ಯಕ್ಷಗಾನಂ ಅಮೃತಪಾನಂ
’ಅನಾಥೋ ದೇವ ರಕ್ಷಕ ’ ಎಂಬ ಮಾತು, ಆಸ್ತಿಕ
ಮನಸ್ಸಿನ ವಿಶ್ವಾಸವಾಗಿರುತ್ತದೆ. ಎಲ್ಲ ಜೀವಗಳಿಗೂ ಬದುಕುವ ಹಕ್ಕು ಜನನದಲ್ಲೇ ಸಿಕ್ಕಿರುತ್ತದೆ.
ಆದರೆ ಅನಾಥತ್ವಕ್ಕೆ ಆಸರೆಯಾಗುವುದು ಪರಮಾತ್ಮ. ಯಾವುದಕ್ಕೆ ಬದುಕುವ ಹಕ್ಕಿರುತ್ತದೋ ಅದಕ್ಕೆ
ಬದುಕು ಅಸಾಧ್ಯವಾದಾಗ ತಳೆಯುವ ವಿಶ್ವಾಸ ಯಾಕೋ ನೆನಪಿಗೆ ಬಂತು. ಮುಂದೆ ಹೇಳುವ ವಿಚಾರಗಳಿಗೆ
ಇದೆಷ್ಟು ಹೊಂದಿಕೆಯಾಗುತ್ತದೋ ಅದರ ಯೋಚನೆ ಇಲ್ಲ.
ನಶಿಸಿ ಹೋಗುವ ಹಲವು ಕಲೆಯ ಮತ್ತು
ಕಲಾವಿದನ ಉಳಿವಿಗೆ ನಿರೀಕ್ಷಿತ ಆಸರೆ ಇಲ್ಲ
ಎಂದಾಗುವಾಗ ಮೊದಲಿನಿಂದಲೂ ರಾಜಾಶ್ರಯ ಎಂಬುದು ಇರುತ್ತಿತ್ತು. ರಾಜನಿಗೆ ಆ ಕಲೆಯ ಬಗ್ಗೆ ತಿಳಿಯದೇ
ಇದ್ದರೂ ಆಢಳಿತದ ದೃಷ್ಟಿಯಲ್ಲಿ ಆ ಕಲೆಗೆ ದೊರೆಯ ಅನುಗ್ರಹ ಆಧಾರವಾಗುತ್ತದೆ. ಈಗ ಆ ಅರಸರ
ಸ್ಥಾನವನ್ನು ಸರಕಾರವೇ ಮಾಡುವುದು ಪ್ರಜಾಪ್ರಭುತ್ವದ ನಿಯಮ. ಅನಾಥವಾಗುವ ಕಲೆಗೆ ಸರಕಾರದ
ಅನುದಾನವೇ ಆಶ್ರಯವಾಗುತ್ತದೆ. ಇದು ಸದ್ವಿನಿಯೋಗವಾಗಿ ಒಂದು ಸತ್ ಪರಂಪರೆ ಉಳಿದುಕೊಂಡಲ್ಲಿ
ಸರಕಾರದ ಆಶ್ರಯ ಎನ್ನುವಂಥದ್ದು ಮೇಲೆ ಹೇಳಿದ ದೇವ
ರಕ್ಷಕ ಎಂಬ ಶಬ್ದಕ್ಕೆ ಯೋಜ್ಯವಾಗಿರುತ್ತದೆ.
ಇತ್ತೀಚೆಗೆ ಯಕ್ಷಗಾನದ ಪಠ್ಯ ಪುಸ್ತಕ
ಪ್ರಕಟಗೊಂಡು ಅದನ್ನು ಕೊಂಡು ಓದಿರುವ ಮಿತ್ರರಾದ ಶ್ರೀ ಕಟೀಲು ಸಿತ್ಲ ರಂಗನಾಥರ ಪ್ರತಿಕ್ರಿಯೆ
ಕಂಡಾಗ ನನಗೆ ಮೇಲಿನ ವಾಕ್ಯಗಳು ನೆನಪಾದವು. ಯಕ್ಷಗಾನದಲ್ಲಿ ಪ್ರಾಚೀನ ಪರಂಪರೆ ಉಳಿಯಬೇಕು ಅದು
ಮುಂದಿನ ಪೀಳಿಗೆಗೆ ಯಥಾವತ್ ಆಗಿ ಲಭ್ಯವಾಗಬೇಕು ಎಂಬ ನ್ಯಾಯವಾದ ಬೇಡಿಕೆ ಯಕ್ಷಗಾನ ಸಾರಸ್ವತ
ಲೋಕದಲ್ಲಿ ಇದ್ದೂ ಇಲ್ಲದಂತೆ ಇದೆ. ವ್ಯಾವಹಾರಿಕವಾಗಿ, ಇಂದು ಯಕ್ಷಗಾನ ಮೇಳಗಳಾಗಲೀ
ಕಲಾವಿದರಾಗಲೀ ಹಲವಾರು ಕಾರಣಗಳಿಗೆ ಪರಂಪರೆಯ ಉಳಿವಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ.
ಆವಾಗ ನಶಿಸಿ ಹೋಗುವ ಯಕ್ಷಗಾನದ ಮೌಲ್ಯಯುತ
ಅಂಶಗಳಿಗೆ ರಾಜಾಶ್ರಯ ಅಂದರೆ ಸರಕಾರದ ಆಸರೆ ಅತೀ ಅವಶ್ಯ. ಇದು ವಾಣಿಜ್ಯ ಪರವಾದ ಕೆಲಸವಲ್ಲ. ಕಲೆ
ಪರಂಪರೆಯಲ್ಲಿ ಹೀಗಿತ್ತು ಎಂಬುದನ್ನು ಉಳಿಸುವಲ್ಲಿ ಸಾಕಷ್ಟು ಪ್ರೋತ್ಸಾಹ ಸಿಗದಾಗ ಸರಕಾರದ ಆಶ್ರಯ
ಅತ್ಯಗತ್ಯ. ಹಾಗಾಗಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಬ ಸರಕಾರೀ ಅಂಗ ಸಂಸ್ಥೆ ಈ ಕೆಲಸವನ್ನು
ಮಾಡಬೇಕು ಎಂಬ ನಿರೀಕ್ಷೆ ಇದ್ದೇ ಇರುತ್ತದೆ. ಇಲ್ಲಿ ಮಾಡಿಲ್ಲ ಎಂಬ ಆರೋಪವಲ್ಲ.
ಆದರೆ ಪರಂಪರೆಯ ಉಳಿವಿಗೆ ಸಹಕಾರಿಯಾಗಿ ಕಾರ್ಯ ಪ್ರವೃತ್ತವಾಗಿಲ್ಲ ಎಂಬುದಂತೂ ರಂಗನಾಥರ
ಲೇಖನ ಓದುವಾಗ ಮನದಟ್ಟಾಗುತ್ತದೆ.
ಈ ಲೇಖನದಲ್ಲಿ ಕೆಲವು ಅಂಶಗಳು
ಉಲ್ಲೇಖಾರ್ಹ. ಇದರಲ್ಲಿ ಯಾವುದೇ ವೈಯಕ್ತಿಕ ಲೋಪದೋಷಾರೋಪವಿಲ್ಲ. ಮತ್ತು ಲೇಖನದಲ್ಲಿ ಹೇಳಿದ ಎಲ್ಲಾ
ಅಂಶಗಳಿಗೂ ಆಳವಾದ ಅಧ್ಯಯನ ಮತ್ತು ಸಂಶೋಧನೆಯ ಹಿನ್ನೆಲೆ ಕಂಡು ಬರುತ್ತದೆ. ಮತ್ತೊಂದು ಮುಖ್ಯ ಅಂಶವೆಂದರೆ ಇಲ್ಲಿ ಕಂಡುಬರುವ ಯಕ್ಷಗಾನದ ಬಗೆಗಿನ ಕಾಳಜಿ. ಇಲ್ಲವಾದರೆ ಅಷ್ಟು ಹಣ ಸಮಯ ವ್ಯರ್ಥ ಮಾಡುವ
ಆವಶ್ಯಕತೆಯೇ ಇರುತ್ತಿರಲಿಲ್ಲ. ಇವರಲ್ಲಿರುವ ಈ ತುಡಿತ ಇಷ್ಟವಾಗುತ್ತದೆ. ಆದರೆ ಆ ತುಡಿತಕ್ಕೆ ಅನುಸರಿಸಿ ಅದು ಮನ್ನಿಸಲ್ಪಡಲಿಲ್ಲ
ಎಂಬುದು ಅತ್ಯಂತ ಖೇದನೀಯ.
ಶ್ರೀರಂಗನಾಥರು ಉಲ್ಲೇಖಿಸಿದಂತ
ಲೋಪದೋಷಗಳ ಬಗ್ಗೆ ವಿಮರ್ಶೆ ಮಾಡುವಷ್ಟು ಸಮರ್ಥ ನಾನಲ್ಲ. ಆದರೆ ದೋಷಗಳಿಗೆ ಸಾಕಷ್ಟು
ಪುರಾವೆಗಳನ್ನು ವಿದ್ವಾಂಸರ ಅಭಿಪ್ರಾಯಗಳನ್ನು ಓದುವಾಗ ಛೇ ನಶಿಸಿ ಹೋಗುವ ಯಕ್ಷಗಾನದ ಪರಂಪರೆಗೆ
ದೇವ(ಸರಕಾರ) ರಕ್ಷಣೆಯೂ ಇಲ್ಲದಾಗಿ ಹೋಯಿತಲ್ಲ, ಎಂದು ಖೇದವಾಯಿತು. ಈ
ಅಸಕ್ತಿಯ ಒಂದಷ್ಟು ಅಂಶವಾದರೂ ಪಠ್ಯ ರಚನೆಯಲ್ಲಿ ಇರುತ್ತಿದ್ದರೆ ಈ ದೋಷಯುಕ್ತ ವಸ್ತು ನಮ್ಮ
ಮುಂದಿರುತ್ತಿರಲಿಲ್ಲ. ಬಹುಷಃ ಉಪ್ಪು ಕಡಿಮೆಯಾದ ಆಹಾರಕ್ಕೆ ತಟ್ಟೆಗೆ ಉಪ್ಪು ಹಾಕಿದಂತೆ, ದೋಷವಿದ್ದರೆ ಕಲಿಯುವವ ಸರಿಮಾಡಿಕೊಂಡು
ಕಲಿಯಲಿ ಎಂಬ ಉದಾರತೆಯೋ, ಈ ರೀತಿಯಲ್ಲಿ ಸರಕಾರೀ ಅನುದಾನದ ಸದ್ವಿನಿಯೋಗ ಎಂಬ ಭಾವಕ್ಕೆ ಬಾಧಕವಾದ ಒಂದು ಆರೋಪವಿದೆ ಎಂಬುದು ಸರ್ವ ವಿದಿತ. ಇವುಗಳೆಲ್ಲ ತಳ್ಳಿ ಹಾಗುವ ಗಮಾನಾರ್ಹವಲ್ಲದ ದೋಷಗಳೇ? ಅದನ್ನು ಮಾಡಿದವರೇ
ವಿಷದೀಕರಿಸಬೇಕು. ಅದು ಪ್ರಾಮಾಣಿಕ
ಆತ್ಮಾವಲೋಕನವಾಗುತ್ತದೆ. ಯಕಃಶ್ಚಿತ್
ತಿನ್ನುವ ಒಂದು ಹಣ್ಣನ್ನು ಆಯ್ಕೆ ಮಾಡುವಾಗಲೂ
ದೋಷ ಇಲ್ಲದೇ ಇದ್ದದ್ದನ್ನು ಆಯ್ದುಕೊಳ್ಳುವ ನಮ್ಮ ಕಾಳಜಿ ದೋಷಮುಕ್ತವಾದದ್ದನ್ನು ಕೊಡುವಲ್ಲಿ
ಒದಗಿ ಬರಬೇಕು.
ಈ ದೋಷಗಳು ಉಂಟಾಗಿರುವುದಕ್ಕೆ ಹಲವಾರು ಕಾರಣಗಳಿವೆ. ದೋಷಗಳು, ಮನುಷ್ಯನಾದವನಿಗೆ ಸಹಜ. ಅದರೆ ಇಲ್ಲಿ ಅದು ಆಗದಂತೆ ತಡೆಯುವ
ಸರ್ವ ಅವಕಾಶಗಳು ಇದ್ದರೂ ಅದನ್ನು ಅವಗಣಿಸಲಾಯಿತು ಎಂಬುದಕ್ಕೆ ಪುರಾವೆ ಇದೆ. ಯಕ್ಷಗಾನದ ಪಠ್ಯ
ಪುಸ್ತಕ ರಚನೆಯಾಗುವ ಹಂತದಲ್ಲೇ ಅದರ ಕರಡು ಪ್ರತಿಯನ್ನು ಯಕ್ಷಗಾನದ ವಿದ್ವಾಂಸರ ಅವಲೋಕನಕ್ಕೆ
ಒದಗಿಸಿಕೊಟ್ಟರೆ ಉತ್ತಮ ಎಂದು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತವಾಗಿತ್ತು. ಇದೇ ರಂಗನಾಥರು
ತಮ್ಮ ಅಂತರ್ಜಾಲ ಮಾಧ್ಯಮವಾದ ಫೇಸ್ ಬುಕ್ ನಲ್ಲಿ ಆ ಬಗ್ಗೆ ಒಂದು ಲೇಖನವನ್ನು ಪ್ರಕಟಿಸಿ ಅದಕ್ಕೆ
ನಾನು ಮತ್ತು ನನ್ನಂತೆ ಹಲವರು ಅಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದೆವು. ಆದರೆ ಅದೆಲ್ಲವನ್ನು
ನಿರ್ಲಕ್ಷಿಸಿ ದೋಷ ಉಳಿದರೂ ಅಡ್ಡಿ ಇಲ್ಲ ಎಂಬ ರೀತಿಯಲ್ಲಿ ಅದಕ್ಕೆ ಸಂಬಂಧಿಸಿದ ಮಹನೀಯರು
ನಡೆದುಕೊಂಡದ್ದು ದೌರ್ಭಾಗ್ಯಕರ. ಕುರುಕ್ಷೇತ್ರ
ಸಮರ ಅಂತ್ಯವಾಗುವಾಗ ಎಲ್ಲವನ್ನು ಬಲ್ಲ ಜ್ಞಾನಿ ಯುಧಿಷ್ಠಿರನೂ ಭೀಷ್ಮೋಪದೇಶ ಪಡೆದ. ಎಲ್ಲವನ್ನು
ತಿಳಿದರೂ ತಿಳಿಯದೇ ಇರುವದ್ದು ಇನ್ನೂ ಹಲವಿದೆ ಎಂಬುದಕ್ಕೆ ಉದಾಹರಣೆ. ಇದು ಪಠ್ಯಪುಸ್ತಕಕ್ಕೆ
ಸಂಬಂಧ ಪಟ್ಟ ಮಹನೀಯರಲ್ಲಿ ಒಬ್ಬರಿಗೂ ಮನವರಿಕೆಯಾಗಲಿಲ್ಲ. ಆಗುತ್ತಿದ್ದರೆ,
ಯಕ್ಷಗಾನದಲ್ಲಿ ತೆಂಕು ಬಡಗು ಎಂಬ
ವೆತ್ಯಾಸವಿಲ್ಲದೆ ಎಲೆ ಮರೆಯ ಕಾಯಿಯಂತೆ ಇರುವ ಹಿರಿಯರ ಸಲಹೆ ಸೂಚನೆ ಪಡೆಯುತ್ತಿದ್ದರು. ಹೀಗೆ ಹಲವು ವಿದ್ವಾಂಸರನ್ನೂ ಹಿರಿಯ ಕಲಾವಿದರನ್ನೂ ಅವಗಣಿಸಿದ್ದು ಈ ದೋಷಕ್ಕೆ ಮೂಲ ಕಾರಣ ಎಂಬುದು
ಸುಸ್ಪಷ್ಟ. ಈ ಅವಗಣನೆಯಿಂದ ಹಿರಿಯ ಕಲಾವಿದರಿಗೆ ಆದ ಅವಮಾನಕ್ಕಿಂತಲೂ
ಯಕ್ಷಗಾನದ ಮುಂದಿನ ಪೀಳಿಗೆಗೆ ಆಗುವ ನಷ್ಟ ದೊಡ್ಡದು
.
ದೋಷದ ಬಗ್ಗೆ ಯೋಚಿಸುವುದಕ್ಕಿಂತಲೂ ಅ ತಪ್ಪುಗಳು ಘಟಿಸುವುದಕ್ಕೆ ಕಾರಣಗಳನ್ನು
ಅವಲೋಕಿಸುವ ಅನಿವಾರ್ಯತೆ ಒದಗಿ ಬಂದಿದೆ.
ಪ್ರತಿಕ್ರಿಯೆ ನೀಡಿದ ನಮಗೆ ಯಾವುದೇ ಸಂಭಾವನೆ ಇಲ್ಲ. ಅಥವಾ ಯಾವುದೇ ಅಂಗೀಕಾರದ ಸ್ವಾರ್ಥ
ಇಲ್ಲ. ಕೇವಲ ಯಕ್ಷಗಾನದ ಹಿತವನ್ನಷ್ಟೇ ಕಂಡುಕೊಂಡು ಆಯಾಚಿತವಾಗಿ ಅಲ್ಲಿ ಪ್ರತಿಕ್ರಿಯೆ
ವ್ಯಕ್ತವಾದದ್ದು. ಆದರೆ ಸಂಭಾವನೆ ಪಡೆಯುವ ಕೈಗಳೇ ಯುಕ್ತವಾಗುವಂತೆ ನಡೆದುಕೊಳ್ಳುವಲ್ಲಿ ಹಿಂದೇಟು
ಹಾಕಿದೆ.
ಯಕ್ಷಗಾನ ಲೋಕಕ್ಕೆ ಕಿಟಿಕಿ ಬಾಗಿಲುಗಳ
ವೆತ್ಯಾಸವೇ ಇಲ್ಲ. ಎಲ್ಲಿಂದಲೂ ಬರಬಹುದು ಎಲ್ಲಿಂದಲೂ ಹೊರಗೆ ಹೊಗಬಹುದು. ಎನನ್ನೂ ತರಬಹುದು, ಏನನ್ನೂ ಕದಿಯಬಹುದು. ಪರವಾನಿಗೆಯ ಮಾತೇ ಇಲ್ಲ ಬಿಡಿ. ಹಾಗಾಗಿ ಹಿರಿಯ ಕಲಾವಿದ ಹಾಗು ಪ್ರಸಂಗ ಕತೃ ಶ್ರೀ ದಿವಂಗತ ಸಿದ್ದಕಟ್ಟೆ ವಿಶ್ವನಾಥ
ಶೆಟ್ಟಿಯವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಯಕ್ಷಗಾನದಷ್ಟು
ಅತ್ಯಾಚಾರಕ್ಕೆ ಒಳಗಾದ ಕಲೆ ಇನ್ನೊಂದು ಇರಲಾರದು. ಎಂತಹ ನೋವಿನ ಮಾತು ಇದು. ಇಂದು ಯಕ್ಷಗಾನದ
ಪಾಠಪುಸ್ತಕ ಈ ಅತ್ಯಾಚಾರಕ್ಕೆ ಪರಿಕರ ವಸ್ತುವನ್ನು ಒದಗಿಸಿತೇ ಎಂಬ ಅನುಮಾನ ಮೂಡುತ್ತದೆ.
ಇದೆಲ್ಲದಕ್ಕಿಂತಲೂ ವಿಚಿತ್ರವಾದ ಭಾವ
ಯಕ್ಷಗಾನದ ಸಾರಸ್ವತ ಲೋಕದಲ್ಲಿ ವ್ಯಕ್ತವಾದದ್ದು ಇನ್ನೂ ಆಶ್ಚರ್ಯವನ್ನು ತಂದಿದೆ . ಪುಸ್ತಕ ಪ್ರಕಟವಾದೊಡನೆ ಶ್ರೀ ರಂಗನಾಥರು ಅದನ್ನು
ಹುಡುಕಿ, ಕೊಂಡು ಕೊಂಡು ಅದನ್ನು ಅಧ್ಯಯನ ಮಾಡಿ
ಅದರಲ್ಲಿ ದೋಷಗಳು ಇದೆ ಎಂದು ಸಾಕ್ಷಿ ಸಹಿತ ಪ್ರಕಟಿಸಿದ ನಂತರವೂ ಯಕ್ಷಗಾನ ಲೋಕ ಅದರ ಬಗ್ಗೆ
ಔದಾಸಿನ್ಯವನ್ನು ತಾಳಿದ್ದು ನಿಜಕ್ಕೂ ಪರಮಾಶ್ಚರ್ಯವನ್ನು ತಂದಿದೆ. ಮೊನ್ನೆ ಮೊನ್ನೆ ಯಾವುದೋ
ಹೆಣ್ಣು ಮಗಳೊಬ್ಬಳು ಬಾಯಿತಪ್ಪಿ ಆಡಿದ ಮಾತಿಗೆ ಯಕ್ಷಗಾನದ ಕಡು ಅಭಿಮಾನಿಗಳು ಯದ್ವಾ ತದ್ವಾ
ಪ್ರತಿಕ್ರಿಯೆಗಳನ್ನು ನೀಡಿದ್ದರು. ಆಕೆ ಹೇಳಿದ್ದರ ವಿಶ್ಲೇಷಣೆಯಲ್ಲ. ಆದರೆ ಅಲ್ಲಿ ಇದ್ದ
ಸೇನಾನಿಗಳು ಇಲ್ಲಿ ಮಾತನಾಡಲೇ ಬೇಕಾದಂತಹ ವಿಚಾರದಲ್ಲಿ ದಿವ್ಯ ಮೌನವನ್ನು ತಾಳಿದ್ದು ಯಾವ ರೀತಿಯ
ಯಕ್ಷಗಾನದ ಅಭಿಮಾನವೋ ತಿಳಿಯುವುದಿಲ್ಲ. ಇಂತಹ
ಮೌನ ಹೊಸತಲ್ಲ. ಬೇಕಾದ್ದಕ್ಕೆ ಬೇಕಾದರೀತಿಯಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು
ವ್ಯಕ್ತಪಡಿಸುವುದು ಬಹಳಷ್ಟು ಮಂದಿಗೆ
ತಿಳಿಯುವುದೇ ಇಲ್ಲ. ಅತ್ಯಂತ ಗಂಭೀರ
ವಿಚಾರಗಳು ವೈಯಕ್ತಿಕ ನೆಲೆಯಲ್ಲಿ ಗಂಭೀರತೆಯನ್ನೇ ಕಳೆದುಕೊಂಡು ವಸ್ತುನಿಷ್ಠತೆ ಗಹ ಗಹಿಸುತ್ತದೆ.
ಪಠ್ಯ ಪುಸ್ತಕ ಪ್ರಕಟವಾದರೂ ಅದರ ಬಗ್ಗೆ ಏಕವಾಕ್ಯದ ಪ್ರತಿಕ್ರಿಯೆ
ಕೂಡ ಪ್ರಕಟಿಸದೆ ಘಟಾನು ಘಟಿ ವಿದ್ವಾಂಸರೆಲ್ಲ ಯಾವುದೋ ಕಾರಣ ಹಿಡಿದು ದಿವ್ಯ ಮೌನಕ್ಕೆ ಶರಣಾಗಿದ್ದರು.
ಬಹುಶಃ ಈ ಮೌನದ ಗಂಭೀರತೆಯ ಬೆಲೆ ಮುಂದೆ ತರಬೇಕಾಗಬಹುದು.
ರಂಗನಾಥರ ಅನ್ವೇಷಣೆ ಪ್ರತಿಕ್ರಿಯೆ ಒತ್ತಟ್ಟಿಗಿರಲಿ. ಅದನ್ನು
ಬಿಟ್ಟು ಬಿಟ್ಟು ಪ್ರತ್ಯೇಕವಾಗಿಯಾದರು ಪಠ್ಯ ಪುಸ್ತಕವನ್ನು ಪರಿಪೂರ್ಣವಾಗಿ ಅವಲೋಕಿಸುವ ಕಾರ್ಯ ನಡೆಯಲಿಲ್ಲ. ಅದೊಂದು ಗಂಭೀರವಾದ ವಿಚಾರ ಅಲ್ಲವೆಂಬಂತಹ ಅಸಡ್ಡೆ ಸಾರ್ವತ್ರಿಕವಾಗಿ ಕಂಡು ಬಂತು.
ಹೀಗೆ ಗಂಭೀರವಾದ ವಿಚಾರ ಹುಟ್ಟಿಕೊಂಡು
ಹಾಗೇ ಆನಾಥವಾಗುತ್ತದೆ ಎಂಬುದನ್ನು ಕಂಡು ಪ್ರಸ್ತುತ ಪಾಠ ಪುಸ್ತಕದ ವಿಚಾರದ ಕಾಳಜಿಯಿಂದ
ಯಕ್ಷಗಾನದ ಸಕ್ರಿಯ ಹಿರಿಯ ಕಲಾವಿದ ಶ್ರೀ ರಾಧಕೃಷ್ಣ ನಾವಡರು ತಮ್ಮ ಅಭಿಪ್ರಾಯವನ್ನು ಮಾತ್ರವಲ್ಲ
ಜತೆಗೆ ಮನವಿಯನ್ನೂ ಸಂಕ್ಷೇಪವಾಗಿ ನೀಡಿದ್ದರು. ಅದರಲ್ಲಿ ಅವರು ಹೇಳಿದಂತೆ, ಈ ಗಂಭಿರವಾದ ವಿಚಾರಕ್ಕೆ ಎಲ್ಲರೂ
ಸುಮ್ಮನೆ ನಿಸ್ತೇಜವಾಗಿ ಸುಮ್ಮನುಳಿದರೋ ಹಾಗಾದಲ್ಲಿ
ಇನ್ನು ಕಲಾವಿದರ ಬಗ್ಗೆ ಯಾವುದೇ ವಿಮರ್ಷೆ ಪತಿಕ್ರಿಯೆಗಳನ್ನು ನೀಡುವ ನೈತಿಕತೆ ಯಾರಿಗೂ ಉಳಿದಿಲ್ಲ. ಇಲ್ಲೂ ಒಂದು
ವಿಚಿತ್ರವಿತ್ತು. ಹಿರಿಯ ಕಲಾವಿದರು ಯಾವ
ವಿಚಾರದ ಕಾಳಜಿಯಿಂದ ಈ ಪ್ರತಿಕ್ರಿಯೆ ನೀಡಿದರೋ
ಅದನ್ನು ಅದೇ ಭಾವದಲ್ಲಿ ತಿಳಿಯುವುದಕ್ಕೆ ಹಲವರು ವಿಫಲರಾದದ್ದು ಅದಕ್ಕೆ ಬಂದ ಹಲವು
ಪ್ರತಿಕ್ರಿಯೆಗಳಿಂದ ವ್ಯಕ್ತವಾಯಿತು. ಶ್ರೀ ರಾಧಕೃಷ್ಣ ನಾವಡರು ಹೇಳಿದ ಕಲಾವಿದರಿಗೆ ಯಾವುದೇ
ಪ್ರತಿಕ್ರಿಯೆಯನ್ನು ನೀಡಬಾರದು ಎನ್ನುವ ವಿಚಾರದ ಕುರಿತಾಗಿಯೇ ಯದ್ವಾ ತದ್ವಾ ಅಭಿಪ್ರಾಯ
ವ್ಯಕ್ತವಾಯಿತೇ ಹೊರತು, ಪಠ್ಯದೋಷ
ಎಂಬ ಗಂಭೀರವಾದ ವಿಚಾರ ಪ್ರತಿಕ್ರಿಯೆ ಇಲ್ಲದೇ ಹಾಗೇ ಉಳಿಯಿತು. ಇಲ್ಲಿ ನಾವಡರ ಆಶಯ ಹಲವು
ಅಜ್ಞಾನಿಗಳಿಗೆ ತಿಳಿಯದೇ ಹೋಯಿತು. ಎಲ್ಲರೂ ತಮ್ಮ
ಬರವಣಿಗೆಯ ಚಪಲವನ್ನು ತೀರಿಸಿಕೊಳ್ಳುತ್ತಿದ್ದದು ಕಂಡು ಬಂತು. ವಾಸ್ತವದಲ್ಲಿ ರಾಧಾಕೃಷ್ಣ ನಾವುಡರು ಇದುವರೆಗೆ ಯಾವುದೇ
ಪ್ರತಿಕ್ರಿಯೆ ವಿಮರ್ಷೇಗೆ ಸ್ಥಿಮಿತದಿಂದ
ವ್ಯವಹರಿಸುವವರು. ಹಾಗಾಗಿ ನೈತಿಕತೆಯ
ಪ್ರಶ್ನೆ ಕೇವಲ ಇಲ್ಲಿನ ಪಠ್ಯದೋಷದ ವಿಚಾರವಾಗಿ ಹೆಚ್ಚು ಪ್ರಸ್ತುತವಾಗುತ್ತದೆ. ಆಡಬೇಕಾದ
ವಿಚಾರಗಳಿಗೆ ದ್ಯೂತದಲ್ಲಿ ಸೋತ ಪಾಂಡವರಂತೆ ವರ್ತಿಸುವ ಈ ಪ್ರೇಕ್ಷಕ ವರ್ಗಕ್ಕೆ ಯಾವ ನೈತಿಕತೆ
ಇದೆ. ಹಿರಿಯ ಕಲಾವಿದ ಶ್ರೀ ಸೂರಿಕುಮೇರಿ ಗೋವಿಂದ
ಭಟ್ಟರು ಹೇಳಿದಂತೆ, ಕಲೆಯ
ವಿಮರ್ಶೆಯಾಗಬೇಕು, ಕಲಾವಿದನ
ವಿಮರ್ಶೆಯಲ್ಲ. ಆದರೆ ಮೂರ್ಖರಿಗೆ ಇದೆಲ್ಲ ಅರ್ಥವಾಗುವುದಿಲ್ಲ. ಶ್ರೀ ರಾಧಾಕೃಷ್ಣ ನಾವಡರ ನಿಜವಾದ
ಆಶಯ ಅದುವೇ ಆಗಿತ್ತು. ಪಾಠ ಪುಸ್ತಕದ ವಿಚಾರದ
ಬಗ್ಗೆ ಶುದ್ದವಾದ ಚರ್ಚೆಯಾಗಬೇಕು.
ಇಂದು ಯಕ್ಷಗಾನಕ್ಕೆ ಸಂಬಂಧಿಸಿದಂತೆ
ಇಷ್ಟೊಂದು ಸಂಘ ಸಂಸ್ಥೆಗಳಿವೆ. ಯಕ್ಷಗಾನವನ್ನೇ ಕಲಿಸುವ ಸಂಸ್ಥೆಗಳಿವೆ. ಯಕ್ಷಾಗಾನ
ಗುರುಗಳಿದ್ದಾರೆ. ಯಕ್ಷಗಾನಕ್ಕೆ ಸಂಬಂಧಿಸಿ ಹಲವಾರು ಪತ್ರಿಕೆಗಳಿವೆ. ಆದರೆ ಒಂದೇ ಒಂದು ಸಂಸ್ಥೆಗಾಗಲೀ ಪತ್ರಿಕೆಯಾಗಲೀ
ಓರ್ವನೇ ಒಬ್ಬ ವ್ಯಕ್ತಿಗಾಗಲೀ ಈ ಪಾಠ ಪುಸ್ತಕದಲ್ಲಿದ್ದ ತಪ್ಪುಗಳನ್ನು ಹೇಳಿದನಂತರವಾದರೂ
ಪಾಠ ಪುಸ್ತಕದ ಬಗ್ಗೆ ಒಂದು ಸಂವಾದ ವಿಚಾರ ಸಂಕೀರಣ ಮಾಡುವ ಯೋಚನೆಯೇ ಬರಲಿಲ್ಲ. ಅನಗತ್ಯ
ವಿಚಾರಗಳಿಗೆ ಪ್ರಚಾರದ ಅಶೆಗೆ ಅಥವಾ ಇನ್ನಾವುದೋ ಸ್ವಾರ್ಥಕ್ಕೆ ಇಡೀ ದಿನ ಕಾರ್ಯಕ್ರಮ ಮಾಡಿ
ವ್ಯಯಿಸುವ ಮಂದಿಗೆ ಇದು ಗಂಭೀರ ವಿಚಾರ ಅನ್ನಿಸದೇ ಇರುವುದು ದುರ್ದೈವ ಎನ್ನಬೇಕು. ಒಂದು ಪತ್ರಿಕೆಯಾಗಲಿ ಅದರಲ್ಲಿ ಪುಟಗಟ್ಟಲೆ ಗೀಚುವ
ಲೇಖಕರಾಗಲೀ ಇದರ ಬಗ್ಗೆ ಒಂದೇ ಒಂದು ವಾಕ್ಯವನ್ನು ಬರೆಯದಿರುವುದ ಅಚ್ಚರಿಯಾಗುತ್ತದೆ. ಹಣ ಅಥವಾ ಹೊಗಳಿಕೆ ಮತ್ತು ಖ್ಯಾತಿ ಇವಿಷ್ಟೇ ಇಲ್ಲಿ
ಸ್ವಾರ್ಥದ ಮುಖವಾಗಿ ಗೋಚರವಾಗುತ್ತದೆ.
ವಾಸ್ತವದಲ್ಲಿ ಪಾಠ ಪುಸ್ತಕದ ದೋಷದ
ಬಗ್ಗೆ ಒಂದು ಸಂವಾದವನ್ನು ಒಂದು ಗಟ್ಟಿ ಅಭಿಪ್ರಾಯವನ್ನು ರಾಧಾಕೃಷ್ಣ ನಾವಡರು ನಿರೀಕ್ಷಿಸಿದ್ದರು. ಹೆಚ್ಚಿನವರಿಗೆ ಅದು
ಅರ್ಥವಾಗಲೇ ಇಲ್ಲ. ಅದೂ ಒಂದು ದುರ್ದೈವ. ಕಾರಣ ಇಷ್ಟೇ ಯಾರಿಗೂ ನಿಷ್ಠೂರವಾಗಿ ವಸ್ತುನಿಷ್ಠವಾಗಿ ವ್ಯವಹರಿಸುವುದು ಬೇಕಾಗೇ ಇರಲಿಲ್ಲ. ಎಲ್ಲಿ ಯಾರಿಗೆ ಅಸಮಾಧಾನವಾಗುತ್ತದೋ ಎಂಬ
ಆತಂಕ. ಯಕ್ಷಗಾನದ ಉಳಿವಿಗಿಂತಲೂ ವ್ಯಯಕ್ತಿಕ ಪ್ರತಿಷ್ಠೆಯ ಕೈ ಮೇಲಾಯಿತು. ಹಾಗಾದರೆ ಅಷ್ಟು ಶ್ರಮವಹಿಸಿ ಸರಕಾರದ ಒಂದಷ್ಟು ಲಕ್ಷ
ವ್ಯಯ ಮಾಡಿ ರಚಿಸಿದ ಪಾಠ ಪುಸ್ತಕದ ದೋಷ ಹಾಗೇ ಮುಂದುವರಿಯಬೇಕೆ? ಪ್ರಶ್ನೆ ಸಹಜವಾಗಿ ಮೂಡುತ್ತದೆ
ಯಕ್ಷಗಾನದಲ್ಲಿ ’ಅಮರ ಶಿಲ್ಪಿ ವೀರ ಶಂಭು
ಕಲ್ಕುಡ’ ಎಂಬ ಒಂದು ಜನಪ್ರಿಯ ಪ್ರಸಂಗವಿದೆ. ಹಿಂದೆ ಸುರತ್ಕಲ್ ಮೇಳದವರು ಇದನ್ನು
ಆಡುತ್ತಿದ್ದರು. ಅದರಲ್ಲಿ ತಂದೆಯಾದ ಶಂಭು ಕಲ್ಕುಡ ಕೆತ್ತಿದ ಗೋಮಟೇಶ್ವರನ ಮೂರ್ತಿಯಲ್ಲಿ ಮಗ ದೋಷ
ಕಂಡು ಹಿಡಿಯುತ್ತಾನೆ. ಇದನ್ನು ತಿಳಿದು ತಂದೆ ಶಂಭು ಕಲ್ಕುಡ ಆತ್ಮ ಹತ್ಯೆ ಮಾಡಿಕೊಳ್ಳುತ್ತಾನೆ .
ಅಂದರೆ ದೋಷಯುಕ್ತವಾದದ್ದು ಉಳಿಯಬಾರದು ಎನ್ನುವ ಕಾಳಜಿ. ಇಲ್ಲಿ ಜೀವ ತೆರುವುದು ಬೇಡ ಒಂದಷ್ಟು
ಪರಾಮರ್ಶೆ ಅವಲೋಕನವಾದರೂ ಆಗಬೇಕಲ್ಲ. .
ನಾನು ಬಾಲಕನಾಗಿದ್ದಾಗ
ಒಂದು ಘಟನೆ. ಆಗ ನಾನು ಮತ್ತು ನನ್ನಂತೆ ಮತ್ತೊಬ್ಬ ಬಾಲಕ ನಮ್ಮ ಅಜ್ಜನ ಬಳಿಯಲ್ಲಿ ವೇದ ಪಾಠ
ಅಭ್ಯಾಸ ಮಾಡುತ್ತಿದ್ದೆವು. ಅಜ್ಜನ ವೇದ ಪಾಠವೆಂದರೆ, ಆರಂಭದಲ್ಲೇ ಐವತ್ತೆರಡು ಸಾಲದು ಎಂಬಂತೆ ಮತ್ತು ನಾಲ್ಕು
ಅಕ್ಷರವನ್ನು ಅಕ್ಷರಮಾಲೆಯೊಂದಿಗೆ ಸೇರಿಸಿ ತಪ್ಪಿಲ್ಲದೇ
ಉಚ್ಚರಿಸಿದ ನಂತರ ವೇದಪಾಠವನ್ನು ಆರಂಭಿಸಿದ್ದರು. ಉಚ್ಚಾರದ ಸ್ಪಷ್ಟತೆಯಲ್ಲಿ
ನಮ್ಮಜ್ಜನಿಗಿದ್ದ ಕಾಳಜಿ ಅದು. ಮಂತ್ರೋಚ್ಚಾರಣೆಯಲ್ಲಿ ಒಂದು ಅಕ್ಷರ, ಒಂದು
ವಿಸರ್ಗ, ಅಥವಾ ಒಂದು ಸ್ವರ ಪ್ರಸ್ತಾರ ತಪ್ಪಾದರೂ ಅಲ್ಲೇ
ಎಚ್ಚರಿಸುತ್ತಿದ್ದರು. ದೋಷಯುಕ್ತ ಉಚ್ಚಾರ ಸಹಿಸುತ್ತಿರಲಿಲ್ಲ. ನನ್ನ ಜತೆಯಲ್ಲಿದ್ದ ಹುಡುಗನೊಬ್ಬನ ತಪ್ಪು ಉಚ್ಚಾರಕ್ಕೆ ಅತನನ್ನು ಇಡೀ ದಿನ
ಉಚ್ಚಾರ ಸರಿಯಾಗುವ ವರೆಗೆ ಬಿಡಲಿಲ್ಲ. ಮಧ್ಯಾಹ್ನ ಕುಳಿತ ಹುಡುಗ ತಪ್ಪಿಲ್ಲದೇ ಮಂತ್ರ ಹೇಳುವಾಗ
ಕತ್ತಲೆಯಾಗಿತ್ತು. ಆದರೂ ತಪ್ಪು ತಪ್ಪು ಮಂತ್ರ ಉಚ್ಚರಿಸಬಾರದು. ವಿದ್ಯೆಯನ್ನು ತಪ್ಪಾಗಿ ಕಲಿಯ
ಬಾರದು ಎನ್ನುವುದು ಅವರ ಪ್ರತಿಪಾದನೆ. ತಪ್ಪಾದ ದೋಷಯುಕ್ತ ಉಚ್ಚಾರ ಕಲಿಯಬಾರದು. ಆ ದೋಷ ಅಲ್ಲೇ ನಾಶವಾಗಬೇಕು ಎಂಬುದು
ನಮ್ಮಜ್ಜನ ಕಾಳಜಿ. ಇದನ್ನು ಹಲವು ಸಲ ನಾನೇ ಸ್ವತಃ ಅನುಭವಿಸಿದ್ದೇನೆ. ಹಾಗಾಗಿ ಈಗಲೂ ಉಚ್ಚಾರ
ಸ್ಪಷ್ಟತೆಯನ್ನು ಅತಿಯಾಗಿ ಹಿಂಬಾಲಿಸುತ್ತೇನೆ. ಯಾವುದೇ ವಿದ್ಯೆಯಾದರೂ ದೋಷಯುಕ್ತವಾಗಿ ತಪ್ಪನ್ನೇ
ಮತ್ತೂ ಮತ್ತೂ ಕಲಿಯುವಂತಾದರೆ ಆ ವಿದ್ಯೆ ಪರಿಪೂರ್ಣವಾಗುವುದೇ ಇಲ್ಲ. ಹಾಗಾಗಿ ನಮ್ಮಜ್ಜ ಪುಸ್ತಕ
ನೋಡಿ ಮಂತ್ರ ಹೇಳುವುದನ್ನು ಕಡುವಾಗಿ ವಿರೋಧಿಸುತ್ತಿದ್ದರು. ಮಂತ್ರ ಸರಸ್ವತಿ ಅದು ನಾಲಗೆಯಲ್ಲಿ
ಸದಾ ನೆಲಸಿರಬೇಕು. ಅದಕ್ಕೆ ಪುಸ್ತಕದ ಅವಶ್ಯಕತೆ ಬೀಳಬಾರದು. ಪುಸ್ತಕದ ಮುದ್ರಣ ದೋಷಗಳನ್ನು ಹಾಗೇ
ಅನುಸರಿಸಿ ಅದನ್ನೇ ಕಲಿಯುವ ಅಪಾಯವಿರುತ್ತದೆ. ತಪ್ಪನ್ನು ಕಲಿಯಬಾರದು ಎಂಬ ಕಾಳಜಿಯೇ ಇದಕ್ಕೆ
ಕಾರಣ. ಅವುಗಳನ್ನೆಲ್ಲ ಮುದ್ರಣ ದೋಷ ಎಂದು
ಮುದ್ರಾ ರಾಕ್ಷಸನ ತಲೆಗೆ ಕಟ್ಟಬಹುದು. ಈಗ ಇಲ್ಲಿ ಉಂಟಾದ ದೋಷಕ್ಕೆ ಯಾರು ಹೊಣೆ?
ಪಾಠ ಪುಸ್ತಕ ಎಂದರೆ ವೇದಕ್ಕೆ
ಸಮಾನ. ಇಲ್ಲಿ ಯಾವ ಮಂತ್ರವನ್ನು ಮುಂದಿನ
ಪೀಳಿಗೆಗೆ ಒದಗಿಸಲಾಗುತ್ತದೆ? ವಿದ್ಯೆ ಅಮೃತವಾಗಿ
ಪರಿಣಮಿಸಬೇಕು. ಇಲ್ಲಿ ವಿದ್ಯೆ ದೋಷ ಯುಕ್ತವಾಗಿ ಮುಂದೆ ಅದೇ ವೇದವಾಗಿ ಸ್ಥಿರವಾಗುವ ಎಲ್ಲ
ಹಂತದಲ್ಲಿ ಯಕ್ಷಗಾನದ ಮರಣ ಮೃದಂಗದ ಛಾಪು ಕೇಳಿದರೂ ಅಚ್ಚರಿ ಪಡಬೇಕಿಲ್ಲ.
ಇದೊಂದು ಸರಕಾರದ ಕಾರ್ಯಕ್ರಮ. ಪಾಠ
ಪುಸ್ತಕಕ್ಕೆ ಸರಕಾರದ ಅಂಗೀಕಾರವಿರುತ್ತದೆ. ಮುಂದೆ ಅದನ್ನೇ ಅನುಸರಿಸುವ ಅನಿವಾರ್ಯತೆ
ಒದಗಿಬರಬಹುದು. ಸರಕಾರಿ ಸ್ವಾಮ್ಯದಲ್ಲಿ ಇದನ್ನೇ
ಪಾಠ ಮಾಡಬೇಕು ಎಂಬ ಕಾನೂನು ಮುಂದೆ ಬಂದರೂ ಅಚ್ಚರಿ ಪಡಬೇಕಿಲ್ಲ. ಈ
ದೋಷದಿಂದ ಕೂಡಿದ ಯಕ್ಷಗಾನವನ್ನು ಮುಂದಿನವರು ಕಲಿಯಬೇಕು ಅನುಸರಿಸಬೇಕು. ಆಗ ಕಾನೂನು ಬದಲಿಸುವಂತೆ
ನಾವೇ ಹೋರಾಡುವ ಅನಿವಾರ್ಯತೆಯೂ ಬರಬಹುದು. ಹಾಗಾಗಿ ಈ ದೋಷ ಇಲ್ಲಿಯೇ ಪರಿಹರಿಸಲ್ಪಡಬೇಕು.
ಯಕ್ಷಗಾನ ಎಂಬ ವಿದ್ಯೆ ಮುಂದಿನ ಪೀಳಿಗೆಗೆ ಅಮೃತತ್ವವನ್ನು ಕಲ್ಪಿಸಲಿ ಎಂಬ ಆಶಯ. ಯಕ್ಷಗಾನ
ಅಮೃತಪಾನವಾಗಲಿ. . "ಯಕ್ಷಗಾನಂ ಅಮೃತಪಾನಂ.”