"ಇದು ವಿಮರ್ಶೆಯಲ್ಲದ ಚಿಂತನ"

Tuesday, October 25, 2011

ಸ್ಮರಣೀಯ ಸಂಸ್ಮರಣೆ



ಬಹು ನಿರೀಕ್ಷೆಯಂತೆ ತಾಳ ಮದ್ದಲೆ ಸಪ್ತಾಹವೊಂದು ಬೆಂಗಳೂರಲ್ಲಿ ಆಯೋಜನೆಗೊಂಡು ಮಳೆಗಾಲದ ಕೊನೆಯ  ಬೃಹತ್ ಯಕ್ಷಗಾನ ಚಟುವಟಿಗೆ ಸಾಕ್ಷಿಯಾಯಿತು. ಒಂದು ವಾರಗಳ ಕಾಲ ಬೆಂಗಳೂರಿನ ಪುತ್ತಿಗೆ ಮಠದಲ್ಲಿ  ಚೆಂಡೆ ಮದ್ದಲೆಯ ಸದ್ದು ಮಾರ್ದನಿಗೊಂಡಿತು. ಕೆಲವು ಉತ್ತಮ ಪ್ರಸಂಗಗಳು ಅಯೋಜನೆಗೊಂಡದ್ದು ಈ ಬಾರಿಯ ವಿಶೇಷ.. ವಾಮನ ಚರಿತ್ರೆ ಚೂಡಾಮಣಿ...ಅತಿಕಾಯ ಮೋಕ್ಷ. ಹೀಗೆ ಸಾಮಾನ್ಯವೆನಿಸಲ್ಪಡುವ ಪ್ರಸಂಗಗಳಿಗಿಂತ ಭಿನ್ನವಾದ ಪ್ರಸಂಗಗಳತ್ತ ಗಮನ ಹರಿಸಿದ್ದು ವೈಶಿಷ್ಟ್ಯವಾಗಿತ್ತು.  ಊರಿನ ಹಿರಿಯ ಕಲಾವಿದರ ಸಾನ್ನಿದ್ಯವನ್ನು ತಾಳ ಮದ್ದಲೆ ಅಭಿಮಾನಿಗಳು ಸಂತಸದಿಂದಲೇ ಸ್ಪಂದಿಸಿ ಯಶಸ್ವಿಯಾಗಿ ಸಮಾಪನೆಗೊಂಡಿತು.ಒಂದು ಬೃಹತ್ ಕಾರ್ಯಕ್ರಮವನ್ನು ತಕ್ಕ ಮಟ್ಟಿಗೆ ಯಶಸ್ವಿಯಾಗಿ ಪೂರೈಸಿದ   ಗಾನ ಕಲಾಪ್ರತಿಷ್ಠಾನದ ಸದಸ್ಯರಿಗೆ ಕೃತಜ್ಞತೆಗಳು

ಏಳುದಿನದ ಪ್ರಸಂಗಗಳಲ್ಲಿ ಮೂರುದಿನ ಮಾತ್ರ ಹೋಗಿ ಅನುಭವಿಸುವುದಕ್ಕೆ ಸಾಧ್ಯವಾಗಿ ಆ ಮೂರುದಿನದ ಕಾರ್ಯಕ್ರಮದಲ್ಲಿ “ಕರ್ಣ ಭೇದನ, ಕರ್ಣಾವಸಾನ”   “ಭಕ್ತ ಸುಧನ್ವ” ಮತ್ತು ಕೊನೆಯ ದಿನದ “ಶರಸೇತು ಬಂಧನ” , ಹೀಗೆ ಮೂರು ತಾಳ ಮದ್ದಲೆಯನ್ನು ಆಸ್ವಾದಿಸುಂವತಾಯಿತು. ಅದರಲ್ಲಿ ಕರ್ಣಾವಸಾನ ಸಾಧಾರಣ ಮಟ್ಟದಲ್ಲಿತ್ತು. ತೆಂಕಬೈಲು ಭಾಗವತಿಕೆ ಒಂದು ಬಹಳ ನಿರೀಕ್ಷೆಯಲ್ಲಿತ್ತು. ಆದರೆ ಅದನ್ನು ಸಮಯಾಭಾವದಿಂದ ಆಸ್ವಾದಿಸುವುದು ಆಗದೇ ಹೋಯ್ತು.

ಮೊದಲ ಪ್ರಸಂಗ ಕರ್ಣ ಭೇದನ ಭಾವಪೂರ್ಣ ಸನ್ನಿವೇಶದ ಪ್ರಸಂಗ. ಕರಪತ್ರದಲ್ಲಿದ್ದಂತೆ ಪಾತ್ರಹಂಚಿಕೆಯಾಗದೇ ಇದ್ದದ್ದು ಅಚ್ಚರಿ ತಂದಿತ್ತು. ಕೃಷ್ಣನಾಗಿ ವಾಸುದೇವ ರಂಗ ಭಟ್, ಕರ್ಣನಾಗಿ ಉಜಿರೆ ಅಶೋಕ ಭಟ್, ಕುಂತಿಯಾಗಿ ಸುಧನ್ವ ದೇರಾಜೆ ಕರ್ಣ ಭೇದನದದ ಪಾತ್ರಗಳಲ್ಲಿದ್ದರೆ ಮೊದಲು ಕೃಷ್ಣ ಆನಂತರ ತಾಯಿ ಕುಂತಿ ಹೀಗೆ ಇಬ್ಬರು ಕರ್ಣನ ಮರ್ಮ ಭೇಧನವನ್ನು ಪರೋಕ್ಷವಾಗಿ ಮಾಡುವ ಮಾರ್ಮಿಕ  ಸಂದರ್ಭಗಳು ಹೃದ್ಯವಾಗಿ ಮೂಡಿ ಬಂದರೂ ಸಂಭಾಷಣೆ ಅರ್ಥಗಾರಿಕೆ ಅತ್ಯಂತ ದೀರ್ಘವಾಗಿ ಯಾವ ಪದಕ್ಕೆ ಅರ್ಥ ಎಂಬುದೇ ಮರೆತು ಹೋಗುತ್ತಿತ್ತು. ಅಗತ್ಯಕ್ಕಿಂತ ಹೆಚ್ಚೇ ಸಮಯವನ್ನು ಇದು ತೆಗೆದು ಕೊಂಡು ನಂತರದ ಕರ್ಣವಾಸನದ ಮೊದಲ ಎರಡು ಪದಕ್ಕೆ ಕಿಚ್ಚು ಹತ್ತಿಸಿದಂತಾಗಿ ಅದು ಶಮನವಾಗಬೇಕಾದ್ರೆ ಬರೊಬರಿ ಒಂದು ಘಂಟೆ ತೆಗೆದು ಕೊಂಡಿತು. ಸುಣ್ಣಂಬಳ ಮತ್ತು ಜಬ್ಬಾರ್ ಅವರ ಕರ್ಣಾರ್ಜುನ ಬಿಸಿ ಬಿಸಿ ಚರ್ಚೆಗೆ ಸಂದರ್ಭವೊದಗಿಸಿದ್ದು ಮಾತ್ರವಲ್ಲ ಶಾಸ್ತ್ರಿ ಪದ್ಯಾಣರ ದ್ವಂದ್ವ ಇದನ್ನು ಮತ್ತೂ ಸ್ವಲ್ಪ ಲಂಬಿಸಿತು.ಅಪರೂಪಕ್ಕೆ ಶಾಸ್ತ್ರಿಗಳ ಪದ ಕೇಳುವ ಅವಾಕಾಶ ಸಿಕ್ಕಿತಲ್ಲ ಎಂದು ನಿರೀಕ್ಷೆ ಇಟ್ಟು ಹೊದಾಗ ತೃಪ್ತಿಯಾಗುವಂತೆ ಆಸ್ವಾದಿಸುವುದು ಅಸಾಧ್ಯವಾಗಿಬಿಟ್ಟಿತು. ನನ್ನ ಅನಿಸಿಕೆಯಂತೆ ಆದಿನ ದ್ವಂದ್ವದಲ್ಲಿ ಹಾಡಿದುದಕ್ಕಿಂತಲೂ ಶಾಸ್ತ್ರಿಗಳು ಏಕಾಂಗಿಯಾಗಿ ಹಾಡುವಾಗ ಮೈದುಂಬಿ ಹಾಡಿದ್ದರು. ಕೆಲವು ಪದಗಳಂತು ಆತ್ಯುತ್ತಮ ರಾಗ ಭಾವ ತುಂಬಿ ಹಾಡಿದಾಗ ಇದಕ್ಕೆ ಮೀಸಲಿಟ್ಟ ಸಮಯ ಅತ್ಯಂತ ಕಡಿಮೆಯಾಯಿತಲ್ಲ ಎಂದನಿಸಿತು. ಸರ್ಪಾಸ್ತ್ರ ಮತ್ತು ಕರ್ಣರ ಸಂಭಾಷಣೆ ಮಧ್ಯೆ ಶಲ್ಯನ ಪಾತ್ರ ಮಾತನಾಡುವುದು ಹೊಸಕ್ರಮದಂತೆ ಕಂಡಿತು ಮಾತ್ರವಲ್ಲ ಅದು ಸ್ವಲ್ಪ ಕಿರಿ ಕಿರಿಯಾದಂತೆ ಭಾಸವಾಗುತ್ತಿತ್ತು. ಪದವಿಲ್ಲದ ಅರ್ಥಕ್ಕೆ ಇದೊಂದು ಸೇರ್ಪಡೆ.    ಅದು ಅಲ್ಲದೆ ನೆರೆದ ಸಭಿಕರಲ್ಲಿ ಹಲವರ ಮೊಬೈಲ್ ರಿಂಗಣಿಸುವುದು... ಪಕ್ಕದಲ್ಲೆ ಹಲವರು ದೊಡ್ಡದಾಗಿ ಆಡುವ ಮಾತುಗಳು ಅತ್ಯಂತ ರಸಭಂಗವನ್ನುಂಟು ಮಾಡುತ್ತಿತ್ತು. ಹಲವಾರು ಸಲ ಸಂಘಟಕರು ಮನವಿ ಮಾಡಿದರೂ ಇದು ಅವ್ಯಾಹತವಾಗಿ ಮರುಕಳಿಸುತ್ತಿತ್ತು. ಕೊನೇ ಪಕ್ಷ ತಮ್ಮ ಮೊಬೈಲ್ ನ್ನು ನಿಶ್ಯಭ್ದ ಸ್ಥಿತಿಗೆ (silent mode)  ಇಡಲಾಗದ ಸಂಸ್ಕಾರವಂತರು ನಮ್ಮೂರಿನವರೇ ಎಂದು ಅನಿಸಿಬಿಟ್ಟಿತು. ಎಲ್ಲೋ ಸಂದಿಗೊಂದಿಯಲ್ಲಿಟ್ಟ ಮೊಬೈಲ್ ರಿಂಗ್ ಆಗಿ ಸುತ್ತಮುತ್ತಲಿನವರ ಗಮನ ಸೆಳೆದು ಆ ಮೊಬೈಲ್ ತಣ್ಣಗಾಗುವುದಕ್ಕೆ ಹಲವಾರು ಘಳಿಗೆ ತೆಗೆದುಕೊಳ್ಳುತ್ತಿತ್ತು. ಯಾರಕರೆ ಎಂದು ನೋಡುವುದಕ್ಕೆ ಸ್ವಲ್ಪ ಹೊತ್ತು ಆನಂತರ ಆ ಕರೆಯನ್ನು ಸ್ವೀಕರಿಸುವುದಕ್ಕೆ ಸ್ವಲ್ಪ ಹೊತ್ತು  ಮತ್ತೆ ಮಾತನಾಡಲು ಒಂದಿಷ್ಟು ಹೊತ್ತು.. ಒಟ್ಟಿನಲ್ಲಿ  ಉಳಿದವರ ಸಹನೆ ಪರೀಕ್ಷಾ ಪ್ರಸಂಗ ಇದರ ಮಧ್ಯೆ.   ಕರೆ ಬಂದಾಗ ಎದ್ದು ಹೊರ ಹೋಗಿ ಮಾತನಾಡಲಾಗದಷ್ಟು ಸಂಸ್ಕಾರವಂತರು ಇದ್ದುದು ಅತ್ಯಂತ ಬೇಸರ ಹಾಗು ಕಳವಳಕಾರಿ ವಿಚಾರ. ಇನ್ನು ಕಾರ್ಯಕ್ರಮವಾದಾಗ ಇದರಬಗ್ಗೆ ಎಚ್ಚರ ವಹಿಸುವುದು ಅತ್ಯಂತ ಅವಶ್ಯ. ಅತಿಥಿಗಳು ಬರುವಾಗಲೇ ಮುಖ್ಯದ್ವಾರದಲ್ಲಿ ಎಚ್ಚರಿಸಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡರೆ ಹೇಗೆ? 

ಮರುದಿನದ ಚೂಡಾಮಣಿ ಪ್ರಸಂಗವನ್ನು ಅತ್ಯಂತ ಹೆಚ್ಚು ನಿರೀಕ್ಷೆ ಮಾಡಿದ್ದೆ ಆದಿನ ಹೋಗುವುದಕ್ಕಾಗದೆ ಮರುದಿನದ ಭಕ್ತ ಸುಧನ್ವ ಪ್ರಸಂಗಕ್ಕೆ ಉತ್ಸುಕನಾಗಿಯೇ ಹೋಗಿದ್ದೆ. ಬಹುದಿನದಿಂದ ನಂತರ ಪುತ್ತಿಗೆ ಹೊಳ್ಳರ ಭಾಗವತಿಕೆ ಮತ್ತು ಪದ್ಯಾಣ ಶಂಕರಣ್ಣನ ಮದ್ದಲೆ ಸವಿಯುವ ಬಹುವಾದ ನಿರೀಕ್ಷೆ ಇತ್ತು. ಆ ನಿರೀಕ್ಷೆ  ಮತ್ತು ಬಯಕೆ ಮಾತ್ರ ಅತ್ಯಂತ ತೃಪ್ತಿಯಿಂದ ನೆರವೇರಿತು. ಚೆಂಡೆಯಲ್ಲಿ ಮಾಂಬಾಡಿ ವೇಣು ತುಸು ಪಳಗಿದಂತೆ ಕಂಡು ಬಂದಿತು. ಹೊಳ್ಳ ಮತ್ತು ಪದ್ಯಾಣದವರ ಸಾನ್ನಿಧ್ಯವನ್ನು ವೇಣು ಸರಿಯಾಗಿ ಬಳಸಿಕೊಂಡರು.  ಸುಧನ್ವನಾಗಿ ಉಜಿರೆಯವರು ಮತ್ತು ಪ್ರಭಾವತಿಯಾಗಿ ಉದಯೋನ್ಮುಖ ಬೆಂಗಳೂರು ಅರ್ಥಧಾರಿ ರಾಜೇಶ್ ಅಜ್ಜಾವರ ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದರು. ಉತ್ತಮ ಚುರುಕು ಸಂಭಾಷಣೆಯಿಂದಲೂ ಉತ್ತಮ ಹಿಮ್ಮೇಳದಿಂದಲೂ ಸಮಯ ಸರಿದದ್ದೆ ತಿಳಿಯಲಿಲ್ಲ. ಸತಿ ಶಿರೋಮಣಿ ಪ್ರಭಾವತಿ,.... ನಳಿನಾಕ್ಷಿ ಕೇಳೆ ಈಗ..... ಸತಿಗೆ ಷೋಡಶದ ೠತು ಸಮಯ..ಈ ಪದಗಳು ಮತ್ತು ಮತ್ತು ಮೆಲುಕು ಹಾಕುವಂತಿತ್ತು. ಶಂಕರಣ್ಣನ ಮದ್ದಲೆ ಮಾತ್ರ ಅದ್ಭುತವಾಗಿತ್ತು. ತಾಳಮದ್ದಲೆ ಕಳೆದು ದಿನ ಸಂದರೂ ಇನ್ನೂ ಅ ಮದ್ದಲೆಯ ನಿನಾದದ ಗುಂಗು ಹಾಗೆ ಇದೆ ಎಂದರೆ ಅದೆಷ್ಟು ಉತ್ಕೃಷ್ಟವಾಗಿರಬಹುದು? ಅಲ್ಲಿಯ ವರೆಗೂ  ಆ ಕರ್ಷಣೆಯನ್ನು ಉಳಿಸಿಕೊಂಡ ಪ್ರಸಂಗ ಪ್ರಭಾವತಿಯ ನಿರ್ಗಮನವಾಗುತ್ತಿದ್ದಂತೆ ಸಪ್ಪೆಯೆನಿಸತೊಡಗಿತು. ಸುಧನ್ವಾರ್ಜುನರ ಯುದ್ಧ ಸನ್ನಿವೇಶ ಪರಸ್ಪರ ಉಭಯಕುಶಲೊಪರಿ ಮಾತನಾಡಿಕೊಂಡಂತೆ ಅನಿಸಿತು. ಯುದ್ದ ಸನ್ನಿವೇಶದ  ಕಲ್ಪನೆಯ ಭಾವವು ಅಲ್ಲಿ ಬರಲಿಲ್ಲ ಕೃಷ್ಣನ ಪ್ರವೇಶದನಂತರ ಪ್ರಸಂಗ ಚುರುಕುಗೊಂಡರು ಆಗ ಸಮಯ ಮೀರಿಹೊಗಿತ್ತು.
         
          ಕೊನೆಯ ದಿನದ ಶರಸೇತು ಬಂಧನ ಬಹಳ ಉತ್ತಮವಾಗಿತ್ತು. ಎಲ್ಲವನ್ನು ಮರೆಸುವಂತಹ ಕಾರ್ಯಕ್ರಮವಾಗಿ ಮೂಡಿಬಂತು. ಶುರುವಿನಿಂದಲೇ ಉತ್ತಮ ಲಯದಲ್ಲಿ ಆರಂಭವಾದ ತಾಳ ಮದ್ದಲೆ ಕೊನೆಯ ಕ್ಷಣದವರೆಗೂ ಆ ಬಿಸುಪನ್ನು ಕಾಯ್ದು ಕೊಂಡಿತು. ಎಂದಿನಂತೆ ಶಂಕರಣ್ಣನ ಮದ್ದಲೆ ಸರಸದ ಮಾತು ಆಡುತ್ತಿದ್ದರೆ ಮಧ್ಯದಲ್ಲಿ ಮಾಂಬಾಡಿಯವರ ಚೆಂಡೆ ಸರಸದ ಕಾವ್ಯವನ್ನೇ ಬರೆಯುತ್ತಿತ್ತು ಸುಮಾರು ಹನ್ನೆರಡು ವರ್ಷಗಳ ಬಳಿಕ ಮಾಂಬಾಡಿಯವರ ಚೆಂಡೆವಾದನ ಸವಿಯುವ ಘಳಿಗೆ ಕೂಡಿಬಂದುದು ಅದ್ಭುತ ಸ್ಮರಣೀಯ ಕಾರ್ಯಕ್ರಮವನ್ನಾಗಿಸಿತು. ಚೆಂಡೆಯ ವೈವಿಧ್ಯ ಮಯ ಸ್ವರ ಲಯಕ್ಕೆ ಪ್ರೇಕ್ಷಕರು ನಿಬ್ಬೆರಗಾದರು. ತಾಳ ಮದ್ದಲೆಯ ಸನ್ನಿವೇಶಗಳಲ್ಲಿ ಅಷ್ಟೇನು ಮಹತ್ವವಿಲ್ಲದ ಪದಗಳು ಅಂದರೆ ವೀರರಸದ ಏರಿ ಪದಗಳಲ್ಲಿ ಕೂಡ ವಿಶೇಷತೆಯನ್ನು ಬರಿಸಿದ್ದು ಹಿರಿಯ ಕಲಾವಿದರ ಕಲಾನೈಪುಣ್ಯಕ್ಕೆ ಸಾಕ್ಷಿ. ಅತ್ಯುತ್ತಮ ತಾಳಮದ್ದಲೆಯನ್ನು ಕಾಣುವ ಸೌಭಾಗ್ಯ ಒದಗಿಬಂದದ್ದು ಸುಳ್ಳಲ್ಲ.

          ಇಂತಹ ಬೃಹತ್ ಯೋಜನೆಗಳನ್ನು ನಿರ್ವಹಿಸುವುದು ಬಹಳ ಶ್ರಮದಾಯಕ ಕೆಲಸ. ಎಲ್ಲವೂ ಸರಿ ಎಂದು ಊಹಿಸಿದಾಗ ಕಲಾವಿದರ ಲಭ್ಯತೆ ಪ್ರಶ್ನಾರ್ಹವಾಗಿ ನಿರ್ವಹಣೆ ಅತ್ಯಂತ ಕಠಿಣವಾಗುವುದು. ಆದರೂ ಕೆಲವೊಂದು ಅನಿಸಿಕೆಗಳು ಸುಳಿಯದೆ ಉಳಿಯುವುದಿಲ್ಲ. ಮೊದಲಾಗಿ ಇದು ಹಿರಿಯ ಅರ್ಥಧಾರಿ ಹರಿದಾಸ ರಾಮದಾಸ ಸಾಮಗರ ಸಂಸ್ಮರಣೆಯ ಕಾರ್ಯಕ್ರಮವಾಗಿದ್ದುದು ಶ್ಲಾಘನೀಯ. ಈ ರೂಪದಲ್ಲಿ ಹಿರಿಯರನ್ನು ಸ್ಮರಿಸುವುದು ಒಂದು ರೋಮಾಂಚನದ ಸಂಗತಿ. ಆದರೂ ಕಾರ್ಯಕ್ರಮದಲ್ಲಿ ಕೆಲವು ಇನ್ನೂ ಕೆಲವು ಕಲಾವಿದರ  ಉಪಸ್ಥಿತಿಯಿದ್ದಲ್ಲಿ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು. ರಂಗದಲ್ಲಿ ಸಾಮಗರ ಹೆಚ್ಚು ಒಡನಾಡಿಯಾಗಿದ್ದ ರಂಗದಲ್ಲಿ ಜತೆಯಾಗಿ ಮಿಂಚುತ್ತಿದ್ದ ಯಕ್ಷದಂಪತಿಗಳೆಂದು ಅನ್ವರ್ಥವಾಗಿರುತ್ತಿದ್ದ ಶ್ರೀ ಕೋಳ್ಯೂರು ರಾಮಚಂದ್ರ ರಾಯರು ಇರಬೇಕಿತ್ತು.  ಮಾತ್ರವಲ್ಲ ಹಿರಿಯ ಕಲಾವಿದರಾದ ಸಾಮಗರ ಶಿಷ್ಯರೆಂದು ಗುರುತಿಸಲ್ಪಟ್ಟ ಶ್ರೀಸೂರಿಕುಮೇರಿಯವರೂ ಇರುತ್ತಿದ್ದರೆ..  ಅಲ್ಲದೇ ಭಾಗವತ ದಿನೇಶ ಅಮ್ಮಣ್ಣಾಯರನ್ನಾಗಲಿ, ಕುರಿಯ ಗಣಪತಿ ಶಾಸ್ತ್ರಿಗಳನ್ನು ಅಥವಾ ಬಲಿಪ್ಪರನ್ನು( ಇದು ನಾವು ಸೂಚಿಸುವ ಹೆಸರೆಂದು ಪರಿಗಣಿಸದೇ ಇದ್ದರೂ)  ಇವರನ್ನೆಲ್ಲ ಲಕ್ಷಿಸದೇ ಇದ್ದದ್ದು ಒಂದು ರೀತಿಯ ಅವಗಣನೆಯೇ ಆಗಿ ಕಂಡು ಬರುತ್ತದೆ. ಒಂದು ವಾರದ ಸಪ್ತಾಹದಲ್ಲಿ ಒಂದು ದಿನವಾದರೂ  ಇವರೆಲ್ಲರನ್ನು ಗಣನೆಗೆ ತೆಗೆದು ಕೊಳ್ಳದಿದ್ದ ಕಾರಣವೇನು ಎಂದು ಅರ್ಥವಾಗುವುದಿಲ್ಲ. ಇದರಲ್ಲಿ ಸೂರಿಕುಮೇರಿಯವರು ಬೆಂಗಳೂರಿನಲ್ಲಿ ವರ್ಷದಲ್ಲಿ ಹಲವು ಬಾರಿ ಕಾಣಿಸಿಕೊಳ್ಳುವುದರಿಂದ ಉಳಿದ ಕಲಾವಿದರ ಲಭ್ಯತೆ ಅಥವಾ ಇನ್ನಿತರ ಕಾರಣಗಳೇನೇ ಇದ್ದರು ಮೇಲಿನ ಹಿರಿಯರು ಅವಗಣಿಸಲ್ಪಡುವುದು ಮಾತ್ರ ಸುಳ್ಳಲ್ಲ. ಪದೇ ಪದೇ ಮರುಕಳಿಸುವ ಮುಖಗಳೇ ಪುನಃ ಪುನಃ ಚರ್ವಿತ ಚರ್ವಣವಾಗುವುದು ಚಿಂತೆಯನ್ನು ತರಿಸುತ್ತದೆ. ಕಾರ್ಯಕ್ರಮದ ಕರಪತ್ರ ನೋಡಿ ಮಿತ್ರರೊಬ್ಬರು ಹೇಳಿದ್ದರು ಇದು ಸುಣ್ಣಂಬಲ ಅರ್ಥವೈಭವಾಗತ್ತದೆ. ಹಾಗಾಗಿದ್ದರೆ ಒಂದು ರೀತಿಯ ತೃಪ್ತಿಯೂ ಇರುತ್ತಿತ್ತು. ಆದರೂ ಮಹತ್ವದ ಪಾತ್ರಗಳು ಅವರಿಂದ ನಿರ್ವಹಿಸಲ್ಪಡಲಿಲ್ಲ.

         
ಒಟ್ಟಿನಲ್ಲಿ ಕೋನೆಯ ಅವಧಿಗೆ ಕಾರ್ಯಕ್ರಮ ಸ್ತುತ್ಯರ್ಹವಾಗಿತ್ತು. ಶುಭ ನಿಮಿತ್ತವೆಂಬಂತೆ ಆದಿನ ಹೊರಗಿನ ಕಿರಿ ಕಿರಿ ಶಬ್ದ ಮಾಲಿನ್ಯದ ರಸಭಂಗ ಅಷ್ಟಾಗಿ ಬಾಧಿಸಲಿಲ್ಲ. ಆದರೂ ಯಕ್ಷಗಾನ ತಾಳಮದ್ದಲೆಗೆ ಆ ಸ್ಥಳ ಅಷ್ಟೊಂದು ಸೂಕ್ತ ಎಂದು ಅನ್ನಿಸುವುದಿಲ್ಲ. ಮಧ್ಯೆ ಮಧ್ಯೆ ಆಗುವ ಶಬ್ದ ಮಾಲಿನ್ಯ ಬಹಳ ರಸಭಂಗವನ್ನುಂಟು ಮಾಡುತ್ತದೆ.ದ್ವನಿ ವರ್ಧಕದ ಎಕ್ಕೊ... ಸ್ವರವೂ ಇದರ ಜತೆ ಇನ್ನೊಂದು. ವಾಹನಗಳು ಪಾರ್ಕಿಂಗ್ ಸ್ಥಳಕ್ಕೆ ಬರಬೇಕಾದರೆ ಕಡಿದಾದ ಚಡಾವನ್ನು ಹತ್ತಿ ಬರುವುದರಿಂದ ಆಗಾಗ ಮೊದಲ ಗೇರ್ ನಲ್ಲೆ ಬರುವ ವಾಹನಗಳು ಸಭೆಯಲ್ಲಿ ಕುಳಿತ ಎಲ್ಲರ ತಲೆಯನ್ನು ಟೇಬಲ್ ಪ್ಯಾನ್ ಅಗಿ ಪರಿವರ್ತಿಸುವುದು  ತಮಾಷೆಯಂತೆ ಭಾಸವಾಗುತ್ತಿತ್ತು.   ಹಿರಿಯ ಪ್ರಸಂಗ ಕರ್ತ ಭಾಗವತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸನ್ಮಾನ, ಯಕ್ಷಗುರುಗಳೆಂದು ಪರಿಗಣಿಸಲ್ಪಟ್ಟ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರವರನ್ನು ಆದರಿಸಿದ ಹಾಗೇ  ಇನ್ನೂ ಹಲವು ಸಂಗತಿಗಳು ರೋಮಾಂಚನವನ್ನುಂಟು ಮಾಡುತ್ತವೆ. ಬೆಂಗಳೂರಿಗರ ಪಾಲಿಗೆ ಮತ್ತೋಂದು ಸ್ಮರಣೀಯ ಕಾರ್ಯಕ್ರಮ.

. 

Wednesday, October 19, 2011

ಭಗವಂತನೊಳಗೊಂದು ಭಾಗವತ




ಭಗವಂತನಿಗೂ ಭಾಗವತನಿಗೂ ಮೇಲ್ನೋಟಕ್ಕೆ ಕಾಣುವ ಒಂದು ವೆತ್ಯಾಸ ಶೂನ್ಯ, ಇದರ ಅರ್ಥ ಇಬ್ಬರಲ್ಲೂ ವೆತ್ಯಾಸವೇ ಇಲ್ಲ.  ಅದು ಶೂನ್ಯ ಎಂತಲೂ, ಬರಣಿಗೆಯಲ್ಲಿ ಅಥವಾ ಉಚ್ಚಾರದಲ್ಲಿ ಭಗವಂತನಲ್ಲಿರುವ ಶೂನ್ಯ ಬೇರ್ಪಡಿಸಿದರೆ ಅದು ಭಗವತ ಅಥವಾ ಭಾಗವತ. ಭಗವಂತ ಸರ್ವಾಂತರ್ಯಾಮಿ. ಎಲ್ಲೆಲ್ಲೂ ಅವನ ಅಸ್ತಿತ್ವವಿದೆ.  ಹಾಗಾದರೆ ಶೂನ್ಯದಲ್ಲೂ ಅಸ್ತಿತ್ವ ಗುರುತಿಸಬಹುದಾದಲ್ಲಿ ಶೂನ್ಯದಿಂದ ಭಗವಂತನನ್ನು ಬೇರ್ಪಡಿಸಬೇಕು. ಅದನ್ನು ಹೀಗೆ ವಿಶ್ಲೇಷಣೆ ಮಾಡಿದರೆ ಶೂನ್ಯದಲ್ಲಿರುವ ಭಗವಂತನನ್ನು ಹೊರತೆಗೆದು ಅಂದರೆ ಭಗವಂತನ ದರ್ಶನವನ್ನು ಮಾಡಿಸುವ ಕಾರ್ಯ ಭಾಗವತನದ್ದು. ಈ ಶಭ್ದ ಮೌಲ್ಯ ತುಲನೆಯನ್ನು ಹಲವಾರು ವಿದ್ವಾಂಸರು ಮಾಡುತ್ತಾ ಭಾಗವತ ಎಂಬ ಪದಕ್ಕೆ ಅನ್ವರ್ಥವನ್ನು ಯಕ್ಷಗಾನದಲ್ಲಿ ಕಂಡುಕೊಂಡ ಹಾಗೆ ಗ್ರಹಿಕೆಯಾಗುತ್ತದೆ. ಹೀಗಿರುವಾಗ ಭಾಗವತನ ಜವಾಬ್ದಾರಿ ಅತ್ಯಂತ ಗಂಭೀರವಾದದ್ದು ಮತ್ತು ಗುರುತರವಾದದ್ದು.ಶೂನ್ಯ ಎಲ್ಲಿದೆಯೋ ಅಲ್ಲಿ ಭಾಗವತನನ್ನು ಬರಿಸಿದರೆ ಅಲ್ಲಿ ಭಗವಂತನ ದರ್ಶನವಾಗುತ್ತದೆ. ಎಷ್ಟು ಸುಂದರ ಕಲ್ಪನೆ.!!

ಯಕ್ಷಗಾನದಲ್ಲಿ ಆದ್ಯ ಸ್ಥಾನ ನೀಡುವ ಮೂಲಕ ಭಾಗವತ ಶಬ್ದ ಮತ್ತು ಸ್ಥಾನ ಮಹತ್ವದ ಅರ್ಥ ಕಲ್ಪಿಸಲಾಗಿದೆ. ಭಾಗವತ ಎಂಬ ಶಬ್ದಕ್ಕೆ ಭಗವತ್ ಭಕ್ತ ಅರ್ಥವಿದ್ದರೆ ಗಾಯಕ ಎಂಬ ಅರ್ಥವೂ ಇದೆ.   ಹಾಗಾಗಿ ಯಕ್ಷಗಾನದಲ್ಲೂ ಗಾಯನವೇ ಪ್ರಧಾನವಾಗಿರುವ ಸ್ಥಾನಕ್ಕೆ ಭಾಗವತ ಎಂಬ ಶಬ್ದ ಬಳಕೆಗೆ ಬಂದುದಿರಬಹುದು. ಯಕ್ಷಗಾನದಲ್ಲಿ ಅನಾದಿಕಾಲದಿಂದಲೂ ಭಾಗವತರಿಗೆ ಪರಮೋಚ್ಚ ಸ್ಥಾನ. ಯಕ್ಷಗಾನದ ಪ್ರತಿಯೊಂದು ವಿಭಾಗದಲ್ಲೂ ಪರಿಣತಿ ಮತ್ತು ಅಪಾರವಾದ ಜ್ಞಾನ ಅನುಭವ ಪಡೆದಾಗಲೇ ಈ ಪದವಿ ಪ್ರಾಪ್ತಿಯಾಗುವುದು.  

ಯಕ್ಷಗಾನದಲ್ಲಿ ಭಾಗವತ ಸ್ಥಾನ ಅತ್ಯಂತ ಗೌರವಯುತವಾದುದು. ಭಾಗವತರ ನಿಲುಮೆಯೇ ಅಂತಿಮ. ಆ ಸ್ಥಾನಕ್ಕೆ ತಕ್ಕುದಾದ ನ್ಯಾಯ ಒದಗಿಸಲು ಭಾಗವತರು ಬಹಳ ನಿಷ್ಠೂರವಾಗಿಯೂ ಇರಬೇಕಾಗುತ್ತದೆ.  ಭಾಗವತರು ನಿಷ್ಠೂರವಾಗಿ ನಡೆದುಕೊಂಡ ಹಲವು ಉದಾಹರಣೆಗಳು ಕಥೆಗಳು ಯಕ್ಷಗಾನದಲ್ಲಿ ಭಾಗವತ ಎಷ್ಟು ಪ್ರಧಾನವಾಗುತ್ತಾರೆ ಎಂಬುದಕ್ಕೆ ನಿದರ್ಶನವಾಗಿದೆ.  ಬಹಳ ಹಿಂದೆ ಮಂಗಳೂರಿನ ಉರ್ವಸ್ಟೋರಿನಲ್ಲಿನ ಕಟೀಲು ಮೇಳದ ಹರಕೆ ಆಟ. ಹರಕೆ ಸಲ್ಲಿಸುವರು ದೇವಿಯ ಪರಮ ಭಕ್ತರು.  ಅತ್ಯಂತ ಅನುಕೂಲವಂತರೂ ಸಾರ್ವಜನಿಕವಾಗಿ ಗಣ್ಯವ್ಯಕ್ತಿಗಳೂ ಆಗಿದ್ದರು. ಅಂದು ಆಟ ನಡೆಯುತ್ತಿತ್ತು. ವಾಡಿಕೆಯಂತೆ ದೇವಿ ಮಹಾತ್ಮೆ ಪ್ರಸಂಗ.  ಬಹಳ ಅದ್ಧೂರಿಯಾಗಿ ನಡೆಯುತ್ತಿದ್ದ ಪ್ರದರ್ಶನ. ಅಸಂಖ್ಯ ಸಂಖ್ಯೆಯಲ್ಲಿ ನೆರೆದ ಪ್ರೇಕ್ಷಕರು. ಸೇವೆ ಸಲ್ಲಿಸುವ ಗಣ್ಯವ್ಯಕ್ತಿಗಳಿಗೆ ದೇವಿ ಭಕ್ತಿ ಅವೇಶ ಮನಸ್ಸಿನಲ್ಲಿ ಮೂಡಿತು. ಹಾಗಾಗಿ ದೇವಿ ಪ್ರತ್ಯಕ್ಷವಾಗುವ ಸಂದರ್ಭವೊಂದರಲ್ಲಿ ಹೂವಿನ ಮಾಲೆಯೋ ನೋಟಿನ ಮಾಲೆಯೊ ಜ್ಞಾಪಕವಿಲ್ಲ, ದೇವಿಯ ಕೊರಳಿಗೆ ಹಾಕುವುದಕ್ಕಾಗಿ ವೇದಿಕೆಗೆ ಪ್ರವೇಶಿಸುವವರಿದ್ದರು. ಆದರೆ ಅಂದು ಭಾಗವತರು ನಿಷ್ಠೂರವಾಗಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ.  ಭಾಗವತನಿಗೆ ಮೊದಲು ಗೌರವ ಸಲ್ಲಿಸಿ ಆಮೇಲೆ ವೇಶಕ್ಕೆ ಗೌರವ ಸಲ್ಲಿಸಿ. ರಂಗಸ್ಥಳದಲ್ಲಿ ಪಾತ್ರ ಯಾವುದಾದರೂ ಭಾಗವತನೇ ದೊಡ್ಡವ ಎಂದು ಬಿಟ್ಟರು.

ಯಕ್ಷಗಾನ ತಾಳಮದ್ದಲೆಯಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ. ಹಿರಿಯ ಭಾಗವತರೊಬ್ಬರು ಮೊದಲೆ ಕಾರ್ಯಕ್ರಮದ ಸ್ಥಳದಲ್ಲಿದ್ದರು. ನಂತರ ಬಂದ ಆದಿನದ ಪ್ರಸಿದ್ದ ಅರ್ಥಧಾರಿಗಳೊಬ್ಬರು ಬಂದವರೇ ಹಿರಿಯ ಭಾಗವತರನ್ನು ತಮ್ಮ ಬಳಿಗೆ ಬರುವಂತೆ ಕರೆ ಕಳುಹಿದರು. ಸ್ವಭಾವತಹ ಸಾಧುವಾದರೂ ರಂಗದ ಮೇಲೆ ನಿರ್ದಾಕ್ಷಿಣ್ಯವಾಗಿ ವರ್ತಿಸುವ ಸ್ವಭಾವದ ಭಾಗವತರು..” ಅವರೇ ನಾನಿದ್ದಲ್ಲಿಗೆ ಬರಲಿ. ಇವತ್ತಿನ ಕಾರ್ಯಕ್ರಮಕ್ಕೆ ನಾನೇ ಭಾಗವತ. ಯಾರೇ ಆದರೂ ನಾನಿದ್ದಲ್ಲಿಗೇ ಬರಲಿ.” ಎಂದು ಬಿಟ್ಟು ಭಾಗವತ ಸ್ಥಾನದ ಹಿರಿಮೆಯನ್ನು ತೋರಿಸಿಕೊಟ್ಟರು.

ಇತ್ತೀಚೆಗೆ ಹಲವು ಕಡೆ ಭಾಗವತರ ಶ್ರಮ ಕಡಿಮೆ ಮಾಡುವುದಕ್ಕೋ ಅಥವ ಭಾಗವತ ಕಾರ್ಯವ್ಯಾಪ್ತಿಯನ್ನು ಕುಂಠಿತಗೊಳಿಸುವುದನ್ನು ಕಾಣಬಹುದು. ಅದರ ಸ್ವರೂಪವೇ ನಿರ್ದೇಶಕ ಎಂಬ ಸ್ವತಂತ್ರ ಹುದ್ದೆಯ ಸೃಷ್ಟಿ. ಈ ಸಂದರ್ಭದಲ್ಲಿ ಭಾಗವತರು ಕೇವಲ ಸಾಮಾನ್ಯ ಅಂಗವಾಗಿ ಕೇವಲ ಹಾಡುವುದಷ್ಟಕ್ಕೇ  ಸೀಮಿತವಾಗಿಬಿಡುತ್ತಾರೆ. ಯಾವ ರೀತಿಯಲ್ಲಿ ಹಾಡುವುದಕ್ಕೆ ಮಾತ್ರ ಸೀಮಿತ ಗೊಂಡರೂ ಭಾಗವತರಿಗೆ ಅನಿವಾರ್ಯ ಕರ್ಮಗಳು ಸುತ್ತಿಕೊಂಡು ಅವರು ಪರೋಕ್ಷವಾಗಿ ಪ್ರಧಾನವಾಗಿಯೇ ಬಿಡುತ್ತಾರೆ. ಇದು ಕೆಲವೊಂದು ಸಲ ಭಾಗವತರ ಸಾಮಾರ್ಥ್ಯವನ್ನು ತೋರಿಸಿಬಿಡುತ್ತದೆ. ನಿರ್ದೇಶಕನ ಪದವಿಯೇ ಗೌಣವಾಗುವ ಸಂದರ್ಭವೇ ಅಧಿಕ. ಯಕ್ಷಗಾನಕ್ಕೆ ಸಂಬಂಧಿಸಿ ಅಷ್ಟೊಂದು ತಾದಾತ್ಮ್ಯ ಸಂಬಂಧ ಮತ್ತು ಸ್ಥಾನ ಭಾಗವವತರದ್ದು. ಭಾಗವತ ಸ್ಥಾನದ ಗೌರವವನ್ನು ಭಾಗವತರು ರಕ್ಷಿಸುವುದು ಎಷ್ಟು ಅನಿವಾರ್ಯವೋ ಅಷ್ಟೇ ಅನಿವಾರ್ಯತೆ ಪ್ರತಿಯೊಂದು ಅಂಗಗಳಿವೆ. ಹಿಮ್ಮೇಳದ ಸಹಕಲಾವಿದರಾಗಲೀ, ವೇಶಧಾರಿಗಳಾಗಲೀ ಆ ಸ್ಥಾನವನ್ನು ಗೌರವಿಸುವುದು ಅನಿವಾರ್ಯ ಮಾತ್ರವಲ್ಲ ಅದು ಪ್ರಮಾಣರೂಪವು ಹೌದು. ಯಾರು ಹೇಗೆ ಸ್ವತಂತ್ರ ಪ್ರವೃತ್ತರಾದರು, ಇನ್ನಿತರರು ಬಾಲ ಬಿಚ್ಚಿದಂತೆ ಭಾಸವಾದರೂ  ಯಾವುದಾದರೂ ಮುಖ್ಯ ಹಂತದಲ್ಲಿ ಬಾಲದ ತುದಿ ಭಾಗವತರ ಕೈಯಲ್ಲೇ ಇರುತ್ತದೆ. ಇದು ಸರ್ವ ವಿದಿತ. ಅದುವೇ ಯಕ್ಷಗಾನದ ವೈಶಿಷ್ಟ್ಯ. ಇದನ್ನು ಅರಿತಾಗಲೇ ಭಾಗವತರಿಗೆ ಭಾಗವತರ ಮೌಲ್ಯ ಅರಿವಾಗುವುದು. ನಿಜವಾದ ಪದವಿಗೌರವ ಲಭ್ಯವಾಗುವುದು. ಅದಕ್ಕಾಗಿ ಪ್ರತೀ ಕ್ಷಣ ರಂಗಸ್ಥಳವನ್ನೂ ಗಮನಿಸುತ್ತಾ ಇರಬೇಕು. ಭಾಗವತರು ರಂಗದ ಮೇಲೆ ಶಿಸ್ತಿನಿಂದ ಇದ್ದರೆ ಬಾಲವೂ ಶಿಸ್ತಿನಿಂದ ಇರಬೇಕಾದುದು ಅನಿವಾರ್ಯವಾಗಿಬಿಡುತ್ತದೆ. ಪದೇ ಪದೇ ಪಕ್ಕದವರತ್ತ ಮಾತನಾಡುವುದು, (ಇತ್ತೀಚೆಗಿನ ಅಸಹ್ಯವೆಂದರೆ ಮೊಬೈಲ್ ಬಳಸುವುದು)  ಅಗಾಗ ಚೌಕಿಯತ್ತ ಎದ್ದು ಹೋಗಿ ಇಣುಕುವುದು , (ಮರಿ ಭಾಗವತರೆಂದು ಕರೆಸಿಕೊಳ್ಳುವುವರು ಇದನ್ನೂ ಅನುಕರಿಸಿಬಿಡುತ್ತಾರೆ...!!!) ಇದೆನ್ನೆಲ್ಲಾ  ಅಶಿಸ್ತು ಎಂದು ಪರಿಗಣಿಸುವುದಕ್ಕೆ ಮಾಹಾಜ್ಞಾನದ ಅವಶ್ಯಕತೆ ಏನು ಬೇಕಾಗಿಲ್ಲ. ಯಕ್ಷಗಾನಕ್ಕೇ ತೀರ ಅಪರಿಚಿತನಾದವನೂ ಇದನ್ನು ಹೇಳಬಲ್ಲ.

ಭಾಗವತರಲ್ಲಿ ಕರ್ತವ್ಯ ಪ್ರಜ್ಞೆ ಹೇಗೆ ಸದಾ ಇರಬೇಕೋ ಅದರ ಅರಿವು ಸಹಕಲಾವಿದರಲ್ಲಿಯೂ ಇರಬೇಕು. ನಮ್ಮ ಮನೆಯ ಹಿರಿಯರನ್ನು ನಾವು ಗೌರವ ಪ್ರೀತಿಯಿಂದ ಕಂಡರೆ ಊರವರೂ ಕಾಣುವರು. ಗೌರವವನ್ನು ಉಳಿಸಿಕೊಳ್ಳುವುದು ಹಿರಿಯರಿಗೆ ಎಷ್ಟು ಅನಿವಾರ್ಯವೋ ಅದನ್ನು ಗಳಿಸಿಕೊಳ್ಳುವುದು ಅಷ್ಟೇ ಅನಿವಾರ್ಯ. ಈ ಅನಿವಾರ್ಯತೆ ಕೇವಲ ಹಿರಿಯರಿಗೆ ಸಂಬಂಧಿಸಿ ಮಾತ್ರ ಉಳಿಯುವುದಿಲ್ಲ ಕಿರಿಯರೆಲ್ಲರಿಗೂ ಇದು ಅನಿವಾರ್ಯವಾಗಿ ಬಿಡುತ್ತದೆ. ಇದು ಮಹತ್ವದ ಅರಿವೂ ಆಗಿರುತ್ತದೆ. ಭಾಗವತ ಪದವಿ ಅದು ಬರೀದೇ ಬರುವುದಲ್ಲ. ಬರಿದೇ ಬಂದರು ಅದು ಉಳಿಯುವುದೂ ಇಲ್ಲ. ಮಾತ್ರವಲ್ಲ ಅದನ್ನು ತಾಳಿಕೊಂಡು ನಿರ್ವಹಿಸುವ ಸಾಮಾರ್ಥ್ಯವೂ ಇರುವುದಿಲ್ಲ. ಬರೀದೆ ಎರಡು ಪದ ಹೇಳಿದಲ್ಲಿ ಭಾಗವತನೂ ಆಗಲಾರ. ಅದಕ್ಕೆ ಅವಿರತ ಶ್ರಮದಿಂದ ಸಾಧಿಸಿದ ಜ್ಞಾನವನ್ನು ನಿಧಿಯಾಗಿ ಹೊಂದಬೇಕು. ಅಥವಾ ಹೊಂದುವಲ್ಲಿ ಉದ್ಯುಕ್ತನಾಗಿ ಅದನ್ನು ಸಾಧಿಸುವ ಕಲಿಯುವ ಮನೋಭಾವವಾದರೂ ಇರಬೇಕು. ಹಾಗಿದ್ದರೆ ಮಾತ್ರ ಶೂನ್ಯದಲ್ಲಿ ಭಾಗವತನ್ನು ತಂದು ಭಗವಂತನನ್ನಾಗಿಸಬಹುದು.










Friday, October 7, 2011

ಅರ್ಥ ಪೂರ್ಣ ಅರ್ಥವೈಭವ

ಇತ್ತೀಚೆಗೆ ಉಜಿರೆಯಲ್ಲಿ ಹಿರಿಯ ಕಲಾವಿದರಾದ ಸೂರಿಕುಮೇರಿ ಗೋವಿಂದ ಭಟ್ಟರ ಅರ್ಥ ವೈಭವ ಎಂಬ ತಾಳಮದ್ದಲೆ ಸಪ್ತಾಹ ಜರಗಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ವಿಶೇಷವಾಗಿ ಸಪ್ತಾಹವು ಅತಿ ಯಶಸ್ವಿಯಾಗಿ ನಡೆಸಲ್ಪಟ್ಟಿತ್ತು. ಅದನ್ನು ಆಲಿಸುವ ಸೌಭಾಗ್ಯವಷ್ಟೇ ನಮಗೆ ಸಾಧ್ಯವಾದದ್ದು. ಇದಕ್ಕೆ ಮೊದಲಾಗಿ ನಮ್ಮ ಮಿತ್ರ ಸುಬ್ಬಣ್ಣನಿಗೆ ಯಥಾವತ್ತಾಗಿ ಧನ್ಯವಾದ ಸಲ್ಲಿಸಬೇಕು.


ಉತ್ತಮವಾದ ಪ್ರಸಂಗ ಆಯ್ಕೆಯಿಂದ ಹಿಡಿದು ಉತ್ತಮ ಹಿಮ್ಮೇಳ ಮುಮ್ಮೇಳವನ್ನು ಒಟ್ಟಾಗಿ ಸೇರಿಸಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ಅದರಲ್ಲೂ ಗಮನ ಸೆಳೆದ ಪ್ರಸಂಗಗಳು ರಾಜಾ ಕೌಶಿಕ, ಗಧಾಯುದ್ದ, ಭಸ್ಮಾಸುರ, ಭೀಷ್ಮಾರ್ಜುನ, ಹಿರಣ್ಯ ಕಶಿಪು ವಧೆ ಮತ್ತು ಇಂದ್ರಜಿತು ಕಾಳಗ. ಎಲ್ಲದರಲ್ಲೂ ಗೋವಿಂದಣ್ಣ ವಿಜ್ರಂಭಿಸಿದ ಪರಿ ನೋಡಿದರೆ ಇದು ಅವರು ಕಡೆದ ಒಂದೊಂದೇ ಪಾತ್ರಗಳನ್ನು ಚೆನ್ನಾಗಿ ಹೊಳಪು ಬರುವಂತೆ ತೊಳೆದು ಒಪ್ಪಗೊಳಿಸಿ ಪುನಃ ಪ್ರದರ್ಶಿಸಿದಂತೆ ಇತ್ತು. ಕೇವಲ ರಂಗದ ಮೇಲೆಯೇ ಸರಿ ಎನ್ನಿಸುವಂತ ಪ್ರಸಂಗಗಳಿಗೆ ಜೀವ ತುಂಬಿಸುತ್ತಿದ್ದ ಪಾತ್ರಗಳನ್ನು ಅಷ್ಟೆ ಸಮಂಜಸವಾಗಿ ಮತ್ತು ವೈಭವವನ್ನು ಸಾಕ್ಷಾತ್ಕರಿಸುವಂತೆ ತಾಳ ಮದ್ದಲೆಯಲ್ಲೂ ವೈಭವೀಕರಿಸಿದ್ದು ಗೋವಿಂದಣ್ಣನ ಪ್ರತಿಭೆಗೆ ನಿದರ್ಶನವಾಗಿ ಪರಿಣಮಿಸಿತು. ಹಲವು ಬಗೆಯ ಹಲವು ವಿಧದ ಪಾತ್ರಗಳು ಕೇವಲ ವಾಙ್ಮಯ ಶಕ್ತಿಯಿಂದ ಜೀವತಳೆದು ನಿಂತವೆಂದರೆ ಆಶ್ಚರ್ಯವಾಗಿಬಿಡುತ್ತದೆ. ತಮ್ಮ ಆಳವಾದ ಮತ್ತು ಹರಿತವಾದ ಕಂಠದಿಂದ ಗೋವಿಂದಣ್ಣ ಕೌಶಿಕನಾಗಿ ಕೌರವನಾಗಿ ಅಸುರ ಭಸ್ಮಾಸುರನಾಗಿ ಮೆರೆದ ಪರಿ ಗೋವಿಂದಣ್ಣನನ್ನು ಅರಿತವರಿಗೇ ಆಶ್ಚರ್ಯವೆನಿಸುವಷ್ಟು ರೀತಿಯಲ್ಲಿ ಪ್ರಸ್ತುತವಾಗಿತ್ತು. ಗಧಾಯುದ್ದವೆಂಬ ಪ್ರಸಂಗ ಅಪರೂಪವೆನ್ನಿಸುವಂತೆ ತಾಳಮದ್ದಲೆಯಲ್ಲಿ  ಪ್ರಸ್ತುತವಾಗುವುದು ಇದೆ. ಗೋವಿಂದಣ್ಣ ಹಾಗು ಪುತ್ತಿಗೆ ರಘುರಾಮ ಹೊಳ್ಲರ ಜೊತೆಗಾರಿಕೆಯ ಜುಗಲ್ ಬಂದಿ ರಂಗಸ್ಥಳದ ಮೇಲೆ ವರ್ತಮಾನದಲ್ಲಿ ಅತ್ಯಂತ ಪ್ರಸಿದ್ದ. ಆದರೆ ಇಲ್ಲಿ ತಾಳ ಮದ್ದಲೆ ರೂಪದಲ್ಲಿ ಇಲ್ಲಿ ರೂಪಗೊಂಡದ್ದು ವೈಶಿಷ್ಟ್ಯವಾಗಿತ್ತು. ಮಾತ್ರವಲ್ಲ ಅದು ಯಶಸ್ಸನ್ನು ಕಂಡದ್ದು ಇಬ್ಬರ ಅಂತರಂಗದ ಪ್ರತಿಭೆಗೆ ಸಾಕ್ಷಿಯಾಗಿತ್ತು.



         ಹಿರಣ್ಯ ಕಶಿಪು ಎಂಬ ಕಥಾನಕ ಅಧಿಕವಾಗಿ ಯಕ್ಷಗಾನ ಬಯಲಾಟಗಳಲ್ಲಿ, ತ್ರಿಜನ್ಮ ಮೋಕ್ಷ ಅಥವಾ ದಶಾವತಾರ ಪ್ರಸಂಗಗಳಲ್ಲಿ ಒಂದು ಭಾಗವಾಗಿ ಕಂಡು ಬರುವ ಒಂದು ಬಯಲಾಟದ ಪ್ರಸಂಗ. ಕೇವಲ ಹಿರಣ್ಯ ಕಶಿಪು ಪಾತ್ರವೇ ಇದರಲ್ಲಿ ಎದ್ದು ಕಾಣುವುದು ಸಾಮಾನ್ಯ. ಹಾಗಾಗಿ ತಾಳಮದ್ದಲೆಯಲ್ಲಿ ಇದು ಯಶಸ್ವಿಯಾಗುವುದು ಅತ್ಯಂತ ಕಷ್ಟಕರ. ತಾಳಮದ್ದಲೆಯಲ್ಲಿ ಎರಡು ಪಾತ್ರಗಳ ಸಂಭಾಷಣೆಗೆ ಒತ್ತು ಕೊಟ್ಟ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಳ್ಳುವುದು ಸಾಮಾನ್ಯ. ಪರಸ್ಪರ ಸಂಭಾಷಣೆಯಿಂದಲ್ಲೆ ಪಾತ್ರಗಳನ್ನು ಕಟ್ಟಿ ಬೆಳೆಸುವ ಕಾರಣ ಹಿರಣ್ಯ ಕಶಿಪು ಎಂಬ ಕಥಾಭಾಗವನ್ನು ಒಂದು ತಾಳ ಮದ್ದಲೆಯಾಗಿ ಆಯ್ಕೆಮಾಡುವುದು ತೀರ ಅಪರೂಪ. ಅದರೂ ಇಲ್ಲಿ ಅದೇ ವೈಶಿಷ್ಟ್ಯವೆಂಬಂತೆ ಆಯ್ಕೆ ಮಾಡಿದ್ದು ಮಾತ್ರವಲ್ಲ ಕೂಟದ ಯಶಸ್ವಿ ತಾಳಮದ್ದಲೆಯಲ್ಲಿ ಇದೂ ಒಂದಾಗಿ ಪರಿಣಮಿಸಿತು. ಎಂತಹ ಹಿರಣ್ಯ ಕಶಿಪು ಎಂತಹ ಕಯಾದು ಇದಕ್ಕೆ ಹೊಂದಿಕೆ ಆಗುವಂತೆ ಪ್ರಹ್ಲಾದ ಮತ್ತು ಚಂಡಾ ಮರ್ಕರ ಪಾತ್ರಗಳು ಸುಂದರವಾಗಿ ಹೊಂದಾಣಿಕೆಯಲ್ಲಿ ಮೂಡಿಬಂದರೆ, ಅಮ್ಮಣ್ಣಾಯ ನೇತೃತ್ವದಲ್ಲಿ ಹಿಮ್ಮೇಳವೈಭವ ಕೂಟದ ಅತ್ಯಂತ ಯಶಸ್ವಿ ಹಿಮ್ಮೇಳವಾಗಿ ಕಂಡುಬಂದಿತು.ನಿಧಾನವಾಗಿ ಶ್ರುತಿ ಎರಿಸುತ್ತ ಸಹಜವಾಗಿ ತನ್ನ ತನ್ಮಯತೆಯಲ್ಲಿ ಹಾಡಿದ ಅಮ್ಮಣ್ಣಾಯರು ಅತ್ಯಮೋಘವಾಗಿ ಕಂಡುಬಂದರು. ಅಂದಿನ ಅಮ್ಮಣ್ಣಾಯರ ಭಾಗವತಿಕೆಯನ್ನು ಸ್ಥಳದಲ್ಲಿದ್ದು ಅಸ್ವಾದಿಸಿದವರು ಬಹಳ ಪುಣ್ಯವಂತರು.ನೆರೆದ ಅವರ ಅಭಿಮಾನಿ ವೃಂದಕ್ಕೆ ಹೊಟ್ಟೆತುಂಬುವಂತಹ ತೃಪ್ತಿಯ ರಸದೌತಣವನ್ನು ಉಣಬಡಿಸಿದರು. ಅದಕ್ಕೆ ಹೊಂದುವಂತೆ ಶೃತಿಯನ್ನು ಏರಿಸುತ್ತ ಸಾಗಿದ ಗೋವಿಂದಣ್ಣನ ಹಿರಣ್ಯಕಶಿಪುವಿನ ಪಾತ್ರ ವೈಭವ ಮತ್ತೊಂದು ಅದ್ಭುತವಾಗಿ ಪರಿಣಮಿಸಿತು.ಯಾವುದೇ ಪಾತ್ರವಾದರೂ ಅದು ಅಟವಾಗಲೀ ತಾಳಮದ್ದಲೆಯಾಗಲೀ ಗೋವಿಂದಣ್ಣನಿಗೆ ಅದು ಸವಾಲೇ ಅಲ್ಲ. ಕಠಿಣವಾದ ಹಿರಣ್ಯಕಶಿಪುವಿನ ಪಾತ್ರ  ಅತನ ಕಠಿಣವಾದ ವ್ಯಕ್ತಿತ್ವ ದೊಂದಿಗೆ ಅಷ್ಟೇ ಸುಂದರವಾಗಿ ಮೂಡಿಬಂತು.

           ಇದರಲ್ಲಿ ಬರುವ ಇನ್ನೊಂದು ಪ್ರಮುಖವಾದ ಕಯಾದುವಿನ ಪಾತ್ರ. ಕೋಳ್ಯೂರರಲ್ಲಿ ಆವೇಶಗೊಂಡಿತು. ಹಿರಿಯ ಕಲಾವಿದರಾದ ಕೋಳ್ಯೂರರ ಹಾಗೆ ಸ್ತ್ರೀ ಪಾತ್ರಗಳಿಗೆ ಜೀವ ತುಂಬಬಲ್ಲವರು ಯಾರೂ ಇಲ್ಲ. ಅತ್ಯಂತ ಸಾಂದರ್ಭಿಕ ಹಾಗು ಮಾರ್ಮಿಕ ಮಾತುಗಾರಿಕೆಯಲ್ಲಿ ಎಂದಿನ ತಮ್ಮ ಭಾವಾವೇಶದ ಅರ್ಥಗಾರಿಕೆಯ ಮೂಲಕ ತಾಳಮದ್ದಲೆಯಲ್ಲಿ ಕಯಾದುವಿನ ಪಾತ್ರವೂ ಅತಿಮುಖ್ಯವೆನಿಸಲ್ಪಡುತ್ತದೆ ಎಂಬುದನ್ನು ತೋರಿಸಿಕೊಟ್ಟರು. ಇವರ ಅನನ್ಯ ಅರ್ಪಣಾಭಾವ ತಾಳ ಮದ್ದಲೆಯ ಇತಿಮಿತಿಯಲ್ಲಿ ಪಾತ್ರವನ್ನು ಪೋಷಿಸುವ ಕ್ರಮ ಇಂದಿನ ಕಲಾವಿದರು ಮಾತ್ರವಲ್ಲ ಕಾರ್ಯಕ್ರಮವನ್ನು ಮಾಡುವ ಸಂಘಟಕರೂ ಗಮನಿಸಬೇಕಾದ ಅಂಶವಾಗಿದೆ. ಬಹುಶಃ ಅಂದು ಇವರ ಪಾತ್ರಕಂಡು ತೇವವಾಗದ ಕಣ್ಣುಗಳು ಇರಲಾರದು. ಹೆಣ್ಣಿನ ತಾಯ್ತನದ ಅಂತರಾಳದ ಭಾವನೆಗಳನ್ನು ಹೆಣ್ಣಿಗಿಂತ ಚೆನ್ನಾಗಿ ಬಿಡಿಸಿ ವ್ಯಕ್ತಪಡಿಸುವ ಸಮರ್ಥರು ಎಂದರೆ ಅದು ಕೋಳ್ಯೂರು ಮಾತ್ರ. ಕಯಾದುವಿನ ಪಾತ್ರದ ಮೂಲಕ ಅದನ್ನೆಲ್ಲ ತೆರೆದಿಟ್ಟ ಪರಿ ಅದ್ಭುತ.



                 ಹೀಗಿದ್ದರೂ ಇಂದು ಅಮ್ಮಣ್ಣಾಯರಿಗಾಗಲೀ ಕೋಳ್ಯುರರಿಗಾಲಿ ಒಂದು ರೀತಿಯ ಅವಗಣನೆ ಕಂಡು ಕಾಣದಂತೆ ಭಾಸವಾಗುತ್ತದೆ. ಇದು ಒಂದು ರೀತಿಯ ನೋವಿನ ಸಂಗತಿ. ಇದು ಕೇವಲ ಒಂದೆಡೆಗೆ ಸೀಮಿತವಾಗಿ ಉಳಿದಿಲ್ಲ. ಯಕ್ಷಗಾನ ಇಂದು ಹಲವು ಸವಾಲುಗಳನ್ನು ಎದುರಿಸಿ ಉತ್ಕರ್ಷೆಯಲ್ಲಿದ್ದರೂ ಈ ಸವಾಲುಗಳಲ್ಲಿ ಯಕ್ಷಗಾನದ ಈ ಒಳರಾಜಕೀಯಗಳು ಅತೀ ದೊಡ್ಡ ಸವಾಲಾಗಿ ಕಲೆಯ ಅಭಿಮಾನಿಗಳಿಗೆ ಕಿರಿಕಿರಿಯನ್ನೊದಗಿಸುತ್ತದೆ. ಹಲವರ ಅಭಿರುಚಿ ಅಭಿಮಾನಗಳು ಭಿನ್ನ ಭಿನ್ನವಾಗಿದ್ದರೂ ಇದು ಒಂದು ಪರಂಪರೆಯ ಒಳಗೆ ನುಸುಳಿಕೊಂಡಿರುವುದು ಶೋಚನೀಯವೆನಿಸುವುದಿಲ್ಲವೆ? ಶತಾಯ ಗತಾಯ ತನಗಾಗದವರ ಕಾರ್ಯಕ್ರಮಕ್ಕೆ ವಿಘ್ನವುಂಟು ಮಾಡಿ ವಿಘ್ನ ಸಂತೋಷವನ್ನು ಪಡೆದುಕೊಳ್ಳುವ ಈ ಆಟದ ರಾಜಕೀಯಗಳೇ ಇಂದು ಸಂಘಟಕರ ಮೊದಲ ಸವಾಲಾಗಿ ಪರಿಣಮಿಸಿ ಇದರಿಂದ ದೂರ ಉಳಿಯುವ ಪ್ರಮೇಯವೇ ಅಧಿಕ. ಈ ಎಲ್ಲ ಸವಾಲುಗಳನ್ನು ಕ್ರಮಿಸಿ ಒಂದು ಕಾರ್ಯಕ್ರಮ ನಡೆಯಿತೆಂದರೆ ಅದು ನಿಜ ಅರ್ಥದಲ್ಲಿ ದೊಡ್ಡ ಕಲಾಸೇವೆ.

Saturday, September 24, 2011

ತಾಳವಿಲ್ಲದ ಪದಗಳು



ಹೆಸರು ಕೇಳುವಾಗ ವಿಚಿತ್ರವೆಂದು ಭಾಸವಾಗುವುದಿಲ್ಲವೆ. ಯಕ್ಷಗಾನ  ಕಲೆಯಲ್ಲಿ ಹಿಮ್ಮೇಳವಾದನದ ವೈಶಿಷ್ಟ್ಯತೆಗಳಲ್ಲಿ ಇದೂ ಒಂದು. ಸಂಗೀತ ಗಾಯನ ವಾದನ ನಾಟ್ಯ ಹೀಗೆ ಹಲವು ವೈಶಿಷ್ಟ್ಯತೆಗಳಿಗೆ ಹೆಸರಾದರೂ ಯಕ್ಷಗಾನದಲ್ಲಿ ಕೇವಲ ಶ್ರುತಿಯೊಂದಿಗೆ ಹಾಡುವ  ಹಲವು ರೀತಿಯ ಪದಗಳಿಗೆ ತಾಳವೇ ಬೇಡ..!!

ಕಂದ ಭಾಮಿನಿ ವಾರ್ಧಿಕ ದ್ವಿಪದಿ ಮುಂತಾದ ಛಂದಸ್ಸಿನ ಪದಗಳು ತಾಳವಿಲ್ಲದೇ ಹಾಡುವ ಪದಗಳು. ಯಕ್ಷಗಾನ ನಾಟ್ಯ ಅಭಿನಯಕ್ಕೆ ಮತ್ತು ಚೆಂಡೆ ಮದ್ದಲೆಯ ಹಿಮ್ಮೇಳ ವೈಭವಕ್ಕೆ ಹೆಸರು ಪಡೆದರೂ ಈ ತಾಳವಿಲ್ಲದ ಪದಗಳಿಗೆ ಯಕ್ಷಗಾನದಲ್ಲಿ ಅದರದ್ದೇ ಅದ ಸ್ಥಾನವಿದೆ. ಚೆಂಡೆ ಮದ್ದಲೆಯ ಬಡಿತಕ್ಕೆ ಗಿರಿಕಿ ಸುತ್ತುತ್ತ ಅಥವಾ ನಾಟ್ಯದ ಹಲವು ಸ್ತರಗಳಲ್ಲಿ ಕುಣಿಯುವ ವೇಷಗಳು ಆಕರ್ಷಣೀಯವಾಗಿ ದೃಶ್ಯವೈಭವವನ್ನು ಸಾಕ್ಷಾತ್ಕಾರಗೊಳಿಸಿದರೂ, ಸನ್ನಿವೇಶದ ಅಭಿನಯಕ್ಕೆ ಪೂರಕವಾಗಿ ಚೆಂಡೆ ಮದ್ದಲೆಯ ತಾಳಕ್ಕೆ ಪಾತ್ರಧಾರಿ ಕಥಾನಕದ ದೃಶ್ಯವನ್ನು ರಂಗದಲ್ಲಿಳಿಸಿದರೂ ಈ ತಾಳವಿಲ್ಲದ ಪದಗಳು ಯಕ್ಷಗಾನದ ಸನ್ನಿವೇಶಗಳಲ್ಲಿ ಸೊಗಸಾಗಿ ಮತ್ತು ಮಾರ್ಮಿಕವಾಗಿ ಹೆಣೆಯಲ್ಪಟ್ಟಿವೆ. ಈ ತಾಳವಿಲ್ಲದ ಪದಗಳು ಕೆಲವೊಮ್ಮೆ ರಸಿಕರ ಹೃದಯದ ತಾಳವನ್ನೇ ತಪ್ಪಿಸಿಬಿಡುವಷ್ಟು ಪ್ರಭಾವವನ್ನು ಬೀರುತ್ತವೆ.


“ಅರ್ಕೇಂದು ಬುಧಾ೦ಗೀರಸರ  ನೆನೆದು .. ಅರ್ಕಸುತನಿಗೆ ಬಲವಂದು ಮಣಿದು...”     “ ಗುರುಪಾದ ಯುಗ್ಮವನು ಮನದೊಳಗೆ ಸ್ಮರಿಸಿ.....”


                                                                                                       ಕುಮಾರ ವಿಜಯದ  ಬಲಿಪ್ಪ ಹೊಳ್ಳ
                                                                                               ಕುಮಾರ ವಿಜಯದ ಪ್ರಸಂಗದಲ್ಲಿ ಕವಿ ಮುದ್ದಣನ ಈ ದ್ವಿಪದಿಗಳು ಕೇಳುವಾಗ ಮನದಲ್ಲಿ ನವಿರೇಳುವ ಭಾವನೆಗೆಳು ಹೇಗಿರುತ್ತವೆ. ಯಕ್ಷಗಾನದ ವೈಭವವನ್ನು ಸರಳವಾದ ಧಾಟಿಯಲ್ಲಿ ಸಾರುವ ಈ ತಾಳವಿಲ್ಲದ ದ್ವಿಪದಿ ಪದ ಒಂದು ಸಲ ಕೇಳೀದರೆ ಪದೇ ಪದೇ ಗುನುಗುವಂತಾಗುವುದು ಏಕೆ?


                                             ಪಂಚವಟಿಯ ಒಳಹೊಕ್ಕು ಬನ್ನಿ ತ್ರಿಂದ್ವದಲ್ಲಿ ಬಲಿಪ್ಪ-ಪದ್ಯಾಣ- ಹೊಳ್ಳ 
                                                                                   

ಪಾರ್ತಿಸುಬ್ಬನ ಪಂಚವಟಿ ಪ್ರಸಂಗದ ಪದಗಳು ಬಹುಶಃ ಯಾವುದೇ ಯಕ್ಷಗಾನ ಅಭಿಮಾನಿ ಮರೆಯಲಾಗದು.
” ಎನುತ ನಿಜಮನದೊಳಗೆ ಯೋಚನೆಯ ಮಾಡಿ... ...” ಶೂರ್ಪನಖೆಯ ಶೃಂಗಾರ ಲಾಸ್ಯವನ್ನು ಮಾತ್ರವಲ್ಲ ಶೂರ್ಪನಖೆಯ ಕೌಟಿಲ್ಯವನ್ನು ತೋರಿಸುವ ಈ ದ್ವಿಪದಿ ಪದ ಬರಿದೇ ಕಿವಿಯಲ್ಲಿ ಕೇಳಿದರೂ ಸಾಕು ಶೂರ್ಪನಖಿ ಪಂಚವಟಿ ಅರಣ್ಯದಲ್ಲಿ ಸುತ್ತುವ  ದೃಶ್ಯಗಳು ಕಣ್ಣ ಮುಂದೆ ಬಂದು ನಿಲ್ಲುವುದಿಲ್ಲವೆ? ಶೂರ್ಪನಖಿಯ ಭಾವನೆ ವಿಡಂಬನೆಯ ಚಿತ್ರಣ ಅಷ್ಟೇ ಸುಂದರವಾಗಿ ಮನಸ್ಸಿಗೆ  ನೇರವಾಗಿ ಅಷ್ಟೇ  ಪ್ರಭಾವ ಬೀರುತ್ತದೆ.ಇದು ಕಾವ್ಯಗುಣ. ಮಾತಿನಲ್ಲಿ ಹೇಳಲಾಗದೇ ಇದ್ದುದನ್ನು ಅದಕ್ಕಿಂತ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮನಸ್ಸಿಗೆ ತೋರಿಸಿಕೊಡುವುದು.

“ ಅವಧರಿಸು ಜನಪಾಲ ಒಂದು ಚೋದ್ಯವನು... ...” ಕರ್ಣ ಪರ್ವದ ಆರಂಭದ ಈ ದ್ವಿಪದಿ ಭಾಗವತ ಶುರು ಮಾಡಿದಾಗಲೇ  ಕುರುಕ್ಷೇತ್ರದ ರಣರಂಗ ದೃಶ್ಯ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ. ಕೌರವ ಪಾಂಡವ ಸೇನೆ ಯುದ್ದಕ್ಕೆ ಸಜ್ಜಾಗಿ ನಿಂತಿರುವುದನ್ನು ಕಲ್ಪಿಸಿಯೇ ಮನಸ್ಸು ಮುಂದಿನ ಪ್ರಸಂಗಕ್ಕೆ ಆವೇಶದಲ್ಲಿ ಸಿದ್ದವಾಗುವಂತೆ ಮಾಡುತ್ತದೆ. ಇದು ದ್ವಿಪದಿಯಲ್ಲಿರುವ ಅಂತಃಸತ್ವ. ಪ್ರಸಂಗ ಕರ್ತ ಸಂದರ್ಭ ನೋಡಿ ಅದನ್ನು ಅಲ್ಲಿಗೆ ಹೊಂದಿಸಿಬಿಟ್ಟಿರುತ್ತಾನೆ, ಕಥಾಸನ್ನಿವೇಶದ ಸಂಪೂರ್ಣ ಅರಿವಿದ್ದರೂ ನಾವು ಸಮ್ಮೋಹನಕ್ಕೆ ಒಳಗಾಗಿಬಿಡುತ್ತೇವೆ.   ಭಾಗವತನ ದ್ವಿಪದಿಯ ಆಲಾಪನೆಯ ಎಳೆಯನ್ನು ಹಿಡಿದು ಒಂದೊಂದೇ ಹೆಜ್ಜೆಯನ್ನು ಎಳೆಯುತ್ತ ಪ್ರಸಂಗದ ಒಳಗೆ ಇಳಿದುಬಿಡುತ್ತೇವೆ. ಯಕ್ಷಗಾನ ವೈಭವದ ಸೊಗಡು ಇರುವುದೇ ಇದರಲ್ಲಿ.

ಯಕ್ಷಗಾನದಲ್ಲಿ ಈ ದ್ವಿಪದಿ ಪದಗಳಿಗೆ ಮಹತ್ವದ ಸ್ಥಾನವಿದೆ. ಮೊದಲೇ ನಮಗೆ ಪೌರಾಣಿಕ ಪಾತ್ರಗಳ ವ್ಯಕ್ತಿ ಚಿತ್ರಣ ಅರಿವಿದ್ದರೂ ಈ ಪದಗಳು ಅದನ್ನು ಇನ್ನಷ್ಟು ಸುಂದರವಾಗಿ ಮಾರ್ಮಿಕವಾಗಿಸುತ್ತವೆ. ಯಕ್ಷಗಾನದ ಪ್ರಸಂಗದ ವೇಗದ ನಡೆಗೆ ಈ ಪದಗಳು ಹೊಂದಿಕೊಂಡಷ್ಟು ಬೇರಾವುದೇ ಪದಗಳು ಹೊಂದಿಕೊಳ್ಳುವುದಿಲ್ಲ.ವಾರ್ಧಿಕ ಭಾಮಿನಿ ಹೀಗೆ ಕೇವಲ ಶ್ರುತಿ ಮತ್ತು ಅದನ್ನು ಉತ್ತೇಜಿಸುವಂತೆ ಮದ್ದಲೆಯ ಛಾಪು ಉಪಯೋಗಿಸಿಕೊಳ್ಳುವ ಈ ಪದಗಳು ಯಕ್ಷಗಾನದಲ್ಲಿ ಮಹತ್ವಪೂರ್ಣ ಛಂದಸ್ಸುಗಳ ಪದಗಳಾಗಿವೆ.

ಇದು ಹೊಳ್ಳರ ನಿತ್ಯ ನೂತನ ಶೈಲಿ



ಹಳೆಯ ಕನ್ನಡ ಪೌರಾಣಿಕ ಚಲನಚಿತ್ರವೊಂದರ  ಸನ್ನಿವೇಶಕ್ಕೆ ಇದೇ ತರಹದ ಗೀತೆಯನ್ನು ಹೊಸೆದು ಅಳವಡಿಸಿದ್ದರು. “ಆರು ಅರಿಯರು ನಿನ್ನ  ಭುಜ ಬಲದ ಪರಾಕ್ರಮ...”  ಸಾಮಾನ್ಯವಾಗಿ ಚಿತ್ರಪ್ರೇಮಿಗಳು ರೋಮಾಂಚಿತರಾಗುವ ಈ ಹಾಡು  ಆದರೆ ಯಕ್ಷಗಾನದ  ನಿತ್ಯ ವೀಕ್ಷಕನಿಗೆ ಇದರಿಂದ ರೋಮಾಂಚನವಾಗುವುದಿಲ್ಲ. ಕಾರಣ ಅದಕ್ಕಿಂತ ಮಿಕ್ಕಿದ ಪದಗಳನ್ನು ಅದಕ್ಕಿಂತಲೂ  ಸುಶ್ರಾವ್ಯವಾಗಿ ಸನ್ನಿವೇಶಕ್ಕೆ ಹೊಂದುವಂತೆ ಏರು ಶ್ರುತಿಯಲ್ಲಿ ಹಾಡಿದ್ದನ್ನು ಇಲ್ಲಿ ಕೇಳಿರುತ್ತಾನೆ. ಒಂದರ್ಥದಲ್ಲಿ ಯಕ್ಷಗಾನದಲ್ಲಿ ಉಪಯೋಗಿಸಿದಂತೆ ಇದನ್ನು ಎಲ್ಲೂ ಉಪಯೋಗಿಸಿರಲಾರರು. ಅದು ಯಕ್ಷಗಾನದ ಹಿರಿಮೆ. ಹೀಗಿದ್ದರೂ ಇಂದು ಚಲನ ಚಿತ್ರ ಸಂಗೀತವನ್ನು ಯಕ್ಷಗಾನದಲ್ಲಿ   “ ಶಂಕರಾ ...”  ಎಂದು ಅಳವಡಿಸುವುದುಂಟು.  ಇದೇ ವಿಚಿತ್ರವಲ್ಲವೆ? ಯಕ್ಷಗಾನ ಸಂಪತ್ತಿಗೂ ಅಭಾವ ಬಂದು ಬಿಟ್ಟಿತೇ ಎಂದು ಅಚ್ಹರಿ ಪಡುವ ಹಾಗಿದೆ.


ವಿಶಾಲವಾದ ಅರ್ಥ ಬಾಹುಳ್ಯವನ್ನು ಸಾಂದರ್ಭಿಕ ವಿವರಣೆಯನ್ನು ಸಾರುವ ದ್ವಿಪದಿಯಾಗಲಿ ವಾರ್ಧಿಕವಾಗಲಿ ಅಥವಾ ಇನ್ನಿತರ ಛಾಪು ಪದಗಳು ಅರ್ಥಧಾರಿಯ ಅಥವ ವೇಶಧಾರಿಗೆ ಆತನ ಪಾತ್ರ ಪೋಷಣೆಗೆ ಅತ್ಯಂತ ಸಹಕಾರಿಯಾಗಿರುತ್ತದೆ. ಪ್ರಸಂಗದ ಮುಂದಿನ ನಡೆಯನ್ನು ಮೊದಲೇ ಪ್ರೇಕ್ಷಕನ ಊಹನೆಗೆ ಬಿಟ್ಟು ಪಾತ್ರಕ್ಕಿರುವ ರಂಗವನ್ನು ಮೊದಲೇ ನಿರ್ಧರಿಸಿ ಬಿಡುತ್ತದೆ. ಆ ಪಾತ್ರದ ಇತಿಮಿತಿಗಳೇನು ಸನ್ನಿವೇಶದ ಕಲ್ಪನೆಯೇನು ಪ್ರೇಕ್ಷಕ ಮೊದಲೇ ನಿರ್ಧರಿಸಿ ಒಂದುರೀತಿಯಲ್ಲಿ ಪಾತ್ರಧಾರಿಯ ಮುಂದಿನ ಹೆಜ್ಜೆಗೆ ಕಾತರನಾಗಿರುತ್ತಾನೆ. ಇದು ಪಾತ್ರಧಾರಿ ಆ ಸನ್ನಿವೆಶದ ಚಿತ್ರಣವನ್ನಾಗಲಿ ಪಾತ್ರದ ಅಸ್ತಿತ್ವವನ್ನು ಸ್ಥಾಪಿಸುವುದಕ್ಕೆ ಸುಲಭ ಸಾಧ್ಯವಾಗುವಂತೆ ಮಾಡುವುದಲ್ಲದೆ, ಅರ್ಥಧಾರಿಗೆ ಮುಂದಿನ ಅರ್ಥದ ನಡೆಗೆ ಗಟ್ಟಿಯಾದ ತಳಹದಿಯನ್ನು ನಿರ್ಮಿಸುವಲ್ಲಿ ರೂಪುರೇಷೆಯನ್ನು ನಿರ್ಮಿಸಿ ಕೊಡುತ್ತದೆ.


ಇದೊಂದು ಬಗೆ ಹೊಳ್ಳರು



ಹಿರಿಯ ಭಾಗವತರಾದ ತೆಂಕಬೈಲು ಶಾಸ್ತ್ರಿಗಳು ಒಂದು ಯಕ್ಷಗಾನ ಕಾರ್ಯಕ್ರಮಕ್ಕೆ ಹೋಗಿಬಂದು ಅದರ ಸ್ವಾರಸ್ಯವನ್ನು ಹಂಚಿಕೊಂಡ ಬಗೆ ಹೀಗಿದೆ. “ಮದ್ದಲೆ ಸರಿಗಟ್ಟು ಇತ್ತಿಲ್ಲೆ.. ಎಲ್ಲ ಪದ ಭಾಮಿನಿ ವಾರ್ಧಿಕದಲ್ಲಿ ಬಿಟ್ಟಿಕ್ಕಿ ಬಂದೆ..” ಇದು ತಾಳವಿಲ್ಲದ ಪದಗಳನ್ನು ಸಮರ್ಥ ಭಾಗವತರು  ಹೇಗೂ ಹೊಂದಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಡುತ್ತದೆ. ಚೆಂಡೆ ಮದ್ದಲೆಯ ತಾಳ,  ನರ್ತನದ ವೈಭವ ಎಲ್ಲವೂ ಇದ್ದ ಯಕ್ಷಗಾನದಲ್ಲಿ ತಾಳವಿಲ್ಲದ ಪದಗಳೂ ನಿರ್ಣಾಯಕವೆನಿಸಿ ಬಿಡುವುದು ಎಷ್ಟೊಂದು ಕೌತುಕದ ವಿಚಾರವಲ್ಲವೆ?


ಅಹಾ!!   ಅಶೋಕವನದ ಶೋಕತಪ್ತ ಸೀತೆ ...ಹೊಳ್ಳರ ಕಂಠದಲ್ಲಿ


ಅಮ್ಮಣ್ಣಾಯರು ಭಗವಾನ್ ಕೃಷ್ಣನನ್ನು ಧರೆಗಿಳಿಸಿದ ಪರಿ   



ಯಾವುದೇ ಯಕ್ಷಗಾನ ಆಟವಾಗಲೀ ತಾಳಮದ್ದಲೆಯಾಗಲೀ ಅಥವಾ ಗಾನವೈಭವವೇ ಆಗಲಿ  ಹಲವು ವೈಶಿಷ್ಟ್ಯಪೂರ್ಣ ಪದಗಳನ್ನು ಭಾಗವತರು ತನ್ನದೇ ರೀತಿಯಲ್ಲಿ ಪ್ರಸ್ತುತ ಪಡಿಸಬಹುದು. ಹಲವಾರು ರಾಗ ತಾಳದಿಂದ ಪ್ರದರ್ಶನ ಕಳೆಗಟ್ಟುವಂತೆ ಮಾಡಿ, ಉತ್ತಮ ಪ್ರದರ್ಶನವನ್ನು ನೀಡಬಹುದು. ತನ್ನ  ಸಹ ಕಲಾವಿದರ ಹಿಮ್ಮೇಳವನ್ನು ಸರಿಯಾಗಿ ಒರೆಗೆ ಹಚ್ಹಿ ದುಡಿಸಬಹುದು, ಮುಮ್ಮೇಳದ ಕಲಾವಿದನ ಕುಣಿತ ಅಭಿನಯದ ಸಾಮಾರ್ಥ್ಯವನ್ನು ಹೊರಗೆಳೆಯಬಹುದು.. ಆದರೂ ಒಂದು ವಾರ್ಧಿಕವೊ ಭಾಮಿನಿಯೋ ಇಲ್ಲ ದ್ವಿಪದಿಯೋ ಉತ್ತಮ ಆಲಾಪನೆಯಿಂದ ಹೊರಬಿಟ್ಟನೆಂದರೆ ಪ್ರೇಕ್ಷಕರ ಕರತಾಡನದಿಂದ ಸಭೆಯಲ್ಲಿ ಸಮುದ್ರ ಘೋಷ ಮೊಳಗುತ್ತದೆ. ಇದರ ಭರವಸೆ ಇದ್ದೇ ಭಾಗವತ ಪ್ರೇಕ್ಷಕನ ಹೃದಯಕ್ಕೆ ಲಗ್ಗೆ ಹಾಕಲು ಇಂತಹ ತಾಳವಿಲ್ಲದ ಪದಗಳನ್ನು ಶ್ರುತಿಗಿಳಿಸುವುದು.



  



Thursday, September 15, 2011

ಸರಳತೆಯ ತಾಳ - ಮದ್ದಲೆ


ಮೊನ್ನೆ ಒಂದು ದಿನ ಮಿತ್ರ ಸುಬ್ಬಣ್ಣ ಒಂದು ಯಕ್ಷಗಾನ ತಾಳ ಮದ್ದಲೆಯ ಧ್ವನಿ ಮುದ್ರಣವನ್ನು ಕಳುಹಿಸಿ “ ರಾಜಣ್ಣ ಇದನ್ನು ಸ್ವಲ್ಪ ಕೇಳುವಹಾಗೆ ರಿಪೇರಿ ಮಾಡಿ ಕೊಡಿ” ಎಂದರು. ಸುಬ್ಬಣ್ಣ ಹೀಗೆ ಹೇಳುವುದು ಹೊಸತೇನೂ ಅಲ್ಲ. ಊರಲ್ಲಿ ಆಗುವ ವಿಶೇಷ ತಾಳ ಮದ್ದಲೆ ಯಕ್ಷಗಾನವನ್ನು ತಮ್ಮ ಐ ಪೋಡ್ ನಲ್ಲಿ ದಾಖಲಿಸಿ ಅದನ್ನು ಹಾಗೆ ನನಗೆ ರವಾನಿಸುವುದು, ಅದನ್ನು ಹಾಗೆ ಹೀಗೆ ಸ್ವಲ್ಪ ಸಂಕಲನ ಗೊಳಿಸಿ ಸಾಮಾನ್ಯರೂಪಕ್ಕೆ ತಂದು ಕೇಳುವುದು ಸಾಮಾನ್ಯ. ಆದರೆ ಮೊನ್ನೆ ಅವರು ನೀಡಿದ್ದುದರಲ್ಲಿ ನನಗಂತೂ ಸ್ವಲ್ಪ ವಿಶೇಷವೇ ಇತ್ತು ಎನ್ನಬಹುದು. ಕೆಲವರ ಅಭಿರುಚಿಗಳೇ ಹಾಗೆ. ಕೇಳುವಾಗಲೇ ಮುದ ನೀಡುವಂತಹುದು.

ಮನೆಯಲ್ಲಿ ಅಪರೂಪದ ಬಂಧು ಭಾಂಧವರು ಯಾವುದೇ ದಿನದಲ್ಲಿ ಮನೆಯಲ್ಲಿ ಒಟ್ಟು ಸೇರಿದಾಗ ತಿಥಿ ವಾರ ದಿನ ನೋಡದೇ ಆ ದಿನ ಹಬ್ಬದ ದಿನವೇ ಆಗಿಬಿಡುವುದಿಲ್ಲವೆ. ಎಲ್ಲರೂ ಬಂದ ದಿನದ ವಿಶೇಷವೊಂದು ಬೇಡವೇ ಊಟ ಆಟದ ವಿನೋದಕ್ಕೆ ಎಲ್ಲೆಯೇ ಇರುವುದಿಲ್ಲ. ಅಂತೆ ಒಂದುದಿನ ಸುಬ್ಬಣ್ಣ ಮತ್ತವರ ಮಿತ್ರರು ಒಟ್ಟು ಸೇರಿದರು. ಏನು ಮಾಡುವುದೆಂದು ಯೋಚಿಸಿ ತೀರ ಅಂತರಂಗದ ಒಂದು ತಾಳ ಮದ್ದಲೆಯೇ ಮಾಡಿಬಿಡುವ ಎಂಬ ಯೋಚನೆ ಬಂದು ಬಿಟ್ಟಿತು. ತಾಳಮದ್ದಲೆ ಅಥವಾ ಇನ್ನಿತರ ಕಾರ್ಯಕ್ರಮ ಮಾಡುವ ಯೋಚನೆ ಹೊಸತಲ್ಲವಾದರೂ ಇಲ್ಲಿ ಹೊಸತನ ಇದ್ದುದ್ದು ಅದನ್ನು ಮಾಡಿದ ರೀತಿ. ಯಾವುದೇ ಕಟ್ಟು ಪಾಡುಗಳಿಲ್ಲದೆ ಅತ್ಯಂತ ಸರಳವಾಗಿ ಮಾಡಿದ ಬಗೆ.

ತಾಳಮದ್ದಲೆ ಯೋಚನೆ ಬಂದಿದ್ದೇ ತಡ ಸಿದ್ದತೆಗಳು ಕ್ಷಣದೊಳಗೇ ಆರಂಭವಾಯಿತು.ಭಾಗವತ ಪ್ರಸಾದ ಬಲಿಪ್ಪರನ್ನು ಕರೆಸಿದರು. ಸರಳವಾದ ತಾಳ ಮದ್ದಲೆ. ಪ್ರೇಕ್ಷಕರೂ ಕಲಾವಿದರು ಎಲ್ಲ ಒಂದೇ ಅದೇ ಇದರ ವೈಶಿಷ್ಟ್ಯ.ಇದೇ ನೋಡಿ ಅಭಿರುಚಿ. ಕೇವಲ ಕೆಲವೇ ಪಾತ್ರಗಳಿರುವ ಪ್ರಸಂಗವೂ ನಿರ್ಣಯಿಸಿದರು. “ಮುದ್ರಿಕಾ ಪ್ರದಾನ”, ಸನ್ಮನಸ್ಸು ಮತ್ತು ಸದಭಿರುಚಿಯೊಂದಿದ್ದದ್ದು ಸಹಮನಸ್ಕರು ಒಟ್ಟಾಗಿ, ಇಂತಹ ಯೋಚನೆಗಳು ಮೂಡಿ ಕಾರ್ಯಗತವಾದರೆ ಅದೇ ಒಂದು ಸ್ಮರಣೀಯ ಘಟನೆಯಾಗಿಬಿಡುತ್ತದೆ. ಹೀಗೆ ಮಿತ್ರರೆಲ್ಲ ಒಟ್ಟು ಸೇರಿ ಅತ್ಯಂತ ಸರಳವಾಗಿ ತಾಳಮದ್ದಲೆಯ ಎಲ್ಲ ಸಂವೇದನೆಯನ್ನು ಅನುಭವಿಸಿಬಿಟ್ಟರು. ಇದರಲ್ಲಿ ಇನ್ನೂ ವೈಶಿಷ್ಟ್ಯಗಳಿವೆ. ಮುಖ್ಯವಾಗಿ ಯಾವುದೇ ಆಡಂಬರವಿಲ್ಲ ಸ್ವಕೀಯವಾಗಿ ಮಾಡಿದ ಕಾರ್ಯಕ್ರಮ. ಹಿಮ್ಮೇಳಕ್ಕೆ ಭಾಗವತ ಮತ್ತು ಮದ್ದಲೆಗಾರರು ಮಾತ್ರ. ಪ್ರಸಾದ ಬಲಿಪರು ಮತ್ತು ಹಾಗೆ ಕೊನೆಯ ಕ್ಷಣದಲ್ಲಿ, ಕರೆದ ಕೇವಲ ಐದಾರು ನಿಮಿಷದ ಒಳಗೇ ಹಾಜಾರಾಗಿ ಮದ್ದಲೆಯ ಛಾಪು ಬಡಿದ ಚಂದ್ರಶೇಖರ ಕೊಂಕಣಾಜೆ. ಎಲ್ಲ  ಒಟ್ಟು ಎಂಟು ಜನ ಅರ್ಥಧಾರಿಗಳು. ಮಾತ್ರವಲ್ಲ ಪ್ರೇಕ್ಷಕರೂ ಅವರೇ. ಅದಕ್ಕೆ ಪೂರಕವಾಗಿ ನಿರಾಡಂಬರಕ್ಕೆ ನಿದರ್ಶನವೆಂಬಂತೆ ಅಬ್ಬರಿಸುವ ಧ್ವನಿವರ್ಧಕ ಮೈಕ್ ಗಳಿಲ್ಲ. ಕೇವಲ ಕೆಲವೇ ಮಂದಿ ಒಟ್ಟಾಗಿ ಖಾಸಗಿಯಾಗಿ ಕುಳಿತು ಹೊರಗೆ ಅಬ್ಬರಿಸುವ ಮಳೆಗೆ ರಾವಣನ ಅಶೋಕವನ ಧರೆಗಿಳಿಸಿ ಆನಂದಿಸಿದರು. ಆ ಸಂತಸದ ಘಳಿಗೆಯನ್ನು ಧ್ವನಿ ಮುದ್ರಿಸಿ ಸುಬ್ಬಣ್ಣ ನನಗೆ ಕಳಿಸಿದ್ದರು.



ಕೆಲವು ಅಭಿರುಚಿಗಳೇ ಹಾಗೆ. ಅದನ್ನು ಆ ರೀತಿ ಅನುಭವಿಸಿದಾಗಲೇ ಅದರ ನಿಜ ಸ್ವಾದ ಅನುಭವಕ್ಕೆ ಬರುವುದು. ಅದ್ದೂರಿ ಕಾರ್ಯಕ್ರಮದ ಜಾತ್ರೆಯಲ್ಲಿ ಅದು ಇಲ್ಲ ಇದು ಇಲ್ಲ ಎಂದು ಮನಸ್ಸು ಚಂಚಲವಾಗುವಾಗಲ್ಲಿ ಇಂತಹ ಸ್ವಕೀಯ ಕಾರ್ಯಕ್ರಮದಿಂದ ಮನಸ್ಸು ತಣಿದು ತೃಪ್ತವಾಗುತ್ತದೆ. ನಿಜಕ್ಕೂ ಸುಬ್ಬಣ್ಣ ಮತ್ತು ಕಂಪೆನಿಯ ಬಗ್ಗೆ ಅಸೂಯೆಯಾಗುತ್ತದೆ. ಪದೇ ಪದೇ ಅಲ್ಲಲ್ಲಿ ಮಿತ್ರರು ಒಟ್ಟಾದಾಗ ಇಂತಹ ಸರಳ ಕಾರ್ಯಕ್ರಮ ಮುಖೇನ ಉತ್ತಮ ಅನುಭವವನ್ನು ಪಡೆಯಬಹುದು. ವಚನ ಪದ್ಯದ ಹಾಗೆ “ ಎನ್ನ ಕಾಲೇ ಕಂಬ .........ಶಿರವೇ ಹೊನ್ನ ಕಲಶವಯ್ಯ” ಇಲ್ಲಿ ಇದು ಹೆಚ್ಚು ಅನ್ವಯವಾಗುತ್ತದೆ. ಯಕ್ಷಗಾನದಂತಹ ಜನಪದಕ್ಕೆ ಹತ್ತಿರವಾದ ಕಲೆ ಉಳಿದು ಬಂದಿರುವ ಮಾರ್ಗವೇ ಇಂತಹುದರಿಂದ. ಇದಕ್ಕೆನಿದರ್ಶನವಾಗಿ ಹಲವಾರು ಜನಪದಕಲೆಗಳು ಲಿಖಿತವಾದ ಶಾಸ್ತ್ರಗಳ ಕಟ್ಟುಪಾಡುಗಳಿಲ್ಲದೆ ಕೇವಲ ಜನರ ಮನಸ್ಸಿನ ಹೃದಯದ ನಡುವಿನ ಸಂವಹನದ ಜೀವಸಲೆಯ ಆಸರೆಯಾಗಿ ಬೆಳೆದು ಬಂದವುಗಳು. ಅವುಗಳು ಸಂಗೀತಗಾರನ ನಿರ್ದೇಶನದಲ್ಲಿ ರಾಗ ಸೇರಿಸಿ ಸಿನಿಮಾದಲ್ಲಿ ಅದ್ದೂರಿ ಸೆಟ್ಟಿಂಗ್ ನಲ್ಲಿ ಅಳವಡಿಸಿದುದರಿಂದ ಅಥವಾ ವೇದಿಕೆಯ ಮೇಲೆ ಆರ್ಕೆಷ್ಟ್ರಾಗಳಲ್ಲಿ ಹತ್ತಾರು ಸಂಗೀತ ಪರಿಕರಗಳೊಂದಿಗೆ ಹಾಡಿ ಉಳಿದು ಬಂದವುಗಳಲ್ಲ. ಜನಸಾಮಾನ್ಯನ ಜೀವನಾಡಿಯಲ್ಲಿ ಬೆರೆತು ಒಂದಾಗಿ ಮೇಳೈಸಿ ಹೃದಯದಿಂದ ಹೃದಯಕ್ಕೆ ಹರಿದು ಬಂದವುಗಳು. ಹಾಗಾಗಿ ಸಾಮಾನ್ಯ ರೂಪದಲ್ಲೂ ಯಕ್ಷಗಾನ ಸುಧೆ ಹರಿದು ಬಂದರೆ ಮುಂದಿನ ಪೀಳಿಗೆಗೆ ಅದುವೇ ಅಮೃತ ಧಾರೆಯಾಗುವುದರಲ್ಲಿ ಸಂಶಯವಿಲ್ಲ. ಅನಾವಶ್ಯಕ ದುಂದುವೆಚ್ಚವಿಲ್ಲದ ಇಂತಹ ಕಾರ್ಯಕ್ರಮಗಳು ಮನೆಯವರು ಒಟ್ಟಾಗಿ ಕುಳಿತು ಪಟ್ಟಾಗಿ ಮನೆಯೂಟವನ್ನು ಸಡಗರದಿಂದ ಉಂಡಂತೆ.

ಯಾವ ಪೂರ್ವ ಯೋಜನೆಯೂ ಇಲ್ಲದೆ ಮಿತ್ರರೆಲ್ಲ ಒಟ್ಟು ಸೇರಿದಾಗ ಯೋಚನೆಯಾದದ್ದು ತಾಳ ಮದ್ದಲೆಯದ್ದು. ಕೆಲವರ ಬಯಕೆಗಳೇ ಹಾಗೆ ಅದನ್ನು ಸಾಧಿಸಿಯೆ ಬಿಡಬೇಕು ಎನ್ನುವ ಛಲ. ತಾಳ ಮದ್ದಲೆಯ ಯೋಚನೆಗೆ ತಕ್ಕ ಹಾಗೆ ಪ್ರಸಂಗವೂ “ ಮುದ್ರಿಕಾ ಪ್ರದಾನ” ಜಾಂಬವನ ಅನುಜ್ಞೆಯನ್ನು ಪಡೆದ ಹನುಮ ಲಂಕೆಗೆ ಹಾರುವುದು.. ಲಂಕಿಣಿಯ ಸಂಹಾರ, ಅಶೋಕವನದ ದುಃಖತಪ್ತ ಸೀತೆಯ ದುಃಖ ಹನುಮನ ಸಾಂತ್ವಾನ.. ಮುದ್ರಿಕಾ ಪ್ರದಾನ.. ಇಷ್ಟರಲ್ಲೇ ತಾಳ ಮದ್ದಲೆ ಮುಗಿದು ಬಿಡುತ್ತದೆ. ಕೇವಲ ಮಿತಿಯೊಳಗಿನ ಪಾತ್ರಗಳು.ಇದು ಪಾರ್ತಿಸುಬ್ಬನ ಪ್ರಸಂಗ ಹಾಗಾಗಿ ಪದಗಳಿಗೆ ಮತ್ತೆ ಹೇಳಬೇಕೆ.. ಮೊದಲೇ ಉಜಿರೆಯವರು ಎಂದಂತೆ ಪಾರ್ತಿಸುಬ್ಬನ ಪ್ರಸಂಗ ಪದಗಳು ಬಲಿಪ್ಪರಿಗೆ ಪೇಟೆಂಟ್ ಮಾಡಿದ ಹಾಗೆ. ಅದನ್ನು ಆ ಶೈಲಿಯಲ್ಲಿ ಕೇಳುವುದೇ ಒಂದು ಭಾಗ್ಯ. ಇಲ್ಲಿ ಪ್ರಸಾದ ಬಲಿಪರು ಅದನ್ನೇ ಮುಂದುವರೆಸಿದ್ದಾರೆ. ಅದೇ ಶೈಲಿ ಅದೇ ಸರಳ ಖಚಿತತೆಯ ಒಂದಿನಿತೂ ತಪ್ಪದ ತಾಳಬದ್ದ ಲಯಬದ್ದ ಶೈಲಿ. ಅಜ್ಜಿ ಮಾಡಿದ ಅಡುಗೆ ಉಂಡ ನಾಲಿಗೆ ಹಲವು ವರ್ಷಕಳೆದ ಮೇಲೆ ಮೊಮ್ಮಗಳ ಕೈಯಲ್ಲೂ ಅದೇ ಸ್ವಾದವನ್ನು ಅನುಭವಿಸಿದ ಹಾಗೆ, ಪ್ರಸಾದ ಬಲಿಪ್ಪರು ಅಜ್ಜಿ ಮಾಡಿದ ಆಡುಗೆಯನ್ನೇ ಅದ್ಭುತವಾಗಿ ಒದಗಿಸಿದ್ದಾರೆ. ಈ ಪ್ರಸಂಗದ ಹಲವು ಪದಗಳು ಮಗುದೊಮ್ಮೆ ಮಗುದೊಮ್ಮೆ ಕೇಳುವ ಚಪಲ ಉಂಟಾಗುತ್ತದೆ. ಕೇವಲ ಮದ್ದಲೆಯನ್ನು ಮಾತ್ರ ಹೊಂದಿಸಿಕೊಂಡು ಯಾವುದೇ ಗೌಜಿ ಗದ್ದಲವಿಲ್ಲದ ಕಾರ್ಯಕ್ರಮ ಊಹಿಸುವಾಗಲೇ ಮನಸ್ಸಿಗೆ ಅಪ್ಯಾಯಮಾನದ ಅನುಭವವಾಗಿಬಿಡುತ್ತದೆ. ನಿಜ ಅರ್ಥದಲ್ಲಿ ಇದು ತಾಳ ಮತ್ತು ಮದ್ದಲೆಯೇ ಆಗಿಬಿಟ್ಟಿದೆ.

ಶ್ರೀ ಪ್ರಸಾದ ಬಲಿಪರ ಕೆಲವು ಪದಗಳು

ಶ್ರೀ ಪ್ರಸಾದ ಬಲಿಪ್ಪರ ಸರಳತೆ ಮತ್ತು ಕಲೆಯ ಬಗೆಗಿನ ಅರ್ಪಣಭಾವ ಇದರಲ್ಲಿ ಅರಿವಿಗೆ ಬರುತ್ತದೆ. ಬೇರೆ ಯಾವುದೇ ಭಾಗವತನೂ ಇಷ್ಟು ವಿಶಾಲ ಮನಸ್ಕರಾಗಿ ಇಂತಹ ಸರಳ ಸ್ವಕೀಯದಂತಹ ಕಾರ್ಯಕ್ರಮದಲ್ಲಿ ಹಾಡಲು ಮನಸ್ಸು ಮಾಡುವುದು ಅಸಾಧ್ಯ. ಹಾಗಾಗಿ ಈ ಯುವ ಭಾಗವತರು ತಂದೆಯವರಿಂದ ಬಳುವಳಿಯಾಗಿ ಕೇವಲ ಕಲೆಯನ್ನು ಮಾತ್ರವಲ್ಲ ಸದ್ಗುಣಗಳನ್ನೂ ಧಾರಾಳವಾಗಿ ಪಡೆದಿದ್ದಾರೆ. ದೊಡ್ಡ ದೊಡ್ಡ ವೇದಿಕೆಯನ್ನೇ ಲಕ್ಷ್ಯವಿರಿಸಿದ ಭಾಗವತರ ಮಧ್ಯೆ ಕೇವಲ ಕಲೆಯನ್ನೆ ಲಕ್ಷ್ಯವಿರಿಸಿದ ಇಂತಹ ಹಿರಿಯ ಮನಸ್ಸಿನ ಯುವ ಕಲಾವಿದರು ನಮ್ಮೊಂದಿಗೆ ಇದ್ದಾರೆ ಎನ್ನುವುದೇ ಸಂತಸದ ವಿಚಾರ.









Tuesday, September 6, 2011

ಪರಂಪರೆಯ ಸಂಪ್ರದಾಯಬದ್ದ ಮದ್ದಲೆವಾದಕ ಶ್ರೀ ಕುದ್ರೆಕೊಡ್ಲು ರಾಮ ಭಟ್



ಈ ನುಡಿನಮನವನ್ನು ಹಲವುದಿನ ಮೊದಲೇ ಬರೆಯಬೇಕೆಂದಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಸಮಯದಭಾವದಿಂದ ಅದು ಕೈಗೂಡಲಿಲ್ಲ. ವಾರದ ಮೊದಲು ಹಿರಿಯ ಕಲಾವಿದರ ನಿಧನದ ಸುದ್ದಿ ಕೇಳಿದಾಗ ಒಂದಷ್ಟು ಹೊತ್ತು ಮನಸ್ಸುಹಳೆಯ ನೆನಪುಗಳನ್ನು ಸ್ಮರಣೆಗೆ ತಂದು ಕೊಂಡಿತು. ನಾನು ತಿಳಿದಂತೆ ನಮ್ಮ ಹಿರಿಯರ ಆಪ್ತವಲಯದಲ್ಲಿ ಗುರುತಿಸಲ್ಪಟ್ಟ ಕಲಾವಿದರಾಗಿದ್ದ, ಚೆಂಡೆ ಮದ್ದಲೆಯ ವಾದನದಲ್ಲಿ ಸಮರ್ಥ ಕಲಾವಿದರಾದ ಕುದ್ರೆಕೊಡ್ಲು ಶ್ರೀ ರಾಮ ಭಟ್ ನಿಧನಾರದ ಸುದ್ದಿ ಅನಿರೀಕ್ಷಿತವಾಗಿ ಬಂದು ಬಿಟ್ಟಿತು. 

ಕುದ್ರೆಕೊಡ್ಲು ರಾಮಭಟ್ಟರ ವಿಷಯದಲ್ಲಿ ನೆನಪಿನ ಸುಳಿ ಬಿಚ್ಚತೊಡಗಿದರೆ ಆ ಸುಳಿ ಬಲಿಪ್ಪರ ಭಾಗವತಿಕೆಯೊಂದಿಗೆ ಹೆಚ್ಚಾಗಿ ಸುರುಳಿಕೊಂಡಿರುತ್ತದೆ. ಅಂದಿನ ಕಾಲವದು. ಗುರುಗಳಾದ ಹಿರಿಯ ಅರ್ಥಧಾರಿ ಪೆರ್ಲ ಕೃಷ್ಣ ಭಟ್ ಬಳಗದ ಹಲವು ತಾಳಮದ್ದಲೆ ಕಾಣುವ ಯೋಗ ನನಗೆ ಒದಗಿತ್ತು. ಈ ತಂಡ ಮಂಗಳೂರು ಆಕಾಶವಾಣಿಯಲ್ಲೂ ಹಲವು ತಾಳಮದ್ದಲೆ ಕಾರ್ಯಕ್ರಮವನ್ನು ನೀಡಿತ್ತು. ಆ ಬಳಗದಲ್ಲಿ ಈಗಿನ ಹಿರಿಯ ಬಲಿಪ್ಪರು ಭಾಗವತರಾಗಿದ್ದರೆ ಅವರಿಗೆ ಸಮರ್ಥ ಹಿಮ್ಮೇಳದವರಾಗಿ ಒಬ್ಬರು ಪುಂಡಿಕ್ಕಾಯಿ ಕೃಷ್ಣಭಟ್ ಇದ್ದರೆ ಇನ್ನೊಬ್ಬರು ಈ ಕುದ್ರೆಕೊಡ್ಲು ರಾಮ ಭಟ್ ತಮ್ಮ ಕೈಚಳಕಕ್ಕೆ ಸಾಕ್ಷಿಯನ್ನು ರೂಪಿಸಿಬಿಡುತ್ತಿದ್ದರು.  ಬಹುಷಃ ನನ್ನೆಣಿಕೆಯಂತೆ ಇದು ನಾನು ಕಂಡ ಒಂದು ಅತ್ಯುತ್ತಮ ಹೊಂದಾಣಿಕೆಯ ಶ್ರೇಷ್ಠ ಹಿಮ್ಮೇಳ. ಎಂತಹ ಹಿಮ್ಮೇಳ ವೈಭವವದು. ಬಲಿಪ್ಪರ ಶೈಲಿಗೆ ಸಹಜವಾಗಿ ಮತ್ತು ಮಾನಸಿಕವಾಗಿ ಹೊಂದಿಕೊಂಡ ಮದ್ದಲೆ ವಾದನವದು. ಆದರೆ ಇಂದು ಹಲವು ಧ್ವನಿ ಮುದ್ರಣ ಮಾತ್ರವೇ  ಅದಕ್ಕೆ ಸಾಕ್ಷಿಯಾಗಿದೆ. ನನು ಕಂಡ ಅತ್ಯುತ್ತಮ ಜತೆಗಾರಿಕೆಯಲ್ಲಿ ಬಲಿಪ್ಪ ಕುದ್ರೆಕೊಡ್ಲು ಜತೆಗಾರಿಕೆಯೂ ಒಂದು

ಹಾಗಾಗಿ ಶ್ರೇಷ್ಠ ಹಿಮ್ಮೆಳ ವೊಂದರ ಗಾಲಿಯೊಂದು ಕಳಚಿದ ಅನುಭವವಾದಂತೆ.ಸರಳವಾದ ಮಾಂತ್ರಿಕ ಸ್ಪರ್ಶದ ಪೆಟ್ಟುಗಳಿಗೆ ಹೆಸರಾದ ರಾಮ ಭಟ್ಟರ ವಾದನ ಇನ್ನು ನೆನಪು ಮಾತ್ರ. ಬಾಲ್ಯದಲ್ಲಿ ತಂದೆಯ ಮಿತ್ರರಾಗಿದ್ದುದ್ದು ನಾನು ಗುರುತಿಸಿಕೊಂಡಿದ್ದೆ. ಸೌಮ್ಯ ಸ್ವಭಾವದ ಅಷ್ಟೇ ಸೌಮ್ಯ ಮಾತುಗಳ ರಾಮ ಭಟ್ಟರ ವ್ಯಕ್ತಿ ಪರಿಚಯ ಅಷ್ಟೇನು ಆಳವಾಗಿ ನನಗಿಲ್ಲದಿದ್ದರೂ ಅವರ ಸ್ಥೂಲವಾದ ವ್ಯಕ್ತಿತ್ವದ ಅಚ್ಚು ಇನ್ನು ಮನಸ್ಸಿನಲ್ಲಿದೆ.  ಯಾವುದೇ ಮೇಳಕ್ಕೆ ಅಂಟಿಕೊಂಡ ಕಲಾವಿದರಾಗಿ ನನ್ನ ನೆನಪಿನಲ್ಲಿ ಇರದಿದ್ದರೂ ಬಹಳ ಹಿಂದಿ ಹಿರಿಯ ಸ್ತ್ರೀ ವೇಷಧಾರಿ ಕಾವೂರು ಕೇಶವರ ಯಜಮಾನಿಕೆ ಕೊಲ್ಲೂರು ಮೇಳದಲ್ಲಿ ಒಂದು ವರ್ಷ ಚೆಂಡೆ ವಾದಕರಾಗಿದ್ದುದು ಇನ್ನೂ ನೆನಪಿನಲ್ಲಿದೆ. 

ನಮ್ಮ ಹಿರಿಯರು ಇವರ ತಂದೆ, ಅವರಿಗೂ ಇದುವೇ ಹೆಸರು, ಇವರ ಮಗನಿಗೂ ಇದೇ ಹೆಸರು ಅದರ ಕಾರಣವೇನೋ ಅರಿಯದು. ಆದರೂ ಹಿರಿಯ ಕುದ್ರೆಕೊಡ್ಲು ರಾಮ ಭಟ್ಟರೆ ಸಮಸ್ತ ಭಾಗವತರು ಹೇಳುವಂತೆ ಅಪ್ರತಿಮ ಚೆಂಡೆ ಮದ್ದಲೆ ವಾದಕರು. ಚೆಂಡೆ ಮದ್ದಲೆಗಳೆರಡರಲ್ಲೂ ಸಮಾನ ಸಾಮಾರ್ಥ್ಯವನ್ನು ಮೆರೆದದವರು.  ಬಲಿಪ್ಪರು  ಸಹ ಅದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಹಾಗೆ ನೋಡಿದಾಗ ಮತ್ತೊಂದು ವೈಶಿಷ್ಟ್ಯ ಗಮನಕ್ಕೆ ಬರುವುದು ಅದು ಹಿರಿಯ ಹಾಗು ಕಿರಿಯ ರಾಮಭಟ್ಟರು ಹಾಗು ಈಗಿನ ಹವ್ಯಾಸಿ ಕುದ್ರೆಕೊಡ್ಲು ರಾಮಮೂರ್ತಿ ಯವರೊಂದಿಗೂ ಭಾಗವತಿಕೆ ಮಾಡುವುದರ ಮೂಲಕ ಮೂರು ತಲೆಮಾರಿನವರೊಂದಿಗೆ ಭಾಗವತರಾದ ದಾಖಲೆ  ಅಪೂರ್ವವೆನಿಸಿಬಿಡುತ್ತದೆ. ಹಾಗಾಗಿ ಇದರ ಪ್ರಮುಖ ಕೊಂಡಿಯೊಂದು ಇತಿಹಾಸವಾಗಿ ಸೇರಿಕೊಂಡ ವಿಷಯ ಮಾತ್ರ ದುಃಖಕರ. 
ಬಲಿಪ್ಪರ ಮಾತಿನಂತೆ ಭಾಗವತ ಪದ ತೆಗಿವಾಗ ಎರಡನೆ ಶಬ್ಧಕ್ಕೆ ತಾಳ ಆ ಪದ ಯಾವ ತಾಳದಲ್ಲಿ ಇದೆ  ಎಂದು ಗುರುತಿಸುವಂತಾಗಬೇಕು. ಕುದ್ರೆಕೊಡ್ಲು ರಾಮಭಟ್ಟರ ಜತೆಗಾಗಿರಿಕೆಯಲ್ಲಿ ಇದು ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ. ಇಂದು ತೀರ ಅಪರೂಪವಾಗಿ ಬಿಟ್ಟಿರುವ ಈ ವಿಷಯಕ್ಕೆ ಅಂದಿನವರು ಅದೆಷ್ಟು ಮಹತ್ವವನ್ನು ಕೊಡುತ್ತಿದ್ದರು. ರಾಮ ಭಟ್ಟರ ಮದ್ದಲೆಯ ಛಾಪುಗಳು, ಬಿಡಿತಗಳು ಜತೆಯಲ್ಲಿ ಮೆದುವಾಗಿ ಹಾಗು ಖಚಿತವಾಗಿ ಮೊಳಗುವ ಮದ್ದಲೆಯ ಪೆಟ್ಟುಗಳ ಲಯವಿನ್ಯಾಸದ ಭಾಷೆ ಕೇಳಿಯೇ ಅರಿಯಬೇಕು. ಪರಂಪರೆಯ ಸಂಪ್ರದಾಯಬದ್ದ ಮದ್ದಲೆ ವಾದನ ಯಾವುದೇ ಸರ್ಕಸ್ ಇಲ್ಲದ ಸುಂದರ ವಾದನ ಕಾವ್ಯವಾಗಿ ಆಸ್ವಾದಿಸಬಹುದು

ಕುದ್ರೆಕೊಡ್ಲು ರಾಮಭಟ್ ಮದ್ದಲೆಯ ಒಂದು ಝಲಕ್

.

ಅದರಂತೆ ಮನ್ನಣೆ ನಿರೀಕ್ಷಿತ ಮಟ್ಟದಲ್ಲಿ ಸಿಗದ ಹಲವು ಪ್ರತಿಭೆಗಳನ್ನು ಕಾಣಬಹುದು. ಯಕ್ಷಗಾನದಲ್ಲಂತೂ ಇದನ್ನು  ಧಾರಾಳವಾಗಿ ಕಾಣಬಹುದು. ಸಾಲಿಗೆ ಕುದ್ರೆಕೊಡ್ಲು ಪ್ರತಿಭೆಯೂ ಸೇರಿಬಿಡುವುದು ಅತ್ಯಂತ ಖೇದನೀಯ ವಿಚಾರ.  ಸಹಜ ತಣ್ಣನೆಯ ಸ್ವಭಾವದಂತೆ ಪ್ರತಿಭೆಯನ್ನು ಹೊರ ಹೊಮ್ಮಿಸುವುದರಲ್ಲೂ ರಾಮಭಟ್ಟರು ತಣ್ಣಗಾದದ್ದು ಒಂದು ಅಪ್ರತಿಮ ಪ್ರತಿಭೆಯ ದುರಂತವೇ ಎನ್ನಬಹುದು.

          ಅಲ್ಪಜ್ಞಾನಿಗಳು ತಮ್ಮ ಅಲ್ಪಜ್ಞಾನವನ್ನೇ ಭಂಡವಳವನ್ನಾಗಿಸಿ ವಶೀಲಿಯೋ ಇನ್ನಿತರ ಮಾರ್ಗಗಳ ಮೂಲಕ ಮನ್ನಣೆಯನ್ನು ಬಲವಂತವಾಗಿ ಗಿಟ್ಟಿಸುವ ಯುಗದಲ್ಲಿ... ಮಾರುಕಟ್ಟೆಯಲ್ಲಿ ಅಲ್ಪ ದಾಸ್ತಾನಿನ ಅಂಗಡಿಯವ ಇದ್ದ ವಸ್ತುಗಳನ್ನೆಲ್ಲ ಪ್ರದರ್ಶನಕ್ಕೆ ಇಡುವಂತೆ, ರಖಂ ವ್ಯಾಪಾರಿಗಳು ತಮ್ಮ ದಾಸ್ತಾನಿನ ವಸ್ತುಗಳ ತೀರಾ ಅಲ್ಪಭಾಗವನ್ನು ಪ್ರದರ್ಶನಕ್ಕೆ ಇಡುವಂತೆ ಇಂದಿನ ಹಲವು ಕಲಾವಿದರೆನ್ನಿಸಿಕೊಳ್ಳುವವರ ನಡವಳಿಕೆ. ತಮ್ಮೊಳಗೆ ಏನೂ ಇಲ್ಲದವ ಇದೇ ಸರ್ವಸ್ವ ಎಂದು ತಿಳಿದ ಅಲ್ಪಜ್ಞಾನವನ್ನೇ ಪ್ರದರ್ಶಿಸಲು ಹವಣಿಸುವಾಗ  ಅಪಾರ ಜ್ಞಾನವನ್ನು ಹೊಂದಿದ ಓರ್ವ ಪರಿಪೂರ್ಣ ಕಲಾವಿದ ಅವಕಾಶವಂಚಿನಾಗಿ ತಣ್ಣಗೇ ಕುಳಿತುಬಿಡುವ ಪರಿಸ್ಥಿತಿ. ಭಾಗವತಿಕೆಯ ಹಿಂದು ಮುಂದು ಅರಿಯದವ ತಾನೀಗ ಒಂದೆರಡು ಪದ ಮಾತ್ರ ಹೇಳುವುದಕ್ಕಷ್ಟೇ ಆಟಕ್ಕೆ ಹೋಗುವುದು ಎಂದು ಹೆಗ್ಗಳಿಕೆಯ ಮಾತು ಹೇಳಿ ತನ್ನ ಅಲ್ಪಜ್ಞಾನವನ್ನೇ ಪ್ರದರ್ಶಿಸುವಲ್ಲಿ ಢಾಂಬಿಕತನದ ಪ್ರದರ್ಶನ ಮಾಡುವಾಗ ಕಲಾಸಂಪನ್ನರು ಮೂಲೆಗುಂಪಾಗುವುದನ್ನೂ ಕಾಣಬಹುದು. ತನ್ನೊಳಗೆ ಅಪಾರಜ್ಞಾನವನ್ನು ಹುದುಗಿಸಿಟ್ಟವನು ದೊಡ್ಡ ವ್ಯಾಪಾರಿಯಂತೆ  ಎಂದಿಗೂ ಅದರ ಪೂರ್ಣ ಪ್ರದರ್ಶನಕ್ಕೆ ಹಾತೊರೆಯುವುದಿಲ್ಲ. ತನಗೆ ತಿಳಿದುದರ ಅಲ್ಪವನ್ನು ಮಾತ್ರ ಪ್ರದರ್ಶಿಸುತ್ತಾನೆ. ಶೂನ್ಯ ಜ್ಞಾನಿ,  ಇಲ್ಲದುದನ್ನು ಇದೆ ಎಂದು ತೋರಿಸುತ್ತಾ  ಮಾತ್ರವಲ್ಲ ಇದೇ ಸಾರ್ವತ್ರಿಕ ಎಂಬ ಹುಂಬತನವನ್ನು ತೋರಿಸಿಬಿಡುತ್ತಾನೆ.

ಕಲೆ ಪ್ರತಿಭೆ ಎಂಬುದು ಒರೆಗೆ ಹಚ್ಚಿ ಹೊರಗೆ ಬರಬೇಕು. ಆವಾಗಲೇ ಅದು ಮಹತ್ವವನ್ನು ಮತ್ತು ಪೂರ್ಣತೆಯನ್ನು  ಪಡೆದುಕೊಳ್ಳುವುದು. ಇಲ್ಲವಾದರೆ ಒರೆಗೆ ಹಚ್ಚಿದಾಗ ಇದ್ದ ಬಣ್ಣವನ್ನೂ ಕಳೆದುಕೊಂಡು ಪೇಲವವಾಗಿಬಿಡುತ್ತದೆ. ಆದರೆ ರಾಂಭಟ್ಟರಿಗೆ ಒರೆಗೆ ಹಚ್ಚುವ ಅವಕಾಶವೇ ಸಿಗಲಿಲ್ಲ ಎನ್ನಬಹುದು. ಅಗಲಿದ ಪ್ರತಿಭೆ ಇನ್ನು ಕೇವಲ ನೆನಪಿನ ಪುಟಗಳ ಉಲ್ಲೇಖವಾಗುವ ಅನಿವಾರ್ಯತೆ ಈ ವಾಸ್ತವ ಪ್ರಪಂಚದ ಕಟು ಸತ್ಯ. ಅಗಲಿದ ಚೇತನಕ್ಕೆ ಅಂತರಾಳ ನಮನವನ್ನು ಮಧುರ ನೆನಪುಗಳ ಸ್ಮರಣೆಯೊಂದಿಗೆ ಸಲ್ಲಿಸುವ ಪ್ರಯತ್ನ ಮಾತ್ರ ಸಾಧ್ಯ.  ಈ ಮೂಲಕ ಅಗಲಿದ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ ಎಂಬ ಮನದಾಳದ ಪ್ರಾರ್ಥನೆ.
         
         









Wednesday, August 10, 2011

ಸಂಪನ್ಮೂಲ ದಾಖಲೀಕರಣಗಳು


ಯಕ್ಷಗಾನದ ಪಾರಂಪರಿಕ ಶೈಲಿಯ ಮಟ್ಟುಗಳ ಭಾಗವತಿಕೆಯ ದಾಖಲೀಕರಣದ ಲೇಖನವೊಂದು ಉದಯವಾಣಿ ಲಲಿತರಂಗ ವಿಭಾಗದಲ್ಲಿ ಇತ್ತೀಚೆಗೆ ಪ್ರಕಟಗೊಂಡಿತ್ತು. ಡಾ| ನಾಗವೇಣಿ ಮಂಚಿ ಯವರು ಈ ಲೇಖನವನ್ನು ಬರೆದಿದ್ದರು. ಅತ್ಯುತ್ತಮ ಭಾವಸ್ಪರ್ಶೀ ಲೇಖನ ಓದಿದಾಗ ಬಹಳ ಸಂತಸವಾಯಿತು.ಪರಂಪರೆಯ ಮಟ್ಟುಗಳ ದಾಖಲೀಕರಣವೆಂಬುದು ಪ್ರಸ್ತುತ ಕಾಲಘಟ್ಟದಲ್ಲಿ ಬಹಳ ಅನಿವಾರ್ಯವೆನಿಸಿದೆ. ಸೂಕ್ತ ಸಮಯದಲ್ಲಿ ಲಭ್ಯವಿರುವ ಸಂಪನ್ಮೂಲದ ರಕ್ಷಣೆ ಮತ್ತು ಉಪಯೋಗ ಈ ನಿಟ್ಟಿನಲ್ಲಿ ಮಾತ್ರ ಸಾಧ್ಯವೆಂದು ತೋರುತ್ತದೆ.YAKSHAGANA ARTICLE

ಬಹಳ ಹಿಂದೆ ಸುಮಾರು ಇಪ್ಪತ್ತು ವರ್ಷದ ಹಿಂದೆ ಮಂಗಳೂರಿನ ಪಾಲ್ಕೆ ಹಾಲ್ ನಲ್ಲಿ ಯಕ್ಷಗಾನ ತಾಳ ಮದ್ದಲೆಯೊಂದು ಆಗಿದ್ದುದು ಇನ್ನೂ ನೆನಪಿದೆ. ಬಲಿಪ ಭಾಗವತರು,  ಚಿಪ್ಪಾರು, ಶೇಣಿ,  ಪೆರ್ಲ, ಜೋಶಿ ಹೀಗೆ ಅತ್ಯಂತ ಹಿರಿಯರು ಭಾಗವಹಿಸಿದ ಒಂದು ಅದ್ಭುತ ತಾಳಮದ್ದಲೆಯಾಗಿತ್ತು. ಬಹಳ ಸರಳವಾಗಿ ನಡೆದ ಕಾರ್ಯಕ್ರಮವದು.   ಮುಖ್ಯವಾಗಿ ಅಂದಿನ ಕಾರ್ಯಕ್ರಮದ ವಿಶೇಷತೆ ಎಂದರೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರಿಂದ ಕೆಮ್ಮಣ್ಣು ನಾರಣಪ್ಪ ಶೈಲಿಯ ಮದ್ದಲೆವಾದನವಾಗಿತ್ತು. ಅತ್ಯಂತ ವಿಶಿಷ್ಟ ಶೈಲಿಯ ಮದ್ದಲೆ ವಾದನವದು. ಬಹುಷಃ ಚಿಪ್ಪಾರು ಬಲ್ಲಾಳರಿಂದ ನಂತರ ಆ ಶೈಲಿಯನ್ನು  ಕರಗತ ಮಾಡಿಕೊಂಡವರು ಯಾರೂ ಇಲ್ಲವೆಂದು ನನ್ನ ಅನಿಸಿಕೆ. ಈಗ ಆ ಶೈಲಿಯನ್ನು ಅರಸುವುದು ಕಠಿಣವೇ. ಹಾಗಾಗಿ ಈ ದಾಖಲೀಕರಣವೆಂಬುದು ಪ್ರಸ್ತುತ ಇಂದಿನ ಮಟ್ಟಿಗೆ ತೀರ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಕಾಳಜಿ ವಹಿಸಿ ಆಯೋಜಿಸಿದ್ದುದು ಅತ್ಯಂತ ಶ್ಲಾಘನೀಯ ಕಾರ್ಯ.
ಯಕ್ಷಗಾನ ಪ್ರದರ್ಶನರಹಿತವಾದ ಹತ್ತು ಯಕ್ಷಗಾನ ಸಂಬಂಧೀ ವಿಚಾರಸಂಕಿರಣಗಳು, ಕಮ್ಮಟಗಳು ಕಾರ್ಯಾಗಾರಾಗಳ ಬಗ್ಗೆ ಇಂದಿನ ಕಾಲದಲ್ಲಿ ಆಸಕ್ತಿದಾಯಕವಿಚಾರವಾಗುವುದು ಸ್ವಾಗತಾರ್ಹ. ಇದು ಸಂಪನ್ಮೂಲದ ಶೋಧನೆಯನ್ನು ಬಲಗೊಳಿಸುವಂತಾಗಬೇಕು. ಮಾತ್ರವಲ್ಲ ಅರ್ಹವ್ಯಕ್ತಿಗಳನ್ನು ಸೇರಿಸಿ ಮುಂದಾಲೋಚನೆಯಿಂದ  ಇಂತಹ ಕಾರ್ಯಕ್ರಮಗಳು ನೆರವೇರಿದಲ್ಲಿ ಮುಂದಿನ ಪೀಳಿಗೆಗೆ ಉಪಯುಕ್ತವಾಗುವುದರಲ್ಲಿ ಸಂಶವಿಲ್ಲ. ಅದರ ಮೌಲ್ಯವನ್ನು ಅರಿಯುವ ಜ್ಞಾನವನ್ನು ಬೆಳೆಸುವಂತಾಗಬೇಕು. ಕೇವಲ ಕಾರ್ಯಕ್ರಮದ ಲೆಕ್ಕಕ್ಕೆ ಇಂತಹ ಕಾರ್ಯಕ್ರಮ ಮಾಡುವ ಪ್ರಮೇಯವಿರಬಾರದು.
ಯಕ್ಷ್ಗಗಾನ ಪರಂಪರೆಯಬಗ್ಗೆ ಚರ್ಚೆ ಹೇಗೂ ಇರಲಿ ಹಳೆಯ ಮಟ್ಟುಗಳು ಸಂಪ್ರದಾಯ ಕ್ರಮಗಳ ಅರಿವಿರಬೇಕಾದುದು ಅತೀ ಮುಖ್ಯ. ಮುಂದಿನ ಪೀಳಿಗೆಗೆ ಅದನ್ನು ಮುಂದುವರಿಸಿ ರಕ್ಷಿಸಬೇಕಾದರೆ ಅಂತಹ ಜ್ಞಾನ ಸಂಪನ್ಮೂಲ ವ್ಯಕ್ತಿಗಳು ಇಂದು ಕೆಲವರು ಮಾತ್ರ ಸಿಗಬಲ್ಲರು. ಈ ನಿಟ್ಟಿನಲ್ಲಿ ಗಮನ ಹರಿಸಿ ಇಂತಹ ವಿಷಯಗಳ ದಾಖಲೀಕರಣ ಕಾರ್ಯಕ್ರಮ ಅನಿವಾರ್ಯವಾಗಿದೆ. ಇದರಲ್ಲಿ ವ್ಯಾಪಾರೀ ಭಾವ ನುಸುಳಬಾರದು. ಕಲೆಯೆಂದರೆ ಅದು ಆರೋಗ್ಯವಂತ ಮನಸ್ಸಿನ ಪ್ರತೀಕವಾಗಬೇಕು. ಮನಸ್ಸನ್ನು ಮುದಗಗೋಳಿಸುವ ಕಲೆಯ ಮೌಲ್ಯ ಮನಸ್ಸಿನಿಂದಲೇ ಅಧಿಕವಾಗಬೇಕಲ್ಲದೆ ನಾವು ಅದಕ್ಕೆ ಮೌಲ್ಯವನ್ನು ನಿರ್ಣಯಿಸಿ ಅದನ್ನು ವ್ಯಾಪಾರೀಕರಣಗೊಳಿಸಬಾರದು.
ಯಕ್ಷಗಾನದಲ್ಲಿ ಅಧ್ಯಯನ ವಸ್ತುಗಳ ಶೋಧನೆಯೂ ಅನಿವಾರ್ಯವಾಗಿದೆ. ಕೆಲವೇ ವಸ್ತುಗಳಿಗೆ ಕಮ್ಮಟಗಳು ಕಾರ್ಯಾಗಾರಗಳು ಸೀಮಿತವಾಗಬಾರದು. ಪ್ರತಿಯೊಂದರಲ್ಲೂ ಆಸಕ್ತಿದಾಯಕ ವಿಚಾರಗಳಿವೆ. ಆ ವಿಚಾರಗಳು ಪ್ರಕಾಶಿಸಬೇಕು. ಹೊರ ಜಗತ್ತು ತಿಳಿಯುವಂತಾಗಬೇಕು. ಇಂದು ಅಂತಹವಿಚಾರಗಳು ಅರಿತ ಸಂಪನ್ಮೂಲವ್ಯಕ್ತಿಗಳ ಮಾರ್ಗದರ್ಶನ ಪಡೆಯಬೇಕು ಇದರಲ್ಲಿ ಯಾವುದೇ ಪೂರ್ವಾಗ್ರಹ ಸಲ್ಲದು. ಇಂದು ಹಲವು ವಿಚಾರಗಳನ್ನೆ ಯೋಚಿಸುತ್ತಾ ಗಮನಿಸಿದರೆ ಅರಿವಾಗಬಹುದು.ಹಿಮ್ಮೇಳದ ಮದ್ದಲೆವಾದನವನ್ನು ಉದಾಹಾರಿಸಿದರೆ ಅದರಲ್ಲಿ ಹಲವಾರು ವಿಚಾರಗಳು ಅಧ್ಯಯನಕ್ಕೆ ಯೋಗ್ಯವಾಗಿದೆ. ಯಾವುದೇ ಮಟ್ಟುಗಳ ಬಗ್ಗೆಯಾಗಲೀ ಸಂಪ್ರದಾಯದ ಬಗ್ಗೆಯಾಗಲೀ ಕಾರ್ಯಕ್ರಮವಿದ್ದರೆ ಆವಾಗ ಮೊದಲ ಆಯ್ಕೆಯ ವ್ಯಕ್ತಿಯಾಗುವುದು ಪದ್ಯಾಣ ಶಂಕರಣ್ಣನವರು. ಸಂಪ್ರದಾಯದ ಮಟ್ಟುಗಳ ಬಗ್ಗೆ ಅದ್ಭುತ ಪಾಂಡಿತ್ಯ ಇರುವವ ಇವರನ್ನು ಇತ್ತೀಚೆಗೆ ನಡೆದ ಹಲವು ಕಾರ್ಯಕ್ರಮಗಳಲ್ಲಿ ಸೂಕ್ತವಾಗಿ ಉಪಯೋಗಿಸಿಕೊಂಡಿದ್ದಾರೆ. ಅದು ಮುದ್ದಣ್ಣ ಶತಮಾನೋತ್ಸವದ ಸಿ. ಡಿ ಯಾಗಿರಬಹುದು, ದಾಖಲೀಕರಣವಾಗಿರಬಹುದು. ಇದರಲ್ಲೆಲ್ಲ ಅವರ ಅನುಭವದ ಕಿಂಚಿತ್ ಭಾಗವನ್ನು ಮಾತ್ರವೇ ದಾಖಲಿಸಲ್ಪಟ್ಟಿದೆ ಇಲ್ಲವೇ ಪ್ರಕಾಶಕ್ಕೆ ಬಂದಿದೆ. ಇನ್ನೂ ಇಂತಹ ಅದೆಷ್ಟು ವಿಚಾರಗಳು ಇವರಲ್ಲಿ ಹುದುಗಿರಬಹುದು? ಅವರನ್ನು ಆಹ್ವಾನಿಸಿ ಚೆಂಡೆ ಹೆಗಲಿಗೇರಿಸಿ ಪುಂಡುವೇಶವನ್ನು ಮನಬಂದತೆ ಕುಣಿಸುವುದು ಮಾತ್ರ ಆಗಬಾರದಲ್ಲವೇ? ವಿಚಾರಸಂಕೀರಣಗಳು ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಇಂತಹ ಯೋಗ್ಯವ್ಯಕ್ತಿಗಳಿಗೆ ಪ್ರಾಶಸ್ತ್ಯ ಸಿಗಬೇಕು. ಅದು ಯಾವುದೋ ಸಾಧನೆಗೆ ಅಥವಾ ಪ್ರಚಾರಕ್ಕೆ ಮಾಡುವ ಕಾರ್ಯಕ್ರಮವಾಗಬಾರದು.

ಇವರ ಜ್ಞಾನವನ್ನೇಲ್ಲ ಹೊರತೆಗೆದು ಜೋಪಾನ ಮಾಡುವಂತಹ ಯೋಜನೆಗಳು ಸಿದ್ದವಾಗಬೇಕು. ಇದು ಕೇವಲ ವ್ಯಕ್ತಿಯೊಬ್ಬರಿಗೆ ಮಾತ್ರ ಸಂಬಂದಿಸಿರುವುದಲ್ಲ. ಇಂತಹ ಅದೆಷ್ಟು ಸಂಪನ್ಮೂಲವ್ಯಕ್ತಿಗಳನ್ನು ಕೇವಲ ಪೂರ್ವಾಗ್ರಹದಿಂದಲೋ ಸ್ವಾರ್ಥದಿಂದಲೋ ಅಲಕ್ಷಿಸುತ್ತೇದ್ದೆವೆ ಎಂದು ಅನ್ನಿಸುವುದಿಲ್ಲವೇ?  ಅದು ಮಾಂಬಾಡಿ ಗುರುಗಳಾಗಿರಬಹುದು, ಬಲಿಪ್ಪರಾಗಿರಬಹುದು, ತೆಂಕಬೈಲು ಕೋಳ್ಯೂರಂತಹ ಹಿರಿಯ ಕಲಾವಿದರಾಗಬಹುದು. ಈ ಎಲ್ಲ ಸಂಫತ್ತಿನ ದಾಖಲೀಕರಣ ಆಗಬೇಕಾದುದು ಬಹಳ ಅನಿವಾರ್ಯ.
          ಈ ನಿಟ್ಟಿನಲ್ಲಿ ನಾವು ಬಲಿಪ್ಪರ ಅನುಭವದ ಸಂದರ್ಶನವನ್ನು ಸರಳವಾಗಿ ಮಾಡಿ ಅದನ್ನು ವೀಡಿಯೊ ಮುಖಾಂತರ ಮಾಡಿ ಸಾಧ್ಯವಾದಷ್ಟು ಮಟ್ಟಿಗೆ ದಾಖಲೀಕರಿಸಿದ್ದೇವೆ. ಇಂತಹ ಸಣ್ಣ ಕಾರ್ಯಕ್ರಮದ ಮುಖಾಂತರವೂ ಸಾಧ್ಯವಾದಷ್ಟು ಮಟ್ಟಿಗೆ ಮಾಡಬಹುದು. ಮತ್ತೊಂದು ಗಮನಾರ್ಹವೆಂದರೆ ಕಾರ್ಯಕ್ರಮ ಸರಳವಾದಷ್ಟು ಅದರಲ್ಲಿ ವಿಚಾರಗಳು ಹೊರಬರುವುದು ಅಧಿಕ. ಆಡಂಬರದಿಂದ ಪ್ರಚಾರ, ಒಂದಷ್ಟು ಅಬ್ಬರ ಆದ್ರೆ ಒಂದಷ್ಟು ಧನಸಂಗ್ರಹ ಮಾತ್ರ ಸಾಧ್ಯ.
ಇನ್ನೊಂದು ಮುಖ್ಯ ಅಂಶವೆಂದರೆ ಇಂತಹ ದಾಖಲೀಕರಣಗಳು ಆಸಕ್ತಿವಂತರಿಗೆ ಸುಲಭದಲ್ಲಿ ಸಿಗುವಂತಾಗಬೇಕು. ಆಸಕ್ತಿವಂತರು ಅದನ್ನು ಸ್ವಾರ್ಥ ರಹಿತವಾಗಿ ಅದರ ಮೌಲ್ಯವನ್ನು ಸೂಕ್ತ ರೀತಿಯಲ್ಲಿ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪರಸ್ಪರ ಸೌಹಾರ್ದ ಮತ್ತು ಸಹದುಡಿಮೆಯಿಂದ ನಿಸ್ವಾರ್ಥವಾಗಿ ದುಡಿದರೆ ಇಂತಹ ಸಂಪನ್ಮೂಲಗಳು ಜೀವತಳೆದು ದೃಢವಾಗಿ ಬೆಳೆದು ನಿಂತು ಯಕ್ಷಗಾನಾ ನಿಜ ಅರ್ಥದಲ್ಲಿ ಅಧ್ಹೂರಿಯಾಗುವುದರಲ್ಲಿ ಸಂಶಯವಿಲ್ಲ.