"ಇದು ವಿಮರ್ಶೆಯಲ್ಲದ ಚಿಂತನ"

Thursday, February 24, 2011

ಬಾಬೇಗ ಚಂದಮಾಮ.



[ಒಂದು ಮುನ್ನುಡಿ: ನನ್ನಲ್ಲಿ ಯಕ್ಷಗಾನದ ಅಭಿರುಚಿಯನ್ನು ಹುಟ್ಟಿಸಿ ಪೋಷಿಸಿದ ನನ್ನ ಮಾವನ ಚಿರಸ್ಮರಣೆಯಲ್ಲಿ ]

ವ್ಯಕ್ತಿತ್ವ ವಿಕಸನಕ್ಕೆ ಅಥವಾ ಅದು ರೂಪುಗೊಳ್ಳುವುದಕ್ಕೆ ಪ್ರತಿಯೊಬ್ಬರಿಗೂ ಯಾವುದಾದರು ವ್ಯಕ್ತಿ ಕಾರಣಿಭೂತರಾಗಿ, ಅಥವಾ ಪ್ರೇರಕ ಶಕ್ತಿಯಾಗಿ ಶಿಲ್ಪಿಯಂತೆ ಶಕ್ತಿರೂಪವಾಗಿರುತ್ತಾರೆ. ಅದು ಯಾವ ರೂಪದಲ್ಲೊ ಭಾವದಲ್ಲೊ ನಿರ್ವಚನ ಅಸಾಧ್ಯ. ಹೇಳಲಸಾಧ್ಯವಾದ ಭಾವನಾರೂಪಿಗಳು ಹಲವರ ಬದುಕಿನಲ್ಲಿ ನಿರೂಪಿಗಳಾಗಿಬಿಡುತ್ತಾರೆ. ಅದರಂತೆ ನನ್ನದಾದ ವ್ಯಕ್ತಿತ್ವ ಏನಿದೆಯೋ ಅದನ್ನು ನಾನು ರೂಢಿಸಿಕೊಂಡ ಬಗೆ ಏನಿದೆಯೋ ಅದಕ್ಕೆ ಪ್ರೇರಕರಾಗಿ ರೂಪಕರಾಗಿದ್ದದ್ದು ನನ್ನ ಸೋದರ ಮಾವ, ನನ್ನ ಅಮ್ಮನ ಒಡ ಹುಟ್ಟಿದ ತಮ್ಮನಾದ ಪೂಜ್ಯರಾದ ಶ್ರೀ ರಾಮ ಚಂದ್ರ ಭಟ್ ಆವಳ ಮಠ. ನಮ್ಮ ಮನೆತನಗಳಲ್ಲಿ ಪ್ರಸಿದ್ದವಾದ ಮಠದ ಕುಟುಂಬದವರಾದ  ಹಾಗು ನನ್ನ ಅಜ್ಜ ಪರಮಪೂಜ್ಯ  ಶ್ರೀ ಅಚ್ಚುತ ಭಟ್ (ಅಚ್ಚಣ್ಣ ಭಟ್ಟ) ಆವಳ ಮಠ ಇವರ ಮಗನಾದ ಇವರು ನನ್ನ ತಾಯಿಯವರ ಸಹೋದರ.

ಮೊನ್ನೆಯ ಸೋಮವಾರದ ದಿನಾಂಕ  21.02.2011 ರ ರಾತ್ರಿ ಬಂದ ಕರೆ ನನಗೆ ತೀವ್ರ ಅಘಾತವನ್ನು ಕೊಟ್ಟುಬಿಟ್ಟಿತು. ಮಾವ ಬ್ರೈನ್ ಹೇಮರೇಜ್ ಆಗಿ ಇನ್ನು ಅಸಾಧ್ಯ ಅಂತ ವೈದ್ಯರಿಂದ ತಿರಸ್ಕರಿಸಲ್ಪಟ್ಟು ಮನೆಗೆ ಬಂದ ವಾರ್ತೆ ನನ್ನ ಮನಸ್ಸಲ್ಲಿ ತಲ್ಲಣವನ್ನುಂಟು ಮಾಡಿತು. ಕಳೆದ ದಿನಗಳ ನೆನಪಿನ ಅಲೆಗಳ ಭೋರ್ಗರೆತಕ್ಕೆ ಸಂಪೂರ್ಣ ಶರಣಾದೆ, ಹೃದಯ ಬಡಿತ ನನ್ನ ನಿಯಂತ್ರಣ ವಿಲ್ಲದಂತೆ ವರ್ತಿಸಿತು. ನನ್ನ ಮನಸ್ಸಿನ ಪ್ರತಿ ಮಿಡಿತಗಳಿಗೆ ಹೃದಯದ ಬಡಿತಗಳಿಗೆ ಜನನಿಯಂತೆ ನಿಮಿತ್ತವಾದ ಮಾವ ರುಗ್ಣ ಶಯ್ಯೆಯಲ್ಲಿ . ಮನಸ್ಸು ತಾಳಿಕೊಳ್ಳುವ  ಶಕ್ತಿಯನ್ನು ಅರಸುವ ಯತ್ನ ಮಾಡಿತು.

ಮಂಚದಲ್ಲಿ ಎದ್ದು ಕುಳಿತು ಭಗವಂತನನ್ನು ಸ್ಮರಿಸಿದೆ. ಬೇಡುವುದಕ್ಕೇನು ತೋಚಲಿಲ್ಲ. ವೇಗವಾಗಿ ಬಡಿಯುತ್ತಿದ್ದ ಫ್ಯಾನ್ ಗಾಳಿ ಇದ್ದರೂ ವಾತಾವರಣ ಸ್ಥಬ್ಧವಾದಂತೆ ಭಾಸವಾಯಿತು. ದೋ ಎಂಬ ಅಕಾಲಿಕ ಮಳೆ ಬೇರೆ. ಅಸಹಜ ವಾತಾವರಣ. ಮಲಗಿದ್ದ ಅಮ್ಮನನ್ನು ಎಬ್ಭಿಸುವ ಯೋಚನೆ ಬಂದರೂ ಎಬ್ಭಿಸುವ ಬಗ್ಗೆ ಯೋಚಿಸ ಹತ್ತಿತ್ತು. ಏನೂ ಮಾಡಲು ತೋಚದ ಸನ್ನಿವೇಶ. ಯಾವುದನ್ನೂ ಯೋಚಿಸದ ಮನ ನಗಾರಿಯಂತೆ ಬಡಿದುಕೊಳ್ಳುತ್ತಿದ್ದ ಎದೆಯನ್ನು ನಿಯಂತ್ರಿಸುವಂತೆ ಪ್ರೇರೇಪಿಸಿ ಹಾಗೆ ಸ್ವಲ್ಪ ಅಂಗಾತನೆ ಮಲಗಿದೆ. ಮನಸ್ಸನ್ನು ಶಾಂತವಾಗಿಸುವ ಯತ್ನ. ನಾನು ನಾನಲ್ಲ ಎಂಬ ದಿವ್ಯತೆಯ ಅನುಭವವನ್ನು ಹೊಂದುವ ಯತ್ನ. ಹಾಗೆ ನಿಶ್ಚಲ ನಾಗಿ ಸ್ವಲ್ಪ ಹೊತ್ತು ಅದೇ ಸ್ಥಿತಿಯಲ್ಲಿ ಕಳೆದೆ. ಯಾವ ಕ್ಷಣದಲ್ಲೂ ಮೊಬೈಲ್ ರಿಂಗಾಗಬಹುದು. ಇದನ್ನೇ ನಿರೀಕ್ಷಿಸುತ್ತಾ ಭಹುಶಃ ಅಲ್ಲಿಗೆ ಸಣ್ಣ ಜೊಂಪು ಬಡಿಯಿತೋ ಏನೋ ?

ಸ್ಪುರದ್ರೂಪಿ ಮಾಮ
ಪಕ್ಕನೆ ಜೊಂಪು ಬಿಟ್ಟೆದ್ದೆ.. ಹೊರಗೆ ಮಳೆ ನಿಂತು ಶುಭ್ರ ಆಕಾಶ, ಬೆಳದಿಂಗಳ ನೀರವ ಮೌನದಲ್ಲೂ ವಿಚಿತ್ರವಾಗಿ ಕಾಗೆಗಳು ಕಿರುಚುವ ಸದ್ದು. ಒಂದೇ ಸವನೆ ಕಾ.. ಕಾ.. ಗುಟ್ಟುವಿಕೆಗೆ ಮನಸ್ಸು ನಾರಯಣ ಧ್ಯಾನವನ್ನು ಮಾಡಿತು. ಮೈ ಪೂರ ಬೆವರಿದ ಅನುಭವ. ಮೈ ಮನ ಕಟ್ಟಿ ಹಾಕಿದ ಬಂಧನದ ಹಾಗೆ ಭಾಸವಾಯಿತು. ಗಂಟೆ ಸರಿ ಸುಮಾರು ಒಂದಾಗಿರಬಹುದು.ಕಾಗೆಗಳು ಯಾಕೆ ಕಿರುಚಿತ್ತಿವೆ? ಮನಸ್ಸು ಮತ್ತಷ್ಟು ಕ್ಷೋಭೆಗೆ ಒಳಗಾಯಿತು. ಸ್ವಲ್ಪ ಹೊತ್ತಿಗೆ ಎಲ್ಲವೂ ಶಾಂತವಾಯಿತೋ ಎನ್ನುವಾಗ ಮೊಬೈಲ್ ರಿಂಗಾಯಿತು. ಧಿಗ್ಗನೆ ಎದ್ದೆ...ಬಾವನ ಹೆಸರು ಮೂಡಿತ್ತು. “ ಹಲೋ...” ಎಂದೆ ನನ್ನ ಧ್ವನಿ ನನಗೆ ಕೇಳಿಸಿಲ್ಲ ... “ ಬಾವ .. ಎಲ್ಲ ಮುಗೀತು .. ಈಗ ಐದು ನಿಮಿಷ ಆಯಿತಷ್ಟೇ....” ಮತ್ತೆ ಮಾತಿಲ್ಲ.
ಒಂದೆ ಬಾರಿಗೆ ಬಂಧಮುಕ್ತ ವಾತಾವಾರಣ ..ಎಲ್ಲಿತ್ತೋ ತಂಗಾಳಿ ಬೀಸತೊಡಗಿತು. ಮೈಯಲ್ಲಿ ಒಂದು ಬಗೆ ಚಲನೆಯ ಚುರುಕುತನ ಹೊಮ್ಮಿತು. ಎದ್ದೆ. ಹೊರಬಂದೆ ದೇವರಿ ನಮಸ್ಕರಿಸಿದೆ. ಮನಸ್ಸೆಂದಿತು “ ಭಗವಂತ ದಿವ್ಯಾ ಅತ್ಮಕ್ಕೆ ಸದ್ಗತಿಯನ್ನು ನೀಡು”
ಮತ್ತೂ ಒಂದು ಪ್ರಶ್ನೆ ಕಾಗೆ ಹಾಗೆ ಅರಚಿತ್ತೇ. ...? ಹೌದು ನಿಜ .


ಅಮ್ಮನನ್ನು ಎಬ್ಬಿಸಿದೆ ಅದಾಗಲೇ ಸತಿ ಎದ್ದು ಅಗಿತ್ತು. ಅಮ್ಮನಿಗೆ ನಿದ್ದೆಯೇ ಬಂದಿರಲಿಲ್ಲ. ರಾತ್ರಿ ಮಲಗಿದ್ದಾಗ ಹಿರಿಯ ಮಾವನ ನೆನಪೌ ಅದ್ಯಾಕೋ ಕಾಡಿತ್ತು. ಅದರೆ ಕಾಗೆಯ ಅರಚಾಟ ಅವರಿಗೂ ಕೇಳಿಸಿತ್ತು. ಮೆತ್ತೆಗೆ ಹೇಳಿದೆ.  “ ಬಾವ ಫೋನ್ ಮಾಡಿದ್ದ.. ಚಂದಮಾಮ ತೀರಿ ಹೋದರು...” ನನ್ನ ಅಳುವನ್ನು ಕಷ್ಟಪಟ್ಟು ತಡೆ ಹಿಡಿದೆ ಹಿರಿಯ ಜೀವ ಉದ್ವಿಗ್ನವಾಗಬಾರದಲ್ಲ?


ಮತ್ತೆ ಎಲ್ಲ ಕ್ಷಣದಲ್ಲಿ ಚುರುಕಾದೆವು. ತಮ್ಮ ಕಾರ್ ಸ್ಟಾರ್ಟ್ ಮಾಡಿದ. ಇದ್ದುದನ್ನು ಕೈಯಲ್ಲಿ ಹಿಡಿದು ಆ ರಾತ್ರಿಯೇ ಮಂಗಳೂರಿನತ್ತ ಹೊರಟೆವು.

ದಾರಿಯುದ್ದಕ್ಕೂ ಮಾವನ ನೆನಪುಗಳು ಮಾತಿನ ಮುಖದಲ್ಲಿ ಹರಿದಾಡಿತು.  ನನ್ನ ಮಾವ  ನನ್ನ ವ್ಯಕ್ತಿತ್ವದ ಸರ್ವ ರೂಪಕ್ಕೂ ಕಾರಣರಾದ ಮಾವ ಎಷ್ಟೊಂದು ಘಟನೆಗಳು. ಸಂದ ದಿನಗಳು. ಒಮ್ಮೆಲೆ ಮಾತು ನಿಲ್ಲಿಸಿ ಅಳುತ್ತಾ ಕಣ್ಣೀರು ಹಾಕಿದೆ. ಮಾವ .....ನನ್ನ ಮಾವ ಎಂತಹ ಅದ್ಭುತ ವ್ಯಕ್ತಿ...!!! 


ಅಷ್ಟೇನೂ ವಿದ್ಯಾವಂತರಲ್ಲದ ಮಾವ ಮಹಾಜ್ಞಾನಿಯಂತೆ ಮಾತನಾಡ ಬಲ್ಲರು. ತತ್ವಾದರ್ಶವನ್ನು ತಾವು ಕಂಡ ಬಗೆಯಲ್ಲಿ ಹೇಳಬಲ್ಲರು. ನನ್ನಲ್ಲಿ ನಿಸ್ವಾರ್ಥತೆಯ ಭಾವವನ್ನು ಬೆಳೆಸಿದ ಪರಮ ಗುರುವಾಗಬಲ್ಲರು. ಚಂದಮಾಮ ಎಂದಿಗೂ ಚಂದಮಾಮನೇ ನಿಸ್ವಾರ್ಥಿ. ಪವಿತ್ರ ಚಂದ್ರನ ಬೆಳಗಿನ ಶುಭ್ರಮನಸ್ಸಿನವ್ಯಕ್ತಿ.


ನನ್ನ ಬಾಲ್ಯ ... ತುಂಬ ಸಣ್ಣ ಮಗುವಾಗಿರುವಾಗಲೇ ಅಕ್ಕನ ಮಕ್ಕಳೆಂದರೆ ಅಕ್ಕರೆ. ಅದೆಂತಹ ಅಕ್ಕರೆ. ಇಂದೂ  ಮಾವನ ಮಕ್ಕಳಲ್ಲಿ ನಾನು ಹೇಳುವುದಿದೆ. “ನಿಮಗೆ ಗೊತ್ತಿಲ್ಲದ ನಿಮ್ಮ ಅಪ್ಪನನ್ನು ನಾನು ಕಂಡಿದ್ದೇನೆ ಅವರಲ್ಲಿ. ನಿಮಗೆ ಕೊಡದಂತಹ ಪ್ರೀತಿ ಮಮತೆಯನ್ನು ನಾನು ಉಂಡಿದ್ದೇನೆ. ನಿಮ್ಮನ್ನು ಎತ್ತಿ ತಿರುಗಾಡಿದ್ದು ನಿಮಗೆ ನೆನಪಿಲ್ಲದಷ್ಟು ಕಡಿಮೆ ... ಅದರೆ ನನ್ನನ್ನು ಎತ್ತಿ ತಿರುಗಾಡಿದ್ದು ನನಗಿನ್ನೂ ನೆನಪಿದೆ.”


ಪ್ರತೀ ಯೊಬ್ಬರಲ್ಲೂ ಅಗಾಗ ಹೇಳುವ ಮಾತಿದೆ ಆ ಅಕ್ಕನ ಮಕ್ಕಳು ಈ ತೋಳಿಂದ ಎತ್ತಿ ಬೆಳೆದವುಗಳು. ನನ್ನ ಮಡಿಲಲ್ಲಿ ಉಚ್ಚೆ ಹೊಯಿದು ಒದ್ದೆ ಮಾಡುವ ಮೊದಲೇ ನನ್ನ ಪ್ರೀತಿಯ ಕಣ್ಣೀರಧಾರೆ ಅವರನ್ನು ತೋಯಿಸಿ ಆಗಿದೆ. ಹೌದು ಅಲ್ಲಿಗೆ ನಾವು ಪವಿತ್ರಪಾಣಿಗಳಾಗಿದ್ದೆವು.

ಬಸವಳಿದ ದೇಹ..
ಹಲವು ಸಲ ನಾನು ಹೇಳಿದ್ದಿದೆ, ನನ್ನ ಬಾಲ್ಯದ ಸಂಗತಿಗಳು. ಅದೆಲ್ಲದಕ್ಕೂ ಅಧಿಕ ನಂಟು ಇರುವುದು ನನ್ನ ಚಂದಮಾಮನಿಗೆ. ಕಣ್ಣಿಗೆ ಅಗಸದಲ್ಲಿ ಕಾಣುವ ಚಂದ ಮಾಮ ಈ ರೂಪದಲ್ಲಿ ಅನ್ವರ್ಥವಾಗಿದ್ದ. ಬಾಲ್ಯದಿಂದಲೆ...!!
ನನಗೆ ರಾಜ್ ಕುಮಾರ್ ಎಂದು ನಾಮಕರಣ ಮಾಡಿದವರೇ ನನ್ನ ಮಾವ. ಹಲವು ವಿಧದಲ್ಲಿ ಚಿತ್ರ ನಟ ರಾಜ್ ಕುಮಾರ್ ಗೆ ಹೋಲುವಂತಿದ್ದ ಸ್ಪುರದ್ರೂಪಿ ಮಾವ ನನಗೇ ಪ್ರೀತಿಯಿಂದ ಆ ಹೆಸರಿಟ್ಟಿದ್ದರು. ಮಾತ್ರವಲ್ಲ ಆವಾಗ ಕಾರ್ ಸ್ಟ್ರೀಟ್ ನಲ್ಲಿ ತಾನು ನಡೆಸುತ್ತಿದ್ದ ಹೋಟೇಲ್ ಗೆ ರಾಜಾಮಹಲ್ ಎಂದು ನನ್ನದೆ ಹೆಸರು ಇಟ್ಟಿದ್ದರು.   ಒಂದು ಸಲ ಅವರು ಚಲನಚಿತ್ರಕ್ಕೂ ಆಯ್ಕೆಯಾಗಿದ್ದರು ಎಂದು ಹಲವರು ನಮ್ಮಲ್ಲಿ ಹೇಳುತ್ತಿದ್ದರು. ನಮ್ಮ ಅಜ್ಜ ಯಾವುದಕ್ಕೂ ಅವರನ್ನು ಬಿಟ್ಟಿರಲಿಲ್ಲ. ಬ್ರಾಹ್ಮಣರಿಗೆ ಸಲ್ಲುವದ್ದು ಅಲ್ಲ ಎಂದೆ ಬೈದು ತಡೆದರು. ಹಾಗೆ ನೋಡಿದರೆ ಮಾವ ಸ್ವತಃ ಉತ್ತಮ ಕಲಾವಿದ, ಗಾಯಕ, ಆದರೆ  ದುರ್ದೈವ ಯಾವುದೂ ಬಹಿರಂಗವಾಗಲೇ ಇಲ್ಲ. “ಗುಮ್ಮನ ಕರೆಯದಿರೆ ಅಮ್ಮಾ ನೀನು ” ಎಂಬ ಪುರಂದರ ದಾಸರ ಭಜನೆ ಈಗಲೂ ನನ್ನ ಕಿವಿಯಲಿ ಗುಂಯ್ ಗುಡುತ್ತಿದೆ.ಯಕ್ಷಗಾನದ ಅಭಿರುಚಿಯನ್ನು ನನ್ನಲ್ಲಿ ಬೆಳೆಸಿದ ಮೂಲ ಇರುವುದು ಮಾವನಲ್ಲೇ. ಎಷ್ಟೊಂದು ಯಕ್ಷಗಾನ ಬಯಲಾಟ  ತಾಳಮದ್ದಲೆಗಳಿಗೆ ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ಬಲಿಪ ನಾರಾಯಣ ಬಾಗವತರು ಆಗಾಗ ಮನೆಗೆ ಬೇಟಿ ಕೊಟ್ಟಾಗಲು ಅಪಾರ ಕಾಳಜಿಯಿಂದ ಅವರ ಅತಿಥ್ಯವಹಿಸುತ್ತಿದ್ದರು. ಕಳೆದ ವರ್ಷ ನನ್ನ ಭಾವನ ಮದುವೆ ಸಂದರ್ಭದಲ್ಲಿ ನನ್ನ ಮೊಬೈಲ್ ನಲ್ಲಿದ್ದ ಬಲಿಪ್ಪಜ್ಜನ ಭೀಷ್ಮಪರ್ವ ಯಕ್ಷಗಾನವನ್ನು ಮಾವ ಆಸಕ್ತಿಯಿಂದ ಆಲಿಸಿದಾಗ ನನಗೆ ಗತಕಾಲದ ಮಾವನ ನೆನಪಾಗಿತ್ತು. ಅವರ ಬಾಲ್ಯದಲ್ಲಿ ಒಂದು ಸಲ ಯಕ್ಷಗಾನದಲ್ಲಿ ಸ್ತ್ರೀ ವೇಶ ಮಾಡಿದ್ದನ್ನೂ ಹಲವುಸಲ ನೆನಪಿಸುತ್ತಿದ್ದರು. ಮಹಾವಿಷ್ಣುವಿನ ಜತೆ ಲಕ್ಷ್ಮಿಯ ಪಾತ್ರ. ವಿಷಯ ತಿಳಿದ ಅವರ ಅಪ್ಪ ನನ್ನಜ್ಜ ಅವರನ್ನು ವೇದಿಕೆಯಿಂದಲೇ ಎಳೆದುಕೊಂಡು ಬಂದಿದ್ದರಂತೆ. ಇದನ್ನು ಯಾವ ಭಾವನೆಯಲ್ಲಿ ಹೇಳುತ್ತಿದ್ದರೋ ಆ ಭಾವನೆಯ ಅರ್ಥ ಈಗಲೂ ನನಗೆ ಆಗಲೆ ಇಲ್ಲ. ಅಳಕೆ ರಾಮ ರೈ ಯ ಪಾತ್ರ ಮತ್ತು ನಟನೆಯನ್ನು ಎಷ್ಟುಸಲ ವಿವರಿಸುತ್ತಿದ್ದರೋ ಲೆಕ್ಕವಿಲ್ಲ. ಶೇಣಿ ಸಾಮಗ ಪೆರ್ಲರ ಹಲವು ಸಂವಾದವನ್ನು ಎಳೆ ಎಳೆಯಾಗಿ ನನಗೆ ವಿವರಿಸುತ್ತಿದ್ದರು. ಪೆರ್ಲರ ಅರ್ಥಗಾರಿಕೆಯ ಸೊಗಸನ್ನು ಅಪಾರವಾಗಿ ಅಭಿಮಾನಿಸುತ್ತಿದ್ದ ಅವರು ಅದರ ತತ್ವ ಸಿದ್ದಾಂತಗಳ ಆಳವನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದರು.

ಹಲವು ದಶಕದ ಹಿಂದಿನ ಮಂಗಳೂರು ನಗರ. ಹಳೆಯ ನೀಲಿ ಕಪ್ಪು ಗೆರೆಯ ಸಿ.ಪಿ.ಸಿ. ಬಸ್ ನಲ್ಲಿ ಅಥವಾ ಶಂಕರ್ ವಿಟ್ಟಲ್ ಬಸ್ ನಲ್ಲಿ ಮಾವನ ಜತೆ ನಗರದಲ್ಲಿ ಓಡಾಡಿದ್ದು , ಮಾತ್ರವಲ್ಲ ಅವರ ಹಳೆಯ ಬಿ.ಎಸ್. ಎ. ಸೈಕಲ್ ನಲ್ಲಿ ಹಂಪನ್ ಕಟ್ಟೇ ಕಾರ್ ಸ್ಟ್ರೀಟು ಟೆಂಪಲ್ ಸ್ಕ್ವೇರ್ ಎಂದೆಲ್ಲ ಓಡಾದ್ದು ಇನ್ನೂ ನನಗೆ ಅಚ್ಚಳಿಯದೆ ಉಳಿದಿದೆ. ವಿಶ್ವಭವನದಲ್ಲಿ ನಾನು ಅವರು ಜತೆಯಾಗಿ ತಿನ್ನುತ್ತಿದ್ದ ಇಡ್ಲೀ ಸಾಂಬಾರ್ ರವಾದೋಸೆಯ ನೆನಪು ಮಾವ ಎಂದೋಡನೆ ನೆನಪಿಗೆ ಬರುತ್ತದೆ. ಹಳೆಯ ಉಡುಪಿ ಕೃಷ್ಣ ಭವನ...(ಈಗಿನ ದೊಡ್ಡ ಐಡಿಯಲ್ ಐಸ್ಕ್ರೀಮ್ ಪಕ್ಕದ ಕಟ್ಟಡದಲ್ಲಿ)ದಲ್ಲಿನ ಉದ್ದಿನ ಬಿಸ್ಕಿಟ್ ಅಂಬಡೆ ಸಾಂಬಾರ್ ಮಾವನ ಪ್ರಿಯವಾದ ತಿಂಡಿ.


ಹತ್ತು ಹಲವು ತಿಂಡಿಗಳನ್ನು ಮಾಡಲು ಬಲ್ಲ ಮಾವ ಚಕ್ಕುಲಿ ಎಳ್ಳುಂಡೆಯ ತಯಾರಿಯಲ್ಲಿ ತನ್ನದೇ ತಂತ್ರಜ್ಞಾನವನ್ನು ತುಂಬುತ್ತಿದ್ದರು. ವ್ಯಾಪಾರಿ ಉದ್ದೇಶಕ್ಕೆ ಇವರ ಅದ್ಭುತ ಟಿಪ್ಸ್ ಗಳು ಮತ್ತು ಇವುಗಳ ತಯಾರಿಯನ್ನು ಅವರಿಂದಲೇ ನಾನು ಕಲಿತದ್ದು ಮಾತ್ರವಲ್ಲ ಪ್ರಥಮದಲ್ಲಿ ಅದೇ ನನ್ನ ಜೀವನ ರೂಪೀಕರಣಕ್ಕೂ ಹಾದಿಯಾಗಿತ್ತು. ಕೆಲಸದಲ್ಲೂ ಹಾಗೆ ಅತ್ಯಂತ ವೇಗವಾದ ಕೆಲಸ ಮಾವನ ಶೈಲಿ. ಯಾವುದೇ ಕೆಲಸವನ್ನಾದರೂ ಬೇಗನೆ ಮುಗಿಸಿ ಮತ್ತೆ ಸುಮ್ಮನೆ ಮಲಗುವುದು ಮಾವನ ಪ್ರಿಯವಾದ ಶೈಲಿ. ಎರಡು ಮೂರು ಜನರ ಕೆಲಸವನ್ನು ಒಬ್ಬರೇ ಮಾಡುವ ಜಾಣತನ ಮಾವನಲ್ಲಿ ಅಪಾರ. ಇತ್ತಿಚೆಗೆ ಹಲವು ತಿಂಡಿ ವ್ಯಾಪಾರಿಗಳು ಇದರ ಲಾಭ ಪಡೆದದ್ದಿದೆ.


ನಾನು ಮರೆಯದ ಹಲವು ಹವ್ಯಾಸಗಳು ಒಂದು ತರಕಾರಿ ಬೆಳೆಯುವುದು ಮತ್ತು ಅಡುಗೆಕೆಲಸ. ಮಂಗಳೂರಿನ ಸ್ಥಳದಲ್ಲಿ ಊರಿನ ಉತ್ತಮ ಬೆಂಡೇಕಾಯಿ ಸ್ವಂತ ಕೃಷಿ ಮಾಡುತ್ತಿದ್ದರು.  ಅದು ಉದ್ದ ತಳವಾರಿನ ಹಾಗೆ ಅಗುತ್ತಿತ್ತು. ಹೀರೆಕಾಯಿ .. ಕೆಸುವು ಮತ್ತು ಹಾಗಲ ಕಾಯಿ ಮಾವನ ಪ್ರಿಯ ತರಕಾರಿಗಳು. ಇವುಗಳ ರುಚಿ ಅಸ್ವಾದನೆಯನ್ನು ನನಗೆ ಕಲಿಸಿದ್ದೇ ಮಾವ. ಇಂದಿಗೂ ನನ್ನ ಅತಿಪ್ರಿಯ ತರಕಾರಿ ಹಾಗಲ. ಹತ್ತು ಹಲವು ರೀತಿಯ ಹಾಗಲಕಾಯಿ ವಿಭವಗಳ ತಯಾರಿಯಲ್ಲಿ ಮಾವ ಸಿದ್ದಹಸ್ತರು.

ಚಂದಮಾವ ಎಂದೊಡನೆ ಅವರೊಂದಿಗೆ ಕಳೆದ ಹಲವು ರಸಘಳಿಗೆಗಳಲ್ಲಿ  ಒಂದು.. ನಾವೆಲ್ಲ ಮಕ್ಕಳು ರಾತ್ರಿ ಬೇಗನೇ ಊಟ ಮಾಡಿ ಮಲಗುತ್ತಿದ್ದೆವು. ತಡ ರಾತ್ರಿಯಲ್ಲಿ ಮನೆಗೆ ಬಂದ ಇವರು ಅತ್ತೆಯಲ್ಲಿ ಊಟಕ್ಕೆ ಏನೇ? ಎಂದು ವಿಚಾರಿಸಿ ಮಾಡಿದ ಅಡುಗೆ ಇಷ್ಟವಿಲ್ಲದೆ ... ಅಂಗಳ ದ ಮೂಲೆಗೆ  ಸ್ವತಹ ಬೆಳೆಸಿದ ಬೆಂಡೇಕಾಯಿ ಅಥವಾ ಪಡುವಲ ಕಾಯಿಯನ್ನು ಅದೂ ಅತ್ಯಂತ ತುಂಬಾ ಎಳೆಯದಾಗಿ ಇರುವದ್ದನ್ನು ಹಸಿ ಹಸಿಯಾಗಿ ಒಂದೆರಡನ್ನು ಕೊಯಿದು ತರುತ್ತಿದ್ದರು. ಆರಾತ್ರಿ ಅವರ ಆಡುಗೆ ಶುರು. ತಂದು ಬೇಗನೆ ಬೇಗನೆ ಹೆಚ್ಚಿ..ಪಲ್ಯತಯಾರಿ. ಅದರ ಪರಿಮಳಕ್ಕೆ ನಮಗೆ ಎಚ್ಚರವಾಗುತ್ತಿತ್ತು. ಆದರು ದೊಡ್ಡಮ್ಮನ ಭಯದಿಂದ ಹಾಗೆ ಮಲಗಿದ್ದರೆ ಊಟ ಮಾಡುತ್ತಿದ್ದ ;ಇವರು...” ರಾಜ ಮಲಗಿದಿಯಾ..? ನಿದ್ದೆ ಬಂತ.. ? “ ಅಂತ ಕರೆದಾರು ನಾನು ದಿಗ್ಗನೆ ಎದ್ದು ಪುನಃ ಪಲ್ಯ ಅನ್ನ ಊಟ ಮಾಡಿ ಮಲಗುತ್ತಿದ್ದೆ. ಯಾವುದು ಮರೆತರು ಇದನ್ನು ಮರೆಯಲಾರೆ. ಅದ್ಭುತ ರುಚಿಯ ಇಂತ ಹಲವು  ಅಡುಗೆ ಮಾವನ ವಿಶೇಷತೆ.  ಊಟದಲ್ಲೂ ಅಷ್ಟೇ ಎಲ್ಲರೂ ಪಲ್ಯದ ಹೋಳು ತೆಗೆದುಕೊಳ್ಳುತ್ತಿದ್ದರೆ ಇವರು ಪಲ್ಯದ ಜತೆಗೆ ಇರುತ್ತಿದ್ದ ಬರೀ ರಸ.. ಅದು ಒಗ್ಗರಣೆ ಮಿಶ್ರಿತವಾಗಿ ಇದ್ದದ್ದನ್ನು ಸಾರಿನಂತೆ ಹಾಕಿ ಊಟ ಮಾಡುತ್ತಿದ್ದರು. ಮತ್ತು ಈ ರುಚಿಯನ್ನು ನನಗೂ ಹಿಡಿಸಿದ್ದರು. ನಮ್ಮಲ್ಲಿ ಸಾಮಾನ್ಯವಾಗಿ ರುಚಿಯಾಗಿ ಅಡುಗೆ  ಮಾಡುವುದರಲ್ಲಿ ಹೆಂಗಸರಿಗಿಂತ  ಗಂಡಸರೇ ಮುಂದು. ಅದರೆ ಮಾವ ಇದರಲ್ಲೂ  ಎತ್ತಿದ ಕೈ. ಅದರಲ್ಲೂ ತನಗೆ ಬೇಕಾದದ್ದನ್ನು ತಾನೆ ಅಚ್ಚುಕಟ್ಟಾಗಿ ಮಾಡಿತಿನ್ನುತ್ತಿದ್ದರು. ಮಧ್ಯಾಹ್ನ ಒಂದು ಗಂಟೆಗೆ ಆಡುಗೆ ಮಾಡಲು ಹೋಗುವ ಇವರು ಒಂದೂವರೆಗೆ ಎಲ್ಲ ಸಿದ್ದಗೊಳಿಸಿ ಊಟಕ್ಕೆ ಕೂರುತ್ತಿದ್ದರು. ಅತ್ಯಂತ ಕ್ಷಿಪ್ರ ಅಷ್ಟೇ ರುಚಿಯಾದ ಅಡುಗೆ. ಇದನ್ನು ನಾನು ಬಹಳ ಇಷ್ಟ ಪಟ್ಟು ನನ್ನಲ್ಲೂ ಅಲವಡಿಸುವ ಪ್ರಯತ್ನ ಮಾಡಿದ್ದೇನೆ. ನನಗೆ ಬೇಕು ಅನ್ನಿಸಿದ್ದು ನಾನೆ ಮಾಡಿ ತಿನ್ನುವ ಗುಣ ನಾನು ಕಲಿತಿದ್ದರೆ ಅದು ಇವರಿಂದ. ಸಾಧ್ಯವಾದಷ್ಟು ಅವರದೇ ಶೈಲಿಯನ್ನು ಅನುಕರಿಸುತ್ತಿದ್ದೇನ. ಮತ್ತು ನನ್ನ ಅತಿಪ್ರಿಯವಾದ ಹವ್ಯಾಸ ವೂ ಆಗಿದೆ. ಇದರಿಂದಾಗಿ ನನ್ನ ಅಡುಗೆ ನನ್ನ ತಮ್ಮನಿಗೆ ಅತ್ಯಂತ ಪ್ರಿಯವಾಗಿ ಪರಿಣಮಿಸಿದೆ.

ಹೀಗೆ ಒಂದೆರಡಲ್ಲ.. ಹಲವು ವೇದ ಮಂತ್ರ ಶ್ಲೋಕಗಳಿಗೆ ಮೊದಲು ನನಗೆ ಮಾವನೇ ಗುರು. ಉತ್ತಮವಾಗಿ ಭಜನೆ ಮಾಡುವ ಗುಣ ಅಲ್ಪಸ್ವಲ್ಪ ನಾನು ಕಲಿತಿದ್ದೆ. ಮಂಗಳೂರಿನ ಪರಿಸರದಲ್ಲಿ ಹಲವು ಕಡೆ ಹೋದದ್ದು ನೆನಪಿದೆ. ಹಲವು ಪ್ರತಿಭೆಗಳ ಜತೆ ಅತ್ಯಂತ ವಿಶಿಷ್ಟ ಗುಣಗಳು ಬಹುಶಃ ಮಾವನ ಮೇರುವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಅವುಗಳಲ್ಲಿ ಅತ್ಯಂತ ವಿಶಿಷ್ಟವಾದದ್ದು ನಿಸ್ವಾರ್ಥ ಸ್ವಭಾವ ..ತನಗಾಗಿ ಮಾವ ಎನೂ ಮಾಡಲಿಲ್ಲ. ಒಂದು ಪಂಚೆಯಾಗಲಿ ವಸ್ತುವಾಗಲಿ ಮಾವ ಬಯಸಲಿಲ್ಲ. ಅತ್ಯಂತ ತಾಳ್ಮೆಯ ಸ್ವಭಾವ. ಇವರ ನಿಸ್ವಾರ್ಥತೆ ಹಲವು ನಿದರ್ಶನಗಳು ಬದುಕಿನುದ್ದಕ್ಕೂ ಸಿಗುತ್ತದೆ.

ಮಂಗಳೂರಿನ ಮನೆಯಲ್ಲಿ ಉಳಿದುಕೊಂಡು ಕಾಲೇಜು ವಿದ್ಯಾಭ್ಯಾಸ ಮಾಡಿದ ಹಲವು ವ್ಯಕ್ತಿಗಳಿದ್ದಾರೆ. ಉಚಿತವಾಗಿ ಊಟ ಉಂಡು ವಿದ್ಯಾಭ್ಯಾಸ ಮಾಡಿದವರು ಇಂದು ಬದುಕಿನಲ್ಲಿ ತಮ್ಮದೇ ನೆಲೆಗಳನ್ನು ಕಂಡು ಕೊಂಡು ಬ್ಯಾಂಕ್ ಮ್ಯಾನೇಜರ್ ಅಥವಾ ಇನ್ಯಾವುದೊ ಹುದ್ದೆಯಲ್ಲಿದ್ದರೆ ಮಾವ ಮಾತ್ರ ಅದೇ ತುಂಡು ಪಂಚೆ ಬೈರಾಸಿನ ಬೈರಾಗಿಯಾಗಿಯೇ ಕೊನೆವರೆಗೆ ಉಳಿದದ್ದು ಬದುಕಿನ ವಿಚಿತ್ರ. ಎಂತಹ ತ್ಯಾಗ ಮನೋಭಾವ..ಅದು ಮಾತ್ರ ಪ್ರಸಿದ್ದಿಗೆ ಬರಲೇ ಇಲ್ಲ. ಮಾವ ಪ್ರಸಿದ್ಧಿಯ ಹಿಂದೆ ಹೋಗಲೂ ಇಲ್ಲ. ಯಾವತ್ತಿಗೂ ದುಡ್ಡಿನ ಹಿಂದೆ ಹೋಗದ ನಿಸ್ವಾರ್ಥತೆ... ಕೊನೇವರೆಗೂ ಹೇಳಿದ ಮಾತು ದುಡ್ಡು, ಅದು ನಾನು ಮಾಡುತ್ತಿದ್ದರೆ ಕಟ್ಟಿ ಇಡುತ್ತಿದ್ದರೆ ಇಂದು ಈ ಮಾಮ ಬೇರೆಯೆ ಅಗುತ್ತಿದ್ದ. ಸ್ವಂತ ಮಕ್ಕಳಿಗಿಂತ ಪರರಿಗೆ ನೀಡಿದ್ದೇ ಅಧಿಕ. ನನ್ನ ಅರಿವಿನಲ್ಲೇ ಹಲವು ವ್ಯಕ್ತಿಗಳು ಬಂದು ಹೋಗುತ್ತಾರೆ.

ಮೊನ್ನೆಯ ದಿನ ನಿಸ್ತೇಜ ಶರೀರ ಕಂಪನವಿಲ್ಲದೇ ಬದುಕಿನ ಪೂರ್ಣ ವಿರಾಮ ಹಾಕಿ ಮಲಗಿತ್ತು. ನನ್ನನ್ನು ಮುದ್ದಿಸಿ ಬೆಳೆಸಿದ ತುಟಿಗೆ ಹಾಕಿದ ಗಂಗೋದಕ ತೊಟ್ಟಿಕ್ಕುತ್ತಿತ್ತು. ಭಾವನಾರಹಿತ ಮುಖ ಬಡಿತವಿಲ್ಲದ ಎದೆ... ಎಲ್ಲವೂ ನಿಶ್ಚಲ. ಸಾವು ಎಂಬುದು ಎಲ್ಲ ಸಮಸ್ಯೆಗೂ ಪರಿಹಾರವೆಂಬಂತೆ ಪಾರ್ಥಿವಶರೀರ ಸಾಕ್ಷಿಯಾಗಿ ಮಲಗಿತ್ತು. ಯಾವಾಗಲೂ ನನ್ನನ್ನು ಕಂಡಾಗ ಬಿಕ್ಕಿ ಬಿಕ್ಕಿ ಅಳುವ ಭಾವನಾಜೀವಿ , ನನ್ನ ಕೈ ಹಿಡಿದು ತನ್ನ ತೋಳನ್ನು ಮಡಿಲನ್ನು ತೋರಿಸುವ ಮಾವನ ಕೈಗಳು ಎಲ್ಲಿದೆ ಎಂದು ಅರಸಿದೆ. ಕೊನೆಗೊಂದು ಬಾರಿಯಾದರೂ ಮಮತೆಯ ಮಾಮ ಜೀವ ತಳೆದಾರೆ.? ಸೋಮವಾರ , ಸಂಕಷ್ಟಿ.. ಉತ್ತರಾಯಣ..ಕೃಷ್ಣಪಕ್ಷ ಬಂದವರಲ್ಲಿ ಯಾರೋ ಹೇಳುತ್ತಿದ್ದರು ಈ ಆತ್ಮಕ್ಕೆ ಮೋಕ್ಷ ಬರೆದಿಟ್ಟಾಗಿದೆ. ಹೌದು ಪರಮಾತ್ಮ ಈ ಆತ್ಮಕ್ಕೆ ಅಷ್ಟಾದರೂ ದಯಪಾಲಿಸಲಿ ಅಂತರಾತ್ಮ ಕಂಬನಿದುಂಬಿ ಬೇಡಿತು. ಮನಸ್ಸು ಪರಮಾತ್ಮನಲ್ಲಿ ಕೇಳಿತು .. ಹೇ ಪರಮಾತ್ಮ  ನನ್ನ ಚಂದಮಾಮ ನಿನಗೂ ಇಷ್ಟು ಬೇಗ ಪ್ರಿಯವಾದರೆ? ಈ ಚಂದಮಾಮ ಎಂದಿಗೂ ನನ್ನ ಬದುಕಿನಲ್ಲಿ ಹೊಳೆಯುವ ಚಂದಮಾಮನಾಗಲಿ... ಮಾವನ ಹೇಳುತ್ತಿದ್ದ ಹಾಡು ಅಪ್ರಯತ್ನವಾಗಿ ಗುನುಗುನಿಸುತ್ತಿತ್ತು ಮನ...ಅಮರ ಮಧುರ ಪ್ರೇಮ .. ಬಾ ಬೇಗ ಚಂದಮಾಮ ಬಾ ಬೇಗ ಚಂದಮಾಮ..... ಬರಬಹುದೇ?

Sunday, February 20, 2011

ಆನಿವಾರ್ಯತೆಯ ಉರುಳು


ಒಂದು ಕಥೆಯಿದೆ. ಅದರಲ್ಲಿ ಓರ್ವ ತನ್ನ ಮಿತ್ರನಲ್ಲಿ ತನ್ನ ಮನೆ ಹಾಗು ಊರಿನ ವಿವಿಧ ಕ್ರಮಗಳನ್ನು ಹೇಳುತ್ತಾ ಅದರ ಬಗ್ಗೆ ಅಭಿಮಾನ ಪಟ್ಟುಕೊಳ್ಳುತ್ತಾನೆ. ಹಾಗೆ ಅವನ ಮನೆಯಲ್ಲಿ ಮಾಡುವ ವಿವಿಧ ತಿಂಡಿಗಳ ಬಗ್ಗೆಯೂ ಅಡುಗೆ ಊಟದ ಬಗ್ಗೆಯೂ ಹೆಮ್ಮೆ ಪಟ್ಟುಕೊಳ್ಳುತ್ತಾ ವಿವರಿಸುತ್ತಿರುತ್ತಾನೆ. ಹಾಗೆ ಒಂದು ದಿನ ತನ್ನ ಮಿತ್ರನನ್ನು ಮನೆಗೆ ಅತಿಥಿಯಾಗಿ ಊಟಕ್ಕೆ ಆಹ್ವಾನಿಸುತ್ತಾನೆ. ತನ್ನ ಪತ್ನಿಗೆ ವಿಶೇಷವಾದ ಅಡುಗೆ, ಅದರಲ್ಲಿ ಅವರ ಪರಂಪರೆಯ ಆಡುಗೆಯನ್ನೇ ಅಧಿಕವಾಗಿ ಮಾಡುವಂತೆ ಹೇಳುತ್ತಾನೆ. ತಾನು ಹೇಳೀದಂತೆ ತನ್ನ ಮನೆಯ ವಿವಿಧ ಬಗೆ ಊಟ ಖಾದ್ಯಗಳ ಬಗ್ಗೆ ತೋರಿಸಿಕೊಡುವುದೇ ಆತನ ಉದ್ದೇಶವಾಗಿರುತ್ತದೆ. ಹೀಗೆ ಮನೆಗೆ ಕರೆದ ಮೇಲೆ ಬಂದ ಅತಿಥಿ ಮಿತ್ರನಿಗೆ ಹಲವು ಬಗೆಯ ಭಕ್ಷ್ಯ ಭೋಜನಗಳೊಂದಿಗೆ ಬಡಿಸುತ್ತಾ ವಿವರಿಸುತ್ತಿರುತ್ತಾನೆ. ಆಗ ಒಂದೆರಡು ತಿಂಡಿಗಳಲ್ಲಿ ಮಾಡಿದ ಕೊರತೆಯನ್ನು ಕಂಡು ಪತ್ನಿಯೊಡನೆ ಸಿಡಿಮಿಡಿಗುಟ್ಟುತ್ತಾ “ ನೋಡು ನಮ್ಮ ಆಡುಗೆ ಹಾಗಿಲ್ಲ.. ತೆಂಗಿನ ಕಾಯಿ ಸರಿಯಾಗಿ ಅರೆದು ಹಾಕಬೇಕು… ಮೊಸರಿನ ಬದಲು ಮಜ್ಜಿಗೆಯೇ ಹಾಕಬೇಕು..” ಇತ್ಯಾದಿ ಗದರುತ್ತಾನೆ. ಆಗ ರೋಸಿ ಹೋದ ಹೆಂಡತಿ ಹೇಳುತ್ತಾಳೇ  “ ಎನೋ ಒಂದು ಕಷ್ಟ ಪಟ್ಟು ಮಾಡಿ ಬಡಿಸಿದ್ದೇನೆ..ಹಾಗೇನು ಆಗಿಲ್ಲ … ಅಷ್ಟಕ್ಕೂ ಅದೆಲ್ಲ ಅವರಿಗೆ ತಿಂದೂ ಗೊತ್ತಿಲ್ಲ ತಾನೆ?”
ಇಲ್ಲಿ ಯಾರದೂ ತಪ್ಪು ಕಾಣುವುದಿಲ್ಲ. ತನ್ನ ಮನೆಯ ಕ್ರಮಗಳ ಬಗ್ಗೆ ಅಭಿಮಾನ ಪಟ್ಟುಕೊಳ್ಳುವ ಅವನ ತಪ್ಪು ಇಲ್ಲ. ಸಂದರ್ಭಕ್ಕೆ ತಕ್ಕ ಕಷ್ಟ ಪಟ್ಟು ಏನೋ ಒಂದು ಅಂತ ಮಾಡಿ ಬಡಿಸುವ ಪತ್ನಿಯ ತಪ್ಪೂ ಇರುವುದಿಲ್ಲ. ಆದರೂ ಮಾಡಿದ ಕ್ರಿಯಯಿಂದ ಪತಿ ಪೂರ್ಣ ತೃಪ್ತನಾಗುವ ಹಾಗೂ ಇಲ್ಲ.

ಹಿರಿಯ ಭಾಗವವತ ಬಲಿಪ ನಾರಾಯಣ ಭಾಗವತರೊಂದಿಗೆ ಔಪಚಾರಿಕವಾಗಿ ಸಂವಾದ ನಡೆಸುವಾಗ ಈ ಬಗೆಯ ಗ್ರಹಿಕೆ ಬಂದು ಹೋಯಿತು. ಬಲಿಪ್ಪರೊಂದಿಗೆ ಒಂದೆರಡು ತಾಸು ಕಾಲ ಕಳೆಯುವ ಸುಯೋಗ ಇತ್ತೀಚೆಗೆ ಲಭ್ಯವಾದಾಗ ಅವರ ಅಮೂಲ್ಯ ಅನುಭವಗಳನ್ನು ನಾವು ಮಿತ್ರರು ಹಂಚಿಕೊಂಡೆವು. ಯಕ್ಷಗಾನದ ಬಗೆಗಿನ ಅವರ ಅದ್ಭುತ ಚಿಂತನೆಗಳು ಹಾಗೂ ಅಪಾರವಾದ ಜ್ಞಾನ ಎಂತಹವರಿಗೂ ಬೆರಗನ್ನು ಉಂಟುಮಾಡುತ್ತದೆ. ಅವರದೇ ಮಾತುಗಳಲ್ಲಿ ಅವರ ಅನುಭವ ಸವಿದರೆ ಆಗುವ ಆನಂದ ಪ್ರತಿಸಲವೂ ಭಿನ್ನವಾಗಿರುತ್ತದೆ. ಕೆಲವೊಮ್ಮೆ ಬಲಿಪ್ಪರು ಎಷ್ಟು ಮುಗ್ಧರೋ ಕೆಲವೊಮ್ಮೆ ಈ ಅನುಭವದ ವಿಚಾರದಲ್ಲಿ ಅವರು ಮುಗ್ಧರು ಎಂದು ಅನ್ನಿಸುವುದಿಲ್ಲ.

ಪ್ರತಿಸಲವೂ ಅವರು ಒಂದು ಸಾಮಾನ್ಯ ಮಾತೊಂದನ್ನು ಆಡುತ್ತಾರೆ ಮೊದಲಿನ ಹಾಗೆ ಜನರನ್ನು ಹಿಡಿದಿಡುವ ಕಲಾವಿದರು ಇಂದು ಇಲ್ಲ. ಆದರೂ ಅವರಲ್ಲಿ ಅದು  ಇದೆ ಎಂಬುದು ಮೊನ್ನೆ ತಾನೆ ನಮ್ಮ ಅಭಿನಂದನಾ ಕಾರ್ಯಕ್ರಮದಲ್ಲಿ ರುಜುವಾತಾಗಿಬಿಟ್ಟಿದೆ. ಕೊನೆಯವರೆಗೂ ಪ್ರೇಕ್ಷಕರು ತಲ್ಲೀನರಾಗಿದ್ದುದೇ ನಿದರ್ಶನ. ಬದಲಾದ ಪರಿಸ್ಥಿತಿಯಲ್ಲಿ ಅವರ ಅನುಭವದ ಮಾತುಗಳನ್ನು ಗಮನಿಸಿದಾಗ ನನಗೆ ಮೇಲಿನ ಗ್ರಹಿಕೆ ಬಂದು ಹೋಯಿತು. ತುಂಬ ಅಪರೂಪ ಹಳೆಯ ಮಟ್ಟಿನ ಯಕ್ಷಗಾನದ ತಾಳದ ರೂಪವನ್ನು ನಮ್ಮ ಪ್ರಶ್ನೆಯೊಂದಕ್ಕೆ ವಿವರಿಸುತ್ತಾ.. ಈ ತಾಳಕ್ಕೆ ಕುಣಿಯುವ ಕಲಾವಿದನೇ ಇಲ್ಲ.  ಅಳಕೆ ರಾಮ ರೈ ಪಡ್ರೆ ಚಂದು ಮುಂತಾದ ಹಿರಿಯ ಕಲಾವಿದರು ಇದೇ ತಾಳಕ್ಕೆ ಐದಾರು ವಿಧದಲ್ಲಿ ಕುಣಿದು ರಂಜಿಸುತ್ತಿದ್ದರು. ಅವರಿಂದ ಮುಂದಿನವರು ಅದನ್ನು ಅವರಿಂದ ಕಲಿಯುವ ಉತ್ಸಾಹವನ್ನೇ  ತೋರಿಸಿಲ್ಲ ಅಥವಾ ಕಲಿಯಲೂ ಇಲ್ಲ. ಇಂದಿನವರು ಹತ್ತು ಗಂಟೆಗೆ ಬೈಕಿನಲ್ಲಿ ಬರ್ತಾರೆ “ ಭಾಗವತರೆ  ಈ ಪದ ಮಾರವಿಯಲ್ಲಿ ಹಾಕಿ ಇದು ತಿತ್ತಿಥೈ ಯಲ್ಲಿ ಹಾಕಿ..” ಅಂತ ಹೇಳ್ತಾರೆ ಏನೋ ಒಂದು ಕುಣಿದು ಹೋಗ್ತಾರೆ”  ಇದು ಇರುವಾಗ ಇಲ್ಲಿ ಕಾಲಮಿತಿಯಲ್ಲದೆ ಇಡೀ ರಾತ್ರಿ ಯಕ್ಷಗಾನ ನಡೆದೀತೆ? ಒಂದು ಕಾಲವಿತ್ತು ಭಾಗವತನ ತಾಳಕ್ಕೆ ವೇಷಧಾರಿ ಕುಣಿಯುತ್ತಿದ್ದ. ಅದು ಯಾವುದಾದರೂ ಸಮಸ್ಯೆ ಎಂದು ಅನ್ನಿಸುತ್ತಿರಲಿಲ್ಲ. ಇಂದು ಭಾಗವತನೇ ತಾಳಕ್ಕೆ ತಕ್ಕಂತೆ ಕುಣಿಯಬೇಕಾದದ್ದು ವಿಪರ್ಯಾಸ. ಒಂದು ಹಾಸ್ಯದ ಮಾತಿದೆ. ಒಬ್ಬಾತ ಮಿತ್ರನೋಡನೆ ಜಂಬ ಕೊಚ್ಚಿಕೊಳ್ಳುತ್ತಾ ಹೇಳುತ್ತಾನೆ… “ ನಾನು ಹಾಕಿದ ಗೆರೆಯಿಂದ ನನ್ನ ಹೆಂಡತಿ ಆ ಕಡೆ ದಾಟುದಿಲ್ಲ….”   ಅದರೆ ಗೆರೆ ಎಲ್ಲಿ ಹಾಕಬೇಕು ಎಂದು ನಿರ್ಧರಿಸುವುದು ಅವಳೇ ಆಗಿರುತ್ತಾಳೆ ಇದು ಮಾತ್ರ ವಾಸ್ತವ.  ಖರ್ಚಿಗೆ ನಾಲ್ಕು ರಾಗ ಕಲಿತಿದ್ದೇನೆ ಅದು ಭಾಗವತ ಅಗ್ಲಿಕ್ಕೆ ಸಾಕು ಎಂಬ ಮನೋಭಾವ ಇರುವಾಗ ಇದೆಲ್ಲ ಸಹಜವೇ. ಜ್ಞಾನದೀಕ್ಷೆ ಪರಿಪೂಣತ್ವವನ್ನು ಪಡೆಯುವಲ್ಲಿ ಇಚ್ಚಾಶಕ್ತಿಯೂ ಬೇಕಾಗುತ್ತದೆ. ಈಗಿನ ಮಟ್ಟಿಗೆ ಇದು ಧಾರಾಳ ಸಾಕು ಎಂಬ ಉಡಾಫೆ ಮನೋಭಾವ ಇದ್ದಲ್ಲಿ ಬೇರೇನು ಸಾಧ್ಯ.?

ನಮ್ಮ ಮಿತ್ರರೊಬ್ಬರ ಅನುಭವ   ಮೇಲೆ ಹೇಳಿದ ಕಥೆಗೆ ತುಂಬ ಹತ್ತಿರದ ನಿದರ್ಶನ. ಯಕ್ಷಗಾನಕ್ಕೆ ಹೊಸ ಪ್ರೇಕ್ಷಕವರ್ಗ ಇಲ್ಲ ಎಂಬ ಮಾತಿದೆ. ಹೊಸದಾಗಿ ಒಬ್ಬಾತನನ್ನು ಹುರಿದುಂಬಿಸಿ ಒಂದು ಯಕ್ಷಗಾನಕ್ಕೆ ಕರೆದು ಕೊಂಡು ಹೋದರೆ ಮನೆ ಊಟಕ್ಕೆ ಮಿತ್ರನನ್ನು ಅತಿಥಿಯಾಗಿ ಕರೆದ ಅನುಭವವೇ ಆಯಿತು. ಬನ್ನಿ ನಮ್ಮ ಕರಾವಳಿಯ ಗಂಡು ಕಲೆ, ಕರ್ನಾಟಕ ರಾಜ ಕಲೆ ಯಕ್ಷಗಾನ. ಕೇರಳದ ಕಥಕ್ಕಳಿ ಯಂತೆ ಕರ್ನಾಟಕದ ಯಕ್ಷಗಾನ ಇದರ ಬಗ್ಗೆ ಏನೆಲ್ಲ ವಿಶೇಷಣಗಳು ಬೇಕೋ ಎಲ್ಲವನ್ನೂ ಹೇಳಿದರು. ಹೋದರೆ ಯಕ್ಷಗಾನ ಏನೋ ಅದ್ಧೂರಿಯಾಗಿಯೇ ಇದ್ದಿತು. ಭರ್ಜರಿಯಾಗಿ ವೇದಿಕೆ ಸಜ್ಜುಗೊಳಿಸಲಾಗಿತ್ತು. ಸುತ್ತು ಮುತ್ತಲು ಜಾಹೀರಾತುಗಳ ಬ್ಯಾನರ್ ಗಳು. ಶುಭ ಹಾರೈಕೆಯ ಮಹಾಪೂರಗಳು.ವೇದಿಕೆಯ ಮೇಲೆ ಯಕ್ಷಗಾನದ ಹಿಮ್ಮೇಳದವರಾಗಲಿ ಕುಣಿವ ಪಾತ್ರಗಳಾಗಲಿ ಗಮನಕ್ಕೆ ಬಾರದಷ್ಟು ದೊಡ್ಡದಾದ ರಂಗುರಂಗಿನ ಬ್ಯಾನರ್ .. ಬಣ್ಣದ ವೇಶದ ಬ್ರ್ ಹದಾಕಾರದ ಚಿತ್ರಗಳು.ಮಿತ್ರರಿಗೆ ಇದೇ ನಮ್ಮೂರಿನ ಯಕ್ಷಗಾನ ಎಂದು ಅಭಿಮಾನದಿಂದ ಹೇಳುವ ಬಗ್ಗೆ ಯೋಚಿಸುವಂತಾಯಿತು. ಯಾವುದನ್ನು ಹೇಳುವುದು? ಶ್ರುತಿಯಿಲ್ಲದ ಹಿಮ್ಮೇಳದ ಬಗ್ಗೆಯೆ? ನಾಲ್ಕುರಾಗದ ಭಂಡವಾಳದ ಭಾಗವತಿಕೆಯನ್ನೇ?  ದಿಗಿಣ ಮಾತ್ರ ಯಕ್ಷಗಾನದ ಕುಣಿತ ಎಂದು ಭಾವಿಸಿ ಕುಣಿದ ನಾಟ್ಯಕ್ಕೆಯೆ? ದಿಗಿಣದ ರಭಸಕ್ಕೆ ಜಾರುವ ಕಿರೀಟದ ಬಗ್ಗೆಯೆ? ತಲೆಯ ಮೇಲೆ ಕಿರಿಟವಿದೆ ಎಂದು ತಲೆಯ ಒಳಗೆ ಅರಿವಿಲ್ಲದೆ ಇರುವುದಕ್ಕೆಯೆ?
ಈ ಮಾತು ಹೇಳಿವಾಗ ಇತ್ತೀಚೆಗೆ ಊರಿನ ಕಾರ್ಯಕ್ರದಲ್ಲಿ ಹಿರಿಯ ಕಲಾವಿದರೊಬ್ಬರು ಹೇಳಿದ ಮಾತು ನೆನಪಿಗೆ ಬರುತ್ತದೆ. ಬೆಂಗಳೂರಿನಲ್ಲಿ ಇವರ ಕಾರ್ಯಕ್ರಮ ಒಂದು ಆಯೋಜನೆಗೊಂಡು ಪ್ರದರ್ಶಿತವಾಗಿ ಬಲು ಪ್ರಶಂಸೆ ಗಳಿಸಿತು. ಅದರ ಬಗ್ಗೆ ಹೇಳುತ್ತಾ ತೆಂಕು ತಿಟ್ಟು ಯಕ್ಷಗಾನ ಬರೀ ದಿಗಿಣ ಮಾತ್ರಾ ಕುಣಿತ ಎಂದು ಭಾವಿಸಿದವರಿಗೆ ನಮ್ಮ ಪ್ರದರ್ಶನ ಅತ್ಯದ್ಭುತ ಅನುಭವ ಕೊಟ್ಟಿತು. ಎಲ್ಲರ ಪ್ರಶಂಸೆಗ ಪಾತ್ರವಾಗಿ ಆ ಪ್ರದರ್ಶನ ನೆರವೇರಿತು. “ನಾವು ತೋರಿಸಿಕೊಡಬೇಕು ಯಕ್ಷಗಾನ ಎಂದರೆ ಬರೀ ಚಪ್ಪಾಳೆಗೋಸ್ಕರ ಹಾರುವ ದಿಗಿಣವಲ್ಲ. ತನ್ನ ದಿಗಿಣದಲ್ಲಿ ಎಲ್ಲ ಅಭಾಸಗಳನ್ನು ಅಜ್ಞಾನವನ್ನೂ ಮುಚ್ಚಿಹಾಕುವ ಪ್ರಮೇಯ ಇರಬಾರದು.”
ಇಲ್ಲಿಗೆ ಇಷ್ಟು ದೊಡ್ಡದು ಬೇಕಾದರೆ ನೋಡಿ ಇದೇ ಎಂಬ ಭಾವದ ಮಾತು ಬಂದರೆ ..ಹೊಸ ಪ್ರೇಕ್ಷಕ ಮಿತ್ರನಿಗೆ ಇದೇ ಯಕ್ಷಗಾನ ಎಂದು ತೋರಿಸುವ ಅನಿವಾರ್ಯತೆ ನಮ್ಮ ಮಿತ್ರರಿಗೆ. ತೋರಿಸುವುದಕ್ಕೇನು ಬಿಡಿ ಅಸಲೀ ಯಕ್ಷಗಾನ ನೋಡದವರು ಒಹ್ ಅದ್ದೂರಿ ಸೆಟ್ಟಿಂಗ್ಸ್ ದಣಿವಿಲ್ಲದ ದಿಗಿಣ.. ಇದನ್ನೆ ತಲೆಯಲ್ಲಿ ತುಂಬಿಕೊಂಡು ಒಹ್ ಇದು ಯಕ್ಷಗಾನ ಎಂದು ಕಂಡದ್ದಕ್ಕೆ ತೃಪ್ತಿಪಟ್ಟುಕೊಳ್ಳುವ ಅನಿವಾರ್ಯತೆ. ಕಥೆ ಯಲ್ಲಿದ್ದಂತೆ ಇಲ್ಲಿಯೂ ಯಾರದೂ ತಪ್ಪಿಲ್ಲ. ಎಲ್ಲವೂ ಭ್ರಮನಿರಸನ. ಉತ್ತಮವಾದುದನ್ನು ಕೊಡುವ ಪ್ರಾಮಾಣಿಕ ಪ್ರಯತ್ನ ಅಲ್ಲೊಂದಿಲ್ಲೋಂದು ಆದರೂ ಅದು ಗಮನಕ್ಕೆ ಬರುವುದಿಲ್ಲ. ಎಷ್ಟೇ  ಪರಿಮಳ ಬೀರುವ ಸುಗಂಧ ದ್ರವ್ಯ ಪೂಸಿದರೂ ಒಂದು ತೊಟ್ಟು ಸೀಮೇ ಎಣ್ಣೆಯೊ ಅಥವಾ ಇನ್ಯಾವುದೋ ದುರ್ನಾತಕ್ಕೆ  ಮಾಸಿ ಹೋದಂತೆ.ಆನಿವಾರ್ಯತೆಯ  ದಾಕ್ಷಿಣ್ಯದ ಉರುಳು ಬಿಗಿಯಾಗುತ್ತಾ ಹೋಗುತ್ತಿದೆ. ಸಹಜವಾದ ಅಭಿರುಚಿ ಕರಗಿ ಅಭಿರುಚಿಯ ರೂಪವೇ ಬದಲಾಗುತ್ತಿದೆ.

Wednesday, February 9, 2011

ವೇಣೂರಿನ ತಾಳ ಮದ್ದಲೆ ಸತೀ ಸಂರಕ್ಷಣೇ



ಚಿತ್ರಕೃಪೆ: ಉಲ್ಲಾಸ್
“ ಸ್ವಾದಿಷ್ಟ ರುಚಿಯಾದ ಮದುವೆಯ ಭೋಜನ ಉಂಡು ಅರಗಿಸಿಕೊಳ್ಳುವ ಮೊದಲೇ ನಾಲಿಗೆ ಅದರ ರುಚಿಯನ್ನು ಚಪ್ಪರಿಸುತ್ತ ಇರುವಾಗ ಅದಕ್ಕಿಂತಲೂ ರುಚಿಯಾದ ಗೃಹ ಪ್ರವೇಶದ ಭೂರಿ ಭೋಜನ ಸವಿಯುವ ಹಾಗಾಯಿತು.” ಇದು ಮೊನ್ನೆ ವೇಣೂರಿನ ತಾಳ ಮದ್ದಲೆ ಕಾರ್ಯಕ್ರಮ  ಮುಗಿಸಿ ಬರುವಾಗ ಅನ್ನಿಸಿದ್ದು. ನಮ್ಮೆಲ್ಲರ ಮುಖದಲ್ಲಿ ತುಂಬಿದ ಸಂತೃಪ್ತಿಯ ಕಿರುನಗೆ ಇದಕ್ಕೆ ದ್ಯೋತಕವಾಗಿ ಇದನ್ನು ಸಾರಿ ಹೇಳುತ್ತಿತ್ತು. ಮೊನ್ನೆಯ  ದಿನಾಂಕ ಶನಿವಾರ, ಪೆಬ್ರವರಿ ಐದರಂದು ಅದ್ಭುತವಾಗಿ ವ್ಯವಸ್ಥೆ ಮಾಡಿ ಭೂರಿ ಭೋಜನದೊಂದಿಗೆ ಯಕ್ಷ ಭೋಜನವನ್ನು ಊಣ ಬಡಿಸಿದ ವೇಣೂರು ಕಜೆ ಮನೆಯವರಿಗೆ ಮತ್ತೊಮ್ಮೆ ಅಭಾರಿಯಾಯಿತು ಮೈಮನ. !!!

ಚಿತ್ರಕೃಪೆ: ಉಲ್ಲಾಸ್
ನಮ್ಮ ಬೆಂಗಳೂರಿನ ಕಾರ್ಯಕ್ರಮ ಕ್ಕಿಂತ ಮೊದಲೇ ನಮ್ಮ ಸುಬ್ಬಣ್ಣ  ಅವರ ಮನೆಯ ಅತಿ ಮುಖ್ಯ ಕಾರ್ಯಕ್ರಮದ ತಾಳ ಮದ್ದಲೆಯನ್ನು ನಿಶ್ಚೈಸಿದ್ದರು. ಅದಕ್ಕೆಂದೆ ನಮ್ಮೆಲ್ಲರ ಸಲಹೆಗೆ ಪ್ರಸಂಗಗಳ ಪಟ್ಟಿಯನ್ನು ಕೊಟ್ಟಿದ್ದರು. ಐದಾರು ಪ್ರಸಂಗಗಳ ಪಟ್ಟಿಯಲ್ಲಿ “ಸತೀ ಸಂರಕ್ಷಣೆ” ಎಂದು ಮರುನಾಮಾಂಕಿತವಾಗಿ ಅದೇ ಪ್ರಸಂಗವನ್ನು ಆಯ್ಕೆ ಮಾಡಿದ್ದರು ಸುಬ್ಬಣ್ಣ. ವರ್ಷದ ಮೊದಲು ಈ ಪ್ರಸಂಗದ ಬಗ್ಗೆ ನಾನು ನನ್ನ ಇರಾದೆಯನ್ನು ತಿಳಿಸಿದ್ದು.. ಅದನ್ನೇ ಈ ವರ್ಷದ ಪ್ರಸಂಗವಾಗಿ ಆಯ್ಕೆಮಾಡಿದ್ದು ನನ್ನಲ್ಲಿ ಉತ್ಸಾಹ ಮೂಡಿಸಿತ್ತು.
ಚಿತ್ರಕೃಪೆ: ಉಲ್ಲಾಸ್
ವಿರಾಟಪರ್ವದ ಅತೀ ಪ್ರಮುಖ ಭಾಗವಾದ ಕೀಚಕ ವಧೆಯ ಪ್ರಸಂಗವೇ ಈ ಸತೀ ಸಂರಕ್ಷಣೆ. ತಾಳ ಮದ್ದಲೆಗೆ  ಅತ್ಯಂತ ವಿರಳ ಪ್ರಸಂಗವಿದು.  ತಾಳ ಮದ್ದಲೆಗೆ ಬರುವ ಇಂಗಿತವನ್ನು ಪುತ್ತಿಗೆ ರಘುರಾಮ ಹೊಳ್ಳರು ತಾವಾಗಿಯೇ ಸುಬ್ಬಣ್ಣನ್ನಲ್ಲಿ ವ್ಯಕ್ತಪಡಿಸಿದ್ದರು. ಇಂತಹ ಮೇರು ಕಲಾವಿದರು ಅವರಾಗಿಯೇ ಬರುವ ಇಂಗಿತವನ್ನು ತೋಡಿಕೊಂಡದ್ದು ಸಹವಾಗಿ ಕಾರ್ಯಕ್ರಮದ ಮೌಲ್ಯವನ್ನೇ ವರ್ಧಿಸಿತ್ತು. ಪ್ರಸಂಗದ ಬಗ್ಗೆ ವಿಚಾರಿಸಿದಾಗ ಅವರಿಗೆ ಆಶ್ಚರ್ಯವಾಗಿತ್ತು. ಆಗ ಹೇಳಿದ್ದರು  ‘ ತಾವು ಅದನ್ನು  ಇಷ್ಟರವರೆಗೆ ತಾಳಮದ್ದಲೆ  ಮಾಡಿಲ್ಲ.ಆಟ ಮಾತ್ರ ಆಡಿಸಿದ್ದು ಅಂತ. ಆದರೂ ಪರವಾಗಿಲ್ಲ ಬಲಿಪ್ಪರು ಇದ್ದಾರಲ್ಲ? ಅವರಲ್ಲಿ ಕೇಳಿ ಮಾಡುವ ತೊಂದರೆ ಇಲ್ಲ.’ ಇದು ನಿಜಕ್ಕೂ ಅವರ ದೊಡ್ಡ ಗುಣವನ್ನು ತೋರಿಸಿತ್ತು. ಹೊಳ್ಳರಂತಹ ಕಲಾವಿದರು ಇನ್ನೂ ಕಲಿಯಬೇಕು  ಅದೂ ಬಲಿಪ್ಪರಲ್ಲಿ  ಎಂಬ ಬಾವನೆ ವ್ಯಕ್ತ ಪಡಿಸುವುದು ನಮಗೆಲ್ಲ ರೋಮಾಂಚನ ಉಂಟುಮಾಡುವ ಸಂಗತಿ. ಆಗ ನನಗನಿಸಿದ ವಿಚಾರವೆಂದರೆ ಪ್ರತಿಯೊಂದರಲ್ಲೂ ಹೊಳ್ಳರನ್ನು ಅನುಕರಣೆ ಮಾಡುವ ಮರಿಕಲಾವಿದರು ಅವರ ಇಂತಹ ದೊಡ್ಡಗುಣಗಳನ್ನೂ ಅನುಕರಣೆ ಮಾಡಿದರೆ ಒಳ್ಳೆಯದು ಅಲ್ಲವೇ?

ಚಿತ್ರಕೃಪೆ: ಉಲ್ಲಾಸ್
ಇದೇ ಸಂದರ್ಭದಲ್ಲಿ ಹೊಳ್ಳರ ಮನೆಗೆ ಹೋಗುವ ಒಂದು ಸದವಕಾಶ ನನಗೊದಗಿ ಬಂತು. ಹೊಳ್ಳರನ್ನು ಕಾರ್ಯಕ್ರಮಕ್ಕೆ ಕರೆತರುವ ಗುರುತರ ಜವಾಬ್ದಾರಿಯನ್ನು ಸುಬ್ಬಣ್ಣ ನನ್ನಿಂದ ನಿರೀಕ್ಷಿಸಿದ್ದರು. ಹಾಗಾಗಿ ಅಂದು ಬೆಳಗ್ಗೆ ಮಂಗಳೂರಲ್ಲಿ ಇಳಿದವನೇ ಮಿತ್ರನ ಕಾರು ತೆಗೆದು ಕೊಂಡು ಅತ್ಮೀಯ ಉಲ್ಲಾಸನ ಜತೆಯಲ್ಲಿ ಪ್ರಥಮ ಬಾರಿ ಮಂಗಳೂರಿನಲ್ಲಿರುವ ಹೊಳ್ಳರ ಮನೆಗೆ ಹೋಗಿದ್ದೆ.  ವಿಷಯ ಮಾತಾಡುತ್ತ ನನ್ನ ಯಕ್ಷಗಾನ ಸಂಗ್ರಹ ಮತ್ತು ಅದರ ಬಗ್ಗೆ ಮಾತು ಹೊರಳಿತು. ಹೊಳ್ಳರು ನನ್ನ ಸಂಗ್ರಹಕ್ಕೆ ಅವರಲ್ಲಿದ್ದ ಅಮೂಲ್ಯ ಸಂಗ್ರಹಗಳನ್ನು ಕೊಟ್ಟದ್ದು ನನ್ನ ಅದೃಷ್ಟವಲ್ಲವೆ? ಹಲವಾರು ಅಮೂಲ್ಯ ಯಕ್ಷಗಾನ ಧ್ವನಿ ಸುರುಳಿಗಳ ಧ್ವನಿಗಳು ಈಗ ನನ್ನ ಕಂಪ್ಯೂಟರ್ ಹೊಕ್ಕಲು ಕಾದು ಕುಳಿತಿವೆ.  

ಸದುದ್ದೇಶದ ಯಾವ ಕಾರ್ಯಕ್ರಮವೂ ಸತ್ಪಲವನ್ನು ಕೊಡುತ್ತದೆ ಎಂಬುದಕ್ಕೆ ಇಂತಹ ಕಾರ್ಯಕ್ರಮಗಳು ನಿದರ್ಶನವಾಗಬಲ್ಲುದು. ತಾಳ ಮದ್ದಲೆಗೆ ಪೂರ್ವ ಭಾವಿಯಾಗಿ ಗಣ್ಯ ಕಲಾವಿದರನ್ನೇ ಸುಬ್ಬಣ್ಣ ಆಯ್ಕೆ ಮಾಡಿದ್ದರು. ಬಲಿಪ್ಪ ಹೊಳ್ಳರ ದ್ವಂದ್ವ ಭಾಗವತಿಕೆಗೆ ಮತ್ತು ವೇಣೂರಿನ ಕಜೆ ಮನೆಗೆ ಅತ್ಯಂಟ ನಿಕಟಪೂರ್ವವಾದ ಸಂಬಂಧವಿದೆ. ಹಲವು ಯಶಸ್ವಿ ಮಾದರಿ ತಾಳ ಮದ್ದಲೆಗೆ ಇವರದ್ದು ಸ್ಥಿರ ಹಿಮ್ಮೇಳ. ಅದರಂತೆ ಮದ್ದಲೆಗೆ ಅತಿ ಉತ್ಕೃಷ್ಟ ಪ್ರತಿಭೆಯ ಸುಬ್ರಹ್ಮಣ್ಯ ಶಾಸ್ತ್ರಿಯ ಆಯ್ಕೆ ಅತ್ಯಂತ ಸೂಕ್ತವಾಗಿ ಅದು ಸಂಪೂರ್ಣ ತಾಳಮದ್ದಲೆಯ ಯಶಸ್ಸಿಗೆ ಬಹುಮುಖ್ಯ ದೇಣಿಗೆಯನ್ನು ಕೊಟ್ಟಿತು.  ಸಾಂಪ್ರದಾಯಿಕ ಸೊಗಡಿನ ಮತ್ತು ಅದ್ಭುತ ಸಾಹಿತ್ಯದ ಶಾಸ್ತ್ರೀ..!!! ಪೆಟ್ಟುಗಳು ಅತ್ಯದ್ಭುತ. ಎಂತಹ ಖಚಿತ ಪೆಟ್ಟುಗಳ ಮದ್ದಲೆ ವಾದನ ನಿಜಕ್ಕೂ ತಲೆದೂಗಬೇಕು. ಚೆಂಡೆವಾದನಕ್ಕೆ ಎಂದಿನಂತೆ ಕೊಂಕಣಾಜೆ ಸೂಕ್ತ ಜತೆಗಾರಿಗೆ ನೀಡಿದರು. ಇನ್ನು ಮುಮ್ಮೇಳ.. ಕೋಳ್ಯೂರು ರಾಮಚಂದ್ರ ರಾಯರ ಸ್ತ್ರೀ ಪಾತ್ರದ ಅರ್ಥ ವೈಭವವನ್ನು ಸವಿಯಬೇಕು ಎನ್ನುವುದು ಸುಬ್ಬಣ್ಣನ್ನ ಬಯಕೆ. ಆಗ ಮೊದಲು ಗೋಚರವಾಗುವುದು ಅವರ ದ್ರೌಪದೀ ಪಾತ್ರ..ಈ ಪಾತ್ರ ನಿರ್ವಹಿಸುವಾಗ ವಿಶೇಷವಾಗಿ ಪ್ರಸಂಗ ಯಾವುದೇ ಆಗಿದ್ದರೂ ರಾಯರು ಆವೇಶ ಭರಿತರಾಗಿ ಅದರಲ್ಲಿ ಪೂರ್ಣವಾಗಿ ಲೀನವಾಗಿಬಿಡುತ್ತಾರೆ. ಅವರ ಪಾತ್ರದೊಳಗಿನ ಪರಕಾಯ ಪ್ರವೇಶಕ್ಕೆ ವೇಣೂರು ಕಜೆ ಮನೆ ವೇದಿಕೆ ಸಜ್ಜಾಗಿತ್ತು. ಮಾತ್ರವಲ್ಲ ಅಭೂತಪೂರ್ವವಾದ ಪಾಂಚಾಲೆಯ ಅವತಾರವನ್ನು ಕಾಣುವ ಅವಕಾಶ ಒದಗಿ ಬಂತು. ಅವರ ಅಭಿವ್ಯಕ್ತಿಗೆ   ಭಹಳ ಸೂಕ್ತ ಈ ಪ್ರಸಂಗ . ಇನ್ನು ಕೀಚಕನ ಅತೀ ಮುಖ್ಯ ಪಾತ್ರಕ್ಕೆ ಸೂರಿಕುಮೇರಿ ಗೋವಿಂದ ಭಟ್ಟರನ್ನು ಕರೆಯುವುದು ಮತ್ತು ಈ ಮೂಲಕ ವೇಣೂರು ತಾಳ ಮದ್ದಲೆಗೆ ಅವರ ಹೆಸರು ಪ್ರಥಮ ಬಾರಿ ಗಮನಕ್ಕೆ ಬಂತು. ಭೀಮನಾಗಿ ಇಲ್ಲಿಯ ಸ್ಥಿರ ಅರ್ಥಧಾರಿ ಸುಣ್ಣಂಬಲ ವಿಶ್ವೇಶ್ವರ ಭಟ್ ಹಾಗೇನೇ ಸುಧೇಶ್ಣೆಯಾಗಿ ವಾಟೆಪಡ್ಪು ವಿಷ್ಣುಭಟ್ ಹೀಗೆ ಒಟ್ಟೂ ತಾಳ ಮದ್ದಲೆಯ ಸ್ವರೂಪ ಅತ್ಯಂತ ಆಕರ್ಷಕವಾಗಿತ್ತು.

ಚಿತ್ರಕೃಪೆ: ಉಲ್ಲಾಸ್
ಸ್ವಕೀಯವಾದ ಈ ಕೌಟುಂಬಿಕ ಕಾರ್ಯಕ್ರಮದಲ್ಲಿ ಪರಿಶುದ್ದ ಕಲಾಪ್ರೇಮಿಗಳಾದ ಅಲ್ಪ ಸ್ವಲ್ಪ ಜನರೇ ಎಂದಿನಂತೇ ಪ್ರೇಕ್ಷಕರು.ಮಧ್ಯಾಹ್ನದ ಉರಿಬಿಸಿಲ ಬಿಸಿಗೆ ತಾಳಮದ್ದಲೆ ಆರಂಭದಲ್ಲೇ ಬಿಸಿ  ಏರತೊಡಗಿತು. ಒಂದೇ ವೆತ್ಯಾಸ ಹೊತ್ತು ಕಳೆದಂತೆ ಬಿಸಿಲು ತಂಪಾದರೆ ತಾಳ ಮದ್ದಲೆ ಮಾತ್ರ ಬಿಸಿಯಾಗುತ್ತಾ ಹೋಯಿತು. ಸೂರಿಕುಮೇರಿಯವರ ಕೀಚಕ ಒಡ್ಡೋಲಗದ ಅರ್ಥಗಾರಿಕೆ ಬಲಿಪ್ಪರ ಏರು ಶ್ರುತಿಯ ಪದದಿಂದ ಸ್ಫೂರ್ತಿ ಪಡೆದುಕೊಂಡಿತು. ಇದರಿಂದ ಬಹಳ ಪ್ರಭಾವಿತ ರಾದ ಸೂರಿಕುಮೇರಿ ಅದೇ ಶ್ರುತಿಯಲ್ಲಿ ತೊಡಗಿ ಅರಂಭದಿಂದಲೇ ಉತ್ತಮ ಮಟ್ಟವನ್ನು ಕಾಯ್ದುಕೊಂಡರು. ಬಲಿಪ್ಪ ಹೊಳ್ಳರ ದ್ವಂದ್ವ ಆರಂಭದಿಂದಲೇ ಸಿಡಿ ಮದ್ದಿಗೆ ಕಿಚ್ಚು ಹತ್ತಿಸಿದಂತೆ ಭಾಸವಾಯಿತು. ಉತ್ತಮ ಶ್ರುತಿಯಲ್ಲೇ ಬಿರುಸಿನ ಮದ್ದಲೆ ಪ್ರತಿಯೊಂದು ಪದಕ್ಕೂ ಕಾಯುವಂತೆ ಮಾಡುತ್ತಿತ್ತು. ಅಂದು ಕೀಚಕನ ಪಾತ್ರ ಮರೆಯಲಾರದ ಒಂದು ಪಾತ್ರವಾಗಿ ಪರಿಣಮಿಸಿಉತು. ಬಲು ಮುಖ್ಯ ಭಾಗವಾದ ಕೀಚಕ ದ್ರೌಪದೀ ಮುಖಾಮುಖಿ ಸಂವಾದ ತುಂಬ ರಂಜನೀಯವಾಗಿತ್ತು. ಇದರಲ್ಲಿ  ಕೀಚಕನ ಮನೋಧರ್ಮವನ್ನು ಭಟ್ಟರು ಅತ್ಯಂತ ಸುಂದರವಾಗಿ ಮಂಡಿಸಿದರು. “ಸುಲಲಿತಾಂಗಿ ಎನ್ನೊಳಿನಿತು ಕರುಣವಿಲ್ಲ ನಿನಗೆ”...ಎಂಬ  ಬಲಿಪ್ಪರ ಭಾವಪೂರ್ಣ ಪದಕ್ಕೆ ಅರ್ಥ ವೈಭವದಿಂದ ಮತ್ತೂ ಭಾವವನ್ನು ತುಂಬಿಸಿದರು.
ಸುಂದರ ಕೀಚಕನ ಕ್ರೌರ್ಯ ಅಧಿಕವಾಗಿ ದುಪದ ನಂದನೆಯ ಮಂದಲೆಗೆ ಕೈ ಹಾಕಿ ಒದೆದ ಸನ್ನಿವೇಶವಂತೂ ಕಣ್ಣಿಗೆ ಕಟ್ಟಿದಂತೆ ಭಾಸವಾಯಿತು. ಸುಧೇಶ್ಣೆಯ ಕಟ್ಟಾಜ್ಞೆಗೆ ಮನನೊಂದ ಸೈರಂಧ್ರಿ ಮಧುವಿನ ಪಾತ್ರವನ್ನು ಕೈಯಲ್ಲಿ ಹಿಡಿದು ಗೋವಿಂದನಿಗೆ ಮೊರೆಯಿಡುವ ಪದ. “ಎಂದ ಮಾತನು ಕೇಳಿ ನೊಂದು ಪಾಂಚಾಲೆಯು..” ಎಂಬ ಪದವನ್ನು   
[ಆ ಪದವನ್ನು ಆಲಿಸಲು ಇಲ್ಲಿ ಅದುಮಿರಿ]


ಹೊಳ್ಳರು ಸುಂದರವಾಗಿ ಭಾವಪೂರ್ಣವಾಗಿ ಹಾಡಿದರೆ ಸೈರಂಧ್ರಿಯ ಅಂತರಂಗದ ವೇದನೆಯನ್ನು ಕೋಳ್ಯುರು ಅಮೋಘವಾಗಿ ತೆರೆದಿಟ್ಟರು.

ಇನ್ನೊಂದು ಮಹತ್ವದ ಸನ್ನಿವೇಶ ವಲಲ ಭೀಮ ಮತ್ತು ಪಾಂಚಾಲೆಯ ರಹಸ್ಯ ಸಂಭಾಷಣೆ. ಇಡಿ; ತಾಳ ಮದ್ದಲೆ ಪ್ರಸಂಗದ  ಅತ್ಯಂತ ಭಾವಪೂರ್ಣ ಸನ್ನಿವೇಶವಿದು. ಕೋಳ್ಯೂರರ ಪರಕಾಯ ಪ್ರವೇಶ ಪೂರ್ಣ ರೂಪವನ್ನು ಪಡೆದಕೊಂಡದ್ದು ಈ ಸನ್ನಿವೇಶದಲ್ಲಿ. ಕಂಕ ಸನ್ಯಾಸಿ ಯಾಗಿರುವ ಅಣ್ಣನ ಮಾತಿನಿಂದ ನೊಂದ ಭೀಮ ಅಡಿಗೆ ಶಾಲೆಯಲ್ಲಿ ಮಸ್ತಕದಡಿಗೆ ಸೌದೆಯನ್ನು ಇಟ್ಟು ಮಲಗಿರುತ್ತಾನೆ. ಅಲ್ಲಿಗೆ ನಿಶಭ್ಧವಾಗಿ ಬಂದ ಸೈರಂಧ್ರಿ ಚಂದ್ರವಶಜನ ದುರವಸ್ಥೆಯನ್ನು ಕಂಡು ಮಮ್ಮಲ ಮರುಗುವ ಮತ್ತು ಇವಳ ಕರೆಗೆ ನಿಧಾನವಾಗಿ ಕಣ್ತೆರೆವ ಭೀಮ ಹೀಗೆ ಭಾವ ಪೂರ್ಣ ಸನ್ನಿವೇಶದ ಒಳಗೆ ನಾವೆಲ್ಲ ನಿಧಾನವಾಗಿ ಜಾರಿದ ಅರಿವೆ ನಮಗಿಲ್ಲ. ನಕಾರಾತ್ಮಕವಾಗಿ ಮೊದಲು ಮಾತಾಡಿದ ಭೀಮನಾಗಿ ಸುಣ್ಣಂಬಲ ಉತ್ತಮ ಪಾತ್ರ ಪೋಷಣೆ ಮಾಡಿ ಕೀಚಕನಿಂದ ನೊಂದ ದ್ರೌಪದಿಯ ಕಣ್ಣೀರು ಒರೆಸುವ ದೃಶ್ಯ ಮನ ಕರಗಿಸಿತು.
 ಸತೀ ಸಂರಕ್ಷಣೆ ಎಂದು ಸಂದರ್ಭೋಚಿತವಾಗಿ  ಪುನರ್ನಾಮಾಂಕಿತ ಗೊಂಡ ಕೀಚಕ ವಧೆ ಪ್ರಸಂಗ ತಾಳ ಮದ್ದಲೆ ರೂಪದಲ್ಲಿ ಅಗುವುದೆ ಅಪರೂಪ. ಅದನ್ನು ಸವಿದ ಮೇಲೆ ಅನ್ನಿಸಿದ್ದು- ಬಲಿಪ್ಪ ಹೊಳ್ಳರ ದ್ವಂದ್ವ ಭಾಗವತಿಕೆ ಪ್ರಸಂಗದ ಉತ್ತರಾರ್ಧದಲ್ಲಿ  ಏರು ಶ್ರುತಿಯಲ್ಲಿ ಹಾಡಿದ ಬಲಿಪ್ಪರ ಅಮೋಘ ಪದಗಳು ಶಾಸ್ತ್ರಿಯವರ ಅದ್ಭುತ ಮದ್ದಲೆ ವಾದನ ಜತೆಗೆ ಸೂಕ್ತ ಮುಮ್ಮೇಳ ಇದು ಇನ್ನು ಸಿಗಬಲ್ಲುದೇ? ಸಿಗುವುದಿದ್ದರೂ ಅದಕ್ಕೆ ಇಂತಹುದೇ ಕೂಟಗಳು ಸಂದರ್ಭಗಳು ಕೂಡಿ ಬರಬೇಕು.

ಎಂದಿನಂತೆ ವೇಣೂರು ಮನೆಯವರ ಅತಿಥ್ಯ ಜತೆಗೆ ಅದ್ಭುತ ತಾಳ ಮದ್ದಲೆ ಎಲ್ಲವನ್ನು ಸವಿದ ಮನಸ್ಸು ಹೃದಯ ತುಂಬಿದ ಕೃತಜ್ಞತೆಯನ್ನು ಅರ್ಪಿಸಿತು. ಪಿತೃಗಳ ಸ್ಮರಣೆಯಲ್ಲಿ ಜರಗಿಸಿದ ತಾಳಮದ್ದಲೆ ಆ ಕಾರ್ಯಕ್ರಮಕ್ಕೆ ಉತ್ತಮ ಅರ್ಥ ಪೂರ್ಣ ಸ್ಮರಣೆಯನ್ನು ಒದಗಿಸಿತು. ನಿಜಕ್ಕು ವೇಣೂರು ಕುಟುಂಬದವರೊಂದಿಗೆ ನಾವೆಲ್ಲರೂ ಧನ್ಯರು.



Wednesday, February 2, 2011

ಅಂತರಂಗದಲ್ಲಿ ಉಳಿದವುಗಳು



“ಕಲೆಗೆ ವ್ಯಕ್ತಿಗಿಂತ ಪ್ರಾಧಾನ್ಯತೆಯನ್ನು ಕೊಡಬೇಕು. ಕಲೆ ಇದ್ದಲ್ಲಿ ವ್ಯಕ್ತಿಗೆ ಮಹತ್ವ”  ಈ ಅರ್ಥಪೂರ್ಣ ಮಾತುಗಳನ್ನು ಮಿತ್ರರೊಬ್ಬರು ಇತ್ತೀಚೆಗೆ  ನಿಷ್ಠೂರವಾಗಿ ನನ್ನಲ್ಲಿ ಹೇಳಿದ್ದರು. ಅವರು ಅಂತಹ ಹಲವು ಉದಾತ್ತ ಧ್ಯೇಯಗಳನ್ನು ಇರಿಸಿಕೊಂಡ ನಿಷ್ಠೂರವಾದಿಯಾಗಿದ್ದರು.ಈ ಮಾತಿಗೆ ಬಹುಶಃ ಪ್ರತ್ಯುತ್ತರ ಸಿಗಲಾರದು. ಹಲವು ವಿಚಾರವಂತರ ನಡುವೆ ಹರಿವ ಈ ಮಾತು ಸರ್ವಾಕಾಲಿಕ ಸತ್ಯ. ಇತ್ತೀಚೆಗೆ ನಾವು ನಡೆಸಿದಂತಹ ಹಿರಿಯ ಕಲಾವಿದ ಭಾಗವತ ಶ್ರೇಷ್ಠರಾದ ಬಲಿಪ ನಾರಾಯಣ ಭಾಗವತರ ಅಭಿನಂದನಾ ಸಮಾರೋಹ ಮತ್ತು ಅದರ ನಂತರ ಇದೇ ಪುಟಗಳಲ್ಲಿ ಬರೆದ ತದನಂತರದ ಲೇಖನವನ್ನು ಬರೆದಾಗ ಚಿತ್ತಭಿತ್ತಿಯಲ್ಲಿ ಈ ವಾಕ್ಯ ಯಾಕೋ ಹಲವುಸಲ ತನ್ನ ಛಾಯೆಯನ್ನು ತೋರಿದ ಹಾಗೆ ಆಗುತ್ತಿತ್ತು. ಈ ಅನುಮಾನ ನನ್ನಲ್ಲೇ ಹಲವು ಸಲ ಬಂದದ್ದು ಸುಳ್ಳಲ್ಲ. ಇದು ನನ್ನ ಪ್ರಾಮಾಣಿಕ ಅನಿಸಿಕೆ.

ಆದರೂ ನನ್ನ ಚಿಂತನೆಗಳು ಹಲವು ಅನಿಸಿಕೆಗಳಿಗೆ ರೂಪವನ್ನು ಕೊಡುತ್ತವೆ. ಇಲ್ಲಿ ಶ್ರೀ ಭಾಗವತರ ವಿಷಯಕ್ಕೆ ಬಂದಾಗ ನಾನು ಅತ್ಯಂತ ಭಾವುಕನಾಗುವುದು ಅಥವಾ ಉದ್ವೇಗಕ್ಕೆ ಒಳಗಾಗುವುದು ಸಹ ಕೆಲವೊಮ್ಮೆ ನಾನು ಅಂತರ್ಮುಖಿಯಾಗಿ ಯೋಚಿಸುವಂತೆ ಮಾಡುತ್ತದೆ. ಇದನ್ನು ಗಾಢವಾಗಿ ಯೋಚಿಸಿದಾಗ ಇದಕ್ಕೆ ಕಾರಣ ಬೇರೆಯೆ ಎಂಬ ಅಂಶ ನನ್ನ ಗಮನಕ್ಕೆ ಬರುತ್ತದೆ. ಈ ಹಿರಿಯರು ಕೇವಲ ಕಲಾವಿದರಾಗಿ ನನ್ನಲ್ಲಿ ಅಭಿಮಾನವನ್ನು ಬೆಳೆಸಿದವರಲ್ಲ. ಬಲಿಪ್ಪರೆಂದರೆ ಮೊದಲಿನಿಂದಲೂ ಅಭಿಮಾನ ಇಟ್ಟುಕೊಂಡರೂ ಆ ಅಭಿಮಾನ, ಪ್ರೀತಿ ಬೆಳೆದು ಬರುವುದರಲ್ಲಿ ಕಲೆಯಿಂದ ಆಚೆಗಿನ ವಿಚಾರಗಳು ಹೆಚ್ಚು ಮಹತ್ವ ನನಗರಿವಿಲ್ಲದೆ ಪಡೆದುಕೊಂಡಿದೆ ಎಂಬುದು ಸತ್ಯ. ಇಂದು ಇದೇ ಬಗೆಯ ಅಭಿಮಾನವನ್ನು ಗೌರವವನ್ನು ನಾನು ಹಿರಿಯ ಕಲಾವಿದ ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರಲ್ಲಿಯೂ ಹೊಂದಿದ್ದೇನೆ. ಇಬ್ಬರಲ್ಲೂ ವೈಯಕ್ತಿಕವಾಗಿ ಅದ್ಭುತ ಗುಣಗಳಿವೆ.

ಬಲಿಪ್ಪರು ನಮ್ಮ ಅಭಿನಂದನೆ ಸ್ವೀಕರಿಸಿ ಇಲ್ಲಿನ ಹುಡುಗರ ಅಭಿಮಾನ ಕಂಡು ಭಾವುಕರಾಗಿ ಅಂದು ಮನಸ್ಸು ತುಂಬಿ ಹಾಡಿದ್ದರು. ಅಂದು ಗಜಮುಖದವಗೆ .. ಎಂಬ ಮೊದಲ ಪದದಿಂದ ಆರಂಭವಾದ ಆ ಸ್ಪಿರಿಟ್ ಮಂಗಳ ಪದ ಹಾಡಿ ಜಾಗಟೆಯನ್ನು ಮೆಲುವಾಗಿ ತಟ್ಟಿ ನಿಲ್ಲಿಸುವವರೆಗೆ ಇತ್ತು. ಅಂದಿನ ಆ ಅದಮ್ಯ ಉತ್ಸಾಹಕ್ಕೆ ಹಲವು ಕಾರಣಗಳಿದ್ದರೂ ಅಂದು ಬಲಿಪ್ಪರು ನಮ್ಮ ಹುಡುಗರಿಗಾಗಿ ಹಾಡಿದ್ದರು ಎಂದು ನನ್ನ ಅಭಿಮತ. ಅದಕ್ಕೆ ಅವರು ಅಂದು ಭಾವುಕರಾಗಿ ನಿದ್ದೆ ಬಿಟ್ಟದ್ದು ಆನಂತರ ಎರಡು ದಿನ ಬಿಟ್ಟು ನಮಗೆಲ್ಲ ವೈಯಕ್ತಿಕವಾಗಿ ಕರೆ ಮಾಡಿ ಕಾರ್ಯಕ್ರಮದ ಬಗ್ಗೆ ವಿಚಾರಿಸಿದ್ದು ಸಾಕ್ಷಿಯಾಗಿಬಿಡುತ್ತದೆ. ಹೀಗೆ ಅವರು ಕಾರ್ಯಕ್ರಮ ಮುಗಿದ ನಂತರ ದಿನಗಳು ಕಳೆದು ಸಂಘಟಕರಿಗೆ ಕರೆ ಮಾಡಿ ಕಾರ್ಯಕ್ರಮದ ಬಗ್ಗೆ ವಿಚಾರಿಸಿದ್ದು ನನ್ನ ಅರಿವಿನಲ್ಲಿ ಇಲ್ಲ. ಮಾತ್ರವಲ್ಲ ಅದು ಇಲ್ಲವೇ ಇಲ್ಲ ಎಂದು ನನ್ನ ವಿಶ್ವಾಸ. ಯಾವ ಕಲಾವಿದನೂ ಹೀಗೆ ಕೇಳಿದ ನಿದರ್ಶನ ಬಹಳ ವಿರಳ. ನಮ್ಮಗಳ ವಿಚಾರದಲ್ಲಿ ಬಲಿಪ್ಪರು ಅಷ್ಟೂ ಭಾವುಕರಾಗಿದ್ದರು. ಹಸಿದ ಹೊಟ್ಟೆಯಲ್ಲಿ ಬಂದ ಮಗುವಿಗೆ ತಾಯಿ ಹೊಟ್ಟೆ ತುಂಬ ಬಡಿಸಿ ಅಕ್ಕರೆಯಲ್ಲಿ ವಿಚಾರಿಸಿದ ಹಾಗೆ ವಿಚಾರಿಸಿದ್ದರು. ಇದು ಅವರ ಹೃದಯ ವೈಶಾಲ್ಯವನ್ನು ಮತ್ತು ಮುಗ್ಧತೆಯನ್ನು ತೋರಿಸುತ್ತದೆ. ಇಂತಹ ಕೆಲೆಯಿಂದ ಹೊರಗಿನ ವಿಚಾರಗಳು ಅವರಲ್ಲಿ ಅಭಿಮಾನವನ್ನು ಹೆಚ್ಚಿಸುತ್ತದೆ. ಅವರ ಬಗ್ಗೆ ಹೇಳುವಾಗ ಬರಿಯುವಾಗ ಈ ಅದಮ್ಯ ಪ್ರಚೋದನೆ ಕೆಲಸ ಮಾಡುತ್ತದೆ.

ಹಾಗೇನೆ ನಮ್ಮ್ರ ಕಾರ್ಯದಲ್ಲೂ ಕೇವಲ ಪರಿಶುದ್ದ ಅಭಿಮಾನ ಮಾತ್ರವೇ ನಮ್ಮೊಳಗಿನ ಶಕ್ತಿಯಾಗಿತ್ತು. ಮತ್ತು ಇಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಕೆಲಸ ಮಾಡಿದ್ದು.. ನಾವು ಮಾಡುವ ಕಾರ್ಯದ ಯೋಗ್ಯತೆ. ಬಲಿಪ್ಪರಂತಹ ಅತೀ ಹಿರಿಯ ಮತ್ತು ಯೋಗ್ಯರನ್ನು ಉದ್ದೇಶಿಸಿ ಮಾಡುವ ಕಾರ್ಯಕ್ರಮ ನಮ್ಮಿಂದ ಹಲವು ಕಾರ್ಯಗಳನ್ನು ಸುಲಭದಲ್ಲಿ ಮಾಡಿಸಿತ್ತು. ಸಾರ್ವತ್ರಿಕ ಪ್ರತಿಕ್ರಿಯೆ ಒಂದು ರೀತಿಯಲ್ಲಿ ಇದಕ್ಕೆ ಪ್ರಚೋದನೆಯನ್ನು ಕೊಟ್ಟಿತು. ಒಟ್ಟಿನಲ್ಲಿ ನಮಗೆ ಯೋಗವಿತ್ತು. ಬಯಸಿದ್ದನ್ನು ಸಾಧಿಸುವ ಯೋಗ. ಮೌಲ್ಯಯುತ ಕಾರ್ಯಕ್ರಮ ಮಾಡಿ ಕೃತಾರ್ಥರಾಗುವ ಯೋಗ. ಈ ಯೋಗಕ್ಕೆ ಅನುಕೂಲವಾಗುವಂತೆ ಹಲವು ಸಹಕಾರಗಳು ದೊರೆತವು. ನಮ್ಮ ಯೋಜನೆಯಂತೆ  ಸರಿಯಾದ ಸಮಯಕ್ಕೆ ಎಲ್ಲ ಕಾರ್ಯಕ್ರಮಗಳು ಹಂತ ಹಂತವಾಗಿ ನಡೆದುವು. ತಾಳ ಮದ್ದಲೆಗೆ ಮೀಸಲಿಟ್ಟ ಸಮಯದಲ್ಲಿ ಯಾವುದೇ ಕಡಿತವಾಗಬಾರದು. ಎಷ್ಟು ಸಾಧ್ಯವೋ ಅಷ್ಟು ಬಲಿಪ್ಪರ ಪದಗಳನ್ನು ಕೇಳಬೇಕು. ಆ ಮೂಲಕವೇ ಕಾರ್ಯಕ್ರಮದ ಯಶಸ್ಸು ಸಿದ್ದಿಸಬೇಕೆಂಬ ಇಂಗಿತಕ್ಕೆ ಸಹಕಾರಿಯಾಗುವಂತೆ .. ಜಬ್ಬಾರ್ ಸುಮೋ ತಮ್ಮ ಅರ್ಥಗಾರಿಕೆಯನ್ನು ಮೆರೆದರು. ಅತ್ಯಂತ ವೇಗವಾಗಿ ಮಿಂಚಿನಂತಹ ಅರ್ಥಗಾರಿಕೆಯನ್ನು ತೋರಿಸಿ ಬಲಿಪ್ಪರಿಗೆ ಒಂದಾದ ಮೇಲೆ ಒಂದರಂತೆ ಪದಗಳನ್ನು ಎತ್ತಿಕೊಡುತ್ತಾ ಪ್ರಚೋದಿಸುತ್ತಿದ್ದರು. ಇದು ಮತ್ತಷ್ಟು ನಮ್ಮ ಇಂಗಿತವು ಕಾರ್ಯರೂಪಕ್ಕೆ ಬರುವಲ್ಲಿ ಸಹಕಾರವಾಯಿತು.

 ಇಂದು ಅಭೂತಪೂರ್ವ ಯಶಸ್ಸಿನ ಒಂದು ಕಾರ್ಯಕ್ರಮ ಮಾಡಿದನಂತರ ಹಲವು ಅಲಿಖಿತ ಜವಾಬ್ದಾರಿಗಳು ಮತ್ತು ನಿರೀಕ್ಷೆಗಳು ನಮ್ಮ ಮೇಲೆ ಇದೆ ಎಂದು ಅನ್ನಿಸುತ್ತದೆ. ಅಂದು ಕಾರ್ಯಕ್ರಮ ಮುಗಿದು ಹಲವುದಿನಗಳ ವರೆಗೂ ಕೆಲವರು ಹೇಳಿದ್ದರು – ವರ್ಷಕ್ಕೆ ಎರಡಾದರೂ ಇಂತಹ ಕಾರ್ಯಕ್ರಮ ಮಾಡಿ. ನಿಜಕ್ಕಾದರೆ ನಮ್ಮ ಮೂಲ ಉದ್ದೇಶ ಕೇವಲ ಈ ಒಂದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿತ್ತು. ಇಲ್ಲಿ ಅವಗಣಿಸಲ್ಪಟ್ಟ ಮಹಾನ್ ವ್ಯಕ್ತಿಗೆ ಬಹುಶಃ  ನಮ್ಮ ಅಭರುಚಿಗೆ ತಕ್ಕ ಹಾಗೆ, ತಮ್ಮ ಮನೋಭಾವಕ್ಕೆ ಅನುಸರಿಸಿ ಒಂದು ಮನದಾಳದ ಪುರಸ್ಕಾರ ಮಾತ್ರವೇ ನಮ್ಮ ಉದ್ದೇಶವಾಗಿತ್ತು. ಯಾವುದೇ ಅಡೆ ತಡೆ ಎದುರಾದರೂ ಮಾಡುವ ಹಂಬಲವಿತ್ತು. ಬಲಿಪ್ಪರಂತಹ ಒಬ್ಬ ಯಕ್ಷಗಾನದ ಹಿರಿಯರನ್ನು ಅವಗಣಿಸಿ ಅ ಅವಗಣನೆಯನ್ನು ಪುರಸ್ಕರಿಸುವಂತೆ ಮಂಡಿಸುವ ಮೊಂಡುವಾದವೂ ಪರೋಕ್ಷವಾಗಿ ಇಲ್ಲಿ ಕೆಲಸ ಮಾಡಿತ್ತೋ ಎಂದು ಹಲವು ಸಲ ಅನ್ನಿಸುತ್ತಿದೆ.

ಅತ್ಯಂತ ವಿಶಿಷ್ಟವಾದ ಪ್ರಸಂಗ ತಾಮ್ರಧ್ವಜ ಕಾಳಗ. ಇದನ್ನು ತಾಳಮದ್ದಲೆಗೆ ಆಯ್ದುಕೊಂಡಾಗ ಹಲವರ ಪ್ರತಿಕ್ರಿಯೆ ಇದು ಹೇಗೆ ತಾಳ ಮದ್ದಲೆಗೆ ಸೂಕ್ತ. ಹೆಚ್ಚಾಗಿ ಚೆಂಡೆ ಪದಳಿರುವ ಪ್ರಸಂಗ ತಾಳಮದ್ದಲೆಗೆ ಸೂಕ್ತವಲ್ಲ ಎಂಬ ವಾಡಿಕೆ ಮಾತು ಇದೆ. ಮೇಲ್ನೋಟಕ್ಕೆ ಈ ಪ್ರಸಂಗ ಅದೇರೀತಿಯಾಗಿ ಕಂಡರೂ ಈ ಪ್ರಸಂಗ, ಅತ್ಯಂತ ವಿಶಿಷ್ಟ ಕಿಚ್ಚು ಹತ್ತಿಸಿದಂತಹ ಪದಗಳಿಂದ ಕೂಡಿದೆ. ಮಾತ್ರವಲ್ಲ ಬಲಿಪ್ಪರು ಇದನ್ನು ಸಲೀಸಾಗಿ ಅತಿ ಯಶಸ್ವಿಯಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ನಂತರ ಜಬ್ಬಾರ್ ಕೂಡ ಭಾವ ತುಂಬಿ ಇದನ್ನೇ ಹೆಳೀದ್ದರು.ಯಕ್ಷಗಾನದಲ್ಲಿ ಸಾವಿರಕ್ಕಿಂತಲೂ ಮಿಕ್ಕಿದ ಪ್ರಸಂಗ ಇದ್ದರೂ ಇನ್ನೂ ಅದೇ ರಾಗ ಅದೇ ಹಾಡು ಅದೇ ಗೋಳೂ ಎಂಬಂತೆ ವಾಲಿಮೊಕ್ಷ. .ಕರ್ಣಾವಸಾನ ಎಂಬಂತಹ ಪ್ರಸಂಗ ಆಯ್ಕೆ ಮಾಡುವುದರಲ್ಲಿ ನಮ್ಮಲ್ಲಿ ಯಾರಿಗೂ ಸಹಮತವಿಲ್ಲವಾಗಿತ್ತು. ಯಕ್ಷಗಾನ ನಿಂತ ನೀರಾಗಬಾರದು ಎನ್ನುವಾಗ  ಇಂತಹ ಪ್ರಸಂಗಗಳನ್ನು ಬಯಸುವುದು ಎಷ್ಟುಸರಿ? ಇನ್ನೂ ಅದನ್ನೇ ಮಾಡುತ್ತಿದ್ದರೆ ನಿಂತ ನೀರು, ನೀರಾಗುವುದು ಮಾತ್ರವಲ್ಲ ಕೆಸರಾಗಿ ಕ್ರಿಮಿಗಳಾಗಿ ಬಿಡುತ್ತವೆ. ನಂತರ ಕ್ರಿಮಿಗಳಿಂದ  ಪ್ರಸಂಗಗಳಲ್ಲಿ ಅಭಿಮನ್ಯು ಉತ್ತರೆಯ ಯುಗಳಗೀತೆಯು ಮೊಳಗಬಹುದು. ಇಲ್ಲಾ ಕಲೆ ಹೊಸರೂಪವನ್ನೆ ಪಡೆದುಕೊಳ್ಳಬಹುದು.


 ಅಧಿಕೃತವಾಗಿ ಇಲ್ಲಿ ಯಾರೂ ಕೇಂದ್ರವಾಗಿರದೆ ಕೇವಲ ಸ್ನೇಹ ವಿಶ್ವಾಸ ಮತ್ತು ಅಭಿಮಾನ ಸಮ್ಮಿಳಿತ ಗೊಂಡು ಶಕ್ತಿಯಾಗಿ ಮೂಡಿತ್ತು. ಎಲ್ಲ ಯೋಜನೆಗಳು ಯೋಚನೆಗಳು ಸ್ವಯಂ ಸ್ಪೂರ್ತಿಗೊಂಡು ಕಾರ್ಯರೂಪಕ್ಕೆ ಇಳಿಯಿತು. ಅನುಭವದ ಕೊರತೆ ಕೆಲವೆಲ್ಲ ತಪ್ಪುಗಳು ಮುಖ್ಯಕಾರಣವಾಗಿದ್ದರೂ ಅವೆಲ್ಲವು ಒಟ್ಟು ಯಶಸ್ಸಿನಲ್ಲಿ ಲೀನವಾಯಿತು. ಇನ್ನು ಈ ಬಗೆಯ ಕಾರ್ಯಕ್ರಮ ಮಾಡುವುದಿದ್ದರೆ ಇದಕ್ಕಿಂತ ಅಧಿಕ ನಿರೀಕ್ಷೆ ನಮ್ಮ ಮೇಲಿದೆ ಎಂಬ ಯೋಚನೆಯೆ ಕೆಲವೊಮ್ಮೆ ಭಯ ಹುಟ್ಟಿಸುತ್ತದೆ. ಕೇವಲ ಒಂದರ ಯಶಸ್ಸಿನಿಂದ ಎಲ್ಲವೂ ನಿರ್ಧರಿಸಲ್ಪಡುವುದಿಲ್ಲ ಆದರೂ ಸನ್ಮಮನಸ್ಸಿನ ನಮ್ಮ ಹುಡುರ ವಿಶ್ವಾಸ ಅಪರಿಮಿತ. ಕಟ್ಟಿ ಹಾಕಿದಂತಿದ್ದ ಅಭಿಮಾನ ತನ್ನ ಎಲ್ಲಾ ಶಕ್ತಿಯನ್ನು ಉಪಯೋಗಿಸಿ ಧುಮ್ಮಿಕ್ಕಿತು. ಅರ್ಹ ವ್ಯಕ್ತಿತ್ವವನ್ನು ಪುರಸ್ಕರಿಸಿ ಹೊಗಳುವುದಕ್ಕೆ ಈ ಬಿಗುಮಾನ ಅಥವಾ ಛಲ ಯಾಕೆಂದೆ ಕೆಲವೊಮ್ಮೆ ತಿಳಿಯದೆ ಆಶ್ಚರ್ಯ ಪಡುವಂತಾಗುತ್ತದೆ. ಏನಿದ್ದರೂ ಎಲ್ಲವನ್ನು ಕಳೆದು ನಮ್ಮತನವನ್ನು ತೋರಿದ್ದಕ್ಕೆ ಸಂತೋಷವೆನಿಸುತ್ತದೆ ಮಾತ್ರವಲ್ಲ ಅದರಲ್ಲಿ ಸಿಕ್ಕಿದ ಯಶಸ್ಸೂ ಕೂಡ ಆತ್ಮ ಬಲವನ್ನು ಹೆಚ್ಚಿಸಿದೆ. ಸದ್ಭಾವನೆಗೆ ದಕ್ಕಿದ ಯಶಸ್ಸು ಅಂತ ಅನುಮಾನವಿಲ್ಲದೆ ಹೇಳಬಹುದು. ಯಾರನ್ನೂ ಹಿಂದಿಕ್ಕುವ ಪ್ರಮೇಯವಿಲ್ಲದೆ ತಮ್ಮ ದಾರಿಯನ್ನು ಕ್ರಮಿಸುವ ನಡೆ ಮಾತ್ರ. ಇನ್ನು ಮುಂದಿಗೂ ಅದೇ ಸ್ಥಾಯೀ ಭಾವವಾಗಿ ಗೋಚರಿಸಲಿ. 

ಧನ್ಯತೆಯ ಘಳಿಗೆ.



ಗಜಮುಖದವಗೆ ಗಣಪಗೇ.............
ಅನಶ್ವರ ಕಲಾವಿದ ಮನದುಂಬಿ ಸ್ಫೂರ್ತಿಗೊಂಡು ಹಾಡಿದನೆಂದರೆ, ಸರಸ್ವತಿಯ ಕರಕಮಲ ಸಂಜಾತ ನೆರೆದ ಅಭಿಮಾನಿಗಳ ಹೃದಯದ ಕದ ತಟ್ಟಿದನೆಂದರೆ ಮತ್ತೆ ಕೇಳಬೇಕೆ? ಕಣ್ಣು ತನ್ನ ಅಸ್ತಿತ್ವ ಸಾರಿಕೊಂಡಿತು. ಕಿವಿ ತನ್ನ ಹಸಿವು ನೀಗಿಸಿತು. ಮನಸ್ಸು ಭಾವನೆಯ ಹೊಳೆಗೆ ಕೊಚ್ಚಿ ನಲುಗಾಡಿ ಬೇಕೆಂದೇ ಆ ಪ್ರವಾಹಕ್ಕೆ ಧುಮುಕಿತು. ಹಲವು ದಿನಗಳ ದಾಹಕ್ಕೆ ಗಂಗಾಜಲ ಸ್ಪುರಿಸಿದಂತೆ ಹತ್ವಾರ್ ಸಭಾಂಗಣದಲ್ಲಿ ಬಲಿಪ್ಪರ ದ್ಬನಿ ಪೂರ್ಣ ಕಂಠದಿಂದ ಹೊರ ಹೊಮ್ಮಿದಾಗ, ಮನಸ್ಸಿಗೆ ಇಳಿದ ಗಂಗಾಜಲ ಕಣ್ಣಿಂದ ಧಾರೆ ಧಾರೆಯಾಗಿ ಹೊರಹೊಮ್ಮಿತು. ಅಬ್ಬಾ ಇದಕ್ಕಲ್ಲವೆ ನಾವು ಶಬರಿಯಾದದ್ದು. ನಮ್ಮ ಶಾಪ ವಿಮೋಚನೆಯಾಯಿತೇ?  ಅಜ್ಞಾತವಾಸ ಕಳೆದು ನಮ್ಮಜ್ಜ ಪ್ರತ್ಯಕ್ಷವಾದರೆ? ಇಂದು ನಮಗಾಗಿ ಹಾಡಿದರೆ? ಅಲ್ಲ ಅವರೇ ಸ್ವಯಂ ಪ್ರೇರಿತರಾದರೆ? ಅಲ್ಲ ಆ ಗಾನ ಸರಸ್ವತಿಯೇ ಆ ಕಂಠದಲ್ಲಿ ಪ್ರತ್ಯಕ್ಷಗೊಂಡು ತನ್ನ ವೀಣೆ ಮೀಟಿದಳೇ?
ಎಲ್ಲವೂ ಸಾಕಾರಗೊಂಡಿತು. ಅದು  ಅಂದು  ಮೆಲ್ಲನೇ ಮೆತ್ತಗೆ ಬಂದೇ ಬಿಟ್ಟಿತು.
.
 ಹಲವು ದಿನಗಳ ಅಜ್ಞಾತವಾಸದ ಬಿಡುಗಡೆಯೋ ಎಂಬಂತೆ ಆ ದಿನ ಬಂದೆ ಬಿಟ್ಟಿತು. ಹಲವು ದುಗುಡ ಆತಂಕಗಳನ್ನು ಜತೆಗೆ ರೋಮಾಂಚನದ ಅನುಭವಕ್ಕೆ ಕಾತುರವಾದ ಮನಸ್ಸನ್ನು ಪಕ್ವವಾಗಿಸಿ ಕಾಯುತ್ತಿದ್ದ ದಿನ ಬಂದೇಬಿಟ್ಟಿತು. ಅದೇ ೨೦೧೧ರ ಜನವರಿ ೨೩ ಉತ್ತರಾಯಣದ  ಸೂರ್ಯ ದಿಶೆಬದಲಿಸಿ ಅಣಿಯಾಗಿದ್ದ ಕಾಲಮಾನವಲ್ಲವೆ? ವಸಂತನ ಆಗಮನಕ್ಕೆ ಕಾದಿದ್ದ ಮಾಮರದ ಕೋಗಿಲೆಯ ಸಮಯದ ಸನಿಹಕ್ಕೆ ದಿನ ಬಂದೇ ಬಿಟ್ಟಿತು...


ಬೆಂಗಳೂರಿನಲ್ಲಿ ಬಲಿಪ್ಪ ನಾರಾಯಣ ಭಾಗವತರ ಅಭಿನಂದನೆ ಎಂಬ ಮಹತ್ಕಾರ್ಯಕ್ಕೆ ಕಟಿಬದ್ದರಾದ ವಿಚಾರ ಮೊದಲೇ ಬಿತ್ತರಿಸಿ ಸಂಚಲನ ಉಂಟು ಮಾಡಿಯಾಗಿದೆ. ಹಲವು ಸಿದ್ದತೆಗಳ ಯಾದಿಯನ್ನು ಸಿದ್ದಪಡಿಸಿ ಒಂದೊಂದಾಗಿ ಮುಗಿಸಿ ಸಂಭ್ರಮದ ಕ್ಷಣಗಳಿಗೆ ಇನ್ನೇನು ಕೆಲವೇ ಘಂಟೆಗಳಿವೆ ಎನ್ನುವಾಗ ಬೆಂಗಳೂರಿಗೆ ಬಂದೆರಗಿತು ಬಂದ್ ಎಂಬ ಮುಷ್ಕರ ನಿಷೇಧಾಜ್ಞೆಯ ಸಿಡಿಲು. ಮೊದಲ ದಿನ ಬಲಿಪ್ಪರು ಆಗಮಿಸುವ ದಿನ. ಮುಂಜಾನೆ ಎದ್ದು ಕಿರಿಗುಟ್ಟಿದ ಮೊಬೈಲು ಕಂಡೊಡನೆ ಬೆಚ್ಚಿಬಿದ್ದೆ. ಕರ್ನಾಟಕ ಬಂದ್!!!! ಎಂಬ ಮಿತ್ರನ ಸಂದೇಶ. ೧೪೪ ನಿಷೇಧಾಜ್ಞೆ ಜಾರಿಯಾಗಿತ್ತು. ಬಲಿಪ್ಪರು ಆಗಮಿಸಿ ಸುರಕ್ಷಿತ ತಾಣ ಸೇರುವವರೆಗೆ ಒಂದು ಆತಂಕವಾದರೆ ಮರುದಿನದ ಬಗೆ ಹೇಗೆ ಎಂಬ ಆತಂಕ ಇನ್ನೊಂದು.


ಆತಂಕದೆಡೆಯೂ ಒಂದು ರೋಮಾಂಚನ ಉಂಟುಮಾಡುವ ವಿಚಾರವಿತ್ತು. ಅದು ಅಂದಿನ ಬಹುತೇಕ ಮುಖ್ಯ ಕನ್ನಡ ಪತ್ರಿಕೆಗಳಾದ  ಉದಯವಾಣಿ, ಪ್ರಜಾವಾಣಿ, ವಿಜಯಕರ್ನಾಟಕ ಮತ್ತು ಕನ್ನಡ ಪ್ರಭ ನಮ್ಮ ಕಾರ್ಯಕ್ರಮದ ಸುದ್ದಿಯನ್ನು ಪ್ರಕಟಿಸಿದ್ದುವು. ಅದರ ಮಧ್ಯೆ ಹಲವು ಫೊನ್ ಕರೆಗಳು ಮತ್ತು ಮೇಸೇಜ್ ಗಳು ನಾಳಿನ ಕಾರ್ಯಕ್ರಮದ ವಿವರ ತಿಳಿಯಲು. ಕಾರ್ಯಕ್ರಮ ಇದೆಯೇ? ಎಂಬ ಆತಂಕದ ಪ್ರಶ್ನೆಬಂದಾಗ ಮನಸ್ಸಿನ ತಳಮಳ ಹೇಗೆ ಹೇಳುವುದು? ಎಡೆ ಬಿಡದೆ ಮಿತ್ರರಿಗೆ ಕರೆ ಮಾಡಿ ನನ್ನ ತಳ ಮಳ ಅವರಿಗೂ ದಾಟಿಸುವ ಪ್ರಯತ್ನ ಮಾಡಿದೆ. ಹಾಗೆಂದು ನನ್ನಿಂದ ಅಧಿಕ ಆತಂಕ ನನ್ನ ಬಳಗಕ್ಕೆ ಇದ್ದಿತು


ಆದರೇ ದೈವ ನಿಯಮವೇ ಹಾಗೆ. ಒಂದು ರೀತಿ ಈ ಅತಂಕದಲ್ಲು ಬಂದೆರಗಿದ ಸಂಕಟವನ್ನು (ಅಂದು ಸಂಕಷ್ಟಿ ಬೇರೆ..!!) ಸದುಪಯೋಗ ಗೋಳಿಸಿದ ವಿಚಾರ ಮುಂದೆ ಹೇಳೋಣ.


ಸಾಯಂಕಾಲವಾಗುತ್ತಿದ್ದಂತೆ ಬೆಂಗಳೂರು ಸಹಜವಾಗಿಬಿಟ್ಟಿತು. ಆತಂಕ ಅಲ್ಪಸ್ವಲ್ಪ ದೂರವಾದರೂ ನಿಷೇಧಾಜ್ಞೆಯ ಭೂತ ಇನ್ನು ದರ್ಶನ ಕೊಡುತ್ತಿತ್ತು. ಆತಂಕ ತುಂಬಿದ ರಾತ್ರಿ ಮಿತ್ರರೊಂದಿಗೆ ವಿಚಾರ ವಿನಿಮಯ ನಡೆಸಿ ನಾಳಿನ ಮಹತ್ವದ ಘಳಿಗೆಗೆ ಮನಸ್ಸು ಸಿದ್ದವಾಗತೊಡಗಿತು. ಮಿತ್ರ ಸುಬ್ಬಣ್ಣ ನನ್ನ ಜತೆಯಲ್ಲೇ ಮನೆಗೆ ಬಂದಿದ್ದರು. ಅಂದು ರಾತ್ರಿ ನಮ್ಮಲ್ಲಿ ಅವರ ವಿಶ್ರಾಂತಿ.ಮರುದಿನದ ಸಣ್ಣ ಸಿದ್ದತೆ ಮಾಡಿ ಬೇಗನೆ... ಮಲಗಿದರು (ರಾತ್ರಿ ೧೧.೩೦!!!! ) ತುಸು ಹೊತ್ತು ನಿದ್ದೆಬರಲೇ ಇಲ್ಲ. ನಾಳಿನ ದಿನದ ರೊಮಾಂಚನದ ಘಳಿಗೆಗೆ ಮನಸ್ಸು ಕಾಯುತ್ತಿತ್ತು. ಎದೆ ಬಡಿತ ತೀವ್ರಗೊಂಡರು ಆಗಾಗ ಸಂಯಮದ ಮಂತ್ರ ಪಠಿಸುತ್ತಾ ನಿದ್ದೆ ಬಂದು ಬಿಟ್ಟಿತು. ನಿದ್ದೆಬಿಟ್ಟು ಎಚ್ಚರವಾದಾಗ ಕಿಟಿಕಿಯಿಂದ ಹೊನಲು ಬೆಳಕು ಒಳ ಪಸರಿಸಿತ್ತು. ಬೆಳಗೆ ಯಾಯಿತೆ. ಶುಭದಿನ ಬಂತೇ? ಬಳಿಯಲ್ಲೆ ಇದ್ದ ಮೊಬೈಲ್ ತೆಗೆದು ಗಂಟೆ ನೋಡಿದೆ  ೨.೩೦ ಆಗಿತ್ತು.. ಹಾಗೆ ಪುನಃ ಮಾನಸಿಕ ಒತ್ತಡ ಶುರುವಾಯಿತು. ನಿದ್ದೆ ಹತ್ತಿರ ಸುಳಿಯದು.. ಕ್ಷಣ ಮೊದಲು ಕನಸಿನಲ್ಲೇ ಅಭಿಮನಂದನಾ ಕಾರ್ಯಕ್ರಮ ತಾಳ ಮದ್ದಲೆ ನಡೆದು ಹೋಗಿತ್ತು...!!!!

ನಿದ್ದೆಬಾರದು ಮಿತ್ರನಿಗೆ ಮೊಬೈಲ್ ನಿಂದ ಕಿರು ಸಂದೇಶ ಕಳಿಸಿದೆ.  “ ನಿದ್ದೆ ಬರುದಿಲ್ಲ ... ಮರಾಯ್ರೆ..” ಇಲ್ಲ ಮತ್ತೆ ಮಲಗಿಲ್ಲ...ಹಾಗೇ ಆತಂಕ ತವಕದ ಮನಸ್ಸು ಮುಂಜಾವಿನವರೆಗೂ ಎಚ್ಚರ....!!!
ಮುಂಜಾನೆ ಎದ್ದು ಮೊದಲು ಮುಷ್ಕರದ ಬಿಸಿ ಕಡಿಮೆ ಆದ ವಾರ್ತೆ ಓದಿ ಅಲ್ಪ ಸಮಾಧಾನ ಅಯಿತು.ಇನ್ನು ನಮ್ಮ ಅಧ್ವರದ ದೀಕ್ಷೆ ಈಡೇರಿದಂತೆ.


ಮಿತ್ರ ಸುಬ್ಬಣ್ಣ ಮುರಳಿ ಉಲ್ಲಾಸ್ ಕೇಶವ ವೇಣು ಶಿರಂಕಲ್ಲು  ಹೀಗೆ ನಿತ್ಯ ಸದಸ್ಯರ ಬಳಗದೊಂದಿಗೆ ಆದಿನದ ಸಿದ್ದತೆಗೆ ತೊಡಗಿದೆವು.ಮೊದಲು ನಮ್ಮ ಕಾರ್ಯಕ್ರಮದ ಸಭಾಂಗಣದ ಬಗ್ಗೆ ಹೇಳಿಬಿಡುವ. ನಗರದ ಚಾಮರಾಜ್ ಪೇಟೆಯ  ನಾಲ್ಕನೇ ಮುಖ್ಯರಸ್ತೆಯ ತುಸು ಪ್ರಶಾಂತ ವಾತಾವರಣದಲ್ಲಿರುವ ಸಭಾಂಗಣ. ಅಂದು ನಮ್ಮ ಮಟ್ಟಿಗೆ ಇತಿಹಾಸ ನಿರ್ಮಿಸಲು ಕಾದು ಕುಳಿತ ಹತ್ವಾರ್ ಸಭಾಂಗಣದ ಸಿಬ್ಬಂದಿಗಳು ಬೇಕಾದ ಸರ್ವಸಿದ್ದತೆಗೆ ಅನುಕೂಲ ಮಾಡಿಕೊಟ್ಟು ನಮ್ಮೊಂದಿಗೆ ಟೊಂಕ ಕಟ್ಟಿನಿಂತಿದ್ದರು. ಬಹುಶಃ ಯಾವ ಕಲಾಕ್ಷೇತ್ರದಲ್ಲೂ ಈ ಬಗೆಯ ಸಿಬ್ಬಂದಿ ಇರುವುದು ದುರ್ಲಭ.ಅಷ್ಟೊಂದು ಆತ್ಮೀಯತೆ. ಇದು ನಮ್ಮ ಕಾರ್ಯಕ್ರಮಕ್ಕೆ ಮೊದಲು ಸಿಕ್ಕ ಶುಭಸೂಚನೆ..!!! ಸುತ್ತಲೂ ಬದಿಯಲ್ಲಿ ಶಾಲೆ, ಹೊರಗೆ  ಅಷ್ಟೇನೂ ಸದ್ದು ಗದ್ದಲವಿಲ್ಲದ ವಿಶಾಲ ರಸ್ತೆ.. ಸುತ್ತಲೂ ಮರದ ನೆರಳು, ಯಕ್ಷಗಾನದಂತಹ ಅಬ್ಬರದ ಕಾರ್ಯಕ್ರಮಕ್ಕೆ ಹೇಳಿ ಮಾಡಿಸಿದಂತಹ ಹೊರಾಂಗಣ ವಾತಾಯನ ವ್ಯವಸ್ಥೆಯ ಹತ್ವಾರ್ ಸಭಾಂಗಣ ಕಂಡೊಡನೆ ಮಿತ್ರರು ರೋಮಾಂಚಿತರಾದರು. ಕೇಕೆ ಹಾಕಿ ಕುಶಿ ಪಟ್ಟಾಗ ಅಬ್ಬ ಮೊದಲ ಯಶಸ್ಸು ಸಿಕ್ಕಿದ ಹಾಗೆ ಅನಿಸಿತು.


ಮಧ್ಯಾಹ್ನ ಮಿತ್ರರೊಂದಿಗೆ ಉಂಡು ನಿರಾಳತೆಯನ್ನು ಅನುಭವಿಸುವ ಪ್ರಯತ್ನ ಮಾಡಿದೆ. ಮನದ ಮೂಲೆಯಲ್ಲಿ ಅವಿತ ಉದ್ವಿಗ್ನತೆ ಪದೇ ಪದೇ ನೋವಿನರಿವು ಬರುವಂತೆ ಮುಂದೆ ಬರುತ್ತಿತ್ತು. ಎಲ್ಲವೂ ಸಸೂತ್ರವಾಗಿ ಸಾಗುವ ವಿಶ್ವಾಸ ಇತ್ತು. ನಮ್ಮ ಯೋಜನಾಪ್ರಕಾರ ಎಲ್ಲವೂ ಹಂತ ಹಂತವಾಗಿ ನೆರವೇರುತ್ತಾ ಸಾಗಿತು. ಯಾವ ಸಮಸ್ಯೆಯೂ ಘಳಿಗೆಗಿಂತ ಅಧಿಕ ನಮ್ಮನ್ನು ಬಾಧಿಸಲಿಲ್ಲ. ನಮ್ಮ ಇಚ್ಛಾಶಕ್ತಿ ಕ್ರಿಯಾ ಶಕ್ತಿಗೆ ಇದೊಂದು ಸವಾಲೇ ಅಲ್ಲ ಆದರೂ ಹೇಗಾಗಬಹುದು ಎಂಬ ಆತಂಕ. ಎಲ್ಲದಕ್ಕು ಜಾಣ್ಮೆ ಉಪಾಯೋಗಿಸಿ ಪರ್ಯಾಯ ವ್ಯವಸ್ಥೆ ಮಾಡಿದ್ದೆವು ಹಾಗಾದರೆ ಹೀಗೆ.. ಎಲ್ಲವೂ ಲೆಕ್ಕಾಚಾರದ ಶ್ರಮವಿಲ್ಲದ ವ್ಯವಸ್ಥೆಗಳು. ಇಂತಹ ಕಾರ್ಯಕ್ರಮಕ್ಕೆ ನಮ್ಮೆಲ್ಲ ಮುಖಾಮುಖಿ ಭೇಟಿ ಕೇವಲ ಒಂದೇ ಬಾರಿ. ಅದೇ ನಮ್ಮ ಇಚ್ಚಾ ಶಕ್ತಿ ಮತ್ತು ಅತ್ಮಶಕ್ತಿಯ ಪ್ರತೀಕ ಅಂತ ನನ್ನ ಭಾವನೆ.


ಮಧ್ಯಾಹ್ನ ಸೂರ್ಯ ನೆತ್ತಿನೇರದಿಂದ ನಿಧಾನವಾಗಿ ಸರಿದ ಹಾಗೆ ಕಾರ್ಯಕ್ರಮದ ಬಿಸಿ ಏರುತ್ತಾಹೋಯಿತು. ಸರಿಯಾಗಿ ಎರಡು ಗಂಟೆಗೆ ಆರಂಭಿಸುವ ಅನಿವಾರ್ಯತೆ ನಮಗಿತ್ತು. ಆ ವೇಳೆಗೆ ಯಾರೂ ಬರಲಾರರು ಅಂತ ನಮ್ಮ ಎಣಿಕೆ ಒಂದು ೫ ನಿಮಿಷದ ಅವಧಿಯಲ್ಲಿ ಹುಸಿಯಾಗಿಬಿಟ್ಟಿತ್ತು. ೨ ಗಂಟೆಗೆ ಸಭೆಯಲ್ಲಿಟ್ಟ ಅರ್ಧಕ್ಕಿಂತಲೂ ಮಿಕ್ಕಿದ ಆಸನಗಳು ಭರ್ತಿಯಾದವು..!!! ನಮ್ಮ ಸಭಾಕಾರ್ಯಕ್ರಮಕ್ಕೆ ನಾವೇ ಪ್ರೇಕ್ಷಕರೆಂಬ ನಮ್ಮ ಊಹೆ ನಿರೀಕ್ಷೆಗೂ ಮೀರಿ ಹುಸಿಯಾಯಿತು.
 ೨ ಗಂಟೆ ೧೫ ನಿಮಿಷಕ್ಕೆ ನಮ್ಮ ಸಭಾಕಾರ್ಯಕ್ರಮ ಸರಳವಾಗಿ ಆರಂಭಗೊಂಡಿತು. ಹೃದಯ ತುಂಬಿ ಭಾವನೆಯ ಕಟ್ಟೊಡೆವ ಸನ್ನಾಹ ಮಾಡುತ್ತಿತ್ತು. ಹಲವು ಮಿತ್ರರು ಪಿಸುಗುಟ್ಟಿ ಎಚ್ಚರಿಸಿದರು. ಎಕ್ಸೈಟ್ ಆಗ್ಬೇಡಿ ರಾಜಣ್ಣ. ಆದರೆ ಬಾವನೆಯ ಮೇಲೆ ನನ್ನ ನಿಯಂತ್ರಣ ಸಂಪೂರ್ಣ ಕಳೆದು ಕೊಂಡಿತ್ತು. ಎಲ್ಲವು ಯೋಜನೆಯಂತೆ ಪ್ರಸ್ತಾಪನೆಯಲ್ಲಿ ಸ್ವಲ್ಪವಾಗಿ ಮನಸ್ಸಿಗೆ ಬಂದದ್ದು ಹೇಳಿದೆ. “ ಪರಂಪರೆಯಕಲೆ ಯಕ್ಷಗಾನದ  ಅಭಿಮಾನಿಗಳು ಹೇಗೆ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಾರೋ ಹಾಗೆ ಯಕ್ಷಗಾನ ಅಭಿಮಾನಿಗಳ ನಡುವೆ ಈ ಬಲಿಪ್ಪ ಅಭಿಮಾನಿಗಳು ಪ್ರತ್ಯೇಕವಾಗಿರ್ ಗುರುತಿಸಲ್ಪಡುತ್ತಾರೆ.” ಇದು ಬೆಂಗಳೂರಿನಲ್ಲಿ ಅಕ್ಷರಕ್ಷರಹ ಸತ್ಯ. ಆದರು ಬಲಿಪ್ಪ ಅಭಿಮಾನಿಗಳು ಶಾಪಗ್ರಸ್ಠರಂತೆ ಅದೆಷ್ಟು ದಿನ ಕಾಯಬೇಕು ಹೇಳಿ? ಇಂದು ಅದಕ್ಕೆ ಮೋಕ್ಷ ಅದೂ ನಮ್ಮಿಂದ.. ಮತ್ತೆ ಹೃದಯ ಭಾರವಾಗದಿದ್ದರೆ ಅದು ಹೃದಯವಾದೀತೆ? ಭಾವನೆಗಳು ಇಲ್ಲದ ಬರೀ ಲಬ್ ಡಬಿಸುವ ಯಂತ್ರವಲ್ಲವೇ?


ನಾವು ದೀಕ್ಷೆ ಕೈಗೊಂಡಾಗ ನಮಗೆ ಯಾರದೇ ಸಹಾಯದ ನಿರೀಕ್ಷೆ ಇರಲಿಲ್ಲ. ನಮ್ಮ ಜೇಬಿನಲ್ಲಿ ವಿಶ್ವಾಸ ಇದ್ದವರಂತೆ ಹೊರಟಿದ್ದೆವು. ನಮಗೆ ಕೈ ಜೋಡಿಸಬಲ್ಲ ಹತ್ತು ಹಲವು ಮಿತ್ರರ ಈ ಮೇಲ್  ವಿಳಾಸ ಮಾತ್ರ ನಮ್ಮ ಬಳಿ ಇದ್ದುದು. ನಮ್ಮ ಮಿತ್ರ ಬಳಗದ ಮೇಲೆ ಅದಮ್ಯವಿಶ್ವಾಸ ಸುಳ್ಳಾಗಲಿಲ್ಲ ಎಂದು ನಮಗೆ ಅರಿವಾದುದು.. ಒಬ್ಬೊಬ್ಬರೇ ನನ್ನ ಮನವಿಗೆ ಸ್ಪಂದಿಸಿ ನನ್ನ ಬ್ಯಾಂಕ್ ಖಾತೆ ಉಬ್ಬಿಸಿದಾಗಲೇ. ವರ್ಷಕ್ಕೆ ಒಮ್ಮೆ ನೋಡುವ ಮಿತ್ರ ಸುದ್ದಿ ಇಲ್ಲದೆ ಖಾತೆಗೆ ಸಾವಿರಕ್ಕು ಮೀರಿ ಮೊತ್ತವನ್ನು ಹಾಕಿ ಆಗಿತ್ತು. ಇಂತಹ ಹಲವು ಅಭಿಮಾನದ ಪುಷ್ಪದ ಪರಿಮಳ ಕಾಣುವ ಯೋಗ ನನ್ನದಾಯಿತು. ದೊರದ ಜರ್ಮನಿಯಾದರೇನು, ಅಮೇರಿಕವಾದರೇನು ... ಕರ್ನಾಟಕದ ಹುಬ್ಬಳ್ಳಿಯಾದರೇನು ನಮ್ಮ ಇಚ್ಛಾಶಕ್ತಿಗೆ ಕೊರತೆ ಎಂದು ಅನ್ನಿಸಲಿಲ್ಲ. ದೂರದ ಕಾಶಿಗೆ ಹೊರಟ ಭಕ್ತನಲ್ಲಿ ಅದೂ ಪರಿಚಯ ಇಲ್ಲದವನಲ್ಲಿ ತಮ್ಮ  ಪಾಲಿನ ಕಾಣಿಕೆಯನ್ನು ಕೊಟ್ಟಂತೆ.. ತಾನು ಹೋಗಿ ದೇವರ ದರ್ಶನ ಭಾಗ್ಯ ಪಡೆಯದಿದ್ದರೂ ಅಡ್ಡಿ ಇಲ್ಲ ಕಾಣಿಕೆ ಸಲ್ಲಲಿ.ಇದಲ್ಲವೇ ಅಭಿಮಾನ? ಬಲಿಪ್ಪರಿಗೆ ಅಭಿಮಾನಿಗಳು ಎಲ್ಲಿದ್ದಾರೆ ಎಂದು ನಾನು ನನ್ನನ್ನೆ ಕೇಳುವುದನ್ನು ಬಿಟ್ಟುಬಿಟ್ಟೆ.ಹಲವು ಕಂಡು ಕೇಳರಿಯದ ಅಭಿಮಾನಿಗಳು ತಮ್ಮ ದೇಣಿಗೆ ಸದ್ದಿಲ್ಲದೆ ಸಲ್ಲಿಸಿದರು!!!  ಇಂದಿಗೂ ಕೊಟ್ಟವರ ಹೆಸರು ಮಾತ್ರ ತಿಳಿದಿದೆ ವಿನಹ ವ್ಯಕ್ತಿ ಯಾರೋ ನಾನು ನೋಡಲೇ ಇಲ್ಲ. ವಿಚಿತ್ರ ಅಲ್ಲವೆ? ನಾವು ಇಲ್ಲಿ ನೆಪ ಮಾತ್ರ.ಅದಕ್ಕೆ  ನಿಮಿತ್ತವಾಗಿ ನಾನು ವೇಶ ಹಾಕಿದ್ದೆ. ನನ್ನಿಂದಲೂ ದೊಡ್ಡ ಅಭಿಮಾನಿಗಳನ್ನು ನೋಡಿ ರೋಮಾಂಚಿತನಾದೆ. ದೇಣಿಗೆ ನೀಡಿದವರ ನನ್ನ ಪಟ್ಟಿಯಲ್ಲಿ ನನು ಕೆಲವರನ್ನು ಮಾತ್ರ ಕಂಡಿದ್ದೆ. ಎಂತಹ ವಿಚಿತ್ರ. ಯಾವ ಕಲಾವಿದನಿಗೆ ಇಂತಹ ಅಭಿಮಾನಿ ಇರಲು ಸಾಧ್ಯ? ಅದು ಬಲಿಪ್ಪರಿಗೆ ಮಾತ್ರ ....ಅದ್ಭುತ ಅತ್ಯದ್ಭುತ.!!!


ನಮ್ಮ ಎಲ್ಲರ ಗುರಿಯೊಂದು ಇದ್ದಿತು. ಒಂದು ಬಲಿಪ್ಪರ ಕಾರ್ಯಕ್ರಮ ಅದು ಪರಿಶುದ್ದ ಮನಸ್ಸಿ ಕಾರ್ಯವಾಗಬೇಕು. ಇಲ್ಲಿ ಭೇದವಿಲ್ಲದ ಒಂದೇ ವಿಶ್ವಾಸದ ಕೆಲಸ ಹೊರಹೊಮ್ಮಬೇಕು. ನಿಸ್ವಾರ್ಥ ಇದರ ಮೂಲ ತತ್ವವಾಗಬೇಕು. ಯಕ್ಷಗಾನ ಅಭಿಮಾನ ಜತೆಗೆ ಬಲಿಪ್ಪ ಗೌರವ ಬಿಟ್ಟು ಬೇರಾವ ಗುರಿಯು ಇಲ್ಲಿ ಇರಬಾರದು. ಈ ಗುರಿಯೇ ಈ ಕಾರ್ಯಕ್ರಮದ ಅಭೂತ ಪೂರ್ವ ಯಶಸ್ಸಿಗೆ ಕಾರಣ. ಅದರ ಅರಿವು ಹೆಚ್ಚಿನವರಿಗೆ ಕೊನೇವರೆಗೆ ತಿಳಿಯಲೇ ಇಲ್ಲ.  ಅದಕ್ಕೆ ಒಂದು ನಿದರ್ಶನ.. “ ಅಭಿನಂದನಾ ಭಾಷಣದ ಜವಾಬ್ದಾರಿಯನ್ನು ಶ್ರೀ ಗಣರಾಜ್ ಕುಂಬಳೆಯವರಿಗೆ ವಹಿಸಲಾಗಿತ್ತು.ಇದು ಅವರಿಗೆ ಅನಿರೀಕ್ಷಿತ ಜವಾಬ್ದಾರಿಯಾಗಿ.. ಮೊದಲೇ ಭಾವುಕರಾದ ಅವರು ಮತ್ತಷ್ಟು ಭಾವುಕರಾಗಿಬಿಟ್ಟರು. “ಭಾಷಣ ಮಾಡುತ್ತ..ಬಲಿಪ್ಪರ ಪದ..ಶರಣು ತಿರುವಗ್ರ ಶಾಲಿವಾಹಿನಿ ಮೊಬೈಲ್ ಗಳಲ್ಲಿ ರಿಂಗಣಿಸುವ ಬಗೆಯನ್ನು ಹೇಳಿದರು. ವಾಡಿಕೆಯಂತೆ ಕೊನೆಗೆ ಈ ಕಾರ್ಯಕ್ರಮದ ರೂವಾರಿಗಳಿಗೆ ನಮ್ಮ ಸಂಘಟನೆಗೆ ಕೃತಜ್ಞತೆ ಹೇಳುವುದಕ್ಕೋಸ್ಕರ...ಅತ್ತಿತ್ತ ನೋಡಿದರು.. ಯಾಕೆಂದರೆ ನಮ್ಮ ಸಂಘಟನೆ ಹೆಸರು ಎಲ್ಲೂ ಕಂಡು ಬರಲಿಲ್ಲ...!!! ವ್ಯಕ್ತಿಪರವಾಗಿ ಅವರು ಆಮಂತ್ರಣ ಸ್ವೀಕರಿಸಿದ್ದರೇ ಹೊರತು... ನಮ್ಮ ಅಭಿಮಾನಿ ಸಂಘದ ಅರಿವೇ ಇಲ್ಲ.  ಮಾಮುಲಿನಂತೆ ಅತ್ತ ಇತ್ತ ನೋಡಿದರು ಎಲ್ಲೂ ಫಲಕಗಳು ಬ್ಯಾನರ್ ಪ್ಲೆಕ್ಸ್ ಗಳು ಕಂಡು ಬರಲೇ ಇಲ್ಲ. ಯಾವುದೇ ಜಾಹೀರಾತು ಇರಲಿಲ್ಲ. ಹಿಂತಿರುಗಿ ಪರದೆ ನೋಡಿದರು ಊಹುಂ ಅದು ಖಾಲಿ ಯಾಗಿತ್ತು. ಯಾಕೆ ಹೀಗೆ ..ಮತ್ತೆ ಸಣ್ಣದಾಗಿ ಅನ್ವರ್ಥ ವಾಕ್ಯದಲ್ಲೇ ವಂದನೆ ಹೇಳಿದರೂ ... ಮತ್ತೆ ನನ್ನಲ್ಲಿ ಕೇಳಿದಾಗ ಅವರಿಗೆ ಅತೀವ ಅಶ್ಚರ್ಯವಾಗಿಬಿಟ್ಟಿತು..  ಯಾಕೆಂದರೆ ನಮಗೆ ನಮ್ಮ ಬಗ್ಗೆ  ಸ್ವ-ಪ್ರಚಾರದ ಆಕಾಂಕ್ಷೆ ಇರಲಿಲ್ಲ.  ಆರಂಭದಿಂದಲ್ಲೇ ಇದರ ಬಗ್ಗೆ ಕಠಿಣ ನಿರ್ಧಾರ ವಚನಬದ್ದರಾಗಿದ್ದೆವು. ಆಮಂತ್ರಣ ಪತ್ರಿಕೆಯಲ್ಲಿ ಯಾರ ಹೆಸರೂ ಇರಲಿಲ್ಲ. ಎಷ್ಟು ಅಗತ್ಯವೋ ಅಷ್ಟು ಮಾಹಿತಿ ಮಾತ್ರ ಮುದ್ರಿಸಲಾಗಿತ್ತ. ಸಂಪ್ರದಾಯದಂತೆ ಇಲ್ಲಿ ಆಡಳಿತ ಸಮಿತಿ ಯಾಗಲಿ , ಅಧ್ಯಕ್ಷ ಅಥವಾ ಕಾರ್ಯದರ್ಶಿಯ ಪದವಿಯಾಗಲಿ ಇಲ್ಲದೆ  ಕೇವಲ ಕಾರ್ಯಕ್ರಮದತ್ತ ಗುರಿ ಇಟ್ಟಿದ್ದೆವು. ನಮ್ಮ ಗುರಿ ಎನು ಎಂಬ ಅರಿವು ಪ್ರತಿಯೊಬ್ಬರಿಗೂ ಇದ್ದು.. ಈ ಕಾರ್ಯಕ್ರಮದ ಕಾರ್ಯಕಾರಿ  ಕೇಂದ್ರ ವ್ಯಕ್ತಿ ಯಾರೂ ಇಲ್ಲದೆ ಎಲ್ಲರು ಎಲ್ಲದರ ಭಾರವನ್ನು ಸಮಾನವಾಗಿ ಮತ್ತು ಅದನ್ನು ಮಾನಸಿಕವಾಗಿ ಹಂಚಿಕೊಂಡಿದ್ದೆವು.ಹಾಗಾಗಿ ನಮ್ಮ ಸಂಸ್ಥೆಯ ಪ್ರಚಾರವಾಗಲಿ ಅದರ ಉದ್ಘೋಷಣೆ ಯಾಗಲಿ ನಮಗೆ ಮುಖ್ಯವೆನಿಸಲಿಲ್ಲ. ಕೇವಲ ಯಕ್ಷಗಾನ ಅಭಿಮಾನ ಜತೆಗೆ ಬಲಿಪ್ಪರ ಅಭಿಮಾನ ಮಾತ್ರವೇ ಮುಖ್ಯವಾಗಿ ಸ್ವಯಂ ಸ್ವಾರ್ಥದ ಲವ ಲೇಶವೂ ಅಲ್ಲಿರಲಿಲ್ಲ. ಹಾಗಾಗಿ ಕಾರ್ಯಕ್ರಮದಲ್ಲಿ ನಮ್ಮದು ಬ್ಯಾನರ್ ಕಟ್ಟೌಟ್ ಯವುದೇ ಫಲಕವಿಲ್ಲದ ಮೊದಲ ಕಾರ್ಯಕ್ರಮವಾಗತ್ತು. ಹಾಗಾಗಿ ಕಲಾಭಿಮಾನ ಮಾತ್ರ ವ್ಯಕ್ತವಾದರೆ ಸಾಕು ನಾವು ಯಕ್ಷಗಾನ ಅಭಿಮಾನಿಗಳು ಎಂಬ ಢಾಂಬಿಕ ಪ್ರಚಾರ ನಮಗೆ ಗಣ್ಯವೆನಿಸಲಿಲ್ಲ. ಇದನ್ನು ಕುಂಬ್ಳೆಯವರು ನಿರೀಕ್ಷಿಸಿರಲಿಲ್ಲ!! ಆಶ್ಚರ್ಯವಾಗಿತ್ತು.. ಯಾವುದೇ ಸ್ವಾರ್ಥವಿಲ್ಲದ ಸಂಘಟನೆಯೇ? ಇಂದು ವೇದಿಕೆಯಲ್ಲಿ ಸಂಘಟನೆಯ ಪ್ಫಲಕಗಳೆ ಪ್ರದರ್ಶನಕ್ಕಿಂತ ದೊಡ್ಡದಗಿ ಅಣಕಿಸುವಂತೆ ಪ್ರದರ್ಶಿಸುವಾಗ ನಿಜ ಯಕ್ಷಗಾನ ಪ್ರದರ್ಶನ ಕಾಣುವುದೇ ಇಲ್ಲ. ಇಂತಹ ನಿಸ್ವಾರ್ಥತೆ ಅವರು ಊಹಿಸದ ಸಂಗತಿಯಾಗಿತ್ತು.
ನಿಖರವಾಗಿ ಕೇವಲ ೪೫ ನಿಮಿಷಗಳ ಸಭಾಕಾರ್ಯಕ್ರಮವೂ ಹಾಗೇನೆ ಕೇವಲ ಬಲಿಪ್ಪರ ಅಭಿನಂದನೇ ಮಾತ್ರವೇ ಮುಖ್ಯವಾಗಿ ಅದೇ ಸಂಪೂರ್ಣ ಕೇಂದ್ರಿಕೃತವಾಗಿತ್ತು. ಸಾಂಕೇತಿಕವಾಗಿ ಯವುದು ಮುಖ್ಯ ಕ್ರಿಯೆಯಾಗಬೇಕೋ ಅದಷ್ಟನ್ನು ಕೈಗೊಂಡೆವು. ಹಾಗಾಗಿ ಉದ್ದುದ್ದ ಭಾಷಣ ವಿಲ್ಲ. ಅನಗತ್ಯ ಹೊಗಳಿಗೆಯ ಮಹಾಪೂರವಿರಲಿಲ್ಲ. ಎಲ್ಲವೂ ಸಾಂಕೇತಿಕವಾಗಿತ್ತು. ಚುಟುಕಾಗಿ ನಮ್ಮ ಬಗ್ಗೆ ಹೇಳಿಕೊಂಡೆವು.ಆರ್ಥೈಸುವವರಿಗೆ ಅದೇ ಸಾಕು. ಮತ್ತಿನ್ನು ಬಲಿಪ್ಪರನ್ನು ನಮಗಿಂತ ಹಿರಿಯರು ಯೋಗ್ಯರು ಹೊಗಳಿದ್ದರು ಮತ್ತು ಅಭಿನಂದಿಸಿ ಗೌರವಿಸಿದ್ದರು. ಈ ಕ್ರಿಯೆ ಕೇವಲ ನಮ್ಮ ಆತ್ಮತೃಪ್ತಿಯ ಸಂಕೇತವಾಗಿತ್ತು. ಅನವಶ್ಯ ಕಾರ್ಯಕ್ರಮ ವಿಳಂಬಿಸಿ ಮುಖ್ಯವಾದ ತಾಳ ಮದ್ದಲೆಯ ಕಾರ್ಯಕ್ರಮವನ್ನು ಕಡಿತಗೊಳಿಸುವ ಆಶಯ ನಮ್ಮದಲ್ಲ. ಸೇರಿದ ಅಭಿಮಾನಿಗಳು ಸಾಧ್ಯವಾದಷ್ಟು ಬಲಿಪ್ಪರ ಪದ ಸಿಂಚನವನ್ನು ಸೋಕಿಸುವ ತವಕದಲ್ಲಿ ಬಂದದ್ದನ್ನು ನಾವು ಗಣಿಸಬೇಡವೇ?


ಬಲಿಪ್ಪರಿಗೆ ಸನ್ಮಾನ ಫಲ ತಾಂಬೂಲದೊಂದಿಗೆ ಅವರ ಇಷ್ಟ ದೇವರಾದ ದೇವಿಯ ವಿಗ್ರಹವನ್ನೇ ಸ್ಮ್ರರಣಿಕೆಯಾಗಿ ನೀಡಲಾಯಿತು. ಸನ್ಮಾನ ಪತ್ರದಲ್ಲು ಅವರ ಎಲ್ಲ ಸನ್ಮಾನ ಪತ್ರದಿಂದಿ ತೀರ ವಿಬ್ಭಿನ್ನವಾಗಿ ವಿನ್ಯಾಸಗೊಳಿಸಲಾಗಿತ್ತು. ಅದರ ಬರಹ ಉಲ್ಲೇಖಗಳು ವೈಶಿಷ್ಟ್ಯವನ್ನು ಸಾರುವಲ್ಲಿ ಗಮನ ಹರಿಸಿ  ಎಲ್ಲಿಯು ಸ್ವಾರ್ಥದ ಲೇಪನವೂ ಅಗದಂತೆ ನಿಗಾವಹಿಸಲಾಗಿತ್ತು. ಸಂಗ್ರಹವಾದ ಮೊತ್ತದಲ್ಲಿ ರುಪಾಯಿ ಇಪ್ಪತ್ತೈದು ಸಾವಿರದ ಚೆಕ್ ಸನ್ಮಾನ ನಿಧಿಯಾಗಿ ಅರ್ಪಿಸಿ ವಂದಿಸಿದಾಗ ಸರ್ವರ ಕಣ್ನಾಲಿಗಳು ತೇವವಾಗಿದ್ದು , ಭಾವುಕರಾಗಿ ತಾವು ಕೃತಕೃತ್ಯರಾದದ್ದು ಒತ್ತಿಬಂದ ಧನ್ಯತೆಯ ಭಾವ ಎಲ್ಲವು ಅವಿಸ್ಮ್ಪರಣೀಯ ಆನಂದವನ್ನು ನೀಡಿತ್ತು. ಈ ಧನ್ಯತೆಯನ್ನು ಗಳಿಸಲು ಮನಸ್ಸು ಅದೆಷ್ಟು ಹಪಹಪಿಸಿತ್ತು. ಅಂತೂ ಕೈಗೂಡಿತು. ನಮ್ಮೆಲ್ಲರ ಮನಸ್ಸಿನ ಉಕ್ಕಿಬಂದ ಅಭಿಮಾನವನ್ನು ಬಲಿಪ್ಪರು ಅರಿವಾದುದು ಅವರ ಪ್ರಸನ್ನ ಮುಖದಲ್ಲಿ ವ್ಯಕ್ತವಾಗಿತ್ತು. ಅಭಿನಂದನೆಗೆ ಉತ್ತರಿಸುತ್ತಾ.. “ ಈ ಸನ್ಮಾನ ನನಗೆ ಮಾಡಿದ್ದಲ್ಲ. ನಾನು ನಂಬಿದ ಯಕ್ಷಗಾನ ಕಲೆಗೆ ಮಾಡಿದ್ದೀರಿ” ಎಂಬಂತೆ ಮಾತಾಡಿದರು.  ಅವರ ಅರ್ಥ ಪೂರ್ಣ ಮಾತು ನಮ್ಮ ಕ್ರಿಯೆಗೆ ಅರ್ಥವನ್ನು ಉಂಟುಮಾಡಿತ್ತು. ಪ್ರತಿ ಹಂತದಲ್ಲೂ ಧನ್ಯತೆಯ ಭಾವ.   

ಮುಂದೆ ನಡೆದ ತಾಳ ಮದ್ದಲೆಯೂ ಆಷ್ಟೇ.. ತಾಮ್ರಧ್ವಜ ಕಾಳಗ.. ಎಂಬ ಪ್ರಸಂಗ. ಈ ಪ್ರಸಂಗದ ಆಯ್ಕೇಯೇ ಹಲವರ ಹುಬ್ಬೇರಿಸುವಂತೆ ಮಾಡಿತ್ತು. ಆದರೆ ಪ್ರಸಂಗದ ನಡೆ ಅದರ ಸನ್ನಿವೇಶಗಳು ಅದರ ಅದ್ಭುತ ಎನ್ನ ಬಹುದಾದ ಪದರಚನೆಗಳ ಮೇಲೆ ನನಗೆ ಅತೀವ ವಿಶ್ವಾಸವಿತ್ತು. ಬಲಿಪ್ಪರ ಯಶಸ್ವಿ ತಾಲ ಮದ್ದಲೆ ಪ್ರಸಂಗಳಲ್ಲಿ ಒಂದಾದ ಈ ಪ್ರಸಂಗ ಅಂದು  ಮತ್ತೆ ಇತಿಹಾಸವನ್ನು ನಿರ್ಮಿಸಿಬಿಟ್ಟಿತು.  ಒಂದೊಂದು ಪದಗಳೂ ಅದ್ಭುತವಾಗಿ ಮೂಡಿಬಂತು. ಬಲಿಪ್ಪರ ಸಾರಥ್ಯದಲ್ಲಿ ಯಕ್ಷ ವೈಭವವೇ ನಡೆದು ಬಿಟ್ಟಿತಲ್ಲ!!  ಇ ಪ್ರಸಂಗದ ಕಥಾಸಾರಾಂಶ ಸನ್ನಿವೇಶ ಮತ್ತು ಪಾತ್ರ ಪರಿಚಯವನ್ನು ಕೇಶವ ಮೊದಲಾಗಿ ಸುಂದರವಾಗಿ ಮಂಡಿಸಿದ್ದರು. ಇದು ನಮ್ಮ ಕಾರ್ಯಕ್ರಮದ ಹೊಸ ರೀತಿಯನ್ನು ತೋರಿಸಿತ್ತು. ಪಾತ್ರವರ್ಗಗಳಲ್ಲು ನಮ್ಮದು ಯೋಜನಾಬದ್ದವಾಗಿ ಪ್ರಸಂಗಕ್ಕನುಗುಣವಾಗಿ ಹಂಚಿದ್ದೆವು. ಹಾಗಾಗಿ ತಾಮ್ರಧ್ವಜ ನಾಗಿ ಜಬ್ಬಾರ್ ಸಮೊ ಅದ್ಭುತ ಆವೇಶಭರಿತರಾಗಿ ಪಾತ್ರ ಮಂಡನೆ ಮಾಡಿದರು.ಮಯೂರಧ್ವಜನ ಭಾವುಕ ಪಾತ್ರಕ್ಕೆ ಗಣರಾಜ್ ಕುಂಬ್ಳೆ ಅತ್ಯಂತ ಸೂಕ್ತವಾಗಿ ಭಾವಾವೇಶ ತೋರ್ಪಡಿಸಿದರು. ಪ್ರತೀ ಪದಕ್ಕೂ ತಮ್ಮ ಹಸ್ತಾಭಿನಯದಿಂದ  ಹೃದ್ಯ ಮಾತುಗಳಿಂದ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಟ್ಟರು. ರಾಧಾಕೃಷ್ಣ ಕಲ್ಚಾರ್ ಗಂಭೀರ ಅರ್ಥಗಾರಿಕೆ ಮೆರೆದರು. ಎಲ್ಲರೂ ಬಲಿಪ್ಪರ ಉಪಸ್ಥಿತಿಯಿಂದ ಆವೇಶಭರಿತರಾದರು. ಇಷ್ಟೊಂದು ಅದ್ಭುತ ಚೈತನ್ಯವನ್ನು ತುಂಬಿಸಿತ್ತು ಬಲಿಪ್ಪರ ಕಂಠಶ್ರೀ. ಇನ್ನುಳಿದ ಪಾತ್ರಗಳಲ್ಲಿ.. ಅರ್ಜುನನಾಗಿ ಮಿತ್ರಬಳಗದಿಂದ ಸುಬ್ರಹ್ಮಣ್ಯ ಭಟ್ ಔಚಿತ್ಯ ಪೂರ್ಣವಾಗಿ ನಿರ್ವಹಣೆ ಮಾಡಿದರು. ನಾವು ಇರಿಸಿದ ವಿಶ್ವಾಸವನ್ನು ಹುಸಿಯಾಗದಂತೆ ನಮ್ಮ ಆಯ್ಕೆ ಅರ್ಥ ಪೂರ್ಣವಾಗುವಂತೆ ನಕುಲಧ್ವಜ ನಮ್ಮ ಮಿತ್ರ ಮುಳಿಯ ರಘುರಾಮ ಮತ್ತು ಕುಮುದ್ವತಿ ಪಾತ್ರದಲ್ಲಿ ಶ್ರೀರಾಮ ಶಿರಂಕಲ್ಲು ಸೂಕ್ತವಾದ, ಶ್ರುತಿಬದ್ಧವಾದ ಅರ್ಥಗಾರಿಕೆಯನ್ನು ಮಾಡಿದರು. ಇಬ್ಬರೂ ತಮಗೊದಗಿದ ಅವಕಾಶದಿಂದ ಭಾವತುಂಬಿ ಅರ್ಥ ಹೇಳಿ ಧನ್ಯರಾದರು. ಹಿಮ್ಮೇಳದ ಮದ್ದಲೆ ವಾದನದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯರು ನಿಜವಾಗಿಯು ಅದ್ಭುತ ಸಾಹಿತ್ಯ ಮತ್ತು ಜಾಣ್ಮೆಯನ್ನು ಪ್ರದರ್ಶಿಸಿದರು.ಬಲಿಪ್ಪರು ತಮ್ಮ ಭಾಗವತಿಕೆಯೊಂದಿಗೆ ಪದವನ್ನು ಹೇಳುತ್ತ ಭಾವಭಿನಯದೊಂದಿಗೆ ವಿವರಿಸುವ ಶೈಲಯಿಂದ ಇವರಿಬ್ಬರು ಬಹಳ ಪ್ರಭಾವಿತರಾದರು.  ಬಲಿಪ್ಪರ ಭಾಗವತಿಕೆಗೆ ಇವರ ಆಯ್ಕೆ ಅತ್ಯಂತ ಸೂಕ್ತವಾಗಿತ್ತು. ಸೂಕ್ತ ಪ್ರೋತ್ಸಾಹ ದೊರೆತಲ್ಲಿ ಇವರು ಉತ್ತಮ ಭವಿಷ್ಯವನ್ನು ರೂಪಿಸಬಲ್ಲರು.     ಚೆಂಡೆಯಲ್ಲಿ ರವಿಶಂಕರ ಬಡೆಕ್ಕಿಲ ಬಲಿಪ್ಪರ ಸಾನಿಧ್ಯವನ್ನು ಸಾರ್ಥಕ ಪಡಿಸಿಕೊಂಡರು.


ನಮ್ಮ ಯೋಜನೆಯಂತೆ ಸುಮಾರು ೭ ಗಂಟೆಗೆ ಅದ್ಭುತ ಕಾರ್ಯಕ್ರಮ ಸಂಪನ್ನಗೊಂಡಿತು.ಬಲಿಪ್ಪರ ಮಂಗಳ ಪದದ ವರೆಗೂ ಮೌನವಾಗಿ ತನ್ಮಯರಾಗಿ ಕುಳಿತ ಪ್ರೇಕ್ಷಕ ವರ್ಗ ಮುಗಿಯುತ್ತಿದ್ದಂತೆ ಅದ್ಭುತ ಕರತಾಡನದೊಂದಿಗೆ ಅದ್ಭುತ ಭಾಗವತ ಶ್ರೇಷ್ಠರಿಗೆ ಮತ್ತುಳಿದ ಕಲಾವಿದರಿಗೆ ಹೃದಯದುಂಬಿ ಕೃತಜ್ಞತೆಯನ್ನು ಸಲ್ಲಿಸಿತು.


ಈ ಮಹತ್ಕಾರ್ಯದಲ್ಲಿ ನಾವು ಹಲವರ ಸಹಕಾರವನ್ನು ಮರೆಯಲು ಸಾಧ್ಯವೇ ಇಲ್ಲ. ಮೊದಲಾಗಿ ರಶೀತಿ ಪುಸ್ತಕದ ಅಗತ್ಯವಿಲ್ಲದೆ ನನ್ನ ಮತ್ತು ನಮ್ಮ ಮಿತ್ರರ ಮೇಲಿನ ವಿಶ್ವಾಸದಲ್ಲಿ ಧನ ಸಹಾಯ ಒದಗಿಸಿದ ಮಿತ್ರರು ಮತ್ತು ಕಲಾಭಿಮಾನಿಗಳ  ಸಹಾಯ ಮತ್ತು ಸಹಕಾರ ಇವರಲ್ಲಿ ಎಲ್ಲರ ಹೆಸರನ್ನು ಉದ್ದರಿಸುವುದು ಕಷ್ಟ ಸಾಧ್ಯ... ನಿರೀಕ್ಷಯಂತೆ.. ಹಿರಿಯ ಯಕ್ಷಗಾನ ಅಭಿಮಾನಿ ಕಲಾವಿದರ ಆಪದ್ಭಾಂದವ ಆಯುಕ್ತರಾದ ಶ್ರೀ ಟಿ. ಶ್ಯಾಂ ಭಟ್, ಅರಬ್ ರಾಷ್ಟ್ರದಲ್ಲೇ ಇದ್ದರೂ ನನ್ನ ಹಾಗು ನಮ್ಮ ಪ್ರತೀ ಚಟುವಟಿಕೆಯನ್ನು ಹತ್ತಿರದಲ್ಲೇ ಗಮನಿಸಿ ಪ್ರೋತ್ಸಾಹಿಸುವ ಅತ್ಯಂತ ಆತ್ಮೀಯ ಮಿತ್ರ ಶ್ರೀ ಪ್ರಸನ್ನ ತೆಂಕಬೈಲು ಅಲ್ಲದೆ ಅದ್ಭುತ ಭಾಗವತ ಅಭಿಮಾನವನ್ನು ಕಾರ್ಯಕ್ರಮದ ಸಿದ್ದತೆಯ ಅಂತಿಮ ಘಳಿಗೆಯಲ್ಲಿ ತೋರಿಸಿಕೊಟ್ಟ ಶ್ರೀ ಮುರಳೀಧರ ಕಾಟಿಪಳ್ಳ ಹೀಗೆ ಇನ್ನು ಹಲವರ ಅದ್ಭುತ ಸಹಕಾರ ಸಹಾಯಕ್ಕೆ ನಾವು ಕೃತಜ್ಞರಾಗಲೇ ಬೇಕು.  ಇನ್ನು ಕಾರ್ಯಕ್ರಮದಂದು ನನ್ನ ಬೆನ್ನೆಲುಬಾಗಿ ನಿಂತ ನಿತ್ಯಬಳಗದ ಮಿತ್ರರು , ಕಲಾವಿದರಿಗೆ ರಾತ್ರಿಯ ಊಟದ ವ್ಯವಸ್ಥೆಯನ್ನು ಮತ್ತು ಇನ್ನಿತರ ಹಲವು ಸಹಾಯಗಳನ್ನು ಶ್ರಮವಹಿಸಿ ಸೂಕ್ತ ಸಮಯಕ್ಕೆ ಒದಗಿಸಿದ ಅತ್ಮೀಯ ಬಂಧು ಶ್ರೀ ಆಟಿಕುಕ್ಕೆ ವೆಂಕಟೇಶ್ ಭಟ್ ಇವರೆಲ್ಲರ ಸಹಾಯವನ್ನು ಮರೆಯಲಾರೆ. ಪ್ರತೀ ಹಂತದಲ್ಲು ಎಲ್ಲಾ ಸಹಾಯ ಒದಗಿಸಿದ ಹತ್ವಾರ್ ಸಭಾಂಗಣದ ಆಡಳಿತ ಮತ್ತು ಸಿಬ್ಬಂದಿ ವರ್ಗದ ವರಿಗೆ ಮನಸಾ ಕೃತಜ್ಞತೆಗಳು.


ಎಲ್ಲಕ್ಕಿಂತ ಮಿಗಿಲಾಗಿ ಯಶಸ್ಸಿನ ಸಿಂಹಪಾಲು ಅಂದು ಆಗಮಿಸಿದ ಯಕ್ಷಗಾನ ಹಾಗು ಬಲಿಪ್ಪ ಅಭಿಮಾನಿಗಳು. ಕೊನೆಯವರೆಗೂ ಸುಸಂಸ್ಕೃತ ಪ್ರೇಕ್ಷಕರು ಇಡೀ ಕಾರ್ಯಕ್ರಮದ ಘನತೆಯನ್ನು ಮೌಲ್ಯವನ್ನು ಹೆಚ್ಚಿಸಿದರು. ಮಿತವಾಗಿದ್ದ ಚಪ್ಪಾಳೆ ಕೇಕೆ ಶಿಳ್ಳೆ ರಹಿತ ಪ್ರೇಕ್ಷಕ ವರ್ಗ ನಮ್ಮ ಮನೋಭಾವಕ್ಕನುಗುಣವಾಗಿ ಪ್ರೋತ್ಸಾಹಿಸಿತು. ಒಂದು ಕ್ಷಣ ಎದ್ದು ಹೋದರೆ ಎಲ್ಲಿ ಬಲಿಪ್ಪರ ಪದ ತಪ್ಪುವುದೋ ಎಂದು ಅದರಲ್ಲೇ ತಲ್ಲೀನರಾದ ಪ್ರೇಕ್ಷಕರನ್ನು ಮರೆಯುವುದೆಂತು ಸಾಧ್ಯ.?
ಬಲಿಪ್ಪರನ್ನು ಕರೆದು ಇತಿಹಾಸ ಸೃಷ್ಟಿಸಿದ ಈ ಕಾರ್ಯಕ್ರಮ   ಇನ್ನು ಹಲವು ಚರಿತ್ರಾರ್ಹ ಘ್ಹಟನೆಗೆ ನಾವು ಕಾರಣರಾದದ್ದು ನಮ್ಮ ಭಾಗ್ಯ. ನಭೂತೋ ನಭವಿಷ್ಯತಿ ಎಂಬಂತಹ ಕಾರ್ಯಕ್ರಮ..(ನಭವಿಷ್ಯತಿ ಆಗಬಾರದೆಂಬ ಆಶಯ.)ದಲ್ಲಿ. ಹಲವು ಸಂಘ ಸಂಸ್ಥೆಗಳು ಅವಗಣಿಸಿದ ಬಲಿಪ್ಪರ ಸನ್ಮಾನ ಕಾರ್ಯಕ್ರಮ ನಮ್ಮಿಂದ ಆದದ್ದು. ಯಕ್ಷಗಾನಕ್ಕೆ ಹೊಸಪ್ರೇಕ್ಷಕರು ಬರುವುದಿಲ್ಲ ಎಂಬುದು ಹುಸಿಯಾಗುವಂತೆ ಅಂದು ಹಲವು ಸುತ್ತ ಮುತ್ತಲ ಪ್ರೇಕ್ಷಕರು ಬಂದು ಕೊನೇಯವರೆಗೂ ನೋಡಿ ನಮ್ಮ ಕೈ ಕುಲುಕಿ ಹೋದದ್ದು, ಅತ್ಯಂತ ಸಭ್ಯ ರೀತಿಯ ಶಿಸ್ತು ಬದ್ದ ಮತ್ತು ಯಾವುದೇ ಸ್ವಾರ್ಥದ ಲೇಪವೂ ಇಲ್ಲದಂತಹ ಕಾರ್ಯಕ್ರಮ ಸಂಘಟಿಸಿದ್ದು. ಅನಾವಶ್ಯಕ ಆಡಂಬರವನ್ನು ತೋರದೇ ಅತ್ಯಂತ ಸರಳ ರೀತಿಯಲ್ಲಿ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿಸಿದ್ದು. ಒಂದು ಯಕ್ಷಗಾನ ಕಾರ್ಯಕ್ರಮಕ್ಕೆ “ಸಮಯ ಟಿ.ವಿ”. ಮಾಧ್ಯಮದವರು ಆಹ್ವಾನಿಸದೇ ಬಂದು ಬಲಿಪ್ಪರ , ಕಲಾವಿದರ ಮತ್ತು ನಮ್ಮ ಸಂದರ್ಶನವನ್ನು ಮಾಡಿ ಅದನ್ನು ಅಂದೇ ರಾತ್ರಿ ಮುಖ್ಯ ವಾರ್ತೆಯಲ್ಲಿ ಪ್ರಸಾರ ಮಾಡಿದ್ದು. ಇದೆಲ್ಲ ಕಡಿಮೆ ಸಾಧನೆ ಮತ್ತು ಇದು ದುರಹಂಕಾರದ ಮಾತು ಎಂದು ನನಗನಿಸುವುದಿಲ್ಲ. ಉತ್ತಮ ಕಾರ್ಯಕ್ಕೆ ಸಿಕ್ಕ ದೇವರು ನೀಡಿದ ಫಲ.ಸದುದ್ದೇಶ ಮತ್ತು ನಿಸ್ವಾರ್ಥ ಮನೋಭಾವ ಇದ್ದಲ್ಲಿ ಕಾರ್ಯಕ್ರಮ ಬಹುತೇಕ ಯಶಸ್ವಿಯಾದಂತೆ. ಪರರ ಕಾಲೆಳೆಯುವ ತಂತ್ರವಿಲ್ಲದೇ , ಪರರನ್ನು ದೂಶಿಸದೆ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಈ ಯಶಸ್ಸು ಸಿಗುವುದೆಂಬುದಕ್ಕೆ ನಿದರ್ಶನವಾಯಿತು ನಮ್ಮ ಕಾರ್ಯಕ್ರಮ. .


ಕೊನೆಯಲ್ಲಿ ಕೆಲವು ಮಾತು ಆದಿನ ಬಲಿಪ್ಪರು ಎಲ್ಲವನ್ನು ಮರೆತು ಹೃದಯ ತುಂಬಿ ಹಾಡಿದರು. ಜಬ್ಬಾರ್ ಅವರಂತು ಮುಕ್ತ ಕಂಠದಿಂದ ಶ್ಲಾಘಿಸಿದರು “ಇತ್ತೀಚಿನ ೪-೫ ವರ್ಷಗಳಲ್ಲಿ ಬಲಿಪ್ಪರು ಹೀಗೆ ಪದ ಹೇಳಿದ್ದನ್ನು ನಾನು ಕೇಳಲಿಲ್ಲ.”  ಅದು ಪ್ರಾಮಾಣಿಕವಾಗಿ ಒಪ್ಪಬೇಕಾದ ಮಾತು. ಕೊನೆಯ ನಾಲ್ಕು ಪದಗಳಿವೆ ಎಂಬಾಗ ಬಲಿಪ್ಪರು ಹೇಳಿದರು 
“ ಕೂಡುವುದಿಲ್ಲ.... ಖ್ಹೆಮ್ಮು ಬರ್ತಾ ಇದೆ”  ಏನು ಹೇಳಲಿ. ಅವಿಶ್ರಾಂತ ನಾಲ್ಕು ಗಂಟೆಗಳ ಕಾಲ ಪದ ಹೇಳಿ ನಮ್ಮ ಅದ್ಭುತ ಕಂಠಸಿರಿಯಿಂದ ಗಾನಸುಧೆಯನ್ನು ಉಣಿಸಿದ ಬಲಿಪ್ಪರನ್ನು ತೇವ ಭರಿತ  ಕಣ್ಣಲ್ಲಿ ಕಂಡೆ ಆಗ ನನಗನಿಸಿದ್ದು. “ ತಾನು ನೋವನುಭವಿಸಿ ಎದೆ ಹಾಲನ್ನು ಜನನಿ ಮಗುವಿಗೆ ನೀಡುತ್ತಾಳೆ. ಆ ಮಗು ತೃಪ್ತಿಯಿಂದ ಆ ಮಧುರಾಮೃತವನ್ನು ಸವಿಯುತ್ತದೆ.” ಇಲ್ಲೂ ಹಾಗೆ ಆ ಮಧುರಾಮೃತವನ್ನು  ನಮಗೆ ಉಣಬಡಿಸಿದ ಬಲಿಪ್ಪರು ಮಹಾತಾಯಿಯಾಗಿ ಮಹಾನ್ ವ್ಯಕ್ತಿಯಾಗಿ ಶಕ್ತಿಯಾಗಿ ಕಾಣುವುದಿಲ್ಲವೇ?


































Friday, December 31, 2010

ಯಕ್ಷಗಾನದ ಮಹಾಪಾತ್ರಗಳು

ಚಿತ್ರ ಕೃಪೆ: ಲಾ.ನಾ.
ಯಕ್ಷಗಾನದಲ್ಲಿ ಎಷ್ಟೋ ಪೌರಾಣಿಕ  ಪ್ರಸಂಗಗಳು ಪ್ರಸಿದ್ದವಾಗಿವೆ. ಇವುಗಳು ರಾಮಾಯಣ, ಮಹಾಭಾರತ , ಭಾಗವತ ಅಥವಾ ಉಪನಿಷತ್ ಕಥೆಗಳನ್ನಾಧರಿಸಿ ಹಲವು ಪ್ರಸಂಗಗಳು ಚಾಲ್ತಿಯಲ್ಲಿ ಬಂದು ಯಕ್ಷಗಾನಕ್ಕೆ ಮೂಲ ಅಧಾರವಾಗಿ ಇಂದಿನವರೆಗೂ ಪ್ರದರ್ಶನಗೊಳ್ಳುತ್ತ ಬಂದಿದೆ. ಹಲವು ಪ್ರಸಂಗ ಕರ್ತೃಗಳು ಹಲವು ಕಥಾನಕಗಳನ್ನು ತಮ್ಮ ಜ್ಞಾನ ತಮ್ಮ ಪ್ರತಿಭೆಗೆ ತಕ್ಕಂತೆ ಹಲವು ಪ್ರಸಂಗಗಳನ್ನು ರಚಿಸುತ್ತ ಕಲೆಯ ಒಟ್ಟಂದಕ್ಕೆ ತಮ್ಮ ದೇಣಿಗೆಯನ್ನುs ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ.ಹೀಗೆ ಯಕ್ಷಗಾನ ಕಥಾನಕಗಳಲ್ಲಿರುವ ಪೌರಾಣಿಕ ಕಥಾನಕಗಳಲ್ಲಿ ಹಲವು ಪಾತ್ರಗಳು ಸಾಮಾನ್ಯವಾಗಿ ಬರುತ್ತದೆ. ಅದು ದೇವೆಂದ್ರನ ಪಾತ್ರವಾಗಿರಬಹುದು, ಇಲ್ಲ ಶಿವನ ಪಾತ್ರವಾಗಿರಬಹುದು, ಹೀಗೆ ಹಲವು ಪಾತ್ರಗಳು ಕಧಾನಕದ ಜೀವಾಳವಾಗಿ ಕಥೆಗೆ ಅತ್ಯಂತ ಪೂರಕವಾಗಿರುತ್ತದೆ.ಇಂತಹ ಪ್ರಸಂಗದಿಂದ ಪ್ರಸಂಗಗಳಿಗೆ ಮರುಕಳಿಸುವ  ಪಾತ್ರಗಳ ವಿಶ್ಲೇಷಣೆಯಿದು.

ಚಿತ್ರ ಕೃಪೆ: ಲಾ.ನಾ
ಯಕ್ಷಗಾನದ ಅತ್ಯಂತ ಸಾಮಾನ್ಯ ಪಾತ್ರ ದೇವೆಂದ್ರನದು. ಕಥೆಯ ದೃಷ್ಟಿಯಿಂದ ಅದರ ಬೆಳವಣಿಗೆಗೆ ಮಾತ್ರವಲ್ಲ ಇಂದು ಯಕ್ಷಗಾನ ಎಂದೊಡನೆ ನಮ್ಮ ಮನಃಪಟಲದಲ್ಲಿ ಮೂಡುವ ಚಿತ್ರ ಸಾಮಾನ್ಯವಾಗಿ ದೇವೆಂದ್ರಾದಿ ದೇವತೆಗಳ ಪಾತ್ರವೇ ಆಗಿರುತ್ತದೆ. ಯಕ್ಷಗಾನ ಆರಂಭದಲ್ಲಿ ದೇವೇಂದ್ರನ ಒಡ್ಡೋಲಗದ ಸನ್ನಿವೇಶ ಸಾಂಪ್ರದಾಯಿಕವಾಗಿ ಅತಿ ಮಹತ್ವವನ್ನು ಪಡೆದಿದೆ. ಇಂದ್ರ ಅಗ್ನಿ ವಾಯು ವರುಣಾದಿ ದೇವತೆಗಳ ಸಾಂಪ್ರದಾಯಿಕ  ಒಡ್ದೋಲಗ ಯಕ್ಷಗಾನದ ವೇದಿಕೆಯ ವೈಭವವನ್ನು ಸಾರುವಲ್ಲಿ ಪ್ರಧಾನ ಪಾತ್ರವನ್ನು ವಹಿಸಿದೆ. ಇತ್ತಿಚಿನ ದಿನಗಳಲ್ಲಿ ಇದನ್ನು ಕೇವಲ ಹರಕೆಯ ಸನ್ನಿವೇಶದಂತೆ ಚಿತ್ರಿಸುವುದು ಯಕ್ಷಗಾನದ ನಿಜ ವೈಭವವನ್ನು ಸಾರುವಲ್ಲಿ ಹಿನ್ನಡೆಯನ್ನು ಅನುಭಿವಿಸಿದಂತೆ ಭಾಸವಾಗುತ್ತದೆ. ಹಲವು ವರ್ಷಗಳ ಮೊದಲಿನ ಯಕ್ಷಗಾನದಲ್ಲಿ ದೇವೆಂದ್ರನ ಒಡ್ಡೊಲಗದಲ್ಲಿ ಅಗ್ನಿ ವರುಣಾದಿಗಳಿಂದ ತೊಡಗಿ ಬಣ್ಣದ ವೇಷವಾಗಿ ಯಮನ ವೇಷವೂ ಪ್ರವೇಶಿಸುತ್ತಿತ್ತು. ಸುಮಾರು ಒಂದು ಘಂಟೆಯ ಅವಧಿಗೆ ನಡೆಯುವ ಇಂದ್ರನ ಒಡ್ಡೊಲಗದ ದೃಶ್ಯ ಝಗ ಝಗಿಸುವ ವೇಶಭೂಷಣದಿಂದ ರಂಗಸ್ಥಳ ಪೂರ್ಣವಾಗಿ ತುಂಬಿ ಇಂದ್ರನ ಅಮರಾವತಿಯ ನಿಜವೈಭವವನ್ನು ಧರೆಗಿಳಿಸಿದ ಅನುಭವ ನೀಡುತ್ತಿತ್ತು. ಅದರೆ ಇಂದು ಕೇವಲ ವೇಶ ಯಾವುದು ಎಂದರೆ ದೇವೆಂದ್ರನ ಬಲ (ಎಡವೂ ಇಲ್ಲ ) ಎನ್ನುವಶ್ಟರ ಮಟ್ಟಿಗೆ ಸಂಕುಚಿತಗೊಂಡಿದೆ. ಬಹುಶಃ ಮುಂದಿನ ಜನಾಂಗ ಈ ದೃಶ್ಯಗಳಿಂದ ವಂಚಿತವಾಗಿದೆ ಎಂದೇ ಭಾವಿಸೋಣ. ಇಂದು ಯಕ್ಷಗಾನದ  ಪ್ರಾಥಮಿಕ ವಿದ್ಯಾರ್ಥಿಗಳು ಮಾತ್ರವೇ ಈ ದೇವೆಂದ್ರನ ಪಾತ್ರವನ್ನು ನಿರ್ವಹಿಸುತ್ತಾರೆ. ಅದು ಒಂದೆರಡು ಬಾರಿ ಒಬ್ಬ ಈ ಬಗೆಯ ಪಾತ್ರ ಮಾಡಿ ರಂಗಸ್ಥಳ ಪ್ರವೇಶ ಮಾಡಿದರೆ ನಂತರ ಅದೇ ಪಾತ್ರ ಮಾಡಲು ನಿರಾಕರಿಸುವುದೂ ಇದೆ. ಇದರಲ್ಲು ಪಟ್ಟಭದ್ರ ರಾಜಾಕೀಯ ಮಾಡುವವರು ತಮಗೆ ಆಗದವರಿಗೆ ಇದನ್ನು ಬರುವಂತೆ ಮಾಡುವಲ್ಲಿ ಪಿತೂರಿ ಮಾಡುವ ನೆಲೆಗೆ ಈ ಪಾತ್ರ ನಿರ್ವಹಣೆ ಬಂದಿದೆ ಎಂದರೆ ಖೇದವಾಗಿಬಿಡುತ್ತದೆ. ದೇವೇಂದ್ರನ ಒಡ್ಡೊಲಗ ಎಂದೊಡನೆ ಬಾಲ್ಯದಲ್ಲಿ ನೋಡಿದ ಕಟೀಲು ಧರ್ಮಸ್ಥಳ ಮೇಳದ ಆಟಗಳು ಕಣ್ಣೆದುರಿಗೆ ಬರುತ್ತವೆ. ಧರ್ಮಸ್ಥಳ ಮೇಳದ aಆಟದ ದೇವೆಂದ್ರನ ಒಡ್ಡೊಲಗದಲ್ಲಿ ಬರುವ ಜಯಂತನ ಪಾತ್ರ ಶ್ರೀಧರ ಭಂಡಾರಿ ಸಿಡಿಲ ಮರಿಯಂತೆ ನಿರ್ವಹಿಸುತ್ತಿದ್ದ ದೃಶ್ಯ ಇನ್ನು ನೆನಪಿಗೆ ಬಂದರೆ ಅದು ನಿರ್ವಹಿಸುತ್ತ ನೀಡುತ್ತಿದ್ದ ಅನನ್ಯ ಅನುಭವವೇ ಕಾರಣ.  

ದೇವೆಂದ್ರನ ಪಾತ್ರ ಹಲವು ಪ್ರಸಂಗಗಳಲ್ಲಿ ಪ್ರಧಾನ ಪಾತ್ರವಾಗಿದ್ದರೂ ಪ್ರಸಂಗದ ಮುಖ್ಯಪಾತ್ರವಾಗಿ ಮತ್ತು ಮೇಳದ ಯಾ ತಂಡದ ಮುಖ್ಯವೇಶಧಾರಿ ನಿರ್ವಹಿಸುವ ಹಾಗಿರುವ ಪ್ರಸಂಗಗಳಲ್ಲಿ ಸಮುದ್ರಮಥನ, ಕಾಯಕಲ್ಪ, ಕನ್ಯಾಂತರಂಗ, ಕುಮಾರವಿಜಯ, ಮಹಾಬ್ರಾಹ್ಮಣ ಹೀಗೆ ಹೆಸರಿಸಬಹುದು. ಹಲವು ಪ್ರಸಂಗಗಳಲ್ಲಿ ಇಂದ್ರನ ಪಾತ್ರ ಬಂದರೂ ಅದು ಒಂದು ಯುದ್ದದ ಸನ್ನಿವೇಶದಲ್ಲಿ ಆ ಪಾತ್ರ ನಿರ್ವಹಣೆ ಸಂಪನ್ನಗೊಳ್ಳುವುದುದು ಅಧಿಕ. ಆದರೂ ಯಕ್ಷಗಾನದ ದೃಷ್ಟಿಯಿಂದ ಇಂದ್ರ ಒಂದು ಮಹಾಪಾತ್ರಗಳಲ್ಲಿ ಒಂದು ಎನ್ನಬಹುದೇನೊ. ಎಂಪೆಕೆಟ್ಟೆ ರಾಮರೈ ಇಂದ್ರನ ಪಾತ್ರವನ್ನು ಅತ್ಯಂತ ಸುಂದರವಾಗಿ ನಿರೂಪಿಸುತ್ತಿದ್ದರು. ಇದರಲ್ಲಿ ಸಮುದ್ರ ಮಥನದ ಇಂದ್ರ ಇವರ ವಿಶೇಷ ಪಾತ್ರಗಳಲ್ಲಿ ಒಂದು.  ಹೀಗೆ ಇನ್ನೂ ಗಮನಕ್ಕೆ ಬಾರದ ಕಲಾವಿದರು ಇದ್ದರೂ ಇರಬಹುದು.

ಯಕ್ಷಗಾನದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಇನ್ನೊಂದು ಶ್ರೀಕೃಷ್ಣನ ಅಥವಾ ಮಹಾವಿಷ್ಣುವಿನ ಪಾತ್ರ. ಈ ಪಾತ್ರಕ್ಕಿರುವಷ್ಟು ಮಹತ್ವ ಯಕ್ಷಗಾನದಲ್ಲಿ ಬೇರೆ ಯಾವುದೇ ಪಾತ್ರಕ್ಕೂ ಇಲ್ಲ ಎನ್ನಬಹುದೇ?  ಈ ಪಾತ್ರ ಮಾಡುವವನಿಗೆ ಅಲ್ಪಸ್ವಲ್ಪ ಸಂಸ್ಕ್ರತ ಜ್ಞಾನ ಇರಬೇಕಾದ್ದು ಅನಿವಾರ್ಯ ಎಂಬ ಪ್ರತೀತಿ ಇದೆ. ಹಲವು ಪ್ರಸಂಗಗಳ ಪ್ರಧಾನ ಪಾತ್ರ ಶ್ರೀಕೃಷ್ಣನ  ಪಾತ್ರ. ಸಾಮಾನ್ಯವಾಗಿ ಇದನ್ನು ಹೆಚ್ಚಾಗಿ ಮೇಳದ ಪುಂಡುವೇಶಧಾರಿ ನಿರ್ವಹಿಸುತ್ತಾರೆ. ಶ್ರೀಕೃಷ್ಣ ಲೀಲೆ , ಶ್ರೀಕೃಷ್ಣ ಸಂಧಾನ, ಪಾರಿಜಾತ  ನರಕಾಸುರ ವಧೆ,  ಜಾಂಬವತಿ ಕಲ್ಯಾಣ , ರುಕ್ಮಿಣಿ ಕಲ್ಯಾಣ, ರತಿ ಕಲ್ಯಾಣ ಹೀಗೆ ಪಾಂಡವಾಶ್ವ ಮೇಧದ ಹಲವು ಪ್ರಸಂಗಗಳು  ಯಕ್ಷಗಾನದ ಹೆಚ್ಚಿನ ಪ್ರಮುಖ ಪ್ರಸಂಗಗಳ ಮುಖ್ಯಪಾತ್ರವೇ ಶ್ರೀ ಕೃಷ್ಣನದು. ವೇಶಗಾರಿಕೆಯಲ್ಲು ಅಷ್ಟೆ ಯಕ್ಷಗಾನದ ಸಂಪ್ರದಾಯದಂತೆ ಕಿರೀಟವೇಶ ಧರಿಸಿದರೆ ಇನ್ನು ಕೆಲವರು ನಾಟಕೀಯ ವೇಶ ಹಾಕುವುದು ರೂಢಿಯಲ್ಲಿದೆ.ಇದರಲ್ಲಿ ಯಾವುದು ಸರಿ ಯಾವುದು ಸೂಕ್ತವಲ್ಲದ್ದು ಎಂದು ಹೇಳುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ. ವಿವೇಚನೆ ಬಿಟ್ಟು ಮತ್ತೂ ಹೇಳಿದರೆ ಕೃಷ್ಣನ ವೇಶಧಾರಿ ಬಣ್ಣದ ವೇಶವಾಗಿ ಮೈಮೇಲೆ ಎರಿ ಬಂದರೆ.!?? ಪರಂಪರೆಯ ಯಕ್ಷಗಾನದಲ್ಲಿ ಶ್ರೀ ಕೃಷ್ಣನ ಒಡ್ಡೋಲಗವನ್ನು ಸಾಂಪ್ರದಾಯಿಕವಾಗಿ ಪ್ರದರ್ಶಿಸುವುದು ಬಳಕೆಯಲ್ಲಿದೆ.    ಹೀಗೆ ಯಕ್ಷಗಾನದ ಮಹಾಪಾತ್ರಗಳಲ್ಲಿ ಶ್ರೀಕೃಷ್ಣನ ಪಾತ್ರ ಅತೀ ಪ್ರಮುಖ ಪಾತ್ರ.ಮತ್ತು ಶ್ರೀಕೃಷ್ಣ ಪರಮಾತ್ಮನ ಕಥಾನಕ ಅಂದರೆ ಅದು ರಂಜನೀಯವಾಗಿ ಯಕ್ಷಗಾನ ಪ್ರಸಂಗ ಅಕರ್ಷಣೀಯವಾಗಿ ಮೂಡಿಬರುತ್ತದೆ.ಪ್ರಮುಖ ಪಾತ್ರವಲ್ಲದ ಪ್ರಸಂಗವಾದರೂ ಕೃಷ್ಣ ಪ್ರವೇಶದ ಸನ್ನಿವೇಶ ಅತಿ ಮುಖ್ಯವಾಗಿ ಬಿಂಬಿಸಲ್ಪಡುತ್ತವೆ. ಮೇಳದ ಮುಖ್ಯ ಪಾತ್ರಧಾರಿ ನಿರ್ವಹಿಸುವ ಈ ಪಾತ್ರಗಳನ್ನು ಹಲವು ಕಲಾವಿದರು ತಮ್ಮ ಪ್ರತಿಭೆಯಿಂದ ತಮ್ಮದೇ ಛಾಪನ್ನು ಈ ಪಾತ್ರ ನಿರ್ವಹಣೆಯಲ್ಲಿ ಮೂಡಿಸಿದ್ದಾರೆ.ನಮ್ಮ ಕಾಲದಲ್ಲಿ ಶ್ರೀ ಕುಂಬಳೆ ಸುಂದರ್ ರಾವ್ ಶ್ರೀ ಕೃಷ್ಣನ ಪಾತ್ರ ನಿರ್ವಹಿಸುವುದರಲ್ಲಿ ಅತ್ಯಂತ ಪ್ರಸಿದ್ದವಾಗಿದ್ದರು. ಹಾಗೆ ಇನ್ನೂ ಹಲವು ಕಲಾವಿದರು ಈ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ.

ಶಿವನ ಪಾತ್ರವೂ ಹಲವು ಪ್ರಸಂಗಗಳಲ್ಲಿ ಪ್ರಮುಖವಾಗಿ ಕಾಣಬಹುದು. ತ್ರಿಪುರ ಮಥನ, ಭಸ್ಮಾಸುರ ಮೋಹಿನಿ, ದಕ್ಷಯಜ್ಞ, ಬ್ರಹ್ಮಕಪಾಲ, ಶಿವಪಂಚಾಕ್ಷರಿ ಮಹಾತ್ಮೆ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ.  ಹೀಗೆ ಹಲವು ಪ್ರಸಂಗಗಳ ಶಿವನ ಪಾತ್ರ ಪ್ರಧಾನ ಕಲಾವಿದರಿಂದಲೇ ನಿರ್ವಹಿಸಲ್ಪಡುತ್ತದೆ. ಇದರಲ್ಲು ಹಲವು ಬಗೆಯ ಭಿನ್ನ ವೇಶಗಾರಿಕೆಯನ್ನು ಕಾಣಬಹುದು. ಗಜ ಚರ್ಮಾಂಬರನಾದ ಶಿವನ ವೇಶ, ಭುಜಕೀರ್ತಿ ಮುಂತಾದ ದಿರಿಸುಗಳಿಂದ ಪರಂಪರೆಯ ಶಿವನ ವೇಶ,ಕೆಲವು ಕಡೆ ಸನ್ಯಾಸಿ ವೇಶವನ್ನೇ ಅಲ್ಪ ಸ್ವಲ್ಪ ಮಾರ್ಪಾಟು ಮಾಡಿ ಶಿವನ ವೇಶ ಧರಿಸುವುದು ಇದೆ. ಮಾತ್ರವಲ್ಲ ಕಾವಿ ದಿರಿಸನ್ನು ಧರಿಸಿ ಶಿವನ ವೇಶ ಸಹ ಮಾಡುವವರಿದ್ದಾರೆ. ಆಯಾಯ ಸಮಯಕ್ಕೆ ಮತ್ತು ವೇಶಧಾರಿಯ ಮನೋಭಾವಕ್ಕೆ ತಕ್ಕ ಹಾಗೆ ಹಲವು ಬಗೆಯವೇಶವನ್ನು ಕಂಡರೂ ಕೆಲವು ಪ್ರಸಂಗಗಳಲ್ಲಿ ಶಿವನ ಪಾತ್ರ ತುಂಬ ಪ್ರಧಾನವಾಗಿರುತ್ತದೆ. ದಿವಂಗತ ಶ್ರೀ ರಾಮದಾಸ ಸಾಮಗರು ಬ್ರಹ್ಮಕಪಾಲ ಪ್ರಸಂಗದ ಶಿವನ ಪಾತ್ರಕ್ಕೆ ಪ್ರಸಿದ್ದರಾಗಿದ್ದರು. ತನ್ನದೇ ವಿಶಿಷ್ಟ ಶೈಲಿಯಿಂದ ಈ ಪ್ರಸಂಗವನ್ನೆ ಎತ್ತಿನಿಲ್ಲಿಸುವ ಸಾಮಾರ್ಧ್ಯವಿತ್ತು ಅವರ ನಿರ್ವಹಣೆಯಲ್ಲಿ ಎಂದು ಕೇಳಿದ್ದೇನೆ.
ಚಿತ್ರ ಕೃಪೆ: ಲಾ.ನಾ


ಶ್ರೀರಾಮನ ಪಾತ್ರವು ಯಕ್ಷಗಾನದ ಹತ್ತು ಹಲವು ಪ್ರಮುಖ ಪಾತ್ರಗಳಲ್ಲಿ ಒಂದು. ನಿರ್ದಿಷ್ಟವಾಗಿ ರಾಮಾಯಣವನ್ನು ಆಧರಿಸಿದ ಹೆಚ್ಚಿನ ಎಲ್ಲಾ ಪ್ರಸಂಗಗಳಲ್ಲಿ ಶ್ರೀರಾಮನ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಪರಂಪರೆಯ ಯಕ್ಷಗಾನದಲ್ಲಿ ರಾಜವೇಶದ ಶ್ರೀರಾಮನನ್ನು ಕಂಡರೆ ನೀಲ ಬಣ್ಣದ ನಾರು ಮುಡಿಯ ರಾಮನೇ ಹತ್ತು ಹಲವು ಪ್ರಸಂಗಗಳಲ್ಲಿ ಮುಖ್ಯವಾಗಿ ಕಾಣಬಹುದು. ಭಾವನಾತ್ಮಕ ಅಭಿನಯ ಅರ್ಥಪೂರ್ಣ ಮಾತುಕಾರಿಕೆ ಹಿತಮಿತವಾದ ಗಂಭೀರ ನಾಟ್ಯವಿದ್ದರೆ ಮಾತ್ರ ಸಮರ್ಥವಾಗಿ ರಾಮನ ಪಾತ್ರ ನಿರ್ವಹಿಸಬಹುದು. ಪಟ್ಟಾಭಿಷೇಕ, ಪಂಚವಟಿ, ಪಾದುಕಾಪ್ರದಾನ, ವಾಲಿವಧೆ, ಇಂದ್ರಜಿತು ಕಾಳಗ, ಕುಂಭಕರ್ಣ ಕಾಳಗ ರಾವಣವಧೆ , ಲವಕುಶ ಕಾಳಗ ಹೀಗೆ ಹಲವು ಪ್ರಸಂಗಗಳಲ್ಲಿ ಶ್ರೀರಾಮನ ಪಾತ್ರ ಅತ್ಯಂತ ಪ್ರಮುಖ ಪಾತ್ರ. ಅದರಲ್ಲೂ ಲವಕುಶ ಅಥವಾ ಸೀತಾ ಪರಿತ್ಯಾಗದಂತ ಪ್ರಸಂಗದ ಶ್ರೀರಾಮನ ಪಾತ್ರ ನಿರ್ವಹಿಸುವುದು ಯಾವುದೇ ಕಲಾವಿದನಿಗೂ ಅತ್ಯಂತ ಸವಾಲಿನ ವಿಷಯವಾಗಿರುತ್ತದೆ. ವಿನೋದದ ಮತ್ತು ಸರಸ ಸಂಭಾಷಣೆಯ ಶ್ರೀರಾಮನನ್ನು ಪಂಚವಟಿ ಪ್ರಸಂಗದಲ್ಲಿ ಮಾತ್ರವೇ ಕಾಣಬಹುದು.ಅದರೂ ಸಹಜವಾಗಿ ಗಂಭೀರ ವ್ಯಕ್ತಿತ್ವದ ರಾಮನ ಪಾತ್ರ ಯಕ್ಷಗಾನ ಪ್ರಸಂಗಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ.

ಯಕ್ಷಗಾನದ ಹಲವು ಪ್ರಸಂಗಗಳಲ್ಲಿ ಬಹುಮುಖ್ಯವಾಗಿ ಬರುವ ಪಾತ್ರಗಳಲ್ಲಿ ಹನುಮಂತನ ಪಾತ್ರ ಇನ್ನೊಂದು ಬಗೆಯದು. ಭಕ್ತಾಗ್ರೇಸರ ಸಾಹಸಿ ಹನುಮ ಮೆರೆದಾಡುವಂತಹ ಹಲವು ಯಶಸ್ವೀ ಪ್ರಸಂಗಗಳು ಯಕ್ಷಗಾನದ ಯಶಸ್ವೀ ಅಂಶಗಳಲ್ಲಿ ಒಂದು. ರಾಮಾಯಣದ ಹಲವು ಪ್ರಸಂಗಗಳು. ಲಂಕಾದಹನ, ಚೂಡಾಮಣಿ, ಇಂದ್ರಜಿತು ಕಾಳಗ, ಮೈರಾವಣ ಅಹಿರಾವಣ ಕಾಳಗ. ವೀರಮಣಿ ಕಾಳಗ .ಮಹಾಭಾರತದ ಹಲವು ಪ್ರಸಂಗಗಳು ಶರಸೇತು ಬಂಧನ ಪುರುಷಾಮೃಗ,ವೀರವರ್ಮ ಕಾಳಗ ಗರುಡಗರ್ವಭಂಗ ಹೀಗೆ ರಾಮಾಯಣಕ್ಕು ಮಹಾಭಾರತಕ್ಕು ಮಧೆ ಬೆಸುಗೆಯಂತಿರುವ ಚಿರಂಜೀವಿ ಹನುಮನ ಪಾತ್ರವನ್ನು ಮೇಳದ ಮುಖ್ಯಕಲಾವಿದ ಮಾತ್ರವೇ ಸಮರ್ಥವಾಗಿ ನಿರ್ವಹಿಸಬಲ್ಲ. ಹನುಮಂತನ ಒಡ್ಡೋಲಗವೆಂಬು ಸಾಂಪ್ರದಾಯಿಕ ಯಕ್ಷಗಾನದ ಬಹು ಮುಖ್ಯ ಅಂಶ. ಹಲವು ವಿಧದ ಹನುಮಂತನ ವೇಶಗಳು ಯಕ್ಷಗಾನದಲ್ಲಿ ಬಳಕೆಯಲ್ಲಿವೆ.

ಚಿತ್ರ ಕೃಪೆ: ಲಾ.ನಾ
ಯಕ್ಷಗಾನದ ವೀರಾವೇಶದ ಪಾತ್ರಕ್ಕೆ ಸೂಕ್ತವಾದ ಪಾತ್ರ ಅರ್ಜುನನ ಪಾತ್ರ. ಹಲವು ಪ್ರಸಂಗಗಳ ಬಹುಮುಖ್ಯವಾದ ಈ ಪಾತ್ರ ಅತ್ಯಂತ ವೈವಿಧ್ಯಮಯವಾಗಿ ಹಲವು ಪ್ರಸಂಗಗಳಲ್ಲಿ ಚಿತ್ರಿತವಾದ ಪಾತ್ರ. ರಾಜವೇಶದ ಕಿರೀಟವೇಶದ ಪಾತ್ರವೆಂದಾಕ್ಷಣ ಅರ್ಜುನನ ಪಾತ್ರವೂ ಮನಸ್ಸಿನಲ್ಲಿ ಹಾದು ಹೋಗುವುದಕ್ಕೆ ಹಲವು ಕಾರಣಗಳಿದೆ. ವೀರರಸಕ್ಕೆ ಪ್ರಾಧಾನ್ಯವಿರುವ ಯಕ್ಷಗಾನದಲ್ಲಿ ಅರ್ಜುನನ ಪಾತ್ರ ಮೇಳದ ಬಹುಮುಖ್ಯ ಕಲಾವಿದನಿಂದ ನಿರ್ವಹಿಸಲ್ಪಡುವುದು ಸಾಮಾನ್ಯ. ಅದರಲ್ಲಿ ಹಲವು ಪ್ರಸಂಗಗಳು, ಪಾಂಡವಾಶ್ವಮೇಧದ ಹಲವು ಪ್ರಸಂಗಗಳು, ಕರ್ಣಪರ್ವ, ಕೃಷ್ಣಾರ್ಜುನ,ಶರಸೇತು ಬಂಧನ, ಕುರುಕ್ಷೇತ್ರದ ಹಲವು ಪ್ರಸಂಗಗಳು ಅರ್ಜುನನ ಪಾತ್ರ ಮುಖ್ಯವಾಗುವ ಪ್ರಸಂಗಗಳು. ಅಳಕೆ ರಾಮ ರೈ, ಸಂಪಾಜೆ ಶೀನಪ್ಪ ರೈ, ಇವರುಗಳ ಅರ್ಜುನ ಪಾತ್ರ ಒಂದು ಮಾದರಿ ಅರ್ಜುನನ ಪಾತ್ರ ಎನ್ನಬಹುದು. ಕೇವಲ ವೀರರಸಕ್ಕೆ ಸೀಮಿತವಾಗಿ ಪಾತ್ರವಲ್ಲ,  ಈ ಅರ್ಜುನನ ಪಾತ್ರ ಭಕ್ತಿ, ಕರುಣ ರಸಗಳಿಂದಲೂ ಪ್ರಧಾನವಾಗಿದೆ.
ಇವುಗಳೆಲ್ಲದರಿಂದ ತೀರ ಭಿನ್ನವಾಗಿ ಗುರುತಿಸಲ್ಪಡುತ್ತದೆ ಯಕ್ಷಗಾನದಲ್ಲಿ ನಾರದನ ಪಾತ್ರ. ನಾರದನ ಪಾತ್ರವಿಲ್ಲದ ಪ್ರಸಂಗ ಅತ್ಯಂತ ಕಡಿಮೆ ಎನ್ನಬಹುದೇನೋ? ಹಲವು ಪ್ರಸಂಗದ ನಡೆಗೆ ಸನ್ನಿವೇಶದ ಉಪಯುಕ್ತತೆಯನ್ನು ಅನುಸರಿಸಿಕೊಂಡು ಈ ಪಾತ್ರ ತುಂಬ ವೈಶಿಷ್ಟ್ಯಪೂರ್ಣವಾಗಿ ರಂಗದಲ್ಲಿ ಬರುವುದು. ಜಾಂಬವತಿ ಕಲ್ಯಾಣದಂತಹ ಕಥಾನಕಗಳಲ್ಲಿ ನಾರದನ ಪಾತ್ರ ಕಥೆಗೆ ಸೂಕ್ತವಾಗಿ ಬಳಕೆಯಾಗುತ್ತದೆ. ಹಾಸ್ಯ ಮಿಶ್ರಿತ ನಾರದನ ಪಾತ್ರವೇ ಹೆಚ್ಚಾಗಿ ನೋಡಬಹುದು. ಬಹುಶಃ ಮೇಳದ ಹಾಸ್ಯಗಾರನೆ ಹೆಚ್ಚಾಗಿ ನಿರ್ವಹಿಸುವುದರಿಂದಲೋ ಎನೋ ಈ ಪ್ರಭಾವ ಅಧಿಕವಾಗಿ ಕಾಣಬಹುದು. ಪ್ರಸಂಗಗಳಿಗೆ ಕೀಲಿಕೈಯಂತಿರುವ ನಾರದನ ಪಾತ್ರ ಎಷ್ಟು ಮುಖ್ಯವೋ ಅಷ್ಟೆ ಔದಾಸಿನ್ಯದಿಂದ ಇದು ಪ್ರದರ್ಶಿತವಾಗುವುದು ಇದೆ. ಕಲಾವಿದರು ಹರಕೆ ಸಲ್ಲಿಸುವ ಯೋಜನೆ ಹಾಕವುದು ಈ ಪಾತ್ರದ ಮುಖಾಂತರವೆ ಅಂತ  ಅನ್ನಿಸಿದ್ದಿದೆ. ಕೆಲವೊಮ್ಮೆ ಅಷ್ಟೂ ಸೋಮಾರಿತನದಲ್ಲಿ ಇದನ್ನು ಬಿಂಬಿಸಲಾಗುತ್ತದೆ.ಯಾವುದೇ ಪ್ರಸಂಗದಲ್ಲಿ ನಾರದನ ಪಾತ್ರ ಅತೀ ಮುಖ್ಯ ಅಂತ ಅನ್ನಿಸುವುದೇ ಇಲ್ಲ. ಇದು ನನ್ನ ಅಭಿಮತ. ವೇಶಗಾರಿಕೆಯಿಂದಲೂ ನಾಟ್ಯ ಮತ್ತು ಅರ್ಥಗಾರಿಕೆಯಿಂದಲೂ ಈ ಪಾತ್ರ ಅತ್ಯಂತ ಉದಾಸಿನದ ಪಾತ್ರ ಅಂತ ಹೇಳಬಹುದೆನೋ?

ಇನ್ನೂ ನನ್ನ ಗಮನಕ್ಕೆ ಬಾರದ ಹಲವು ಪಾತ್ರಗಳಿವೆ. ವಿಶ್ವಾಮಿತ್ರ ವಸಿಷ್ಠರ ಪಾತ್ರ. ಸತ್ಯ ಹರಿಶ್ಚಂದ್ರ , ಮಹಾಬ್ರಾಹ್ಮಣ, ಸೀತಾಸ್ವಯಂವರ, ತಾಟಕಿ ಸಂಹಾರ ಹೀಗೆ ಹಲವು ಪ್ರಸಂಗಗಳಲ್ಲಿ ವಿಶ್ವಾಮಿತ್ರ ಪಾತ್ರ ಅತಿಮುಖ್ಯವಾಗಿ ಬಿಡುತ್ತದೆ. ಯಕ್ಷಗಾನದ ಪ್ರಸಂಗಗಳಲ್ಲಿ  ಹಲವು ಪಾತ್ರಗಳ ಬಳಕೆಯನ್ನನುಸರಿಸಿ ಒಂದು ಸಂಶೋಧನೆಯನ್ನು ಮಾಡಿ ಆ ಮೂಲಕ ಒಂದು  ಗ್ರಂಥವನ್ನು ಬರೆಯಬಹುದು.ಅದು ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಬಹಳ ಸೂಕ್ತವಾಗಬಹುದು.






Monday, December 20, 2010

ಅಭಿಮಾನಕ್ಕೆ ಭೇದವುಂಟೇ?

ಕೆಲವೊಂದು ಸಂಗತಿಗಳು ನಮ್ಮ ಬದುಕಿನ ರೀತಿ ನೀತಿಗೆ ನಿದರ್ಶನವಾಗಿ  ಮುಖಪುಟವಾಗಿಬಿಡುತ್ತದೆ. ನಮ್ಮ ನೆನಪು ಬಂದಾಗ ಪಕ್ಕನೆ ಮನಸ್ಸಿನಲ್ಲಿ ಹಾದುಹೋಗುವ ಭಾವನೆಗಳು ಇದಕ್ಕೆ ಅನುಗುಣವಾಗಿ ಸ್ಪಂದನೆಯನ್ನುಂಟುಮಾಡುತ್ತವೆ.ಬಹುಶಃ ಸಂಸ್ಕಾರ ಎಂಬುದು ಇದನ್ನೆ ಅವಲಂಬಿಸಿ ಉಂಟೇನೋ. ದೇವರು ಪಾಲಿಸಿದ ಪಂಚೇದ್ರಿಯಗಳೊಂದಿಗೆ ಶರೀರವನ್ನು ಪಡೆದು ಜನ್ಮ ತಳೆವ ಮಾನವ ಹುಟ್ಟಿನಿಂದಲೂ ಒಂದು ಬದುಕಿನ ಆಯಾಮವನ್ನು ತನ್ನ ಸುತ್ತಲ ಪರಿಸರಕ್ಕನುಗುಣವಾಗಿ ಪಡೆಯುತ್ತಾನೆ. ಹುಟ್ಟಿದ ಮನೆ ಒಡನಾಟದ ಬಂಧುಬಳಗ ಇದೆಲ್ಲವು ಸಂಸ್ಕಾರದಲ್ಲಿ ಪ್ರತಿಫಲಿಸಿ ಅದೇ ಮುಂದಿನ ಬದುಕಲ್ಲಿ ಸ್ಥಾಯಿಯಾಗಿ ಗುರುತಿಸಲ್ಪಡುತ್ತದೆ. ಬೆಳೆದು ಬಂದು ಎಲ್ಲವು ಅನುಭವದ ಪಕ್ವತೆಯನ್ನು ಪಡೆಯುತ್ತ ಒಂದೊಂದೇ ದಿನವನ್ನು ಕಳೆದು ಮುಂದೇನು ಮುಂದೇನು ಎಂದು ಅನ್ವೇಷಣೆ ನಡೆಸುತ್ತ ಬರುತ್ತದೆ. ಈ ಬದುಕು ಎಂದರೆ ಹೀಗೆ ಪ್ರತಿ ಹಂತದಲ್ಲು ಘಳಿಗೆ ಕಳೆದಂತೆ ಪಕ್ವತೆಯನ್ನು ಪಡೆಯುತ್ತ ಹೋಗುತ್ತದೆ. ಇಂದು ಇರುವ ವಿಚಾರ ಮುಂದೆ ಬದಲಾದ ದಿಶೆಯಲ್ಲೂ ಕೆಲವೊಮ್ಮೆ ಒಳಗಿನ ಗುಣವನ್ನು ಬಿಟ್ಟುಕೊಡಲಾರವು. ಇಲ್ಲಿ ಅನ್ನ ತಿಂದು ಹಸಿವ ನೀಗುವ ಶರೀರ ಇನ್ನೊಂದು ಪರಿಸರದಲ್ಲಿ ಹುಟ್ಟಿ ಬೆಳೆದರೆ ಅನ್ನದ ಬದಲು ಬೇರಿನ್ನೇನನ್ನೋ ರೂಢಿಸಿಕೊಳ್ಳುತ್ತದೆ. ಆಹಾರ ಪರಸರಕ್ಕೆ ಹೊಂದಿಕೊಂಡು ಭಿನ್ನವಾಗಿರುವುದು ತಪ್ಪು ಅಲ್ಲ. ಅದು ಅಪರಾಧವೂ ಅಲ್ಲ. ಇಲ್ಲಿ ಅನ್ನ ತಿನ್ನುವವ ಇನ್ನೊಂದೆಡೆಯ ರೊಟ್ಟಿ ಆಹಾರವನ್ನು ಕೆಟ್ಟದ್ದು ಎನ್ನುವ ಹಾಗೂ ಇಲ್ಲ. ಅಥವಾ ತನಗೆ ಆಗದು ಎಂದ ಮಾತ್ರಕ್ಕೆ ರೊಟ್ಟಿ ಕಳಪೆಯೂ ಅಲ್ಲ. ಇದು ಮನುಷ್ಯ ಜೀವನದ ವೈವಿಧ್ಯತೆಯ ಸಂಕೇತ. ಭೂಗರ್ಭದಿಂದ ಒಸರುವ ನೀರು ಯಾವ ಪಾತ್ರೆಗೆ ಬಿದ್ದು ಅದೇ ಅಕಾರವನ್ನು ಪಡೆಯುತ್ತದೋ ಹಾಗೆ ಈ ಜೀವನ ಎಂದು ಅನ್ನಿಸುತ್ತದೆ. ನೀರು ಮತ್ತೆ ಪಾತ್ರೆ  ಬದಲಾದಂತೆ ಬದಲಾವಣೆ ಕಂಡರು ದ್ರವರೂಪದ ಗುಣವನ್ನು ಬಿಡುವುದೇ ಇಲ್ಲ. ಆ ಗುಣವನ್ನು ಬಿಟ್ಟಾಗ ಅದು ಈ ಪ್ರಫಂಚದಲ್ಲಿ ಲೀನವಾಗಿ ಹೋಗಿಬಿಡುತ್ತದೆ.


ಇಂತಹ ಯೋಚನೆಗಳು ಇಲ್ಲಿ ಹುಟ್ಟಿಕೊಂಡು ಈ ರೂಪಕ್ಕೆ ಬರಲು ಕಾರಣವೂ ಇದೆ. ಹುಟ್ಟಿನಿಂದಲೆ ಬೆಳೆದು ಬಂದ ವಾತವಾರಣ ಜೀವನದಲ್ಲಿ ಎಲ್ಲಾ ಕಡೆ ಹಾಸುಹೊಕ್ಕಾಗಿ ಇರುತ್ತದೆ. ಒಂದೊ ತನ್ನದಾಗಿ ಪಡೆದು ಬಂದ ಜೀವನ ಕ್ರಮ ತಮಗೆ ಇಷ್ಟವಲ್ಲವಾದರು ಅದಕ್ಕೆ ಒಗ್ಗಿ ಕೊಂಡು ಹೋಗುವ ಜೀವನ ಕ್ರಮವಾದರೆ ಇನ್ನೋಂದು ಅದನ್ನೇ ಅಭಿಮಾನಿಸಿಕೊಂಡು ಅದು ತನ್ನದು ಎಂದು ಮೈಗೊತ್ತಿ ನಡೆವ ಜೀವನ ಕ್ರಮ. ಇದರಲ್ಲಿ ಯಾವುದು ಎಷ್ಟೆಷ್ಟು ಎಂಬುದು ಸಮಯಕ್ಕೆ ಬಿಟ್ಟವಿಚಾರ. ಅಲ್ಪ ಗೊಂದಲವೂ ಇಲ್ಲದೆ ಇರುವುದಿಲ್ಲ.


ಬಾಲ್ಯದಲ್ಲಿ ಅತ್ಯಂತ ಬಡತನದ ಜೀವನ. ಇನ್ನು ಹತ್ತರಿಂದ ಮೇಲೆ ಮಂದಿ ಇರುವ ಸಮೃದ್ದ ಕುಟುಂಬದ ಬಡತನ ಊಹಿಸಿ. ಏಳೆಂಟು ಮಕ್ಕಳು ಒಟ್ಟಾಗಿ ಬದುಕುವ ದೊಡ್ಡ ಮನೆ. ದೂರದ ಕಂಡು ಕೇಳರಿಯದ ಊರಲ್ಲಿ ಒಂದು ಶ್ರಾಧ್ದವೋ ವೈಕುಂಠ ಸಮಾರಾಧನೆಯೊ ಇದ್ದರೆ (ಆ ಕಾಲದಲ್ಲಿ ಆಮಂತ್ರಣ ಇಲ್ಲದೆ ಹೋಗಬಹುದಾದ ಕಾರ್ಯಕ್ರಮ ಇದುವೆ. ) ಹತ್ತು ಹನ್ನೆರಡು ಮೈಲುಗಳನ್ನು ಹೊಟ್ಟೆತುಂಬ ಊಟದ ಬಯಕೆ ಹೊತ್ತು   ನಡೆದುಕೊಂಡೇ  ಹೋಗುತ್ತಿದ್ದೆವು. ಆ ನನ್ನ ಐದು ಆರನೇ ವಯಸ್ಸಿನಲ್ಲಿ ನಾವೆಲ್ಲ ಮಕ್ಕಳು ನಡೆದದ್ದು ಇನ್ನೂ ನೆನಪಿದೆ. ಕಾಯರ್ ಕಟ್ಟೇ... (ನಮ್ಮ ಪೈವಳಿಕೆ ಬಾಯಾರು ಮಧ್ಯೆ) ಎಲ್ಲಿ?  ದೂರದ ಕನ್ಯಾನದ ಯಾವುದೋ ಮೂಲೆಯ ಬೈಲಿನ ಮನೆ ಎಲ್ಲಿ? ಊಹಿಸಿ. ಈಗ ಅರ್ಧ ಘಂಟೆಯ ದೂರ ಆದರೂ ಆವಾಗ ಗುಡ್ಡೆಯಂತೆ ಇರುವ ಮಣ್ಣಿನ ರಸ್ತೆ.. ಬೆಳಗ್ಗೆ ಒಂದು ಮಧ್ಯಾಹ್ನ ಒಂದು ಎಂದು ಓಡುವ ವಾಹನದ ಕಾಲವದು. ನನ್ನ ಆರನೆಯ ವಯಸ್ಸಿನ ಈ ಊಟದ ಹಸಿವಿನ ನಡೆ ಇಂದು ನೆನಸಿದರೆ ತುತ್ತು ಅನ್ನವೂ ಮೌಲ್ಯಕಂಡುಕೊಳ್ಳುತ್ತದೆ. ಚಪ್ಪಲಿಯಿಲ್ಲದ ಬರಿಗಾಲು ಚಡ್ಡಿ ಮಾತ್ರ ಧರಿಸುವ ಬರಿ ಮೈ... ಎಂತಹ ಬಾಲ್ಯ ಆದರು ಕೆಲವೊಮ್ಮೆ ಅನ್ನಿಸುತ್ತದೆ ಆ ಬಾಲ್ಯ ಬರಬಾರದೇ?

ಇದೆಲ್ಲ ಅನಗತ್ಯ ಅನ್ನಿಸಬಹುದಾದ ಪ್ರವರ ಇಲ್ಲಿ ಕೆಲವೊಮ್ಮೆ ಹೇಳಿಬಿಡುವ ಎಂಬ ಬಯಕೆ. ಹೀಗನ್ನಿಸುವುದು, ಅಂತಹ ಬದುಕಲ್ಲೂ ಕಳೆದ ನಮ್ಮ ರಸಮಯ ದಿನಗಳ ಮಧುರ ಅನುಭವವೇ ಕಾರಣ. ಬಾಲ್ಯದಲ್ಲಿ ಆಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅನಿಶ್ಚತೆಯ ಜೀವನ. ಕೆಲವು ದಿನ ಪೈವಳಿಕೆಯಾದರೆ ಕೆಲವು ದಿನ ಸೋದರ ಮಾವನೊಂದಿಗೆ ಮಂಗಳೂರಲ್ಲಿ. ಅಲ್ಲಿ ಸಾಮಾನ್ಯ ದೊಡ್ಡ ಮನೆ ಎಲ್ಲ ಕಡೆಯೂ ಸಾಮಾನ್ಯ ಮಂದಿಗಳೆ. ಇಲ್ಲಿದ್ದರೂ ಅಲ್ಲಿದ್ದರು ಇದು ನಮ್ಮ ಮನೆ ಎಂಬ ಭಾವನೆ.  ಮಂಗಳೂರಲ್ಲಿ ಎನ್ನ ದೊಡ್ಡಮ್ಮ ನ ಮುದ್ದಿನ ಆರೈಕೆ. ಸೋದರ ಮಾವನ ಪ್ರೀತಿಯ ಪಾಲನೆ.

ಆಗಿನ ಮಧುರ ಅನುಭವಗಳಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಮಧುರ ಭಾವನೆಗಳು ಹಲವು. ಇದು  ಹಲವು ಸಲ ಹೇಳಿದಂತೆ ಯಕ್ಷಗಾನ ನಮಗೆಲ್ಲ ಸುಲಭದಲ್ಲಿ ಸಿಗುವ ದೊಡ್ಡ ಮನರಂಜನೆ. ಮಾತ್ರವಲ್ಲ ಅದು ಕಟೀಲು ಮೇಳದ ಬಯಲಾಟಕ್ಕೇ ಹೆಚ್ಚಾಗಿ ಸೀಮಿತ. ಮಂಗಳೂರಿನಲ್ಲಿ ಅಲ್ಲಲ್ಲಿ ಆಗುವ ಕಟೀಲು ಮೇಳದ ಅಟಗಳು ಸಾಯಂಕಾಲದಿಂದ ಮುಂಜಾನೆವರೆಗೂ ಬಯಲಲ್ಲೇ ಕಳೆವಂತೆ ಮಾಡಿದೆ. ಎಪ್ಪತ್ತರ ದಶಕದ ಕಟೀಲು ಮೇಳದ ಆಟಗಳು ಈಗಿನಷ್ಟು ಹರಕೆಯಾಗಿ ಇರುತ್ತಿರಲಿಲ್ಲ. ಆವಾಗ ಬಲಿಪ್ಪರು ಇದ್ದ ಒಂದೇ ಮೇಳ ಆರಂಭದಲ್ಲಿ ಇದ್ದದ್ದು. ಪೂರ್ವರಂಗದ ನಂತರ ಪೀಠವೇರುವ ಬಲಿಪ್ಪರು ಮುಂಜಾನೆ ಮಂಗಳದವರೆಗೂ ಕುಳಿತು ರಂಗದಲ್ಲಿ ಮೆರೆಯುವಂತಹ ದಿನಗಳು, ಇಂದು ಯಾವ ಭಾಗವತ ಇದ್ದಾರೆ.? ತಲೆಗೆ ಕೆಂಪು ಪೇಟ ಸುತ್ತಿ  (ಮೊದಲೆ ಸಿದ್ದ ಪಡಿಸಿದ ರೆಡಿ ಮೇಡ್ ಪೇಟವಲ್ಲ ಅದು) ಇಂದಿಗೂ ಅದೇ ಬದಲಾಗದ ನಿಲುವು ನೋಡಿದರೆ ಎಂತಹವರಿಗೂ ಗೌರವ ಉಕ್ಕುವ ಕಳೆ,  ಇವರ ಜತೆಗೆ ನಿಡ್ಲೆ ಅಜ್ಜನ ಚೆಂಡೆ ಪುರುಷ ಭಟ್ಟರ ದೇವಿ ಇವೆಲ್ಲ ಸಾಮಾನ್ಯ. ಯಕ್ಷಗಾನ ಎಂದರೆ ತೆಂಕು ತಿಟ್ಟು ಮಾತ್ರ ಎಂಬಂತೆ ಇದ್ದ ಬುದ್ಧಿಶಕ್ತಿ. ತೆಂಕು ತಿಟ್ಟಿನ ರಾಜವೇಶ ಪುಂಡುವೇಶ ಬಣ್ಣದವೇಶದ ಬಣ್ಣ ಬಣ್ಣದ ಲೋಕವೆ ನಮ್ಮ ಲೋಕ. ಆದರೂ ಅಗ ಒಮ್ಮೆ ಮನೆಗೆ ತಂದ ಸಿಂಡಿಕೇಟ್ ಭ್ಯಾಂಕ್ ಕ್ಯಾಲೆಂಡರ್ ನಲ್ಲಿ ಬಡಗುತಿಟ್ಟಿನ ಹಲವು ವೇಷದ ಚಿತ್ರಗಳನ್ನು ಗಾಬರಿ ಹಾಗು ಕುತೂಹಲದಿಂದ ನೋಡಿದ್ದು ಇನ್ನೂನೆನಪಿದೆ. ಎಲ್ಲೇಲ್ಲೂ ತೆಂಕು ಯಕ್ಷಗಾನವನ್ನೇ ಕಂಡು ಬೆಳೆದ ನನಗೆ ಅದರಲ್ಲೇ ಅಭಿಮಾನ ಬೆಳೆದು ಬಂದರೆ ಅದು ಈಗ ದುರಭಿಮಾನ ಮತ್ತು ಅಹಂಕಾರದ ಸಂಕೇತವಾಗಿ ಗುರುತಿಸಲ್ಪಟ್ಟದ್ದು ತುಂಬಾ ಖೇದವನ್ನು ತರಿಸಿದೆ. ಅದರೂ ಒಂದು ಪ್ರಶ್ನೆ ಹಾಗೆ ಉಳಿದು ಬಿಡುತ್ತದೆ. ವೈಯಕ್ತಿಕವಾಗಿ ಬರೆದು ನನ್ನ ಯಕ್ಷಗಾನಾಬಿಮಾನದ ಬಗ್ಗೆ ನೇರವಾಗಿ ಕೇಳೀದುದಕ್ಕೆ ಬೇಸರವಿಲ್ಲ. ವೈಯಕ್ತಿಕವಾಗಿ ಬರೆದ ಮೈಲ್ ನ್ನು ನನಗೆ ಅರಿವಿಲ್ಲದೆ ಸಾರ್ವಜನಿಕವಾಗಿ ಬಹಿರಂಗ ಪಡಿಸಿದ ಉದ್ದೇಶ ಕೇವಲ ಅವರ ಯಕ್ಷಗಾನ ಅಭಿಮಾನವನ್ನು ತೋರಿಸುವ ಬದಲಾಗಿ ದುರಹಂಕಾರವನ್ನು ತೋರಿಸುವುದಿಲ್ಲವೇ? ವೈಯಕ್ತಿಕವಾಗಿ ಕೇಳಿ ನಾನು ಸ್ಪಂದಿಸದೆ ಇರುತ್ತಿದ್ದರೆ ಆ ವೇಳೆಯಲ್ಲಿ  ಇದು ಯುಕ್ತವಾಗುತ್ತಿತ್ತು. ಎಲ್ಲವೂ ಗೊಂದಲ ಮನಸ್ಸಿನ ಹೇಳಿಕೆಯಂತೆ ಭಾಸವಾಗುತ್ತಿದೆ. ತೆಂಕು ಬಡಗು ಎರಡು ಕಣ್ಣುಗಳ ಹಾಗೆ.. ದೊಡ್ಡ ವೇದವಾಕ್ಯವೆಂಬಂತೆ ನಾನು ಹೊಸದಾಗಿ ಪಾಠಕ್ಕೆ ಕುಳಿತ ವಿದ್ಯಾರ್ಥಿಯ ಭಾವದಲ್ಲಿ ಪರಿಗಣಿಸಬೇಕೆ. ನಾನು ಇನ್ನು ಹೇಳಬಲ್ಲೆ. ಯಕ್ಷಗಾನವೆಂಬ ಮನೆಯಲ್ಲಿ ತೆಂಕು ಬಡಗು ದಂಪತಿಯರಂತೆ. ಪರಸ್ಪರ ಸ್ನೇಹ ಹೊಂದಾಣಿಕೆಯ ಜೀವನವಾಗಬೇಕು. ಕೇವಲ ತೋರಿಕೆಯ ಜಾಹಿರಾತಿನ ಪ್ರೀತಿಯಾಗಬಾರದು. ಇಲ್ಲಿ ಯಾವುದು ಮೇಲು ಎಂಬ ಘರ್ಷಣೆಗೆ ಮೂಲವಾಗದೆ ಸರಸದ ಜೀವನವಾಗಬೇಕು. ಅದು ಇಂದು ಎದೆಯೆಂದು ನನಗನಿಸುವುದಿಲ್ಲ.

ಒಬ್ಬಕಳ್ಳನೋ ಸುಳ್ಳನೋ ಹುಟ್ಟಿನಲ್ಲೇ ಅದೇ ಪರಿಸರವನ್ನು ಅಂಟಿಸಿಕೊಂಡು ಬೆಳೆದು ಅದೇ ಸಂಸ್ಕಾರದಲ್ಲಿ ಬೆಳೆದರೆ ಆವಾಗ ಹೇಳಬಹುದು ಈ ಸಂಸ್ಕಾರ ಸರಿಯಲ್ಲ. ಇದು ಹುಟ್ಟಿನಿಂದಲೇ ಬಂದರೂ ಬದಲಿಸಿಕೊಳ್ಳಬೇಕಾದದ್ದು ಅನಿವಾರ್ಯ. ಯಾಕೆಂದರೆ ಈ ಸಂಸ್ಕಾರ ಪರರಿಗೆ ತೊಂದರೆಯನ್ನೇ ತರುವಂತದ್ದು. ಅದರ ಬಗ್ಗೆ ಅಭಿಮಾನ ಇದ್ದರೆ ಅದು ಸಮಾಜಕ್ಕೇ ಮಾರಕ ಅಲ್ಲವೇ. ಆದರೆ ಹುಟ್ಟಿನಿಂದ ಬಂದ ಈ ಪರರಿಗೆ ತೊಂದರೆಯಾಗದ  ಯಕ್ಷಗಾನದ ಅಭಿಮಾನ ತಿದ್ದುವುದಕ್ಕೆ ಪ್ರಯತ್ನಿಸುವ ಮಂದಿಗೆ ಏನು ಹೇಳೋಣ. ಅಭಿಮಾನವು ಒಂದು ಅಹಂಕಾರವೇ? ಪರ ಜೇಬು ಹಿಂಡಿ ನಾವು ನಮ್ಮ ಯಕ್ಷಗಾನದ ಅಭಿಮಾನ ಇಟ್ಟುಕೊಂಡರೆ ಹೇಳಬಹುದು ಈ ಅಭಿಮಾನ ಬದಲಿಸು ಎಂಬುದಾಗಿ. ಎಲ್ಲ ಮೂಢತನದ ಪರಮಾವಧಿ ಅಂತ ಅನ್ನಿಸುವುದು ಆವಾಗ. ವಿವಾದದ ಸೊಲ್ಲು ಬಂದಾಗಲೇ ಅದಕ್ಕೆ ಪ್ರತಿವಾದ ಮಂಡಿಸಿ ನಮ್ಮದಾದ ಚಿಂತನೆಯನ್ನು ಹರಿಯಬಿಟ್ಟರೆ ವೃಥಾವಾಗ್ವಾದ, ಚರ್ಚೆ ಮತ್ತೆ ವೈಷಮ್ಯ.ವಾಗ್ವಾದ ಸಂವಾದವಾಗುವುದು ಸಹೃದಯವಿದ್ದಲ್ಲಿ ಮಾತ್ರ.

ಇತ್ತೀಚಿನ ಸಣ್ಣ ಸಂವಾದ ಒಂದು ವಿವಾದದ ಹಂತ ತಲುಪಿದ್ದು ಮಾತ್ರ ಖೇದಕರ. ಹುಟ್ಟಿನಿಂದಲೇ ಬೆಳೆಸಿಕೊಂಡ ಅಭಿಮಾನ ಯಕ್ಷಗಾನದ್ದು . ಅಂತಹುದೇ ಪರಿಸರ ಸಿಕ್ಕಿದಾಗ ಸಹಜವಾಗಿ ಪರಿಸರದಲ್ಲಿ ಇದ್ದ ಯಕ್ಷಗಾನದ ಒಂದು ಅಂಗವಾದ ತೆಂಕು ತಿಟ್ಟಿನಲ್ಲೇ ಅಭಿಮಾನವಿರಿಸಿ ಆ ಸಂಸ್ಕಾರವನ್ನೆ ಅಳವಡಿಸಿಕೊಂಡು ಸಾಗಿ ಬಂದ ಬದುಕು. ಇತರರಿಗೆ ತೊಂದರೆಯಾಗದ  ರೀತಿಯಲ್ಲಿ ಸದ್ಭಾವನೆಯನ್ನು ಇರಿಸಿಕೊಂಡು ಬೆಳೆಸಿಕೊಂಡು ಬಂದ ಅಭಿಮಾನ ಅಹಂಕಾರ ಎಂದು ಗುರುತಿಸಲ್ಪಟ್ಟರೆ ಗುರುತಿಸಿದ ದೃಷ್ಟಿಗೆ ಚಿಕಿತ್ಸೆ ಬೇಕೆ ಬೇಡವೇ? ನನ್ನ ಪರಿಸರ ನನ್ನ ಸಂಸ್ಕಾರ ಎಂಬ ಅಭಿಮಾನ ತಪ್ಪೇ? ನಾನು ಅತಿಯಾಗಿ ಅಭಿಮಾನಿಸುವ ಬಲಿಪ್ಪರ ಅಭಿಮಾನವೇ ನಿಂದನೆಯ ಗುರಿಯಾಗಿ ಬಿಟ್ಟದ್ದು ನಿಜವಾಗಿ ಈ ಕಲಾವಿದರು ಎಂದು ಹೇಳುವವರ ಅಜ್ಞಾನಕ್ಕೆ ಏನೆನ್ನಬೇಕೊ ತಿಳಿಯದಾಗಿದೆ. ನಿಂದನೆಯಾದರು ತಾಳಿಕೊಳ್ಳಬಹುದೇನೊ. ಎಕೆಂದರೆ ಎಲ್ಲವನ್ನು ಸಮಾನ ಚಿತ್ತದಿಂದ ಸ್ವೀಕರಿಸುವ ರೂಢಿಯನ್ನು ಬೆಳೆಸಿಕೊಳ್ಳುವ ಪ್ರವೃತ್ತಿಯನ್ನು ರೂಢಿಸಿಕೊಳ್ಳುವ ಬಯಕೆ ನನ್ನದು. ಆದರೆ ಇಲ್ಲಿ ಕೇವಲ ನಿಂದನೆಯಲ್ಲ ಅದರ ಹಿಂದೆ ಇರುವ ಉದ್ದೇಶ ಮಾತ್ರ ತೀರ ಮೃಗಿಯ ವರ್ತನೆಯಾಗಿ ಗೋಚರಿಸಿತು.ಅನಗತ್ಯ ಮಾರ್ಗ ಹಿಡಿಸುವ ಪ್ರೇರೇಪಣೆ. ಜಗಳ ವೈಶಮ್ಯವನ್ನು ಮತ್ತು ಹೆಚ್ಚಿಸಿಕೊಳ್ಳುವ ಉದ್ದೀಪನೆ. ಅದಕ್ಕೆ ಸಹಾಯಕವಾಗಿ ಎರಗಿಸುವ ಟೀಕಾಪ್ರಹಾರ. ಇಲ್ಲಿ ಹಲವು ಗೊಂದಲಗಳನ್ನು ಆರಂಭದಲ್ಲೇ ಗುರುತಿಸಿದೆ. ಸ್ವಭಾವದಂತೆ ನಾನು ತಣ್ಣನೆಯ ಪ್ರತಿಕ್ರಿಯೆಗೆ ಶರಣಾದೆ. ಟೀಕೆಯನ್ನು ಮಾಡುವಲ್ಲಿಯೂ ಪರರನ್ನೆ ಆಶ್ರಯಿಸಿ ಅದೇ ಉಚ್ಚಿಷ್ಠ ಸವಿಯುವ ಮತ್ತು ಮಾನಸಿಕವಾಗಿಯೂ ಪರಾವಲಂಬಿಯಂತೆ ಕಾಣುವ ಪ್ರವೃತ್ತಿ  ಹೇಸಿಗೆ ಹುಟ್ಟಿಸುವುದಿಲ್ಲವೆ? ಎಲ್ಲವೂ ಇರಲಿ ಅದರ ಪಾಡಿಗೆ ಅದು ಇರಲಿ ನಮ್ಮ ಹಾದಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿದ್ದರೆ ಅದೇ ಸಮಾಧಾನ ತಳೆದು ಮೌನವಹಿಸಿದರೂ ಕೆಲವೊಂದು ಚೋದ್ಯಗಳು ಸಿಗದ ಉತ್ತರವನ್ನೇ ಎದುರು ನೋಡುತ್ತದೆ. ಅದು ಹೀಗೆ.
ಕಲೆಯ ವಿಚಾರದಲ್ಲಿ ಸ್ಪರ್ಧೆ ಇರುವುದು ಸಹಜ. ಅದು ಕಲಾವಿದನ ಮಧ್ಯೆಯಾಗಲಿ ಒಟ್ಟು ಪ್ರದರ್ಶನ ರೂಪದಲ್ಲಾಗಲಿ ಹಲವು ವಿಧದ ಸ್ಪರ್ಧೆ ಇರುವುದು ಕೂಡ ಸಹಜ. ಯಕ್ಷಗಾನದ ವಿಚಾರಕ್ಕೆ ಬಂದಾಗ ಇಲ್ಲಿ ಹಲವು ವಿಧದ ಸ್ಪರ್ಧೆಯನ್ನು ಪ್ರತೀ ಪ್ರದರ್ಶನದಲ್ಲೂ ಕಾಣಬಹುದು. ಇಂದು ಸ್ಪರ್ಧೆ ಕೇವಲ ತಿಟ್ಟುಗಳ ಮಧ್ಯೆ ಮಾತ್ರ ಸೀಮಿತವಾಗಿಲ್ಲ. ಅದು ಸಂಘಟಕರ ನಡುವೆಯೂ ಬೆಳೆದು ಬರುವುದು ಸಾಮಾನ್ಯ ವಿಶಯವಾಗಿದೆ. ಎಲ್ಲವೂ ಸಾಮಾನ್ಯ ಎಂದು ತಳ್ಳಿ ಹಾಕಬಹುದಾದರು ಒಂದು ಸಾಹೋದರ್ಯದ ಭಾವ ಇದರಲ್ಲಿ ಹುಡುಕುವಂತಹ ವಾತಾವರಣ ಮಾತ್ರ ಅಸಹನೀಯವೆನ್ನಿಸುವುದಿಲ್ಲವೆ? ಅದು ಸುಸಂಸ್ಕೃತ ಕಲೆಯೆಂದು ನಾವು ಅಭಿಮಾನ ಪಟ್ಟುಕೊಳ್ಳುವ ಈ ಯಕ್ಷಗಾನ ಕಲೆಯಲ್ಲಿ. ಭಿನ್ನಾಭಿಪ್ರಾಯ ಸಹಜವಾದರು ಅದಕ್ಕೆ ಪರಿಹಾರ ಕಂಡುಕೊಳ್ಳುವ ಮಾರ್ಗ ಮಾತ್ರ ತೀವ್ರ ಅಪಾಯಕಾರಿಯಾಗಿ ಗೋಚರಕ್ಕೆ ಬರುತ್ತದೆ. ಕಲೆ- ಕಲೆಯ ಮಧ್ಯೆ, ಕಲಾವಿದನ ಮಧ್ಯೆ ಸ್ಪರ್ಧೆ ಎಲ್ಲರೂ ಬಯಸಬಹುದು. ಆದರೆ ಆ ಸ್ಪರ್ಧೆ ಹೇಗಿರಬೇಕು ಎಂಬ ಚಿಂತನೆ ಮಾತ್ರ ಇರುವುದಿಲ್ಲ. ಸ್ಪರ್ಧೆಯಿಂದ ಉತ್ಕೃಷ್ಟತೆಯನ್ನು ನೀರೀಕ್ಷಿಸಬಹುದಾದರು ಅಲ್ಲಿ ಸ್ಪರ್ಧೆಯ ರೂಪವೇ ಬಿನ್ನವಾಗ ಬಾರದಲ್ಲ?ಒಂದು ವೇದಿಕೆಯಲ್ಲಿ ಕಲಾವಿದನ ನಡುವೆ ಸ್ಪರ್ಥೆ ಪ್ರತಿಸ್ಪರ್ಧಿಯ ದಮನವನ್ನು ಗುರಿಯಾಗಿಸಿ ಇರದಿದ್ದರೆ ಹೇಗನಿಸಬಹುದು? ಪ್ರತಿಸ್ಪರ್ಧಿಯನ್ನು ಸೋಲಿಸಬೇಕೆಂಬುದೇ ಮುಖ್ಯ ಗುರಿಯಾದಲ್ಲಿ ಉತ್ಕೃಷ್ಟತೆ ಹೇಗೆ ಬರಬಹುದು? ಇಲ್ಲಿ ಕೇವಲ ಒಂದು ಸ್ಪರ್ಥೆ ಮಾತ್ರ ಕಾಣಬಹುದಷ್ಟೆ. ಇದು ಎಲ್ಲರಿಗು ತಿಳಿದಿದ್ದರೂ ಕ್ಷಣಿಕ ಗೆಲುವಿಗೆ ಎನೆಲ್ಲ ಪ್ರಯತ್ನಗಳನ್ನು ಮಾಡಿಬಿಡುತ್ತೇವೆ. ಸ್ಪರ್ಧಿಯ ದಮನದಿಂದ ಒಲಿದ ಗೆಲುವು ಅದು ಗೆಲುವಾಗಬಲ್ಲುದೇ? ಒಂದು ಸ್ಪರ್ಧೆ ಸೋಲು ಗೆಲುವಿನ ಸ್ಪರ್ಧೆ ಆಗಬಾರದು. ಗೆಲುವಿನ ಗುರಿಯೇ ಪ್ರಧಾನವಾದರೆ ಪ್ರತಿಸ್ಪರ್ಧಿಯ ದಮನವೆ ಗುರಿಯಾಗಿಬಿಡುತ್ತದೆ.   ಒಟ್ಟಿನಲ್ಲಿ  ಪ್ರೇಕ್ಷಕನಿಗೆ ಉತ್ತಮವಾದುದನ್ನು ಕೊಡುವ ಸ್ಪರ್ಧೆಯಾಗಬೇಕು.   ಪ್ರತಿಸ್ಪರ್ಧಿಯ ಪ್ರತಿಭೆಯನ್ನು ಉತ್ತೇಜಿಸುತ್ತಾ ಅದಕ್ಕೆ ಮನ್ನಣೆ ನೀಡುತ್ತ ಸ್ಪರ್ಧಿಗಳು ಸ್ಪರ್ಥಿಸಿದರೆ ಅದು ಆರೋಗ್ಯಕರ ಸ್ಪರ್ಧೆಯಾಗಬಲ್ಲುದು.

ಇನ್ನು ಅಭಿಮಾನದ ವಿಚಾರವು ಇದಕ್ಕಿಂತ ಭಿನ್ನವಾಗಿಲ್ಲ. ಈ ಅಭಿಮಾನ ಪ್ರೀತಿ ಅದು ಬಲವಂತದಿಂದ ಸೆಳೆದು ಹುಟ್ಟಿಕೊಳ್ಳುವಂತಹುದಲ್ಲ. ಕುದುರೆಯನ್ನು ನೀರಿನ ಹತ್ತಿರ ತಂದು ಬಿಡಬಹುದು ಆದರೆ ಅದನ್ನು ನೀರು ಕುಡಿಯುವಂತೆ ಮಾಡಲು ಸಾಧ್ಯವೆ? ಆ ಪ್ರಚೋದನೆ ಅದಕ್ಕೆ ಮನಸ್ಸಿನಲ್ಲಿ ಹುಟ್ಟಬೇಕು. ಇಷ್ಟೇ ಆದರೆ ಪರವಾಗಿಲ್ಲ.   ಆದರೆ ಅದಕ್ಕೆ ನೀರನ್ನು ಕುಡಿವ ಅನಿವಾರ್ಯತೆಯನ್ನು ತಂದು ಇಡುವ ಪ್ರವೃತ್ತಿ ಮಾತ್ರ ವಿಚಿತ್ರವಾಗಿದೆ. ಇದೆಲ್ಲ ತಿಳಿದಿದ್ದರೂ ತನ್ನ ಅಭಿಮಾನವನ್ನೆ ಪುರಸ್ಕರಿಸಲ್ಪಡಬೇಕು ಎಂಬ ಪ್ರವೃತ್ತಿ ಹೇಗೆ ಅಹಂಕಾರವಲ್ಲದೆ ಅಗಿರಲು ಸಾಧ್ಯ? ಕನ್ನಡ ಚಲನ ಚಿತ್ರವನ್ನೇ ನೋಡಬೇಕೆಂದು ಬೇರೆ ಚಲನ ಚಿತ್ರ ಬಹಿಷ್ಕರಿಸಿದಂತೆ ಅಲ್ಲವೆ? ಮನಸ್ಸಿಂದ ಪ್ರೇರಣೆಯಾದದ್ದು ಪರರಿಗೆ ತೊಂದರೆಯಾಗದ ರೀತಿಯಲ್ಲಿ ತಮ್ಮ ಅಭಿಮಾನ ಬೆಳೆಸುವುದು ಅಪರಾಧ ಅಥವಾ ನಿಂದಾರ್ಹ ಎಂದಾದರೆ ವ್ಯಕ್ತಿಸ್ವಾತಂತ್ರ್ಯಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿದೆ? ಅಭಿಮಾನ ಪ್ರೀತಿಯ ಪ್ರವೃತ್ತಿಯಲ್ಲಿ ಹುಟ್ಟಬೇಕು.  ಬಲವಂತದ ಸೆಳೆತವಾದಷ್ಟು ಅದು  ವ್ಯತಿರಿಕ್ತ ಆಗುವ ಸಂಭವವೇ ಜಾಸ್ತಿ. ಇಂತಹ ಸಾಮಾನ್ಯ  ಜ್ಞಾನವು ಇಲ್ಲದಿದ್ದರೆ ಪರರನ್ನೆ ಅಪರಾಧಿಗಳನ್ನಾಗಿ ಚಿತ್ರಿಸುವಲ್ಲಿ ಉದ್ಯುಕ್ತವಾಗುತ್ತದೆ ಮನಸ್ಸು. ನನ್ನ ಅಭಿಮಾನ ಯಾರಿಂದ ಸಾಲಪಡೆದದ್ದು ಅಲ್ಲ .ಎರವಲು ವಸ್ತುವೂ ಅಲ್ಲ. ಅದು ನನ್ನಲ್ಲೇ ಉದ್ದೀಪನಗೊಂಡ ಸಾಮನ್ಯ ಮಾನಸಿಕ ಭಾವನೆ. ಯಾವುದೇ ರೀತಿಯಲ್ಲಿ ಸಮಸ್ಯೆಯಾಗದ ಈ ಅಭಿಮಾನ ಹೀಗೆ ಇರಲಿ ಅಲ್ಲವೆ.?

ಜನನಿಯ ಒಡಲಿನ ಹಾಲಿನ ರುಚಿ ಜನನದಿಂದಲೇ ನೋಡಿ ಮರಣದವರೆಗೂ ಆ ಅನುಭವ ಉಳಿಸುವ ನಮ್ಮ ಸಂಸ್ಕಾರ ಹುಟ್ಟಿನಿಂದಲೆ ಕಂಡು ಅನುಭವಿಸಿದ ಕಲೆಯ ಅಭಿಮಾನವನ್ನು ಸದಾ ಜಾಗ್ರತವಾಗಿರಿಸದೆ?


ಅಭಿಮಾನವು ವಿಬ್ಭಿನ್ನವಾಗಿರಲಿ ಪ್ರೀತಿ ಹಂಚಿಹೋಗಲಿ ಅದರೆ ವೈಷಮ್ಯಮಾತ್ರ ಹುಟ್ಟದಿರಲಿ ಎಂಬ ಸಧ್ಬಾವನೆ ಸದಾಶಯವನ್ನು ಹೊತ್ತು ಸದಾ ಉಲ್ಲಸಿತವಾಗಿರುವ  ಶುದ್ದಸಂಸ್ಕಾರದ ಪರಿಸರ ಬೆಳೆಸೋಣ.