ನನ್ನ ಕಕ್ಷಿದಾರರೊಬ್ಬರು ನಮ್ಮ ಕಛೇರಿಗೆ ಬಂದವರು ನನ್ನ ಯಕ್ಷಗಾನದ ಹವ್ಯಾಸವನ್ನು ಕಂಡು, ಅವರ ಯಾರೋ ಸಂಭಂದಿಗಳ ಮಕ್ಕಳು ಯಕ್ಷಗಾನದಲ್ಲಿ ವೇಷಹಾಕಿದ ಫೋಟೋ ವೀಡಿಯೋಗಳನ್ನು ತೋರಿಸಿದರು. ಬೆಂಗಳೂರಿನಲ್ಲಿ ಆದ ಕಾರ್ಯಕ್ರಮದಲ್ಲಿ ಅವರೆಲ್ಲ ಭಾಗಿಯಾದ ವಿಷಯಗಳನ್ನು ಖುಷಿಯಲ್ಲಿ ಹಂಚಿಕೊಂಡರು.
ಇದರಲ್ಲಿ ವೈಷಿಷ್ಟ್ಯವೇನೂ ಇರಲಿಲ್ಲ. ಆ ವ್ಯಕ್ತಿಯ ಹಿನ್ನೆಲೆ ಅಷ್ಟಾಗಿ ತಿಳಿದಿಲ್ಲ. ಅಗಾಗ ಕಛೇರಿಗೆ ಬರುವ ಅವರು ಯಕ್ಷಗಾನದ ಬಗ್ಗೆ ಮಾತನಾಡಿದ್ದೇ ವೈಷಿಷ್ಟ್ಯವಾಗಿತ್ತು. ಅವರು ತೋರಿಸಿದ ಫೋಟೋಗಳನ್ನು ನೋಡುತ್ತಿದ್ದಂತೆ ಬಹಳ ನಿರಾಸಕ್ತಿ ನಿರುತ್ಸಾಹ ಒಮ್ಮಿಂದೊಮ್ಮೇಲೆ ಉಂಟಾಯಿತು. ಅವರು ಸಂಭ್ರಮದಿಂದ ತೋರಿಸುತ್ತಿದ್ದರೆ ನನಗೆ ಮಾತ್ರ ಅದನ್ನು ನೋಡುವ ಆಸಕ್ತಿ ಚಿಗುರಲೇ ಇಲ್ಲ. ಕಾರಣ ಇಷ್ಟೇ ತೆಂಕು ಬಡಗು ವೆತ್ಯಾಸವೇ ಇಲ್ಲದ ಯಕ್ಷಗಾನ ಪ್ರದರ್ಶನವದು. ಆದರೆ ಅವರಿಗೆ ಅದನ್ನು ಹೇಳಿದರೆ ತಿಳಿದುಕೊಳ್ಳುವ ಜ್ಞಾನವೂ ಇದ್ದಂತಿಲ್ಲ. ಒಂದು ಕಲೆ ಸಂಫೂರ್ಣ ಹಾದಿ ತಪ್ಪಿದೆ ಎಂಬುದಕ್ಕೆ ನಿದರ್ಶನವನ್ನು ಆ ವ್ಯಕ್ತಿಯಲ್ಲಿ ಕಾಣಬಹುದಿತ್ತು.
ತೆಂಕು ಬಡಗು ವೆತ್ಯಾಸ ತಿಳಿಯದೇ ಇದ್ದವರೂ ವೇಷ ಹಾಕುವುದನ್ನು ಕಾಣುವಾಗ ಅದನ್ನು ನೋಡುವ ಪ್ರೇಕ್ಷಕನಿಗೂ ಇದರ ಅರಿವು ಇರಬೇಕು. ಅರಿವು ಇಲ್ಲದೇ ಇದ್ದರೆ ಪ್ರದರ್ಶಿಸುವ ಕಲಾವಿದನ ಜವಾಬ್ದಾರಿ ಹೆಚ್ಚು ಇರುತ್ತದೆ. ಒಟ್ಟು ಯಕ್ಷಗಾನದ ವೇಷ ಹಾಕಿದರೆ ಅದೇ ಸಾಧನೆ ಎಂಬಂತೆ ಆ ಫೋಟೋಗಳು ಹೇಳುತ್ತಿದ್ದವು. ಯಾರೋ ಒಬ್ಬ ಎಲ್ಲೊ ಒಂದು ಕಡೆ ಹೀಗೆ ಮಾಡಿದರೆ ನಿರ್ಲಕ್ಷಿಸಬಹುದಾಗಿತ್ತು, ಆದರೆ ಇದೊಂದು ಪ್ರತಿಷ್ಠಿತ ಸಂಸ್ಥೆಯ ಕಾರ್ಯಕ್ರಮ. ಹಲವಾರು ಪ್ರಮುಖ ವ್ಯಕ್ತಿಗಳು ಅತಿಥಿಗಳಾಗಿದ್ದರು. ಇವರೆಲ್ಲರ ಮುಂದೆ ಇದುವೇ ಯಕ್ಷಗಾನ ಎಂದು ಬಿಂಬಿಸಿದ್ದು ನಿಜಕ್ಕೂ ವಿಷಾದನೀಯ. ಹೀಗೆ ಆಗುವುದು ಇದೇನು ಮೊದಲಲ್ಲ. ಹಲವು ಸಲ ಇಂತಹ ಪ್ರವೃತ್ತಿ ಕಾಣಬಹುದು. ಒಂದಿಷ್ಟು ಅಭಿಮಾನ ಇದ್ದವರು ಆಭಾಸಗಳನ್ನು ನೋಡುವುದಕ್ಕಿಂತ ಸುಮ್ಮನಿರುವುದೇ ಲೇಸು ಅಂತ ಗೈರಾಗಿ ಮನಃ ಶಾಂತಿಗೆ ಮೊರೆ ಹೋಗುತ್ತಾರೆ. ತೆಂಕು ಬಡಗು ಎಂಬ ಭೇದ ಎನಿದ್ದರೂ ನಾವು ಸಮಾನವಾಗಿ ಕಾಣಬೇಕು ನಿಜ. ಆದರೆ ಈ ರೀತಿ ಎರಡನ್ನೂ ವರ್ಣ ಸಂಕರ ಮಾಡಿ ನಮ್ಮ ಚಪಲಕ್ಕೆ ಅದರೆ ಮೂಲವನ್ನು ನಾಶ ಮಾಡುವ ಪ್ರವೃತ್ತಿ ಅದಕ್ಕೆ ಮಾಡುವ ದ್ರೋಹವಾಗುತ್ತದೆ.
ತೆಂಕು ಬಡಗು ಮಿಶ್ರವಾಗಿ ಹೊಸ ತಳಿ ಬಿತ್ತನೆಯಾವುದು ಇಂದು ಮೊದಲಲ್ಲ. ಹಲವರ ಚಪಲಕ್ಕೆ ಎರಡೂ ತಿಟ್ಟುಗಳ ಯಕ್ಷಗಾನ ಬಲಿಯಾಗುವುದು ವಿಶೇಷವೇನೂ ಅಲ್ಲ. ಆದರೆ ಯಕ್ಷಗಾನ ಸೇವೆಯನ್ನೇ ಗುರಿಯಾಗಿಸಿಕೊಂಡ ಸಂಸ್ಥೆಗಳು ಹೀಗೆ ಮಾಡಿದಾಗ ಅಯ್ಯೋ ಪಾಪ ಎನಿಸುತ್ತದೆ. ಇವುಗಳಿಗೆ ತಮ್ಮದೇ ಆದ ಹಲವಾರು ಸ್ವಯಂ ಸಿದ್ದ ಸ್ಪಷ್ಟಿಕರಣಗಳು ಕಾರಣಗಳು ಯಥೇಚ್ಚವಾಗಿ ಮನಸ್ಸಿನ ಚಪಲದಂತೆ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಅತಿಥಿಗಳು ಮನೆಗ ಆಗಮಿಸಿದಾಗ ಅವರಿಗೆ ಬೇಕಾದದ್ದನ್ನು ಮಾಡಿ ಸತ್ಕರಿಸುವ ಪರಿಪಾಠ ಒಂದು ಕಾಲದಲ್ಲಿತ್ತು. ಈಗ ಅದು ಬದಲಾಗಿ ತಮಗೇನು ಇಷ್ಟವೋ ಅದನ್ನೇ ಸಲ್ಲಿಸುವ ಹೊಸ ರೀತಿ ಇದೆ. ಅದು ಇಲ್ಲೂ ಸಹ ಮುಂದುವರೆಯುತ್ತದೆ. ಮೂಲ ಯಕ್ಷಗಾನ ಹೇಗಿದ್ದರೇನು? ನಮಗೆ ಬೇಕಾದಂತೆ ನಾವು ತಿಂದು ಮುಕ್ಕಿದರೆ ಯಾರೂ ಕೇಳುವುದಕ್ಕಿಲ್ಲ ಎಂಬ ಮನೋಭಾವ. ತೆಂಕು ಅಥವಾ ಬಡಗೂ ಇಬ್ಬರಿಗೂ ಹೊಂದಿಕೊಂಡು ಬೇಸರವಾಗದಂತೆ ಹೊಸ ಒಂದು ಕ್ರಮ ಸ್ವತಃ ಜಾರಿ ಮಾಡುತ್ತಾರೆ. ಮೊದಲೇ ಧರ್ಮಾರ್ಥವಾಗಿ ಉಚಿತವಾಗಿ ಸಿಗುವಂತಹ ಸೇವೆಗಳ ಗುಣ ಮಟ್ಟ ನಮ್ಮಲ್ಲಿ ಎಂದೋ ಶಿಥಿಲವಾಗಿ ಹೋಗಿದೆ. ಅದರಲ್ಲಿ ಯಕ್ಷಗಾನವೂ ಸೇರಿ ಹೋದರೆ ಅಚ್ಚರಿ ಇಲ್ಲ. ಇದೆಲ್ಲದರ ನಡುವೆ ನಮ್ಮ ತೆಂಕು ಅಥವಾ ಬಡಗು ಯಾವುದೇ ಇರಲಿ, ಅದರಲ್ಲಿ ಹೀಗೆ ಒಂದು ದಾರಿದ್ರ್ಯ ವನ್ನು ಕಂಡುಕೊಂಡ ಈ ಅಭಿರುಚಿಗೆ ಏನು ಅಂತ ಹೇಳಬೇಕು? ಇದು ತಿಟ್ಟುಗಳಲ್ಲಿರುವ ಸಂಪನ್ಮೂಲದ ಕೊರತೆಯಲ್ಲ. ಬದಲಿಗೆ ಬುದ್ದಿದಾರಿದ್ರ್ಯದ ಕೊರತೆ.
ಇಲ್ಲಿ ಬಂದ ವ್ಯಕ್ತಿಗೆ ಯಕ್ಷಗಾನದ ಅರಿವಿಲ್ಲದೇ ಈ ಆಭಾಸವನ್ನೇ ಯಕ್ಷಗಾನ ಎಂದು ತಿಳಿದುಕೊಂಡ. ಅದನ್ನೇ ದೊಡ್ಡ ಸಾಧನೆ ಎಂಬ ಆತ್ಮ ತೃಪ್ತಿ ಅನುಭವಿಸಿದ. ಆದರೆ ನಿಜವಾದ ಯಕ್ಷಗಾನಕ್ಕೆ ಇಲ್ಲಿ ಒದಗಿಬಂದ ದ್ರೋಹ ಮನಟ್ಟಾಗಿವುದಿಲ್ಲ. ಆಭಾಸಗಳನ್ನು ಯಕ್ಷಗಾನದ ಮಹಾ ಸಾಧನೆ ಎಂದು ತೋರಿಸಿ ಅದನ್ನೆ ಯಕ್ಷಗಾನ ಎಂಬಂತೆ ಬಿಂಬಿಸಿದವರಿಗೂ ಈ ದುಷ್ಪರಿಣಾಮದ ಗಂಭೀರತೆಯ ಅರಿವಿಲ್ಲ. ಮುಂದೆ ಯಾವುದು ಯಕ್ಷಗಾನ ಎಂಬುದು ತಿಳಿಯದೇ ಯಾವುದೋ ಒಂದನ್ನು ಯಕ್ಷಗಾನ ಎಂದು ತಿಳಿದುಕೊಳ್ಳುವಾಗ, ಇವರು ಎಸಗಿದ ದ್ರೋಹದ ಅರಿವಾದರೂ ಆಗುವ ಸಾಧ್ಯತೆ ಇಲ್ಲ. ಇಷ್ಟಕ್ಕೂ ಇದರ ಆವಶಕತೆ ಇದೆಯೇ? ವರ್ಷಕ್ಕೊಂದು ಕಾರ್ಯಕ್ರಮ ಮಾಡಿ ಅದರ ಫೋಟೋ ವಿಡಿಯೋ ತೋರಿಸಿ ಒಂದಷ್ಟು ಸರಕಾರದ ಅನುದಾನವನ್ನು ಗಿಟ್ಟಿಸಿಕೊಳ್ಳುವ ಹುನ್ನಾರ ಇದು. ಬಡಪಾಯಿ ಯಕ್ಷಗಾನ ಇದಕ್ಕೆ ಬಲಿಪಶುವಾಗುತ್ತಿದೆ. ಯಾಕೆಂದರೆ ಇದನ್ನು ನಿಯಂತ್ರಿಸುವುದಕ್ಕೆ ನಮ್ಮಲ್ಲಿ ಯಾವ ವ್ಯಕ್ತಿಯೂ ಇಲ್ಲ . ಯಾವ ಶಕ್ತಿಯೂ ಇಲ್ಲ. ಆಕಾಡೆಮಿಗಳು ಸ್ವಾರ್ಥದ ಪರಿಧಿಯಲ್ಲಿ ಮೌನವಾಗಿಬಿಡುತ್ತವೆ.
ಯಕ್ಷಗಾನವನ್ನು ಐವತ್ತರ ದಶಕದಲ್ಲಿ ಪುನರ್ನಿರ್ಮಿಸಿ ಅದರ ಪುನರುತ್ಥಾನ ಮಾಡಿದ್ದು ಕೇಳಿಯಾದರು ತಿಳಿಯಬೇಕು. ಅದರ ಹಿಂದೆ ಅದೆಷ್ಟು ಪರಿಶ್ರಮ ಇದ್ದಿರಬಹುದು ಎಂದು ಆತ್ಮಾವಲೋಕನ ಮಾಡಬೇಕು. ತಮ್ಮ ಸ್ವಾರ್ಥಕ್ಕೆ ಒಮ್ದು ಉತ್ತಮ ಕಲೆ ಬಲಿಯಾಗುವಾಗ ಉರಿದು ರೋಧಿಸುವ ಆತ್ಮಗಳು ಇವೆ ಎಂಬ ಪರಿಜ್ಞಾನವಾದರೂ ಇರಬೇಕು. ಮುಖ್ಯವಾಗಿ ನಮಗೆ ನಮ್ಮದು ಎಂಬ ಆತ್ಮಾಭಿಮಾನವಾದರೂ ಇರಬೇಕು. ಯಕ್ಷಗಾನದ ಅರಿವಿಲ್ಲದವರಿಗೆ ನಿಜವಾದ ಯಕ್ಷಗಾನವನ್ನು ತೋರಿಸುವ ಒಂದಷ್ಟು ಪ್ರಾಮಾಣಿಕತೆಯ ಬದ್ದತೆಯನ್ನು ತೋರಿಸಬೇಕು. ನಮಗೆ ಅವಮಾನವಾದರೆ ಸಹಿಸಿಕೊಳ್ಳದ ನಾವು ಯಕ್ಷಗಾನಕ್ಕೆ ಆಗುವ ಅವಮಾನವನ್ನು ತಿಳಿಯುವ ಪ್ರಯತ್ನ ಮಡಬೇಕು. ಇಷ್ಟಕ್ಕೂ ಮಾನ ಎಂದರೆ ಏನು? ಸಾಮಾನ್ಯವಾಗಿ ಮಾನ ಅವಮಾನದ ಬಗ್ಗೆ ತಿಳಿಯಬೇಕಾದರೆ ಮಾನ ಎಂದರೇನು ಎಂಬ ಖಚಿತ ಅರಿವು ಇರಬೇಕು. ಹಾಗಾಗಿ ಇದು ಅವಮಾನ ಎಂದು ಅನಿಸುವುದೇ ಇಲ್ಲ. ಯಾವುದೋ ಒಂದು ಅದ್ಭುತ ಸಾಧನೆ ಎಂದು ತಮ್ಮ ತಲೆಗೆ ತಾವೇ ಗರಿಯನ್ನು ಅಲಂಕರಿಸುತ್ತಾರೆ. ನಮ್ಮ ಬಾಷೆ ಸಂಸ್ಕೃತಿ ಯಾರೋ ಹೊರಗಿನಿಂದ ಆಕ್ರಮಿಸಿ ನಾಶ ಮಾಡುವ ಹಾಗಿಲ್ಲ. ಅದರ ನಾಶದ ಮೂಲ ಬಿತ್ತನೆ ನಮ್ಮಲ್ಲೇ ಆಗಿರುತ್ತದೆ. ಯಕ್ಷಗಾನವೂ ಅದಕ್ಕೆ ಹೊರತಲ್ಲ. ಯಾವುದೋ ಟೀವಿ ಮಾಧ್ಯಮಗಳಲ್ಲಿ ಯಕ್ಷಗಾನವನ್ನು ಯಾವುದೋ ರೂಪದಲ್ಲಿ ತೋರಿಸಿದಾಗ ಅವಮಾನ ಎಂದುಕೊಂಡು ಪ್ರತಿಭಟನೆ ಮಾಡುವಾಗ ಒಂದು ಯೋಚಿಸಬೇಕು, ಮಾಧ್ಯಮಗಳಲ್ಲಿ ಯಕ್ಷಗಾನದ ಬಗ್ಗೆ ಸರಿಯಾದ ಅರಿವಿಲ್ಲದೇ ಅಗೌರವ ತೋರಬಹುದು. ಆದರೆ ಇಲ್ಲಿ ಸಂಘ ಸಂಸ್ಥೆಗಳು ಅದರ ಅರಿವಿದ್ದವರು ಹೀಗೆ ವರ್ತಿಸಿ ನಾಶ ಮಾಡಿದರೆ ಅದನ್ನು ಪ್ರತಿಭಟಿಸುವವರು ಯಾರು? ಪ್ರತಿಭಟನೆಗೆ ಒಂದಿಷ್ಟಾದರೂ ಆತ್ಮ ಸಾಕ್ಷಿ ಎಂಬುದಿದ್ದರೆ ಮೊದಲು ಇಂತಹ ಆಭಾಸಗಳು ಪ್ರತಿಭಟಿಸಲ್ಪಡಬೇಕು. ಇಲ್ಲವಾದರೆ ಪ್ರತಿಭಟನೆಗಳು ಪ್ರಾಮಾಣಿಕತನವನ್ನು ಕಳೆದುಕೊಳ್ಳುತ್ತವೆ. ಯಕ್ಷಾಗಾನದ ಸೇವೆ ಅದರ ಪೋಷಣೆಯನ್ನು ಮಾಡಬೇಕು. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ ಅದನ್ನು ಉಳಿಸುವ ಕೆಲಸವಾದರೂ ಮಾಡಬೇಕು, ಕೊನೆ ಪಕ್ಷ ಅದನ್ನು ನಾಶವಾದರೂ ಮಾಡದೆ ಅದಕ್ಕೆ ಕೃತಜ್ಞತೆಯನ್ನು ತೋರಿಸಬೇಕು. ಇದು ಆತ್ಮ ಸಾಕ್ಷಿ.
ತೆಂಕು ಆಗಲಿ ಬಡಗು ಆಗಲಿ ಅಥವಾ ಯಾವುದೇ ಕಲೆಗಳಾಗಲಿ ಅದರಲ್ಲಿ ಸಾಕಷ್ಟು ಸಂಪನ್ಮೂಲಗಳಿರುತ್ತವೆ. ಅವುಗಳೆಂದೂ ದಾರಿದ್ರ್ಯವನ್ನು ಬಿಂಬಿಸುವುದಿಲ್ಲ. ದಾರಿದ್ರ್ಯವಿರುವುದ ಅದನ್ನು ಸರಿಯಾಗಿ ಗುರುತಿಸುವ ಮನೋಭಾವದಲ್ಲಿ. ಅದರ ಪೋಷಣೆಗಿಂತ ಅದರ ಸಂರಕ್ಷಣೆಗೆ ಹೆಚ್ಚು ಆದ್ಯತೆ ಒದಗಿಬರಬೇಕು. ಸಂಸ್ಥೆಗಳು ಯಾವುದೇ ಕಾರಣಕ್ಕೂ ಇದನ್ನು ಮರೆಯುವಂತಿಲ್ಲ.



