ಇಂದು ಸೂರ್ಯನನ್ನು ಕಾಣುವಾಗ ಈ ಕರ್ಣನಲ್ಲಿ ಹೊಸದೇನೋ ಅನುಭವ. ಈ ಸೂರ್ಯ ಭಗವಂತ ಎಂದಿನಂತಿಲ್ಲ, ಇಂದು ಅದೇನೋ ಪರಿ ನಗುವಂತೆ ಭಾಸವಾಗುತ್ತದೆ. ಅದೇನು ಅವಹೇಳನವೋ ಆತ್ಮೀಯ ಪ್ರೀತಿಯೋ ವ್ಯಕ್ತತೆಯ ಅರಿವಾಗುವುದಿಲ್ಲ. ಯಾಕೆ ಹೀಗೆ? ಕೈಯಲ್ಲಿ ಅರ್ಘ್ಯವನ್ನು ಹಿಡಿದು ತದೇಕ ಚಿತ್ತದಿಂದ ಸೂರ್ಯನನ್ನು ನೋಡುತ್ತೇನೆ ಯಾಕೋ ಎಂದಿನ ಮನೋಭಾವ ಸ್ಫುರಿಸುವುದಿಲ್ಲ. ಇಲ್ಲ, ಇಂದು ಸೂರ್ಯನನ್ನು ನೋಡುವಲ್ಲಿ ಆತ್ಮಸ್ಥೈರ್ಯ ಕುಗ್ಗುತ್ತಾ ಇದೆ. ಸೂರ್ಯನಲ್ಲಿ ಎಂದಿನ ಭಕ್ತಿ ಏಕಾಗ್ರತೆ ಸಿದ್ದಿಸುವುದಿಲ್ಲ. ಮನಸ್ಸಿನ ವೈಶಾಲ್ಯತೆ ಹೃಸ್ವವಾಗುತ್ತದೆ. ಕರ್ಮದಲ್ಲಿ ವಿಶ್ವಾಸ ಕ್ಷೀಣವಾಗುತ್ತದೆ.
ಹೌದು ನಿನ್ನೆ ತಾನೇ ಅಮ್ಮ ಬಂದಿದ್ದರು. ಪ್ರತಿಯೊಬ್ಬರನ್ನೂ ಅಮ್ಮ ಎಂದು ಕಾಣುವ ನಾನು ಅಮ್ಮ ಬಂದಿದ್ದರು ಎಂದುಕೊಂಡರೆ ಅದು ಪರಿಪೂರ್ಣವಾಗುವುದಿಲ್ಲ. ಹೌದು ಒಂದು ಕಾಲದ ಮಹಾರಾಣಿ ಚಕ್ರವರ್ತಿಯ ವಾಮ ಭಾಗಿಣಿ ಕುಂತೀ ದೇವಿ ಬಂದಿದ್ದಳು. ಅಮ್ಮ ಬರುವುದಕ್ಕೆ ಮೊದಲೇ ಪೂರ್ವಭಾವಿಯಾಗಿ ಏನೋ ಸಿದ್ಧತೆ ಮಾಡಿಕೊಂಡೇ ಬಂದಿದ್ದಳು. ಇಲ್ಲವಾದರೆ ಸಂಧಾನಕ್ಕಾಗಿ ಬಂದಿದ್ದ ಶ್ರೀಕೃಷ್ಣ ಬರುವ ಉದ್ದೇಶವಾದರೂ ಏನಿತ್ತು? ಸಂಧಾನ ಎಂಬುದು ನನ್ನ ಪಾಲಿಗೆ ಪೂರ್ವಭಾವಿ ಸನ್ನಾಹವೇ ಆಗಿಬಿಟ್ಟಿತು. ಶ್ರೀಕೃಷ್ಣ ಬಂದವನು ಹೇಳಿದ, ಏರು ಎನ್ನಯ ರಥವನು, ಕೂರು ಎನ್ನ ತೊಡೆ ಸೋಂಕಿನಲ್ಲಿ. ಆದರೆ ಇದಕ್ಕೆ ಅರ್ಹತೆಯನ್ನು ಗಳಿಸುವಲ್ಲಿ ಈ ಸೂತ ಪುತ್ರನ ಆಯುಷ್ಯವೇ ಒತ್ತೆ ಇಟ್ಟಾಗಿ ಹೋಗಿತ್ತು. ಇನ್ನೇಕೆ? ಕರ್ಣಾ ನೀನು ರಾಧೇಯನಲ್ಲ, ನೀನು ಸೂತ ಪುತ್ರನಲ್ಲ. ನೀನು ಭಾಸ್ಕರ ತನಯ. ಭಾಸ್ಕರ ಜಗತ್ತಿಗೇ ತಂದೆ, ಇದರಲ್ಲಿ ಅತಿಯಶವೇನಿತ್ತು. ಆದರೆ ಹಾಗಲ್ಲ. ನೀನು ಆ ಸೂರ್ಯನ ಅನಂತರವನು. ಸೂರ್ಯನಂತೆ ಪ್ರಖರತೆಯಲ್ಲಿ ಮೆರೆಯಬೇಕಾದವನು. ಬಾ ಎನ್ನ ಬಳಿಗೆ. ರಥವನ್ನು ಏರು, ಜತೆಗೆ ಈ ಭೂಮಂಡಲದ ಚಕ್ರವರ್ತಿಯಾಗು. ಆಹಾ ಎಂಥಹಾ ಯೋಗ್ಯತೆಯನ್ನು ಕಲ್ಪಿಸಿದ ಭಗವಂತ ? ಭಗವಂತನ ಅಂಗೀಕಾರವೂ ಒಂದು ಹುನ್ನಾರವಾಗುತ್ತದೆ ಎಂದು ಈಗ ಭಾಸವಾಗುತ್ತದೆ. ಮಾಹಾ ಪೂರದಂತೆ ಶ್ರೀಕೃಷ್ಣನ ಕೊಡುಗೆ ಹರಿದು ಬಂತು. ಆದರೆ ಅದಕ್ಕೆ ಒಂದು ನಿಬಂಧನೆ.....ನಾನು ಆತನ ಜತೆಗೆ ಹೋಗಬೇಕು. ಛೇ...ಎಂತಹಾ ವಿಪರ್ಯಾಸ. ಬದುಕಿನಾದ್ಯಂತ ಉದಯವಿಲ್ಲದ ದಿನವನ್ನು ಕಳೆದ ನಾನು. ಸುರ್ಯನ ಆಗಮನವಾದಲ್ಲೇಲ್ಲಾ ಪೂರ್ವ ಹುಟ್ಟಿದರೆ, ನನ್ನ ಪೂರ್ವಾಪರದ ಕಥೆಯೇ ವಿಚಿತ್ರವಾಗಿ ಹೋಯಿತು. ಹಿನ್ನೇಲೆ ಏನೋ ಸೂರ್ಯನ ಬಂಧವಿದ್ದರೆ ಬದುಕು ಸಂಪೂರ್ಣ ಕತ್ತಲೆಯಲ್ಲೇ ಕಳೆದವನು. ಎಲ್ಲರಿಗೂ ದಾರಿ ತೋರುವ ಭಗವಂತ ಈಗಲೂ ದಾರಿ ತೋರುತಿದ್ದಾನೆ ವಿಚಿತ್ರವೆಂದರೆ ಅದಕ್ಕೊಂದು ನಿಬಂಧನೆ ಇದೆ. ಇದೇ ಅಲ್ಲವೇ ತೊಡಕಾಗಿ ಬಿಟ್ಟದ್ದು. ಈ ತೊಡಕು ಅರಿತೇ ಭಗವಂತ ಪರೀಕ್ಷೆ ಇಟ್ಟುಬಿಟ್ಟ.
ನನಗೂ ಅನುಮಾನವಿತ್ತು. ನನ್ನ ಭುಜಗಳಲ್ಲಿ ಉಕ್ಕಿ ಹರಿಯುವ ಚೈತನ್ಯ ನನ್ನ ಜನ್ಮದ ಬುಡವನ್ನೇ ಅಲುಗಾಡಿಸಿದಂತೆ. ಹಲವು ಸಲ ಅತಿರಥನಲ್ಲಿ ಕೇಳಿದ್ದೆ. ವೃದ್ಧ......ಅವಿದ್ಯಾವಂತ. ಸಂಸ್ಕಾರ ಶೂನ್ಯ. ದೀಪವನ್ನು ಉರಿಸಿದ ಆದರೆ ಅದಕ್ಕೆ ಗೋಡೆ ಅಡ್ಡವಾಗಿಬಿಟ್ಟಿತು. ಅತಿರಥನನ್ನು ಸಂಸ್ಕಾರ ಶೂನ್ಯ ಅಂತ ನಾನು ಹೇಳಿದರೆ ನನ್ನ ಬದುಕಿಗೆ ಅರ್ಥವಿಲ್ಲ. ಆದರೆ ಸಮಾಜ ಇಂದು ಅದನ್ನೇ ತಾನೇ ಹೇಳಿದೆ. ಬದುಕಿನುದ್ದಕ್ಕೂ ಅದನ್ನೇ ಕೇಳಿ ಬೆಳೆದೆ. ಎಂತಹ ವಿಚಿತ್ರ, ಎಲ್ಲೋ ತೇಲಿ ಬಂದ ಮಗುವಿಗೆ ಅನ್ನಾಹಾರ ಕೊಟ್ಟ ಸಂಸ್ಕಾರ, ನನ್ನ ಹೆತ್ತ ತಾಯಿಗೆ ಇಲ್ಲದೇ ಹೋಯಿತು. ಅದೇ ಸಂಸ್ಕಾರ ಇಂದು ಅಕೆಯನ್ನು ನನ್ನ ಎದುರು ನಿಲ್ಲಿಸಿದೆ.
ಸೂರ್ಯ ಯಾರಿಗೂ ನೆರಳನ್ನು ಕೊಟ್ಟ ದಾಖಲೆ ಇಲ್ಲ. ಆದರೆ ನನ್ನ ನೆರಳನ್ನು ಅಕ್ಷರಶಃ ಆತ ಕಸಿದೇ ಬಿಟ್ಟ. ಕುಂತಿ ಮಂತ್ರ ಹೇಳಿದಳು, ಈತ ಹಾದಿ ತಪ್ಪಿದ. ಮಂತ್ರವನ್ನು ಕೊಟ್ಟ ದುರ್ವಾಸರು ಕೇವಲ ಮಂತ್ರ ಮಾತ್ರ ಕೊಟ್ಟರು ಸಂಸ್ಕಾರ ಒದಗಿಸಲಿಲ್ಲ. ಇದೆಲ್ಲ ರಮ್ಯ ಕಥೆಯಾಗಿ ಕರ್ಣನ ಸುತ್ತಲೂ ಸುತ್ತುತ್ತಾ ಇದೆ. ಅದನ್ನು ನಂಬುವ ಸ್ಥಿತಿಯಲ್ಲಿ ಕರ್ಣ ಇಂದು ಇಲ್ಲ. ಅತಿರಥ ಹೇಳಿದ ನನ್ನ ಮಗನಲ್ಲ. ಹೌದು ಅನುಮಾನ ಸತ್ಯ, ಆದರೆ ಅದಕ್ಕೆ ಸಿಕ್ಕಿದ ಉತ್ತರ ಮಾತ್ರ ಮತ್ತೊಂದು ಅಗ್ನಿ ಪರೀಕ್ಷೆಯನ್ನು ನೀಡಿದೆ. ಶ್ರೀಕೃಷ್ಣ ಏರು ಎನ್ನಯ ರಥವನು ಹೇಳಿದರೆ, ಹೆತ್ತ ತಾಯಿ ಕುಂತಿ ನನ್ನೈವರನ್ನು ಉಳಿಸು ಎಂದು ಬೇಡಿದಳು.....ಬೇಡಿದಳು ಎನ್ನುವುದಕ್ಕಿಂತ ಕಾಡಿದಳು ಎನ್ನುವುದೇ ಸೂಕ್ತ. ಶ್ರೀಕೃಷ್ಣ ಸ್ವಯಂ ಭಗವಾನ್.... ಆತನ ಮಾತನ್ನು ತಳ್ಳಿದೆ, ಆತ ನನಗಾಗಿ ಏನು ಮಾಡಿದ್ದಾನೆ. ಆದರೆ ಕುಂತಿ.....ಹಾಗಲ್ಲ ಜನ್ಮವನ್ನಾದರೂ ಕೊಟ್ಟಿದ್ದಾಳೆ. ಇಂದು ಆಕೆಯ ಮಾತು ತಳ್ಳಿಹಾಕುವಂತಿಲ್ಲ. ಅಂದರೆ ಐವರನ್ನು ನಾನು ಉಳಿಸಬೇಕು. ಮಮ ಪ್ರಾಣಾಹಿ ಪಾಂಡವಾಹ ಎನ್ನುವ ಕೃಷ್ಣನ ಮಾತಿಗೆ ವಿಶ್ವಾಸವನ್ನು ನಾನು ಒದಗಿಸಬೇಕು. ಅತ್ತ ಕೂಳುಕೊಟ್ಟ ಕೌರವ, ಇತ್ತ ಜನ್ಮ ಕೊಟ್ಟ ತಾಯಿ, ಮತ್ತೊಂದು ಕಡೆ ಬದುಕು ಕೊಟ್ಟ ಅತಿರಥ ಇನ್ನೊಂದೆಡೆ ಈ ಎಲ್ಲ ದಾಳದ ಸೂತ್ರವನ್ನು ಹಿಡಿದ ಶ್ರೀಕೃಷ್ಣ....ಕರ್ಣ ತನ್ನ ಸ್ವಂತಿಕೆಯನ್ನು ಮಾರಾಟಕ್ಕಿಡುವಂತೆ ಮಾಡಿದೆ. ಅಂತ್ಯ ಕಾಲದಲ್ಲು ಸಿಗಬೇಕಾದ ಸಾಂತ್ವನ ಮರೀಚಿಕೆಯಾಗಿ ಹೋಗಿದೆ. .....
ಇದೆಲ್ಲ ಸ್ವಗತದ ಕರ್ಣನ ಮಾತುಗಳು. ಯಕ್ಷಗಾನದಲ್ಲಿ ಪಾತ್ರಧಾರಿ ಹೀಗೆ ಪಾತ್ರವನ್ನು ಕಟ್ಟಿಕೊಡುತ್ತಿದ್ದರೆ, ಪ್ರೇಕ್ಷಕ ತಾನೇ ಕರ್ಣ ಎಂಬಂತೆ ಭಾವ ಪರವಶನಾಗುತ್ತಾನೆ. ಕಂಬನಿ ಮಿಡಿಯುತ್ತಾನೆ. ಕರ್ಣ ಒಬ್ಬ ಕಥಾನಾಯಕನಾಗಿ ವಿಜ್ರಂಭಿಸುತ್ತಾನೆ. ನಾಯಕನಲ್ಲಿ ತನ್ನನ್ನು ಕಾಣುವ ಪ್ರೇಕ್ಷಕ ಭಾವ ಪರವಶತೆಗೆ ತನ್ನನ್ನು ಒಪ್ಪಿಸಿಬಿಡುತ್ತಾನೆ.
ಕಥಾನಾಯಕ ಎಂದರೆ ಆತ ಆದರ್ಶ ಪುರುಷ. ಅಂದರೆ ಆತನದ್ದೆಲ್ಲವೂ ತಾನು ಅನುಸರಿಸಬೇಕು ಎಂಬ ಮನೋಭಾವ ಇರುತ್ತದೆ. ಆದರೆ ಕರ್ಣನ ವ್ಯಕ್ತಿತ್ವ ಹಾಗೆಂದು ಪೂರ್ಣವಾಗಿ ಒಪ್ಪಿಕೊಳ್ಳುವ ಹಾಗಿಲ್ಲ. ಆತ ಒಳ್ಳೆಯವನೋ ಕೆಟ್ಟವನೋ ಇಂದಿಗೂ ವಿಮರ್ಶೆಯಾಗಿಯೇ ಉಳಿದೆ. ಆದರೆ ಮೂಲ ಭಾರತದಲ್ಲಿ ಆತ ನಿರ್ದಿಷ್ಟವಾಗಿ ದುಷ್ಟನೇ ಆಗಿಬಿಟ್ಟಿದ್ದಾನೆ. ಆಗಿನಿಂದಲೂ ನಮ್ಮಲ್ಲಿ ಒಂದು ಮನೋಭಾವವಿದೆ. ನಾಯಕನನ್ನು ವಿಜ್ರಂಭಿಸುವುದು. ಯಾರನ್ನೋ ನಾಯಕನ ಸ್ಥಾನದಲ್ಲಿ ಕೂರಿಸಿ ಬಿಡುವುದು. ಕನ್ನಡದ ಆಗಿನಿಂದಲೇ ಕವಿಗಳು ಇದನ್ನು ಯಥಾ ಪ್ರಕಾರ ಮಾಡಿದ್ದಾರೆ ಎಂದು ವಿದ್ವಾಂಸರು ವಿಮರ್ಶಿಸುತ್ತಾರೆ. ಇದರ ಸತ್ಯಾಸತ್ಯೆತೆಯ ಬಗ್ಗೆ ನಿರ್ಧರಿಸುವುದಕ್ಕಿಂತ ಒಂದಷ್ಟು ವಿಷಯಗಳನ್ನು ತಿಳಿಯುವುದು ಹೆಚ್ಚು ಸೂಕ್ತ. ಈಗಲೂ ಯಕ್ಷಗಾನವಾಗಲಿ ಇನ್ನಿತರ ಮಾಧ್ಯಮವಾಗಲಿ ಯಾರೋ ಒಬ್ಬ ಹೇಗೋ ಕಥಾನಾಯಕನಾಗಿಬಿಡುತ್ತಾನೆ. ದುಷ್ಟ ದುರ್ಯೊಧನನೂ ಕಥಾನಾಯಕ, ಹೆಚ್ಚೇಕೆ ದೇವಿ ಮಹಾತ್ಮೆಯಲ್ಲಿ ದುರುಳ ರಕ್ಕಸ ಮಹಿಷಾಸುರನೂ ಕಥಾನಾಯಕನಾಗುತ್ತಾನೆ. ಪ್ರತಿಯೊಬ್ಬರ ಹಿಂದೆಯೂ ಒಂದು ಕಥೆ ಇರುತ್ತದೆ. ಮತ್ತು ಆ ಕಥೆಗೆ ಅವರೇ ನಾಯಕರಾಗಿರುತ್ತಾರೆ. ಆ ನಿಟ್ಟಿನಲ್ಲಿ ಯಾರನ್ನು ಕಥಾನಾಯಕನಾಗಿ ಚಿತ್ರಿಸಬಹುದು. ಇದರ ನಡುವೆ ವಾಸ್ತವ ಮಾತ್ರ ಮರೆಯಾಗಬಾರದು. ಒಂದು ವೇಳೆ ಸ್ವತಃ ನಾನೇ ಕರ್ಣನ ಪಾತ್ರ ಮಾಡಿ ಕಥೆ ಹೆಣೆಯುತ್ತಿದ್ದರೆ ಹೀಗೆ ಹೇಳಿ ಪಾತ್ರಕ್ಕೆ ಜೀವ ತುಂಬುವುದಕ್ಕೆ ಪ್ರಯತ್ನಿಸುತ್ತಿದ್ದೆ. ಯಾಕೆಂದರೆ ಪಾತ್ರ ಜೀವ ತಳೆಯಬೇಕಾಗಿರುವುದು ರಂಗದ ನಿಯಮ. ಆದರೂ ವಾಸ್ತವ ಮಾತ್ರ ಅರಿಯುವಂತಹ ಸಾಧನ.
ಕರ್ಣ.....ಮೂಲದಲ್ಲಿ ಒಬ್ಬ ರಾಕ್ಷಸ, ದಂಬೋಧ್ಬವ ಅಥವಾ ಸಹಸ್ರ ಕವಚ. ಆ ಅಸುರೀ ಅಂಶ ಆತನಲ್ಲಿ ಇನ್ನೂ ಇತ್ತು ಎಂಬುದಕ್ಕೆ ಆತನ ವರ್ತನೆಯೇ ಸಾಕ್ಷಿ. ಬದುಕಿನ ಪರ್ಯಂತ ಆತನ ವರ್ತನೆ ಇದಕ್ಕೆ ಸಾಕ್ಷ್ಯವನ್ನು ಒದಗಿಸುತ್ತಾ ಬರುತ್ತದೆ. ಹಾಗಾಗಿ ಕರ್ಣ ಎಂದಿಗೂ ಉತ್ತಮ ವ್ಯಕ್ತಿತ್ವವನ್ನು ಹೊಂದಲಿಲ್ಲ. ಶ್ರೀಕೃಷ್ಣ ಆತನನ್ನು ಕರೆಯದೇ ಇದ್ದರೂ, ಆತ ಪಾಂಡವರ ಪಕ್ಷದಲ್ಲಿರುವ ಗುಣಗಳು ಒಂದೂ ಆತನಲ್ಲಿರಲಿಲ್ಲ. ಆತನ ದುಷ್ಟ ಪ್ರವೃತ್ತಿಯೇ ಆತನನ್ನು ಕೌರವನಲ್ಲಿ ಸೆಳೆಯುವಂತೆ ಮಾಡಿತ್ತು. ಸದಾ ಕೌರವನಿಗೆ ದುರ್ಬೋಧನೆಯನ್ನು ಮಾಡಿ, ದುಷ್ಟ ಪ್ರಚೋದನೆಯನ್ನು ಮಾಡುತ್ತಿದ್ದವನಲ್ಲಿ ಸನ್ಮನಸ್ಸು ಹೇಗೆ ಗುರುತಿಸುವುದಕ್ಕೆ ಸಾಧ್ಯ? ದ್ರೌಪದಿಯ ಮಾನಭಂಗ ಮಾಡುವುದರಲ್ಲಿ ಕರ್ಣನ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಆ ಪ್ರಚೋದನೆ ಆದನ ಕ್ಷುದ್ರ ಮನಸ್ಸಿಗೆ ಸಾಕ್ಷಿ. ಅಸುರೀ ಮನಸಿನಲ್ಲಿ ಸತ್ಪ್ರೇರಣೆ ಎಂದು ಮೂಡಲಾರದು.
ಆತನ ಜನ್ಮದ ಪ್ರಮೇಯದಲ್ಲೇ ಅಸುರೀ ಶಕ್ತಿಯ ಪ್ರಭಾವವನ್ನು ಗುರುತಿಸಬಹುದು. ದುರ್ವಾಸ ಮುನಿಗಳಿಂದ ಉಪದೇಶಿಸಲ್ಪಟ್ಟ ಅಷ್ಟೂ ಮಂತ್ರಗಳಲ್ಲಿ ದೈವಾಂಶ ಸಂಭೂತರಾದ, ಧರ್ಮಿಷ್ಠರಾದ ಪಾಂಡವರು ಹುಟ್ಟಿಕೊಳ್ಳುತ್ತಾರೆ. ಪರಿಶುದ್ದ ವಾದ ಪಾತ್ರೆಯಲ್ಲಿ ಅಮೃತಮಯ ಹಾಲು ಸುರಿದಂತೆ. ಆದರೆ ಕರ್ಣನ ಜನನ ಅನಿಷ್ಟ ಸಂಭವ. ಇದರ ಪ್ರಭಾವ ಸೂರ್ಯನ ಮೇಲೂ ಸಂಭವಿಸುತ್ತದೆ. ಜಗತ್ತಿನ ಕಣ್ಣಾಗಬೇಕಿದ್ದ ಸೂರ್ಯನೂ ಹಾದಿ ತಪ್ಪುವಂತೆ ಮಾಡುತ್ತದೆ. ಕನ್ಯೆಯಾಗಿದ್ದ ಕುಂತಿ ಮಂತ್ರದ ಪ್ರಭಾವದಿಂದ ಸೂರ್ಯನನ್ನು ಸಂಕಲ್ಪಿಸುತ್ತಾಳೆ. ಬಂದ ಸೂರ್ಯ ಕುಂತಿ ಕನ್ನಿಕೆ ಎಂದು ತಿಳಿದೂ ಶಿಶುವನ್ನು ಅನುಗ್ರಹಿಸುತ್ತಾನೆ. ಕನ್ಯೆಯಾದ ಕುಂತಿ ವಿವಾಹ ಮೊದಲು ತಾಯಿಯಾಗುವುದು ಅಪರಾಧವೆಂದು ಜಗತ್ತಿನ ಕಣ್ಣಾದ ಸೂರ್ಯ ಹಿತವಚನ ಹೇಳಬಹುದಿತ್ತು. ಕುಂತಿಯ ಅಮಾಯಕತನವನ್ನು ಆತನು ಬಳಸಿಕೊಂಡ. ಅತನಿಗೂ ಒಂದು ವಿಧದ ಅಂಧತ್ವ ಆವರಿಸಿಕೊಂಡುಬಿಟ್ಟಿತು. ಅದಕ್ಕೆ ಕಾರಣ ಕರ್ಣನ ಜನನ. ಅದರ ಪ್ರಭಾವ ತಾಯಿ ತಂದೆಯರ ಮೇಲೆ ಆಗಿಯೇ ಬಿಟ್ಟಿತು.
ಮುಂದೆ ಆತನ ಅಸುರೀ ಗುಣಗಳು ಪರಶುರಾಮರಿಗೆ ಅರಿವಿಗೆ ಬಂದುದರಿಂದಲೇ ತಾವು ಉಪದೇಶಿಸಿದ ಧನುರ್ವಿದ್ಯೆ ಆತನಿಗೆ ಸಕಾಲದಲ್ಲಿ ಒದಗದಂತೆ ಶಾಪವನ್ನು ಕೊಟ್ಟಿದ್ದರು. ಒಂದು ವೇಳೆ ಆ ಶಾಪ ಆತನಿಗೆ ಇರದಿದ್ದರೆ ಮುಂದಿನ ಪರಿಣಾಮ ಹೇಗಿರಬಹುದಿತ್ತು? ಲೋಕ ಕ್ಷೇಮಕ್ಕೆ ಭಗವಂತನೆ ಕೆಲವೊಂದು ಉತ್ಪಾತರೂಪಿ ಅಸುರೀ ಶಕ್ತಿಗಳಿಗೆ ನಿಯಂತ್ರಣ ವಿಧಿಸುತ್ತಾನೆ. ದುರ್ಯೋಧನನ ಮೇಲಿದ್ದ ಸ್ನೇಹವನ್ನು ಸ್ವಾಮಿ ಭಕ್ತಿಯನ್ನಾಗಿ ತೋರಿಸುತ್ತಾನೆ. ಇದು ಕೇವಲ ಆತನ ಸ್ವಾರ್ಥವಾಗಿರುತ್ತದೆ. ಅವಕಾಶವಾದವಾಗಿರುತ್ತದೆ.
ಕರ್ಣನಲ್ಲಿದ್ದ ಒಂದು ದೊಡ್ಡಗುಣವೆ ದಾನಶೂರ ಕರ್ಣ ಎಂದು ಕರೆಸಿಕೊಂಡರೂ, ನಿತ್ಯ ಬ್ರಾಹ್ಮಣರಿಗೆ ಯಥೇಚ್ಛವಾಗಿ ದಾನ ಮಾಡುತ್ತಿದ್ದರೂ ಅದು ಪಾಂಡವರು ಮಾಡುತ್ತಿದ್ದ ಧಾನ ಧರ್ಮಕ್ಕೆ ಹೋಲಿಕೆಯಾಗುವುದಿಲ್ಲ. ಈತ ದುರ್ಯೋಧನನಿಂದ ಸಿಕ್ಕಿದ ಭಿಕ್ಷೆ ಬ್ರಾಹ್ಮಣರಿಗೆ ಕರೆ ಕರೆದು ಕೊಡುತ್ತಿದ್ದ. ಆದರೆ ಧರ್ಮರಾಯ ಕಾಡಿನಲ್ಲಿದ್ದರೂ ಬ್ರಾಹ್ಮಣರಿಗೆ ದಾನವನ್ನು ನೀಡುತ್ತಿದ್ದ. ವಾಸ್ತವದಲ್ಲಿ ಕರ್ಣನ ಪಾಪಕರ್ಮಗಳಿಗೆ ಪ್ರಾಯಶ್ಚಿತವಾಗಿಯೂ ಈ ದಾನ ಧರ್ಮಗಳು ಪರಿಗಣಿಸಲ್ಪಡಲಿಲ್ಲ. ಅಧರ್ಮದ ಸಂಪಾದನೆಯನ್ನು ದಾನ ಎಂದು ಪರಿಗಣಿಸುವ ಹಾಗಿಲ್ಲ.
ಮೂಲ
ಭಾರತದಲ್ಲಿ ಎಲ್ಲೂ ಆತನನ್ನು ಶ್ರೇಷ್ಠವ್ಯಕ್ತಿಯಾಗಿ ಗುರುತಿಸಲಿಲ್ಲ ಎಂದು ವಿದ್ವಾಂಸರ ಅಭಿಮತ. ಆದರೂ
ಆತನನ್ನು ದುರಂತ ನಾಯಕನಾಗಿ ಕಾವ್ಯಗಳಲ್ಲಿ ಕಥೆಗಳಲ್ಲಿ ಚಿತ್ರಿಸಲಾಗಿದೆ. ಅದೇನು ತಪ್ಪಲ್ಲ,
ಕಾಲಧರ್ಮದಂತೆ, ಅದೊಂದು ದೃಷ್ಟಿಕೋನ. ಆಕರ್ಷಣೆಗೋ ಯಾವುದೋ ಕಾರಣಕ್ಕೆ ಆತ
ದುರಂತನಾಯಕನಾಗುತ್ತಾನೆ. ಹಲವು ಸಲ ಈ ದುರಂತಗಳು ದುಃಖ ದುಮ್ಮಾನಗಳು ನಮ್ಮ ಭಾವುಕ ಮನಸ್ಸಿಗೆ ಆಪ್ಯಾಯಮಾನವಾಗುತ್ತದೆ.




