"ಇದು ವಿಮರ್ಶೆಯಲ್ಲದ ಚಿಂತನ"

Thursday, October 30, 2014

ರಾಜವೇಷಕ್ಕೆ ಸಂದ ಪುರಸ್ಕಾರ


ಬಲ್ಲಿರೇನಯ್ಯಾ.......ಯಾರೆಂದುಕೊಳ್ಳಬಲ್ಲಿರಿ.....ಹಾಗೆಂದುಕೊಳ್ಳಬಹುದು. ಬಂದಂತಹ ಕಾರ್ಯ ಅನೇಕವಿದೆ. ಯಕ್ಷಗಾನದ ಒಡ್ಡೋಲಗದ ಆದ್ಯ ಮಾತುಗಳಿವು. ಮುಖ್ಯವಾಗಿ ರಾಜವೇಶವೊಂದು ಪ್ರವೇಶಗೊಂಡು ಸಿಂಹಾಸನಾರೂಢವಾದಮೇಲೆ ಗತ್ತಿನಿಂದ ಸಭೆಯನ್ನು ನಾಲ್ದೆಸೆಗೆ ನೋಡಿ ಹೇಳುವಂತಹ ಈ ಮಾತಿನಿಂದಲೇ ಪ್ರೇಕ್ಷಕನನ್ನು ಸನ್ನಿಗೊಳಪಡಿಸುತ್ತವೆ. ಅದರಲ್ಲೂ ತೆಂಕುತಿಟ್ಟು ಯಕ್ಷಗಾನದ ಪ್ರವೇಶದ ಅಬ್ಬರದ ವೈಶಿಷ್ಟ್ಯ ಆ ಸೊಗಸು ಪೂರ್ಣವಾಗಿ ಅನುಭವಿಸಿದ್ದಲ್ಲಿ ಯಕ್ಷಗಾನದ ಮುಂದಿನ ಸನ್ನಿವೇಶಕ್ಕೆ ಪ್ರೇಕ್ಷಕ ಅಣಿಯಾದಂತೆ. ತೆಂಕುತಿಟ್ಟು ಯಕ್ಷಗಾನದ ರಾಜಗಾಂಭೀರ್ಯವನ್ನು ತೋರಿದ ಪ್ರಮುಖರ ಹೆಸರನ್ನು ಇಂದು ಯಕ್ಷಗಾನ ಅಭಿಮಾನಿಗಳಲ್ಲಿ ಕೇಳಿನೋಡಿ, ಆ ಪಟ್ಟಿಯಲ್ಲಿ ಮೊದಲು ಕಂಡು ಬರುವ ಹೆಸರು ಸಂಪಾಜೇ ಶೀನಪ್ಪ ರೈಗಳದ್ದು.
ಹದವಾದ ಮತ್ತು ಅಷ್ಟೇ ಬಲಿಷ್ಠವಾದ ಹೆಜ್ಜೆಗಾರಿಕೆ, ಬಾಹುಗಳನ್ನು ಅಗಲಿಸಿ ಶಿರವನ್ನು ನಿಮಿರಿಸಿ ಕಣ್ಣುಗಳನ್ನು ಅರಳಿಸಿ ತಾಳಕ್ಕೆ ಸರಿಯಾಗಿ  ರೈಗಳ ರಾಜವೇಶದ ಪ್ರವೇಶ ಕಾಣುವುದೆಂದರೆ ಅದು ಮಾದರಿ ಯಕ್ಷಗಾನವನ್ನು ಕಂಡಂತೆ. ಇಂದು ಯಕ್ಷಗಾನಕ್ಕೆ ಪ್ರೇಕ್ಷಕ ಹಂಬಲಿಸಿ ಅದರ ಹುಚ್ಚು ಬೆಳೆಸಿದ್ದರೆ ಅದರಲ್ಲಿ ಇಂತಹ ರಾಜವೇಷಗಳ ಪಾಲು ಬಹಳಷ್ಟಿವೆ. ಸಾಂಪ್ರದಾಯಿಕ ಒಡ್ದೋಲಗದ ದೇವೇಂದ್ರನಿಂದ ತೊಡಗಿ ಅರ್ಜುನ,  ಅತಿಕಾಯ, ಹಿರಣ್ಯಾಕ್ಷ ರಕ್ತ ಬೀಜ, ಛೇ ಒಂದೇ ಎರಡೆ ಹಲವು ಸಲ ಪ್ರಸಂಗ ನಿರ್ಣಯವಾಗುವುದೂ ಇಂತಹ ವೈಶಿಷ್ಟ್ಯತೆಗಳಿಂದ. ಆ ವೈಶಿಷ್ಟ್ಯತೆಯನ್ನು ತುಂಬಿದ ಪ್ರಮುಖರಲ್ಲಿ ಸಂಪಾಜೆ ರೈಗಳು ಅಗ್ರಗಣ್ಯರು.
ಅತ್ಯಂತ ಸರಳ ಸಜ್ಜನಿಕೆಯ ವಿನಯವಂತ ಕಲಾವಿದ. ಸದಾ ಮಂದಸ್ಮಿತ ಮುಖದಲ್ಲಿ ಹೊಳೆಯುವ ಕಣ್ಣುಗಳು ಹಲವು ಪಾತ್ರಗಳಿಗೆ ಹಲವು ಭಾವಗಳನ್ನು ತುಂಬಿಸಿಬಿಡುತ್ತವೆ. ಆಕರ್ಷಕ ಮುಖವರ್ಣಿಕೆ , ಅಚ್ಚುಕಟ್ಟಿನ ವೇಷಗಾರಿಕೆ, ಲಯಬದ್ದ ಕುಣಿತ ಅದಕ್ಕೊಪ್ಪುವ ಅಭಿನಯ ಇದೆಲ್ಲದಕ್ಕೂ ಸರಿಮಿಗಿಲೆನಿಸುವ ಹಿತಮಿತವಾದ ಮಾತುಗಾರಿಕೆ ಎಲ್ಲವೂ ಯಕ್ಷಗಾನ ಪರಂಪರೆಯ ದರ್ಶನವನ್ನು ಮಾಡಿಸುತ್ತವೆ. ಕುಣಿತವಾಗಲಿ ಮಾತುಗಾರಿಕೆಯಾಗಲಿ ಅಭಿನಯವಾಗಲಿ ಯಕ್ಷಗಾನ ಪರಂಪರೆಯನ್ನು ಉಲ್ಲೇಖಿಸಿ ಹೇಳುವುದಾದರೆ ಈಗ ಸಂಪಾಜೆಯವರ ಹೆಸರನ್ನು ಮೊದಲು ಹೇಳಬೇಕಾಗುತ್ತದೆ. ಅಂತಹ ಸುದೃಢ ಸಂಪೂರ್ಣ ವೇಷಗಾರಿಕೆ.
ಕಟೀಲು ಮೇಳದಲ್ಲಿನ ಇವರ ವೇಷಗಾರಿಕೆ ಅದರಲ್ಲೂ ಬಲಿಪ್ಪರು  ಇರಾ ಭಾಗವತರು (ಕುಂಡಚ್ಚ) ಮೊದಲಾದವರೊಂದಿಗಿನ ಇವರ ವೇಷಗಳು, ಅದು ಹಿರಣ್ಯಾಕ್ಷ, ರಕ್ತಬೀಜನ ಅಬ್ಭರ, ಕಾರ್ತವೀರ್ಯನ ಬೇಟೆಯಾಡುವ ದೃಶ್ಯ ಇಂದಿಗೂ ಯಕ್ಷರಸದ ಸ್ವಾದದ ನೆನಪನ್ನು ಉಳಿಸಿಬಿಟ್ಟಿದೆ. ಇವರ ಕುಣಿತ ಬಹಳ ಸರಳವಾಗಿರುತ್ತದೆ, ದೇಹ ದಂಡನೆಯಿಲ್ಲದ ಕುಣಿತ. ಪ್ರತಿ ಹೆಜ್ಜೆಯೂ ತಾಳಬದ್ದ. ರಂಗ ಸ್ಥಳದಲ್ಲಿನ ನಿಲುವಿನಲ್ಲೂ ಲೆಕ್ಕಾಚಾರ. ರಂಗವನ್ನು ತನ್ನ ಕುಣಿತಕ್ಕೆ ಹಾವ ಭಾವಕ್ಕೆ ಬಳಸಿಕೊಳ್ಳುವಲ್ಲಿ ರಂಗ ತುಂಬಿಕೊಳ್ಳುವಾಗ ವೇಷಗಾರಿಕೆ ಮಾತ್ರವಲ್ಲ ಯಕ್ಷಗಾನ ಸೋಲುವುದೇ  ಇಲ್ಲ. ಹಿರಣ್ಯಾಕ್ಷ ಸತ್ತು ಬಿದ್ದರೂ ಪ್ರೇಕ್ಷಕ ಮನದಲ್ಲಿ ಪಾತ್ರ ಜೀವಂತವಾಗಿ ಮತ್ತೂ ವಿಜ್ರಂಭಿಸುತ್ತದೆ. ಇರುಳಿಡೀ ಆಟ ನೋಡಿ ಮರುದಿನ ನಿದ್ದೆಯ ಗುಂಗಿನಲ್ಲಿ ತಿರುಗಾಡುವಾಗ ತಲೆಯಲ್ಲಿ ರಾಜವೇಷದ ಕಿರೀಟ ಹೊತ್ತಂತೆ ತಲೆ ಅಲುಗಾಡುತ್ತಾ ಸಂಪಾಜೆ ರೈಗಳ ವೇಷ ಭಂಗಿಯ ಕನಸನ್ನು ಕಾಣುತ್ತದೆ. ಇದು ರೈಗಳ ವೇಷಗಳ ಸಮ್ಮೋಹನ ಎಂದು ಹೇಳಬಹುದು.

ಶ್ರೀ ಸಂಪಾಜೆ ಶೀನಪ್ಪರೈಗಳಿಗೆ ಈ ಬಾರಿಯ ರಾಜ್ಯ ಪ್ರಶಸ್ತಿ ಬಂದಿದೆ ಎಂದರೆ ಅದು ಕೇಳುವಾಗಲೂ ಹರುಷ, ಬರೆಯುವಾಗಲೂ ಹರುಷ,,,ಆ ಸ್ಮೃತಿಗಳೇ ಒಂದು ಮಂದಹಾಸದ ಮಧುರತೆಯಿಂದ ತುಂಬಿರುತ್ತದೆ. ಇದು ಕೇವಲ ರೈಗಳಿಗೆ ಸಂದ ಪ್ರಶಸ್ತಿಯಲ್ಲ. ಯಕ್ಷಗಾನದ ಅದರಲ್ಲೂ ತೆಂಕುತಿಟ್ಟಿನ ರಾಜವೇಷಕ್ಕೆ ದೊರಗಿದ ರಾಜ ಸನ್ಮಾನ. ಈ ಘಳಿಗೆ ಯಕ್ಷಗಾನ ಅಭಿಮಾನಿಗಳಿಗೆ ಮಧುರ ನೆನಪಾಗಿ ಉಳಿಯಲಿ ಕಲಾವಿದರು ಸಲ್ಲಿಸಿದ ಸೇವೆಗೆ ಮತ್ತಷ್ಟು ಮೆರುಗನ್ನು ಒದಗಿಸಲಿ ಎಂದು ಹಾರೈಸುತ್ತಾ   ಹೃದಯ ತುಂಬಿ ಹೇಳುವಂತಾಗುತ್ತದೆ.....ಯಕ್ಷಗಾನಂ ಗೆಲ್ಗೆ. 

Thursday, October 16, 2014

ಒಂದು ಪರಂಪರೆಯ ಒಂದು ಮೆಟ್ಟಿಲು


ಚಿನುಮಯನೆ ಲಾಲಿಪುದು  ಪುಣ್ಯವಂತಗೆ ಘೋರಾರಣ್ಯ ಪಟ್ಟಣಗಳ್ ಮಣ್ಣೇ ಹೊನ್ನಹುದು  ಪುಣ್ಯಹೀನಗೆ ರಾಜ್ಯ ಕಾನನವೆ ಪೇಳ್ ಮತ್ತೆ ಚಿನ್ನಗಳ್ ಮೃತ್ತಿಕೆಗಳಂತೆ ತೋರುವವು

            ಇದು ಭೀಷ್ಮಾರ್ಜುನ ಪ್ರಸಂಗದ ಪದ. ಅದನ್ನು ಬೆಂಗಳೂರಿನ ಕೋಣನಕುಂಟೆಯ, ಶ್ರೀರಾಮ ಕಲಾಸಂಘದ ತಾಳಮದ್ದಲೆಯಲ್ಲಿ ಪ್ರಸಾದ ಬಲಿಪ್ಪರು ಹಾಡಿದ ರೀತಿ, ನಾನು ಗಮನಿಸುತ್ತಿದ್ದೆ ವೃದ್ದೆಯೊಬ್ಬರು  ಆ ಪದಕ್ಕೆ ತಲ್ಲೀನವಾಗಿ ತಾಳ ಬಡಿಯುತ್ತಿದ್ದರು.  ಯಕ್ಷಗಾನದ ಪರಂಪರೆಯ ಗಟ್ಟಿತನದಿಂದ ಕೂಡಿದ ಆ ಲಯಬದ್ದ ಶೈಲಿಗೆ ಪ್ರೇಕ್ಷಕರು  ಮಾರು ಹೋದ ಸಂದರ್ಭವದು. ಒಂದು ಪದ ಹೇಳಿ ಮುಗಿದ ನಂತರ ಇನ್ನೊಂದರ ಆರಂಭ ಯಾವಾಗ ಎಂದು ಕಾದು ಕುಳಿತುಕೊಳ್ಳುವ ಪ್ರಮೇಯ. ಕೊನೆಗೊಮ್ಮೆ ಮಂಗಳಗಾನ ಕೇಳಿದಾಗ ಸಂತೃಪ್ತಿಯ ಮುಖಭಾವ.  ಪ್ರಸಾದರ ಹಾಡುಗಾರಿಕೆಯೇ ಹಾಗೆ, ತಾಳ ಶುದ್ದಿ ಲಯ ಶುದ್ದಿ ಜತೆಗೆ ಚಿತ್ತ ಶುದ್ದಿ....ಯಕ್ಷಗಾನವನ್ನು ಮಾತ್ರವೇ ಚಿಂತಿಸಿ ಅದರಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಶುದ್ದ ಮನಸ್ಸಿನಿಂದ ಹಾಡುವುದು, ಇದು ತನ್ಮಯತೆಯನ್ನು ತಂದುಕೊಡುತ್ತದೆ. 
ಛಾಯಾ ಚಿತ್ರ ಕೃಪೆ ಶ್ರೀ ರಾಮ ನರೆಶ್ ಮಂಚಿ

ಒಂದು ಪರಂಪರೆಯ ಅನುಸರಣೆಯಾಗಲೀ  ಅದರನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವುದಾಗಲೀ ಅದು ಕೆಲವೊಮ್ಮೆ ತಪಸ್ಸಿಗೆ ಸಮಾನಾಗಿ ಕಂಡುಬರುತ್ತದೆ. ಒಂದು ಸಲ ಈ ಸಾಂಪ್ರಾದಾಯಿತ್ವದ  ಪದಗ್ರಹಣವಾಯಿತೋ ಹಂತ ಹಂತವೂ ಸತ್ವ ಪರೀಕ್ಷೆ ನಡೆದು ಹೋಗುತ್ತದೆ. ಅದು ಶಾರೀರಿಕವಾಗಿ ಮಾನಸಿಕವಾಗಿ ಬದುಕನ್ನು ಒರೆಗೆ ಹಚ್ಚಿಸಿಬಿಡುತ್ತದೆ. ಇಂತಹ ಒಂದು ಪರಂಪರೆಯ ಮೆಟ್ಟಿಲಾಗಿ ನಿಲ್ಲುವ ಪ್ರಯತ್ನ ಯಕ್ಷಗಾನದಲ್ಲಿ ಸದ್ಯದ ಮಟ್ಟಿಗೆ ಶ್ರೀ ಪ್ರಸಾದ ಬಲಿಪ್ಪರಲ್ಲಿ ಸಾಕಷ್ಟು ಕಂಡುಬರುತ್ತದೆ. ಯಕ್ಷಗಾನದಲ್ಲಿ ಬಲಿಪ ಎಂಬುದು ಒಂದು ಸುದೃಢವಾದ ಪರಂಪರೆಗೆ ಸಾಕ್ಷಿಯೊದಗಿಸುವ ಹೆಸರು. ಆ ಹೆಸರಿನ ನೆರಳಲ್ಲೇ ಬೆಳೆದು ಬಂದು ಅದೇ ಆಯಾಮದಲ್ಲಿ ತನ್ನ ನೆಲೆಯನ್ನು ಕಂಡುಕೊಂಡದ್ದು ಮಾತ್ರವಲ್ಲ ಆ ಆಯಾಮಕ್ಕೆ ತನ್ನದೇ ರೀತಿಯಲ್ಲಿ ದೇಣಿಗೆಯನ್ನು ಸಲ್ಲಿಸುವಲ್ಲಿ ಕಾರ್ಯಮಗ್ನರಾಗಿರುತ್ತಾರೆ. ತಂದೆ ಬಲಿಪ ನಾರಾಯಣ ಭಾಗವತರು ಯಕ್ಷಗಾನದ ಪರಂಪರೆಯ ಹಾದಿಯಲ್ಲಿ ಮುನ್ನಡೆಯುತ್ತ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಹೋದರೆ ಅದೇ ತಂದೆಯವರ ಶಲ್ಯದ ತುದಿಯನ್ನು ಹಿಡಿದು ಅದೇ ನೆರಳಲ್ಲಿ ಅದೇ ಮೆಟ್ಟಿಲನ್ನು ಒಂದೊಂದಾಗಿ ಏರುತ್ತಾ ಅನುಸರಿಸುವಾಗ ಶ್ರೀ ಪ್ರಸಾದರು ಏರಿದ ಎತ್ತರ ಅರಿವಿಗೆ ಬರುವುದೇ ಇಲ್ಲ. ಅವರ ನಿಷ್ಕಲ್ಮಷ ನಗುವಿನ ಹಿಂದೆ ಅವರು ಪಡೆದ ಅನುಭವ ಮರೆಯಾದ ಹಾಗೆ ಭಾಸವಾಗುತ್ತದೆ.

ಯಕ್ಷಗಾನದ ಪರಂಪರೆಯ ವಿಚಾರ ಬಂದಾಗ ಆಲ್ಲಿ ಮೊದಲು ಗಮನ ಹರಿಯುವುದು ಬಲಿಪ ಶೈಲಿಯತ್ತ. ಯಕ್ಷಗಾನದ ಪರಂಪರೆಗೆ ಬಲಿಪ ನಾಮ  ಅನ್ವರ್ಥವಾದಹಾಗೆ ಬೇರೆ  ಯಾವುದೂ ಬೆಸೆದುಕೊಂಡಿಲ್ಲ. ಅಷ್ಟು ಗಟ್ಟಿತನದಿಂದ ಯಕ್ಷಗಾನವನ್ನು ರೂಪಿಸಿದ ಶೈಲಿಯದು. ಯಕ್ಷಗಾನದಲ್ಲಿ ಹಲವಾರು ಅವಿಷ್ಕಾರಗಳು ಆಟದ ವೇಷಗಳಂತೆ ರಂಗವೇರಿ ಅದೇ ರೀತಿ ಹೇಳ ಹೆಸರಿಲ್ಲದೆ ಮರೆಯಾಗಿ ಹೋಗಿದೆ. ಆದರೆ ಈ ಪರಂಪರೆಯ ಶ್ರೀಮಂತ ಶೈಲಿ ಇಂದಿಗೂ ಬದಲಾಗದೇ ಹಾಗೆ ಉಳಿದುಕೊಂಡಿದ್ದರೆ ಅದಕ್ಕೆ ಬಲಿಪ ಹೆಸರಿನ ಆಧಾರ ಪ್ರಧಾನವಾಗಿಬಿಡುತ್ತದೆ.


ಯಕ್ಷಗಾನದಲ್ಲಿ ಅವಿಷ್ಕಾರಗಳು ಆದ ಹಾಗೆ ಭಾಗವತಿಕೆಯಲ್ಲೂ ಹಲವಾರು ಬದಲಾವಣೆಗಳು ಆವಿಷ್ಕಾರಗಳೂ ಆಗಿವೆ. ಪ್ರೇಕ್ಷಕರ ನಾಡಿ ಮಿಡಿತ ಹುಡುಕುತ್ತ ಮೂಲ ಯಕ್ಷಗಾನದ ನಾಡಿಮಿಡಿತವನ್ನೇ ಮರೆತುಬಿಟ್ಟಿದ್ದಾರೆ ಹಲವರು. ಶಾಸ್ತ್ರೀಯ ಸಂಗೀತ ಮುಂದುವರೆದಂತೆ, ಸುಗಮ ಸಂಗೀತ, ಜಾನಪದ ಮತ್ತೂ ಮತ್ತೂ ತನ್ನ ತೆವಲು ತೀರದಾದಾಗ ಸಿನಿಮಾ ಸಂಗೀತವನ್ನೂ ಬಳಕೆಗೆ ತಂದ ಹೆಗ್ಗಳಿಕೆ ಇಲ್ಲಿಯದ್ದು.  ಒಂದಷ್ಟು ಸೀಮಿತ ಅವಧಿಗಷ್ಟೇ ರಂಜಿಸುವ ಇವುಗಳು ಎಂದೂ ಸ್ಥಿರ ಅಸ್ತಿತ್ವವನ್ನು ಉಳಿಸಿಕೊಂಡಿಲ್ಲ ಎಂಬುದು ವಾಸ್ತವದ ಸಂಗತಿ. ಈಗಿನ ಹಿರಿಯ ಬಲಿಪ್ಪರು ಅಂದು ಹಾಡುತ್ತಿರುವಾಗಲೂ ಅವರ ಶೈಲಿ ಎಲ್ಲಿ ನವೀಕರಣದ ಧಾಳಿಗೆ ಅಲುಗುತ್ತಿದೆಯೋ ಎಂದು ಅನ್ನಿಸಿತ್ತು. ಆದರೆ ಅದು ಅತ್ಯಂತ ಮುತುವರ್ಜಿಯಿಂದ ಅನುಸರಿಸಲ್ಪಟ್ಟು ಇಂದಿಗೂ ಅದೇ ತರನಾಗಿ ಉಳಿದುಕೊಂಡಿದೆ ಮಾತ್ರವಲ್ಲ ಅದೇ ಜನಪ್ರಿಯತೆಯನ್ನು ಮನ್ನಣೆಯನ್ನು ಪಡೆದುಕೊಂಡಿದೆ. ರಸ್ತೆಯಲ್ಲಿ ಸಂಚರಿಸುವಾಗ ಜೋರು ಮಳೆಬಂದರೆ ಎಲ್ಲೊ ಒಂದು ಸಣ್ಣ ಮರೆಯಲ್ಲಿ ಆಶ್ರಯ ಪಡೆಯುತ್ತೇವೆ. ಹಾಗೆಂದು ಅದು ಶಾಶ್ವತ ಆಸರೆ ಏನೂ ಅಲ್ಲ. ಆ ಅಸರೆಯಲ್ಲಿ ಮನೆಯಲ್ಲಿ ಸಿಗುವ ಸುರಕ್ಷಿತತೆಯನ್ನು ನಾವು ಅನುಭವಿಸುವುದಿಲ್ಲ. ಮಳೆಯ ಹೊಡೆತಕ್ಕೆ ಯಾವಾಗ ನಮ್ಮ ಮನೆಗೆ ಅದು ಗುಡಿಸಲಾದರೂ ಸರಿ ಹೊಕ್ಕು ಕುಳಿತೆವೋ ಎಂದು ಮನಸ್ಸು ಬಯಸುತ್ತದೆ.  ಅದರಂತೇ ವಿಚಿತ್ರ ಸಂಗೀತ ಮಿಶ್ರಣದ ನವ್ಯ ಭಾಗವತಿಕೆ. ಕ್ಷಣಿಕ ರಂಜನೆಯನ್ನು ರೋಮಾಂಚನವನ್ನು ತರಬಲ್ಲುದು.  ಆದರೆ ಯಕ್ಷಗಾನದ ನಿಜ ಸ್ವಾದವನ್ನು ಅನುಭವಿಸಬೇಕಾದರೆ ನಮ್ಮ ಸ್ವಂತ ಗುಡಿಸಲಿನ ನೆನಪಾದಂತೆ ಪರಂಪರೆಯನ್ನೇ ಆಶ್ರಯಿಸಬೇಕು. ಅದು ಅದರ ಗಟ್ಟಿತನ. ಹಲವರು ಬಂದರು ಹೋದರು, ಎನೇನೋ ಪ್ರಯೋಗಗಳು ನಡೆದುವು. ಆದರೆ ಈ ಶೈಲಿ,  ಬದಲಾವಣೆಯ ಧಾಳಿಗೆ ಒಳಗಾಗಲೇ ಇಲ್ಲ. ಇಂದಿಗೂ ನವಿರುತನವನ್ನೂ ಸೆಳೆತವನ್ನೂ ಹಾಗೆ ಉಳಿಸಿಕೊಂಡಿದೆ. ನವ್ಯ ಶೈಲಿಯ ಹಾಡುಗಾರಿಕೆ ಒಂದೆರಡು ದಿನ ರಂಜನೆಯನ್ನು ಕೊಡಬಹುದು. ಆಹಾ ಎಂದು ತಲೆದೂಗುವಂತೆ ಅದಕ್ಕೆ ಮಾರು ಹೋಗಲೂ ಬಹುದು. ರಾಗ ವೈವಿಧ್ಯದ ಆಲಾಪನೆ ದೀರ್ಘವಾದಾಗ ತಲೆದೂಗಿ ಚಪ್ಪಾಳೆ ಹೊಡೆಯಬಹುದು. ಅದು ಕೇವಲ ಸೀಮಿತ ಅವಧಿಗೆ ಮಾತ್ರ.  ಆದರೆ ಈ ಪರಂಪರೆಯ ಶೈಲಿ ಅದು ಸವಕಲಾಗದ ಚಿನ್ನದ ನಾಣ್ಯ. ಇಂದಿಗೂ ಅದೇ ನಾವಿನ್ಯತೆ. ಆದೇ ಯಕ್ಷಗಾನದ ಸತ್ವವನ್ನೇ ಉಣಿಸುತ್ತದೆ. 


ಈ ಪರಂಪರೆಯ  ವಿಶಾಲವಾದ ಮರದ ನೆರಳಿನಲ್ಲಿ ಇಂದಿಗೂ ಪ್ರಸಾದರು ಚಿಕ್ಕ ಗಿಡವಾಗಿ ತನ್ನನ್ನು ಗುರುತಿಸಿಕೊಂಡವರು,  ಮಾತ್ರವಲ್ಲ ಗುರುತಿಸಲ್ಪಟ್ಟವರೂ ಹೌದು. ಆದರೂ ಇಂದು ಯಕ್ಷಗಾನ ಪರಂಪರೆಯ ಪ್ರಶ್ನೆ ಬಂದಾಗ ತಂದೆಯಿಂದ ಕಲಿತ ಪಾಠವನ್ನು ಹಾಗೇ ಸಲೀಸಾಗಿ ಒಪ್ಪಿಸಿಬಿಡುತ್ತಾರೆ. ಪರಂಪರೆಯ ಬೀಜ ಇವರಲ್ಲಿ ಅದು ಹೇಗೆ ಮೊಳೆತು  ವೃಕ್ಷವಾಗಿಬಿಟ್ಟಿದೆ ಎಂದು ಆಶ್ಚರ್ಯವಾಗಿಬಿಡುತ್ತದೆ. ಹಾಗಿದ್ದರೂ ಏನೂ ತಿಳಿಯದ ಭಾವ ತುಂಬಿದ ಅದೇ ಆ ನಿಷ್ಕಲ್ಮಷ ನಗು ಪ್ರಾಮಾಣಿಕ ಮನಸ್ಸಿನ ಕನ್ನಡಿಯಾಗುತ್ತದೆ.



ಯಕ್ಷಗಾನದ ಪ್ರತಿಷ್ಠಿತ ಕಟೀಲಿನ ಎರಡನೇ ಮೇಳದ ಪ್ರಧಾನ ಭಾಗವತರು. ಇದು ತಂದೆಯಿಂದಲೇ ಪಡೆದು ಮುಂದುವರಿಸಿದ ಉಮೇದುವಾರಿಕೆ. ಅದಿನ್ನೂ ಯಶಸ್ವಿಯಾಗಿ ನಿಭಾವಣೆಯಾಗುತ್ತಿದೆ. ನೋಡುವುದಿದ್ದರೆ ಕಟೀಲಿನ ಎರಡನೇ ಮೇಳದ ಆಟವನ್ನು ಎರಡನೇ ಜಾವದಲ್ಲಿ ನೋಡಿ, ನೋಡುವುದಲ್ಲವಾದರೆ ದೂರದಲ್ಲಿ ಕುಳಿತು ಕೇಳಿದರೂ ಸಾಕು...ಇದು ಉತ್ಪ್ರೇಕ್ಷೆಯಲ್ಲ. ಆ  ನಾಲ್ಕನೇ ಜಾವದ  ಪ್ರಸಾದ ಬಲಿಪರ ಭಾಗವತಿಕೆಯನ್ನು ಹಲವರು ನನ್ನಲ್ಲಿ ಹೇಳಿದ್ದಾರೆ. ಇದು ಅವರ ಪದದ ವಿಶಿಷ್ಟತೆ. ಯಕ್ಷಗಾನದ ಬಗೆಗಿನ ಶ್ರದ್ದೆ ಪರಿಶ್ರಮ ಅದೆಲ್ಲವೂ ಅಲ್ಲಿ ವ್ಯಕ್ತವಾಗುತ್ತದೆ. ಅದರಲ್ಲೂ ಅವರು ತಂದೆಯನ್ನು ಸಮರ್ಥವಾಗಿ ಅನುಕರಿಸಿಬಿಡುತ್ತಾರೆ.

ಒಂದು ತಾಳ ಮದ್ದಲೆಗೆ ಕರೆದಾಗ ಇವರು ಮದ್ದಲೆಗೆ ಯಾರು ಎಂದು ಕೇಳುವ ಗೋಜಿಗೆ ಹೋಗುವುದಿಲ್ಲ. ಅಥವಾ ಹೋದ ಮೇಲೆ ಇವರೇ ಆಗಬೇಕೆಂದು ಬೇಡಿಕೆಯನ್ನೂ ಇಡುವುದಿಲ್ಲ. ಕೇವಲ ಪದ ಹೇಳುವುದಷ್ಟೇ ಕಾಯಕವೆಂಬಂತೆ ಮದ್ದಲೆ ಯಾರಾದರೇನು ಇವರ ಹಾಡುಗಾರಿಕೆ ಅದು ಸ್ಥಿರವಾದ ನಿರ್ವಹಣೆಯಲ್ಲಿ ರಂಜಿಸುತ್ತದೆ. ಇವರ ಭಾಗವತಿಕೆಯಲ್ಲಿರುವ  ಅರ್ಪಣಾ ಭಾವ ಅದು ಮದ್ದಲೆಯನ್ನು ಹೊಂದಿಕೊಂಡಿರುವುದೇ ಇಲ್ಲ.
ಒಬ್ಬ ಕಲಾವಿದನಲ್ಲಿ ಇರಬೇಕಾದ ಅತೀ ಮುಖ್ಯ ಗುಣವೆಂದರೆ ಅದು ಅಹಮಿಕೆಯಿಂದ ದೂರವಾಗಿ ಇರುವುದು. ಅಹಂಕಾರ ಎಲ್ಲಿ ಮನೆ ಮಾಡಿರುತ್ತದೆಯೋ ಅಲ್ಲಿ ಕಲೆ ನೆಮ್ಮದಿಯಿಂದ ಉಸಿರಾಡಲು ಸಾಧ್ಯವೇ ಇಲ್ಲ. ವಿಪರ್ಯಾಸ ಎಂದರೆ ಇಂದು ಕಲಾವಿದರಲ್ಲಿ ದುರಹಂಕಾರೀ ಪ್ರವೃತ್ತಿ ಸಾಮಾನ್ಯವೆಂಬಂತೆ ಕಂಡುಬರುತ್ತಿದೆ. ಹೀಗಿರುವಾಗ  ಶ್ರೀಪ್ರಸಾದರು ಅದರಿಂದ ಒಂದಷ್ಟು ದೂರ ಏಕಾಂಗಿ ಎಂಬಂತೆ ನಿಂತಿರುತ್ತಾರೆ. ಅವಕಾಶಕ್ಕೆ ಯೋಗ್ಯತೆ ಮೀರಿ ಹೋರಾಡುವಾಗ ಬಿಟ್ಟುಳಿದದ್ದು ನನಗೆ ಸಾಕು ಎಂಬ ವೈಶಾಲ್ಯತೆಯಿಂದ ನಿರ್ವಿಕಲ್ಪ ಚಿತ್ತರಾಗಿಬಿಡುತ್ತಾರೆ. ಆಗ ಇವರ ಅಪ್ಪನ ಮಾತು ನೆನಪಿಗೆ ಬರುತ್ತದೆ. “ದೇವಿ ಯಾರಿಂದ ಹಾಡಿಸಬೇಕೋ ಅವರಿಂದ ಹಾಡಿಸುತ್ತಾಳೆ’ ಇದು ನಿಸ್ವಾರ್ಥ ವಚನ.



ಪ್ರಸಾದರನ್ನು ಕರೆದು ಹಾಡಿಸಿದಲ್ಲಿ ಅದು ಕೇವಲ ಒಂದೆರಡು ಯಕ್ಷಗಾನ ಪದಕ್ಕಷ್ಟೇ ಸೀಮಿತವಾಗಿರುರುವುದಿಲ್ಲ. ಬದಲಾಗಿ, ಇಂದಿನ ಯಕ್ಷಗಾನ ಲೋಕದಲ್ಲಿ ಅಪರೂಪವಾದ ಒಂದು ಪ್ರಾಮಾಣಿಕ ಸದ್ಗುಣ ಸನ್ನಡತೆಯನ್ನು ಗೌರವಿಸಿದ ಹಾಗೆ ಆಗುತ್ತದೆ. ಅಹಂಕಾರವಿಲ್ಲ ನಿರ್ವ್ಯಾಜ್ಯ ಅಂತಃ ಕರಣಕ್ಕೆ ಸಲ್ಲುವ ಮನ್ನಣೆಯಾಗುತ್ತದೆ. ಕಲೆಯ ಮಟ್ಟಿಗೆ ಅದು ಪರೋಕ್ಷವಾಗಿ ಒಂದು ಪರಂಪರೆಯಲ್ಲಿ ಬೆಳೆದು ಬಂದ ಪರಿಶುದ್ದ ಯಕ್ಷಗಾನವನ್ನು ಅಂಗೀಕರಿಸಿದ ಹಾಗೆ ಹಾಗುತ್ತದೆ. ಇಲ್ಲಿ ಸರ್ವೇ ಸಾಮಾನ್ಯವಾಗಿ ಎಂಬಂತೆ ಕಂಡು ಬರುವ ಕ್ಷುದ್ರ ರಾಜಕೀಯ ವೈಷಮ್ಯಕ್ಕೆ ಹೊರತಾದ ಒಂದು ಯಕ್ಷಗಾನ ಪ್ರಪಂಚವನ್ನು ಗೌರವಿಸಿದ ಹಾಗೆ ಆಗುತ್ತದೆ. ಉತ್ಪ್ರೇಕ್ಷೆ ಎಂದು ಎನಿಸಬಹುದಾದರೂ, ಪ್ರಸಾದರಂತಹ ಕಲಾವಿದರೇ  ಇದ್ದಲ್ಲಿ ಕಲ್ಪಿಸೋಣ ಅದೊಂದು ದ್ವೇಷ ವೈಷಮ್ಯ ಮಾತ್ಸರ್ಯ ರಹಿತ ವಾದ ರಾಜಕಿಯವೇ ಇಲ್ಲದ ಒಂದು ಸುಂದರ ಯಕ್ಷಗಾನ ಪ್ರಪಂಚವಾಗಬಹುದಲ್ಲವೇ?  ರಾಜಕೀಯ ವಿವಾದಗಳಿಂದ ಒಂದಷ್ಟು ದೂರ ಅಂತರದಲ್ಲಿ ನಿಲ್ಲುವ ಕಲಾವಿದರೆಂದರೆ ಅದು ಪ್ರಸಾದರು.  

 ಇಂದು ಬಹುತೇಕ ಕಲಾವಿದರಲ್ಲಿ ಕಲಾವಿದ ಎಂಬ ಹಣೆಪಟ್ಟಿ ಕಟ್ಟುವ ಮೊದಲೇ ದುರ್ವ್ಯಸನದ ಪಟ್ಟಿ ಅಲಂಕರಿಸಲ್ಪಟ್ಟಿರುತ್ತದೆ. ಒಂದಲ್ಲ ಒಂದು ವ್ಯಸನ ಅಂಟಿಕೊಂಡು ಕಲೆಯೊಂದಿಗೆ ಅದೂ ಸ್ಪರ್ಧೆಗೆ ಇಳಿದು ಬಿಟ್ಟು ಎರಡೂ ಒಂದಕ್ಕೊಂದು ಅನಿವಾರ್ಯವೆಂಬ ಹಂತ ಮುಟ್ಟಿರುತ್ತದೆ. ಯಾವುದೇ ವ್ಯಸನವನ್ನು ಅಂಟಿಸಿಕೊಳ್ಳದ ಪ್ರಸಾದ ಬಲಿಪ್ಪರು ಇಲ್ಲಿ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಾರೆ. ಬಹಳ ಸಾಧು ಸ್ವಭಾವದ ನಿಷ್ಕಲ್ಮಷ ಸ್ವಭಾವದ ತಂದೆಯ ಹಾದಿಯಲ್ಲೇ ಹೆಜ್ಜೆಯೂರುವ ಮೃದು ಹೃದಯಿಗಳು. ನನ್ನ ಮಿತ್ರರೊಬ್ಬರು ಹೇಳುವುದಿದೆ....  “ಅದು ನಿಜವಾಗಿಯೂ ಎಲ್ಲಾ ಅರ್ಥದಲ್ಲಿಯೂ ಬಲಿಪ್ಪರ ಪ್ರಸಾದವೇ...” ಇದು ಅಲ್ಲ ಎಂದು ಹೇಳುವುದಕ್ಕೆ ಪ್ರಾಮಾಣಿಕವಾದ ಮನಸ್ಸು ಒಪ್ಪುವುದೇ ಇಲ್ಲ ಅಲ್ಲವೇ? 

Thursday, October 2, 2014

ಭೀಷ್ಮ ಪ್ರತಿಜ್ಞೆ



ಮಹಾಭಾರತದ ಅತ್ಯಂತ ಮಹಾ ಪಾತ್ರಗಳಲ್ಲಿ ಒಂದು ಭೀಷ್ಮನ ಪಾತ್ರ. ಈ ಮಹಾ ಪರಾಕ್ರಮಿ ಎಲ್ಲಿಯೂ  ಜೈತ್ರ ಯಾತ್ರೆ ಹೋದ ಉಲ್ಲೇಖವಿಲ್ಲ. ಎಲ್ಲಿಯೂ ಯುದ್ದ ಮಾಡಿದ ಸಂಭವವೂ ವ್ಯಕ್ತವಾಗುವುದಿಲ್ಲ.  ಆದರೂ ಭೀಷ್ಮ ಪ್ರವೇಶಮಾಡಿ ತನ್ನ ಪದಾಘಾತದೊಂದಿಗೆ  ಧನುಷ್ಠೇಂಕಾರ ಮಾಡಿದಾಗ ಎಲ್ಲೇ ಆಗಲಿ ಯುದ್ದ ಏಕಪಕ್ಷೀಯವಾಗಿ ಅಂತ್ಯಕಾಣುತ್ತಿತ್ತು . ತನ್ನ ಪ್ರವೇಶ ಮಾತ್ರದಿಂದಲೇ ಯುದ್ದ ಮಾಡದೇ ಯುದ್ದವನ್ನು ಜಯಿಸುವ ಏಕಮೇವ ಪರಾಕ್ರಮಿ ಭೀಷ್ಮ. ಜಗತ್ತಿನ ಕಣ್ಣಿಗೆ ಭೀಷ್ಮ ಒಂದು ನಿಗೂಢ ವಿಸ್ಮಯ. ಭೀಷ್ಮನಲ್ಲಿ ಏನುಂಟು ಅದು ಯಾರಿಗೂ ತಿಳಿದಿಲ್ಲ. ವಸಿಷ್ಠ ರಿಂದ ಬ್ರಹ್ಮ ಸೂತ್ರ,  ಶುಕ್ರನಿಂದ ದಂಡನೀತಿ,  ಬ್ರಹಸ್ಪತಿಯಿಂದ ರಾಜನೀತಿ ಅದರಂತೇ ಪರಶುರಾಮರಿಂದ ಧನುರ್ವೇದ,   ಹೀಗೆ ಜ್ಞಾನ ನಿಧಿಯಾಗಿ ಜಗತ್ತಿಗೆ ತೆರೆದುಕೊಳ್ಳುವ ಭೀಷ್ಮವ್ಯಕ್ತಿತ್ವವನ್ನು ಅಂದಾಜಿಸುವಲ್ಲಿ ಜಗತ್ತೂ  ಸೋಲುತ್ತದೆ.  ಭೀಷ್ಮನ ನಿಗೂಢತೆಯೇ ಅವನನ್ನು ಅಭೇದ್ಯವನ್ನಾಗಿಸುತ್ತದೆ. ಯಾವ ಯೋಧನೂ ಅತನನ್ನು ಪರೀಕ್ಷಿಸುವ ಸಾಹಸವನ್ನು ಮಾಡಲಿಲ್ಲ.   ಅಂಬಾ ಪ್ರಕರಣದ ಭೀಷ್ಮ ವಿಜಯ ಪ್ರಸಂಗದಲ್ಲಿ  ಸ್ವತಃ ಗುರುವಿನೊಂದಿಗೆ ಹೋರಾಡುತ್ತಾನೆ. ಗುರು,  ಮರಣವನ್ನೇ ಅರಿಯದ ಚಿರಂಜೀವಿಯಾದರೆ, ಶಿಷ್ಯ,  ಇಚ್ಛಾ ಮರಣಿ. ಸಮ ಬಲದ ಸಮರವಾದರೂ ಅಲ್ಲಿ ಭೀಷ್ಮ ವಿಜಯವೇ ನಿರ್ಣಯವಾಗಿಬಿಡುತ್ತದೆ. ಗುರು ಸಮ್ಮುಖದಲ್ಲಿ  ಭೀಷ್ಮನ ವ್ಯಕ್ತಿತ್ವವನ್ನು  ಒರೆಗೆ ಹಚ್ಚುವಂತಹ ಪ್ರಸಂಗವಿದು. ಧರ್ಮ ಸೂಕ್ಷ್ಮವನ್ನು ಅರಿತು ಪ್ರತಿಯೊಂದು ಹೆಜ್ಜೆಯನ್ನಿಡುವ ಭೀಷ್ಮ ,  ತಾತ್ವಿಕವಾಗಿ ಅಂಬೆಯ ವ್ಯಕ್ತಿತ್ವದ ಎದುರು ಗೆದ್ದರೂ ಅಂತರಂಗದಲ್ಲಿ ಪರಿತಪಿಸುತ್ತಾನೆ. ತನ್ನೆದುರೇ ಸುಟ್ಟುಹೋದ ಅಂಬೆಯ ಬದುಕನ್ನು ಕಂಡು ತನ್ನ ವಿಜಯದಲ್ಲೂ ಹತಾಶನಾಗಿ ಮರುಗುತ್ತಾನೆ ಭೀಷ್ಮ.

ರಾಗ ಕೇತಾರಗೌಳ ಅಷ್ಟತಾಳ
ಸುರನದೀಸುತ ಕೇಳು ವರಿಸದಿರಲು ಮಹ | ಧುರಧೀರನನು ತರುವೆ ||
ಕೊರಳಕೊಯಿಸುವೆನೆನ್ನ ಸ್ವೀಕರಿಸೆನ್ನಲು | ಕೆರಳುತ್ತಲಿಂತೆಂದನು ||
ತರುಣಿ ಭಸ್ಮೀಭೂತವಾಗಲು ಭೀಷ್ಮನು | ಕರಗಿ ತನ್ನಯ ಮನದಿ ||
ಅರರೆ ಸ್ತ್ರೀ ಹತ್ಯವಾಯಿತು ಮುಂದಕೆನ್ನಯ | ಕೊರಳ ಕೊಯಿಸುವಳೆನ್ನುತ

 ಯಾವ ಗಂಡಿನಿಂದಲೂ ಸೋಲಿಸಲಾಗದ ಭೀಷ್ಮ, ಯಾವ ಹೆಣ್ಣಿಗೂ ಸೋಲಲಾರದ ಭೀಷ್ಮ,  ಅವೆರಡೂ ಅಲ್ಲದೇ ಜನ್ಮತಾಳಿ ಪ್ರತೀಕಾರ ತೀರಿಸುತ್ತೇನೆ ಎಂದು ಶಪಥಗೈಯುವ ಅಂಬೆ ಪರಿಹಾರ್ಯವಲ್ಲದ ಪ್ರಶ್ನೆಯಾಗಿಯೇ ಭೀಷ್ಮನೆದುರು ಸುಳಿಯುವಾಗ,  ಹೆಣ್ಣು ಗಂಡು ಅಲ್ಲದೇ ಇರುವಲ್ಲಿ ಶಸ್ತ್ರವನ್ನು ಎತ್ತಲಾರೆ. ಸಶಸ್ತ್ರಕನಾಗುವುದಿಲ್ಲ ಎಂದು ಭೀಷ್ಮನೂ ಸಂಕಲ್ಪ ಮಾಡಿಕೊಳ್ಳುತ್ತಾನೆ.

ಭಾಮಿನಿ
ಸುರನದೀಸುತ ಚಿಂತಿಸುತ್ತಿರೆ |
ಭರದಿ ನಾರದ ಬಂದು ಪೇಳಿದ |
ತರುಣಿ ಮರು ಜನ್ಮದಲಿ ದ್ರುಪದನ ಸತಿಯೊಳುದಿಸುತ್ತ ||
ಬರುವಳೈ ನಾಮದಿ ಶಿಖಂಡಿಯು |
ಧುರಕೆ ಧನುವನೆ ಧರಿಸಿ ನಿನ್ನಯ |
ಸರಿಸಕೈತರೆ | ಬಿಡು ರಣಾಗ್ರವ ಪವಡಿಸಾದಿನದಿ ||

ಅತೀ ದೀರ್ಘ ಬದುಕನ್ನು ಕಂಡ ಭೀಷ್ಮ,  ಪರಾಕ್ರಮಿಯಾಗಿಯೂ ಧರ್ಮ ನಿಷ್ಠನಾಗಿಯೂ ಭಾಗವತೋತ್ತಮನಾಗಿಯೂ ಬಾಳಿದ ಭೀಷ್ಮ ಯಃಕಶ್ಚಿತ್ ಸಾಮಂತನೂ ಅಲ್ಲದ ಕ್ಷತ್ರಿಯನ ಮಗಳೊಬ್ಬಳ ಸವಾಲಿಗುತ್ತರವಾಗಿ ತನ್ನ ಇಚ್ಛಾ ಮರಣದ ಇಚ್ಚೆಯನ್ನು ಬರೆದಿಡುವುದೆಂದರೆ ಅದೊಂದು ವಿಪರ್ಯಾಸ.
ಅಂಬಾ ಪ್ರಕರಣ ಬಿಟ್ಟರೆ ಭೀಷ್ಮ ಪಾತ್ರ ವಿಜ್ರಂಭಿಸುವುದು ಕುರುಕ್ಷೇತ್ರದ ಯುದ್ದಾರಂಭದಲ್ಲಿ.

ಆರು ಸೇನಾಧೀಶರಹರು ನಮ್ಮಯ ಬಲದಿ | ಶೂರಾಗ್ರೇಸರರಾಗಿ ನಡೆಸುವರು ಪಡೆಯ ||
ಪಾರಮಾರ್ಥದೊಳರುಹಿ ಸೇನಾನಿ ಪಟ್ಟವನು | ಯಾರಿಗೀಯುವುದೀಗ ತೋರಿರೆನಲವರು ||   
ಹರಿಯ ಮಾಯವನುಳಿದು ಮೆರೆದು ಸೇನೆಗಳನ್ನು | ಪರಿಪಾಲಿಸುವನೊಬ್ಬ ಗಾಂಗೇಯ ಶೂರ |
ಧುರ ಪರಾಕ್ರಮಿಯವನ ಬಿಟ್ಟನ್ಯರಿಲ್ಲೆಂದು | ಕುರುರಾಯಗರುಹಿದರು ಸಕಲ ಧರಣಿಪರು ||  

ಸರಿಯೆನುತ ಕೌರವನು ಪೊರಟು ನಿಶಿಕಾಲದಲಿ | ತೆರಳಿದನು ಗಾಂಗೇಯನಿರುವ ಬಳಿಗಾಗಿ ||
ಹರಿಯ ನೆನೆಯುತ ಮಂಚದೊಳಗೆ ಮಲಗಿರೆ ಭೀಷ್ಮ | ಗೆರಗಿದನು ಕುರುರಾಯನೆತ್ತಿ ಮುದ್ದಿಸುತ ||

            ಇರುಳ ನಿಶಿಯಲ್ಲಿ ಕೌರವನ ಆಗಮನ ಭೀಷ್ಮನ ಬಿಡದಿಗೆ ಆಗುತ್ತದೆ. ಆ ರಾತ್ರಿಯಲ್ಲೂ ನಿದ್ದೆ ಬಾರದೆ ಭೀಷ್ಮ ಚಡಪಡಿಸುತ್ತಿದ್ದಾನೆ. ಈತ ಬ್ರಹ್ಮ ಚಾರಿಯಾದುದರಿಂದಲೋ ಏನೋ ನಿದ್ರಾಂಗನೇ ಎಂಬ ಹೆಣ್ಣು ಹತ್ತಿರವೇ ಸುಳಿಯುತ್ತಿಲ್ಲ.  ಗುರು ಆಶ್ರಮದಿಂದ ಹಸ್ತಿನೆಗೆ ಬಂದ ಮೇಲೆ ನಿದ್ದೆ ಬರುತ್ತಿದ್ದರೂ ಭೀಷ್ಮ ನಿದ್ದೆ ಮಾಡಲಾರದೇ ಹೋದ.  ಹಸ್ತಿನೆಗೆ ಸಮರ್ಥ ಹಾಗೂ ಪರಿಪೂರ್ಣ ಉತ್ತಾರಾಧಿಕಾರಿ ಸಿಗುವವರೆಗೆ ಸಿಂಹಾಸನದ ರಕ್ಷಣೆಯ ನಡುವೆ ವಿರಾಮವೆಲ್ಲಿ ಬಂತು?  ತಂದೆ ಶಂತನುವಿನಿಂದ ಪಡೆದುಕೊಂಡು ಬಂದ ಶುದ್ದರಾಯಸವದು.  ರಾಮದಾಸ ಸಾಮಗರು ಭೀಷ್ಮನಾಗಿ ಒಂದೆಡೆ ಹೇಳುತ್ತಾರೆ,  “  ಸಿಂಹಾಸನದ ರಕ್ಷಣೆ ! ವಿಚಿತ್ರವಾಗಿ ಕಾಣುತ್ತದೆ. ಯಾರಿಂದ ರಕ್ಷಿಸಬೇಕು? ಇದೇ ಸಿಂಹಾಸನದ ಕೆಳಗೆ ತಾನೇ ಚಂದ್ರವಂಶಕ್ಕೆ ಕಳಂಕ ತರುವಂತೆ ಆ ಘಟನೆ ನಡೆದು ಹೋದದ್ದು?  ಚಂದ್ರವಂಶಕ್ಕೆ ಸೇರಿದ ಒಂದು ಹೆಣ್ಣು ಮಗಳಿಗೆ ಸಿಂಹಾಸನದಿಂದ ರಕ್ಷಣೆ ಒದಗಿ ಬಂತೆ?  ಮಾನಾಛ್ಚಾದಿತವಾದ ಸೆರಗನ್ನು ಹಿಡಿದೆಳೆವಾಗ ಆ ಪಾಂಚಾಲಿ ಕೇಳಿದ್ದೇನು? ರಕ್ಷಣೆಯನ್ನಲ್ಲ.. ಆಕೆಗೆ ಅರಿವಿತ್ತೋ ಏನೂ ಅದು ಸಿಗುವುದಿಲ್ಲ ಎಂದು. ಭೀಷ್ಮರೇ , ಆಚಾರ್ಯ ದ್ರೋಣರೇ   ನನ್ನನ್ನು  ರಕ್ಷಿಸಿ...  ಎಂದು ಆಕೆ ಕೇಳಲಿಲ್ಲ.  ನನ್ನ ಮುಖ ನೋಡಿಯಲ್ಲವೇ ಆಕೆ ಕೇಳಿದ್ದು “ಭೀಷ್ಮರೇ ಇದು ನ್ಯಾಯವೇ?”   ಧೃತರಾಷ್ಟ್ರ ಕಾಣಲಿಲ್ಲ ಆದರೂ ಇದನ್ನು ಕೇಳಿರಬಹುದಲ್ಲ ? ಕ್ಷತ್ರಿಯಾಣಿ ಅವಳು. ಅವಳ ರಕ್ಷಣೆಯ ಬಗ್ಗೆ ಅರಿವಿದ್ದವಳು. ಆದರೂ ವರ್ತಮಾನದ ಮಾಹಾ ಮತ್ಸದ್ಧಿಗಳು ಪರಾಕ್ರಮಿಗಳೂ ಇದ್ದ ಆಸ್ಥಾನದಲ್ಲಿ ಆ ಘಟನೆ ನಡೆದೇ ಬಿಟ್ಟಿತಲ್ಲ?"

            ಪ್ರಪಂಚ ಈವರೆಗೆ ಭೀಷ್ಮನನ್ನು ಕಂಡದ್ದು ಹೇಗೆ?  ಒಂದು ಕಾಲದಲ್ಲಿ ಭೀಷ್ಮ ಸಭಾ ಪ್ರವೇಶ ಮಾಡಿ ಹೀಗಾಗ ತಕ್ಕದ್ದು ಎಂದು ಆಜ್ಞಾಪಿಸಿದರೆ ಅದನ್ನು ಇದಿರಿಸುವವರು ಇಲ್ಲ. ಆದರೆ ಇಂದು ಹಸ್ತಿನಾವತಿಯಲ್ಲಿ ಅದೂ ಅರಮನೆಯಲ್ಲಿ ತನ್ನ ಮೊಮ್ಮಕ್ಕಳು ಈ ಅಜ್ಜನ ಮಾತನ್ನೇ ಕೇಳುವುದಿಲ್ಲ. ಆ ಮೊಮ್ಮಕ್ಕಳಿಗೆ ಪ್ರತಿನಿಧಿಯಾದ ಸುಯೋಧನ ಬಾಗಿಲಲ್ಲಿ ನಿಂತಿದ್ದಾನೆ.   ಮಂಚದಲ್ಲಿ ಮಲಗಿದ ಭೀಷ್ಮ ಈ ಮೊಮ್ಮಗನ ಆಗಮನದ ಕಾರಣ ತಿಳಿಯುತ್ತಾನೆ. ತಮ್ಮಿಂದಲೂ ಮೊದಲೇ ಕುರುಧಾರಿಣಿಯಲ್ಲಿ ಪಾಂಡವರ ಸೇನೆ ಬೀಡುಬಿಟ್ಟಿದೆ. ಮತ್ತು ಅವರೇ ಯುದ್ದಾಕಾಂಕ್ಷಿಗಳಾಗಿ ಶಸ್ತ್ರ ಸನ್ನದ್ದರಾಗಿ “ ಮನಸ್ಸಿದ್ದರೆ ಯುದ್ದಕ್ಕೆ ಬರಬೇಕಂತೆ.....” ಎಂದು ಹಸ್ತಿನಾವತಿಗೆ ಹೇಳಿಕೆಯನ್ನು ಕಳುಹಿಸಿದ್ದಾರೆ.  

            ಕೌರವನ ಮನದ ಇಂಗಿತವನ್ನು ಭೀಷ್ಮ ಸಹಿಸುವುದಿಲ್ಲ. ಶೇಣಿಯವರು ಭೀಷ್ಮನಾಗಿ ಒಂದು ಕಡೆ  ಕೌರವನಿಗೆ ಹೇಳುತ್ತಾರೆ, ಇದು ನಮಗೆ ಸಂದ ’ಮೊದಲ ಅಪಜಯ’ !    ಭೀಷ್ಮನ ಮಾತಿನ ಅಂತರಾರ್ಥವನ್ನು ಕೆಲವು ಬಗೆಯಲ್ಲಿ ಗುರುತಿಸಬಹುದು. ಹಸ್ತಿನಾವತಿಯ ರಾಜ ಸಿಂಹಾಸನದ ಆಡಳಿತದ ಅಪಜಯವೋ ?  ಇಲ್ಲಿ “ನಮಗೆ ಅಪಜಯ” ಇಲ್ಲಿ ನಮಗೆ ಎಂಬುದು ಸಮಷ್ಟಿಯ ದ್ಯೋತಕ.  ದಾಯಾದಿ ಕಲಹಕ್ಕೆ ನಾಂದಿಯನ್ನು ಹಾಡಿದ, ಸಮಷ್ಟಿಯಲ್ಲಿ ಕೌರವ ಪಾಂಡವರನ್ನು ಕೂಡಿಕೊಂಡ ಸಮಸ್ತ ಹಸ್ತಿನಾವತಿಯ ರಾಜ ಕುಟುಂಬಕ್ಕೆ ಇದು ಅಪಜಯ.  ಹಾಗಾಗಿ ಭೀಷ್ಮ ವೈಯಕ್ತಿಕ ಎಂಬಂತೆ ಬಡಬಡಿಸುತ್ತಾನೆ ತಾನು ಕಂಡ ಚಂದ್ರವಂಶದ ಮೊದಲ ಅಪಜಯ. ಮಹತ್ವಾಕಾಂಕ್ಷೆಯಿಂದ ಹಸ್ತಿನಾವತಿಯ ರಾಜ ಸಿಂಹಾಸನ ಯುದ್ದವನ್ನು ಸಾರುತ್ತದೆ. ಆದರೆ ಸಿಂಹಾಸನದ ರಕ್ಷಕ ಎಂದು ತನ್ನನ್ನು ಅನ್ವರ್ಥವಾಗಿಸುವ ಸೇನಾನಿಯಾದ  ಭೀಷ್ಮ, ಈಗ  ಯುದ್ದ ನಿರ್ಣಯವಾದ ಮೇಲೆ  ವಿರೋಧಿ ಬಣದ ಅಹ್ವಾನದಲ್ಲಿ ತಮ್ಮ ಅಪಜಯವನ್ನು ಕಾಣುತ್ತಾನೆ! ವಿಚಿತ್ರ !!   ಇಲ್ಲಿ ಭೀಷ್ಮನ ಮಾನಸಿಕ ತಳಮಳ ವ್ಯಕ್ತವಾಗುತ್ತದೆ. ಯಾವಾಗ ದಾಯಾದಿ ಕಲಹ ಕಿಡಿ ಹತ್ತಿತೊ ಅಲ್ಲಿ ಕೌಟುಂಬಿಕ ಸಾಮರಸ್ಯ ಅರ್ಥ ಕೆಟ್ಟಿತು ಎಂದರ್ಥ.

            ಕುರುಕುಲಾನ್ವಯತಿಲಕ ಬಾ ಬಾ | ತರಳ ಬಾರೀ ನಿಶಿಥಕಾಲದಿ |
ತೆರಳಿ ಬಂದಿಹುದೇತಕೋರ್ವನೆ | ಪೇಳು ಪೇಳೈ ಮಾಜದೆ||

ಅದುವರೆಗೂ ಕೌರವನೊಡನೆ ಎಕಾಂತವನ್ನು ಕಾಣದೇ ಇದ್ದ ಭೀಷ್ಮ,  ಮೊಮ್ಮಗ ಕುರುಕುಲಾನ್ವಯ ತಿಲಕನಿಗೆ ಹಿತೋಪದೇಶ ಮಾಡುತ್ತಾನೆ. ಅನಭಿಷಿಕ್ತ ಚಕ್ರವರ್ತಿ ಮೊಮ್ಮಗನ ವೇಷವನ್ನು ತೊಟ್ಟು ಬಂದಿದ್ದಾನೆ. ಕೆಲವರು ಇದನ್ನು ವೇಷವೆಂದೇ ವ್ಯಾಖ್ಯಾನಿಸುವುದು. ಯಾಕೆ?. ಭೀಷ್ಮ ಮೊಮ್ಮಗನಾಗಿ ಬಂದರೂ ಅದರಲ್ಲಿ ಅವನ ರಾಜಾತಾಂತ್ರಿಕ ಬುದ್ದಿ ಇರುತ್ತದೆ. ಅದು ಕೌರವನ ನಿಜ ಬಣ್ಣ. ಇದು ಅರಿತೇ  ಭೀಷ್ಮ ಸಾರಿ ಹೇಳುತ್ತಾನೆ. ಕುರುಕುಲಾನ್ವಯ ತಿಲಕ,  ತಿಲಕ ಕೇವಲ ಹಣೆಗೆ ಮಾತ್ರವೇ ಇರಬೇಕು. ಆದರೆ ಅದು ಮುಖ ತುಂಬ ವ್ಯಾಪಿಸಿದ ಹಾಗೆ,  ಇದರ ಕಪ್ಪು ಇಡೀ  ಹಸ್ತಿನಾವತಿಯನ್ನೇ  ವ್ಯಾಪಿಸಿ ಬಿಟ್ಟಿದೆ. ಪಾಂಡವರಿಗೆ ಅನಿವಾರ್ಯವಾಗುವ ಯುದ್ದ ಕೌರವನಿಗೆ ಅನಿವಾರ್ಯವಲ್ಲ. ಅದನ್ನು ತಪ್ಪಿಸಬಹುದು. ಶ್ರೀ ಕೃಷ್ಣ ಬಂದು ಪಾಂಡವರಿಗಾಗಿ ಅರ್ಧ ರಾಜ್ಯವನ್ನು ಅಥವಾ ಒಂದು ಗ್ರಾಮವನ್ನು ಕೇಳುತ್ತಾನೆ, ಅಥವಾ ಶ್ರೀಕೃಷ್ಣ  ತನಗಾಗಿ ಅವನ ಮುಕುಟ ಮಣಿಯೋ ಮುದ್ರೆಯುಂಗುರವೋ ಇನ್ನೊಂದೋ ಕೇಳಲಿಲ್ಲ. ಕೇವಲ ಪಾಂಡವರಿಗಾಗಿ ಅವರದೇ ಆದ ಅರ್ಧ ರಾಜ್ಯ ಕೇಳುತ್ತಾನೆ. ನಿಜವಾಗಿಯೂ ಕೃಷ್ಣ ಶಾಂತಿ ದೂತನಾಗುತ್ತಾನೆ. ಆದರೆ ಅಲ್ಲಿ ಕಣ್ಣಿದ್ದೂ ಕುರುಡನಾಗುತ್ತಾನೆ ಕುರುಡನ ಮಗ.  ಕೊಡುವುದಿಲ್ಲ. ಬದಲಾಗಿ ಕೃಷ್ಣನಲ್ಲಿ ಹೇಳಿದ್ದೇನು ?  ಪಾಂಡವರನ್ನು ಯುದ್ದಕ್ಕೆ ಕರೆದು ತಾ. ಕೌರವನಿಗೆ ಬೇಕಾಗಿರುವುದು ಯುದ್ದ. ಪಾಂಡವರಿಗೆ ರಾಜ್ಯ ಕೊಡಲಾರ. ಬದಲಾಗಿ ರಾಜ್ಯದ ತುಂಡೊಂದನ್ನು ಯಾರೋ ಒಬ್ಬ ಅನಾಮಧೇಯ ಕರ್ಣನಿಗೆ ಕೊಡುತ್ತಾನೆ. ಹಾಗಾದರೆ ಆತನ ಬಯಕೆಯಾದರೂ ಏನು? ಈಗ ಪಾಂಡವರು ಕುರುಕ್ಷೇತ್ರಕ್ಕೆ ಬಂದಿದ್ದಾರೆ. ಇವನು ರಾತ್ರಿ ಎದ್ದುಕೊಂಡು ಭೀಷ್ಮನ ಬಿಡಾರ ಹುಡುಕಿಕೊಂಡು ಬಂದಿದ್ದಾನೆ. ಇಲ್ಲಿಯೂ ಭೀಷ್ಮ ಮರುಗುವುದು ಆ ಸತ್ಯ ಎದುರು ಬಂದು ನಿಂತಿತಲ್ಲ. ಹೌದು ಬಂದರೇ ಪಾಂಡವರು,  ಈ ವರೆಗೆ ಅನುಮಾನವಿತ್ತು.  ಈಗ ಯುದ್ದ ಸನ್ನದ್ದರಾಗಿ ಬಂದೇ ಬಿಟ್ಟರಲ್ಲ. ಯೌದ್ದವನ್ನು ವಾಸ್ತವದ ಹತ್ತಿರ ತಂದು ನಿಲ್ಲಿಸಿಬಿಟ್ಟರೇ ಪಾಂಡವರು.

“ಸುಯೋಧನ,  ಬಂದರೇ ಪಾಂಡವರು, ಇಂದು ಸಂತತಿಗೆ ಅರ್ಹರಲ್ಲವೇ?  ಅವರ ರಾಜ್ಯವನ್ನು ಅವರು ಪಡೀಲಿಕ್ಕೆ ಯುದ್ದ ಮಾಡಬೇಕಾದ ದುಸ್ಥಿತಿ ಬಂತಲ್ಲ? ಅವರು ಬಂದರೆ ಅಪರಾಧವೇ? ಅವರ ಮನೆಗೆ ಅವರು ಬಾರದಿದ್ದರೆ ಮತ್ತೆಲ್ಲಿಗೆ ಅವರು ಹೋಗುವುದು?“ 

ಯುದ್ದ ಅಂಗಳಕ್ಕೆ ಬಂದು ನಿಂತಿತಲ್ಲ ಎಂಬ ಭೀಷ್ಮನ ತಳಮಳ ಕೌರವನಿಗೆ ಅರ್ಥವಾಗುವುದಿಲ್ಲ. ಅರ್ಥವಾದರೂ ಭೀಷ್ಮನನ್ನು ಭಾವನಾತ್ಮಕವಾಗಿ ಕಟ್ಟಿಹಾಕುವ ಪ್ರಯತ್ನವೋ ಎನೋ ಕೌರವನದ್ದು.                ಈಗ ರಾತ್ರಿ ಬಂದು ಪಾಂಡವರು ಯುದ್ದಕ್ಕೆ ಸನ್ನದ್ಧರಾಗಿ  ಬಂದಿದ್ದಾರೆ ಅವರೊಂದಿಗೆ ಹರಿ ನಿಂತಿದ್ದಾನೆ. ಹರಿತಂತ್ರಕ್ಕೆ ಪ್ರತಿಯಾಗಿ ಇಂದು ಹಸ್ತಿನಾವತಿಯಲ್ಲಿ ನಿಲ್ಲಬಲ್ಲವರೆಂದರೆ ಅದು ನೀವು ಅಜ್ಜಾ   ಅದುದರಿಂದ ಅಜ್ಜಾ  ನೀವು ಕಾಯಬೇಕು  ಎಂದರೆ..,    ಭೀಷ್ಮ ಕೌರವನ ಭುಜಗಳ ಸುತ್ತಲಿರುವ ದುಷ್ಟ ಚತುಷ್ಟಯರನ್ನು ತೋರಿಸುತ್ತಾನೆ. 
ಎಲೆ ಮರುಳೆ ಕರ್ಣಾದಿ ದುಷ್ಟರ
ಬಳಸಿನಲಿ ಕೇಡಾದೆ ವಂಶಕೆ
ನಳಿನ ನೇತ್ರನ ಮುಂದೆ ಅಳವಿಗಾನುವರಾರುಂಟೆ ಲೋಕದಲಿ.

ಭೀಷ್ಮ ಸುಯೋಧನನ ಈವರೆಗಿನ ಸಹವರ್ತಿಗಳು ಯಾರು?  ಆ ಕರ್ಣ. ವೈಯಕ್ತಿಕವಾಗಿ ಆ ಕರ್ಣನ ದಾನ ಚೌಂಡತ್ವವೋ ಮತ್ತೋಂದೋ ಒಂದೂ ಕೌರವನಿಗೆ ನೆರವಿಗೆ ಬರಲಿಲ್ಲ. ಚಂದ್ರವಂಶಕ್ಕೆ ಸೇರಿದ ಹೆಣ್ಣುಮಗಳ ಸೀರೆಗೆ ಕೈಯಿಕ್ಕುವಂತೆ ಪ್ರಚೋದನೆ ಕೊಟ್ಟನಲ್ಲ?  ಇನ್ನು  ಆ ದು:ಶ್ಯಾಸನ  ಶಕುನಿ, ಸೈಂಧವ  ಇವರೇ ಹೆಚ್ಚಾಗಿ ಹೋದರು. ಇವರ ಬಳಸಿನಲಿ ಸುಯೋಧನ ಒಬ್ಬನೇ ಹಾಳಾದ್ದಲ್ಲ. ಈವರೆಗೆ ಯಾರೂ ಮೌಲ್ಯಮಾಪನ ಮಾಡದಂತೆ  ಚಂದ್ರವಂಶದ ಅರಸೊತ್ತಿಗೆಗೆ ದುಡಿದ ತನ್ನ ದುಡಿಮೆಯನ್ನೂ ಸಂಪೂರ್ಣ ನಾಶ ಮಾಡುವುದಕ್ಕೆ ಸುಯೋಧನನೆ ಪವಿತ್ರ ಪಾಣಿಯಾದನಲ್ಲ.
ಆದರೂ ಭೀಷ್ಮ ಮತ್ತೊಂದು ಆಶಾಭಾವ ವ್ಯಕ್ತಪಡಿಸುವುದುಂಟು. ಶೇಣಿಯವರು ಕುಚೋದ್ಯವೆಂಬಂತೆ ಇದನ್ನು ಹೇಳುತ್ತಾರೆ, “ ಮೊಮ್ಮಗನೇ  ಸರಿಯಾದ ಹಾದಿಗೆ ಬಂದಿ ನೀನು, ನನ್ನ ಮೊಮ್ಮಗ….,   ಈಗ ನಾನಿದ್ದೇನೆ ಹೆದರಬೇಡ. ರಣವೀಳ್ಯವನ್ನು ಕೊಟ್ಟರೇನಂತೆ . ಅದೇ ಏನು ಮಹಾ ಪ್ರಮಾಣವಲ್ಲ. ಕೃಷ್ಣನಲ್ಲಿ ನಾನು ಹೋಗಿ ಕೇಳ್ತೆನೆ. ಏನು ನಿನ್ನದು ಸಂಧಿ? ಕೌರವನಿಂದ ಅರ್ಧ ರಾಜ್ಯ ನಾನು ತೆಗೆಸಿಕೊಡ್ತೇನೆ.  ಕೃಷ್ಣ ಇಲ್ಲಾಂತ ಹೇಳಿಯಾನೋ” ಇಲ್ಲಿ ಯುದ್ದದ ಬಗೆಗೆ ಅದರಲ್ಲೂ ಮೊಮ್ಮಕ್ಕಳ ಯುದ್ದದ ಬಗ್ಗೆ ಭೀಷ್ಮನ ಒಳ ಮನಸ್ಸಿನ ತುಮುಲ ಅರ್ಥವಾಗುತ್ತದೆ. ನಡುವೆ ಒಂದು ಆಶಾಭಾವ ಯುದ್ದ ನಿಲ್ಲಬಹುದೇ?

 ಸುಯೋಧನ ತನ್ನ ಬರವಿನ ಉದ್ದೇಶವನ್ನು ವಿವರಿಸುತ್ತಾನೆ. ಪಾಂಡವ ಪಕ್ಷಪಾತಿ ಕೃಷ್ಣನ ತಂತ್ರಗಳಿಗೆ ಪಾರಮಾರ್ಥಿಕವಾಗಿಯೂ ಲೌಕಿಕವಾಗಿಯೂ ಪ್ರತಿಭಟನೆಯ ಅರ್ಹ ವ್ಯಕ್ತಿಗಳೆಂದರೆ ಅದು ಭೀಷ್ಮರು. ಪಾಂಡವರನ್ನು ಹರಿ ಕಾಯುತ್ತಿರುವಾಗ ನಮ್ಮನ್ನು ಕಾಯುವುದಕ್ಕೆ ಹರಿಯ ಸ್ಥಾನದಲ್ಲಿ ಭೀಷ್ಮರು ಬರಬೇಕು. ತನ್ನ ಹೋರಾಟ ಪಾಂಡವರಲ್ಲಿ ಅಲ್ಲ, ಬದಲಾಗಿ ಅವರನ್ನು ಆಯುಧಗಳನ್ನಾಗಿ ಮಾಡುವ ಕೃಷ್ಣನಲ್ಲಿ.  ಇಲ್ಲಿ ಕೌರವನ ತೀಕ್ಷ್ಣ ವಾದ ಮತ್ಸದ್ಧೀ ತನವೂ ಕೆಲಸ ಮಾಡುತ್ತದೆ. ಕೃಷ್ಣಸ್ತು ಭಗವಾನ್ ಸ್ವಯಂ ಎಂದು ನಂಬಿದ ಭಾಗವತೋತ್ತಮರನ್ನೇ ಕೃಷ್ಣರೆದುರು ನಿಲ್ಲಿಸಿದರೆ....ಸ್ವತಃ  ಇಚ್ಛಾಮರಣಿಯಾದಂತಹ ಭೀಷ್ಮ ತಾನು ಬಯಸಿದ್ದಲ್ಲದ್ದೆ ತಮ್ಮ ಮರಣವನ್ನು ತಂದುಕೊಳ್ಳಲಾರರು. ಭೀಷ್ಮರು ಎಲ್ಲಿಯವರೆಗೆ ಸೇನಾಪತಿಯಾಗಿರುತ್ತಾರೋ ಅಲ್ಲಿವರೆಗೆ ಕೌರವ ಸೇನೆ ಅಭೇದ್ಯವಾಗಿರುತ್ತದೆ. ಸೇನಾಪತಿಯಾದಂತಹ ಭೀಷ್ಮ ತಮ್ಮ ಸೋಲನ್ನು ತಾವು ಬಯಸಲಾರರು.  ವಿಪರ್ಯಾಸವೆಂದರೆ ಭೀಷ್ಮನ ಸೋಲು ಗೆಲುವಿನ ನಿಜವಾದ ಅರ್ಥವನ್ನು ಮಾಡಿಕೊಳ್ಳುವಲ್ಲಿ ಕೌರವ ವಿಫಲನಾಗುತ್ತಾನೆ. ಮಾನಸಿಕವಾಗಿ ಈ ಕೌಟುಂಬಿಕ ಕಲಹದಿಂದ ಭೀಷ್ಮರು ಹತಾಶರಾಗಿರುವುದು ಕೌರವನ ಗಮನಕ್ಕೆ ಬರುವುದೇ ಇಲ್ಲ!! ಭೀಷ್ಮರು ನಿಟ್ಟುಸಿರೊಂದನ್ನು ಎಳೆಯುತ್ತಾರೆ. (ಭೀಷ್ಮನಾಗಿ ಶೇಣಿಯವರು ಕೇವಲ ಈ ನಿಟ್ಟುಸಿರೊಂದರಲ್ಲೇ ಭೀಷ್ಮನ ಅಷ್ಟೂ ಭಾವವನ್ನು ತುಂಬಿಸಿಬಿಡುತ್ತಾರೆ...!!! )

ಎನೂ ಇಲ್ಲದ ಪಾಂಡವರು ರಾಜ್ಯದಾಶೆಯಿಂದ ಕೆಣಕುತ್ತ ಬರುವವರು ದಿನ ದಿನದಿ. ಇದೀಗ ತಾವೇ ಹೋರಾಟಕ್ಕೆ ಮುಂದಾಗಿ ಬರುತ್ತಾರೆ. ಅವರಿಗೆ ಇರುವ ರಕ್ಷಣೆಯಾದರೂ ಏನು?

          ಆದಿನಾರಯಣ ದುಷ್ಟ ಶಿಕ್ಷಣಕಾಗಿ ಮೋದದಿ ದೇವಕಿಗುದಿಸಿ
          ಸಾದರದೊಳು ಪಾಂಡು ಜಾತರ ಪೊರೆಯುವ ಛೇದಿಸಿಹನು ಕಂಸಾದಿಗಳ
          ಕೆಡುಕ ಯೋಚಿಸಬೇಡ ಸತ್ಯ ಮಾರ್ಗಗಳನ್ನು ಪಿಡಿದು ಪೋದರು ವನಕವರು
ಕೊಡದಿರೆ ಅರ್ಧರಾಜ್ಯವ ಕೃಷ್ಣ ಧುರದೊಳು ಬಿಡದೆ ಹೊಂದಿಪ ಜಯಗಳನು.

          ಅವರಿಗೆ ಹರಿ ರಕ್ಷಣೆ ಉಂಟು ಎಂದಾದರೆ,  ಪೊರೆಯುವರಾರು ಎಮ್ಮನು...?.ಕೌರವನ ಅಳಲಿಗೆ ಭೀಷ್ಮನ ಸಾಂತ್ವಾನವಿದು.
ಎಲ್ಲಿ ಪ್ರಶ್ನೆ ಉಳಿಯುವುದಿಲ್ಲವೋ ಅಲ್ಲಿವರೆಗೆ ಪ್ರಶ್ನಿಸಿಕೊಂಡು ಹೋದಾಗ ಅದು ಅನಾದಿ ಎನಿಸಲ್ಪಡುತ್ತದೆ. ಅವನ ಅಪ್ಪ ಯಾರು? ಅಪ್ಪನ ಅಪ್ಪ ಯಾರು?  ಅಜ್ಜನ ಅಜ್ಜ ಯಾರು ?  ಹೀಗೆ ಪ್ರಶ್ನಿಸುತ್ತಾ ಹೋದಾಗ ಈ ಪ್ರಶ್ನೆಯ ಪ್ರಶ್ನೆಯಲ್ಲಿ ಮತ್ತೊಂದು ಪ್ರಶ್ನೆ ಹುಟ್ಟುತ್ತದೆ. ಆದರೆ ಪ್ರಶ್ನೆಯೇ  ಇಲ್ಲದ ಒಂದು ಹಂತ ಇರುತ್ತದೆ. ಅದು ಅನಾದಿ..  ಮೊತ್ತ ಮೊದಲು ಇದ್ದ ಆ ವಸ್ತುವಿಗೆ ಆದಿ ವಸ್ತು...ಇಲ್ಲಿ ಆ ಅದಿಯನ್ನು ಆದಿನಾರಾಯಣ ಎಂದು ಗುರುತಿಸಿದ್ದು ಭಗವತ್ ಸ್ವರೂಪಿಯಾದ ಶ್ರೀಕೃಷ್ಣನಲ್ಲಿ. ಲಿಂಗಭೇದವೇ ಇಲ್ಲದ ಭಗವಂತ ನಾರಾಯಣಳು, ನಾರಾಯಣನು ಅಥವಾ ನಾರಾಯಣವೂ ಆಗಿ ನಾವು ಏನನ್ನು ಕಾಣಬಹುದೋ ಅವನು,  ಆತನ ಮೈಯಂತಿರುವ ಈ ಬ್ರಹ್ಮಾಂಡದಲ್ಲಿ ಹುಣ್ಣಾದರೆ ಅದನ್ನು ನಿವಾರಣೆ ಮಾಡಬೇಕಾಗುತ್ತದೆ, ಅಥವಾ ತನ್ನ ಕಣ್ಣಲ್ಲಿ ಕಸ ಬಿದ್ದಾಗ,  ಬಿದ್ದಿರುವ ಕಸ ತೆಗೆದು ಹಾಕಬೇಕಾಗುತ್ತದೆ. ಹಾಗೆ ಈ ಭೂಮಿಯಲ್ಲಿ ದುಷ್ಟ ಶಕ್ತಿ ಹೆಚ್ಚಾದಾಗ, ಸಂತ್ರಸ್ತೆಯಾದ ಭೂಮಿಯನ್ನು ರಕ್ಷಿಸುವಂತೆ, ಈ ಆದಿನಾರಾಯಣ ಅವತರಿಸುತ್ತಾನೆ. ಅವತರಿಸುವುದಕ್ಕೂ ಬೀಳುವುದಕ್ಕೂ ವೆತ್ಯಾಸವಿದೆ. ಒಬ್ಬಾತ ಆನೆಯ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದ ಅದು ಪತನ,, ಅರಸ ಆನೆಯಿಂದ ಕೆಳಗೆ ಇಳಿದು ಬಂದ, ಅದು ಅವತರಣ. ಹೀಗೆ ದುಷ್ಟ ದಮನಕ್ಕಾಗಿ ಅವತಾರ ಎತ್ತಿದವನು ಶ್ರೀಕೃಷ್ಣ.  ಕನ್ನಡಿಯಲ್ಲಿ ಕಂಡ ಪ್ರತಿಬಿಂಬದಂತೆ, ಅಲ್ಲಿ ನಾವು ನಕ್ಕರೆ ಅಥವಾ ಅತ್ತರೆ ಕನ್ನಡಿಯೊಳಗಿನ ಪ್ರತಿಬಿಂಬ ನಗುವಂತೆ ಅಥವಾ ಅಳುವಂತೆ ನಮಗೆ ಭಾಸವಾಗುತ್ತದೆ ಹೊರತು ಕನ್ನಡಿ ನಗುವುದೂ ಇಲ್ಲ ಅಳುವುದೂ ಇಲ್ಲ. ಭಂಗವಂತನ ಅವತಾರ ಎಂದರೆ ಹಾಗೆ.  ಮಾಯೆಯು ಅವನಾಗಿ ಅವನು ಮಾಯಿಯಾಗಿ ಇರುತ್ತಾನೆ.  ನಾವು ಮತ್ತು ನಮ್ಮ ನೆರಳು ಇಲ್ಲಿ ನೆರಳು ಇದಕ್ಕೆ ಅಸ್ತಿತ್ವ ಇರುವುದಿಲ್ಲ. ಬೆಳಕನ್ನು ತೆಗೆದುಕೊಂಡು ನೆರಳು ಎಲ್ಲಿ ಅಂತ ಹುಡುಕಿದರೆ ಕಾಣಸಿಗುವುದಿಲ್ಲ. ಆದರೂ ನೆರಳು ಇರುವುದು ಸುಳ್ಳಲ್ಲ.   ಹಾಗಾಗಿ ಕೃಷ್ಣನಲ್ಲಿ ಭಗವಂತನನ್ನು ಅರೋಪಿಸಿ ಕೃಷ್ಣನನ್ನೇ  ಆದಿನಾರಾಯಣನಾಗಿ ಕಾಣು.

          ಇದು ತಾಳ ಮದ್ದಲೆಯೊಂದರಲ್ಲಿ ಶ್ರೀ ರಾಮದಾಸ ಸಾಮಗರ ಅರ್ಥಗಾರಿಕೆಯ ಸ್ಥೂಲ ವಿವರಣೆ.  ಭಗವಂತನ ಅವತರಣಿಕೆಯನ್ನು ಇಲ್ಲಿ ಬಹಳ ಸರಳವಾಗಿ ವಿವರಿಸಿದ್ದಾರೆ. ಸುಯೋಧನ ಭಗವಂತನ ದೇಹದ ವೃಣವಾಗಕೂಡದು ಎಂದು ಪರೋಕ್ಷ ಸಂದೇಶ ಇದರಲ್ಲಿದೆ. ಅಂತಹ ಭಗವಂತ ಪಾಂಡವರ ಜತೆ ಸದಾ ಇದ್ದು ಅವರನ್ನು ಪೊರೆಯುತ್ತಾನೆ. ಧರ್ಮ ಎಲ್ಲಿದೆಯೋ ಅಲ್ಲಿ ಕೃಷ್ಣನಿದ್ದಾನೆ. ಕೃಷ್ಣನೆಲ್ಲಿದ್ದಾನೋ ಅಲ್ಲಿ ಧರ್ಮ ನೆಲೆಸುತ್ತದೆ. ಹಾಗಾಗಿ ಆ ಧರ್ಮದ ಜತೆ ನೀನು ಸೇರಿಕೋ. ಪಾಂಡವರಿಗೆ ಸಲ್ಲಬೇಕಾದ ರಾಜ್ಯವನ್ನು ಕೊಟ್ಟು ಧರ್ಮವನ್ನು ನಿನ್ನಲ್ಲೂ ನೆಲೆಸುವಂತೆ ಮಾಡಿ ಕೃಷ್ಣನ ಅನುಗ್ರಹಕ್ಕೆ ಪಾತ್ರನಾಗು.
          ಆರ್ತರನ್ನು ಧರ್ಮಾತ್ಮರನ್ನು ಪರಮಾತ್ಮ ರಕ್ಷಿಸುತ್ತಾನೆ ಎನ್ನುವುದಕ್ಕೆ ಸುಯೋಧನ ಆಕ್ಷೇಪ ಅಥವಾ ಪ್ರತಿವಾದವನ್ನು ಹೇಳುತ್ತಾನೆ. ಪಾಂಡವರ ಜೀವನದ ಮೂಲಕವೇ ಅದು ವ್ಯಕ್ತವಾಗುವುದನ್ನು ವಿವರಿಸುತ್ತಾನೆ. ಪಾಂಡವರನ್ನು ಪಾಲಿಸುತ್ತಾನೆ ಎಂದರೆ ಅದು ಸತ್ಯವೇ?

ಪೊರೆಯುವ ಮಹಿಮನು ವಿಪಿನಾಂತರಗಳ ಚಲಿಸುವ ಕಾಲದೊಳು
ಧರಣಿಯ ಕೊಡಿಸದೆ ಬಿಟ್ಟಿಹನೇತಕೆ ಸರ್ವಥಾ ಕೊಡೆನಿನ್ನು

          ಧರ್ಮ ಇದ್ದಕಡೆ ಕೃಷ್ಣನಿದ್ದಾನೆ, ಪಾಂಡವರು ಧರ್ಮಾತ್ಮರು. ಅವರು ಸದಾ ಪೊರೆಯುವವನು, ಪಾಂಡವರಿಗೆ ದ್ಯೂತದಲ್ಲಿ ರಕ್ಷಿಸಲಿಲ್ಲ. ಅವರು ವನಾಂತಾರಗಳಲ್ಲಿ ಮರದ ಅಡಿಯಲ್ಲೋ ಕಲ್ಲು ಬಂಡೆಯ ಮೇಲೋ ಮಲಗಿದರೆ ತಾನು ಹಂಸ ತೂಲಿಕಾ ತಲ್ಪದಲ್ಲಿ ನಿದ್ರಿಸುತ್ತೇನೆ, ನಿತ್ಯವು ಮೃಷ್ಟಾನ್ನ ಭೋಜನವನ್ನೇ ಸ್ವಿಕರಿಸುತ್ತೇನೆ.  ಹುಟ್ಟಿನಿಂದ ತಾನು ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದರೆ,  ಪಾಂಡವರು ವನವಾಸ ಅಜ್ಞಾತವಾಸ ಬಡತನ ಇವುಗಳಲ್ಲೇ ಜೀವಿಸುವಂತಾದರೆ ಇವರನ್ನು  ಭಗವಂತ ಪೊರೆಯುತ್ತಾನೆ ಎಂದರೆ ಹೇಗೆ? ಪಾಂಡವರ ಧರ್ಮದ ಹಾದಿಯಲ್ಲೂ ಕೊಂಕನ್ನು ಕಾಣುವ ಕೌರವನಿಗೆ ಭೀಷ್ಮರು ಹೇಳುತ್ತಾರೆ. ಕೆಡುಕ ಯೋಚಿಸಬೇಡ,
          ಕೆಡುಕ ಯೋಚಿಸಬೇಡ ಸತ್ಯ ಮಾರ್ಗಗಳನ್ನು ಪಿಡಿದು ಪೋದರು ವನಕವರು
            ಕೊಡದಿರೆ ಅರ್ಧ ರಾಜ್ಯವ ಕೃಷ್ಣ ಧುರದೊಳು ಬಿಡದೆ ಹೊಂದಿಪ ಜಯಗಳನು

            ಬಹಳ ಸರಳವಾದ ಉದಾಹರಣೆಯನ್ನು ಸಾಮಗರ ಭೀಷ್ಮ ನೀಡುತ್ತಾನೆ. ಒಬ್ಬ ಶ್ರೀಮಂತ  ಅಂತ ಇರ್ತಾನೆ. ಅವನು ಒಳ್ಳೆಯವನಾಗಿರುತ್ತಾನೋ, ಬಡವ ಒಬ್ಬ ಇರುತ್ತಾನೆ. ಅವನು ಕೆಟ್ಟವನೋ? ಶ್ರೀಮಂತರಲ್ಲೂ ಕೆಟ್ಟವರೂ ಇರುತ್ತಾರೆ ಒಳ್ಳೆಯವರೂ ಇರುತ್ತಾರೆ. ಅದೇ ರೀತಿ ಬಡವರಲ್ಲೂ. ಒಬ್ಬಾಕೆ ರೂಪದಲ್ಲಿ ಬಹಳ ಸುಂದರವಾಗಿರುತ್ತಾಳೆ. ಅವಳು ಒಳ್ಳೆಯವಳೇ ಆಗಿ ಇರಬೇಕೆಂದೇನೂ ಇಲ್ಲ. ಹಾಗೇ ಒಬ್ಬಾಕೆ ಕುರೂಪಿ ಅವಳು ಕೆಟ್ಟವಳೇ ಆಗಿರಬೇಕೆಂದೇನು ಇಲ್ಲ. ಹಾಗಾಗಿ ಒಳ್ಳೆಯದು ಕೆಟ್ಟದ್ದು ಹೊರ ಆವರಣದಿಂದ ನಿರ್ಧರಿಸ ತಕ್ಕದ್ದಲ್ಲ. ದಾರಿದ್ರ್ಯ ಎಂಬುದು ದೌಷ್ಟ್ಯವಲ್ಲ. ಧನಾಢ್ಯ,  ಸಂಪಧ್ಬರಿತತೆ ಅದಕ್ಕೆ ಸಜ್ಜನಿಕೆ ಎಂದೂ ಇರುವುದಿಲ್ಲ. ದಾರಿದ್ರ್ಯ ಎಂಬುದು ಲೌಕಿಕ ಸ್ಥಿತಿ. ಮೈಯಿಂದ ಬಡವನಾಗಿದ್ದವನು ಮನಸ್ಸಿನಿಂದ ಸಿರಿವಂತನಾಗಿರುತ್ತಾನೆ. ಮೈಯಿಂದ ಸಿರಿವಂತ ನಾದವನು ಮನಸ್ಸಿನಿಂದ ಬಡವನಾಗಿರುತ್ತಾನೆ. ಪಾಂಡವರಿಗೆ ಅನಾಥತೆ ಬಂತು. ಅದೊಂದು ಸ್ಥಿತಿ. ಅದು ಅಪರಾಧವಲ್ಲ. ಕುರೂಪತೆ ಎಂಬುದು ಅಪರಾಧವಲ್ಲ. ಆದರೂ ಅವರು ಹರಿಯ ಕರುಣೆಗೆ ಅರ್ಹರು. ಸುಖ ದುಃಖಗಳ ನಿರ್ಧಾರ ಎಲ್ಲಿ ಅದು ಮನಸ್ಸಿನಲ್ಲಿ. ಯಾರಲ್ಲಿ ಸಂಪತ್ತು ಹೆಚ್ಚು ಎಷ್ಟು ಉಂಟು. ಅವನು ಯಾವ ತಲ್ಪದಲ್ಲಿ ಮಲಗುತ್ತಾನೆ. ಅವನ ಶ್ರೀಮಂತಿಕೆಯ ಜೇವನದ ರೀತಿಯಿಂದ ಅಲ್ಲ ಸುಖವನ್ನು ನಿರ್ಣಯಿಸುವುದು. ಇಷ್ಟೆಲ್ಲ ಇದ್ದವನೂ ಮಾನಸಿಕ ಅಸಂತೃಪಿಯಿಂದಲೂ ನಿದ್ರಾಹೀನತೆಯಿಂದಲೂ ಬಳಲುದಿಲ್ಲವೋ?  ಹಂಸ ತೂಲಿಕಾ ತಲ್ಪದಲ್ಲಿ ಸುಯೋಧನ ಮಲಗಿದ್ದರೂ ಪಾಂಡವರ ಯೋಚನೆಯಲ್ಲೇ ನಿದ್ರಾಹೀನನಾಗಲಿಲ್ಲವೇ? ಮರದ ಬುಡದಲ್ಲಿ ಮಲಗಿದ್ದರೂ ಪಾಂಡವರು ನಿಶ್ಚಿಂತೆಯಿಂದ ನಿದ್ರಿಸಲಿಲ್ಲವೇ? ಹಾಗಾಗದರೆ ಸುಖ ನಿರ್ಧರಿಸುವುದು ಇಲ್ಲೇ. ಮಾನಸಿಕ ಸ್ಥಿತಿಯಲ್ಲಿ. ಕುಸ್ತಿಯ ಮಲ್ಲನಿಗೆ ಮರಳ ಮಣ್ಣನ್ನೇ ಅನುಕೂಲಿಸಿ ಕೊಡಬೇಕು. ಅವನಿಗೆ ಶ್ರೇಯಸ್ಸಿಗೆ ಅದುವೇ ಅನುಕೂಲ. ಹಾಗೆ ಪಾಂಡವರಿಗೆ ವನವಾಸ. ಹಾಗಾದುದರಿಂದ ಅವನಿಗೆ ಅಭಿಮುಖರಾಗಿರುವವರಿಗೆ ಭಗವಂತನು ಅಭಿಮುಖವಾಗಿಯೂ ವಿಮುಖವಾಗಿರುವವರಿಗೆ ವಿಮುಖನಾಗಿಯೂ ಇರುತ್ತಾನೆ. ಆದುದರಿಂದ್ ಅರ್ಧ ರಾಜ್ಯ ಕೊಡೆ ಎಂದು ಛಲ ಹಿಡಿಯಬೇಡ. ಅವನು ಅದನ್ನು ನಿನ್ನಿಂದ ಕಿತ್ತುಕೊಂಡಾದರೂ ಪಾಂಡವರಿಗೆ ನೀಡುತ್ತಾನೆ.
           
ಭೀಷ್ಮರು ಅಧೀರರಾಗುತ್ತಾರೆ. ಅದೂ ತನ್ನ ಮೊಮ್ಮಗನ ಆರೋಪದ ನುಡಿ ಭರ್ತ್ಸನೆ ಕೇಳಿ. “ ಅಜ್ಜಾ ಕೌರವರು ಪಾಂಡವರಲ್ಲಿ ನಿಮಗೆ ಭೇದವೆ?”  ಹೆತ್ತ ತಾಯಿ ಮೊದಲು ಅಲುಗುವ ಮಾತು, ಮಕ್ಕಳಿಂದ ಬಂದಾಗ  ಅದು, ’ಭೇದ ಮಾಡ್ತಿಯ ತಾಯಿ’  ಎಂಬ ಆರೋಪ ಕೇಳಿ ಬಂದಾಗ. ಯಾವುದೇ ಪ್ರಾಣಿಗೆ ತನ್ನ ದೇಹದ ಯಾವುದೇ ಭಾಗವಾದರೂ ಭೇದ ಮಾಡುವುದಕ್ಕೆ ಸಾಧ್ಯವಾಗ್ತದೆಯೇ? ಕೈಯಲ್ಲಿ ಐದೂ ಬೆರಳುಗಳು ಗಾತ್ರದಲ್ಲಿ ಸಣ್ಣದು ದೊಡ್ಡದು ಇರಬಹುದು. ಅದರ ಉಪಯೋಗದ ಆದ್ಯತೆ ಹೆಚ್ಚು ಕಡಿಮೆ  ಇರಬಹುದು ಹಾಗೆಂದು ಯಾವುದೇ ಬೆರಳಿಗೆ ನೋವಾದರೂ ಆ ಅನುಭವ ಆಗುವುದೆಲ್ಲಿಗೆ? ಕೌರವನದ್ದು ಬುದ್ದಿ ದಾರಿದ್ರ್ಯದ  ಪ್ರಶ್ನೇಯೇ?  ಭೀಷ್ಮ ಯೋಚಿಸುತ್ತಾನೆ.  ಖಂಡಿತ ಅಲ್ಲ. ಹೇಗಾದರೂ ಭೀಷ್ಮರನ್ನು ಪ್ರಚೋದಿಸಬೇಕು.ಹೊಡೆತ ತಿಂದಾಗಲೇ ಮೃದಂಗ ಶ್ರುತಿ ಸೇರಿಸುವುದು. ಪಳಗಿದ ವಾದನ ಪಟುವಿಗೆ ಅರಿವಿರುತ್ತದೆ. ಎಲ್ಲಿ ಹೊಡೆದರೆ ಶ್ರುತಿ ಹೊಂದಿಕೆಯಾಗ್ತದೆ ಎಂದು. ಪಳಗಿದ ವಾದಕನಂತೆ ಕೌರವನ ಮಾತು. ಇದೆಲ್ಲ ತಿಳಿದಿದ್ದರೂ ಭೀಷ್ಮರು ವಿಚಲಿತರಾದಂತೆ ಪ್ರತಿಜ್ಞಾವಾಕ್ಯ ಮೊಳಗಿಸುತ್ತಾರೆ. ಅಂತರಂಗದಲ್ಲಿ ಪರಮಾತ್ಮ ಶ್ರೀಕೃಷ್ಣನ ಬಗ್ಗೆ ಇದ್ದ ಅಲ್ಪ ಅಸಮಧಾನವೂ ಕಾರಣವಾಗಿರಬಹುದು.  

ಹಸ್ತಿನಾವತಿಯ ಸಿಂಹಾಸನದ ಹೊಣೆ ಶಂತನು ಚಕ್ರವರ್ತಿಯಿಂದ ಪಡೆದುಕೊಂಡದ್ದು. ಪರಿಪೂರ್ಣನಾದ ಒಬ್ಬ ಕ್ಷತ್ರಿಯ ಆ ಸಿಂಹಾಸನದಲ್ಲಿ ಏರಿದಾಗಲೇ ಈ ಹೊಣೆಗಾರಿಕೆಯ ಭಾರ ಇಳಿಸಬೇಕು. ಬಹುಶಃ ಭಗವಂತನ ನಿಯತಿಯೇ ಇದು ಇರಬೇಕು. ಪರಿ ಪರಿಯ ಬೇಡಿಕೆಗೆ ಕೌರವನ ಮೊಂಡುವಾದವೇ ಮುಂದಾಗುವುದಾದರೆ ಇದಕ್ಕಿಂತ ಬೇರೆ ಪುರಾವೆ ಬೇಕೆ. ಈ ಅಪೂರ್ಣ ಬದುಕಿನತ್ತ ಯೋಚಿಸುತ್ತಾರೆ. ಭೀಷ್ಮರದು ಅತ್ತ ಪೂರ್ಣ ಗೃಹಸ್ಥನಲ್ಲದ ಬದುಕು. ಇತ್ತ ಪೂರ್ಣ ಸನ್ಯಾಸಿ ಎನ್ನಿಸಿಕೊಳ್ಳದ ಬದುಕು. ಏಕಾಂಗಿಯಾಗಿ ಇದ್ದರೂ ಏಕಾಂತವನ್ನು ಅನುಭವಿಸದ ಬದುಕು. ಹಸ್ತಿನಾವತಿಯ ಅರಸನೂ ಅಲ್ಲ, ಹಾಗಂತ ಅರಸೊತ್ತಿಗೆ ಬಿಟ್ಟು ಹೋಗದಂತಹ ಸ್ಥಿತಿ. ಭಾಗವತೋತ್ತಮ ಎನಿಸಿಕೊಂಡರೂ ಭಗವದನುಗ್ರಹ ಮರೀಚೆಕೆಯಾದಂತಹ ಬದುಕು. ಹಾಗಾಗಿ ತನ್ನ ಬದುಕನ್ನು ಭಗವಂತನ ಎದುರು ಪಣಕ್ಕಿಡುವಂತೆ ಪ್ರತಿಜ್ಞೆಗೈಯುತ್ತಾರೆ.. ಭೀಷ್ಮ ಸೇನಾಧಿಪತ್ಯ  ಕೌರವ ತನ್ನ ಸಭೆಯ ಸರ್ವ ಸಮ್ಮತ ಏಕಾಭಿಪ್ರಾಯ ಎಂದು ಬಿಂಬಿಸ ಹೊರಟರೂ ವಯೋ ವೃದ್ಧ ಭೀಷ್ಮನಿಗೆ  ಪಟ್ಟ ಎಂದಾಗಲೇ ಕರ್ಣಾದಿಗಳು ಅಸಮಧಾನ ಸೂಚಿಸಿದ್ದರು. ಹಾಗಾದರೆ ಭೀಷ್ಮರ ಸಾಮಾರ್ಥ್ಯಕ್ಕೆ ಹಸ್ತಿನಾವತಿಯಲ್ಲೇ ಅಪಸ್ವರ ಇದೆ ಎಂದಾಯಿತು. ಇನ್ನು ಈ ಬದುಕಿನಲ್ಲಿ ಈ ಪ್ರಶ್ನೆಗೆ ಉತ್ತರಿಸುವ ಅವಕಾಶವೂ ಸಿಗದೇ ಹೋದೀತೆ?  ಅದೇ ಆವೇಶವೆಂಬಂತೆ ಪ್ರತಿಜ್ಞಾ ವಾಕ್ಯ ಮೊಳಗುತ್ತದೆ. “ ದಿನವೊಂದಕ್ಕೆ ಹತ್ತು ಸಾವಿರ ಮುಕುಟ ಮರ್ದನರ ತಲೆಯನ್ನು ಕತ್ತರಿಸುತ್ತೇನೆ,”  ಇಷ್ಟು ಸಾಲದೂ ಎಂಬಂತೆ ಭಗವಂತ ಶ್ರೀಕೃಷ್ಣನಿಗೆ ಒಂದು ಸವಾಲು ಬರೆದು ಬಿಡುತ್ತಾರೆ. “ಚಕ್ರ ಹಿಡಿಯುವುದಿಲ್ಲ ಎಂದು ಸಂಕಲ್ಪ ಮಾಡಿದ ಶ್ರೀಕೃಷ್ಣನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ. “  ಈ ಪ್ರತಿಜ್ಞೆ ಪರೋಕ್ಷವಾಗಿಯೂ ಪ್ರತ್ಯಕ್ಷವಾಗಿಯೂ ಭಗವಂತನಿಗೆ ಎಸೆದ ಸವಾಲುಗಳಾಗಿತ್ತು. ಭೀಷ್ಮರ ಕೊನೆಯ ಪ್ರತಿಜ್ಞೆಯೇ ಶ್ರೀ ಕೃಷ್ಣನಿಗೆ ಎದುರಾಗಿ ಎಂದರೆ ಅದೂ ಒಂದು ವಿಪರ್ಯಾಸ. 

Sunday, September 21, 2014

ಯಕ್ಷಬ್ರಹ್ಮ ಪದವಿಗೊಂದು ಪ್ರಶ್ನೆ

          ಮಹಾಭಾರತದಲ್ಲಿ ಪಾಂಡವರು ಕೌರವರಿಗೆ ಗುರುವಾದ ದ್ರೋಣ ಶಸ್ತ್ರಾಭ್ಯಾಸ ಮಾಡಿಸುತ್ತಾನೆ. ನೂರೈದು ಮಂದಿ ಶಿಷ್ಯರು ಶಸ್ತ್ರವಿದ್ಯೆಯಲ್ಲಿ ಪರಿಣತಿಯನ್ನುಗಳಿಸಿದ ಬಳಿಕ ಶಸ್ತ್ರ ಪರೀಕ್ಷೆಯನ್ನು ಭೀಷ್ಮ ಧೃತರಾಷ್ಟ್ರರ ಸಮ್ಮುಖದಲ್ಲಿ ದ್ರೋಣ ಏರ್ಪಡಿಸುತ್ತಾನೆ. ಶಸ್ತ್ರ ಪರೀಕ್ಷೆಯಲ್ಲಿ ನೈಪುಣ್ಯತೆಯನ್ನು ಪರೀಕ್ಷೆಗೊಳಪಡಿಸಿ ಆ ಮೂಲಕ ತನ್ನ ಗುರುತ್ವವನ್ನು ದ್ರೋಣ ಪುಷ್ಟೀಕರಿಸುತ್ತಾನೆ. ಆ ಪರೀಕ್ಷಾರಂಗದಲ್ಲಿ ಬಿಲ್ಲುವಿದ್ಯೆಯಲ್ಲಿ ಯಾರೂ ಇದಿರಿಲ್ಲದ ಸಾಮಾರ್ಥ್ಯವನ್ನು ಅರ್ಜುನ ನೀಡುತ್ತಾನೆ. ತನ್ನ ಪಟ್ಟ ಶಿಷ್ಯ ಅರ್ಜುನನಿಗೆ ದ್ರೋಣರು “ಪಾರ್ಥೋ ಏವ ಧನುರ್ಧರಃ”  ಎಂದು ಕೊಂಡಾಡಿದರೆ ಕುರುಕುಲ ವೃದ್ದ ಪಿತಾಮಹ ಭೀಷ್ಮ ಅಂಕಿತವನ್ನು ಎಳೆಯುತ್ತಾರೆ.

          ದ್ರೋಣ ಭೀಷ್ಮರಿಬ್ಬರಿಗೂ ಧನುರ್ವೇದವನ್ನು ಕಲಿಸಿದ ಗುರುಗಳು ಪರಶುರಾಮರು. ಇಬ್ಬರೂ ಧನುರ್ವಿದ್ಯೆಯಲ್ಲಿ ಅಸಾಮಾನ್ಯ ಪರಾಕ್ರಮವನ್ನು ಹೊಂದಿದವರು. ಅದರಲ್ಲೂ ಭೀಷ್ಮ ಸ್ವತಃ ಪರಾಕ್ರಮಿಗಳು. ತನ್ನ ಪ್ರವೇಶ ಮಾತ್ರದಿಂದಲೇ ಯುದ್ದವನ್ನು ಜಯಿಸಬಲ್ಲ ಅಖಂಡ ಪರಾಕ್ರಮಿ. ಆದರೂ ಇಲ್ಲಿ ಪರೀಕ್ಷಾರಂಗದಲ್ಲಿ ಪಾರ್ಥೋ ಏವ ಧನುರ್ಧರನಾದ. ಸ್ವತಃ ಭೀಷ್ಮನಾಗಲಿ ದ್ರೋಣರಾಗಲೀ ಸ್ಪರ್ಧಾಳುಗಳಾಗಿ ರಂಗಕ್ಕಿಳಿಯಲಿಲ್ಲ.

          ಯಕ್ಷಗಾನ ವಿಶ್ವಮಟ್ಟದಲ್ಲಿ ಹೆಸರನ್ನು ಗುರುತಿಸುವ ಹವಣಿಕೆಯಲ್ಲಿದೆ. ಇದು ಕೇವಲ ಒಂದೆರಡು ಕೆಲಸಗಳಿಂದ ಅಥವಾ ಒಂದಿಬ್ಬರ ಯತ್ನದಿಂದ ಆಗಿರುವುದಲ್ಲ. ಕಾಲ ಕಾಲಕ್ಕೆ ಜೀವಿಸಿದ ಮಹನೀಯರು ಅರಿತೋ ಅರಿಯದೆಯೋ ಇದರಲ್ಲಿ ತಮ್ಮದೇ ದೇಣಿಗೆ ನೀಡಿದ್ದಾರೆ. ಅದರಂತೆ ಇತ್ತೀಚೆಗೆ ಜಾಗತಿಕಟ್ಟದಲ್ಲಿ ಯಕ್ಷಗಾನ ಒಂದು ಸ್ಪರ್ಧಾರಂಗವಾಗಿ ಗುರುತಿಸಿ ಒಂದು ಉತ್ಸವವಾಗಿ  ಆಚರಣೆಯಲ್ಲಿದೆ. ಈ ಬೃಹತ್ ಸ್ಪರ್ಧಾಕಣದಲ್ಲಿ ಬಹಳಷ್ಟು ಹಿರಿಯ ಕಿರಿಯ ಕಲಾವಿದರು ವಯೋಭೇದವಿಲ್ಲದೆ  ತಮ್ಮನ್ನು ತಾವು ತೊಡಗಿಸಿಗೊಂಡು ಈ ಸ್ಪರ್ಧೆ ಮಾಹಾ ಸಂಭವ ಎಂಬಂತೆ ಬಿಂಬಿಸಲ್ಪಟ್ಟಿದೆ.  ಇದರಲ್ಲಿ ಎರಡು ಮಾತಿಲ್ಲ.  ಈ ಸ್ಪರ್ಧೆಯ ಆರಂಭ ರೇಖೆಯಲ್ಲಿ ನಿಂತ ಹುರಿಯಾಳುಗಳನ್ನು ಕಂಡಾಗ ಮೇಲಿನ ಪೌರಾಣಿಕ ಪ್ರಕರಣ ನೆನಪಿಗೆ ಬಂತು ಚಿಂತನೆಗೆ ಗ್ರಾಸವನ್ನೊದಗಿಸಿಬಿಟ್ಟಿತು.
          ಯಕ್ಷಗಾನ ಸ್ಪರ್ಧೆ ಆರಂಭದಲ್ಲೇ ಸಿದ್ದ ಪ್ರಸಿದ್ದ ಕಲಾವಿದರ ಪಟ್ಟಿಯೇ ಸ್ಪರ್ಧೆಗೆ ಇನ್ನಿಲ್ಲದ ಪ್ರಸಿದ್ಧಿಯನ್ನು ಪ್ರಕಾಶವನ್ನು ಕೊಟ್ಟದ್ದು ಯಕ್ಷಗಾನ ವಲಯದಲ್ಲಿ ಒಂದು ಸಂಚಲನವನ್ನು ಮೂಡಿಸಿತ್ತು. ಇದರ ಸಿದ್ದತೆಗಳು ಎಲ್ಲವೂ ಒಂದು ಕಲ್ಪನಾರಹಿತ ಭಾವನೆಯನ್ನು ಸೃಷ್ಟಿಸಿ,  ಒಂದು ದೊಡ್ಡ ವರ್ಷಧಾರೆಯ ಮೊದಲು ಕಟ್ಟುವ ದಟ್ಟ ಮೋಡವು ಮೇಘವರ್ಷದ ನಿರೀಕ್ಷೆಯನ್ನು ಮೂಡಿಸಿದಂತೆ ನಿರೀಕ್ಷೆಯನ್ನು ಹುಟ್ಟಿಸಿತು. ನಿಜಕ್ಕೂ ಇಲ್ಲಿ  ಬಹಳ ದೊಡ್ಡ ವರ್ಷಧಾರೆಯೇ ಸುರಿದುಬಿಟ್ಟಿತು. ಸುರಿದ ವರ್ಷಧಾರೆಯ ಸಾಧಬಾಧಕಳನ್ನು ಗುರುತಿಸಲು ಮಳೆ ಸ್ವಲ್ಪ ನಿಂತಾಗ ಒಂದು ಸಲ ಸುತ್ತಾಡಿ ಬಂದಂತೆ ಕಣ್ಣಿಗೆ ಕಂಡ ಒಂದು ವಿಷಯ.

          ಸ್ಪರ್ಧೆ ಆರಂಭವಾದಂದಿನಿಂದ ಹಲವರು ಇದರಲ್ಲಿ ತೊಡಗಿಸಿಕೊಂಡು ಒಂದು  ಗಂಭೀರ  ಮಜ್ಜನವನ್ನು ತಮ್ಮ ಶಕ್ತ್ಯಾನುಸಾರ ಅನುಭವಿಸಿದ್ದಾರೆ. ಆದರೆ ಸ್ಪರ್ಧಾಂಭದ ರೇಖೆಯಲ್ಲಿ ಯಕ್ಷಗಾನದ ಭೀಷ್ಮರೆಂದು ಗುರುತಿಸಿಕೊಳ್ಳುವ ಸಮಕಾಲೀನ ಮಾಹಾ ವ್ಯಕ್ತಿಗಳು ನಿಂತುಕೊಂಡು ಸ್ಪರ್ಧೆಯ ಓಟಕ್ಕೆ ತುದಿಗಾಲನ್ನು ಇಟ್ಟದ್ದು ಸ್ಪರ್ಧೆಯ ಒಂದು ವಿಡಂಬನೆಯಾಗಿ ಕಂಡಿತು.

          ಯಕ್ಷಗಾನ ಎಂದರೆ ಎಲ್ಲರಿಗೂ ತಿಳಿದ ಹಾಗೆ ಪರಂಪರೆಯಿಂದ ಹುಟ್ಟಿ ಅನುಭವಿಸಿಕೊಂಡು ಬಂದ ಕಲೆ. ಇದಕ್ಕೆ ಯಾವುದೇ ಶಾಸ್ತ್ರೀಯ ಚೌಕಟ್ಟು ಇಲ್ಲದಾಗ ಹಿರಿಯ ಕಲಾವಿದರ ನಿರ್ಣಯಗಳು ಅವರು ತಳೆದ ನಿಲುವು, ಅನುಸರಿಸಿದ ಮಾರ್ಗಗಳೇ ಶಾಸ್ತ್ರವಾಗಿ  ಆಚರಣೆಗೆ ಬಂತು. ಅದು ಇಂದಿಗೂ ಪ್ರಚಲಿತ. ಹಿರಿಯರು ಹಾಕಿಕೊಟ್ಟ ಪಂಕ್ತಿಯೇ ಎಲ್ಲರಿಗೂ ಅನುಸರಣೆಯೋ ಅನುಸರಣೆಯೋ ಆಗಿ ಕಲೆಬೆಳೆದು ಬಂತು. ಈ ಅನುಕರಣೆಗೆ ವರ್ತಮಾನದ ಹಿರಿಯ ಕಲಾವಿದರು ದಿಕ್ಸೂಚಕರೂ ನಿರ್ದೇಶಕರೂ ಆಗಿ ಇದಮಿತ್ಥಂ ಎಂಬ ನಿರ್ಣಯವನ್ನು ಮಂಡಿಸುವ ಸ್ಥಾನದಲ್ಲಿ ಗುರುತಿಸಲ್ಪಟ್ಟರು. ವರ್ತಮಾನದ ಈ ಜಾಗತಿಕ ಸ್ಪರ್ಧೆಯಲ್ಲಿ ಇಂತಹ ಗುರು ಸ್ಥಾನಿಗಳು ನಿರ್ಣಾಯಕರ ಲೇಖನಿಯ ಅಂಕಗಳಿಗೆ ತಮ್ಮ  ವಿದ್ವತ್ತನ್ನು ಬರೆದುಕೊಟ್ಟದ್ದು ವಿಪರ್ಯಾಸವಾಗಿ ಕಂಡು ಬರುತ್ತದೆ. ವಾಸ್ತವದಲ್ಲಿ ಸ್ಪರ್ಧಾಳುಗಳನ್ನು ಕಂಡಾಗ ನಿರ್ಣಾಯಕರ ಲೇಖನಿ ಕಂಪಿಸಬೇಕು. ಇಲ್ಲಿ ಅಂಕಗಳನ್ನು ಬಿತ್ತುವಲ್ಲಿ ಅವರು ಗುರುತಿಸಬಹುದಾದ ಮಾನದಂಡಗಳ ಬಗ್ಗೆ ವಿವೇಚನೆ ಹುಟ್ಟಬೇಕಿತ್ತು. ಆದರೆ ಹಾಗೆ ಆಗಲೇ ಇಲ್ಲ. ಸ್ಪರ್ಧಾಕಣದಲ್ಲಿ ಭೀಷ್ಮ ದ್ರೋಣರೂ ಬಿಲ್ಲು ಹಿಡಿದು  ಗುರಿಯತ್ತ ಬಾಣವನ್ನು ಎಸೆದರು. ನಿರ್ಣಾಯಕರು ಅದರ ಸಾಧಕ ಭಾದಕಗಳು ಅಳೆದು ಅಂಕಗಳನ್ನು ಬಿತ್ತುತ್ತಾ ಸಾಗಿದರು.
          ಕೆಲವು ಹಿರಿಯ ಕಲಾವಿದರ ಹೆಸರನ್ನು ಕೇಳಿದ ಮಾತ್ರಕ್ಕೆ ಕನಸಿನಲ್ಲೂ ಎಚ್ಚರದಲ್ಲೂ ಯಕ್ಷಗಾನದ ಸವಿಯನ್ನು ಅನುಭವಿಸುವಾಗ ಅಂತಹ ಕಲಾವಿದರು ಸ್ಪರ್ಧಿಗಳಾಗಿ ನಿಲ್ಲುವುದು ಸರಿಯೇ? ಈ ಹಿರಿಯ ಕಲಾವಿದರ ಕಲಾ ಸಾಮಾರ್ಥ್ಯವಾಗಲೀ ಅವರು ಆರ್ಜಿಸಿಕೊಂಡ ಕಲಾನೈಪುಣ್ಯತೆಯಾಗಲೀ ಅದಕ್ಕೆ ಮೌಲ್ಯವನ್ನು ಕಟ್ಟುವುದು ಸಾಧ್ಯವಿಲ್ಲವೆಂದೇ ಯಕ್ಷಗಾನದ ಅಭಿಮಾನಿಯ ಪ್ರಾಮಾಣಿಕ ಅಭಿಪ್ರಾಯ. ಇಂತಹ ಮಹನೀಯರ ಪ್ರತಿಭೆಗೆ,  ಸಾಮರ್ಥ್ಯಕ್ಕೆ,  ಅವರ ಜ್ಞಾನಕ್ಕೆ ತಕ್ಕಡಿಯನ್ನು ಹಿಡಿಯುವುದೆಂದರೆ ಅದು ಮೂಢತನದ ಕೆಲಸವಲ್ಲವೇ? ತನ್ನ ಸಾಮಾರ್ಥ್ಯದ ಅರಿವಿಲ್ಲದೇ ಇದ್ದ ಸಂದರ್ಭದಲ್ಲಿ ಆತನನ್ನು ಪ್ರಲೋಭನೆಗೆ ಒಡ್ಡಿ ಅದರಲ್ಲಿ ರಂಜನೆಯನ್ನು ಅನುಭವಿಸುವುದು ಅದು ಖಂಡನೀಯ. ಮುದ್ರೆಯನ್ನು ಒತ್ತಬೇಕಾದ ಕೈಗಳು ಸ್ಪರ್ಧೆಯಲ್ಲಿ ಮುಷ್ಠಿ ಬಿಗಿ ಹಿಡಿದು ನಿಂತರೆ ಪರೋಕ್ಷವಾಗಿ ಅದು ಯಕ್ಷಗಾನವನ್ನೇ ಲೇವಡಿ ಮಾಡಿ ವ್ಯವಸ್ಥೆಯನ್ನು ಅಣಕಿಸಿದಂತೆ ಭಾಸವಾಗುತ್ತದೆ.  

          ಹಿರಿಯ ಕಲವಿದರುಗಳಾದ ಬಲಿಪ್ಪರನ್ನು, ಗೋವಿಂದಣ್ಣನನ್ನು ನಾವು ಯಕ್ಷಭೀಷ್ಮರೆಂದು ಅನ್ವರ್ಥಗೊಳಿಸಿ  ಕೊಂಡಾಡುತ್ತ ಅವರನ್ನು ರಂಗದ ಮೇಲೆ ಕಂಡಾಗ ನನಗಂತೂ ಇದು ಮೌಲ್ಯವನ್ನು ಕಟ್ಟಲಾಗದ ವಸ್ತುವಾಗಿ ಭಾಸವಾಗುತ್ತದೆ. ಆದರೂ ಇಲ್ಲಿ ಅವರ ಪ್ರತಿಭೆಗೆ ಅಂಕವನ್ನು ಬರೆಯಲಾಗುತ್ತದೆ. ಇದು ವಿಪರ್ಯಾಸ.  ಯಾವುದನ್ನು ಉನ್ನತ ಸ್ಥಿತಿಯಲ್ಲಿ ಗುರುತಿಸಿ  ಆ ಉನ್ನತಿಯನ್ನು ನಿರ್ಣಯಿಸುವುದೆಂದರೆ ನನ್ನ ಯೋಚನೆಗೆ ಸಾಧ್ಯವಾಗದ ವಿಚಾರ. ಇಲ್ಲಿ ಗೆದ್ದವರು ಇವರಿಂದಲೂ ಶ್ರೇಷ್ಠರು ಎಂದು ಯೋಚಿಸುವುದು ನನಗಂತೂ ಸಾಧ್ಯವಿಲ್ಲ. ಆದರೂ ಇಲ್ಲಿ ಭೀಷ್ಮರಿಗೆ ಒಬ್ಬ ಸ್ಪರ್ಧಿಯನ್ನು ಮಾಡಿದ್ದೇವೆ ಎಂದ ಮೇಲೆ ಕಾಲಾಯ ತಸ್ಮೈ ನಮಃ ಎಂದು ನಿಟ್ಟುಸಿರು ಬಿಡುತ್ತೇನೆ.  ಇದು ಕೇವಲ ನನ್ನ ಅನಿಸಿಕೆ. ನನ್ನ ತಿಳುವಳಿಕೆ ಸೀಮಿತ. ಆದರೂ ಓದುಗರೇ ನಿಮಗೆ ಹೇಗೆ ಅನ್ನಿಸುತ್ತದೆ?
          

          

Friday, September 12, 2014

ಗಂಗಾ ತನಯ ಭೀಷ್ಮ


ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾಸೃಜಾಮೃಹಮ್||
ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಮ್||
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||

ಯಾವಾಗ ಧರ್ಮಕ್ಕೆ ಗ್ಲಾನಿಯುಂಟಾಗುತ್ತದೆಯೋ ಆವಾಗ ಧರ್ಮವನ್ನು ನೆಲೆಗೊಳಿಸುವುದಕ್ಕೊಸ್ಕರ ಯುಗ ಯುಗದಲ್ಲೂ ಜನ್ಮ ತಾಳುವೆನು..ಇದು ಭಗವಂತನ ಮಾತು.

ಮಹಾಭಾರತದ ಆದ್ಯಂತ ಧರ್ಮ ಸ್ಥಾಪನೆಗೋಸ್ಕರ ಶ್ರೀಕೃಷ್ಣ ಆಡಿದ ಆಟ ವ್ಯಕ್ತವಾಗುತ್ತಾ ಸಾಗುತ್ತದೆ. ಈ ಆಟದಲ್ಲಿ ಹಲವು ಪಾತ್ರಗಳು ಕಾಯಿಗಳಾಗಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಧರ್ಮ ಸಂಸ್ಥಾಪನೆಯಲ್ಲಿ ಭಗವಂತನಿಗೆ ತನ್ನ ಪಾಲನ್ನು ನೀಡುತ್ತಾ ಬಂದಿವೆ. ಅವುಗಳಲ್ಲಿ ಒಂದು ಪಾತ್ರ ದೇವವ್ರತ ಭೀಷ್ಮ. ಮಹಾಭಾರತದಲ್ಲಿ ಆರಂಭದಿಂದ ಅಂತ್ಯದವರೆಗೂ ಒಂದು ತತ್ವಕ್ಕಾಗಿ ಹೋರಾಡುವ ಈ ಪಾತ್ರ ಯಕ್ಷಗಾನದ ಹಲವು ಪ್ರಸಂಗಳಲ್ಲಿ ಕಥೆಯ ಮುಖ್ಯಪಾತ್ರವಾಗಿ ಬಿಂಬಿಸಲ್ಪಟ್ಟಿದೆ. ದೇವವೃತನಾಗಿ ಗಂಗೆಯ ಗರ್ಭದಲ್ಲಿ  ಶಂತನು ಚಕ್ರವರ್ತಿಯ ಪುತ್ರನಾಗಿ ಜನಿಸುತ್ತಾನೆ.  ತಂದೆಗಾಗಿ ಭೀಷಣವಾದ ಶಪಥ ಮಾಡಿ ಭೀಷ್ಮ ಎನಿಸಿಕೊಳ್ಳುತ್ತಾನೆ. ತನ್ನ ಮಾತು ಉಳಿಸುವುದಕ್ಕೊಸ್ಕರ ಧರ್ಮಕ್ಕಾಗಿ ಗುರುವಿನೊಡನೆ ಹೋರಾಟ ಮಾಡಿ ಜಯಿಸುತ್ತಾನೆ. ಭೀಷ್ಮ ಪರ್ವದಲ್ಲಿ  ಸ್ವ ಇಚ್ಛೆಯಿಂದ ಶರಶಯ್ಯೆಗೆ ಜಾರುತ್ತಾನೆ. ಧರ್ಮರಾಯನಿಗೆ ಉಪದೇಶವನ್ನು ಮಾಡಿ ತನ್ನ ಪ್ರಾಣವನ್ನು ತಾನೇ ನೀಗಿಕೊಳ್ಳುತ್ತಾನೆ.

ಯಕ್ಷಗಾನದಲ್ಲಿ ಈ ಪಾತ್ರವನ್ನು ಹಲವು ಕಲಾವಿದರು ಹಲವು ರೀತಿಯಲ್ಲಿ ಅದನ್ನು ಯಕ್ಷಗಾನಕ್ಕೆ ಸಂಬಂಧಿಸಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ. ಇದೇ ಕಾರಣಕ್ಕೆ ಯಕ್ಷಗಾನದ ಪ್ರೇಕ್ಷಕನಲ್ಲಿ  ಭೀಷ್ಮ ಎಂಬ ಪಾತ್ರದ ಮುದ್ರೆ ಬಲವಾಗಿ ಮುದ್ರಿಸಲ್ಪಟ್ಟಿರುತ್ತದೆ. ಆದುದರಿಂದ ಸಾಮಾನ್ಯ ಪ್ರೇಕ್ಷಕನೂ  ಇಲ್ಲಿ ಭೀಷ್ಮನ ವ್ಯಕ್ತಿತ್ವವನ್ನೂ, ಭೀಷ್ಮನ ತತ್ವ ಸಿದ್ದಾಂತದ ತಳಹದಿಯನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಬಲ್ಲ.
ಪರುಶುಧಾರಿಯೊಳಿತ್ತ ಚೌಷಷ್ಟಿವಿದ್ಯವ | ನರಿತು ಗಂಗಾತ್ಮಜನು |
ಇರಲೊಂದಿನದೊಳು ಮಾತೆಗೆ ಭಕ್ತಿಯೊ | ಳೆರಗುತ ಪೇಳಿದನು || 

ಜನಕನು ಪುರದೊಳಗನುವಿಂದೆನ್ನನು | ನೆನೆಯುತ ದುಃಖಿಪನು |
ಜನನಿಯೆ ನೇಮವ ಕೊಡು ನಾ ಪೋಗುವೆ | ನೆನುತಿಹ ಕುವರನನು || 

ಪಿಡಿದಪ್ಪುತ ಸುಕುಮಾರನೆ ಎನ್ನೆಡೆ | ಗಡಿಗಡಿಗೈತಹುದು |
ನಡೆ ನೀ ಬಂದುದು ಬಹು ದಿನವಾಯಿತು | ಸಡಗರದಿಂ ಪುರಕೆ ||

ದೇವವ್ರತ ಹುಟ್ಟಿದೊಡನೆ ಶಂತನುವಿನಿಂದ ವಿಚ್ಛೇದತಳಾಗಿ ಅತನನ್ನು ತಾಯಿ ಗಂಗಾ  ಮಾತೆ ತನ್ನೊಂದಿಗೆ ಒಯ್ಯುತ್ತಾಳೆ.  ನಂತರದಲ್ಲಿ ಆತನನ್ನು ಪರಶುರಾಮನಲ್ಲಿ ವಿದ್ಯಾರ್ಜನೆಗೆ ಕಳುಹಿಸುತ್ತಾಳೆ. ಆಕೆ ಶಂತನುವಿನಿಂದ ಬೇರ್ಪಟ್ಟನಂತರ ಭೀಷ್ಮನಿಗೆ ತಂದೆಯ ಮುಖ ಕಾಣುವ ಸೌಭಾಗ್ಯಸಿಗುವುದಿಲ್ಲ.  ಪರಶುರಾಮರಿಂದಲೂ ಬೃಹಸ್ಪತಿಯಿಂದಲೂ ವಿದ್ಯಾ ಪಾರಂಗತನಾಗಿ ಪ್ರಾಯ ಪ್ರಬುದ್ಧನಾಗಿ ಹಸ್ತಿನಾವತಿಗೆ ಬರುತ್ತಾನೆ. ತನ್ನ ಜನ್ಮದಲ್ಲಿ  ಮಾತಾ ಪಿತರು ವಿಚ್ಛೇದಗೊಳಕ್ಕಾದರು ಎಂಬ ವಿಷಾದ ಮನಸ್ಸಿನಲ್ಲಿರುತ್ತದೆ. ತೆಂದೆಗಾಗಿ ಏನಾದರೂ ಮಾಡಬೇಕು ಎಂಬ ತುಡಿತ ಹಸ್ತಿನಾವತಿಗೆ ಬರುವಾಗಲೇ ಕಾಡುತ್ತಿರುತತದೆ.  ದೇವವ್ರತನಾಗಿ ಅರ್ಥ ಹೇಳುವಾಗ ಇದನ್ನು ಮನಮುಟ್ಟುವಂತೆ ಕೆಲವರು ವಿವರಿಸುತ್ತಾರೆ. ಎದುರಾಗುವ ಸಂದರ್ಭಕ್ಕೆ ಪ್ರೇಕ್ಷಕನನ್ನು ಮೊದಲೇ ಸಜ್ಜುಗೊಳಿಸುವ ಬಗೆಯದು. ಚೌಷಷ್ಟಿ ವಿದ್ಯೆಯೆಲ್ಲವನ್ನೂ ಕಲಿತು ಬಂದ ದೇವವ್ರತನಿಗೆ ವಿದ್ಯೆ ಎಂಬುದು ತ್ಯಾಗವನ್ನೇ ಕಲಿಸುತ್ತದೆ. ಸಂಪೂರ್ಣವಾದ ವಿದ್ಯೆ ಎಂದರೆ ನಾನು ಎಂಬ ಅಹಂ ನ್ನು ಬಿಡುವುದು ಅರ್ಥಾತ್ ವಿದ್ಯೆ ತ್ಯಾಗವನ್ನೇ ಸೂಚಿಸುತ್ತದೆ. ದೇವವೃತನ ಈ ಯೋಚನೆ ನಿರ್ಧಾರಗಳು ಪಾತ್ರ ದೃಷ್ಟಿಕೋನದ ಜತೆಗೆ ಆ ವ್ಯಕ್ತಿತ್ವದ ನಡೆ ಹೇಗಿರುತ್ತದೆ ಎಂಬುದನ್ನು ಮುಂದಾಗಿ ಸೂಚಿಸುತ್ತದೆ.

ಕೇಳಿದ ಮಂತ್ರಿ ಸುನೀತಿಯ ಕರೆದು ಭೂ |
ಪಾಲನೆಲ್ಲಿಗೆ ಪೋದನು ||
ಓಲಗಕೀದಿನ ಬರಲಿಲ್ಲವ್ಯಾತಕೆ |
ಪೇಳೆನಲಿಂತೆಂದನು |

ತೆರಳಿದ ಯಮುನೆಯ ತಡಿಯಿಂದ ಬಂದಂತಃ |
ಪುರದೊಳು ಮಲಗಿರುವ ||
ತೆರಳಲ್ಲಿಗೆನಲಾಗಲೈತಂದು ಪರಿಕಿಸೆ |
ಧರಣಿಪನಿರೆ ಮಂಚದಿ

ರಾಜ್ಯಾಡಳಿತದಿಂದ ವಿಮುಖನಾಗಿ ದೂರವೇ ಉಳಿದ ತಂದೆ ಶಂತನುವಿನ ದುಃಖದ ಮೂಲ ತಿಳಿಯುತ್ತಾನೆ ದೇವವೃತ. ಅಷ್ಟಸೌಭಾಗ್ಯಗಳು ಎಲ್ಲವೂ ಇದ್ದರೂ ಸ್ತ್ರೀ ಸೌಭಾಗ್ಯದಿಂದ ವಂಚಿತನಾದ ತಂದೆ ಶಂತನುವಿನ ವಿರಕ್ತಿಯ ಮೂಲ ಇದೇ ಎಂದು ತಿಳಿಯುತ್ತಾನೆ.    ದಾಶರಾಜನ ಮಗಳು ಮತ್ಸ್ಯಗಂಧಿ, ಸತ್ಯವತಿಯಲ್ಲಿ ಮಹಾರಾಜ ಶಂತನು ಅನುರಕ್ತನಾಗಿ ಅದು ಫಲಿಸದೆ ವಿರಾಗಿಯಾಗಿ ಅಂತಃಪುರವನ್ನು ಸೇರಿರುತ್ತಾನೆ. ತಂದೆಯ ಬಯಕೆಯನ್ನು ಈಡೇರಿಸುವಲ್ಲಿ ವಿದ್ಯಾಸಂಪನ್ನತೆಯನ್ನೇ ದೇವವ್ರತ ಮೆರೆಯುತ್ತಾನೆ.  ತಂದೆಯ ಮಾತಿಗೆ ತಾಯಿಶಿರವನ್ನು ಧರೆಗುರುಳಿಸಿದ ಪರಶುರಾಮನನ್ನೇ ಗುರುವಾಗಿ ಪಡೆದವನಲ್ಲವೇ?

ತಾಳ ಮದ್ದಲೆಯೊಂದರಲ್ಲಿ  ಹಿರಿಯ  ಅರ್ಥ ಧಾರಿ ಶೇಣಿ ಗೋಪಾಲಕೃಷ್ಣ ಭಟ್ಟರ ಶಂತನುವಿನ ಪಾತ್ರ ಪೋಷಣೆ ತೊಡಗುವುದು ಹೀಗೆ.   ಗಾಲವರ ಅಪೇಕ್ಷೆಯಂತೆ ತಮಾಲಕೇತುವನ್ನು ಕೊಂದು ಶಂತನು ಪುನಃ ತನ್ನ ಅರಮನೆ ಕಡೆಗೆ ಬರುತ್ತಾನೆ. ಪ್ರಕೃತಿಯ ರಮಣಿಯತೆಯನ್ನು ಸವಿಯುತ್ತಾ ಗಂಗಾ ನದೀತೀರದಲ್ಲೇ ಬರುತ್ತಿರುವಾಗ ಹಿಂದಿನ ಗಂಗೆಯೊಂದಿಗೆ ಬೆಸೆದ ಬಾಂಧವ್ಯದ ಮಧುರ ಸ್ಮೃತಿಯ  ಸಿಂಚನವಾಗುತ್ತದೆ. ಬರುತ್ತಾ ಗಂಗಾ ಯಮುನ ಸಂಗಮ ಸ್ಥಳಕ್ಕೆ ಬರುತ್ತಿದ್ದಾನೆ. ಯಮುನೆಯ ಸಂಗಮ ಕಂಡವನು ಭಾವನಾತ್ಮಕವಾಗಿ ಚಿಂತಿಸ ತೊಡಗುತ್ತಾನೆ. ಮೊದಲೇ ಗಂಗೆಯ ವಿಯೋಗದ ವೇದನೆಯ ನೆನಪನ್ನು  ಗಂಗಾನದಿಯ ತೀರ ಮಾಡಿಕೊಟ್ಟಿರುತ್ತದೆ. ಯಮುನೆಯ ಸಂಗ ಕಂಡಾಗ ಇನ್ನೂ ಯಮುನೆಯ ಸಂಗಮವಾದರೇನೆ ಗಂಗೆ ಪರಿಪೂರ್ಣಳಾಗುವಳೋ ಎಂದು ಭಾವಿಸುತ್ತಾನೆ. ಗಂಗೆ ಯಮುನೆಯ ಸಂಗಮದಲ್ಲೇ ಭಾಗೀರಥಿ ಪರಿಪೂರ್ಣಳಾಗುವುದು. ಇದೊಂದು ರೀತಿ ಮುಂದಿನ ಘಟನೆಗೆ ಸೂಕ್ಷ್ಮವಾಗಿ ತಳಹದಿಯನ್ನು ನಿರ್ಮಿಸುವ ರೀತಿ. ಗಂಗೆ ಶಂತನುವಿನ ಬದುಕಲ್ಲಿ ಸಂಗಮಿಸಿ ಹರಿದು ಹೋಗಿರುತ್ತಾಳೆ. ಆ ಗಂಗೆ ಪರಿಪೂರ್ಣಳಾಗಬೇಕಾದರೆ ಇನ್ನು ಹರಿಯಬೇಕಾದ ಯಮುನೆ ಯಾರಾಗಿರಬಹುದು?

ಸೂರ್ಯನಿಗೆ ಅಭಿಮುಖವಾಗಿ ಸಾಗುವಾಗ ನೆರಳು ಹಿಂಬಾಲಿಸಿದಂತೆ  ಬದುಕಿನಲ್ಲಿ ಹೆಂಡತಿಯಾದವಳು ಆರಂಭದಲ್ಲಿ ಹಿಂದೇ ಹಿಂದೆ ನೆರಳಾಗಿ ಹಿಂಬಾಲಿಸುತ್ತಾಳೆ. ಬದುಕಿನ ಮಧ್ಯದ ಯೌವನದಲ್ಲಿ ಸೂರ್ಯ ನಡು ನೆತ್ತಿಗೆ ಬಂದಾಗ ಅದೇ ನೆರಳು ತನ್ನೊಳಗೆ ಐಕ್ಯವಾದಂತೆ ಹೆಂಡತಿ ತನ್ನೊಳಗೆ ಐಕ್ಯಳಾಗಿಬಿಡುತ್ತಾಳೆ. ನಂತರ ಬದುಕಿನ ಮುಸ್ಸಂಜೆಯಲ್ಲಿ ಸೂರ್ಯ ಹಿಂದೆ ಸರಿದಾಗ ಅದೇ ನೆರಳು ನೆಮ್ಮ ಮುಂದೆ ಚಲಿಸಿದರೆ ಅದೇ ನೆರಳನ್ನು ನಾವು ಹಿಂಬಾಲಿಸುತ್ತೇವೆ. ಅಂದರೆ ಬದುಕಿನ ಈಸಂಜೆಯಲ್ಲಿ ಹಿಂಬಾಲಿಸಬೇಕಾದ ಒಂದು ನೆರಳಿನ ಅವಶ್ಯಕತೆಯಿದೆ ಎಂದಾಯಿತಲ್ಲ.

ದಾಶರಾಜ ತನ್ನ ಮಗಳನ್ನು ಶಂತನುವಿಗೆ ಕೊಡುವುದಕ್ಕೆ ಆತಂಕವನ್ನು ನಿವೇದಿಸಿಕೊಂಡಿದ್ದ. ಸತ್ಯವತೀ ಶಂತನುವಿನ ಮಹಾರಾಣಿಯಾದರೂ ಆಕೆಯ ಮಕ್ಕಳು,  ತಂದೆಯ ನಂತರ ದೇವವೃತನಿರುತ್ತಾ ಪಟ್ಟವನ್ನೇರುವ ಹಾಗಿಲ್ಲ. ಒಂದುವೇಳೆ ಶಂತನು ಮಕ್ಕಳನ್ನು ಪಟ್ಟವನ್ನೇರಿಸಿದರೂ ದೇವವ್ರತ ಇರುತ್ತಾ ಅದು ಅವರಿಗೆ ಸ್ಥಿರವಾಗಿ ಉಳಿಯಲಾರದು ಎಂಬ ಆತಂಕ.

ಭಾಮಿನಿ
ಭರತಕುಲದರಸುಗಳು ಧರ್ಮವ |
ತೊರೆದು ಪೋಗುವರಲ್ಲವೆಂದಿಗು |
ಸುರರು ಮುನಿಗಳು ಸಿದ್ಧಸಾಧ್ಯರು ಕೇಳಲೀಕ್ಷಣದಿ ||
ಒರೆವೆನೆನ್ನಯ ಶಪಥ ಲಾಲಿಸು |
ಪರಮ ಸಿಂಹಾಸನವನೇರುತ |
ಧರೆಯ ಪಾಲಿಪನಲ್ಲ ತಪ್ಪಲು ಶಂತಸುತನಲ್ಲ||

ದಾಶರಾಜನ ಆತಂಕದಿಂದ ವಿಚಲಿತನಾಗದೇ ದೇವವೃತ ವಿದ್ಯೆಯನ್ನು ತ್ಯಾಗವೆಂದೇ ಭಾವಿಸುತ್ತಾನೆ. ಹಾಗಾಗಿ ಸಿಂಹಾಸನವನ್ನು ತ್ಯಾಗಮಾಡುತ್ತಾನೆ ಮಾತ್ರವಲ್ಲ  ತನ್ನ ಮಕ್ಕಳು ಪಟ್ಟವನ್ನು ಏರುವುದು ಅಸಂಭವವಾಗಬೇಕೆಂಬ ನಿಶ್ಚಯದಿಂದ ತಾನು ಅಜನ್ಮ ಅಖಂಡ ಬ್ರಹ್ಮಚಾರಿಯಾಗಿ ಉಳಿಯುವ ಭೀಷ್ಮ ಪ್ರತಿಜ್ಞೆಯನ್ನುಗೈದು ಭೀಷ್ಮ ಎಂದು ಕರೆಸಿಕೊಳ್ಳುತ್ತಾನೆ.

ಆದರಾಲಿಸು ಶಪಥ ಇನ್ನೊಂದಿದೆ |
ಖೇದಪಡದಿರು ನಿನ್ನ ಮನಸಿಗೆ | ಮೋದದಿಂದಲೆ ಪೇಳ್ವೆನು ||
ಸುರರು ಸಿದ್ಧರು ಸಾಧ್ಯಗಂಧರ್ವರು |
ಗರುಡಪನ್ನಗರೆಲ್ಲ ಕೇಳ್ವುದು | ಒರೆವೆನೆನ್ನಯ ಶಪಥವ ||
ಸುತವಿಹೀನಗೆ ಗತಿಯಿಲ್ಲವೆಂಬುವ |
ಶ್ರುತಿಯು ಜನಕನ ಕಾರ್ಯಕೋಸುಗ | ಗತಿಯ ಪಡೆದಪೆ ಮುಂದಕೆ ||
ಇಂದಿನಾರಭ್ಯ ಮರಣ ಪರ್ಯಂತರ |
ವೊಂದೆ ಮನದೊಳು ಬ್ರಹ್ಮಚರ್ಯವು | ಇಂದುಮುಖಿಯರ ಪೊಂದೆನು  ||


ಪುತ್ರನ ಪಿತೃಭಕ್ತಿಗೆ ಪ್ರತಿಫಲವೆಂಬಂತೆ ಶಂತನು ಇಚ್ಛಾಮರಣಿಯಾಗುವಂತೆ ವರವನ್ನು ಅನುಗ್ರಹಿಸುತ್ತಾನೆ. ತಾನು ಇಚ್ಚಿಸಿದಾಗ ತನ್ನ ಬದುಕನ್ನು ಕೊನೆಗೊಳಿಸುವಂತಹ ವರ. ಬದುಕೇ ಅಲ್ಲದ ಏಕಾಂಗಿ ಬದುಕದು. ಅದನ್ನು ಅಂದೇ ಕೊನೆಗೊಳಿಸುವಂತೆ ಭೀಷ್ಮ ಬಯಸಬಹುದಿತ್ತು. ಆದರೂ ಬಯಸಲಿಲ್ಲ. ವಿಪರ್ಯಾಸವೆಂದರೆ ಅದೆಷ್ಟೋ ತಲೆಮಾರುಗಳನ್ನು ಹಸ್ತಿನಾವತಿಯಲ್ಲಿ ಕಂಡು ಮತ್ತೂ ಬದುಕುಳಿಯುತ್ತಾನೆ ಭೀಷ್ಮ.  ಪ್ರಶ್ನಾತೀತವಾದ ಭೀಷ್ಮನ ನಿಷ್ಠೆ, ಪ್ರಶ್ನಾತೀತವಾದ ಅಖಂಡ ಬ್ರಹ್ಮಚಾರಿತ್ವ  ಆದರೂ ಬದುಕಿನ ಅಂತ್ಯದವರೆಗೂ  ಆತನಿಗೆ ಅದುವೇ ಪ್ರಶ್ನೆಯಾಗಿ ಕಾಡಿದ್ದು ಸುಳ್ಲಲ್ಲ.