ಶ್ರೀಕೃಷ್ಣ ಸಂಧಾನ ’ತಾಳದ’ ಮದ್ದಲೆ, ಹೀಗೆ ವಿಶಿಷ್ಟ ರೀತಿಯಲ್ಲಿ ಕರೆಯುವುದಕ್ಕೆ ಒಂದು
ಮುಖ್ಯ ಕಾರಣ ಇದೊಂದು ಹಳೆಯ ತಾಳ ಮದ್ದಲೆ ಬಗೆಗಿನ ಅನಿಸಿಕೆಗಳು. ಸಾಮಾನ್ಯವಾಗಿ ಹದಗೆಟ್ಟ ಸ್ಥಿತಿಗೆ, ನಿಯತಿಯನ್ನು
ಮೀರಿದ ನಿಯಂತ್ರಣವಿಲ್ಲದ ಸ್ಥಿತಿಗೆ ತಾಳ ತಪ್ಪಿದೆ ಅಂತ ಹೇಳುವುದಿದೆ. ಪ್ರಪಂಚದ ಸರ್ವ ಸ್ವರಗಳೂ
ಸಂಗೀತದ ಪ್ರತಿನಿಧಿತ್ವವನ್ನು ಹೊಂದಿದೆ ಅಂತ ಸಂಗೀತ ಬಲ್ಲವನು ಹೇಳುವ ಮಾತು. ಹಾಗಾಗಿ ಬದುಕಿನ
ಅಸ್ತಿತ್ವವೂ ಒಂದು ತಾಳದ ರೇಖೆಯಲ್ಲಿದೆ ಅಂತ ಹೇಳಬಹುದು. ಈ ತಾಳಮದ್ದಲೆ ಹೆಸರಿಗೆ
ಅನ್ವರ್ಥವಾಗುವಂತೆ ತಾಳದಿಂದ ಕಿಂಚಿತ್ ಕದಲದೆ ಸ್ಥಿರವಾದ
ಲಾಲಿತ್ಯದ ಸೌಂದರ್ಯವನ್ನು ನೀಡುತ್ತದೆ. ಇದೊಂದು
ತಾಳ ಮದ್ದಲೆ ಆಲಿಸುತ್ತಾ ಹೋದಂತೆ ಮೊದಲ ಅನಿಸಿಕೆ ತಾಳ ಲಯ ವಿನ್ಯಾಸದ ಆ ಹಿಮ್ಮೇಳದ ಬಗೆಗೆ
ಆಗಿರುತ್ತದೆ. ಈ ಅನಿಸಿಕೆಗಳಿಗೆ ಮುಖ್ಯ ಆಕರ್ಷಣೆಯನ್ನು
ಈ ತಾಳವೇ ಒದಗಿಸಿದೆ. ಪ್ರತೀ ಅಂಗುಲ ಅಂಗುಲವೂ ಯಕ್ಷಗಾನದ ಮೂಲ ಧಾತುವಿನಿಂದ ಕದಲದೆ ಆ
ಗಂಭೀರತೆಯ ಹೆಜ್ಜೆಯನ್ನು ಇಡುತ್ತಾ ಸಾಗುತ್ತದೆ. ಸಂಪೂರ್ಣ ಯಕ್ಷಗಾನಕ್ಕೆ ಬದ್ಧವಾಗಿ
ಸ್ಥಿರತೆಯಿಂದ ಸಂತುಲಿತ ದರ್ಶನವನ್ನು ನೀಡುವ ಇದೊಂದು ಹಳೆಯ ಅದ್ಭುತ ಯಕ್ಷಗಾನ ತಾಳ ಮದ್ದಲೆ. ಇದು ಆಕರ್ಷಣೀಯವಾಗಿ ತೋರಲು ಮುಖ್ಯ ಕಾರಣ ಹಲವಾರು ದಶಕದ
ಮೊದಲು ಈ ತಾಳ ಮದ್ದಲೆಗೆ ನಾನೂ ಪ್ರತ್ಯಕ್ಷದರ್ಶಿಯಾಗಿದ್ದೆ. ಆಗಿನ ಆಸ್ವಾದನೆಯ ಮಟ್ಟ ಈಗ
ಸಂಪೂರ್ಣವಾಗಿ ಬದಲಾಗಿ ಆಗ ಕಾಣದೇ ಇದ್ದ ಯಕ್ಷಗಾನದ ಸಂದುಗೊಂದಿಗಳು ಈಗ ಸ್ಪಷ್ಟವಾಗಿ
ಕಾಣುವಂತಾಗಿದೆ. ಹೀಗಿದ್ದರೂ ಇದೊಂದು ಸಾಂಕೇತಿಕ
ತಾಳ ಮದ್ದಲೆ ಅಂತ ಸಂಘಟಕರು ಮೊದಲಾಗಿ ಹೇಳುವಲ್ಲಿ ವಿಸ್ತೃತವಾದದ್ದು ಇನ್ನೂ ಇದೆ ಎಂದು
ಮನಗಾಣಬೇಕು.
ಬಹಳ ವರ್ಷಗಳ ಹಿಂದೆ ಮಂಗಳೂರು ಪುರಭವನದಲ್ಲಿ
ಅದ್ಧೂರಿಯಾಗಿ ನಡೆದ ತಾಳ ಮದ್ದಲೆ ಇದು. ಇದರ
ಸಂಪೂರ್ಣ ಕಲಾವಿದರ ವಿವರ ಈ ಕೆಳಗೆ ಇದೆ.
ಹಿಮ್ಮೇಳದಲ್ಲಿ ಭಾಗವತರು ಶ್ರೀ ಅಗರಿ ಶ್ರೀನಿವಾಸ ರಾಯರು, ಚೆಂಡೆ ಮದ್ದಲೆ : ಶ್ರೀ ದಿವಾಣ ಭೀಮ ಭಟ್ ಮತ್ತು ಶ್ರೀ
ನೆಡ್ಲೆ ನರಸಿಂಹ ಭಟ್
ಕೌರವ ೧. ಶ್ರೀ ಮಟ್ಟಿ ಸುಬ್ಬರಾವ್ ೨. ಶ್ರೀ ಕೋಟ ಕುಞಿ ನಾರಾಯಣ ಶೆಟ್ಟಿ
ವಿದುರ ಶ್ರೀಕೀರಿಕ್ಕಾಡು
ಮಾಸ್ತರ್ ವಿಷ್ಣು ಭಟ್
ಶ್ರೀ ಕೃಷ್ಣ ಶ್ರೀಮಲ್ಪೆ
ಶಂಕರನಾರಾಯಣ ಸಾಮಗ
ಭೀಮ ಶ್ರೀ
ಶೇಣಿ ಗೋಪಾಲ ಕೃಷ್ಣ ಭಟ್
ದ್ರೌಪದಿ ಶ್ರೀ
ಪ್ರೋ ಎಂ ಆರ್ ಶಾಸ್ತ್ರಿ.
ಧರ್ಮರಾಯ ೧. ಶ್ರೀ ಸೀತಾನದಿ ಗಣಪಯ್ಯ ಶೆಟ್ಟಿ ೨. ಶ್ರೀ ಕೋರಕ್ಕೋಡು ಭವಾನಿ ಶಂಕರ ರಾಯ
ದ್ರೋಣ ಶ್ರೀ ದೇರಾಜೆ ಸೀತರಾಮಯ್ಯ
ಈ ತಾಳಮದ್ದಲೆಯಲ್ಲಿ ಭಾಗವಹಿಸಿದ ಬಹುತೇಕ ಎಲ್ಲಾ ಕಲಾವಿದರು ಆ ಕಾಲದ ಹಿರಿಯರಲ್ಲಿ ಹಿರಿಯರಾಗಿದ್ದವರು. ಈಗಿನ ಪ್ರೇಕ್ಷಕವರ್ಗವೇನಿದೆ, ಅಲ್ಲಿ ಶೇಣಿಯವರು ಕೂಡ
ಪೂರ್ಣವಾಗಿ ಪರಿಚಿತರಲ್ಲ. ಇಂದಿನ ಪ್ರೇಕ್ಷಕರಲ್ಲಿ
ಹಿರಿಯ ಪ್ರೇಕ್ಷಕರು ಶೇಣಿಯವರ ಅರ್ಥಗಾರಿಕೆಯನ್ನು ಕಣ್ಣಾರೆ ಕಂಡವರು. ಇಂದು ಶೇಣಿಯವರ
ಅರ್ಥಗಾರಿಕೆಯನ್ನು ಕಂಡು ಕೇಳಿದ ಇಂದಿನ
ಪ್ರೇಕ್ಷಕನನ್ನು ಕಾಣುವುದು ಸಾಧ್ಯವಿಲ್ಲ. ಕೇವಲ
ಧ್ವನಿ ಸುರುಳಿಗಳಿಂದ ಶೇಣಿಯವರ ಅರ್ಥಗಾರಿಕೆಯನ್ನು ಅನುಭವಿಸಿರಬಹುದು. ವೈಶಿಷ್ಟ್ಯವೆಂದರೆ ಈ
ತಾಳಮದ್ದಲೆಯಲ್ಲಿ ಶೇಣಿಯವರು ಅತ್ಯಂತ ಕಿರಿಯ ಅರ್ಥಧಾರಿ...! ಹೀಗೆ ಆ ಕಾಲದಲ್ಲೇ ಹಲವು
ವೈಶಿಷ್ಟ್ಯಗಳಿಂದ ಹಲವರ ಪರಿಶ್ರಮದಿಂದ ಈ ಕಾರ್ಯಕ್ರಮ ಅಧ್ದೂರಿಯಾಗಿ ನಡೆದಿತ್ತು. ಈಗಲೂ ಹಲವು ಹಿರಿಯರಲ್ಲಿ ಕೇಳಿದರೆ ಅದನ್ನು ಮೆಲುಕು
ಹಾಕಬಲ್ಲರು.
ಅರಸ
ಕೇಳಿತ್ತಲಸುಯೋಧನ...ಎಂಬ ಪದದಲ್ಲಿ ಆರಂಭವಾಗುವ ಕೃಷ್ಣಸಂಧಾನದಲ್ಲಿ ಮೊದಲ ಕೌರವನಾಗಿ ಶ್ರೀ ಮಟ್ಟಿ
ಸುಬ್ಬರಾಯರ ಕೌರವನ ಪಾತ್ರ ಕೌರವನ ಛಲವನ್ನು ಯಥಾವತ್ತಾಗಿ ಚಿತ್ರಿಸಿತ್ತು. ಕೊಡೆ, ಬಿಡೆ ಎನ್ನುವ
ಕೌರವ, ತನ್ನ ಪಾಂಡವರ ಮೇಲಿನ ಹಗೆತನವನ್ನು ಸರಳ
ಮಾತುಗಳಲ್ಲೇ ಮುಂದಿಡುತ್ತಾನೆ. ರಾಜನಾದವನು
ರಾಜ್ಯವನ್ನು ಯಾವರೂಪದಲ್ಲೂ ಗೆಲ್ಲಬಹುದು, ಯುದ್ದ ಮಾಡಿಯೂ ಗೆಲ್ಲಬಹುದು, ದ್ಯೂತವಾಡಿಯೂ
ಗೆಲ್ಲಬಹುದು. ಯಾವ ರಕ್ತವೂ ಚೆಲ್ಲದೆ
ದ್ಯೂತದಲ್ಲಿ ಪಾಂಡವರನ್ನು ಸೋಲಿಸಿದ್ದೇನೆ. ವಿರಾಟನಗರಿಯಲ್ಲಿ ಪಾಂಡವರು ಏನು ಮಾಡಿದ್ದರೋ ಅದನ್ನೆ ಹಸ್ತಿನಾವತಿಯಲ್ಲಿ
ಒದಗಿಸಬಹುದು, ಧರ್ಮ ರಾಯನಿಗೆ ಪಂಚಾಗವನ್ನು, ಭೀಮನಿಗೆ ಅಡುಗೆ
ಕೆಲಸವನ್ನು, ಅರ್ಜುನನಿಗೆ ನಾಟ್ಯ ಶಾಲೆಯನ್ನು ನಕುಲ ಸಹದೇವರಿಗೆ ಕುದುರೆ
ಸಾಕುವ ಕೆಲಸವನ್ನು ಕೊಡಬಹುದು. ಇಷ್ಟು ಮಾಡದೇ ಇದ್ರೆ , ಈ ಕೌರವನ ಮುಖದಲ್ಲಿ ಮೀಸೆ ಇದ್ದರೂ ಅದು ಮೀಸೆಯಲ್ಲ.
ಪಾಂಡವರಿಗೆ ರಾಜ್ಯವನ್ನು ಕೊಡಲಾರೆ ಎನ್ನುವ
ಕೌರವನ ಛಲದ ದುರಹಂಕಾರದ ಮಾತುಗಳಿಗೆ ಅಷ್ಟೇ ಸಮರ್ಥ ರೀತಿಯ ಗುರುವಾದ ಕೃಪಾಚಾರ್ಯ ಪ್ರತಿಕ್ರಿಯೆಯನ್ನು
ನೀಡುವನು ದ್ರೋಣನಾಗಿ ದೇರಾಜೆಯವರದ್ದು ಹಿತಮಿತವಾದ ಗಹನವಾದ ಅರ್ಥ.
ಸುಯೋಧನನ ಬಗ್ಗೆ
ಹೇಳುವ ಮಾತು “ ಮೀಸೆ ಮೇಲೆ ಕೈಯಾಡಿಸ್ತಾನೆ. ಅವನದ್ದೇ ಮೀಸೆ ಅವನದ್ದೇ ಮುಖ. ಇವನು ಗಂಡುಗಲಿಯಂತೆ, ನಾವು ಕೊಂಡಾಟದಲ್ಲಿ ಹೇಳಬಹುದು. ಆದರೆ
ಇವನಿಗೆ ಶಸ್ತ್ರ ವಿದ್ಯಾಭ್ಯಾಸ ಮಾಡಿಸಿದ ನನಗೆ ಗೊತ್ತುಂಟು ಇವನ ನಾಡಿ ಬಡಿತ ಹೇಗೆ ಅಂತ. ಏಲ್ಲೋ ಇದ್ದ
ಪಾಂಡವರನ್ನು ಇಲ್ಲಿಗೆ ಕರೆದುಕೊಂಡು ಬಂದು ರಾಜ್ಯ ಕೊಟ್ಟಾಯಿತು. ಅಲ್ಲಿಗೆ ಇಲ್ಲಿಯ ಪೌರತ್ವಕೊಟ್ಟ ಹಾಗಾಯಿತು. ಪೌರತ್ವ ಕೊಟ್ಟ ಮೇಲೆ
ಅವರು ಇಲ್ಲಿನವರೆ ಆದ ಮೇಲೆ,
ಈಗ ಅವರನ್ನು ಕೊಲ್ಲುವುದಕ್ಕೆ ಸೈನ್ಯದ ಸಿದ್ಧತೆ ಇಲ್ಲಿ ನಡೆದಿದೆ. ಹಾಗಾದರೆ ಅವರು ಮತ್ತೆ ಎಲ್ಲಿಗೆ ಹೋಗಬೇಕು?
ಎಲೆ ಭೂಪ ಕೇಳ್
ಪಾಂಡುಜಾತರೊಡನೆ ನೀನು ಬೆಳೆಸದಿರಹಿತವನು ಎಂದು ಕೌರವ ಕೇಳುವವನಲ್ಲ, ಆದರೂ ತಾನು ಹೇಳಲಿಲ್ಲ
ಎಂದಾಗಬಾರದಲ್ಲ? ಹಾಗಾಗಿ ದ್ರೋಣ ಹಿತವಚನ ಹೇಳುತ್ತಾನೆ.
ಉರಗ ಕೇತನ ದುರ್ಯೋಧನ, ಅಂದರೆ ಕೌರವನ ಧ್ವಜದಲ್ಲಿ ಉರಗವಿದೆ. ಅದೇ ಪಾಂಡವರನ್ನು ಯಾರು
ರಕ್ಷಿಸುವನೋ ಅವನು, ಶ್ರೀಕೃಷ್ಣ ಅವನದ್ದು ಗರುಡ ಧ್ವಜ. ಗರುಡನ ರಕ್ಷಣೆಯಲ್ಲಿರುವವರಿಗೆ ಉರಗದ ರಕ್ಷಣೆಯಲ್ಲಿರುವವರು ಏನು ಮಾಡುವುದಕ್ಕೆ ಸಾಧ್ಯ?
ಹಾಗಿರುವಾಗ ಕೌರವ ಪಾಂಡವರಲ್ಲಿ ಹೋರಾಡಿದರೆ ಏನು ಫಲ? ಪರಸ್ಪರ ವಿರೋಧವುಳ್ಳಂತಹ ಪ್ರಾಣಿಗಳು ಸಾನ್ನಿಧ್ಯ
ಒಳ್ಳೆಯದಿದ್ದಲ್ಲಿ ಒಂದಾಗಿ ಇರುವಂತೆ ಕೌರವ ಪಾಂಡವರು ಹಸ್ತಿನಾವತಿಯಲ್ಲಿ ಒಂದಾಗಿ ಇರಬೇಕು.
ಕಂಡ ಕಂಡವರ ಮಾತು
ಕೇಳುವ ಕೌರವನಿಗೆ ದೇಹವೆಲ್ಲ ಚಿನ್ನ ಆದರೆ ಕಿವಿಯ
ಹತ್ತಿರಬರುವಾಗ ಹಿತ್ತಾಳೆ ಆಗಿಹೋಯಿತು. ಕರ್ಣಾದಿ
ಸಹವರ್ತಿಗಳ ದುರ್ಬೋಧೆಯಿಂದ ಕೌರವ ಹಾಳಾಗುತ್ತಾನೆ.
ಹೀಗೆ ದುರ್ಯೋಧನನಿಗೆ
ಹಿತವಚನ ಹೇಳುವ ದ್ರೋಣನಾಗಿ ದೇರಾಜೆಯವರದ್ದು ಅರ್ಥಗರ್ಭಿತ ಮಾತುಗಾರಿಕೆ.
ಇದಕ್ಕೆ ಪ್ರತಿಯಾಗಿ ಒಂದೋ ಪಾಂಡವರು ಇರಬೇಕು ಇಲ್ಲ ಕೌರವ
ಇರಬೇಕು. ಇಲ್ಲಿ ಇಬ್ಬರಿಗೂ ಜಾಗವಿಲ್ಲ ಎಂದು ಮೊಂಡುತನ ತೋರುವ ಕೌರವ ಉತ್ತಮ ಪಾತ್ರ ಪ್ರಸ್ತುತಿ.
ಇನ್ನು ಪ್ರಸಂಗದ
ಇನ್ನೊಂದು ಪ್ರಧಾನ ಭಾಗವೆಂದರೆ ಭೀಮ ದ್ರೌಪದಿ ಸಂವಾದ. ಭೀಮನಾಗಿ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ ಶ್ರೋತೃ
ಲಕ್ಷ್ಯವನ್ನು ಗಮನಾರ್ಹವಾಗಿ ಸೆಳೆಯುತ್ತಾರೆ. ದ್ರೌಪದಿಯಾಗಿ ಶ್ರೀ ಎಂ ಆರ್ ಶಾಸ್ತ್ರಿಯವರ ಭಾವನಾತ್ಮಕ
ಮಾತುಗಾರಿಕೆ ಒಂದೆಡೆಯಾದರೆ ಶೇಣಿಯವರ ಭೀಮ ಅತ್ಯುತ್ತಮ ಮಾತುಗಾರಿಕೆಯಾಗಿತ್ತು. ಸಡಗರದಿಂದ ಬಂದ ದ್ರೌಪದಿಯನ್ನು ಕಂಡು ಭೀಮ ಹೇಳುವ ಕೆಲವು ಮಾತುಗಳು ಸ್ವಾರಸ್ಯವಾಗಿದೆ.
“ ಅಹಾ,
ಬಹುಕಾಲದಿಂದ ನಿರೀಕ್ಷಿಸ್ತಾ ಇದ್ದೆ. ಮತ್ತೊಮ್ಮೆ ಈ ಅಲಂಕಾರದಿಂದ ಕಂಡೆನೆ? ನಾರುಡೆಯಂತಹ
ಬಟ್ಟೆಯುಟ್ಟು ಹೂ ಮುಡೀಬೇಕು ಅಂತ ಆಸೆಯಾದರೂ ಮುಡಿಬಾರದು ಅಂತ ವೃತದ ಕಟ್ಟಿನೊಳಗಿದ್ದ ಪಾಂಚಾಲಿಯ
ಚಿತ್ರ, ನನ್ನ ಕಣ್ಣಿಗೆ ಕಸವಾಗಿತ್ತು. ಇದಾದರೆ ಸರಿ. ಇನ್ನು ಏನುಂಟು? ಪಟ್ಟೆ ಪೀತಾಂಬರ ಧರಿಸಿ
ಹೀಗೆ ಬಂದೆಯಲ್ಲಾ? ನಾಳೆ ನಾನು ಸನ್ಯಾಸಿಯಾದರೂ ಚಿಂತೆ ಇಲ್ಲ. “
“ಸ್ವಾಮೀ ಈ ವರೆಗೆ, ಇಷ್ಟು ಪ್ರಾಯ ಆಗಿ , ನಮ್ಮ ಈ ರಾಜಕೀಯದಲ್ಲಿ ಮತದಾನದ ಹಕ್ಕು ನನಗೆ ಸಿಕ್ಕಿದ್ದೂ
ಇಲ್ಲ. ನಾನು ಕೇಳಿದ್ದೂ ಇಲ್ಲ.” ಸಂಧಾನದ ಬಗ್ಗೆ ಅಭಿಪ್ರಾಯ ಕೇಳಿದಾಗ ಶ್ರೀಕೃಷ್ಣನಲ್ಲಿ
ಹೀಗೆ ಎನ್ನುವ ಭೀಮ ಅಣ್ಣನಿಗೆ ನೀತಿಯಾದರೆ,
ನಿನ್ನ ಮನಕೊಪ್ಪಿದರೆ ನನ್ನದು ಸರ್ವಾನುಮತವಿದೆ
ಅಂತ ವ್ಯಂಗ್ಯವಾಗಿಯೇ ಹೇಳುತ್ತಾನೆ. “
“ಕುರು
ಭೂಪಾಲ, ಅವಕೊಟ್ಟರೆ, ಯುದ್ದ ಯಾಕೆ ಬೇಕು? ಅಂತ ಒಂದು ತೀರ್ಮಾನಕ್ಕೆ ಬಂದು ಒಂದು ಜನ
ಹೊರಡ್ಲಿಕ್ಕೆ ತಯಾರಾಗಿ ನಿಂತದೆ.”
“
ಕಳುಹಿಸುವವನು ನಮ್ಮಣ್ಣನಾದರೆ... ಹೋಗುವವನು ನಿಮ್ಮಣ್ಣ!”
ಸಂಧಿಯೇ ಕಲಿ ಭೀಮ ನಿನಗಾನಂದವೇ ಕುರುಭೂಪನಲಿ ... ಎನ್ನುವ ಪದಕ್ಕೆ ದ್ರೌಪದಿ ಹೇಳುವ
ಭಾವನಾತ್ಮಕ ಮಾತುಗಳು ಬಹಳ ಹೃದ್ಯವಾಗುತ್ತದೆ.
“ಕೇಸರೀಯ
ಕಂಠದಿಂದ ಸಿಂಹನಾದವೇ ಹೊರಟಿತಲ್ಲದೇ ಇಲಿಯ ಚಿಲಿಪಿಲಿ ಹೊರಟೀತೆ? ದಿಗ್ದಿಗಂತಗಳಲ್ಲಿ ಮಾರ್ದನಿಗಳ್ಳುವ ನಿಮ್ಮ ಕಂಠದಿಂದ
ಸಂಧಿ ಎನ್ನುವ ಮಾತೇ? “
“ತನ್ನನ್ನು
ಸಭೆಯಲ್ಲಿ ನಿಂದಿಸಿದ ಎಂದ ಶಿಶುಪಾಲನ ಶಿರವನ್ನು ಕತ್ತರಿಸಿದ ಶ್ರೀಕೃಷ್ಣನಿಗೆ ಈ ಸಂಧಿಯ ಮಾತನ್ನು
ಹೇಳಿ ಕೊಟ್ಟಿರಾ?”
“ವಿಷದ
ಹಾವುಗಳಿಂದ ಕಚ್ಚಿಸಿ, ವಿಷದ ಲಡ್ದುಗೆ ಗಳನ್ನು ತಿನ್ನಿಸಿ ನಿಮ್ಮನ್ನು ಕೊಲ್ಲುವುದಕ್ಕೆ ಪ್ರಯತ್ನ
ಮಾಡಿದವನು. ಅರಗಿನ ಮನೆಯಲ್ಲಿ ಎಲ್ಲರನ್ನೂ ಸುಡುವುದಕ್ಕೆ ಪ್ರಯತ್ನ ಮಾಡಲಿಲ್ಲವೇ? ಸುಡಲಿಲ್ಲ.
ಹೀಗೆ ಹೆಂಡತಿಯನ್ನು ಸಭೆಗ ಎಳೆದು ತಂದು ಸೆರಗನ್ನು ಎಳೆಯಲಿಲ್ಲವೇ? ಇಂತಹ ದುಷ್ಟನನ್ನು ಸಹೋದರ
ಎಂದು ಭಾವಿಸುವುದು, ಒಡಹುಟ್ಟು ಎಂಬ ಕನಿಕರ ಬರುವುದಕ್ಕೆ ಕಾರಣವೇನು? ಶರೀರದಲ್ಲಿಯೇ ಹುಟ್ಟಿದ್ದು
ಒಂದು ರೋಗ, ಅದನ್ನು ಒಡಹುಟ್ಟು ಎಂದು ಬೆಳೆಸ್ತಾರೆಯೇ?”
ಅತ್ಯಂತ ಭಾವನಾತ್ಮಕ ದ್ರೌಪದಿ ಪಾತ್ರ ಚಿತ್ರಣ.
ಶ್ರೀರಮಣ ದಯವಾದ ನಮಗೆ
ಎನ್ನುವ ವಿದುರನಾಗಿ ಶ್ರೀ ಕೀರಿಕ್ಕಾಡು ವಿಷ್ಣು ಮಾಸ್ತರ್, ಇವರೆಲ್ಲ ಯುಗ ಪುರುಷರು
ಎನ್ನುವ ಮಾತಿಗೆ ಸಾರ್ಥಕತೆಯನ್ನು ಒದಗಿಸಿದಂತೆ ಇತ್ತು. ವಯೋಸಹಜ ತೊಂದರೆ
ಬಿಟ್ಟರೆ ಇಳಿ ವಯಸ್ಸಿನಲ್ಲು ಯಕ್ಷಗಾನದ ನಿಜ ಹುಮ್ಮಸ್ಸು ಬೆರಗು ಹುಟ್ಟಿಸುತ್ತದೆ. ಕಡಲೇ ಉಕ್ಕಿ ಬಂದಂತೆ ಹಾಲು ಉಕ್ಕಿ
ಹರಿದು ಬಂದು ಹೋಗಿ ಅದು ಕೌರವನ ಹೃದಯ ಸೇರಲಿ ಎಂಬ ಅನಿಸಿಕೆಯೋ ಏನೋ ಎನ್ನುವ ವಿದುರನ ಹೃದಯ ದರ್ಶನ
ಅತ್ಯಂತ ಸಂಕ್ಷಿಪ್ತ ಅಷ್ಟೇ ಪರಿಣಾಮಕಾರಿ ಮಾತುಗಳು.
ವಿದುರ ನಿಜಕ್ಕೂ ದೈನ್ಯತೆಯ ಹಸ್ತಿನೆಯ
ವಿದುರನೇ ಆಗಿಬಿಟ್ಟ.
ಸಂಪೂರ್ಣ ತಾಳಮದ್ದಲೆಯಲ್ಲಿ ಶ್ರೀ ಕೃಷ್ಣ ಹೆಸರಿಗೆ ತಕ್ಕಂತೆ ವಿಜ್ರಂಭಿಸಿದೆ. ಬರಿದೆ ಮಾತನಾಡಿ ಪೆಟ್ಟು ತಿನ್ನಬೇಕಾದೀತು ಎನ್ನುವ ಕೌರವನಿಗೆ, ಶ್ರೀಕೃಷ್ಣ
ಹೇಳುತ್ತಾನೆ, ಪೆಟ್ಟು ತಿನ್ನುವುದಕ್ಕೆ ನಾನು
ಸಿದ್ದ ಅಪಾಂಡವರಿಗೆ ಸಹಾಯವಗುವುದಿದ್ದರೆ ಇಂತಹ ಸೂಕ್ಷ್ಮ ಮಾತುಗಾರಿಕೆಯ ಹಿರಿಯ ಸಾಮಗರ ನಿರರ್ಗಳ ಹರಿತ ಮಾತುಗಾರಿಕೆ ತಾಳಮದ್ದಲೆಯ
ಸುಸ್ವರೂಪವೇ ಪ್ರತ್ಯಕ್ಷವಾದಂತೆ ಭಾಸವಾಗುತ್ತದೆ. ಎಲ್ಲದಕ್ಕೂ ಮಿಕ್ಕಿ ಅದನ್ನು
ಪ್ರತ್ಯಕ್ಷವಾಗಿ ಅನುಭವಿಸಿದ ಅಂದಿನ ಪ್ರೇಕ್ಷಕವರ್ಗದಲ್ಲಿ ಒಂದು ಧನ್ಯತೆ ಬಂದಿರಬಹುದು. ಸಾಮಾನ್ಯವಾಗಿ ತಾಳ ಮದ್ದಲೆ ಎಂದರೆ ಕೂದಲು
ಬೆಳ್ಳಗಾದವರಿಗೆ ಅಂತ ಮಾತಿದೆ. ಇಲ್ಲಿ ಪ್ರೇಕ್ಷಕ ಮಾತ್ರವಲ್ಲ ವೇದಿಕೆಯ
ಮೇಲೂ ವಯೋ ವೃದ್ಧಿಯ ಬೆಳ್ಳಿಕೂದಲುಗಳು. ಹೇಗಿರಬಹುದು? ವಯೋ ಸಹಜ ದೌರ್ಬಲ್ಯವನ್ನು ಮೆಟ್ಟಿ ನಿಂತ
ಆ ಹುಮ್ಮಸ್ಸು ನಿಜಕ್ಕೂ ರೋಮಾಂಚನವಾಗಬೇಕು.
ಈ
ತಾಳ ಮದ್ದಲೆಯ ಅತ್ಯಂತ ಪ್ರಮುಖ ಅಂಶವೆಂದರೆ, ಘನವಾದ ಹಿಮ್ಮೇಳ. ಅದಕ್ಕೆ ಚುಕ್ಕಾಣಿ ಹಿಡಿದವರು
ಹಿರಿಯ ಭಾಗವತರಾದ ಶ್ರೀ ಅಗರಿ ಶ್ರೀನಿವಾಸ ಭಾಗವತರು, ಅಪ್ಪಟ ಅಗರಿ ಶೈಲಿ ಹೇಗಿರುತ್ತದೆ ಎಂಬುದನ್ನು ಇಂತಹ ಪದಗಳನ್ನು
ನೋಡಿ ಕೇಳಿ ಅಧ್ಯಯನ ಮಾಡಬೇಕು. ಈಗ ಅಗರಿ ಶೈಲಿ ಎಂದು ಏನು ಹಾಡುತ್ತಾರೋ ಅದಕ್ಕೂ ಮೂಲ
ಅಗರಿ ಶೈಲಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಇಲ್ಲಿನ ಅಗರಿಯ ಪದಗಳನ್ನು ಕೇಳಿದಾಗ ತಿಳಿಯಬಹುದು. ಅಗರಿ ಶೈಲಿಯ ಬಗ್ಗೆ ಅಷ್ಟು ಅಭಿಮಾನವಿದ್ದಲ್ಲಿ,
ಅದರ ಬಗ್ಗೆ ಅಷ್ಟು ಆಸಕ್ತಿ ಕಾಳಜಿ ಇದ್ದಲ್ಲಿ ಅದನ್ನು ಸರಿಯಾಗಿ ಅಧ್ಯಯನ ಮಾಡಿದರೆ
ಉತ್ತಮ. ಈಗ ಅದಕ್ಕೆ ಸಾಕಷ್ಟು
ಸಂಪನ್ಮೂಲ ಸಿಗಬಹುದು. ಇಲ್ಲಿಯ
ಪದಗಳನ್ನು ಕೇಳುವಾಗ ಮೊದಲು ಅನ್ನಿಸುವ ಅನಿಸಿಕೆ ಇದು. ನಾವೇನು ಕಳೆದುಕೊಂಡಿದ್ದೇವೆ ಎಂಬುದು
ಅರಿವಿಗೆ ಬರಬೇಕಾದರೆ ಆ ವಸ್ತುವನ್ನು ಹೊಂದಿರಬೇಕು. ಮತ್ತು ಅದರ ಮೌಲ್ಯ ತಿಳಿದಿರಬೇಕು. ಈ
ಯಕ್ಷಗಾನ ತಾಳ ಮದ್ದಲೆ ಕೇಳುವಾಗ ನಾವು ಕಳೆದುಕೊಂಡದ್ದು ಬಹಳಷ್ಟಿದೆ ಅಂತ ಅನ್ನಿಸುತ್ತದೆ.
ಸುಮ್ಮನೇ ಹಿರಿಯ ಕಲಾವಿದರ ಹೆಸರನ್ನು ಹೇಳಿ ಅಭಿಮಾನ ಗೌರವ ತೋರಿಸುತ್ತೇವೆ. ಆದರೆ ಅದೆಲ್ಲ
ಢಾಂಭಿಕತನ ಎಂದನಿಸುತ್ತದೆ. ಒಂದಿಷ್ಟಾದರೂ ಇದ್ದರೆ ಈ ಮೌಲ್ಯಗಳನ್ನು ಯಥಾವತ್ ಉಳಿಸುವ
ಪ್ರಯತ್ನವಾದರು ಮಾಡಬೇಕು. ಅಧ್ಯಯನ ಮಾಡದೆ ಮಾನಸಿಕವಾಗಿ ಪರವಾನಿಗೆ ಪಡೆಯದೆ ಯಾವುದನ್ನೇ ಆದರೂ
ಉಪಯೋಗಿಸುವುದು ಹಿರಿಯ ತಲೆಮಾರಿಗೆ ಮಾಡುವ ಘೋರ ವಂಚನೆಯಾಗುತ್ತದೆ.
ಚೆಂಡೆ
ಮದ್ದಲೆಯಲ್ಲಿ ಶ್ರೀ ದಿವಾಣ ಭೀಮ ಭಟ್, ಮತ್ತು ನೆಡ್ಲೆ ಶ್ರೀ ನರಸಿಂಹ ಭಟ್
ಇಬ್ಬರ ಜತೆಗಾರಿಗೆ ಅದ್ಭುತವಾಗಿತ್ತು. ಸಮ ವಿಷಮ
ವಾದನದ ಹದವಾದ ಪಾಕ. ಇಂದಿನ ಪ್ರೇಕ್ಷಕ ಯಾವುದು ಪರಂಪರೆ ಯಾವುದು ಸಂಪ್ರದಾಯ ಈ ಗೊಂದಲದಲ್ಲೇ
ಯಕ್ಷಗಾನ ಕಾಣುತ್ತಾನೆ. ತಾನು ಕಂಡದ್ದು ಎಷ್ಟು ಪರಿಪೂರ್ಣ ಎಷ್ಟು ಪರಿಶುದ್ದ ಎಂಬ ಸಂದೇಹ
ಮನಸ್ಸಿನಲ್ಲಿ ಉಳಿದು ಬಿಡುತ್ತದೆ. ಧ್ವನಿ ರೂಪವಾದರೂ ಇಲ್ಲಿ ಹಲವು ಸಂದೇಹಗಳಿಗೆ ಸ್ಪಷ್ಟ
ಉತ್ತರಗಳಿವೆ. ಅದನ್ನು ಗಮನಿಸಿ ನೋಡುವ ದೃಷ್ಟಿಕೋನವಿರಬೇಕು. ಕೃಷ್ಣ ಸಂಧಾನದ ನಾಲ್ಕು ತಾಸಿನ ತಾಳ
ಮದ್ದಲೆಯಲ್ಲಿ ಹೆಚ್ಚೆಂದರೆ ಒಂದು ನಿಮಿಷಕ್ಕಿಂತ ಹೆಚ್ಚು ಯಾವ ಪದಗಳೂ ಇರಲಿಲ್ಲ. ಇಂದು ಅದನ್ನು ಕನಸಿನಲ್ಲೂ ಊಹಿಸುವುದು ಕಷ್ಟ. ಅದಕ್ಕೆ ಸಮತೂಕ
ಎನ್ನುವಂತ ಅರ್ಥಗಾರಿಕೆ. ದೀರ್ಘವಾದ ಉಪನ್ಯಾಸಗಳಿಲ್ಲದ ಹದವಾದ ಸ್ಪರ್ಧಾತ್ಮಕ
ಅರ್ಥಗಾರಿಕೆ. ಹಿಮ್ಮೇಳಕ್ಕೂ ಮುಮ್ಮೇಳಕ್ಕು ಮಾದರಿಯಾಗಬಲ್ಲ, ಪಠ್ಯವಿಷಯವಾಗಬಲ್ಲ ತಾಳಮದ್ದಲೆ ಎಂಬುದರಲ್ಲಿ ಸಂಶಯವಿಲ್ಲ. ಯಕ್ಷಗಾನ
ಪರಂಪರೆ ಏನು ಎಂದು ತಿಳಿಯಲು ಯಾವ ಚರ್ಚಾಕೂಟಗಳಾಗಲೀ ವಿಚಾರ ಸಂಕಿರಣವಾಗಲೀ ಅವಶ್ಯಕತೆ ಇಲ್ಲ.
ಇಂತಹ ಯಕ್ಷಗಾನದ ಮಟ್ಟುಗಳನ್ನು ವಿಶಾಲ ಮತ್ತು ಶಾಂತ ಚಿತ್ತದಿಂದ ಆಲಿಸುವುದನ್ನು
ಕಲಿಯಬೇಕು. ಯಕ್ಷಗಾನದಲ್ಲಿ ಮೂಲ ಜೀವಾಳ ಇರುವುದು ಹಿಮ್ಮೇಳದಲ್ಲಿ.
ದೂರದಲ್ಲಿ ಯಕ್ಷಗಾನ ಪದ ಕೇಳುತ್ತಿದ್ದರೆ ಯಕ್ಷಗಾನದ ಗಂಧ ಹರಡಿದಂತೆ ಭಾಸವಾದರೆ ಇದೇ
ಕಾರಣ. ಪರಂಪರೆ ಎಂದರೆ ಅದಕ್ಕೊಂದಷ್ಟು ಇತಿಹಾಸವಿರುತ್ತದೆ. ಗಟ್ಟಿ ತಳಹದಿ ಇರುತ್ತದೆ. ಅದಕ್ಕೊಂದು ದೀರ್ಘ ಬದುಕು ಇರುತ್ತದೆ. ಆ ಬದುಕನ್ನು ಹರಣಮಾಡಿ, ನವೀಕರಣದ ಹೊಸತನ್ನು ಸೇರಿಸುವಾಗ ಇದನ್ನು ಮರೆತಿರುವುದು ಇಲ್ಲಿ
ಅನುಭವಕ್ಕೆ ಬರುತ್ತದೆ.
ಅದಕ್ಕೆ ಒಂದಿಷ್ಟು ಅರಿವಿರಬೇಕು. ಈ ಅಜ್ಞಾನವಿದ್ದರೆ ಅದರ ಬಗ್ಗೆ ಹೇಳಿಕೊಳ್ಳುವ ಹಕ್ಕನ್ನು ನಾವು
ಕಳೆದುಕೊಳ್ಳುತ್ತೇವೆ. ಯಕ್ಷಗಾನದ ಪರಂಪರೆಯ ಅಗರಿ
ಶೈಲಿ ಯಥಾ ರೂಪದಲ್ಲಿ ಉಳಿಯಬೇಕು, ಅದನ್ನು ಇನ್ನೂ ಅಸ್ವಾದಿಸಬೇಕು ಎಂಬ ಆಶಯವನ್ನು
ಈ ಯಕ್ಷಗಾನ ತಾಳಮದ್ದಲೆ ಉಂಟು ಮಾಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ಈ ಕಾರ್ಯಕ್ರಮವನ್ನು
ಏರ್ಪಡಿಸಿದ ಸಂಘಟಕರಿಗೆ ಧನ್ಯವಾದಗಳು. ಅವರ ಪರಿಶ್ರಮ ಇಲ್ಲದೇ ಇರುತ್ತಿದ್ದರೆ ಇದು ಇಂದು ನಾವು ಕೇಳುವುದಕ್ಕಿಲ್ಲ.
ಹಾಗೇ ಇದನ್ನು ಧ್ವನಿ ಮುದ್ರಣಗೊಳಿಸಿ ಈ ಕಾಲಕ್ಕೂ ಮುಡಿಪಾಗಿಟ್ಟ ಯಕ್ಷಗಾನ ಕಲಾಭಿಮಾನಿಗಳಿಗೆ ಹಾರ್ಧಿಕ
ಧನ್ಯವಾದಗಳು
ಅತ್ಯಂತ ಹಿರಿಯ ಮೇರು ವ್ಯಕ್ತಿತ್ವಗಳ ಸಹಭಾಗಿತ್ವದಲ್ಲಿ ಇಂತಹ
ಒಂದು ಕಾರ್ಯಕ್ರಮ ಏರ್ಪಡಿಸುವುದು ಇತಿಹಾಸವನ್ನು ದಾಖಲಿಸಿದಂತೆ. ಆ ದಾಖಲೀಕರಣದ ದರ್ಶನವಾದಂತಾಯಿತು.. ಅದಕ್ಕೆ ಯಕ್ಷಗಾನ ಪ್ರಸಂಗಗಳಿಗೆ ಸೂಕ್ತ
ಮಾದರಿ ಎನ್ನಿಸಿದ ಶ್ರೀಕೃಷ್ಣ ಸಂಧಾನವನ್ನೇ ಆಯ್ಕೆ ಮಾಡಿದ್ದು ಅತ್ಯಂತ ಸೂಕ್ತವೆನ್ನಿಸಿತು. ಇಳಿ ವಯಸ್ಸಿನಲ್ಲೂ ಯಕ್ಷಗಾನದ ಪ್ರೇಮ ಯುವ
ಹುಮ್ಮಸ್ಸಿನಂತೆ ಇಲ್ಲಿ ವ್ಯಕ್ತವಾಗಿದೆ. ವಯೋ ವೃದ್ಧರ ಈ ಶ್ರದ್ದೆಯನ್ನು ಕಂಡರೆ ಇವರೆಲ್ಲರ
ಅಸ್ತಿತ್ವ ಪ್ರತ್ಯಕ್ಷದಲ್ಲೂ ಪರೋಕ್ಷದಲ್ಲೂ
ಯಕ್ಷಗಾನ ಕ್ಷೇತ್ರದಲ್ಲಿ ನಿತ್ಯ ಚೇತನವಾಗಿ ಇರಬೇಕು.
ಯಾಕೆಂದರೆ ಯಕ್ಷಗಾನ ಪರಂಪರೆ ಇವರನ್ನೇ ಸುತ್ತಿಕೊಂಡಿದೆ. ಆದನ್ನು ಉಳಿಸುವ ಮಹತ್ತರ ಜವಾಬ್ದಾರಿ ಇಂದಿನ ಜನಾಂಗ ಅನಿವಾರ್ಯವಾಗಿ ಹೊರಲೇ ಬೇಕು. ಅದೇ ನಮ್ಮ ಹೃದಯಾಂತರಾಳದ
ನಮನವಾಗಲಿ.