“ಯುದ್ದ, ಎಂದಿಗೂ
ಸಮಸ್ಯೆಯನ್ನು ನಿವಾರಣೆ ಮಾಡೋದೇ ಇಲ್ಲ. ಯುದ್ದ ಮತ್ತೊಂದು ಸಮಸ್ಯೆಯನ್ನು ಹುಟ್ಟಿಸ್ತದೆ”
ಇದು ಶ್ರೀಕೃಷ್ಣ
ಧರ್ಮರಾಯನಿಗೆ ಹೇಳುವ ಮಾತು.
(ಈ ಲೇಖನದ ಸಂಪನ್ಮೂಲ " ಶೇಣಿ ಭಾರತ" ಲೇಖಕರು ಶ್ರೀ ಡಾ. ಗೋಪಾಲ ಕೃಷ್ಣ ಎಲ್ ಹೆಗಡೆ. ಅನಂತಾನಂತ ಕೃತಜ್ಞತೆಯ ಸ್ಮರಣೆಯೊಂದಿಗೆ. )
ಹನ್ನೆರಡು ವರ್ಷ
ವನವಾಸವನ್ನು ಒಂದು ವರ್ಷ ಅಜ್ಞಾತವಾಸವನ್ನೂ ಪೂರೈಸಿದ ಮೇಲೆ ಒಪ್ಪಂದಂತೆ ದಾಯಭಾಗವನ್ನು ಸಾಮದಲ್ಲಿ
ಪಡೆಯುವಲ್ಲಿ ಶ್ರೀಕೃಷ್ಣನನ್ನು ಸಂಧಾನಕ್ಕಾಗಿ ಹೋಗುವಂತೆ ಧರ್ಮರಾಯ ಬೇಡಿಕೊಳ್ಳುತ್ತಾನೆ.
ನೀತಿಯೇ
ಕರುಣಾಳು ನಿನಗೆ ವಿ |
ಘಾತ
ವೆಣಿಸಿದ ದುಷ್ಟನೋಳು ಸಂ|
ಪ್ರೀತಿಯೇ
ಸಂಧಾನಕನುವಾಗುವರೆ ಹೇಳೆನಲು||
ಖ್ಯಾತ
ಧರ್ಮಜ ನುಡಿದನಿಬರ |
ಪಾತಕವು
ಮಗುಳವರ ಹೊದ್ದಿರ|
ಲಾತನಲಿ
ಸಂಧಿ ಪ್ರಯತ್ನವ ಮಾಡಿಬಹುದೆಂದ ||
ಶ್ರೀಕೃಷ್ಣನ ಧ್ವನಿಯೂ ಧರ್ಮಜನ ಇರಾದೆಯೂ
ಒಂದೇ ಪದದಲ್ಲಿ ವ್ಯಕ್ತವಾಗುವ ಭಾವದ ಶ್ರೀ ಕೃಷ್ಣ ಸಂಧಾನ
ಪ್ರಸಂಗದ ಭಾಮಿನಿ ಷಟ್ಪದಿಯಲ್ಲಿನ ಈ ಪದಕ್ಕೆ
ಶ್ರೀಕೃಷ್ಣನಾಗಿ ಯಕ್ಷ ವಾಚಸ್ಪತಿ ಹರಿದಾಸ ಶ್ರೀ
ಶೇಣಿಗೋಪಾಲ ಕೃಷ್ಣ ಭಟ್ಟರು ಹೇಳುವ ಅರ್ಥಗಾರಿಕೆಯಲ್ಲಿನ ಮೇಲೇ ಉದ್ದರಿಸಿದ ವಾಕ್ಯ ಒಂದು
ಶ್ರೀಕೃಷ್ಣನ ಆತ್ಮವನ್ನೇ ತೆರೆದು ಬಿಟ್ಟಂತೆ ಭಾಸವಾಯಿತು. ಯುದ್ದ ಒಂದು ಪರಿಹರಿಸಿದ ಸಮಸ್ಯೆಗಳು
ಯಾವುದಾದರು ಇದೆಯೇ? ಒಂದು ಭಾಮಿನಿ ಷಟ್ಪದಿಯ ಪದದಲ್ಲಿ ಇಷ್ಟು ವಿಚಾರಗಳನ್ನು
ತುಂಬಿಸಿ ಧಾರೆ ಎರೆದು ಬಿಡಬಹುದಲ್ಲ ಎಂದು ಆಶ್ಚರ್ಯವಾಗುತ್ತದೆ.
ಯಕ್ಷಗಾನದಲ್ಲಿ
ಶ್ರೀಕೃಷ್ಣ ಪಾತ್ರ ಎಂಬುದು ಯಾವ ಪ್ರಸಂಗದಲ್ಲೇ ಆಗಲಿ ಅದರ ಅರ್ಥಗಾರಿಕೆ ಬಹಳ
ವಿಶಿಷ್ಟವಾಗಿರುತ್ತದೆ. ದೇವನಾಗಿಯೂ ಜ್ಞಾನಿಯಾಗಿಯೂ ನಂತರ ಯಾದವನಾಗಿಯೂ ಅರ್ಥ ಹೇಳುವಾಗ
ವ್ಯಕ್ತಿತ್ವ ದರ್ಶನ ಪ್ರಾಮುಖ್ಯವಾಗುತ್ತದೆ. ಈ ಪ್ರಸಂಗದ ಶ್ರೀ ಕೃಷ್ಣನಾಗಿ ಶೇಣಿಯವರು ಹೊಸತೊಂದು
ಶ್ರೀಕೃಷ್ಣನನ್ನು ತೋರಿಸಿಕೊಟ್ಟಾಗ ನಮ್ಮ ವಿಚಾರ ಲಹರಿಯನ್ನೂ ಮಸೆದ ಅನುಭವವಾಗುತ್ತದೆ. ಶ್ರೀಕೃಷ್ಣನ
ನಿಲುವಿನ ಜತೆಯಲ್ಲಿ ಶೇಣಿಯವರ ಅರ್ಥಗಾರಿಕೆಯ ವೈಖರಿಯೂ ಇಲ್ಲಿ ಗಮನಾರ್ಹವಾಗಿದೆ.
ನೀತಿಯೇ
ಕರುಣಾಳು...ಎಂದು ಧರ್ಮರಾಯನಂತಹ ಧರ್ಮಜ್ಞನಲ್ಲಿ ಪ್ರಶ್ನಿಸುವ ಶ್ರೀಕೃಷ್ಣ ಇಲ್ಲಿ
ವಿಶ್ಲೇಷಿಸುವುದು ಧರ್ಮರಾಯನನ್ನೂ ಅಲ್ಲ, ದುರ್ಯೋಧನನ್ನೂ ಅಲ್ಲ ಬದಲಿಗೆ ಭೀಷ್ಮನನ್ನು.!! ಹೀಗೆ
ಮತೂಂದು ಪಾತ್ರದ ವಿಶ್ಲೇಷಣೆಯನ್ನು ಮಾಡುತ್ತಾ ಪ್ರಸಂಗ ಚಿತ್ರಣವನ್ನು ಒದಗಿಸುವುದು ಬಹಳ ವಿಶಿಷ್ಟವಾಗಿ
ಗಮನ ಸೆಳೆಯುತ್ತದೆ.
ನೀತಿ ಎಂಬುದು
ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ’ಸೂರ್ಯೋದಯಕ್ಕಿಂತ
ಮೊದಲು ತಣ್ಣೀರಿನಲ್ಲಿ ಸ್ನಾನ ಮಾಡಬೇಕು’ ಯಾವನಾದರೊಬ್ಬ ಯಾವುದೋ ಒಂದು ಪರದೇಶಕ್ಕೆ ಹೋದರೆ, ಅಲ್ಲಿ
ಮಧ್ಯಾಹ್ನಕ್ಕಾದರೂ ಬಿಸಿ ನೀರಿನಲ್ಲೇ ಸ್ನಾನ ಮಾಡಿದರೆ ಮೂರು ದಿವಸ ಇದ್ದಾನು ಅಂತ ಆದ್ರೆ,
ಅಲ್ಲಿಗೆ ಹೋಗುವಾಗ ಸೂರ್ಯೋದಯಕ್ಕಿಂತ ಮೊದಲ ತಣ್ಣೀರ ಸ್ನಾನ ಎಂಬ ನೀತಿ ಬದಲಾಗೋದಿಲ್ವೇ? ಹಾಗಾದರೆ ನೀತಿ ಎಂಬುದು ಸ್ಥಾಯಿಯಲ್ಲ.
ಮಿಕ್ಕವರೆಲ್ಲ
ಯುದ್ಧವೇ ಬೇಕು ಅಂತ ಹೇಳುವಾಗ, ಧರ್ಮರಾಯ ಒಬ್ಬ ಯುದ್ದ ಬೇಡ ಸಾಮದಲ್ಲೇ ನೋಡುವ ಎನ್ನುತ್ತಾನೆ.
ಇದನ್ನು ಶ್ರೀ ಕೃಷ್ಣ ಸರ್ವಾಧಿಕಾರಿ ಮನೋವೃತ್ತಿ ಅಂತ ಹೇಳುತ್ತಾನೆ. ಸರ್ವಾಧಿಕಾರಿ ಮನೋ ಪ್ರವೃತ್ತಿ ನೀತಿಯೇ? ಕೌರವ ಏನೇ
ಹೇಳಲಿ . ಅವನು ದುಷ್ಟ ಎಂದರೆ ನೂರು ಸಲ ಹೇಳಿ
ಎನ್ನುವವ. ಯಾರ ಮಾತನ್ನೂ ಕೇಳದವನು. ತನ್ನದೇನುಂಟು ಅಂತ ಹೇಳದವನು. ಹೋಗಲಿ. ಆದರೆ ನೀನು ಧರ್ಮರಾಯ ನಿನ್ನವರು ಏನು ಹೇಳುತ್ತಿದ್ದಾರೆ
ಎಂಬುದನ್ನು ನೋಡದಿರುವುದು ನೀತಿಯೇ? ಧರ್ಮರಾಯ,
ಧರ್ಮ ಸೂಕ್ಷ್ಮವನ್ನು ಅರಿತವನು ಅನುಸರಿಸುವ ನೀತಿಯನ್ನೇ ಪ್ರಶ್ನಿಸುತ್ತಾನೆ.
ಕೌಟುಂಬಿಕವಾಗಿ
ಧರ್ಮರಾಯ ಯೋಚಿಸಬೇಕು. ಅದಕ್ಕೆ ರಾಮನ ಒಂದು
ಉದಾಹರಣೆಯನ್ನು ಕೊಡುತ್ತಾರೆ, “ ಶ್ರೀರಾಮ ದೇವರಿಂದ ನಾವು ಕಲೀಬೇಕಾಗ್ತದೆ. ’ರಾಮೋ
ದುರ್ನಾಭಿಭಾಷತೇ’ ರಾಮನೇ ಹೇಳಿದ್ದು ನಾನು ಎರಡಾಡುವುದಿಲ್ಲ ಅಂತ. ಭರತ ಬಂದಾವಾಗ , ಬರ್ತೇನೆ
ಹದಿನಾಲ್ಕು ವರ್ಷ ಕಳೆದು ರಾಜ್ಯ ಆಳುತ್ತೇನೆ ಅಂತ ಹೇಳಿದ. ಕುರುಹಾಗಿ ತನ್ನ
ಪಾದುಕೆಯನ್ನೇ ಕೊಟ್ಟ. ಒಬ್ಬ ಬುದ್ಧಿವಂತ ಹೇಳ್ಯಾನೊ
’ ರಾಮ ಕಾಲು ಜಾರಿದ ’ ಅಂತ. ಒಂದು ಕುಟುಂಬ ವ್ಯವಸ್ಥೆಯಲ್ಲಿ ಇದೆಲ್ಲ ಸಹಜ.
ಹೊಂದಾಣಿಕೆ ಮಾಡಿಕೊಳ್ಳಬೇಕಾಗ್ತದೆ.
ನಂತರ ವಿಚಾರಧಾರೆ
ಕೌರವನ ಕಡೆಗೆ ಹೊರಳಿ ಭೀಷ್ಮನಲ್ಲಿ ಕೇಂದ್ರೀಕರಿಸುತ್ತದೆ. ಇಲ್ಲಿ ಶ್ರೀ ಕೃಷ್ಣ ಭೀಷ್ಮನನ್ನು
ನೋಡುವ ದೃಷ್ಟಿಕೋನವೇ ಬೇರೆ. ಹೇಳಿ ಕೇಳಿ ಭೀಷ್ಮ ಭಾಗವತೋತ್ತಮ. ಆದರೂ ಭೀಷ್ಮನ ನಿರ್ಧಾರ
ಕಾಲುಜಾರಿದಂತೆ ಕಂಡು ಬರುತ್ತದೆ. ಚಂದ್ರವಂಶದ ಹಿರಿಯ ಭೀಷ್ಮನ ನಡೆಯನ್ನು ವಿಮರ್ಷಿಸುತ್ತಾ ಪರೋಕ್ಷವಾಗಿ ಕೃಷ್ಣ ತನ್ನ
ಮನೋಗತವನ್ನು ತನ್ನ ದಾರಿಯನ್ನೂ ತಿಳಿಸುವ ಪರಿ ವಿಚಿತ್ರ. ಬಹುಷಃ ಸ್ವತಃ ಪಾತ್ರವಾದರೂ ಆಗಬಹುದು.
ಆದರೆ ತದ್ರೂಪಿ ಪಾತ್ರ ನಿರ್ಮಾಣ, ಅದೂ ಕೇವಲ ಮಾತಿನ ಚಮತ್ಕಾರದಲ್ಲಿ, ಅದುವೇ ಅದ್ಭುತ. ಶೇಣಿ
ವೈಶಿಷ್ಟ್ಯ ಇರುವುದೇ ಇಲ್ಲಿ. ಪಾತ್ರದಿಂದ ಪಾತ್ರಕ್ಕೆ ಈ ವೈವಿಧ್ಯ ಬದಲಾಗುತ್ತಾ ಹೋಗುತ್ತದೆ. ಸ್ವ
ವ್ಯಕ್ತಿತ್ವವನ್ನು ವಿವರಿಸುವುದು ಸುಲಭ.
ಮತ್ತೊಂದು ವ್ಯಕ್ತಿತ್ವದಿಂದ ವಿವರಿಸುವುದು ಕಷ್ಟ.
ನಿಮ್ಮಜ್ಜ, ಎಂಥದೋ
ವಿಷ ಘಳಿಗೆಯಲ್ಲಿ ಹೇಳಿದ ’ಸಿಂಹಾಸನ ಏರೋದಿಲ್ಲ. ಮದ್ವೆ ಆಗೋದಿಲ್ಲ’ ಆಗ ದೊಡ್ಡ ಕೊಡುಗೆ ಅದು. ಆದರೆ ಒಂದು, ರಾಮನಿಗಾದದ್ದು ಭೀಷ್ಮನಿಗೆ ಅಗಲಿಲ್ಲ. ಭೀಷ್ಮ ಏನು
ಯೋಚಿಸಿದ, ತನ್ನ ಉಳಿವಿಗಾಗಿ ಅಪ್ಪ ಅಮ್ಮನನ್ನೇ ಬಿಟ್ಟು ಬದುಕಿದ. ಆ ಅಪ್ಪನಿಗಾಗಿ ಏನು ಮಾಡಿದರೂ
ಕಡಿಮೆಯೇ. ಪಿತೃ ಋಣ ತೀರಿಸುವ ಹಂಬಲ. ವಾಸ್ತವದಲ್ಲಿ ಅದು ಸತ್ಯ. ಆದರೂ ಏನಾಗಿ ಹೋಯಿತು? ಸಂತಾನವೇ ಮುತ್ತಿತು. ಸಂತತಿಯೇ ಇಲ್ಲದ ಮೇಲೆ ಅಧಿಕಾರ
ಯಾರಿಗೆ? ಸತ್ಯವತಿಯ ಸಂತಾನಕ್ಕೆ ರಾಜ್ಯ ಸಿಕ್ಕಿತೆ? ಸತ್ಯವತಿ ಹೇಳ್ತಾಳೇ, ನೀನೆ ಯೋಗ್ಯತಾವಂತ.
ದೇವರ ಸಂಕಲ್ಪವೂ ಅದೇ. ಸಿಂಹಾಸನ ಏರು. ಭೀಷ್ಮ ಕೇಳಲಿಲ್ಲ. ಸನ್ಯಾಸಿಯಾಗೇ ಇದ್ದ. ಆದರೆ ಒಂದು
ಸನ್ಯಾಸಿಯಾದವನು ಯಾಕೆ ಬದರಿಕಾಶ್ರಮಕ್ಕೆ ಹೋಗಲಿಲ್ಲ.? ಮತ್ತೂ ಹಸ್ತಿನಾವತಿಯಲ್ಲೇ ಉಳಿದ. ಶ್ರೀ ಕೃಷ್ಣನ ದೃಷ್ಟಿಯಲ್ಲಿ ಭೀಷ್ಮನ ತ್ಯಾಗದ
ಉದ್ದೇಶವೇ ವ್ಯರ್ಥವಾಗುತ್ತದೆ.
ಇಲ್ಲೊಂದು
ಉದಾಹರಣೆ, ಮನೆಯಲ್ಲಿದ್ದ ಧಾನ್ಯದ ಬಗ್ಗೂ ಆಸೆ , ನೆಂಟ್ರ ಬಗ್ಗೆಯೂ ಪ್ರೀತಿ. ಪರಿಣಾಮ?
ನೆಂಟ್ರಿಗೆ ಇಕ್ಕ್ಲಿಕ್ಕೆ ಮನಸ್ಸಿಲ್ಲ.
ಅದಕ್ಕವನು ಬಂದವರಿಗೆ ಹೇಳ್ತಾನೆ ” ಒಳ್ಳೆ ದಿವಸ ನೋಡಿ ಬಂದ್ರಲ್ಲ. ಇವತ್ತು
ಏಕಾದಶಿ” ಆಗ ಒಳಗೆ ಇದ್ದದ್ದನ್ನೂ ಊಟ ಮಾಡದೇ ಇರೋದು. ಬಂದವರಿಗೂ ಇಲ್ಲ. ತನಗೂ ಇಲ್ಲ. ಭೀಷ್ಮನಿಗೆ ಬಂದ ದೌರ್ಬಲ್ಯ ಅದೇ ಅಗಿಬಿಟ್ಟಿತು.
ಹೆಣ್ಣನ್ನು ತಂದ.
ಮದ್ವೆ ಆಗಬಹುದಿತ್ತು. ಆಗ್ಲಿಲ್ಲ. ಕೊನೆಗೆ ನಾದಿನಿಯರಿಗೆ ಭೀಷ್ಮನಲ್ಲೇ ನಿಯೋಗ ಮಾಡುವಂತೆ ಸತ್ಯವತಿ ಹೇಳ್ತಾಳೆ. ಭೀಷ್ಮ
ತನ್ನ ಮಾತಿಗೆ ಅಚಲನಾಗಿದ್ದುದು ಎಂತಹ ದುರಂತಗಳಿಗೆ ಕಾರಣವಾಗುತ್ತದೆ.? ಶ್ರೀರಾಮನಿಗೂ ಇದ್ದದ್ದು
ಪಿತೃವಾಕ್ಯ. ಭೀಷ್ಮನಿಗೂ ಅದೇ, ತಂದೆಗಿತ್ತೆನು
ಭಾಷೆಯ. ಏನು ಹೇಳಿದ? ನಿಯೋಗ ಅಂದ್ರೆ ಅದು ವ್ಯಭಿಚಾರ. ಬ್ರಹ್ಮ ಚರ್ಯ ಭಂಗವಾಗ್ತದೆ. ಆದರೆ
ಇವನಿಗೆ ಮಾಡಲಾಗದೇ ಇದ್ದದ್ದು ವ್ಯಾಸರಿಗೆ ಆಗಬಹುದಂತೆ. ಕ್ಷತ್ರಿಯನಾದ ಭೀಷ್ಮನಿಗೆ ಆಗದೇ
ಇದ್ದದ್ದು ವ್ಯಾಸರಿಗೆ ಆಗಬಹುದು. ಇಲ್ಲಿ
ವ್ಯಾಸರನ್ನು ನಾವು ವಿಚಾರಣೆಗೆ ಗುರಿ ಪಡಿಸಬೇಡವೇ?
ಇನ್ನು ಆ ಹೆಂಗಸರು,
ಮದುವೆ ಆಗದೇ ಇದ್ದರೆ ಏನು? ಈಗ ನಿಯೋಗವಾದರೂ
ಸಾಧ್ಯವಾಗುತ್ತದಲ್ಲ. ಭಾವ ಬರ್ತಾನೆ ಅಂತ
ತಿಳ್ಕೊಂಡ್ರು. ನಿಜವಾಗಿಯೂ ಹುಡುಗಿಯರು ಮನಸಾ
ಮೆಚ್ಚಿದ್ದು ಭೀಷ್ಮನನ್ನೇ.!! ನಿಯೋಗ ಆದರೂ ಮಾಡಬಹುದಲ್ಲ? ತಾವು ಕಣ್ಣಿಟ್ಟ ಭಾವನಿಂದಲೇ
ಸಂತಾನೋತ್ಪತ್ತಿಯಾಗುತ್ತದೆ. ಎಲ್ಲ ಅಲಂಕಾರ ತಯಾರಾಗಿ ಬಂದ್ರೆ ....ಬಂದ ಜನ ಯಾರು? !!
ಶ್ರೀಕೃಷ್ಣ
ಹೇಳ್ತಾನೆ ’ಭೀಷ್ಮಜ್ಜ ಸಿಕ್ಕಿದರೆ ನಾನು ಕೇಳ್ತೇನೆ.’
. ವ್ಯಾಸನಿಂದ ನಿಯೋಗ ಹೇಗಾಯ್ತು? ವ್ಯಾಸ ಯಾರು? ಸತ್ಯವತಿ ದೇವಿಗೆ ಯಾರಿಂದಲೋ ಹುಟ್ಟಿದ
ಕಾನೀನ ಸಂತಾನ. ಚಂದ್ರವಂಶದ ಅಭಿವೃದ್ದಿಗೆ ಅವನಿಗೇನು ಅಧಿಕಾರ. ಹಾಗಾಗಿ ಭಾಲವಿಧವೆಯರ ಆಶೆಯೂ ಭಂಗವಾಯಿತು. ಭೀಷ್ಮನಂತಹ
ರಾಜಕುಮಾರ, ಕ್ಷತ್ರಿಯನನ್ನು ನಿರೀಕ್ಷಿಸಿ ಕುಳಿತಿದ್ದ ಈ ಹೆಂಗಸು, ಈ ಅವಧೂತ ವೇಷದ ಸ್ನಾನ
ಇಲ್ಲದ ಮೈ ದುರ್ಗಂಧದದ ಇವನನ್ನು ನೋಡಿ ಕಣ್ಣು ಮುಚ್ಚದೇ ಏನು ಮಾಡಿಯಾಳು??
ಈ ಎಲ್ಲ ದುರಂತಕ್ಕೂ
ಭೀಷ್ಮನೇ ಕಾರಣ.
ಭೀಷ್ಮ ತನ್ನ
ಸಂಸಾರದೊಂದಿಗಿನ ಸಂಬಂಧವೇ ಎಲ್ಲದಕ್ಕೂ ಮೂಲ ಕಾರಣವಾಗಿಬಿಟ್ಟಿತು. ಎಲ್ಲವನ್ನೂ ಬೇಡ ಅಂತ
ಹೇಳಿದವನು ಕಾಡಿಗೆ ಹೋಗಬೇಕಿತ್ತು. ಹೋಗಲಿಲ್ಲ. ಎಲ್ಲವೂ ಬೇಕು ಎನ್ನುವ ಹಾಗೆ ನೋಡುತ್ತಾ ಕುಳಿತ.
ಜಗಳವೇ ಬೇಡ ಎಂದು ತಟಸ್ಥವಾಗಿ ದೂರದಲ್ಲಿ ಕುಳಿತವನೂ ಕೆಲವೊಮ್ಮೆ ಜಗಗಳಕ್ಕೆ ಕಾರಣನಾಗುತ್ತಾನೆ. ಏನಾದರೂ
ನಂತರ ಅವನೇ ಹೇಳಬೇಕು. ಜಗಳವಾಡಿದವರು ಅಲ್ಲಿ ಇರುವುದಿಲ್ಲ.
ಭೀಷ್ಮ ಪ್ರೇಕ್ಷಕನೂ
ಅಲ್ಲ, ನಟನೂ ಅಲ್ಲ. ಆದರೆ ಇಲ್ಲಿ ಅವಿಭಾಜ್ಯವಾಗಿ ತನ್ನನ್ನು ತಾನು ಗುರುತಸಿಕೊಂಡ.
ಭೀಷ್ಮ ವಂಶದ ಬಗ್ಗೆ
ಔದಾರ್ಯ ತೋರಬೇಕಿತ್ತು. “ಏನಾದ್ರೂ ಆಗ್ಲಿ ಯಾರಿಂದ ಬೇಕಾದರೂ ಸಂತಾನ ಹುಟ್ಲಿ. ಹಾಗಂತ ನನ್ಗೆ
ಬಿಟ್ಟು ಹೋಗ್ಲಿಕ್ಕೂ ಉಪಾಯ ಇಲ್ಲ. “ ಇಲ್ಲಿಂದ ಆರಂಭವಾಯಿತು ಭೀಷ್ಮನ ಪತನ !. ಅವನಿಗಿದ್ದ
ಮನಸ್ಸಿನ ಸಂಕಟ ಅವನಿಗೂ ಅವನ ದೇವ್ರಿಗೂ ಗೊತ್ತು. ಇನ್ನೊಬ್ರಿಗೆ ಗೊತ್ತಿಲ್ಲ. ಎಷ್ಟು ಎತ್ತರಕ್ಕೆ
ಬೆಳೆದ ಭೀಷ್ಮ? ಈಗ ಈ ಮೊಮ್ಮಕ್ಕಳ ಕಾಲಕ್ಕಾಗುವಾಗ
ಸಾಯ್ಲಿಕ್ಕೆ ಉಪಾಯ ಇಲ್ಲವಲ್ಲ? ಅಂತ ಬದುಕುವ
ಪರಿಸ್ಥಿತಿಗೆ ಬಂದರೆ ಏನು ದುರಂತ ಅದು. ಹಾಗಾಗಿ ರಾಮನೇ ಸರಿ ಸಂದರ್ಭಕ್ಕೆ ಸರಿಯಾಗಿ ರಾಜಿ
ಮಾಡಿಕೊಂಡ. ಭೀಷ್ಮ ಆ ಮಟ್ಟಿಗೆ ವರಟ.! ಬೆಳೆದ
ಬೆಳೆದ ದೊಡ್ಡ ಅಲದ ಮರದ ಹಾಗೆ ಬೆಳೆದ. ಊರಲ್ಲಿ ಎಲ್ಲಾ ಕೀರ್ತಿಯೂ ಭೀಷ್ಮನದ್ದು. ಆದರೆ ಕುಟುಂಬದಲ್ಲಿ? ಈಗೊಂದು ತೋಟ ಮಾಡುವಾಗ ಒಂದೇ ಮರ ಉದ್ದಕ್ಕೂ ಅಗಲಕ್ಕೂ
ಬೆಳೆದರೆ ಅದು ತೋಟವಾಗುತ್ತದಾ? ಭೀಷ್ಮ ಬೆಳೆದ ರೀತಿಯದು.
ಧರ್ಮರಾಯನಿಗೆ
ಕೇಳ್ತಾನೆ “ಒಂದು ವೇಳೆ ಭೀಷ್ಮ ನಿಯೋಗ
ಮಾಡುತ್ತಿದ್ದರೆ, ಎಂಥವ್ರು ಹುಟ್ಟುತ್ತಿದ್ದರು ಭಾವ? ನಿಮ್ಮ ಅಪ್ಪನ ಹಾಗಿದ್ದವನೋ ಅಲ್ಲ ನಿಮ್ಮ
ದೊಡ್ಡಪ್ಪನ ಹಾಗಿದ್ದವನೋ? ಹೋಗ್ಲಿ ಮತ್ತೊಬ್ಬಳು ಬಂದ್ಲು ದಾಸಿ. ಎಲ್ಲದಕ್ಕೂ ಸಿದ್ಧವಾಗಿಯೇ ಅವಳು
ಬಂದದ್ದು. ಇವರು ರಾಜ ಕುಮಾರಿಯರು ಮೈಯ ಬಿಸಿ ಇದ್ದವರು. ವಿಲಾಸಿನಿಯರು. ಆಕೆಯೋ ದಾಸಿ.
ಶ್ರಧ್ದಾ ಭಕ್ತಿಯಿಂದ ಉಪಚರಿಸಿದಳು. ಹುಟ್ಟಿದವ ಎಂಥವನು? ಮಹಾ ಜ್ಞಾನಿ. ಆದರೆ ಪ್ರಯೋಜನ ಏನು?
ಅವನಿಗೆ ಕ್ಷೇತ್ರ ದೋಷ. ಉಳಿದವರಿಗೆ ಭೀಜ ದೋಷ. ಇದನ್ನೆಲ್ಲ ಮೂಕ ಸಾಕ್ಷಿಯಾಗಿ ಭೀಷ್ಮ
ನೋಡಿದ್ದನಲ್ಲವೇ? ನಾನು ಮತ್ತೆ ಭೀಷ್ಮನ ಜಾಗದಲ್ಲಿ ಇರುತ್ತಿದ್ದರೆ, ವಿಷಯವೇ ಬೇರೆ. ಆದರೆ ಒಂದು ಹೇಳಿಬಿಡ್ತೇನೆ,
ಭೀಷ್ಮನನ್ನು ತಿದ್ದುವವರು ಈ ಪ್ರಪಂಚದಲ್ಲಿ ಯಾರೂ ಇಲ್ಲ.
ಎಂತಹಾ
ವಿಶ್ಲೇಷಣೆ. ಸಂಧಾನದ ಯತ್ನದಲ್ಲಿ ಶ್ರೀಕೃಷ್ಣ ಚಂದ್ರವಂಶದ
ಕುಟುಂಬದ ವಸ್ತುಸ್ಥಿತಿಯನ್ನು ತೆರೆದು ಕೊಡುತ್ತಾನೆ.
ಭೀಷ್ಮನ ವ್ಯಕ್ತಿತ್ವ ಹೇಳುವಾಗ ಶೇಣಿಯವರು ಹೆಚ್ಚು ಹೆಚ್ಚು ಆಳವಾಗುತ್ತಾರೆ. ಪ್ರತೀ ಸಲವೂ
ಭೀಷ್ಮನ ಪಾತ್ರದಲ್ಲಿ ಅವರು ಏನೋ ಒಂದು ತಾದಾತ್ಮ್ಯವನ್ನು ಅನುಭವಿಸುವುದು ಇಲ್ಲೂ ಅನುಭವವಕ್ಕೆ
ಬರುತ್ತದೆ. ಇದು ಅವರ ಹಲವು ಭೀಷ್ಮನ ಅರ್ಥಗಾರಿಕೆ
ಕೇಳಿದ ಅನುಭವವಾಗಿರಬಹುದು.
ಧರ್ಮರಾಯನಿಗೆ ಒಂದು
ಅರಿವಿನ ಕೊರತೆ ಇದೆ. ಎಲ್ಲಾ ಧರ್ಮ ಸೂಕ್ಷ್ಮವನ್ನೂ ತಿಳಿದವನಿಗೆ ಅವನಲ್ಲಿ ಆ ಅರಿವನ್ನು
ಮೂಡಿಸುವುದು ಶ್ರೀ ಕೃಷ್ಣನ ಕಾಳಜಿಯಾಗಿರುತ್ತದೆ. ಅದಕ್ಕಾಗಿಯೆ ಕೃಷ್ಣ ಹೇಳುವುದು, “ ಧರ್ಮರಾಯ
ಕರುಣಾಳು ನೀನು. ಕರುಣಾಳು ಎಂಬುದಕ್ಕೆ ಸ್ವರೂಪ ಬೇರೆ ಬೇರೆ ಉಂಟು. ಶತ್ರುವಾದರೂ ಬದುಕಲಿ ಅಂತ
ಬಯಸಬಹುದು, ಆದರೆ ಬದುಕಬೇಕಾದರೆ ಶರ್ತ ಇಡುವವರು ನಾವಾಗಬೇಕು. ಆದರೆ ಇಲ್ಲಿ ಹಾಗ, ಅರ್ಧ ರಾಜ್ಯ
ಬೇಡ ಐದು ಗ್ರಾಮವನ್ನಾದರು ಅವ ಕೊಟ್ಟರೆ,!!! ಆತ
ಕೊಡಲೇ ಬೇಕು ಕೊಡತಕ್ಕದ್ದು ಎಂಬುದಲ್ಲ. ಐದು ಗ್ರಾಮಕ್ಕಾದರೂ ಕೃಷ್ಣ ಸಂಧಾನವನ್ನು ಮಾಡಿ ಬರಬೇಕು.
ನಿಜಕ್ಕಾದರೆ, ಈ ಹೊತ್ತಿನಲ್ಲಿ ಬದುಕಬೇಕಾದರೆ ಸಂಧಾನ ಮಾಡಬೇಕಾದವನು ಕೌರವ!!! ಗ್ರಾಮ
ಕೇಳುವುದಕ್ಕೆ ಪಾಂಡುವಿನ ಮಕ್ಕಳು ಗ್ರಾಮಾಧಿಕಾರಿಗಳೋ? ಅಲ್ಲ ರಾಜ್ಯಾಧಿಕಾರಿಗಳೋ? ಇದನ್ನು ಕೌರವ
ಕೇಳಿದರೆ ಉತ್ತರ ಹೇಳಬೇಕಲ್ಲ?
ಕೊನೆಗೊಮ್ಮೆ
ಕೃಷ್ಣ ಅಂಗಲಾಚುತ್ತಾನೆ, ಧರ್ಮರಾಯ, ಹೆಚ್ಚು ಬೇಡ, ನಮಗೆ ಹಕ್ಕು ಉಂಟು ಅಂತ ಒಪ್ಪಿಕೋ
ಮಾರಾಯ. ಶ್ರೀಕೃಷ್ಣ ಕುಟಿಲನಿರಬಹುದು, ತಂತ್ರಗಾರಿಕೆಯವನಿರಬಹುದು. ಒಂದು ಕಡೆಯಲ್ಲಿ ಕೃಷ್ಣನೇ
ಹೇಳುತ್ತಾನೆ. ನೂರು ಶಕುನಿಯರೂ ಒಬ್ಬ ಕೃಷ್ಣನಿಗೆ ಸಮನಾಗಲಾರರು. ಆದರೆ ಇಲ್ಲಿ ಧರ್ಮರಾಯನಿಗೆ
ನೀತಿ ಬೋಧೆ ಮಾಡುವ ಕೃಷ್ಣನ ವ್ಯಕ್ತಿತ್ವ ಅದ್ಭುತವಾಗಿ ಅನಾವರಣವಾಗುತ್ತದೆ.
ಕೃಷ್ಣ ಪರಿ
ಪರಿಯಾಗಿ ಬೇಡುತ್ತಾನೆ, ಧರ್ಮರಾಯ ಅರ್ಧರಾಜ್ಯದ ಹಕ್ಕು ಇದೆ. ಒಪ್ಪಿಕೋ. ಕರುಣಾಳು ನೀನು. ಆದರೆ
ನೀನು ನಿನ್ನ ಕರುಣೆಯನ್ನು ಕೌರವನಲ್ಲಿ ಅಲ್ಲ ತೋರಬೇಕಾದ್ದು. ಕರುಣೆಯನ್ನು ಎಲ್ಲಿ ವ್ಯಯ ಮಾಡಬೇಕೋ
ಅಲ್ಲಿ ವ್ಯಯಮಾಡು. ನಿನ್ನ ತಮ್ಮಂದಿರು, ನಿನ್ನ ಬಗ್ಗೆ ಸಂಕಟ ಪಟ್ಟವರು, ಹದಿ ಮೂರು ವರ್ಷ
ತಾಳ್ಮೆಯನ್ನು ತೆಕ್ಕೊಂಡವರ ಬಗ್ಗೆ ಕರುಣೆಯನ್ನು ತಾಳು
ಶ್ರೀ ಕೃಷ್ಣ ಇಷ್ಟು ಹೇಳಿದರೂ ಆತ ಸಂಧಾನಕ್ಕೆ ಮತ್ತೂ ಹೋಗುತ್ತಾನೆ ಎಂದರೆ, ಶ್ರೀಕೃಷ್ಣನನ್ನು ಶಾಂತಿದೂತ ಅಂತ ಭೀಷ್ಮ ಹೇಳುವುದನ್ನು ಕೇಳಿದ್ದರಲ್ಲಿ ಅತಿಶಯವಿಲ್ಲ
ಎಂದನಿಸುತ್ತದೆ. ಒಂದು ಪಾತ್ರ
ನಿರ್ವಹಣೆಯಲ್ಲಿ ಕೇವಲ ಪಾತ್ರದ ಮುಖೇನ ದೃಷ್ಟಿಕೋನವಿದ್ದರೆ ಸಾಲದು. ಒಟ್ಟು
ಸ್ಥೂಲವಾಗಿ ಸಮಗ್ರವಾಗಿ ಒಟ್ಟು ಪ್ರಸಂಗದ ಅಥವಾ ಕಥೆಯ ಮೇಲೆ ಚಿಂತನೆ ಅತೀ ಅವ್ಯಶ್ಯ. ಈ ಅರ್ಥಗಾರಿಕೆಯಲ್ಲಿ ಅದೂ ಸಹ ಗಮನಾರ್ಹವಾಗುತ್ತದೆ.
ಅದರಲ್ಲೂ ಕೊನೆಯ
ಕೆಲವು ಚಿಂತನೆಗಳು ಮತ್ತಷ್ಟೂ ಗಹನವಾಗಿ ಕಾಣುತ್ತದೆ. ಇದು ಕೇವಲ ಶ್ರೀ ಕೃಷ್ಣನ ಮಾತ್ರ ಚಿಂತನೆ
ಎಂದನಿಸುವುದಿಲ್ಲ.
ಒಂದು ರಾಜ್ಯ ದಂಡೆತ್ತಿ ಗೆಲ್ಲುವಾಗ, ನಮಗೆ ಆಗದೇ ಇದ್ದದ್ದನ್ನು ಮಾತ್ರ ಇಲ್ಲವಾಗಿಸುವ ಹಂಬಲ
ಇರುತ್ತದೆಯೇ? ಆ ರಾಜ್ಯದ ಯಾವುದನ್ನು ನಾವು
ಬಯಸುತ್ತೇವೆ? ರಾಜ ಸಾಯುವುದನ್ನೋ? ಸೈನಿಕರು ನಾಶವಾಗುವುದನ್ನೋ ? ಪ್ರಜೆಗಳು ಸಂಪತ್ತು
ಇಲ್ಲವಾಗುವುದನ್ನೋ? ಎಲ್ಲವನ್ನೂ ನಾಶ ಮಾಡುವುದಾದರೆ ಅಲ್ಲಿ ಮತ್ತೆ ರಾಜ್ಯ ಕಟ್ಟುವುದಕ್ಕೆ ನಮ್ಮ
ಸ್ವಂತ ರಾಜ್ಯದಿಂದ ತೆಗೆದುಕೊಂಡು ಹೋಗುವುದೋ?
ಭಾವಯ್ಯ,
ಯುದ್ದವೆಂಬಂಥ ಒಬ್ಬ ಕಳ್ಳನನ್ನು ನಾವು ಹೊರ ಹಾಕುವಾಗ, ದೊಡ್ಡ ಕಳ್ಳನನ್ನು ಮನೆಗೆ ಹೊಕ್ಕಲು
ಬಿಡಬಾರದಲ್ಲ?
“ಯುದ್ದ, ಎಂದಿಗೂ
ಸಮಸ್ಯೆಯನ್ನು ನಿವಾರಣೆ ಮಾಡೋದೇ ಇಲ್ಲ. ಯುದ್ದ ಮತ್ತೊಂದು ಸಮಸ್ಯೆಯನ್ನು ಹುಟ್ಟಿಸ್ತದೆ”
ಯುದ್ಧ ಸಾರಿದವನೂ
ಸೋತ, ಯುದ್ಧ ಇದಿರಿಸಿದವನೂ ಸೋತ. ಅವರಿಬ್ಬರೂ ಸೋತರೆ ನಂತರ ಆ ರಾಜ್ಯದ ಪ್ರಜೆಗಳೂ ಸೋಲುತ್ತಾರೆ. ಹಾಗಾಗಿ
ಸಾಮ ಮಾಡುವಾಗ ನಮ್ಮ ಅಂತಸ್ತಿಗೆ ಕಳಂಕ ಬರಬಾದು. ನಾವು ಬಿಡ್ವ. ಅವನು ಅರ್ಧ ರಾಜ್ಯ ಕೊಟ್ಟ ಮೇಲೆ
ನಾವೇ ಐದನ್ನು ಬಿಡ್ವ.
ಯುದ್ದ ಪ್ರಿಯನಲ್ಲ
ಎಂದರೆ ಯುದ್ದಕ್ಕೆ ಹೆದರುವವನು ಅಂತಲ್ಲ. ಜೀವನ ಯುದ್ದದ ಹೋರಾಟದಲ್ಲಿ ಆಜೇಯ. ಒಂದು ರೀತಿಯ
ನಿಸ್ಪೃಹ ಮನೋವೃತ್ತಿಯ ಸ್ಥಿತಪ್ರಜ್ಞ ಯುಧಿಷ್ಠಿರ. ಸ್ಥಿರತೆ ಅಲುಗಾಡುವುದಿಲ್ಲ. ಹೆದರುವುದಿಲ್ಲ.
ಈ ಹೆದರುವುದಿಲ್ಲ ಎನ್ನುವುದು ಯುದ್ಧಕ್ಕಿದ್ದ ಅಧಿಕಾರವಲ್ಲ. ಅದು ಕೌರವಂದು, ನಾನು ಯಾರಿಗೂ
ಹೇದರೋದಿಲ್ಲ. ಹಾಗಂತ ಪಟ್ಟಕಟ್ಟುವುದಕ್ಕೆ ಸಾಧ್ಯವೇ? ಯುದ್ದಕ್ಕೆ ಹೆದರುವುದಿಲ್ಲ, ಆದರೆ
ಸಂಧಾನದ ಶರ್ತ ಸರಿಯೋ? ಸಂಧಾನ ಎನ್ನುವುದು
ವ್ಯಕ್ತಿ ಧರ್ಮವಾಗಬಾರದು. ಪಕ್ಷಧರ್ಮವಾಗಬೇಕು.
ಇದು ನೀತಿಯೇ?
ಯುದ್ದ ಇಲ್ಲ ಎಂದ ಮೇಲೆ ಕೌರವನಿಗೆ ಶಿಕ್ಷೆ ಇಲ್ಲಾ ಅಂತಲೋ? ದೊಡ್ಡ ಬ್ರಾಹ್ಮಣನಾಗಿ ಹುಟ್ಟಬೇಕಾದವ, ನೀನು ಕುಂತಿಯ
ಹೊಟ್ಟಿ ನಮ್ಮಂಥವರ ತಲೆ ಬಿಸಿ ಮಾಡಿದೆ. ಅದು ಸಂಕಲ್ಪ ದೂರ್ವಾಸರದ್ದು. ನಿನಗೆ ವಿಘಾತನೆಣಿಸಿದ
ದುಷ್ಟನಲಿ ಸಂಪ್ರೀತಿಯೇ?
ಶ್ರೀಕೃಷ್ಣ ಹೀಗೆ
ಮತ್ತೂ ಮತ್ತು ಹೇಳುವುದಕ್ಕೆ ಒಂದು ಕಾರಣವಿರುತ್ತದೆ.,
ಕೌರವ ಭೀಮನಿಗೆ ವಿಷ ಹಾಕಲಿ, ಅರ್ಜುನನ್ನು
ಮನೆಒಳಗೆ ಸುಡಲಿ, ಇಷ್ಟೆಲ್ಲ ಯೋಚಿಸುವ ಧರ್ಮರಾಯನಿಗು ಅವನು ಹೀಗೆ ಅವನ ವ್ಯವಹಾರ.
ಹಾಗಿರುವಾಗ ಯಾವ ನಾಣ್ಯ ಅವನಲ್ಲಿ ಚಲಾವಣೆ ಇಲ್ಲವೋ ಅದನ್ನು ತೆಗೆದುಕೊಂಡು ಹೋಗಿ ಇದರ ಬದಲು ಬೇರೆ
ಕೊಡು ಅಂತ ಹೇಳುವುದರಲ್ಲಿ ಯಾವ ಪ್ರಯೋಜನವೂ ಇಲ್ಲ.
ಬಹುಶಃ ಹಾಗಾಗಿಯೇ ಖಡುಗವಾಗಲಿ,
ನೀತಿಯಾಗಲಿ, ಒಡೆಯ ಲಕ್ಷ್ಮೀ ರಮಣನೈತಹ ಅಂತ ಹೇಳಿದ್ದಿರಬೇಕು.
ಶ್ರೀಕೃಷ್ಣನ ಪಾತ್ರ ವೈಖರಿಯನ್ನು ಕೇಳುವಾಗ, ಶ್ರೀಕೃಷ್ಣ ಕಳ್ಳನಲ್ಲ, ಶಕುನಿಯಲ್ಲ ಯಾವುದೂ ಅಲ್ಲ.
ಆದರೂ ಶ್ರೀಕೃಷ್ಣ ಎಲ್ಲವೂ ಆಗಿರುವ ಮಹಾ ಮುತ್ಸದ್ಧಿ. ರಾಜ ನೀತಿಜ್ಞ ಎಂದನಿಸುವುದು.
ಕಳ್ಳ ಶಕುನಿಯರು ತಮ್ಮ ಮೇಲಿನ ಅವಿಶ್ವಾಸದಿಂದ ಅದನ್ನು ಅವನಲ್ಲಿ ಕಂಡರೆ, ಅವನ ರಾಜನೀತಿ ಕಾಣಬೇಕಿದ್ದರೆ ಆ ದೃಷ್ಟಿಕೋನದ ಚಿಂತನೆ ಅತ್ಯವಶ್ಯ.





