ಬೆಂಗಳೂರಿನಲ್ಲಿರುವ ನಮ್ಮ ಯಕ್ಷಗಾನ ಅಭಿಮಾನಿಗಳೆಲ್ಲ ಸೇರಿ ಈ ಬಾರಿ ಅಪೂರ್ವವಾದ ಒಂದು ಕಾರ್ಯಕ್ರಮ ರೂಪಿಸುವ ಮಹತ್ವದ ನಿರ್ಧಾರ ತೆಗೆದುಕೊಂಡೆವು. ಬಹುಶಃ ಸುಪ್ತವಾಗಿದ್ದ ಬಯಕೆಯನ್ನು ಬಡಿದೆಬ್ಬಿಸುವ ಪ್ರಚೋದನೆ ಇದಾಗಿ ನನಗೆ ಭಾಸವಾಯಿತು. ಯಕ್ಷಗಾನದ ಹಿರಿಯ ಸರ್ವಮಾನ್ಯ ಶ್ರೀ ಬಲಿಪ ನಾರಾಯಣ ಭಾಗವತರಿಗೆ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಇದಕ್ಕೆ ನಿಮಿತ್ತವಾಗಿಬಿಟ್ಟಿತು. ನಾನು ಮತ್ತು ಮಿತ್ರ ಬರೆಕೆರೆ ವೇಣು ಸೇರಿ ಈ ಯೋಚನೆಗೆ ಹುಟ್ಟುಹಾಕಿ ಚಾಲನೆಗೆ ಕೊಟ್ಟೆವು. ಆರಂಭದಲ್ಲಿ ನನಗೆ ಅಶೆ ಇದ್ದರೂ ನಿರೀಕ್ಷೆ ಇರಲಿಲ್ಲ. ಇದಕ್ಕೆ ಕಾರಣ ಹಲವು. ಇದೇ ಅಂತರ್ಜಾಲ ಪುಟಗಳಲ್ಲಿ ವ್ಯಕ್ತಪಡಿಸಿದಂತೆ ಅದೇಕೋ ಬಲಿಪ್ಪರ ಕಾರ್ಯಕ್ರಮ ಇಲ್ಲಿನ ಯಾವುದೇ ಸಂಘಸಂಸ್ಥೆಗಳೆಲ್ಲ ಆಶ್ಚರ್ಯಕರ ರೀತಿಯಲ್ಲಿ ಔದಾಸಿನ್ಯ ತೋರಿಸುತ್ತಿದ್ದುದು. ಹಲವರಲ್ಲಿ ಹೇಳಿಯು ಈ ಮಹನೀಯ ಕಲಾವಿದರ ಕಾರ್ಯಕ್ರಮಕ್ಕೆ ಯಾರೂ ಮನ ಮಾಡದಿದ್ದುದು ಒಂದು ಮುಖ್ಯಕಾರಣ. ಮತ್ತೆ ಬೆಂಗಳೂರಲ್ಲಿ ಯಕ್ಷಗಾನದಂತಹ ಕಾರ್ಯಕ್ರಮ ರೂಪಿಸುವುದು ಅತ್ಯಂತ ಶ್ರಮದಾಯಕ ಕೆಲಸ. ಮುಖ್ಯವಾಗಿ ಯೋಗ್ಯವಾದ ಸ್ಥಳ. ಇಲ್ಲಿ ಹೆಚ್ಚಿನ ರಂಗ ಮಂದಿರವಾಗಲಿ ಸಭಾಭವನವಾಗಲಿ ಯಕ್ಷಗಾನದಂತಹ ಅಬ್ಬರದ ಕಾರ್ಯಕ್ರಮಕ್ಕೆ ಹೊಂದಿಕೆಯಾಗುವುದಿಲ್ಲ. ಹೊರಾಂಗಣ ಸ್ಥಳಗಳಲ್ಲಿ ಕಾರ್ಯಕ್ರಮ ಮಾಡುವಲ್ಲಿ ಅನೇಕ ತಾಂತ್ರಿಕ ಹಾಗು ಹಲವು ಇತರ ತೊಂದರೆಗಳಿದ್ದುವು. ಮುಖ್ಯವಾಗಿ ಅನುಕೂಲ ಸ್ಥಳ ತುಂಬ ದುರ್ಲಭವೇ. ನಮ್ಮೂರಿನಲ್ಲಿ ಎಲ್ಲಿ ಬೇಕಾದರು ಯಕ್ಷಗಾನ ಕಾರ್ಯಕ್ರಮ ರೂಪಿಸುವುದಕ್ಕೆ ಕಷ್ಟವೇನೂ ಇಲ್ಲ ಎಂಬುದು ಇಲ್ಲಿನ ತೊಂದರೆ ಗಮನಿಸಿದಾಗ ಮನವರಿಕೆಯಾಗುವುದು. ಇನ್ನೋಂದು ಇಲ್ಲಿ ಪರಿಚಿತವಾಗಿ ಇದ್ದುಕೊಂಡು ಈ ಯಕ್ಷಗಾನ ಕಲೆ ಅಪರಿಚಿತ ಕಲೆಯೇ ಆಗಿಬಿಟ್ಟಿದೆ. ಮೊದಲಾಗಿ ಬೆಂಗಳೂರಿಗರಿಗೆ ಶುದ್ದ ಸಂಸ್ಕೃತಿಯ ಕಾರ್ಯಕ್ರಮಗಳು ಬೇಡವೇಬೇಡ. ಅಸಭ್ಯ ನರ್ತನದದ ಸಿನಿಮಾಟಿಕ್ ಡಾನ್ಸ್ ಕೀಳಭಿರುಚಿಯ ಕಿವಿಗಡಚಿಕ್ಕುವ ಸಿನಿಮಾ ಅರ್ಕೆಸ್ಟ್ರ ಇವುಗಳೇ ಸಂಸ್ಕ್ರತಿಯ ದ್ಯೋತಕವೇ ಆಗಿರುವಾಗ ಈ ಶುದ್ದ ಕನ್ನಡ ಸಂಸ್ಕೃತಿಯ ಯಕ್ಷಗಾನ ಕಲೆ ತಿಳಿದಿದ್ದರೂ ಬೇಡ. ಹೀಗೆ ಹಲವು ಕಾರಣಗಳಿದ್ದುವು. ಅದೆಲ್ಲ ಈಗ ಪ್ರಸ್ತಾಪದ ವಿಚಾರಗಳೇ ಅಲ್ಲ.
ನಾನು ಆತಂಕದಿಂದದಲೇ ನಿತ್ಯ ಸಂಭಾಷಿಸುವ ಮಿತ್ರರಾದ ಕೆಲವರಲ್ಲಿ ಪ್ರಸ್ತಾಪವನ್ನು ಮುಂದಿಟ್ಟೆ. ಅಷ್ಟೇ... ಎಲ್ಲರೀಗೂ ಇದು ರೋಮಾಂಚನದ ಸಂಚಲನ ಉಂಟುಮಾಡಿದ ವಿಚಾರವಾಗಿತ್ತು.ಮುಂದಿನ ಯೋಚನೆಯಂತೆ ಸಮಾನ ಮನಸ್ಕ ಕೆಲವು ಮಿತ್ರರಲ್ಲಿ ಈ ಅಭಿಪ್ರಾಯ ಪ್ರಸ್ತಾಪಿಸಿ ಒಂದು ಸಂದೇಶವನ್ನು ಬಿಟ್ಟೆ.ಒಂದು ಮನವಿಯನ್ನು ಎಲ್ಲರ ಮುಂದಿಟ್ಟೆ. ಅರ್ಥ ಪೂರ್ಣ ಸಮಯೋಚಿತ ಸರಳ ಕಾರ್ಯಕ್ರಮದ ಆವಶ್ಯಕತೆಯನ್ನು ಮುಂದಿಟ್ಟೆ. ನಿರೀಕ್ಷೆಗೂ ಮೀರಿ ಎಲ್ಲರೂ ಸ್ಪಂದಿಸಿದ್ದು ಈ ಮಿತ್ರರ ಯಕ್ಷಗಾನ ಮೇಲಿನ ಅಭಿಮಾನ ಮಾತ್ರವಲ್ಲ ಬಲಿಪ್ಪರ ಮೇಲಿನ ಗೌರವ ಕಾಳಜಿ ವ್ಯಕ್ತವಾಯಿತು. ಇನ್ನು ಸುಮ್ಮನಿರುವುದು ಅಸಾಧ್ಯವಾಯಿತು. ಪದೆ ಪದೆ ಹಲವರು ಕರೆ ಮಾಡಿ ಕೇಳುವುದಕ್ಕೆ ತೊಡಗಿದಾಗ ನನ್ನ ಮಟ್ಟಿಗೆ ವಿಷಯ ಅತ್ಯಂತ ಗಂಭೀರ ಅನ್ನಿಸಿತು.
ಮುಂದಿನ ಹಂತದಂತೆ ಎಲ್ಲರ ಅಭಿಪ್ರಾಯದಂತೆ ಸರಳತೆಗೆ ಒತ್ತು ಕೊಟ್ಟು ಲಭ್ಯವಿದ್ದ ಕೆಲವೇ ಕಲಾವಿದರನ್ನು ಖಾತರಿಗೊಳಿಸಿ ತಾಳಮದ್ದಲೆಯನ್ನು ಸಂಘಟಿಸುವುದು. ಮತ್ತು ಅದಕ್ಕೆ ಬೇಕಾದ ಖರ್ಚುವೆಚ್ಚದ ಯೋಜನೆಯನ್ನು ಸಿದ್ದ ಪಡಿಸುವುದಾಗಿತ್ತು. ಹಾಗಾಗಿ ಮೊದಲು ಬಲಿಪ್ಪರಿಗೆ ಕರೆ ಮಾಡಿ ಅವರ ಲಭ್ಯತೆಯ ದಿನಾಂಕವನ್ನು ನಿಗದಿ ಮಾಡಿ ಜನವರಿ ೨೩ ನೆಯ ಭಾನುವಾರವನ್ನು ಇದಕ್ಕಾಗಿ ನಿಶ್ಚೈಸಿಬಿಟ್ಟೆವು. ಅದರಂತೆ ಬಲಿಪ್ಪರೊಂದಿಗೆ ಚರ್ಚಿಸಿ ತಾಳಮದ್ದಲೆಗೆ ಒಂದು ಪ್ರಸಂಗ ನಿರ್ಣಯ ಮಾಡಿಕೊಂಡೆವು. ಪ್ರಸಂಗ ನಿರ್ಣಯಿಸುವಾಗ ಕೆಲವೊಂದು ಯೋಚನೆ ನನಗಿತ್ತು. ಅದರಂತೆ ಬೆಂಗಳೂರಿಗೆ ಸಾಧ್ಯವಾದಷ್ಟು ಅಪರೂಪವಾದ ಪ್ರಸಂಗವಾಗಬೇಕು. ಸಾಮಾನ್ಯವಾಗಿ ಎಲ್ಲೆಡೆಯೂ ತಾಳಮದ್ದಲೆಯಾಗಿ ಅದು ಬೆಂಗಳೂರಲ್ಲಿ ಆಯೋಜಿಸುವ ಪ್ರಸಂಗಗಳಾದ ಸಮರ ಸನ್ನಾಹ,ಕರ್ಣ ಪರ್ವ, ವಾಲಿವಧೆ ಇವುಗಳಿಂದ ಭಿನ್ನವಾದ ಪ್ರಸಂಗವಾಗಬೇಕೆಂದು ನಮ್ಮ ಬಯಕೆಯಾಗಿತ್ತು. ಇದರಂತೆ “ತಾಮ್ರಧ್ವಜ ಕಾಳಗ” ಅಥವಾ ವಿರಾಟಪರ್ವ.. (ಕೀಚಕವಧೆ) ಎಂಬ ಎರಡು ಪ್ರಸಂಗದಲ್ಲಿ ಒಂದನ್ನು ಆಯ್ಕೆ ಮಾಡಬೇಕಿತ್ತು. ಇದರಲ್ಲಿ ವಿರಾಟ ಪರ್ವಕ್ಕೆ ಸೂಕ್ತ ಕಲಾವಿದರು ಲಭ್ಯವಿಲ್ಲದೇ (ಎಲ್ಲರೂ ವ್ಯವಸಾಯಿ ಮೇಳಗಳಲ್ಲಿ ವ್ಯಸ್ತರಾಗಿರುವಾಗ) “ತಾಮ್ರಧ್ವಜ ಕಾಳಗ” ಎಂಬ ಪ್ರಸಂಗ ನಿರ್ಣಯಿಸಿಕೊಂಡೆವು. ಇದಕ್ಕಾಗಿ ನಿಗದಿಯಾದಂತೆ ಶ್ರೀ ಜಬ್ಬಾರ್ ಸ.ಮೊ. ಅತ್ಯಂತ ವಿಶಿಷ್ಟ ಪಾತ್ರಶೈಲಿಗೆ ಹೆಸರಾದ ಪ್ರಸಿದ್ದ ಕಲಾವಿದ, ಶ್ರೀ ರಾಧಾಕೃಷ್ಣ ಕಲ್ಚಾರ್ ಅತ್ಯಂತ ಜನಪ್ರಿಯ ಯುವ ಅರ್ಥಧಾರಿ, ಮತ್ತೆ ಭಾವನಾತ್ಮಕ ಪಾತ್ರಕ್ಕೆ ಸೂಕ್ತರಾದ ಶ್ರೀ ಗಣರಾಜ ಕುಂಬಳೆ ಹೀಗೆ ಊರಿಂದ ಈ ಮೂವರು ಕಲಾವಿದರು ನಮಗೆ ಲಭ್ಯವಾದರು. ಇನ್ನುಳಿದ ಪಾತ್ರಕ್ಕೆ ಇಲ್ಲಿನ ನಮ್ಮ ಮಿತ್ರರೇ ಅದ ಯುವಕ ಶ್ರೀಸುಧನ್ವ ದೇರಾಜೆ ಯವರನ್ನು ನಿಶ್ಚೈಸಿಕೊಂಡು ಹಿಮ್ಮೇಳಕ್ಕೆ ಬಲಿಪ್ಪರ ಸಲಹೆಯನ್ನು ಗಣನೆಯಲ್ಲಿರಿಸಿಕೊಂಡು ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರನ್ನು ಮದ್ದಲೆ ವಾದಕರಾಗಿ ಮಾತಾಡಿಕೊಂಡೆವು. ಮತ್ತೆ ಚೆಂಡೆವಾದಕರಾಗಿ ಇಲ್ಲಿನ ಹವ್ಯಾಸಿ ಹಿಮ್ಮೇಳ ವಾದಕರಾದ ಶ್ರೀ ರವಿಶಂಕರ ಬಡೆಕ್ಕಿಲ ಅವರನ್ನು ಸಂಪರ್ಕಿಸಿದೆವು. ಅವರ ಒಪ್ಪಿಗೆಯೂ ಸಿಕ್ಕಿತ್ತು.
ಇನ್ನು ಕಾರ್ಯಕ್ರಮಕ್ಕೆ ಒಂದು ಸೂಕ್ತವಾದ ಸ್ಥಳದ ಹುಡುಕಾಟ ಶುರುವಾಯಿತು. ಅದ್ದೂರಿ ಭವನವನ ನಮ್ಮ ಯೋಜನೆಗೆ ಕೈಗೆಟುವ ಹಾಗಿರಲಿಲ್ಲ. ಇದಕ್ಕಾಗಿ ವೆಚ್ಚವನ್ನು ಹಿಗ್ಗಿಸುವುದು ನಮಗೆ ಸೂಕ್ತ ಅನ್ನಿಸದೆ ಸರಳವಾದ ಹೋರಾಂಗಣಕ್ಕೆ ತೆರೆದಿದ್ದ ಸಭಾಭವನದ ಅನ್ವೇಷಣೆಯಲ್ಲಿ ನಮ್ಮ ನರಸಿಂಹ ಭಟ್ಟರು ಚಾಮರಾಜ ಪೇಟೆಯ ನಾಲ್ಕನೆ ಮುಖ್ಯರಸ್ತೆಯಲ್ಲಿರುವ ಹತ್ವಾರ್ ಸಭಾಂಗಣವನ್ನು ನೋಡುವುದಕ್ಕೆ ಸೂಚಿಸಿದರು. ನಾನು ಮತ್ತು ಮಿತ್ರ ಮುರಳಿ ಬಿಡುವು ಮಾಡಿಕೊಂಡು ಚಾಮಾರಜ ಪೇಟೆಯ ಭಾರತೀಯ ವಿದ್ಯಾಸಂಸ್ಕೃತಿಯ ಕಾಲೇಜು ಪರಿಸರದ ಹತ್ವಾರ್ ಸಭಾಂಗಣವನ್ನು ನೋಡಿ ಸಮ್ಮತಿಸಿ ಮುಂದಿನ ಯೋಜನೆಯನ್ನು ನಿರೂಪಿಸುವ ಕಾರ್ಯಕ್ಕೆ ತೊಡಗಿದೆವು
ಇಲ್ಲಿಗೆ ತಾಳಮದ್ದಲೆಯ ಪೂರ್ವ ತಯಾರಿ ಸಿದ್ಧವಾಗಿಬಿಟ್ಟಿತು. ಇನ್ನು ಎಲ್ಲಾ ಮಿತ್ರರಿಗೆ ಈ ಶುಭ ಸಮಾಚಾರವನ್ನು ವಿತರಿಸುವ ಕಾರ್ಯವಾಗಬೇಕಿತ್ತು. ಮತ್ತು ಎಲ್ಲರೂ ಕೊಡಬಹುದಾಗಿದ್ದ ಧನಸಹಾಯವನ್ನು ಸ್ವೀಕರಿಸುವ ಮಹತ್ವದ ಕೆಲಸ ಇನ್ನು ಕೆಲವು ಕೆಲಸಗಗಳಿಗೆ ಚಾಲನೆ ಕೊಡಬೇಕಿತ್ತು. ಮುಖ್ಯವಾಗಿ ಪ್ರಚಾರ ನಮ್ಮ ಮುಂದಿನ ಹಂತದ ಪ್ರಮುಖ ಯೋಜನೆಯಾಯಿತು. ಅದರಂತೆ ಆಮಂತ್ರಣ ಪತ್ರಿಕೆಯ ವಿನ್ಯಾಸವನ್ನು ಮಾಡಲು ಉತ್ಸಾಹಿ ಯಕ್ಷಗಾನ ಅಭಿಮಾನಿ ಮಾತ್ರವಲ್ಲ ಬಲಿಪ್ಪರ ಪರಮ ಭಕ್ತ ಶ್ರೀ ಲ. ನಾ. (ಲಕ್ಷ್ಮೀನಾರಾಯಣ) ಅವರಲ್ಲಿ ವಿನಂತಿಸಿದೆ ಕೇವಲ ಒಂದೇದಿನದಲ್ಲಿ ಸುಂದರ ವಿನ್ಯಾಸ ಅತ್ಯಂತ ಸಂಭ್ರಮದಿಂದ ಸಿದ್ದಗೊಳಿಸಿದರು.ಇದನ್ನು ಹೇಳುವಾಗ ಒಂದು ಮಾತು ಹೇಳದಿರಲು ನನ್ನ ಮನಸ್ಸು ಒಪ್ಪುವುದಿಲ್ಲ.ಇಲ್ಲಿನ ಹಲವು ಯುವಕರ ಬಲಿಪ್ಪರ ಅಭಿಮಾನ..ಉಲ್ಲಾಸ್, ಲ. ನಾ. ಮುರಳಿ . ಶಿರಂಕಲ್ಲು (ಹೀಗೆ ಪಟ್ಟಿ ದೊಡ್ಡದಿದೆ..!!!) ನೋಡಿದಾಗ ನನ್ನದಾಂತಹ ಅಭಿಮಾನ ಏನಿದೆಯೋ ಅದು ಏನೂ ಅಲ್ಲ ಅಂತ ಅನ್ನಿಸಿಬಿಟ್ಟಿದೆ. ನಿಜಕ್ಕೂ ಅತ್ಯಂತ ಉತ್ಸಾಹಿ ವಿಶಾಲ ಹೃದಯೀ ಮಿತ್ರರು. ಇವರ ಮಾನಸಿಕ ಸ್ಪಂದನೆಗೆ ಪೂರಕವಾಗಿ ಪ್ರೇರೆಪಣೆ ಕೊಡುವಂತಹ ಯಕ್ಷಗಾನ ಕಾರ್ಯಕ್ರಮ ಅರ್ಥ ಪೂರ್ಣವಾಗಿ ಮಾಡುವುದು ಒಂದು ಮಧುರಾನುಭವ.
ಕರಪತ್ರ ವಿನ್ಯಾಸ ಅತ್ಯಂತ ಸುಂದರವಾಗಿ ಮೂಡಿಬಂತು. ಇದನ್ನು ಸಿಕ್ಕವರಿಗೆ ನೆನಪಿನ ಸ್ಮೃತಿ ಪಟಲದಲ್ಲಿ ಬಂದ ಎಲ್ಲರೀಗು ಈ ಮೇಲ್. ಮುಖಾಂತರ ಹಂಚಿಯಾಯಿತು. ಇನ್ನು ಮಹತ್ವದ ಒಂದು ಕೆಲಸ ಅಂದರೆ ಬೆಂಗಳೂರಿನಲ್ಲಿ ಯಕ್ಷಗಾನ ಚಟುವಟಿಕೆಯನ್ನು ಮಾಡುವಂತಹ ಸಂಘ ಸಂಸ್ಥೆಗಳಿಗೆ ಸಂದೇಶ ಕಳಿಸುವುದು. ನಿಗದಿಯಾದ ದಿನಾಂಕ. ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಕಾರ್ಯಕ್ರಮದ ಸ್ಥೂಲ ರೂಪುರೇಷೆಯನ್ನು ತಿಳಿಸುವುದು. ಇದರಿಂದ ಯಕ್ಷಗಾನ ಸಂಸ್ಥೆಗಳಿಗೆ ತಮ್ಮದೇ ಆದಂತಹ ಕಾರ್ಯಕ್ರಮ ರೂಪಿಸುವಲ್ಲಿ ಇದು ಸಹಾಯಕವಾಗುತ್ತದೆ. ಅದೇ ದಿನ ಆದಷ್ಟು ಬಿಡುವಾಗಿ ಸಿಗುವುದು ನಮ್ಮ ಉದ್ದೇಶ. ಅದರಂತೆ ಸಾಧ್ಯವಾದಷ್ಟು ಯಕ್ಷಗಾನ ಸಂಘ ಸಂಸ್ಥೆಗಳಿಗೆ ಮುಂದಾಗಿಯೆ ನಮ್ಮ ಈ ಕಾರ್ಯಕ್ರಮದ ಬಗ್ಗೆ ಸೂಚನೆಯನ್ನು ಕೊಟ್ಟೆವು. ಎಲ್ಲ ಸಂಘ ಸಂಸ್ಥೆಗಳು ಈ ಮಹತ್ತರವಾದ ಕಾರ್ಯಕ್ರಮಕ್ಕೆ ಸೂಕ್ತ ಭರವಸೆಯನ್ನು ಸಹಕಾರದ ಕೊಡುಗೆಯನ್ನು ನೀಡಿದವು. ಆ ಮೂಲಕ ಬಲಿಪ್ಪರ ಮೇಲಿನ ಅಭಿಮಾನ ಹಾಗು ಗೌರವವನ್ನು ವ್ಯಕ್ತಪಡಿಸಿದುವು. ಎಲ್ಲರೂ ಆದಿನಕ್ಕೆ ಸಹಾರಿಸುವುದಾಗಿ ಹೇಳಿದಾಗ ನಿಜಕ್ಕೂ ಇದು ಅತ್ಯಂತ ಮಹತ್ವದ ವಿಷಯವಾಗಿ ಭಾಸವಾಯಿತು. ಬಲಿಪ್ಪರ ಕಾರ್ಯಕ್ರಮಕ್ಕೆ ಈ ಮಟ್ಟಿಗೆ ಗೌರವ ಲಭಿಸಿತಲ್ಲ. ಆ ದಿನ ಈ ಕಾರ್ಯಕ್ರಮಕ್ಕೆ ಮೀಸಲಿರಿಸಿದರೆ ಅದೊಂದು ಗೌರವಸಂಕೇತವಾಗಬಹುದು.
ಇನ್ನು ಹತ್ತು ಹಲವು ಗುರುತರವಾದ ಕಾರ್ಯಗಳಿವೆ. ನಡೆಯ ಬೇಕಾದ ಕಾರ್ಯಕ್ರಮದ ಪೂರ್ಣ ರೂಪುರೇಶೆಯನ್ನು ಸಿದ್ದಪಡಿಸಬೇಕಿದೆ. ಇದರ ನಡುವೆ ಧನ ಸಹಾಯ ಹೇಳಿದಂತೆ ಮಿತ್ರರು ನನ್ನನ್ನು ಅರಸಿ ಬಂದಿರುತ್ತಾರೆ. ತಮ್ಮದಾದ ದೇಣಿಗೆಯನ್ನು ದೇವಕಾರ್ಯವೆಂಬಂತೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನೀಡುತ್ತಿದ್ದಾರೆ. ನನ್ನ ಅಥವಾ ನಮ್ಮ ಮೇಲಿನ ವಿಶ್ವಾಸಕ್ಕಿಂತಲೂ ಬಲಿಪ್ಪರ ಮೇಲಿನ ಮತ್ತು ಯಕ್ಷಗಾನದ ಮೇಲಿನ ಅಭಿಮಾನ ಪ್ರೀತಿ ದೊಡ್ಡದು. ಇದನ್ನು ನೋಡಿದಾಗ ಹೃದಯ ತುಂಬಿ ಭಾವನೆಗಳಿಗೆ ಜಾಗವಿಲ್ಲದಂತಾಗಿದೆ. ಆ ಮಹತ್ವದ ದಿನ ಹಾಗು ಘಳಿಗೆಯ ನೀರೀಕ್ಷೆಯಲ್ಲಿ ನಾವೆಲ್ಲ ಮಿತ್ರರು ಕಾದು ಕುಳಿತಿದ್ದೇವೆ ಅಲ್ಲ ತುದಿಗಾಲಲ್ಲಿ ನಿಂತಿದ್ದೇವೆ. ಇದರ ಮಧ್ಯೆ ಮಿತ್ರರೊಬ್ಬರು ಸಲಹೆ ಕೊಟ್ಟರು. ಬೆಂಗಳೂರಲ್ಲಿ ಇಂತಹ ಕಾರ್ಯಕ್ರಮಕ್ಕೆ ಜನ ಹೊಂದಿಸುವುದು ತುಂಬ ಸಾಹಸದ ಕಾರ್ಯ. ನಿರೀಕ್ಷೆಯ ಜನಗಳು ಬರುವುದು ಕಷ್ಟಸಾಧ್ಯ. ಅದರೂ ನನ್ನ ಎಣಿಕೆಯೊಂದಿದೆ. ಕೇವಲ ಸೇರಿದ ಜನಸಂಖ್ಯೆ ಮಾತ್ರ ಕಾರ್ಯಕ್ರಮದ ಗುಣಕ್ಕೆ ಮತ್ತು ಕಾರ್ಯಕ್ರಮದ ಒಟ್ಟು ಮಾನಂದಡವಾಗುವುದಿಲ್ಲ.ಅದೊಂದು ಮೌಲ್ಯಮಾಪನವೂ ಅಲ್ಲ. ತಿನ್ನುವವರು ಕಡಿಮೆ ಎಂದು ಹಾಗಲಕಾಯಿ ತರಕಾರಿ ಅಗದೆ ಇರುತ್ತದೆಯೆ. ಅದರ ರುಚಿ ಬಲ್ಲವನೆ ಬಲ್ಲ. ಜನಸಂದಣಿಯ ನಿರೀಕ್ಷೆಯ ಬಗ್ಗೆ ಆಷ್ಟೊಂದು ನಿರೀಕ್ಷೆಯೂ ಇಲ್ಲ. ನಮ್ಮ ಇರಾದೆ , ಇದೊಂದು ಕೌಟುಂಬಿಕ ಬಂಧನದ ರೀತಿಯಲ್ಲಿ ಸರಳ ಸಹೃದಯ ಕಾರ್ಯಕ್ರಮವಾಗಬೇಕು. ಹಾಗಾಗಿ ಬಂದವರು ನಿಜಕ್ಕೂ ಬಲಿಪ್ಪ ಅಭಿಮಾನಿ ಮಾತ್ರವಲ್ಲ ಯಕ್ಷಗಾನ ಅಭಿಮಾನಿಗಳೂ ಹೌದು ಎಂಬ ನಂಬಿಕೆ ನನ್ನದು.
ಕೊನೆಗೆ ಒಂದು ಮಾತು ನೀವು ಬರುವಿರಿ ತಾನೆ?
.
