"ಇದು ವಿಮರ್ಶೆಯಲ್ಲದ ಚಿಂತನ"

Thursday, June 3, 2010

ಬರೆಕೆರೆಯ ಯಕ್ಷಗಾನ ಹಿಮ್ಮೇಳ ವೈಭವ




ಉತ್ತಮ ಕಾರ್ಯಕ್ರಮವೊಂದು ಇತ್ತಿಚೆಗೆ ಅಂದರೆ ದಿನಾಂಕ ೨೮.೦೫.೨೦೧೦ ರಂದು, ನಮ್ಮ ಬರೆಕೆರೆಯ ಮಿತ್ರ ಕೇಶವ ಪ್ರಶಾಂತರವರವರ ಮನೆಯಲ್ಲಿ ಜರಗಿತು, ತ್ರಿಕಾಲ ಪೂಜೆಯ ದೇವತಾರಾಧನೆಯ ಅಂಗವಾಗಿ ಯಕ್ಷಗಾನ ಹಿಮ್ಮೇಳ ಗಾನ ವೈಭವವನ್ನು ಯಕ್ಷಗಾನದ ಹಿರಿಯ ಭಾಗವತತ್ರಯರ ಕಲಾಪ್ರೌಢಿಮೆಗೆ ಸಾಕ್ಷಿಯಾಗುವಂತೆ ಅತ್ಯುತ್ತಮ ಹಿಮ್ಮೇಳದೊಂದಿಗೆ ಕಾರ್ಯಕ್ರಮ ಯೋಜಿಸಿದ್ದರು.. ಎರಡುವಾರ ಮೊದಲೇ ಕೇಶವ ಕರೆ ಮಾಡಿ ಕಾರ್ಯಕ್ರಮದ ಕರೆ ನೀಡಿದ್ದರು. ಬಲಿಪ, ಪದ್ಯಾಣ, ಹೊಳ್ಳ, ಈ ಮೂರು ತ್ರಿಮೂರ್ತಿಗಳು ಇಂದು ಯಕ್ಷಗಾನಲೋಕದ ಹಿರಿಯ ವ್ಯಕ್ತಿಗಳು. ಇವರ ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ನಡೆಯುವುದು ಇದೇನೂ ಹೊಸತಲ್ಲ. ಇಲ್ಲಿ ಹೊಸತು ನಮ್ಮ ಮಿತ್ರರ ಮನೆಯಲ್ಲಿ ಆಗುತ್ತಿರುವುದು, ಮಿತ್ರರು ಮತ್ತವರ ಕುಟುಂಬವರ್ಗದವರು ಇದನ್ನು ಮೊದಲೆ ಯೋಚಿಸಿದ್ದರೋ ಗೊತ್ತಿಲ್ಲ. ಈ ಕಾರ್ಯಕ್ರಮ ನನ್ನ ಮಟ್ಟಿಗೆ ದಿಡೀರ್ ಆಗಿ ನಿರ್ಧರಿತ ಕಾರ್ಯಕ್ರಮ.


ಪದ್ಯಾಣ ಗಣಪಣ್ಣನ ನೇತ್ರ್ ತ್ವದಲ್ಲಿ ಯೋಜಿಸಿದ್ದನ್ನು ಅತ್ಯಂತ ಉತ್ಸಾಹದಲ್ಲಿ ಮಿತ್ರ ಕೇಶವ ಹೇಳಿದಾಗ ಈ ಕಾರ್ಯಕ್ರಮ ಕಳೆದುಕೊಳ್ಳಬಾರದು ಎಂದು ಯೊಚಿಸಿದೆ.
ಆದರೆ ಎಲ್ಲ ಬಾರಿಯಂತೆ ಈ ಬಾರಿಯೂ ಕಾರ್ಯಕ್ರಮಕ್ಕೆ ಹೋಗಿ ಸವಿಯುವುದು ಕನಸಾಗಿಯೆ ಉಳಿದು ಬಿಟ್ಟಿತು. ವಾರದ ಮಧ್ಯಭಾಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಮಯದ ಅಭಾವದಿಂದ ಹೋಗುವುದು ಸಾಧ್ಯವಾಗದೆ ಹೋಯಿತು. ಈ ನಿರಾಶೆಯ ಮಧ್ಯದಲ್ಲೇ ಅದೆ ದಿನ ಸಾಯಂಕಾಲ ಕೇಶವರಿಗೆ ಕರೆ ಮಾಡಿ ಉತ್ಸಾಹದಿಂದಲೇ ಕೇಳಿದಾಗ ನನ್ನಿಂದಲೂ ಹೆಚ್ಚಿನ ಉತ್ಸಾಹದಿಂದ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ವರದಿ ಒಪ್ಪಿಸಿಬಿಟ್ಟರು. ನಿಜಕ್ಕು ಆದಿನ ನನ್ನಂತಹ ಹಲವು ಯಕ್ಷಗಾನ ಮಿತ್ರರು ಈ ಕಾರ್ಯಕ್ರಮದ ಸವಿಯುನ್ನುಣ್ಣುವುದರಲ್ಲಿ ವಂಚಿತರಾಗಿಬಿಟ್ಟೆವು.


ಎಲ್ಲದರ ಮಧ್ಯೆ ಒಂದು ತೃಪ್ತಿ... ಈ ಕಾರ್ಯಕ್ರಮ ಸಂಪೂರ್ಣವಾಗಿ ವೀಡಿಯೊ ದಾಖಲಿಕರಣವಾಗುವುದರಿಂದ ಅಲ್ಪ ಮಟ್ಟಿನ ಆಸ್ವಾದನೆಯನ್ನು ಅನುಭವಿಸುವ ಅವಕಾಶ. ಅದರಂತೆ ಮೊನ್ನೆ ಸೋಮವಾರದಂದು ಕೇಶವ ಹೇಳಿದರು ವೀಡಿಯೊ ಸಿದ್ದವಿದೆ... ಮತ್ತೆ ಮನಸ್ಸು ಕೇಳಲಿಲ್ಲ. ನನ್ನ ಇನ್ನೊರ್ವ ಮಿತ್ರ ಸುಬ್ಬಣ್ಣ ಇದಕ್ಕಾಗಿಯೇ ಕಾದು ಕುಳಿತಿದ್ದರು. ಇಬ್ಬರೂ ಸಾಯಂಕಾಲ ಕೇಶವರ ಮನೆಗೆ ಧಾಳೀ ಇಟ್ಟೇಬಿಟ್ಟೆವು. ಅಲ್ಲಿ ಕೆಲವು ವೀಡಿಯೊ ತುಣುಕು ನೋಡಿದ ಮೇಲೆಯೆ ಮನಸ್ಸಿಗೆ ಸ್ವಲ್ಪ

ಸಮಾಧಾನವಾದದ್ದು.
ಎಲ್ಲವನ್ನು ತಂದು ನನ್ನ ಕಂಪ್ಯೂಟರ್ನಲ್ಲಿ ಹಾಕಿದ ಮೇಲೆ ಎಂದಿನಂತೆ ಒಂದುಸಲ ಸ್ವಲ್ಪ ಸ್ವಲ್ಪ ತುಣುಕಾಗಿ ಸವಿದ ಮೇಲೆ ನನ್ನ ಆಡಿಯೊ ವೀಡಿಯೊ ಕಾರ್ಖನೆಗೆ ಕೆಲಸ ಶುರುವಾಯಿತು. ಹೌದು ಎಲ್ಲವನ್ನು ಸಂಕಲಿಸಿ ಬೇಡದೆ ಇದ್ದ ಭಾಗ ತೆಗೆದು ಫೈಲು ಗಳಸ್ವರಗಳನ್ನು ನೇರ ಒಪ್ಪ ಗೊಳಿಸಿ ಎಲ್ಲದಕ್ಕೂ ಒಂದು ರೂಪಕೊಡುವ ಕೆಲಸ ಶುರುವಾಯಿತು.
ಪದ್ಯಾಣ ಹೊಳ್ಳರ ದ್ವಂದ್ವ ಎಂದರೆ ಮೊದಲು ನೆನಪಿಗೆ ಬರುವುದು ದಶಕದ ಹಿಂದೆ ಸಂಗೀತಾ ರೆಕಾರ್ಡಿಂಗ ಕಂಪೆನಿ ಬಿಡುಗಡೆ ಮಾಡಿದ ಶೇಣಿಯವರು ಕರ್ಣನಾಗಿ ಅರ್ಥಗಾರಿಕೆ ಮೆರೆದ ಕರ್ಣಾವಸಾನ ಧ್ವನಿಸುರುಳಿಯ ಈ ಇಬ್ಬರ ದ್ವಂದ್ವ ಹಾಡುಗಾರಿಕೆ . ಯಕ್ಷಗಾನ ಇತಿಹಾಸದಲ್ಲೆ ಒಂದು ಛಾಪನ್ನು ಒತ್ತಿದ ಕ್ಯಾಸೆಟ್ ಇದು. ಇಲ್ಲಿ ಅದು ಕೆಲವು ಕಡೆ ಮರುಕಳಿಸಿತೇ ಎಂದು ಭಾವಿಸಿಬಿಡುವ ಹಾಗೆ ಪದ್ಯಾಣ ಹೊಳ್ಳರು ಪೂರ್ಣ ಉತ್ಸಾಹಿಗಳಾಗಿದ್ದರೆ.. ಹಿರಿಯ ಬಲಿಪ್ಪಜ್ಜ ಎಂದಿನಂತೆ ಸ್ವರಧಾರೆ ಎರೆಯಲು ಉದ್ಯುಕ್ತರಾಗಿದ್ದರು. ಅದರಲ್ಲೂ ಮೂರುಜನ ಸೇರಿ ಹಾಡಿದ ಕರ್ಣಾವಸಾನದ ಪದಗಳು ಅದ್ಭುತವಾಗಿ ಮೂಡಿಬಂದು ಇಂದಿನ ನನ್ನ ದಿನ ಪೂರ್ಣ ಯಕ್ಷಗಾನ ಮಯವನ್ನಾಗಿಸಿತು,


ಬಲಿಪ್ಪರ ಕೆಲವು ಪೇಟೆಂಟ್ ಪದಗಳು ಮಾರಿಚ ನಿಶಾಚರ,ಪಂಚವಟಿ , ಹಾಗು ಅತಿಕಾಯದ ಪದಗಳು ಈ ಮೊದಲು ಹಲವು ಕಾರ್ಯಕ್ರಮಗಳಲ್ಲಿ ಕೇಳಿದ್ದರೂ ಇಲ್ಲಿ, ಕಟೀಲು ದೇವಾಲಯದ ಮಧ್ಯಾಹ್ನದ ಊಟದ ಸಾರಿನಂತೆ ನಿತ್ಯವೂ ಹೇಗೆ ಹೊಸ ರುಚಿಯನ್ನು ಕೊಡುತ್ತದೋ ಅದೇ ರೀತಿಯಿತ್ತು. ಶುದ್ದ ಪರಂಪರೆಯ ಎಲ್ಲಿಯೂ ರಾಜಿಯಿಲ್ಲದ, ಛಂದೋಬದ್ದ,ರಾಗ ತಾಳಲಯಬದ್ದ ಬಲಿಪ್ಪ ಶೈಲಿ ಎಷ್ಟು ಮೋಹಕ..!!.

ಇನ್ನು ಗದ್ದಾಯುದ್ದದ , ದಕ್ಷಾಧ್ವರ, ಸಹಸ್ರಕವಚ ಮೋಕ್ಷ, ಮುಂತಾದ ಪದಗಳಿಗೆ ತನ್ನದೆ ಛಾಪನ್ನು ಒತ್ತಿದ್ದ ಹೂಳ್ಳರ ಪದಗಳು ಪ್ರತಿಸಲ ಪುನರಾವರ್ತನೆಗೊಳಿಸುವಂತೆ ಮಾಡುತ್ತದೆ.

ಅಗರಿ ಶೈಲಿಯಲ್ಲಿ ಪದ್ಯಾಣ ಹಾಡಿದರೆ ಸ್ವತಃ ಅಗರಿ ಮೈಮೇಲೆ ಬಂದಂತೆ ಹಾಡುವ ಇವರ ಪದಗಳು ಇಂತಹುದೆ ಪ್ರಸಂಗಕ್ಕೆಂದು ಬ್ರಾಂಡ್ ಅಗಿಲ್ಲ. ಸ್ವರದ
ಏರಿಳೀತದ ಶೈಲಿಯ ಪದ್ಯಾಣ ಗಣಪ್ಪಣ್ಣನ ಪದ್ಯಗಳ ಆಲಾಪನೆ ಶೈಲಿಯೇ ಸುಂದರ.
ಕಾರ್ಯಕ್ರಮದ ಆರಂಭದಲ್ಲಿ ಪದ್ಯಾಣ ಹೊಳ್ಳರ ದ್ವಂದ್ವದಲ್ಲಿ ಗಣಪತಿ ಸ್ತುತಿ ಆನಂತರ ಬಲಿಪ್ಪರ ಪ್ರಸಿದ್ದ ಪದಗಳಲ್ಲಿ ಒಂದಾದ ಶರಣುತಿರುವಗ್ರ ಶಾಲಿವಾಹಿನಿ ಸಹಜವಾಗಿ ಸುಂದರವಾಗಿತ್ತು



ಭೀಷ್ಮ ವಿಜಯದ ಪರಮೠಷಿ ಮಂಡಲದ ಮಧ್ಯದಿ... ಪದ್ಯಾಣ ಹೊಳ್ಳರ ದ್ವಂದ್ವದಲ್ಲಿ ಮೂಡಿ ಆನಂತರ ಕರ್ಣಾವಸಾನ ಪ್ರಸಂಗದ ಏನು ಸಾರಥಿ... ಸಾಯಕತೊಡುವ ವಿಚಾರ... ಮತ್ತೀತರ ಪದಗಳು ಮೂವರು ಪರಸ್ಪರ ಸಹಭಾಗಿತ್ವದಲ್ಲಿ ಮೊಳಗಿ ಆಷಾಢ ಮಾಸದ ವರ್ಷಧಾರೆಯಂತೆ ಭೋರ್ಗರೆಯಿತು.


ಈ ಕಾರ್ಯಕ್ರಮದಲ್ಲಿ ಹೊಳ್ಳ ಮತ್ತು ಉಪಾಧ್ಯಾಯರ ಜತೆಗಾರಿಕೆ ಮಾತ್ರ ಸಂಪೂರ್ಣವಾಗಿ ಮೆರೆದಾಡಿತು. ಕೆಲವೊಂದು ಅದ್ಭುತ ಪದಗಳು ಮತ್ತೂ ಮತ್ತು ಮೆಲುಕು ಹಾಕುವಂತಿತ್ತು. ಮಧ್ಯಮಾವತಿಯ ಗಂಡು ಸ್ವರದಲ್ಲಿ ಹಾಡಿದ ದಕ್ಷಾಧ್ವರದ ಒಂದುದಿವಸ ತಾನು ಕುಳಿತಿರ್ಪ ಸಭೆಗೆ.. , ಜಯ ಕಂಸಾಸುರ ಮರ್ದನ ಅಲ್ಲಿ ಸೇರಿದ ಮಂದಿಗೆ ಮರೆಯದ ಅನುಭವ ಉಂಟು ಮಾಡಿರಬಹುದು,ಬಲಿಪ್ಪರು ಹಾಡಿದ ..ಅತಿಕಾಯ ಪ್ರಸಂಗದ ಏತಕೆ ಮರುಳಾದೆ ತಾತ... ಮಾರೀಚ ನಿಷಾಚರ... ದಂಡು ಬಂತೈ ರಾಘವನ...ಎಂಬ ಪದಗಳು ನಮಗೆ ಮೈಮನ ಮರೆವಂತೆ ಮಾಡುವುದರಲ್ಲಿ ಅನುಮಾನವಿಲ್ಲ.
ಪದ್ಯಾಣ ಅಗರಿ ಶೈಲಿಯಲ್ಲಿ ಹಾಡಿದ ವಾಮನ ಚರಿತ್ರೆ ಪ್ರಸಂಗದ ಮಣಿದಾತ ನುಡಿದ ಪಾವನವಾದ ತವ ಪಾದ ಅವರ ಅತ್ಯುತ್ತಮ ಪದಗಳಲ್ಲಿ ಒಂದಾಗಿ ಮೂಡಿತು.


ಸುಮಾರು ಮೂರು ಘಂಟೆ ಅವಧಿಯ ಯಕ್ಷಗಾನ ಹಿಮ್ಮೇಳದ ಝೇಂಕಾರ ಮೊಳಗಿಸಿದ ಇವುಗಳನ್ನು ಮೊದಲ ದಿನವೇ ಮೂರು ಬಾರಿ ಕೇಳಿ ನನ್ನ ತೃಷೆಯನ್ನು ನೀಗಿಸಿದೆ ಅಂತಲೇ ಹೇಳಬಹುದು.
ಅತ್ಯಂತ ಶ್ರಮವಹಿಸಿ ಈ ಕಾರ್ಯಕ್ರಮವನ್ನು ನಮ್ಮ ಮಿತ್ರ ಬರೆಕೆರೆ ಕೇಶವ ಹಾಗು ಮನೆಯವರು ಅಯೋಜಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರ ಈ ಕಾರ್ಯಕ್ರಮಕ್ಕೆ ಎರಡುವಾರ ಮೊದಲೇ ಭಾಗವತರು ಹಾಡಬೇಕಾದ ಪದಗಳ ಪಟ್ಟಿ ಸಿದ್ದ ಪಡಿಸುವಂತೆ ನನ್ನಲ್ಲಿ ಕೇಳಿಕೊಂಡಿದ್ದರು. ಅದರಂತೆ ನನ್ನಲ್ಲಿದ್ದ ಸಂಗ್ರಹಗಳನ್ನೆಲ್ಲಾ ಜಾಲಾಡಿ ನನಗೆ ಅತ್ಯುತ್ತಮವೆನಿಸಿದಂತಹ ಪದಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಸಿದ್ದ ಮಾಡಿ ಕಳುಹಿಸಿದ್ದೆ, ದೊಡ್ಡ ಮನಸ್ಸಿನಿಂದ ಅವುಗಳಲ್ಲಿ ಕೆಲವು ಪದಗಳನ್ನು ಆಯ್ಕೆ ಮಾಡಿ ಹಾಡಿಸಿದ್ದಾರೆ. ಸಾಮಾನ್ಯವಾಗಿ ಹಾಡುವಂತಹ ಪದಗಳಿಗೆ ಬದಲಾಗಿ ಅಪರೂಪಕ್ಕೆ ಹಾದುವಂತಹ ಪದಗಳನ್ನು ಆಯ್ಕೆ ಮಾಡಿ ಪಟ್ಟಿ ಸಿದ್ದ ಮಾಡಿ ಕಳುಹಿಸಿ ಅದರಲ್ಲಿ ಕೆಲವು ಪದಗಳು ಆಯ್ಕೆ ಗೊಂಡು ಹಾಡಲ್ಪಟ್ಟದ್ದು ತುಂಬ ಖುಷಿ ಕೊಟ್ಟಿತು. ಅಪರೂಪಕ್ಕೆ ತಮ್ಮದೆ ಮನೆಯಲ್ಲಿ ನಡೆಯುವ ಕಾರ್ಯಕ್ರಮ, ಹಾಗಾಗಿ ಮನೆಯವರದ್ದೆ ಆದ ಆಶಯಗಳು ಬೇಡಿಕೆಗಳು ಹಲವು ಇರುತ್ತವೆ. ಬೇರೆಲ್ಲೊ ಲೌಡ್ ಸ್ಪೀಕರ್ ನಲ್ಲಿ ದಿನವೂ ನಮಗಿಷ್ಟವಾದ ಹಾಡುಗಳನ್ನು ಕೇಳೀದರೂ ನಮ್ಮದೆ ಮನೆಯ ಪುಟ್ಟ ಟೇಪ್ ರೇಕಾರ್ಡರ್ ನಲ್ಲಿ ಕೇಳುವ ಅನುಭವವೆ ಬೇರೆ. ಹಾಗಾಗಿ ಹಲವು ಇತಿಮಿತಿಗಳ ನಡುವೆ ಅತ್ಯುತ್ತಮ ಎನ್ನಬಹುದಾದ ಹಲವು ಪದಗಳ ಸರಪಣಿ ನಿನಾದವನ್ನು ಕೇಳಿದ ಅನುಭವ ಆಯಿತು.







“ಬರೀ ಪದ ಹೇಳೀದ್ರೆ ಕೇಳ್ಳಿಕ್ಕೆ ಜನ ಸೇರ್ತಾರೆ...ಬರೀ ಅರ್ಥ ಮಾತ್ರ ಅದ್ರೆ ಯಾರು ಸೇರುದಿಲ್ಲ.” ಎಂಬ ಬಲಿಪ್ಪರ ಮಾತಿಗೆ ಪುಷ್ಟಿ ಕೊಡುವಂತೆ ಯಕ್ಷಗಾನ ಹಿಮ್ಮೇಳ ಮಾತ್ರ ಅಧಾರಿತ ಇಂತಹ ಹಿಮ್ಮೇಳ ವೈಭವ ಇತ್ತಿಚೆಗೆ ಬಹಳ ಜನಪ್ರಿಯತೆಯನ್ನು ಗಳಿಸುತ್ತಿದೆ.
ಒಂದು ಉತ್ತಮ ಕಾರ್ಯಕ್ರಮ ನಡೆಸಿ ಅದನ್ನು ಮುದ್ರಿಸಿ, ನಮಗೆಲ್ಲ ಸವಿಯುವಂತೆ ಮಾಡಿದ ಮಿತ್ರ ಕೇಶವ ಹಾಗು ಮನೆ ಮಂದಿಗೆ ತುಂಬು ಹೃದಯದ ಧನ್ಯವಾದಗಳು. ಮೊದಲ ಕಾರ್ಯಕ್ರಮದಿಂದ ಉತ್ಸಾಹಿತರಾದ ಮನೆ ಮಂದಿ ಮುಂದೆ ಯಕ್ಷಗಾನ ಬಯಲಾಟ ಏರ್ಪಡಿಸುವ ಬೃಹದಾಶೆಯನ್ನು ಇಟ್ಟುಕೊಂಡಿದ್ದಾರೆ. ಆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಚೈತನ್ಯವನ್ನು ಈ ಕುಟುಂಬ ವರ್ಗದವರಿಗೆ ಭಗವಂತನು ನೀಡಲಿ,ಹಾಗು ಅದನ್ನು ಕಾಣುವ ಭಾಗ್ಯ ನಮ್ಮದಾಗಲಿ ಎಂದು ಹಾರೈಸೋಣ ಅಲ್ಲವೆ?



Sunday, May 16, 2010

ಶ್ರಿ ಮಹಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸುರತ್ಕಲ್

ಅದು ಮಂಗಳೂರಲ್ಲಿ ಕೆಲಸಕ್ಕಿದ್ದ ಸಮಯ. ಕೈಯಲ್ಲಿ ನಾಲ್ಕು ಕಾಸು ನನ್ನದು ಅಂತ ಒಡಾಡ್ತಾ ಇತ್ತು. ದುಂದು ವೆಚ್ಚದಲ್ಲಿ ನಾನು ಮೊದಲಿಂದಲೂ ಹಿಂದೆ. ವಾರಕ್ಕೊಮ್ಮೆ ಮನೆಗೆ ಬರುವ ಕ್ರಮ. ಶನಿವಾರ ಕೆಲಸ ಮುಗಿಸಿ ಅವಾಗ ತಾನೆ ಮಂಗಳೊರಿನ ಕೆ ಎಸ್ ಅರ್ ಟಿ ಸಿ ಬಸ್ ಸ್ಟಾಂಡ್ ಹೊಸದಾಗಿ ಬಿಜೈ ಯಲ್ಲಿ ಸುರುವಾಗಿದ್ದ ಕಾಲ. ಮೊದಲು ಆ ಜಾಗ ತೆಂಗಿನ ತೋಟವೂ ಹೊಲಗದ್ದೆಯಿಂದ ಕೂಡಿತ್ತು. ಕೆಲಸ ಮುಗಿಸಿ ಕಾಸರಗೋಡಿಗೆ ಇದ್ದ ಏಕ ಮಾತ್ರ ಕರ್ನಾಟಕ ಸರಕಾರಿ ಬಸ್ ಗೆ ಕಾದು ಕುಳಿತಿದ್ದೆ. ಹೊಸದಾಗಿ ಆದ ಬಸ್ ಸ್ಟಾಂಡ್ ಕೇವಲ ಕೆಲವೇ ಮಂದಿ ಹಾಗು ಅದರಂತೆ ಕೆಲವೆ ಬಸ್ಸುಗಳು. ಒಂದೆರಡು ಅಂಗಡಿ.

ನನ್ನ ಪಕ್ಕದಲ್ಲಿ ಕುಳಿತಿದ್ದ ಒಬ್ಬಾತ ಆಗಂತುಕ ಅಂದಿನ ಉದಯವಾಣಿ ಓದುತ್ತಾಇದ್ದ. ಪೇಪರಿನ ಕೋನೆ ಪುಟದಲ್ಲಿದ್ದ ಒಂದು ಜಾಹೀರಾತು ನನ್ನ ಕಣ್ಣೆಗೆ ಬೀಳಬೇಕೆ. ಒಂದು ವೇಳೆ ಅದು ನನ್ನ ಕಣ್ಣಿಗೆ ಬೀಳದಿರುತ್ತಿದ್ದರೆ..ಅಂದು ಬಸ್ ಗೆ ಒಂದು ಜನ ನನ್ನ ರೂಪದಲ್ಲಿ ಹೆಚ್ಚಾಗಿರುತ್ತಿತ್ತು. ಅದೊಂದು ಆವಾಗ ಮಮೂಲಾಗಿದ್ದ ಅಟದ ಜಾಹಿರಾತು. ಅದೆ ಕೊನೆಯ ಪುಟದ ಎಡಭಾಗದ ತಳದಲ್ಲಿ ಆವಾಗ ಚಾಲ್ತಿಯಲ್ಲಿದ್ದ ಯಕ್ಷಗಾನಾ ಮೇಳಗಳ ಎರಡು ದಿನದ ಕಾರ್ಯಕ್ರಮ ಅಲ್ಲಿ ಸಂಕ್ಷೇಪವಾಗಿ ಇರುತ್ತಿತ್ತು. ತುತ್ತ ತುದಿಯಲ್ಲಿ ಧರ್ಮಸ್ಠಳ ಮೇಳ , ಅದರ ಕೆಳಗೆ ಕರ್ಣಾಟಕ ಮೇಳ ಆ ನಂತರ ಮೂರನೆಯದಾಗಿ ಸುರತ್ಕಲ್ ಮೇಳ..

ಹೆಚ್ಚಾಗಿ ಆವಾಗೆಲ್ಲ ನನ್ನ ಕಣ್ಣು ಉದಯವಾಣಿ ಕಂಡ ಕೂಡಲೆ ಮೊದಲು ಓಡುತ್ತಿದ್ದ ಜಾಗ ಅದು. ಅದರಲ್ಲೂ ಮೂರನೆಯದಾಗಿದ್ದ ಸುರತ್ಕಲ್ ಮೇಳದ ಆಂದಿನ ಆಟ ಎಲ್ಲಿ ಎಂದು ನೋಡುವ ಸಹಜ ಚಪಲ ಅಂದು ಕೂಡ ನನ್ನ ಪ್ರಯಾಣದ ಯೋಜನೆಯನ್ನೇ ಬದಲಿಸಿತು. ಹೌದು ಅಂದು ಸುರತ್ಕಲ್ ಮೇಳದ ಆಟದ ಜಾಹಿರಾತು ಕಂಡೊಡನೇ ಕಾರ್ಯಕ್ರಮ ಸಂಪೂರ್ಣ ಬದಲಾಗಿಬಿಟ್ಟಿತು. ಅಂದು ಮೇಳದ ಆಟ ಮಂಗಳೊರಿನ ಕೇಂದ್ರ ,ನೆಹರೂ ಮೈದಾನಿನಲ್ಲಿ. ಅದೂ ಪ್ರಸಂಗ ನೋಡಿದ ಕೂಡಲೆ ಮತ್ತೆ ಪುನಃ ಯೊಚಿಸುವ ಮನಸ್ಸು ಆಗಲಿಲ್ಲ.



ಶ್ರಿ ಮಹಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸುರತ್ಕಲ್. ಈ ಮೇಳದ ಅಂದಿನ ಆಟ ಮತ್ತು ಆಮೇಳದ ಹಿಟ್ ಪ್ರಸಂಗವಾದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ..ಇನ್ನು ಬೇರೆ ಬೇಕೆ? ಅದಾಗಲೆ ಯಾವ ಬಸ್ಸಿಗಾಗಿ ಕಾಯುತ್ತಿದ್ದೆನೋ ಆ ಬಸ್ಸು ಖಾಲಿಯಗಿ ಬಂದು ನಿಂತಿತ್ತು. ಮನಸ್ಸು ಎರಡಾಗುವ ಮೊದಲೇ ಕುಳಿತಲ್ಲಿಂದ ಎದ್ದು ಹೊರಬಂದೆ. ಉಪ್ಪಳದ ಸಾಯಿಬರೊಬ್ಬರು ಬಸ್ ಸ್ಟಾಂಡಿಂದ ಹೊರಬರುವ ನನ್ನ ಪರಿಚಿತ ಮುಖ ನೋಡಿ ಒಳಗೆ ಹೋದರು.. ಅವರು ಅದೇ ಬಸ್ ಗೆ ಏದುಸಿರು ಬಿಡುತ್ತಾ ಹೋಗುತ್ತಿದ್ದರು. ನಾನು ಮಾತ್ರ ಪೂರ್ಣ ನಿರ್ಧರಿಸಿ ನೆಹರೂ ಮೈದಾನಿನತ್ತ ನಡೆದೆ.
ಇದು ನನಗೆ ಆ ಕಾಲದಲ್ಲಿ ಆ ಮೇಳದಲ್ಲಿದ್ದ ಆಕರ್ಷಣೆ...!!!

ಹತ್ತು ಹಲವು ವೃತ್ತಿಪರ ಮೇಳಗಳು ಕಾರ್ಯಪ್ರವೃತ್ತವಾಗಿದ್ದ ಯಕ್ಷಗಾನ ಕಲೆಯ ಮಟ್ಟಿಗೆ ಸುವರ್ಣಯುಗದ ಆ ಕಾಲದಲ್ಲಿ ಎಲ್ಲ ಮೇಳಗಳೂ ತಮ್ಮದೆ ವೈಶಿಷ್ಟ್ಯವನ್ನು ಪಡೆದುಕೊಂಡು ಸ್ಪರ್ಧಾತ್ಮಕವಾದ ಪ್ರತಿಭೆಯನ್ನು ತೋರುತ್ತಿದ್ದ ಕಾಲವದು. ಈ ಸುರತ್ಕಲ್ ಮೇಳ ನನಗೆ ಇಷ್ಟವಾಗಿದ್ದುದು ಅದರ ಬಹುಮುಖ ಪ್ರತಿಭೆ. ಹಲವು ಸೂಪರ್ ಹಿಟ್ ಪ್ರಸಂಗಗಳು ಅದು ಎಲ್ಲಾ ರಂಗಕ್ಕೂ ಅನ್ವಯವಾಗುತ್ತಿತ್ತು. ಹಲವು ಪೌರಾಣಿಕ ಪ್ರಸಂಗಳಂತೆ ತುಳು ಮತ್ತು ಸಾಮಾಜಿಕ ಪ್ರಸಂಗಗಳನ್ನು ಪ್ರದರ್ಶಿಸುವುದರಲ್ಲಿ ತನ್ನದೆ ಆದ ವೈಶಿಷ್ಟ್ಯವನ್ನು ಹೊಂದಿಕೊಂಡಿತ್ತು.ನನಗಿನ್ನೂ ನೆನಪಿದೆ ಸುರತ್ಕಲ್ ಮೇಳದ ಆಟ ನಾನು ನೋಡಿದ್ದು ಅದು ಉಪ್ಪಳದಲ್ಲಿ ಆದ ರಾಣಿ ರತ್ನಾವಳಿ ಪ್ರಸಂಗ. ಅತ್ಯುತ್ತಮ ಕಥಾಹಂದರವನ್ನು ಹೊಂದಿದ್ದ ಈ ಪ್ರಸಂಗ ಆಗಿನ ಪ್ರಬುದ್ದ ಕಲಾವಿದರಿಂದಾಗಿ ಇಂದೂ ಅದು ನೆನಪಿನಲ್ಲಿ ಉಳಿಯುವಂತಾಗಿದೆ. ಆವಾಗಿನ್ನು ಶಿವರಾಮ ಜೋಗಿ ಅತ್ಯುತ್ತಮ ಪುಂಡುವೇಷಧಾರಿಯಾಗಿದ್ದ ಕಾಲ ಅವರಿಗೆ ಹಾಸ್ಯದಲ್ಲಿ ಜತೆಯಾಗಿ ವೇಣೂರು ಸುಂದರ ಆಚಾರಿ ಸಹ ಅಷ್ಟೇ ಪ್ರತಿಭೆಯನ್ನು ತೋರುತ್ತಿದ್ದ ಯುವ ಹಾಸ್ಯಗಾರ. ಇಷ್ತೆ ಅಲ್ಲ, ಅತ್ಯುತ್ತಮ ರಾಜ ವೇಶದಲ್ಲಿ ಮಿಂಚುತ್ತಿದ್ದ ಮಧೂರು ಗಣಪತಿ ರಾವ್ ಹಾಗು ಖಳ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಬಾಬು ಕುಡ್ತಡ್ಕ, ಬಣ್ಣದ ವೇಷಕ್ಕೆಂದೇ ಪ್ರಸಿದ್ದರೂ ಯಕ್ಷಗಾನದ ಬಣ್ಣದ ವೇಷಕ್ಕೆ ಮಾದರಿಯಾಗಿ ನಿಂತ ಬಣ್ಣದ ಮಾಲಿಂಗ, ಸ್ತ್ರೀ ಪಾತ್ರಗಳಲ್ಲಿ ನಾನು ನೋಡಿದ ಆರಂಭದ ದಿನಗಳಲ್ಲಿ ಈಶ್ವರ ಭಟ್ ಕೊಕ್ಕಡ ತಮ್ಮ ಲಾಸ್ಯ ಬೆಡಗು ಬಿನ್ನಾಣಕ್ಕೆ ಮುಂಚೂಣಿಯಲ್ಲಿದ್ದರೆ ಎಂ. ಕೆ. ರಮೇಶ ಆಚಾರ್ಯ ತಮ್ಮ ವಿಶಿಷ್ಟಸ್ತ್ರೀ ಪಾತ್ರಗಳಿಗೆ ಹೆಸರಾಗಿದ್ದರು. ಅಂತೆ ಶ್ಯಾಮಸುಂದರ ಅವರು ಇವರೊಂದಿಗೆ ಜತೆಯಾಗಿ ತಮ್ಮದೇ ಸ್ಥಾನ ಗುರುತಿಸಿಕೊಂಡಿದ್ದರು. ಇವೆಲ್ಲದಕ್ಕು ಮಿಗಿಲಾಗಿ ಹಿರಿಯರಾದ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ ಆ ಮೇಳದ ಪ್ರಧಾನ ಅಂಗವಾಗಿದ್ದುದು ತಿಳಿಯದವರಾರು? ಮತ್ತೊಬ್ಬ ಹಿರಿಯ ಕಲಾವಿದ ಆನಂದ ಮಾಸ್ತರ್ ತೆಕ್ಕಟ್ಟೆ ಇವರ ಪಾಂಡಿತ್ಯ ಪೂರ್ಣ ಅರ್ಥಗಾರಿಕೆ ಪ್ರತೀ ವೇಷಗಳೂ ಕಳೆ ಕಟ್ಟುತ್ತಿದ್ದವು. ಇನ್ನು ಹಿಮ್ಮೇಳದಲ್ಲಿ ಅಗರಿ ರಘುರಾಮ ಭಾಗವತ, ಮತ್ತು ಪದ್ಯಾಣ ಗಣಪತಿ ಭಟ್, ಚೆಂಡೆ ಹಾಗು ಮದ್ದಲೆಯಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್ ಮತ್ತು ಕಡಬ ನಾರಾಯಣ ಅಚಾರಿ. ಹೀಗೆ ಒಟ್ಟಂದದಲ್ಲಿ ಒಂದು ತಂಡವಾಗಿ ಸುರತ್ಕಲ್ ಮೇಳದ ಆಟಗಳು ತಮ್ಮದೆ ಆದ ವೈಶಿಷ್ಟ್ಯವನ್ನು ಪಡೆದುಕೊಂಡಿದ್ದವು. ಈ ಮೇಳದ ಹಲವು ಅದ್ಭುತ ಎನ್ನಬಹುದಾದ ಆಟಗಳನ್ನು ನೋಡಿದ್ದೇನೆ.

ಅವುಗಳ ನೆನಪು ಇನ್ನೂ ಹಸಿರಾಗಿರುವಂತೆ ಅವುಗಳು ಗಾಢವಾದ ಮುದ್ರೆಯೂನ್ನೊತ್ತಿವೆ. ಮೊದಲಾಗಿ ಸಮಗ್ರ ಭೀಷ್ಮ. ಶಂತನು ಮಹಾರಾಜನ ಒಡ್ಡೋಲಗದಿಂದ ಆರಂಭವಾಗುವ ಈ ಪ್ರಸಂಗ ಭೀಷ್ಮ ಪರ್ವದವರೆಗೂ ಸಾಗುತ್ತದೆ. ಶಂತನುವಾಗಿ ಮಧೂರು ಗಣಪತಿ ರಾವ್,ಗಂಗೆಯಾಗಿ ಕೊಕ್ಕಡ ಈಶ್ವರ ಭಟ್ ಮೊದಲಾರ್ಧದಲ್ಲಿ ನಿರ್ವಹಿಸಿದರೆ.ಭೀಷ್ಮ ಪ್ರತಿಙ್ಙೆಯ ಸತ್ಯವೃತನಾಗಿ ಶಿವರಾಮ ಜೋಗಿ ,ದಾಶರಾಜನಾಗಿ ತೆಕ್ಕಟ್ಟೆ ಆನಂದ ಮಾಸ್ತರ್, ಸತ್ಯವತಿಯಾಗಿ ಪುನಃ ರಂಗವೇರುವ ಈಶ್ವರ ಭಟ್ ,ಆನಂತರ ನಡುವಿರುಳು ಕಳೆದು ಶೇಣಿಯವರ ಭೀಷ್ಮ ಪ್ರವೇಶವಾದರೆ ಎಂ. ಕೆ. ರಮೇಶ ಅವರ ಅಂಬೆ, ಒಟ್ಟಿನಲ್ಲಿ ಆ ಬಾಲ್ಯದಲ್ಲಿ ನೋಡಿದ ಆ ಪ್ರಸಂಗ ಇನ್ನು ಮನಸ್ಸಿನಲ್ಲಿ ಅಚ್ಚೋತ್ತಿದೆ.

ಹೆಸರಿಸುತ್ತಾ ಹೋದರೆ ಹಲವಾರು ಪ್ರಸಂಗಗಳ ಅದ್ಭುತ ವರ್ಣನೆಯನ್ನೆ ಮಾಡಿಬಿಡಬಹುದು. ಸಮಗ್ರ ವಾಲಿ, ರಾಜಾಯಯಾತಿ, ಇವೆರಡೊ ಪ್ರಸಂಗಗಳು ಅದ್ಭುತವಾಗಿ ಪ್ರದರ್ಶಿತವಾಗುತ್ತಿದ್ದವು. ಸಮಗ್ರ ವಾಲಿಯ ಮೊದಲ ವಾಲಿ ಜೋಗಿ ಅದ್ಭುತವಾಗಿ ನಿರ್ವಹಿಸಿದರೆ ನಂತರದ ಶೇಣಿಯವರ ವಾಲಿ ಚರಿತ್ರಾರ್ಹವಾಗಿರುತ್ತಿತ್ತು. ರಾಜಾ ಯಯಾತಿಯಲ್ಲಿ ಸುರತ್ಕಲ್ ಮೇಳದಲ್ಲಿ ಅಡಕವಾಗಿದ್ದ ಪ್ರತಿಭೆ ಸಂಪೂರ್ಣವಾಗಿ ಹೊರಬರುವಂತಹ ಪ್ರಸಂಗವಾಗಿತ್ತು. ರಾಜಾ ಯಯಾತಿ ಅಥವಾ ಧರ್ಮ ದಾಸಿ ಎಂದು ಇದ್ದ ಪ್ರಸಂಗ ಸುರತ್ಕಲ್ ಮೇಳಕ್ಕೆ
ಇನ್ನಿಲ್ಲದ ಪ್ರಸಿದ್ದಿಯನ್ನು ತಂದು ಕೊಟ್ಟಿತ್ತು. ಮೊದಲ ಯಯಾತಿಯಾಗಿ ಜೋಗಿ.. ನಂತರ ಶೇಣಿಯವರು.. ದೇವಯಾನೆಯಾಗಿ ಎಂ. ಕೆ. ರಮೇಶ ಆಚಾರ್ಯ, ಶರ್ಮಿಷ್ಟೆಯಾಗಿ ಕೊಕ್ಕಡ ಈಶ್ವರ ಭಟ್. ಹೀಗೆ ಹಿಮ್ಮೇಳದ ಅದ್ಭುತ ಹೊಂದಾಣಿಕೆಯಿಂದ ಈ ಪ್ರಸಂಗ ಅಂದು ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿತ್ತು. ಈ ಮೇಳದ ಇನ್ನು ಹಲವು ಪ್ರಸಂಗಗಳು, ಚಂದ್ರಾವಳಿ ವಿಲಾಸ, ರಾಣಿ ರತ್ನಾವಳಿ, ಸತೀ ಶೀಲವತಿ ವೀರಚಂದ್ರ ವಿಜಯ, ಪಾಪಣ್ಣ ವಿಜಯ ಗುಣಸುಂದರಿ, ತಿರುಪತಿ ಕ್ಷೇತ್ರ ಮಾಹಾತ್ಮೆ, ಈ ಪ್ರಸಂಗವಂತೂ ಇತ್ತಿಚೆಗೆ ಹೃಸ್ವಗೊಂಡು ಶ್ರೀನಿವಾಸ ಕಲ್ಯಾಣವಾಗಿ ಪ್ರದರ್ಶಿತವಾದರೂ, ಅಗರಿಯವರ ಈ ಪ್ರಸಂಗ ಅಂದು ಈ ಮೇಳ ಆದ್ಭುತವಾಗಿ ಪ್ರದರ್ಶಿತವಾಗುತ್ತಿತ್ತು. ಶೇಣಿಯವರ ಮಾಧವ ಭಟ್ಟ ಮರೆಯಲು ಸಾಧ್ಯವೆ? ಹಾಗೆ ಜೋಗಿ ಮತ್ತು ವೇಣೂರು ಜತೆಯ ಕಿರಾತನ ಪಾತ್ರವೂ ಈಗ ಪ್ರದರ್ಶಿತವಾಗುವ ಶ್ರೀನಿವಾಸ ಕಲ್ಯಾಣ ವನ್ನು ತುಲನೆ ಮಾಡುವಂತೆ ಮಾಡುತ್ತದೆ. ಎಂತಿದ್ದರು ಸರಳ ಹಾಗು ಸುಂದರಾವಾದ ಅಂದಿನದೇ ಹಲವು ಸಲ ಉತ್ತಮ ಅನ್ನಿಸಿಬಿಟ್ಟಿದೆ.

ಈ ಮೇಳದ ಇನ್ನೊಂದು ಅದ್ಭುತ ಪ್ರಸಂಗ ಕಡುಗಲಿ ಕುಮಾರ ರಾಮ.. ಎಂಬ ಚಾರಿತ್ರಿಕ ಪ್ರಸಂಗ..ಯಕ್ಷಗಾನಕ್ಕೆ ಇದನ್ನು ಅಳವಡಿಸಿದ ರೀತಿ ಮಾತ್ರ ಅದ್ಭುತ. ಇಂದಿನ ಹಲವು ನವ್ಯ ಪ್ರಸಂಗ ಕರ್ತರು ಈ ಪ್ರಸಂಗ ನಡೆಯನ್ನು ಒಂದು ಸಲ ಗಮನಿಸಿದರೆ ಉತ್ತಮ. ಇದರ ಮುಖ್ಯ ಆಕರ್ಷಣೆ ಶೇಣಿಯವರ ಔರಂಗ ಜೇಬ್ ನ ಪಾತ್ರ. ಇದೊಂದು ಪ್ರಸಂಗದಂತೆ ಪಾತ್ರ ನಿರ್ವಹಣೆಯೂಚರಿತ್ರಾರ್ಹ.
ವಿಲಕ್ಷಣ ವ್ಯಕ್ತಿತ್ವದ ಔರಂಗ ಜೇಬನ ಪಾತ್ರ ಶೇಣಿ ಮುಖೇನ ಅನಾವರಣ ಗೊಳ್ಳುವ ಪರಿ ಮಾತ್ರ ಅಸಾದೃಶವಾಗಿತ್ತು. ಕುಮಾರ ರಾಮನಾಗಿ ಜೋಗಿಯವರ ಮಿಂಚಿನ ಅಭಿನಯ, ಖಳ ಪಾತ್ರವೊಂದರಲ್ಲಿ ಬಾಬು ಕುಡ್ತಡ್ಕ, ಮಾತಂಗಿಯಾಗಿ ಎಂ. ಕೆ ರಮೇಶ ಅಚಾರ್ಯ ಎಂದೂ ಮರೆಯದ ಅಭಿನಯ ನೀಡಿದರೆ, ಹಾಸ್ಯ ಪಾತ್ರಗಳಲ್ಲಿ ವೇಣೂರು ನಕ್ಕು ನಗಿಸಿ ಬಿಡುತ್ತಿದ್ದರು. ಔರಂಗಜೇಬನ ಮಗಳ ವೇಶವನ್ನು ಶ್ಯಾಮಸುಂದರ್ ಎಂಬ ಸ್ತ್ರೀ ಕಲಾವಿದ ಪರಕಾಯ ಪ್ರವೇಶ ಮಾಡಿ ನಿರ್ವಹಿಸುತ್ತಿದ್ದರು. ಹಲವು ಸಮಯದ ನಂತರ ಇದೆ ಹೆಸರಿನಲ್ಲಿ ಕನ್ನಡ ಚಲನ ಚಿತ್ರ ಬಂದರೂ ಎಂದಿಗೂ ಅದು ಈ ಅದ್ಭುತ ಪ್ರಸಂಗಕ್ಕೆ ಯಾವ ರೀತಿಯಲ್ಲೂ ಸಾಟಿಯಾಗಲೇ ಇಲ್ಲ.

ಹೀಗೆ ಹತ್ತು ಹಲವು ಪ್ರಸಂಗಗಳ ನೆನಪು ಮನಸೆಂಬ ಕ್ಷೀರ ಸರೋವರದ ಕೆನೆಯಂತೆ ಪ್ರತ್ಯೇಕವಾಗಿ ಇನ್ನೂ ಶಾಶ್ವತ ಕುರುಹಾಗಿ ನಿಂತಿದೆ.

Tuesday, April 27, 2010

ಅರ್ಥಗಾರಿಕೆಯ ಹರಿದಾಸ ಸಾಮಗನೆಂಬ ಹರಿಕಾರ..



ದಿನಾಂಕ ೨೭ .೦೪.೨೦೧೦ ಮಂಗಳವಾರದ ಸಾಯಂಕಾಲದ ಹೊತ್ತು ಬಂದ ಸಂದೇಶ ಒಂದು ಕ್ಷಣ ವಿಚಲಿತನಾಗುವಂತೆ ಮಾಡಿತು. ಅದೇ ಹಿರಿಯ ಯಕ್ಷಗಾನ ಕಲಾವಿದರೂ ಹರಿದಾಸರೂ ಆದ ಶ್ರೀ ಮಲ್ಪೆ ರಾಮದಾಸ ಸಾಮಗರ ನಿಧನದ ವಾರ್ತೆ. ಅವರ ಕೆಲವೇ ಪಾತ್ರಗಳನ್ನು ಮತ್ತು ತಾಳ ಮದ್ದಲೆಯ ಅರ್ಥಗಾರಿಕೆಯನ್ನು ಮಾತ್ರ ಅನುಭವಿಸಿದ್ದರೂ ಅದನ್ನೆಲ್ಲ ಮೆಲುಕು ಹಾಕುವಂತೆ ಎಲ್ಲವು ಮಾನಸ ಪುಟಗಳಲ್ಲಿ ಎಂದೂ ಮಾಸದ ಮುದ್ರೆಯನ್ನು ಒತ್ತಿಹಾಕಿದೆ. ಎಲ್ಲವು ಒಂದೇಸಲಕ್ಕೆ ಮೈ ಕೊಡವಿ ಮೇಲಕ್ಕೆ ಬಂದುಬಿಟ್ಟಿವೆ.

ಅದು ಬಾಯರು ಮುಳಿಗದ್ದೆಯಲ್ಲಿ ಒಂದು ತುಳು ಯಕ್ಷಗಾನ ಆಟ. ಪ್ರಸಂಗ ಅನಂತ ರಾಮ ಬಂಗಾಡಿ ವಿರಚಿತ “ಪಟ್ಟದ ಪದ್ಮಲೆ” ತುಳು ಭಾಗವತಿಕೆ ಪದಗಳನ್ನು ಹೊಂದಿದ ಬಹುಶಃ ಮೊದಲಿನ ಪ್ರಸಂಗ ಇರಬೇಕು. ಟೆಂಟ್ ಮೇಳಗಳ ಆಟ ಆವಾಗ ನಮಗೆಲ್ಲ ಹೆಚ್ಚಾಗಿ ನೋಡುವ ಅವಕಾಶವೆ ಇಲ್ಲ. ಅದರಲ್ಲೂ ತುಳು ಪ್ರಸಂಗವೆಂದರೆ ಮನೆಯವರ ಎಲ್ಲರ ವಿರೋಧ ಬೇರೆ. ಹೀಗಿದ್ದರು ಅಂದಿನ ಆಟ ನೋಡುವ ಅವಕಾಶ ನನಗೆ ಸಿಕ್ಕಿತು.ಆ ಪ್ರಸಂಗ ಚಂದ್ರ ಸೇನ ಮಹಾರಾಜ ಮತ್ತು ಪದ್ಮಲೆಯ ಶ್ರಿಂಗಾರ ರಸ ಪೂರ್ಣ ಸಂಭಾಶಣೆ ಯ ಸನ್ನಿವೇಶದಲ್ಲಿ ಚಂದ್ರ ಸೇನನಾಗಿ ಶ್ರೀ ಸಾಮಗರು, ಪದ್ಮಲೆಯಾಗಿ ಪುಂಡರಿಕಾಕ್ಷ ಉಪಾಧ್ಯಾಯ ಅಮೋಘವಾಗಿ ಅಭಿನಯಿಸಿದ ಸನ್ನಿವೇಶ, ದಾಮೋದರ ಮಂಡೆಚ್ಚರ ಪದಗಳನ್ನು ಅವರದೇ ಶೈಲಿಯಲ್ಲಿ ಹಿಂಬಾಲಿಸುವ ಸಾಮಗರ ರಂಗದ ಮೇಲಿನ ಆಂಶಿಕ ಭಾಗವತಿಕೆ ಅಂದು ತುಂಬ ಶ್ಲಾಘನೆಗೆ ಪಾತ್ರವಾಗಿತ್ತು. ಅದರಂತೆ ಕಾಡಮಲ್ಲಿಗೆಯ ಉದಯ ಕುಮಾರ , ಹೀಗೆ ಹಲವು ತುಳು ಪ್ರಸಂಗಗಳ ಸನ್ನಿವೇಶಗಳು ಓಂದೇಸವನೆ ನೆನಪಿನ ಹೊಯಿಲನ್ನು ಮನಸ್ಸಿನ ಮೇಲ್ಪದರಕ್ಕೆ ತರುತ್ತಿದ್ದರೆ ಮರೆಯಾದರೆ ಸಾಮಗರು? ಎಂದು ನಿಟ್ಟುಸಿರು ಬರುವಂತೆ ಮಾಡಿತು.

ಬಾಲ್ಯದಲ್ಲಿ ನಾನು ಕಂಡ ಅವರ ಪಾತ್ರಗಳೆಷ್ಟು. ಅವರ ಅರ್ಥಗಾರಿಗೆ ಸರಳವಾಗಿರದೆ ಅರ್ಥೈಸುವದಕ್ಕೆ ಬಹಳ ಕ್ಲಿಷ್ಟವಾಗರುತ್ತಿತ್ತು. ಹೀಗಿದ್ದರೂ ವಿಡಂಬನಾತ್ಮಕವಾದ ವಾದ ಮಂಡನೆ ಪಾತ್ರ ಪೋಶಣೆ ಪ್ರತಿಯೊಬ್ಬ ಯಕ್ಷಗಾನ ಅಭಿಮಾನಿಯೂ ಮರೆಯುವುದು ಅಸಾಧ್ಯವಾಗಿದೆ.ಉತ್ಕಟ ಅಭಿನಯವನ್ನು ಮೆರೆಸುತ್ತಿದ್ದ ಇವರ ಹಲವು ಪಾತ್ರಗಳು ಇಂದು ಆ ಬಗೆಯಲ್ಲಿ ನಿರ್ವವಹಿಸುವವರಿಲ್ಲದೆ ಪಾತ್ರಗಳೇ ಪಾತ್ರಧಾರಿಯನ್ನು ಕಾಯುವಂತೆ ಮಾಡಿದೆ. ಹೆಚ್ಚಾಗಿ ಅವರ ಕೃಷ್ಣನ ಪಾತ್ರಗಳನ್ನೆ ನೋಡಿದ ನನಗೆ ಅವೆಲ್ಲ ತುಂಬಾ ಅಪ್ಯಾಯಮಾನವಾಗಿದ್ದವು. ಅಪ್ರತಿಮ ವಾಗ್ಮಿ, ಭಾಷಾ ವ್ಯಾಕರಣ ಉತ್ತಮ ಪಾಂಡಿತ್ಯವನ್ನು ಹೊಂದಿದ ಇವರು ಇದರಿಂದ ತಮ್ಮ ಅರ್ಥಗಾರಿಕೆ ತುಂಬ ಶ್ರೀಮಂತವಾಗಿರುವಂತೆ ಮಾಡುತ್ತಿದ್ದರು. ಅನಗತ್ಯ ಸ್ಪರ್ಧೆಗಿಳಿಯದೆ ಅತ್ಯುತ್ತಮ ಸಹಕಾರೀ ಮನೋಭಾವವನ್ನು ತಮ್ಮ ಅರ್ಥಗಾರಿಕೆಯಲ್ಲೂ ಮೆರೆಸುತ್ತಿದ್ದರು. ಇವರ ನೆರಳಲ್ಲಿ ಬೆಳೆದ ಹಲವು ಕಲಾವಿದರು ಇಂದಿಗೂ ಅವರ ಒಡನಾಟವನ್ನು ಮರೆಯಲಾರರು. ಕಳೆದ ಕೆಲವು ತಿಂಗಳ ಮೊದಲು ಅವರ ಚುಟುಕು ತಾಳಮದ್ದಲೆಯ ರೂಪವನ್ನು ನೋಡುವ ಭಾಗ್ಯ ನನಗೆ ಒದಗಿ ಬಂತು. ಅವರನ್ನು ಅಂದೇ ನಾನು ಕೊನೆಗೆ ನೋಡಿದ್ದೆಂದು ಈಗ ಯೋಚಿಸಿದರೆ ಮನಸ್ಸಿನ ಅಂತರಂಗದಲ್ಲೊಂದು ತಳಮಳ ಕಾಡುತ್ತಾಇದೆ. ತುಂಬಾ ಇಳಿದು ಹೋದ ಶರೀರ ಅಂದು ನೋಡಿ ಕಾಲನ ಪ್ರಭಾವಕ್ಕೆ ಇಂತಹ ಕಲಾವಿದರು ಒಳಗಾಗದೆ ವಿನಾಯಿತಿಯನ್ನು ಪಡೆದರೆ ಹೇಗೆ ಅಂತ ಅನ್ನಿಸಿತ್ತು.

ನಮ್ಮ ಮನೆಯಲ್ಲಿ ಹಿರಿಯರೆಲ್ಲ ಸಣ್ಣ ಶಾಮುಖರೆಂದು ಕರೆಸಲ್ಪಡುತ್ತಿದ್ದ ಇವರು ನೀಳ ಕೇಶ ರಾಶಿಯೊಂದಿಗೆ ತಾಳಮದ್ದಲೆಯ ಅರ್ಥಧಾರಿಯಾಗಿ ವೇದಿಕೆಗೆ ಬಂದರೆ ನಮಗೆಲ್ಲಾ ಅಂದು ದೂರ್ವಾಸ ವಿಶ್ವಾಮಿತ್ರರನ್ನು ನೋಡಿದಂತೆ ಭಯವಾಗುತ್ತಿತ್ತು. ಅಷ್ಟೊಂದು ಗೌರವ ಪೂರ್ಣ ಕಳೆಯಿಂದ ಮುಖ ಕಂಗೊಳಿಸುತ್ತಿತ್ತು. ಇಷ್ಟಿದ್ದರು ಅವರು ಸಹ್ರಿದಯಿ ಎಂದು ಕೇಳಿದ್ದೆ. ಈಗ ಅವರ ಬಗ್ಗೆ ಬರೆಯುವ ಯೋಗ್ಯತೆ ಅರ್ಹತೆ ತಿಳುವಳಿಕೆ ನನಗಿದೆಯೋ ನನಗರಿಯದು.ಆದರೆ ಅದ್ಭುತ ಕಲಾವಿದ ನನ್ನಂತಹ ಸಾಮಾನ್ಯನ ಮಾನಸ ದಲ್ಲಿ ಅಚ್ಚಳಿಯದ ಮುದ್ರೆಯನ್ನು ಎಂದೊ ಒತ್ತಿ ಆಗಿಹೋಗಿದೆ. ಇಂದು ಮತ್ತು ಮುಂದೂ ಅದರ ಮೆಲುಕು ಮಾತ್ರಾ ನಮ್ಮೊಂದಿಗೆ ಇದೆ ಎಂಬುದನ್ನು ಮಾತ್ರಾ ಅರಗಿಸಿಕೊಳ್ಳಲಾಗದ ಸ್ಥಿತಿ. ಇಳಿ ವಯಸ್ಸು, ಇಳಿದು ಹೋದ ಶರೀರ, ಆದರೂ ತೀಕ್ಷ್ಣ ಕಣ್ಣು ಮತ್ತು ಭಾವನೆಯೆಂಬ ಕರುಳನ್ನೆ ಬಗೆದು ತೆಗೆವಂತಹ ಸ್ವರ ಶಾರೀರ ಕೊನೆಯಲ್ಲಿ ಕಂಡು ಬೆರಗಾಗಿ ಹೋಗಿದ್ದೆ.

ಹಲವು ಹಿರಿಯ ಕಲಾವಿದರನ್ನು ಕಲಾಭಿಮಾನಿಗಳನ್ನು ಅಗಲಿದ ಮಹಾನ್ ಕಲಾವಿದ ಇನ್ನು ಮುಂದು ಜನ್ಮ ತಳೆಯಲಿ ,ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನೂ ಎಲ್ಲರಿಗೂ ಅನುಗ್ರಹಿಸಲಿ ಎಂದು ಭಾರವಾದ ಹೃದಯತುಂಬಿ ಕಿರು ಕಂಬನಿ ತುಂಬಿದ ಅಂತಿಮ ನಮನಗಳು.

Wednesday, April 21, 2010

ಯಕ್ಷಗಾನ ಹಾದಿಯ ಮೈಲಿಗಲ್ಲು.





“ಪ್ರಪಂಚದಲ್ಲಿ ಏನಾದರೂ ಸಾಧನೆಯಾದರೆ ಅದು ಹುಚ್ಚರಿಂದ ಮಾತ್ರಾ ಸಾಧ್ಯ. ಐನ್ಸ್ ಟೀನ್ ,ನ್ಯೂಟನ್, ಗಾಂಧೀಜಿ ಅವರ ಕಾಲದಲ್ಲಿ ಮೊದಮೊದಲು ಹುಚ್ಚ ಎಂದು ಕರೆಸಿಕೊಂಡವರು. ಅವರ ಸಾಧನೆ ಇಂದು ಲೋಕವೇ ತಿಳಿದಿದೆ.” ಈ ಮಾತು ಅಂದಿನ ಗಣ್ಯ ಅತಿಥಿ ಡಾ. ಶ್ರೀ ಎಂ. ಪ್ರಭಾಕರ ಜೋಶಿ ಯವರು ತಮ್ಮ ಅಭಿನಂದನಾ ಭಾಷಣದಲ್ಲಿ ಸಹಜವಾಗಿ ಉಧಾಹರಿಸಿ ಉದ್ಗರಿಸಿದರು. ಅವರ ಮಾತು ಹಾಸ್ಯ ಸಹಜವಾಗಿ ಭಾಸವಾದರು ನೈಜತೆಗೆ ತೀರ ಹತ್ತಿರವಾಗಿದೆ. ಹೌದು ನಾವೆಲ್ಲ ಯಕ್ಷಗಾನದ ವಿಷಯ ಬಂದಾಗ ನಿಜಕ್ಕೂ ಹುಚ್ಚರು. ಅದೂ ಯಾವ ಚಿಕಿತ್ಸೆಯೂ ಇದಕ್ಕಿಲ್ಲ. ಹುಚ್ಚಿನ ಪ್ರಾಮಾಣ ಮಾತ್ರ ಇಲ್ಲಿ ಹೆಚ್ಚುಕಮ್ಮಿ ಅಷ್ಟೆ.

ಅಂದು ಭಾನುವಾರ ಶ್ರೀ ಬಲಿಪ ನಾರಾಯಣ ಭಾಗವತರಿಂದ ರಚಿಸಲ್ಪಟ್ಟ ಅತೀ ದೀರ್ಘವಾದ ಪ್ರಸಂಗ ..ಐದು ದಿನಗಳ ಶ್ರೀ ದೇವಿ ಮಹಾತ್ಮೆ ಪುಸ್ತಕದ ಬಿಡುಗಡೆ ಸಮಾರಂಭ.ಕಲೆಯ ಪ್ರಕಾರ ಸಂಕುಚಿತ ಗೊಂಡು ಪ್ರದರ್ಶನದ ಅವಧಿ ಕುಂಠಿತಗೊಂಡು ಪೂರ್ಣ ರಾತ್ರಿಯ ಬದಲಾಗಿ ಕೆಲವೆ ಗಂಟೆಗಳಷ್ಟು ಮಟ್ಟಿನ ಅವಧಿಗೆ ಇಳಿದಿರುವಾಗ ಈ ಐದು ದಿನದ ಅವಧಿ ಎಂಬ ಪ್ರಶ್ನೆ ಮೊದಲಾಗಿ ಎದುರಾದರೂ ಹಲವು ಗುಣಗಳಿಂದ ಈ ಪ್ರಸಂಗ ಕೃತಿ ಅದ್ಭುತ ವಿಶೇಷ ಮನ್ನಣೆಗೆ ಅರ್ಹವಾದುದು. ಈ ಸರಳ ಸುಂದರ ಸಮಾರಂಭಕ್ಕೆ ಸಾಕ್ಷಿಯಾಗಬಹುದಾದ ಕೆಲಸ ಮಾತ್ರ ನನ್ನಿಂದ ಸಾಧ್ಯವಾಯಿತು.




ಹಲವು ಸಮಯದ ಮೊದಲು ಬಲಿಪ್ಪರ ಮುದ್ದಾದ ಹಸ್ತಾಕ್ಷರದಿಂದ ಕೂಡಿದ ಹಸ್ತಪ್ರತಿಯೊಂದನ್ನು ನನ್ನ ಮಿತ್ರ ಕಜೆ ಸುಬ್ರಹ್ಮಣ್ಯ ಭಟ್ ರವರು ತೋರಿಸಿದಾಗ ಬಾಹ್ಯಕಾಶ ಪಂಡಿತ ಎನೂ ಅರಿಯದವನಿಗೆ ನಕ್ಷತ್ರದ ಬಗೆಗಿನ ಪಠ್ಯ ಪುಸ್ತಕ ತೋರಿಸಿದಂತೆ ಆಗಿತ್ತು. ಇದನ್ನು ಪ್ರಕಟಿಸುವ ಮಹತ್ತರ ಯೋಜನೆಯನ್ನು ಮುಂದಿಟ್ಟರು. ಇಂತಹ ಹತ್ತು ಹಲವು ಮಹತ್ವಾಕಾಂಕ್ಷೆಯನ್ನು ನಿತ್ಯವೂ ಯೋಜಿಸುವ ಸುಬ್ಬಣ್ಣ ಇಂತಹ ಯೋಜನೆ ವಿಶೇಷವೆಂದು ನನಗನಿಸಲಿಲ್ಲ.ಅವರ ಹಲವುದಿನದ ಯೋಜನೆಯ ಫಲಶ್ರುತಿ ಸಾಕಾರಗೊಂಡ ಕ್ಷಣವದು ಅವರ ಜತೆ ಸಂಭ್ರಮಿಸುವ ಕೆಲಸ ಮಾತ್ರನಮ್ಮದು.
ಇತ್ತೀಚಿನ ಬಿಡುವಿಲ್ಲದ ಕೆಲಸದಿಂದ ಈ ಕಾರ್ಯಕ್ರಮಕ್ಕೆ ಹೋಗುವ ಭರವಸೆಯೇ ಇಲ್ಲವಾಗಿತ್ತು. ಸುಬ್ಬಣ್ಣನಿಗೆ ನಂತರ ಏನು ಉತ್ತರಿಸುವುದು ಎಂಬ ಚಿಂತೆ ಒಂದೆಡೆ. ಪ್ರತಿಯೊಬ್ಬ ಮಿತ್ರಬಳಗದವರನ್ನೂ ಪ್ರತ್ಯೇಕವಾಗಿ ಆಹ್ವಾನಿಸಿ ಎಲ್ಲರಿಗೂ ಅನುಕೂಲವಾಗಲೆಂದು ಹಲವು ಸಲ ಮುಂದೂಡಿ ಕೊನೆಗೆ ಭಾನುವರದಂದು ನಿಗದಿ ಮಾಡಿ ಬಿಟ್ಟು ಪ್ರತೀ ಬಾರಿ ಮುಗ್ಧತನದಿಂದ ಬರಲೇ ಬೇಕೆಂದು ಆಹ್ವಾನಿಸಿದ ಸುಬ್ಬಣ್ಣನ ಹೃದಯವಂತಿಕೆಗೆ ನಮ್ಮಲ್ಲಿ ಉತ್ತರ ಇಲ್ಲ. ಹಲವು ಹವ್ಯಾಸಗಳನ್ನು ಕಂಡವ ನಾನು. ನಮ್ಮ ಕುಟುಂಬದಲ್ಲಿ ಕೆಲವು ಹಿರಿಯ ವ್ಯಕ್ತಿಗಳಿದ್ದಾರೆ, ಒಂದು ನನ್ನಮ್ಮ,ನನ್ನತ್ತೆ(ಪತ್ನಿಯ ತಾಯಿ) ಇನ್ನು ನನ್ನ ಅಜ್ಜಿ ತಾಯಿಯ ಅಮ್ಮ ಇವರದೊಂದು ಹವ್ಯಾಸ ಇತ್ತು. ಇದನ್ನು ಇಲ್ಲಿ ಉದಾಹರಿಸುವುದಕ್ಕೆ ಸಾಮ್ಯತೆ ಇದೆ. ರುಚಿಕಟ್ಟಾದ ಅಡುಗೆ ಮಾಡಿ ವಿಚಿತ್ರ ಖಾದ್ಯಗಳನ್ನು ಮಾಡಿ ನಮಗೆಲ್ಲ ತಿನ್ನಿಸಿ ನಮ್ಮಿಂದ ತೃಪ್ತಿಯ ಶಾಭಾಶ್ ಗಿರಿ ಪಡೆಯುವುದೆಂದರೆ ಈ ಹಿರಿಯರ ಒಂದು ಹವ್ಯಾಸ. ತೃಪ್ತಿಯಿಂದ ಚಪ್ಪರಿಸಿ ತಿನ್ನುವ ನಮ್ಮನ್ನು ನೋಡುವುದೆಂದರೆ ಇವರಿಗೆಲ್ಲ ಒಂದು ಬಗೆಯ ಹವ್ಯಾಸ. ಹಾಗೆನೇ ನಮ್ಮ ಸುಬ್ಬಣ್ಣನಿಗೂ ವರ್ಷಕ್ಕೆ ಕನಿಷ್ಠ ಒಂದಾದರು ತಾಳ ಮದ್ದಲೆಯೊ ಇನ್ನೊಂದೋ ಯಕ್ಷಗಾನದ ಕಾರ್ಯಕ್ರಮ ಸರಳವಾಗಿ ಮಾಡಿ ನಮಗೆಲ್ಲ ತೋರಿಸಿ, ಅದರಲ್ಲಿ ನಾವು ಪಡುವ ಆನಂದವನ್ನು ಕಂಡು ತಾವು ಆನಂದ ಪಡುವ ಹವ್ಯಾಸ. ಅಂತೇ ಈ ಕಾರ್ಯಕ್ರಮವನ್ನು ಹಲವು ಕನಸು ಕಂಡು ಆಯೋಜಿಸಿದ್ದರು. ಹಾಗೇ ಆದಿನ ನನ್ನ ಬರವನ್ನು ಕಾದು ಬಸ್ ಸ್ಟಾಪ್ ನಲ್ಲಿ ನಿಂತಿದ್ದ ಸುಬ್ಬಣ್ಣನ ಸ್ನೇಹಕ್ಕೆ ಎನೆನ್ನಬೇಕು ನೀವೇ ಹೇಳಿ. ಶೇಣೀ ಭಾಷೆಯಲ್ಲಿ ಹೇಳಬಹುದಾದರೆ..ಹೇಳಿ ..ಕೇಳಿ... ಕೌಟುಂಬಿಕ ಸಂಭಂಧ ಯಾವುದೂ ನಮ್ಮ ನಡುವಿಲ್ಲದಿದ್ದರೂ ಒಂದು ಕಾಲದಲ್ಲಿ ತೀರ ಅಪರಿಚಿತರಾಗಿದ್ದ ನಮ್ಮ ನಡುವಿನ ಸ್ನೇಹ ಅನುಭವಿಸಿಯೇ ತಿಳಿಯಬೇಕು.


ಕಜೆ ಮನೆ ಕಳೆದ ಬಾರಿ ನಾನು ಹೋದ ತಾಳಮದ್ದಲೆ ಗುಂಗಿನಲ್ಲೆ ಇದ್ದಂತೆ ಭಾಸವಾಗುತ್ತಿತ್ತು. ಬಲಿಪ ಹೊಳ್ಳರ ದ್ವನಿಯ ಕಲರವ ಇನ್ನೂ ಇದೆಯೇನೋ ಅನ್ನು ಅಂಬೋಣ ನನ್ನದು. ಆ ದಿನ ಪುನಃ ಬಲಿಪ್ಪ ತ್ರಯರ ಧ್ವನಿಯ ಕಂಪನಕ್ಕೆ ಸಿದ್ದವಾಗಿದ್ದಂತೆ ಭಾಸವಾಯಿತು.


ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭ ಮಿತ್ರರ ಸ್ವಾಗತ ಭಾಷಣ. ಪ್ರಸಂಗ ಪುಸ್ತಕಕ್ಕೆ ಮುನ್ನುಡಿ ಬರೆದ ಹಿರಿಯ ಎಂ ಪ್ರಭಾಕರ ಜೋಶಿಯವರಿಂದ ಬಲಿಪ್ಪರ ಬಗೆಗೆ ಮತ್ತು ಪ್ರಸಂಗ ಪುಸ್ತಕದ ಬಗ್ಗೆ ಸ್ವ ಅನಿಸಿಕೆಗಳು. ಬಲಿಪ್ಪರ ಬಗೆಗಿನ ಮಾತುಗಳನ್ನು ಅವರು ಹೇಳುತ್ತ ಅವರು ಭಾವುಕರಾದದ್ದಲ್ಲ ನೆರೆದ ಮಂದಿ ಭಾವುಕರಾಗುವಂತೆ ಮಾಡಿದರು. ಬಲಿಪ್ಪರ ಬಗ್ಗೆ, ಅವರ ವ್ಯಕ್ತಿತ್ವ ಜೀವನದ ಬಗ್ಗೆ ಯಾರಾದರೂ ಹೇಳಿದರೆ ನಾನಂತೂ ಅತಿ ಭಾವುಕಾನಾಗಿ ಬಿಡುತ್ತೇನೆ. ಅದಾವ ಪ್ರಭಾವ ನನ್ನ ಮನಸ್ಸಿನಲ್ಲಾಗಿದೊ ನನಗಿನ್ನು ಅದರ ಅರಿವಿಲ್ಲ. ಅತಿ ಚಿಕ್ಕ ಚಿಕ್ಕ ಪ್ರಸಂಗಗಳು ರಚಿಸಲ್ಪಟ್ಟು ಪ್ರದರ್ಶಗೊಳ್ಳುವ ಈ ಕಾಲದಲ್ಲಿ ಈ ಐದು ದಿನದ ದೇವಿ ಮಹಾತ್ಮೆ ಬಲಿಪರಿಂದ ಸೃಷ್ಟಿಯಾಗಿದೆ ಎಂದರೆ ಒಂದು ಬಗೆಯ ದ್ವಿಮುಖ ಚಲನೆಯನ್ನು ಜೋಶಿಯವರು ಸೊಗಸಾಗಿ ವಿವರಿಸಿದರು. ಈಗಿನ ಕಾಲದಲ್ಲೂ ಇಂತಹ ಕೃತಿಯನ್ನು ಬರೆಯುವ ಸಾಹಸ ಮಾಡುವ ಬಗ್ಗೆ ಹೇಳುತ್ತಾ “ ಇದೊಂದು ದೊಡ್ದ ಹುಚ್ಚು.ಇದು ಆಸಾಮಾನ್ಯ ಸಾಧನೆಗೆ ಪ್ರೇರಣೆ, ಅದನ್ನು ಪ್ರಕಟಿಸಿ ಪ್ರಕಾಶನ ಮಾಡುತ್ತಿರುವ ಸುಬ್ಬಣ್ಣ ಹಾಗು ಬಳಗಕ್ಕೆ ಮತ್ತೊಂದು ಹುಚ್ಚು ..ಹೀಗೆ ತಮ್ಮ ಎಂದಿನ ಸಹಜ ಹಾಸ್ಯದಿಂದ ತುಂಬಿದ ಮಾತಿನಿಂದ ಅರ್ಥ ಪೂರ್ಣ ಅಭಿನಂದನೆಯನ್ನು ಸಲ್ಲಿಸಿದರು.
ಇನ್ನು ಬಲಿಪ್ಪಜ್ಜ ತಮ್ಮ ಭಾವನೆಗಳನ್ನು ಹಂಚಿಕೊಂಡ ಪರಿ ಹೃದಯಂಗಮಯವಾಗಿತ್ತು. ದೊಡ್ಡ ಪ್ರವಚಕರಲ್ಲದಿದ್ದರೂ ಸರಳವಾದ ರೀತಿಯಲ್ಲಿ ಮನದಾಳದ ಮಾತು ತೋಡಿಕೊಂಡ ರೀತಿ ನನ್ನ ಕಣ್ಣುಗಳನ್ನು ಮತ್ತೊಮ್ಮೆ ತೇವಗೊಳಿಸಿದವು. ಮನೆಯ ಹಿರಿಯರು ನೆಟ್ಟು ಬೆಳೆಸಿದ ಮರ ಮಕ್ಕಳು ಬೇಕಾದರೆ ಉಳಿಸಿ ಕೊಳ್ಳಬೇಕು.. ಹೀಗೆಂದಾಗ ಮಾತ್ರ ನೆರೆದಿದ್ದ ಜನ ಭಾವನೆಯ ಹೊಯಿಲಿಗೆ ಸಿಕ್ಕಿಬಿಟ್ಟರು. ಬಿರು ಬಿಸಿಲಿನ ಬೇಗೆಯನ್ನು ಮರೆತರು. ಈ ಅಜ್ಜ ಕಣ್ಣೆದುರಿಗೆ ಬಂದರೆ ಮನದುಂಬಿ ಭಾವುಕರಾಗುವ ನಾವು ಇನ್ನು ಅವರ ಆಂತರ್ಯದ ಮುಗ್ದ ಮಾತುಗಳನ್ನು ಕೇಳೀದರೆ ಹೇಳಬೇಕೆ ..ನನ್ನ ಕಣ್ಣೆವೆಗಳಲ್ಲಿ ಬಲವಂತವಾಗಿ ತಡೆ ಹಿಡಿದ ಕಣ್ಣೀರು ಮನಸ್ಸಿಗಾದ ಮಹದಾನಂದದ ಪ್ರತೀಕವಾಗಿತ್ತು. ಉಳಿದವರಿಗೆ ಹೇಗಾಗಿದೋ ಅದನ್ನು ನೋಡುವುದು ನನ್ನಿಂದ ಸಾಧ್ಯವಾಗಲಿಲ್ಲ. ಈ ಮಹಾನ್ವ್ಯಕ್ತಿ ಅದೇಕೆ ನನ್ನ ಕಣ್ಣ ತೇವಕ್ಕೆ ಕಾರಣರಾಗುತ್ತಾರೊ ದೇವರೇ ಬಲ್ಲ.ನಿಷ್ಕಲ್ಮಶ ಹೃದಯಿಯ , ಶಾಂತ ಮೂರ್ತಿಯ ಮಾತುಗಳನ್ನು ಇನ್ನೂ ಇನ್ನೊ ಮನದಲ್ಲಿ ತುಂಬಿಸಿಕೊಳ್ಳುತ್ತಿದ್ದರೆ ಸಮಯದ ಪರಿವೆ ಬಿಸಿಲಿನ ಪರಿವೆ ಒಂದೂ ಇಲ್ಲ. ಕೊನೆಗೆ ಅವರದೆ ರೀತಿಯಲ್ಲಿ ಸುಬ್ಬಣ್ಣನನ್ನು ಶಾಲು ಹೊದಿಸಿ ಸತ್ಕರಿಸಿದ ಪರಿ ಎಂಥಹವರಿಗೂ ಭಾವುಕರನ್ನಾಗಿಸುವಂತಿತ್ತು. ಸ್ವತಹ ಸುಬ್ಬಣ್ಣನೂ ಇದನ್ನು ನಿರೀಕ್ಷಿಸದೆ ತಮ್ಮ ಕಣ್ಣೆವೆಗಳನ್ನು ತುಂಬಿಸಿಕೊಂಡದ್ದು ಕಣ್ಣಿಗೆ ಕಟ್ಟುವ ಹಾಗಿತ್ತು. ಸುಬ್ಬಣ್ಣನ ನಿಸ್ವಾರ್ಥ ಕರ್ಮಕ್ಕೆ ಸಂದ ನಿಜ ಮನ್ನಣೆ.


ಸಾವಿರದೈನೂರಕ್ಕೂ ಮಿಕ್ಕಿದ ಪದ ಗಳಿರುವ ಈ ಬ್ರಹತ್ ಪ್ರಸಂಗ ಪುಸ್ತಕ ಯಾರೂ ಕಲ್ಪಿಸಲಾಗದ ooooooooo ಊಹಿಸಲಾಗದ ಕೃತಿ. ಒಟ್ಟೂ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿ ಹೇಳಬಹುದಾದಲ್ಲಿ ಇದೊಂದು ಬೃಹತ್ ಗ್ರಂಥ. ಯಕ್ಷಗಾನ ಸಾಹಿತ್ಯ ಎಂದು ಅವಗಣಿಸದೆ ಸಮಷ್ಟಿಯಲ್ಲಿ ಕನ್ನಡ ಸಾರಸ್ವತ ಲೋಕ ಇತ್ತ ಗಮನ ಹರಿಸುವಂತೆ, ಆ ಗುಣ, ಅರ್ಹತೆಯನ್ನು ಹೊಂದಿಕೊಂಡ ಕೃತಿ. ಆ ಮೂಲಕ ಯಾವುದೇ ವಶೀಲಿಗೆ ಒಳಗಾಗದೆ ಇದಕ್ಕೆ ಅರ್ಹ ಮನ್ನಣೆ ಪ್ರಶಸ್ತಿಗಳು ಸಂದಲ್ಲಿ ಕೃತಿ ಕರ್ತನ ಅವಿಶ್ರಾಂತ ದುಡಿಮೆ ಹಾಗು ನಿಸ್ವಾರ್ಥ ಕರ್ಮಕ್ಕೆ ಸಲ್ಲಬಹುದಾದ ಅರ್ಹ ಕೊಡುಗೆಯಾಗಬಲ್ಲುದು. ಇದರಲ್ಲಿ ಬರುವ ಅಸಂಖ್ಯ ಪದಗಳು, ಶಬ್ಧ ಛಂದಸ್ಸಿನ ಜತೆ ರಾಗ ತಾಳಗಳನ್ನು ಸಮ್ಮಿಳಿತ ಗೊಳಿಸಿ ಪೋಣಿಸಿದ ಈ ಸುಂದರ ಪುಷ್ಪ ಮಾಲೆಯನ್ನು ಕಲಾ ದೇವಿಯ ಕೊರಳಗೆ ತೊಡಿಸಿ ಆ ಸೌಂದರ್ಯವನ್ನು ನಾವು ಕಾಣುವಂತೆ ಮಾಡಿದ್ದಾರೆ. ಅದನ್ನು ನೋಡಿ ಅರ್ಥೈಸುವ ಅಂತ್ಃಛಕ್ಷು ನಮ್ಮಲ್ಲಿರಬೇಕು ಅಷ್ಟೇ. ತಮ್ಮ ಬದುಕಿನ ಅಮೂಲ್ಯ ಸಮಯವನ್ನು ಶ್ರಮವನ್ನು ವಿನಿಯೋಗಗೊಳಿಸಿ ರಚಿಸಿ ನಮ್ಮೆಲ್ಲರ ಕೈಗಿತ್ತು ಬಲಿಪ್ಪರು ಧನ್ಯತೆಯ ಮುಖಭಾವ ಹೊತ್ತರೆ, ಅವರಿಂದ ಇದನ್ನು ಪಡೆದು ನಾವು ನಮ್ಮ ಜನ್ಮವನ್ನು ಪುನೀತಗೊಳಿಸಿದೆವು.ಈ ಮೂಲಕ ಯಕ್ಷಗಾನದಲ್ಲಿ ಹೊಸತೊಂದು ಮೈಲಿಗಲ್ಲು ಬಲಿಪ್ಪರು ಸ್ಥಾಪಿಸಿದ್ದಾರೆ.

ಕೊನೆಯ ಒಂದು ತಾಸು ಅವಧಿಯಲ್ಲಿ ಮೊತ್ತ ಮೊದಲ ಬಾರಿಗೆ ನಡೆದ ಬಲಿಪತ್ರಯರ ಭಾಗವತಿಕೆಗೆ ವೇಣೂರು ಕಜೆ ಮನೆ ಸಾಕ್ಷಿಯಾಯಿತು. ಇದರಲ್ಲಿ ಮದ್ದಲೆ ವಾದಕರಾಗಿ ಕುದ್ರೆಕೊಡ್ಲು ರಾಮ ಮೂರ್ತಿ ಅತ್ಯುತ್ತಮವಾಗಿ ಸಹಕರಿಸಿ ತಮ್ಮ ತಂದೆಯಿಂದ ಬಳುವಳಿಯಾಗಿ ಪಡೆದ ಸಾಂಪ್ರದಾಯಿಕ ಮದ್ದಲೆ ವಾದನ ಮೆರೆದರು. ಉತ್ತಮ ಹಿಮ್ಮೇಳದೊಂದಿಗೆ ಪ್ರಸ್ತುತ ಪ್ರಸಂಗದ ಹಲವು ಪದಗಳನ್ನು ಬಹಳ ಅದ್ಭುತವಾಗಿ ಹಾಡಿ ತೋರಿಸಿದರು. ಸುಡು ಬಿಸಿಲಿನ ತಾಪವನ್ನು ಲೆಕ್ಕಿಸದೆ ಬಲಿಪ್ಪತ್ರಯರ ಭಾಗವತಿಕೆಯ ರಸಧಾರೆಯಲ್ಲಿ ಮುಳುಗೆದ್ದರು ಎನ್ನಬಹುದು. ಬಲಿಪ್ಪರ ಭಾಗವತಿಕೆಯ ಬಗೆ ಹಾಗೆ. ಚಪ್ಪಾಳೆಯ ನಿರೀಕ್ಷೆಯಿಲ್ಲ. ಪಾತ್ರೆಯ ತಳದಲ್ಲಿ ಉಳಿದು ಗಟ್ಟಿಯಾಗಿ ಅಂಟಿಕೊಂಡಿದ್ದ ಪಾಯಸ ಸೌಟಿನಿಂದ ಕೆರೆಸಿ ಕೆರೆಸಿ ತಿಂದ ಹಾಗೆ. ಮತ್ತೂ ಮತ್ತೂ ಮತ್ತೇರಿಸಿ ಬಿಡುವ ಹಾಗೆ. ಅದರಲ್ಲೂ ಪ್ರಸಾದ ಬಲಿಪರು ನಮ್ಮ ಭಾಷೆಯಲ್ಲಿ ಹೇಳಬಹುದಾದರೆ, PRASADA IS REALY ROCKING..!!!!



ಕಾರ್ಯಕ್ರಮದ ಕೊನೆಯಲ್ಲಿ ರುಚಿಕಟ್ಟಾದ ಲಘೂಪಹಾರದ ವ್ಯವಸ್ಥೆಯ ಸೇವೆ ಕಜೆ ಮನೆಯ ಸಹೃದಯಿಗಳಿಂದಾಯಿತು. ಇಲ್ಲಿ ಬಂಧು ಭಾಂಧವರೆಂಬ ಭಾವನೆಯಿಲ್ಲದೆ ಕೇವಲ ಯಕ್ಷಗಾನ ಮತ್ತು ಬಲಿಪ್ಪರು ಎಂಬ ಅಂತರ್ಗತವಾದ ಒಂದು ಅಗೋಚರಧಾರೆ ಮಾತ್ರ ತೋರುತ್ತಿತ್ತು. ಅಂತಹ ಸ್ನೇಹ ಮಾತ್ರ ಹೊರಸೂಸುವ ಕಜೆ ಮನೆಯಿಂದ ಕಾರ್ಯಕ್ರಮ ಮುಗಿಸಿ ಹೊರಬರಲಾಗದ ಭಾವುಕ ಸ್ಥಿತಿಗೆ ಮನಸ್ಸು ಬಂದಿತ್ತು. ಕಂಬನಿಯಿಂದ ಭಾರವಾದ ಕಣ್ಣು ಮತ್ತು ಭಾವನೆಯಿಂದ ಭಾರವದ ಹೃದಯವನ್ನು ಹೊತ್ತು ಅಲ್ಲಿಂದ ಬರುವ ವೇಳೆ, ಸುಬ್ಬಣ್ಣನ ಸಹೋದರಿ ಕೇಳಿದ “ ಚಾ ಕುಡೀತಿರ ರಾಜಣ್ಣ” ಎಂಬ ಉಪಚಾರದ ಮಾತು ಇನ್ನೂ ಮನಸ್ಸಿನಲ್ಲಿ ಬಲಿಪ್ಪರ ಪದದಂತೆ ಅಚ್ಚಳಿಯದ ನೆನಪಿನ ಮುದ್ರೆಯನ್ನು ಒತ್ತಿದೆ. ಇದು ಆ ಮನೆಯವರ ಸ್ನೇಹದ ಸಂಕೇತಮಾತ್ರ.


ತೀವ್ರವಾದ ಕೆಲಸದ ಒತ್ತಡದ ಮಧ್ಯೆಯಲ್ಲೂ ಅಲ್ಪಸ್ವಲ್ಪ ಬಿಡುವು ಮಾಡಿ ಮನಸ್ಸಿಗೆ ಬಂದ ನೆನಪಾದ ಭಾವನೆಗಳನ್ನಷ್ಟೇ ಇಲ್ಲಿ ಹೇಳಲು ಸಾಧ್ಯವಾಗಿದೆ. ಮನದೊಳಗಿನ ಹೇಳಲು ತೋಚದ ಹಲವು ಭಾವನೆಗಳು ಮೇಲೆ ಹೇಳಿದ ಪಾಯಸದಂತೆ ಮನಸ್ಸಿನ ತಳಕ್ಕೆ ಅಂಟಿಕೊಂಡು ಬಿಟ್ಟಿವೆ. ಬರಲೊಲ್ಲದು ಏನು ಮಾಡಲಿ? ಮುಂದೊಂದು ಸಮಯ ಅದನ್ನು ಕೆರೆಸಿ ತೆಗೆವ ಪ್ರಯತ್ನ ಮಾಡೋಣ ಅಲ್ಲವೇ?

Tuesday, March 30, 2010

ವೇಷ ಕಳಚಿದ ಸಮಯ ಭಾಗ ಭಾಗ ೫

ಯರೋ ಒಬ್ಬಾತ ಬಂದು ಬಾಗಿಲ ಬಳಿ ನಿಂತಾಗ, ಶ್ಯಾಮಲ ಕೇಳಿದಳು. “ ಮಾವ ಊಟಕ್ಕೆ ಹೇಳುದಲ್ವ?’ಬಂದು ನಿಂತವನು ಕ್ಯಾಂಟೀನು ಹುಡುಗ ಭಟ್ಟರು ಭಾಗೀರಥಿ ಮುಖ ನೋಡಿದರು. ತಮಗೆ ಆಹಾರದ ಬಗ್ಗೆ ಅಶ್ಟೊಂದು ಆಸಕ್ತಿ ಯಿಲ್ಲ. ಮೊದಲಿನಿಂದಲೂ ಮನೆ ಊಟವೇ ಆಗಬೇಕೆಂದು ನಿಯಮಿಸಿಕೊಂಡವರಲ್ಲ. ಮೇಳದ ಜತೆಗೆ ಬದುಕಿನ ಅಧಿಕ ಸಮಯವನ್ನು ಕಳೆದವರಿಗೆ ಮನೆ ಊಟ ಅದು ಗಂಜಿಯೂಟವಾದರೂ ಹಬ್ಬದೂಟದಂತೆ.

ಭಾಗೀರಥಿಗೆ ಇಂದು ಹಸಿವಾದರೆ ತಾನೆ ಊಟದ ಚಿಂತೆ. ಹಾಗಾಗಿ.ಏನೂ ಬೇಡವೆಂದು ಕೊಸರಾಡಿದಳು. ಭಟ್ಟರೆಂದರು..”ಬೇಡ, ನಾನು ಹೊರಗೆ ಹೋಗ್ತೇನೆ.” .ಇಲ್ಲಿ ಕೂತು ಮಾಡುವುದೇನು. ಸ್ವಲ್ಪ ಹೊತ್ತು ಹೊರಗೆ ತಿರುಗಾಡಿದಹಾಗಾಯಿತು. ಬಂದವರೆಲ್ಲ ಹೋಗಿ ಭಾಗೀರಥಿ ಮಾತ್ರವಾದಾಗ ಭಟ್ಟರೆಂದರು.” ನಾನು ಹೊರಗೆ ಹೋಗಿ ಬರ್ತೇನೆ..ಏನಾದ್ರೂ ತರ್ಬೇಕೆನೇ?”

ಆಕೆ, ಒಂದುಸಲ ಮುಖ ನೋಡಿದಂತೆ ಮಾಡಿ ಗೋಣು ಅಲ್ಲಾಡಿಸಿದಳು. ಭಟ್ಟರು ತುಸುಹೊತ್ತು ಕುಳಿತಿದ್ದು ನಿಧಾನವಾಗಿ ಹೊರಬಂದು ಕ್ಯಾಂಟೀನು ಎಲ್ಲಿದೆ ಎಂದು ಹುಡುಕುತ್ತಾ ನಡೆದು ಇನ್ನೇನು ಕ್ಯಾಂಟೀನು ಬಾಗಿಲ ಬಳಿಯಲ್ಲೆ ....ಅದೇ ದಾಸಪ್ಪ!!! ಈಸಲ ಆತ ಹಲವು ಜನ್ಮದ ಬಂಧವೆಂಬಂತೆ ಪರಿಚಿತ ನಗು ಮೂಡಿಸಿದ.

” ಬನ್ನಿ ಭಟ್ರೆ ಊಟ ಮಾಡೋಣ” .ಎನ್ನುತ್ತಾ ಅಹ್ವಾನಿಸಿದ. ಬೇಡ ಎನ್ನಲಾಗದೇ ಆತನ ಜತೆಗೇ ಒಳ ನಡೆದರು.
ಹೊಗುತ್ತ ಆತ ಕೇಳಿದ “ ನಿಮಿಗೆ ಹೋಟೇಲು ಊಟ ಅಭ್ಯಾಸ ಇರ್ಬೇಕಲ್ವ. ?ಆಟದವರಿಗೆ ಮನೆ ಊಟ ಕಮ್ಮಿ..ಹೋಟೇಲು ಊಟ ಜಾಸ್ತಿ, ಅಲ್ವ? “ ಎಂದು ಹೇಳಿ ಜೋರಾಗಿ ನಕ್ಕ. ಯಾವ ಒಳಾರ್ಥದಲ್ಲಿ ಹೇಳಿದನೋ ದೇವರೆ ಬಲ್ಲ, ’ಕದ್ದು ತಿನ್ನುವವನಿಗೆ ಅಂಜಿಕೆ, ತನಗೇಕೆ? ತಾವೆಂದೂ ಗೌಪ್ಯ ಹೋಟೇಲು ಹೊಕ್ಕೇಇಲ್ಲ. ಇವರಿಗೆಲ್ಲ ವಿಮರ್ಶೆಗೆ ಸುಲಭದಲ್ಲಿ ಸಿಗುವುದು ಆಟದ ಕಲಾವಿದರು. ತಮಗೆ ಸಿಗುವ ಅಲ್ಪ ಸಂಭಾವನೆ ಜತೆ ಇಂತಹ ವಿಮರ್ಶೆ ಪುಕ್ಕಟೆ ಕೊಡುಗೆ. ಲಕ್ಷಾಂತರ ರೂಪಾಯಿ ಸಂಭಾವನೆ ಪಡೆದು ದೊಡ್ಡ ಕಲಾವಿದ ಎಂದು ಕರೆಸಿಕೊಳ್ಳುವ ಸಿನಿಮಾ ಮಂದಿ ಮಾಡೋದೇನು. ಗಂಡ –ಹೆಂಡತಿ ಎಂಬ ಸಂಬಂಧ ಎಂಬುದು ಇವರ ನಡುವೆ ತೀರಾ ಹಾಸ್ಯಾಸ್ಪದವಾಗಿದೆ. ದಿನವೂ ಬೇಡವೆಂದರೂ ಕಿವಿಗೆ ಬೀಳುವ ಇಂತಹ ಸುದ್ದಿಗಳೆಂದರೆ ಭಟ್ಟರಿಗೆ ಒಂದು ರೀತಿ ಅಸ್ಪ್ರಶ್ಶ್ಯತೆ. ಈ ಆಟದ ಕಲಾವಿದರನ್ನು ಸಂಸ್ಕಾರದ ಹರಿಕಾರರೆಂದು ವಿಮರ್ಶೆ ಏಕೊ?
ದಾಸಪ್ಪ ಒಂದು ಕುರ್ಚಿ ತೋರಿಸಿ ಕುಳಿತುಕೊಳ್ಳುವಂತೆ ಹೇಳಿದ..ಮತ್ತೆ ಬಂದ ಮಾಣಿಗೆ.. ಊಟ ತರುವಂತೆ ಹೇಳಿದ. ಊಟ ಮಾಡುತ್ತಾ ದಾಸಪ್ಪನೆಂದ

“ ನಾನು ಆವಾಗ ಮಾತಾಡಿದ್ದು ಬೇಜಾರಾಯ್ತ? ನೀವು ತುಂಬ ಒಳ್ಳೆ ಜನ ನಂಗೆ ಗೊತ್ತು.”
ಅಬ್ಬ ಇವನ ಶಿಪಾರಸು ಪತ್ರ ಸಿಕ್ಕಿತಲ್ಲ..?
“ನೋಡಿ ಸ್ವಾಮಿ. ನಾನು ಇಂತಹ ವಿಚಾರಗಳಲ್ಲಿ ಮಾತಾಡುದು ತುಂಬ ಕಡಿಮೆ. ಯಾಕೆ ಹೇಳಿ ನನ್ನಿಂದ ಆದದ್ದು ನಿಸ್ವಾರ್ಥವಾಗಿ ಮಾಡೋದು ಅಷ್ಟೇ.ಮತ್ತೆ ಕಲೆ ಜೀವನ ಎಂಬುದು ತೀರಾ ಭಿನ್ನ. ನಾವುಗಳು ನೋಡಿ ಮನೆ ಸಂಸಾರ ಬಿಟ್ಟು ಹೊಟ್ಟೆ ಪಾಡಿಗೋ ಮಾಡುವ ಉದ್ಯೋಗ ಬೇರೆ ಗೊತ್ತಿಲ್ಲದೆ ಅಂತೂ ಹೀಗೆ ಜೀವನ ಮಾಡ್ತಾ ಇದ್ದೇವೆ. ಯಾವ ರಂಗದಲ್ಲಿ ಪರಿಪೂರ್ಣ ಮನುಷ್ಯರಿದ್ದಾರೆ ಹೇಳಿ.? ಕಲೆ ಅಂದ್ರೆ ಮನುಷ್ಯನ ಪ್ರತಿಫಲನ ಇದ್ದ ಹಾಗೆ. ಮನುಷ್ಯ ಜೀವನ ಯಾವ ನೆಲೆಯಲ್ಲಿ ಇದೆಯೊ ಅದೆ ಕಲೆಯಲ್ಲಿ ವ್ಯಕ್ತವಾಗುತ್ತದೆ. ಇಂದು ಸಿನಿಮಾ ಟೀ. ವೀ ಬಿಟ್ರೆ ಬೇರೆ ರಂಜನೆ ಈ ಮನುಷ್ಯರಿಗೆ ಗೊತ್ತಿದೆಯಾ ಹೇಳಿ.?ಕಲೆ ಎಷ್ಟು ಪ್ರದರ್ಶನ ವಸ್ತುವೋ ಅದನ್ನು ಪ್ರದರ್ಶಿಸುವ ಗುಣವೂ ಅಷ್ಟೇ ಪ್ರದರ್ಶನ ಯುಕ್ತವಾಗಿದೆ. ಹಲವು ಕಡೆ ಕಲೆಯ ಅಭಿಮಾನಿಗಳು ಪ್ರಾಮಾಣಿಕವಾಗಿದ್ದರೆ ಇನ್ನು ಕೆಲವೆಡೆ ಆ ಅಭಿಮಾನವೇ ಪ್ರದರ್ಶನ ವಸ್ತುವಾಗಿದೆ.”

“ನೋಡಿ ಸುಮಾರು ನಲವತ್ತು ವರ್ಷದ ಮೇಲೆ ಅಯಿತು. ಈ ಮೇಳ, ಈ ರಂಗಸ್ಥಳ ಚೌಕಿ ವೇಷ ನಾನು ನೋಡುದು. ಮೊದಲೆಲ್ಲ ಕಲೆಯ ಅಭಿಮಾನ , ಅನ್ನ ಕೊಡುವ ಕಲೆ ಹೀಗೆ ಹಲವು ಮಾನಸಿಕ ಸಂಬಂಧ ಇತ್ತು. ಈಗ ಯಾವ ಅಭಿಮಾನವೂ, ಪ್ರೀತಿಯೂ ಉಳಿದಿಲ್ಲವೇನೋ ಅನ್ನಿಸುತ್ತದೆ. ಏಕೆಂದರೆ ಇದು ಬಿಟ್ಟು ಬೇರೆ ಯೋಚಿಸುವ ಯೋಚನೆಯೇ ಬರುದಿಲ್ಲ. ಎಲ್ಲವೂ ಯಾಂತ್ರಿಕವಾಗಿ ಬಿಟ್ಟಿದೆ. ಯಾವುದೋ ವೇಷ ಯಾವುದೋ ರೀತಿ ಒಟ್ಟು ಮಾಡುವಂತಾಗಿದೆ. ವೇಷ ಹಾಕುದು ಬಿಟ್ಟರೆ ಬೇರೆ ಗೊತ್ತೂ ಇಲ್ಲ ಅದು ಇಲ್ಲದೆ ಹೂತ್ತೂ ಇಲ್ಲ. ಈಗ ನನಗಾಗಿ ವೇಷ ಹಾಕ್ತಾ ಇದ್ದೇನೊ ಅಲ್ಲ ನೋಡುವವರಿಗೆ ಮಾಡ್ತಾ ಇದ್ದೇನೋ ಒಂದೂ ಹೇಳಲಾಗದ ತಳಮಳ ಅಷ್ಟೇ. ಈ ಊಟ ನೋಡಿ ಇದು ಹಸಿವೆಗೆ ಅಂತ ಅನ್ನಿಸ್ತಾ ಇದೆಯ?ರುಚಿಗೆ ಅಂತ ಅನ್ನಿಸ್ತದಾ? ಅಲ್ಲ ಬದುಕ್ಲಿಕ್ಕೆ ಈ ಊಟ ಮಾಡ್ತಾ ಇದ್ದೇನೋ? ಒಟ್ಟು ಊಟ ಅಂತು ಮಾಡ್ತಾ ಇದ್ದೆನೆ. ಆಷ್ಟೇ”

ದಾಸಪ್ಪನಿಗೆ ಎಷ್ಟು ಅರ್ಥವಾಯಿತೊ ಗೊತ್ತಿಲ್ಲ ಆದರೆ ಭಟ್ಟರು ಮೊದಲ ಬಾರಿಗೆ ಮನಸ್ಸಿನಲ್ಲಿದ್ದುದನ್ನು ಹೊರಹಾಕಿದರು.
ಮತ್ತೆ ಕಲೆಯ ಬಗ್ಗೆ ಮಾತಾಡುವ ಮನಸ್ಸು ಇಬ್ಬರಿಗೂ ಇಲ್ಲ.

ಊಟ ಮಾಡಿ ವಾರ್ಡ್ ನೊಳ ಹೊಕ್ಕಾಗ ಭಾಗಿರಥಿ ಒಬ್ಬಳು ಎಚ್ಚರವಾಗಿದ್ದಳು. ಶ್ಯಾಮಲ ಕಣ್ಣು ಮುಚ್ಚಿ ಮಲಗಿದ್ದಳು. ಮಿಕ್ಕುಳಿದು ಬಂದವರೆಲ್ಲ ಹೊರಟು ಹೋಗಿಯಾಗಿತ್ತು. ಸ್ವಲ್ಪ ಹೊತ್ತು ನೋಡಿದ ಭಟ್ಟರಿಗೆ ಇನ್ನುಳಿದೇನು ಮಾಡುದು ಇಲ್ಲಿ. ಭಾಗಿರಥಿಯಲ್ಲಿ “ ನಾನು ಹೋಗ್ಬೇಕು.” ಎಂದು ಪಿಸು ಗುಟ್ಟಿದರು.
“ಶ್ಯಾಮಲ ತುಂಬ ಒತ್ತಾಯ ಮಾಡ್ತಾಇದ್ದಾಳೆ. ಇವತ್ತು ರಜೆ ಹಾಕಿದ್ರೆ ಆಗಲ್ವ. “
“ ಇಲ್ಲ ಇದಕ್ಕೆಲ್ಲ ಯಾಕೆ ರಜೆ. ಸುಮ್ಮನಿರು. ಮತ್ತೆ ಅಲ್ಲಿ ರಜೆ ಹಾಕಿ ಮತ್ತೆ ಇಲ್ಲಿ ನಿದ್ದೆ ಬಾರದೆ ಒದ್ದಾಡುವುದೇ?”
ಭಟ್ಟರು ಅಷ್ಟೋಂದು ಅನಿವಾರ್ಯಾ ಅಲ್ಲದ ವಿನಾಃ ರಜೆ ಹಾಕುವವರಲ್ಲ. ರಜೆ ಹಾಕಿ ಮನೆಯಲ್ಲಿ ಮಲಗಿದರು ಇವರು ನಿದ್ದೆ ಬಾರದೆ ಒದ್ದಾಡುವ ಪರಿಸ್ಥಿತಿ ಸಾಮಾನ್ಯ. ಎನೋ ಕಳೆದು ಹೋದ ಅನುಭವ. ಎಳವೆಯಲ್ಲಿ ಒಂದು ಸಲ ಮನೆಯ ಯಾವುದೊ ಕಾರ್ಯಕ್ರಮಕ್ಕೆಂದು ರಜೆ ಹಾಕಿದ್ದರು. ರಾತ್ರಿ ಆದ ಹಾಗೆ ಇವರಿಗೆ ಮನಸ್ಸಿನ ತಳಮಳ ಹೆಚ್ಚಾಗಿ ನೀರವಾಗಿ ಮೈಲು ದೂರ ಮೇಳ ಆಟವಾಗುತ್ತಿದ್ದ ಜಾಗಕ್ಕೆ ಹೋಗಿ ವೇಷ ಮಾಡಿ ಬಂದಾಗಲೇ ಸಮಾಧಾನವಾದದ್ದು. ಈಗೀಗಲಂತೂ ರಜೆ ಬೇಕೆಂದು ಅನ್ನಿಸುವುದೇ ಇಲ್ಲ. ಇನ್ನು ಇಂತಹ ಕ್ಷುಲ್ಲಕ ಕಾರಣಕ್ಕೆ ರಜೆ ಹಾಕಬೇಕೆ? ಹಾಗೆ ಬೇಕಿದ್ದರೆ ನಾಳೆ ಪುನಃ ಬಂದರಾಯಿತು.ಇನ್ನು ಸಾಯಂಕಾಲ ಆಗುವಾಗ ಚೌಕಿ ಗಣಪನಿಗೆ ಅಡ್ಡ ಬೀಳದೇ ಇದ್ದರೆ ಏನೋಕಳೆದು ಹೋದ ಅನುಭವ.

“ನಾನು ಹೊರಟೆ ಭಾಗಿರಥಿ ನೀ ಬೇಕಾದರೆ ಇದ್ದುಬಿಡು. ಚಿನ್ಮಯ ಯಾವಾಗ ಬರ್ತಾನೊ ಕೇಳಿದ್ದಿಯಾ?”

“ಅವನಿಗೆ ಇವತ್ತು ಎಂತದೋ ಮೀಟಿಂಗು . ಹಾಗೆ ನಾಳೆ ಸಂಜೆ ಬರ್ತಾನೋ ಏನೋ?”
ಅದು ಹೌದು. ಈ ದೊಡ್ಡ ದೊಡ್ಡಾ ಕಂಪೆನಿ ಕೆಲಸದವರಿಗೊಂದು ಕೂತ್ರೆ ನಿಂತ್ರೆ ಮೀಟಿಂಗು. ಇಬ್ರೆ ಕೂತು ಮಾತಾಡಿಕೊಂಡರೂ ಮೀಟಿಂಗು.ನಾವು ಹತ್ತಿಪ್ಪತ್ತ ಐದು ಜನ ಇಷ್ಟು ವರ್ಷ ಒಟ್ಟಿಗೆ ಬದುಕ್ತಾ ಇದ್ದೇವೆ ಇದುವರೆಗೂ ಮೀಟಿಂಗು ಮಾಡಿದ್ದಿಲ್ಲ. ಹಾಗೆ ನಮ್ಮ ಹಳ್ಳಿಯಲ್ಲಿ ಮೈಕು ಕಟ್ಟಿ ಭಾಷಣ ಮಾಡಿದ್ರೆ ಅದೊಂದು ಮೀಟಿಂಗು ಅಂತಾ ಕರೀತಿದ್ರು.

“ಶ್ಯಾಮಲ ಎದ್ರೆ ಹೇಳಿ ಬಿಡು. ನಾನು ಹೊರಟೆ.” ತೊಟ್ಟಿಲಲ್ಲಿ ಮಲಗಿದ್ದ ಎಳೆ ಮೊಮ್ಮಗುವಿನ ಕೆನ್ನೆ ನೇವರಿಸಿದರು.ಏದೆ ಹಾಲಿನ ಪರಿಮಳಕ್ಕೆ ತಲ್ಲೀನವಾಗಿ ಮಲಗಿದ್ದ ಕಂದಮ್ಮನನ್ನು ಕಂಡು ಮಮತೆ ಉಕ್ಕಿತು.

ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ವಾರ್ಡು ಆಸ್ಪತ್ರೆ ಬಿಟ್ಟು ಬಸ್ ಸ್ಟಾಂಡ್ ಕಡೆಗೆ ನಡೆದರು. ಎಕಾಕಿ ಯಾದೆನೆಂದು ಒಂದು ಸಲ ಅಂದು ಕೊಂಡರು. ಮನುಷ್ಯನಿಗೆ ವಯಸ್ಸಾದಂತೆ ಅಂತರ್ಮುಖಿಯಾಗುವುದು ಸಹಜವೊ ಎನೋ. ? ಹಾಗೇನೆ ಅಂತರ್ಮುಖಿಯಾಗಿ ಯೋಚಿಸುತ್ತಾ ಮುನ್ನಡೆದರು.
(ಇನ್ನೂ ಮುಂದುವರಿಯುವುದು )


Saturday, March 20, 2010

ವೇಷ ಕಳಚಿದ ಸಮಯ ಭಾಗ -೪

"ನಮಸ್ಕಾರ"

ತಣ್ಣನೆ ಪರಸ್ಪರ ವಿನಿಮಯವಾಯಿತು. ಭಟ್ಟರಿಗೆ ಆ ವ್ಯಕ್ತಿ ತೀರ ಅಪರಿಚಿತ. ಹಾಗಾಗಿ ಅವನ ಪರಿಚಯಕ್ಕೆ ನಿರೀಕ್ಷಕ ನೋಟವನ್ನೆಸೆದರು. ಅದನ್ನು ಗ್ರಹಿಸಿ ಆತನೆ೦ದ
" ನಾನು ದಾಸಪ್ಪ ... ಇಲ್ಲಿ ನನ್ನ ಅಣ್ಣ ಅಡ್ಮಿಟ್ ಆಗಿದ್ದಾನೆ. " ಮತ್ತೆ ಯಾವುದೋ ಊರಿನ ಹೆಸರು ಹೇಳಿದ.
ಅನಾಸಕ್ತಿಯಿ೦ದ ಸೌಜನ್ಯತೆಯಿ೦ದ ಉತ್ತರಿಸಿದರು..
"ಹೌದಾ...? ನನ್ನ ಸೊಸೆ ಇಲ್ಲಿ ಅಡ್ಮಿಟ್ ಆಗಿದ್ದಾಳೆ. ಮಗನ ಹೆ೦ಡತಿ..... ಹೆತ್ತಿದ್ದಾಳೆ." ಭಟ್ಟರಿಗೆ ಮತ್ತೆ ಮಾತು ಸಿಗಲಿಲ್ಲ.. ಆ ವ್ಯಕ್ತಿ ತಿಳಿದನೋ ಎನೋ ..ಭಟ್ಟರಿಗೆ ಮಾತಾಡ್ಲಿಕ್ಕೆ ಭಾಗವತರು ಪದ ಹೇಳಿ ಆಗಬೇಕು ಎ೦ದು. ಭಟ್ಟರು ಇ೦ತಹ ಮಾತುಕತೆಯಲ್ಲಿ ತು೦ಬಾ ಹಿ೦ದೆ. ಕಿರುನಗು ಒ೦ದು ಸಲ ಬೀರಿ ನೋಟ ಬೇರೆಡೆ ಹರಿಸಿದಾಗ ಆತ ಪುನಹ..

"ಇವತ್ತು ಆಟ ಇದೆಯಾ?" ಉತ್ತರವಾಗಿ ಇವರು ಇದೆ ಎ೦ಬ೦ತೆ ಗೋಣು ಅಲ್ಲಾಡಿಸಿದರು.
"ನೀವು ರಜವಾ ಇವತ್ತು. ?"
"ಇಲ್ಲ ಹೊಗ್ಬೇಕು. .." ಅದನ್ನು ಅವರು ಇಲ್ಲಿ ಬರುವ ಮೊದಲೇ ನಿರ್ಧರಿಸಿದ್ದರು. ಹಾಗಾಗಿ ...ಇರುವುದು ಅವರಿಗೆ ಇಷ್ಟವಿಲ್ಲ..ಅದು ಅವನಿಗೆ ತಿಳಿಯದು ಏ೦ದು ತಿಳಿದಿದ್ದರೂ ಅವಸರವಾಗಿ ಉತ್ತರಿಸಿದರು.

"ನಾಡಿದ್ದು ನಮ್ಮ ಶೆಟ್ರು ..ಪುತ್ತೂರಲ್ಲಿ ದೊಡ್ಡ ಆಟ ಆಡಿಸ್ತಾರಲ್ಲ..ನಿಮಗೂ ವೇಷ ಇರ್ಬೇಕಲ್ಲ.?" ತು೦ಬಾ ದೊಡ್ಡ ಕೂಟ..!! ಏಳು ಜನ ಭಾಗವತರು...ಐದು ಪ್ರಸಂಗ...." ರಾಗವೆಳೆದ.
ಕಿರುನಗು ತಂದುಕೊಂಡು "ಹೌದು" ಅಂದರು.
ಆತ ಕುಳಿತ ಭಂಗಿಯಲ್ಲೇ ದೇಹ ಕೊಡವಿದಂತೆ ಮಾಡಿ ....
"ಎಂತಾದ್ರು ಸ್ವಾಮಿ.. ಈ ಜಾತ್ರೆ ಹಾಗಿದ್ದ ಆಟಕ್ಕೆ ನಮ್ಮಂತೋರು ಸುಮ್ಮನೆ ಹೋಗೂದು. ಎನೂ ಇಲ್ಲ ಅದರಲ್ಲಿ. ಅದಕ್ಕಿಂತ ನಮ್ಮೂರ ಮಾಂಕಾಳಿ ನೇಮಕ್ಕೆ ಹೋದ್ರೆ ಸ್ವಲ್ಪ ಪುಣ್ಯ ಆದ್ರೂ ಸಿಕ್ಬಹುದು. ದಂಡ.ಆಟದವರೇನು ಬರ್ತಾರೆ.. ನಮ್ಮಂತೋರಿಗೆ ಒಂದು ಪದ ಕೂಡ ಸರಿ ಕೇಳ್ಳಿಕ್ಕೆ ಆಗೋದಿಲ್ಲ. "
ಮೊದಲೆ ಭಟ್ಟರು ಮಾತು ಹುಡುಕುವವರು ಇಂತಹ ಪ್ರಶ್ನೆಗಳಿಗೆ ಬಿಲ್ ಕುಲ್ ಉತ್ತರ ಸಿಗದು. ಆತ ಮುಂದರಿಸಿದ...
"ನಿಮ್ಗೆ ಬೇಜಾರಾಯ್ತಾ?" ಈ ಬಾರಿ ಭಟ್ಟರು ಇಲ್ಲ ಎಂದು ತಲೆ ಅಲ್ಲಾಡಿಸಿದರು.
"ಬೇಜಾರೆಂಥದು? ನಿಮ್ಮನ್ನು ನಂಗೆ ಗೊತ್ತಿಲ್ವಾ... ? ಇನ್ನೂ ಉತ್ಸುಕನಾಗಿ ಹಲವು ದಿನದಿಂದ ಬಲ್ಲ ಮಿತ್ರನಂತೆ ಮುಂದರಿಸಿದ. "ಒಬ್ಬೋಬ್ರದ್ದು ಒಂದೊಂದು ಹುಚ್ಚು... ಒಟ್ತು ಈ ಆಟದ ಹುಚ್ಚು. ಅಷ್ಟೆ.. ಒಂದೆರಡು ಪ್ರಸಂಗ ಸರಿಯಾದ್ದು ಕೆಲವು ವೇಷದವರನ್ನು ಕರೆಸಿ ಆಡಿಸುದಪ್ಪ.. ಇದ್ದವರನ್ನೆಲ್ಲಾ ಕರಿಯುದು.. ಆ ವೇಷ ಆಗ್ಲಿಕ್ಕಿಲ್ಲ .. ಇದಾಗ್ಲಿಕ್ಕಿಲ್ಲ..ಪದ ಒಂದು ಜಾಸ್ತಿ.. ಹೀಗೆ .. ಪೊಲಿಟಿಕ್ಸ್ ಮಾಡುದು. ಮತ್ತೆ... ಒಂದು ಅರ್ಥದಲ್ಲಿ ಇವರಿಗೆ ಪೊಲಿಟಿಕ್ಸ್ ಹೇಳಿಕೊಡುದೇ..ನಾವಾಂತಾ..ಸಂಶಯ ಅಗ್ತದೆ ಕೆಲವು ಸಲ.. .."
ಭಟ್ಟರು ಗೋಣು ಆಡಿಸುದಲ್ಲದೆ ಬೇರೆನೂ ಮಾಡಲಿಲ್ಲ. ಆತ ಒಂದು ಸಲ ಇವರ ತಲೆಯನ್ನೆ ನೋಡಿದ..ಬಹುಷಃ ..ಈ ಭ್ಹಟ್ರು ತಲೆಯಲ್ಲಿ ಕಿರೀಟ ಇಲ್ಲದ್ದಕ್ಕೆ.. ಅದು ಲೂಸಾಗುವ ಚಾನ್ಸು ಇಲ್ಲವೆಂದು ತಲೆ ಅಲ್ಲಾಡಿಸ್ತಾರೊ ಎನೊ. ? ಆತನ ನೋಟಕ್ಕೆ ಭಟ್ಟರಿಗೆ ಹಾಗೆ ಅನ್ನಿಸಿದರು.. ವೇಷ ಕಳಚಿದ ಭಟ್ಟರು ಹೀಗೆಯೆ...ಮೌನಿ.. ಬಹುಷಃ ಇವರ ಜೀವದ ಕಂಪನ ಇರುವುದೆ ವೇಷದಲ್ಲೋ ಎನೋ?ವೇಷವಿಲ್ಲದ ತನುವಿದು ಜೀವ ಸೆಲೆ ಕಳೆದಂತೆ.
" ಅಲ್ಲ ನೀವೇ ಹೇಳಿ...?" ಈ ಸಲ ಅವರಿಂದ ಸಜೀವ ಪ್ರತಿಕ್ರಿಯೆ ಪಡೆಯುವ ತವಕ...
" ಅಲ್ಲ ನೀವೇ ಹೇಳಿ...? ಮದುವೆ ಜಂಬ್ರದ ಊಟ ಎಷ್ಟು ಬಗೆ ಇದ್ದರೂ.. ಮನೆಯಲ್ಲಿದ್ದ ಗಂಜಿ ಚಟ್ನಿ ಟೇಸ್ಟು ಬರ್ತದಾ? " ಭಟ್ಟರ ಕಿರುನಗು ಮಾತ್ರ ಪುನಹ.

"ನಿಮ್ಗೆ ಬೇಜಾರಾಯ್ತ.. ? " ಪುನಃ ಕೇಳಿದಾಗ ಭಟ್ಟರೆಂದರು ."ಇಲ್ಲ..ಅದರೂ ನೋಡಿ ಕೆಲವೊಮ್ಮೆ ಹೊಟ್ಟೆಪಾಡು ಕೂಡ ಹೀಗೆ ಅನಿವಾರ್ಯ ತಂದು ಬಿಡುತ್ತದೆ.ಕೆಲವರಿಗೆ ಬೇರೆ ಯಾವ ಆದಾಯವೂ ಇಲ್ಲ..ಕೈಗೆ ಸಿಗುವ ಕವರನ್ನು ಕಾಯುವಂತಾಗುತ್ತದೆ."

" ಅದೇನೊ, ಸರಿ ಅಂತ ಮೇಲಿಂದ ಮೇಲೆ ಕಾಣ್ಬಹುದು..ಆದ್ರೆ ನೋಡಿ ಮುಗಿಯದ ಹೊಟ್ಟೆ ಪಾಡು ಅಂತ ರಾಗ ಎಳಿವ ಹಲವರನ್ನು ನೋಡಿದ್ದೇನೆ.. ಅವರ ದುರಭ್ಯಾಸಕ್ಕೆ ಮುಕ್ಕಾಲು ಕವರು ಹರಿದು ಎಸಿತಾರೆ ಗೊತ್ತಾ.. " ನುಡಿದ ಮಾರ್ಮಿಕವಾಗಿ.
ಇನ್ನು ಇವನಲ್ಲಿ ಹರಟಿದರೆ ಆಗ್ಲಿಕ್ಕಿಲ್ಲ..ಇವನು ಎಲ್ಲಿಂದ ಗಂಟು ಬಿದ್ದ? ಇವರು ಸೊಸೆ ಮಲಗಿದ್ದ ವಾರ್ಡ್ ಬಾಗಿಲನ್ನು ಕುಳಿತಲ್ಲಿಂದಲೇ ಬಗ್ಗಿ ನೋಡಿದರು.
ಮತ್ತೂ ಆತನ ಮಾತು ಮುಂದುವರೆದಿತ್ತು.
"ನೋಡಿ ಸ್ವಾಮಿ ಎಷ್ತು ಜನ ಭಾಗವತ್ರಿಗೆ ಗೊತ್ತು ಪೂರ್ವ ರಂಗ ಆಡಿಸಿಲಿಕ್ಕೆ. ಸರಿಯಾಗಿ ದೇವೇಂದ್ರನ ಒಡ್ಡೋಲಗ ಮಾಡ್ಲಿಕ್ಕೆ ಗೊತ್ತಿಲ್ಲದೊರು ದೊಡ್ಡ ಭಾಗವತರಾಗಿಬಿಟ್ಟಿದ್ದಾರೆ.. ಒಂದೆರಡು ರಾಗ ಎಳೀಲಿಕ್ಕೆ ಬಿಟ್ರೆ ಬೇರೆ ಸಂಗತಿ ಗೊತ್ತಿಲ್ಲ.ಒಟ್ಟಾರೆ ಚಪ್ಪಾಳೆ ಬಿದ್ರೆ ಸಾಕು. ಒಂದು ಪದಕ್ಕೆ ವೇಷದವರನ್ನು ಅರ್ಧ ಘಂಟೆ ಸರ್ಕಸ್ಸು ಮಾಡಿ ಕುಣಿಸ್ಲಿಕ್ಕೆ ಗೊತ್ತಿದ್ರೆ ಸಾಕು ಅಲ್ವ.??"
ಭಟ್ಟರಿಗೆ ಇನ್ನು ಅಲ್ಲಿ ಕೂರುವುದು ಕಷ್ಟ ಅನ್ನಿಸಿತು. ಇವನು ಹೇಗಿದ್ರು ಬಾಯಿಗೆ ಕೋಲು ಹಾಕುವ ಹಾಗೆ ಕಾಣ್ತದೆ. ಮತ್ತೆ ಎನಾದ್ರು ವಿವಾದ ಆಗುವ ವಿಚಾರಗಳೇ ಸಿಗ್ತಾಇದೆ. ಎನೇ ಇರಲಿ ಬಡ ಕಲಾವಿದನನ್ನು ವಿಮರ್ಶೆ ಮಾಡಲು ಸಾವಿರ ನಾಲಗೆ ಇರ್ತದೆ.ಅದೆಲ್ಲ ಚರ್ಚಿಸುವ ಮನಃಸ್ಥಿತಿಯಾಗಲಿ ಕಾಲಸ್ಥಿತಿಯಾಗಲಿ ಅವರದ್ದಲ್ಲ. ಏಲ್ಲೆ ಆದರೂ ಇಂತಹ ಚರ್ಚೆಯಲ್ಲಿ ತೊಡಗುವ ಮನೋಭಾವ ತೋರಿದವರೇ ಅಲ್ಲ. ಕಲೆಗಾಗಿ ಬದುಕಿದ್ದೇನೊ ಕಲೆಯಿಂದ ಬದುಕಿದ್ದೇನೊ ಎಂದು ಚಿಂತಿಸುವಾಗ ಕೆಲವೊಮ್ಮೆ ಗೊಂದಲಕ್ಕೆ ಒಳಗಾಗುವುದು ಇದೆ. ಮೊದಲು ಕಲೆಗಾಗಿ ಬದುಕನ್ನು ಮರೆತವರು ಈಗೀಗ ಕಲೆಯಲ್ಲಿ ಬದುಕನ್ನು ಮರೆಯುವ ಯತ್ನ ಮಾಡುತ್ತಿದ್ದರು. ಇಂತಹುದೆಲ್ಲ ಹೇಳುವ ವಿಚಾರಗಳಾ? ಮನಸ್ಸಿನ ಇಂತಹ ಗೊಂದಲಗಳನ್ನು ಹೊರಗೆ ತೋರದಿರಲು ಶತಪ್ರಯತ್ನ ಮಾಡಿದರು. ಇದಕ್ಕಾಗಿ ಅವರ ಅಂತರ್ಮುಖೀ ಗುಣ ಸಹಾಯ ಮಾಡಿದರೂ ಮನಸ್ಸಿನ ಯೋಚನೆಗಳು ಅರಿವಿಲ್ಲದೆ ಮುಖ ಭಾವನೆಯಲ್ಲಿ ಹೊರಗೆ ವ್ಯಕ್ತವಾಗುತ್ತಿದ್ದವು. ನಿಜ ಜೀವನದಲ್ಲಿ ತಾನಿನ್ನೂ ಒಬ್ಬ ನಟನೇ ಅಲ್ಲ. ಹಾಗಾಗಿ ಎದ್ದು ನಿಂತು ಮೈಮುರಿದಂತೆ ಮಾಡಿ ಕಿರುನಗು ಸೂಸಿ " ಬಂದೆ..ಈಗ.." ಎಂದು ವಾರ್ಡ್ ಕಡೆ ನಡೆದರು.

ವಾರ್ಡ್ ಒಳಗೆ ಮಂಚದ ಸುತ್ತಾ ಆ ಬಳಗ ಅದೇ ಹರಟೆಯಲ್ಲಿ ಮಗ್ನವಾಗಿತ್ತು. ಭಟ್ಟರು ಒಂದು ಸಲ ಸೊಂಟಕ್ಕೆ ಕೈ ಕೊಟ್ಟು ನಿಂತು ಕೊಂಡು ಸೊಸೆಯ ಮುಖ ನೋಡಿದರು.ಆದೇ ಸಮಯ ಆಕೆಯು ತಲೆ ಎತ್ತಿ ಇವರೆಡೆಗೆ ಮುಗುಳು ನಗೆ ಬೀರಿದಾಗ ಒಂದು ಸಲ ಭಟ್ಟರಿಗೆ ಹಾಯೆನಿಸಿತು. ಅವರ ಬಳಗದೆದುರು ನಕ್ಕಳಲ್ಲ.. ಮನಸ್ಸು ತುಸು ಗೆಲುವಾಯಿತು. ಅದಾಗಲೆ ತೊಟ್ಟಿಲಲ್ಲಿದ್ದ ಕಂದ ಭಾಗಿರಥಿ ತೋಳಿನಲ್ಲಿತ್ತು. ಭಾವನಾರಹಿತ ಎಳೆ ಮುಖದಲ್ಲಿ ನಗುವನ್ನು ತರಿಸುವ ವಿಫಲ ಯತ್ನ ಮಾಡುತ್ತ ಹಸನ್ಮುಖಿಯಾದ ಮಡದಿಯನ್ನು ನೋಡಿ ಭಟ್ಟರು ಭಾವ ಪರವಶರಾದರು. ಎಂತಹ ನಿರ್ವಾಜ್ಯ ಮಮತೆ ಈಕೆಯದು? ತನ್ನನ್ನು ನೋಡಿ ಮೆಲುದನಿಯಲ್ಲಿ ಗದರಿದಂತೆ ಮಾಡಿದಳು
"ಎಲ್ಲಿ ಹೋದಿರಿ...ನೀವು?" ಎಂದು ಪುಟ್ಟ ಕಂದನನ್ನು ಹತ್ತಿರ ತಂದು ತೋರಿದಳು. ಅವಳ ಕೈತೋಳಿನ ತೊಟ್ಟಿಲಲ್ಲಿ ನಿಧಾನವಾದ ತೂಗಾಟದಲ್ಲಿ ಹೋರಲೋಕವನ್ನು ಎಳೆ ಕಣ್ಣುಗಳಿಂದ ಅತಿಥಿ ಮನೆ ಹೊಕ್ಕು ನೋಡಿದಂತೆ ನೋಡುತ್ತಿತ್ತು. ಹಲವು ವರ್ಷಗಳ ಹಿಂದೆ ಹೋಯಿತು ಭಟ್ಟರ ಮನಸ್ಸು. ಇದು ನಿರೀಕ್ಷಿತವಾದರು, ಅಂದು ಭಾಗಿರಥಿ ಮೈ ಬಿಸಿಯಲ್ಲಿ ಮಲಗಿದ್ದ ಪುಟ್ಟಕಂದ ಚಿನ್ಮಯನ ನೆನಪಾಯಿತು.

“ಹೇಗಿದ್ದಿಯಾ ಶ್ಯಾಮಲಾ..? “
“ಚೆನ್ನಾಗಿದ್ದೀನಿ ಮಾವ.. ಮತ್ತೆ..ನೀವು ಹೇಗಿದ್ದಿರಾ..? ತುಂಬ ಸೋತು ಹೋಗಿದ್ದೀರಾ. ?”
ಅಬ್ಬ ಭಟ್ಟರು ಮಾನಸಿಕವಾಗಿ ಸ್ವಲ್ಪ ಗೆಲುವಾದರು.ಬೇಡವೆಂದರೂ ಕಂಠ ಗದ್ಗದವಾಯಿತು. ಇತ್ತೀಚೆಗೆ ಭಾವನೆಗಳು ನಿಯಂತ್ರಣಕ್ಕೆ ಬರುವುದಿಲ್ಲ. ಪುನಃ ಒಂದು ಸಲ ತೇವಭರಿತ ಕಣ್ಣುಗಳಿಂದ ಮಗುವಿನೆಡೆ ನೋಟ ಹರಿಸಿದರು. ಏನೇ ಆದರು ಎನ್ನದೇ ರಕ್ತವಲ್ಲವೆ? ಮತ್ತೆ ಮಾತಾಡುವಲ್ಲಿ ತಡಕಾಟ ಶುರುವಾಯಿತು.

ಬಂದವರಲ್ಲಿ ಒಬ್ಬಾಕೆ ಕೇಳಿದಳು..” ಇವತ್ತು ಆಟ ಇದೆ ಅಲ್ವ..? ಎಲ್ಲಿ? “
ಅದಕ್ಕೆ ಉತ್ತರವೊ ಎಂಬಂತೆ..ಶ್ಯಾಮಲ ಎಂದಳು “ ಇವತ್ತು ರಜ ಹಾಕ್ತೀರಲ್ವ ಮಾವ....? ” ಇವತ್ತು ಎಲ್ಲಿ ಆಟವಿದ್ದರೂ ಹೋಗದಂತಹ ಬೇಡಿಕೆ. ಆಕೆಯ ಮಾತಿನ ಹಿನ್ನೆಲೆಯ ಭಾವವನ್ನು ಹುಡುಕುವ ಯತ್ನದಲ್ಲಿ ಸೋತರು. ಬೇಡವೆಂದರೂ ಈಗ ಕಣ್ಣುಗಳಲ್ಲಿ ನೀರು ತೊಟ್ಟಿಕ್ಕಿ ನೋಟವನ್ನು ಬೇರೆಡೆ ಬದಲಿಸಿದರು. ಭಟ್ಟರು ಪೂರ್ಣವಾಗಿ ಭಾವ ಪರವಶರಾಗಿ ಕೋಣೆಯ ಮತ್ತೊಂದು ಬದಿಯಲ್ಲಿದ್ದ ಕುರ್ಚಿಯೊಂದರಲ್ಲಿ ಕುಸಿದರೂ ಕುಳಿತಂತೆ ಸಾವರಿಸಿಕೊಂಡರು.




















Sunday, March 14, 2010

ಯಕ್ಷಗಾನ ಮತ್ತು ಕಾರ್ಯಾಗಾರ




ಮಿತ್ರರೊಬ್ಬರ ಮೊಬೈಲ್ ಸಂದೇಶವೊಂದು ರಾತ್ರಿ 9 ಗಂಟೆಗೆ ಬಂದಾಗ ಆಶ್ಚರ್ಯಗೊಂಡೆ. ಬೆಂಗಳೂರಲ್ಲಿ ಎಡನೀರು ಮೇಳದ ಆಟದ ಸರಣಿ ಅದಾಗಲೇ ಸ್ಥಳ ಸಮಯದ ಪಟ್ಟಿ ಸಿದ್ದವಾಗಿ ನಮ್ಮ ಸಮಯದ ಹೊಂದಾಣಿಕೆಯ ಸರ್ಕಸ್ಸು ಮಾಡುವಂತಹ ಅನಿವಾರ್ಯತೆಯ ಮಧ್ಯೆ ಮತ್ತೊಂದು ಯಕ್ಷಗಾನ ಕಾರ್ಯಕ್ರಮದ ಸಂದೇಶವಾಗಿತ್ತು. ಕೋಳ್ಯೂರು ರಾಮಚಂದ್ರ ರಾವ್ ಮತ್ತು ಕುಂಬ್ಳೆ ಸುಂದರ್ ರಾವ್ ಜತೆಗೆ ತೆಂಕಬೈಲು ಶಾಸ್ತ್ರಿಗಳ ಹೆಸರು ಕಂಡಾಗ ಪುಳಕ ಗೊಂಡಿತು ಮನಸ್ಸು. ಅಂತೆ ಯಕ್ಷಗಾನ ಕಾರ್ಯಾಗಾರವೂ ಎಂಬ ಉಲ್ಲೇಖ ನೋಡಿದಾಗ ಮಾತ್ರ ಇದನ್ನು ತಪ್ಪಿಸಿಕೊಳ್ಳುವ ಹಾಗಿಲ್ಲ ಏನು ಮಾಡಲಿ?

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಯಕ್ಷ ದಿಶಾ ಬೆಂಗಳೂರು ಸಂಯುಕ್ತವಾಗಿ ಹಮ್ಮಿಕೊಂಡ ಯಕ್ಷಗಾನ ಪ್ರಾತ್ಯಕ್ಷಿಕೆ ಮತ್ತು ಕಾರ್ಯಗಾರ ಜತೆಗೆ ಯಕ್ಷಗಾನ ತಾಳಮದ್ದಲೆ ಮತ್ತು ಯಕ್ಷಗಾನ ಬಯಲಾಟ. ಬರೀ ಬಯಲಾಟಗಳನ್ನೇ ನೋಡಿ ಏಕತಾನತೆಯನ್ನು ಅನುಭವಿಸಿದ ಮನಸ್ಸಿಗೆ ಒಂದು ರೀತಿಯ ಹೊಸ ಬದಲಾವಣೆ ಮತ್ತು ಅದರ ಆಕರ್ಷಣೆ ಕಾರ್ಯಕ್ರಮದ ಭಾರವಾಹಿಗಳಿಗೆ, ಮನಸ್ಸು ಮೊದಲೇ ಧನ್ಯವಾದವನ್ನು ಹೇಳಿತ್ತು. ಕಾರ್ಯಕ್ರಮದ ವಿವರವನ್ನು ಮಾಂಬಾಡಿ ವೇಣುಗೋಪಾಲ್ ಭಟ್ ಈ-ಮೇಲ್ ಮೂಲಕ
ನೀಡಿದ್ದರು .



ಕಾರ್ಯಕ್ರಮ ಸರಳ ವಾದ ಆರಂಭವನ್ನು ಪಡೆಯಿತು. ಸಂಘಟಕರು ಗಿರಿನಗರದ ರಾಮಾಶ್ರಮದ ಕೃಪಾಶ್ರಯದಲ್ಲಿ ಉತ್ತಮ ವ್ಯವಸ್ಥೆ ಮಾಡಿದ್ದರು. ಹಿರಿ ಕಿರಿಯ ಕಲಾವಿದರೆಲ್ಲ ಸೇರಿದ್ದ ಒಂದು ಹಿತವಾದ ವಾತಾವರಣ.

ರಂಗಭೂಮಿಯ ಹಿರಿಯ ಮೇರು ನಟ ಮಾಸ್ಟರ್ ಹಿರಣ್ಣಯ್ಯ ಮುಖ್ಯ ಅತಿಥಿಯಾಗಿ ಬಂದು ಯಕ್ಷಗಾನಕ್ಕೂ ಅವರಿಗೂ ಇದ್ದ ಸಂಭಂಧದ ಎಳೆಯನ್ನು ಬಿಚ್ಚಿದರು. ಯಕ್ಷಗಾನದಿಂದ ಪಡೆದುಕೊಂಡ ಜ್ಞಾನದ ಬಗ್ಗೆ ಭಾವುಕರಾಗಿ ಹೇಳಿ ನಮ್ಮನ್ನು ಒಂದು ಘಳಿಗೆ ಭಾವುಕರಾಗುವಂತೆ ಮಾಡಿಬಿಟ್ಟರು. ಯಕ್ಷಗಾನದ ಅರ್ಥಧಾರಿ ಜಬ್ಬಾರ್ ಸುಮೋ ವನ್ನು ನೆನಸಿಕೊಳ್ಳುತ್ತಾ ಸರಸ್ವತಿ ಒಲಿಯುವಾಗ ಯಾವ ಜಾತಿಯನ್ನೂ ನೋಡುದಿಲ್ಲ ಎಂದು ಮಾರ್ಮಿಕವಾಗಿ ನುಡಿದು ಕಾರ್ಯಕ್ರಮಕ್ಕೆ ಉತ್ತಮ ಹಾರೈಕೆಯೊಂದಿಗೆ ಆರಂಭವನ್ನು ನೀಡಿದರು.ಕುಂಬ್ಳೆ ಸುಂದರ್ ರಾವ್ ಅವರು ಎಂದಿನಂತೆ ಯಕ್ಷಗಾನ ಬಯಲಾಟ ಅಕಾಡೆಮಿಯ ಕಾರ್ಯ ಚಟುವಟಿಕೆಯನ್ನು ಸ್ಥೂಲವಾಗಿ ಪರಿಚಯಿಸಿದರು.

ಕಾರ್ಯಕ್ರಮದ ಅಂಗವಾದ ಯಕ್ಷಗಾನ ಪ್ರಾತ್ಯಕ್ಷಿಕೆಯಲ್ಲಿ ಸ್ತ್ರೀ ಪಾತ್ರದಲ್ಲಿನ ಅರ್ಥ ವಿವಿಧ್ಯತೆ ಬಗೆಗೆ ಕೋಳ್ಯೂರು ತಮ್ಮ ಸ್ವಂತ ಅನುಭವವದ ಸಾರವನ್ನು ತಿಳಿಯ ಪಡಿಸುತ್ತಾ , ಸ್ತ್ರೀ ಪಾತ್ರಗಳಲ್ಲಿರುವ ಮೂರು ವಿಧ ಉತ್ತಮ ಸ್ತ್ರೀಪಾತ್ರಗಳು , ಮಧ್ಯಮ ಸ್ತ್ರೀಪಾತ್ರಗಳು, ಮತ್ತು ಸಾಮಾನ್ಯ ಸ್ತ್ರೀ ಪಾತ್ರಗಳು ಇವುಗಳ ಬಗ್ಗೆ ವಿವರಣೆಯನ್ನು ನೀಡಿದರು. ಸೀತಾ ದ್ರೌಪತಿ ಮಂಡೋದರಿ ಹೀಗೆ ಹಲವು ಪಾತ್ರ ವೈವಿಧ್ಯವನ್ನು ಸ್ವಾರಸ್ಯವಾಗಿ ವಿವರಿಸಿದರು. ಅಂತೆಯೇ ಯಾವುದೇ ಪಾತ್ರದ ಪೋಷಣೆಗೆ ರಂಗದ ಮೇಲೆ ಪರಸ್ಪರ ಸಹಕಾರ ತುಂಬಾ ಅಗತ್ಯ ಎಂದು ಹೇಳುತ್ತಾ,ಅವರಿಗೆ ಈ ನಿಟ್ಟಿನಲ್ಲಿ ಸಹಕರಿಸಿದ ಹಿರಿಯ ಕಲಾವಿದರಾದ ಶ್ರೀ ಪೆರ್ಲ ಕೃಷ್ಣ ಭಟ್ , ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್, ಯಕ್ಷ ದಂಪತಿಯರೆಂದು ಅನ್ವರ್ಥಗೊಳಿಸಿದ ಶ್ರೀ ರಾಮದಾಸ ಸಾಮಗರ ಅರ್ಥ ವಿಶೇಷತೆಯನ್ನು ಉಲ್ಲೇಖಿಸಿದರು , ಹಾಗು ಅಲ್ಲೇ ಉಪಸ್ಥಿತರಿದ್ದ ಕುಂಬ್ಳೆ ಸುಂದರ್ ರಾವ್ ಅವರ ಅರ್ಥ ವಿಶೇಷತೆಯನ್ನು ವರ್ಣಿಸಿದರು. ರಂಗದಲ್ಲಿ
ಪ್ರತಿವೇಷ ಧಾರಿ ಹಾಗು ಅವರ ಪಾತ್ರಗಳನ್ನು ಪೋಷಿಸುವುದರಲ್ಲಿ ಇವರೆಲ್ಲ ತುಂಬಾ ಸಮರ್ಥರು ಎಂದು ಪ್ರತ್ಯೇಕವಾಗಿ ಉಲ್ಲೇಖಿಸಿದರು. ನಂತರ ನಡೆದ ಪ್ರಶ್ನೋತ್ತರ ಕಾರ್ಯಕ್ರಮ ಕೇವಲ ಒಬ್ಬರ ಪ್ರಶ್ನೆಗೆ ಮಾತ್ರ ಸೀಮಿತ ಗೊಂಡಿತು. ಬೇರೆ ಯಾರೂ ತಮ್ಮ ಜಿಜ್ಞಾಸೆಗಳನ್ನು ಹಿರಿಯ ಕಲಾವಿದರಲ್ಲಿ ಮುಂದಿಡುವ ಪ್ರಯತ್ನವನ್ನೇ ಮಾಡಲಿಲ್ಲ. ನಿಜವಾಗಿ ಇಲ್ಲಿನ ಉದಯೋನ್ಮುಖ ಹಾವ್ಯಾಸಿ ಕಲಾವಿದರು ಇಂತಹ ಕಾರ್ಯಕ್ರಮಗಳನ್ನು ತಮ್ಮ ಕಲಾ ಜೀವನಕ್ಕೆ ಪೂರಕವಾಗಿ ಉಪಯೋಗಿಸದೆ ಇದ್ದದ್ದು, ಇಂತಹ ಅರ್ಥ ಪೂರ್ಣ ಕಾರ್ಯಕ್ರಮದ ಸದವಕಾಶವನ್ನು ಪಡೆದುಕೊಳ್ಳುವಲ್ಲಿ ಅವಕಾಶ ವಂಚಿತರಾದರೆಂದೆ ಅನಿಸುತ್ತದೆ.



ಅದರನಂತರ ಎಲ್ಲರ ನಿರೀಕ್ಷೆಯ ತಾಳಮದ್ದಲೆ ವಿದುರಾತಿಥ್ಯ ಆರಂಭವಾಯಿತು. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಗಳು ಭಾಗವತರಾಗಿ ಹಾಗು ಅವರಿಗೆ ಹಿಮ್ಮೇಳದಲ್ಲಿ ನಾರಾಯಣ ಬಳ್ಳುಕ್ಕುರಾಯ, ಮತ್ತು ವೇಣುಗೋಪಾಲ್ ಮಾಂಬಾಡಿ ಸಹಕರಿಸಿ, ಧರ್ಮ ರಾಯನಾಗಿ ರಾಜಗೋಪಾಲ್ ಕನ್ಯಾನ . ಶ್ರೀ ಕೃಷ್ಣನಾಗಿ ಸುಧನ್ವ ದೇರಾಜೆ,ಅರ್ಜುನನಾಗಿ ವೇಣುಗೋಪಾಲ್ ಭಟ್ . ಭೀಮನಾಗಿ ಶಶಾಂಕ ಮತ್ತು ಹಿರಿಯರಾದ ರಾವ್ ದ್ವಯರು ದ್ರೌಪದಿ ಮತ್ತು ವಿದುರನ ಪಾತ್ರಗಳಲ್ಲಿ ನಿರ್ವಹಣೆ ನೀಡಿದರು. ತೆಂಕಬೈಲು ಪದಗಳು ಮೊದಲೆರಡು ಮಂದ ಸ್ವರದಲ್ಲಿ ಶುರುವಾಗಿ ನಂತರ ನಿಧಾನವಾಗಿ ಗತಿಯನ್ನೇರಿಸುತ್ತ ಸಾಗಿತು. ಅದರಲ್ಲೂ ಕೋಮಲಾಂಗಿ ಕೇಳೆ........... , ನಿನ್ನ ಭಕ್ತಿಗೆ ಮೆಚ್ಚಿದೆನು.................. ,ಹಾಗು ನೋಡಿದಂ ಕಣ್ ದಣಿಯೇ..... ಅಮೋಘವಾಗಿ ಹಾಡಿದರು. ಮಧ್ಯದಲ್ಲೊಮ್ಮೆ ನಾನು ಎದ್ದು ಹೊರಬಂದಾಗ ....." ಬೊಳ್ಳೆ ಒಳ್ಳೆ ಊಕಿನಲ್ಲಿದ್ದು ಮಾರಾಯ..." ಎಂದು ಹೇಳಿದ್ದು ಕೇಳಿ, ಸತ್ಯ...!! ತೆಂಕಬೈಲು ಇಳಿವಯಸ್ಸಿನಲ್ಲೂ ಅಮೋಘವಾದ ಸ್ವರ ಶಾರಿರವನ್ನು ತೋರಿಸಿದ್ದರು ಅನಿಸಿತು.

ಇನ್ನು ಹಿಮ್ಮೇಳ ದಲ್ಲಿ ವೇಣು ಅವರ ಮದ್ದಲೆ ಸ್ವಲ್ಪ ಗಮನ ಸೆಳೆಯಿತು.. ಯಾಕೋ ಚೆಂಡೆಗಿಂತ ಇವರ ಮದ್ದಲೆವಾದನ ಹಿಡಿಸಿತು. ಉಳಿದಂತೆ ಅರ್ಥಗಾರಿಕೆ ಯಲ್ಲಿ ಕೋಳ್ಯೂರು ಮತ್ತು ಕುಂಬ್ಳೆ ನಿರೀಕ್ಷೆಗೆ ಮೀರಿ ತಮ್ಮ ಅರ್ಥಗಾರಿಕೆಯನ್ನು ಮೆರೆದರು. ಕೋಳ್ಯೂರು ಅವರು ಇತ್ತೀಚಿಗೆ ತುಂಬಾ ಭಾವುಕರಾಗುವುದು ಇಲ್ಲಿಯೂ ಕಂಡು ಬಂತು. ಪಾತ್ರದೊಳಗಿನ ತಲ್ಲೀನತೆಯೋ, ಮಾಗಿದ ವಯಸ್ಸಿನ ಅನುಭವವೋ ಏನಿದ್ದರು ದ್ರೌಪದಿ ನಿಜ ಆವೇಶ ಮೈಮನದಲ್ಲಿ ತಂದು ಕೊಂಡರು. ಶ್ರೀ ಕೃಷ್ಣನಾಗಿ ಸುಧನ್ವ ದೇರಾಜೆ ಉತ್ತಮವಾಗಿಯೇ ನಿರ್ವಹಣೆ ತೋರಿದರು. ಭೀಮನ ಪಾತ್ರ ಮಾತ್ರ ಸ್ವಲ್ಪ ನಿರ್ವಹಣೆಯಲ್ಲಿ ಸೊರಗಿತು. ಸಂಧಾನಕ್ಕೆ ಹೊರಟ ಕೃಷ್ಣ ಧರ್ಮಜಾದಿಗಳ ಸಹಮತವನ್ನು ಕೇಳಿ ದ್ರೌಪತಿಯನ್ನು ಕರೆಸುವಂತೆ ಹೇಳುತ್ತಾನೆ. ಸಂಗ್ರಾಮ ನಿರ್ಣಯಕ್ಕೆ ಕೃಷ್ಣ ಹಸ್ತಿನಾವತಿಗೆ ಹೊರಡುವನೆಂದು ತಿಳಿದ ದ್ರೌಪದಿ ಸಡಗರದಿಂದ ಸರ್ವಾಭಾರಣ ಭೂಶಿತೆಯಾಗಿ ಬರುತ್ತಲೇ, ಬಾಗಿಲಲ್ಲೇ ಇದ್ದ ಭೀಮನನ್ನು ಕಂಡು ಸಂಭಾಷಣೆಗೆ ತೊಡಗುವ ಸನ್ನಿವೇಶ ಪ್ರಸಂಗದ ಬಹುಮುಖ್ಯ ಸನ್ನಿವೇಶ. ಆದರೆ ಇಲ್ಲಿ ಪಾಂಚಾಲೆಯ ಬೆಡಗು ಬಿನ್ನಾಣ ಮತ್ತು ಸಂತಸಕ್ಕೆ ಕಾರಣವೇನೆಂದು ಕೆಣಕಿ ಕೇಳಬೇಕಿತ್ತು ಮತ್ತು ಆ ಮೂಲಕ ಸಂಭಾಷಣೆಯನ್ನು ತೊಡಗಿಸಿ ಕೋಮಲಾಂಗಿ ಕೇಳೆ ಎಂಬ ಪದಕ್ಕೆ ಎತ್ತುಗಡೆ ಕೊಟ್ಟಿದ್ದರೆ ತುಂಬಾ ಸೂಕ್ತವಾಗುತ್ತಿತ್ತು. ದ್ರೌಪದಿಯಾದ ಕೋಳ್ಯೂರು ಸಹಜವಾಗಿ ಸಂದರ್ಭವನ್ನು ತಾವೇ ನಿಭಾಯಿಸಿಕೊಂಡು ..."ನೋಡು ಈ ಅಲಂಕಾರ ವೆಲ್ಲ ಏಕೆಂದು ಕೇಳುವುದಿಲ್ಲವೇ " ಎಂದು ಕೇಳುವಂತಾದುದು ಅಷ್ಟೊಂದು ಸಹಜ ಎಂದೆನಿಸಲಿಲ್ಲ. ಬಹುಶ: ಅತಿಹಿರಿಯ ಕಲಾವಿದರೊಂದಿಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿ ದೌರ್ಬಲ್ಯವನ್ನು ಮೆಟ್ಟಿನಿಲ್ಲುವ ಸಾಹಸವನ್ನು ಯವಕಲಾವಿದ ಮಾಡುವುದರಲ್ಲಿ ವಿಫಲಾರದರೆಂದೆ ನನ್ನ ಅನಿಸಿಕೆ. ಕೋಮಲಾಂಗಿ ಕೇಳೆ ಎಂಬ ಬಹು ಮುಖ್ಯ ಪದ ಭೀಮನ ಪಾತ್ರಕ್ಕಾದರೂ ಅದಕ್ಕೆ ಅರ್ಥ ಹೇಳಿದ್ದು ದ್ರೌಪದಿ.. !!! ಇಂತಿದ್ದರೂ ಹಿರಿಯ ಕಲಾವಿದರೊಂದಿಗೆ ಅರ್ಥ ಹೇಳುವ ಧೈರ್ಯವನ್ನು ತೋರಿದ್ದಕ್ಕೆ ಮೆಚ್ಚಲೇ ಬೇಕು.

ಇಂತಹ ಹಿರಿಯ ಕಲಾವಿದರ ಯಕ್ಷಗಾನ ಈ ನಗರಿಯಲ್ಲಿ ತೀರ ಅಪರೂಪವಾಗಿರುವಂತಹ ಸಮಯದಲ್ಲಿ ಹಿರಿಯರ ಕರೆ ತರಿಸಿ ಉತ್ತಮ ಯಕ್ಷಗಾನ ಆಸ್ವಾದನೆಗೆ ಕಾರಣರಾದ ಎಲ್ಲ ಕಾರ್ಯಕರ್ತ ಮಿತ್ರರಿಗೆ ಕೃತಜ್ಞತೆಗಳು. ಅದರಂತೆ ಈ ಮೂಲಕ ಒಂದು ಮನವಿ.. ಹಿರಿಯ ಕಲಾವಿದ ಪ್ರಕೃತ ಯಕ್ಷಗಾನದ ಭೀಷ್ಮ ಎಂದೇ ಕರೆಸಲ್ಪಡುವ ಶ್ರೀ ಬಲಿಪ ನಾರಾಯಣ ಭಾಗವತರ ಕಾರ್ಯಕ್ರಮವನ್ನು ಇದೆ ರೀತಿ ಸರಳ ಸುಂದರವಾಗಿ ಆಯೋಜಿಸಿ ಆ ಮೂಲಕ ನಮಗೆಲ್ಲ ತೀರ ಅಪರೂಪವಾದ ಕಲಾವಿದ ಮಹಾಶಯರ ಕಲಸ್ವಾದನೆಗೆ ಅನುವು ಮಾಡಿಕೊಡುವಂತೆ ಒಂದು ವಿನಮ್ರ ಭಿನ್ನಹ.

ಹೀಗೆ ವಿದುರ ಕೃಷ್ಣ ರ ಭಕ್ತಿ ರಸದ ಸಂಭಾಷಣೆಯೊಂದಿಗೆ ತಾಳಮದ್ದಲೆ ಸಮಾಪನಗೊಂಡಾಗ ಉತ್ತಮ ಯಕ್ಷಗಾನವನ್ನು ಮೈಮನಗಳಲ್ಲಿ ತುಂಬಿದ ಅನುಭವವಾದರೆ., ಉಪಾಹಾರ ಮತ್ತು ಸರಳ ಹಾಗು ರುಚಿಕರ ಭೋಜನದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ ಯಕ್ಷದಿಶಾ ಹಾಗು ಯಕ್ಷಗಾನ ಬಯಲಾಟ ಅಕಾಡೆಮಿಗೆ ನಮನವನ್ನು ಸಲ್ಲಿಸದೆ ಇರಲು ಸಾಧ್ಯವೇ?