"ಇದು ವಿಮರ್ಶೆಯಲ್ಲದ ಚಿಂತನ"

Thursday, May 25, 2017

ಯಕ್ಷಗಾನ ಮತ್ತು ಧರ್ಮ ಚಿಂತನೆ

ನಮ್ಮ ಊರಿನ ಯಕ್ಷಗಾನ ಬಯಲಾಟ. ಪ್ರಸಂಗ ಬಪ್ಪನಾಡು ಕ್ಷೇತ್ರ ಮಹಾತ್ಮೆ.  ಸುಂಕದ ಕಟ್ಟೆಮೇಳ ಇಲ್ಲಾ ಶ್ರೀ ಭಗವತೀ ಮೇಳ ಇರಬೇಕು. ಅದು ನೆನಪಿಲ್ಲ. ದಾರುಕಾಸುರ ಸಂಹಾರವಾಗಿ ದುರ್ಗಾ ಪರಮೇಶ್ವರಿ ಒಂದು ಕ್ಷೇತ್ರದಲ್ಲಿ ನೆಲೆಯಾಗುವಂತಹ ಸನ್ನಿವೇಶ. ವಿಷ್ಣುವಿನ ಅಶ್ರುವಿನಿಂದ ಅವತರಿಸಿದ ದುರ್ಗೆಯ ಒಂದು ಶಕ್ತಿ ಮೂಲ್ಕಿ ಬಳಿಯಲ್ಲಿ ನೆಲೆಯಾಗುವ ಮುನ್ನ ವರ್ತಕ ಬಪ್ಪನಿಗೆ ಕಾಣಿಸಿಕೊಳ್ಳುತ್ತಾಳೆ. ತನಗಾಗಿ ಕ್ಷೇತ್ರವನ್ನು ನಿರ್ಮಿಸುವಂತೆ ಆತನಲ್ಲಿ ಅಭೀಷ್ಟವನ್ನು ವ್ಯಕ್ತಪಡಿಸುತ್ತಾಳೆ.  ಬಪ್ಪ ಭಾವಾವೇಶದಿಂದ ದೇವಿಯನ್ನು ಕಂಡು ಕೈಮುಗಿದು ಆಕೆಯ ಆಶಯದಂತೆ ಕ್ಷೇತ್ರ ನಿರ್ಮಾಣ ಮಾಡುತ್ತಾನೆ. ದೇವಿ ನೆಲೆಯಾಗುತ್ತಾಳೆ. ಸಾಮಾನ್ಯವಾಗಿ ಮುಂಜಾನೆಯ ಹೊತ್ತಿನಲ್ಲಿ ಈ ಸನ್ನಿವೇಶ ರಂಗದಲ್ಲಿ ಕಾಣಿಸಿಕೊಳ್ಳುತ್ತದೆ. ಅಂದು ಮುಂಜಾನೆಯ ನಮಾಜ್ ಗೆ ರಸ್ತೆಯಲ್ಲಿ ಹೊರಟ ಮುಸ್ಲಿಂ ವ್ಯಕ್ತಿಗೆ ರಸ್ತೆಯ ಬದಿಯಲ್ಲೇ ಇರುವ ರಂಗಸ್ಥಳದ ಸನ್ನಿವೇಶದಲ್ಲಿ  ಬೇಡದೇ ಇದ್ದರೂ ಗಮನ ಹರಿಯುತ್ತದೆ.  ಒಂದೆರಡು ಘಳಿಗೆ ನೋಡುತ್ತಾನೆ ನಂತರ ತನ್ನ ಪಾಡಿಗೆ ತಾನು ಮಸೀದಿಯೆಡೆಗೆ ಮೌನವಾಗಿ  ಹೆಜ್ಜೆ ಹಾಕುತ್ತಾನೆ. ಮತೀಯವಾದಂತಹ ಯಾವ ಗೊಂದಲವೂ ಹುಟ್ಟಿಕೊಳ್ಳದೆ ಸಹಜವಾಗಿ ತನ್ನ ಪಾಡಿಗೆ ಮುಂದುವರೆಯುತ್ತಾನೆ.  ಆತನಿಗೆ ಅಷ್ಟರ ಮಟ್ಟಿಗೆ ಯಕ್ಷಗಾನದ ಮೇಲೆ  ವಿಶ್ವಾಸವಿದೆ. ಇಂದು ಈ ವಿಶ್ವಾಸದ ಕೊರತೆಯೇ ವಿವಾದಕ್ಕೆ ಮೂಲ ಕಾರಣ.
ಮೇಲೆ ಹೇಳಿದಂತಹ ಸನ್ನಿವೇಶ ಅದೆಷ್ಟು ಕಡೆಯಲ್ಲಿ ನಡೆದಿರುತ್ತದೋ ಊಹನೆಗೆ ಸಿಕ್ಕುವುದಿಲ್ಲ. ಅದರ ಬಗ್ಗೆ ಯಾವ ಜಿಜ್ಞಾಸೆಯಾಗಲೀ ಸಮಸ್ಯೆಯಾಗಲಿ ಅನಪೇಕ್ಷಿತ ಪ್ರಚೋದನೆಯಾಗಲಿ ಬೆಳೆದು ಬರುವುದಿಲ್ಲ. ವಿವಾದ ರಹಿತವಾಗಿ ಆ ಪ್ರಸಂಗ ಇನ್ನೂ ಪ್ರದರ್ಶನವಾಗುವುದೇ ಇದಕ್ಕೆ ಸಾಕ್ಷಿ. ಸರಳವಾಗಿ ಯೋಚಿಸುವ ಪ್ರೇಕ್ಷಕನಿಗೆ ಯಾವ ವಿವಾದದ ಅವಶ್ಯಕತೆಯೂ ಇರುವುದಿಲ್ಲ. ಯಾಕೆಂದರೆ ಆತ ಕೆಲವರಂತೆ ಪ್ರಚಾರಪ್ರಿಯನಲ್ಲ. ಹೆಸರು ಗಳಿಸುವ ಮಹತ್ವಾಕಾಂಕ್ಷೆಯ ಸ್ವಾರ್ಥವಿರುವುದಿಲ್ಲ. ಯಕ್ಷಗಾನ ಅದರ ಚೌಕಟ್ಟಿನೊಳಗೆ ಅನುಭವಿಸುವುದಷ್ಟೇ ಆತನ ಉದ್ದೇಶ. ಹಾಗಿದ್ದರೆ ವಿವಾದ ಹುಟ್ಟಿಕೊಳ್ಳುತ್ತದೆ. ಬೃಹದಾಕಾರವಾಗಿ ಬೆಳೆದಿದೆ ಎಂಬ ಭ್ರಮೆಯನ್ನು ತರಿಸುತ್ತದೆ. ಇದಕ್ಕೆ ಅನೂಕೂಲವಾಗಿ ಹಲವು ವಿಧದದ ಮಾಧ್ಯಮಗಳು ತಮಗರಿವಿಲ್ಲದೆ ಅಥವ ಉದ್ದೇಶ ಪೂರ್ವಕವಾಗಿಯೂ ಸಹಕರಿಸುತ್ತದೆ.
ಅನ್ಯಧರ್ಮದ ಕಥೆಯೊಂದು ಯಕ್ಷಗಾನದಲ್ಲಿ ಪ್ರಸಂಗವಾಗಿ ಬಹಿರಂಗವಾಗುತ್ತದೆ. ನಿಜಕ್ಕಾದರೆ ಇಲ್ಲಿ ಬಹಿರಂಗದ ಮಾತು ಬಹಳ ಹಳೆಯದು. ಸವೆದು ಹೋದ ಕೊರಡಿನಂತೆ ಅದರ ರೂಪವೂ ಬದಲಾಗಿ ಈಗ ಕೇವಲ ಅಸ್ತಿತ್ವ ಮಾತ್ರವಿದೆ.  ಆದರೂ ಉದ್ದೇಶ ಪೂರ್ವಕವಾಗಿ ವಿವಾದ ಹುಟ್ಟಿಕೊಂಡಿದೆ.
ವಿವಾದ ಎಬ್ಬಿಸುವಲ್ಲಿ ಮೂರು ಭಾವಗಳು  ಕಾರಣೀ ಭೂತವಾಗಿರಬೇಕಿತ್ತು.  ಒಂದು ಯಕ್ಷಗಾನ ಕಲೆಯ ಬಗ್ಗೆ ಅತೀವ ಕಾಳಜಿ. ಇನ್ನೊಂದು ಮತೀಯ ಭಾವನೆಯ ಬಗ್ಗೆ ಅಭಿಮಾನ. ಮತ್ತೊಂದು ಸಮಾಜದ ಸ್ವಾಸ್ಥ್ಯದ ಬಗ್ಗೆ ಇರುವಂತಹ ಆಸಕ್ತಿ. ಆದರೆ ಹುಟ್ಟಿಕೊಂಡ ವಿವಾದದಲ್ಲಿ ಈ ಮೂರು ಇಲ್ಲದಿರುವುದು ವಿವಾದದ ಉದ್ದೇಶವನ್ನು ಸ್ಪಷ್ಟವಾಗಿಸುತ್ತದೆ.
ಯಕ್ಷಗಾನ ಯಾವುದೇ ಮತಕ್ಕೆ ಧರ್ಮಾಚರಣೆಗೆ ಸೀಮಿತವಲ್ಲ ಎಂಬುದು ಯಕ್ಷಗಾನದ ಭವ್ಯ ಇತಿಹಾಸ ತಿಳಿಸುತ್ತದೆ. ಯಕ್ಷಗಾನ ಎಂದೇನು ಯಾವುದೇ ಕಲೆಯೂ ಧರ್ಮಕ್ಕೆ ಸೀಮಿತವಾಗಿ ಉಳಿದರೆ ಅದು ಕಲೆ ಎಂದೆನಿಸಲ್ಪಡುವುದಿಲ್ಲ. ಬದಲಾಗಿ  ಧರ್ಮಾಚರಣೆಯ ಅಂಗವಾಗುತ್ತದೆ.  ಆವಾಗ ಅದು ಧರ್ಮಕ್ಕೆ ಸೀಮಿತವಾಗಿರಿಸಬಹುದು. ಆದರೆ ಅದನ್ನು ಕಲೆ ಎಂದು ಸಮಾಜ ಸ್ವೀಕರಿಸುವುದಿಲ್ಲ.  
ಇನ್ನು ಯಕ್ಷಗಾನದ ಬಗ್ಗೆ ಕಾಳಜಿ ಇದ್ದಲ್ಲಿ ಯಕ್ಷಗಾನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ತನ್ನ ಪರಂಪರೆಯ ಸೊಗಡನ್ನು ಉಳಿಸಿಕೊಳ್ಳುವುದಿಲ್ಲ ಎಂಬ ಕಾರಣ ವಿವಾದದೊಂದಿಗೆ ಥಳುಕು ಹಾಕಿದ್ದರೆ ಅದು ನಿಜಕ್ಕೂ ಹಾಸ್ಯಾಸ್ಪದ ಮಾತ್ರವಲ್ಲ ವಿವಾದದ ಉದ್ದೇಶದ ಹಿಂದೆ ಮಹಾ ಸ್ವಾರ್ಥವೊಂದು ಹೆಡೆಯಾಡುತ್ತದೆ ಎಂದುಕೊಳ್ಳಬೇಕು.
ಇಂದು ಬದುಕುಳಿದಂತಹ ಹಿರಿಯರಾದ ಮಹಾನ್ ಕಲಾವಿದರಲ್ಲಿ, ಯಕ್ಷಗಾನಕ್ಕೆ ಸರ್ವಸ್ವವನ್ನು ಅರ್ಪಿಸಿದಂತಹ ಮಹನೀಯರಲ್ಲಿ ಯಕ್ಷಗಾನದ ಆಗು ಹೋಗುಗಳ ಬಗ್ಗೆ, ಸ್ಥಿತಿಗತಿಯ ಬಗ್ಗೆ ಒಮ್ಮೆ ವಿಚಾರಿಸಿದರೆ  ದೊಡ್ಡ ನಿಟ್ಟುಸಿರು ಬಿಡದೇ ಇರುವಂತಹ ಕಲಾವಿದ ಇರುವುದಕ್ಕೆ ಸಾಧ್ಯವಿಲ್ಲ. ಕೆಲವರಂತೂ ಯಕ್ಷಗಾನದ ಬಗ್ಗೆ ಹೇಳುವುದನ್ನೇ ಬಿಟ್ಟು ಸ್ಥಿತಪ್ರಜ್ಞರಾಗಿ ಕಾಲಗಳು ಸಂದು ಹೋಗಿದೆ. ಅಷ್ಟು ಕೆಟ್ಟು ಹೋದ ಯಕ್ಷಗಾನ ಕೆಡುವುದಕ್ಕೆ, ಈಗಿನ ವಿವಾದಕ್ಕೆ ಹೇತುವಾದ  ಪ್ರಸಂಗ ಕಾರಣವಂತು ಖಂಡಿತಾ ಅಲ್ಲ. ಹಾಗಾದರೆ ಯಕ್ಷಗಾನದ ಬಗ್ಗೆ ಕಾಳಜಿಯಿದ್ದಲ್ಲಿ ಹಾಳಾದ ಮತ್ತು ನಶಿಸಿ ಹೋಗುತ್ತಿರುವ ಕಲೆಯ ಬಗ್ಗೆ ವಿವಾದ ಹುಟ್ಟಿಕೊಳ್ಳಬೇಕಿತ್ತು. ಹೊರಾಟದ ಕಿಚ್ಚು ಹೊತ್ತಿಕೊಳ್ಳಬೇಕಿತ್ತು. ಪರಂಪರೆಯ ಧ್ವನಿ ಹುಟ್ಟಿದಲ್ಲಿ ಅದನ್ನು ದಮನಮಾಡುವ ಕೈಗಳೇ ಇಂದು ವಿವಾವದವನ್ನು ಕೈಗೆ ಎತ್ತಿಕೊಂಡಿರುವಲ್ಲಿ ಯಕ್ಷಗಾನದ ಹಿತ ಅಥವಾ ಕಲೆಯ ಹಿತ ಇರುವುದಕ್ಕೆ ಸಾಧ್ಯವಿಲ್ಲ.
ವಿಪರ್ಯಾಸವೆಂದರೆ ಯಕ್ಷಗಾನದಲ್ಲಿ ಹಾಸ್ಯದ ಹೆಸರಲ್ಲಿ ಮಾನಾಹಾನಿಯಾಗಿ ಹಾಸ್ಯ ಅಪಹಾಸ್ಯವಾಗುವಾಗ ವಿವಾದವಾಗುವುದಿಲ್ಲ. ಯಕ್ಷಗಾನದ ಹೆಸರಲ್ಲಿ ಅಸಂಭದ್ದ ದರ್ಶನವಾಗುವಾಗ ವಿವಾದವಾಗುವುದಿಲ್ಲ. ಕೇವಲ ಮನರಂಜನೆಗಾಗಿಯೋ ವ್ಯಕ್ತಿನಿಷ್ಠವಾಗಿಯೋ ಯಕ್ಷಗಾನದ ಹೊರಾವರಣ ಇಟ್ಟು ಇನ್ನೇನೋ ಸರಕು ತುಂಬಿಸಿ ಅದನ್ನು ಯಕ್ಷಗಾನ ಎಂದು ಬಿಂಬಿಸುವಾಗ ವಿವಾದವಾಗುವುದಿಲ್ಲ.  ಆಗ ಇದೇ ಕೈಗಳು ಚಪ್ಪಾಳೆ ಬಡಿಯಲು ಸಿದ್ಧವಾಗಿರುತ್ತದೆ. ಅನಾವಶ್ಯವಾಗಿ ಲಕ್ಷಗಟ್ಟಲೆ ಖರ್ಚು ಮಾಡಿ ರಂಗಸ್ಥಳ ಕಟ್ಟುವಾಗ ಔಷಧಿಗೆ ದುಡ್ಡಿಲ್ಲದೇ ಸ್ವಂತ ಕುಟುಂಬವನ್ನೂ ಪೋಷಿಸುವುದಕ್ಕೆ ಅಸಮರ್ಥನಾದ ಬಡ ಕಲಾವಿದ ಅದೇ ರಂಗಸ್ಥಳದಲ್ಲಿ ಸಿಗುವ ಬಿಡಿಗಾಸಿಗೆ ಕುಣಿಯುತ್ತಿರಬೇಕಾದರೆ ವಿವಾದವಾಗುವುದಿಲ್ಲ.  ಲಕ್ಷಗಟ್ಟಲೇ ಖರ್ಚು ಮಾಡಿದ ಆಡಂಬರ ದರ್ಶನವೇ ಯಕ್ಷಗಾನ ಅಭಿಮಾನ ಎಂದು ಬಿಂಬಿಸಿ ಸಮಾಜವನ್ನು ಮೂರ್ಖರನ್ನಾಗಿಸುವಾಗ ವಿವಾದ ಹುಟ್ಟಿಕೊಳ್ಳುವುದಿಲ್ಲ.  ಇಷ್ಟೆಲ್ಲ ಯಕ್ಷಗಾನದ ಬಗ್ಗೆ ಅಭಿಮಾನ ವ್ಯಕ್ತ ಪಡಿಸುವುದಕ್ಕೆ ಈಗ ಯಕ್ಷಗಾನದ ಮೌಲ್ಯ ಎಷ್ಟು ಉಳಿದಿದೆ. ಆ ಉಳಿದಂತಹ ಮೌಲ್ಯ ರಕ್ಷಣೆಯ ಭಾಗ ಈ ವಿವಾದ ಎಂದು ತಿಳಿದುಕೊಳ್ಳಬಹುದೇ? ಪ್ರಾಮಾಣೀಕವಾಗಿ ಒಪ್ಪಿಕೊಳ್ಳುವುದು ಕಷ್ಟವಾದೀತು.
ಈಗ ವಿವಾದ ಹುಟ್ಟಿಕೊಂಡಿದೆ. ಮತೀಯವಾದ ಬಣ್ಣ ಬಳಿಯುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಸರ್ವ ಧರ್ಮ ಸಮನ್ವಯವನ್ನು ಯಕ್ಷಗಾನದಲ್ಲಿ ತೋರಿಸಿದಷ್ಟು ಮಾರ್ಮಿಕವಾಗಿ ಬೇರೆ ಇನ್ನಾವುದೇ ಕಲೆಯಲ್ಲಿ ತೋರಿಸಿಲ್ಲ ಎಂಬುದು ಯಕ್ಷಗಾನವನ್ನು ಪ್ರಾಮಾಣಿಕವಾಗಿ ಪ್ರೀತಿಸುವವರಿಗೆ ಅದರ ಸಾರವನ್ನುಆರ್ಥವಿಸುವವರಿಗೆ ತಿಳಿದಿರುತ್ತದೆ. ವಿವಾದ ಹುಟ್ಟಿಸುವಲ್ಲಿ ಇಂತಹ ವಿಚಾರಗಳು ತಲೆಗೆ ಹತ್ತುವಷ್ಟು ವಿಷಯ ತಲೆಯೊಳಗೂ ಇರಬೇಕಲ್ಲ. ಹಾಗಾಗಿ ವಿವಾದ ಹುಟ್ಟಿಕೊಳ್ಳುತ್ತದೆ. ಮತ್ತದನ್ನು ಬೆಳೆಸುವ ಯತ್ನ ನಡೆಯುತ್ತಾ ಇರುತ್ತದೆ.  ಪ್ರತಿಯೊಂದು ಧರ್ಮವೂ ಆಚರಣೆಯ ಮೂಲಕ ಭಗವಂತನೊಡನೆ ಐಕ್ಯವಾಗುವುದನ್ನು ಸಾರುತ್ತವೆ. ತನ್ನ ಧರ್ಮ ಶ್ರೇಷ್ಠ ಎಂದು ಅನ್ಯ ಧರ್ಮವನ್ನು ನಿಂದಿಸುವುದು ಅದಾವುದೇ ಧರ್ಮವಾಗಲೀ ಅದು ಮತಾಂಧತೆಯಾಗುತ್ತದೆ. ಇಂತಹ ತತ್ವಗಳು ಹಲವು ಯಕ್ಷಗಾನ ಪ್ರಸಂಗಗಳಲ್ಲಿ  ಹಲವು ಪಾತ್ರಗಳಲ್ಲಿ ಶ್ರೇಷ್ಠ ಕಲಾವಿದರು ಪ್ರತಿಪಾದನೆ ಮಾಡಿ ಯಕ್ಷಗಾನ ಪರಿಪಕ್ವ ಧರ್ಮ ಕಲೆ ಎಂದು ಸಾಬೀತು ಮಾಡಿರುತ್ತಾರೆ.  ಇಂತಹ ಸೂಕ್ಷವಿಚಾರವನ್ನು ಮರೆತು ಮತೀಯವಾದ ಬಣ್ಣ ಮೆತ್ತಿ ರಂಜನೆಯನ್ನು ನೋಡುವುದು ಮಾನಸಿಕ ದೌರ್ಬಲ್ಯವನ್ನು ತೋರಿಸುತ್ತದೆ.  ಯಕ್ಷಗಾನ ಪ್ರಸಂಗಕ್ಕೆ ಅನ್ಯಧರ್ಮದ ಕಥೆಯೊಂದು ಅಥವಾ ಅದರ ತತ್ವವೊಂದು ಆಧಾರವಾಗುವುದರಲ್ಲಿ ಅಪಾರಾಧವಾದರೂ ಏನು? ಉತ್ತಮವಾದುದನ್ನು ಸ್ವೀಕರಿಸುವುದು ಶುದ್ದ ಸಂಸ್ಕಾರದ ಗುಣ. ಇದು ತಪ್ಪಾಗಿದ್ದರೆ ಯಕ್ಷಗಾನದಲ್ಲಿ ಸ್ವೀಕೃತವಾಗಿರುವುದರಲ್ಲಿ ಸ್ವಧರ್ಮದ ವಿಚಾರಳು ಮಾತ್ರವೇ ಇರುವುದು ಎಂದು ಖಡಾಖಂಡಿತವಾಗಿ ಹೇಳುವುದಕ್ಕೆ ಸಾಧ್ಯವಿದೆಯೇ?
ವಿವಾದಗಳು ಹುಟ್ಟಿಕೊಳ್ಳುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಫೇಸ್ ಬುಕ್ ವಾಟ್ಸಪ್ ಮತ್ತು ವಾರ್ತಾ ಮಾಧ್ಯಮಗಳ ದುರುಪಯೋಗವೇ ಇಂದಿನ ಸ್ಥಿತಿಗೆ ಕಾರಣ. ವಿವಾದಗಳನ್ನು ಹಿನ್ನೆಲೆಯಲ್ಲಿ ದೂಷಿಸುತ್ತಾ ಮುನ್ನೆಲೆಯಲ್ಲಿ ರಂಜನೆಯನ್ನು ಪಡೆಯುವಲ್ಲಿ ಸಮಾದ ಸ್ವಾಸ್ಥ್ಯ ಹಾಳಾಗಿದೆ ಎಂದು ಅನ್ನಿಸುವುದಿಲ್ಲ.

ವಿವಾದ ಪ್ರತಿಯೊಂದು ಕಾರ್ಯದ ಹಿಂದೆಯೂ ಹುಟ್ಟಿಕೊಳ್ಳುತ್ತದೆ. ಆದರೆ ಸದುದ್ದೇಶದಿಂದ ಸತ್ ಸಂಕಲ್ಪದ ಪ್ರಾಮಾಣಿಕ ಯತ್ನ ಅದು ಮುಂದುವರಿಯುವಾಗ ಯಾವ ವಿವಾದವೂ ಅರ್ಥವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಪ್ರಾಮಾಣಿಕನಾಗಿದ್ದವನು ವಿವಾದದ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಆತನ ಪ್ರಯತ್ನಕೆ ಸತ್ಫಲ ಒಂದಲ್ಲ ಒಂದು ವಿಧದಲ್ಲಿ ಸಿಕ್ಕಿಯೇ ಸಿಗುತ್ತದೆ. ಯಾಕೆಂದರೆ ಅಲ್ಲಿ ಸ್ವಾರ್ಥವಿರುವುದಿಲ್ಲ. ಕೇವಲ ಉದ್ದೇಶಮಾತ್ರವೇ ಇರುತ್ತದೆ. ಅದುವೆ ಸತ್ ಸಂಕಲ್ಪ.  ತಾವು ಮಾಡುವ ಕಾರ್ಯದಲ್ಲಿ ಸತ್ ಸಂಕಲ್ಪ ಸದುದ್ದೇಶ ಪ್ರಾಮಾಣಿಕವಾಗಿದ್ದಲ್ಲಿ ಆ ಸಂಕಲ್ಪ ಶುದ್ದಿಯೇ ಆ ಕಾರ್ಯವನ್ನು ಯಶಸ್ಸಿನ ತುದಿಯಲ್ಲಿ ನಿಲ್ಲಿಸುತ್ತದೆ. 

Monday, May 1, 2017

'ಕುರಿಯ' ಮನೆತನದ ಹುಲಿ

            

            ಕಣ್ಣುರೆಪ್ಪೆಯ ಸನಿಹದಲ್ಲಿದ್ದರೂ ಕಾಣಿಸದಂತಹ ಕಡುಗತ್ತಲೆಯ ವಾತಾವರಣ. ವಿದ್ಯುತ್ ಸಂಪರ್ಕವಿನ್ನೂ ಊರಿಗೆ ಬರದೇ ಇದ್ದಂತಹ  ಸಮಯ. ಸಂಜೆ ಸೂರ್ಯಾಸ್ತವಾಗುತ್ತಿದ್ದರೆ ಊರೆಲ್ಲ ಸಾಮಾನ್ಯವಾಗಿ ಕತ್ತಲೆಯಲ್ಲಿ ಮುಳುಗಿರುತ್ತಿತ್ತು. ಕಣ್ಣು ಕಾಣಿಸದಾಗ ಕಿವಿ ಚುರುಕಾಗುವಂತೆ ದೂರದ ಕ್ಷೀಣ ಧ್ವನಿಗೂ ಕಿವಿ ಸ್ಪಂದನೆಯನ್ನು ನೀಡುತ್ತದೆ. ದೇಹದ ಸುತ್ತೆಲ್ಲ ಗಾಳಿ ಶುಷ್ಕವಾಗಿ ಸ್ಪರ್ಶಸುಖವನ್ನು ಪಡೆದಿದ್ದರೆ ಅದೇ ಗಾಳಿ ಕಿವಿಯ ಸನಿಹಕ್ಕೆ ಬರುವಾಗ ದೂರದಿಂದ ಹೊತ್ತು ತಂದ ಅಬ್ಬರದ ಧ್ವನಿಯನ್ನು ಯಥಾಸಾಧ್ಯ ಚುರುಕಾದ ಕಿವಿಯೊಳಗೆ ರವಾನಿಸಿತ್ತು. ಅಬ್ಬರದ ಧ್ವನಿ ಕೇಳುವುದೇ ತಡ ಮನಸ್ಸು ತಾಳ ಬಡಿಯಿತು. ಮತ್ತೆ ಕಾಲು ನಿಂತಲ್ಲಿ ನಿಲ್ಲದೆ ಸದ್ದು ಬಂದೆಡೆ ಹೆಜ್ಜೆ ಹಾಕಿತು.
ಛಾಯಾ ಚಿತ್ರ  : ಕಟೀಲು ರಂಗನಾಥ ರಾವ್ ಸಿತ್ಲ
ಆ ಹೆಜ್ಜೆಗಳು ಸರಿದು ಬಂದದ್ದು ಕಾಯರ್ ಕಟ್ಟೆ ಶಾಲೆಯ ಜಗಲಿಗೆ.  ಊರ ತುದಿಯ ಶಾಲೆಯಲ್ಲಿ ಪೆಟ್ರೋಲ್ ಮೇಕ್ಸ್ ಪ್ರಖರವಾಗಿ ಉರಿಯುತ್ತಿತ್ತು. ಆ ಬೆಳಕಿನಲ್ಲಿ ಯಕ್ಷಗಾನ ಬಯಲಾಟದ ರಂಗ ತಾಲೀಮು ನಡೆಯುತ್ತಿತ್ತು. ಒಂದೆರಡು ಅಧ್ಯಾಪರು ಹತ್ತಾರು ವಿದ್ಯಾರ್ಥಿಗಳು ಸೇರಿ ಮುಂದಿನ ಶಾಲಾ ವಾರ್ಷಿಕೋತ್ಸವಕ್ಕೆ  ಯಕ್ಷಗಾನ ಬಯಲಾಟದ ಆಭ್ಯಾಸದಲ್ಲಿ  ತೊಡಗಿದ್ದರು. ಹೀಗೆ ಶಾಲೆಯವರೊಂದಿಗೆ ಜತೆಯಾಗಿ ಭಾಗವತಿಕೆ ಮಾಡುತ್ತಾ ಕೆಲವೊಮ್ಮೆ ಕುಣಿಯುತ್ತಾ ಪ್ರಸಂಗವನ್ನು ವಿವರಿಸು ಉತ್ಸಾಹಿ ತರುಣ ವ್ಯಕ್ತಿಯೊಬ್ಬರು ಪ್ರತೀ ಅಭ್ಯಾಸಕ್ಕೂ ಇರುತ್ತಿದ್ದರು. ಮಕ್ಕಳಿಗೆ ಯಕ್ಷಗಾನವನ್ನು ಅದೂ ಕುಣಿತ ಅರ್ಥಗಾರಿಕೆ ಏನೊಂದೂ ತಿಳಿಯದ ಮಕ್ಕಳಿಗೆ ಕಲಿಸಿ ಯಕ್ಷಗಾನ ಬಯಲಾಟಕ್ಕೆ ಸಿದ್ದಪಡಿಸುವುದೆಂದರೆ ಸಾಮಾನ್ಯ ಕೆಲಸವಲ್ಲ. ನಾಟಕವೋ ನೃತ್ಯವೋ ಆದರೆ ಅದಷ್ಟನ್ನೇ ಹೇಳಿ ಮುಗಿಸಬಹುದು. ಆದರೆ ಯಕ್ಷಗಾನ ಹಾಗಲ್ಲ.  ಪ್ರತಿ ಪದಕ್ಕೆ ಕುಣಿತದ ಜತೆಗೆ ಅರ್ಥಗಾರಿಕೆಯನ್ನು ತಿಳಿಸಿ ಹೇಳಬೇಕಾದರೆ ಅದಕ್ಕೆ ಅಪಾರವಾದ ಕ್ಷಮತೆಯೂ ತಾಳ್ಮೆಯೂ ಜತೆಯಲ್ಲಿ ನಿರ್ದೇಶನ ಮಾಡುವ ಚಾಕಚಕ್ಯತೆಯೂ ಅನಿವಾರ್ಯ. ಅಂತಹ ಅಪರೂಪದ ವ್ಯಕ್ತಿತ್ವದ ಯಕ್ಷಗಾನದ ಸರ್ವ ರಸಗಳನ್ನು ನರನಾಡಿಗಳಲ್ಲಿ ಹರಿಸಬಲ್ಲ ವ್ಯಕ್ತಿ ಬೇರಾರೂ ಅಲ್ಲ. ಅದು ಹತ್ತರದಲ್ಲೆ ಇರುವ ಕುರಿಯ ಮನೆತನದ ಕಲಾವಿದ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು. 
ಅದು ಸುಮಾರು ಎಪ್ಪತ್ತರ ದಶಕದ ಕಾಲ.  ಕಾಯರ್ ಕಟ್ಟೆಯ ಗುಡ್ಡದ ತುದಿಯಲ್ಲಿರುವ ಹೈಸ್ಕೂಲು ಊರಿಗೆ ಅನ್ವರ್ಥವಾಗಿ ಕಾಯರ್ ಕಟ್ಟೆ ಮತ್ತು ಶಾಲೆ ಎಂದರೆ ಒಂದೇ ಆಗಿ ಕಾಣುವಂತೆ ಮಾಡಿದಂತಹ ಕಾಲ. ಉಪ್ಪಳದಲ್ಲಿ ಬಸ್ಸು ಹತ್ತಿ ’ಹೈಸ್ಕೂಲು’  ಎಂದು ಟಿಕೆಟ್ ತೆಗೆದರೆ ಕಂಡಕ್ಟರ್ ಕಾಯರ್ ಕಟ್ಟೆಗೆ ಟಿಕೇಟ್ ಕಿತ್ತು ಕೊಡುತ್ತಿದ್ದ. ಯಾಕೆಂದರೆ ಪೈವಳಿಕೆ ಪಂಚಾಯತ್ ನ ಏಕಮೇವ ಪ್ರೌಢ ಶಾಲೆ ಎಂದರೆ ಅದು ಕಾಯರ್ ಕಟ್ಟೆ ಸರಕಾರಿ ಹೈಸ್ಕೂಲು. ದೂರದ ಪೆರ್ಮುದೆ, ಕನ್ಯಾನ ಚಿಪ್ಪಾರು ಕುರುಡ ಪದವು ಈ  ಕಡೇ ಕುಬಣೂರು ಹೀಗೆ ಇಷ್ಟೊಂದು ಪ್ರದೇಶಗಳಿಗೆ ಕೇಂದ್ರವಾಗಿದ್ದ ಈ ಶಾಲೆ ಒಂದೇ ಆಗಿದ್ದುಕೊಂಡು ಶಿಕ್ಷಣದಲ್ಲೂ ಅತ್ಯಂತ ಪ್ರಸಿದ್ಧಿಯನ್ನು ಪಡೆದಿತ್ತು. ರಸ್ತೆಗೆ ಸನಿಹದಲ್ಲಿದ್ದೂ  ಪೇಟೆಯ ಗದ್ದಲದಿಂದ ಬಹುದೂರವಿದ್ದಂತೆ ಶಾಲೆಯ ಪರಿಸರ ಶಿಕ್ಷಣಕ್ಕೆ ಅನುಕೂಲವಾದಂತೆ ಶಿಕ್ಷಣಕ್ಕೆ ಪೂರಕವಾದ ಚಟುವಟಿಗೆಗಳಿಗೂ ಪ್ರಾಕೃತಿಕ ಸೌಕರ್ಯವನ್ನು ನೀಡಿತ್ತು.
            ಅಂದು ಶಾಲಾ ವಾರ್ಷಿಕೋತ್ಸವ ಎಂದರೆ ಊರ ಹಬ್ಬದಂತೆ ವಿಜ್ರಂಭಿಸುತ್ತಿತ್ತು. ಇಡೀ ರಾತ್ರಿ ಯಿಂದ ಬೆಳಗಿನವರೆಗೆ ನಡೆಯುವ ವಾರ್ಷಿಕೋತ್ಸವದಲ್ಲಿ ಮಕ್ಕಳ ನೃತ್ಯ ನಾಟಕ ಯಕ್ಷಗಾನ ಹೀಗೆ ವಿವಿಧ್ಯಮಯ ಕಾರ್ಯಕ್ರಮಗಳು ಸಾಮಾನ್ಯ. ಎಲ್ಲ ಕಾರ್ಯಕ್ರಮದ ಕೊನೆಯಲ್ಲಿ ಯಕ್ಷಗಾನ ಅದು ಅನಿವಾರ್ಯ. ಅದು ಶಾಲಾವಿದ್ಯಾರ್ಥಿಗಳಿಂದ ಕೆಲವೊಮ್ಮೆ ಶಾಲಾ ಹೆಳೆ ವಿದ್ಯಾರ್ಥಿಗಳಿಂದ ಇಷ್ಟು ಸಾಲದೇ ಇದ್ದರೆ ಊರಿನ ಪ್ರಸಿದ್ದ ಕಲಾವಿದರಿಂದ.   ಇಲ್ಲಿ ಪೈವಳಿಕೆ ಬಾಯಾರು ಸನಿಹದ ಎಲ್ಲ ಊರುಗಳ ಪ್ರತಿ ಮನೆಯಲ್ಲೂ ಯಕ್ಷಗಾನ ಕಲಾವಿದರು ಸಿಗುತ್ತಾರೆ. ಇದೊಂದು ಇಲ್ಲಿನ  ಹೆಗ್ಗಳಿಕೆ. 
ಇಂತಹ ಸಮಯದಲ್ಲಿ   ಕಾಯರ್ ಕಟ್ಟೆ ಶಾಲೆಯ ಪ್ರತಿ ಯಕ್ಷಗಾನದಲ್ಲೂ ಮಕ್ಕಳನ್ನು ಕುಣಿಸಿ ಸ್ವತಃ ಯಕ್ಷಗಾನವನ್ನು ಅನುಭವಿಸಿ ಆನಂದಿಸುವ ವ್ಯಕ್ತಿಯೆಂದರೆ ಅದು ಇಂದಿನ ಜನಪ್ರಿಯ ಭಾಗವತ ಕುರಿಯ ಶಾಸ್ತ್ರಿಗಳು. ಯಕ್ಷಗಾನ ಕಲೆ ಹೇಗೆ ಒಲಿದು ಬಂತೋ ಹಾಗೇನೇ,  ಯಕ್ಷಗಾನ ನಿರ್ದೇಶನದ ನೈಪುಣ್ಯತೆಯೂ  ಅವರ ನರ ನಾಡಿಗಳಲ್ಲಿ ಹರಿದಾಡುತ್ತಿದೆ. ಯಕ್ಷಗಾನದ ಪ್ರಾಥಮಿಕ ಹಂತದಲ್ಲೇ ಇವರು ದಕ್ಷ ನಿರ್ದೇಶಕರಾಗಿದ್ದುದನ್ನು ಕಣ್ಣಾರೆ ಕಂಡಿದ್ದೆನೆ. ಇವರ ನಾಡಿಮಿಡಿತ ವೆಂದರೆ ಅದು ಯಕ್ಷಗಾನದ ಮಿಡಿತ ಎಂದರೂ ತಪ್ಪಾಗಲಾರದು.  ಇವರ ಸರಳ ಶಿಕ್ಷಣ ಕ್ರಮ ರಂಗದಲ್ಲಿ ಒಂದಾಗಿ ಅದರಲ್ಲಿ ಮಾನಸಿಕವಾಗಿ ವಿಲೀನವಾಗುವುದು ಪ್ರತಿಯೋಬ್ಬರಲ್ಲೂ ರಂಗದ ಬಗ್ಗೆ ಜಾಗೃತಿಯನ್ನು ಗೌರವವನ್ನು ಹುಟ್ಟಿಸುತ್ತದೆ.
ಅಂದು ಉತ್ಸಾಹೀ  ತರುಣರಾಗಿದ್ದ ಶಾಸ್ತ್ರಿಗಳು ಇಂದು ಯಕ್ಷಗಾನದಲ್ಲಿ ವ್ಯಕ್ತಿತ್ವದಿಂದಲೂ ಪ್ರತಿಭೆಯಿಂದಲೂ   ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಯಕ್ಷಗಾನಕ್ಕೆ ಎಂತಹಾ ಭಾಗವತ ಬೇಕು ಎಂಬುದಕ್ಕೆ ಕುರಿಯ ಶಾಸ್ತ್ರಿಗಳನ್ನು ಉದಾಹರಿಸುವಷ್ಟು ಸುಲಭದಲ್ಲಿ  ಮತ್ತೊಬ್ಬರು ಸಿಗಲಾರರು. ಕುರಿಯ ಶಾಸ್ತ್ರಿಗಳ ಭಾಗವತಿಕೆ ಎಂದರೆ ವೈವಿಧ್ಯವಿರುತ್ತದೆ. ಆದರೆ ಅಲ್ಲಿ ಗೊಂದಲಗಳಿರುವುದಿಲ್ಲ. ಅತ್ಯಂತ ಸರಳ ಶೈಲಿ.  ಸಾಮಾನ್ಯವಾಗಿ ಯಕ್ಷಗಾನದಲ್ಲಿ ’ಅಗರಿ ಶೈಲಿ’ ಭಾಗವತಿಕೆ ಅತ್ಯಂತ ಜನಪ್ರಿಯ ಪ್ರಕಾರ. ಅತ್ಯಂತ ಸರಳ ಸುಂದರ ಶೈಲಿಯಲ್ಲಿ ಕುರಿಯ ಭಾಗವತರೂ ಏಕೆಮೇವಾದ್ವೀತಿಯರು. ಅಗರಿ ಶೈಲಿ ಇವರಿಗೆ ಒಲಿದಂತೆ ಇನ್ನಾರಿಗೂ ಒಲಿದಿಲ್ಲ.    ಭಾಗವತಿಕೆ ಎಂದರೆ ಇಷ್ಟು ಸುಲಭವೇ ಎನ್ನುವಂತಹ ಸುಗಮ ಹಾಡುಗಾರಿಕೆಯ ಈ ಶೈಲಿ  ಇದೀಗ ರಂಗಸ್ಥಳವನ್ನು ಏರುವ ಮಕ್ಕಳಿಂದ ತೊಡಗಿ ಅತ್ಯಂತ ಹಿರಿಯ ಕಲಾವಿದರಿಗೂ ಅಪ್ಯಾಯಮಾನವಾಗಿಬಿಡುತ್ತದೆ.   ಯಕ್ಷಗಾನದ ಹಿಮ್ಮೇಳವಾಗಲೀ ಕುಣಿತವಾಗಲೀ ಅದನ್ನು ಅಸ್ವಾದಿಸಿ ಅನುಭವಿಸುತ್ತಾ ಇವರು ಹಾಡುವುದನ್ನು ಕಾಣುವಾಗ ರಂಗದಲ್ಲಿನ ಅರ್ಪಣಾ ಭಾವ ವ್ಯಕ್ತವಾಗುತ್ತದೆ.
ಯಕ್ಷಗಾನದಲ್ಲಿ ಭಾಗವತರದ್ದು ಅತ್ಯಂತ ಹಿರಿಯ ಸ್ಥಾನ. ಅದು ಕೇವಲ ರಂಗಸ್ಥಳಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ರಂಗದ ಹೊರಗೂ ಅದರ ಪ್ರಭಾವ ಮತ್ತು ಯೋಗ್ಯತೆಯನ್ನು ಭಾಗವತನಾದವ ಉಳಿಸಿಕೊಳ್ಳಬೇಕು. ಭಾಗವತ ಸ್ಥಾನದ ಆಳ ಅರಿವು ಭಾಗವತಿಕೆಯನ್ನು ಅಭ್ಯಾಸ ಮಾಡಿದುದಕ್ಕಿಂತಲೂ ಅಧಿಕವಾಗಿರುತ್ತದೆ. ಆ ಸ್ಥಾನದ ಗೌರವ ಅರಿತಿದ್ದರೆ ಮಾತ್ರ ಭಾಗವತ ಸ್ಥಾನ ಭದ್ರತೆಯನ್ನು ಅನುಭವಿಸುತ್ತದೆ. ಆ ನಿಟ್ಟಿನಲ್ಲಿ ಕುರಿಯ ಶಾಸ್ತ್ರಿಗಳು ಭಾಗವತ ಎಂಬುದಕ್ಕೆ ಅನ್ವರ್ಥವಾಗಿಬಿಡುತ್ತಾರೆ. ಇವರಿದ್ದಲ್ಲಿ ಭಾಗವತ ಸ್ಥಾನ ಪ್ರಶ್ನಾತೀತವಾಗಿ ಸೆಟೆದು ನಿಲ್ಲುತ್ತದೆ. ಇದಕ್ಕೆ ಇವರ ಭ್ಯವ್ಯ ವ್ಯಕ್ತಿತ್ವದ  ನಿಲುಮೆಯೂ ಜತೆಯಲ್ಲಿ  ಯಕ್ಷಗಾನದ ಬಗೆಗಿರುವ ಜ್ಞಾನ ಮತ್ತು ಬದ್ದತೆ  ಮುಖ್ಯ ಕಾರಣಗಳಾಗುತ್ತವೆ.  ಯಕ್ಷಗಾನದ ಸೂಕ್ಷ್ಮಾತಿ ಸೂಕ್ಷ್ಮ ಅಂಗವನ್ನೂ ಸ್ವತಃ ಅನುಭವಿಸಿದ ಶಾಸ್ತ್ರಿಗಳ ಸ್ಥಾನ ಯಕ್ಷಗಾನದಲ್ಲಿ ಪ್ರಶ್ನಾತೀತ. ಇಷ್ಟಾದರೂ ಇವರು ನಿಗರ್ವಿ,  ಸರಳ, ಸಜ್ಜನ.
ಯಕ್ಷಗಾನ ವಿಚಾರಕ್ಕೆ ಬಂದಾಗ ಶಾಸ್ತ್ರಿಗಳು ನಿಷ್ಠೂರ ವ್ಯಕ್ತಿಯಾಗಿಬಿಡುತ್ತಾರೆ. ರಂಗದ ಪ್ರದರ್ಶನದಲ್ಲಿ ಪ್ರತಿಕ್ಷಣವೂ ಇದನ್ನು ಕಾಣಬಹುದು. ರಂಗಸ್ಥಳ ಇರುವುದು ವೇಷಧಾರಿ ಕುಣಿಯುವುದಕ್ಕೆ. ಅದು ಕಲಾವಿದ ದಣಿವಾರಿಸುವ ಸ್ಥಳವಾಗಬಾರದು. ಇದು ಕುರಿಯ ಭಾಗವತರ ನಂಬಿಕೆ.  ಪಾತ್ರಧಾರಿಯೂ ಹಾಗೇನೆ,   ಒಬ್ಬ ಕುರುಡನಾದವನು ಇನ್ನೊಬ್ಬ ವ್ಯಕ್ತಿಯ  ಹೆಗಲ ಮೇಲೆ ಕೈಯಿಕ್ಕಿ ವಿಶ್ವಾಸದಿಂದ ಮುಂದೆ ಹೆಜ್ಜೆ ಹಾಕಿದಂತೆ  ಪಾತ್ರಧಾರಿಯಾದವನು ಕುರಿಯ ಭಾಗವತರು ರಂಗದಲ್ಲಿದ್ದರೆ ಹೆಜ್ಜೆ ಹಾಕುತ್ತಾನೆ. ಯಾಕೆಂದರೆ ಅಲ್ಲಿ ರಂಗದ ಸಂಫೂರ್ಣ ಜವಬ್ದಾರಿ ಸ್ಥಿರವಾಗಿ ಭದ್ರವಾಗಿರುತ್ತದೆ. ಭಾಗವತರು ತೋರಿದತ್ತ ಹೆಜ್ಜೆ ಹಾಕಿದರೆ ಸಾಕು. ಉಳಿದುದಕ್ಕೆ ಯೋಚಿಸುವ ಪ್ರಮೇಯವೇ ಬರುವುದಿಲ್ಲ.
ಸಾಮಾನ್ಯವಾಗಿ ಗಾಯಕನೊಬ್ಬ ಹಾಡಬೇಕಾದರೆ ಆತನಿಗೆ ಸ್ಫೂರ್ತಿ ಅತ್ಯವಶ್ಯ. ಕುರಿಯ ಶಾಸ್ತ್ರಿಗಳೂ ಹಾಗೆ. ಇವರೊಳಗಿನ ಗಾಯಕ ವಿಜ್ರಂಭಿಸುವುದು ಅಲ್ಲಿ ರಂಗ ನಿರ್ಮಾಣವಾದಾಗ. ಅದು ಯಕ್ಷಗಾನ ಬಯಲಾಟವಾಗಲೀ ತಾಳ ಮದ್ದಲೆಯಾಗಲೀ ರಂಗದಲ್ಲಿ ಒಂದಾಗುವುದು ಇವರ ಸಹಜ ಗುಣ. ಎದುರಲ್ಲಿ ಪಾತ್ರಧಾರಿ ಇಲ್ಲವಾದರೆ ಇವರ ಭಾಗವತ ಪೂರ್ಣವಾಗಿ ಅನಾವರಣಗೊಳ್ಳುವುದಿಲ್ಲ. ಹಾಗಾಗಿ ಗಾನ ವೈಭವದಂತಹ ರಸಮಂಜರಿ ರೂಪಕ್ಕೆ ಬಂದಾಗ ಇವರು ಅದನ್ನು ನಯವಾಗಿ ತಿರಸ್ಕರಿಸುತ್ತಾರೆ. ರಂಗ ಭಾಗವತನಾಗುವುದೇ ಇವರ ಭಾಗವತಿಕೆಯ ಸಹಜ ಗುಣ. ಇವರ ಹಾಡಿಗೆ ಕುಣಿಯುವ ಅರ್ಥ ಹೇಳುವ ಪಾತ್ರ ಅಲ್ಲಿ ಇರಲೇಬೇಕು. ಆಗ ಶಾಸ್ತ್ರಿಗಳು ವಿಜ್ರಂಭಿಸುತ್ತಾರೆ.
ಕುರಿಯ ಭಾಗವತರ ನಿಲುಮೆ ಎಂದರೆ ಅದು ರಂಗಸ್ಥಳವನ್ನು ತುಂಬಿ ನಿಲ್ಲುತ್ತದೆ. ಅಲ್ಲಿ ಕಲಾವಿದನ ಸ್ಥಾನ ಆನಂತರವೇ ಗೋಚರಿಸುತ್ತದೆ. ಇದು ಭಾಗವತ ಸ್ಥಾನ ಎಂಬ ಪ್ರಜ್ಞೆ ನೋಡುವ ಪ್ರೇಕ್ಷಕನಲ್ಲೂ ಜಾಗ್ರತವಾಗಿರುತ್ತದೆ. ಭಾಗವತನೆಂದರೆ ರಂಗಸ್ಥಳಕ್ಕೂ ಚೌಕಿಗೂ ಮತ್ತು ಪ್ರೇಕ್ಷಕನಿಗೂ ಸಂವಹನವನ್ನು ಕಲ್ಪಿಸುವ ಏಕ ಮಾಧ್ಯಮ. ಅಲ್ಲಿ ಒಂದು ಬಡವಾದರೂ ಯಕ್ಷಗಾನಕ್ಕೆ ಪೂರ್ಣವಾದ ನ್ಯಾಯ ಲಭಿಸುವುದಿಲ್ಲ.
ಬಾಲ ವೇಷಧಾರಿ ಪುಂಡುವೇಶಧಾರಿಯಾಗಿ ಬದಲಾಗಿ ತೇರ್ಗಡೆಯಾಗುವಾಗ ಬಾಲ ವೇಶಧಾರಿ ಸ್ಥಾನ ಸಹಜವಾಗಿ ನಷ್ಟವನ್ನು ಅನುಭವಿಸುತ್ತದೆ. ಅದರಂತೇ ಪುಂಡು ವೇಶಧಾರಿ  ಬಣ್ಣದ ವೇಶಧಾರಿಯಾಗುವಾಗ. ಆದರೆ ಅಲ್ಲಿ ಹಳೆ ಚಿಗುರು ಬಲಿತು ಹೊಸ ಚಿಗುರು ಮೊಳಕೆಯೊಡೆದಂತೆ ಮತ್ತೊಬ್ಬರು ಆ ಸ್ಥಾನವನ್ನು ತುಂಬಿಬಿಡುತ್ತಾರೆ. ಕುರಿಯದವರ ವಿಚಾರದಲ್ಲೂ ಹಾಗೆ ಮೊದಲು ಪ್ರಸಿದ್ಧ ವೇಷಧಾರಿಯಾಗಿದ್ದವರು. ಇವರ ಹಲವು ವೇಶಗಳು ಪ್ರಸಿದ್ದವಾಗಿ ಮಹಿಷಾಸುರ ಪಾತ್ರಕ್ಕೆ ಸ್ವತಃ ಹೊಸ ರೂಪವನ್ನು ತಂದವರು. ಅನಾರೋಗ್ಯದ ನಿಮಿತ್ತ ಕುರಿಯದವರು ವೇಷ ಕಳಚಿದಾಗ ಆಭಾಗ ನಷ್ಟ ಅನುಭವಿಸಿತು. ಇಂದಿನ ತಲೆ ಮಾರಿಗೆ ಕುರಿಯದವರ ವೇಶ ಕೇವಲ ವರ್ಣನೆಗೆ ಸೀಮಿತ. ಇವರ ಅಪರಿಮಿತ ಉತ್ಸಾಹ ಪಾತ್ರದಲ್ಲಿ ಒಂದಾಗಿ ಶುದ್ದ ಪಾತ್ರವೇ ಆಗಿಬಿಡುವ ಅರ್ಪಣಾ ಭಾವ ಅವರ್ಣನೀಯ. ಹಣ್ಣೆಲೆ ಉದುರಿ ಹೊಸ ಚಿಗುರು ಚಿಗುರಬಹುದು. ಅರಳಿದ ಹೂವು ಉದುರಿ ಗಿಡದಲ್ಲಿ ಹೊಸ ಹೂವು ಅರಳಬಹುದು. ಆದರೆ ಕುರಿಯ ಶಾಸ್ತ್ರಿಗಳ ಸ್ಥಾನದಲ್ಲಿ ಹೊಸ ಚಿಗುರಾಗಲೀ ಹೊಸ ಹೂವಾಗಲಿ ಹಾಗೇ ಹುಟ್ಟುವುದಕ್ಕೆ ಸಾಧ್ಯವೇ ಇಲ್ಲ. ಅಗರಿ ಶೈಲಿಯಂತೆ ಕುರಿಯ ಶೈಲಿ ಎಂಬುದು ಅದು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅದು ಅವರಿಗಷ್ಟೇ ಸೀಮಿತ. ಅಂತಹ ಮರೆಯಲಾಗದ ಘನ ವ್ಯಕ್ತಿತ್ವವನ್ನೂ ಪ್ರತಿಭಾ ಮುದ್ರೆಯನ್ನೂ  ಇವರು ಒತ್ತಿ ತೋರಿದವರು.
ಸರ್ವ ತಂತ್ರ ಸ್ವತಂತ್ರವಾಗುವ ಭಾಗವತ ಶೈಲಿ ಕುರಿಯ ಶಾಸ್ತ್ರಿಗಳ ಶೈಲಿ ಇಂದಿನ ತಲೆಮಾರಿನಲ್ಲಿ ಇದು ಕಾಣುವುದಕ್ಕೆ ಸಾಧ್ಯವೇ ಇಲ್ಲ. ಮಾತ್ರವಲ್ಲ ಇವರ ಭಾಗವತಗುಣಗಳು ಅದು ಕೇವಲ ಶಾಸ್ತ್ರಿಗಳಿಗಷ್ಟೇ ಸೀಮಿತ. ಅದು ಅವರಲ್ಲೇ ಭದ್ರವಾಗಿರುವ ನಿಕ್ಷೇಪದಂತೆ ಅದರ ವಾರಸುದಾರ ಯಾರೂ ಇಲ್ಲ ಎಂಬಂತಹ ನಿರ್ಭೀತ ನಡೆ ಈ ಭಾಗವತ ವರೇಣ್ಯ ಕುರಿಯ ಗಣಪತಿ ಶಾಸ್ತ್ರಿಗಳದ್ದು. ಇದಕ್ಕೆ ಅನುಮಾನವೇ ಇಲ್ಲ.


Saturday, March 25, 2017

ಗೇರು ಕಟ್ಟೆಯ ಮೇಲೊಂದು ಕಂಬನಿ


ಅಂದು ನನಗೆ ನೆನಪಿದೆ ಬೆಂಗಳೂರಿನ ಎಡನೀರು  ಮಠದ ಆ ದುರ್ಘಟನೆ. ಅಪ್ರತಿಮ ಚೆಂಡೆ ವಾದಕ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ನಿಧನ. ಎಡನೀರು ಮೇಳದ ಯಕ್ಷಗಾನ ಬಯಲಾಟ ನೋಡಲು ಹೋಗಿದ್ದೆ. ಮೊದಲ ದಿನ ಬಲ್ಲಾಳರಲ್ಲಿ ಮಾತನಾಡಿಸಿದಾಗ ಆತ್ಮೀಯತೆಯಂದ ಹೆಗಲ ಮೇಲೆ ಕೈ ಹಾಕಿ “ ದಾನೆ ಅಣ್ಣೆರೆ...” ಅಂತ ಕುಶಲ ವಿಚಾರಿಸಿದ ಬಲ್ಲಾಳರು ಕೇವಲ ನೆನಪಿನ ಪುಟಗಳಲ್ಲಿ ಹಾಜರಿ ಹಾಕಿ ಹೋಗಿದ್ದರು. ರಂಗಸ್ಥಳದ ಬಳಿಯಲ್ಲೇ ಇನ್ನೇನು ರಂಗಸ್ಥಳ ಏರಬೇಕು ಎನ್ನುವಾಗ ಕುಸಿದು ಬಿದ್ದು ಇನ್ನಿಲ್ಲವಾದ ಬಲ್ಲಾಳರು ಇಹಲೋಕ ತ್ಯಜಿಸಿದ್ದರು. ಮೊದಲ ದಿನ ಚೌಕಿ ಪೂಜೆಗೂ ಮೊದಲು ದೇವಾಲಯದ ಮಹಾಮಂಗಳಾರತಿ ಬರಿ ಮೈಯಲ್ಲಿ ಚೆಂಡೆ ಹೆಗಲ ಮೇಲೆ ಹಾಕಿ ನಿಂತ ಬಲ್ಲಾಳರನ್ನು ಮರೆಯುವುದಕ್ಕೇ ಸಾಧ್ಯವಾಗಲಿಲ್ಲ. ಇಂದಿಗೂ ಅಲ್ಲಿಗೆ ಹೋದರೆ ಅದುವೇ ಮತ್ತೂ ಮತ್ತೂ ನೆನಪಿಗೆ ಬಂದು ಒಂದು ಕ್ಷಣ ಮನಸ್ಸು ವಿಚಲಿತವಾಗುತ್ತದೆ. ಕೇವಲ ಪ್ರೇಕ್ಷಕನಾದ ನನಗೇ ಈ ಅನುಭವವಾದರೆ ಜತೆಯಲ್ಲಿ ಒಂದಾಗಿ ಬೆರೆಯುವ ಕಲಾವಿದರ ಮನಸ್ಥಿತಿ ಹೇಗಾಗಬೇಡ.?

ಕಳೆದ ದಿನ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ ಶ್ರೀ ಗೇರುಕಟ್ಟೆ ಗಂಗಯ್ಯ ಶೆಟ್ಟರು ರಂಗದಲ್ಲಿ ಕುಸಿದು ಬಿದ್ದ ದೃಶ್ಯವನ್ನು ಅಂತರ್ಜಾಲದಲ್ಲಿ ನೋಡಿದಾಗ ಮೇಲಿನ ಘಟನೆ ಮತ್ತೆ ಮತ್ತೆ ನೆನಪಿಗೆ ಬಂದು ಬಿಟ್ಟಿತು. ಅಂದು ಶೆಟ್ಟರು ಬಣ್ಣ ಬಳಿಯುವಾಗ ತಿಳಿದಿದ್ದರೆ?  ಈ ಬಣ್ಣ ಉಸಿರ ಕೊನೆಯಲ್ಲೂ ಮುಖದಲ್ಲಿ ಹಾಗೆ ಇರುತ್ತದೆ ಎಂದು. ಈ ತೊಟ್ಟ ವೇಷವನ್ನು ಸ್ವತಃ ನಾನು ಕಳಚುವುದಿಲ್ಲ ಎಂದು?   ಆದರೆ ಇದು ತಿಳಿದಿತ್ತೋ ಎಂಬಂತೆ  ಕೊನೆಯ ವೇಷದಲ್ಲಿದ್ದ  ಅವರ ಹುರುಪು ಆ ಕುಣಿತದಲ್ಲಿ ಕಂಡುಬರುತ್ತಿತ್ತು.  ತಾನಿನ್ನೂ ಕುಣಿಯಬಲ್ಲೇ ಎಂದು  ಸಾವರಿಸಿಕೊಂಡು ಸಿಂಹಾಸನ ಕೈಯಲ್ಲಿ ಹಿಡಿದು ಬಿಟ್ಟು ಹೋಗುತ್ತಿರುವ ಉಸಿರನ್ನು ಹಿಡಿದಿಡುವ ಪ್ರಯತ್ನ ಮಾಡಿದರು. ತೊಟ್ಟ ವೇಷದ ಅಸುರೀ ಆವೇಶ ದೇಹದಲ್ಲಿ ಹುಮ್ಮಸ್ಸನ್ನೂ ತುಂಬುತಿದ್ದರೂ ಯಾವುದನ್ನೂ ಹಿಡಿದು ನಿಯಂತ್ರಿಸಲಾಗದೇ ಚೆಂಡೇ ಬಡಿತದ ಸದ್ದಿನಲ್ಲಿ ಶ್ರೇಷ್ಠಕಲಾವಿದನ ಎದೆಬಡಿತವೂ ಲೀನವಾಗಿ ಹೋದದ್ದು ವಿಪರ್ಯಾಸ ಎನ್ನಬೇಕು. ರಂಗದಲ್ಲಿ ಪ್ರವೃತ್ತರಾಗಿದ್ದ ಸಹ ಕಲಾವಿದರು ಕಂಗಾಲಾಗಿ ಹೋದರು. ಕ್ಷಣ ಮೊದಲು ರಂಗಸ್ಥಳದ ಧೂಳೆಬ್ಬಿಸಿ ಬೆವರು ಚೆಲ್ಲಿದ ಕಲಾವಿದ ಇನ್ನಿಲ್ಲವಾದ.

ರಂಗದ ಮೇಲೆ ಕೊನೆಯ ಉಸಿರಿನೊಂದಿಗೆ  ಕೊನೆಯ ಎದೆಯ ತಾಳವನ್ನು ಬಡಿದ ಕಲಾವಿದರು ಹಲವರು ಯಕ್ಷಗಾನದ ಇತಿಹಾಸದೊಂದಿಗೆ ಇತಿಹಾಸವಾಗಿದ್ದಾರೆ. ಇದು ಮತ್ತೊಂದು ಇತಿಹಾಸದ ಪುಟ. ಈ ವಾರ್ತೆ ಟಿ ವಿ ಯಲ್ಲಿ ಬಿತ್ತರವಾಗುತ್ತಿದ್ದಂತೆ ಹಿರಿಯ ರಂಗ ಕರ್ಮಿ ಮಾಸ್ಟರ್ ಹಿರಣ್ಣಯ್ಯ ತಮ್ಮ ಅಭಿಪ್ರಾಯವನ್ನು ಹೇಳುತ್ತಾರೆ. “ ಪ್ರತಿಯೊಬ್ಬ ಕಲಾವಿದ ಬಯಸುವುದು ರಂಗದ ಮೇಲೆ ಆತ್ಮಾರ್ಪಣೆಯಾಗಬೇಕು. ಅದರಂತೆ ಕೂಡಿಬಂದಿದೆ. ಕಲಾವಿದನಿಗೆ ಸಂಬಂಧಿಸಿದಂತೆ ಇದು ಕಲಾವಿದನ ಭಾಗ್ಯ. ಕಲಾವಿದನಿಗೆ ಅದಕ್ಕಿಂತ ಪುಣ್ಯಸ್ಥಳ ಬೇರೆ ಯಾವುದು. ಅನೇಕ ವರ್ಷಗಳ ತಪಸ್ಸಿನ ಫಲ.” ಆದರೆ ಜತೆಕಲಾವಿದರಿಗೆ ಈ ಆಘಾತದಿಂದ ಹೊರಬರಬೇಕಾದರೆ ಇನ್ನು ಕೆಲವು ಸಮಯವಾದರೂ ಬೇಕು. ರಂಗದ ಕಂಬ ಕಂಬಗಳೂ ಈ ನೆನಪಿಗೆ ಸಾಕ್ಷಿಯಾಗಿ ಅಲ್ಲಿ ಕಲಾವಿದ ನೆನಪಾಗಿ ಕಾಡುತ್ತಿದ್ದರೆ, ಅದನ್ನು ಮರೆಯುವುದಕ್ಕೆ ಆತ್ಮ ಬಲ ಜಾಗೃತವಾಗಬೇಕು.


ಯಾವುದೇ ವಸ್ತುವು ಅದರ ಅಸ್ತಿತ್ವ ಕಳೆದುಕೊಂಡಾಗಲೇ ಅದರ ಮೌಲ್ಯ ಹೆಚ್ಚುತ್ತದೆ. ಆವಾಗ ಹಲುಬುತ್ತೇವೆ ಅನರ್ಘ್ಯ ರತ್ನವೊಂದನ್ನು ಕಳೆದುಕೊಂಡಿದ್ದೇವೆ. ಒಂದು ವೇಳೆ ಸಕಾಲದಲ್ಲಿ ಆ ರತ್ನದ ಮೌಲ್ಯ ತಿಳಿದು ಪ್ರವರ್ತಿಸುತ್ತಿದ್ದರೆ....?   ಗಂಗಯ್ಯ ಶೆಟ್ಟರ ಅನಿರೀಕ್ಷಿತ ನಿರ್ಗಮನ ಅಪರಾಧಿ ಮನೋಭಾವಕ್ಕೆ ಕಾರಣವಾಗುತ್ತಿರಲಿಲ್ಲ. ಯಕ್ಷಗಾನದಲ್ಲಿ ಇತ್ತೀಚೆಗಿನ ರಜತ ಪರ್ವಗಳ ಉತ್ಸವ ಸರಣಿಯಲ್ಲಿ ಗಂಗಯ್ಯ ಶೆಟ್ಟರ ನಲ್ವತ್ತೇಳು ವರ್ಷದ ಅತೀ ದೀರ್ಘ ಕಲಾಸೇವೆ ಯಕ್ಷಗಾನ ಪ್ರಪಂಚವನ್ನೇ ಅಣಕಿಸುತ್ತದೆ. ಶೆಟ್ಟರದ್ದು ಕೇವಲ ನಲವತ್ತೇಳರ ಅಂಕೆಯ ಮಿತಿಯಲ್ಲಿ ನಿಲ್ಲುವ ಸಾಧನೆಯಲ್ಲ. ಪರಂಪರೆಯ ವೇಷಗಾರಿಕೆಯಲ್ಲಿ ಭದ್ರವಾದ ಮೈಲಿಗಲ್ಲನ್ನು ನೆಟ್ಟವರು. ರಾಜವೇಷವಿರಲಿ ಬಣ್ಣದ ವೇಷವಿರಲಿ ಶೆಟ್ಟರದು ತಮ್ಮದೆ ಛಾಪನ್ನು ಒತ್ತುವ ಬಿಸು ಸುಯ್ಯುವ ಸರಿಮಿಗಿಲೆನಿಸದ ಪಾತ್ರಗಳು. ತೆಂಕು ತಿಟ್ಟಿನಲ್ಲಿ ಬಣ್ಣದವೇಷವೆಂದರೆ ಬರೀ  ಅಬ್ಬರದ ಆರ್ಭಟೆ. ಅಲ್ಲಿ  ಮಾತಿಲ್ಲ, ಕುಣಿತವಿಲ್ಲ  ಎಂದು ತಿಳಿದವರಿಗೆ ಶೆಟ್ಟರು  ತಮ್ಮ ಸರ್ವಾಂಗೀಣ ಪ್ರತಿಭೆಯಿಂದ ಉತ್ತರವನ್ನು ಕೊಟ್ಟವರು.  ಸ್ಪಷ್ಟ ಮಾತುಗಾರಿಕೆ, ಪರಂಪರೆಯ ಕುಣಿತ. ಇದು ಸಮರ್ಥ ಗುರುಗಳ ಉತ್ತರದಾಯಿತ್ವದ ಕುರುಹುಗಳು. ಆದರೆ ರಜತ ಪರ್ವಗಳ ಭರಾಟೆಯಲ್ಲಿ ಇದು ಆಟಕ್ಕಿಲ್ಲದ ಚೆಂಡಿನಂತೆ ಅವಗಣಿಸಲ್ಪಟ್ಟಿತು. ರಂಗದ ಮೇಲೆ ತನ್ನ ಸಾನ್ನಿಧ್ಯದಿಂಲೇ ಪ್ರಸಂಗಕ್ಕೆ ವೇಗವನ್ನು ಪ್ರಭೆಯನ್ನು ತಂದುಕೊಡುವ ಗಂಗಯ್ಯ ಶೆಟ್ಟರ ಸಾಧನೆಗೆ  ಸಿಗಬೇಕಾದ ಮನ್ನಣೆ ಸಿಕ್ಕಿಲ್ಲವೆಂದೇ ಪ್ರಬುದ್ದ ಯಕ್ಷಗಾನ ಪ್ರೇಕ್ಶಕರ ಅನಿಸಿಕೆ.  ಈಗ ರತ್ನ ಕೈಜಾರಿ ಹೋಗಿದೆ.  ಇನ್ನು ಶ್ರದ್ದಾಂಜಲಿಯೊಂದೇ ಉಳಿದಿರುವುದು. ಅದೂ ಪ್ರದರ್ಶನದ ಸರಕಾಗದೇ ಪರಮಾರ್ಥದಿಂದಲೂ ಶ್ವದ್ದೆಯ ಕಂಬನಿಯಾಗಬೇಕು.
ಅನಿರೀಕ್ಷಿತ ಘಟನೆಗಳು ಮನುಷ್ಯನಿಗೆ ಪ್ರಕೃತಿ ಕಲಿಸುವ ಪಾಠಗಳು ಆದರೆ ಮನುಷ್ಯ ಅದನ್ನು ಘಟನೆಯಾಗಿಯಷ್ಟೇ ಪರಿಗಣಿಸುವುದು ವಿಪರ್ಯಾಸ. ರಂಗದ ಮೇಲೇ ಪ್ರವೃತ್ತಿಯಲ್ಲಿರುವಾಗಾ ನಾನು ನನ್ನದು ಎಂಬ ಹಮ್ಮು ಇರುತ್ತದೆ. ತನಗೆ ಮುಂದೆ ಬರಲಾಗದೇ ಇದ್ದರೆ ಮುಂದೆ ಇದ್ದವರನ್ನು ಹಿಂದೆ ಎಳೆಯುವ ಪ್ರಮೇಯ. ಸದಾ ತಮ್ಮ ಪ್ರತಿಷ್ಠೆ ಸ್ವಾರ್ಥ ತಮ್ಮ ಸ್ಥಾನ ಮಾನಗಳು ಇದರ ನಡುವೆಯೇ ಗಿರಕಿ ಹೊಡೆಯುವಾಗ ಇಂತಹ ಘಟನೆಗಳು ನಮಗೆ ಸಾಕ್ಷಿಯಾಗಬೇಕು. ಜೀವನ ಮೌಲ್ಯಗಳನ್ನು ಗುರುತಿಸಿ ಗೌರವಿಸಬೇಕು. ಮೌಲ್ಯಗಳು ಕೂಡ ಒಂದು ರೀತಿಯ ಸ್ವಾರ್ಥ ಸಾಧನೆಗೆ ದಾರಿಯನ್ನು ಸೃಷ್ಟಿಸುತ್ತವೆ......ಬಹುಷಃ ಯಕ್ಷಗಾನದಂತಹ ಕಲೆ ಇಂದು ಈ ಸ್ಥಿತಿಗೆ ಬರುತ್ತಿರಲಿಲ್ಲ. ಕಳೆದು ಹೋದವರ ಜ್ಞಾನ ಬದುಕಿದ್ದಾಗ ಹಿಂಬಾಲಿಸಿ ಪಡೆಯುವ ಹಂಬಲವಿಲ್ಲ. ಮತ್ತೆ ನಮ್ಮ ಹಲುಬಾಟಕ್ಕೆ ಅರ್ಥವೆಲ್ಲಿ ಇರುತ್ತದೆ.? ಒಂದೊಂದು ರತ್ನ ಕಳಚಿ ಬೀಳುತ್ತದೆ. ಯಕ್ಷಗಾನ ಲೋಕ ಅದನ್ನು ನೋಡಿ ಮತ್ತೆ ಯಥಾ ಸ್ಥಿತಿ ಎಂಬಂತೆ ಪೂರ್ವನಿಗದಿಯ ರಸ್ತೆ ಇದುವೇ ಎಂದುಕೊಂಡು ಅದೇ ಜಾಡು ಹಿಡಿಯುತ್ತದೆ.
ಕಲಾವಿದನೊಬ್ಬ ಅನಿರೀಕ್ಷಿತವಾಗಿ ಇಲ್ಲದೇ ಆದಾಗ ಅದರಿಂದ ಕಲಿಯುವ ಪಾಠವಿರುತ್ತದೆ. ನಮ್ಮ ನಿಯಂತ್ರಣದಲ್ಲಿ ಇಲ್ಲದೇ ಇರುವಂತಹುದು ಬಹಳಷ್ಟಿದೆ ಎಂಬ ಪ್ರಜ್ಞೆಯಿಂದ ತಮ್ಮ ಸ್ವಾರ್ಥ ಸಾಧನೆಯನ್ನು, ಕೀಳು ರಾಜಕೀಯವನ್ನು  ಬಿಟ್ಟು ಕೇವಲ ಯಕ್ಷಗಾನ ಕಲೆಯನ್ನಷ್ಟೇ ನೋಡಿ ಕಲಾವಿದ ಮತ್ತು ಪ್ರೇಕ್ಷಕ ಬದುಕಬೇಕು. ಇದು ಗತಿಸಿದ ಕಲಾವಿದನಿಗೆ ಅರ್ಪಿಸುವ ಪ್ರಾಮಾಣಿಕ ಶ್ರದ್ದಾಂಜಲಿಯಾಗಬಹುದು

Sunday, January 29, 2017

ತನ್ನಂಗ ದಿನ್ನಂಗ ಶ್ರುತಿಲಯದಲ್ಲಿ


ತನ್ನಂಗ ದಿನ್ನಂಗ ತಕ್ಕಿಟ ತೋಂ.......ಇದೊಂದು ಲಯ ವಿನ್ಯಾಸದ ಮೂಲಾಕ್ಷರ. ಇದೇ ಹೆಸರಿನಲ್ಲಿ ಕೆಲವು ದಶಕಗಳ ಹಿಂದೆ ಮಂಗಳೂರು ಆಕಾಶವಾಣಿಯಲ್ಲಿ ಒಂದು ಕಾರ್ಯಕ್ರಮ  ಪ್ರಸಾರವಾಗಿತ್ತು. ಯಕ್ಷಗಾನವನ್ನು ಆಮೂಲಾಗ್ರವಾಗಿ ಬಲ್ಲ ಯಕ್ಷವಿದ್ವಾಂಸ ಡಾಕ್ಟರ್ ಶ್ರೀ ರಾಘವ ನಂಬಿಯಾರರು ನಡೆಸಿಕೊಟ್ಟ ಕಾರ್ಯಕ್ರಮವದು.  ಪ್ರಾಥಮಿಕ ಹಂತದಿಂದ ಯಕ್ಷಗಾನವನ್ನು ಸ್ಥೂಲವಾಗಿ ಇದರಲ್ಲಿ ಪರಿಚಯಿಸಲಾಗುತ್ತಿದೆ. ಕರಾವಳಿ ಪ್ರದೇಶದಲ್ಲಿ ಯಕ್ಷಗಾನ ಹೇಗೆ ಜೀವನಾಡಿಯಲ್ಲಿ ಬೆರೆತು ಒಂದಾಗಿದೆ ಎಂಬಲ್ಲಿಂದ ಕಾರ್ಯಕ್ರಮ ಆರಂಭವಾಗುತ್ತದೆ.  ಚೆಂಡೆ ಮದ್ದಲೆಗಳ ಪೆಟ್ಟುಗಳನ್ನು ವಿವಿಧ ರೂಪಗಳನ್ನು ಬಾಯಿತಾಳದೊಂದಿಗೆ ಬಹಳ ಸೂಕ್ಷ್ಮವಾಗಿಯೂ ಸ್ಥೂಲವಾಗಿಯೂ ವಿವರಿಸುತ್ತಾರೆ.

            ತೆಂಕು ಯಕ್ಷಗಾನದಲ್ಲಿ ಜಾಗಟೆಯ ವೈಶಿಷ್ಟ್ಯದಂತೆ ಬಡಗಿನಲ್ಲಿ ....ತಾಳ. ಜತೆಯಲ್ಲಿ ಹಿಮ್ಮೇಳದ ಇತರ ಅಂಗಗಳಾದ ಚೆಂಡೆ ಮದ್ದಲೆಗಳ ಪ್ರಾಧಾನ್ಯತೆ ಮತ್ತು ಭಾಗವತ ಹಿಮ್ಮೇಳ ವಾದಕ, ಹೀಗೆ ಹಿಮ್ಮೇಳದ ಅಂಗಗಳನ್ನು ಅದರ ಪೂರ್ಣ ರಚನಾ ಕೌಶಲವನ್ನೂ ವಿವರಿಸುತ್ತಾರೆ.   ಶ್ರೀ ಗೋಪಾಲ ಕೃಷ್ಣ ಕುರುಪ್ ಮತ್ತು ಹಿರಿಯಡ್ಕ ಗೋಪಾಲಾಚಾರ್ಯರ ಮದ್ದಲೆ ವಾದನದ ಪ್ರಸ್ತುತಿ ಯಕ್ಷಗಾನದ ಬಾಲ ಪಾಠ ಹೇಗಿರಬೇಕು ಎಂಬುದನ್ನು ತೋರಿಸಿಕೊಡುತ್ತದೆ.  ಇದೆಲ್ಲದರ ಜತೆಗೆ ಹಿಮ್ಮೇಳದ ಸ್ವರೂಪವನ್ನು ಕೆತ್ತುವ ಶಿಲ್ಪಿಯಂತೆ  ಶ್ರೀ ರಾಘವ ನಂಬಿಯಾರರ ಪ್ರಸ್ತುತಿ ಪೂರಕವಾಗಿ ಚಿತೋಹಾರಿಯಾಗಿರುತ್ತದೆ. ಅದರಲ್ಲೂ ಬಾಯಿತಾಳದೊಂದಿಗೆ ಮದ್ದಲೆಯ ವಾದನವನ್ನೂ ಅದರ ರಚನಾ ವಿಶೇಷತೆಯನ್ನು ವಿವರಿಸುವಾಗ ಯಕ್ಷಗಾನದ ಪ್ರಥಮ ಅಕ್ಷರ ಮಾಲೆಯೂ ಎಷ್ಟು ಶಿಸ್ತುಬದ್ದವಾಗಿದೆ ಎಂದನಿಸುತ್ತದೆ. ಇದನ್ನು ಶಾಸ್ತ್ರೀಯ ಕಲೆಯಲ್ಲ ಎಂದು ಹೇಳುವುದಿದ್ದರೆ ಸ್ವಲ್ಪ ಯೋಚಿಸಬೇಕಾಗುತ್ತದೆ.

            ಶ್ರೀ ರಾಘವ ನಂಬಿಯಾರರು ಯಕ್ಷಗಾನದ ಬಲುದೊಡ್ಡ ವಿದ್ವಾಂಸ, ಸಂಶೋಧಕ ಮಾತ್ರವಲ್ಲ ಸ್ವತಃ ಯಕ್ಷಗಾನ ಕಲೆಯ ನರ ನಾಡಿಗಳನ್ನು ಬಲ್ಲ ಅದ್ಭುತ ಕಲಾವಿದ.  ಇದು ಅವರು ಬಾಯಿತಾಳವನ್ನು ಉಚ್ಚರಿಸುವಲ್ಲೇ ತಿಳಿಯಬಹುದು. ಒಂದು ಶುದ್ದ ಪರಂಪರೆಯಲ್ಲಿ ಅವರು ತೋರುವ ಕಾಳಜಿಯನ್ನು ಹೀಗೆ ವಿವರಿಸುವುದು ಸಾಧ್ಯವಿಲ್ಲ. ಇಂದಿನ ಹೆಸರಾಂತ ಭಾಗವತರಿಗೆ ಕಲಾವಿದರಿಗೆ ಇದು ಸಾಧ್ಯವೇ?  ಹೀಗೆ ಅನ್ನಿಸಿದರೆ ಆಶ್ಚರ್ಯವಾಗುವುದಿಲ್ಲ. ಯಾಕೆಂದರೆ ಗಟ್ಟಿಪರಂಪರೆಯ ಶೈಥಿಲ್ಯಕ್ಕೆ ಎಂದೋ ನಾಂದಿ ಬರೆದಾಗಿದೆ ಎನ್ನಬೇಕು.  ವಸ್ತುವೊಂದು ಕಾಲ ಕಳೆದಂತೆ ತನ್ನ ಕಾಠಿಣ್ಯವನ್ನು ಕಳೆದುಕೊಂಡು ಶಿಥಿಲವಾದಂತೆ ಯಕ್ಷಗಾನವೂ ಕಾಲಮಾನದ ಧಾಳಿಗೆ ನಲುಗಿ ಹೋಗಿದೆ. ಹೀಗನ್ನಿಸುವುದು ಹಳೆಯ ಯಕ್ಷಗಾನ ಸಂಗ್ರಹದತ್ತ ಹೀಗೆ  ಕಿವಿಯಗಲಿಸಿದಾಗ.
            ಮಿತ್ರರೊಬ್ಬರ ಸಹಕಾರ ಸಹಾಯದಿಂದ ಹಳೆಯ ಅತೀ ಹಳೆಯ ಎನ್ನಬಹುದಾದ ಧ್ವನಿ ಸುರುಳಿಗಳು ನನ್ನ ಸಂಗ್ರಹದ ಕಿಂಚಿತ್ ಸ್ಥಳವನ್ನು ಆವರಿಸಿಕೊಂಡು ಸೇರಿಹೋಗಿದೆ. ಅದರಲ್ಲಿ ಹಲವು ಹಿರಿಯ ಕಲಾವಿದರ ಸಂದರ್ಶನಗಳು  ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್, ಹೊಸಹಿತ್ಲು ಮಹಾಲಿಂಗ ಭಟ್, ನಗರ ಜಗನ್ನಾಥ ಶೆಟ್ಟಿ  ರಾಘವ ನಂಬಿಯಾರ್ ಮುಂತಾದವರ ಜೀವನಾನುಭವದ ಸಂದರ್ಶನಗಳು  ಬಡಗುತಿಟ್ಟಿನ ಅತ್ಯಂತ ಹಿರಿಯ ಭಾಗವತರಾದ  ಗೋರ್ಪಾಡಿ ವಿಠಲ ಭಾಗವತರ  ಅನುಭವಗಳನ್ನು  ಕೇಳುವಂತಹ ಒಂದು ಸುಯೋಗ ಈ ಹವ್ಯಾಸದಿಂದ ಕೂಡಿಬಂತು.

            ಬೆಂಕಿ ಸುಡುತ್ತದೆ ನೀರು ತಣಿಸುತ್ತದೆ ಹಾವು ಕಚ್ಚುತ್ತದೆ, ಕಾಡಿನಲ್ಲಿ ಹುಲಿ  ಹಿಡಿದು ತಿನ್ನುತ್ತದೆ. ಮನುಷ್ಯ ಜೀವನ,  ಇಂತಹುವುಗಳು ಹಿರಿಯರು ಹೇಳುವುದನ್ನು ಕೇಳಿ ಆ ಅನುಭವದಿಂದ ಕಟ್ಟಿದ ಬದುಕಾಗಿರುತ್ತದೆ. ಇಲ್ಲವಾದರೆ ಕಾಡನ್ನು ಕಂಡು ಹುಲಿಯನ್ನು ಕಂಡು ಸತ್ಯಾಸತ್ಯತೆಯನ್ನು ಅರಿಯುವಲ್ಲಿ ಆಯುಷ್ಯದ ಅರ್ಧ ಸಂದು ಹೋಗಿರುತ್ತದೆ. ಅದಲ್ಲವಾದರೆ ಆ ಅನುಭವ ಹೊಂದುವಾಗ ಅನುಭವಿಸುವುದಕ್ಕೆ ಬದುಕೇ ಉಳಿದಿರುವುದಿಲ್ಲ. ಇದು ವಾಸ್ತವವಾದರೂ ಈ ವಾಸ್ತವದ ಪಾಠ ಯಕ್ಷಗಾನಕ್ಕೆ ಬಂದಾವಗ ಅರ್ಥವನ್ನು ಕಳೆದುಕೊಂಡಿರುತ್ತದೆ.  ಹುಲಿ ಹಿಡಿದು ತಿನ್ನುವುದನ್ನು ಕಾಣದೇ ಇದ್ದರೂ ಹಿರಿಯರ ಅನುಭವವನ್ನು ನಂಬಿ ಅದನ್ನು ದೂರವಿಡುವಲ್ಲಿ ಪರಂಪರೆಯನ್ನು ಅನುಭವಿಸುವ ಮನುಷ್ಯ,  ಕಲೆಯ ವಿಚಾರದಲ್ಲಿ   ಪರಂಪರೆ ಸಂಪ್ರದಾಯ ಎಂಬ ಧ್ವನಿ ಹಗಲಿನಲ್ಲೂ ಕೇಳುವ ಗೂಬೆಯ ಧ್ವನಿಯಂತೆ ಅರ್ಥವೇ ಇರುವುದಿಲ್ಲ. ಇಲ್ಲಿ ರಂಜನೆ ಜನಪ್ರಿಯತೆ ಇದರ ಬೆನ್ನತ್ತಿ ಹೋಗುವಾಗ ಕಳಚಿ ಬೀಳುವ ವಸ್ತ್ರದಂತೆ  ಯಕ್ಷಗಾನದ ಅಂಗಗಳು ಒಂದೊಂದಾಗಿ ಕಳಚಿ ಬೀಳುತ್ತಾ ಕಳೆದುದೇನು ಎಂಬ ಅರಿವೇ ಮರೆತು ಹೋಗಿರುತ್ತದೆ.  ಹಿರಿಯರ ಅನುಭವ ಪರಂಪರೆ ರಂಗದಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿ ಶಾಲು ಹೋದಿಸುವವರೆಗೆ ಸೀಮೀತವಾಗುತ್ತದೆ.

            ಗೋರ್ಪಾಡಿ ಭಾಗವತರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಒಂದೆಡೆ ಹೇಳುತ್ತಾರೆ, ಮೊದಲು ಏಳು ಘಂಟೆಗೆ ಪೂರ್ವರಂಗಕ್ಕೆ ತೊಡಗಿದರೆ ಹತ್ತರ ಪೀಠಿಕೆಯವರೆಗೂ ಹಾಡುವ ಸ್ತುತಿ ಪದಗಳೆಷ್ಟು?  ಅಲ್ಲಿ ಬರುವ ವೈವಿಧ್ಯತೆ ಎಷ್ಟು?.  ಇಪ್ಪತ್ತು ಮೂವತ್ತು ಸ್ತುತಿ ಪದಗಳಷ್ಟೂ ಸಹ ಕಂಠ ಪಾಠವಾಗಿರುತ್ತಿತ್ತು. ಇಂದು ಸರಿಯಾಗಿ ಸ್ತುತಿಪದಗಳನ್ನು ಪುಸ್ತಕ ನೋಡಿಯೇ ಹೇಳುವ ಯೋಗವೂ  ಇಲ್ಲ ಯೋಗ್ಯತೆಯೂ ಇಲ್ಲ. ಒಂದೆರಡು ಪದಗಳಷ್ಟನ್ನೇ ಪುನರಾವರ್ತಿಸುವ ಇಂದಿನ ಭಾಗವತರಲ್ಲಿ ಕಲಿಯುವ ಹಂಬಲವಿಲ್ಲ.   ರಾಗಗಳ ಬೆನ್ನತ್ತಿ ಹೋಗುವ ಇಂದಿನ ಭಾಗವತರು ಯಕ್ಷಗಾನದ ಪರಿಧಿ ಎಲ್ಲಿ ದಾಟಿದ್ದಾರೆ ಎಂಬುದೇ ತಿಳಿದಿರದ ಪರಿಸ್ಥಿತಿ.  ಸಂತರ್ಪಣೆಯೇ ಇಲ್ಲವಾಗುವಾಗ ಹಸ್ತೋದಕದ ಮಾತೆಲ್ಲಿಯದು? ಹಿಮ್ಮೇಳವಾದನದಲ್ಲೂ ತದ್ರೀತಿ ಒಂದನೇ ಕಾಲ ಎರಡನೇ ಮೂರನೇ ಕಾಲ ಎಂಬಲ್ಲಿ ಕಾಲನಡೆಯ ವೆತ್ಯಾಸ ಸ್ಪಷ್ಟವಾಗಿ ಅರಿವಿಗೆ ಬರುತ್ತಿತ್ತು. ಇಂದು ಕಾಲದ ವೆತ್ಯಾಸವೇ ಇಲ್ಲದೇ ಕಾಲವನ್ನೇ ನುಂಗುವ ಸ್ಥಿತಿ. ಇನ್ನು ಹಿಮ್ಮೇಳದಲ್ಲಿ ಮದ್ದಲೆ ವಾದನ, ತಾಳ ಒಂದೇ ಆದರೂ ಕಾಲಕ್ಕೆ ತಕ್ಕಂತೆ ಅದನ್ನು ನುಡಿಸುವ ಪರಿ ಅನನ್ಯ. ಅಷ್ಟಿದ್ದೂ ಅದು ಯಕ್ಷಗಾನದ ಚೌಕಟ್ಟಿನೊಳಗೆ ಇದ್ದು ಮನಸ್ಸಿಗೆ ಹತ್ತಿರವಾಗುತ್ತದೆ. ಚೆಂಡೆವಾದನವೂ ವೈವಿಧ್ಯಮಯ ಹತ್ತೆಂಟು ಬಗೆಯ ಉರುಳಿಕೆ ಶೈಲಿ ಕಾಲಕ್ಕೆ ತಕ್ಕಂತೆ ವೇಷಕ್ಕೆ ತಕ್ಕಂತೆ ಅದು ಬದಲಾಗುವ ರೀತಿ ಇದನ್ನು ಅನುಭವಿಸಿ ತಿಳಿಯಬೇಕು. ಹೀರಿಯರೊಬ್ಬರು ಹೇಳುತ್ತಾರೆ ಮೂವತ್ತೆರಡು ಬಗೆಯ ಉರುಳಿಕೆ ಇದೆ. ಯಾರಿಗೆ ಗೊತ್ತು ಎಂದು ಕೇಳುವುದಕ್ಕಿಂತ ಅದನ್ನು ಅನ್ವೇಷಣೆ ಮಾಡಿ ತಿಳಿದುಕೊಳ್ಳುವ ಹಂಬಲವೂ ನಶಿಸಿ ಹೋಗಿದೆ. ತಾವು ತಿಳಿದದ್ದೆ ಪರಮಾರ್ಥ ಎಂದು ತಿಳಿದು ಚಪ್ಪಾಳೆಗಿಟ್ಟಿಸುವ ಹಂಬಲದಲ್ಲಿ ಆತ್ಮ ಸಾಕ್ಷಿಯ ಅತ್ಮಾವಲೋಕನವೂ ನಶಿಸಿ ಹೋಗುತ್ತದೆ.   ಇಂದು ಅಚ್ಚಿನಲ್ಲಿ ಎರಕ ಹೊಯ್ದ ಪ್ರತಿಮೆಯಂತೆ  ಬೇರೆ ರೂಪವೇ ಇಲ್ಲ. ಇದ್ದರೂ ಅದಕ್ಕೆ ಯಾವ ಅಕಾರದಲ್ಲಿ ಇದೆ ಎಂದು ಸ್ವತಃ ಬಡಿಯುವವರಿಗೆ ಅಯೋಮಯವಾಗುವಂತಹ ಪರಿಸ್ಥಿತಿ.

            ಯಕ್ಷಗಾನದ ಬಹಳ ದೊಡ್ಡ ದುರಂತವೆಂದರೆ, ಯಕ್ಷಗಾನ ಬದಲಾಗಿದೆ. ಆದರೆ ಬದಲಾದ ಯಕ್ಷಗಾನದ ಬದಲಾವಣೆಯೇ ಅರಿವಿಗೆ ಬಾರದಿರುವುದು. ಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿ ಅದು ಚತುಷ್ಪಥವೋ ಷಟ್ಪಥವೋ ಆಗಿ ಬದಲಾಗುವಾಗ ಊರು ಸಂಪೂರ್ಣ ಬದಲಾದಂತೆ, ಬದಲಾದ ಊರಿನಲ್ಲಿ ಆ ಬದಲಾವಣೆಗೆ ಹೊಂದಿಕೊಳ್ಳದೆ ತಮ್ಮ ಪಾಡಿಗೆ ಒಂದು ಮೂಲೆಯಲ್ಲಿ ತಾವಿರುವ ವಯೋ ವೃದ್ದರಂತೆ, ಯಕ್ಷಗಾನದಲ್ಲಿ ಪರಂಪರೆಯ ಬಗ್ಗೆ ಮಾತನಾಡುವವರ ಸ್ಥಾನವಾಗಿದೆ.  ನವೀಕರಣದ ಅಬ್ಬರದಲ್ಲಿ ಈ ಹಿರಿಯರ ನಿಟ್ಟುಸಿರಾಗಲೀ ಒದ್ದೆಯಾಗುವ ಕಣ್ಣುಗಳಾಗಲೀ ಕಾಣುವುದಿಲ್ಲ. ಗುರುಸೇವೆ ಮಾಡಿ ಬಡತನದ ಬದುಕಿನಲ್ಲೂ ಕಠಿಣ ಪರಿಶ್ರಮದಿಂದ ಕಲಿತ ವಿದ್ಯೆ ಯಾಕಾದರೂ ಕಲಿತೆ?  ಎಂದು ಹಿರಿಯರು ಪರಿಪಿಸುವಂತೆ ರಂಗ ಬದಲಾಗಿ ಹೋಗಿದೆ.  ವ್ಯಾಪಾರ ವ್ಯಹವಾರಗಳು ಜೀವನದ ಅಂಗ. ವ್ಯಾಪಾರ ಮಾಡುವುದೇ ಲಾಭಕ್ಕಾಗಿ. ಆದರೆ ಲಾಭದ ಆಶೆಯಲ್ಲಿ ವಂಚನೆಯಾಗಬಾರದಲ್ಲ. ಅದನ್ನೇ ನೈತಿಕತೆ ಎಂದು ಹೇಳುವುದು. ಅದು ಇಂದು ನಶಿಸುತ್ತಿದೆ. ಏನೂ ಮಾಡಿದರೂ ಕಲೆ ಎಂದು ಬೆನ್ನು ತಟ್ಟುವಾಗ ನೈತಿಕತೆ ಪ್ರವಚನದ ವಸ್ತುವಾಗುತ್ತದೆ.

 ಬದಲಾದ ಯಕ್ಷಗಾನ ಅರಿವಿಗೆ ಬರುವಲ್ಲಿ ಹಳೆಯ ಯಕ್ಷಗಾನಗಳನ್ನು ಮೆಲುಕು ಹಾಕುವಾಗ ಈ ಸಂಗ್ರಹಗಳು ಉತ್ತಮ ಸಹಚರನಂತೆ ಮಿತ್ರನಂತೆ ನನಗೆ ಆತ್ಮೀಯರಾಗಿಬಿಡುತ್ತವೆ.  ಈ ಯಕ್ಷಗಾನದ ಪರಂಪರೆಯತ್ತ ಅವಲೋಕನ ಮಾಡುವಾಗ ವರ್ತಮಾನಕ್ಕೆ ವಿಮುಖನಾಗಿಬಿಡುತ್ತೇನೆ. ಹಳೆಯ ಶುದ್ದ ಪರಂಪರೆಯ ಯಕ್ಷಗಾನಗಳನ್ನು ಕೇಳುವಾಗ ಅದರ ಲಯ ವಿನ್ಯಾಸಗಳು ಪರಂಪರೆಯ ಮಟ್ಟುಗಳು ಇದನ್ನು ತಿಳಿವಲ್ಲಿ ಸವಿಯುವಲ್ಲಿ ಮನಸ್ಸು ಹಾತೊರೆದರೆ ಈಗಿನವುಗಳನ್ನು ಅರ್ಧಕ್ಕೇ ನಿಲ್ಲಿಸಿ ನಿಟ್ಟುಸಿರು ಬಿಡುವಂತಾಗುತ್ತದೆ.
            ಸುಧನ್ವ ಮೋಕ್ಷ ಪ್ರಸಂಗದ ಜನಪ್ರಿಯ ಪದ, “ಸೃಷ್ಟಿಗರ್ಜುನ ನೆಂಬವನೇ ನೀನು…” ಅಧುನಿಕ ಯಕ್ಷಗಾನದ ಧಾಳಿಗೆ ಇದರಷ್ಟು ತುತ್ತಾದ ಬೇರೆ ಪದವಿರುವುದಕ್ಕೆ ಸಾಧ್ಯವಿಲ್ಲ ಎಂಬುದು ನನ್ನ ಅನಿಸಿಕೆ.  ವೀರ ರಸದ ಈ ಪದ ಬದಲಾಗಿ ಬದಲಾಗಿ ಯಾವೂದೋ ಒಂದು ರೂಪ ಪಡೆದುಕೊಂಡು ಇನ್ನು ಬದಲಾವಣೆ ಗೊಳ್ಳುತ್ತಲೇ ಇದೆ. ಕೆಲವು ಘಳಿಗೆಯಲ್ಲಿ ಮುಕ್ತಾಯ ಕಾಣುವ ಈ ಪದ ಈಗ ಸರಿ ಸುಮಾರು ಅರ್ಧ ಘಂಟೆಯ ಅವಧಿಯನ್ನೂ ತಿಂದ ಉದಾಹರಣೆಗಳಿವೆ.  ಈಗ ಈ ಪದ ರಂಗದ ಮೇಲೆ ನೋಡುವಾಗ ಸುಧನ್ವ ಯದ್ದಕ್ಕೆ ಬಂದದ್ದೋ ಅಲ್ಲ ಕುಣಿಯುವುದಕ್ಕೆ ಬಂದದ್ದೋ ಎಂಬ ಭ್ರಮೆ ಮೂಡುತ್ತದೆ. ಅರ್ಧಘಂಟೆಯ ಪದಕ್ಕೆ ಇನ್ನು ಒಂದು ಘಂಟೆ ಅರ್ಥಗಾರಿಕೆ ಇರಬಹುದೇ ಎಂದು ಭಾವಿಸಿದರೆ ಎರಡು ವಾಕ್ಯ ಪೂರ್ಣವಾಗಿ ಹೇಳುವ ಸಮಯವೂ ಇರುವುದಿಲ್ಲ ಸಾಮಾರ್ಥ್ಯವೂ ಇರುವುದಿಲ್ಲ. ಹೀಗೆ  ಬದಲಾದ ಬದಲಾವಣೆಯಲ್ಲಿ ಮೂಲ ಸ್ವರೂಪ ಏನೆಂದೆ ಮರೆತು ಹೋಗಿದೆ.  ಅದು ಮರೆತು ಚರಿತ್ರೆಯ ಪುಟಕ್ಕೆ ಸೇರದಿರಲಿ ಎಂದು ಯಾರಾದರೂ ಒಬ್ಬ ಪ್ರಯತ್ನಿಸಿದರೆ, ಇಂದು ಅದಕ್ಕೆ ಆಸ್ಪದವಿಲ್ಲದಂತೆ ವಾತಾವರಣ ಸೃಷ್ಟಿಸಿ ಬಿಡುತ್ತಾರೆ. ಪ್ರಸಂಗದ  “ಸೆಟ್ಟಿಂಗ್”  ಹಾಳಾಗುತ್ತದೆ ಎಂದು ರಾಗ ತೆಗೆಯುವ ಕಲಾವಿದರು, ಇವರಿಗೆ ಯಕ್ಷಗಾನಕ್ಕಿಂತಲೂ ದರಿದ್ರ ಸೆಟ್ಟಿಂಗ್ ಅಧಿಕವಾಗಿಬಿಡುತ್ತದೆ.  ಹಿರಿಯ ಹಿಮ್ಮೇಳ ಕಲಾವಿದರೊಬ್ಬರು ಹೇಳುತ್ತಾರೆ, ಮೊದಲು ಭಾಗವತರ ಪದಕ್ಕೆ ಚೆಂಡೆ ಮದ್ದಲೆ ಬಡಿದರೆ ಇಂದು ವೇಷಧಾರಿಗೋಸ್ಕರ ಬಾರಿಸುವ ಸ್ಥಿತಿ ಇದೆ.  ಭಾಗವತ ಯಾವ ತಾಳ ಯಾವ ರಾಗದಲ್ಲಿ  ಪದ ಹೇಳಬೇಕೆಂದು ನಿರ್ಧರಿಸುವುದು ವೇಷಧಾರಿ.!! ರಾಗತಾಳದ ಬಗ್ಗೆ ಹೇಳುವಾಗ ಯಕ್ಷಗಾನದ ಮಟ್ಟು ಇದರ ಬಗ್ಗೆ ತಿಳಿಯುವುದೂ ಇಲ್ಲ. ತಿಳಿಯುವ ಮನಸ್ಸೂ ಇರುವುದಿಲ್ಲ.  ಹಳೆಯ ಧ್ವನಿ ಮುದ್ರಣವೊಂದರಲ್ಲಿ ಅದೇ ಆ ’ಸೃಷ್ಟಿಗರ್ಜುನನೆಂಬವನೇ ನೀನೂ...” ಎಂದು ಕೇಳುವಾಗ ಒಂದರೆ ಕ್ಷಣ ಕೈಕಾಲು ಭೂಮಿಯ ಮೇಲೆ ನಿಲ್ಲುವುದಿಲ್ಲ. ಒಂದರೆ ಘಳಿಗೆಯಲ್ಲಿ ಮುಗಿಯುವ ಪದಕ್ಕೆ ಘಂಟೆಗಳ ಕಾಲ ಮನಸ್ಸು ಸ್ಥಬ್ಧವಾದ ಅನುಭವವನ್ನು ಕೊಡುತ್ತದೆ. ಅಲ್ಲಿ ಸೃಷ್ಟಿಯಾಗುವ ಭಾವೋತ್ಕರ್ಷ  ರಸ ಸೃಷ್ಟಿ ಅದೆಂತಹುದು ?

            ರೂಪಾಂತರವಾಗಿ ನಶಿಸಿ ಹೋಗುವ ಆತಂಕವಿರಲಿ,  ಅದರ ಮುನ್ನ ಎಚ್ಚೆತ್ತುಕೊಳ್ಳುವ ಭರವಸೆಯೂ ಇಲ್ಲವಾಗುತ್ತದೆ. ಹಾಗಾಗಿ ಕೂರ್ಮ ಮುಸುಕೆಳೆದು ಅವಿತಂತೆ ಈ ಹಳೆಯ ಸಂಗ್ರಹದೊಳಗೆ ಲೀನವಾಗುವುದರಲ್ಲಿ ಸುಖ ಕಾಣುವುದು ಅನಿವಾರ್ಯವಾಗುತ್ತದೆ. ಆ ಮುಸುಕಿನ ಒಳಗೊಳಗೇ ಮನಸ್ಸು ತನ್ನಂಗ ದಿನ್ನಂಗ ಎಂದು ಹಾಡುವುದನ್ನು ಅಭ್ಯಾಸ ಮಾಡಿಕೊಂಡಿದೆ.






. 

Saturday, November 5, 2016

ದ್ವಂದ್ವ ಗಾಯನ

ಚಿತ್ರ ಕೃಪೆ : ಶ್ರೀ ನಟರಾಜ ಉಪಾಧ್ಯಾಯ ಅಂತರ್ಜಾಲ ವಿಡಿಯೋ ಕೃಪೆ.
ಕಾರ್ತಿಕ ಮಾಸದ ತಂಪನ್ನು ಯಕ್ಷಗಾನ ಸಾರಸ್ವತ ಲೋಕ ಸ್ವಾಗತಿಸುವುದು ಸಂಪಾಜೆ ಯಕ್ಷೋತ್ಸವದ ಬಿಸಿಯಿಂದ. ಶ್ರಾವಣ ಮಾಸ ಕಳೆದೊಡನೆ ಯಕ್ಷಪ್ರೇಮಿಗಳ ಒಂದು ದೃಷ್ಟಿ ಕೀಲಾರು ಪ್ರತಿಷ್ಠಾನ ಪ್ರಕಟಣೆಯ ಕಡೆಗೆ. ಅಲ್ಲಿ ಈ ವರ್ಷದ ಪ್ರಸಂಗಗಳು ಯಾವುದು? ಕಲಾವಿದರು ಯಾರು ? ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಬಹುತೇಕ ಎಲ್ಲ ಕಲಾವಿದರೂ ಸಮ್ಮಿಳಿತವಾಗುವುದರಿಂದ ಕಲಾವಿದರ ವಿಂಗಡನೆ , ಯಾರು ಎಲ್ಲಿಲ್ಲಿಗೆ ? ಎಂಬ ನಿರೀಕ್ಷೆ ಮಾತ್ರವೇ ಇರುತ್ತದೆ. ಅಷ್ಟೊಂದು ನಿರೀಕ್ಷೆಯನ್ನು ಕಾತರವನ್ನು ಹುಟ್ಟಿಸುವ ಸಂಪಾಜೆ ಯಕ್ಷೊತ್ಸವ ಪ್ರತಿವರ್ಷದ ದೀಪಾವಳಿ ಜತೆಗಿನ ಯಕ್ಷಪರ್ವ ಎಂದೆ ಕರೆಸಿಕೊಳ್ಳುತ್ತದೆ. ವರ್ಷದಿಂದ ವರ್ಷಕ್ಕೆ ವೈಶಿಷ್ಟ್ಯಗಳನ್ನು ಹೊತ್ತು ತರುವ ಈ ಉತ್ಸವ ಯಕ್ಷಪ್ರೇಮಿಗಳಿಗೆ ದೀಪಾವಳಿ ಅಭ್ಯಂಜನವನ್ನು ಮಾಡಿಸಿಬಿಡುತ್ತದೆ.  ಹೋಗುವವರು ಹೋಗುವ ಸಡಗರದಲ್ಲಿ ಹೋಗದವರು ಹೋಗಲಾಗದ ಹತಾಶೆಯಲ್ಲಿ ಕಳೆದರೆ ಇದರ ಪರಿವೆ ಇಲ್ಲದಂತೆ ಯಾರ ವಿಮರ್ಷೆ ಪ್ರತಿಕಿಯೆಗೂ ಕಾಯದೆ ಅದ್ಧೂರಿಯಲ್ಲಿ ನಡೆದುಹೋಗುತ್ತದೆ. ಆ ವರ್ಷದ ಮೇಳಗಳ ಸಂಚಾರಕ್ಕೆ ಮುನ್ನುಡಿಯನ್ನು ಬರೆದು ದಿಗ್ವಿಜಯಕ್ಕೆ ವೀಳ್ಯವನ್ನು ಅನಧಿಕೃತವಾಗಿ ನೀಡಿದಂತೆ ಸಂಪಾಜೆ ಯಕ್ಷೋತ್ಸವ.

ಯಕ್ಷೋತ್ಸವದ ವೈಶಿಷ್ಟ್ಯತೆಗಳನ್ನು ಪಟ್ಟಿ ಮಾಡುತ್ತಾ ಹೋದಲ್ಲಿ ಅದು ಬೆಳೆಯುತ್ತಾ ಹೋಗುತ್ತದೆ. ಪ್ರತೀ ವರ್ಷವೂ ವೈಶಿಷ್ಟ್ಯಗಳು ಸಂಪಾಜೆ ಯಕ್ಷೋತ್ಸವಕ್ಕಾಗಿಯೆ ಹುಟ್ಟು ಹಾಕಿದಂತೆ ಭಾಸವಾಗುತ್ತದೆ. ಕಲಾವಿದರ, ಪ್ರೇಕ್ಷಕರ,  ಕೊನೆಗೆ ಸಂಘಟಕರ ನಿರೀಕ್ಷೆಗೂ ಮೀರಿ ವೈಶಿಷ್ಟ್ಯದಲ್ಲೇ ವಿಶೇಷ ನಡೆದು ಹೋಗುತ್ತದೆ. ಇದು ಅಲ್ಲಿನ ವಿಶೇಷ. ಇನ್ನು ಅಲ್ಲಿಗೆ ಹೋದವರ ಮೊಬೈಲ್ ಹೋಗದೇ ಮನೆಯಲ್ಲಿ ಉಳಿದವರ ಮೊಬೈಲು ಉತ್ಸವ ಸಂಪನ್ನವಾಗುವವರೆಗೆ ಮಾತ್ರವಲ್ಲ ನಂತರವೂ ಸದಾ ಕ್ರಿಯಾಶೀಲವಾಗಿದ್ದುಕೊಂಡು ಬಿಸಿ ಬಿಸಿ ವರದಿಗಳ ವಿನಿಮಯ ರಾತ್ರಿ ಹಗಲೆನ್ನದೆ ಆಗುತ್ತದೆ. ಈ ಕಾತುರ ನಿರೀಕ್ಷೆಗಳನ್ನು ತಾನೇ ತಾನಾಗಿ ಹುಟ್ಟುಹಾಕುವುದೇ ಸಂಪಾಜೆ ಯಕ್ಷೋತ್ಸವದ ಮತ್ತೊಂದು ವೈಶಿಷ್ಟ್ಯತೆ.

ಈ ಸಲದ ಯಕ್ಷೋತ್ಸವದ ಒಂದು ನಿರೀಕ್ಷೆ  ಉತ್ತರಾರ್ಧದಲ್ಲಿ ನಡೆಯುವ  ಪ್ರಸಂಗದ ಮೇಲೆ ಇತ್ತು. ಎಲ್ಲ ಪ್ರಸಂಗಗಳೂ ಬಗೆ ಬಗೆಯ ವೈಶಿಷ್ಟ್ಯವನ್ನು ಹೊಂದಿದ್ದರೂ ಕೊನೆಯ ಹಂತದಲ್ಲಿ ರಂಗಸ್ಥಳದ ಧೂಳೆಬ್ಬಿಸುವ ಪ್ರಸಂಗದ ನಿರೀಕ್ಷೆಯೇ ಬೇರೆ.  ಎರಡು ಜನ ಭಾಗವತರ ದ್ವಂದ್ವ ಹಾಡುಗಾರಿಕೆ ಈ ಸಲದ ವಿಶಿಷ್ಟ್ಯತೆಗಳಲ್ಲಿ ಒಂದು. ಸಾಮಾನ್ಯವಾಗಿ ಬೆಳಗಿನ ಜಾವದ ಯಕ್ಷಗಾನ ಎಂದರೆ ಅದರಲ್ಲೂ ತೆಂಕು ತಿಟ್ಟಿನ ಯಕ್ಷಗಾನಗಳು ಏರು ಶ್ರುತಿಯ ಭಾಗವತಿಕೆಗೂ ಚೆಂಡೆಯ ಅಬ್ಬರಕ್ಕೆ, ಆಕಾಶ ಭೂಮಿ ಒಂದು ಮಾಡಿಬಿಡುವ ವೇಷಗಳ ಕುಣಿತಕ್ಕೂ ಹೆಸರು ವಾಸಿಯಾಗಿರುತ್ತದೆ. ಅದರಂತೆ ಇಲ್ಲೂ ಅದರ ಎಲ್ಲ ಲಕ್ಷಣವೂ ತಿಂಗಳ ಮೊದಲು ಹಂಚಿದ ಕರಪತ್ರ ಸಾರಿ ಸಾರಿ ಹೇಳುತ್ತಿತ್ತು.  ಹಾಗಾಗಿ ತೀವ್ರವಾದ ಕುತೂಹಲ ಹೆಚ್ಚುತ್ತಿದ್ದರೆ, ಇದಕ್ಕೆ ವಾಟ್ಸಾಪ್ ಮುಂತಾದ ಅಂತರ್ಜಾಲ ಮಾಧ್ಯಮಗಳು ಈ ಬಿಸಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದವು. ಟಿ. ವಿ. ಮಾಧ್ಯಮಗಳ ತತ್ಸಮಯದ (ಲೈವ್)  ವರದಿಗಿಂತಲೂ ಕಡಿಮೆ ಇಲ್ಲದಂತೆ,  ಸಂದೇಶಗಳು ಸಂಪಾಜೆಯ ಹಲವು ಮೊಬೈಲ್ ಗಳಿಂದ ಬಿತ್ತರವಾಗುತ್ತಿದ್ದವು.

ಈ ಬಾರಿ ವಿಶೇಷವಾಗಿ ಉಲ್ಲೇಖಿಸಲ್ಪಟ್ಟು ಬಹು ನಿರೀಕ್ಷೆಯ ದ್ವಂದ್ವ ಭಾಗವತಿಕೆಯ ಕೊನೆಯ ಹಂತ.  ಯುವ ಭಾಗವತ ಶ್ರೀ ಬಲಿಪ ಪ್ರಸಾದ ಮುತ್ತು  ಶ್ರೀ ಹೊಸಮೂಲೆ ಗಣೇಶ ಭಟ್ ಇವರ ದ್ವಂದ್ವ ಭಾಗವತಿಕೆ. ಈರ್ವರೂ ಯಕ್ಷಲೋಕದಲ್ಲಿ ಏರುಕಂಠದ ಹುಲಿಗಳೆಂದೇ ಜನ ಜನಿತರು. ಅದರಲ್ಲೂ ಪ್ರಸಾದ ಬಲಿಪರು ಭಾಗವಹಿಸಿದ ಪ್ರತಿ ಆಟಗಳಲ್ಲೂ ತನ್ನ ಏರು ಶೃತಿಯ ಕಂಠದಿಂದ ಜನಪ್ರಿಯತೆಯನ್ನು ಗಳಿಸುತ್ತಾ ಸಾಗಿದವರು. ಹೊಸಮೂಲೆಯವರಂತೂ ಒಂದು ರೀತಿಯ ಹಳೆಯ ಹುಲಿ.
 ಕರಪತ್ರದಲ್ಲಿ ಬೆಳಗಿನ ಜಾವ ಮೂರು ಘಂಟೆಗಿದ್ದರೂ ಸರಿಯಾಗಿ ಪ್ರಸಂಗ ಆರಂಭವಾದ ಸಂದೇಶ ಪ್ರಸಾರವಾಗುವಾಗ  ಮರುದಿನ ಸೂರ್ಯ ನಡು ನೆತ್ತಿಯ ಹತ್ತಿರ ಬಂದಾಗಿತ್ತು. ಸೂರ್ಯ ಬಿಸಿಯ ಜತೆಗೆ ಭೂಗರ್ಭವೇ ಬಿರಿಯುವಂತೆ ಯಕ್ಷಗಾನದ ಹಾಡುಗಳು ಒಂದರ ನಂತರ ಒಂದರಂತೆ ಹೊಮ್ಮತೊಡಗಿದವು. ಕೆಲವು ಪದಗಳಂತೂ ಧ್ವನಿವರ್ಧಕದ ಅವಶ್ಯಕತೆಯೇ ಬೇಡವೆನ್ನುವ ಭ್ರಮೆಯನ್ನು ಹುಟ್ಟಿಸುತ್ತಿದ್ದವು. ಈಬ್ಬರೂ ಭಾಗವತರೂ ಜತೆಯಲ್ಲಿ ಚೆಂಡೆ ಮದ್ದಲೆಯ ಹಿಮ್ಮೇಳದವರು ತಮ್ಮ ಶಕ್ತಿ ಮೀರಿ ಅಧ್ಬುತ ಪ್ರದರ್ಶನವನ್ನು ನೀಡಿದರು.  ಆರಂಭದಿಂದಲೇ ಶ್ರುತಿ ಏರುತ್ತಾ ಏರುತ್ತಾ ಪ್ರೇಕ್ಷಕರ ಹೃದಯ ಸ್ತಂಭನ  ವಾಗುವುದೋ ಎಂಬ ಭ್ರಮೆಯನ್ನು ಹುಟ್ಟಿಸುತ್ತಿತ್ತು.

ದ್ವಂದ್ವ ಭಾಗವತಿಕೆ ಯಕ್ಷಗಾನದಲ್ಲಿ ಕೇವಲ ರಂಜನೆಗಾಗಿ ಮಾತ್ರವೇ ಪರಿಗಣಿಸಲ್ಪಡುತ್ತದೆ. ಸಹಜವಾದ ಕ್ರಮಬದ್ದವಾದ ಯಕ್ಷಗಾನಕ್ಕೆ ಇದು ಸೂಕ್ತವಲ್ಲ. ಇದು ಅನಿವಾರ್ಯವೂ ಅಲ್ಲ. ಅನಿವಾರ್ಯವಾಗಲೂ ಬಾರದು.  ಆದರೂ ದ್ವಂದ್ವದ ರಸಮಂಜರಿಯ ಧಾರೆ ಜನಪ್ರಿಯತೆಗೆ ಸುಲಭದ ರಹದಾರಿ ಎಂದರೆ ತಪ್ಪಿಲ್ಲ.  ದ್ವಂದ್ವ ಎಂದೊಡನೆ ಒಂದು ವಾಹನಕ್ಕೆ ಎರಡು ಚಾಲಕರನ್ನು ಅಳವಡಿಸಿದಂತೆ. ಒಂದು ಕಲಾಪ್ರಾಕಾರ ಸುಂದರ ರೂಪವನ್ನು ಪಡೆದುಕೊಳ್ಳುವುದಕ್ಕೆ ಸ್ಪರ್ಧೆ ಬೇಕು ಆದರೆ ಅದು ಅನಿವಾರ್ಯವಾಗಕೂಡದು. ಇಲ್ಲಿ ಮನೋಭಾವ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. 
ಇಂದಿನ ಸ್ಪರ್ಧಾಮಯ ಜಗತ್ತಿನಲ್ಲಿ ಸ್ಪರ್ಧೆ ಇರುವಲ್ಲಿ ಮಾತ್ರವೇ ಉತ್ತಮವಾದುದು ಸೃಷ್ಟಿಯಾಗಬಹುದು. ಆದರೆ ಆ ಸ್ಪರ್ಧೆ,  ಉತ್ತಮವಾದುದು ಹೊರಗೆ ಬರುವುದಕ್ಕೆ ಮಾತ್ರವೇ ಸೀಮಿತವಾಗಿರಬೇಕು. ಪ್ರತಿಸ್ಪರ್ಧಿಯನ್ನು ಸೋಲಿಸದೆ  ಗೆಲ್ಲುವುದೇ ನಿಜವಾದ ಗೆಲುವು.  ನೈಜ   ಬದುಕಿನಲ್ಲೂ ಹಾಗೆ ಮುಂದೆ ಗಮಿಸುವಲ್ಲಿ ಸ್ಪರ್ಧೆ ಅನಿವಾರ್ಯ. ಆದರೆ ಸ್ಪರ್ಧೆಯಲ್ಲಿ ದಮನಕಾರಿ ನೀತಿ ಸುಳಿಯಬಾರದು. ಇನ್ನೊಬ್ಬರ ಗೆಲುವಲ್ಲಿ ನಮ್ಮ ಗಮ್ಯವನ್ನು ಗುರುತಿಸುವ ದೃಷ್ಟಿಇರಬೇಕು.   ಅದೇ ರೀತಿ ಯಕ್ಷಗಾನದಲ್ಲಿ ಒಬ್ಬ ಸೋತರೆ ಮತ್ತೊಬ್ಬ ಗೆಲ್ಲಬಹುದು. ಆದರೆ ಒಬ್ಬನ ಸೋಲು ಅದು ಕಲೆಯ ಸೋಲು ಕೂಡ ಆಗುತ್ತದೆ. ಹಾಗಾಗಿ ದ್ವಂದ್ವ ಎಂಬುದು ಸರಸವಾಗಿ ಸ್ಪರ್ಧೆಯಾಗಿ ಪರಸ್ಪರ ಮನೋಭಾವ ಅರಿತು ಇಬ್ಬರೂ ಗೆದ್ದಲ್ಲಿ ಯಕ್ಷಗಾನಕ್ಕೆ ಅಮೋಘವಾದ ಜಯ ಪ್ರಾಪ್ತಿಯಾಗುವುದು.  ಪ್ರತಿಸ್ಪರ್ಧಿಯನ್ನು ಹೇಗಾದರೂ ಹಿಂದಿಕ್ಕುವುದೇ ಗುರಿಯಾದಾಗ ಅಲ್ಲಿ ಕಲೆಯೂ ಕಾಣುವುದಿಲ್ಲ ಯಾವುದೂ ಕಾಣುವುದಿಲ್ಲ ಗೆಲುವೊಂದೇ ಕಾಣುತ್ತದೆ. ಮನೋಭಾವದ ವೆತ್ಯಾಸವಾದರೆ ’ಜುಗಲ್ಬಂದಿ ’ಜಗಳಬಂದಿಯಾಗಬಹುದು.


ಯಕ್ಷಗಾನ ಭಾಗವತಿಕೆಯಲ್ಲಿ ಹಲವು ದ್ವಂದ್ವ ಗಾಯನಗಳು ಜನಪ್ರಿಯವಾಗಿವೆ. ಆದರೆ ಅದರಲ್ಲಿ ಇಂದಿಗೂ ನಿರಾತಂಕವಾಗಿ ಅನುಭವಿಸುವಂತೆ ಆಗುವುದು ಕೆಲವೇ ಕೆಲವು ಜತೆಗಾರಿಕೆಗಳು ಮಾತ್ರ. ಇತ್ತೀಚೆಗೆ ಹಿರಿಯ ಭಾಗವತರಾದ ಬಲಿಪ್ಪರು ಮತ್ತು ಹೊಳ್ಳರು ದ್ವಂದ್ವ ಹಾಡುವಾಗ ಹಿತವಾಗುತ್ತದೆ. ಅಲ್ಲಿ  ಸ್ಪರ್ಧೆಇದ್ದರೂ ಸೋಲು ಗೆಲುವು ಇರುವುದಿಲ್ಲ. ಬದಲಿಗೆ ಪ್ರಸ್ತುತವಾಗುವ ಹಾಡು ಗೆಲುವನ್ನು ಸಾಧಿಸುತ್ತದೆ. ಇದನ್ನೇ ಮನೋಭಾವ ಎನ್ನುವುದು. ಹಿಂದೆ ಇದೇ ರೀತಿ ಹಲವು ಕಲಾವಿದರ ದ್ವಂದ್ವ ಗಾಯನ ರೋಮಾಂಚನವನ್ನು ತರುತ್ತಿತ್ತು. ಹಿಂದೆ ಹಿರಿಯ ಭಾಗವತರಾದ ತೆಂಕಬೈಲು ಮತ್ತು ಪದ್ಯಾಣರು ಹಾಡಿದಾಗಲೂ ಇದೇ ಮಾರ್ದವತೆಯನ್ನು ಅನುಭವಿಸಿದ ನೆನಪುಂಟು.  ಹೀಗೆ ಹಲವು ಜತೆಗಾರಿಕೆಗಳೂ ದ್ವಂದ್ವಗಾಯನ ಸೌಂದರ್ಯವನ್ನು ತೆರೆದಿಟ್ಟಿವೆ. ದ್ವಂದ್ವಗಾಯನ ಎಂದಿಗೂ ಅನಿವಾರ್ಯವಲ್ಲ ಎಂಬ ಜವಾಬ್ದಾರಿಯ ಅರಿವಿನಲ್ಲಿ ದ್ವಂದ್ವಗಾಯನ ಜನಪ್ರಿಯವಾಗಲಿ ಎಂಬ ಆಶಯ. 

Saturday, October 29, 2016

ಗಾನವೈಭವದ ಪಲ್ಲವಿಗಳು....

“ಮಾಯಾಗಾರನು ನೀನೇ ಮಹಿಮನು ನೀನೆ..................................
 ಕಾಯಜಪಿತಲೋಕ ನಾಯಕ ಹರಿಯೆ...” 
ಕಪ್ಪು ಮೂರರ ಶೃತಿಯಲ್ಲಿ ಆರಂಭದಿಂದಲೇ ಈ   ಪದವನ್ನು  ಎಬ್ಬಿಸಿದಾಗ, ಗಾನವೈಭವಕ್ಕೆ ಹಾಕಿದ ಮರದ ಪೀಠ ಕಂಪಿಸಿದ ಅನುಭವವಾಯಿತು. ಕೇವಲ ನನಗೆ ಮಾತ್ರವೇ  ಅದಂತಹ ಕಂಪನದ ಅನುಭವ ಆ ಘಳಿಗೆಯನ್ನು  ಮರೆಯದಂತಹ ಪುಟಗಳ ಸಾಲಿಗೆ ಸೇರಿಸಿತು. ಗಾನವೈಭವದ ಆರಂಭದ ಹಂತವದು.  ಈ  ಪದದ ಅರಂಭದ ಉಕ್ತಿಯನ್ನು ಹೇಳಿ ಪ್ರಸಾದರತ್ತ ನೋಟ ಹರಿಸಿದ್ದೆ. ಶೃತಿಯನ್ನು ಹೊಂದಿಸಿ ಮಾಯಗಾರನ ಮಂತ್ರದಂಡವನ್ನು ಆಡಿಸಿದಂತಾಯಿತು. ಕುಳಿತ ಅಟ್ಟಣಿಗೆ ಕಂಪಿಸಿತೇ? ಇದು ಕೇವಲ ನನ್ನ ಅನುಭವ ಎಂದುಕೊಂಡು ಮುಂದಿನ ಚರಣಕ್ಕೆ ಕಿವಿಯಗಲಿಸಿದೆ. ಹಾಗೆ ನೋಡಿದರೆ ಆ ರೀತಿ ವೇದಿಕೆಯಲ್ಲಿ ಭಾಗವತರ ಪಕ್ಕ ಕುಳಿತದ್ದು ನನ್ನ ಮೊದಲ ಅನುಭವ. ಆದುದರಿಂದ ನಾನು ಭ್ರಮಾಧೀನ ಸ್ಥಿತಿಗೆ ತಲುಪಿದ್ದೇನೆಂಬ ವಾಸ್ತವ ಅರಿವಾಯಿತು. ಅವಿಸ್ಮರಣೀಯ ಅನುಭವ ಎಂದು ಹೇಳಬೇಕು.
ಚಾಯಾ ಚಿತ್ರ....ವಾಟ್ಸಪ್ ಮಿತ್ರರು
 ಪ್ರಸಾದ ಭಾಗವತರ ಕಂಚಿನ ಕಂಠದಲ್ಲಿ ಪದದ ಉತ್ತರ ಭಾಗ ಏರುತ್ತಾ ಹೋಗುವುದು ಕೇಳುವುದೇ ಸೋಗಸು.  ಸುಮಾರು ಎರಡು ದಶಕದ ಹಿಂದೆ ಪ್ರಸಾದರು ರಂಗಸ್ಥಳ ಏರುವಾಗ ಅವರಿಗೆ ಸಭಾಕಂಪನದ ಅರಿವಾಗಿತ್ತೋ ಏನೋ ತಿಳಿಯದು, ಈಗ ಅವರ ಸ್ವರಕ್ಕೆ ರಂಗಸ್ಥಳವೇ ಕಂಪಿಸತೊಡಗುತ್ತದೆ !    ಇದು ಉತ್ಪ್ರೇಕ್ಷೆ ಎಂದು ನನಗನಿಸುವುದಿಲ್ಲ. ಹೀಗೆ ಅವರಲ್ಲಿ ಹೇಳಿದರೆ ಒಂದು ತುಟಿಯಂಚಿನಲ್ಲಿ ಅದೇ ಮುಗ್ಧ ನಗುವನ್ನುತೋರಿಸಿಬಿಡುತ್ತಾರೆ.  ತನ್ನ ವಯಸ್ಸಿನ ಅರ್ಧಕ್ಕಿಂತಲೂ ಹೆಚ್ಚಿನ ವರ್ಷವನ್ನು ರಂಗಸ್ಥಳದಲ್ಲೇ ಕಳೆದ ಅನುಭವಿ ಎಂಬುದನ್ನು ಅನುಮಾನಿಸುವಂತಹ ಮುಗ್ಧ ಆತ್ಮೀಯ ನಗುವದು.  
ಪಲ್ಲವಿ ಸಂಸ್ಥೆಯ ಭಾರವಾಹಿಗಳು ನಿರೂಪಣೆಗೆ ನನ್ನನ್ನೆ ಹೊಣೆಯಾಗಿಸಿದಾಗ ನಿಜಕ್ಕೂ ಒಲ್ಲದ  ಮನಸ್ಸಿನಿಂದ ಒಪ್ಪಿದ್ದೆ.  ವೇದಿಕೆಯಲ್ಲಿ ತೆರೆದುಕೊಳ್ಳುವುದು ನಾನು ಬಯಸದ ಪ್ರಮೇಯ. ಯಾರಾದರೂ ಅದರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರೆ ಆ ಪದಗಳ ಪಟ್ಟಿಗೆ ನನ್ನಿಚ್ಛೆಯ ಒಂದೆರಡನ್ನು ಸೇರಿಸುವ ಬಯಕೆಯಲ್ಲಿ ಕೇಳಿದ್ದೆ. ಆದರೆ ಹೀಗೆ ಎಲ್ಲವೂ ನನ್ನ ಹೆಗಲೇರಿ ಬಿಡುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ, ಮಾತ್ರವಲ್ಲ ಅದಕ್ಕೆ ನಾನು ಸಿದ್ಧನೂ ಇರಲಿಲ್ಲ. ನನಗೆ ನಿರ್ವಹಿಸಲಾಗದ ಒಂದು ಭಾರ ಹೆಗಲ ಮೇಲೇರಿ ಆತಂಕವನ್ನು ಸೃಷ್ಟಿಸಿತ್ತು.  ಆತಂಕವಿದ್ದರೂ ಅದೊಂದು ಹಿತಾನುಭವ ಇದು ಪ್ರಾಮಣಿಕ ಅನಿಸಿಕೆ.

ಜವಾಬ್ದಾರಿ ಸಿಕ್ಕಿದ ಮೇಲೆ ಮತ್ತದನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಒತ್ತಡ ತಾನಾಗಿಯೇ ಪ್ರಚೋದನೆಗೊಂಡಿತು. ಹಾಗಾಗಿ ವಾಡಿಕೆಯಂತೆ ವೇಣೂರು ಸುಬ್ಬಣ್ಣನ ಮೊರೆ ಹೋದೆ. ಸುಬ್ಬಣ್ಣನೋ ಬಹಳ ಸಡಗರದಿಂದ ಸ್ತುತಿ ಪದ, ಪೂರ್ವರಂಗ, ಒಡ್ಡೋಲಗ ಹೀಗೆ ಮೊದಲು ರಾಗ ತಾಳಗಳ ಹೆಸರನ್ನು ಎಸೆಯುತ್ತಾ ಹೋದರು. ನನಗೆ ಬರೆದಿಡುವಷ್ಟು ವ್ಯವಧಾನವಿಲ್ಲ.  ಬಾಲ್ಯದಲ್ಲಿ ತೋಟದ ಆಳು ದೊಡ್ಡ ಮಾವಿನ ಮರ ಹತ್ತಿ ಕೊಯ್ದ ಮಾವನ್ನು ಎಸೆಯುತ್ತಿದ್ದ ನೆನಪಾಯಿತು. ಕೆಳಗೆ ನಿಂತ ನಾವು ಬೀಳುವ ಮಾವಿಗೆ ಬೊಗಸೆಯೊಡ್ಡುತಾ ಅತ್ತಿಂದ ಇತ್ತ ಇತ್ತಿಂದತ್ತ ಓಡಿದ ಅನುಭವ.  ರಾಗ ತಾಳಗಳ ಪಟ್ಟಿ ಸಿದ್ದವಾದಂತೆ ಅದಕ್ಕೆ ಪದಗಳನ್ನು ಸೇರಿಸುವುದಕ್ಕೆ ತೊಡಗಿದೆವು.

ಒಂದೊಂದು ಪದಗಳನ್ನು ಪಟ್ಟಿಗೆ ಏರಿಸುವಾಗಲೇ  ರೋಮಾಂಚನವಾದಂತಾಗುತ್ತಿತ್ತು. ಬಹಳಷ್ಟು ಅಪರೂಪದ ಪದಗಳಾಗಬೇಕೆಂಬ ಅವ್ಯಕ್ತ ಕಾಳಜಿ ಇತ್ತು. ಬಲಿಪ್ಪರೇ ಬರೆದ ಪ್ರಸಂಗವಾದ ಐದು ದಿನದ ದೇವಿಮಹಾತ್ಮೆ ಪ್ರಸಂಗದ ಬಹಳಷ್ಟು ಪದಗಳನ್ನು ಸೇರಿಸಿಯಾಯಿತು. ಸುಬ್ಬಣ್ಣ ತನ್ನ ಸಂಗ್ರಹದಿಂದ ಬಹಳಷ್ಟು ಪದಗಳನ್ನು ಕಳುಹಿಸಿಕೊಟ್ಟರು. ಯಾವ ರಾಗ ತಾಳ ಎಲ್ಲಿರಬೇಕೋ ಆ ಸರದಿ ಮೊದಲು ಸಿದ್ದವಾಗಿತ್ತು. ಅದಕ್ಕೆ ಹೊಂದುವ ಹಾಗೆ ಪದಗಳನ್ನು ಸೇರಿಸಬೇಕು. ಮೊದಲ ದಿನ ರಾತ್ರಿ ಹನ್ನೊಂದಾದರೂ ಪಟ್ಟಿ ಅಂತಿಮವಾಗಲೇ ಇಲ್ಲ!!!  ಒಂದು ರೀತಿ ತಳಮಳ ಬೇರೆ.   ಪದಗಳನ್ನು ಟೈಪಿಸಿ ಇಬ್ಬರೀಗೂ ಪ್ರತ್ಯೆಕ ಪಟ್ಟಿಯನ್ನು ಸಿದ್ದ ಪಡಿಸಬೇಕಾಗಿತ್ತು. ಅಂತೂ ಭಾನುವಾರ ಹತ್ತುಘಂಟೆಯ ತನಕವೂ ಈ ಕೆಲಸ ಲಂಬಿಸಿತು. ಆದರೂ ಪಟ್ಟಿ ಅಂತಿಮವಾದಾಗ ಒಂದು ಬಗೆಯ ರೋಮಾಂಚನ ಮತ್ತು ಕಾತರ.

ಕಾರ್ಯಕ್ರಮ ಆರಂಭವಾಗುವುದಕ್ಕೆ ಮೊದಲು ಪ್ರಸಾದರಲ್ಲೂ ಬಲಿಪರಲ್ಲೂ ಸಲಹೆ ಸೂಚನೆಯನ್ನು ತೆಗೆದುಕೊಂಡೆ. ಆತಂಕ ಬಹಳಷ್ಟು ದೂರಾಗಿತ್ತು. ಬಲಿಪ ಪ್ರಸಾದರ ಒಂದೆರಡು ಅನಿಸಿಕೆ ಹೇಳಲೇಬೇಕು.  ಪದಗಳ ಆಯ್ಕೆ ಪಟ್ಟಿ ನನ್ನದು ಎಂದು ತಿಳಿದಾಗ ಮೊದಲ ದಿನವೇ ಎರಡು ಮೂರು ಸಲ ಕರೆ ಮಾಡಿ ಕೇಳಿದರು. ನಿಜಕ್ಕಾದರೆ ಕಾರ್ಯಕ್ರಮ ಆರಂಭಕ್ಕೆ ಒಂದು ಅರ್ಧಗಂಟೆಗೂ ಮುನ್ನ ವಿಚಾರಿಸಿ ಸಿದ್ದಪಡಿಸುವುದು ರೂಢಿ. ಆದರೆ ಅವರು ಕೇಳಿದ ಆ ಧ್ವನಿ ಭಾವ ವಿಶೇಷವಾಗಿತ್ತು. ಮರುದಿನ ಪರೀಕ್ಷೆಯ ಅಭ್ಯರ್ಥಿಯಂತೆ ಕಂಡಿತು. ಹಲವಾರು ಪ್ರಸಂಗ ಕಂಠಸ್ಥವಾಗಿಯೂ ಯಾವುದೇ ಪೌರಾಣಿಕ ಪ್ರಸಂಗವನ್ನು ಆಡಿಸುವಂತಹ ಪಳಗಿದ ಭಾಗವತನ ಅತ್ಮವಿಶ್ವಾಸ ಬಲವಾಗಿರುತ್ತದೆ. ಹೀಗಿದ್ದು ಅವರು ಮೊದಲೇ ವಿಚಾರಿಸುವುದು ಕಾರ್ಯದ ಬಗ್ಗೆ ಇರುವ ಗೌರವ ಜತೆಗೆ ನಮ್ಮ ಮೇಲಿರುವ ಪ್ರೀತಿಆದರವನ್ನು ತೋರಿಸುತ್ತದೆ. 

ಗಜಮುಖದವಗೆ ಸ್ತುತಿ ಪದವನ್ನು ಪ್ರಸಾದರು ಆರಂಭಿಸಿದಾಗ ಮನಸ್ಸು ತಾನೇ ತಾನಾಗಿ ಸಂಭ್ರಮವನ್ನು ಅನುಭವಿಸತೊಡಗಿತು.  ಭಾಗವತರ ಪಕ್ಕದಲ್ಲೇ ಇರುವ ಅವಕಾಶ ಅಚಾನಕ್ಕಾಗಿ ಸಿಕ್ಕಿದ್ದು, ಅದರ ಪೂರ್ಣ ರೋಮಾಂಚನ ಅನುಭವಿಸತೊಡಗಿದೆ ಎನ್ನಬೇಕು. ಇಲ್ಲಿ ಒಂದು ಪದದ ನಂತರ ಇನ್ನೊಂದು ಮಧ್ಯೆ ನನ್ನ ನಿರೂಪಣೆ, ಅದ ಸ್ವತಹ ನನಗೇ ಬೇಡಾಗಿತ್ತು. ಹಾಗಾಗಿ ಬಹಳ ಸಣ್ಣದಾಗಿ ವಿವರ ಹೇಳಿ ಪದಕ್ಕೆ ಕಿವಿಯೊಡ್ಡುತ್ತಿದ್ದೆ.  ಸ್ಪಷ್ಟ ಉಚ್ಚಾರದಿಂದ ಬಲಿಪ್ಪರ “ ಚಿಕ್ಕ ಪ್ರಾಯದ ಬಾಲೆ”  ಹಳೆಯ ಪೂರ್ವರಂಗವನ್ನು ನೆನಪಿಗೆ ತಂದಿತು.  ಅಪರೂಪದ ಒಡ್ಡೋಲಗದ ಪದಕ್ಕೆ ಮಕರಾಕ್ಷಕಾಳಗದ ಪದವಾದ “ ರಾಜಕುವರರು ಕೇಳಿ ರಾಜೇಂದ್ರ ರಾಘವನು...” ಪದ ಅದ್ಭುತವಾಗಿ ಬಲಿಪ್ಪರು ತನ್ಮಯರಾಗಿ ಹಾಡಿದರು. ಗಾನವೈಭವಕ್ಕೆ ಇದು ಅತ್ಯಂತ ಭಿನ್ನವಾದ ಪದ.  
“ನೋಡು ನೋಡನುಜ ನೀನಾ ಕಡೆಯಾ....” ಐದು ದಿನದ ದೇವಿ ಮಹಾತ್ಮೆಯ ಸುಂದರ ಪದಗಳಲ್ಲಿ ಒಂದು. ಚಂಡ ಮುಂಡರ ಸನ್ನಿವೇಶದ ಪದವನ್ನು ಬಾಯಿತಾಳದೊಂದಿಗೆ ಪ್ರಸಾದರು ಹಾಡಿದಾಗ ನನಗೆ ಸ್ವರ್ಗಕ್ಕೆ ಮೂರೇಗೇಣು. ಅದರ ಗುಂಗಿನಲ್ಲಿ ನಂತರ ಪದವನ್ನು ತಡಕಾಡುವ ಹಾಗಾಯಿತು . ಹಲವು ಸಲ ನನ್ನಿಂದಲೇ ರಸಾಭಾಸವಾಗಿದೇಯೋ ಎಂಬ ಅನುಮಾನವಿದೆ.  ಸರದಿಯಲ್ಲಿ ಹಾಡಿದ ದ್ವಿಪದಿ ಪದಗಳು  “ ಹಹ ಈವನ ನೋಡದವ ಮನುಜನಲ್ಲ....”  ಪ್ರಸಾದರು ಹಾಡಿದ “ ರಂಗನ್ಯಾತಕೆ ಬಾರನೆ...” ಕೃಷ್ಣ ಚರಿತೆಯ ಈ ಪದ ಪ್ರಸಾದರ ಪೇಟೆಂಟ್ ಪದವಾಗುವ ಎಲ್ಲ ಲಕ್ಷಣವನ್ನೂ ತೋರಿಬಿಟ್ಟಿತು.  ದೇವಿ ಮಹಾತ್ಮೆಯ ಸ್ವರಚಿತ ಪದ “ ಪಾವನರು ನಾವಾದೆವೈ....” ಯನ್ನು ಬಲಿಪ ನಾರಾಯಣ ಭಾಗವತರು ಭಾವನಾತ್ಮಕವಾಗಿ ಹಾಡಿದರು.

ಕೊನೆಯಲ್ಲಿ ಹದಿನೈದು ನಿಮಿಷಗಳಷ್ಟು ಹೆಚ್ಚು ಸಮಯಾವಕಾಶ ಲಭಿಸಿ, ಅದನ್ನು ಪ್ರಸಾದ ಬಲಿರು ಸೂಕ್ತವಾಗಿ ಬಳಸಿಕೊಂಡರು. ಇದರಿಂದ ಸ್ಫೂರ್ತಿಗೊಂಡ ಬಲಿಪ್ಪರು ತಮ್ಮ ಅರೋಗ್ಯವನ್ನು ಲೆಕ್ಕಿಸದೇ ಎಲ್ಲ ನೋವನ್ನು ಮೀರಿ ಹಾಡಿ ಹಾಡಿ ದೈತ್ಯಶಕ್ತಿಯಂತೆ ಗೋಚರಿಸಿದರು. ಇದುವರೆಗೆ ನಾವು ಹೇಳಿದ , ನಮ್ಮ ಬೇಡಿಕೆಯ ಪದಗಳನ್ನಷ್ಟೆ ಹಾಡಿದರು. ಆದರೆ ಗಾಯಕ ಸ್ವಯಂ ಸ್ಫೂರ್ತಿಯಿಂದ ಹಾಡುವ ಹಾಡುಗಳು ಅದು ಗಾಯಕನ ಹೃದಯವನ್ನು ಮಾತ್ರವಲ್ಲ ಕೇಳುಗನ ಹೃದಯವನ್ನೂ ಸ್ಪರ್ಶಿಸುತ್ತವೆ. ಇದಕ್ಕೆ ಕೊನೆಯ ಹದಿನೈದು ನಿಮಿಷದ ಪದಗಳು ನಿಜವಾದ ಅರ್ಥದಲ್ಲಿ ಗಾನದ ವೈಭವವೇ ಅನ್ನಿಸಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ವೀರ ರಸದ ಏರು ಪದಗಳು ಅದ್ಭುತವಾಗಿತ್ತು. ಇವು  ಸಹಜವಾಗಿ ಬಲಿಪ ಶೈಲಿಗೆ ಮಾರುಹೋಗುಂತಹ ಪದಗಳು. ಯಕ್ಷಗಾನದ ಸೌಂದರ್ಯವನ್ನು ಈ ಪದಗಳು ತೋರಿಸಿಕೊಟ್ಟಿತು. ಉದಯೋನ್ಮುಖ ಭಾಗವತ ಶ್ರೀ ಪ್ರಸಾದ ಬಲಿಪರು ತಮ್ಮ ಜನಪ್ರಿಯತೆಗೆ ಒಪ್ಪುವಂತೆ ಇವುಗಳನ್ನು ಅಮೋಘವಾಗಿ ಹಾಡಿದರು.  ಈ ಮೂಲಕ ಬಲಿಪ ಶೈಲಿಗೆ ಸಮರ್ಥ ಉತ್ತರಾಧಿಕಾರಿ ಎಂಬ ಭಾವನೆಯನ್ನು ಮೂಡಿಸಿದರು.  ತಾಮ್ರಧ್ವಜ ಕಾಳಗ, ಮಕರಾಕ್ಷ ಕಾಳಗ ಕುಮಾರ ವಿಜಯ ಮುಂತಾದ ಹಲವು ಪ್ರಸಂಗ ಪದಗಳು ಅದು ಬಲಿಪ್ಪ ಶೈಲಿಗೆ ಹೇಳಿ ಮಾಡಿಸಿದ ಪದಗಳು. ಅವುಗಳನ್ನು ಹಾಡಿದರೆ ಕೇಳುಗ ಯಕ್ಷಗಾನ ಲೋಕದ ಒಳಗೆ ತನಗರಿವಿಲ್ಲದೇ ನುಸುಳಿಬಿಡುತ್ತಾನೆ.

ಭಾಗವತರ ಜತೆ ಕುಳಿತು ತುಂಬಿದ ಸಭೆಯಲ್ಲಿ ಭಾಗವತಿಕೆಯನ್ನು ಸವಿಯುವ ಅನುಭವ ಅದೂ ಭಾಗವತ ಶ್ರೇಷ್ಠ ಬಲಿಪ್ಪರ ಜತೆಗೆ ಎಂದರೆ ಅದು  ಅವರ್ಣನೀಯ. ಇದು ಅಪರೂಪಕ್ಕೆ ಒದಗುವ ಭಾಗ್ಯ.  ಇದನ್ನು ಒದಗಿಸಿಕೊಟ್ಟ ಪಲ್ಲವಿ ಸಾಂಸ್ಕೃತಿಕ ವೇದಿಕೆಯ  ಭಾರವಾಹಿಗಳಿಗೆ ನನ್ನ ಮನದಾಳದ ಕೃತಜ್ಞತೆಗಳು.  ಈ ಗಾನ ವೈಭವಕ್ಕೆ ಸೂಕ್ತ ಪದಗಳ ಆಯ್ಕೆಗೆ ಹೆಚ್ಚು ಮುನುವರ್ಜಿಯಿಂದ ಸಹಾಯ ಹಸ್ತವನ್ನು ನೀಡಿದ ನನ್ನ ಸನ್ಮಿತ್ರ ವೇಣೂರು ಸುಬ್ರಹ್ಮಣ್ಯ ಭಟ್ ಇವರನ್ನು ಹೃತ್ಪೂರ್ವಕವಾಗಿ ಸ್ಮರಿಸುತ್ತೇನೆ.
ಎಲ್ಲರಿಗೂ ಕೃತಜ್ಞತೆ ಅರ್ಪಿಸಿ ವೇದಿಕೆ ಇಳಿಯುವಾಗ ಅದೇ... ಪ್ರಸಾದರ “ ರಂಗನ್ಯಾತಕೇ ಬಾರನೆ “ ಎಂಬ  ಗಾನ  ಮತ್ತೂ  ಮತ್ತೂ ಗುನಿ ಗುನಿಸುವಂತೆ ಮಾಡಿದ್ದು ಮಾತ್ರವಲ್ಲ ಮನೆಗೆ ಬಂದು ಮಲಗಿ ನಿದ್ರಿಸಿದ ಮೇಲು ಮನಸ್ಸು ಪುನಃ ಪುನಃ  ಹೇಳಿತು “  ರಂಗನ್ಯಾತಕೇ ಬಾರನೆ ...ರಂಗನ್ಯಾತಕೇ ಬಾರನೆ”  ಎಂದು.  ಬದಿಕಿನ ಅವಸ್ಮರಣೀಯ ಪುಟಗಳಲ್ಲಿ ಇದು ಒಂದು.

ಕಾರ್ಯಕ್ರಮ ಸುಂದರವಗಿತ್ತು. ಆದರೂ ನಮ್ಮ ಬಲಿಪ್ಪಜ್ಜನ ಬಗ್ಗೆ ಮತ್ತಷ್ಟು ನೆನಪುಗಳು ಸೇರಿ ಆ ಗಂಟು ಮತ್ತಷ್ಟು ದೊಡ್ಡದಾಯಿತು. ಅದೆಂತಹ ವ್ಯಕ್ತಿತ್ವ?  ನಾವೆಲ್ಲ ಹಾಗೆ ಆಗಬೇಕೆಂದರೆ ಈ ಜನ್ಮದಲ್ಲಂತು ಸಾಧ್ಯವೇ ಇಲ್ಲ.  
“ ನಾನು ಬೆಂಗಳೂರಲ್ಲಿ ಕಾರ್ಯಕ್ರಮ ಮಾಡುತ್ತೇನೆ ಬರ್ತಿರಾ? “ ಅಂತ ಅದೆಷ್ಟು ಸಲ ಕರೆದೆನೋ.....ಆದರೆ
 ”  ಮುಕ್ಕ ದೈನಾ.....”
 ನಮ್ಮ ಮನೆಭಾಷೆಯಲ್ಲಿ “ ನನಗೆ ಆಗುದಿಲ್ಲಾ” ಅಂತ ಹೇಳುತ್ತಿದ್ದರು. ಇದು ನನ್ನ ಮೇಲಿನ ಮಮತೆಯಿಂದ. ಪರೋಕ್ಷವಾಗಿ ಅವರ ಅರೋಗ್ಯ ದೇಹಸ್ಥಿತಿಯನ್ನು ನೋಡಿ ನೀನಾದರೂ ಕರೆಯದಿರು ಎಂದು ಹೇಳುವ ಹಾಗೆ ನನಗೆ ಅನಿಸುತ್ತಿತ್ತು. ಪಾಪ, ನಮ್ಮ ಚಾಪಲ್ಯಕ್ಕೆ ಅವರನ್ನು ಯಾಕೆ ತೊಂದರೆಗೆ ಸಿಲುಕಿಸಬೇಕು. ಅವಾಗ ಅನ್ನಿಸಿದ್ದಿದೆ,  ಅವರ ಮನೆಯಲ್ಲಿ ಹೇಗಿದ್ದರೂ  ಈಗ  ಬಲಿಪ ಭವನವಾಗಿದೆ. ಒಂದು  ಶ್ರುತಿ ಪೆಟ್ಟಿಗೆ ತೆಗೆದುಕೊಂಡು ಹೋಗಿ ಅಲ್ಲೇ ನಾಲ್ಕು ವಾರ್ಧಿಕ ಭಾಮಿನಿ ಕೇಳುವ ಅಂತ. ಅದಕ್ಕೂ ಸಮಯ ಒದಗಿ ಬರುವಷ್ಟು ಪುಣ್ಯ ಸಂಚಯ ನನ್ನಲ್ಲಿಲ್ಲ.  ಈಗ ಬೆಂಗಳೂರಿಗೆ ಬಂದಿದ್ದಾರೆ. ಹಾಡಿದ ನಾಲ್ಕು ಪದ್ಯಗಳಾದರೂ ನೆನಪಿನ ಡಬ್ಬದಲ್ಲಿ ಹಾಕಿ ಗಟ್ಟಿ ಮುಚ್ಚಳ ಹಾಕಿ ಮುಚ್ಚುವಂತೆ ಮನ ಮುಟ್ಟುವಂತೆ ಹಾಡಿದ್ದಾರೆ. ಬೇರೆ ಏನು ಹೇಳುವುದಕ್ಕೂ ಶಬ್ದಗಳು ಸಿಗುವುದಿಲ್ಲ. ಎಲ್ಲ ಯೋಚಿಸುತ್ತಾ ಕಣ್ಣಾಲಿಗಳು ತೇವವಾಗುತ್ತದೆ. ಛೇ ನಮ್ಮಜ್ಜ..ನಾವು ಹುಡುಗರು ಸೇರಿ ಕಾರ್ಯಕ್ರಮಾಡಿದ್ದಾಗ ಅವರ ಕಣ್ಣಾಲಿಗಳು ತೇವವಾಗಿದ್ದವು. ಕಾರ್ಯಕ್ರಮ ಮುಗಿಸಿ ಸುಬ್ಬಣ್ಣನ ಜತೆಗೆ ಕಳುಹಿಸಿಕೊಟ್ಟಿದ್ದೆವು. ಇಲ್ಲಿಂದ ಬಂಟ್ವಾಳದವರೆಗೂ ಸುಬ್ಬಣ್ಣನನ್ನು ನಿದ್ದೆ ಮಾಡುವುದಕ್ಕೆ ಬಿಟ್ಟಿಲ್ಲ. ನಮ್ಮ ಬಗ್ಗೆಯೇ ಅಜ್ಜ ಅವರಲ್ಲಿ ಹೇಳುತ್ತಾ ಸಾಗಿದ್ದರು. ನಿದ್ದೆ ಮಾಡುವುದಕ್ಕೆ ಬಿಟ್ಟಿಲ್ಲ ಅಲ್ಲ, ಸುಬ್ಬಣ್ಣ ನಿದ್ದೆ ಮಾಡಿಲ್ಲ ಎಂದರೂ ಸರಿಯೇ. ಹಾಗೆ ಹೋದವರು ನಮ್ಮ ನಾಲ್ಕು ಜನರ ಮೊಬೈಲ್ ನಂಬರು ಪಡೆದು ನಮಗೆ ಕರೆ ಮಾಡಿ ಕಾರ್ಯಕ್ರಮದ ಬಗ್ಗೆ ಆವಾಗ ಕೇಳಿದ್ದರು. ಅದೆಂತಹ ಸರಳತೆ ಮುಗ್ದತೆ. ಅಜ್ಜನನ್ನು ಮುಗ್ದ ಎನ್ನುವುದಕ್ಕೆ ನನ್ನ ಮನಸ್ಸು ಒಪ್ಪುವುದಿಲ್ಲ. ಅನುಭವದಿಂದ ಪ್ರಪಂಚವನ್ನು ಕಂಡು ತುಂಬಿಕೊಂಡ ಪರಿಪಕ್ವ ಮನಸ್ಸಿನ ವ್ಯಕ್ತಿತ್ವ ಅದು. ಅಂತಹ ಅಜ್ಜ ಬಂದಿದ್ದಾರೆ. ಹಾಡಿದ್ದಾರೆ. ಇದಕ್ಕಿಂತ ಬೇರೆ ಭಾಗ್ಯ ಇಲ್ಲ.

ಈಗ ಅನ್ನಿಸುವುದು ಇಷ್ಟೆ ಇನ್ನು ಯಾರೂ ಅವರನ್ನು ಕರೆಯದಿರಲಿ. ಬಲಿಪ್ಪರ ಪದ ಕೇಳಲೇಬೇಕಿದ್ದರೆ ಅವರ ಮನೆಯಲ್ಲೇ ಕೇಳಬಹುದು. ಆ ರೀತಿಯ ಅಭಿಮಾನ ವ್ಯಕ್ತವಾಗಬೇಕು ಅಷ್ಟೇ.  ಆ ಅಜ್ಜ ನೋವನುಭವಿಸಿ ಹಾಡುವುದು ಕಲ್ಪಿಸುವುದಕ್ಕೆ ಆಗುವುದಿಲ್ಲ. ಹಾಗೆ ಮೊನ್ನೆ ವೇದಿಕೆಯಲ್ಲೇ ಹೇಳಿದ್ದೆ. ” ಅಜ್ಜ ನೋವು ಮರೆತು ಹಾಡುತ್ತಾರೆ. ನಾವು ನಮ್ಮ ನೋವನ್ನು ಮರೆಯುತ್ತೇವೆ “ ಎಂದು. ಇದು ಮನದಾಳದಲ್ಲಿ ತೋಚಿದ ಮಾತು.  ಅದರೂ ಅಜ್ಜ ಹಾಡಿದ ದೇವಿಮಹಾತ್ಮೆಯ ಕೊನೆಯ ಪದ್ಯ .......

ಪಾವನರು ನಾವಾದೆವೈ ಸಂ| ಜೀವನವು ನೀವಾದಿರೆಮಗೀ | ನ್ನಾವಿಮಲೆ ಶ್ರೀದೇವಿಯೊಲಪ್ಪಂತೆ ಮಾಡಿದಿರಿ || ಭಾವಭಕ್ತಿಗಳಿಂದಲಾಕೆಯ | ಸೇವಕರು ನಾವಹೆನುತ ಮುನಿ| ದೇವಗೆರಗುತಲೀರ್ವರರ್ಚಿಸಲವಪಡಕೊಳುತ ||
ಇದೊಂದೆ ಸಾಕು ಅಜ್ಜ ಸದಾ ಹೃದಯ ಸಾಮೀಪ್ಯದಲ್ಲಿರುವುದಕ್ಕೆ.  ಜೈ ಬಲಿಪ್ಪಜ್ಜ....
.









Friday, October 21, 2016

ಭಾಗವತ ಸನ್ಮಾನ


            ಬಡ ಪುರೋಹಿತನೊಬ್ಬನಿಗೆ ದಾನವಾಗಿ ತೆಂಗಿನ ಕಾಯಿ ಅಕ್ಕಿ ಬೆಲ್ಲ ಸಿಗುತ್ತದೆ. ಹೀಗೆ ದಾನವಾಗಿ ಸಿಕ್ಕಿದ್ದು ಮನೆಯಲ್ಲಿ ತಂದಾಗ ಒಂದು ಸಂಭ್ರಮ.  ಅದಿನದ ಊಟಕ್ಕೆ ಅಕ್ಕಿ ಪರಮಾನ್ನ ಸಿದ್ದಪಡಿಸಿ ದೇವರ ಮುಂದೆ ನೈವೇದ್ಯ ಮಾಡಿ  ಸಂತೋಷದಿಂದ ಉಣ್ಣುತ್ತಾರೆ.  ಅಂದು ಪಾಯಸ ಮಾಡುವ ಉದ್ದೇಶದಿಂದ ಪಾಯಸ ಮಾಡಿದ್ದಲ್ಲ. ಪಾಯಸ ಮಾಡಲೇ ಬೇಕೆಂಬ ಅನಿವಾರ್ಯತೆಯೂ ಇಲ್ಲ. ಮಾಡಿದ ನಂತರ ಅದನ್ನು ದೇವರ ಮುಂದೆ ಇಡಲೇ ಬೇಕೆಂಬ ನಿಯಮವೂ ಇಲ್ಲ. ಆದರೆ ಅಂದು ಅವರು ಅದನ್ನು ಆಸಕ್ತಿ ಶ್ರದ್ದೆಯಿಂದ ಮಾಡುತ್ತಾರೆ. ಕಾರಣ ಇಷ್ಟೆ ಪಾಯಸದ ಸಾಮಾಗ್ರಿಗಳು ಸಿಕ್ಕಿತಲ್ಲ? ಹಾಗೆ ಸಿಕ್ಕಿದ ಸಾಮಾಗ್ರಿಯನ್ನು ಇನ್ನೇನೋ ತಯಾರಿಸಿ, ಅಕ್ಕಿಯ ಅನ್ನವೋ ದೋಸೆಯೋ ಮಾಡಿ ಉಣ್ಣಬಹುದಿತ್ತು. ಆದರೆ ಬಡತನದ ಬೇಗೆಯಲ್ಲಿ ಅಂದು ಊಟವಿದೇ ಎಂಬ ಖಾತರಿಯೇ ಇಲ್ಲದಿರುವಾಗ ಹೀಗೆ ಯಾರೋ ಕೊಟ್ಟ ವಸ್ತು ಅದೃಷ್ಟವೆಂಬಂತೆ ಸಿಗುವಾಗ ಪಾಯಸ ಮಾಡಿ ಉಣ್ಣುವುದೇ ಒಂದು ಸಂಭ್ರಮ.

            ಹಿರಿಯ ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರು ಬರುತ್ತಿದ್ದಾರೆ. ಇಂದಿನ ಯುವಜನತೆಯ ವಯಸ್ಸಿನ ಇಮ್ಮಡಿಯಷ್ಟು ವರ್ಷವನ್ನು  ರಂಗಸ್ಥಳದಲ್ಲೇ ಕಳೆದಂತಹ ಮಹಾನ್ ಭಾಗವತರು ಬರುತ್ತಿದ್ದಾರೆ ಎಂದರೆ ಅದು ಯಕ್ಷಗಾನ ಭಾಗವತಿಕೆಯ ವೈಶಿಷ್ಟ್ಯವನ್ನೇ ಸಾರುತ್ತದೆ. ಅದರಲ್ಲೂ ಬಲಿಪ್ಪರ ಕಾರ್ಯಕ್ರಮ ಎಂದರೆ ಅದು ಕೇವಲ ಯಕ್ಷಗಾನ ಕಾರ್ಯಕ್ರಮವಾಗುವುದಿಲ್ಲ. ಅರ್ಥಧಾರಿ ಅಥವಾ ವೇಷಧಾರಿ ಅದು ಯಾರೇ ಆಗಿರಲಿ, ಹೆಚ್ಚೇಕೆ ಪ್ರಸಂಗವೂ ಪ್ರಾಮುಖ್ಯತೆ ಪಡೆಯುವುದಿಲ್ಲ . ಕೇವಲ ಒಂದೆರಡು ಪದಗಳನ್ನು ಕೇಳುವ ಎಂಬ ಆಸಕ್ತಿಯೊಂದೇ ಪ್ರಥಮ ಆದ್ಯತೆಯಾಗಿಬಿಡುತ್ತದೆ. ಇದು ಬಲಿಪ್ಪರ ಪದಕ್ಕಿರುವ ಆಕರ್ಷಣೆ. ಅಲ್ಲಿ  ಯಕ್ಷಗಾನದ ಉಳಿದ ಅಂಗಗಳೆಲ್ಲ ಮಹತ್ವವನ್ನು ಕಳೆದುಕೊಂಡಂತೆ ಎನಿಸುತ್ತದೆ.

            ವಾಡಿಕೆಯಲ್ಲಿ ಒಂದು ಮಾತುಂಟು, ಅರ್ಥ ಹೇಳುತ್ತೇನೆ  ಎಂದರೆ ಯಾರೂ ಬರವುದಿಲ್ಲ. ಬದಲಾಗಿ ಪದ ಹೇಳುತ್ತೇನೆ ಎಂದರೆ ಕೇಳುವುದಕ್ಕೆ ಕಿವಿಗಳು ಸಿಗುತ್ತವೆ. ಇದು ಯಕ್ಷಗಾನ ಭಾಗವತಿಕೆಯ ಸೌಂದರ್ಯ. ಅದರೆ ಆ ಮಾತು ಹೆಚ್ಚು ಅರ್ಥ ಪೂರ್ಣವಾಗುವುದು ಬಲಿಪ್ಪರ ಭಾಗವತಿಕೆಯಿಂದ.  ಸರಿ ಸುಮಾರು ಮೂರು ದಶಕಗಳಿಗಿಂತಲೂ ಮಿಗಿಲಾದ ನನ್ನ ಅರಿವಿನ ಚರಿತ್ರೆಯಲ್ಲಿ ಈ ಪ್ರವೃತ್ತಿ ಬದಲಾಗಿಲ್ಲ. ಬಲಿಪ್ಪರ ಹೆಸರು ಇದ್ದಲ್ಲಿ ಒಂದೆರಡು ಪದ ಕೇಳುವ ಎಂದು ಆಗಮಿಸುವ ರಸಿಕರಿಗೆ ಕೊರತೆ ಇಲ್ಲ.  ಸಂಘಟಕರೂ ಹಾಗೆ ಬಲಿಪ್ಪರು ಇದ್ದಾರೆಂದರೆ ಬೇರೆ ಪಾತ್ರಧಾರಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ್ದಿಲ್ಲ. ಈ ಆಕರ್ಷಣೆಯ ನಡುವೆ ಉಳಿದವೆಲ್ಲ ಗೌಣವಾಗುತ್ತದೆ.
           
            ಹೀಗೆ ವ್ಯಕ್ತಿಯೊಬ್ಬರಿಗಾಗಿ ಕಾರ್ಯಕ್ರಮ ಏರ್ಪಡುತ್ತದೆ. ಅದಕ್ಕೆ ಪೂರಕವಾಗಿ ಮತ್ತೆಲ್ಲ ಸಿದ್ದತೆಗಳು ಆಸಕ್ತಿಯಿಂದಲೇ ನಡೆದು ಹೋಗುತ್ತದೆ. ಹಾಗೋ ಹೀಗೋ ಹತ್ತೆಂಟು ಕಡೆಯ ನೀರು ಹರಿದು ಬಂದು ಸೇರುವ ಹಾಗೆ ಸಹಕಾರಗಳೂ ಬಂದು ಸೇರುತ್ತದೆ.  ಎಲ್ಲದರಲ್ಲೂ ಉದ್ದೇಶ ಒಂದೇ ಬಲಿಪ್ಪರ ಒಂದೆರಡು ಪದ ಕೇಳಬೇಕು. ಮತ್ತದೆಲ್ಲ ಜತೆಯಲ್ಲೇ ಬಂದು ಸೇರುವ ಹೂವಿನ ಎಲೆಗಳು.

            ಇದೀಗ ಬಲಿಪ್ಪರು ಬರುತ್ತಿದ್ದಾರೆ. ಬೆಂಗಳೂರಿನ ಪಲ್ಲವಿ ಸಾಂಸ್ಕೃತಿಕ ವೇದಿಕೆಯ ವಿಶೇಷ ಕಾರ್ಯಕ್ರಮವೊಂದು ಅವರಿಗಾಗಿಯೇ ಸಿದ್ದವಾಗುತ್ತಿದೆ. ಇದೇ ಬರುವ ಭಾನುವಾರ ದಿನಾಂಕ ಅಕ್ಟೊಬರ್  23 ರಂದು ಗಣ್ಯರ ಉಪಸ್ಥಿತಿಯಲ್ಲಿ ವಿಶೇಷವಾಗಿ ಸನ್ಮಾನಗೊಳ್ಳಲಿದ್ದಾರೆ.  ಬಲಿಪ್ಪ ಭಾಗವತರಿಗೆ ಸನ್ಮಾನ ಎಂಬುದು ವಿಶೇಷವಲ್ಲ. ಆದರೆ ಅಭಿಮಾನಿಗಳಿಗೆ ಅದು ವಿಶೇಷ.  ಅವರ ನಿವಾಸದ ಬಳಿಯ ಬಲಿಪ ಭವನದಲ್ಲಿ ಇರಿಸಿದ ಸನ್ಮಾನ ಪತ್ರಗಳು ಫಲಕಗಳನ್ನು ಬರಿದೇ ನೋಡಿ ಮುಗಿಸಲು ದಿನ ಸಾಕಾಗುವುದಿಲ್ಲ. ಅಷ್ಟುಆದರ ಸನ್ಮಾನ ಗೌರವವಗಳನ್ನು ಪಡೆದಿದ್ದಾರೆ. ಹಾಗಾಗಿ ಸನ್ಮಾನ ಇದು ಸಂಸ್ಥೆಗೆ ಮುಖ್ಯವಾಗುತ್ತದೆ. ಯಾವುದೇ ಯಕ್ಷಗಾನಕ್ಕೆ ಸಂಬಂಧಿಯಾದ ಸಂಸ್ಥೆಗಾಗಲಿಲೀ ಸಂಘಗಳಿಗಾಗಲೀ  ಶ್ರೀ ಬಲಿಪ್ಪರನ್ನು ಸನ್ಮಾನಿಸುವುದು ಕರೆದು ಕಾರ್ಯಕ್ರಮ ನೆರವೇರಿಸುವುದು ಒಂದು ಯೋಗವೇ ಎನ್ನಬೇಕು.  ಇದರಿಂದಲೇ ಒಂದು ಸಂಸ್ಥೆಗೆ ಯಕ್ಷಗಾನ ಕಲೆಯ ಬಗ್ಗೆ ಇರುವ ಕಾಳಜಿ ವ್ಯಕ್ತವಾಗುತ್ತದೆ. ಯಕ್ಷಗಾನ ಸೇವೆಯಲ್ಲಿ ಒಂದು ಸಂಸ್ಥೆಗೂ ಇದೊಂದು ಅರ್ಹತೆ ಎಂದು ಗುರುತಿಸಲ್ಪಡುತ್ತದೆ. ಹಾಗಾಗಿಯೇ ಬಲಿಪ್ಪರಿಗೆ ಸಲ್ಲುವ ಸನ್ಮಾನ ಅದು ಕೇವಲ ವ್ಯಕ್ತಿಗೆ ಮಾತ್ರವಲ್ಲ ಅದು ಯಕ್ಷಗಾನಕ್ಕೆ ಸಲ್ಲುವ ಸನ್ಮಾನ ಎಂದರೆ ಬಹಳ ಅರ್ಥಪೂರ್ಣ.  ಈ ನಿಟ್ಟಿನಲ್ಲಿ ಪಲ್ಲವಿ ಸಾಂಸ್ಕೃತಿಕ ವೇದಿಕೆ ಯಕ್ಷಗಾನ ಲೋಕದಲ್ಲಿ ತನ್ನನ್ನು ತಾನು ಗುರುತಿಸಿಕೊಂಡು  ಯಕ್ಷಗಾನ ಕಲೆಯಿಂದ ಪ್ರಮಾಣಿಕರಿಸಲ್ಪಡುತ್ತದೆ.


     ಬಹುಜನರ ಹಾರೈಕೆ, ಹಿತೈಷಿಗಳ ಸಹಕಾರ ಎಲ್ಲವೂ ಜತೆಗೂಡಿ   ಈಕಾರ್ಯಕ್ರಮ ನೆರವೇರಲಿದೆ. ಹೀಗೆ ಯಕ್ಷಗಾನದ ಪರಮಾನ್ನ ಅಂಗೈ ತುಂಬಾ  ತುಂಬಲಿದೆ. ಜತೆಗೂಡಿ ಸವಿಯುವ ಮಧುರ ಘಳಿಗೆಯ ನಿರೀಕ್ಷೆ ಸಾಕಾರಗೊಳ್ಳಲಿದೆ.


ಯಕ್ಷಗಾನಂ ಗೆಲ್ಗೆ