ನಾನು ಬಾಲ್ಯದಲ್ಲಿರುವಾಗಿನ ಒಂದು ಘಟನೆ ಇತ್ತೀಚೆಗೆ
ನೆನಪಾಗಿ ಬಿಟ್ಟದ್ದು ಯಕ್ಷಗಾನದ ಅವಹೇಳನದ ಬಗೆಗಿನ ವಿಚಾರಕ್ಕಾಗಿ. ನಮ್ಮೂರಿನ ರಾಜಕೀಯ
ಪಕ್ಷವೊಂದರ ಅದ್ಧೂರಿ ಸಮಾರಂಭ ವದು. ಸಮ್ಮೇಳನವೋ ಪ್ರತಿಭಟೆನೆಯೋ ನೆನಪಿಲ್ಲ. ಸಮಾರಂಭದ ಅಂಗವಾಗಿ ಬೃಹತ್ ಮೆರವಣೆಗೆ ವ್ಯವಸ್ಥೆಯಾಗಿತ್ತು.
ಸಾವಿರ ಸಾವಿರ ಸಂಖ್ಯೆಯ ಜನಗಳು ಸಾಲಾಗಿ ಮೆರವಣಿಗೆಯಲ್ಲಿ ಪಾಲುಗೊಂಡಿದ್ದರು. ಆ ಮೆರವಣಿಗೆಯಲ್ಲಿ ಹಲವು ಕಲಾಪ್ರಕಾರಗಳು, ಜಾನ ಪದ
ನೃತ್ಯಗಳು ಕಾರ್ಯಕ್ರಮದ ಅದ್ಧೂರಿತನಕ್ಕೆ
ಪೂರಕವೆಂಬಂತೆ ತಮ್ಮ ಪ್ರದರ್ಶನವನ್ನು ಮೆರವಣಿಗೆಯುದ್ದಕ್ಕೂ ನೀಡುತ್ತಿದ್ದವು. ನಾಡಿನ ಹಲವು
ಕಲೆಗೆ ಈ ರೀತಿಯ ಅವಕಾಶ ಒದಗಿ ಬಂದದ್ದು ತಪ್ಪು ಎನ್ನುವುದಕ್ಕೆ ಆಗುವುದಿಲ್ಲ. ಅದೇ ರೀತಿ
ಮೆರವಣಿಗೆಯಲ್ಲಿ ಯಕ್ಷಗಾನ ಕಲೆಯ ಪ್ರತಿಮೆ ಎಂಬಂತೆ ಕೆಲವು ಯಕ್ಷಗಾನ ವೇಷಗಳು ಚೆಂಡೆ ಮದ್ದಲೆಯ
ಧೀಂಗಿಣಕ್ಕೆ ಹೆಜ್ಜೆ ಹಾಕತೊಡಗಿತ್ತು. ದೇವಿ ಮಹಾತ್ಮೆಯ ದೇವಿ ಮಹಿಷಾಸುರ ದೇವೆಂದ್ರ ಹೀಗೆ ಕೆಲವಾರು ವೇಷಗಳು ಕುಣಿಯುತ್ತಾ
ಮೆರವಣಿಗೆಯ ಅಂದವನ್ನು ಹೆಚ್ಚಿಸುವಲ್ಲಿ ತಮ್ಮ ದೇಣಿಗೆಯ ಸಲ್ಲಿಕೆಯ ಪ್ರಯತ್ನದಲ್ಲಿತೊಡಗಿದ್ದವು.
ಆದರೆ ಶೋಚನೀಯವೆಂದರೆ ಆನಂತರದ್ದು.
ಮೆರವಣಿಗೆ ಮುಗಿಸಿ ಮುಸ್ಸಂಜೆ ಕಳೆದ ಮೇಲೆ ಎಲ್ಲರೂ
ತಮ್ಮತಮ್ಮ ಮನೆಗೆ ತೆರಳಿದರು. ಈ ಕಲಾಪ್ರಕಾರಗಳ
ಹಲವರು ಬಂದ ವೇಷದಲ್ಲೆ ಮನೆಕಡೆ ಮುಖ ಮಾಡಿದರೆ, ಊರ ಹೊರಗಿನ ಸರಾಯಿ ಅಂಗಡಿಯಲ್ಲಿ ದೇವಿಯೂ ಮಹಿಷಾಸುರನೂ ಬೆಂಚಿಮೇಲೆ ವೇಷದಲ್ಲೇ ಕುಳಿತು ನಶೆ ಏರಿಸುತ್ತಿದ್ದರು. ಮಕ್ಕಳಾದ ನಮಗೆ ಈ ಘಟನೆ, ಈ
ದೃಶ್ಯ ಆಗ ಹಾಸ್ಯದ ವಸ್ತುವಾಗಿ ವಿಡಂಬನೆಯಾಗಿ ಕಂಡಿದ್ದರೆ್ ಆನಂತರ ಅದು ಬಹಳ ಕಾಡಿದ್ದೂ ಇದೆ.
ಮಹಿಷನಿಗೂ ದೇವಿಗೂ ರಾಜಿಯಾಯಿತು ಎಂದು ಗೇಲಿ ಮಾಡಿ ನಕ್ಕದ್ದು ಈಗಲೂ ಕಣ್ಣಿಗೆ ಕಾಣುವಂತಿದೆ. ಆಗಿನ್ನೂ
ಊರಲ್ಲಿ ಈಗಿನಂತೆ ವಿದ್ಯುತ್ ಸಹ ಸರಿಯಾಗಿರದ ಒಂದು ಅಂಧಕಾರದ ಸಮಯ. ಅಂದರೆ ಬಹಳ ವರ್ಷಗಳ ಅಯುಷ್ಯ
ಈ ನೆನಪಿಗೆ ಇದೆ. ಅದು ಇಂದು ಮತ್ತೆ ಮರುಕಳಿಸಿದೆ. ಇಲ್ಲಿ ತಪ್ಪು ಯಾರದು ಎನ್ನೋಣ? ವಿಶ್ಲೇಷಿಸುವುದು ಬಹಳ
ಕಷ್ಟ.
ಇತ್ತೀಚೆಗೆ ಟಿ. ವಿ ಮಾಧ್ಯಮದ ರಿಯಾಲಿಟಿ ಶೋದಲ್ಲಿನ ಹಾಡಿನ
ದೃಶ್ಯದಲ್ಲಿ ಯಕ್ಷಗಾನದ ಉಡುಗೆಯಲ್ಲಿ
ನರ್ತಿಸಿದ್ದರು. ಇದೇನು ಹೊಸತಲ್ಲ. ಹಲವು
ಸಿನಿಮಾಗಳಲ್ಲೂ ಇನ್ನು ಹಲವು ಕಾರ್ಯಕ್ರಮಗಳಲ್ಲೂ ಇದು ಸರ್ವೇ ಸಾಮಾನ್ಯ. ಈಗ ಇವುಗಳನ್ನು
ವಿಮರ್ಶಿಸುವಾಗ ಅದೇ ಮೇಲಿನ ಆ
ದೃಶ್ಯ ನೋಡಿದ್ದರೆ...? ಬಹುಶಃ ಎದೆ ಒಡೆದು ಹೊಗುವ ಪರಿಸ್ಥಿತಿ ಬರಬಹುದೇ? ಮುಖ್ಯವಾಗಿ ಶಿಸ್ತು ಪ್ರಜ್ಞೆ ಗೌರವ ಮುಂತಾದ ವಿಚಾರಗಳು
ನಮ್ಮ ಮನಸ್ಸಿನ ಒಳಗಿಂದ ಪ್ರಚೋದಿಸಲ್ಪಡಬೇಕು. ಎಲ್ಲರೂ ಶುಭ್ರವಾದ ಬಿಳಿ ಉಡುಗೆಯಲ್ಲಿ ಬಂದು
ನಿಂತರೆ ಒಬ್ಬ ಮಲಿನವಾದ ಉಡುಗೆ ತೊಟ್ಟವನಿಗೆ ಅವರೊಂದಿಗೆ ಸೇರುವುದಕ್ಕೆ ಸ್ವತಃ
ಹಿಂಜರಿಕೆಯಾಗುತ್ತದೆ. ಭಯ ಗೌರವವೆಂಬ ಭಾವನೆಗೆ
ಅಂತರಂಗವೇ ಮೊದಲ ಸಾಕ್ಷ್ಯ. ಹಾಗಾಗಿ ಕೊರತೆ
ಎಂಬುದು ಎಲ್ಲಿರುತ್ತದೆ ಅದನ್ನು ಮೊದಲು ಸರಿಪಡಿಸುವ ಜಾಗ್ರತಾವಸ್ಥೆ ಬರಬೇಕು. ಅದನ್ನೇ ಆತ್ಮಾವಲೋಕನ
ಎಂದು ಸುಸಂಸ್ಕೃತವಾಗಿ ಹೇಳುವುದು.
ಹಾಗೆ ನೋಡಿದರೆ ಇಂದು ಹೀಗೆ ಧಾಳಿಗೆ ಒಳಗಾಗಿ ತನ್ನ
ಪರಂಪರೆಯ ಸೊಗಡನ್ನು ಕಳೆದು ಹೋದ ಕಲೆ ಕೇವಲ ಯಕ್ಷಗಾನ ಮಾತ್ರವೇ? ಸಿನಿಮಾ ಸಂಗೀತದ ಮೂಲಕ
ಶಾಸ್ತ್ರೀಯ ಸಂಗೀತವೂ ನಲುಗಿ ಹೋಗಿರುತ್ತದೆ. ಸಂಗೀತದ ಮೇಲಂತೂ ಇದು ಪೈಶಾಚಿಕ ಧಾಳಿಯನ್ನೇ
ಮಾಡಿದೆ. ಆದರೂ ಆ ಸಂಗೀತಕ್ಕೆ ತಾಳ ಬಡಿಯುವುದಿಲ್ಲವೇ? ಅಂತಹಾ ಅಭಾಸದ ಸಂಗೀತದ ಹಾಡುಗಳೇ ಯಕ್ಷಗಾನ
ರಂಗಸ್ಥಳದಲ್ಲಿ ಬಳಸಲ್ಪಡುವಾಗ ನಮಗೆ ಅವಮಾನ ಎಂದರೆ ಏನು ಎಂದು ಪ್ರಶ್ನಿಸುವ ಹಾಗಾಗುತ್ತದೆ.
ಅದನ್ನೇ ಆತ್ಮಾವಲೋಕನ ಎನ್ನುವುದು.
ಹಾಗೆ ನೋಡಿದರೆ ಇಂದು ಯಾವ ಕಲೆಯೂ ಈ ರೀತಿಯ ಅಗೌರವದಿಂದ
ಹೊರತಾಗಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅದು ಶೋಚನೀಯತೆಯನ್ನು ಅನುಭವಿಸುತ್ತದೆ. ಒಬ್ಬ ಉತ್ತಮ
ಕೊಳಲು ವಾದಕನೋ, ತಬಲಾ ವಾದಕನೋ ಹೊರಗೆ ಸಂಚರಿಸುವಾಗ, ರಸ್ತೆಬದಿಯಲ್ಲಿ ಭಿಕ್ಷಾರ್ಥಿಯಾಗಿ ಬಿಕ್ಷುಕನೊಬ್ಬ ತಬಲ,
ಕೊಳನ್ನು
ನುಡಿಸುವಾಗ ಚಡಪಡಿಸಬಹುದು. ತಾನು ಪೂಜಿಸುವ ಕಲೆಗೆ ಯಾವ ಅವಸ್ಥೆ ಬಂದೊದಗಿತಪ್ಪಾ?
ಅದು ಆತನಿಗೆ ಆ ಸಂಗೀತದ ಮೇಲಿರುವ ಗೌರವ. ಕೃಷಿಕ
ಬೆಳೆದ ಅಕ್ಕಿಯ ಅನ್ನ ಅದು ದೇವರ ನೈವೇದ್ಯದ
ಬಟ್ಟಲಲ್ಲೂ ಇರಬಹುದು, ಕಸದ ತೊಟ್ಟಿಯಲ್ಲಿ ಎಸೆದ ಅವಸ್ಥೆಯಲ್ಲಿಯೂ ಇರಬಹುದು. ಇಲ್ಲಿ ಅನ್ನದ
ಮಹತ್ವವೇನು ಕಡಿಮೆಯಾಗುವುದಿಲ್ಲ. ಅದನ್ನು ಉಪಯೋಗಿಸುವ ಮನೋಭಾವ ಮಾತ್ರಾ ಗಣನೆಗೆ ಬರುತ್ತದೆ.
ಟೀವಿ ಕಾರ್ಯಕ್ರಮದಲ್ಲಿ ಸಿನಿಮಾ ಹಾಡಿಗೋ ಅಥವಾ
ಇನ್ನಿತರ ರೂಪಗಳಲ್ಲೋ ಯಕ್ಷಗಾನ ವೇಷಗಳನ್ನು ಕಂಡಾಗ ಪರಿಶುದ್ಧ ಯಕ್ಷಗಾನ ಅಭಿಮಾನಿಯಾದವನ ಮನಸ್ಸು
ನೋವನ್ನು ಅನುಭವಿಸುತ್ತದೆ. ಇಂದು ಈ ನೋವು ಗುರುತಿಸಲ್ಪಡುವಾಗ ಗಮನ ಹರಿಸದೇ ಇರುವ ಇನ್ನು ಹಲವು
ನೋವುಗಳಿರಬಹುದೆಂಬ ಕಲ್ಪನೆಯೇ ನಮಗಿಲ್ಲ. ಹೊರಗಿನ ಶತ್ರುಗಳು ಇರಿಯುವಾಗ ಸಹಿಸಬಹುದು, ನೋವು
ಅನುಭವಿಸಬಹುದು. ಇಲ್ಲಾ ಪ್ರತಿಭಟಿಸಬಹುದು. ಆದರೆ ಒಳಗಿನ ಹಿತೈಷಿಗಳೇ (ಶತ್ರುಗಳು) ಇರಿದಲ್ಲಿ ಅದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ
ಮಾತ್ರವಲ್ಲ ಅದು ಆತ್ಮವಂಚನೆ ಎನಿಸಲ್ಪಡುತ್ತದೆ. ಟೀವಿಯಲ್ಲೋ ಸಿನಿಮಾದಲ್ಲೋ ಅತರ ಇನ್ನಿತರ
ಮಾಧ್ಯಮಗಳಲ್ಲೋ ಪ್ರದರ್ಶಿಸುವುದಕ್ಕಿಂತಲೂ ಕೀಳ್ಮಟ್ಟದಲ್ಲಿ ಅದೂ ಯಕ್ಷಗಾನ ರಂಗಸ್ಥಳದಲ್ಲಿ ಅಭಾಸಗಳನ್ನು
ಪ್ರದರ್ಶಿತವಾಗುವಾಗಲೂ ಪರಿಶುದ್ದ ಅಭಿಮಾನಿಯ ಮನಸ್ಸು ನೋವನುಭವಿಸುತ್ತದೆ. ಆದರೆ ಅದು
ಗುರುತಿಸಲ್ಪಟ್ಟರೂ ಗಮನಕ್ಕೆ ಬಾರದವರಂತೆ ವರ್ತಿಸುವಾಗ ಅವಮಾನವಾಗಿ ಅದನ್ನು ಪರಿಗಣಿಸುವುದಕ್ಕೆ
ಮನಸ್ಸು ಬರುವುದಿಲ್ಲ.
ಬದಲಾಗಿ
ಹೋದ ಇಂದಿನ ಯಕ್ಷಗಾನವನ್ನು ಕಂಡು ಅದೆಷ್ಟು ಮಂದಿ ಮರುಗುವುದಿಲ್ಲ? ಈ ನೊವಿನ ಧ್ವನಿಗೆ ಅದೆಷ್ಟು ಕಿವಿಯಗಲವಾಗಿದೆ. ಆದರೆ ಅದನ್ನು ವಿವೇಚಿಸುವುದು ಇಂದಿನ ಕಾಲದಲ್ಲಿ
ಅಪರಾಧವಾಗುತ್ತದೆ. ಬದಲಾವಣೆ ಅದು ಕಾಲಗುಣ. ಯಾರ
ನಿಯಂತ್ರಣಕ್ಕೂ ಸಿಗದೆ ಅದು ಸಂಭವಿಸುತ್ತದೆ.
ಪೂರ್ಣವಾಗಿ ಅಭ್ಯಾಸ ಮಾಡದೆ ರಂಗವೇರಿ ಹೆಸರುಗಳಿಸುವ ತೆವಲು ಇಂದು ಹಲವರಲ್ಲಿ ಕಾಣಬಹುದು.
ಆದರೆ ಅದನ್ನು ಅಭಿಮಾನದ ಬಣ್ಣದಿಂದಲೇ ಕಾಣುತ್ತೇವೆ ಹೊರತು ಅಲ್ಲಿ ಅಭಾಸವಾಗಿ ಕುಂದಿ ಹೋಗುವ
ಯಕ್ಷಗಾನದ ಮೌಲ್ಯಗಳತ್ತ ಗಮನ ಹರಿಸುವುದಿಲ್ಲ. ಟೀವಿ ಕಾರ್ಯಕ್ರಮದಲ್ಲಿ ಯಾವುದೋ ಸ್ವಾರ್ಥ ಸಾಧನೆಯ ದ್ಯೋತಕವಾಗಿ ಕಾಣಬಹುದು. ಆದರೆ ಸ್ವಾರ್ಥ ಕೇವಲ
ಅಲ್ಲಿ ಮಾತ್ರ ಇರುವುದಲ್ಲ. ಅಭಿಮಾನದ ಪರವಾನಿಗೆಯಲ್ಲೇ ಅಭಾಸವನ್ನು ಸೃಷ್ಟಿಸುವಲ್ಲಿ ಇರುವ
ಸ್ವಾರ್ಥ ಗಮನಾರ್ಹವಾಗುವುದೇ ಇಲ್ಲ. ಇದು ಇಂದಿನ ವಸ್ತು ಸ್ಥಿತಿ. ಮೊದಲಾಗಿ ಹಿರಿಯರು ಹತ್ತಿ
ಕುಳಿತ ಸ್ಥಾನದಲ್ಲಿ ನಾವೇರಿ ಕುಳಿತುಕೊಳ್ಳಲು ನಾವೆಷ್ಟು ಅರ್ಹರು ಎಂಬುದನ್ನು ಮನಗಾಣಬೇಕು.
ಅದಿಲ್ಲವಾದರೆ ಆ ಅರ್ಹತೆ ತಮಗಿಲ್ಲ ಎಂಬ ಸಾಮಾನ್ಯ ಪರಿಜ್ಞಾನವಾದರೂ ಇರಬೇಕು. ಇಂದಿನ ಕಾಲಕ್ಕೆ
ಅದು ದುರ್ಲಭ. ಹಾಗಾದಲ್ಲಿ ಹೇಳಿ ಹೋಗುತ್ತದೆ,
ಟಿವಿಯಲ್ಲಿ ಅಲ್ವ...ಅಗಲಿ ಯಕ್ಷಗಾನಕ್ಕೆ ಹಾಗಾದರೂ ಪ್ರಚಾರ ಸಿಗಲಿ. ಎಲ್ಲ ಸ್ವಾರ್ಥ ಸಾಧನೆಯಲ್ಲಿ
ಆ ಸ್ವಾರ್ಥ ಸಾಧನೆಯೂ ಯಕ್ಷಗಾನದ ಮೂಲಕ ನೆರವೇರಲಿ. ಆದರೆ ಇದರ ಹಿಂದಿರುವ ನೋವು ಅರ್ಥವಿಸುವ
ಮನೋಭಾವ ಇರುವುದಿಲ್ಲ ಅದು ಇಂದಿನ ವಾಸ್ತವ.

