ಅದು ಸುರತ್ಕಲ್ ಮೇಳದ ಆಟ. ಪ್ರಸಂಗ ಸಮಗ್ರ ಭೀಷ್ಮ. ಪ್ರಸಂಗದ
ಅರಂಭದ ಭಾಗ. ಶಂತನು ತಮಾಲಕೇತ ನೆಂಬ ರಕ್ಕಸನನ್ನು ಸಂಹರಿಸುವ ಸನ್ನಿವೇಶ.
ತಮಾಲ ಕೇತನಾಗಿ ಯಕ್ಷಗಾನದ ಅಸುರ ಪಾತ್ರಧಾರಿ ಮಾತ್ರವಲ್ಲ ಬಣ್ಣದ ವೇಷಗಳಿಗೆ ತಾರಾಮೌಲ್ಯವನ್ನು
ತಂದುಕೊಟ್ಟಂತಹ ಕಲಾವಿದ ಶ್ರೀ ಬಣ್ಣದ ಮಹಾಲಿಂಗ. ಬಣ್ಣದ ವೇಶದ ಒಡ್ದೋಲಗ
ಎಂದರೆ ಕೇಳಬೇಕೆ? ಮೂರು ಸಲ ಆರ್ಭಟೆಕೊಟ್ಟು ನಂತರ ನಿಧಾನವಾಗಿ ರಂಗವೇರಿ
ಹಂತ ಹಂತವಾಗಿ ಅಸುರ ರೂಪವನ್ನು ಅನಾವರಣಗೊಳ್ಳಿಸುವ ರಾಕ್ಷಸೀ ವೇಶ. ಆದರೆ
ನಾವಂದು ಯಕ್ಷಗಾನದ ಅದ್ಭುತ ಬಣ್ಣದ ವೇಶವನ್ನು ಕಾಣುತ್ತಿದ್ದೇವೆ ಎಂಬ ಅರಿವು ನಮಗಿರಲಿಲ್ಲ.
ಯಥಾ ಪ್ರಕಾರ ಯಾವುದೋ ಒಂದು ವೇಶ ಎಂದು ಭಾವಿಸಿದ್ದರೆ ಪ್ರತ್ಯಕ್ಷದ ವಾಸ್ತವವೇ ಬೇರೆ.
ರಂಗಸ್ಥಳದ ತೆರೆ ಹಂತ ಹಂತವಾಗಿ ಸರಿಯುತ್ತಿದ್ದಂತೆ ರಂಗದ ಮಂದ ಬೆಳಕಿನಲ್ಲಿ ತಾರಕದ ಆರ್ಭಟೆಯೊಂದಿಗೆ ತಮಾಲ ಕೇತನ ದೈತ್ಯ
ವೇಶ ಕಣ್ಣೆದುರು ನಿಂತಿದೆ. ಭಯಾನಕ ವೇಶ ನೋಡಲಾರೆನು ಎಂದು ಕುಳಿತರೆ ಸಾಕೆ?
ಬಣ್ಣದ ಮರೆಯಲ್ಲಿ ಆ ಬಾಯಿ ಎಲ್ಲಿ ಅಡಗಿದೆಯೋ ಎಂದು ಹುಡುಕುವ ಮೊದಲು ಕರ್ಣವನ್ನು
ಇರಿಯುವಂತೆ ಅಸುರಾರ್ಭಟ ಕಿವಿಯನ್ನು ಮುಚ್ಚುವಂತೆ ಮಾಡುತ್ತಿದ್ದವು. ಕಣ್ಣು
ಕಿವಿ ಮುಚ್ಚಿದ ಮೇಲೆ ನೋಡುವ ಆಟ ಎಂತದ್ದು? ಸದ್ದು ಮಾಡಲೆಂದೇ ದುಡ್ಡುಕೊಟ್ಟು ತಂದ ಗರ್ನಾಲು ಹೊಟ್ಟಿಸುವಾಗ ಕೇಳಲಾಗದೆ
ಕಿವಿ ಮುಚ್ಚುವಂತೆ, ಆಟ
ನೋಡುವುದಕ್ಕೆಂದೇ ಬಂದ ಮೇಲೆ ರಕ್ಕಸ ಪಾತ್ರಕ್ಕೆ ಕಣ್ಣು ಕಿವಿ ಮುಚ್ಚಿಕುಳಿತರಾದೀತೆ. ವಿಚಿತ್ರವೆಂದರೆ ಕಣ್ಣು ಕಿವಿ ಮುಚ್ಚುತ್ತಿದ್ದದ್ದು ಪ್ರೇಕ್ಷಕನಲ್ಲ. ಮಾಲಿಂಗಣ್ಣ ನ ಆರ್ಭಟೆ ಮತ್ತು ವೇಶ ಇಂದ್ರಿಯಗಳೆರಡನ್ನೂ ನಿಷ್ಕ್ರಿಯವಾಗುವಂತೆ ಮಾಡುತ್ತಿದ್ದವು.
ಚೆಂಡೆಯ ಸದ್ದಿನಲ್ಲೂ ಸೂಕ್ಷ್ಮವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾದ ಆರ್ಭಟೆ
ಒಂದೆಡೆಯಾದರೆ ಪೊದೆಯೊಳಗೆ ಅವಿತುಕೊಂಡ ವ್ಯಾಘ್ರನಂತೆ ಬಣ್ಣದ ರಾಶಿಯ ಆಳದಲ್ಲಿ ಬೆಂಕಿಯನ್ನು
ಉಗುಳುವಂತೆ ತಿರುಗುತ್ತಿದ್ದ ಕಣ್ಣುಗಳು. ತಮಾಲ ಕೇತ ತಮಳವನ್ನು ಸೃಷ್ಟಿಸಿದ್ದ.
![]() |
|
ಅಂತರ್ಜಾಲದ ಅನಾಮಿಕ
ಚಿತ್ರಗಾರನಿಗೆ ಕೃತಜ್ಞನಾಗಿ
|
ಮಾಲಿಂಗಣ್ಣನ ಪ್ರವೇಶ
ಎಂದರೆ ಅಲ್ಲಿ ಧಾವಂತವಿಲ್ಲ. ಕಿರಿದಾದ ಹೆಜ್ಜೆಗಳನ್ನಿಡುತ್ತಾ ಕೈಗಳೆರಡನ್ನು ಭುಜದೆತ್ತರಕ್ಕೆ
ಅಗಲಿಸಿ ನಿಧಾನವಾಗಿ ಬರುವ ಸಿಂಹ ನಡಿಗೆಯದು. ಮುಖದ ಬಣ್ಣಗಾರಿಕೆಯೋ ಯಾವುದೇ ಡಿಪ್ಲೊಮವೂ ಮಾಡದ
ದೈವದತ್ತ ವರ್ಣ ವಿಸ್ಮಯವದು. ಸಾಮಾನ್ಯವಾಗಿ ಯಕ್ಷಗಾನದಲ್ಲಿ ಬಣ್ಣದವೇಶ ವೆಂದರೆ ಹಾಗೆ ಬಂದ ಹೀಗೆ ಹೋದ ಎನ್ನುವಂತಹ
ಸಂಭವ. ಆದರೂ ಮಾಲಿಂಗಣ್ಣನ ಬಣ್ಣ ಮುಖದಂತೆಯೆ ಮನಸ್ಸಿನಲ್ಲೂ ಗಾಢವಾಗುತ್ತದೆ. ವೇಷದಿಂದ ವೇಷಕ್ಕೆ
ಪಾತ್ರಕ್ಕೆ ಒಪ್ಪು ಯಕ್ಷಗಾನ ಪರಂಪಗೆ ಮಾದರಿ ಎನಿಸುವಂತಹ ಬಣ್ಣಗಾರಿಕೆ. ಕೇವಲ ಬಣ್ಣಗಾರಿಕೆ ಮಾತ್ರವಲ್ಲ ಅಂದಿನ ಆಕಾಲದಲ್ಲೂ
ಸೀಮಿತ ತಂತ್ರಜ್ಞಾನದಲ್ಲಿ ವೇಷಗಾರಿಕೆಯಲ್ಲಿ ಇವರು ತೋರುತ್ತಿದ್ದ ಕುಸುರಿ ಗಾರಿಕೆ ಕ್ರೀಯಾ
ಶೀಲತೆ ಯಕ್ಷಗಾನಕ್ಕೆ ಭೂಷಣ ಪ್ರಾಯವಾಗುತ್ತಿತ್ತು. ರಂಗವನ್ನು ತುಂಬುತ್ತಿದ್ದ ವೇಷಗಳು ಅದರಲ್ಲೂ
ಅಸುರ ವೇಷಗಳಂತೂ ಎಂತಹವರ ಎದೆಯಲ್ಲೂ ಕಂಪನವನ್ನು ಹುಟ್ಟಿಸುವ ರುದ್ರ ಭೀಕರವಾಗಿರುತ್ತಿತ್ತು.
ಬಣ್ಣದ ವೇಷಗಳ ಕುಣಿತ
ಅದರಲ್ಲು ದೊಡ್ಡ ಕಿರೀಟಧರಿಸಿ ರಂಗವೇರುವಾಗ ಘನ ಗಂಭೀರದ ನಿಧಾನ ವೇಗದ ಕುಣಿತ. ಇಂದು ಅದು
ಪೂರ್ಣವಾಗಿ ಬದಲಾಗಿ ಹೋಗಿದೆ. ರಂಗದ ಮೇಲೆ ರಾಜವೇಶ ಪುಂಡುವೇಷಕ್ಕೆ ಸರಿಮಿಗಿಲಾಗಿ ಬಣ್ಣದ ವೇಷಗಳು
ಕುಣಿಯಲಾರಂಬಿಸಿವೆ. ಬಣ್ಣದ ವೇಶದ ಪ್ರಭಾವ ಪ್ರೇಕ್ಷಕನಲ್ಲಿ ಉಂಟಾಗಬೇಕಾದರೆ ಅದು ನಿಧಾನವಾದ ಸಿಂಹ
ಹೆಜ್ಜೆಗಳೇ ಸೂಕ್ತ. ಮಾಲಿಂಗಣ್ಣನ ಕುಣಿತದ ವೈಶಿಷ್ಯವೇ ಇದು. ರಂಗಸ್ಥಳದ ಮೂಲೆಯಿಂದ ಮೂಲೆಗೆ ಅವರ
ಕುಣಿತದ ಒಂದು ಶೈಲಿ ಬಹಳ ಆಕರ್ಷಕವಾಗಿ ರಂಗವನ್ನು ತುಂಬಿಕೊಳ್ಳುತ್ತಿತ್ತು. ಮಿತಿಯಲ್ಲಿ ಸುತ್ತುವ
ಕ್ರಮ ಅದು ಇಂದು ರಂಗದಲ್ಲಿ ಅಪರೂಪವೇ ಆಗಿಬಿಟ್ಟಿದೆ. ಇಂದು ಸುತ್ತುವುದಕ್ಕೆ ಇಷ್ಟೇ ಎಂಬ
ಪರಿಮಿತಿಯೂ ಇಲ್ಲ. ವೇಷ ಕುಣಿದಂತೆ ಹಿಮ್ಮೇಳದವರು ಬಾರಿಸಿಬಿಡುತ್ತಾರೆ. ನಿಯಮವೂ ಇಲ್ಲ. ಪಾತ್ರದ ಮನೋಭಾವವನ್ನು ಅರ್ಥೈಸುವ
ಪ್ರಮೇಯವೇ ಇಲ್ಲ. ಅಂದಿನ ಅನಕ್ಷರಸ್ಥ ಅವಿದ್ಯಾವಂತರೂ ವೇಷ ಮಾಡುತ್ತಿದ್ದರೆ ಆಯಾ ಪಾತ್ರದ ಆಮೂಲಾಗ್ರ ಚಿತ್ರಣವನ್ನು ರಂಗದ ಮೇಲೆ
ಮೂಡಿಸುವ ಪ್ರಯತ್ನ ಮಾಡುತ್ತಿದ್ದರು. ಪಾತ್ರದಿಂದ ಪಾತ್ರಕ್ಕೆ ವಿಭಿನ್ನವಾಗಿ ಮೂಡಿಬರುತ್ತಿತ್ತು.
ಇಂದು ವಿದ್ಯೆ ಇದೆ. ಆದರೆ ಶಿಕ್ಷಣವಿಲ್ಲ.
ಮಾಲಿಂಗಣ್ಣನವರು ಕೇವಲ
ಅಸುರ ಪಾತ್ರಕ್ಕೆ ಸೀಮಿತವಾದವರಲ್ಲ. ತುಳು ಪ್ರಸಂಗಗಳಲ್ಲಿನ ವೇಷಗಳನ್ನೂ ನಾನು ಕೆಲವನ್ನು
ನೋಡಿದ್ದೇನೆ. ಅಲ್ಲಿಯೂ ಅವರ ವೈಶಿಷ್ಟ್ಯವನ್ನು ತನ್ನ ಬಣ್ಣಗಾರಿಕೆಯಿಂದ ವೇಶದ
ಕುಶಲಗಾರಿಕೆಯಿಂದಲೂ ತೋರಿಸುತ್ತಿದ್ದರು. ಗಾಢವಾಗಿ ಎದ್ದು ಕಾಣುವ ವರ್ಣ ಚಿತ್ತಾರ ರಂಗದಲ್ಲಿ
ವೇಷವನ್ನು ಆ ಮಂದ ಬೆಳಕಲ್ಲೂ ಎದ್ದು ಕಾಣುವಂತೆ ಮಾಡುತ್ತಿದ್ದವು. ತುಳು
ಪ್ರಸಂಗವೊಂದರಲ್ಲಿ ಅದು ಹೆಸರು ನೆನಪಿಲ್ಲ. ಮಾಲಿಂಗಣ್ಣ ಕುಸ್ತಿಯ ಜಟ್ಟಿ ವೇಶದಲ್ಲಿ ಬರುತ್ತಾರೆ. ಬಲಿಷ್ಠ ತೋಳುಗಳು ಮತ್ತು ಕಾಲುಗಳಿಗೆ ಸಂಕೇತವಾಗುವಂತೆ ಕೈ
ಕಾಲುಗಳಿಗೆ ಬಟ್ಟೆಯ ಮೇಲೆ ಬಟ್ಟೆಯನ್ನು ಸುತ್ತಿ
ದೈತ್ಯಾಕಾರವಾಗಿ ರಂಗವೇರುವಾಗ ಅಧ್ಬುತವಾದ ಜಟ್ಟಿ ಪ್ರವೇಶವಾದ ಅನುಭವ. ಇದು ಇವರೇ ಸೃಷ್ಟಿಸುವ
ಪಾತ್ರಗಳು ಇಂತಹ ಸಾವಿರಾರು ಪಾತ್ರಗಳು ರಂಗದಲ್ಲಿ
ಮಾಲಿಂಗಣ್ಣನ ವೇಶಗಾರಿಕೆಯಲ್ಲಿ ರೂಪತಳೆದಿವೆ. ಸಾಮಾನ್ಯವಾಗಿ ಕಥಕ್ಕಳಿ ಮುಂತಾದ ಕಲೆಯಲ್ಲಿ ಮುಖವರ್ಣಿಕೆಗೆ
ಬೇರೆಯೇ ಕಲಾವಿದರು ಸಹಾಯಕರು ಇರುತ್ತಾರೆ. ಆದರೆ ಯಕ್ಷಗಾನದಲ್ಲಿ ಸ್ವ ಬಣ್ಣಗಾರಿಕೆಯೇ ವೈಶಿಷ್ಟ್ಯ
ಅದರಲ್ಲೂ ಮಾಲಿಂಗನಂತಹವರ ಕೈಚಳಕ ಕಂಡರೆ ಯಕ್ಷಗಾನದ ವಿಶೇಷತೆ ಅರಿವಾಗುತ್ತದೆ. ಈ ವಿಶೇಷತೆಗೆ ಪೂರಕವಾಗುವಂತೆ
ಮಾಲಿಂಗಣ್ಣನ ವೇಶಗಾರಿಗೆ ವರ್ಣ ವೈಭವವನ್ನು ರಂಗದಲ್ಲಿ ಮೆರೆಸಲ್ಪಡುತ್ತದೆ.
ಬಣ್ಣದ ವೇಷಗಳ ತಂತ್ರಜ್ಞಾನ
ಇಂದು ಬಹಳಷ್ಟು ಬದಲಾಗಿ ಹೋಗಿದೆ. ಮೊದಲು ಬಣ್ಣಗಾರಿಕೆಯಿಂದಲೇ ಪ್ರತ್ಯೇಕಿಸಲ್ಪಡುತ್ತಿದ್ದ ವೇಷಗಾರಿಕೆ
ಇಂದು ವೆತ್ಯಾಸವಿಲ್ಲದೇ ಒಟ್ಟು ಬಣ್ಣಗಾರಿಕೆಯಿಂದ ರಂಗವೇರುತ್ತದೆ. ಬಣ್ಣಗಾರಿಕೆ ಕೇವಲ ವೇಶಗಾರಿಕೆ
ಎಂಬಂತಾಗಿದೆ. ಹಲವಾರು ವೇಶಗಳು ಬಣ್ಣವನ್ನು ಬದಿಗಿಟ್ಟು ಮುಖವಾಡದ ಮೊರೆ ಹೊತ್ತಿವೆ. ಇದು ಯಕ್ಷಗಾನದ
ಮೂಲ ವೈಶಿಷ್ಟ್ಯಕ್ಕೆ ಧಕ್ಕೆಯಾಗುವಂತಹುದು. ವೇಶಗಳ ಮುಖವರ್ಣಿಕೆ ಅದು ಬಣ್ಣಗಾರಿಕೆಯಿಂದಲೇ ರೂಪತಳೆಯಬೇಕು.
ಅದು ಯಕ್ಷಗಾನದ ನಿಜ ಬಣ್ಣಗಾರಿಕೆ. ಬಣ್ಣವಿಲ್ಲದ ಮುಖಗಳಿಗೆ ಮುಖವರ್ಣಿಕೆ ಎಂದು ಹೇಳುವುದಕ್ಕೆ ಅರ್ಥವಿಲ್ಲ. ಅದು ಕೇವಲ
ಮುಖವಾಡ. ಅದನ್ನು ಬಣ್ಣದ ವೇಶ ಎಂದು ವರ್ಗೀಕರಿಸಿದರೆ ಯಕ್ಷಗಾನದ ನಿಜ ಬಣ್ಣವೇಶಗಾರಿಕೆಯನ್ನು ಲೇವಡಿ
ಮಾಡಿದಂತೆ. ಇಂದು ತಂತ್ರಜ್ಞಾನ ಬೆಳೆವಣಿಗೆಯಾಗಿದೆ. ಆದರೆ ಪರಿಣಾಮ ನಿಸ್ತೇಜವಾಗಿದೆ. ಪ್ರಭಾವವೇ ಬೀರುವುದಿಲ್ಲ.
ಮಾಲಿಂಗಣ್ಣನಂತವರು ರಂಗಸ್ಥಳದಲ್ಲಿ ಕಳೆಯುವ ಸಮಯಕ್ಕಿಂತಲೂ ಅಧಿಕ ಹೊತ್ತನ್ನು ಬಣ್ಣದ ಪೆಟ್ಟಿಗೆಯ ಮುಂದೆ
ಕಳೆದಿದ್ದಾರೆ. ಆದರೂ ಅವರ ವೇಶಗಾರಿಕೆಯಲ್ಲಿ ’ಇಲ್ಲಿಗೆ ಇಷ್ಟು ಸಾಕು’ ಎಂಬ ಕಾಟಾಚಾರವಿರುತ್ತಿರಲಿಲ್ಲ. ಸಂಪೂರ್ಣ ಬದ್ದತೆ ಮತ್ತು
ಅರ್ಪಣಾ ಮನೋಭಾವ ಅವರ ವೇಶಗಾರಿಕೆಯಲ್ಲೂ ನಾಟ್ಯ ಅಭಿನಯದಲ್ಲೂ ಕಾಣಬಹುದಿತ್ತು. ಒಂದೆರಡು ಘಳಿಗೆಗೆ
ಬಂದು ಹೋಗುವ ಪಾತ್ರಗಳಿಗೆ ಗಂಟೆಗಟ್ಟಲೆ ಬಣ್ಣ ಬಳಿಯುತ್ತಾ ಕುಳಿತುಕೊಳ್ಳುವುದೆಂದರೆ ಇಂದಿನವರು ಕಲ್ಪಿಸುವುದಕ್ಕೂ
ಸಾಧ್ಯವಿಲ್ಲ. ಇಂದು ಯಕ್ಷಗಾನವೆಂದರೆ ಕೇವಲ ಅನುಕರಣೆ. ಅದರಲ್ಲೂ
ತಮಗಿಷ್ಟವಾದುದಷ್ಟನ್ನೇ ಅನುಕರಿಸುತ್ತಾರೆ ಹೊರತು ಯಕ್ಷಗಾನಕ್ಕೆ ಉಚಿತವಾದುದನ್ನಲ್ಲ. ಹಿರಿಯರ
ಅನುಕರಣೆ ಮಾಡುವಾಗ ಅದರ ಆಳಕ್ಕೆ ಇಳಿಯದೆ ಪಾತ್ರದ ಅಂತರಾತ್ಮ ತಿಳಿಯದೇ ಕೇವಲ ಅನುಕರಣೆ. ಇದು ಯಕ್ಷಗಾನಕ್ಕೆ
ಕ್ರಿಮಿಯಾಗಿ ಕಾಡುವ ಮಿಮಿಕ್ರಿ. ಪರೀಕ್ಷಾ ಸಮಯದಲ್ಲಿ
ನಕಲು ಹೊಡೆದು ಪಾಸಾದಂತೆ. ಉತ್ತರ ಕೇವಲ ಪತ್ರಿಕೆಯಲ್ಲಿ ಇರುತ್ತದೆ ಹೊರತು ತಲೆಯಲ್ಲಿ ಇರುವುದಿಲ್ಲ.
ಇವರ ತಲೆಯೂ ಕೇವಲ ಅನುಕರಣೆಗೆ ಸೀಮಿತವಾಗಿ ಉಳಿದಂತೆ ಶೂನ್ಯವಾಗಿರುತ್ತದೆ. ಹಾಗಾಗಿ ಮಾಲಿಂಗಣ್ಣನ ವೇಷ ಅನುಕರಣೆಗೆ ಸೀಮಿತವಾಗದೆ ಅನುಸರಣೆಗೆ
ಮಾರ್ಗವಾಗಿ ಪರಿವರ್ತನೆಯಾಗಬೇಕು.
ಮಾಲಿಂಗಣ್ಣನ ಬಣ್ಣದವೇಶವಾಗಲಿ ಇತರ ವೇಷವಾಗಲೀ ಪ್ರತ್ಯೇಕಿಸುವುದು ಕಷ್ಟ.
ಆದರೂ ಬಣ್ಣಕ್ಕೆ ವಿಶೇಷವಾಗಿ ಮಾಲಿಂಗ ಬಣ್ಣದವ್ಯಕ್ತಿಯಾಗಿ ಯಕ್ಷಗಾನದಲ್ಲಿ ಇತಿಹಾಸ ನಿರ್ಮಿಸಿ ಬಿಟ್ಟಿದ್ದಾರೆ.
ಇವರ ವೇಶವನ್ನು ಕಾಣುವಾಗ ನಾವು ಒಂದು ಇತಿಹಾಸಕ್ಕೆ ಸಾಕ್ಷಿಯಾಗುತ್ತೇವೆ ಎಂಬ ಅರಿವು ಇರುತ್ತಿರಲಿಲ್ಲ.
ಇರುತ್ತಿದ್ದರೆ? ಅಂತ ಈಗ ಅನ್ನಿಸುತ್ತದೆ. ಮಾಲಿಂಗಣ್ಣ
ಎಂದರೆ ಅದು ಯಕ್ಷಗಾನದ ಬಣ್ಣಕ್ಕೆ ಅನ್ವರ್ಥ. ಹಲವು ಸಲ ಅವರನ್ನು ವೇಷವಿಲ್ಲದೇ ಸಾಮಾನ್ಯವಾಗಿ ಕಂಡಾಗ
ನಾವು ಬೇರಗಾಗಿಬಿಡುತ್ತೇವೆ. ರಂಗದಮೇಲೆ ಬಂದು ರುದ್ರ ಭೀಕರತೆಯನ್ನು ಸೃಷ್ಟಿಸುವ ಮಾಲಿಂಗಣ್ಣ ಏನು
ಅರಿಯದ ಮುಗ್ಧರಂತೆ ಕಂಡು ಬರುತ್ತಿದ್ದರು. ಯಕ್ಷಗಾನದಲ್ಲಿ ಬಣ್ಣಕ್ಕೆ ತಾರಾಮೌಲ್ಯವನ್ನು ಒದಕಿಸಿ ಬಣ್ಣದ
ವಿಶ್ವವಿದ್ಯಾನಿಲಯವಾದರು ಬಣ್ಣದ ಮಾಲಿಂಗಣ್ಣ. ಹಾಗಾಗಿ ಯಕ್ಷಗಾನ ಎಂದೇಕೆ ಯಾವುದೇ ಕಲೆಯನ್ನು ಪರಿಗಣಿಸಿದರೂ
ಬಣ್ಣನೆಯ ಮಾತಲ್ಲ
ಬಣ್ಣಕ್ಕೊಬ್ಬನೇ ಮಾಲಿಂಗ ಅದು "ಬಣ್ಣದ ಮಾಲಿಂಗ".




