ಮುಂಜಾನೆ ಸೂರ್ಯನುದಿಸುವ ಮೊದಲೆ ಮೊಬೈಲ್ ರಿಂಗಣಿಸಿ ಮತ್ತೊಂದು ಸೂರ್ಯಾಸ್ತಮಾನದ ಸುದ್ದಿಯನ್ನು ಒರೆಯಿತು. ಹೌದು, ಯಕ್ಷಗಾನ ಹಿರಿಯ ಭಾಗವತ ಯುಗ ಪ್ರವರ್ತಕ, ಉಭಯ ತಿಟ್ಟುಗಳಲ್ಲೂ ಸಮಾನ ಗೌರವವನ್ನು ಆರ್ಜಿಸಿಕೊಂಡ ಶ್ರೀ ಕಡತೋಕ ಮಂಜುನಾಥ ಭಾಗವತರು ನೆನಪಿನಂಗಳಕ್ಕೆ ಸರಿದು ಹೋದರು. ಇನ್ನು ಕಡತೋಕ ಬರೀ ನೆನಪೆಂಬುದು ವಾಸ್ತವದ ಕಟು ಸತ್ಯವಾಯಿತು. ಯಕ್ಷಗಾನದಲ್ಲಿ ಕಡತೋಕ ಮಂಜುನಾಥ ಭಾಗವತರ ಹೆಸರನ್ನು ಕೇಳದವರು ಅಥವ ಅರಿಯದವರು ಯಾರೂ ಇರಲಾರರು. ಒಂದು ಹೊಸ ಅಧ್ಯಾಯವನ್ನು ರೂಪಿಸಿ ಮೆರೆದಾಡಿದ ಭಾಗವತರು. ಇಂದಿನ ಹಲವು ಮೇರು ಕಲಾವಿದರನ್ನು ರೂಪಿಸುವಲ್ಲಿ ಕಡತೋಕರ ಕೊಡುಗೆ ಅಪಾರ. ಇವರಂತಹ ಸರ್ವಾಂಗೀಣ ಭಾಗವತರನ್ನು ಬಹುಷಃ ಯಕ್ಷಗಾನ ಪ್ರಪಂಚ ಕಾಣುವುದು ಅಸಾಧ್ಯ. ದಶಕಗಳ ಕಾಲ ಶ್ರೀ ಧರ್ಮಸ್ಠಳ ಮೇಳದ ಭಾಗವತರಾಗಿ ಮೇಳದ ಸುವರ್ಣ ಯುಗಕ್ಕೆ ಮೂಲ ಕಾರಣಕರ್ತರೆನಿಸುವ ಕಡತೋಕರ ವೈಭವದ ದಿನಗಳನ್ನು ಯಕ್ಷಗಾನ ಪ್ರೇಮಿ ಮರೆಯುವುದುಂಟೇ? ಇವರ ಕೈ ತಾಳಕ್ಕೆ ಕುಣಿಯದ ಇವರ ಪದಕ್ಕೆ ಅರ್ಥ ಹೇಳದ ಹಿರಿಯ ಕಲಾವಿದರಿದ್ದಾರೆಯೆ? ಅದೋಂದು ಸುಯೋಗವೆಂದು ತಿಳಿದುಕೊಂಡವರು ಹಲವರು.
ಕಡತೋಕರ ಸ್ಮರಣೆಗಾಗಿ ಈ ಪದಗಳು
ಇವರ ಸಾಮಾರ್ಥ್ಯ ವಿಶೇಷಗಳನ್ನು ಕೇವಲ ಒಂದೆರಡು ವಾಕ್ಶಗಳಲ್ಲೋ ಮಾತುಗಳಲ್ಲೋ ಹೇಳುವುದು ಅಸಾಧ್ಯವಾದ ಕಾರ್ಯ. ರಂಗದ ಮೇಲೆ ಹಲವು ಅವಿಸ್ಮರಣೀಯ ನೆನಪುಗಳನ್ನು ಕೇವಲ ಯಕ್ಷಗಾನ ಕಲಾವಿದರಿಗೆ ಮಾತ್ರವಲ್ಲ ಸಮಸ್ತ ಯಕ್ಷಗಾನ ಅಭಿಮಾನಿಗಳಿಗೆ ಉಳಿಸಿದವರು. ಧರ್ಮಸ್ಥಳ ಮೇಳದ ಅಂದಿನ ಯಕ್ಷಗಾನ ವೈಭವವನ್ನು ಹೇಳುವುದಿದ್ದರೆ, ಅದರಲ್ಲಿ ಬಹುಪಾಲು ಇವರ ವೈಭವಕ್ಕೇ ಸಾಕ್ಷಿಯಾಗಿಬಿಡುತ್ತದೆ. ಹತ್ತು ಹಲವು ಪ್ರಸಂಗಗಳು ಜತೆಯಲ್ಲಿ ಹಿಮ್ಮೇಳದಲ್ಲಿ ಜತೆಯಿದ್ದ ದಿವಂಗತ ಚಿಪ್ಪಾರು ಬಲ್ಲಾಳರು ಮುಮ್ಮೇಳದ ಅದ್ವಿತೀಯ ಕಲಾವಿದರೆಂದು ಗುರುತಿಸಲ್ಪಟ್ಟ ಪುತ್ತೂರು ನಾರಾಯಣ ಹೆಗಡೆ, ಎಂಪೆಕೆಟ್ಟೆ ರಾಮ ರೈ , ಚಂದ್ರಗಿರಿ ಅಂಬು, ವಿಟ್ಲ ಜೋಷಿ. ಈಗಿನ ಹಿರಿಯ ಕಲಾವಿದರಾದ ಸೂರಿಕುಮೇರಿ ಗೋವಿಂದ ಭಟ್, ಕುಂಬಳೇ ಸುಂದರ್ ರಾವ್, ಪಾತಾಳ ವೆಂಕಟ್ರಮಣ ಭಟ್ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಪ್ರತೀಯೊಬ್ಬರ ಸಾಮಾರ್ಥ್ಯದಲ್ಲೂ ಕಡತೋಕರ ಹೆಸರು ಪ್ರಸ್ತಾಪವಾಗದೇ ಇರುವುದು ಅಸಾಧ್ಯದ ಮಾತು. ಕಡತೋಕ ಮತ್ತು ಚಿಪ್ಪಾರು ಬಲ್ಲಾಳರ ಹಿಮ್ಮೇಳ ವೈಭವ ಬಹುಶಃ ಯಕ್ಷಗಾನದ ಒಂದು ಮರೆಯಲಾಗದ ಅದ್ಭುತವೆನ್ನಬಹುದು.
ಕಂಚಿನ ಕಂಠದ ಭಾಗವತರು ಇನ್ನಿಲ್ಲ ಎಂದಾಗ ಒಂದು ಘಳಿಗೆಯಾದರೂ ಸ್ತಂಭೀ ಭೂತರಾಗುವ ಹಲವು ಕಲಾವಿದರು ಮತ್ತು ಯಕ್ಷಗಾನ ಅಭಿಮಾನಿಗಳಿದ್ದಾರೆ. ಇದು ಕಡತೋಕರು ಅಚ್ಚಳಿಯದೆ ಬಿಟ್ಟು ಹೋದ ಕಲಾವಿದ ವ್ಯಕ್ತಿತ್ವದ ನೆನಪು. ತೆಂಕು ಬಡಗು ಎಂಬ ಪ್ರಬೇಧ ವೆತ್ಯಾಸಗಳಿಲ್ಲದೆ ಇವರಂತೆ ಸಮಾನ ಪ್ರಭೆಯಿಂದ ಮೆರೆದವರು ಇರಲಾರರು.ಅದ್ಭುತ ಗಾಯಕ ಅದ್ಭುತ ಭಾಗವತ, ಅದ್ಭುತ ರಂಗ ನಿರ್ದೇಶಕ ಹೀಗೆ ಹಲವು ಅದ್ಭುತಗಳಿಗೆ ಹೆಸರಾದ ಶ್ರೀ ಕಡತೋಕ ಮಂಜುನಾಥ ಭಾಗವತರು ಇಲ್ಲವೆಂದರೆ ಸೂರ್ಯಾಸ್ತಮಾನವಾಗಿ ಗಾಢ ಮೌನದ ಇರುಳು ಕವಿದ ಅನುಭವ. ಆ ಅಂಧಕಾರದ ಇರುಳಲ್ಲಿ ಇವರು ಬಿಟ್ಟು ಹೋದ ಮಧುರ ನೆನಪುಗಳು ದೀವಿಗೆಯಾಗಿ ಇವರು ಹಾಕಿ ಕರೆದ ದಾರಿಯನ್ನು ತೋರುವಂತಾಗಲಿ. ನಮ್ಮನ್ನಗಲಿದ ದಿವ್ಯಾತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ ಎಂಬ ಹೃದಯಾಂತರಾಳದ ಪ್ರಾರ್ಥನೆ ಇದು.


