"ಇದು ವಿಮರ್ಶೆಯಲ್ಲದ ಚಿಂತನ"

Sunday, April 21, 2013

ಕಂಡು ಕಾಣದ ವಾಸ್ತವಾಂಶಗಳು


 ದೇವಸ್ಥಾನಕ್ಕೆ ಹೋದಾಗ ದೊಡ್ದದಾದ ಹೂಮಾಲೆಯೊಂದು ಪ್ರಸಾದವಾಗಿ ಪ್ರಸಾದಿಸಿದಾಗ, ಕೆಲವೊಮ್ಮೆ ಸಿಕ್ಕಿದ ಹೂಮಾಲೆಯಿಂದ ಸಣ್ಣ ಚೂರೊಂದನ್ನು ಅಥವಾ ಹೂವಿನ ಎಸಳೊಂದನ್ನು ತೆಗೆದು ಮುಡಿಗೇರಿಸುತ್ತಾರೆ. ಯಾಕೆಂದರೆ ಇಡೀ ಹೂಮಾಲೆಯನ್ನು ಧರಿಸುವವರೂ ಜತೆಗಿರುವುದಿಲ್ಲ. ಅದನ್ನು ಜೋಪಾನವಾಗಿ ಮನೆಗೆ ತೆಗೆದುಕೊಂಡು ಹೋದರೂ ಮನೆಗೆ ಅದು ತಲುಪುವ ಹಾಗಿಲ್ಲ. ಹಾಗಾಗಿ ಪ್ರಸಾದವನ್ನು ಪ್ರಸಾದಂತೆ ಸ್ವೀಕರಿಸಿ ಹೂಮಾಲೆಯನ್ನೇ ಧರಿಸಿದಂತೆ ತೃಪ್ತರಾಗುತ್ತಾರೆ. ದೊಡ್ಡ ಕೊಪ್ಪರಿಗೆಯಲ್ಲಿ ಪಕ್ವಾನ್ನವೋ ಪರಮಾನ್ನವೋ ಸಿದ್ದವಾಗಿ ಹೆಬೆಯಾಡುತ್ತಿರುತ್ತದೆ. ಕಂಡಾಗ ಹಲವು ಸಲ ಒಂದೆರಡು ಚಮಚೆ ಕೈಗೆ ಸುರಿದುಕೊಂಡು ರುಚಿನೋಡುವ ಚಪಲ ಹುಟ್ಟುತ್ತದೆ. ಹಾಗೆಂದು ಊಟಮಾಡಿ ಪೂರ್ಣವಾಗಿ ಅದನ್ನು ಸವಿಯುವ ಮನಸ್ಸು ಇರುವುದಿಲ್ಲ ವ್ಯವಧಾನವೂ ಇಲ್ಲ.! ಇದು ಇಂದಿನ ವೇಗದ ಪ್ರಪಂಚದಲ್ಲಿ ಬದಲಾದ ಅಭಿರುಚಿ ವ್ಯಕ್ತವಾಗುವ ಕ್ರಮ. ತಮಗೆಷ್ಟು ಬೇಕೋ ಅಷ್ಟನ್ನು ಮಾತ್ರ ತಿಕ್ಕಿ ತಿಕ್ಕಿ ನೋಡುವ ಕ್ರಮ. ಯಕ್ಷಗಾನವೂ ಇಂದು ಬದಲಾಗಿ ಬದಲಾಗಿ ತಮಗೆಷ್ಟು ಬೇಕೋ ಅಷ್ಟನ್ನು ಮಾತ್ರ ಸವಿಯುವ ಪ್ರವೃತ್ತಿಯಾಗುತ್ತಿದೆ. ಆದರೂ ಅದನ್ನೇ ಪೂರ್ಣ ಸಾಧಿಸಿ ತೊರಿಸುವಾಗ ಹಿರಿಯರು ಕಟ್ಟಿದ ದೊಡ್ದ ಮನೆ ಪ್ರಾಚ್ಯ ವಸ್ತು ರೂಪವಾಗಿ ಕೂಡ ಉಳಿಸದಂತೆ ಭಾಸವಾಗುತ್ತದೆ. ದೊಡ್ಡ ಮನೆಯ ಕೋಣೆ ಕೋಣೆಗಳನ್ನು ತುಂಡು ತುಂಡಾಗಿ ಮಾಡಿ ಕೆಲವನ್ನು ನಾಶಮಾಡಿ ಇನ್ನೇನೋ ಮಾಡಿ ಒಟ್ಟಾರೆ ಪತನದ ಹಾದಿಯನ್ನೆ ಸರ್ವಸ್ವ ಎಂದು ನಂಬಿದ ಹಾಗೆ ಅನಿಸುತ್ತದೆ.

ಕೆಲವು ಸಮಯದ ಮೊದಲು ಪ್ರಸಿದ್ಧ ಭಾಗವತರೊಬ್ಬರಲ್ಲಿ ಹೀಗೆ ಮಾತಿಗೆ ಕೇಳಿದ್ದೆ "ಈಸಲ ನಿಮಗೆ ಮೇಳದಲ್ಲಿ ಮದ್ದಲೆಗೆ ಜನ ಯಾರು ?" ಯಾವುದೇ ಭಾವ ಇಲ್ಲದೇ ಅವರು ಹೇಳಿದರು ( ಅಥವಾ ಅವರ ಅಂತರಂಗದ ಭಾವ ಏನೋ? ಅದು ನನಗೆ ಅರಿವಾಗದೇ ಇರಬಹುದು) " ನಾನು ಈಗ ಅದನ್ನೆಲ್ಲ ನೋಡುವುದಿಲ್ಲ....ನನ್ನ ಕೆಲಸ ಮಾಡುವುದು ಬರುವುದು" ಇಲ್ಲಿ           " ಕೆಲಸ " ಎಂದರೆ ಹೇಗೆ ಅದರ ಪರಿಪೂರ್ಣತೆಯ ಬಗ್ಗೆ ವಿವರಣೆ ವಿಶ್ಲೇಷಣೆಯ ಬಗ್ಗೆ ಹೇಳುವುದಲ್ಲ. ಬದಲಾಗಿ ಕಲಾವಿದನಿಗೆ ಈ ಭಾವ ಬಂದಲ್ಲಿ ಕಲೆಯನ್ನು ಕಲೆಯಾಗಿ ಕಾಣಲು ಸಾಧ್ಯವೇ ? ಕಾರಣ ಏನೇ ಇದ್ದರೂ ಇದರ ಅರಿವಿಲ್ಲದ ಪ್ರೇಕ್ಷಕ ಪಾಲಿಗೆ ಬಂದದ್ದು ಎಂದು ತೃಪ್ತನಾಗುವ ಬಗೆಯನ್ನು ಕಾಣುವ ಪ್ರಯತ್ನ ಮಾಡುತ್ತಾನೆ. ದೂರಕ್ಕೆ ಪ್ರಯಾಣಿಸುವ ರೈಲು ಬಂಡಿಯಲ್ಲಿ ಹಲವು ಸಲ ಮೂಲ ಜಾಗದಿಂದ ಹೊರಟ ರೈಲು ಭೋಗಿಯನ್ನು ಕಳಚಿಕೊಂಡೋ ಬೇರೆ ಭೋಗಿಯನ್ನು ಸೇರಿಸಿಕೊಂಡೋ ಅಥವಾ ಇನ್ನೊಂದು ರೈಲಿಗೆ ಸೇರಿಕೊಂಡೋ ಹೊರಟ ರೂಪದಲ್ಲಿ ಗಮ್ಯವನ್ನು ಸೇರುವುದಿಲ್ಲ. ಸಿಬ್ಬಂದಿಗಳು ಬದಲಾಗುತ್ತಾ ಹೋಗಿ ಅಂತ್ಯದಲ್ಲಿ ಒಟ್ಟು ಪ್ರಯಾಣದ ಸ್ವರೂಪವೇ ಬದಲಾದಂತೆ ಭಾಸವಾಗುತ್ತದೆ. ಯಾವುದೋ ಒಂದು ರೂಪದಲ್ಲಿ ಗಮ್ಯವನ್ನು ಸೇರಿ ಗುರಿ ಸಾಧಿಸುವ ಹಾಗೆ ಯಕ್ಷಗಾನ ಬದಲಾಗಿದೆ.

ಈ ಬಾರಿಯ ಯಕ್ಷಗಾನ ಪತ್ರಿಕೆಯ ಯಕ್ಷಪ್ರಭದಲ್ಲಿನ ಲೇಖನವೊಂದು ಮನಸ್ಸಿಗೆ ಹಿಡಿದ ಕನ್ನಡಿಯಂತೆ ಭಾಸವಾಗಿ ವಾಸ್ತವದತ್ತ ಮುಖಮಾಡುವಂತೆ ಮಾಡಿತು. " ಯಕ್ಷಗಾನ ಕಲೆ ಕಲಾವಿದ X ಜಿಜ್ಞಾಸು ಪ್ರೇಕ್ಷಕ" ಪೆರ್ನಡ್ಕ ಶ್ಯಾಮ ಭಟ್ಟ ಬರೆದ ಈ ಲೇಖನದಲ್ಲಿ ಹಲವಾರು ವಾಸ್ತವಾಂಶಗಳನ್ನು ಮನ ಮುಟ್ಟುವಂತೆ ಲೇಖಕರು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ವ್ಯಕ್ತವಾಗದೇ ಉಳಿವ ನಮ್ಮ ಭಾವನೆಗಳು ಸ್ಪಂದನೆಗೆ ಸಿಕ್ಕಿವೆಯೇ ಎಂದು ಅನುಮಾನಿಸುವ ಹಾಗೆ ಲೇಖನ ಅಚ್ಚು ಕಟ್ಟಾಗಿ ಪ್ರಕಟವಾಗಿದೆ. ಮೊದಲಾಗಿ ಹಿಮ್ಮೇಳದ ಬಗ್ಗೆ ಬರೆಯದಿದ್ದರೆ ಉತ್ತಮ ಎಂದು ಬರೆಯಲು ಮನಸ್ಸಿಲ್ಲದಿದ್ದರೂ ಬರೆದಿದ್ದಾರೆ. ಇದು ಅಪ್ರಚೋದಿತ ಉದ್ಗಾರದಂತೆ.ಕೆಲವೊಂದು ಸಲ ನಾವು ನಗುವುದೇ ಬೇಡ ಎಂದು ಬಿಗುವಿನಲ್ಲಿ ಕುಳಿತಿದ್ದರೂ ಹಾಸ್ಯ ನಮ್ಮನ್ನು ಅನಿಯಂತ್ರಿತವಾಗಿ ನಗುವಂತೆ ಮಾಡುತ್ತದೆ. ಹಾಗೆಈಗಿನ ಹಿಮ್ಮೇಳವು ಬೇಡದೇ ಇದ್ದರೂ ಇಲ್ಲಿ ಪ್ರಚೋದನೆ ಕೊಟ್ಟಂತೆ ಭಾಸವಾಯಿತು. ಹಲವು ಸಲ ಭಾಗವತ ರಾಗಾಲಾಪನೆ ಹಿಗ್ಗಿಸುತ್ತಾ ಹೋಗುತ್ತಾನೆ. ಈಗಿನ ಪ್ರೇಕ್ಷಕ ರೋಮಾಂಚನಗೊಂಡು ಪ್ರತಿಕ್ರಿಯಿಸಲು ಕಾದಿರುವುದನ್ನು ಗಮನಿಸಿ ಮತ್ತೂ ಅಲಾಪನೆಯನ್ನು ದೀರ್ಘಿಸುತ್ತಾನೆ. ರಂಗದ ಮೇಲಿನ ಪಾತ್ರಧಾರಿ ಈ ರಾಗ ನನ್ನ ಪಾತ್ರಕ್ಕಾಗಿಯೇ ಅಲ್ಲ ಪ್ರೇಕ್ಷಕನಿಗಾಗಿಯೇ ಎಂಬ ಅನುಮಾನದಲ್ಲಿ ಮೆರವಣಿಗೆಯ ಪ್ರತಿಮೆಯಂತೆ ಸ್ತಭ್ದವಾಗಿ ನಿಂತು ಬಿಡುತ್ತಾನೆ!! ಮತ್ತೆ ಮಾಡುವುದೇನು? ಸಂಗೀತ ಕಛೇರಿಯೋ ಯಕ್ಷಗಾನವೋ ಗೊಂದಲ. ಅತ್ತ ಸಂಗೀತಕ್ಕೂ ನ್ಯಾಯವಿಲ್ಲ ಇತ್ತ ಯಕ್ಷಗಾನಕ್ಕೂ ನ್ಯಾಯವಿಲ್ಲ. ಯಾಕೆಂದರೆ ಭಾಗವತನಿಗೆ ಎರಡರದ್ದೂ ಪೂರ್ಣ ಜ್ಞಾನವೇ ಸಿದ್ಧಿಸಿರುವುದಿಲ್ಲ. ಎರಡೂ ಸರಿಯಾಗಿ ಬರುವುದಿಲ್ಲ. ಈ ನಡುವೆ ಪ್ರೇಕ್ಷಕ ಕಿರಾಣಿ ಅಂಗಡಿಯ ಮುಂದೆ ನಿಂತುಕೊಂಡು ಪಕ್ಕದ ಬಟ್ಟೆ ಅಂಗಡಿಯನ್ನು ನೋಡುವಂತೆ ಯಾವುದಕ್ಕೆ ಗ್ರಾಹಕನಾಗುವುದು? ಯಾವುದನ್ನು ಗ್ರಹಿಸುವುದು? ಎಂಬ ಗೊಂದಲದಲ್ಲಿ ಬೀಳುತ್ತಾನೆ. ಕೊನೆಗೆ ಅಂತು ರಂಜನೆ ಸಿಕ್ಕಿತಲ್ಲ ಎಂದುಕೊಳ್ಳುತ್ತಾನೆ. ಹಾಗಾಗಿ ಇಂದು ರಂಜನೆ ಯಾವುದರಲ್ಲಿ ಸಿಗುತ್ತದೆ ಅಷ್ಟನ್ನು ಮಾತ್ರ ರಂಗದಲ್ಲಿ ತಂದು ಚಪ್ಪಾಳೆ ತಟ್ಟಿ ಖುಷಿ ಪಡುವುದು. ಗಮನಿಸಿ ಇಂದಿನ ಎಷ್ಟು ಜನ ಯುವಭಾಗವತರಿಗೆ ಏರು ಪದ ವಿರಳವಾಗಿ ಉಚ್ಚರಿಸಲು ಬರುತ್ತದೆ? ಕೇವಲ ಒಂದೆರಡು ಪದವನ್ನಷ್ಟೇ ಗುರಿಯಾಗಿಸಿ ಪ್ರಸಂಗ ಸೂಚಿಸುತ್ತಾರೆ ಮತ್ತು ಆ ಎರಡು ಪದಕ್ಕೆರಾಗ ಪೋಣಿಸುವುದರಲ್ಲೇ ತೊಡಗಿ ಬೇರೆ ಎಲ್ಲವೂ ಹರಕೆ ಸಂದಾಯವಾಗಿಬಿಡುತ್ತದೆ. ಅದನ್ನು ಯಕ್ಷಗಾನ ಎಂದು ಬಿಂಬಿಸುವಾಗ ಎಷ್ಟಿದ್ದರೇನು ಇಷ್ಟು ಇವತ್ತಿಗೆ ಸಾಕು ಎಂದು ಬಡಿಸಿದ ಹಾಗೆ.

ಬೆಂಗಳೂರಿನಲ್ಲಿ ಪ್ರಸಿದ್ದ ಗಾಯಕರೊಬ್ಬರು ಯಕ್ಷಗಾನವನ್ನು ನೋಡಿ ಪ್ರತಿಕ್ರಿಯಿಸುತ್ತಾರೆ.. "ಯಕ್ಷಗಾನ ಭಾಗವತರು ವಿರಳ ವಿಲ್ಲದೆ ಅರ್ಥವಾಗದಂತೆ ಹಾಡುತ್ತಾರೆ ಯಾಕೆ? ಸ್ಪಷ್ಟವಾದ ಉಚ್ಚಾರ ಯಾಕೆ ಇಲ್ಲ? ಇದು ವಿದ್ಯಾಭ್ಯಾಸದ ಕೊರತೆಯೇ?" ವಿಪುಲವಾದ ಜ್ಜಾನವನ್ನೂ ಸಂಸ್ಕಾರವನ್ನೂ ಅಕ್ಷರಾಭ್ಯಾಸ ಇಲ್ಲದಿದ್ದರೂ ಯಕ್ಷಗಾನದ ಮೂಲಕ ತೋರಿಕೊಟ್ಟ ಕಲಾವಿದರು ಈ ಪ್ರತಿಕ್ರಿಯೆ ಕೇಳಿದರೆ ಹೇಗಾಗಬಹುದು? ಭಾಷಾವಿಜ್ಞಾನದಲ್ಲಿ ಸ್ನಾತಕರಾದವರಿಗೂ ತಿಳಿಯದಷ್ಟು ವ್ಯಾಕರಣ, ಪೌರಾಣಿಕ ಜ್ಞಾನ ಕಥೆ ಉಪನಿಷತ್ತುಗಳ ತಿಳುವಳಿಕೆ, ಹಲವು ಯಕ್ಷಗಾನ ಕಲಾವಿದರಿಗೆ ತಿಳಿದಿರುತ್ತದೆ. ಧರ್ಮ ಕರ್ಮಗಳ ಬಗ್ಗೆ ಸಿದ್ಧಾಂತವನ್ನು ಮಂಡಿಸುವ ಕಲಾವಿದನ ಅನುಭವದ ಜ್ಞಾನಕ್ಕೆ ಸಿಗುವ ಮನ್ನಣೆ ಎಂದರೆ ಇದೇ ಎನು? ಈ ಪ್ರತಿಕ್ರಿಯೆಯ ಆಳ ಎಷ್ಟು? ಹೊಸ ಪ್ರೇಕ್ಷಕನಲ್ಲಿ ಯಕ್ಷಗಾನದ ಗಾಯನದ ಬಗ್ಗೆ ಯಾವ ಕಲ್ಪನೆ ಬರುತ್ತದೆ? ಅದರ ಪರಿಣಾಮವೇನು? ಯೋಚಿಸುವ ಶಕ್ತಿ ವ್ಯವಾಧಾನ ಇದೆಯೇ? ಅಥವಾ ನಮಗೆ ಕೇವಲ ರಂಜನೆ ಮಾತ್ರ ಸಾಕೇ?

ಯಕ್ಷಗಾನ ಪರಂಪರೆಯ ಪೂರ್ವ ರಂಗವಂತು ಕಾಲ ನಿಯಮಕ್ಕೆ ಸಿಕ್ಕಿ ದೂರವಾಗುತ್ತದೆ. ಸೀಮಿತ ಮೂರು ಘಂಟೆಯಲ್ಲಿ ಇರುವ ಯಕ್ಷಗಾನದಲ್ಲಾದರೂ ಪರಂಪರೆ ಎಷ್ಟು ಬಳಕೆಯಾಗುತ್ತದೆ. ಅನಾವಶ್ಯಕ ದುಂದು ವೆಚ್ಚ ಅದ್ದೂರಿತನದ ಬ್ಯಾಂಡು ವಾಲಗ ಸಿಡಿಮದ್ದಿನ ಸದ್ಧುಗದ್ದಲಕ್ಕೆ ಪ್ರಾಮುಖ್ಯತೆಯೇ ಹೊರತು ರಂಗಸ್ಥಳದ ಯಕ್ಷಗಾನಕ್ಕಲ್ಲ. ಒಬ್ಬ ಬಣ್ಣದ ವೇಷಧಾರಿ ಚೌಕಿಯಲ್ಲಿ ಗಂಟೆಗಿಂತಲೂ ಹೆಚ್ಚು ಅವಧಿಯಲ್ಲಿ ಬಂಧಿಯಂತೆ ಕುಳಿತು ಚುಕ್ಕಿ ಇಟ್ಟು ಬಣ್ಣ ಹಚ್ಚಿ ಅಬ್ಬರದಲ್ಲಿ ರಂಗ ಪ್ರವೇಶ ಮಾಡಿದರೆ... ಪ್ರೇಕ್ಷಕ ಮಾತ್ರ ರಂಗಕ್ಕೆ ಬೆನ್ನು ಹಾಕಿ ದೂರದಲ್ಲಿ ಸಿಡಿಯುವ ಪಟಾಕಿಯನ್ನು ನೋಡುತ್ತಿರುತ್ತಾನೆ. ಇದು ಇಂದಿನ ಅಧ್ದೂರಿ ಯಕ್ಷಗಾನ. ಬಣ್ಣದವೇಷದೊಂದಿಗೆ ಯಕ್ಷಗಾನವೂ ರಂಗದಲ್ಲಿ ಏಕಾಂಗಿಯಾಗಿಬಿಡುತ್ತದೆ.ಬ್ಯಾಂಡು ಗದ್ದಲ, ಆಕಡೆಯಿಂದ ಸಿಡಿ ಮದ್ದಿನ ಗದ್ದಲ ಒಂದು ವೇಳೆ ನಿಜವಾದ ಯಕ್ಷಗಾನ ಸಿಗಬೇಕಾದರೆ ಅದು ಅದೃಷ್ಟವಿದ್ದಲ್ಲಿ ಒಂದಷ್ಟು ಹೊತ್ತಿನ ನಂತರ ಸಿಗುತ್ತದೆ. ಸಿಡಿ ಮದ್ದು ಗದ್ದಲ ಅದ್ದೂರಿ ತನ ಇದ್ದಲ್ಲಿ ಆಟ ರೈಸುತ್ತದೆ ಎಂಬ ಕಲ್ಪನೆ.

ಇನ್ನು ಪುಂಡುವೇಷ ಅಥವಾ ಸ್ತ್ರೀ ವೇಷವಾಗಲೀ ಚಾಲೂಕುಣಿತದ ತಕ ಥೈ ಒಂದ ಅರ್ಧ ಗಂಟೆ ಕುಣಿದ ಮೇಲೆ...ಪುಂಡುವೇಷದವನಾದರೇ ಒಂದಷ್ಟು ಗಿರಕಿ ಹೊಡೆದ ಮೇಲೆ..ಕೆಲವೊಮ್ಮೆ ಗಿರಕಿಯಲ್ಲಿ ಮಾತ್ರ ಗಮನ ಹರಿಸಿ ಬಾಕಿ ಕುಣಿತವೇ ಇಲ್ಲದೆ ನಿಂತ ಮೇಲೆ ಮೈಕಿನಲ್ಲಿ ಉಸಿರಾಟದ ಬುಸುಗುಟ್ಟುವಿಕೆ ಮಾತ್ರ ಕೇಳಬಹುದು...ಅರ್ಥಗಾರಿಕೆಯೇ ಇಲ್ಲ. ಅರ್ಥ ಗಾರಿಕೆಯಲ್ಲಿ ಸಾಧನೆಯ ಕೊರತೆ ಕಂಡುಬರುತ್ತದೆ. ಸರಿಯಾದ ಭಾಷಾಜ್ಞಾನವೂ ಇಲ್ಲದೆ ಉದುರುವ ಅಣಿಮುತ್ತುಗಳನ್ನು ಕೇಳಿದರೆ ಯಾವುದು ಮುಖ್ಯವಾಗಬೇಕೋ ಅದು ಮೂಲೆಗುಂಪಾಗಿರುತ್ತದೆ. ಗಮನಿಸಿ ಕೋಳ್ಯೂರಂತೆ ಪಾತಾಳದವರಂತೆ ಭಾವನಾತ್ಮಕ ಸ್ತ್ರೀ ವೇಷದ ಅರ್ಥಗಾರಿಕೆ ಇಂದು ರಂಗದಲ್ಲಿ ಕಾಣುವುದಕ್ಕಿದೆಯೇ? ಅರ್ಥ ಗಂಟೆ ಚಾಲುಕುಣಿತ ಬಳುಕಿಸಿದ ಮೇಲೆ ಮತ್ತೆ ಮೊದಲು ಹೇಳಿದಂತೆ ಬುಸುಗುಟ್ಟುವಿಕೆ ಮಾತ್ರ, ಮತ್ತೆ ಅರ್ಥಗಾರಿಕೆ ಪ್ರೇಕ್ಷಕ ಕಲ್ಪಿಸಿಕೊಂಡರೆ ಸಾಕು. ಯಕ್ಷಗಾನಕ್ಕೆ ಹೊಂದಿಕೆಯಾಗದೇ ಇದ್ದದ್ದನ್ನು ಅಟ್ಟಾಡಿಸಿ ಓಡಿ ಹಿಡಿದು ತಂದು ರಂಗದಲ್ಲಿ ತುರುಕುವಾಗ ಪರಂಪರೆ ಕೇವಲ ನಗೆಪಾಟಲಾಗಿ ಬಿಡುತ್ತದೆ. ಪರಂಪರೆಯ ಮೇಲಿನ ಅಭಿಮಾನ ಪ್ರೀತಿಯನ್ನು ಯಾವಾಗಲಾದರೂ ಒಮ್ಮೆ ಪೂರ್ವ ರಂಗದ ವಿಚಾರ ಸಂಕಿರಣವೋ, ಪೂರ್ವರಂಗದ ಕಮ್ಮಟವನ್ನೋ ಮಾಡಿ ತೋರಿಸಿದರಷ್ಟೇ ಸಾಕು ಎಂಬ ಭಾವ. ಅದೂ ಪರಿಪೂರ್ಣವಾದ ಜ್ಞಾನವನ್ನು ಅದರ ತಿಳುವಳಿಕೆಯನ್ನು ತಿಳಿದ ವ್ಯಕ್ತಿಗಳು ಬೇಡ. ಒಟ್ಟು ಒಂದು ಹರಕೆ ಸಲ್ಲಿಸಿ, ತೆಗೆದ ವೀಡಿಯೋದಲ್ಲಿ ಅಥವಾ ಫೋಟೋದಲ್ಲಿ ಹಾಕಿದ ದೊಡ್ಡ ಬ್ಯಾನರ್ ಕಂಡರೆ ಸಾಕು. ಅಷ್ಟೇ ಕ್ರಿಯಾತ್ಮಕ ದರ್ಶನ.

ಹೆಸರಾಂತ ಕಲಾವಿದರು ಇದ್ದಲ್ಲಿ ಯಕ್ಷಗಾನ ಅದ್ಧೂರಿಯಾಗಿ ಯಶಸ್ವಿಯಾಗುತ್ತದೆ ಎಂಬ ಭಾವನೆ ಇದೆ. ಆದರೆ ಈ ನಿರೀಕ್ಷೆ ಹುಸಿಯಾದದ್ದೇ ಹೆಚ್ಚು. ರಾಜಕೀಯ ಪಕ್ಷ ತನ್ನ ಆಡಳಿತವನ್ನು ಸ್ಥಿರಗೊಳಿಸುವುದಕ್ಕೆ ರೂಪಿಸು ಜಂಬೋ ಮಂತ್ರಿ ಮಂಡಲದಂತೆ. ಒಳಗೊಳಗೇ ಅಥವಾ ಬಹಿರಂಗವಾಗಿ ಅಸಮಾಧಾನ ತುಂಬಿ ಮಾತ್ಸರ್ಯ ಹಗೆತನದಿಂದ ಕಾಲೇಳೆವ ತಂತ್ರದಿಂದ ಉತ್ತಮ ಅಭಿವೃದ್ಧೀ ಪರ ಕೆಲಸಗಳು ಮರೀಚಿಕೆಯಾದಂತೆ ಉತ್ತಮ ಕಾರ್ಯಕ್ರಮವೂ ನಡೆಯುವುದಿಲ್ಲ. ಇದು ಕೇವಲ ಒಂದು ಪ್ರದರ್ಶನಕ್ಕೆ ಸೀಮಿತವಾಗದೆ ಪ್ರಸಿದ್ಧ ಮೇಳಗಳಲ್ಲಿ ಒಳಗೊಳಗೇ ನಡೆವ ಅತ್ಯಂತ ಕೀಳುಮಟ್ಟದ ರಾಜಕೀಯ ಪ್ರತಿಷ್ಠೆಗೂ ಅನ್ವಯವಾಗುತ್ತದೆ. ಪ್ರಸಿದ್ಧ ಕಲಾವಿದರ ನಡುವೆ ಉತ್ತಮ ಸೌಹಾರ್ದತೆಯ ಸಂವಹನ ಸಾಧ್ಯವಾಗದೇ ಕೇವಲ ಹರಕೆ ಅಟಗಳು ನಿಜಾರ್ಥದಲ್ಲೂ ಹರಕೆಯೇ ಆಗಿಬಿಡುತ್ತವೆ. ಒಂದೆರಡು ಪ್ರಸಿದ್ಧ ಕಲಾವಿದರೀದ್ದರೂ ಮೇಳ ಒಟ್ಟು ಸಮನ್ವಯ ಸಾಧಿಸಿ ಉತ್ತಮ ಯಕ್ಷಗಾನವನ್ನು ನೀಡುವುದನ್ನು ಕಾಣಬಹುದು. ಒಳಗಿನ ಹುಳುಕನ್ನೂ ದೌರ್ಬಲ್ಯವನ್ನು ಮರೆಮಾಚುವುದಕ್ಕೆ ಪ್ರೇಕ್ಷಕನ ದಿಕ್ಕು ತಪ್ಪಿಸುವುದಕ್ಕೆ ಪ್ರಸಿದ್ಧ ಕಲಾವಿದರನ್ನು ಬೆರೆಸುವ ಈ ತಂತ್ರಗಳು ಒಟ್ಟು ಕಲೆಯನ್ನು ಕಾಣುವ ದೃಷ್ಟಿಕೋನವನ್ನೇ ಪ್ರಶ್ನಿಸಿದಂತಾಗುತ್ತದೆ. ಭಾಗವತನಾದವ ತನ್ನಲ್ಲಿರುವ ಆತ್ಮ ವಿಶ್ವಾಸದ ಕೊರತೆಗೆ ಪ್ರಸಿದ್ದ ಕಲಾವಿದರನ್ನು ಸೇರಿಸುವ ಹುನ್ನಾರ ಮಾಡಿದ್ದಲ್ಲಿ ಯಕ್ಷಗಾನಕ್ಕಿಂತ ಮಿಕ್ಕುಳಿದ ವಿಚಾರಗಳೇ ಗಮನಾರ್ಹವಾಗಿಬಿಡುತ್ತದೆ.ಆದರೆ ಸಮರ್ಥ ಭಾಗವತ ಇರುವ ಕಲಾವಿದರಿಂದಲೇ ಪ್ರತಿಭೆಯನ್ನು ಒರೆಗೆ ಹಚ್ಚುವ ಸವಾಲನ್ನು ದಿಟ್ಟವಾಗಿ ಸ್ವೀಕರಿಸುತ್ತಾನೆ. ಇಂತಹ ಭಾಗವತರಿಗೇ ಪ್ರಾಮಾಣಿಕ ಪ್ರೋತ್ಸಾಹ ಮಾತ್ರ ಸಿಗುತ್ತಿಲ್ಲ. ಹಾಗಾಗಿ ಕೆಟ್ಟ ರಾಜಕೀಯ ದುರಾಡಳಿತ ಮುಂತಾದವುಗಳಿಂದ ಆಗಾಗ ಮರುಕಳಿಸುವ ಅರ್ಥಹೀನ ಮತದಾನದಿಂದ ಈಗಿನ ಮತದಾರ ಬೇಸತ್ತು ದೂರವಾದಂತೆ ಯಕ್ಷಗಾನದಿಂದ ಪ್ರೇಕ್ಷಕ ವಿಮುಖನಾಗುತ್ತಿದ್ದಾನೆ. ಕೆಲವೊಮ್ಮೆ ಅನಿವಾರ್ಯತೆಯಿಂದ ಹತ್ತಿರವಾದರೂ ಅದನ್ನೇ ನಿಜವೆಂಬ ಭ್ರಮೆಯಲ್ಲಿ ತೇಲಿ ಬಿಡುತ್ತೇವೆ. ಮೊದಲು ಬೆಳಗಿನ ವರೆಗೆ ಪ್ರೇಕ್ಷಕನನ್ನು ಹಿಡಿದಿಟ್ಟ ಯಕ್ಷಗಾನ ಇಂದು ಪ್ರೇಕ್ಷಕನಿಂದ ಬೇಕೆಂದೇ ದೂರ ಮಾಡಲ್ಪಟ್ಟಿದೆ ಅಂತಾನೆ ಹೇಳಬಹುದು. ಬೆಳಗಿನ ಜಾವದಲ್ಲಿ ಪ್ರವೇಶವಾಗುವ ಪ್ರಸಿದ್ಧ ಕಲಾವಿದನ ವೇಷಕ್ಕೆ ಆಟದ ಪೂರ್ವ ರಂಗ ಅರಂಭವಾಗುವ ಮೊದಲು ಜಾಗ ಹಿಡಿದಿಟ್ಟು ಕುಳಿತಿರುತ್ತಿದ್ದ ಪ್ರೇಕ್ಷಕ ಇಂದೂ ಹಾಗೆ ಇದ್ದಾನೆ... ಅಂತಹ ಕಲಾವಿದ ಮಾತ್ರ ಇಲ್ಲ.






Thursday, April 11, 2013

ಅಂಬಾ ವೃತ್ತಾಂತ-3



ತನ್ನೊಳಗಿನ ಸಮಸ್ಯೆಯನ್ನು ಬೇರೆಯವರಿಗೆ ಸಮಸ್ಯೆಯಾಗಿ ಮಾಡುವ ಸಂದರ್ಭಗಳು ಹಲವನ್ನು ಕಾಣಬಹುದು.ಅದೇ ರೀತಿ ತನ್ನ ಚತ್ತ ಚಾಂಚಲ್ಯದಿಂದ , ಅಸ್ಥಿರ ಮನಸ್ಸಿಂದ ಭೀಷ್ಮನಿಗೆ ಸಮಸ್ಯೆಯನ್ನು ತಂದಿಟ್ಟವಳು ಅಂಬೆ. ಸಾಲ್ವ ತೋರಿದ ಅವಗಣನೆ ಅವಮಾನದ ಉರಿ ಸೇಡಿನ ದಾವಾನಲವನ್ನು ಹೆಚ್ಚಿಸಿ ಮತ್ತೆಲ್ಲ ಚಿಂತನಾ ಶಕ್ತಿಯನ್ನು ಹೊಸಕಿ ಹಾಕಿತು. ಸೇಡು ಸೇಡು... ಇದೊಂದೇ ಪರಮ ಲಕ್ಷ್ಯವಾಗಿಬಿಟ್ಟಿತು. ಎಂತಹ ಹೆಣ್ಣಿಗೂ ಭೀಷ್ಮ ಸೋಲಲಾರ, ಮತ್ತಿನ್ನು ಆತನನ್ನು ಸೋಲಿಸುವ ಗಂಡು ಭೂಮಿಯ ಮೇಲೆ ಇರಲಾರ. ಹಾಗಿದ್ದರೆ ಸೇಡು ಸಾಧಿಸುವ ಬಗೆಯಾದರೂ ಹೇಗೆ. ಲೋಕ ನಿಯಮವೇ ಹಾಗೆ.. ಸೇಡು ವೈಷಮ್ಯ ಸಾಧಿಸುವಲ್ಲಿ ಮನಸ್ಸು ಚಿಂತಿಸುವುದು ಬಹಳ ಸುಲಭ. ಆವಾಗ ಮನಸ್ಸು ಏಕಾಗ್ರತೆಯನ್ನು ಸಾಧಿಸಬಲ್ಲುದು. ಸರ್ವ ಶಕ್ತಿಯೂ ಕ್ರೋಢೀಕರಿಸಲ್ಪಡಬಹುದು. ಹಾಗಾಗೀ ತನ್ನ ಏಕಾಗ್ರತೆಯ ಶಕ್ತಿಯನ್ನು ಸೇಡಿನ ತಪಸ್ಸನ್ನಾಗಿ ಪರಿವರ್ತಿಸಿ ಅಂಬೆ ಕಾಡಿನಲ್ಲಿ ತಪಸ್ಸಿಗಾಗಿ ತೆರಳುವಾಗ ಪರಶುರಾಮ ಶಿಷ್ಯರ ಗಮನಕ್ಕೆ ಬರುತ್ತಾಳೆ. ಅಲ್ಲಿಂದ ಅಂಬಾ ವೃತ್ತಾಂತ ಬಹಳ ಮಹತ್ವವನ್ನು ಗಳಿಸಿಬಿಡುತ್ತದೆ.

"ಮದುವೆಗೆ ಬಾಸಿಂಗ ಕಟ್ಟಿ ಬರಬೇಕು ಇಲ್ಲವೆ ಯುದ್ದಕ್ಕೆ ಸನ್ನದ್ದನಾಗಿ ಬರಬೇಕು" ಇದು ತನ್ನ ಗುರು ಪರಶುರಾಮರಿಂದ ಬಂದ ಕರೆ, ಆಗು ಹೋಗುಗಳು ಗೊತ್ತು ಗುರಿಯಿಲ್ಲದೇ ನಡೆಯಬೇಕಾದರೆ ಆದಂತಾಗಲೀ ಎಂದು ತನ್ನ ಕೈಯ ವಾಘೆಯನ್ನು ಬಿಟ್ಟಂತೆ ಭೀಷ್ಮ ತಟಸ್ಥವಾಗಿರುವಾಗ ಗುರು ಸ್ಥಾನದಿಂದ ಬಂದ ಕರೆ. ಇದು ಒಂದು ರೀತಿಯಲ್ಲಿ ಗುರು ಪ್ರಚೋದನೆಯೇ ಸರಿ ಎಂದು ಭೀಷ್ಮ ಬಧ್ಹನಾಗುತ್ತಾನೆ. ಭೂಮಿಯ ಮೇಲೆ ತನ್ನನ್ನು ವಿಶ್ಲೇಶಿಸಿ ವಿಮರ್ಶಿಸಬಲ್ಲ ಶಕ್ತಿಯಿದ್ದರೆ ಅದು ಪರಶುರಾಮಲ್ಲಿ ಮಾತ್ರ. ಭೀಷ್ಮನ ಸುಯೋಗವೋ ಅಂಬೆ ಸರಿಯಾದ ಸ್ಥಾನವನ್ನು ಸೇರಿದ್ದಾಳೆ. ಬೇರೆಲ್ಲೂ ಇದಕ್ಕೆ ಪರಿಹಾರ ಸಿಕ್ಕರೂ ಅದು ಪರ್ಯಾಪ್ತವಾಗಲಾರದು. ಆದರೆ ಪರಶುರಾಮ ಸನ್ನಿಧಾನದಲ್ಲಿ ಅದು ನಿರ್ಣಯವಾದರೆ ಅದು ಪ್ರಶ್ನಾತೀತವಗಬಲ್ಲುದು. ಹಾಗಾಗಿ ಗುರು ಪರಶುರಾಮರ ಕರೆಯನ್ನು ಸುಯೋಗವೆಂದೇ ಪರಿಗಣಿಸುತ್ತಾನೆ. ಸುಯೋಗವಲ್ಲದೇ ಮತ್ತೇನಾಗಲು ಸಾಧ್ಯ. ಬರಹೇಳಿದ ಸ್ಥಳವಾದರೂ ಯಾವುದು ...ಕುರುಕ್ಷೇತ್ರ. ಕ್ಷತ್ರಿಯರಿಗೆ ಕೇವಲ ಯುದ್ಡಕ್ಕಷ್ಟೇ ಸೀಮಿತವಾಗುಳಿದ ಬಂಜರು ಭೂಮಿಯದು. ಪರಶುರಾಮರು ತನ್ನ ರಕ್ತಸಿಕ್ತ ಆಯುಧವನ್ನು ತೊಳೆದಂತಹ ಜಾಗ ಸ್ಯಮಂತ ಮಂಚಕದ ಕ್ಷೇತ್ರ,, ಇಲ್ಲಿ ಯಾವುದೇ ಮದುವೆಯಾದ ಇತಿಹಾಸವಿಲ್ಲ. .. ಇಲ್ಲಿಗೆ ಮದುವೆಗೆ ಬಾಸಿಂಗ ಕಟ್ಟಿ ಬಾ ಎಂದರೆ ? .ಕೇವಲ ರಕ್ತ ಸಿಕ್ತ ಇತಿಹಾಸ ಇರುವ ಕೇವಲ ಔರ್ಧ್ವದೇಹಿ ಸಂಸ್ಕಾರದ ಕ್ಷೇತ್ರದಲ್ಲಿ ಮದುವೆಗಾಗಿ ಬಾಸಿಂಗ ಕಟ್ಟಿ ಹೋಗುವುದೆಂದರೆ ? ಹಾಗಾದರೆ ರಣರಂಗವೆಂದೇ ಗುರುಗಳು ಅದನ್ನೇ ಆಯ್ಕೆ ಮಾಡಬೇಕೆಂದಿದ್ದರೆ ಗುರುವಿನ ನಿಲುಮೇ ಏನು ಎಂದು ಬಾಹ್ಯ ನೋಟಕ್ಕೇ ಅರ್ಥವಿಸಬಹುದಾಗಿರುತ್ತದೆ. ಭೀಷ್ಮ ತನ್ನ ಪ್ರತಿಜ್ಞೆಯಿಂದ ವಿಮುಖನಾಗಬಾರದೆಂದು ಗುರು ಇರಾದೆ ಇದ್ದ ಹಾಗಿದೆ. ಅಲ್ಲವಾದರೆ ಯುದ್ದವನ್ನೆ ಪೂರ್ವನಿರ್ಣಯಿಸಿದಂತೆ ಕುರುಕ್ಷೇತ್ರಕ್ಕೇ ಯಾಕೆ ಬರ ಹೇಳಬೇಕು. ಭೀಷ್ಮ ತನ್ನಲ್ಲೇ ತರ್ಕಿಸಿಕೊಳ್ಳುತ್ತಾನೆ. ಹೌದು, ಭೀಷ್ಮ ಬಾಸಿಂಗ ತೊಡುವುದು.. ಭೀಷ್ಮ ಕನಸಲ್ಲೂ ಕಲ್ಪಿಸಲಾಗದೇ ಇದ್ದದ್ದು. ಹಾಗಾಗೀ ಕ್ಷತ್ರಿಯೋಚಿತವಾದ ಯುದ್ಡ ನಿರ್ಣಯವನ್ನೇ ಮನಸ್ಸಿನಲ್ಲಿ ಅಚ್ಚೊತ್ತಿಸಿ ಅಯುಧ ಪಾಣಿಯಾಗಿ ಮಾತೆ ಸತ್ಯವತೀ ದೇವಿಯ ಆಶೀರ್ವಾದ ಪಡೆಯುತ್ತಾನೆ. ಹೌದು, ಪ್ರಾಯದಲ್ಲಿ ಚಿಕ್ಕವರಾದರೂ ಭೀಷ್ಮ ಸತ್ಯವತೀ ದೇವಿಯರನ್ನು ತನ್ನ ತಾಯಿಯಂತೆ ಕಾಣುತ್ತಾನೆ. ಭಗವಾನ್ ವೇದವ್ಯಾಸರಿಗೇ ತಾಯಿಯಾದ ಪುಣ್ಯಗರ್ಭೆ ಭೀಷ್ಮನಂತವರಿಗೆ ತಾಯಿಯಲ್ಲವೇ? ಮಾತ್ರವಲ್ಲ ದಾಶರಾಜನ ಎದುರು ಆತನ ಪ್ರತಿಜ್ಞೆಯೂ ಹಾಗೇ ಇತ್ತಲ್ಲವೇ? ಇನ್ನು ಮುಂದೆ ಎಲ್ಲ ಹೆಣ್ಣುಗಳು ತನಗೆ ಗಂಗಾ ಸಮಾನರು. ಹೆಣ್ಣುಗಳನ್ನು ಕಾಣುವಾಗ ಹೆತ್ತವ್ವೆ ಗಂಗಾ ತಾಯಿಯನ್ನು ನೆನಪಿಸುವಲ್ಲಿ, ಈ ಗಂಗಾ ತೀರದಲ್ಲಿ ಹುಟ್ಟಿದ ಹೆಣ್ಣು ಮಗಳೊಬ್ಬಳು ಅದಕ್ಕೆ ಸವಾಲಾಗಿ ಪರಿಣಮಿಸುತ್ತಾಳೆಯೆಂದರೆ ವಿಪರ್ಯಾಸವೆಂದೇ ಹೇಳಬೇಕು.

ಪ್ರತಿಯೋಂದು ಹಂತದಲ್ಲೂ ಭೀಷ್ಮನ ಹೃದಯದಾಳಕ್ಕೆ ಶೇಣಿಯವರು ಇಳಿಯುತ್ತಾರೆ. ಮಾತ್ರವಲ್ಲ ನಮ್ಮನ್ನು ಕೈಹಿಡಿದು ಆ ಆಳದ ಜಲಾಶಯದ ಒಂದೋಂದೇ ಮೆಟ್ಟಲು ಇಳಿವಂತೆ ಇಳಿದುಬಿಡುತ್ತಾರೆ. ಕಾಶೀದೇಶಕ್ಕೆ ಹೋದುದಾಗಲೀ ಅಂಬೆ ಅಂಬಾಲಿಕೆಯರನ್ನು ತಂದುದಾಗಲೀ ಈ ಸಿಂಹಾಸನದ ಪ್ರತಿನಿಧಿಯಾಗಿ. ಹಾಗಾಗೀ ಸಿಂಹಾಸನದ ಪ್ರತಿನಿಧಿಯಾಗಿಯೇ ವ್ಯವಹರಿಸುತ್ತಾರೆ. ಸಿಂಹಾಸನದ ಪ್ರತಿನಿಧಿಯಾಗಿ ಹೋದದ್ದು ಮಾಡಿದ್ದು ಇಷ್ಟು ಗಂಡಾಂತರವನ್ನು ತರುತ್ತದೆಯಾದರೆ..ಅದು ಸಿಂಹಾಸನದ ಪ್ರಶ್ನೆ. ಹೀಗೆ ಗುರುವಿನ ಆಜ್ಞೆಯನ್ನು ಪಾಲಿಸುವ ಸಚ್ಚಿಶ್ಯನಂತೆ ಗುರು ಕಾಣಿಕೆಯನ್ನು ಪಲ್ಲಕ್ಕಿಯಲ್ಲಿಟ್ಟು ಕುರುಕ್ಷೇತ್ರದತ್ತ ಭೀಷ್ಮ ಹೆಜ್ಜೆಯಿಡುತ್ತಾನೆ.

"ಪರಮ ಋಷಿ ಮಂಡಲದ ಮಧ್ಯದೀ ಮೆರೆವ ಯಜ್ಞೇಶ್ವರನ ಪ್ರಭೆಯಲಿ..." .ಭೀಷ್ಮ ವಿಜಯ ಪ್ರಸಂಗದ ಜನಪ್ರಿಯ ಪದ. ಹಸ್ತಿನಾವತಿಯ ರಕ್ಷಕನಾಗಿ ಸೇನಾನಿಯಾಗಿ ವಿಧೇಯ ಶಿಷ್ಯನಾಗಿ ಭೀಷ್ಮ ಗುರುಗಳನ್ನು ಕಾಣುವ ಪದವಿದು. ನಾರಾಯಣನ ಅವತಾರವಾದ ಯಜ್ಞನಾರಾಯಣನ ಪ್ರಭೆಯಲಿ ರಾರಾಜಿಸುವ ಪರಶುರಾಮನ್ನು ಕಂಡಾಕ್ಷಣವೇ ಭೀಷ್ಮನಾದುದರಿಂದ ಅಧೀರನಾಗದೇ ವಿನಯದಿಂದಲೇ ಮಧುಪರ್ಕಾದಿಗಳನ್ನು ಇತ್ತು ಶ್ರೀ ಗುರುಭ್ಯೋಂ ನಮಃ ಎಂದು ಕಾಲಿಗೆರಗುತ್ತಾನೆ. ಇದು ಶರಣಾಗತಿಯಲ್ಲ. ಬದಲಾಗಿ ಶಿಷ್ಯನ ಆಯ್ಕೆ ಏನು ಎಂದು ಆಶೀರ್ವದಿಸಬೇಕಾದ ಕರ್ತವ್ಯ ಪ್ರಜ್ಞೆಯನ್ನು ಜಾಗ್ರತಗೊಳಿಸುವ ಭಾವ.

ಭೀಷ್ಮನ ಪರಮ ಭಕ್ತಿಗೆ ಪರಶುರಾಮ ಭಾವ ಪರವಶನಾದರೂ ತನ್ನ ಶಿಷ್ಯನ ಯೋಗ್ಯತೆಯನ್ನು ಮನಗಂಡು ಈ ಭೀಷ್ಮ ತನಗೆ ತಕ್ಕ ಶಿಷ್ಯ ಎಂದು ಮೆಚ್ಚಿಕೊಳ್ಳುತ್ತಾನೆ. ಅದರೆ ಎಲ್ಲರೀತಿಯಲ್ಲೂ ಮೆಚ್ಚಿಗೆ ಗಳಿಸಿದರೂ ಪರಶುರಾಮ ಖತಿಗೊಳ್ಳುತ್ತ ಎತ್ತಲಿರಿಸಿದೇ ಭೀಷ್ಮ ಬುದ್ದಿಗಳನೆಂದು ಕೇಳುತ್ತಾನೆ. ಕಾಶೀರಾಜನ ಸ್ವಯಂವರ ಮಂಟಪಕ್ಕೆ ನುಗ್ಗಿ ಕುವರಿಯರನ್ನು ಬಲವಂತವಾಗಿ ಅಪಹರಿಸಿದೆ. ಕ್ಷತ್ರಿಯೋಚಿತವಾಗಿ ತಂದರೂ ಆಕೆಯನ್ನು ವರಿಸಬೇಕಿತ್ತು. ವರಿಸಲಿಲ್ಲ. ಈ ಕಾರಣದಿಂದ ಸಾಲ್ವನೂ ತಿರಸ್ಕರಿಸಿದ. ಅವಳು ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕು.ವಿಚಾರವನ್ನು ಮಾಡದೇ ಅಲ್ಲಿಗೆ ಹೋದರೂ ಹೃದಯದಲ್ಲಿ ಯೋಚಿಸಬೇಕಿತ್ತು. ಕರುಣೆಯಿಂದ ಕಂಡಾದರೂ ಈಕೆಯನ್ನು ಕೂಡಿಕೊಳ್ಳಬೇಕಿತ್ತು. ಅದನ್ನು ಮಾಡಲಿಲ್ಲ. ನೀನು ಬಿಟ್ಟೆ ಸಾಲ್ವನೂ ಬಿಟ್ಟ ಹಾಗಿದ್ದರೆ ಆಕೆಯನ್ನು ಯಾರು ವರಿಸುತ್ತಾರೆ? ಆಕೆಯ ಜೀವನವೇ ಹಾಳಾಗಿ ಹೋಗುತ್ತಿದೆಯಲ್ಲ.

"ಹಾಳಾಗಿ ಹೋಗುವುದನ್ನು ಉಳಿಸುವುದಕ್ಕೆ ಮಾರ್ಗ ಉಳಿದಿಲ್ಲವೆಂದಾದರೆ ಅದರ ಬಗ್ಗೆ ಔದಾಸಿನ್ಯವನ್ನೆ ತಾಳುವುದು ಒಳ್ಳೆಯದಲ್ಲವೆ?" ಗುರುಗಳ ಅಕ್ಷೇಪಕ್ಕೆ ಒಂದೊಂದಾಗಿ ಭೀಷ್ಮ ಉತ್ತರಿಸತೊಡಗುತ್ತಾನೆ. ಆಕೆ ಪ್ರಕರಣದ ಸ್ಥೂಲ ಚಿತ್ರಣವನ್ನಷ್ಟೆ ಅದು ತನ್ನ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟನ್ನೆ ವರದಿ ಮಾಡಿದ್ದಾಳೆ. ಕೆಲವೊಮ್ಮೆ ನನ್ನಂತಹವರು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದಾಗ ನಾವು ಬಯಸದೇ ಇದ್ದದ್ದನ್ನು ಮನಸ್ಸಿಗೆ ವಿರುದ್ದವಾದದ್ದನ್ನು ಮಾಡಬೇಕಾಗುತ್ತದೆ. ಕಾಯೆನವಾಚಾ ಸರ್ವ ಸಂಗ ಪರಿತ್ಯಾಗಿಗಳಿಗೂ ಈ ಅನಿವಾರ್ಯತೆ ಬಿಟ್ಟಿಲ್ಲ. ಎಲ್ಲಿವರೆಗೆ ಪ್ರಪಂಚಾವಲಂಬಿಗಳಾಗಿರುತ್ತೇವೆ. ಪರಿಸ್ಥಿತಿಗೆ ವಿರುದ್ದವಾಗಿ ಬದುಕುತ್ತೇವೆ ಎನ್ನುವುದು ಸುಳ್ಳು. ಬ್ರಾಹ್ಮಣನಾಗಿ ಹುಟ್ಟಿ ಕ್ಷತ್ರಿಯತ್ವದ ಕ್ಷೇತ್ರದಲ್ಲಿ ಬೆಳೆ ಮಾಡಬೇಕಾಯಿತು ಎಂದು ಹೇಳಿದವರು ನೀವು. ಬ್ರಹ್ಮ ಚಾರಿಯಾದವ ನಾನು ಸ್ವಯಂವರ ಮಂಟಪಕ್ಕೆ ಹೋದೆ. ಇದರಿಂದಲೇ ನಾನು ನನಗಾಗಿ ಹೋಗಿದ್ದಲ್ಲ ಎಂಬುದು ಸ್ಪಷ್ಟ. ಹಾಗಾದಾರೆ ಯಾರಿಗಾಗಿ ನನ್ನ ತಮ್ಮ ವಿಚಿತ್ರ ವೀರ್ಯನಿಗಾಗಿ.. ಸತ್ಕುಲ ಪ್ರಸೂತೆಯರಾದ ಹೆಣ್ಣು ಮಕ್ಕಳನ್ನು.ತಮ್ಮ ಮನೆಯ ಗಂಡು ಮಕ್ಕಳಿಗೆ ತರಬೇಕೆನ್ನುವ ಅಕಾಂಕ್ಷೆಯೋ ಆಸಕ್ತಿಯೋ ಮನೆಯ ಹಿರಿಯನಿಗೆ ಇರುವುದು ಅಪರಾಧವಲ್ಲ. ಹಾಗೆ ತಂದಿದ್ದೇನೆ. ಹಸ್ತಿನಾವತಿಗೆ ಆಮಂತ್ರಣ ಇಲ್ಲದೆ ರಹಸ್ಯವಾಗಿ ಹಸ್ತಿನೆಯ ಸಾಮಂತರನ್ನು ಕರೆಸಿ ನಿಗೂಢವಾಗಿ ಸ್ವಯಂವರ ಮಾಡಿಸುತ್ತಿದ್ದಾನೆ. ಅದರಲ್ಲೂ ಶಕ್ತಿ ಪ್ರದರ್ಶನದ ಮೂಲಕ ಗೆದ್ದವನಿಗೆ ಹೆಣ್ಣು.. ಇದೆಲ್ಲ ಹಸ್ತಿನಾವತಿಯ ಆಡಳಿತದ ವಿರುದ್ಧ ಕಾರಸ್ಥಾನವಲ್ಲವೆ? ರಾಜಕೀಯ ದೃಷ್ಟಿಯಿಂದ ಇದು ಹಸ್ತಿನಾವತಿಯ ಸಿಂಹಾಸನಕ್ಕೆ ಭಾಧಕ, ಅಲ್ಲಿ ಎಲ್ಲರನ್ನೂ ಗೆದ್ದು ಒಬ್ಬ ತಾನು ವಿಕ್ರಮಿ, ಏಕೈಕ ವೀರ ಎಂದು ಮೆರೆದರೆ ಅದೂ ಭೀಷ್ಮ ಹಸ್ತಿನಾವತಿಯ ರಕ್ಷಕನಾಗಿರುವಾಗ..ಹಾಗಾಗಿ ಹಸ್ತಿನಾವತಿಯ ರಾಜ ಪ್ರತಿನಿಧಿಯಾಗಿ ಅಲ್ಲಿಗೆ ಹೋದದ್ದು. ಹೆಣ್ಣುಮಕ್ಕಳನ್ನು ತಂದದ್ದು, ಅವರಲ್ಲಿ ಕರುಣೆಯಿಂದಲೇ ಚಕ್ರವರ್ತಿಯನ್ನು ವರಿಸುವಂತೆ ಕೇಳಿಕೊಂಡದ್ದು ತಂಗಿಯಂದಿರ ಹೊರತಾದ ಅಂಬೆ ನನ್ನನ್ನು ವರಿಸುವ ಬಯಕೆಯನ್ನು ವ್ಯಕ್ತ ಪಡಿಸಿ ಅದು ಸಾಧುವಲ್ಲ ಎಂದಾದಾಗ ಸಾಲ್ವನ ಜತೆಗಿನ ಪ್ರಣಯವನ್ನು ಹೇಳಿಕೊಂಡದ್ದು. ಆಕೆಯ ಬೇಡಿಕೆಯಂತೆ ಸಾಲ್ವನಲ್ಲಿಗೆ ಕಳುಹಿಸಿದ್ದು ಸಾಲ್ವ ತಿರಸ್ಕರಿಸಿದ್ದು ಯಕಃಶ್ಚಿತ್ ಸಾಲ್ವನಂತವನು ತಿರಸ್ಕರಿದ ಹೆಣ್ಣು ಚಕ್ರವರ್ತಿಯ ಕೈಹಿಡಿಯುವುದು ಶಕ್ಯವೇ?"

"ಇನ್ನು ಗುರು ಸನ್ನಿಧಾನದಲ್ಲಿ ಇದು ತೀರ್ಮಾನವಾಗಬೇಕು. ಎಲ್ಲೆಡೆಯೂ ಆಕೆ ಅಪಪ್ರಚಾರ ಮಾಡುತ್ತಿದ್ದಾಳೆ. ಯಾವುದೇ ಗಂಡಿಗಂತೂ ಭೀಷ್ಮ ಸೋಲಲಿಲ್ಲ.. ಮಾತ್ರವಲ್ಲ ಅಂಬೆಯಂತಹ ಹೆಣ್ಣಿಗೂ ಭೀಷ್ಮ ಸೋಲಲಿಲ್ಲ. ಇದು ಭೀಷ್ಮನ ಬಗ್ಗೆ ಕೊಟ್ಟ ಶುದ್ದ ರಾಯಸವೆಂದೇ ಪರಿಗಣಿಸಬೇಕು. ಇನ್ನು ಗುರು ಸ್ಥಾನದಲ್ಲಿ ಇದೆಲ್ಲ ಪರಿಹಾರವಾಗಿ ಭೀಷ್ಮ ಪರಿಶುದ್ದವಾಗಿ ತೊಳೆಯಲ್ಪಡಬೇಕು."

ಭೀಷ್ಮನದ್ದಾದ ಸ್ಪಷ್ಟನೆ ಕೇಳಿ ಅಷ್ಟರಲ್ಲೇ ಗುರು ತೃಪ್ತನಾದರೆ ಭೀಷ್ಮನ ಅಂತಃ ಸತ್ವ ಒರೆಗೆ ಹಚ್ಚಿದಂತಾಗಬಹುದೇ? ಅಷ್ಟರಲ್ಲೇ ಭೀಷ್ಮನ ಪರವಾಗಿ ತೀರ್ಮಾನ ತೆಗೆದುಕೊಂಡಲ್ಲಿ ಅದು ಪಕ್ಷಪಾತ ಮಾಡಿದಂತೆ ಭಾಸವಾಗುವುದಿಲ್ಲವೇ. ದೂರು ಇತ್ತವನಿಗೆ ಸಿಗುವ ಪರಿಹಾರದ ಪರಿಣಾಮ ಏನಿದೆಯೋ ದೂರಲ್ಪಟ್ಟವನ ಮೇಲೂ ಆ ಪರಿಣಾಮ ಪ್ರಭಾವ ಬೀರಬೇಕಲ್ಲ. ಅಪರಾಧಿಯಾದರೆ ಆ ಅಪರಾಧದಕ್ಕೆ ಪರಿಮಾರ್ಜನೆಯಾದಂತೆ, ನಿರಪರಾಧಿಯಾದಾಗ ಆ ಅರೋಪದಿಂದ ಪೂರ್ಣವಾಗಿ ಮುಕ್ತನಾಗಬೇಕಲ್ಲ? ಹಾಗಾಗಿ ಗುರು ಈ ಸನ್ನಿವೇಶವನ್ನು ಇನ್ನಷ್ಟು ಒರೆಗೆ ಹಚ್ಚಿ ಪರಾಂಬರಿಸುವ ಯತ್ನ ಮಾಡುತ್ತಾನೆ. ತಳೆಯುವ ನಿರ್ಧಾರವನ್ನು ಪರಸ್ಪರ ಸ್ವಕೀಯವಾಗಿ ಮಾತಾಡಿ ತೆಗೆದುಕೊಂಡರೆ ಒಂದುವೇಳೆ ನಿರಪರಾಧಿ ಅಪರಾಧವನ್ನೂ ತೊಳೆದುಕೊಂಡರೂ ಅದು ಪೂರ್ಣ ಪರಿಶುದ್ದತೆ ಎನಿಸುವುದಿಲ್ಲ. ಇದು ಪಾತ್ರವಾಗಿ ಪಾತ್ರಧಾರಿ ಆ ಜವಾಬ್ದಾರಿಯನ್ನು ಅರಿತಿರಬೇಕಾಗುತ್ತದೆ.

"ಭೀಷ್ಮ ತಮ್ಮನಿಗಾಗಿಯೇ ತಂದದ್ದು..ಇದು ಹೌದೇ? ಭೀಷ್ಮನ ಮೊದಲ ಆಕ್ಷೇಪ ಏನು? ಕಾಶೀರಾಜ ಹಸ್ತಿನಾವತಿಯ ಮಾಂಡಲೀಕರನ್ನು ರಹಸ್ಯವಾಗಿ ಒಂದೆಡೆ ಸೇರಿಸಿದ್ದರಲ್ಲಿ ಒಂದು ಗೂಢಾಲೋಚನೆಯಿದೆ. ಕರಿಪುರದಭೀಷ್ಮರರಿಯದ ಹಾಗೆ.. ಎಂದು ಕಾಶೀರಾಜ ಉದ್ದೇಶಿಸುವುದಕ್ಕೆ ಕಾರಣವಾದರೂ ಏನು? ಹಸ್ತಿನಾವತಿಯವರು ಚಕ್ರವರ್ತಿಯ ಸ್ಥಾನದಲ್ಲಿರುವವರು ಭಾಗಿಯಾಗುವಷ್ಟು ಘನತೆಯನ್ನು ಯೋಗ್ಯತೆಯನ್ನು ಆ ಕಾರ್ಯಕ್ರಮ ಪಡೆದುಕೊಂಡಿಲ್ಲ ಎಂಬಂತೆ ಆಗುವುದಿಲ್ಲವೇ?" ಗುರುವಿನ ಈ ತರ್ಕದಿಂದಲೇ ಅಂಬೆ ಪ್ರಕರಣ ಸತ್ಯಾಸತ್ಯತೆಯನ್ನು ಪೂರ್ಣವಾಗಿ ಹೇಳಲಿಲ್ಲ ಎಂದು ಮನವರಿಕೆಯಾಗುತ್ತದೆ. ದೂರುದಾರ ತನಗೆ ಹೇಗೆ ಲಾಭವಾಗಬಹುದು.ತನ್ನ ದೂರು ಹೇಗೆ ಮನ್ನಣೆಗಳಿಸಬಹುದು ಎಂದು ಯೋಚಿಸಿ ಅದಕ್ಕೆ ತಕ್ಕ ಹಾಗೆ ತನ್ನ ಫಿರ್ಯಾದನ್ನು ಮಂಡಿಸುತ್ತಾನೆ. ಇದು ಸಹಜ ಆಗ ನಿರ್ಣಯಿಸುವವನ ಜವಾಬ್ದಾರಿ ಇಲ್ಲಿ ಹಿರಿದಾಗಿರುತ್ತದೆ. ನಿರ್ಣಯಿಸುವವನ ದೃಷ್ಟಿಕೋನಗಳೂ ವಿಭಿನ್ನವಾಗಿರಬೇಕು.

"ಭೀಷ್ಮರರಿಯದ ಹಾಗೆ..." ಎನ್ನುವುದಕ್ಕೆ ಕಾರಣವನ್ನೂ ಭೀಷ್ಮ ಕೊಡುತ್ತಾನೆ. ಈ ಮೊದಲು ಅಂಬೆ ಅಂಬಾಲಿಕಾದಿಗಳನ್ನು ಹಸ್ತಿನಾವತಿಯ ಚಕ್ರವರ್ತಿಗೆ ಅಂದರೆ ವಿಚಿತ್ರವೀರ್ಯನಿಗೆ ತರುವ ಬಯಕೆಯಿಂದ ಕಾಶೀರಾಜನಿಗೆ ಪತ್ರವೊಂದನ್ನು ಬರೆದಿದ್ದ. ಹಸ್ತಿನಾವತಿಯ ರಾಜಸಿಂಹಾಸನದ ಬಗ್ಗೆ ಇರುವ ಭಯದಿಂದಲೇ ಆಗಿರಬಹುದು ಆ ಪತ್ರಕ್ಕೆ ಯಾವುದೇ ಪ್ರತಿಕ್ರಿಯನ್ನು ನೀಡಲಿಲ್ಲ. ಬದಲಾಗಿ ಮಾಂಡಲೀಕರನ್ನೆಲ್ಲ ಸೇರಿಸಿ ಹೀಗೊಂದು ಕನ್ಯಾಪಣವನ್ನಿಟ್ಟು ಸ್ಪರ್ಧೆ ಮಾಡಿದ ಎಂದಾದರೆ ಅದು ಹಸ್ತಿನಾವತಿಗೆ ಮಾಡುವ ಅವಮಾನವಲ್ಲವೇ? ಹಸ್ತಿನಾವತಿಯ ಸಾಮಂತರಸರನ್ನು ಹೀಗೆ ಭೀಷ್ಮನಿಗೆ ಅರಿಯದ ಹಾಗೆ ಗೂಢವಾಗಿ ಸೇರಿಸುವ ಮರ್ಮವೇನು? ತಾನು ಹೆಣ್ಣು ಕೇಳಿ ಕಾಶೀರಾಜ ನೀಡದೇ ಇದ್ದದ್ದಕ್ಕೂ ಭೀಷ್ಮನ ಆಕ್ಷೇಪವಿಲ್ಲ. ಹಾಗಾದರೆ ಈ ರಹಸ್ಯ ಸಮಾವೇಶವನ್ನು ಹಮ್ಮಿಕೊಂಡ ಕಾಶೀರಾಜನ ಅಂತರಾಳದ ನಿಗೂಢತೆ ಏನಿರಬಹುದು? ಆ ಸಂದೇಹದಿಂದಲೇ ಗೂಢಾಚಾರರಿಂದ ಈ ವರದಿ ಬರುವುದು ವಿಳಂಬವಾದುದರಿಂದ ಇವನ ಆಣತಿಯೊಳಗಿರುವ ಸಾಮಂತರಸರನ್ನು ತಡೆಯುವಷ್ಟು ವೇಳೆ ಇಲ್ಲದೆ ಭೀಷ್ಮ ಸ್ವಯಂವರ ಮಂಟಪವನ್ನು ಪ್ರವೇಶಿಸುತ್ತಾನೆ..

ಆದರೆ ಗುರುಗಳು ಇದನ್ನೇ ಆಕ್ಷೇಪಿಸುತ್ತಿದ್ದಾರಲ್ಲ.? "ಭೀಷ್ಮ ನಿನ್ನ ಪ್ರವೇಶವೇ ಸರಿಯಾಗಲಿಲ್ಲ.." ಯಾಕೆ?. ಭೀಷ್ಮ ನೀನು ಹೋಗಿಯಾದಮೇಲೂ ಮೊದಲು ಹೇಳಿದುದೇನು? ಕಾಶೀಕುವರಿಯರನ್ನು ದಿಟ್ಟಿಸಿ.." ಏರಿರೆನ್ನಯ ರಥವನು....." ಎಂದು ಆಜ್ಞಾಪಿಸುತ್ತಾನೆ. ಇಲ್ಲಿ ಕೆಲವೊಂದು ಅಂತರಂಗದ ಭಾವಗಳು ವಿಶ್ಲೇಷಣೆಗೆ ಸಿಗುತ್ತವೆ. ಸಾಮಂತರೊಳಗೆ ಕಚ್ಚಾಡಿಸಿ ಅದೂ ಹೆಣ್ಣಿಗಾಗಿ...ಗೆದ್ದವರಿಗೆ ಆ ಹೆಣ್ಣನ್ನು ಕೊಡುವುದು..ಇಲ್ಲಿ ಹೆಣ್ಣು ಅದೂ ರಾಜಕುವರಿಯರು, ಅವರನ್ನು ಒಂದು ಸ್ಪರ್ಧೆಯ ಪಣವನ್ನಾಗಿಸುವಷ್ಟು ಹೆಣ್ಣಿನ ಸ್ಥಾನ ಮಾನವನ್ನು ಕಡೆಗಣಿಸಿದಂತಾಯಿತಲ್ಲವೇ? ಹಾಗಾಗಿ " ನಿಮ್ಮ ಸ್ಥಾನಮಾನಕ್ಕೆ ಹೊಂದುವಂತಹುದಲ್ಲ.. ಏರಿರೆನ್ನಯರಥವನು" ಎಂದು ಭೀಷ್ಮಗರ್ಜಿಸುವುದಕ್ಕೆ ಅರ್ಥ ಕಲ್ಪಿಸಬಹುದಲ್ಲವೇ? ಹಸ್ತಿನಾವತಿಯವರು ತನ್ನ ಹೆಣ್ಣು ಮಕ್ಕಳಿಗೆ ಯೋಗ್ಯರಲ್ಲ ಎಂದು ಅಂದಾಜಿಸಿ ಕಾಶೀರಾಜ ಆ ಹೆಣ್ಣಿಗೆ ಕೊಟ್ಟ ಸ್ಥಾನಮಾನವಾದರೂ ಏನು? ಪರೋಕ್ಷವಾಗಿ ಇದಕ್ಕಿಂತ ಕೆಳಗೆ ಹಸ್ತಿನಾವತಿಯವರು ಬಗೆದಂತೆ ಅಲ್ಲವೇ? ಹಸ್ತಿನಾವತಿಯ ಸಾಮಂತರೂ ಯಾರೋ ಅದು ತಿಳೀಯದಿದ್ದರೂ ಅವರು ಹಸ್ತಿನಾವಾತಿಯವರಿಗಿಂತ ಒಳ್ಳೆ ಗಂಡು ..ಹಾಗಾಗಿ ಸಾಮಂತರಲ್ಲಿ ಯಾರು ಬಲ ಶಾಲಿ ಆತ ಹಸ್ತಿನಾವತಿಯ ಗಂಡುಸರಿಗಿಂತ ಶ್ರೇಷ್ಠ ಎಂದು ಮಾನದಂಡವನ್ನು ಕೊಡುವ ಉದ್ದೇಶವಲ್ಲವೇ?










Sunday, March 17, 2013

ವಿಲಕ್ಷಣ ಪ್ರಸಂಗ ಅಂಬಾ ಪ್ರತಿಜ್ಞೆ


ಸೌಭದೇಶದ ಸಾಲ್ವನೊಂದಿಗಿನ  ಕಾಶೀ ಪುತ್ರಿಯ ಪ್ರಣಯ ವೃತ್ತಾಂತ ಕೇಳಿ ಭೀಷ್ಮ ಚಕಿತನಾಗುತ್ತಾನೆ. ಆರಂಭದಲ್ಲಿ ಅಮಾಯಕಳಂತೆ ಕಂಡ ಅಂಬೆ ನಂತರ ವ್ಯವಹಾರ ಕುಶಲಿಯಂತೆ ಕಂಡುಬಂದಾಗ ಭೀಷ್ಮ ಜಾಗರೂಕನಾಗುತ್ತಾನೆ. “ಜಾರುವ ನೆಲ ಅಲ್ಲ ಎಂದು ತಿಳಿದು ಭರವಸೆಯಿಂದ ಕಾಲು ಇಟ್ಟು ಬಿಡುತ್ತೇವೆ. ಕಾಲು ಜಾರುತ್ತದೆ.. ಅದು ಕಾಲಿನ ದೌರ್ಬಲ್ಯ ಅಲ್ಲ ನೆಲದ ದೋಷ”   ನಿಜ ಜೀವನದಲ್ಲಿ ಕಂಡು ಬರುವ ಸಹಜ ಪ್ರವೃತ್ತಿಗಳನ್ನು ಯಕ್ಷಗಾನದಲ್ಲಿ ಹೇಗೆ   ಸರಳವಾಗಿ ವಿಶ್ಲೇಶಿಸುತ್ತಾರೆ ಎಂಬುದಕ್ಕೆ ಇದು ನಿದರ್ಶನ. 
  
ಕಾಶೀ ಜನಪ ನಂದನೆಯರು ಅದು ಕಾಶೀ ಯಲ್ಲಿ ಹುಟ್ಟಿದವಳ ಹಿನ್ನೆಲೆಯಲ್ಲಿ ಇಂತಹ ಒಂದು ಕಥೆ ಇದೆ ಎಂದರೆ ಭೀಷ್ಮ ಬೆರಗಾಗುತ್ತಾನೆ. ಸ್ವಯಂವರದ ಮೊದಲ ದಿನ ಹುಡುಗನನ್ನು ಕಾಣುವುದೇನು?  ಪ್ರಣಯ ನಿರ್ಣಯ ತೆಗೆದುಕೊಳ್ಳುವುದೆಂದರೇನು?  ಹೀಗೊಂದು ಪ್ರಕರಣ ಇರಬಹುದೆಂದು ಊಹಿಸಲೂ ಅವನದ್ದಾದ  ಸಂಸ್ಕಾರ ಬಿಡಲಿಲ್ಲ.  ಭೀಷ್ಮ ಈಗ ತನ್ನ ದಾರಿಯ ಸ್ವಚ್ಛತೆಯನ್ನು ಅವಲೋಕಿಸುತ್ತಾ ಅಂಬೆಯ ವರ್ತನೆಯನ್ನು ವಿಶ್ಲೇಶಿಸುತ್ತಾನೆ. ಒಂದು ರೀತಿಯಲ್ಲಿ ತನ್ನ ವೈಚಾರಿಕ ಭದ್ರತೆಯನ್ನು  ಚಿಂತಿಸತೊಡಗುತ್ತಾನೆ.  

ಕಾಶೀ ರಾಜ ಇಟ್ಟ ಪಣವೇನು. ಗೆದ್ದವರಿಗೆ ತನ್ನ ಮಕ್ಕಳನ್ನು ಕೊಡುತ್ತೇನೆ. ಗೆದ್ದ ಮಕ್ಕಳು ಎಂದರೆ ಮೂರು ಜನರನ್ನು ಸೇರಿಸಿ ಹೇಳಿದ್ದಲ್ಲವೇ?  ಉಳಿದಿಬ್ಬರು ಗೆದ್ದವರ ಜತೆ ಹೋಗಲಿ ಆದರೆ ಈ ಪ್ರಕರಣದ ನಂತರ ಅದೂ ಸಾಲ್ವನಿಗೆ ವಚನವಿತ್ತವಳು ವಚನಬದ್ದಳಾಗಬೇಕಾದವಳು  ಉಳಿದಿಬ್ಬರ ಜತೆ ಸ್ವಯಂವರ ಮಂಟಪಕ್ಕೆ ಬರುವುದೆಂದರೆ, ಬಂದರೂ ತಂದೆಯೊಡನೆ ತನ್ನ ನಿರ್ಣಯವನ್ನು ಮೊದಲಾಗಿ ಹೇಳಿಬಿಡಬಹುದಾಗಿತ್ತು... ಹೇಳಲಿಲ್ಲ.. ತಾನು ಆವಾಗಷ್ಟೇ ಅಲ್ಲಿಗೆ ಕಾಲಿಟ್ಟವ.. ಇಬ್ಬರ ಜತೆ ನಿಂತ ಅಂಬೆಯನ್ನು ಕಂಡಾಗ ಸ್ವತಃ ಹುಟ್ಟಿಸಿದ ಅಪ್ಪನಿಗೇ ಗೊತ್ತಾಗದೇ ಇದ್ದದ್ದು ತನಗೆ ಹೇಗೆ ಅರಿವಾಗಬೇಕು? ಆದರೂ ಅಂಬೆ ಹೇಳಿಬಿಡಬಹುದಾಗಿತ್ತು, ಹೇಳಲಿಲ್ಲ,  ಕಾರಣ ಸಾಲ್ವನೆದುರು ಸುಳಿಯದ,  ತಂದೆಯೆದುರು ಹುಟ್ಟಿಕೊಂಡ ನಾಚಿಕೆ. ಒಂದುವೇಳೆ ಸಾಲ್ವ ಯುದ್ದಕ್ಕೆ ಸಜ್ಜಾಗುವಾಗಲಾದರೂ ಹೇಳಬಹುದಾಗಿತ್ತು ಸಾಲ್ವ ಪೆಟ್ಟುತಿಂದು ಬೀಳುವಾಗಲೂ ಹೇಳಲಿಲ್ಲ.  ಕೊನೆಗೆ ಭೀಷ್ಮ ಕೇಳುತ್ತಾನೆ "ಏರಿರಿ ಎನ್ನಯ ರಥವನು, ಎನ್ನುವಾಗಲಾದರೂ ಹೇಳಬಾರದಿತ್ತೇ? ಇಷ್ಟೆಲ್ಲ ಗುಟ್ಟಿನ್ನು ಬಚ್ಚಿಟ್ಟುಕೊಂಡವಳು ಗೆದ್ದವನಿಗೆ ಹಾಕಲು ಹಾರ ಹಿಡಿದು ನಿಲ್ಲಬಹುದೇ? ತಪ್ಪಲ್ಲವೇ?  ಸುಮ್ಮನೇ ಆದರೂ ಪ್ರತ್ಯೆಕ ಇರುತ್ತಿದ್ದರೆ ತಂದೆಯಾದರೂ ಗುಟ್ಟಿನಲ್ಲಿ ಕೇಳುತ್ತಿದ್ದನಲ್ಲ. ಬಹಿರಂಗ ಲೋಕಕ್ಕೆ ಉಮೇದ್ವಾರಿಣಿಯಾಗಿ ನಿಂತವಳನ್ನು ಅನುಮಾನಿಸುವುದು ಹೇಗೆ?  ನೀನು ಹೇಳಲಿಲ್ಲ. ಸಾಲ್ವನೂ ಹೇಳಲಿಲ್ಲ... ಗುಟ್ಟು ಮಾಡಿ ಪೆಟ್ಟಿಗೆ ನಿಂತ..ಅವನು ' ಈಕೆ ನನ್ನವಳು ನಮ್ಮೊಳಗೆ ಹೀಗೆ ಹೀಗೆ ಆಗಿದೆ...ನೀನು ಬಲವಂತವಾಗಿ ಕೊಂಡುಹೋಗುವುದು ಸರಿಯೇ?'  ಎಂದು ಕೇಳಿರುತ್ತಿದ್ದರೆ ಬಹುಶಃ ಅಲ್ಲಿಯೇ ಇತ್ಯರ್ಥವಾಗುವ ವಿಷಯವನ್ನು ಹಸ್ತಿನಾವತಿಯವರೆಗೆ ತಂದೆಯಲ್ಲ? ಇಷ್ಟಕ್ಕೆಲ್ಲ ಕಾರಣ ಬೇಡದೇ ಇದ್ದ ಜಾಗದಲ್ಲಿ ಬಂದ ನಾಚಿಗೆ ಕಾರಣ. ಸಾಲ್ವ ನೆದುರು ಬಾರದ ನಾಚಿಕೆ ತಂದೆಯೆದುರು ಬಂತು. ಅಸ್ಥಾನದಲ್ಲಿ ಬಂದ ನಾಚಿಕೆ" 

"ಎರಿರಿ ಎನ್ನಯ ರಥವನು"  ಎನ್ನುವಾಗ ನಾನು  ಯಾವುದನ್ನೂ ಹೇಳದೆ ರಥವನ್ನು ಏರಿದ್ದಕ್ಕೆ ಎರಡು ಕಾರಣ. ಒಂದು ತಂದೆಯೆದುರು ನಿಜ ಹೇಳಲು ಭಯ ಮತ್ತೊಂದು ಹೇಗೆ ಹೇಳಲಿ ಎಂಬ  ನಾಚಿಕೆ." 
ಹೌದಲ್ಲ,  ಬೇಕಾದ ಜಾಗದಲ್ಲಿ ಎರಡೂ ಇರುವುದಿಲ್ಲ. ಬೇಡದೇ ಇದ್ದ ಜಾಗದಲ್ಲಿ ಲೆಕ್ಕಕ್ಕಿಂತ ಹೆಚ್ಚಿಗೆ ಇರುತ್ತದೆ. 

ಹಾಗಾದರೆ ಮುಂದೇನು?  ಆಗ ಅಂಬೆ ಹೇಳುತ್ತಾಳೆ ತನ್ನನ್ನು ಸಾಲ್ವನಲ್ಲಿಗೆ ಕಳುಹಿಸಿ ಕೊಡು. ತಂದೆಯನ್ನು ಸತ್ಯವತಿಯರನ್ನು ಒಟ್ಟುಗೂಡಿಸಿದ ಹಾಗೆ ನನ್ನನ್ನೂ ಸಾಲ್ವನನ್ನು ಒಟ್ಟು ಗೂಡಿಸು ಎಂದು ಬೇಡಿಕೊಳ್ಳುತ್ತಾಳೆ. 

ಭೀಷ್ಮ ಸಂತುಷ್ಟನಾಗುತ್ತಾನೆ. ಒಂದು ದಾರಿಯನ್ನು ಆಕೆಯೇ ಸೂಚಿಸಿದಳಲ್ಲ. " ಕಾಯೇನ ವಾಚಾ ನೀನು ಸಾಲ್ವನನ್ನು ಪ್ರೀತಿಸಿದ್ದಿ. ಆ ನಿನ್ಹ ಪ್ರೀತಿ ಆ ನಿಲುಮೆ ಭದ್ರವಾಗಿದೆಯಲ್ಲ. ಸಾಲ್ವನನ್ನಲ್ಲದೇ ಬೇರೆ ಯಾರನ್ನೂ ಇಲ್ಲ" ಭೀಷ್ಮ ಆಕೆಯ ಮನದೊಳಗಿನ ನಿರ್ಧಾರವನ್ನು ಖಾತರಿ ಪಡಿಸಿಕೊಳ್ಳುತ್ತಾನೆ. ಮುಂದೆ ಈ ಅಂಬೆ ತನಗೆ ಪ್ರಶ್ನೆಯಾಗಬಾರದು. ತನ್ನ ಹಾದಿಯನ್ನೂ ತನ್ನ ನಿರ್ಧಾರವನ್ನೂ ಪುಷ್ಟೀಕರಿಸುವುದಕ್ಕಾಗಿ ಮತ್ತೂ ಒಂದು ಪ್ರಶ್ನೆಯನ್ನು ಕೇಳುತ್ತಾನೆ ಭೀಷ್ಮ...ಇದು ಒಂದು ರೀತಿಯಲ್ಲಿ ಆ ಪಾತ್ರದ ಸ್ಥಿರತೆ ಎಂತಹುದು ಮತ್ತು ಅದರ ಮನೋಭಾವ ಏನು ಎಂದು ಮೊದಲೇ ತಿಳಿಸುವ ಪ್ರಯತ್ನ. ಆಕೆಯ ಅಚಲ ನಿರ್ಧಾರ ಎಷ್ಟು ಗಟ್ಟಿಯಾದದ್ದು ಎಂದು ತೋರಿಸುವ ಯತ್ನ.
  
"ಅಂಬೇ  ನಿನ್ನ ಸಾಲ್ವನ ಪ್ರೀತಿ ಭದ್ರವಾದದ್ದು, ಒಂದು ವೇಳೆ ನಾನು ನನ್ನ ನಿರ್ಧಾರ ಬದಲಿಸಿ   ಅಂಬೆ ನನ್ನನ್ನು ಮದುವೆಯಾಗು ಎಂದರೂ ನೀನು ನಿನ್ನ ನಿರ್ಧಾರದಿಂದ ಕದಲದೆ ಸಾಲ್ವನನ್ನಲ್ಲದೆ ಬೇರೆ ಯಾರನ್ನೂ ವರಿಸುವುದಿಲ್ಲವಲ್ಲ?"  ಬಹಳ ಜಾಣತನದ ಪ್ರಶ್ನೆ. ವಾಸ್ತವದಲ್ಲಿ ಪುರಾಣದ ಭೀಷ್ಮ ಹಾಗೆ ಕೇಳುತ್ತಾನೋ ಇಲ್ಲವೋ ಅದು ಅಪ್ರಸ್ತುತ. ಆದರೆ ಯಕ್ಷಗಾನದಲ್ಲಿ ಒಂದು ಪಾತ್ರದ ಬಹುಕೋನಗಳು ಆಯಾಮಗಳು ಸೃಷ್ಟಿಸಲ್ಪಡುತ್ತವೆ. ಅದು ಸಂದರ್ಭೋಚಿತವಾಗಿ ವಾಸ್ತವಕ್ಕೆ ಹತ್ತಿರವಾಗಿರುತ್ತದೆ. ಇದಕ್ಕೆ ಆಂಬೆ ಏನೆಂದಾಳು? ಅಂಬೆಯ ಪಾತ್ರಧಾರಿಕೂಡ ಒಂದು ಬದ್ಧತೆಗೆ ಬರಬೇಕಾಗುತ್ತದೆ. ವಾಸ್ತವದಲ್ಲಿ ಚಿತ್ರಣ ಹೇಗೋ.. ಅಂಬೆಯ ನಿರ್ಥಾರ ಗಟ್ಟಿಯಾಗಿ ಇಲ್ಲದೇ ಇದ್ದರೂ ಈಗ ಅದನ್ನು ಗಟ್ಟಿಯಾಗಿಸುವುದು ಅನಿವಾರ್ಯ. ಇದೊಂದು ವಿಚಿತ್ರ ಕಲ್ಪನೆ. ಯಕ್ಷಗಾನದ ಪಾತ್ರಗಳು ಕೇವಲ ಮಾತಿನಲ್ಲೇ ತಮ್ಮನ್ನು ತೋರಿಕೊಳ್ಳುವ ಬಗೆ ಇದು. 
  
ಶೇಣಿಯವರು ಪಾತ್ರದ ವಶವಾಗುವ ರೀತಿಯೇ ಹಾಗೆ. ಭೀಷ್ಮನದ್ದಾದ ಮಾತುಗಳನ್ನು ಆಡಿ ಅಂಬೆಯ ಪಾತ್ರವನ್ನು ಈಬಗೆಯಲ್ಲಿ  ಕಟ್ಟುತ್ತಾರೆ. ಇದು ಅದ್ಭುತ ಕಲ್ಪನೆ. ಇಲ್ಲಿ ಭೀಷ್ಮನ ಪಾತ್ರ ಭದ್ರವಾದಷ್ಟೇ ಅಂಬೆಯ ಪಾತ್ರವೂ ಮನ ಮುಟ್ಟುತ್ತದೆ. ಯಕ್ಷಗಾನ ತಾಳ ಮದ್ದಲೆಯ ಅರ್ಥಗಾರಿಕೆಯಲ್ಲಿ ವೈಚಾರಿಕತೆ ಬಿಂಬಿಸುವ ಬಗೆ ಇದು. ಪರೋಕ್ಷವಾಗಿ ಅಂಬೆಯ ಪಾತ್ರ ಸಾಗುವ ದಿಕ್ಕನ್ನು ಮೊದಲೇ ತೋರಿಕೊಡುವುದು. 

ಸ್ವಗತದಲ್ಲಿ ಭೀಷ್ಮ ವಿಲಪಿಸುತ್ತಾನೆ ಸಾಲ್ವನನ್ನು ಪ್ರೇಮಿಸಿದವಳನ್ನು ಹಸ್ತಿನಾವತಿಯ ಹಿರಿಯರಾಣಿಯಾಗಿ ಮಾಡಿರುತ್ತಿದ್ದರೆ ಇಲ್ಲಿ ಒಂದು ಮರಿಸಾಲ್ವನ ಜನನವಾಗುತ್ತಿತ್ತಲ್ಲ? . ನಮ್ಮ ದೇಶದ ಸಂಸ್ಕಾರ ಹೇಗೆ ಪತನ ಹೊಂದುತ್ತದೆ. ಕಾಶಿಯಲ್ಲಿ ಹುಟ್ಟಿದ ಮಗಳು ಅದು ಕಾಶೀರಾಜನ ಮಗಳು ಹೀಗೆ ಸ್ವಯಂವರದ ಮೊದಲು ನಾಚಿಕೆ ಬಿಟ್ಟು ಪ್ರೇಮಿಸಿದ್ದು ಕಾಶಿಯಿಂದಲೇ ಇದು ಆರಂಭವಾಯಿತಲ್ಲ. ಅಂತೂ ಅವಳಿಂದಲೇ ಪರಿಹಾರವನ್ನು ಕಂಡುಕೊಂಡ ಭೀಷ್ಮ  ಮುಕ್ತನಾದಂತೆ ಭಾವಿಸಿ ಅಂಬೆಯನ್ನು ಬ್ರಾಹ್ಮಣರ ಜತೆಯಾಗಿಸಿ ಸಾಲ್ವನಲ್ಲಿಗೆ ಕಳುಹಿಸಿಕೊಡುತ್ತಾನೆ. 

ಪೆಟ್ಟು ತಿಂದ ಹಾವಿನಂತೇ ಸಾಲ್ವ. ಇದು ಅಂಬೆಗೆ ಅರಿಯದೇ ಹೋಗುತ್ತದೆ. ಸೌಭ ದೇಶದ ಆಸ್ಥಾನಕ್ಕೆ ಬಂದ ಅಂಬೆಗೆ ಇದೇ ಅನುಭವವಾಗುತ್ತದೆ. ಸಾಲ್ವನಲ್ಲಿ  ತನ್ನ ಅಭೀಷ್ಟವನ್ನು ಹೇಳಿಕೊಳ್ಳುತ್ತಾಳೆ. ಮನವನ್ನು ಮೊದಲೇ ಒಪ್ಪಿಸಿದೆ. ಈಗ ಸತಿಯಾಗಿ ಸರ್ವವನ್ನು ಒಪ್ಪಿಸಿಕೊಳ್ಳುವುದಕ್ಕೆ ಬಂದಿದ್ದೇನೆ. ಸಾಲ್ವನಿಗಾಗಿ ಭೀಷ್ಮನಲ್ಲಿ ಭಿನ್ನವಿಸಿ ಬಂದಿರುವುದಾಗಿ ಹೇಳುತ್ತಾಳೆ. ಮೊದಲು ಪ್ರೇಮಾಂಕುರವಾದಾಗ ಕಂಡ ಭಾವವನ್ನು ಈಗಲೂ ನಿರೀಕ್ಷಿಸುತ್ತಾಳೆ. 

ಆದರೆ ಸಾಲ್ವ ಅವಳ ಬಗ್ಗೆ ವಿರಕ್ತ ಭಾವವನ್ನು ತೋರಿಕೊಡುತ್ತಾನೆ. ತನ್ನ ಪಾಲಿಗೆ ಅಂಬೆಯಾಗಿ ಉಳಿಯದೆ ಕೇವಲ ಕಾಶೀ ರಾಜಕುಮಾರಿಯಾಗಿ ಉಳಿದವಳು. ಮಾತ್ರವಲ್ಲ ಈಗ ಭೀಷ್ಮನ ವಶವರ್ತಿ. ಅವನ ಆಣತಿಯಂತೆ ಬಂದವಳು. ಆಕೆಯ ತಂದೆ ಸಹೋದರಿಯರನ್ನು ಯಾರಿಗಿತ್ತರೂ ಈಯಲಿ ನಾನು ನಿನ್ನನ್ನು ವರಿಸುತ್ತೇನೆ ಎಂದವಳು ಸ್ವಯಂವರ ಮಂಟಪದಲ್ಲಿ ಯಾವುದೇ ಮಾತಾಡದೆ ಶೌರ್ಯವಂತ ಭೀಷ್ಮನನ್ನು ಕಂಡು ಅವನ ರಥವೇರಿ ಹೊರಟವಳು. ಯಾವಾಗ ಭೀಷ್ಮನ ಜತೆಗೆ ಹೋದವಳೋ ಅಂದೇ ಅಂಬೆಯ ವಿಷಯ ಸಾಲ್ವನ ಬದುಕಿನಲ್ಲಿ ಮುಗಿದು ಹೋದ ಅಧ್ಯಾಯವಾಗಿ ಪರಿಣಮಿಸಿತು.  

ಕಾಶೀರಾಜನ ಸ್ವಯಂವರ ಮಂಟಪದಲ್ಲಿ ಭೀಷ್ಮನ ಪ್ರವೇಶವದೊಡನೇ ಅಲ್ಲಿ ನೆರೆದಂತಹ ಎಲ್ಲ ಮಾಂಡಲೀಕರೂ ಅರಸುಕುಮಾರರು ಭೀಷ್ಮನ ಕಾಲು ಹಿಡಿದು ಶರಣಾದರೂ..ತಾನು ಮಾತ್ರ ಪ್ರತಿಭಟಿಸಿದವನು. ಕಾರಣ ಒಂದೇ ಅಂಬೆಯ ಮೇಲಿನ ಪ್ರಾಮಾಣಿಕ ಪ್ರೀತಿ. ಭೀಷ್ಮನೊಡನೆ ಹೋರಾಡಿ ಸೋತು ಬಸವವಳಿದು ಹಣ್ಣಾಗಿ ಹೋಗಿ ಈಗ ಭೀಷ್ಮನ ಹೆಸರು ಕೇಳಿದೊಡನೆ ನಡುಕ ಉಂಟಾಗುತ್ತದೆ. ಸೋತು ಹಣ್ಣಾದ ಸಾಲ್ವ.. ಈಗ ಒಬ್ಬ ಹೆಣ್ಣಾಗಿದ್ದಾನೆ. ಒಂದು ಹೆಣ್ಣು ಮತ್ತೊಂಡು ಹೆಣ್ಣನ್ನು ಮದುವೆಯಾಗುವುದು ಸಾಧ್ಯವೇ? ಗಂಗಾ ತೀರದಲ್ಲಿ ಗಾಢಪ್ರೇಮವನ್ನು ಹೊಂದಿ ಅಂಬೆಗೆ ವಚನವನ್ನು ಕೊಟ್ಟ ಮೇಲೆ ಆ ವಚನಕ್ಕೆ ಪ್ರಾಮಾಣಿಕವಾಗಿ ದುಡಿದರೂ.. ಅದೇ ಪ್ರಾಮಾಣಿಕತೆ ಅಂಬೆಯಿಂದ ದಕ್ಕದೇ ಹೋಯಿತು. ಆಕೆ ಭೀಷ್ಮನ ರಥವೇರಿದಳು..ಸಾಲ್ವ ತಿರಸ್ಕರಿಸಿಬಿಡುತ್ತಾನೆ. ಅಂಬೆ ಹತಾಶಳಾಗುತ್ತಾಳೆ. ಜತೆಯಲ್ಲಿ ಬಂದ ವೃದ್ಧ ವಿಪ್ರನ ತೇಪೆ ಕೆಲಸ ಕೂಡ ಸಾಗುವುದಿಲ್ಲ. 

ಸಾಲ್ವನಾಗಿ ಪ್ರಭಾಕರ ಜೋಷಿಯವರದ್ದು ಮಿಂಚಿನ ಅರ್ಥಗಾರಿಕೆ.  ತಂದೆಯೊಡನೆ ತಮ್ಮ ಬಾಂಧವ್ಯವನ್ನು ಹೇಳಿಕೊಳ್ಳದವಳು ಭೀಷ್ಮನ ರಥವೇರಿ ಆತನ ಜತೆಗೆ ಹೋಗುತ್ತಾಳೆ. ಒಂದು ವೇಳೆ ಇವಳ ಬೇಡಿಕೆಯಂತೆ ಭೀಷ್ಮ ಸಮ್ಮತಿಸುತ್ತಿದ್ದರೆ ಆಕೆ ಭೀಷ್ಮನನ್ನು ವರಿಸುತ್ತಿದ್ದಳಲ್ಲವೇ? ಹಾಗಾದಲ್ಲಿ ಭೀಷ್ಮನಲ್ಲಿ ಅನುರಾಗ ಇಲ್ಲ ಎಂದು ಹೇಗೆ ನಂಬಲಿ? ಭೀಷ್ಮನಂತವನಿಗೆ ನೀತಿಯನ್ನು ಅರುಹಿ ಇಲ್ಲಿಗೆ ಬಂದವಳು ಇವಳು,  ಶಂತನು ಪುತ್ರಗೆ ನೀತಿಯನ್ನು ಅರುವಂತವಳೇ ? ಈಕೆ ವಿಚಲಿತ ಮನಸ್ಸಿನವಳು. ಭೀಷ್ಮ ಅಲ್ಲದಿದ್ದರೆ ಸಾಲ್ವ ...ಸಾಲ್ವ ಅಲ್ಲದಿದ್ದರೆ ಇನ್ನೊಬ್ಬನು, "ಎಷ್ಟು ಪೇಳಿದರೀಕೆಯನು.... ....ಒಪ್ಪಿಕೊಳ್ಳುವನಲ್ಲ " ಎಂದು   ಈಕೆ ವ್ಯಭಿಚಾರಿಣಿ ಎಂದು ತಳ್ಳಿಬಿಡುತ್ತಾನೆ. ಹತಾಶಳಾದ ಅಂಬೆ ಕ್ರುದ್ದಳಾಗುತ್ತಾಳೆ, ಪ್ರತಿಯಾಗಿ ಸಾಲ್ವನನ್ನೇ ಜರೆಯುತ್ತಾಳೆ.  `ಗಂಗಾ ತೀರದಲ್ಲಿ ಮೊದಲು ಕಂಡವನು ಅವನು, ಬಳಿ ಬಂದು ಮಾತಾಡಿಸಿದವನು ಅವನು, ವಿವಾಹದ ಬೇಡಿಕೆಯ ಮನದಾಶೆಯನ್ನು ಹೇಳಿದವನು ಅವನು. ತನ್ನ ಮನದಲ್ಲಿ ಬಯಕೆಯನ್ನು ಕಾಮವನ್ನು ಕೆರಳಿಸಿದವನು ಅವನು ...ಇವನೇ ಜಾರನು`   ಪ್ರೇಮ ಸಂಪೂರ್ಣ ವಿರಸದತ್ತ ಮುಖ ಮಾಡುವಾಗ ಅಂಬೆ  ದುರಂತ ನಾಯಕಿಯಾಗಿಬಿಡುತ್ತಾಳೆ. 

 ಮೊದಲೇ ಅಪ್ರಾಮಾಣಿಕ ಮನಸ್ಸು ಹೊಂದಿರುವುದರಿಂದಲೇ? ಅಲ್ಲ ಸಾಲ್ವನ ಬಗ್ಗೆ ಭರವಸೆ ಸಾಲದಾಯಿತೆ?ಆಕೆಯ  ಅತ್ಮ ವಿಶ್ವಾಸದ ಬಗ್ಗೆ ಸ್ವತಃ ಆಕೆಗೆ ನಂಬಿಕೆ ಇಲ್ಲ.  ಹಾಗಾಗಿ ಅಂಬೆ ಹಸ್ತಿನಾವತಿಯಿಂದ ಜತೆಯಲ್ಲಿದ್ದ ವೃದ್ದ ಬ್ರಾಹ್ಮಣರನ್ನು ಮಧ್ಯವರ್ತಿಯಾಗಿ ಮಾಡಿದಳೇ? ಸಾಲ್ವನನ್ನು ಒಲಿಸಿಕೊಳ್ಳುವಲ್ಲಿ ತಾನು ಸಂಪೂರ್ಣ ವಿಫಲಳಾದಾಗ ವೃದ್ದ ವಿಪ್ರರ ಮುಖ ನೋಡುತ್ತಾಳೆ. ವೃದ್ದ ವಿಪ್ರನ ಮಾತಿಗೂ ಸಾಲ್ವ ಮನ್ನಣೆಯನ್ನು ಕೊಡುವುದಿಲ್ಲ ಬದಲಾಗಿ ಆಗ ವಿಪ್ರನೊಂದಿಗಿನ ಒಪ್ಪಂದ ತಿಳಿದು ಬಿಡುತ್ತದೆ. ಅಲ್ಲಿಗೆ ಅಂಬೆಯ ಜೀವನ ಹಾಸ್ಯಾಸ್ಪದವಾಗಿ ಮಾರ್ಪಡುತ್ತದೆ.  ಅಲ್ಲಿಂದ ಬಲವಂತವಾಗಿ ಹೊರಡಬೇಕಾಗುತ್ತದೆ.. ಈಗ ಅಂಬೆ ನಿಜಕ್ಕೂ ಮತಿಹೀನಳಾಗುತ್ತಾಳೆ. 

ಅಂಬೆ ವಿಲಪಿಸುತ್ತಾಳೆ. ಭ್ರಾಂತಳಾಗಿಬಿಡುತ್ತಳೆ.   "ಮರುಳೆ ನಾನಾಗೀರ್ಪೆ......"  ಜನ್ಮ ಕೊಟ್ಟ ಕಾಶೀರಾಜ. .ಮೂರ್ಖನೇ? ಮಕ್ಕಳ ವ್ಯಕ್ತಿತ್ವಕ್ಕೆ ಬೆಲೆಕೊಡದೇ ಮನಸ್ಸನ್ನು ಅರಿಯದೆ ಕೆಟ್ಟ ಪಣವನ್ನಿಟ್ಟು ಮಕ್ಕಳನ್ನು ಅದಕ್ಕೆ ಬಲಿಕೊಟ್ಟನೇ? ವಿಧಿ ಬರಹವನ್ನು ಬರೆದ ಸೃಷ್ಟಿಕರ್ತ ಬ್ರಹ್ಮ  ದುಷ್ಟನೇ? ಯೌವನವತಿಯನ್ನು ಕಂಡು ಮರುಳಾಗಿ ಆಶೆಯನ್ನು ಕೆರಳಿಸಿದ ಸಾಲ್ವ ಮೂರ್ಖನೆ? ಹೀಗೆ ಯೋಚನೆಯ ಸುಳಿ ಸುತ್ತುತ್ತಾ ಕೊನೆಗೆ ಭೀಷ್ಮನತ್ತವೇ ಸುಳಿಯುತ್ತದೆ. ಸ್ವಯಂವರವೆಂದು ತಿಳಿದೂ ಬ್ರಹ್ಮಚಾರಿ ಶಪಥ ಮಾಡಿದ  ಭೀಷ್ಮ ಅಲ್ಲಿಗೆ ಬಂದ. ಬಲವಂತವಾಗಿ ರಥ ಹತ್ತಿಸಿದ. ಹೀಗೆ ಕೋಳ್ಯೂರರು ಬಹಳ ಸುಲಭವಾಗಿ ಮಾತಿನಲ್ಲೇ ಭಾವಾವೇಶಗೊಂಡು ಪರಕಾಯ ಪ್ರವೇಶ ಮಾಡಿಬಿಡುತ್ತಾರೆ!

ಒದ್ದ ಚೆಂಡು ಮರಳಿ ಬರುವಂತೆ ಅಂಬೆ ಪುನಃ ಹಸ್ತಿನೆಯ ಬಾಗಿಲು ಬಡಿಯುತ್ತಾಳೆ.  ಭೀಷ್ಮನ ಜತೆಯಲ್ಲಿ ಹೋದ ಅಂಬೆ ಎಂದುಕೊಂಡು ಸಾಲ್ವ ತಿರಸ್ಕರಿಸಿದನೆಂಬ ವಿಚಾರವನ್ನು ಹೇಳುತ್ತಾಳೆ. ಈಗ  ತನ್ನ ನಿರ್ಧಾರವನ್ನು ಭೀಷ್ಮ ಸಮರ್ಥಿಸಿಕೊಳ್ಳುವ ರೀತಿ ಬಹಳ ವಿಶಿಷ್ಟವಾಗಿರುತ್ತದೆ. 

"ಸಾಲ್ವ ಹೇಳಿದುದೇನು?  ಭೀಷ್ಮನ ಜತೆಯಲ್ಲಿ ಹೋದುದರಿಂದ ನೀನು ತ್ಯಾಜ್ಯಳು ಹಾಗಾದರೆ ಸಾಲ್ವನ ನಿಲುಮೆ ಏನು? ಭೀಷ್ಮನ ಜತೆಯಲ್ಲಿ ಹೋದುರಿಂದ... ಇಲ್ಲಿ ಸಾಲ್ವನ ನಿಲುಮೆಯನ್ನು ನೀನು ಒಪ್ಪಿಕೊಂಡ ಹಾಗಲ್ಲವೇ? ಸಾಲ್ವನ ನಿಲುಮೆ ಅಕ್ರಮದ್ದು ಅನ್ಯಾಯದ್ದು ಎಂದಾದರೆ ಅದನ್ನು ಅವನಲ್ಲೇ ಇತ್ಯರ್ಥ ಮಾಡಿಕೊಳ್ಳುವುದು ಬಿಟ್ಟು ಇಲ್ಲಿ ಬಂದು ನನ್ನನ್ನು ನೀನೆ ವರಿಸು..ಹಾಗಾದರೆ ಭೀಷ್ಮನು ತಪ್ಪು ಮಾಡಿದ್ದಾನೆ. ಆ ತಪ್ಪು ತೋರಿಸಿಕೊಟ್ಟವನು ಸಾಲ್ವ ಈಗ ಭೀಷ್ಮ ತಪ್ಪನ್ನು ಒಪ್ಪಿಕೊಂಡು, ಜಾಗ್ರತನಾಗಿ ಆ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡ ಅಂದರೆ  ಅಂಬೆಯನ್ನು ಸ್ವೀಕರಿಸಿದ..ಭೀಷ್ಮ ನು ತಪ್ಪಿದ ಎಂದುಕೊಂಡು ಅಂಬೆಯ ಮೂಲಕ ಸಾಲ್ವನ ಮೂಲಕ ಪ್ರಾಯಶ್ಚಿತ್ತ ಮಾಡಿಕೊಂಡ ಎಂಬ ದುರ್ವಿಧಿ ಎಂದು ಕಲ್ಪಿಸಿದರೆ ಅದು ಮೂರ್ಖತನವಾದೀತು. ಅಂಬೇ ನೀನು ಅವನನ್ನು ಪ್ರೇಮಿಸಿದೆ ... ಅವನು ನಿನಗೆ ಹೃದಯವನ್ನು ಕೊಟ್ಟ. ಈಗ ಹೇಳ್ತಾನೆ.. ಭೀಷ್ಮನ ಜತೆಯಲ್ಲಿ ಹೋದುದರಿಂದ ಆಗದು...ಇಲ್ಲಿ ಆಕ್ಷೇಪ  ನಿನ್ನ ಮೇಲೆ. ನೀನೆ ಅಪರಾಧಿ. ಭೀಷ್ಮನ ಮೇಲೆ ಆರೋಪವಿಲ್ಲ.   ಈ ಪ್ರಣಯದ ಗುಟ್ಟು ನನಗೆ ಗೊತ್ತಿರುತ್ತಿದ್ದರೆ ನಾನು ತರುತ್ತಿರಲಿಲ್ಲ.  ನಿಮ್ಮೊಳಗಿನ ವ್ಯವಹಾರದ ಗೊತ್ತಿದ್ದ ನೀನೇ ಸುಮ್ಮನುಳಿದೆ...ನಿನ್ನ ಮೂರ್ಖತನಕ್ಕೆ ನೀನೆ ಅನುಭವಿಸಬೇಕೆ ಹೊರತು ನಿನ್ನಂತಹ ಹೆಣ್ಣಿನ ಅಗ್ಗದ ವಿಚಾರಕ್ಕೆ ನನ್ನದ್ದಾದ ಬ್ರಹ್ಮ ಚರ್ಯ ವೃತ ಕಳೆದುಕೊಳ್ಳಬೇಕೆ? ಸಾಲ್ವನನ್ನೇ ಮನಸಾ ವರಿಸಿದ್ದೇನೆ... ಎಂದು ಹೇಳಿದ ನೀನು  ಸಾಲ್ವನನ್ನೆ ನಂಬಿದ್ದೇನೆ ಎಂದು ಹೋದ ನೀನು ಈಗ ಸಾಲ್ವ ತಿರಸ್ಕರಿಸಿದ ಎಂದು ಬಂದರೆ ಸ್ವೀಕರಿಸಬೇಕೆ? ಸಾಲ್ವ ತಿರಸ್ಕರಿಸಿದ ಹೆಣ್ಣನ್ನು ಹಸ್ತಿನಾವತಿಯ ಚಕ್ರವರ್ತಿ ಸ್ವೀಕರಿಸಿದ ಎಂದದಾರೆ ಹಸ್ತಿನಾವತಿಯ ಘನತೆ ಏನು? ಎಲ್ಲದಕ್ಕಿಂತಲೂ ದೊಡ್ದ ತಪ್ಪು.. ನನ್ನ ತಮ್ಮನನ್ನು ನೀನು ತಿರಸ್ಕರಿಸಿದೆ..ನೀನೇ ತಿರಸ್ಕರಿಸಿದ ಮೇಲೆ ನಿನ್ನನ್ನು ವರಿಸು ಎಂದು ಹೇಳುವುದು ಸರಿಯೇ?" 

ನೇರವಾದ ಮಾತುಗಳ ವಿಶ್ಲೇಷಣೆಗೆ ಮೊದಲೇ ಮಾತಿಲ್ಲದ ನಿರುತ್ತರಳಾಗಿದ್ದ ಅಂಬೆ ಪುನಃ ಹೇಗೆ ಸಮರ್ಥಿಸಿಕೊಂಡಾಳು. ಆದರೂ ಕೊನೆಗೆ ತನ್ನ ಕಣ್ಣೀರಿಗೆ ಕರಗೋದಿಲ್ಲವೇ? ಆಗ ಭೀಷ್ಮನ ಮಾತು ಬಹಳ ಅರ್ಥ ಗರ್ಭಿತ.. ಶೂರ್ಪನಖ ಕೊನೇಗೆ ರಾಮನೆದುರು ಬಂದು ಕಣ್ಣೀರು ಹಾಕಿ ಬೇಡಿಕೊಂಡರೂ ರಾಮ ಸ್ವೀಕರಿಸಲಿಲ್ಲ ಯಾಕೆ? ಅದು ಅವಳಾಗಿಯೇ ತಂದುಕೊಂಡ ವಿಧಿ. ಅದನ್ನು ಅವಳೇ ಅನುಭವಿಸಬೇಕು. 

ಭೀಷ್ಮ ತನ್ನನ್ನು ಕ್ಷಮಿಸುವುದಿಲ್ಲ ಎಂದು ತಿಳಿದಾಗ ಅಂಬೆ ಕೊನೆಯಲ್ಲಿ  ಶಪಥ ಮಾಡುವ ಹಂತಕ್ಕೆ ಬಂದು ಬಿಡುತ್ತಾಳೆ. ಪ್ರಪಂಚದಲ್ಲಿ ಅವನಿಂದ ಪರಾಕ್ರಮಿಯನ್ನು ವೀರನನ್ನು ಹುಡುಕುತ್ತೇನೆ ಅವನಿಂದ ಭೀಷ್ಮನನ್ನು ಕೊಲ್ಲುವುದಾಗಿ ಹೇಳುತ್ತಾಳೆ. ಅದು ಸಾಧ್ಯವಾಗದೇ ಇದ್ದರೆ  ಸರ್ವಸಂಗ ತ್ಯಾಗ ಮಾಡಿ ಕಾಡಿಗೆ ಹೋಗಿ ತಪಸ್ಸನ್ನಾಚರಿಸಿ ಆಮೂಲಕ ಸಿದ್ದಿಯನ್ನು ಗಳಿಸಿ ನಿನ್ನನ್ನು ಶಪಿಸುತ್ತೇನೆ..ಭೀಷ್ಮನನ್ನು ಸುಟ್ಟು ಬೂದಿ ಮಾಡಿ ಅದರಿಂದ ತಿಲಕ ವಿಡದೇ ಹೋದರೆ ನಾನು ಕಾಶಿರಾಜ ಪ್ರತಾಪಸೇನನ ಮಗಳೇ ಅಲ್ಲ.  ಎಷ್ಟು ಬಾಲಿಷವಾದ ಮಾತು ಇದು. ಅದಕ್ಕೆ ಭೀಷ್ಮ ಕೊಡುವ ವಿವರಣೆ ಎಷ್ಟು ಅರ್ಥ ಪೂರ್ಣ. ಈ ಪ್ರಸಂಗದ ಅಂತರಂಗದ ಒಳ ಅರ್ಥವನ್ನು ಸ್ಥೂಲವಾಗಿ ಶೇಣಿಯವರು ಭೀಷ್ಮನ ಮೂಲಕ ತೋರಿಸಿಕೊಡುತ್ತಾರೆ. 

ತನ್ನಿಂದ ವೀರನನ್ನು ಹುಡುಕಿ ಆ ಗಂಡಿನಿಂದ ಕೊಲ್ಲಿಸುತ್ತೇನೆ. ಹಾಗೆ ಗಂಡನ್ನು ಹುಡುಕಬೇಕೆಂದಿದ್ದರೆ ಆಕೆಯಲ್ಲಿರುವ ಭಂಡವಾಳವಾದರೂ ಏನು? ಅಂತಹ ವೀರ ಅವಳ ನೇತೃತ್ವದಲ್ಲಿ, ಆಕೆಯನ್ನು ಮುಂದಿಟ್ಟುಕೊಂಡು ಬರಬೇಕಲ್ಲವೇ? ಅಂಬೆಯ ಹಿಂದೆ ಬರುವ ಗಂಡುಸು....,  ಒಂದು ವೇಳೆ ತಪಸ್ಸನ್ನಾಚರಿಸಿ ಆಕೆ ಯೋಗಿನಿಯಾಗಿ ಬಂದಲ್ಲಿ..., ಅಂತಹ ಪೂಜ್ಯ ಸ್ಥಾನ ಅವಳು ಗಳಿಸುತ್ತಾಳೆ ಎಂದಾದರೆ ಆ ಸಮಯದಲ್ಲಿ ಈ ದೇಶದ ಸಂಸ್ಕಾರದ ಪ್ರಕಾರ ನನ್ನಿಂದಲೂ  ಯೋಗ್ಯತಾವಂತಳು ಪೂಜ್ಯಳು ಎಂದು ಪೂಜಿಸಿಯೇನು. ಕಾಲು ಹಿಡಿದೇನು. ಯಾಕೆ?  ` ಯತ್ರ ನಾರ್ಯಸ್ತು  ಪೂಜ್ಯಂತೇ ರಮಂತೇ ತತ್ರ ದೇವತಾಃ.` ಎಂದು ಮಂತ್ರ.  ಗಂಗೆ ಪವಿತ್ರವಾದುದರಿಂದ ಹರನ ಶಿರವನ್ನು ಅಲಂಕರಿಸುತ್ತಾಳೆ. ಸರಸ್ವತಿ ತನ್ನ ವಿದ್ವತ್ ನಿಂದ ಬ್ರಹ್ಮನ ಮುಖವಾಗುತ್ತಾಳೆ. ಸಿರಿ ಲಕ್ಷ್ಮೀ ದೇವಿ ತನ್ನ ಯೋಗ್ಯತೆಯಿಂದ ಹರಿಯ ವೃಕ್ಷಸ್ಥಲವನ್ನು ಅಲಂಕರಿಸುತ್ತಾಳೆ. ಗಂಗೆಯನ್ನು ಹರನ ಶಿರದಲ್ಲಿ ಕಂಡು ಅರಾಧಿಸುತ್ತೇವೆ ಆಕೆ ಹರನಿಂದ ದೊಡ್ಡವಳೆಂದು ಅಲ್ಲ, ಹಾಗೇ ಸರಸ್ವತಿಯನ್ನು ಬ್ರಹ್ಮನ ಮುಖವಾಗಿ ಪೂಜಿಸುತ್ತೇವೆ. ಲಕ್ಷ್ಮಿಯನ್ನು ಹರಿಯ ಹೃದಯವಾಗಿ ಕಾಣುತ್ತೇವೆ. ಹೆಣ್ಣಿನಲ್ಲಿ  ತಾಯ್ತನವನ್ನು ಗುರುತಿಸುವ ಗೌರವಿಸುವ ಸಂಸ್ಕೃತಿ ನಮ್ಮದು. ಅಂತಹ ಯೋಗ್ಯತೆ  ಪವಿತ್ರಾತ್ಮ ಅಂಬೆಯಾದಲ್ಲಿ ಆಕೆಯ ಕಾಲು ಹಿಡಿಯುವುದರಲ್ಲಿ ತಪ್ಪೇನು? ಪುರುಷನ ಮುಖವಾಗಿ ಶಿರವಾಗಿ ಹೃದಯವಾಗಿ ಬರಬೇಕಾದ ಸ್ತ್ರೀ ತಾಟಕಿಯಾಗಿಯೋ ಶೂರ್ಪನಖಿಯಾಗಿಯೋ ಬಂದಲ್ಲಿ ಅಕೆಯನ್ನು ಮೊದಲು ನಾಶ ಮಾಡುತ್ತೇವೆ. ರಾಮಾಯಣದಲ್ಲಿ ಈ ಎರಡು ಭಾವಗಳೂ ಸ್ತ್ರೀಯ ಮೂಲಕ ಕಾಣುತ್ತೇವೆ. ಉತ್ತರದ ಸೀತೆ..ದಕ್ಷಿಣದ ಶೂರ್ಪನಖಿ.. ಉತ್ತರದಿಂದ ದಕ್ಷಿಣಕ್ಕಿರುವ ಸೇತುವಿನ ಎರಡು ಬದಿಯಲ್ಲಿ ನಿಲ್ಲುವ ವ್ಯಕ್ತಿತ್ವಗಳಿವು.  ಈ ಎರಡು ಪಾತ್ರಗಳೇ ರಾಮ ರಾವಣರ ಕಾಳಗಕ್ಕೆ  ಮೂಲಕಾರಣ. ಸ್ತ್ರೀ ಮೂಲದಿಂದಲೇ ರಾವಣನ ನಾಶವಾಗುತ್ತದೆ. ಇಂತಹ ಭವ್ಯವೂ ದಿವ್ಯವೂ ಆದ ಚರಿತ್ರೆಯನ್ನು ಬಲ್ಲ ನಾವು... ಹೆಣ್ಣು ಸ್ತ್ರೀತ್ವದಿಂದ ಇರಬೇಕು. ಹಾಗಾಗಿ ಕೇವಲ ಹೆಣ್ಣಾಗಿ ಅಂಬೆ ಶಪಿಸುವುದಕ್ಕೂ ಇಲ್ಲ. ಕೇವಲ ಹೆಣ್ಣಾಗಿ ಆಕೆಯ ಹಿಂದೆ ಬರುವ ಗಂಡಸೂ ಇಲ್ಲ. ಪರೋಕ್ಷವಾಗಿ ಆಕೆಯ ಸ್ತ್ರೀತ್ವ ಗೌರವಿಸಲ್ಪಡಬೇಕು. ಆಕೆಯ ಸ್ತ್ರೀತ್ವ ಗೌರವಿಸಲ್ಪಟ್ಟಾಗ ಆಕೆಯ ಶಾಪವೋ ವರವೋ ಯಾವುದನ್ನೂ ನಾನು ಸ್ವೀಕರಿಸುತ್ತೇನೆ.  ಭೀಷ್ಮನ ಪಾತ್ರ ವ್ಯಕ್ತಿತ್ವ ಮುಂದೆ ಯಾವ ರೀತಿ ಸಾಗುತ್ತದೆ ಎಂಬುದು ಸೂಚ್ಯವಾಗಿ ಕಾಣೀಸುವ ಮಾತುಗಳು. ಈ ಮಾತುಗಳು ಕೇವಲ ಯಕ್ಷಗಾನದ ಅರ್ಥಗಾರಿಕೆಯಾಗಿ ನಿಲ್ಲುವುದಿಲ್ಲ. ಯಾವುದೇ ಗ್ರಂಥದಲ್ಲಿ ಮೂಲಾಕ್ಷರವಾಗಿ ಬಳಸಲ್ಪಡಬೇಕಾದ ಪದಗಳು. ಇಡೀ ಭೀಷ್ಮನ ಚರಿತ್ರೆಯಲ್ಲಿ ಅಂಬೆ ಎಂಬುದು ವಿಲಕ್ಷಣ ಪಾತ್ರವಾಗಿಬಿಡುತ್ತದೆ. 





   







Wednesday, March 6, 2013

ಅಂಬಾ ವೃತ್ತಾಂತ



"ಎನುತಾಲಾಜ್ಞೆಯೊಳಿಂತು ಕಾಶಿ ಜನಪ ನಂದನೆಯರನು..." ಹಲಸಿನಹಳ್ಳಿ ನರಸಿಂಹಯ್ಯ ಬರೆದ "ಭೀಷ್ಮ ವಿಜಯ" ಎಂಬ ಪ್ರಸಂಗದ ಈ ಪದದಿಂದ ತೊಡಗುವ ಭೀಷ್ಮನ ಒಡ್ಡೋಲಗದ ಸ್ವಗತ ಮಾತುಗಳ ಪ್ರಸ್ತಾವನೆ ರೂಪುಗೊಳ್ಳುತ್ತಿದ್ದಂತೆ ತಾಳ ಮದ್ದಲೆ ಆರಂಭವಾಗುತ್ತದೆ. ಭೀಷ್ಮನಾಗಿ ಶೇಣಿ ಗೋಪಾಲಕೃಷ್ಣ ಭಟ್ ಪ್ರಸಂಗದ ಆದಿಯ ಸಂದರ್ಭವನ್ನು ವಿವರಿಸುತ್ತಾ ಭೀಷ್ಮನ ಪರಕಾಯ ಪ್ರವೇಶದ ಮೊದಲ ದ್ವಾರವನ್ನು ಹೊಕ್ಕುಬಿಡುತ್ತಾರೆ. ಹಂತ ಹಂತವಾಗಿ ಭೀಷ್ಮ ಆವಾಹನೆಗೊಳ್ಳುವಾಗ ತಾಳಮದ್ದಲೆ ನಮ್ಮನ್ನು ವರ್ತಮಾನದಿಂದ ಹಸ್ತಿವಾತಿಗೆ ಎತ್ತಿ ಹಾಕುತ್ತದೆ. ಹತ್ತು ಮೂವತ್ತು ವರ್ಷಗಳಷ್ಟು ಹಿಂದಿನ ಹಳೆಯ ತಾಳಮದ್ದಲೆಯ ಧ್ವನಿಯನ್ನು ಸುತ್ತಿದ ಸುರುಳಿಯನ್ನು ಬಿಚ್ಜುವುದಷ್ಟೇ ನಮ್ಮ ಕೆಲಸ. ಮತ್ತೆ ಕಿವಿ ನಿಮಿರ ತೊಡಗುತ್ತದೆ. ಮನಸ್ಸು ಭಾವನೆಯ ಗರಿಯಿಂದ ಕಲ್ಪನೆಯ ಚಿತ್ರವನ್ನು ಚಿತ್ರಿಸತೊಡಗುತ್ತದೆ. ಪಳಗಿದ ಚಿತ್ರಕಾರನಂತೆ `ಯಕ್ಷಗಾನ' ಬಿಡಿಸುವ ಚಿತ್ರಕ್ಕೆ ಒಳಗಣ್ಣು ಕೀಲಿಸದ ನೋಟವನ್ನು ನೆಟ್ಟು ಬೆರಗಾಗಿ ನಿಂತು ಬಿಡುತ್ತದೆ. ಭೀಷ್ಮ, ಅಂಬೆ ಸಾಲ್ವ, ಪರಶುರಾಮ, ವೃದ್ದ ಬ್ರಾಹ್ಮಣ ವ್ಯಕ್ತಿ ಪಾತ್ರಗಳ ಬಣ್ಣಗಳು ಹಿಮ್ಮೇಳದ ಸುಧಾಮೃತದಲ್ಲಿ ಅದ್ದಿಕೊಂಡು ಚಿತ್ರಕಾರನ ಕೈಚಳಕಕ್ಕೆ ತಮ್ಮನ್ನು ಒಡ್ದಿಕೊಳ್ಳುತ್ತಾ ಸಾಗುತ್ತದೆ. ಭೀಷ್ಮ ವಿಜಯ ಎಂಬ ಚಿತ್ರ ಕಣ್ದೆರೆಯಾಗಿ ರೂಪುಗೊಂಡಾಗ ಯಕ್ಷಗಾನ ತಾಳಮದ್ದಲೆ ಎಂಬ ಪರಮಾನ್ನದ ಪಾಯಸವನ್ನು ಕೌಳಿಗದ ಸೌಟಿನಿಂದ ತುದಿನಾಲಿಗೆಗೆ ತೊಟ್ಟಿಕ್ಕಿಸಿ ಚಪ್ಪರಿಸಿದ ಅನುಭವವಾಗುತ್ತದೆ.

ತಾಳ ಮದ್ದಲೆಯ ಹಿಮ್ಮೇಳದಲ್ಲಿ ಭಾಗವತರು ಕಡತೋಕರೋ ಅಲ್ಲ ನಾವುಡರೋ ಆರಂಭದಲ್ಲಿ ಸ್ವರವನ್ನು ಗುರುತಿಸುವಲ್ಲಿ ಸಂದಿಗ್ಧತೆ ಆದರೇನಂತೆ ಅಪ್ಪಟ ಪ್ರತಿಭಾವಂತ ಯುಗಪುರುಷರ ಪದಕ್ಕೆ ಗುರುತಿಸುವ ಉತ್ತರಕ್ಕಿಂತಲೂ ಅದನ್ನು ಕೇಳುವ ಆತುರ ಮಾತ್ರ ಮುಂದಾಗುತ್ತದೆ. ಆದರೆ ಈಗ ಆ ಅನುಮಾನ ಬಗೆಹರಿದಿದೆ. ಬೀಷ್ಮ ಕಾಶಿ ಜನಪನ ಕನ್ಯೆಯರನ್ನು ಸ್ವಯಂವರ ಮಂಟಪದಿಂದ ಅಪಹರಿಸುತ್ತಾನೆ. ಈ ಕನ್ಯೆಯರನ್ನು ಅಪಹರಿಸುವ ಅಥವಾ ಆ ಕನ್ಯಾರ್ಥಿ ಸ್ಪರ್ಧೆಯನ್ನು ಭಂಗಗೊಳಿಸುವ ತನ್ನ ಅನಿವಾರ್ಯತೆಯನ್ನು ಸ್ವಗತವಾಗಿ ವಿಶ್ಲೇಷಣೆಯನ್ನು ಭೀಷ್ಮನಾಗಿ ಶೇಣಿಯವರು ಮಾಡುತ್ತಾರೆ. ಕಾಶೀ ದೇಶ ಸ್ವತಂತ್ರ ಪ್ರದೇಶ. ಆದರೆ ಸ್ಪರ್ಧೆಗಾಗಿ ಹಸ್ತಿನಾವತಿಯ ಸಾಮಂತರು ಅಲ್ಲಿ ಸೇರಿಕೊಂಡು ಕಾಶಿನಂದನೆಯರಿಗಾಗಿ ಹೋರಾಡುವುದು ಹಸ್ತಿನಾವತಿಯ ರಾಜಕೀಯ ದೃಷ್ಟಿಯಿಂದ ಭಂಡಾಯಕ್ಕೆ ಹಾದಿ ಮಾಡಿಕೊಟ್ಟಂತೆ. ಹಸ್ತಿನಾವತಿಯ ಸಾಮಂತರು ಪರಸ್ಪರ ಕಚ್ಚಾಡಿಕೊಂಡರೆ ಹಸ್ತಿನಾವತಿಯ ಸಿಂಹಾಸನದ ಭದ್ರತೆಗೂ ಇದು ತೊಂದರೆ. ಹಾಗಾಗಿ ಹಸ್ತಿನಾವತಿಯ ಸಿಂಹಾಸನದ ರಕ್ಷಕನಾಗಿಯೂ ಪ್ರತಿನಿಧಿಯಾಗಿ ಕಾಶೀ ಮಂಟಪವನ್ನು ಭೀಷ್ಮ ಪ್ರವೇಶಿಸುಉತ್ತಾನೆ. ಭೀಷ್ಮನ ಪ್ರವೇಶ ಮಾತ್ರದಿಂದಲೇ ಎಲ್ಲ ಮಾಂಡಲೀಕರು ಶರಣಾಗುತ್ತಾರೆ. ಭೀಷ್ಮನ ಹೂಂಕಾರದಿಂದಲೇ ಸ್ವಯಂವರ ವಧುಗಳು ರಥವೇರುತ್ತಾರೆ. ಹಾಗೆ ಕರೆತಂದ ಅವರನ್ನು ಚಕ್ರವರ್ತಿ ಸಹೋದರನ ಕೈ ಹಿಡಿಯುವಲ್ಲಿ ಅ ಹೆಣ್ಣು ಮಕ್ಕಳ ಅಭಿಪ್ರಾಯವೇನು ತಿಳಿದುಕೊಳ್ಳುವುದಕ್ಕಾಗಿ ತನ್ನಲ್ಲಿಗೆ ಬರುವಂತೆ ಆಜ್ಞಾಪಿಸುತ್ತಾ ತನ್ನ ಆಶಯದ ಬಗ್ಗೆ ಅವರ ಅಭಿಪ್ರಾಯವನ್ನು ಕೇಳುವಲ್ಲಿಂದ ಕಥಾಭಾಗದ ಮೊದಲ ಘಟ್ಟ ಆರಂಭವಾಗುತ್ತದೆ.

ಅಂಬಿಕೆ ಅಂಬಾಲಿಕೆಯರು ಭೀಷ್ಮನ ಅಭಿಪ್ರಾಯಕ್ಕೆ ಸಮ್ಮತಿಸುತ್ತಾರೆ. ಆದರೆ ಹಿರಿಯಳಾದ ಅಂಬೆ ಭೀಷ್ಮನಲ್ಲಿ ಜಿಜ್ಞಾಸೆಗೆ ಮುಂದಾಗುತ್ತಾಳೆ. ಒಬ್ಬ ಕ್ಷತ್ರಿಯ ಗೆದ್ದು ತಂದ ವಸ್ತುವನ್ನು ಸಂಗ್ರಹಿಸಿಕೊಂಡರೆ ಅದನ್ನು ತಾನು ಅನುಭವಿಸುವ ಬದಲಾಗಿ ಮತ್ತೊಬ್ಬರಿಗೆ ಕೊಡುವುದು ಸರಿಯೇ? ಇದು ಶಾಸ್ತ್ರ ಬದ್ಧವೇ? ಮೇಲಾಗಿ ತಾನು ಜೀವಂತ ಹೆಣ್ಣು ನನ್ನನ್ನು ಗೆದ್ದು ಒಂದು ವಸ್ತುವಿನಂತೆ ಪರರಿಗೆ ಒಪ್ಪಿಸುವುದು ಶಾಸ್ತ್ರ ಸಮ್ಮತವೇ? ಸಂಪ್ರದಾಯವೇ? ಭೀಷ್ಮನ ವಿಷದೀಕರಣ ಬಹಳ ಮಾರ್ಮಿಕವಾಗಿರುತ್ತದೆ. ಈ ಸಂದರ್ಭದಲ್ಲಿ ಕೃತಿ ಮುಖ್ಯವಲ್ಲ. ಆ ಕ್ರಿಯೆಗೆ ಹೊರಡುವಾಗ ಮಾಡಿಕೊಂಡ ಸಂಕಲ್ಪ ಮುಖ್ಯ, ಯಾವುದೇ ಕೃತಿಗೆ ಅರ್ಥ ಬರುವುದು ಮನಸ್ಸಿನ ಸಂಕಲ್ಪದಿಂದ. ಮನಸ್ಸಿನ ಆಶಯ ಏನಿರುತ್ತದೆಯೋ ಅದೇ ಅರ್ಥ ಕೃತಿಯಲ್ಲಿ ಕಾಣಿಸಿಕೊಳ್ಳುತ್ತದೆ. ರೂಪ ಮತ್ತು ಆಶಯ ಅಭಿವ್ಯಕ್ತಿ ಗೊಳ್ಳುವಾಗ ಎರಡು ಹೊಂದಿಕೆಯಾಗಿ ಬರಬೇಕು. ಆಶಯಕ್ಕೆ ಅನುಸರಿಸಿ ಕ್ರಿಯೆ ಮೂಡಿಬರಬೇಕು. ಅಥವಾ ಕ್ರಿಯೆಯಲ್ಲಿ ಮನಸ್ಸಿನ ಆಶಯ ಅಭಿವ್ಯಕ್ತಗೊಳ್ಳಬೇಕು. ತನಗೇ ಬೇಕು ಅಂತ ಸಂಕಲ್ಪ ಮಾಡಿ ಯಾವನೇ ಒಬ್ಬ ರಾಜ್ಯವನ್ನೋ ಹೆಣ್ಣನ್ನೋ ಗೆದ್ದು ತರುತ್ತಾನೆ ಎಂದಾದರೆ ಆಗ ಅವನ ಸಂಕಲ್ಪದಂತೆ ಗೆದ್ದುದನ್ನು ಅವನೇ ಭೋಗಿಸಬೇಕು. ಆದರೆ ಸಂಕಲ್ಪದಲ್ಲಿ ತಮ್ಮನಿಗಾಗಿ ಅಂತ ಗೆದ್ದು ತರುವಾಗ ತಮ್ಮನಿಗಾಗಿ ಒಪ್ಪಿಸುವುದರಲ್ಲಿ ತಪ್ಪಲ್ಲ. ಭೀಷ್ಮನ ಚಿಂತನೆಗೆ ಅಂಬೆ ಆಕ್ಷೇಪಿಸುತ್ತಾಳೆ,

ತಮ್ಮನಿಗೆ ಒಪ್ಪಿಸುವುದರಲ್ಲಿ ತಪ್ಪಿಲ್ಲ. ಆದರೆ ಸಂಕಲ್ಪವೆಂಬುದು ಬಹಿರಂಗದಲ್ಲಿ ತಿಳಿಯುತ್ತಿದೆಯೇ? ಅದು ಕೇವಲ ಮನಸ್ಸಿನ ಒಳಗೆ ಇರುವಂತಹುದು. ಭೀಷ್ಮನ ಸಂಕಲ್ಪ ಉಳಿದವರಿಗೆ ಹೇಗೆ ಅರಿವಾಗಬೇಕು? ಹೌದಲ್ಲ...? ಯಾರಾದರೂ ಹೆಣ್ಣನ್ನು ಗೆಲ್ಲುವುದು ತನಗಾಗಿ? ಬೇರವರಿಗೆ ಗೆದ್ದು ಕೊಡಬಹುದೆ? ಇಲ್ಲಿ ನಿಯಮ ಹಾಗಿದೆಯಲ್ಲ? ಅಂಬೆ ಕೇಳುವಾಗ ಭೀಷ್ಮ ಸರಳವಾಗಿ ಉತ್ತರಿಸುತ್ತಾನೆ..

ಇಲ್ಲಿ ನಿಯಮ ಯಾರದ್ದು? ಆಕೆಯ ತಂದೆಯದ್ದು ಗೆದ್ದವನಿಗೆ ಹೆಣ್ಣು.. ಆದರೆ ನಿಯಮ ಭೀಷ್ಮ ನಿಗೆ ಹೇಗೆ ಬಾಧಕವಾಗಬೇಕು? ನಿಯಮ ಅದನ್ನು ಅನುಮೋದಿಸಿದವನಿಗೆ ಅದು ಬಾಧಕವಾಗಬೇಕು ಆದರೆ ಅದನ್ನು ಅತಿಕ್ರಮಿಸಿದವನಿಗೆ ಅದನ್ನು ಒಪ್ಪದವನಿಗೆ ಅದು ಬಾಧಕವೇ? ಆರಂಭದಲ್ಲೇ ಅದನ್ನು ಉಲ್ಲಂಘಿಸಿಯಾಗಿದೆಯಲ್ಲ? ಸ್ವಯಂವರವನ್ನೇ ವಿರೋಧಿಸಿ ಏರಿರಿ ಎನ್ನಯ ರಥವನ್ನು ಎಂದು ಆಜ್ಞಾಪಿಸಿಬಿಡುತ್ತಾನಲ್ಲ? ಭೀಷ್ಮ ಆಮಂತ್ರಿತ ವ್ಯಕ್ತಿಯಾಗಿ ಹೋದದ್ದಲ್ಲ.

ತರ್ಕಗಳು, ಸಂಘರ್ಷಗಳು ಪಾತ್ರಗಳ ವರ್ತನೆಗೆ ಆ ಪಾತ್ರಧಾರಿ ಕೊಡುವ ಸಮರ್ಥನೆ ಬಹಳ ಸ್ವಾರಸ್ಯದಿಂದ ಕೂಡಿರುತ್ತದೆ. ತನ್ನ ತರ್ಕ ಸುಲಭದಲ್ಲಿ ಸುಲಭದಲ್ಲಿ ಸೋಲಬಾರದು. ಅಂಬೆ ಮತ್ತೂ ಚಾಣಾಕ್ಷಳಾಗಿ ಪ್ರಶ್ನಿಸುತ್ತಾಳೆ. "ಒಂದು ಲೋಕಾಪವಾದ ಬರುವುದಿಲ್ಲವೆ? ತನಗಾಗಿ ಗೆದ್ದ ಹೆಣ್ಣನ್ನು ಪರರಿಗೆ ಒಪ್ಪಿಸಿದರೆ ಸ್ವತಃ ಘನತೆಗೆ ಕುಂದಾಗುವುದಿಲ್ಲವೇ? ಗೆದ್ದು ತಂದ ಗೌರವಕ್ಕೆ ಕುಂದಾಗುವುದಿಲ್ಲವೇ? "

ಆಗ ಭೀಷ್ಮ ಹೇಳುವ ಮಾತು ಬಹಳ ಮಾರ್ಮಿಕವಾಗಿರುತ್ತದೆ. ಒಬ್ಬ ಕ್ಷತ್ರಿಯನಾದವ ಯುದ್ದವನ್ನು ಮಾಡುವುದು ತನಗಾಗಿ ಅಲ್ಲ ಸೈನಿಕನಾದವ ಅರಸನಿಗಾಗಿ ಯುದ್ದ ಮಾಡಿ ಗೆದ್ದು ತರುತ್ತಾನೆ ವಿನಾ ಅವನಿಗಾಗಿ ಅಲ್ಲ. ಮಹಾರಾಜನಿಗಾಗಿ ಅವನು ನಿಯೋಗಿಯಾಗಿ ಗೆದ್ದು ತರುತ್ತಾನೆ. ಹೀಗೆ ತರ್ಕಗಗಳಿಗೆ ಸಮರ್ಪಕ ಉತ್ತರಗಳನ್ನು ತೋರಿಸುತ್ತಾನೆ. ಮಾತ್ರವಲ್ಲ ತನ್ನ ಸಂಕಲ್ಪಕ್ಕೆ ಅನಿವಾರ್ಯತೆಯನ್ನೂ ವಿವರಿಸುತ್ತಾನೆ. ಸತ್ಯವತೀ ದೇವಿಯನ್ನು ತಂದೆ ಶಂತನುಗಾಗಿ ತರುವಾಗ ತಾನು ಮಾಡಿದ ಶಪಥ. ಅದರಿಂದ ಸತ್ಯವೃತನಾದವನು ಭೀಷ್ಮನಾದ ಬಗೆ ವಿವರಿಸುತ್ತಾನೆ. ಸತ್ಯವತೀ ದೇವಿಯ ಮಕ್ಕಳಿಗಾಗಿ ಅರಸೊತ್ತಿಗೆಯನ್ನು ಬಿಟ್ಟುಕೊಟ್ಟು, ತಾನಿನ್ನು ಆ ಜನ್ಮ ಬ್ರಹ್ಮ ಚಾರಿಯಾಗಿರುತ್ತೇನೆ ಎಂಬ ಶಪಥ ಮಾಡಿಬಿಡುತ್ತಾನೆ. ಮುಂದೆ ತಂದೆಯ ಮಾತಿನಂತೆ ಸಿಂಹಾಸನದ ರಕ್ಷಕನಾಗುವುದು ಮಾತ್ರವಲ್ಲ ಮಲತಾಯಿ ಮಕ್ಕಳನ್ನೂ ರಕ್ಷಿಸುತ್ತಾನೆ. ಈಗ ವಿಚಿತ್ರವೀರ್ಯನಿಗಾಗಿ ಕಾಶೀ ನಂದನೆಯರನ್ನು ಗೆದ್ದು ತರುತ್ತಾನೆ. ಆಗ ಅಂಬೆ ಒಂದು ಜಾಣತನದ ಜಿಜ್ಜಾಸೆಯನ್ನು ಭೀಷ್ಮನ ಮುಂದಿಡುತ್ತಾಳೆ. ಸೂಕ್ಷ್ಮವಾಗಿ ಇದು ಅಂಬೆಯ ಪಾತ್ರ ಪೋಷಣೆ ಮಾತ್ರವಲ್ಲ ಅಂಬೆಯ ವ್ಯಕ್ತಿತ್ವವನ್ನು ಸಾಂಕೇತಿಕವಾಗಿ ಗುರುತಿಸುವಂತೆ ಮಾಡುತ್ತದೆ. ಅದರ ಪ್ರಕಾರ ಆಕೆ ವಿಚಿತ್ರವೀರ್ಯನನ್ನು ದುರ್ಬಲ ಎಂದು ಸಂದೇಹ ವ್ಯಕ್ತ ಪಡಿಸುತ್ತಾ ಅದಕ್ಕಾಗಿ ಭೀಷ್ಮ ಅವನ ಪರವಾಗಿ ಕಾಶಿ ಸ್ವಯಂವರಕ್ಕೆ ಬಂದುದಾಗಿ ಸಂಶಯ ವ್ಯಕ್ತ ಪಡಿಸುತ್ತಾಳೆ. ಅದಕ್ಕಾಗಿ ಹಲವು ಕಾರಣಗಳನ್ನು ಕೊಡುವ ಆಕೆ, ಅತನನ್ನು ಸ್ವಯಂವರ ಮಂಟಪಕ್ಕೆ ಕರೆದುಕೊಂಡು ಬಾರದೆ ಅವನ ಪರವಾಗಿ ಯುದ್ಧ ಮಾಡುವುದಕ್ಕಾಗಿ ಭೀಷ್ಮನೇ ಸ್ವತಹ ಬರುತ್ತಾನೆ. ಇಲ್ಲಿ ಆತ ದುರ್ಬಲ ಎಂದಂತಾಗುದಿಲ್ಲವೇ? ಅಂಬೆಯ ಅಂತರಂಗದ ಮೂಲ ಯೋಚನೆಯ ಹೊಲಬು ಇಲ್ಲಿ ಅರ್ಥವಾಗುತ್ತದೆ. ವಿಚಿತ್ರವೀರ್ಯನನ್ನು ದುರ್ಬಲ ಎಂದು ಸಾಧಿಸಿ ಪರೋಕ್ಷವಾಗಿ ಭೀಷ್ಮನ ಪೌರುಷದತ್ತ ವಾಲುವ ಮನಸ್ಸು. ಪಾತ್ರದ ವ್ಯಕ್ತಿತ್ವದ ಸೂಕ್ಷ್ಮವನ್ನು ಬಹಳ ಸುಂದರವಾಗಿ ಮತ್ತು ಸಾಂಕೇತಿಕವಾಗಿ ಕೋಳ್ಯೂರರು ತೋರಿಸಿ ಕೊಡುತ್ತಾರೆ. ಮುಂದೆ ಇದೇ ಯೋಚನೆ ಹೆಮ್ಮರವಾಗಿ ಬೆಳೆದು ಭೀಷ್ಮನ ಬದುಕಿಗೆ ಪರ್ಯಾಯವಾಗಿ ಸಡ್ಡು ಹೊಡೆಯುತ್ತದೆ. ಇಂತಹ ವಾದಗಳು ಪರಿಶುದ್ದ ತಾಳಮದ್ದಲೆಯ ಸಂವಾದವನ್ನು ಬಿಂಬಿಸುತ್ತದೆ. ಇಲ್ಲಿ ಪ್ರತಿಸ್ಪರ್ಧಿಯನ್ನು ಸೋಲಿಸುವ ಪ್ರವೃತ್ತಿಯಲ್ಲ ಬದಲಾಗಿ ಅಂಬೆಯ ವ್ಯಕ್ತಿತ್ವದ ಛಾಪನ್ನು ಒತ್ತುವ ಪ್ರಯತ್ನವಾಗಿರುತ್ತದೆ.

ಅಂಬೆಯ ಯೋಚನೆ ಹೇಗೇ ಇರಲಿ ಭೀಷ್ಮ ತನ್ನ ದಾರಿಯನ್ನು ಕಂಡುಕೊಂಡ ರೀತಿಯನ್ನು ಶೇಣಿಯವರು ಸರಳವಾಗಿ ವಿವರಿಸುತ್ತಾರೆ. ಒಂದು ವೇಳೆ ವಿಚಿತ್ರವೀರ್ಯನೇ ಕನ್ಯಾರ್ಥಿಯಾಗಿ ಸ್ವಯವರಕ್ಕೆ ಹೋದರೆ ಅಲ್ಲಿ ಆತ ಇದಿರಿಸಬೇಕಾದದ್ದು ಯಾರನ್ನು? ಕಾಶೀರಾಜನ ಸ್ವಯಂವರದಲ್ಲಿ ಬಂದವರೆಲ್ಲರೂ ಹಸ್ತಿನಾವತಿಯ ಸಾಮಂತ ಅರಸರುಗಳು. ಒಬ ಚಕ್ರವರ್ತಿ ಸಾಮಂತರುಗಳೊಡನೆ ಹೋರಾಡುವುದೆಂದರೆ ಚಕ್ರವರ್ತಿಯ ಘನತೆಗೆ ಹೊಂದಿಕೊಳ್ಳುವುದಿಲ್ಲ. ಮಾತ್ರವಲ್ಲ ಒಂದು ವೇಳೆ ಸಾಮಂತರ ಜತೆಗಿನ ಯುದ್ದದಲ್ಲಿ ಸೋತರೆ...ಸಿಂಹಾಸದ ಅಸ್ತಿತ್ವವೇ ಅಲುಗಾಡುದಿಲ್ಲವೇ? ಅಂಬೆಯ ಅಪ್ಪನೊಡನೇ ಹೋರಾಡುವುದಾದರೆ ಅದು ಸಹ್ಯವಾಗುತ್ತಿತ್ತೋ ಎನೋ? ಚಕ್ರವರ್ತಿ ಸ್ಪರ್ಧೆಗಾಗಿ ಹೋದರು ಅವನ ಸ್ಥಾನವೇ ದೊಡ್ಡದು. ಅವನು ಎಲ್ಲೇ ಹೋದರು ಚಕ್ರವರ್ತಿಯೇ. ಚಕ್ರ ವರ್ತಿ ಮಾಂಡಲೀಕರಿಂದ ಪೆಟ್ಟು ತಿನ್ನುವಂತಾಗಬಾರದು. ಬದಲಾಗಿ ಚಕ್ರವರ್ತಿಗೆ ಚಕ್ರವರ್ತಿಯೇ ಪ್ರತಿಸ್ಪರ್ಧಿ. ಇದಕ್ಕೆ ರಾಮಾಯಣದ ಪ್ರಸಂಗವೊಂದನ್ನು ಉದಾಹರಿಸುತ್ತಾರೆ..ಮಿಥಿಲಾನಗರಕ್ಕೆ ವಿಶ್ವಾಮಿತ್ರರ ಜತೆಗೆ ರಾಮ ಲಕ್ಷಣರು ಬರುತ್ತಾರೆ. ಅಲ್ಲಿ ಹರಧನುಸ್ಸನ್ನು ಸೀತಾಸ್ವಯಂವರದ ಪಣವಾಗಿ ಇಟ್ಟಿತ್ತು. ಸ್ಪರ್ಧಿಗಳು ಅದನ್ನು ಹದೆ ಏರಿಸಿ ತಮ್ಮ ಪರಾಕ್ರಮವನ್ನು ಶ್ರುತಪಡಿಸಬೇಕು. ಬಂದ ವಿಶ್ವಾಮಿತ್ರರು ಜನಕರಾಜನಲ್ಲಿ ಹರಧನುಸ್ಸು ಎಲ್ಲಿದೇ ಎಂದು ಕೇಳುವಾಗ ಜನಕ ಮಹಾರಾಜ ಹೇಳುತ್ತಾನೆ.." ಚಕ್ರವರ್ತಿ ಪುತ್ರರು ಬರುತ್ತಾರೆ ಎಂದಾದರೆ ಈ ಸುದ್ದಿಯನ್ನೇ ನಾನು ಪ್ರಕಟ ಪಡಿಸುತ್ತಿರಲಿಲ್ಲ.." ಯಾಕೆ? ಈ ರಾಮಲಕ್ಷ್ಮಣರು ಈ ಬಿಲ್ಲನ್ನು ಹೆದೆ ಏರಿಸುವಲ್ಲಿ ವಿಫಲರಾದರೆ ಚಕ್ರವರ್ತಿ ಪುತ್ರರು ದುರ್ಬಲರು ಎಂದಾಗುದಿಲ್ಲವೇ? ಚಕ್ರವರ್ತಿ ರಾಮ ಸೋತರೆ... ಅದು ದೇಶದ ಭದ್ರತೆಗೇ ತೊಂದರೆಯಲ್ಲವೇ?

ಹೀಗೆ ಅಂಬೆಯ ಪ್ರತೀಯೋಂದು ವಾದ ಖಂಡಿಸಲ್ಪಟ್ಟು ತನ್ನ ಬಯಕೆಗಳು ಯೋಚನೆಗಳು ಫಲಿಸುವುದಿಲ್ಲ ಎನ್ನುವಾಗ ಕೊನೆಯದಾಗಿ ಅಂಬೆ ಆವರೆಗೂ ಹೇಳದ ಮಾತನ್ನು ತನ್ನ ಅಂತರಗದ ಭಾವನೆಗಳನ್ನು ಮಾತ್ರವಲ್ಲ ಸ್ವಯಂವರದ ಮೊದಲು ನಡೆದ ಘಟನೆಯನ್ನು ಹೇಳುತ್ತಾಳೆ. ಸ್ವಯಂವರದ ಮೊದಲ ದಿನ ಸಾಲ್ವನನ್ನು ಭೇಟಿಯಾದದ್ದು.. ಅಲ್ಲಿ ಪರಸ್ಪರ ಹೃದಯವನ್ನು ಹಂಚಿಕೊಂಡದ್ದು. ಮದುವೆಯಾಗುವುದಾಗಿ ಮಾತುಕೊಟ್ಟದ್ದು... ಯಾರನ್ನು ಯಾರು ಗೆದ್ದರೂ ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಸಾಲ್ವನಿಗೆ ಮಾತುಕೊಟ್ಟದ್ದನ್ನು ಹೇಳುತ್ತಾಳೆ.

Wednesday, February 6, 2013

ರಸಿಕ ರತ್ನ ವಿಟ್ಲ ಜೋಷಿ

ಚಿತ್ರ ಕೃಪೆ: ವಿಟ್ಲ ಜೋಷಿ ಪ್ರತಿಷ್ಠಾನ ಪರ್ಕಳ


ನಮ್ಮ ಪೈವಳಿಕೆ ಶಾಲಾ ವಠಾರದಲ್ಲಿ ಶ್ರೀ ಧರ್ಮಸ್ಥಳ ಮೇಳದ ಆಟ. ಪ್ರಸಂಗ ಅಮರೇಂದ್ರ ಪಥ ವಿಜಯ. ಅದರ ಒಂದು ಹಾಸ್ಯ ಸನ್ನಿವೇಶ. ಅಡುಗೆ ಭಟ್ಟರಾಗಿ ವಿಟ್ಲ ಗೋಪಾಲಕೃಷ್ಣ ಜೋಯಿಸರ ಪ್ರವೇಶ. ತೆರೆ ಸರಿಯುತ್ತಿದ್ದಂತೆ ನಿರ್ವಿಕಲ್ಪ ಮುಖದ ಜೋಯಿಸರ ನಿಂತ ಭಂಗಿ ಕಾಣುತ್ತಿದ್ದಂತೆ ಸಭೆಯಲ್ಲಿ ಹರ್ಷೋದ್ಗಾರ. ಹಾಸ್ಯಗಾರನ ಹೆಗ್ಗಳಿಕೆ ಎಂದರೆ ಅದುವೇ. ಕೇವಲ ದರ್ಶನ ಮಾತ್ರದಿಂದಲೇ ಮುಂದಿನ ಸನ್ನಿವೇಶಕ್ಕೆ ಪ್ರೇಕ್ಷಕರನ್ನು ಮಾನಸಿಕವಾಗಿ ಸಿದ್ದಮಾಡಿ ಬಿಡುತ್ತಾನೆ. ಬೇರೆ ಯಾವುದೇ ಸನ್ನಿವೇಶವಾದರೂ ಪೂರ್ವಭಾವಿ ಅನುಭವ ಇರುವುದಿಲ್ಲ. ಸನ್ನಿವೇಶದ ಜತೆಗೆ ರಸಾನುಭವ ವ್ಯಕ್ತವಾಗುತ್ತ ಸಾಗುತ್ತದೆ. ಆದರೆ ಹಾಸ್ಯ ಇದೆಲ್ಲದರಿಂದ ಭಿನ್ನವಾಗುವುದು ಅದು ಇನ್ನಿಲ್ಲದ ನಿರೀಕ್ಷೆಯನ್ನು ಮೊದಲ ಕ್ಷಣದಲ್ಲೆ ತರಿಸಿಬಿಡುತ್ತದೆ. ಒಂದು ಸಮಾರಂಭದ ಊಟದ ಪ್ರಸಂಗ. ಎಲ್ಲ ಬ್ರಾಹ್ಹಣರು ಊಟಕ್ಕೆ ಕುಳಿತಿದ್ದಾರೆ. ರಂಗಸ್ಥಳದ ಎರಡು ಕಡೆ ಕುಳಿತವರಿಗೆ ಗೊಣಗುತ್ತ ಬಡಿಸುವ ಅಡುಗೆ ಭಟ್ಟ ಜೋಯಿಸರು ತನ್ನ ಸಿಡುಕು ಅಭಿನಯದಿಂದ ನಿಲ್ಲದ ನಗೆಯ ಅಲೆಯನ್ನು ತೇಲಿಸುತ್ತಿದ್ದರು. ಒಂದು ಪಂಕ್ತಿಗೆ ಸಾರು ಬಡಿಸುತ್ತಾ.. ಮತ್ತೊಂದು ಪಂಕ್ತಿಯಲ್ಲಿ ಕೀಟಲೆ ಮಾಡಿದ ಮಾಣಿಯನ್ನು ಬೈಯುತ್ತಾ ಸಾರು ಬಡಿಸುತ್ತಲೆ ಇದ್ದರು. ಇಕ್ಕಿಸಿಕೊಂಡ ಮಾಣಿ ..." ಓಯ್ ಭಟ್ರೆ ...ಓಯ್ ಭಟ್ರೆ ..." ಎಂದು ಎಷ್ಟು ಚೀರಿದರು ಬಡಿಸುವ ಈ ಭಟ್ಟರಿಗೆ ಪರಿವೇಯೇ ಇಲ್ಲ.. ಊಟಕ್ಕೆ ಕುಳಿತ ಮಾಣಿ ಎದ್ದು ನಿಂತು ಭಟ್ಟರನ್ನು ಹಿಡಿದು ಅಲುಗಾಡಿಸಿದರೂ ಊಹುಂ ... ನಮ್ಮ ಜೋಶಿಯವರಲ್ಲಿ ಆವಾಹನೆಯಾದ ಅಡುಗೆ ಭಟ್ಟ ಒಂದು ಕಡೆ ನಿಂತು ವಾಲಿದಾ ಭಂಗಿ ಅತ್ತನೋಡುತ್ತ ಇತ್ತ ಬಡಿಸುತ್ತಲೇ ಇತ್ತು...ಸಾರು ಹೊಳೆಯಾಗಿ ಹರಿಯುತ್ತಿದ್ದರೆ ನೆರೆದ ಪ್ರೇಕ್ಷಕ ನಗು ತಡೆಯದೆ ಕುಳಿ ಈಸಿಚೆಯರ್ ನಿಂದ ನೆಗೆದು ಬೀಳುತ್ತಿದ್ದ..!!

ಇದು ವಿಟ್ಲದ ಜೋಯಿಸರ ನವಿರಾದ ಹಾಸ್ಯದ ಒಂದು ಘಟನೆ. ಅಡುಗೆಯವ ತಾನುಂಡು ಉಳಿದವರಿಗೆ ಬಡಿಸುವಂತಾಗಬಾರದು.. ಅರ್ಥಾತ್ ಹಾಸ್ಯಗಾರನೂ ಹಾಗೆ.. ತನ್ನ ಹಾಸ್ಯಕ್ಕೆ ತಾನು ನಗಬಾರದು. ತನ್ನ ಹಾಸ್ಯಕ್ಕೆ ಸ್ವತಃ ಅವನು ನಕ್ಕರೆ ಅಡುಗೆಯವ ಎಲ್ಲರಿಗಿಂತ ಮೊದಲು ತಾನು ಊಟ ಮಾಡಿ ತೇಗಿದ ಹಾಗೆ ಎಂದೇ ಅರ್ಥ. ವಿಟ್ಲ ಜೋಷಿಯವರ ಹಾಸ್ಯ ನೋಡುವಾಗ ಈ ಭಾವನೆ ಮೊದಲಿಗೆ ಬರುತ್ತದೆ. ಅವರ ಹಾಸ್ಯ ಪ್ರಸಂಗಕ್ಕೆ ಅವರು ನಕ್ಕಿದ್ದೇ ಇಲ್ಲ... ಬದಲಾಗಿ ಬಿದ್ದು ಬಿದ್ದು ನಗುವ ಪ್ರೇಕ್ಷಕನನ್ನು ಕಂಡು ಮತ್ತೂ ಅವೇಶ ಭರಿತರಾಗಿ ಇವರೊಳಗಿನ ಹಾಸ್ಯಗಾರ ವಿಜ್ರಂಭಿಸುತ್ತಿದ್ದ. ಹಾಸ್ಯಕ್ಕಾಗಿ ಯಾವುದೇ ಸರ್ಕಸ್ ಇಲ್ಲದ ನೇರ ಮತ್ತು ನವಿರಾದ ಹಾಸ್ಯ. ಹಲವು ಸಲ ನಮಗೆ ಮಾರ್ಮಿಕವಾದ ಚಿಂತನೆಯ ಕಿಡಿಯನ್ನು ಹಚ್ಚುತ್ತಿದ್ದರೆ...ಕೆಲವುಸಲ ಇವರ ಹಾಸ್ಯ ತತ್ಸಮಯಕ್ಕೆ ಅರ್ಥವಾಗದೆ ತುಸು ಬಿಟ್ಟು ಅರ್ಥವಾಗಿ ಬಿದ್ದು ಬಿದ್ದು ನಗುವ ಹಾಗೆ ಆಗುತ್ತಿತ್ತು. ಒಂದು ರೀತಿಯಲ್ಲಿ ನಮ್ಮ ಬುದ್ದಿಮತ್ತೆಯನ್ನು ಒರೆಗೆ ಹಚ್ಚುತ್ತಾ ಯಾರು ಯಾವುದಕ್ಕೆ ನಗುತ್ತಿದ್ದಾರೆ ಎಂಬುದೇ ಸೋಜಿಗವಾಗುತ್ತಿತ್ತು. ಒಬ್ಬನನ್ನು ಅಳುವಂತೆ ಮಾಡುವುದು ಸುಲಭ ಆದರೆ ನಗುವಂತೆ ಮಾಡುವುದು ಬಹಳ ಕಷ್ಟ. ಅಭಿನಯ ಕಲೆ ಎಂದರೆ ಒಂದು ರೀತಿಯ ವಿಪರ್ಯಾಸದ ಅನುಭವ. ಪೆಟ್ಟು ಕೊಡುವ ಅಭಿನಯಕ್ಕಿಂತಲೂ ಪೆಟ್ಟು ತಿನ್ನುವ ಅಭಿನಯ ಬಹಳ ಕಷ್ಟ. ಹೊರ ಪ್ರಪಂಚಕ್ಕೆ ಪೆಟ್ಟು ಕೊಡುವವ ವೀರನಂತೆ ವಿಜ್ರಂಭಿಸಬಹುದು ಆದರೆ ನೈಜ ಅಭಿನಯ ವಿಜ್ರಂಭಿಸುವುದು ಪೆಟ್ಟು ತಿನ್ನಿವವನ ಅಭಿನಯದಿಂದ. ಅದೇ ರೀತಿ ಹಾಸ್ಯಗಾರನ ಇರುವಿಕೆ. ಒಂದೆರಡು ಸನ್ನಿವೇಶವಾದರೂ ಬೇರೆ ಪಾತ್ರಗಳು ಅತ್ಯಂತ ಗಾಢವಾದ ಪರಿಣಾಮ ಬೀರಬೇಕಾದರೆ ಇವೇ ಜೀವಾಳವಾಗಿಬಿಡುತ್ತದೆ. ಪಾಯಸದಲ್ಲಿನ ಗೋಡಂಬಿ ಎದ್ದು ಕಂಡ ಹಾಗೆ ಹಾಸ್ಯ.

ನನ್ನ ಬಾಲ್ಯದಲ್ಲಿ ಧರ್ಮಸ್ಥಳದ ಮೇಳದ ಆಟಗಳು ಕಂಡದ್ದು ಹಲವು. ಇದರಲ್ಲಿ ಆಗ ವಿಟ್ಲ ಜೋಷಿಯವರ ತಾರುಣ್ಯದ ಹುಮ್ಮಸ್ಸಿನ ಪಾತ್ರಗಳನ್ನು ಹಾಸ್ಯವನ್ನು ಕಂಡದ್ದು ಕೆಲವೇ.. " ಲಾಲೀಸಬೇಕು ಜೀಯಾ...." ಎಂಬ ಪದಕ್ಕೆ ಆಗಿನ ಹಾಸ್ಯದ ಕುಣಿತ.. ಮರೆಯುವುದುಂಟೇ? ಯಕ್ಷಗಾನದಲ್ಲಿ ಹಾಸ್ಯದ ಕುಣಿತಕ್ಕೆ ಒಂದು ಪರಂಪರೆಯಿದೆ. ಇವರ ಹಲವು ರೀತಿಯ ಹಾಸ್ಯದ ಕುಣಿತಗಳು ಪರಿಶುದ್ದ ಯಕ್ಷಗಾನದ ಶೈಲಿಯ ಅಚ್ಜುಗಟ್ಟುತನವನ್ನು ಬಿಂಬಿಸುತ್ತಿದ್ದವು. ಪ್ರತಿಯೊಂದರಲ್ಲೂ ವಿಶಿಷ್ಟವಾದ ನರ್ತನವೇ ರಸಿಕತೆಗೆ ಹಿಡಿದ ಕನ್ನಡಿಯಂತೆ ಇರುತ್ತಿದ್ದವು. ಎಲ್ಲ ಶಿಸ್ತುಬದ್ದ ಕುಟಿತಗಳು. ಹಾಸ್ಯಗಾರ ತಾಳ ತಪ್ಪಿದಂತೆ ತಾಳದ ಪರಿಜ್ಞಾನವೇ ಇಲ್ಲದಂತೆ ಕುಣಿದರೂ ತಾಳಬದ್ದವಾಗಿರಬೇಕು. ಸಮ-ವಿಷಮದ ಮಿಶ್ರಣದ ಕುಣಿತ. ಎಲ್ಲ ತಾಳ ತಪ್ಪಿತು.. ಹೆಜ್ಜೆ ಹಿಂದು ಮುಂದಾಯಿತು ಎಂದು ದಿಗ್ಭ್ರಮೆಯನ್ನು ತರುವಾಗ ಎಲ್ಲವು ಒಂದು ಲಯದಲ್ಲಿ ಇದೆ ಎಂಬ ಭಾವನೆಯನ್ನು ತರುತ್ತದೆ. ಹಾಸ್ಯ ಕೇವಲ ಸಂಭಾಷಣೆಗೆ ಸೀಮಿತವಲ್ಲ. ಸಮಯ ಪ್ರಜ್ಞೆಯೊಂದಿಗೆ ಪರಂಪರೆಯ ಹಾಸ್ಯಕುಣಿತಗಳನ್ನು ಕಾಣುವಾಗಲೇ ಯಕ್ಷಗಾನದ ಹಾಸ್ಯದ ವಿಭಿನ್ನತೆ ಅರಿವಾಗುತ್ತದೆ. ದೇವಲೋಕದ ದ್ವಾರಪಾಲಕನಾಗಲೀ ರಾಕ್ಷಸ ದೂತನಾಗಲೀ ಕುಣಿತಗಳಿಂದಲೂ ಅದರದ್ದೇ ಆದ ವಿಭಿನ್ನತೆಗೆ ಹೆಸರಾಗಿದ್ದವು. ಆದರೆ ಇಂದು ಈ ಹಾಸ್ಯದ ಕುಣಿತಗಳು ಕೇವಲ ಕಾಟಾಚರಕ್ಕೆ ಎಂಬಂತೆ ಭಾಸವಾಗುತ್ತದೆ. ನಗಿಸುವುದಕ್ಕಾಗಿ ಮಾಡುವ ಸರ್ಕಸ್ ಗೆ ಪರಿಮಿತಿಯೇ ಇಲ್ಲ. ಡಿಸ್ಕೋ ಬ್ರೇಕ್ ಡಾನ್ಸ್ ಇನ್ನು ಗಂಗಂ ಸ್ಟೈಲ್ ಎಲ್ಲ ಬಳಕೆಗೆ ಬರುತ್ತದೆ. ಯಕ್ಷಗಾನದ ಪರಂಪರೆಯ ಸಾಂಪ್ರದಾಯಿಕ ಹಾಸ್ಯವೇ ನಗೆಪಾಟಲು ಎಂಬಂತಾಗಿದೆ. ಹಾಸ್ಯದ ಕುಣಿತ ಕರುಣಾರಸವನ್ನು ಬಿಂಬಿಸಿ ಒಟ್ಟು ಸನ್ನಿವೇಶವೇ ಶೋಚನೀಯ ಎಂಬಂತಾಗುತ್ತದೆ. ರಂಗದ ಮೇಲೆ ಹಾಸ್ಯದ ಅಕ್ರಮಣವನ್ನೂ ಆ ಮೂಲಕ ಆಕ್ರಂದನವನ್ನು ಕಾಣುವಾಗ ಜೋಷಿಯವರ ಪ್ರಭುದ್ದ ಹಾಸ್ಯ ಮುಂದಿನ ಪೀಳಿಗೆಗೆ ಕೇವಲ ಕಥೆಯಾಗಿಬಿಡುತ್ತದೆಯೇ ಅನಿಸುತ್ತದೆ.

ಸಮುದ್ರ ಮಥನದ ಮೂಕಾಸುರ ಬಹುಶಃ ನಾನು ಕಂಡ ಜೋಯಿಸರ ಮಾಸ್ಟರ್ ಪೀಸ್ ಗಳಲ್ಲಿ ಒಂದು. ಬಹುಶಃ ಇವರಿಗಾಗಿಯೆ ಸೃಷ್ಟಿಯಾದ ಪಾತ್ರವೇ ಇದು ಎಂದು ನನ್ನ ಅನಿಸಿಕೆ. ಅಥವಾ ಆ ಪಾತ್ರ ನಿರ್ವಹಣೆಯಲ್ಲಿ ಇವರು ಆವಿಷ್ಕರಿಸಿದ ವಿಧಾನಗಳು ಈ ಪಾತ್ರ ಮೂಲಕಥೆಗೆ ಬಿಡದಂತಹ ಸಂಬಂಧವನ್ನು ಬೆಸೆದಹಾಗಿದೆ. ಇಂದು ಯಾರು ಇ ಪಾತ್ರ ನಿರ್ವಹಿಸಿದರೂ ಆ ಆವಿಷ್ಕಾರದ ಪೊರೆ ಕಳಚಿ ಬರುವುದು ಸಾಧ್ಯವೇ ಇಲ್ಲದಷ್ಟು ಜೋಯಿಸರ ಮೂಕಾಸುರ ತನ್ನ ನೆರಳನ್ನು ಪಸರಿಸಿಯಾಗಿದೆ. ಅದರ ಒಂದೊಂದು ಸನ್ನಿವೇಶಗಳು ಈಗಲೂ ಕಣ್ಣಿಗೆ ಕಟ್ಟಿದಂತಿರುತ್ತದೆ. ಎಲ್ಲವನ್ನು ಕಳೆದುಕೊಂಡು ದೂರ್ವಾಸ ಶಾಪಗ್ರಸ್ಥನಾದ ದೇವೆಂದ್ರ ಬಂದಾಗ ಇವರು ನಡೆಸಿಕೊಳ್ಳುವ ರೀತಿ.. ...ಪದೇ ಪದೇ.. " ಗಾಳಿ ಹಾಕು...ಗಾಳಿ ಹಾಕು " ಎಂದು ದೇವೆಂದ್ರನಿಂದ ಚಾಕಿರಿ ಮಾಡಿಸಿಕೊಳ್ಳುವದ್ದು....ಮೂಕಾಸುರ ಒಂದು ಅದ್ಭುತ ಪಾತ್ರ.

ಅದರಂತೆ ಅವರಿಗೆ ಅತ್ಯಂತ ಜನಪ್ರಿಯತೆಯನ್ನು ತಂದುಕೊಟ್ಟದ್ದು.. ಶೇಣಿಯವರ ಬಪ್ಪಬ್ಯಾರಿ ಜತೆಗಿನ "ಉಸ್ಮಾನ್:" ಪಾತ್ರ. ಉಸ್ಮಾನ್ ನ ಆ ಮುಗ್ಧತೆ, ಆ ಶರೀರ ಭಾಷೇ ಆ ಸಂಭಾಷಣೇ ಛ್ಹೇ.., ಅದನ್ನು ಶಬ್ದಗಳಲ್ಲಿ ವರ್ಣಿಸುವುದು ಖಂಡಿತ ನನ್ನ ಸಾಮರ್ಥ್ಯಕ್ಕೆ ಮೀರಿ ನಿಂತ ವಿಷಯ. ಹಾಗೇನೇ ಬಹಳ ಸರಳವಾಗಿ ರಂಗಸ್ಥಳದಲ್ಲಿ ಕುಲುಕಾಡುತ್ತ ಕುಣಿವ ಚಂದ್ರಾವಳಿ ಪ್ರಸಂಗದ ಅತ್ತೇ ಪಾತ್ರ.ಇಂದು ಈ ಪಾತ್ರವನ್ನು ಕೆಟ್ಟದಾಗಿ ಚಿತ್ರೀಕರಿಸುವುದನ್ನು ಕಾಣುವಾಗ ಬಹಳ ಸರಳವಾಗಿ ರಂಗಸ್ಥಳ ತುಂಬಿಕೊಳ್ಳುತ್ತಿದ್ದ ಜೋಯಿಸರ ಅತ್ತೆ ಪದೇ ಪದೇ ನೆನಪಿಗೆ ಬರುತ್ತದೆ.

ಯಕ್ಷಾಗನದ ಹಾಸ್ಯಪಾತ್ರಗಳಿಗೆ ತಾರಾಮೌಲ್ಯವನ್ನು ಒದಗಿಸಿಕೊಟ್ಟ ಇವರ ಪಾತ್ರನಿರ್ವಹಣೆ ಹಾಸ್ಯವೆಂದರೆ ಜೋಯಿಸರದ್ದು ಎನ್ನುವಷ್ಟರ ಮಟ್ಟಿಗೆ ಆಪ್ಯಾಯಮಾನವಾಗಿತ್ತು. ಇಂದು ಹತ್ತು ಹಲವು ರೂಪದಲ್ಲಿ ಹಾಸ್ಯ ಪಾತ್ರಗಳು ಹೊಸಬಗೆಯಲ್ಲಿ ಅನಾವರಣಗೊಂಡಂತೆ ಕಂಡರೂ ಜೋಯಿಸರ ಅನುಕರಣೆಯನ್ನೇ ಗುರುತಿಸುವಂತಾಗುತ್ತದೆ. ಹಾಸ್ಯಗಾರ ತನ್ನ ಹಾಸ್ಯಕ್ಕೆ ಸ್ವತಃ ತಾನೇ ಮೊದಲ ಪ್ರೇಕ್ಷಕನಾಗಬಾರದು. ಹಾಸ್ಯ ರಸಾಭಿವ್ಯಕ್ತಿ ನವರಸಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಬಿಂಬಿಸಲ್ಪಡುವ ರಸ. ಹಲವು ಸಲ ಹಾಸ್ಯ ಅದೆಷ್ಟು ನಿಗೂಢವಾಗಿರುತ್ತದೆ ಎಂದರೆ ಅದು ಮನವರಿಕೆಯಾಗುವವರೆಗೂ ಅದು ಹಾಸ್ಯದ ಅನುಭವವೇ ಆಗದೇ ಕೊನೆಗೆ ಅರಿವಾದಾಗ ತಮ್ಮ ನಿಯಂತ್ರಣವನ್ನು ಕಳೆದುಕೊಳ್ಳುವಷ್ಟರ ಮಟ್ಟಿಗೆ ಪ್ರಚೋದನೆಯನ್ನು ಉಂಟು ಮಾಡುತ್ತದೆ. ಹಾಸ್ಯ ಬಹುಮುಖೀ ರಸ. ಇದರಲ್ಲಿ ವಿಡಂಬನೆ ಇರಬಹುದು, ವಿನೋದವಿರಬಹುದು, ಲಾಸ್ಯವಿರಬಹುದು,ಲೇವಡಿಯಿರಬಹುದು..ಎಲ್ಲದಕ್ಕೂ ಹಾಸ್ಯ ಕೆಲವೊಮ್ಮೆ ಉಪಾಧಿಯಾಗಿಬಿಡುತ್ತದೆ. ಹಾಸ್ಯದ ಮುಖಗಳನ್ನು ಅರಿತರೆ ಮಾತ್ರ ವಿದೂಷಕನಾಗಬಹುದು. ಆದರೂ ಇದು ಪರಿಪೂರ್ಣ ಎಂದು ಅನಿಸುವುದಿಲ್ಲ.ಯಕ್ಷಗಾನದಲ್ಲಿ ಹಾಸ್ಯಗಾರ ಎಂದರೆ ಅದರ ಸರ್ವ ಅಂಗಗಳ ಪರಿಜ್ಞಾನ ಹೊಂದಿರಬೇಕು. ಮಾತುಗಾರಿಕೆಯಾಗಲಿ ಕುಣಿತವಾಗಲೀ ವೇಶಗಾರಿಕೆಯಾಗಲಿ ಹಿಮ್ಮೇಳದ ವಿವಿಧ ಮಜಲುಗಳಾಗಲಿ ಎಲ್ಲದರಲ್ಲೂ ಪ್ರಾವಿಣ್ಯತೆಯನ್ನು ಗಳಿಸಿರಬೇಕು. ಸಂದರ್ಭಾನುಸಾರ ಯಾವ ಅಂಗದಲ್ಲೂ ತನ್ನ ಪ್ರತಿಭೆಯನ್ನು ಒರೆಗೆ ಹಚ್ಚುವ ತಾಕತ್ತನ್ನು ತೋರಿಸಬೇಕು. ಆದರೆ ಜೋಷಿಯವರು ಇದರಲ್ಲಿ ಪರಿಪೂರ್ಣತೆಯನ್ನು ಗಳಿಸಿದವರು. ಅವರ ಉಪಸ್ಥಿತಿ ರಂಗಸ್ಥಳದಲ್ಲಿ ಎಲ್ಲದನ್ನೂ ತುಂಬಿಕೊಡುತ್ತಿತ್ತು. ಹಾಸ್ಯಕ್ಕೆ ಅನ್ವರ್ಥರಾಗಿ ಬೆಳೆದು ನಿಂತವರು. ನಾಟ್ಯ ಅಭಿನಯ ಸಂಭಾಷಣೆ ಮತ್ತು ಸಮಯ ಪ್ರಜ್ಞೆ ಈ ಎಲ್ಲದರಲ್ಲೂ ಪ್ರೇಕ್ಷಕರ ರಸಿಕತನವನ್ನು ಒರೆಗೆ ಹಚ್ಚಿ ನಿಜ ಅರ್ಥದಲ್ಲಿ " ರಸಿಕರತ್ನ" ರಾದವರು.

ಇತ್ತೀಚೆಗಷ್ಟೇ ಈ ಮಹಾನ್ ವಿದೂಷಕನ ಸ್ಮರಣೆಯ ಕರೆಯೋಲೆಯನ್ನು ಕಂಡಾಗ ಅದರಲ್ಲಿ ಕಂಡ ಒಂದೆರಡು ಭಾವ ಚಿತ್ರಗಳನ್ನು ಕಂಡಾಗ ಅಂದಿನ ಹಾಸ್ಯದ ಸಿಂಚನದ ಅನುಭವವನ್ನು ಕಂಡಹಾಗಾಯಿತು. ರಂಗದಲ್ಲಿ ಏನು ಅಲ್ಲದೆ ಎಲ್ಲವೂ ಆಗಿರುವ ಒಬ್ಬ ಹಾಸ್ಯ ಚಕ್ರವರ್ತಿಯ ಸಂಸ್ಮರಣೆ ಮಾತ್ರವಲ್ಲ ಆ ದಿವ್ಯಸ್ಮರಣೆಯ ಗ್ರಂಥರೂಪ ವಾಸ್ತವದಲ್ಲಿ ಸಾಧ್ಯವಾಗುತದೆ ಎಂದಾದರೆ ಯಕ್ಷಗಾನದ ವಿವಿಧ ಮುಖಗಳಿಗೆ ಇದು ಸಾಕ್ಷಿಯಾದಂತೆ.

Saturday, January 26, 2013

ತಾಳಮದ್ದಲೆಯ ತಾಳ

ತಾಳ-ಮದ್ದಲೆ ಎಂಬುದು ಅದು ಒಂದೇ ಶಬ್ದ ಬೇರೆ ಬೇರೆ ಶಬ್ದವಾಗಿ ಪರಿಗಣಿಸಬಾರದು. ಮೊದಲೆಲ್ಲ ದೇವಸ್ಥಾನದ ಪೂಜಾಸಮಯದಲ್ಲಿ ಇತರ ಮಂಗಳ ವಾದ್ಯ ಮೊಳಗಿಸುವಂತೆ ಜಾಗಟೆ ಮತ್ತು ಮದ್ದಲೆಯನ್ನು ಚೆಂಡೆ ನುಡಿಸುತ್ತಿದ್ದರು. ಪಂಚ ವಾದ್ಯದಲ್ಲಿ ಈ ಎಲ್ಲವೂ ಅಲ್ಲಲ್ಲಿ ಬಳಕೆಯಲ್ಲಿದೆ. ಹಾಗೆ ಅದರ ವಿವಿಧ ರೂಪಗಳು ಹಲವೆಡೆಯಲ್ಲಿ ಸಂಪ್ರದಾಯದಲ್ಲಿ ಇದ್ದಿರಬಹುದು. ಹಾಗೆ ಮದ್ದಲೆ ಜಾಗಟೆ ನುಡಿಸುವಾಗ ಸ್ತುತಿ ಪದಗಳು ಹೇಳುವ ಕ್ರಮ ಇದ್ದು.. ಆನಂತರ ಪುರಾಣದ ಕೆಲವು ಸಂದರ್ಭಗಳನ್ನು ಅದರಲ್ಲಿ ಪದ್ಯರೂಪದಲ್ಲಿ ಹಾಡುವ ಸಂಪ್ರದಾಯ ಬಳಕೆಗೆ ಬಂದಿರಬಹುದು. ಆನಂತರ ಈ ತಾಳಮದ್ದಲೆ ಜತೆಗೆ ಅರ್ಥಗಾರಿಕೆ ಸಂದರ್ಭಾನುಸಾರ ಬಳಕೆಗೆ ಬಂದು ಅದು ಪೂರ್ಣ ರೂಪದಲ್ಲಿ ಕಾರ್ಯಕ್ರಮವಾಗಿ ಮಾರ್ಪಟ್ಟಿತ್ತು. ಮೊದಲೆಲ್ಲ ತಾಳಮದ್ದಲೆಯಲ್ಲಿ ಚೆಂಡೆ ಬಳಕೆಯಲ್ಲಿ ಇರಲಿಲ್ಲ. ಆನಂತರ ಕಾರ್ಯಕ್ರಮ ಮಾಡುವವರ ಮರ್ಜಿಗೆ ತಕ್ಕಂತೆ ಚೆಂಡೆ ಬಳಕೆಗೆ ಬಂತು. ಅದೂ ಹಲವು ಸಲ ಇಬ್ಬರು ಚೆಂಡೆ ಬಾರಿಸುತ್ತಿದ್ದರು ಎಂದು ಕೇಳಿ ಬಲ್ಲೆ. ಕ್ರಮೇಣ ಅರ್ಥಗಾರಿಕೆಯಲ್ಲಿ ಹಿರಿಯ ವಿದ್ವಾಂಸರ ಆಗಮನದಿಂದ ತಾಳಮದ್ದಲೆ ಎಂಬುದು ಒಂದು ಪ್ರೌಢ ಸುಧಾರಿತ ಕಲೆಯಾಗಿ ರಂಜಿಸತೊಡಗಿತು. ಯಕ್ಷಗಾನ ಬಯಲಾಟಕ್ಕಿಂತಲೂ ಸುಲಭವಾಗಿ ಮತ್ತು ಸರಳವಾಗಿ ಮತ್ತು ಅಷ್ಟೇ ಪ್ರಭಾವಯುತವಾಗಿ ತಾಳ ಮದ್ದಲೆ ಜನಪ್ರಿಯವಾಯಿತು.


"ಆಶು ಕವಿತ್ವ" ಈ ಸ್ವಭಾವಲಕ್ಷಣವನ್ನು ಬಹಳಷ್ಟು ಹೊಂದಿಕೊಂಡ ಕಲೆ ಎಂದರೆ ಯಕ್ಷಗಾನ. ಯಕ್ಷಗಾನದಲ್ಲಿ ಎದ್ದು ಕಾಣುವ ವೈಶಿಷ್ಟ್ಯಗಳಲ್ಲಿ ಇದೂ ಒಂದು. ಇಲ್ಲಿ ಒಟ್ಟು ವಿಷಯದ ಮುಕ್ಕಾಲಕ್ಕಿಂತ ಹೆಚ್ಚು ಭಾಗ ತತ್ಸಮಯದಲ್ಲೇ ಸೃಷ್ಟಿಯಾಗುತ್ತದೆ.ವೇದಿಕೆಯಲ್ಲೇ ಸೃಷ್ಟಿಯಾಗುವ ಅದ್ಭುತ ನಾಟಕ ರೂಪವಿದು. ಅದಕ್ಕೆ ಚೌಕಟ್ಟು ಪರಂಪರೆಯಿಂದ ಬಂದಿರುತ್ತದೆ. ಇದಕ್ಕೆ ಚಿತ್ರಕಥೆಯನ್ನು ಸಿದ್ಧಪಡಿಸಿ ಅ ಮೂಲಕ ಪ್ರದರ್ಶಿಸುವ ಹಾಗಿಲ್ಲ. ಒಂದು ವೇಳೆ ಪ್ರದರ್ಶಿಸಿದರೂ ಅದು ಆ ಚಿತ್ರಕಥೆಯ ಜತೆಗಿನ ಸಂಬಂಧವನ್ನು ಉಳಿಸಿಕೊಳ್ಳದೆ ತನ್ನ ಸಹಜತೆಯನ್ನೇ ಬಿಂಬಿಸುತ್ತದೆ. ವಿಬ್ಭಿನ್ನ ದೃಷ್ಟಿಕೋನಗಳು ಒಂದು ತಂತುವಿನಲ್ಲಿ ಬೆಸೆದಿರುತ್ತವೆ. ದೊಡ್ಡ ರಥವನ್ನು ಒಂದು ಬಳ್ಳಿಯ ಮೂಲಕ ಎಳೆವಂತೆ ಆ ತಂತುವೇ ಪ್ರಾಧಾನವಾಗಿ ಇಲ್ಲಿ ವಿಭಿನ್ನ ಮನೋಭಾವಗಳು ಏಕ ಭಾವವನ್ನು ಪ್ರದರ್ಶಿಸುತ್ತವೆ. ಸೂತ್ರದಿಂದ ಪ್ರತಿಯೊಂದು ಆಧರಿಸಿ ನಿಯಂತ್ರಿತವಾಗಿದ್ದರೂ , ಪ್ರತಿಯೊಂದೂ ಸ್ವತಂತ್ರವಾಗಿ ವರ್ತಿಸುತ್ತದೆ. ಆದಕಾರಣ ಸಹಜವೆಂಬಂತೆ ಇಲ್ಲಿ ಸ್ಪರ್ಧಾತ್ಮಕವಾದ ಪ್ರವೃತ್ತಿಯೂ ಧಾರಾಳವಾಗಿ ಕಂಡುಬರುತ್ತದೆ. ಹಲವು ಸಲ ಇದೇ ಇದರ ಆಕರ್ಷಣೆಯೋ ಎಂದು ಯೋಚಿಸುವ ಹಾಗಾಗುತ್ತದೆ.

ಯಕ್ಷಗಾನ ಬಯಲಾಟಗಳಲ್ಲಿ ಆದಂತೆ ತಾಳಮದ್ದಲೆಯಲ್ಲೂ ಹಲವಾರು ಬದಲಾವಣೆಗಳು ಪ್ರಯೋಗಗಳು ಬಳಕೆಗೆ ಬಂದಿವೆ. ಮೊದಲೆಲ್ಲ ರಾತ್ರಿಯ ಪೂರ್ಣಾವಧಿಯ ತಾಳಮದ್ದಲೆ ಸಂಘಟಿಸಲ್ಪಡುತ್ತಿದ್ದರೆ ಈಗ ಬಹಳಷ್ಟು ಕಡಿಮೆಯಾಗಿದೆ. ಗಾನ - ಸಂವಾದ ರಾತ್ರಿಯಿಂದ ಬೆಳಗಿನ ತನಕ ಕುಳಿತು ಕೇಳುವಷ್ಟು ತಾಳ್ಮೆಯ ಮನೋಭಾವ ಕಡಿಮೆಯಾಗುತ್ತಿರುವುದೇ ಇದಕ್ಕೆ ಕಾರಣವಾಗಿರಬಹುದು. ಅಂದಿನ ಕಾಲದಲ್ಲಿ ಮನೆಯಲ್ಲಿ ಅದೂ ಖಾಸಗಿಯಾಗಿ ರಾತ್ರಿ ಇಡೀ ತಾಳಮದ್ದಲೆ ಆಗುತ್ತಿದ್ದದ್ದು, ಅದನ್ನು ಶುಭ ಸಮಾರಂಭದ ಜತೆಗೆ ಮನೆ ಮಂದಿ ಕುಳಿತು ಆಲಿಸುತ್ತಿದ್ದ ತಾಳಮದ್ದಲೆ ಇಂದು ಅಭಿರುಚಿಗೆ ತಕ್ಕಂತೆ ಬದಲಾಗಿದೆ ಎನ್ನಬಹುದು. ಕೇವಲ ಹತ್ತಾರು ಜನವಿದ್ದು ಪೆಟ್ರೋ ಮೇಕ್ಸ್ ಬೆಳಕಿನಲ್ಲಿ ಬೆಳಗಿನವರೆಗೂ ನಡೆದ ತಾಳಮದ್ದಲೆ ಕಂಡ ನೆನಪಿದೆ.

ಆದರೂ ಯಕ್ಷಗಾನದಲ್ಲಿ ಆದಷ್ಟು ಅವಿಷ್ಕಾರಗಳು ನವ್ಯ ನಾಗರೀಕತೆಯ ಪ್ರಭಾವ ತಾಳಮದ್ದಲೆಯಲ್ಲಿ ಅಗಲಿಲ್ಲ. ಯಕ್ಷಗಾನದ ಶ್ರಿಂಗಾರ ದೃಶ್ಯಗಳು ಸಿನಿಮಾದ ಯುಗಳ ಗೀತೆಯ ದೃಶ್ಯದಂತೆ ಪ್ರದರ್ಶಿತವಾಗುತ್ತಿದೆ. ಗಂಡು ಹೆಣ್ಣು ವೇಷಗಳು ಸಿನಿಮಾ ಭಿತ್ತಿಪತ್ರದ ಭಂಗಿಯನ್ನು ತೋರಿಸುವಂತಹ ಅವಿಷ್ಕಾರಗಳಾಗಿವೆ. ಇದು ಸರಿಯೋ ತಪ್ಪೋ ಅದು ಅಭಿರುಚಿಗೆ ಬಿಟ್ಟ ವಿಚಾರ. ಯಕ್ಷಗಾನದಲ್ಲಿ ಅನಿವಾರ್ಯ ಸನ್ನಿವೇಶದಲ್ಲಿ ಮಾತ್ರವೇ ಅಂಗಾಂಗ ಸ್ಪರ್ಷ ಅಂತ ಹೇಳುತ್ತಿದ್ದರು.. ಅಂದರೆ ಇಲ್ಲಿ ಬಹಳಷ್ಟು ಸಂಕೇತಮಾತ್ರ. ಯುದ್ದ ಸನ್ನಿವೇಶಗಳು ಸಿನಿಮಾ ಶೈಲಿಯ ಪ್ರಭಾವಕ್ಕೆ ಒಳಗಾಗಿ ಯಕ್ಷಗಾನದ ಸಾಂಕೇತಿಕವು ಮಾಯವಾಗಿ ನೈಜತೆಯತ್ತ ಹೊರಳಿ ಕಲಾವಿದರೂ ಪರಸ್ಪರ ಹೊಡೆದಾಡುವ ಪರಿಸ್ಥಿತಿ ಬಂದರೂ ಅಚ್ಚರಿಪಡಬೇಕಿಲ್ಲ. ತಾಳಮದ್ದಲೆಯಲ್ಲೂ ಸಂವಾದ ಚರ್ಚೆ ವಿವಾದವಾಗಿ ಜಗಳವಾಗುವುದು ಇಲ್ಲದಿಲ್ಲ. ಇದಕ್ಕೆ ಇಂದಿನ ಅಭಿರುಚಿಯೇ ಸ್ವಲ್ಪ ಮಟ್ಟಿಗೆ ಕಾರಣವಾಗುತ್ತದೆ. ಆದರೆ ಇದು ತಾಳಮದ್ದಲೆಯಲ್ಲಿ ಹೊಸತು ಅವಿಷ್ಕಾರ ಎಂದು ಹೇಳುವ ಹಾಗಿಲ್ಲ. ವೈಯಕ್ತಿಕ ಪ್ರತಿಷ್ಠೆ ಹಿತಾಸಕ್ತಿಗಳು ಕಲೆಯಿಂದ ಅತೀತವಾದಾಗ ದ್ವೇಷ ವೈಷಮ್ಯ ವಿವಾದಗಳಿಗೆ ಕಾರಣವಾಗಿ ಹಲವು ಸಲ ಪ್ರಭಾವವನ್ನು ಬೀರುತ್ತವೆ.

ತಾಳಮದ್ದಲೆಯ ಕಲಾವಿದರನ್ನು ಸೇರಿಸಿ ಪ್ರಸಂಗ ನಿರ್ಣಯಿಸುವಾಗಲೇ ನಮ್ಮ ಅಭಿರುಚಿಯ ಹೊಲಬು ಅರಿವಿಗೆ ಬರುತ್ತದೆ. ಅರ್ಥಧಾರಿಗಳು ಸಂವಾದ ಬದಲಿಸಿ ಚರ್ಚೆ ಮಾಡಿ ಕಚ್ಚಿ ಕೊಳ್ಳದಿದ್ದರೆ ತಾಳಮದ್ದಲೆ ರೈಸುವುದಿಲ್ಲ ಎಂಬ ಮನೋಭಾವ ಇದೆ. ಆಗ ಕೃಷ್ಣ ಸಂಧಾನಕ್ಕಿಂತ ಕೃಷ್ಣಾರ್ಜುನ ಕಾಳಗವೇ ಅಪ್ಯಾಯಮಾನವಾಗುತ್ತದೆ. ಇಲ್ಲಿ ಪ್ರಸಂಗವನ್ನು ಹೇಳುವ ಹಾಗಿಲ್ಲ. ಆದರೆ ಅದನ್ನು ಬಳಸುವ ಉದ್ದೇಶ ಮಾತ್ರ ಪ್ರಶ್ನಾರ್ಥಕವಾಗುತ್ತದೆ. ವೈಚಾರಿಕ ವಿಚಾರಗಳಿಗಿಂತ ಸಂಘರ್ಷದ ಮನರಂಜನೆಯೇ ಉದ್ದೇಶವಾಗಿಬಿಡುತ್ತದೆ. ಸಂಘರ್ಷ ಮನರಂಜನೆ ತಾಳಮದ್ದಲೆಯ ಪೂರಕ ವಿಚಾರವಾಗಿ ಪರಿಗಣಿತವಾಗಬೇಕು. ಈಗೀಗ ರಂಜನೆಯೊಂದನ್ನೇ ಗಮನ ಹರಿಸಿ ವ್ಯವಸ್ಥೆ ಮಾಡಲಾಗುತ್ತದೆ. ಇದು ತಾಳ ಮದ್ದಲೆಯಲ್ಲಾದ ಅವಿಷ್ಕಾರ.

ಸುಧನ್ವ ಮೋಕ್ಷ, ಭಕ್ತ ಸುಧನ್ವ ಹೀಗೆ ಹಲವು ವಿಧದಲ್ಲಿ ಈ ಪ್ರಸಂಗ ತಾಳಮದ್ದಲೆಯಲ್ಲಿ ಕಾಣುವುದುಂಟು. ತಾಳಮದ್ದಲೆಗೂ ಬಯಲಾಟಕ್ಕೂ ಹೊಂದಿಬರುವ ಪ್ರಸಂಗಗಳಲ್ಲಿ ಒಂದು ಸುಧನ್ವ ಮೋಕ್ಷ. ಹಂಸದ್ವಜ ಮಹಾರಾಜ ತನ್ನ ಚಂಪಕಾವತಿಗೆ ಬಂದ ಪಾಂಡವರ ಅಶ್ವಮೇಧದ ಕುದುರೆಯನ್ನು ಕಟ್ಟುವಲ್ಲಿಂದ ಪ್ರಸಂಗ ತೊಡಗುತ್ತದೆ. ಹರಿದರ್ಶನದ ಉದ್ದೇಶದಿಂದ ಕಟ್ಟಲ್ಪಡುವ ಕುದುರೆಯ ರಕ್ಷಣೆಗಾಗಿ ಬರುವ ಪಾರ್ಥನೊಂದಿಗಿನ ಸಮರಕ್ಕೆ ಸಮಸ್ತರಿಗೂ ಕಟ್ಟಪ್ಪಣೆ ಮಾಡುತ್ತಾನೆ.ಯಾರು ಹಿಂದುಳಿಯುತ್ತಾರೋ ಅವರನ್ನು ಕಾದೆಣ್ಣೆಯ ಕೊಪ್ಪರಿಗೆಯೊಳಗೆ ಹಾಕಲಾಗುವ ಶಿಕ್ಷೆ..ಹೀಗೆ ತೊಡಗುವ ಪ್ರಸಂಗದಲ್ಲಿ ಮುಖ್ಯ ಸೇನಾನಾಯಕನಾಗಿ ಮಗನಾದ ಸುಧನ್ವನ್ನು ನೇಮಿಸುತ್ತಾನೆ. ಸೇನಾಪತಿಯಾಗಿ ರಣಾಂಗಣಕ್ಕೆ ಹೋಗುವ ಮೊದಲು ತಾಯಿಯ ಆಶಿರ್ವಾದ ಪಡೆದು ಮಡದಿ ಪ್ರಭಾವತಿಯನ್ನು ಕಂಡು ಬರುವಾಗ ತಡವಾಗಿ ಬಿಡುತ್ತದೆ. ಮಗ ಯುದ್ದಕ್ಕೆ ಹೋಗುವಲ್ಲಿ ಹಿಂದುಳಿದ, ರಾಜಾಜ್ಞೆಯ ಉಲ್ಲಂಘನೆಯಾಯಿತು. ಹಾಗಾಗಿ ಶಾಸನದಂತೆ ಸುಧನ್ವನನ್ನು ಕಾದೆಣ್ಣೆಯ ಕೊಪ್ಪರಿಗೆಗೆ ಎಸೆಯಲಾಗುವುದು. ಅಲ್ಲಿ ಸುಧನ್ವನ ಭಕ್ತಿ ಪರೀಕ್ಷೆನಡೆದುಬಿಡುತ್ತದೆ. ಅನಂತರ ಅರ್ಜುನನ ಪ್ರವೇಶ, ಮತ್ತೆ ಯುದ್ದ ಸನ್ನಿವೇಶ ಹೀಗೆ ಪ್ರಸಂಗ ಮುಂದುವರೆಯುತ್ತಾ ಭಕ್ತ ಸುಧನ್ವನ ಭಕ್ತಿಯ ಶಕ್ತಿಯ ದರ್ಶನವಾಗಿ ಹರಿದರ್ಶನವಾಗುತ್ತದೆ. ಆದರೆ ಇತ್ತೀಚೆಗೆ ಪ್ರಭಾವತಿಯ ಸಂಭಾಷಣೆ ನಂತರ ಯುದ್ದದ ಸನ್ನಿವೇಶ ಇಷ್ಟರಲ್ಲೇ ಪ್ರಸಂಗ ಮುಗಿದು ಬಿಡುತ್ತದೆ. ಬಹಳ ಮಹತ್ವದ ಸುಧನ್ವನ ಭಕ್ತಿ ಪರೀಕ್ಷೆಯ ಸನ್ನಿವೇಶವೇ ಮರೆಯಾಗಿ ಸುಧನ್ವಾರ್ಜುನ ಎಂಬಷ್ಟಕ್ಕೆ ಪ್ರಸಂಗ ಸೀಮಿತವಾಗುತ್ತದೆ. ಕೆಲವೊಮ್ಮೆ ಪ್ರಭಾವತಿಯೊಂದಿಗಿನ ಸಂಭಾಷಣೆ ರಂಜನೆಗಾಗಿ ಎಲ್ಲೆಯನ್ನು ಮೀರುತ್ತದೆ. ಸುಧನ್ವಾರ್ಜುನ ಯುದ್ದದಲ್ಲಿ ಇಬ್ಬರೂ ಕಚ್ಚಿಕೊಂಡು ತಾಳಮದ್ದಲೆ ರಂಜಿಸುತ್ತದೆ.

ಅದರಂತೆ ಕರ್ಮಬಂಧ ಪ್ರಸಂಗದಲ್ಲಿ , ಕುರುಕ್ಷೇತ್ರ ಯುದ್ದಕ್ಕೆ ಕೌರವರ ಸೇನಾಪತಿಯನ್ನಾಗಿ ಯಾರನ್ನು ಮಾಡುವುದು ದುರ್ಯೋಧನ ತನ್ನವರೊಂದಿಗೆ ಮಂತ್ರಾಲೋಚನೆ ಮಾಡಿ ರಾತ್ರೋರಾತ್ರಿ ಭೀಷ್ಮರ ಬಳಿಗೆ ಬರುತ್ತಾನೆ. ಬಂದ ಸುಯೋಧನನಿಗೆ ಭೀಷ್ಮ ಹಿತವಚನ ಹೇಳುತ್ತಾನೆ. ಹೆಸರಾಂತ ಅರ್ಥಧಾರಿಗಳಿಬ್ಬರು ವೇದಿಕೆಯಲ್ಲಿರುತ್ತಾ ಪ್ರೇಕ್ಷಕರೂ ಬಹಳಷ್ಟು ನಿರೀಕ್ಷೆಯಿಡುತ್ತಾರೆ.ಪ್ರಸಂಗ ನಡೆಯಲ್ಲಿ ಭೀಷ್ಮನ ಹಿತವಚನಕ್ಕೆ ಕೌರವ ಮೊಂಡುವಾದವನ್ನೇ ಮಂಡಿಸುತ್ತ ಸಾಗಬೇಕು. ಕೌರವನ ಪಾತ್ರಧಾರಿ ಅತ್ಯಂತ ಸಮರ್ಥವಾಗಿ ಕೌರವನ ಮೊಂಡುವಾದವನ್ನು ವಿಶಿಷ್ಟ ಬಗೆಯಲ್ಲಿ ಮಂಡಿಸುತ್ತಾರೆ. 

" ಆದಿನಾರಾಯಣ ದುಷ್ಟ ಶಿಕ್ಷಣಕ್ಕಾಗಿ ಶಿಷ್ಟ ರಕ್ಷಣೆಗಾಗಿ ಇರುವುದಾದರೆ ಪಾಂಡವರಿಗೆ ಹರಿಯ ರಕ್ಷಣೆ ಇರುವುದಾದರೆ, ದ್ಯೂತದಲ್ಲಿ ಪಾಂಡವರು ಗೆಲ್ಲುವಂತೆ ಯಾಕೆ ಮಾಡಲಿಲ್ಲ? ಅವನ ಬಗೆಯಲ್ಲಿ ಅನ್ಯಾಯಗಾರ ನಾನು ಅರಮನೆಯ ಸುಪ್ಪತ್ತಿಗೆಯಲ್ಲಿ ಸುಖವಾಗಿ ಬೆಳೆದರೆ ಪಾಂಡವರು ಪರಮಾತ್ಮನ ಪ್ರಿಯರು ಕಾಡಿನಲ್ಲಿ ಕಠಿಣ ಜೀವನ ನಡೆಸುವಂತೆ ಯಾಕೆ ಆಗುತ್ತದೆ. ಶಿಷ್ಟರಕ್ಷಣೆಯನ್ನು ಮಾಡದೆ ನಾರಾಯಣ ಯಾಕೆ ಹಿಂದುಳಿದ?"

ಈ ಮೊಂಡುವಾದಕ್ಕೆ ಬಹಳಷ್ಟು ತಾಳಮದ್ದಲೆಯಲ್ಲಿ ಭೀಷ್ಮ ಅರ್ಥಧಾರಿಗಳು ಹೊಸ ಹೊಸ ಬಗೆಯಲ್ಲಿ ಅದ್ಭುತವಾಗಿ ಕೌರವನ ವಾದವನ್ನು ಪ್ರತೀ ಪ್ರಶ್ನೆಗೂ ಉತ್ತರಿಸುತ್ತ ಜಾಣ್ಮೆಯಿಂದ ಖಂಡಿಸುತ್ತಾ ಸಾಗುತ್ತಾರೆ, ಇದಕ್ಕೆ ಅರ್ಥಧಾರಿ ಬಹಳಷ್ಟು ವಿಚಾರಗಳನ್ನು ಸ್ವತಹ ತಿಳಿದಿರಬೇಕು. ಒಂದು ರೀತಿಯ ಪಾರಮಾರ್ಥಿಕತೆಯ ವಿದ್ವತ್ತನ್ನು ತಿಳಿದು ಅದನ್ನು ಸಮರ್ಥವಾಗಿ ಮಂಡಿಸುವ ಜಾಣ್ಮೆಯೂ ಇರಬೇಕು. ಅದರೆ ಇಲ್ಲಿ ಯಾವುದೇ ಚರ್ಚೆಗೆ ಆಸ್ಪದವಿಲ್ಲದಂತೆ ಕೇವಲ ಧರ್ಮರಾಯನ ಧರ್ಮ ನೀಷ್ಠೂರತೆಯನ್ನು ಸತ್ಯಸಂಧತೆಯನ್ನೂ ಸುಂದರವಾಗಿ ವಿವಿಧ ಉಪಮೆ ಕಲ್ಪನೆಯನ್ನು ಉಪಯೋಗಿಸಿ ಅರ್ಥವನ್ನು ಮಂಡಿಸುತ್ತಾರೆ. ಕೊನೆಯ ವರೆಗೂ ಕೌರವ ಕೇಳಿದ ಪ್ರಶ್ನೆ ಹಾಗೆ ಉಳಿದುಬಿಡುತ್ತದೆ. ಪ್ರಸಂಗವೇನೋ ಪದಕ್ಕೆ ತಕ್ಕ ಅರ್ಥ ಎಂಬಂತೆ ಮುಂದೆ ಹೋಗುತ್ತದೆ. ಭೀಷ್ಮರ ಅರ್ಥಗಾರಿಗೆ ವಿದ್ವತ್ ಪೂರ್ಣವಾಗಿದ್ದರೂ ಸೂಕ್ಷ್ಮವಾಗಿ ಗಮನಿಸುವವನಿಗೆ ಎಲ್ಲೋ ಒಂದು ಕಡೆ ಪಲಾಯನವಾದದ ಛಾಯೆ ಕಂಡುಬರುತ್ತದೆ. ವಿದ್ವತ್ಪೂರ್ಣ ಅರ್ಥಗಾರಿಕೆಯೂ ಇಲ್ಲಿ ಚರ್ಚೆಯಿಲ್ಲದೆ ಸೋಲುತ್ತದೆ.

ಎಲ್ಲಿ ಚರ್ಚೆ ಬೇಡವೋ ಅಲ್ಲಿ ಚರ್ಚೆ ತುರ್ಯಾವಸ್ಥೆಗೆ ಮುಟ್ಟಿ ತನ್ನ ಹೊಲಬನ್ನೆ ಕಳೆದು ಕೊಳ್ಳುತ್ತದೆ.... ಎಲ್ಲಿ ಚರ್ಚೆ ಬೇಕೋ ಅಲ್ಲಿ ಸಮರ್ಪಕ ವಾದ ಮಂಡನೆಯಿಲ್ಲದೆ ಅರ್ಥ ಅರ್ಥಹೀನವಾದರೂ ಹೊರ ಆವರಣಕ್ಕೆ ಎರಡೂ ರಂಜನೆಯನ್ನು ಕೊಡುತ್ತದೆ. ಎಲ್ಲರೀತಿಯಲ್ಲೂ .ತಾಳಮದ್ದಲೆಯ ಕಲೆಯ ದೃಷ್ಟಿಯಿಂದಲೂ ವ್ಯಕ್ತಿರೂಪದಿಂದಲೂ ಇಲ್ಲಿ ಸೋಲು ಗೆಲುವು ಗೊಂದಲವನ್ನೇ ಉಂಟುಮಾಡುತ್ತದೆ, ಹಲವುಸಲ ಒಂದೆರಡು ಗೆರೆಯ ಪದಕ್ಕೆ ಒಂದು ಘಂಟೆಗಿಂತಲು ಮೀರಿ ಚರ್ಚೆ ಬೆಳೆಯುತ್ತದೆ. ಯಾವ ಪದಕ್ಕೆ ಈ ಸಂವಾದ ಬೆಳೆದಿದೆ ಎಂಬುದನ್ನೂ ಪ್ರೇಕ್ಷಕ ಮರೆತು ಬಿಟ್ಟಿರುತ್ತಾನೆ..! ಮಾತ್ರವಲ್ಲ ಹಲವು ಸಲ ಚರ್ಚೆಯ ತಿರುಳನ್ನು ಹುಡುಕುವುದರಲ್ಲೀ ಸೋತರೂ ಸೋಲು ಗೆಲುವಿನ ಲೆಕ್ಕಾಚಾರದ ರಂಜನೆಯಲ್ಲಿ ಎಲ್ಲವನ್ನೂ ಮರೆತು ಬಿಡುತ್ತಾನೆ..!! ಕಲೆಯಲ್ಲಿ ವ್ಯಕ್ತಿಯ ಗೆಲುವು ಹಿನ್ನೆಲೆಯಾಗಿ, ಕಲೆಯ ಗೆಲುವಿಗೆ ಪೂರಕವಾಗಿರಬೇಕು. ಆದು ಅರೋಗ್ಯವಂತ ವಾತಾವರಣವನ್ನು ಕಲ್ಪಿಸುತ್ತದೆ. ಕಲಾವಿದ ವ್ಯಕ್ತಿಯಾಗಿ ಗೆಲುವನ್ನು ಬಯಸುವ ಪ್ರಮೇಯ ಬರಬಾರದು. ಪಾತ್ರ ಗೆದ್ದರೆ ಕಲೆ ಗೆಲ್ಲುತ್ತದೆ. ಇವೆರಡು ಗೆದ್ದರೆ ಮಾತ್ರ ಕಲಾವಿದ ಗೆಲ್ಲುತ್ತಾನೆ.








Monday, January 7, 2013

ವಾಮನ ಚರಿತ್ರೆಯ ತ್ರಿವಿಕ್ರಮರು !


ತನ್ನದು ಎಂದು ಏನಿದೆಯೋ ಅದೆಲ್ಲವೂ ನಿನ್ನದೇ, ಎರಡು ಪದಗಳಿಂದ ವಾಮನ ಭೂಮಿ ಆಕಾಶವನ್ನು ಅಳೆದಾಗ ಇನ್ನೋಂದು ಪದ ಎಲ್ಲಿ ಬಲಿಯಲಿ ಎಂದು ಕೇಳಿದಾಗ ತನ್ನದು ಎಂದು ಲೌಕಿಕ ಜಗತ್ತಿನಲ್ಲಿರುವುದು ಇದೊಂದೇ ಎಂದು ತನ್ನ ಶಿರವನ್ನು ತೋರಿಸಿಬಿಡುವ ವೈರೋಚನಿಯ ಬಲಿದಾನದ ಕಥೆ ತಿಳಿಯದವರಾರು ಇರಲಾರರು. ಪುರಾಣದ ಈ ಕಥೆ ಯಕ್ಷಗಾನದಲ್ಲಿ ಈ ವಾಮನ ಚರಿತ್ರೆ ಪ್ರಸಂಗ ಪಾರಮಾರ್ಥಿಕತೆಗೆ ಭಗವಂತನ ಸಾಕ್ಷಾತ್ಕಾರಕ್ಕೆ ಪೂರಕವಾಗಿ ಚಿತ್ರಿಸಲ್ಪಡುತ್ತದೆ. ಅತ್ಯಂತ ವಿಶಿಷ್ಟ ಸರಳವಾದ ಪ್ರಸಂಗವಿದು. ಇದರಲ್ಲಿ ಮೇಲ್ನೋಟಕ್ಕೆ ಬಯಲಾಟ ರಂಜನೆಯಾಗಲಿ ದೃಶ್ಯವೈಭವಾಗಲಿ ಕಾಣುವುದಕ್ಕೆ ಸಾಧ್ಯವಿಲ್ಲ. ಆದರ ಅಂತರಂಗಕ್ಕೆ ಹತ್ತಿರವಾಗುವ ಹೃದ್ಯ ಸಂಭಾಷಣೆಗಳು ಹೆಣೆದಾಗ ಕಣ್ಣಿಗೆ ಕಾಣದ ದೃಶ್ಯವೈಭವ ಮನಸ್ಸಿಗೆ ಗೋಚರವಾಗುತ್ತದೆ. ತಾಳ ಮದ್ದಲೆಯೇ ಹಾಗೆ. ಅದು ಕಾಣುವ ಅಗತ್ಯವಿಲ್ಲ. ಕೇಳುವುದು ಮಾತ್ರ. ಊರ ದೇವಸ್ಥಾನ ಕಟ್ಟೆಯಲ್ಲಿ ತಾಳಮದ್ದೆಲೆಯಾದರೆ ಮನೆಯ ಜಗುಲಿಯಲ್ಲಿ ಕುಳಿತು ಆ ಯಕ್ಷಗಾನ ತಾಳ ಮದ್ದಲೆಯ ದೃಶ್ಯವನ್ನು ಕೇಳಿ ಕಲ್ಪನೆಯ ಚಿತ್ರಣವನ್ನು ಹೆಣೆಯಬಹುದು. ಪರಿಶುದ್ದವಾದ ಯಕ್ಷಗಾನದಲ್ಲಿ ದೃಶ್ಯಗಳು ಸಾಂಕೇತಿಕವಾಗಿದ್ದು ತಾಳ ಮದ್ದಲೆಯಲ್ಲಿ ಅದಿನ್ನೂ ಸಂಕೀರ್ಣವಾಗಿ ಸಾಂಕೇತಿಕವಾಗಿರುತ್ತದೆ. ಹಿಮ್ಮೇಳದ ಪದಕ್ಕೆ ಸ್ಫೂರ್ತಿಗೊಂಡು ಬಲಿಪಾತ್ರ ಯಾಗ ಶಾಲೆಯನ್ನು ವಾಚಿಕತ್ವದಿಂದಲೇ ಚಿತ್ರಿಸುತ್ತದೆ.

ಪೌರಾಣಿಕದಲ್ಲಿನ ಮೂರು ಪಾತ್ರಗಳು ಹಿರಣ್ಯ ಕಶಿಪು, ಪ್ರಹ್ಲಾದ ಮತ್ತು ವೈರೋಚನಿ. ಈ ಮೂರು ಪಾತ್ರಗಳು ತಮ್ಮದೇ ರೀತಿಯಲ್ಲಿ ಭಗವಂತನ ಸಾನ್ನಿಧ್ಯವನ್ನು ಸೇರುವ ವಿಭಿನ್ನ ವ್ಯಕ್ತಿತ್ವದ ಪಾತ್ರಗಳು. ಅವುಗಳು ಕ್ರಮಿಸುವ ದಾರಿಗಳು ಬೇರೆ ಗಮ್ಯ ಮಾತ್ರ ಒಂದೇ. ಕ್ಷೀರ ಸಾಗರ ಶಯನ ಮಹಾವಿಷ್ಣುವಿನ ಸಾಕ್ಷಾತ್ಕಾರವನ್ನು ಪಡೆಯುವ ಕಥೆಗಳು ವಿಭಿನ್ನ. ವೈರಭಾವವನ್ನು ಹೊಂದಿರುತ್ತಾ, ವಿರೋಧ ಭಕ್ತಿಯಿಂದಲೇ ಹಿರಣ್ಯ ಕಶಿಪು ನರಸಿಂಹನ ದ್ವಾರ ಭಗವಂತನಿಗೆ ತನ್ನನ್ನು ಅರ್ಪಿಸಿದ ಮೇಲೆ, ಅವನ ಮಗ ಪ್ರಹ್ಲಾದ ಹರಿಯೊಬ್ಬನೇ ಬೇರೆ ಇಲ್ಲ ಎಂಬ ಭಕ್ತಿ ಭಾವದಿಂದ ತನ್ನ ಗುರಿಯನ್ನು ಕಂಡುಕೊಂಡರೆ ಇವರಿಬ್ಬರ ವ್ಯಕ್ತಿತ್ವ ನಡೆದ ದಾರಿ ತೀರ ವಿರೋಧವಾದರೂ ಒಂದು ಅಸುರೀ ಶಕ್ತಿಯನ್ನು ವೈಭವೀಕರಿಸಿದರೆ ಇನ್ನೊಂದು ಪರಮ ವೈಷ್ಣವ ಶಕ್ತಿಯನ್ನು ಅನುಸರಿಸುತ್ತದೆ. ಆದರೆ ಇದೆರಡನ್ನು ತನ್ನಲ್ಲಿ ರೂಢಿಸಿಕೊಂಡ ವೈರೋಚನಿಯ ಮೋಕ್ಷ ಮಾತ್ರ ಬಹಳ ಸಮಸ್ಯೆಯನ್ನು ಬಿಂಬಿಸುತ್ತದೆ. ಅಸುರನಾಗಿ ಮೂರು ಲೋಕವನ್ನು ಜಯಿಸಿ ಕೊನೆಗೆ ಇಂದ್ರಪದಕ್ಕಾಗಿ ಶತಮನ್ಯುವನ್ನು ಕೈಗೊಳ್ಳುವ ಈತ ಪರಮ ಧಾರ್ಮಿಕ. ಹಾಗಾಗಿ ಇವನ ನಿಗ್ರಹ ಸಮಸ್ಯೆಯಾಗುತ್ತದೆ. ವೈರೋಚನಿ ಅರ್ಥಾತ್ ಬಲಿಯ ಮೋಕ್ಷದ ವಿಭಿನ್ನ ಕಥಾನಕವೇ ಈ ವೈರೋಚನಿಯ ವೃತ್ತಾಂತವೇ ವಾಮನ ಚರಿತ್ರೆ.

ಭಾಗವತ ಶಿವಶಂಕರರ ಶ್ರುತಿಗೆ ಹೊಂದಿಕೊಂಡು ದೇರಾಜೆ ಸುಧನ್ವನ ಕಶ್ಯಪ ಪಾತ್ರ ಕಥಾರಂಭವನ್ನು ಸೂಕ್ತವಾಗಿ ಮಾಡುತ್ತದೆ. ತಪಸ್ಸಿಗೆ ಒಲಿದ ಮಹಾ ವಿಷ್ಣು ಅದಾಗಾಲೇ ಉಪೇಂದ್ರಾನಾಗಿ ವಾಮನ ರೂಪಿನಿಂದ ಅವತರಿಸಿಯಾಗಿರುತ್ತದೆ. . ವಾಮನನಾಗಿ ವಿದ್ವಾನ್ ಉಮಾಕಾಂತ್ ಭಟ್ ಆಸೀನರಾಗುತ್ತಾರೆ. ಆರಂಭಿಕ ಸನ್ನಿವೇಶ ಸೂಕ್ತವಾಗಿ ಅನಾವರಣ ಗೊಳ್ಳುತ್ತದೆ

ಕಶ್ಯಪ ಬ್ರಹ್ಮ ಮತ್ತು ಅದಿತಿ ದೇವಿಯ ಗರ್ಭದಲ್ಲಿ ಉಪೇಂದ್ರನಾಮಕ .. ಅಂದರೆ ಉಪ - ಇಂದ್ರನಾಗಿ ಅವತರಿಸುವ ಮಹಾ ವಿಷ್ಣುವಿನಿಂದ ಬಲಿಮೋಕ್ಷ ಪ್ರಸಂಗ ಆರಂಭಗೊಳ್ಳುತ್ತದೆ. ಇಂದ್ರ ಪದದ ಕೊನೆಯ ಚರಣವೆಂಬಂತೆ ನೂರನೇ ಯಾಗಕ್ಕೆ ವೈರೋಚನಿ ದೀಕ್ಷಾಬದ್ದನಾಗಿರುತ್ತಾನೆ. ಇಲ್ಲಿ ವೈರೋಚನಿಯಾಗಿ ಜೋಶಿಯವರು ಪಾತ್ರದ ಅಸ್ತಿವಾರವನ್ನು ಗಟ್ಟಿಯಾಗಿ ಕಟ್ಟುತ್ತಾರೆ.

ವೈರೋಚನಿಯ ಚಿಂತನೆಯನ್ನು ಒಂದೊಂದಾಗಿ ತೆರೆದಿಡುತ್ತಾ ಇಂದ್ರ ಪದವಿಗಾಗಿ ನೂರನೇ ಯಾಗ, ಆದರೂ ಒಂದು ಸಂದೇಹ ಇಂದ್ರ ಪದವಿಯೇ ಕೊನೆಯ ಗುರಿಯೇ? ಅದರ ನಂತರ ಏನು? ತನ್ನ ಹಿರಿಯರಾದ ಹಿರಣ್ಯ ಕಶಿಪು ಹಿರಣ್ಯಾಕ್ಷ ಹರಿಯನ್ನು ಕಂಡ ಬಗೆ. ಆ ಮೂಲಕ ಕೊನೆ ಎಲ್ಲಿ ಎಂದು ಕಂಡು ಕೊಂಡ ಬಗೆ, ಅಜ್ಜ ಪ್ರಹ್ಲಾದರಾಯರು ತನ್ನ ದೃಷ್ಟಿಯಲ್ಲಿ ಹರಿಯನ್ನು ಕಂಡುಕೊಂಡ ಬಗೆ, ಹೀಗೆ ವಿಭಿನ್ನ ಅಯಾಮಗಳನ್ನು ಗಮನಿಸಿ ತನ್ನ ದಾರಿಯನ್ನು ಕಂಡುಕೊಂಡ ಬಗೆಯನ್ನು ವೈರೋಚನಿಯಾಗಿ ವಿವರಿಸುತ್ತಾರೆ. ವೈರೋಚನಿ ಎಂದರೆ ಲೋಕದೊಡನೆ ರುಚಿ ಇಲ್ಲದವನು. ಜೋಶಿಯವರು ಇಲ್ಲಿ ತಮ್ಮ ಪಾತ್ರ ನಡೆಯುವ ಹಾದಿಯನ್ನು ಸೂಕ್ಷ್ಮವಾಗಿ ಸೂಚಿಸುತ್ತಾ ಆ ಹಾದಿಯ ಇಕ್ಕೆಲಗಳನ್ನು ತೋರಿಸುತ್ತ ಸಾಗುತ್ತಾರೆ. ತಾಳ ಮದ್ದಲೆಯ ಪಾತ್ರಗಳು ಕೇವಲ ವಾಚಕತ್ವದಿಂದಲೇ ಕೂಡಿರುತ್ತವೆ. ಅವುಗಳ ಒಳ ತುಡಿತಗಳು ಅರ್ಥವಾಗಬೇಕಾದರೆ ಕಥೆಯ ಬಗ್ಗೆ ಮೊದಲೇ ಸ್ವಲ್ಪ ಅರಿವಿರಬೇಕು ಅರ್ಥಧಾರಿಯ ಹೊಲಬನ್ನು ಆ ಸೂಕ್ಷವನ್ನು ಗಮನಿಸುತ್ತ ಹಿಂಬಾಲಿಸಬೇಕು. ಇಲ್ಲಿ ಪಾತ್ರ ಸಾಗುವ ಹೊಲಬನ್ನು ಸುಲಭವಾಗಿ ಮತ್ತು ಅಷ್ಟೇ ಸೂಕ್ಷ್ಮವಾಗಿ ಒಪ್ಪಿಸುತ್ತಾ ಸಾಗುವುದನ್ನು ಕಂಡು ಕೊಂಡರೆ ತಾಳ ಮದ್ದಲೆಯ ಅರ್ಥಗಾರಿಕೆಯ ಅಸ್ವಾದನೆ ಬಹಳ ಸುಂದರವಾಗಿರುತ್ತದೆ. ಅದರಲ್ಲಿ ತನ್ಮಯತೆಯನ್ನು ಕಾಣಬಹುದು. ದೇವತೆಗಳ ಮೇಲಿನ ವಿರೋಧದ ಜತೆಗೆ ಇಂದ್ರತ್ವದ ಮೋಹ. ಹಿರಿಯರಾದ ಹಿರಣ್ಯಾಕ್ಷಾದಿಗಳು ವಿರೋಧದಿಂದಲೇ ಸಾಗಿದರೆ, ಪ್ರಹ್ಲಾದರಾಯನ ಸಾಮ ಮಾರ್ಗ ಹೀಗೆ ವೈರೋಚನಿಯ ದಾರಿಯ ಇಕ್ಕೆಲಗಳ ದರ್ಶನ ಜೋಶಿಯವರ ಅರ್ಥಗಾರಿಕೆ ತೋರಿಸುತ್ತದೆ. ಇಂದ್ರ ಪದವಿಯ ನಂತರ ಏನು  ಎಂಬ ದ್ವಂದ್ವದಲ್ಲಿ ಇರುತ್ತಿದ್ದಂತೇ, ಇನ್ನೇನು ಯಾಗದ ಪೂರ್ಣಾಹುತಿ,   ಕೆಲವೇ ಕ್ಷಣಗಳಲ್ಲಿ ಆಗುವ ಇಂದ್ರ ಪದದ ಸಾಕ್ಷಾತ್ಕರಕ್ಕೆ ಅಸುರ ಸಮೂಹವೇ ಕಾತರದಿಂದ ಕಾಯುತ್ತಿದೆ. ಆಗ ಜೋಶಿಯವರ ಮಾತಿನಲ್ಲಿ ಕಮಂಡಲು ಧಾರಿ ಛತ್ರಪಾಣಿ ವಾಮನ ನಿಧಾನವಾಗಿ ಯಾಗಶಾಲೆಯ ದ್ವಾರದಲ್ಲಿ ಪ್ರತ್ಯಕ್ಷವಾಗುತ್ತಾನೆ.

ಬಲಿ ಭಾವುಕನಾಗಿ ಬಿಡುತ್ತಾನೆ. ನೂರನೇ ಯಾಗದ ಸಿದ್ಧಿ ಏನು? ಯಾಕಾಗಿ ನೂರನೇ ಯಾಗ? ಯಾಗದ ಪೂರ್ಣಾಹುತಿ ಆಗದೇ ಇದ್ದರೂ ಮಾಡುವ ಯಜ್ಞ ಪೂರ್ಣವಾದ ಅನುಭವ ಯಾಕೆ ಈ ಸಂತೃಪ್ತಿ? ಅರ್ಥಗಾರಿಕೆಯ ಎಸಳು ತೆರೆದುಕೊಂಡ ರೀತಿ,  ಯಜ್ಞದ ಪ್ರತಿರೂಪ ಯಜ್ಞನಾರಾಯಣ,  ಅವನ ಪ್ರತಿನಿಧಿ ಸೂರ್ಯನಾರಾಯಣ,  ನಡೆಯುವ ಯಜ್ಞ ಪೂರ್ಣವಾಯಿತು,  ಗುರಿತಲುಪಿತು,  ಎಂದು ತೊರಲು ಬಂದರೆ? ಉದಯಿಸಿಕೊಂಡ ಸೂರ್ಯ ಅದು ಹೊರಗೆ ಅಂದರೆ ಬಾಹ್ಯಪ್ರಪಂಚದಲ್ಲಿಯೋ ಇಲ್ಲ ತನ್ನ ಅಂತರಂಗದಲ್ಲೋ? ಸೂರ್ಯನ ಉದಯ ಒಳಗೋ? ಅಲ್ಲ,  ಹೊರಗೋ? ಎಂತಹ ಕಲ್ಪನೆ? ಬಲಿ ಸಾಗುವ ಮಾರ್ಗದ ಸೂಚನೆ ಸುಲಭವಾಗಿ ವ್ಯಕ್ತವಾಗುತ್ತದೆ.

ಒಂದು ಕರ್ಮ ಮಾಡಲೂ ಜ್ಞಾನ ಬೇಕು. ಜ್ಞಾನದಿಂದ ಕರ್ಮ ಸಾಗಿ ಅದು ಪರ್ಯಾಪ್ತವಾಗಿ ಉದಯವಾಗುವುದೇ ಮತ್ತೊಂದು ಜ್ಞಾನ. ಇಲ್ಲಿ ಆದ ಭಗವಂತನ ಅವತಾರವೇ ಜ್ಜಾನರೂಪಿಯೇ? ಸುಂದರವಾದ ಕಾವ್ಯಾರ್ಥ. ದ್ವಾರದಲ್ಲಿ ಉದಯಿಸಿದ ಕೋಟಿ ಪ್ರಕಾಶವನ್ನು ಕಂಡು ಬಲಿ ಅಚ್ಚರಿಗೊಳ್ಳುತ್ತಾನೆ. ಜ್ಞಾನದ ಉದಯವಾದದ್ದು ಒಳಗೂ ಅಲ್ಲ ಹೊರಗೂ ಅಲ್ಲ ಮಧ್ಯದಲ್ಲಿ ಅಂದರೆ ದ್ವಾರದಲ್ಲಿ . ವಾಮನನ್ನು ಕಂಡು ಬಲಿ ಭಾವುಕನಾಗಿ ಬಿಡುತ್ತಾನೆ. ಜ್ಞಾನ ಸಿದ್ದಿಯಾದಂತೆ ಭಾವನೆಯಲ್ಲಿ ತನ್ಮಯನಾಗಿರುವಾಗ ಬಂದ ವಾಮನ ಮುಂದಿನ ಸಂಕೇತವನ್ನು ರವಾನಿಸುವ ಬಗೆಯೇ ಅತ್ಯಂತ ವಿಶೇಷ. ಬಲಿಯ ಉಪಚಾರವನ್ನೇ ಹೊಗಳುತ್ತಾ ಉಮಾಕಾಂತರ ವಾಮನ ಕೇಳುವ ಮಾತು " ಬಾಗಿಲಲ್ಲೇ ಇದ್ದೇನೆ. ಈ ಪಾದ ಒಳಗಿಡಲೇ?" ಬಹಳ ಸೂಕ್ಷ್ಮವಾದ ಸಂಕೇತದ ರವಾನೆಯಿದು. ಒಳಗೆ ಅಂದರೆ ಎಲ್ಲಿ? ಮುಂದಿನ ಹಂತದಲ್ಲಿ ಇದೇ ಪಾದ ಅತ್ಯಂತ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಬಲಿಯ ಇಂದ್ರತ್ವದ ಆಚೆಗಿನದ್ದು ಎನು ಎಂಬುದನ್ನು ತೋರಿಸಿಕೊಡುತ್ತದೆ. ತಾಳ ಮದ್ದಲೆ ಅರ್ಥಗಾರಿಕೆಯ ಸೊಗಸು ಅಡಗಿರುವುದೇ ಇಂತಹ ಸೂಚ್ಯತೆಗಳಿಂದ. ಇಂತಹ ಸೂಕ್ಷಗಳು ಕಲಾವಿದನಿಂದ ಕಲಾವಿದನಿಗೆ ವೆತ್ಯಸ್ತವಾಗಿರುತ್ತದೆ. ಆ ಮನೋಭಾವಕ್ಕೆ ಹೊಂದಿಕೊಂಡು ಹಿಂಬಾಲಿಸುವ ಅರಿವಿದ್ದರೆ ತಾಳ ಮದ್ದಲೆಯ ಉತ್ಕೃಷ್ಟತೆ ಅರಿವಾಗುತ್ತದೆ. ಇವೆಲ್ಲ ಯಾವುದೇ ಪೂರ್ವ ತಯಾರಿಯಾಗಲಿ ಚಿತ್ರಕಥೆಯಾಗಲಿ ಇಲ್ಲದೆ ರಂಗದ ಮೇಲೆ ಅನಾವರಣಗೊಳ್ಳುತ್ತದೆ. ಹಾಗಾಗಿ ತಾಳ ಮದ್ದಲೆಯ ಅರ್ಥಗಾರಿಕೆಯನ್ನು ಸಂಗ್ರಹಿಸಿದರೆ ಯಾವುದೇ ಪ್ರಸಿದ್ಧ ಕಾವ್ಯಕ್ಕೆ ಸಮಾನಾಗಿ ಇದನ್ನು ಪರಿಗಣಿಸಬಹುದು. ವಿಶೇಷವೆಂದರೆ ಇದು ಸಾಂದರ್ಭಿಕವಾಗಿ ಅಲ್ಲೇ ಸೃಷ್ಟಿಯಾಗಿ ಅಲ್ಲೇ ನೆನಪಿನ ಸಂಪುಟಕ್ಕೆ ಸೇರಿಬಿಡುತ್ತದೆ. ಮತ್ತೆ ಇದರ ಸ್ಮರಣೆ ಮಾತ್ರ ಸಾಧ್ಯ. ಯಾವುದೇ ಜ್ಞಾನ ಪೀಠ ಮನ್ನಣೆಯ ಕಾವ್ಯಕ್ಕಿಂತ ತಾಳ ಮದ್ದಲೆಯ ಅರ್ಥಗಾರಿಕೆಯ ತೂಕ ಅತ್ಯಂತ ಹೆಚ್ಚು ಅಂತ ಆಗ ಅನ್ನಿಸುವುದು.

ಜೋಶಿಯವರು, ಇಲ್ಲಿ ಹೊರಬರುವ ಪ್ರತಿಯೊಂದು ಶಬ್ದಕ್ಕೂ ವಾಕ್ಯಕ್ಕೂ ತನ್ನದೇ ದೃಷ್ಟಿಕೊನದಿಂದ ಅರ್ಥ ಅನ್ವರ್ಥಗಳನ್ನು ವಿವರಿಸುತ್ತಾ ಸಾಗುತ್ತಾರೆ. ಕೆಲವೊಮ್ಮೆ ಸಾಮಗರ ಅರ್ಥಗಾರಿಕೆಯ ಹೊಲಬು ಕಂಡಂತೆ ಭಾಸವಾದರೂ ಅವರ ಸ್ವಂತಿಕೆ ಇಲ್ಲಿ ಬೇರೆಯೇ ವ್ಯಕ್ತವಾಗುತ್ತದೆ. ಪ್ರತಿ ಹಂತದಲ್ಲೂ ವ್ಯಕ್ತವಾಗುವ ವಿಡಂಬನೆ ಕೆಲವೊಮ್ಮೆ ಮನಸ್ಸಿನ ಭಾವನೆಗೆ ಕಚಗುಳಿಯಿಟ್ಟಂತೆ ಭಾಸವಾಗುತ್ತದೆ.

ವಾಮನಾವತಾರಿಯ ಮಾತುಗಳು ಇನ್ನೊಂದು ರೀತಿಯಲ್ಲಿ ನಮ್ಮನ್ನು ಕಲ್ಪನೆಯ ಲೋಕಕ್ಕೆ ಸೆಳೆಯುತ್ತದೆ. ಬಲಿಯ ಹಿರಿಯರ ವೃತ್ತಾಂತಗಳನ್ನು ವಿಶಿಷ್ಟತೆಯನ್ನು ಹೊಗಳುತ್ತಾ.. ಲೋಕದಲ್ಲಿ ಸರ್ವವ್ಯಾಪಿಯಾಗಿ ಬೆಳೆದ ಹಿರಣ್ಯಾಕ್ಷ ಹಿರಣ್ಯಕಶಿಪು ಭಗವಂತನಾದ ಮಹಾವಿಷ್ಟುವಿಗೆ ಕೇವಲ ವೈಕುಂಠ ಮಾತ್ರ ಪರಮ ಪದವಾಗಿ ಮಾಡುತ್ತಾರೆ. ಹಾಗಾಗಿ ವಿಷ್ಣು ಆ ಪರಮ ಪದವನ್ನು ಮತ್ತೆ ಹುಡುಕುವುದು ಇವರ ಉದರದೊಳಗೆ ಅರ್ಥಾತ್.. ಮಹಾವಿಷ್ಟುವಿಗೆ ತಮ್ಮ ದೇಹದಲ್ಲಿ ಪರಮ ಪದವನ್ನು ತೋರಿಸಿದವರು ಇವರು. ಎಂತಹ ಕಲ್ಪನೆ. ಇದು ತಾಳ ಮದ್ದಲೆಯಲ್ಲಿ ಮಾತ್ರ ಸಾಧ್ಯ.

ಯಾಗ ಶಾಲೆಗೆ ಅಗಮಿಸಿದ ವಾಮನ ವಟುವಿನಲ್ಲಿ ಬಲಿ "ಏನು ಬೇಕು, ಮೂರುಲೋಕದ ಒಡೆಯ.. ನಾನು ಕೊಟ್ಟಮೇಲೆ ಇನ್ನೊಬ್ಬ ಕೊಡುವುದಕ್ಕಿರಬಾರದು..ಇನ್ನೊಬ್ಬನಲ್ಲಿ ಕೇಳುವುದಕ್ಕಿರಬಾರದು." ಸಾಮಾನ್ಯ ಪ್ರಶ್ನೆಗೆ ಸಾಮಾನ್ಯವಾಗಿ ಉತ್ತರಿಸುವ ವಾಮನ ಮೂರಡಿ ಭೂಮಿಯನ್ನು ಬಯಸುತ್ತಾನೆ. ಬಲಿ ಅವಾಕ್ಕಾಗಿ.. ಮಗುವಿನ ಮನಸ್ಸು ಬಲ್ಲವರಲ್ಲಿ ಕೇಳಿ ತಿಳಿದು ಆಮೇಲೆ ನನ್ನಲ್ಲಿ ಕೇಳು.. ಮೂರಡಿ ಭೂಮಿಯೇ? ಏಳು ದ್ವೀಪವನ್ನಾದರೂ ನೀಡಿಯೇನು. ಬೇಡಿಕೆಯನ್ನು ತಿದ್ದಿಕೊಳ್ಳುವಂತೆ ಸಲಹೆ ನೀಡುವಾಗ.. ವಾಮನ ಹೇಳುವ ಮಾತಿಗೆ ಪಳಗಿದ ಅರ್ಥಧಾರಿಗಳು ಅಧ್ಯಾತ್ಮದ ಬಣ್ಣವನ್ನು ಬಳಿಯುವ ರೀತಿ ಗಮನಿಸಬಹುದು.. " ಮೂರು ಲೋಕದ ಒಡೆಯ ನೀನು.. ಆದರೆ ನನಗೆ ಮೂರು ಅಡಿ ಮಾತ್ರ ಸಾಕು. ಎಲ್ಲಿ ಆಶೆಗಳಿರುತ್ತವೋ ಅಲ್ಲಿ ಜೀವನವಿರುವುದಿಲ್ಲ. ಬೇಕು ಬೇಕು ಎನ್ನುವುದಕ್ಕಿಂತ ಮೇಲಿನ ಬಡತನ ಬೇರೆ ಇಲ್ಲ. ತನ್ನಲ್ಲಿದ್ದದ್ದನ್ನು ಅನುಭವಿಸದೇ ಬೇರೆಯವರಲ್ಲಿ ಇದ್ದದ್ದು ಬಯಸುತ್ತಾನೋ ಅವನು ದೊಡ್ಡ ಬಡವ. ಬೇಕು ಎನ್ನುವವನೇ ದೊಡ್ದ ಬಡವ.ಸಾಕು ಎನ್ನುವವನೇ ನಿಜವಾದ ಶ್ರೀಮಂತ. ತೃಪ್ತಿಯಿಂದ ಬದುಕುವವರಿಗೆ ಮೂರು ಆಡಿ ಭೂಮಿಯೇ ಸಾಕು." ಈ ಮಾತಿನ ಗೂಡಾರ್ಥ ತೆರೆದುಕೊಳ್ಳುವುದು ನಂತರದ ಅಧ್ಯಾತ್ಮವಿಚಾರದಲ್ಲಿ. ಬಲಿ ಯೋಚಿಸುತ್ತಾನೆ. " ಮೂರು ಲೋಕದ ಭೋಗ್ಯ ವಸ್ತುಗಳಿದ್ದರೂ ಇನ್ನೇನೋ ಬಯಸಿ ತೃಪ್ತನಾಗದೇ ತಾನು ಯಾಗ ಮಾಡುತ್ತಿದ್ದೇನೆ" , ವಾಮನನಲ್ಲಿ ಪ್ರತಿವಾದವಿಲ್ಲ. ಬಂದವನು ಅಸಾಮಾನ್ಯನೆಂಬ ಸುಳಿವು ಅಂತಾರಾತ್ಮಕ್ಕೆ ಅರಿವಾಗುತ್ತ ಅದು ಬಲವಾಗುತ್ತದೆ.

ಅತಿಯಾದ ಮಹತ್ವಾಕಾಂಕ್ಷೆಯೊಂದಿಗೆ ವೈರೋಚನಿಯಿಂದ ನೂರು ಯಾಗಗಳನ್ನು ಮಾಡಿಸಿದ ಗುರು ಶುಕ್ರಾಚಾರ್ಯ ಬಲಿಯ ನಿರ್ಧಾರದಿಂದ ಅಘಾತಕ್ಕೆ ಒಳಗಾಗುತ್ತಾನೆ. ಬಂದ ವಾಮನ ವಟು ಕೇವಲ ಬ್ರಾಹ್ಮಣನಲ್ಲ. ವಾಮನ ಅವತಾರಿ ವಿಷ್ಣು ಎಂದು ಹಲವು ವಿಧದಲ್ಲಿ ತಿಳಿಯ ಹೇಳುತ್ತಾನೆ.ಯಾರಿಗೆ ನೀಡಿದರೂ ವಿಷ್ಣುವಿಗೆ ನೀಡದಿರು ಎಂದು ಪರಿ ಪರಿ ಹೇಳುತ್ತಾನೆ. ಆದರೆ ಅದಾಗಲೇ ಅಂತರಾತ್ಮದಲ್ಲಿ ದೃಢ ನಿರ್ಧಾರ ತಳೆದ ಬಲಿ ಗುರು ಸಲಹೆಯನ್ನು ಸ್ವೀಕರಿಸುವುದೇ ಇಲ್ಲ. ಯಾವುದಕ್ಕಾಗಿ ಯಜ್ಞದೀಕ್ಷೆಯನ್ನು ಕೈಗೊಂಡಿದ್ದೇವೋ. ಅದು ಕೈಗೂಡುವ ಮೊದಲೇ ಯಜ್ಞನಾರಾಯಣನ ಆಗಮನವಾಗಿದೆ. ನೀರಿಗಾಗಿ ಬಾವಿ ತೋಡುವವನಲ್ಲಿ, ಬಾವಿ ತೋಡ ಬೇಡ ನೀರು ಸಿಗುತ್ತದೆ ಎಂದು ಹೇಳಿದ ಹಾಗಾಯಿತು.ಇಂತಹ ಸರಳವಾಕ್ಯಗಳು ಬಹಳ ಅರ್ಥಗರ್ಭಿತವಾಗಿರುತ್ತದೆ. ಯಜ್ಞತ್ವದ ಫಲ ಪ್ರಾಪ್ತಿಯಾಗಿದೆ ನಾರಾಯಣನಿಗೆ ನೀಡದೆ ಇನ್ನಾರಿಗೆ ನೀಡಲಿ.

ಸಂವಾದ ಕುತುಹಲವನ್ನು ಬೆಳೆಸುತ್ತದೆ. ಶುಕ್ರಾಚಾರ್ಯ ಹೇಳುತ್ತಾನೆ ಅನುಗ್ರಹಕ್ಕಾಗಿ ಯಜ್ಞನಾರಾಯಣ ಆಗಮನವಾದರೆ ಅವನೇನು ಕೇಳಿದರೂ ಕೊಡಬಹುದು. ಆದರೆ ಈಗ ಬಂದ ಉದ್ದೇಶವೇ ಬೇರೆ."ಅರಿಯದಿತ್ತೆಯ ಭಾಷೆಯಾ ,,," ಎಂದು ವಿಲಪಿಸುತ್ತಾ ಬಂದವ ಹರಿಯೆಂದು ತಿಳಿಯದೇ ಭಾಷೆಯನ್ನಿತ್ತೆ. ಆತ ನಿನ್ನದೆಲ್ಲವನ್ನೂ ಕಸಿದುಕೊಳ್ಳುತ್ತಾನೆ. ಹೀಗೆ ಶುಕ್ರಾಚಾರ್ಯನ ಪ್ರಲಾಪ ಬಲಿಗೆ ಸಮ್ಮತವಾಗುವುದಿಲ್ಲ. ಪರಮ ವೈಷ್ಣವನಾದ ತನಗೆ ಭಕ್ತವತ್ಸಲನಾದ ಹರಿ ದ್ರೋಹ ಬಗೆದಾನೇ? ಒಂದು ವೇಳೆ ತನ್ನಿಂದ ದಾನವಾಗಿ ಪಡೆದಾಗ ದಾತೃ ತಾನಾಗುತ್ತೇನೆ.ಹರಿಯೆಂದು ಅರಿಯದಿದ್ದಾಗ ಕೊಟ್ಟಭಾಷೆಯನ್ನು ಹರಿಯೆಂದು ತಿಳಿದಾಗ ಕೊಡದಿರಲು ಸಾಧ್ಯವೇ? ಒಂದು ವೇಳೆ ಕೊಡದೇ ಇದ್ದರೆ ಬೇರೆ ರೀತಿಯಲ್ಲಿ ಹರಿ ಪಡೆಯಲಾರನೇ?

ಆದರೂ ಶುಕ್ರಾಚಾರ್ಯ ಮತ್ತೂ ಗೋಗರೆಯುತ್ತಾನೆ.. ಬಲಿಯ ಸ್ಥಾನ ಚ್ಯುತಿಯಾಗುತ್ತದೆ. ಬಲಿ ವಂಚಿಸಲ್ಪಡುತ್ತಾನೆ. ಇದು ಹರಿಯ ವಂಚನೆ. ಈ ವಂಚನೆಗಾಗಿ ಸುಳ್ಳನ್ನು ಹೇಳಬಹುದು. ಅದಕ್ಕಾಗಿ ಶುಕ್ರಾಚಾರ್ಯ ಕೊಡುವ ಸರಳ ಉದಾಹರಣೆ .. ಹುಟ್ಟಿದಾರಭ್ಯದಿಂದ ನಾವು ಈ ಪಂಚಭೂತಗಳಿಂದ ಆವೃತವಾದ ಭೂಮಿಯನ್ನೋ ಮತ್ತಿತರ ವಸ್ತುಗಳನ್ನೋ ನನ್ನದು ನನ್ನದು ಎಂದು ಜೀವನ ಪರ್ಯಂತ ಸುಳ್ಳು ಹೇಳಿ ಬದುಕುತ್ತೇವೆ, ಹಾಗೇನೆ, ಇಲ್ಲಿಯೂ ಸುಳ್ಳು ಹೇಳಬಹುದು. ಆದುದರಿಂದ ಸತ್ಯವನ್ನೇ ನುಡಿದರೆ ಈಗ ಎಲ್ಲವನ್ನು ಕಳೆದುಕೊಳ್ಳುತ್ತಿ. ಸ್ಥಾನ ಭ್ರಷ್ಟವಾಗುತ್ತದೆ. ನಾನಿದ್ದೇನೆ ನೀನು ಸುಳ್ಳು ಹೇಳು ಎಂದು ಪರಿ ಪರಿಯಾಗಿ ಹೇಳುತ್ತಾನೆ.

ಅದರೂ ಬಲಿ ಸುಳ್ಳು ಹೇಳಲು ನಿರಾಕರಿಸುತ್ತಾನೆ. ಅದಕ್ಕೆ ಕೊಡುವ ಉದಾಹರಣೆ-
" ಒಂದು ಏಣಿಯನ್ನು ಉಪಯೋಗಿಸಿ ಮಾಳಿಗೆಯನ್ನು ಹತ್ತಿದಮೇಲೆ.. ಏಣಿ ದೊಡ್ಡದೆಂದು ಅದಕ್ಕೆ ನಮಸ್ಕರಿಸಬಹುದು.. ಅದರೆ ಮಾಳಿಗೆ ಹತ್ತಿದ ಮೇಲೆ ಏಣಿಯನ್ನು ಬಿಡಬೇಕು? "

ತನ್ನ ಯವುದೇ ಮಾತಿಗೆ ಶಿಷ್ಯನಾದವ ಒಪ್ಪದಾಗ ಖತಿಗೊಂಡ ಗುರು "ಸ್ಥಾನ ಭೃಷ್ಠನಾಗು" ಎಂದು ಶಪಿಸುತ್ತಾನೆ. ಆದರೂ ಬಲಿ ವಿಚಲಿತನಾಗದೇ ಗುರು ಶಾಪವನ್ನು ವರವೆಂದು ತನ್ನ ವಾದದಿಂದ ನಿರೂಪಿಸುತ್ತಾನೆ. ಗುರು ಶಾಪಕ್ಕೆ ಬಲಿಯ ಪ್ರತಿಕ್ರಿಯೆ ಬಹಳ ಚಿಂತನೆಯನ್ನು ಉಂಟುಮಾಡುತ್ತದೆ. " ತಾಯಿಯಾದವಳು ಹೊಡೆದರೂ ಅದು ಪ್ರೀತಿಯಿಂದಲೇ. ಗುರುವೇ ನಿನ್ನಯ ಶಾಪ ಶಿರದೊಳಗೆ ಧರಿಸಿಹೆನು. ಸ್ಥಾನ ಭ್ರಷ್ಟ ನಾದರೆ ಶ್ರೀ ಹರಿಗೆ ಮತ್ತಷ್ಟೂ ಹತ್ತಿರವಾಗುತ್ತೇನೆ" ಅಧ್ಯಾತ್ಮ ಚಿಂತನೆಯನ್ನು ಬಹಳ ಸರಳವಾಗಿ ಮಾಡಿಸುವ ಈ ಅರ್ಥಗಾರಿಕೆಯನ್ನು ತಲ್ಲೀನವಾಗಿ ಆಲಿಸಿದಾಗಲೇ ಅದರ ರುಚಿ ಮತ್ತು ಅದರ ಮಹತ್ವದ ಅರಿವಾಗುವುದು. ಪತ್ನಿಯಾದ ತರುಣಿ ಸಂದ್ಯಾವಳಿಯೂ ತನ್ನ ಅಭಿಮತವನ್ನು ಮುಂದಿಡುತ್ತಾಳೆ "ಕತ್ತಲೆಯಿಂದ ಬೆಳಕಿನೆಡೆಗೆ ಹೋದಂತೆ ಇಲ್ಲಿ ಕಳೆದುಕೊಳ್ಳುವುದರಿಂದ ಅಲ್ಲಿ ಮುಕ್ತಿ ಸಿಗುತ್ತದೆ."

ವಾಮನ ಬೃಹದಾಕಾರವಾಗಿ ಬೆಳೆದು ಒಂದರಿಂದ ಸ್ವರ್ಗವನ್ನು,,, ಇನ್ನೋಂದರಿಂದ ಧರೆಯವನ್ನೆಲ್ಲ ಅಳೆದು ಕೇಳುತ್ತಾನೆ ಮೂರನೆಯದು ಎಲ್ಲಿ? ಆಗ ಬಲಿ ಹೇಳುವ ಮಾತು ... ಒಂದನೆಯದು ಅದು ನನ್ನದಲ್ಲ ಎರಡನೆಯದೂ ಅದೂ ನನ್ನದಲ್ಲ... . ಈಸ್ವರ್ಗಕ್ಕೂ ಈಧರೆಗೂ ಸಮಾನವಾದದ್ದು ನನ್ನಲ್ಲಿ ಇನ್ನೂ ಇದೆ ಎಂದೆ ಕೇಳಿತ್ತಿರುವೆ ಇನ್ನೋಂದು ಇದೆ, .ಅದು ನನ್ನ ದೇಹ.. ಬಲಿಯ ನೂರನೆಯ ಯಾಗದ ಪೂರ್ಣಾಹುತಿ ನಿಜ ಅರ್ಥದಲ್ಲಿ ಆಗುವುದು ಇದೇ ಅಲ್ಲವೇ? ಹೀಗೆ ವಾಕ್ಪ್ರಂಪಚದ ಸೌಂದರ್ಯ ವಿಶಾಲವಾಗಿ ತೆರೆದುಕೊಳ್ಳುವ ಪರಿಗೆ ಆನಂದವಾಗುತ್ತದೆ.

ಯಕ್ಷಗಾನ ತಾಳ ಮದ್ದಲೆಯ ವೈಭವ ಈ ವಾಕ್ಪ್ರಪಂಚದಲ್ಲಿ ಅಡಗಿದೆ. ಅದನ್ನು ಅನುಭವಿಸಬೇಕಾದರೆ ಅದರಲ್ಲಿ ತಲ್ಲೀನರಾಗಿ ಅನುಭವಿಸಿದಾಗಲೇ ಇದರ ಅರಿವಾಗುವುದು. ಬಹಳ ವಿಶಾಲವಾದ, ಅರ್ಥವತ್ತಾದ ಜ್ಞಾನ ಸಂಪತ್ತು ಇಲ್ಲಿ ಬಹಳ ಸರಳವಾಗಿ ಸುಲಭವಾಗಿ ಲಭ್ಯವಾಗುತ್ತದೆ. ಬೇರೆ ಯಾವಪ್ರಾಕಾರದಲ್ಲೂ ಸಿಗದ ಹೇರಳವಾದ ಮನರಂಜನೆ ಮತ್ತು ಜ್ಞಾನ ಸಂಪತ್ತು ಕುಳಿತು ಕೇಳುವುದರಿಂದ ಪ್ರತಿಯೊಂದು ಪಾತ್ರದ ಒಳಗೆ ಇಣುಕುವುದರಿಂದ ಇಲ್ಲಿ ಸಾಧ್ಯವಾಗುತ್ತದೆ. ಇದಕ್ಕೆ ದೊಡ್ಡ ಗ್ರಂಥವನ್ನು ಉರು ಹೊಡೆಯಬೇಕಾಗಿಲ್ಲ. ಹಗಲಿರುಳು ಅಭ್ಯಾಸ ಮಾಡಬೇಕಾಗಿಲ್ಲ. ಸರಳವಾಗಿ ಅನುಭವಿಸುವುದು.