"ಇದು ವಿಮರ್ಶೆಯಲ್ಲದ ಚಿಂತನ"

Saturday, January 15, 2022

ಅಜ್ಜ ಬಲಿಪರೋ?

  "ಭಾಗವತರು ಯಾರು?"  ಬಾಲ್ಯದಲ್ಲಿ ನಮ್ಮೂರ ಅಕ್ಕ ಪಕ್ಕ ಯಕ್ಷಗಾನ ಬಯಲಾಟ ತಾಳ ಮದ್ದಲೆಯಾಗುತ್ತಿದ್ದರೆ,  ಭಾಗವತರು ಬಲಿಪ್ಪರು ಎಂದು ಹೇಳಿದರೆ  ಹಿರಿಯರಾದ ನಮ್ಮಜ್ಜ ಕೇಳುವುದಿತ್ತು.      ಬಲಿಪರು   ದೊಡ್ಡವರ? ಸಣ್ಣವರಾ?   ದೊಡ್ಡ ಬಲಿಪ್ಪರು ಎಂದರೆ ಯಕ್ಷ ಬ್ರಹ್ಮ ಎಂದು ಅನ್ವರ್ಥವಾದ ದಿವಂಗತ ಅಜ್ಜ ಬಲಿಪರು.  ಯಕ್ಷಗಾನ  ಎಂದರೆ ಅದು ಅಜ್ಜ ಬಲಿಪರು ಮಾತ್ರ ಅಂತ ಬಲವಾಗಿ ನಂಬಿಕೊಂಡವರು ನಮ್ಮ ಹಿರಿಯರು. ಬೇರೆ ಯಾರಾದರೂ ಅಷ್ಟೊಂದು ಆಸಕ್ತಿ ತೋರಿಸುತ್ತಿರಲಿಲ್ಲ. ಅದರಲ್ಲೂ ನಮ್ಮಜ್ಜ ದೊಡ್ಡ ಬಲಿಪರ ಬಹಳ ದೊಡ್ಡ ಅಭಿಮಾನಿ. ಅವರು ಹೇಳುವುದಿತ್ತು, ಮೈಲು ದೂರದಲ್ಲಿ ಆಟ ಆದರೂ ಅವರ ಸ್ವರ ಕೇಳಿದರೆ ಅದರ ಜಾಡು ಹಿಡಿದು ಕೈಯಲ್ಲಿ ಒಂದು ಸೂಟೆ ಹಿಡಿದು ಗುಂಪು ಕಟ್ಟಿ ಹೋಗುತ್ತಿದ್ದರು. ಇನ್ನು ಅರ್ಥಗಾರಿಕೆ ಶಾಮುಖರು ( ಸಾಮಗರನ್ನು ವಾಡಿಕೆಯಲ್ಲಿ ಕರೆಯುತ್ತಿದ್ದದ್ದು) ಎಂದರೆ ದೊಡ್ಡ ಶಾಮುಖರೋ ಅಂತ ಕುತೂಹಲದ ಪ್ರಶ್ನೆ ಇದ್ದಂತೆ ಬಲಿಪರು ಎಂದಾಕ್ಷಣ ದೊಡ್ಡ ಬಲಿಪ ಎಂಬ ಹೆಸರೇ ಮಿಂಚಿನ ಸಂಚಲನ ಮೂಡಿಸುತ್ತಿತ್ತು. 

ಅಜ್ಜ ಬಲಿಪ ಎಂದಾಕ್ಷಣ ಹಲವಾರು ಸ್ವಾರಸ್ಯಕರ ಕಥೆಗಳನ್ನು ನಮ್ಮಜ್ಜ ಮಾವ ಹೇಳುತ್ತಿದ್ದದ್ದು ನಾನು ಬಾಲ್ಯದಲ್ಲಿ ಕೇಳೀದ್ದೆ. ದೊಡ್ಡ ಬಲಿಪರು ಎಂದರೆ ಅದೆಂತಹುದೋ ಎಂಬ ಆಕೃತಿ ಮನಸ್ಸಿನಲ್ಲಿ ಪ್ರಭಾವ ಬೀರಿದ್ದಂತೂ ಸತ್ಯ. ಹೀಗಿದ್ದರೂ ಬಾಲ್ಯದಲ್ಲಿ ಅಜ್ಜ ಬಲಿಪರ ಪದಗಳನ್ನು ಕೇಳಿದ್ದೇನೋ ಇಲ್ಲವೋ ಎಂದು ನನಗೆ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಹಲವಾರು ಯಕ್ಷಗಾನಗಳಿಗೆ ಹೋಗಿದ್ದರೂ,  ಮತ್ತು  ಬಲಿಪರ ಪದ ಕೇಳಿದ್ದರೂ ಬಾಲ್ಯದಲ್ಲಿ ಇದರ ಬಗ್ಗೆ ಹೆಚ್ಚು ತಿಳುವಳಿಕೆ ಇರುವುದಕ್ಕೆ ಸಾಧ್ಯವಿರಲಿಲ್ಲ. ಆಟ ತಾಳ ಮದ್ದಲೆಗೆ ಹೋದರೆ ಆಗಾಗ ಸಿಗುವ ಚಹ ತಿಂಡಿ ಮತ್ತೆ ಚೆಂಡೆಯ ಗದ್ದಲ ಇವಿಷ್ಟೇ ಆಸಕ್ತಿಯ ಸಂಗತಿಗಳಾಗಿತ್ತು.  ಆದರೆ ಬೆಳೆದು ಬೆಳೆದು ದೊಡ್ಡವನಾಗಿ ಆನಂತರ ಈಗಿನ  ಹಿರಿಯ ಬಲಿಪ್ಪರ ಪದದ ಹುಚ್ಚು ಹಿಡಿದ ಮೇಲೆ ಅಜ್ಜ ಬಲಿಪರ ಪದ ಹೇಗಿರಬಹುದು ಎಂಬ ಕುತೂಹಲ ಹುಟ್ಟಿಕೊಂಡದ್ದು ಸತ್ಯ.  ಆದರೆ ಆಗ ಕಾಲ ಸಂದು ಹೋಗಿತ್ತು. ಈ ಎಲ್ಲ ಕುತೂಹಲಕ್ಕೆ ಉತ್ತರವಾದ ಪ್ರಕರಣವೆಂದರೆ ಇತ್ತೀಚೆಗೆ ಬಹಿರಂಗಗೊಂಡ ಅಜ್ಜ ಬಲಿಪರ ಎರಡು ಧ್ವನಿ ಮುದ್ರಣಗಳು.  ಒಂದು ಬೆಂಗಳೂರು ಆಕಾಶವಾಣಿಯಲ್ಲಿ ಧ್ವನಿಮುದ್ರಣಗೊಂಡ ಅಜ್ಜ ಬಲಿಪರ  ಸಂದರ್ಶನ, ಇನ್ನೊಂದು ಅಜ್ಜ ಬಲಿಪರ ಭಾಗವತಿಕೆಯ ತಾಳ ಮದ್ದಲೆ.  ಇದನ್ನು ಕೇಳಿದಾಗ ಒಂದಷ್ಟು ಸಂದೇಹಗಳು ಬಗೆ ಬಗೆಯ ಜಿಜ್ಞಾಸೆ ವಿಶ್ಲೇಷಣೆಗಳು ಕುತೂಹಲಕರ ವಿಚಾರಗಳು ವಿನಿಮಯವಾಗಿದ್ದು ಅತ್ಯಂತ ವಿಶಿಷ್ಟವಾಗಿತ್ತು. 

ಮೊದಲಿಗೆ ಅಜ್ಜ ಬಲಿಪರದ್ದು ಎನ್ನಬಹುದಾದ ಸಂದರ್ಶನ. ಇದು ಪ್ರಕಟಗೊಂಡಾಗ ತಪ್ಪಿನಿಂದ ಈಗಿನ ಹಿರಿಯ ಬಲಿಪರ ಚಿತ್ರವನ್ನೇ ಹಾಕಿದ್ದರಿಂದ ಬಹಳಷ್ಟು ಗೊಂದಲವಾಗಿ ಅದರಲ್ಲಿ ಉಲ್ಲೇಖಗೊಂಡ ಕೆಲವು ವಿಷಯಗಳಿಂದ,  ಸಂದರ್ಶನ ಕೇಳಿದ ಮೇಲೆ ಇದು ಅಜ್ಜ ಬಲಿಪರದ್ದು ಅಂತ ಖಾತರಿಯಾಗಿತ್ತು.  ನಿಜಕ್ಕೂ ಅದೊಂದು ರೋಮಾಂಚದ ಕ್ಷಣ. ಒಂದೇ ಏಟಿಗೆ ಮೂರು ನಾಲ್ಕು ಬಾರಿ ಸಂದರ್ಶನ ಕೇಳಿದ್ದೆ. ಅದು ಕೇಳುವಾಗ ಯಕ್ಷಗಾನದಲ್ಲಿ ಭಾಗವತ ಸ್ಥಾನ ಯಾಕೆ ವರಿಷ್ಠತೆಯನ್ನು ಗಳಿಸಿಕೊಂಡಿದೆ ಎಂದು ಸಾರಿ ಹೇಳಿದಂತಾಗಿತ್ತು.  ಬಹಳ ಸ್ಪಷ್ಟ ಮಾತುಗಳಿಂದ ಅಂದಿನ ಯಕ್ಷಗಾನದ ಆಗುಹೋಗುಗಳನ್ನು ಸ್ಫುಟವಾಗಿ ಹೇಳಿದ್ದರು. 


ಇದುವರೆಗೆ ದೊಡ್ಡ ಬಲಿಪರ ಯಾವುದೇ ಧ್ವನಿಮುದ್ರಣ ಸಂಗ್ರಹದಲ್ಲಿಇದ್ದ ಮಾಹಿತಿ ಇರಲಿಲ್ಲ. ಅಲ್ಲಿ ಉಂಟು ಇಲ್ಲಿ ಉಂಟು ಎಂಬ ಊಹಾ ಪೋಹಗಳಲ್ಲದೇ ಬಲಿಪರ ಸ್ವರದ ಬಗ್ಗೆ ಪರಿಚಯಸ್ಥರು ಬಹಳ ಕಡಿಮೆ. ಇನ್ನು ಹಿರಿಯರಲ್ಲಿ ವಿಚಾರಿಸಿದರೆ ವರ್ಣರಂಜಿತವಾಗಿ ಹೇಳುವುದು ಬಿಟ್ಟರೆ ಸ್ವರದ ಪರಿಚಯದ ಇನ್ನೂ ಗೊಂದಲಗಳೇ ತುಂಬಿದ್ದವು. ಹಲವು ಸಲ ಈಗಿನ ಹಿರಿಯ ಬಲಿಪರ   ತುಂಬ ಹಳೆಯ ಧ್ವನಿ ಮುದ್ರಣ ಸಿಕ್ಕಿದಾಗೆಲ್ಲಾ ಇದೇ ಏನೋ ಅಜ್ಜ ಬಲಿಪರದ್ದು ಎಂದು ಸಂದೇಹ ಪಟ್ಟು ಕೊನೆಗೆ ಅದು ಅಲ್ಲ ಎಂದಾಗಿ ಒಂದು ರೀತಿಯ ನಿರಾಶೆಯೇ ಉತ್ತರವಾಗುತ್ತಿತ್ತು. ಹಿರಿಯ ಅಗರಿ ಶ್ರೀನಿವಾಸ ಭಾಗವತರು, ಪುತ್ತಿಗೆ ರಾಮಕೃಷ್ಣ ಜೋಯಿಸರು,  ಹೀಗೆ ಹಲವು ಧ್ವನಿ ಮುದ್ರಣಗಳು ಲಭ್ಯವಿದ್ದರೂ ದೊಡ್ಡ ಬಲಿಪರ ಸ್ವರ ಇನ್ನೂ ನಿಗೂಢವಾಗಿಯೇ ಇತ್ತು. ಆದರೆ ಆಚಾನಕ್ ಆಗಿ ಈ ಎರಡು ಧ್ವನಿ ಮುದ್ರಣಗಳು ಬಹಿರಂಗಗೊಂಡಾಗ ಇದು ಹೌದೋ ಅಲ್ಲವೋ ಎಂದು ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಹಾಗೆ ಹೀಗೆ ಅಂತ ಅನುಮಾನದಲ್ಲಿ ಇರುವಾಗ ಸಿಕ್ಕ ಧ್ವನಿ ಮುದ್ರಣವನ್ನು ಹಿರಿಯರಿಗೆ ಕೇಳಿಸಿ ಖಚಿತ ಪಡಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದೆವು. 

ಸಿಕ್ಕ ಧ್ವನಿಮುದ್ರಣದಲ್ಲಿ ಒಂದು ಆಕಾಶವಾಣಿ ಕಾರ್ಯಕ್ರಮದಲ್ಲಿ ಮುದ್ರಣಗೊಂಡ ಒಂದು ತಾಸಿನ ಕಾರ್ಯಕ್ರಮ. ಅದರ ಧ್ವನಿಗ್ರಹಣವೂ ಸಾಕಷ್ಟು ಅಪಸ್ವರಗಳಿಂದ ಈಗಿನ ಬಲಿಪ್ಪರಿಗೂ ಆಗಿನ ಅಜ್ಜ ಬಲಿಪರ ಸ್ವರಕ್ಕೂ ವೆತ್ಯಾಸವನ್ನು ಗುರುತಿಸುವುದು ಬಹಳ ಕಷ್ಟವಾಗಿತ್ತು. ನಾನು ಸಿಕ್ಕಿದ ಧ್ವನಿ ಮುದ್ರಣದಲ್ಲಿದ್ದ ಅನಗತ್ಯ ಕಿರಿ ಕಿರಿಯನ್ನು ತೆಗೆದು ಸ್ವಚ್ಛಗೊಳಿಸಿದೆ. ಧ್ವನಿ ಮುದ್ರಣ ಅಜ್ಜ ಬಲಿಪರದ್ದು ಎಂದು ನಂಬುವುದು ನನಗೆ ಬಹಳ ಕಷ್ಟವಾಯಿತು. ಅದು ಈಗಿನ ಹಿರಿಯ ಬಲಿಪರ ಸ್ವರ ಮತ್ತು ಶೈಲಿಯೊಂದಿಗೆ ಯಾವುದೇ ವೆತ್ಯಾಸ ನನಗೆ ಅರಿವಿಗೆ ಬರಲಿಲ್ಲ. ಆದರೂ ಯಾವುದೋ ಒಂದು ಸಣ್ಣ ಅನುಮಾನ ವ್ಯಕ್ತ ಪಡಿಸುವುದಕ್ಕೆ ತಿಳಿಯದೇ ಕೊನೆಗೆ ಅದನ್ನು ಪರಿಹರಿಸಿಕೊಳ್ಳುವುದಕ್ಕೆ ಯತ್ನಿಸಿದೆ.  ಹಾಗೇ ಅದನ್ನು ಹಿರಿಯ ವಿದ್ವಾಂಸರಾದ ಡಾ. ರಾಘವ ನಂಬಿಯಾರರಿಗೆ ಕಳುಹಿಸಿಕೊಟ್ಟು ಅವರ ಅಭಿಪ್ರಾಯ ಕೇಳಿ ನೋಡೋಣ ಎಂದನಿಸಿತು. ಮಾತ್ರವಲ್ಲ ಇವರಿಗಿಂತ ಸೂಕ್ತ ವ್ಯಕ್ತಿ , ಮತ್ತದನ್ನು ಖಚಿತವಾಗಿ ವಿವರಿಸುವ ಮಹನೀಯರು ಸದ್ಯದಲ್ಲಿ ಯಾರೂ ಸಿಗುವುದಕ್ಕೆ ಸಾಧ್ಯವಿರಲಿಲ್ಲ. 


ಶ್ರೀ ನಂಬಿಯಾರರು ಅಷ್ಟೇ ಉತ್ಸಾಹದಿಂದ ಅದನ್ನು ಕೇಳಿ ನನಗೆ ಕರೆ ಮಾಡಿದರು.  ಅವರ ವಿಶ್ಲೇಷಣೆ ಅತ್ಯಂತ  ಉಪಯುಕ್ತ ಅಂತ ಅನ್ನಿಸಿತು. ಒಂದೆರಡು ಸಲ ಅವರಿಗೆ ಕರೆ ಮಾಡಿದಾಗ ಅವರು ಹೇಳಿದ ಕಾರಣಗಳು ಬಹಳ ಕುತೂಹಲಕಾರಿಯಾಗಿತ್ತು.   ಈ ಧ್ವನಿ ಮುದ್ರಣದ ಬಗೆಗಿಂತಲೂ ಒಟ್ಟು ಯಕ್ಷಗಾನದ ಮಾಹಿತಿಗಳು 


ಶ್ರೀ ನಂಬಿಯಾರರ ವಿಶ್ಲೇಷಣೆ ಎಂದರೆ ಅದರಲ್ಲಿ ಹಲವು ಆಯಾಮಗಳು ಇದ್ದೇ ಇರುತ್ತವೆ. ಯಕ್ಷಗಾನದ ಬಗ್ಗೆ ಅದರಲ್ಲೂ ಪರಂಪರೆಯ ಯಕ್ಷಗಾನದ ಬಗ್ಗೆ ಇದಮಿತ್ಥಂ ಎಂದು ಹೇಳಬಲ್ಲವರು. ಅವರು  ಹಲವಾರು ತಾಂತ್ರಿಕ ಕಾರಣಗಳನ್ನು ಮತ್ತು ಕೆಲವು ಕುತೂಹಲ ವಿಚಾರಗಳನ್ನು ತಿಳಿಸಿ ಇದು ಅಜ್ಜ ಬಲಿಪ್ಪರದ್ದೇ ಸ್ವರ ಎಂದು ಖಚಿತ ಪಡಿಸಿದಾಗ ಮನಸ್ಸಿಗೆ ಬಹಳಷ್ಟು ಸಮಾಧಾನವಾಯಿತು. ಇದು ಮಾತ್ರವಲ್ಲದೆ ಈ ಧ್ವನಿಮುದ್ರಣದ ಸಂಗ್ರಹ ಮಾಡಿದ ಶ್ರಿ ರಾಜಗೋಪಾಲ ಕನ್ಯಾನದವರಿಗೂ ಕರೆ ಮಾಡಿ ಅವರಲ್ಲಿ ಮಾತನಾಡಿದ ಮೇಲೆ ಮತ್ತೆ ಯಾವ ಅನುಮಾನವೂ ಉಳಿಯಲಿಲ್ಲ. ಇದು ಅಜ್ಜ ಬಲಿಪರದೇ ಸ್ವರ ಎಂದು ಖಚಿತವಾಯಿತು. 

ಧ್ವನಿ ಮುದ್ರಣದಲ್ಲಿ ಅಜ್ಜಬಲಿಪರಿಗೂ ಈಗಿನ ಹಿರಿಯ ಬಲಿಪರಿಗೂ ಮೇಲ್ನೋಟಕ್ಕೆ ಬಹಳ ಸಾಮ್ಯತೆ ಇತ್ತು. ಅದರಲ್ಲಿ ವೆತ್ಯಾಸವನ್ನು ಗುರುತಿಸುವುದು ಅಷ್ಟು ಸುಲಭವಲ್ಲ.           ಇದು ಈಗಿನ ಬಲಿಪ್ಪರದ್ದು ಅಲ್ಲ ಎಂದು ತಿಳಿವಾಗ ಅದು ಅರ್ಧ ಶತಮಾನಕ್ಕೂ ಹೆಚ್ಚುಅದೇ ಶೈಲಿಯನ್ನು ಉಳಿಸಿಕೊಂಡ ಬಗ್ಗೆ ಅವರ ಬಗ್ಗೆ ಗೌರವ ಮೂಡುತ್ತದೆ. ಇದು ತಪಸ್ವಿಯೊಬ್ಬನ ಸಾಧನೆ.  ನಂಬಿಯಾರರು  ಈ ಧ್ವನಿಮುದ್ರಣದಲ್ಲಿ  ಎರಡು ಮುಖ್ಯವಾದ ವೈಶಿಷ್ಟ್ಯವನ್ನು ಗುರುತಿಸಿದರು. ಒಂದು ಪದಗಳಲ್ಲಿನ ಬಿಡ್ತಿಗೆ ಕ್ರಮ. ಬಿಡ್ತಿಗೆ ಮತ್ತು  ಮುಕ್ತಾಯ ಬಾರಿಸುತ್ತಿದ್ದ ಕ್ರಮ   ಈಗ ಬಹಳ ಬದಲಾವಣೆಯಾಗಿದೆ. ಬಿಡ್ತಿಗೆ ಪೆಟ್ಟುಗಳಲ್ಲಿ ಮುಂಚಿನ ಕ್ರಮ ಬೇರೆ , ಈಗಿನ ಕ್ರಮಬೇರೆ. ಉದಾಹರಣೆಗೆ ಏಕ ತಾಳದ ಬಿಡ್ತಿಕೆಗೆ ಮದ್ದಲೆಗಾರರು ತದಿಗಿಣ ಧೀಂ ತದಿಗಿಣ ಧೀಂ ತದಿಗಿಣ ಧೀಂ ಎಂದು ನಿಲ್ಲಿಸಿ ಎರಡು ಅಕ್ಷರ  ಬಿಟ್ಟು ನಂತರ ತೊಂ ತೊಂ ಅಂತ ಬಡಿಯುತಿದ್ದಾರೆ. ವಾಸ್ತವದಲ್ಲಿ ಕುಣಿತದಲ್ಲಿ ಗಟ್ಟಿ ಇಲ್ಲದ ಕಲಾವಿದರು ರಂಗದಲ್ಲಿ ಬಂದನಂತರ ಆ ಕ್ರಮ ಬಂದದ್ದು. ಅದೊಂದು ರೀತಿಯ ಕುಣಿತದ ಹೊಂದಾಣಿಕೆಗೆ ಶುರು ಮಾಡಿಕೊಂಡ ಕ್ರಮ.  ನಾಟ್ಯದಲ್ಲಿ ಗಟ್ಟಿ ಇಲ್ಲದ ಕಲಾವಿದರನ್ನು ರಂಗದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಬಿಡ್ತಿಗೆಯನ್ನೇ ಕಡಿತ ಗೊಳಿಸಿದ್ದರು. ಕೊನೆಗೆ ಅದೇ ಕ್ರಮ ಮುಂದುವರಿಕೆಯಾಯಿತು. ಇದರ ಮಹತ್ವವನ್ನು ತಿಳಿಯದವರು ನಂತರ ಇದೇ ಕ್ರಮ ಎಂದು ಅನುಸರಿಸಿದ್ದು ಮಾತ್ರವಲ್ಲ ಯಕ್ಷಗಾನದ ಮೂಲ ಕ್ರಮ ಇಂದು ಯಾರಿಗೂ ತಿಳಿದಿಲ್ಲ ಎಂಬುದು ವಾಸ್ತವದ ಸತ್ಯ.  ಯಕ್ಷಗಾನ ಕಲಿಕಾ ಕೇಂದ್ರದಲ್ಲೂ ಅದನ್ನೇ ಅನುಸರಿಸತೊಡಗಿದರು. ಮೊದಲೆಲ್ಲ ನಾಟ್ಯದಲ್ಲಿ ಪರಿಣತಿ ಇಲ್ಲದೇ ಇದ್ದರೆ ಮೇಳದಲ್ಲಿ ಪ್ರವೇಶವೇ ಇರುತ್ತಿರಲಿಲ್ಲ.  ಆದರೆ ಕ್ರಮೇಣ ನಾಟ್ಯ ಒಂದಷ್ಟು ಗೌಣವಾಗಿ ಅರ್ಥಗಾರಿಕೆಯನ್ನೆ ಭಂಡವಾಳವಾಗಿ ಕಲಾವಿದರ ಆಗಮನವಾದಾಗ ಈ ಬಿಡ್ತಿಗೆ ಕ್ರಮದಲ್ಲಿ ಗಣನೀಯ ಬದಲಾವಣೆಯಾಯಿತು. ಕ್ರಮೇಣ ಪಳಗಿದ ಮದ್ದಲೆಗಾರರಿಗೂ ಇದು ಮರೆತು ಹೋಗಿ ಗೊತ್ತೇ ಇಲ್ಲ ಎಂಬಂತಹ ಪರಿಸ್ಥಿತಿ ಬಂದಿದೆ. ಅಜ್ಜ ಬಲಿಪರ ಈ ಧ್ವನಿಮುದ್ರಣದಲ್ಲಿ ಈ ಬಿಡ್ತಿಗೆಯ ವೆತ್ಯಾಸ  ಸ್ಪಷ್ಟವಾಗಿ ಅರಿವಿಗೆ ಬರುತ್ತದೆ.   ಮತ್ತೊಂದು ಆಗಿನ ಕಾಲದಲ್ಲಿ ಭಾಗವತರಿಗೆ ಮದ್ದಲೆಯ ಶ್ರುತಿಯೇ ಪ್ರಧಾನ. ಮದ್ದಲೆಯ ಶ್ರುತಿಯಲ್ಲಿಯೇ ಭಾಗವತರು ಪದ ಹೇಳುತ್ತಿದ್ದರು.  ಮದ್ದಲೆಯ ಶ್ರುತಿಗೆ ಪುಂಗಿ ಬಾರಿಸುತ್ತಿದ್ದರು. ಅದೂ ಶ್ರುತಿಬದ್ದವಾಗಿ ಬಾರಿಸಬೇಕಿದ್ದರೆ ಪುಂಗಿಯವನಿಗೂ ಶ್ರುತಿಯಬಗ್ಗೆ ಅರಿವಿರಬೇಕಿತ್ತು. ಶ್ರುತಿ ಜ್ಞಾನ ಇಲ್ಲದೇ ಪುಂಗಿ ಬಾರಿಸುವುದಕ್ಕೆ ಸಾಧ್ಯವಿರುತ್ತಿರಲಿಲ್ಲ.  ಆಗಿನ ಹಳೆಯ ಕ್ರಮದಲ್ಲೇ ಮದ್ದಲೆ ವಾದನವಿದೆ. ಹಾಗಾಗಿ ಇದು ಅಜ್ಜ ಬಲಿಪರದ್ದೇ ಎಂದು ನಂಬಿಯಾರರು ಖಚಿತವಾಗಿ    ಹೇಳಿದರು. 

ಇದೇ ಸಂದರ್ಭದಲ್ಲಿ ಆಕಾಶವಾಣಿಯಲ್ಲಿ ಬಲಿಪ ಭಾಗವತರ ಸಂದರ್ಶನವನ್ನು ಮುದ್ರಿಸಿಕೊಳ್ಳಲಾಯಿತು.  ಆ ಸಂದರ್ಶನದಲ್ಲಿ ಇಬ್ಬರು ಶಿಷ್ಯರ ಬಗ್ಗೆ ಅವರು ಉಲ್ಲೇಖಿಸುತ್ತಾರೆ ಅದುಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ನೆಡ್ಲೆ ನರಸಿಂಹ ಭಟ್ಟರಾಗಿದ್ದಾರೆ ಅನುಮಾನ.   ಇವರಿಬ್ಬರೂ  ಬಲಿಪರ ಒಡನಾಟ ಇದ್ದುದನ್ನು ನೆನಪಿಸಿಕೊಳ್ಳುತ್ತಿದ್ದರು.   ಧ್ವನಿ ಮುದ್ರಣದಲ್ಲಿ  ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮದ್ದಲೆಗಿದ್ದರೆ ಚೆಂಡೆಗೆ ನೆಡ್ಲೆ ನರಸಿಂಹ ಭಟ್ಟರು ಇದ್ದಾರೆ ಎಂದು ಅನುಮಾನವಿದೆ. ಮಾತ್ರವಲ್ಲ ಆಗಿನ ಕಾಲದಲ್ಲಿ ಮದ್ದಲೆಯ ಬಳಕೆ ಇತ್ತು. ಈಗ ಮೊದಲಿನಂತೆ ಛಾಪು ಪೆಟ್ಟುಗಳನ್ನು ಬಾರಿಸುವುದಿಲ್ಲ. 

  ಈ ಎಲ್ಲಾ  ಅಂಶಗಳು ಹೆಚ್ಚು ತಾಂತ್ರಿಕ ಕಾರಣ ಅಂತ ನನಗನಿಸಿತು. ಹಿರಿಯ ಅಗರಿ ಭಾಗವತರು ಪದದ ನಡುವೆ ಆಗಾಗ ಮದ್ದಲೆಗಾರರಿಗೆ ಛಾಪು ಛಾಪೂ ಎಂದು ಎಚ್ಚರಿಸುತ್ತಿದ್ದದ್ದು ಆ ಕಾಲದಲ್ಲಿ ಭಾಗವತರಿಗೆ ಮದ್ದಲೆಯ ಶ್ರುತಿ ಪ್ರಧಾನವಾಗಿತ್ತು.   ಮೊದಲು ಶ್ರುತಿಗೆ ಪುಂಗಿಯ ನಾದವನ್ನು ಬಳಸುತ್ತಿದ್ದವರು ಕ್ರಮೇಣ ಅದರ ಸ್ಥಾನದಲ್ಲಿ ಹಾರ್ಮೋನಿಯಂ ಬಳಕೆಯಾಯಿತು. ಈಗ ಹಾರ್ಮೋನಿಯಂ  ಬದಲಾಗಿ ಶ್ರುತಿ ಪೆಟ್ಟಿಗೆ ಬಂದು ಇನ್ನೂ  ಕಂಪ್ಯೂಟರ್ ಯುಗದಲ್ಲಿ ಹೇಗೆ ಪರಿವರ್ತನೆಯಾಗುವುದೋ ಊಹಿಸುವುದು ಕಷ್ಟ. 

ಬೆಂಗಳೂರು ಆಕಾಶವಾಣಿಯಲ್ಲಿ ಸುಮಾರು ಎಪ್ಪತ್ತರ ದಶಕದಲ್ಲಿ ಹಿರಿಯ ಬಲಿಪರ ಸಂದರ್ಶನದ  ಧ್ವನಿಮುದ್ರಣ ಆಗಿದೆ. ಅದೇ ಸಂದರ್ಭದಲ್ಲಿ ಬೆಂಗಳೂರಲ್ಲೇ ಇದ್ದವರನ್ನು     ಸೇರಿಸಿಕೊಂಡು ಒಂದು ಘಂಟೆ ಅವಧಿಯ ಸುಧನ್ವಾರ್ಜುನ ಎಂಬ ಪ್ರಸಂಗದ ಆಕಾಶವಾಣಿ ತಾಳಮದ್ದಲೆಯನ್ನೂ ಧ್ವನಿ ಮುದ್ರಿಸಿದ್ದಾರೆ.  ಮಾತ್ರವಲ್ಲ ಈಗಿನ ಸಣ್ಣ ಬಲಿಪರೂ , ಈ ಧ್ವನಿ ಮುದ್ರಣದ ಬಗ್ಗೆ ಉಲ್ಲೇಖಿಸಿದ್ದಾರೆ.  ಈ ಎಲ್ಲ ಕಾರ್ಯಕ್ರಮವನ್ನು ಮುತುವರ್ಜಿಯಿಂದ ನಡೆಸಿಕೊಟ್ಟವರು ಆಗ ಹಿರಿಯ ಬಲಿಪರ ಬಹಳ ದೊಡ್ಡ ಅಭಿಮಾನಿಯಾದ ಶ್ರೀ ಸಿ ಆರ್ ರಾವ್ ರವರು,  ಅದೇ ಯಕ್ಷಗಾನ ಆಕಾಶವಾಣಿಯಿಂದ ಪ್ರಸಾರವಾಗುವಾಗ ತಮ್ಮ ಟೇಪ್ ರೆಕಾರ್ಡರ್ ನಲ್ಲಿ ಧ್ವನಿ ಮುದ್ರಿಸಿದರು ಎಂದು  ಈ ಧ್ವನಿ ಮುದ್ರಣ ಸಂಗ್ರಹಿಸಿಟ್ಟು ಕೊಂಡಿದ್ದ ಶ್ರೀ ರಾಜಗೋಪಾಲ ಕನ್ಯಾನ ಅವರೂ ಹೇಳುತ್ತಾರೆ.  ಇಲ್ಲಿ ಸಿ. ಆರ್ ರಾವ್ ಅವರ ಕಾರ್ಯವನ್ನು ಎಷ್ಟು ಸ್ಮರಿಸಿದರು ಸಾಲದು. ಅವರು ಮಾಡದೇ ಇರುತ್ತಿದ್ದರೆ ಇಂದು ಇಂತಹ ಅಮೂಲ್ಯ ಸಂಗ್ರಹ ಇರುವುದಕ್ಕೆ ಸಾಧ್ಯವಿರಲಿಲ್ಲ. 

ಆಸಕ್ತಿ ಇದ್ದರೆ ಪರಿಷ್ಕೃತ ಧ್ವನಿ ಮುದ್ರಣ ಈ ಕೊಂಡಿಯಿಂದ ಪಡೆದುಕೊಳ್ಳಬಹುದು. 


ಸುಧನ್ವಾರ್ಜುನ ಪ್ರಸಂಗದ ತಾಳ ಮದ್ದಲೆಯ ಭಾಗವತಿಕೆಯನ್ನು ಕೇಳಿ ಮಿತ್ರ ಶ್ರೀ ಕಟೀಲು ಸಿತ್ಲ ರಂಗನಾಥರೂ ಒಂದು ಅಭಿಪ್ರಾಯ ಹೇಳಿದ್ದನ್ನೂ ಇಲ್ಲಿ ಉಲ್ಲೇಖಿಸಬೇಕು. ಇದರಲ್ಲಿ ಒಂದು ನಿರ್ದಿಷ್ಟವಾದ ಗಮಕವನ್ನು ಹಿರಿಯ ಬಲಿಪ್ಪರು ಒಂದು ಬಾರಿ  ಹಾಡುತ್ತಾರೆ, ಅದನ್ನು ಈಗಿನ ಬಲಿಪ್ಪರು ಆ ನಿರ್ದಿಷ್ಟವಾದ ಗಮಕವನ್ನು ಒಂದಕ್ಕಿಂತ ಹೆಚ್ಚು ಬಾರಿ ಹಾಡುತ್ತಾರೆ. 

ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಯಾವ ಧ್ವನಿಗಾಗಿ ನಾವು ಕೇಳುವುದಕ್ಕೆ ಉತ್ಸುಕರಾಗಿದ್ದೇವೋ ಆ ಹಿರಿಯ ಬಲಿಪ ನಾರಾಯಣ ಭಾಗವತರ ಸ್ವರ ಇದು ಎನ್ನುವುದಕ್ಕೆ ಯಾವುದೇ ಅನುಮಾನಗಳು ಉಳಿದಿಲ್ಲ. ಯಕ್ಷಗಾನದ ದೃಷ್ಟಿಯಲ್ಲಿ ಇದೊಂದು ಅತ್ಯಮೂಲ್ಯ ಸಂಗ್ರಹ. ಇದನ್ನು ಒದಗಿಸಿದ ರಾಜಗೋಪಾಲ್ ಕನ್ಯಾನ ಇವರ ಮನೆಯವರಿಗೆ ಒಂದು ಕೃತಜ್ಞತೆಯನ್ನು ಸಲ್ಲಿಸಬೇಕು. ಬಹಳ ಹಳೆಯ ಧ್ವನಿ ಮುದ್ರಣ ಇದು. ಇದರ ಗುಣ ಮಟ್ಟ ಕೇಳುವುದಕ್ಕೆ ಧ್ವನಿ  ಸ್ಪಷ್ಟತೆ (clarity) ಇರಲಿಲ್ಲ. ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ಸ್ವಚ್ಛಗೊಳಿಸಿ ಸ್ಪಷ್ಟವಾಗಿ ಕೇಳುವಂತೆ ಒಂದಷ್ಟು ದುರಸ್ತಿಯನ್ನು ಮಾಡಿದ್ದೇನೆ. ಇದನ್ನು ಹಲವಾರು ಸಲ ಕೇಳಿ ಆನಂದಿಸಿದೆ. ಹಲವಾರು ವರ್ಷದಿಂದ ಇದ್ದ ಕುತೂಹಲ ತಣಿದಿದೆ.  ಇಂದಿನ ಯಕ್ಷಗಾನ ಕಲಾವಿದರು ಭಾಗವತರು ಮತ್ತು ಕೇಳುಗರು ಇದನ್ನು ಗಂಭೀರವಾಗಿ ಸ್ವೀಕರಿಸಬೇಕು. ಇದರ ಸ್ಪಷ್ಟ ಅಧ್ಯಯನವನ್ನು ಮಾಡಬೇಕು. ನಾವೇನು ಕಳೆದುಕೊಂಡಿದ್ದೇವೆ ಅದರ ಪುನರುತ್ಥಾನಕ್ಕೆ ಬಲ್ಲವರಲ್ಲಿ ಕೇಳಿ ಅಧ್ಯಯನ ಮಾಡಬೇಕು. ಬಲಿಪ್ಪರು ಒಂದು ಕಡೆ ಹೇಳುತ್ತಾರೆ, ಪರಂಪರೆಯಲ್ಲಿ ಇದ್ದದ್ದು ಎಷ್ಟು ಸೂಕ್ತ ಎಂಬುದು ವಿಮರ್ಶೆ ಮಾಡಬೇಕಿಲ್ಲ. ಆದರೆ ಪರಂಪರೆಯ ಅರಿವು ಅದು ಇರಬೇಕು. ಒಂದು ಕಾಲದಲ್ಲಿ ಹೀಗಿತ್ತು ಎಂಬ ಅರಿವಿದ್ದು ಅದನ್ನು ಕಲಿಯಬೇಕು. ನಾವು ಏನೇ ಬದಲಾವಣಿ ಮಾಡಿಕೊಂಡರೂ ಪರಂಪರೆಯಲ್ಲಿದ್ದ ಸಂಗತಿಗಳನ್ನು ಕಳೆದುಕೊಳ್ಳಬಾರದು. 

ಯಕ್ಷಗಾನದಲ್ಲಿ ಸಂಗೀತದ ಬಳಕೆ ತಪ್ಪೋ ಸರಿಯೋ ಅದು ಬೇರೆ ವಿಚಾರ. ಆದರೆ ಅದು ಬಳಕೆಗೆ ಬಂದನಂತರ ಮದ್ದಲೆಯ ಛಾಪು ಪೆಟ್ಟುಗಳು ಮಾಯವಾಗುತ್ತಾ ಬಂದಿವೆ. ತಬಲ ಮತ್ತು ಮದ್ದಲೆಗೆ ಯಾವ ವೆತ್ಯಾಸವೂ ಇರದಂತೆ ಇಂದಿನ ಭಾಗವತಿಕೆ ಎಂಬ ಪ್ರಹಸನ ಬೆಳೆದು ಬರುತ್ತದೆ. ಮದ್ದಲೆಯ ಶ್ರುತಿಗೆ ಪದ ಹೇಳಬೇಕು ಎನ್ನುವ ಪರಿಜ್ಞಾನ ಯಾರಿಗೆಲ್ಲ ಇದೆಯೊ ತಿಳಿಯದು. ಬಹಳಷ್ಟು ಹಿರಿಯ ಭಾಗವತರು ತೆರೆಯ ಹಿಂದೆ ಸರಿದು ಚೌಕಿಯಿಂದಲೂ ಮರೆಯಾಗಿದ್ದಾರೆ. ಕೆಲವು ತಿಂಗಳ ಸಂಗೀತ ಕಲಿತು ಭಾಗವತರಾಗಿ ರಂಗ ವೇರುವಾಗ ತಮಗೆಷ್ಟು ಅರ್ಹತೆಯಿದೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಈ ಧ್ವನಿಮುದ್ರಣ ಅತ್ಯಂತ ಸೂಕ್ತ. ಇದನ್ನು ಕೇಳಿದರೂ ಇಂದಿನ ಭಾವಗವತರಿಗೆ ಅದರ ವೆತ್ಯಾಸ ಗೊತ್ತಾಗುವುದಿಲ್ಲ ಎಂದರೆ ಅನುಮಾನ ಬೇಡ ಯಕ್ಷಗಾನ ದುರಂತದತ್ತ ಸಾಗುತ್ತದೆ. ಯಕ್ಷಗಾನ ಬದಲಾಗಲಿಲ್ಲ ಹಾಗೇ ಉಂಟು ಅಂತ ಹಲುಬುವವರು ಈ ಧ್ವನಿ ಮುದ್ರಣವನ್ನು ಗಮನವಿಟ್ಟು ಕೇಳುವ ವ್ಯವಧಾನವನ್ನಾದರೂ ತೋರಬೇಕು. ನನಗೆ ಯಕ್ಷಗಾನ ತಾಳ ಲಯ ಶ್ರುತಿಯ ಬಗ್ಗೆ ಅಷ್ಟೇನೂ ಅರಿವಿಲ್ಲ ಹಾಗಿದ್ದರೂ ಇದರಲ್ಲಿರುವ ಗಾಢವಾಗದ ನೈಜ ಯಕ್ಷಗಾನದ ಕಂಪನ್ನು ಅನುಭವಿಸಬಲ್ಲೆ. ಯಕ್ಷಗಾನದಲ್ಲಿ ಅನಗತ್ಯವಾದ ಅಸಂಗತವಾದುದನ್ನು ತರುವುದಕ್ಕೆ ಅದೆಷ್ಟೋ ಸಾಧನೆ ಮಾಡಿ ಯಕ್ಷಗಾನವನ್ನು ಯಾವುದೋ ರೂಪಕ್ಕೆ ಕೊಂಡೊಯ್ಯುವುದಕ್ಕೆ ಕಟಿಬದ್ಧರಾಗುತ್ತೇವೆ.  ಆದರೆ ಇಂತಹ ಅವಶ್ಯವೆನಿಸುವ ವಿಷಯಗಳ ಅಧ್ಯಯನಕ್ಕೆ ನಮ್ಮಲ್ಲಿ ಮನಸ್ಸೂ ಇಲ್ಲ ಸಮಯವೂ ಇಲ್ಲ ಎಂದಾದರೆ ಅನ್ನ ನೆಮ್ಮದಿ ಕೊಡುವ ಕಲೆಗೆ ನಾವು ದ್ರೋಹ ಮಾಡುತ್ತಿದ್ದೇವೆ ಎಂದು ಬೇರೆ ಹೇಳಬೇಕಿಲ್ಲ. 





Tuesday, December 7, 2021

ಮಾನಾಪಮಾನ


        ಮಾನ ಎಂದರೆ ಒಂದು ಅಳತೆ ಎಂದಷ್ಟೆ ಅರ್ಥ. ಆದರೆ ಆಳತೆ ಅಳಿಯುವುದಕ್ಕೆ ಸಾಧ್ಯವಿಲ್ಲದೇ ಆಗುವುದು ಅದು ಗೌರವದೊಂದಿಗೆ ಬೆಸೆದುಕೊಂಡಾಗ.  ಮಾನ ಅವಮಾನಗಳು ಜಡ ವಸ್ತುವಿನಲ್ಲಿ ಇರುವುದಿಲ್ಲ. ಅದು ಕ್ರಿಯೆಯಲ್ಲಿ ಅಡಕವಾಗಿರುತ್ತದೆ.  ಅಕ್ಕಿ ತೆಂಗಿನ ಕಾಯಿ ಇಟ್ಟು ಭಕ್ತಿ ಗೌರವದಿಂದ ಪೂಜಿಸಿ ನಮಸ್ಕರಿಸಿದಾಗ ಅದು ಗಣಪತಿಯೋ ನಾರಾಯಣನೋ ಆಗುತ್ತದೆ. ಇಲ್ಲವಾದರೆ ಅದು ಕೇವಲ ಅಕ್ಕಿ ತೆಂಗಿನಕಾಯಿ ಅಷ್ಟೇ.  ಬದುಕಿನ ಪ್ರತಿ ಹಂತದಲ್ಲೂ ಮನುಷ್ಯ ಬದುಕುವುದು ತನ್ನ ಭಾವನೆಗಳ ಜತೆಗೆ. ಅಪ್ಪ ಅಮ್ಮನಲ್ಲಿ ಪ್ರೀತಿ ಗೌರವ ಕಂಡಾಗ ಮಾತ್ರ ಅದು ಅಪ್ಪ ಅಮ್ಮ. ಇಲ್ಲವಾದರೆ ಕೇವಲ ಮನುಷ್ಯರು. ಮತ್ತೂ ಮುಂದಕ್ಕೆ ಹೊದರೆ ಮಾಂಸ ಖಂಡಗಳು ತುಂಬಿದ ಕೈ ಕಾಲುಗಳ ದೇಹ. 

        ಮೊನ್ನೆ ಯಕ್ಷಗಾನದ ಒಂದು ವಿಡಿಯೋ ಚಿತ್ರದ ತುಣುಕು ಕಂಡು ಹೊರಬಂದ ಹತಾಶೆಯ ಭಾವನೆ ಇದು. ಆಶೆಗಳೆಲ್ಲ ಸತ್ತು ಸತ್ವ ಹೀನವಾದಾಗ ಹತಾಶೆ ಹುಟ್ಟಿಕೊಳ್ಳುತ್ತದೆ. ಆ ಚಿತ್ರ ಈ ಪುಟಗಳಲ್ಲಿ ಹಾಕುವುದಕ್ಕೇ  ಈ ಹತಾಶೆಯೂ ಸಹಿಸುವುದಿಲ್ಲ. ಯಾಕೆ ಈ ಪುಟಗಳನ್ನು ಅಪವಿತ್ರ ಗೊಳಿಸಬೇಕು? ಲೌಕಿಕ ಜಗತ್ತಿನ ಪ್ರತಿನಿಧಿಯಂತೆ ಯಕ್ಷಗಾನದ ವೇಷಗಳು ಹೋಟೇಲೊಂದರಲ್ಲಿ ......ಛೇ ಅದನ್ನು ಹೇಳಿಕೊಳ್ಳುವುದರಲ್ಲಿ ಯಾವ ಸಾರ್ಥಕತೆಯೂ ಇರುವುದಿಲ್ಲ. 

        ನಮ್ಮ ಪ್ರಿಯ ಪಾತ್ರರು ನಮ್ಮನ್ನಗಲಿ ದೂರವಾದ ಮೇಲೆ ಅವರ ಸ್ಮರಣಿಕೆಗಾಗಿ ಅವರು ಉಪಯೋಗಿಸುತ್ತಿದ್ದ ವಸ್ತ್ರವೋ ಮತ್ತೊಂದೋ ಎಷ್ಟು ಹಳೆಯದಾದರೂ ಉಳಿಸಿಕೊಳ್ಳುತ್ತೇವೆ. ನಮ್ಮ ಭಾವುಕ ಮನಸ್ಸಿನ ಗೌರವ ಅದು. ಇಲ್ಲವಾದರೆ ಆ ವಸ್ತುಗಳು ಕಸದ ತೊಟ್ಟಿಗೆ ಸೇರಬೇಕಾದವುಗಳು. ಒಂದು ವೇಳೆ ಅದನ್ನು ಕಸದ ತೊಟ್ಟಿಯಲ್ಲಿ ಕಂಡಾಗ ಎಷ್ಟು ನೋವಾಗುತ್ತದೆ. ಮೂರು ವರ್ಣಗಳ ನಮ್ಮ ರಾಷ್ಟ್ರ ಧ್ವಜವಿದೆ. ನಮ್ಮ ರಾಷ್ಟ್ರ ಪ್ರೇಮದ ಸಂಕೇತವದು. ಅದು ರಸ್ತೆಯ ಬದಿಯಲ್ಲಿ ಚರಂಡಿಯಲ್ಲಿ ಬಿದ್ದಿದ್ದರೆ ಎತ್ತಿ ಇಡುವ ಪ್ರೇರಣೆಯಾಗುತ್ತದೆ. ಯಾಕೆ? ಅದರ ಹಿಂದಿರುವ ಉದಾತ್ತವಾದ ಪ್ರೇಮ. ಹುಟ್ಟಿಸಿದ ತಂದೆ ಮದ್ಯಪಾನ ಮಾಡಿ ರಸ್ತೆಯ ಬದಿಯಲ್ಲಿ ಬಿದ್ದಿದ್ದರೆ ಮಗನಾದಾವನು ಅಪ್ಪ ಮಾಡಿದ ಕರ್ಮ ಎಂದು ಬಿಟ್ಟು ಬಂದರೆ, ಕರ್ಮ ಭೃಷ್ಠನಾಗುತ್ತಾನೆ. ನಮ್ಮ ಕ್ರಿಯೆಯನ್ನು ಮರೆತ ಪರಿಣಾಮವದು. 

        ಯಕ್ಷಗಾನ ಎಂಬುದು ಯಾರಿಗೋ ಪೂಜನಿಯವಾದರೆ ಇನ್ನು ಅದಕ್ಕೆ ಹಿಂದಿರುವ ಭಾವನೆಗಳು ಗೌರವಿಸಲ್ಪಡುವುದೇ ಕಾರಣ. ಸದರೀ ಕಲಾವಿದರು ಮತ್ತೆ ಕ್ಷಮಾಪಣೆ ಕೇಳಿದರು. ಅದು ಹೇಗಿತ್ತೆಂದರೆ ಮೊದಲೇ ಬರೆದಿಟ್ಟ ಸಂಭಾಷಣೆ ಒಪ್ಪಿಸಿದಂತೆ ಇತ್ತು. ಒಂದು ವೇಳೆ ಆಕ್ಷೇಪ ಬಂದರೆ ಹೀಗೆ ಹೇಳಿಬಿಡುವ ಎಂದು ಪರಿಹಾರ ಕಂಡುಕೊಂಡು ತಪ್ಪು ಎಸಗಿದಂತೆ. ಯಾಕೆಂದರೆ ಆ ಹೇಳಿಕೆಗಳಲ್ಲಿಯೂ ಒಂದು ಆಕ್ಷೇಪಗಳಿದ್ದುವು. ಆ ಚಿತ್ರ ನೋಡಿ ಎದ್ದ ವಿವಾದದಲಿ ಬಂದ ಪ್ರತಿಕ್ರಿಯೆಯ ಬಗ್ಗೆಯೇ ಅಸಮಾಧಾನ ಹೊರಹಾಕಿದಂತೆ ಅನಿಸುತ್ತಿತ್ತು. ಒಂದು ವೇಳೆ ಯಾರೊಬ್ಬರೂ ಆ ಚಿತ್ರವನ್ನು ಮಾಧ್ಯಮಗಳಲ್ಲಿ ಹರಿಯ ಬಿಡುತ್ತಿದ್ದರೆ, ಅದರ ಯಾವುದೇ ಪ್ರತಿಕ್ರಿಯೆ ಬರದಿರುತ್ತಿದ್ದರೆ ....ಇವರ ಯಾವ ಹೇಳಿಕೆಗಳೂ ಇರುತ್ತಿರಲಿಲ್ಲ. ಆದ ಘಟನೆ ಸದ್ದಿಲ್ಲದೇ ಮೂಲೆಗೆ ಸೇರಿಬಿಡುತ್ತಿತ್ತು. ಇಂತಹ ಅದೇಷ್ಟೋ ತಪ್ಪುಗಳು ಅಪ ಸವ್ಯಗಳು ಮೂಲೆ ಸೇರಿರುತ್ತವೆ. ಇದೂ ಆ  ಸಾಲಿಗೆ.  ಹಾಗಾದರೆ ಅದಕ್ಕೆ ಹೊರಬಂದ ಪ್ರತಿಕ್ರಿಯೆಗಳೂ ಒಂದು ಅಸಮಾಧಾನಕ್ಕೆ ಕಾರಣವಾದರೆ ಅದಕ್ಕೆ ಕಾರಣ ವೈಯಕ್ತಿಕ ಪ್ರತಿಷ್ಠೆ.  ವೈಯಕ್ತಿಕವಾಗಿ ಘಾಸಿಯಾದಾಗ ಪರಿಸರ ಪ್ರಜ್ಞೆ ಮೂಡುತ್ತದೆ. ಯೋಚಿಸಿ ಕೆರೆಯ ನೀರು ಮಲಿನವಾದರೆ ಜಲಚರಗಳೂ ಕೆಟ್ಟು ಹೋಗುತ್ತವೆ. ಯಕ್ಷಗಾನದ ಸ್ಥಿತಿಯೂ ಕೆರೆಯ ನೀರಂತೆ ಎಂಬ ಪ್ರಜ್ಞೆ ಮೂಡದಿರುವುದು ಭಾವನೆಗಳ ಕೊರತೆ ಎನ್ನಬೇಕಾಗುತ್ತದೆ.

        ಇತ್ತೀಚೆಗೆ ಯಕ್ಷಗಾನದ ಸ್ಥಿತಿ ಹೇಗಾಗಿದೆ ಎಂದರೆ, ಹಾಸ್ಯಗಾರರೊಬ್ಬರು ಹೇಳಿದ ಮಾತು ನೆನಪಾಗುತ್ತದೆ "ಪರ್ಕಟ್ ಅಂಗಿಗ್ ಕೈ ಪಾಡ್ನವುಲೇ ಕಿಸೆ"  ಚಿಂದಿಯಾದ ಬಟ್ಟೆಯಲ್ಲಿ ಮತ್ತೊಂದು ಹರುಕು ಉಂಟಾದಂತೆ.  ಹೆಚ್ಚೇನೂ ಪರಿಣಾಮವಿಲ್ಲ. ಇಲ್ಲವಾದರೆ ಒಂದೇರಡು ರಾಗ ಅನುಕರಿಸುವವನು ಪ್ರಧಾನ ಭಾಗವತನಾಗುತ್ತಾನೆ. ಕುಣಿತ ತಿಳಿಯದವನು ಪ್ರಧಾನ ಕಲಾವಿದನಾಗುತ್ತಾನೆ. ತನಗೆ ತಿಳಿಯದೇ ಇರುವದ್ದು ಹೇಳಿಕೊಡುವವನು ಗುರುವಾಗುತ್ತಾನೆ. ಅಧ್ಯಯನದ ದಿಕ್ಕು ದೆಸೆಗಳೇ ಬದಲಾಗಿದೆ.  ಹಾಗೆ ಈ ಹರಕುಗಳೊಂದಿಗೆ ಇದು ಇನ್ನೊಂದು ಅಷ್ಟೆ. ಕೈ ಹಾಕಿದಲ್ಲೆಲ್ಲ ಕಿಸೆ ಅಂತ ತೃಪ್ತರಾಗಬೇಕು.  ಇವುಗಳನ್ನೆಲ್ಲ ನಿಯಂತ್ರಿಸುವುದಕ್ಕೆ ಒಂದು ನಿಯಂತ್ರಣದ ನಿಯಮವೋ ಸಮಿತಿಯೋ ಇನ್ನೇನೋ ಇರಬೇಕಂತೆ. ಹೇಗಿದೆ. ನಾವು ತಪ್ಪುತ್ತಿದ್ದೇವೆ. ನಮ್ಮನ್ನು ನಿಯಂತ್ರಿಸಿ ಅಂತ ಹೇಳಿದಂತೆ. ಹುಚ್ಚು ನಾಯಿ ಕಚ್ಚಿದವನು ಸಂಕಲೆ ತಂದು ಕೊಟ್ಟಂತೆ ಅನ್ನಿಸುವುದಿಲ್ಲವೇ? ನಿಯಂತ್ರಣ ನಿಯಮ ಸಮಿತಿ ಅಧುನಿಕ ಭಾಷೆಯಲ್ಲಿ ಸೆನ್ಸಾರ್ ಇವುಗಳೆಲ್ಲ ಇದ್ದರಷ್ಟೇ ನಾವು ನಿಯಂತ್ರಣಕ್ಕೆ ಒಳಗಾಗಬೇಕೆ?  ರಸ್ತೆಯ ಮಧ್ಯೆ ಶಿಸ್ತಿನ ಸಂಚಾರಕ್ಕೆ ರಸ್ತೆ ವಿಭಾಜಕವನ್ನು ನಿರ್ಮಿಸುತ್ತಾರೆ. ಯಾಕೆ? ನಾವು ಸಂಚರಿಸುವಾಗ ಸುಮ್ಮನೇ ಇಲ್ಲಿ ರಸ್ತೆ ವಿಭಾಜಕ ಇದೆ ಅಂತ ಕಲ್ಪಿಸಿಕೊಂಡು ಸಂಚರಿಸಬಹುದಲ್ಲ? ಯಕ್ಷಗಾನಕ್ಕೆ ಸಂಭಂಧಿಸಿ ಈ ಗೌರವ ಮನಸ್ಸಿನಲ್ಲಿ ಇದ್ದರೆ ಯಾವ ಸೆನ್ಸಾರ್ ಕೂಡ ಬೇಡ. ಯಾವ ನಿಯಮವೂ ಬೇಡ. ತರಗತಿಯೊಳಗೆ ಗುರುಗಳು ಇಲ್ಲದೇ ಇದ್ದರೂ ಮಕ್ಕಳು ಮೌನವಾಗಿ ಗುರುಗಳು ಇದ್ದಾರೆ ಎಂಬ ಭಾವನೆಯಲ್ಲಿರಬೇಕು. ಅದನ್ನೇ ಶಿಸ್ತು ಎನ್ನುವುದು. ಹಾಗಾದರೆ ನಮಗೆ ಶಿಸ್ತು ಬೇಕು ಎನ್ನುವ ಅರಿವು ಇದೆ. ಹಾಗಿದ್ದರೆ ಈ ಅಪಸವ್ಯಗಳು ಬೇಕೆಂದೇ ತಿಳಿದೇ ಮಾಡುವ ಅಪರಾಧಗಳಾಗುತ್ತವೆ.  ಇದಕ್ಕೆ ಕ್ಷಮೆ ಕೇಳುವ ನೈತಿಕತೆಯಾದರೂ ಉಳಿದಿರುವುದಕ್ಕೆ ಸಾಧ್ಯವೇ?  

        

        ಕಳ್ಳತನ ಮಾಡುವುದು ತಪ್ಪು ಎಂದು ಕಳ್ಳನಿಗೆ ಅರಿವಿದೆ. ಹಾಗಾಗಿ ಆತ ಯಾರಿಗೂ ಕಾಣದಂತೆ ಕದಿಯುತ್ತಾನೆ. ನಿಯಮ ಎಂದು  ಕೇವಲ ಭಾವನೆಯಷ್ಟೇ. ನಾವದಕ್ಕೆ ಪ್ರಾಮಾಣಿಕವಾಗಿದ್ದರೆ ಅದು ಶಿಸ್ತು ಎಂದಾಗುತ್ತದೆ. ಮದ್ಯದಂಗಡಿಯಲ್ಲಿ ಮದ್ಯದ ಸೀಸೇ ಎದುರಿಗೇ ಕಾಣುವಂತೆ ಇಟ್ಟರೂ ಕುಡಿಯುವವನು ಮರೆಯಲ್ಲಿ ಹೋಗಿ ಕುಡಿಯುತ್ತಾನೆ. ಮದ್ಯಕ್ಕೆ ಯಾವ ಮಾನ ಅಪಮಾನವೂ ಇಲ್ಲ. ಕ್ರಿಯೆಗೆ ಮಾತ್ರ. ನಮ್ಮ ಕ್ರಿಯೆ ಪರಿಶುದ್ಧವಾಗಬೇಕು. ಹಾಗಾದರೆ ಮಾತ್ರ ಯಕ್ಷಗಾನವೂ ಪರಿಶುದ್ಧವಾಗುತ್ತದೆ. ಗೌರವಿಸಲ್ಪಡುತ್ತದೆ. ಈ ಘಟನೆಯ ಬಗ್ಗೆ ಈ ವಿವಾದದ ಬಗ್ಗೆ ಇನ್ನು ಹೆಚ್ಚಿನದ್ದು ಹೇಳುವ ಆವಶ್ಯಕತೆಯೂ ಇಲ್ಲ. ಆ ಗೌರವವೂ ಇಲ್ಲ. ಕೊನೆಯಲ್ಲಿ ಹೇಳುವುದೊಂದೇ ಸದಾಶಯಗಳು ಜೀವಂತವಾಗಿರಲಿ.  ಯಕ್ಷಗಾನಂ ಗೆಲ್ಗೆ. 








Wednesday, October 27, 2021

ಬದಲಾಗದ ಸತ್ಯ

       ಮೊನ್ನೆ ಒಬ್ಬರು ಮಿತ್ರರು ಒಂದು ಯೂಟ್ಯೂಬ್ ಯಕ್ಷಗಾನವನ್ನು ಕಳುಹಿಸಿದ್ದರು. ಇಂತಹ ವಿಷಯಗಳು ಆಸಕ್ತಿಯನ್ನು ಕಳೆದುಕೊಂಡು ಬಹಳ ದಿನಗಳು ಕಳೆದು ಹೋಗಿದೆ.  ಅದನ್ನು ನೋಡಿ ವಿಮರ್ಶೆ ಬರೆಯುವಂತೆ ಸಂದೇಶ ಕಳುಹಿಸಿದರು. ನಾನು ಯಾವುದೇ ಪ್ರತಿಕ್ರಿಯೇ ತೋರಲಿಲ್ಲ. ನನಗೆ ಆಸಕ್ತಿ ಇಲ್ಲ. ಆದರೆ ಅವರು ಬಿಡಬೇಕಲ್ಲ. ಪ್ರತಿಕ್ರಿಯೆ ಇಲ್ಲದೆ ಇರುವಾಗ ಕರೆ ಮಾಡಿದರು. ನೋಡಿ ಚೆನ್ನಾಗಿದೆ ಅಂತ ಒತ್ತಾಯ ಮಾಡಿದರು. ನಾನು ಸಮಯವಾದಾಗ ನೋಡುತ್ತೇನೆ ಎಂದು ಸಾಗ ಹಾಕಿದೆ. ಇಲ್ಲ ಮರುದಿನ ಪುನಃ ಕರೆ ಮಾಡಿದಾಗ ಒಂದು ಸಲ ನೋಡೋಣ ಎಂದು ನೋಡಿದೆ. ಅಷ್ಟೇ  ಒಂದಷ್ಟು ಹಾರಿಸಿ ನೋಡುವ ಪ್ರಚೋದನೆಯನ್ನು ಹತ್ತಿಕ್ಕಿಕೊಳ್ಳಲಾಗಲಿಲ್ಲ.  ಒಂದಷ್ಟು ನೋಡಿ ಮತ್ತೆ ಅದನ್ನು ನಿಲ್ಲಿಸಿಬಿಟ್ಟೆ.  ಆ ಮಿತ್ರರು ಮರುದಿನ ಪುನಃ ಕರೆ ಮಾಡಿ ಅಭಿಪ್ರಯ ಕೇಳಿದರು. ಇಂತಹ ಸನ್ನಿವೇಶದಲ್ಲಿ ಪ್ರಜ್ಞಾವಂತರು ಜಾಣತನದಿಂದ ವರ್ತಿಸುವುದು ಕ್ಷೇಮಕರ. ಯಾಕೆಂದರೆ ನಮಗನಿಸಿದ್ದನ್ನು ನೇರವಾಗಿ ಹೇಳಿದರೆ ಮಾನಸಿಕ ಆರೋಗ್ಯ ಹದಗೆಡಬಹುದು. ಆದರೆ ಸನ್ನಿವೇಶ ತೀರಾ ವ್ಯತಿರಿಕ್ತವಾಗುತ್ತದೆ.ನಮ್ಮ ಪ್ರತಿಕ್ರಿಯೆ ಹೇಗಾದರು ಪಡೆಯುವ ಇಕ್ಕಟ್ಟಿಗೆ ಸಿಲುಕಿಸಿಬಿಡುವ ಆತುರವಿರುತ್ತದೆ.     

        ಪುನಃ ಹೇಗಿತ್ತು ಎಂಬ ಪ್ರಶ್ನೆ. ನಾನು ಪೂರ್ಣವಾಗಿ ನೋಡಿಲ್ಲ. ಯಾಕೆ ನೋಡಿಲ್ಲ ಮರು ಪ್ರಶ್ನೆ ಒಡನೆಯೇ ಬರುತ್ತದೆ. ಸ್ಥಿತಿ ಎಲ್ಲಿವರೆಗೆ ಎಂದರೆ ಹೇಗಾದರೂ ನಮ್ಮ ಪ್ರತಿಕ್ರಿಯೆಯನ್ನು ಪಡೆದೇ ತೀರುವ ಹಪಹಪಿಕೆ ಇರುತ್ತದೆ. ಹಾಗಾಗಿ ಅನಾವಶ್ಯಕ ವಿವಾದಗಳು ಹುಟ್ಟಿಕೊಳ್ಳುವ ಅಪಾಯವಿರುತ್ತದೆ. ಮತ್ತೊಂದು , ನಾನಂತೂ ನನ್ನ ಅನುಭವಕ್ಕೆ ಸೀಮಿತವಾಗಿ ನಿಲ್ಲುವವನು. ನನ್ನ ಅನುಭವ ಹೇಗೋ ಹಾಗೆ ಆ ತಳಹದಿಯಲ್ಲೇ ಅನಿಸಿಕೆಗಳು ಚಿಗುರೊಡೆಯುತ್ತವೆ. 

        ಕೊನೆಗೆ ನಿಷ್ಠೂರವಾಗಿ ಹೇಳಿದೆ, ಬಾಯಿಮುಚ್ಚಿಸುವುದೋಂದೆ ಉದ್ದೇಶ. ಹಲವು ಸಲ ನಂಬರ್ ಬ್ಲಾಕ್ ಮಾಡಿಬಿಡಬಹುದು. ಸುಮ್ಮನೇ ವೈಷಮ್ಯ ದಾಕ್ಷಿಣ್ಯ. ಹಾಗಾಗಿ ನಾನು ಹೇಳಿದೆ.  ಅಸಲೀ ಶುದ್ದ ಸಂಗೀತ ನನ್ನಲ್ಲಿ ಬೇಕಾದಷ್ಟು ಇದೆ. ನಾನು ಅದರಲ್ಲೇ ಕೇಳುತ್ತೇನೆ. ಅವರಿಗೆ ಮೊದಲಿಗೆ ಅದರ ಆಳ ಅರ್ಥವಾಗಲಿಲ್ಲ. ನಂತರ ಅರ್ಥವಾಯಿತು. ಆನಂತರ ಅವರ ಕರೆಯೂ ಇಲ್ಲ. ಸಂದೇಶಗಳೂ ಇಲ್ಲ. ಬಹುಶಃ ವೈಷಮ್ಯ ಯಾಕೆ ಅಂತ ನಾನು ದಾಕ್ಷಿಣ್ಯ ತೋರಿದೆನೋ ಅದು ಸುಮ್ಮನೆ ಅಂತ ಸಾಬೀತಾಯಿತು.  ಗಾನ ಗಾಯನವಾಗಿ ಬದಲಾಗಿ ಹೋಗಿರುವುದಕ್ಕೆ ನನ್ನಲ್ಲಿ ಯಾವ ಆಕ್ಷೇಪವೂ ಇಲ್ಲ. 

          ಬೆಂಗಳೂರಲ್ಲಿ ಬೇಕಾದಷ್ಟು ಮಂಗಳೂರು ಸ್ಟೋರ್ ಗಳು ಇವೆ.   ಹೆಚ್ಚಾಗಿ ನಮ್ಮೂರಿನ ಹಲವಾರು ಸಾಮಾಗ್ರಿಗಳು, ಕುಚ್ಚಿಲಕ್ಕಿಯಿಂದ ತೊಡಗಿ ತರಕಾರಿ ತಿಂಡಿಗಳು ಔಷಧಿಗಳು ಪಾತ್ರೆ ಪಗಡೆಗಳು ಊರಿನದ್ದು ಅಂತ ಇಲ್ಲಿ ಮಾರಾಟವಾಗುತ್ತಿದೆ. ತೆಂಗಿನಕಾಯಿ ಸಹ ಇದು ಊರಿನಿಂದ ಅಂತ ಹೇಳಿ ಒಂದಕ್ಕೆ ಎರಡು ದರ ಪೀಕಿಸುವವರೂ ಇದ್ದಾರೆ. ಅಸಲಿಗೆ ಅಲ್ಲೆ ಗಾಡಿಯವನಿಂದ ತೆಂಗಿನ ಕಾಯಿ ತಂದಿಟ್ಟಿರುತ್ತಾರೆ ! ಎಲ್ಲರೂ ಅಲ್ಲ ಕೆಲವರು. ಇನ್ನು ತಿಂಡಿಗಳು ಹೆಚ್ಚಾಗಿ ಇಲ್ಲೆ ತಯಾರದರೂ ಮಂಗಳೂರಿನದ್ದು ಅಂತ ಬಣ್ಣ ಹಚ್ಚಿಬಿಡುತ್ತಾರೆ. ಅಸಲಿಗೆ ಅದು ಎಲ್ಲವೂ ತಯಾರಾಗುವುದು ಬೆಂಗಳೂರಲ್ಲೆ.  ಕೊಳ್ಳುವವರಿಗೂ ನಮ ಊರುದಕ್ಲು ಅಂತ ಭ್ರಮೆ ಇರುತ್ತದೆ. ಇಷ್ಟೆಲ್ಲಾ ಸಿಗುತ್ತಿದ್ದರೂ ನಾವು ಊರಿಗೆ ಹೋದರೆ ಊರಿನಿಂದಲೆ ಕುಚ್ಚಿಲಕ್ಕಿ ಮೂಟೆ ಹಲಸಿನಕಾಯಿ ಇನ್ನಿತರ ಸಾಮಾನು ಕಾರಿನಲ್ಲಿ ಜಾಗವಿಲ್ಲದೆ ಇದ್ದರೂ ತುಂಬಿಸಿ ಬಿಡುತ್ತೇವೆ. ಯಾಕೆ ಊರಿನಿಂದ ತಾಜಾ ಅಸಲಿ ಸಿಗುವಾಗ ಇಲ್ಲಿ ಸಿಗುವ ಅನುಮಾನದ ವಸ್ತು ಯಾಕೆ? ಮೂಲದಲ್ಲಿ ಏನಿದೆ ಅದನ್ನೇ ಪಡೆಯುವ ಬಯಕೆ. 

           ಹೌದು ಈಗಿನ ಕಾಲವೆಂದರೆ ನಕಲಿ ಯುಗ ಮೂಲದ ಅಸಲೀ ಬದಲಾಗಿ ನಕಲಿಯೇ ಅಸಲಿಯಾಗಿ ಅವತಾರ ಎತ್ತುತ್ತಿದೆ. ಹಾಗಾಗಿ ಮೂಲದ ಅಸಲಿಯ ಹಿಂದೆ ಹೋಗಿ ಆದಷ್ಟು ಉತ್ಕೃಷ್ಟ ಪರಿಶುದ್ದವನ್ನು ಪಡೆಯುವ ಬಯಕೆ ಎಲ್ಲರಿಗೂ ಇರುತ್ತದೆ. ಅಲ್ಲಿಂದ ತಂದು ಇಲ್ಲಿ ಎರಡು ದಿನ ಕಳೆದು ಬಾಡಿದ ಬಸಲೆ ಬೆಂಡೇಕಾಯಿ ಗಿಂತ ಊರಿಗೆ ಹೋದಾಗ ಅಲ್ಲಿಂದ ಶುದ್ಧವಾಗಿದ್ದದ್ದನ್ನೇ ತರುವ ಬಯಕೆ ಯಾರಿಗಿಲ್ಲ ಹೇಳಿ? ಹಾಗಾಗಿ ಅಸಲೀ ಸಂಗೀತವನ್ನು ಕೇಳುವುದಕ್ಕೆ ಯಕ್ಷಗಾನವನ್ನು ನೋಡುವ ಅನಿವಾರ್ಯತೆ ನನಗೆ ಇಲ್ಲ.ಶುದ್ದವಾದ ಸಂಗೀತಸಿಗುವ ತಾಣಗಳು ಬೇಕಾದಷ್ಟು ಇರುವಾಗ ಈ ರೂಪಾಂತರಿಯ ಹಿಂದೆ ಹೋಗುವ ಅನಿವಾರ್ಯತೆ ಯಾಕೆ?  ಅಲ್ಲಿ ಒಂದರ ಜತೆ ಇನ್ನೊಂದು ಉಚಿತ ಅಂತ  ಎಣ್ಣೆಯ ಜತೆ ಮಡ್ಡಿನ ರೂಪದ ಹಿಂಡಿಯನ್ನು ಪಡೆಯುವ ಸಂಭವ ಯಾರಿಗೆ ಬೇಕು? ಹಾಗಾಗಿ ಯಕ್ಷಗಾನ ಅರ್ಧಕ್ಕೆ ನಿಲ್ಲಿಸಿದ್ದೆ. ಇದು ಕೇವಲ ನನ್ನ ಅಭಿರುಚಿಗೆ ಸಂಭಂಧಿಸಿದ ವಿಚಾರ. 

                ಯಕ್ಷಗಾನ ಬದಲಾಗಿದೆ. ಬದಲಾಗುವ ಅನಿವಾರ್ಯತೆ ಇದ್ದರೂ ಇರಬಹುದು. ಆದರೆ ಕೇಳುವ ಅನಿವಾರ್ಯತೆ ನನಗಿಲ್ಲ. ಹಾಗಾಗಿ ಸಂಗೀತಮಯ ಲೋಕದ ಹೊರ ಬಾಗಿಲಿನಿಂದಲೇ ಒಮ್ಮೆ ಇಣುಕಿ ಮತ್ತೆ ವಾಪಾಸಾಗಿಬಿಡುತ್ತೇನೆ. 

         ಈಗಂತೂ ಹಲವು ಶೈಲಿಗಳು ಅವತಾರ ಎತ್ತಿವೆ. ಎಲ್ಲವನ್ನೂ ಅಧಿಕೃತವಾಗಿಸುವ ಹಂಬಲ ಎಲ್ಲರಲ್ಲು ಇರುತ್ತದೆ. ಆದರೆ ಮೂಲ ಅಥವಾ ಅಸಲಿಯಾದದ್ದು ಎಂಬುದೊಂದು ಇದೆ ಎಂಬುದನ್ನು ತಳ್ಳಿಹಾಕುವ ಹಾಗಿಲ್ಲ.  ಆದರೆ ವಾಸ್ತವದಲ್ಲಿ  ಈ ಮೂಲದ ಅಸಲಿಯ ಅಸ್ತಿವಾರದ ಮೇಲೆ  ನಕಲಿಯ ಸೌಧ ಎದ್ದು ನಿಲ್ಲುತ್ತದೆ. ಅದನ್ನು ನಕಲಿ ಅಂತ ಹೇಳಬೇಕೆ ಬೇಡವೆ ಎಂಬ ಅನುಮಾನ ಇದೆ. ಆದರೂ ಅಸಲಿಯ ದ್ವಂದ್ವ ಅಂತ ಉಪಯೋಗಿಸಿದ್ದೇನೆ.   ಮೂಲ ಪಂಚಾಗ ಮಣ್ಣಿನಡಿಯಲ್ಲಿ ಹೂತು ಹೋಗುವಂತೆ ಅದು ಮರೆಯಾಗಿ ಹೋಗಿದೆ. ನಕಲಿಗೆ ತಾನು ಅಸಲಿಯ ಮೇಲೆ ನಿಂತಿದ್ದೇನೆ ಎಂಬ ಪರಿವೆಯೇ ಇಲ್ಲದಂತೆ ಮೇಲೆ ನಗುತ್ತಿದೆ ಎನ್ನುವುದಕ್ಕಿಂತ ಅಟ್ಟಹಾಸ ಮೆರೆಯುತ್ತದೆ. 

        ಅದೇನಿದ್ದರೂ ಅಭಿರುಚಿಯೊಂದೇ ಅಸ್ತಿತ್ವಕ್ಕೆ ಕಾರಣವಾಗುತ್ತದೆ. ಹಾಗಾಗಿ ಮೂಲದಲ್ಲಿ ಯಾವುದು ಎಂಬುದರ ಗಂಭೀರ ಚಿಂತನೆ ಇರುವುದಿಲ್ಲ. ಬೆಂಗಳೂರಿನ ಹೊರವಲಯದಲ್ಲಿ ದೊಡ್ಡ ಆಲದ ಮರ ಒಂದಿದೆ. ಜಗತ್ಪ್ರಸಿದ್ಧ ಬೃಹತ್ ಆಲದ ಮರ. ಬಹಳಷ್ಟು ಮಂದಿ ಕೌತುಕದಿಂದ ಅದನ್ನು ನೋಡುತ್ತಾರೆ. ವಿಪರ್ಯಾಸವೆಂದರೆ ಈಗ ನಾವು ಕಾಣುತ್ತಿರುವ ಮರ ಅದು ಮೂಲದಲ್ಲಿರುವ ಮರವೇ  ಅಲ್ಲ. ಮೂಲದಲ್ಲಿ ಹುಟ್ಟಿದ ಮರ ಎಂದೋ ಸತ್ತು ಹೋಗಿದೆ. ಅದರ ಬಿಳಲಷ್ಟೇ ಉಳಿದು ನೋಡಿದವರು ಅದೇ ಮೂಲದ ಮರ ಎಂಬ ಭ್ರಮೆಯಲ್ಲಿರುತ್ತಾರೆ. ಯಕ್ಷಗಾನಕ್ಕೆ ಸಂಬಂಧಿಸಿ ಇದೇ  ಭ್ರಮೆ ಎಂದರೆ ಬಹಳ ಅರ್ಥ ಪೂರ್ಣವಾಗುತ್ತದೆ. ಸರಿ ಯಾವುದು?  ತಪ್ಪು ಯಾವುದು?  ಎಂಬ ಚರ್ಚೆಗಿಂತಲೂ  ಸತ್ಯ ಯಾವುದು ಎಂಬುದರ ಅರಿವು ಮಾತ್ರ ಮುಖ್ಯವಾಗುತ್ತದೆ. ಇಲ್ಲಿ ಅಭಿರುಚಿ ಮಾತ್ರ ವಾಸ್ತವದ ಸತ್ಯ. ಹಲವು ಸಲ ಅಭಿರುಚಿ ಎಂಬುದು ಎಲ್ಲದಕ್ಕೂ ಅತೀತವಾಗಿರುತ್ತದೆ.  ಯಾವುದೇ ತಿಂಡಿಗೂ ಸಮೃದ್ಧವಾಗಿ ಚಟ್ನಿ ಹಾಕಿ ಸವಿಯುವ ತಮಿಳರ ಮುಂದೆ ಐಸ್ಕ್ರೀಂ ತಂದಿಟ್ಟರು "ಚಟ್ಟಿ ಇಲ್ಲೇಯಾ " ಅಂತ ರಾಗವೆಳೆದರೆ ಆಶ್ಚರ್ಯ ಪಡಬೇಕಿಲ್ಲ. ಅದು ಅಭಿರುಚಿ ಎಂದು ಸುಮ್ಮನಾಗಬೇಕು. ಆದರೂ ಇದರನಡುವೆ ಸತ್ಯ ಏನೆಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವಷ್ಟು ಮನೋಧರ್ಮವನ್ನಾದರೂ ರೂಢಿಸಿಕೊಳ್ಳಬೇಕು.  ಯಾಕೆಂದರೆ ಸತ್ಯ ಅದು ಬದಲಾಗುವುದಿಲ್ಲ.  ಏನಂತೀರಿ? 


ಎಂದಿಗೂ....ಯಕ್ಷಗಾನಂ ಗೆಲ್ಗೆ. 


Saturday, September 18, 2021

ಯಕ್ಷಗಾನ ನೈಜತೆಯ ಅಗರಿ ಪದ

 

ಹಲವು ದಿವಸಗಳ ನಂತರ ಹಿರಿಯ ಭಾಗವತರಾದ ದಿವಂಗತ ಅಗರಿ ರಘುರಾಮ ಭಾಗವತರ ಧ್ವನಿ ಸುರುಳಿ ಬಿಚ್ಚಿ ಕೇಳಿದೆ. ಯಕ್ಷಗಾನದ ಸುಸ್ವರೂಪದ ಭಾಗವತಿಕೆ. ಲಯ ಶುದ್ದಿ ಸ್ಪಟಿಕ ರೂಪದ ಉಚ್ಚಾರ ಎರಕ ಹೊಯ್ಯುವ  ತಾಳ  ಒರಟು ಸ್ವರವಾದರೂ (ಹಲವರ ಅಭಿಪ್ರಾಯ ನನ್ನದಲ್ಲ) ಸ್ವರದಲ್ಲಿರುವ ಗಾಂಭೀರ್ಯತೆ ಮತ್ತು ಆಕರ್ಷಣೆ,  ಬಿಡ್ತಿಗೆ ಎತ್ತುಗಡೆಯ ನಡುವೆ ಸಂಚರಿಸುವ ಗಾಯನ ಶೈಲಿ,  ಪದ ಮುಗಿದರೂ ತಲೆದೂಗುತ್ತದೆ.  ಈಗೀಗ ಹೊಸದಾಗಿ ಯಕ್ಷಗಾನ ಕೇಳುವ ನೋಡುವ ಪ್ರಚೋದನೆ ಮನಸ್ಸಿಗಾಗುತ್ತಿಲ್ಲ. ಅತಿಯಾದ ಸಂಗೀತ ಅಲಾಪನೆಯಿಂದ ಹಳಿತಪ್ಪಿದ ಯಕ್ಷಗಾನ ಹಿಮ್ಮೇಳ ಒಂದೆಡೆಯಾದರೆ ಮನಬಂದಂತಹ ಕುಣಿತ, ರಂಗಸ್ಥಳವನ್ನೇ ಓರೆಯನ್ನಾಗಿಸಿದ ಅನುಭವವಾಗುತ್ತದೆ. ಸಂಗೀತ , ಭಜನೆ, ಭಾವಗೀತೆ ಎಲ್ಲವೂ ಕಲಸು ಮೇಲೋಗರವಾಗಿ ಮೂಲ ಯಾವುದೆಂದು ಗುರುತು ಹಿಡಿಯದಷ್ಟು ಬದಲಾಗಿದೆ. ದುರ್ದೈವ ಎಂದರೆ ಕತ್ತಲೆ ಬೆಳಗಾಗುವುದರೊಂದಿಗೆ ಯಾವುದೋ ಬಿರುದು ತೆಲೆಗೇರಿಸಿಕೊಂಡು ಹೆಗಲಿಗೆ ಉತ್ತರಿ ಶಾಲು ಹೊದ್ದುಕೊಂಡು ಗಂಧರ್ವಗಳಾಗುತ್ತಿರುವ ನವ ಪೀಳಿಗೆಗಳಿಗೆ ಈ ಮೂಲ ಯಕ್ಷಗಾನದ ಅರಿವೇ ಇಲ್ಲ. 



ಅಗರಿ ಶೈಲಿ ಅದೊಂದು ಯಕ್ಷಗಾನದ ಮೂಲಭೂತವಾದ ಶೈಲಿ. ಬರೀ ಸಂಗೀತಮಯವಾಗುತ್ತಿರುವ ಇಂದಿನ ಭಾಗವತಿಕೆ ಕ್ಯಾಟರಿಂಗ್ ನ ಆಡುಗೆಯಂತೆ ಒಂದೊಮ್ಮೆ ರುಚಿಸಿದರೂ ಮತ್ತೆ ಹೊಟ್ಟೆ ಉಬ್ಬರಿಸುವುದಕ್ಕೆ ತೊಡಗಿ ಯಾಕಾದರೂ ಉಂಡೆನೋ ಎನ್ನುವಂತಾಗುತ್ತದೆ. ಯಾವುದೇ ಭಾಗವತರನ್ನು ಕೇಳಿ ಮೊದಲು ರಾಗದ ಹೆಸರಿಗೆ ಹಲುಬುತ್ತಾರೆ.  ಮೊಹನ ಕಲ್ಯಾಣಿ ಹೀಗೆ ಚಪ್ಪಾಳೆಗೆ ಕೀರಲುಗುಟ್ಟಿ ಬರುವ ಕಾಗೆಗಳಂತೆ ನಿಜವಾದ ಯಕ್ಷಗಾನ ನಿಸ್ತೇಜವಾಗಿ ಬಿದ್ದುಬಿಡುತ್ತದೆ. ಅತ್ತ ಹಿಂದುಸ್ಥಾನಿಯೂ ಅಲ್ಲದ ಇತ್ತ ಕರ್ನಾಟಕೀಯೂ ಅಲ್ಲದ ಗಾಯನ ಇಲ್ಲಿ ಯಕ್ಷಗಾನದ ಪ್ರಚೋದನೆಯನ್ನೂ ನುಂಗಿಹಾಕುತ್ತದೆ.  ರಾಗವಲ್ಲದೆ ಯಕ್ಷಗಾನದ ಅರಿವಿದ್ದಂತೆ ಇಲ್ಲ. ಯಥಾಗುರು ತಥಾ ಶಿಷ್ಯ ಎಂಬ ಪರಂಪರೆಯ ನಡುವೆ ಕೇಳಿದ ಅಗರಿ ರಘುರಾಮ ಭಾಗವತರ ಹಾಡುಗಾರಿಕೆ ಅದೆಷ್ಟು ಯಕ್ಷಗಾನದ ರಸವನ್ನು ಉಕ್ಕಿಸುತ್ತದೆ ಎಂದರೆ ಶುರುವಾಗಿ ಪರಮ ಮೂರ್ಧಾವಸ್ಥೆಗೆ ಕ್ಷಣದಲ್ಲಿ ಸಂಚರಿಸಿ ಅದೇ ರೀತಿ ಮಗುವನ್ನು ತೊಟ್ಟಿಲಿಗೆ ಇಳಿಸಿದಂತೆ ಮೆತ್ತಗೆ ಇಳಿಸಿಬಿಡುತ್ತದೆ. ಮನಸ್ಸಿನ ಸಹನೆಯನ್ನು ಪರೀಕ್ಷಿಸುವ ಯಾವುದೇ ವಾಮ ಮಾರ್ಗಗಳಿಲ್ಲ.  ಮಾತೆತ್ತಿದರೆ ಸಂಗೀತಮಯವಾಗುವ ಇಂದಿನ ಭಾಗವತರು ಯಕ್ಷಗಾನವನ್ನು ಕೇವಲ ಗಾಯನವನ್ನಾಗಿಸುತ್ತಾರೆ. ಗಾಯನಕ್ಕೇ ಮನಮಾಡುವಾಗ ತಪ್ಪುವ ಶ್ರುತಿ ತಾಳ ಸಾಧನೆಯ ಕೊರತೆಯನ್ನು ಹೇಳುತ್ತದೆ. ಯಾಕೋ ಯಕ್ಷಗಾನದ ಅನುಭವದ ಸ್ಪುರಣೆಯೇ ಮನಸ್ಸಿಗೆ ಆಗುತ್ತಿಲ್ಲ. ಅತ್ತ ಸಂಗೀತವೂ ಇಲ್ಲದ ಇತ್ತ ಯಕ್ಷಗಾನವೂ ಇಲ್ಲದ ಒಂದು ಬರಿದಾಗುವ ಶುಷ್ಕ ಅನುಭವ.  ಆ ದಾಹವನ್ನು ಪರಿಹರಿಸುವುದು ಹೀಗೆ ಹಳೆಯ ಧ್ವನಿಯನ್ನು ಮತ್ತೊಮ್ಮೆ ತೆಗೆದು ಆಲಿಸುವುದು. 


ಮೊದಲು ಯಕ್ಷಗಾನದ  ಹಾಡುಗಾರಿಕೆಗೆ  ಪೂರ್ವ ನಿರ್ಧಾರವಿರುತ್ತಿತ್ತು. ಅದಕ್ಕೊಂದು ಖಚಿತವಾದ ಲಯವಿರುತ್ತಿತ್ತು. ಇಂತಹ ಕಡೆಗೆ ಹೋಗುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿ ಬಂದಂತೆ ಎಲ್ಲವೂ ಆರಂಭಕ್ಕೆ ಮೊದಲೇ ನಿರ್ಧಾರವಾದಂತೆ. ಒಂದಷ್ಟು ಅಗರಿಯವರು ಹಾಡಿದ ಪದಗಳನ್ನು ತನ್ಮಯತೆಯಿಂದ ಕೇಳಿದರಷ್ಟೇ ಅದು ಅರಿವಿಗೆ ಬರುತ್ತದೆ.   ಬಳಲಿ ಬೆಂಡಾಗಿಸುವ ಪದಗಳ ಪುನರಾವರ್ತನೆಗಳಿರುವುದಿಲ್ಲ.  ಕೇಳುಗನನ್ನು ಹಿಡಿದಿಟ್ಟುಕೊಳ್ಳುವ ಯಾವ ತಂತ್ರಗಾರಿಕೆಯೂ ಇಲ್ಲಿರುವುದಿಲ್ಲ. ಎಲ್ಲಿಯೂ ಸಂಗೀತಮಯವಾಗುವುದಿಲ್ಲ. ಬದಲಿಗೆ ಕೇಳುಗ ವಶನಾಗಿಬಿಡುತ್ತಾನೆ.  ಈಗ ಪ್ರೇಕ್ಷಕ ತಾಳ ಬಡಿಯುತ್ತಾನೆ, ಭಾಗವತರು ಹಾಡುತ್ತಾರೆ ಎಂಬಂತಾಗಿದೆ. ಯಕ್ಷಗಾನದ ನಿಜಶೈಲಿಗಳು ಮರೆಯಾಗುತ್ತಾ ಯಾವುದೋ ಒಂದು ಆಧುನೀಕತೆ ಸರ್ವವ್ಯಾಪಕವಾಗಿದೆ. ಯಕ್ಷಗಾನದ ಪರಂಪರೆಯ ಅವನತಿಯ ಸಂಕೇತ ಇದು. ಯಾವ ಸಂಗೀತವನ್ನು ನಾವು ಪ್ರತ್ಯೇಕವಾಗಿ ಕೇಳಿ ಮನಸ್ಸು ಹಗುರವಾಗಿಸುತ್ತೇವೋ, ಅದೇ ಸಂಗೀತ ಇಲ್ಲಿ ಬೆರಕೆಯಾದಾಗ ಮನಸ್ಸು ರೋಸಿ ಹೋಗುತ್ತದೆ. ಮಧುರವಾದ ಸುವಸ್ತುವಿಗೆ ಕಹಿಯ ಆವರಣವನ್ನು ಹೊದಿಸಿದಂತೆ. ಈಗ ಮಾಧುರ್ಯದ ಸಿಹಿ ಇಲ್ಲದಾಗಿ ಬರಿ ಕಹಿಯ ಅನುಭವವಾಗುತ್ತಿದೆ. ಕಳೆದುಕೊಂಡ ಮಾಧುರ್ಯ ಏನು ಎಂದು ಅರಿವಿಗೆ ಬರಬೇಕಾದರೆ ಹಳೆಯ ಧ್ವನಿ ಮುದ್ರಣಗಳನ್ನು ಕೇಳಬೇಕು. ಪುಣ್ಯ ನಾವು ಅಷ್ಟಾದರೂ ಅದೃಷ್ಟವಂತರಿದ್ದೇವೆ. ಒಂದಷ್ಟು ಹಳೆಯದನ್ನು ಮೆಲುಕುವ ಅವಕಾಶವಿದೆ.  ಹಳೆಯದನ್ನು ಯಾವುದೋ ಹುಚ್ಚಿನಲ್ಲಿ ಧ್ವನಿ ಮುದ್ರಿಸಿದ ಆ ಮಹನೀಯರ ರಸಿಕತನ ಇಂದು ಒಂದಷ್ಟು ಗಂಗಾಜಲವನ್ನು ಉಣ್ಣಿಸುತ್ತದೆ. ಇಂದಿನ ಭಾಗವತರು ಕಡೆಮೆ ಎಂದರೆ ದಿವಸಕ್ಕೆ ಮೂರು ಸಲ ಅಗರಿ ಅಥವಾ ಬಲಿಪರ ಪದಗಳನ್ನುಖಡ್ಡಾಯವಾಗಿ ಕೇಳಬೇಕು.  ಎಷ್ಟು ಹಾಳುಗೆಡಹಿದ್ದಾರೆ, ಅಥವಾ ಎಷ್ಟು ಹಾಳು ಗೆಡಹುತ್ತಾರೆ ಎಂಬ ಅರಿವಾದರೂ ಉಂಟಾಗಿ ಪಾಪ ಪ್ರಜ್ಞೆ ಉಂಟಾದರೆ ಯಕ್ಷಗಾನ ಉಸಿರಾಡಬಹುದು. 




Tuesday, July 13, 2021

ವೇಷಕಳಚಿದ ಸಂಪಾಜೆ ರೈಗಳು.

 

ಯಕ್ಷಗಾನ ಅದರಲ್ಲೂ ತೆಂಕುತಿಟ್ಟು ಯಕ್ಷಗಾನ ಬಯಲಾಟಗಳಲ್ಲಿ ರಾಜ ವೇಷ ಎಂಬುದು ಪ್ರಾತಿನಿಧಿಕ ವೇಷ. ಒಡ್ಡೋಲಗದಲ್ಲಿ ಆರಂಭವಾಗುವ ರಾಜವೇಶದ ಪ್ರವೇಶ ಹಾಗಾಗಿ ವೈಶಿಷ್ಟ್ಯವನ್ನು ತಂದಿದೆ. ದೇವೇಂದ್ರ, ಅರ್ಜುನ ಇವು ಮೊದಲಿಗೆ ಕಾಣುವ ವೇಷಗಳಾದರೂ ರಾಜವೇಶವೇ ಉಳಿದಂತೆ ಸರ್ವಾಂಗೀಣವಾಗಿ ಯಕ್ಷಗಾನದ ಸಂಪೂರ್ಣ ಕಲ್ಪನೆಗೆ ಪೂರಕವಾಗಿ ನಿಂತಿದೆ. ಹಿರಣ್ಯಾಕ್ಷ, ಶಿಶುಪಾಲ ರಕ್ತ ಬೀಜನಂತಹ ಕಿಡಿ ಹತ್ತಿಸಿ ಧೂಳೆಬ್ಬಿಸುವ ಪಾತ್ರಗಳು ಯಕ್ಷಗಾನದ ವೈಭವಕ್ಕೆ ಸಾಕ್ಷಿಯಾಗಿದೆ.  ಈ ರಾಜವೇಶಗಳಲ್ಲಿ ಹಲವರು ಪ್ರಸಿದ್ಧಿಯನ್ನು ಗಳಿಸಿದ್ದಾರೆ. ಅವರಲ್ಲಿ ಒಬ್ಬರು ಇಂದು ನಮ್ಮನ್ನಗಲಿದ ಶ್ರೀ ಸಂಪಾಜೆ ಶೀನಪ್ಪ ರೈಗಳು. ಅತ್ಯಂತ ಬಡ ಕುಟುಂಬದ ಹಿನ್ನೆಲೆ ಇರುವ ಇವರು ರಾಜ ವೇಷದಲ್ಲಿ ಇವರನ್ನು ಎಲ್ಲೋ ಒಂದು ಸಲ ಉಳಿದ ಪುಂಡುವೇಶದಲ್ಲಿ ಕಂಡ ನೆನಪು ಮಾಸಿದಂತೆ ಇದೆ. ಆದರೆ ಇವರು ರಾಜವೇಶವಲ್ಲದೇ ಬೇರೆ ವೇಷದಲ್ಲಿ ಕಂಡದ್ದು ಅಪರೂಪ. ಶೀನಪ್ಪ ರೈ ಎಂದರೆ ಆ ರಾಜವೇಷ ಕಣ್ಣು ತುಂಬಿ ಬರುತ್ತದೆ. ಆ ಗಾಂಭೀರ್ಯ, ಸ್ವರಭಾರದಲ್ಲು ನಾಟ್ಯದ ಗತ್ತು ಗೈರತ್ತಿನಲ್ಲು ರಾಜವೇಷವೆಂದರೆ ಹೀಗಿರಬೇಕು ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಹಾಗೆ ಇದೆ. 

ಶೀನಪ್ಪ ರೈಗಳು ಯಕ್ಷಗಾನದ ಪಾರಂಪರಿಕ ವೇಷಧಾರಿ. ಅವಶ್ಯವಿದ್ದಲ್ಲಿ ರಭಸವವನ್ನು ಹೆಚ್ಚಿಸಿದ ವೇಗ, ಸೌಮ್ಯದಲ್ಲಿ ಮಾರ್ದವತೆಯನ್ನು ಸೃಷ್ಟಿಸುವ ಕುಶಲಗಾರಿಕೆ ಸಂಪಾಜೆಯವರಲ್ಲಿ ತುಂಬಿಕೊಂಡ ಪ್ರತಿಭೆಗಳು. ಇವರ ರಾಜವೇಶವನ್ನು ಕಾಣುವುದೆಂದರೆ ಅದೊಂದು ನಿಜ ಯಕ್ಷಗಾನದ ವೈಭವ ಎನ್ನಬೇಕು. ಪ್ರವೇಶದಲ್ಲೇ  ಪ್ರೇಕ್ಷಕರ ಎದೆಗೆ ಲಗ್ಗೆ ಇಡುವ ಹೆಜ್ಜೆಗಾರಿಕೆ ಅದ್ಭುತ ಕಲ್ಪನೆಯನ್ನು ಸೃಷ್ಟಿಸ ಬಲ್ಲ ಹಿತ ಮಿತವಾದ ಮಾತುಗಾರಿಕೆ  ಬಹುಶಃ ರೈಗಗಳಿಗೆ ಸರಿ ಮಿಗಿಲೆನಿಸುವ ಕಲಾವಿದ ಇನ್ನು ಕಾಣುವುದು ಕನಸು ಎನ್ನಬೇಕು.  ಇಂದು ರಾಜವೇಷಕ್ಕೂ ಪುಂಡುವೇಷಕ್ಕೂ ವೆತ್ಯಾಸವೇ ಇಲ್ಲದಂತೆ ಕುಣಿಯುತ್ತಾರೆ. ತಾಸುಗಟ್ಟಲೆ ಕುಣಿದು ಏಕತಾನತೆಯನ್ನು ಸೃಷ್ಟಿಸುವಾಗ ಸಂಪಾಜೆಯವರ ವೈಖರಿ ಮತ್ತೂ ಮತ್ತೂ ನೆನಪಿಗೆ ಬರುತ್ತದೆ. ಯಾಕೆಂದರೆ ಅಲ್ಲಿ ಅವರ ಕುಣಿತ ಕೇವಲ ಸಂಕೇತವಾಗಿ ಉಳಿದವುಗಳು ಪ್ರೇಕ್ಷಕನ ಕಲ್ಪನೆಯನ್ನು ಚಿಗುರುವಂತೆ ಮಾಡುತ್ತದೆ. ನಿಜವಾದ ಯಕ್ಷಗಾನಕ್ಕೆ ಇಷ್ಟೇ ಸಾಕಾಗುತ್ತದೆ. ಪದದ ಪ್ರತಿಯೊಂದು ಶಬ್ದಕ್ಕೂ ಅಭಿನಯವನ್ನು ತೊರುವ ಹಪ ಹಪಿಕೆಯನ್ನು ಇಂದಿನ ಕಲಾವಿದರು ತೋರುವಾಗ ಸಂಪಾಜೆಯವರನ್ನು ಒಂದಿಷ್ಟು ನೋಡಿ ಕಲಿಯಿರಿ ಅಂತ ಹೇಳುವ ಹಾಗೆ ಶೀನಪ್ಪರೈಗಳು ಯಕ್ಷಗಾನದ ಪ್ರಾತಿನಿಧಿಕ ವೇಶಗಾರಿಕೆಗೆ ಸಾಕ್ಷಿಯಾಗುತ್ತಾರೆ. 



ಬಾಲ್ಯದಲ್ಲಿ ಇವರ ಹಿರಣ್ಯಾಕ್ಷ, ಶಿಶುಪಾಲ ನೋಡಿ  ಆ ಕ್ರೌರ್ಯಕ್ಕೆ ಬೆಚ್ಚಿ ಬಿದ್ದಿದ್ದೇನೆ. ಎಂದು ಈ ವೇಷ ಸಂಹಾರವಾಗುತ್ತದೋ ಎಂಬ ಕಾತುರತೆ ಮೂಡಿಸುವಂತಹ ಆ ಕ್ರೌರ್ಯ ಆ ಪಾತ್ರಗಳಲ್ಲಿ ಅಭಿವ್ಯಕ್ತವಾಗಬೇಕಿದ್ದರೆ  ಪಾತ್ರಗಳು ನೈಜವಾಗಿ ಅವತಾರ ಎತ್ತಿದಂತೆ ಭಾಸವಾಗುತ್ತಿತ್ತು. ಭೂದೇವಿಯನ್ನು ಕಂಡ ಹಿರಣ್ಯಾಕ್ಷ ಅಟ್ಟ ಹಾಸ ಮೆರೆಯುವಾಗ ಭೂದೇವಿಯನ್ನು ರಕ್ಷಸುವುದಕ್ಕೆ ಮಹಾವಿಷ್ಣು ಯಾಕೆ ತಡಮಾಡುತ್ತಾನೆ ಎಂಬ ಕಾತರ ಸೃಷ್ಟಿಯಾಗುತ್ತಿತ್ತು. ಯಕ್ಷಗಾನದಲ್ಲಿ ದಂತ ಕಥೆ ಎನಿಸಲ್ಪಟ್ಟ  ಅಳಕೆ ರಾಮಯ್ಯ ರೈಗಳ ಶೈಲಿಯನ್ನು ಸಾಕಷ್ಟು  ಹೋಲುವ ಇವರ ವೇಷಗಾರಿಕೆ ಅವರನ್ನು  ಆ ರೈಗಳ ನಷ್ಟವನ್ನು ಈ ರೈಗಳು ತುಂಬಿಕೊಡುವ ಪ್ರಯತ್ನ ಕಾಣುತ್ತಿತ್ತು. 


ಬದಲಾದ ಕಾಲದಲ್ಲಿ ಯಕ್ಷಗಾನ ಸಾಕಷ್ಟು ಆವಿಷ್ಕಾರವನ್ನು ಕಂಡಿದೆ. ಮಾತು ಕುಣಿತಕ್ಕಿಂತಲೂ ಅಭಿನಯಕ್ಕೆ ಒತ್ತು ಕೊಡುವ ಇಂದಿನ ದೇಹದಂಡನೆಯ ನರ್ತನ ಶೈಲಿ ಯಕ್ಷಗಾನದ ಮೂಲ ಸ್ವರೂಪವನ್ನೇ ಬದಲಾಯಿಸಿದೆ. ಅದೆಷ್ಟು ಸರಿಯೋ ವಿಷಯವಲ್ಲ. ಇಂತಹ ಸಂಕೀರ್ಣ ಸ್ಥಿತಿಯಲ್ಲೂ ಸಂಪಾಜೆಯಂತಹ ಕಲಾವಿದರು ಅನಿವಾರ್ಯ ಎನಿಸಲ್ಪಡುತ್ತಾರೆ. ರಂಗದಿಂದ ಇವರ ನಿರ್ಗಮನವಾಗುತ್ತಿದ್ದಂತೆ ದೊಡ್ಡದೊಂದು ನಿಟ್ಟುಸಿರು ಪ್ರೇಕ್ಷಕನಿಂದ ಹೊಮ್ಮಿದರೆ ಅಚ್ಚರಿ ಪಡಬೇಕಿಲ್ಲ. ಅಂತಹ ಅದ್ಭುತ ಪ್ರತಿಭೆ ಇಲ್ಲಿದೆ. ಎಲ್ಲ ಅಂಗವೂ ಹಿತಮಿತವಾಗಿರುವ ಇವರ ಶೈಲಿ ಯಕ್ಷಗಾನದ ಉಸಿರಂತೆ ಭಾಸವಾಗುತ್ತದೆ. ನಿಜಕ್ಕಾದರೆ ಇವರ ಅನುಸರಣೆ, ಇವರ ಪ್ರೇರಣೆ ಇಂದಿನ ಕಾಲಕ್ಕೆ ಯಕ್ಷಗಾನಕ್ಕೆ ಅನಿವಾರ್ಯವಾಗಬೇಕಿತ್ತು. ಇವರ ಶಿಷ್ಯ ವರ್ಗ ವಿಶಾಲವಾಗಬೇಕಿತ್ತು. ಅದು ಯಕ್ಷಗಾನಕ್ಕೆ ಬಹಳ ದೊಡ್ಡ ಆಸ್ತಿಯನ್ನು ಹುಟ್ಟು ಹಾಕುತ್ತಿತ್ತು. ಅದೊಂದು ಬಗೆಯ ನಷ್ಟವಾದರೆ, ಈಗ ಇವರ ಅಗಲಿಕೆಯಿಂದ ಮತ್ತೊಂದು ಶೂನ್ಯತೆ ಒದಗಿ ಪರಂಪರೆಯ ಯಕ್ಷಗಾನಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.  ಪರಂಪರೆಯ ಒಂದು ಕೊಂಡಿ ಕಳಚಿದೆ ಎಂದು ಸುಲಭವಾಗಿ ಹೇಳಬಹುದು. ಆದರೆ ಹಾಗೆ ಹೇಳುವಲ್ಲಿ ಅತ್ಮಾರ್ಥ  ಪ್ರಾಮಾಣಿಕತೆ ತೋರಬೇಕಿದ್ದರೆ ಅವರು ಬೆಳೆದು ಬಂದ ರೀತಿಯನ್ನು, ಅವರ ವೇಷಗಾರಿಕೆಯನ್ನು ಅನುಸರಿಸುವ ಮನಸ್ಸು ಇಂದಿನವರು ಮಾಡಬೇಕು. ಹಾಗಿದ್ದರೆ ಮಾತ್ರ ಅವರ ನಷ್ಟದ ಸಂತಾಪಕ್ಕೆ ಒಂದು ಅರ್ಥ ಬಂದೀತು. 


ಸಂಪಾಜೆಯ ಶೀನಪ್ಪ ರೈಗಳ ವೇಷ  ರಂಗದಲ್ಲಿ ನೋಡುವುದಕ್ಕಿಲ್ಲ ಎಂಬುದು ಒಂದ ಅಸಹನೆಯನ್ನು ಉಂಟು ಮಾಡುತ್ತದೆ.  ರೈಗಳು ವೇಷ ಮುಗಿಸಿದ್ದಾರೆ.  ಸಂಪಾಜೆ ಬದುಕಿನ ವೇಷ ಕಳಿಚಿಯಾಗಿದೆ.  ಅವರ ವೇಷಗಳನ್ನು ಈ ಯಕ್ಷಗಾನ ರಂಗಸ್ಥಳ ಮರೆಯುವುದಕ್ಕಿಲ್ಲ. ಇದು ಇಂದು ಸತ್ಪ್ರೇರಣೆಯಾಗಿ ಒದಗಲಿ.  ಅವರ ಆತ್ಮಕ್ಕೆ ಆ ನಿಟ್ಟಿನಲ್ಲೂ ಶಾಂತಿ ಒದಗಲಿ ಇದೇ ಮನದಾಳದ ಹಾರೈಕೆ. 

Sunday, May 16, 2021

ವಿದ್ಯಾಭ್ಯಾಸ ನಿರಂತರ


“ಯಾವುದಕ್ಕಾದರೂ ಪರಿಪೂರ್ಣತೆ ಬರಬಹುದು, ಆದರೆ ವಿದ್ಯೆಗೆ ಪರಿಪೂರ್ಣತೆ ಸಾಧ್ಯವಿಲ್ಲ. ಮನುಷ್ಯನ ಜೀವನವೇ ಒಂದು ವಿದ್ಯಾರ್ಥಿ ಜೀವನ. ಇಲ್ಲಿ ಸಾಧನೆ ನಿರಂತರ. ಅಭ್ಯಾಸ ನಿರಂತರ. “ ಇದು ಖ್ಯಾತ ಗಾಯಕ  ಶ್ರೀ ಜೇಸುದಾಸ್ ಅವರು ಶಾಸ್ತ್ರೀಯ ಸಂಗೀತದ ಕಛೇರಿಯಲ್ಲಿ ಹೇಳಿದ ಮಾತುಗಳು. ಕನಕಾಂಗಿ ರಾಗದ ಪ್ರಸ್ತುತಿಯ ಮುನ್ನುಡಿಯಾಗಿ ದಾಸೇಟ್ಟನ್ ಹೀಗೆ ಹೇಳುತ್ತಾ ಕನಕಾಂಗಿ ರಾಗದ ವಿಶೇಷತೆಗಳನ್ನು ಹೇಳಿ ತಾನು ಈಗಲೂ ನಿಯಮಿತವಾಗಿ ರಾಗಗಳನ್ನು ಅಭ್ಯಾಸ ಮಾಡುತ್ತಿದ್ದೇನೆ. ಯಾಕೆಂದರೆ ವಿದ್ಯಾಸರಸ್ವತಿ ನಮ್ಮಲ್ಲಿ ನೆಲೆ ನಿಲ್ಲಬೇಕಾದರೆ ಆಕೆಯನ್ನು ಈ ಅಭ್ಯಾಸದ ಮೂಲಕವೇ  ಸಂಪ್ರೀತಿಗೊಳಿಸಬೇಕು. ಸಾಧನೆ ಅಭ್ಯಾಸ ಇಲ್ಲದೆಡೆ ಸರಸ್ವತಿ ನೆಲೆ ನಿಲ್ಲುವುದಿಲ್ಲ.

ಎಪ್ಪತ್ತೈದರ  ಹರಯದ ಜನಪ್ರಿಯ ಸಂಗೀತ ಚಕ್ರವರ್ತಿ ಈಗಲೂ ಅಭ್ಯಾಸ ಮಾಡುತ್ತಿದ್ದಾರೆ  ಎಂದರೆ ಆಶ್ಚರ್ಯವಾಗುತ್ತದೆ. ಆ ಸಾಧನೆಯ ಗುರಿ ಉದ್ದೇಶ ಏನಿರಬಹುದು? ಜೇಸುದಾಸ್ ಹೇಳಿ ಕೇಳಿ ಖ್ಯಾತ ಗಾಯಕ. ಹಾಡದಿದ್ದ ಪ್ರಾಕಾರಗಳಿಲ್ಲ. ಭಾರತದ ಹಲವು ಭಾಷೆಗಳಲ್ಲಿ ಹಾಡಿದ ಮಹಾನ್ ಸಾಧಕ. ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಸಿನಿಮಾ ಕ್ಷೇತ್ರ ಹೀಗೆ ಎಲ್ಲ ಕ್ಷೇತ್ರದಲ್ಲಿ ತಮ್ಮ ಅದ್ವಿತೀಯ ಪ್ರತಿಭೆಯನ್ನು ಜನಪ್ರಿಯಗೊಳಿಸಿದ ಅಪ್ರತಿಮ ಕಲಾವಿದರು. ಇನ್ನು ಉನ್ನತಿಯಲ್ಲಿ ಅವರು ಏರಬೇಕಾಗಿರುವ ಪದವಿ ಏನಿರಬಹುದು? ಏನೂ ಇಲ್ಲ. ಒಬ್ಬ ಕಲಾವಿದ ಬಯಸುವ ಎಲ್ಲಾ ಬಯಕೆಗಳನ್ನು ಈಡೆರಿಸಿಕೊಂಡವನಿಗೆ ಅಭ್ಯಾಸ ಸಾಧನೆಯ ಹಾದಿ ಇನ್ನೂ ಇದೆ ಎಂದರೆ ಆಶ್ಚರ್ಯವಾಗುತ್ತದೆ.

ಯಕ್ಷಗಾನದ ಹಿರಿಯ ಭಾಗವತ ಶ್ರೀ ಬಲಿಪ್ಪ ನಾರಾಯಣ ಭಾಗವತರು, ಒಂದು ಸಲ ಮಾತನಲ್ಲಿ ಹೇಳುತ್ತಾರೆ, ಮನುಷ್ಯನಿಗೆ ಕಲಿತು ಮುಗಿಯುವುದಿಲ್ಲ. ನಿತ್ಯ ಅಭ್ಯಾಸ ಮಾಡಬೇಕು. ಆಗ ಕಲಿತ ವಿದ್ಯೆ ಉಳಿಯುತ್ತದೆ. ಯಕ್ಷಗಾನದಲ್ಲಿ ಅದು ಇಂದು ಯಾರಿಗೂ ಬೇಡ. ಸ್ವಲ್ಪ ಕಲಿತು ರಂಗಸ್ಥಳ ಹತ್ತಿದ ನಂತರ ಮತ್ತೆ ಅಧ್ಯಯನ ಕಲಿಯುವ ನಿರಂತರ ಸಾಧಿಸುವ ಮನಸ್ಸು ಬರುವುದಿಲ್ಲ. ಅಧ್ಯಯನ ಕೊರತೆ ಇಂದು ಹೆಚ್ಚಿನವರಿಗೆ ಇದೆ. ತಲೆಯಲ್ಲಿ ನಾವು ಕಲಿತಾಯಿತು ಎಂಬ ಅಹಂ ಬೆಳೆದು ಬಿಟ್ಟರೆ ಮತ್ತೆ ಆತನಲ್ಲಿ ವಿದ್ಯೆಯ ಚಿಗುರು ಅರಳುವುದಿಲ್ಲ. ಇಂಥವರಿಂದ ಯಕ್ಷಗಾನ ಉಳಿಯುವುದಾದರೂ ಹೇಗೆ?

ಕಲಾವಿದನ ಅಪೂರ್ಣ ಜ್ಞಾನ ಅದು ಅವನನ್ನು ಮಾತ್ರ ಬಾಧಿಸುವುದಲ್ಲ. ಪರೋಕ್ಷವಾಗಿ ಕಲೆಯನ್ನೂ ಬಾಧಿಸುತ್ತದೆ. ಒಂದು ಸಲ ರಂಗಸ್ಥಳ ಹತ್ತಿ ಸಂಭಾವನೆಯ ರುಚಿ ಹತ್ತಿತೋ ಮತ್ತೆ ಕಲಿಯುವ ಮನೋಭಾವ ಬರುವುದಿಲ್ಲ. ಸಿಗುವ ಸಂಭಾವನೆ ಸ್ಥಾನಮಾನ ಉಳಿಯುವುದಕ್ಕೆ ಏನೆಲ್ಲ ವಕ್ರ ಹಾದಿಗಳಿರುತ್ತವೆಯೋ ಅವುಗಳನ್ನು ಹುಡುಕುತ್ತಾ ಹೋಗುತ್ತಾನೆ. ಅದಲ್ಲೆ ಆತನೇ ಕಂಡುಕೊಳ್ಳುವ ಮಾರ್ಗವೆಂದರೆ ಹೊಸತನ. ತನ್ನ ನೆಲೆ ಕಾಯುವುದಕ್ಕಷ್ಟೇ ಮಹತ್ವ.  ಬದಲಿಗೆ ಯಕ್ಷಗಾನದಲ್ಲಿ ಏನುಂಟು? ಅದರ ಸಂಪನ್ಮೂಲದ ಹಾದಿ ಯಾವುದುಂಟು ? ಅ ಆಧ್ಯಯನಕ್ಕೆ ತೊಡಗುವುದಿಲ್ಲ. ಕಲಾವಿದ ಒಮ್ಮೆ ರಂಗ ಎರಿದನೋ ಬಾಳೆ ಗೊನೆ ಹಾಕಿದಂತೆ ಮತ್ತೆ ಅಲ್ಲಿ ಪುನಃ ಚಿಗುರು ಹುಟ್ಟುವುದಿಲ್ಲ.  ಆ ಬಾಳೆ ಮರ ಇರುವವರೆಗೆ ಅಲ್ಲಿ ಮತ್ತೊಂದು ಬಾಳೆ ಪರಿಪೂರ್ಣವಗಿ ಬೆಳೆಯುವುದೂ ಇಲ್ಲ.  ಅಧ್ಯಯನ ಶೀಲವಿಲ್ಲದ ಕಲಾವಿದ ಎಷ್ಟೇ ದೊಡ್ಡ ಸ್ಥಾನಮಾನ ಇದ್ದರೂ ಆತ ಯಕ್ಷಗಾನಕ್ಕೆ ಕಲೆಗೆ ಮಾರಕವಾಗುತ್ತಾನೆ.

            ಪ್ರಸಿದ್ಧ ಮದ್ದಲೆಗಾರ ಶ್ರೀ ಕುದ್ರೆಕೊಡ್ಲು  ರಾಮ ಭಟ್ (ಕುದ್ರೆಕೊಡ್ಲು ರಾಮಮೂರ್ತಿಯವರ ತಂದೆಯವರು) ನಮ್ಮ ಮಂಗಳೂರಿನಲ್ಲಿರುವ ಮಾವನ ಮನೆಗೆ ಆಗಾಗ ಬರುತ್ತಿದ್ದರು. ನನ್ನ ಮಾವ ಅಜ್ಜ ಹೀಗೆ ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದರು. ನಮ್ಮ ಮನೆಗೆ ಬಂದರೆ ಒಂದೆರಡು ದಿನ ತಂಗಿ ಹೋಗುತ್ತಿದ್ದರು. ಅದೇ ಸಮಯದಲ್ಲಿ ಸುತ್ತಮುತ್ತಲು ಕಾರ್ಯಕ್ರಮ ಇದ್ದರೆ ಅದು ಮುಗಿಸಿ ನಮ್ಮಲ್ಲೇ ಮೊಕ್ಕಾಂ ಹೂಡುತ್ತಿದ್ದರು.  ಸುಮ್ಮನೇ ಇದ್ದಾಗ ಚಾಪೆಯಲ್ಲಿ ಕುಳಿತು ಚೆಂಡೆ ಕೋಲಿನಿಂದ ಚಾಪೆಗೆ ಅಂದರೆ ನೆಲಕ್ಕೆ ಬಡಿದು ಚೆಂಡೆ ಅಭ್ಯಾಸ ಮಾಡುತ್ತಿದ್ದರು. ಪ್ರತೀ ದಿನ ಒಂದಷ್ಟು ಹೊತ್ತು ಸಮಯ ಇದ್ದಾಗಲೆಲ್ಲಾ ಹೀಗೆ ಚೆಂಡೆ (ಚಾಪೆ) ಬಾರಿಸುತ್ತಿದ್ದರು. ಒಂದು ಸಲ ನಾನು ಕೇಳಿದ್ದೆ ಚೆಂಡೆ ತಂದು ಬಾರಿಸುವುದಿಲ್ಲ ಯಾಕೆ ಅಂತ? ಆದರೆ ಒಂದು ಸಲವೂ ಅವರು ಚೆಂಡೆ ತಂದವರಲ್ಲ. ಆದರೆ ಬಂದಾಗಲೆಲ್ಲ  ಹೀಗೆ ಚಾಪೆಗೆ ಬಡಿಯುತ್ತಿದ್ದರು. ಚೆಂಡೆ ಹೀಗೆ ಅಭ್ಯಾಸ ಮಾಡಬೇಕು. ನಿತ್ಯ ಅಭ್ಯಾಸ ಮಾಡಿದರೆ ಒಳ್ಳೆದು ಅಂತ ನಮಗೆಲ್ಲ ಹೇಳುತ್ತಿದ್ದರು.

            ಪ್ರಸಿದ್ಧ ಮದ್ದಲೆಗಾರರಾಗಿ ಮೇಳದಲ್ಲಿ ವೃತ್ತಿನಿರತರಾಗಿದ್ದರೂ ಹೀಗೆ ನಿತ್ಯ ಅಭ್ಯಾಸ ಮಾಡುತ್ತಿದ್ದ ಅವರನ್ನು ಈಗ ನೆನಪಿಸುತ್ತಿದ್ದೇನೆ. ಅಂತಹ ವೃತ್ತಿ ಪರತೆ ಈಗ ಕಾಣುವುದಕ್ಕಿಲ್ಲ. ಚೆಂಡೆ ಇಲ್ಲದೇ ಇದ್ದರೂ ಚಾಪೆಗೆ ಬಡಿದು ಅಭ್ಯಾಸ ಮಾಡುತ್ತಿದ್ದ ಅವರ ಕಾಳಜಿ ತನ್ಮಯತೆ ಸ್ಮರಣೀಯ. ಮೇಳದಲ್ಲಿದ್ದರೇನು, ಇನ್ನೂ ಅಭ್ಯಾಸ ಶೀಲವಾಗಿರುವ ಆ ಪ್ರವೃತ್ತಿ ಇಂದಿನವರು ಬೆಳೆಸಿಕೊಳ್ಳಬೇಕು. ಅಧ್ಯಯನ ಮತ್ತು ಅಭ್ಯಾಸ ಇಲ್ಲದೇ ಇದ್ದರೆ ಯಾವ ಪ್ರತಿಭೆಗೂ ವಿದ್ಯೆಗೂ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಅದು ನಿಂತ ನೀರಾಗುತ್ತದೆ. ಕಲೆ ನಿಂತ ನೀರಾಗಬಾರದು ಅಂತ ಏನೇನೋ ಸೇರಿಸುತ್ತಾರೆ. ಅದಕ್ಕೆ ಸೃಜನ ಶೀಲತೆ ಅಂತ ಕರೆಯುತ್ತಾರೆ. ಸೃಜನ ಶೀಲತೆ ಎಂದರೆ ಮೂಲ ಕಲೆಯನ್ನು ಬದಲಿಸುವುದಲ್ಲ. ರೂಪ ವಿಕಾರ ಮಾಡುವುದಲ್ಲ. ಮೂಲ ರೂಪದಲ್ಲೇ ಅದಕ್ಕೆ ನಾವಿನ್ಯತೆಯನ್ನು ಮೆರುಗನ್ನು ಕೊಡಬೇಕು. ಅದಕ್ಕೆ ನಿತ್ಯ ಅಧ್ಯಯನ ಇರಬೇಕು.

ನಾನು ಬಾಲ್ಯದಲ್ಲಿರುವಾಗ ಒಂದೆರಡು ವರ್ಷ ನನ್ನಜ್ಜನ ಬಳಿಯಲ್ಲಿ ವೇದ ಪಾಠ ಅಭ್ಯಾಸ ಮಾಡುತ್ತಿದ್ದೆ. ವೇದ ಪಾಠದಲ್ಲಿ ನಿರಂತರವಾದ ಒಂದು ಸಾಧನೆ ಎಂದರೆ ಅದು ವರ್ಗಸಂತೆ, ವಿದ್ಯಾರ್ಥಿಗೆ ಉಪದೇಶವಾದ ಮಂತ್ರಗಳನ್ನು ಆತ ವರ್ಗಸಂತೆ , ಅಂದರೆ ನಿರಂತರ ಪಠಣದ ಮೂಲಕ ಕಲಿಯಬೇಕು. ಪ್ರತಿಯೊಂದು ಮಂತ್ರಕ್ಕೂ  ಇಷ್ಟು ವರ್ಗ ಸಂತೆ ಎಂದಿದ್ದರೂ ನಿರಂತರ ಪಠಣಕ್ಕೆ ಕೊನೆ ಇಲ್ಲ. ನಿತ್ಯ ಅಭ್ಯಾಸದ ಸಾಧನೆ ಇದ್ದಲ್ಲಿ ಆರ್ಜಿಸಿದ ವಿದ್ಯೆ ನೆಲೆನಿಲ್ಲುತ್ತದೆ. ಕಲಿತ ಮಂತ್ರ ನಾಲಗೆಯಲ್ಲಿರುತ್ತದೆ. ಹೀಗಾಗಿ ಬ್ರಾಹ್ಮಣನಾದವನಿಗೆ ವೇದ ಪಾರಾಯಣವೆಂಬುದು ನಿತ್ಯ ವಿಧಿಯಾಗುತ್ತದೆ. ಬ್ರಹ್ಮೋಪದೇಶದಿಂದ ಸ್ನಾತಕ ವೃತಧಾರಿಯಾಗುವವನ ಮುಂದೆ ಬ್ರಹ್ಮತ್ವದ ಸಾಧನೆ ಇರುತ್ತದೆ. ಈ ಸಾಧನೆಗೆ ಈ ಪಾರಾಯಣ ಸಾಧನೆಯ ಹಾದಿಯಾಗುತ್ತದೆ. ಹಾಗಾಗಿ ವಿದ್ಯೆ ಸಾಧನೆಯ ಹಾದಿಯನ್ನು ತೋರಿಸುತ್ತದೆ. ಸಾಧನೆಯ ಶಿಕರ ಮಾತ್ರ ಇನ್ನೂ ಬೆಳೆಯುತ್ತಾ ಸಾಗುತ್ತದೆ. ಅದಕ್ಕೆ ಸೀಮೆ ಎಂಬುದಿಲ್ಲ.

ವಿದ್ಯೆ ಅಮೃತವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅಫೂರ್ಣ ವಿದ್ಯೆ ಅದು ಅವಸಾನದತ್ತ ಸೆಳೆಯುತ್ತದೆ.  

 

 

 

 


Saturday, April 24, 2021

ವಿದ್ಯಯಾಮೃತ ಮಶ್ನುತೇ

             ಬಾಲ್ಯದಲ್ಲಿ ನಮ್ಮಲ್ಲಿ ಕೇಳುವ ಒಂದು ಪ್ರಶ್ನೆ ದೊಡ್ಡವನಾದ ಮೇಲೆ ಏನಾಗುತ್ತಿಯಾ? ಇದು ಬಹುತೇಕ ಎಲ್ಲ ಮಕ್ಕಳಲ್ಲೂ ಕೇಳುವ ಸಾಮಾನ್ಯ ಪ್ರಶ್ನೆ. ಈ ಪ್ರಶ್ನೆಯನ್ನು ಗಂಡು ಮಕ್ಕಳಲ್ಲಿ ಕೇಳಿದರೆ, ಹೆಚ್ಚಿನ ಮಕ್ಕಳು ಹೇಳುವ ಉತ್ತರ, ದೊಡ್ಡೋನಾದ ಮೇಲೇ ನಾನು ಬಸ್ ಡ್ರೈವರ್ ಆಗ್ತೇನೆ. ಮಕ್ಕಳಿಗೆ ಡ್ರೈವರ್ ಕೆಲಸ ಎಂದರೆ ಒಂದು ಕನಸು. ಬಾಲ್ಯದಲ್ಲಿ ಬಸ್ಸು ಬಿಡದ ಮಕ್ಕಳಿರಲಾರರು. ಈಗ ಆಟದ ಶೈಲಿ ಬದಲಾಗಿದೆ.  ಆದರೆ ಚಾಲಕ ವಿದ್ಯೆ ಅದೆಷ್ಟು ಗಹನವಾದದ್ದು ಎಂದರೆ ಆಶ್ಚರ್ಯವಾಗುತ್ತದೆ.  ಹಲವಾರು ಜನರ ಜೀವ ಕೈಯಲ್ಲಿ ಹಿಡಿದು ಕೊಂಡು ಹೋಗುವ ಕೆಲಸ.

ನಮ್ಮ ಪೈವಳಿಕೆಯಲ್ಲಿ ಓಡುವ ಎಲ್ಲಾ ಬಸ್ಸುಗಳ ಡ್ರೈವರ್ಗಳು ಒಂದು ಕಾಲದಲ್ಲಿ ನನಗೆ ತೀರ ಪರಿಚಿತರಾಗಿದ್ದರು. ಅದರಲ್ಲಿ ಕೆಲರು ಅತ್ಯಂತ ಆತ್ಮೀಯರಾಗಿದ್ದರು. ಕಿಸೆಯಲ್ಲಿ ದುಡ್ಡು ಇಲ್ಲದೇ ಇದ್ದರೂ ಬಸ್ಸಿನಲ್ಲಿ ಓಡಾಡಬಹುದಿತ್ತು. ಆಗ ತಲಪಾಡಿ ಬಸ್ಸಿನ ಚಾಲಕಮಿತ್ರನೊಬ್ಬ ಇದ್ದ. ಅವಿದ್ಯಾವಂತ,  ಆದರೆ ಡ್ರೈವಿಂಗ್ ಮಾತ್ರ ಸುಂದರ ಕಾವ್ಯಮಯ. ಆತನಲ್ಲಿ ಸಲುಗೆಯಿಂದಲೆ ಒಂದು ಸಲ ಕೇಳಿದ್ದೆ. “ ಎಂಕ್ ಡ್ರೈವಿಂಗ್ ಪಂಡ್ ದ್ ಕೊರ್ಪಾರಾ?” ( ನನಗೆ ಡ್ರೈವಿಂಗ್ ಹೇಳಿ ಕೊಡುವಿರ?) ನಾನು ಕೇಳಿದ್ದು ಏಕ್ ದಂ ಬಸ್ ಡ್ರೈವಿಂಗ್ ಕಲಿಸುವುದಕ್ಕೆ.  ಆತ, ಆ ಅವಿದ್ಯಾವಂತ ಡ್ರೈವರ್ ಹೇಳಿದ ಮಾತು ಈಗಲೂ ನನಗೆ ನೆನಪಿದೆ. ಅಣ್ಣೆರೆ, ಗುರುಸೇವೆ ಮಲ್ತ್ ಕಲ್ತ್ ದೇ. ಗುರುವೆರ್ ನ  ಅಡಿವಸ್ತ್ರಲಾ ದೆಕ್ಕ್ ದ್ ಕಲ್ತಿನ ವಿದ್ಯೆ ಉಂದು. ಆತ್ ಕಷ್ಟ ಉಂಡಣ್ಣ. ಗಾಡಿ ಏರ್ಲ ಬಲಿಪ್ಪಾವೇರ್ ಆಂಡ ನಿಜವಾಯಿನ ಡ್ರೈವಿಂಗ್ ಅವು ಕಲ್ತ್ ದೇ ಬರೋಡು. ಪೊಕ್ಕಡೇ ಬರ್ಪುಜ್ಜಿ. (ಅಣ್ಣಾ, ಗುರು ಸೇವೆ ಮಾಡಿ ಕಲಿತಿರುವೆ. ಗುರುಗಳ ಅಡಿವಸ್ತ್ರವನ್ನೂ ತೊಳೆದು ಕಲಿತ ವಿದ್ಯೆ ಇದು.  ಅಷ್ಟು ಕಷ್ಟವಿದೆ. ಗಾಡಿ ಯಾರೂ ಓಡಿಸಿಯಾರು,  ಆದರೆ ನಿಜವಾದ ಡ್ರೈವಿಂಗ್ ಅದು ಕಲಿತೇ ಬರಬೇಕು. ಸುಮ್ಮನೇ ಬರಲಾರದು). 

ವಿದ್ಯೆ ಹಲವು ವಿಧ ಇರಬಹುದು. ಆದರೆ ಪ್ರಪಂಚದ ಅಸ್ತಿವಾರವೇ ವಿದ್ಯೆ. ಎಲ್ಲದರ ಅಡಿಗಲ್ಲು ಈ ವಿದ್ಯೆ. ಅದು ತಪಸ್ಸಿನಂತೆ ತಿಳಿದೋ ತಿಳಿಯದೇಯೊ ಅದನ್ನು ಅನುಸರಿಸಿ ಅದರಿಂದಲೇ  ಭವಿಷ್ಯ ಕಟ್ಟುವುದು.

ಪರಿಪೂರ್ಣ ವಿದ್ಯಾರ್ಥಿ ಮಾತ್ರವೇ ವಿದ್ಯೆಯ ಬಗ್ಗೆ ಪೂರ್ಣ ಅಧಿಕಾರವನ್ನು ಹೊಂದಿರುತ್ತಾನೆ.  ಅದು ಲಭ್ಯವಾಗುವುದು ಪೂರ್ಣ ಅಧ್ಯಯನದಿಂದ ಮತ್ತು ಯೋಗ್ಯಗುರುವಿನಿಂದ.  ವಿದ್ಯಾರ್ಥಿ ಹುದ್ದೆ ವಿದ್ಯಾ ಪಯಣವೆಂದರೆ ಅದು ನಿತ್ಯವೂ ಅನಂತ. ಜೀವನ ಪರ್ಯಂತ.

ವಾಹನ ಚಾಲನೆ ಅಥವಾ ಡ್ರೈವಿಂಗ್ ಇದನ್ನು ಹವ್ಯಾಸ ಮಾಡಿಕೊಂಡವರ ಸಂಖ್ಯೆ ಬಹಳವಿದೆ. ಅದರಲ್ಲೂ ಬೈಕ್ ಕಾರ್ ಡ್ರೈವಿಂಗ್ ಕಲಿತ ಆರಂಭದಲ್ಲಿ ಅವುಗಳನ್ನು ಓಡಿಸುವುದು ಎಂದರೆ ನೋವು ಹಸಿವು ಎಲ್ಲವನ್ನು ಮರೆಸುತ್ತದೆ. ನಾನು ಮೊದಲು ಸೈಕಲ್ ಕಲಿತು  ಆನಂತರ ಒಬ್ಬನೇ ಪೈವಳಿಕೆ ಶಾಲಾ ಮೈದಾನದಲ್ಲಿ ಸೈಕಲ್ ಓಡಿಸಿದ ಅನುಭವ ಮರೆಯಲಾರೆ. ಹಾಗೇ ಕಾರ್ ಡ್ರೈವಿಂಗ್ ಕಲಿತು ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ದೊಡ್ಡ ಬಳ್ಳಾಪುರದಿಂದ ಬೆಂಗಳೂರು ತನಕ ಮೂದಲ ಬಾರಿಗೆ  ಕಾರು ಒಬ್ಬನೇ ಸ್ವತಂತ್ರವಾಗಿ ಓಡಿಸಿದ್ದು ಮರೆಯಲಾರೆ.  ವಾಹನ ಚಾಲನೆ,  ಅದೊಂದು ಕಲೆ.

 ಹಿಂದೊಮ್ಮೆ ಮಿತ್ರರೊಬ್ಬರ ಜತೆಗೆ ಮಿಲಿಟರಿ ಚಾಲಕ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದೆ. ಮಿಲಿಟರಿ ಪೋಲೀಸ್ ಇಲಾಖೆಗಳ ಚಾಲಕ ಸಿಬ್ಬಂದಿಗಳಿಗೆ ಅಲ್ಲಿ ಪರೀಕ್ಷೆ ಮಾಡಿ ಆಯ್ಕೆ ಮಡುತ್ತಿದ್ದರು. ಕ್ಯಾಂಪ್ ಒಳಗಡೆ ವಿಶಾಲವಾದ ಮೈದಾನ ಮತ್ತು ಹೊರಗೆ ಇರುವಂತೆ ರಸ್ತೆಗಳು ಸೂಚನಾ ಫಲಕಗಳು, ಬಸ್ ತಂಗುದಾಣ, ರೈಲ್ವೇ ಹಳಿ ಹೀಗೆ ಪರೀಕ್ಷೆಯ ಸಕಲ ಅಂಗಗಳೂ ಅಲ್ಲಿದ್ದವು. ಅಲ್ಲಿದ್ದ ಇನ್ಸ್ ಪೆಕ್ಟರ್ ಒಬ್ಬರು ವಾಹನ ಚಾಲನೆಯ ಬಗ್ಗೆ ಹೇಳುವಾಗ ನಿಜಕ್ಕೂ ವಾಹನ ಚಲಾಯಿಸುವ ವಿದ್ಯೆ ಅಷ್ಟೊಂದು ವಿಶೇಷವೇ ಅಂತ ಅನ್ನಿಸದೇ ಇರಲಾರದು. ಹೌದು ವಾಹನ ಚಾಲನೆ ಕೇವಲ ವಾಹನವನ್ನು ಓಡಿಸುವುದಲ್ಲ. ಅದರಲ್ಲಿ ಹಲವು ಸಂಗತಿಗಳಿವೆ ಅದನ್ನು ಅರಿತರೆ ಮಾತ್ರ ಆತ ಪೂರ್ಣ ಪ್ರಮಾಣದಲ್ಲಿ ಚಾಲಕನಾಗಬಲ್ಲ. ರಸ್ತೆಯಲ್ಲಿ ವಾಹನ ಓಡಿಸಬೇಕಿದ್ದರೆ ಚಾಲಕನಿಗೆ ಯಾವೆಲ್ಲ ಅರ್ಹತೆಗಳಿರಬೇಕು ಇದನ್ನು ತಿಳಿದರೆ ಇಂದು ಶೇಕಡ ಎಪ್ಪತ್ತೈದು ಮಂದಿ ವಾಹನ ಓಡಿಸುವಂತಿಲ್ಲ. ಡ್ರೈವಿಂಗ್ ಕೇವಲ ವಿದ್ಯೆಯಲ್ಲ. ಅದೊಂದು ಕಲೆ. ಡ್ರೈವರ್ ಎಂದರೆ ಒಂದು ಗೌರವಾನ್ವಿತ ಹುದ್ದೆ. ಆತ ಅದರ ಬಗ್ಗೆ ಎಷ್ಟು ಅಭ್ಯಾಸ ಮಾಡಿದ್ದಾನೆ ಎಂಬುದರಲ್ಲಿ ಚಾಲನೆ ಗೌರವಾನ್ವಿತ  ಅಂತ ಅನ್ನಿಸಿಕೊಳ್ಳುವುದು. ಚಾಲಕನಾದವನು ತಾನು ಓಡಿಸುವ ವಾಹನದ ಪ್ರತಿಯೊಂದು ಭಾಗವನ್ನು ಅರಿತಿರಬೇಕು. ಆಗಲೇ ಆತ ಚಾಲಕನಾಗುವುದು.

ಒಂದು ವಾರದಲ್ಲಿ ಡ್ರೈವಿಂಗ್ ಕಲಿತು ರಸ್ತೆಯಲ್ಲಿ ರಾಜ ಠೀವಿಯಲ್ಲಿ ಹೋಗುವುದನ್ನು ಕಾಣುವಾಗ ಡ್ರೈವರ್ ಎರಡು ವರ್ಷ ಕಲಿತಿರುವ ಡ್ರೈವಿಂಗ್ ಆದರೂ ಯಾವುದು? ಅದನ್ನೇ ವಿದ್ಯೆ ಎನ್ನುವುದು.ಒಂದು ವಾರದಲ್ಲಿ ಕಲಿಯುವುದಕ್ಕೂ ಎರಡುವರ್ಷ ಕಲಿತಿರುವುದಕ್ಕೂ ವೆತ್ಯಾಸವಿಲ್ಲವೇ? ಇದೆ, ಅದರ ಮೌಲ್ಯದಿಂದ ಗುರುತಿಸಬೇಕು. ಇಂದಿನ ಕ್ಷಿಪ್ರಯುಗದಲ್ಲಿ ಕಲಿಯುವವರಿಗೆ ಈ ಮೌಲ್ಯ ಅರ್ಥವಾಗುವುದಿಲ್ಲ.

 

ವಿದ್ಯಯಾಮೃತ ಮಶ್ನುತೆ, ಎಂದು ಜ್ಞಾನಿಗಳು ಹೇಳುತ್ತಾರೆ. ಪ್ರಪಂಚದ ಇರುವಿಕೆಯ ಕುರುಹಾದ ಜ್ಞಾನದ ರಹದಾರಿಯೇ ವಿದ್ಯೆ. ಆ ವಿದ್ಯೆ ಅಮೃತ ಸದೃಶ. ಗುರು ವಿದ್ಯಾದಾನವನ್ನು ಮಾಡುವಾಗ ಅದು ಶಿಷ್ಯನಲ್ಲಿ ಅಮೃತವಾಗಿ ನಿಕ್ಷೇಪಿಸಲ್ಪಡಬೇಕು. ಆ ಮೌಲ್ಯವನ್ನು ಶಿಷ್ಯನೂ ಅರ್ಥವಿಸಬೇಕು. ಆಗಲೇ ವಿದ್ಯೆ ಅದೇ ರೀತಿಯಲ್ಲಿ ಶಿಷ್ಯನಲ್ಲಿ ನಿಕ್ಷೇಪವಾಗುತ್ತದೆ.  ಆವಾಗಲೇ ವಿದ್ಯೆ ಅಮೃತವಾಗುತ್ತದೆ.

ಒಬ್ಬ ಸಾಮಾನ್ಯ ಚಾಲಕನಲ್ಲಿದ್ದ ಪ್ರಜ್ಞೆ ಇಂದು ಅತಿ ವಿದ್ಯಾವಂತರಲ್ಲೇ ನಾಶವಾಗಿದೆ. ಹಾಗಾಗಿಯೇ ಪರಂಪರಾಗತವಾಗಿ ಗುರುವಿನಿಂದ ಬಂದದ್ದು ಮೂಲ ಆಶಯವನ್ನು ಮರೆತು ಹೊಸ ಆವಿಷ್ಕಾರದಲ್ಲಿ ಬದಲಾವಣೆಯಾಗಿದೆ.  ತನ್ನ ಗುರುವಿನಿಂದ ಉಪದೇಶಿಸಲ್ಪಟ್ಟ ವಿದ್ಯೆಯನ್ನು ಗುರುವಿನ ಅನುಮತಿ ಇಲ್ಲದೇ ಬದಲಾಯಿಸುವುದಕ್ಕೆ ಅಧಿಕಾರವಿಲ್ಲ. ಒಂದು ವಿದ್ಯೆಯನ್ನು ಸಂಪೂರ್ಣವಾಗಿ ಅರಿತವನು ಅದನ್ನು ಬದಲಾಯಿಸುವುದಕ್ಕೆ ಮನಸ್ಸು ಮಾಡುವುದೂ ಇಲ್ಲ. ಈ ಮೌಲ್ಯದ ಅರಿವಿಲ್ಲದೇ ಇಂದು ಪರಂಪರೆ ಸಾಂಪ್ರದಾಯಿಕ ವಿಚಾರಗಳು ಬದಲಾಗಿವೆ.  ಕಲೆ ಕಲಾವಿದ ಬದಲಾಗುತ್ತಾನೆ. ಅಪೂರ್ಣವಾದ ಜ್ಞಾನದಿಂದಲೇ ಅದನ್ನು ಬದಲಿಸುತ್ತಾನೆ. ಅದಕ್ಕೆ ಹಲವು ಸ್ವಯಂ ನಿರ್ಮಿತ ಕಾರಣಗಳನ್ನು ಕೊಡುತ್ತಾನೆ. ಅದರಲ್ಲೇನೂ ಇಲ್ಲ ಎಂಬ ಬೇಜವಾಬ್ದಾರೀ  ಚಿಂತನೆಗಳು ಹಿರಿಯರ ಹೆಜ್ಜೆಗಳನ್ನು ಅಳಿಸಿಹಾಕಿವೆ.  ಗುರು ಹಿರಿಯರು ಕೇವಲ ಅಲಂಕಾರಿಕ ವಸ್ತುಗಳಾಗುವಾಗ ಇವುಗಳೆಲ್ಲ ಸಹಜ.  ಪರಮಾತ್ಮನ ಮೇಲೆ ಭಕ್ತಿಯೂ ಇಲ್ಲ,  ಇದ್ದರೂ  ಅದರ ಹಾದಿ ಕ್ರಮಿಸುವ ಇಚ್ಛಾಶಕ್ತಿ ಇಲ್ಲ.

ಯಾವುದೇ ವಸ್ತುವಿನಲ್ಲಿ ಬದಲಾವಣೆ ಅವಶ್ಯವಾದರೆ ಅದರಲ್ಲಿ ನ್ಯೂನ್ಯತೆ ಇರಬೇಕು. ಇದು ಅರಿವಾಗಬೇಕಾದರೆ ಅದರ ಬಗ್ಗೆ ಸರಿಯಾದ ಮಾಹಿತಿ ಅರಿತಿರಬೇಕು. ಇಲ್ಲವಾದರೆ ಅದರಲ್ಲಿ ಕಾಣುವ ನ್ಯೂನ್ಯತೆ ಅಥವಾ ಕೊರತೆ ಅದು ನಮ್ಮದೇ ಕೊರತೆಯಾಗಿರುತ್ತದೆ.  ಅದರ ಪರಿಪೂರ್ಣ ಜ್ಞಾನ ಗಳಿಸದೇ ಇರುವುದು ನಮ್ಮ ತಪ್ಪಾಗಿರುತ್ತದೆ. ನಮ್ಮ ಸಮಸ್ಯೆಗಳನ್ನೇ ಅದರ ಹೇರಿ ಮೇಲೆ ಹೇರಿ ತಾವು ನಿರಪರಾಧಿಗಳಂತೆ ಮುಖವಾಡ ಹಾಕುತ್ತೇವೆ.  ನಮ್ಮ ತಪ್ಪನ್ನು ವಸ್ತುವಿನಲ್ಲಿ ಹೇರಿದರೆ ನಾವು ಆತ್ಮವನ್ನು ವಂಚಿಸಿದಂತೆ. ವಿದ್ಯೆಯನ್ನು ಸರಿಯಾಗಿ ತಿಳಿಯದೆ, ಅದರ ಪರಿಪೂರ್ಣತೆ ಸಾಧ್ಯವಾಗದಿದ್ದರೆ ಅದರಲ್ಲಿ ಬದಲಾವಣೆಯನ್ನು ಬಯಸುವ ಅಧಿಕಾರ ಯಾರಿಗೂ ಇಲ್ಲ. ಆದರೂ ಸುಡುವ ಬಿಸಿಲಿಗೆ  ಅಜ್ಜನೆಟ್ಟ ಆಲದ ಮರದ ನೆರಳನ್ನೇ ಹುಡುಕುವಾಗ ಅಜ್ಜನ ನೆನಪಾಗುವುದಿಲ್ಲ.  ತಾವು ಸುರಕ್ಷಿತರಾದರೆ ಸಾಕು ಎಂಬ ಸ್ವಾರ್ಥ.  ಆದರೆ ದುರಂತಗಳು ಅನಾಹುತಗಳು ಎದುರಾಗುವಾಗ ಅದನ್ನು ಅನುಭವಿಸುವುದಕ್ಕೆ ತಾವಿರುವುದಿಲ್ಲ. ನಮ್ಮ ಮುಂದಿನ ಜನಾಂಗಕ್ಕೆ ನಾವು ನಿರ್ಮಿಸಿಕೊಡುವ ಪರಂಪರೆ ದುರಂತವನ್ನೇ ತಂದಿಡುತ್ತವೆ ಎಂಬುದನ್ನು ಮರೆಯಬಾರದು.