ಪಾರ್ಥನ ಸಾರಥ್ಯವನ್ನು ವಹಿಸಿಕೊಂಡ ಶ್ರೀಕೃಷ್ಣ ತಾನು ಪಾರ್ಥ ಸಾರಥಿ ಎಂದು
ಕರೆಸಿಕೊಳ್ಳುವುದರಲ್ಲೂ ವಾತ್ಸಲ್ಯವನ್ನು ಪ್ರಕಟ ಪಡಿಸುತ್ತಾನೆ. ಪಾರ್ಥನ ರಥ ತನ್ಮೂಲಕ ಪಾಂಡವರ
ರಥಕ್ಕೆ ಹಾದಿಯನ್ನು ತೋರಿಸುತ್ತಾನಾದರೆ, ಈ ಭೀಷ್ಮನ ರಥ ಎಂಟುನೂರು ವರ್ಷಗಳಿಂದ ನಿಂತಲ್ಲೇ
ನಿಂತಿರುವುದು ಗಮನಕ್ಕೆ ಬಾರದೇ ಹೋಯಿತಲ್ಲ? ಈ ಭವದ ಜೀವನದಲ್ಲಿ ಕರ್ಮದ ಭಾಧೆಯಿಂದ ಒಬ್ಬ
ನರಳುತ್ತಾನೆ ಎಂದರೆ ನಾರಾಯಣನ ನಾಮಸ್ಮರಣೆಯಿಂದ ಕರ್ಮಬಂಧನವನ್ನು ತೊಲಗಿಸಿ ಈ ಭವದ ಜೀವಕ್ಕೆ ಒಂದು
ಲಕ್ಷ್ಯವನ್ನು ತೋರಬಹುದು. ಭೀಷ್ಮ ನಗುವುದು ಅದಕ್ಕೆ. ತನ್ನ ನೋವಿನಿಂದ ಬಂದ ವಿಷಾದದ ನಗುವಲ್ಲ.
ಯಾವಾತನು ಕರ್ಮಬಾಧೆಯಿಂದ ಮುಕ್ತಿಯನ್ನು ಕರುಣಿಸಬೇಕೋ ಆತನೇ ಸ್ವತಃ ಕರ್ಮದ ಬಾಧೆಯಿಂದ ನರಳಿ ಈಗ
ಪಾರ್ಥನ ಸಾರಥಿಯಾಗಿದ್ದಾನೆ ಎಂದಾದರೆ ಭೀಷ್ಮ ತನ್ನ ಬಂಧನವನ್ನು ಕ್ಷಣ ಹೊತ್ತು ಮರೆಯುತ್ತಾನೆ. ಸಾಕ್ಷಾತ್
ಶೂಲಿಯಾದ ಪರಮೇಶ್ವರನಿಗೆ ಬ್ರಹ್ಮನ ಕಪಾಲ
ಬಿಡಲಿಲ್ಲ. ಅತ್ತ ಸೃಷ್ಟಿಕರ್ತನಾದ ಬ್ರಹ್ಮ ನಿರಂತರ ಜೀವಿಗಳನ್ನು ಸೃಷ್ಟಿಸುತ್ತಾ ಭೂಮಿಯ
ಕೂಲಿಯಾಳುವಿನಂತೆ ಭಾಧೆಗೆ ಒಳಗಾದ ಇವರಿಬ್ಬರನ್ನು ಬಿಡದ ಕರ್ಮ ಬಾಧೆ ಸರ್ವ ಶಕ್ತ ಆದಿನಾರಾಯಣನಾದ ನಿನಗೂ ಅಂಟಿಕೊಂಡು ನೀನು ಕರ್ಮ ಬದ್ಧನಾದ ದೇವನೇ ಆದೆ.
ಗರುಡಧ್ವಜನದ ಕೇಳುತ ಗಂಗಾ | ತರಳನ ನುಡಿಗಳನು ||
ದುರಿತಗಳೊದಗದ ತೆರದೊಳು ಶರಣರ | ಪೊರೆವುದೆ ಬಿರುದೆನ್ನ||
ಭೀಷ್ಮ ಪರ್ವದ ಆದಿ ಭಾಗದಲ್ಲಿ
ಗೀತೋಪದೇಶ ಪ್ರಸಂಗವೂ ಬರುತ್ತದೆ. ಮೋಹವಶನಾದ ಅರ್ಜುನನಿಗೆ ಬಂಧುಮೋಹವನ್ನು ತ್ಯಜಿಸುವಂತೆ
ಶ್ರೀಕೃಷ್ಣ ತನ್ನ ವಿಶ್ವರೂಪವನ್ನು ತೋರಿಸುತ್ತಾನೆ. ಪ್ರಪಂಚದ ಸಕಲ ಆಗು
ಹೋಗುಗಳಿಗೂ ಮೂಲ ಸ್ವರೂಪದ ನಿಮಿತ್ತ ರೂಪನೇ ನಾನು ಎಂದು ತೋರಿಸಿ ಯುದ್ದಕ್ಕೆ ಅಣಿಯಾಗುವಂತೆ ಮಾಡುತ್ತಾನೆ.
ಭೀಷ್ಮ ದ್ರೋಣ ಮೊದಲಾದವರು ಕಾಲದ ಘಾತಕ್ಕೆ ಮೊದಲೇ ಹತರಾದವರು. ನೀನು ನಿಮಿತ್ತ ಮಾತ್ರದವನು, ಹೀಗೆ ಶ್ರೀಕೃಷ್ಣ ಜಗದ್ಗುರುವಾಗಿ
ಉಪದೇಶ ಮಾಡುತ್ತಾನೆ. ಅಲ್ಲಿ ಪಾರಮಾರ್ಥಿಕ ಬದುಕಿನ ಬಗ್ಗೆ ವಿರಳವಾಗಿ ಪಾರ್ಥನಿಗೆ
ಭೋಧಿಸುವ ಪ್ರಸಂಗವದು. ಆದರೆ ಇಲ್ಲಿ ಅದೇ ಬಗೆಯ ಪ್ರಶ್ನೆಗಳಿಗೆ ಕುಚೋದ್ಯದಿಂದಲೇ
ಶ್ರೀಕೃಷ್ಣ ಉತ್ತರಿಸುತ್ತಾನೆ. ಅಥವ ಉತ್ತರವನ್ನು ತೋರಿಸುತ್ತಾನೆ ಎಂದರೂ
ಸರಿಯೇ. ಯಾಕೆಂದರೆ ಅರ್ಜುನ ಶುದ್ಧ ಮನಸ್ಸಿನಿಂದ ತಾನು ಏನೂ ಅಲ್ಲ ತನ್ನಲ್ಲೇನೂ
ಇಲ್ಲ ಎಂಬ ಭಾವದಲ್ಲಿ ತನ್ನನ್ನು ಶ್ರೀಕೃಷ್ಣನಿಗೆ ಸಮರ್ಪಿಸಿಕೊಳ್ಳುತ್ತಾನೆ. ಅತ್ಯಂತ ವಿನಮ್ರ ವಿಧೇಯಕನಂತೆ ಹರಿಯನ್ನು ಅನುಸರಿಸುತ್ತಾನೆ. ಆದರೆ
ಭೀಷ್ಮ ವಯೋವೃದ್ಧ ವಯಸ್ಸಿನಲ್ಲಿ ತನ್ನಿಂದ ಅದೆಷ್ಟೊ ಪಾಲು ಹಿರಿಯ, ಮಾತ್ರವಲ್ಲ
ಸಕಲ ತತ್ವ ಶಾಸ್ತ್ರಗಳಲ್ಲಿ ಪಾರಂಗತ. ಇಂಥವನಲ್ಲಿ ಸಮದಂಡಿಯಾಗಿಯೇ ಮಾತನಾಡುತ್ತಾನೆ.
ಹೀಗೆ ಒಂದೇ ಪ್ರಸಂಗದಲ್ಲಿ (ಭೀಷ್ಮ ಪರ್ವ) ಎರಡು ಬಗೆಯನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ.
ಹಲವಾರು ಕರ್ಮ ಬಂಧ ತಾಳ
ಮದ್ದಲೆಯ ಅರ್ಥಗಾರಿಕೆಯನ್ನು ಗಮನಿಸಿದಾಗ ಪೆರ್ಲ ಶ್ರೀಕೃಷ್ಣ ಭಟ್ಟರ ಕೃಷ್ಣ ನನಗೆ ಬಹಳ ಇಷ್ಟವಾಗುತ್ತದೆ. ಅತ್ಯಂತ
ಸರಳವಾದ ವಿವರಣೆ. ಸಂಭಾಷಣೆಯಲ್ಲಿ ಹಂತ ಹಂತವಾಗಿ ಮೇಲೆ ಹೋಗುವ ರೀತಿ ಅಂತಿಮ
ಹಂತದಲ್ಲಿ ಎಲ್ಲಿ ತಲಪಬೇಕೋ ಅಲ್ಲಿಗೆ ಗುರಿಮುಟ್ಟಿಸುವ ಅರ್ಥಗಾರಿಕೆಯದು. ಪ್ರೇಕ್ಷಕ ಗಮನವಿಟ್ಟು ಕೇಳುವಂತೆ ಮಾಡುವುದಲ್ಲದೆ ಆ ಸಂದರ್ಭದ ಸಾರಾಂಶವನ್ನು ಮನವರಿಕೆ ಮಾಡುತ್ತದೆ.
ಕರ್ಮಬಂಧ ಅರ್ಥಗಾರಿಕೆಗೆ ಸವಾಲೆನಿಸುವ ಪ್ರಸಂಗ. ಯಕ್ಷಗಾನ ಪದಗಳ ಒಳ
ಭಾವಾರ್ಥವೇನು? ಆ ಸನ್ನಿವೇಶವೇನು? ಮತ್ತು ಆ ಪಾತ್ರದ ವ್ಯಕ್ತಿತ್ವವೇನು? ಇದಿಷ್ಟನ್ನು
ಸೂಕ್ಷ್ಮವಾಗಿ ಗಮನಿಸಿರಬೇಕಾಗುತ್ತದೆ. ಬಹಳಷ್ಟು ಅರ್ಥಧಾರಿಗಳು ತಾಳ ಮದ್ದಲೆ ಎಂದರೆ ತಮ್ಮ
ಪಾಂಡಿತ್ಯದರ್ಶನಕ್ಕೆ ಇರುವ ರಹದಾರಿ ಎಂದು ತಿಳಿದು ಔಚಿತ್ಯ ಮೀರಿ ಈ ಪ್ರಸಂಗದ ಮೂಲ ಸ್ವಭಾವವನ್ನೇ
ಮರೆಸಿಬಿಡುವ ಪ್ರಮೇಯ ಕಾಣಬಹುದು. ಚಂಡೆ ಬಡಿಲಿಕ್ಕೆ ಪರಿಣತಿ ಇದ್ದರೆ ಸಾಲದು ಭಾಗವತರ ಪದಕ್ಕೆ ತಕ್ಕ
ನುಡಿಸುವ ಜಾಣ್ಮೆಇರಬೇಕು. ಹಾಗೆಯೆ ಅರ್ಥಗಾರಿಕೆ ಸಂದರ್ಭೋಚಿತವಾಗಿ ಹರಿದುಬಂದರೆ ಅದು
ಕಾವ್ಯಮಯವಾಗುತ್ತದೆ.
ಇಲ್ಲೊಂದು ಸಾಮಗರ ಭೀಷ್ಮ
ಮತ್ತು ಪೆರ್ಲ ಪಂಡಿತರ ಶ್ರೀಕೃಷ್ಣ ಬಹಳ ಸ್ವಾರಸ್ಯವಾಗಿತ್ತು. ಸಂಭಾಷಣೆಯಲ್ಲಿ ವಿಷಯ ಮಂಡನೆ
ಮತ್ತು ಅದರ ಅಂತಿಮ ಹಂತ ಬಹಳ ಮಾರ್ಮಿಕವವಾಗಿ ಮೂಡಿಬಂದಿತ್ತು.
“ಆದಿನಾರಾಯಣ
ಎಂಬ ಒಂದು ತತ್ವ! ಈ
ಆದಿನಾರಾಯಣ ಎಂಬುದನ್ನು ನಾವು ಯಾವುದನ್ನು ಉದ್ದರಿಸಿ ಹೇಳುತ್ತೇವೊ, ಆದಿ
ಅಂದರೆ ಎಲ್ಲದಕ್ಕೂ ಕಾರಣೀಭೂತವಾದದ್ದು, ಎಲ್ಲ ಶಕ್ತಿಗೂ ಮೂಲಭೂತವಾದದ್ದು, ಎಲ್ಲದಕ್ಕಿಂತಲೂ ಮೊದಲು
ಇರುವಂತಹುದು, ಅಂತಹ ಒಂದು ತತ್ವ…..ಆ ತತ್ವವನ್ನು
ಕಂಡವರು ಯಾರು? ವೇದ ಮಂತ್ರಗಳ ಆಧಾರದಿಂದ ಋಷಿಮುನಿಗಳು ತಾವು ಕಂಡ ಸತ್ಯವನ್ನು
ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ. ಈ ವಿಶಾಲವಾದಂತಹ ಸೃಷ್ಟಿಗೆ ಆದಿಯಾದಂತಹ ಒಂದು ಶಕ್ತಿ
ಇರಬೇಕು. ಸರ್ವಶಕ್ತಿ, ಅದು ಈಶ್ವರನ ಅಸ್ತಿತ್ವ
ಎಂದು ಸಾಧಿಸಬಹುದಾದರೆ, ಆ ಈಶ್ವರನ ಅಸ್ತಿತ್ವಕ್ಕೆ ಯಾರು ಕಾರಣ? ಆ ಸ್ಥಿತಿಗೆ ಅನಾಸ್ಥಾ ಎಂದು
ಕರೆದರು. ಇದನ್ನೆಲ್ಲ ಯೋಚಿಸಿ ಆ ಸ್ಥಿತಿ ಪರ ಬ್ರಹ್ಮ ಎಂಬ ತತ್ವ ಹೇಳಿದ್ದಾರೆ. ಇಲ್ಲಿ ತತ್ವ
ಎಂಬುದು ಜ್ಞಾನ ರೂಪವಾಗಿ ಕಂಡುಕೊಳ್ಳಬೇಕು. ಯಾಕೆಂದರೆ ಪರಬ್ರಹ್ಮ ಕಂಡವರು ಯಾರು? ಯಾರೂ
ಕಾಣದಿದ್ದ ಒಂದು ತತ್ವ!! ಹೀಗೆ ತತ್ವ ಮಾತ್ರ ಲೋಕದ ಮುಂದಿದ್ದರೆ, ಅದನ್ನು ಕಂಡವರು ಯಾರು? ಈ
ತತ್ವ ಯಾರಿಗೂ ಅನುಭವಕ್ಕೆ ಬಂದದ್ದಿಲ್ಲ. ಸ್ವತಃ ಭೀಷ್ಮನೂ ಈ ಮಟ್ಟಿಗೆ ಅನುಭವ ರಹಿತನೇ. ಆದರೂ
ಆತನಿಗೆ ತಿಳಿದಿದೆ ಅದು ಕೇವಲ ಜ್ಞಾನ. ಜ್ಞಾನ ಬೇರೆ ಅನುಭವ ಬೇರೆ. ಜ್ಜಾನ ಮತ್ತು ಅನುಭವದ ವಿಶ್ಲೇಷಣೆ
ಬಹಳ ಸುಲಭ. ಜ್ಞಾನ ಎಲ್ಲರಿಗೂ ಇರಬಹುದು. ಆದರೆ ಅನುಭವ ಇರಲಾರದು. ಯಾರಿಗೆ ಈ ಎಕಂ
ಸತ್... ಈ ಸತ್ಯ ಒಂದೇ, ಅಥವಾ ಪರಬ್ರಹ್ಮದ ಅನುಭವ ಉಂಟಾಗುತ್ತದೋ ಅವರಿಗೆ ಈ ಪ್ರಶ್ನೆಯೇ
ಉದ್ಭವಿಸುವುದಿಲ್ಲ. ಅವರಿಗೆ ಈ ಜೀವರು ಬೇರೆಯಲ್ಲ. ಇದೊಂದೇ ಸತ್ಯವೆಂದು ತಿಳಿದು ಉಳಿದವೆಲ್ಲ
ಮಿಥ್ಯ ಎಂದು ತಿಳಿದುಕೊಂಡಿರುತ್ತಾರೆ. ತಿಳಿದುಕೊಳ್ಳುವುದು ಮುಖ್ಯವಲ್ಲ, ಪರಬ್ರಹ್ಮದ
ಅನುಭವವಾಗಬೇಕು. ಅನುಭವ ಹೊಂದಿದವನು ಈ ಕರ್ಮದ ಬಗೆಗಿನ ಜಿಜ್ಞಾಸೆಯನ್ನು ಮಂಡಿಸುವುದೇ
ಇಲ್ಲ. ಹೀಗೆ ಭೀಷ್ಮನ ಪ್ರಶ್ನೆಗೆ ಪ್ರಶ್ನೆಯಲ್ಲೇ
ಉತ್ತರವನ್ನು ತೋರಿಸುತ್ತಾರೆ.
ಪರಬ್ರಹ್ಮದ ಅನುಭವ ಭೀಷ್ಮನಿಗಾಗಲಿಲ್ಲ. ಹಾಗಿರುವಾಗ ಇಲ್ಲಿ ಇದು
ವ್ಯಾವ ಹಾರಿಕ ಪ್ರಪಂಚದಲ್ಲಿ ಇದ್ದುಕೊಂಡು ಯೊಚಿಸುವಾಗ ಭಗವಂತ ಅವತರಿಸುವಾಗ ವ್ಯಾವಹಾರಿಕ
ಪ್ರಪಂಚದಲ್ಲಿದ್ದುಕೊಂಡೇ ತನ್ನ ನಿರ್ಗುಣ ನಿರಾಕಾರಗಳನ್ನು ಬದಿಗಿಟ್ಟು ವ್ಯವಹರಿಸುತ್ತಾನೆ. ಭಗವಂತ ಇಲ್ಲಿ ಆಕಾರವನ್ನು ತಾಳುತ್ತಾನೆ. ಅಕಾರಕ್ಕೆ
ತಕ್ಕ ವ್ಯವಹಾರವನ್ನು ಮಾಡುತ್ತಾನೆ. ಹಲವು ಅವತಾರಗಳನ್ನು ಕಾಣುತ್ತಾನೆ. ಆದರೆ ಒಂದು ಅವತಾರದಲ್ಲಿ
ಮಾಡಿದ ಕರ್ಮದ ಫಲ ಮತ್ತೊಂದು ಅವತಾರದಲ್ಲಿ ಅನುಭವಿಸಿದ್ದು ಯಾರಾದರೂ ಕಂಡದ್ದುಂಟೇ? ಮತ್ಸಾವತಾರದ
ಕರ್ಮ ಫಲ ಕೂರ್ಮಾವತಾರದಲ್ಲಿ ಕಂಡಬಗ್ಗೆ ನಿದರ್ಶನ ಇದೆಯೇ? ಇಲ್ಲ. ಯಾವುದೋ ಅವತಾರದ ಫಲ ಇನ್ನೊಂದು ಅವತಾರ ಎತ್ತುವುದಕ್ಕೆ
ಕಾರಣವೇ ಅಲ್ಲ. ಹಾಗಿರುವಾಗ ಇದು ಕರ್ಮದಿಂದ ಬಂದಂತಹಾ ಅವತಾರಗಳಲ್ಲ.
ಕರ್ಮ ಬಾಧೆ ಇಲ್ಲ
ಎಂದಾದಾಗ ಭವವಂತನ ಕ್ರಿಯೆಯಲ್ಲಿ ಇದರ ದರ್ಶನವಾದರೂ ಯಾಕೆ? ಪ್ರಾಪಂಚಿಕ ವ್ಯವಹಾರದಲ್ಲಿ ಭಗವಂತನ
ಭಕ್ತರು ಎಂದು ಕರೆಸಲ್ಪಡುವವರಿಗಾಗಿ ಈ ಕರ್ಮ ಬಂಧನದ ಪ್ರದರ್ಶನ. ಅದಕ್ಕೆ ಸೂಕ್ತವಾದ ಒಂದು
ಉದಾಹರಣೆ, ಬಾಯಿಬರದ ತೊದಲುತ್ತಿರುವ ಮಗುವಿನೊಡನೆ ತಾಯಿ ತೊದಲು ನುಡಿಯಲ್ಲೇ ಮಾತನಾಡುತ್ತಾಳೆ.
ಹಾಗೆಂದು ತಾಯಿಗೆ ಮಾತುಬರುವುದಿಲ್ಲ ಎಂದಾಗುತ್ತದೆಯೇ? ಇಲ್ಲ. ಕೇವಲ ಮಗುವಿಗಾಗಿ ಆ ಕರ್ಮವನ್ನು
ಅಂಟಿಸಿಕೊಳ್ಳುತ್ತಾ ಬಾಯಿಬರದವಳಂತೆ ನಟಿಸುತ್ತಾಳೆ. ಮಗುವಿಗಾಗಿ ಅವಳು ಹಾಗೆಯೇ
ಮಾತನಾಡಬೇಕಾಗುತ್ತದೆ. ಇಲ್ಲವಾದಲ್ಲಿ ಆ ಮಗುವಿಗೆ ಅರ್ಥವಾಗುವುದಿಲ್ಲ. ಮಾತ್ರವಲ್ಲ ಈ
ವ್ಯವಹಾರಗಳನ್ನು ಮಗು ಕಲಿಯುವುದೂ ಇಲ್ಲ. ವ್ಯಾವಹಾರಿಕ
ಪ್ರಪಂಚದಲ್ಲಿ ಬರುವ ಇಂತಹ ಶರಣರನ್ನು ಪೊರೆಯುವುದಕ್ಕಾಗಿ ಈ ಪ್ರಪಂಚದ ವ್ಯವಹಾರಗಳಲ್ಲಿ
ಒಂದಾಗಿಬಿಡುತ್ತಾನೆ. ಕರ್ಮಕ್ಕೆ ಅಧೀನನಾದವನಂತೆ ವ್ಯವಹರಿಸುತ್ತಾನೆ.
ಎಲ್ಲರೂ ಭೂಮಿಗೆ ಪತನ
ಹೊಂದಿ ಹುಟ್ಟಿಕೊಳ್ಳುತ್ತಾರೆ. ಆದರೆ ಭಗವಂತ ಅವತಾರ ಎತ್ತುತ್ತಾನೆ. ಪತನ ಎಂದರೆ ಬೀಳುವುದು.
ಒಬ್ಬ ಆನೆಯ ಮೇಲಿನಿಂದ ಸವಾರ ಇಳಿದು ಬರುವುದಕ್ಕೂ ಬೀಳುವುದಕ್ಕೂ ವೆತ್ಯಾಸವಿದೆ. ಹೀಗೆ ಅವತಾರ
ಎತ್ತಿಬಂದ ಭಗವಂತ, ಕೆಸರಿನಲ್ಲಿ ಬಿದ್ದ ಮಗುವನ್ನು ಎತ್ತುವುದಕ್ಕೋಸ್ಕರ ತಾಯಿ ಆಲ್ಲಿರುವ
ಕೆಸರನ್ನು ಮೆತ್ತಿಸಿಕೊಂಡಹಾಗೆ ಇಲ್ಲಿ ಭಗವಂತನಿಗೆ
ಕರ್ಮಬಂಧ. ಮಗುವನ್ನು ಎತ್ತಿ ಆದನಂತರ ಕೆಸರನ್ನು ತೊಳೆದುಕೊಂಡಹಾಗೆ ಆ ಕರ್ಮವನ್ನು ಭಗವಂತ
ಅಂಟಿಸಿಕೊಳ್ಳುವುದಿಲ್ಲ. ಅರ್ಥಾತ್ ಆ ಕರ್ಮಕ್ಕೆ ಮತ್ತೊಂದು ಜನ್ಮವನ್ನು ಎತ್ತುವುದಿಲ್ಲ. ಹೀಗೆ
ಕೆಸರಲ್ಲಿ ಬಿದ್ದ ಶರಣರನ್ನು ಪೊರೆಯುವುದು ಭಗವಂತನ ಕೆಲಸ. ಭಗವಂತನದ್ದು ಎಲ್ಲವೂ ಅಭಿನಯ. ಪರ
ಇಚ್ಛಾಪ್ರಾರಭ್ದ ದಂತೆ ಶರಣರಿಗಾಗಿ ಎಲ್ಲವನ್ನು ಅಭಿನಯಿಸುವುದು. ಹಾಗೆ ಇಲ್ಲಿ ಅರ್ಜುನ ಶರಣನಾಗಿ
ಕ್ಷಣ ಕ್ಷಣವೂ ತನ್ನನ್ನು ಅನುಸರಿಸುತ್ತಾನೆ. ಕೃಷ್ಣಾ...ಎಂದು ಮೊರೆಯಿಡುತ್ತಾನೆ. ಹಾಗಾಗಿ ಅವನ
ಉದ್ಧಾರಕ್ಕೆ ಈ ಸಾರಥ್ಯ ಹೊರತು ಇದು ಯಾವುದೋ ಅವತಾರ ಕರ್ಮದ ಪ್ರಭಾವವಲ್ಲ.
ಪಂಕಜಾಕ್ಷ ಭೇದವೇಕೊ | ಕಿಂಕರನಲ್ಲವೆ ನಾನು ||
ಶಂಕೆಯೇನೈ ಪಾರ್ಥನಧಿಕ | ಕಿಂಕರನಾಗಿಹನೇ ನಿನಗೆ ||
ನಿರ್ಗುಣನೂ
ನಿರಾಕಾರಿಯೂ ಆದಂತಹ ಶ್ರೀಕೃಷ್ಣ ವ್ಯವಹಾರಿಕ ಪ್ರಪಂಚದ ಸಂಬಂಧವನ್ನು ತಿಳಿಸಿ ಹೇಳಿದಾಗ, ಆ
ಸಂಬಂಧವನ್ನು ಹೊಂದಿಕೊಂಡೆ ಭೀಷ್ಮ ಪಂಕಜಾಕ್ಷ ಎಂದು ಉದ್ಧರಿಸಿ ರೂಪಸಾದೃಶವನ್ನು ಕಲ್ಪಿಸುತ್ತಾನೆ.
ತಾವರೆ ಸೂರ್ಯನನ್ನು ಕಂಡು ಅರಳುತ್ತದೆ. ತಾವರೆ ಅರಳುವುದೋ ಅಲ್ಲ ಸೂರ್ಯ ತಾನು ಅರಳಿಸುವುದೋ ಎಂಬ
ಸಂಶಯ ಇದ್ದರೂ ತಾವರೆ ಸೂರ್ಯನಿಗಾಗಿ ಅರಳುವುದೋ ಅಥವಾ ತಾವರೆಗಾಗಿ ಸೂರ್ಯ ಉದಯಿಸುವುದೋ ತಾವರೆ
ತನಗಾಗಿ ಅಂತ ಹೇಳಿಕೊಳ್ಳುತ್ತದೆ, ಕವಿಕಲ್ಪನೆ ಏನೆ ಇದ್ದರೂ, ಅರಳಿದ ತಾವರೆ ಸೂರ್ಯನಿಗೆ ಅಭಿಮುಖವಾಗಿ ತನ್ನೆಲ್ಲ
ಎಸಳುಗಳನ್ನು ಚಾಚುತ್ತದೆ. ಎಲ್ಲ ಎಸಳುಗಳೂ ಸೂರ್ಯನನ್ನು ಕಂಡು ಸಮಾನವಾದ ಸಂತೋಷವನ್ನು
ಹೊಂದುತ್ತದೆ. ಆದರೆ ಇಲ್ಲಿ ಇನ್ನೊಂದು ಜಿಜ್ಞಾಸೆ ಸೂರ್ಯ ಕೇವಲ ತಾವರೆಗಾಗಿ ಮಾತ್ರವಲ್ಲವಲ್ಲ
ಅರಳುವುದು? ಎಲ್ಲರಿಗೂ ಸಮಾನವಾಗಿ ಬೆಳಕನ್ನು ಕೊಡುವ ಸೂರ್ಯ ಯಾರಲ್ಲೂ ಭೇದವನ್ನು
ಕಲ್ಪಿಸುವುದಿಲ್ಲ.
ಶರಣರ ಪೊರೆವುದೆ
ಬಿರುದೆನ್ನ ಎನ್ನುವ ಶ್ರೀಕೃಷ್ಣ ಶರಣರಲ್ಲಿ
ಭೇದವನ್ನು ಕಾಣುತ್ತಿದ್ದಾನೆಯೆ? ಶರಣರಲ್ಲಿ ಕುಂಟನೋ ಕುರುಡನೋ ಕುರೂಪಿಯೋ ಎಂಥವನೇ ಆಗಿರಲಿ, ಶರಣರ
ಪೊರೆವುದು ಇದರಲ್ಲಿ ಭಿನ್ನತೆಯಿಲ್ಲ. ವೆತ್ಯಾಸವಿದ್ದರೂ ಇಲ್ಲಿ ಅರ್ಜುನನಲ್ಲಿ ಭೀಷ್ಮನಿಗಿಂತ
ಅದೆಂತಹಾ ವೆತ್ಯಾಸವನ್ನು ಭಗವಂತ ಗುರುತಿಸಿದ?
“ ಶ್ರೀ ಕೃಷ್ಣ,
ಅರ್ಜುನ ಶರಣನೆಂದು ಅವನನ್ನು ಪೊರೆದೆ, ಎನಗೆ ಮತ್ಸರವಿಲ್ಲ. ಈ ಒಂಭತ್ತು ದಿನ ಆತನ ರಥದ ಸಾರಥಿಯಾದೆ, ಹೌದಲ್ಲ?
ಇನ್ನು ಒಂದಷ್ಟು ದಿನ ದಿನ ಯಾಕೆ ಒಂದಷ್ಟು ಘಳಿಗೆ ನನ್ನ ರಥದ ಸಾರಥಿಯಾಗು. ಅಷ್ಟನ್ನೂ ಮಾಡಲಾಗದ
ನೀನು ನನ್ನಿಂದಲೂ ಶ್ರೇಷ್ಠವಾದ ಭಕ್ತಿಯನ್ನು ಅವನಲ್ಲಿ ಏನು ಕಂಡೆ?
ಇಲ್ಲಿ ನೀನು ಪೊರೆಯುವುದನ್ನು
ಅಭಿನಯ ಎಂದು ಹೇಳಬೇಡ. ಅಭಿನಯ ಎಂಬುದು ಕೃತ್ರಿಮ. ಒಬ್ಬಾತ ರಂಗದ ಮೇಲೆ ಅಭಿನಯಿಸುತ್ತಾ ತನ್ನ
ಹೆಂಡತಿ ಸತ್ತಳೂ ಎಂದು ದುಃಖಿಸಿದರೆ, ವಾಸ್ತವದಲ್ಲಿ ಅವನ ಹೆಂಡತಿ ರಂಗದ ಎದುರಿಗೇ ಕುಳಿತು ಇವನ
ಅಭಿನಯವನ್ನು ನೋಡುತ್ತಿರುತ್ತಾಳೆ.!! ಅಂದರೆ ಅಭಿನಯ ಎಂಬುದು ಕಲೆ, ಹಾಗಾಗಿ ಕಲೆ ಎಂಬುದು
ಕೃತ್ರಿಮ. ಅದು ಯಥಾರ್ಥತೆಗೆ ವಿರೋಧವಾದದ್ದು. ಅದು ನಿಜವಾದರೆ ಕಲೆಯಾಗಿ ಉಳಿಯುವುದಿಲ್ಲ. ಒಬ್ಬ ಮನುಷ್ಯನೇ ಬಂದು ನಿಂತರೆ ಆಶ್ಛರ್ಯವಾಗುವುದಿಲ್ಲ.
ಆದರೆ ಮನುಷ್ಯನಂತಿರುವ ಮಣ್ಣಿನ ಬೊಂಬೆಯನ್ನು ತಂದಿರಿಸಿದರೆ ಬೆರಗಾಗುತ್ತೇವೆ. ಬೊಂಬೆ ಎಂಬುದು
ನಿಜವಾದ ಮನುಷ್ಯನಲ್ಲದೇ ಇದ್ದರೂ ಶ್ರೇಷ್ಠ ಕಲೆಯಾಗಿ ಗೋಚರಿಸುತ್ತದೆ. ಅಳು ಬರದಿದ್ದರೂ ಅತ್ತವನಂತೆ
ಬೇರೆಯವರು ಭ್ರಮೆಗೊಳಗಾದವನಂತೆ ಆಳಬೇಕು. ಇಲ್ಲಿ ಕೃತ್ರಿಮವೇ ಕಲೆಯೆಂದು ಕರೆಸಲ್ಪಡುತ್ತದೆ.
ವಾಸ್ತವಕ್ಕೆ ಹತ್ತಿರವಾಗಿ ಶ್ರೀಕೃಷ್ಣ ನೀನು ಇದಕ್ಕೆ ಸ್ಪಷ್ಟ ಮಾತುಗಳನ್ನು ಹೇಳಲೇಬೇಕು.
ನನ್ನಿಂದಲೂ ಅಧಿಕ ವಿಶೇಷತೆ ಅರ್ಜುನನಲ್ಲಿ ಅದೇನು ಕಂಡೆ?
ಅರ್ಜುನ ನಿನಗೆ ಹೇಗೆ ಕಿಂಕರನೋ ನಾನು ನಿನ್ನ ಕಿಂಕರ ಎಂಬ ಮನೋಭಾವದಲ್ಲೇ ಜೀವಿಸಿದವನು. ಅರ್ಜುನನ
ಭಕ್ತಿಯನ್ನು ಅಂಗೀಕರಿಸಿ ನನ್ನ ಭಕ್ತಿಯನ್ನು ತಿರಸ್ಕರಿಸಿರುವೆಯಲ್ಲ ಕೃಷ್ಣ.
ಭೇದವು ನಿಮ್ಮೊಳಗುಭಯರ ಪಾಲಿಪ | ನಾದಿಪಿತಾಮಹನು |
ಕಾದಿಹ ತೈಲವ ತೊಡೆದನೆ ಧರ್ಮಜ | ಹೋದೆಯೊ ಕುರುಬಲಕೆ ||
ಭೀಷ್ಮ ಸಹಜವಾಗಿ
ಉದ್ವೇಗಭರಿತನಾದ. ತನ್ನಿಂದ ಬಹಳ ಕಿರಿಯನಾದ ಅರ್ಜುನನಿಂದ ತಾನು ಭಾಗವತ ಧರ್ಮವನ್ನು
ಕಲಿಯುವಂತಾಯಿತೇ? ಹಾಗಾಗಿ ಬೇಡ ಬೇಡವೆಂದರೂ
ಮಾತಿನಲ್ಲಿ ಮಾತ್ಸರ್ಯ ಸಿಡಿಯಿತು. ತನ್ನ ಮೊಮ್ಮಗನ ರಥದ ಆಳಾಗಿ ಭಗವಂತ ಇಳಿಯುತ್ತಾನೆ
ಎಂದಾದರೆ, ತನ್ನ ಜೀವನ ರಥದ ಸಾರಥ್ಯವನ್ನು ನಿರಾಕರಿಸಿದಂತೇ ಅಲ್ಲವೇ?
ಭೀಷ್ಮನ ಉದ್ವೇಗ
ಶ್ರೀಕೃಷ್ಣ ಸರಿಯಾಗಿ ಅರ್ಥವಿಸಿಕೊಳ್ಳುತ್ತಾನೆ. ಯಾವ ಭೇದವನ್ನು ತನ್ನ ಮೇಲೇ ಆರೋಪಿಸುವಾಗ ಸ್ವತಃ
ತಾನು ಅದೇ ಭೇದವನ್ನು ತೋರಿಸುತ್ತಾ ಅದಕ್ಕೆ ವಶವರ್ತಿಯಾಗಿ ವ್ಯವಹರಿಸುತ್ತಿದ್ದಾನಲ್ಲ. ಶರಣರ
ಪೊರೆಯುವುದು ಇದು ತನ್ನ ಬಿರುದು ಆದರೂ ಶರಣ ಎಂಬುದಾಗಿ ಅರ್ಜುನನ್ನು ಒಬ್ಬನನ್ನೇ
ಪರಿಗಣಿಸುತ್ತಾನಲ್ಲ. ಸ್ವತಃ ಹಿರಿಯನಾದ ಭೀಷ್ಮ ಸ್ಥಾನ ಗೌರವವನ್ನು ಅರ್ಥವಿಸಬೇಕಿತ್ತು. ಅದನ್ನು
ಬಿಂಬಿಸಿಯೇ ತುಸು ಕಠಿಣವಾಗಿಯೇ ಮೊನಚಾದ ಮಾತುಗಳಿಂದ ಪ್ರತಿಕ್ರಿಯಿಸುತ್ತಾನೆ. ಒಂದು ತಾಯಿಗೆ
ಮಕ್ಕಳು ಹಲವರಿರಬಹುದು. ಆ ಮಕ್ಕಳೆಲ್ಲರನ್ನು ಸಮಾನವಾಗಿ ಪಾಲಿಸುವ ಗುಣವನ್ನು ತಾಯಿಗೆ ತಿಳಿಸುವ
ಅಗತ್ಯ ಇದೆಯೇ? ಆದರೂ ಪಾಲನೆಯಲ್ಲಿ ವೆತ್ಯಾಸ ವೈವಿಧ್ಯತೆಯನ್ನು ತೋರಬೇಕಾದ್ದು ಅನಿವಾರ್ಯ. ಹಿರಿಯ
ಮಗನಾದವನು ತನ್ನಿಂದಲೂ ಅತಿ ಕಿರಿಯನಾದ ಮಗುವಿಗೆ
ತನ್ನಮ್ಮ ಎದೆಹಾಲನ್ನು ಉಣಿಸುತ್ತಿದ್ದರೆ, ನನಗೂ ಉಣ್ಣಿಸು ಎಂದು ಹಿರಿಯನಾದವನು ಹೇಳಬಹುದೇ.?
ಭಾವವೆತ್ಯಾಸ ಪ್ರೀತಿಯ ಮೇಲೆ ಪ್ರಭಾವ ಬೀರುವುದಿಲ್ಲ. ಹಲವು ಮಕ್ಕಳ ಮೇಲೂ ತಾಯಿಯಾದವಳ ವಾತ್ಸಲ್ಯ
ಒಂದೇ ಆಗಿರುತ್ತದೆ. ಬೆಳೆದ ಮಗನಿಗೂ ಎಳೆಯ ಶಿಶುವಿಗೂ ಪಾಲನೆಯಲ್ಲಿ ವೆತ್ಯಾಸವಿದ್ದರೆ ಅದನ್ನು
ಭೇದ ಎಂದು ದೂಷಿಸುವುದಕ್ಕೆ ಸಾಧ್ಯವೇ? ಸ್ವತಃ
ಪಿತಾಮಹನ ಸ್ಥಾನದಲ್ಲಿದ್ದವನು ಭೀಷ್ಮ, ಆತ ಮಾಡಿದ್ದೇನು? ಹಾಗಾಗಿ ಇರಿದೇ ಮಾತನಾಡುತ್ತಾನೆ.
“ ಭೀಷ್ಮರೇ, ಭೇದ ಅದು ನಿಮ್ಮಲ್ಲೇ ಇದೆ. ನೀವು ಪಿತಾಮಹರರಾಗಿರುವುದು
ಕೇವಲ ಕೌರವರಿಷ್ಟೇ ಅಲ್ಲವಲ್ಲ. ಇಂದು ಕೌರವ
ಪಾಂಡವರನ್ನು ಸಮಾನವಾಗಿ ಕಾಣಬೇಕಾದ ನೀವು, ಕೌರವನ ಆಯುಧವಾಗಿ ಪಾಂಡವರನ್ನು ಅದೂ ನಿಮ್ಮ
ಮೊಮ್ಮಕ್ಕಳನ್ನು ತರಿಯುವುದಕ್ಕೆ ಹೊರಟಿದ್ದೀರಲ್ಲ. ಸ್ವಗೋತ್ರ ನಾಶದ ಈ ಯುದ್ದದಲ್ಲಿ ನೀವು
ತೊಡಗುವುದೇ? ಕೌರವನ ಪರವಾಗಿ ಆಯುಧ ಹಿಡಿಯುವ ನಿಮಗೆ ಧರ್ಮರಾಯ ಏನು ಮಾಡಿದ ಕಾದ ಎಣ್ಣೆಯನ್ನು
ಎರಚಿದನೇ? ನೀವು ಭೇದವನ್ನು ಬಿಡುವ ಮನಸ್ಸಿದ್ದರೆ ಇಷ್ಟು ದಿನ ಕೌರವನ ಪಕ್ಷ ಹಿಡಿದಿದ್ದಿರಿ
ಇನ್ನು ನಿಮ್ಮ ಸೇನಾಧಿಪತ್ಯ ಪಾಂಡವರ ಕಡೆಯಿಂದ ಸಾಗಲಿ. ಆದುದರಿಂದ ಭೇದ ನಿಮ್ಮಲ್ಲೇ ಇದೆ.”
ತನ್ನ ಬಂಧನವನ್ನು
ಶ್ರೀಕೃಷ್ಣ ಭೇದ ಎಂದು ಗುರುತಿಸಿದ್ದು ಮಾತ್ರವಲ್ಲ ಒಂದು ರೀಲಿಯಲ್ಲಿ ಮೂದಲಿಕೆಯನ್ನೇ
ಮಾಡುತ್ತಾನೆ. ಭೂಮಿಯ ಮೇಲೆ ಹುಟ್ಟಿದ ಮೇಲೆ ಸಂಭಂಧಗಳ ಒಳಗೆ ಬದುಕಬೇಕಾಗುತ್ತದೆ. ಸಂಬಂಧಗಳು
ಬೇದಕ್ಕೆ ಕಾರಣವಾಗುತ್ತದೆ ಎಂದು ಆ ಸಂಬಂಧ ಬೇಡವೆಂದು ಬಗೆದರೆ ಜೀವನದ ಸಾರ್ಥಕತೆಯನ್ನು
ಪಡೆಯುವುದಾದರೂ ಹೇಗೆ. ಪಿತಾಮಹನಾದರೂ ತಾನೂ ಅದಕ್ಕೂ ಮೊದಲು ಒಂದು ಸಂತಾನ ಪುತ್ರನೇ ತಾನೆ? ಸಂಬಂಧಗಳ
ನಡುವೆ ಹಂಗು ಎಂಬುದು ಇದೇ ರೀತಿ ಬೆಳೆದು ಬಿಡುತ್ತದೆ. ಹಸ್ತಿನಾವತಿಯಲ್ಲಿ ಭೀಷ್ಮ ಎಂದು ಅರಸನಾಗಲಿಲ್ಲ.
ಆದರೂ ಅರಸೊತ್ತಿಗೆಯ ಮುಳ್ಳು ದೇಹಕ್ಕೆ ಚುಚ್ಚಿದ್ದು ಕಿತ್ತು ಹಾಕುವುದಕ್ಕೆ ಸಾಧ್ಯವಾಗುವುದಿಲ್ಲ.
ಹಸ್ತಿನೆಯಲ್ಲಿ ಭೀಷ್ಮ ಅರಸನಲ್ಲ ಎಂದಾದರೆ ಹಸ್ತಿನಾವತಿಯ ಸಿಂಹಾಸನದ ಹಂಗು ತಾನಾಗಿ ಮುತ್ತಿಕೊಳ್ಳುತ್ತದೆ.
ಶ್ರೀ ಕೃಷ್ಣನಿಗೆ ಇದು ಅರಿವಿಲ್ಲದೇ ಏನೂ ಅಲ್ಲ. ಶುದ್ಧ ಧಾರ್ಮಿಕ ಮನೋಭಾವದಿಂದಲೇ ಕೃಷ್ಣ ಪ್ರತಿಕ್ರಿಯಿಸುತ್ತಾನೆ.
ಶ್ರೀಕೃಷ್ಣನ ಮಾತೇ ಹಾಗೆ. ಅದನ್ನು ಅವರವರ ದೃಷ್ಣಿಕೋನಕ್ಕೆ ಸರಿಯಾಗಿ ಅವರವರ ಬೌದ್ಧಿಕ ಮಟ್ಟಕ್ಕೆ
ಸರಿಯಾಗಿ ಯೋಚಿಸುವುದಕ್ಕೆ ಸಾಧ್ಯವಾಗುತ್ತದೆ. ಪರೋಕ್ಷವಾಗಿ ಆತ ಹೇಳುವುದಾದರೂ ಏನು? ತಾನು ಕೇವಲ ಕೌರವನ
ಸೇನಾಧಿಪತ್ಯದ ಪದವಿಯಿಂದ ವಿರಮಿಸುವುದಲ್ಲ.. ಈ ದೀರ್ಘ ಬದುಕಿನಿಂದಲೇ ವಿರಮಿಸಬೇಕಿದೆ. ಹಾಗಾಗಿ ಆ
ಹಾದಿಯನ್ನೇ ತೋರುತ್ತಿದ್ದಾನೆಯೇ? ಹೌದು ಇದು ಭೀಷ್ಮನ ಅಂತಿಮ ದಿನದ ಯುದ್ದವಾಗಲಿ ಎಂಬ ಅಶಯವೇ? ಹಾಗಾಗಿ
ತನ್ನ ಸ್ಥಾನಕ್ಕೆ ಇನ್ನು ಅರ್ಜುನನ ಉಮೇದ್ವಾರಿಕೆ ಎಂದು ಸಾರುತ್ತಿದ್ದಾನಲ್ಲ.? ಹಾಗಾದರೆ ಈ ಉಮೇದ್ವಾರಿಕೆಯನ್ನೂ ಪರೀಕ್ಷಿಸುವಂತೆ ಪ್ರೇರೇಪಣೆ
ಯಾಕೆ ಇದಾಗಿರಬಾರದು?
ತನಗೆ ಕೌರವನ ಅನ್ನದ ಋಣ.
ಹಸ್ತಿನಾವತಿಯ ಸಿಂಹಾಸನದ ಹಂಗು. ಆದರೆ ಶ್ರೀಕೃಷ್ಣನಿಗೆ ಜಗದ ಹಂಗು ಇದೆ. ಆ ಹಂಗಿನಂದಲೇ ಧರ್ಮ ಸಂಸ್ಥಾಪನಾರ್ಥಾಯ
ಎಂದು ಹೊರಟದ್ದು. ಒಂದು ವೇಳೆ ಇಂದು ಭೀಷ್ಮ ಜಯಿಸಿದರೆ..., ಆ ಜಯ
ಸಲ್ಲುವುದು ಭೀಷ್ಮನಿಗಲ್ಲ. ಇಲ್ಲಿ ಭೀಷ್ಮನ ಧರ್ಮಪ್ರವೃತ್ತಿ
ಗೆಲ್ಲುವುದಲ್ಲ. ಅಧರ್ಮಿಯಾದ ಕೌರವನಿಗೆ ಆ ಗೆಲುವು ಸಲ್ಲುತ್ತದೆ. ಆಗ
ಕೌರವ ನಡೆದುಕೊಂಡದ್ದೇ ಸರಿ ಎಂದಾಗಬಹುದಲ್ಲವೇ? ಧರ್ಮ ಇದ್ದಲ್ಲಿ ಜಯ ಸಿಗುವುದಿಲ್ಲ ಎಂದಾದರೆ
ಭಗವಂತನ ಇರಾದೆ ಹಾಗಿರಲಾರದು. ಮತ್ತೇನು ಇರಬಹುದು? ಯಥೋ ಧರ್ಮಃ ತಥೋ ಜಯ: ಈ ವೇದವಾಕ್ಯ
ಸತ್ಯವಾಗದೇ ಇದ್ದೀತೆ? ಹಾಗಾಗಿ ಭಗವಂತನ ಇರಾದೆ ನನ್ನ ಪ್ರವೃತ್ತಿಗೆ ನಿವೃತ್ತಿಯನ್ನು
ತರುವುದಿರಬಹುದಲ್ಲವೇ? ಹಾಗಿರುವಾಗ ತನಗೇಕೆ ಈ ಛಲ? ಅದು ಭಗವಂತನಿಗೆ ವೇದ್ಯವಾಗಲಿ ಎಂಬುದೇ ನನ್ನ
ಪ್ರಯತ್ನ. ಆದನ್ನು ಭಗವಂತನ ಮುಂದೆ ಪರೋಕ್ಷವಾಗಿ ಇರಿಸಿಯಾಗಿದೆ. ಅದಕ್ಕಾಗಿಯೇ ಅಲ್ಲವೇ ಆತ ತಾಯಿ
ಪ್ರೇಮದ ರೀತಿಯನ್ನು ಒರೆದದ್ದು. ಸಮಾನತೆ ಅದು ಶಬ್ದ ಒಂದೇ, ಆದರೆ ಆಂತರಿಕ ಸಮಾನತೆ ಬಾಹ್ಯ
ಭಿನ್ನತೆ ಎಂದಿದೆ. ಆಂತರಿಕ ಸಮಾನತೆಯಲ್ಲಿ ತಾಯಿಗೆ ಎಲ್ಲ ಮಕ್ಕಳಲ್ಲೂ ಒಂದೇ ರೀತಿಯ ಪ್ರೀತಿ
ಮಮಕಾರ ಇರುತ್ತದೆ. ಆದರೆ ಬಾಹ್ಯದ ವ್ಯವಹಾರದಲ್ಲಿ ಭಿನ್ನತೆಯುಂಟು. ಹಾಗಾಗಿ ಆಂತರಿಕ
ಸಮಾನತೆಯಲ್ಲಿ ಭೀಷ್ಮನಿಗೂ ಭಗವಂತನ ಹೃದಯದಲ್ಲಿ ಸ್ಥಾನ ಉಂಟು ಅಂತ ಪರೋಕ್ಷವಾಗಿ ಸಾರಿದ
ಹಾಗಾಯಿತು. ಹಾಗಾಗಿ ಅದನ್ನು ಕಾಣಬೇಕಲ್ಲ. ಧರ್ಮದ ಜಿಜ್ಞಾಸೆಗಾಗಿ ಗುರುವಿನಲ್ಲೇ ಕ್ಷತ್ರಿಯತ್ವ
ಮೆರೆದ ಭೀಷ್ಮನಿಗೆ ಇಂದು ಭಗವಂತನ ಎದುರು ಅದೇ ದಾರಿ. ತನ್ನವ್ವೆಗೆ ಹಾದಿಯನ್ನು ತೋರಿಸಿದ ಹರಿಪಾದ
ನಖ, ನನಗೊಂದು ಹಾದಿಯನ್ನು ತೋರದೇ ಇರಲರಾದು.
ಧರ್ಮ ರಕ್ಷಣೆಗಲ್ಲವೇ ಅರ್ಜುನನ ರಕ್ಷಣೆ. ನೋಡೋಣ ರಕ್ಷೆ
ಹೇಗಾಗುತ್ತದೆ. ಹಾಗಾದಲ್ಲಿ ನಾನು ವಿರಾಮವನ್ನು ಕಂಡುಕೊಳ್ಳಬಹುದು ಅದುವರೆಗೆ ಈ ಭೀಷ್ಮ ವಿರಮಿಸುವ
ಪ್ರಶ್ನೇಯೇ ಇಲ್ಲವೆಂದು ದೃಢನಿಲುವು ತಾಳಿ ದೃಢವಾಗಿ ನೆಲಕ್ಕೆ ಊರಿದ ಧನುಸ್ಸನ್ನು ಭೀಷ್ಮ ಕೈಯಲ್ಲಿ ಎತ್ತಿ
ಹಿಡಿಯುತ್ತಾನೆ .











