"ಭಾಗವತರು ಯಾರು?" ಬಾಲ್ಯದಲ್ಲಿ ನಮ್ಮೂರ ಅಕ್ಕ ಪಕ್ಕ ಯಕ್ಷಗಾನ ಬಯಲಾಟ ತಾಳ ಮದ್ದಲೆಯಾಗುತ್ತಿದ್ದರೆ, ಭಾಗವತರು ಬಲಿಪ್ಪರು ಎಂದು ಹೇಳಿದರೆ ಹಿರಿಯರಾದ ನಮ್ಮಜ್ಜ ಕೇಳುವುದಿತ್ತು. ಬಲಿಪರು ದೊಡ್ಡವರ? ಸಣ್ಣವರಾ? ದೊಡ್ಡ ಬಲಿಪ್ಪರು ಎಂದರೆ ಯಕ್ಷ ಬ್ರಹ್ಮ ಎಂದು ಅನ್ವರ್ಥವಾದ ದಿವಂಗತ ಅಜ್ಜ ಬಲಿಪರು. ಯಕ್ಷಗಾನ ಎಂದರೆ ಅದು ಅಜ್ಜ ಬಲಿಪರು ಮಾತ್ರ ಅಂತ ಬಲವಾಗಿ ನಂಬಿಕೊಂಡವರು ನಮ್ಮ ಹಿರಿಯರು. ಬೇರೆ ಯಾರಾದರೂ ಅಷ್ಟೊಂದು ಆಸಕ್ತಿ ತೋರಿಸುತ್ತಿರಲಿಲ್ಲ. ಅದರಲ್ಲೂ ನಮ್ಮಜ್ಜ ದೊಡ್ಡ ಬಲಿಪರ ಬಹಳ ದೊಡ್ಡ ಅಭಿಮಾನಿ. ಅವರು ಹೇಳುವುದಿತ್ತು, ಮೈಲು ದೂರದಲ್ಲಿ ಆಟ ಆದರೂ ಅವರ ಸ್ವರ ಕೇಳಿದರೆ ಅದರ ಜಾಡು ಹಿಡಿದು ಕೈಯಲ್ಲಿ ಒಂದು ಸೂಟೆ ಹಿಡಿದು ಗುಂಪು ಕಟ್ಟಿ ಹೋಗುತ್ತಿದ್ದರು. ಇನ್ನು ಅರ್ಥಗಾರಿಕೆ ಶಾಮುಖರು ( ಸಾಮಗರನ್ನು ವಾಡಿಕೆಯಲ್ಲಿ ಕರೆಯುತ್ತಿದ್ದದ್ದು) ಎಂದರೆ ದೊಡ್ಡ ಶಾಮುಖರೋ ಅಂತ ಕುತೂಹಲದ ಪ್ರಶ್ನೆ ಇದ್ದಂತೆ ಬಲಿಪರು ಎಂದಾಕ್ಷಣ ದೊಡ್ಡ ಬಲಿಪ ಎಂಬ ಹೆಸರೇ ಮಿಂಚಿನ ಸಂಚಲನ ಮೂಡಿಸುತ್ತಿತ್ತು.
ಅಜ್ಜ ಬಲಿಪ ಎಂದಾಕ್ಷಣ ಹಲವಾರು ಸ್ವಾರಸ್ಯಕರ ಕಥೆಗಳನ್ನು ನಮ್ಮಜ್ಜ ಮಾವ ಹೇಳುತ್ತಿದ್ದದ್ದು ನಾನು ಬಾಲ್ಯದಲ್ಲಿ ಕೇಳೀದ್ದೆ. ದೊಡ್ಡ ಬಲಿಪರು ಎಂದರೆ ಅದೆಂತಹುದೋ ಎಂಬ ಆಕೃತಿ ಮನಸ್ಸಿನಲ್ಲಿ ಪ್ರಭಾವ ಬೀರಿದ್ದಂತೂ ಸತ್ಯ. ಹೀಗಿದ್ದರೂ ಬಾಲ್ಯದಲ್ಲಿ ಅಜ್ಜ ಬಲಿಪರ ಪದಗಳನ್ನು ಕೇಳಿದ್ದೇನೋ ಇಲ್ಲವೋ ಎಂದು ನನಗೆ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಹಲವಾರು ಯಕ್ಷಗಾನಗಳಿಗೆ ಹೋಗಿದ್ದರೂ, ಮತ್ತು ಬಲಿಪರ ಪದ ಕೇಳಿದ್ದರೂ ಬಾಲ್ಯದಲ್ಲಿ ಇದರ ಬಗ್ಗೆ ಹೆಚ್ಚು ತಿಳುವಳಿಕೆ ಇರುವುದಕ್ಕೆ ಸಾಧ್ಯವಿರಲಿಲ್ಲ. ಆಟ ತಾಳ ಮದ್ದಲೆಗೆ ಹೋದರೆ ಆಗಾಗ ಸಿಗುವ ಚಹ ತಿಂಡಿ ಮತ್ತೆ ಚೆಂಡೆಯ ಗದ್ದಲ ಇವಿಷ್ಟೇ ಆಸಕ್ತಿಯ ಸಂಗತಿಗಳಾಗಿತ್ತು. ಆದರೆ ಬೆಳೆದು ಬೆಳೆದು ದೊಡ್ಡವನಾಗಿ ಆನಂತರ ಈಗಿನ ಹಿರಿಯ ಬಲಿಪ್ಪರ ಪದದ ಹುಚ್ಚು ಹಿಡಿದ ಮೇಲೆ ಅಜ್ಜ ಬಲಿಪರ ಪದ ಹೇಗಿರಬಹುದು ಎಂಬ ಕುತೂಹಲ ಹುಟ್ಟಿಕೊಂಡದ್ದು ಸತ್ಯ. ಆದರೆ ಆಗ ಕಾಲ ಸಂದು ಹೋಗಿತ್ತು. ಈ ಎಲ್ಲ ಕುತೂಹಲಕ್ಕೆ ಉತ್ತರವಾದ ಪ್ರಕರಣವೆಂದರೆ ಇತ್ತೀಚೆಗೆ ಬಹಿರಂಗಗೊಂಡ ಅಜ್ಜ ಬಲಿಪರ ಎರಡು ಧ್ವನಿ ಮುದ್ರಣಗಳು. ಒಂದು ಬೆಂಗಳೂರು ಆಕಾಶವಾಣಿಯಲ್ಲಿ ಧ್ವನಿಮುದ್ರಣಗೊಂಡ ಅಜ್ಜ ಬಲಿಪರ ಸಂದರ್ಶನ, ಇನ್ನೊಂದು ಅಜ್ಜ ಬಲಿಪರ ಭಾಗವತಿಕೆಯ ತಾಳ ಮದ್ದಲೆ. ಇದನ್ನು ಕೇಳಿದಾಗ ಒಂದಷ್ಟು ಸಂದೇಹಗಳು ಬಗೆ ಬಗೆಯ ಜಿಜ್ಞಾಸೆ ವಿಶ್ಲೇಷಣೆಗಳು ಕುತೂಹಲಕರ ವಿಚಾರಗಳು ವಿನಿಮಯವಾಗಿದ್ದು ಅತ್ಯಂತ ವಿಶಿಷ್ಟವಾಗಿತ್ತು.
ಮೊದಲಿಗೆ ಅಜ್ಜ ಬಲಿಪರದ್ದು ಎನ್ನಬಹುದಾದ ಸಂದರ್ಶನ. ಇದು ಪ್ರಕಟಗೊಂಡಾಗ ತಪ್ಪಿನಿಂದ ಈಗಿನ ಹಿರಿಯ ಬಲಿಪರ ಚಿತ್ರವನ್ನೇ ಹಾಕಿದ್ದರಿಂದ ಬಹಳಷ್ಟು ಗೊಂದಲವಾಗಿ ಅದರಲ್ಲಿ ಉಲ್ಲೇಖಗೊಂಡ ಕೆಲವು ವಿಷಯಗಳಿಂದ, ಸಂದರ್ಶನ ಕೇಳಿದ ಮೇಲೆ ಇದು ಅಜ್ಜ ಬಲಿಪರದ್ದು ಅಂತ ಖಾತರಿಯಾಗಿತ್ತು. ನಿಜಕ್ಕೂ ಅದೊಂದು ರೋಮಾಂಚದ ಕ್ಷಣ. ಒಂದೇ ಏಟಿಗೆ ಮೂರು ನಾಲ್ಕು ಬಾರಿ ಸಂದರ್ಶನ ಕೇಳಿದ್ದೆ. ಅದು ಕೇಳುವಾಗ ಯಕ್ಷಗಾನದಲ್ಲಿ ಭಾಗವತ ಸ್ಥಾನ ಯಾಕೆ ವರಿಷ್ಠತೆಯನ್ನು ಗಳಿಸಿಕೊಂಡಿದೆ ಎಂದು ಸಾರಿ ಹೇಳಿದಂತಾಗಿತ್ತು. ಬಹಳ ಸ್ಪಷ್ಟ ಮಾತುಗಳಿಂದ ಅಂದಿನ ಯಕ್ಷಗಾನದ ಆಗುಹೋಗುಗಳನ್ನು ಸ್ಫುಟವಾಗಿ ಹೇಳಿದ್ದರು.
ಇದುವರೆಗೆ ದೊಡ್ಡ ಬಲಿಪರ ಯಾವುದೇ ಧ್ವನಿಮುದ್ರಣ ಸಂಗ್ರಹದಲ್ಲಿಇದ್ದ ಮಾಹಿತಿ ಇರಲಿಲ್ಲ. ಅಲ್ಲಿ ಉಂಟು ಇಲ್ಲಿ ಉಂಟು ಎಂಬ ಊಹಾ ಪೋಹಗಳಲ್ಲದೇ ಬಲಿಪರ ಸ್ವರದ ಬಗ್ಗೆ ಪರಿಚಯಸ್ಥರು ಬಹಳ ಕಡಿಮೆ. ಇನ್ನು ಹಿರಿಯರಲ್ಲಿ ವಿಚಾರಿಸಿದರೆ ವರ್ಣರಂಜಿತವಾಗಿ ಹೇಳುವುದು ಬಿಟ್ಟರೆ ಸ್ವರದ ಪರಿಚಯದ ಇನ್ನೂ ಗೊಂದಲಗಳೇ ತುಂಬಿದ್ದವು. ಹಲವು ಸಲ ಈಗಿನ ಹಿರಿಯ ಬಲಿಪರ ತುಂಬ ಹಳೆಯ ಧ್ವನಿ ಮುದ್ರಣ ಸಿಕ್ಕಿದಾಗೆಲ್ಲಾ ಇದೇ ಏನೋ ಅಜ್ಜ ಬಲಿಪರದ್ದು ಎಂದು ಸಂದೇಹ ಪಟ್ಟು ಕೊನೆಗೆ ಅದು ಅಲ್ಲ ಎಂದಾಗಿ ಒಂದು ರೀತಿಯ ನಿರಾಶೆಯೇ ಉತ್ತರವಾಗುತ್ತಿತ್ತು. ಹಿರಿಯ ಅಗರಿ ಶ್ರೀನಿವಾಸ ಭಾಗವತರು, ಪುತ್ತಿಗೆ ರಾಮಕೃಷ್ಣ ಜೋಯಿಸರು, ಹೀಗೆ ಹಲವು ಧ್ವನಿ ಮುದ್ರಣಗಳು ಲಭ್ಯವಿದ್ದರೂ ದೊಡ್ಡ ಬಲಿಪರ ಸ್ವರ ಇನ್ನೂ ನಿಗೂಢವಾಗಿಯೇ ಇತ್ತು. ಆದರೆ ಆಚಾನಕ್ ಆಗಿ ಈ ಎರಡು ಧ್ವನಿ ಮುದ್ರಣಗಳು ಬಹಿರಂಗಗೊಂಡಾಗ ಇದು ಹೌದೋ ಅಲ್ಲವೋ ಎಂದು ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಹಾಗೆ ಹೀಗೆ ಅಂತ ಅನುಮಾನದಲ್ಲಿ ಇರುವಾಗ ಸಿಕ್ಕ ಧ್ವನಿ ಮುದ್ರಣವನ್ನು ಹಿರಿಯರಿಗೆ ಕೇಳಿಸಿ ಖಚಿತ ಪಡಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದೆವು.
ಸಿಕ್ಕ ಧ್ವನಿಮುದ್ರಣದಲ್ಲಿ ಒಂದು ಆಕಾಶವಾಣಿ ಕಾರ್ಯಕ್ರಮದಲ್ಲಿ ಮುದ್ರಣಗೊಂಡ ಒಂದು ತಾಸಿನ ಕಾರ್ಯಕ್ರಮ. ಅದರ ಧ್ವನಿಗ್ರಹಣವೂ ಸಾಕಷ್ಟು ಅಪಸ್ವರಗಳಿಂದ ಈಗಿನ ಬಲಿಪ್ಪರಿಗೂ ಆಗಿನ ಅಜ್ಜ ಬಲಿಪರ ಸ್ವರಕ್ಕೂ ವೆತ್ಯಾಸವನ್ನು ಗುರುತಿಸುವುದು ಬಹಳ ಕಷ್ಟವಾಗಿತ್ತು. ನಾನು ಸಿಕ್ಕಿದ ಧ್ವನಿ ಮುದ್ರಣದಲ್ಲಿದ್ದ ಅನಗತ್ಯ ಕಿರಿ ಕಿರಿಯನ್ನು ತೆಗೆದು ಸ್ವಚ್ಛಗೊಳಿಸಿದೆ. ಧ್ವನಿ ಮುದ್ರಣ ಅಜ್ಜ ಬಲಿಪರದ್ದು ಎಂದು ನಂಬುವುದು ನನಗೆ ಬಹಳ ಕಷ್ಟವಾಯಿತು. ಅದು ಈಗಿನ ಹಿರಿಯ ಬಲಿಪರ ಸ್ವರ ಮತ್ತು ಶೈಲಿಯೊಂದಿಗೆ ಯಾವುದೇ ವೆತ್ಯಾಸ ನನಗೆ ಅರಿವಿಗೆ ಬರಲಿಲ್ಲ. ಆದರೂ ಯಾವುದೋ ಒಂದು ಸಣ್ಣ ಅನುಮಾನ ವ್ಯಕ್ತ ಪಡಿಸುವುದಕ್ಕೆ ತಿಳಿಯದೇ ಕೊನೆಗೆ ಅದನ್ನು ಪರಿಹರಿಸಿಕೊಳ್ಳುವುದಕ್ಕೆ ಯತ್ನಿಸಿದೆ. ಹಾಗೇ ಅದನ್ನು ಹಿರಿಯ ವಿದ್ವಾಂಸರಾದ ಡಾ. ರಾಘವ ನಂಬಿಯಾರರಿಗೆ ಕಳುಹಿಸಿಕೊಟ್ಟು ಅವರ ಅಭಿಪ್ರಾಯ ಕೇಳಿ ನೋಡೋಣ ಎಂದನಿಸಿತು. ಮಾತ್ರವಲ್ಲ ಇವರಿಗಿಂತ ಸೂಕ್ತ ವ್ಯಕ್ತಿ , ಮತ್ತದನ್ನು ಖಚಿತವಾಗಿ ವಿವರಿಸುವ ಮಹನೀಯರು ಸದ್ಯದಲ್ಲಿ ಯಾರೂ ಸಿಗುವುದಕ್ಕೆ ಸಾಧ್ಯವಿರಲಿಲ್ಲ.
ಶ್ರೀ ನಂಬಿಯಾರರು ಅಷ್ಟೇ ಉತ್ಸಾಹದಿಂದ ಅದನ್ನು ಕೇಳಿ ನನಗೆ ಕರೆ ಮಾಡಿದರು. ಅವರ ವಿಶ್ಲೇಷಣೆ ಅತ್ಯಂತ ಉಪಯುಕ್ತ ಅಂತ ಅನ್ನಿಸಿತು. ಒಂದೆರಡು ಸಲ ಅವರಿಗೆ ಕರೆ ಮಾಡಿದಾಗ ಅವರು ಹೇಳಿದ ಕಾರಣಗಳು ಬಹಳ ಕುತೂಹಲಕಾರಿಯಾಗಿತ್ತು. ಈ ಧ್ವನಿ ಮುದ್ರಣದ ಬಗೆಗಿಂತಲೂ ಒಟ್ಟು ಯಕ್ಷಗಾನದ ಮಾಹಿತಿಗಳು
ಶ್ರೀ ನಂಬಿಯಾರರ ವಿಶ್ಲೇಷಣೆ ಎಂದರೆ ಅದರಲ್ಲಿ ಹಲವು ಆಯಾಮಗಳು ಇದ್ದೇ ಇರುತ್ತವೆ. ಯಕ್ಷಗಾನದ ಬಗ್ಗೆ ಅದರಲ್ಲೂ ಪರಂಪರೆಯ ಯಕ್ಷಗಾನದ ಬಗ್ಗೆ ಇದಮಿತ್ಥಂ ಎಂದು ಹೇಳಬಲ್ಲವರು. ಅವರು ಹಲವಾರು ತಾಂತ್ರಿಕ ಕಾರಣಗಳನ್ನು ಮತ್ತು ಕೆಲವು ಕುತೂಹಲ ವಿಚಾರಗಳನ್ನು ತಿಳಿಸಿ ಇದು ಅಜ್ಜ ಬಲಿಪ್ಪರದ್ದೇ ಸ್ವರ ಎಂದು ಖಚಿತ ಪಡಿಸಿದಾಗ ಮನಸ್ಸಿಗೆ ಬಹಳಷ್ಟು ಸಮಾಧಾನವಾಯಿತು. ಇದು ಮಾತ್ರವಲ್ಲದೆ ಈ ಧ್ವನಿಮುದ್ರಣದ ಸಂಗ್ರಹ ಮಾಡಿದ ಶ್ರಿ ರಾಜಗೋಪಾಲ ಕನ್ಯಾನದವರಿಗೂ ಕರೆ ಮಾಡಿ ಅವರಲ್ಲಿ ಮಾತನಾಡಿದ ಮೇಲೆ ಮತ್ತೆ ಯಾವ ಅನುಮಾನವೂ ಉಳಿಯಲಿಲ್ಲ. ಇದು ಅಜ್ಜ ಬಲಿಪರದೇ ಸ್ವರ ಎಂದು ಖಚಿತವಾಯಿತು.
ಧ್ವನಿ ಮುದ್ರಣದಲ್ಲಿ ಅಜ್ಜಬಲಿಪರಿಗೂ ಈಗಿನ ಹಿರಿಯ ಬಲಿಪರಿಗೂ ಮೇಲ್ನೋಟಕ್ಕೆ ಬಹಳ ಸಾಮ್ಯತೆ ಇತ್ತು. ಅದರಲ್ಲಿ ವೆತ್ಯಾಸವನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಇದು ಈಗಿನ ಬಲಿಪ್ಪರದ್ದು ಅಲ್ಲ ಎಂದು ತಿಳಿವಾಗ ಅದು ಅರ್ಧ ಶತಮಾನಕ್ಕೂ ಹೆಚ್ಚುಅದೇ ಶೈಲಿಯನ್ನು ಉಳಿಸಿಕೊಂಡ ಬಗ್ಗೆ ಅವರ ಬಗ್ಗೆ ಗೌರವ ಮೂಡುತ್ತದೆ. ಇದು ತಪಸ್ವಿಯೊಬ್ಬನ ಸಾಧನೆ. ನಂಬಿಯಾರರು ಈ ಧ್ವನಿಮುದ್ರಣದಲ್ಲಿ ಎರಡು ಮುಖ್ಯವಾದ ವೈಶಿಷ್ಟ್ಯವನ್ನು ಗುರುತಿಸಿದರು. ಒಂದು ಪದಗಳಲ್ಲಿನ ಬಿಡ್ತಿಗೆ ಕ್ರಮ. ಬಿಡ್ತಿಗೆ ಮತ್ತು ಮುಕ್ತಾಯ ಬಾರಿಸುತ್ತಿದ್ದ ಕ್ರಮ ಈಗ ಬಹಳ ಬದಲಾವಣೆಯಾಗಿದೆ. ಬಿಡ್ತಿಗೆ ಪೆಟ್ಟುಗಳಲ್ಲಿ ಮುಂಚಿನ ಕ್ರಮ ಬೇರೆ , ಈಗಿನ ಕ್ರಮಬೇರೆ. ಉದಾಹರಣೆಗೆ ಏಕ ತಾಳದ ಬಿಡ್ತಿಕೆಗೆ ಮದ್ದಲೆಗಾರರು ತದಿಗಿಣ ಧೀಂ ತದಿಗಿಣ ಧೀಂ ತದಿಗಿಣ ಧೀಂ ಎಂದು ನಿಲ್ಲಿಸಿ ಎರಡು ಅಕ್ಷರ ಬಿಟ್ಟು ನಂತರ ತೊಂ ತೊಂ ಅಂತ ಬಡಿಯುತಿದ್ದಾರೆ. ವಾಸ್ತವದಲ್ಲಿ ಕುಣಿತದಲ್ಲಿ ಗಟ್ಟಿ ಇಲ್ಲದ ಕಲಾವಿದರು ರಂಗದಲ್ಲಿ ಬಂದನಂತರ ಆ ಕ್ರಮ ಬಂದದ್ದು. ಅದೊಂದು ರೀತಿಯ ಕುಣಿತದ ಹೊಂದಾಣಿಕೆಗೆ ಶುರು ಮಾಡಿಕೊಂಡ ಕ್ರಮ. ನಾಟ್ಯದಲ್ಲಿ ಗಟ್ಟಿ ಇಲ್ಲದ ಕಲಾವಿದರನ್ನು ರಂಗದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಬಿಡ್ತಿಗೆಯನ್ನೇ ಕಡಿತ ಗೊಳಿಸಿದ್ದರು. ಕೊನೆಗೆ ಅದೇ ಕ್ರಮ ಮುಂದುವರಿಕೆಯಾಯಿತು. ಇದರ ಮಹತ್ವವನ್ನು ತಿಳಿಯದವರು ನಂತರ ಇದೇ ಕ್ರಮ ಎಂದು ಅನುಸರಿಸಿದ್ದು ಮಾತ್ರವಲ್ಲ ಯಕ್ಷಗಾನದ ಮೂಲ ಕ್ರಮ ಇಂದು ಯಾರಿಗೂ ತಿಳಿದಿಲ್ಲ ಎಂಬುದು ವಾಸ್ತವದ ಸತ್ಯ. ಯಕ್ಷಗಾನ ಕಲಿಕಾ ಕೇಂದ್ರದಲ್ಲೂ ಅದನ್ನೇ ಅನುಸರಿಸತೊಡಗಿದರು. ಮೊದಲೆಲ್ಲ ನಾಟ್ಯದಲ್ಲಿ ಪರಿಣತಿ ಇಲ್ಲದೇ ಇದ್ದರೆ ಮೇಳದಲ್ಲಿ ಪ್ರವೇಶವೇ ಇರುತ್ತಿರಲಿಲ್ಲ. ಆದರೆ ಕ್ರಮೇಣ ನಾಟ್ಯ ಒಂದಷ್ಟು ಗೌಣವಾಗಿ ಅರ್ಥಗಾರಿಕೆಯನ್ನೆ ಭಂಡವಾಳವಾಗಿ ಕಲಾವಿದರ ಆಗಮನವಾದಾಗ ಈ ಬಿಡ್ತಿಗೆ ಕ್ರಮದಲ್ಲಿ ಗಣನೀಯ ಬದಲಾವಣೆಯಾಯಿತು. ಕ್ರಮೇಣ ಪಳಗಿದ ಮದ್ದಲೆಗಾರರಿಗೂ ಇದು ಮರೆತು ಹೋಗಿ ಗೊತ್ತೇ ಇಲ್ಲ ಎಂಬಂತಹ ಪರಿಸ್ಥಿತಿ ಬಂದಿದೆ. ಅಜ್ಜ ಬಲಿಪರ ಈ ಧ್ವನಿಮುದ್ರಣದಲ್ಲಿ ಈ ಬಿಡ್ತಿಗೆಯ ವೆತ್ಯಾಸ ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ಮತ್ತೊಂದು ಆಗಿನ ಕಾಲದಲ್ಲಿ ಭಾಗವತರಿಗೆ ಮದ್ದಲೆಯ ಶ್ರುತಿಯೇ ಪ್ರಧಾನ. ಮದ್ದಲೆಯ ಶ್ರುತಿಯಲ್ಲಿಯೇ ಭಾಗವತರು ಪದ ಹೇಳುತ್ತಿದ್ದರು. ಮದ್ದಲೆಯ ಶ್ರುತಿಗೆ ಪುಂಗಿ ಬಾರಿಸುತ್ತಿದ್ದರು. ಅದೂ ಶ್ರುತಿಬದ್ದವಾಗಿ ಬಾರಿಸಬೇಕಿದ್ದರೆ ಪುಂಗಿಯವನಿಗೂ ಶ್ರುತಿಯಬಗ್ಗೆ ಅರಿವಿರಬೇಕಿತ್ತು. ಶ್ರುತಿ ಜ್ಞಾನ ಇಲ್ಲದೇ ಪುಂಗಿ ಬಾರಿಸುವುದಕ್ಕೆ ಸಾಧ್ಯವಿರುತ್ತಿರಲಿಲ್ಲ. ಆಗಿನ ಹಳೆಯ ಕ್ರಮದಲ್ಲೇ ಮದ್ದಲೆ ವಾದನವಿದೆ. ಹಾಗಾಗಿ ಇದು ಅಜ್ಜ ಬಲಿಪರದ್ದೇ ಎಂದು ನಂಬಿಯಾರರು ಖಚಿತವಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಆಕಾಶವಾಣಿಯಲ್ಲಿ ಬಲಿಪ ಭಾಗವತರ ಸಂದರ್ಶನವನ್ನು ಮುದ್ರಿಸಿಕೊಳ್ಳಲಾಯಿತು. ಆ ಸಂದರ್ಶನದಲ್ಲಿ ಇಬ್ಬರು ಶಿಷ್ಯರ ಬಗ್ಗೆ ಅವರು ಉಲ್ಲೇಖಿಸುತ್ತಾರೆ ಅದುಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ನೆಡ್ಲೆ ನರಸಿಂಹ ಭಟ್ಟರಾಗಿದ್ದಾರೆ ಅನುಮಾನ. ಇವರಿಬ್ಬರೂ ಬಲಿಪರ ಒಡನಾಟ ಇದ್ದುದನ್ನು ನೆನಪಿಸಿಕೊಳ್ಳುತ್ತಿದ್ದರು. ಧ್ವನಿ ಮುದ್ರಣದಲ್ಲಿ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮದ್ದಲೆಗಿದ್ದರೆ ಚೆಂಡೆಗೆ ನೆಡ್ಲೆ ನರಸಿಂಹ ಭಟ್ಟರು ಇದ್ದಾರೆ ಎಂದು ಅನುಮಾನವಿದೆ. ಮಾತ್ರವಲ್ಲ ಆಗಿನ ಕಾಲದಲ್ಲಿ ಮದ್ದಲೆಯ ಬಳಕೆ ಇತ್ತು. ಈಗ ಮೊದಲಿನಂತೆ ಛಾಪು ಪೆಟ್ಟುಗಳನ್ನು ಬಾರಿಸುವುದಿಲ್ಲ.
ಈ ಎಲ್ಲಾ ಅಂಶಗಳು ಹೆಚ್ಚು ತಾಂತ್ರಿಕ ಕಾರಣ ಅಂತ ನನಗನಿಸಿತು. ಹಿರಿಯ ಅಗರಿ ಭಾಗವತರು ಪದದ ನಡುವೆ ಆಗಾಗ ಮದ್ದಲೆಗಾರರಿಗೆ ಛಾಪು ಛಾಪೂ ಎಂದು ಎಚ್ಚರಿಸುತ್ತಿದ್ದದ್ದು ಆ ಕಾಲದಲ್ಲಿ ಭಾಗವತರಿಗೆ ಮದ್ದಲೆಯ ಶ್ರುತಿ ಪ್ರಧಾನವಾಗಿತ್ತು. ಮೊದಲು ಶ್ರುತಿಗೆ ಪುಂಗಿಯ ನಾದವನ್ನು ಬಳಸುತ್ತಿದ್ದವರು ಕ್ರಮೇಣ ಅದರ ಸ್ಥಾನದಲ್ಲಿ ಹಾರ್ಮೋನಿಯಂ ಬಳಕೆಯಾಯಿತು. ಈಗ ಹಾರ್ಮೋನಿಯಂ ಬದಲಾಗಿ ಶ್ರುತಿ ಪೆಟ್ಟಿಗೆ ಬಂದು ಇನ್ನೂ ಕಂಪ್ಯೂಟರ್ ಯುಗದಲ್ಲಿ ಹೇಗೆ ಪರಿವರ್ತನೆಯಾಗುವುದೋ ಊಹಿಸುವುದು ಕಷ್ಟ.
ಬೆಂಗಳೂರು ಆಕಾಶವಾಣಿಯಲ್ಲಿ ಸುಮಾರು ಎಪ್ಪತ್ತರ ದಶಕದಲ್ಲಿ ಹಿರಿಯ ಬಲಿಪರ ಸಂದರ್ಶನದ ಧ್ವನಿಮುದ್ರಣ ಆಗಿದೆ. ಅದೇ ಸಂದರ್ಭದಲ್ಲಿ ಬೆಂಗಳೂರಲ್ಲೇ ಇದ್ದವರನ್ನು ಸೇರಿಸಿಕೊಂಡು ಒಂದು ಘಂಟೆ ಅವಧಿಯ ಸುಧನ್ವಾರ್ಜುನ ಎಂಬ ಪ್ರಸಂಗದ ಆಕಾಶವಾಣಿ ತಾಳಮದ್ದಲೆಯನ್ನೂ ಧ್ವನಿ ಮುದ್ರಿಸಿದ್ದಾರೆ. ಮಾತ್ರವಲ್ಲ ಈಗಿನ ಸಣ್ಣ ಬಲಿಪರೂ , ಈ ಧ್ವನಿ ಮುದ್ರಣದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಎಲ್ಲ ಕಾರ್ಯಕ್ರಮವನ್ನು ಮುತುವರ್ಜಿಯಿಂದ ನಡೆಸಿಕೊಟ್ಟವರು ಆಗ ಹಿರಿಯ ಬಲಿಪರ ಬಹಳ ದೊಡ್ಡ ಅಭಿಮಾನಿಯಾದ ಶ್ರೀ ಸಿ ಆರ್ ರಾವ್ ರವರು, ಅದೇ ಯಕ್ಷಗಾನ ಆಕಾಶವಾಣಿಯಿಂದ ಪ್ರಸಾರವಾಗುವಾಗ ತಮ್ಮ ಟೇಪ್ ರೆಕಾರ್ಡರ್ ನಲ್ಲಿ ಧ್ವನಿ ಮುದ್ರಿಸಿದರು ಎಂದು ಈ ಧ್ವನಿ ಮುದ್ರಣ ಸಂಗ್ರಹಿಸಿಟ್ಟು ಕೊಂಡಿದ್ದ ಶ್ರೀ ರಾಜಗೋಪಾಲ ಕನ್ಯಾನ ಅವರೂ ಹೇಳುತ್ತಾರೆ. ಇಲ್ಲಿ ಸಿ. ಆರ್ ರಾವ್ ಅವರ ಕಾರ್ಯವನ್ನು ಎಷ್ಟು ಸ್ಮರಿಸಿದರು ಸಾಲದು. ಅವರು ಮಾಡದೇ ಇರುತ್ತಿದ್ದರೆ ಇಂದು ಇಂತಹ ಅಮೂಲ್ಯ ಸಂಗ್ರಹ ಇರುವುದಕ್ಕೆ ಸಾಧ್ಯವಿರಲಿಲ್ಲ.
ಆಸಕ್ತಿ ಇದ್ದರೆ ಪರಿಷ್ಕೃತ ಧ್ವನಿ ಮುದ್ರಣ ಈ ಕೊಂಡಿಯಿಂದ ಪಡೆದುಕೊಳ್ಳಬಹುದು.
ಸುಧನ್ವಾರ್ಜುನ ಪ್ರಸಂಗದ ತಾಳ ಮದ್ದಲೆಯ ಭಾಗವತಿಕೆಯನ್ನು ಕೇಳಿ ಮಿತ್ರ ಶ್ರೀ ಕಟೀಲು ಸಿತ್ಲ ರಂಗನಾಥರೂ ಒಂದು ಅಭಿಪ್ರಾಯ ಹೇಳಿದ್ದನ್ನೂ ಇಲ್ಲಿ ಉಲ್ಲೇಖಿಸಬೇಕು. ಇದರಲ್ಲಿ ಒಂದು ನಿರ್ದಿಷ್ಟವಾದ ಗಮಕವನ್ನು ಹಿರಿಯ ಬಲಿಪ್ಪರು ಒಂದು ಬಾರಿ ಹಾಡುತ್ತಾರೆ, ಅದನ್ನು ಈಗಿನ ಬಲಿಪ್ಪರು ಆ ನಿರ್ದಿಷ್ಟವಾದ ಗಮಕವನ್ನು ಒಂದಕ್ಕಿಂತ ಹೆಚ್ಚು ಬಾರಿ ಹಾಡುತ್ತಾರೆ.
ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಯಾವ ಧ್ವನಿಗಾಗಿ ನಾವು ಕೇಳುವುದಕ್ಕೆ ಉತ್ಸುಕರಾಗಿದ್ದೇವೋ ಆ ಹಿರಿಯ ಬಲಿಪ ನಾರಾಯಣ ಭಾಗವತರ ಸ್ವರ ಇದು ಎನ್ನುವುದಕ್ಕೆ ಯಾವುದೇ ಅನುಮಾನಗಳು ಉಳಿದಿಲ್ಲ. ಯಕ್ಷಗಾನದ ದೃಷ್ಟಿಯಲ್ಲಿ ಇದೊಂದು ಅತ್ಯಮೂಲ್ಯ ಸಂಗ್ರಹ. ಇದನ್ನು ಒದಗಿಸಿದ ರಾಜಗೋಪಾಲ್ ಕನ್ಯಾನ ಇವರ ಮನೆಯವರಿಗೆ ಒಂದು ಕೃತಜ್ಞತೆಯನ್ನು ಸಲ್ಲಿಸಬೇಕು. ಬಹಳ ಹಳೆಯ ಧ್ವನಿ ಮುದ್ರಣ ಇದು. ಇದರ ಗುಣ ಮಟ್ಟ ಕೇಳುವುದಕ್ಕೆ ಧ್ವನಿ ಸ್ಪಷ್ಟತೆ (clarity) ಇರಲಿಲ್ಲ. ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ಸ್ವಚ್ಛಗೊಳಿಸಿ ಸ್ಪಷ್ಟವಾಗಿ ಕೇಳುವಂತೆ ಒಂದಷ್ಟು ದುರಸ್ತಿಯನ್ನು ಮಾಡಿದ್ದೇನೆ. ಇದನ್ನು ಹಲವಾರು ಸಲ ಕೇಳಿ ಆನಂದಿಸಿದೆ. ಹಲವಾರು ವರ್ಷದಿಂದ ಇದ್ದ ಕುತೂಹಲ ತಣಿದಿದೆ. ಇಂದಿನ ಯಕ್ಷಗಾನ ಕಲಾವಿದರು ಭಾಗವತರು ಮತ್ತು ಕೇಳುಗರು ಇದನ್ನು ಗಂಭೀರವಾಗಿ ಸ್ವೀಕರಿಸಬೇಕು. ಇದರ ಸ್ಪಷ್ಟ ಅಧ್ಯಯನವನ್ನು ಮಾಡಬೇಕು. ನಾವೇನು ಕಳೆದುಕೊಂಡಿದ್ದೇವೆ ಅದರ ಪುನರುತ್ಥಾನಕ್ಕೆ ಬಲ್ಲವರಲ್ಲಿ ಕೇಳಿ ಅಧ್ಯಯನ ಮಾಡಬೇಕು. ಬಲಿಪ್ಪರು ಒಂದು ಕಡೆ ಹೇಳುತ್ತಾರೆ, ಪರಂಪರೆಯಲ್ಲಿ ಇದ್ದದ್ದು ಎಷ್ಟು ಸೂಕ್ತ ಎಂಬುದು ವಿಮರ್ಶೆ ಮಾಡಬೇಕಿಲ್ಲ. ಆದರೆ ಪರಂಪರೆಯ ಅರಿವು ಅದು ಇರಬೇಕು. ಒಂದು ಕಾಲದಲ್ಲಿ ಹೀಗಿತ್ತು ಎಂಬ ಅರಿವಿದ್ದು ಅದನ್ನು ಕಲಿಯಬೇಕು. ನಾವು ಏನೇ ಬದಲಾವಣಿ ಮಾಡಿಕೊಂಡರೂ ಪರಂಪರೆಯಲ್ಲಿದ್ದ ಸಂಗತಿಗಳನ್ನು ಕಳೆದುಕೊಳ್ಳಬಾರದು.
ಯಕ್ಷಗಾನದಲ್ಲಿ ಸಂಗೀತದ ಬಳಕೆ ತಪ್ಪೋ ಸರಿಯೋ ಅದು ಬೇರೆ ವಿಚಾರ. ಆದರೆ ಅದು ಬಳಕೆಗೆ ಬಂದನಂತರ ಮದ್ದಲೆಯ ಛಾಪು ಪೆಟ್ಟುಗಳು ಮಾಯವಾಗುತ್ತಾ ಬಂದಿವೆ. ತಬಲ ಮತ್ತು ಮದ್ದಲೆಗೆ ಯಾವ ವೆತ್ಯಾಸವೂ ಇರದಂತೆ ಇಂದಿನ ಭಾಗವತಿಕೆ ಎಂಬ ಪ್ರಹಸನ ಬೆಳೆದು ಬರುತ್ತದೆ. ಮದ್ದಲೆಯ ಶ್ರುತಿಗೆ ಪದ ಹೇಳಬೇಕು ಎನ್ನುವ ಪರಿಜ್ಞಾನ ಯಾರಿಗೆಲ್ಲ ಇದೆಯೊ ತಿಳಿಯದು. ಬಹಳಷ್ಟು ಹಿರಿಯ ಭಾಗವತರು ತೆರೆಯ ಹಿಂದೆ ಸರಿದು ಚೌಕಿಯಿಂದಲೂ ಮರೆಯಾಗಿದ್ದಾರೆ. ಕೆಲವು ತಿಂಗಳ ಸಂಗೀತ ಕಲಿತು ಭಾಗವತರಾಗಿ ರಂಗ ವೇರುವಾಗ ತಮಗೆಷ್ಟು ಅರ್ಹತೆಯಿದೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಈ ಧ್ವನಿಮುದ್ರಣ ಅತ್ಯಂತ ಸೂಕ್ತ. ಇದನ್ನು ಕೇಳಿದರೂ ಇಂದಿನ ಭಾವಗವತರಿಗೆ ಅದರ ವೆತ್ಯಾಸ ಗೊತ್ತಾಗುವುದಿಲ್ಲ ಎಂದರೆ ಅನುಮಾನ ಬೇಡ ಯಕ್ಷಗಾನ ದುರಂತದತ್ತ ಸಾಗುತ್ತದೆ. ಯಕ್ಷಗಾನ ಬದಲಾಗಲಿಲ್ಲ ಹಾಗೇ ಉಂಟು ಅಂತ ಹಲುಬುವವರು ಈ ಧ್ವನಿ ಮುದ್ರಣವನ್ನು ಗಮನವಿಟ್ಟು ಕೇಳುವ ವ್ಯವಧಾನವನ್ನಾದರೂ ತೋರಬೇಕು. ನನಗೆ ಯಕ್ಷಗಾನ ತಾಳ ಲಯ ಶ್ರುತಿಯ ಬಗ್ಗೆ ಅಷ್ಟೇನೂ ಅರಿವಿಲ್ಲ ಹಾಗಿದ್ದರೂ ಇದರಲ್ಲಿರುವ ಗಾಢವಾಗದ ನೈಜ ಯಕ್ಷಗಾನದ ಕಂಪನ್ನು ಅನುಭವಿಸಬಲ್ಲೆ. ಯಕ್ಷಗಾನದಲ್ಲಿ ಅನಗತ್ಯವಾದ ಅಸಂಗತವಾದುದನ್ನು ತರುವುದಕ್ಕೆ ಅದೆಷ್ಟೋ ಸಾಧನೆ ಮಾಡಿ ಯಕ್ಷಗಾನವನ್ನು ಯಾವುದೋ ರೂಪಕ್ಕೆ ಕೊಂಡೊಯ್ಯುವುದಕ್ಕೆ ಕಟಿಬದ್ಧರಾಗುತ್ತೇವೆ. ಆದರೆ ಇಂತಹ ಅವಶ್ಯವೆನಿಸುವ ವಿಷಯಗಳ ಅಧ್ಯಯನಕ್ಕೆ ನಮ್ಮಲ್ಲಿ ಮನಸ್ಸೂ ಇಲ್ಲ ಸಮಯವೂ ಇಲ್ಲ ಎಂದಾದರೆ ಅನ್ನ ನೆಮ್ಮದಿ ಕೊಡುವ ಕಲೆಗೆ ನಾವು ದ್ರೋಹ ಮಾಡುತ್ತಿದ್ದೇವೆ ಎಂದು ಬೇರೆ ಹೇಳಬೇಕಿಲ್ಲ.


