ಕಾಯಜಪಿತಲೋಕ ನಾಯಕ ಹರಿಯೆ...”
ಕಪ್ಪು ಮೂರರ ಶೃತಿಯಲ್ಲಿ ಆರಂಭದಿಂದಲೇ ಈ ಪದವನ್ನು
ಎಬ್ಬಿಸಿದಾಗ, ಗಾನವೈಭವಕ್ಕೆ ಹಾಕಿದ ಮರದ ಪೀಠ ಕಂಪಿಸಿದ ಅನುಭವವಾಯಿತು. ಕೇವಲ ನನಗೆ
ಮಾತ್ರವೇ ಅದಂತಹ ಕಂಪನದ ಅನುಭವ ಆ
ಘಳಿಗೆಯನ್ನು ಮರೆಯದಂತಹ ಪುಟಗಳ ಸಾಲಿಗೆ
ಸೇರಿಸಿತು. ಗಾನವೈಭವದ ಆರಂಭದ ಹಂತವದು. ಈ ಪದದ ಅರಂಭದ ಉಕ್ತಿಯನ್ನು ಹೇಳಿ ಪ್ರಸಾದರತ್ತ ನೋಟ
ಹರಿಸಿದ್ದೆ. ಶೃತಿಯನ್ನು ಹೊಂದಿಸಿ ಮಾಯಗಾರನ ಮಂತ್ರದಂಡವನ್ನು ಆಡಿಸಿದಂತಾಯಿತು. ಕುಳಿತ
ಅಟ್ಟಣಿಗೆ ಕಂಪಿಸಿತೇ? ಇದು ಕೇವಲ ನನ್ನ ಅನುಭವ ಎಂದುಕೊಂಡು ಮುಂದಿನ ಚರಣಕ್ಕೆ ಕಿವಿಯಗಲಿಸಿದೆ. ಹಾಗೆ
ನೋಡಿದರೆ ಆ ರೀತಿ ವೇದಿಕೆಯಲ್ಲಿ ಭಾಗವತರ ಪಕ್ಕ ಕುಳಿತದ್ದು ನನ್ನ ಮೊದಲ ಅನುಭವ. ಆದುದರಿಂದ ನಾನು
ಭ್ರಮಾಧೀನ ಸ್ಥಿತಿಗೆ ತಲುಪಿದ್ದೇನೆಂಬ ವಾಸ್ತವ ಅರಿವಾಯಿತು. ಅವಿಸ್ಮರಣೀಯ ಅನುಭವ ಎಂದು
ಹೇಳಬೇಕು.
![]() |
| ಚಾಯಾ ಚಿತ್ರ....ವಾಟ್ಸಪ್ ಮಿತ್ರರು |
ಪ್ರಸಾದ
ಭಾಗವತರ ಕಂಚಿನ ಕಂಠದಲ್ಲಿ ಪದದ ಉತ್ತರ ಭಾಗ ಏರುತ್ತಾ ಹೋಗುವುದು ಕೇಳುವುದೇ ಸೋಗಸು. ಸುಮಾರು ಎರಡು ದಶಕದ ಹಿಂದೆ ಪ್ರಸಾದರು ರಂಗಸ್ಥಳ ಏರುವಾಗ
ಅವರಿಗೆ ಸಭಾಕಂಪನದ ಅರಿವಾಗಿತ್ತೋ ಏನೋ ತಿಳಿಯದು, ಈಗ ಅವರ ಸ್ವರಕ್ಕೆ ರಂಗಸ್ಥಳವೇ
ಕಂಪಿಸತೊಡಗುತ್ತದೆ ! ಇದು ಉತ್ಪ್ರೇಕ್ಷೆ ಎಂದು ನನಗನಿಸುವುದಿಲ್ಲ. ಹೀಗೆ
ಅವರಲ್ಲಿ ಹೇಳಿದರೆ ಒಂದು ತುಟಿಯಂಚಿನಲ್ಲಿ ಅದೇ ಮುಗ್ಧ ನಗುವನ್ನುತೋರಿಸಿಬಿಡುತ್ತಾರೆ. ತನ್ನ ವಯಸ್ಸಿನ ಅರ್ಧಕ್ಕಿಂತಲೂ ಹೆಚ್ಚಿನ ವರ್ಷವನ್ನು
ರಂಗಸ್ಥಳದಲ್ಲೇ ಕಳೆದ ಅನುಭವಿ ಎಂಬುದನ್ನು ಅನುಮಾನಿಸುವಂತಹ ಮುಗ್ಧ ಆತ್ಮೀಯ ನಗುವದು.
ಪಲ್ಲವಿ ಸಂಸ್ಥೆಯ ಭಾರವಾಹಿಗಳು ನಿರೂಪಣೆಗೆ ನನ್ನನ್ನೆ
ಹೊಣೆಯಾಗಿಸಿದಾಗ ನಿಜಕ್ಕೂ ಒಲ್ಲದ ಮನಸ್ಸಿನಿಂದ
ಒಪ್ಪಿದ್ದೆ. ವೇದಿಕೆಯಲ್ಲಿ ತೆರೆದುಕೊಳ್ಳುವುದು
ನಾನು ಬಯಸದ ಪ್ರಮೇಯ. ಯಾರಾದರೂ ಅದರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರೆ ಆ ಪದಗಳ ಪಟ್ಟಿಗೆ
ನನ್ನಿಚ್ಛೆಯ ಒಂದೆರಡನ್ನು ಸೇರಿಸುವ ಬಯಕೆಯಲ್ಲಿ ಕೇಳಿದ್ದೆ. ಆದರೆ ಹೀಗೆ ಎಲ್ಲವೂ ನನ್ನ ಹೆಗಲೇರಿ
ಬಿಡುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ, ಮಾತ್ರವಲ್ಲ ಅದಕ್ಕೆ ನಾನು ಸಿದ್ಧನೂ ಇರಲಿಲ್ಲ. ನನಗೆ
ನಿರ್ವಹಿಸಲಾಗದ ಒಂದು ಭಾರ ಹೆಗಲ ಮೇಲೇರಿ ಆತಂಕವನ್ನು ಸೃಷ್ಟಿಸಿತ್ತು. ಆತಂಕವಿದ್ದರೂ ಅದೊಂದು ಹಿತಾನುಭವ ಇದು ಪ್ರಾಮಣಿಕ
ಅನಿಸಿಕೆ.
ಜವಾಬ್ದಾರಿ ಸಿಕ್ಕಿದ ಮೇಲೆ ಮತ್ತದನ್ನು
ಪ್ರಾಮಾಣಿಕವಾಗಿ ನಿರ್ವಹಿಸುವ ಒತ್ತಡ ತಾನಾಗಿಯೇ ಪ್ರಚೋದನೆಗೊಂಡಿತು. ಹಾಗಾಗಿ ವಾಡಿಕೆಯಂತೆ
ವೇಣೂರು ಸುಬ್ಬಣ್ಣನ ಮೊರೆ ಹೋದೆ. ಸುಬ್ಬಣ್ಣನೋ ಬಹಳ ಸಡಗರದಿಂದ ಸ್ತುತಿ ಪದ, ಪೂರ್ವರಂಗ,
ಒಡ್ಡೋಲಗ ಹೀಗೆ ಮೊದಲು ರಾಗ ತಾಳಗಳ ಹೆಸರನ್ನು ಎಸೆಯುತ್ತಾ ಹೋದರು. ನನಗೆ ಬರೆದಿಡುವಷ್ಟು
ವ್ಯವಧಾನವಿಲ್ಲ. ಬಾಲ್ಯದಲ್ಲಿ ತೋಟದ ಆಳು ದೊಡ್ಡ
ಮಾವಿನ ಮರ ಹತ್ತಿ ಕೊಯ್ದ ಮಾವನ್ನು ಎಸೆಯುತ್ತಿದ್ದ ನೆನಪಾಯಿತು. ಕೆಳಗೆ ನಿಂತ ನಾವು ಬೀಳುವ
ಮಾವಿಗೆ ಬೊಗಸೆಯೊಡ್ಡುತಾ ಅತ್ತಿಂದ ಇತ್ತ ಇತ್ತಿಂದತ್ತ ಓಡಿದ ಅನುಭವ. ರಾಗ ತಾಳಗಳ ಪಟ್ಟಿ ಸಿದ್ದವಾದಂತೆ ಅದಕ್ಕೆ ಪದಗಳನ್ನು
ಸೇರಿಸುವುದಕ್ಕೆ ತೊಡಗಿದೆವು.
ಒಂದೊಂದು ಪದಗಳನ್ನು ಪಟ್ಟಿಗೆ ಏರಿಸುವಾಗಲೇ ರೋಮಾಂಚನವಾದಂತಾಗುತ್ತಿತ್ತು. ಬಹಳಷ್ಟು ಅಪರೂಪದ
ಪದಗಳಾಗಬೇಕೆಂಬ ಅವ್ಯಕ್ತ ಕಾಳಜಿ ಇತ್ತು. ಬಲಿಪ್ಪರೇ ಬರೆದ ಪ್ರಸಂಗವಾದ ಐದು ದಿನದ ದೇವಿಮಹಾತ್ಮೆ
ಪ್ರಸಂಗದ ಬಹಳಷ್ಟು ಪದಗಳನ್ನು ಸೇರಿಸಿಯಾಯಿತು. ಸುಬ್ಬಣ್ಣ ತನ್ನ ಸಂಗ್ರಹದಿಂದ ಬಹಳಷ್ಟು
ಪದಗಳನ್ನು ಕಳುಹಿಸಿಕೊಟ್ಟರು. ಯಾವ ರಾಗ ತಾಳ ಎಲ್ಲಿರಬೇಕೋ ಆ ಸರದಿ ಮೊದಲು ಸಿದ್ದವಾಗಿತ್ತು.
ಅದಕ್ಕೆ ಹೊಂದುವ ಹಾಗೆ ಪದಗಳನ್ನು ಸೇರಿಸಬೇಕು. ಮೊದಲ ದಿನ ರಾತ್ರಿ ಹನ್ನೊಂದಾದರೂ ಪಟ್ಟಿ
ಅಂತಿಮವಾಗಲೇ ಇಲ್ಲ!!! ಒಂದು ರೀತಿ ತಳಮಳ ಬೇರೆ. ಪದಗಳನ್ನು ಟೈಪಿಸಿ ಇಬ್ಬರೀಗೂ ಪ್ರತ್ಯೆಕ ಪಟ್ಟಿಯನ್ನು
ಸಿದ್ದ ಪಡಿಸಬೇಕಾಗಿತ್ತು. ಅಂತೂ ಭಾನುವಾರ ಹತ್ತುಘಂಟೆಯ ತನಕವೂ ಈ ಕೆಲಸ ಲಂಬಿಸಿತು. ಆದರೂ ಪಟ್ಟಿ
ಅಂತಿಮವಾದಾಗ ಒಂದು ಬಗೆಯ ರೋಮಾಂಚನ ಮತ್ತು ಕಾತರ.
ಕಾರ್ಯಕ್ರಮ ಆರಂಭವಾಗುವುದಕ್ಕೆ ಮೊದಲು ಪ್ರಸಾದರಲ್ಲೂ
ಬಲಿಪರಲ್ಲೂ ಸಲಹೆ ಸೂಚನೆಯನ್ನು ತೆಗೆದುಕೊಂಡೆ. ಆತಂಕ ಬಹಳಷ್ಟು ದೂರಾಗಿತ್ತು. ಬಲಿಪ ಪ್ರಸಾದರ ಒಂದೆರಡು
ಅನಿಸಿಕೆ ಹೇಳಲೇಬೇಕು. ಪದಗಳ ಆಯ್ಕೆ ಪಟ್ಟಿ
ನನ್ನದು ಎಂದು ತಿಳಿದಾಗ ಮೊದಲ ದಿನವೇ ಎರಡು ಮೂರು ಸಲ ಕರೆ ಮಾಡಿ ಕೇಳಿದರು. ನಿಜಕ್ಕಾದರೆ
ಕಾರ್ಯಕ್ರಮ ಆರಂಭಕ್ಕೆ ಒಂದು ಅರ್ಧಗಂಟೆಗೂ ಮುನ್ನ ವಿಚಾರಿಸಿ ಸಿದ್ದಪಡಿಸುವುದು ರೂಢಿ. ಆದರೆ
ಅವರು ಕೇಳಿದ ಆ ಧ್ವನಿ ಭಾವ ವಿಶೇಷವಾಗಿತ್ತು. ಮರುದಿನ ಪರೀಕ್ಷೆಯ ಅಭ್ಯರ್ಥಿಯಂತೆ ಕಂಡಿತು.
ಹಲವಾರು ಪ್ರಸಂಗ ಕಂಠಸ್ಥವಾಗಿಯೂ ಯಾವುದೇ ಪೌರಾಣಿಕ ಪ್ರಸಂಗವನ್ನು ಆಡಿಸುವಂತಹ ಪಳಗಿದ ಭಾಗವತನ
ಅತ್ಮವಿಶ್ವಾಸ ಬಲವಾಗಿರುತ್ತದೆ. ಹೀಗಿದ್ದು ಅವರು ಮೊದಲೇ ವಿಚಾರಿಸುವುದು ಕಾರ್ಯದ ಬಗ್ಗೆ ಇರುವ
ಗೌರವ ಜತೆಗೆ ನಮ್ಮ ಮೇಲಿರುವ ಪ್ರೀತಿಆದರವನ್ನು ತೋರಿಸುತ್ತದೆ.
ಗಜಮುಖದವಗೆ ಸ್ತುತಿ ಪದವನ್ನು ಪ್ರಸಾದರು ಆರಂಭಿಸಿದಾಗ
ಮನಸ್ಸು ತಾನೇ ತಾನಾಗಿ ಸಂಭ್ರಮವನ್ನು ಅನುಭವಿಸತೊಡಗಿತು. ಭಾಗವತರ ಪಕ್ಕದಲ್ಲೇ ಇರುವ ಅವಕಾಶ ಅಚಾನಕ್ಕಾಗಿ
ಸಿಕ್ಕಿದ್ದು, ಅದರ ಪೂರ್ಣ ರೋಮಾಂಚನ ಅನುಭವಿಸತೊಡಗಿದೆ ಎನ್ನಬೇಕು. ಇಲ್ಲಿ ಒಂದು ಪದದ ನಂತರ
ಇನ್ನೊಂದು ಮಧ್ಯೆ ನನ್ನ ನಿರೂಪಣೆ, ಅದ ಸ್ವತಹ ನನಗೇ ಬೇಡಾಗಿತ್ತು. ಹಾಗಾಗಿ ಬಹಳ ಸಣ್ಣದಾಗಿ ವಿವರ
ಹೇಳಿ ಪದಕ್ಕೆ ಕಿವಿಯೊಡ್ಡುತ್ತಿದ್ದೆ. ಸ್ಪಷ್ಟ
ಉಚ್ಚಾರದಿಂದ ಬಲಿಪ್ಪರ “ ಚಿಕ್ಕ ಪ್ರಾಯದ ಬಾಲೆ”
ಹಳೆಯ ಪೂರ್ವರಂಗವನ್ನು ನೆನಪಿಗೆ ತಂದಿತು.
ಅಪರೂಪದ ಒಡ್ಡೋಲಗದ ಪದಕ್ಕೆ ಮಕರಾಕ್ಷಕಾಳಗದ ಪದವಾದ “ ರಾಜಕುವರರು ಕೇಳಿ ರಾಜೇಂದ್ರ
ರಾಘವನು...” ಪದ ಅದ್ಭುತವಾಗಿ ಬಲಿಪ್ಪರು ತನ್ಮಯರಾಗಿ ಹಾಡಿದರು. ಗಾನವೈಭವಕ್ಕೆ ಇದು ಅತ್ಯಂತ
ಭಿನ್ನವಾದ ಪದ.
“ನೋಡು ನೋಡನುಜ ನೀನಾ ಕಡೆಯಾ....” ಐದು ದಿನದ ದೇವಿ
ಮಹಾತ್ಮೆಯ ಸುಂದರ ಪದಗಳಲ್ಲಿ ಒಂದು. ಚಂಡ ಮುಂಡರ ಸನ್ನಿವೇಶದ ಪದವನ್ನು ಬಾಯಿತಾಳದೊಂದಿಗೆ ಪ್ರಸಾದರು
ಹಾಡಿದಾಗ ನನಗೆ ಸ್ವರ್ಗಕ್ಕೆ ಮೂರೇಗೇಣು. ಅದರ ಗುಂಗಿನಲ್ಲಿ ನಂತರ ಪದವನ್ನು ತಡಕಾಡುವ ಹಾಗಾಯಿತು
. ಹಲವು ಸಲ ನನ್ನಿಂದಲೇ ರಸಾಭಾಸವಾಗಿದೇಯೋ ಎಂಬ ಅನುಮಾನವಿದೆ. ಸರದಿಯಲ್ಲಿ ಹಾಡಿದ ದ್ವಿಪದಿ ಪದಗಳು “ ಹಹ ಈವನ ನೋಡದವ ಮನುಜನಲ್ಲ....” ಪ್ರಸಾದರು ಹಾಡಿದ “ ರಂಗನ್ಯಾತಕೆ ಬಾರನೆ...” ಕೃಷ್ಣ
ಚರಿತೆಯ ಈ ಪದ ಪ್ರಸಾದರ ಪೇಟೆಂಟ್ ಪದವಾಗುವ ಎಲ್ಲ ಲಕ್ಷಣವನ್ನೂ ತೋರಿಬಿಟ್ಟಿತು. ದೇವಿ ಮಹಾತ್ಮೆಯ ಸ್ವರಚಿತ ಪದ “ ಪಾವನರು
ನಾವಾದೆವೈ....” ಯನ್ನು ಬಲಿಪ ನಾರಾಯಣ ಭಾಗವತರು ಭಾವನಾತ್ಮಕವಾಗಿ ಹಾಡಿದರು.
ಕೊನೆಯಲ್ಲಿ ಹದಿನೈದು ನಿಮಿಷಗಳಷ್ಟು ಹೆಚ್ಚು ಸಮಯಾವಕಾಶ
ಲಭಿಸಿ, ಅದನ್ನು ಪ್ರಸಾದ ಬಲಿರು ಸೂಕ್ತವಾಗಿ ಬಳಸಿಕೊಂಡರು. ಇದರಿಂದ ಸ್ಫೂರ್ತಿಗೊಂಡ ಬಲಿಪ್ಪರು
ತಮ್ಮ ಅರೋಗ್ಯವನ್ನು ಲೆಕ್ಕಿಸದೇ ಎಲ್ಲ ನೋವನ್ನು ಮೀರಿ ಹಾಡಿ ಹಾಡಿ ದೈತ್ಯಶಕ್ತಿಯಂತೆ
ಗೋಚರಿಸಿದರು. ಇದುವರೆಗೆ ನಾವು ಹೇಳಿದ , ನಮ್ಮ ಬೇಡಿಕೆಯ ಪದಗಳನ್ನಷ್ಟೆ ಹಾಡಿದರು. ಆದರೆ ಗಾಯಕ
ಸ್ವಯಂ ಸ್ಫೂರ್ತಿಯಿಂದ ಹಾಡುವ ಹಾಡುಗಳು ಅದು ಗಾಯಕನ ಹೃದಯವನ್ನು ಮಾತ್ರವಲ್ಲ ಕೇಳುಗನ ಹೃದಯವನ್ನೂ
ಸ್ಪರ್ಶಿಸುತ್ತವೆ. ಇದಕ್ಕೆ ಕೊನೆಯ ಹದಿನೈದು ನಿಮಿಷದ ಪದಗಳು ನಿಜವಾದ ಅರ್ಥದಲ್ಲಿ ಗಾನದ ವೈಭವವೇ
ಅನ್ನಿಸಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ವೀರ ರಸದ ಏರು ಪದಗಳು
ಅದ್ಭುತವಾಗಿತ್ತು. ಇವು ಸಹಜವಾಗಿ ಬಲಿಪ ಶೈಲಿಗೆ
ಮಾರುಹೋಗುಂತಹ ಪದಗಳು. ಯಕ್ಷಗಾನದ ಸೌಂದರ್ಯವನ್ನು ಈ ಪದಗಳು ತೋರಿಸಿಕೊಟ್ಟಿತು. ಉದಯೋನ್ಮುಖ
ಭಾಗವತ ಶ್ರೀ ಪ್ರಸಾದ ಬಲಿಪರು ತಮ್ಮ ಜನಪ್ರಿಯತೆಗೆ ಒಪ್ಪುವಂತೆ ಇವುಗಳನ್ನು ಅಮೋಘವಾಗಿ ಹಾಡಿದರು.
ಈ ಮೂಲಕ ಬಲಿಪ ಶೈಲಿಗೆ ಸಮರ್ಥ ಉತ್ತರಾಧಿಕಾರಿ
ಎಂಬ ಭಾವನೆಯನ್ನು ಮೂಡಿಸಿದರು. ತಾಮ್ರಧ್ವಜ
ಕಾಳಗ, ಮಕರಾಕ್ಷ ಕಾಳಗ ಕುಮಾರ ವಿಜಯ ಮುಂತಾದ ಹಲವು ಪ್ರಸಂಗ ಪದಗಳು ಅದು ಬಲಿಪ್ಪ ಶೈಲಿಗೆ ಹೇಳಿ
ಮಾಡಿಸಿದ ಪದಗಳು. ಅವುಗಳನ್ನು ಹಾಡಿದರೆ ಕೇಳುಗ ಯಕ್ಷಗಾನ ಲೋಕದ ಒಳಗೆ ತನಗರಿವಿಲ್ಲದೇ
ನುಸುಳಿಬಿಡುತ್ತಾನೆ.
ಭಾಗವತರ ಜತೆ ಕುಳಿತು ತುಂಬಿದ ಸಭೆಯಲ್ಲಿ
ಭಾಗವತಿಕೆಯನ್ನು ಸವಿಯುವ ಅನುಭವ ಅದೂ ಭಾಗವತ ಶ್ರೇಷ್ಠ ಬಲಿಪ್ಪರ ಜತೆಗೆ ಎಂದರೆ ಅದು ಅವರ್ಣನೀಯ. ಇದು ಅಪರೂಪಕ್ಕೆ ಒದಗುವ ಭಾಗ್ಯ. ಇದನ್ನು ಒದಗಿಸಿಕೊಟ್ಟ ಪಲ್ಲವಿ ಸಾಂಸ್ಕೃತಿಕ
ವೇದಿಕೆಯ ಭಾರವಾಹಿಗಳಿಗೆ ನನ್ನ ಮನದಾಳದ
ಕೃತಜ್ಞತೆಗಳು. ಈ ಗಾನ ವೈಭವಕ್ಕೆ ಸೂಕ್ತ ಪದಗಳ
ಆಯ್ಕೆಗೆ ಹೆಚ್ಚು ಮುನುವರ್ಜಿಯಿಂದ ಸಹಾಯ ಹಸ್ತವನ್ನು ನೀಡಿದ ನನ್ನ ಸನ್ಮಿತ್ರ ವೇಣೂರು
ಸುಬ್ರಹ್ಮಣ್ಯ ಭಟ್ ಇವರನ್ನು ಹೃತ್ಪೂರ್ವಕವಾಗಿ ಸ್ಮರಿಸುತ್ತೇನೆ.
ಎಲ್ಲರಿಗೂ ಕೃತಜ್ಞತೆ ಅರ್ಪಿಸಿ ವೇದಿಕೆ ಇಳಿಯುವಾಗ
ಅದೇ... ಪ್ರಸಾದರ “ ರಂಗನ್ಯಾತಕೇ ಬಾರನೆ “ ಎಂಬ ಗಾನ
ಮತ್ತೂ ಮತ್ತೂ ಗುನಿ ಗುನಿಸುವಂತೆ
ಮಾಡಿದ್ದು ಮಾತ್ರವಲ್ಲ ಮನೆಗೆ ಬಂದು ಮಲಗಿ ನಿದ್ರಿಸಿದ ಮೇಲು ಮನಸ್ಸು ಪುನಃ ಪುನಃ ಹೇಳಿತು “ ರಂಗನ್ಯಾತಕೇ ಬಾರನೆ ...ರಂಗನ್ಯಾತಕೇ ಬಾರನೆ” ಎಂದು. ಬದಿಕಿನ ಅವಸ್ಮರಣೀಯ ಪುಟಗಳಲ್ಲಿ ಇದು ಒಂದು.
ಕಾರ್ಯಕ್ರಮ ಸುಂದರವಗಿತ್ತು. ಆದರೂ ನಮ್ಮ ಬಲಿಪ್ಪಜ್ಜನ
ಬಗ್ಗೆ ಮತ್ತಷ್ಟು ನೆನಪುಗಳು ಸೇರಿ ಆ ಗಂಟು ಮತ್ತಷ್ಟು ದೊಡ್ಡದಾಯಿತು. ಅದೆಂತಹ ವ್ಯಕ್ತಿತ್ವ? ನಾವೆಲ್ಲ ಹಾಗೆ ಆಗಬೇಕೆಂದರೆ ಈ ಜನ್ಮದಲ್ಲಂತು ಸಾಧ್ಯವೇ
ಇಲ್ಲ.
“ ನಾನು ಬೆಂಗಳೂರಲ್ಲಿ ಕಾರ್ಯಕ್ರಮ ಮಾಡುತ್ತೇನೆ
ಬರ್ತಿರಾ? “ ಅಂತ ಅದೆಷ್ಟು ಸಲ ಕರೆದೆನೋ.....ಆದರೆ
” ಮುಕ್ಕ ದೈನಾ.....”
ನಮ್ಮ
ಮನೆಭಾಷೆಯಲ್ಲಿ “ ನನಗೆ ಆಗುದಿಲ್ಲಾ” ಅಂತ ಹೇಳುತ್ತಿದ್ದರು. ಇದು ನನ್ನ ಮೇಲಿನ ಮಮತೆಯಿಂದ.
ಪರೋಕ್ಷವಾಗಿ ಅವರ ಅರೋಗ್ಯ ದೇಹಸ್ಥಿತಿಯನ್ನು ನೋಡಿ ನೀನಾದರೂ ಕರೆಯದಿರು ಎಂದು ಹೇಳುವ ಹಾಗೆ ನನಗೆ
ಅನಿಸುತ್ತಿತ್ತು. ಪಾಪ, ನಮ್ಮ ಚಾಪಲ್ಯಕ್ಕೆ ಅವರನ್ನು ಯಾಕೆ ತೊಂದರೆಗೆ ಸಿಲುಕಿಸಬೇಕು. ಅವಾಗ
ಅನ್ನಿಸಿದ್ದಿದೆ, ಅವರ ಮನೆಯಲ್ಲಿ ಹೇಗಿದ್ದರೂ ಈಗ ಬಲಿಪ
ಭವನವಾಗಿದೆ. ಒಂದು ಶ್ರುತಿ ಪೆಟ್ಟಿಗೆ ತೆಗೆದುಕೊಂಡು
ಹೋಗಿ ಅಲ್ಲೇ ನಾಲ್ಕು ವಾರ್ಧಿಕ ಭಾಮಿನಿ ಕೇಳುವ ಅಂತ. ಅದಕ್ಕೂ ಸಮಯ ಒದಗಿ ಬರುವಷ್ಟು ಪುಣ್ಯ ಸಂಚಯ
ನನ್ನಲ್ಲಿಲ್ಲ. ಈಗ ಬೆಂಗಳೂರಿಗೆ ಬಂದಿದ್ದಾರೆ.
ಹಾಡಿದ ನಾಲ್ಕು ಪದ್ಯಗಳಾದರೂ ನೆನಪಿನ ಡಬ್ಬದಲ್ಲಿ ಹಾಕಿ ಗಟ್ಟಿ ಮುಚ್ಚಳ ಹಾಕಿ ಮುಚ್ಚುವಂತೆ ಮನ
ಮುಟ್ಟುವಂತೆ ಹಾಡಿದ್ದಾರೆ. ಬೇರೆ ಏನು ಹೇಳುವುದಕ್ಕೂ ಶಬ್ದಗಳು ಸಿಗುವುದಿಲ್ಲ. ಎಲ್ಲ
ಯೋಚಿಸುತ್ತಾ ಕಣ್ಣಾಲಿಗಳು ತೇವವಾಗುತ್ತದೆ. ಛೇ ನಮ್ಮಜ್ಜ..ನಾವು ಹುಡುಗರು ಸೇರಿ
ಕಾರ್ಯಕ್ರಮಾಡಿದ್ದಾಗ ಅವರ ಕಣ್ಣಾಲಿಗಳು ತೇವವಾಗಿದ್ದವು. ಕಾರ್ಯಕ್ರಮ ಮುಗಿಸಿ ಸುಬ್ಬಣ್ಣನ ಜತೆಗೆ
ಕಳುಹಿಸಿಕೊಟ್ಟಿದ್ದೆವು. ಇಲ್ಲಿಂದ ಬಂಟ್ವಾಳದವರೆಗೂ ಸುಬ್ಬಣ್ಣನನ್ನು ನಿದ್ದೆ ಮಾಡುವುದಕ್ಕೆ
ಬಿಟ್ಟಿಲ್ಲ. ನಮ್ಮ ಬಗ್ಗೆಯೇ ಅಜ್ಜ ಅವರಲ್ಲಿ ಹೇಳುತ್ತಾ ಸಾಗಿದ್ದರು. ನಿದ್ದೆ ಮಾಡುವುದಕ್ಕೆ
ಬಿಟ್ಟಿಲ್ಲ ಅಲ್ಲ, ಸುಬ್ಬಣ್ಣ ನಿದ್ದೆ ಮಾಡಿಲ್ಲ ಎಂದರೂ ಸರಿಯೇ. ಹಾಗೆ ಹೋದವರು ನಮ್ಮ ನಾಲ್ಕು
ಜನರ ಮೊಬೈಲ್ ನಂಬರು ಪಡೆದು ನಮಗೆ ಕರೆ ಮಾಡಿ ಕಾರ್ಯಕ್ರಮದ ಬಗ್ಗೆ ಆವಾಗ ಕೇಳಿದ್ದರು. ಅದೆಂತಹ
ಸರಳತೆ ಮುಗ್ದತೆ. ಅಜ್ಜನನ್ನು ಮುಗ್ದ ಎನ್ನುವುದಕ್ಕೆ ನನ್ನ ಮನಸ್ಸು ಒಪ್ಪುವುದಿಲ್ಲ. ಅನುಭವದಿಂದ
ಪ್ರಪಂಚವನ್ನು ಕಂಡು ತುಂಬಿಕೊಂಡ ಪರಿಪಕ್ವ ಮನಸ್ಸಿನ ವ್ಯಕ್ತಿತ್ವ ಅದು. ಅಂತಹ ಅಜ್ಜ
ಬಂದಿದ್ದಾರೆ. ಹಾಡಿದ್ದಾರೆ. ಇದಕ್ಕಿಂತ ಬೇರೆ ಭಾಗ್ಯ ಇಲ್ಲ.
ಈಗ ಅನ್ನಿಸುವುದು ಇಷ್ಟೆ ಇನ್ನು ಯಾರೂ ಅವರನ್ನು
ಕರೆಯದಿರಲಿ. ಬಲಿಪ್ಪರ ಪದ ಕೇಳಲೇಬೇಕಿದ್ದರೆ ಅವರ ಮನೆಯಲ್ಲೇ ಕೇಳಬಹುದು. ಆ ರೀತಿಯ ಅಭಿಮಾನ
ವ್ಯಕ್ತವಾಗಬೇಕು ಅಷ್ಟೇ. ಆ ಅಜ್ಜ ನೋವನುಭವಿಸಿ
ಹಾಡುವುದು ಕಲ್ಪಿಸುವುದಕ್ಕೆ ಆಗುವುದಿಲ್ಲ. ಹಾಗೆ ಮೊನ್ನೆ ವೇದಿಕೆಯಲ್ಲೇ ಹೇಳಿದ್ದೆ. ” ಅಜ್ಜ
ನೋವು ಮರೆತು ಹಾಡುತ್ತಾರೆ. ನಾವು ನಮ್ಮ ನೋವನ್ನು ಮರೆಯುತ್ತೇವೆ “ ಎಂದು. ಇದು ಮನದಾಳದಲ್ಲಿ
ತೋಚಿದ ಮಾತು. ಅದರೂ ಅಜ್ಜ ಹಾಡಿದ ದೇವಿಮಹಾತ್ಮೆಯ
ಕೊನೆಯ ಪದ್ಯ .......
ಪಾವನರು ನಾವಾದೆವೈ ಸಂ| ಜೀವನವು ನೀವಾದಿರೆಮಗೀ |
ನ್ನಾವಿಮಲೆ ಶ್ರೀದೇವಿಯೊಲಪ್ಪಂತೆ ಮಾಡಿದಿರಿ || ಭಾವಭಕ್ತಿಗಳಿಂದಲಾಕೆಯ | ಸೇವಕರು ನಾವಹೆನುತ
ಮುನಿ| ದೇವಗೆರಗುತಲೀರ್ವರರ್ಚಿಸಲವಪಡಕೊಳುತ ||
ಇದೊಂದೆ ಸಾಕು ಅಜ್ಜ ಸದಾ ಹೃದಯ
ಸಾಮೀಪ್ಯದಲ್ಲಿರುವುದಕ್ಕೆ. ಜೈ ಬಲಿಪ್ಪಜ್ಜ....
.




