"ಇದು ವಿಮರ್ಶೆಯಲ್ಲದ ಚಿಂತನ"

Thursday, May 30, 2019

ವೇಷ ಕಳಚಿದ ದೇವಕಾನ



ದಶಕಗಳ ಹಿಂದೆ  ಯಾವುದೋ ಪುಸ್ತಕವನ್ನು ಕೊಂಡುಕೊಳ್ಳಲು ಪೈವಳಿಕೆಯ ನಗರದಲ್ಲಿರುವ  ಸರಕಾರಿ ಪ್ರಾಥಮಿಕ ಶಾಲೆಗೆ ಹೋಗಿದ್ದೆ.  ಅಂದು ಈಗಿನಂತೆ ದೊಡ್ಡ ಶಾಲಾ ಕಟ್ಟಡಗಳಿರಲಿಲ್ಲ. ಎರಡು ಮೂರು ಹಂಚಿನ ಕಟ್ಟಡವಿದ್ದ ಅತ್ಯಂತ ಹಳೆಯ ಶಾಲೆಯದು. ಶಿಥಿಲವಾದ ಹಳೆಯ ಗೋಡೆ, ಹಂಚು, ಬಾಗಿಲು ಇಲ್ಲದ ಕಿಟಿಕಿಗಳು, ಹೀಗೆ ಒಂದು ಹಳ್ಳಿಯ ಸರಕಾರೀ ಶಾಲೆ ಅಂದು ಹೇಗಿರಬೇಕಿತ್ತೋ ಹಾಗಿತ್ತು. ಹೀಗೆ ಶಾಲಾ ವಠಾರಕ್ಕೆ ಕಾಲಿಡಬೇಕಾದರೆ ಸುಶ್ರಾವ್ಯವಾಗಿ ಇಂಪಾದ ಗಡಸು ಸ್ವರದಲ್ಲಿ  ರಾಘವಾಂಕನ ಕಾವ್ಯದ ಪದ್ಯವೊಂದು ಅಲೆ ಅಲೆಯಾಗಿ ಶಾಲಾವಠಾರವೆಲ್ಲ ಮೊಳಗುತ್ತಿತ್ತು. ಬೇರೆ ಹಲವು ತರಗತಿಗಳಲ್ಲಿ ವಿವಿಧ ಪಾಠಗಳು ಚಟುವಟಿಕೆಗಳು ನಡೆಯುತ್ತಿದ್ದರೂ ಈ ತರಗತಿಯ ರಾಘವಾಂಕನ ಕಾವ್ಯ ಪಠನ ಮೌನವಾಗಿ ಒಂದು ಸಲ ಕಿವಿಕೊಡುವಂತೆ ಮಾಡಿದ್ದು ಸುಳ್ಳಲ್ಲ. ಜಗಲಿಯಲ್ಲಿ ಹೆಜ್ಜೆ ಇಡುತ್ತಿರಬೇಕಾದರೆ ತರಗತಿಯ ಕಿಟಿಕಿಯೊಳಗಡೆ ಒಂದು ಸಲ ಆಯಾಚಿತವಾಗಿ ಧ್ವನಿ ಬಂದೆಡೆ ಇಣುಕಿದೆ. ಉದ್ದ ಜುಬ್ಬಾ, ಕಪ್ಪನೆಯ ದಪ್ಪ ಕನ್ನಡಕದ ಆಜಾನು ಬಾಹು ಎಂಬ ವ್ಯಕ್ತಿತ್ವದ ಆಧ್ಯಾಪಕರೊಬ್ಬರು ಪಾಠ ಮಾಡುತ್ತಿದ್ದರು. ಅವರ ಅಂಗಭಂಗಿ, ಮಕ್ಕಳ ಶಾಂತ ಮೌನ ಎಲ್ಲವನ್ನೂ ನೋಡುತ್ತಿದ್ದರೆ ರಾಘವಾಂಕ ನಿಜಕ್ಕೂ ಮೋಡಿ ಮಾಡಿದಂತಿತ್ತು.

ಅಂದು ಕನ್ನಡ ಕಾವ್ಯದ  ಪಾಠ ಮಾಡುತ್ತಿದ್ದ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ನಮ್ಮ ಗ್ರಾಮ ಮಾತ್ರವಲ್ಲ ಸುತ್ತ ಹತ್ತೂರಿನಲ್ಲೂ ಜನಪ್ರಿಯ ಗುರುಗಳಾದ  ಶ್ರೀ ದೇವಕಾನ ಕೃಷ್ಣ ಭಟ್ಟರು. ಅತ್ಯಂತ ಸರಳ ವ್ಯಕ್ತಿತ್ವದ ಅಷ್ಟೇ ಗಾಂಭೀರ್ಯ ನಡೆಯ ದೇವಕಾನದವರು ಇದ್ದಲ್ಲಿ ಯಕ್ಷಗಾನದ ದೇವ ಕಾನನವೇ ಬಂದು ನಿಂತ ಅನುಭವವಾಗುತ್ತಿತ್ತು.  ಇಂದು ಆ ದೇವ ಕಾನನ ನಿಜಕ್ಕೂ ಮೌನದಲ್ಲಿ ಲೀನವಾಗಿದೆ.

 ಹಗಲಿನಲ್ಲಿ ಶಾಲಾ ಅಧ್ಯಾಪನದಲ್ಲಿ ಎಷ್ಟು ತಲ್ಲೀನರಾಗಿ ಒಂದರ್ಥದಲ್ಲಿ ಪುರುಸೊತ್ತಿಲ್ಲದ ಚಟುವಟಿಕೆಯಲ್ಲಿ ಇರುತ್ತಿದ್ದರೋ ಅದೇ ರೀತಿ ರಾತ್ರಿ ಊರ ಹತ್ತು ಹಲವು ಸಮಾರಂಭಗಳಲ್ಲಿ ಚಟುವಟಿಕೆಯ ಚಿಲುಮೆಯಾಗುತ್ತಿದ್ದ ಕೃಷ್ಣ  ಮಾಸ್ಟ್ರು ವೃತ್ತಿಯಿಂದಲೂ ಪ್ರವೃತ್ತಿಯಿಂದಲೂ ಸದಾ ಕಾರ್ಯಶೀಲ ವ್ಯಕ್ತಿಯಾಗಿದ್ದರು.  ಹಗಲಿನಲ್ಲಿ ಶಾಲೆಯ ಅಧ್ಯಾಪನ,  ರಾತ್ರಿ ಯಕ್ಷಗಾನ, ವೇಷ ಭೂಷಣ.

ನಮ್ಮೂರಿನ ಹಲವು ಶಾಲೆಗಳ ವಾರ್ಷಿಕೋತ್ಸವಗಳಲ್ಲಿ ಇವರ ವೇಷ ಭೂಷಣಗಳು ಮೆರುಗದೇ ಇದ್ದರೆ ರಾತ್ರಿ ಬೆಳಗಾಗುವುದಿಲ್ಲ.  ಸ್ವತಃ ವೇಷಧಾರಿಯಾಗಿದ್ದರೂ ಇವರು ವೇಷ ಹಾಕಿ ರಂಗವೇರುತ್ತಿದ್ದುದು. ಅಪರೂಪ. ನನ್ನ ತೀರಾ ಬಾಲ್ಯದಲ್ಲಿ ಇವರ ಕೆಲವು ವೇಷಗಳನ್ನಷ್ಟೇ ನೋಡಿದ ನೆನಪು, ಮಿಕ್ಕೆಲ್ಲ ಇವರೆಂದಿಗೂ ಹಿನ್ನೆಲೆಯ ಚಕ್ರವರ್ತಿಯಾಗಿಯೇ ಮೆರೆದವರು. ಊರಲ್ಲಿ ಎಲ್ಲೇ ನಾಟಕ ಯಕ್ಷಗಾನ ಆದರೂ ಚೌಕಿಗೆ ಹೋದರೆ, ತಲೆಗೆ ಒಂದು ಮುಂಡಾಸು, ಮುಖದಲ್ಲಿ ಒಂದು ಕನ್ನಡಕ  ಹಿಂಗೈಗೆ ಮೆತ್ತಿದ ಒಂದಿಷ್ಟು ಬಣ್ಣಗಳು, ಕೈಯಲ್ಲೊಂದು ಕುಂಚ ಹಿಡಿದ ಭಟ್ಟರನ್ನು ಕಾಣದೇ ಬರುವುದು ಸಾಧ್ಯವಿಲ್ಲ. ದೂರದಲ್ಲಿ ನಮ್ಮನ್ನು ನೋಡಿದರೂ ಹತ್ತಿರ ಕರೆದು ಕುಶಲವನ್ನು ವಿಚಾರಿಸುವ ಕೃಷ್ಣ ಭಟ್ಟರ  ಸ್ನೇಹ ಆತ್ಮೀಯತೆ  ಮರೆಯುವುದು ಸಾಧ್ಯವಿಲ್ಲದ ಮಾತು.

ಯಕ್ಷಗಾನವೆಂದರೆ ನಾನು ಕೇವಲ ಪ್ರೇಕ್ಷಕನಾದವನು. ಆದರೂ ಬಾಲ್ಯ ಪ್ರೇಕ್ಷಕತ್ವ ಏನಿದೆ,  ಅದರ ಪರಿಚಯವಾದದ್ದು ಶಾಲಾ ಕಾರ್ಯಕ್ರಮದಲ್ಲಿನ ಮಾಸ್ತರ ವೇಷವನ್ನು ನೋಡಿ. ಒಂದರ್ಥದಲ್ಲಿ ಯಕ್ಷಗಾನದ ಆದ್ಯಾಕ್ಷರದಂತೆ ಯಕ್ಷಗಾನದ ಪರಿಚಯವೂ ಸಹ ಕೃಷ್ಣ ಭಟ್ಟರ ವೇಷದಿಂದಲೇ ಆಗಿತ್ತು. ಮೊದ ಮೊದಲು ವೇಷದಲ್ಲಿ ಕಾಣುತ್ತಿದ್ದವರು, ಯಕ್ಷಗಾನ ವಲಯ ಕೊರತೆಯನ್ನು ಅನುಭವಿಸುತ್ತಿದ್ದ ಹಿನ್ನೆಲೆಯಾದ ಆಹಾರ್ಯದ ಬೆಳೆಗೆ ಕೈ ಹಾಕಿ ಶ್ರೀ ಗಣೇಶ ಕಲಾವೃಂದ ಪೈವಳಿಕೆಯನ್ನು ಕಟ್ಟಿ ಬೆಳೆಸಿದರು. ಇಂದಿಗೂ ದೇವಕಾನದ ವೇಷ ಭೂಷಣವೆಂದರೆ ಅಚ್ಚುಕಟ್ಟಾದ ಶಿಸ್ತಿನ ಝಗ ಝಗಿಸುವ ವೇಷ ಭೂಷಣಗಳೆಂದು ಪ್ರಸಿದ್ಧಿಯನ್ನು ಪಡೆದಿವೆ. ಹಲವು ಮೇಳಗಳಿಗೆ ಬೇಕಾಗುವಷ್ಟು ವೇಷಭೂಷಣಗಳನ್ನು ಹೊಂದಿರುವ ಈ ಸಂಸ್ಥೆ ಬೆಳೆದು ಬಂದಿರುವುದು ಅಚ್ಚರಿ ಎನಿಸಿತ್ತದೆ. ಇದರ ಹಿಂದೆ ದೇವಕಾನದವರ ಕರ್ತೃತ್ವ ಶಕ್ತಿ ಅಗಾಧವಾದುದು. ಇಂದು ಯಕ್ಷಗಾನ ಕ್ಷೇತ್ರ ಇದನ್ನು ಕೃತಜ್ಞತೆಯಿಂದ ಸ್ಮರಿಸುತ್ತದೆ. ಇಂದು ದೇವಕಾನದವರ ವೇಷ ಭೂಷಣವನ್ನು ತೊಡದ ಯಕ್ಷಗಾನ ಕಲಾವಿದರೂ ಇಲ್ಲ, ಕುಣಿಯದ ರಂಗಸ್ಥಳವೂ ಇಲ್ಲ. ಯಕ್ಷಗಾನದ ಪ್ರತೀ ಮೇಳಕ್ಕೂ ಒಂದು ಚೌಕಿ ಇದ್ದೇ ಇರುತ್ತದೆ. ಆದರೆ ಸಮಗ್ರ ಯಕ್ಷಗಾನಕ್ಕೆ ಚೌಕಿ ಎಂಬುದು ಇದ್ದರೆ ಅದು ದೇವಕಾನದವರ ಚೌಕಿ.  ಇದು ವಿಪುಲವಾಗಿ ವಿಶಾಲವಾಗಿ ಯಕ್ಷಗಾನದ ಅನಿವಾರ್ಯ ಅಂಗವಾಗಿ ಬೆಳೆದು ನಿಂತಿದೆ.  ಯಕ್ಷಗಾನದಲ್ಲಿ ನೇಪಥ್ಯ ಕಲಾವಿದರಿಗೂ ಒಂದು ಸೂಕ್ತ ಸ್ಥಾನಮಾನವನ್ನೂ ಒದಗಿಸಿದ ಇವರ ಕಾರ್ಯಶೀಲತೆ ಯಕ್ಷಗಾನದಲ್ಲಿ ನೇಪಥ್ಯವೂ ಹೇಗೆ ಪ್ರಧಾನವಾಗುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ. ಅತ್ಯಂತ ಶಿಸ್ತು ಬದ್ದ ಚೌಕಿಯ ವ್ಯವಸ್ಥೆಗಳು, ಸುಂದರವಾದ ಶುಭ್ರವಾದ ವೇಷ ಭೂಷಣಗಳು ವಾಸ್ತವದಲ್ಲಿ ಯಕ್ಷಗಾನದ ಚೌಕಿ ಪರಿಕರಗಳು ಹೇಗಿರಬೇಕು ಎಂಬುದಕ್ಕೆ ನಿದರ್ಶನವಾಗಿ ವ್ಯವಸ್ಥಿತವಾಗಿರುತ್ತಿತ್ತು. ಇಂದಿಗೂ ಪೈವಳಿಕೆ ಬಸ್ ಸ್ಟಾಪ್ ನ ಎದುರಿನ ಖಾಲಿಜಾಗವನ್ನು ಕಂಡಾಗ ಇವರ ನೆನಪು ಒತ್ತಿ ಬರುತ್ತದೆ.  ಇಂದ್ರನೋ, ಪಾರ್ಥನೋ ಆಗಿ ರಂಗದಲ್ಲಿ ಮೆರೆದಾಡಿದ ವೇಷ ಭೂಷಣಗಳು ಸೂರ್ಯನ ಬಿಸಿಲಿಗೆ ಮೈಯೊಡ್ದಿ ಪುಳಕಗೊಳ್ಳುತ್ತಿದ್ದವು.    ಅದು ಇನ್ನೆಂದಿಗೂ ನೆನಪಿನ ಪುಟಗಳಿಗೇ ಸೀಮಿತ.   ವೇಷತೊಟ್ಟ ನಂತರ ಕಲಾವಿದ ಅದು ಯಾರೇ ಆಗಿರಲಿ ಇವರ ಸೊತ್ತಾಗಿ ಪರಿಗಣನೆಯಾಗುತ್ತಿತ್ತು.  ವೇಷತೊಟ್ಟವರಿಗೆ ಕುಳಿತುಕೊಳ್ಳುವುದಕ್ಕಾಗಿಯೇ ಒಂದು ಬೆಂಚನ್ನು ಇಟ್ಟು ವೇಷಧಾರಿಗಳು ಯಾರೇ ಇರಲಿ ಅಲ್ಲೇ ಕುಳಿತುಕೊಳ್ಳುವಂತೆ ನಿರ್ಬಂಧಿಸುತ್ತಿದ್ದರು.  ಒಂದು ರೀತಿಯಲ್ಲಿ ಯಕ್ಷಗಾನದ ವೇಷಗಾರಿಕೆಗೆ ಇದು ಗೌರವವನ್ನು ತಂದುಕೊಡುತ್ತಿತ್ತು.

ಶಾಲಾ ಕಾಲೆಜುಗಳ ಯಕ್ಷಗಾನ ಕಾರ್ಯಕ್ರಮಗಳಿರಲಿ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿರಲಿ, ವ್ಯವಸಾಯಿ ಅಥವಾ ಹವ್ಯಾಸಿ ಕಲಾವಿದರಿರಲಿ,  ಇವರಿಂದ ಯಕ್ಷಗಾನದ ತಕ ಧಿಮಿ ತಾ ಕುಣಿತವನ್ನು ಕಲಿತವರು ಹಲವರು. ಎಲ್ಲಾ ಕ್ಷೇತ್ರಗಳಲ್ಲೂ ಗುರು ಸಮಾನ ವ್ಯಕ್ತಿತ್ವ ಹೊಂದುವುದು ಎಂದರೆ ಅದು ವ್ಯಕ್ತಿಗತವಾಗಿ ಗಳಿಸುವ ಅರ್ಹತೆ.  ಅದು ದೇವಕಾನ ಕೃಷ್ಣ ಭಟ್ಟರ ಹೆಗ್ಗಳಿಕೆ.

ಬಿಡುವಿನವೇಳೆಯಲ್ಲೂ ಇವರಿಗೆ ಯಕ್ಷಗಾನದ ಕಲೆಯ ಮೇಲೆ ಇರುವ ಕಾಳಜಿ ಗಮನಾರ್ಹವೆನಿಸುತ್ತದೆ. ಅದಿಲ್ಲವಾದರೆ ಯಕ್ಷಗಾನದ ವೇಷ ಭೂಷಣಗಳು ಈ ರೀತಿ ವೈಭವೀಕರಿಸುತ್ತಿರಲಿಲ್ಲ. ಶಾಲೆಯಲ್ಲಿದ್ದಾಗಲು ಸದಾ ಯಕ್ಷಗಾನ ಪದಗಳನ್ನು ಗುನು ಗುನಿಸುತ್ತಿದ್ದ ಇವರು ತಮ್ಮೊಳಗೆ ಯಕ್ಷಗಾನ ಪ್ರಚೋದನೆಯನ್ನು ಸದಾ ಜೀವಂತವಾಗಿರಿಸುತ್ತಿದ್ದರು.

ಯಕ್ಷಗಾನ  ಚೌಕಿಯ ಪ್ರೇರಕ ಶಕ್ತಿ ದೇವಕಾನ ಕೃಷ್ಣ ಭಟ್ಟರು ಬದುಕಿನ ವೇಷ ಕಳಚಿ  ನಿಜ ಜೀವನದ  ಚೌಕಿಗೆ ಸೇರಿ ಹೋದರು. ಯಕ್ಷಗಾನದಲ್ಲಿ ದೇವಕಾನಕ್ಕ್ಕೂ ಒಂದು ಖ್ಯಾತಿಯನ್ನು ತಂದು ಕೊಟ್ಟ ಇವರ ಕಾರ್ಯಶೈಲಿ ಯಕ್ಷಗಾನ ಇರುವವರೆಗೂ ಚಿರಸ್ಥಾಯಿಯಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ.  ಕಳಚಿದ ವೇಷ ಇನ್ನೊಂದು ಪಾತ್ರವಾಗಿಯೋ ವೇಷವಾಗಿಯೋ ರಂಗಸ್ಥಳ ಏರುವುದು ಸಾಮಾನ್ಯ. ಅಂತೇ ದೇವಕಾನ ಕೃಷ್ಣ ಭಟ್ಟರು, ದೈಹಿಕವಾಗಿ ನಮ್ಮೊಡನೇ ಇಲ್ಲದೇ ಇದ್ದರೂ ಯಾವುದೋ ಒಂದು ರೂಪದ ವೇಷವಾಗಿಯೋ ನಮ್ಮ ನಡುವೆ ಇದ್ದಂತೆ ಭಾಸವಾಗುತ್ತದೆ. ಗತಿಸಿದ ಮಹನೀಯರ ಜೀವಂತಿಕೆಯ ದ್ಯೋತಕವದು. ಇವರ ಒಡನಾಡಿಗಳಿಗೂ , ಬಂಧು ಮಿತ್ರರಿಗೂ ಇವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ದಯಪಾಲಿಸುತ್ತಾ ಇವರ ಆತ್ಮಕ್ಕೆ ಚಿರಶಾಂತಿಯನ್ನು ಕಲ್ಪಿಸಲಿ ಎಂಬ ಪಾರ್ಥನೆ ಇದು.
. 

Friday, May 10, 2019

ಸತ್ವ ಪರೀಕ್ಷೆ ಅಥವಾ ಊರ್ವಶೀ ಶಾಪ


"ಹೋಗಿ ಬನ್ನಿ ಭೂಲೋಕಕ್ಕೆ. ಯಾವನೋ ಒಬ್ಬ ಬಾಲಕ ತಪಸ್ಸಿಗೆ ಕುಳಿತಿದ್ದಾನೆ. ಐದು ವರ್ಷದ ಬಾಲಕನ ತಪಸ್ಸನ್ನು ಕೆಡಿಸಿ...ನಿಮ್ಮ ಸ್ತ್ರೀತ್ವ  ಆ ಬಾಲಕನ ಮುಂದೆ ಏನು ಪರಿಣಾಮವನ್ನು ಉಂಟು ಮಾಡೀತು ?  ಆತ ಇನ್ನೂ ಐದು ಹರಯದ ಬಾಲಕ.!”  ತಾನಿದ್ದಲ್ಲಿಗೆ ಬಂದ ಊರ್ವಶಿಯೊಡನೆ ಅರ್ಜುನ ಹೇಳುವ ಮಾತಿದು.  

ಹೀಗೆ  ಹೇಳಿ ಒಲಿದು ಬಂದ ಅಪ್ಸರೆ ಎದುರು ಬಾಲಕನಾಗುವ ಮೂರು ಲೋಕದ ಗಂಡ ಅರ್ಜುನ ದೇವಲೋಕಕ್ಕೂ  ಮರ್ತ್ಯ ಲೋಕಕ್ಕೂ  ಇರುವ ವೆತ್ಯಾಸವನ್ನು ನಿಗೂಢವಾಗಿ ಅರುಹುತ್ತಾನೆ.  ಈ ದೇಹದಿಂದ  ಅನುಭವಿಸಲಾಗದೇ ಇದ್ದ ಸ್ವರ್ಗ ಸುಖವನ್ನು  ತಂದ ಊರ್ವಶಿಯನ್ನು ಕೇವಲ ದೇಹದಿಂದ ಮಾತ್ರವಲ್ಲ ತನ್ನ ಮನೋವ್ಯವಹಾರದಿಂದಲೂ  ದೂರವಿಡುತ್ತಾನೆ. ಅರ್ಜುನ ಎಂಬ ವ್ಯಕ್ತಿತ್ವದ ಮತ್ತೊಂದು ಮುಖ ಸ್ವರ್ಗದಲ್ಲಿ ಅನಾವರಣಗೊಳ್ಳುತ್ತದೆ. ಎಲ್ಲಾ ಜೀವಿಗಳಲ್ಲೂ ನರ ಇದ್ದೇ ಇರುತ್ತದೆ. ಆದರೂ ಪ್ರಾಣಿಗಳಲ್ಲಿ ನರ ಅಂತ ಹೇಳುವುದು ಮನುಷ್ಯನನ್ನು ಮಾತ್ರ. ಹೀಗಿದ್ದರೂ  ಪುರಾಣದಲ್ಲಿ ನರ ಎಂದು ಪರಿಗಣಿಸುವುದು ಅರ್ಜುನನ್ನು ಮಾತ್ರ. ಭಗವಂತನ ಜತೆಯಲ್ಲಿ ನರ ನಾರಾಯಣನಾಗುವ ಪಾರ್ಥನ ವ್ಯಕ್ತಿತ್ವ ಪರ್ವತವಾಗುವ ಪ್ರಸಂಗವೇ  ಊರ್ವಶೀ ಜತೆಗಿನ ಮುಖಾಮುಖಿ . ಕಿರೀಟಿಯಾದ ಅರ್ಜುನನ ಕಿರೀಟ ಇಲ್ಲಿ ಮತ್ತಷ್ಟು ಭದ್ರವಾಗುತ್ತದೆ.  ಇದು ಯಕ್ಷಗಾನ ತಾಳಮದ್ದಲೆಯೊಂದರ ಅಧ್ಬುತ ಪಾತ್ರ ಚಿತ್ರಣ ಎನ್ನಬಹುದು.

’ ಸತ್ವ ಪರೀಕ್ಷೆ ಅಥವಾ ಊರ್ವಶೀ ಶಾಪ’ ಯಕ್ಷಗಾನದ ಅಪರೂಪದ ಪ್ರಸಂಗ. ಅರ್ಜುನ ಮತ್ತು ಊರ್ವಶಿ  ಈ ಪ್ರಸಂಗದ ಮುಖ್ಯ ಪಾತ್ರಗಳು.  ಸಾಮಾನ್ಯವಾಗಿ ಯಕ್ಷಗಾನ ಪ್ರಸಂಗಗಳಲ್ಲಿ ಅರ್ಜುನ ಪಾತ್ರದ ಚಿತ್ರಣ ಒಂದು ರೀತಿಯಲ್ಲಿ ವಿಚಿತ್ರವಾಗಿ ಇರುತ್ತದೆ. ಮೂರುಲೊಕದ ಗಂಡ ಅರ್ಜುನ ಹೆಚ್ಚಿನ ಎಲ್ಲಾ ಪ್ರಸಂಗಳಲ್ಲಿ ಮೊದಲು ಸೋಲುತ್ತಾ ಕೊನೆಯಲ್ಲಿ ಶ್ರೀಕೃಷ್ಣಾನುಗ್ರಹದಿಂದ ಗೆಲ್ಲುತ್ತಾನೆ.  ಮೂರು ಲೋಕವನ್ನು ಗೆಲ್ಲುವ ಶಕ್ತಿ ಸಾಮಾರ್ಥ್ಯ ಇದ್ದರೂ ಏಕಾಂಗಿಯಾಗಿ ಪಾರ್ಥ ವಿಕ್ರಮಿಯಾಗುವ ಚಿತ್ರಣ ಯಕ್ಷಗಾನದಲ್ಲಿ ಬಹಳ ಅಪರೂಪ ಎನ್ನಬಹುದು. ಎಲ್ಲೂ ಪಾರ್ಥ ನಾಯಕತ್ವದ ಚಿತ್ರಣ ಇರುವುದಿಲ್ಲ. ಯಕ್ಷಗಾನ ಪ್ರೇಕ್ಷಕ ಕಾಣುವುದು ಬರೀ ಸೋಲುವ ನಾಯಕನನ್ನು. ಈ ಕಲ್ಪನೆಗಳಿಗೆ ತದ್ವಿರುದ್ದವಾಗಿ ಊರ್ವಶೀ ಶಾಪ ಪ್ರಸಂಗದಲ್ಲಿ ಅರ್ಜುನನ ಪಾತ್ರವ್ಯಕ್ತಿತ್ವ ಮಹೋನ್ನತ ಸ್ಥಾನವನ್ನು ಪಡೆಯುತ್ತದೆ.

ಯಕ್ಷಗಾನದಲ್ಲಿ ಅಪರೂಪ ಎನ್ನಬಹುದಾದ ಪ್ರಸಂಗದ ಈ ತಾಳಮದ್ದಲೆಯಲ್ಲಿ ಯಕ್ಷಗಾನ ಅರ್ಥ ಚಕ್ರವರ್ತಿ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರ ಅರ್ಜುನನ ಪಾತ್ರ, ಅಲ್ಲಿ ಪಾರ್ಥನ ಪಾತ್ರದಲ್ಲಿರಬಹುದಾದ  ಅದ್ಭುತ ಆಯಾಮ ವಿಶ್ಲೇಷಣೆಯಾಗುತ್ತದೆ.. ಅಥವಾ ಪಾರ್ಥನ ವ್ಯಕ್ತಿತ್ವದ ಆಯಮಾಗಳನ್ನು ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರು ಅರ್ಜುನನಾಗಿ ತೆರೆದಿಡುತ್ತಾ ಸಾಗುತ್ತಾರೆ.  ಇಲ್ಲಿ ಊರ್ವಶಿಯ ನರ್ತನವನ್ನು ಕಂಡ ಅರ್ಜುನನಾಗಿ ಶೇಣಿಯವರು ಹೇಳುವುದುಂಟು,  “ ಅವಳು ಕಲೆಯನ್ನು ಅಭಿವ್ಯಕ್ತಿಸಿದ್ದಲ್ಲ, ಕಲೆಯೇ ತನ್ನ ಸ್ವರೂಪವನ್ನು ಊರ್ವಶಿ ಎಂಬ ಮಾಧ್ಯಮದ ಮೂಲಕವಾಗಿ ನನ್ನ ಮುಂದೆ ಪ್ರದರ್ಶಿಸಿತು. “ ಇಲ್ಲೂ ಅದೇ ರೀತಿ ಅರ್ಜುನ ವ್ಯಕ್ತಿತ್ವ ಶೇಣಿ ಎಂಬ ಮಾಧ್ಯಮದ ಮೂಲಕ ವೇದ್ಯವಾಗುತ್ತದೆ.
ಶಿವನ ಕುರಿತಾದ ಘೋರ ತಪಸ್ಸು , ಕಿರಾತನೊಡನೆ ಹೋರಾಟ ಪಾಶುಪತ ಶರಾನುಗ್ರಹವಾದ ನಂತರ ದೇವೆಂದ್ರ,  ತನ್ನ ಮಗನಾದ ಪಾರ್ಥನನ್ನು ತನ್ನ ರಥದಲ್ಲೇ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾನೆ.  ಶೇಣಿಯವರೇ ಹೇಳುವಂತೆ  ಸಾಗರದಲ್ಲೇ ಹುಟ್ಟುವ ಚಂದ್ರನ ಉತ್ಕರ್ಷದಲ್ಲಿ  ಮಗನ ಉತ್ಕರ್ಷಕ್ಕೆ ಉಬ್ಬುವ ಸಾಗರದಂತೆ,  ತನ್ನ ಮಗನ ಉತ್ಕರ್ಷದಲ್ಲಿ ದೇವೇಂದ್ರ ಹಿಗ್ಗುತ್ತಾನೆ. ಸ್ವರ್ಗದಲ್ಲಿ ತನ್ನ ಸಿಂಹಾಸನದ ಅರ್ಥ ಭಾಗದ ದಾಯಿತ್ವವನ್ನು ಕೊಡುವುದು ಮಾತ್ರವಲ್ಲ ಕಿರೀಟವನ್ನು ಇರಿಸಿ ಹರಸುತ್ತಾನೆ. ಸಾಗರ ಮತ್ತು ಚಂದ್ರನಲ್ಲಿ ಕಾಣುವ ತಂದೆ ಮಗನ ಬಾಂಧವ್ಯ ಒಂದು ಅದ್ಭುತ ಕಲ್ಪನೆ.  ಹಾಗೆ ದೇವೇಂದ್ರ  ಆತನಿಗಾಗಿ ದೇವಾಂಗನೆಯರ ನಾಟ್ಯವನ್ನೂ ಏರ್ಪಡಿಸುತ್ತಾನೆ.  ಆ  ನರ್ತನವನ್ನು ನೋಡಿದ ಅರ್ಜುನ ಊರ್ವಶಿಯ ನರ್ತನದ ಬಗ್ಗೆ ಚಿಂತಿಸುವಲ್ಲಿಂದ ಪ್ರಸಂಗ ಆರಂಭವಾಗುತ್ತದೆ. ಆರಂಭದಲ್ಲಿ ಅರ್ಜುನನ ಪೀಠಿಕೆ.
ಆರಂಭದಿಂದಲೇ ಊರ್ವಶಿಯಿಂದ ಆಕರ್ಷಿಸಲ್ಪಟ್ಟ ಅರ್ಜುನನಾದರೂ ಆ  ಆಕರ್ಷಣೆಗೆ ದೈವೀ ರೂಪವನ್ನು ಶೇಣಿಯವರು ಒದಗಿಸಿ ಕೊಡುತ್ತಾ ಅರ್ಜುನನ  ಪಾತ್ರದ ದೃಷ್ಟಿಕೋನವನ್ನು ಪೀಠಿಕೆಯಲ್ಲೇ ತೋರಿಸುತ್ತಾರೆ.   ತನ್ನ ಶಿವ ಧ್ಯಾನದಲ್ಲಿ ಆ ಪರಶಿವನು ಇಳಿದು ಬರುವಂತೆ ಮಾಡಿದಂತಹ ಅರ್ಜುನ,    ಊರ್ವಶಿಯ ಯೋಚನೆಯಲ್ಲೇ ಇದ್ದಾಗ  ಆತನ ಎದುರು ಆ ಊರ್ವಶಿ ಬರುತ್ತಾಳೆ. ಶಿವನಂತೆ  ಊರ್ವಶಿಯನ್ನು ಕಾಣುವ ದೃಷ್ಟಿಕೋನವದು. 
“ ಗೆಜ್ಜೆ ಕಟ್ಟಿದಾಗ ಕುಣಿಯುವುದಕ್ಕೆ ಎಂಬ ಸಂಕಲ್ಪ ಇದ್ದುದರಿಂದ ಕೆಲವರು ಕುಣಿಯುತ್ತಾರೆ.ಆದರೆ ಅಭಿಜಾತ ಕಲಾವಿದೆ, ಊರ್ವಶಿ ಹೆಜ್ಜೆ ಇಡುವುದೂ ಕೂಡ ನಾಟ್ಯ ಶಾಸ್ತ್ರವೇ ಆಗಿರುತ್ತದೆ. ಅದಕ್ಕೆ ಕಾರಣ ಅವಳು ಕಲೆಯೇ ಆಗಿರುವುದರಿಂದ. ಆಕೆಗೆ ಗೆಜ್ಜೆ ಕಟ್ಟಬೇಕೆಂದಿಲ್ಲ, ರಂಗ ನಿರ್ಮಾಣದ ಆವಶ್ಯಕತೆ ಇರುವುದಿಲ್ಲ. ಹೆಜ್ಜೆಗೂ ನಾಟ್ಯವಾಗಿ ಕಾಣುತ್ತಾಳೆ”
ರಾಮನನ್ನು ವಶೀಕರಿಸುವುದಕ್ಕಾಗಿ ರಾವಣನ ತಂಗಿ ಏನೇನೋ ಅಲಂಕಾರವನ್ನೆಲ್ಲ ಮಾಡಿಕೊಂಡರೂ ಕೂಡ ಪೂರ್ಣವ್ಯಕ್ತಿತ್ವ ಉಳ್ಳ ರಾಮನಿಂದ ತಾನು ಆಕರ್ಷಿಸಲ್ಪಡಲಿಕ್ಕಿಲ್ಲವೆಂಬ ಸಂದೇಹದಿಂದ ಕೊನೆಗೆ ಅವಳು ಶೃಂಗಾರವಾಗಿ ಮತ್ತವಳು ಶೃಂಗಾರವೇ ಆಗಿ…ಎಂಬ ಕವಿವಾಣಿ ನೆನಪಿಗೆ ಬರುತ್ತದೆ. ಊರ್ವಶಿ ಹೆಜ್ಜೆ ಇಟ್ಟಲ್ಲಿ ಅದು ನಾಟ್ಯವೇ ಆಗುತ್ತದೆ. ರಾಮನು ಮೆಟ್ಟಿದಲ್ಲೆಲ್ಲ ಅಯೋಧ್ಯೆಯ ಕ್ಷೇತ್ರ ಮಾಡುತ್ತಿದ್ದನಂತೆ, ಹಾಗೇ ಊರ್ವಶಿಯ ಆಗಮನವಾಗಿದೆ. ಹೀಗೆ ದೈವೀ ಭಾವದ ಪರಾಕಾಷ್ಥೆಯನ್ನು ತಲಪುವ ಅರ್ಜುನನನ್ನು ಕಾಣುತ್ತೇವೆ. ತನ್ನ ಮಂಚದ ಬಳಿಗೆ ಬರುವುದಕ್ಕಿಂತ ಮೊದಲೇ ಎದ್ದು  ಒಮ್ಮೆ ಅವಳ ಪಾದ ಮುಟ್ಟಿ ನಮಸ್ಕರಿಸಬೇಕು,. ಹೀಗೆ ದೈವೀ ಭಾವದಿಂದ ಕಾಣುವ ಅರ್ಜುನನ ಚಿಂತನೆಯನ್ನು ಅದ್ಭುತ ರೂಪದಲ್ಲಿ ಶೇಣಿಯವರು ಚಿತ್ರಿಸುತ್ತಾರೆ.  ಹಾಗೇ “ಅಮ್ಮಾ’  ಎಂದು ಉದ್ಗರಿಸುತ್ತಾರೆ.
ಆ ಸಂದರ್ಭದಲ್ಲಿನ ’ಅಮ್ಮಾ’ ಎಂಬ ಕರೆಗೆ ಅವರು ಕೊಡುವ ಕಾರಣ ಹೀಗಿದೆ.   ಕೇವಲ ಹೆತ್ತವಳನ್ನು ಮಾತ್ರ ಅಮ್ಮ ಎಂದು ಕರೆಯುವುದಿಲ್ಲ. ತನಗೆ ಹುಟ್ಟಿದವಳನ್ನೂ ಅಮ್ಮಾ ಎಂದು ಕರೆಯುತ್ತೇವೆ, ಮೊಮ್ಮಗಳನ್ನೂ ಅಮ್ಮಾ ಎಂದು ಕರೆಯುತ್ತೇವ. ಹೀಗೆ ಎಲ್ಲರನ್ನು ಅಮ್ಮಾ ಎಂದು ಕರೆದರೂ  ಗೃಹಸ್ಥಾಶ್ರಮದಲ್ಲಿ ಅವಳನ್ನು ಮಾತ್ರ ಅಮ್ಮ ಎಂದು ಕರೆಯುವುದಿಲ್ಲ.  ಅಂದರೆ ಇಲ್ಲಿ ಊರ್ವಶಿಯನ್ನು ಅಮ್ಮಾ ಎಂದು ಕರೆಯುವ ಅರ್ಜುನ…ಆಕೆಯಲ್ಲಿ ಅರೋಪಿಸುವ ಭಾವನೆ ಎಂತಹದ್ದು ಎಂಬುದನ್ನು ತೋರಿಸಿಬಿಡುತ್ತಾರೆ. ಅಲ್ಲಿಗೆ ಒಂದು ಪಾತ್ರದ  ಅಸ್ಥಿವಾರ ಗಟ್ಟಿಯಾಗಿ  ಬಿಡುತ್ತದೆ.  ಈ ರೀತಿಯ ಪರೋಕ್ಷವಾಗಿ ಪಾತ್ರದ ವ್ಯಕ್ತಿತ್ವವನ್ನು ಸನ್ನಿವೇಶವನ್ನೂ ಚಿತ್ರಿಸುವ ಅರ್ಥ ಗಾರಿಕೆ ಪರಬ್ರಹ್ಮನ ಮರುಸೃಷ್ಟಿಯನ್ನೇ  ನೆನಪಿಗೆ ತರುತ್ತದೆ. 
ಎಲ್ಲವೂ ಸರಿ ಎನ್ನುವಾಗ ಊರ್ವಶಿಯ ಆಗಮನದ ಕಾರಣ ತಿಳಿದುಬಿಡುತ್ತಾನೆ. ತಾನು ಭ್ರಮೆಗೋಳಗಾದೆನೆ?,  ಎಂಬ ಅರ್ಜುನನ ಕಳವಳ,   ಹೃದ್ಯವಾದ ಮಾತುಗಳಲ್ಲಿ ವ್ಯಕ್ತವಾಗುತ್ತದೆ. “ ನಾನು ಕ್ರಿಯಾಲೋಪ ಉಂಟು ಮಾಡಿದೆನೇ? ದೇವಲೋಕದ ಭಾಷೆಗೂ ಭಾಷಾವೆತ್ಯಾಸ ಇದ್ದರೂ ,   ಒಳಗಿನ ಭಾವ ವೆತ್ಯಾಸ ಇರಲಿಕ್ಕಿಲ್ಲ”  ಅರ್ಜುನನ ಕಳವಳ ಮುಂದಿನ ಮಾತುಗಳಲ್ಲಿ ಅಕ್ಷರಶಃ ವ್ಯಕ್ತವಾಗುತ್ತದೆ. “ ಊರ್ವಶಿಗೆ.....ಕಾಮ ! ಅವನೀಗ ಸುಡುವುದಕ್ಕೆ ತೊಡಗಿದ್ದಾನೆ. ದೇವೇಂದ್ರನ ಆಜ್ಞೆಯಂತೆ ನೀನು, ನನ್ನ ಸೇವೆಗೆ ಅಂತ ನಿಯೋಜಿಸಲ್ಪಟ್ಟವಳು. ಮಹನೀಯನಾದಂತಹ ದೇವೇಂದ್ರನಿಗೆ ಈ ಅರ್ಜುನನಿಗೆ ಹೋದಲ್ಲಿ ಬಂದಲ್ಲಿ ಹೀಗಿದ್ದವರು ಬೇಕು ಅಂತ ಕಲ್ಪನೆ ಹೇಗೆ ಬಂತೋ?”
ಕಾಮನನ್ನು ಸುಟ್ಟು  ಹಾಕಿದ ಶಿವನಲ್ಲಿ ಹೋರಾಟ ಮಾಡಿ ಪ್ರಸಾದವನ್ನು ಶಿರದಲ್ಲಿ ಧರಿಸಿ ಬಂದವನಿಗೆ ಇದೆಂತಹ ಕಾಮ ಪರೀಕ್ಷೆ? ದೇವಲೋಕದ ಯಾವೊಬ್ಬ ಸ್ತ್ರೀಯು ತಾವಾಗಿ ಮತ್ತೊಬ್ಬನನ್ನು ಕಾಮಿಸಿ ಹೋಗುವಂತಹ ಪದ್ದತಿ ಈ ವರೆಗೆ ಇರಲಿಲ್ಲ.
ಈ ವರೆಗೆ ಅರ್ಜುನನಿಗೆ  ಊರ್ವಶಿ  ಪರೀಕ್ಷಿಸುತ್ತಿದ್ದಾಳೋ ಎಂಬ ಅನುಮಾನ ಬಂದಿತ್ತು, ಅಮ್ಮನಾಗುವುದಕ್ಕೆ ಅರಿಯದವಳೇ ಈಕೆ? ದೇವೇಂದ್ರನ ಅರ್ಧಾಸನದಲ್ಲಿ ಸ್ಥಾನ ದಕ್ಕುವಾಗ ಈ ಪಾರ್ಥ ಉನ್ಮತ್ತನಾದನೇ ಎಂಬ ಭಾವವೇ? ಅಕೆಯ ಮೇಲೆ ಪೂಜ್ಯ ಭಾವ ಮೂಡುವುದಕ್ಕೆ ತನ್ನಲ್ಲಿದ್ದ ಸಂಸ್ಕಾರವನ್ನು ಅರ್ಥವಿಸದೇ ಹೋದಳೇ? ಇಂದ್ರನಿಗೆ ಊರ್ವಶಿ  ಹೇಗೆಯೋ ಹಾಗೇ ಇಂದ್ರಾಸನದಲ್ಲಿ ಅರ್ಧವನ್ನು ದಕ್ಕಿಸಿಕೊಂಡ ಪಾರ್ಥನಿಗೂ ಊರ್ವಶಿ.....ಆಗ ತನ್ನ ಸಂಸ್ಕಾರದ ಪ್ರಚೋದನೆಯ ಕಾರಣವನ್ನು ಹೇಳುತ್ತಾನೆ. “ ಅಮ್ಮ ನೀನು ಪುರೂರವನ ಅರಸಿಯಾಗಿದ್ದವಳು. ಅವನ ಅರಸಿಯಾಗಿ ನಹುಷನನ್ನು ಹೆಡೆದವಳಲ್ಲವೇ? ವಸಿಷ್ಠರು ಯಾವುದೋ ಕಾರಣಕ್ಕೆ ನಿನ್ನ ಗರ್ಭದಿಂದಲೇ ಭೂಮಿಗೆ ಇಳಿದವರಂತೆ. ವಸಿಷ್ಠರೂ ನಿನಗೆ ಮಗನಾದ ಹಾಗಾಯ್ತು. ವಸಿಷ್ಠರ ಮಗ ಪರಾಶರ, ಆ ಪರಾಶರರ ಪುತ್ರ ವೇದವ್ಯಾಸ.....”  ಹೀಗೆ ತನ್ನ ಹಿರಿಯರ ವೃತ್ತಾಂತವನ್ನು ಹೇಳಿ ಊರ್ವಶಿಯ ಸ್ಥಾನದ ಅರಿವನ್ನು ಉಂಟು ಮಾಡುವುದಕ್ಕೆ ಯತ್ನಿಸುತ್ತಾರೆ.

ನಾರಾಯಣ ಋಷಿಗಳು ತನ್ನ ಎಡ ತೊಡೆಯನ್ನು ತಿಕ್ಕಿಕೊಂಡಾಗ ಊರ್ವಶಿ ಹುಟ್ಟಿದಳು. ಊರ್ವಶಿ ಜನ್ಮ ಕಥೆಯನ್ನು ಹೇಳುತ್ತಾ ಇನ್ನೊಂದು ವಿಶ್ಲೇಷಣೆಯನ್ನು ಮುಂದಿಡುವ ರೀತಿ ಬಹಳ ಅರ್ಥಗರ್ಭಿತವಾಗಿದೆ.
“ ಕಾಮದಿಂದ  ಹುಟ್ಟಿದ, ಯಾವತ್ತೂ ಕಾಮಿನಿಯರಾದಂತಹ ಅಪ್ಸರ ಸ್ತ್ರೀಯರಿಗೆ, ನೀನು ಪತ್ಯಸ್ತ್ರವಾಗಿ ಹುಟ್ಟಿದವಳು. ಕಾಮ ಇಲ್ಲದೇ ಇದ್ದಂತಹ, ಕಾಮದಿಂದ ವಿಕಾರಗೊಳ್ಳದೇ ಇದ್ದಂತಹ ನರ ನಾರಾಯಣ ಋಷಿಗಳ ಸನ್ನಿಧಾನದಲ್ಲಿ, ತ್ಯಾಗ ರೂಪವಾದ, ನಿಯಂತ್ರಣ ರೂಪವಾದಂತಹ, ಇಂದ್ರಿಯ ನಿಗ್ರಹ ರೂಪವಾದಂತಹ ನಾರಾಯಣ ಋಷಿಗಳ ಬಲ ತೊಡೆಯಿಂದ ಹುಟ್ಟಿದಂಹ ನೀನು ಈಗ ’ಕಾಮದ ಊರಿಗೆ ಅಧೀನಳಾಗಿದ್ದೇನೆ’ ಅಂತ ಹೇಳಿದ್ರೆ ಬಹುಶಃ ವ್ಯಕ್ತಿತ್ವದಿಂದ, ಈ ದೇವಲೊಕದ ಸಹವಾಸದಿಂದ ನಿನಗುಂಟಾದಂತಹ ಒಂದು ಪರಿಸರದ ದುರ್ಗಂಧ ಅಂತ ನಾನು ತರ್ಕಿಸಿಕೊಂಡು ನಾನು ವಿಮರ್ಶಿಸಲಿಕ್ಕೆ ಹೋಗುವುದಿಲ್ಲ. ನನಗಂತೂ ನೀನು ಯಾವಾಗಲೂ ಪೂಜ್ಯಳೇ, ಯಾವಗಲೂ ವಂದನಾರ್ಹಳೇ. “
ಊರ್ವಶಿ ಒಂದೇ ಹೇಳುತ್ತಾಳೆ, ನಾವು ಗಣಿಕೆಯರು ನನ್ನ ಸಹಮತ ಇದೆ.   ಅಗ ಗಣಿಕಾ ಧರ್ಮವನ್ನು ಸುಂದರವಾಗಿ ವಿವರಿಸುತ್ತಾರೆ.   ಗಂಡಕೀ ಅಂತ ಒಬ್ಬಾಕೆ ದೇವದಾಸಿ ಇದ್ದಳಂತೆ, ಆಕೆ ’ನಿತ್ಯ ಪತಿವೃತೆ’. ನಿತ್ಯ ಪತಿವೃತೆಯರು ಆ ದಿನ ಯಾವನನ್ನು ವರನಾಗಿ ಸ್ವೀಕರಿಸುತ್ತಾಳೋ,  ಆನಂತರ ಮಹಾರಾಜನೇ ಬರಲಿ ಆಕೆಯ ಮನೆಯ ಬಾಗಿಲು ತೆರೆಯಲ್ಪಡುವುದಿಲ್ಲ.  ಅವಳ ಧರ್ಮಕ್ಕೆ ಒಲಿದು ನಾರಾಯಣನೇ ಅವಳಲ್ಲಿ ಹುಟ್ಟಿ ಬಂದ. ಮುಂದೆ ಸಾಲಿಗ್ರಾಮದ ಉತ್ಪತ್ತಿಗೂ ಇದೇ ಗಂಡಕೀ ಅಥವಾ ಗಂಡಕೀ ನದಿ ಕಾರಣವಾಗುತ್ತದೆ.  ನೀನು ಗಣಿಕೆಯಾಗು, ನಿನ್ನನ್ನು ಮೆಚ್ಚಿ ಬಂದವರಿಗೆ ನೀನು ಸೆರಗು ಹಾಸು. ಹೊರತು ತಾಯೀ.... ತಾಯಿ..ನೀನು ವಿಟನನ್ನು ಹುಡುಕುತ್ತಾ ಹೋಗ ಕೂಡದು. (ಇಲ್ಲಿ ಗಂಭೀರತೆಯನ್ನು ಗಮನಿಸುವಂಥದ್ದು)
ದೇವತಾ ಸ್ತ್ರೀಯರು ಸಂತಾನಾರ್ಥಿಯಾಗಿ ಯಾವ ಪುರುಷನನ್ನೂ ಸಮೀಪಿಸುವುದಿಲ್ಲ. ಆದ್ದರಿಂದ ತಾಯಿಯೆಂದು ಪೂಜಾರ್ಹಳಾಗಿ ನೀನು ಉಳಿಯುವುದಿದ್ದರೆ ಒಂದು ಘಳಿಗೆಯಲ್ಲ ಇಡೀ ರಾತ್ರಿಯಲ್ಲ ನಾಳೆಯೂ ಇರಬಹುದು.  ಪುತ್ರ ನಾನು ನಿನ್ನನ್ನು ಸೇವಿಸ್ತೇನೆ. ಅದಲ್ಲ ನೀನು ಕಾಮಾರ್ಥಿಯಾಗಿ ಬಂದು ಕೇಳಿದರೆ  ಆಗದದು. ಆಗದು. 
ಇಷ್ಟೆಲ್ಲ ವಾದ ತರ್ಕಗಳನ್ನು ಹೇಳುವಾಗ ಊರ್ವಶಿಯ ಒಂದು ಪ್ರಶ್ನೆ ಬಹಳ ಮಾರ್ಮಿಕವಾಗಿರುತ್ತದೆ.  “ದ್ರೌಪದಿ ಒಬ್ಬಳನ್ನು ಐದು ಜನ ಭೋಗಿಸುತ್ತಿದ್ದೀರಲ್ಲ” ದರ್ಮಸೂಕ್ಷ್ಮದ ಜಿಜ್ಞಾಸೆಯ ಪ್ರಶ್ನೆ ಇದು.  ಇದಕ್ಕೆ ಉತ್ತರಿಸಬೇಕಾದರೆ ಕೇವಲ ಪಾತ್ರವಾಗಿ ಇದ್ದರೂ ಸಾಲದು.  ಐವರು ಹಂಚಿಕೊಳ್ಳಿ ಎಂಬ ಮಾತೃವಚನವೇ ಕಾರಣವಾಗಿ ದ್ರೌಪದಿ ಐವರ ಸತಿಯಾಗುತ್ತಾಳೆ. ಏಕ ಕಾಲದಲ್ಲಿ ಆಕೆ ಐವರ ಸತಿಯಾಗುವುದಿಲ್ಲ. ಪರ್ಯಾಯವಾಗಿ ಪಾಂಡವರು ಆಕೆಯ ಪತಿಯಾಗುತ್ತಾರೆ. ಒಬ್ಬಾಕೆ ಗಣಿಕೆಯಾದರೂ ನೂರು ಮಂದಿ ಕಾಯ್ತಾ ಇದ್ದರೂ ಅವಳ ದರ್ಶನವನ್ನೋ ಸ್ಪರ್ಶವನ್ನೋ ಏಕ ಕಾಲದಲ್ಲಿ ಅವಳು ಅನೇಕರಿಗೆ ಏನನ್ನೂ ಹಂಚುವುದಕ್ಕೆ ಸಾಧ್ಯ ಇಲ್ವಲ್ಲ. ?  ಹಾಗಾದರೆ ದ್ರೌಪತಿಯಾದವಳಿಗೆ, ಪತಿಯಾಗಿ ಅಂಗೀಕರಿಸಲ್ಪಡುವಾಗ ಐವರಲ್ಲಿ ಯಾವನೋ ಒಬ್ಬನಲ್ವೋ? ಐವರೂ ಅಲ್ಲವಲ್ಲ?
ಅಲ್ಲಿ ಒಂದಾಗುವುದಕ್ಕೆ ಮಾತೃ ವಚನ ಕಾರಣವಾದರೆ ಇಲ್ಲಿ ಒಂದಾಗುವುದಕ್ಕೆ ಪಿತೃವಚನ ಯಾಕೆ ಕಾರಣವಾಗುವುದಿಲ್ಲ? ಇಷ್ಟೇ,  ಅರ್ಜುನನಿಗೆ  ಪಿತೃ ಅಂದರೆ ದೇವೇಂದ್ರನಿಗೆ,  ತನಗೆ ಸತಿಯಾದಂತೆ ದೇವೆಂದ್ರನಿಗೆ ಸೊಸೆಯಾಗಬಲ್ಲೇಯಾ?  ಇವರಡೂ ಆಗದು. ಯಾವಾಗ ತಂದೆಗೆ ಸೊಸೆಯಾಗುವುದಿಲ್ಲವೋ ಆವಾಗ ಪಿತೃ ವಚನ ಎಂಬುದಕ್ಕೆ ಅರ್ಹತೆಯೇ ಲಭ್ಯವಾಗುವುದಿಲ್ಲ. ದೇವೆಂದ್ರ ವಚನ ಅದು ನನಗೆ ವಚನವಾಗುವುದಿಲ್ಲ. ಅದು ನಿರ್ದೇಶನವಾಗುತ್ತದೆ. ಇಂದ್ರ ಅರ್ಜುನನಿಗೋ ಪಾಂಡವರಿಗೋ ಪಿತೃಸ್ಥಾನದಲ್ಲಿರುವವನಲ್ಲ. ದೇವಲೋಕದಿಂದ ನಾವು ಏನಾದರೂ ಪಡೆಯಬೇಕಾದರೆ ನಾವು ಆ ವೈದಿಕ ಮಾರ್ಗವನ್ನೇ ಅವಲಂಬಿಸಿ ಇಂದ್ರ ಪ್ರಸಾದವನ್ನು ಪಡೆಯಬೇಕಾಗುತ್ತದೆ.  ಪಿತೃ ಸಂಬಂಧ ಎಲ್ಲಿ ಬರುತ್ತದೆ?
ಇನ್ನೊಂದು ವಿವರಣೆಯಲ್ಲಿ ಅರ್ಜುನನ ನಿಲುವು ಇನ್ನೂ ಭದ್ರವಾಗಿ ಗೋಚರವಾಗುತ್ತದೆ. “ ನೀನು ದೇವೇಂದ್ರನ ಆಣತಿಯಂತೆ , ನಿನ್ನನ್ನು ಬೇರೊಬ್ಬರಿಗೂ ಸಮರ್ಪಿಸಿಕೊಳ್ಳಬಲ್ಲೆ. ಒಟ್ಟು ಅರ್ಥ ಏನು ಸ್ವಂತಿಕೆ ಇಲ್ಲದವಳು.”  (ಸ್ವಂತಿಕೆ ಇಲ್ಲದವಳ ಬಯಕೆಯೂ ಸ್ವಂತದ್ದಲ್ಲ. ಇಂದ್ರನ ಆಣತಿಯಂತೆ ಆಕೆಯ ಕಾಮ ವ್ಯಕ್ತವಾಗುತ್ತದೆ. ಒಂದು ವೇಳೆ ಊರ್ವಶಿಯ ಬದಲ್ಲು ರಂಭೆಯನ್ನೋ ಮೇನಕೆಯನ್ನೋ ಕಳುಹಿಸುರ್ತ್ತಿದ್ದರೆ....ಈಕೆಯ ಬಯಕೆ ಹೇಗಿರುತ್ತಿತ್ತು? ) ಹೋಗಿ ಭೂಲೋಕಕ್ಕೆ , ಐದು ವರ್ಷದ ಹುಡುಗನ ತಪಸ್ಸನ್ನು ಕೆಡಿಸಿ ಬನ್ನಿ. ಅಂತ ದೇವೇಂದ್ರ ಹೇಳಿದರೂ ನೀವು ಹೆಂಗಸರಾಗಿ ನಿಮ್ಮ ಸ್ತ್ರೀತ್ವದ ಪ್ರದರ್ಶನಕ್ಕೆ ಏನೂ ಉಪಯೋಗ ಇಲ್ಲ ಅಂತ ಗೊತ್ತಿದ್ರೂ ....ಧ್ರುವನ ತಪ್ಪಸ್ಸಿಗೆ ...ನೀವೆಲ್ಲ ಇಂದ್ರ ಆಜ್ಞಾನು ವರ್ತಿಗಳು. ದೇವೇಂದ್ರನ ಆಯುಧಗಳು ಅಂತ ಅರ್ಥ. ದೇವೇಂದ್ರನನ್ನು ಪೂಜಿಸುವ ನಮಗೆ ದೇವೇಂದ್ರನ ಆಯುಧಗಳೂ ಪೂಜ್ಯವಸ್ತುವೇ.”
ಹೀಗೆ ಸಾರಾಸಗಟಾಗಿ ತಳ್ಳಿ ಹಾಕುತ್ತಾನೆ. ಮಾತೃ ಭಾವದ ಸ್ಥಾಯೀ ಭಾವವನ್ನು ಅರ್ಜುನ ವ್ಯಕ್ತ ಪಡಿಸುತ್ತಾನೆ. 
“ಒಲಿದು ಬಂದ ನನ್ನಂತಹ ಹೆಣ್ಣನ್ನೂ ಸಹ ತಿರಸ್ಕರಿಸುವ ನೀನು ಷಂಡ.” ಎಂದು ಊರ್ವಶಿ ಹೇಳುತ್ತಾಳೆ.
ಈ ಮಾತಿಗೆ ಅರ್ಜುನನ ಪ್ರತಿಕ್ರಿಯೆ ಹೀಗಿರುತ್ತದೆ, ಇದು ತೀರ್ಮಾನವಾಗ ಬೇಕಿದ್ದರೆ ಮರು ವಿಮರ್ಶೆಯಾಗಬೇಕು..  ಗಂಡಸು ಷಂಡ ಅಂತ ಹೆಣ್ಣು ತೀರ್ಮಾನಿಸುವುದಕ್ಕೆ ಅಧಿಕಾರಿಣಿಯಾಗಬೇಕಿದ್ದರೆ ಅವಳ ಇಷ್ಟಾನುವರ್ತಿಯಾಗಿ ಇವ ವ್ಯವಹರಿಸಿದ ಮೇಲೆ, ಇದಕ್ಕಿಂತ ಹೆಚ್ಚು ಬಿಚ್ಚಿ ಹೇಳಲಾರೆ. (ಯಕ್ಷಗಾನ ಸುಸಂಸ್ಕೃತ ಭಾಷಾ ಪ್ರಯೋಗ ಎಂದರೆ ಹೀಗೆ ಇರಬಹುದು).  ಒಂದು ಪ್ರಶ್ನೆ, ಅಮ್ಮಾ ಹೆಣ್ಣಿನ ಹಿಂದೆ ಹೋಗುವವ ಪುರುಷನೋ ಅಲ್ಲ, ಹೆಣ್ಣು ಹಿಂಬಾಲಿಸುವಂತೆ ಮಾಡುವವ ಪುರುಷನೋ?   ಒಬ್ಬನ ಪುರುಷತ್ವವನ್ನು ಅಳೆಯುವುದಕ್ಕೆ ಅದು ಮಾನದಂಡವಲ್ಲ. ಹಿಂದೆ ಹೋಗುವುದು ದಾಸ್ಯ ಭಾವದಿಂದ. ಆತ ಮುಂದೆ ಹೋಗುವವನ ಸೇವಕನಾಗಿರುತ್ತಾನೆ. ಭಗವಂತ ತನ್ನ ಮಾಯೆ, ತನ್ನನ್ನೂ ಅನುಸರಿಸಬೇಕು ಅಂತ ಅಪ್ಪಣೆ ಮಾಡಿ ಅವಳನ್ನು ಹಿಂದೆ ನಿಲ್ಲಿಸಿ ತಾನು ಮುಂದೆ ಹೋಗುತ್ತಾನೆ. ಮಾಯೆಗೆ ಅಧೀನನಾಗುವುದಿಲ್ಲ. ಅವನಿಗೆ ಅಧೀನವಾಗಿ ಮಾಯೆ ಹಿಂದೆ ಹೋಗುತ್ತಾಳೆ.  ಗಂಡಸಾದವನು ಹೆಂಗಸಿನ ಹಿಂದೆ ಹೋಗುವುದಿಲ್ಲ. ಶ್ರೀಮಂತನಾದವ ಮತ್ತೊಬ್ಬ ಶ್ರೀಮಂತನ ಹಿಂದೆ ಹೋಗುವುದಿಲ್ಲ. ಪೂರ್ಣನಾದವ ಮತ್ತೊಂದು ಪೂರ್ಣನಾದವನನ್ನು ಹುಡುಕಿಕೊಂಡು ಹೋಗುವುದಿಲ್ಲ. ಪೂರ್ಣವಾದ ಗಂಡಸಿನ ಯೋಗ್ಯತೆ ಏನು? ಅವನನ್ನು ಹುಡುಕಿ ಹೆಂಗಸರು ಹಿಂದೆ ಬರಬೇಕು. ಶೂರ್ಪನಖಿ ರಾಮನಿಂದ ಆಕರ್ಷಿತಳಾದಳೇ ಹೊರತು ರಾಮನನ್ನು ಯಾವ ಹೆಣ್ಣೂ ಆಕರ್ಷಿಸಲಿಲ್ಲ. ನಾನು ನಿಜವಾದ ಗಂಡಸು ಹಾಗಾಗಿಯೇ ನಿನ್ನಿಂದ ಆಕರ್ಷಿತನಾಗಲಿಲ್ಲ. “
ತನ್ನ ಸೌಂದರ್ಯಕ್ಕೆ ಯಾವುದೇ ರೀತಿ ವಿಕಾರ ಭರಿತನಾಗದೇ ಇರುವ ಅರ್ಜುನನನ್ನು ನೋಡಿ ಆತನಲ್ಲಿ ನಪುಂಸಕತ್ವವನ್ನು ಆರೋಪಿಸುತ್ತಾಳೆ. ಇದನ್ನು ತೀರ್ಮಾನಿಸುವುದಕ್ಕೆ ಅವರೊಳಗಿನ ವ್ಯವಹಾರ ಸಾಕ್ಶಿಯಾಗುವುದಿಲ್ಲ . ಇದನ್ನು ಪರಿ ಪರಿಯಾಗಿ ವಿವರಿಸಿದರೂ ಸಂವತ್ಸರ ಒಂದಕ್ಕೆ  ಷಂಡನಾಗು ಎಂದು ಶಪಿಸಿಬಿಡುತ್ತಾಳೆ. ಆಕೆ ತಾಯಿಯಾಗುವುದಿಲ್ಲ. ಹೆಂಡತಿಯಾಗುವುದಿಲ್ಲ. ವ್ಯವಹಾರ ಫಲಕಾರಿಯಾಗದ ಹತಾಶೆಯ, ಮೊದಲು ಹೇಳಿದ ಕೇವಲ ಗಣಿಕಾ ಸ್ತ್ರೀಯಾಗಿಯೆ ವ್ಯವಹರಿಸಿ ಬಿಡುತ್ತಾಳೆ. 
ಅರ್ಜುನ ಚಿಂತಿಸುತ್ತಾನೆ. ಮೂರು ಲೋಕದ ಗಂಡನನ್ನು ಆಕೆ ಷಂಡ ಅಂತ ಹೇಳ್ತಾಳೆ. ಎರಡನೇ ಹೇಳ್ತಾಳೆ ನರಗುರಿಯೆ. ಒಂದು ವೇಳೆ ಆಕೆಯ ಇಚ್ಛೆಯಂತೆ ಅರ್ಜುನ ನಡೆದುಕೊಂಡಿದ್ದರೆ, ನರಗುರಿಯೇ ಎಂಬುದಕ್ಕೆ ಅರ್ಥ ಒದಗುತ್ತಿತ್ತು. ಈ ಅರ್ಜುನ ಬಲಿಯಾದ್ದಾನೋ? ಅಲ್ಲ ಅರ್ಜುನನನ್ನು  ಆಕೆಗೆ ಬಲಿಕೊಡಲು ಜಗತ್ತಿನಲ್ಲಿ ಯಾವುದದರು ಒಂದು ಶಕ್ತಿಗೆ ಸಾಧ್ಯವಿದೆಯೇ? ಸ್ವರ್ಗದಲ್ಲಿ ಸತ್ಕರಿಸಲ್ಪಟ್ಟು ಶಪಿಸಲ್ಪಟ್ಟೂ ಆಯ್ತು. ಒಮ್ದು ವರ್ಷ ಷಂಡನಾಗಿರಬೇಕಂತೆ.  ಮೂರು ಲೋಕದ ಗಂಡ ಅರ್ಜುನ ಒಂದು ವರ್ಷವಲ್ಲ ಒಂದು ಘಳಿಗೆಯಾದರೂ ಷಂಡನಾಗಿ ಬದುಕುವುದಕ್ಕೆ ಸಾಧ್ಯವೇ? ಸಹೋದರರ ಮುಂದೆ ಹೆಂಡತಿ ಸುಭದ್ರೆಯ ಮುಂದೆ ದ್ರೌಪದಿಯ ಮುಂದೆ ಷಂಡ ನಾಗಿ ಹೇಗೆ ನಿಲ್ಲಲ್ಲಿ?  ಈ ಕ್ಲೈಬ್ಯವನ್ನು ಹೇಗೆ ನಿರ್ವಹಿಸಲಿ?
ಭೂಲೋಕಕ್ಕೆ ಹೋಗದೇ ಇಲ್ಲೆ ಉಳಿಯಲೇ. ಎಲ್ಲಿಯವರೆಗೆ ದೇವೆಂದ್ರನ ರಕ್ಷಾಕವಚ ಇರುವುದೋ ಅಲ್ಲಿಯ ತನಕ ಈ ದೇಹ ಇಲ್ಲಿಯ ವಾತಾವರಣವನ್ನು ಸಹಿಸಿಕೊಳ್ಳಬಹುದು. ಅವನಿಂದ ತಿರಸ್ಕರಿಸಲ್ಪಟ್ಟರೆ ಒಂದು  ನಿಮಿಷವೂ ಇಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. “ ನೀರಲ್ಲಿ ಹುಟ್ಟಿದ ಮೀನು ಬದುಕಬೇಕಾದರೆ ಪುನಃ ನೀರನ್ನೇ ಅಶ್ರಯಿಸಬೇಕು. ಯಾರಾದರೂ ನೀರು ಬೇಡ ಹಾಲಿನಲ್ಲಿರು , ಹಾಲು ಉತ್ತಮವಾದದ್ದು ಅಂದರೆ ನೀರಿನ ಮೀನಿಗೆ ಹಾಲು ವಿಷವಾಗುತ್ತದೆ. ನಾನು ಇಲ್ಲಿಗೆ ಅತಿಥಿ. ಪ್ರವಾಸಿ. ಇಲ್ಲಿ ಉಳಿಯುವ ಹಾಗೂ ಇಲ್ಲ. ಮರ್ತ್ಯಲೋಕಕ್ಕೆ ಹೋಗುವ ಹಾಗೂ ಇಲ್ಲ. ಅಭಿನವ ತ್ರಿಶಂಕುವಾದೆನಲ್ಲಾ?
ಅರ್ಜುನನ ಪಾಪವನ್ನು ತಿದ್ದುವುದಕ್ಕೆ ಸ್ವರ್ಗಲೋಕದ ಪುಣ್ಯವೂ ಪರ್ಯಾಪ್ತವಲ್ಲ.
ಇಂದ್ರನಲ್ಲೂ ತನ್ನ ದುಃಖವನ್ನು ತೋಡಿಕೊಳ್ಳುತ್ತಾನೆ. ಭೂಲೋಕದಲ್ಲಿ ಒಂದು ವರ್ಷ ಷಂಡನಾಗುವುದು. ನನ್ನಂಥವನಿಗೆ ಒಂದು ವರ್ಷವೇನು ಒಂದು ನಿಮಿಷವಾದರೂ... ಅದು ಕಳೆದು ಪುನಃ ನಾನು ಪುರುಷ ಅಂಥ ಸ್ಥಾಪಿಸುವುದಕ್ಕೆ ಯಾವ ಧನ್ವಂತರಿಯನ್ನು ಹುಡುಕಲಿ? ಭೂಲೋಕದಲ್ಲಿ ಈ ಷಂಡತ್ವದಿಂದ ನನಗೆ ಎನು ಪ್ರಯೋಜನ?
ದೇವೆಂದ್ರ ಮಗನಿಗೆ ಸಾಂತ್ವನದ ನುಡಿಗಳನ್ನು ಹೇಳುತ್ತಾನೆ. ಮುಂದೊಂದು ದಿನ ಈ ಷಂಡತನ ಅಜ್ಞಾತವಾಗಿ ಇರಲು ಉಪಯೋಗಕ್ಕೆ ಬರುತ್ತದೆ. ಅರ್ಜುನನಂತಹ ಘನ ವಿಕ್ರಮಿ, ಮೂರು ಲೋಕದ ಗಂಡ ಅಜ್ಞಾತವಾಗಿ ಇರುವುದಕ್ಕೆ ಸಾಧ್ಯವೇ? ಜನಪ್ರಿಯ ಕಲಾವಿದ ಯಾವ ವೇಷದಲ್ಲಿ ಬಂದರೂ ಪ್ರೇಕ್ಷಕ ಗುರುತು ಹಿಡಿಯುವಂತೆ ಅರ್ಜುನ ಜಗತ್ತು ಕಂಡ ವ್ಯಕ್ತಿತ್ವ. ಆತನಿಗೆ ಸುಲಭದಲ್ಲಿ ಅಜ್ಞಾತವಾಗಿ ಇರುವುದಕ್ಕೆ ಸಾಧ್ಯವಿಲ್ಲ. ಅಂತಹ ಅರ್ಜುನ ಗಂಡೂ ಅಲ್ಲದ ಹೆಣ್ಣು ಅಲ್ಲದ ರೂಪದಲ್ಲಿ ಇದ್ದರೆ, ಯಾರಿಂದಲೂ ಗುರುತು ಹಿಡಿಯುವುದಕ್ಕೆ ಸಾಧ್ಯವಿಲ್ಲ. ಒಂದರ್ಥದಲ್ಲಿ ಊರ್ವಶಿಯ ಶಾಪವೂ ವರವಾಗುತ್ತದೆ.
ಕಲೆ ಒಂದು ಅವಧಿಗೆ ಮಾತ್ರ ಸೀಮಿತವಾಗಿ ಪ್ರದರ್ಶನ ಗೊಳ್ಳುತ್ತದೆ. ಆದರೆ ಅದರ ಪ್ರಭಾವ ಅದು ನಿರಂತರವಾಗಿ ಜೀವನ ಪರ್ಯಂತ ನಮ್ಮೊಡನಿರುತ್ತದೆ. ಹಾಗೆ ಈ ಪಾತ್ರ ಚಿತ್ರಣ ಒಂದು ಸಲ ಕಂಡೆವು ಎಂದಾದರೆ ಅದರ ಪ್ರಭಾವ ದಟ್ಟವಾಗಿ ಮನಸ್ಸಿಗೆ ಉಂಟುಮಾಡುವುದರಲ್ಲಿ ಅನುಮಾನವಿಲ್ಲ. ಮನುಷ್ಯ ಸಾಹಿತ್ಯಾಸಕ್ತನಾದಷ್ಟು ಆತ ಪ್ರಬುದ್ಧನಾಗುತ್ತಾನೆ.  ಸಾಹಿತ್ಯ ಆಸ್ವಾದನೆ ಮನಸ್ಸಿನ ಸಂಚಲನಕ್ಕೆ ಕಾರಣವಾಗುತ್ತದೆ.  ಸಾಹಿತ್ಯಾಸ್ವಾದನೆ  ಮನಸ್ಸಿನ ಜೀವ ಚೈತ್ಯನ್ಯಕ್ಕೆ ಕಾರಣವಾಗುತ್ತದೆ.   ಮನಸ್ಸಿನಲ್ಲಿ ಸಂಚಲನ ಉಂಟಾದಾಗ ನಿಂತ ನೀರಲ್ಲಿ ಸಂಚಲನೆಯ ಅಲೆಯು ಸೃಷ್ಟಿಯಾದಂತೆ ಮನಸ್ಸಿನ ಉಸಿರಾಟಕ್ಕೆ ಕಾರಣವಾಗುತ್ತದೆ.  ಸಾಹಿತ್ಯಾ ಸಕ್ತಿ ಇಲ್ಲದೇ ಇದ್ದ ಮನಸ್ಸು ನಿಂತ ನೀರಂತೆ  ರೋಗ ರುಜಿನವನ್ನು ಸೃಷ್ಟಿಸುತ್ತದೆ.  ಯಾವ ಮನಸ್ಸಿನಲ್ಲಿ ಚಿಂತನೆಗಳು ಮೊಳೆಯುವುದಿಲ್ಲವೋ ಅದು ಜೀವಂತಿಕೆಯನ್ನು ತೋರಿಸಲಾರದು.  ಜ್ಞಾನದ ರಹದಾರಿಯೇ ಸಾಹಿತ್ಯ.
ಕೇವಲ ಯಕ್ಷಗಾನದಲ್ಲಿ ಮಾತ್ರ ಸಾಧ್ಯವಾಗುವ ಈ ಪಾತ್ರ ವೈಭವ ಅನುಭವಿಸುವುದಕ್ಕೆ ನಾವು ಪಳಗಿದ ಪ್ರೇಕ್ಷಕರಾಗಬೇಕು. ನಭೂತೋ ನಭವಿಷ್ಯತಿ ಎಂಬಂತೆ ಶೇಣಿ ಗೋಪಾಲ ಕೃಷ್ಣ ಭಟ್ಟರಂತಹ ಕಲಾವಿದರ ಸಮಕಾಲೀನರು ನಾವಾಗಿದ್ದೇವೆ. ಕಣ್ಣಾರೆ ಇದನ್ನು ಕಂಡು ಕೇಳಿ ಮರೆಯಲಾಗದ ಅನುಭವವನ್ನು ಪಡೆದುಕೊಂಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. 
ಕಲಾವಿದ ತಾನು ಕಲೆಯನ್ನು ತಿಳಿದಿದ್ದೇನೆ ಎನ್ನುವುದಕ್ಕಿಂತ ಕಲೆ ಅವನನ್ನು ಎಷ್ಟು ತಿಳಿದುಕೊಂಡಿದೆ ಎಂಬುದು ಮುಖ್ಯವಾಗುತ್ತದೆ.    ಶೇಣಿಯವರು ಕಲಾವಿದನಾಗಿ ಎಷ್ಟು ಮಹಾತ್ಮರೋ ಅದಕ್ಕಿಂತ ಮಿಗಿಲಾಗಿ ಅವರಲ್ಲಿರುವ ಕಲೆಯನ್ನು ಈ ಯಕ್ಷಗಾನ ಕಲೆ ತಿಳಿದುಕೊಂಡಿದೆ.  ಈ ಅರ್ಥ ವೈಭವವನ್ನು ಮತ್ತೊಮ್ಮೆ ಸಾದ್ಯಂತವಾಗಿ ಅನುಭವಿಸುವುದಕ್ಕೆ ಸಹಕಾರಿಯಾದದ್ದು ಹಲವು ವರ್ಷಗಳ ಕೆಳಗೆ ಪ್ರಕಾಶನ ಗೊಂಡ ಡಾ. ಶ್ರೀ ಗೋಪಾಲಕೃಷ್ಣ ಎಲ್ ಹೆಗಡೆಯವರಿಂದ ರಚಿಸಲ್ಪಟ್ಟ “ ಶೇಣಿ ಭಾರತ” ಎಂಬ ಪುಸ್ತಕ. ಇದನ್ನು ಒದಗಿಸಿದ ಮಹನೀಯರಿಗೆ ಮತ್ತೊಮ್ಮೆ ಪ್ರಣಾಮಗಳನ್ನು ಅರ್ಪಿಸುತ್ತೇನೆ.  ಶೇಣಿಯವರ ಅರ್ಜುನ ಸುರಿಸಿದ ಶರ ವರ್ಷದ ನೆನಪಲ್ಲಿ   ಮತ್ತಷ್ಟು ಮಿಂದೇಳುವ ಆಶೆ.





Wednesday, April 3, 2019

ಕಂಸ ವೃತ್ತಾಂತ....



ಕಂಸ ವೃತ್ತಾಂತ....
[ ಹರಿದಾಸ ಶ್ರೀ ಶೇಣಿ ಗೋಪಾಲ ಕೃಷ್ಣ  ಭಟ್ಟರು ಯಕ್ಷಗಾನ ಲೋಕ ಕಂಡ ಅದ್ಭುತ ಕಲಾವಿದ ಶ್ರೇಷ್ಠ. ತಮ್ಮ ಮಾತುಗಾರಿಕೆಯಿಂದಲೇ ಪಾತ್ರಗಳನ್ನು ಚಿತ್ರಿಸುತ್ತಾರೆ ಎಂದಾದರೆ, ಆ ಪಾತ್ರಗಳು ಮತ್ತೊಮ್ಮೆ ಜೀವ ತಳೆದು ಬಂದ ಅನುಭವವಾಗುತ್ತದೆ. ಪ್ರಕೃತಿಯಲ್ಲಿ ಮನುಷ್ಯನಿಗೆ ಮಾತ್ರವೇ ಮಾತನಾಡುವ ಯೋಗ್ಯತೆ ಭಗವಂತ ಕಲ್ಪಿಸಿದ್ದಾನೆ. ಆದರೆ ಭಗವಂತನ ಈ ಅನುಗ್ರಹವನ್ನು ಸಾರ್ಥಕಗೊಳಿಸಿದ ಶ್ರೇಯಸ್ಸು ಯಕ್ಷಗಾನ ಲೋಕಕ್ಕೆ ಸಂದರೆ,  ಅದರಲ್ಲಿ ಬಹುಪಾಲು ಶತಮಾನಕ್ಕೊಬ್ಬ ಶೇಣಿ ಎಂಬ ಖ್ಯಾತಿಗೆ ಕಾರಣರಾದ ಶ್ರೀ ಶೇಣಿ ಗೋಪಾಲ ಕೃಷ್ನ ಭಟ್ಟರಿಗೆ ಸಲ್ಲುತ್ತದೆ. ಕಣ್ಣು ತೆರೆದು ಪಾತ್ರಗಳನ್ನು ಕಾಣುವುದಕ್ಕಿಂತಲೂ ಕೇಳುವುದರಲ್ಲೇ ಅದರ ಪೂರ್ಣಾನುಭವವನ್ನು ಕೊಡುವ ಭಟ್ಟರ ಮಾತುಗಾರಿಕೆ ಯಕ್ಷಗಾನದ ಅದ್ಭುತ ರಮ್ಯ ಚರಿತ್ರೆಯ ಭಾಗವಾಗುತ್ತದೆ. ಈ ಮಾತಿನ ವೈಖರಿಯಲ್ಲಿ ಜೀವ ತಳೆದ ಒಂದು ಪಾತ್ರ ಕಂಸ. ಶ್ರೀಕೃಷ್ಣ ಜನ್ಮ  ಎಂಬ ಕಥಾಭಾಗದ  ಒಂದು ಅರ್ಥಗಾರಿಕೆ ಕೇಳುತ್ತಿರಬೇಕಾದರೆ ಹತ್ತು ಹಲವು ಚಿಂತನೆಯ ಅನುಭವ ಕೇಳುಗನಿಗೂ ಸಾಧ್ಯವಾಗುತ್ತದೆ. ಆ ಅರ್ಥಗಾರಿಕೆಯ ಸಂಕ್ಷೇಪ ರೂಪದೊಂದಿಗೆ ಹಲವು ಚಿಂತನೆಗಳು ರೂಪಗೊಂಡ ಸ್ವ ಅನುಭವ ಇಲ್ಲಿದೆ. ಭಾವನೆಗಳು ವಿಮರ್ಶಾತೀತವಾಗುತ್ತದೆ ಎಂಬ ಭಾವನೆ ನನ್ನದು. ಅದು ಸರಿ ಇರಬಹುದು ತಪ್ಪಿರಬಹುದು. ಅದು ಕೇವಲ ಭಾವನೆಗಳಷ್ಟಕ್ಕೆ ಸೀಮಿತ.  ಹುಚ್ಚು ಮನಸ್ಸಿನ ಕಲ್ಪನೆಗಳಂತೆ ಅನುಭವಗಳಲ್ಲಿ ನ್ಯೂನ್ಯತೆಗಳಿದ್ದರೆ ಅದನ್ನು ಮನ್ನಿಸುತ್ತ ಅನುಭವಿಸಬೇಕು. ]

ಕಂಸನ ಸ್ವಗತ....


            ಎಂಟಾಗಬೇಕಾದರೆ ಏಳು ಕಳೆಯಲೇ ಬೇಕಲ್ಲ?  ಏಳರವರೆಗೆ ಸಂದದೇ ಇದ್ದರೆ ಎಂಟು ಹೇಗೆ ಉಂಟಾದೀತ?. ವಸುದೇವ ಹುಟ್ಟಿದ ಏಳು ಮಕ್ಕಳನ್ನೂ ಕಂಸನಿಗೆ ತಂದು ಒಪ್ಪಿಸಿದ. ಯಾಕೆ? ಎಂಟನೆಯದ್ದು ಹುಟ್ಟುವುದಕ್ಕೆ ಅವಕಾಶ ಒದಗಿಬರಬೇಕಲ್ಲ? ಏಳು ಕಳೆಯದೇ ಇದ್ದರೆ, ಏಳು ಹೆಜ್ಜೆ ಇಡದೇ ಇದ್ದಲ್ಲಿ ಎಂಟನೆಯ ಹೆಜ್ಜೆಯ ಸ್ಥಾನ ಒದಗುವುದಾದರೂ ಹೇಗೆ? ಹೀಗೆ ಎಂಟರ ನಂಟಿನ ಮರ್ಮವನ್ನು ಬಿಚ್ಚಿಕೊಳ್ಳುತ್ತಾ ಸಾಗುವ ಕಂಸ ವೃತ್ತಾಂತ ಪರಮಾತ್ಮ ಸಂಕಲ್ಪಕ್ಕಿಂತ ಮಿಗಿಲಾದುದು ಇಲ್ಲ ಎಂಬುದನ್ನು ತೋರಿಸುತ್ತಾ ಸಾಗುತ್ತದೆ.  ಆದರೆ ಕಂಸ ಪ್ರಯತ್ನ ಎಂಬುದು ಪರಮಾತ್ಮನಿಗೆ ಸವಾಲೆಸೆಯುತ್ತಾ ಸಾಗುತ್ತದೆ. ಕಂಸ ಪರಮಾತ್ಮನೊಡನೆ ಸಂಘರ್ಷಕ್ಕಿಳಿಯುವುದು ಹೀಗೆ. ಪರಮಾತ್ಮನಿಗೆ ತೊಡಗುವ ಎಂಟರ ನಂಟಿನ ಅನುಬಂಧವನ್ನು ವಿವರಿಸುತ್ತಾ ಸಾಗುವ ಯಕ್ಷಗಾನ ತಾಳ ಮದ್ದಲೆ ಇದು. ಯಕ್ಷಗಾನದ ವಾಕ್ ಪ್ರಪಂಚದ ಯುಗ ಪುರುಷ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಕಂಸನ ಪಾತ್ರ ಲೌಕಿಕ ಮತ್ತು ಅಧ್ಯಾತ್ಮದ ಜೀವನವನ್ನು ತೆರೆದಿಡುತ್ತಾ ಸಾಗುತ್ತದೆ.   

            ಭಾವ ವಸುದೇವ ತಂಗಿ ದೇವಕಿಯನ್ನು ವೈಭವೋಪೇತವಾಗಿ ಕರೆದುಕೊಂಡು ಹೋಗುವಾಗ ಕೇಳುವ ಅಶರೀರವಾಣಿ, ದೇವರ ಅಸ್ತಿತ್ವವನ್ನು  ನಂಬದ ಕಂಸನಿಗೆ ಅನುಮಾನವನ್ನು ಹುಟ್ಟುಹಾಕಿಸುತ್ತದೆ. ಮೃತ್ಯುವನ್ನು  ತನ್ನ ಕಂಕುಳಲ್ಲೇ ಇಟ್ಟುಕೊಂಡು ಸಾಗುವ  ಕಂಸನಿಗೆ ಸಾವು ಹತ್ತಿರವಾದ ಅನುಭವ. ಆದರೂ ದೇವರು ತನಗೆ ಎಂಟರವರೆಗೆ ಸಮಯವನ್ನು ಕೊಟ್ಟಿದ್ದಾನಲ್ಲ ಎಂದು ತಿಳಿಯದೇ ಹೋದ. ನಾಳೆಯೋ ಮರುಕ್ಷಣವೋ ಹೀಗೆ ಸಾವಿನ ಬಗ್ಗೆ ಖಚಿತವಾಗಿ ತಿಳಿಯದೇ ಇರುವವನಿಗೆ ಎಂಟರವರೆಗಾದರೂ ಸಮಯವಿದೆಯಲ್ಲ ಎಂದು ಕಂಸ ಭಾವಿಸುವುದಿಲ್ಲ. ಬದಲಾಗಿ ಎಂಟರ ನಂತರವಾದರೂ  ಬರುವ ಮರಣಕ್ಕೆ ಅಂಜಿಬಿಡುತ್ತಾನೆ.  ಆಧ್ಯಾತ್ಮ ಮತ್ತು ಲೌಕಿಕದ ಮುಖದರ್ಶನವಾಗುವುದು ಹೀಗೆ.

            ಮಹಾ ಜ್ಞಾನಿಗಳಿಗೂ ತಮ್ಮ ಮರಣದ ಬಗ್ಗೆ ತಿಳಿಯುವುದಿಲ್ಲ. ಆದರೆ ಕಂಸನಿಗೆ ಅಶರೀರವಾಣಿ ಬಂದು ಮೊಳಗುತ್ತದೆ. ಶರೀರವಿಲ್ಲದ ಶಾರೀರ ಧ್ವನಿ ತೋರಿಸಿದ ಅಶಾಶ್ವತ ಶರೀರ ಸಂಬಂಧವನ್ನು ಕಂಸ ತಿಳಿಯದೇ ಹೋದ. ಒಂದಲ್ಲ ಎರಡಲ್ಲ ಎಂಟು ಸಲ ದೇವಕಿ ತಾಯಿಯಾಗಬೇಕು.  ಯೋಚಿಸುತ್ತಾನೆ ಕಂಸ, ಮಹಾ ಜ್ಞಾನಿಗಳು ಎಷ್ಟು ಯತ್ನಿಸಿದರೂ ತಿಳಿಯದ ರಹಸ್ಯವನ್ನು ತನಗೆ ಪರಮಾತ್ಮ ಏಕೆ ಹೇಳಿದ? ಮತ್ತೇನೂ ಅಲ್ಲ. ಇದು ದೇವಕಿಯ ದುರ್ದೈವ. ದುರಾದೃಷ್ಟ. ಮಹಾರಾಜನ ಮುದ್ದಿನ ತಂಗಿ, ಹೇಗೆ ಬದುಕನ್ನು ಸಾಗಿಸಬಹುದಿತ್ತು. ದುರ್ದೈವವಲ್ಲದೇ ಮತ್ತೇನು?  ದೇವಕಿಯ ದುರ್ದೈವ ತನಗಿಂದು ಸದೈವವಾಗಿ ಪರಿಣಮಿಸಿದೆ.  ಬರಬಹುದಾದ ವ್ಯಾಧಿಯನ್ನು ಮೊದಲೇ  ತಿಳಿದಾಗಿದೆ. ಇನ್ನು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಸಾವನ್ನು ಮೊದಲಾಗಿ ತಿಳಿದ ನಾನು ಅದೃಷ್ಟವಂತ. ಅಶರೀರವಾಣಿ ರೂಪದಲ್ಲಿ   ಪರಮಾತ್ಮ  ನಾನು ಸಾಯಲಿ ಎಂದು ಬಯಸಿ ಹೇಳಿದ್ದಲ್ಲ. ಬದಲಿಗೆ ಎಚ್ಚರಿಸಿದ್ದಾನೆ. ಜಾಗರೂಕನಾಗಬೇಕಿದೆ. ಹೀಗೆ ಮರಣವನ್ನು ಅಥವಾ ವಿಧಿಯನ್ನು ಎದುರಿಸುವುದಕ್ಕೆ ಕಂಸ ಪ್ರಯತ್ನಿಸುತ್ತಾನೆ.

            ಎಲ್ಲ ತರ್ಕಗಳ ಭರವಸೆ ಇದ್ದರೂ ಕಂಸ ಕೊಂಚ ಅಧೀರನಾಗುತ್ತಾನೆ.  ಬದುಕಲ್ಲಿ ಮೊದಲಾಗಿ ಮರಣ ಭಯ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಆತ ವಸುದೇವನೆದುರಿಗೆ ದಯನೀಯ ಭಾವದಿಂದ ವರ್ತಿಸುತ್ತಾನೆ. ಯಾಕೆಂದರೆ ಇಡೀ ಜಗತ್ತಿನಲ್ಲಿ ಯಾವ ದೇವರು ರಕ್ಷಿಸಲಾರ. ವಸುದೇವ ....ಈ ವಸುದೇವ ಪ್ರಾಮಾಣಿಕವಾಗಿ  ಮನಸ್ಸು ಮಾಡಿದರೆ ಕಂಸನಿಗೆ ಮರಣ ಭಯ ಇನ್ನಿಲ್ಲವಾಗುತ್ತದೆ.  ಇನ್ನು ಕಂಸ ಮರಣದ ಬಗ್ಗೆ ಯೋಚಿಸುವ ಅಗತ್ಯವೇ ಇಲ್ಲ.  ಆದರೆ ವಸುದೇವ ಮನಸ್ಸು ಮಾಡಬೇಕಲ್ಲ? ಕಾಲಿಗೆ ಮುಳ್ಳು ತಾಗಿದ್ದಕ್ಕೆ ಕಾಡಲ್ಲಿದ್ದ ಮುಳ್ಳಿಗೆ ಬೆಂಕಿ ಕೊಡಬೇಕಾದ ಅಗತ್ಯವಿಲ್ಲ. ಕಾಲಿಗೆ ಚಿಕಿತ್ಸೆ ಮಾದಿದರಾಯಿತು. ಹೌದು ವಸುದೇವನಿಂದಲೇ ತೊಡಗಬೇಕು.  ಮತ್ತೊಮ್ಮೆ ದಯನೀಯ ಭಾವದಿಂದ ವಸುದೇವನಲ್ಲಿ ಬೇಡಿಕೊಳ್ಳುತ್ತಾನೆ . ದಯನೀಯವಾಗಿ ಹೇಳುವ ’ಭಾವಯ್ಯ’   ಎನ್ನುವ ಆ  ದೀನ ಸ್ಥಿತಿ , ಶೇಣಿಯವರ ಕಂಸ ನಿಜಕ್ಕೂ ಪರಕಾಯ ಪ್ರವೇಶದ ಅನುಭವವನ್ನು ಕೊಡುತ್ತದೆ. ಕಂಸನಿಗೆ   ಅರಿಯದೇ ಆವರಿಸಿದ  ಮರಣಭಯಕ್ಕೆ ಅದು ಸಾಕ್ಷಿಯಾಗುತ್ತದೆ.  ವಸುದೇವನಲ್ಲಿ  ಮತ್ತೂ ಮತ್ತೂ ಕೇಳುತ್ತಾನೆ "ಭಾವ ನಿನಗೆ ಮನಸ್ಸುಂಟ ನಾನು ಸಾಯ್ಲಿ ಅಂತ?" ಎಂತಹ ಮಾರ್ಮಿಕ ಪ್ರಶ್ನೆ ಇದು.  ಒಂದು ಘಳಿಗೆ ಮರಣ ದಂಡನೆಯನ್ನು ವಿಧಿಸುವ ಯಮರೂಪಿಯಾಗಿ ವಸುದೇವ ಕಂಡು ಬರುತ್ತಾನೆ.

ಅದುವೆರೆಗೆ ತಂಗಿ ದೇವಕಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಕಂಸ.  ಹಾಗಾಗಿ ಭಾವನೊಂದಿಗೆ ಒಡಂಬಡಿಕೆಯೊಂದಕ್ಕೆ ಮನಸ್ಸು ಮಾಡಿದ್ದು.  ತಂಗಿಯನ್ನು ಅತಿಯಾಗಿ ಪ್ರೀತಿಸಿದ್ದ. ಅದು ಕಂಸನ ತಪ್ಪಲ್ಲ. ಭಾವನನ್ನು ಗೌರವದಲ್ಲಿ ಕಂಡಿದ್ದ. ಅದೂ ತಪ್ಪಲ್ಲ.  ಕೇವಲ ಮರಣ ಭಯಕ್ಕೆ ವಶವಾದದ್ದು...!!! ಕಂಸನ ಅಪರಾಧವೆಂದರೆ ಅದು ಮರಣ ಭಯ. ಅಷ್ಟಾಗಿಯೂ ಈತನಲ್ಲಿ ಮರಣ ಭಯವನ್ನು ಹುಟ್ಟಿಸಿದ ವಿಧಿಯ ಮರ್ಮ ಏನೋ?


 ಕೊನೆಯಲ್ಲಿ ವಸುದೇವನ ಬೇಡಿಕೆಯಂತೆ ಒಂದು ಒಪ್ಪಂದಕ್ಕೆ ಬರುತ್ತಾರೆ. ಹುಟ್ಟಿದ ಅಷ್ಟೂ ಮಕ್ಕಳನ್ನು ತಂದು ಕಂಸನಿಗೆ ಒಪ್ಪಿಸುವುದು. ಹುಟ್ಟಿದ ಎಂಟು ಮಕ್ಕಳನ್ನೂ ಕೊಡುವುದಕ್ಕೆ ವಸುದೇವ ಒಪ್ಪಿಕೊಂಡ. ಕೊನೆಯಲ್ಲಿ ಕಂಸ ಹೇಳುತ್ತಾನೆ,  ಈ ಎಳನ್ನು ಕೊಡದೇ ಇದ್ದರೆ ಎಂಟನೆಯದನ್ನು ಹುಟ್ಟುವುದಕ್ಕೇ ಕಂಸ ಬಿಡಲಾರ.!  ಎಂತಹ ವಿಚಿತ್ರ ತರ್ಕ? ಇದು ತನ್ನ ಅತ್ಮವಿಶ್ವಾಸವನ್ನು ಕಂಸ ವ್ಯಕ್ತ ಪಡಿಸುವ ರೀತಿ.  ಮನದಲ್ಲೇ ಕಂಸ ಲೆಕ್ಕ ಹಾಕುತ್ತಾನೆ. ಒಂದರಿಂದ ಏಳು ಪರ್ಯಂತ ನನಗೆ ತೊಂದರೆ ಇಲ್ಲ. ಎಂಟನೆಯದ್ದು. ಒಬ್ಬ ಮನುಷ್ಯನಿಗೆ ಎಂಟು ಮಕ್ಕಳು ಬೇಕೇ ಬೇಕು ಎಂಬ ನಿಯಮವೇನೂ ಇಲ್ಲವಲ್ಲ. ಅಕ್ಕರೆಯ ತಂಗಿ ಪ್ರೀತಿಯ ಭಾವ ಎಲ್ಲ ಇದ್ದೂ ಎಂಟನೆಯದ್ದನ್ನು ಬಯುಸುತ್ತಾರೆ ಎಂದಾದರೆ, ವಿಚಿತ್ರ ಸಂಕಟದಲ್ಲಿ ಕಂಸ ಸಿಲುಕಿದ.

ಎಂಟನೆಯ ಜನ್ಮಕ್ಕಾಗಿ ಕಾದು ಕುಳಿತ ಕಂಸ. ಇಷ್ಟಕ್ಕೇ ವಿಧಿಯಾಟ ನಿಲ್ಲುವುದಿಲ್ಲ. ನಾರದ  ಬರುತ್ತಾನೆ. ಲೆಕ್ಕದ ಮರ್ಮವನ್ನು ತಿಳಿಸುತ್ತಾನೆ. ಸುರುಳಿ ಸುತ್ತಿದ ಎರಡು ಶೂನ್ಯದ ಎಂಟರ ಮಹತ್ವ ಹೇಳಿಬಿಡುತ್ತಾನೆ.  ಸಪ್ತಸ್ವರ,   ಸಪ್ತ ಸಾಗರ,   ಸಪ್ತ ಲೋಕ,  ಸಪ್ತ ಋಷಿ  ಹೀಗೆ ಸೃಷ್ಟಿಯ ಏಳರ ಆಚೆಗಿನ ಪರಮಾತ್ಮ ಎಂಬುದನ್ನು  ಎಂಟರಲ್ಲಿ ತೋರಿಸುತ್ತಾನೆ. ಎಂಟನೆಯದರ ಹುಡುಕಾಟ ಆರಂಭವಾಗುತ್ತದೆ. ಎಂಟನೆಯದ್ದು ಎಲ್ಲಿ ಅಡಗಿದೆ? ಎರಡು ಶೂನ್ಯವನ್ನು ಸುತ್ತಿಕೊಂಡ ಎಂಟು ಅಧ್ಯಾತ್ಮಿಕ ಲೌಕಿಕದಲ್ಲಿರುವ ಶೂನ್ಯತೆಯನ್ನೇ ಬಿಂಬಿಸುತ್ತದೆ. ನಾರದರ ರಹಸ್ಯ ಭೇದನದ ಮರ್ಮ ಕಂಸ ತಿಳಿಯುವುದಿಲ್ಲ. ಎಂಟು ಅದು,   ಈ ಏಳರಲ್ಲಿ ಎಲ್ಲಿ ಬೇಕಾದರೂ ಇರಬಹುದು.  ಒಂದು ಎರಡು...ಹೀಗೆ ಯವುದೂ ಎಂಟಾಗಬಹುದು.  ಎಂಟರ ಶೂನ್ಯದಂತೆ ಅದು ವರ್ತುಲಾಕಾರವಾಗಿ ಎಲ್ಲವೂ ಆಯೋಮಯವಾಗಿಬಿಡುತ್ತದೆ.  ಪ್ರಾಮಾಣಿಕವಾಗಿ ಹೇಳುವುದಿದ್ದರೆ, ನಾರದ ಬಂದದ್ದು ಆತನಲ್ಲಿದ್ದ ಮರಣ ಭಯವನ್ನು ದೂರಿಕರಿಸುವುದಕ್ಕೆ. ಪ್ರಾಪಂಚಿಕ ವ್ಯವಹಾರದ ಆಚೆಗಿನ ಸಂಭಂಧವನ್ನು ವಿವರಿಸುವ ಅವಶ್ಯಕತೆಯೇ ಒದಗುವುದಿಲ್ಲ. ಮೊದಲೆ ಭಯಗೊಂಡವನು ಹಗ್ಗವನ್ನು ತುಳಿದು ಹಾವೆಂದು ಭಯಗೊಂಡಂತಾಗುತ್ತದೆ. ಕಂಸ ಮತ್ತಷ್ಟು ಹತಾಶನಾಗುತ್ತಾನೆ,  ವ್ಯಗ್ರನಾಗುತ್ತಾನೆ. ಮಗಳ ಕೈ ಹಿಡಿದ ಅಳಿಯನನ್ನು ಮಾವ ದೇವರಾಗಿ ಕಾಣುತ್ತಾನೆ. ಅದರೆ ಭಗವಂತ ಅಳಿಯನಾಗಿ ಹುಟ್ಟಿದರೂ ಕಂಸ ದೇವರಾಗಿ ಕಾಣಲೇ ಇಲ್ಲ. ವಸುದೇವ ದೇವಕಿಯರಿಗೆ ಸೆರೆಮನೆಯೇ ಅಂತಃಪುರವಾಗಿಬಿಡುತ್ತದೆ.

ದೇವಕಿ ನನ್ನ ಸಹೋದರಿ, ವಸುದೇವ ತನ್ನ ಭಾವ ಇಬ್ಬರೂ ತನ್ನ ವಶದಲ್ಲಿದ್ದರೂ ಕಂಸನಿಗೆ ತಾನು ಗೆದ್ದೇ ಬಿಡುವ ವಿಶ್ವಾಸ ಇರುವುದಿಲ್ಲ. ಮೃತ್ಯು ಭಯ ತನ್ನವರನ್ನೂ ಸಹ ನಂಬದಂತಹ ಕತ್ತಲೆಗೆ ಆತನನ್ನು  ತಳ್ಳಿಬಿಡುತ್ತದೆ. ಕತ್ತಲೆಯ ಕೋಣೆಯಲ್ಲಿದ್ದರೂ ವಸುದೇವ ದೇವಕಿಯರು ಬೆಳಕನ್ನು ಕಂಡರೂ ಕಂಸ ತನಗಾವರಿಸಿದ ಕತ್ತಲಿಂದ ಹೊರಬರಲಾಗುವುದೇ ಇಲ್ಲ. ಒಂದು ಸುಮೂಹುರ್ತದಲ್ಲಿ ಶ್ರೀಕೃಷ್ಣ ಜನನವಾಗುತ್ತದೆ. ಭಗವಂತನ ಅಪೇಕ್ಶೆಯಂತೆ ಶಿಶು ರೂಪದ ಪರಮಾತ್ಮನನ್ನು ವಸುದೇವ ನಂದಗೋಕುಲಕ್ಕೆ ಹೊತ್ತೊಯ್ಯುತ್ತಾನೆ. ಎಂಟನೆಯ ಜನ್ಮವಾಗಿ ಹೆಣ್ಣು ಮಗುವನ್ನು ಕಾಣುವಾಗ ಕಂಸ ತನ್ನ ಸ್ಥಿಮಿತವನ್ನು ಕಳೆದುಕೊಳ್ಳುತ್ತಾನೆ. ತನ್ನನ್ನು ಕೊಲ್ಲುವ ಶಿಶು ನಂದಗೋಕುಲದಲ್ಲಿ ಬೆಳೆಯುತ್ತಿದೆ. ಕಂಸ ಹತಾಶನಾಗುತ್ತನೆ.    ಮೊದಲೊಮ್ಮೆ ಮೊಳಗಿದ ಅಶರೀರವಾಣಿ ಸಾವಿನ ಭೀತಿಯನ್ನು ತಂದು ಭಯವನ್ನು ಹುಟ್ಟಿಸಿದ್ದರೆ ನಂತರ ಬಂದ ನಾರದರು ಮತ್ತಷ್ಟು ಗೊಂದಲವನ್ನು ಸೃಷ್ಟಿಸಿ ಬಿಡುತ್ತಾರೆ. ಇದೀಗ ಕೊನೆಯಲ್ಲಂತೂ ವಿಧಿಯ ಅಟ್ಟ ಹಾಸದ ಸದ್ದಿಗೆ ಬೆರಗಾಗುತ್ತಾನೆ. ಮೂರು ಬಾರಿಯೂ ವಿಧಿ ಆತನ ಮರಣದ ನಿಮಿತ್ತವನ್ನು ಮೊದಲಾಗಿ  ತಿಳಿಸಿದರೂ ಕಂಸ ಅಸಹಾಯಕನಾಗುತ್ತಾನೆ.  ನಂತರವೂ ವಿಧಿಗೆ ಸಡ್ಡು ಹೊಡೆಯುವಲ್ಲಿಆತನ ಮನಸ್ಸು  ಪೂತನಿಯ ಕುರಿತು ಚಿಂತಿಸುತ್ತದೆ. ಅಲ್ಲಿಯೂ ಕಂಸ ಯೋಚಿಸುವುದು...ಒಂದೋ ವಿಷ ಹೀರಿ ಮಗು ಸಾಯಬೇಕು, ಇಲ್ಲಾ ಈಕೆಯ ನಂಜಾದರೂ ಖಾಲಿಯಾಗಬೇಕು. ಆದರೆ ನಂಜಲ್ಲದೇ ಪೂತನಿಯಲ್ಲಿ ಏನೂ ಇಲ್ಲ ಎಂಬುದು ವಿಪರ್ಯಾಸ.

ಕೃಷ್ಣಜನ್ಮ ಕಥಾನಕ ಮಂಗಳವಾದರೂ ಕಂಸನ ಹತಾಶ ಮುಖ ಸ್ಮೃತಿಯಿಂದ ಮಾಸುವುದೇ ಇಲ್ಲ.





           

  

Monday, February 4, 2019

ಮದ್ದಲೆಯ ಝೇಂಕಾರದ ಕೆಮ್ಮಣ್ಣು ಶೈಲಿ


            ಎಳೆದು ಬಿಗಿದ ಮದ್ದಲೆಯ ನಾದ ಪುಟ್ಟ ಸಭಾಂಗಣದ ತುಂಬೆಲ್ಲ ಪ್ರತಿಧ್ವನಿಸುತ್ತಿತ್ತು. ಧ್ವನಿವರ್ಧಕದ ಆವಶ್ಯಕತೆಯೇ ತನಗಿಲ್ಲ ಎಂಬಂತೆ ತನ್ನ ಮೇಲಾಗುವ ಕೈ ಬೆರಳ ನರ್ತನಕ್ಕೆ ಮದ್ದಲೆ ಮನೋಹರವಾಗಿ ಸ್ಪಂದಿಸುತ್ತಾ ತನ್ನ ಇರವನ್ನು ಆ ಪರಿಸರಕ್ಕೆ ಉಂಟು ಮಾಡುತ್ತಿತ್ತು. ಹೊರಗಡೆ ಚುಮು ಚುಮು ಮಳೆಯಾದರೆ ಒಳಗಡೆ ಈ ಮದ್ದಲೆಯ ಅಬ್ಬರದ ನಾದ. ಆಅ ನಾದಕ್ಕೆ ಸೂರು ಕಿತ್ತು ಹಾರಿ ಹೋಯಿತೇನೋ ಎಂಬ ಭ್ರಮೆ. ಹೊರಗೆ ಸಿಡಿಲೋ ಮಳೆಯೂ ಒಂದೂ ಪರಿವೆ ಇಲ್ಲದಂತೆ ಈ ಮದ್ದಲೆಯ ನಾದ ಪ್ರಕೃತಿ ಮಯವಾಗಿ ವ್ಯಾಪಿಸಿತ್ತು.  ಅಕ್ಷರಶಃ ಮದ್ದಲೆ ಕುಣಿದು ಕುಪ್ಪಳಿಸಿತ್ತಿತ್ತು.  ಇದು ಭ್ರಮೆಯಲ್ಲ. ವಾಸ್ತವ ಎಂಬ ಅರಿವಾಗುವಾಗ ಯಕ್ಷಗಾನ ಹಿಮ್ಮೇಳದ ಔತಣವನ್ನು ಚಪ್ಪರಿಸಿಯಾಗಿಹೋಗಿತ್ತು. ಮದ್ದಲೆ ಹರುಷದಿಂದ ಕುಣಿದಂತೆ ಬಾಸಾವಾಗುತ್ತಿತ್ತು. ಯಾಕೆಂದರೆ ಅಪರೂಪವೆಂಬಂತೆ ಇದು ಈ ಮದ್ದಲೆವಾದನಕ್ಕೆ ಏರ್ಪಡಿಸಿದ ಯಕ್ಷಗಾನ ತಾಳಮದ್ದಲೆಯ ಕಾರ್ಯಕ್ರಮ. ಕುಣಿಸುವ ಮದ್ದಲೆ  ಇಲ್ಲಿ ತಾನೇ ಕುಣಿದಂತೆ ಭಾಸವಾಗುತ್ತಿತ್ತು.  ಆಶ್ಚರ್ಯವಾಗಬಹುದು. ಒಬ್ಬ ಭಾಗವತರಿಗಾಗಿ ಅಥವಾ ಅರ್ಥಧಾರಿಗಾಗಿ ಒಂದು ತಾಳ ಮದ್ದಲೆ ಆಯೋಜನೆಗೊಳ್ಳುವುದು ಸ್ವಾಭಾವಿಕ. ಆದರೆ ಇಲ್ಲಿ ಕಥಾನಾಯಕನಾಗಿರುವುದು ಮದ್ದಲೆ ಎಂದರೆ ಅತಿಶಯವಲ್ಲ. ಕುತೂಹಲ ಎನಿಸುತ್ತದೆಯಲ್ಲ? ಒಬ್ಬ ಪ್ರಸಿದ್ಧ  ಮದ್ದಲೆವಾದಕರ  ಸ್ಮರಣೆಯಲ್ಲಿ ಅವರ ವಾದನದ ಸ್ಮೃತಿಯನ್ನು  ಮತ್ತೆ ತರುವುದಕ್ಕಾಗಿಯೇ ಈ ಕಾರ್ಯಕ್ರಮ  ಏರ್ಪಡಿಸಲಾಗಿತ್ತು. ಯಕ್ಷಗಾನದಲ್ಲಿ ಮದ್ದಲೆಯ ವಾದನವೂ ಇಷ್ಟು ಗಮನಾರ್ಹವಾಗಿ ಕಂಡು ಬಂದದ್ದು ಅದೇ ದಿನ.  ಅಂದು ಒಬ್ಬ ಮದ್ದಲೆ ವಾದಕ ತಾರಾ ಮೌಲ್ಯವನ್ನು ಗಳಿಸಿಕೊಂಡು ಬಿಟ್ಟಿದ್ದ.  ಚೆಂಡೆಯೊಂದೇ ಯಕ್ಷಗಾನವನ್ನು ಪ್ರತಿನಿಧಿಸುತ್ತದೆ ಎಂದು ತಿಳಿದವರಿಗೆ ಇದೊಂದು ಮದ್ದಲೆಯ ಅಹವಾಲು ಎಂದರೆ ತಪ್ಪಲ್ಲ. ಅಂದಿನ ಮದ್ದಲೆಯ ವೈಭವ ಮತ್ತೆಂದೂ ಮರೆಯದ ವೈಭವವಾಗಿತ್ತು.
ಮದ್ದಲೆಯ ಮೋಡಿಗಾರ ಕೆಮ್ಮಣ್ಣು ನಾರಣಪ್ಪಯ ಪುಸ್ತ್ಕಕದ ಮುಖಚಿತ್ರ

ವಿಶೇಷವೆಂದರೆ  ಆಂದಿನ ತಾಲಮದ್ದಲೆಗೆ  ಟಿಕೇಟ್ ಇರಿಸಲಾಗಿತ್ತು. ಅದು ಬಯಲಾಟವಲ್ಲ,  ಈ ತಾಳಮದ್ದಲೆಯನ್ನೂ  ಟಿಕೇಟ್ ಪಡೆದು ನೋಡುವುದೆಂದರೆ ಈಗ ವಿಚಿತ್ರ ಅನ್ನಿಸಬಹುದು. ವಾಹನ ಕಳುಹಿಸಿ ನಮ್ಮ ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆಯುವಂತಹ  ಈಗಿನ ಸನ್ನಿವೇಶದಲ್ಲಿ ಟಿಕೇಟು ಪಡೆದು ತಾಳ ಮದ್ದಲೆ ನೋಡುವುದೆಂದರೆ ಆಶ್ಚರ್ಯವೆನಿಸುತ್ತದೆ. ತಾಳ ಮದ್ದಲೆ ಆ ಮಟ್ಟದ ಆಕರ್ಷಣೆಯನ್ನು ಹೊಂದಿತ್ತು ಎಂಬುದಕ್ಕೆ ಇದೊಂದು ನಿದರ್ಶನ. ತಾಳಮದ್ದಲೆಗೆ  ಬನ್ನಿ ಎಂದು ವಾಹನ ಕಳಿಸಿದರೂ ಬೇಡ ಮಳೆ ಬರುತ್ತಿದೆ ಎಂದು ಇಲ್ಲದ ಕೆಲಸವನ್ನು ನೆನಪಿಸಿಕೊಳ್ಳುತ್ತಾರೆ.  ಏನಿದ್ದರೂ ಅಂದಿನ ತಾಳ ಮದ್ದಲೆ ಹಲವು ವಿಚಾರಗಳಿಂದ ಸ್ಮರಣೆಯಲ್ಲಿ ಉಳಿಯುವಂತಾದದ್ದು  ಅದು ಸೃಷ್ಟಿಸಿದ ರೋಚಕತೆಗೆ ಸಾಕ್ಷಿ.

ಅಂದು ಮಳೆಗಾಲದ ಒಂದು ದಿನ. ಮಂಗಳೂರಿನ ಬಲ್ಲಾಳ್ ಭಾಗ್ ನ ಪಾಲ್ಕೆ ಹಾಲ್ ನಲ್ಲಿ ಈ ತಾಳ ಮದ್ದಲೆ.  ಆ ದಿನದ ಉದಯವಾಣಿ ಪತ್ರಿಕೆಯ ಕೊನೆಯ ಪುಟದಲ್ಲಿ ಇದರ ಬಗ್ಗೆ ಜಾಹೀರಾತು ಸಹ ಬಂದಾಗಿತ್ತು. ಹಾಗಾಗಿಯೇ ನಮ್ಮ ಗಮನ ಅತ್ತ ಹೋದದ್ದು.  ಈ ತಾಳಮದ್ದಲೆಯ ವೈಶಿಷ್ಟ್ಯ ಬಹಳ ವಿಚಿತ್ರವೆನಿಸ ಬಹುದಾದ್ದು. ಅದೂ ಈ ಕಾಲದಲ್ಲಿ ಅದನ್ನು ಕಲ್ಪಿಸಿದರೆ ನಿಜಕ್ಕೂ ಅತ್ಯಂತ ವಿಶಿಷ್ಟ ಎಂದೆನಿಸುತ್ತದೆ.  “ಪ್ರಸಿದ್ಧ ಮದ್ದಲೆವಾದಕ ಶ್ರೀ ಕೆಮ್ಮಣ್ಣು ನಾರಣಪ್ಪಯ್ಯ ಶೈಲಿಯ ಮದ್ದಲೆವಾದನ ಕೇಳಲು ಮರೆಯದಿರಿ”  ಎಂಬ ಶಿರೋನಾಮೆಯೊಂದಿಗೆ ಪ್ರಸಿದ್ಧ ಭಾಗವತರಾದ ಬಲಿಪ ನಾರಾಯಣ ಭಾಗವತ ಮತ್ತು ಶೇಣಿ ಪೆರ್ಲ ವಿಟ್ಲ ಜೋಷಿ ಮುಂತಾದವರ ಘಟಾನುಘಟಿ ಕಲಾವಿದರು ಒಡಗೂಡಿದ ಘನ ಗಂಭೀರ ತೆಂಕು ತಿಟ್ಟಿನ  ತಾಳ ಮದ್ದಲೆ ಕಾರ್ಯಕ್ರಮ.

ಯಕ್ಷಗಾನದಲ್ಲಿ ಮದ್ದಲೆವಾದನ ಎಂದರೆ ಅದು ಪರಂಪರೆಯ ಒಂದು ಭಾಗ. ಈಗಿನಂತೆ ಅದು ಮೃದಂಗವಾದನವಲ್ಲ ಎಂಬುದು ಗಮನಾರ್ಹ.  ಮದ್ದಲೆಯ ಕಂಪನದ ಝೇಂಕಾರದ ನಾದ ಕೇಳುವಾಗಲೇ ಯಕ್ಷಗಾನದ ನೈಜ ಲೋಕ ತೆರೆದುಕೊಳ್ಳುತ್ತದೆ. ಒಂದೆರಡು ಛಾಪು ಪೆಟ್ಟುಗಳನ್ನು ಭಾರಿಸಿ ಮದ್ದಲೆಗಾರ ಬೆನ್ನು ಚಪ್ಪರಿಸಿದ ಎಂದರೆ ಯಕ್ಷಲೋಕದ ಬಾಗಿಲು ತೆರೆದಂತೆ ಭಾಸವಾಗುತ್ತದೆ. ಇಂತಹ ಎದೆಬಿರಿಯುವ ಛಾಪುಗಳಿಗೆ ಹೆಸರಾದವರು ಶ್ರೀ ಕೆಮ್ಮಣ್ಣು ನಾರಣಪ್ಪಯ್ಯ ಎಂಬ ದೈತ್ಯ ಪ್ರತಿಭೆಯ ಮದ್ದಲೆಗಾರ. ಈಗ ಕಲ್ಪಿಸಿದರೆ ಕಲ್ಪನೆಗೆ ನಿಲುಕದ ಪ್ರತಿಭೆ. ಇದು ನಮ್ಮ ಹಿರಿಯರ ಮಾತು. ಈ ಕೆಮ್ಮಣ್ಣು ಶೈಲಿಯನ್ನು  ಯಥಾವತ್ ತೋರಿಸಿಕೊಟ್ಟವರು ಶ್ರೀ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು.  ಅಂದು ಕೆಮ್ಮಣ್ಣು ಶೈಲಿ ಎಂದರೆ ಏನೆಂಬ  ಒಂದು ಕಿರು ಪರಿಚಯವಾಗಿಬಿಟ್ಟಿತು.  

ಈ ಮದ್ದಲೆಯ ರಣ ಭಯಂಕರ ನಾದಕ್ಕೆ ಪ್ರಚೋದನೆಗೊಂಡು ತಾಳ ಮದ್ದಲೆ ಪ್ರಸಂಗದ ಸುಧನ್ವನಾಗಿದ್ದ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರು ಇಲ್ಲಿ ಪ್ರಭಾವತಿಗೆ ಹೇಳಿದ ಮಾತು ಈಗಲು ನೆನಪಿದೆ.  ಪ್ರಭಾವತಿ,  ಚಂಪಕಾವತಿ ಯುದ್ದಕ್ಕೆ ಸನ್ನದ್ದವಾಗಿದೆ. ಅದೋ ರಣಭೇರಿ ಕೇಳುತ್ತಿದೆಯಲ್ಲ. ಎಂದು ಇಲ್ಲದ ಹೊಸ ಉತ್ಸಾಹದ ಭೇರಿಯ ಸದ್ದದು.  ಪುಟಿದೇಳುವ ಮದ್ದಲೆಯ ನಾದ ಉಂಟು ಮಾಡಿದ ಪ್ರಚೋದನೆ ಇದು. ಅಂದು  ಬಲ್ಲಾಳರು ತಮ್ಮ ಸಹಜ ಶೈಲಿಯನ್ನು ಬಿಟ್ಟು ಈ ಕೆಮ್ಮಣ್ಣು ಶೈಲಿಯನ್ನು ತೋರಿಸಿದರು.

 ಈಗ ಕೆಮ್ಮಣ್ಣು ನಾರಣಪ್ಪಯ್ಯ ಶೈಲಿ ಏನು ಎಂದು ವಿಶ್ಲೇಷಿಸುವುದಾದರೆ ಈ ಶೈಲಿ  ಯಕ್ಷಗಾನದಲ್ಲಿ ಅತ್ಯಂತ ವಿಶಿಷ್ಟ ಶೈಲಿ.  ಅಂದು ಬಲ್ಲಾಳರು ಅದನ್ನು ಅನುಕರಿಸಿ ಬಾರಿಸುವುದಷ್ಟಕ್ಕೆ ಸಾಧ್ಯವಾಯಿತು. ಕೆಮ್ಮಣ್ಣು ನಾರಣಪ್ಪಯ್ಯನ ವಾದನ ವೈಖರಿಯ ವೈಶಿಷ್ಟ್ಯತೆ  ಇಷ್ಟಕ್ಕೆ ಸೀಮಿತವಾಗಿ ನಿಲ್ಲುವುದಲ್ಲ. ಇಂದು ಅದರ ಸಂಪನ್ಮೂಲಗಳು ಇದ್ದರೆ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪಡೆಯಬಹುದು. ಆ ತಾಳ ಮದ್ದಲೆಯಲ್ಲಿ ಅದರ ಸೂಕ್ಷ್ಮ ವನ್ನಷ್ಟೇ ಕಾಣುವುದಷ್ಟೆ ಸಾಧ್ಯವಾಯಿತು. ಕೇವಲ ಒಂದು ಪ್ರದರ್ಶನದಿಂದ ಅದರ ಆಳ ವಿಸ್ತಾರ ತಿಳಿಯುವುದು ಸಾಧ್ಯವಿಲ್ಲದ ಮಾತು. ಇಂದು  ಅದನ್ನು ಪರಿಪೂರ್ಣವಾಗಿ  ತಿಳಿಯಬೇಕಿದ್ದರೂ  ಸಾಧ್ಯವಿಲ್ಲ.  ಯಾಕೆಂದರೆ  ಆ ಶೈಲಿ  ಇಂದು ತೀರ ನೇಪಥ್ಯಕ್ಕೆ ಸರಿದು ಹೋಗಿದೆ. ಇಂದು ಬೆರಳೆಣಿಕೆಯ ಮಂದಿಯೂ ಇದರ ಬಗ್ಗೆ ಹೇಳುವುದಕ್ಕೆ ಸಿಗಲಾರರು.  ಯಕ್ಷಗಾನದಲ್ಲಿ ಕಳೆದು ಹೋದ ವಿಚಾರಗಳನ್ನು ಉಲ್ಲೇಖಿಸುತ್ತಾ ಹೋದರೆ ಅದರಲ್ಲಿ ಈ ಶೈಲಿಯೂ ಅತ್ಯಂತ ಅವಶ್ಯವಾಗಿ ಸೇರಿಸಲ್ಪಡುತ್ತದೆ.  ಹಾಗಾಗಿ ಈ ಕೆಮ್ಮಣ್ಣು ಶೈಲಿಯ ಸೀಮಿತ ವಿಶ್ಲೇಷಣೆ ಈಗ ಅವಶ್ಯ ಎಂದನಿಸುತ್ತದೆ.

ಕೆಮ್ಮಣ್ಣು ನಾರಣಪ್ಪಯ್ಯ  ಮದ್ದಲೆಗಾರರೆಂದರೆ, ಭಾಗವತರೂ ಸಹ ತಮ್ಮ ತಾಳ ಲಯವನ್ನು ಪರೀಕ್ಷೆ ಒಡ್ಡಿದ ಅನುಭವವನ್ನು ಪಡೆದುಕೊಳ್ಳುತ್ತಿದ್ದರು. ಪ್ರಸಿದ್ದ ಭಾಗವತರೊಬ್ಬರು ತಮ್ಮ ಭಾಗವತಿಕೆ ಮುಗಿಸಿ ಕುಳಿತಾಗ ಇವರು ಥೋಂ   ಥೋಂ ಎಂದು  ಏಕ ಪ್ರಕಾರವಾಗಿ ಬಾರಿಸುತ್ತಲೇ ಇದ್ದರು. ವಾಸ್ತವದಲ್ಲಿ ನಿನ್ನ ಪದ ಮುಗಿಯಲೇ ಇಲ್ಲ ಎಂಬಂತೆ ತಮ್ಮ ವಾದನದಲ್ಲೇ  ಭಾಗವತರಿಗೆ ಸೂಚಿಸಿದ್ದರು.  ತಾಳ ಲಯ ಗಟ್ಟಿಯಿಲ್ಲದ ಭಾಗವತರು ಇವರ ಮದ್ದಲೆ ವಾದನಕ್ಕೆ ಪದ ಹೇಳುವುದಕ್ಕೆ ಅಂಜಿಕೊಳ್ಳುತ್ತಿದ್ದರು. ನೀಳವಾದ ಕೈಬರೆಳುಗಳು ಮದ್ದಲೆಯನ್ನು ಪೂರ್ಣವಾಗಿ ಆವರಿಸಿಕೊಂಡು ಪ್ರಹಾರವನ್ನೇ ಮಾಡುತ್ತಿದ್ದವು.  ಎಲ್ಲವೂ ಘಾತ ಪೆಟ್ಟುಗಳು! ಕೆಮ್ಮಣ್ಣು ಮದ್ದಲೆಗೆ ಎಂದರೆ ಒಂದೆರಡು ಮದ್ದಲೆ ಹರಿದು ಒಡೆದು ಹೋಗುವುದು ಸಾಮಾನ್ಯದ ಮಾತಾಗಿತ್ತು. ಮದ್ದಲೆ ಒಡೆದು ಹೋಗಬೇಕೆಂದು ಬಾರಿಸುವ ಪೆಟ್ಟುಗಳಲ್ಲ. ಮದ್ದಲೆವಾದಕ ಆವೇಶಗೊಂಡು ಮೈಮರೆಯುವ ಅದ್ಬುತ ಶೈಲಿ.   ಮದ್ದಲೆ ತನ್ನ ಸಾಮಾರ್ಥ್ಯವನ್ನು ಪೂರ್ಣವಾಗಿ ಪಣಕ್ಕಿಟ್ಟಂತೆ ಭಾಸವಾಗುತ್ತದೆ. ಮದ್ದಲೆಯ ಛಳಿ ಬಿಡಿಸುವಂತಹ ಪೆಟ್ಟುಗಳು ಎನ್ನುವುದಕ್ಕಿಂತ ಕಲಾವಿದನ ಮೈ ಛಳಿ ದೂರಾಗಿಸಿ ಮೈ ಮನ ಬೆಚ್ಚಗಾಗಿಸುವ ಮದ್ದಲೆಯ ವೈಭವವದು. ಮದ್ದಲೆಗಾರ ಈ ವಾದನವನ್ನು ತಪಸ್ಸೆಂದು ತಿಳಿದು ಒಂದಾಗಿ ಹೋಗುವ ರಸಘಳಿಗೆ.  ವಿಶೇಷ ಎಂದರೆ ಈ ಪೆಟ್ಟುಗಳಿಗೆ ಮದ್ದಲೆ ಒಡೆದು ಹೋದರೂ ಎದೆಯೇ ಬಿರಿಯುವಂತಹ ಪೆಟ್ಟುಗಳಿಗೆ ಪ್ರೆಕ್ಷಕನ ಹೃದಯ ಒಡೆಯುವುದಿಲ್ಲ. ಬದಲಾಗಿ ಆನಂದದಿಂದ  ಹೃದಯ ತುಂಬಿ ಹೋಗುತ್ತದೆ. ಒಂದು ವೇಳೆ ಹೃದಯ ಒಡೆದುಕೊಂಡರೂ  ಅದು ಇನ್ನಷ್ಟು ನಾದ ತರಂಗಗಳನ್ನು ತನ್ನೊಳಗೆ  ತುಂಬಿಸಿಕೊಂಡು ಬಚ್ಚಿಡುವುದಕ್ಕೆ ತೆರೆದಿದೆ ಎನ್ನಬೇಕು.  ಪ್ರೇಕ್ಷಕನನ್ನು ಎತ್ತಲಿಂದ ಎತ್ತಲೋ ಒಯ್ಯುವ ಈ ನಾದ ಚಮತ್ಕಾರ ಒಂದು ವಿಸ್ಮಯ ಚರಿತ್ರೆಯನ್ನು ಸೃಷ್ಟಿಸುತ್ತಿತ್ತು.

ಇವುಗಳೆಲ್ಲ ನಮ್ಮ ಹಿರಿಯರು ಅನುಭವಿಸಿದ ರಸ ಚಮತ್ಕಾರದ ಘಳಿಗೆಳು. ಅದನ್ನು ಅವರಿಂದ ಕೇಳುವಾಗಲೇ ಪುರಾಣದ ಯಾವುದೋ ಲೋಕಕ್ಕೆ ಹೋದ ಅನುಭವವಾಗುತ್ತದೆ. ಇನ್ನು ಸ್ವತಃ ಅನುಭವಿಸಿದರೆ ಮತ್ತೆ ಕೇಳಬೇಕೆ?

ಕೆಮ್ಮಣ್ಣು ನಾರಣಪ್ಪಯ್ಯನವರು  ಹೀಗೆ ವಿಶಿಷ್ಟ ಮದ್ದಲೆವಾದನಕ್ಕೆ ಹೆಸರಾದವರು. ಇದು ಕೇವಲ ಎದೆ ಬಿರಿಯುವ ಪ್ರಹಾರ ಎಂದುಕೊಂಡರೆ ಅದು ತಪ್ಪಾಗುತ್ತದೆ. ಅದು ಪ್ರಹಾರವಲ್ಲ. ಯಕ್ಷಗಾನದ ಲಯ ವಿನ್ಯಾಸದ ಚಿತ್ರಗಳು. ಮದ್ದಲೆಯನ್ನು ಶ್ರುತಿಬರಿಸುವಾಗಲೇ ವಿಶೇಷವಾಗಿ ಅದನ್ನು ಸಿದ್ದ ಪಡಿಸುತ್ತಾರೆ.  ಒಂದೆರಡು ಮದ್ದಲೆ ತಲೆ ಒಡೆದುಕೊಂಡರೂ ಯಾರೂ ಆ ಬಗ್ಗೆ ಗಾಬರಿಯಾಗುವುದಿಲ್ಲ. ಅದೆಲ್ಲವನ್ನು ಸಹಜವಾಗಿ ಸ್ವೀಕರಿಸಿ ಮತ್ತೆ ಮತ್ತೊಂದು ಮದ್ದಲೆಯ ನಾದಕ್ಕೆ ಕಿವಿಯಗಲಿಸುತ್ತಾರೆ. ಕೆಮ್ಮಣ್ಣು ನಾರಣಪ್ಪಯ್ಯ ಇವರ ವಾದನ ಶೈಲಿ ಎಂದರೆ, ಇವರು ಮದ್ದಲೆಯೊಂದಿಗೆ  ಭಾಗವತರ ಜತೆಗೆ ನಾದ ಸಂವಾದವನ್ನು ಮಾಡಿಬಿಡುತ್ತಾರೆ.  ಇದನ್ನು ಹಿರಿಯರೊಬ್ಬರು ಸ್ವಾರಸ್ಯಕರವಾಗಿ ವಿವರಿಸುತ್ತಾರೆ.  “ನಿನ್ನದು ಹಾಗಾದರೆ ತಗೋ ನನ್ನದು ಹೀಗೆ” ಎಂಬಂತೆ ಇರುವ ನಾದ ಸಂವಾದದವನ್ನು ಪ್ರೇಕ್ಷಕ ಅರ್ಥವಿಸಿಕೊಂಡರೆ ಪ್ರೇಕ್ಷಕನಿಗೆ ದಿವ್ಯ ರಸಾನುಭವ ಸಾಧ್ಯವಾಗುತ್ತದೆ. ನಿಜವಾದ ರಸಿಕತೆ ಎಂದರೆ ಇದೇ ತಾನೇ? ಈ ನಾದ ಸಂವಾದದ ಜುಗಲ್ಪಂದಿ, ಕೆಲವೊಮ್ಮೆ ಸ್ಪರ್ಧೆಯಾದರೆ, ಕೆಲವೊಮ್ಮೆ ದ್ವಂದ್ವ ಯುದ್ಧವಾಗುತ್ತದೆ, ಇನ್ನು ಕೆಲವೊಮ್ಮೆ ಸರಸ ಸಂಭಾಷಣೆಯಾಗಿಬಿಡುತ್ತದೆ. ಮದ್ದಲೆಯ ಪೆಟ್ಟುಗಳು ಹೇಗೆ ವಿಸ್ಮಯ ಪ್ರಪಂಚವನ್ನು ಸೃಷ್ಟಿ ಮಾಡುತ್ತದೆ ಎಂದರೆ, ಈ ಕೈಬೆರೆಳುಗಳಿಂದ ಮದ್ದಲೆ ಆ ನಾದವನ್ನು ಹೊರಡಿಸುವುದಕ್ಕೆ ಸಾದ್ಯವೇ ಎಂದು ಅಚ್ಚರಿಯಾಗುತ್ತದೆ. ಪಟ್ ಪಟ್ ಅಂತ ಪ್ರಹಾರದ ಸರಮಾಲೆ ತಾಳ ಲಯಕ್ಕೆ ತಕ್ಕಂತೆ ಮದ್ದಲೆಯ ಮೇಲೆ ಆಗುತ್ತಿದ್ದರೆ ಅದನ್ನು ಅನುಭವಿಸುವ ಪ್ರೇಕ್ಷಕನ ಸ್ಥಿತಿ ಹೇಗಾಗಬಹುದು?  ಈ ಅನುಭವಗಳನ್ನು ನಾದ ವೈಖರಿಗಳನ್ನು ಅಕ್ಷರ ರೂಪದಲ್ಲಿ ಕೊಡುವುದು ಸಾಧ್ಯವಿಲ್ಲದ ಮಾತು. ಆದರೂ ಹೀಗೊಂದು ವಿಸ್ಮಯ ಪ್ರಪಂಚ ಯಕ್ಷಗಾನದಲ್ಲಿ ಇತ್ತು ಎನ್ನುವುದನ್ನು ತೋರಿಸುವ ಅಗತ್ಯವಿದೆ.  ಹೀಗೆ ಹಿಮ್ಮೇಳವು ಪ್ರೇಕ್ಷಕನನ್ನು ಮೋಡಿ ಮಾಡಿಬಿಡುತ್ತದೆ ಎಂದರೆ ಆ ನಾದೋಪಾಸನೆ ಹೇಗಿರಬೇಡ.? ನಿಜವಾಗಿ ಮದ್ದಲೆ ಮಾತನಾಡುವುದು ಎಂದರೆ ಇದುವೇ ಆಗಿದೆ.  ಹಲವು ಸಲ ಮುಮ್ಮೇಳದ ವಾದ ವಾಗ್ವಾದಗಳಿಗಿಂತಲೂ ಈ ಹಿಮ್ಮೇಳದ ವಾದ ಸಂವಾದಕ್ಕೆ ಪ್ರೇಕ್ಷಕ ಕಾದು ಕುಳಿತುಕೊಳ್ಳುತ್ತಾನೆ.  ಹೀಗಿದ್ದಾಗಲೇ ಯಕ್ಷಗಾನ ಸರ್ವಾಂಗೀಣ ಕಲೆ ಎನಿಸುವುದು.

ಯಕ್ಷಗಾನ ಹಿಮ್ಮೇಳದಲ್ಲಿ ಮದ್ದಲೆಗಾರ ಎಂದರೆ ಭಾಗವತರಿಗೆ ಸಮದಂಡಿಯಾಗಿರಬೇಕಾದ ಕಲಾವಿದ. ಭಾಗವತರಿಂದಲೂ ಒಂದಿಷ್ಟು ಅಧಿಕ ಈತನಿಗೆ ತಿಳಿದಿರಬೇಕು. ಒಬ್ಬ ಸಮರ್ಥ ಮದ್ದಲೆಗಾರ ಭಾಗವತನನ್ನು ಎತ್ತರಕ್ಕೆ ಏರಿಸಬಲ್ಲ. ಅಥವಾ ಮದ್ದಲೆ ಕಳಪೆಯಾದಲ್ಲಿ ಭಾಗವತನೂ ಅದರ ಪರಿಣಾಮವನ್ನು ಅನುಭಸಿ ಕಳಪೆಯಾಗುತ್ತಾನೆ. ಭಾಗವತನ ಪದವನ್ನು ಮೇಲೆ ಹಾಕುವುದು ಅಥವಾ ಕೆಳಗೆ ಮಾಡುವುದು ಮದ್ದಲೆಗಾರನಿಗೆ ಸಾಧ್ಯ. ಇದನ್ನು ಸಂದರ್ಶನ ಒಂದರಲ್ಲಿ ಕುರಿಯ ಗಣಪತಿ ಶಾಸ್ತ್ರಿಗಳು ಹೇಳುತ್ತಾರೆ. ಒಬ್ಬ ಮದ್ದಲೆಗಾರ.   ಭಾಗವತ ಮನೋಧರ್ಮ ಅರಿತಿರಬೇಕು. ಭಾಗವತನ ತಾಳ ಜ್ಞಾನ ಗಟ್ಟಿ ಇದ್ದಲ್ಲಿ ಮದ್ದಲೆಗಾರ ಬಹಳಷ್ಟು ಸ್ವಾತಂತ್ರ್ಯವನ್ನು ಅನುಭವಿಸುತ್ತಾನೆ. ತನ್ನ ತಂತ್ರಗಾರಿಕೆ ಪ್ರಶಸ್ತ ಅವಕಾಶವನ್ನು ಹುಡುಕುತ್ತಾ ಇರುತ್ತಾನೆ.  ಹಾಗಿದ್ದಲ್ಲಿ ಮಾತ್ರವೇ ಆತ ನಿಜವಾದ ಯಕ್ಷಗಾನದ ಮದ್ದಲೆಗಾರನಾಗುವುದಕ್ಕೆ ಸಾಧ್ಯ. ತಾಳ ಲಯ ಮತ್ತು ಭಾಗವತಿಕೆಯಲ್ಲೂ ಪರಿಪೂರ್ಣತೆ ಇದ್ದರೆ ಮಾತ್ರ ಆತ ಮದ್ದಲೆಗಾರನಾಗುತ್ತಾನೆ. ಭಾಗವತನ ನಾಡಿ ಮಿಡಿತವನ್ನು ಗಮನಿಸುವ ತಜ್ಞನಂತೆ ಯಕ್ಷಗಾನದಲ್ಲಿ ಮದ್ದಲೆಯ ವಾದಕನಾಗಿಬೇಕು.  ಭಾಗವತನ ಅತ್ಯಂತ ಹತ್ತಿರದ ಜತೆಗಾರನಾಗಿ, ಭಾಗವತನ ಆತ್ಮವೇ ಆಗಿ ರಂಗದಲ್ಲಿ ವ್ಯವಹರಿಸಬೇಕಾಗುತ್ತದೆ. ಭಾಗವತ ಸಂಚರಿಸುತ್ತಿದ್ದರೆ ಮದ್ದಲೆಗಾರ ಹಾದಿಯನ್ನು ಮಾಡಿಕೊಡುತ್ತಾ ಸಾಗಬೇಕು. ಒಂದರ್ಥದಲ್ಲಿ ಭಾಗವತ ಸಾಗುವ ಹಾದಿಯನ್ನು ಮೊದಲೆ ಗ್ರಹಿಸಿ ಅದಕ್ಕೆ ಅನುವು ಮಾಡಿಕೊಡಬೇಕು. ಹಾಗಾಗಿ ಕೆಮ್ಮಣ್ಣು ಶೈಲಿಗೆ ಪದ ಹೇಳುವುದೇ ಒಂದು ಅರ್ಹತೆ ಎಂಬಂತೆ ಪರಿಗಣಿಸಲ್ಪಡುತ್ತಿತ್ತು.  ಅಲ್ಲಿ ಮಾನ್ಯತೆ ಗಳಿಸಿಕೊಂಡರೆ ಮತ್ತೆ ಭಾಗವತನಿಗೆ ಬೇರೆ ಅಂಗೀಕಾರದ ಅವಶ್ಯಕತೆ ಇಲ್ಲ.   ಎಲ್ಲ ನಿಯಂತ್ರಣವೂ ಭಾಗವತನದ್ದೇ ಆದರೂ ಭಾಗವತನ ಶ್ರುತಿ ಲಯದ ಬಗ್ಗೆ ಮದ್ದಲೆಗಾರ ಎಚ್ಚರವಹಿಸುತ್ತಾನೆ. ಮತ್ತದಕ್ಕೆ ಒಂದು ಕಾಲ್ಪನಿಕ ರೇಖೆಯನ್ನು ಎಳೆಯುತ್ತಾನೆ. ಅದನ್ನೇ ಹಾದಿ ಮಾಡಿಕೊಡುವುದು ಎನ್ನುವುದು. ಇದು ನಾರಣಪ್ಪನವರಲ್ಲಿ ಇತ್ತು. ಹಾಗಾಗಿಯೇ ಭಾಗವತ ಮತ್ತು ವಾದಕನ ಸಂವಾದ ಜತೆಗೆ ಒಂದಿಷ್ಟು ಸಮರ ನಡೆಯುವುದು.

ಕೆಮ್ಮಣ್ಣು ನಾರಣಪ್ಪಯ್ಯ ಶೈಲಿಯ ಬಗ್ಗೆ ಹಿರಿಯ  ವಿದ್ವಾಂಸ ಶ್ರೀ ರಾಘವ ನಂಬಿಯಾರರಲ್ಲಿ ಕೇಳಿದಾಗ ಬಹಳಷ್ಟು ವೈಶಿಷ್ಟ್ಯಗಳನ್ನು ಸ್ಮರಿಸಿಕೊಂಡರು. ಹೆಚ್ಚಾಗಿ ಹಿರಿಯ ದೊಡ್ಡ ಬಲಿಪರ ಏರು ಸ್ವರಗಳಿಗೆ ಮತ್ತು ಅವರ ಶೈಲಿಗೆ ಪರಸ್ಪರ ಮಾಡಿಸಿದಂತೆ  ಹೊಂದಿಕೆ ಯಾಗುತ್ತಿತ್ತು. ಏರು ಸ್ಥಾಯಿಯ ಬಲಿಪ್ಪರ ಸ್ವರಕ್ಕೆ ಇವರ ಮದ್ದಲೆ ವಾದನ ಆ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿತ್ತು.  ಎರಡೂ ಮದಗಜದ ತುಮುಲ ಹೋರಾಟದಂತೆ ಪ್ರೇಕ್ಷಕ ಅದನ್ನು ಅನುಭವಿಸುತ್ತಿದ್ದ.  ಮದ್ದಲೆಯಿಂದ ಹೊರಡುವ ಆ ನಾದ ಇಂದಿನ ಮೃದಂಗದಲ್ಲಿ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಮದಗಜಗಳ ತುಮುಲ ತುರುಸು ಮುರಿಸಿನ ಹೋರಾಟದಲ್ಲಿ ಜಯಾಪಜಯಗಳ ಲೆಕ್ಕವಿಲ್ಲ. ಕೇವಲ ಜ್ಞಾನ ಸಂಘರ್ಷವಿರುತ್ತಿತ್ತು. ಈ ಸಂಘರ್ಷ ಪರಾಕಾಷ್ಠೆಗೆ ಮುಟ್ಟುವುದನ್ನೇ ಪ್ರೇಕ್ಷಕ ಕಾದಿರುತ್ತಿದ್ದ. ಸಿನಿಮಾ ನಾಟಕದಲ್ಲಿರುವ ಲಿಖಿತ ಸಂಭಾಷಣೆ  (scripted dialogue)   ಇಲ್ಲಿರುವುದಿಲ್ಲ. ಎಲ್ಲವೂ ಸಾಂದರ್ಭಿಕ ಸೃಷ್ಟಿಯಾಗಿರುತ್ತಿತ್ತು.  ಹೀಗಾಗಿ ಬಲಿಪ್ಪ ಮತ್ತು ನಾರಣಪ್ಪರ ಜತೆಗಾರಿಗೆ ಅದು ಅತ್ಯಂತ ಜನಪ್ರಿಯ ಜತೆಗಾರಿಕೆಯಾಗಿ ಹೆಸರು ಮಾಡಿತ್ತು. ಗಜಕಾಳಗ ಎಂದರೆ ಅದರ ರೋಚಕತೆಯ ಪರಾಕಾಷ್ಠೆ ಯಾವ ರೀತಿಯದ್ದಾಗಿರಬಹುದು?  ಮುಮ್ಮೇಳದ ವಾದ ಸಂವಾದದ ರೋಚಕತೆಯಂತೆ ಇದೂ ಅತ್ಯಂತ ರೋಚಕ ಸ್ಥಿತಿಯನ್ನು ತಲುಪುತ್ತಿತ್ತು. ಇದು ಅನುಭವಿಗಳು ಹೇಳುವ ಮಾತು. ಅದನ್ನು ಈಗ ಕಲ್ಪಿಸಿದರೆ ರೋಮಾಂಚನವಾಗುತ್ತದೆ. ಅದು ಯಕ್ಷಗಾನದ ನಿಜವಾದ ಸಂಪತ್ತು. ವಾದಕನ ಮುಂದೆ ಮಂಡಿಯೂರುವ   ಮದ್ದಲೆ ಕುಣಿದು ಕುಪ್ಪಳಿಸುತ್ತದೆ ಎನ್ನುವುದಕ್ಕಿಂತಲೂ ಅದು ತನ್ನೆಲ್ಲ ಸಾಮಾರ್ಥ್ಯವನ್ನು ವಾದಕನಿಗೆ ಒಪ್ಪಿಸಿ ಉಪಯೋಗಿಸುವ ಹಕ್ಕನ್ನು ನೀಡಿದಂತೆ ಭಾಸವಾಗುತ್ತಿತ್ತು.

            ಕೆಮ್ಮಣ್ಣು ಶೈಲಿಯ ಬಗ್ಗೆ ವಿಚಾರ ವಿಮರ್ಷೆಯನ್ನು ಮಾಡಿದಾಗ ಮಿತ್ರ ಶ್ರೀ ಕಟೀಲು ಸಿತ್ಲ ರಂಗನಾಥ ರಾವ್  ಈ ಪುಸ್ತಕವನ್ನು ಒದಗಿಸಿದರು.        ಶ್ರೀ ಕೆಮ್ಮಣ್ಣು ನಾರಣಪ್ಪಯ್ಯ ರವರ ಬಗ್ಗೆ ಇತೀಚೆಗೆ ಪ್ರಕಾಶನಗೊಂಡ “ಮದ್ದಳೆಯ ಮೋಡಿಗಾರ ಕೆಮ್ಮಣ್ಣು ನಾರಣಪ್ಪಯ್ಯ”  ಎಂಬ ಈ  ಪುಸ್ತಕದಲ್ಲಿ ಉಲ್ಲೇಖಿಸಿದಂತೆ ೧೮೯೬ ರಿಂದ ೧೯೭೬ ರ ತನಕ. ಸ್ವಾತಂತ್ರ್ಯ ಪೂರ್ವ  ಕಾಲದಲ್ಲಿ ಶ್ಯಾನುಭೋಗರ ವೃತ್ತಿಯಲ್ಲಿದ್ದರು. ಇವರ ಬಗ್ಗೆ ಪ್ರಕಾಶಗೊಂಡ ಏಕಮಾತ್ರ ಪುಸ್ತಕವಿದು. ನಾರಣಪ್ಪನವರ ಬಗ್ಗೆ ಬಹಳಷ್ಟು ಮಾಹಿತಿಗಳು ಈ ಪುಸ್ತಕದಲ್ಲಿ ಲಭ್ಯವಿದೆ.  ಡಾ. ಯೋಗೀಶ್ ಕೈರೋಡಿ ಲೇಖಕರಾಗಿರುವ ಈ ಪುಸ್ತಕದ ಪ್ರಕಾಶನವನ್ನು ಕನ್ನಡ ಸಂಘ ಕಾಂತಾವರ(ರಿ) ಮಾಡಿದೆ.  ಇದರಲ್ಲಿ ಇವರು ಬರೆದ ಎರಡು ಪ್ರಸಂಗಗಳೂ ಈ ಪುಸ್ತಕದಲ್ಲಿ ಮುದ್ರಿಸಲ್ಪಟ್ಟಿದೆ. ಈಗಿನ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆಮ್ಮಣ್ಣು(ನಿಟ್ಟೆ)ಯಲ್ಲಿದ್ದ ಶ್ರೀನಿವಾಸಯ್ಯ ಮತ್ತು ಭವಾನಿಯಮ್ಮ ದಂಪತಿಗಳ ಸುಪುತ್ರರು.  ಬಾಲ್ಯದಲ್ಲೇ ಯಕ್ಷಗಾನದ ವಾತಾವರಣವಿದ್ದ ಮನೆ. ತಂದೆಯವರು ಸ್ವತಃ ಭಾಗವತರಾಗಿದ್ದರು.  ಯಾವುದೇ ಮೇಳದಲ್ಲಿ ವೃತ್ತಿಪರ ಕಲಾವಿದರಾಗಿರದೇ ಹವ್ಯಾಸಿ ಕಲಾವಿದರಾಗಿದ್ದರು. ಹಲವು ಹಿರಿಯರು ಒಡನಾಡಿಗಳು ನಾರಣಪ್ಪಯ್ಯ ನವರ ನೆನಪುಗಳನ್ನು ಈ ಪುಸ್ತಕದಲ್ಲಿ ಸ್ಮರಿಸಿರುತ್ತಾರೆ. ಸದ್ಯದಲ್ಲಿ ಇದು  ನಾರಣಪ್ಪನವರ ಬಗೆಗಿರುವ ಏಕ ಮಾತ್ರ ದಾಖಲೆ.  ಇಂತಹ ದೈತ್ಯ ಪ್ರತಿಭೆಗಳಿದ್ದರೂ  ನಾರಣಪ್ಪನವರು ಯಾವುದೇ ಮೇಳದ ತಿರುಗಾಟ ಮಾಡಲಿಲ್ಲ. ಹವ್ಯಾಸಿ ಕಲಾವಿದರಾಗಿಯೇ ಇದ್ದವರು. ಅಂದು ಕಠಿಣವಾದ ಶಾನುಭೋಗ ವೃತ್ತಿಯಲ್ಲಿದ್ದುಕೊಂಡು ಊರೂರು ತಿರುಗುತ್ತಿದ್ದರೂ  ತಮ್ಮಲ್ಲಿದ್ದ ಯಕ್ಷಗಾನ ಆಸಕ್ತಿಯನ್ನು ಬೆಳೆಸಿಕೊಂಡು ಬಂದವರು. ಒಂದು ವಿಶಿಷ್ಟ ಶೈಲಿಗೆ ಹರಿಕಾರರಾಗಿ ಬದುಕಿದವರು. ಚೆಂಡೆ ಮದ್ದಲೆ ವಾದಕರಾಗಿಯೂ ಭಾಗವತರಾಗಿ ಪ್ರಸಂಗ ಕರ್ತರಾಗಿ ತಮ್ಮ ಕಲಾಜೀವನವನ್ನು ಸಲ್ಲಿಸಿದವರು. ಭಾಗವತ ಬ್ರಹ್ಮ ದಿವಂಗತ ಹಿರಿಯ ಬಲಿಪ ನಾರಾಯಣ ಭಾಗವತರನ್ನು ಮತ್ತು ಸುಬ್ಬಣ್ಣಿ ಮದ್ಲೆಗಾರರನ್ನು ಗುರು ಸ್ಥಾನದಲ್ಲಿ ಕಂಡುಕೊಂಡವರು. ಆರ್ಥಿಕ ಫಲಾಪೇಕ್ಷೆಯ ಹಿಂದೆ ಹೋಗದೆ ಕೇವಲ ಹವ್ಯಾಸಿಗಳಾಗಿ ಅಪ್ರತಿಮ ಸಾಧನೆ ಮಾಡಿದವರು.  ಮದ್ದಲೆ ವಾದನಕ್ಕೆ ತನ್ನ ವಿಶಿಷ್ಟ ಶೈಲಿಯಿಂದ ಸ್ಟಾರ್ ವಾಲ್ಯು (ತಾರಮೌಲ್ಯ)ವನ್ನು ಒದಗಿಸಿದವರು. ನೆಡ್ಲೆಯಂತಹ  ಹಲವು ಹಿರಿಯ ಕಲಾವಿದರು ಇವರ ಶಿಷ್ಯವರ್ಗದಲ್ಲಿದ್ದರು. ಮದ್ದಲೆಯ ಮೇಲೆ ಪ್ರಹಾರವನ್ನೇ ಮಾಡುವಂತಹ ಈ ವಿಶಿಷ್ಟ ಶೈಲಿ ಯಕ್ಷಗಾನ ಲೋಕದ ಒಂದು ಅದ್ಭುತ  ವಿಷಯವೆಂದರೆ ತಪ್ಪಲ್ಲ.  ಮದ್ದಲೆಯ ವಾದನಕ್ಕೆ ಪಠ್ಯ ಪುಸ್ತಕವೇನಾದರೂ ರಚಿಸಲ್ಪಟ್ಟರೆ ಅದರ ಮಹತ್ವದ ಪುಟಗಳು ಕೆಮ್ಮಣ್ಣು ನಾರಣಪ್ಪ ಶೈಲಿಗೆ ಮೀಸಲಿರಿಸಬೇಕಾಗಬಹುದು. ಆದರೆ ಆ ಪಾಠವನ್ನು ಬರೆಯುವವರು ಯಾರು ಎಂಬುದೇ ಪ್ರಶ್ನೆ. ಇಂತಹ ತಾರಾಮೌಲ್ಯದ ಸಾಧಕನ ಸ್ಮರಣೆಯನ್ನೇ ಯಕ್ಷಗಾನ ಪ್ರಪಂಚ ಅಷ್ಟಾಗಿ ಉಳಿಸಿಕೊಂಡಿಲ್ಲ ಎಂದರೆ ಈ ಜನಾಂಗದ ಅನುಸರಣೆಯ ಮಟ್ಟ ಎಷ್ಟು ಕುಸಿದು ಹೋಗಿದೆ ಎಂದು ಅರ್ಥವಾಗುತ್ತದೆ.

       ಇಂದು ಈ  ಶೈಲಿಯ ಬಗ್ಗೆ ಬಹಳ ವಿರಳವಾಗಿ ತಿಳಿದುಕೊಂಡಿರುವಲ್ಲಿ, ಈ  ಶೈಲಿಯನ್ನು ನುಡಿಸುವ ಬಗ್ಗೆ ತಿಳಿದಿರಬಹುದಾದ ಪ್ರೆಮೇಯವಂತೂ ಬಹಳ ಕಡಿಮೆ ಎನ್ನಬೇಕು.  ಮೂಲ ಯಕ್ಷಗಾನದ  ಶೈಲಿಯಿಂದ ಬಹುತೇಕ ದೂರವಾಗಿರುವ ಇಂದಿನ ಯಕ್ಷಗಾನದ ಹಿಮ್ಮೇಳದ ನಡುವೆ ಈ ಶೈಲಿ ಅರಿವಿಲ್ಲದೇ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ತಾಳ ಲಯದಿಂದ ಕೂಡಿದ ಯಕ್ಷಗಾನ ಪರಂಪರೆ ಎಂಬುದು ಕರ್ನಾಟಕ ಸಂಗೀತದ ರಾಗ ಧಾಳಿ ಇನ್ನಿಲ್ಲದಂತೆ ನಾಶವಾಗಿ ಹೋಗಿದೆ.  ಛಂದಸ್ಸು ತಾಳ ಲಯ ಇವೆಲ್ಲವನ್ನೂ ಕಳೆದುಕೊಂಡು ಯಕ್ಶಗಾನ ಹಿಮ್ಮೇಳ ಯಾವಾಗ ರಾಗದ ಪ್ರಭಾವಕ್ಕೆ ಒಳಗಾಗಿ ತನ್ನ ಸಹಜ ಸೌಂದರ್ಯವನ್ನು ಕಳೆದುಕೊಂಡಿತೋ ಅಂದಿನಿಂದ ಈ ಮದ್ದಲೆಯ ಶೈಲಿ ದೂರವಾಗಿ ಬಿಟ್ಟಿತು. ಅತ್ತ ಕರ್ನಾಟಕ ಸಂಗೀತವೂ ಅಲ್ಲದ ಇತ್ತ ಯಕ್ಷಗಾನವೂ ಅಲ್ಲದ ಇದು ಒಂದು ರೀತಿಯ, ಯಕ್ಷಗಾನವೆಂಬ ಗಂಡು ಕಲೆಯ   ಗಂಡೂ ಅಲ್ಲದ ಹೆಣ್ಣು ಅಲ್ಲದಂತಹ ಸ್ಥಿತಿ.  ಈ  ಮದ್ದಲೆ ವಾದನದ ಸ್ಮರಣೆ ಇದ್ದವನಿಗೆ ಮಾತ್ರವೇ  ಇದು ಅರ್ಥವಾಗಲು ಸಾಧ್ಯ.

ಕ್ರಮೇಣ ಈ ಶೈಲಿ ಯಕ್ಷಗಾನ ಕ್ಷೇತ್ರದಿಂದ ದೂರವಾಯಿತು. ಇಂದು ನೆನಪಿನಲ್ಲೇ ಇಲ್ಲದಂತೆ ಅಳಿಸಿಹೋಗಿದೆ. ಇದಕ್ಕೆ ಕಾರಣವನ್ನು ವಿಶ್ಲೇಷಿಸುತ್ತಾ ಹೋದರೆ ಹಲವು ಕಾರಣಗಳು ಸಿಗುತ್ತವೆ. ಯಕ್ಷಗಾನ ಹಿಮ್ಮೇಳದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಳಕೆ ಯಾವಾಗಿನಿಂದ ಆರಂಭವಾಯಿತೋ ಅಂದಿನಿಂದ ಇದರ ಅಳಿವಿಗೆ ಮುನ್ನುಡಿ ಬರೆದಾಗಿತ್ತು. ಭಾಗವತ ಹೇಗಿರುತ್ತಾನೋ ಹಾಗೆ ಮದ್ದಲೆಗಾರ ಇರುವುದು ಸಾಮಾನ್ಯ. ರಾಗ ವೈವಿಧ್ಯಗಳ ನಡುವೆ ಯಕ್ಷಗಾನದ ಶಾಸ್ತ್ರೀಯ ಮಟ್ಟುಗಳು ಗೌಣವಾಗತೊಡಗಿತು. ಛಂದಸ್ಸು ತಾಳ ಲಯದಿಂದ ತೊಡಗಬೇಕಾದಲ್ಲಿ ರಾಗದ ಅನ್ವೇಷಣೆ ಸಂಶೋಧನೆ ಅಲವಡಿಕೆಗಳು ತೊಡಗಿ ಮದ್ದಲೆಯ ಕೌಶಲ್ಯವಾದನ ಬದಿಗೆ ಸರಿದು ಅದನ್ನೇ ಅನುಸರಿಸುವ ಕಲಾವಿದ ಮೂಲೆಗುಂಪಾಗಿ ಅವಜ್ಞೆಗೆ ಒಳಗಾದ. ಇದು ಕೆಮ್ಮಣ್ಣು ಶೈಲಿ  ಎಂಬ ಶುದ್ದ ಯಕ್ಷಗಾನ ಶೈಲಿ ಕರ್ನಾಟಕ ಸಂಗೀತಕ್ಕೆ ಹೊಂದಿಕೊಳ್ಳದಾಯಿತು. ಅಥವಾ ಯಾವುದೇ ಭಾಗವತನೂ ಅದನ್ನು ಅವಲಂಬಿಸದೇ ಹೋದ. ಜನಪ್ರಿಯತೆಯ ದಾಹ ಇದಕ್ಕೆ ಕಾರಣ.  ಬದಲಾದ ಪರಿಸ್ಥಿತಿಯಲ್ಲಿ ಮದ್ದಲೆಯ ಪೆಟ್ಟುಗಳನ್ನು ಮರೆತು ಹೊಸಯುಗಕ್ಕೆ ಹೊಂದಿಕೊಂಡ ಕಲಾವಿದನಷ್ಟೇ ಚಲಾವಣೆಯ ನಾಣ್ಯವಾಗಿ ಯಕ್ಷಗಾನದ ಜೇಬಿನಲ್ಲಿ ಸ್ಥಾನ ಪಡೆದುಕೊಂಡ.  ಇಂದಿಗೂ ಕಿರಿಯ ಬಲಿಪ್ಪರು ಹೇಳುವುದಿದೆ ನಾನು ಕರ್ನಾಟಕ ಸಂಗೀತ ಕಲಿಯಲಿಲ್ಲ. ಕೇವಲ ಯಕ್ಷಗಾನ ಮಾತ್ರ ಕಲಿತದ್ದು. ಹಾಗಾಗಿ ಅವರು ರಾಷ್ಟ್ರಗೀತೆ ಜನಗಣ ಮನವನ್ನು ಹಾಡಿದರೂ ಅದು ಯಕ್ಷಗಾನದ ಪದವಾಗಿಯೇ ಭಾಸವಾಗುತ್ತದೆ. ನಾರಣಪ್ಪನವರ ಶೈಲಿಯೂ ಅದೇ ಆಗಿತ್ತು ಎಂಬುದಕ್ಕೆ ಇದು ಸೂಕ್ತ ನಿದರ್ಶನ. ಇಂತಹ ಸನ್ನಿವೇಶದಲ್ಲೂ ಮಂಡೆಚ್ಚರ ಹಾಡುಗಾರಿಕೆ ನೆನಪಾಗುತ್ತದೆ. ಸಂಗೀತವನ್ನು ಅಲವಡಿಸಿದರೂ ಅವರೆಂದೂ ಕಿರುಚಿಕೊಂಡದ್ದು ನಾನು ಕೇಳಲಿಲ್ಲ.  ಆ ಸಂಗೀತ ಶೈಲಿ ಯಕ್ಷಗಾನದ ರಂಗತಂತ್ರದಿಂದ ದೂರಾಗಿ ನಿಲ್ಲಲಿಲ್ಲ.  ಯಕ್ಷಗಾನ ಸಂಗೀತವೆಂದರೆ ಬರೀ ಕಿರುಚಾಟ ಎಂಬಂತಾಗಿದೆ. ಯಕ್ಷಗಾನವನ್ನು ಹೊಸದಾಗಿ ನೋಡಿದ ಕರ್ನಾಟಕ ಸಂಗೀತದ ರಸಿಕರೊಬ್ಬರು ನನ್ನಲ್ಲಿ ಕೇಳಿದ್ದರು ಯಕ್ಷಗಾನದಲ್ಲಿ ಅದೇಕೆ ಕಿರುಚಿ ಹಾಡುತ್ತಾರೆ?  ಅದಕ್ಕೆ ಸರಿಯಾದ ಉತ್ತರ ಕೊಡುವಲ್ಲಿ ನಾನು ಅಸಮರ್ಥನಾಗುತ್ತೇನೆ. ಚಪಾತಿ ಬೇಕೆಂದು ಕೇಳಿದರೆ ಗೋಧಿ ದೋಸೆ ಕೊಡುವ ಪ್ರಮೇಯ ವಿದು. ಎರಡರಲ್ಲೂ ಹಿಟ್ಟು ಒಂದೇ. ವೆತ್ಯಾಸದ ಅರಿವಿದ್ದವನಿಗೆ ಮಾತ್ರ ಹೇಳುವುದಕ್ಕೆ ಸಾಧ್ಯ.

ದಾಹಜಲದ ಮೂಲದಂತೆ ಮೂಲ ನಾಶವಾಗುತ್ತದೆ. ಹೀಗೆ ಪುರಾತನ ಶೈಲಿಗಳು ಅಳಿವಿನಂಚಿಗೆ ಸರಿಯುತ್ತಿದೆ. ಮನುಷ್ಯನ ದಾಹ ಮಾತ್ರ ತಣಿಯುತ್ತಿಲ್ಲ.     ಇಂದು ರಾಗ ವೈವಿಧ್ಯದ ಹಿಂದೆ ಹೋಗುವುದಲ್ಲದೆ ಯಕ್ಷಗಾನದ ಹಿಂದೆ ಹೋಗುವುದಿಲ್ಲ. ತಾಳ ಲಯ ಛಂದಸ್ಸಿನಿಂದ ತೊಡಗಿ ಆಮೇಲೆ ಆವಶ್ಯವಿದ್ದರೆ ಮಾತ್ರ ರಾಗದತ್ತ ಸುಳಿಯುತ್ತಿದ್ದರು.   ಈಗ ರಾಗದಿಂದಲೇ ತೊಡಗಿ ತಾಳವನ್ನು ಹುಡುಕುತ್ತಾರೆ. ಇನ್ನು ಛಂದಸ್ಸು ಅದು ಬೇಡವೇ ಬೇಡ. ವರ್ತಮಾನ ಪತ್ರಿಕೆಯನ್ನು ಓದಿ ಅದನ್ನೇ ಪದವಾಗಿ ಹಾಡ ಬಲ್ಲರು. ಹೀಗಿರುವಾಗ ಕೆಮ್ಮಣ್ಣು ಶೈಲಿ ಎಂದರೆ ಹಾಸ್ಯಾಸ್ಪದವಾಗಿ ಕಂಡರೆ ಅಚ್ಚರಿಯಿಲ್ಲ. ಒಂದು ವೇಳೆ ಅಲ್ಲೋ ಇಲ್ಲೋ ಒಬ್ಬನೇ ಒಬ್ಬ ಈ ಶೈಲಿಯ ಮದ್ದಲೆಗಾರ ಇದ್ದರೂ ಅವರನ್ನು ಅವಕಾಶ ವಂಚಿತರಾಗುವ ಪ್ರಮೇಯವೇ ಅಧಿಕ. ಕಲಿಯುಗದಲ್ಲಿ ದೇವರು ನಿಜವಾಗಿ ಪ್ರತ್ಯಕ್ಷವಾದರೂ ಯಾರೂ ನಂಬುವುದಿಲ್ಲ. ಕಲ್ಲು ಹೊಡೆದು ಬಿಟ್ಟಾರು. ತಮ್ಮ ಮನಸ್ಸನ್ನು ಹೊಂದಿಸಿಕೊಳ್ಳಲಾರರು.

ಈ ನಡುವೆ ಹಿರಿಯರು ಹೇಳಿದ ಘಟನೆಯೊಂದು ನೆನಪಾಗುತ್ತದೆ. ಅದು ಕಾಳಿಂಗ ನಾವುಡರ ಪ್ರವರ್ಧಮಾನದ ಕಾಲ. ಅವರ ಹಾಡುಗಾರಿಕೆ ಯಕ್ಷಗಾನದಲ್ಲಿ ತಿಟ್ಟು ಭೇದವಿಲ್ಲದೇ ಕ್ರಾಂತಿಯನ್ನೇ ಉಂಟು ಮಾಡಿತ್ತು. ಅದನ್ನು ಎಲ್ಲರೂ ಹಿಂಬಾಲಿಸಿದರು. ಇಂತಹ ಸನ್ನಿವೇಶದಲ್ಲೂ ಮಂಗಳೂರು ಪುರಭವನದಲ್ಲಿ ಯಕ್ಷಗಾನ ಬಯಲಾಟ ನಡೆಯಿತು. ಆಟದ ಪೂರ್ವಾಧದ ವರೆಗೆ ಶ್ರೀ ಕಾಳಿಂಗ ನಾವುಡರ ಭಾಗವತಿಕೆಗೆ  ಕಿಕ್ಕಿರಿದ ಜನಸ್ತೋಮ ಸಂಪೂರ್ಣ ವಶವಾಗಿ ಬಿಟ್ಟಿತು. ಆ ಅವರಣದಿಂದ ಪ್ರೇಕ್ಷಕ ಹೊರಬರಲಾರನೋ ಎಂಬ ಭ್ರಮೆ ಆವರಿಸಿತ್ತು. ಆನಂತರ ಬಹುಶಃ ಕರ್ಣ ಪರ್ವ ಪ್ರಸಂಗ ಇರಬೇಕು. ಹಿರಿಯ ಅಗರಿ ಶ್ರೀನಿವಾಸ ಭಾಗವತರು ಭಾಗವತಿಕೆ ಮಾಡಿದರು. ಅಂದಿನ ಆ ಭಾಗವತಿಕೆ ಹೇಗಿತ್ತು ಎಂದರೆ ಅದುವರೆಗೆ ನಾವುಡರು ನಿರ್ಮಿಸಿದ್ದ ಆ ಭ್ರಮಾ ಲೋಕವನ್ನು ಅಗರಿಯವರು ಭೇದಿಸಿ ಬಿಟ್ಟಿದ್ದರು. ಇದು ಪರಸ್ಪರ ಹೋಲಿಕೆಯಲ್ಲ. ಅಗರಿ ಎಂಬ ಯಕ್ಷಗಾನದ ಮಟ್ಟು ಇದಕ್ಕೆ ಕಾರಣ. ಇಂದು ಅಗರಿ ಶೈಲಿಯ ಕಥೆಯು ವಾಸ್ತವದ ಕನ್ನಡಿಯಾಗಬಹುದು.

 ಪರಿಪೂರ್ಣ ಘಾತ ಪೆಟ್ಟುಗಳಿಂದಲೇ ಅನುರಣೆ ಗೊಳ್ಳುವ ಈ ವಿಶಿಷ್ಟ ಮದ್ದಲೆ ವಾದನವನ್ನು ಅಂದು ಚಿಪ್ಪಾರು ಬಲ್ಲಾಳರು ಅಧ್ಬುತವಾಗಿ ನುಡಿಸಿದ್ದರು. ಕೇವಲ ಬಲ್ಲಾಳರ ಅನುಕರಣೆಯೇ  ನಮ್ಮಲ್ಲಿ ಅಷ್ಟೊಂದು ಪ್ರಭಾವವನ್ನು ಬೀರಿದ್ದರೆ ಅದರ ನೈಜ ಅನುಭವ ಪಡೆದರೆ ಹೇಗಾಗಬೇಡ.  ಅಂದು ಅಷ್ಟಾದರು ಸ್ಮರಣೆಯಲ್ಲಿದ್ದದ್ದು ಇಂದು ಆ ನೆನಪು ಸಹ ಅಳಿಸಿ ಹೋಗಿದೆ.    ಅಂದು ನಾರಣಪ್ಪನವರಂತೆ  ಬಲ್ಲಾಳರು ಪೂರ್ಣ ಅವಧಿಯಲ್ಲಿ ರಾತ್ರಿಯಿಂದ ಬೆಳಗಿನ ತನಕ ನಡೆದ ಆ ತಾಳ ಮದ್ದಲೆಯಲ್ಲಿ ಬಲಿಪ್ಪರೊಂದಿಗೆ ವಿರಾಮ ವಿಲ್ಲದೆ ಕೈ ಬದಲಿಸದೇ ಏಕಾಂಗಿಯಾಗಿ ಬಲ್ಲಾಳರು ಮದ್ದಲೆ ನುಡಿಸಿದ್ದರು.   ಚೆಂಡೆ ವಾದಕಾರಾಗಿ ಅಂದು ಶ್ರೀ ಕಡಬ ನಾರಾಯಣ ಆಚಾರ್ಯ ಇವರು ಭಾಗವಹಿಸಿದ್ದರು. ಬೆಳಗಿನ ತನಕ ಬಲ್ಲಾಳರು ಏಕ ಮಾತ್ರರಾಗಿ ಮದ್ದಲೆ ನುಡಿಸಿದ್ದು ನನಗಂತೂ ಅದ್ಭುತ ಎನಿಸಿ ಮರೆಯಲಾರದ ಅನುಭವವನ್ನು ಒದಗಿಸಿತ್ತು.  ಮದ್ದಲೆಯ ಝೇಂಕಾರದ ನಾದದ ಸುಳಿಯಲ್ಲಿ ಪ್ರೇಕ್ಷಕ ಮಿಂದೆದ್ದರೆ  ಒಂದಿಷ್ಟೂ ಕಣ್ಣು ಮಿಟುಕಿಸದೇ ಉತ್ಸಾಹದಿಂದ ದಣಿವರಿಯದೆ ಬಲ್ಲಾಳರು ಎಂದಿನಂತೆ ತಮ್ಮ ನಿರ್ವಿಕಲ್ಪ ಭಾವದಿಂದ  ಬೆಳಗಿನ ತನಕ  ಮದ್ದಲೆ  ಬಡಿದು ತೋರಿಸಿದ್ದರು.   ಅಂದಿನ ಕಲಾವಿದರ ಕಸುವು ಆ ತಾದಾತ್ಮ್ಯ ಮನೋಭಾವ ಇಂದು ಬಹಳ ಅಪರೂಪ ಎನ್ನಬೇಕು.

ಭಾಗವತರು ವೇಷಧಾರಿಗಳು ಸನ್ಮಾನವನ್ನುಗಳಿಸುವಾಗ ಹಿಮ್ಮೇಳ ವಾದಕನೂ ಸಹ ಸನ್ಮಾನವನ್ನು ಅಪೇಕ್ಷಿಸುವುದು ತಪ್ಪಲ್ಲ. ಅಪೇಕ್ಷೆಯ ಕೂಗಿನ ನಡುವೆ ಹೀಗೆ ಮದ್ದಲೆ ವಾದನಕ್ಕೂ ತಾರಮೌಲ್ಯವನ್ನು ಒದಗಿಸಿಕೊಟ್ಟು  ಆ ಮದ್ದಲೆ ವಾದನಕ್ಕೆ  ಕಾರ್ಯಕ್ರಮಮವನ್ನು ಏರ್ಪಡಿಸುವಲ್ಲಿಗೆ ಹಿಮ್ಮೇಳದ ಹಿರಿಮೆಯನ್ನು ಎತ್ತಿ ಹಿಡಿದ ನಾರಣಪ್ಪರಂತಹ ಕಲಾವಿದರ ಸಾಧನೆ ಸ್ಮರಣೆಗೆ ಬರಬೇಕು.   ನಾವು ಏನು ಕಳೆದುಕೊಂಡಿದ್ದೇವೆ ಎಂಬುದರ ಮೌಲ್ಯದ ತುಲನೆಯಲ್ಲಿ ಇಂದು ಗಳಿಸಿರುವುದನ್ನು ಲೆಕ್ಕ ಹಾಕಬೇಕು.  ಕಳೆದು ಹೋದ ಇಂತಹ ಶೈಲಿಯ ಅಧ್ಯಯನ ಮಾಡಿ ಅದನ್ನು ಅನುಸರಿಸಿ ಉಳಿಸಿರುತ್ತಿದ್ದರೆ  ಬಯಸುವ ಅಪೇಕ್ಷೆಗೆ ನ್ಯಾಯವನ್ನು ತೋರಿಸಿದಂತಾಗುತ್ತಿತ್ತು. ಯಾವುದೇ ಫಲಾಪೇಕ್ಷೆ ಇಲ್ಲದೇ ಕೇವಲ ಹವ್ಯಾಸದಿಂದ ಕಲೆಯ ದಾಹವನ್ನು ತಣಿಸುವುದಕ್ಕೆ ನಿಸ್ವಾರ್ಥದಿಂದ ದುಡಿದ ಮಹನೀಯರ ಆದರ್ಶ ನಮ್ಮ ಮುಂದಿರುವಾಗ, ವಾಣಿಜ್ಯ ಉದ್ದೇಶದ ಇಂದಿನ ಸನ್ಮಾನಗಳು ಅಂಗೀಕಾರಗಳು ಕ್ಷುಲ್ಲಕ ಎಂದೆನಿಸುತ್ತದೆ.

ಇಂದು ಯಕ್ಷಗಾನದ ಮದ್ದಲೆಯ ಬಗ್ಗೆ ವಿಚಾರ ಮಂಥನ ಮಾಡುವಾಗ ಕೆಮ್ಮಣ್ಣು ಶೈಲಿಯನ್ನು ಮರೆತು ಮಾತನಾಡುವುದಕ್ಕೆ ಸಾಧ್ಯವಿಲ್ಲ. ಕೆಮ್ಮಣ್ಣುವಿನ  ಸೌಂದರ್ಯದಂತೆ ಆ ನಾದ ಝೇಂಕಾರ ಇನ್ನೂ ಹೃದಯದಲ್ಲಿ ಪುಟಿದೇಳುತ್ತಾ ಇದೆ. ಇದು ಆ ಕಾಲದ ಯಕ್ಷಗಾನ ರಸಿಕರ ಮನದಾಳದ ಮಾತು.