"ಇದು ವಿಮರ್ಶೆಯಲ್ಲದ ಚಿಂತನ"

Monday, December 20, 2010

ಅಭಿಮಾನಕ್ಕೆ ಭೇದವುಂಟೇ?

ಕೆಲವೊಂದು ಸಂಗತಿಗಳು ನಮ್ಮ ಬದುಕಿನ ರೀತಿ ನೀತಿಗೆ ನಿದರ್ಶನವಾಗಿ  ಮುಖಪುಟವಾಗಿಬಿಡುತ್ತದೆ. ನಮ್ಮ ನೆನಪು ಬಂದಾಗ ಪಕ್ಕನೆ ಮನಸ್ಸಿನಲ್ಲಿ ಹಾದುಹೋಗುವ ಭಾವನೆಗಳು ಇದಕ್ಕೆ ಅನುಗುಣವಾಗಿ ಸ್ಪಂದನೆಯನ್ನುಂಟುಮಾಡುತ್ತವೆ.ಬಹುಶಃ ಸಂಸ್ಕಾರ ಎಂಬುದು ಇದನ್ನೆ ಅವಲಂಬಿಸಿ ಉಂಟೇನೋ. ದೇವರು ಪಾಲಿಸಿದ ಪಂಚೇದ್ರಿಯಗಳೊಂದಿಗೆ ಶರೀರವನ್ನು ಪಡೆದು ಜನ್ಮ ತಳೆವ ಮಾನವ ಹುಟ್ಟಿನಿಂದಲೂ ಒಂದು ಬದುಕಿನ ಆಯಾಮವನ್ನು ತನ್ನ ಸುತ್ತಲ ಪರಿಸರಕ್ಕನುಗುಣವಾಗಿ ಪಡೆಯುತ್ತಾನೆ. ಹುಟ್ಟಿದ ಮನೆ ಒಡನಾಟದ ಬಂಧುಬಳಗ ಇದೆಲ್ಲವು ಸಂಸ್ಕಾರದಲ್ಲಿ ಪ್ರತಿಫಲಿಸಿ ಅದೇ ಮುಂದಿನ ಬದುಕಲ್ಲಿ ಸ್ಥಾಯಿಯಾಗಿ ಗುರುತಿಸಲ್ಪಡುತ್ತದೆ. ಬೆಳೆದು ಬಂದು ಎಲ್ಲವು ಅನುಭವದ ಪಕ್ವತೆಯನ್ನು ಪಡೆಯುತ್ತ ಒಂದೊಂದೇ ದಿನವನ್ನು ಕಳೆದು ಮುಂದೇನು ಮುಂದೇನು ಎಂದು ಅನ್ವೇಷಣೆ ನಡೆಸುತ್ತ ಬರುತ್ತದೆ. ಈ ಬದುಕು ಎಂದರೆ ಹೀಗೆ ಪ್ರತಿ ಹಂತದಲ್ಲು ಘಳಿಗೆ ಕಳೆದಂತೆ ಪಕ್ವತೆಯನ್ನು ಪಡೆಯುತ್ತ ಹೋಗುತ್ತದೆ. ಇಂದು ಇರುವ ವಿಚಾರ ಮುಂದೆ ಬದಲಾದ ದಿಶೆಯಲ್ಲೂ ಕೆಲವೊಮ್ಮೆ ಒಳಗಿನ ಗುಣವನ್ನು ಬಿಟ್ಟುಕೊಡಲಾರವು. ಇಲ್ಲಿ ಅನ್ನ ತಿಂದು ಹಸಿವ ನೀಗುವ ಶರೀರ ಇನ್ನೊಂದು ಪರಿಸರದಲ್ಲಿ ಹುಟ್ಟಿ ಬೆಳೆದರೆ ಅನ್ನದ ಬದಲು ಬೇರಿನ್ನೇನನ್ನೋ ರೂಢಿಸಿಕೊಳ್ಳುತ್ತದೆ. ಆಹಾರ ಪರಸರಕ್ಕೆ ಹೊಂದಿಕೊಂಡು ಭಿನ್ನವಾಗಿರುವುದು ತಪ್ಪು ಅಲ್ಲ. ಅದು ಅಪರಾಧವೂ ಅಲ್ಲ. ಇಲ್ಲಿ ಅನ್ನ ತಿನ್ನುವವ ಇನ್ನೊಂದೆಡೆಯ ರೊಟ್ಟಿ ಆಹಾರವನ್ನು ಕೆಟ್ಟದ್ದು ಎನ್ನುವ ಹಾಗೂ ಇಲ್ಲ. ಅಥವಾ ತನಗೆ ಆಗದು ಎಂದ ಮಾತ್ರಕ್ಕೆ ರೊಟ್ಟಿ ಕಳಪೆಯೂ ಅಲ್ಲ. ಇದು ಮನುಷ್ಯ ಜೀವನದ ವೈವಿಧ್ಯತೆಯ ಸಂಕೇತ. ಭೂಗರ್ಭದಿಂದ ಒಸರುವ ನೀರು ಯಾವ ಪಾತ್ರೆಗೆ ಬಿದ್ದು ಅದೇ ಅಕಾರವನ್ನು ಪಡೆಯುತ್ತದೋ ಹಾಗೆ ಈ ಜೀವನ ಎಂದು ಅನ್ನಿಸುತ್ತದೆ. ನೀರು ಮತ್ತೆ ಪಾತ್ರೆ  ಬದಲಾದಂತೆ ಬದಲಾವಣೆ ಕಂಡರು ದ್ರವರೂಪದ ಗುಣವನ್ನು ಬಿಡುವುದೇ ಇಲ್ಲ. ಆ ಗುಣವನ್ನು ಬಿಟ್ಟಾಗ ಅದು ಈ ಪ್ರಫಂಚದಲ್ಲಿ ಲೀನವಾಗಿ ಹೋಗಿಬಿಡುತ್ತದೆ.


ಇಂತಹ ಯೋಚನೆಗಳು ಇಲ್ಲಿ ಹುಟ್ಟಿಕೊಂಡು ಈ ರೂಪಕ್ಕೆ ಬರಲು ಕಾರಣವೂ ಇದೆ. ಹುಟ್ಟಿನಿಂದಲೆ ಬೆಳೆದು ಬಂದ ವಾತವಾರಣ ಜೀವನದಲ್ಲಿ ಎಲ್ಲಾ ಕಡೆ ಹಾಸುಹೊಕ್ಕಾಗಿ ಇರುತ್ತದೆ. ಒಂದೊ ತನ್ನದಾಗಿ ಪಡೆದು ಬಂದ ಜೀವನ ಕ್ರಮ ತಮಗೆ ಇಷ್ಟವಲ್ಲವಾದರು ಅದಕ್ಕೆ ಒಗ್ಗಿ ಕೊಂಡು ಹೋಗುವ ಜೀವನ ಕ್ರಮವಾದರೆ ಇನ್ನೋಂದು ಅದನ್ನೇ ಅಭಿಮಾನಿಸಿಕೊಂಡು ಅದು ತನ್ನದು ಎಂದು ಮೈಗೊತ್ತಿ ನಡೆವ ಜೀವನ ಕ್ರಮ. ಇದರಲ್ಲಿ ಯಾವುದು ಎಷ್ಟೆಷ್ಟು ಎಂಬುದು ಸಮಯಕ್ಕೆ ಬಿಟ್ಟವಿಚಾರ. ಅಲ್ಪ ಗೊಂದಲವೂ ಇಲ್ಲದೆ ಇರುವುದಿಲ್ಲ.


ಬಾಲ್ಯದಲ್ಲಿ ಅತ್ಯಂತ ಬಡತನದ ಜೀವನ. ಇನ್ನು ಹತ್ತರಿಂದ ಮೇಲೆ ಮಂದಿ ಇರುವ ಸಮೃದ್ದ ಕುಟುಂಬದ ಬಡತನ ಊಹಿಸಿ. ಏಳೆಂಟು ಮಕ್ಕಳು ಒಟ್ಟಾಗಿ ಬದುಕುವ ದೊಡ್ಡ ಮನೆ. ದೂರದ ಕಂಡು ಕೇಳರಿಯದ ಊರಲ್ಲಿ ಒಂದು ಶ್ರಾಧ್ದವೋ ವೈಕುಂಠ ಸಮಾರಾಧನೆಯೊ ಇದ್ದರೆ (ಆ ಕಾಲದಲ್ಲಿ ಆಮಂತ್ರಣ ಇಲ್ಲದೆ ಹೋಗಬಹುದಾದ ಕಾರ್ಯಕ್ರಮ ಇದುವೆ. ) ಹತ್ತು ಹನ್ನೆರಡು ಮೈಲುಗಳನ್ನು ಹೊಟ್ಟೆತುಂಬ ಊಟದ ಬಯಕೆ ಹೊತ್ತು   ನಡೆದುಕೊಂಡೇ  ಹೋಗುತ್ತಿದ್ದೆವು. ಆ ನನ್ನ ಐದು ಆರನೇ ವಯಸ್ಸಿನಲ್ಲಿ ನಾವೆಲ್ಲ ಮಕ್ಕಳು ನಡೆದದ್ದು ಇನ್ನೂ ನೆನಪಿದೆ. ಕಾಯರ್ ಕಟ್ಟೇ... (ನಮ್ಮ ಪೈವಳಿಕೆ ಬಾಯಾರು ಮಧ್ಯೆ) ಎಲ್ಲಿ?  ದೂರದ ಕನ್ಯಾನದ ಯಾವುದೋ ಮೂಲೆಯ ಬೈಲಿನ ಮನೆ ಎಲ್ಲಿ? ಊಹಿಸಿ. ಈಗ ಅರ್ಧ ಘಂಟೆಯ ದೂರ ಆದರೂ ಆವಾಗ ಗುಡ್ಡೆಯಂತೆ ಇರುವ ಮಣ್ಣಿನ ರಸ್ತೆ.. ಬೆಳಗ್ಗೆ ಒಂದು ಮಧ್ಯಾಹ್ನ ಒಂದು ಎಂದು ಓಡುವ ವಾಹನದ ಕಾಲವದು. ನನ್ನ ಆರನೆಯ ವಯಸ್ಸಿನ ಈ ಊಟದ ಹಸಿವಿನ ನಡೆ ಇಂದು ನೆನಸಿದರೆ ತುತ್ತು ಅನ್ನವೂ ಮೌಲ್ಯಕಂಡುಕೊಳ್ಳುತ್ತದೆ. ಚಪ್ಪಲಿಯಿಲ್ಲದ ಬರಿಗಾಲು ಚಡ್ಡಿ ಮಾತ್ರ ಧರಿಸುವ ಬರಿ ಮೈ... ಎಂತಹ ಬಾಲ್ಯ ಆದರು ಕೆಲವೊಮ್ಮೆ ಅನ್ನಿಸುತ್ತದೆ ಆ ಬಾಲ್ಯ ಬರಬಾರದೇ?

ಇದೆಲ್ಲ ಅನಗತ್ಯ ಅನ್ನಿಸಬಹುದಾದ ಪ್ರವರ ಇಲ್ಲಿ ಕೆಲವೊಮ್ಮೆ ಹೇಳಿಬಿಡುವ ಎಂಬ ಬಯಕೆ. ಹೀಗನ್ನಿಸುವುದು, ಅಂತಹ ಬದುಕಲ್ಲೂ ಕಳೆದ ನಮ್ಮ ರಸಮಯ ದಿನಗಳ ಮಧುರ ಅನುಭವವೇ ಕಾರಣ. ಬಾಲ್ಯದಲ್ಲಿ ಆಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅನಿಶ್ಚತೆಯ ಜೀವನ. ಕೆಲವು ದಿನ ಪೈವಳಿಕೆಯಾದರೆ ಕೆಲವು ದಿನ ಸೋದರ ಮಾವನೊಂದಿಗೆ ಮಂಗಳೂರಲ್ಲಿ. ಅಲ್ಲಿ ಸಾಮಾನ್ಯ ದೊಡ್ಡ ಮನೆ ಎಲ್ಲ ಕಡೆಯೂ ಸಾಮಾನ್ಯ ಮಂದಿಗಳೆ. ಇಲ್ಲಿದ್ದರೂ ಅಲ್ಲಿದ್ದರು ಇದು ನಮ್ಮ ಮನೆ ಎಂಬ ಭಾವನೆ.  ಮಂಗಳೂರಲ್ಲಿ ಎನ್ನ ದೊಡ್ಡಮ್ಮ ನ ಮುದ್ದಿನ ಆರೈಕೆ. ಸೋದರ ಮಾವನ ಪ್ರೀತಿಯ ಪಾಲನೆ.

ಆಗಿನ ಮಧುರ ಅನುಭವಗಳಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಮಧುರ ಭಾವನೆಗಳು ಹಲವು. ಇದು  ಹಲವು ಸಲ ಹೇಳಿದಂತೆ ಯಕ್ಷಗಾನ ನಮಗೆಲ್ಲ ಸುಲಭದಲ್ಲಿ ಸಿಗುವ ದೊಡ್ಡ ಮನರಂಜನೆ. ಮಾತ್ರವಲ್ಲ ಅದು ಕಟೀಲು ಮೇಳದ ಬಯಲಾಟಕ್ಕೇ ಹೆಚ್ಚಾಗಿ ಸೀಮಿತ. ಮಂಗಳೂರಿನಲ್ಲಿ ಅಲ್ಲಲ್ಲಿ ಆಗುವ ಕಟೀಲು ಮೇಳದ ಅಟಗಳು ಸಾಯಂಕಾಲದಿಂದ ಮುಂಜಾನೆವರೆಗೂ ಬಯಲಲ್ಲೇ ಕಳೆವಂತೆ ಮಾಡಿದೆ. ಎಪ್ಪತ್ತರ ದಶಕದ ಕಟೀಲು ಮೇಳದ ಆಟಗಳು ಈಗಿನಷ್ಟು ಹರಕೆಯಾಗಿ ಇರುತ್ತಿರಲಿಲ್ಲ. ಆವಾಗ ಬಲಿಪ್ಪರು ಇದ್ದ ಒಂದೇ ಮೇಳ ಆರಂಭದಲ್ಲಿ ಇದ್ದದ್ದು. ಪೂರ್ವರಂಗದ ನಂತರ ಪೀಠವೇರುವ ಬಲಿಪ್ಪರು ಮುಂಜಾನೆ ಮಂಗಳದವರೆಗೂ ಕುಳಿತು ರಂಗದಲ್ಲಿ ಮೆರೆಯುವಂತಹ ದಿನಗಳು, ಇಂದು ಯಾವ ಭಾಗವತ ಇದ್ದಾರೆ.? ತಲೆಗೆ ಕೆಂಪು ಪೇಟ ಸುತ್ತಿ  (ಮೊದಲೆ ಸಿದ್ದ ಪಡಿಸಿದ ರೆಡಿ ಮೇಡ್ ಪೇಟವಲ್ಲ ಅದು) ಇಂದಿಗೂ ಅದೇ ಬದಲಾಗದ ನಿಲುವು ನೋಡಿದರೆ ಎಂತಹವರಿಗೂ ಗೌರವ ಉಕ್ಕುವ ಕಳೆ,  ಇವರ ಜತೆಗೆ ನಿಡ್ಲೆ ಅಜ್ಜನ ಚೆಂಡೆ ಪುರುಷ ಭಟ್ಟರ ದೇವಿ ಇವೆಲ್ಲ ಸಾಮಾನ್ಯ. ಯಕ್ಷಗಾನ ಎಂದರೆ ತೆಂಕು ತಿಟ್ಟು ಮಾತ್ರ ಎಂಬಂತೆ ಇದ್ದ ಬುದ್ಧಿಶಕ್ತಿ. ತೆಂಕು ತಿಟ್ಟಿನ ರಾಜವೇಶ ಪುಂಡುವೇಶ ಬಣ್ಣದವೇಶದ ಬಣ್ಣ ಬಣ್ಣದ ಲೋಕವೆ ನಮ್ಮ ಲೋಕ. ಆದರೂ ಅಗ ಒಮ್ಮೆ ಮನೆಗೆ ತಂದ ಸಿಂಡಿಕೇಟ್ ಭ್ಯಾಂಕ್ ಕ್ಯಾಲೆಂಡರ್ ನಲ್ಲಿ ಬಡಗುತಿಟ್ಟಿನ ಹಲವು ವೇಷದ ಚಿತ್ರಗಳನ್ನು ಗಾಬರಿ ಹಾಗು ಕುತೂಹಲದಿಂದ ನೋಡಿದ್ದು ಇನ್ನೂನೆನಪಿದೆ. ಎಲ್ಲೇಲ್ಲೂ ತೆಂಕು ಯಕ್ಷಗಾನವನ್ನೇ ಕಂಡು ಬೆಳೆದ ನನಗೆ ಅದರಲ್ಲೇ ಅಭಿಮಾನ ಬೆಳೆದು ಬಂದರೆ ಅದು ಈಗ ದುರಭಿಮಾನ ಮತ್ತು ಅಹಂಕಾರದ ಸಂಕೇತವಾಗಿ ಗುರುತಿಸಲ್ಪಟ್ಟದ್ದು ತುಂಬಾ ಖೇದವನ್ನು ತರಿಸಿದೆ. ಅದರೂ ಒಂದು ಪ್ರಶ್ನೆ ಹಾಗೆ ಉಳಿದು ಬಿಡುತ್ತದೆ. ವೈಯಕ್ತಿಕವಾಗಿ ಬರೆದು ನನ್ನ ಯಕ್ಷಗಾನಾಬಿಮಾನದ ಬಗ್ಗೆ ನೇರವಾಗಿ ಕೇಳೀದುದಕ್ಕೆ ಬೇಸರವಿಲ್ಲ. ವೈಯಕ್ತಿಕವಾಗಿ ಬರೆದ ಮೈಲ್ ನ್ನು ನನಗೆ ಅರಿವಿಲ್ಲದೆ ಸಾರ್ವಜನಿಕವಾಗಿ ಬಹಿರಂಗ ಪಡಿಸಿದ ಉದ್ದೇಶ ಕೇವಲ ಅವರ ಯಕ್ಷಗಾನ ಅಭಿಮಾನವನ್ನು ತೋರಿಸುವ ಬದಲಾಗಿ ದುರಹಂಕಾರವನ್ನು ತೋರಿಸುವುದಿಲ್ಲವೇ? ವೈಯಕ್ತಿಕವಾಗಿ ಕೇಳಿ ನಾನು ಸ್ಪಂದಿಸದೆ ಇರುತ್ತಿದ್ದರೆ ಆ ವೇಳೆಯಲ್ಲಿ  ಇದು ಯುಕ್ತವಾಗುತ್ತಿತ್ತು. ಎಲ್ಲವೂ ಗೊಂದಲ ಮನಸ್ಸಿನ ಹೇಳಿಕೆಯಂತೆ ಭಾಸವಾಗುತ್ತಿದೆ. ತೆಂಕು ಬಡಗು ಎರಡು ಕಣ್ಣುಗಳ ಹಾಗೆ.. ದೊಡ್ಡ ವೇದವಾಕ್ಯವೆಂಬಂತೆ ನಾನು ಹೊಸದಾಗಿ ಪಾಠಕ್ಕೆ ಕುಳಿತ ವಿದ್ಯಾರ್ಥಿಯ ಭಾವದಲ್ಲಿ ಪರಿಗಣಿಸಬೇಕೆ. ನಾನು ಇನ್ನು ಹೇಳಬಲ್ಲೆ. ಯಕ್ಷಗಾನವೆಂಬ ಮನೆಯಲ್ಲಿ ತೆಂಕು ಬಡಗು ದಂಪತಿಯರಂತೆ. ಪರಸ್ಪರ ಸ್ನೇಹ ಹೊಂದಾಣಿಕೆಯ ಜೀವನವಾಗಬೇಕು. ಕೇವಲ ತೋರಿಕೆಯ ಜಾಹಿರಾತಿನ ಪ್ರೀತಿಯಾಗಬಾರದು. ಇಲ್ಲಿ ಯಾವುದು ಮೇಲು ಎಂಬ ಘರ್ಷಣೆಗೆ ಮೂಲವಾಗದೆ ಸರಸದ ಜೀವನವಾಗಬೇಕು. ಅದು ಇಂದು ಎದೆಯೆಂದು ನನಗನಿಸುವುದಿಲ್ಲ.

ಒಬ್ಬಕಳ್ಳನೋ ಸುಳ್ಳನೋ ಹುಟ್ಟಿನಲ್ಲೇ ಅದೇ ಪರಿಸರವನ್ನು ಅಂಟಿಸಿಕೊಂಡು ಬೆಳೆದು ಅದೇ ಸಂಸ್ಕಾರದಲ್ಲಿ ಬೆಳೆದರೆ ಆವಾಗ ಹೇಳಬಹುದು ಈ ಸಂಸ್ಕಾರ ಸರಿಯಲ್ಲ. ಇದು ಹುಟ್ಟಿನಿಂದಲೇ ಬಂದರೂ ಬದಲಿಸಿಕೊಳ್ಳಬೇಕಾದದ್ದು ಅನಿವಾರ್ಯ. ಯಾಕೆಂದರೆ ಈ ಸಂಸ್ಕಾರ ಪರರಿಗೆ ತೊಂದರೆಯನ್ನೇ ತರುವಂತದ್ದು. ಅದರ ಬಗ್ಗೆ ಅಭಿಮಾನ ಇದ್ದರೆ ಅದು ಸಮಾಜಕ್ಕೇ ಮಾರಕ ಅಲ್ಲವೇ. ಆದರೆ ಹುಟ್ಟಿನಿಂದ ಬಂದ ಈ ಪರರಿಗೆ ತೊಂದರೆಯಾಗದ  ಯಕ್ಷಗಾನದ ಅಭಿಮಾನ ತಿದ್ದುವುದಕ್ಕೆ ಪ್ರಯತ್ನಿಸುವ ಮಂದಿಗೆ ಏನು ಹೇಳೋಣ. ಅಭಿಮಾನವು ಒಂದು ಅಹಂಕಾರವೇ? ಪರ ಜೇಬು ಹಿಂಡಿ ನಾವು ನಮ್ಮ ಯಕ್ಷಗಾನದ ಅಭಿಮಾನ ಇಟ್ಟುಕೊಂಡರೆ ಹೇಳಬಹುದು ಈ ಅಭಿಮಾನ ಬದಲಿಸು ಎಂಬುದಾಗಿ. ಎಲ್ಲ ಮೂಢತನದ ಪರಮಾವಧಿ ಅಂತ ಅನ್ನಿಸುವುದು ಆವಾಗ. ವಿವಾದದ ಸೊಲ್ಲು ಬಂದಾಗಲೇ ಅದಕ್ಕೆ ಪ್ರತಿವಾದ ಮಂಡಿಸಿ ನಮ್ಮದಾದ ಚಿಂತನೆಯನ್ನು ಹರಿಯಬಿಟ್ಟರೆ ವೃಥಾವಾಗ್ವಾದ, ಚರ್ಚೆ ಮತ್ತೆ ವೈಷಮ್ಯ.ವಾಗ್ವಾದ ಸಂವಾದವಾಗುವುದು ಸಹೃದಯವಿದ್ದಲ್ಲಿ ಮಾತ್ರ.

ಇತ್ತೀಚಿನ ಸಣ್ಣ ಸಂವಾದ ಒಂದು ವಿವಾದದ ಹಂತ ತಲುಪಿದ್ದು ಮಾತ್ರ ಖೇದಕರ. ಹುಟ್ಟಿನಿಂದಲೇ ಬೆಳೆಸಿಕೊಂಡ ಅಭಿಮಾನ ಯಕ್ಷಗಾನದ್ದು . ಅಂತಹುದೇ ಪರಿಸರ ಸಿಕ್ಕಿದಾಗ ಸಹಜವಾಗಿ ಪರಿಸರದಲ್ಲಿ ಇದ್ದ ಯಕ್ಷಗಾನದ ಒಂದು ಅಂಗವಾದ ತೆಂಕು ತಿಟ್ಟಿನಲ್ಲೇ ಅಭಿಮಾನವಿರಿಸಿ ಆ ಸಂಸ್ಕಾರವನ್ನೆ ಅಳವಡಿಸಿಕೊಂಡು ಸಾಗಿ ಬಂದ ಬದುಕು. ಇತರರಿಗೆ ತೊಂದರೆಯಾಗದ  ರೀತಿಯಲ್ಲಿ ಸದ್ಭಾವನೆಯನ್ನು ಇರಿಸಿಕೊಂಡು ಬೆಳೆಸಿಕೊಂಡು ಬಂದ ಅಭಿಮಾನ ಅಹಂಕಾರ ಎಂದು ಗುರುತಿಸಲ್ಪಟ್ಟರೆ ಗುರುತಿಸಿದ ದೃಷ್ಟಿಗೆ ಚಿಕಿತ್ಸೆ ಬೇಕೆ ಬೇಡವೇ? ನನ್ನ ಪರಿಸರ ನನ್ನ ಸಂಸ್ಕಾರ ಎಂಬ ಅಭಿಮಾನ ತಪ್ಪೇ? ನಾನು ಅತಿಯಾಗಿ ಅಭಿಮಾನಿಸುವ ಬಲಿಪ್ಪರ ಅಭಿಮಾನವೇ ನಿಂದನೆಯ ಗುರಿಯಾಗಿ ಬಿಟ್ಟದ್ದು ನಿಜವಾಗಿ ಈ ಕಲಾವಿದರು ಎಂದು ಹೇಳುವವರ ಅಜ್ಞಾನಕ್ಕೆ ಏನೆನ್ನಬೇಕೊ ತಿಳಿಯದಾಗಿದೆ. ನಿಂದನೆಯಾದರು ತಾಳಿಕೊಳ್ಳಬಹುದೇನೊ. ಎಕೆಂದರೆ ಎಲ್ಲವನ್ನು ಸಮಾನ ಚಿತ್ತದಿಂದ ಸ್ವೀಕರಿಸುವ ರೂಢಿಯನ್ನು ಬೆಳೆಸಿಕೊಳ್ಳುವ ಪ್ರವೃತ್ತಿಯನ್ನು ರೂಢಿಸಿಕೊಳ್ಳುವ ಬಯಕೆ ನನ್ನದು. ಆದರೆ ಇಲ್ಲಿ ಕೇವಲ ನಿಂದನೆಯಲ್ಲ ಅದರ ಹಿಂದೆ ಇರುವ ಉದ್ದೇಶ ಮಾತ್ರ ತೀರ ಮೃಗಿಯ ವರ್ತನೆಯಾಗಿ ಗೋಚರಿಸಿತು.ಅನಗತ್ಯ ಮಾರ್ಗ ಹಿಡಿಸುವ ಪ್ರೇರೇಪಣೆ. ಜಗಳ ವೈಶಮ್ಯವನ್ನು ಮತ್ತು ಹೆಚ್ಚಿಸಿಕೊಳ್ಳುವ ಉದ್ದೀಪನೆ. ಅದಕ್ಕೆ ಸಹಾಯಕವಾಗಿ ಎರಗಿಸುವ ಟೀಕಾಪ್ರಹಾರ. ಇಲ್ಲಿ ಹಲವು ಗೊಂದಲಗಳನ್ನು ಆರಂಭದಲ್ಲೇ ಗುರುತಿಸಿದೆ. ಸ್ವಭಾವದಂತೆ ನಾನು ತಣ್ಣನೆಯ ಪ್ರತಿಕ್ರಿಯೆಗೆ ಶರಣಾದೆ. ಟೀಕೆಯನ್ನು ಮಾಡುವಲ್ಲಿಯೂ ಪರರನ್ನೆ ಆಶ್ರಯಿಸಿ ಅದೇ ಉಚ್ಚಿಷ್ಠ ಸವಿಯುವ ಮತ್ತು ಮಾನಸಿಕವಾಗಿಯೂ ಪರಾವಲಂಬಿಯಂತೆ ಕಾಣುವ ಪ್ರವೃತ್ತಿ  ಹೇಸಿಗೆ ಹುಟ್ಟಿಸುವುದಿಲ್ಲವೆ? ಎಲ್ಲವೂ ಇರಲಿ ಅದರ ಪಾಡಿಗೆ ಅದು ಇರಲಿ ನಮ್ಮ ಹಾದಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿದ್ದರೆ ಅದೇ ಸಮಾಧಾನ ತಳೆದು ಮೌನವಹಿಸಿದರೂ ಕೆಲವೊಂದು ಚೋದ್ಯಗಳು ಸಿಗದ ಉತ್ತರವನ್ನೇ ಎದುರು ನೋಡುತ್ತದೆ. ಅದು ಹೀಗೆ.
ಕಲೆಯ ವಿಚಾರದಲ್ಲಿ ಸ್ಪರ್ಧೆ ಇರುವುದು ಸಹಜ. ಅದು ಕಲಾವಿದನ ಮಧ್ಯೆಯಾಗಲಿ ಒಟ್ಟು ಪ್ರದರ್ಶನ ರೂಪದಲ್ಲಾಗಲಿ ಹಲವು ವಿಧದ ಸ್ಪರ್ಧೆ ಇರುವುದು ಕೂಡ ಸಹಜ. ಯಕ್ಷಗಾನದ ವಿಚಾರಕ್ಕೆ ಬಂದಾಗ ಇಲ್ಲಿ ಹಲವು ವಿಧದ ಸ್ಪರ್ಧೆಯನ್ನು ಪ್ರತೀ ಪ್ರದರ್ಶನದಲ್ಲೂ ಕಾಣಬಹುದು. ಇಂದು ಸ್ಪರ್ಧೆ ಕೇವಲ ತಿಟ್ಟುಗಳ ಮಧ್ಯೆ ಮಾತ್ರ ಸೀಮಿತವಾಗಿಲ್ಲ. ಅದು ಸಂಘಟಕರ ನಡುವೆಯೂ ಬೆಳೆದು ಬರುವುದು ಸಾಮಾನ್ಯ ವಿಶಯವಾಗಿದೆ. ಎಲ್ಲವೂ ಸಾಮಾನ್ಯ ಎಂದು ತಳ್ಳಿ ಹಾಕಬಹುದಾದರು ಒಂದು ಸಾಹೋದರ್ಯದ ಭಾವ ಇದರಲ್ಲಿ ಹುಡುಕುವಂತಹ ವಾತಾವರಣ ಮಾತ್ರ ಅಸಹನೀಯವೆನ್ನಿಸುವುದಿಲ್ಲವೆ? ಅದು ಸುಸಂಸ್ಕೃತ ಕಲೆಯೆಂದು ನಾವು ಅಭಿಮಾನ ಪಟ್ಟುಕೊಳ್ಳುವ ಈ ಯಕ್ಷಗಾನ ಕಲೆಯಲ್ಲಿ. ಭಿನ್ನಾಭಿಪ್ರಾಯ ಸಹಜವಾದರು ಅದಕ್ಕೆ ಪರಿಹಾರ ಕಂಡುಕೊಳ್ಳುವ ಮಾರ್ಗ ಮಾತ್ರ ತೀವ್ರ ಅಪಾಯಕಾರಿಯಾಗಿ ಗೋಚರಕ್ಕೆ ಬರುತ್ತದೆ. ಕಲೆ- ಕಲೆಯ ಮಧ್ಯೆ, ಕಲಾವಿದನ ಮಧ್ಯೆ ಸ್ಪರ್ಧೆ ಎಲ್ಲರೂ ಬಯಸಬಹುದು. ಆದರೆ ಆ ಸ್ಪರ್ಧೆ ಹೇಗಿರಬೇಕು ಎಂಬ ಚಿಂತನೆ ಮಾತ್ರ ಇರುವುದಿಲ್ಲ. ಸ್ಪರ್ಧೆಯಿಂದ ಉತ್ಕೃಷ್ಟತೆಯನ್ನು ನೀರೀಕ್ಷಿಸಬಹುದಾದರು ಅಲ್ಲಿ ಸ್ಪರ್ಧೆಯ ರೂಪವೇ ಬಿನ್ನವಾಗ ಬಾರದಲ್ಲ?ಒಂದು ವೇದಿಕೆಯಲ್ಲಿ ಕಲಾವಿದನ ನಡುವೆ ಸ್ಪರ್ಥೆ ಪ್ರತಿಸ್ಪರ್ಧಿಯ ದಮನವನ್ನು ಗುರಿಯಾಗಿಸಿ ಇರದಿದ್ದರೆ ಹೇಗನಿಸಬಹುದು? ಪ್ರತಿಸ್ಪರ್ಧಿಯನ್ನು ಸೋಲಿಸಬೇಕೆಂಬುದೇ ಮುಖ್ಯ ಗುರಿಯಾದಲ್ಲಿ ಉತ್ಕೃಷ್ಟತೆ ಹೇಗೆ ಬರಬಹುದು? ಇಲ್ಲಿ ಕೇವಲ ಒಂದು ಸ್ಪರ್ಥೆ ಮಾತ್ರ ಕಾಣಬಹುದಷ್ಟೆ. ಇದು ಎಲ್ಲರಿಗು ತಿಳಿದಿದ್ದರೂ ಕ್ಷಣಿಕ ಗೆಲುವಿಗೆ ಎನೆಲ್ಲ ಪ್ರಯತ್ನಗಳನ್ನು ಮಾಡಿಬಿಡುತ್ತೇವೆ. ಸ್ಪರ್ಧಿಯ ದಮನದಿಂದ ಒಲಿದ ಗೆಲುವು ಅದು ಗೆಲುವಾಗಬಲ್ಲುದೇ? ಒಂದು ಸ್ಪರ್ಧೆ ಸೋಲು ಗೆಲುವಿನ ಸ್ಪರ್ಧೆ ಆಗಬಾರದು. ಗೆಲುವಿನ ಗುರಿಯೇ ಪ್ರಧಾನವಾದರೆ ಪ್ರತಿಸ್ಪರ್ಧಿಯ ದಮನವೆ ಗುರಿಯಾಗಿಬಿಡುತ್ತದೆ.   ಒಟ್ಟಿನಲ್ಲಿ  ಪ್ರೇಕ್ಷಕನಿಗೆ ಉತ್ತಮವಾದುದನ್ನು ಕೊಡುವ ಸ್ಪರ್ಧೆಯಾಗಬೇಕು.   ಪ್ರತಿಸ್ಪರ್ಧಿಯ ಪ್ರತಿಭೆಯನ್ನು ಉತ್ತೇಜಿಸುತ್ತಾ ಅದಕ್ಕೆ ಮನ್ನಣೆ ನೀಡುತ್ತ ಸ್ಪರ್ಧಿಗಳು ಸ್ಪರ್ಥಿಸಿದರೆ ಅದು ಆರೋಗ್ಯಕರ ಸ್ಪರ್ಧೆಯಾಗಬಲ್ಲುದು.

ಇನ್ನು ಅಭಿಮಾನದ ವಿಚಾರವು ಇದಕ್ಕಿಂತ ಭಿನ್ನವಾಗಿಲ್ಲ. ಈ ಅಭಿಮಾನ ಪ್ರೀತಿ ಅದು ಬಲವಂತದಿಂದ ಸೆಳೆದು ಹುಟ್ಟಿಕೊಳ್ಳುವಂತಹುದಲ್ಲ. ಕುದುರೆಯನ್ನು ನೀರಿನ ಹತ್ತಿರ ತಂದು ಬಿಡಬಹುದು ಆದರೆ ಅದನ್ನು ನೀರು ಕುಡಿಯುವಂತೆ ಮಾಡಲು ಸಾಧ್ಯವೆ? ಆ ಪ್ರಚೋದನೆ ಅದಕ್ಕೆ ಮನಸ್ಸಿನಲ್ಲಿ ಹುಟ್ಟಬೇಕು. ಇಷ್ಟೇ ಆದರೆ ಪರವಾಗಿಲ್ಲ.   ಆದರೆ ಅದಕ್ಕೆ ನೀರನ್ನು ಕುಡಿವ ಅನಿವಾರ್ಯತೆಯನ್ನು ತಂದು ಇಡುವ ಪ್ರವೃತ್ತಿ ಮಾತ್ರ ವಿಚಿತ್ರವಾಗಿದೆ. ಇದೆಲ್ಲ ತಿಳಿದಿದ್ದರೂ ತನ್ನ ಅಭಿಮಾನವನ್ನೆ ಪುರಸ್ಕರಿಸಲ್ಪಡಬೇಕು ಎಂಬ ಪ್ರವೃತ್ತಿ ಹೇಗೆ ಅಹಂಕಾರವಲ್ಲದೆ ಅಗಿರಲು ಸಾಧ್ಯ? ಕನ್ನಡ ಚಲನ ಚಿತ್ರವನ್ನೇ ನೋಡಬೇಕೆಂದು ಬೇರೆ ಚಲನ ಚಿತ್ರ ಬಹಿಷ್ಕರಿಸಿದಂತೆ ಅಲ್ಲವೆ? ಮನಸ್ಸಿಂದ ಪ್ರೇರಣೆಯಾದದ್ದು ಪರರಿಗೆ ತೊಂದರೆಯಾಗದ ರೀತಿಯಲ್ಲಿ ತಮ್ಮ ಅಭಿಮಾನ ಬೆಳೆಸುವುದು ಅಪರಾಧ ಅಥವಾ ನಿಂದಾರ್ಹ ಎಂದಾದರೆ ವ್ಯಕ್ತಿಸ್ವಾತಂತ್ರ್ಯಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿದೆ? ಅಭಿಮಾನ ಪ್ರೀತಿಯ ಪ್ರವೃತ್ತಿಯಲ್ಲಿ ಹುಟ್ಟಬೇಕು.  ಬಲವಂತದ ಸೆಳೆತವಾದಷ್ಟು ಅದು  ವ್ಯತಿರಿಕ್ತ ಆಗುವ ಸಂಭವವೇ ಜಾಸ್ತಿ. ಇಂತಹ ಸಾಮಾನ್ಯ  ಜ್ಞಾನವು ಇಲ್ಲದಿದ್ದರೆ ಪರರನ್ನೆ ಅಪರಾಧಿಗಳನ್ನಾಗಿ ಚಿತ್ರಿಸುವಲ್ಲಿ ಉದ್ಯುಕ್ತವಾಗುತ್ತದೆ ಮನಸ್ಸು. ನನ್ನ ಅಭಿಮಾನ ಯಾರಿಂದ ಸಾಲಪಡೆದದ್ದು ಅಲ್ಲ .ಎರವಲು ವಸ್ತುವೂ ಅಲ್ಲ. ಅದು ನನ್ನಲ್ಲೇ ಉದ್ದೀಪನಗೊಂಡ ಸಾಮನ್ಯ ಮಾನಸಿಕ ಭಾವನೆ. ಯಾವುದೇ ರೀತಿಯಲ್ಲಿ ಸಮಸ್ಯೆಯಾಗದ ಈ ಅಭಿಮಾನ ಹೀಗೆ ಇರಲಿ ಅಲ್ಲವೆ.?

ಜನನಿಯ ಒಡಲಿನ ಹಾಲಿನ ರುಚಿ ಜನನದಿಂದಲೇ ನೋಡಿ ಮರಣದವರೆಗೂ ಆ ಅನುಭವ ಉಳಿಸುವ ನಮ್ಮ ಸಂಸ್ಕಾರ ಹುಟ್ಟಿನಿಂದಲೆ ಕಂಡು ಅನುಭವಿಸಿದ ಕಲೆಯ ಅಭಿಮಾನವನ್ನು ಸದಾ ಜಾಗ್ರತವಾಗಿರಿಸದೆ?


ಅಭಿಮಾನವು ವಿಬ್ಭಿನ್ನವಾಗಿರಲಿ ಪ್ರೀತಿ ಹಂಚಿಹೋಗಲಿ ಅದರೆ ವೈಷಮ್ಯಮಾತ್ರ ಹುಟ್ಟದಿರಲಿ ಎಂಬ ಸಧ್ಬಾವನೆ ಸದಾಶಯವನ್ನು ಹೊತ್ತು ಸದಾ ಉಲ್ಲಸಿತವಾಗಿರುವ  ಶುದ್ದಸಂಸ್ಕಾರದ ಪರಿಸರ ಬೆಳೆಸೋಣ.

Sunday, December 5, 2010

ಪೂರ್ವ ಸಿದ್ದತೆಯಲ್ಲಿ.

ಬೆಂಗಳೂರಿನಲ್ಲಿರುವ ನಮ್ಮ ಯಕ್ಷಗಾನ ಅಭಿಮಾನಿಗಳೆಲ್ಲ ಸೇರಿ ಈ ಬಾರಿ ಅಪೂರ್ವವಾದ ಒಂದು ಕಾರ್ಯಕ್ರಮ ರೂಪಿಸುವ ಮಹತ್ವದ ನಿರ್ಧಾರ ತೆಗೆದುಕೊಂಡೆವು. ಬಹುಶಃ ಸುಪ್ತವಾಗಿದ್ದ ಬಯಕೆಯನ್ನು ಬಡಿದೆಬ್ಬಿಸುವ ಪ್ರಚೋದನೆ ಇದಾಗಿ ನನಗೆ ಭಾಸವಾಯಿತು. ಯಕ್ಷಗಾನದ ಹಿರಿಯ ಸರ್ವಮಾನ್ಯ ಶ್ರೀ ಬಲಿಪ ನಾರಾಯಣ ಭಾಗವತರಿಗೆ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಇದಕ್ಕೆ ನಿಮಿತ್ತವಾಗಿಬಿಟ್ಟಿತು.    ನಾನು ಮತ್ತು ಮಿತ್ರ ಬರೆಕೆರೆ ವೇಣು ಸೇರಿ ಈ ಯೋಚನೆಗೆ ಹುಟ್ಟುಹಾಕಿ ಚಾಲನೆಗೆ ಕೊಟ್ಟೆವು. ಆರಂಭದಲ್ಲಿ ನನಗೆ ಅಶೆ ಇದ್ದರೂ ನಿರೀಕ್ಷೆ ಇರಲಿಲ್ಲ. ಇದಕ್ಕೆ ಕಾರಣ ಹಲವು. ಇದೇ ಅಂತರ್ಜಾಲ ಪುಟಗಳಲ್ಲಿ ವ್ಯಕ್ತಪಡಿಸಿದಂತೆ ಅದೇಕೋ ಬಲಿಪ್ಪರ ಕಾರ್ಯಕ್ರಮ ಇಲ್ಲಿನ ಯಾವುದೇ ಸಂಘಸಂಸ್ಥೆಗಳೆಲ್ಲ  ಆಶ್ಚರ್ಯಕರ ರೀತಿಯಲ್ಲಿ ಔದಾಸಿನ್ಯ ತೋರಿಸುತ್ತಿದ್ದುದು. ಹಲವರಲ್ಲಿ ಹೇಳಿಯು ಈ ಮಹನೀಯ ಕಲಾವಿದರ  ಕಾರ್ಯಕ್ರಮಕ್ಕೆ ಯಾರೂ ಮನ ಮಾಡದಿದ್ದುದು ಒಂದು ಮುಖ್ಯಕಾರಣ. ಮತ್ತೆ ಬೆಂಗಳೂರಲ್ಲಿ ಯಕ್ಷಗಾನದಂತಹ ಕಾರ್ಯಕ್ರಮ ರೂಪಿಸುವುದು ಅತ್ಯಂತ ಶ್ರಮದಾಯಕ ಕೆಲಸ. ಮುಖ್ಯವಾಗಿ ಯೋಗ್ಯವಾದ ಸ್ಥಳ. ಇಲ್ಲಿ ಹೆಚ್ಚಿನ ರಂಗ ಮಂದಿರವಾಗಲಿ ಸಭಾಭವನವಾಗಲಿ ಯಕ್ಷಗಾನದಂತಹ ಅಬ್ಬರದ ಕಾರ್ಯಕ್ರಮಕ್ಕೆ ಹೊಂದಿಕೆಯಾಗುವುದಿಲ್ಲ. ಹೊರಾಂಗಣ ಸ್ಥಳಗಳಲ್ಲಿ ಕಾರ್ಯಕ್ರಮ ಮಾಡುವಲ್ಲಿ ಅನೇಕ ತಾಂತ್ರಿಕ ಹಾಗು ಹಲವು ಇತರ ತೊಂದರೆಗಳಿದ್ದುವು. ಮುಖ್ಯವಾಗಿ ಅನುಕೂಲ ಸ್ಥಳ ತುಂಬ ದುರ್ಲಭವೇ. ನಮ್ಮೂರಿನಲ್ಲಿ ಎಲ್ಲಿ ಬೇಕಾದರು ಯಕ್ಷಗಾನ ಕಾರ್ಯಕ್ರಮ ರೂಪಿಸುವುದಕ್ಕೆ ಕಷ್ಟವೇನೂ ಇಲ್ಲ ಎಂಬುದು ಇಲ್ಲಿನ ತೊಂದರೆ ಗಮನಿಸಿದಾಗ ಮನವರಿಕೆಯಾಗುವುದು. ಇನ್ನೋಂದು ಇಲ್ಲಿ ಪರಿಚಿತವಾಗಿ ಇದ್ದುಕೊಂಡು ಈ ಯಕ್ಷಗಾನ ಕಲೆ ಅಪರಿಚಿತ ಕಲೆಯೇ ಆಗಿಬಿಟ್ಟಿದೆ. ಮೊದಲಾಗಿ ಬೆಂಗಳೂರಿಗರಿಗೆ ಶುದ್ದ ಸಂಸ್ಕೃತಿಯ ಕಾರ್ಯಕ್ರಮಗಳು ಬೇಡವೇಬೇಡ. ಅಸಭ್ಯ ನರ್ತನದದ ಸಿನಿಮಾಟಿಕ್ ಡಾನ್ಸ್ ಕೀಳಭಿರುಚಿಯ ಕಿವಿಗಡಚಿಕ್ಕುವ ಸಿನಿಮಾ  ಅರ್ಕೆಸ್ಟ್ರ ಇವುಗಳೇ ಸಂಸ್ಕ್ರತಿಯ ದ್ಯೋತಕವೇ ಆಗಿರುವಾಗ ಈ ಶುದ್ದ ಕನ್ನಡ ಸಂಸ್ಕೃತಿಯ ಯಕ್ಷಗಾನ ಕಲೆ ತಿಳಿದಿದ್ದರೂ ಬೇಡ. ಹೀಗೆ ಹಲವು ಕಾರಣಗಳಿದ್ದುವು. ಅದೆಲ್ಲ ಈಗ ಪ್ರಸ್ತಾಪದ ವಿಚಾರಗಳೇ ಅಲ್ಲ.

ನಾನು ಆತಂಕದಿಂದದಲೇ ನಿತ್ಯ ಸಂಭಾಷಿಸುವ ಮಿತ್ರರಾದ ಕೆಲವರಲ್ಲಿ ಪ್ರಸ್ತಾಪವನ್ನು ಮುಂದಿಟ್ಟೆ. ಅಷ್ಟೇ... ಎಲ್ಲರೀಗೂ ಇದು ರೋಮಾಂಚನದ ಸಂಚಲನ ಉಂಟುಮಾಡಿದ ವಿಚಾರವಾಗಿತ್ತು.ಮುಂದಿನ ಯೋಚನೆಯಂತೆ ಸಮಾನ ಮನಸ್ಕ ಕೆಲವು ಮಿತ್ರರಲ್ಲಿ ಈ ಅಭಿಪ್ರಾಯ ಪ್ರಸ್ತಾಪಿಸಿ ಒಂದು ಸಂದೇಶವನ್ನು ಬಿಟ್ಟೆ.ಒಂದು ಮನವಿಯನ್ನು ಎಲ್ಲರ ಮುಂದಿಟ್ಟೆ. ಅರ್ಥ ಪೂರ್ಣ ಸಮಯೋಚಿತ ಸರಳ ಕಾರ್ಯಕ್ರಮದ ಆವಶ್ಯಕತೆಯನ್ನು ಮುಂದಿಟ್ಟೆ. ನಿರೀಕ್ಷೆಗೂ ಮೀರಿ ಎಲ್ಲರೂ ಸ್ಪಂದಿಸಿದ್ದು ಈ ಮಿತ್ರರ ಯಕ್ಷಗಾನ ಮೇಲಿನ ಅಭಿಮಾನ ಮಾತ್ರವಲ್ಲ ಬಲಿಪ್ಪರ ಮೇಲಿನ ಗೌರವ ಕಾಳಜಿ ವ್ಯಕ್ತವಾಯಿತು. ಇನ್ನು ಸುಮ್ಮನಿರುವುದು ಅಸಾಧ್ಯವಾಯಿತು. ಪದೆ ಪದೆ ಹಲವರು ಕರೆ ಮಾಡಿ ಕೇಳುವುದಕ್ಕೆ ತೊಡಗಿದಾಗ ನನ್ನ ಮಟ್ಟಿಗೆ ವಿಷಯ ಅತ್ಯಂತ ಗಂಭೀರ ಅನ್ನಿಸಿತು.

ಮುಂದಿನ ಹಂತದಂತೆ ಎಲ್ಲರ ಅಭಿಪ್ರಾಯದಂತೆ ಸರಳತೆಗೆ ಒತ್ತು ಕೊಟ್ಟು ಲಭ್ಯವಿದ್ದ ಕೆಲವೇ ಕಲಾವಿದರನ್ನು ಖಾತರಿಗೊಳಿಸಿ ತಾಳಮದ್ದಲೆಯನ್ನು ಸಂಘಟಿಸುವುದು. ಮತ್ತು ಅದಕ್ಕೆ ಬೇಕಾದ ಖರ್ಚುವೆಚ್ಚದ ಯೋಜನೆಯನ್ನು ಸಿದ್ದ ಪಡಿಸುವುದಾಗಿತ್ತು. ಹಾಗಾಗಿ ಮೊದಲು ಬಲಿಪ್ಪರಿಗೆ ಕರೆ ಮಾಡಿ ಅವರ ಲಭ್ಯತೆಯ ದಿನಾಂಕವನ್ನು ನಿಗದಿ ಮಾಡಿ ಜನವರಿ ೨೩ ನೆಯ ಭಾನುವಾರವನ್ನು ಇದಕ್ಕಾಗಿ  ನಿಶ್ಚೈಸಿಬಿಟ್ಟೆವು. ಅದರಂತೆ ಬಲಿಪ್ಪರೊಂದಿಗೆ ಚರ್ಚಿಸಿ ತಾಳಮದ್ದಲೆಗೆ ಒಂದು ಪ್ರಸಂಗ ನಿರ್ಣಯ ಮಾಡಿಕೊಂಡೆವು. ಪ್ರಸಂಗ ನಿರ್ಣಯಿಸುವಾಗ ಕೆಲವೊಂದು ಯೋಚನೆ ನನಗಿತ್ತು. ಅದರಂತೆ ಬೆಂಗಳೂರಿಗೆ ಸಾಧ್ಯವಾದಷ್ಟು ಅಪರೂಪವಾದ ಪ್ರಸಂಗವಾಗಬೇಕು. ಸಾಮಾನ್ಯವಾಗಿ ಎಲ್ಲೆಡೆಯೂ ತಾಳಮದ್ದಲೆಯಾಗಿ ಅದು ಬೆಂಗಳೂರಲ್ಲಿ ಆಯೋಜಿಸುವ ಪ್ರಸಂಗಗಳಾದ ಸಮರ ಸನ್ನಾಹ,ಕರ್ಣ ಪರ್ವ, ವಾಲಿವಧೆ ಇವುಗಳಿಂದ ಭಿನ್ನವಾದ ಪ್ರಸಂಗವಾಗಬೇಕೆಂದು ನಮ್ಮ ಬಯಕೆಯಾಗಿತ್ತು. ಇದರಂತೆ “ತಾಮ್ರಧ್ವಜ ಕಾಳಗ” ಅಥವಾ ವಿರಾಟಪರ್ವ.. (ಕೀಚಕವಧೆ) ಎಂಬ ಎರಡು ಪ್ರಸಂಗದಲ್ಲಿ ಒಂದನ್ನು ಆಯ್ಕೆ ಮಾಡಬೇಕಿತ್ತು. ಇದರಲ್ಲಿ ವಿರಾಟ ಪರ್ವಕ್ಕೆ ಸೂಕ್ತ ಕಲಾವಿದರು ಲಭ್ಯವಿಲ್ಲದೇ (ಎಲ್ಲರೂ ವ್ಯವಸಾಯಿ ಮೇಳಗಳಲ್ಲಿ ವ್ಯಸ್ತರಾಗಿರುವಾಗ) “ತಾಮ್ರಧ್ವಜ ಕಾಳಗ” ಎಂಬ ಪ್ರಸಂಗ ನಿರ್ಣಯಿಸಿಕೊಂಡೆವು. ಇದಕ್ಕಾಗಿ ನಿಗದಿಯಾದಂತೆ ಶ್ರೀ ಜಬ್ಬಾರ್ ಸ.ಮೊ. ಅತ್ಯಂತ ವಿಶಿಷ್ಟ ಪಾತ್ರಶೈಲಿಗೆ ಹೆಸರಾದ ಪ್ರಸಿದ್ದ ಕಲಾವಿದ, ಶ್ರೀ ರಾಧಾಕೃಷ್ಣ ಕಲ್ಚಾರ್ ಅತ್ಯಂತ  ಜನಪ್ರಿಯ ಯುವ ಅರ್ಥಧಾರಿ, ಮತ್ತೆ ಭಾವನಾತ್ಮಕ ಪಾತ್ರಕ್ಕೆ ಸೂಕ್ತರಾದ ಶ್ರೀ ಗಣರಾಜ ಕುಂಬಳೆ ಹೀಗೆ ಊರಿಂದ ಈ ಮೂವರು ಕಲಾವಿದರು ನಮಗೆ ಲಭ್ಯವಾದರು. ಇನ್ನುಳಿದ ಪಾತ್ರಕ್ಕೆ ಇಲ್ಲಿನ ನಮ್ಮ ಮಿತ್ರರೇ ಅದ ಯುವಕ ಶ್ರೀಸುಧನ್ವ ದೇರಾಜೆ ಯವರನ್ನು ನಿಶ್ಚೈಸಿಕೊಂಡು ಹಿಮ್ಮೇಳಕ್ಕೆ ಬಲಿಪ್ಪರ ಸಲಹೆಯನ್ನು ಗಣನೆಯಲ್ಲಿರಿಸಿಕೊಂಡು ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರನ್ನು ಮದ್ದಲೆ ವಾದಕರಾಗಿ ಮಾತಾಡಿಕೊಂಡೆವು. ಮತ್ತೆ ಚೆಂಡೆವಾದಕರಾಗಿ ಇಲ್ಲಿನ ಹವ್ಯಾಸಿ ಹಿಮ್ಮೇಳ ವಾದಕರಾದ ಶ್ರೀ ರವಿಶಂಕರ ಬಡೆಕ್ಕಿಲ ಅವರನ್ನು ಸಂಪರ್ಕಿಸಿದೆವು. ಅವರ ಒಪ್ಪಿಗೆಯೂ ಸಿಕ್ಕಿತ್ತು.


ಇನ್ನು ಕಾರ್ಯಕ್ರಮಕ್ಕೆ ಒಂದು ಸೂಕ್ತವಾದ ಸ್ಥಳದ ಹುಡುಕಾಟ ಶುರುವಾಯಿತು. ಅದ್ದೂರಿ ಭವನವನ ನಮ್ಮ ಯೋಜನೆಗೆ ಕೈಗೆಟುವ ಹಾಗಿರಲಿಲ್ಲ. ಇದಕ್ಕಾಗಿ ವೆಚ್ಚವನ್ನು ಹಿಗ್ಗಿಸುವುದು ನಮಗೆ ಸೂಕ್ತ ಅನ್ನಿಸದೆ ಸರಳವಾದ ಹೋರಾಂಗಣಕ್ಕೆ ತೆರೆದಿದ್ದ ಸಭಾಭವನದ ಅನ್ವೇಷಣೆಯಲ್ಲಿ ನಮ್ಮ ನರಸಿಂಹ ಭಟ್ಟರು ಚಾಮರಾಜ ಪೇಟೆಯ ನಾಲ್ಕನೆ ಮುಖ್ಯರಸ್ತೆಯಲ್ಲಿರುವ ಹತ್ವಾರ್ ಸಭಾಂಗಣವನ್ನು ನೋಡುವುದಕ್ಕೆ ಸೂಚಿಸಿದರು. ನಾನು ಮತ್ತು ಮಿತ್ರ ಮುರಳಿ ಬಿಡುವು ಮಾಡಿಕೊಂಡು ಚಾಮಾರಜ ಪೇಟೆಯ ಭಾರತೀಯ ವಿದ್ಯಾಸಂಸ್ಕೃತಿಯ ಕಾಲೇಜು ಪರಿಸರದ ಹತ್ವಾರ್ ಸಭಾಂಗಣವನ್ನು ನೋಡಿ ಸಮ್ಮತಿಸಿ ಮುಂದಿನ ಯೋಜನೆಯನ್ನು ನಿರೂಪಿಸುವ ಕಾರ್ಯಕ್ಕೆ ತೊಡಗಿದೆವು

ಇಲ್ಲಿಗೆ ತಾಳಮದ್ದಲೆಯ ಪೂರ್ವ ತಯಾರಿ ಸಿದ್ಧವಾಗಿಬಿಟ್ಟಿತು. ಇನ್ನು ಎಲ್ಲಾ ಮಿತ್ರರಿಗೆ ಈ ಶುಭ ಸಮಾಚಾರವನ್ನು ವಿತರಿಸುವ ಕಾರ್ಯವಾಗಬೇಕಿತ್ತು. ಮತ್ತು ಎಲ್ಲರೂ ಕೊಡಬಹುದಾಗಿದ್ದ ಧನಸಹಾಯವನ್ನು ಸ್ವೀಕರಿಸುವ ಮಹತ್ವದ ಕೆಲಸ ಇನ್ನು ಕೆಲವು ಕೆಲಸಗಗಳಿಗೆ ಚಾಲನೆ ಕೊಡಬೇಕಿತ್ತು. ಮುಖ್ಯವಾಗಿ ಪ್ರಚಾರ ನಮ್ಮ ಮುಂದಿನ ಹಂತದ ಪ್ರಮುಖ ಯೋಜನೆಯಾಯಿತು. ಅದರಂತೆ ಆಮಂತ್ರಣ ಪತ್ರಿಕೆಯ ವಿನ್ಯಾಸವನ್ನು ಮಾಡಲು ಉತ್ಸಾಹಿ ಯಕ್ಷಗಾನ ಅಭಿಮಾನಿ ಮಾತ್ರವಲ್ಲ ಬಲಿಪ್ಪರ ಪರಮ ಭಕ್ತ  ಶ್ರೀ ಲ. ನಾ. (ಲಕ್ಷ್ಮೀನಾರಾಯಣ) ಅವರಲ್ಲಿ ವಿನಂತಿಸಿದೆ ಕೇವಲ ಒಂದೇದಿನದಲ್ಲಿ ಸುಂದರ ವಿನ್ಯಾಸ ಅತ್ಯಂತ ಸಂಭ್ರಮದಿಂದ  ಸಿದ್ದಗೊಳಿಸಿದರು.ಇದನ್ನು ಹೇಳುವಾಗ ಒಂದು ಮಾತು ಹೇಳದಿರಲು ನನ್ನ ಮನಸ್ಸು ಒಪ್ಪುವುದಿಲ್ಲ.ಇಲ್ಲಿನ ಹಲವು ಯುವಕರ ಬಲಿಪ್ಪರ ಅಭಿಮಾನ..ಉಲ್ಲಾಸ್, ಲ. ನಾ. ಮುರಳಿ . ಶಿರಂಕಲ್ಲು (ಹೀಗೆ ಪಟ್ಟಿ ದೊಡ್ಡದಿದೆ..!!!) ನೋಡಿದಾಗ ನನ್ನದಾಂತಹ ಅಭಿಮಾನ ಏನಿದೆಯೋ ಅದು ಏನೂ ಅಲ್ಲ ಅಂತ ಅನ್ನಿಸಿಬಿಟ್ಟಿದೆ. ನಿಜಕ್ಕೂ ಅತ್ಯಂತ ಉತ್ಸಾಹಿ ವಿಶಾಲ ಹೃದಯೀ ಮಿತ್ರರು. ಇವರ ಮಾನಸಿಕ ಸ್ಪಂದನೆಗೆ ಪೂರಕವಾಗಿ ಪ್ರೇರೆಪಣೆ ಕೊಡುವಂತಹ ಯಕ್ಷಗಾನ ಕಾರ್ಯಕ್ರಮ ಅರ್ಥ ಪೂರ್ಣವಾಗಿ ಮಾಡುವುದು ಒಂದು ಮಧುರಾನುಭವ.

ಕರಪತ್ರ ವಿನ್ಯಾಸ ಅತ್ಯಂತ ಸುಂದರವಾಗಿ ಮೂಡಿಬಂತು. ಇದನ್ನು ಸಿಕ್ಕವರಿಗೆ ನೆನಪಿನ ಸ್ಮೃತಿ ಪಟಲದಲ್ಲಿ ಬಂದ ಎಲ್ಲರೀಗು ಈ ಮೇಲ್. ಮುಖಾಂತರ ಹಂಚಿಯಾಯಿತು. ಇನ್ನು ಮಹತ್ವದ ಒಂದು ಕೆಲಸ ಅಂದರೆ ಬೆಂಗಳೂರಿನಲ್ಲಿ ಯಕ್ಷಗಾನ ಚಟುವಟಿಕೆಯನ್ನು ಮಾಡುವಂತಹ ಸಂಘ ಸಂಸ್ಥೆಗಳಿಗೆ ಸಂದೇಶ ಕಳಿಸುವುದು. ನಿಗದಿಯಾದ ದಿನಾಂಕ. ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಕಾರ್ಯಕ್ರಮದ ಸ್ಥೂಲ ರೂಪುರೇಷೆಯನ್ನು ತಿಳಿಸುವುದು. ಇದರಿಂದ ಯಕ್ಷಗಾನ ಸಂಸ್ಥೆಗಳಿಗೆ ತಮ್ಮದೇ ಆದಂತಹ ಕಾರ್ಯಕ್ರಮ ರೂಪಿಸುವಲ್ಲಿ ಇದು ಸಹಾಯಕವಾಗುತ್ತದೆ. ಅದೇ ದಿನ ಆದಷ್ಟು ಬಿಡುವಾಗಿ ಸಿಗುವುದು ನಮ್ಮ ಉದ್ದೇಶ.  ಅದರಂತೆ ಸಾಧ್ಯವಾದಷ್ಟು ಯಕ್ಷಗಾನ ಸಂಘ ಸಂಸ್ಥೆಗಳಿಗೆ ಮುಂದಾಗಿಯೆ ನಮ್ಮ ಈ ಕಾರ್ಯಕ್ರಮದ  ಬಗ್ಗೆ ಸೂಚನೆಯನ್ನು ಕೊಟ್ಟೆವು. ಎಲ್ಲ ಸಂಘ ಸಂಸ್ಥೆಗಳು ಈ ಮಹತ್ತರವಾದ ಕಾರ್ಯಕ್ರಮಕ್ಕೆ ಸೂಕ್ತ ಭರವಸೆಯನ್ನು ಸಹಕಾರದ ಕೊಡುಗೆಯನ್ನು ನೀಡಿದವು. ಆ ಮೂಲಕ ಬಲಿಪ್ಪರ ಮೇಲಿನ ಅಭಿಮಾನ ಹಾಗು ಗೌರವವನ್ನು ವ್ಯಕ್ತಪಡಿಸಿದುವು. ಎಲ್ಲರೂ ಆದಿನಕ್ಕೆ ಸಹಾರಿಸುವುದಾಗಿ ಹೇಳಿದಾಗ  ನಿಜಕ್ಕೂ ಇದು ಅತ್ಯಂತ ಮಹತ್ವದ ವಿಷಯವಾಗಿ ಭಾಸವಾಯಿತು. ಬಲಿಪ್ಪರ ಕಾರ್ಯಕ್ರಮಕ್ಕೆ ಈ ಮಟ್ಟಿಗೆ ಗೌರವ ಲಭಿಸಿತಲ್ಲ. ಆ ದಿನ ಈ ಕಾರ್ಯಕ್ರಮಕ್ಕೆ ಮೀಸಲಿರಿಸಿದರೆ ಅದೊಂದು ಗೌರವಸಂಕೇತವಾಗಬಹುದು.

ಇನ್ನು ಹತ್ತು ಹಲವು ಗುರುತರವಾದ ಕಾರ್ಯಗಳಿವೆ. ನಡೆಯ ಬೇಕಾದ ಕಾರ್ಯಕ್ರಮದ ಪೂರ್ಣ ರೂಪುರೇಶೆಯನ್ನು ಸಿದ್ದಪಡಿಸಬೇಕಿದೆ. ಇದರ ನಡುವೆ ಧನ ಸಹಾಯ ಹೇಳಿದಂತೆ ಮಿತ್ರರು ನನ್ನನ್ನು ಅರಸಿ ಬಂದಿರುತ್ತಾರೆ. ತಮ್ಮದಾದ ದೇಣಿಗೆಯನ್ನು ದೇವಕಾರ್ಯವೆಂಬಂತೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನೀಡುತ್ತಿದ್ದಾರೆ. ನನ್ನ ಅಥವಾ ನಮ್ಮ ಮೇಲಿನ ವಿಶ್ವಾಸಕ್ಕಿಂತಲೂ ಬಲಿಪ್ಪರ ಮೇಲಿನ ಮತ್ತು ಯಕ್ಷಗಾನದ ಮೇಲಿನ ಅಭಿಮಾನ ಪ್ರೀತಿ ದೊಡ್ಡದು. ಇದನ್ನು ನೋಡಿದಾಗ ಹೃದಯ ತುಂಬಿ ಭಾವನೆಗಳಿಗೆ ಜಾಗವಿಲ್ಲದಂತಾಗಿದೆ. ಆ ಮಹತ್ವದ ದಿನ ಹಾಗು ಘಳಿಗೆಯ ನೀರೀಕ್ಷೆಯಲ್ಲಿ ನಾವೆಲ್ಲ ಮಿತ್ರರು ಕಾದು ಕುಳಿತಿದ್ದೇವೆ ಅಲ್ಲ ತುದಿಗಾಲಲ್ಲಿ ನಿಂತಿದ್ದೇವೆ. ಇದರ ಮಧ್ಯೆ ಮಿತ್ರರೊಬ್ಬರು ಸಲಹೆ ಕೊಟ್ಟರು. ಬೆಂಗಳೂರಲ್ಲಿ ಇಂತಹ ಕಾರ್ಯಕ್ರಮಕ್ಕೆ ಜನ ಹೊಂದಿಸುವುದು ತುಂಬ ಸಾಹಸದ ಕಾರ್ಯ. ನಿರೀಕ್ಷೆಯ ಜನಗಳು ಬರುವುದು ಕಷ್ಟಸಾಧ್ಯ. ಅದರೂ ನನ್ನ ಎಣಿಕೆಯೊಂದಿದೆ. ಕೇವಲ ಸೇರಿದ ಜನಸಂಖ್ಯೆ ಮಾತ್ರ ಕಾರ್ಯಕ್ರಮದ ಗುಣಕ್ಕೆ ಮತ್ತು ಕಾರ್ಯಕ್ರಮದ ಒಟ್ಟು ಮಾನಂದಡವಾಗುವುದಿಲ್ಲ.ಅದೊಂದು ಮೌಲ್ಯಮಾಪನವೂ ಅಲ್ಲ. ತಿನ್ನುವವರು ಕಡಿಮೆ ಎಂದು ಹಾಗಲಕಾಯಿ ತರಕಾರಿ ಅಗದೆ ಇರುತ್ತದೆಯೆ. ಅದರ ರುಚಿ ಬಲ್ಲವನೆ ಬಲ್ಲ.  ಜನಸಂದಣಿಯ ನಿರೀಕ್ಷೆಯ ಬಗ್ಗೆ ಆಷ್ಟೊಂದು ನಿರೀಕ್ಷೆಯೂ ಇಲ್ಲ. ನಮ್ಮ ಇರಾದೆ , ಇದೊಂದು  ಕೌಟುಂಬಿಕ ಬಂಧನದ ರೀತಿಯಲ್ಲಿ ಸರಳ ಸಹೃದಯ ಕಾರ್ಯಕ್ರಮವಾಗಬೇಕು.   ಹಾಗಾಗಿ ಬಂದವರು ನಿಜಕ್ಕೂ ಬಲಿಪ್ಪ ಅಭಿಮಾನಿ ಮಾತ್ರವಲ್ಲ ಯಕ್ಷಗಾನ ಅಭಿಮಾನಿಗಳೂ ಹೌದು ಎಂಬ ನಂಬಿಕೆ ನನ್ನದು.


ಕೊನೆಗೆ ಒಂದು ಮಾತು ನೀವು ಬರುವಿರಿ ತಾನೆ?




.



Sunday, November 28, 2010

ವೇಷ ಕಳಚಿದ ಸಮಯ ಭಾಗ ೬


ಈ ಕಥೆಯಕೊನೆಯ ಭಾಗವಿದು. ಇದರಿಂದ ಮೊದಲ ಭಾಗಗಳ ಲಭ್ಯವಾಗುವ ತಾಣಗಳ ಕೊಂಡಿಯನ್ನು ಕೊಡಲಾಗಿದೆ.
ಭಾಗ ೧    ಭಾಗ ೨  ಭಾಗ ೩  ಭಾಗ ೪   ಭಾಗ ೫



ಇನ್ನು ಮುಂದೆ ಓದಿರಿ......

ಭಾಗ ೬

ವೇಗವೊಂದೇ ಮಂತ್ರವೆಂದು ಪಠಿಸುವಂತಿದ್ದ ಬಸ್ ಡ್ರೈವರ್ ಬಸ್ಸನ್ನು ಬುಸುಗುಟಿಸುತ್ತಾ ಹೆದ್ದಾರಿ ಬದಿಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದಾಗ, ಆ ಎಕ್ಸ್ ಪ್ರೆಸ್ಸ್ ಬಸ್ ಪುನಃ ಹೊರಡುವಲ್ಲಿ ಉದ್ಯುಕ್ತವಾದಂತೆ ಭಟ್ಟರು ಅವಸರವಸರವಾಗಿ ಎದ್ದರು, ಅದು ಬಸ್ ನಿರ್ವಾಹಕನಿಗೆ ನಿಧಾನದಂತೆ ತೋರಿತು. ನಗರದಿಂದ ಬಿಡುವಾಗ ಹೊರಡಲು ಮನಸ್ಸಿಲ್ಲದಂತೆ ನಿಧಾನವಾಗಿ ಹೊರಡುವ ಈ ಬಸ್ಸು, ಅದರ ಹಿಂದಿನ ಬಸ್ ನವರೊಂದಿಗೆ ಜಗಳವಾಡಿಯೊ ಬೈದಾಡಿಯೋ ನಗರ ಬಿಡುವವರು ಮತ್ತೆ ಬೇಕಾದ ಊರಲ್ಲಿ ಪ್ರಯಾಣಿಕರನ್ನು ಇಳಿಸುವಾಗ ಮಾತ್ರ ಇನ್ನಿಲ್ಲದ ಅವಸರ ತೋರಿಸುವುದು ವಿಚಿತ್ರ ಅನ್ನಿಸಿಬಿಡುತ್ತದೆ. ನಿರ್ವಾಹಕನ ಅಸಮಧಾನ ನೋಟ ಗಮನಿಸಿದಂತೆ ಬಸ್ ನಿಂದ ಇಳಿದು ಸುತ್ತಲೂ ನೋಡಿದರು. ಹಲವು ಸಲ ಬರುವ ಪರಿಚಿತ ಸ್ಥಳ. ಸಾಧಾರಣ ನಗರದಂತಿದ್ದ ಬಸ್ ಸ್ಟಾಪ್ ಅದು. ಹೆಗಲಲ್ಲಿದ್ದ ಬ್ಯಾಗ್ ಅನ್ನು ಸರಿಪಡಿಸಿ ಅಲ್ಲಿಂದ ಕವಲು ಹೊಡೆದ ರಸ್ತೆಯ ಕಡೆಗೆ ನೋಡಿದರು. ದೂರದಲ್ಲಿದ್ದ ಇನ್ನೊಂದು ಬಸ್ ಸ್ಟಾಪ್ ನತ್ತ ನೋಡಿ ನಡೆದರು. ಇಂದಿನ ಆಟದ ಸ್ಥಳಕ್ಕೆ ಹೋಗಬೇಕಾದರೆ ಆ ಮೂಲಕ ಹೊರಡುವ ಬಸ್ ಹಿಡಿಯಬೇಕು.



ಬಸ್ ಸ್ಟಾಪ್ ನಲ್ಲಿ ಬಸ್ ಬರುವದಿಕ್ಕನ್ನೇ ನೋಡುತ್ತಿರಬೇಕಾದರೆ ತಮ್ಮ ಭುಜವನ್ನು ಹಿಂದಿನಿಂದ ತಟ್ಟಿದಂತಾಗಿ ತಲೆ ತಿರುಗಿಸಿ ನೋಡಿದರು. ಅದು ಅಲ್ಲೆ ಬಳಿಯಲ್ಲೆ ಪುಟ್ಟ ಅಂಗಡಿ ಇಟ್ಟುಕೊಂಡಿದ್ದ ತಿಮ್ಮಣ್ಣ ಭಟ್ಟರು. ಪರಿಚಿತ ನಗುವಿನಿಂದ...”ನಮಸ್ಕಾರ..ಸ್ವಾಮಿ. ಇವತ್ತು ನಮ್ಮೊರಲ್ಲೆ ಅಲ್ವ ಆಟ..?”

“ಹೌದು .” ಗೆಲುವಿನ ನಗು ಬೀರಿದರು.

“ಬಸ್ ಗೆ ಇನ್ನೊ ಸ್ವಲ್ಪ ಸಮಯ ಇದೆ. ಬನ್ನಿ ಇಲ್ಲಿ” ಎನ್ನುವ ಆಹ್ವಾನಕ್ಕೆ ಮಣಿದು ಅವರ ಜತೆ ಅಂಗಡಿ ಕಡೆ ನಡೆದರು. ಈ ಕಡೆ ಬಂದರೆ ಇದೇನೂ ಹೊಸತಲ್ಲ ತಿಮ್ಮಣ್ಣ ಭಟ್ಟರ ಅಂಗಡಿ ಕಾಲಯಾಪನೆಗೆ ಖಾಯಂ ಜಾಗ. ಸರ್ವೇಸಾಮಾನ್ಯ ಎಲ್ಲ ಹೆಚ್ಚಿನ ಎಲ್ಲಾ ಕಲಾವಿದರ ಪರಿಚಯ ಇರುವ ತಿಮ್ಮಣ್ಣ ಭಟ್ಟರಿಗೆ ಆಟದ ಕಲಾವಿದರೆಂದರೆ ಗೌರವ ಮಿಶ್ರಿತ ಸಲುಗೆ. ಹಾಗಾಗಿ ಇವರು ಕರೆದಾಗ ಬಂದರೆ ಒಳಗಿದ್ದ ಕುರ್ಚಿಯನ್ನು ಅಂಗಡಿಯ ಹೊರ ಜಗಲಿಯಲ್ಲಿಟ್ಟು ಕೂರಿಸಿ ಹತ್ತಿರದ ಬೊಂಡದವನಿಂದ ಒಂದು ಬೊಂಡ ತರಿಸಿ ಕುಡಿಸಿ ಸತ್ಕರಿಸುವುದು ಒಂದು ವಾಡಿಕೆ. ಮತ್ತೆ ಅದೂ ಇದು ಕ್ಷೇಮ ಸಮಾಚಾರ ಮಾತುಕತೆ.



ಹೊರಜಗುಲಿಯಲ್ಲಿಟ್ಟ ಕುರ್ಚಿಯಲ್ಲಿ ಕುಳಿತಾಗ ಒಂದು ರೀತಿ ಆರಾಮ ಎನಿಸಿತು. ಅಲ್ಪ ಮಟ್ಟಿನ ಬೇಗುದಿ ದೂರವಾದ ಅನುಭವ. ಪುತ್ತೂರಿನ ಆಟದ ದೊಡ್ಡದೊಂದು ಭಿತ್ತಿ ಪತ್ರ ಅಂಗಡಿ ಹೊರಗೆ ನೇತಾಡುತ್ತಿತ್ತು. ತುಸು ಹೊತ್ತಿನಲ್ಲೇ ಮಾಮೂಲಿನಂತೆ ಬೊಂಡ ಬಂತು. ಅದನ್ನು ಕುಡಿದಾಗ ಹಾಯೆನಿಸಿತು. ಅಂಗಡಿಯ ಅಲ್ಪ ಸ್ವಲ್ಪ ವ್ಯಾಪಾರದ ಮಧ್ಯೆ ತಿಮ್ಮಣ್ಣ ಭಟ್ಟರು ಮಾತಿಗೆ ತೊಡಗಿದರು. ಅಲ್ಲಿಗೆ ಬರುವ ಗಿರಾಕಿಗಳು ಕೆಲವೊಮ್ಮೆ ಸೇರುವುದು ಇರುತ್ತಿತ್ತು.



“ನಮ್ಮ ಮನೆ ಆ ಕಡೆ ಇರುವ ಪದ್ಮನಾಭ ಆಗಲೆ ಜೀಪು ತೆಕ್ಕೊಂಡು ಕೆಳಗಿನ ಪೇಟೆಗೆ ಹೋಗಿದ್ದಾನೆ. ಅವನ ಜೀಪಿನಲ್ಲಿ ಆರಾಮದಲ್ಲಿ ಹೋಗಬಹುದು. ಸಾಯಂಕಾಲದ ಈ ಬಸ್ಸುಗಳು ತುಂಬ ರಶ್ ಅಲ್ವಾ? “



ಇದು ಯಾವಾಗಲಿನ ಪರಿಪಾಠ. ಭಟ್ಟರ ಈ ಅಂಗಡಿ ಒಂದು ಸಂವಹನ ತಾಣ. ಆ ಕಡೆಯಿಂದ ಬರುವವರಿಗೆ ಒಂದು ಸಲ ಇಲ್ಲಿ ಮುಖ ತೊರಿಸಿ ಹೋಗುವ ವಾಡಿಕೆ. ತಿಮ್ಮಣ್ಣ ಭಟ್ಟರಿಗೂ ಇದೊಂದು ಜನಸೇವೆಯಂತೆ. ಆ ಕಡೆ ಈ ಕಡೆ ಓಡಾಡುವವರಿಗೆ ಇದು ತಮ್ಮ ಸಾಮಾನು ಸಲಕರಣೆ ಇಡಲು ಕೆಲವೊಮ್ಮೆ ಪ್ರಶಸ್ತ ಜಾಗ. ಮಾಮೂಲಿನಂತೆ ಬಂದ ಬೊಂಡ ಕುಡಿದ ಮೇಲೆ ಮಧ್ಯಾಹ್ನದ ನಂತರ ಇದ್ದ ಉದರ ಹಾಗು ಮಾನಸಿಕ ತಳಮಳ ಕೊಂಚ ಕಡಿಮೆಯಾಯಿತು.

ಯಾರೋ ಅಂಗಡಿಗೆ ಬಂದ ಗಿರಾಕಿಯೊಬ್ಬ ತಿಮ್ಮಣ್ಣನವರಲ್ಲಿ ಮೆಲು ದನಿಯಲ್ಲಿ ತುಳುವಿನಲ್ಲಿ ಭಟ್ಟರೆಡೆಗೆ ಸನ್ನೆಮಾಡಿ ಕೇಳಿದ “ಇಂಬೆರ್ ಆಟೊಡುಪ್ಪುನಾರ್ ಅತ್ತಾ?” ಎಷ್ಟೇ ಮೆಲುದನಿಯಲ್ಲಿ ಕೇಳಿದರೂ ಭಟ್ಟರ ಕಣ್ಣು ಅವನ ಮಾತಿನ ಹಾವಭಾವ ನೋಡಿಯೇ ಕೇಳಿದ ಪ್ರಶ್ನೆಯನ್ನು ಊಹಿಸಿತು. ಗುಂಪಿನಲ್ಲಿ ಬೇರೆಯಾಗಿ ಗುರುತಿಸಲ್ಪಡುವ ಅನುಭವ ಇಂದೇನಲ್ಲ. ಅದು ಹಲವು ಸಲದ ಅನುಭವ. ಜನ ಪ್ರವಾಹದಲ್ಲಿ ಬೇರೆಯಾಗಿ ನಿಲ್ಲುವ ಗುಣ ಬಹುಶಃ ಯಕ್ಷಗಾನ ಕಲಾವಿದ ರೂಡಿಸಿಕೊಂಡು ಬರಬೇಕೊ ಏನೋ?



ತಿಮ್ಮಣ್ಣ ಭಟ್ಟರಿಗೆ ಅಲ್ಲಿ ಪರಿಚಯಕ್ಕೆ ಕೊರತೆಇಲ್ಲ ಸ್ವಲ್ಪ ಹೊತ್ತಿನಲ್ಲೆ ಯಾರೊ ಒಬ್ಬ ಪರಿಚಿತರ ಬಂದ ಕಾರಿನಲ್ಲಿ ಭಟ್ಟರನ್ನು ಹತ್ತಿ “ಸರಿ ಕಾಣುವಾ” ನಗೆ ಬೀರಿ ಕಳಿಸಿದಾಗ ಬದಲಾದ ಪ್ರಸಂಗದಂತೆ ಕಾರಿನಲ್ಲಿ ಬೇರೆಯೆ ಮಾತುಕತೆ ಆರಂಭಗೊಂಡಿತು. ಎಲ್ಲ ಕಡೆಯಲ್ಲೂ ಒಂದು ಸಾಮಾನ್ಯ ವಿಷಯ ಪ್ರಸ್ತಾಪಕ್ಕೆ ಬರುವುದುಂಟು. ಇಂದಿನ ಯಕ್ಷಗಾನ ಮತ್ತು ಅದು ಬದಲಾದ ರೀತಿ. ಇದು ಕೇಳಿ ಕೇಳಿ ಕೆಲವೊಮ್ಮೆ ವೈರಾಗ್ಯ ಬರಿಸುವಷ್ಟರ ಮಟ್ಟಿಗೆ ಮುಟ್ಟುವುದು.ಮೊದಲಿನಂತೆ ಇದನ್ನು ಗಂಬೀರವಾಗಿ ಪರಿಗಣಿಸುವ ಹಾಗಿರಲಿಲ್ಲ. ಇಂತಹ ಸಂವಾದದಿಂದ ಯಾವ ಲಾಭವೂ ಇಲ್ಲ ಎಂದು ಭಾವಿಸಿದ್ದರು. ಪಾಯಸಕ್ಕೆ ಒಗ್ಗರಣೆ ರುಚಿ ನೋಡುವ ಮನೋಭಾವ ಇರುವಾಗ ಇಂದಿನ ಅಭಿರುಚಿಯನ್ನು ಬದಲಿಸಲು ಸಾಧ್ಯವೇ?



ಊರಿಂದ ಸ್ವಲ್ಪ ದೂರದಲ್ಲೆ ಬಯಲಲ್ಲಿ ಅಂದಿನ ಆಟ. ದೂರದಲ್ಲೆ ಯಕ್ಷಗಾನ ಡೇರೆ ಕಾಣುತ್ತಿತ್ತು. ನಸುಗತ್ತಲೆ ಗಾಢವಾಗುತ್ತ ಹೋಗುತ್ತಿತ್ತು. ಸುತ್ತ ಮುತ್ತ ಅಂಗಡಿ ಸಂತೆ ಅದೇ ಬೀಡಾ ಬೀಡಿ ಗುಟ್ಕಾದ ಮಾಲೆ ಎಲ್ಲವೂ ಮಾಮುಲು. ಕೇವಲ ಆಟದಲ್ಲಿ ಮಾತ್ರ ಬದಲಾವಣೆಯಲ್ಲ ಅಟದ ಬಯಲಲ್ಲಿ ಸೇರುವ ಈ ಸಂತೆಯೂ ಮೊದಲಿನಂತೆ ಕಲಾತ್ಮಕವಾಗಿದೆಯೆ? ಅಂದಿನ ಮಂದ ಬೆಳಕಿನಲ್ಲಿ ಮರದ ಬೆಂಚಿನಲ್ಲಿ ಕುಳಿತಾಗ ಗಾಜಿನ ಲೋಟದಲ್ಲಿ ತಂದಿಡುವ ಬಿಸಿ ಬಿಸಿ ತಾಜಾ ಚಹದ ರುಚಿ.. ಇಂದು ಯವಾಗಲೋ ಮಾಡಿದ ಚಹವನ್ನು ಫ್ಲಾಸ್ಕ್ ನಲ್ಲಿ ತುಂಬಿಸಿ , ಆ ಹಳಸಿದ ಚಹವನ್ನು ಸಣ್ಣ ಪ್ಲಾಸ್ಟಿಕ್ ಲೋಟದಲ್ಲಿ ಹೊಯಿದು ಕೊಡುವ ರುಚಿಯಲ್ಲಿ ಇದೆಯೆ? ಇಂದೆಲ್ಲವು ತಾಂತ್ರಿಕ.



ಜೋಬಿನಲ್ಲಿದ್ದ ಮೊಬೈಲು ಕಂಪಿಸಿದಾಗ ಯೋಚನಾ ಲಹರಿಯಿಂದ ಹೊರಬಂದ ಬಟ್ಟರು ಅದಾಗಲೇ ಚೌಕಿಯನ್ನು ಪ್ರವೇಶಿಸಿಯಾಗಿತ್ತು. ಮೈಕದಲ್ಲಿ ಯಾವುದೋ ಭಕ್ತಿ ಗೀತೆ ಕರ್ಕಶವಾದಂತೆನಿಸಿ, ಮೊಬೈಲ್ ನ್ನು ಕೈಯ್ಯಲ್ಲಿ ಹಿಡಿದು ನೋಡುತ್ತ ಚೌಕಿಯಿಂದ ಅನತಿ ದೂರಕ್ಕೆ ಭಟ್ಟರು ಬಂದು ಬಿಟ್ಟರು.



ಮುದ್ದಾಗಿ ಬರೆದ ಮಗನ ಹೆಸರು ಮೊಬೈಲ್ ಪರದೆಯಲ್ಲಿ ಬಂದಿತ್ತು. ಗಂಭೀರವಾಗಿ ಕರೆಯನ್ನು ಸ್ವೀಕರಿಸಿ “ಹೂಂ..” ಎಂದು ಗಂಭೀರವಾಗಿ ಹೂಂಗುಟ್ಟಿದರು. ಹರುಕು ಪಂಚೆ ತೆಗೆದು ಅದನ್ನು ಹೊಲಿಯಲು ಸೂಜಿ ನೂಲು ಹಿಡಿದು ಎಲ್ಲಿ ಹರುಕು ಇದೆ ಎಂದು ಹುಡುಕಿದಂತಾಯಿತು.ಮುಳ್ಳಿನ ಪೊದೆಯಲ್ಲಿ ಬಿದ್ದ ಬಟ್ಟೆ ತೆಗೆದು ಅಂಟಿಕೊಂಡ ಮುಳ್ಳನ್ನು ಒಂದೊಂದಾಗಿ ತೆಗೆವ ಪ್ರಯತ್ನ. ಎಷ್ಟು ಪ್ರಯತ್ನಿಸಿದರೂ ಅವನಿಗೇಕೆ ಬೇಜಾರು ಮಾಡಬೇಕೆಂದು ಇವರು ಅಪ್ಪನಿಗೇಕೆ ಸುಮ್ಮನೆ ನೋವು ಎಂದು ಅವನು ಹೀಗೆ ಮನಸ್ಸಲ್ಲಿದ್ದ ಹಲವು ಭಾವನೆಗಳು ಮನದಲ್ಲೇ ಸುಪ್ತ.



“ಅಪ್ಪಾ...” ಎಂದಿನ ಗಾಂಭೀರ್ಯ ಮಗನ ಧ್ವನಿಯಲ್ಲಿ ಗುರುತಿಸಲಿಲ್ಲ. ಒಂದು ವಿಧದ ತಣ್ಣಗಿನ ಅನುಭವ ಭಾಸವಾಯಿತು. ತಾನು ಅಪ್ಪನಾದ ಮೇಲೆ ಅಪ್ಪನೆಂದರೆ ಏನು ಎಂದು ತಿಳಿದುಕೊಳ್ಳುವ ತವಕವೇ? ಸಂಕೋಚ ದುಮ್ಮಾನ ರಹಿತ ಧ್ವನಿಗೆ ತನ್ನದೆಲ್ಲವನ್ನು ಒಂದು ಕ್ಷಣ ಮರೆತರು. ಇದೇ ಅಲ್ಲವೇ ಯಾವುದೇ ಹೆತ್ತವರು ತಮ್ಮ ಮಕ್ಕಳಿಂದ ಬಯಸುವುದು.ಕರಗಿ ಹೋಗುವುದು. ಇಲ್ಲಿ ಪ್ರದರ್ಶನದ ಸಂಪತ್ತು ವರ್ಚಸ್ಸು ನಿಜವಾದ ಸಂವಹನದಲ್ಲಿ ಗೌಣವಾಗಿಬಿಡುತ್ತದೆ. “ಅಪ್ಪಾ..” ಬೇರೆನೂ ಬೇಡ ಇದನ್ನೇ ಹತ್ತೂಸಲ ಸಾಲದು ಮತ್ತೂ ಮತ್ತೂ ಕೇಳುವ ಚಪಲ ಏಕೆ?ನಿಜವಾದ ದೇಹಾರೋಗ್ಯವು ಹೃದಯದ ಇಂತಹ ಹಿತವಾದ ಬಡಿತದಿಂದ ತುಂಬಿಬರುವುದು. ಕೈಯ್ಯಲ್ಲಿ ಹಿಡಿದ ಮೊಬೈಲ್ ಕಂಪಿಸಿತು, ಕಣ್ಣಂಚಿನ ನೀರು ಇನ್ನು ಮೊಬೈಲ್ ನೊಳಗೆ ಹೋದರೆ...ಮುಖ ತಿರುಗಿಸಿ ಶಲ್ಯದಿಂದ ಕಣ್ಣಂಚು ಸವರಿದರು.ಭಾರವಾದ ಹೃದಯ ತನ್ನೆಲ್ಲ ಭಾರವನ್ನು ಕಾಲಮೇಲೆ ಹಾಕಿದಂತೆ ಭಾಸವಾಯಿತು. ನರಗಳೆ ಎದ್ದು ಕಾಣುವ ಕೈ ಕಂಪಿಸುವ ಬೆರಳು ಹಿಡಿದ ಮೋಬೈಲನ್ನು ಮತ್ತು ಹಿಡಿತ ಬಿಗಿಗೊಳಿಸಿತು. ಈ ಮಾತು ಈ ಧ್ವನಿ ನುಸುಳಿ ಹೋಗದಿರಲಿ. ಬಹುಶಃ ತಮ್ಮ ಮನಸ್ಸು ಹಲವು ನೋವನುಭವಿಸಿ ಕರಗುವ ಹಂತಕ್ಕೆ ಬಂತೆ. ಹಲವು ಸಮಯ ಕಳೆಯಿಗುತು ಮಗನ ಜತೆ ಮಾತನಾಡದೆ. ಬಿಗುಮಾನದ ಬಂಧನ ಸಡಿಲವಾಯಿತು. ಮಗನ ಮಾತು ಮುಂದುವರಿಯಿತು. ಅಲ್ಲ ಇವರ ಮೌನ ಅದನ್ನು ಮುಂದುವರೆಸಿತು.

“ ಅಪ್ಪ ನಿಮ್ಮಂತೆ ನಾನು ಅಪ್ಪನಾದೆ. ಅಪ್ಪನಾದೆ ಈಗ ಮಗನಾಗಿ ಕಂಡೆ. ನಿಮ್ಮದರಲ್ಲಿ ನನ್ನ ಕಂಡು ನಾನೇನು ಎಂಬ ಅರಿವಾಗಿದೆ.” ತಾಳ ಮದ್ದಲೆಯ ಸಂಭಾಷಣೆಯಂತೆ ಭಾಸವಾಯಿತು.

“ಅಪ್ಪಾ ಇಂದು ನಿಜವಾಗಿಯೂ ನಿಮ್ಮನ್ನು ನೋಡುವ ಬಯಕೆಯಾಗಿದೆ. ನಿಮ್ಮನ್ನು ಒಂಟಿಯಾಗಿಸುವ ಬಯಕೆ ಇಲ್ಲ. ನಿಮ್ಮನ್ನ ನೋಡ್ತೇನೆ ಎಂದು ಭಾವಿಸಿ ನಿರಾಶೆಯಾಗಿದೆ. ಇಂದು ನಿಲ್ಲದೆ ಏಕಪ್ಪ ಹೋದಿರಿ? ನಾನು ಅಷ್ಟೂ ಬೇಡವಾದೆನೆ? ನಾಳೆ ನನ್ನ ಈ ಮಗನಿಗು ನಾನು ಹೀಗಾದರೆ? ನಿಮ್ಮಂತೆ ಸಹಿಸುವ ಶಕ್ತಿ ಎನಗುಂಟೇ? ತನ್ನಿರವೇನು ಈಗ ಅರಿವಾಗಿದೆ. ನಿಮ್ಮ ಮಮತೆ ಪ್ರೀತಿಯ ಅರಿವು ಈವಾಗ ಅಗಿದೆ. ನೋಡಬೇಕು. ಅಪರಾಧವೆಲ್ಲವೂ ಪರಿಮಾರ್ಜನಗೊಳ್ಳಲಿ. ಬಲವಂತ ಬಂಧನದಿಂದ ಮನಸ್ಸಿನ ಹಿಡಿದಿಟ್ಟ ಭಾವನೆಗಳೆಲ್ಲವೂ ಬಂಧಮುಕ್ತವಾಗಬೇಕು. ದ್ವೇಷ ಅಸಮಾಧಾನ ಇದ್ದಷ್ಟು ದಿನ ಮನಸ್ಸು ಮುದ್ದೆ ಮಾಡಿದ ಕಾಗದದಂತೆ ಎಲ್ಲವನ್ನು ಹಿಡಿದಿಟ್ಟಿತ್ತು. ಪುಣ್ಯ ಆ ಮುದ್ದೆ ಕಾಗದ ನೀರಿಗೆ ಬೀಳುವ ಮೊದಲೆ ಕೈಗೆ ತೆಗೆದು ಬಿಡಿಸುವ ಆಶೆಯಾಗಿದೆ. ಎಲ್ಲಿದ್ದೀರಾ?”





ಜಗತ್ತೇ ಹೀಗೆಯೆ? ಹೊಸಚಿಗುರೆಲೆಯ ಕಂಡು ಹಣ್ಣಾದ ಎಲೆ ತನ್ನಿರವನ್ನು ಅರಿಯಿತೆ? ಬರುವ ಚಿಗುರಿಗೆ ತನ್ನಿರವ ಬಿಡುವಾಸೆಯೆ?

ಏನೆಂದು ಹೇಳುವುದು. “ ನಾಳೆ ಬೆಳಗ್ಗೆ ಬರ್ತೆನೆ. ಚಿನ್ಮಯ” ಇಷ್ಟೇ ಹೇಳಿ ಮಾತು ಮುಗಿಸುವ ಆತುರ ತೋರಿದರು. ಇನ್ನು ಹೆಚ್ಚು ಹೊತ್ತು ಮಾತಾಡಿದರೆ ಭಾವನೆಗಳು ನಿಯಂತ್ರಿಸುವುದು ಕಷ್ಟವಾಗಬಹುದು. ಇದನ್ನು ನೋಡಿ ಸಹವರ್ತಿಗಳು ಏನೇನೋ ಊಹನೆ ಕಥೆ ಕಟ್ಟುವುದು. ಎಲ್ಲ ಮರೆತವರಂತೆ ಅದಷ್ಟು ಸ್ಥಿತ ಪ್ರಜ್ಞತೆ ಜಾರಿಕೊಂಡು ಮೊಬೈಲ್ ಜೋಬೊಳಗೆ ಸೇರಿಸಿ ಚೌಕಿಯತ್ತ ನಡೆದರು.



ಚೌಕಿಯಲ್ಲಿ ಅದಾಗಲೇ ಸಂಗೀತಗಾರನ ಗಜ ಮುಖದವಗೆ .ರಾಗದೊಂದಿಗೆ ಚೌಕಿ ಪೂಜೆ ಆರಂಭವಾಗಿತ್ತು. ಆಟ ಆಡಿಸುವ ಕುಟುಂಬದವರು ಮಿತ್ರರು ಎಲ್ಲ ಚೌಕಿಯಲ್ಲಿ ನೆರೆದಿದ್ದರು. ತಮ್ಮಂತ ಹಿರಿಯ ಕಲಾವಿದ ವೇಶವಿಲ್ಲದೇ ಚೌಕಿಗೆ ಹೊಕ್ಕಿದರೂ ಕೆಲವೊಮ್ಮೆ ರಂಗಸ್ಥಳ ಪ್ರವೇಶ ಮಾಡಿದ ಅನುಭವ ಆಗುತ್ತದೆ. ಎಲ್ಲರ ಗಮನ ರಂಗಸ್ಥಳದಲ್ಲಿ ಸೆಳೆದ ಹಾಗೆ ಇಲ್ಲೂ ಅದೇ ಅನುಭವ.ಆ ಊರಿನ ಹಿರಿಯ ನಿವೃತ್ತ ಕಲಾವಿದರೊಬ್ಬರು ಚೌಕಿಯೊಳಗೆ ಇದ್ದರು ಇವರನ್ನು ಕಂಡವರೆ ಕುಶಲೋಪಹರಿ ವಿಚಾರಿಸಿದರು.



ಇಂದು ಎರಡನೇ ಪ್ರಸಂಗದ ಜಾಂಬವತಿ ಕಲ್ಯಾಣದ ಜಾಂಬವನ ವೇಶ. ಇದೇ ಪ್ರಸಂಗದಲ್ಲಿ ಇನ್ನೋಬ್ಬನೂ ಜಾಂಬವನ ವೇಶ ಹಾಕಿ ಎರಡನೆ ವೇಶವಾಗಿ ಭಟ್ಟರ ಪ್ರವೇಶ. ಕೇಸರಿಯೊಂದಿಗಿನ ಯುದ್ದ ಆನಂತರ ಶ್ಯಮಂತಕ ಮಣಿ ಕೈವಶ ಅಲ್ಲಿವರೆಗೆ ಮೊದಲ ಕಲಾವಿದ ಅಭಿನಯಿಸಿ, ಪಾಂಚಜನ್ಯ ಮೊಳಗಿದಲ್ಲಿಂದ ಭಟ್ಟರ ಪ್ರವೇಶ.



ಇನ್ನೇನು ಕೆಲವೇ ಘಳಿಗೆ, ಭಟ್ಟರು ಇಂದು ನಿರಾಳವಾಗಿದ್ದರು. ಮಗನ ಜತೆ ಸಂಭಾಷಣೆಯ ಕಾರಣ ಮನಸ್ಸು ಹೆಚ್ಚು ಪ್ರಫುಲ್ಲಿತವಾಗಿತ್ತು. ಸಾಂಪ್ರದಾಯಿಕ ಕಿರೀಟವೇಶವಾಗಿ ಜಾಂಬವಂತ ತಯಾರಾದ. ಕಿರೀಟ ಧರಿಸಿ ಒಂದಿಷ್ಟು ನೀರು ಕುಡಿದು, ಎಲೆ ಅಡಿಕೆ ವಾಡಿಕೆಯಂತೆ ಬಾಯಿಗೆ ಜಗಿಯುತ್ತ, ರಂಗಸ್ಥಳ ತುಸು ದೂರವಿದ್ದುದರಿಂದ ಗೆಜ್ಜೆ ರಿಂಗಣಿಸುತ್ತ ನಿಧಾನವಾಗಿ ಅತ್ತ ನಡೆದರು. ರಂಗ ಸ್ಥಳದ ಹಿಂದೆ ಇರಿಸಿದ ಬೆಂಚಿನಲ್ಲಿ ನಿಧಾನವಾಗಿ ಕುಳಿತರು. ರಂಗದಲ್ಲಿ ಜಾಂಬವತಿ ಪದ... ಭಾಗವತರು ರಾಗದಲ್ಲಿ ಹಾಡುತ್ತಿದ್ದರು. “ ಜೋ ಜೊ. ಜೊ ಸುಕುಮಾರ....ತಂದೆಯಾಗಿಹ ಜಾಂಬವಂತಗೆ ಸರಿಯೆ.....” ಯಾಕೊ ಚಿನ್ಮಯನ ನೆನಪು ಒತ್ತಿ ಮರುಕಳಿಸಿ ಬಿಟ್ಟಿತು. ಆ ನೆನಪಿನ್ನೂ ಮಧುರವಾಗಿದೆಯಲ್ಲ. ಪುಟ್ಟ ಮಗುವನ್ನು ಲಲ್ಲೆಗರೆಯುವ ಘಳಿಗೆ. ಅಳುತ್ತ ಆಡುತ್ತ ಎಷ್ಟೊಂದು ಬಾರಿ ನನ್ನ ಮಡಿಲಲ್ಲಿ ಮಲಗಿದ್ದ. ಎಂತಹ ಸಂತೃಪ್ತಿಯ ದಿನಗಳವು.? ತನ್ನ ಹೆಗಲ ಮೇಲೆ ತಲೆಯನ್ನಿಟ್ಟು ನಿದ್ದೆಗೆ ಜಾರಿದ ಮಗುವಿನ ತಲೆಯ ಹಿಂಬದಿಯಿಂದ ಪೃಷ್ಠದ ವರೆಗೆ ಇದೇ ಕೈಯಿಂದ ಅದೆಷ್ಟು ಬಾರಿ ಮಮತೆಯಿಂದ ಕೈಯಾಡಿಸಿಲ್ಲ.? ನಿದ್ದೆಯಲ್ಲಿದ್ದಾಗ ಅದೆಷ್ಟು ಬಾರಿ ತಲೆ ನೇವರಿಸಿ ಮುದ್ದಿಸಲಿಲ್ಲ? ಅವನ ಮೇಲೆ ವೈಷಮ್ಯವೇ? ಯಾಕಾಗಿ? ತನ್ನದು ಮೊಂಡುತನವೆ? ಇರುವ ಈ ಎರಡು ದಿನದ ಬದುಕಲ್ಲಿ ಒತ್ತಿನಲ್ಲಿರುವವರಲ್ಲಿ ವೈಷಮ್ಯ ವಿದ್ದು ಸಾಧಿಸುವುದೇನು? ಎನೋ ಸ್ವಭಾವದೋಷ ಎಲ್ಲವು ನನ್ನ ಹಾದಿಗೆ ಬರಬೇಕೆಂದರೆ.. ತೀರ ಕ್ಷುಲ್ಲಕವೆಂದು ತೋರಿತು. ಏನೇ ಅಸಮಧಾನವಿದ್ದರು ವಿಶಾಲಮನೋಭಾವದಿಂದ ಸ್ವೀಕರಿಸಿ ಪರಿಹರಿಸಿಕೊಳ್ಳಬಹುದಾಗಿತ್ತು. ವೃಥಾ ಕಾರಣದಿಂದ ಬದುಕಿನ ಕೆಲವು ದಿನಗಳನ್ನು ಮನಸ್ಸಮಾಧಾನವಿಲ್ಲದೆ ಕಳೆದೆ ಎಂದನಿಸತೊಡಗಿತು. ಎಲ್ಲವೂ ಯಾವುದೋ ಒಂದು ಪ್ರೇರಣೆ. ಇಂದು ಇದ್ದ ಮನೋಭಾವ ಬದುಕಿನಲ್ಲಿ ಸ್ಥಾಯಿಯಾಗಿ ಉಳಿಯುವುದೇ ಇಲ್ಲ. ಇಂದು ತೋರಿದ ವರ್ತನೆ ಮುಂದೊಂದು ಘಳಿಗೆ ಹಾಸ್ಯಾಸ್ಪದವಾಗ್ ಕಾಣಬಹುದು. ದೀರ್ಘ ಬದುಕಿನಲ್ಲಿ ಅನುಭವ ಪಡೆದೆ ಬದುಕು ಮುಗಿಸಿಬಿಡುತ್ತೇವೆ. ನಿಡಿದಾದ ನಿಟ್ಟುಸಿರು ಬಿಟ್ಟರು.



“ ಅರೆರೆ ಪಿತನೇ ಕೆಟ್ಟೆ” ಎಂದು ಜಾಂಬವತಿ ರೋದಿಸತೊಡಗಿದಳು. ರಂಗಸ್ಥಳ ಅಂಚಿಗೆ ಸರಿದ ಭಟ್ಟರು ಮುಂದಿನ ಸರದಿಯ ಪದಕ್ಕೆ ಕಾದು ನಿಂತರು. ..ಅಬ್ಬರದ ಚೆಂಡೆಯೊಂದಿಗೆ ಜಾಂಬವಂತನ ಪ್ರವೇಶ.. ಸಭೆ ಕರತಾಡನ ತುಂಬ ಹೊತ್ತು ಉರಿಸಿದ ಮಾಲೆ ಪಟಾಕಿಯಂತೆ ಶಭ್ಡಿಸುತ್ತ ಇತ್ತು. .. “ ಆರೋ ಎನ್ನಯ ಗುಹೆಯಾ.... ಭಾಗವತರ ಪದಕ್ಕೆ ಅವೇಶ ಬಂದ ವಾನರನ ಅಪರಾವತಾರದಂತೆ ಭಟ್ಟರು ಕುಣಿದರು. ಸಭೆ ಮತ್ತೊಮ್ಮೆ ಕರತಾಡನ ದೊಂದಿಗೆ ಹುಚ್ಚೆದ್ದಿತು.



ಕೃಷ್ಣನೊಂದಿಗಿನ ಸಮರದಲ್ಲಿ ಬಸವಳಿದು ಕುಸಿದು ಕುಳಿತ ಜಾಂಬವ. ವೇಶದೊಳಗಿನ ಭಟ್ಟರು ಬಸವಳಿದಿದ್ದರೂ ಉತ್ಸಾಹ ಸುಮನಿರಿಸಲಿಲ್ಲ. ಬಂದ ಶ್ರೀ ಕೃಷ್ಣ ಭಗವಂತ ರಾಮನಾಗಿ ಕಂಡಾಗ ಕುಳಿತ ಭಟ್ಟರು ಭಾವುಕರಾದರು. “ ರಾಮ ಕೃಷ್ಣ.. ಹರೆ ಹರೆ..ಅಪರಾಧವೆಸಗಿದೆ ಭಗವಂತ..ಎಲ್ಲವು ನಿನ್ನ ಎಣಿಕೆಯಂತೆ ನಾವೆಲ್ಲ ಬರಿ ನಿಮಿತ್ತ ಮಾತ್ರ. ರಾಮನಲ್ಲದೇ ಯಾರು ಬೇಡವೆಂದು ಈ ವಿಪಿನದೊಳು ಏಕಾಂಗಿಯಾಗಿದ್ದೆ. ಎಂದಿಗೆ ನಿನ್ನ ದರ್ಶನವೊ ಎಂದು ಕಾದಿದ್ದೆ. ಇಂದು ಈ ಪಾಮರ ಬಲ್ಲೂಕನಿಗೊಲಿದೆಯ ಪರಮಾತ್ಮ. ನಾವೆಲ್ಲ ಸಂಸ್ಕಾರ ರಹಿತರು ಸ್ವಾಮಿ. ನಶ್ವರ ಜನ್ಮವನ್ನು ಇದುವೇ ಸ್ಥಾಯಿ ಎಂದು ತಿಳಿದ ಹುಂಬರು. ಬಂದೆ ನಿಂದೆ ನಿನ್ನ ದರ್ಶನದಿಂದ ಈ ಆತ್ಮ ಪಾವನವಾಯಿತು. ಇನ್ನು ಈ ಜನ್ಮ ವ್ಯರ್ಥವಾಗದು ಸ್ವಾಮಿ. ನಿನ್ನ ಧ್ಯಾನ ಅತ್ಮೊನ್ನತಿ ಒಂದೆ. ....” ನಿರರ್ಗಳ ಅರ್ಥಗಾರಿಕೆಯ ರಸಧಾರೆ ಹರಿಯಿತು. ಭಾವುಕರಲ್ಲಿ ಭಾವುಕರಾದರು ಭಟ್ಟರು. ಮಗಳು ಜಾಂಬವತಿಯನ್ನು ಶ್ರೀ ಕೃಷ್ಣನಿಗಿತ್ತು ಧನ್ಯನಾದ ಜಾಂಬವ ಹರೆ ರಾಮ ಹರೆ ಕೃಷ್ಣನೆಂದ.



ರಂಗಸ್ಥಳದಿಂದ ನಿರ್ಗಮಿಸುತ್ತ ಚೌಕಿಯೆಡೆಗೆ ಹೊಸಹುರುಪಿನಲ್ಲಿ ಬಂದರು ಭಟ್ಟರು. ದೇಹ ಬೆವರಿ ಬೆಂಡಾಗಿ ಬಸವಳಿದಿತ್ತು. ಚೌಕಿಗೆ ಬಂದವರೆ ಒಂದೊಂದಾಗಿ ವೇಶವನ್ನು ಕಳಚುತ್ತಾ ಹೋದರು. ಸಹಾಯಕ ಆಳು ಅನಿಸುರಿಸುತ್ತಾ ಹೋದಂತೆ ಜಾಂಬವ ಕರಗಿ ಹೋದ. ಎಲ್ಲ ವೇಶವೆಲ್ಲ ಕಳಚಿದಾಗ ಮೈಗೆ ಒಸರಿದ ಬೆವರಿಗೆ ಹತ್ತಿರವಿದ್ದ ಬೀಸಣಿಗೆಯಿಂದ ಗಾಳಿ ಹಾಕತೊಡಗಿದರು. ಆಳು ನೀರ ತಂಬಿಗೆಯನ್ನು ತಂದಿತ್ತ ಗಟ ಗಟನೆ ನೀರು ಕುಡಿದ ಭಟ್ಟರು ಚೌಕಿಯ ಇನ್ನೋಂದು ತೆರೆದ ಬದಿ ನೋಡುತ್ತಾರೆ ಸ್ತಭ್ಧವಾಗಿಬಿಟ್ಟರು. ಅಲ್ಲಿ ಚಿನ್ಮಯ ನಿಂತಿದ್ದ.!!!



ಒಂದು ಕ್ಷಣ ಅಷ್ಟೇ. ಹತ್ತಿರ ಸರಿದು ಹೋದ ಭಟ್ಟರು ಮಗನ ಕೈಹಿಡಿದು ಚೌಕಿಯ ಹೊರಗೆ ಇನ್ನೊಂದು ಬದಿಗೆ ಬಂದರು. ಇನ್ನು ಚಿನ್ಮಯ ತಡೆಯದಾದ ಅಪ್ಪನ ಸಣಕಲು ಶರೀರವನ್ನು “ ಅಪ್ಪಾ .....”ಎನ್ನುತ್ತ ತಬ್ಬಿಹಿಡಿದ. ಹೊರಗಿನಿಂದ ಕಾಣುವ ಬಡಕಲು ಎದೆಗೆ ತಲೆಗೊಟ್ಟ. ಆ ಎದೆಯ ವೈಶಾಲ್ಯವನ್ನು ಅಂದಾಜಿಸುವದಕ್ಕೆ ತೊಡಗಿದ. ಎಂತಹ ವಿಪರೀತ. ಕ್ಷುಲ್ಲಕ ಹಿತಾಸಕ್ತಿಗೆ ವೈಶಮ್ಯ ತಳೆದು ನಮ್ಮೊಳಗೆ ಅಂತರ ಹೆಚ್ಚಿಸಿ ಬದುಕನ್ನು ವಿಷಮವನ್ನಾಗಿಸುತ್ತೇವೆ.



ಎದೆಗೊತ್ತಿದ್ದ ಮಗನ ಶಿರವನ್ನು ನೇವರಿಸಿ ಕರಗಳಿಂದಲೇ ಸಾಂತ್ವಾನ ಹೇಳಿದರು. “ಚಿನ್ಮಯ ನನ್ನ ಬದುಕು ಇದೇ. ಈ ಆಟವಿಲ್ಲದೆ ನನ್ನಾಟವಿಲ್ಲ. ಇಷ್ಟು ದಿನ ನನ್ನ ಮೈಯಲ್ಲಿ ರಕ್ತಸಂಚಲನೆಗೆ ನಿಮಿತ್ತವಾದ ಈ ಆಟವನ್ನು ಬಿಟ್ಟು ಹೇಗೆ ದಿನ ಕಳೆಯಲಿ.?ಇರುವಷ್ಟು ದಿನ ರಂಗಸ್ಥಳದಲ್ಲಿ ಇರುವಾಶೆಯಲ್ಲ, ತೆವಳುವ ಬಯಕೆ ಇಟ್ಟುಕೊಂಡು ಇಲ್ಲಿವರೆಗೆ ಬಂದೆ.ನನಗಾಗಿಯೇ ಬದುಕಿದೆ. ನಿಮಗಾಗಿ ದುಡಿದೆ. ಇದನ್ನು ಬಿಟ್ಟು ನನ್ನ ದಿನವನ್ನು ನಾನು ಹೇಗೆ ರೂಪಿಸಬಲ್ಲೆನೋ ಅರಿಯೆ. ನಿನ್ನೊಂದಿಗೆ ನಾನಿರಬೇಕೋ ನನ್ನೊಂದಿಗೆ ನೀನಿರಬೇಕೊ ಎಲ್ಲವೂ ಸಮಷ್ಟಿಯಲ್ಲಿ ಒಂದೆ ತೆರನಾಗಿಯೆ ಇದೆ.ನಮ್ಮೊಳಗಿನ ಬದುಕಲ್ಲಿ ಲಾಭ ನಷ್ಟ, ಸೋಲು ಗೆಲುವಿನ ಅಳತೆಯೇಕೆ ಮಗನೇ?ಏನೋ ಇದನ್ನು ಬಿಟ್ಟ ಬದುಕನ್ನು ಊಹಿಸದಾದೆ. ಇರಲಿ..ನೋಡಿದೆಯಲ್ಲ ಸುತ್ತಲೂ ಇರುಳು. ಈ ಇರುಳೇ ನಮ್ಮಂತಹ ಕಲಾವಿದನಿಗೆ ಹಗಲಾಗಿದೆ. ಸೂರ್ಯ ಅಸ್ತಮಿಸುವಾಗಲೆ ಇಲ್ಲಿ ಬೆಳಕಿನ ಉದಯ ಎಂತಹ ವಿಚಿತ್ರ ಬದುಕು. ಆದರೂ ನಿನ್ನ ಮನಸ್ಸಿನ ಹಿತಕ್ಕೆ ಒತ್ತಿ ನಡೆಯಬಲ್ಲೆ.”



“ಅಪ್ಪ.. ಬೇಡಪ್ಪ ಅಂತಹ ಮಾತುಗಳು ಯಾವುದೂ ಅಗತ್ಯ ಇದೆ ಎಂದು ನನಗನಿಸುವುದಿಲ್ಲ.ನಾನು ಅಪ್ಪನಾದಗ ಅಪ್ಪನ ತುಮುಲ ಏನೆಂದು ಅರಿವಾಯಿತು. ಈ ಕೌಟುಂಬಿಕ ಜೀವನದಲ್ಲಿ ಪರ ಹಿತಕ್ಕಾಗಿ ತನ್ನ ತನವನ್ನು ಪ್ರತಿಯೊಬ್ಬರೂ ಧಾರೆ ಎರೆದರೆ ಅಸಮಾಧಾನ ಎಲ್ಲಿದೆ ಹೇಳಿ? ಇಕ್ಕಟ್ಟು ನಿಮಗೂ ಬೇಡ ನನಗೂ ಬೇಡ. ನಿಮ್ಮ ಬದುಕನ್ನು ನಿಮ್ಮ ರೀತಿಯಲ್ಲೆ ಕ್ರಮಿಸಿ. ನನಗೆ ಅದೇ ಅಪ್ಪ ಸಾಕು. ನಿಮ್ಮ ಮನಸ್ಸಿಗೆ ನೋವುಂಟುಮಾಡಿ ಯಾವ ಹಿತವೂ ನನಗೆ ಬೇಡ. ಆಟದ ವೇಶ ನೀವು ಕಳಚಿ ನಿಂತಿದ್ದೀರಿ. ಬದುಕಿನಲ್ಲಿ ನಿಜವೇಶ ಕಳಚಿ ನಾನು ನಿಂತಿದ್ದೇನೆ”



ಭಟ್ಟರಿಗೆ ನಿಜಕ್ಕು ಭಾವವೇಶ ಈಗಲೇ ಬಂದದ್ದು. ರಾಮನೋ ರಾವಣನೋ ಎರಡೂ ಒಂದೇ ಚೌಕಿಯಿಂದ ಬರುವ ವೇಶಗಳು. ರಂಗದಲ್ಲಿ ಬೇರೆ ಬೇರೆಯಾಗಿ ಗೋಚರವಾದರು ಕೊನೆಗೆ ಚೌಕಿಯಲ್ಲಿ ಪುನಃ ಒಂದಾಗಿಬಿಡುತ್ತವೆ.



“ಚಿನ್ಮಯ, ಇನ್ನು ಹೇಳುವುದು ಹಲವಿದ್ದರೂ ನಿನಗೆ ಹೇಳುವ ಅಗತ್ಯವಿಲ್ಲ. ನನ್ನ ಮನಸ್ಸರಿತು ನನ್ನ ಆತ್ಮದ ಬಳಿಗೇ ಬಂದೆ. ಮಗನ ಉಜ್ವಲ ಬದುಕು ಕೇವಲ ವಿದ್ಯೆ ಮತ್ತು ಸಂಪತ್ತಿನಿಂದ ಬರುವುದಿಲ್ಲ ಹಿರಿಯರ ಮನದಿರವ ಅರಿವ ಗೌರವಿಸುವ ಸಂಸ್ಕಾರವು ಇಂದಿನ ಜೀವನ ಕ್ರಮದಲ್ಲಿ ಅತ್ಯವಶ್ಯ ಆದರೆ ಯಾವ ಅಪ್ಪ ಅಮ್ಮನೂ ಹಿರಿಯರು ಈ ಬಗ್ಗೆ ಚಿಂತಿಸುವುದೇ ಇಲ್ಲ. ಹಾಗಾಗಿ ಲೋಕದಲ್ಲಿ ಸಂಸ್ಕಾರದ ಅಪಕರ್ಷವನ್ನು ಕಾಣುತ್ತೇವೆ. ಇರಲಿ ಇನ್ನು ಹೇಳದೆಯೇ ಅರಿಯಬಲ್ಲೆ ನೀನು. ಇರಲಿ ಮನೆಗೆ ಬರ್ತೆನೆ ಮಾತಡುವ. ಏನು ಬೇಕೋ ? ಹೇಗೆ ಬೇಕೊ ಮಾಡೋಣ. ದುಃಖಿಸಬೇಡ ನೀವೆಲ್ಲ ದುಃಖಿಸಿ ಕಣ್ಣೀರಿಡುವದನ್ನು ನೋಡುವ ಚೈತನ್ಯ ನನ್ನಲ್ಲಿ ಇಲ್ಲ, ಇರು ನಾನು ಎಲ್ಲ ತೆಗೆದು ಬಂದೆ. ಎನ್ನುತ್ತ ಮತ್ತೊಮ್ಮೆ ಮಗನ ಶಿರವನ್ನು ಬಲವಾಗಿ ಎದೆಗೊತ್ತಿ ಚೌಕಿಯತ್ತ ನಿಧಾನವಾಗಿ ನಡೆದರು.



ಕತ್ತಲಲ್ಲಿ ಕರಗಿ ಹೋಗುವ ಅಪ್ಪನ್ನನ್ನು ನೋಡುತ್ತ ಚಿನ್ಮಯ ನಿಂತುಕೊಂಡ. ನಿಧಾನವಾಗಿ ಸೊಂಟಕ್ಕೆ ಕೈಕೊಟ್ಟು ಉತ್ಸಾಹದಿಂದ ಭಾರವದ ಹೆಜ್ಜೆಯಿಡುತ್ತ ಅಪ್ಪಚೌಕಿಯೆಡೆಗೆ ಸರಿದು ಹೋದರು. ಕಲಾವಿದನಿಗೆ ಚೌಕಿಯೆಂದರೆ ಮನೆಯಿದ್ದಂತೆ. ವೇಶವಾಗಿಯೂ ವೇಶವಿಲ್ಲದೆಯೂ ತೊರಬಲ್ಲ ಜಾಗ. ಅದರಿಂದ ಅಪ್ಪನನ್ನು ಸೆಳೆವ ಯತ್ನ ಮಾಡಿದೆನಲ್ಲ. ಎಂತಹ ತಂದೆಗೆ ನೋವನ್ನು ಕೊಟ್ಟೆ. ಸಹಜವಾಗಿ ಬಿಗುವಿಲ್ಲದೆ ಬದುಕಬಹುದಿತ್ತು. ಅದು ಅರಿವಿಗೆ ಈಗ ಬಂತು. ಚಿನ್ಮಯ ಹಾಗೇ ನಿಂತು ಅಪ್ಪ ಹೋದೆಡೇ ನೋಡುತ್ತಲೇ ಇದ್ದ.





ಶುಭಂ



Monday, November 8, 2010

ಪ್ರಶಸ್ತಿ ವಿಜೇತ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ


ಕಳೆದ ಭಾನುವಾರ ಹಲವು ಯಕ್ಷಗಾನದ ಕಲಾವಿದರು ಪ್ರಶಸ್ತಿ ಪಡೆವ ಸಂಭ್ರಮದಲ್ಲಿದ್ದರು. ಹಲವು ಪತ್ರಿಕೆಯ ಮುಖಪುಟಗಳಲ್ಲೇ ಹೆಸರು ಮತ್ತು ಚಿತ್ರದೊಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ವಿವರ ಪ್ರಕಟವಾಗಿತ್ತು. ಕೆಲವರು ರಾಜ್ಯ ಮಟ್ಟದಲ್ಲಿ ಪ್ರಶಸ್ತಿಭಾಜನರಾದರೆ ಇನ್ನು ಕೆಲವರು ಜಿಲ್ಲಾಮಟ್ಟದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಂಡರು. ಯಕ್ಷಗಾನಕ್ಕೆ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಈ ಬಾರಿ ಆಯ್ಕೆ ಮಾಡಿದ ವ್ಯಕ್ತಿಗಳಲ್ಲಿ ನನ್ನ ಗಮನ ಸೆಳೆದ ವ್ಯಕ್ತಿ ಎಂದರೆ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ.ಸುಮಾರು ಎಪ್ಪತ್ತರ ದಶಕದಲ್ಲಿ ನನ್ನ ಬಾಲ್ಯದ ಸಮಯ. ಮಂಗಳೂರು ಪರಿಸರದಲ್ಲಿ ಆಗುತ್ತಿದ್ದ ಕಟೀಲು ಮೇಳಗಳಲ್ಲಿ ಕಂಡುಬರುತ್ತಿದ್ದ ಸಾಮಾನ್ಯ ಒಂದು ಮುಖ ಶ್ರೀ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು. ಸುರತ್ಕಲ್ ನ ಈ ಹಾಸ್ಯಗಾರರು ಅಂದಿನ ನಮ್ಮ ಬಾಲಕರಿಗೆ ಅಚ್ಚುಮೆಚ್ಚಿನ ಕಲಾವಿದರಾಗಿದ್ದರು. ತನ್ನ ಅದ್ಭುತ ಹಾಸ್ಯದಿಂದ ನಗಿಸುತ್ತಿದ್ದರಿಂದಲೋ ಏನೋ ರಂಗದಲ್ಲಿ ಇವರ ಮುಖ ಕಂಡೊಡನೆ ಮಕ್ಕಳು ನಾವು ಉತ್ಸುಕರಾಗುತ್ತಿದ್ದೆವು. ನೆಲ್ಲಿಕಟ್ಟೆ ಹಾಸ್ಯಗಾರರು ಸರಳ ಹಾಸ್ಯದಿಂದ ಪ್ರಸಿದ್ದರಾದವರು. ಬಲಿಪ್ಪರ ಸಾರಥ್ಯದಲ್ಲಿ ನಡೆಯುತ್ತಿದ್ದ ಕಟೀಲು ಮೇಳದಲ್ಲಿ ಹಾಸ್ಯಗಾರರಾಗಿ ಹತ್ತು ಹಲವು ಪಾತ್ರಗಳನ್ನು ಒಂದೇ ಇರುಳಲ್ಲಿ ಮಾಡುತ್ತಿದ್ದ ಇವರ ಪ್ರತಿಭೆ ಇಂದು ಯಾವ ಕಲಾವಿದನಲ್ಲೂ ಕಾಣುವುದು ಅಸಾಧ್ಯ.

ಅಂದು ಕಟೀಲು ಮೇಳದ ಆಟ ನಡೆಯುತ್ತಿದ್ದ ರಂಗಸ್ಥಳಕ್ಕೂ ಚೌಕಿಗೂ ಸುಮಾರು ದೂರವಿರುತ್ತಿತ್ತು. ಚೌಕಿಯಿಂದ ರಂಗಸ್ಥಳಕ್ಕೆ ಪದೇ ಪದೇ ಓಡಾಡುವುದು ಕಷ್ಟವಾಗುತ್ತಿದ್ದುದರಿಂದ, ಸಾಂದರ್ಭಿಕವಾಗಿ ಹಲವು ವೇಶವನ್ನು ಮಾಡುವ ಅನಿವಾರ್ಯ ಪಾತ್ರಧಾರಿಯಾಗಿ ಹಾಸ್ಯಗಾರ ತನ್ನ ಸ್ಥಾನವನ್ನು ನಿರ್ವಹಿಸಬೇಕಾಗುತ್ತಿತ್ತು. ದೇವಲೋಕದ ದ್ವಾರಪಾಲಕನಾದ ಮರುಕ್ಷಣವೇ ನಾರದಮುನಿಯ ಪಾತ್ರವೋ ವೃದ್ದ ಬ್ರಾಹ್ಮಣನ ಪಾತ್ರವೋ ಮಾಡಿ ಪ್ರಸಂಗ ನಡೆಗೆ ಸಹಕಾರಿಯಾಗಬೇಕಾಗಿತ್ತು.ಬೆಳಗಿನವರೆಗೆ ನಿರ್ವಹಿಸುವ ವೇಶಗಳ ಪರಿಕರಳನ್ನು ಅದಷ್ಟು ರಂಗಸ್ಥಳದ ಬಳಿಯಲ್ಲೇ ವ್ಯವಸ್ಥೆ ಗೊಳಿಸಿ, ದೂರದ ಚೌಕಿಗೆ ಹೋಗದೆ ರಂಗಸ್ಥಳದ ಬಳಿಯಲ್ಲೇ  ಕ್ಷಣದೊಳಗೆ ಬಗೆ ಬಗೆಯ ಪಾತ್ರವಾಗುವ ಇವರ ಪ್ರತಿಬೆ ಹಲವುಸಲ ಕಣ್ಣಾರೆ ಕಂಡವ ನಾನು. ನಾರದ ಕ್ಷಣಾರ್ಧದಲ್ಲಿ ದೇವದೂತನಾಗುವುದೋ, ವೃಧ್ಧ ವಿಪ್ರ ಗಡ್ಡ ಬಿಟ್ಟ ಸನ್ಯಾಸಿಯಾಗುವುದೊ, ಈ ಪರಿವರ್ತನೆಗೆ ಸೀಮೆಇಲ್ಲ.

ಇಂದಿನ ಕಾಲ ಮಿತಿ ಪ್ರದರ್ಶನದಲ್ಲಿ ಒಂದೋ ಎರಡೋ ಪಾತ್ರಕ್ಕೆ ಮಾತ್ರ ಸೀಮಿತವಾಗುವ ಸಮಯದಲ್ಲಿರುವ  ಕೆಲವು ಘಳಿಗೆಯಲ್ಲಿ ಕೆಲವೇ ಪಾತ್ರ ನಿರ್ವಹಿಸುವ ಹಾಸ್ಯ ಕಲಾವಿದರಿಗೆ ಇವರ ಹಲವು ಪಾತ್ರಗಳನ್ನು ಒಂದೇ ಇರುಳಲ್ಲಿ ಮಾಡಿಬಿಡುವ ಅಂದಿನ ದುಡಿಮೆ  ಅತ್ಯಧ್ಭುತವಾಗಬಲ್ಲುದು.ಪ್ರತೀ ಪಾತ್ರದ ದೃಷ್ಟಿಕೋನ ಒಂದೊಂದು ಬಗೆಯದು.  ಪೂರ್ವ ರಂಗದ ಆಹೂಹು ದಕ್ಕಿತ್ತು ... ಎಂದು ಎಲ್ಲಾ ದೇವರನ್ನು ಪ್ರಾರ್ಥಿಸುವಲ್ಲಿಂದ ತೊಡಗಿ ಮುಂಜಾವಿನವರೆಗೆ ಎಷ್ಟೊಂದು ಬಗೆ ವೇಶಗಳು? ವೈವಿಧ್ಯಮಯ ಪಾತ್ರಗಳು. ಅದು ಹಾಸ್ಯ ಎಂದು ನೇರ ಹೇಳಿಬಿಡುವ ಹಾಗಿಲ್ಲ. ನವರಸಗಳನ್ನು ಪೂರ್ಣವಾಗಿ ಬಿಂಬಿಸಬಲ್ಲ ಪಾತ್ರಗಳು. ಇದನ್ನು ನಿರ್ವಹಿಸುವ ಇವರಂತಹವರ ಕಲಾಸಾಮರ್ಥ್ಯವನ್ನು ಒಂದು ಬಾರಿ ಯೋಚಿಸಿ. ಇಂದು ಸಿನಿಮಾದಲ್ಲಿ ಈ ಬಗೆಯ ಪಾತ್ರ ನಿರ್ವಹಿಸುವ ಕಲಾವಿದರಿದ್ದಾರೆಯೆ? ಇದ್ದರೆ ಭಹುಶಃ ಅವರಿಗೆ ಪದ್ಮಭೂಷಣ ಸಿಗುವಲ್ಲಿ ಹಲವರ ಅಹವಾಲು ಸಲ್ಲುತ್ತಿತ್ತು. ಇಂತಹ ತಾರತಮ್ಯದಲ್ಲಿ ಇವರಿಗೆ ಜಿಲ್ಲಾರಾಜ್ಯೋತ್ಸವ ಮನ್ನಣೆ ಒಲಿಯಿತಲ್ಲ ಅದು ಎಲ್ಲದಕ್ಕಿಂತಲೂ ಶ್ರೇಷ್ಠ. ಇವರ ನೈಪುಣ್ಯವನ್ನು ಕಂಡವರು ನೀಡುವ ಮನ್ನಣೆಯಲ್ಲವೆ?

ಶ್ರೀ ನೆಲ್ಲಿಕಟ್ಟೆ ಹಾಸ್ಯಗಾರರು ಅಂದು ಕಟೀಲು ಮೇಳದ ಚಿರಪರಿಚಿತ ಹಾಸ್ಯಗಾರರು. ಮಂಗಳೂರು, ದೇರೆಬೈಲು, ಉರ್ವಸ್ಟೋರ್ ಮುಂತಾದ ಪರಿಸರಗಳಲ್ಲಿ ಅಂದು ಇವರ ಹಾಸ್ಯವನ್ನು ಕಂಡವರು ಇವರನ್ನು ಮರೆಯಲು ಸಾಧ್ಯವಿಲ್ಲ. ವ್ಯವಸಾಯಿ ಮೇಳಗಳಲ್ಲಿ ಜನಪ್ರಿಯ ಹಾಸ್ಯಗಾರರಾದ ವಿಟ್ಲ ಜೋಷಿ, ಮಿಜಾರು ಇಂಥವರ ಜನಪ್ರಿಯತೆಯಲ್ಲೂ ಹರಕೆ ಬಯಲಾಟಗಳಲ್ಲಿ ತನ್ನದೇ ಸ್ಠಾನದಿಂದ ಗುರುತಿಸಲ್ಪಟ್ಟವರು ಇವರು. ದ್ವಂದ್ವಾರ್ಥ ವಿಲ್ಲದ ಸರಳ ಹಾಸ್ಯ ಅಬಾಲ ವೃದ್ದರಾದಿ ಎಲ್ಲರು ಅಸ್ವಾದಿಸಬಹುದಾದ ಈ ಹಾಸ್ಯ ಇಂದು ಬದಲಾಣೆಯ ಗಾಳಿಯಲ್ಲಿ ಪಡೆದುಕೊಂಡ ಮಜಲನ್ನು ಸ್ವತಃ ಇವರೇ ಕಂಡರೆ ಬೆಚ್ಚಿಬೀಳಬಹುದು. ಜನಮಾನಸದಿಂದ ಅಥವಾ ರಂಗದಿಂದ ಮರೆಯಾಗುತ್ತಿರುವ ಇಂತಹ ಕಲಾವಿದರನ್ನು ಸ್ಮೃತಿ ಪರದೆ ಮೇಲೆ ತರಿಸುವಂತೆ ಸನ್ಮಾನಿಸಿದ ಮಹನೀಯರೂ ಅಭಿನಂದನಾರ್ಹರು.




Wednesday, November 3, 2010

ಪ್ರಶಸ್ತಿಗೆ ಬಂತು ಮೌಲ್ಯ

ಮೊನ್ನೆ ದಿನಾಂಕ  ನವೆಂಬರ್ ಒಂದರಂದು ಮಂಗಳೂರಿಂದ ಬೆಂಗಳೂರಿಗೆ ಬರುವಾಗ, ರಾತ್ರಿ ಪುತ್ತೂರಿಗೆ ತಲುಪುತ್ತಿದ್ದಂತೆ ಬೆಂಗಳೂರಿಂದ ಬಂದ ಕರೆಗೆ ಉತ್ತರಿಸಿ ಬಲಿಪ್ಪರೊಂದಿಗೆ ಮಾತನಾಡಿ ಮುಗಿಸಿದಾಗ ಒಂದು ದೊಡ್ಡ ನಿಟ್ಟುಸಿರು ಬಂದು ಮನಸ್ಸು ಭಾವ ಪರವಶವಾಗಿಬಿಟ್ಟಿತು. ಆಗ ತಾನೇ ಬಲಿಪ್ಪರು ಸನ್ಮಾನಿತರಾಗಿ ಹೊರಬಂದು ಅತ್ಯುತ್ಸಾಹದಲ್ಲಿ ಮಾತಾಡಿದರು. ಸಹಜವಾಗಿ ಯಕ್ಷಗಾನದ ವಿಚಾರ ಬಂದರೆ ಬಲಿಪ್ಪರ ಉತ್ಸಾಹ 
ಪ್ರಶಸ್ತಿಫಲಕದೊಂದಿಗೆ ಶ್ರೀ ಬಲಿಪ ನಾರಾಯಣ ಭಾಗವತರು
ಎಲ್ಲರಿಗೂ ತಿಳಿದ ವಿಚಾರ. ಅವರ ಸಮರ್ಪಣ ಭಾವ ತೊಡಗಿಸಿಕೊಳ್ಳುವ ರೀತಿ ಎಲ್ಲವೂ ವಿಶಿಷ್ಟ. ಆ ವೈಶಿಷ್ಟ್ಯದ ಮೌಲ್ಯಗಳಿಗೆ ಅಂಗೀಕಾರದ ಸರಕಾರಿ ಮುದ್ರೆ ಬಿದ್ದಂತೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಬಂದು ಬಿಟ್ಟಿತು. ಬಲಿಪ್ಪರ ಸಂತೋಷ ಕೇವಲ ಪೋನಿನಲ್ಲಿ ಧ್ವನಿ ಮೂಲಕ ಅನುಭವಿಸುವ, ಕಾಣುವ ಯೋಗ ಮಾತ್ರವೇ ನನಗೆ ಇದ್ದುದು. ನಾನಲ್ಲಿ ದೂರದ ಊರಿನಲ್ಲಿದ್ದೆ. ನಮ್ಮ ಕರಾಡ ಭಾಷೆಯಲ್ಲಿ ದಣಿವರಿಯದೆ ಮಾತಡಿದ ಬಲಿಪ್ಪರ ಧ್ವನಿ ಈಗಲೂ ಕೇಳುತ್ತಿದೆಏನೋ ಎಂಬ ಭ್ರಮೆ ಇನ್ನೂ ಬಿಟ್ಟಿಲ್ಲ.

ಊರಿನ ಕಲಾವಿದ ವರ್ಗದಲ್ಲಿ ಸಂಪೂರ್ಣ ಯಕ್ಷಗಾನ  ಕ್ಷೇತ್ರದಲ್ಲಿ ಯಾರಿಗೂ ಮಾತ್ಸರ್ಯ ವಿಲ್ಲದೆ ಎಲ್ಲರ ಅಭಿಪ್ರಾಯದಲ್ಲಿ ಸಹಮತವಿತ್ತು. ಈ ಪ್ರಶಸ್ತಿ ಬಲಿಪ್ಪರಿ ತುಂಬ ತಡವಾಗಿ ಬಂದಿದೆ. ಮತ್ತು ಇವರು ಎಂದೋ ಇದಕ್ಕೆ ಅರ್ಹವ್ಯಕ್ತಿಯಾಗಿ ಬಿಟ್ಟಿದ್ದರು. ಮತ್ತೊಂದು ಸೋಜಿಗವೆಂದರೆ ಬಲಿಪ್ಪರಿಗೆ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ತೀರಾ ಅನಿರೀಕ್ಷಿತ. ಮನೆಯಲ್ಲಿ ಆರಾಮ ಆಸನದಲ್ಲಿ ಕುಳಿತು ಸಾಯಂಕಾಲ ಟಿ. ವಿ. ವಾರ್ತೆ ನೋಡುತ್ತಿದ್ದವರಿಗೆ ತಮ್ಮ ಹೆಸರನ್ನು ಅಲ್ಲಿ ಕಂಡು ಅಚ್ಚರಿಯಾಯಿತು. ಬಹುಶಃ ಈ ಅನುಭವ ಕೆಲವೇ ವ್ಯಕ್ತಿಗಳಿಗೆ ಅಗುವುದಕ್ಕೆ ಸಾಧ್ಯ. ಎಂದೂ ಪ್ರಶಸ್ತಿಯ ಹಿಂದೆ ಹೋಗದ ಬಲಿಪ್ಪರಿಗೆ ಸ್ವತಃ ಅವರ ಆಯ್ಕೆ ಅವರಿಗೇ ಅಚ್ಚರಿಯಾದದ್ದರಲ್ಲಿ ವಿಶೇಷವೇನೂ ಇಲ್ಲ.ಪ್ರಶಸ್ತಿಗೆ ಅರ್ಜಿ ಹಾಕಿ ಅದರ ಹಿಂದೆ ಪುಸಲಾವಣೆಗೆ ಮಾರ್ಗ ಹುಡುಕುವ ಪ್ರವೃತ್ತಿ ಬಲಿಪ್ಪರಿಗೆ ಕನಸಲ್ಲು ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಈ ಬಗೆಯ ಪ್ರಶಸ್ತಿಯಲ್ಲಿ ಅವರಿಗೆ ಔದಾಸಿನ್ಯ, ಸರಕಾರೀ ಅದೇಶದ ಬಗ್ಗೆ ಏನೊಂದು ಅರಿವಿರದ ಮುಗ್ಧ ಬಲಿಪ್ಪರಿಗೆ ಯಾರನ್ನು ಸಂಪರ್ಕಿಸಬೇಕು ಎಂದು ತಿಳಿಯದಾಗ ಅವರ ಅಭಿಮಾನಿಗಳ ಉತ್ಸಾಹದ ಸಹಕಾರ ಮಾತ್ರ ಇಲ್ಲಿ ಸ್ಮರಣಾರ್ಹ. ಊರಿನ ಪಯಣದಲ್ಲಿದ್ದ ನನಗೆ ಕರೆ ಬಂದು ಅದರ ವ್ಯವಸ್ಥೆಗೆ ಹಲವಾರು ಕಡೆ ಕರೆ ಮಾಡುವ ಕೆಲಸ ನನ್ನದಾಯಿತು. ಹೆಚ್ಚಿನ ಎಲ್ಲ ಮಿತ್ರರು ಊರಲ್ಲಿದ್ದುದರಿಂದ ಬೆಂಗಳೂರಲ್ಲಿ ವ್ಯವಸ್ಥೆ ಮಾಡುವುದಕ್ಕೆ ಸ್ವಲ್ಪ ಹೆಣಗಾಡಬೇಕಾಯಿತು. ಉಳಕೊಳ್ಳುವ ವ್ಯವಸ್ಥೆ ಯಿಂದ ಸರಕಾರಿ ಪಾಸು ಕೊಳ್ಳುವ ಮುಂತಾದ ವ್ಯವಸ್ಥೆಗಳಿಗೆ ಅವರ ಅಭಿಮಾನಿವೃಂದ ನೀಡಿದ ಸಹಾಯ ಹಸ್ತ ನಾನು ಸ್ಮರಿಸಲೇಬೇಕು. ಎಲ್ಲ ಕಾರ್ಯಕ್ರಮ ನಿರೀಕ್ಷೆಯಂತೆ ಸಂಪನ್ನವಾದಾಗ ಬಲಿಪ್ಪರೊಂದಿಗಿನ  ಉತ್ಸಾಹದ ಸಂಭಾಷಣೆ ನನ್ನನ್ನು ನಿರಾಳ ಮನಸ್ಸಿನವನನ್ನಾಗಿ ಮಾಡಿತು.
ರಾಜ್ಯಪ್ರಶಸ್ತಿಪತ್ರ ಹಾಗು ಸ್ವರ್ಣಪದಕ


ಮೊದಲದಿನ ಮೂಡಬಿದ್ರೆ ಆಳ್ವಾಸ್ ನುಡಿಸಿರಿ ಸಮಾರಂಭದಲ್ಲಿ ತಡ ಸಾಯಂಕಾಲದವರೆಗೂ ಸನ್ಮಾನ ಸ್ವೀಕರಿಸಿ ಅಲ್ಲಿಂದ ಬೆಳ್ಳಾರೆ ಸಮೀಪದ ಕಲ್ಮಡ್ಕದ ಕಾರ್ಯಕ್ರಮದಲ್ಲಿ ಭಾಗವಹಿಸಿ.ಅಲ್ಲಿನ ಜನತೆ ಅದ್ಭುತ ಕರತಾಡನದಿಂದ ಸಮಾರಂಭಕ್ಕೆ ಸ್ವಾಗತಿಸಿದ್ದು ಎಲ್ಲರು ಬಲಿಪ್ಪರಿಗೆ ಸಂದ ಪ್ರಶಸ್ತಿಯನ್ನು ಸಂಭ್ರಮಿಸಿದ್ದು ವಿಶೇಷ. ಯಾರಿಗೂ ನೋವುಂಟು ಮಾಡದ ಬಲಿಪ್ಪರು ಕಲ್ಮಡ್ಕದಿಂದ ಒಪ್ಪಿಕೊಂಡ ಯಕ್ಷಗಾನ ಬಯಲಾಟದ ಭಾಗವತಿಕೆಯನ್ನು ಸಂಘಟಕರ ಕೇಳಿಕೆಯಂತೆ ಬಿಟ್ಟು  ಬೆಂಗಳೂರಿಗೆ ಬಂದು ಇಲ್ಲಿ ಪ್ರಶಸ್ತಿ ಸ್ವೀಕರಿಸುವುದೆಂದರೆ ಬಲಿಪ್ಪರು.  ಮೂಡಬಿದ್ರೆ , ಕಲ್ಮಡ್ಕ, ಹೀಗೆ ಹಲವು ಸಮಾರಂಭದಲ್ಲಿ ಅಭಿಮಾನದ ಅಭಿನಂದನೆ ಸ್ವೀಕರಿಸಿ  ಅಂತೇ ಹಲವೆಡೆ ಒಂದೇ ದಿನದ ಅವಧಿಯಲ್ಲಿ ಸನ್ಮಾನಿತರಾದ ಬಲಿಪ್ಪರ ಸಾಧನೆ ಅಮೋಘವಲ್ಲವೆ?
ಈ ಸಲದ ರಾಜ್ಯೋತ್ಸದಲ್ಲಿ ಹಲವಾರು ಅರ್ಹರು ಪ್ರಶಸ್ತಿಗೆ ಆರ್ಹರಾದದ್ದು ವಿಶೇಷವಾಗಿದೆ. ಇದರಲ್ಲಿ ಶ್ರೀ ಕೊಡಕ್ಕಲ್ಲು ಗೋಪಲಕೃಷ್ಣ ಹಾಸ್ಯಗಾರರದ್ದು ಸೂಕ್ತ ಅಯ್ಕೆ. ಕಡು ಬಡತನದಲ್ಲಿ ದುರ್ಭರ ಜೇವನ ನಡಸುವ ಇವರಿಗೆ ಈ ಇಳಿ ವಯಸ್ಸಿನಲ್ಲಿ ಇದು ಸ್ವಲ್ಪ ತುಸು ಸಹಕಾರಿಯಾಗಿ ಬದುಕನ್ನು ಅಧರಿಸೀತು. ನಿಜಕ್ಕೂ ಇವರ ಮಟ್ಟಿಗೆ ಸಕಾಲಿಕ ಪ್ರಶಸ್ತಿ. ಹಾಗೆಯೆ ಬಡಗಿನ  ನೆಬ್ಬೂರು ನಾರಯಣ ಭಾಗವತರು, ಇವರಿಗೆ ಎಂದೋ ಬರಬೇಕಾದ ಪ್ರಶಸ್ತಿ ಇಂದು ಬಂದಿದೆ. ಬಡಗಿನಲ್ಲಿ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ತನ್ನದೇ ಸ್ಥಾನ ಮಾನದಿಂದ ಗುರುತಿಸಲ್ಪಡುವ ಇವರಿಗೆ ಈ ಕೊಡುಗೆ ಸ್ತುತ್ಯರ್ಹ, ಹಾಗೆ ಇನ್ನೊಬ್ಬ ಮಹನೀಯರೆಂದರೆ, ಉಡುಪಿ ಯಕ್ಷಗಾನ ಕೇಂದ್ರದ ಶ್ರೀ ಸಂಜೀವ ಸುವರ್ಣರು. ಇವರ ಯಕ್ಷಗಾನ ಚಟುವಟಿಕೆ, ಸಾಧನೆ ಸರಕಾರ ಈಗಲಾದರು ಗುರುತಿಸಿದ್ದು ಸೂಕ್ತವಾಗಿದೆ. ಇವರ ಮುಂದಿನ ಚಟುವಟಿಕೆಗೆ ಇದು ಅತ್ಯುತ್ತಮ ಚೈತನ್ಯವನ್ನು ನೀಡುವುದರಲ್ಲಿ ಅನುಮಾನವಿಲ್ಲ. ನಿಸ್ವಾರ್ಥ ಕಲಾಸೇವೆಗೆ ಸಂದ ಗೌರವ. ಈ ಎಲ್ಲ ಮಹನೀಯರಿಗೂ ಹೃದಯತುಂಬಿ ಅಭಿನಂದನೆ ಸಲ್ಲಿಸೋಣ.

ಹೀಗೆ ಈ ಸಲದ ರಾಜ್ಯೋತ್ಸವದಲ್ಲಿ ಸರಿ ಸುಮಾರು ೧೮೦ ಪ್ರಶಸ್ತಿ ವಿಜೇತರಿದ್ದರು ಶೇಕಡವಾರು ಎಷ್ಟು ಜನ ಪ್ರಶಸ್ತಿಗೆ ಅರ್ಹರೋ ಆ ಪಟ್ಟಿ ನೋಡಿದರೆ ಗಾಬರಿಯಾದರೂ ಅದೆಲ್ಲವನ್ನು ಮರೆಸುವಂತೆ ಯಕ್ಷಗಾನದ ಹಲವು ಸಾಧಕರಿಗೆ ಈ ಪ್ರಶಸ್ತಿ ಸಂದು ಈ ಪ್ರಶಸ್ತಿಗೆ ನಿಜ ಮೌಲ್ಯ ಬಂದಂತಾಗಿದೆ.

ಮತ್ತೊಮ್ಮೆ ಶ್ರೀ ಬಲಿಪ್ಪ ನಾರಾಯಣ ಭಾಗವತರಿಗೆ ಮಾತ್ರವಲ್ಲ ಜತೆಗೆ ಶ್ರೀ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರೀ ಕೊಡಕ್ಕಲ್ಲು ಗೋಪಾಲ ಕೃಷ್ಣ ಹಾಸ್ಯಗಾರರಿಗೆ ಮತ್ತು ಶ್ರೀ ಸಂಜೀವ ಸುವರ್ಣರಿಗೆ ಹ್ರಿತ್ಪೂರ್ವಕ ಅಭಿನಂದನೆಗಳು. ಇನ್ನೂ ಹೆಚ್ಚಿನ ಕಲಾ ಸೇವೆಯನ್ನು ಮಾಡುವಲ್ಲಿ ಭಗವಂತನು ಚೈತನ್ಯ ರೂಪವಾಗಿ ಇವರೆಲ್ಲರಿಗೆ ಕರುಣಿಸಲಿ ಎಂಬ ಹಾರೈಕೆಗಳು.


 ಚಿತ್ರಕೃಪೆ: ಶ್ರೀ ವೇಣು ಬರೆಕೆರೆ.



Saturday, October 30, 2010

ಮಿತ್ರನ ವರ್ಗಾವಣೆ


ಅತ್ಮೀಯ  ಮಿತ್ರ ಸುಬ್ಬಣ್ಣ ತುಮಕೂರಿನ ಸಿದ್ದಗಂಗಾ ಕಾಲೇಜಿನಿಂದ ವರ್ಗವಾದರು. ಮೊದಲ ಕೆಲವು ದಿನಗಳು ಗೂಗಲ್ ಟಾಲ್ಕ್ ನಲ್ಲಿ ಸುಬ್ಬಣ್ಣನ ಹೆಸರ ಮುಂದೆ ಇರುವ ಚುಕ್ಕೆ ಹಸುರಾಗಿರದೆ ನಸು ಕಪ್ಪಾಗಿ ಗೊಚರಿಸಿ ಅವರ ಗೈರು ಹಾಜರಿಯನ್ನು ಎತ್ತಿ ತೋರಿಸುತ್ತಿತ್ತು. ಹೌದು ಸುಬ್ಬಣ್ಣ ವರ್ಗಾವಣೆಗೊಂಡರು. ನಮ್ಮ ಮಿತ್ರ ಬಳಗದಲ್ಲಿ ಅತಿ ಮುಖ್ಯ ಬದಲಾವಣೆ ಎಂದರೆ ಸುಬ್ಬಣ್ಣನ ವರ್ಗಾವಣೆ. ನಿತ್ಯವೂ ನಿಗದಿತ ಸಮಯದಲ್ಲಿ ಗೂಗಲ್ ನಲ್ಲಿ ಹರಟುವ ಸುಬ್ಬಣ್ಣ ದೂರದ ಉಜಿರೆ ಧರ್ಮಸ್ಥಳದ ಅಯ್ಯನ ಕೃಪಾ ಛತ್ರದ ಒಳಗೆ ಸೇರಿಕೊಂಡರು, ಅಂದರೆ ಉಜಿರೆ ಕಾಲೇಜ್ ನಲ್ಲಿ ಅಧ್ಯಾಪನವನ್ನು ತೊಡಗಿಸಿಕೊಂಡರು. ವೃತ್ತಿ ರೀತ್ಯಾ ಮಹತ್ತರ ಬದಲಾವಣೆ. ತುಮಕೂರಿನ ಕಾಲೇಜ್ ನಲ್ಲಿ ಐ ಪೋಡ್ ಕಿವಿಗೆ ಇಟ್ಟು ಕೇಳೀದ ಯಕ್ಷಗಾನ ಕೇಳಿ ಸಾಕಾದಾಗ “ಇನ್ನು ಹೊಸತ್ತು ಯಾವುದು ಇದೆ ರಾಜಣ್ಣ ?” ಎಂದು ಕೇಳುವ ಸುಬ್ಬಣ್ಣ,ತುಮಕೂರಿನ ಧೂಳಿನ ರಸ್ತೆಗೆ ವಿದಾಯ ಹೇಳಿ ದೂರದ ಉಜಿರೆಯಲ್ಲಿ ತೊಡಗಿಕೊಂಡರು. ಈಗ ಉಲ್ಲಾಸದ ಲವವಲವಿಕೆಯ ಸುಬ್ಬಣ್ಣನಲ್ಲಿ ನಾನೇ ಕೇಳುವಂತಾಗಿದೆ  “ ಹೊಸತ್ತು ಏನಿದೆ ಸುಬ್ಬಣ್ಣ?”

ಹೌದು, ಈಗ ಊರಲ್ಲಿ ಸುಬ್ಬಣ್ಣ ಏಕಾಂಗಿಯಾಗಿ..(ನಾವು ಮಿತ್ರರು ಇಲ್ಲದೆ) ಯಕ್ಷಗಾನ ಸಪ್ತಾಹ ಆಚರಿಸುತ್ತಿದ್ದಾರೆ. ಐ ಪೋಡ್ ತೆಕ್ಕೋಂಡು , ಬಿಡುವು ಮಾಡಿಕೊಂಡು ಯಕ್ಷಗಾನ ತಾಳ ಮದ್ದಲೆ, ಬಯಲಾಟದಲ್ಲಿ ಚೆನ್ನಾಗಿ ಧ್ವನಿ ಮುದ್ರಿಸಿ ಮತ್ತು ಮತ್ತು ಕೇಳುತ್ತ ಸುಖಿಸುತ್ತಿದ್ದಾರೆ. ನನಗಂತೂ ಇದು ಸ್ವಲ್ಪ ಹೊಟ್ಟೆಕಿಚ್ಚು ತರಿಸುತ್ತದೆ. ಮನೆಯ ಊಟ...ಊರಿನ ಆಟಾ ಆಹಾ ಸುಬ್ಬಣ್ಣನ ಭಾಗ್ಯವೇ.?

 ತಾಳಮದ್ದಲೆಗೆ ಹೋಗಿ ಅದನ್ನು ನೋಡಿ ಕೇಳಿ ಎಂಜಾಯ್ ಮಾಡಿ ಮತ್ತೆ ಕೆಲವುದಿನ ಧ್ವನಿ ಮುದ್ರಿಸಿದ ಮುದ್ರಿಕೆಯನ್ನು ಕೇಳಿ..ಇದೊಂದು ಬಗೆಯ ಅನುಭವ...ನೀವು ಮದುವೆ ಜಂಬರದ ಅಥವಾ ಇನ್ಯಾವುದೋ ಸಮಾರಂಭದ ಊಟ ಗಡದ್ ಹೊಡೆದು ಹೊಟ್ಟೇ ತುಂಬಿಸಿ ಕೊಂಡರೂ, ಕೆಲವೊಮ್ಮೆ ಅಡುಗೇ ಶಾಲೆಗೆ ನುಗ್ಗಿ ಅಡುಗೆ ಭಟ್ಟರಲ್ಲಿ ಕುಶಲ ಸಮಾಚಾರ ಮಾತಾಡುತ್ತ.. ಇವತ್ತು ಸಾರು ಲಾಯಕ್ಕಾಗಿದೆ ಅಂತ ಒಂದು ಸ್ಟೀಲ್ ಲೋಟಕ್ಕೆ ಹಾಕಿ ಚಪ್ಪರಿಸುವುದಿಲ್ಲವೇ? ಹಾಗೆ. ಈ ತಾಳ ಮದ್ದಲೆ ಗಾನವೈಭವ ಆಟ ಇವುಗಳ ಧ್ವನಿ ಮುದ್ರಣ ನಂತರ ಪದೇ ಪದೇ ಕೇಳುವುದೆಂದರೆ ಈ ಸಾರು ಲೋಟಕ್ಕೆ ಹಾಕಿ ಕುಡಿದಂತೆ. ಅದರ ಅನುಭವ ಸವಿದವನೇ ಬಲ್ಲ. ಬೆಳಗ್ಗಿನ ಉಪಾಹಾರಕ್ಕೆ ಅವಲಕ್ಕಿ ಉಪ್ ಕರಿ ಮೂರು ಮೂರು ಸಲ ಹಾಕಿಸಿ ತಿಂದರು ಮತ್ತೆ ಎಲ್ಲವು ಆದ ಮೇಲೇ ಒಳಗೆ ಹೋಗಿ ಐದು ಬೆರಳು ತುದಿಗೆ ಬಂದಷ್ಟು ಅವಲಕ್ಕಿಯ ಉಪ್ಕರಿಯನ್ನು ಬಾಚಿ ಕೈಗೆ ಹಾಕಿ ತಿನ್ನದೇ ಇದ್ದರೆ ಕೆಲವರಿಗೆ ಸಮಾಧಾನ ಆಗುದಿಲ್ಲ. ಉಪ್ಕರಿಯ ವಿಶೇಷತೆಯೇ ಅದು.

ಹೀಗೆ ಧ್ವನಿಮುದ್ರಿಸಿದ ಯಕ್ಷಗಾನದಲ್ಲಿ ಇತ್ತಿಚೆಗೆ ಪೆರಡಾಲದ ಗಾನ ವೈಭವ ಮತ್ತು ಅಂಗದ ಸಂಧಾನ ತಾಳ ಮದ್ದಲೆ ಹಾಗೂ ಉಜಿರೆಯಲ್ಲಿ ನಡೆದ ಹಲವು ತಾಳ ಮದ್ದಲೆಗಳ ಧ್ವನಿ ಮುದ್ರಣ ಉತ್ತಮ ಯಕ್ಷಗಾನ ಕೂಟವನ್ನು ಸವಿದ ಅನುಭವವನ್ನು ನೀಡುತ್ತಿದೆ. ಪೆರಡಾಲದ ಗಾನವೈಭವ ಕೆಲವೊಂದು ವೈಶಿಷ್ಟ್ಯಪೂರ್ಣ ಪದಗಳನ್ನು ಕೂಡಿತ್ತು. ಸಾಮಾನ್ಯವಾಗಿ ಇತ್ತೀಚೆಗೆ ನಡೆವ ಗಾನ ವೈಭವಗಳಲ್ಲಿ ಪದೆ ಪದೆ ಮರುಕಳಿಸುವ ಪದಗಳು ಒಂದು ವಿಧದ ಏಕತಾನತೆಯಿಂದ ಕೂಡಿರುತ್ತವೆ. ಕೆಲವು ಕಡೆ ಪದಗಳನ್ನು ಆಯ್ಕೆ ಮಾಡುವವರು ಇದರ ಬಗ್ಗೆ ಗಮನಹರಿಸುವಂತಾಗಬೇಕು. ಇದು ಕೇವಲ ಗಾನ ವೈಭವಕ್ಕೆ ಸೀಮಿತವಲ್ಲ ತಾಳಮದ್ದಲೆಯಾಗಲಿ ಯಕ್ಷಗಾನವಾಗಲಿ ಇದರಿಂದ ಹೊರತಲ್ಲ. ಆ ಮಟ್ಟಿಗೆ ಪೆರಡಾಲದ ಗಾನವೈಭವದಲ್ಲಿ ಬಹುವಂಶ ಪದಗಳು ವಿಶೇಷವಾಗಿದ್ದರೆ, ಪಂಚವಟಿ, ಗಧಾಯುದ್ದ , ದಕ್ಷಾಧ್ವರದ ಪದಗಳೂ ಹಲವು ಸಲ ಕೇಳೀದ ಮತ್ತದೇ ರಾಗವಾಗಿಬಿಟ್ಟಿತ್ತು. ಇಂತಹ ಕಾರ್ಯಕ್ರಮಗಳಿಗೆ ಯಾವುದೇ ಮಿತಿಗಳಿಲ್ಲದಿರುವುದರಿಂದ ಭಾಗವತರಿಗೆ ಸವಾಲೆನಿಸುವಂತಹ ಪದಗಳನ್ನು ಆಯ್ಕೆ ಮಾಡುವಂತಾಗಬೇಕು. ಇದರಿಂದ ಯಕ್ಷಗಾನ ಹಿಮ್ಮೇಳದ ಬಗ್ಗೆ ಅಧಿಕ ಮಾಹಿತಿ ಸಿಗಬಹುದಲ್ಲವೆ.

 ಪೆರಡಾಲದ ಗಾನವೈಭವದ ಝಲಕ್


ಉಜಿರೆಯಲ್ಲಿ ಜರಗಿದ ತಾಳಮದ್ದಲೆಯಲ್ಲಿ ಎರಡನ್ನು ಮಾತ್ರ ಅಸ್ವಾದಿಸುವ ಭಾಗ್ಯ ಲಭಿಸಿತ್ತು. ಒಂದು ಭೀಷ್ಮ ಪರ್ವ ಇನ್ನೊಂದು ಶಲ್ಯ ಸಾರಥ್ಯ. ಭೀಷ್ಮ ಪರ್ವ ದಲ್ಲಿ  ಯಕ್ಷಗಾನದಲ್ಲಿ ಅದ್ಭುತ ಜತೆಗಾರಿಕೆಯ ಸಂವಹನವನ್ನು ತುಂಬುವ ಹಿಮ್ಮೇಳ ಕಲಾವಿದರಾದ ಅಮ್ಮಣ್ಣಾಯ, ಗೋರೆ ಮತ್ತು ದೇಲಂತ ಮಜಲು ಅವರ ವೈಭವದ ಸಾಥ್ ಕಣ್ಣಾರೆ ತಾಳಮದ್ದಲೆಯನ್ನು ಸವಿದ ಅನುಭವ ನೀಡಿತ್ತು. ಪ್ರತಿಯೊಂದು ಪದವನ್ನು ಹಲವು ಸಲ ಪುನರಾವರ್ತಿಸಿ ಕೇಳುವ ತುಡಿತವನ್ನು ತಡೆ ಹಿಡಿವುದು ತುಂಬ ಕಷ್ಟವಾಗಿತ್ತು. ಅಂತೇ ಇದರಲ್ಲಿ ಭೀಷ್ಮನಾಗಿ ಪ್ರಭಾಕರ ಜೋಷಿ, ಕೃಷ್ಣನಾಗಿ ವಾಸುದೇವ ರಂಗ ಭಟ್ ಉತ್ತಮವಾಗಿ ಮಿಂಚಿದರು. ಅರ್ಜುನನ ಪಾತ್ರ ನಿರ್ವಹಿಸಿದ ವಾದಿರಾಜ ಕಲ್ಲೂರಾಯ ಭರವಸೆಯ ಯುವ ಅರ್ಥಧಾರಿಯಾಗಿ ಗಮನ ಸೆಳೆಯುತ್ತಾರೆ. ಇವರ ಅರ್ಥಗಾರಿಕೆ ಇಂದಿ ಹೊಸ ಚಿಗುರಲ್ಲೂ ಆಶಾಭಾವನೆಯನ್ನು ಮೂಡಿಸುತ್ತದೆ. ಉತ್ತಮ ಹಿತಮಿತವಾದ ಅರ್ಥಗಾರಿಕೆಯ ಅರ್ಜುನ.

ಭೀಷ್ಮ ಪರ್ವ ಉಜಿರೆಯ ಒಂದು ಭಾಗ

ಇನ್ನು ಶಲ್ಯಸಾರಧ್ಯದ ಹಿಮ್ಮೇಳದಲ್ಲಿ ಉಲ್ಲೇಖಿಸಬಹುದಾದ ಅಂಶ ಪದ್ಮನಾಭ ಉಪಾಧ್ಯಾಯರ ಮದ್ದಲೆ ವಾದನ. ಅದ್ಭುತ ಹಸ್ತದ ಈ ಮದ್ದಲೆ ವಾದಕರ ಮದ್ದಲೆ ವಾದನ ಸವಿಯುವುದೇ ಒಂದು ಸೊಗಸು. ಇದರಲ್ಲಿ ಭಾಗವತರಾದ ಕನ್ನಡಿಕಟ್ಟೆ ಯವರ ಭಾಗವತಿಕೆಯಲ್ಲಿ ಉಲ್ಲೇಖಿಸುವ ಅಂಶ ಯಾವುದು ನನ್ನ ಗಮನಕ್ಕೆ ಬಾರಲಿಲ್ಲ ಯುವ ಪ್ರತಿಭಾವಂತ ಭಾಗವರಾದ ಇವರು ತಾಳ ಬದ್ದವಾಗಿ ಹಾಡಿದರೂ ಶ್ರುತಿ ಲಯವನ್ನು ಹಿಡಿದಿಡುವಲ್ಲಿ ವಿಫಲರಾದಂತೆ ಭಾಸವಾಗುತ್ತದೆ. ಆ ಮಟ್ಟಿಗೆ ಇನ್ನು ಸಾಧನೆ ಅಭ್ಯಾಸ ಅತ್ಯವಶ್ಯ ಇದು ಗಮನಕ್ಕೆ ಬರುತ್ತದೆ.   ಅರ್ಥಧಾರಿಗಳಾಗಿ ಹಾಸ್ಯಮತ್ತು ವಿಡಂಬನಾತ್ಮಕವಾಗಿ ಪಾತ್ರ ಚಿತ್ರಣವನ್ನು ನೀಡಿದ ಪ್ರಭಾಕರ ಜೋಷಿಯವರ ಶಲ್ಯ ಮತ್ತು ಸುಣ್ಣಂಬಲರ ಕೌರವ ಅತ್ಯುತ್ತಮ ಸಂವಾದದಿಂದ ಕೂಡಿತ್ತು. ಇಬ್ಬರು ತಮ್ಮ ತಮ್ಮ ಶೈಲಿಯಲ್ಲೇ  ಈ ಪಾತ್ರಗಳಿಗೆ ಜೀವತುಂಬಿದರೆ, ಕರ್ಣನಾಗಿ ಗೋವಿಂದ ಭಟ್ಟರು ಶಲ್ಯ ಕರ್ಣ ಸಂವಾದದಲ್ಲಿ ಮಿಂಚಿದರು.

ಶಲ್ಯ ಸಾರಥ್ಯ ಉಜಿರೆಯ ಒಂದು ಭಾಗ

ಯಾವುದೋ ರೂಪದಲ್ಲಿ ಬಂದ ಧ್ವನಿ ಮುದ್ರಣದ ಕಡತವನ್ನು ಅಲ್ಲಲ್ಲಿ ಧ್ವನಿ ಹೆಚ್ಚಿಸಿ ಯಾ ಕಡಿಮೆ ಗೊಳಿಸಿ ಧೋ ಎಂದು ಸುರಿದ ಮಳೆ ಛಾವಣಿಗೆ ಅಪ್ಪಳಿಸಿ ಉಂಟಾದ ಶಭ್ದದ ನಡುವೆಯೂ ಇದನ್ನು ಒಂದು ರೂಪಕ್ಕೆ ತಂದು ಈ  ತಾಳ ಮದ್ದಲೆಗಳನ್ನು ಅಸ್ವಾದಿಸುವಾಗ, ಇದರ ಕಲಾವಿದರು ಮತ್ತು ಸಂಘಟಕರನ್ನು ಕೃತಜ್ಞತೆಯಿಂದ ಸ್ಮರಿಸುತ್ತದೆ. ಮಾತ್ರವಲ್ಲ ಊರಿಗೆ ಹೋಗಿ ತಾಳ ಮದ್ದಲೆಯನ್ನು ನೋಡುವ ಕೇಳುವ ಅವಕಾಶವಿಲ್ಲದಿರುವಾಗ ಅದನ್ನು ಒದಗಿಸಿದ ಈ ಸುಬ್ಬಣ್ಣನ ವರ್ಗಾವಣೆಯೆ ಕಾರಣವಲ್ಲದೆ ಬೇರೇನು ಅಲ್ಲ. ಸುಬ್ಬಣ್ಣನ ಈ ನಿಷ್ಕಾಮ ಕರ್ಮವನ್ನು ಸ್ಮರಿಸದಿದ್ದರೆ ಹೇಗೆ? 

Monday, October 25, 2010

ಯಕ್ಷಚಿಂತನದ ಅನಾಮಿಕನ ಹೆಗ್ಗಳಿಕೆ

 “ಯಕ್ಷಚಿಂತನ” ಈ ಪುಟ ಬರೆಯಲಾರಂಭಿಸಿ ಸುಮಾರು ೨ ವರ್ಷ ಆಗಿರಬಹುದುದೇನೋ. ಇದು ಕೇವಲ ನನ್ನ ವ್ಯಯಕ್ತಿಕ ಅನಿಸಿಕೆಗಳನ್ನು ಸ್ವತಂತ್ರವಾಗಿ ಬರೆಯಲು ನಾನು ಉಪಯೋಗಿಸಿದ ಮಾಧ್ಯಮ. ಯಾವುದೇ ಜನಪ್ರಿಯತೆಗಳಿಸುವ ಉದ್ದೇಶ ಇಲ್ಲವಾದರೂ ಕೆಲವೊಮ್ಮೆ ಬಯಸದೆ ಅದನ್ನು ಒಪ್ಪಿಕೊಳ್ಳುವ ಹಾಗೆ ಅಗಿದೆ. ಕೇವಲ ಸೀಮಿತ ಮಿತ್ರ ಓದುಗರನ್ನು ಹೊಂದಿರುವ ನನ್ನ ಈ ಪುಟಗಳು ಯಾರ ಗಮನಕ್ಕೆ ಬಂದಿದೆಯೊ ಆ ಬಗ್ಗೆ ಈವರೆಗೆ ನಾನು ಯೋಚಿಸಿಲ್ಲ ಅಥವ ಯೋಚಿಸುವ ಅಗತ್ಯವೂ ಬಂದಿಲ್ಲ. ಸಾರ್ವಜನಿಕ ಪುಟವಲ್ಲವೆ, ಅದಕ್ಕೆ ಪರಿಧಿ ಎನೂ ಇಲ್ಲ.
ಇತ್ತೀಚೆಗೆ ಬರೆದ ಒಂದು ಲೇಖನ ನನ್ನ ಮಟ್ಟಿಗೆ ಅಷ್ಟೇನೂ ಮಹತ್ವ ಅಲ್ಲದ ಲೇಖನ ನನಗರಿವಿಲ್ಲದೆ ಮಹತ್ವವನ್ನು ಪಡೆದ ಬಗೆ ನನಗೆ ತುಂಬ ವಿಚಿತ್ರವೆನಿಸಿತು








.ಸಾಮಾನ್ಯವಾಗಿ ವಿಶೇಷವಾದ ಯಕ್ಷಗಾನ ವಿಷಯಗಳು ಗಮನಕ್ಕೆ ಬಂದಾಗ, ಅದು ಇಂತಹುದೇ ಆಗಬೇಕೆಂಬ ನಿಯಮವೇನೂ ಇಲ್ಲ ಯಕ್ಷಗಾನ ಕಾರ್ಯಕ್ರಮ ಇರಬಹುದು ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳು ಗಮನಕ್ಕೆ ಬಂದಾಗ, ಮನಸ್ಸಿನ ಯೋಚನೆಗಳನ್ನು ತೆರೆದಿಟ್ಟುಕೊಳ್ಳುವ ಅನಿಯಮಿತ ಕ್ರಿಯೆ ಇತ್ತೀಚೆಗೆ ರೂಢಿಯಾಗಿಬಿಟ್ಟಿದೆ. ಹಾಗೆ ಹಲವು ಲೇಖನಗಳು ನನ್ನೆಣಿಕೆಗೆ ತಕ್ಕಂತೆ ಇಲ್ಲಿ ಹಂಚಿಕೊಂಡಿರುತ್ತಿದ್ದೆ. ಇದರ ಯೋಗ್ಯತೆಯೋ, ಗುಣಾವಗುಣಗಳ ಬಗ್ಗೆ, ವ್ಯಾಕರಣ ಛಂದಸ್ಸಿನ ಬಗ್ಗೆಯಾಗಲೀ ನಾನೆಂದು ತಲೆಕೆಡಿಸಿಕೊಂಡಿಲ್ಲ. ನಾನೆ ಹೇಳುವಂತೆ ಇರುವುದಾದರೆ ಇದೆಲ್ಲ ಹುಚ್ಚು ಮನಸ್ಸಿನ ಕಲ್ಪನೆಗಳು. ಹೀಗೆ ಇದರಲ್ಲಿ ಹಲವು ಯಕ್ಷಗಾನದ ಕಾರ್ಯಕ್ರಮದ ಬಗ್ಗೆ ನನ್ನ ಅನಿಸಿಕೆ, ವ್ಯಕ್ತಿ ಚಿತ್ರಣದ ನುಡಿನಮನಗಳು, ಹತ್ತು ಹಲವು ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದೆ. ಅದರಂತೆ ಇತ್ತೀಚೆ ವಿಶೇಷವಾಗಿ ಸಿಕ್ಕಿದ ದೊಂದಿ ಬೆಳಕಿನ ಯಕ್ಷಗಾನದ ವೀಡಿಯೋ ಸಿ.ಡಿ. ಗಳ ಬಗ್ಗೆ ಒಂದು ಲೇಖನ ಬರೆದಿದ್ದೆ. ನಿಜಕ್ಕಾದರೂ ಇದೆಲ್ಲ ಅಧಿಕಪ್ರಸಂಗ ಎಂದು ಹಲವು ಸಲ ಅನ್ನಿಸಿದ್ದರೂ ನನ್ನ ಮಟ್ಟಿಗೆ ಸೀಮಿತ ಎಂದು ತಿಳಿದಷ್ಟು ಜಾಗರೂಕನಾಗಿ ಬರೆದಿದ್ದೆ. ಮೊದಲೇ ಹೇಳಿದಂತೆ ಅದರ ಗುಣಮಟ್ಟ ಹೇಗೊ, ಅದು ಹಾಗಿರಲಿ. ಇಂತಹ ಲೇಖನವೊಂದು ಹಲವು 
ಮಹನೀಯರ ಗಮನಕ್ಕೆ ನನಗರಿವಿಲ್ಲದೇ ಬಂದುದು ನಾನು ಇಷ್ಟು ಬರೆಯುವುದಕ್ಕೆ ಕಾರಣವಾಯಿತು. 




ಲೇಖನ ಹೇಗೋ ಅದರ ಬಗ್ಗೆ ಅಂತಿರಲಿ. ಆದರೆ ಈ ಲೇಖನವನ್ನು ನನ್ನ ಗಮನಕ್ಕೆ ತಾರದೆ ತಮ್ಮದೇ ಪತ್ರಿಕೆಯಲ್ಲಿ ಯಥಾವತ್ತಾಗಿ “ಯಕ್ಷಚಿಂತನದ ಅನಾಮಿಕ” ಎಂಬ ತಲೆಬರಹದಲ್ಲಿ ಪ್ರಕಟಿಸಿದ್ದು ನನಗೆ ಅತೀವ ಗಾಬರಿಯನ್ನುಂಟು ಮಾಡಿತ್ತು. ನನ್ನ ಅನುಮತಿಯೆಂಬ ದೊಡ್ಡ ಶಬ್ಧವನ್ನು ಹೇಳುವ ಯೋಗ್ಯತೆ ನನಗಿಲ್ಲ ಆದರೂ ನನ್ನ ಲೇಖನ ಪ್ರಕಟಿಸುವ ಒಂದು ಸೂಚನೆಯನ್ನಾದರೂ ಕೊಡಬಹುದಿತ್ತು , ಇದನ್ನು ನನ್ನ ಈ ಪುಟದ ಪ್ರತಿಕ್ರಿಯೆ ಕಾಲಂ ನಲ್ಲಿ ಚಿಕ್ಕದಾಗಿ ಸೂಚಿಸಿದ್ದರೂ ಸಾಕಿತ್ತು. ಕೇವಲ ಅನಾಮಿಕನಾಗಿ ನನ್ನನ್ನು ಚಿತ್ರಿಸಿದ್ದು ನನಗೆ ವಿಚಿತ್ರವೆನಿಸಿದೆ. ನನ್ನ ಬ್ಲಾಗ್ ನ ಪುಟದಲ್ಲಿ ನನ್ನ ಬಗೆಗಿನ ಸಂಕ್ಷಿಪ್ತ ವಿವರವನ್ನು ಉಲ್ಲೇಖಿಸಿದ್ದರು ಅದೆಂತು ಅನಾಮಿಕನಾದೆನೊ? ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಲ್ಲಿ ವಿಫಲನಾಗಿದ್ದೇನೆ. ಇದನ್ನು ಅಲ್ಲಿ ಮುದ್ರಿಸಿದ ಔಚಿತ್ಯವೇನೋ  ಅದೂ ನನಗೆ ಸ್ಪಷ್ಟವಾಗಲಿಲ್ಲ, ಯಕ್ಷ ಚಿಂತನ ಆ ಮಟ್ಟಿಗಾದರೂ ಗಮನಾರ್ಹವಾಯಿತಲ್ಲ ಅದೊಂದು ಹೆಗ್ಗಳಿಗೆ ಎಂದು ತಿಳಿಯಲೇ?.
.

ಹೌದು, ಇದು ನನ್ನ ಮಟ್ಟಿಗೆ ಹೆಗ್ಗಳಿಕೆಯ ವಿಚಾರವೇ ಅಗಿದೆ. ನನ್ನ ಅನುಮತಿಯೋ ಅಥವಾ ಗಮನಕ್ಕೆ ತರುವುದೊ ಅದೆಲ್ಲದರ ಬಗ್ಗೆ ಇದನ್ನು ಪ್ರಕಟಿಸಿದವರಿಗೆ ಬಿಟ್ಟದ್ದು. ನಾನಂತು ಈಗ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಲೂ ಇಲ್ಲ. ವಿವಾದಗಳಿಗೆ ಒಳಗಾಗುವಷ್ಟು ಮಹನೀಯನು ನಾನಲ್ಲ ಎಂಬ ಪರಿಜ್ಞಾನ ನನಗಿದೆ. ಅದರೂ ಇಷ್ಟೊಂದು ಮಹತ್ವವನ್ನು ನನ್ನ ಯಕ್ಷಚಿಂತನ ಪಡೆಯಿತಲ್ಲ. ಎಲ್ಲವೂ ಓದುಗರ ನಿರ್ಧಾರಕ್ಕೆ ಬಿಟ್ಟುಬಿಡೊಣವಲ್ಲವೆ.


 ಈ ಪತ್ರಿಕೆಯ ಬಗ್ಗೆ ಹೆಚ್ಚೇನು ವಿವರ ನನಗೆ ಲಭ್ಯವಾಗಲಿಲ್ಲ. ಮಿತ್ರರು ಕಳಿಸಿದ ಪುಟವನ್ನಷ್ಟೇ ಇಲ್ಲಿ ಬಳಸಿಕೊಂಡಿದ್ದೇನೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮುಖವಾಣಿ ಪತ್ರಿಕೆಯ ಪುಟಗಳಲ್ಲಿ ಯಕ್ಷಚಿಂತನದ ಚಿಂತನೆಗಳು ಮಹತ್ವ ಪಡೆಯಿತಲ್ಲ. ಇದು ನನ್ನ ಅನುಮತಿಯಾಗಲಿ ನನ್ನ ಗಮನಕ್ಕೆ ತಾರದೆ ಪ್ರಕಟಿಸಿದ್ದರೂ ಅದು ಯಾವಬಗೆಯಲ್ಲೇ ಇರಲಿ ಅದೊಂದು ಹೆಗ್ಗಳಿಕೆ ತಾನೇ? ಆದರೂ ಮನದ ಮೂಲೆಯಲ್ಲಿ ಒಂದು ಮಾತು ನನ್ನಲ್ಲಿ ಹೇಳಿರುತ್ತಿದ್ದರೆ.. ಆ ಮಟ್ಟಿಗೆ ನಾನು ಅನಾಮಿಕನಾಗಿ ಬಿಟ್ಟೆನೆ? ಹಾಗಿದ್ದಲ್ಲಿ ಯಕ್ಷಚಿಂತನದ ಅನಾಮಿಕ ಎಂಬ ವಾಕ್ಯ ಅರ್ಥಪೂರ್ಣವಾಗುತ್ತದೆ. ಆದರೂ ಪ್ರಕಟಿಸಿದವರು ಈ ಯಕ್ಷಚಿಂತನದ ಪುಟಗಳನ್ನು ಸ್ವಲ್ಪ ಕೂಲಂಕೂಷವಾಗಿ ನೋಡಿರುತ್ತಿದ್ದರೆ ನನ್ನ ಬಗೆಗಿನ ವಿವರ ಲಭ್ಯವಾಗುತ್ತಿತ್ತು. ನನ್ನ ವಿಳಾಸ ಕೊಟ್ಟು ಸ್ವವಿವರವನ್ನೆಲ್ಲಾ ಕೊಟ್ಟು ಕರೆ ಮಾಡಿ ವಿಡಿಯೋ ಡಿ. ವಿ.ಡಿ.ಯನ್ನು ತರಿಸಿದ್ದನ್ನು ಲೇಖನದಲ್ಲಿ ಉಲ್ಲೇಖಿಸಿದ್ದರೂ ನಾನು ಅನಾಮಿಕನಾದ ಬಗೆ ಮಾತ್ರ ತುಂಬ ವಿಚಿತ್ರವಲ್ಲವೆ? ಹೀಗಿದ್ದರೂ ಅನಾಮಧೇಯನಾಗಿ ಪತ್ರಿಕಾ ಬಳಗಕ್ಕೆ ಈ ಮೂಲಕ ಕೃತಜ್ಞತೆಗಳು. ನನಗರಿವಿಲ್ಲದೇ ಹೀಗೆ ಲೇಖನ ಪ್ರಕಟಿಸಿದ  ಅನಿವಾರ್ಯತೆ ಯನ್ನು ತಿಳಿವ ಕುತೂಹಲವಿದೆ.  ಸಾಧ್ಯವಾದರೆ ಸಂಬಂದಿಸಿದವರಿಗೆ ಈಗ ಲೇಖನ ಗಮನಕ್ಕೆ ಬಂದಲ್ಲಿ ತಿಳಿಸುವ ಹಾಗಿದ್ದರೆ ತಿಳಿಸಬೇಕಾಗಿ ಭಿನ್ನಹ.