"ಇದು ವಿಮರ್ಶೆಯಲ್ಲದ ಚಿಂತನ"

Wednesday, September 21, 2016

ಸೀತಾಪಹಾರ ಒಂದು ಪಾತ್ರಚಿತ್ರ........

[ ಸೀತಾಪಹಾರ ಯಕ್ಷಗಾನದ ಒಂದು ಶ್ರೇಷ್ಠ ಪ್ರಸಂಗ. ಪಾರ್ತಿಸುಬ್ಬನಿಂದ ರಚಿತವಾದ ಇದು ಯಕ್ಷಗಾನದಲ್ಲಿ ತನ್ನದೇ ಆಯಾಮವನ್ನು ಪಡೆದುಕೊಂಡಿದೆ. ತಾಳ ಮದ್ದಲೆಗೂ ಯಕ್ಷಗಾನ ಬಯಲಾಟಕ್ಕೂ ಸಹಜವಾಗಿ ಸೂಕ್ತವಾಗುವಂತಹ ಕಥಾನಕವಿದು. ಯಕ್ಷಗಾನ ತಾಳ ಮದ್ದಲೆಯ ಆಧಾರದೊಂದಿಗೆ ಪಾತ್ರವಿನ್ಯಾಸದ ಚಿತ್ರಣವನ್ನು ಬಿಂಬಿಸುವ ಪ್ರಯತ್ನ ಇಲ್ಲಿದೆ. ಇದು ಎಷ್ಟು ಪ್ರಭಾವ ಶಾಲಿಯಾಗುತ್ತದೆಯೊ ಅರಿವಿಲ್ಲ. ಆದರೆ ಯಕ್ಷಗಾನದ ವಾಕ್ ಪ್ರಪಂಚದಲ್ಲಿನ ವೈಶಿಷ್ಟ್ಯವೆಂದರೆ ಅದು  ಅದ್ಭುತರಮ್ಯ.   ಕೇವಲ ಧ್ವನಿ ಮಾತ್ರದಿಂದಲೇ ಯಕ್ಷಲೋಕದ ರಸಸೃಷ್ಟಿಯಾಗಿ ಕಣ್ಣೆದುರಿಗೇ ರಸವೃಷ್ಟಿಯಾದ ಅನುಭವವಾಗುತ್ತದೆ. ಈ ವಾಙ್ಮಯ ಪ್ರಪಂಚದ ಪರಿಧಿ ಯಕ್ಷಗಾನದ ಸೀಮೆಯನ್ನು ದಾಟಿ ಮುಂದೆ ಹೋಗಲೆಂಬ ಆಶಯವಿದು. ಯಕ್ಷಗಾನದ ಶ್ರೇಷ್ಠ ಅರ್ಥಧಾರಿಗಳಾದ ಶ್ರೀ ಶೇಣಿ ಗೋಪಾಲ ಕೃಷ್ಣಭಟ್ಟರ  ರಾವಣನ ಅರ್ಥಗಾರಿಕೆ ಯ ಸ್ಥೂಲ ಪರಿಚಯ ಇಲ್ಲಿದೆ.  ಅದನ್ನು ಬರಹ ರೂಪಕ್ಕೆ ಇಳಿಸುವುದು ಒಂದು ಬೃಹತ್ ಸಾಹಸದಂತೆ ಭಾಸವಾಗುತ್ತದೆ. ]
 ದಂಡಕಾರಣ್ಯದಲ್ಲಿನ ಒಂದು ಶೃಂಗಾರ ಕಥೆ ಶೂರ್ಪನಖಿಯ ಪಾಲಿಗೆ  ಅಂತ್ಯವಾಗುವುದು ದುಃಖಾಂತದಲ್ಲಿ. ತನ್ನ ಕಪಟ ವಂಚನೆಯ ಹಾದಿ ಹೀಗೆ ದುರಂತವನ್ನು ಕಂಡು ಆಕೆಯಲ್ಲಿ  ಹತಾಶೆ ಭುಗಿಲೇಳುತ್ತದೆ. ಆಗ ಆಕೆಯೊಂದು ಮಾತು ಹೇಳುತ್ತಾಳೆ,
 “ ಈ ಕಥೆ ಸುಖಾಂತದಲ್ಲಿ ಅಂತ್ಯ ಕಂಡು ಸುಖವನ್ನು ಕಾಣಬೇಕು ಅಂದುಕೊಂಡೆ, ಆದರೆ ಅದು ಹಾಗಾಗಲಿಲ್ಲ, ಮತ್ತೆ ದುಃಖಾಂತ್ಯದಲ್ಲಿ ನಾನು ಸುಖ ಕಾಣಬೇಕಿದೆ. ಆದರೆ ಆ  ದುಃಖಾಂತ ಹೀಗಲ್ಲ ಅದು ರಾಮನ ಪಾಲಿಗೆ ದುಃಖಾಂತ್ಯವವಾಗಬೇಕು. ಇಲ್ಲಾ ನನ್ನಣ್ಣ ರಾವಣನ ಪಾಲಿಗಾದರೂ ಆದೀತು” 
ಹೀಗೆ ಎರಡು ಬಗೆಯ ದುಃಖಾಂತದಲ್ಲಿ ಸುಖವನ್ನು ಕಾಣುವ ಹಂಚಿಕೆ ಆಕೆಯದ್ದು. ಹಾಗಾಗಿ ಕರ್ಣ ನಾಸಗಳನ್ನು ಕಳೆದುಕೊಂಡ ಧೂರ್ತೆ ಲಂಕೆಯನ್ನು ಪ್ರವೇಶಿಸುತ್ತಾಳೆ.
ಯಕ್ಷಗಾನದ ಅತ್ಯಂತ ಜನಪ್ರಿಯ ಪ್ರಸಂಗ ’ ಸೀತಾಪಹಾರ ’ ಆರಂಭವಾಗುವುದು ಇಲ್ಲಿಂದ. ಪಾರ್ತಿಸುಬ್ಬನ ಈ ಪ್ರಸಂಗ ಹಲವು ಬಗೆಯಲ್ಲಿ ಹಿತವಾಗುತ್ತದೆ. ಅದರ ಸನ್ನಿವೇಶ ಚಿತ್ರಣ, ಪಾತ್ರ ಚಿತ್ರಣ ಅದಕ್ಕೆ ಒಪ್ಪುವಂತಹ ಹೃದ್ಯವಾಗುವ ಮಧುರ ಛಂದಸ್ಸಿನ  ಪದಗಳು ಯಕ್ಷಗಾನಕ್ಕೆ ಭದ್ರ ಅಡಿಪಾಯವನ್ನು ನಿರ್ಮಿಸುವಲ್ಲಿ ಸಹಾಯವಾಗಿದೆ ಎನ್ನಬಹುದು.
ರಾವಣನಿಗೆ ತನ್ನ ಕರ್ಣ ನಾಸಾಛ್ಚೇದಿತ ಮುಖವನ್ನು ತೋರಿಸುತ್ತಾಳೆ. ಇಂತಹ ಸನ್ನಿವೇಶವೊಂದರಲ್ಲಿ ರಾವಣನಾಗಿ ಶೇಣಿ ಗೋಪಾಲ ಕೃಷ್ಣ ಭಟ್ಟರು ಆತಂಕವನ್ನು ತೋರಿಸುವ ರೀತಿ ಬಹಳ ವಿಚಿತ್ರವಾಗಿದೆ. ಅದರಲ್ಲಿ ಎರಡು ಬಗೆಯ ಭಾವಗಳನ್ನು ತೋರಿಸುತ್ತಾರೆ. ಬಹಳಷ್ಟು ವ್ಯಂಗ್ಯಭಾವವೇ ಇಲ್ಲಿ ವ್ಯಕ್ತವಾಗುತ್ತದೆ. ಗಂಡ ವಿದ್ಯುಜ್ಜೀವ ತನ್ನಿಂದ ಹತನಾದ, ಇನ್ನು ತನ್ನ ಮುಖ್ಯವಾದ ಅಂಗಗಗಳನ್ನು ಸ್ವತಃ ಇವಳೇ ಕಳೆದುಕೊಂಡಳು. ಯಾಕಾದರೂ ಕಳೆದು ಹೋಯಿತು?  ರಾವಣ ಇಲ್ಲಿ ಅಭಿವ್ಯಕ್ತಿಸುವ ಭಾವ ಬಹಳ ವಿಶಿಷ್ಟವಾಗುತ್ತದೆ. “ ನಿನ್ನ ಮೂಗು ಹೋದ ಮುಖನೋಡಿದರೆ ಮೂಗು ಇದ್ದವರು ಸುಮ್ಮನೆ ಕುಳಿತಾರ ಹೇಳು?  ಒಂದೊ ತನ್ನ ಮೂಗು ಹಿಡಿಬೇಕು,  ಇಲ್ಲಾ ಮುಖತೋರಿಸದೇ ಇರಬೇಕು”  ಕನಿಕರವೋ ವ್ಯಂಗ್ಯವೋ ಅಥವಾ ಹರುಷವೋ ರಾವಣನ ವ್ಯಕ್ಕ್ತಿತ್ವವೇ ಹಾಗಿರುತ್ತದೆ.   ಆದರೆ ತಂಗಿ ಇದನ್ನು ಅರಿಯದವಳೇನಲ್ಲ.  ಅದಕ್ಕಾಗಿ ತನ್ನ ದಯನೀಯಾವಸ್ಥೆಯನ್ನು ರಾವಣನ ಅಂತಃ ಪುರದ ದೌರ್ಬಲ್ಯದ  ಪ್ರಚೋದನೆಗೆ ಉಪಯೋಗಿಸುತ್ತಾಳೆ.  ಈ ಹಂಚಿಕೆಯಲ್ಲೇ ಆಕೆಯ ಲಂಕಾಪ್ರವೇಶವಾಗಿರುತ್ತದೆ.
ರಾಜಕೀಯವಾಗಿಯೂ ಸಾಂಸಾರಿಕವಾಗಿಯೂ ದೂರವಿಡಬೇಕೆಂದು ಬಯಸಿದ್ದು ಪುನಃ ಎದುರಿಗೇ ಪ್ರತ್ಯಕ್ಷವಾದಾಗ ರಾವಣ ಅಸಹ್ಯ ಪಟ್ಟರೂ ಮತ್ತಷ್ಟೂ ಅಸಹ್ಯವಾಗುವುದು ತಂಗಿಯ ಮುಖ ಎದೆಯನ್ನು ಕಂಡಾಗ. ಹಾಗಾಗಿಯೇ ತಾತ್ಸಾರದಲ್ಲೇ ಕೇಳುತ್ತಾನೆ ಏನು ಬಡಿಯಿತು ಮಾರಿ ನಿನಗೆ?
ಏನು ಹೊಡೆಯಿತು ಮಾರಿ ತಂಗಿ ನಿನಗೆನುತ
ದಾನವರ ಅರಸ ಬೆಸಗೊಂಡ ನಸುನಗುತ
ಊನವನು ತಂದೆ ಖಳವಂಶಕ್ಕೆ ನೀನು
ಮಾನಭಂಗವನೆಸಗಿದವನ ಪೆಸರೇನು
ಕಿವಿ ಮೂಗು ಹೋದದ್ದು ಬಹಿರಂಗದಲ್ಲಿಯಾದರೂ ಆ ಕಥೆ,  ಅದನ್ನು ಬಹಿರಂಗದಲ್ಲಿ ಕೇಳುವಂತಿಲ್ಲ. ಹಾಗಾಗಿ ಅಂತರಂಗದಲ್ಲಿ ಕೇಳುವ ಎಂದು ತಂಗಿಯನ್ನು ಒಳಗೆ ಕರೀತಾನೆ. ರಾವಣ ಆಕಂಪನ ನಿಂದ ಮೊದಲೇ ವಾರ್ತೆಯನ್ನು ಕೇಳಿ ತಿಳಿದಿದ್ದರೂ ತಂಗಿಯಿಂದ ಇನ್ನೂ ಕೇಳುವ ಬಯಕೆ.
ಪಂಚವಟಿಯಲ್ಲಿ ಇಬ್ಬರು ಹುಡುಗರು, ನೋಡಲಿವರು ಬಾಲಕರು ಆದರೆ ಅಸಮ ಸಾಹಸಿಗರು. ಇವರು  ದಶರಥನ ಮಕ್ಕಳು ರಾಮಲಕ್ಷ್ಮಣರೆಂಬ ಇವರಿಗೆ ಭೂಮಿಯೊಳಗೆ ಸರಿಸಮಾನರು ಯಾರೂ ಇಲ್ಲ. ಅಂತಹ ಪರಾಕ್ರಮಿಗಳು.  ಪರಾಕ್ರಮಿಗಳ ಬಳಿಗೆ ದಶಕಂಠನ ತಂಗಿ  ಹೋಗುವ ಉದ್ದೇಶವಾದರೂ ಏನು? ರಾವಣ ಕುತೂಹಲದಿಂದಲೇ ಆಲಿಸುತ್ತಾನೆ. ರಾಜಕಾರಣದ ಕುಟಿಲತೆಯೇ , ಅಥವಾ ಸಹಜವಾದ ರಾಕ್ಷಸೀ ಚಾಂಚಲ್ಯವೇ?  ಮಂಡೋದರಿಯಂತಹ ಸತಿಯಿದ್ದೂ ಪ್ರಪಂಚದ ಸುಂದರಿಯರು ತನ್ನವರಾಗಬೇಕೆಂಬ ಚಪಲ ತನಗಿದ್ದರೆ, ಪತಿಯಿಲ್ಲದ ತಂಗಿ ವೀರ ಜವ್ವನಿಗರ ಬಳಿಗೆ ಹೋದ ಉದ್ದೇಶ ಅರಿಯದ ಮೂಢನಲ್ಲ. ತಂಗಿಯೂ ತನ್ನಣ್ಣನ ಚಾಪಲ್ಯವನ್ನು ತನ್ನ ಹಂಚಿಕೆಗೆ ಅಡಿಪಾಯವನ್ನಾಗಿಸುತ್ತಾಳೆ.  
ಶೇಣಿಯವರು ಒಂದು ಕಡೆಯಲ್ಲಿ ರಾವಣನಾಗಿ ತಂಗಿಯ ಗಮನಕ್ಕೆ ಹೀಗೆ ಸಂದೇಹವನ್ನು ವ್ಯಕ್ತಪಡಿಸುತ್ತಾರೆ. ಉತ್ತರದ ಸೀಮೆಯಲ್ಲಿ ಖರದೂಷಣಾದಿಗಳನ್ನು ಬಿಟ್ಟದ್ದು ಗಡಿಭದ್ರತೆಗೆ. ಹಾಗಿದ್ದರೂ ರಾಮ ಲಕ್ಷ್ಮಣರು ಬಂದು ಬಿಡಾರ ಹೂಡಿದ್ರು. ಹೋಗಲಿ ನಿನ್ನನ್ನುಅಲ್ಲಿಗೆ ಬಿಟ್ಟದ್ದು ಯಾಕೆ? ಅಣ್ಣಕೊಟ್ಟ ಸ್ವಾತಂತ್ರ್ಯ ಸ್ವೇಚ್ಛೇಯಾಗಿ ಉಪಯೋಗಿಸುವಂತೆ ಪ್ರೇರೆಪಿಸಿದರೇ? ಎಷ್ಟೆಂದರೂ  ಖರದೂಷಣಾದಿಗಳು ಚಿಕ್ಕಮ್ಮನ ಮಕ್ಕಳು. ಜ್ಞಾತಿಗಳು. ಶೂರರಾದ ರಾಮ ಲಕ್ಷ್ಮಣರನ್ನು ಸೇರಿಕೊಂಡು ಈ ರಾವಣನ ಪಟ್ಟಕ್ಕೆ ಬೆಲೆ ಕೇಳುವ ಹುನ್ನಾರವೇ? ಇಲ್ಲವಾದರೆ ಹೆಂಗಸಾದ ನಿನಗೇನಲ್ಲಿ ಕೆಲಸ? ರಾವಣನ ಮತ್ಸದ್ಧೀತನವನ್ನು ತೋರಿಸುವ ಪ್ರಯತ್ನ.
ಮತ್ತಿನ ವಿಶ್ಲೇಷಣೆ ಇನ್ನೂ ವಿಶಿಷ್ಟವಾಗಿದೆ. ತಂಗಿ ಶೂರ್ಪನಖಿ ಹೇಳುತ್ತಾಳೆ. ಸುಂದರಿಯಾದ ಸೀತೆಯನ್ನು ಕಂಡು ತಾನಲ್ಲಿಗೆ ಹೋದೆ. ಆ ಸೌಂದರ್ಯವತಿ ಕಾಡು ಪಾಲಾದ ರಾಮನೊಡನೆ ಕಾಡಿನಲ್ಲಿರುವುದಕ್ಕಿಂತಲೂ ಅಣ್ಣ ರಾವಣನ ಬಳಿಯಿರುವುದು ಲೇಸೆಂದು ತೋರಿತು.   ಆದರೆ ರಾವನ ಹೀಗೂ ಯೋಚಿಸುತ್ತಾನೆ. ಸುಂದರಿಯಾದ ಸೀತೆಗಿಂತಲೂ ಗಂಡುಸಾದ ರಾಮನನ್ನು ಕಂಡು ಹೋದಳೇ? ಸೀತೆ ಕಾಮನರಗಿಣಿಯಂತೆ ಎಂದು ಹೇಳುತ್ತಾಳೆ. ಕಾಮನನ್ನು ಕಂಡಿರಬಹುದೇ ಕಾಮ ದರ್ಶನದಿಂದ ಆಕೆ ಕಾಮಿನಿಯಾಗಿ ಗೋಚರಿಸಿದಳೇ?  ಹೋಗಲಿ ಸೀತೆ ಕಾಮನರಗಿಣಿ ರಾಮ ಹೇಗೆ?  ರಾಮ ಕಾಮನ ಹಾಗಿಲ್ಲ. ಹಾಗದರೆ ಅದನ್ನೂ ಪರೀಕ್ಷೆ ಮಾಡಿದಳೆ? ಇದೊಂದು ರೀತಿ ರಾವಣನಾಗಿ ಶೂರ್ಪನಖಿಯ ಪಾತ್ರ ವಿಶ್ಲೇಷಣೆ ಮಾಡುವ ರೀತಿ. ಶೂರ್ಪನಖಿಯ ಉದ್ದೇಶ ಯಾರಿಗೆ ತಿಳಿದಿಲ್ಲ? ಆದರೂ ಒಂದು ಚೌಕಟ್ಟಿನೊಳಗೆ ಸತ್ಯದ ಕದವನ್ನು ಸ್ಪರ್ಶಿಸುವ ಈ ವಿಶ್ಲೇಷಣೆಯ ಪರಿ ಅದ್ಬುತ.

            ಶೂರ್ಪನಖಿ ಹೇಳುವಂತೆ ರಾವಣನಿಗಾಗಿ ಸೀತೆಯ ಮೇಲೆ ಕೈಯಿಕ್ಕಿದೆ., ಶೂರ್ಪನಖಿಯನ್ನು ಇದೇ ಕೆಲಸಕ್ಕೆ  ರಾವಣ ನೇಮಿಸಿದ್ದಾನೆ ಎಂದು ಲೋಕ ಹೇಳದೇ ಇದ್ದೀತೆ? ಇದು ರಾವಣನ ಯೋಚನೆಯ ಹೊಲಬು.   ಇದರ ಅಂತರಾರ್ಥ ಬಹಳ ಗಹನವಾಗಿರುತ್ತದೆ. ಪರೋಕ್ಷವಾಗಿ ಇಲ್ಲಿ  ತಂಗಿಯ ಉದ್ದೇಶವನ್ನು ವ್ಯಂಗ್ಯವಾಗಿ ಕಾಣುವುದು ಸ್ಪಷ್ಟವಾಗುತ್ತದೆ.  ತ್ರಿಶಿರಾದಿಗಳು ಸತ್ತರು. ಈಕೆ ಅರ್ಧ ಸತ್ತು ರಾವಣನ್ನು ಜೀವಚ್ಚವ ಮಾಡಿಬಿಟ್ಟಳು.  ಇದು ಎಲ್ಲ ಅರ್ಥದಲ್ಲೂ ರಾವಣ ಜೀವಚ್ಚವ ಆದ ಪರಿಯನ್ನು ಹೇಳುವ ಪ್ರಯತ್ನ. ಸ್ರೀಮೂಲದಿಂದ ರಾವಣನ ಮಾನ ತೆಗೆದ ರಾಮ, ಈಗ ತಾನೂ ಅಷ್ಟೇ ಅದೇ ಸ್ತ್ರೀ ಮೂಲವನ್ನು ಹಿಡಿದು ಬಿಡಬೇಕು.  ಹತ್ತಕ್ಕಿಂತ ಹೆಚ್ಚು ವರ್ಷ ಪರ್ಣಕುಟಿಯಲ್ಲಿದ್ದ ರಾಮ ಈವರೆಗೆ ಯಾಕೆ ಸುಮ್ಮನಿದ್ದ? ಹಾಗಾದರೆ ಇದು ರಾಜ ತಾಂತ್ರಿಕತೆ. ಮತ್ಸದ್ದೀತನ. ಬಿಡಬಹುದೇ? ಅದಲ್ಲವಾದರೆ ಶೂರ್ಪನಖಿಯ ಮೂಗು ಮೊಲೆಯನ್ನಷ್ಟೇ ಏಕೆ ಕತ್ತರಿಸಿದ, ತಲೆಯನ್ನೇ ಕತ್ತರಿಸಬಹುದಿತ್ತಲ್ಲ? ಹಾಗಾದರೆ ರಾವಣನಿಗೆ ಪರೋಕ್ಷ ಸಂದೇಶ. ಈ ಬೌದ್ಧಿಕವಾದ ಪಂಥಾಹ್ವಾನಕ್ಕೆ ನನ್ನದೂ ಅದೇ ರೀತಿಯ ಪ್ರತಿಕ್ರಿಯೆ ಕೊಡಬೇಕಲ್ಲ? ಹಾಗಾಗಿ ಅವನ ಹೆಣ್ಣನ್ನು ತರಬೇಕು. ಆ ಹೆಣ್ಣ ನೆವನದಿಂದ ಆತ ನನ್ನ ಬಳಿ ಬರಬೇಕು. ಮೂಗು ಹಿಡೆದೆಳೆದರೆ ಮೈ ಬರ್ತದೆ. ಈಗ ಅದೇ ಅಲ್ವ ಅವನು ಮಾಡಿದ್ದು. ಈಗ ಅವನ ಮೂಗು ನಾನು ಹಿಡಿದೆಳೆಯಬೇಕು. ಆಗ ಅವನು ಬರ್ತಾನೋ ಇಲ್ವೊ ನೋಡೋಣ.
            ರಾವಣ ಸಕಲ ಶಾಸ್ತ್ರ ಪಾರಂಗತ ಆದರೆ, ಹಲವು ದೌರ್ಬಲ್ಯ ಇಲ್ಲ,  ಇರುವುದು ಒಂದೆರಡಾದರೂ ಅದಷ್ಟು ಸಾಕು. ಹೆಣ್ಣಿನ ವಿಷಯಕ್ಕೆ ಬಂದಾಗ ಉಳಿದೆಲ್ಲವನ್ನೂ ಮರೆತು ಬಿಡುತ್ತಾನೆ. ಇದಕ್ಕೆ ರಾವಣ ಕೊಡುವ ವಿಶ್ಲೇಷಣೆ ಹೀಗೆ.  ಹಸಿವಾದವನಿಗೆ ತಾನೆ ಊಟ ರುಚಿಸುವುದು. ಹೌದು ರಾವಣನಿಗೆ ಈ ವಯಸ್ಸಿನಲ್ಲೂ ಆರೋಗ್ಯ ಉಂಟು. ಹೊಟ್ಟೆಯಲ್ಲಿ ಹಸಿವಿಲ್ಲದೇ ಅಗ್ನಿಮಾಂದಿ ಪೀಡಿತನಿಗೆ ಊಟ ಬೇಕು ಅಂತ ಆದೀತೋ.  ಅದೇ ಹಸಿವನ್ನು ಇಲ್ಲಿ ಉಪಯೋಗಿಸುತ್ತಾನೆ.
            ಸೀತೆ, ರಾಮನೇ ಸರ್ವಸ್ವ ಎಂದು ರಾಮನನ್ನು ಕಾಣುವವಳು. ರಾಮನಲ್ಲದೇ ಬೇರೆ ಇಲ್ಲ. ಹಾಗಾದರೆ ಇಲ್ಲಿ ಅದೇ ಪ್ರಶ್ನಾರ್ಹವಾಗಬೇಕು. ಸರ್ವಸ್ವ ಎಂಬಲ್ಲಿಂದ ಅಲುಗಾಡಬೇಕು.  ಅವಳ ಚಿತ್ತವೃತ್ತಿಯನ್ನು ಬದಲಿಸಬೇಕು. ರಾಮ ಪರಿಪೂರ್ಣನಲ್ಲ.  ಎಂದು ಆಕೆ ತೋರಿದರೆ ಆ ಸ್ಥಾನಕ್ಕೆ ಅವಳು ನಮ್ಮತ್ತ ಯೋಚಿಸುವ ಹಾಗೆ ಆಗ್ತದೆ. ಈಗ ರಾವಣನಿಗೆ ನೆನಪಾಗುವುದು ತಪಸ್ಸಿಗೆ ಕುಳಿತ ತನ್ನ ಮಾವ ಮಾರೀಚನದ್ದು. ಹಾಗಾಗಿ ಮಾರಾಂಗ ಶರೀರಿ ಎಂದು ಮಾರೀಚನ ಬಿಡದಿಗೆ ಬಂದು ಸೇರುತ್ತಾನೆ.
ಮಾರೀಚನಿಶಾಚರ ಸಂತತ |  ವೀರಮನೋಹರ ವಿಕ್ರಮಶೌರ್ಯ ||
ಮಾರಾಂಗಶರೀರಮನೋಹರ | ಕಾರುಣ್ಯ ಸಮುದ್ರಗಂಭೀರ||
            ಪುಷ್ಕಳ ಭೋಜನವನ್ನು ಹೊಟ್ಟೆತುಂಬ ಸೇವಿಸಿದವನಿಗೆ ರಸಬಾಳೆಯನ್ನು ತಂದು ಎದುರಿಟ್ಟರೆ ಸೇವಿಸದೆ ಇರುತ್ತಾನೆಯೇ? ರಾವಣನ ಅವಸ್ಥೆ ಹಾಗಾಗಿದೆ.  ಮಂಡೋದರಿಯಂತಹ  ಸುಂದರಿ ಹೆಂಡತಿ ಇರುವಾಗ ಮತ್ತೊಂದು ಹೆಣ್ಣ ಮೇಲೆ ಬಯಕೆ ಹುಟ್ಟಿದೆ. ಈಗ ರಸಬಾಳೆ ಹಣ್ಣು ಎದುರಿಗೆ ತಂದಿಟ್ಟಾಗಿದೆ. ಹೀಗೆ ರಾವಣ  ಮಾರೀಚನಿಗೆ ತನ್ನ ಆಗಮನದ ಉದ್ದೇಶವನ್ನು ತಿಳೀಸುತ್ತಾನೆ. ಶೂರ್ಪನಖಿಗೆ ಕಂಡ ಸೌಂದರ್ಯವೇ ರಾವಣನಿಗೆ ಕಾಣಬೇಕೆಂದಿಲ್ಲವಲ್ಲ? ಇನ್ನೂ ಏನೋ ವಿಶಿಷ್ಟವಾದದ್ದು ಅಲ್ಲಿದೆ. ಹಾಗಾಗಿ ಹಿಂದೆಯೂ ಇಲ್ಲದ ಮುಂದೆಯೂ ಇಲ್ಲದ ಒಂದು ಮಾಯೆ ಕೇವಲ ಮಾಯೆ ವರ್ತಮಾನದಲ್ಲಿ ಸೃಷ್ಟಿಯಾಗಬೇಕು. ಅದು ಕೈಗೆ ಸಿಕ್ಕಿಯೂ ಸಿಗದಂತೆ ಇರಬೇಕು. ಅಂತಹ ಒಂದು ಮಾಯಾಜಿಂಕೆ ಮಾವ ಮಾರೀಚನಾಗಬೇಕು.  ಆಗ ಸೀತೆಗೆ ಅದರಲ್ಲಿ ಮೋಹ ಹೆಚ್ಚಾಗುತ್ತದೆ. ಆಕೆಯ ಬಯಕೆ ಪೂರೈಸುವುದಕ್ಕೆ ರಾಮ ಲಕ್ಷ್ಮಣರು ಮುಂದಾಗುತ್ತಾರೆ. ಆಗ ಸೀತೆಯನ್ನು ಅಪಹರಿಸಿಬಿಡುತ್ತೇನೆ. ರಾಮನಂತಹ ಪರಿಪೂರ್ಣನಿದ್ದೂ ಸೀತೆಗೆ ಮತ್ತೊಂದನ್ನು ಕಾಣುವಾಗ ಬೇಕು ಅಂತಾಗುತ್ತದೆ ಎಂದಾದರೆ ರಾವಣನಿಗೆ ಬಯಕೆ ಹುಟ್ಟುವುದರಲ್ಲಿ ತಪ್ಪೆನು? ಇದು ರಾವಣನ ಸಮರ್ಥನೆ.
            ರಾವಣನ ಮನಸ್ಸು ದುಷ್ಟ ಪ್ರಚೋದನೆಗೆ ಒಳಗಾಗಿರುವುದೇ ದೇವತೆಗಳ ಷಡ್ಯಂತ್ರದಿಂದ. ಇದನ್ನು ಮಾರೀಚ ಮನಗಾಣುತ್ತಾನೆ. ಹಿಂದೆ ಮಾಹೆಂದ್ರ ಲೋಕವನ್ನು ಕೈವಶ ಇಟ್ಟ ಶೂರಪದ್ಮನಿಗೂ ಇದೇ ಆಗಿರುತ್ತದೆ. ಈಗ ಮೂರುಲೋಕವನ್ನೂ ಗೆದ್ದ ರಾವಣನಿಗೂ ಇದೇ. ಹಾಗಾಗಿ ಮಾರೀಚ ನಿರಾಕರಿಸುತ್ತಾನೆ. ಪರರ ಪತ್ನಿಯನ್ನು ಬಯಸುವುದು ತಪ್ಪು. ಮಾತ್ರವಲ್ಲ ರಾಮ ಬಹಳ ಪರಾಕ್ರಮಿ, ತಾಟಕಿಯನ್ನು ಕೊಂದಂತಹ ರಾಮ , ತನ್ನನ್ನೂ ಬಿಡದ  ಸ್ವಾನುಭವವವನ್ನು ಹೇಳುತ್ತಾನೆ. ಎಲ್ಲಕ್ಕಿಂತ ಮಿಗಿಲಾಗಿ, ಶ್ರೀಮನ್ನಾರಾಯಣನೇ ಭೂಮಿಗಿಳಿದು ಬಂದಂತಹ ಭಗವಂತನ ಅವತಾರ. ರಾಮ ನಾರಾಯಣನಾದರೆ ಸೀತೆ ಯಾರು? ಹಾಗಾಗಿ ಈ ಪವೃತ್ತಿಯಿಂದ ದೂರ ಸರಿಯುವುದು ಒಳ್ಳೆಯದಲ್ಲವೆ?  
            ಪ್ರತಿಯಾಗಿ ರಾವಣನ ತರ್ಕ ಹೀಗಿದೆ. ರಾಮ ತಾಟಕಿಯನ್ನು ಸಂಹರಿಸಿರಬಹುದು. ಅಸೀಮ ಪರಾಕ್ರಮಿ ಇರಬಹುದು. ಅದನ್ನು ತಿಳಿದೇ ಆತನಿಗೆ ಎದೆಯೊಡ್ಡಿಸಿ ನಿಲ್ಲುವುದರ ಬದಲಾಗಿ ತಮಗೆ ಸರಿ ಎನಿಸಿದ ಮಾಯಾವಿದ್ಯೆಯ ಪ್ರಯೋಗ. ಇದು ನಮ್ಮ ತಂತ್ರ. ಇನ್ನು ಪರ ಪತ್ನಿಯನ್ನು ಬಯಸುವುದು ಅಪರಾಧ, ಇದು ರಾಮನಿಗೆ ಸಂಬಂಧಿಸಿ ಸರಿ ಎಂದನಿಸುವುದಿಲ್ಲ. ಮತ್ತೊಬ್ಬರ ಹೆಂಡತಿಯನ್ನು ಕೂಡಬಹುದು ಎಂದು ತೋರಿಸಿಕೊಟ್ಟ ದೇವೆಂದ್ರನನ್ನೇ ಆರಾಧನೆ ಮಾಡಿ ವರರೂಪವಾಗಿ ಹುಟ್ಟಿದ ಮಗ  ರಾಮ, ಅಂಥವರನ್ನು ದೇವರೂ ಎಂದು ಪೂಜೆಮಾಡುವ ಜನಕ್ಕೆ ಮತ್ತೊಬ್ಬನ ಹೆಂಡತಿಯನ್ನು ಮುಟ್ಟಬಾರದು ಎಂಬ ನ್ಯಾಯ ಸರಿಯೆ? ದೇವೇಂದ್ರ,  ಗೌತಮನ ಆಶ್ರಮಕ್ಕೆ ಹೋದ. ನಾನು ಸೀತೆಯನ್ನು ಇಲ್ಲಿಗೇ ತೆಕ್ಕೊಂಡು ಬರುತ್ತೇನೆ. ಈ ತತ್ವ ರಾಮನಿಗೂ ಒಪ್ಪಿಗೆ ಇದೆ. ಹೇಗೆ? ದೇವೆಂದ್ರ ಕೆಡಿಸಿದರೂ,  ಆಕೆ ಕೆಡಲಿಲ್ಲ ಪರಮ ಪವಿತ್ರಳು ಎಂದು ಮಾಡಿ ತೋರಿಸಿ ಮತ್ತೆ ಮುದುಕ ಮುದುಕಿಯರನ್ನು ಜತೆ ಸೇರಿಸಲಿಲ್ಲವೆ? ನಾರಾಯಣ ರಾಮನಾಗಿ ಭೂಮಿಗಿಳಿದು ಬಂದ. ಅಂದರೆ, ನಾನು ನನ್ನ ಅರಮನೆ ಬಿಟ್ಟು ಹೀಗೆ ಸಂಚಾರಕ್ಕೆ ಇಳಿದ ಹಾಗೆ. ತಿರುಗಾಟ ಎಂದಮೇಲೆ ಅಷ್ಟಿಷ್ಟು ಸಂಗ್ರಹ ಆಗ್ತದೆ. ಹಾಗೆ, ರಾವಣನಿಗೆ ಬಹಳಷ್ಟು ಸಂಗ್ರಹ ಆಗಿದೆ. ರಾಮನಿಗೂ ಹಾಗೆ, ನಾರಾಯಣ ಹುಟ್ಟಿ ಬರಲಿ, ಆದರೆ ಅವನಿಗೆ ಜನ್ಮವನ್ನು ಕೊಟ್ಟಂತಹ ದಶರಥ ಮೊದಲೇ ವೈಕುಂಠದಿಂದಲೋ ಕೈಲಾಸದಿಂದಲೋ ಇಳಿದುದಲ್ಲವಲ್ಲ? ಇಲ್ಲಿ ಬಂದ ಮೇಲೆ ರಾಮನಿಗೆ ಹೆಂಡತಿಯಾದಳು ಸೀತೆ.  ಅವಳೂ ಹಾಗೆ ರಾಮನಿಗೆ ಸಂಚಾರ ಕಾಲದಲ್ಲಿ ಸಿಕ್ಕಿದ ಒಂದು ಸಂಗ್ರಹ.
ಸಾಕೆಲವೊ ಬಲ್ಲೆನು ನಾನು | ಏಕವರನು ಕೊಂಡಾಡುವೆಯಾ ||
ನಾ ಕೊಲ್ಲುವೆ ನೀ ಪೋಗದಿರೆ | ಎನೆ | ತಾ ಕೈಮುಗಿದೈದುವೆನೆಂದ|| 
ಮಾರೀಚನನ್ನು ಮರುಳು ಮಾತುಗಳಲ್ಲಿ ಒಪ್ಪಿಸುವುದಕ್ಕೆ ನೋಡುತ್ತಾನೆ. ಮಾರೀಚ ಆಕ್ಷೇಪಿಸಿದಾಗ ಮತ್ತೆ ರಾಜಾಜ್ಜೆಯ ಬೆದರಿಕೆ ಹಾಕುತ್ತಾನೆ.  ಹೋಗದೇ ಇದ್ದಲ್ಲಿ ತಲೆ ಕಡಿಯುತ್ತೇನೆ. ಎಂದು ಆರ್ಭಟಿಸುತ್ತಾನೆ.
 “ಪೋಗುವೇ ದಮ್ಮಯ್ಯ ನಿನ್ನಯ ಕೈಲಿ ಪೆಟ್ಟು ತಿಂದು ಸಾವುದಕಿಂತ...” ಎಂದು ಮಾರೀಚ ಸ್ವರ್ಣ ಜಿಂಕೆಯಾಗಿ ನರ್ತಿಸಲು ಅಣಿಯಾಗುತ್ತಾನೆ. ರಾವಣನ ಕೈಯಲ್ಲಿ ಶಿವಾನುಗ್ರಹದ ಚಂದ್ರಹಾಸ ವಿದ್ದರೂ ಅದರಿಂದ ಸಾಯುವುದಕ್ಕಿಂತ ರಾಮನ ಬಾಣದಲ್ಲಿ ಹತನಾಗಿ ಸಾಯುಜ್ಯವನ್ನು ಸೇರುವುದು ಒಳಿತು. ರಾವಣನ ಕೈಯಲ್ಲಿ ಸತ್ತರೆ ಮತ್ತೂ ನರಕಕ್ಕೆ ಹೋಗಬೇಕಾದೀತು. ಇಲ್ಲಿ ಆಯುಧ ಮುಖ್ಯವಲ್ಲ ಅದನ್ನು ಪ್ರಯೋಗಿಸುವ ವ್ಯಕ್ತಿ ಮುಖ್ಯನಾಗುತ್ತಾನೆ.  ಮಾರೀಚ ರಾವಣನ ಯೋಗ್ಯತೆಯನ್ನು ಮೊದಲೇ ಅಳೆದುಬಿಡುತ್ತಾನೆ. ಮಾರೀಚಂ ಮೃಗವಾಗಿ ಪಂಚವಟಿಗಂ ಬಂದಾಗಲೋಲಾಡಲುಂ
ಸೌರಮ್ಯಾತಿಶಯಪ್ರಧಾನಕರಮಂ ಕಂಡಾಗಳಾ ಜಾನಕೀ |
ಚೋರತ್ವಂಗಳ ಮಾಯದಾಕೃತಿಯಿದೆಂದಾಕಾಂತೆ ತಾ ಕಾಣದೆ
ಭೂರೀ ವಿಸ್ಮಿತೆಯಾಗಿ ಕಾಂತನೊಡನಂ ತಾ ದೈನ್ಯದಿಂತೆಂದಳು |
            ತಮ್ಮ ಪರ್ಣಕುಟಿಯ ಎದುರು ತನ್ನಂಗ ದಿನ್ನಂಗ ಎಂದು ಹಾಡಿ ಕುಣಿಯುವ ಮೃಗವನ್ನು ನೋಡಿ ಸೀತೆ ಮರುಳಾಗುತ್ತಾಳೆ.  ಎಂದೂ ರಾಮನಲ್ಲದೇ ಬೇರೇನನ್ನೂ ಬಯಸದ ಸೀತೆ ಇಲ್ಲಿ ಮೃಗವನ್ನು ಬಯಸುತ್ತಾಳೆ. ಅದು ರಾಕ್ಷಸ ಮಾಯೆ ಎಂದು ರಾಮ ಹೇಳಿದರೂ ಆಕೆ ತೃಪ್ತಳಾಗುವುದಿಲ್ಲ.  ರಾಮ ಹೇಳುತ್ತಾನೆ. “ ನಿನ್ನ ಎಣಿಕೆಯಂತೆ ಅದು  ಸ್ವರ್ಣ ಚಿಂಕೆ.  ನನ್ನೆ ಊಹನೆಯಂತೆ ಅದು ರಾಕ್ಷಸರ ಮಾಯೆ. ರಾಕ್ಷಸರ ಮಾಯೆ ಎಂದು ತಿಳಿದ ನಾನು,  ಆಸ್ವರ್ಣ ಜಿಂಕೆಗೆ ಬಾಣ ಬಿಟ್ಟರೆ ಅದು ಸತ್ತರೆ, ಆದರೂ ಆ ಜಿಂಕೆ ಬೇಕಾ?”
ಕೆಟ್ಟ ಮೇಲೇ ಬುದ್ಧಿ ಬರುವುದು ನೀ ಗಂಟ | ಕಟ್ಟಿಕೊ ಸೆರಗಿನಲಿ ||
ದಿಟ್ಟೆ ಹೆಂಗುಸು ಇವಳಾಡುವ ಮಾತಿಗೆ | ಲಕ್ಷ್ಮಣ ಸಾಕ್ಷಿ ನೀನು||
            ಸೀತೆಯ ಮನದಿಂಗಿತದ ಆಳವನ್ನು ತಿಳಿಯುವ ಹಂಚಿಕೆ ಶ್ರೀರಾಮನದ್ದು. ಮತ್ತು ಆ ಹಂಬಲ ಸೀತೆಯಲ್ಲಿ ಉಂಟಾಗಬೇಕಾದರೆ ಕಾರಣವೇನು? ಕಾಲದ ಪ್ರಭಾವವೇ? ಉದಿಸುವ ಸೂರ್ಯನು ನಮ್ಮಲ್ಲೆಲ್ಲ ಹೊಸ ಭಾವನೆಗಳನ್ನು ಹುರಪನ್ನು ತಂದರೂ ಗೂಬೆ, ಅದಕ್ಕೆ ಸೂರ್ಯ ಉದಿಸುವುದು ಬೇಕಾಗಿಲ್ಲ. ಅದು ಕತ್ತಲನ್ನೇ ಬಯಸುತ್ತದೆ . ಅಂದರೆ ಕಾಲ ನಮ್ಮಲ್ಲಿ ಒಂದು ಪ್ರಭಾವ ಬೀರಿದರೆ ಗೂಬೆಯ ಮೇಲೆ ಇನ್ನೊಂದು ಪ್ರಭಾವವನ್ನು ಬೀರುತ್ತದೆ.  ಜೀವ ಸಹಿತ ತರಲು ಆಸಾಧ್ಯವಾದಲ್ಲಿ ಸೀತೆ ಅದನ್ನು ಬಯಸಿಯಾಳೆ.? ಒಂದು ವೇಳೆ ಬಯಸದೇ ಇದ್ದಲ್ಲಿ, ರಾಕ್ಷಸರ ಮಾಯೆ ವ್ಯರ್ಥವಾಗುತ್ತದೆ. ಆದರೂ ರಾಮನಂದಂತೆ  ಕಾಲದ ಪ್ರಭಾವ ಹೇಗಿರುತ್ತದೆ. ಸೀತೆಯ ಬಯಕೆಯನ್ನು ಕೇಳಿ ಆಶ್ಚರ್ಯವಾಗುತ್ತದೆ. ಸತ್ತರೂ ಸರಿಯೇ ತನಗೆ ಆ ಜಿಂಕೆ ಬೇಕು ಎನ್ನುತ್ತಾಳೆ. ಅದರ ಚರ್ಮದ ಕಂಚುಕವನ್ನು ಮಾಡಿ ಧರಿಸುತ್ತೇನೆ ಎನ್ನುತ್ತಾಳೆ. ಆಶ್ಚರ್ಯವಾಗುತ್ತದೆ.  ಸೀತೆಯ  ಬಯಕೆ ಅದೆಷ್ಟು ಕಾಲಪ್ರಭಾವಕ್ಕೆ ಒಳಗಾಗಿರುತ್ತದೆ  ಎಂದರೆ ಸೀತೆಯಂತಹ ಸೌಮ್ಯ ಹೆಣ್ಣು, ಹಿಂಸಾ ಪ್ರವೃತ್ತಿಯೊಂದು ಆಕೆಯ ಮನೋಭಾವದಲ್ಲಿ ಕಾಣುತ್ತದೆ.   ಜೀವ ಹೋದರೂ ಆ   ಸತ್ತ ಜಿಂಕೆಯಾದರೂ  ಹಂಬಲಿಸುತ್ತಾಳೆ .  ರಾಮ ಬಾಣ ಪ್ರಯೋಗಿಸಿ ಮೃಗ ಸತ್ತರೂ  ಶಕ್ಯವಿಲ್ಲ. ತನಗೆ ಆ ಜಿಂಕೆ ಬೇಕೆ ಬೇಕು.  ಪಂಚ ಬಾಣನ ಪಿತನ ಕೇಳು ಎನ್ನುತ್ತಾ ಓಲೈಸುತ್ತಾಳೆ, ಮುನಿಯುತ್ತಾಳೆ ಕೊನೆಗೆ  ಸೀತೆಯನ್ನು ಸಂಪೂರ್ಣ ಬಲ್ಲ ರಾಮನಿಗೆ ಆಶ್ಚರ್ಯವಾಗುತ್ತದೆ. ಕಾಲದ ಪ್ರಭಾವವೇ ಇರಬೇಕು. ಹಾಗಾಗಿ ಲಕ್ಷ್ಮಣನನ್ನು ಕಾಯುವಂತೆ ಹೇಳಿ ಸ್ವರ್ಣ ಮೃಗದ ಜಾಡು ಹಿಡಿಯುತ್ತಾನೆ.

            ರಾಮನಿಗೆ ರಾಕ್ಷಸರ ಮಾಯೆ ಎಂಬ ಅರಿವಿದ್ದರೂ ಸ್ವರ್ಣ ಮೃಗದ ಹಿಂದೆ ನಡೆಯುತ್ತಾನೆ.  ಸೀತೆಯ ಜಿಂಕೆಯ ತುಡಿತ ಅತಿಯಾದಂತೆ ರಾಮ ಕೇವಲ ಮನುಷ್ಯನಾಗಿಯೇ  ವ್ಯವಹರಿಸುತ್ತಾನೆ. ತನ್ನ ಬಾಣ  ಮಾಯೆಯನ್ನು ಗೆಲ್ಲಬಹುದು ಎಂಬ ಆತ್ಮವಿಶ್ವಾಸ. ಆದರೆ ಮಾಯೆಯ ಹೊಲಬು ಅರಿಯಲಾರದೇ ಹೋಗುತ್ತಾನೆ. ಹಾ ...!!! ಲಕ್ಶ್ಮಣಾ .....ಎಂಬ ಕೂಗಿನ ಮರ್ಮವನ್ನೇ ತಿಳಿಯುವುದಿಲ್ಲ. ಒಂದು ವೇಳೆ ಈ ಕೂಗಿನ ಮರ್ಮ ಅರಿಯುತ್ತಿದ್ದರೆ .......ಲಕ್ಷ್ಮಣ ಸೀತೆಯ ರಕ್ಷಣೆಗೆ ರೇಖೆಯನ್ನು ಎಳೆಯುವ ಆವಶ್ಯಕತೆ ಎದುರಾಗುತ್ತಿರಲಿಲ್ಲವೋ ಏನೋ? ಎಲ್ಲವೂ ಕಾಲದ ಪ್ರಭಾವಕ್ಕೆ ಶರಣಾಗುತ್ತವೆ.
            ತನ್ನಣ್ಣನ ಮೇಲೆ ಅದಮ್ಯ ವಿಶ್ವಾಸ ಲಕ್ಷ್ಮಣನಿಗೆ. ಇದನ್ನು ಅತ್ತಿಗೆಯಲ್ಲಿ ಸಾರಿ ಸಾರಿ ಹೇಳುತ್ತಾನೆ. ಆದರೆ ಆ ಅರ್ತಾನಾದ ಸೀತೆಯನ್ನು ವ್ಯಾಕುಲತೆಗೆ ತಳ್ಳುತ್ತದೆ. ಬಹುಶಃ ಕಾಲದ ಪ್ರಭಾವ ಹೀಗೂ ಆಗುತ್ತದೆ. ಎಂದೂ ಪತಿಯ ಆತ್ಮದಂತಿರುವ ಲಕ್ಷ್ಮಣನ ಮೇಲೆ  ಹರಿ ಹಾಯದ, ಸಹನೆಗೆ ಅನ್ವರ್ಥವಾದ ಭೂಮಿಯ ಮಗಳಾಗಿ ಸೀತೆ ಭರ್ತ್ಸನೆಯ ಮಾತುಗಳನ್ನಾಡುತ್ತಾಳೆ ಎಂದರೆ ಕಾಲದ ಪ್ರಭಾವ ಗಾಢವಾಗಿರುತ್ತದೆ.  
ಬಾಲಕ ನಿನ್ನ | ಭಾವವೇನಯ್ಯ | ಶ್ರೀಲಲಾಮ ತಾ | ನಳಿದ ಮೇಲೆನ್ನ ||
ಆಳುವೆನೆಂಬ | ಆಸೆಯಿಂದಲಿ | ಆಲಸ್ಯದಿಂದ | ನೀ | ಕುಳಿತೆ ನಿಶ್ಚಯ ||

ರಾಕ್ಷಸರ ಮಾಯೆಯ ಎದುರು ರಾಮನೂ ಸೋಲುತ್ತಾನೆ ಎನ್ನುವುದಕ್ಕಿಂತ ಕಾಲದ ಪ್ರಭಾವವೇ  ಮಾಯೆಯನ್ನು ಗೆಲ್ಲಿಸುತ್ತದೆ. ಮಾಯೆ ಎಂದರೆ ಇಂದ್ರಜಾಲ. ಅದು ಕ್ಷಣಿಕ. ಅದರಂತೆ ಕಾಲವೂ ಕ್ಷಣ ಕ್ಷಣಕ್ಕೂ ಬದಲಾಗುತ್ತದೆ.
            ಸೀತೆಯ ಏಕಾಂತದಲ್ಲಿ ಸನ್ಯಾಸಿಯ ಪ್ರವೇಶವಾಗುತ್ತದೆ.  ರಾವಣನಿಗೆ ತನ್ನ ತಂತ್ರದ ಬಗ್ಗೆ ಅನುಮಾನವಿತ್ತು. ಆದರೂ ಒಂದು ವಿಶ್ವಾಸ, ದಶರಥನ ಮಕ್ಕಳು, ಹೇಗಿದ್ದರೂ ಕೊನೆ ಘಳಿಗೆಯಲ್ಲಿ ಹೆಂಡತಿ ಮಾತಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ದಶರಥನೂ ಹಾಗೆ....ಈಗ ರಾಮನೂ ಹಾಗೆ. ಅದೇ ಅಪ್ಪನ ಮಕ್ಕಳು. ರಾಮ ಏನು ಹೇಳಿದ ರಾಕ್ಷಸರ ಮಾಯ ಕಾಣೇ...ಕೊನೆಗೆ ಅವಳ ಮಾತಿಗೆ ಕಟ್ಟು ಬಿದ್ದು ಹೊರಟು ನಿಂತ. ಬುದ್ದಿವಂತೆ ಆಕೆ. ಲಕ್ಷ್ಮಣನನ್ನೂ ಕಳುಹಿಸಿದಳು. ಅಯೋಧ್ಯೆ ಬಿಡುವಾಗ ತಾಯಿ ಏನು ಹೇಳಿದಳು, ಲಕ್ಷ್ಮಣಾ ರಾಮ ಎಲ್ಲಿ ಹೋಗ್ತಾನೋ ಅಲ್ಲಿ ಹಿಂಬಾಲಿಸು. ಸೀತೆಯನ್ನು ತಾಯಿಯ ಹಾಗೆ ಕಂಡ ಸೀತೆಯೂ ಹೇಳಿದ್ದು ಹಾಗೆ, ರಾಮನನ್ನು ಹಿಂಬಾಲಿಸಿ ಹೋಗು.  
ಕಾವಿ ವಸನದ ಕೈಯ ಜಪಸರ | ಕೋವಿ ದಂಡ ಕಮಂಡಲುಗಳಿಂ |
ರಾವಣನು ಸನ್ಯಾಸಿವೇಷವ | ತಾಳಿ ಬಂದ ||
ಮರದ ಮರೆಯಲ್ಲಿ ಎಲ್ಲವನ್ನೂ ನೋಡುತ್ತಿದ್ದಾನೆ ರಾವಣ.  ಸೀತೆಯನ್ನು ನೋಡಿದ ನಂತರ ರಾವಣ ಬೆರಗಾಗಿಬಿಡುತ್ತಾನೆ. ಈ ಸೌಂದರ್ಯ ಕಾಮಸಕ್ತನನ್ನಾಗಿಸುವುದು ಮಾತ್ರವಲ್ಲ ಕಾಮಮುಕನನ್ನಾಗಿಸಿ  ಚರಮ ಲಕ್ಷ್ಯವನ್ನು ನೀಡುವಂತೆ ಭಾಸವಾಗುತ್ತದೆ. ಉಳಿದ ಎಲ್ಲದರಲ್ಲೂ ಅನಾಸಕ್ತಿ ಜಾಗ್ರತವಾಗುತ್ತದೆ. ಒಂದು ರೀತಿಯಲ್ಲಿ ಮೋಕ್ಷಲಕ್ಷ್ಮಿಯ ದರ್ಶನ.  ಮನಸ್ಸಿನಲ್ಲಿ ಎಲ್ಲವನ್ನು ಬಿಟ್ಟ ಒಂದು ಸನ್ಯಾಸ ಭಾವ,  ಆ ಲಂಕೆ ಏನು?    ಲಂಕೆಯ ವೈಭವವೇನು? ಎಲ್ಲವೂ ತೃಣ ಸಮಾನವಾಗಿ ಕಾಣುತ್ತದೆ.? ಅದೆಲ್ಲವನ್ನು ಬಿಟ್ಟು ಬಿಡಬೇಕು? ಆ ಸನ್ಯಾಸ ಭಾವದಲ್ಲೇ ಸನ್ಯಾಸಿಯಾಗಿ ಅವಳೆದುರು ಪ್ರಕಟವಾಗುತ್ತಾನೆ.
 “ ಭಿಕ್ಷೆಯ ನೀಡೇ ದೇವಿ | ಸನ್ಯಾಸಿಗೆ ಭಿಕ್ಷೆಯ ನೀಡೆ ದೇವಿ | “    ದೈನ್ಯತೆ ರಾವಣನ ಧ್ವನಿ. ಎಲ್ಲವನ್ನು ಬಿಟ್ಟ ಸನ್ಯಾಸಿಗೆ, ಹಸಿವು...... ....ಈ  ಹಸಿವು ಬಿಡುವುದಿಲ್ಲ. ಹಾಗಾಗಿ ಅಮ್ಮಾ ಭಿಕ್ಷೆ ಹಾಕಮ್ಮ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೆಣ್ಣೋಬ್ಬಳು ಏಕಾಂಗಿಯಾಗಿರುವಾಗ ಭಿಕ್ಷಾರ್ಥಿಯಾಗಿ ಬಂದಿದ್ದಾನೆ. ಗಂಡಸರು ಇದ್ದರೆ,  ದಂಪತಿಗಳಿಂದ ದಾನ ತೆಕ್ಕೊಳ್ಳುವವನೂ ಗೃಹಸ್ಥನಾಗಿರಬೇಕಲ್ಲ? ಹಾಗಾಗಿ ಇದು ಭಿಕ್ಷೆ. ಭವತಿ ಭಿಕ್ಷಾಂದೇಹಿ ಎಂದು ಗೋಗರೆಯುತ್ತಾನೆ.  ಪ್ರತಿಯೊಂದು ಸನ್ನಿವೆಶಕ್ಕೂ ಇಲ್ಲಿ ಅರ್ಥಕಲ್ಪಿತವಾಗುತ್ತದೆ.
           “           ಲೇಸಾಯಿತಯ್ಯ ಸನ್ಯಾಸಿಯೆ ನಿನ್ನ  ಚರಣಕ್ಕೆ ಸಾಸಿರ ಶರಣೆಂಬೆ ನಾನು ”  ಸೀತೆ ದುಗಡದಲ್ಲೇ ಎಕಾಂಗಿಯಾಗಿರುವಾಗ ಬಂದಿದ್ದಾನೆ ಸನ್ಯಾಸಿಯೋರ್ವ.  ಮುನಿ ಸನ್ಯಾಸಿಗಳೆಂದರೆ ಸಹಜವಾಗಿ ಗೌರವ ಹೊಂದಿರುವ ಸಾಧ್ವೀ ಮಣಿ ಸೀತೆ. ಆದರೆ ಗುಡಿಸಲಿನಲ್ಲಿ ಆಕೆಯೊಬ್ಬಳೆ ಇರುವ ಅಸಹಾಯಕತೆ ಒಂದೆಡೆ. ಆದರೆ ಈ ಕಾಡಿನೊಳಗೆ ಅದೂ ಈ ಗುಡಿಸಲಿಗೆ ಭಿಕ್ಷಾರ್ಥಿಯಾಗಿ ಬಂದಿದ್ದಾನಲ್ಲ, ಅದರ ಹಿನ್ನೆಲೆ ಆಕೆ ಅರಿಯುವ ಯೋಚನೆಗೆ ಹೋಗುವುದಿಲ್ಲ. ದೂರದಿಂದಲೇ ನಮಸ್ಕರಿಸಿ ಬಿಡುತ್ತಾಳೆ.
            ಸನ್ಯಾಸಿ, ಇಲ್ಲಿ ಏಕಾಕಿಯಾಗಿರುವ ಸೀತೆಯ ಪರಿಚಯ ಕೇಳುತ್ತಾನೆ.
ಕಂಡೊಂದು ಮೃಗವನಾ ಬಯಸಿದಡದನಿನ್ನು | ಕೊಂಡುಬರಲು ರಾಮ ಪೋದ ||
ಪುಂಡರೀಕಾಕ್ಷ ಬಾರದೆ ಹೊತ್ತಾದುದರಿಂದ |ಅಂಡಲೆಯುತ ತಮ್ಮ ನಡೆದ ||

 ದೂರದ ಅಯೋಧ್ಯಾ ದೇಶದ ವಾಸಿಗಳು ನಾವು. ಅಲ್ಲಿಯ ಸೂರ್ಯವಂಶದ ಅರಸರು ನಾವು. ಶ್ರೀರಾಮ ನನ್ನ ಗಂಡ.  ಪಿತೃವಾಕ್ಯ ಪರಿಪಾಲನೆಗಾಗಿ  ಅವರಿಗೆ ಕಾಡಿಗೆ ಬರಬೇಕಾಯಿತು. ಅವರ ಪತ್ನಿಯಾದ ನಾನು ಅವರನ್ನು ಹಿಂಬಾಲಿಸಿ ಇಲ್ಲಿವರೆಗೂ ಬರಬೇಕಾಯಿತು. ಈಗ ತನ್ನ ಗಂಡನಾದ ಶ್ರೀರಾಮ ನನ್ನಾಶೆಯನ್ನು ಈಡೇರಿಸುವುದಕ್ಕಾಗಿ ಬಂಗಾರದ ಜಿಂಕೆಯನ್ನು ಹಿಂಬಾಲಿಸಿಕೊಂಡು ಹೋದ. ಆತನನ್ನು ಹಿಂಬಾಲಿಸಿಕೊಂಡು ನನ್ನ ಮೈದುನನಾದ ಲಕ್ಷ್ಮಣನೂ ಹೋಗಬೇಕಾಯಿತು.  ಹಾಗಾಗಿ ಈಗ ಭಿಕ್ಷೆಯನ್ನು ಈಯುವುದು ಸಾಧ್ಯವಿಲ್ಲ.
ಅಡುಗೆ ಊಟಗಳೆಂಬ ಗೊಡವೆಯು ನಮಗಿಲ್ಲ.... ಬರೀ ಅಡವಿಯ ಫಲವಸ್ತುಗಳಲ್ಲೇ ಹಸಿವನ್ನು ನೀಗುತ್ತಾ ಇದ್ದೇವೆ. ಮತ್ತೆ ನಿನಗೆಲ್ಲಿ ಭಿಕ್ಷೆಯಿಕ್ಕಲಿ ಎಂದು ಗೋಗರೆಯುತ್ತಾಳೆ.  ಪಲವಸ್ತುಗಳನ್ನೇ ನೀಡು ಹಸಿದಿದ್ದೇನೆ ಎಂದರೂ ಸೀತೆ ಕದಲುವುದಿಲ್ಲ. ಲಕ್ಷ್ಮಣ ಎಳೆದಂತಹ ರೇಖೆಯನ್ನು ಮೀರಿ ಬರುವುದಕ್ಕೆ ಸಾಧ್ಯವಿಲ್ಲ ಎಂದು ನಿರಾಕರಿಸಿಬಿಡುತ್ತಾಳೆ.
ನೆವನ ಹೇಳುವುದೇತಕೆ | ನಾ ದೇಹಿಯೆಂ | ದರೆ ನಾಸ್ತಿಯೆನಬಹುದೆ ||
ಶಿವನಾಣೆ ಮೂರು ದಿನದೊಳೇನೊಂದಾಹಾ | ರವಗೊಳ್ಳದಿಲ್ಲಿಗಿಂದೇ |ಹಸಿದು ಬಂದೆ ||

            ಸನ್ಯಾಸಿ ಸೀತೆಯನ್ನು ಹೊರಗೆ ಬರುವಂತೆ ಪ್ರೇರೇಪಿಸುತ್ತಾನೆ. ಆದರೆ ಆಕೆ ಹೊರಬಲು ಸರ್ವಥಾ ಒಪ್ಪುವುದಿಲ್ಲ. ರಾಕ್ಷಸರ ಕಾಟ ಈ ಹಿಂದೆ ಶೂರ್ಪನಖಾ ಪ್ರಕರಣದ ಅನುಭವವನ್ನು ಆಕೆ ಮರೆಯಲಾರಳು. ಮುನಿ ಪತ್ನಿಯರು ತನ್ನಲ್ಲಿ ಹೇಳಿದ ಮಾತಿನಂತೆ, ಈ ಕಾಡಲ್ಲಿ ದೂರದ ದಶಕಂಠನೆಂಬ ದಾನವನ ಪರಿವಾರದವರು ಅಲೆದಾಡುತ್ತಿದ್ದಾರೆ. ಒಂದು ವೇಳೆ ದಶಕಂಠನಾದ ರಾವಣನ ಕಣ್ಣಿಗೆ ಹೆಣ್ಣುಗಳು ಬಿದ್ದಲ್ಲಿ ಆತ ಸುಮ್ಮನುಳಿಯುವವನಲ್ಲ. ಹಾಗಾಗಿ ಹೊರಗೆ ಬರಲಾರೆ ಎಂದು ಹೇಳುತ್ತಾಳೆ. ಆದರೆ ಸನ್ಯಾಸಿ ತನ್ನ ಉದ್ದೇಶ ಸಿದ್ದಿಗಾಗಿ ಶತಾಯ ಗತಾಯ ಪ್ರಯತ್ನಿಸುತ್ತಾನೆ.
ಮರ್ಮವಿಡಿದು ನಾವು ಶಪಿಸಿ ಪೋದರೆ ವಂಶ |
ನಿರ್ಮೂಲವಹುದು ಕಾಣೆ | ಈಶ್ವರನಾಣೆ
 ರಾವಣ ಈಗ ನಿಜವಾಗಿಯೂ ಧೃತಿಗೆಡುತ್ತಾನೆ. ಆ ರೇಖೆ ಸೀಮೆಯನ್ನುಗುರುತಿಸಿರುವುದು ಕೇವಲ ಸೀತೆಗಾಗಿ ಮಾತ್ರವಲ್ಲ ತನಗೂ ಅದನ್ನು ಮೀರುವುದು ಸಾಧ್ಯವಿಲ್ಲ ಎಂಬ ಅರಿವಿರುತ್ತದೆ. ಹಾಗಾಗಿ ಕ್ರೋಧಗೊಳ್ಳುತ್ತಾನೆ.  ನಂತರ ಶಪಿಸುತ್ತೇನೆ ಎಂದು ಹೂಂಕರಿಸಿದಾಗ ವಿಧಿಯಿಲ್ಲದೇ ಸೀತೆ ಭಿಕ್ಷೆಯನ್ನು ನೀಡುವುದಕ್ಕಾಗಿ ಮುಂದಡಿಯಿಡುತ್ತಾಳೆ. ಲಕ್ಷ್ಮಣ ಎಳೆದ ರೇಖೆಯನ್ನು ಕ್ರಮಿಸಿ ಸೀತೆ ಪದ ಊರುತ್ತಿದ್ದಂತೆ ರಾವಣ ತನ್ನ ಕಪಟರೂಪವನ್ನು ಕಳಚಿ ನಿಜ ರಾವಣನಾಗಿ ಕಾಣಿಸಿಕೊಳ್ಳುತ್ತಾನೆ. ಸೀತೆ ತನ್ನ ಕೈವಶವಾಗುತ್ತಿದ್ದಂತೆ ಪುಷ್ಪಕ ವಿಮಾನದಲ್ಲಿ ಕುಳ್ಳಿರಿಸಿ ನಭಕ್ಕೆ ವಿಮಾನವನ್ನು ಹಾರಿಸುತ್ತಾನೆ. ತಾನು ವಂಚನೆಗೆ ಒಳಗಾದದ್ದು ಸೀತೆಗೆ ಅರಿವಾಗುತ್ತದೆ. ಆದರೆ ಸಮಯವದು ಮೀರಿಹೋಗಿರುತ್ತದೆ. ಶ್ರೀರಾಮನ ಕೋದಂಡ, ಲಕ್ಷ್ಮಣನ ರೇಖೆ ಇದೆಲ್ಲವೂ ಸೀತೆಯ ಪಾಲಿಗೆ ಕಾಲಪ್ರಭಾವದ ದ್ರವ್ಯಗಳಾಗಿಬಿಟ್ಟಿತು. ರಾವಣನ ಅಟ್ಟ ಹಾಸದ ನಡುವೆ ತನ್ನ ರೋದನವೂ ಕರಗುತ್ತಿದೆಯಲ್ಲ ಎಂಬ ಆತಂಕದಲ್ಲಿ ಸೀತೆಯ ಕಂಬನಿ ಕರಗುತ್ತಲಿತ್ತು.


Tuesday, September 6, 2016

ಪಲ್ಲವಿಸಿದ ಅತಿಕಾಯ ಮೋಕ್ಷ


“ತನ್ನಲ್ಲಿ ಇದ್ದುದರ ಅರಿವಿಲ್ಲದೆ ತನ್ನಲ್ಲಿ ಇಲ್ಲದೇ ಇರುವುದರ ಹಿಂದೆ ತಿರುಗುವುದು ಮನುಷ್ಯ ಸಹಜ ಗುಣ” 
ತನ್ನಲ್ಲಿದ್ದ ಸಂಪತ್ತಿನ ಬಗ್ಗೆ ಯೋಚಿಸುವುದರ ಬದಲು. ಪರರ ಸಂಪತ್ತಿನ ಬಗ್ಗೆ ಯೋಚಿಸುವಾಗ ಮನಸ್ಸಿನ ನೆಮ್ಮದಿಯನ್ನು ತಾನೆ ಬಲಿಕೊಟ್ಟ ಹಾಗೆ. ಮೊನ್ನೆ ಬೆಂಗಳೂರಲ್ಲಿ ಆದ ಯಕ್ಷಗಾನ ಕಾರ್ಯಕ್ರಮವನ್ನು ಕಂಡಾಗ ಈ ತತ್ವ ಮತ್ತೂ ಮತ್ತೂ ಸ್ಪುರಣೆಗೆ ಬಂತು. ಅದು ಪಲ್ಲವಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಜರಗಿದ ಕಾರ್ಯಕ್ರಮ.  ಈ ವೇದಿಕೆಯ ಮೂಲ ಬೆನ್ನೆಲುಬಿನಂತೆ ದುಡಿಯುವ ಮಹನಿಯರೆಂದರೆ ಅದು ನರಸಿಂಹ ಭಟ್ಟರು.  ತಮ್ಮ    ದೈಹಿಕ ದೌರ್ಬಲ್ಯಗಳೆಲ್ಲವನ್ನೂ ನಗಣ್ಯವಾಗಿಸಿಕೊಂಡು ಅಪ್ಪಟ ಕಲಾಭಿಮಾನದಿಂದ ದುಡಿಯುವ ಶ್ರಮಜೀವಿ.  ಇವರು ತನ್ನಲ್ಲಿ ಇಲ್ಲದುದರ ಬಗ್ಗೆ ಯೋಚಿಸದೆ ತನ್ನಲ್ಲಿ ಇದ್ದ ಸಂಪನ್ಮೂಲದಿಂದ ಅದೇನೋ ಸಾಧಿಸುವ ಛಲ ಹೊಂದಿದವರು. ಬುದ್ದಿವಂತ ವರ್ತಕನ ಹಾಗೆ,, ತನ್ನಲ್ಲಿದ್ದ ಭಂಡವಾಳವನ್ನು ಮೊದಲು ಯೋಚಿಸಿ ಅದರ ಮೇಲೆ ಮೊದಲು ವಿಶ್ವಾಸವಿರಿಸುತ್ತಾನೆ.

ಯಕ್ಷ ಸೌರಭ ಎಂಬ ಈ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಯಕ್ಷಗಾಯನ ವೇಣುವಾದನ ಜುಗಲ್ಪಂದಿ. ಸುಮಾರು ಒಂದುವರೆ ತಾಸಿನ ಈ ಕಾರ್ಯಕ್ರಮ ರಂಜನೆಯನ್ನು ಒಂದಗಿಸಿತು. ತೆಂಕು ಬಡಗು ಖ್ಯಾತಿಯ ಭಾಗವತ ಶ್ರೀ ಸತ್ಯನಾರಾಯಣ ಪುಣಿಚಿತ್ತಾಯರ ಯಕ್ಷ ಗಾಯನಕ್ಕೆ  ವಿದ್ವಾನ್ ಶ್ರೀ ಗಣೇಶ್ ಕೆ. ಎಸ್ ಅವರ ಕೊಳಲು ವಾದನ. ಯುವ ಮದ್ದಲೆಗಾರ ಶ್ರೀಶ ನಿಡ್ಲೆ ಮತ್ತು ಶ್ರೀ ಅವಿನಾಶ್ ಬೈಪಡಿತ್ತಾಯರ ಮದ್ದಲೆ ವಾದನ.  ಚೆಂಡೆಯಲ್ಲಿ ಮಿತ್ರ ವೇಣುಗೋಪಾಲ್ ಪಡ್ರೆ ಮತ್ತು ಪುಟ್ಟ ಕುಮಾರ ಮಾ | ನಿನಾದ ಕೆ ಜಿ.   ಈ ಪುಟ್ಟ ಕಂದ ವಿದ್ವಾನ್ ಗಣೇಶ್ ಕೆ ಎಸ್ ಅವರ  ಪುತ್ರ. ಚೆಂಡೆಯ ಗಾತ್ರದ ಪುಟ್ಟ ಕಿಶೋರನ ಚೆಂಡೆ ವಾದನ ಬಹಳ ಆಕರ್ಷಣೀಯವಾಗಿತ್ತು. ಉಳಿದಂತೆ ಒಂದುವರೆ ಘಂಟೆಗಳ ಕಾಲ ಸಂಗೀತ ಸುಧೆ ಪರಿಷತ್ ನ ಸಭಾಭವನದಲ್ಲಿ ಸಂಗೀತ ತರಂಗಗಳನ್ನು ಸೃಷ್ಟಿಸಿತು.  ಎರಡು ಸಂಗೀತ ಪ್ರತಿಭೆಗಳು ಪ್ರೇಕ್ಷಕರನ್ನು ವಿಶೇಷವಾಗಿ ರಂಜಿಸಿದವು. 



ಆನಂತರ ಸುಮಾರು ಮೂರು ತಾಸುಗಳ ಅವಧಿಗೆ ಅತಿಕಾಯ ಮೋಕ್ಷ ಎಂಬ ಪ್ರಸಂಗ ತಾಳ ಮದ್ದಲೆ ರೂಪದಲ್ಲಿ ಸಂಪನ್ನಗೊಂಡಿತು. ಇದರ ನೇತೃತ್ವವನ್ನು ವಹಿಸಿದವರು ಶ್ರೀ ಶಿವ ಶಂಕರ ಬಲಿಪರು. ಮದ್ದಲೆಯಲ್ಲಿ ಶ್ರೀ ಶ ನಿಡ್ಲೆ ಮತ್ತು ಶ್ರೀ ಅವಿನಾಶ್ ಬೈಪಡಿತ್ತಾಯ, ಚೆಂಡೆ ಶ್ರೀ ವೇಣು ಗೋಪಾಲ ಪಡ್ರೆ.

ತಾಳ ಮದ್ದಲೆ ನೋಡಿದಮೇಲೆ ಒಂದೆರಡು ವಿಚಾರಗಳು ಬೇಡವೆಂದರೂ ಮನಸ್ಸಿನಲ್ಲಿ ಕೊರೆಯತೊಡಗಿದವು. ಯಕ್ಷಗಾನ ತಾಳ ಮದ್ದಲೆ ಅಂದಿನಿಂದ ಇಂದಿನವರೆಗೆ ಹಲವು ಕಾರಣಗಳಿಂದ ಹಲವಾರು ಅವಿಷ್ಕಾರಗಳನ್ನೂ ಬದಲಾವಣೆಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡು ಜೀವಸೆಲೆಯನ್ನು ಉಳಿಸಿಕೊಂಡಿದೆ ಎನ್ನಬಹುದು. ಇದು ಎಷ್ಟು ಸರಿ ಯಾವುದು ತಪ್ಪು ಅದನ್ನು ಪ್ರತ್ಯೇಕಿಸುವುದೇ ಇಂದಿನ ಕಾಲದಲ್ಲಿ ಸಮರ್ಪಕವೆಂದೆನಿಸುವುದಿಲ್ಲ. ಯಾಕೆಂದರೆ ಅದರಜತೆಗೆ ಬೆಳೆದು ಬಂದಿರುವ ವಿಭಿನ್ನದೃಷ್ಟಿಕೋನ ಇದಕ್ಕೆ ಕಾರಣ. ಹಾಗಿರುವಾಗ ಇಲ್ಲಿ ನಿರ್ಣಾಯಕವಾಗುವುದು ಅವರವರ ಅಭಿರುಚಿ. ಆ ನಿಟ್ಟಿನಲ್ಲಿ ವಿಚಾರಗಳು ಕೊರೆಯತೊಡಗಿತು ಎನ್ನಲೇಬೇಕಾಗುತ್ತದೆ.

ಪ್ರಸ್ತುತ ಅತಿಕಾಯ ಮೋಕ್ಷವೆಂಬ ಪ್ರಸಂಗ. ಪ್ರಸಂಗ ಕರ್ತೃ ಇದನ್ನು ಯಾವ ದೃಷ್ಟಿಕೋನದಿಂದ ರಚಿಸಿರಬಹುದು, ನನ್ನಂತಹವನ ಯೋಚನೆಗೆ ನಿಲುಕುವುದಿಲ್ಲ. ಆದರೂ  ಯಕ್ಷಗಾನ ಪ್ರಸಂಗಗಳ ಒಂದು ಸಾರ್ವತ್ರಿಕ ರೂಪ ಹೇಗಿರುತ್ತದೆ ಎನ್ನುವಲ್ಲಿ ಸರಳವಾಗಿ ಹೇಳಬೇಕೆಂದರೆ ಅವುಗಳು ಪುರಾಣಕ್ಕೆ ಹೊಂದಿಕೊಂಡು ಇರುತ್ತವೆ ಹೊರತು ಅದು ಪುರಾಣ ಕಥೆಗಳ ಯಥಾವತ್ ಆಗಿರುವುದಿಲ್ಲ. ಆದರೆ ಹಲವು ಸಲ ಇದನ್ನು ಒಂದೇ ಆಗಿ ರೂಪಿಸಿ  ಹಲವು ತರ್ಕಗಳಿಗೆ ಎಡೆಮಾಡಿಕೊಡುತ್ತವೆ. ತಾಳ ಮದ್ದಲೆಯಲ್ಲಂತೂ ಇದು ನಿಷ್ಠೂರ ಸತ್ಯ ಎನ್ನಬೇಕು.

ಅತಿಕಾಯ ಮೋಕ್ಷಪ್ರಸಂಗ ಮೂಲ ಧ್ಯೇಯವೆಂದರೆ ಇಲ್ಲಿ ವೈಷ್ಣವ ಮತ್ತು ಶೈವ  ಪಂಥದ ಸ್ಥೂಲವಾದ ದರ್ಶನ ಎನ್ನಬಹುದು. ರಾವಣ ಅಖಂಡ ಶಿವಭಕ್ತ ಮಾತ್ರವಲ್ಲ ತಾತ್ವಿಕವಾಗಿ ಹರಿದ್ವೇಷವನ್ನೇ ಅನುಸರಿಸಿಕೊಂಡು ಬಂದವನು. ಆದರೆ ಅತನ ಮಗ ಅತಿಕಾಯ ಪರಮ ವೈಷ್ಣವನಾಗಿರುತ್ತಾನೆ. ಹಾಗಾಗಿ ಇಲ್ಲಿ ಈ ಪ್ರಸಂಗದಲ್ಲಿ ಅಲ್ಪಮಟ್ಟಿನ ಸಂಘರ್ಷವನ್ನು ಪ್ರಸಂಗ ಕರ್ತ ಬಯಸುತ್ತಾನೆ  ಎನ್ನಬೇಕು.  ಹಾಗಾಗಿಯೇ ಅತಿಕಾಯ “ ಏತಕೆ ಮರುಳಾಹೆ ತಾತ.......” ಎಂದು ರಾವಣ ತತ್ವದೊಡನೆ ಸಂಘರ್ಷಕ್ಕೆ ಇಳಿಯುತ್ತಾನೆ. ಇಲ್ಲಿ ಮರುಳು ಎಂಬ ವಿಚಾರಕ್ಕೇ ಒಂದಷ್ಟು ಚರ್ಚೆಯಾಗುತ್ತದೆ. ಕೇಳುತ್ತಾ ಹೋದಂತೆ  ಇಂದಿನ ತಾಳ ಮದ್ದಲೆಯ  ಅರ್ಥಗಾರಿಕೆಯ ರೂಪವೇ ಬದಲಾಗುತ್ತಿದೆ ಎಂದನಿಸುತ್ತದೆ. ಇದು ಸರಿಯೋ ತಪ್ಪೋ ಅದನ್ನು ವಿಶ್ಲೇಷಿಸುವ ಸಾಮಾರ್ಥ್ಯ ಇಲ್ಲ. ಆದರೂ ನಮ್ಮ ಮನಸ್ಸು ಸ್ವಾರಸ್ಯ ಕಳೆದುಕೊಳ್ಳುವುದಕ್ಕೆ ನಾವೇ ಹೊಣೆಗಾರರು ಎಂದು ಹೇಳಬೇಕು.

ಪ್ರಸಂಗದ ಕರ್ತೃವಿಗೆ ರಾವಣ ಅತಿಕಾಯರ ನಡುವೆ ಕಚ್ಚಿಕೊಳ್ಳಬೇಕು ಎಂದು ಇದ್ದೀತೆ? ಇಂದಿನ ಪ್ರೇಕ್ಷಕ ದೃಷ್ಟೀಕೋನವೂ ಇದರಿಂದ ಭಿನ್ನವಾಗಿಲ್ಲ. ತಾಳ ಮದ್ದಲೆ ಎಂದರೆ ಒಂದಷ್ಟು ಕಚ್ಚಿಕೊಂಡು ಪರಸ್ಪರ ಮರ್ಮಕ್ಕೆ ನೋಟವಿರಿಸಿದ ಮಾತುಗಳು ಇರಲೇಬೇಕು. ರಾವಣನ ಮೋಕ್ಷವೋ ಅತಿಕಾಯನ ಮೋಕ್ಷವೋ ಅದು ವೆತ್ಯಾಸವಿರುವುದಿಲ್ಲ. ರಾವಣ ವಧೆಯಾದರೆ ಅತಿಕಾಯ ಮೋಕ್ಷ ಯಾಕಾಗಬೇಕು? ಇದರ ಜಿಜ್ಞಾಸೆ ಇರುವುದಿಲ್ಲ.  ಚರ್ಚೆಯಂತೂ ರಂಜನೆಯನ್ನು ಕೊಡುತ್ತದೆ ಚಪ್ಪಾಳೆಯನ್ನು ಗಿಟ್ಟಿಸುತ್ತದೆ.

ಅತಿಕಾಯ ಪ್ರವೇಶದಿಂದ  ತೊಡಗಿ ರಣ ವೀಳ್ಯ ಪ್ರದಾನವಾಗುವರೆಗೂ ತಂದೆ ಮಗ ಅಕ್ಷರಶಃ ಕಚ್ಚಿಕೊಂಡರು ಎಂದರೂ ಸರಿಯೇ,  ಆದರೂ ಅಲ್ಲಿ ವ್ಯಕ್ತವಾಗಬೇಕಾದ ವಿಭಿನ್ನ ಭಕ್ತಿ ಮಾರ್ಗದ ಪ್ರತಿಪಾದನೆಗೆ ಸಮಯವೇ ಒದಗಿ ಬರಲಿಲ್ಲ. ರಾವಣ ಹರಿದ್ವೇಷವನ್ನೆ ಜೀವನವನ್ನಾಗಿಸಿ ದ್ವೇಷಭಕ್ತಿಯಲ್ಲೇ ಮೋಕ್ಷಗಮನ ನಾಗಿದ್ದರೆ, ಮಗ ಭಕ್ತ ವೈಷ್ಣವನಾಗಿ ತಾತ್ವಿಕವಾಗಿ ತಂದೆಗೆ ವಿರುದ್ದವಾಗಿರುತ್ತಾನೆ. ಶ್ರೀರಾಮನ ಔನ್ನತ್ಯವನ್ನು ಶ್ರೇಷ್ಠತೆಯನ್ನು ಅರಿತೇ ರಾವಣ ರಾಮನಲ್ಲಿ ಸಂಘರ್ಷಕ್ಕೆ ಇಳಿಯುತ್ತಾನೆ.  ಇಷ್ಟೆಲ್ಲ ತಿಳಿದ ರಾವಣ ಅಷ್ಟನ್ನು ತಿಳಿಯದೇ ಹೋದನೆ? ಇದು ಇಲ್ಲಿನ ತಾತ್ವಿಕ ಸಮರ್ಥನೆ.  

 ಕೊನೆಗೆ ಚರ್ಚೆ ಉಪಸಂಹಾರಗೊಂಡು ಅತಿಕಾಯ ಯುದ್ದಕ್ಕೆ ಹೋರಡುವುದೇ ಲೇಸೆಂದು ಬಗೆಯುತ್ತಾನೆ. “ ಜೀಯ ತಾ ಸಂಗರಕೆ ........” ಎಂದು ಯುದ್ದಕ್ಕೆ ಅಣಿಯಾಗಿ ಕೊಡು ಧುರವೀಳ್ಯವನು ಎನ್ನುವಾಗ ರಾವಣ ಸಂತುಷ್ಟನಾಗಿ ಅತಿಕಾಯನ ವೈಶಿಷ್ಟ್ಯವನ್ನೂ ಚರಿತ್ರೆಯನ್ನೂ ತುಂಬು ಮನಸ್ಸಿನಿಂದ ಹೊಗಳುತ್ತಾನೆ. “ ನಿನ್ನಂತಹ ಮಗನನ್ನು ಪಡೆದ ನಾನು ಧನ್ಯ....ಧಾನ್ಯ ಮಾಲಿನಿ (ಅತಿಕಾಯನ ತಾಯಿ) ಯಂತಹವಳನ್ನು ಪಡೆದ ನಾನು ಧನ್ಯ  ” ಈ ಹೊಗಳಿಕೆಯ ನಡುವೆಯೇ ಚರ್ಚೆ ಬೆಳೆದು ರಾವಣ ಅತಿಕಾಯನ ಮೇಲೆ ಏರಿಹೋಗುವುದು ವಿಚಿತ್ರವೆನಿಸುತ್ತದೆ.  ಹಾಗಾದರೆ ಮಗನ ಹೊಗಳಿಕೆ ಮಹತ್ವ ಎಲ್ಲಿ ಬಂತು?

 ಕೊನೆಯ ಒಂದೆರಡು ವಾಕ್ಯದ ಅತಿಕಾಯ ಅರ್ಥಗಾರಿಕೆಯಲ್ಲಿ ರಾವಣ ಮತ್ತು ಅತಿಕಾಯನ ಭಕ್ತಿ ಮಾರ್ಗವನ್ನು ವಿವರಿಸಿದರೂ. ಆದರೆ ಅದುವರೆಗೆ ಪೂರ್ಣ ತಾಳ ಮದ್ದಲೆಗೆ ಇದ್ದ ಮೂರು ತಾಸಿನ ಸಮಯಾವಕಾಶದಲ್ಲಿ  ಒಂದುವರೆ ತಾಸಿನ ತಾಳಮದ್ದಲೆ ಅವಧಿ ಮುಗಿದು ಹೋಗಿತ್ತು. ಈ ಒಂದೆರಡು ವಾಕ್ಯದ ತಾತ್ಪರ್ಯಕ್ಕೆ ಚರ್ಚೆಯಲ್ಲಿ ಈವರೆಗೆ  ಬಂದ ವಿಚಾರಗಳು ಮಾತ್ರ ಅದಕ್ಕೆ ಸಂಬಂಧಿಸಿಯೇ ಇರಲಿಲ್ಲ.  

ತಾಳ ಮದ್ದಲೆ ಕ್ಷೇತ್ರದಲ್ಲಿ ಇಂದು ಬಹು ಸಂಖ್ಯೆಯಲ್ಲಿ ವಿದ್ವಾಂಸರೂ ವಿದ್ಯಾವಂತರೂ ಇರುತ್ತಾರೆ. ನಿಜವಾಗಿಯೂ ಇದು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲುತ್ತಿರುವ ಸೌಭಾಗ್ಯ ಎನ್ನಬೇಕು.  ಹೀಗಿರುವಾಗ ಅರ್ಥಗಾರಿಕೆಯೂ ಪಾಂಡಿತ್ಯ ಪೂರ್ಣವಾಗುವ ಅವಕಾಶವಿರುತ್ತದೆ. ವಿಪರ್ಯಾಸವೆಂದರೆ ಹೀಗಿದ್ದೂ ತಾಳಮದ್ದಲೆಗಳು  ಪ್ರಸಂಗದ ಆಶಯದಿಂದ ದೂರವಾಗುತ್ತಿರುವುದು.  ಒಂದು ಸಣ್ಣ ಮೊಳೆಯನ್ನು ಹೊಡೆಯುವುದಕ್ಕೆ ದೊಡ್ಡ ಸುತ್ತಿಗೆಯನ್ನೇನೋ ಉಪಯೋಗಿಸಬಹುದು. ಆದರೆ ಅದರ ಮೇಲೆ ಹೊಡೆಯುವ ಪ್ರಹಾರ ಅದೇ ರೀತಿಯಾದರೆ ಮೊಳೆ ಹೊಡೆಯುವ ಉದ್ದೇಶವೇ ಸಫಲವಾಗುವುದಿಲ್ಲ. ಪಾಂಡಿತ್ಯವಾಗಲೀ ಅನುಭವವಾಗಲಿ ಔಚಿತ್ಯ ಪೂರ್ಣವಾಗಿ ಉಪಯೋಗವಾದಲ್ಲಿ ತಾಳ ಮದ್ದಲೆ ವಿದ್ವಜ್ಜನರ ಸಮ್ಮೇಳನವಾಗಬಹುದು.

 ಅರ್ಥಗಾರಿಕೆ ಸ್ಪರ್ಧಾತ್ಮವಾಗಿರಬೇಕು. ಜತೆಗೆ ಅದರ ಆಶಯವೂ ಸ್ಪಷ್ಟವಾಗಿರಬೇಕಲ್ಲ? ಪ್ರಸಂಗದ ಆಶಯವೇ ಬದಲಾದರೆ ಅಯೋಮಯವಾಗುತ್ತದೆ. ಯಾವುದು ಸರಿ ಯಾವುದು ತಪ್ಪು ಎಂಬ ಗೊಂದಲದಲ್ಲಿ ಪ್ರೇಕ್ಷಕ ಮುಳುಗಿಬಿಡುತ್ತಾನೆ.  ದೀರ್ಘವಾದ ಅರ್ಥಗಾರಿಕೆ,  ನಿರರ್ಗಳ ಉಪಕಥೆ ಉದಾಹರಣೆಗಳು ಇದ್ದುಕೊಂಡು  ಅದು ತಾಳಮದ್ದಲೆ ಅರ್ಥಗಾರಿಕೆ ಎಂಬಂತೆ ಬಿಂಬಿಸಲ್ಪಟ್ಟರೆ ಅಲ್ಲಿ ಕ್ಷಣಿಕವಾದ ರಂಜನೆಗಳಿಸಬಹುದು, ಆದರೆ ಅದು ಒಟ್ಟು ಆಶಯದ ವಿರುದ್ದವಾಗುವುದಿಲ್ಲವೇ? ಮಾತ್ರವಲ್ಲ    ದೀರ್ಘವಾದ ಅರ್ಥಗಾರಿಕೆ ಮತ್ತು ಚರ್ಚೆಯ ನಡುವೆ ಹಿಮ್ಮೇಳದವರ ಅಸಹನೀಯತೆಯನ್ನು ಯಾರು ಅರ್ಥವಿಸಿಕೊಳ್ಳುತ್ತಾರೆ?
ನನ್ನ ತಿಳುವಳಿಕೆಯಂತೆ ತಾಳ ಮದ್ದಲೆಗೂ ಪುರಾಣಕ್ಕೂ ಸಂದರ್ಭೋಚಿತವಾಗಿ ಬಹಳಷ್ಟು ವೆತ್ಯಾಸವಿರುತ್ತದೆ. ಹಲವು ಪ್ರಸಂಗಗಳು ಅದರಲ್ಲಿ ಬರುವ ಹಲವು ಸನ್ನಿವೇಶಗಳು ಪುರಾಣದಲ್ಲಿ ಉಲ್ಲೇಖವೇ ಇರುವುದಿಲ್ಲ, ಮತ್ತು ಹಲವು ಕಾಲ್ಪನಿಕ. ತಾಳಮದ್ದಲೆ ಎಂಬುದು ಸಂಪೂರ್ಣ ಆಶು ಸಾಹಿತ್ಯದ ರೂಪ. ಇಲ್ಲಿ ಹಿನ್ನೆಲೆಯ ತಯಾರಿ ಏನೂ ಇರುವುದಿಲ್ಲ. ಇದರ ಚಿತ್ರಕಥೆ ಮೊದಲೇ ತಯಾರಿಯಾಗುವುದಿಲ್ಲ. ಹಾಗೊಂದು ವೇಳೆ ಅದು ಪೂರ್ವ ತಯಾರಿಯಾದರೆ ತಾಳ ಮದ್ದಲೆಯಲ್ಲಿ ಸ್ವಾರಸ್ಯವೇ ಇರುವುದಿಲ್ಲ. ಪೂರ್ವ ಸಿದ್ದತೆಯಲ್ಲಿ ಅರ್ಥಧಾರಿ ರಂಗವೇರಿದರೆ ಆತನ ಸಿದ್ದತೆಗೆ ಅಲ್ಲಿ ಅವಕಾಶವೇ ಒದಗಿ ಬಾರದೆ ಇರಬಹುದು. ಉಳಿದೆಲ್ಲ ಕಲೆಗಳಿಗಿಂತ ಯಕ್ಷಗಾನ ಭಿನ್ನವೆನಿಸುವುದು ಇಂತಹ ವಿಚಾರಗಳಿಂದಲೇ. ಇಲ್ಲಿ ಬಿಟ್ಟ ರೀಲನ್ನು ಪುನ ಬಿಚ್ಚಿಟ್ಟರೆ ಅದರ ಮಹತ್ವವೇ ಮಾಯವಾಗಿಬಿಡುತ್ತದೆ.  ಆದರೆ ಇಂದು ತದ್ವಿರುದ್ದವಾಗಿ ಇಷ್ಟೇ ಹೀಗೆ ಮಾತನಾಡಬೇಕು ಎಂದು ಸಿದ್ದತೆಯಲ್ಲಿ ಬರುವುದನ್ನು ಕಾಣಬಹುದು. ಇಂತಹ ಸಂದರ್ಭದಲ್ಲಿ ಮಾತುಗಾರಿಗೆ ವಾದಗಳು ವಿವಾದವಾಗಿ ಪ್ರಸಂಗದ ಮೂಲ ಆಶಯವೇ ಬದಲಾಗಿಬಿಡುತ್ತದೆ.  


ಈ ವಿಚಾರಗಳನ್ನೆಲ್ಲ ಯೋಚಿಸುವಾಗ ಅತಿಕಾಯ ಮೋಕ್ಷದ ಪೂರ್ವಾರ್ಧ ಪ್ರೇಕ್ಷಕ ಸ್ಪಂದನೆಯಿಂದ ದೂರವಾಗಿದ್ದರೂ ಉತ್ತರಾರ್ಧ ಉತ್ತಮವಾಗಿ ಕೊನೆಯ ಕ್ಷಣದವರೆಗೂ ಪ್ರೇಕ್ಷಕನ ಆಕರ್ಷಣೆಯ ಪರಿಧಿಯಲ್ಲೇ ಸುತ್ತುತ್ತಿತ್ತು.  ಕ್ಲಪ್ತ ಸಮಯದಲ್ಲೇ ಕಾರ್ಯಕ್ರಮ ಪರಿಸಮಾಪ್ತಿಗೊಂಡು ಪಲ್ಲವಿ ಸಾಂಸ್ಕೃತಿಕ ವೇದಿಕೆಯ ಮತ್ತೊಂದು ಪುಟವನ್ನು ತುಂಬಿಸಿಬಿಟ್ಟಿತು. ಇನ್ನೀಗ ಇನ್ನೊಂದು ಬೃಹತ್ ಕಾರ್ಯಕ್ರಮ ಒಂದು ವೇದಿಕೆಯಲ್ಲಿ ಅನಾವರಣಗೊಳ್ಳಲಿದೆ. ಅದಕ್ಕೆ ಪೂರ್ವಭಾವಿಯಾಗಿ ಈ ಕಾರ್ಯಕ್ರಮ ತಕ್ಕ ಮಟ್ಟಿನ ಯಶಸ್ವೀ ಕಾರ್ಯಕ್ರಮ ಎನ್ನಬಹುದು. ಪ್ರತೀ ವರ್ಷವೂ ಸರಳವಾಗಿ ಸುಂದರವಾಗಿ ಯಕ್ಷಗಾನ ,  ಸುಗಮ ಸಂಗೀತ,  ಹೀಗೆ ಕಲಾಲೋಕದ ಶ್ರೀರಾಮನ ಪಾದದ ತಳದಲ್ಲಿ ಅಳಿಲಾಗಿ ತನ್ನ ಕೈಂಕರ್ಯವನ್ನು ಮಾಡುತ್ತ ಬಂದಿದೆ. ಈ ಸತ್ಕಾರ್ಯಕೆ ಪಲ್ಲವಿ ಸಾಂಸ್ಕೃತಿಕ ವೇದಿಕೆಯ ಭಾರವಾಹಿಗಳಿಗೆ ಕೃತಜ್ಞತೆ ಸಲ್ಲಲೇಬೇಕು. 

  ಯಕ್ಷಗಾನಂ ಗೆಲ್ಗೆ

Saturday, August 13, 2016

ಬೊಗಸೆಯೊಳಗಿನ ಅಮೃತ


ಸತ್ಯ ನಿಷ್ಠೆ ಪ್ರಾಮಾಣಿಕತೆ ಇವುಗಳೆಲ್ಲ ಸವಕಲು ನಾಣ್ಯಗಳಂತೆ ವಾಸ್ತವಿಕ ಸಮಾಜದಲ್ಲಿ ಮೌಲ್ಯವನ್ನು ಕಳೆದುಕೊಂಡಂತೆ ಕಂಡರೂ ,  ಇತಿಹಾಸ  ಸುಪ್ತವಾದ ಮೌಲ್ಯಗಳ ಅಸ್ತಿತ್ವವನ್ನು ಸಾರುತ್ತಾ ಬರುತ್ತದೆ.  ಮಾತ್ರವಲ್ಲ ಇತಿಹಾಸವೇ ಇದಕ್ಕೆ ಸಾಕ್ಷ್ಯವಾಗಿ ಎದುರು ಬಂದು ನಿಲ್ಲುತ್ತದೆ. ಇಂದಿನ ವ್ಯಾವಹಾರಿಕ ಪ್ರಪಂಚದ ಢಾಂಬಿಕತನದಲ್ಲಿ ಮೌಲ್ಯ ಕಳೆದುಕೊಂಡ ವಸ್ತುಗಳು ತನ್ನ ಮೌಲ್ಯವನ್ನು ನಿಗೂಢವಾಗಿರಿಸುತ್ತ ಆ ಮೌಲ್ಯಗಳಿಗೆ ಅರ್ಥವನ್ನು ಒದಗಿಸುತ್ತಾ ಸಾಗುತ್ತದೆ.

ಇತ್ತೀಚೆಗೆ ಶ್ರೀಕೃಷ್ಣಸಭಾ ದ ಯಕ್ಷಗಾನದಲ್ಲಿ ಹಿರಿಯ ಭಾಗವತ ಶ್ರೀ ಬಲಿಪ್ಪ ನಾರಾಯಣ ಭಾಗವತರ ಹಾಡುಗಾರಿಕೆಯನ್ನು ಕೇಳಿ ಆನಂದಿಸುತ್ತಿದ್ದೆ. ಆದೇನು ಮಾಧುರ್ಯ, ಅದೇನು ಸ್ವರ ಗಾಂಭೀರ್ಯ. ಇಳಿವಯಸ್ಸಿನಲ್ಲೂ ಕರಗಿಹೊಗದ ಕಂಠ ಸಿರಿ ಪ್ರತಿ ಸಾರಿ ಕೇಳುವಾಗಲೂ ಅದ್ಭುತ ರಮ್ಯವೆನಿಸುತ್ತದೆ.  ಆ ಸ್ವರ ಮಾಧುರ್ಯ ನಶ್ವರ ಜೀವನದಲ್ಲೂ ಅನಶ್ವರತೆಯ ತತ್ವವನ್ನು ಸಾರುತ್ತವೆಯೋ ಎಂದು ಭಾಸವಾಗುತ್ತದೆ. ಅನುಭವಿಸುವುದರಲ್ಲೂ ಅಪ್ಪಟ ಪ್ರಾಮಾಣಿಕತನವಿದ್ದಲ್ಲಿ ಈ ಅನುಭವ ಸಾಧ್ಯವಾಗುತ್ತದೆ.

ಈಗ ಅಧುನೀಕರಣಗೊಂಡ ಸುಧಾರಿತ ವಿದ್ಯುನ್ಮಾನ ಮಾಧ್ಯಮಗಳ ಕ್ರಾಂತಿಯಿಂದ ಎಲ್ಲವೂ ಸಂತೆಯಲ್ಲಿನ ಸರಕು ಎನ್ನಬಹುದೆ ?  ಇಲ್ಲ ಕಸ ಎನ್ನಬಹುದೇ ? ಅನುಮಾನವಾಗುತ್ತದೆ. ಇದೆಲ್ಲ ಒಂದು ರೀತಿಯಲ್ಲಿ ಅಪಮೌಲ್ಯವನ್ನೇ ಸಾರಿದರೂ ಅಲ್ಲಿ ಇಲ್ಲಿ ಮೌಲ್ಯ ಪ್ರತ್ಯಕ್ಷವಾಗುತ್ತಿರುವುದು ಸುಳ್ಳಲ್ಲ. ಇಂತಹ ಸನ್ನಿವೇಶದಲ್ಲಿ ಬಹಳಷ್ಟನ್ನು ನಾವು ನೋಡುತ್ತೇವೆ, ಕೇಳುತ್ತೇವೆ. ಮನೋಭಾವಕ್ಕನುಸರಿಸಿ ಸ್ಪಂದಿಸುತ್ತೇವೆ.
 ಅದ್ಬುತ ಛಾಯಾ ಚಿತ್ರ ಕೃಪೆ : ಶ್ರೀ ರಾಮನರೇಶ್ ಮಂಚಿ

ಯಕ್ಷಗಾನದಲ್ಲಿ ಹಲವಾರು ಭಾಗವತರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುತ್ತಾರೆ.  ಒಂದಿಷ್ಟು ಕಾಲ ಯಕ್ಷಗಾನ ಅವರನ್ನು ತಬ್ಬಿಕೊಳ್ಳುತ್ತದೆ.  ಹಿರಿಯ ಕಿರಿಯ ಭೇದವಿಲ್ಲದೆ ಹೆತ್ತ ಮಡಿಲ ಪ್ರೇಮದ ರೀತಿಯಲ್ಲಿ ಯಕ್ಷಗಾನ ನೆರಳನ್ನು ನೀಡಿ ಅಪ್ಪಿಕೊಳ್ಳುತ್ತದೆ. ಹಲವರು ಉಚ್ಛ್ರಾಯ ಸ್ಥಿತಿಯನ್ನು ತಲಪಿ ಇನ್ನಿಲ್ಲದಂತೆ ಪ್ರಭಾವ ಬೀರುತ್ತಾರೆ. ಆದರೆ ಕಾಲ ಎಂಬುದು ಎಲ್ಲ ಸಂಭಂಧಗಳನ್ನು ಅನಿವಾರ್ಯವಾಗಿಸುವಲ್ಲಿ ಪ್ರಧಾನವಾದಾಗ ಕಾಲದ ಗತಿಗೆ ಅನ್ಯಥಾ ಶರಣಂ ನಾಸ್ತಿ ಎನ್ನಲೇಬೇಕಾಗುತ್ತದೆ. ಹಾಗಾಗಿ ತಾವು ಹರಡಿದ ಪ್ರಭಾವಳಿಗಳೇನುಂಟೋ ಅದನ್ನು ಉಳಿಸುವಲ್ಲಿ ಬಹಳಷ್ಟು ಜನರ ವೈಫಲ್ಯವನ್ನು ಕಾಣಬಹುದು. ಇದಕ್ಕೆ ಹಲವು ಕಾರಣಗಳಿರಬಹುದು. ವಯೋಸಹಜವಾದ ದೈಹಿಕ ದೌರ್ಬಲ್ಯಗಳು ಹಲವು ಸಲ ಕಾರಣವಾದರೆ ಕೆಲವೊಮ್ಮೆ ಸ್ವಯಂಕೃತ ಅಪರಾಧಗಳು ವಾಸ್ತವದ ಪ್ರತಿಬಿಂಬವಾಗುತ್ತದೆ. ಹಾಗಾಗಿ ಹಾಡುಗಾರಿಕೆಯ ಸೆಳೆತ ಸ್ಥಿರವಾಗಿ ನಿಲ್ಲುವುದಿಲ್ಲ. ಪದ ಕೇಳುವಾಗ ಮನಸ್ಸು ಆನಂದಿಸುತ್ತದೆ ಆದರೆ ಸಂತೃಪ್ತಿಯನ್ನು ಅನುಭವಿಸುವುದಿಲ್ಲ. ಛೇ ಅಂದಿನ ಹಾಗೆ ಇಲ್ಲ ಎಂದು ಪರಿತಪಿಸುತ್ತದೆ.  ಆದರೆ ಬಲಿಪ ಗಾನದಲ್ಲಿ ಇದು ಅಪವಾದವಾಗುವುದು ಅವರು ನಡೆದು ಬಂದ ಹಾದಿಯೇ ಕಾರಣವಾಗುತ್ತದೆ.  ದಶಕದ ಮೊದಲು ಕೇಳಿದ ಪದ ಹಾಡುಗಾರಿಕೆ ಅದೇ ಮಾರ್ದವತೆಯನ್ನು ಈಗಲೂ ಉಳಿಸಿಕೊಂಡಿದೆ. ವಯಸ್ಸು ಕಾಲ ಎಲ್ಲವೂ ಈ ಮಾಧುರ್ಯತೆಯ ಎದುರು ಸೋಲುತ್ತವೆ. ದಶಕದ ಹಿಂದೆ ಹೇಗೆ ಬಲಿಪ್ಪಜ್ಜನ ಪದ ಕೇಳುವಂತೆ ಈಗಲೂ ಅದೇ ಶ್ರದ್ಧೆಯಿಂದ ಪದವನ್ನು ಕೇಳುವಂತೆ ಮಾಡುತ್ತದೆ. ಆ ಪದ ಹೃದ್ಯವಾಗಿ ತಾಲ ಬಡಿಯುತ್ತಾ ಇರುತ್ತದೆ.  ಸ್ವರ ಮಾಧುರ್ಯದ ಆಕರ್ಷಣೆ ಅಂದು ಹೇಗಿತ್ತೋ ಇಂದು ಹಾಗೇ ಸ್ಥಾಯೀಯಾಗಿ ಉಳಿದು ಮತ್ತು ಮತ್ತು ಅಪ್ಯಾಯತೆಯನ್ನು ತೃಪ್ತಿಯನ್ನು ಒದಗಿಸುತ್ತದೆ.

ಒಬ್ಬ ಕಲಾವಿದ ಹೇಗಿರಬೇಕೋ ಅದು ಇಲ್ಲಿ ಸಾಕ್ಷಿಯಾಗುತ್ತದೆ.  ಸ್ಥಾನ ಮಾನ ಪ್ರಸಿದ್ಧಿ ಸಂಪತ್ತು ಹೀಗೆ ಕಲಾವಿದ ಅಮಿತವಾಗಿ ಗಳಿಸಬಹುದು. ಆದರೆ ಅದು ಶಾಶ್ವತವಾಗಬೇಕಾದರೆ ಅವನಲ್ಲಿರುವ ಕಲೆ ಮಾತ್ರಾ ಸಾಕಾಗುವುದಿಲ್ಲ. ಅದಾವುದೂ ಅಲ್ಲದ ಇನ್ನೊಂದು ಅಲ್ಲಿರಬೇಕು ಅನ್ನಿಸುತ್ತದೆ. ಆವಾಗ ಬಲಿಪ್ಪರ ಮುಖ ನೆನಪಿಗೆ ಬರುತ್ತದೆ. ಅಂದಿನ ಶ್ರದ್ದೆ ಇಂದು ಮತ್ತಷ್ಟೂ ಬಲವಾಗಿ ಹಲವು ಸಲ ಶಾರೀರಿಕ ಬಲವನ್ನು ಸೋಲಿಸಿ ಮುಂದೆ ಸಾಗುತ್ತದೆ. ಹಾಗಾಗೀಯೇ ಬಲಿಪ್ಪಜ್ಜ ಇಂದು ಚಲಾವಣೆಯ ನಾಣ್ಯವಾಗಿಬಿಡುತ್ತಾರೆ. ಇಂದಿಗೂ ಜಾಗಟೆ ಕೋಲು ಹಿಡಿದು ಸ್ವರ ಏರಿಸಿದರೆ ಮತ್ತೆಲ್ಲ ಸದ್ದು ಸ್ವಯಂ ಮೌನವಾಗುತ್ತದೆ.  ಹಲವು ಕಲಾವಿದರು ಬರುತ್ತಾರೆ, ಮೆರೆದು ಆಳುತ್ತಾರೆ ಸಂಭ್ರಮವನ್ನು ಆಚರಿಸಿ ನಂತರ ಇನ್ನಿಷ್ಟೇ ಎಂದು ಅಲ್ಪವಿರಾಮ ಎಳೆದು ಹಳೆಯದರ ನೆರಳಲ್ಲೆ ಅಸ್ತಿತ್ವವನ್ನು ಗುರುತಿಸುವಲ್ಲಿ ತೃಪ್ತರಾಗಿಬಿಡುತ್ತಾರೆ.   ಆದರೆ ಸ್ವಯಂ ಕಲಾವಿದ ಎಲ್ಲ ಸಂಭ್ರಮವನ್ನು ಮೀರಿ ನಿಂತರೆ ಕಲೆ ಶಾಶ್ವತವಾಗುತ್ತದೆ.  ಬಲಿಪ್ಪರಲ್ಲಿ ಕಾಣಬಹುದಾದ ಅಮೂಲ್ಯ ವಿಷಯಗಳಿವು. ಬಹುಷಃ ಅವರಿಗೊಲಿದ ಕಲೆಗಿಂತಲೂ ಈ ವಿಚಾರಗಳು ಜೀವನದುದ್ದಕ್ಕೂ ವಿಸ್ತಾರವಾಗಿ ಹಬ್ಬಿದೆ ಎನ್ನಬೇಕು. ಬಲಿಪ್ಪರು ಹಾಡುತ್ತಾರೆ ಅಲ್ಲಿ ಮೈದುಂಬಿ ಎನ್ನುವ ವಿಶೇಷಣ ಹಚ್ಚಿದರೆ ಅದು ನಮ್ಮ ಅನಿಸಿಕೆ ಅಥವಾ ನಮ್ಮ ತಿಳುವಳಿಕೆಯ ಕೊರತೆ ಎನ್ನಬೇಕಾಗುತ್ತದೆ. ಯಾಕೆಂದರೆ  ಅವರು ಹಾಡುವುದೇನಿದ್ದರೂ ಅದು ಮೈದುಂಬಿಯೇ ಹಾಡುವುದು. ಅದಲ್ಲದೆ ಬೇರೆ ಅವರಿಗೆ ತಿಳಿದಿಲ್ಲ. ಕಲೆಯಲ್ಲಿ ಅದೂ ಯಕ್ಷಗಾನದಲ್ಲಿ ಅವರಿಗಿರುವ ಶ್ರದ್ಧೆ ಭಕ್ತಿ ಗೌರವ ಅವರಾಡುವ ಪ್ರತಿ ಚರಣದಲ್ಲೂ ಪಲ್ಲವಿಯಲ್ಲೂ ಇದ್ದು ಅದು ಗಾನಾಮೃತವಾಗುತ್ತದೆ. ಗಾನ ಅಮೃತವಾಗುವುದೆಂದರೆ ಅದು ಸರಸ್ವತಿ ಒಲಿದಾಗ. ಆ ಒಲುಮೆ ಅವರಿಗಿದೆ ಎನ್ನುವುದಕ್ಕೆ ಅವರ ದೀರ್ಘವಾದ ಕಲಾಜೀವನವೇ ಸಾಕ್ಷಿ. ಈಗಲೂ ಹಾಡಿದಾಗ ಅದೇ ಕಂಚಿನ ತರಂಗವನ್ನು ಎಬ್ಬಿಸುತ್ತದೆ. ಹಾಗಾಗಿ ಅನ್ನಿಸುತ್ತದೆ ಸರಸ್ವತಿಯ ಅನುಗ್ರಹ ಇಲ್ಲಿ ಸ್ಥಿರವಾಗಿ ಉಳಿದಿದೆ ಎಂದು.  ಸರಸ್ವತಿಯ ಒಲುಮೆ ಅನುಗ್ರಹವಾಗುವಾಗ ಅಲ್ಲಿ ಬೊಗಸೆಯೊಡ್ಜಿ ಹಿಡಿಯುವ ಭಿಕ್ಷಾ ಪಾತ್ರವೂ ಶುಭ್ರವಾಗಿರಬೇಕು. ಪಾತ್ರ ಕಿಲಿಬುದಾರೆ ಅನುಗ್ರಹಿಸಿದ ಅಮೃತವೂ ಹೆಪ್ಪುಗಟ್ಟಿ ಬೆಲೆಯೇ ಇಲ್ಲದಂತಾಗುತ್ತದೆ.

ಬಲಿಪ್ಪರ ದೇಹ ದಣಿದಿರಬಹುದು. ಆ ಕಂಠ ದಣಿಯುವುದಿಲ್ಲ ಇದೆಲ್ಲವನ್ನೂ ಯೋಚಿಸುವಾಗ ಬಲಿಪ್ಪ ಗಾನ ಎಂಬುದು ನಿತ್ಯಧಾರೆಯಂತೆ ಹರಿಯಿತ್ತಿರಲಿ ನಿಜಾರ್ಥದಲ್ಲಿ ಗಾನ ಸುಧೆಯ ಅಮೃತ ಸಿಂಚನವಾಗಲಿ ಎಂದನಿಸುತ್ತದೆ.


Monday, July 25, 2016

ಕೆಲವು ವಾಸ್ತವಾಂಶಗಳು


ನಾನು ಬಾಲ್ಯದಲ್ಲಿರುವಾಗಿನ ಒಂದು ಘಟನೆ ಇತ್ತೀಚೆಗೆ ನೆನಪಾಗಿ ಬಿಟ್ಟದ್ದು ಯಕ್ಷಗಾನದ ಅವಹೇಳನದ ಬಗೆಗಿನ ವಿಚಾರಕ್ಕಾಗಿ. ನಮ್ಮೂರಿನ ರಾಜಕೀಯ ಪಕ್ಷವೊಂದರ ಅದ್ಧೂರಿ ಸಮಾರಂಭ ವದು. ಸಮ್ಮೇಳನವೋ ಪ್ರತಿಭಟೆನೆಯೋ ನೆನಪಿಲ್ಲ.   ಸಮಾರಂಭದ ಅಂಗವಾಗಿ ಬೃಹತ್ ಮೆರವಣೆಗೆ ವ್ಯವಸ್ಥೆಯಾಗಿತ್ತು. ಸಾವಿರ ಸಾವಿರ ಸಂಖ್ಯೆಯ ಜನಗಳು ಸಾಲಾಗಿ ಮೆರವಣಿಗೆಯಲ್ಲಿ ಪಾಲುಗೊಂಡಿದ್ದರು.  ಆ ಮೆರವಣಿಗೆಯಲ್ಲಿ ಹಲವು ಕಲಾಪ್ರಕಾರಗಳು, ಜಾನ ಪದ ನೃತ್ಯಗಳು  ಕಾರ್ಯಕ್ರಮದ ಅದ್ಧೂರಿತನಕ್ಕೆ ಪೂರಕವೆಂಬಂತೆ ತಮ್ಮ ಪ್ರದರ್ಶನವನ್ನು ಮೆರವಣಿಗೆಯುದ್ದಕ್ಕೂ ನೀಡುತ್ತಿದ್ದವು. ನಾಡಿನ ಹಲವು ಕಲೆಗೆ ಈ ರೀತಿಯ ಅವಕಾಶ ಒದಗಿ ಬಂದದ್ದು ತಪ್ಪು ಎನ್ನುವುದಕ್ಕೆ ಆಗುವುದಿಲ್ಲ. ಅದೇ ರೀತಿ ಮೆರವಣಿಗೆಯಲ್ಲಿ ಯಕ್ಷಗಾನ ಕಲೆಯ ಪ್ರತಿಮೆ ಎಂಬಂತೆ ಕೆಲವು ಯಕ್ಷಗಾನ ವೇಷಗಳು ಚೆಂಡೆ ಮದ್ದಲೆಯ ಧೀಂಗಿಣಕ್ಕೆ ಹೆಜ್ಜೆ ಹಾಕತೊಡಗಿತ್ತು. ದೇವಿ ಮಹಾತ್ಮೆಯ ದೇವಿ ಮಹಿಷಾಸುರ   ದೇವೆಂದ್ರ ಹೀಗೆ ಕೆಲವಾರು ವೇಷಗಳು ಕುಣಿಯುತ್ತಾ ಮೆರವಣಿಗೆಯ ಅಂದವನ್ನು ಹೆಚ್ಚಿಸುವಲ್ಲಿ ತಮ್ಮ ದೇಣಿಗೆಯ ಸಲ್ಲಿಕೆಯ ಪ್ರಯತ್ನದಲ್ಲಿತೊಡಗಿದ್ದವು. ಆದರೆ ಶೋಚನೀಯವೆಂದರೆ ಆನಂತರದ್ದು.

 ಮೆರವಣಿಗೆ ಮುಗಿಸಿ ಮುಸ್ಸಂಜೆ ಕಳೆದ ಮೇಲೆ ಎಲ್ಲರೂ ತಮ್ಮತಮ್ಮ ಮನೆಗೆ ತೆರಳಿದರು.  ಈ ಕಲಾಪ್ರಕಾರಗಳ ಹಲವರು ಬಂದ ವೇಷದಲ್ಲೆ ಮನೆಕಡೆ ಮುಖ ಮಾಡಿದರೆ, ಊರ ಹೊರಗಿನ ಸರಾಯಿ ಅಂಗಡಿಯಲ್ಲಿ  ದೇವಿಯೂ ಮಹಿಷಾಸುರನೂ ಬೆಂಚಿಮೇಲೆ ವೇಷದಲ್ಲೇ  ಕುಳಿತು ನಶೆ ಏರಿಸುತ್ತಿದ್ದರು.   ಮಕ್ಕಳಾದ ನಮಗೆ ಈ ಘಟನೆ,  ಈ ದೃಶ್ಯ ಆಗ ಹಾಸ್ಯದ ವಸ್ತುವಾಗಿ ವಿಡಂಬನೆಯಾಗಿ ಕಂಡಿದ್ದರೆ್ ಆನಂತರ ಅದು ಬಹಳ ಕಾಡಿದ್ದೂ ಇದೆ. ಮಹಿಷನಿಗೂ ದೇವಿಗೂ ರಾಜಿಯಾಯಿತು ಎಂದು ಗೇಲಿ ಮಾಡಿ ನಕ್ಕದ್ದು ಈಗಲೂ ಕಣ್ಣಿಗೆ ಕಾಣುವಂತಿದೆ. ಆಗಿನ್ನೂ ಊರಲ್ಲಿ ಈಗಿನಂತೆ ವಿದ್ಯುತ್ ಸಹ ಸರಿಯಾಗಿರದ ಒಂದು ಅಂಧಕಾರದ ಸಮಯ. ಅಂದರೆ ಬಹಳ ವರ್ಷಗಳ ಅಯುಷ್ಯ ಈ ನೆನಪಿಗೆ ಇದೆ. ಅದು ಇಂದು ಮತ್ತೆ ಮರುಕಳಿಸಿದೆ.  ಇಲ್ಲಿ ತಪ್ಪು ಯಾರದು ಎನ್ನೋಣ? ವಿಶ್ಲೇಷಿಸುವುದು ಬಹಳ ಕಷ್ಟ.

ಇತ್ತೀಚೆಗೆ  ಟಿ. ವಿ ಮಾಧ್ಯಮದ ರಿಯಾಲಿಟಿ ಶೋದಲ್ಲಿನ ಹಾಡಿನ ದೃಶ್ಯದಲ್ಲಿ  ಯಕ್ಷಗಾನದ ಉಡುಗೆಯಲ್ಲಿ ನರ್ತಿಸಿದ್ದರು.  ಇದೇನು ಹೊಸತಲ್ಲ. ಹಲವು ಸಿನಿಮಾಗಳಲ್ಲೂ ಇನ್ನು ಹಲವು ಕಾರ್ಯಕ್ರಮಗಳಲ್ಲೂ ಇದು ಸರ್ವೇ ಸಾಮಾನ್ಯ. ಈಗ ಇವುಗಳನ್ನು ವಿಮರ್ಶಿಸುವಾಗ ಅದೇ ಮೇಲಿನ ಆ ದೃಶ್ಯ ನೋಡಿದ್ದರೆ...? ಬಹುಶಃ ಎದೆ ಒಡೆದು ಹೊಗುವ ಪರಿಸ್ಥಿತಿ ಬರಬಹುದೇ?  ಮುಖ್ಯವಾಗಿ ಶಿಸ್ತು ಪ್ರಜ್ಞೆ ಗೌರವ ಮುಂತಾದ ವಿಚಾರಗಳು ನಮ್ಮ ಮನಸ್ಸಿನ ಒಳಗಿಂದ ಪ್ರಚೋದಿಸಲ್ಪಡಬೇಕು. ಎಲ್ಲರೂ ಶುಭ್ರವಾದ ಬಿಳಿ ಉಡುಗೆಯಲ್ಲಿ ಬಂದು ನಿಂತರೆ ಒಬ್ಬ ಮಲಿನವಾದ ಉಡುಗೆ ತೊಟ್ಟವನಿಗೆ ಅವರೊಂದಿಗೆ ಸೇರುವುದಕ್ಕೆ ಸ್ವತಃ ಹಿಂಜರಿಕೆಯಾಗುತ್ತದೆ.  ಭಯ ಗೌರವವೆಂಬ ಭಾವನೆಗೆ ಅಂತರಂಗವೇ ಮೊದಲ ಸಾಕ್ಷ್ಯ.  ಹಾಗಾಗಿ ಕೊರತೆ ಎಂಬುದು ಎಲ್ಲಿರುತ್ತದೆ ಅದನ್ನು ಮೊದಲು ಸರಿಪಡಿಸುವ ಜಾಗ್ರತಾವಸ್ಥೆ ಬರಬೇಕು. ಅದನ್ನೇ ಆತ್ಮಾವಲೋಕನ ಎಂದು ಸುಸಂಸ್ಕೃತವಾಗಿ ಹೇಳುವುದು.

ಹಾಗೆ ನೋಡಿದರೆ ಇಂದು ಹೀಗೆ ಧಾಳಿಗೆ ಒಳಗಾಗಿ ತನ್ನ ಪರಂಪರೆಯ ಸೊಗಡನ್ನು ಕಳೆದು ಹೋದ ಕಲೆ ಕೇವಲ ಯಕ್ಷಗಾನ ಮಾತ್ರವೇ? ಸಿನಿಮಾ ಸಂಗೀತದ ಮೂಲಕ ಶಾಸ್ತ್ರೀಯ ಸಂಗೀತವೂ ನಲುಗಿ ಹೋಗಿರುತ್ತದೆ. ಸಂಗೀತದ ಮೇಲಂತೂ ಇದು ಪೈಶಾಚಿಕ ಧಾಳಿಯನ್ನೇ ಮಾಡಿದೆ. ಆದರೂ ಆ ಸಂಗೀತಕ್ಕೆ ತಾಳ ಬಡಿಯುವುದಿಲ್ಲವೇ? ಅಂತಹಾ ಅಭಾಸದ ಸಂಗೀತದ ಹಾಡುಗಳೇ ಯಕ್ಷಗಾನ ರಂಗಸ್ಥಳದಲ್ಲಿ ಬಳಸಲ್ಪಡುವಾಗ ನಮಗೆ ಅವಮಾನ ಎಂದರೆ ಏನು ಎಂದು ಪ್ರಶ್ನಿಸುವ ಹಾಗಾಗುತ್ತದೆ. ಅದನ್ನೇ ಆತ್ಮಾವಲೋಕನ ಎನ್ನುವುದು.   

ಹಾಗೆ ನೋಡಿದರೆ ಇಂದು ಯಾವ ಕಲೆಯೂ ಈ ರೀತಿಯ ಅಗೌರವದಿಂದ ಹೊರತಾಗಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅದು ಶೋಚನೀಯತೆಯನ್ನು ಅನುಭವಿಸುತ್ತದೆ. ಒಬ್ಬ ಉತ್ತಮ ಕೊಳಲು ವಾದಕನೋ, ತಬಲಾ ವಾದಕನೋ ಹೊರಗೆ ಸಂಚರಿಸುವಾಗ,  ರಸ್ತೆಬದಿಯಲ್ಲಿ ಭಿಕ್ಷಾರ್ಥಿಯಾಗಿ ಬಿಕ್ಷುಕನೊಬ್ಬ ತಬಲ,  ಕೊಳನ್ನು  ನುಡಿಸುವಾಗ  ಚಡಪಡಿಸಬಹುದು.  ತಾನು ಪೂಜಿಸುವ ಕಲೆಗೆ ಯಾವ ಅವಸ್ಥೆ ಬಂದೊದಗಿತಪ್ಪಾ? ಅದು ಆತನಿಗೆ ಆ ಸಂಗೀತದ ಮೇಲಿರುವ ಗೌರವ.  ಕೃಷಿಕ ಬೆಳೆದ ಅಕ್ಕಿಯ ಅನ್ನ  ಅದು ದೇವರ ನೈವೇದ್ಯದ ಬಟ್ಟಲಲ್ಲೂ ಇರಬಹುದು, ಕಸದ ತೊಟ್ಟಿಯಲ್ಲಿ ಎಸೆದ ಅವಸ್ಥೆಯಲ್ಲಿಯೂ ಇರಬಹುದು. ಇಲ್ಲಿ ಅನ್ನದ ಮಹತ್ವವೇನು ಕಡಿಮೆಯಾಗುವುದಿಲ್ಲ. ಅದನ್ನು ಉಪಯೋಗಿಸುವ ಮನೋಭಾವ ಮಾತ್ರಾ ಗಣನೆಗೆ ಬರುತ್ತದೆ.

ಟೀವಿ ಕಾರ್ಯಕ್ರಮದಲ್ಲಿ ಸಿನಿಮಾ ಹಾಡಿಗೋ ಅಥವಾ ಇನ್ನಿತರ ರೂಪಗಳಲ್ಲೋ ಯಕ್ಷಗಾನ ವೇಷಗಳನ್ನು ಕಂಡಾಗ ಪರಿಶುದ್ಧ ಯಕ್ಷಗಾನ ಅಭಿಮಾನಿಯಾದವನ ಮನಸ್ಸು ನೋವನ್ನು ಅನುಭವಿಸುತ್ತದೆ. ಇಂದು ಈ ನೋವು ಗುರುತಿಸಲ್ಪಡುವಾಗ ಗಮನ ಹರಿಸದೇ ಇರುವ ಇನ್ನು ಹಲವು ನೋವುಗಳಿರಬಹುದೆಂಬ ಕಲ್ಪನೆಯೇ ನಮಗಿಲ್ಲ. ಹೊರಗಿನ ಶತ್ರುಗಳು ಇರಿಯುವಾಗ ಸಹಿಸಬಹುದು, ನೋವು ಅನುಭವಿಸಬಹುದು. ಇಲ್ಲಾ ಪ್ರತಿಭಟಿಸಬಹುದು. ಆದರೆ ಒಳಗಿನ ಹಿತೈಷಿಗಳೇ  (ಶತ್ರುಗಳು)  ಇರಿದಲ್ಲಿ ಅದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಮಾತ್ರವಲ್ಲ ಅದು ಆತ್ಮವಂಚನೆ ಎನಿಸಲ್ಪಡುತ್ತದೆ. ಟೀವಿಯಲ್ಲೋ ಸಿನಿಮಾದಲ್ಲೋ ಅತರ ಇನ್ನಿತರ ಮಾಧ್ಯಮಗಳಲ್ಲೋ ಪ್ರದರ್ಶಿಸುವುದಕ್ಕಿಂತಲೂ ಕೀಳ್ಮಟ್ಟದಲ್ಲಿ  ಅದೂ ಯಕ್ಷಗಾನ ರಂಗಸ್ಥಳದಲ್ಲಿ ಅಭಾಸಗಳನ್ನು ಪ್ರದರ್ಶಿತವಾಗುವಾಗಲೂ ಪರಿಶುದ್ದ ಅಭಿಮಾನಿಯ ಮನಸ್ಸು ನೋವನುಭವಿಸುತ್ತದೆ. ಆದರೆ ಅದು ಗುರುತಿಸಲ್ಪಟ್ಟರೂ ಗಮನಕ್ಕೆ ಬಾರದವರಂತೆ ವರ್ತಿಸುವಾಗ ಅವಮಾನವಾಗಿ ಅದನ್ನು ಪರಿಗಣಿಸುವುದಕ್ಕೆ ಮನಸ್ಸು ಬರುವುದಿಲ್ಲ.


 ಬದಲಾಗಿ ಹೋದ ಇಂದಿನ ಯಕ್ಷಗಾನವನ್ನು ಕಂಡು ಅದೆಷ್ಟು ಮಂದಿ ಮರುಗುವುದಿಲ್ಲ?  ಈ ನೊವಿನ ಧ್ವನಿಗೆ ಅದೆಷ್ಟು ಕಿವಿಯಗಲವಾಗಿದೆ.  ಆದರೆ ಅದನ್ನು ವಿವೇಚಿಸುವುದು ಇಂದಿನ ಕಾಲದಲ್ಲಿ ಅಪರಾಧವಾಗುತ್ತದೆ.  ಬದಲಾವಣೆ ಅದು ಕಾಲಗುಣ. ಯಾರ ನಿಯಂತ್ರಣಕ್ಕೂ ಸಿಗದೆ ಅದು ಸಂಭವಿಸುತ್ತದೆ.  ಪೂರ್ಣವಾಗಿ ಅಭ್ಯಾಸ ಮಾಡದೆ ರಂಗವೇರಿ ಹೆಸರುಗಳಿಸುವ ತೆವಲು ಇಂದು ಹಲವರಲ್ಲಿ ಕಾಣಬಹುದು. ಆದರೆ ಅದನ್ನು ಅಭಿಮಾನದ ಬಣ್ಣದಿಂದಲೇ ಕಾಣುತ್ತೇವೆ ಹೊರತು ಅಲ್ಲಿ ಅಭಾಸವಾಗಿ ಕುಂದಿ ಹೋಗುವ ಯಕ್ಷಗಾನದ ಮೌಲ್ಯಗಳತ್ತ ಗಮನ ಹರಿಸುವುದಿಲ್ಲ. ಟೀವಿ ಕಾರ್ಯಕ್ರಮದಲ್ಲಿ ಯಾವುದೋ ಸ್ವಾರ್ಥ  ಸಾಧನೆಯ ದ್ಯೋತಕವಾಗಿ ಕಾಣಬಹುದು. ಆದರೆ ಸ್ವಾರ್ಥ ಕೇವಲ ಅಲ್ಲಿ ಮಾತ್ರ ಇರುವುದಲ್ಲ. ಅಭಿಮಾನದ ಪರವಾನಿಗೆಯಲ್ಲೇ ಅಭಾಸವನ್ನು ಸೃಷ್ಟಿಸುವಲ್ಲಿ ಇರುವ ಸ್ವಾರ್ಥ ಗಮನಾರ್ಹವಾಗುವುದೇ ಇಲ್ಲ. ಇದು ಇಂದಿನ ವಸ್ತು ಸ್ಥಿತಿ. ಮೊದಲಾಗಿ ಹಿರಿಯರು ಹತ್ತಿ ಕುಳಿತ ಸ್ಥಾನದಲ್ಲಿ ನಾವೇರಿ ಕುಳಿತುಕೊಳ್ಳಲು ನಾವೆಷ್ಟು ಅರ್ಹರು ಎಂಬುದನ್ನು ಮನಗಾಣಬೇಕು. ಅದಿಲ್ಲವಾದರೆ ಆ ಅರ್ಹತೆ ತಮಗಿಲ್ಲ ಎಂಬ ಸಾಮಾನ್ಯ ಪರಿಜ್ಞಾನವಾದರೂ ಇರಬೇಕು. ಇಂದಿನ ಕಾಲಕ್ಕೆ ಅದು ದುರ್ಲಭ. ಹಾಗಾದಲ್ಲಿ  ಹೇಳಿ ಹೋಗುತ್ತದೆ, ಟಿವಿಯಲ್ಲಿ ಅಲ್ವ...ಅಗಲಿ ಯಕ್ಷಗಾನಕ್ಕೆ ಹಾಗಾದರೂ ಪ್ರಚಾರ ಸಿಗಲಿ. ಎಲ್ಲ ಸ್ವಾರ್ಥ ಸಾಧನೆಯಲ್ಲಿ ಆ ಸ್ವಾರ್ಥ ಸಾಧನೆಯೂ ಯಕ್ಷಗಾನದ ಮೂಲಕ ನೆರವೇರಲಿ. ಆದರೆ ಇದರ ಹಿಂದಿರುವ ನೋವು ಅರ್ಥವಿಸುವ ಮನೋಭಾವ ಇರುವುದಿಲ್ಲ ಅದು ಇಂದಿನ ವಾಸ್ತವ. 

Thursday, July 21, 2016

ಪಾಂಡವಾಶ್ವಮೇಧದ ಯಕ್ಷಯಾನ


ಯಾವುದೇ ಒಂದು ಹೊಸ ವಸ್ತು ಸಿಕ್ಕಿದಲ್ಲಿ ಅದರ ಹೊರಾವರಣವನ್ನು ಒಂದಷ್ಟು ನೋಡುತ್ತೇವೆ. ಮೇಲೆ ಕೆಳಗೆ ಅತ್ತ ಇತ್ತ ಹೀಗೆ,  ಒಂದು ಪುಸ್ತಕವನ್ನೋ ಪತ್ರಿಕೆಯನ್ನೋ ಕಾಣುವಾಗ ಮೊದಲು ಗಮನ ಹರಿಸುವುದು ಮೊದಲ ಪುಟ ಆ ಮತ್ತೆ ಕೊನೆಯ ಪುಟ.  ಈ ನಡುವೆ ಮಧ್ಯದ ಪುಟಗಳತ್ತ ಹಲವು ಸಲ ಗಮನ ಹರಿಸುವುದು ಬೇಡವೆಂದು ಔದಾಸಿನ್ಯ ಮೂಡಿಬಿಡುತ್ತದೆ. ಆದರೆ ಅಮೂಲ್ಯವಾದದ್ದು ಹೂರಣದಂತೆ ಹೊರಾವರಣದ ವರ್ತುಲದೊಳಗೆ ಅವಿತಿರುತ್ತದೆ. ಹೊರಾವರಣವನ್ನು ದಾಟಿ ಮುಂದೆ ಹೋದರೆ ನಮ್ಮ ಔದಾಸಿನ್ಯದ ನಷ್ಟ ಪರಿಮಾಣ  ಅರಿತುಬಿಡುತ್ತದೆ.  ಹೀಗೆ ಹೊರಾವರಣವನ್ನು ದಾಟಿ ಮುಂದೆ ಹೋಗಬೇಕು ಈ ಧ್ವನಿಸುರುಳಿಯನ್ನು ಆಲಿಸುವುದಕ್ಕೆ.  ಆ ಧ್ವನಿ ಸುರುಳಿ ಗಾತ್ರದಲ್ಲಿ ಹಿರಿದಾಗಿ ಒಂದು ಪುಷ್ಕಳ ಭೂರಿಭೋಜನದ ಹರಿವಾಣದ ಮುಂದೆ ಕುಳಿತ ಅನುಭವವನ್ನು ತರುತ್ತದೆ. ಆದರೆ ಇಂದು ಪುಷ್ಕಳ ಭೋಜನವನ್ನೂ ಸವಿಯುವಲ್ಲಿಯೂ ವ್ಯವಧಾನ ಇಲ್ಲವಾಗಿದೆ.

ಕೆಲವು ಸಮಯದ ಮೊದಲು ವೇಣೂರಿನ ಮಿತ್ರ ಸುಬ್ಬಣ್ಣ ಒಂದು ಯಕ್ಶಗಾನದ ಧ್ವನಿಮುದ್ರಿತ ಡಿವಿಡಿಯನ್ನು ನೀಡಿದರು. ಇತ್ತೀಚೆಗೆ ಯಕ್ಷಗಾನದ ದ್ವನಿಮುದ್ರಣಗಳ ಹೊಸ ಸಂಗ್ರಹ ಬಹಳಷ್ಟು ಸೇರಿರುವುದರಿಂದ ಈ ಧನಿಮುದ್ರಿಕೆ ಸರದಿಯ ಸಾಲಿಗೆ ಸೇರಿಕೊಂಡುಬಿಟ್ಟಿತು. ಹೀಗೆ ನೋಡುವಾಗ ಒಂದು ಸಲ ಅದರತ್ತ ಗಮನ ಹರಿಯಿತು. ಸುಬ್ಬಣ್ಣ ನಿಂದ ನನ್ನ ಕೈಸೇರಿದಾಗಲೇ ಮೇಲೆ ಹೇಳಿದಂತೆ ಆರಂಭ ಮತ್ತು ಅಂತ್ಯ ಕೇಳಿದ್ದೆ.  ಆದರೆ ಈಗ ಆಯಾಚಿತವಾಗಿ ಹರಿದ ಗಮನ ಅದನ್ನು ಪೂರ್ಣವಾಗಿ ಕೇಳುವಂತೆ ಪ್ರೇರೇಪಿಸಿತು. ಅದರ ಗಾತ್ರದ ದೃಷ್ಟಿ ಯಿಂದ  ರಖಂ ಗ್ರಾಹಕನ ಪಟ್ಟಿಯನ್ನು ಬದಿಗಿರಿಸಿ ,  ಚಿಲ್ಲರೆ ಗ್ರಾಹಕನನ್ನು ಕಳುಹಿಸುವ ವರ್ತಕನಂತೆ ಚಿಕ್ಕ ಪುಟ್ಟ ತುಣುಕುಗಳನ್ನು ಕೇಳಿ ಸಂಗ್ರಹಕ್ಕೆ ಸರಿಸುವುದರಲ್ಲೇ ಮಗ್ನನಾದ ನನಗೆ,  ಸರಿ ಸುಮಾರು ಆರು ಘಂಟೆ ಅವಧಿಯ ಬ್ರಹತ್ ಮುದ್ರಣವನ್ನು ಕೈಗೆತ್ತಿಗೊಳ್ಳುವುದು ತಡವಾಯಿತು. ಆದರು ಈ ಎಲ್ಲದರ ನಡುವೆ ನನ್ನ ಗಮನ ಹರಿದಾಗ ಒಂದು ಸಲ ಕೇಳುವ ಎಂದು ಕಿವಿಯನ್ನು ಮುದ್ರಣದ ತುಟಿಗೆ ಒತ್ತಿಹಿಡಿದೆ.

ಅದು ಮಿತ್ರ ಸಹೋದರಾದ ಸುಣ್ಣಂಗುಳಿ ಸಹೋದರರ ಪರಿಶ್ರಮದ ಫಲ. ಪಾಂಡವಾಶ್ವಮೇಧವೆಂಬ ಯಕ್ಷಗಾನ ಹಿಮ್ಮೇಳದ ಧ್ವನಿ ಸುರುಳಿ. ಇದೊಂದು ದಾಖಲೀಕರಣದ  ಕಾರ್ಯವಾಗಿಯೇ ನೋಡಬೇಕು ಹೊರತು ಇದು ಮನರಂಜನೆಯ ವಸ್ತುವಲ್ಲ. ಇದಿಲ್ಲಿ ಮೊದಲಾಗಿ ಗಮನ ಹರಿಸಬೇಕಾದ ವಿಚಾರ. ಇಲ್ಲಿ ಮನರಂಜನೆ ಎಂಬುದು ಹಿನ್ನೆಲೆಯ ಸಂಗತಿ.

ಮನರಂಜನೆ ಎಂಬುದು ಮುನ್ನೆಲೆಯಾದಾಗ ಹಲವು ಸಲ ಅದರ ಮೌಲ್ಯಗಳು ಹಿನ್ನೆಲೆಗೆ ಜಾರಿ ಮತ್ತೆ ಮರೆಯಾಗಿಬಿಡುತ್ತದೆ. ಹೀಗೆ ಹಿನ್ನೆಲೆಗೆ ಜಾರಿದ ಪರಿಣಾಮದ ದುರಂತಗಳು ಸಾಕ್ಷಿಭೂತವಾಗಿ ಇಂದು ನಮ್ಮೆದುರು ಕುಣಿದಾಡುತ್ತದೆ. ಅದಕ್ಕೆ ಯಕ್ಷಗಾನ ಅತ್ಯಂತ ಸೂಕ್ತ ಪುರಾವೆಯನ್ನು ಒದಗಿಸುತ್ತದೆ. ಮನರಂಜನೆಯೇ ಪ್ರಧಾನವಾದ ಪರಿಣಾಮ ಯಕ್ಷಗಾನ ಇಂದು ಬಹಳಷ್ಟನ್ನು ಹಿನ್ನೆಲೆಗೆ ಜಾರಿಸಿ ಒಂದಷ್ಟನ್ನು ಒರತೆಯಂತೆ ಹನಿ ಹನಿಯಾಗಿ ಉಳಿಸಿ ಬಹಳಷ್ಟನ್ನು ಮರೆಯಾಗಿಸಿ ಕಳೆದು ಕೊಂಡಿದೆ.  ಈ ದೃಷ್ಟಿಯಿಂದ ಗಮನಿಸಿದಾಗ ಈ ಧ್ವನಿ ಸುರುಳಿಯ ಮಹತ್ವ ಅರಿವಾಗುತ್ತದೆ. ಹಾಗಾಗಿಯೇ ಇದೊಂದು ನಿಜವಾದ ದಾಖಲೀಕರಣ ಎನಿಸಲ್ಪಡುತ್ತದೆ.

            ಇದು ಯಕ್ಷಗಾನದ ಅತ್ಯಂತ ಪ್ರಸಿದ್ಧ ಪ್ರಸಂಗ ಸಂಕಲನವಾದ ಪಾಂಡವಾಶ್ವಮೇಧ ಎಂಬ ಪ್ರಸಂಗದ ಹಿಮ್ಮೇಳದ ಧ್ವನಿಮುದ್ರಿತ ದಾಖಲೀಕರಣ. ಯಕ್ಷಗಾನದ ಪರಂಪರೆಯ ಪ್ರಸಂಗ ನಡೆ ಹೇಗಿರುತ್ತದೆ ಎಂಬುದನ್ನು ಹಂತ ಹಂತವಾಗಿ ಅನಾವರಣ ಗೊಳ್ಳಿಸುತ್ತ ದಾಖಲಾತಿಯ ಪುಟಗಳಲ್ಲಿ ಒಂದೊಂದೇ ಅಕ್ಷರವನ್ನು ಸೇರಿಸುತ್ತಾ ಸಾಗುವ ಪ್ರಯತ್ನ. ಯಕ್ಷಗಾನದ ಹಾಡುಗಾರಿಕೆ ಹಿಮ್ಮೇಳವಾದನ ಇವಿಷ್ಟೆ ಇಲ್ಲಿಯ ದಾಖಲಾತಿಯ  ಶಬ್ದಗಳು.  ಇಂತಹ ಮುದ್ರಿಕೆಗಳಲ್ಲಿ ಸಹಜವಾಗಿರುವಂತೆ  ಇಲ್ಲಿ  ಅನಗತ್ಯ ವಿವರಗಳ ನಿರೂಪಣೆಯ ಕೊರೆತವಿಲ್ಲ. ಹಾಗಾಗಿ ನಿರೂಪಣೆಯ ಕಾಲವ್ಯಯವಿಲ್ಲದೆ ನಿರಂತರಾವಾಗಿ ಸಾಗುವ ಯಕ್ಷಯಾನವಿದು. ಒಂದು ಸಲ ಸ್ತುತಿ ಪೀಠಿಕೆಯಿಂದ ತೊಡಗಿದರೆ ನಂತರ ಮಂಗಳದಲ್ಲೇ ಮುಕ್ತಾಯ. ಇದರ ನಡುವೆ ಆರು ಘಂಟೆಗಳ ಸುದೀರ್ಘ ಅವಧಿಯ ಸ್ವರಯಾನ. ಆದುದರಿಂದ ನಮ್ಮ ಎಕಾಗ್ರತೆಯನ್ನು ಪ್ರತೀ ಹಂತದಲ್ಲೂ ಸ್ಥಿರೀಕರಿಸುವುದು ತುಸು ಪರಿಶ್ರಮದ ಕೆಲಸ.  ಆ ಎಕಾಗ್ರತೆ ಇದ್ದಲ್ಲಿ ಇದನ್ನು ಅಹ್ಲಾದತೆಯಿಂದ ಅನುಭವಿಸಿಬಿಡಬಹುದು. ಮಾತ್ರವಲ್ಲ ಇದು ಇದೇ ಬಗೆಯಲ್ಲಿ ಆಲಿಸಬೇಕು. ಅದಲ್ಲವಾದರೆ ಇದರ ಮಹತ್ವದ ಅರಿವಾಗುವುದಿಲ್ಲ.

            ಯಕ್ಷಗಾನದ ಅಶ್ವಮೇಧ ಪ್ರಸಂಗಳನ್ನು ಜೋಡಿಸಿ ಪಾಂಡವಾಶ್ವ ಮೇಧವನ್ನು ಆಡಲಾಗುತ್ತದೆ. ಇದರಲ್ಲಿ ಆರಂಭದಲ್ಲಿ ಪ್ರಮೀಳಾರ್ಜುನ, ನಂತರ  ಬಬ್ರುವಾಹನ ಆನಂತರ ಮಯೂರಧ್ವಜ ತಾಮ್ರಧ್ವಜ ಕಾಳಗ ಬರುತ್ತದೆ.  ಈ ಯಕ್ಷಗಾನ ಪ್ರಸಂಗದಲ್ಲಿರುವ ಕೇವಲ ಹಿಮ್ಮೇಳವನ್ನಷ್ಟೇ ಪರಂಪರೆಗೆ ಹೊಂದಿಕೊಂಡು ದಾಖಲಿಸುವಾಗ ಅದು ಆರುಘಂಟೆಗಳಷ್ಟು ಹೊತ್ತು ಲಂಬಿಸುತ್ತದೆ. ಇಲ್ಲಿ ಕುಣಿತ ಅರ್ಥಗಾರಿಕೆ ಹೆಚ್ಚೇಕೆ ನಿರುಪಣೆಯೂ ಇಲ್ಲದೆ ಇಷ್ಟೊಂದು ದೀರ್ಘ ಅವಧಿಯನ್ನು ತೆಗೆದುಕೊಳ್ಳುತ್ತದೆ. ಆದರೆ ಇಂದಿನ ವಿಪರ್ಯಾಸವೆಂದರೆ ಕಾಲಮಿತಿಯಲ್ಲಿ ಇಂದು ಈ ಪ್ರಸಂಗವನ್ನು ಬೇಕಾದರೆ ಮತ್ತೆರಡನ್ನು ಸೇರಿಸಿ ಬಯಲಾಟವಾಗಿ ಆಡಲಾಗುತ್ತದೆ. ಯಕ್ಷಗಾನ ಹೇಗೆ ಬದಲಾಗಿದೆ ಮತ್ತು ಬದಲಾದ ಯಕ್ಷಗಾನ ಹೇಗೆ ಬಡಕಲಾಗಿ ವಿಕಲಾಂಗದಂತೆ ಭಾಸವಾಗುತ್ತದೆ ಎಂಬುದನ್ನು ಊಹಿಸಬಹುದು.  ಬಹಳಷ್ಟನ್ನು ಕಳೆದು ಛೇದಿಸಿ ಪ್ರಸಂಗದ ಮನರಂಜನೆಯ ಅಂಶಗಳನ್ನು ಮಾತ್ರವೇ ತೋರಿಸಲ್ಪಡುತ್ತದೆ.  ಮಾತ್ರವಲ್ಲ ಅಭಾಸಗಳನ್ನು ಸೇರಿಸುವುದಕ್ಕೋಸ್ಕರ  ಇಲ್ಲಿ ಅಮೂಲ್ಯವಾದವುಗಳು ಮಾಯವಾಗಿ ಮೌಲ್ಯಗಳನ್ನು ಕಳೆದುಕೊಳ್ಳುತ್ತದೆ.  ಹಾಗೆ ಕಳೆದು ಹೋದಂತಹ ಮೌಲ್ಯಗಳನ್ನು ಅರಸುತ್ತ ಅದನ್ನು ಸಂಗ್ರಹಿಸುವ ಪ್ರಯತ್ನ ಇಲ್ಲಿ ಗಮನಾರ್ಹ. ಒಂದರ್ಥದಲ್ಲಿ ಯಕ್ಷಗಾನದ ರಸವನ್ನು ಅರಸುವುದು ಎಂದು ಬಗೆಯಬಹುದು. ಆದುದರಿಂದ ಇಲ್ಲಿ ಈ ಧ್ವನಿ ಮುದ್ರಣ ಕೇಳುತ್ತಾ ಸಾಗಿದಂತೆ ಕಳೆದು ಹೋದವುಗಳ ಸೂಕ್ಷ್ಮದರ್ಶನಾಗಿಬಿಡುತ್ತದೆ. ನಗರದಿಂದ ಹೊರಟ ಬಂಡಿ ಹಳ್ಳಿಯನ್ನು ಹಾದು ಹೋದಾಗ,  ಕಂಡು ಬರುವ ಹಳ್ಳಿ ಮನೆಗಳಂತೆ ಈ ಯಕ್ಷಯಾನದಲ್ಲಿ ಹಳೆಯದನ್ನು ಕಾಣುವ ಪ್ರಯತ್ನವನ್ನು ಕಾಣಬಹುದು.  

            ಇಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯರಾದ ಶ್ರೀ ಬಲಿಪ ನಾರಾಯಣ ಭಾಗವತ, ಪುತ್ತಿಗೆ ರಘುರಾಮ ಹೊಳ್ಳ ಮತ್ತು ಪದ್ಯಾಣ ಗಣಪತಿ ಭಟ್. ಹಿಮ್ಮೇಳದಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ ಮತ್ತು ಆಡೂರು ಗಣೇಶ ರಾವ್ ಸಹಕರಿಸುತ್ತಾರೆ.  

            ಸ್ತುತಿ ಪದದೊಂದಿಗೆ ಪರಂಪರೆಯ ಪೀಠಿಕೆ ವಾದನದ ಜತೆಗೆ  ಒಡ್ಡೋಲಗದ ಅನಾವರಣ ಹೀಗೆ ಇತಿಮಿತಿಯೊಳಗಿನ ಪ್ರಯತ್ನ ಶ್ಲಾಘನೀಯ. ಆರಂಭದ ಪ್ರಮೀಳಾರ್ಜುನ  ಪರಿಣಾಮಕಾರಿಯಲ್ಲದಿದ್ದರೂ  ನಂತರದ ಬಬ್ರುವಾಹನ ಯಕ್ಷಗಾನದ ಕಿಡಿಯನ್ನು ಹಾರಿಸುತ್ತಾನೆ. ಇದೊಂದು ಹೊಸ ಬಗೆಯ ಯೋಜನೆಯಾದುದರಿಂದ ಇದರ ಅನುಭವವವೂ ಹೊಸತು. ಹಾಗಾಗಿ  ಒಟ್ಟು ಯೋಜನೆಯ ಸ್ಕಿಪ್ಟ್ ಎಂದು ನಾವೇನು ಹೇಳುತ್ತಿದ್ದೇವೆಯೋ ಅದರ ಕೊರತೆ ಪ್ರಥಮದಲ್ಲಿ ಕಂಡರೆ ನಂತರದ ಬಬ್ರುವಾಹನದಲ್ಲಿ ಕಾರ್ಯಕ್ರಮದ ರೂಪುರೇಷೆ ಸ್ಪಷ್ಟವಾಗಿ ಕಂಡುಕೊಳ್ಳಲಾಗುತ್ತದೆ. ಆನಂತರದ ಎಲ್ಲ ಪದಗಳು ಮಾರ್ಮಿಕವಾಗಿ ಮೂಡಿಬರುತ್ತವೆ. ಹತ್ತು ಹಲವು ಪದಗಳು ಪುನರಾವರ್ತನೆಗೆ ನಮ್ಮನ್ನು ಪ್ರಚೋದಿಸುವಷ್ಟು ಮಾರ್ಮಿಕವಾಗಿದೆ. ಇಂದು ಮಾಯವಾಗಿಯೇ ಹೋದ ಹಲವು ಪದಗಳು ಕಿಲುಬನ್ನು ಕಳೆದ ಪುತ್ತಳಿಯಂತೆ ಹೊಸತನದ ಮೆರುಗನ್ನು ನೀಡುತ್ತವೆ.  ಕೆಲವು ಪದಗಳನ್ನು ಕೇಳುವಾಗ ಇಂದು ಪ್ರಸಂಗ ಪುಸ್ತಕದಿಂದ ಈ ಪುಟಗಳನ್ನೇ ಹರಿದೆಸೆಯಲಾಗಿದೆಯೋ ಎನ್ನುವ ಅನುಮಾನದ ಹತಾಶೆ ಭಾವನೆ ಮೂಡುತ್ತದೆ.

ನರನೆ ಕೇಳೀ ರಾಜ್ಯದರಸು ಶೇಷನ ಮೊಮ್ಮ 
ಕಟ್ಟಾಳು ಮೂರು ನರ ಲೋಕಗೆ,
ತಂದೆಯಲ್ಲವೇ ನಿನಗರ್ಜುನ   ಹಿರಿಯ ತಂದೆಯಲ್ಲವೇ ಧರ್ಮನಂದನ
ತಪ್ಪ ಪಾಲಿಸಿಕೊಂಬುದೆಲೆ ತಾಯೆ
ಪಾರ್ಥ ತಾತನೆಂಬುದೆಂತು ಎಲೆ ತಾಯೆ
ಮಧುತಿಷ ಹರಿ ಸರ್ವೋತ್ತಮನೆಂದು...
ಕರೆದೆಯ್ದು ಸಿಂಹಾಸನವೇರಿಸುತ್ತಲಾಗ
ಶೀಲ ಸಾಧು ಗುಣವಂತ..

ಹೀಗೆ ಹತ್ತು ಹಲವು ಪದಗಳು  ಸುಂದರವಾಗಿ ಆಲಿಸುವಲ್ಲಿ ಪುನರಾವರ್ತನೆಯನ್ನು ಪ್ರೇರೇಪಿಸುತ್ತವೆ. ಹಾಗೇನೆ ಒಟ್ಟು ಪ್ರಸಂಗಗಳು ವೀರರಸ ಪ್ರಧಾನ ಪ್ರಸಂಗಗಳು, ಇಲ್ಲಿನ ಏರು ಪದಗಳು ಯಕ್ಷಗಾನದ ನಿಜ ಸ್ವರೂಪವನ್ನು ಕೇವಲ ಧ್ವನಿ ಮಾತ್ರದಿಂದ ತೆರೆದಿಡುವಲ್ಲಿ ಸ್ಪರ್ಧಿಸುತ್ತವೆ.

            ಇಂತಹ ದಾಖಲೀಕರಣಗಳು ದೃಶ್ಯ ಶ್ರಾವ್ಯ ಹೀಗೆ ಎರಡೂ ಬಗೆಯಲ್ಲಿ ದಾಖಲಾತಿಗೊಳಿಸಬೇಕಾದದ್ದು ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯ. ಇದೀಗ ಧ್ವನಿ ರೂಪದಲ್ಲಿ ದಾಖಲೆಗೆ ಸೇರಿ ಹೋಗುವಲ್ಲಿ ಸುಣ್ಣಂಗುಳಿ ಮಿತ್ರರ ಶ್ರಮ ಸ್ತುತ್ಯರ್ಹ ಎನ್ನುವುದರಲ್ಲಿ ಮಾತಿಲ್ಲ. ಇಂದಿನ ವರ್ತಮಾನವೆ ಭವಿಷ್ಯತ್ ನಲ್ಲಿ ಭೂತವಾಗಿ ದಾಖಲೆಯ ಪುಟಗಳ ಅಕ್ಷರಗಳಾಗುವುದರಿಂದ ವರ್ತಮಾನ ಹೇಗೆ ಸಂದು ಹೋಗಿದೆ ಎಂಬುದು ಗಮನಾರ್ಹವಾಗುತ್ತದೆ. ಆ ನಿಟ್ಟಿನಲ್ಲಿಯೂ ಇದು ಶ್ಲಾಘನೀಯ ಕಾರ್ಯ.  ಇನ್ನು ಮುಂದೆ ಇದಕ್ಕಿಂತಲೂ ಉತ್ತಮವಾಗಿ ಇದೇ ಮಾದರಿಯ ಕಾರ್ಯಗಳು ನೆರವೇರಲಿ ಎಂಬ ಹಾರೈಕೆ ಅರ್ಥಪೂರ್ಣವಾಗುತ್ತದೆ.


Tuesday, June 14, 2016

ಏಕಾಂತದ ಅಭಿಮಾನ.

            ಎರಡು ವಾರದ ಮೊದಲು ಒಂದು ದಿನ ಬೆಳಗ್ಗೆ ಒಬ್ಬರು ಕರೆ ಮಾಡಿ “ನಿಮ್ಮಲ್ಲಿಗೆ ಬರುತ್ತಿದ್ದೇನೆ. ಯಾವ ಹೊತ್ತಿಗೆ ಬರಲಿ”  ಎಂದು ಕೇಳಿದರು. ಒಂದು ಬಾರಿ ಗೊಂದಲಕ್ಕೊಳಗಾದೆ. ಕಾರಣ ಇಷ್ಟೆ ಕರೆದ ವ್ಯಕ್ತಿ ನಮ್ಮೂರಿನ ಜನ. ಸುಮಾರು ಒಂದು ವರ್ಷದಿಂದ ಕರೆ ಮಾಡುತ್ತಿದ್ದರು.  ಕೆಲವು ಯಕ್ಷಗಾನದ ಧ್ವನಿ ಮುದ್ರಣವನ್ನು ಬೇಡುತ್ತಿದ್ದರೆ. ನಾನು ಹಾಗೆ ಬನ್ನಿ ಕೊಡುವ ಎಂದು ಹಾರಿಸುತ್ತಿದ್ದೆ. ಹಾಗೆ ಕರೆ ಮಾಡಿ ಬೇಡಿಕೆ ಸಲ್ಲಿಸುವವರ ಸಂಖ್ಯೆ ಬಹಳಷ್ಟು ದೊಡ್ಡದಿದೆ. ಕೆಲವರು ದುಡ್ದಿನ ಅಮಿಷವನ್ನು ಒಡ್ಡಿದ ಉದಾಹರಣೆ ಇಲ್ಲದಿಲ್ಲ.  ಹೆಚ್ಚಿನವರು ವಾಟ್ಸಪ್ ಮೂಲಕ ಈ ಮೇಲ್ ಮೂಲಕ ಶೇರು ಮಾಡಿ ಎಂದು ಹೇಳುತ್ತಿದ್ದರೆ ನಾನು ಅಂಥವುಗಳನ್ನು ಸಹಜವಾಗಿ ನಿರ್ಲಕ್ಷಿಸುತ್ತಿದ್ದೆ.  ಆದರೆ ಈ ಮಹನೀಯರು ಅದಾವುದನ್ನು ಕೇಳದೆ ನೇರವಾಗಿ ಬೆಂಗಳೂರಿಗೆ ಬಂದು ಎಷ್ಟೊತ್ತಿಗೆ ಬರಲಿ ಎಂದು ಕೇಳುತ್ತಿದ್ದಾರೆ. ಅನಿರೀಕ್ಷಿತ ವಿದ್ಯಾಮಾನ ನನಗೆ. ಆದರು ಅವರ ಅಭಿಮಾನ ಮತ್ತು ಪ್ರಾಮಾಣಿಕತೆಗೆ ಬಗ್ಗೆ ಮೆಚ್ಚುಗೆಯನಿಸಿತು.
            ನಾನಿರುವ ಹೊತ್ತನ್ನು ತಿಳಿದು ರಾತ್ರಿ ಎಂಟುಗಂಟೆಗೆ ನಮ್ಮ ಮನೆ ಹುಡುಕಿಕೊಂಡು ಬಂದೇ ಬಿಟ್ಟ ಜನವನ್ನು ನೋಡಿ ಮನಸ್ಸಿನಲ್ಲೇ ನಗು ಬಂತು.  ಹೀಗೆ ರಾತ್ರಿ ಹೊತ್ತು ಆಟಕ್ಕೆ ಬಂದಹಾಗೆ ಇವರಂತೆ ಹಲವರು ಬರುತ್ತಾರೆ ಬಂದು ಒಂದಷ್ಟು ಯಕ್ಷಗಾನ ಧ್ವನಿಯನ್ನು ಸಂಗ್ರಹವನ್ನು ನೋಡಿ ಕಣ್ಣರಳಿಸುತ್ತಾರೆ.  ಹಾಗೆ ಬಂದವರಿಗಿಂತಲೂ ಈಗ ಬಂದವರು ಬಹಳ ವಿಬ್ಭಿನ್ನ. ಹಾಗೆ ಕಾಣುವುದಕ್ಕೆ ಕಾರಣವೂ ಇದೆ. ಹೆಚ್ಚಿನವರು ಬೆಂಗಳೂರಲ್ಲಿದ್ದುಕೊಂಡು ಅಥವಾ ಇಲ್ಲಿಗೆ ಇನ್ನಿತರ ಕೆಲಸದ ನಿಮಿತ್ತ ಬಂದವರು ಇಲ್ಲಿಗೆ ಬಂದರೆ,  ಇನ್ನು ಕೆಲವರು ನನ್ನ ಮೇಲಿನ ಆತ್ಮಿಯತೆಯಿಂದ ಬರುತ್ತಿದ್ದರು.. ಆದರೆ, ಈ ವ್ಯಕ್ತಿ ಕೇವಲ ನನ್ನ ಯಕ್ಷಗಾನ ಕೇಳಿ ಕೊಟ್ಟರೆ ಒಂದಷ್ಟು ತೆಗೆದುಕೊಂಡು ಹೋಗುವುದಕ್ಕೋಸ್ಕರವೇ ದೂರದ ಊರಿನಿಂದ  ಬಂದಿದ್ದರು !  ಅಚ್ಚರಿಯಾಯಿತು. ಹಲವು ರೀತಿಯ ಅಭಿಮಾನಗಳನ್ನು ಇಲ್ಲಿ ಕಂಡ ನನಗೆ ಇದು ಬಹಳ ವಿಶಿಷ್ಟವಾಗಿ ಕಂಡಿತು. ಹಾಗೆ ನನ್ನ ಅಭಿಮಾನ ಇವರೊಂದಿಗೆ ತುಲನೆ ಮಾಡಿದಲ್ಲಿ ನನ್ನದು ಏನೇನು ಅಲ್ಲದ ಅಭಿಮಾನ.
            ಬಂದವರು ಅವರ ಅನುಭವ ಅಭಿಮಾನಗಳ ಪೈಕಿ ಒಂದಷ್ಟು ಪ್ರವರ ಒಪ್ಪಿಸಿದರು. ಬಲಿಪ್ಪರ  ಬಗ್ಗೆ ಅಪಾರವಾದ ಅಭಿಮಾನ ಇದ್ದ ಅವರಿಗೆ ಅದೇ ಧ್ವನಿ ಮುದ್ರಣಗಳನ್ನು ಕೇಳುವ ಹಂಬಲ. ಕೆಲವನ್ನು ಹಾಕಿ ಕೇಳಿಸಿದೆ.  ಅತ್ಯಂತ ಹಳೆಯ ಧ್ವನಿಮುದ್ರಣದ ಕೆಲವು ಪದಗಳನ್ನು ಕೇಳಿ ಭಾವುಕರಾಗಿಬಿಟ್ಟರು. “ ಏನೇ ಹೇಳಿ ಮಾರಾಯ್ರೆ ಬಾಕಿ ಎಲ್ಲರ ಪದವೂ ಕೇಳಿಕ್ಕೆ ಒಳ್ಳೆದಾಗ್ತದೆ. ಆದರೆ ಯಕ್ಷಗಾನದ ಸರಿಯಾದ ಅನುಭವ ಆಗುವುದು ಬಲಿಪ್ಪರ ಪದ ಕೇಳುವಾಗ. ಅದು ವೇಷ ಕಣ್ಣೆದುರು ಕುಣಿದ ಹಾಗೆ ಆಗ್ತದೆ.” ಕೇವಲ ಎರಡು ವಾಕ್ಯಗಳಲ್ಲಿ ವಿಪುಲವಾದ ಅರ್ಥವನ್ನು ತುಂಬಿಸಿ ಹೇಳಿಬಿಟ್ಟರು. ಪರಂಪರೆಯ ಗಾಢವಾದ ಅನುಭವವನ್ನು ಅಹ್ಲಾದವಾಗಿ ಹೃದಯಕ್ಕೆ ತುಂಬಿಸುವ ಭಂಗಿಯಲ್ಲಿ ಕೇಳುತ್ತಾ ಕುಳಿತುಬಿಟ್ಟರು.
            ಅವರಿಗಾಗಿ ಹಳೆಯ ಬಲಿಪ್ಪ ಮತ್ತು ಕುದ್ರೆಕೊಡ್ಲು ರವರ ಪದ ಒಂದನ್ನು ಹಾಕಿದೆ.  ಆಗ ಅವರ ಮುಖದ ಭಾವನೆ ಓದುವುದೇ ನನಗೊಂದು ಕೌತುಕವಾಗಿತ್ತು.  ಅವರು ಹೇಳಿದರು “ ಹಳೆಯದನ್ನು ಕೇಳಬೇಕು. ಆಗ ಸ್ಪಷ್ಟವಾಗುತ್ತದೆ, ಈಗಿನದ್ದು ಎಷ್ಟು ಹಾಳಾಗಿದೆ ಎಂದು.” ಅದನ್ನು ಅಲ್ಲಗಳೆಯುವ ಮನಸ್ಸಾಗಲಿಲ್ಲ.  ಕೆಟ್ಟದ್ದರ ಪರಿಚಯವಿದ್ದರೆ ಒಳ್ಳೆಯದರ ಅನುಭವವಾಗುತ್ತದೆ. ಇದು ಒಳ್ಳೆಯ ಸಿದ್ಧಾಂತ. ಆದರೆ ವಾಸನೆ ಎಂದು ತಿಳಿಯಬೇಕಾದರೆ ಪರಿಮಳದ ಅಗತ್ಯವಿರುವುದಿಲ್ಲ. ಅಂತರಂಗದ ಸ್ಪಂದನೆ ಜಾಗ್ರತವಾಗಬೇಕು ಅಷ್ಟೆ. ಮತ್ತೊಂದಿದೆ ದುರ್ವಾಸನೆಯೇ ಅಭ್ಯಾಸವಾದ ಮೇಲೆ  ಮೊದಲು ಮೂಗು ಮುಚ್ಚಿದರೂ ನಂತರ ಮೂಗು ಹಿಡಿಯದೆ ಓಡಾಡುವಂತೆ ಎಲ್ಲ ಸಹಜವಾಗಿಬಿಡುತ್ತದೆ. ಇದು ಪ್ರಕೃತಿ ನಿಯಮ.   
            ಅವರತಾಳ ಬಡಿಯುತ್ತಿದ್ದ ಕೈಯನ್ನು ಚಾಚಿ ನನ್ನ ಕೈ ಹಿಡಿದು ಹೇಳಿದರು. “ಬಹಳ ಸಂತೋಷವಾಯಿತು ಮಾರಾಯ್ರೆ.  ಇದು ಕೇಳುವುದಕ್ಕೆ ಮಾತ್ರವಲ್ಲ ಉಳಿಸಿಕೊಳ್ಳುವುದಕ್ಕೂ ಭಾಗ್ಯಬೇಕು. “ ಇದರ ಮರ್ಮಾರ್ಥ ಹೀಗೆ ಎಂದು ನಿರ್ಣಯಿಸುವುದರಲ್ಲಿ ನಾನು ವಿಫಲನಾದೆ. .
                ಹೌದು, ಪ್ರತಿನಿತ್ಯವೂ,  ಇಡೀ ದಿನ ಸಮಯವಿಲ್ಲದೇ ಇದ್ದರೂ ರಾತ್ರಿ ಮಲಗುವಾಗ ಒಂದೆರಡಾದರೂ ಬಲಿಪ್ಪರ ಪದ ಕೇಳಿ ಮಲಗುವುದು ರೂಢಿಯಾಗಿದೆ. ಸಂಧ್ಯೆಯ ಗಾಯತ್ರಿಯಂತೆ ಅದು ಗಾಢವಾಗಿ ಬದುಕಿಗೆ ಹೊಸೆದುಕೊಂಡಿದೆ. ಹಾಗಾಗಿ ಅವರ ಆಸ್ವಾದನೆಯ ಅನುಭವದ  ಆಳವನ್ನು ಅರಿಯಬಲ್ಲೆ. ಅದನ್ನು ಅವರ ಮುಖದಲ್ಲಿ ಓದಬಲ್ಲೆ. ನನ್ನಲ್ಲಿಗೆ ಬಂದ ಉದ್ದೇಶವನ್ನೆ ನೋಡುತ್ತಾ ಪರಾಂಬರಿಸುತ್ತಿದ್ದೇನೆ.  ಕಲೆಯ ಮೇಲಿನ ಸುಪ್ತ ಅಭಿಮಾನವನ್ನು ಕಂಡೆ. ಸುಪ್ತವಾದ ಅಭಿಮಾನ ಕಲೆಯನ್ನು ಗಾಢವಾಗಿ ತನ್ಮಯತೆಯಿಂದ ಅನುಭವಿಸುತ್ತದೆ. ಯಾಕೆಂದರೆ ಅಲ್ಲಿ ಮನಸ್ಸಿನ ಭಾವನೆಗಳೆಲ್ಲವೂ ಅನುಭವಿಸುವುದರಲ್ಲಿ ಕೇಂದ್ರಿಕೃತವಾಗಿರುತ್ತದೆ. ಅಲ್ಲಿ ಆಡಂಬರ ಇಲ್ಲ. ಅಭಿಮಾನಗಳ ಮಾತ್ಸರ್ಯದ ಮೇಲಾಟವಿಲ್ಲ. ಕೇವಲ ಅನುಭವಿಸುವುದಷ್ಟೇ.  ಇಂದು ಅಭಿಮಾನದಲ್ಲೂ ಸ್ಪರ್ಧೆ. ಅದನ್ನು ತೋರಿಕೊಡುವುದರಲ್ಲೂ ಸ್ಪರ್ಧೆ. ಹೋಗಲಿ ಅದನ್ನು ಅನುಭವಿಸುವುದರಲ್ಲೂ ಸ್ಪರ್ಧೆ. ಸ್ಪರ್ಧೆ ಎಂದಾಗ ಅಲ್ಲಿ ಹಿಂದಿಕ್ಕುವುದೇ ಪ್ರಧಾನವಾಗಿ ಸ್ವಪ್ರತಿಷ್ಠೆಯ ಕೈ ಮೇಲಾಗುತ್ತದೆ.  ಇಂದು ಯಕ್ಷಗಾನದಲ್ಲಿ ಒಂದಷ್ಟು ರಾಜಕೀಯ ಎಂಬುದು ಮಿಳಿತವಾಗಿದ್ದರೆ ಅದಕ್ಕೆ ಒಂದು ಮುಖ್ಯ ಕಾರಣ ಈ ಅಭಿಮಾನದ ಸ್ಪರ್ಧೆ. ತಮ್ಮ ಅಭಿಮಾನ ಇನ್ನೊಬ್ಬರು ಗುರುತಿಸಬೇಕೆನ್ನುವ ತುಡಿತ.  ಅವೆಲ್ಲದರ ನಡುವೆ ಇಂತಹ ಅಭಿಮಾನಗಳನ್ನು ಕಂಡಾಗ ಮೌನದ ನಗುವೊಂದು ಮೂಡಿ ಮರೆಯಾಗುತ್ತದೆ.
            ಕೆಲವೊಂದು ಯಕ್ಷಗಾನ ಮುದ್ರಣಗಳನ್ನು ತಮ್ಮ ಮೊಬೈಲ್ ಗೆ ರವಾನಿಸುವಂತೆ ಕೇಳಿದರು. ಇಲ್ಲ ಎನ್ನುವ ಮನಸ್ಸಾಗುವುದಿಲ್ಲ. ಕೆಲವೊಂದು ನೀಡಿದ ನಂತರ ಹೇಳಿದೆ ಜೋಪಾನ. ನಿಮ್ಮಂತಹವರ ಕೈಗೆ ಸಿಕ್ಕಿದರೆ ಪರವಾಗಿಲ್ಲ. ಎಲ್ಲಿದ್ದರೂ ಅದರ ಗೌರವವನ್ನು ಉಳಿಸುವ ಭಾವನೆ ಇರುತ್ತದೆ.  ಬಯಲಾಟ ಮುಗಿವವರೆಗೆ ಅಲ್ಲಿ ಇಲ್ಲಿ ಭದ್ರವಾಗಿ ಕೈಯಲ್ಲಿ ಓಡಾಡುವ ಕರಪತ್ರ ಆನಂತರ ಚರಂಡಿಯಲ್ಲಿ ಕಾಣಸಿಗುತ್ತದೆ.  ಇದು ವಾಸ್ತವ.  

            ಸಂತೃಪ್ತಿಯಿಂದ ಎದ್ದು ನಿಂತು ಕಂಕುಳಲ್ಲಿ ಬ್ಯಾಗ್ ನೇತಾಡಿಸಿ ನಮಸ್ಕಾರ ಹೇಳಿದರು. ಹೊರಟು ನಿಂತ ಅವರ ಜತೆ ಅಂಗಳದ ವರೆಗೂ ಬಂದು ಬೀಳ್ಕೊಟ್ಟೆ. ನಿಧಾನವಾಗಿ ಕೈ ಆಡಿಸುತ್ತಾ ಬೆನ್ನು ತೋರಿಸಿ ನಡೆದು ಬಿಟ್ಟರು.  ಕೈಯಲ್ಲಿದ್ದ ಮೊಬೈಲ್ ನ್ನು ಕಿವಿಗಾನಿಸಿ ಯಕ್ಷಗಾನವನ್ನು ಕೇಳುತ್ತಾ ನಿಧಾನವಾಗಿ ನಡೆದು ಹೋಗುತ್ತಿದ್ದ ಅವರನ್ನು ರಸ್ತೆಯ ತಿರುವಲ್ಲಿ ಮರೆಯಾಗುವವರೆಗೂ ನೋಡುತ್ತಾ ನಿಂತೆ. ಅಭಿಮಾನವನ್ನು ಏಕಾಂಗಿಯಾಗಿ ಅನುಭವಿಸುವುದರಲ್ಲಿ ಒಂದು ಸುಖವಿದೆ ಎಂದನಿಸಿತು.