ಕೆ ಆತಂಕವಾಗುತ್ತದೆ. 


        
          ಯಾವ ವಸ್ತುವಾದರೂ ಅದಕ್ಕೆ ಮೂಲ ಧಾತು ಎಂಬುದಿರುತ್ತದೆ. ಅದರ ಗುಣ. ಮಾವಿನ ಹಣ್ಣು ಯಾವ ರೂಪದಲ್ಲಿ ಬಂದರೂ ಅದರ ರುಚಿಯಲ್ಲಿ ಅರಿವಿಗೆ ಬರುವ ಹಾಗೆ ಯಕ್ಷಗಾನಕ್ಕೂ ಒಂದು ಮೂಲ ಧಾತು ಗುಣ ಇದೆ ಅಂತ ನನ್ನ ಅನಿಸಿಕೆ. ಆದರೆ ಇಂದು ಆ  ಮೂಲ ಗುಣವೇ ಕಳೆದು ಹೋಗಿದೆ ಅಂತ ಅನ್ನಿಸುತ್ತದೆ. ಒಂದು ಯಕ್ಷಗಾನ ಪದ ಕೇಳುವಾಗ ಮನಸ್ಸಿನಲ್ಲೇ ಅದರ ಹಿಮ್ಮೇಳ  ವಿಂಗಡಿಸಿ ಕೇಳಿದರೆ ಇದು ಅರಿವಿಗೆ ಬರುತ್ತದೆ. ಬೆಂಗಳೂರಿನ ಹೊರಗೆ ಒಂದು ದೊಡ್ಡ ಆಲದ ಮರ ಇದೆ. ಶತಮಾನದ ಇತಿಹಾಸ ಇದೆ ಇದಕ್ಕೆ. ಆದರೂ ಮೊದಲಿನ ಮರದ ಬಿಳಲುಗಳನ್ನಷ್ಟೇ ಈಗ ಮರ ಅಂತ ನೋಡುತ್ತೇವೆ. ಮೂಲದ ಮರ  ಎಂದೋ ಮರೆಯಾಗಿದೆ. ಯಕ್ಷಗಾನಕ್ಕೂ ಹೆಚ್ಚುಕಮ್ಮಿ ಅದೇ ಸ್ಥಿತಿ.  ಹೀಗಿದ್ದರೂ ಚೆಂಡೆ ಮದ್ದಲೆಯ ಧ್ವನಿಗೆ ಇದು ನಮ್ಮ ಯಕ್ಷಗಾನ ಅಂತ ಅಭಿಮಾನ ಪಟ್ಟುಕೊಳ್ಳಬೇಕು. 

       ಯಕ್ಷಗಾನ ಕೇಳುವ ಆರಂಭದ ಕಾಲಘಟ್ಟದಲ್ಲಿ ಅಂದರೆ ನಾವು ಚಿಕ್ಕವರಿರುವಾಗ, ಯಕ್ಷಗಾನದ ನಾಲ್ಕು ಭಾಗವತರನ್ನು ನಾಲ್ಕು ಸ್ತಂಭದಂತೆ ನಾಲ್ಕು ಭಾಗವತರು ಅಂತ ಹೇಳುತ್ತಿದ್ದರು. ಅಗರಿ ಬಲಿಪ ಕಡತೋಕ ಮಂಡೆಚ್ಚ . ಅದರಲ್ಲೂ ಅಗರಿ ಬಲಿಪ ಎಂಬುದು ಪರಂಪರೆಯ ಪ್ರಭೇಧವೆಂಬಂತೆ ಪರಿಗಣಿಸಲ್ಪಟ್ಟಿದೆ. ಅದರಲ್ಲಿ ಕಡತೋಕ ಮಂಡೆಚ್ಚರು ಭಾಗವತಿಕೆಯಲ್ಲಿ ಬಹಳಷ್ಟು ಬದಲಾವಣೆ ಮಾಡಿ ತಮ್ಮದೇ ಪ್ರಭೇದವನ್ನು ಹುಟ್ಟು ಹಾಕಿದ್ದರೂ ಅಗರಿ ಬಲಿಪ ಎಂಬುದು  ಪರಂಪರೆಯ ಮೂಲ ಪ್ರಭೇದವಾಗಿದೆ ಎಂದು ವಿದ್ವಾಂಸರು ಹೇಳುತ್ತಾರೆ. ಅದು ಹೇಗೆ ಇರಲಿ. ಭಾಗವತಿಕೆಗೆ ಪ್ರಭೇದವಿದ್ದಂತೆ ಯಕ್ಷಗಾನ ಹಾಸ್ಯಕ್ಕೂ ಪ್ರಭೇದವಿದೆ ಎಂದು ಅನ್ನಿಸುತ್ತದೆ.
ಛಾಯಾ ಚಿತ್ರ....ಅಂತರ್ಜಾಲದ ಮೂಲದಿಂದ 

             ತೆಂಕು ತಿಟ್ಟು ಯಕ್ಷಗಾನದಲ್ಲಿ ಶ್ರೀ ಗೋಪಾಲ ಕೃಷ್ಣ ಜೋಶಿ ವಿಟ್ಲ ಹಾಗೇನೇ ಶ್ರೀ ಮಿಜಾರು ಅಣ್ಣಪ್ಪ ನಾವು ನೋಡುವ ಆರಂಭದ ದಿನಗಳಲ್ಲಿ ಪ್ರಸಿದ್ಧ  ಹಾಸ್ಯಗಾರರಾಗಿದ್ದರು. ಹಾಗೆ ನೋಡಿದರೆ ಪೆರುವೊಡಿ  ನೆಲ್ಲಿಕಟ್ಟೆಯಂತಹ ಹಾಸ್ಯಗಾರರೂ ಸಕ್ರಿಯವಾಗಿ ರಂಗದಲ್ಲಿ ಮಿಂಚುತ್ತಿದ್ದರು.  ಆದರೆ ನನ್ನ ಅನುಭವದಂತೆ ಜೋಶಿ ಮತ್ತು ಮಿಜಾರು ಎರಡು ಪ್ರಭೇದಗಳು ಪ್ರಮುಖವಾಗಿ ಗಮನಾರ್ಹವಾಗಿತ್ತು. 


         ಜೋಷಿ ಮತ್ತು ಮಿಜಾರು ಪರಸ್ಪರ ಹೋಲಿಸುವುದು ಸಾಧ್ಯವಿಲ್ಲ. ಎರಡೂ ಸಹ ದೈವದತ್ತವಾದ  ವಿಭಿನ್ನ ಪ್ರತಿಭೆಗಳು.  ಅಂದು ಇವರ ಹಾಸ್ಯದ ಹೊನಲು ಅನುಭವಿಸಿ ರಸಾನುಭವವನ್ನು ಪಡೆಯದ ಯಕ್ಷರಸಿಕರು ಇರಲಾರರು. ಇಬ್ಬರ ಶರೀರ ಭಾಷೆಯಾಗಲಿ , ಹಾಸ್ಯ ಪ್ರಸ್ತುತಿಯಲ್ಲಿ ಅಗಾಧವಾದ ವೆತ್ಯಾಸಗಳಿದ್ದರೂ ಎರಡನ್ನೂ ಅಂದಿನ ಪ್ರೇಕ್ಷಕಸಮೂಹ ಪರಂಪರೆಯ ಹಾಸ್ಯದಂತೆ ಅನುಭವಿಸುತ್ತಿತ್ತು. 

     ‘ವಿಟ್ಲ ಜೋಷಿ..’.ಹೆಸರು ಕೇಳಿದೊಡನೇ ನವಿರಾದ ನಗು ಮುಖದಲ್ಲಿ ಬಾರದಿದ್ದರೆ ಆತ ಯಕ್ಷರಸಿಕನೇ ಅಲ್ಲ. ಹಾಗಾಗಿಯೇ ಇವರನ್ನು ರಸಿಕ ರತ್ನ ಅಂತ ಅನ್ವರ್ಥವಾಗಿ ಕರೆಯುತ್ತಿದ್ದರು. ಇವರ ಹಾಸ್ಯಗಳಲ್ಲಿ  ಮಾತುಗಳು ಮಿತವಾಗಿದ್ದು ಶರೀರ ಭಾಷೆಯಲ್ಲೇ ಗಮನಾರ್ಹ ಹಾಸ್ಯವಿರುತ್ತಿತ್ತು. ಹಾಸ್ಯದ ದೈತ್ಯ ಪ್ರತಿಭೆ ಇದು.  ನೆರೆದ ಸಮೂಹ ಬಿದ್ದು  ಬಿದ್ದು  ನಕ್ಕರೂ ಸಹ ಇದು ತನಗೆ ಸಂಭಂಧಿಸಿದ್ದೇ ಅಲ್ಲ ಎಂಬಂತೆ ನಿರ್ಲಿಪ್ತ ಮನೋಭಾವದಲ್ಲಿದ್ದು ಬಿಡುವುದು  ಸಾಮಾನ್ಯನಿಗೆ ಸಾಧ್ಯವಿಲ್ಲದ ಕೆಲಸ. ಅಡುಗೆ ಮಾಡಿದವನು ತಾನು ಮಾಡಿದ ಆಡುಗೆಯ ರುಚಿ ನೋಡಬಾರದು. ಅದು ಉಚ್ಚಿಷ್ಠಮಾಡಿದಂತೆ. ಹಾಗೇ ಜೋಷಿಯವರು ತಮ್ಮ ಹಾಸ್ಯಕ್ಕೆ ತಾವೇ ನಕ್ಕು ಸ್ವತಃ ಪ್ರೇಕ್ಷಕನಾಗುವ ಉದಾಹರಣೆಯೇ ಸಿಗದು. ವಿದೂಷಕನಿಗಿರಬೇಕಾದ ಮುಖ್ಯ ಗುಣವೆಂದರೆ ತನ್ನ ಹಾಸ್ಯಕ್ಕೆ  ತಾನು ನಗದಿರುವುದು. ತನ್ನ ಹಾಸ್ಯಕ್ಕೆ ತಾನು ನಗುವುದೆಂದರೆ  ಇದು ಹಾಸ್ಯ ಒಮ್ಮೆ ನಕ್ಕು ಬಿಡಿ ಅಂತ ಪ್ರೇಕ್ಷಕನಿಗೆ ಹೇಳಿದಂತೆ.  ಭಾಷೆಯ  ಶಬ್ದಗಳು ವಿಕಟ ರೂಪದಲ್ಲಿ ಇವರ ನಾಲಗೆಯಲ್ಲಿ ನಿತ್ಯ ಸರ್ಕಸ್ ಮಾಡತ್ತಿದ್ದವು. ಅದರ ಜತೆಯಲ್ಲಿ ಆ ಮ್ಯಾನರಿಸಂ, ಅದು ಹೇಗಿರುತ್ತಿತ್ತೆಂದರೆ,   ನಗುವದನ್ನ ನಿಷೇಧಿಸಿ ಯಾರಾದರೂ ಖಡ್ಗ ಹಿಡಿದು ನಿಂತರೂ ಜೇವ  ಭಯ ಬಿಟ್ಟು ನಕ್ಕುಬಿಡುವಂತಹ ತಾಕತ್ತು ಆ ಶರೀರ ಭಾಷೆಯಲ್ಲಿತ್ತು. ಹತ್ತು ಹಲವು ಪಾತ್ರಗಳಿಗೆ ಮಾದರಿಯನ್ನು ರೂಪಿಸಿದ ಕಲಾವಿದರು ಮಾತ್ರವಲ್ಲ ತನ್ನಿಂದ ನಂತರಕ್ಕೆ ತನ್ನದೇ ಒಂದು ಪ್ರಭೇದವನ್ನು ಸೃಷ್ಟಿಸಿದ ಕಲಾವಿದರು.ಮಾತುಗಳನ್ನು ಒಪ್ಪಿಸುವುದು ಬಹಳ ಕಡಿಮೆ ಎನ್ನುವುದಕ್ಕಿಂತಲೂ ಮಿತವಾಗಿತ್ತು. ಶಬ್ದಗಳ ಉಚ್ಚಾರಗಳಲ್ಲಿ ಆಂಗಿಕ ಅಭಿನಯಗಳಲ್ಲಿ ಎಲ್ಲಕ್ಕಿಂತಲೂ ಹೆಚ್ಚು ಸಮಯ ಪ್ರಜ್ಞೆ ಯಾವುದನ್ನು ಹೇಗೆ ಎಷ್ಟು ಮಾತನಾಡಬೇಕು ಎಂಬುದರ ಪರಿಪೂರ್ಣತೆ ಇವರಲ್ಲಿತ್ತು. ನಾನು ಬಾಲ್ಯದಲ್ಲಿ ಇವರ ಆಟ ನೋಡುವಾಗ ಇವರ ನಾಟ್ಯವನ್ನೂ ನೋಡಿದ ನೆನಪಿದೆ. ಆನಂತರ ಪ್ರಾಯದ ಪರಿಣಾಮವೋ ದೇಹಾರೋಗ್ಯದ ಪರಿಣಾಮವೋ ನಾಟ್ಯ ಬಹಳಷ್ಟು ಕಡಿಮೆಯಾಗಿ ಅಭಿನಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ಆಗಲೂ ಮುಖಭಾವನೆಯ ವೈಶಿಷ್ಟ್ಯತೆಯಲ್ಲೇ ಪಾತ್ರವನ್ನು ರಂಗದ ಮೇಲೆ ತೋರಿಸಿಕೊಡುತ್ತಿದ್ದರು. ಹಾಸ್ಯಕ್ಕಾಗಿ ಹೇಳಿ ಮಾಡಿಸಿದ ದೇಹ ಒಂದು ಸಾಂಪ್ರದಾಯಿಕ ಹಾಸ್ಯ ಹೇಗಿರಬೇಕು ಎಂಬುದಕ್ಕೆ ನಿದರ್ಶನದಂತಿತ್ತು.

       ಜೋಶಿಯವರದು ಯಕ್ಷಗಾನದ ಟಿಪಿಕಲ್ ಹಾಸ್ಯ, ಮಾದರಿ ಹಾಸ್ಯ ಎನ್ನಬಹುದು. ಶಬ್ದಗಳ ವಿಕಟ ಬ್ರಹ್ಮನಾಗಿರುವ ಇವರ ಮಾತುಗಳು ಮುತ್ತಿನಂತೆ ಅದು ಹೊರಬಿದ್ದರೆ ಹಿಡಿದಿಡುವುದಕ್ಕೆ ಪ್ರೇಕ್ಷಕನ ಕಿವಿ ಅಗಲವಾಗಿ ತೆರೆದಿರುತ್ತಿತ್ತು. ಅತ್ಯಂತ ಸರಳ ಸಹಜ ಶುದ್ಧ ಹಾಸ್ಯ. ಶ್ರಮವಿಲ್ಲದ  ನವಿರುತನ ಅದರಲ್ಲಿರುತ್ತಿತ್ತು. ಪೌರಾಣಿಕ ಪ್ರಸಂಗದ ಹಲವು ವೇಷಗಳಿಗೆ ಬ್ರಾಂಡ್ ಮಾಡಿದ ಅವತಾರದ ಹಾಸ್ಯಗಾರ. ಆ ಪರಂಪರೆಯನ್ನು ಹಲವರು ಮುಂದುವರೆಸಿಕೊಂಡು ಬಂದಿದ್ದಾರೆ. 

       
         ಆ ಕಾಲದ ಇನ್ನೊಂದು ಹಾಸ್ಯ ಪ್ರಭೇದವೆಂದರೆ ಅದು ಶ್ರೀ ಮಿಜಾರು ಅಣ್ಣಪ್ಪನವರದ್ದು. ಮಿಜಾರು ಎಂಬ ಊರ ಹೆಸರೇ ಪರ್ಯಾಯ ಹಾಸ್ಯವಾಗಿ ಬದಲಾದದ್ದು ಯಕ್ಷಗಾನ ಚರಿತ್ರೆಯ ಅದ್ಭುತವೆನ್ನಬೇಕು. ಈ ಸಣಕಲೂ ಶರೀರಿಯ ರಂಗ ಪ್ರವೇಶವಾದರೆ ಎಂತಹಾ ಪ್ರೇಕ್ಷಕನೂ ರಂಗದಿಂದ ಆಚೆಗೆ ಹೋಗಲಾರ. 
ತುಳು ಭಾಷೆ ಹಾಸ್ಯಕ್ಕೆ ಅತ್ಯಂತ ಇಷ್ಟವಾದ ಭಾಷೆ. ಇಂತಹಾ ಹ್ಯೂಮರ್  ಲಕ್ಷಣಕ್ಕೆ ಸಾಕ್ಷ್ಯ ಮಿಜಾರು ಹಾಸ್ಯದಲ್ಲಿದೆ.  ಇವರದು ಕುಣಿತ ಕಡಿಮೆ. ಇದ್ದರೂ ಅದು ಸಂಪ್ರದಾಯಕ್ಕೆ ಹೊಂದಿಕೊಂಡು ಮಿತಿಯೊಳಗಿನ ನಾಟ್ಯ. ವಿಡಂಬನೆಯ ಸರಳ ಜಾನಪದ ಹಾಸ್ಯ ಇವರದು.  ಅಲ್ಲಿ ಇಲ್ಲಿ ಕಾಣುವ ವಿಚಾರಗಳು ಅಷ್ಟೇ ಸಲೀಸಾಗಿ ಇವರ ಸಂಭಾಷಣೆಯಲ್ಲಿ ಸೇರಿಕೊಂಡು ಚಿಂತನೆಯನ್ನುಂಟು ಮಾಡುತ್ತಿತ್ತು. ಹಾಸ್ಯಗಳಲ್ಲಿ ಪಂಚಿಂಗ್ ಎನ್ನುವ ಮಾತುಗಳು ಯಥೇಚ್ಚವಾಗಿರುತ್ತಿತ್ತು. ಹಾಸ್ಯದಲ್ಲಿ ಕರುಣೆ ಮಿಶ್ರಿತವಾಗಿ ಹೃದಯಕ್ಕೆ ಹತ್ತಿರವಾಗುವಂತೆ ಮಾತನಾಡುವುದರಲ್ಲೂ ಇವರದು ಅದ್ಭುತ ಪ್ರತಿಭೆ ಎನ್ನಬೇಕು. ಅವರ ಸಂಭಾಷಣೆಗಳು ಅವರಿಗೆ ಮಾತ್ರ ಸೀಮಿತವಾಗಿದ್ದವು. ಅವುಗಳನ್ನು ಬೇರೆಯವರು ಉಪಯೋಗಿಸಿದಲ್ಲಿ ಆ ಪರಿಣಾಮ ಉಂಟಾಗುತ್ತಿರಲಿಲ್ಲ. ಆ ಧ್ವನಿ ಸ್ವರ ಭಾರ ಅದು ಮಿಜಾರು ಅಣ್ಣಪ್ಪನಿಗಷ್ಟೇ ಸಾಧ್ಯ.  ದುಃಖದ ಸನ್ನಿವೇಶದಲ್ಲೂ ಹರಿತವಾದ ಹಾಸ್ಯ ಇವರ ವೈಶಿಷ್ಟ್ಯತೆ ಎನ್ನಬೇಕು. ನೋವಲ್ಲಿದ್ದರೂ ಚಿಮ್ಮುವ   ದಯನೀಯ ಹಾಸ್ಯಗಳು ಮಿಜಾರು ವಿಶೇಷ . ಆ ಸ್ವರಭಾರ ಅದಕ್ಕೆ ಸೂಕ್ತವಾಗಿ ಹೊಂದಿಕೆಯಾಗುತ್ತಿತ್ತು, ಒಂದು ರೀತಿಯ ಜಾನಪದೀಯ ಪ್ರಾತಿನಿಧಿತ್ವ ಇವರ ಹಾಸ್ಯ ಪಾತ್ರಗಳಲ್ಲಿರುತ್ತಿತ್ತು. ಹೊರಗೆ ಕಂಡು ಬರುವ ಪಾತ್ರಗಳು ರಂಗದಲ್ಲಿ ಕಂಡು ರಸಿಕರಿಗೆ ಮಿಜಾರು ಹಾಸ್ಯ ಪಾತ್ರಗಳೆಂದರೆ ತಮ್ಮೊಳಗಿನ ಮಂದಿಯನ್ನು ಕಂಡ ಅನುಭವ. ಅದರಂತೆ ಪರಿಶುದ್ಧ ತುಳು ಭಾಷೆಯ ಜಾನಪದ ಸೌಂದರ್ಯ ನೋಡಬೇಕಾದರೆ ಇವರ ಮಾತುಗಳನ್ನು ಕೇಳಬೇಕು. ಅದು ಮತ್ತೂ ಮತ್ತೂ ಕೇಳುವಂತೆ ಮಾಡುತ್ತದೆ. ತುಳು ಭಾಷೆಯಂತೇ ಕನ್ನಡ ಪೌರಾಣಿಕ ಪಾತ್ರಗಳಲ್ಲೂ ಇವರದೇ ಆದ ವೈಶಿಷ್ಟ್ಯತೆಗಳಿರುತ್ತಿತ್ತು. ಎರಡೂ ಕ್ಷೇತ್ರದಲ್ಲೂ ಏಕ ಪ್ರಕಾರವಾದ ಪ್ರತಿಭೆಯನ್ನು ಹೊಂದಿ ಅಸಾಮಾನ್ಯ ಕಲಾವಿದರು ಇವರು.  ಹಾಸ್ಯಕ್ಕೂ ತಾರಾಮೌಲ್ಯ ಇದೆ. ಅದೂ ಸಹ ಅಂದಿನ ಯಕ್ಷಗಾನದ ವಾಣಿಜ್ಯ ಚಿಂತನೆಗಳಿಗೆ ಅವಕಾಶವನ್ನು ಅರ್ಹತೆಯನ್ನೂ ನೀಡಿತ್ತು. 

         ಇಂದು ಹಾಸ್ಯ ಪ್ರದರ್ಶನಗಳು ಬೇಕೆಂದೇ ತುರುಕಿದಂತೆ ಇರುತ್ತವೆ. ಪ್ರಸಂಗದ ಮೌಲ್ಯ  ಸನ್ನಿವೇಶದ ಗಂಭೀರತೆ ಅರಿವಿಲ್ಲದೇ ಸೃಷ್ಟಿಸಲಾಗುತ್ತದೆ. ಹಾಸ್ಯ ಅದು ಕೇವಲ ನಗಿಸುವುದಕ್ಕಿರುವುದಲ್ಲ. ಕಲೆಯಲ್ಲಿ ಅದರಲ್ಲೂ ಯಕ್ಷಗಾನದಲ್ಲಿ ಹಾಸ್ಯದ ಜವಾಬ್ದಾರಿ ಸಾಕಷ್ಟಿದೆ. ಅದನ್ನು ಮರೆತು ವ್ಯವಹರಿಸುವಾಗ ಯಕ್ಷಗಾನ ರಂಗದಿಂದ ದೂರವಾಗುತ್ತದೆ. ಯಕ್ಷಗಾನದ ಗತಕಾಲದ ಚರಿತ್ರೆಯಲ್ಲಿ ಈ ಎರಡು ಹಾಸ್ಯ ಪ್ರಭೇದಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿರುವುದು ಸುಳ್ಳಲ್ಲ.