Monday, July 26, 2010
ಅನುಭವದ ಸಿಂಚನ
Friday, July 16, 2010
ದೊಂದಿ ಬೆಳಕಿನ ಯಕ್ಷಗಾನ...ಹೀಗೊಂದು ಚಿಂತನ
ದಾಖಲೀಕರಣದ ಸುದ್ದಿ ಕೇಳಿಯೇ ನಾವು ಮಿತ್ರರೆಲ್ಲ ಅದೆಂದು ಕೈಸೇರುವುದೋ ಎಂಬ ತವಕದಲ್ಲಿ ಇದ್ದೆವು. ಮೊನ್ನೆಯೊಂದು ದಿನ ಅತ್ರಿಯವರ ಬ್ಲಾಗ್ ಪುಟದಲ್ಲಿ ಯಕ್ಷಗಾನ ವೀಡಿಯೋ ಲಭ್ಯತೆಯ ವಿವರ ದಾಖಲಾದದಿನವೇ ತರಿಸುವಲ್ಲಿ ಉದ್ಯುಕ್ತನಾದೆ. ಹಾಗೆ ತರಿಸುವಾಗ ಬಡಗು ಯಕ್ಷಗಾನ ರೂಪದಲ್ಲಿ ಬಂದ ವೀಡಿಯೊ ಪ್ರಸಂಗ ಹಿಡಿಂಬಾವಿವಾಹ ಅಥವಾ ಅರಗಿನ ಮನೆ ಯಕ್ಷಗಾನ ಮೊದಲಾಗಿ ಕೈ ಸೇರಿದರೆ ನಂತರ ತೆಂಕು ಯಕ್ಷಗಾನ ಕುಂಭಕರ್ಣ ಕಾಳಗ ಕೈಸೇರಿತು. ಆಸಕ್ತಿಯಿಂದ ನೋಡಿ ಅನುಭವಗಳನ್ನು ಯಥಾವತ್ತಾಗಿ ಹಂಚಿಕೊಳ್ಳುವ ಯತ್ನವಿದು.
.ಕಲಾತ್ಮಕ ಯಕ್ಷಗಾನದಲ್ಲಿ ಇಂತಹ ದೃಶ್ಯವೈಭವ ಚಿತ್ರೀಕರಿಸುವ ಅಗತ್ಯವಾದರೂ ಏನು?ಇದನ್ನು ನಿರ್ಮಿಸುವಲ್ಲಿನ ನಿರ್ಮಾಪಕ ತಂಡದ ಸದಸ್ಯರ ಸಾಧನೆ ಪ್ರತಿ ಹಂತದಲ್ಲು ಕಾಣಬಹುದು. ಆ ಕಾಳಜಿಗೆ ನಾವೆಲ್ಲ ಸ್ವಲ್ಪ ಪ್ರೋತ್ಸಾಹದ ಕಾಳಜಿ ತೋರಿಸಿದಲ್ಲಿ ಇನ್ನೂ ಮುಂದಕ್ಕೆ ಇಂತಹ ಕಾರ್ಯಕ್ರಮಗಳು ಇನ್ನೂ ವ್ಯವಸ್ಥಿತವಾಗಿ ಮಾಡುವಲ್ಲಿ ಚೈತನ್ಯ ಬರುವುದು.ಆ ಚೈತನ್ಯ ಭಗವಂತನು ಅನುಗ್ರಹಿಸಲಿ ಎಂದು ಆಶಿಸೋಣ.
Friday, July 2, 2010
ನಮ್ಮ ಬಲಿಪಜ್ಜನ ಯಶೋಗಾಥೆ.
Friday, June 18, 2010
ಗಾಬರಿ ಪಡುವ ಸಂಗತಿಗಳು
ಇಂದು ಈ ಅನುಕರಣೆಯೇ ಪ್ರಧಾನವಾಗಿದೆ. ಒಬ್ಬ ಭಾಗವತ ಒಂದು ಪದವನ್ನು ಒಂದು ಸ್ವರ ಸ್ಥಾಯಿಯಲ್ಲಿ ಅನುಸರಿಸಿ ಹಾಡುತ್ತಿದ್ದರೆ ಅದನ್ನು ಅನುಕರಿಸಿದರೆ ಅದು ಒಂದು ಕಲೆಯೆಂದು ತಿಳಿಯಬಹುದು. ಮೂಲ ಅನುಕರಣೆಯಂತೆ ಕಂಡರೂ ತನ್ನದಾದ ರೀತಿಯನ್ನು ಸೇರಿಸಿ ಸ್ವ ಸಾಮಾರ್ಥ್ಯದಿಂದ ಹೊಸ ರೂಪದಲ್ಲಿ ಹಾಡಿದರೆ ಅದನ್ನು ನಿಜವಾದ ಕಲೆಯೆಂದು ಮನ್ನಣೆ ಕೊಡುವಲ್ಲಿ ಗಾಬರಿಯಾಗುವುದಿಲ್ಲ.
ಮಗು ಎಳವೆಯಲ್ಲಿ ತನ್ನ ಹಿರಿಯನ್ನು ಅನುಕರಿಸಿಯೇ ಬೆಳೆಯುತ್ತ ಅಪ್ಪನಂತೆಯೋ ಅಮ್ಮನಂತೆಯೊ ಹಲವು ವಿಷಯಗಳಲ್ಲಿ ಅನುಕರಿಸಿ ತನ್ನದೇ ಒಂದು ಶೈಲಿಯನ್ನು ರೂಡಿಸಿಕೊಳ್ಳುತ್ತಾ ಆ ಶೈಲಿಗೆ ತಾನೆ ಒಡೆಯನಾಗಿಬಿಡುವುದು ಸಾಮಾನ್ಯ.
ತನ್ನ ಮೆಚ್ಚಿನ ಕಲಾವಿದ ವೇಶ ತೊಟ್ಟು ಅಂಗೈಯಲ್ಲಿ ಮಿರಿ ಮಿಂಚುವ ಕರವಸ್ತ್ರ ಹಿಡಿದುಕೊಂಡು ರಂಗ ಪ್ರವೇಶ ಮಾಡಿದರೆ, ಈತನೂ ಅದರಂತೆ ಅನುಕರಿಸುವುದು, ಹಿರಿಯ ಭಾಗವತರೊಬ್ಬರನ್ನು ಅನುಕರಿಸುವುದು ಯಾವ ರೂಪದಲ್ಲಿ ಇದೆ ಎಂದರೆ, ಆತ ಧರಿಸಿದ ರೀತಿಯಲ್ಲೇ ಶಾಲು ಹೊದ್ದುಕೊಳ್ಳುವುದು, ಅವಾಗವಾಗ ತೊಟ್ಟ ಅಂಗಿಯನ್ನು ಆತನಂತೇ ಸರಿ ಮಾಡಿಕೊಳ್ಳುವುದು, ಆ ಹಿರಿಯ ಭಾಗವತ ಅಗಾಗ ನಿಂತುಕೊಂಡು ಪದ ಹೇಳಿದರೆ ಈತನೂ ಅದೇ ರೀತಿ ನಿಂತುಕೂಳ್ಳುವುದು, ಹಾಗೆ ಹಿರಿಯರು ಅಗಾಗ ವೇದಿಕೆ ಹಿಂಭಾಗಕ್ಕೆ ಹೋಗಿ ನೇತು ಹಾಕಿದ ಪರದೆ ಸರಿಸಿ ಚೌಕಿಯಲ್ಲಿ ಇಣುಕಿ ನೋಡಿದರೆ , ಇವರು ಹೀಗೆ ಕಲಾವಿದರಿಗೆ ನಿರ್ದೇಶನ ಕೊಡುತ್ತಿದ್ದರೆ,ಈತನು ಆಗಾಗ ವಿನಾ ಕಾರಣವಾಗಿ ಅದೆ ಶೈಲಿಯಲ್ಲಿ ಒಳಗೆ ಇಣುಕುವುದು ಈತನ ಇಣುಕುವಿಕೆಗೆ ಯಾರೂ ಪ್ರಾಮುಖ್ಯತೆ ಕೊಡದಿದ್ದರೂ ಹಿರಿಯ ಭಾಗವತನ ಹಾಗೆ ಒಂದು ಘಳಿಗೆಯ ಅವಧಿಗಾದರೂ ತಾನಾದೆ ಎಂಬ ಅಲ್ಪತೃಪ್ತಿ. ತನ್ನ ಅಭಿಮಾನಧನ ಕಲಾವಿದ ತಲೆಯುನ್ನೋ ಕೂದಲನ್ನೊ ಸರಿ ಮಾಡಿಕೊಂಡರೆ ಈತನೂ ಚಾಚು ತಪ್ಪದೇ ಅದೇ ರೀತಿ ಅನುಕರಿಸಿ, ಕೊನೆಗೆ ಮೈ ಮೇಲೆ ಹುಣ್ಣಾಗಿ ತುರಿಕೆ ಯುಂಟಾಗಿ ಹಿರಿಯ ಭಾಗವತ ತುರಿಸಿಕೊಂಡರೆ ಈತನೂ ಅದೇ ರೀತಿ ಕೆರೆದು ಕೊಳ್ಳುವುದು.. ಇದೆಲ್ಲ ಸತ್ಯವಾಗಿಯೂ ಗಾಬರಿ ಹುಟ್ಟಿಸುತ್ತದೆ.
ಇಂದು ವೃತ್ತಿಪರ ಕಲಾವಿದರಿಗೆ ಇದ್ದ ಅನಿವಾರ್ಯತೆ ಹವ್ಯಾಸಿಗಳಿಗೆ ಕಡಿಮೆಯಾದಾಗ ಸಹಜವಾಗಿ ಒಟ್ಟು ಗುಣಮಟ್ಟದ ಕೊರತೆ ಧಾರಾಳವಾಗಿ ಕಂಡುಬರುತ್ತಿದೆ. ಹವ್ಯಾಸಿಗಳು ಗುರುತರವಾದ ತಮ್ಮ ಜವಾಬ್ದಾರಿಯ ಅರಿವಿಲ್ಲದೆ ವರ್ತಿಸುವುದು ಅಭಿಮಾನದಿಂದ ಕಂಡ ಕಲೆಗೆ ಅಪಚಾರ ಎಸಗಿದಂತೆ. ಮೊದಲು ವೃತ್ತಿಪರರಿಗೆ ತಮಗೆ ಜೀವನ ಕೊಡುತ್ತಿರುವ ಮತ್ತು ಜೀವನ ನಿರ್ವಹಣೆಗೆ ಇದೇ ಅನಿವಾರ್ಯವಾಗಿರುವುರಿಂದ ಅದರಲ್ಲಿ ಅವರಿಗರಿವಿದ್ದು ಇಲ್ಲದೆಯೊ ಕಲೆಯಬಗ್ಗೆ ಬದ್ದತೆಯನ್ನು ತೊರಿಸುವುದೂ ಅನಿವಾರ್ಯವಾಗಿತ್ತು. ಇಂತಹ ಅನಿವಾರ್ಯತೆ ಹವ್ಯಾಸಿಗಳಿಗೆ ಇಲ್ಲ ಮಾತ್ರವಲ್ಲ ಹವ್ಯಾಸಿಗಳಂತೆ ಇದು ಹೊಟ್ಟೇ ಪಾಡೂ ಅಲ್ಲ. ಮೊದಲಿನಂತೆ ಕಲಾವಿದನಿಗೆ ವಿದ್ಯೆ ಎಂದರೆ ಇದೊಂದೇ ಅರಿವಿನಲ್ಲಿತ್ತು. ಒಂದು ರೀತಿಯ ಶಿಕ್ಷಣ ವಂಚಿತರು. ಹವ್ಯಾಸಿಗಳು ಇಂದು ಹೆಚ್ಚು ಸುಶಿಕ್ಷಿತರು ಮತ್ತು ಬದುಕಿನಲ್ಲಿ ಹೆಚ್ಚು ಭದ್ರತೆಯನ್ನು ಹೊಂದಿದವರು. ಇವರಿಂದ ಕಲಾ ಜಗತ್ತು ಅಧಿಕವನ್ನು ನಿರೀಕ್ಷಿಸುವುದರಲ್ಲಿ ತಪ್ಪೇನಿದೆ. ಆದರೆ ಜವಾಬ್ದಾರಿಯ ಅರಿವು ಬರಬೇಕಷ್ಟೆ. ಕಲೆ ಕೇವಲ ಮನರಂಜನೆಯ ವಸ್ತುವಾಗಿ ಕಾಣದೆ ಅದರಲ್ಲಿ ಪೂಜನೀಯಭಾವನೆ ಬೆಳೆಯುವಂತಾಗಬೇಕು. ವಸ್ತುಸ್ಥಿತಿ ಕಂಡಾಗ ಕೇವಲ ಇಷ್ಟು ಮಾಡಿದ್ದು ಸಾಕು ಏಂಬ ಉಡಾಫೆಯ ತೃಪ್ತಿ ಕಂಡಾಗ ಗಾಬರಿಯಾಗುತ್ತದೆ.
ಕಾಲಮತಿಯೋಳಗೆ ನಡೆಯುತ್ತಿರುವ ಯಕ್ಷಗಾನ ಕಂಡಾಗ ಬಾಲ್ಯದಲ್ಲಿ ಭಯ ಕುತೂಹಲದಿಂದ ಕಂಡ ಯಕ್ಷಗಾನವನ್ನು ಹೋಲಿಸುವಂತಾಗುತ್ತದೆ. ಆತೀ ಹೆಚ್ಚಾಗಿ ಕಾಣುವ ದೇವಿ ಮಹಾತ್ಮೆಯ ಮಹಿಷಾಸುರ, ರುದ್ರಭಯಂಕರನಾಗಿ ಭಯಾನಕ ಲೋಕವನ್ನೆ ಸಾಕ್ಷಾತ್ಕಾರಗೋಳಿಸುತ್ತಿದ್ದ ಮಹಿಷಾಸುರ ಇಂದು ಪ್ರೆಕ್ಷಕರನ್ನು ನಗಿಸುವ ಕಾಯಕದಲ್ಲಿ ಸಬೆಯನ್ನು ಅಟ್ಟಾಡಿಸಿ ಚೆಲ್ಲಾಪಿಲ್ಲಿ ಗೊಳಿಸುವುದು, ಏನೇನೋ ವಿಚಿತ್ರ ಭಂಗಿಯನ್ನು ತೋರಿಸುವುದು... ರುದ್ರಭಯಂಕರ ಬಣ್ಣದವೇಷ ಇಲ್ಲಿ ಹಾಸ್ಯಗಾರನ ಪಾತ್ರ ಮಾಡಿದಾಗ ಗಾಬರಿ ಮಾತ್ರವಲ್ಲ ಒಟ್ಟು ವ್ಯವಸ್ಥೆಯ ಬಗ್ಗೆ ಹೇಸಿಗೆಯಾಗಿ ದೂರವೇ ಉಳಿಯುವಂತಾಗುತ್ತದೆ. ಹೀಗೆ ಎಲ್ಲದರಲ್ಲೂ ಕ್ರಮವಾಗಿ ಬಂದ ಕ್ರಮ ನಿಯಮಗಳಿಗೆ ಅತೀತರಾಗಿ ಪ್ರವರ್ತಿಸುವಾಗ ಏನಾಗಬೇಕು ? ನಾವೆಲ್ಲಿ, ಯಾವ ಯುಗದಲ್ಲಿ ಜೀವ ಹಿಡಿದು ಬದುಕುತ್ತಿದ್ದೇವೆ ಎಂದು ಯೋಚಿಸುವಾಗ ಗಾಬರಿ ಇನ್ನೂ ಜಾಸ್ತಿಯಾಗಿಬಿಡುತ್ತದೆ.
ಗುರುವನ್ನು ಮೀರಿದ ಶಿಷ್ಯ ಎಂಬಮಾತು ಕೇಳುವಲ್ಲಿ ಮನಸ್ಸು ತವಕಿಸುತ್ತಿದ್ದರೆ,ಈ ಅಂಧಾನುಕರಣೆಯ ಉರುಳಲ್ಲಿ ನರಳಾಡುವ ಕಲೆಯನ್ನು ಕಂಡಾಗ ಗಾಬರಿಯಾಗುತ್ತದೆ. ಯಕ್ಷಗಾನದ ಮಟ್ಟಿಗೆ ಅರಗಿಸಿಕೊಳ್ಳಬೇಕಾದ ಸಂಗತಿಗಳು ಹಲವು ಇರಬಹುದು. ಇಂದಿನ ಯಾವುದೇ ಹಿರಿಯ ಕಲಾವಿದನೂ ತನ್ನ ಸಮರ್ಥ ಉತ್ತರಾಧಿಕಾರಿಯನ್ನು ನಿಯಮಿಸುವಲ್ಲಿ ಸಫಲನಾಗಿಲ್ಲ ಎಂದೇ ಹೇಳಬಹುದು. ತಮ್ಮ ವಿಶಿಷ್ಟ ಶೈಲಿಯಿಂದ ತಮ್ಮ ಗುರುಗಳಿಂದ ವಿಬ್ಭಿನ್ನವಾಗಿ ಗುರುತಿಸಲ್ಪಟ್ಟವರು ತಮ್ಮ ವಿಭಿನ್ನತೆಯ ಕಲ್ಪನೆಗೆ ವಾರಸುದಾರರಿಲ್ಲದ ಪರಿಸ್ಥಿತಿಯಲ್ಲಿ ಮುಂದಿನ ಜನಾಂಗದಲ್ಲಿ ಹೇಗಿರಬಹುದು ಅದು ಕೇವಲ ಒಬ್ಬರಿಗೆ ಸೀಮಿತವಾಗಿರದೆ ಸಮಷ್ಟಿಯಲ್ಲಿ ಎದುರಾಗುವ ಸಮಸ್ಯೆ. ಒಂದು ಸಲ ಯೋಚಿಸಿದರೆ ಮೇಲೆ ಹೇಳಿದ ಭಾಗವತರಂತೆ, ಯಾವುದೇ ಪ್ರಸಂಗವಾದರು ಸೈ ಎನ್ನುವ ಭಾಗವತರು ಯಾರಿದ್ದಾರೆ? ಇದು ಗಾಬರಿಯ ಸಂಗತಿಯಲ್ಲವೇ?
Thursday, June 3, 2010
ಬರೆಕೆರೆಯ ಯಕ್ಷಗಾನ ಹಿಮ್ಮೇಳ ವೈಭವ
ಆದರೆ ಎಲ್ಲ ಬಾರಿಯಂತೆ ಈ ಬಾರಿಯೂ ಕಾರ್ಯಕ್ರಮಕ್ಕೆ ಹೋಗಿ ಸವಿಯುವುದು ಕನಸಾಗಿಯೆ ಉಳಿದು ಬಿಟ್ಟಿತು. ವಾರದ ಮಧ್ಯಭಾಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಮಯದ ಅಭಾವದಿಂದ ಹೋಗುವುದು ಸಾಧ್ಯವಾಗದೆ ಹೋಯಿತು. ಈ ನಿರಾಶೆಯ ಮಧ್ಯದಲ್ಲೇ ಅದೆ ದಿನ ಸಾಯಂಕಾಲ ಕೇಶವರಿಗೆ ಕರೆ ಮಾಡಿ ಉತ್ಸಾಹದಿಂದಲೇ ಕೇಳಿದಾಗ ನನ್ನಿಂದಲೂ ಹೆಚ್ಚಿನ ಉತ್ಸಾಹದಿಂದ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ವರದಿ ಒಪ್ಪಿಸಿಬಿಟ್ಟರು. ನಿಜಕ್ಕು ಆದಿನ ನನ್ನಂತಹ ಹಲವು ಯಕ್ಷಗಾನ ಮಿತ್ರರು ಈ ಕಾರ್ಯಕ್ರಮದ ಸವಿಯುನ್ನುಣ್ಣುವುದರಲ್ಲಿ ವಂಚಿತರಾಗಿಬಿಟ್ಟೆವು.
ಸಮಾಧಾನವಾದದ್ದು.
ಏರಿಳೀತದ ಶೈಲಿಯ ಪದ್ಯಾಣ ಗಣಪ್ಪಣ್ಣನ ಪದ್ಯಗಳ ಆಲಾಪನೆ ಶೈಲಿಯೇ ಸುಂದರ.
Sunday, May 16, 2010
ಶ್ರಿ ಮಹಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸುರತ್ಕಲ್

ನನ್ನ ಪಕ್ಕದಲ್ಲಿ ಕುಳಿತಿದ್ದ ಒಬ್ಬಾತ ಆಗಂತುಕ ಅಂದಿನ ಉದಯವಾಣಿ ಓದುತ್ತಾಇದ್ದ. ಪೇಪರಿನ ಕೋನೆ ಪುಟದಲ್ಲಿದ್ದ ಒಂದು ಜಾಹೀರಾತು ನನ್ನ ಕಣ್ಣೆಗೆ ಬೀಳಬೇಕೆ. ಒಂದು ವೇಳೆ ಅದು ನನ್ನ ಕಣ್ಣಿಗೆ ಬೀಳದಿರುತ್ತಿದ್ದರೆ..ಅಂದು ಬಸ್ ಗೆ ಒಂದು ಜನ ನನ್ನ ರೂಪದಲ್ಲಿ ಹೆಚ್ಚಾಗಿರುತ್ತಿತ್ತು. ಅದೊಂದು ಆವಾಗ ಮಮೂಲಾಗಿದ್ದ ಅಟದ ಜಾಹಿರಾತು. ಅದೆ ಕೊನೆಯ ಪುಟದ ಎಡಭಾಗದ ತಳದಲ್ಲಿ ಆವಾಗ ಚಾಲ್ತಿಯಲ್ಲಿದ್ದ ಯಕ್ಷಗಾನಾ ಮೇಳಗಳ ಎರಡು ದಿನದ ಕಾರ್ಯಕ್ರಮ ಅಲ್ಲಿ ಸಂಕ್ಷೇಪವಾಗಿ ಇರುತ್ತಿತ್ತು. ತುತ್ತ ತುದಿಯಲ್ಲಿ ಧರ್ಮಸ್ಠಳ ಮೇಳ , ಅದರ ಕೆಳಗೆ ಕರ್ಣಾಟಕ ಮೇಳ ಆ ನಂತರ ಮೂರನೆಯದಾಗಿ ಸುರತ್ಕಲ್ ಮೇಳ..

ಹೆಚ್ಚಾಗಿ ಆವಾಗೆಲ್ಲ ನನ್ನ ಕಣ್ಣು ಉದಯವಾಣಿ ಕಂಡ ಕೂಡಲೆ ಮೊದಲು ಓಡುತ್ತಿದ್ದ ಜಾಗ ಅದು. ಅದರಲ್ಲೂ ಮೂರನೆಯದಾಗಿದ್ದ ಸುರತ್ಕಲ್ ಮೇಳದ ಆಂದಿನ ಆಟ ಎಲ್ಲಿ ಎಂದು ನೋಡುವ ಸಹಜ ಚಪಲ ಅಂದು ಕೂಡ ನನ್ನ ಪ್ರಯಾಣದ ಯೋಜನೆಯನ್ನೇ ಬದಲಿಸಿತು. ಹೌದು ಅಂದು ಸುರತ್ಕಲ್ ಮೇಳದ ಆಟದ ಜಾಹಿರಾತು ಕಂಡೊಡನೇ ಕಾರ್ಯಕ್ರಮ ಸಂಪೂರ್ಣ ಬದಲಾಗಿಬಿಟ್ಟಿತು. ಅಂದು ಮೇಳದ ಆಟ ಮಂಗಳೊರಿನ ಕೇಂದ್ರ ,ನೆಹರೂ ಮೈದಾನಿನಲ್ಲಿ. ಅದೂ ಪ್ರಸಂಗ ನೋಡಿದ ಕೂಡಲೆ ಮತ್ತೆ ಪುನಃ ಯೊಚಿಸುವ ಮನಸ್ಸು ಆಗಲಿಲ್ಲ.

ಶ್ರಿ ಮಹಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸುರತ್ಕಲ್. ಈ ಮೇಳದ ಅಂದಿನ ಆಟ ಮತ್ತು ಆಮೇಳದ ಹಿಟ್ ಪ್ರಸಂಗವಾದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ..ಇನ್ನು ಬೇರೆ ಬೇಕೆ? ಅದಾಗಲೆ ಯಾವ ಬಸ್ಸಿಗಾಗಿ ಕಾಯುತ್ತಿದ್ದೆನೋ ಆ ಬಸ್ಸು ಖಾಲಿಯಗಿ ಬಂದು ನಿಂತಿತ್ತು. ಮನಸ್ಸು ಎರಡಾಗುವ ಮೊದಲೇ ಕುಳಿತಲ್ಲಿಂದ ಎದ್ದು ಹೊರಬಂದೆ. ಉಪ್ಪಳದ ಸಾಯಿಬರೊಬ್ಬರು ಬಸ್ ಸ್ಟಾಂಡಿಂದ ಹೊರಬರುವ ನನ್ನ ಪರಿಚಿತ ಮುಖ ನೋಡಿ ಒಳಗೆ ಹೋದರು.. ಅವರು ಅದೇ ಬಸ್ ಗೆ ಏದುಸಿರು ಬಿಡುತ್ತಾ ಹೋಗುತ್ತಿದ್ದರು. ನಾನು ಮಾತ್ರ ಪೂರ್ಣ ನಿರ್ಧರಿಸಿ ನೆಹರೂ ಮೈದಾನಿನತ್ತ ನಡೆದೆ.
ಇದು ನನಗೆ ಆ ಕಾಲದಲ್ಲಿ ಆ ಮೇಳದಲ್ಲಿದ್ದ ಆಕರ್ಷಣೆ...!!!
ಹತ್ತು ಹಲವು ವೃತ್ತಿಪರ ಮೇಳಗಳು ಕಾರ್ಯಪ್ರವೃತ್ತವಾಗಿದ್ದ ಯಕ್ಷಗಾನ ಕಲೆಯ ಮಟ್ಟಿಗೆ ಸುವರ್ಣಯುಗದ ಆ ಕಾಲದಲ್ಲಿ ಎಲ್ಲ ಮೇಳಗಳೂ ತಮ್ಮದೆ ವೈಶಿಷ್ಟ್ಯವನ್ನು ಪಡೆದುಕೊಂಡು ಸ್ಪರ್ಧಾತ್ಮಕವಾದ ಪ್ರತಿಭೆಯನ್ನು ತೋರುತ್ತಿದ್ದ ಕಾಲವದು. ಈ ಸುರತ್ಕಲ್ ಮೇಳ ನನಗೆ ಇಷ್ಟವಾಗಿದ್ದುದು ಅದರ ಬಹುಮುಖ ಪ್ರತಿಭೆ. ಹಲವು ಸೂಪರ್ ಹಿಟ್ ಪ್ರಸಂಗಗಳು ಅದು ಎಲ್ಲಾ ರಂಗಕ್ಕೂ ಅನ್ವಯವಾಗುತ್ತಿತ್ತು. ಹಲವು ಪೌರಾಣಿಕ ಪ್ರಸಂಗಳಂತೆ ತುಳು ಮತ್ತು ಸಾಮಾಜಿಕ ಪ್ರಸಂಗಗಳನ್ನು ಪ್ರದರ್ಶಿಸುವುದರಲ್ಲಿ ತನ್ನದೆ ಆದ ವೈಶಿಷ್ಟ್ಯವನ್ನು ಹೊಂದಿಕೊಂಡಿತ್ತು.ನನಗಿನ್ನೂ ನೆನಪಿದೆ ಸುರತ್ಕಲ್ ಮೇಳದ ಆಟ ನಾನು ನೋಡಿದ್ದು ಅದು ಉಪ್ಪಳದಲ್ಲಿ ಆದ ರಾಣಿ ರತ್ನಾವಳಿ ಪ್ರಸಂಗ. ಅತ್ಯುತ್ತಮ ಕಥಾಹಂದರವನ್ನು ಹೊಂದಿದ್ದ ಈ ಪ್ರಸಂಗ ಆಗಿನ ಪ್ರಬುದ್ದ ಕಲಾವಿದರಿಂದಾಗಿ ಇಂದೂ ಅದು ನೆನಪಿನಲ್ಲಿ ಉಳಿಯುವಂತಾಗಿದೆ. ಆವಾಗಿನ್ನು ಶಿವರಾಮ ಜೋಗಿ ಅತ್ಯುತ್ತಮ ಪುಂಡುವೇಷಧಾರಿಯಾಗಿದ್ದ ಕಾಲ ಅವರಿಗೆ ಹಾಸ್ಯದಲ್ಲಿ
ಜತೆಯಾಗಿ ವೇಣೂರು ಸುಂದರ ಆಚಾರಿ ಸಹ ಅಷ್ಟೇ ಪ್ರತಿಭೆಯನ್ನು ತೋರುತ್ತಿದ್ದ ಯುವ ಹಾಸ್ಯಗಾರ. ಇಷ್ತೆ ಅಲ್ಲ, ಅತ್ಯುತ್ತಮ ರಾಜ ವೇಶದಲ್ಲಿ ಮಿಂಚುತ್ತಿದ್ದ ಮಧೂರು ಗಣಪತಿ ರಾವ್ ಹಾಗು ಖಳ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಬಾಬು ಕುಡ್ತಡ್ಕ, ಬಣ್ಣದ ವೇಷಕ್ಕೆಂದೇ ಪ್ರಸಿದ್ದರೂ ಯಕ್ಷಗಾನದ ಬಣ್ಣದ ವೇಷಕ್ಕೆ ಮಾದರಿಯಾಗಿ ನಿಂತ ಬಣ್ಣದ ಮಾಲಿಂಗ, ಸ್ತ್ರೀ ಪಾತ್ರಗಳಲ್ಲಿ ನಾನು ನೋಡಿದ ಆರಂಭದ ದಿನಗಳಲ್ಲಿ ಈಶ್ವರ ಭಟ್ ಕೊಕ್ಕಡ ತಮ್ಮ ಲಾಸ್ಯ ಬೆಡಗು ಬಿನ್ನಾಣಕ್ಕೆ ಮುಂಚೂಣಿಯಲ್ಲಿದ್ದರೆ ಎಂ. ಕೆ. ರಮೇಶ ಆಚಾರ್ಯ ತಮ್ಮ ವಿಶಿಷ್ಟಸ್ತ್ರೀ ಪಾತ್ರಗಳಿಗೆ ಹೆಸರಾಗಿದ್ದರು. ಅಂತೆ ಶ್ಯಾಮಸುಂದರ ಅವರು ಇವರೊಂದಿಗೆ ಜತೆಯಾಗಿ ತಮ್ಮದೇ ಸ್ಥಾನ ಗುರುತಿಸಿಕೊಂಡಿದ್ದರು. ಇವೆಲ್ಲದಕ್ಕು ಮಿಗಿಲಾಗಿ ಹಿರಿಯರಾದ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ ಆ ಮೇಳದ ಪ್ರಧಾನ ಅಂಗವಾಗಿದ್ದುದು ತಿಳಿಯದವರಾರು? ಮತ್ತೊಬ್ಬ ಹಿರಿಯ ಕಲಾವಿದ ಆನಂದ ಮಾಸ್ತರ್ ತೆಕ್ಕಟ್ಟೆ ಇವರ ಪಾಂಡಿತ್ಯ ಪೂರ್ಣ ಅರ್ಥಗಾರಿಕೆ ಪ್ರತೀ ವೇಷಗಳೂ ಕಳೆ ಕಟ್ಟುತ್ತಿದ್ದವು. ಇನ್ನು ಹಿಮ್ಮೇಳದಲ್ಲಿ ಅಗರಿ ರಘುರಾಮ ಭಾಗವತ, ಮತ್ತು ಪದ್ಯಾಣ ಗಣಪತಿ ಭಟ್, ಚೆಂಡೆ ಹಾಗು ಮದ್ದಲೆಯಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್ ಮತ್ತು ಕಡಬ ನಾರಾಯಣ ಅಚಾರಿ. ಹೀಗೆ ಒಟ್ಟಂದದಲ್ಲಿ ಒಂದು ತಂಡವಾಗಿ ಸುರತ್ಕಲ್ ಮೇಳದ ಆಟಗಳು ತಮ್ಮದೆ ಆದ ವೈಶಿಷ್ಟ್ಯವನ್ನು ಪಡೆದುಕೊಂಡಿದ್ದವು. ಈ ಮೇಳದ ಹಲವು ಅದ್ಭುತ ಎನ್ನಬಹುದಾದ ಆಟಗಳನ್ನು ನೋಡಿದ್ದೇನೆ.ಅವುಗಳ ನೆನಪು ಇನ್ನೂ ಹಸಿರಾಗಿರುವಂತೆ ಅವುಗಳು ಗಾಢವಾದ ಮುದ್ರೆಯೂನ್ನೊತ್ತಿವೆ. ಮೊದಲಾಗಿ ಸಮಗ್ರ ಭೀಷ್ಮ. ಶಂತನು ಮಹಾರಾಜನ ಒಡ್ಡೋಲಗದಿಂದ ಆರಂಭವಾಗುವ ಈ ಪ್ರಸಂಗ ಭೀಷ್ಮ ಪರ್ವದವರೆಗೂ ಸಾಗುತ್ತದೆ. ಶಂತನುವಾಗಿ ಮಧೂರು ಗಣಪತಿ ರಾವ್,ಗಂಗೆಯಾಗಿ ಕೊಕ್ಕಡ ಈಶ್ವರ ಭಟ್ ಮೊದಲಾರ್ಧದಲ್ಲಿ ನಿರ್ವಹಿಸಿದರೆ.ಭೀಷ್ಮ ಪ್ರತಿಙ್ಙೆಯ ಸತ್ಯವೃತನಾಗಿ ಶಿವರಾಮ ಜೋಗಿ ,ದಾಶರಾಜನಾಗಿ ತೆಕ್ಕಟ್ಟೆ ಆನಂದ ಮಾಸ್ತರ್, ಸತ್ಯವತಿಯಾಗಿ ಪುನಃ ರಂಗವೇರುವ ಈಶ್ವರ ಭಟ್ ,ಆನಂತರ ನಡುವಿರುಳು ಕಳೆದು ಶೇಣಿಯವರ ಭೀಷ್ಮ ಪ್ರವೇಶವಾದರೆ ಎಂ. ಕೆ. ರಮೇಶ ಅವರ ಅಂಬೆ, ಒಟ್ಟಿನಲ್ಲಿ ಆ ಬಾಲ್ಯದಲ್ಲಿ ನೋಡಿದ ಆ ಪ್ರಸಂಗ ಇನ್ನು ಮನಸ್ಸಿನಲ್ಲಿ ಅಚ್ಚೋತ್ತಿದೆ.
ಹೆಸರಿಸುತ್ತಾ ಹೋದರೆ ಹಲವಾರು ಪ್ರಸಂಗಗಳ ಅದ್ಭುತ ವರ್ಣನೆಯನ್ನೆ ಮಾಡಿಬಿಡಬಹುದು. ಸಮಗ್ರ ವಾಲಿ, ರಾಜಾಯಯಾತಿ, ಇವೆರಡೊ ಪ್ರಸಂಗಗಳು ಅದ್ಭುತವಾಗಿ ಪ್ರದರ್ಶಿತವಾಗುತ್ತಿದ್ದವು. ಸಮಗ್ರ ವಾಲಿಯ ಮೊದಲ ವಾಲಿ ಜೋಗಿ ಅದ್ಭುತವಾಗಿ ನಿರ್ವಹಿಸಿದರೆ ನಂತರದ ಶೇಣಿಯವರ ವಾಲಿ ಚರಿತ್ರಾರ್ಹವಾಗಿರುತ್ತಿತ್ತು. ರಾಜಾ ಯಯಾತಿಯಲ್ಲಿ ಸುರತ್ಕಲ್ ಮೇಳದಲ್ಲಿ ಅಡಕವಾಗಿದ್ದ ಪ್ರತಿಭೆ ಸಂಪೂರ್ಣವಾಗಿ ಹೊರಬರುವಂತಹ ಪ್ರಸಂಗವಾಗಿತ್ತು. ರಾಜಾ ಯಯಾತಿ ಅಥವಾ ಧರ್ಮ ದಾಸಿ ಎಂದು ಇದ್ದ ಪ್ರಸಂಗ ಸುರತ್ಕಲ್ ಮೇಳಕ್ಕೆ 
ಇನ್ನಿಲ್ಲದ ಪ್ರಸಿದ್ದಿಯನ್ನು ತಂದು ಕೊಟ್ಟಿತ್ತು. ಮೊದಲ ಯಯಾತಿಯಾಗಿ ಜೋಗಿ.. ನಂತರ ಶೇಣಿಯವರು.. ದೇವಯಾನೆಯಾಗಿ ಎಂ. ಕೆ. ರಮೇಶ ಆಚಾರ್ಯ, ಶರ್ಮಿಷ್ಟೆಯಾಗಿ ಕೊಕ್ಕಡ ಈಶ್ವರ ಭಟ್. ಹೀಗೆ ಹಿಮ್ಮೇಳದ ಅದ್ಭುತ ಹೊಂದಾಣಿಕೆಯಿಂದ ಈ ಪ್ರಸಂಗ ಅಂದು ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿತ್ತು. ಈ ಮೇಳದ ಇನ್ನು ಹಲವು ಪ್ರಸಂಗಗಳು, ಚಂದ್ರಾವಳಿ ವಿಲಾಸ, ರಾಣಿ ರತ್ನಾವಳಿ, ಸತೀ ಶೀಲವತಿ ವೀರಚಂದ್ರ ವಿಜಯ, ಪಾಪಣ್ಣ ವಿಜಯ ಗುಣಸುಂದರಿ, ತಿರುಪತಿ ಕ್ಷೇತ್ರ ಮಾಹಾತ್ಮೆ, ಈ ಪ್ರಸಂಗವಂತೂ ಇತ್ತಿಚೆಗೆ ಹೃಸ್ವಗೊಂಡು ಶ್ರೀನಿವಾಸ ಕಲ್ಯಾಣವಾಗಿ ಪ್ರದರ್ಶಿತವಾದರೂ, ಅಗರಿಯವರ ಈ ಪ್ರಸಂಗ ಅಂದು ಈ ಮೇಳ ಆದ್ಭುತವಾಗಿ ಪ್ರದರ್ಶಿತವಾಗುತ್ತಿತ್ತು. ಶೇಣಿಯವರ ಮಾಧವ ಭಟ್ಟ ಮರೆಯಲು ಸಾಧ್ಯವೆ? ಹಾಗೆ ಜೋಗಿ ಮತ್ತು ವೇಣೂರು ಜತೆಯ ಕಿರಾತನ ಪಾತ್ರವೂ ಈಗ ಪ್ರದರ್ಶಿತವಾಗುವ ಶ್ರೀನಿವಾಸ ಕಲ್ಯಾಣ ವನ್ನು ತುಲನೆ ಮಾಡುವಂತೆ ಮಾಡುತ್ತದೆ. ಎಂತಿದ್ದರು ಸರಳ ಹಾಗು ಸುಂದರಾವಾದ ಅಂದಿನದೇ ಹಲವು ಸಲ ಉತ್ತಮ ಅನ್ನಿಸಿಬಿಟ್ಟಿದೆ.
ಈ ಮೇಳದ ಇನ್ನೊಂದು ಅದ್ಭುತ ಪ್ರಸಂಗ ಕಡುಗಲಿ ಕುಮಾರ ರಾಮ.. ಎಂಬ ಚಾರಿತ್ರಿಕ ಪ್ರಸಂಗ..ಯಕ್ಷಗಾನಕ್ಕೆ ಇದನ್ನು ಅಳವಡಿಸಿದ ರೀತಿ ಮಾತ್ರ ಅದ್ಭುತ. ಇಂದಿನ ಹಲವು ನವ್ಯ ಪ್ರಸಂಗ ಕರ್ತರು ಈ ಪ್ರಸಂಗ ನಡೆಯನ್ನು ಒಂದು ಸಲ ಗಮನಿಸಿದರೆ ಉತ್ತಮ. ಇದರ ಮುಖ್ಯ ಆಕರ್ಷಣೆ ಶೇಣಿಯವರ ಔರಂಗ ಜೇಬ್ ನ ಪಾತ್ರ. ಇದೊಂದು ಪ್ರಸಂಗದಂತೆ ಪಾತ್ರ ನಿರ್ವಹಣೆಯೂಚರಿತ್ರಾರ್ಹ.
ವಿಲಕ್ಷಣ ವ್ಯಕ್ತಿತ್ವದ ಔರಂಗ ಜೇಬನ ಪಾತ್ರ ಶೇಣಿ ಮುಖೇನ ಅನಾವರಣ ಗೊಳ್ಳುವ ಪರಿ ಮಾತ್ರ ಅಸಾದೃಶವಾಗಿತ್ತು. ಕುಮಾರ ರಾಮನಾಗಿ ಜೋಗಿಯವರ ಮಿಂಚಿನ ಅಭಿನಯ, ಖಳ ಪಾತ್ರವೊಂದರಲ್ಲಿ ಬಾಬು ಕುಡ್ತಡ್ಕ, ಮಾತಂಗಿಯಾಗಿ ಎಂ. ಕೆ ರಮೇಶ ಅಚಾರ್ಯ ಎಂದೂ ಮರೆಯದ ಅಭಿನಯ ನೀಡಿದರೆ, ಹಾಸ್ಯ ಪಾತ್ರಗಳಲ್ಲಿ ವೇಣೂರು ನಕ್ಕು ನಗಿಸಿ ಬಿಡುತ್ತಿದ್ದರು. ಔರಂಗಜೇಬನ ಮಗಳ ವೇಶವನ್ನು ಶ್ಯಾಮಸುಂದರ್ ಎಂಬ ಸ್ತ್ರೀ ಕಲಾವಿದ ಪರಕಾಯ ಪ್ರವೇಶ ಮಾಡಿ ನಿರ್ವಹಿಸುತ್ತಿದ್ದರು. ಹಲವು ಸಮಯದ ನಂತರ ಇದೆ ಹೆಸರಿನಲ್ಲಿ ಕನ್ನಡ ಚಲನ ಚಿತ್ರ ಬಂದರೂ ಎಂದಿಗೂ ಅದು ಈ ಅದ್ಭುತ ಪ್ರಸಂಗಕ್ಕೆ ಯಾವ ರೀತಿಯಲ್ಲೂ ಸಾಟಿಯಾಗಲೇ ಇಲ್ಲ.
Tuesday, April 27, 2010
ಅರ್ಥಗಾರಿಕೆಯ ಹರಿದಾಸ ಸಾಮಗನೆಂಬ ಹರಿಕಾರ..

ದಿನಾಂಕ ೨೭ .೦೪.೨೦೧೦ ಮಂಗಳವಾರದ ಸಾಯಂಕಾಲದ ಹೊತ್ತು ಬಂದ ಸಂದೇಶ ಒಂದು ಕ್ಷಣ ವಿಚಲಿತನಾಗುವಂತೆ ಮಾಡಿತು. ಅದೇ ಹಿರಿಯ ಯಕ್ಷಗಾನ ಕಲಾವಿದರೂ ಹರಿದಾಸರೂ ಆದ ಶ್ರೀ ಮಲ್ಪೆ ರಾಮದಾಸ ಸಾಮಗರ ನಿಧನದ ವಾರ್ತೆ. ಅವರ ಕೆಲವೇ ಪಾತ್ರಗಳನ್ನು ಮತ್ತು ತಾಳ ಮದ್ದಲೆಯ ಅರ್ಥಗಾರಿಕೆಯನ್ನು ಮಾತ್ರ ಅನುಭವಿಸಿದ್ದರೂ ಅದನ್ನೆಲ್ಲ ಮೆಲುಕು ಹಾಕುವಂತೆ ಎಲ್ಲವು ಮಾನಸ ಪುಟಗಳಲ್ಲಿ ಎಂದೂ ಮಾಸದ ಮುದ್ರೆಯನ್ನು ಒತ್ತಿಹಾಕಿದೆ. ಎಲ್ಲವು ಒಂದೇಸಲಕ್ಕೆ ಮೈ ಕೊಡವಿ ಮೇಲಕ್ಕೆ ಬಂದುಬಿಟ್ಟಿವೆ.
ಅದು ಬಾಯರು ಮುಳಿಗದ್ದೆಯಲ್ಲಿ ಒಂದು ತುಳು ಯಕ್ಷಗಾನ ಆಟ. ಪ್ರಸಂಗ ಅನಂತ ರಾಮ ಬಂಗಾಡಿ ವಿರಚಿತ “ಪಟ್ಟದ ಪದ್ಮಲೆ” ತುಳು ಭಾಗವತಿಕೆ ಪದಗಳನ್ನು ಹೊಂದಿದ ಬಹುಶಃ ಮೊದಲಿನ ಪ್ರಸಂಗ ಇರಬೇಕು. ಟೆಂಟ್ ಮೇಳಗಳ ಆಟ ಆವಾಗ ನಮಗೆಲ್ಲ ಹೆಚ್ಚಾಗಿ ನೋಡುವ ಅವಕಾಶವೆ ಇಲ್ಲ. ಅದರಲ್ಲೂ ತುಳು ಪ್ರಸಂಗವೆಂದರೆ ಮನೆಯವರ ಎಲ್ಲರ ವಿರೋಧ ಬೇರೆ. ಹೀಗಿದ್ದರು ಅಂದಿನ ಆಟ ನೋಡುವ ಅವಕಾಶ ನನಗೆ ಸಿಕ್ಕಿತು.ಆ ಪ್ರಸಂಗ ಚಂದ್ರ ಸೇನ ಮಹಾರಾಜ ಮತ್ತು ಪದ್ಮಲೆಯ ಶ್ರಿಂಗಾರ ರಸ ಪೂರ್ಣ ಸಂಭಾಶಣೆ ಯ ಸನ್ನಿವೇಶದಲ್ಲಿ ಚಂದ್ರ ಸೇನನಾಗಿ ಶ್ರೀ ಸಾಮಗರು, ಪದ್ಮಲೆಯಾಗಿ ಪುಂಡರಿಕಾಕ್ಷ ಉಪಾಧ್ಯಾಯ ಅಮೋಘವಾಗಿ ಅಭಿನಯಿಸಿದ ಸನ್ನಿವೇಶ, ದಾಮೋದರ ಮಂಡೆಚ್ಚರ ಪದಗಳನ್ನು ಅವರದೇ ಶೈಲಿಯಲ್ಲಿ ಹಿಂಬಾಲಿಸುವ ಸಾಮಗರ ರಂಗದ ಮೇಲಿನ ಆಂಶಿಕ ಭಾಗವತಿಕೆ ಅಂದು ತುಂಬ ಶ್ಲಾಘನೆಗೆ ಪಾತ್ರವಾಗಿತ್ತು. ಅದರಂತೆ ಕಾಡಮಲ್ಲಿಗೆಯ ಉದಯ ಕುಮಾರ , ಹೀಗೆ ಹಲವು ತುಳು ಪ್ರಸಂಗಗಳ ಸನ್ನಿವೇಶಗಳು ಓಂದೇಸವನೆ ನೆನಪಿನ ಹೊಯಿಲನ್ನು ಮನಸ್ಸಿನ ಮೇಲ್ಪದರಕ್ಕೆ ತರುತ್ತಿದ್ದರೆ ಮರೆಯಾದರೆ ಸಾಮಗರು? ಎಂದು ನಿಟ್ಟುಸಿರು ಬರುವಂತೆ ಮಾಡಿತು.
ಬಾಲ್ಯದಲ್ಲಿ ನಾನು ಕಂಡ ಅವರ ಪಾತ್ರಗಳೆಷ್ಟು. ಅವರ ಅರ್ಥಗಾರಿಗೆ ಸರಳವಾಗಿರದೆ ಅರ್ಥೈಸುವದಕ್ಕೆ ಬಹಳ ಕ್ಲಿಷ್ಟವಾಗರುತ್ತಿತ್ತು. ಹೀಗಿದ್ದರೂ ವಿಡಂಬನಾತ್ಮಕವಾದ ವಾದ ಮಂಡನೆ ಪಾತ್ರ ಪೋಶಣೆ ಪ್ರತಿಯೊಬ್ಬ ಯಕ್ಷಗಾನ ಅಭಿಮಾನಿಯೂ ಮರೆಯುವುದು ಅಸಾಧ್ಯವಾಗಿದೆ.ಉತ್ಕಟ ಅಭಿನಯವನ್ನು ಮೆರೆಸುತ್ತಿದ್ದ ಇವರ ಹಲವು ಪಾತ್ರಗಳು ಇಂದು ಆ ಬಗೆಯಲ್ಲಿ ನಿರ್ವವಹಿಸುವವರಿಲ್ಲದೆ ಪಾತ್ರಗಳೇ ಪಾತ್ರಧಾರಿಯನ್ನು ಕಾಯುವಂತೆ ಮಾಡಿದೆ. ಹೆಚ್ಚಾಗಿ ಅವರ ಕೃಷ್ಣನ ಪಾತ್ರಗಳನ್ನೆ ನೋಡಿದ ನನಗೆ ಅವೆಲ್ಲ ತುಂಬಾ ಅಪ್ಯಾಯಮಾನವಾಗಿದ್ದವು. ಅಪ್ರತಿಮ ವಾಗ್ಮಿ, ಭಾಷಾ ವ್ಯಾಕರಣ ಉತ್ತಮ ಪಾಂಡಿತ್ಯವನ್ನು ಹೊಂದಿದ ಇವರು ಇದರಿಂದ ತಮ್ಮ ಅರ್ಥಗಾರಿಕೆ ತುಂಬ ಶ್ರೀಮಂತವಾಗಿರುವಂತೆ ಮಾಡುತ್ತಿದ್ದರು. ಅನಗತ್ಯ ಸ್ಪರ್ಧೆಗಿಳಿಯದೆ ಅತ್ಯುತ್ತಮ ಸಹಕಾರೀ ಮನೋಭಾವವನ್ನು ತಮ್ಮ ಅರ್ಥಗಾರಿಕೆಯಲ್ಲೂ ಮೆರೆಸುತ್ತಿದ್ದರು. ಇವರ ನೆರಳಲ್ಲಿ ಬೆಳೆದ ಹಲವು ಕಲಾವಿದರು ಇಂದಿಗೂ ಅವರ ಒಡನಾಟವನ್ನು ಮರೆಯಲಾರರು. ಕಳೆದ ಕೆಲವು ತಿಂಗಳ ಮೊದಲು ಅವರ ಚುಟುಕು ತಾಳಮದ್ದಲೆಯ ರೂಪವನ್ನು ನೋಡುವ ಭಾಗ್ಯ ನನಗೆ ಒದಗಿ ಬಂತು. ಅವರನ್ನು ಅಂದೇ ನಾನು ಕೊನೆಗೆ ನೋಡಿದ್ದೆಂದು ಈಗ ಯೋಚಿಸಿದರೆ ಮನಸ್ಸಿನ ಅಂತರಂಗದಲ್ಲೊಂದು ತಳಮಳ ಕಾಡುತ್ತಾಇದೆ. ತುಂಬಾ ಇಳಿದು ಹೋದ ಶರೀರ ಅಂದು ನೋಡಿ ಕಾಲನ ಪ್ರಭಾವಕ್ಕೆ ಇಂತಹ ಕಲಾವಿದರು ಒಳಗಾಗದೆ ವಿನಾಯಿತಿಯನ್ನು ಪಡೆದರೆ ಹೇಗೆ ಅಂತ ಅನ್ನಿಸಿತ್ತು.
ನಮ್ಮ ಮನೆಯಲ್ಲಿ ಹಿರಿಯರೆಲ್ಲ ಸಣ್ಣ ಶಾಮುಖರೆಂದು ಕರೆಸಲ್ಪಡುತ್ತಿದ್ದ ಇವರು ನೀಳ ಕೇಶ ರಾಶಿಯೊಂದಿಗೆ ತಾಳಮದ್ದಲೆಯ ಅರ್ಥಧಾರಿಯಾಗಿ ವೇದಿಕೆಗೆ ಬಂದರೆ ನಮಗೆಲ್ಲಾ ಅಂದು ದೂರ್ವಾಸ ವಿಶ್ವಾಮಿತ್ರರನ್ನು ನೋಡಿದಂತೆ ಭಯವಾಗುತ್ತಿತ್ತು. ಅಷ್ಟೊಂದು ಗೌರವ ಪೂರ್ಣ ಕಳೆಯಿಂದ ಮುಖ ಕಂಗೊಳಿಸುತ್ತಿತ್ತು. ಇಷ್ಟಿದ್ದರು ಅವರು ಸಹ್ರಿದಯಿ ಎಂದು ಕೇಳಿದ್ದೆ. ಈಗ ಅವರ ಬಗ್ಗೆ ಬರೆಯುವ ಯೋಗ್ಯತೆ ಅರ್ಹತೆ ತಿಳುವಳಿಕೆ ನನಗಿದೆಯೋ ನನಗರಿಯದು.ಆದರೆ ಅದ್ಭುತ ಕಲಾವಿದ ನನ್ನಂತಹ ಸಾಮಾನ್ಯನ ಮಾನಸ ದಲ್ಲಿ ಅಚ್ಚಳಿಯದ ಮುದ್ರೆಯನ್ನು ಎಂದೊ ಒತ್ತಿ ಆಗಿಹೋಗಿದೆ. ಇಂದು ಮತ್ತು ಮುಂದೂ ಅದರ ಮೆಲುಕು ಮಾತ್ರಾ ನಮ್ಮೊಂದಿಗೆ ಇದೆ ಎಂಬುದನ್ನು ಮಾತ್ರಾ ಅರಗಿಸಿಕೊಳ್ಳಲಾಗದ ಸ್ಥಿತಿ. ಇಳಿ ವಯಸ್ಸು, ಇಳಿದು ಹೋದ ಶರೀರ, ಆದರೂ ತೀಕ್ಷ್ಣ ಕಣ್ಣು ಮತ್ತು ಭಾವನೆಯೆಂಬ ಕರುಳನ್ನೆ ಬಗೆದು ತೆಗೆವಂತಹ ಸ್ವರ ಶಾರೀರ ಕೊನೆಯಲ್ಲಿ ಕಂಡು ಬೆರಗಾಗಿ ಹೋಗಿದ್ದೆ.
ಹಲವು ಹಿರಿಯ ಕಲಾವಿದರನ್ನು ಕಲಾಭಿಮಾನಿಗಳನ್ನು ಅಗಲಿದ ಮಹಾನ್ ಕಲಾವಿದ ಇನ್ನು ಮುಂದು ಜನ್ಮ ತಳೆಯಲಿ ,ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನೂ ಎಲ್ಲರಿಗೂ ಅನುಗ್ರಹಿಸಲಿ ಎಂದು ಭಾರವಾದ ಹೃದಯತುಂಬಿ ಕಿರು ಕಂಬನಿ ತುಂಬಿದ ಅಂತಿಮ ನಮನಗಳು.