"ಇದು ವಿಮರ್ಶೆಯಲ್ಲದ ಚಿಂತನ"

Wednesday, September 27, 2017

ಯಕ್ಷಗಾನದ ಇಂದ್ರ ಎಂಪೆಕೆಟ್ಟೆ ರಾಮ ರೈ




ಅದೊಂದು ಯಕ್ಷಗಾನ ಬಯಲಾಟ.  ಪೀಠಿಕೆ ಹೊಡೆದು ಚೆಂಡೆಯವರು ಬೆವರೊರೆಸಿಕೊಳ್ಳುತ್ತಿದ್ದರೆ, ಮದ್ದಲೆಯವರು ಛಾಪು ಹೊಡೆಯುತ್ತ ಮದ್ದಲೆಯ ಶ್ರುತಿಯನ್ನು ಅರಸುತ್ತಿದ್ದರು. ಭಾಗವತರು ಗಂಟಲು ಸರಿ ಮಾಡಿಕೊಳ್ಳುತ್ತಾ ಹಾರ್ಮೋನಿಯಂ ಶ್ರೂತಿಯನ್ನು ಮತ್ತಷ್ಟು ಪರೀಕ್ಷಿಸಿ ಅಂಬುರುಹದಳನೇತ್ರೆ ಹೇಳುವುದಕ್ಕೆ ತೊಡಗಿದರು. ಡೇರೆಯೊಳಗಿನ ಲೈಟುಗಳು ಒಂದೊಂದಾಗಿ ನಂದಿಸಲ್ಪಟ್ಟು ಸುತ್ತಲೆಲ್ಲ ಕತ್ತಲೆ ಹರಡಿದಾಗ ರಂಗಸ್ಥಳ ಇನ್ನಷ್ಟು ಪ್ರಖರವಾಯಿತು.  ನೆರೆದಿದ್ದ ಪ್ರೇಕ್ಷಕ ಅಷ್ಟು ಹೊತ್ತು ನಿರಾಸಕ್ತಿಯಿಂದ ಚಿಕ್ಕಪ್ರಾಯದ ಚದುರೆ ನೋಡುತ್ತಿದ್ದವರು ಕುಳಿತ ಆಸನವನ್ನೆಲ್ಲ ಸರಿ ಪಡಿಸಿ ಶುರುವಾಗುವ ಪ್ರಸಂಗದ ಕಡೆಗೆ ಗಮನ ಹರಿಸಿದರು. ಆಗ ತಾನೆ ಬಂದ ಕೆಲವರು ಖಾಲಿ ಇದ್ದ ಆಸನವನ್ನು ಟಾರ್ಚು ಬೆಳಗಿಸಿ ಹುಡುಕುತ್ತಿದ್ದರು. ಈ ನಡುವೆ ಅಟದ ಡೇರೆ  ಸದ್ದಿಲ್ಲದೆ ಭರ್ತಿಯಾಗಿತ್ತು.

            ಅಂಬುರುಹದಳನೇತ್ರೆ ಮೊಳಗುತ್ತಿದ್ದಂತೆ ನಂತರ ಒಡ್ಡೋಲಗ,  ಒಂದೋಂದೇ ವೇಷಗಳ ಪ್ರವೇಶಕ್ಕೆ ಚೆಂಡೆ ತಾರಕದ ಸ್ವರವನ್ನು ಲಯಬದ್ದವಾಗಿ ಹೊರಡಿಸುತ್ತಿತ್ತು. ಅದು ಅಮರಾವತಿಯ ದೇವೇಂದ್ರನ ಒಡ್ಡೋಲಗದ ದೃಶ್ಯ. ಅಷ್ಟ ದಿಕ್ಪಾಲಕರ ಅಷ್ಟೂ ವೇಷದಿಂದ ರಂಗಸ್ಥಳ ಝಗಮಗಿಸಿತ್ತು. ದೇವೆಂದ್ರನ ನಾಕಲೋಕದ ಒಡ್ಡೋಲಗದ ವೈಭವ ಹೇಗಿದೆಯೋ ಕಂಡವರಾರು? ಆದರೆ ಪ್ರೇಕ್ಷಕ  ನೂರಡಿ ಚದರದ ಒಳಗೆ ಸಾಕ್ಷಾತ್ ನಾಕಲೋಕವನ್ನು ಕಂಡ ಭ್ರಮೆಯಲ್ಲಿ ತೇಲುತ್ತಿದ್ದ.

ಇಂದು ಹರಕೆ ಸಂದಾಯವಾಗುವ ದೇವೇಂದ್ರನ ಒಡ್ಡೋಲಗದ ವೇಷಗಳನ್ನು ನೋಡಿದಾಗ ಸ್ವರ್ಗಲೋಕಕ್ಕೆ ಬರಗಾಲ ಬಂದಂತೆ ಇರುತ್ತದೆ. ವೇಷದಲ್ಲಿ ಗಾಂಭೀರ್ಯ ವರ್ಚಸ್ಸು ಇರುವುದಿಲ್ಲ. ಮುಖದಲ್ಲಿ ಉತ್ಸಾಹ ಇರುವುದಿಲ್ಲ.ಅಸುರ ಧಾಳಿಗಿಂತ ಮೊದಲೇ ದೇವತೆಗಳ ಅವಸ್ಥೆ ಹೀಗಾದರೆ ಮುಂದಿನ ಪ್ರಸಂಗ ಭಾಗ ಅರ್ಥವನ್ನು ಕಂಡುಕೊಳ್ಳುವುದು ಹೇಗೆ?  ತನ್ನ ಪಾಲಿಗೆ ಬಂದ ದೇವೆಂದ್ರನ ಪಾತ್ರಕ್ಕೆ ಸಿಡಿಮಿಡಿಗೊಳ್ಳುತ್ತಾ ಸಹಕಲಾವಿದರ ರಾಜಕೀಯಕ್ಕೆ ಅವುಡುಗಚ್ಚಿ ರಂಗ ಹತ್ತುವ ವೇಷಗಳು ಯಂತ್ರಗಳ ಗಾಲಿಗಳಂತೆ ಭಾಸವಾಗುತ್ತದೆ.

ಅಷ್ಟದಿಕ್ಪಾಲಕರು, ಸುಮನಸರು ಹೀಗೆ ವೈವಿಧ್ಯಮಯ ವೇಷಗಳು ಪ್ರಖರವಾಗಿ ಕಣ್ಣು ಕೋರೈಸುತ್ತಿದ್ದರೆ ಮಧ್ಯೆ ಸಿಂಹಾಸನದಲ್ಲಿ ಕುಳಿತ ಇಂದ್ರನ ಗಾಂಭೀರ್ಯ ದರ್ಪದ ನಿಲುಮೆ ಸಾಕ್ಶಾತ್ ಸುರಪತಿಯ ಭ್ರಮೆಯನ್ನು ಮೂಡಿಸುತ್ತಿತ್ತು. ಯಕ್ಷಗಾನದ ಬಹಳಷ್ಟು ಪ್ರಸಂಗಗಳ ಆರಂಭ ಇದೇ ಆಗಿರುತ್ತದೆ. ದೇವೇಂದ್ರ ಒಡ್ದೋಲಗ ಒಂದು ಪ್ರಾಥಮಿಕ ಪಾಠದಂತೆ.  ಯಾವುದೇ ಆದರೂ ತೊಡಗುವುದು ಇಲ್ಲಿಂದಲೇ. ಆದರೆ ಈ ಸನ್ನಿವೇಶ ಮಾತ್ರ ಕೇವಲ ಉರು ಹೊಡೆದು ಒಪ್ಪಿಸುವ ಬಾಲ ಪಾಠವಲ್ಲ. ಇದು ಕೆಲವು ದಶಕಗಳ ಹಿಂದಿನ ಕಥೆ. ಬಯಲಾಟದ ಕರಪತ್ರದಲ್ಲೂ ವಿಶೇಷವಾಗಿ ಆಕರ್ಷಣೆಯ ವಸ್ತುವಾಗಿ ಉಲ್ಲೇಖವಾದ ದೇವೇಂದ್ರನ ಪಾತ್ರ. ಒಂದು ದೇವೇಂದ್ರನ ಪಾತ್ರ ವಿಶೇಷ ಆಕರ್ಷಣೆ ಎಂದಾಗುವುದಾದರೆ ಅದರಲ್ಲಿ ಒಂದು ವೈಶಿಷ್ಯ ವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆ ವೈಶಿಷ್ಟ್ಯವೇ ಶ್ರೀ ಎಂಪೆಕೆಟ್ಟೆ ರಾಮ ರೈ.

ದೇವೇಂದ್ರನ ಒಡ್ದೋಲಗವೆಂದರೆ ಇಂದಿಗೂ ನೆನಪಾಗುವುದು ಎಂಪೆಕೆಟ್ಟೆ ರಾಮ ರೈಗಳ ರಂಗವನ್ನು ತುಂಬುವ ಘನ ಗಂಭೀರ ರಾಜವೇಷ. ಆಟನೋಡಿ ಬಂದು  ಹಗಲು ಮನೆಯ ಪಡಸಾಲೆಯ ಮಕ್ಕಳಾಟದ ಯಕ್ಷಗಾನದಲ್ಲಿ ದೇವೆಂದ್ರನಾಗುವ ಪ್ರೇರಣೆಯೆಂದರೆ ರಾತ್ರಿನೋಡಿದ ರೈಗಳ ದೇವೆಂದ್ರ. ಆಟದ ಮಾರನೇದಿವಸ,   ಅಂದು ಹಲವು ಪಡಸಾಲೆಯ ಹಗಲು ನಿದ್ದೆಯ ಕನಸಿನಲ್ಲೂ ರೈಗಳ ದೇವೇಂದ್ರ ಪ್ರವೇಶ ವಾಗದೇ ಇದ್ದರೆ ಆ ನಿದ್ದೆಯೂ ಪೂರ್ಣವಾಗುವುದಿಲ್ಲ ಕಂಡ ಕನಸೂ ನೆನಪಲ್ಲಿ ಉಳಿಯುವುದಿಲ್ಲ. ಇದು ಕೇವಲ ಮಕ್ಕಳ ಆಟಕ್ಕೆ ಸೀಮೀತವಾಗಿಲ್ಲ.  ದೇವೇಂದ್ರನಿಗೆ ಅನ್ವರ್ಥವಾಗಿ ಯಕ್ಷಗಾನ ರಂಗದಲ್ಲಿ ಪ್ರತಿ ಇಂದ್ರನಾಗಿ ರಂಗವನ್ನಾಳಿದ ಕಲಾವಿದ ಶ್ರೇಷ್ಠರು ಎಂಪೆಕೆಟ್ಟೆ ರಾಮರೈಗಳು. ಅಂತಹಾ ಕಲಾವಿದರೊಬ್ಬರು ಇದ್ದರು ಎಂಬುದನ್ನು ಯಕ್ಷಲೋಕ ಮರೆತಂತಿದೆ.

ಯಕ್ಷಗಾನದಲ್ಲಿ ದೇವೇಂದ್ರ ಪಾತ್ರ ಎಂಬುದು ಕಂಡೂ ಕಾಣದ ಜೀವಾಳದಂತೆ. ಪುಷ್ಪ ಮಾಲಿಕೆಯ ದಾರದಂತೆ. ಪ್ರಸಂಗದಿಂದ ಪ್ರಸಂಗಕ್ಕೆ ಬದಲಾಗುವ ದೇವೇಂದ್ರನ ಪಾತ್ರದ ವ್ಯಕ್ತಿತ್ವ ಮತ್ತು  ವಸ್ತು ಚಿತ್ರಣದ ವೈವಿಧ್ಯತೆಯನ್ನು  ಸೂಕ್ಷ್ಮಾವಲೋಕನ ಮಾಡಿದಲ್ಲಿ ಇದು ಅರಿವಿಗೆ ಬರುತ್ತದೆ. ಈ ಅವಲೋಕನ ಸುಲಭಸಾಧ್ಯವಲ್ಲ. ಪಾತ್ರಗಳ ಸನ್ನಿವೇಶಗಳನ್ನೂ ಪಾತ್ರ ಸೃಷ್ಟಿಯ ಹಿನ್ನೆಲೆಯನ್ನೂ ವಿವೇಚಿಸಬೇಕು. ಈ ವಿವೇಚನೆಯ ದೃಷ್ಟಿ ಪ್ರಚೋದಿತವಾಗುವುದಿದ್ದರೆ ಅಲ್ಲಿ ಎಂಪೆಕೆಟ್ಟೆಯವರ  ಪಾತ್ರಗಳು ಸಾರ್ಥಕವಾಗಿ  ಅನಾವರಣಗೊಂಡಿದೆ ಎಂದೇ ಅರ್ಥ. ಈಗಿನವರ ಭಾಷೆಯಲ್ಲಿ ಹೇಳುವುದಿದ್ದರೆ ಅವರ ಇಂದ್ರನ ವೇಷಗಾರಿಕೆಯೇ  ಪಿ ಎಚ್, ಡಿ ವಸ್ತುವಾಗಿಬಿಡಬಹುದು. ಪ್ರಾಮಾಣಿಕವಾಗಿ ಹೇಳುವುದಿದ್ದರೆ ಈ ಪಾತ್ರಗಳನ್ನು ಅನುಭವಿಸುವಾಗ ಇದು ಮನವರಿಕೆಯಾಗಲಿಲ್ಲ. ಆದರೆ ಅದರಿಂದ ಪ್ರಭಾವಿತರಾಗುವಲ್ಲಿ ಮತ್ತು ಆಸಕ್ತಿಯನ್ನು ಕೆರಳಿಸುಲ್ಲಿನ ಕಾರಣ ಏನೆಂದು ಯೋಚಿಸಿದರೆ ಇದು ಅರಿವಿಗೆ ಬರುತ್ತದೆ.    ಯಕ್ಷಗಾನ ಪರಂಪರೆಯ ಕಲೆ ಎಂದು ಹೇಳುವುದೇ ಇದಕ್ಕೆ. ಇಲ್ಲಿ ಪರಂಪರೆಗೆ ರೂಪುಕೊಟ್ಟ ಹಲವು ಕಲಾವಿದರಿದ್ದಾರೆ. ಪರಂಪರೆಯಸೃಷ್ಟಿಗೆ ನಿದರ್ಶನವಾಗಬಲ್ಲವರು ಇವರೆಲ್ಲ. ಹಾಕಿಕೊಟ್ಟ ಪಂಕ್ತಿ ಆ ಸೃಜನ ಶೀಲತೆ ಪರಂಪರೆಯ ಶುದ್ದ ಗಂಧವನ್ನು ಸೃಷ್ಟಿಸಿ ಅದನ್ನು ಗಾಢವಾಗಿಸುತ್ತದೆ.

ಒಳಿತು ಮತ್ತು ಕೆಡುಕಿನಲ್ಲಿ ಒಳಿತಿನ ಪ್ರಾತಿನಿಧಿಕವೇ ಇಂದ್ರ. ಹಾಗಾಗಿ ಇದು ಸದಾ ಸಂಘರ್ಷವನ್ನು ಎದುರು ಹಾಕಿಕೊಳ್ಳುವುದು ಅನಿವಾರ್ಯ. ಅದು ವೆತ್ಯಸ್ತ ಘಟನೆಗಳು ವೆತ್ಯಸ್ತ ಪ್ರಸಂಗಗಳು. ಕೆಲವುದಕ್ಕೆ ಪೌರಾಣಿಕ ಹಿನ್ನೆಲೆ ಇರಬಹುದು,ಕೆಲವುದಕ್ಕೆ ಕಾಲ್ಪನಿಕ ಹಿನ್ನೆಲೆಯಾಗಬಹುದು. ಆದರೆ ಇಂದ್ರನ ಪಾತ್ರ ವ್ಯಕ್ತಿತ್ವಅದು ಒಂದು ವರ್ಣರಂಜಿತ ಪಾತ್ರಕ್ಕೆ ಕಾರಣವಾಗುತ್ತದೆ.  ಈ ಪಾತ್ರ ವ್ಯಕ್ತಿತ್ವವನ್ನು ಅಭಿವ್ಯಕ್ತೀಕರಿಸುವಲ್ಲಿ ಪ್ರಾಮಾಣಿಕತೆ ಎಂಪೆಕೆಟ್ಟೆಯವರ ಪಾತ್ರನಿರ್ವಹಣೆಯಲ್ಲಿ ಕಂಡುಬರುತ್ತಿತ್ತು.  ಯಕ್ಷಗಾನ ಪ್ರಸಂಗದ ಜನಪ್ರೀಯತೆ ಈ ನಿರ್ವಹಣೆಯನ್ನು ಅವಲಂಬಿಸಿದೆ ಎಂದು ಈಗ ಬದಲಾದ ತಲೆಮಾರಿನಲ್ಲಿ ಆ ಪ್ರಸಂಗಗಳನ್ನು ಕಂಡಾಗ ಮನವರಿಕೆಯಾಗುತ್ತದೆ. ಅಂದಿನ ಪಾತ್ರದ ಬಲವಾದ ಸೆಳೆತ ಆ ಪ್ರಸಂಗಗಳಲ್ಲಿ ಅವರನ್ನು ಬಿಟ್ಟು ಕಲ್ಪಿಸುವುದಕ್ಕೆ ಸಾಧ್ಯವಾಗುವುದಿಲ್ಲ.  ಯಾವುದೇ ರಾಜವೇಷವಿರಲಿ ಸರಳ ಕುಣಿತದಲ್ಲಿ ನೂರಾರು ಭಾವನೆಯನ್ನು ಕೆರಳಿಸಬಲ್ಲ ನಾಟ್ಯ ಶೈಲಿ. ಆಂಗಿಕ ಅಭಿನಯ. ಇಂದು ವೇಷ ರೈಸುವುದು ಎಂದರೆ ಬಿಡು ಬೀಸಾಗಿ ಕುಣಿದು ಒಂದಷ್ಟು ಗದ್ದಲವೆಬ್ಬಿಸುವುದು. ಅದನ್ನು ನೋಡಿ ಚಪ್ಪಾಳೆ ಶಿಳ್ಳೆ ಬಿದ್ದರಂತೂ ನಂತರ ವೇಷ ಪಾತ್ರ ಯಾವುದೇ ಆದರೂ ಆ ಮಾದರಿಯ ಕುಣಿತ ಖಾತರಿಯಾಗಿ ಇದ್ದೇ ಇರುತ್ತದೆ.

ಸಮುದ್ರ ಮಥನ, ಅಮರೇಂದ್ರ ಪಥ ವಿಜಯ, ಕಾಯಕಲ್ಪ, ವಜ್ರಧರ ವಿಲಾಸ, ಮಹಾಬ್ರಾಹ್ಮಣ , ಕುಮಾರ ವಿಜಯ ಹೀಗೆ ಹಲವಾರು ಪ್ರಸಂಗಗಳಲ್ಲಿ  ವಿಲಕ್ಷಣ ದೇವೆಂದ್ರಪಾತ್ರಗಳು  ಸೃಷ್ಟಿಯಾಗಿದ್ದರೆ ಅದಕ್ಕೆ ಎಂಪೆಕೆಟ್ಟೆಯವರ ಪ್ರತಿಭೆಯೂ ಕಾರಣವಾಗಿರುತ್ತಿತ್ತು. ಅದರಲ್ಲೂ ಅಂದಿನ ಸಮುದ್ರಮಥನ ಪ್ರಸಂಗದ ವಿಶೇಷ ಆಕರ್ಷಣೆಯಲ್ಲಿ ಆನೆಯ ಮೇಲಿನ ಇಂದ್ರನ ಐರಾವತದ ಒಡ್ಡೋಲಗ ಒಂದಾದರೆ ಅದಕ್ಕೆ ಹೊಂದಿಕೊಂಡು ಎಂಪೆಕೆಟ್ಟೆಯವರ ಇಂದ್ರನೂ ಆಕರ್ಷಣೀಯವಾಗಿದ್ದ. ಈ  ಎರಡೂ ವಿಶೇಷಗಳು ಆಟದ ಕರಪತ್ರದಲ್ಲಿ ಅಚ್ಚಾಗಿಬಿಡುತ್ತಿದ್ದರೆ ಇದರಲ್ಲಿ ಎಂಪೆಕೆಟ್ಟೆಯವರ ಪಾತ್ರದ ತೂಕ ಗಜ ತೂಕವನ್ನೂ ಮೀರಿಸುತ್ತಿತ್ತು. ಸಮುದ್ರ ಮಥನ ಪ್ರಸಂಗದ  ಆರಂಭದಲ್ಲಿ ದೇವೇಂದ್ರನ ವೈಭವ ಪೂರ್ಣ ಒಡ್ಡೋಲಗ. ಇದು ಕೇವಲ ಒಡ್ಡೋಲಗ ಮಾತ್ರವಲ್ಲ. ಪ್ರಸಂಗದ ಮುಂದಿನ ನಡೆಗೆ ಇಂದ್ರನ ವ್ಯಕ್ತಿಚಿತ್ರಣ ಇಲ್ಲಿ ಅನಿವಾರ್ಯ.  ಯಕ್ಷಗಾನದಲ್ಲಿ ಅದರಲ್ಲೂ ತೆಂಕುತಿಟ್ಟಿನಲ್ಲಿ ಕೆಲವು ಪಾತ್ರದ ಪ್ರವೇಶವೇ ಆ ಪಾತ್ರದ ಚಿತ್ರಣವನ್ನು ಬಹಳಷ್ಟು ನೀಡುತ್ತದೆ. ಹಾಗಾಗಿ ಪ್ರವೇಶದಲ್ಲಿ ಪ್ರಕಟವಾಗುವ ಭಾವನೆಗಳು  ಪಾತ್ರಾಭಿನಯಕ್ಕೆ ಒಂದು ತಳಹದಿ. ಪ್ರವೇಶದಲ್ಲೇ ಪ್ರೇಕ್ಷಕನ ಚಿತ್ತವನ್ನು ವ್ಯಾಪಿಸಿದ ಮೇಲೆ ವೇಷಧಾರಿಗೆ ಪಾತ್ರದೊಂದಿಗೆ ಪ್ರೇಕ್ಷಕನ ಸಂವಹನ ಸುಲಭ ಸಾಧ್ಯವಾಗುತ್ತದೆ.  ಇದೇ ಕಾರಣಕ್ಕೆ ಹಲವು ಕಲಾವಿದರು ಪ್ರೇಕ್ಷಕರ ಆಸನಗಳನ್ನು ರಂಗಸ್ಥಳಕ್ಕೆ ಅತ್ಯಂತ ಸಮೀಪ ವಿರುವಂತೆ ಬಯಸುತ್ತಾರೆ. ಆವಾಗ ಪ್ರೇಕ್ಷಕನ ಭಾವನೆಯನ್ನು ಗ್ರಹಿಸುವುದಕ್ಕೆ ಕಲಾವಿದನಿಗೆ ಸಾಧ್ಯವಾಗುತ್ತದೆ. ಪ್ರೇಕ್ಷಕನ ಸ್ಥಾನ ದೂರವಾದಷ್ಟೂ ಕಲಾವಿದ ಮತ್ತು ಪ್ರೇಕ್ಷಕನ ಅಂತರ ಹೆಚ್ಚುತ್ತಾ ಹೋಗುತ್ತದೆ. ಸಂವಹನ ಕಠಿಣವಾಗುತ್ತಾ  ಅದು ಒಟ್ಟು ಪ್ರದರ್ಶನದಲ್ಲಿ ಋಣಾತ್ಮಕ ಪ್ರಭಾವವನ್ನು ಬೀರುತ್ತದೆ.  ಸಮುದ್ರ ಮಥನ ಪ್ರಸಂಗದ ಆರಂಭದಲ್ಲಿ ದೇವೆಂದ್ರ ಗರ್ವದಿಂದಲೂ ದುರಹಂಕಾರೀ ಪ್ರವೃತ್ತಿಯಿಂದ ಕೂಡಿರುತ್ತಾ ಅದೇ ಕಾರಣದಿಂದ ದುರ್ವಾಸ ಶಾಪಕ್ಕೆ ಒಳಗಾಗುತ್ತಾನೆ. ಆನಂತರ ಅಸುರಧಾಳಿಯಾಗುತ್ತದೆ. ಇಂದ್ರನ ಸೌಭಾಗ್ಯಗಳೆಲ್ಲವೂ ಸಮುದ್ರ ಪಾಲಾಗುತ್ತದೆ. ಆನಂತರ ಶ್ರೀ ಹರಿಯ ಸೂಚನೆಯಂತೆ ಅಸುರಾಧಿಪತಿ ಬಲಿಯೊಂದಿಗೆ ಸಂಧಾನ ಮಾಡಬೇಕಾಗುತ್ತದೆ. ಇಲ್ಲಿ ದೇವೇಂದ್ರ ತನ್ನ ಅಹಂಕಾರ ದರ್ಪವನ್ನು ತೊರೆದು ಅಕ್ಷರಶಃ ದೀನಸ್ಥಿತಿಗೆ ಇಳಿಯಬೇಕಾಗುತ್ತದೆ.  ಇಂತಹ ವ್ಯತಿರಿಕ್ತ ವಿಭಿನ್ನ ಸನ್ನಿವೇಷಗಳಲ್ಲಿ ರೈಯವರ ಇಂದ್ರನ ಪಾತ್ರ ವ್ಯಕ್ತಿಯಾಗಿ ಬೆಳೆದು ನಿಲ್ಲುತ್ತದೆ. ಸನ್ನಿವೇಶ ಬದಲಾದಂತೆ ದೇವೆಂದ್ರ ಬದಲಾಗುತ್ತಾ ಹೋಗುವುದರಲ್ಲಿ ಎಂಪೆಕೆಟ್ಟೆಯವರು ವಿಸ್ಮಯವನ್ನೇ ಉಂಟು ಮಾಡುತ್ತಾರೆ.  ಎಂಪೆಕೆಟ್ಟೆಯವರ ಪಾತ್ರಚಿತ್ರಣಕ್ಕೆ ಇದೊಂದು ಉದಾಹರಣೆ ಮಾತ್ರ.

ಯಕ್ಷಗಾನದಲ್ಲಿ ಪ್ರಸಂಗದಿಂದ ಪ್ರಸಂಗಕ್ಕೆ ದೇವೇಂದ್ರ ಪಾತ್ರಾಭಿವ್ಯಕ್ತಿ ವಿಭಿನ್ನವಾಗಿರುತ್ತದೆ. ಅದನ್ನು ಕಲಾವಿದನಾದವನು ಗುರುತಿಸಬೇಕು. ಅದು ನಿಜವಾದ ಕಲಾವಿದನ ಲಕ್ಷಣ. ಮಾತ್ರವಲ್ಲ ಕಲಾವಿದ ಧರ್ಮಕೂಡ. ಇದು ಪ್ರತೀ ಪಾತ್ರಕ್ಕೂ ಅನುಯೋಜ್ಯ. ಹಾಗಾದಲ್ಲಿ ಮಾತ್ರ ಆತ ಪಾತ್ರವನ್ನು ಪ್ರೀತಿಸುತ್ತಾನೆ. ಪಾತ್ರ ಪ್ರೀತಿ ಪಾತ್ರವಾದರೆ ಕಲೆಯ ಮೇಲೂ ಪ್ರಾಮಾಣಿಕವಾದ ಗೌರವ ಮೂಡುತ್ತದೆ. ನೈಜ ಅಭಿಮಾನ ಪೋಷಣೆಯಾಗುತ್ತದೆ. ಯಕ್ಷಗಾನದ ಕೀಳು ರಾಜಕೀಯದಿಂದ ದೇವೇಂದ್ರ ವೇಷ ಸದಾ ಅವಗಣನೆಗೆ ಒಳಗಾಗಿದೆ ಎನ್ನಬಹುದು. ತಮಗೆ ಆಗದವರಿಗೆ ದೇವೆಂದ್ರ ವೇಷವನ್ನು ಕೊಟ್ಟು ಬಿಡುವ ಕೆಟ್ಟ ಚಾಳಿ ಅನಧಿಕೃತವಾಗಿ ಬೆಳೆದು ನಿಂತಿರುತ್ತದೆ. ಕಲಾವಿದರೂ ದೇವೆಂದ್ರ ವೇಷವಾ? ಬೇಡ ಅಂತ ದೂರ ಉಳಿಯುವ ಪ್ರಯತ್ನ ಮಾಡುತ್ತಾರೆ.  ಇಂತಹ ವಿಚಾರವಿದ್ದಾಗಲೂ ದೇವೇಂದ್ರನ ಪಾತ್ರಕ್ಕೆ ಎಂಪೆಕೆಟ್ಟೆಯವರು ತಾರಾಮೌಲ್ಯವನ್ನು ತಂದು ಕೊಟ್ಟಿದ್ದಾರೆ. ಇದವರ ಕಲಾಪ್ರೌಢಿಮೆಯ ಮಾನದಂಡ. ದೇವೆಂದ್ರ ವೇಷ ಎಂದರೆ ಅದು ಎಂಪಕೆಟ್ಟೆಯವರದ್ದು ಅದರ ವೈಶಿಷ್ಟ್ಯ ಅನುಭವಿಸಿ ತಿಳಿಯಬೇಕು.  ಸತ್ವಯುತ ಕಲಾವಿದ ಯಾವುದೇ ಪಾತ್ರ ಮಾಡಿದರೂ ಪಾತ್ರಭೇದವಿಲ್ಲದೇ ತನ್ನ ಪ್ರತಿಭಾ ಮುದ್ರೆಯನ್ನು ಒತ್ತಿಬಿಡುತ್ತಾನೆ. ಆದರೆ ಇಂದಿನ ಕಲಾವಿದರಲ್ಲಿ ಆ ಅತ್ಮ ವಿಶ್ವಾಸದ ಕೊರತೆ ಇದೆ. ಹಾಗಾಗಿ ಅವರ ಪ್ರತಿಭೆಯ ಬಗ್ಗೆ ಅವರಿಗೇ ಭರವಸೆ ಇಲ್ಲದಂತಾದಾಗ ಆ ವೇಷ ಬೇಡ ಅಂತ ವರಸೆಗೆ ತೊಡಗುತ್ತಾರೆ.  ಇಂದು ಕಲೆಯಲ್ಲಿ ತನ್ನ ಅಗತ್ಯವನ್ನು ರೂಪಿಸುವುದೇ ಕಲಾವಿದನ ಆದ್ಯ ಕರ್ತವ್ಯದಂತೆ ಭಾಸವಾಗುತ್ತದೆ. ಕಲೆಯಲ್ಲಿ ಯಾರು ಪ್ರಭಾವ ಸೃಷ್ಟಿಸುತ್ತಾನೋ ಆತ ಕಲೆಯನ್ನು ಒಂದು ಹಂತದಲ್ಲಿ ಕಲೆಯನ್ನು ಅವಗಣಿಸುತ್ತಾನೆ ಎಂಬುದೇ ಅರ್ಥ. ಮುಖ್ಯ ಪಾತ್ರವೋ ಪೋಷಕ ಪಾತ್ರವೋ ಎಂಪೆಕೆಟ್ಟೆಯವರದ್ದು ಅನಿವಾರ್ಯ ಪಾತ್ರಗಳಾಗುತ್ತಿದ್ದವು. ಇಂದು ನಾಯಕನ ಸೃಷ್ಟಿಯಾಗುತ್ತದೆ ಆದರೆ ನಾಯಕನ ಪಾತ್ರ ಸೃಷ್ಟಿಯಾಗುವುದಿಲ್ಲ. ಪಾತ್ರ ಸೃಷ್ಟಿಯಾಗುವುದಿದ್ದರೆ ಅದಕ್ಕೆ ಪೋಷಕ ಪಾತ್ರಗಳ ಸೃಷ್ಟಿ ಮೊದಲಾಗಬೇಕು. ಆಗ ಎಂಪೆಕೆಟ್ಟೆಯಂತಹ ಕಲಾವಿದರೂ ಜೀವಾಳವಾಗಿಬಿಡುತ್ತಾರೆ.

ದೇವೇಂದ್ರ ಪಾತ್ರ ಕೆಲವು ಪ್ರಸಂಗಗಳಲ್ಲಿ ಬಹಳಷ್ಟು ತಾಮಸ ಸ್ವಭಾವವನ್ನು ಬಿಂಬಿಸುವುದುಂಟು.  ಕಾಯಕಲ್ಪದ ದೇವೇಂದ್ರ ಇದಕ್ಕೆ ಉದಾಹರಣೆ. ಈ ಪ್ರಸಂಗದಲ್ಲಿ ದೇವೆಂದ್ರ ಒಂದು ರೀತಿಯ ಖಳ ಪಾತ್ರದಂತೆ. ಈ ಪ್ರಸಂಗದ ದೇವೇಂದ್ರ ಪಾತ್ರ ಎಂಪೆಕೆಟ್ಟೆಯವರ ಸೃಷ್ಟಿ ಎಂದರೆ ತಪ್ಪಾಗದು. ಅವರಂತೆ ಅದನ್ನು ನಿರ್ವಹಿಸುವುದು ಸಾಧ್ಯವಾಗದ ಮಾತು. ಅವಶ್ಯ ಬಿದ್ದಲ್ಲಿ ಕ್ರೌರ್ಯ, ವ್ಯಂಗ್ಯ, ವಿಡಂಬನೆ, ಹಾಸ್ಯ ಮಾತ್ರವಲ್ಲ ಕರುಣ  ಇದೆಲ್ಲವನ್ನೂ ಬೇಕಾದಂತೆ ತೋರಿಸುವ ಇವರ ಸಾಮಾರ್ಥ್ಯ ಕಂಡು ಅನುಭವಿಸಬೇಕು.

ಇನ್ನು ದೇವೇಂದ್ರ ವೇಷಗಾರಿಕೆಯಲ್ಲೂ ಅಷ್ಟೇ. ಸುಂದರ ಅತ್ಯಾಕರ್ಷಕ.  ಘನ ಗಂಭೀರ. ರಂಗಸ್ಥಳವನ್ನು ತುಂಬಿಬಿಡುವ ಆ ನಿಲುಮೆ ಎಂತಹವರನ್ನು ಸೆಳೆದು ಬಿಡುತ್ತದೆ. ಯಕ್ಷಗಾನದಲ್ಲಿ ದೇವೇಂದ್ರ ಪಾತ್ರಕ್ಕೆ ತಾರಾಮೌಲ್ಯವನ್ನು ರೂಪದರ್ಶಿತ್ವವನ್ನು ಒದಗಿಸಿದವರೆಂದರೆ ಅದು ಎಂಪೆಕೆಟ್ಟೆಯವರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕೇವಲ ಕಿರೀಟವೇಷವಷ್ಟೇ ಅಲ್ಲ ಹಲವು ಚಾರಿತ್ರಿಕ ವೇಷದಲ್ಲೂ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಜಿಪುಣ ಶೆಟ್ಟಿ ಇದಕ್ಕೊಂದು ಸೂಕ್ತ ಉದಾಹರಣೆ. ಹಾಸ್ಯ ಕರುಣೆ ವೀರ ಯಾವುದನ್ನು ಬೇಕಾದರೂ ಕೈಯಲ್ಲಿದ್ದ ಗಂಟಿನಂತೆ ಯಾವಾಗ ಬೇಕು ಆವಾಗ ಹೊರಹಾಕಬಲ್ಲರು. ಗತಕಾಲದ ನೆನಪಿಗೆ ಜಾರುವುದಕ್ಕೆ ಇಂತಹ ಕಲಾವಿದರ ಸ್ಮರಣೆಯೊಂದು ಸಾಕು. ಅದು ಅದ್ಭುತ ರಮ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.





Thursday, September 21, 2017

ವಿಲಕ್ಷಣ ಪ್ರಸಂಗ


ನನ್ನ ಮನೆ ಮಗಳು ನನ್ನ ಮೊಬೈಲ್ ಹಿಡಿದು ಕೆಲವೊಮ್ಮೆ ನೋಡುವುದುಂಟು. ಅದರಲ್ಲಿರುವ ಒಂದಷ್ಟು ವೀಡಿಯೋಗಳನ್ನು ಹಾಡುಗಳನ್ನು ಕಂಡು ಒಂದೆರಡು ಕಮೆಂಟುಗಳನ್ನು ಹೇಳಿ ನನ್ನನ್ನೊಂದಿಷ್ಟು ಕಿಚಾಯಿಸುವುದೆಂದರೆ ಅವಳಿಗಿಷ್ಟವಾದ ಕಾಲಯಾಪನೆ. ನಾನೂ ಅದನ್ನು ಹುಡುಗಾಟಿಕೆಯೊಂದಿಗೆ ಸ್ವೀಕರಿಸಿ ಮಕ್ಕಳಲ್ಲಿ ಮಕ್ಕಳಾಗುವ ಒಂದು ಅವಕಾಶವಾಗಿ ಕಾಣುತ್ತೇನೆ. ಇಂತಹ ಸಮಯದಲ್ಲಿ  ಒಂದಷ್ಟು ಸಲಿಗೆಯಿಂದ ಗೊಣಗಿ ಅವಳಿಂದ ಮೊಬೈಲ್ ಕಿತ್ತುಕೊಳ್ಳುವುದು ನಿತ್ಯ ರೂಢಿ. ನಿನ್ನೆ ನೋಡುತ್ತಿದ್ದಂತೆ ಇದೇನು ದೊಡ್ಡಪ್ಪ ನಿಮ್ಮ ಯಕ್ಷಗಾನದಲ್ಲಿ ಡುಯಟ್ ಸಾಂಗು ಇದೆ . ಯಕ್ಷಗಾನ ಹಾಗೆ ಹೀಗೆ ಹೇಳ್ತೀರಲ್ಲ? ಇದೆಂತದು ಯಕ್ಷಗಾನ?  ನನಗೂ ಕೆಲವೊಮ್ಮೆ ಪಿತ್ಥ ನೆತ್ತಿಗೇರುವುದುಂಟು. ಆದರೂ ಮುದ್ದಿನ ಮಗಳು ಅಂತ ದುರುಗುಟ್ಟುವಿಗೆ ಮಾತ್ರ ಸೀಮಿತವಾಗಿರಿಸಿ ಏನು ಎಂಬಂತೆ ನೋಡಿದೆ. ಆಕೆ ಮೊಬೈಲ್ ಪಕ್ಕಕ್ಕೆ ತಂದು ವೀಡಿಯೋ ತುಣುಕೊಂದನ್ನು ತೋರಿಸಿದಳು.
ಈಗ ಬೆಚ್ಚಿ ಬೀಳುವ ಸರದಿ ನನ್ನದು. ಬೆಚ್ಚಿ ಬೀಳುವುದಲ್ಲ. ಒಂದು ವಿಲಕ್ಷಣ ಭಾವ ನನ್ನ ಮುಖದಲ್ಲಿ ಹಾದು ಹೋಯಿತು. ಹೌದು, ಅಕ್ಷರಶಃ ಒಂದು ಯುಗಳ ಗೀತೆಯೇ. ಒಂದೆರಡು ಸೆಕುಂಡಿನ ವಿಡೀಯೋ ಒಂದು ವಿಶಾಲ ಇತಿಹಾಸದ ಯಕ್ಷಗಾನಕ್ಕೆ ಮಾನವನ್ನು ಗೆರೆ ಎಳೆದಂತೆ ನನ್ನ ಕಣ್ಣು ನಾನೇ ನಂಬಿಕೊಳ್ಳದಂತಹ ಸ್ಥಿತಿ. ಪುಟ್ಟ ಮಗಳ ಎದುರಲ್ಲೇ ಯಕ್ಶಗಾನ ಎಂದರೆ ಇಷ್ಟೇಯಾ ಎಂಬಂತಹ ಪರಿಸ್ಥಿತಿ. ಅದು ಇತ್ತೀಚೆಗೆ ಯಕ್ಷಗಾನ ವಲಯದಲ್ಲಿ  ವೈರಲ್ ಆದ ವೀಡಿಯೋ. ಅದರ ವಿವರಣೆ ಕೊಡುವುದೂ ಅಸಹ್ಯ. ಹೋಗಲಿ ನೋಡುವವರು ನೋಡುತ್ತಾರೆ ಆಡುವವರು ಆಡುತ್ತಾರೆ. ಹೀಗೆ ತಟಸ್ಥನಾಗಿ ನಿರ್ವಿಕಾರ ಭಾವದಲ್ಲಿ ಮೊಬೈಲ್ ಕಿತ್ತುಕೊಂಡು ಮತ್ತಷ್ಟು ಕುಲಂಕೂಷವಾಗಿ ನೋಡುವ ಪ್ರಯತ್ನ ಮಾಡುತ್ತೇನೆ. ಕೆಲವು ಸೆಕುಂಡುಗಳ ವೀಡಿಯೋವಾದರೂ ಸಮಯವಿದ್ದರೂ ಪುನಃ ಕಾಣೂವುದಕ್ಕೆ ಮನಸ್ಸಾಗುವುದಿಲ್ಲ. ಈ ನಡುವೆ ಮನಸ್ಸು ಯೋಚಿಸುತ್ತದೆ. ಅದನ್ನು ಯಥಾವತ್ ನೋಡಿದವರ ಭಾವನೆಗಳೇನಿರಬಹುದು. ಒಂದಷ್ಟು ಜನ ಚಪ್ಪಾಳೆ ಹೊಡೆದು ಶಿಳ್ಳೆ ಹಾಕಿರಬಹುದು. ಇನ್ನಷ್ಟು ಜನ ಏನೂ ನಡೇ ಇಲ್ಲವೆಂಬಂತೆ ಇರಬಹುದು. ಇನ್ನು ಕೆಲವರು ಛೇ ಅಂತ ಲೋಚಗುಟ್ಟಿರಲೂ ಬಹುದು. ಘಟನೆ ನಡೆದು ಅದೆಷ್ಟು ಸಮಯವಾಯಿತೋ. ಈಗ ನಮ್ಮ ಕಣ್ಣಿಗೆ ಬಿದ್ದಿದೆ ಅಂತ ನಾನು ತಿಳಿದೆ. ಯಾಕಂದರೆ ಈಗ ಯಕ್ಷಗಾನಕ್ಕೆ ಯಾವುದೂ ವಿಶೇಷವಲ್ಲ. ಯಾವುದೂ ಅನಿರೀಕ್ಷಿತವಲ್ಲ. ಅವರವರ ದೃಷ್ಟಿಕೋನಕ್ಕೆ ಏನನ್ನಾದರೂ ಮಾಡಿಕೊಳ್ಳಬಲ್ಲಂತಹ ಕಲೆ ಯಕ್ಷಗಾನ. ಹಾಗಾಗಿ ಕೆಲವರಂತೂ ಇವುಗಳಿಗೆಲ್ಲ ಔದಾಸಿನ್ಯದ ಪ್ರತಿಕ್ರಿಯೆಯನ್ನೇ ನೀಡುತ್ತಾರೆ. ಇದು ಸುಲಭವಾದ ಮತ್ತು ತೊಂದರೆ ಇಲ್ಲದ ಪ್ರತಿಕ್ರಿಯೆ ಅಂತ ನನ್ನ ಭಾವನೆ.ಕೆಲವೊಮ್ಮೆ ನಿಜಕ್ಕೂ ಸಂತೋಷ ಬೆರಗು ಒಟ್ಟಿಗೇ ಹುಟ್ಟಿಕೊಳ್ಳುತ್ತದೆ. ಯಕ್ಷಗಾನ ಇಂಥವುಗಳನ್ನೇಲ್ಲಾ ಒಡಲಲ್ಲಿ ಸೇರಿಸಿಬಿಡುವ ಅದ್ಭುತ ಕಲೆಯಾಗಿಬಿಟ್ಟಿದೆಯಲ್ಲ?  ಯಕ್ಷಗಾನದಂತಹ ಸರ್ವಗ್ರಾಹ್ಯ ಕಲೆ ಇನ್ನೊಂದಿರಲಾರದು.
ವೀಡಿಯೋ ಎನೋ ವೈರಲ್ ಆಯಿತು. ಅದಕ್ಕೆ ಎಷ್ಟು ಜನ ವಿರೋಧವಿದ್ದಾರೆ ಪರವಾಗಿ ಎಷ್ಟು ಜನ ಇದ್ದಾರೆ ಯಾರು ಪರ ಯಾರು ವಿರೋಧ ಈ ಜಿಜ್ಞಾಸೆಗಳಲ್ಲೆ ವಾಟ್ಸಾಪ್ ದಿನ ಸರಿದು ಹೋಗುತ್ತದೆ. ಸಾಮಾನ್ಯ  ವಿವಾದಕ್ಕೆ ಒಂದು ಸ್ಪಷ್ಟೀಕರಣ ನೀಡಿ ವಿವಾದವನ್ನು ತಣಿಸುವ ಶ್ಲಾಘನೀಯ ಯತ್ನವೂ ಆಗುತ್ತದೆ. ಅದು ಆಗಬೇಕಾದದ್ದೆ. ಇಲ್ಲವಾದರೆ ಸಮಸ್ಯೆ ತಾರ್ಕಿಕ ಅಂತ್ಯ ಕಾಣುವ ಬಗೆ ಹೇಗೆ? ಹಲವು ಕಾರಣಗಳನ್ನು ನೀಡಿದ ಸಮರ್ಥನೆಯ ಮಾತುಗಳು.  ಅದನ್ನು ಅಲ್ಲ ಅಂತ ಹೇಳುವಷ್ಟಾಗಲೀ ಅಥವ ಹೌದು ಎಂದು ಪೂರಕವಾಗಿ ಹೇಳುವಷ್ಟಾಗಲೀ ನಮ್ಮ ಜ್ಜಾನ ಬೆಳೀಲಿಲ್ಲ. ಇಂತಹ ಸಮಯದಲ್ಲಿ  ನಾವು ತಿಳಿದುಕೊಂಡ ಯಕ್ಷಗಾನ ತುಂಬ ಕಡಿಮೆ ಅಂತ ಅನ್ನಿಸಿಬಿಡುತ್ತದೆ. ಆದರೂ ಅಲ್ಪಮತಿಗೆ ಕೆಲವೊಮ್ಮೆ ಪ್ರಶ್ನೆಗಳು ಮೂಡುವುದುಂಟು. ಅದು ನಮಗಷ್ಟೇ ಸೀಮಿತ.
ನಾನಂತೂ ಯಾರ ಪರವಾಗಿಯೋ ವಿರೋಧವಾಗಿಯೋ ಯೋಚಿಸುವುದಿಲ್ಲ. ಹಾಗೆ ಯೋಚಿಸುವುದರಿಂದ ಪ್ರಯೋಜನವೂ ಇಲ್ಲ. ಈ ಸತ್ಯವನ್ನು ನಾನು ಎಂದಲ್ಲ ಹಲವರು ಕಂಡುಕೊಂಡಾಗಿದೆ. ಹಾಗಾಗಿ ಯಾವ ಚರ್ಚೆ ಸಂವಾದಗಳೂ ಸ್ವಾರಸ್ಯವಾಗಿ ಕಾಣುವುದಿಲ್ಲ. ಸುಮ್ಮನೆ ನೋಡೋಣ ಎಂಬ ಮನರಂಜನಾ ಭಾವವೂ ಉಂಟಾಗುವುದಿಲ್ಲ. ಹಿರಿಯ ವಿದ್ವಾಂಸರರೋಬ್ಬರು ಹೇಳಿದ್ದನ್ನು ಕೇಳಿದ್ದೇನೆ. ಯಕ್ಷಗಾನ ಸರಿಯಾಗಿ ಕಲಿಯುವುದಕ್ಕೆ ಪೂರ್ಣವಾಗಿ ಅಭ್ಯಾಸ ಮಾಡುವುದಕ್ಕೆ ಯಾರೂ ಹೋಗುವುದಿಲ್ಲ. ಬದಲಾಗಿ ಅದರಲ್ಲಿ ಹೊಸತನ್ನು ಇಂಪ್ಲಿಮೆಂಟ್ ಗೆ ತೊಡಗುತ್ತಾರೆ. ಯಕ್ಷಗಾನದಲ್ಲಿ ಇದ್ದದ್ದು ಸಾಕಾಗುವುದಿಲ್ಲ. ಅದರ ಬಗ್ಗೆ ವಿಶ್ವಾಸ ವಿಲ್ಲ. ಹಾಗಾಗಿ ಮತ್ತೇನನ್ನೋ ಸೇರಿಸುತ್ತಾರೆ. ಯಕ್ಷಗಾನದಲ್ಲಿ ಜೀವಮಾನದಲ್ಲಿ ಕಲಿತು ಪೂರೈಸದಷ್ಟು ಇದೆ ಅಂತ ಹಿರಿಯ ಕಲಾವಿದರು ಹಲವರು ಹೇಳುತ್ತಾರೆ. ಅದನ್ನೇ ಸರಿಯಾಗಿ ಅಭ್ಯಾಸ ಮಾಡಿ ಬಳಕೆ ಮಾಡಿದರೆ ಸಾಕಾಗುತ್ತದೆ. ಆದರೆ ಇಂದಿನ ಯುವ ಪೀಳಿಗೆಗೆ ಹಿರಿಯ ಮಾತುಗಳಲ್ಲಿ ಹಿರಿಯರ ಜ್ಜಾನದಲ್ಲಿ ವಿಶ್ವಾಸವಿಲ್ಲ. ಅಥವಾ ಹಿರಿಯರು ಹೇಳಿದಂತೆ ಜೀವಮಾನದಲ್ಲಿ ಕಲಿತು ಮುಗಿಸಲು ಸಾಧ್ಯವಿಲ್ಲದೇ ಇದ್ದುದನ್ನು ಕೇವಲ ಆರು ತಿಂಗಳಲ್ಲಿ ಕಲಿತು ಮುಗಿಸಿದ್ದಾರೋ ಎನೋ ತಿಳಿಯದು. ಹಾಗಾಗಿ ತಮ್ಮತಮ್ಮದು ಇರಲಿ ಅಂತ ಒಂದೊಂದನ್ನು ಇಳಿಸಿ ನೋಡುತ್ತಾರೆ. ಚಪ್ಪಾಳೆ ಸಿಕ್ಕಿದಾಗ ಮತ್ತೂ ಒಂದಷ್ಟನ್ನು ಸೇರಿಸುತ್ತಾರೆ. ತಪ್ಪು ಅಂತ ಹೇಳುವುದಕ್ಕೆ ಸಾಧ್ಯವೇ? ಯಕ್ಷಗಾನ ನಿಂತ ನೀರಾಗಿದೆ. ಹಾಗಾಗಬಾರದಲ್ಲ?  ಹಿರಿಯರು ಹೇಳುವಂತೆ  ಯಕ್ಷಗಾನದಲ್ಲಿ ಇದ್ದುದನ್ನೇ ಸರಿಯಾಗಿ ಅಭ್ಯಾಸ ಮಾಡಿ ಅದಷ್ಟನ್ನೇ ಬಳಕೆ ತರುತ್ತಿದ್ದರೆ, ಕಲಾವಿದರಿಗೆ ಕಣ್ಸನ್ನೆಯ ನಿರ್ದೇಶನವಾಗಲೀ ಆಕ್ಷಣದ ಬದಲಾವಣೆಗಳಾಗಲಿ ಅಗತ್ಯ ಬೀಳಲಾರದು. ಈ ವಿವಾದವೂ ಹುಟ್ಟಿಕೊಳ್ಳುವುದಕ್ಕೆ ಆಸ್ಪದವೂ ಇರಲಾರದು. ಪರಂಪರೆ ನಿಂತ ನೀರಾಗಿ ಕೆಸರಾಗಿ ಮಡುಗಟ್ಟಿ ಹೋಗಿದೆ. ಹಾಗಾಗಿ ವಿವಾದ ಮತ್ತು ಕೆಲವೆಲ್ಲ ಸಹಿಸಿಕೊಳ್ಳಬೇಕು. ಯಕ್ಷಗಾನಕ್ಕೆ ಅಷ್ಟು ಮಾಡದೇ ಇದ್ದರೆ ಹೇಗೆ? ಗಂಟೆ ಕಟ್ಟಲೆ ಪದ ಎಳಿಯದೇ ಇದ್ದರೆ ಹೊಸದನ್ನು ಹುಡುಕುವ ಅವಶ್ಯಕತೆಯೇ ಬೀಳುವುದಿಲ್ಲ. ಎಲ್ಲವು ಕಾಲಕ್ಕೆ ಹೊಂದಿಕೊಂಡಂತೆ ಸರಿ ಅಂತಲೇ ಒಪ್ಪಿಕೊಂಡು ಯಕ್ಷಗಾನ ಬೇಕೋ ಬೇಡವೋ ಅಂತ ದೂರ ಉಳಿಯ ಬೇಕಾದರೆ ಉಳಿದು ಬಿಡಬಹುದು.
ಸುಮಾರು ನಲ್ವತ್ತು ವರ್ಷಗಳಿಂದ ಯಕ್ಷಗಾನ ನೋಡಿ ಆನಂದಿಸಿದ್ದೇನೆ. ಬಾಲ್ಯದಿಂದಲೂ ಯಕ್ಷಗಾನ ಎಂದರೆ ಇದೇ ಅಂತ ಒಂದು ನಂಬಿಕೆ ಬೆಳೆದು ಬಂದು ಬಿಟ್ಟಿದೆ. ಅದು ನನ್ನ ಅಮ್ಮ ಎಂದರೆ ಇವಳು ಎಂಬ ಹಾಗೆ. ಬೇರೆ ಯಾವ ಹೆಂಗಸನ್ನು ತಂದು ತೋರಿಸಿದರೂ ಅಂತರಾಳದಲ್ಲಿ ಅಮ್ಮ ಎನ್ನುವ ಭಾವನೆ ಸ್ಪುರಿಸೀತೆ.? ಇಲ್ಲ. ಹಾಗಾಗಿ ಹೊಸ ಹೊಸ ಅವಿಷ್ಕಾರಗಳು ಮಾಡುವವರು ಮಾಡುತ್ತಾರೆ ನೋಡುವವರು ನೋಡುತ್ತಾರೆ. ಆದರೆ ನಮ್ಮ ನಂಬಿಕೆ ಹಾಗೇ ಉಳಿದು ಬಿಡುತ್ತದೆ.  ನೋಡುವವರಿಗಿಂತಲೂ ನೋಡದೇ ಇರುವವರ ಸಂಖ್ಯೆ ಬೇಕಾದಷ್ಟಿದೆ. ಹಾಗೆಂದು ಯಾವುದೂ ನಿಲ್ಲುವುದಿಲ್ಲವಲ್ಲ?  ತಮ್ಮ ತಮ್ಮ ಕಾರ್ಯಗಳಿಗೆ ವಿವರಣೆಯೋ ಸ್ಪಷ್ಟೀಕರಣವೋ ಇದ್ದೇ ಇರುತ್ತದೆ. ಆದರೆ ಅದನ್ನು ಸತ್ಯ ಎಂದು ನಂಬುವುದು ಬಿಡುವುದು ಹೇಳುವಾತನ  ಕೈಯಲ್ಲಿ ಇರುವುದಿಲ್ಲ. ಒಂದು ಭವ್ಯ ಪರಂಪರೆಯನ್ನು ದೂರ ಮಾಡುವಲ್ಲಿನ ಕಾಳಜಿ ಅದನ್ನು ಉಳಿಸುವುದರಲ್ಲಿ ಇರುವುದಿಲ್ಲ. ಪ್ರೇಕ್ಷಕ ಬೇಕು ಎಂದು  ಬಯಸಿದರೂ ಅದನ್ನು ಒದಗಿಸುವ ಭಂಡವಾಳ ಸ್ವತಃ ಇರುವುದಿಲ್ಲ. ಹಾಗಾಗಿ ಪ್ರೇಕ್ಷಕನ ದೃಷ್ಟಿಕೋನವನ್ನು ಬದಲಿಸಿದರೆ ಸಸೂತ್ರ. ಇದ್ದ ಭಂಡವಾಳದಲ್ಲೇ ವ್ಯವಹಾರ ಸಾಗಿಬಿಡುತ್ತದೆ. ಆದರೂ ಈಗ ಬದಲಾಗುವ ಪ್ರೇಕ್ಷಕ  ಮುಂದೆ ಬದಲಾಗುವುದಿಲ್ಲ ಎಂಬುವುದಕ್ಕೆ ಭರವಸೆ ಇದೆಯೇ?
ಇದೆಲ್ಲ ಚಿಂತನೆಗಳು ನನಗಷ್ಟೇ ಸೀಮಿತ. ಸರಿ ತಪ್ಪು ಎಂದು ವಿಶ್ಲೇಷಣೆ ಮಾಡಬಹುದು. ಆದರೆ ಅದನ್ನು ನಂಬುವುದು ಅಂತರಂಗದ ವಿಚಾರ ಮಾತ್ರವಲ್ಲ. ಅಂತರಂಗದ ಸ್ವಾತಂತ್ಯ್ರ. ಹಾಗಾಗಿ ಅದು ಕೇವಲ ನನ್ನ ಪರಿಧಿಯೊಳಗಿನವುಗಳು. ಯಾರಾದರೂ ಆ ಪರಿಧಿಯೊಳಗೆ ಬರುತ್ತಾರೆ ಎಂದಾದರೆ ಅದವರವರ ಮನೋಭಾವ ಅಷ್ಟೆ.




Sunday, July 2, 2017

ಬಣ್ಣನೆಯ ಮಾತಲ್ಲ ಬಣ್ಣಕ್ಕೊಬ್ಬನೇ ಮಾಲಿಂಗ


ಅದು ಸುರತ್ಕಲ್ ಮೇಳದ ಆಟ. ಪ್ರಸಂಗ ಸಮಗ್ರ ಭೀಷ್ಮ. ಪ್ರಸಂಗದ ಅರಂಭದ ಭಾಗ. ಶಂತನು ತಮಾಲಕೇತ ನೆಂಬ ರಕ್ಕಸನನ್ನು ಸಂಹರಿಸುವ ಸನ್ನಿವೇಶ. ತಮಾಲ ಕೇತನಾಗಿ ಯಕ್ಷಗಾನದ ಅಸುರ ಪಾತ್ರಧಾರಿ ಮಾತ್ರವಲ್ಲ ಬಣ್ಣದ ವೇಷಗಳಿಗೆ ತಾರಾಮೌಲ್ಯವನ್ನು ತಂದುಕೊಟ್ಟಂತಹ ಕಲಾವಿದ ಶ್ರೀ ಬಣ್ಣದ ಮಹಾಲಿಂಗ. ಬಣ್ಣದ ವೇಶದ ಒಡ್ದೋಲಗ ಎಂದರೆ ಕೇಳಬೇಕೆ? ಮೂರು ಸಲ ಆರ್ಭಟೆಕೊಟ್ಟು ನಂತರ ನಿಧಾನವಾಗಿ ರಂಗವೇರಿ ಹಂತ ಹಂತವಾಗಿ ಅಸುರ ರೂಪವನ್ನು ಅನಾವರಣಗೊಳ್ಳಿಸುವ ರಾಕ್ಷಸೀ ವೇಶ. ಆದರೆ ನಾವಂದು ಯಕ್ಷಗಾನದ ಅದ್ಭುತ ಬಣ್ಣದ ವೇಶವನ್ನು ಕಾಣುತ್ತಿದ್ದೇವೆ ಎಂಬ ಅರಿವು ನಮಗಿರಲಿಲ್ಲ. ಯಥಾ ಪ್ರಕಾರ ಯಾವುದೋ ಒಂದು ವೇಶ ಎಂದು ಭಾವಿಸಿದ್ದರೆ ಪ್ರತ್ಯಕ್ಷದ ವಾಸ್ತವವೇ ಬೇರೆ. ರಂಗಸ್ಥಳದ ತೆರೆ ಹಂತ ಹಂತವಾಗಿ ಸರಿಯುತ್ತಿದ್ದಂತೆ ರಂಗದ ಮಂದ ಬೆಳಕಿನಲ್ಲಿ  ತಾರಕದ ಆರ್ಭಟೆಯೊಂದಿಗೆ ತಮಾಲ ಕೇತನ ದೈತ್ಯ ವೇಶ ಕಣ್ಣೆದುರು ನಿಂತಿದೆ. ಭಯಾನಕ ವೇಶ ನೋಡಲಾರೆನು ಎಂದು ಕುಳಿತರೆ ಸಾಕೆ? ಬಣ್ಣದ ಮರೆಯಲ್ಲಿ ಆ ಬಾಯಿ ಎಲ್ಲಿ ಅಡಗಿದೆಯೋ ಎಂದು ಹುಡುಕುವ ಮೊದಲು ಕರ್ಣವನ್ನು ಇರಿಯುವಂತೆ ಅಸುರಾರ್ಭಟ ಕಿವಿಯನ್ನು ಮುಚ್ಚುವಂತೆ ಮಾಡುತ್ತಿದ್ದವು. ಕಣ್ಣು ಕಿವಿ ಮುಚ್ಚಿದ ಮೇಲೆ ನೋಡುವ ಆಟ ಎಂತದ್ದು? ಸದ್ದು ಮಾಡಲೆಂದೇ ದುಡ್ಡುಕೊಟ್ಟು  ತಂದ ಗರ್ನಾಲು ಹೊಟ್ಟಿಸುವಾಗ ಕೇಳಲಾಗದೆ  ಕಿವಿ ಮುಚ್ಚುವಂತೆ, ಆಟ ನೋಡುವುದಕ್ಕೆಂದೇ ಬಂದ ಮೇಲೆ ರಕ್ಕಸ ಪಾತ್ರಕ್ಕೆ ಕಣ್ಣು ಕಿವಿ ಮುಚ್ಚಿಕುಳಿತರಾದೀತೆ. ವಿಚಿತ್ರವೆಂದರೆ ಕಣ್ಣು ಕಿವಿ ಮುಚ್ಚುತ್ತಿದ್ದದ್ದು ಪ್ರೇಕ್ಷಕನಲ್ಲ. ಮಾಲಿಂಗಣ್ಣ ನ ಆರ್ಭಟೆ ಮತ್ತು ವೇಶ ಇಂದ್ರಿಯಗಳೆರಡನ್ನೂ  ನಿಷ್ಕ್ರಿಯವಾಗುವಂತೆ ಮಾಡುತ್ತಿದ್ದವು. ಚೆಂಡೆಯ ಸದ್ದಿನಲ್ಲೂ ಸೂಕ್ಷ್ಮವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾದ ಆರ್ಭಟೆ ಒಂದೆಡೆಯಾದರೆ ಪೊದೆಯೊಳಗೆ ಅವಿತುಕೊಂಡ ವ್ಯಾಘ್ರನಂತೆ ಬಣ್ಣದ ರಾಶಿಯ ಆಳದಲ್ಲಿ ಬೆಂಕಿಯನ್ನು ಉಗುಳುವಂತೆ ತಿರುಗುತ್ತಿದ್ದ ಕಣ್ಣುಗಳು. ತಮಾಲ ಕೇತ ತಮಳವನ್ನು ಸೃಷ್ಟಿಸಿದ್ದ.

ಅಂತರ್ಜಾಲದ ಅನಾಮಿಕ ಚಿತ್ರಗಾರನಿಗೆ ಕೃತಜ್ಞನಾಗಿ

ಮಾಲಿಂಗಣ್ಣನ ಪ್ರವೇಶ ಎಂದರೆ ಅಲ್ಲಿ ಧಾವಂತವಿಲ್ಲ. ಕಿರಿದಾದ ಹೆಜ್ಜೆಗಳನ್ನಿಡುತ್ತಾ ಕೈಗಳೆರಡನ್ನು ಭುಜದೆತ್ತರಕ್ಕೆ ಅಗಲಿಸಿ ನಿಧಾನವಾಗಿ ಬರುವ ಸಿಂಹ ನಡಿಗೆಯದು. ಮುಖದ ಬಣ್ಣಗಾರಿಕೆಯೋ ಯಾವುದೇ ಡಿಪ್ಲೊಮವೂ ಮಾಡದ ದೈವದತ್ತ ವರ್ಣ ವಿಸ್ಮಯವದು. ಸಾಮಾನ್ಯವಾಗಿ ಯಕ್ಷಗಾನದಲ್ಲಿ  ಬಣ್ಣದವೇಶ ವೆಂದರೆ ಹಾಗೆ ಬಂದ ಹೀಗೆ ಹೋದ ಎನ್ನುವಂತಹ ಸಂಭವ. ಆದರೂ ಮಾಲಿಂಗಣ್ಣನ ಬಣ್ಣ ಮುಖದಂತೆಯೆ ಮನಸ್ಸಿನಲ್ಲೂ ಗಾಢವಾಗುತ್ತದೆ. ವೇಷದಿಂದ ವೇಷಕ್ಕೆ ಪಾತ್ರಕ್ಕೆ ಒಪ್ಪು ಯಕ್ಷಗಾನ ಪರಂಪಗೆ ಮಾದರಿ ಎನಿಸುವಂತಹ ಬಣ್ಣಗಾರಿಕೆ.  ಕೇವಲ ಬಣ್ಣಗಾರಿಕೆ ಮಾತ್ರವಲ್ಲ ಅಂದಿನ ಆಕಾಲದಲ್ಲೂ ಸೀಮಿತ ತಂತ್ರಜ್ಞಾನದಲ್ಲಿ ವೇಷಗಾರಿಕೆಯಲ್ಲಿ ಇವರು ತೋರುತ್ತಿದ್ದ ಕುಸುರಿ ಗಾರಿಕೆ ಕ್ರೀಯಾ ಶೀಲತೆ ಯಕ್ಷಗಾನಕ್ಕೆ ಭೂಷಣ ಪ್ರಾಯವಾಗುತ್ತಿತ್ತು. ರಂಗವನ್ನು ತುಂಬುತ್ತಿದ್ದ ವೇಷಗಳು ಅದರಲ್ಲೂ ಅಸುರ ವೇಷಗಳಂತೂ ಎಂತಹವರ ಎದೆಯಲ್ಲೂ ಕಂಪನವನ್ನು ಹುಟ್ಟಿಸುವ ರುದ್ರ ಭೀಕರವಾಗಿರುತ್ತಿತ್ತು.

ಬಣ್ಣದ ವೇಷಗಳ ಕುಣಿತ ಅದರಲ್ಲು ದೊಡ್ಡ ಕಿರೀಟಧರಿಸಿ ರಂಗವೇರುವಾಗ ಘನ ಗಂಭೀರದ ನಿಧಾನ ವೇಗದ ಕುಣಿತ. ಇಂದು ಅದು ಪೂರ್ಣವಾಗಿ ಬದಲಾಗಿ ಹೋಗಿದೆ. ರಂಗದ ಮೇಲೆ ರಾಜವೇಶ ಪುಂಡುವೇಷಕ್ಕೆ ಸರಿಮಿಗಿಲಾಗಿ ಬಣ್ಣದ ವೇಷಗಳು ಕುಣಿಯಲಾರಂಬಿಸಿವೆ. ಬಣ್ಣದ ವೇಶದ ಪ್ರಭಾವ ಪ್ರೇಕ್ಷಕನಲ್ಲಿ ಉಂಟಾಗಬೇಕಾದರೆ ಅದು ನಿಧಾನವಾದ ಸಿಂಹ ಹೆಜ್ಜೆಗಳೇ ಸೂಕ್ತ. ಮಾಲಿಂಗಣ್ಣನ ಕುಣಿತದ ವೈಶಿಷ್ಯವೇ ಇದು. ರಂಗಸ್ಥಳದ ಮೂಲೆಯಿಂದ ಮೂಲೆಗೆ ಅವರ ಕುಣಿತದ ಒಂದು ಶೈಲಿ ಬಹಳ ಆಕರ್ಷಕವಾಗಿ ರಂಗವನ್ನು ತುಂಬಿಕೊಳ್ಳುತ್ತಿತ್ತು. ಮಿತಿಯಲ್ಲಿ ಸುತ್ತುವ ಕ್ರಮ ಅದು ಇಂದು ರಂಗದಲ್ಲಿ ಅಪರೂಪವೇ ಆಗಿಬಿಟ್ಟಿದೆ. ಇಂದು ಸುತ್ತುವುದಕ್ಕೆ ಇಷ್ಟೇ ಎಂಬ ಪರಿಮಿತಿಯೂ ಇಲ್ಲ. ವೇಷ ಕುಣಿದಂತೆ ಹಿಮ್ಮೇಳದವರು ಬಾರಿಸಿಬಿಡುತ್ತಾರೆ.  ನಿಯಮವೂ ಇಲ್ಲ. ಪಾತ್ರದ ಮನೋಭಾವವನ್ನು ಅರ್ಥೈಸುವ ಪ್ರಮೇಯವೇ ಇಲ್ಲ. ಅಂದಿನ ಅನಕ್ಷರಸ್ಥ ಅವಿದ್ಯಾವಂತರೂ ವೇಷ ಮಾಡುತ್ತಿದ್ದರೆ  ಆಯಾ ಪಾತ್ರದ ಆಮೂಲಾಗ್ರ ಚಿತ್ರಣವನ್ನು ರಂಗದ ಮೇಲೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದರು. ಪಾತ್ರದಿಂದ ಪಾತ್ರಕ್ಕೆ ವಿಭಿನ್ನವಾಗಿ ಮೂಡಿಬರುತ್ತಿತ್ತು.  ಇಂದು ವಿದ್ಯೆ ಇದೆ.  ಆದರೆ ಶಿಕ್ಷಣವಿಲ್ಲ.

ಮಾಲಿಂಗಣ್ಣನವರು ಕೇವಲ ಅಸುರ ಪಾತ್ರಕ್ಕೆ ಸೀಮಿತವಾದವರಲ್ಲ. ತುಳು ಪ್ರಸಂಗಗಳಲ್ಲಿನ ವೇಷಗಳನ್ನೂ ನಾನು ಕೆಲವನ್ನು ನೋಡಿದ್ದೇನೆ. ಅಲ್ಲಿಯೂ ಅವರ ವೈಶಿಷ್ಟ್ಯವನ್ನು ತನ್ನ ಬಣ್ಣಗಾರಿಕೆಯಿಂದ ವೇಶದ ಕುಶಲಗಾರಿಕೆಯಿಂದಲೂ ತೋರಿಸುತ್ತಿದ್ದರು. ಗಾಢವಾಗಿ ಎದ್ದು ಕಾಣುವ ವರ್ಣ ಚಿತ್ತಾರ ರಂಗದಲ್ಲಿ ವೇಷವನ್ನು ಆ ಮಂದ ಬೆಳಕಲ್ಲೂ ಎದ್ದು ಕಾಣುವಂತೆ ಮಾಡುತ್ತಿದ್ದವು. ತುಳು ಪ್ರಸಂಗವೊಂದರಲ್ಲಿ ಅದು ಹೆಸರು ನೆನಪಿಲ್ಲ. ಮಾಲಿಂಗಣ್ಣ ಕುಸ್ತಿಯ ಜಟ್ಟಿ ವೇಶದಲ್ಲಿ ಬರುತ್ತಾರೆ. ಬಲಿಷ್ಠ ತೋಳುಗಳು ಮತ್ತು ಕಾಲುಗಳಿಗೆ ಸಂಕೇತವಾಗುವಂತೆ ಕೈ ಕಾಲುಗಳಿಗೆ  ಬಟ್ಟೆಯ ಮೇಲೆ ಬಟ್ಟೆಯನ್ನು ಸುತ್ತಿ ದೈತ್ಯಾಕಾರವಾಗಿ ರಂಗವೇರುವಾಗ ಅಧ್ಬುತವಾದ ಜಟ್ಟಿ ಪ್ರವೇಶವಾದ ಅನುಭವ. ಇದು ಇವರೇ ಸೃಷ್ಟಿಸುವ ಪಾತ್ರಗಳು ಇಂತಹ ಸಾವಿರಾರು  ಪಾತ್ರಗಳು ರಂಗದಲ್ಲಿ ಮಾಲಿಂಗಣ್ಣನ ವೇಶಗಾರಿಕೆಯಲ್ಲಿ ರೂಪತಳೆದಿವೆ. ಸಾಮಾನ್ಯವಾಗಿ ಕಥಕ್ಕಳಿ ಮುಂತಾದ ಕಲೆಯಲ್ಲಿ ಮುಖವರ್ಣಿಕೆಗೆ ಬೇರೆಯೇ ಕಲಾವಿದರು ಸಹಾಯಕರು ಇರುತ್ತಾರೆ. ಆದರೆ ಯಕ್ಷಗಾನದಲ್ಲಿ ಸ್ವ ಬಣ್ಣಗಾರಿಕೆಯೇ ವೈಶಿಷ್ಟ್ಯ ಅದರಲ್ಲೂ ಮಾಲಿಂಗನಂತಹವರ ಕೈಚಳಕ ಕಂಡರೆ ಯಕ್ಷಗಾನದ ವಿಶೇಷತೆ ಅರಿವಾಗುತ್ತದೆ. ಈ ವಿಶೇಷತೆಗೆ ಪೂರಕವಾಗುವಂತೆ ಮಾಲಿಂಗಣ್ಣನ ವೇಶಗಾರಿಗೆ ವರ್ಣ ವೈಭವವನ್ನು ರಂಗದಲ್ಲಿ ಮೆರೆಸಲ್ಪಡುತ್ತದೆ.

ಬಣ್ಣದ ವೇಷಗಳ ತಂತ್ರಜ್ಞಾನ ಇಂದು ಬಹಳಷ್ಟು ಬದಲಾಗಿ ಹೋಗಿದೆ. ಮೊದಲು ಬಣ್ಣಗಾರಿಕೆಯಿಂದಲೇ ಪ್ರತ್ಯೇಕಿಸಲ್ಪಡುತ್ತಿದ್ದ ವೇಷಗಾರಿಕೆ ಇಂದು ವೆತ್ಯಾಸವಿಲ್ಲದೇ ಒಟ್ಟು ಬಣ್ಣಗಾರಿಕೆಯಿಂದ ರಂಗವೇರುತ್ತದೆ. ಬಣ್ಣಗಾರಿಕೆ ಕೇವಲ ವೇಶಗಾರಿಕೆ ಎಂಬಂತಾಗಿದೆ. ಹಲವಾರು ವೇಶಗಳು ಬಣ್ಣವನ್ನು ಬದಿಗಿಟ್ಟು ಮುಖವಾಡದ ಮೊರೆ ಹೊತ್ತಿವೆ. ಇದು ಯಕ್ಷಗಾನದ ಮೂಲ ವೈಶಿಷ್ಟ್ಯಕ್ಕೆ ಧಕ್ಕೆಯಾಗುವಂತಹುದು. ವೇಶಗಳ ಮುಖವರ್ಣಿಕೆ ಅದು ಬಣ್ಣಗಾರಿಕೆಯಿಂದಲೇ ರೂಪತಳೆಯಬೇಕು. ಅದು ಯಕ್ಷಗಾನದ ನಿಜ ಬಣ್ಣಗಾರಿಕೆ. ಬಣ್ಣವಿಲ್ಲದ ಮುಖಗಳಿಗೆ  ಮುಖವರ್ಣಿಕೆ ಎಂದು ಹೇಳುವುದಕ್ಕೆ ಅರ್ಥವಿಲ್ಲ. ಅದು ಕೇವಲ ಮುಖವಾಡ. ಅದನ್ನು ಬಣ್ಣದ ವೇಶ ಎಂದು ವರ್ಗೀಕರಿಸಿದರೆ ಯಕ್ಷಗಾನದ ನಿಜ ಬಣ್ಣವೇಶಗಾರಿಕೆಯನ್ನು ಲೇವಡಿ ಮಾಡಿದಂತೆ. ಇಂದು ತಂತ್ರಜ್ಞಾನ ಬೆಳೆವಣಿಗೆಯಾಗಿದೆ. ಆದರೆ ಪರಿಣಾಮ ನಿಸ್ತೇಜವಾಗಿದೆ. ಪ್ರಭಾವವೇ ಬೀರುವುದಿಲ್ಲ. ಮಾಲಿಂಗಣ್ಣನಂತವರು ರಂಗಸ್ಥಳದಲ್ಲಿ ಕಳೆಯುವ ಸಮಯಕ್ಕಿಂತಲೂ ಅಧಿಕ ಹೊತ್ತನ್ನು ಬಣ್ಣದ ಪೆಟ್ಟಿಗೆಯ ಮುಂದೆ ಕಳೆದಿದ್ದಾರೆ. ಆದರೂ ಅವರ ವೇಶಗಾರಿಕೆಯಲ್ಲಿ ’ಇಲ್ಲಿಗೆ ಇಷ್ಟು ಸಾಕು’  ಎಂಬ ಕಾಟಾಚಾರವಿರುತ್ತಿರಲಿಲ್ಲ. ಸಂಪೂರ್ಣ ಬದ್ದತೆ ಮತ್ತು ಅರ್ಪಣಾ ಮನೋಭಾವ ಅವರ ವೇಶಗಾರಿಕೆಯಲ್ಲೂ ನಾಟ್ಯ ಅಭಿನಯದಲ್ಲೂ ಕಾಣಬಹುದಿತ್ತು. ಒಂದೆರಡು ಘಳಿಗೆಗೆ ಬಂದು ಹೋಗುವ ಪಾತ್ರಗಳಿಗೆ ಗಂಟೆಗಟ್ಟಲೆ ಬಣ್ಣ ಬಳಿಯುತ್ತಾ ಕುಳಿತುಕೊಳ್ಳುವುದೆಂದರೆ ಇಂದಿನವರು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ. ಇಂದು ಯಕ್ಷಗಾನವೆಂದರೆ ಕೇವಲ ಅನುಕರಣೆ.   ಅದರಲ್ಲೂ ತಮಗಿಷ್ಟವಾದುದಷ್ಟನ್ನೇ ಅನುಕರಿಸುತ್ತಾರೆ ಹೊರತು ಯಕ್ಷಗಾನಕ್ಕೆ ಉಚಿತವಾದುದನ್ನಲ್ಲ.    ಹಿರಿಯರ ಅನುಕರಣೆ ಮಾಡುವಾಗ ಅದರ ಆಳಕ್ಕೆ ಇಳಿಯದೆ ಪಾತ್ರದ ಅಂತರಾತ್ಮ ತಿಳಿಯದೇ ಕೇವಲ ಅನುಕರಣೆ. ಇದು ಯಕ್ಷಗಾನಕ್ಕೆ ಕ್ರಿಮಿಯಾಗಿ ಕಾಡುವ ಮಿಮಿಕ್ರಿ.  ಪರೀಕ್ಷಾ ಸಮಯದಲ್ಲಿ ನಕಲು ಹೊಡೆದು ಪಾಸಾದಂತೆ. ಉತ್ತರ ಕೇವಲ ಪತ್ರಿಕೆಯಲ್ಲಿ ಇರುತ್ತದೆ ಹೊರತು ತಲೆಯಲ್ಲಿ ಇರುವುದಿಲ್ಲ. ಇವರ ತಲೆಯೂ ಕೇವಲ ಅನುಕರಣೆಗೆ ಸೀಮಿತವಾಗಿ ಉಳಿದಂತೆ ಶೂನ್ಯವಾಗಿರುತ್ತದೆ.  ಹಾಗಾಗಿ ಮಾಲಿಂಗಣ್ಣನ ವೇಷ ಅನುಕರಣೆಗೆ ಸೀಮಿತವಾಗದೆ ಅನುಸರಣೆಗೆ ಮಾರ್ಗವಾಗಿ ಪರಿವರ್ತನೆಯಾಗಬೇಕು.

ಮಾಲಿಂಗಣ್ಣನ ಬಣ್ಣದವೇಶವಾಗಲಿ ಇತರ ವೇಷವಾಗಲೀ ಪ್ರತ್ಯೇಕಿಸುವುದು ಕಷ್ಟ. ಆದರೂ ಬಣ್ಣಕ್ಕೆ ವಿಶೇಷವಾಗಿ ಮಾಲಿಂಗ ಬಣ್ಣದವ್ಯಕ್ತಿಯಾಗಿ ಯಕ್ಷಗಾನದಲ್ಲಿ ಇತಿಹಾಸ ನಿರ್ಮಿಸಿ ಬಿಟ್ಟಿದ್ದಾರೆ. ಇವರ ವೇಶವನ್ನು ಕಾಣುವಾಗ ನಾವು ಒಂದು ಇತಿಹಾಸಕ್ಕೆ ಸಾಕ್ಷಿಯಾಗುತ್ತೇವೆ ಎಂಬ ಅರಿವು ಇರುತ್ತಿರಲಿಲ್ಲ. ಇರುತ್ತಿದ್ದರೆ?  ಅಂತ ಈಗ ಅನ್ನಿಸುತ್ತದೆ. ಮಾಲಿಂಗಣ್ಣ ಎಂದರೆ ಅದು ಯಕ್ಷಗಾನದ ಬಣ್ಣಕ್ಕೆ ಅನ್ವರ್ಥ. ಹಲವು ಸಲ ಅವರನ್ನು ವೇಷವಿಲ್ಲದೇ ಸಾಮಾನ್ಯವಾಗಿ ಕಂಡಾಗ ನಾವು ಬೇರಗಾಗಿಬಿಡುತ್ತೇವೆ. ರಂಗದಮೇಲೆ ಬಂದು ರುದ್ರ ಭೀಕರತೆಯನ್ನು ಸೃಷ್ಟಿಸುವ ಮಾಲಿಂಗಣ್ಣ ಏನು ಅರಿಯದ ಮುಗ್ಧರಂತೆ ಕಂಡು ಬರುತ್ತಿದ್ದರು. ಯಕ್ಷಗಾನದಲ್ಲಿ ಬಣ್ಣಕ್ಕೆ ತಾರಾಮೌಲ್ಯವನ್ನು ಒದಕಿಸಿ ಬಣ್ಣದ ವಿಶ್ವವಿದ್ಯಾನಿಲಯವಾದರು ಬಣ್ಣದ ಮಾಲಿಂಗಣ್ಣ. ಹಾಗಾಗಿ ಯಕ್ಷಗಾನ ಎಂದೇಕೆ ಯಾವುದೇ ಕಲೆಯನ್ನು ಪರಿಗಣಿಸಿದರೂ ಬಣ್ಣನೆಯ ಮಾತಲ್ಲ ಬಣ್ಣಕ್ಕೊಬ್ಬನೇ ಮಾಲಿಂಗ  ಅದು "ಬಣ್ಣದ ಮಾಲಿಂಗ".




Thursday, June 29, 2017

ಯಕ್ಷಗಾನ ಅವಲೋಕನ


ನಾನು ಸರಿ ಸುಮಾರು ನಾಲ್ಕು ದಶಕಗಳಿಂದಲು ಅಧಿಕ ಅಂದರೆ ನಲ್ವತ್ತು ವರ್ಷಗಳಿಂದ ಯಕ್ಷಗಾನವನ್ನು ನೋಡಿ ಅನುಭವಿಸಿದವನು. ಅಂದಿನಿಂದ ಇಂದಿನವರೆಗೂ ನನ್ನದೇ ಆದ ಅಭಿರುಚಿಯೂ ಹಲವು ಬದಲಾವಣೆಗಳನ್ನು ಕಂಡಿವೆ. ಅಭಿರುಚಿ ಬದಲಾಗುವುದಕ್ಕೆ ಹಲವು ಕಾರಣಗಳಿರುತ್ತವೆ. ನಮ್ಮ ಪರಿಸರ, ಪ್ರೌಢವಾಗುವ ನಮ್ಮ ಮಾನಸಿಕ ತಿಳುವಳಿಕೆ ಹೀಗೆ ಅಭಿರುಚಿ ಬದಲಾಗುತ್ತಾ ಇರುತ್ತದೆ. ಅಭಿರುಚಿ ಬದಲಾದರೂ ಅತೃಪ್ತಿಯೊಂದು ಹಲವುಸಲ ನೆರಳಿನಂತೆ ಹಿಂಬಾಲಿಸುತ್ತದೆ. ಆಗ ಅಭಿರುಚಿ ಬದಲಾಯಿತೋ ಅಥವಾ ಅನುಭವಿಸುವ ಕಲೆ ಬದಲಾಯಿತೋ ಎಂಬ ಅನುಮಾನ ಮೂಡುತ್ತದೆ. ಯಾಕೆಂದರೆ ಬದಲಾದ ಅಭಿರುಚಿಯೊಂದಿಗೆ ನಾವು ಬದಲಾಗುತ್ತ ಬಹಳ ದೂರ ಬಂದಿರುತ್ತೇವೆ. ಆದರೆ ಅತೃಪ್ತಿಯ ಅರಿವಾಗಬೇಕಾದರೆ ಆರಂಭದ ನೆನಪಾಗಬೇಕು.

ಕೆಲವು ತಿಂಗಳ ಮೊದಲು ನನ್ನ ಆತ್ಮೀಯ ಮಿತ್ರ ಶ್ರೀ ಕಟೀಲು ಸಿತ್ಲ ರಂಗನಾಥರು  ತಮ್ಮ ಹವ್ಯಾಸದಂತೆ ಸಂಶೋಧಕ ವಿದ್ವಾಂಸ ಶ್ರೀ ರಾಘವನಂಬಿಯಾರರ ಸಂದರ್ಶನ ಮಾಡಿದ್ದರು. ಯಾವುದೇ ಔಪಚಾರಿಕತೆಯ ಪರಿಧಿ ಇಲ್ಲದೆ ಸ್ವತಂತ್ರವಾಗಿ ಮಾಡಿದ ಸಂದರ್ಶನವದು. ಅದಕ್ಕಾಗಿ ಮಿತ್ರರ ಪ್ರಯತ್ನ ಶ್ಲಾಘನೀಯ. ಹಾಗಾಗಿ ಇಲ್ಲಿ ಶ್ರೀ ನಂಬಿಯಾರರು ತೆರೆದ ಮನಸ್ಸಿನಿಂದ ಯಕ್ಷಗಾನದ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ಹಂಚಿಕೊಂಡಿದ್ದರು ಎನ್ನುವುದಕ್ಕಿಂತ ತಿಳಿಯ ಪಡಿಸಿದರು ಎನ್ನುವುದೇ ಸೂಕ್ತವೇನೋ ಎಂದು ಅನ್ನಿಸುತ್ತದೆ. ಯಾಕೆಂದರೆ ಸಮಗ್ರ ಯಕ್ಷಗಾನಕ್ಕೆ ಸಂಬಂಧಿಸಿ ಅದು ತೆಂಕು ಬಡಗು ಮೂಡಲಪಾಯ ಹೆಚ್ಚೇಕೆ ಸಹೋದರ ಕಲೆಯಾದ ಕಥಕ್ಕಳಿಯ ಬಗ್ಗೆಯೂ ಜ್ಞಾನ ಸಂಪನ್ನವಾಗಿಯೂ ಅಧಿಕಾರಯುತವಾಗಿಯೂ ಮಾತನಾಡಬಲ್ಲ ಸ್ಥಾನ ಅವರದು. ಸಂದರ್ಶನ ಪರಿಸರ ಸಂದರ್ಭವೂ ಹಾಗೆ. ಇಲ್ಲಿ ಯಾವುದೇ ಔಪಚಾರಿಕತೆಯಾಗಲಿ ನಿಬಂಧನೆಗಳಾಗಲಿ ಇಲ್ಲದೆ ಬಹಳ ಮುಕ್ತವಾಗಿ ಮತ್ತು ಸರಳವಾಗಿ ಸಂದರ್ಶನ ನಡೆಯಿತು. ಬಹುಶಃ ಸಂದರ್ಶನ ಎಂಬ ಶಬ್ದಾರ್ಥ ಪರಿಗಣಿಸಿದರೂ ನಿಜಾರ್ಥದಲ್ಲೂ ಇದು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅದು ಸಂ ದರ್ಶನವೇ. ಈ ಸಂದರ್ಶನವನ್ನು ಹಲವು ಸಲ ನೋಡಿದೆ ಕೇಳಿದೆ. ಅಲ್ಲಿಂದ ನನ್ನ ಮನಸ್ಸಲ್ಲಿ ಎಲ್ಲೋ ಅವಿತಿದ್ದ ಅತೃಪ್ತಿಯ ಕಾರಣ ತಿಳಿದು ಬಿಟ್ಟಿತು.  ಈ ಅತೃಪ್ತಿಯ ಚಾದರ ಕಾಲಿಗೆಳೆದರೆ ತಲೆಗಿಲ್ಲ ಎಂಬಂತೆ ಯಾಕಾಗುತ್ತದೆಂದು ಅರಿವಾದ ನಂತರ ಅನುಭವಿಸುವ ರೀತಿಯೂ ಬದಲಾಗಿಬಿಟ್ಟಿತು. ಸಿಕ್ಕಿದ ಚಾದರದೊಳಗೆ ಅವಿತು ವಿರಮಿಸುವುದು ಹೊಂದಾಣಿಕೆಯಾಗುತ್ತದೆ. ನಮ್ಮದೇ ಪರಿಸರದ ವಸ್ತು ನಮಗೇ  ಆದರೂ ಇಂದು ಅನುಭವಿಸುವುದಕ್ಕೆ ಹೊಂದಾಣಿಕೆ ಅಗತ್ಯವಿದೆ.

ಶ್ರೀ ನಂಬಿಯಾರರು ತಮ್ಮ ಮಾತುಗಳಲ್ಲಿ ಅಂದಿನ ಮಹಾನ್ ಕಲಾವಿದರ ಉಲ್ಲೇಖ ಮಾಡಿದ್ದರು. ಆ ಕಲಾವಿದರ ಯಕ್ಷಗಾನ ನಾಟ್ಯ ಅರ್ಥಗಾರಿಕೆ ಅಭಿನಯ ರಂಗಚಲನೆ ಮತ್ತು ಅಪಾರವಾದ ಜ್ಞಾನ. ಅದರಲ್ಲಿ ನಾನು ನೋಡದೆ ಇದ್ದ ಕಲಾವಿದರ ಹೆಸರು ಇದ್ದರೂ ನಾನು ನೋಡಿದ ಅನುಭವಿಸಿದ ಕಲಾವಿದರಾದ ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಅಳಕೆ ರಾಮಯ್ಯ ರೈ, ಪಡ್ರೆ ಚಂದು ಇವರ ಬಗ್ಗೆ ಅವರ ವೇಷಗಾರಿಕೆ ಬಗ್ಗೆ ಬಹಳಷ್ಟು ಹೇಳಿದರು. ಅಳಕೆ ರೈಗಳ ವೇಷ ಎಂದರೆ ಅದೂ ಪೂರ್ಣ ಪ್ರಮಾಣದ ಯಕ್ಷಗಾನವೇ ಆಗಿತ್ತು. ಯಕ್ಷಗಾನದ ಇತಿಮಿತಿಯಲ್ಲೇ ಅವರ ಪಾತ್ರನಿರ್ವಹಣೆ ಅದ್ಬುತವಾಗಿತ್ತು. ಹಲವಾರು ಬಗೆಯ ನಾಟ್ಯವನ್ನು ಅಭಿನಯವನ್ನು ಮತ್ತು ಯಕ್ಷಗಾನದ ಅಪಾರ ಜ್ಞಾನವನ್ನು ಹೊಂದಿದ ಅವರಂತಹ ಕಲಾವಿದ ನಂತರದ ಪೀಳಿಗೆಯಲ್ಲಿ ಬಂದಿಲ್ಲ. ಕಾರಣವೇನು? ಅದು ಸ್ಪಷ್ಟ ಒಂದು ಭ್ಯವ್ಯ ಪರಂಪರೆಯ ಅವಗಣನೆ. ಅದನ್ನು ಮುಂದುವರೆಸಿಕೊಂಡು ಬಂದ ಘನ ಶಿಷ್ಯತ್ವ ಯಕ್ಷಗಾನಕ್ಕೆ ಒಲಿಯಲೇ ಇಲ್ಲ. ಅದರನಂತರದ ಪೀಳಿಗೆಯಲ್ಲಿ ಸಂಪಾಜೆಯವರಂತಹ ಕಲಾವಿದರು ಮುಂದುವರೆಸಿದರಾದರೂ ಸಾಗರಕ್ಕೆ ತಂಬಿಗೆ ನೀರು ಎಂಬಂತಾಗಿ ಅವರು ಪ್ರತ್ಯೇಕವಾಗಿ ಉಳಿದರು.  ಇಂದು ಆ ರೀತಿಯ ಜ್ಜಾನವನ್ನು ಹೊಂದಿರುವ ಏಕ ಮಾತ್ರ ಕಲಾವಿದನೂ ನಮ್ಮ ನಡುವೆ ಇಲ್ಲ ಎನ್ನುವಾಗ ಖೇದವಾಗುತ್ತದೆ. ಅದಕ್ಕೆ ಕಾರಣ ಬೇರೆ ಯಾವುದೋ ಕಲಾ ಪ್ರಕಾರಗಳ ಧಾಳಿಯಲ್ಲ. ನಮಗೆ ನಾವೇ ಕಾರಣರು.

ಬಲಿಪ್ಪರು ಪ್ರತಿಸಲ ಹೇಳುವುದುಂಟು, ಅವರ ಜೀವಮಾನದಲ್ಲಿ ಅವರು ಅಂಗೀಕರಿಸಿದ ಅವರು ಕಂಡ ಕಲಾವಿದ ಎಂದರೆ ಅದು ಅಳಕೆ ರಾಮಯ್ಯ ರೈಗಳು. ಅವರದೇ ಪದಕ್ಕೆ ಒಂದೇ ತಾಳಕ್ಕೆ ಐದಾರು ಬಗೆಯಲ್ಲಿ ಕುಣಿದು ಅಭಿನಯಿಸುತ್ತಿದ್ದರು. ಅದು ಶುದ್ದ ಯಕ್ಷಗಾನ ಶೈಲಿಯವುಗಳು. ದೀರ್ಘ ಅಲಾಪನೆಯಿಲ್ಲದ ಭಾಗವತಿಕೆಗೆ ಚಾಲುಕುಣಿತವಿಲ್ಲದ ಆ ನರ್ತನ ವೈವಿಧ್ಯವನ್ನು ಕಲ್ಪಿಸುವಾಗಲೇ ರೋಮಾಂಚನವಾಗುತ್ತದೆ. ಪದದಿಂದ ಪದಕ್ಕೆ ಶಬ್ದಗಳಿಂದ ಶಬ್ದಕ್ಕೆ ಅಂಗಚಲನೆ ಶಾರೀಕ ಭಾಷೆ ಎಲ್ಲದಕ್ಕೂ ಒಪ್ಪವಾಗುವಂತಹ ಅರ್ಥಗಾರಿಕೆ. ಇಂದು ಅದು ಬೇಕೆಂದರೆ ಸಿಗುವ ಭರವಸೆಯುಂಟೇ? ಬಾಯಿತಾಳದ ಶುದ್ದ ಪರಂಪರೆಯ ಪದಗಳು ಕೇಳಬೇಕೆಂದರೆ ಅದು ಸಾಧ್ಯವಾಗುತ್ತದೆಯೇ? ಬಲಿಪ್ಪಜ್ಜನ ಬಾಯಿತಾಳದ ತೈದಿನ್ನ ತೈಗೆ ಈಗ ಮನಸೋಲದೆ ಇರುವವರು ಯಾರು? ಅದು ಬೇಕು ಎಂದಿದ್ದರೆ ಅದನ್ನು ಮುಂದುವರೆಸುವ ಪ್ರೌಢಿಮೆ ಎಷ್ಟು ಜನರಲ್ಲಿದೆ? ಅದರಂತೆ ಅಧಿಕಾರಯುತವಾಗಿ ನಿರ್ವಚಿಸುವ ಸಕ್ರಿಯ ಕಲಾವಿದರು ಯಾರು? ಇಂದಿನ ಕಲಾವಿದರಿಗೆ ಶಿಕ್ಷಣದ ಕೊರತೆಯಿದೆ. ಅಭ್ಯಾಸದ  ನ್ಯೂನ್ಯತೆಯಿದೆ. ಅಭ್ಯಾಸ ಪೂರ್ಣವಾಗುವ ಮೊದಲೇ ರಂಗವೇರಿ ತಾರಾಮೌಲ್ಯದತ್ತ ಕಣ್ಣು ನೆಟ್ಟಿರುತ್ತಾರೆ ಈ ಎಲ್ಲ  ಕೊರತೆಯನ್ನು ನಿಭಾಯಿಸಿ ರಂಗದಲ್ಲಿ ಸಕ್ರಿಯರಾಗುವುದಕ್ಕೆ ಇನ್ನಿಲ್ಲದ ಸರ್ಕಸ್ ಮಾಡಬೇಕಾಗುತ್ತದೆ.
ನಂಬಿಯಾರರ ಸಂದರ್ಶನದ ಹಲವು ಮಾತುಗಳನ್ನು ಕೇಳಿದಾಗ ನರ್ತನದಲ್ಲಿ ಹಿಮ್ಮೇಳದಲ್ಲಿ ಆ ವೈವಿಧ್ಯವನ್ನು ಕೇಳಿದಾಗ ನನ್ನಲ್ಲಿ ಒಳಗೇ ಅವಿತಿದ್ದ ಅತೃಪ್ತಿ ಏನು ಎಂಬುದರ ಅರಿವಾಯಿತು. ಅದರಲ್ಲೂ ಅವರು ಯಕ್ಷಗಾನ ಪದ ಚಂದಸ್ಸು ಅದರ ಜತೆಗೆ ಸಾಗುವ ಪ್ರಸಂಗನಡೆ ಸನ್ನಿವೇಶಕ್ಕೆ  ತಕ್ಕಂತೆ ಪದಗಳ ಗತಿ ಒಂದೇ ಎರಡೇ ಕೆದಕಿದಷ್ಟೂ ವಿಚಾರಗಳು ತವಕಿಸುತ್ತಿದ್ದವು. ಯಕ್ಷಗಾನ ಪದಗಳ ಮಾತ್ರಗಣ ಛಂದಸ್ಸು ತಾಳ ಲಯ ಈ ಚೌಕಟ್ಟಿನಲ್ಲಿ ಹೇಗೆ ಹಾಡಬೇಕು ಯಾಕೆ ಹಾಡಬೇಕು ಇದನ್ನು ಅವರು ವಿವರಿಸಿ ಹೇಳುವಾಗ ಕಳೆದು ಹೋದದ್ದು ನಿರ್ಲಕ್ಷ್ಯಕ್ಕೆ ಒಳಗಾದದ್ದು ಬಹಳವಿದೆ ಎಂದನಿಸುತ್ತದೆ.  ಯಕ್ಷಗಾನದಲ್ಲಿ ಹೊರಮುಖಕ್ಕೆ ಕಾಣುವುದು ವೇಷಗಾರಿಕೆ ಕುಣಿತ ಹಿಮ್ಮೇಳ ಮತ್ತೆ ಮಾತುಗಾರಿಕೆ. ಆದರೆ ಇವಿಷ್ಟೇ ಅಲ್ಲದೆ ಯಕ್ಷಗಾನದ ಆಳಕ್ಕೆ ಇಳಿದಂತೆ ವಿಷಯಗಳು ಸಿಗುತ್ತವೆ. ಈ ವಿಷಯ ಚಿಂತನೆಗೆಳಿಗೆ ಸರಿಯಾದ ಕಾರಣಗಳು ಸಿಗುತ್ತವೆ. ಯಕ್ಷಗಾನ ಕೇವಲ ಜಾನಪದ ಕಲೆಯಾದರೂ ಶತಮಾನಗಳ ಇತಿಹಾಸ ಇರುವ ಯಕ್ಷಗಾನ ಇವುಗಳನ್ನೆಲ್ಲ ಕ್ರಮಾಗತವಾಗಿ ಹೊತ್ತುಕೊಂಡು ಹೇಗೆ ಬಂತು. ತಲೆಮಾರಿಂದ ತಲೆಮಾರಿಗೆ ಅದು ರವಾನೆಯಾದ ಬಗೆ ಹೇಗೆ? ಶಾಸ್ತ್ರೀಯ ಕಲೆಗೆ ಏನೇನೂ ಕಡಿಮೆಯಿಲ್ಲದೆ ಜನಪದ ನೆರಳಲ್ಲೆ ಬೆಳೆದು ಬಂದ ಕಲೆ. ಅವರು ಬಿಡಿಸಿಟ್ಟ ವಿಚಾರಗಳು ವಿಶಾಲ ಚಿಂತನೆಯನ್ನು ಒಳಗೊಂಡಿತ್ತು.ಅವುಗಳನ್ನು ಇಂದು ಒಬ್ಬ ಪಳಗಿದ ಕಲಾವಿದನಲ್ಲಿ ಕೇಳಿದರೂ ಉತ್ತರವಿಲ್ಲದ ವಿವರಿಸಲಾಗದ ವಿಚಾರಗಳಾಗಿಯೇ ಉಳಿದು ಬಿಡುತ್ತದೆ.

 ಅಂದಿನಿಂದ ಈಗಿನ ಯಕ್ಷಗಾನಗಳಲ್ಲಿ ಆಸಕ್ತಿಯೇ ಕಡಿಮೆಯಾಯಿತು. ಇಂದು ಹಲವು ಯಕ್ಷಗಾನಗಳನ್ನು ನೋಡಿದರೂ ಪೂರ್ಣ ತೃಪ್ತಿ ಅನುಭವಿಸುವುದಿಲ್ಲ.   ಶ್ರೀ ಅಳಕೆ ರೈಗಳ ಹಲವು ವೇಷಗಳನ್ನು ನೋಡಿದ್ದೇನೆ. ಪೌರಾಣಿಕ ಪ್ರಸಂಗಗಳಲ್ಲಿ ಆನಂತರದ ಕರ್ನಾಟಕ ಮೇಳದ ತುಳು ಪ್ರಸಂಗಗಳಲ್ಲಿ ಅವರ ವೇಷಗಾರಿಕೆ ನೋಡಿದ್ದೇನೆ. ಅಂದು ಅಷ್ಟು ತಿಳುವಳಿಕೆಯಿಲ್ಲದ ಬಾಲ್ಯದ ದಿನಗಳು ಎಂಬುದಕ್ಕೆ ನನಗೆ ವಿಷಾದವಿದೆ. ಪಡ್ರೇಚಂದು ಇವರ ದೇವಿ ಮಹಾತ್ಮೆ ಸುಗ್ರೀವನ ಪಾತ್ರ ಈಗಲೂ ಕಣ್ಣ ಮುಂದೆ ಇದೆ. ಅದರ ವಿಶಿಷ್ಟ್ಯಗಳನ್ನೆಲ್ಲ ನಂಬಿಯಾರ ಮುಖದಲ್ಲಿ ಕೇಳಿದಾಗ ನಾವು ಕಳೆದುಕೊಂಡದ್ದು ಕೇವಲ ಭೌತಿಕ ಶರೀರಗಳನ್ನಲ್ಲ  ಇಂತಹ ಅನರ್ಘ್ಯ ಭಂಡಾರವನ್ನು ಶಾಪಗ್ರಸ್ಥರಂತೆ ಕಡಲಿಗೆ ಎಸೆದಿದ್ದೇವೆ ಎಂದನಿಸುತ್ತದೆ. ಈಗ ಎಲ್ಲಿದೆ? ಇದ್ದರೂ ಅದಕ್ಕೆ ಮೌಲ್ಯ ಸಿಗಬಹುದೇ? ಇಂದಿನ ಯಕ್ಷಗಾನದಲ್ಲಿ ಬೇಕಾದಷ್ಟು ವಿಭವಗಳನ್ನು ಸೇರಿಸಿ ಹೊಸ ಪಾಕ ಮಾಡಿ ರೂಪಾಂತರ ಮಾಡಿಯಾಗಿದೆ. ಅದುವೇ ನಮ್ಮ ಯಕ್ಷಗಾನ ಎನ್ನುವಾಗ ನೋಡುವುದಕ್ಕೆ ಮನಸ್ಸುಬರುವುದಿಲ್ಲ. ಅದನ್ನು ನೋಡಿದರೆ ಅಂದಿನ ಹಿರಿಯ ಕಲಾವಿದರಿಗೆ ನಾನೂ ಪರೋಕ್ಷವಾಗಿ ಅವಮಾನಿಸಿದಂತೆ ಎಂದನ್ನಿಸುತ್ತದೆ. ಬಹುಶಃ ನನ್ನ ಅನಿಸಿಕೆಯೇ ತಪ್ಪಾಗಿರಬಹುದು. ಮಾನಸಿಕ ನೆಲೆಯೇ ತಪ್ಪಿರಬಹುದೇ? ಯಕ್ಷಗಾನ ಪರಂಪರೆಯ ಹಲವು ಅಮೂಲ್ಯ ವಿಷಯಗಳು ಅವಜ್ಞೆಗೆ ಒಳಗಾಗಿದೆ. ವಿಷಯಗಳು ಗಮನ ಇಲ್ಲದೇ ಕಳೆದುಹೋಗಿದೆ ಎಂದು ಅರಿವಾಗಬೇಕಾದರೆ ಅವುಗಳು ಇತ್ತು ಎಂಬುದು ತಿಳಿಯಬೇಕಾಗುತ್ತದೆ. ಇಲ್ಲವಾದರೆ ಕಳೆದು ಹೋದದ್ದು ತಿಳಿಯುವುದಾದರೂ ಹೇಗೆ?  ಯಕ್ಷಗಾನ ಪರಂಪರೆಯನ್ನು ಚಿತೆಗೆ ಏರಿಸುವ ಪ್ರವೃತ್ತಿಯಲ್ಲಿ ಮುಂದೊಂದು ದಿನ ಅಸ್ಥಿ ಸಂಚಯನಕ್ಕೂ ಪರದಾಡಬೇಕಾಗಬಹುದು.

ಈಗಲೂ ಶ್ರೇಷ್ಠ ಕಲಾವಿದರು ಇಲ್ಲ ಎಂದಲ್ಲ. ಆದರೆ ಅವರಲ್ಲಿ ತಾರುಣ್ಯದ ಉತ್ಸಾಹ ಎಷ್ಟು ಅಡಗಿದೆ? ಅವರಲ್ಲೇ ಕೇಳಿದರೆ ಇಂದಿನ ಬಗ್ಗೆ ನಿರುತ್ಸಾಹದಿಂದಲೇ ಪ್ರತಿಕ್ರಿಯಿಸುತ್ತಾರೆ. ಯಾಕೆಂದರೆ ಗ್ರಾಹಕರು ಇಲ್ಲವಾದರೆ ವಸ್ತು ಅದೆಷ್ಟು ಉತ್ತಮವಾಗಿದ್ದರೂ ಅದನ್ನು ಅಂಗಡಿಯವನು ಇರಿಸಿಕೊಳ್ಳುವುದಿಲ್ಲ. ಪರಂಪರೆ ಎಂದರೆ ಇಂದು ಮೌಲ್ಯ ಇದ್ದರೂ ಗಿರಾಕಿ ಇಲ್ಲದ ವಸ್ತುವಿನಂತೆ. ಒಂದು ವೇಳೆ ಯಾರಾದರೊಬ್ಬ ಮೌಲ್ಯ ಅರಿತು ಅದನ್ನು ಕೊಂಡು ಅನುಭವಿಸಿದರೂ ಅತನ ಬಗ್ಗೆ ಅನುಮಾನಿಸುತ್ತಾರೆ.

ಕೆಲವು ಸಮಯದ ಹಿಂದೆ ಶ್ರೀ ಕೋಳ್ಯೂರು ರಾಮಚಂದ್ರರಾಯರು ಬೆಂಗಳೂರಿನ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು. ಪ್ರೇಕ್ಷಕ ಜಾಗ್ರತನಾಗಬೇಕು. ಯಕ್ಷಗಾನಕ್ಕೆ ಅಲ್ಲದೇ ಇದ್ದದ್ದು ರಂಗಸ್ಥಳದಲ್ಲಿ ಕಂಡಾಗ ಕಲ್ಲು ಎಸೆಯಬೇಕು. ಅವರ ಮನಸ್ಸಿನ ಅಂತರಾಳದ ಹತಾಶೆಯ ಕ್ರೋಧವದು. ಒಬ್ಬ ಹಿರಿಯ ಕಲಾವಿದ ಹೀಗೆ ಪ್ರತಿಕ್ರಿಯಿಸುವ ಹಾಗೆ ಪರಿಸರ ಬೆಳೆಯಬಾರದಿತ್ತು. ಹೋಗಲಿ ಅವರು ಹೇಳಿದ್ದಾರೆ ಎಂದು ಯಕ್ಷಗಾನದ ಮೇಲಿನ ಅಭಿಮಾನದಿಂದ ಕಲ್ಲು ಬಿಸಾಡುವುದಿರಲಿ.. ನಾನು ನೋಡುವುದಿಲ್ಲ ಎಂದು ಎದ್ದು ಬಂದರೂ ನಮ್ಮನ್ನು ಬಲವಂತವಾಗಿ ಕೂರಿಸಿ ಬಿಡುವ ಪ್ರಮೇಯ ಮತ್ತು ಅವುಗಳ ಬಗ್ಗೆ ತುಸು ಪ್ರತಿಕ್ರಿಯಿಸಿದರೂ ಬೆದರಿಕೆ ಕರೆಗಳಿಗೆ ಉತ್ತರಿಸಬೇಕಾಗುತ್ತದೆ.  

ತಡವಾಗಿಯಾದರೂ ಹಳೆಯದರ ಮೌಲ್ಯ ಅಲ್ಲೋ ಇಲ್ಲೋ ಗುರುತಿಸಲ್ಪಡುತ್ತದೆ ಇಲ್ಲ ಎನ್ನುವ ಹಾಗಿಲ್ಲ. ಆವಾಗ ಬಲಿಪ್ಪರ ನೆನಪಾಗುತ್ತದೆ. ಉಳಿದಂತೆ ಅವರ ಮಾತಿಗೆಷ್ಟು ಮನ್ನಣೆ ಸಿಗುತ್ತದೆ? ಇಂದಿಗೂ ಅಪರೂಪವೆನ್ನುವಂಥ ಪ್ರಸಂಗನಡೆಯನ್ನು ವಿವರಿಸುವುದಕ್ಕೆ ಅವರ ಅಗತ್ಯವಿರುತ್ತದೆ. ಹಲವು ಸಲ ಅದು ಆ ಒಂದು ಪ್ರಸಂಗದ ಒಂದು ಪ್ರದರ್ಶನಕ್ಕಷ್ಟೇ ಸೀಮಿತವಾಗುತ್ತದೆ. ಅವರು ಯಾವುದೇ ಪ್ರಲೋಭನೆಗೆ ಒಳಗಾಗದೆ ಯಾವುದೇ ಪ್ರಭಾವಕ್ಕೂ ಶರಣಾಗದೇ ಶುದ್ದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ.  ಅದಕ್ಕೂ ಅವರು ಸಹಿಸಿಕೊಂಡ ನೋವೆಷ್ಟಿರಬಹುದು? ಅದು ಅವರ ಅಂತರಂಗವನ್ನು  ಹೊಕ್ಕಿ ನೊಡಬೇಕು. ಹಾಗಾಗಿ ಪರಂಪರೆಯ ಕಲೆ ಯಕ್ಷಗಾನ. ಪರಂಪರೆಯ ಯಕ್ಷಗಾನದ ಕಿಂಚಿತ್ ಜ್ಞಾನವೂ ಇಲ್ಲದೇ ಯಕ್ಷಗಾನದ ಬಗ್ಗೆ ಮಾತನಾಡುತ್ತಾರೆ.   ಅದರಿಂದ ಪರಂಪರೆ ಎಂಬ ಶಬ್ದವನ್ನು ಅಳಿಸುವುದೇ ಉತ್ತಮ.
ಒಂದು ಕಲೆ ಉಳಿಯಬೇಕಿದ್ದರೆ ಅದು ನಿಂತ ನೀರಾಗಬಾರದು. ಅದರಲ್ಲಿ ನಿರಂತರ ಸೃಜನ ಶೀಲತೆ ಸೃಷ್ಟಿಯಾಗಬೇಕು. ಹಾಗಿರುವಾಗ ಕೆಲವುಗಳನ್ನು ಬಿಡಬೇಕಾಗುವುದೋ ಮಾರ್ಪಾಡು ಮಾಡುವುದೋ ಕಾಲಕ್ಕೆ ತಕ್ಕಂತೆ ಅನಿವಾರ್ಯವಾಗುತ್ತದೆ, ಎಂಬುದೇನೋ ಸರಿ. ಆದರೆ ಹಳೆಯದನ್ನು ತಿಳಿಯಬಾರದು, ಅದರ ಅಭ್ಯಾಸವೂ ಸಲ್ಲದು ಎಂಬುದಿದೆಯೇ? ಅದರಲ್ಲಿ ಎಂತದೂ ಇಲ್ಲ. ಅದರಿಂದೇನು ಪ್ರಯೋಜನ ಎಂದು ಅದನ್ನು ತಳ್ಳಿ ಹಾಕಬಹುದೇ? ಹಳೆಯದನ್ನು ಉಳಿಸಿಕೊಂಡು ಹೊಸದರ ಆವಿಷ್ಕಾರವಾಗಬೇಕು ಹಾಗಾಗಿಯೇ ಅಳಕೆ ರಾಮ ರೈಗಳ ತುಳು ಪ್ರಸಂಗಗಳ ವೇಶವನ್ನು ಉಲ್ಲೇಖಿಸಿದ್ದು.  ಆವಿಷ್ಕಾರದ ರೂಪದಲ್ಲಿ ಕಲೆ ಜನ ಪ್ರಿಯವಾಗಬೇಕು ಎಂಬ ನೆಲೆಯಲ್ಲಿ ಅದೇನನ್ನೋ ಬಳಕೆ ತರುತ್ತೇವೆ. ಅದಕ್ಕೆ ರಾಗ ತಾಳ ನರ್ತನ ವೈವಿಧ್ಯದ ಉದಾಹರಣೆಯನ್ನು ಕೊಡುತ್ತೇವೆ. ಆದರೆ ಅದರಲ್ಲಿ ಮೂಲ ಯಕ್ಷಗಾನ ಎಷ್ಟು ಉಳಿಯುತ್ತದೆ?  ಯಕ್ಷಗಾನದ ಹೊಸ ನೀರು ಹೊಸ ಅಲೆ ಬರಬೇಕು. ಆದರೆ ಅದು ದಡದಲ್ಲಿದ್ದ ಹೆಮ್ಮರವನ್ನು ಕಿತ್ತುಕೊಂಡು ಹೋಗಿ ಸ್ಥಳದ ಪರಿಸರದ ಗುರುತೇ ಸಿಗದಂತೆ ಮಾಡಬಾರದಲ್ಲವೇ?  ಯಕ್ಷಗಾನ ಪರಂಪರೆಯ ಮಟ್ಟುಗಳು ಶೈಲಿಗಳು ಶತಮಾನದಿಂದ ಜತನದಿಂದ ಮೊನ್ನೆ ಮೊನ್ನೆತನಕವೂ ಉಳಿದು ಬಂತು. ಆದರೆ ಅವಿಷ್ಕಾರ ಗೊಂಡ ಯಕ್ಷಗಾನದಲ್ಲಿ ಕಳೆದ ವರ್ಷದ ಪ್ರಸಂಗವೇ ಮೂಲೆ ಗುಂಪಾಗಿ ಹಳಸಿದ ವಸ್ತುವಾಗುತ್ತದೆ. ಅದರ ಅರ್ಥ ಇಂದು ಆವಿಷ್ಕರಿಸಿದ ವಸ್ತುಗಳಾವುದಕ್ಕೂ ಆಯುಷ್ಯವಿಲ್ಲ. ಆದರೂ ಅದನ್ನೇ ಯಕ್ಷಗಾನ ಎಂದು ತೋರಿಸುವಲ್ಲಿನ ಪಟ್ಟ ಭದ್ರ ಹಿತಾಸಕ್ತಿ ಮಾತ್ರ ವಿಚಿತ್ರವಾಗುತ್ತದೆ.

ಶಾಸ್ತ್ರೀಯ ಸಂಗೀತ ಭರತನಾಟ್ಯ ಮುಂತಾದ ಶಾಸ್ತ್ರೀಯ ಕಲೆಗಳಲ್ಲೂ ಸಾಕಷ್ಟು ಅವಿಷ್ಕಾರವಾದರೂ ಆ ಕಲೆ ಮೂಲರೂಪದಲ್ಲಿ ಹಾಗೆ ಉಳಿದಿದೆ. ಶಾಸ್ತ್ರೀಯ ಸಂಗೀತ ಲಘು ಸಂಗೀತವಾಗಿ ಸಿನಿಮಾ ಸಂಗೀತವಾಗಿ ಬದಲಾಗಿ ಹೋದರೂ ಇಂದಿಗೂ ಶಾಸ್ತ್ರೀಯ ಸಂಗೀತ ಅದೇ ಮಟ್ಟದಲ್ಲಿ ಉಳಿದುಕೊಂಡಿದೆ. ಅದನ್ನರಸಿಕೊಂಡು ಹೋಗುವ ಪ್ರೇಕ್ಷಕನೂ ಉಳಿದಿದ್ದಾನೆ. ಪರಂಪರೆಯ ಯಕ್ಷಗಾನವೂ ಅದೇ ರೀತಿ ಪ್ರೇಕ್ಷಕನಿಗೆ ಸಿಗುವಂತಾಗಬೇಕು.  

ಯಕ್ಷಗಾನ ಇಂದು ಜಗದಗಲ ಜನಪ್ರಿಯವಾಗಿದೆ. ನರ್ತನದಲ್ಲಿ , ಯಕ್ಷಗಾನದ ಹಾಡುಗಾರಿಕೆಯಲ್ಲಿ ಹಿಮ್ಮೇಳವಾದನದಲ್ಲಿ  ಅದರ ರಂಗ ಚಲನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಲವಾರು ಕಲಾ ಪ್ರಕಾರಗಳು ಕಾಲಕ್ಕೆ ತಕ್ಕಂತೆ ಇದರಲ್ಲಿ ಮಿಶ್ರವಾಗಿವೆ. ಹಲವು ಸಲ ನಾವು ಯಕ್ಷಗಾನವನ್ನು ನೋಡುತ್ತಿದ್ದೇವೋ ಅಲ್ಲ ಬೇರೆ ಇನ್ನಾವುದೋ ಕಲೆಯನ್ನು ನೋಡುತ್ತಿದ್ದೇವೋ ಎಂಬ ಭ್ರಮೆಯುಂಟಾಗುತ್ತದೆ. ಅದರ ಸರಿ ತಪ್ಪು ವಿಶ್ಲೇಷಣೆ ಒತ್ತಟ್ಟಿಗಿರಲಿ ಅದರ ಪರಿಣಾಮವನ್ನು ಅದೇ ರೀತಿಯಲ್ಲಿ ವಿಶ್ಲೇಶಿಸವುದಿದ್ದರೆ,  ಯಕ್ಷಗಾನ ಕರಾವಳಿ ಬಿಟ್ಟು ಸೀಮೆ ದಾಟಿ ಹೋಗಿ ದಶಕಗಳೇ ಸಂದಿರಬಹುದು. ’ಯಕ್ಷಗಾನ’  ಎಂದು ದೂರದ ಉತ್ತರ ಭಾರತದ ಯಾವುದಾದರೂ ಒಂದು ಹಳ್ಳಿಯಲ್ಲಿ  ಜನಪ್ರಿಯತೆಗೆ ಬಲಿಬಿದ್ದು ಇಲ್ಲಿ  ಆವಿಷ್ಕಾರಗೊಂಡ ಈಗಿನ ಯಕ್ಷಗಾನವನ್ನು ಅಲ್ಲಿ ಪ್ರದರ್ಶಿಸಿದರೆ ...ಮುಂದೊಂದು ದಿನ ಅಲ್ಲಿಯ ಜನಗಳು ಹೇಳಿಯಾರು,  ಇದು ನಮ್ಮ ಕೂಚುಪುಡಿಯೋ ಮಣಿಪುರಿಯೋ ಮತ್ತೊಂದೋ ಅದರಂತೆ ಇದೆ ಅಲ್ಲವೇ? ಇದು ಯಕ್ಷಗಾನವೇ? ಯಕ್ಷಗಾನ ಎಂದರೆ ಇಷ್ಟೇಯಾ? ಈಗ ದೇಶದ ಗಡಿದಾಟಿ ವಿದೇಶಕ್ಕೂ ಯಕ್ಷಗಾನ ಪಸರಿಸಿದೆ. ಸಂತೋಷ. ಆದರೆ ವಿದೇಶಿಗರು ಈ ಯಕ್ಷಗಾನ ನೋಡಿ ಅರೇ ಇದು ನಮ್ಮ ಬ್ರೇಕ್ ಡಾನ್ಸ್ ನಂತೆ ಇದೆ.  ಎಂದು ಹೇಳುವುದಿಲ್ಲ ಎಂದು ಭರವಸೆ ಏನು? ಯಾಕೆಂದರೆ ಈಗಿನ ಯಕ್ಷಗಾನ ಅಷ್ಟು ಬದಲಾಗಿ ಹೋಗಿದೆ. ಯಕ್ಷಗಾನದ ಮೂಲ ನೃತ್ಯ ಪ್ರಕಾರಗಳನ್ನು ಗುರುದಕ್ಷಿಣೆ ಕೊಟ್ಟು ಕಲಿಯುವ ಯೋಗ್ಯತೆ ಇಲ್ಲದೇ ಇನ್ನಾವೂದೋ ಕಲೆಯ ಎಂಜಲನ್ನು ಇಲ್ಲಿ ಹರಡಿಬಿಡುತ್ತಾರೆ.  ಹಾಗಾಗಿ ಹೊರಗೆ ತೋರಿಸುವುದಕ್ಕಾಗಿಯಾದರೂ ಶುದ್ದ ಪರಂಪರೆಯ ಯಕ್ಷಗಾನ ಕೆಲವರಿಗಾದರೂ ತಿಳಿದಿರಬೇಕಾದದ್ದು ಅವಶ್ಯವಲ್ಲವೇ?

ಇಂದು ಪರಂಪರೆಯ ಬಗ್ಗೆ ಧ್ವನಿ ಎತ್ತುವುದಿರಲಿ, ಅದನ್ನು ಉಳಿಸಬೇಕು ಅನುಭವಿಸಬೇಕು ಎನ್ನುವುದೇ ಮಹಾಪರಾಧವಾಗಿ ಪರಿಗಣಿಸಲ್ಪಡುತ್ತದೆ. ಹಳೆಯ ಪಳೆಯುಳಿಕೆಯ ಪ್ರೇಮಿಗಳೆಂದರೆ ಅಜ್ಜ ಹಾಕಿದ ಆಲದ ಮರಕ್ಕೆ ನೇತಾಡುವ ದೆವ್ವಗಳಂತೆ ಭಾಸವಾದರೆ ಪರಂಪರೆ ಉಳಿಯಬೇಕು ಎನ್ನುವ ಧ್ವನಿಗೆ ಉಸಿರೆಲ್ಲಿ ಸಿಗಬಹುದು?

ಯಕ್ಷಗಾನದಲ್ಲಿ ಇಂದು ಕೇವಲ ಯಕ್ಷಗಾನ ಸೇವೆಗಾಗಿಯೇ ಎಂದು ಹಲವಾರು ಮೇಳಗಳಿವೆ. ಸಂಘ ಸಂಸ್ಥೆಗಳಿವೆ. ಅವುಗಳಲ್ಲಿ ಕೆಲವಾದರೂ ಶುದ್ದ ಪರಂಪರೆಯನ್ನು ಕಲಿಯುವ ಅದರ ಸಂಶೋಧನೆ ಮಾಡಿ ಮುಂದಿನ ಪೀಳಿಗೆಗೆ ಒಪ್ಪಿಸುವುದಕ್ಕೆ ಮೀಸಲಾಗಿರಿಸಿಕೊಳ್ಳಬೇಕು. ಶುದ್ದ ಪರಂಪರೆಯಲ್ಲಿ ಯಾವುದೇ ರಾಜಿಯಿಲ್ಲದೆ ಚಾಲು ನೃತ್ಯ ಸಂಗೀತ ಕಛೇರಿಗಳಿಲ್ಲದ ಯಕ್ಷಗಾನವನ್ನು ಪ್ರದರ್ಶಿಸುವ ಮತ್ತದನ್ನು ಮುಂದುವರೆಸುವ ಕಾರ್ಯಕ್ಕೆ ಮೀಸಲಾಗಿ ಉಳಿಯಬೇಕು.

 ಮೊದಲು ಮನೆ ಕಟ್ಟುವಾಗ ದೇವರ ವಿಶಾಲವಾದ ದೇವರ ಕೋಣೆ ಇತ್ತು. ದೇವರ ಎದುರು ಸಾಷ್ಟಾಂಗ ನಮಸ್ಕಾರ ಮಾಡುವಷ್ಟು ಸ್ಥಳಾವಕಾಶವು ಇತ್ತು. ಈಗ ದೇವರ ಕೋಣೆ ಚಿಕ್ಕ ಚಿಕ್ಕದಾಗಿ ಕೋಣೆಯೇ ಇಲ್ಲವಾಗಿದೆ. ದೇವರು ಹೋಗಿ ಪುಟ್ಟ ಸ್ಟಾಂಡ್ ಮೇಲೆ ಕುಳಿತಿದ್ದಾನೆ. ನಮ್ಮ ಜೀವನ ಶೈಲಿ ಅನಿವಾರ್ಯತೆಯಿಂದ ಬದಲಾಗಿ ಹೋಗಿದೆ. ಹಾಗಿರುವಾಗ ವಿಶಾಲವಾದ ದೇವರ ಕೋಣೆ ನೂರರಲ್ಲಿ ಒಂದನ್ನಾದರೂ ಉಳಿಸುವ ಪ್ರಯತ್ನವಾಗಬೇಕು. ಹಿರಿಯ ಕಲಾವಿದರು ಈಗ ಜೀವಿಸಿರುವ ದಂತಕಥೆಗಳು ಎನ್ನುವಂತಹ ಹಲವು ಕಲಾವಿದರು ಇನ್ನೂ ನಮ್ಮ ನಡುವೆ ಇದ್ದಾರೆ. ಅವರ ಕಾಲು ಹಿಡಿದು ಅವರ ಜ್ಞಾನವನ್ನು ಮುಂದಿನ ಪೀಳಿಗೆ ರವಾನಿಸುವ ಮಾಧ್ಯಮವಾಗಬೇಕು. ಇಲ್ಲವಾದರೆ ಮುಂದಿನ ಪೀಳಿಗೆಗೆ ಕೊಡುವುದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ಬರಿ ನಿಟ್ಟುಸಿರಷ್ಟೇ ಉಳಿಯುತ್ತದೆ.


Thursday, June 22, 2017

ಯಕ್ಷಗಾನ ಯೇಸು ಗಾನ


“ನಿನ್ನನ್ನು ಅಳೆಯುವುದಕ್ಕೆ ಹೊರಟೆ ಸೋತೆ, ನಿನ್ನನ್ನು ಅರಿಯುವುದಕ್ಕೆ ಬಂದವನು ನಿನ್ನನ್ನು ಅರಿತುಕೊಂಡೆ.” 

  ಇದು ದುಷ್ಟ ಪಾತ್ರವೊಂದು ಭಗವಂತನಲ್ಲಿ ಶರಣಾಗತಿಯನ್ನು ಸಲ್ಲಿಸುವ ಭಾವೋತ್ಕರ್ಷದ ಸನ್ನಿವೇಶ. ಸಾಮಾನ್ಯವಾಗಿ ಸರಳವಾಕ್ಯಗಳಲ್ಲೇ ಇಡೀ ಕಥಾಹಂದರವೇ ಹಲವು ಸಲ ಅಡಗಿರುತ್ತದೆ. ಅದಕ್ಕೆ ಸಾಕ್ಷಿಯಾಗಿದ್ದು ಇತ್ತೀಚೆಗೆ ನೋಡಬೇಕು ಕೇಳಬೇಕೆನ್ನುವ ಕೌತುಕವನ್ನು ಮೂಡಿಸಿದಂತಹ ಪ್ರಸಂಗ. ಅದು ಮಹಾ ಚೇತನ ಏಸುಕ್ರಿಸ್ತ ಎಂಬ ಯಕ್ಷಗಾನ ಪ್ರಸಂಗ. ಭಗವಂತನಲ್ಲಿ ಲೀನವಾಗುವಂತಹ ಪಾತ್ರಗಳು ಯಕ್ಷಗಾನದಲ್ಲಿ ಯಥೇಚ್ಛವಾಗಿ ಬಳಕೆಯಾಗುತ್ತದೆ. ಅದೇ ತತ್ವ ಇಲ್ಲೂ ಪ್ರಕಟಗೊಂಡಿದೆ. ಹಾಗಾಗಿ ಇದು ಪರಿಶುದ್ದ ಯಕ್ಷಗಾನದ ಪ್ರಭಾವವನ್ನು ಉಂಟು ಮಾಡಿತು.

ಹಾಗೆ ನೋಡಿದರೆ ಇದು ಹೊಸದಾಗಿ ಧುತ್ತನೇ ಎದುರು ಬಂದು ನಿಂತ ಪ್ರಸಂಗವಲ್ಲ. ದಶಕದ ಹಿಂದೆ ಅದಾವೂದೋ ಚರ್ಚ್ ಒಂದರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇದೇ ಯಕ್ಷಗಾನವನ್ನು ನೋಡಿದ ನೆನಪಿದೆ. ದೂರದರ್ಶನದಲ್ಲೂ ಒಂದೆರಡು ಸಲ ಕಣ್ಣಾಡಿಸಿದ ನೆನಪು ಇದೆ. ಆದರೆ ಆಗ ಅದಾವ ಕೌತುಕವನ್ನೂ ಹುಟ್ಟಿಸದೇ ಇದ್ದ ಪ್ರಸಂಗ ಇತ್ತೀಚೆಗೆ ಆಸಕ್ತಿಯನ್ನು ತುಸು ಕೆರಳಿಸುವಂತೆ ಮಾಡಿತ್ತು. ಹಾಗೆ ನೋಡಿದರೆ ನನಗೆ ಯಕ್ಷಗಾನದ ಪೌರಾಣಿಕವಲ್ಲದ ಪ್ರಸಂಗಗಳಲ್ಲಿ ಆಸಕ್ತಿ ಬಹಳ ಕಡಿಮೆ. ಬೇಡರ ಕಣ್ಣಪ್ಪ, ಶಬರಿ ಮಲೆ ಅಯ್ಯಪ್ಪ, ಶ್ರೀಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಹೀಗೆ ಪಟ್ಟಿ ಬೆಳೆಯುತ್ತಾ ಹೋಗಬಹುದು. ಕಣ್ಣಪ್ಪ ಮಹಾಭಕ್ತನಿರಬಹುದು, ಅಯ್ಯಪ್ಪ ಮಹಾಮಹಿಮನಿರಬಹುದು ಧರ್ಮಸ್ಥಳ ಪವಿತ್ರ ಕ್ಷೇತ್ರವಾಗಿರಬಹುದು. ಈ ವಿಚಾರದಲ್ಲಿ ನಾನು ಭಕ್ತಿ ಗೌರವದಿಂದ ನಡೆದುಕೊಂಡರೂ  ಈ ಪ್ರಸಂಗಳೆಲ್ಲ ರಂಗಸ್ಥಳದಲ್ಲಿ ನೋಡುವಾಗ ಯಕ್ಷಗಾನದ ಭಾವನೆ ತರುವುದಿಲ್ಲ. ಕಿರೀಟ ವೇಶಗಳಿಲ್ಲದ ಯಕ್ಷಗಾನ ಎಂತಹುದು ಎಂಬ ಭಾವನೆ.ಯಕ್ಷಗಾನವೆಂದರೆ ಅದಕ್ಕೆ ಅನುಯೋಜ್ಯವಾದ ವೇಷ ಸನ್ನಿವೇಶ ಎಲ್ಲ ಸಿಗುವುದು ಪೌರಾಣಿಕದಲ್ಲಿ ಮಾತ್ರ. ಅದೂ ಭಾಗವತ ಮಹಾಭಾರತ ರಾಮಾಯಣದ ಕಥಾನಕಗಳು. ಇಂತಹ ಭಾವನೆಯ ನಡುವೆಯೂ ಏಸುವಿನ ಪ್ರಸಂಗ ಕುತೂಹಲ ಕೆರಳಿಸಿದ್ದು ಅದಕ್ಕೆ ಎದುರಾದ ವಿವಾದಗಳಿಂದ.

ಏಸುವಿನ ಈ ಪ್ರಸಂಗ ಅದರ ವಿವಾದ, ಅದರಲ್ಲಿ ಹುಟ್ಟಿಕೊಂಡ ಪರ ವಿರೋಧ ಪ್ರತಿಕ್ರಿಯೆಗಳು ವಾದ ವೈಖರಿಗಳು ಎಲ್ಲವೂ ಮನೋಭಾವಕ್ಕೆ ಹೊಂದಿಕೊಂಡು ಪ್ರಸ್ತಾಪಿಸಲ್ಪಟ್ಟಿತ್ತು. ವಿವಾದವೆಂದರೆ ಹಾಗೇ ಅಲ್ಲವೇ? ಸಂತೆಯಲ್ಲಿ ದಂಧೆ ನಡೆಸುವ ಅಂಗಡಿಗಳಂತೆ. ಅಲ್ಲಿ ವ್ಯಾಪಾರಕ್ಕೆ ಇಂತಹುದೇ ಅಂಗಡಿ ಎಂಬುದಿರುವುದಿಲ್ಲ. ಬಟ್ಟೆ ಅಂಗಡಿ,  ತಿಂಡಿ ಅಂಗಡಿ , ತರಕಾರಿ ಅಂಗಡಿ ಹೀಗೆ ಇದ್ದರೆ ವಿವಾದಗಳಲ್ಲೂ ಬಿಕರಿಯಾಗುವ ವಿಚಾರಗಳು ಹಲವು. ಯಕ್ಷಗಾನ ಶುದ್ದ ಹಿಂದು ಸಂಸ್ಕೃತಿಯಿಂದ ಹುಟ್ಟಿಕೊಂಡದ್ದು. ಹಾಗಾಗಿ ಇಲ್ಲಿಗೇ ಅದೇ ಪುರಾಣದ ಕಥೆಗಳೇ ಒಪ್ಪಿಕೊಳ್ಳಬೇಕು. ಇದೊಂದು ರೀತಿ ಸಾಂಸ್ಕೃತಿಕ ಧಾಳಿ, ಹಿಂದುಗಳು ಏಸುವನ್ನು ಯಕ್ಷಗಾನದಲ್ಲಿ ಒಪ್ಪಿಕೊಂಡಂತೆ ಕೃಷ್ಣನನ್ನೋ ರಾಮನನ್ನೋ ಅವರು ಒಪ್ಪಿಕೊಂಡಾರೆ...ಹೀಗೆ ಚಿಂತನೆಗಳ ರೂಪಗಳು ಹಲವು. ಚಿಂತನೆಗಳು ಅಯಾಯ ಮಟ್ಟದಲ್ಲಿ ಹೌದೂ ಅಂತ ಕಂಡರೂ ಪ್ರತಿಯೂಬ್ಬರ ಚಿಂತನೆಗೂ ಆಯ್ಕೆಗೂ ಒಂದು ಕಾರಣವಿರುತ್ತದೆ. ಸ್ಪಷ್ಟೀಕರಣವಿರುತ್ತದೆ. ಹಲವುಸಲ ಘನ ಉದ್ದೇಶವಿರುತ್ತದೆ. ಅದೆಲ್ಲ ಹೇಗೂ ಇರಲಿ ನನ್ನ ಆಸಕ್ತಿ ಚಿಗುರಿದ್ದು ಇದಾವುದರಿಂದಲೂ ಅಲ್ಲ. ವಿವಾದಗಳ ಬಗ್ಗೆ ನಾನು ಗಂಭೀರವಾಗಿ ಯೋಚಿಸಿಯೇ ಇಲ್ಲ. ಯಾಕೆಂದರೆ ಈ ವಿವಾದಗಳು ಎಂದಿಗೂ ಯಕ್ಷಗಾನದ ಬಗ್ಗೆ ಪ್ರಾಮಾಣಿಕವಾಗಿ ಯೋಚಿಸಿಯೇ ಇಲ್ಲ. ಇದು ನನ್ನ ಅನಿಸಿಕೆ. ಯಕ್ಷಗಾನ ಹಾಳಾಯಿತು ಅಂತ ಹುಯಿಲೆಬ್ಬಿಸಿದರೆ ಯಕ್ಷಗಾನದಲ್ಲಿ ಒಳ್ಳೆಯದು ಎಷ್ಟು ಉಳಿದುಕೊಂಡಿದೆ ಎಂದು ಅಳತೇ ಗೋಲನ್ನು ಹಿಡಿಯಬೇಕಾಗುತ್ತದೆ. ಎಲ್ಲ ಅನುಕೂಲಗಳಿದ್ದೂ ಯಕ್ಷಗಾನ ಯಾಕೆ ಹೀಗಾಯಿತು? ಪ್ರಶ್ನೆ ಏಳುವಾಗ ಉತ್ತರ ಸುಲಭವಿಲ್ಲ. ಹಾಗಾಗಿ ಯಕ್ಷಗಾನದ ಚೌಕಟ್ಟಿನೊಳಗೆ ಕೇವಲ ಒಂದು ಪ್ರಸಂಗವಾಗಿ ಇದನ್ನು ನೋಡಬೇಕಾಗುತ್ತದೆ.

ಈ ಪ್ರಸಂಗದಲ್ಲಿ ಬಣ್ಣ ಬಣ್ಣದ ಕಿರೀಟ ವೇಶಕ್ಕೆ ಎಷ್ಟು ಪ್ರಾಧಾನ್ಯತೆ ಇದೆ ಎಂಬುದು ವಿಚಾರ ಇಲ್ಲಿಲ್ಲ. ಯಾಕೆಂದರೆ,  ಇಲ್ಲಿ ಸಂಘಟಿಸಲ್ಪಟ್ಟಿದ್ದು ತಾಳಮದ್ದಲೆ. ಹಾಗಿದ್ದುದರಿಂದಲೇ ನನ್ನ ಆಸಕ್ತಿ ಕೆರಳಿದ್ದು. ತಾಳ ಮದ್ದಲೆಯಾದಕಾರಣ ಅದನ್ನು ಪೂರ್ಣವಾಗಿ ಅಲ್ಲದೇ ಇದ್ದರೂ ಯಕ್ಷಗಾನದ ರೂಪದಲ್ಲಿ ನೋಡುವುದು ಸ್ವಲ್ಪ ಸುಲಭವಾಗುತ್ತದೆ. ನೋಡುವ ಅನಿವಾರ್ಯತೆ ಉಂಟೊ ಇಲ್ಲವೋ ಅದು ಬೇರೆ. ಇದು ಕೇವಲ ಆಸಕ್ತಿಯಷ್ಟೇ. ಸುಂದರ ಮೈಕಟ್ಟು ಇದ್ದವರು ಯಾವುದೇ ಉಡುಗೆ ಧರಿಸಲಿ ಅದು ಅವರಿಗೆ ಬೇಗ ಹೊಂದಿಕೊಳ್ಳುತ್ತದೆ. ಹಲವು ಸಲ ಜಾಹೀರಾತಿನ ರೂಪದರ್ಶಿ ಒಳ್ಳೆ ಉಡುಪನ್ನು ಧರಿಸಿ ಸುಂದರವಾಗಿ ಕಾಣುತ್ತಾಳೆ ಎಂದು ಆ ಉಡುಪನ್ನು ತಂದು ಮನೆಯವರಿಗೆ ಹಾಕಿದರೆ ಆ ಸೌಂದರ್ಯ ಇಲ್ಲಿ ಕಾಣಸಿಗುತ್ತದೆ ಎಂಬ ಭರವಸೆಯಿರುವುದಿಲ್ಲ. ಅಲ್ಲಿ ಮೈಗೆ ಒಪ್ಪಿಕೊಂಡಂತೆ ಕಂಡ ಉಡುಪು ಇಲ್ಲಿ ವಕ್ರವಕ್ರವಾಗಿ ಕಂಡು ಧರಿಸುವುದೇ ಬೇಡ ಎಂಬ ತೀರ್ಮಾನಕ್ಕೂ ಬರಬಹುದು. ಮನುಷ್ಯನ ವಿಚಾರಗಳೂ ಹಾಗೆ. ಅದು ಮಾರ್ಮಿಕವಾಗುವುದು ಅವುಗಳು ಅಭಿವ್ಯಕ್ತವಾಗುವ ಬಗೆಯಲ್ಲಿ. ಕೆಲವು ಜೋಕುಗಳನ್ನು ಕೆಲವರು ಹೇಳಿದರೆ ಅದೆಷ್ಟು ಹಳಸಲು ಆದರೂ ಮತ್ತೂ ನಗು ಉಕ್ಕಿ ಬರುತ್ತದೆ. ಆಸಕ್ತಿಯನ್ನು ಕೆರಳಿಸುತ್ತದೆ. ಹಾಗೇ ಯಕ್ಷಗಾನ ಎಂಬುದು ಇಲ್ಲಿ ಮಾಧ್ಯಮವಾಗಿ ಭಾಸವಾಯಿತು. 

ಯಕ್ಷಗಾನದಲ್ಲಿ ರಾಮ ರಾವಣ ಭೀಮಾ ಅರ್ಜುನ ಕೌರವ ಹೀಗೆ ಹಲವು ಬಗೆಯ ಪೌರಾಣಿಕ ಪಾತ್ರಗಳ ಚಿಂತನೆಗಳನ್ನು ಕಂಡಿದ್ದೇವೆ. ಧರ್ಮದ ತತ್ವ ಸಿದ್ಧಾಂತಗಳು ಇಲ್ಲಿ ವಿಶ್ಲೇಷಣೆಗೆ ಚರ್ಚೆಗೆ ಒಳಗಾಗಿದೆ. ಪುರಾಣದ ಪಾತ್ರಗಳು ಘಟನೆಗಳು ಚಿತ್ರಣಗಳೂ ವಿಚಾರದ ಸಾಣೆಕಲ್ಲಿನಲ್ಲಿ ತಿಕ್ಕಿ ತೀಡಲ್ಪಟ್ಟಿದೆ. ಅಲ್ಪ ಸ್ವಲ್ಪ ಪೌರಾಣಿಕ ಜ್ಞಾನಗಳನ್ನು ತತ್ವಾದರ್ಶಗಳನ್ನು ನಾವು ತಿಳಿದಿದ್ದರೆ ಅದು ಪುಸ್ತಕ ಗ್ರಂಥ ಪಠಣದಿಂದ ಅಲ್ಲ. ಅದು ಯಕ್ಷಗಾನದಿಂದ. ಇಲ್ಲಿನ ವಿದ್ವಾಂಸರ ಅರ್ಥಗಾರಿಕೆಯಿಂದ. ಹಾಗಾಗಿ ಯಕ್ಷಗಾನ ಪ್ರೇಕ್ಷಕ ಇಂದಿಗೂ ವಿಶಿಷ್ಟವಾದ ನಿಲುವು ಹೊಂದಿರುತ್ತಾನೆ. ಆತನಿಗೆ ಅದೆಷ್ಟು ಉತ್ತಮ ಪೌರಾಣಿಕ ಸಿನಿಮಾ ಬರಲಿ,  ನಾಟಕ ಬರಲಿ,  ಟಿ. ವಿ. ಸೀರಿಯಲ್ ಬರಲಿ ಆಸಕ್ತಿ ಕೆರಳುವುದಿಲ್ಲ. ಆತನಿಗೆ ಅದರಲ್ಲಿ ಸ್ವಾರಸ್ಯವೇ ಇರುವುದಿಲ್ಲ. ಸಿನಿಮಾದಲ್ಲಿ ಪೌರಾಣಿಕ ಪಾತ್ರ ಒಂದು ಉದ್ದುದ್ದ ಸಂಭಾಷಣೆ ಹೇಳಿ ಗತ್ತಿನಲ್ಲಿ ನಿಲ್ಲುವಾಗ ಸಿಗುವ ಚಪ್ಪಾಳೆಗೆ ಹಲವು ಪಾಲುಗಾರಿಕೆ ಇರುತ್ತದೆ.  ಅದಕ್ಕೆ ಕೇವಲ ಅತನೋಬ್ಬನೇ ವಾರಸುದಾರನಾಗಿರುವುದಿಲ್ಲ. ಅಲ್ಲಿ ಕಥೆ ಹೆಣೆದವನು ಸಂಭಾಷಣೆ ಬರೆದವನು ಇದಕ್ಕೆ ಹಿನ್ನೆಲೆ ಸಂಗೀತ ಒದಗಿಸುವವನು ಇದೆಲ್ಲವನ್ನು ನಿರ್ದೇಶಿಸುವವನು ಇದ್ದರೆ, ಯಕ್ಷಗಾನದಲ್ಲಿ ಆತನ ಚಿಂತನೆ ಮಾತುಗಾರಿಕೆಗೆ ಆತನೋಬ್ಬನೇ ವಾರಸುದಾರ. ಸಿಗುವ ಚಪ್ಪಾಳೆಯನ್ನು ಅಧಿಕಾರಯುತವಾಗಿ ಆತ ಸ್ವೀಕರಿಸುತ್ತಾನೆ. ಹಾಗಾಗಿ ಟಿವಿ ಸಿನಿಮಾದ ಪಾತ್ರಗಳನ್ನು ನೋಡಿ ನಮ್ಮ ಪ್ರೇಕ್ಷಕ ಹೇಳುವುದು ನಮ್ಮ ಯಕ್ಷಗಾನಕ್ಕೆ ಇದು ಲೆಕ್ಕವೇ ಅಲ್ಲ ಎಂದು. 

ಇಂತಹ ಯಕ್ಷಗಾನದ ಅಚ್ಚಿನಲ್ಲಿ ಒಂದು ಪಾಶ್ಚಾತ್ಯ ಪ್ರಸಂಗ ಅದು ಹೇಗೆ ಮೂಡಿಬರಬಹುದು. ಅಲ್ಲಿ ಪಾತ್ರ ಸನ್ನಿವೇಶಗಳ ವಿಶ್ಲೇಷಣೆ ಹೇಗಿರಬಹುದು. ಹೇಳಿ ಕೇಳಿ ಇದು ತಾಳಮದ್ದಲೆ. ಹಾಗಾಗಿ ಇಲ್ಲಿ ಬರುವ ವಿಚಾರ ಸಂಘರ್ಷ ಕೇವಲ ಒಂದು ಸಂಸ್ಕೃತಿಗೆ ಸೀಮಿತವಾಗಿ ಉಳಿಯುವುದಿಲ್ಲ. ಅದು ಹರಡಿಕೊಳ್ಳುವುದಕ್ಕೆ ವಿಶಾಲವಾದ ಕವಲುಗಳು ಹಲವಿದೆ. ಹಾಗಾಗಿ ಯಕ್ಷಗಾನ ಒಂದು ಹೇಗಾಗಬಹುದು. ಹೀಗೆ ಚಿಂತನೆ ಮಾಡುವಾಗ ನನ್ನಲ್ಲಿ ಇರುವ ಎರಡು ಹಳೆಯ ಇಂಗ್ಲೀಷ್ ಯಕ್ಷಗಾನ ಧ್ವನಿಸುರುಳಿಯತ್ತ ಗಮನ ಹೋಗುತ್ತದೆ. ಎಲ್ಲವೂ ಇಂಗ್ಲೀಷಲ್ಲೆ ಇರುವ ಈ ಧ್ವನಿ ಸುರುಳಿ ಬಂದು ಹಲವು ವರ್ಷಗಳೇ ಸಂದು ಹೋಯಿತು.

ಏಸು ಕ್ರಿಸ್ತ ಮಹಾತ್ಮೆ ಈ ಎಲ್ಲ ಕಾರಣಗಳಿಂದ ಗಮನಿಸಿದಾಗ ಇಲ್ಲಿ ಅದು ಏಸುವಿನ ಕಥೆ ಅದೊಂದು ಪಾಶ್ಚಾತ್ಯ ಕಥೆ ಎಂದು ಎಲ್ಲಿಯೂ ಅನಿಸುವುದಿಲ್ಲ. ಜೋಸೆಪ್ ಮೆಸ್ಸಾಯನ ಮುಂತಾದ ಪಾತ್ರಗಳ ಹೆಸರು ಒಂದು ಬಿಟ್ಟರೆ ಮತ್ತೆಲ್ಲವೂ ಪೂರ್ಣ ಯಕ್ಷಾನುಭವವನ್ನೇ ತರುವ ಪ್ರಸಂಗವಿದು. ಇದಕ್ಕೆ ಅನುಕೂಲವಾಗುವಂತೆ ಈ ಪ್ರಸಂಗದಲ್ಲಿ ವಿಪುಲ ವಿಷಯಗಳಿವೆ. ಮುಖ್ಯವಾಗಿ ಇಲ್ಲಿ ಪ್ರಸಂಗ ಆರಂಭವಾದದ್ದು ಗಣಪತಿ ಸ್ತುತಿಯಿಂದ ಕಥೆ ಆರಂಭವಾಗುವುದು ಅಂಬುರುಹದಳ ನೇತ್ರೆಯಿಂದ ಪ್ರಸಂಗ ಮುಕ್ತಾಯವಾಗುವುದು ಗಜಮುಖದವಗೆಯಿಂದ. ಹಾಗಾಗಿ ವಿವಾದದ ಮುಖ್ಯವಿಚಾರಕ್ಕೆ ಇಲ್ಲಿ ಮಹತ್ವವೇ ಇಲ್ಲವಾಯಿತು. ಇನ್ನು ಪ್ರಸಂಗ ಸನ್ನಿವೇಶಗಳು ಸಾಗುವುದೂ ಹಾಗೆ ಪಾತ್ರದ ಹೆಸರು ಕೆಲವು ಬಿಟ್ಟರೆ ಇದು ಅಪ್ಪಟ ಪೌರಾಣಿಕ ರೀತಿಯಲ್ಲೇ ಸಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಗಮನಾರ್ಹವಾಗುವುದು ಪ್ರಸಂಗದ ಪದ್ಯಗಳು. ಒಂದೊಂದು ಪದಗಳು ಪರಿಶುದ್ದ ಯಕ್ಷ ಛಾಂದಸ್ಸಿನ ವೈಭವದಿಂದ ಮೂಡಿಬರುತ್ತದೆ. ರಾಗ ತಾಳ ಲಯಗಳು ಅದ್ಭುತವಾಗಿ ರಚಿಸಲ್ಪಟ್ಟಿವೆ. ಶಬ್ದಾಲಂಕಾರವನ್ನು ಕಂಡಾಗ ಗೋವಿಂದ ಪೈಗಳು ಬರೆದ ಗೊಲ್ಗೊಥಾ ಎಂಬ ಕಾವ್ಯ ನೆನಪಿಗೆ ಬರುತ್ತದೆ. ಅಪ್ಪಟ ಕನ್ನಡ ಪ್ರೇಮಿಗಳಿಗೆ ಈ ಪೈಗಳು ಬರೆದ ಗೋಲ್ಗೊಥಾದ ಬಗ್ಗೆ ತಿಳಿದೇ ಇರಲಾರದು. ಹಾಗೊಂದು ಉಂಟೇ ಎಂದು ಮೂಗು ಮುರಿಯುವವರೂ ಇದ್ದಾರೆ. ಪೂರ್ವಾಗ್ರಹದಲ್ಲಿ ಇಲ್ಲಿ ಕುವೆಂಪು ಮಾಸ್ತಿ ಯವರೇ ಕಾಣುವಾಗ ನಮ್ಮ ಗೋವಿಂದ ಪೈಗಳ ಬಗ್ಗೆ ಬೇಕೆಂದೇ ಗಮನ ಹೋಗುವುದಿಲ್ಲ. ಯಕ್ಷಗಾನವೂ ಒಂದು ರೀತಿಯಲ್ಲಿ ಇದೇ ಪೂರ್ವಾಗ್ರಹಕ್ಕೆ ಒಳಗಾಗಿದೆ.  

ಪ್ರಸಂಗ ಪದಗಳು ಎಷ್ಟು ಛಂದೋಬದ್ದವಾಗಿವೆ ಎಂದರೆ, ಪುಸ್ತಕ ನೋಡಿ ಸುಮ್ಮನೇ ಗುನು ಗುನಿಸಿದರೂ ಅದು ಯಕ್ಷಗಾನ ರೂಪದಲ್ಲೇ ಉಚ್ಚರಿಸಲ್ಪಡುತ್ತದೆ. ಯಕ್ಷಗಾನಕ್ಕೆ ಅಷ್ಟು ಎರಕವಾಗಿ ಹೊಂದಿಕೊಂಡು ಇರುವ ಈ ಪ್ರಸಂಗ ಪದಗಳು ವಿವಾದಗಳನ್ನು ಬದಿಗಿರಿಸಿ ಯೋಚಿಸುವಂತೆ ಮಾಡುತ್ತದೆ. ಹಾಗೆ ನೋಡಿದರೆ ಯಕ್ಷಗಾನದಲ್ಲಿ ಇತ್ತೀಚೆಗೆ ಬರುವ ನವ್ಯ ಪ್ರಸಂಗಗಳ ಪದಗಳನ್ನು ಗಮನಿಸಬೇಕು. ಸಿನಿಮಾ ಹಾಡು ಅದು ಯಥಾವತ್ತಾಗಿ ಇಲ್ಲಿ ಭಟ್ಟಿ ಇಳಿಸಿ ಗಬ್ಬೇಬ್ಬಿಸುವಾಗ ಯಾವ ವಿವಾದವೂ ಹುಟ್ಟಿಕೊಳ್ಳುವುದಿಲ್ಲ. ಚಪ್ಪಾಳೆ ಶಿಳ್ಳೆಗಳು ಯಾವುದೇ ನಾಚಿಕೆ ಇಲ್ಲದೆ ಅದನ್ನು ಸ್ವಾಗತಿಸುತ್ತವೆ. ಹಾಸ್ಯದ ಹೆಸರಲ್ಲಿ ಅಪಹಾಸ್ಯವಾಗಿ ಪರನಿಂದೆಯಾಗುವಾಗ ಯಾವ ವಿವಾದವಾಗುವುದಿಲ್ಲ. ಒಟ್ಟು ವಿವಾದ ಹುಟ್ಟಿಸುವುದರಲ್ಲಿ ಸಮಾಜದ ಅಥವಾ ಕಲೆಯ ಸ್ವಾಸ್ಥ್ಯಕ್ಕಿಂತಲೂ ಹೆಸರು ಮಾಡುವ ಸ್ವಾರ್ಥವಿದೆ, ಆದರೆ ಅದು ಗಮನಕ್ಕೆ ಬರುವುದೇ ಇಲ್ಲ.

ಇನ್ನು ಈ ತಾಳಮದ್ದಲೆ ಸಾಗಿದ ರೀತಿಯನ್ನು ಗಮನಿಸಿದರೆ, ಎಲ್ಲಿಯೂ ಯಕ್ಷಗಾನದ ಪರಿಧಿಯನ್ನು ಚೌಕಟ್ಟನ್ನು  ಮೀರುವುದಿಲ್ಲ. ಯಕ್ಷಗಾನದ್ದು ಅಲ್ಲದ ಹಿಮ್ಮೇಳ ವಾದನವು ಇರುವುದಿಲ್ಲ. ಎಲ್ಲ ಶುದ್ದ ಯಕ್ಷಗಾನ ಶೈಲಿಯಲ್ಲೇ ಮೂಡಿಬರುತ್ತದೆ. ಹಿಮ್ಮೇಳದಲ್ಲಿ ಭಾಗವತರ ಪದಗಳನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಅಷ್ಟು ಉತ್ತಮವಾಗಿ ಮೂಡಿಬಂದಿದೆ. ಸುಶ್ರಾವ್ಯವಾದ ಹಾಡುಗಾರಿಕೆ ಇಡೀ ಪ್ರಸಂಗದ ಆಕರ್ಷಣೆಯಾಗಿಯೇ ಉಳಿಯುವುದರಲ್ಲಿ ಮೂಲ ಯಕ್ಷಗಾನದ ಯಶಸ್ಸೂ ಅಡಗಿದೆ. ಮತ್ತೆ ಇನ್ನು ಅರ್ಥಗಾರಿಕೆ ಪಾತ್ರ ಪೋಷಣೆಯಲ್ಲಿ ಏಸುವಾಗಿ ಹಿರಿಯ ಅರ್ಥಧಾರಿ ಶ್ರೀ ರಾಧಾಕೃಷ್ಣ ಕಲ್ಚಾರ್ ಉತ್ತಮ ನಿರ್ವಹಣೆ ತೋರುತ್ತಾರೆ. ಏಸುವಿನ ಪಾತ್ರದ ವಿಚಾರಗಳು ಅರ್ಥಗಾರಿಕೆ ಶುದ್ದ ಯಕ್ಷಗಾನದ ಪಾತ್ರವಾಗಿಯೇ ಬಿಂಬಿಸಲ್ಪಡುತ್ತದೆ. ಇನ್ನು ಹಿರಿಯ ಅರ್ಥಧಾರಿ ಶ್ರೀ ಶಂಭು ಶರ್ಮರು  ನಿರ್ವಹಿಸಿದ  ಸೈತಾನ ನ ಪಾತ್ರ ಯಕ್ಷಗಾನದ ಪ್ರಮುಖ ಅಸುರ ಪಾತ್ರದಂತೆಯೇ ಉತ್ತಮವಾಗಿ ಮೂಡಿಬಂತು. ಮಾತಿನ ಗತ್ತು ಗೈರತ್ತುಗಳು ಯಕ್ಷಗಾನ ನಿಜ ಸ್ವಭಾವವನ್ನು ತೋರಿಸಿಬಿಟ್ಟಿತು. ಒಟ್ಟು ತಾಳಮದ್ದಲೆ ಉತ್ತಮವಾಗಿ ಸಾಗಿದರೂ ಕೊನೆಯಲ್ಲಿ ಏನೋ ಒಂದು ಅತೃಪ್ತಿಯ ಭಾವ ಗೋಚರಿಸುತ್ತದೆ. ಕಥಾನಾಯಕ ಏಸುವಿನ ಪಾತ್ರ ಪ್ರಸಂಗ ಕೊನೆಯ ವರೆಗೂ ಇರುವುದಿಲ್ಲ. ಏಸುವಿನ ನಂತರವೂ ಪ್ರಸಂಗ ಒಂದಷ್ಟು ಸಾಗುತ್ತದೆ. ಕೊನೆಯಲ್ಲಿ ಏಸುವಿನ ಒಂದೆರಡು ಸ್ವಗತವಾದ ತಾತ್ವಿಕ ಅರ್ಥಗಾರಿಕೆಯ ನಿರೀಕ್ಷೆಯಲ್ಲಿ ಇದ್ದರೆ ನಿರೀಕ್ಷೆ ಹಾಗೆ ಉಳಿದು ಬಿಡುತ್ತದೆ. ಏಕಾ ಏಕಿ ಪಾತ್ರದ ಅಂತ್ಯವಾಗುತ್ತದೆ. ಇದೊಂದು ಪ್ರಸಂಗದ ತಾಂತ್ರಿಕ ದೋಷವಾಗಿ ಕಂಡರೂ ಆದಿನ ಸಮಯದ ಅಭಾವವೂ ಕಾರಣವಾಗಿರಬಹುದು. ಕೊನೆಯಲ್ಲಿ ಬರುವ ಪರಿಸಾಯರ ಪಾತ್ರ ಪ್ರಸಂಗ ಕೊನೆಯಲ್ಲೂ ಅಬ್ಬರಿಸಿಬಿಡುತ್ತದೆ. ಮತ್ತುಳಿದಂತೆ ಪ್ರಸಂಗದ ಕೆಲ ಪಾತ್ರಗಳ ಅರ್ಥಗಾರಿಕೆಯ ಬಗ್ಗೆ ಒಂದೆರಡು ಹೇಳುವುದಿದ್ದರೆ,  ಮಾತಿನ ಉಚ್ಚಾರ. ಭಾಷಾ ಉಚ್ಚಾರದೋಷ ಪಾತ್ರವೊಂದರಲ್ಲಿ ಇಲ್ಲಿಯೂ ಗಮನಕ್ಕೆ ಬರುತ್ತದೆ. ಅರ್ಥಗಾರಿಕೆಯಲ್ಲಿ ವಿಚಾರ ಕೊಡುವ ಭರದಲ್ಲಿ ಉಚ್ಚಾರಕ್ಕೆ ಗಮನವೇ ಇರುವುದಿಲ್ಲ. ಪ್ರಾಣ ಅಲ್ಪಪ್ರಾಣದ ವೆತ್ಯಾಸವೇ ಇರುವುದಿಲ್ಲ. ಉಚ್ಚಾರ ಕಳಪೆಯಾಗಿ ಶ್ರುತಿಗೆ ಹೊಂದಿಕೊಳ್ಳದೇ ಇದ್ದರೆ ಅದು ಯಕ್ಷಗಾನಕ್ಕೆ ವಿಹಿತವಾಗಿಯೇ ಕಂಡುಬರುತ್ತದೆ. ಯಕ್ಷಗಾನದ ಅರ್ಥವಾಗುವುದಿಲ್ಲ. ಆದರೂ ಇಲ್ಲಿ ಇದು ಯಕ್ಷಗಾನದ ಪೌರಾಣಿಕ ಪಾತ್ರವಲ್ಲದೇ ಇರುವುದರಿಂದ ಅದು ಉಚ್ಚಾರದೋಷವೂ  ನೈಜವಾಗಿ ಗೋಚರವಾಗುತ್ತದೆ.

ಆದರೂ ಈ ನಡುವೆ ಒಂದು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಯಕ್ಷಗಾನದಲ್ಲಿ ಸಾವಿರಾರು ಪ್ರಸಂಗಗಳಿವೆ. ಅವುಗಳಲ್ಲಿ ಅತ್ಯಂತ ಅಲ್ಪಪ್ರಮಾಣದಲ್ಲಿ ಪ್ರಸಂಗಗಳು ಬಳಸಲ್ಪಟ್ಟಿವೆ. ಯಕ್ಷಗಾನದಲ್ಲಿ ಯಕ್ಷಗಾನದ್ದೇ ಅದ ವಿಷಯ ವಸ್ತುಗಳೂ ಹಲವಾರಿವೆ. ಅವುಗಳು ಬಳಸದೇ ಇದ್ದು ಹೊಸದರ ಅನ್ವೇಷಣೆ ಅಥವಾ ಅದರ ಬಳಕೆ  ಅನಿವಾರ್ಯವೇ? ಸಾವಿರಾರು ಪ್ರಸಂಗವಿದ್ದರೂ ಇನ್ನೂ ನಾವು ಮತ್ತದೇ ಪ್ರಸಂಗಗಳ ಸುತ್ತಲೂ  ಸುತ್ತುತ್ತೇವೆ. ಅದರ ಅರ್ಥ ಅದಾವುದು ಯಕ್ಷಗಾನಕ್ಕೆ ಬೇಕಾಗಿಲ್ಲ ಎಂದು ಪರೋಕ್ಷವಾಗಿ ಹೇಳಿದಂತೆ ಅಲ್ಲವೇ?

ಸಾಕಷ್ಟು ವಿವಾದಗಳಿದ್ದರು ಪ್ರಸಂಗ ಪ್ರದರ್ಶಿತವಾಗಿ ಬಿಡುಗಡೆಯಾಗಿದೆ. ವಿವಾದಗಳ ವಿಚಾರಗಳಲ್ಲಿ ಎಷ್ಟು ನಿಜವಾಗುತ್ತದೋ ತಿಳಿಯಲಾಗದು. ಆದರೂ ಎಲ್ಲವೂ ಒಂದು ಶಾಂತಿಯುತವಾಗಿ ಪರಿಸಮಾಪ್ತಿಯತ್ತ ಸರಿದು ಹೋದದ್ದಕ್ಕೆ ಶಾಂತಿ ಪ್ರಿಯ ಯಕ್ಷಗಾನ ಪ್ರೇಕ್ಷಕರನ್ನು ಅಭಿನಂದಿಸಬೇಕು,

Thursday, June 1, 2017

ಯಕ್ಷಸಂದರ್ಶನ

             ಭಾನುವಾರ ಬಂತು ಎಂದರೆ ಮನೆಯಲ್ಲಿನ ಟಿವಿ ಯ ಕಾರ್ಯಕ್ರಮಗಳು ಸಜ್ಜಿಗ ಅವಲಕ್ಕಿ ಮಾಡಿದಂತೆ. ಎಲ್ಲ ಕಲಸುಮೇಲೋಗರವಾಗಿ ಭಾಸವಾಗುತ್ತದೆ. ಹಲವು ವಾಹಿನಿಗಳು ವೈವಿಧ್ಯತೆಗೆ ಒತ್ತು ಕೊಡುತ್ತಾ ಇಡೀ ವಾರ ನೋಡದೇ ಇದ್ದ ಮಹಾಪರಾಧದ ಶಿಕ್ಷೆಯನ್ನು ಆ ಒಂದೇ ದಿನದಲ್ಲಿ ಕಕ್ಕಿಬಿಡುತ್ತವೆ. ಬೆಳಗ್ಗಿನಿಂದ ತೊಡಗಿ ಸಾಯಂಕಾಲ ಏಕೆ ರಾತ್ರಿಯ ತನಕವು ಚಪ್ಪಾಳೆಯ ಸದ್ದು. ಜತೆಗೆ ಹೋ  ಎಂದು ಬೊಬ್ಬಿಟ್ಟು ಅರಚುವ ಶಬ್ದ.  ಯಾರೋ ಒಬ್ಬ ಹೇಳುವ ಜೋಕಿಗೆ ಅಥವ ಹಾಡಿಗೆ ನಗು ಬಾರದೇ ಇದ್ದರೂ ಸದ್ದು ಮಾತ್ರ ಕಿವಿಗಡಚಿಕ್ಕುವಂತೆ ಕೇಳಿಸುತ್ತದೆ. ಮಕ್ಕಳು ಐ ಪಿ ಲ್ ಹಾಕುವಾಗ  ಬಂದು ವಾಲ್ಯೂಮ್ ಕಡಿಮೆ ಮಾಡುವ ಹೆಂಗಸರು ಭಾನುವಾರ ಮಾತ್ರಾ ಈ ಚಪ್ಪಾಳೆಯ ಸದ್ದಿಗೆ ವಾಲ್ಯೂಮ್ ಗುಂಡಿಯನ್ನು ಮತ್ತಷ್ಟು ಒತ್ತುತ್ತಾ ಶಬ್ದ ಏರಿಸುತ್ತಾ ಹೋಗುತ್ತಾರೆ. ಅವರವರ ಅಭಿರುಚಿ ಅವರಿಗೆ ಬಿಟ್ಟು ಬಿಡುವ. ಆದರೆ ಈ ಕಿವಿಗಡಚಿಕ್ಕುವ ಶಬ್ದದ ಕಾರ್ಯಕ್ರಮಗಳ ನಡುವೆ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮಗಳು  ಸದ್ದಿಲ್ಲದೇ ಮೌನವಾಗಿ ಮನಸ್ಸನ್ನು ಅತ್ತಕಡೆ ಸೆಳೆಯುತ್ತದೆ. ಅದೇ ಟೀವಿ ಯಲ್ಲಿ ಬರುವ ಯಕ್ಷಗಾನ ಕಾರ್ಯಕ್ರಮಗಳು. ವಾಸ್ತವದಲ್ಲಿ ಯಕ್ಷಗಾನ ಎಂದರೆ ಒಂದಿಷ್ಟು ಸದ್ದು ಗದ್ದಲ ಆರ್ಭಟೆಯ ಗಲಾಟೆ ಕಾರ್ಯಕ್ರಮ. ಆದರೆ ಯಕ್ಷಗಾನ ಕಾರ್ಯಕ್ರಮ ಪ್ರಸಾರವಾಗುವಾಗ ಮಾತ್ರ ಒಂದು ರೀತಿಯ ಶಾಂತ ಪರಿಸರ ನಿರ್ಮಾಣವಾಗುತ್ತದೆ. ಯಕ್ಷಗಾನ ಸಂಬಂಧೀ ಕಾರ್ಯಕ್ರಮಗಳೂ ಪ್ರತಿ ದಿನವು ಅಲ್ಲೊಂದು ಇಲ್ಲೊಂದು ಅಂತ ಪ್ರಸಾರವಾಗುತ್ತವೆ.  ಇವುಗಳು  ಕೆಲವೊಮ್ಮೆ ಏಕತಾನತೆಯಿಂದ ಸೋಲುತ್ತಿದ್ದರೂ ಋಣಾತ್ಮಕವಾದ ವಿಚಾರ ದೂರವಿಟ್ಟು ಯೋಚಿಸಬೇಕಾಗುತ್ತದೆ.


            ಭಾನುವಾರ ಬೆಳಗ್ಗೆ ಚಂದನದಲ್ಲಿ ಕೆಲವು ಕರಾವಳೀ ಜಿಲ್ಲೆಯ ಕಾರ್ಯಕ್ರಮಗಳು ಬಂದರೆ,  ಮಧ್ಯಾಹ್ನ ಯಕ್ಷಗಾನ. ಹೇಳಿ ಕೇಳಿ ಚಂದನ ಒಂದು ಸರಕಾರಿ ಸ್ವಾಮ್ಯದ ವಾಹಿನಿ. ಹಾಗಾಗಿ ಅದರ ಕಡೆಗೆ ಹಲವರ ಗಮನ ಕಾರಣಾಂತರವಾಗಿ ಹೋಗುವುದಿಲ್ಲ. ಗುಣಮಟ್ಟ ಹೇಗೂ ಇರಲಿ.  ಆದರೆ ಇತ್ತೀಚೆಗೆ ಖಾಸಗೀ ಚಾನಲ್,  ಅದೂ ಸಹ  ಗಂಟೆ ಗಂಟೆಗೂ ಹಸಿ ಬಿಸಿ ಸುದ್ದಿಯನ್ನು ಬಿತ್ತರಿಸುವ ವಾರ್ತಾ ವಾಹಿನಿಯೊಂದು ಒಂದಷ್ಟು ಘಳಿಗೆ ಯಕ್ಷಗಾನಕ್ಕೆ ಮೀಸಲಿಡುತ್ತದೆ ಎಂದರೆ ಅದರ ಭಾರವಾಹಿಗಳಿಗೆ ಧನ್ಯವಾದ ಹೇಳಲೇಬೇಕು. ಮುಖ್ಯವಾಗಿ ಭಾನುವಾರದ ಈ ಸದ್ದುಗದ್ದಲದ ನಡುವೆ ಒಂದಷ್ಟು ಯಕ್ಷಗಾನದ ಸದ್ದು ಅಪ್ಯಾಯಮಾನವಾಗುತ್ತದೆ.  ಅದು ಪ್ರತಿಷ್ಠಿತ ವಾರ್ತಾವಾಹಿನಿ “ ಸುದ್ದಿ” ಟೀವಿ.. ಭಾನುವಾರ ಮಧ್ಯಾಹ್ನ ಯಕ್ಷರಂಗ ಸರಣಿಯಲ್ಲಿ ಹಲವು ಯಕ್ಷಗಾನ ಕಲಾವಿದರ ಸಂದರ್ಶನಗಳು ಇದಾಗಲೇ ಪ್ರಸಾರವಾಗಿದೆ.

            ಕೇವಲ ಅರ್ಧ ಗಂಟೆಯಲ್ಲಿ ಒಬ್ಬ ಯಕ್ಷಗಾನ ಕಲಾವಿದನ ಅನುಭವ ಜ್ಜಾನಗಳನ್ನು ಸಂಗ್ರಹಿಸಿ ತೋರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಇದು ಅನಿವಾರ್ಯವಾಗಿ ಇತಿಮಿತಿಯೊಳಗಿನ ಕಾರ್ಯಕ್ರಮ ಎನ್ನಲೇಬೇಕು. ಮತ್ತೆ ವಾರ್ತಾವಾಹಿನಿ.  ಹಾಗಾಗಿ ಇಲ್ಲಿ ಕೆಲವು ಕಟ್ಟುಪಾಡುಗಳು ಅವುಗಳಿಗೆ ಇದ್ದೇ ಇರುತ್ತದೆ. ಆದುದರಿಂದ ವಾರದ ಅರ್ಧಗಂಟೆಯಾದರೂ ಮೀಸಲಿದೆಯಲ್ಲಾ ಎಂದು ತ್ಪಪ್ತಿ ಹೊಂದುವುದರೆಲ್ಲೆ ಒಂದು ಸಮಾಧಾನವಿದೆ. ವಾಸ್ತವದಲ್ಲಿ ಯಾವುದೇ ಖಾಸಗೀ ಟಿ. ವಿ ವಾಹಿನಿಗಳು ಮೊದಲು ಗಮನಿಸುವುದು ಟಿ ಆರ್ ಪಿಯನ್ನು. ಆನಂತರ ಕಾರ್ಯಕ್ರಮದ ಬಗ್ಗೆ ಗಮನ ಹೋಗುತ್ತದೆ. ಎಷ್ಟೇ ಒಳ್ಳೆಯ ಸಾಧನವಾದರೂ ಗಿರಾಕಿ ಇಲ್ಲವಾದರೆ ವ್ಯಾವಹಾರಿಕ ಪ್ರಪಂಚದಲ್ಲಿ ಅದಕ್ಕೆ ಬೆಲೆಯೇ ಇರುವುದಿಲ್ಲ. ಹಾಗಾಗಿ ತನ್ನಲ್ಲಿರುವ ಸಾಧನಕ್ಕೆ ಅದೆಂತಹ ಕಳಪೆ ಸಾಮಾಗ್ರಿಯೇ ಆದರು ಹೊರಗೆ ಹೇಗೆ ಬೇಡಿಕೆ ಇರಬಹುದು ಎಂದು ಮೊದಲು ಯೋಚಿಸುತ್ತಾನೆ. ಇಂತಹ ಪಕ್ಕಾ ವ್ಯಾಪಾರೀ ಪರಿಸರದಲ್ಲಿ ಯಕ್ಷಗಾನಕ್ಕೆ ಒಂದಷ್ಟು ವೇಳೆ ಎಂದರೆ ಅದು ಹೇಗೂ ಇರಲಿ ಹೆಮ್ಮೆಯಾಗುತ್ತದೆ.
            ಮುಖ್ಯವಾಗಿ ಇಲ್ಲಿ ಕಾರ್ಯಕ್ರಮ ಹೆಚ್ಚಾಗಿ ಸಂದರ್ಶನಕ್ಕೆ ಮಾತ್ರಾ ಸೀಮಿತವಾಗಿರುತ್ತದೆ. ಇದು ಬಹಳ ಸುಲಭ ಮತ್ತು ಇಂದಿನ ಕಾಲ ಘಟ್ಟದಲ್ಲಿ ಅತ್ಯಂತ ಹೆಚ್ಚು ಸೂಕ್ತವೂ ಆಗಿರುತ್ತದೆ.  ಸಂದರ್ಶನ ಕಲಾವಿದರ ಪರಿಚಯ,  ಸಾಧನೆ ಇದು ಹಲವು ಸಲ ಏಕತಾನತೆಯ ನೆರಳಿಗೆ ಸರಿದಂತೆ ಭಾಸವಾಗುತ್ತದೆ. ಇದರತ್ತ ಮೊದಲು ಗಮನ ಹರಿಸಬೇಕಾಗುತ್ತದೆ.  ಯಾವುದೇ ಕಾರ್ಯಕ್ರಮ ಆಸಕ್ತಿಯನ್ನು ಕೆರಳಿಸುವುದು ಅದರಲ್ಲಿ ಸ್ವಾರಸ್ಯ ಮೂಡಿದಾಗ. ಅದರಲ್ಲೂ ಯಕ್ಷಗಾನದಂತಹ ನವರಸಭರಿತ ಕಾರ್ಯಕ್ರಮಕ್ಕೆ ಇದು ಹೆಚ್ಚು ಅನಿವಾರ್ಯ.
ಯಕ್ಷಗಾನ ಕಲಾವಿದರ ವಿಷಯಗಳಿಗಿಂತಲೂ ಯಕ್ಷಗಾನದದ ವಸ್ತುಗಳು ಪ್ರಧಾನವಾವಗಬೇಕು.   ಸಾಮಾನ್ಯವಾಗಿ ಎಲ್ಲ ಯಕ್ಷಗಾನ ಕಲಾವಿದರ ಹಿನ್ನೆಲೆಯ ಬದುಕು ಬಡತನದ ಕಲಾಜೀವನ, ಸಾಮಾಜಿಕ ನೆಲೆಗಟ್ಟು ಇವೆಲ್ಲ ಒಂದೇ ರೀತಿಯಾಗಿರುತ್ತದೆ.  ಮಾತ್ರವಲ್ಲ ಯಕ್ಷಗಾನ ಕಲಾವಿದನ ಬವಣೆ  ಎಲ್ಲರಿಗೂ ತಿಳಿದೇ ಇರುತ್ತದೆ. ಇದನ್ನು ಕಡೆಗಣಿಸಬೇಕು ಎಂದಲ್ಲ. ಇದರಲ್ಲಿ ಹೊಸತನ ಕಾಣುವುದು ಅಸಾಧ್ಯವಾಗಿರುತ್ತದೆ.   ಇಂದಿನ ದಿನದಲ್ಲಿ ಯಕ್ಷಗಾನವನ್ನು ತಿಳಿದಿರುವುದಕ್ಕಿಂತಲೂ ಹೆಚ್ಚು ಯಕ್ಷಗಾನ ಕಲಾವಿದರ ಬಗ್ಗೆ ತಿಳಿದಿರುವುದು ಒಂದು ವಿಪರ್ಯಾಸವೇ ಎನ್ನಬೇಕು. ಯಕ್ಷಗಾನಕ್ಕಿಂತಲೂ ಹೆಚ್ಚು ಆಸಕ್ತಿ ಯಕ್ಷಗಾನ ಕಲಾವಿದರ ಬಗ್ಗೆ ಎಂದರೆ ವಿಚಿತ್ರವೆನಿಸುತ್ತದೆ. ಅದಕ್ಕೊಂದು ಸಣ್ಣ ನಿದರ್ಶನವೆಂದರೆ ಸಾರ್ವಜನಿಕರು ಕೆಲವೊಮ್ಮೆ ಸಭೆಯಲ್ಲಿ ಇರುವುದಕ್ಕಿಂತಲೂ ಹೆಚ್ಚು ಹೊತ್ತು ಚೌಕಿಯಲ್ಲಿರುವುದು.  ಒಟ್ಟಿನಲ್ಲಿ ಯಕ್ಷಗಾನ ಕಲಾವಿದನಿಂದ ತಿಳಿಯಬೇಕಾದ ವಿಚಾರಗಳು ಯಾವುದು ಎಂದು ಗಮನಾರ್ಹವಾಗುತ್ತದೆ. ಯಕ್ಷಗಾನ ಕಲಾವಿದನ ಸಂದರ್ಶನದಲ್ಲಿ   ವೈಯಕ್ತಿಕ ವಿಚಾರಗಳಂತೆ ಯಕ್ಷಗಾನ ಕಲೆಯ ಬಗೆಗಿನ ವಿಚಾರಗಳ ಕಡೆಗೂ ಪ್ರಾಮುಖ್ಯತೆಯನ್ನು  ಕೊಡಬೇಕಾಗುತ್ತದೆ. ಇದು ಯಕ್ಷಗಾನದ ದೃಷ್ಟಿಯಿಂದಲೂ ಒಂದು ಅಮೂಲ್ಯವೆನ್ನಿಸುತ್ತದೆ. ಯೋಗ್ಯತಾವಂತ ಕಲಾವಿದನ ಜ್ಞಾನ ತಿಳುವಳಿಕೆ ಪಾಂಡಿತ್ಯಗಳಿಗೆ   ಪ್ರಾಮುಖ್ಯತೆ ಕೊಟ್ಟಾಗ ಕಲಾವಿದನಿಗೂ ತನ್ನ ತಿಳುವಳಿಕೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಮಾತ್ರವಲ್ಲ ಆತ ಇನ್ನಷ್ಟು ಹೆಚ್ಚು ಬೆರೆಯುವುದಕ್ಕೆ ಸಾಧ್ಯವಾಗುತ್ತದೆ. ಇಂದು ಅದೆಷ್ಟೋ ಅಮೂಲ್ಯ ಯಕ್ಷಗಾನದ ಸಂಗತಿಗಳು ಕಲಾವಿದನಲ್ಲೇ ಉಳಿದು ಅದು ನಿಂತ ನೀರಂತೆ ಮುಂದಕ್ಕೆ ಹೋಗುವ ಅವಕಾಶವೇ ಇರುವುದಿಲ್ಲ. ಇಂತಹ ವಸ್ತುಗಳು ಬಹಿರಂಗವಾಗಬೇಕು. ಉದಯೋನ್ಮುಖ ಕಲಾವಿದರಿಗೆ ಇಂತಹ ವಿಚಾರಗಳು ಇವೆ ಎಂಬುದರ ಅರಿವೇ ಇರುವುದಿಲ್ಲ. ಇದ್ದರೂ ಅದನ್ನು ತಿಳಿಯಬೇಕು, ಅಭ್ಯಸಿಸಬೇಕು ರೂಢಿಸಿಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನವೂ ಇರುವುದಿಲ್ಲ. ಇಂತಹ ಅಮೂಲ್ಯವಿಚಾರಗಳು ಒಂದು ಮಾಧ್ಯಮದಲ್ಲಿ ಬಹಿರಂಗವಾಗುವಾಗ ಯಕ್ಷಗಾನ  ಲೋಕಕ್ಕೆ ಅದೆಷ್ಟು ಅನಿವಾರ್ಯವೊ ಅಥವಾ ಅದನ್ನು ಎಷ್ಟು ಅಳವಡಿಸಿಕೊಳ್ಳುತ್ತದೋ ಬೇರೆ ವಿಚಾರ. ಆದರೆ ಇಂದಿನ ಜನಾಂಗ ಯಕ್ಷಗಾನ ಅಂದರೆ ಏನು ಎಂಬ ಮಾನದಂಡ ಲಭಿಸುತ್ತದೆ. ತಾವೆಷ್ಟು ಯಕ್ಷಗಾನಕ್ಕೆ ಪ್ರಾಮಾಣಿಕವಾಗಿದ್ದೇವೆ ಎಂಬುದು ತಿಳಿದು ಬರುತ್ತದೆ. ಬೆಳಕಿನ ಅನುಭವವಾದರೆ ತಾನೆ ಕತ್ತಲಿನ ಅನುಭವ ಅರಿವಿಗೆ ಬರುವುದು.


            ಇನ್ನು ಪ್ರಶ್ನೆಗಳು, ಅದೂ ಸಹ ಉತ್ತಮ ಪರಿಪಕ್ವತೆಯ ಪ್ರಶ್ನೆಗಳಾಗಿರಬೇಕು. ಹತ್ತನೆ ತರಗತಿಯ ವಿದ್ಯಾರ್ಥಿಯಲ್ಲಿ ಮೂರನೇ ತರಗತಿಯ ಪ್ರಶ್ನೆಗಳಂತೆ ಎಳಸು ಪ್ರಶ್ನೆಗಳು ಕಾರ್ಯಕ್ರಮದ ಗುಣಮಟ್ಟವನ್ನು ಕಸಿಯಬಹುದು. ಹಾಗಾಗಿ ಪ್ರಶ್ನೆಗಳಲ್ಲೂ ಒಂದಷ್ಟು ಔಚಿತ್ಯ ಪೂರ್ಣ  ರಸೋತ್ಪತ್ತಿ ಮೂಡಿಸುವುದು ಉತ್ತಮ.  ಕೆಲವೊಮ್ಮೆ ಆತ್ಮೀಯತೆ ಮತ್ತು ಸೌಹಾರ್ದದ ಪರಿಧಿಯೊಳಗೆ ಕುಚೋದ್ಯದ ಪ್ರಶ್ನೇ ಕೇಳೀದರೂ ಕಾರ್ಯಕ್ರಮ ರಸವತ್ತಾಗಿರುತ್ತದೆ. ಇದಕ್ಕೆ ಸ್ವಲ್ಪ ಕಠಿಣ ಪ್ರಯತ್ನವೂ ಬೇಕು. ಇಲ್ಲಿ  ಮಲಯಾಳಂ ಭಾಷೆಯ ಕೈರಳಿ ಎಂಬ ಖಾಸಗೀ ವಾಹಿನಿಯೊಂದರ ಕಾರ್ಯಕ್ರಮ ನೆನಪಿಗೆ ಬರುತ್ತದೆ. ಜೆ ಬಿ ಜಂಕ್ಷನ್ ಎಂಬ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ  ಕಲಾವಿದರಿಗೆ ಸಂದರ್ಶಕ ಕೇಳುವ ಪ್ರಶ್ನೆಗಳು ಇದಕ್ಕೊಂದು ನಿದರ್ಶನ. ವ್ಯಕ್ತಿಗಳೊಂದಿಗೆ ಸರಸದಿಂದ ಸಹಜವಾಗಿ ಕೇಳುವ ಪ್ರಶ್ನೆಗಳಿಗೆ ಕಲಾವಿದರೂ ಅಷ್ಟೆ ಸ್ವಾರಸ್ಯವಾಗಿ ಉತ್ತರ ಹೇಳುತ್ತಾರೆ. ಹೀಗಾಗಿ ಕಾರ್ಯಕ್ರಮ ಕೊನೆಯ ತನಕವೂ ಆಸಕ್ತಿಕರವಾಗಿ ಸಾಗುತ್ತದೆ.  ಕೆಲವೊಂದು ಪ್ರಶ್ನೆಗಳೂ ಅತಿಥಿಗಳಿಗೆ ಸವಾಲಾಗಿದ್ದರೆ ಅವುಗಳನ್ನು ಅವರು ಅಷ್ಟೇ ಕ್ರೀಡಾಸ್ಫೂರ್ತಿಯಲ್ಲಿ ತೆಗೆದುಕೊಂಡು ಅದೇ ಭಾವದಲ್ಲಿ ಉತ್ತರಿಸುತ್ತಾರೆ. ಹೀಗೆ ಬಹಳ ವಿಚಾರಗಳನ್ನು ಹಂಚಿಕೊಳ್ಳುವುದಕ್ಕಿರುವ ಅವಕಾಶಕ್ಕೆ ಈ ವೇದಿಕೆ ರೂಪುಗೊಳ್ಳುತ್ತದೆ.

             ಇದು ಯಕ್ಷಗಾನ ಕಲಾವಿದರ ಕಾರ್ಯಕ್ರಮ. ಸಹಜವಾಗಿ ಯಕ್ಷಗಾನ ಕಲಾವಿದರು ಉತ್ತಮ ಮಾತುಗಾರರಾಗಿರುತ್ತಾರೆ. ಇದನ್ನು ಬಳಸಿಕೊಳ್ಳುವುದು ಸಂದರ್ಶಕನ ಜಾಣತನವಾಗುತ್ತದೆ. ಅದಿಲ್ಲವಾದರೆ ಎಷ್ಟೇ ಪ್ರತಿಷ್ಠಿತ ವಾಹಿನಿಯಾದರೂ ಕಾರ್ಯಕ್ರಮ ಹತ್ತರೊಟ್ಟಿಗೆ ಹನ್ನೊಂದರ ಪುಟಸೇರಿಬಿಡುತ್ತದೆ. 

Thursday, May 25, 2017

ಯಕ್ಷಗಾನ ಮತ್ತು ಧರ್ಮ ಚಿಂತನೆ

ನಮ್ಮ ಊರಿನ ಯಕ್ಷಗಾನ ಬಯಲಾಟ. ಪ್ರಸಂಗ ಬಪ್ಪನಾಡು ಕ್ಷೇತ್ರ ಮಹಾತ್ಮೆ.  ಸುಂಕದ ಕಟ್ಟೆಮೇಳ ಇಲ್ಲಾ ಶ್ರೀ ಭಗವತೀ ಮೇಳ ಇರಬೇಕು. ಅದು ನೆನಪಿಲ್ಲ. ದಾರುಕಾಸುರ ಸಂಹಾರವಾಗಿ ದುರ್ಗಾ ಪರಮೇಶ್ವರಿ ಒಂದು ಕ್ಷೇತ್ರದಲ್ಲಿ ನೆಲೆಯಾಗುವಂತಹ ಸನ್ನಿವೇಶ. ವಿಷ್ಣುವಿನ ಅಶ್ರುವಿನಿಂದ ಅವತರಿಸಿದ ದುರ್ಗೆಯ ಒಂದು ಶಕ್ತಿ ಮೂಲ್ಕಿ ಬಳಿಯಲ್ಲಿ ನೆಲೆಯಾಗುವ ಮುನ್ನ ವರ್ತಕ ಬಪ್ಪನಿಗೆ ಕಾಣಿಸಿಕೊಳ್ಳುತ್ತಾಳೆ. ತನಗಾಗಿ ಕ್ಷೇತ್ರವನ್ನು ನಿರ್ಮಿಸುವಂತೆ ಆತನಲ್ಲಿ ಅಭೀಷ್ಟವನ್ನು ವ್ಯಕ್ತಪಡಿಸುತ್ತಾಳೆ.  ಬಪ್ಪ ಭಾವಾವೇಶದಿಂದ ದೇವಿಯನ್ನು ಕಂಡು ಕೈಮುಗಿದು ಆಕೆಯ ಆಶಯದಂತೆ ಕ್ಷೇತ್ರ ನಿರ್ಮಾಣ ಮಾಡುತ್ತಾನೆ. ದೇವಿ ನೆಲೆಯಾಗುತ್ತಾಳೆ. ಸಾಮಾನ್ಯವಾಗಿ ಮುಂಜಾನೆಯ ಹೊತ್ತಿನಲ್ಲಿ ಈ ಸನ್ನಿವೇಶ ರಂಗದಲ್ಲಿ ಕಾಣಿಸಿಕೊಳ್ಳುತ್ತದೆ. ಅಂದು ಮುಂಜಾನೆಯ ನಮಾಜ್ ಗೆ ರಸ್ತೆಯಲ್ಲಿ ಹೊರಟ ಮುಸ್ಲಿಂ ವ್ಯಕ್ತಿಗೆ ರಸ್ತೆಯ ಬದಿಯಲ್ಲೇ ಇರುವ ರಂಗಸ್ಥಳದ ಸನ್ನಿವೇಶದಲ್ಲಿ  ಬೇಡದೇ ಇದ್ದರೂ ಗಮನ ಹರಿಯುತ್ತದೆ.  ಒಂದೆರಡು ಘಳಿಗೆ ನೋಡುತ್ತಾನೆ ನಂತರ ತನ್ನ ಪಾಡಿಗೆ ತಾನು ಮಸೀದಿಯೆಡೆಗೆ ಮೌನವಾಗಿ  ಹೆಜ್ಜೆ ಹಾಕುತ್ತಾನೆ. ಮತೀಯವಾದಂತಹ ಯಾವ ಗೊಂದಲವೂ ಹುಟ್ಟಿಕೊಳ್ಳದೆ ಸಹಜವಾಗಿ ತನ್ನ ಪಾಡಿಗೆ ಮುಂದುವರೆಯುತ್ತಾನೆ.  ಆತನಿಗೆ ಅಷ್ಟರ ಮಟ್ಟಿಗೆ ಯಕ್ಷಗಾನದ ಮೇಲೆ  ವಿಶ್ವಾಸವಿದೆ. ಇಂದು ಈ ವಿಶ್ವಾಸದ ಕೊರತೆಯೇ ವಿವಾದಕ್ಕೆ ಮೂಲ ಕಾರಣ.
ಮೇಲೆ ಹೇಳಿದಂತಹ ಸನ್ನಿವೇಶ ಅದೆಷ್ಟು ಕಡೆಯಲ್ಲಿ ನಡೆದಿರುತ್ತದೋ ಊಹನೆಗೆ ಸಿಕ್ಕುವುದಿಲ್ಲ. ಅದರ ಬಗ್ಗೆ ಯಾವ ಜಿಜ್ಞಾಸೆಯಾಗಲೀ ಸಮಸ್ಯೆಯಾಗಲಿ ಅನಪೇಕ್ಷಿತ ಪ್ರಚೋದನೆಯಾಗಲಿ ಬೆಳೆದು ಬರುವುದಿಲ್ಲ. ವಿವಾದ ರಹಿತವಾಗಿ ಆ ಪ್ರಸಂಗ ಇನ್ನೂ ಪ್ರದರ್ಶನವಾಗುವುದೇ ಇದಕ್ಕೆ ಸಾಕ್ಷಿ. ಸರಳವಾಗಿ ಯೋಚಿಸುವ ಪ್ರೇಕ್ಷಕನಿಗೆ ಯಾವ ವಿವಾದದ ಅವಶ್ಯಕತೆಯೂ ಇರುವುದಿಲ್ಲ. ಯಾಕೆಂದರೆ ಆತ ಕೆಲವರಂತೆ ಪ್ರಚಾರಪ್ರಿಯನಲ್ಲ. ಹೆಸರು ಗಳಿಸುವ ಮಹತ್ವಾಕಾಂಕ್ಷೆಯ ಸ್ವಾರ್ಥವಿರುವುದಿಲ್ಲ. ಯಕ್ಷಗಾನ ಅದರ ಚೌಕಟ್ಟಿನೊಳಗೆ ಅನುಭವಿಸುವುದಷ್ಟೇ ಆತನ ಉದ್ದೇಶ. ಹಾಗಿದ್ದರೆ ವಿವಾದ ಹುಟ್ಟಿಕೊಳ್ಳುತ್ತದೆ. ಬೃಹದಾಕಾರವಾಗಿ ಬೆಳೆದಿದೆ ಎಂಬ ಭ್ರಮೆಯನ್ನು ತರಿಸುತ್ತದೆ. ಇದಕ್ಕೆ ಅನೂಕೂಲವಾಗಿ ಹಲವು ವಿಧದದ ಮಾಧ್ಯಮಗಳು ತಮಗರಿವಿಲ್ಲದೆ ಅಥವ ಉದ್ದೇಶ ಪೂರ್ವಕವಾಗಿಯೂ ಸಹಕರಿಸುತ್ತದೆ.
ಅನ್ಯಧರ್ಮದ ಕಥೆಯೊಂದು ಯಕ್ಷಗಾನದಲ್ಲಿ ಪ್ರಸಂಗವಾಗಿ ಬಹಿರಂಗವಾಗುತ್ತದೆ. ನಿಜಕ್ಕಾದರೆ ಇಲ್ಲಿ ಬಹಿರಂಗದ ಮಾತು ಬಹಳ ಹಳೆಯದು. ಸವೆದು ಹೋದ ಕೊರಡಿನಂತೆ ಅದರ ರೂಪವೂ ಬದಲಾಗಿ ಈಗ ಕೇವಲ ಅಸ್ತಿತ್ವ ಮಾತ್ರವಿದೆ.  ಆದರೂ ಉದ್ದೇಶ ಪೂರ್ವಕವಾಗಿ ವಿವಾದ ಹುಟ್ಟಿಕೊಂಡಿದೆ.
ವಿವಾದ ಎಬ್ಬಿಸುವಲ್ಲಿ ಮೂರು ಭಾವಗಳು  ಕಾರಣೀ ಭೂತವಾಗಿರಬೇಕಿತ್ತು.  ಒಂದು ಯಕ್ಷಗಾನ ಕಲೆಯ ಬಗ್ಗೆ ಅತೀವ ಕಾಳಜಿ. ಇನ್ನೊಂದು ಮತೀಯ ಭಾವನೆಯ ಬಗ್ಗೆ ಅಭಿಮಾನ. ಮತ್ತೊಂದು ಸಮಾಜದ ಸ್ವಾಸ್ಥ್ಯದ ಬಗ್ಗೆ ಇರುವಂತಹ ಆಸಕ್ತಿ. ಆದರೆ ಹುಟ್ಟಿಕೊಂಡ ವಿವಾದದಲ್ಲಿ ಈ ಮೂರು ಇಲ್ಲದಿರುವುದು ವಿವಾದದ ಉದ್ದೇಶವನ್ನು ಸ್ಪಷ್ಟವಾಗಿಸುತ್ತದೆ.
ಯಕ್ಷಗಾನ ಯಾವುದೇ ಮತಕ್ಕೆ ಧರ್ಮಾಚರಣೆಗೆ ಸೀಮಿತವಲ್ಲ ಎಂಬುದು ಯಕ್ಷಗಾನದ ಭವ್ಯ ಇತಿಹಾಸ ತಿಳಿಸುತ್ತದೆ. ಯಕ್ಷಗಾನ ಎಂದೇನು ಯಾವುದೇ ಕಲೆಯೂ ಧರ್ಮಕ್ಕೆ ಸೀಮಿತವಾಗಿ ಉಳಿದರೆ ಅದು ಕಲೆ ಎಂದೆನಿಸಲ್ಪಡುವುದಿಲ್ಲ. ಬದಲಾಗಿ  ಧರ್ಮಾಚರಣೆಯ ಅಂಗವಾಗುತ್ತದೆ.  ಆವಾಗ ಅದು ಧರ್ಮಕ್ಕೆ ಸೀಮಿತವಾಗಿರಿಸಬಹುದು. ಆದರೆ ಅದನ್ನು ಕಲೆ ಎಂದು ಸಮಾಜ ಸ್ವೀಕರಿಸುವುದಿಲ್ಲ.  
ಇನ್ನು ಯಕ್ಷಗಾನದ ಬಗ್ಗೆ ಕಾಳಜಿ ಇದ್ದಲ್ಲಿ ಯಕ್ಷಗಾನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ತನ್ನ ಪರಂಪರೆಯ ಸೊಗಡನ್ನು ಉಳಿಸಿಕೊಳ್ಳುವುದಿಲ್ಲ ಎಂಬ ಕಾರಣ ವಿವಾದದೊಂದಿಗೆ ಥಳುಕು ಹಾಕಿದ್ದರೆ ಅದು ನಿಜಕ್ಕೂ ಹಾಸ್ಯಾಸ್ಪದ ಮಾತ್ರವಲ್ಲ ವಿವಾದದ ಉದ್ದೇಶದ ಹಿಂದೆ ಮಹಾ ಸ್ವಾರ್ಥವೊಂದು ಹೆಡೆಯಾಡುತ್ತದೆ ಎಂದುಕೊಳ್ಳಬೇಕು.
ಇಂದು ಬದುಕುಳಿದಂತಹ ಹಿರಿಯರಾದ ಮಹಾನ್ ಕಲಾವಿದರಲ್ಲಿ, ಯಕ್ಷಗಾನಕ್ಕೆ ಸರ್ವಸ್ವವನ್ನು ಅರ್ಪಿಸಿದಂತಹ ಮಹನೀಯರಲ್ಲಿ ಯಕ್ಷಗಾನದ ಆಗು ಹೋಗುಗಳ ಬಗ್ಗೆ, ಸ್ಥಿತಿಗತಿಯ ಬಗ್ಗೆ ಒಮ್ಮೆ ವಿಚಾರಿಸಿದರೆ  ದೊಡ್ಡ ನಿಟ್ಟುಸಿರು ಬಿಡದೇ ಇರುವಂತಹ ಕಲಾವಿದ ಇರುವುದಕ್ಕೆ ಸಾಧ್ಯವಿಲ್ಲ. ಕೆಲವರಂತೂ ಯಕ್ಷಗಾನದ ಬಗ್ಗೆ ಹೇಳುವುದನ್ನೇ ಬಿಟ್ಟು ಸ್ಥಿತಪ್ರಜ್ಞರಾಗಿ ಕಾಲಗಳು ಸಂದು ಹೋಗಿದೆ. ಅಷ್ಟು ಕೆಟ್ಟು ಹೋದ ಯಕ್ಷಗಾನ ಕೆಡುವುದಕ್ಕೆ, ಈಗಿನ ವಿವಾದಕ್ಕೆ ಹೇತುವಾದ  ಪ್ರಸಂಗ ಕಾರಣವಂತು ಖಂಡಿತಾ ಅಲ್ಲ. ಹಾಗಾದರೆ ಯಕ್ಷಗಾನದ ಬಗ್ಗೆ ಕಾಳಜಿಯಿದ್ದಲ್ಲಿ ಹಾಳಾದ ಮತ್ತು ನಶಿಸಿ ಹೋಗುತ್ತಿರುವ ಕಲೆಯ ಬಗ್ಗೆ ವಿವಾದ ಹುಟ್ಟಿಕೊಳ್ಳಬೇಕಿತ್ತು. ಹೊರಾಟದ ಕಿಚ್ಚು ಹೊತ್ತಿಕೊಳ್ಳಬೇಕಿತ್ತು. ಪರಂಪರೆಯ ಧ್ವನಿ ಹುಟ್ಟಿದಲ್ಲಿ ಅದನ್ನು ದಮನಮಾಡುವ ಕೈಗಳೇ ಇಂದು ವಿವಾವದವನ್ನು ಕೈಗೆ ಎತ್ತಿಕೊಂಡಿರುವಲ್ಲಿ ಯಕ್ಷಗಾನದ ಹಿತ ಅಥವಾ ಕಲೆಯ ಹಿತ ಇರುವುದಕ್ಕೆ ಸಾಧ್ಯವಿಲ್ಲ.
ವಿಪರ್ಯಾಸವೆಂದರೆ ಯಕ್ಷಗಾನದಲ್ಲಿ ಹಾಸ್ಯದ ಹೆಸರಲ್ಲಿ ಮಾನಾಹಾನಿಯಾಗಿ ಹಾಸ್ಯ ಅಪಹಾಸ್ಯವಾಗುವಾಗ ವಿವಾದವಾಗುವುದಿಲ್ಲ. ಯಕ್ಷಗಾನದ ಹೆಸರಲ್ಲಿ ಅಸಂಭದ್ದ ದರ್ಶನವಾಗುವಾಗ ವಿವಾದವಾಗುವುದಿಲ್ಲ. ಕೇವಲ ಮನರಂಜನೆಗಾಗಿಯೋ ವ್ಯಕ್ತಿನಿಷ್ಠವಾಗಿಯೋ ಯಕ್ಷಗಾನದ ಹೊರಾವರಣ ಇಟ್ಟು ಇನ್ನೇನೋ ಸರಕು ತುಂಬಿಸಿ ಅದನ್ನು ಯಕ್ಷಗಾನ ಎಂದು ಬಿಂಬಿಸುವಾಗ ವಿವಾದವಾಗುವುದಿಲ್ಲ.  ಆಗ ಇದೇ ಕೈಗಳು ಚಪ್ಪಾಳೆ ಬಡಿಯಲು ಸಿದ್ಧವಾಗಿರುತ್ತದೆ. ಅನಾವಶ್ಯವಾಗಿ ಲಕ್ಷಗಟ್ಟಲೆ ಖರ್ಚು ಮಾಡಿ ರಂಗಸ್ಥಳ ಕಟ್ಟುವಾಗ ಔಷಧಿಗೆ ದುಡ್ಡಿಲ್ಲದೇ ಸ್ವಂತ ಕುಟುಂಬವನ್ನೂ ಪೋಷಿಸುವುದಕ್ಕೆ ಅಸಮರ್ಥನಾದ ಬಡ ಕಲಾವಿದ ಅದೇ ರಂಗಸ್ಥಳದಲ್ಲಿ ಸಿಗುವ ಬಿಡಿಗಾಸಿಗೆ ಕುಣಿಯುತ್ತಿರಬೇಕಾದರೆ ವಿವಾದವಾಗುವುದಿಲ್ಲ.  ಲಕ್ಷಗಟ್ಟಲೇ ಖರ್ಚು ಮಾಡಿದ ಆಡಂಬರ ದರ್ಶನವೇ ಯಕ್ಷಗಾನ ಅಭಿಮಾನ ಎಂದು ಬಿಂಬಿಸಿ ಸಮಾಜವನ್ನು ಮೂರ್ಖರನ್ನಾಗಿಸುವಾಗ ವಿವಾದ ಹುಟ್ಟಿಕೊಳ್ಳುವುದಿಲ್ಲ.  ಇಷ್ಟೆಲ್ಲ ಯಕ್ಷಗಾನದ ಬಗ್ಗೆ ಅಭಿಮಾನ ವ್ಯಕ್ತ ಪಡಿಸುವುದಕ್ಕೆ ಈಗ ಯಕ್ಷಗಾನದ ಮೌಲ್ಯ ಎಷ್ಟು ಉಳಿದಿದೆ. ಆ ಉಳಿದಂತಹ ಮೌಲ್ಯ ರಕ್ಷಣೆಯ ಭಾಗ ಈ ವಿವಾದ ಎಂದು ತಿಳಿದುಕೊಳ್ಳಬಹುದೇ? ಪ್ರಾಮಾಣೀಕವಾಗಿ ಒಪ್ಪಿಕೊಳ್ಳುವುದು ಕಷ್ಟವಾದೀತು.
ಈಗ ವಿವಾದ ಹುಟ್ಟಿಕೊಂಡಿದೆ. ಮತೀಯವಾದ ಬಣ್ಣ ಬಳಿಯುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಸರ್ವ ಧರ್ಮ ಸಮನ್ವಯವನ್ನು ಯಕ್ಷಗಾನದಲ್ಲಿ ತೋರಿಸಿದಷ್ಟು ಮಾರ್ಮಿಕವಾಗಿ ಬೇರೆ ಇನ್ನಾವುದೇ ಕಲೆಯಲ್ಲಿ ತೋರಿಸಿಲ್ಲ ಎಂಬುದು ಯಕ್ಷಗಾನವನ್ನು ಪ್ರಾಮಾಣಿಕವಾಗಿ ಪ್ರೀತಿಸುವವರಿಗೆ ಅದರ ಸಾರವನ್ನುಆರ್ಥವಿಸುವವರಿಗೆ ತಿಳಿದಿರುತ್ತದೆ. ವಿವಾದ ಹುಟ್ಟಿಸುವಲ್ಲಿ ಇಂತಹ ವಿಚಾರಗಳು ತಲೆಗೆ ಹತ್ತುವಷ್ಟು ವಿಷಯ ತಲೆಯೊಳಗೂ ಇರಬೇಕಲ್ಲ. ಹಾಗಾಗಿ ವಿವಾದ ಹುಟ್ಟಿಕೊಳ್ಳುತ್ತದೆ. ಮತ್ತದನ್ನು ಬೆಳೆಸುವ ಯತ್ನ ನಡೆಯುತ್ತಾ ಇರುತ್ತದೆ.  ಪ್ರತಿಯೊಂದು ಧರ್ಮವೂ ಆಚರಣೆಯ ಮೂಲಕ ಭಗವಂತನೊಡನೆ ಐಕ್ಯವಾಗುವುದನ್ನು ಸಾರುತ್ತವೆ. ತನ್ನ ಧರ್ಮ ಶ್ರೇಷ್ಠ ಎಂದು ಅನ್ಯ ಧರ್ಮವನ್ನು ನಿಂದಿಸುವುದು ಅದಾವುದೇ ಧರ್ಮವಾಗಲೀ ಅದು ಮತಾಂಧತೆಯಾಗುತ್ತದೆ. ಇಂತಹ ತತ್ವಗಳು ಹಲವು ಯಕ್ಷಗಾನ ಪ್ರಸಂಗಗಳಲ್ಲಿ  ಹಲವು ಪಾತ್ರಗಳಲ್ಲಿ ಶ್ರೇಷ್ಠ ಕಲಾವಿದರು ಪ್ರತಿಪಾದನೆ ಮಾಡಿ ಯಕ್ಷಗಾನ ಪರಿಪಕ್ವ ಧರ್ಮ ಕಲೆ ಎಂದು ಸಾಬೀತು ಮಾಡಿರುತ್ತಾರೆ.  ಇಂತಹ ಸೂಕ್ಷವಿಚಾರವನ್ನು ಮರೆತು ಮತೀಯವಾದ ಬಣ್ಣ ಮೆತ್ತಿ ರಂಜನೆಯನ್ನು ನೋಡುವುದು ಮಾನಸಿಕ ದೌರ್ಬಲ್ಯವನ್ನು ತೋರಿಸುತ್ತದೆ.  ಯಕ್ಷಗಾನ ಪ್ರಸಂಗಕ್ಕೆ ಅನ್ಯಧರ್ಮದ ಕಥೆಯೊಂದು ಅಥವಾ ಅದರ ತತ್ವವೊಂದು ಆಧಾರವಾಗುವುದರಲ್ಲಿ ಅಪಾರಾಧವಾದರೂ ಏನು? ಉತ್ತಮವಾದುದನ್ನು ಸ್ವೀಕರಿಸುವುದು ಶುದ್ದ ಸಂಸ್ಕಾರದ ಗುಣ. ಇದು ತಪ್ಪಾಗಿದ್ದರೆ ಯಕ್ಷಗಾನದಲ್ಲಿ ಸ್ವೀಕೃತವಾಗಿರುವುದರಲ್ಲಿ ಸ್ವಧರ್ಮದ ವಿಚಾರಳು ಮಾತ್ರವೇ ಇರುವುದು ಎಂದು ಖಡಾಖಂಡಿತವಾಗಿ ಹೇಳುವುದಕ್ಕೆ ಸಾಧ್ಯವಿದೆಯೇ?
ವಿವಾದಗಳು ಹುಟ್ಟಿಕೊಳ್ಳುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಫೇಸ್ ಬುಕ್ ವಾಟ್ಸಪ್ ಮತ್ತು ವಾರ್ತಾ ಮಾಧ್ಯಮಗಳ ದುರುಪಯೋಗವೇ ಇಂದಿನ ಸ್ಥಿತಿಗೆ ಕಾರಣ. ವಿವಾದಗಳನ್ನು ಹಿನ್ನೆಲೆಯಲ್ಲಿ ದೂಷಿಸುತ್ತಾ ಮುನ್ನೆಲೆಯಲ್ಲಿ ರಂಜನೆಯನ್ನು ಪಡೆಯುವಲ್ಲಿ ಸಮಾದ ಸ್ವಾಸ್ಥ್ಯ ಹಾಳಾಗಿದೆ ಎಂದು ಅನ್ನಿಸುವುದಿಲ್ಲ.

ವಿವಾದ ಪ್ರತಿಯೊಂದು ಕಾರ್ಯದ ಹಿಂದೆಯೂ ಹುಟ್ಟಿಕೊಳ್ಳುತ್ತದೆ. ಆದರೆ ಸದುದ್ದೇಶದಿಂದ ಸತ್ ಸಂಕಲ್ಪದ ಪ್ರಾಮಾಣಿಕ ಯತ್ನ ಅದು ಮುಂದುವರಿಯುವಾಗ ಯಾವ ವಿವಾದವೂ ಅರ್ಥವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಪ್ರಾಮಾಣಿಕನಾಗಿದ್ದವನು ವಿವಾದದ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಆತನ ಪ್ರಯತ್ನಕೆ ಸತ್ಫಲ ಒಂದಲ್ಲ ಒಂದು ವಿಧದಲ್ಲಿ ಸಿಕ್ಕಿಯೇ ಸಿಗುತ್ತದೆ. ಯಾಕೆಂದರೆ ಅಲ್ಲಿ ಸ್ವಾರ್ಥವಿರುವುದಿಲ್ಲ. ಕೇವಲ ಉದ್ದೇಶಮಾತ್ರವೇ ಇರುತ್ತದೆ. ಅದುವೆ ಸತ್ ಸಂಕಲ್ಪ.  ತಾವು ಮಾಡುವ ಕಾರ್ಯದಲ್ಲಿ ಸತ್ ಸಂಕಲ್ಪ ಸದುದ್ದೇಶ ಪ್ರಾಮಾಣಿಕವಾಗಿದ್ದಲ್ಲಿ ಆ ಸಂಕಲ್ಪ ಶುದ್ದಿಯೇ ಆ ಕಾರ್ಯವನ್ನು ಯಶಸ್ಸಿನ ತುದಿಯಲ್ಲಿ ನಿಲ್ಲಿಸುತ್ತದೆ.