"ಇದು ವಿಮರ್ಶೆಯಲ್ಲದ ಚಿಂತನ"
“ಭಗವಂತ ಮತ್ತು ಮಾಯೆ ಎಂಬುದು ಮನುಷ್ಯ ಮತ್ತು ನೆರಳಿನಂತೆ. ಒಂದು ಅವಿನಾಭಾವ ಸಂಬಂಧಂತೆ. ಮಾಯೆ ಎಂದರೆ ಭಗವಂತನೇ ಮಾಯೆಯೋ? ಅಲ್ಲ ಭಗವಂತನೊಳಗೆ ಮಾಯೆಯೋ.?”
ಎಂಬ ಕೌರವನ ಪ್ರಶ್ನೆಗೆ ಭೀಷ್ಮನ
ಪಾತ್ರಧಾರಿ ಸರಳವಾದ ಉಧಾಹರಣೆಯ ಮೂಲಕ ಅತ್ಯಂತ
ಸ್ವಾರಸ್ಯವಾಗಿ ಉತ್ತರಿಸುತ್ತಾ- “ಮಾಯೆ ಎಂದರೆ ಮನುಷ್ಯನ ನೆರಳು ಹೇಗೋ ಹಾಗೆ. ಬೆಳಕು ಬಿದ್ದಾಗ ಆ
ನೆರಳಿನ ಅಸ್ತಿತ್ವವೇ ಇಲ್ಲವಾಗುತ್ತದೆ. ಆ ವರೆಗೆ ಅದು ಅವನ ನೆರಳು..ಅದರ ಉದ್ದ ಅಳತೆ ಅಳಿಯಲು
ಬೆಳಕನ್ನು ಹಿಡಿದಾಗ ಅದು ಇಲ್ಲವಾಗುತ್ತದೆ. ಮೊದಲು ದೃಶ್ಯವಾದ ನೆರಳು ಮತ್ತೆ ಬೆಳಕು ಬಂದಾಗ
ಅದೃಶ್ಯವಾಗುವ ಹಾಗೆ. ಮಾಯೆ ಎಂದರೆ ಭಗವಂತನ ಅವಿಭಾಜ್ಯ ಅಂಗ... ಒಬ್ಬ ಸಂಗೀತಗಾರ ಹಾಡುತ್ತಾನೆ.
ಹಾಡುವುದು ಅವನೆಯೋ ಅಥವಾ ಅವನೊಳಗಿನ ಶಕ್ತಿಯೋ.. ಅವನೊಳಗಿನ ಶಕ್ತಿಯಾದರೆ, ಅವನು ಬೇಡ ಅವನೊಳಗಿನ
ಶಕ್ತಿಮಾತ್ರ ಸಾಕು ನಮಗೆ .. ಅದು ಸಾಧ್ಯವೋ? ಅವನು ಮತ್ತು ಅವನ ಶಕ್ತಿ ಎಂಬಲ್ಲಿಗೆ ಒಂದು
ಅವಿನಾಭಾವ ಸಂಬಂಧ ಅಂದರೆ ಅವಿನಾದ್ವೈತ ಸಂಬಂಧ ಎಂಬುದು ಅದು” . ಭಗವಂತ ಮತ್ತು ಮಾಯೆ
..ಎಂಬುದಕ್ಕೆ ಸರಳವಾದ ವ್ಯಖ್ಯಾನವನ್ನು ನೀಡುತ್ತಾರೆ.
ಯಕ್ಷಗಾನ ತಾಳಮದ್ದಲೆಯಲ್ಲಿ ಇಂತಹ
ಸನ್ನಿವೇಶ ಚಿತ್ರಣಗಳದ್ದೇ ಒಂದು ವಿಶೇಷತೆ ಇದೆ. ತಾಳ ಮದ್ದಲೆ ಯಕ್ಷಗಾನದ ಹೂರಣ ಇದ್ದಂತೆ. ಇದು
ಕೇವಲ ಭಾಗವತರ ಹಾಡಿನ ಶಬ್ದಾರ್ಥ ಹೇಳುವುದು ಎಂದರೆ ತಪ್ಪಾಗುತ್ತದೆ. ಹಾಗೆಂದು ಪಾತ್ರಗಳ ನಡುವಿನ
ನಾಟಕೀಯ ಸಂಭಾಷಣೆ ಎಂದರೂ ತಪ್ಪಾಗುತ್ತದೆ. ತಾಳ ಮದ್ದಲೆಯ ವಿಶೇಷತೆ ಇಷ್ಟಕ್ಕೆ ಸೀಮಿತವಾಗಿಲ್ಲ. ತಾಳ
ಮದ್ದಲೆ ಒಂದು ರೀತಿಯ ವಿದ್ವಜ್ಜನರ ಸಮ್ಮೇಳನ ಇದ್ದಂತೆ. ಯಕ್ಷಗಾನದ ಸರಳ ರೂಪವೇ ಇದು ಎಂದು
ತೋರಿದರು ಇದರ ವೈಶಾಲ್ಯದ ಅರಿವು ಅದನ್ನು ಸವಿದೇ ಅರಿಯಬೇಕು. ನನ್ನ ಅನಿಸಿಕೆಯಂತೆ... ಯಕ್ಷಗಾನ
ಬಯಲಾಟ ಎಂದರೆ ಅದು ಹಾಲು ಹಾಕಿದ ಕ್ರಮಬದ್ಧ ಚಹದಂತೆ. ತಾಳ ಮದ್ದಲೆ ಎಂದರೆ ಕೇವಲ ಚಹದ ಮೂಲ
ಸ್ವಾದವನ್ನು ಕೊಡುವ ಕಣ್ಣ ಚಹ (ಕಪ್ಪು ಚಹ) ಇದ್ದಂತೆ. ಇದಕ್ಕೆ ಕೆಲವೊಂದು ಸಲ ಕೇವಲ ನೀರು ಮತ್ತು
ಚಹಪುಡಿ ಮಾತ್ರವೇ ಆದರೂ ಅದನ್ನು ಸವಿಯುವ ರೀತಿ ಗೊತ್ತಿದ್ದರೆ ಅದರ ಅನುಭವವೇ ಬೇರೆ. ರುಚಿಯಲ್ಲಿ
ಮೇಲ್ನೋಟಕ್ಕೆ ಒಂದೇ ಕಂಡರು ಅದರ ಅನುಭವ ಮತ್ತು ಆ ಅನುಭವವನ್ನು ಗಂಟಲಲ್ಲಿ ಉಳಿಸುವ ಅವಧಿ ಎಲ್ಲವೂ
ವೆತ್ಯಾಸವಿದೆ. ಸರಳತೆಯಲ್ಲೂ ವೈಭವವನ್ನು ಗುರುತಿಸುವ ಅರಿವು ಇರಬೇಕು ಅಷ್ಟೇ. ಚಹದ ಗಾಢವಾದ
ರುಚಿಯನ್ನು ಅಷ್ಟಕ್ಕೇ ಬಯಸುವವನು ಯಾವಾಗಲೂ ಬಯಸುವುದು ಕಣ್ಣ ಚಹವನ್ನು. ಇದಕ್ಕೆ ಮೇಲ್ನೋಟಕ್ಕೆ
ಬಡತನ ಕಾರಣವಾಗಿದ್ದರೂ ಅದು ಅಂತ ಒಪ್ಪುವುದು ಮಾತ್ರ ಕಷ್ಟ. ಹಾಲು ಹಾಕಿದ ಕ್ರಮಬದ್ಧ ಚಹಕ್ಕೆ
ಬೆಳಗಾಗುವ ತನಕ ಮತ್ತು ದನ ಇದ್ದರೂ ದನ ಹಾಲು ಕೊಡುವ ತನಕ
ಕಾಯಬೇಕು. ಮಾತ್ರವಲ್ಲ ಅದಕ್ಕೆ ಬಹಳ ಸಿದ್ದತೆಯ ಅವಶ್ಯಕತೆಯೂ ಅಗತ್ಯವಿದೆ. ಆದರೆ ಕಣ್ಣ
ಚಹಕ್ಕೆ ಕೇವಲ ಚಹ ಪುಡಿಸಿಕ್ಕಿದರೂ ಸರಳವಾಗಿ ಪೂರ್ಣ ಚಹದ ಅನುಭವವನ್ನು ಪಡೆಯುವ ಅವಕಾಶ
ಇರುತ್ತದೆ. ಹಾಗಾಗಿ ಸರಳವಾಗಿ ನಡೆಯುವ ಯಕ್ಷಗಾನ ತಾಳ ಮದ್ದಲೆ ಮೇಲ್ನೋಟಕ್ಕೆ ಬಡವಾಗಿ ಕಂಡರೂ
ಇದರಲ್ಲಿ ಇಲ್ಲದ ಶ್ರೀಮಂತಿಕೆ ಅದರಲ್ಲಿ ಇದೆ. ಅನುಭವಿಸುವ ಮನೋಭಾವ ಇರಬೇಕು ಅಷ್ಟೆ.
ಇತ್ತೀಚೆಗೆ ಕರ್ಮಬಂಧ ಎಂಬ ಹಳೆಯ ತಾಳ ಮದ್ದಲೆಯ ಧ್ವನಿ
ಮುದ್ರಣವೊಂದು ಸಿಕ್ಕಿ ಅದನ್ನು ಕೇಳಿದಾಗ ಗರಿಗೆದರಿದ ಕಲ್ಪನೆಗಳು ಹಲವು. ನೆಬ್ಬೂರು ಮತ್ತು
ಕಡತೋಕರ ಭಾಗವತಿಕೆಯ ಅತ್ಯಂತ ಹಳೆಯ ತಾಲಮದ್ದಲೆಯದು. ಭೀಷ್ಮನಾಗಿ ರಾಮದಾಸ ಸಾಮಗರು, ಕೌರವನಾಗಿ ಎಂ
ಪ್ರಭಾಕರ ಜೋಶಿಯವರು, ಕೊನೆಯುಲ್ಲಿ ಕೃಷ್ಣನಾಗಿ ಗುರು ಪೆರ್ಲ ಕೃಷ್ಣ ಭಟ್ ರವರು ಸೇರಿ
ನಡೆಸಿಕೊಟ್ಟ ಅದ್ಭುತ ತಾಳ ಮದ್ದಲೆಯದು. ಕರ್ಮ
ಬಂಧ ಎಂಬ ಪ್ರಸಂಗ ಕುರುಕ್ಷೇತ್ರ ಯುದ್ದದ ಆರಂಭದಲ್ಲೇ ಬಂದು ಬಿಡುತ್ತದೆ. ಪ್ರಸಂಗದ ಆರಂಭದಲ್ಲಿ
ಕೌರವನ ಜಿಜ್ಞಾಸೆಗೆಳಿಗೆ ಉತ್ತರಿಸುವ ಭೀಷ್ಮ ಉತ್ತರಾರ್ಧಲ್ಲಿ ಶ್ರೀ ಕೃಷ್ಣನಲ್ಲೇ ಹಲವು
ಜಿಜ್ಞಾಸೆಗೆ ಉತ್ತರವನ್ನು ಬಯಸುತ್ತಾನೆ. ಯುದ್ದ ಸನ್ನಿವೇಶದಲ್ಲಿ ಕೇವಲ ವಿಚಾರ ಸಂಘರ್ಷವನ್ನು
ತೋರಿಸುವ ಅತ್ಯಂತ ವಿಶಿಷ್ಟ ಪ್ರಸಂಗವಿದು. ದ್ವಂದ್ವದಿಂದ ಕೂಡಿದ ಭೀಷ್ಮನ ಪಾತ್ರ ನಿರ್ವಹಿಸುವುದು
ಬಹಳ ಕಷ್ಟವಾಗಿ ಕಂಡರೂ ಮಿಕ್ಕ ಪಾತ್ರಗಳು ಕೂಡ ಕಬ್ಬಿಣದ ಕಡಲೆಯೇ. ಇದು ಯಕ್ಷಗಾನ ತಾಳ ಮದ್ದಲೆಯ
ವೈಶಿಷ್ಟ್ಯ. ಯುದ್ದ ಆರಂಭ ಯಾವಾಗ ಅಗುತ್ತದೆ? ಚೆಂಡೆ ಪೆಟ್ಟು ಯಾವಾಗ ಕೇಳಬಹುದು? ಎಂದು ಇಲ್ಲಿ ಕಾಯುವ ಹಾಗಿಲ್ಲ. ಸನ್ನಿವೇಶ ಚಿತ್ರಣ
ದರ್ಶನವಾಗುವುದೇ ವಿಚಾರ ಸಂಘರ್ಷಮಯವಾಗಿ ಮತ್ತು ಹಲವು ಜಿಜ್ಞಾಸೆಗಳನ್ನು ಮೂಡಿಸಿ ಅದರಲ್ಲೇ
ಅವುಗಳಿಗೆ ಪರಿಹಾರವನ್ನು ನೀಡುತ್ತದೆ. ಕಥಾ ಹಂದರಕ್ಕೆ ಮಹತ್ವ ಇದ್ದರೂ ಸನ್ನಿವೇಶದಲ್ಲಿ ಅದು ಬಹಳ ಸೂಕ್ಷ್ಯವಾಗಿಯೇ ಚಿತ್ರಿತವಾಗುತ್ತದೆ. ಮಾತಿನಲ್ಲಿ ವಿಚಾರ ಸಂಘರ್ಷಕ್ಕೆ ಹೆಚ್ಚು ಒತ್ತು.
ಈ ಪ್ರಸಂಗದ ಪ್ರಥಮಾರ್ಧದಲ್ಲಿ ಭೀಷ್ಮ
ಕೌರವನ ಸಂಭಾಷಣೆಯಲ್ಲಿ ಒಂದು ರೀತಿಯ ವಿಚಾರ ಮಂಥನ ನಡೆದರೆ ಉತ್ತರಾರ್ಧದ ಭೀಷ್ಮ ಕೃಷ್ಣರ
ಸಂಭಾಷಣೆಯಲ್ಲಿ ಬೇರೊಂದು ರೀತಿಯ ವಿಚಾರ ಮಂಥನ. “ಪಂಕಜಾಕ್ಷ ಭೇದವೇಕೋ ಕಿಂಕರನಲ್ಲವೇ
ನಾನು..” ಎಂದು ಭೀಷ್ಮ
ಪರಮಾತ್ಮನ ಭೇದವನ್ನು ಪ್ರಶ್ನಿಸುತ್ತಾನೆ. ಅರ್ಜುನನಲ್ಲಿ ಭಕ್ತನೆಂದು ತೋರುವ ಪರಿಗಣನೆ ತನಗೇಕೆ
ಇಲ್ಲ? ಪಾರ್ಥಸಾರಥಿಯಾದವನು ಭೀಷ್ಮ ಸಾರಥಿ ಯಾಕೆ ಆಗುವುದಿಲ್ಲ? ಈ ಜಿಜ್ಞಾಸೆಗೆ ಕೃಷ್ಣ ಕೊಡುವ
ಉತ್ತರ ಅಷ್ಟೇ ಮಾರ್ಮಿಕವಾಗಿರುತ್ತದೆ. ಉತ್ತಮ ಉದಾಹರಣೆಯ ಮೂಲಕ ಅದಕ್ಕೆ ಉತ್ತರವನ್ನು ತೋರಿಸುವ
ರೀತಿ ಬಹಳ ಸ್ವಾರಸ್ಯವಾಗಿರುತ್ತದೆ. ಯಕ್ಷಗಾನದ ಅರ್ಥಗಾರಿಕೆಯಲ್ಲಿ ಬರುವ ಈ ಉದಾಹರಣೆಗಳೇ ಹಲವು
ಸಲ ನಮ್ಮ ಜ್ಞಾನ ಪರೀಕ್ಷೆಯನ್ನು ಮಾಡುತ್ತವೆ. ಬಹಳ ಸರಳ ಉಧಾಹರಣೆಗಳು ಉದ್ದರಿಸಲ್ಪಡುವಾಗ
ಯಕ್ಷಗಾನದ ವಾಙ್ಮಯ ಪ್ರಪಂಚದ ವೈಶಾಲ್ಯತೆಗೆ ಬೆರಗಾಗುವ ಹಾಗೆ ಅಗುತ್ತದೆ. ಒಬ್ಬಾಕೆ ತಾಯಿಗೆ
ನಾಲ್ಕು ಮಕ್ಕಳಿರುವಾಗ ಹಿರಿ ಮಗನಿಗೆ ಮೀಸೆ
ಬಂದಿರುತ್ತದೆ.ಅತ್ಯಂತ ಸಣ್ಣ ಮಗುವಿಗೆ ಇನ್ನೂ ಸ್ತನ್ಯಪಾನವನ್ನು ತಾಯಿ ಕೊಡುತ್ತಿದ್ದಾಳೆ. ನಾಲ್ಕು ಮಕ್ಕಳನ್ನೂ ಸಮಾನ
ಪ್ರೀತಿಯಲ್ಲಿ ಕಾಣುವ ತಾಯಿ, ಕಿರಿಯ ಮಗುವಿಗೆ ಮಾತ್ರ ಮೊಲೆಹಾಲನ್ನು ಕೊಡುವುದನ್ನು ಹಿರಿ ಮಗ
ಭೇದ ಮಾಡುವುದೆಂದು ಪ್ರಶ್ನಿಸಬಹುದೇ? ಸಮಾನತೆ ಎಂಬುದು ಶಬ್ದ ಒಂದೇ.ಆಂತರಿಕ ಸಮಾನತೆ
ಬಾಹ್ಯ ಭಿನ್ನತೆ. ತಾಯಿಯ ಅಂತರಂಗದ ಭಾವನೆಯಲ್ಲಿ ಸಮಾನತೆ ಇದ್ದರೂ ಬಾಹ್ಯ ಪ್ರಪಂಚದ ವ್ಯವಹಾರದಲ್ಲಿ
ಭಿನ್ನತೆ ಇರಲೇ ಬೇಕಾಗುತ್ತದೆ.
ಇಂತಹ ಹಲವು ವಿಚಾರಗಳು ತೆರೆದ ಪುಸ್ತಕದ
ಬರಹದಂತೆ ಇಲ್ಲಿ ಸಿಗುತ್ತದೆ. ಕಬ್ಬಿಣದ ಕಡಲೆಯಾದ ಚಿಂತನೆಗಳು ರುಚಿಯಾದ ಗೋಡಂಬಿಯಂತೆ ಬಾಯಿಯೊಳಗೆ
ಹಾಕಲ್ಪಡುತ್ತದೆ. ತಾಳ ಮದ್ದಲೆಯ ಮಹತ್ವ ಇಂತಹುದರಲ್ಲಿ ಮತ್ತು ಇಂತಹ ಹಲವು ಪ್ರಸಂಗಗಳಲ್ಲಿ.
ಮನುಷ್ಯನ ಚಿಂತನೆಗೆ ಸರಿಯಾದ ದಿಶೆಯನ್ನು ಮಾರ್ಗಸೂಚಿಯನ್ನು ಕೊಡುವ ಈ ವಿಚಾರ ಸಂಘರ್ಷಗಳು
ಇಷ್ಟೊಂದು ಸರಳವೇ ಎಂದು ಬೆರಗಾಗುವಂತೆ ಮಾಡುತ್ತದೆ.
ಆದರೂ, ಈ ತಾಳಮದ್ದಲೆಯನ್ನು ಕೇಳುತ್ತಿದ್ದಂತೆ
ವಾಸ್ತವದ ಯಕ್ಷಗಾನ ತಾಳ ಮದ್ದಲೆಯ ಸ್ಥಿತಿಗತಿಗಳನ್ನು ಯೋಚಿಸುವಂತೆ ಮಾಡಿತು. ಸದ್ಯ ಕೇಳಿದ ಕರ್ಮ
ಬಂಧದಂತೆ ಇನ್ನೋಂದು ಪ್ರಸಂಗ ರುಕ್ಮಾಂಗದ ಚರಿತ್ರೆ. ಇದರಲ್ಲಿ ಶೇಣಿಯವರ ರುಕ್ಮಾಂಗದ, ಗೋವಿಂದ ಭಟ್ಟರ ಜಗನ್ಮೋಹಿನಿ ಅದ್ಭುತವಾಗಿ ಮೂಡಿ
ಬಂದಿತ್ತು. ಕೇಳುತ್ತ ಹೋದಂತೆ ಈಗಿನ ತಾಳಮದ್ದಲೆಯ ವಾಸ್ತವವನ್ನು ಚಿಂತಿಸುವಂತೆ ಮಾಡಿದ್ದು
ಸುಳ್ಳಲ್ಲ. ಈ ಎರಡು ಪ್ರಸಂಗಗಳನ್ನು ಗಮನಿಸಿದಾಗ ಇಂತಹ ಪ್ರಸಂಗವನ್ನು ಈಗ ಪ್ರಸ್ತುತ
ಪಡಿಸುತ್ತಿದ್ದರೆ, ಸದ್ಯ ಅದನ್ನು ನಿರ್ವಹಿಸಬಲ್ಲ
ಸಮರ್ಥ ಕಲಾವಿದರನ್ನು ಗಮನಿಸುತ್ತ ಹೋದರೆ, ಹಲವು
ಹಿರಿಯ ಕಲಾವಿದರನ್ನು ಬಿಟ್ಟರೆ ಇಂದಿನ ಹೊಸ
ತಲೆಮಾರಿನ ಕಲಾವಿದರಿಗೆ ಇಂತಹ ಪ್ರಸಂಗಗಳು ಸವಾಲಾಗಿಯೇ ಇದೆ. ಪ್ರಸ್ತುತ ಯುವ ತಲೆಮಾರಿಗೆ
ವೈಚಾರಿಕ ಬಡತನ ಬಂದಿರುವುದು ಇದರಿಂದ ಸ್ಪಷ್ಟವಾಗಿ ಗೋಚರವಾಗುತ್ತದೆ. ಹಾಗಾಗಿ ವಾಲಿವಧೆ,
ಕರ್ಣಾವಸಾನ, ಜಾಂಬವತಿ ಕಲ್ಯಾಣ, ಸಮರ ಸನ್ನಾಹ ಇಂತಹ ಪ್ರಸಂಗಗಳೇ ಪುನರಾವರ್ತನೆಯಾಗುತ್ತಿರುವುದು.
ಈ ಪ್ರಸಂಗಗಳು ವಿಚಾರಪ್ರದವಾಗಿಲ್ಲ ಎಂದು ಅರ್ಥವಲ್ಲ, ಆದರೆ ಆ ಸಂಘರ್ಷಗಳಿಗೆ ಹೆಚ್ಚು
ಒತ್ತುಕೊಡದೆ ಇದನ್ನು ಪ್ರಸ್ತುತ ಪಡಿಸುವುದು ಸಾಧ್ಯವಾಗುತ್ತದೆ. ಇದರಲ್ಲಿ ರಂಜನೆಗೆ,
ಆಕರ್ಷಣೆಗೆ ಬೇರೆ ಹಲವು ವಿಷಯಗಳು ಇರುವುದೇ
ಕಾರಣವಾಗುತ್ತದೆ. ಒಂದೆರಡು ಕಲಾವಿದರನ್ನು ಬಿಟ್ಟರೆ ಕರ್ಮ ಬಂಧ, ಗೀತೋಪದೇಶ ದಂತಹ ಪ್ರಸಂಗಗಳನ್ನು
ಒಪ್ಪಿಕೊಳ್ಳುವ ಕಲಾವಿದರು ಇಲ್ಲವಲ್ಲ? ಈ ವೈಚಾರಿಕ ಬಡತನ ಗಮನಕ್ಕೆ ಬಾರದ ವಿಚಾರವಾಗಿದೆ.
ಯಕ್ಷಗಾನದ ಬಯಲಾಟದಲ್ಲಿ ಮಹಿಷಾಸುರನ ಅರ್ಧ
ತಾಸಿನ ಅವಧಿಯ ಪ್ರವೇಶ, ಅಷ್ಟು ಸಭೆಯನ್ನು
ಚೆಲ್ಲಾಪಿಲ್ಲಿ ಮಾಡಿ ರಂಜನೆ ಉಂಟುಮಾಡಿದಲ್ಲಿ ಯಕ್ಷಗಾನ ಸೇವೆಯ ಕೃತಾರ್ಥತೆಯನ್ನು ಕಾಣುತ್ತ,
ಅರ್ಥ ಗಂಟೇ ಒಂದೇ ಪದಕ್ಕೆ ಕುಣಿದು ಬೆವರು
ಸುರಿಸಿದಲ್ಲಿ ಯಕ್ಷಗಾನ ಭಾವಾಭಿನಯ ಅಭಿವ್ಯಕ್ತಗೊಳ್ಳುವ ಪರಿ ಯಕ್ಷಗಾನದಲ್ಲಿದ್ದರೆ, ತಾಳ
ಮದ್ದಲೆಯ ಇಂತಹ ಜ್ವಲಂತ ಸಮಸ್ಯೆಗಳು ಅದರಿಂದಲೂ ಹಲವರನ್ನು ವಿಮುಖರನ್ನಾಗಿಸುವುದು ಸುಳ್ಳಲ್ಲ. ಹಲವಾರು
ತತ್ವಾದರ್ಶಗಳ ದರ್ಶನದೊಂದಿಗೆ ವಿಚಾರ ಸಂಘರ್ಷಗಳನ್ನು , ಸನಾತನ ಅಧ್ಯಾತ್ಮಿಕ ವಿಚಾರಗಳನ್ನು
ಸರಳವಾಗಿ ಅಷ್ಟೇ ಮಾರ್ಮಿಕವಾಗಿ ಅರ್ಥ ಮಾಡಿಕೊಡುವ ತಾಳಮದ್ದಲೆಗಳು ಜನ ಮುಖದಿಂದ ದೂರವಾಗುತ್ತಿವೆ.
ಇದ್ದರು, ಬಹಳ ನೀರಸವಾಗಿ ಯಾಂತ್ರಿಕ ಕಾರ್ಯಕ್ರಮವಾಗಿ ಭಾಸವಾಗುತ್ತಿದೆ. ಗಹನವಾದ ವಿಚಾರಗಳನ್ನು
ಚರ್ಚಿಸುತ್ತಿದ್ದರೆ ಪ್ರೇಕ್ಷಕರಿಗೆ ಅದು ಬೇಡವಾಗುತ್ತ ಗಮನದ ಹಾದಿ ಬದಲಾಗುತ್ತಿದೆ. ವಿಚಾರ
ಸಂಘರ್ಷ ಚರ್ಚೆಗಳು ಪ್ರತಿಸ್ಪರ್ಧಿಯನ್ನು ಸೋಲಿಸುವ ಗುರಿಯನ್ನು ಮಾತ್ರವೇ ಹೊಂದಿ ಸಂಘರ್ಷ ಕೇವಲ
ಸಂಘರ್ಷವೇ ಅಗುತ್ತಿದೆ. ಇದಕ್ಕೆ ಕಾರಣಗಳು ಹಲವಿದೆ.ಮಾತ್ರವಲ್ಲ ಬಹುಮಂದಿಗೆ ಇದರ ಅರಿವೂ ಇದೆ. ಆದರೆ ಆ ಸಮಸ್ಯೆಯ ಬಗ್ಗೆ
ಗಂಭೀರತೆ ಇಲ್ಲ. ಒಂದು ಕಾರ್ಯಕ್ರಮ ಆರಂಭಿಸಿ ಜನರಂಜನೆಯನ್ನು ಗಳಿಸಿದರೆ ಸಾಕು ಎಂಬ ಭಾವ. ಅದಕ್ಕಾಗಿ
ಅನಾವಶ್ಯಕ ಪ್ರಯೋಗಗಳ ಜತೆ ಹೊಸತನ ಆವಿಷ್ಕಾರಗಳು.ಆದರೆ ಇವುಗಳು ಯಾವುದು ಇಂದಿನ ತಲೆಮಾರಿನ
ಅಧ್ಯಯನ ಶೀಲದ ಕೊರತೆಯನ್ನು ನೀಗಿಸುವುದಿಲ್ಲ. ಗಹನವಾದ ವಿಚಾರಗಳ ಬಗ್ಗೆ ಉತ್ತಮ ಅಧ್ಯಯನದ
ಅವಶ್ಯಕತೆ ಇದೆ ಅದಕ್ಕೆ ಅಗತ್ಯವಾದ ಮಾಹಿತಿ ಮತ್ತು ಸೌಕರ್ಯಗಳು ಸುಲಭವಾಗಿ ಲಬ್ಯವಾಗಬೇಕಿದೆ.
ಸೋಲಿಸುವ ಸ್ಪರ್ಧೆಗಿಂತ ಉತ್ತಮವಾದುದನ್ನು ಕೊಡುವಲ್ಲಿ ಸ್ಪರ್ಧಾ ಮನೋಭಾವವನ್ನು
ಬೆಳೆಸುವಂತಾಗಬೇಕು. ಆ ಮೂಲಕ ತಾಳ ಮದ್ದಲೆಯ ಸತ್ವ ಸಂಪೂರ್ಣ ಅನಾವರಣಗೊಳ್ಳಬೇಕು.
ಯಕ್ಷಗಾನಂ ಗೆಲ್ಗೆ





