"ಇದು ವಿಮರ್ಶೆಯಲ್ಲದ ಚಿಂತನ"

Monday, October 30, 2017

ಯಕ್ಷಲೋಕದ ಕುಮಾರ ರಾಮ ಶಿವರಾಮ ಜೋಗಿ

                        ಪೈವಳಿಕೆ ನಮ್ಮ ಮನೆಯ ಬಳಿಯ ವಳಚ್ಚಾಲು. (ಮುಳಿ ಹುಲ್ಲಿನ ಗುಡ್ಡೆ)ಯ ಮೈದಾನದಲ್ಲಿ ಸುರತ್ಕಲ್ ಮೇಳದ ಯಕ್ಷಗಾನ ಬಯಲಾಟ. ಪ್ರಸಂಗ “ ಅಮರ ಶಿಲ್ಪಿ ವೀರ ಕಲ್ಕುಡ”. ಅದರ ಒಂದು ಸನ್ನೀವೇಶ ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ಸಾಧಾರಣವಾಗಿ ಸುರತ್ಕಲ್ ಮೇಳದವರ ಪ್ರಸಂಗಗಳು ಕನ್ನಡ ಪೌರಾಣಿಕ ಪ್ರಸಂಗಗಳು ಎಂಬ ನಿರೀಕ್ಷೆಯೇ ಹೆಚ್ಚು. ಇದು ಎರಡೂ ಸೇರಿದ ಪ್ರಸಂಗ. ಇದರ ದ್ವಿತೀಯಾರ್ಧದಲ್ಲಿ ಕಲ್ಕುಡ ಮತ್ತು ಕಲ್ಲುರ್ಟಿ ಎರಡೂ ಅಣ್ಣ ತಂಗಿ ಯರಾಗಿ ಜನ್ಮವೆತ್ತುತ್ತವೆ. ಅದಾಗಲೇ ತಂದೆಯನ್ನು ಕಳೆದುಕೊಂಡು ತಬ್ಬಲಿಗಳಾಗಿ ಬದುಕುತ್ತಿರುವ ಕಾಲ. ಊರ ಬೈರರಸನ ಕುತಂತ್ರದಿಂದ ಅಣ್ಣ ವೀರ ಕಲ್ಕುಡ ಕೈ ಕಳೆದುಕೊಳ್ಳುತ್ತಾನೆ. ತಂಗಿ ಅಣ್ಣನನ್ನು ಅರಸಿಕೊಂಡು ಬರುವ ಸನ್ನಿವೇಶ. ಅಣ್ಣಾ ಅಣ್ಣಾ ಎಂಬ ತಂಗಿಯ ಧ್ವನಿಗೆ ಆರ್ತತೆಯಿಂದ ತಂಗಡೀ ಎಂದು ಕರೆಯುವ ಧ್ವನಿ ಎಂತಹವರ ಮನಸ್ಸನು ಕಲಕುತ್ತದೆ. ಅತ್ಯಂತ ಭಾವಪೂರ್ಣ ಅಭಿನಯ. ಈ ಭಾವ ಪೂರ್ಣ ಸನ್ನಿವೇಶಕ್ಕೆ ಸಭೆ ದಂಗಾಗಿ ಕಣ್ಣೀರು ಮಿಡಿಯುತ್ತದೆ. ಅಭಿನಯಿಸುವ ಕಲಾವಿದರು ಆಭಾಗದಲ್ಲಿ ಸ್ವಲ್ಪ ಅಪರಿಚಿತರೇ. ಸುರತ್ಕಲ್ ಮೇಳದ ಪ್ರಥಮ ಆಟ ಬೇರೆ. ಆ ಕಲಾವಿದರು ಬೇರೆ ಯಾರೂ ಅಲ್ಲ.  ಮಾತಿನಲ್ಲಿಯೂ ಭಾವಾಭಿನಯದಲ್ಲೂ ನಾಟ್ಯದಲ್ಲೂ ಹೆಣ್ಣಾಗಿ ತಂಗಿಯಾಗಿ ಹೆಸರಾಂತ ಕಲಾವಿದ ಎಂ ಕೆ, ರಮೇಶ್ ಆಚಾರ್, ಅಣ್ಣ ವೀರಕಲ್ಕುಡನಾಗಿ ಪ್ರಸಿದ್ದ ಪುಂಡುವೇಷಧಾರಿ ಶ್ರೀ ಶಿವರಾಮ ಜೋಗಿ.  ಜೋಗಿಯವರ  ಅತ್ಯಂತ ವಿಶಿಷ್ಟ ಧ್ವನಿ, ಅಪ್ಪಟ ಯಕ್ಷಗಾನದ  ಆಳವಾದ ಸ್ವರವದು. ಎಂತಹವರನ್ನೂ ತನ್ನೆಡೆಗೆ ಸೆಳೆಯುವ ಸೆಳೆತ ಅದರಲ್ಲಿತ್ತು. ವಾಸ್ತವದಲ್ಲಿ ಪ್ರಸಂಗದ ಆರಂಭದ ಭಾಗ ಪೌರಾಣಿಕ. ಅದರಲ್ಲಿ ಅದಾಗಲೇ ಶೇಣಿಯವರು ವಿಶ್ವರೂಪ ಮುನಿಯಾಗಿ ಮೋಡಿ ಮಾಡಿದ್ದರು. ಇನ್ನೂ ಪ್ರೇಕ್ಷಕ ಆ ಗುಂಗಿನಿಂದ ಹೊರಬಂದಿರಲಿಲ್ಲ. ನಂತರ ತೆಕ್ಕಟ್ಟೇ ಮಾಸ್ತರ್ ರವರ ಶಂಭು ಕಲ್ಕುಡ.  ಇದೆಲ್ಲದರ ನಡುವೆ    ಅಪ್ಪಟ  ಪುಂಡುವೇಷಧಾರಿಯ ಪಾತ್ರ ಅತ್ಯಂತ ಸೊಗಸಾಗಿ ಜನಮನ್ನಣೆಯನ್ನು ಪಡೆದಿತ್ತು. ಶೇಣಿಯವರು, ತೆಕ್ಕಟ್ಟೆ ಮಾಸ್ತರ್, ಕೊಕ್ಕಡ ಈಶ್ವರ ಭಟ್, ಬಾಬು ಕುಡ್ತಡ್ಕ ಹೀಗೆ ಅತ್ಯಂತ ಉತ್ತುಂಗದ ಕಲಾವಿದ ಅತಿರಥ ಮಹಾರಥರಿರುವಂತಹ ಸಮಯದಲ್ಲೂ ತನ್ನ ಮಾತಿನಿದಿಂದಲೂ ಕುಣಿತದಿಂದಲೂ ಜೋಗಿಯವರ ಪಾತ್ರ ಪ್ರಭಾವ ಬೀರುತ್ತಿತ್ತು. ಈ ಕಲಾವಿದರೂ ಯಾರಪ್ಪಾ?  ಎನ್ನುವಷ್ಟರ ಮಟ್ಟಿನ ನಿರ್ವಹಣೆ ಅದು ಅಂತಹ ಕಲಾವಿದರ ನಡುವೆ ಸಾಮಾನ್ಯವೇನಲ್ಲ.

                         ಅದು ಪುರಭವನದಲ್ಲಿ ಮಳೆಗಾಲದ ಪ್ರದರ್ಶನ. ಪ್ರಸಂಗ ಕಡುಗಲಿ ಕುಮಾರ ರಾಮ. ಇದು ಐತಿಹಾಸಿಕ ಪ್ರಸಂಗ.  ಬಹುತೇಕ ಸುರತ್ಕಲ್ ಮೇಳದ ಕಲಾವಿದರೇ ಆಗಿದ್ದರು ಇನ್ನೂ ಕೆಲವು ಅತಿಥಿ ಕಲಾವಿದರಿದ್ದರು. ಆ ಪ್ರಸಂಗದಲ್ಲಿ ವಿಶೇಷ ಆಕರ್ಷಣೆಯಾಗಿದ್ದದ್ದು ಶೇಣಿಯವರ ಮಹಮ್ಮದ್ ಬಿನ್ ತೊಗಲಕ್ ಪಾತ್ರ. ಆ ಪ್ರಸಂಗ ಹಲವು ವೈಶಿಷ್ಟ್ಯಗಳಿಂದ ಪ್ರಸಿದ್ದಿಯನ್ನು ಪಡೆದಿತ್ತು. ತೊಗಲಕನ್ ಮಗಳು ನೂರ್ ಜಹಾ( ಹೆಸರು ಸರಿಯಾಗಿ ನೆನಪಿಲ್ಲ) ಪ್ರಸಿದ್ದ ಸ್ರೀವೇಷಧಾರಿ ಶ್ರೀ ಶಾಮ ಸುಂದರ್, ಅಂತೇ ಮಾತಂಗಿಯಾಗಿ ಎಂ. ಕೆ ರಮೇಶ ಆಚಾರ್ ಅದ್ಭುತ ಪಾತ್ರ ನಿರ್ವಹಣೆ. ಶೇಣೀಯವರ ತೊಗಲಕ್ ನ ಮೋಡಿ ಇವುಗಳೆಲ್ಲದರ ನಡುವೆ ತನ್ನದೇ ಸಹಜ ಪ್ರಭಾವದಿಂದ ರಂಜಿಸಿದ್ದು ಶಿವರಾಮ ಜೋಗಿಯವರ ಕುಮಾರ ರಾಮನ ಪಾತ್ರ. ಬಹಳ ನಾನು ಇಷ್ಟ ಪಟ್ಟ ಅತ್ಯಂತ ಶ್ರೇಷ್ಠ ಪಾತ್ರ. ಪುಂಡು ವೇಷಧಾರಿಯಾಗಿ ಜೋಗಿಯವರ ನಿರರ್ಗಳ ಮಾತುಗಾರಿಕೆ ಹಿತಮಿತವಾದ ಕುಣಿತ ಭಾವೋತ್ಕರ್ಷ ಸನ್ನಿವೇಷದಲ್ಲಿ ಬಡಿದೆಬ್ಬಿಸುವ ಅಭಿನಯ ಅದು ಒಬ್ಬ ಪುಂಡುವೇಷಧಾರಿ ಸಂಪೂರ್ಣ ಅವಾಹನೆಗೊಂಡಂತೆ. ಇದು ಬಹಳ ಅಪರೂಪದ ಸಮ್ಮಿಲನ. ಇಂದು ಪುಂಡುವೇಷವೆಂದರೆ ಬರೀ ಕುಣಿತ. ಅರ್ಧ ತಾಸು ಕುಣಿದರೆ ಒಂದು ನಿಮಿಷ ಮಾತನಾಡುತ್ತಾರೆ.

                         ಅದರಂತೆ ಮತ್ತೊಂದು ಪ್ರಸಂಗ ಧರ್ಮದಾಸಿ ಅಥವಾ ರಾಜಾ ಯಯಾತಿ. ಇದರಲ್ಲಿ ಪ್ರಥಮಾರ್ಧದ ಯಯಾತಿಯ ನಿರ್ವಹಣೆ ಜೋಗಿಯವರದ್ದು ಇದು ಒಂದು ಅದ್ಭುತ ಪಾತ್ರ ಕಲ್ಪನೆ. ನಂತರ ಶೇಣಿಯವರ ಯಾಯಾತಿ ಪಾತ್ರ ನಿರ್ವಹಿಸಿದರೂ ಜೋಗಿಯವರ ಪಾತ್ರದ ಸಮ್ಮೋಹನ ಜೀವಂತವಾಗಿರುತ್ತದೆ. ಅಂತೇ ಸತೀ ಶೀಲವತಿಯ ವೀರಚಂದ್ರ,  ರಾಣಿ ರತ್ನಾವಳಿಯ ಉದಯನ ಮಹಾರಾಜ,  ಕುರುಕ್ಷೇತ್ರದ ಅಭಿಮನ್ಯು, ಹೀಗೆ ಹತ್ತು ಹಲವು ಪ್ರಸಂಗಗಳ ಹೆಸರಾಂತ ಪಾತ್ರಗಳು ಇಂದಿಗೂ ಸ್ಮೃತಿಯಲ್ಲಿ ಉಳಿದಿದ್ದರೆ ಅದರಲ್ಲಿ ಜೋಗಿಯವರ ಪಾಲು ಬಹಳಷ್ಟಿದೆ. ಆರಕ್ಕೇರದ ಮೂರಕ್ಕಿಳಿಯದ ಪಾತ್ರ ನಿರ್ವಹಣೆ, ಘಟಾನು ಘಟಿ ಕಲಾವಿದರ ನಡುವೆಯೂ ತನ್ನ ಅಸ್ತಿತ್ವವನ್ನು ತೋರಿಸುತ್ತಿದ್ದ ಆ ನಿರ್ವಹಣೆಗಳನ್ನು ಮರೆಯುವುದು ಯಕ್ಷ ರಸಿಕನಿಗೆ ಅಸಾಧ್ಯ.  ಸುಂದರವಾದ ನಾಟ್ಯ ಅದ್ಭುತವಾದ ರಂಗ ಪ್ರಜ್ಞೆ. ಉತ್ತಮವಾದ ವೇಷಗಾರಿಕೆ , ಹರಿತವಾದ ಬಹಳ ದೂರಕ್ಕೆ ಕೇಳುವ ಕಂಠ ಸ್ವರ ಹೀಗೆ   ಶರೀರ ಮತ್ತು ಶಾರೀರ  ಎರಡು ಅಪ್ಪಟ ಯಕ್ಷಗಾನ ಶೈಲಿಯಲ್ಲಿ ಮಿಳಿತವಾಗಿರುವ ಅಪರೂಪದ ಕಲಾವಿದ ಶ್ರೀ ಶಿವರಾಮ ಜೋಗಿ ಎಂಬುದರಲ್ಲಿ ಅನುಮಾನವಿಲ್ಲ. ಇಂದಿಗೂ ಅವರ ಸ್ವರ ಬಹಳ ಆಕರ್ಷಕ.  ಅವರ ಅರ್ಥಗಾರಿಕೆಯ ಒಂದು ಮೆರುಗು ಎಂದರೆ ಅದು ಕಂಠದಾಳದಿಂದ ಹೊರ ಹೊಮ್ಮುವ ಸ್ವರ ಭಾರ. ಪಾತ್ರ ಯಾವುದೇ ಅದರೂ ಅದಕ್ಕೆ ಸೂಕ್ತವಾದ ಹೊಂದಾಣಿಕೆಯ ಸ್ವರ.

                         ಯಕ್ಷಗಾನ ಪಾತ್ರ ನಿರ್ವಹಣೆಯಲ್ಲಿ ಮೂರು ಅಂಶಗಳು ಪ್ರಥಮವಾಗಿ ಪ್ರೇಕ್ಷಕನನ್ನು ಹಿಡಿದು ನಿಲ್ಲಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತವೆ.  ಒಂದು ಪ್ರವೇಶ. ಇದು ಅರ್ಧದಷ್ಟು ಕೆಲಸವನ್ನು ಮಾಡಿದರೆ ನಂತರ ನಾಟ್ಯ ಮತ್ತು ನಿಲುವು ಮುಂದೆ ಮಾತುಗಾರಿಕೆ. ಮಾತುಗಾರಿಕೆ ಸೆಳೆಯಲ್ಪಡುವುದು ಆಕರ್ಷಕ ಕಂಠ ಸಿರಿಯಿದ್ದರೆ ಮಾತ್ರ. ಅದೂ ಯಕ್ಷಗಾನದಲ್ಲಿ ಅತ್ಯಂತ ಪ್ರಾಮುಖ್ಯ. ಈ ಎಲ್ಲ ಗುಣಗಳು ಶಿವರಾಮ ಜೋಗಿಯಲ್ಲಿ ಧಾರಾಳವಾಗಿದ್ದ್ದು ಒಂದು ಮೇಳದ ಅನಿವಾರ್ಯ ಪ್ರಧಾನ ಕಲಾವಿದನಾಗಿ ಬೆಳೆಯುವಲ್ಲಿ ಸಹಕಾರಿಯಾಯಿತು. ಈಗಲೂ  ಜೋಗಿಯವರ ಪ್ರವೇಶ ನಂತರ ರಂಗವನ್ನಾಕ್ರಮಿಸಿ ನಿಲ್ಲುವ ಪರಿ ಅನನ್ಯ. ಯಾವ ವೇಷ ಯಾವ ಸನ್ನಿವೇಶದಲ್ಲಿ ರಂಗದಲ್ಲಿ ಹೇಗೆ ನಿಂತಿರಬೇಕು, ಆ ನಿಲುಮೆ ಏನು?  ಇದನ್ನು ಜೋಗಿಯವರ ವೇಷವನ್ನು ನೋಡಿ ಕಲಿಯಬೇಕು.  ಅದು ಯಕ್ಷಗಾನ ಪರಂಪರೆಯ ಶಿಕ್ಷಣ.  ಇದು ಅಸಾಮಾನ್ಯ ರಂಗ ಪ್ರಜ್ಞೆ.
                         ಪುಂಡುವೇಷದ ಪರ್ವಕಾಲ ಕಳೆದನಂತರ ಅಷ್ಟೇ ಸಮರ್ಥವಾಗಿ ರಾಜವೇಷದಂತ ಮಾಗಿದ ವೇಷಗಳನ್ನು ನಿರ್ವಹಿಸುತ್ತಿದ್ದರು. ಸಾಮಾನ್ಯವಾಗಿ ಪುಂಡು ವೇಷಧಾರಿಗಿರುವ ತೊಂದರೆ ಎಂದರೆ ಅದು. ಅತ್ತ ಪುಂಡುವೇಷ ನಿರ್ವಹಣೆಗೆ ದೇಹ ಕೇಳುವುದಿಲ್ಲ. ಇತ್ತ ರಾಜ ವೇಷ ಒಗ್ಗುವುದಿಲ್ಲ. ಇಂತಹ ಸಂದಿಗ್ದದಲ್ಲಿ ತಮ್ಮ ನಿರ್ವಣೆಯಲ್ಲಿ ಬದಲಾವಣೆಯನ್ನು ತಂದು ಯಶಸ್ವಿಯಾದವರು ಶಿವರಾಮ ಜೋಗಿಯವರು. ಅವರ ಪುಂಡುವೇಷವಾಗಲಿ ರಾಜವೇಷವಾಗಲಿ ಯಾವುದೇ ಆದರೂ ಅದನ್ನು ಸಲೀಸಾಗಿ ನಿರ್ವಹಿಸುತ್ತಾರೆ. ಆ ಪಾತ್ರದೊಂದಿಗೆ ರಂಗವನ್ನು ಪ್ರವೇಶಿಸುವಾಗ ಅವರಲ್ಲಿರುವ ಆತ್ಮ ವಿಶ್ವಾಸ ಅದು ಪಾತ್ರದಲ್ಲಿ ಹೊಮ್ಮುತ್ತದೆ.  ಅವರ ಪುಂಡುವೇಷಗಳಲ್ಲಿ ಲೆಕ್ಕವಿಲ್ಲದ ಗಿರಕಿಗಳು ಇರುತ್ತಿರಲಿಲ್ಲ. ಹಿತಮಿತವಾದ ಕುಣಿತ. ಹೆಜ್ಜೆಗಾರಿಕೆಯ ಸೊಗಸು ನೋಡವುದೇ ಹಬ್ಬ. ಯಕ್ಷಗಾನದ ಪಂಪರೆಯ ಕುಣಿತವನ್ನು ಅಲ್ಲಿ ಕಾಣಬಹುದು.

                         ಇಂತಹ ಒಬ್ಬ ಯಕ್ಷಗಾನ ಕೂಟದ ಅನಿವಾರ್ಯ ಕಲಾವಿದನಿಗೆ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ. ಇದು ಕೇವಲ ಜೋಗಿ ಎಂಬ ಕಲಾವಿದನಿಗೆ ಸಲ್ಲುವ ಸನ್ಮಾನವಲ್ಲ. ಬದಲಾಗಿ ಪರಂಪರೆಯ ಪುಂಡುವೇಷಕ್ಕೆ ಸಲ್ಲುವ ಅಂಗೀಕಾರ. ಪರಂಪರೆಯ ರಾಜವೇಷಕ್ಕೆ ಸಲ್ಲುವ ಮನ್ನಣೆ.  ಒಬ್ಬ ಸರ್ವಾಂಗೀಣ ಕಲಾವಿದನಿಗೆ ಸಲ್ಲುವ ಅರ್ಥ ಪೂರ್ಣ ಮಾನ್ಯತೆ. ಯಕ್ಷಗಾನಂ ಗೆಲ್ಗೆ. 

Sunday, October 15, 2017

ತೇಜೋವಧೆ


ಅದು ಅಯೋಧ್ಯೆಯ ರಾಜ ಸಭೆ. ಋತುಪರ್ಣ ಮಹಾರಾಜ ಸಿಂಹಾಸನದಲ್ಲಿ ವಿರಾಜಮಾನನಾಗಿದ್ದಾನೆ. ಒಮ್ಮಿಂದೊಮ್ಮೆಗೆ ಮಹಾರಾಜನಿಗೆ ಕುಳಿತ ಸಿಂಹಾಸನ ಅಲುಗಿದ ಅನುಭವ. ಅಷ್ಟೇ ಕುಳಿತಲ್ಲಿಂದ ಧಿಗ್ಗನೆ ಕೆಳಗೆ ಹಾರಿ ಬಿಡುತ್ತಾನೆ. ಅದು ಕ್ಷಣ ಮಾತ್ರದ ಪ್ರಚೋದನೆ ಮತ್ತು ಪ್ರತಿಕ್ರಿಯೆ. ಯಾಕೆ ಹೀಗಾಯಿತು. ಆಗಲೇ ರಾಜಸಭೆಗೆ ದೂರದಲ್ಲಿ ಒಂದು ಆಕೃತಿಯ ಪ್ರವೇಶವಾಗುತ್ತದೆ. ಅದು ಮನುಷ್ಯಾಕೃತಿ ಎನ್ನುವುದಕ್ಕೇ ಅನುಮಾನ ಪಡುವಂತೆ ವಿಕೃತ ರೂಪ. ಆದರೂ ಅದು ನೇರವಾಗಿ ಸಭೆಯೊಳಗೆ ಬರುತ್ತದೆ. ಆ ಧೈರ್ಯ ಆತ್ಮ ಶಕ್ತಿಗೆ ರಾಜ ಗೊಂದಲಕ್ಕೆ ಸಿಲುಕುತ್ತಾನೆ. ತಾನೇಕೆ ಕುಳಿತಲ್ಲಿಂದ ಎದ್ದೆ? ಅದಾವ ಪ್ರಚೋದನೆ ತನ್ನನ್ನು ತಳ್ಳಿಬಿಟ್ಟಿತು. ಆಂತರ್ಯವನ್ನು ಬಡಿದೆಬ್ಬಿಸಿದ ಆ ಶಕ್ತಿ ಅದಾವುದು?

ಅದು ಬೇರಾವ ಶಕ್ತಿಯೂ ಅಲ್ಲ. ಅದು ಚಕ್ರವರ್ತಿಯೊಬ್ಬನ ತೇಜಸ್ಸು ಎಂಬುದು  ಋತುಪರ್ಣನಿಗೆ ಅರಿವಾಗುವುದು ಕಥೆಯ ಅಂತ್ಯದಲ್ಲಿ. ಚಕ್ರವರ್ತಿಯೊಬ್ಬನಿಗಿರುವ ತೇಜಸ್ಸು ಸಾಮಂತನಾದ ಋತು ಪರ್ಣನನ್ನು ಬಡಿದೆಬ್ಬಿಸಿತು. ಮುಂದೆ ಆತನ ಅನುಮಾನಕ್ಕೇ ಅದೂ ಒಂದು ಕಾರಣವಾಯಿತು. ವಿಚಿತ್ರ ಕುರೂಪಿಯಾದ ಆ ಬಾಹುಕನೆಲ್ಲಿ? ಸುರಸುಂದರ ಚಕ್ರವರ್ತಿ ನಳನೆಲ್ಲಿ? ಕಾರ್ಕೋಟಕ ವಿಷ ಪ್ರಭಾವದಿಂದ ತನ್ನ ದೇಹ ವಿಕಾರವಾಗಿದ್ದರೂ ನಳನ ಅಂತಶಕ್ತಿಯಿಂದ ಆತ್ಮದಲ್ಲಿ ಅಡಕವಾಗಿದ್ದ ಆತ್ಮ ವರ್ಚಸ್ಸು ತನ್ನ ಪ್ರಭೆಯನ್ನು ಕಳೆದುಕೊಳ್ಳಲಿಲ್ಲ. ಅದನ್ನು ಕಸಿಯುವುದಕ್ಕೆ ಬಹುಶಃ ಆತನನ್ನು ಕಾಡುವ ಶನಿದೇವನಿಗೂ ಸಾಧ್ಯವಾಗಲಿಲ್ಲವೋ ಏನೋ? ತೇಜಸ್ಸು!  ಎನ್ನುವುದು ಇದನ್ನು.

ಅದು ನರ್ಮದೆಯ ತೀರದಲ್ಲಿನ ಬಲಿ ಚಕ್ರವರ್ತಿಯ ಯಾಗ ಶಾಲೆ. ಇನ್ನೇನು ಪೂರ್ಣಾಹುತಿಗೆ ಎಲ್ಲವೂ ಸಿದ್ಧವಾಗಿದೆ. ಅಸುರ ಗುರು ಶುಕ್ರ ನಿಂದ ತೊಡಗಿ ಅದೆಷ್ಟೋ ಮುನಿಗಳು ಋಷಿ ಪ್ರಮುಖರು, ಋತ್ವಿಜರು ಯಾಗ ಶಾಲೆಯಲ್ಲಿ ಉಪಸ್ಥಿತರಿದ್ದಾರೆ. ಇನ್ನೊಂದು ಆಹುತಿಯೊಂದಿಗೆ ಬಲಿಗೆ ಇಂದ್ರಪದವಿ ಸಿದ್ದಿಸುತ್ತದೆ. ಆವಾಗ ಯಾಗ ಶಾಲೆಯ ದ್ವಾರದಲ್ಲಿ ದಿವ್ಯ ಬಾಲಕನ ಆಗಮನವಾಗುತ್ತದೆ. ಬಾಲಕನ ತೇಜಸ್ಸು ಕಂಡು ಯಾಗದೀಕ್ಷೆಯಲ್ಲಿ ಕುಳಿತಿದ್ದ ಬಲಿ ಚಕ್ರವರ್ತಿ ತನಗರಿವಿಲ್ಲದೇ ಎದ್ದೇಳುತ್ತಾನೆ. ಅದೆಂತಹ ತೇಜಸ್ಸು.  ಅಲ್ಲಿದ್ದ ಅಷ್ಟೂ ಋಷಿ ಪ್ರಮುಖರ ತೇಜಸ್ಸು ಈ ಬಾಲಕನ ತೇಜಸ್ಸಿಗೆ ಶರಣಾಗಿ ಆತನನ್ನು ಹಿಂಬಾಲಿಸುತ್ತದೆ. ಶುಕ್ರ ಪ್ರಮುಖರೆಲ್ಲ ಬೆಕ್ಕಸ ಬೆರಗಾಗುತ್ತಾರೆ. ತೇಜಸ್ಸು!  ಎನ್ನುವುದು ಇದನ್ನು.

ವಿಚಿತ್ರವೆಂದರೆ ಇಂದು ಸಾರ್ವಜನಿಕ ವಲಯದಲ್ಲಿ ತಿಳಿಯದೇ ಚರ್ಚೆಗೊಳಗಾಗುವ ಶಬ್ದವೆಂದರೆ ತೇಜೋವಧೆ. ತನ್ನ ತೇಜೋವಧೆಯಾಯಿತು ಎನ್ನುವುದೇ ಒಂದು ಸ್ವಾರ್ಥದ ಸಂಕೇತ. ತನ್ನ ಬೆನ್ನನ್ನು ತಾನೆ ಚಪ್ಪರಿಸಿಕೊಂಡ ಹಾಗೆ. ನಿಜವಾಗಿ  ತೇಜಸ್ಸು ಎಂಬುದು ಅಡಕವಾಗಿದ್ದಲ್ಲಿ ಅದು ಬೇಡವೆಂದರೂ ಗೌರವವನ್ನು ಎಳೆದು ತರುತ್ತದೆ. ಅಂತಹ ತೇಜಸ್ಸು ಇದ್ದವನು ತೇಜೋವಧೆಯಾಯಿತು ಎಂದು ಅಲವತ್ತುಕೊಳ್ಳುವುದಿಲ್ಲ. ಯಾಕೆಂದರೆ ಆತನ ತೇಜಸ್ಸು ಅದು ವಿಕ್ರಯಿಸುವ ಸೊತ್ತಲ್ಲ. ಇನ್ನೊಬ್ಬರು ಕೊಡುವ ಮೌಲ್ಯಕ್ಕೆ ಅದು ಕಾದು ಕುಳಿತುಕೊಳ್ಳುವುದಿಲ್ಲ.     ತೇಜಸ್ಸು ಇಲ್ಲದವರೆ ತಮ್ಮೈಲಿ ಇಲ್ಲದೇ ಇದ್ದುದರ ವಧೆಯಾಯಿತು ಎಂದು ಪರಿತಪಿಸುವುದು. ಪ್ರಪಂಚ ನಿಯಮವೇ ಹಾಗೆ, ಕಳುವಾದಾಗ ತನ್ನಲ್ಲಿ ಇಲ್ಲದೇ ಇದ್ದ ವಸ್ತುವೂ ಕಳುವಾಗಿದೆ ಎಂದು ಹೇಳುವುದು ಜಾಣತನ. ಹಾಗಾದರೂ ತನ್ನ ಅರ್ಹತೆಯನ್ನು ಬಾಹ್ಯ ಪ್ರಪಂಚ ಗುರುತಿಸಲಿ ಎಂಬ ಸ್ವಾರ್ಥ.

ತೇಜಸ್ಸು ಸತ್ವಯುತ ಬದುಕಿನ ಪ್ರತೀಕ. ಅದು ಅರ್ಹತೆಯಿಲ್ಲದಲ್ಲಿ ಬೆಳಗುವುದಿಲ್ಲ. ನಂದಾದೀಪ ಬೆಳಗಿ ಪ್ರಬೆಯನ್ನು ಬೀರುವುದಕ್ಕೆ ಹೇಗೆ ಸೂಕ್ತವಾದ ವಾತಾವರಣ ಬೇಕೋ ಹಾಗೆ ಸೂಕ್ತ ನೆಲೆ ಸಿಕ್ಕಿದಲ್ಲಿ ಮಾತ್ರ  ತೇಜಸ್ಸು ಬೆಳಗುವುದು.

 ದೇಹ ಮನಸ್ಸು ಮತ್ತು ದೈವ ಹೀಗೆ ಬರುವ ತಾಪಗಳನ್ನು ಮೂರು ವಿಭಾಗ ಮಾಡಿ ಅದನ್ನು ತಾಪತ್ರಯ ಎಂದರೆ , ಇಂದು ನೂರೆಂಟು ತಾಪತ್ರಯ ಎನ್ನುವುದೂ ಇದೆ. ನಿಜವಾಗಿ ತಾಪಗಳು ಮೂರೆ. ಅದರಂತೆ ತೇಜಸ್ಸು ಎಂಬ ಶಬ್ದ ಪ್ರಯೋಗದ ಉಪಯೋಗದಲ್ಲಿ ಶಬ್ದ ತೇಜಸ್ಸೇ ಕಾಣೆಯಾಗಿದೆ.

ವಿದ್ಯಾವಂತನಾದ ವ್ಯಕ್ತಿಯಲ್ಲಿ ಆತ ಆರ್ಜಿಸಿದಂತಹ ವಿದ್ಯೆ ಆತನಲ್ಲಿ ವರ್ಚಸ್ಸನ್ನು ಮೂಡಿಸುತ್ತದೆ. ಆ ವರ್ಚಸ್ಸು ವಿದ್ಯಾರ್ಹತೆ.  ಅದು ಅತನ ಬದುಕಿನ ಶೈಲಿಯೊಂದಿಗೆ ಬೆರೆತಿರುತ್ತದೆ. ಅದು ಪ್ರಕಾಶಿಸುವುದು ಅಥವಾ ಕಂದಿಹೋಗುವುದು ಅದೇನಿದ್ದರು ಅವನನ್ನು ಸಂಬಂಧಿಸಿಯೇ ಹೊರತು ಅವನೊಳಗಿನ ಪ್ರಕಾಶವನ್ನು ಮತ್ತೊಬ್ಬನಿಂದ ನಾಶ ಪಡಿಸುವುದಕ್ಕೆ ಸಾಧ್ಯವಿಲ್ಲ. ಕ್ರೋಧಗೊಂಡಾಗ ಶರೀರ ಕಂಪಿಸಬಹುದು. ಮುಖದ ತುಂಬ ರಕ್ತ ತುಂಬ ಬಹುದು. ಉದ್ವೇಗ ಅಧಿಕವಾಗಿ ಎದೆಯ ಬಡಿತ ಹೆಚ್ಚಾಗಬಹುದು. ಕಣ್ಣುಗಳು ರೂಪ ಕೆಡಿಸಿಕೊಳ್ಳಬಹುದು. ಹೀಗೆ ದೇಹದ ಹಲವು ಭಾಗಗಳ ಸ್ಪಂದನೆಗೆ ಸ್ವತಃ ಜೀವ ಭಾವವೇ ಕಾರಣ ಹೊರತು, ಸಿಟ್ಟು ಬರುವಂತೆ ಮಾಡುವ ಇನ್ನೊಬ್ಬನಲ್ಲ. ತಮ್ಮ ಸಿಟ್ಟಿಗೆ ಇನ್ನೊಬ್ಬನನ್ನು ನಿಮಿತ್ತ ಮಾಡುವುದರಲ್ಲೂ ಇದೆಯೊಂದು ಸ್ವಾರ್ಥ.

ನಮ್ಮಲ್ಲಿನ ಅರ್ಹತೆಗಳಿಗೆ ನಮ್ಮನ್ನು ನಾವೆ ಕಾರಣರನ್ನಾಗಿ ಮಾಡುತ್ತೇವೆ. ಅದೇ ದೌರ್ಬಲ್ಯಗಳಿಗೆ ಹೊರಗಿನ ವಿಚಾರಗಳನ್ನು ಕಾರಣವನ್ನಾಗಿಸುತ್ತೇವೆ. ನಮ್ಮ ಅರ್ಹತೆಗೆ ಮಿಗಿಲಾಗಿ ಸ್ವಾಭಿಮಾನವನ್ನು ಬೆಳೆಸುತ್ತೇವೆ. ಅದು ಅಹಂಕಾರವಾಗುತ್ತದೆ. ಅದರೊಂದಿಗೆ ಸ್ವಾರ್ಥ ಬೆರೆತು ಅದು ದುರಹಂಕಾರವಾಗಿ ಪ್ರತಿಷ್ಠೆಯಾಗುತ್ತದೆ. ಹೀಗೆ ನಮ್ಮ ಅಹಮಿಕೆಗೆ ನಾವು ಕೊಡುವ ಹೆಸರೇ ತೇಜಸ್ಸು!  

ಮನುಷ್ಯನ ದೇಹ ಕೊಳೆಯಾದಾಗ ಅತ ಸ್ನಾನ ಮಾಡಲು ಕೊಳಕ್ಕೆ ಇಳಿಯುತ್ತಾನೆ. ತನ್ನ ದೇಹದ ಕಲ್ಮಷವನ್ನು ಕೊಳದ ನೀರಿಗೆ ಬೆರೆಸುತ್ತಾನೆ. ಆಗ ಯೋಚಿಸುವುದಿಲ್ಲ ನನ್ನಿಂದ ನೀರು ಕಲುಷಿತಗೊಂಡಿತು ಎಂದು. ತನ್ನ ದೇಹದ ಮಲೀನತೆ ಕಳೆದುಕೊಳ್ಳುವುದಷ್ಟೇ ಆಗಿರುತ್ತದೆ. ಆತನಿಗೆ ಬೇರೆನೂ ಕಾಣುವುದಿಲ್ಲ. ಅದೇ ನೀರು ಕೊಳೆಯನ್ನು ಕಳೆದುಕೊಂಡು ನಂತರವೂ ಶುದ್ದವಾಗಬಹುದು. ಆದರೂ ತನ್ನ ಕೊಳೆಯನ್ನು ಅಲ್ಲಿ ಕಳೆದುಕೊಂಡದ್ದು ಸತ್ಯ. ಹಕ್ಕಿಯೊಂದು ಮರದ ಮೇಲೆ ಕುಳಿತಿರುತ್ತದೆ. ವ್ಯಾಧ್ಯನೊಬ್ಬ ಅದಕ್ಕೆ ಬಾಣ ಎಸೆಯುತ್ತಾನೆ. ಇಲ್ಲ ಮನುಷ್ಯ ತನ್ನ ಕೋವಿಯಿಂದ ಗುಂಡು ಸಿಡಿಸಲೂ ಬಹುದು. ಆದರೆ ಬಾಣ ಅಥವಾ ಗುಂಡು ಹಕ್ಕಿಗೆ ತಾಕಿ ಹಕ್ಕಿ ಸಾಯುತ್ತದೆ. ಜತೆಯಲ್ಲಿ ಹಕ್ಕಿ ಅವಿತುಕುಳಿತಲ್ಲಿನ ಹಲವು ಎಲೆಗಳು ಉದುರಿಬೀಳಬಹುದು. ಮರದ ಗೆಲ್ಲು ಘಾಸಿಯಾಗಬಹುದು. ಆಸರೆ ಪಡೆದ ಹಕ್ಕಿ ಯೋಚಿಸುವುದಿಲ್ಲ. ಬಾಣ ಬಿಟ್ಟ ಬೇಟೆಗಾರನೂ ಯೋಚಿಸುವುದಿಲ್ಲ. ಮರಕ್ಕೆ ಯಾವ ಅಪರಾಧಕ್ಕೆ ಘಾಸಿಗೊಳಗಾಗಬೇಕಾಯಿತು. ಬೇಟೆಗೆ ಆಸರೆಯನ್ನು ಕೊಟ್ಟ ಅಪರಾಧವೇ? ಅದರ ಎಲೆಗಳನ್ನು ಕಳೆದುಕೊಳ್ಳುವುದಕ್ಕೆ ಅದರ ಅಪರಾಧವೇನು?

ಸಂಗೀತಗಾರನೊಬ್ಬ ಹಾಡುತ್ತಾನೆ. ಅಥವಾ ಸಂಗೀತ ನುಡಿಸುತ್ತಾನೆ. ಅದಕ್ಕೊಂದು ರಾಗ ಅದು ಶಂಕರಾಭರಣ, ಕಲ್ಯಾಣಿ ಮತ್ತೇನೋ ರಾಗವಾಗಿರಬಹುದು. ತಾಳವೂ ಅಷ್ಟೇ. ಆದರೆ ಕೇಳುಗನೊಬ್ಬ ಆತನ ಶಂಕರಾಭರಣದ ಅವರೋಹಣವನ್ನು ವಿಮರ್ಶಿಸಬಹುದು. ಇದು ತಪ್ಪು ಎಂದು ಸಾರ್ವಜನಿಕವಾಗಿ ಹೇಳಬಹುದು.  ಸಂಗೀತಗಾರ ಹೇಗೆ ಸಂಗೀತದ ಅಂಗವೋ ಕೇಳುಗನೂ ಅದರ ಅಂಗವೇ. ಶಂಕರಾಭರಣ ಕೆಡುವುದನ್ನು ಆತನಿಗೆ ಕೇಳುವುದಕ್ಕಾಗುವುದಿಲ್ಲ. ಕೆಟ್ಟು ಹೋದ ಸಂಗಿತವನ್ನು ಆಸ್ವಾದಿಸುವುದಕ್ಕೆ ಆಗುವುದಿಲ್ಲ. ಹೋಗಲಿ ಸಂಗೀತ ಕೆಡುವುದನ್ನು ಸಹಿಸುವುದಕ್ಕೂ ಸಾಧ್ಯವಾಗುವುದಿಲ್ಲ.   ಆದರೆ ಸಂಗೀತಗಾರನ ಅಹಮಿಕೆ ಪೆಟ್ಟುಬೀಳುತ್ತದೆ . ಹಾಡುವುದಕ್ಕೆ ಆಗದವನು ಸಂಗೀತ ನುಡಿಸುವುದಕ್ಕೆ ಅರಿಯದವನು ತನ್ನ ರಾಗದ ಬಗ್ಗೆ ವ್ಯಾಖ್ಯಾನ ಮಾಡುತ್ತಾನೆ.  ಆತ ಒರಲುತ್ತಾನೆ ತನ್ನ ತೇಜೋವಧೆಯಾಯಿತು.  ಅಹಂಕಾರ ಇಲ್ಲದೇ ಇರುತ್ತಿದ್ದರೆ ಸಂಗೀತಗಾರ ಸಂಗೀತದ ಬಗ್ಗೆ ಯೋಚಿಸುತ್ತಿದ್ದ. ನಂತರ ತನ್ನ ಬಗ್ಗೆ ಯೋಚಿಸುತ್ತಿದ್ದ. ಹಾಗಾಗಿದ್ದರೆ ಅಲ್ಲಿ ಸಹೃದಯ ವಾತಾವರಣ ಮೂಡುತ್ತಿತ್ತು. ಒಂದು ವೇಳೆ ಹಾಡುವುದಕ್ಕೆ ಅರಿತ್ತಿದ್ದವನೂ ಸಾರ್ವಜನಿಕವಾಗಿ ಹೇಳಿದರೆ ಅಗಲೂ ಅದು ತೇಜೋವಧೆಯಾಗುತ್ತದೆ. ವಿಚಿತ್ರವೆಂದರೆ  ಸಾರ್ವಜನಿಕವಾಗಿ ಹಾಡಬಹುದು. ಸಾರ್ವಜನಿಕವಾಗಿ ಪ್ರತಿಕ್ರಿಯೆ ಸಲ್ಲದು
ಈ ಸಂಗೀತ ಆ ಶಂಕರಾಭರಣ ಇದ್ದ ಕಾರಣವೇ ಆತ ಸಂಗೀತಗಾರನಾಗಿದ್ದು. ಕೇಳುಗನೂ ಅಷ್ಟೇ ಶಂಕರಾಭರಣವನ್ನು ಅಥವಾ ಸಂಗೀತವನ್ನು ಸವಿಯುವುದಕ್ಕೆ ಕುಳಿತಿದ್ದ. ಇಬ್ಬರಿಗೂ ಆಸರೆಯಾಗಿದ್ದು ಸಂಗೀತವೆಂಬ ಮಾಧ್ಯಮ. ಬೆಸೆಯುವ ಕೊಂಡಿಯನ್ನೇ ಸಂಗೀತಗಾರ ತುಂಡರಿಸುವ ಪ್ರಯತ್ನ ಮಾಡುತ್ತಾನೆ! ಸಂಗೀತದ ಬಗ್ಗೆ ಯೋಚಿಸದೇ ತನ್ನ ತೇಜೋವಧೆಯ ಬಗ್ಗೆ ಯೋಚಿಸುತ್ತಾನೆ!!  ಆದರೆ ಆ ತೇಜಸ್ಸು ಆತನಲ್ಲಿ ಇದೆ ಎಂದು ಅನ್ನಿಸುವುದೇ ಇಲ್ಲ.  ಸಂಗೀತದ ಅಸ್ತಿತ್ವ ಇದ್ದರೆ ಮಾತ್ರ ಸಂಗೀತಗಾರ ಅಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಬಹುದು. ಆತನ ಶಂಕರಾಭರಣವನ್ನು ಸವಿಯಲು ತಿಳಿದಿದ್ದವನು ಇದ್ದರೆ ಮಾತ್ರ ಆತನ ಶಂಕರಾಭರಣಕ್ಕೆ ಮೌಲ್ಯ ಬರುವುದು. ಒಬ್ಬ ಕಲಾವಿದನಲ್ಲಿ ಇರುವ  ಪ್ರತಿಭೆ ಅತನದ್ದು ಸ್ವಂತ ನಿಜ. ಆದರೆ ಕಲೆ ಅದು ಸಾರ್ವಜನಿಕ ಸೊತ್ತು. ಇದಕ್ಕೆ ಆತ ಬದ್ಧನಾಗಿರಬೇಕು. ತಂಡ ಸೋತರೂ ಆಟಗಾರ ಶತಕ ಸಿಡಿಸಿದ ಹಾಗೆ ಏನು ಪ್ರಯೋಜನ? ಕಲೆ ವ್ಯಕ್ತಿ ನಿಷ್ಠವಾದರೆ ಕಲೆ ಜೀವಸತ್ವವನ್ನು ಕಳೆದುಕೊಂಡಂತೆ. ಬಾಡಿಗೆ ದಾರ ಮನೆ ಬಿಡುವಾಗ ಎಷ್ಟೇ ಬದಲಾವಣೆ ಮಾಡಿದರೂ ಅದು ತಾತ್ಕಾಲಿಕ. ಆತ ಬಿಟ್ಟು ಹೋಗುವಾಗ ಮನೆ ಮೊದಲಿನಂತೆ ಇರಬೇಕು. ಅದು ಕರಾರು.


ತಪ್ಪೆಸಗುವುದಕ್ಕೆ ಅನಿವಾರ್ಯವಾದ  ಹಲವಾರು  ಕಾರಣಗಳು ಇರಬಹುದು. ಆದರೆ ತಪ್ಪನ್ನು ಒಪ್ಪದಿರುವುದಕ್ಕೆ ಒಂದು ಕಾರಣವೂ ಇರುವುದಿಲ್ಲ. ತೇಜಸ್ಸು ಇರುವಲ್ಲಿ ತಪ್ಪನ್ನು ಒಪ್ಪಿಕೊಳ್ಳುವ ವಿಶಾಲ ಮನಸ್ಸು ಇದ್ದೇ ಇರುತ್ತದೆ. ಕ್ಷಮಿಸುವುದು ದೊಡ್ಡ ಗುಣವಿರಬಹುದು. ಅದರೆ ಕ್ಷಮೆ ಕೇಳುವ ಮನಸ್ಸು ವಿಶಾಲವಾಗಿರುತ್ತದೆ .  ಮನಸ್ಸು ವಿಶಾಲವಾಗಿ ಸ್ಥಿತ ಪ್ರಜ್ಞವಾಗಿದ್ದರೆ  ತೇಜಸ್ಸು ವಾಸವಾಗಿರುತ್ತದೆ.  ನಿಜವಾದ ತೇಜಸ್ಸು ಎಂದಿಗೂ ವಧೆಯಾಗುವುದಿಲ್ಲ. ಒಂದು ವೇಳೆ ಅದು ವಧೆಯಾಗಿ ಹೋದರೆ,  ಅದು ಸ್ವಯಂಕೃತ ಅಪರಾಧದ ಆತ್ಮ ಹತ್ಯೆಯೇ ಹೊರತು ವಧೆಯಾಗುವುದಿಲ್ಲ. 

Thursday, October 12, 2017

ಜೋಷಿಯೊಡನೊಂದು ಸಂಜೆ

          

ಮಂಗಳೂರಿನ ನಮ್ಮ ಕಛೇರಿಯಲ್ಲಿ ಕುಳಿತು ಈ ಮೇಲ್ ಗಳನ್ನು ಅವಲೋಕಿಸುತ್ತಿದ್ದೆ. ಮಜರಾಯಿ ಇಲಾಖೆಗೆ ವರದಿ ಸಲ್ಲಿಸುವ ಕಾರಣ  ದೇವಸ್ಥಾನಗಳ ಲೆಕ್ಕ ಪರಿಶೋಧನೆಗಾಗಿ ಹೊರಡುವ ಅವಸರವೂ ಇತ್ತು. ಯಾರದ್ದೋ ಕರೆಗಾಗಿ ಕಾದು ಕುಳಿತಿದ್ದೆ. ಆದರೂ ಗಡಿಬಿಡಿಯಲ್ಲಿ ಕಂಡ  ಹಲವು ಸಂದೇಶಗಳ ನಡುವೆ ಒಂದು ಸಂದೇಶ ಕುತೂಹಲವನ್ನು ಹುಟ್ಟಿಸಿತು. ಅದು ಯಕ್ಷಗಾನದ ಘನ ವಿದ್ವಾಂಸ, ಸಂಶೋಧಕ ಹಿರಿಯ ಅರ್ಥದಾರಿ ಶ್ರೀ ಎಂ ಪ್ರಭಾಕರ ಜೋಷಿಗಳ ಮೇಲ್ ಸಂದೇಶವಾಗಿತ್ತು. ಹಿಂದಿನ ದಿನವಷ್ಟೇ ಬೆಂಗಳೂರಿನಲ್ಲಿ ಮುಖತಃ ಭೇಟಿಯಾಗಿದ್ದೆ. ಅದೇ ರಾತ್ರಿ ಮಂಗಳೂರು ಹೊರಟು ಬಂದಿದ್ದೆ. ಇದೀಗ ಮೇಲ್ ಪುಂಜಗಳಲ್ಲಿ  ಅವರ ಹೆಸರೂ ಕಂಡಾಗ ಏನಾಗಿರಬಹುದು ಎಂಬ ಅದಮ್ಯ ಕುತೂಹಲವದು  ಮೇಲ್ ಅಂಚೆ ತೆರೆದು ನೋಡಿದ ಮೇಲೆ ತಣಿಯಿತು. ಬಹಳ ಸಂಕ್ಷೇಪವಾಗಿ ಶ್ರೀ ಪ್ರಭಾಕರ ಜೋಷಿಯವರು ಸಂದೇಶವನ್ನು ಬರೆದಿದ್ದರು. “ ನಿನ್ನೆ ನಿಮ್ಮನ್ನು ಬೇಟಿಯಾಗಿದ್ದು ಬಹಳ ಸಂತೋಷ ತಂದಿದೆ. ಮಂಗಳೂರು ಕಡೆಗೆ ಬಂದಾಗ ಸಮಯವಕಾಶವಿದ್ದಲ್ಲಿ ಕರೆಮಾಡಿ. ಮುಖತಃ ಕುಳಿತು ಒಂದಷ್ಟು ಸಮಯವನ್ನು ಕಳೆಯೋಣ”  ಅತ್ಯಂತ ಸಂಕ್ಷೇಪ ಮತ್ತು ನೇರ ಮಾತುಗಳು.

ಅವರ ಈ ಮೇಲ್ ಗಳು ಇಂದೇನು ಹೊಸತಲ್ಲ. ಅಗಾಗ ಬರೀತಿರುತ್ತಾರೆ.  ಅವೆಲ್ಲ ಆತ್ಮಿಯವಾದ ಸಂಕ್ಷೇಪ ಮಾತುಗಳು. ಹಲವು ಸಲ ನನ್ನ ಬ್ಲಾಗ್ ಲೇಖನಗಳನ್ನು ನೋಡಿ ಅದರಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿರುತ್ತಾರೆ. ಅದು ಒಂದೆರಡು ವಾಕ್ಯದೊಳಗಿನ ಬರಹಗಳು.  ಕೆಲವೊಮ್ಮೆ ಸಂಕೋಚದಿಂದ  ನನ್ನ ಲೇಖನಗಳನ್ನು ಅವರಿಗೆ ಕಳುಹಿಸದೇ ಉಳಿದಿದ್ದೇನೆ. ಅವರಂತಹ ಹಿರಿಯ ವಿದ್ವಾಂಸರಿಗೆ  ನನ್ನ ಬಾಲಿಷ  ಲೇಖನಗಳನ್ನು ತೋರಿಸುವುದು ಹಾಸ್ಯಾಸ್ಪದವಾಗಿ ಕಾಣುತ್ತಿತ್ತು ಇದೊಂದು ನಾನು ಅವರಿಗೆ . ಸುಮ್ಮನೆ ನೀಡುವ  ಹಿಂಸೆ  ಎಂಬ ಹಿಂಜರಿಕೆ ನನ್ನದಾದರೆ, ನಾನು ಕಳುಹಿಸಿದ ಯಾವುದೇ ಲೇಖನವಾಗಲಿ ಒಂದೂ ಸಹ ಅವರ ಪ್ರತಿಕಿಯೆ ಇಲ್ಲದೇ ಇರುತ್ತಿರಲಿಲ್ಲ. ಅದು ನನ್ನ ಮೇಲೆ ಇಟ್ಟಿರುವ ಪ್ರೀತಿ ಅಂತ ಅನಿಸುವುದಿಲ್ಲ. ಬದಲಾಗಿ ಯಕ್ಷಗಾನದ ಬಗೆಗಿರುವ ಅವರ ಕಾಳಜಿಯನ್ನು ತೋರಿಸುತ್ತಿತ್ತು. ಇಲ್ಲವಾದರೆ ಅದ್ಭುತ ಎನ್ನುವಂತಹ ಲೇಖಕರ ಒಡನಾಟದಲ್ಲಿರುವ ಹಿರಿಯರಿಗೆ ನನ್ನ ಲೇಖನ ಕಿರಿ ಕಿರಿಯಾಗಬೇಕಿತ್ತು. ಹಾಗಾಗಲಿಲ್ಲ, ಬದಲಾಗಿ ಪ್ರತಿಯೊಂದು ಯಕ್ಷಗಾನದ ಬರಹಗಳಿಗೆ ಅವರು ಅಭಿಪ್ರಾಯ ತಿಳಿಸಿದಾಗ ಬೆನ್ನು ತಟ್ಟಿದ ಅನುಭವ ನನಗಾಗಿದೆ. ಸದ್ಯ ಯಾವುದೇ ಲೇಖನ ಕಳುಹಿಸಿರಲಿಲ್ಲ. ಆದರೂ ಬರೆದಿದ್ದಾರೆ ಎಂದರೆ ವಿಚಾರ ಇರಲೇಬೇಕು.
          ಅವರ ಸಂದೇಶ ಅರ್ಧ ಓದಿದ ಕೂಡಲೇ ಅದಕ್ಕೆ ಉತ್ತರ ಬಹಳ ಸಂಕ್ಷೇಪವಾಗಿಯೇ ಬರೆದೆ. ”ನಾನು ಮಂಗಳೂರಲ್ಲಿ ಇದ್ದೇನೆ.”  ಮೇಲ್ ಕಳುಹಿಸಿ ಎರಡು ನಿಮಿಷವಾಗಿಲ್ಲ. ಅವರ ಕರೆ ಬಂತು. ನನ್ನ ಕೆಲಸಗಳ ಬಗ್ಗೆ ವಿಚಾರಿಸಿ ಸಮಯವಿದ್ದರೆ ಸಾಯಂಕಾಲ ನನಗೆ ಸ್ವಲ್ಪ ಬಿಡುವಿದೆ ನಿಮಗೆ ಬಿಡುವಾದಾಗ ತಿಳಿಸಿ ನೀವಿದ್ದಲ್ಲಿಗೆ ಬಂದು ಕರೆದು ಕೊಂಡು ಬರುತ್ತೇನೆ. ನನಗೆ ನಂಬುವುದಕ್ಕೆ ಸಾಧ್ಯವಾಗಿಲ್ಲ. ಹಿಂದೆ ಒಂದು ಸಲ ಯಕ್ಷಚಿಂತನದಲ್ಲಿ ಅವರ ಬಗ್ಗೆ ಒಂದು ಸರಳ ನುಡಿ ನಮನ ಬರೆದಿದ್ದೆ. ಇತ್ತೀಚೆಗಷ್ಟೇ ಅದನ್ನು ಪುನಃ ನನ್ನಲ್ಲಿ ಕೇಳಿ ಪಡಿದಿದ್ದರು. ಅದು ಯಾಕೆ ಎಂದು ನಾನು ಕೇಳಲೂ ಇಲ್ಲ. ನನಗದರ ಅವಶ್ಯಕತೆಯೂ ಇರಲಿಲ್ಲ ಬಿಡಿ.
          ಸಾಯಂಕಾಲ ನಾಲ್ಕು ಐದು ಘಂಟೆಯಷ್ಟು ಹೊತ್ತಿಗೆ ನಾನೇ ಕರೆ ಮಾಡಿದೆ. ಕೂಡಲೆ ನಾನು ಎಲ್ಲಿದ್ದೇನೆ ಎಂದು ತಿಳಿದು ಅಲ್ಲಿಗೆ ಬರ್ತೇನೆ ಅಂತ ಹೇಳಿದಾಗ ನಾನು ಸಂಕೋಚದಿಂದ ಬೆವೆತು ಹೋದೆ. ಮಲ್ಲಿಕಟ್ಟೆಯ ಬಳಿಗೆ ಬರ್ತೇನೆ ಅಂತ ಹೇಳಿದರೆ, ಅಲ್ಲಿಗೆ ಬಂದು ಕರೆ ಮಾಡಿ ಬರ್ತೇನೆ ಅಂತ ಹೇಳಿದರು. ಹೇಳಿದ್ದು ಮಾತ್ರವಲ್ಲ, ನನ್ನ ಬರವನ್ನು ಕಾದು ಕುಳಿತಂತೆ ಕಾರು ಚಲಾಯಿಸಿಕೊಂಡು ಬಂದು ಬಿಟ್ಟರು. ಹಾಗೇ ಆತ್ಮೀಯವಾಗಿ ಮನೆಯತ್ತ ಕರೆದುಕೊಂಡು ಹೋದರೆ ಹಿರಿಯ ಸಂಬಂಧಿಯೊಬ್ಬರ ಹಿಂದೆ ನಡೆದಂತೆ ಭಾಸವಾಗಿ  ನಿಧಾನವಾಗಿ ಅವರ ಜತೆಯಾದೆ.
          ಮನೆಯಲ್ಲಿ ಅವರ ಧರ್ಮಪತ್ನಿಯವರು  ಆತ್ಮೀಯವಾಗಿ ಸ್ವಾಗತಿಸಿದರು. ಆದರ ಉಪಚಾರ ಮಾಡಿದ ನಂತರ ಜೋಷಿಯವರ ಜತೆಯಲ್ಲಿ ಆತ್ಮೀಯವಾದ ಸಂವಾದ. ನನಗಂತೂ ಸ್ವರ್ಗಕ್ಕೆ ಮೂರೇ ಗೇಣು. ಹಲವು ಕಡೆ ಕಾರ್ಯಕ್ರಮಗಳಲ್ಲಿ ಸಿಕ್ಕಿದಾಗ ಆತ್ಮೀಯವಾಗಿ ಮಾತನಾಡಿಸುತ್ತಾರೆ. ಆದರೆ ಅಲ್ಲೆಲ್ಲ ಒಂದು ಪರಿಧಿಯಿರುತ್ತಿತ್ತು. ಇಲ್ಲಿ ಅದಾವುದೂ ಇಲ್ಲದೇ,  ಶುದ್ದ ಆತ್ಮೀಯ ಸಂವಾದ. ಕಟ್ಟುಪಾಡುಗಳಿಲ್ಲ  ಜಗಳವಾಡಿ ಗುದ್ದಾಡಿದರೂ ಗಂಧದ ಜತೆಗೆ ಆಗಬೇಕಂತೆ. ಇದು ಬೇರೆ ಆತ್ಮೀಯ ಸಂವಾದ. ಅದು ಅಲ್ಲಿನ ನನ್ನ ಅನುಭವ. ಜೋಷಿ ಎಂಬ  ಗಂಧ ತೇಯುತ್ತಿದ್ದಂತೆ ಪರಿಮಳ ಬೀರುವುದಕ್ಕೆ ಆರಂಭವಾಗಿಬಿಟ್ಟಿತು. ಇದಕ್ಕೆ ಜಗಳವಾಡುವ ಅವಶ್ಯಕತೆ ಇಲ್ಲ. ಗಂಧ ಕಡ್ಡಿಯ ಪೊಟ್ಟಣ ತೆರೆದಂತೆ ಸುತ್ತೆಲ್ಲ ಘಮ ಘಮವಾಗಿ  ಪುಂಖಾನು ಪುಂಖವಾಗಿ ವಿಚಾರಗಳು. ಪ್ರತಿಯೊಂದು ವಿಚಾರಗಳನ್ನು ಅದೆಷ್ಟು ಸರಳವಾಗಿ ವಿವರಿಸುತ್ತಿದ್ದರೆಂದರೆ ನಾನು ಮಾತಿಲ್ಲದೇ ಕುಳಿತೆ. ಬಹಳಷ್ಟು ಮಾತುಗಳು ಇಂದಿನ ಯಕ್ಷಗಾನದ ಬಗ್ಗೆ. ಹಳೆಯ ಕೆಲವು ನೆನಪುಗಳ ಬಗ್ಗೆ, ಇದ್ದರೆ  ಮತ್ತದೇ ತಮ್ಮ ವಿಚಾರ ಲಹರಿಗಳು. ಮನೆಯೊಳಗೆ ವಿಪರೀತ ಸೆಕೆ ಅಂತ ಕಿಟಕಿ ಬಾಗಿಲು ತೆರೆದರೆ ಚಂಡ ಮಾರುತದಂತೆ ಕುಳಿರ್ಗಾಳಿ ಒಮ್ಮೆಲೇ ನುಗ್ಗಿ ಬಂದರೆ ಹೇಗಾಗಬಹುದು? ಹಾಗೆ ಇವರ ವಿಚಾರಧಾರೆಗಳು ಪುಂಖಾನು ಪುಂಖವಾಗಿ ಅದರಲ್ಲಿ ನಾನು ಕೊಚ್ಚಿ ಹೋದ ಅನುಭವ. ಯಾವುದನ್ನು ನೆನಪಿಟ್ಟುಕೊಳ್ಳಲಿ?  ಎಂಬ ಗೊಂದಲ. ಅದರೆ ಪ್ರತಿಯೋಂದು ಚಿಂತನಾರ್ಹ. ಅದ್ಭುತ ರಮ್ಯ ವಿಚಾರಗಳು.  
ವಾಸ್ತವದಲ್ಲಿ  ಜೋಷಿಯವರ ಪ್ರವಚನ ಭಾಷಣ ಇದ್ದರೆ ನಾನು ಅದನ್ನು ಕಳೆದುಕೊಳ್ಳುವುದಕ್ಕೆ ಸಿದ್ದನಿರುವುದಿಲ್ಲ. ಅದರ ಪ್ರತೀ ಶಬ್ದ ಶಬ್ದಗಳನ್ನು ಹೀರುವುದಕ್ಕೆ ಸಿದ್ಧನಾಗಿರುತ್ತೇನೆ. ನಮ್ಮ ಯಕ್ಷಗಾನಕ್ಕೆ ಒಂದು ಅಭಿನಂದನಾ ಭಾಷಣದ ರೂಪದರ್ಶಿತ್ವ ಇದ್ದರೆ ಅದು ಜೋಷಿಯವರ ಮಾತುಗಳು ಎಂಬಷ್ಟರ ಮಟ್ಟಿಗೆ ಅವರ ಪ್ರಭಾಷಣ ಕಲೆ ರಮ್ಯತೆಯನ್ನು ಒದಗಿಸುತ್ತದೆ. ಸ್ವತಃ ಉಪನ್ಯಾಸಕಾರದ ಇವರು ಕೇಳುಗರನ್ನು ಬೇಗನೇ ಸಂಮೋಹನ ಗೊಳಿಸುತ್ತಾರೆ. ಹಾಸ್ಯವಾಗಿ, ವಿಡಂಬನೆಯಾಗಿ ಹಲವು ಸಲ ತೀವ್ರವಾದ ಭಾವ ಉತ್ಕರ್ಷಕ್ಕೆ ಕಾರಣವಾಗುವಂತೆ ಮಾತನಾಡಿ ಹೃದಯಕ್ಕೆ ಹತ್ತಿರವಾಗುತ್ತಾರೆ. ಬಹಳ ಪ್ರಾಪಂಚಿಕ ಉದಾಹರಣೆಗಳೇ ಅಲೌಕಿಕತೆಯ ಅನುಭವವನ್ನು ಕೊಡುತ್ತವೆ. ಅದವರ ಮಾತುಗಳ ಶೈಲಿ. ಮೊದಲೇ ಅವರ ಮಾತುಗಳನ್ನು ಬಿಡದ ನಾನು ಇಲ್ಲಿ ಸಮಯವನ್ನು ಹಾಗೆ ವ್ಯಯಿಸುವುದಕ್ಕೆ ಸಿದ್ಧನಿರಲಿಲ್ಲ. ಹಾಗಾಗಿ ಕಿವಿಯೊಂದಿಗೆ ಮನಸ್ಸು ಸಿದ್ದಪಡಿಸಿ ಕುಳಿತಿದ್ದೆ.
ಜೋಷಿಯವರು ಹಲವು ಸಲ ಹೇಳುತ್ತಾರೆ, ನಾನು ಸ್ವಲ್ಪ ಪೆದಂಬು.  ಅದು ನಾನು ಜೀವನದ ಘಟನೆಗಳನ್ನು ಕಾಣುವ ಅವಲೋಕಿಸುವ ರೀತಿ. ಎಲ್ಲದರಲ್ಲೂ ವಿಡಂಬನೆಯನ್ನೂ ಚಿಕಿತ್ಸಕ ದೃಷ್ಟಿಯನ್ನು ನೋಡುತ್ತೇನೆ.  ಇದವರ ವಿಲಕ್ಷಣತೆಯ ಬಣ್ಣ. ಎಷ್ಟು ವಿಲಕ್ಷಣವೋ ಅದರಲ್ಲಿ ಅಷ್ಟೇ ಆತ್ಮೀಯತೆ ಸಲುಗೆ ಇರುತ್ತದೆ. ಬಹಳ ಸರಳವಾಗಿ ಸಂಬಂಧಿಯಂತೆ ಹತ್ತಿರವಾಗುತ್ತಾರೆ. ಈಗಂತೂ ಎಪ್ಪತ್ತರ ಜೀವನಾನುಭವ ಪ್ರತಿ ಮಾತಿನಲ್ಲೂ ಕಂಡು ಬರುತ್ತದೆ. ಅದು  ಯಕ್ಷಗಾನದ ಅರ್ಥಗಾರಿಕೆಯ ವಿಚಾರದಲ್ಲೂ  ಹಾಗೆ.  ಅದನ್ನು ಅರ್ಥವಿಸುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಗಹನವಾದ ವಿಚಾರಗಳು ಅರ್ಥವಾಗುವುದಕ್ಕೆ ಕಷ್ಟವಾದರೂ   ಏಕಾಗ್ರತೆಯಿಂದ ಹೊಕ್ಕು ನೋಡಿದರೆ ಮತ್ತೆ ಆ ಮಾತಿನ ಹೊಯಿಲಿನಿಂದ ಹೊರ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ಅದು ಜೋಷೀ ಶೈಲಿ. ಅವರೊಂದಿಗಿನ ದೀರ್ಘ ಸಂವಾದವೂ ಇದೇ ಅನುಭವವನ್ನು ನೀಡಿತು.
ಯಾವುದೋ   ಘಟನೆಯನ್ನು ವಿವರಿಸುತ್ತಾ  ಶ್ವೇತ ಕುಮಾರ ಚರಿತ್ರೆ ಎಂಬ ಪ್ರಸಂಗದ ವಿಶ್ಲೇಷಣೆಯನ್ನು ಬಹಳ ಸರಳವಾಗಿ ವಿವರಿಸಿದರು. ಶ್ವೇತ ಕುಮಾರ ಲೌಕಿಕ ಪ್ರಪಂಚದಿಂದ ಅಲೌಕಿತೆಯತ್ತ ಹೋಗುತ್ತಾನೆ. ಮೋಕ್ಷ ಮಾರ್ಗದಲ್ಲಿ ಒಂದು ಪುಣ್ಯದ ಕೆಲಸದಿಂದ ಮತ್ತೂ ಅಲೌಕಿಕತೆ ಹೋಗಬೇಕಾದವನು ರಂಭೆಯ ಮೇಲಿನ ಮೋಹ ಪುನಃ ಲೌಕಿಕ ಪ್ರಪಂಚಕ್ಕೆ ಎಳೆದು ತರುತ್ತದೆ. ದೇವಲೋಕಕ್ಕೆ ಹೋದರೂ ಲೌಕಿಕತೆಯ ಚಿಂತನೆಯೇ ಇರುವುದಾದರೆ  ದೇವಲೋಕಕ್ಕೆ ಹೋದ ಸಾರ್ಥಕತೆಯಾದರು ಎಂತಹುದು? ಅಲ್ಲೂ ಲೌಕಿಕ ಚಿಂತನೆಗಳು ಆವರಿಸುತ್ತವೆ ಎಂದಾದರೆ ದೇವಲೋಕ ಎಂಬುದಕ್ಕೆ ಅರ್ಥವೆಂತಹಹುದು? ಒಬ್ಬ ಪ್ರಸಂಗ ಕರ್ತ ಇಂತಹ ಲೌಕಿಕ ಅಲೌಕಿಕ ವಿಚಾದ ದೃಷ್ಟಿಕೋನದಲ್ಲೇ ಪ್ರಸಂಗ ರಚಿಸಿದರೂ ಯಾವೊಬ್ಬ ಕಲಾವಿದನು ಪ್ರಸಂಗದ ಗಾಢವಾದ ತತ್ವವನ್ನು ಗಮನಿಸುವುದಿಲ್ಲ. ಅದಕ್ಕೇ ಇನ್ನೇನೋ ಮಸಾಲೆ ಸೇರಿಸಿ ಇನ್ನೇನೋ ಮಾಡಿ ಒಟ್ಟು ಪ್ರಸಂಗ ಅರ್ಥಹೀನವಾಗುತ್ತದೆ. ಮೋಕ್ಷ ಸಿಗದ ಆತ್ಮಕ್ಕೆ  ಒಂದು ಶಿವನಾಮ ಸ್ಮರಣೆಯಿಂದ ಲೌಕಿಕತೆಯತ್ತ  ಹೊರಳುವಂತೆ ಮಾಡುವ ಉದ್ದೇಶವಾದರೂ ಏನು? ಪ್ರಸಂಗದ ತತ್ವ ನಿಗೂಢವಾಗಿಯೇ ಉಳಿದುಬಿಡುತ್ತದೆ.

ಇಂತಹ ಮಾತುಗಳು ನನ್ನಂಥಹವನಿಗೆ ಗಾಢ ಚಿಂತನೆಯನ್ನು ಹುಟ್ಟಿಸುತ್ತವೆ. ಇಂದು  ಕೇವಲ ರಂಜನೆಯನ್ನಷ್ಟೇ ಗಮನಿಸುತ್ತೇವೆ. ಈ ಕಾರಣದಿಂದಾಗಿಯೇ ಶೇಣಿಯ ನಂತರದ ಪೀಳಿಗೆಯ ತಾಳಮದ್ದಲೆಗಳು ಸಪ್ಪೆಯಾಗುತ್ತಿರುವುದು. ಪ್ರಸಂಗಕ್ಕೆ ಇರುವ ತಾತ್ವಿಕ ವಿಚಾರಗಳತ್ತ ಗಮನ ಹರಿಸುವುದಿಲ್ಲ. ಹಲವು ಸಲ ಅರ್ಥಧಾರಿ ಪಾತ್ರದ ಒಳ ಹೊಕ್ಕರು ಆತ ಏನು ಹೇಳುತ್ತಾನೆ ಎಂಬುದರಲ್ಲಿ ಗಮನ ಇರುವುದಿಲ್ಲ. ಏನಾದರೂ ಚರ್ಚೆ ಮುರುಟುವಾದ ಬರುವಾಗಲಷ್ಟೇ ಪ್ರೇಕ್ಷಕ ಗಮನ ಹರಿಸುತ್ತಾನೆ. ಬಹಳಷ್ಟು ಇಂದಿನ ಅರ್ಥಗಾರಿಕೆಯ ದಿಕ್ಕೂ ಅದೇ ಆಗಿರುತ್ತದೆ. ಶ್ವೇತ ಕುಮಾರ ಚರಿತ್ರೆಯಲ್ಲಿ ಮೋಕ್ಷ ಪಡೆಯದ ಆತ್ಮ ಪುನಃ ಶರೀರದಲ್ಲಿ ಬರುವಂತಾಗುವಾಗ ಅದರ ತಾತ್ವಿಕ ತಳಹದಿಯನ್ನು ಯಾರೂ ಗಮನಿಸುವುದಿಲ್ಲ. ಪ್ರೇತ ವೇಷದವನು ಏನೋ ಸರ್ಕಸ್ ಮಾಡಿ ಹಾಸ್ಯಕ್ಕಾಗಿ ಅಶ್ಲೀಲತೆಯನ್ನೇ ತೋರಿಸುವಾಗ ಪ್ರಸಂಗದ ಆಶಯವೂ ಸಾಯುತ್ತದೆ.  ಶುದ್ದ ಯಕ್ಷಗಾನದ ದೃಷ್ಟಿಕೋನವೂ ನಾಶವಾಗುತ್ತದೆ. ಯಾವುದೇ ಪಾತ್ರವಾಗಲೀ ಅದು ಅಭಿವ್ಯಕ್ತೀಕರಿಸುವ ಸನ್ನಿವೇಶವಾಗಲೀ ಪ್ರಸಂಗದ ಚೌಕಟ್ಟು ಮೀರುವಂತಿರಬಾರದು. ಮತ್ತದಕ್ಕೆ ಯಕ್ಷಗಾನದ ತಳಹದಿಯೂ ಅಗತ್ಯ. ಪಾತ್ರ ಕೇವಲ ಒಂದು ಸನ್ನಿವೇಶ ಒಂದು ಪದ ಇಷ್ಟನ್ನೇ ಗಮನಿಸಿದರೆ ಸಾಕೇ? ಹಾಗಾಗಿ ನಾಟ್ಯಾಭಿನಯ ವಿಕೃತಿಯಾಗಿ ಬಿಂಬಿಸುವುದು. ಅದು ಯಕ್ಷಗಾನಕ್ಕೆ ಅನಿವಾರ್ಯವೇ? ಯಕ್ಷಗಾನಕ್ಕೆ ಅದರ ಕೊರತೆ ಬಾಧಿಸುತ್ತದೆಯೇ? ಇದನ್ನು ಯೋಚಿಸುವುದಿಲ್ಲ. ಒಟ್ಟು ಹೊಸತನವಾಗಬೇಕು. ಜನರಂಜನೆ ಆಗ್ಬೇಕು. ಅದನ್ನು ನೋಡಿ ಮತ್ತಷ್ಟು ಕಾರ್ಯಕ್ರಮ ನಿಗದಿಯಾಗಬೇಕು. ಇದಿಷ್ಟೇ ಕಲಾವಿದನ ಕರ್ತವ್ಯವಾದರೆ ಯಕ್ಷಗಾನ ದೃಷ್ಟಿಕೋನ ಕಲಾಸೇವೆ ಏನು ಬಂತು?   ತನಗೆಲ್ಲವನ್ನೂ ಕೊಟ್ಟ ಕಲೆಗೆ ಕಲಾವಿದನಾದವನು  ಕೊಡುವ ದೇಣಿಗೆ ಎಂತಹುದು? ಅದು ಹಿತವಾಗಿ ಸಭ್ಯವಾಗಿ ಇರಬೇಕಾದದ್ದು ಅನಿವಾರ್ಯವಲ್ಲವೇ?  ಇದರಲ್ಲಿ ಪ್ರೇಕ್ಷಕನೂ ಒಬ್ಬ ಪಾಲುದಾರ.  
          ಜೋಷಿಯವರು ಚಿಂತನೆಗಳು ಹೇಳುವುದಕ್ಕೆ ತೊಡಗಿದರೆ ಅದಕ್ಕೆ ಸೀಮೆ ಪರಿಮಿತಿಗಳಿರುವುದಿಲ್ಲ. ಯಕ್ಷಗಾನದಿಂದಾಚೆವರೆಗೂ ಸ್ವಾರಸ್ಯವನ್ನು ತುಂಬಬಲ್ಲರು. ಆದರೂ ಯಕ್ಷಗಾನೀಯ ಚಿಂತನೆಗಳೊಂದಿಗೆ ಸುಲಭವಾಗಿ ಬೆರೆಯುತ್ತಾರೆ  ಯಕ್ಷಗಾನದ ಅಂಗ ಅಂಗ ರೋಮ ರೋಮಗಳು ಅವರಿಗೆ ಚಿರ ಪರಿಚಿತ. ತೀರ ಚಿಕ್ಕ ಕಲಾವಿದನಾದರೂ ಅವರ ತಿಳುವಳಿಕೆಯ ಪುಟಗಳಲ್ಲಿ ಆ ಕಲಾವಿದನ ಬಗ್ಗೆ ಉಲ್ಲೇಖವಿರುತ್ತದೆ.  ಯಕ್ಷಗಾನವೆಂದರೆ ಇಂದು ಹಲವು ಮನೆಯ ಹಸಿವನ್ನು ನೀಗಿಸುತ್ತದೆ. ಹಲವು ಮಂದಿಯ ಬದುಕನ್ನು ಕಟ್ಟಿಕೊಟ್ಟಿದೆ. ಇಂದು ಕೇವಲ ಒಂದು ಕ್ಷೇತ್ರದಲ್ಲಿ ಇನ್ನೂರೈವತ್ತಕ್ಕೂ ಮಿಕ್ಕಿ ಕಲಾವಿದರು ಬದುಕನ್ನು ಕಂಡುಕೊಂಡಿರುವುದು ನಿಜಕ್ಕೂ ವಿಸ್ಮಯ ತರುವ ವಿಚಾರ.
          ಆಗ ನನ್ನ ಚಿಂತನೆಯನ್ನು ನನ್ನ ಅಭಿಪ್ರಾಯವನ್ನು ಸೂಕ್ಷ್ಮವಾಗಿ ಮಂಡಿಸಿದೆ. ಐದಾರು ಮೇಳಗಳು ಒಂದು ಕ್ಷೇತ್ರದಿಂದ ಹೊರಡುತ್ತವೆ. ಅದರ ಜತೆಯಲ್ಲಿ ನೂರಾರು ಕಲಾವಿದರ ಬದುಕು ಬೆಸೆದುಕೊಂಡಿದೆ. ಇಲ್ಲಿ ಒಂದು ಬದಿಯ ತಾಳ ತಪ್ಪಿದರೂ ಕಲಾವಿದರ ಮೇಲೆ ಪರಿಣಾಮ ಬೀರುತ್ತದೆ. ಇಂದು ಅದೆಷ್ಟೋ  ಸಂಘ ಸಂಸ್ಥೆಗಳು ಯಕ್ಷಗಾನದ ಚಟುವಟಿಕೆಯಲ್ಲಿ ತೊಡಗಿವೆ. ಯಕ್ಷಗಾನ ಚಟುವಟಿಕೆಗೆ ಇಂದು ಕೊರತೆಯಿಲ್ಲ. ಆದರೆ ಶುದ್ದವಾದ ಯಕ್ಷಗಾನದ ಕೊರತೆಯನ್ನು ಅನುಭವಿಸುವಂತಾಗಿದೆ. ಇಷ್ಟು ಮೇಳಗಳಲ್ಲಿ ಒಂದು ಮೇಳವಾದರೂ ಎಲ್ಲಾ ಬಾಧ್ಯತೆಗಳನ್ನು ಬದಿಗಿರಿಸಿ ಪರಂಪರೆಯಿಂದ ಬಂದ ಯಕ್ಷಗಾನಕ್ಕೆ ಮೀಸಲಾಗಿರಿಸಿಕೊಳ್ಳಬೇಕು. ಯಾವುದೇ ವಿಷಯದಲ್ಲಿ ರಾಜಿ ಹೊಂದಾಣಿಕ ಮಾಡಿಕೊಳ್ಳದೆ, ಕೇವಲ ಹಿಂದಿನ ಪರಂಪರೆಯಲ್ಲಿ ಯಕ್ಷಗಾನ ಹೇಗಿತ್ತೋ ಅದನ್ನು ತೋರಿಸುವ ಪ್ರಯತ್ನ ಮಾಡಬೇಕು. ಇದು ಸಂಪೂರ್ಣವಾಗಿ ಅದಕ್ಕೇ ಮೀಸಲಾಗಿರಿಸಬೇಕು. ಅಲ್ಲಿ ಚಾಲುಕುಣಿತ, ಅಥವಾ ಸಂಗೀತ ಕಛೇರಿಯಂತಹ ಹಾಡುಗಾರಿಕೆ  ಅದಾವುದೂ ಇಲ್ಲದ ಕೇವಲ ಶುದ್ದ ಪರಂಪರೆಗೆ ಮೀಸಲಾಗಿರಿಸಿಕೊಳ್ಳಬೇಕು. ಅಲ್ಲಿ ಯಾವುದೇ ಹೊಂದಾಣಿಕೆ ಇಲ್ಲದೆ ಪರಂಪರೆಯಲ್ಲಿ ಏನಿತ್ತೋ ಅದರ ಅಧ್ಯಯನದ ಜತೆಗೆ ಸಂಶೋಧನೆಯೂ ಸಾಧ್ಯವಾಗುತ್ತದೆ. ಮುಂದಿನ ಪೀಳಿಗೆಗೆ ಒಂದು ಶುದ್ದವಾದ ಯಕ್ಷಗಾನವನ್ನು ಉಳಿಸಿದಂತಹ ಮಹತ್ಕಾರ್ಯವೂ ಆಗಿಬಿಡುತ್ತದೆ. ಇಷ್ಟು ಮೇಳಗಳು ಸಂಘ ಸಂಸ್ಥೆಗಳು ಅಂಕೆಗೆ ಸಿಗದ ಪ್ರದರ್ಶನಗಳು ಇದ್ದು ಏನು ಪ್ರಯೋಜನ? ಯಕ್ಷಗಾನದ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಐದಾರು ಮೇಳಗಳು ಒಂದು ಕ್ಷೇತ್ರದಿಂದ ಹೊರಡುವಾಗ ಇದರಲ್ಲಿ ಒಂದು ಮೇಳದ,  ಪೂರ್ಣ ಆಟವಲ್ಲದೇ ಇದ್ದರೂ ಒಂದು ಪ್ರಸಂಗವನ್ನಾದರೂ ಶುದ್ದ ಪರಂಪರೆಗೆ ಮೀಸಲಿರಿಸಬಾರದೇ?  ಎಲ್ಲದಕ್ಕೂ ಪ್ರೇಕ್ಷಕರತ್ತ ಬೊಟ್ಟು ಮಾಡಿ ತೋರಿಸುತ್ತಾರೆ. ಕಲಾವಿದ ತನ್ನ ಹೊಟ್ಟೆಯನ್ನು ತೋರಿಸುತ್ತಾನೆ.    ತನ್ನ ಹೊಟ್ಟೆ,   ಪ್ರೇಕ್ಷಕರೂ,  ಹೀಗೆ ಎಲ್ಲದಕ್ಕೆ ಮರುಗುವಾಗ ಯಾರಿಗೂ  ಯಕ್ಷಗಾನದದ ಬಗ್ಗೆ ಮರುಗುವ ಮತ್ತು  ಕನಿಕರ ತೋರಿಸುವ ಮನಸ್ಸಾಗುವುದಿಲ್ಲ. ಕಲೆ ಹಾಳಾಗಿ ನಾಶವಾಗಿ ಹೋದರೂ ಕಲಾವಿದ ಕ್ಷೇಮವಾಗಿರಬೇಕು.  ತಾನು ಉದ್ದಾರವಾಗಬೇಕು ನಮಗೆ ರಂಜನೆ ಸಿಗಬೇಕು ಎನ್ನುವ ಮನೋಭಾವಕ್ಕೆ ಏನು ಹೇಳಬಹುದು? ಹೊಸ ಅವಿಷ್ಕಾರಗಳಿಗೆ ಹೊಸತನಕೆ ಅಥವಾ ಇನ್ನೇನೋ ಪ್ರಯೋಗಗಳಿಗೆ ಹತ್ತು ಮೇಳಗಳು ಇರುವಾಗ ನೂರಾರು ಕಲಾವಿದರು ಇರುವಾಗ ಒಂದು ಮೇಳ ಒಂದಷ್ಟು ಕಲಾವಿದರು ಪರಂಫರೆಯ ಯಕ್ಷಗಾನಕ್ಕೆ ಸಿಗುವುದಿಲ್ಲ ಎನ್ನಲು ಸಾಧ್ಯವೇ. ಮನುಷ್ಯ ಇಷ್ಟೂ ಸ್ವಾರ್ಥಿಯಾಗಬಹುದೇ. ಪ್ರೇಕ್ಷಕರತ್ತ ಬೊಟ್ಟು ಮಾಡುವಾಗ ಇಂದು ಹರಕೇ ಆಟಗಳಿಗೆ ಬರುವ ಪ್ರೇಕ್ಷಕನ ಸಂಖ್ಯೆ ಎಷ್ಟಿದೆ? ಯಾವ ಪ್ರೇಕ್ಷಕನಿಗಾಗಿ ಹೊಸ ಹೊಸ ಪ್ರಯೋಗಗಳು? ಪ್ರೇಕ್ಷಕನಿಲ್ಲದೇ ಇದ್ದರೂ ಅದರ ಕಡೆಗೆ ಗಮನ ಕೊಡದೆ ಶುದ್ದ ಹರಕೆಯಂತೆ ಪರಂಪರೆಯ ಯಕ್ಷಗಾನ ಪ್ರದರ್ಶನಗೊಳ್ಳಬೇಕು.  ಆ ಮೂಲಕ ಮುಂದಿನ ಪೀಳಿಗೆಗೆ ಯಕ್ಷಗಾನ ಎಂದರೆ ಇದು ಎಂದು ತೋರುವಂತಾಗಬೇಕು. ಖಂಡಿತವಾಗಿ ಇದಕ್ಕೆ ಸ್ಪಂದಿಸುವ ಪ್ರೇಕ್ಷಕ ಸಂಖ್ಯೆ ದೊಡ್ಡದೇ ಇದೆ. ಆದರೆ ತೀರ ಬೇಕಾಗಿದ್ದು ಮಾಡುವಲ್ಲಿ ಯಾವ ಆಸಕ್ತಿಯೂ ಮೂಡುವುದಿಲ್ಲ. ತಪ್ಪಿದ ಹಾದಿಯನ್ನೇ ತಿಳಿದೂ ತಿಳಿದೂ ತುಳಿಯುವ ಹಂಬಲ.
          ಯಕ್ಷಗಾನವೆಂದರೆ ಇಂದು ಸೂಪರ್ ಮಾರ್ಕೆಟ್ ತರಹ ಆಗಿಬಿಟ್ಟಿದೆ. ಅಲ್ಲಿ ಎಲ್ಲಾ ಬಗೆಯ ಸರಕುಗಳೂ ಸಿಗುತ್ತದೆ. ಸಂಗೀತ ಕಛೇರಿಯೂ ಸಿಗುತ್ತದೆ. ವಿವಿಧ ಬಗೆಯ ಹಿಮ್ಮೇಳವೂ ಸಿಗುತ್ತದೆ. ಯಾವುದೇ ಬಗೆಯ ನರ್ತನವೂ ಸಿಗುತ್ತದೆ..ಭರತ ನಾಟ್ಯದಿಂದ ತೊಡಗಿ ಯಗಳ ಗೀತೆಯ ವರೆಗೂ ಸಿಗುವ ದೊಡ್ಡ ಮಾರ್ಕೆಟ್ ಆಗಿಹೋಗಿದೆ. ಅದಕ್ಕೆ ಇಂತಹುದೇ ಒಂದು ನಿಯಮಿವಲ್ಲ. ನಾವು ನಿತ್ಯ ಪೂಜೆ ಮಾಡುವ ಭಕ್ತಿ ಗೌರವದಿಂದ ಕಾಣುವ ದೇವರ ಕೋಣೆಯೊಂದಿದೆ ಎಂದುಕೊಂಡರೆ ಅಲ್ಲಿ ಕೇವಲ ಮಂಗಳ ದ್ರವ್ಯಗಳು ಪೂಜಾಸುವಸ್ತುಗಳು ಮಾತ್ರಾ ಇರುವುದನ್ನು ಬಯಸುತ್ತೇವೆ. ಅಲ್ಲಿ ಚಪ್ಪಲಿಯೋ ಮಾಂಸವೋ ಮತ್ತೊಂದೊ ಮಗುದೊಂದೋ ಇದ್ದರೆ, ನಮಗೆ ದೇವರ ಮೇಲೆ ಭಕ್ತಿ ಗೌರವ ಮೂಡುವುದಿಲ್ಲ. ಹಾಗೇನೆ ಯಕ್ಷಗಾನ ಅದು ಶುದ್ದವಾಗಿರಬೇಕು. ಅಶ್ಲೀಲತೆಯಿಂದ ದೂರವಾಗಿರಬೇಕು. ಹಾಗಾದರೆ ಅದರ ಗೌರವ ಭಾವ ಮೂಡುತ್ತದೆ. ಚಿಂತನೆಗಳು ಹಲವು.    
          ದರ್ಮಸ್ಥಳದ ಮೇಳದ ಆಟಗಳು ಮತ್ತು ಕಡತೋಕರ ಬಗ್ಗೆ ಒಂದು ಮಾತು ಬಂತು. ಕುಂಬಳೆ ಸುಂದರ್ ರಾವ್, ಪುತ್ತೂರು ನಾರಾಯಣ ಹೆಗಡೆ, ಸೂರಿಕುಮೇರಿ ಗೋವಿಂದ ಭಟ್ ಈ ಮೂರು ಕಲಾವಿದರನ್ನು ಆಧಾರವಾಗಿಟ್ಟು ಪಾತ್ರ ಹಂಚಿಕೆಯಾಗುತ್ತಿತ್ತು. ರಂಗಸ್ಥಳದಲ್ಲಿ ಈ ಮೂರು ಕಲಾವಿದರಲ್ಲಿ ಯಾರಾದರೂ ಒಬ್ಬರಾದರೂ ಬಿಟ್ಟು ಬಿಟ್ಟು ಇಡೀ ರಾತ್ರಿಯ ಪ್ರಸಂಗದಲ್ಲಿ ರಂಗಸ್ಥಳದಲ್ಲಿ ಸಕ್ರಿಯವಾಗಿರುತ್ತಿದ್ದರು. ಇವುಗಳನ್ನು ಬೆಸೆಯುವಂತೆ ಪಾತಾಳ ವೆಂಕಟ್ರಮಣ ಭಟ್,  ಎಂಪೆಕೆಟ್ಟೆ ರಾಮಯ್ಯ ರೈ, ಶ್ರೀಧರ ಭಂಡಾರಿ ಚಂದ್ರಗಿರಿ ಅಂಬು,  ಪಕಳ ಕುಂಜ ಕೃಷ್ನ ನಾಯ್ಕ ಮುಂತಾದ ಕಲಾವಿದ ಪ್ರಮುಖರ ಗಡಣವೇ ಇರುತ್ತಿತ್ತು. ಹಾಗಾಗಿ ಪ್ರೇಕ್ಷಕನ ಗಮನ ಸದಾ ರಂಗಸ್ಥಳದಲ್ಲಿ ಸ್ಥಿರವಾಗಿರುತ್ತಿತ್ತು.
ಇಂದು ಕಲಾವಿದರನ್ನು  ನೋಡಿ ಪ್ರಸಂಗ ನಿಗದಿಯಾಗುತ್ತದೆ. ಆ ಪ್ರಸಂಗವಾದರೆ ಅವನಿಗೆ ವೇಷವಿಲ್ಲ ಇದಾದರೆ ಇವರಿಗೆ ಕಷ್ಟ. ಆದರೆ ಮೊದಲು ಪ್ರಸಂಗಕ್ಕೆ ಕಲಾವಿದ ನಿಗದಿಯಾಗುತ್ತಿದ್ದ. ಅದೇ ಕಾರಣದಿಂದ ಕಡತೋಕರ ನಿರ್ದೇಶನದಲ್ಲಿ ಧರ್ಮಸ್ಥಳ ಮೇಳ ವಿಜ್ರಂಭಿಸುತ್ತಿತ್ತು. ಇದು ನನ್ನ ಅನಿಸಿಕೆ.
ನನ್ನ ಲೇಖನಗಳ ಬಗ್ಗೆ ಮರೆಯದೇ ಪ್ರತಿಕ್ರಿಯಿಸಿದರು. ಅವರ ಬಗ್ಗೆ ಬರೆದ ಲೇಖನದ ಅಂಶಗಳನ್ನು ಹೇಳಿದರು.
 “ನನ್ನ ಬಗ್ಗೆ ಹಲವು ಲೇಖನಗಳು ಬಂದಿವೆ. ಬಹಳಷ್ಟು ಲೇಖನಗಳು ಯದ್ವಾ ತದ್ವಾ ಹೊಗಳಿಯೇ ಬರೆಯುತ್ತಾರೆ. ಕೆಲವೊಮ್ಮೆ ಅದು ಅತಿರೇಕ ಅಂತ ಅನ್ನಿಸುತ್ತದೆ. ಒಬ್ಬ ವ್ಯಕ್ತಿಯ ಬಗ್ಗೆ ಬರೆಯುವಾಗ ಆತನ ವೈಯಕ್ತಿಕ  ವಿಚಾರಗಳನ್ನು ವಿಶೇಷವಾಗಿ ಉಲ್ಲೇಖಿಸುವುದು ಅತಿಶಯವಾಗುತ್ತದೆ. ಯಾವುದಕ್ಕೋ ಹೋಲಿಸಿ ಅಂಥವರು ಇಂಥವರು ಅಂತ ಬರೆಯುತ್ತಾರೆ. ಅದನ್ನು ಓದುವಾಗ ಸಂತೋಷಕ್ಕಿಂತಲೂ ಗಾಬರಿಯಾಗಿಬಿಡುತ್ತದೆ. ಅದು ನಮಗೆ ನಾವೇ ಮಾಡಿಕೊಂಡ ಆತ್ಮವಂಚನೆಯಾಗುತ್ತದೆ. ಆದರೆ ನಿಮ್ಮ ಲೇಖನದ ವೈಶಿಷ್ಟ್ಯ ಇರುವುದು ಅಲ್ಲೇ. ಅಲ್ಲಿ ಕೇವಲ ನಿಮ್ಮ ಅನುಭವವ ಮಾತ್ರ ಹೇಳುವುದು. ನಿಮ್ಮ ದೃಷ್ಟಿಕೋನದಲ್ಲಿ ಜೋಷಿಯ ವ್ಯಕ್ತಿತ್ವ ಮತ್ತವರ ವೈಶಿಷ್ಟ್ಯ ಬಹಳ ಇಷ್ಟವಾಯಿತು. ಅತಿಯಾದ ಹೊಗಳಿಕೆ ಇಲ್ಲ. ಅತಿರೇಕದ ಭಾವೋದ್ರೇಕ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ  ಅಡಕವಾಗುವ ಯಕ್ಷಗಾನದ ದೃಷ್ಟಿಕೋನ ಬಹಳ ಇಷ್ಟವಾಯಿತು.ಇನ್ನೂ ಬರೀತಾ ಇರಿ.”
ಅವರ ಆಶೀರ್ವಾದ ಒಂದು ಅತಿಯಾದ ಚೈತನ್ಯವನ್ನು ತುಂಬಿಸಿದ ಅನುಭವ. ಯಾವುದೇ ವ್ಯಾಕರಣ ನಿಬದ್ದವಾಗಿರದ , ಬಾಲಿಷವಾದ ನನ್ನ ಲೇಖನಗಳೆಲ್ಲಿ ಅದು ಕೇವಲ ಜೋಷಿಯವರ ಗಮನಕ್ಕೆ ಬಂದಿದೆ ಅವರು ಓದಿದ್ದಾರೆ ಎನ್ನ್ನುವುದೇ ಆಭಿಮಾನದ ಹಿರಿಮೆಯಾಗಿ ಭಾಸವಾಗುವಲ್ಲಿ , ಇನ್ನೂ ಬರೀತಾ ಇರಿ ಎಂಬ ಆಶೀರ್ವಾದ ಸಾರ್ಥಕತೆಯನ್ನು ತಂದಿತು.

ವಿಚಾರಗಳು ಹಲವಾರು. ಆದರೆ ಸಮಯ ಯಾವತ್ತಿಗೂ ನಮ್ಮನ್ನೂ ಮೀರಿ ಬೆಳೆಯುತ್ತದೆ. ಅವಾಗ ಸಮಯದ ಜತೆ ನಾವು ಓಡಬೇಕಾಗುತ್ತದೆ. ಗಡಿಯಾರ ನೋಡಿದೆ. ಅದಾಗಲೇ ಎಂಟು ಗಂಟೆಯಾಗಿತ್ತು. ಅವರಿಗೂ ಒಂದೆರಡು ಫೋನ್ ಕರೆಗಳು ಈನಡುವೆ ಬಂತು. ಅದಾವುದೋ ಕೌಟುಂಬಿಕ ಕಾರ್ಯಕ್ರಮಕ್ಕೆ ಹೊರಡುವ ಅನಿವಾರ್ಯತೆ ಒದಗಿ ಬಂತು. ಇನ್ನು ನಾನು ಹೊರಡಲು ಉದ್ಯುಕ್ತನಾದೆ. ನನ್ನನ್ನು ಆಸನವೊಂದರಲ್ಲಿ ಕೂರಿಸಿದರು. ನಾನು ಕಕ್ಕಾಬಿಕ್ಕಿಯಾದೆ. ಶಾಲೊಂದನ್ನು ನನಗೆ ಹೊದೆದು ಎರಡು ಪುಸ್ತಕಗಳನ್ನು ಕೈಯಲ್ಲಿ ಇರಿಸಿದರು. “ಮೊದಲ ಸಲ ಬಂದಿದ್ದೀರ. ಇದು ನನ್ನ ಖುಷಿಗೆ.”  ಜೋಷಿಯವರ ಖುಷಿಯನ್ನು ಕಂಡು ಮೂಕನಾದೆ.  ಎರಡು ಪುಸ್ತಕಗಳು, ಒಂದು ಅವರದೇ ಕೃತಿ. “ಯಕ್ಷಗಾನ ಸ್ಥಿತಿಗತಿ.” ಇನ್ನೊಂದು “ಪುಚ್ಚೆಕೆರೆ ಕೃಷ್ಣ ಭಟ್ಟ ಜೀವನ ಸಾಧನೆ” 
ಈ ವರೆಗೆ ಯಕ್ಷಗಾನಕ್ಕೆ ಸಂಬಂಧಿಸಿ ನನಗೆ  ಇಂತಹ ಅನುಭವವಾಗಿಲ್ಲ. ಯಕ್ಷಗಾನ ಕ್ಷೇತ್ರದ ಹಿರಿಯರೊಬ್ಬರು ನನ್ನ ಆದರಿಸಿ ಸತ್ಕರಿಸಿ ನನ್ನನ್ನು ರೋಮಾಂಚನಗೊಳಿಸಿದರು. ಯಾವೊಂದೂ ಅರ್ಹತೆಯಿಲ್ಲದ ನನ್ನನ್ನು ಸ್ನೇಹದಿಂದ ಪ್ರೀತಿಯಿಂದ ಕಂಡರು. ಹತ್ತಿರದ ಬಂಧುವಂತೆ ಉಪಚರಿಸಿದರು. ಎಲ್ಲದಕ್ಕೂ ನಾನು ಕೃತಜ್ಜ ಎನ್ನುವ ಪರಿಮಿತಿಯಲ್ಲಷ್ಟೇ ನಾನಿದ್ದೆ. ಹೊರಡುತ್ತಾ ಎಲ್ಲಿ ಬಿಡಬೇಕು ಎಂದು ಕೇಳಿದರು. ಹಾಗೇನೆ ನಾನು ಹೋಗಬೇಕಾದ ಸ್ಥಳಕ್ಕೆ ತಂದು ಬಿಟ್ಟು ಇನ್ನೊಮ್ಮೆ ಇದೇ ರೀತಿ ಭೇಟಿಯಾಗೋಣ ಎನ್ನುತ್ತಾ ಬೀಳ್ಕೊಂಡಾಗ ಆತ್ಮೀಯ ಬಂಧು ಮನೆಗೆ ಹೋಗಿ ಬಂದ ಅನುಭವ.  

Wednesday, September 27, 2017

ಯಕ್ಷಗಾನದ ಇಂದ್ರ ಎಂಪೆಕೆಟ್ಟೆ ರಾಮ ರೈ




ಅದೊಂದು ಯಕ್ಷಗಾನ ಬಯಲಾಟ.  ಪೀಠಿಕೆ ಹೊಡೆದು ಚೆಂಡೆಯವರು ಬೆವರೊರೆಸಿಕೊಳ್ಳುತ್ತಿದ್ದರೆ, ಮದ್ದಲೆಯವರು ಛಾಪು ಹೊಡೆಯುತ್ತ ಮದ್ದಲೆಯ ಶ್ರುತಿಯನ್ನು ಅರಸುತ್ತಿದ್ದರು. ಭಾಗವತರು ಗಂಟಲು ಸರಿ ಮಾಡಿಕೊಳ್ಳುತ್ತಾ ಹಾರ್ಮೋನಿಯಂ ಶ್ರೂತಿಯನ್ನು ಮತ್ತಷ್ಟು ಪರೀಕ್ಷಿಸಿ ಅಂಬುರುಹದಳನೇತ್ರೆ ಹೇಳುವುದಕ್ಕೆ ತೊಡಗಿದರು. ಡೇರೆಯೊಳಗಿನ ಲೈಟುಗಳು ಒಂದೊಂದಾಗಿ ನಂದಿಸಲ್ಪಟ್ಟು ಸುತ್ತಲೆಲ್ಲ ಕತ್ತಲೆ ಹರಡಿದಾಗ ರಂಗಸ್ಥಳ ಇನ್ನಷ್ಟು ಪ್ರಖರವಾಯಿತು.  ನೆರೆದಿದ್ದ ಪ್ರೇಕ್ಷಕ ಅಷ್ಟು ಹೊತ್ತು ನಿರಾಸಕ್ತಿಯಿಂದ ಚಿಕ್ಕಪ್ರಾಯದ ಚದುರೆ ನೋಡುತ್ತಿದ್ದವರು ಕುಳಿತ ಆಸನವನ್ನೆಲ್ಲ ಸರಿ ಪಡಿಸಿ ಶುರುವಾಗುವ ಪ್ರಸಂಗದ ಕಡೆಗೆ ಗಮನ ಹರಿಸಿದರು. ಆಗ ತಾನೆ ಬಂದ ಕೆಲವರು ಖಾಲಿ ಇದ್ದ ಆಸನವನ್ನು ಟಾರ್ಚು ಬೆಳಗಿಸಿ ಹುಡುಕುತ್ತಿದ್ದರು. ಈ ನಡುವೆ ಅಟದ ಡೇರೆ  ಸದ್ದಿಲ್ಲದೆ ಭರ್ತಿಯಾಗಿತ್ತು.

            ಅಂಬುರುಹದಳನೇತ್ರೆ ಮೊಳಗುತ್ತಿದ್ದಂತೆ ನಂತರ ಒಡ್ಡೋಲಗ,  ಒಂದೋಂದೇ ವೇಷಗಳ ಪ್ರವೇಶಕ್ಕೆ ಚೆಂಡೆ ತಾರಕದ ಸ್ವರವನ್ನು ಲಯಬದ್ದವಾಗಿ ಹೊರಡಿಸುತ್ತಿತ್ತು. ಅದು ಅಮರಾವತಿಯ ದೇವೇಂದ್ರನ ಒಡ್ಡೋಲಗದ ದೃಶ್ಯ. ಅಷ್ಟ ದಿಕ್ಪಾಲಕರ ಅಷ್ಟೂ ವೇಷದಿಂದ ರಂಗಸ್ಥಳ ಝಗಮಗಿಸಿತ್ತು. ದೇವೆಂದ್ರನ ನಾಕಲೋಕದ ಒಡ್ಡೋಲಗದ ವೈಭವ ಹೇಗಿದೆಯೋ ಕಂಡವರಾರು? ಆದರೆ ಪ್ರೇಕ್ಷಕ  ನೂರಡಿ ಚದರದ ಒಳಗೆ ಸಾಕ್ಷಾತ್ ನಾಕಲೋಕವನ್ನು ಕಂಡ ಭ್ರಮೆಯಲ್ಲಿ ತೇಲುತ್ತಿದ್ದ.

ಇಂದು ಹರಕೆ ಸಂದಾಯವಾಗುವ ದೇವೇಂದ್ರನ ಒಡ್ಡೋಲಗದ ವೇಷಗಳನ್ನು ನೋಡಿದಾಗ ಸ್ವರ್ಗಲೋಕಕ್ಕೆ ಬರಗಾಲ ಬಂದಂತೆ ಇರುತ್ತದೆ. ವೇಷದಲ್ಲಿ ಗಾಂಭೀರ್ಯ ವರ್ಚಸ್ಸು ಇರುವುದಿಲ್ಲ. ಮುಖದಲ್ಲಿ ಉತ್ಸಾಹ ಇರುವುದಿಲ್ಲ.ಅಸುರ ಧಾಳಿಗಿಂತ ಮೊದಲೇ ದೇವತೆಗಳ ಅವಸ್ಥೆ ಹೀಗಾದರೆ ಮುಂದಿನ ಪ್ರಸಂಗ ಭಾಗ ಅರ್ಥವನ್ನು ಕಂಡುಕೊಳ್ಳುವುದು ಹೇಗೆ?  ತನ್ನ ಪಾಲಿಗೆ ಬಂದ ದೇವೆಂದ್ರನ ಪಾತ್ರಕ್ಕೆ ಸಿಡಿಮಿಡಿಗೊಳ್ಳುತ್ತಾ ಸಹಕಲಾವಿದರ ರಾಜಕೀಯಕ್ಕೆ ಅವುಡುಗಚ್ಚಿ ರಂಗ ಹತ್ತುವ ವೇಷಗಳು ಯಂತ್ರಗಳ ಗಾಲಿಗಳಂತೆ ಭಾಸವಾಗುತ್ತದೆ.

ಅಷ್ಟದಿಕ್ಪಾಲಕರು, ಸುಮನಸರು ಹೀಗೆ ವೈವಿಧ್ಯಮಯ ವೇಷಗಳು ಪ್ರಖರವಾಗಿ ಕಣ್ಣು ಕೋರೈಸುತ್ತಿದ್ದರೆ ಮಧ್ಯೆ ಸಿಂಹಾಸನದಲ್ಲಿ ಕುಳಿತ ಇಂದ್ರನ ಗಾಂಭೀರ್ಯ ದರ್ಪದ ನಿಲುಮೆ ಸಾಕ್ಶಾತ್ ಸುರಪತಿಯ ಭ್ರಮೆಯನ್ನು ಮೂಡಿಸುತ್ತಿತ್ತು. ಯಕ್ಷಗಾನದ ಬಹಳಷ್ಟು ಪ್ರಸಂಗಗಳ ಆರಂಭ ಇದೇ ಆಗಿರುತ್ತದೆ. ದೇವೇಂದ್ರ ಒಡ್ದೋಲಗ ಒಂದು ಪ್ರಾಥಮಿಕ ಪಾಠದಂತೆ.  ಯಾವುದೇ ಆದರೂ ತೊಡಗುವುದು ಇಲ್ಲಿಂದಲೇ. ಆದರೆ ಈ ಸನ್ನಿವೇಶ ಮಾತ್ರ ಕೇವಲ ಉರು ಹೊಡೆದು ಒಪ್ಪಿಸುವ ಬಾಲ ಪಾಠವಲ್ಲ. ಇದು ಕೆಲವು ದಶಕಗಳ ಹಿಂದಿನ ಕಥೆ. ಬಯಲಾಟದ ಕರಪತ್ರದಲ್ಲೂ ವಿಶೇಷವಾಗಿ ಆಕರ್ಷಣೆಯ ವಸ್ತುವಾಗಿ ಉಲ್ಲೇಖವಾದ ದೇವೇಂದ್ರನ ಪಾತ್ರ. ಒಂದು ದೇವೇಂದ್ರನ ಪಾತ್ರ ವಿಶೇಷ ಆಕರ್ಷಣೆ ಎಂದಾಗುವುದಾದರೆ ಅದರಲ್ಲಿ ಒಂದು ವೈಶಿಷ್ಯ ವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆ ವೈಶಿಷ್ಟ್ಯವೇ ಶ್ರೀ ಎಂಪೆಕೆಟ್ಟೆ ರಾಮ ರೈ.

ದೇವೇಂದ್ರನ ಒಡ್ದೋಲಗವೆಂದರೆ ಇಂದಿಗೂ ನೆನಪಾಗುವುದು ಎಂಪೆಕೆಟ್ಟೆ ರಾಮ ರೈಗಳ ರಂಗವನ್ನು ತುಂಬುವ ಘನ ಗಂಭೀರ ರಾಜವೇಷ. ಆಟನೋಡಿ ಬಂದು  ಹಗಲು ಮನೆಯ ಪಡಸಾಲೆಯ ಮಕ್ಕಳಾಟದ ಯಕ್ಷಗಾನದಲ್ಲಿ ದೇವೆಂದ್ರನಾಗುವ ಪ್ರೇರಣೆಯೆಂದರೆ ರಾತ್ರಿನೋಡಿದ ರೈಗಳ ದೇವೆಂದ್ರ. ಆಟದ ಮಾರನೇದಿವಸ,   ಅಂದು ಹಲವು ಪಡಸಾಲೆಯ ಹಗಲು ನಿದ್ದೆಯ ಕನಸಿನಲ್ಲೂ ರೈಗಳ ದೇವೇಂದ್ರ ಪ್ರವೇಶ ವಾಗದೇ ಇದ್ದರೆ ಆ ನಿದ್ದೆಯೂ ಪೂರ್ಣವಾಗುವುದಿಲ್ಲ ಕಂಡ ಕನಸೂ ನೆನಪಲ್ಲಿ ಉಳಿಯುವುದಿಲ್ಲ. ಇದು ಕೇವಲ ಮಕ್ಕಳ ಆಟಕ್ಕೆ ಸೀಮೀತವಾಗಿಲ್ಲ.  ದೇವೇಂದ್ರನಿಗೆ ಅನ್ವರ್ಥವಾಗಿ ಯಕ್ಷಗಾನ ರಂಗದಲ್ಲಿ ಪ್ರತಿ ಇಂದ್ರನಾಗಿ ರಂಗವನ್ನಾಳಿದ ಕಲಾವಿದ ಶ್ರೇಷ್ಠರು ಎಂಪೆಕೆಟ್ಟೆ ರಾಮರೈಗಳು. ಅಂತಹಾ ಕಲಾವಿದರೊಬ್ಬರು ಇದ್ದರು ಎಂಬುದನ್ನು ಯಕ್ಷಲೋಕ ಮರೆತಂತಿದೆ.

ಯಕ್ಷಗಾನದಲ್ಲಿ ದೇವೇಂದ್ರ ಪಾತ್ರ ಎಂಬುದು ಕಂಡೂ ಕಾಣದ ಜೀವಾಳದಂತೆ. ಪುಷ್ಪ ಮಾಲಿಕೆಯ ದಾರದಂತೆ. ಪ್ರಸಂಗದಿಂದ ಪ್ರಸಂಗಕ್ಕೆ ಬದಲಾಗುವ ದೇವೇಂದ್ರನ ಪಾತ್ರದ ವ್ಯಕ್ತಿತ್ವ ಮತ್ತು  ವಸ್ತು ಚಿತ್ರಣದ ವೈವಿಧ್ಯತೆಯನ್ನು  ಸೂಕ್ಷ್ಮಾವಲೋಕನ ಮಾಡಿದಲ್ಲಿ ಇದು ಅರಿವಿಗೆ ಬರುತ್ತದೆ. ಈ ಅವಲೋಕನ ಸುಲಭಸಾಧ್ಯವಲ್ಲ. ಪಾತ್ರಗಳ ಸನ್ನಿವೇಶಗಳನ್ನೂ ಪಾತ್ರ ಸೃಷ್ಟಿಯ ಹಿನ್ನೆಲೆಯನ್ನೂ ವಿವೇಚಿಸಬೇಕು. ಈ ವಿವೇಚನೆಯ ದೃಷ್ಟಿ ಪ್ರಚೋದಿತವಾಗುವುದಿದ್ದರೆ ಅಲ್ಲಿ ಎಂಪೆಕೆಟ್ಟೆಯವರ  ಪಾತ್ರಗಳು ಸಾರ್ಥಕವಾಗಿ  ಅನಾವರಣಗೊಂಡಿದೆ ಎಂದೇ ಅರ್ಥ. ಈಗಿನವರ ಭಾಷೆಯಲ್ಲಿ ಹೇಳುವುದಿದ್ದರೆ ಅವರ ಇಂದ್ರನ ವೇಷಗಾರಿಕೆಯೇ  ಪಿ ಎಚ್, ಡಿ ವಸ್ತುವಾಗಿಬಿಡಬಹುದು. ಪ್ರಾಮಾಣಿಕವಾಗಿ ಹೇಳುವುದಿದ್ದರೆ ಈ ಪಾತ್ರಗಳನ್ನು ಅನುಭವಿಸುವಾಗ ಇದು ಮನವರಿಕೆಯಾಗಲಿಲ್ಲ. ಆದರೆ ಅದರಿಂದ ಪ್ರಭಾವಿತರಾಗುವಲ್ಲಿ ಮತ್ತು ಆಸಕ್ತಿಯನ್ನು ಕೆರಳಿಸುಲ್ಲಿನ ಕಾರಣ ಏನೆಂದು ಯೋಚಿಸಿದರೆ ಇದು ಅರಿವಿಗೆ ಬರುತ್ತದೆ.    ಯಕ್ಷಗಾನ ಪರಂಪರೆಯ ಕಲೆ ಎಂದು ಹೇಳುವುದೇ ಇದಕ್ಕೆ. ಇಲ್ಲಿ ಪರಂಪರೆಗೆ ರೂಪುಕೊಟ್ಟ ಹಲವು ಕಲಾವಿದರಿದ್ದಾರೆ. ಪರಂಪರೆಯಸೃಷ್ಟಿಗೆ ನಿದರ್ಶನವಾಗಬಲ್ಲವರು ಇವರೆಲ್ಲ. ಹಾಕಿಕೊಟ್ಟ ಪಂಕ್ತಿ ಆ ಸೃಜನ ಶೀಲತೆ ಪರಂಪರೆಯ ಶುದ್ದ ಗಂಧವನ್ನು ಸೃಷ್ಟಿಸಿ ಅದನ್ನು ಗಾಢವಾಗಿಸುತ್ತದೆ.

ಒಳಿತು ಮತ್ತು ಕೆಡುಕಿನಲ್ಲಿ ಒಳಿತಿನ ಪ್ರಾತಿನಿಧಿಕವೇ ಇಂದ್ರ. ಹಾಗಾಗಿ ಇದು ಸದಾ ಸಂಘರ್ಷವನ್ನು ಎದುರು ಹಾಕಿಕೊಳ್ಳುವುದು ಅನಿವಾರ್ಯ. ಅದು ವೆತ್ಯಸ್ತ ಘಟನೆಗಳು ವೆತ್ಯಸ್ತ ಪ್ರಸಂಗಗಳು. ಕೆಲವುದಕ್ಕೆ ಪೌರಾಣಿಕ ಹಿನ್ನೆಲೆ ಇರಬಹುದು,ಕೆಲವುದಕ್ಕೆ ಕಾಲ್ಪನಿಕ ಹಿನ್ನೆಲೆಯಾಗಬಹುದು. ಆದರೆ ಇಂದ್ರನ ಪಾತ್ರ ವ್ಯಕ್ತಿತ್ವಅದು ಒಂದು ವರ್ಣರಂಜಿತ ಪಾತ್ರಕ್ಕೆ ಕಾರಣವಾಗುತ್ತದೆ.  ಈ ಪಾತ್ರ ವ್ಯಕ್ತಿತ್ವವನ್ನು ಅಭಿವ್ಯಕ್ತೀಕರಿಸುವಲ್ಲಿ ಪ್ರಾಮಾಣಿಕತೆ ಎಂಪೆಕೆಟ್ಟೆಯವರ ಪಾತ್ರನಿರ್ವಹಣೆಯಲ್ಲಿ ಕಂಡುಬರುತ್ತಿತ್ತು.  ಯಕ್ಷಗಾನ ಪ್ರಸಂಗದ ಜನಪ್ರೀಯತೆ ಈ ನಿರ್ವಹಣೆಯನ್ನು ಅವಲಂಬಿಸಿದೆ ಎಂದು ಈಗ ಬದಲಾದ ತಲೆಮಾರಿನಲ್ಲಿ ಆ ಪ್ರಸಂಗಗಳನ್ನು ಕಂಡಾಗ ಮನವರಿಕೆಯಾಗುತ್ತದೆ. ಅಂದಿನ ಪಾತ್ರದ ಬಲವಾದ ಸೆಳೆತ ಆ ಪ್ರಸಂಗಗಳಲ್ಲಿ ಅವರನ್ನು ಬಿಟ್ಟು ಕಲ್ಪಿಸುವುದಕ್ಕೆ ಸಾಧ್ಯವಾಗುವುದಿಲ್ಲ.  ಯಾವುದೇ ರಾಜವೇಷವಿರಲಿ ಸರಳ ಕುಣಿತದಲ್ಲಿ ನೂರಾರು ಭಾವನೆಯನ್ನು ಕೆರಳಿಸಬಲ್ಲ ನಾಟ್ಯ ಶೈಲಿ. ಆಂಗಿಕ ಅಭಿನಯ. ಇಂದು ವೇಷ ರೈಸುವುದು ಎಂದರೆ ಬಿಡು ಬೀಸಾಗಿ ಕುಣಿದು ಒಂದಷ್ಟು ಗದ್ದಲವೆಬ್ಬಿಸುವುದು. ಅದನ್ನು ನೋಡಿ ಚಪ್ಪಾಳೆ ಶಿಳ್ಳೆ ಬಿದ್ದರಂತೂ ನಂತರ ವೇಷ ಪಾತ್ರ ಯಾವುದೇ ಆದರೂ ಆ ಮಾದರಿಯ ಕುಣಿತ ಖಾತರಿಯಾಗಿ ಇದ್ದೇ ಇರುತ್ತದೆ.

ಸಮುದ್ರ ಮಥನ, ಅಮರೇಂದ್ರ ಪಥ ವಿಜಯ, ಕಾಯಕಲ್ಪ, ವಜ್ರಧರ ವಿಲಾಸ, ಮಹಾಬ್ರಾಹ್ಮಣ , ಕುಮಾರ ವಿಜಯ ಹೀಗೆ ಹಲವಾರು ಪ್ರಸಂಗಗಳಲ್ಲಿ  ವಿಲಕ್ಷಣ ದೇವೆಂದ್ರಪಾತ್ರಗಳು  ಸೃಷ್ಟಿಯಾಗಿದ್ದರೆ ಅದಕ್ಕೆ ಎಂಪೆಕೆಟ್ಟೆಯವರ ಪ್ರತಿಭೆಯೂ ಕಾರಣವಾಗಿರುತ್ತಿತ್ತು. ಅದರಲ್ಲೂ ಅಂದಿನ ಸಮುದ್ರಮಥನ ಪ್ರಸಂಗದ ವಿಶೇಷ ಆಕರ್ಷಣೆಯಲ್ಲಿ ಆನೆಯ ಮೇಲಿನ ಇಂದ್ರನ ಐರಾವತದ ಒಡ್ಡೋಲಗ ಒಂದಾದರೆ ಅದಕ್ಕೆ ಹೊಂದಿಕೊಂಡು ಎಂಪೆಕೆಟ್ಟೆಯವರ ಇಂದ್ರನೂ ಆಕರ್ಷಣೀಯವಾಗಿದ್ದ. ಈ  ಎರಡೂ ವಿಶೇಷಗಳು ಆಟದ ಕರಪತ್ರದಲ್ಲಿ ಅಚ್ಚಾಗಿಬಿಡುತ್ತಿದ್ದರೆ ಇದರಲ್ಲಿ ಎಂಪೆಕೆಟ್ಟೆಯವರ ಪಾತ್ರದ ತೂಕ ಗಜ ತೂಕವನ್ನೂ ಮೀರಿಸುತ್ತಿತ್ತು. ಸಮುದ್ರ ಮಥನ ಪ್ರಸಂಗದ  ಆರಂಭದಲ್ಲಿ ದೇವೇಂದ್ರನ ವೈಭವ ಪೂರ್ಣ ಒಡ್ಡೋಲಗ. ಇದು ಕೇವಲ ಒಡ್ಡೋಲಗ ಮಾತ್ರವಲ್ಲ. ಪ್ರಸಂಗದ ಮುಂದಿನ ನಡೆಗೆ ಇಂದ್ರನ ವ್ಯಕ್ತಿಚಿತ್ರಣ ಇಲ್ಲಿ ಅನಿವಾರ್ಯ.  ಯಕ್ಷಗಾನದಲ್ಲಿ ಅದರಲ್ಲೂ ತೆಂಕುತಿಟ್ಟಿನಲ್ಲಿ ಕೆಲವು ಪಾತ್ರದ ಪ್ರವೇಶವೇ ಆ ಪಾತ್ರದ ಚಿತ್ರಣವನ್ನು ಬಹಳಷ್ಟು ನೀಡುತ್ತದೆ. ಹಾಗಾಗಿ ಪ್ರವೇಶದಲ್ಲಿ ಪ್ರಕಟವಾಗುವ ಭಾವನೆಗಳು  ಪಾತ್ರಾಭಿನಯಕ್ಕೆ ಒಂದು ತಳಹದಿ. ಪ್ರವೇಶದಲ್ಲೇ ಪ್ರೇಕ್ಷಕನ ಚಿತ್ತವನ್ನು ವ್ಯಾಪಿಸಿದ ಮೇಲೆ ವೇಷಧಾರಿಗೆ ಪಾತ್ರದೊಂದಿಗೆ ಪ್ರೇಕ್ಷಕನ ಸಂವಹನ ಸುಲಭ ಸಾಧ್ಯವಾಗುತ್ತದೆ.  ಇದೇ ಕಾರಣಕ್ಕೆ ಹಲವು ಕಲಾವಿದರು ಪ್ರೇಕ್ಷಕರ ಆಸನಗಳನ್ನು ರಂಗಸ್ಥಳಕ್ಕೆ ಅತ್ಯಂತ ಸಮೀಪ ವಿರುವಂತೆ ಬಯಸುತ್ತಾರೆ. ಆವಾಗ ಪ್ರೇಕ್ಷಕನ ಭಾವನೆಯನ್ನು ಗ್ರಹಿಸುವುದಕ್ಕೆ ಕಲಾವಿದನಿಗೆ ಸಾಧ್ಯವಾಗುತ್ತದೆ. ಪ್ರೇಕ್ಷಕನ ಸ್ಥಾನ ದೂರವಾದಷ್ಟೂ ಕಲಾವಿದ ಮತ್ತು ಪ್ರೇಕ್ಷಕನ ಅಂತರ ಹೆಚ್ಚುತ್ತಾ ಹೋಗುತ್ತದೆ. ಸಂವಹನ ಕಠಿಣವಾಗುತ್ತಾ  ಅದು ಒಟ್ಟು ಪ್ರದರ್ಶನದಲ್ಲಿ ಋಣಾತ್ಮಕ ಪ್ರಭಾವವನ್ನು ಬೀರುತ್ತದೆ.  ಸಮುದ್ರ ಮಥನ ಪ್ರಸಂಗದ ಆರಂಭದಲ್ಲಿ ದೇವೆಂದ್ರ ಗರ್ವದಿಂದಲೂ ದುರಹಂಕಾರೀ ಪ್ರವೃತ್ತಿಯಿಂದ ಕೂಡಿರುತ್ತಾ ಅದೇ ಕಾರಣದಿಂದ ದುರ್ವಾಸ ಶಾಪಕ್ಕೆ ಒಳಗಾಗುತ್ತಾನೆ. ಆನಂತರ ಅಸುರಧಾಳಿಯಾಗುತ್ತದೆ. ಇಂದ್ರನ ಸೌಭಾಗ್ಯಗಳೆಲ್ಲವೂ ಸಮುದ್ರ ಪಾಲಾಗುತ್ತದೆ. ಆನಂತರ ಶ್ರೀ ಹರಿಯ ಸೂಚನೆಯಂತೆ ಅಸುರಾಧಿಪತಿ ಬಲಿಯೊಂದಿಗೆ ಸಂಧಾನ ಮಾಡಬೇಕಾಗುತ್ತದೆ. ಇಲ್ಲಿ ದೇವೇಂದ್ರ ತನ್ನ ಅಹಂಕಾರ ದರ್ಪವನ್ನು ತೊರೆದು ಅಕ್ಷರಶಃ ದೀನಸ್ಥಿತಿಗೆ ಇಳಿಯಬೇಕಾಗುತ್ತದೆ.  ಇಂತಹ ವ್ಯತಿರಿಕ್ತ ವಿಭಿನ್ನ ಸನ್ನಿವೇಷಗಳಲ್ಲಿ ರೈಯವರ ಇಂದ್ರನ ಪಾತ್ರ ವ್ಯಕ್ತಿಯಾಗಿ ಬೆಳೆದು ನಿಲ್ಲುತ್ತದೆ. ಸನ್ನಿವೇಶ ಬದಲಾದಂತೆ ದೇವೆಂದ್ರ ಬದಲಾಗುತ್ತಾ ಹೋಗುವುದರಲ್ಲಿ ಎಂಪೆಕೆಟ್ಟೆಯವರು ವಿಸ್ಮಯವನ್ನೇ ಉಂಟು ಮಾಡುತ್ತಾರೆ.  ಎಂಪೆಕೆಟ್ಟೆಯವರ ಪಾತ್ರಚಿತ್ರಣಕ್ಕೆ ಇದೊಂದು ಉದಾಹರಣೆ ಮಾತ್ರ.

ಯಕ್ಷಗಾನದಲ್ಲಿ ಪ್ರಸಂಗದಿಂದ ಪ್ರಸಂಗಕ್ಕೆ ದೇವೇಂದ್ರ ಪಾತ್ರಾಭಿವ್ಯಕ್ತಿ ವಿಭಿನ್ನವಾಗಿರುತ್ತದೆ. ಅದನ್ನು ಕಲಾವಿದನಾದವನು ಗುರುತಿಸಬೇಕು. ಅದು ನಿಜವಾದ ಕಲಾವಿದನ ಲಕ್ಷಣ. ಮಾತ್ರವಲ್ಲ ಕಲಾವಿದ ಧರ್ಮಕೂಡ. ಇದು ಪ್ರತೀ ಪಾತ್ರಕ್ಕೂ ಅನುಯೋಜ್ಯ. ಹಾಗಾದಲ್ಲಿ ಮಾತ್ರ ಆತ ಪಾತ್ರವನ್ನು ಪ್ರೀತಿಸುತ್ತಾನೆ. ಪಾತ್ರ ಪ್ರೀತಿ ಪಾತ್ರವಾದರೆ ಕಲೆಯ ಮೇಲೂ ಪ್ರಾಮಾಣಿಕವಾದ ಗೌರವ ಮೂಡುತ್ತದೆ. ನೈಜ ಅಭಿಮಾನ ಪೋಷಣೆಯಾಗುತ್ತದೆ. ಯಕ್ಷಗಾನದ ಕೀಳು ರಾಜಕೀಯದಿಂದ ದೇವೇಂದ್ರ ವೇಷ ಸದಾ ಅವಗಣನೆಗೆ ಒಳಗಾಗಿದೆ ಎನ್ನಬಹುದು. ತಮಗೆ ಆಗದವರಿಗೆ ದೇವೆಂದ್ರ ವೇಷವನ್ನು ಕೊಟ್ಟು ಬಿಡುವ ಕೆಟ್ಟ ಚಾಳಿ ಅನಧಿಕೃತವಾಗಿ ಬೆಳೆದು ನಿಂತಿರುತ್ತದೆ. ಕಲಾವಿದರೂ ದೇವೆಂದ್ರ ವೇಷವಾ? ಬೇಡ ಅಂತ ದೂರ ಉಳಿಯುವ ಪ್ರಯತ್ನ ಮಾಡುತ್ತಾರೆ.  ಇಂತಹ ವಿಚಾರವಿದ್ದಾಗಲೂ ದೇವೇಂದ್ರನ ಪಾತ್ರಕ್ಕೆ ಎಂಪೆಕೆಟ್ಟೆಯವರು ತಾರಾಮೌಲ್ಯವನ್ನು ತಂದು ಕೊಟ್ಟಿದ್ದಾರೆ. ಇದವರ ಕಲಾಪ್ರೌಢಿಮೆಯ ಮಾನದಂಡ. ದೇವೆಂದ್ರ ವೇಷ ಎಂದರೆ ಅದು ಎಂಪಕೆಟ್ಟೆಯವರದ್ದು ಅದರ ವೈಶಿಷ್ಟ್ಯ ಅನುಭವಿಸಿ ತಿಳಿಯಬೇಕು.  ಸತ್ವಯುತ ಕಲಾವಿದ ಯಾವುದೇ ಪಾತ್ರ ಮಾಡಿದರೂ ಪಾತ್ರಭೇದವಿಲ್ಲದೇ ತನ್ನ ಪ್ರತಿಭಾ ಮುದ್ರೆಯನ್ನು ಒತ್ತಿಬಿಡುತ್ತಾನೆ. ಆದರೆ ಇಂದಿನ ಕಲಾವಿದರಲ್ಲಿ ಆ ಅತ್ಮ ವಿಶ್ವಾಸದ ಕೊರತೆ ಇದೆ. ಹಾಗಾಗಿ ಅವರ ಪ್ರತಿಭೆಯ ಬಗ್ಗೆ ಅವರಿಗೇ ಭರವಸೆ ಇಲ್ಲದಂತಾದಾಗ ಆ ವೇಷ ಬೇಡ ಅಂತ ವರಸೆಗೆ ತೊಡಗುತ್ತಾರೆ.  ಇಂದು ಕಲೆಯಲ್ಲಿ ತನ್ನ ಅಗತ್ಯವನ್ನು ರೂಪಿಸುವುದೇ ಕಲಾವಿದನ ಆದ್ಯ ಕರ್ತವ್ಯದಂತೆ ಭಾಸವಾಗುತ್ತದೆ. ಕಲೆಯಲ್ಲಿ ಯಾರು ಪ್ರಭಾವ ಸೃಷ್ಟಿಸುತ್ತಾನೋ ಆತ ಕಲೆಯನ್ನು ಒಂದು ಹಂತದಲ್ಲಿ ಕಲೆಯನ್ನು ಅವಗಣಿಸುತ್ತಾನೆ ಎಂಬುದೇ ಅರ್ಥ. ಮುಖ್ಯ ಪಾತ್ರವೋ ಪೋಷಕ ಪಾತ್ರವೋ ಎಂಪೆಕೆಟ್ಟೆಯವರದ್ದು ಅನಿವಾರ್ಯ ಪಾತ್ರಗಳಾಗುತ್ತಿದ್ದವು. ಇಂದು ನಾಯಕನ ಸೃಷ್ಟಿಯಾಗುತ್ತದೆ ಆದರೆ ನಾಯಕನ ಪಾತ್ರ ಸೃಷ್ಟಿಯಾಗುವುದಿಲ್ಲ. ಪಾತ್ರ ಸೃಷ್ಟಿಯಾಗುವುದಿದ್ದರೆ ಅದಕ್ಕೆ ಪೋಷಕ ಪಾತ್ರಗಳ ಸೃಷ್ಟಿ ಮೊದಲಾಗಬೇಕು. ಆಗ ಎಂಪೆಕೆಟ್ಟೆಯಂತಹ ಕಲಾವಿದರೂ ಜೀವಾಳವಾಗಿಬಿಡುತ್ತಾರೆ.

ದೇವೇಂದ್ರ ಪಾತ್ರ ಕೆಲವು ಪ್ರಸಂಗಗಳಲ್ಲಿ ಬಹಳಷ್ಟು ತಾಮಸ ಸ್ವಭಾವವನ್ನು ಬಿಂಬಿಸುವುದುಂಟು.  ಕಾಯಕಲ್ಪದ ದೇವೇಂದ್ರ ಇದಕ್ಕೆ ಉದಾಹರಣೆ. ಈ ಪ್ರಸಂಗದಲ್ಲಿ ದೇವೆಂದ್ರ ಒಂದು ರೀತಿಯ ಖಳ ಪಾತ್ರದಂತೆ. ಈ ಪ್ರಸಂಗದ ದೇವೇಂದ್ರ ಪಾತ್ರ ಎಂಪೆಕೆಟ್ಟೆಯವರ ಸೃಷ್ಟಿ ಎಂದರೆ ತಪ್ಪಾಗದು. ಅವರಂತೆ ಅದನ್ನು ನಿರ್ವಹಿಸುವುದು ಸಾಧ್ಯವಾಗದ ಮಾತು. ಅವಶ್ಯ ಬಿದ್ದಲ್ಲಿ ಕ್ರೌರ್ಯ, ವ್ಯಂಗ್ಯ, ವಿಡಂಬನೆ, ಹಾಸ್ಯ ಮಾತ್ರವಲ್ಲ ಕರುಣ  ಇದೆಲ್ಲವನ್ನೂ ಬೇಕಾದಂತೆ ತೋರಿಸುವ ಇವರ ಸಾಮಾರ್ಥ್ಯ ಕಂಡು ಅನುಭವಿಸಬೇಕು.

ಇನ್ನು ದೇವೇಂದ್ರ ವೇಷಗಾರಿಕೆಯಲ್ಲೂ ಅಷ್ಟೇ. ಸುಂದರ ಅತ್ಯಾಕರ್ಷಕ.  ಘನ ಗಂಭೀರ. ರಂಗಸ್ಥಳವನ್ನು ತುಂಬಿಬಿಡುವ ಆ ನಿಲುಮೆ ಎಂತಹವರನ್ನು ಸೆಳೆದು ಬಿಡುತ್ತದೆ. ಯಕ್ಷಗಾನದಲ್ಲಿ ದೇವೇಂದ್ರ ಪಾತ್ರಕ್ಕೆ ತಾರಾಮೌಲ್ಯವನ್ನು ರೂಪದರ್ಶಿತ್ವವನ್ನು ಒದಗಿಸಿದವರೆಂದರೆ ಅದು ಎಂಪೆಕೆಟ್ಟೆಯವರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕೇವಲ ಕಿರೀಟವೇಷವಷ್ಟೇ ಅಲ್ಲ ಹಲವು ಚಾರಿತ್ರಿಕ ವೇಷದಲ್ಲೂ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಜಿಪುಣ ಶೆಟ್ಟಿ ಇದಕ್ಕೊಂದು ಸೂಕ್ತ ಉದಾಹರಣೆ. ಹಾಸ್ಯ ಕರುಣೆ ವೀರ ಯಾವುದನ್ನು ಬೇಕಾದರೂ ಕೈಯಲ್ಲಿದ್ದ ಗಂಟಿನಂತೆ ಯಾವಾಗ ಬೇಕು ಆವಾಗ ಹೊರಹಾಕಬಲ್ಲರು. ಗತಕಾಲದ ನೆನಪಿಗೆ ಜಾರುವುದಕ್ಕೆ ಇಂತಹ ಕಲಾವಿದರ ಸ್ಮರಣೆಯೊಂದು ಸಾಕು. ಅದು ಅದ್ಭುತ ರಮ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.





Thursday, September 21, 2017

ವಿಲಕ್ಷಣ ಪ್ರಸಂಗ


ನನ್ನ ಮನೆ ಮಗಳು ನನ್ನ ಮೊಬೈಲ್ ಹಿಡಿದು ಕೆಲವೊಮ್ಮೆ ನೋಡುವುದುಂಟು. ಅದರಲ್ಲಿರುವ ಒಂದಷ್ಟು ವೀಡಿಯೋಗಳನ್ನು ಹಾಡುಗಳನ್ನು ಕಂಡು ಒಂದೆರಡು ಕಮೆಂಟುಗಳನ್ನು ಹೇಳಿ ನನ್ನನ್ನೊಂದಿಷ್ಟು ಕಿಚಾಯಿಸುವುದೆಂದರೆ ಅವಳಿಗಿಷ್ಟವಾದ ಕಾಲಯಾಪನೆ. ನಾನೂ ಅದನ್ನು ಹುಡುಗಾಟಿಕೆಯೊಂದಿಗೆ ಸ್ವೀಕರಿಸಿ ಮಕ್ಕಳಲ್ಲಿ ಮಕ್ಕಳಾಗುವ ಒಂದು ಅವಕಾಶವಾಗಿ ಕಾಣುತ್ತೇನೆ. ಇಂತಹ ಸಮಯದಲ್ಲಿ  ಒಂದಷ್ಟು ಸಲಿಗೆಯಿಂದ ಗೊಣಗಿ ಅವಳಿಂದ ಮೊಬೈಲ್ ಕಿತ್ತುಕೊಳ್ಳುವುದು ನಿತ್ಯ ರೂಢಿ. ನಿನ್ನೆ ನೋಡುತ್ತಿದ್ದಂತೆ ಇದೇನು ದೊಡ್ಡಪ್ಪ ನಿಮ್ಮ ಯಕ್ಷಗಾನದಲ್ಲಿ ಡುಯಟ್ ಸಾಂಗು ಇದೆ . ಯಕ್ಷಗಾನ ಹಾಗೆ ಹೀಗೆ ಹೇಳ್ತೀರಲ್ಲ? ಇದೆಂತದು ಯಕ್ಷಗಾನ?  ನನಗೂ ಕೆಲವೊಮ್ಮೆ ಪಿತ್ಥ ನೆತ್ತಿಗೇರುವುದುಂಟು. ಆದರೂ ಮುದ್ದಿನ ಮಗಳು ಅಂತ ದುರುಗುಟ್ಟುವಿಗೆ ಮಾತ್ರ ಸೀಮಿತವಾಗಿರಿಸಿ ಏನು ಎಂಬಂತೆ ನೋಡಿದೆ. ಆಕೆ ಮೊಬೈಲ್ ಪಕ್ಕಕ್ಕೆ ತಂದು ವೀಡಿಯೋ ತುಣುಕೊಂದನ್ನು ತೋರಿಸಿದಳು.
ಈಗ ಬೆಚ್ಚಿ ಬೀಳುವ ಸರದಿ ನನ್ನದು. ಬೆಚ್ಚಿ ಬೀಳುವುದಲ್ಲ. ಒಂದು ವಿಲಕ್ಷಣ ಭಾವ ನನ್ನ ಮುಖದಲ್ಲಿ ಹಾದು ಹೋಯಿತು. ಹೌದು, ಅಕ್ಷರಶಃ ಒಂದು ಯುಗಳ ಗೀತೆಯೇ. ಒಂದೆರಡು ಸೆಕುಂಡಿನ ವಿಡೀಯೋ ಒಂದು ವಿಶಾಲ ಇತಿಹಾಸದ ಯಕ್ಷಗಾನಕ್ಕೆ ಮಾನವನ್ನು ಗೆರೆ ಎಳೆದಂತೆ ನನ್ನ ಕಣ್ಣು ನಾನೇ ನಂಬಿಕೊಳ್ಳದಂತಹ ಸ್ಥಿತಿ. ಪುಟ್ಟ ಮಗಳ ಎದುರಲ್ಲೇ ಯಕ್ಶಗಾನ ಎಂದರೆ ಇಷ್ಟೇಯಾ ಎಂಬಂತಹ ಪರಿಸ್ಥಿತಿ. ಅದು ಇತ್ತೀಚೆಗೆ ಯಕ್ಷಗಾನ ವಲಯದಲ್ಲಿ  ವೈರಲ್ ಆದ ವೀಡಿಯೋ. ಅದರ ವಿವರಣೆ ಕೊಡುವುದೂ ಅಸಹ್ಯ. ಹೋಗಲಿ ನೋಡುವವರು ನೋಡುತ್ತಾರೆ ಆಡುವವರು ಆಡುತ್ತಾರೆ. ಹೀಗೆ ತಟಸ್ಥನಾಗಿ ನಿರ್ವಿಕಾರ ಭಾವದಲ್ಲಿ ಮೊಬೈಲ್ ಕಿತ್ತುಕೊಂಡು ಮತ್ತಷ್ಟು ಕುಲಂಕೂಷವಾಗಿ ನೋಡುವ ಪ್ರಯತ್ನ ಮಾಡುತ್ತೇನೆ. ಕೆಲವು ಸೆಕುಂಡುಗಳ ವೀಡಿಯೋವಾದರೂ ಸಮಯವಿದ್ದರೂ ಪುನಃ ಕಾಣೂವುದಕ್ಕೆ ಮನಸ್ಸಾಗುವುದಿಲ್ಲ. ಈ ನಡುವೆ ಮನಸ್ಸು ಯೋಚಿಸುತ್ತದೆ. ಅದನ್ನು ಯಥಾವತ್ ನೋಡಿದವರ ಭಾವನೆಗಳೇನಿರಬಹುದು. ಒಂದಷ್ಟು ಜನ ಚಪ್ಪಾಳೆ ಹೊಡೆದು ಶಿಳ್ಳೆ ಹಾಕಿರಬಹುದು. ಇನ್ನಷ್ಟು ಜನ ಏನೂ ನಡೇ ಇಲ್ಲವೆಂಬಂತೆ ಇರಬಹುದು. ಇನ್ನು ಕೆಲವರು ಛೇ ಅಂತ ಲೋಚಗುಟ್ಟಿರಲೂ ಬಹುದು. ಘಟನೆ ನಡೆದು ಅದೆಷ್ಟು ಸಮಯವಾಯಿತೋ. ಈಗ ನಮ್ಮ ಕಣ್ಣಿಗೆ ಬಿದ್ದಿದೆ ಅಂತ ನಾನು ತಿಳಿದೆ. ಯಾಕಂದರೆ ಈಗ ಯಕ್ಷಗಾನಕ್ಕೆ ಯಾವುದೂ ವಿಶೇಷವಲ್ಲ. ಯಾವುದೂ ಅನಿರೀಕ್ಷಿತವಲ್ಲ. ಅವರವರ ದೃಷ್ಟಿಕೋನಕ್ಕೆ ಏನನ್ನಾದರೂ ಮಾಡಿಕೊಳ್ಳಬಲ್ಲಂತಹ ಕಲೆ ಯಕ್ಷಗಾನ. ಹಾಗಾಗಿ ಕೆಲವರಂತೂ ಇವುಗಳಿಗೆಲ್ಲ ಔದಾಸಿನ್ಯದ ಪ್ರತಿಕ್ರಿಯೆಯನ್ನೇ ನೀಡುತ್ತಾರೆ. ಇದು ಸುಲಭವಾದ ಮತ್ತು ತೊಂದರೆ ಇಲ್ಲದ ಪ್ರತಿಕ್ರಿಯೆ ಅಂತ ನನ್ನ ಭಾವನೆ.ಕೆಲವೊಮ್ಮೆ ನಿಜಕ್ಕೂ ಸಂತೋಷ ಬೆರಗು ಒಟ್ಟಿಗೇ ಹುಟ್ಟಿಕೊಳ್ಳುತ್ತದೆ. ಯಕ್ಷಗಾನ ಇಂಥವುಗಳನ್ನೇಲ್ಲಾ ಒಡಲಲ್ಲಿ ಸೇರಿಸಿಬಿಡುವ ಅದ್ಭುತ ಕಲೆಯಾಗಿಬಿಟ್ಟಿದೆಯಲ್ಲ?  ಯಕ್ಷಗಾನದಂತಹ ಸರ್ವಗ್ರಾಹ್ಯ ಕಲೆ ಇನ್ನೊಂದಿರಲಾರದು.
ವೀಡಿಯೋ ಎನೋ ವೈರಲ್ ಆಯಿತು. ಅದಕ್ಕೆ ಎಷ್ಟು ಜನ ವಿರೋಧವಿದ್ದಾರೆ ಪರವಾಗಿ ಎಷ್ಟು ಜನ ಇದ್ದಾರೆ ಯಾರು ಪರ ಯಾರು ವಿರೋಧ ಈ ಜಿಜ್ಞಾಸೆಗಳಲ್ಲೆ ವಾಟ್ಸಾಪ್ ದಿನ ಸರಿದು ಹೋಗುತ್ತದೆ. ಸಾಮಾನ್ಯ  ವಿವಾದಕ್ಕೆ ಒಂದು ಸ್ಪಷ್ಟೀಕರಣ ನೀಡಿ ವಿವಾದವನ್ನು ತಣಿಸುವ ಶ್ಲಾಘನೀಯ ಯತ್ನವೂ ಆಗುತ್ತದೆ. ಅದು ಆಗಬೇಕಾದದ್ದೆ. ಇಲ್ಲವಾದರೆ ಸಮಸ್ಯೆ ತಾರ್ಕಿಕ ಅಂತ್ಯ ಕಾಣುವ ಬಗೆ ಹೇಗೆ? ಹಲವು ಕಾರಣಗಳನ್ನು ನೀಡಿದ ಸಮರ್ಥನೆಯ ಮಾತುಗಳು.  ಅದನ್ನು ಅಲ್ಲ ಅಂತ ಹೇಳುವಷ್ಟಾಗಲೀ ಅಥವ ಹೌದು ಎಂದು ಪೂರಕವಾಗಿ ಹೇಳುವಷ್ಟಾಗಲೀ ನಮ್ಮ ಜ್ಜಾನ ಬೆಳೀಲಿಲ್ಲ. ಇಂತಹ ಸಮಯದಲ್ಲಿ  ನಾವು ತಿಳಿದುಕೊಂಡ ಯಕ್ಷಗಾನ ತುಂಬ ಕಡಿಮೆ ಅಂತ ಅನ್ನಿಸಿಬಿಡುತ್ತದೆ. ಆದರೂ ಅಲ್ಪಮತಿಗೆ ಕೆಲವೊಮ್ಮೆ ಪ್ರಶ್ನೆಗಳು ಮೂಡುವುದುಂಟು. ಅದು ನಮಗಷ್ಟೇ ಸೀಮಿತ.
ನಾನಂತೂ ಯಾರ ಪರವಾಗಿಯೋ ವಿರೋಧವಾಗಿಯೋ ಯೋಚಿಸುವುದಿಲ್ಲ. ಹಾಗೆ ಯೋಚಿಸುವುದರಿಂದ ಪ್ರಯೋಜನವೂ ಇಲ್ಲ. ಈ ಸತ್ಯವನ್ನು ನಾನು ಎಂದಲ್ಲ ಹಲವರು ಕಂಡುಕೊಂಡಾಗಿದೆ. ಹಾಗಾಗಿ ಯಾವ ಚರ್ಚೆ ಸಂವಾದಗಳೂ ಸ್ವಾರಸ್ಯವಾಗಿ ಕಾಣುವುದಿಲ್ಲ. ಸುಮ್ಮನೆ ನೋಡೋಣ ಎಂಬ ಮನರಂಜನಾ ಭಾವವೂ ಉಂಟಾಗುವುದಿಲ್ಲ. ಹಿರಿಯ ವಿದ್ವಾಂಸರರೋಬ್ಬರು ಹೇಳಿದ್ದನ್ನು ಕೇಳಿದ್ದೇನೆ. ಯಕ್ಷಗಾನ ಸರಿಯಾಗಿ ಕಲಿಯುವುದಕ್ಕೆ ಪೂರ್ಣವಾಗಿ ಅಭ್ಯಾಸ ಮಾಡುವುದಕ್ಕೆ ಯಾರೂ ಹೋಗುವುದಿಲ್ಲ. ಬದಲಾಗಿ ಅದರಲ್ಲಿ ಹೊಸತನ್ನು ಇಂಪ್ಲಿಮೆಂಟ್ ಗೆ ತೊಡಗುತ್ತಾರೆ. ಯಕ್ಷಗಾನದಲ್ಲಿ ಇದ್ದದ್ದು ಸಾಕಾಗುವುದಿಲ್ಲ. ಅದರ ಬಗ್ಗೆ ವಿಶ್ವಾಸ ವಿಲ್ಲ. ಹಾಗಾಗಿ ಮತ್ತೇನನ್ನೋ ಸೇರಿಸುತ್ತಾರೆ. ಯಕ್ಷಗಾನದಲ್ಲಿ ಜೀವಮಾನದಲ್ಲಿ ಕಲಿತು ಪೂರೈಸದಷ್ಟು ಇದೆ ಅಂತ ಹಿರಿಯ ಕಲಾವಿದರು ಹಲವರು ಹೇಳುತ್ತಾರೆ. ಅದನ್ನೇ ಸರಿಯಾಗಿ ಅಭ್ಯಾಸ ಮಾಡಿ ಬಳಕೆ ಮಾಡಿದರೆ ಸಾಕಾಗುತ್ತದೆ. ಆದರೆ ಇಂದಿನ ಯುವ ಪೀಳಿಗೆಗೆ ಹಿರಿಯ ಮಾತುಗಳಲ್ಲಿ ಹಿರಿಯರ ಜ್ಜಾನದಲ್ಲಿ ವಿಶ್ವಾಸವಿಲ್ಲ. ಅಥವಾ ಹಿರಿಯರು ಹೇಳಿದಂತೆ ಜೀವಮಾನದಲ್ಲಿ ಕಲಿತು ಮುಗಿಸಲು ಸಾಧ್ಯವಿಲ್ಲದೇ ಇದ್ದುದನ್ನು ಕೇವಲ ಆರು ತಿಂಗಳಲ್ಲಿ ಕಲಿತು ಮುಗಿಸಿದ್ದಾರೋ ಎನೋ ತಿಳಿಯದು. ಹಾಗಾಗಿ ತಮ್ಮತಮ್ಮದು ಇರಲಿ ಅಂತ ಒಂದೊಂದನ್ನು ಇಳಿಸಿ ನೋಡುತ್ತಾರೆ. ಚಪ್ಪಾಳೆ ಸಿಕ್ಕಿದಾಗ ಮತ್ತೂ ಒಂದಷ್ಟನ್ನು ಸೇರಿಸುತ್ತಾರೆ. ತಪ್ಪು ಅಂತ ಹೇಳುವುದಕ್ಕೆ ಸಾಧ್ಯವೇ? ಯಕ್ಷಗಾನ ನಿಂತ ನೀರಾಗಿದೆ. ಹಾಗಾಗಬಾರದಲ್ಲ?  ಹಿರಿಯರು ಹೇಳುವಂತೆ  ಯಕ್ಷಗಾನದಲ್ಲಿ ಇದ್ದುದನ್ನೇ ಸರಿಯಾಗಿ ಅಭ್ಯಾಸ ಮಾಡಿ ಅದಷ್ಟನ್ನೇ ಬಳಕೆ ತರುತ್ತಿದ್ದರೆ, ಕಲಾವಿದರಿಗೆ ಕಣ್ಸನ್ನೆಯ ನಿರ್ದೇಶನವಾಗಲೀ ಆಕ್ಷಣದ ಬದಲಾವಣೆಗಳಾಗಲಿ ಅಗತ್ಯ ಬೀಳಲಾರದು. ಈ ವಿವಾದವೂ ಹುಟ್ಟಿಕೊಳ್ಳುವುದಕ್ಕೆ ಆಸ್ಪದವೂ ಇರಲಾರದು. ಪರಂಪರೆ ನಿಂತ ನೀರಾಗಿ ಕೆಸರಾಗಿ ಮಡುಗಟ್ಟಿ ಹೋಗಿದೆ. ಹಾಗಾಗಿ ವಿವಾದ ಮತ್ತು ಕೆಲವೆಲ್ಲ ಸಹಿಸಿಕೊಳ್ಳಬೇಕು. ಯಕ್ಷಗಾನಕ್ಕೆ ಅಷ್ಟು ಮಾಡದೇ ಇದ್ದರೆ ಹೇಗೆ? ಗಂಟೆ ಕಟ್ಟಲೆ ಪದ ಎಳಿಯದೇ ಇದ್ದರೆ ಹೊಸದನ್ನು ಹುಡುಕುವ ಅವಶ್ಯಕತೆಯೇ ಬೀಳುವುದಿಲ್ಲ. ಎಲ್ಲವು ಕಾಲಕ್ಕೆ ಹೊಂದಿಕೊಂಡಂತೆ ಸರಿ ಅಂತಲೇ ಒಪ್ಪಿಕೊಂಡು ಯಕ್ಷಗಾನ ಬೇಕೋ ಬೇಡವೋ ಅಂತ ದೂರ ಉಳಿಯ ಬೇಕಾದರೆ ಉಳಿದು ಬಿಡಬಹುದು.
ಸುಮಾರು ನಲ್ವತ್ತು ವರ್ಷಗಳಿಂದ ಯಕ್ಷಗಾನ ನೋಡಿ ಆನಂದಿಸಿದ್ದೇನೆ. ಬಾಲ್ಯದಿಂದಲೂ ಯಕ್ಷಗಾನ ಎಂದರೆ ಇದೇ ಅಂತ ಒಂದು ನಂಬಿಕೆ ಬೆಳೆದು ಬಂದು ಬಿಟ್ಟಿದೆ. ಅದು ನನ್ನ ಅಮ್ಮ ಎಂದರೆ ಇವಳು ಎಂಬ ಹಾಗೆ. ಬೇರೆ ಯಾವ ಹೆಂಗಸನ್ನು ತಂದು ತೋರಿಸಿದರೂ ಅಂತರಾಳದಲ್ಲಿ ಅಮ್ಮ ಎನ್ನುವ ಭಾವನೆ ಸ್ಪುರಿಸೀತೆ.? ಇಲ್ಲ. ಹಾಗಾಗಿ ಹೊಸ ಹೊಸ ಅವಿಷ್ಕಾರಗಳು ಮಾಡುವವರು ಮಾಡುತ್ತಾರೆ ನೋಡುವವರು ನೋಡುತ್ತಾರೆ. ಆದರೆ ನಮ್ಮ ನಂಬಿಕೆ ಹಾಗೇ ಉಳಿದು ಬಿಡುತ್ತದೆ.  ನೋಡುವವರಿಗಿಂತಲೂ ನೋಡದೇ ಇರುವವರ ಸಂಖ್ಯೆ ಬೇಕಾದಷ್ಟಿದೆ. ಹಾಗೆಂದು ಯಾವುದೂ ನಿಲ್ಲುವುದಿಲ್ಲವಲ್ಲ?  ತಮ್ಮ ತಮ್ಮ ಕಾರ್ಯಗಳಿಗೆ ವಿವರಣೆಯೋ ಸ್ಪಷ್ಟೀಕರಣವೋ ಇದ್ದೇ ಇರುತ್ತದೆ. ಆದರೆ ಅದನ್ನು ಸತ್ಯ ಎಂದು ನಂಬುವುದು ಬಿಡುವುದು ಹೇಳುವಾತನ  ಕೈಯಲ್ಲಿ ಇರುವುದಿಲ್ಲ. ಒಂದು ಭವ್ಯ ಪರಂಪರೆಯನ್ನು ದೂರ ಮಾಡುವಲ್ಲಿನ ಕಾಳಜಿ ಅದನ್ನು ಉಳಿಸುವುದರಲ್ಲಿ ಇರುವುದಿಲ್ಲ. ಪ್ರೇಕ್ಷಕ ಬೇಕು ಎಂದು  ಬಯಸಿದರೂ ಅದನ್ನು ಒದಗಿಸುವ ಭಂಡವಾಳ ಸ್ವತಃ ಇರುವುದಿಲ್ಲ. ಹಾಗಾಗಿ ಪ್ರೇಕ್ಷಕನ ದೃಷ್ಟಿಕೋನವನ್ನು ಬದಲಿಸಿದರೆ ಸಸೂತ್ರ. ಇದ್ದ ಭಂಡವಾಳದಲ್ಲೇ ವ್ಯವಹಾರ ಸಾಗಿಬಿಡುತ್ತದೆ. ಆದರೂ ಈಗ ಬದಲಾಗುವ ಪ್ರೇಕ್ಷಕ  ಮುಂದೆ ಬದಲಾಗುವುದಿಲ್ಲ ಎಂಬುವುದಕ್ಕೆ ಭರವಸೆ ಇದೆಯೇ?
ಇದೆಲ್ಲ ಚಿಂತನೆಗಳು ನನಗಷ್ಟೇ ಸೀಮಿತ. ಸರಿ ತಪ್ಪು ಎಂದು ವಿಶ್ಲೇಷಣೆ ಮಾಡಬಹುದು. ಆದರೆ ಅದನ್ನು ನಂಬುವುದು ಅಂತರಂಗದ ವಿಚಾರ ಮಾತ್ರವಲ್ಲ. ಅಂತರಂಗದ ಸ್ವಾತಂತ್ಯ್ರ. ಹಾಗಾಗಿ ಅದು ಕೇವಲ ನನ್ನ ಪರಿಧಿಯೊಳಗಿನವುಗಳು. ಯಾರಾದರೂ ಆ ಪರಿಧಿಯೊಳಗೆ ಬರುತ್ತಾರೆ ಎಂದಾದರೆ ಅದವರವರ ಮನೋಭಾವ ಅಷ್ಟೆ.




Sunday, July 2, 2017

ಬಣ್ಣನೆಯ ಮಾತಲ್ಲ ಬಣ್ಣಕ್ಕೊಬ್ಬನೇ ಮಾಲಿಂಗ


ಅದು ಸುರತ್ಕಲ್ ಮೇಳದ ಆಟ. ಪ್ರಸಂಗ ಸಮಗ್ರ ಭೀಷ್ಮ. ಪ್ರಸಂಗದ ಅರಂಭದ ಭಾಗ. ಶಂತನು ತಮಾಲಕೇತ ನೆಂಬ ರಕ್ಕಸನನ್ನು ಸಂಹರಿಸುವ ಸನ್ನಿವೇಶ. ತಮಾಲ ಕೇತನಾಗಿ ಯಕ್ಷಗಾನದ ಅಸುರ ಪಾತ್ರಧಾರಿ ಮಾತ್ರವಲ್ಲ ಬಣ್ಣದ ವೇಷಗಳಿಗೆ ತಾರಾಮೌಲ್ಯವನ್ನು ತಂದುಕೊಟ್ಟಂತಹ ಕಲಾವಿದ ಶ್ರೀ ಬಣ್ಣದ ಮಹಾಲಿಂಗ. ಬಣ್ಣದ ವೇಶದ ಒಡ್ದೋಲಗ ಎಂದರೆ ಕೇಳಬೇಕೆ? ಮೂರು ಸಲ ಆರ್ಭಟೆಕೊಟ್ಟು ನಂತರ ನಿಧಾನವಾಗಿ ರಂಗವೇರಿ ಹಂತ ಹಂತವಾಗಿ ಅಸುರ ರೂಪವನ್ನು ಅನಾವರಣಗೊಳ್ಳಿಸುವ ರಾಕ್ಷಸೀ ವೇಶ. ಆದರೆ ನಾವಂದು ಯಕ್ಷಗಾನದ ಅದ್ಭುತ ಬಣ್ಣದ ವೇಶವನ್ನು ಕಾಣುತ್ತಿದ್ದೇವೆ ಎಂಬ ಅರಿವು ನಮಗಿರಲಿಲ್ಲ. ಯಥಾ ಪ್ರಕಾರ ಯಾವುದೋ ಒಂದು ವೇಶ ಎಂದು ಭಾವಿಸಿದ್ದರೆ ಪ್ರತ್ಯಕ್ಷದ ವಾಸ್ತವವೇ ಬೇರೆ. ರಂಗಸ್ಥಳದ ತೆರೆ ಹಂತ ಹಂತವಾಗಿ ಸರಿಯುತ್ತಿದ್ದಂತೆ ರಂಗದ ಮಂದ ಬೆಳಕಿನಲ್ಲಿ  ತಾರಕದ ಆರ್ಭಟೆಯೊಂದಿಗೆ ತಮಾಲ ಕೇತನ ದೈತ್ಯ ವೇಶ ಕಣ್ಣೆದುರು ನಿಂತಿದೆ. ಭಯಾನಕ ವೇಶ ನೋಡಲಾರೆನು ಎಂದು ಕುಳಿತರೆ ಸಾಕೆ? ಬಣ್ಣದ ಮರೆಯಲ್ಲಿ ಆ ಬಾಯಿ ಎಲ್ಲಿ ಅಡಗಿದೆಯೋ ಎಂದು ಹುಡುಕುವ ಮೊದಲು ಕರ್ಣವನ್ನು ಇರಿಯುವಂತೆ ಅಸುರಾರ್ಭಟ ಕಿವಿಯನ್ನು ಮುಚ್ಚುವಂತೆ ಮಾಡುತ್ತಿದ್ದವು. ಕಣ್ಣು ಕಿವಿ ಮುಚ್ಚಿದ ಮೇಲೆ ನೋಡುವ ಆಟ ಎಂತದ್ದು? ಸದ್ದು ಮಾಡಲೆಂದೇ ದುಡ್ಡುಕೊಟ್ಟು  ತಂದ ಗರ್ನಾಲು ಹೊಟ್ಟಿಸುವಾಗ ಕೇಳಲಾಗದೆ  ಕಿವಿ ಮುಚ್ಚುವಂತೆ, ಆಟ ನೋಡುವುದಕ್ಕೆಂದೇ ಬಂದ ಮೇಲೆ ರಕ್ಕಸ ಪಾತ್ರಕ್ಕೆ ಕಣ್ಣು ಕಿವಿ ಮುಚ್ಚಿಕುಳಿತರಾದೀತೆ. ವಿಚಿತ್ರವೆಂದರೆ ಕಣ್ಣು ಕಿವಿ ಮುಚ್ಚುತ್ತಿದ್ದದ್ದು ಪ್ರೇಕ್ಷಕನಲ್ಲ. ಮಾಲಿಂಗಣ್ಣ ನ ಆರ್ಭಟೆ ಮತ್ತು ವೇಶ ಇಂದ್ರಿಯಗಳೆರಡನ್ನೂ  ನಿಷ್ಕ್ರಿಯವಾಗುವಂತೆ ಮಾಡುತ್ತಿದ್ದವು. ಚೆಂಡೆಯ ಸದ್ದಿನಲ್ಲೂ ಸೂಕ್ಷ್ಮವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾದ ಆರ್ಭಟೆ ಒಂದೆಡೆಯಾದರೆ ಪೊದೆಯೊಳಗೆ ಅವಿತುಕೊಂಡ ವ್ಯಾಘ್ರನಂತೆ ಬಣ್ಣದ ರಾಶಿಯ ಆಳದಲ್ಲಿ ಬೆಂಕಿಯನ್ನು ಉಗುಳುವಂತೆ ತಿರುಗುತ್ತಿದ್ದ ಕಣ್ಣುಗಳು. ತಮಾಲ ಕೇತ ತಮಳವನ್ನು ಸೃಷ್ಟಿಸಿದ್ದ.

ಅಂತರ್ಜಾಲದ ಅನಾಮಿಕ ಚಿತ್ರಗಾರನಿಗೆ ಕೃತಜ್ಞನಾಗಿ

ಮಾಲಿಂಗಣ್ಣನ ಪ್ರವೇಶ ಎಂದರೆ ಅಲ್ಲಿ ಧಾವಂತವಿಲ್ಲ. ಕಿರಿದಾದ ಹೆಜ್ಜೆಗಳನ್ನಿಡುತ್ತಾ ಕೈಗಳೆರಡನ್ನು ಭುಜದೆತ್ತರಕ್ಕೆ ಅಗಲಿಸಿ ನಿಧಾನವಾಗಿ ಬರುವ ಸಿಂಹ ನಡಿಗೆಯದು. ಮುಖದ ಬಣ್ಣಗಾರಿಕೆಯೋ ಯಾವುದೇ ಡಿಪ್ಲೊಮವೂ ಮಾಡದ ದೈವದತ್ತ ವರ್ಣ ವಿಸ್ಮಯವದು. ಸಾಮಾನ್ಯವಾಗಿ ಯಕ್ಷಗಾನದಲ್ಲಿ  ಬಣ್ಣದವೇಶ ವೆಂದರೆ ಹಾಗೆ ಬಂದ ಹೀಗೆ ಹೋದ ಎನ್ನುವಂತಹ ಸಂಭವ. ಆದರೂ ಮಾಲಿಂಗಣ್ಣನ ಬಣ್ಣ ಮುಖದಂತೆಯೆ ಮನಸ್ಸಿನಲ್ಲೂ ಗಾಢವಾಗುತ್ತದೆ. ವೇಷದಿಂದ ವೇಷಕ್ಕೆ ಪಾತ್ರಕ್ಕೆ ಒಪ್ಪು ಯಕ್ಷಗಾನ ಪರಂಪಗೆ ಮಾದರಿ ಎನಿಸುವಂತಹ ಬಣ್ಣಗಾರಿಕೆ.  ಕೇವಲ ಬಣ್ಣಗಾರಿಕೆ ಮಾತ್ರವಲ್ಲ ಅಂದಿನ ಆಕಾಲದಲ್ಲೂ ಸೀಮಿತ ತಂತ್ರಜ್ಞಾನದಲ್ಲಿ ವೇಷಗಾರಿಕೆಯಲ್ಲಿ ಇವರು ತೋರುತ್ತಿದ್ದ ಕುಸುರಿ ಗಾರಿಕೆ ಕ್ರೀಯಾ ಶೀಲತೆ ಯಕ್ಷಗಾನಕ್ಕೆ ಭೂಷಣ ಪ್ರಾಯವಾಗುತ್ತಿತ್ತು. ರಂಗವನ್ನು ತುಂಬುತ್ತಿದ್ದ ವೇಷಗಳು ಅದರಲ್ಲೂ ಅಸುರ ವೇಷಗಳಂತೂ ಎಂತಹವರ ಎದೆಯಲ್ಲೂ ಕಂಪನವನ್ನು ಹುಟ್ಟಿಸುವ ರುದ್ರ ಭೀಕರವಾಗಿರುತ್ತಿತ್ತು.

ಬಣ್ಣದ ವೇಷಗಳ ಕುಣಿತ ಅದರಲ್ಲು ದೊಡ್ಡ ಕಿರೀಟಧರಿಸಿ ರಂಗವೇರುವಾಗ ಘನ ಗಂಭೀರದ ನಿಧಾನ ವೇಗದ ಕುಣಿತ. ಇಂದು ಅದು ಪೂರ್ಣವಾಗಿ ಬದಲಾಗಿ ಹೋಗಿದೆ. ರಂಗದ ಮೇಲೆ ರಾಜವೇಶ ಪುಂಡುವೇಷಕ್ಕೆ ಸರಿಮಿಗಿಲಾಗಿ ಬಣ್ಣದ ವೇಷಗಳು ಕುಣಿಯಲಾರಂಬಿಸಿವೆ. ಬಣ್ಣದ ವೇಶದ ಪ್ರಭಾವ ಪ್ರೇಕ್ಷಕನಲ್ಲಿ ಉಂಟಾಗಬೇಕಾದರೆ ಅದು ನಿಧಾನವಾದ ಸಿಂಹ ಹೆಜ್ಜೆಗಳೇ ಸೂಕ್ತ. ಮಾಲಿಂಗಣ್ಣನ ಕುಣಿತದ ವೈಶಿಷ್ಯವೇ ಇದು. ರಂಗಸ್ಥಳದ ಮೂಲೆಯಿಂದ ಮೂಲೆಗೆ ಅವರ ಕುಣಿತದ ಒಂದು ಶೈಲಿ ಬಹಳ ಆಕರ್ಷಕವಾಗಿ ರಂಗವನ್ನು ತುಂಬಿಕೊಳ್ಳುತ್ತಿತ್ತು. ಮಿತಿಯಲ್ಲಿ ಸುತ್ತುವ ಕ್ರಮ ಅದು ಇಂದು ರಂಗದಲ್ಲಿ ಅಪರೂಪವೇ ಆಗಿಬಿಟ್ಟಿದೆ. ಇಂದು ಸುತ್ತುವುದಕ್ಕೆ ಇಷ್ಟೇ ಎಂಬ ಪರಿಮಿತಿಯೂ ಇಲ್ಲ. ವೇಷ ಕುಣಿದಂತೆ ಹಿಮ್ಮೇಳದವರು ಬಾರಿಸಿಬಿಡುತ್ತಾರೆ.  ನಿಯಮವೂ ಇಲ್ಲ. ಪಾತ್ರದ ಮನೋಭಾವವನ್ನು ಅರ್ಥೈಸುವ ಪ್ರಮೇಯವೇ ಇಲ್ಲ. ಅಂದಿನ ಅನಕ್ಷರಸ್ಥ ಅವಿದ್ಯಾವಂತರೂ ವೇಷ ಮಾಡುತ್ತಿದ್ದರೆ  ಆಯಾ ಪಾತ್ರದ ಆಮೂಲಾಗ್ರ ಚಿತ್ರಣವನ್ನು ರಂಗದ ಮೇಲೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದರು. ಪಾತ್ರದಿಂದ ಪಾತ್ರಕ್ಕೆ ವಿಭಿನ್ನವಾಗಿ ಮೂಡಿಬರುತ್ತಿತ್ತು.  ಇಂದು ವಿದ್ಯೆ ಇದೆ.  ಆದರೆ ಶಿಕ್ಷಣವಿಲ್ಲ.

ಮಾಲಿಂಗಣ್ಣನವರು ಕೇವಲ ಅಸುರ ಪಾತ್ರಕ್ಕೆ ಸೀಮಿತವಾದವರಲ್ಲ. ತುಳು ಪ್ರಸಂಗಗಳಲ್ಲಿನ ವೇಷಗಳನ್ನೂ ನಾನು ಕೆಲವನ್ನು ನೋಡಿದ್ದೇನೆ. ಅಲ್ಲಿಯೂ ಅವರ ವೈಶಿಷ್ಟ್ಯವನ್ನು ತನ್ನ ಬಣ್ಣಗಾರಿಕೆಯಿಂದ ವೇಶದ ಕುಶಲಗಾರಿಕೆಯಿಂದಲೂ ತೋರಿಸುತ್ತಿದ್ದರು. ಗಾಢವಾಗಿ ಎದ್ದು ಕಾಣುವ ವರ್ಣ ಚಿತ್ತಾರ ರಂಗದಲ್ಲಿ ವೇಷವನ್ನು ಆ ಮಂದ ಬೆಳಕಲ್ಲೂ ಎದ್ದು ಕಾಣುವಂತೆ ಮಾಡುತ್ತಿದ್ದವು. ತುಳು ಪ್ರಸಂಗವೊಂದರಲ್ಲಿ ಅದು ಹೆಸರು ನೆನಪಿಲ್ಲ. ಮಾಲಿಂಗಣ್ಣ ಕುಸ್ತಿಯ ಜಟ್ಟಿ ವೇಶದಲ್ಲಿ ಬರುತ್ತಾರೆ. ಬಲಿಷ್ಠ ತೋಳುಗಳು ಮತ್ತು ಕಾಲುಗಳಿಗೆ ಸಂಕೇತವಾಗುವಂತೆ ಕೈ ಕಾಲುಗಳಿಗೆ  ಬಟ್ಟೆಯ ಮೇಲೆ ಬಟ್ಟೆಯನ್ನು ಸುತ್ತಿ ದೈತ್ಯಾಕಾರವಾಗಿ ರಂಗವೇರುವಾಗ ಅಧ್ಬುತವಾದ ಜಟ್ಟಿ ಪ್ರವೇಶವಾದ ಅನುಭವ. ಇದು ಇವರೇ ಸೃಷ್ಟಿಸುವ ಪಾತ್ರಗಳು ಇಂತಹ ಸಾವಿರಾರು  ಪಾತ್ರಗಳು ರಂಗದಲ್ಲಿ ಮಾಲಿಂಗಣ್ಣನ ವೇಶಗಾರಿಕೆಯಲ್ಲಿ ರೂಪತಳೆದಿವೆ. ಸಾಮಾನ್ಯವಾಗಿ ಕಥಕ್ಕಳಿ ಮುಂತಾದ ಕಲೆಯಲ್ಲಿ ಮುಖವರ್ಣಿಕೆಗೆ ಬೇರೆಯೇ ಕಲಾವಿದರು ಸಹಾಯಕರು ಇರುತ್ತಾರೆ. ಆದರೆ ಯಕ್ಷಗಾನದಲ್ಲಿ ಸ್ವ ಬಣ್ಣಗಾರಿಕೆಯೇ ವೈಶಿಷ್ಟ್ಯ ಅದರಲ್ಲೂ ಮಾಲಿಂಗನಂತಹವರ ಕೈಚಳಕ ಕಂಡರೆ ಯಕ್ಷಗಾನದ ವಿಶೇಷತೆ ಅರಿವಾಗುತ್ತದೆ. ಈ ವಿಶೇಷತೆಗೆ ಪೂರಕವಾಗುವಂತೆ ಮಾಲಿಂಗಣ್ಣನ ವೇಶಗಾರಿಗೆ ವರ್ಣ ವೈಭವವನ್ನು ರಂಗದಲ್ಲಿ ಮೆರೆಸಲ್ಪಡುತ್ತದೆ.

ಬಣ್ಣದ ವೇಷಗಳ ತಂತ್ರಜ್ಞಾನ ಇಂದು ಬಹಳಷ್ಟು ಬದಲಾಗಿ ಹೋಗಿದೆ. ಮೊದಲು ಬಣ್ಣಗಾರಿಕೆಯಿಂದಲೇ ಪ್ರತ್ಯೇಕಿಸಲ್ಪಡುತ್ತಿದ್ದ ವೇಷಗಾರಿಕೆ ಇಂದು ವೆತ್ಯಾಸವಿಲ್ಲದೇ ಒಟ್ಟು ಬಣ್ಣಗಾರಿಕೆಯಿಂದ ರಂಗವೇರುತ್ತದೆ. ಬಣ್ಣಗಾರಿಕೆ ಕೇವಲ ವೇಶಗಾರಿಕೆ ಎಂಬಂತಾಗಿದೆ. ಹಲವಾರು ವೇಶಗಳು ಬಣ್ಣವನ್ನು ಬದಿಗಿಟ್ಟು ಮುಖವಾಡದ ಮೊರೆ ಹೊತ್ತಿವೆ. ಇದು ಯಕ್ಷಗಾನದ ಮೂಲ ವೈಶಿಷ್ಟ್ಯಕ್ಕೆ ಧಕ್ಕೆಯಾಗುವಂತಹುದು. ವೇಶಗಳ ಮುಖವರ್ಣಿಕೆ ಅದು ಬಣ್ಣಗಾರಿಕೆಯಿಂದಲೇ ರೂಪತಳೆಯಬೇಕು. ಅದು ಯಕ್ಷಗಾನದ ನಿಜ ಬಣ್ಣಗಾರಿಕೆ. ಬಣ್ಣವಿಲ್ಲದ ಮುಖಗಳಿಗೆ  ಮುಖವರ್ಣಿಕೆ ಎಂದು ಹೇಳುವುದಕ್ಕೆ ಅರ್ಥವಿಲ್ಲ. ಅದು ಕೇವಲ ಮುಖವಾಡ. ಅದನ್ನು ಬಣ್ಣದ ವೇಶ ಎಂದು ವರ್ಗೀಕರಿಸಿದರೆ ಯಕ್ಷಗಾನದ ನಿಜ ಬಣ್ಣವೇಶಗಾರಿಕೆಯನ್ನು ಲೇವಡಿ ಮಾಡಿದಂತೆ. ಇಂದು ತಂತ್ರಜ್ಞಾನ ಬೆಳೆವಣಿಗೆಯಾಗಿದೆ. ಆದರೆ ಪರಿಣಾಮ ನಿಸ್ತೇಜವಾಗಿದೆ. ಪ್ರಭಾವವೇ ಬೀರುವುದಿಲ್ಲ. ಮಾಲಿಂಗಣ್ಣನಂತವರು ರಂಗಸ್ಥಳದಲ್ಲಿ ಕಳೆಯುವ ಸಮಯಕ್ಕಿಂತಲೂ ಅಧಿಕ ಹೊತ್ತನ್ನು ಬಣ್ಣದ ಪೆಟ್ಟಿಗೆಯ ಮುಂದೆ ಕಳೆದಿದ್ದಾರೆ. ಆದರೂ ಅವರ ವೇಶಗಾರಿಕೆಯಲ್ಲಿ ’ಇಲ್ಲಿಗೆ ಇಷ್ಟು ಸಾಕು’  ಎಂಬ ಕಾಟಾಚಾರವಿರುತ್ತಿರಲಿಲ್ಲ. ಸಂಪೂರ್ಣ ಬದ್ದತೆ ಮತ್ತು ಅರ್ಪಣಾ ಮನೋಭಾವ ಅವರ ವೇಶಗಾರಿಕೆಯಲ್ಲೂ ನಾಟ್ಯ ಅಭಿನಯದಲ್ಲೂ ಕಾಣಬಹುದಿತ್ತು. ಒಂದೆರಡು ಘಳಿಗೆಗೆ ಬಂದು ಹೋಗುವ ಪಾತ್ರಗಳಿಗೆ ಗಂಟೆಗಟ್ಟಲೆ ಬಣ್ಣ ಬಳಿಯುತ್ತಾ ಕುಳಿತುಕೊಳ್ಳುವುದೆಂದರೆ ಇಂದಿನವರು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ. ಇಂದು ಯಕ್ಷಗಾನವೆಂದರೆ ಕೇವಲ ಅನುಕರಣೆ.   ಅದರಲ್ಲೂ ತಮಗಿಷ್ಟವಾದುದಷ್ಟನ್ನೇ ಅನುಕರಿಸುತ್ತಾರೆ ಹೊರತು ಯಕ್ಷಗಾನಕ್ಕೆ ಉಚಿತವಾದುದನ್ನಲ್ಲ.    ಹಿರಿಯರ ಅನುಕರಣೆ ಮಾಡುವಾಗ ಅದರ ಆಳಕ್ಕೆ ಇಳಿಯದೆ ಪಾತ್ರದ ಅಂತರಾತ್ಮ ತಿಳಿಯದೇ ಕೇವಲ ಅನುಕರಣೆ. ಇದು ಯಕ್ಷಗಾನಕ್ಕೆ ಕ್ರಿಮಿಯಾಗಿ ಕಾಡುವ ಮಿಮಿಕ್ರಿ.  ಪರೀಕ್ಷಾ ಸಮಯದಲ್ಲಿ ನಕಲು ಹೊಡೆದು ಪಾಸಾದಂತೆ. ಉತ್ತರ ಕೇವಲ ಪತ್ರಿಕೆಯಲ್ಲಿ ಇರುತ್ತದೆ ಹೊರತು ತಲೆಯಲ್ಲಿ ಇರುವುದಿಲ್ಲ. ಇವರ ತಲೆಯೂ ಕೇವಲ ಅನುಕರಣೆಗೆ ಸೀಮಿತವಾಗಿ ಉಳಿದಂತೆ ಶೂನ್ಯವಾಗಿರುತ್ತದೆ.  ಹಾಗಾಗಿ ಮಾಲಿಂಗಣ್ಣನ ವೇಷ ಅನುಕರಣೆಗೆ ಸೀಮಿತವಾಗದೆ ಅನುಸರಣೆಗೆ ಮಾರ್ಗವಾಗಿ ಪರಿವರ್ತನೆಯಾಗಬೇಕು.

ಮಾಲಿಂಗಣ್ಣನ ಬಣ್ಣದವೇಶವಾಗಲಿ ಇತರ ವೇಷವಾಗಲೀ ಪ್ರತ್ಯೇಕಿಸುವುದು ಕಷ್ಟ. ಆದರೂ ಬಣ್ಣಕ್ಕೆ ವಿಶೇಷವಾಗಿ ಮಾಲಿಂಗ ಬಣ್ಣದವ್ಯಕ್ತಿಯಾಗಿ ಯಕ್ಷಗಾನದಲ್ಲಿ ಇತಿಹಾಸ ನಿರ್ಮಿಸಿ ಬಿಟ್ಟಿದ್ದಾರೆ. ಇವರ ವೇಶವನ್ನು ಕಾಣುವಾಗ ನಾವು ಒಂದು ಇತಿಹಾಸಕ್ಕೆ ಸಾಕ್ಷಿಯಾಗುತ್ತೇವೆ ಎಂಬ ಅರಿವು ಇರುತ್ತಿರಲಿಲ್ಲ. ಇರುತ್ತಿದ್ದರೆ?  ಅಂತ ಈಗ ಅನ್ನಿಸುತ್ತದೆ. ಮಾಲಿಂಗಣ್ಣ ಎಂದರೆ ಅದು ಯಕ್ಷಗಾನದ ಬಣ್ಣಕ್ಕೆ ಅನ್ವರ್ಥ. ಹಲವು ಸಲ ಅವರನ್ನು ವೇಷವಿಲ್ಲದೇ ಸಾಮಾನ್ಯವಾಗಿ ಕಂಡಾಗ ನಾವು ಬೇರಗಾಗಿಬಿಡುತ್ತೇವೆ. ರಂಗದಮೇಲೆ ಬಂದು ರುದ್ರ ಭೀಕರತೆಯನ್ನು ಸೃಷ್ಟಿಸುವ ಮಾಲಿಂಗಣ್ಣ ಏನು ಅರಿಯದ ಮುಗ್ಧರಂತೆ ಕಂಡು ಬರುತ್ತಿದ್ದರು. ಯಕ್ಷಗಾನದಲ್ಲಿ ಬಣ್ಣಕ್ಕೆ ತಾರಾಮೌಲ್ಯವನ್ನು ಒದಕಿಸಿ ಬಣ್ಣದ ವಿಶ್ವವಿದ್ಯಾನಿಲಯವಾದರು ಬಣ್ಣದ ಮಾಲಿಂಗಣ್ಣ. ಹಾಗಾಗಿ ಯಕ್ಷಗಾನ ಎಂದೇಕೆ ಯಾವುದೇ ಕಲೆಯನ್ನು ಪರಿಗಣಿಸಿದರೂ ಬಣ್ಣನೆಯ ಮಾತಲ್ಲ ಬಣ್ಣಕ್ಕೊಬ್ಬನೇ ಮಾಲಿಂಗ  ಅದು "ಬಣ್ಣದ ಮಾಲಿಂಗ".




Thursday, June 29, 2017

ಯಕ್ಷಗಾನ ಅವಲೋಕನ


ನಾನು ಸರಿ ಸುಮಾರು ನಾಲ್ಕು ದಶಕಗಳಿಂದಲು ಅಧಿಕ ಅಂದರೆ ನಲ್ವತ್ತು ವರ್ಷಗಳಿಂದ ಯಕ್ಷಗಾನವನ್ನು ನೋಡಿ ಅನುಭವಿಸಿದವನು. ಅಂದಿನಿಂದ ಇಂದಿನವರೆಗೂ ನನ್ನದೇ ಆದ ಅಭಿರುಚಿಯೂ ಹಲವು ಬದಲಾವಣೆಗಳನ್ನು ಕಂಡಿವೆ. ಅಭಿರುಚಿ ಬದಲಾಗುವುದಕ್ಕೆ ಹಲವು ಕಾರಣಗಳಿರುತ್ತವೆ. ನಮ್ಮ ಪರಿಸರ, ಪ್ರೌಢವಾಗುವ ನಮ್ಮ ಮಾನಸಿಕ ತಿಳುವಳಿಕೆ ಹೀಗೆ ಅಭಿರುಚಿ ಬದಲಾಗುತ್ತಾ ಇರುತ್ತದೆ. ಅಭಿರುಚಿ ಬದಲಾದರೂ ಅತೃಪ್ತಿಯೊಂದು ಹಲವುಸಲ ನೆರಳಿನಂತೆ ಹಿಂಬಾಲಿಸುತ್ತದೆ. ಆಗ ಅಭಿರುಚಿ ಬದಲಾಯಿತೋ ಅಥವಾ ಅನುಭವಿಸುವ ಕಲೆ ಬದಲಾಯಿತೋ ಎಂಬ ಅನುಮಾನ ಮೂಡುತ್ತದೆ. ಯಾಕೆಂದರೆ ಬದಲಾದ ಅಭಿರುಚಿಯೊಂದಿಗೆ ನಾವು ಬದಲಾಗುತ್ತ ಬಹಳ ದೂರ ಬಂದಿರುತ್ತೇವೆ. ಆದರೆ ಅತೃಪ್ತಿಯ ಅರಿವಾಗಬೇಕಾದರೆ ಆರಂಭದ ನೆನಪಾಗಬೇಕು.

ಕೆಲವು ತಿಂಗಳ ಮೊದಲು ನನ್ನ ಆತ್ಮೀಯ ಮಿತ್ರ ಶ್ರೀ ಕಟೀಲು ಸಿತ್ಲ ರಂಗನಾಥರು  ತಮ್ಮ ಹವ್ಯಾಸದಂತೆ ಸಂಶೋಧಕ ವಿದ್ವಾಂಸ ಶ್ರೀ ರಾಘವನಂಬಿಯಾರರ ಸಂದರ್ಶನ ಮಾಡಿದ್ದರು. ಯಾವುದೇ ಔಪಚಾರಿಕತೆಯ ಪರಿಧಿ ಇಲ್ಲದೆ ಸ್ವತಂತ್ರವಾಗಿ ಮಾಡಿದ ಸಂದರ್ಶನವದು. ಅದಕ್ಕಾಗಿ ಮಿತ್ರರ ಪ್ರಯತ್ನ ಶ್ಲಾಘನೀಯ. ಹಾಗಾಗಿ ಇಲ್ಲಿ ಶ್ರೀ ನಂಬಿಯಾರರು ತೆರೆದ ಮನಸ್ಸಿನಿಂದ ಯಕ್ಷಗಾನದ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ಹಂಚಿಕೊಂಡಿದ್ದರು ಎನ್ನುವುದಕ್ಕಿಂತ ತಿಳಿಯ ಪಡಿಸಿದರು ಎನ್ನುವುದೇ ಸೂಕ್ತವೇನೋ ಎಂದು ಅನ್ನಿಸುತ್ತದೆ. ಯಾಕೆಂದರೆ ಸಮಗ್ರ ಯಕ್ಷಗಾನಕ್ಕೆ ಸಂಬಂಧಿಸಿ ಅದು ತೆಂಕು ಬಡಗು ಮೂಡಲಪಾಯ ಹೆಚ್ಚೇಕೆ ಸಹೋದರ ಕಲೆಯಾದ ಕಥಕ್ಕಳಿಯ ಬಗ್ಗೆಯೂ ಜ್ಞಾನ ಸಂಪನ್ನವಾಗಿಯೂ ಅಧಿಕಾರಯುತವಾಗಿಯೂ ಮಾತನಾಡಬಲ್ಲ ಸ್ಥಾನ ಅವರದು. ಸಂದರ್ಶನ ಪರಿಸರ ಸಂದರ್ಭವೂ ಹಾಗೆ. ಇಲ್ಲಿ ಯಾವುದೇ ಔಪಚಾರಿಕತೆಯಾಗಲಿ ನಿಬಂಧನೆಗಳಾಗಲಿ ಇಲ್ಲದೆ ಬಹಳ ಮುಕ್ತವಾಗಿ ಮತ್ತು ಸರಳವಾಗಿ ಸಂದರ್ಶನ ನಡೆಯಿತು. ಬಹುಶಃ ಸಂದರ್ಶನ ಎಂಬ ಶಬ್ದಾರ್ಥ ಪರಿಗಣಿಸಿದರೂ ನಿಜಾರ್ಥದಲ್ಲೂ ಇದು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅದು ಸಂ ದರ್ಶನವೇ. ಈ ಸಂದರ್ಶನವನ್ನು ಹಲವು ಸಲ ನೋಡಿದೆ ಕೇಳಿದೆ. ಅಲ್ಲಿಂದ ನನ್ನ ಮನಸ್ಸಲ್ಲಿ ಎಲ್ಲೋ ಅವಿತಿದ್ದ ಅತೃಪ್ತಿಯ ಕಾರಣ ತಿಳಿದು ಬಿಟ್ಟಿತು.  ಈ ಅತೃಪ್ತಿಯ ಚಾದರ ಕಾಲಿಗೆಳೆದರೆ ತಲೆಗಿಲ್ಲ ಎಂಬಂತೆ ಯಾಕಾಗುತ್ತದೆಂದು ಅರಿವಾದ ನಂತರ ಅನುಭವಿಸುವ ರೀತಿಯೂ ಬದಲಾಗಿಬಿಟ್ಟಿತು. ಸಿಕ್ಕಿದ ಚಾದರದೊಳಗೆ ಅವಿತು ವಿರಮಿಸುವುದು ಹೊಂದಾಣಿಕೆಯಾಗುತ್ತದೆ. ನಮ್ಮದೇ ಪರಿಸರದ ವಸ್ತು ನಮಗೇ  ಆದರೂ ಇಂದು ಅನುಭವಿಸುವುದಕ್ಕೆ ಹೊಂದಾಣಿಕೆ ಅಗತ್ಯವಿದೆ.

ಶ್ರೀ ನಂಬಿಯಾರರು ತಮ್ಮ ಮಾತುಗಳಲ್ಲಿ ಅಂದಿನ ಮಹಾನ್ ಕಲಾವಿದರ ಉಲ್ಲೇಖ ಮಾಡಿದ್ದರು. ಆ ಕಲಾವಿದರ ಯಕ್ಷಗಾನ ನಾಟ್ಯ ಅರ್ಥಗಾರಿಕೆ ಅಭಿನಯ ರಂಗಚಲನೆ ಮತ್ತು ಅಪಾರವಾದ ಜ್ಞಾನ. ಅದರಲ್ಲಿ ನಾನು ನೋಡದೆ ಇದ್ದ ಕಲಾವಿದರ ಹೆಸರು ಇದ್ದರೂ ನಾನು ನೋಡಿದ ಅನುಭವಿಸಿದ ಕಲಾವಿದರಾದ ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಅಳಕೆ ರಾಮಯ್ಯ ರೈ, ಪಡ್ರೆ ಚಂದು ಇವರ ಬಗ್ಗೆ ಅವರ ವೇಷಗಾರಿಕೆ ಬಗ್ಗೆ ಬಹಳಷ್ಟು ಹೇಳಿದರು. ಅಳಕೆ ರೈಗಳ ವೇಷ ಎಂದರೆ ಅದೂ ಪೂರ್ಣ ಪ್ರಮಾಣದ ಯಕ್ಷಗಾನವೇ ಆಗಿತ್ತು. ಯಕ್ಷಗಾನದ ಇತಿಮಿತಿಯಲ್ಲೇ ಅವರ ಪಾತ್ರನಿರ್ವಹಣೆ ಅದ್ಬುತವಾಗಿತ್ತು. ಹಲವಾರು ಬಗೆಯ ನಾಟ್ಯವನ್ನು ಅಭಿನಯವನ್ನು ಮತ್ತು ಯಕ್ಷಗಾನದ ಅಪಾರ ಜ್ಞಾನವನ್ನು ಹೊಂದಿದ ಅವರಂತಹ ಕಲಾವಿದ ನಂತರದ ಪೀಳಿಗೆಯಲ್ಲಿ ಬಂದಿಲ್ಲ. ಕಾರಣವೇನು? ಅದು ಸ್ಪಷ್ಟ ಒಂದು ಭ್ಯವ್ಯ ಪರಂಪರೆಯ ಅವಗಣನೆ. ಅದನ್ನು ಮುಂದುವರೆಸಿಕೊಂಡು ಬಂದ ಘನ ಶಿಷ್ಯತ್ವ ಯಕ್ಷಗಾನಕ್ಕೆ ಒಲಿಯಲೇ ಇಲ್ಲ. ಅದರನಂತರದ ಪೀಳಿಗೆಯಲ್ಲಿ ಸಂಪಾಜೆಯವರಂತಹ ಕಲಾವಿದರು ಮುಂದುವರೆಸಿದರಾದರೂ ಸಾಗರಕ್ಕೆ ತಂಬಿಗೆ ನೀರು ಎಂಬಂತಾಗಿ ಅವರು ಪ್ರತ್ಯೇಕವಾಗಿ ಉಳಿದರು.  ಇಂದು ಆ ರೀತಿಯ ಜ್ಜಾನವನ್ನು ಹೊಂದಿರುವ ಏಕ ಮಾತ್ರ ಕಲಾವಿದನೂ ನಮ್ಮ ನಡುವೆ ಇಲ್ಲ ಎನ್ನುವಾಗ ಖೇದವಾಗುತ್ತದೆ. ಅದಕ್ಕೆ ಕಾರಣ ಬೇರೆ ಯಾವುದೋ ಕಲಾ ಪ್ರಕಾರಗಳ ಧಾಳಿಯಲ್ಲ. ನಮಗೆ ನಾವೇ ಕಾರಣರು.

ಬಲಿಪ್ಪರು ಪ್ರತಿಸಲ ಹೇಳುವುದುಂಟು, ಅವರ ಜೀವಮಾನದಲ್ಲಿ ಅವರು ಅಂಗೀಕರಿಸಿದ ಅವರು ಕಂಡ ಕಲಾವಿದ ಎಂದರೆ ಅದು ಅಳಕೆ ರಾಮಯ್ಯ ರೈಗಳು. ಅವರದೇ ಪದಕ್ಕೆ ಒಂದೇ ತಾಳಕ್ಕೆ ಐದಾರು ಬಗೆಯಲ್ಲಿ ಕುಣಿದು ಅಭಿನಯಿಸುತ್ತಿದ್ದರು. ಅದು ಶುದ್ದ ಯಕ್ಷಗಾನ ಶೈಲಿಯವುಗಳು. ದೀರ್ಘ ಅಲಾಪನೆಯಿಲ್ಲದ ಭಾಗವತಿಕೆಗೆ ಚಾಲುಕುಣಿತವಿಲ್ಲದ ಆ ನರ್ತನ ವೈವಿಧ್ಯವನ್ನು ಕಲ್ಪಿಸುವಾಗಲೇ ರೋಮಾಂಚನವಾಗುತ್ತದೆ. ಪದದಿಂದ ಪದಕ್ಕೆ ಶಬ್ದಗಳಿಂದ ಶಬ್ದಕ್ಕೆ ಅಂಗಚಲನೆ ಶಾರೀಕ ಭಾಷೆ ಎಲ್ಲದಕ್ಕೂ ಒಪ್ಪವಾಗುವಂತಹ ಅರ್ಥಗಾರಿಕೆ. ಇಂದು ಅದು ಬೇಕೆಂದರೆ ಸಿಗುವ ಭರವಸೆಯುಂಟೇ? ಬಾಯಿತಾಳದ ಶುದ್ದ ಪರಂಪರೆಯ ಪದಗಳು ಕೇಳಬೇಕೆಂದರೆ ಅದು ಸಾಧ್ಯವಾಗುತ್ತದೆಯೇ? ಬಲಿಪ್ಪಜ್ಜನ ಬಾಯಿತಾಳದ ತೈದಿನ್ನ ತೈಗೆ ಈಗ ಮನಸೋಲದೆ ಇರುವವರು ಯಾರು? ಅದು ಬೇಕು ಎಂದಿದ್ದರೆ ಅದನ್ನು ಮುಂದುವರೆಸುವ ಪ್ರೌಢಿಮೆ ಎಷ್ಟು ಜನರಲ್ಲಿದೆ? ಅದರಂತೆ ಅಧಿಕಾರಯುತವಾಗಿ ನಿರ್ವಚಿಸುವ ಸಕ್ರಿಯ ಕಲಾವಿದರು ಯಾರು? ಇಂದಿನ ಕಲಾವಿದರಿಗೆ ಶಿಕ್ಷಣದ ಕೊರತೆಯಿದೆ. ಅಭ್ಯಾಸದ  ನ್ಯೂನ್ಯತೆಯಿದೆ. ಅಭ್ಯಾಸ ಪೂರ್ಣವಾಗುವ ಮೊದಲೇ ರಂಗವೇರಿ ತಾರಾಮೌಲ್ಯದತ್ತ ಕಣ್ಣು ನೆಟ್ಟಿರುತ್ತಾರೆ ಈ ಎಲ್ಲ  ಕೊರತೆಯನ್ನು ನಿಭಾಯಿಸಿ ರಂಗದಲ್ಲಿ ಸಕ್ರಿಯರಾಗುವುದಕ್ಕೆ ಇನ್ನಿಲ್ಲದ ಸರ್ಕಸ್ ಮಾಡಬೇಕಾಗುತ್ತದೆ.
ನಂಬಿಯಾರರ ಸಂದರ್ಶನದ ಹಲವು ಮಾತುಗಳನ್ನು ಕೇಳಿದಾಗ ನರ್ತನದಲ್ಲಿ ಹಿಮ್ಮೇಳದಲ್ಲಿ ಆ ವೈವಿಧ್ಯವನ್ನು ಕೇಳಿದಾಗ ನನ್ನಲ್ಲಿ ಒಳಗೇ ಅವಿತಿದ್ದ ಅತೃಪ್ತಿ ಏನು ಎಂಬುದರ ಅರಿವಾಯಿತು. ಅದರಲ್ಲೂ ಅವರು ಯಕ್ಷಗಾನ ಪದ ಚಂದಸ್ಸು ಅದರ ಜತೆಗೆ ಸಾಗುವ ಪ್ರಸಂಗನಡೆ ಸನ್ನಿವೇಶಕ್ಕೆ  ತಕ್ಕಂತೆ ಪದಗಳ ಗತಿ ಒಂದೇ ಎರಡೇ ಕೆದಕಿದಷ್ಟೂ ವಿಚಾರಗಳು ತವಕಿಸುತ್ತಿದ್ದವು. ಯಕ್ಷಗಾನ ಪದಗಳ ಮಾತ್ರಗಣ ಛಂದಸ್ಸು ತಾಳ ಲಯ ಈ ಚೌಕಟ್ಟಿನಲ್ಲಿ ಹೇಗೆ ಹಾಡಬೇಕು ಯಾಕೆ ಹಾಡಬೇಕು ಇದನ್ನು ಅವರು ವಿವರಿಸಿ ಹೇಳುವಾಗ ಕಳೆದು ಹೋದದ್ದು ನಿರ್ಲಕ್ಷ್ಯಕ್ಕೆ ಒಳಗಾದದ್ದು ಬಹಳವಿದೆ ಎಂದನಿಸುತ್ತದೆ.  ಯಕ್ಷಗಾನದಲ್ಲಿ ಹೊರಮುಖಕ್ಕೆ ಕಾಣುವುದು ವೇಷಗಾರಿಕೆ ಕುಣಿತ ಹಿಮ್ಮೇಳ ಮತ್ತೆ ಮಾತುಗಾರಿಕೆ. ಆದರೆ ಇವಿಷ್ಟೇ ಅಲ್ಲದೆ ಯಕ್ಷಗಾನದ ಆಳಕ್ಕೆ ಇಳಿದಂತೆ ವಿಷಯಗಳು ಸಿಗುತ್ತವೆ. ಈ ವಿಷಯ ಚಿಂತನೆಗೆಳಿಗೆ ಸರಿಯಾದ ಕಾರಣಗಳು ಸಿಗುತ್ತವೆ. ಯಕ್ಷಗಾನ ಕೇವಲ ಜಾನಪದ ಕಲೆಯಾದರೂ ಶತಮಾನಗಳ ಇತಿಹಾಸ ಇರುವ ಯಕ್ಷಗಾನ ಇವುಗಳನ್ನೆಲ್ಲ ಕ್ರಮಾಗತವಾಗಿ ಹೊತ್ತುಕೊಂಡು ಹೇಗೆ ಬಂತು. ತಲೆಮಾರಿಂದ ತಲೆಮಾರಿಗೆ ಅದು ರವಾನೆಯಾದ ಬಗೆ ಹೇಗೆ? ಶಾಸ್ತ್ರೀಯ ಕಲೆಗೆ ಏನೇನೂ ಕಡಿಮೆಯಿಲ್ಲದೆ ಜನಪದ ನೆರಳಲ್ಲೆ ಬೆಳೆದು ಬಂದ ಕಲೆ. ಅವರು ಬಿಡಿಸಿಟ್ಟ ವಿಚಾರಗಳು ವಿಶಾಲ ಚಿಂತನೆಯನ್ನು ಒಳಗೊಂಡಿತ್ತು.ಅವುಗಳನ್ನು ಇಂದು ಒಬ್ಬ ಪಳಗಿದ ಕಲಾವಿದನಲ್ಲಿ ಕೇಳಿದರೂ ಉತ್ತರವಿಲ್ಲದ ವಿವರಿಸಲಾಗದ ವಿಚಾರಗಳಾಗಿಯೇ ಉಳಿದು ಬಿಡುತ್ತದೆ.

 ಅಂದಿನಿಂದ ಈಗಿನ ಯಕ್ಷಗಾನಗಳಲ್ಲಿ ಆಸಕ್ತಿಯೇ ಕಡಿಮೆಯಾಯಿತು. ಇಂದು ಹಲವು ಯಕ್ಷಗಾನಗಳನ್ನು ನೋಡಿದರೂ ಪೂರ್ಣ ತೃಪ್ತಿ ಅನುಭವಿಸುವುದಿಲ್ಲ.   ಶ್ರೀ ಅಳಕೆ ರೈಗಳ ಹಲವು ವೇಷಗಳನ್ನು ನೋಡಿದ್ದೇನೆ. ಪೌರಾಣಿಕ ಪ್ರಸಂಗಗಳಲ್ಲಿ ಆನಂತರದ ಕರ್ನಾಟಕ ಮೇಳದ ತುಳು ಪ್ರಸಂಗಗಳಲ್ಲಿ ಅವರ ವೇಷಗಾರಿಕೆ ನೋಡಿದ್ದೇನೆ. ಅಂದು ಅಷ್ಟು ತಿಳುವಳಿಕೆಯಿಲ್ಲದ ಬಾಲ್ಯದ ದಿನಗಳು ಎಂಬುದಕ್ಕೆ ನನಗೆ ವಿಷಾದವಿದೆ. ಪಡ್ರೇಚಂದು ಇವರ ದೇವಿ ಮಹಾತ್ಮೆ ಸುಗ್ರೀವನ ಪಾತ್ರ ಈಗಲೂ ಕಣ್ಣ ಮುಂದೆ ಇದೆ. ಅದರ ವಿಶಿಷ್ಟ್ಯಗಳನ್ನೆಲ್ಲ ನಂಬಿಯಾರ ಮುಖದಲ್ಲಿ ಕೇಳಿದಾಗ ನಾವು ಕಳೆದುಕೊಂಡದ್ದು ಕೇವಲ ಭೌತಿಕ ಶರೀರಗಳನ್ನಲ್ಲ  ಇಂತಹ ಅನರ್ಘ್ಯ ಭಂಡಾರವನ್ನು ಶಾಪಗ್ರಸ್ಥರಂತೆ ಕಡಲಿಗೆ ಎಸೆದಿದ್ದೇವೆ ಎಂದನಿಸುತ್ತದೆ. ಈಗ ಎಲ್ಲಿದೆ? ಇದ್ದರೂ ಅದಕ್ಕೆ ಮೌಲ್ಯ ಸಿಗಬಹುದೇ? ಇಂದಿನ ಯಕ್ಷಗಾನದಲ್ಲಿ ಬೇಕಾದಷ್ಟು ವಿಭವಗಳನ್ನು ಸೇರಿಸಿ ಹೊಸ ಪಾಕ ಮಾಡಿ ರೂಪಾಂತರ ಮಾಡಿಯಾಗಿದೆ. ಅದುವೇ ನಮ್ಮ ಯಕ್ಷಗಾನ ಎನ್ನುವಾಗ ನೋಡುವುದಕ್ಕೆ ಮನಸ್ಸುಬರುವುದಿಲ್ಲ. ಅದನ್ನು ನೋಡಿದರೆ ಅಂದಿನ ಹಿರಿಯ ಕಲಾವಿದರಿಗೆ ನಾನೂ ಪರೋಕ್ಷವಾಗಿ ಅವಮಾನಿಸಿದಂತೆ ಎಂದನ್ನಿಸುತ್ತದೆ. ಬಹುಶಃ ನನ್ನ ಅನಿಸಿಕೆಯೇ ತಪ್ಪಾಗಿರಬಹುದು. ಮಾನಸಿಕ ನೆಲೆಯೇ ತಪ್ಪಿರಬಹುದೇ? ಯಕ್ಷಗಾನ ಪರಂಪರೆಯ ಹಲವು ಅಮೂಲ್ಯ ವಿಷಯಗಳು ಅವಜ್ಞೆಗೆ ಒಳಗಾಗಿದೆ. ವಿಷಯಗಳು ಗಮನ ಇಲ್ಲದೇ ಕಳೆದುಹೋಗಿದೆ ಎಂದು ಅರಿವಾಗಬೇಕಾದರೆ ಅವುಗಳು ಇತ್ತು ಎಂಬುದು ತಿಳಿಯಬೇಕಾಗುತ್ತದೆ. ಇಲ್ಲವಾದರೆ ಕಳೆದು ಹೋದದ್ದು ತಿಳಿಯುವುದಾದರೂ ಹೇಗೆ?  ಯಕ್ಷಗಾನ ಪರಂಪರೆಯನ್ನು ಚಿತೆಗೆ ಏರಿಸುವ ಪ್ರವೃತ್ತಿಯಲ್ಲಿ ಮುಂದೊಂದು ದಿನ ಅಸ್ಥಿ ಸಂಚಯನಕ್ಕೂ ಪರದಾಡಬೇಕಾಗಬಹುದು.

ಈಗಲೂ ಶ್ರೇಷ್ಠ ಕಲಾವಿದರು ಇಲ್ಲ ಎಂದಲ್ಲ. ಆದರೆ ಅವರಲ್ಲಿ ತಾರುಣ್ಯದ ಉತ್ಸಾಹ ಎಷ್ಟು ಅಡಗಿದೆ? ಅವರಲ್ಲೇ ಕೇಳಿದರೆ ಇಂದಿನ ಬಗ್ಗೆ ನಿರುತ್ಸಾಹದಿಂದಲೇ ಪ್ರತಿಕ್ರಿಯಿಸುತ್ತಾರೆ. ಯಾಕೆಂದರೆ ಗ್ರಾಹಕರು ಇಲ್ಲವಾದರೆ ವಸ್ತು ಅದೆಷ್ಟು ಉತ್ತಮವಾಗಿದ್ದರೂ ಅದನ್ನು ಅಂಗಡಿಯವನು ಇರಿಸಿಕೊಳ್ಳುವುದಿಲ್ಲ. ಪರಂಪರೆ ಎಂದರೆ ಇಂದು ಮೌಲ್ಯ ಇದ್ದರೂ ಗಿರಾಕಿ ಇಲ್ಲದ ವಸ್ತುವಿನಂತೆ. ಒಂದು ವೇಳೆ ಯಾರಾದರೊಬ್ಬ ಮೌಲ್ಯ ಅರಿತು ಅದನ್ನು ಕೊಂಡು ಅನುಭವಿಸಿದರೂ ಅತನ ಬಗ್ಗೆ ಅನುಮಾನಿಸುತ್ತಾರೆ.

ಕೆಲವು ಸಮಯದ ಹಿಂದೆ ಶ್ರೀ ಕೋಳ್ಯೂರು ರಾಮಚಂದ್ರರಾಯರು ಬೆಂಗಳೂರಿನ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು. ಪ್ರೇಕ್ಷಕ ಜಾಗ್ರತನಾಗಬೇಕು. ಯಕ್ಷಗಾನಕ್ಕೆ ಅಲ್ಲದೇ ಇದ್ದದ್ದು ರಂಗಸ್ಥಳದಲ್ಲಿ ಕಂಡಾಗ ಕಲ್ಲು ಎಸೆಯಬೇಕು. ಅವರ ಮನಸ್ಸಿನ ಅಂತರಾಳದ ಹತಾಶೆಯ ಕ್ರೋಧವದು. ಒಬ್ಬ ಹಿರಿಯ ಕಲಾವಿದ ಹೀಗೆ ಪ್ರತಿಕ್ರಿಯಿಸುವ ಹಾಗೆ ಪರಿಸರ ಬೆಳೆಯಬಾರದಿತ್ತು. ಹೋಗಲಿ ಅವರು ಹೇಳಿದ್ದಾರೆ ಎಂದು ಯಕ್ಷಗಾನದ ಮೇಲಿನ ಅಭಿಮಾನದಿಂದ ಕಲ್ಲು ಬಿಸಾಡುವುದಿರಲಿ.. ನಾನು ನೋಡುವುದಿಲ್ಲ ಎಂದು ಎದ್ದು ಬಂದರೂ ನಮ್ಮನ್ನು ಬಲವಂತವಾಗಿ ಕೂರಿಸಿ ಬಿಡುವ ಪ್ರಮೇಯ ಮತ್ತು ಅವುಗಳ ಬಗ್ಗೆ ತುಸು ಪ್ರತಿಕ್ರಿಯಿಸಿದರೂ ಬೆದರಿಕೆ ಕರೆಗಳಿಗೆ ಉತ್ತರಿಸಬೇಕಾಗುತ್ತದೆ.  

ತಡವಾಗಿಯಾದರೂ ಹಳೆಯದರ ಮೌಲ್ಯ ಅಲ್ಲೋ ಇಲ್ಲೋ ಗುರುತಿಸಲ್ಪಡುತ್ತದೆ ಇಲ್ಲ ಎನ್ನುವ ಹಾಗಿಲ್ಲ. ಆವಾಗ ಬಲಿಪ್ಪರ ನೆನಪಾಗುತ್ತದೆ. ಉಳಿದಂತೆ ಅವರ ಮಾತಿಗೆಷ್ಟು ಮನ್ನಣೆ ಸಿಗುತ್ತದೆ? ಇಂದಿಗೂ ಅಪರೂಪವೆನ್ನುವಂಥ ಪ್ರಸಂಗನಡೆಯನ್ನು ವಿವರಿಸುವುದಕ್ಕೆ ಅವರ ಅಗತ್ಯವಿರುತ್ತದೆ. ಹಲವು ಸಲ ಅದು ಆ ಒಂದು ಪ್ರಸಂಗದ ಒಂದು ಪ್ರದರ್ಶನಕ್ಕಷ್ಟೇ ಸೀಮಿತವಾಗುತ್ತದೆ. ಅವರು ಯಾವುದೇ ಪ್ರಲೋಭನೆಗೆ ಒಳಗಾಗದೆ ಯಾವುದೇ ಪ್ರಭಾವಕ್ಕೂ ಶರಣಾಗದೇ ಶುದ್ದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ.  ಅದಕ್ಕೂ ಅವರು ಸಹಿಸಿಕೊಂಡ ನೋವೆಷ್ಟಿರಬಹುದು? ಅದು ಅವರ ಅಂತರಂಗವನ್ನು  ಹೊಕ್ಕಿ ನೊಡಬೇಕು. ಹಾಗಾಗಿ ಪರಂಪರೆಯ ಕಲೆ ಯಕ್ಷಗಾನ. ಪರಂಪರೆಯ ಯಕ್ಷಗಾನದ ಕಿಂಚಿತ್ ಜ್ಞಾನವೂ ಇಲ್ಲದೇ ಯಕ್ಷಗಾನದ ಬಗ್ಗೆ ಮಾತನಾಡುತ್ತಾರೆ.   ಅದರಿಂದ ಪರಂಪರೆ ಎಂಬ ಶಬ್ದವನ್ನು ಅಳಿಸುವುದೇ ಉತ್ತಮ.
ಒಂದು ಕಲೆ ಉಳಿಯಬೇಕಿದ್ದರೆ ಅದು ನಿಂತ ನೀರಾಗಬಾರದು. ಅದರಲ್ಲಿ ನಿರಂತರ ಸೃಜನ ಶೀಲತೆ ಸೃಷ್ಟಿಯಾಗಬೇಕು. ಹಾಗಿರುವಾಗ ಕೆಲವುಗಳನ್ನು ಬಿಡಬೇಕಾಗುವುದೋ ಮಾರ್ಪಾಡು ಮಾಡುವುದೋ ಕಾಲಕ್ಕೆ ತಕ್ಕಂತೆ ಅನಿವಾರ್ಯವಾಗುತ್ತದೆ, ಎಂಬುದೇನೋ ಸರಿ. ಆದರೆ ಹಳೆಯದನ್ನು ತಿಳಿಯಬಾರದು, ಅದರ ಅಭ್ಯಾಸವೂ ಸಲ್ಲದು ಎಂಬುದಿದೆಯೇ? ಅದರಲ್ಲಿ ಎಂತದೂ ಇಲ್ಲ. ಅದರಿಂದೇನು ಪ್ರಯೋಜನ ಎಂದು ಅದನ್ನು ತಳ್ಳಿ ಹಾಕಬಹುದೇ? ಹಳೆಯದನ್ನು ಉಳಿಸಿಕೊಂಡು ಹೊಸದರ ಆವಿಷ್ಕಾರವಾಗಬೇಕು ಹಾಗಾಗಿಯೇ ಅಳಕೆ ರಾಮ ರೈಗಳ ತುಳು ಪ್ರಸಂಗಗಳ ವೇಶವನ್ನು ಉಲ್ಲೇಖಿಸಿದ್ದು.  ಆವಿಷ್ಕಾರದ ರೂಪದಲ್ಲಿ ಕಲೆ ಜನ ಪ್ರಿಯವಾಗಬೇಕು ಎಂಬ ನೆಲೆಯಲ್ಲಿ ಅದೇನನ್ನೋ ಬಳಕೆ ತರುತ್ತೇವೆ. ಅದಕ್ಕೆ ರಾಗ ತಾಳ ನರ್ತನ ವೈವಿಧ್ಯದ ಉದಾಹರಣೆಯನ್ನು ಕೊಡುತ್ತೇವೆ. ಆದರೆ ಅದರಲ್ಲಿ ಮೂಲ ಯಕ್ಷಗಾನ ಎಷ್ಟು ಉಳಿಯುತ್ತದೆ?  ಯಕ್ಷಗಾನದ ಹೊಸ ನೀರು ಹೊಸ ಅಲೆ ಬರಬೇಕು. ಆದರೆ ಅದು ದಡದಲ್ಲಿದ್ದ ಹೆಮ್ಮರವನ್ನು ಕಿತ್ತುಕೊಂಡು ಹೋಗಿ ಸ್ಥಳದ ಪರಿಸರದ ಗುರುತೇ ಸಿಗದಂತೆ ಮಾಡಬಾರದಲ್ಲವೇ?  ಯಕ್ಷಗಾನ ಪರಂಪರೆಯ ಮಟ್ಟುಗಳು ಶೈಲಿಗಳು ಶತಮಾನದಿಂದ ಜತನದಿಂದ ಮೊನ್ನೆ ಮೊನ್ನೆತನಕವೂ ಉಳಿದು ಬಂತು. ಆದರೆ ಅವಿಷ್ಕಾರ ಗೊಂಡ ಯಕ್ಷಗಾನದಲ್ಲಿ ಕಳೆದ ವರ್ಷದ ಪ್ರಸಂಗವೇ ಮೂಲೆ ಗುಂಪಾಗಿ ಹಳಸಿದ ವಸ್ತುವಾಗುತ್ತದೆ. ಅದರ ಅರ್ಥ ಇಂದು ಆವಿಷ್ಕರಿಸಿದ ವಸ್ತುಗಳಾವುದಕ್ಕೂ ಆಯುಷ್ಯವಿಲ್ಲ. ಆದರೂ ಅದನ್ನೇ ಯಕ್ಷಗಾನ ಎಂದು ತೋರಿಸುವಲ್ಲಿನ ಪಟ್ಟ ಭದ್ರ ಹಿತಾಸಕ್ತಿ ಮಾತ್ರ ವಿಚಿತ್ರವಾಗುತ್ತದೆ.

ಶಾಸ್ತ್ರೀಯ ಸಂಗೀತ ಭರತನಾಟ್ಯ ಮುಂತಾದ ಶಾಸ್ತ್ರೀಯ ಕಲೆಗಳಲ್ಲೂ ಸಾಕಷ್ಟು ಅವಿಷ್ಕಾರವಾದರೂ ಆ ಕಲೆ ಮೂಲರೂಪದಲ್ಲಿ ಹಾಗೆ ಉಳಿದಿದೆ. ಶಾಸ್ತ್ರೀಯ ಸಂಗೀತ ಲಘು ಸಂಗೀತವಾಗಿ ಸಿನಿಮಾ ಸಂಗೀತವಾಗಿ ಬದಲಾಗಿ ಹೋದರೂ ಇಂದಿಗೂ ಶಾಸ್ತ್ರೀಯ ಸಂಗೀತ ಅದೇ ಮಟ್ಟದಲ್ಲಿ ಉಳಿದುಕೊಂಡಿದೆ. ಅದನ್ನರಸಿಕೊಂಡು ಹೋಗುವ ಪ್ರೇಕ್ಷಕನೂ ಉಳಿದಿದ್ದಾನೆ. ಪರಂಪರೆಯ ಯಕ್ಷಗಾನವೂ ಅದೇ ರೀತಿ ಪ್ರೇಕ್ಷಕನಿಗೆ ಸಿಗುವಂತಾಗಬೇಕು.  

ಯಕ್ಷಗಾನ ಇಂದು ಜಗದಗಲ ಜನಪ್ರಿಯವಾಗಿದೆ. ನರ್ತನದಲ್ಲಿ , ಯಕ್ಷಗಾನದ ಹಾಡುಗಾರಿಕೆಯಲ್ಲಿ ಹಿಮ್ಮೇಳವಾದನದಲ್ಲಿ  ಅದರ ರಂಗ ಚಲನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಲವಾರು ಕಲಾ ಪ್ರಕಾರಗಳು ಕಾಲಕ್ಕೆ ತಕ್ಕಂತೆ ಇದರಲ್ಲಿ ಮಿಶ್ರವಾಗಿವೆ. ಹಲವು ಸಲ ನಾವು ಯಕ್ಷಗಾನವನ್ನು ನೋಡುತ್ತಿದ್ದೇವೋ ಅಲ್ಲ ಬೇರೆ ಇನ್ನಾವುದೋ ಕಲೆಯನ್ನು ನೋಡುತ್ತಿದ್ದೇವೋ ಎಂಬ ಭ್ರಮೆಯುಂಟಾಗುತ್ತದೆ. ಅದರ ಸರಿ ತಪ್ಪು ವಿಶ್ಲೇಷಣೆ ಒತ್ತಟ್ಟಿಗಿರಲಿ ಅದರ ಪರಿಣಾಮವನ್ನು ಅದೇ ರೀತಿಯಲ್ಲಿ ವಿಶ್ಲೇಶಿಸವುದಿದ್ದರೆ,  ಯಕ್ಷಗಾನ ಕರಾವಳಿ ಬಿಟ್ಟು ಸೀಮೆ ದಾಟಿ ಹೋಗಿ ದಶಕಗಳೇ ಸಂದಿರಬಹುದು. ’ಯಕ್ಷಗಾನ’  ಎಂದು ದೂರದ ಉತ್ತರ ಭಾರತದ ಯಾವುದಾದರೂ ಒಂದು ಹಳ್ಳಿಯಲ್ಲಿ  ಜನಪ್ರಿಯತೆಗೆ ಬಲಿಬಿದ್ದು ಇಲ್ಲಿ  ಆವಿಷ್ಕಾರಗೊಂಡ ಈಗಿನ ಯಕ್ಷಗಾನವನ್ನು ಅಲ್ಲಿ ಪ್ರದರ್ಶಿಸಿದರೆ ...ಮುಂದೊಂದು ದಿನ ಅಲ್ಲಿಯ ಜನಗಳು ಹೇಳಿಯಾರು,  ಇದು ನಮ್ಮ ಕೂಚುಪುಡಿಯೋ ಮಣಿಪುರಿಯೋ ಮತ್ತೊಂದೋ ಅದರಂತೆ ಇದೆ ಅಲ್ಲವೇ? ಇದು ಯಕ್ಷಗಾನವೇ? ಯಕ್ಷಗಾನ ಎಂದರೆ ಇಷ್ಟೇಯಾ? ಈಗ ದೇಶದ ಗಡಿದಾಟಿ ವಿದೇಶಕ್ಕೂ ಯಕ್ಷಗಾನ ಪಸರಿಸಿದೆ. ಸಂತೋಷ. ಆದರೆ ವಿದೇಶಿಗರು ಈ ಯಕ್ಷಗಾನ ನೋಡಿ ಅರೇ ಇದು ನಮ್ಮ ಬ್ರೇಕ್ ಡಾನ್ಸ್ ನಂತೆ ಇದೆ.  ಎಂದು ಹೇಳುವುದಿಲ್ಲ ಎಂದು ಭರವಸೆ ಏನು? ಯಾಕೆಂದರೆ ಈಗಿನ ಯಕ್ಷಗಾನ ಅಷ್ಟು ಬದಲಾಗಿ ಹೋಗಿದೆ. ಯಕ್ಷಗಾನದ ಮೂಲ ನೃತ್ಯ ಪ್ರಕಾರಗಳನ್ನು ಗುರುದಕ್ಷಿಣೆ ಕೊಟ್ಟು ಕಲಿಯುವ ಯೋಗ್ಯತೆ ಇಲ್ಲದೇ ಇನ್ನಾವೂದೋ ಕಲೆಯ ಎಂಜಲನ್ನು ಇಲ್ಲಿ ಹರಡಿಬಿಡುತ್ತಾರೆ.  ಹಾಗಾಗಿ ಹೊರಗೆ ತೋರಿಸುವುದಕ್ಕಾಗಿಯಾದರೂ ಶುದ್ದ ಪರಂಪರೆಯ ಯಕ್ಷಗಾನ ಕೆಲವರಿಗಾದರೂ ತಿಳಿದಿರಬೇಕಾದದ್ದು ಅವಶ್ಯವಲ್ಲವೇ?

ಇಂದು ಪರಂಪರೆಯ ಬಗ್ಗೆ ಧ್ವನಿ ಎತ್ತುವುದಿರಲಿ, ಅದನ್ನು ಉಳಿಸಬೇಕು ಅನುಭವಿಸಬೇಕು ಎನ್ನುವುದೇ ಮಹಾಪರಾಧವಾಗಿ ಪರಿಗಣಿಸಲ್ಪಡುತ್ತದೆ. ಹಳೆಯ ಪಳೆಯುಳಿಕೆಯ ಪ್ರೇಮಿಗಳೆಂದರೆ ಅಜ್ಜ ಹಾಕಿದ ಆಲದ ಮರಕ್ಕೆ ನೇತಾಡುವ ದೆವ್ವಗಳಂತೆ ಭಾಸವಾದರೆ ಪರಂಪರೆ ಉಳಿಯಬೇಕು ಎನ್ನುವ ಧ್ವನಿಗೆ ಉಸಿರೆಲ್ಲಿ ಸಿಗಬಹುದು?

ಯಕ್ಷಗಾನದಲ್ಲಿ ಇಂದು ಕೇವಲ ಯಕ್ಷಗಾನ ಸೇವೆಗಾಗಿಯೇ ಎಂದು ಹಲವಾರು ಮೇಳಗಳಿವೆ. ಸಂಘ ಸಂಸ್ಥೆಗಳಿವೆ. ಅವುಗಳಲ್ಲಿ ಕೆಲವಾದರೂ ಶುದ್ದ ಪರಂಪರೆಯನ್ನು ಕಲಿಯುವ ಅದರ ಸಂಶೋಧನೆ ಮಾಡಿ ಮುಂದಿನ ಪೀಳಿಗೆಗೆ ಒಪ್ಪಿಸುವುದಕ್ಕೆ ಮೀಸಲಾಗಿರಿಸಿಕೊಳ್ಳಬೇಕು. ಶುದ್ದ ಪರಂಪರೆಯಲ್ಲಿ ಯಾವುದೇ ರಾಜಿಯಿಲ್ಲದೆ ಚಾಲು ನೃತ್ಯ ಸಂಗೀತ ಕಛೇರಿಗಳಿಲ್ಲದ ಯಕ್ಷಗಾನವನ್ನು ಪ್ರದರ್ಶಿಸುವ ಮತ್ತದನ್ನು ಮುಂದುವರೆಸುವ ಕಾರ್ಯಕ್ಕೆ ಮೀಸಲಾಗಿ ಉಳಿಯಬೇಕು.

 ಮೊದಲು ಮನೆ ಕಟ್ಟುವಾಗ ದೇವರ ವಿಶಾಲವಾದ ದೇವರ ಕೋಣೆ ಇತ್ತು. ದೇವರ ಎದುರು ಸಾಷ್ಟಾಂಗ ನಮಸ್ಕಾರ ಮಾಡುವಷ್ಟು ಸ್ಥಳಾವಕಾಶವು ಇತ್ತು. ಈಗ ದೇವರ ಕೋಣೆ ಚಿಕ್ಕ ಚಿಕ್ಕದಾಗಿ ಕೋಣೆಯೇ ಇಲ್ಲವಾಗಿದೆ. ದೇವರು ಹೋಗಿ ಪುಟ್ಟ ಸ್ಟಾಂಡ್ ಮೇಲೆ ಕುಳಿತಿದ್ದಾನೆ. ನಮ್ಮ ಜೀವನ ಶೈಲಿ ಅನಿವಾರ್ಯತೆಯಿಂದ ಬದಲಾಗಿ ಹೋಗಿದೆ. ಹಾಗಿರುವಾಗ ವಿಶಾಲವಾದ ದೇವರ ಕೋಣೆ ನೂರರಲ್ಲಿ ಒಂದನ್ನಾದರೂ ಉಳಿಸುವ ಪ್ರಯತ್ನವಾಗಬೇಕು. ಹಿರಿಯ ಕಲಾವಿದರು ಈಗ ಜೀವಿಸಿರುವ ದಂತಕಥೆಗಳು ಎನ್ನುವಂತಹ ಹಲವು ಕಲಾವಿದರು ಇನ್ನೂ ನಮ್ಮ ನಡುವೆ ಇದ್ದಾರೆ. ಅವರ ಕಾಲು ಹಿಡಿದು ಅವರ ಜ್ಞಾನವನ್ನು ಮುಂದಿನ ಪೀಳಿಗೆ ರವಾನಿಸುವ ಮಾಧ್ಯಮವಾಗಬೇಕು. ಇಲ್ಲವಾದರೆ ಮುಂದಿನ ಪೀಳಿಗೆಗೆ ಕೊಡುವುದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ಬರಿ ನಿಟ್ಟುಸಿರಷ್ಟೇ ಉಳಿಯುತ್ತದೆ.