ಸತ್ಯ ನಿಷ್ಠೆ ಪ್ರಾಮಾಣಿಕತೆ ಇವುಗಳೆಲ್ಲ ಸವಕಲು
ನಾಣ್ಯಗಳಂತೆ ವಾಸ್ತವಿಕ ಸಮಾಜದಲ್ಲಿ ಮೌಲ್ಯವನ್ನು ಕಳೆದುಕೊಂಡಂತೆ ಕಂಡರೂ , ಇತಿಹಾಸ
ಸುಪ್ತವಾದ ಮೌಲ್ಯಗಳ ಅಸ್ತಿತ್ವವನ್ನು ಸಾರುತ್ತಾ ಬರುತ್ತದೆ. ಮಾತ್ರವಲ್ಲ ಇತಿಹಾಸವೇ ಇದಕ್ಕೆ ಸಾಕ್ಷ್ಯವಾಗಿ ಎದುರು
ಬಂದು ನಿಲ್ಲುತ್ತದೆ. ಇಂದಿನ ವ್ಯಾವಹಾರಿಕ ಪ್ರಪಂಚದ ಢಾಂಬಿಕತನದಲ್ಲಿ ಮೌಲ್ಯ ಕಳೆದುಕೊಂಡ
ವಸ್ತುಗಳು ತನ್ನ ಮೌಲ್ಯವನ್ನು ನಿಗೂಢವಾಗಿರಿಸುತ್ತ ಆ ಮೌಲ್ಯಗಳಿಗೆ ಅರ್ಥವನ್ನು ಒದಗಿಸುತ್ತಾ
ಸಾಗುತ್ತದೆ.
ಇತ್ತೀಚೆಗೆ ಶ್ರೀಕೃಷ್ಣಸಭಾ ದ ಯಕ್ಷಗಾನದಲ್ಲಿ ಹಿರಿಯ
ಭಾಗವತ ಶ್ರೀ ಬಲಿಪ್ಪ ನಾರಾಯಣ ಭಾಗವತರ ಹಾಡುಗಾರಿಕೆಯನ್ನು ಕೇಳಿ ಆನಂದಿಸುತ್ತಿದ್ದೆ. ಆದೇನು
ಮಾಧುರ್ಯ, ಅದೇನು ಸ್ವರ ಗಾಂಭೀರ್ಯ. ಇಳಿವಯಸ್ಸಿನಲ್ಲೂ ಕರಗಿಹೊಗದ ಕಂಠ ಸಿರಿ ಪ್ರತಿ ಸಾರಿ
ಕೇಳುವಾಗಲೂ ಅದ್ಭುತ ರಮ್ಯವೆನಿಸುತ್ತದೆ. ಆ ಸ್ವರ
ಮಾಧುರ್ಯ ನಶ್ವರ ಜೀವನದಲ್ಲೂ ಅನಶ್ವರತೆಯ ತತ್ವವನ್ನು ಸಾರುತ್ತವೆಯೋ ಎಂದು ಭಾಸವಾಗುತ್ತದೆ.
ಅನುಭವಿಸುವುದರಲ್ಲೂ ಅಪ್ಪಟ ಪ್ರಾಮಾಣಿಕತನವಿದ್ದಲ್ಲಿ ಈ ಅನುಭವ ಸಾಧ್ಯವಾಗುತ್ತದೆ.
ಈಗ ಅಧುನೀಕರಣಗೊಂಡ ಸುಧಾರಿತ ವಿದ್ಯುನ್ಮಾನ ಮಾಧ್ಯಮಗಳ
ಕ್ರಾಂತಿಯಿಂದ ಎಲ್ಲವೂ ಸಂತೆಯಲ್ಲಿನ ಸರಕು ಎನ್ನಬಹುದೆ ? ಇಲ್ಲ ಕಸ ಎನ್ನಬಹುದೇ ? ಅನುಮಾನವಾಗುತ್ತದೆ. ಇದೆಲ್ಲ ಒಂದು ರೀತಿಯಲ್ಲಿ ಅಪಮೌಲ್ಯವನ್ನೇ ಸಾರಿದರೂ ಅಲ್ಲಿ ಇಲ್ಲಿ ಮೌಲ್ಯ
ಪ್ರತ್ಯಕ್ಷವಾಗುತ್ತಿರುವುದು ಸುಳ್ಳಲ್ಲ. ಇಂತಹ ಸನ್ನಿವೇಶದಲ್ಲಿ ಬಹಳಷ್ಟನ್ನು ನಾವು
ನೋಡುತ್ತೇವೆ, ಕೇಳುತ್ತೇವೆ. ಮನೋಭಾವಕ್ಕನುಸರಿಸಿ ಸ್ಪಂದಿಸುತ್ತೇವೆ.
![]() |
| ಅದ್ಬುತ ಛಾಯಾ ಚಿತ್ರ ಕೃಪೆ : ಶ್ರೀ ರಾಮನರೇಶ್ ಮಂಚಿ |
ಯಕ್ಷಗಾನದಲ್ಲಿ ಹಲವಾರು ಭಾಗವತರು ತಮ್ಮ ಪ್ರತಿಭೆಯನ್ನು
ಒರೆಗೆ ಹಚ್ಚುತ್ತಾರೆ. ಒಂದಿಷ್ಟು ಕಾಲ ಯಕ್ಷಗಾನ
ಅವರನ್ನು ತಬ್ಬಿಕೊಳ್ಳುತ್ತದೆ. ಹಿರಿಯ ಕಿರಿಯ
ಭೇದವಿಲ್ಲದೆ ಹೆತ್ತ ಮಡಿಲ ಪ್ರೇಮದ ರೀತಿಯಲ್ಲಿ ಯಕ್ಷಗಾನ ನೆರಳನ್ನು ನೀಡಿ ಅಪ್ಪಿಕೊಳ್ಳುತ್ತದೆ.
ಹಲವರು ಉಚ್ಛ್ರಾಯ ಸ್ಥಿತಿಯನ್ನು ತಲಪಿ ಇನ್ನಿಲ್ಲದಂತೆ ಪ್ರಭಾವ ಬೀರುತ್ತಾರೆ. ಆದರೆ ಕಾಲ ಎಂಬುದು
ಎಲ್ಲ ಸಂಭಂಧಗಳನ್ನು ಅನಿವಾರ್ಯವಾಗಿಸುವಲ್ಲಿ ಪ್ರಧಾನವಾದಾಗ ಕಾಲದ ಗತಿಗೆ ಅನ್ಯಥಾ ಶರಣಂ ನಾಸ್ತಿ
ಎನ್ನಲೇಬೇಕಾಗುತ್ತದೆ. ಹಾಗಾಗಿ ತಾವು ಹರಡಿದ ಪ್ರಭಾವಳಿಗಳೇನುಂಟೋ ಅದನ್ನು ಉಳಿಸುವಲ್ಲಿ ಬಹಳಷ್ಟು
ಜನರ ವೈಫಲ್ಯವನ್ನು ಕಾಣಬಹುದು. ಇದಕ್ಕೆ ಹಲವು ಕಾರಣಗಳಿರಬಹುದು. ವಯೋಸಹಜವಾದ ದೈಹಿಕ
ದೌರ್ಬಲ್ಯಗಳು ಹಲವು ಸಲ ಕಾರಣವಾದರೆ ಕೆಲವೊಮ್ಮೆ ಸ್ವಯಂಕೃತ ಅಪರಾಧಗಳು ವಾಸ್ತವದ
ಪ್ರತಿಬಿಂಬವಾಗುತ್ತದೆ. ಹಾಗಾಗಿ ಹಾಡುಗಾರಿಕೆಯ ಸೆಳೆತ ಸ್ಥಿರವಾಗಿ ನಿಲ್ಲುವುದಿಲ್ಲ. ಪದ
ಕೇಳುವಾಗ ಮನಸ್ಸು ಆನಂದಿಸುತ್ತದೆ ಆದರೆ ಸಂತೃಪ್ತಿಯನ್ನು ಅನುಭವಿಸುವುದಿಲ್ಲ. ಛೇ ಅಂದಿನ ಹಾಗೆ
ಇಲ್ಲ ಎಂದು ಪರಿತಪಿಸುತ್ತದೆ. ಆದರೆ ಬಲಿಪ
ಗಾನದಲ್ಲಿ ಇದು ಅಪವಾದವಾಗುವುದು ಅವರು ನಡೆದು ಬಂದ ಹಾದಿಯೇ ಕಾರಣವಾಗುತ್ತದೆ. ದಶಕದ ಮೊದಲು ಕೇಳಿದ ಪದ ಹಾಡುಗಾರಿಕೆ ಅದೇ
ಮಾರ್ದವತೆಯನ್ನು ಈಗಲೂ ಉಳಿಸಿಕೊಂಡಿದೆ. ವಯಸ್ಸು ಕಾಲ ಎಲ್ಲವೂ ಈ ಮಾಧುರ್ಯತೆಯ ಎದುರು
ಸೋಲುತ್ತವೆ. ದಶಕದ ಹಿಂದೆ ಹೇಗೆ ಬಲಿಪ್ಪಜ್ಜನ ಪದ ಕೇಳುವಂತೆ ಈಗಲೂ ಅದೇ ಶ್ರದ್ಧೆಯಿಂದ ಪದವನ್ನು
ಕೇಳುವಂತೆ ಮಾಡುತ್ತದೆ. ಆ ಪದ ಹೃದ್ಯವಾಗಿ ತಾಲ ಬಡಿಯುತ್ತಾ ಇರುತ್ತದೆ. ಸ್ವರ ಮಾಧುರ್ಯದ ಆಕರ್ಷಣೆ ಅಂದು ಹೇಗಿತ್ತೋ ಇಂದು ಹಾಗೇ
ಸ್ಥಾಯೀಯಾಗಿ ಉಳಿದು ಮತ್ತು ಮತ್ತು ಅಪ್ಯಾಯತೆಯನ್ನು ತೃಪ್ತಿಯನ್ನು ಒದಗಿಸುತ್ತದೆ.
ಒಬ್ಬ ಕಲಾವಿದ ಹೇಗಿರಬೇಕೋ ಅದು ಇಲ್ಲಿ
ಸಾಕ್ಷಿಯಾಗುತ್ತದೆ. ಸ್ಥಾನ ಮಾನ ಪ್ರಸಿದ್ಧಿ
ಸಂಪತ್ತು ಹೀಗೆ ಕಲಾವಿದ
ಅಮಿತವಾಗಿ ಗಳಿಸಬಹುದು. ಆದರೆ ಅದು ಶಾಶ್ವತವಾಗಬೇಕಾದರೆ ಅವನಲ್ಲಿರುವ ಕಲೆ ಮಾತ್ರಾ
ಸಾಕಾಗುವುದಿಲ್ಲ. ಅದಾವುದೂ ಅಲ್ಲದ ಇನ್ನೊಂದು ಅಲ್ಲಿರಬೇಕು ಅನ್ನಿಸುತ್ತದೆ. ಆವಾಗ ಬಲಿಪ್ಪರ ಮುಖ
ನೆನಪಿಗೆ ಬರುತ್ತದೆ. ಅಂದಿನ ಶ್ರದ್ದೆ ಇಂದು ಮತ್ತಷ್ಟೂ ಬಲವಾಗಿ ಹಲವು ಸಲ ಶಾರೀರಿಕ ಬಲವನ್ನು
ಸೋಲಿಸಿ ಮುಂದೆ ಸಾಗುತ್ತದೆ. ಹಾಗಾಗೀಯೇ ಬಲಿಪ್ಪಜ್ಜ ಇಂದು ಚಲಾವಣೆಯ ನಾಣ್ಯವಾಗಿಬಿಡುತ್ತಾರೆ.
ಇಂದಿಗೂ ಜಾಗಟೆ ಕೋಲು ಹಿಡಿದು ಸ್ವರ ಏರಿಸಿದರೆ ಮತ್ತೆಲ್ಲ ಸದ್ದು ಸ್ವಯಂ ಮೌನವಾಗುತ್ತದೆ. ಹಲವು ಕಲಾವಿದರು ಬರುತ್ತಾರೆ, ಮೆರೆದು ಆಳುತ್ತಾರೆ
ಸಂಭ್ರಮವನ್ನು ಆಚರಿಸಿ ನಂತರ ಇನ್ನಿಷ್ಟೇ ಎಂದು ಅಲ್ಪವಿರಾಮ ಎಳೆದು ಹಳೆಯದರ ನೆರಳಲ್ಲೆ
ಅಸ್ತಿತ್ವವನ್ನು ಗುರುತಿಸುವಲ್ಲಿ ತೃಪ್ತರಾಗಿಬಿಡುತ್ತಾರೆ. ಆದರೆ
ಸ್ವಯಂ ಕಲಾವಿದ ಎಲ್ಲ ಸಂಭ್ರಮವನ್ನು ಮೀರಿ ನಿಂತರೆ ಕಲೆ ಶಾಶ್ವತವಾಗುತ್ತದೆ. ಬಲಿಪ್ಪರಲ್ಲಿ ಕಾಣಬಹುದಾದ ಅಮೂಲ್ಯ ವಿಷಯಗಳಿವು. ಬಹುಷಃ
ಅವರಿಗೊಲಿದ ಕಲೆಗಿಂತಲೂ ಈ ವಿಚಾರಗಳು ಜೀವನದುದ್ದಕ್ಕೂ ವಿಸ್ತಾರವಾಗಿ ಹಬ್ಬಿದೆ ಎನ್ನಬೇಕು.
ಬಲಿಪ್ಪರು ಹಾಡುತ್ತಾರೆ ಅಲ್ಲಿ ಮೈದುಂಬಿ ಎನ್ನುವ ವಿಶೇಷಣ ಹಚ್ಚಿದರೆ ಅದು ನಮ್ಮ ಅನಿಸಿಕೆ ಅಥವಾ
ನಮ್ಮ ತಿಳುವಳಿಕೆಯ ಕೊರತೆ ಎನ್ನಬೇಕಾಗುತ್ತದೆ. ಯಾಕೆಂದರೆ
ಅವರು ಹಾಡುವುದೇನಿದ್ದರೂ ಅದು ಮೈದುಂಬಿಯೇ ಹಾಡುವುದು. ಅದಲ್ಲದೆ ಬೇರೆ ಅವರಿಗೆ
ತಿಳಿದಿಲ್ಲ. ಕಲೆಯಲ್ಲಿ ಅದೂ ಯಕ್ಷಗಾನದಲ್ಲಿ ಅವರಿಗಿರುವ ಶ್ರದ್ಧೆ ಭಕ್ತಿ ಗೌರವ ಅವರಾಡುವ ಪ್ರತಿ
ಚರಣದಲ್ಲೂ ಪಲ್ಲವಿಯಲ್ಲೂ ಇದ್ದು ಅದು ಗಾನಾಮೃತವಾಗುತ್ತದೆ. ಗಾನ ಅಮೃತವಾಗುವುದೆಂದರೆ ಅದು
ಸರಸ್ವತಿ ಒಲಿದಾಗ. ಆ ಒಲುಮೆ ಅವರಿಗಿದೆ ಎನ್ನುವುದಕ್ಕೆ ಅವರ ದೀರ್ಘವಾದ ಕಲಾಜೀವನವೇ ಸಾಕ್ಷಿ.
ಈಗಲೂ ಹಾಡಿದಾಗ ಅದೇ ಕಂಚಿನ ತರಂಗವನ್ನು ಎಬ್ಬಿಸುತ್ತದೆ. ಹಾಗಾಗಿ ಅನ್ನಿಸುತ್ತದೆ ಸರಸ್ವತಿಯ
ಅನುಗ್ರಹ ಇಲ್ಲಿ ಸ್ಥಿರವಾಗಿ ಉಳಿದಿದೆ ಎಂದು. ಸರಸ್ವತಿಯ
ಒಲುಮೆ ಅನುಗ್ರಹವಾಗುವಾಗ ಅಲ್ಲಿ ಬೊಗಸೆಯೊಡ್ಜಿ ಹಿಡಿಯುವ ಭಿಕ್ಷಾ ಪಾತ್ರವೂ ಶುಭ್ರವಾಗಿರಬೇಕು.
ಪಾತ್ರ ಕಿಲಿಬುದಾರೆ ಅನುಗ್ರಹಿಸಿದ ಅಮೃತವೂ ಹೆಪ್ಪುಗಟ್ಟಿ ಬೆಲೆಯೇ ಇಲ್ಲದಂತಾಗುತ್ತದೆ.
ಬಲಿಪ್ಪರ ದೇಹ ದಣಿದಿರಬಹುದು. ಆ ಕಂಠ ದಣಿಯುವುದಿಲ್ಲ ಇದೆಲ್ಲವನ್ನೂ ಯೋಚಿಸುವಾಗ ಬಲಿಪ್ಪ ಗಾನ ಎಂಬುದು
ನಿತ್ಯಧಾರೆಯಂತೆ ಹರಿಯಿತ್ತಿರಲಿ ನಿಜಾರ್ಥದಲ್ಲಿ ಗಾನ ಸುಧೆಯ ಅಮೃತ ಸಿಂಚನವಾಗಲಿ ಎಂದನಿಸುತ್ತದೆ.


