ಗಜಮುಖದವಗೆ ಗಣಪಗೇ.............
ಅನಶ್ವರ ಕಲಾವಿದ ಮನದುಂಬಿ ಸ್ಫೂರ್ತಿಗೊಂಡು ಹಾಡಿದನೆಂದರೆ, ಸರಸ್ವತಿಯ ಕರಕಮಲ ಸಂಜಾತ ನೆರೆದ ಅಭಿಮಾನಿಗಳ ಹೃದಯದ ಕದ ತಟ್ಟಿದನೆಂದರೆ ಮತ್ತೆ ಕೇಳಬೇಕೆ? ಕಣ್ಣು ತನ್ನ ಅಸ್ತಿತ್ವ ಸಾರಿಕೊಂಡಿತು. ಕಿವಿ ತನ್ನ ಹಸಿವು ನೀಗಿಸಿತು. ಮನಸ್ಸು ಭಾವನೆಯ ಹೊಳೆಗೆ ಕೊಚ್ಚಿ ನಲುಗಾಡಿ ಬೇಕೆಂದೇ ಆ ಪ್ರವಾಹಕ್ಕೆ ಧುಮುಕಿತು. ಹಲವು ದಿನಗಳ ದಾಹಕ್ಕೆ ಗಂಗಾಜಲ ಸ್ಪುರಿಸಿದಂತೆ ಹತ್ವಾರ್ ಸಭಾಂಗಣದಲ್ಲಿ ಬಲಿಪ್ಪರ ದ್ಬನಿ ಪೂರ್ಣ ಕಂಠದಿಂದ ಹೊರ ಹೊಮ್ಮಿದಾಗ, ಮನಸ್ಸಿಗೆ ಇಳಿದ ಗಂಗಾಜಲ ಕಣ್ಣಿಂದ ಧಾರೆ ಧಾರೆಯಾಗಿ ಹೊರಹೊಮ್ಮಿತು. ಅಬ್ಬಾ ಇದಕ್ಕಲ್ಲವೆ ನಾವು ಶಬರಿಯಾದದ್ದು. ನಮ್ಮ ಶಾಪ ವಿಮೋಚನೆಯಾಯಿತೇ? ಅಜ್ಞಾತವಾಸ ಕಳೆದು ನಮ್ಮಜ್ಜ ಪ್ರತ್ಯಕ್ಷವಾದರೆ? ಇಂದು ನಮಗಾಗಿ ಹಾಡಿದರೆ? ಅಲ್ಲ ಅವರೇ ಸ್ವಯಂ ಪ್ರೇರಿತರಾದರೆ? ಅಲ್ಲ ಆ ಗಾನ ಸರಸ್ವತಿಯೇ ಆ ಕಂಠದಲ್ಲಿ ಪ್ರತ್ಯಕ್ಷಗೊಂಡು ತನ್ನ ವೀಣೆ ಮೀಟಿದಳೇ?
ಎಲ್ಲವೂ ಸಾಕಾರಗೊಂಡಿತು. ಅದು ಅಂದು ಮೆಲ್ಲನೇ ಮೆತ್ತಗೆ ಬಂದೇ ಬಿಟ್ಟಿತು.
.
ಹಲವು ದಿನಗಳ ಅಜ್ಞಾತವಾಸದ ಬಿಡುಗಡೆಯೋ ಎಂಬಂತೆ ಆ ದಿನ ಬಂದೆ ಬಿಟ್ಟಿತು. ಹಲವು ದುಗುಡ ಆತಂಕಗಳನ್ನು ಜತೆಗೆ ರೋಮಾಂಚನದ ಅನುಭವಕ್ಕೆ ಕಾತುರವಾದ ಮನಸ್ಸನ್ನು ಪಕ್ವವಾಗಿಸಿ ಕಾಯುತ್ತಿದ್ದ ದಿನ ಬಂದೇಬಿಟ್ಟಿತು. ಅದೇ ೨೦೧೧ರ ಜನವರಿ ೨೩ ಉತ್ತರಾಯಣದ ಸೂರ್ಯ ದಿಶೆಬದಲಿಸಿ ಅಣಿಯಾಗಿದ್ದ ಕಾಲಮಾನವಲ್ಲವೆ? ವಸಂತನ ಆಗಮನಕ್ಕೆ ಕಾದಿದ್ದ ಮಾಮರದ ಕೋಗಿಲೆಯ ಸಮಯದ ಸನಿಹಕ್ಕೆ ದಿನ ಬಂದೇ ಬಿಟ್ಟಿತು...
ಬೆಂಗಳೂರಿನಲ್ಲಿ ಬಲಿಪ್ಪ ನಾರಾಯಣ ಭಾಗವತರ ಅಭಿನಂದನೆ ಎಂಬ ಮಹತ್ಕಾರ್ಯಕ್ಕೆ ಕಟಿಬದ್ದರಾದ ವಿಚಾರ ಮೊದಲೇ ಬಿತ್ತರಿಸಿ ಸಂಚಲನ ಉಂಟು ಮಾಡಿಯಾಗಿದೆ. ಹಲವು ಸಿದ್ದತೆಗಳ ಯಾದಿಯನ್ನು ಸಿದ್ದಪಡಿಸಿ ಒಂದೊಂದಾಗಿ ಮುಗಿಸಿ ಸಂಭ್ರಮದ ಕ್ಷಣಗಳಿಗೆ ಇನ್ನೇನು ಕೆಲವೇ ಘಂಟೆಗಳಿವೆ ಎನ್ನುವಾಗ ಬೆಂಗಳೂರಿಗೆ ಬಂದೆರಗಿತು ಬಂದ್ ಎಂಬ ಮುಷ್ಕರ ನಿಷೇಧಾಜ್ಞೆಯ ಸಿಡಿಲು. ಮೊದಲ ದಿನ ಬಲಿಪ್ಪರು ಆಗಮಿಸುವ ದಿನ. ಮುಂಜಾನೆ ಎದ್ದು ಕಿರಿಗುಟ್ಟಿದ ಮೊಬೈಲು ಕಂಡೊಡನೆ ಬೆಚ್ಚಿಬಿದ್ದೆ. ಕರ್ನಾಟಕ ಬಂದ್!!!! ಎಂಬ ಮಿತ್ರನ ಸಂದೇಶ. ೧೪೪ ನಿಷೇಧಾಜ್ಞೆ ಜಾರಿಯಾಗಿತ್ತು. ಬಲಿಪ್ಪರು ಆಗಮಿಸಿ ಸುರಕ್ಷಿತ ತಾಣ ಸೇರುವವರೆಗೆ ಒಂದು ಆತಂಕವಾದರೆ ಮರುದಿನದ ಬಗೆ ಹೇಗೆ ಎಂಬ ಆತಂಕ ಇನ್ನೊಂದು.
ಆತಂಕದೆಡೆಯೂ ಒಂದು ರೋಮಾಂಚನ ಉಂಟುಮಾಡುವ ವಿಚಾರವಿತ್ತು. ಅದು ಅಂದಿನ ಬಹುತೇಕ ಮುಖ್ಯ ಕನ್ನಡ ಪತ್ರಿಕೆಗಳಾದ ಉದಯವಾಣಿ, ಪ್ರಜಾವಾಣಿ, ವಿಜಯಕರ್ನಾಟಕ ಮತ್ತು ಕನ್ನಡ ಪ್ರಭ ನಮ್ಮ ಕಾರ್ಯಕ್ರಮದ ಸುದ್ದಿಯನ್ನು ಪ್ರಕಟಿಸಿದ್ದುವು. ಅದರ ಮಧ್ಯೆ ಹಲವು ಫೊನ್ ಕರೆಗಳು ಮತ್ತು ಮೇಸೇಜ್ ಗಳು ನಾಳಿನ ಕಾರ್ಯಕ್ರಮದ ವಿವರ ತಿಳಿಯಲು. ಕಾರ್ಯಕ್ರಮ ಇದೆಯೇ? ಎಂಬ ಆತಂಕದ ಪ್ರಶ್ನೆಬಂದಾಗ ಮನಸ್ಸಿನ ತಳಮಳ ಹೇಗೆ ಹೇಳುವುದು? ಎಡೆ ಬಿಡದೆ ಮಿತ್ರರಿಗೆ ಕರೆ ಮಾಡಿ ನನ್ನ ತಳ ಮಳ ಅವರಿಗೂ ದಾಟಿಸುವ ಪ್ರಯತ್ನ ಮಾಡಿದೆ. ಹಾಗೆಂದು ನನ್ನಿಂದ ಅಧಿಕ ಆತಂಕ ನನ್ನ ಬಳಗಕ್ಕೆ ಇದ್ದಿತು
ಆದರೇ ದೈವ ನಿಯಮವೇ ಹಾಗೆ. ಒಂದು ರೀತಿ ಈ ಅತಂಕದಲ್ಲು ಬಂದೆರಗಿದ ಸಂಕಟವನ್ನು (ಅಂದು ಸಂಕಷ್ಟಿ ಬೇರೆ..!!) ಸದುಪಯೋಗ ಗೋಳಿಸಿದ ವಿಚಾರ ಮುಂದೆ ಹೇಳೋಣ.
ಸಾಯಂಕಾಲವಾಗುತ್ತಿದ್ದಂತೆ ಬೆಂಗಳೂರು ಸಹಜವಾಗಿಬಿಟ್ಟಿತು. ಆತಂಕ ಅಲ್ಪಸ್ವಲ್ಪ ದೂರವಾದರೂ ನಿಷೇಧಾಜ್ಞೆಯ ಭೂತ ಇನ್ನು ದರ್ಶನ ಕೊಡುತ್ತಿತ್ತು. ಆತಂಕ ತುಂಬಿದ ರಾತ್ರಿ ಮಿತ್ರರೊಂದಿಗೆ ವಿಚಾರ ವಿನಿಮಯ ನಡೆಸಿ ನಾಳಿನ ಮಹತ್ವದ ಘಳಿಗೆಗೆ ಮನಸ್ಸು ಸಿದ್ದವಾಗತೊಡಗಿತು. ಮಿತ್ರ ಸುಬ್ಬಣ್ಣ ನನ್ನ ಜತೆಯಲ್ಲೇ ಮನೆಗೆ ಬಂದಿದ್ದರು. ಅಂದು ರಾತ್ರಿ ನಮ್ಮಲ್ಲಿ ಅವರ ವಿಶ್ರಾಂತಿ.ಮರುದಿನದ ಸಣ್ಣ ಸಿದ್ದತೆ ಮಾಡಿ ಬೇಗನೆ... ಮಲಗಿದರು (ರಾತ್ರಿ ೧೧.೩೦!!!! ) ತುಸು ಹೊತ್ತು ನಿದ್ದೆಬರಲೇ ಇಲ್ಲ. ನಾಳಿನ ದಿನದ ರೊಮಾಂಚನದ ಘಳಿಗೆಗೆ ಮನಸ್ಸು ಕಾಯುತ್ತಿತ್ತು. ಎದೆ ಬಡಿತ ತೀವ್ರಗೊಂಡರು ಆಗಾಗ ಸಂಯಮದ ಮಂತ್ರ ಪಠಿಸುತ್ತಾ ನಿದ್ದೆ ಬಂದು ಬಿಟ್ಟಿತು. ನಿದ್ದೆಬಿಟ್ಟು ಎಚ್ಚರವಾದಾಗ ಕಿಟಿಕಿಯಿಂದ ಹೊನಲು ಬೆಳಕು ಒಳ ಪಸರಿಸಿತ್ತು. ಬೆಳಗೆ ಯಾಯಿತೆ. ಶುಭದಿನ ಬಂತೇ? ಬಳಿಯಲ್ಲೆ ಇದ್ದ ಮೊಬೈಲ್ ತೆಗೆದು ಗಂಟೆ ನೋಡಿದೆ ೨.೩೦ ಆಗಿತ್ತು.. ಹಾಗೆ ಪುನಃ ಮಾನಸಿಕ ಒತ್ತಡ ಶುರುವಾಯಿತು. ನಿದ್ದೆ ಹತ್ತಿರ ಸುಳಿಯದು.. ಕ್ಷಣ ಮೊದಲು ಕನಸಿನಲ್ಲೇ ಅಭಿಮನಂದನಾ ಕಾರ್ಯಕ್ರಮ ತಾಳ ಮದ್ದಲೆ ನಡೆದು ಹೋಗಿತ್ತು...!!!!
ನಿದ್ದೆಬಾರದು ಮಿತ್ರನಿಗೆ ಮೊಬೈಲ್ ನಿಂದ ಕಿರು ಸಂದೇಶ ಕಳಿಸಿದೆ. “ ನಿದ್ದೆ ಬರುದಿಲ್ಲ ... ಮರಾಯ್ರೆ..” ಇಲ್ಲ ಮತ್ತೆ ಮಲಗಿಲ್ಲ...ಹಾಗೇ ಆತಂಕ ತವಕದ ಮನಸ್ಸು ಮುಂಜಾವಿನವರೆಗೂ ಎಚ್ಚರ....!!!
ಮುಂಜಾನೆ ಎದ್ದು ಮೊದಲು ಮುಷ್ಕರದ ಬಿಸಿ ಕಡಿಮೆ ಆದ ವಾರ್ತೆ ಓದಿ ಅಲ್ಪ ಸಮಾಧಾನ ಅಯಿತು.ಇನ್ನು ನಮ್ಮ ಅಧ್ವರದ ದೀಕ್ಷೆ ಈಡೇರಿದಂತೆ.
ಮಿತ್ರ ಸುಬ್ಬಣ್ಣ ಮುರಳಿ ಉಲ್ಲಾಸ್ ಕೇಶವ ವೇಣು ಶಿರಂಕಲ್ಲು ಹೀಗೆ ನಿತ್ಯ ಸದಸ್ಯರ ಬಳಗದೊಂದಿಗೆ ಆದಿನದ ಸಿದ್ದತೆಗೆ ತೊಡಗಿದೆವು.ಮೊದಲು ನಮ್ಮ ಕಾರ್ಯಕ್ರಮದ ಸಭಾಂಗಣದ ಬಗ್ಗೆ ಹೇಳಿಬಿಡುವ. ನಗರದ ಚಾಮರಾಜ್ ಪೇಟೆಯ ನಾಲ್ಕನೇ ಮುಖ್ಯರಸ್ತೆಯ ತುಸು ಪ್ರಶಾಂತ ವಾತಾವರಣದಲ್ಲಿರುವ ಸಭಾಂಗಣ. ಅಂದು ನಮ್ಮ ಮಟ್ಟಿಗೆ ಇತಿಹಾಸ ನಿರ್ಮಿಸಲು ಕಾದು ಕುಳಿತ ಹತ್ವಾರ್ ಸಭಾಂಗಣದ ಸಿಬ್ಬಂದಿಗಳು ಬೇಕಾದ ಸರ್ವಸಿದ್ದತೆಗೆ ಅನುಕೂಲ ಮಾಡಿಕೊಟ್ಟು ನಮ್ಮೊಂದಿಗೆ ಟೊಂಕ ಕಟ್ಟಿನಿಂತಿದ್ದರು. ಬಹುಶಃ ಯಾವ ಕಲಾಕ್ಷೇತ್ರದಲ್ಲೂ ಈ ಬಗೆಯ ಸಿಬ್ಬಂದಿ ಇರುವುದು ದುರ್ಲಭ.ಅಷ್ಟೊಂದು ಆತ್ಮೀಯತೆ. ಇದು ನಮ್ಮ ಕಾರ್ಯಕ್ರಮಕ್ಕೆ ಮೊದಲು ಸಿಕ್ಕ ಶುಭಸೂಚನೆ..!!! ಸುತ್ತಲೂ ಬದಿಯಲ್ಲಿ ಶಾಲೆ, ಹೊರಗೆ ಅಷ್ಟೇನೂ ಸದ್ದು ಗದ್ದಲವಿಲ್ಲದ ವಿಶಾಲ ರಸ್ತೆ.. ಸುತ್ತಲೂ ಮರದ ನೆರಳು, ಯಕ್ಷಗಾನದಂತಹ ಅಬ್ಬರದ ಕಾರ್ಯಕ್ರಮಕ್ಕೆ ಹೇಳಿ ಮಾಡಿಸಿದಂತಹ ಹೊರಾಂಗಣ ವಾತಾಯನ ವ್ಯವಸ್ಥೆಯ ಹತ್ವಾರ್ ಸಭಾಂಗಣ ಕಂಡೊಡನೆ ಮಿತ್ರರು ರೋಮಾಂಚಿತರಾದರು. ಕೇಕೆ ಹಾಕಿ ಕುಶಿ ಪಟ್ಟಾಗ ಅಬ್ಬ ಮೊದಲ ಯಶಸ್ಸು ಸಿಕ್ಕಿದ ಹಾಗೆ ಅನಿಸಿತು.
ಮಧ್ಯಾಹ್ನ ಮಿತ್ರರೊಂದಿಗೆ ಉಂಡು ನಿರಾಳತೆಯನ್ನು ಅನುಭವಿಸುವ ಪ್ರಯತ್ನ ಮಾಡಿದೆ. ಮನದ ಮೂಲೆಯಲ್ಲಿ ಅವಿತ ಉದ್ವಿಗ್ನತೆ ಪದೇ ಪದೇ ನೋವಿನರಿವು ಬರುವಂತೆ ಮುಂದೆ ಬರುತ್ತಿತ್ತು. ಎಲ್ಲವೂ ಸಸೂತ್ರವಾಗಿ ಸಾಗುವ ವಿಶ್ವಾಸ ಇತ್ತು. ನಮ್ಮ ಯೋಜನಾಪ್ರಕಾರ ಎಲ್ಲವೂ ಹಂತ ಹಂತವಾಗಿ ನೆರವೇರುತ್ತಾ ಸಾಗಿತು. ಯಾವ ಸಮಸ್ಯೆಯೂ ಘಳಿಗೆಗಿಂತ ಅಧಿಕ ನಮ್ಮನ್ನು ಬಾಧಿಸಲಿಲ್ಲ. ನಮ್ಮ ಇಚ್ಛಾಶಕ್ತಿ ಕ್ರಿಯಾ ಶಕ್ತಿಗೆ ಇದೊಂದು ಸವಾಲೇ ಅಲ್ಲ ಆದರೂ ಹೇಗಾಗಬಹುದು ಎಂಬ ಆತಂಕ. ಎಲ್ಲದಕ್ಕು ಜಾಣ್ಮೆ ಉಪಾಯೋಗಿಸಿ ಪರ್ಯಾಯ ವ್ಯವಸ್ಥೆ ಮಾಡಿದ್ದೆವು ಹಾಗಾದರೆ ಹೀಗೆ.. ಎಲ್ಲವೂ ಲೆಕ್ಕಾಚಾರದ ಶ್ರಮವಿಲ್ಲದ ವ್ಯವಸ್ಥೆಗಳು. ಇಂತಹ ಕಾರ್ಯಕ್ರಮಕ್ಕೆ ನಮ್ಮೆಲ್ಲ ಮುಖಾಮುಖಿ ಭೇಟಿ ಕೇವಲ ಒಂದೇ ಬಾರಿ. ಅದೇ ನಮ್ಮ ಇಚ್ಚಾ ಶಕ್ತಿ ಮತ್ತು ಅತ್ಮಶಕ್ತಿಯ ಪ್ರತೀಕ ಅಂತ ನನ್ನ ಭಾವನೆ.
ಮಧ್ಯಾಹ್ನ ಸೂರ್ಯ ನೆತ್ತಿನೇರದಿಂದ ನಿಧಾನವಾಗಿ ಸರಿದ ಹಾಗೆ ಕಾರ್ಯಕ್ರಮದ ಬಿಸಿ ಏರುತ್ತಾಹೋಯಿತು. ಸರಿಯಾಗಿ ಎರಡು ಗಂಟೆಗೆ ಆರಂಭಿಸುವ ಅನಿವಾರ್ಯತೆ ನಮಗಿತ್ತು. ಆ ವೇಳೆಗೆ ಯಾರೂ ಬರಲಾರರು ಅಂತ ನಮ್ಮ ಎಣಿಕೆ ಒಂದು ೫ ನಿಮಿಷದ ಅವಧಿಯಲ್ಲಿ ಹುಸಿಯಾಗಿಬಿಟ್ಟಿತ್ತು. ೨ ಗಂಟೆಗೆ ಸಭೆಯಲ್ಲಿಟ್ಟ ಅರ್ಧಕ್ಕಿಂತಲೂ ಮಿಕ್ಕಿದ ಆಸನಗಳು ಭರ್ತಿಯಾದವು..!!! ನಮ್ಮ ಸಭಾಕಾರ್ಯಕ್ರಮಕ್ಕೆ ನಾವೇ ಪ್ರೇಕ್ಷಕರೆಂಬ ನಮ್ಮ ಊಹೆ ನಿರೀಕ್ಷೆಗೂ ಮೀರಿ ಹುಸಿಯಾಯಿತು.
೨ ಗಂಟೆ ೧೫ ನಿಮಿಷಕ್ಕೆ ನಮ್ಮ ಸಭಾಕಾರ್ಯಕ್ರಮ ಸರಳವಾಗಿ ಆರಂಭಗೊಂಡಿತು. ಹೃದಯ ತುಂಬಿ ಭಾವನೆಯ ಕಟ್ಟೊಡೆವ ಸನ್ನಾಹ ಮಾಡುತ್ತಿತ್ತು. ಹಲವು ಮಿತ್ರರು ಪಿಸುಗುಟ್ಟಿ ಎಚ್ಚರಿಸಿದರು. ಎಕ್ಸೈಟ್ ಆಗ್ಬೇಡಿ ರಾಜಣ್ಣ. ಆದರೆ ಬಾವನೆಯ ಮೇಲೆ ನನ್ನ ನಿಯಂತ್ರಣ ಸಂಪೂರ್ಣ ಕಳೆದು ಕೊಂಡಿತ್ತು. ಎಲ್ಲವು ಯೋಜನೆಯಂತೆ ಪ್ರಸ್ತಾಪನೆಯಲ್ಲಿ ಸ್ವಲ್ಪವಾಗಿ ಮನಸ್ಸಿಗೆ ಬಂದದ್ದು ಹೇಳಿದೆ. “ ಪರಂಪರೆಯಕಲೆ ಯಕ್ಷಗಾನದ ಅಭಿಮಾನಿಗಳು ಹೇಗೆ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಾರೋ ಹಾಗೆ ಯಕ್ಷಗಾನ ಅಭಿಮಾನಿಗಳ ನಡುವೆ ಈ ಬಲಿಪ್ಪ ಅಭಿಮಾನಿಗಳು ಪ್ರತ್ಯೇಕವಾಗಿರ್ ಗುರುತಿಸಲ್ಪಡುತ್ತಾರೆ.” ಇದು ಬೆಂಗಳೂರಿನಲ್ಲಿ ಅಕ್ಷರಕ್ಷರಹ ಸತ್ಯ. ಆದರು ಬಲಿಪ್ಪ ಅಭಿಮಾನಿಗಳು ಶಾಪಗ್ರಸ್ಠರಂತೆ ಅದೆಷ್ಟು ದಿನ ಕಾಯಬೇಕು ಹೇಳಿ? ಇಂದು ಅದಕ್ಕೆ ಮೋಕ್ಷ ಅದೂ ನಮ್ಮಿಂದ.. ಮತ್ತೆ ಹೃದಯ ಭಾರವಾಗದಿದ್ದರೆ ಅದು ಹೃದಯವಾದೀತೆ? ಭಾವನೆಗಳು ಇಲ್ಲದ ಬರೀ ಲಬ್ ಡಬಿಸುವ ಯಂತ್ರವಲ್ಲವೇ?
ನಾವು ದೀಕ್ಷೆ ಕೈಗೊಂಡಾಗ ನಮಗೆ ಯಾರದೇ ಸಹಾಯದ ನಿರೀಕ್ಷೆ ಇರಲಿಲ್ಲ. ನಮ್ಮ ಜೇಬಿನಲ್ಲಿ ವಿಶ್ವಾಸ ಇದ್ದವರಂತೆ ಹೊರಟಿದ್ದೆವು. ನಮಗೆ ಕೈ ಜೋಡಿಸಬಲ್ಲ ಹತ್ತು ಹಲವು ಮಿತ್ರರ ಈ ಮೇಲ್ ವಿಳಾಸ ಮಾತ್ರ ನಮ್ಮ ಬಳಿ ಇದ್ದುದು. ನಮ್ಮ ಮಿತ್ರ ಬಳಗದ ಮೇಲೆ ಅದಮ್ಯವಿಶ್ವಾಸ ಸುಳ್ಳಾಗಲಿಲ್ಲ ಎಂದು ನಮಗೆ ಅರಿವಾದುದು.. ಒಬ್ಬೊಬ್ಬರೇ ನನ್ನ ಮನವಿಗೆ ಸ್ಪಂದಿಸಿ ನನ್ನ ಬ್ಯಾಂಕ್ ಖಾತೆ ಉಬ್ಬಿಸಿದಾಗಲೇ. ವರ್ಷಕ್ಕೆ ಒಮ್ಮೆ ನೋಡುವ ಮಿತ್ರ ಸುದ್ದಿ ಇಲ್ಲದೆ ಖಾತೆಗೆ ಸಾವಿರಕ್ಕು ಮೀರಿ ಮೊತ್ತವನ್ನು ಹಾಕಿ ಆಗಿತ್ತು. ಇಂತಹ ಹಲವು ಅಭಿಮಾನದ ಪುಷ್ಪದ ಪರಿಮಳ ಕಾಣುವ ಯೋಗ ನನ್ನದಾಯಿತು. ದೊರದ ಜರ್ಮನಿಯಾದರೇನು, ಅಮೇರಿಕವಾದರೇನು ... ಕರ್ನಾಟಕದ ಹುಬ್ಬಳ್ಳಿಯಾದರೇನು ನಮ್ಮ ಇಚ್ಛಾಶಕ್ತಿಗೆ ಕೊರತೆ ಎಂದು ಅನ್ನಿಸಲಿಲ್ಲ. ದೂರದ ಕಾಶಿಗೆ ಹೊರಟ ಭಕ್ತನಲ್ಲಿ ಅದೂ ಪರಿಚಯ ಇಲ್ಲದವನಲ್ಲಿ ತಮ್ಮ ಪಾಲಿನ ಕಾಣಿಕೆಯನ್ನು ಕೊಟ್ಟಂತೆ.. ತಾನು ಹೋಗಿ ದೇವರ ದರ್ಶನ ಭಾಗ್ಯ ಪಡೆಯದಿದ್ದರೂ ಅಡ್ಡಿ ಇಲ್ಲ ಕಾಣಿಕೆ ಸಲ್ಲಲಿ.ಇದಲ್ಲವೇ ಅಭಿಮಾನ? ಬಲಿಪ್ಪರಿಗೆ ಅಭಿಮಾನಿಗಳು ಎಲ್ಲಿದ್ದಾರೆ ಎಂದು ನಾನು ನನ್ನನ್ನೆ ಕೇಳುವುದನ್ನು ಬಿಟ್ಟುಬಿಟ್ಟೆ.ಹಲವು ಕಂಡು ಕೇಳರಿಯದ ಅಭಿಮಾನಿಗಳು ತಮ್ಮ ದೇಣಿಗೆ ಸದ್ದಿಲ್ಲದೆ ಸಲ್ಲಿಸಿದರು!!! ಇಂದಿಗೂ ಕೊಟ್ಟವರ ಹೆಸರು ಮಾತ್ರ ತಿಳಿದಿದೆ ವಿನಹ ವ್ಯಕ್ತಿ ಯಾರೋ ನಾನು ನೋಡಲೇ ಇಲ್ಲ. ವಿಚಿತ್ರ ಅಲ್ಲವೆ? ನಾವು ಇಲ್ಲಿ ನೆಪ ಮಾತ್ರ.ಅದಕ್ಕೆ ನಿಮಿತ್ತವಾಗಿ ನಾನು ವೇಶ ಹಾಕಿದ್ದೆ. ನನ್ನಿಂದಲೂ ದೊಡ್ಡ ಅಭಿಮಾನಿಗಳನ್ನು ನೋಡಿ ರೋಮಾಂಚಿತನಾದೆ. ದೇಣಿಗೆ ನೀಡಿದವರ ನನ್ನ ಪಟ್ಟಿಯಲ್ಲಿ ನನು ಕೆಲವರನ್ನು ಮಾತ್ರ ಕಂಡಿದ್ದೆ. ಎಂತಹ ವಿಚಿತ್ರ. ಯಾವ ಕಲಾವಿದನಿಗೆ ಇಂತಹ ಅಭಿಮಾನಿ ಇರಲು ಸಾಧ್ಯ? ಅದು ಬಲಿಪ್ಪರಿಗೆ ಮಾತ್ರ ....ಅದ್ಭುತ ಅತ್ಯದ್ಭುತ.!!!
ನಮ್ಮ ಎಲ್ಲರ ಗುರಿಯೊಂದು ಇದ್ದಿತು. ಒಂದು ಬಲಿಪ್ಪರ ಕಾರ್ಯಕ್ರಮ ಅದು ಪರಿಶುದ್ದ ಮನಸ್ಸಿ ಕಾರ್ಯವಾಗಬೇಕು. ಇಲ್ಲಿ ಭೇದವಿಲ್ಲದ ಒಂದೇ ವಿಶ್ವಾಸದ ಕೆಲಸ ಹೊರಹೊಮ್ಮಬೇಕು. ನಿಸ್ವಾರ್ಥ ಇದರ ಮೂಲ ತತ್ವವಾಗಬೇಕು. ಯಕ್ಷಗಾನ ಅಭಿಮಾನ ಜತೆಗೆ ಬಲಿಪ್ಪ ಗೌರವ ಬಿಟ್ಟು ಬೇರಾವ ಗುರಿಯು ಇಲ್ಲಿ ಇರಬಾರದು. ಈ ಗುರಿಯೇ ಈ ಕಾರ್ಯಕ್ರಮದ ಅಭೂತ ಪೂರ್ವ ಯಶಸ್ಸಿಗೆ ಕಾರಣ. ಅದರ ಅರಿವು ಹೆಚ್ಚಿನವರಿಗೆ ಕೊನೇವರೆಗೆ ತಿಳಿಯಲೇ ಇಲ್ಲ. ಅದಕ್ಕೆ ಒಂದು ನಿದರ್ಶನ.. “ ಅಭಿನಂದನಾ ಭಾಷಣದ ಜವಾಬ್ದಾರಿಯನ್ನು ಶ್ರೀ ಗಣರಾಜ್ ಕುಂಬಳೆಯವರಿಗೆ ವಹಿಸಲಾಗಿತ್ತು.ಇದು ಅವರಿಗೆ ಅನಿರೀಕ್ಷಿತ ಜವಾಬ್ದಾರಿಯಾಗಿ.. ಮೊದಲೇ ಭಾವುಕರಾದ ಅವರು ಮತ್ತಷ್ಟು ಭಾವುಕರಾಗಿಬಿಟ್ಟರು. “ಭಾಷಣ ಮಾಡುತ್ತ..ಬಲಿಪ್ಪರ ಪದ..ಶರಣು ತಿರುವಗ್ರ ಶಾಲಿವಾಹಿನಿ ಮೊಬೈಲ್ ಗಳಲ್ಲಿ ರಿಂಗಣಿಸುವ ಬಗೆಯನ್ನು ಹೇಳಿದರು. ವಾಡಿಕೆಯಂತೆ ಕೊನೆಗೆ ಈ ಕಾರ್ಯಕ್ರಮದ ರೂವಾರಿಗಳಿಗೆ ನಮ್ಮ ಸಂಘಟನೆಗೆ ಕೃತಜ್ಞತೆ ಹೇಳುವುದಕ್ಕೋಸ್ಕರ...ಅತ್ತಿತ್ತ ನೋಡಿದರು.. ಯಾಕೆಂದರೆ ನಮ್ಮ ಸಂಘಟನೆ ಹೆಸರು ಎಲ್ಲೂ ಕಂಡು ಬರಲಿಲ್ಲ...!!! ವ್ಯಕ್ತಿಪರವಾಗಿ ಅವರು ಆಮಂತ್ರಣ ಸ್ವೀಕರಿಸಿದ್ದರೇ ಹೊರತು... ನಮ್ಮ ಅಭಿಮಾನಿ ಸಂಘದ ಅರಿವೇ ಇಲ್ಲ. ಮಾಮುಲಿನಂತೆ ಅತ್ತ ಇತ್ತ ನೋಡಿದರು ಎಲ್ಲೂ ಫಲಕಗಳು ಬ್ಯಾನರ್ ಪ್ಲೆಕ್ಸ್ ಗಳು ಕಂಡು ಬರಲೇ ಇಲ್ಲ. ಯಾವುದೇ ಜಾಹೀರಾತು ಇರಲಿಲ್ಲ. ಹಿಂತಿರುಗಿ ಪರದೆ ನೋಡಿದರು ಊಹುಂ ಅದು ಖಾಲಿ ಯಾಗಿತ್ತು. ಯಾಕೆ ಹೀಗೆ ..ಮತ್ತೆ ಸಣ್ಣದಾಗಿ ಅನ್ವರ್ಥ ವಾಕ್ಯದಲ್ಲೇ ವಂದನೆ ಹೇಳಿದರೂ ... ಮತ್ತೆ ನನ್ನಲ್ಲಿ ಕೇಳಿದಾಗ ಅವರಿಗೆ ಅತೀವ ಅಶ್ಚರ್ಯವಾಗಿಬಿಟ್ಟಿತು.. ಯಾಕೆಂದರೆ ನಮಗೆ ನಮ್ಮ ಬಗ್ಗೆ ಸ್ವ-ಪ್ರಚಾರದ ಆಕಾಂಕ್ಷೆ ಇರಲಿಲ್ಲ. ಆರಂಭದಿಂದಲ್ಲೇ ಇದರ ಬಗ್ಗೆ ಕಠಿಣ ನಿರ್ಧಾರ ವಚನಬದ್ದರಾಗಿದ್ದೆವು. ಆಮಂತ್ರಣ ಪತ್ರಿಕೆಯಲ್ಲಿ ಯಾರ ಹೆಸರೂ ಇರಲಿಲ್ಲ. ಎಷ್ಟು ಅಗತ್ಯವೋ ಅಷ್ಟು ಮಾಹಿತಿ ಮಾತ್ರ ಮುದ್ರಿಸಲಾಗಿತ್ತ. ಸಂಪ್ರದಾಯದಂತೆ ಇಲ್ಲಿ ಆಡಳಿತ ಸಮಿತಿ ಯಾಗಲಿ , ಅಧ್ಯಕ್ಷ ಅಥವಾ ಕಾರ್ಯದರ್ಶಿಯ ಪದವಿಯಾಗಲಿ ಇಲ್ಲದೆ ಕೇವಲ ಕಾರ್ಯಕ್ರಮದತ್ತ ಗುರಿ ಇಟ್ಟಿದ್ದೆವು. ನಮ್ಮ ಗುರಿ ಎನು ಎಂಬ ಅರಿವು ಪ್ರತಿಯೊಬ್ಬರಿಗೂ ಇದ್ದು.. ಈ ಕಾರ್ಯಕ್ರಮದ ಕಾರ್ಯಕಾರಿ ಕೇಂದ್ರ ವ್ಯಕ್ತಿ ಯಾರೂ ಇಲ್ಲದೆ ಎಲ್ಲರು ಎಲ್ಲದರ ಭಾರವನ್ನು ಸಮಾನವಾಗಿ ಮತ್ತು ಅದನ್ನು ಮಾನಸಿಕವಾಗಿ ಹಂಚಿಕೊಂಡಿದ್ದೆವು.ಹಾಗಾಗಿ ನಮ್ಮ ಸಂಸ್ಥೆಯ ಪ್ರಚಾರವಾಗಲಿ ಅದರ ಉದ್ಘೋಷಣೆ ಯಾಗಲಿ ನಮಗೆ ಮುಖ್ಯವೆನಿಸಲಿಲ್ಲ. ಕೇವಲ ಯಕ್ಷಗಾನ ಅಭಿಮಾನ ಜತೆಗೆ ಬಲಿಪ್ಪರ ಅಭಿಮಾನ ಮಾತ್ರವೇ ಮುಖ್ಯವಾಗಿ ಸ್ವಯಂ ಸ್ವಾರ್ಥದ ಲವ ಲೇಶವೂ ಅಲ್ಲಿರಲಿಲ್ಲ. ಹಾಗಾಗಿ ಕಾರ್ಯಕ್ರಮದಲ್ಲಿ ನಮ್ಮದು ಬ್ಯಾನರ್ ಕಟ್ಟೌಟ್ ಯವುದೇ ಫಲಕವಿಲ್ಲದ ಮೊದಲ ಕಾರ್ಯಕ್ರಮವಾಗತ್ತು. ಹಾಗಾಗಿ ಕಲಾಭಿಮಾನ ಮಾತ್ರ ವ್ಯಕ್ತವಾದರೆ ಸಾಕು ನಾವು ಯಕ್ಷಗಾನ ಅಭಿಮಾನಿಗಳು ಎಂಬ ಢಾಂಬಿಕ ಪ್ರಚಾರ ನಮಗೆ ಗಣ್ಯವೆನಿಸಲಿಲ್ಲ. ಇದನ್ನು ಕುಂಬ್ಳೆಯವರು ನಿರೀಕ್ಷಿಸಿರಲಿಲ್ಲ!! ಆಶ್ಚರ್ಯವಾಗಿತ್ತು.. ಯಾವುದೇ ಸ್ವಾರ್ಥವಿಲ್ಲದ ಸಂಘಟನೆಯೇ? ಇಂದು ವೇದಿಕೆಯಲ್ಲಿ ಸಂಘಟನೆಯ ಪ್ಫಲಕಗಳೆ ಪ್ರದರ್ಶನಕ್ಕಿಂತ ದೊಡ್ಡದಗಿ ಅಣಕಿಸುವಂತೆ ಪ್ರದರ್ಶಿಸುವಾಗ ನಿಜ ಯಕ್ಷಗಾನ ಪ್ರದರ್ಶನ ಕಾಣುವುದೇ ಇಲ್ಲ. ಇಂತಹ ನಿಸ್ವಾರ್ಥತೆ ಅವರು ಊಹಿಸದ ಸಂಗತಿಯಾಗಿತ್ತು.
ನಿಖರವಾಗಿ ಕೇವಲ ೪೫ ನಿಮಿಷಗಳ ಸಭಾಕಾರ್ಯಕ್ರಮವೂ ಹಾಗೇನೆ ಕೇವಲ ಬಲಿಪ್ಪರ ಅಭಿನಂದನೇ ಮಾತ್ರವೇ ಮುಖ್ಯವಾಗಿ ಅದೇ ಸಂಪೂರ್ಣ ಕೇಂದ್ರಿಕೃತವಾಗಿತ್ತು. ಸಾಂಕೇತಿಕವಾಗಿ ಯವುದು ಮುಖ್ಯ ಕ್ರಿಯೆಯಾಗಬೇಕೋ ಅದಷ್ಟನ್ನು ಕೈಗೊಂಡೆವು. ಹಾಗಾಗಿ ಉದ್ದುದ್ದ ಭಾಷಣ ವಿಲ್ಲ. ಅನಗತ್ಯ ಹೊಗಳಿಗೆಯ ಮಹಾಪೂರವಿರಲಿಲ್ಲ. ಎಲ್ಲವೂ ಸಾಂಕೇತಿಕವಾಗಿತ್ತು. ಚುಟುಕಾಗಿ ನಮ್ಮ ಬಗ್ಗೆ ಹೇಳಿಕೊಂಡೆವು.ಆರ್ಥೈಸುವವರಿಗೆ ಅದೇ ಸಾಕು. ಮತ್ತಿನ್ನು ಬಲಿಪ್ಪರನ್ನು ನಮಗಿಂತ ಹಿರಿಯರು ಯೋಗ್ಯರು ಹೊಗಳಿದ್ದರು ಮತ್ತು ಅಭಿನಂದಿಸಿ ಗೌರವಿಸಿದ್ದರು. ಈ ಕ್ರಿಯೆ ಕೇವಲ ನಮ್ಮ ಆತ್ಮತೃಪ್ತಿಯ ಸಂಕೇತವಾಗಿತ್ತು. ಅನವಶ್ಯ ಕಾರ್ಯಕ್ರಮ ವಿಳಂಬಿಸಿ ಮುಖ್ಯವಾದ ತಾಳ ಮದ್ದಲೆಯ ಕಾರ್ಯಕ್ರಮವನ್ನು ಕಡಿತಗೊಳಿಸುವ ಆಶಯ ನಮ್ಮದಲ್ಲ. ಸೇರಿದ ಅಭಿಮಾನಿಗಳು ಸಾಧ್ಯವಾದಷ್ಟು ಬಲಿಪ್ಪರ ಪದ ಸಿಂಚನವನ್ನು ಸೋಕಿಸುವ ತವಕದಲ್ಲಿ ಬಂದದ್ದನ್ನು ನಾವು ಗಣಿಸಬೇಡವೇ?
ಬಲಿಪ್ಪರಿಗೆ ಸನ್ಮಾನ ಫಲ ತಾಂಬೂಲದೊಂದಿಗೆ ಅವರ ಇಷ್ಟ ದೇವರಾದ ದೇವಿಯ ವಿಗ್ರಹವನ್ನೇ ಸ್ಮ್ರರಣಿಕೆಯಾಗಿ ನೀಡಲಾಯಿತು. ಸನ್ಮಾನ ಪತ್ರದಲ್ಲು ಅವರ ಎಲ್ಲ ಸನ್ಮಾನ ಪತ್ರದಿಂದಿ ತೀರ ವಿಬ್ಭಿನ್ನವಾಗಿ ವಿನ್ಯಾಸಗೊಳಿಸಲಾಗಿತ್ತು. ಅದರ ಬರಹ ಉಲ್ಲೇಖಗಳು ವೈಶಿಷ್ಟ್ಯವನ್ನು ಸಾರುವಲ್ಲಿ ಗಮನ ಹರಿಸಿ ಎಲ್ಲಿಯು ಸ್ವಾರ್ಥದ ಲೇಪನವೂ ಅಗದಂತೆ ನಿಗಾವಹಿಸಲಾಗಿತ್ತು. ಸಂಗ್ರಹವಾದ ಮೊತ್ತದಲ್ಲಿ ರುಪಾಯಿ ಇಪ್ಪತ್ತೈದು ಸಾವಿರದ ಚೆಕ್ ಸನ್ಮಾನ ನಿಧಿಯಾಗಿ ಅರ್ಪಿಸಿ ವಂದಿಸಿದಾಗ ಸರ್ವರ ಕಣ್ನಾಲಿಗಳು ತೇವವಾಗಿದ್ದು , ಭಾವುಕರಾಗಿ ತಾವು ಕೃತಕೃತ್ಯರಾದದ್ದು ಒತ್ತಿಬಂದ ಧನ್ಯತೆಯ ಭಾವ ಎಲ್ಲವು ಅವಿಸ್ಮ್ಪರಣೀಯ ಆನಂದವನ್ನು ನೀಡಿತ್ತು. ಈ ಧನ್ಯತೆಯನ್ನು ಗಳಿಸಲು ಮನಸ್ಸು ಅದೆಷ್ಟು ಹಪಹಪಿಸಿತ್ತು. ಅಂತೂ ಕೈಗೂಡಿತು. ನಮ್ಮೆಲ್ಲರ ಮನಸ್ಸಿನ ಉಕ್ಕಿಬಂದ ಅಭಿಮಾನವನ್ನು ಬಲಿಪ್ಪರು ಅರಿವಾದುದು ಅವರ ಪ್ರಸನ್ನ ಮುಖದಲ್ಲಿ ವ್ಯಕ್ತವಾಗಿತ್ತು. ಅಭಿನಂದನೆಗೆ ಉತ್ತರಿಸುತ್ತಾ.. “ ಈ ಸನ್ಮಾನ ನನಗೆ ಮಾಡಿದ್ದಲ್ಲ. ನಾನು ನಂಬಿದ ಯಕ್ಷಗಾನ ಕಲೆಗೆ ಮಾಡಿದ್ದೀರಿ” ಎಂಬಂತೆ ಮಾತಾಡಿದರು. ಅವರ ಅರ್ಥ ಪೂರ್ಣ ಮಾತು ನಮ್ಮ ಕ್ರಿಯೆಗೆ ಅರ್ಥವನ್ನು ಉಂಟುಮಾಡಿತ್ತು. ಪ್ರತಿ ಹಂತದಲ್ಲೂ ಧನ್ಯತೆಯ ಭಾವ.
ಮುಂದೆ ನಡೆದ ತಾಳ ಮದ್ದಲೆಯೂ ಆಷ್ಟೇ.. ತಾಮ್ರಧ್ವಜ ಕಾಳಗ.. ಎಂಬ ಪ್ರಸಂಗ. ಈ ಪ್ರಸಂಗದ ಆಯ್ಕೇಯೇ ಹಲವರ ಹುಬ್ಬೇರಿಸುವಂತೆ ಮಾಡಿತ್ತು. ಆದರೆ ಪ್ರಸಂಗದ ನಡೆ ಅದರ ಸನ್ನಿವೇಶಗಳು ಅದರ ಅದ್ಭುತ ಎನ್ನ ಬಹುದಾದ ಪದರಚನೆಗಳ ಮೇಲೆ ನನಗೆ ಅತೀವ ವಿಶ್ವಾಸವಿತ್ತು. ಬಲಿಪ್ಪರ ಯಶಸ್ವಿ ತಾಲ ಮದ್ದಲೆ ಪ್ರಸಂಗಳಲ್ಲಿ ಒಂದಾದ ಈ ಪ್ರಸಂಗ ಅಂದು ಮತ್ತೆ ಇತಿಹಾಸವನ್ನು ನಿರ್ಮಿಸಿಬಿಟ್ಟಿತು. ಒಂದೊಂದು ಪದಗಳೂ ಅದ್ಭುತವಾಗಿ ಮೂಡಿಬಂತು. ಬಲಿಪ್ಪರ ಸಾರಥ್ಯದಲ್ಲಿ ಯಕ್ಷ ವೈಭವವೇ ನಡೆದು ಬಿಟ್ಟಿತಲ್ಲ!! ಇ ಪ್ರಸಂಗದ ಕಥಾಸಾರಾಂಶ ಸನ್ನಿವೇಶ ಮತ್ತು ಪಾತ್ರ ಪರಿಚಯವನ್ನು ಕೇಶವ ಮೊದಲಾಗಿ ಸುಂದರವಾಗಿ ಮಂಡಿಸಿದ್ದರು. ಇದು ನಮ್ಮ ಕಾರ್ಯಕ್ರಮದ ಹೊಸ ರೀತಿಯನ್ನು ತೋರಿಸಿತ್ತು. ಪಾತ್ರವರ್ಗಗಳಲ್ಲು ನಮ್ಮದು ಯೋಜನಾಬದ್ದವಾಗಿ ಪ್ರಸಂಗಕ್ಕನುಗುಣವಾಗಿ ಹಂಚಿದ್ದೆವು. ಹಾಗಾಗಿ ತಾಮ್ರಧ್ವಜ ನಾಗಿ ಜಬ್ಬಾರ್ ಸಮೊ ಅದ್ಭುತ ಆವೇಶಭರಿತರಾಗಿ ಪಾತ್ರ ಮಂಡನೆ ಮಾಡಿದರು.ಮಯೂರಧ್ವಜನ ಭಾವುಕ ಪಾತ್ರಕ್ಕೆ ಗಣರಾಜ್ ಕುಂಬ್ಳೆ ಅತ್ಯಂತ ಸೂಕ್ತವಾಗಿ ಭಾವಾವೇಶ ತೋರ್ಪಡಿಸಿದರು. ಪ್ರತೀ ಪದಕ್ಕೂ ತಮ್ಮ ಹಸ್ತಾಭಿನಯದಿಂದ ಹೃದ್ಯ ಮಾತುಗಳಿಂದ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಟ್ಟರು. ರಾಧಾಕೃಷ್ಣ ಕಲ್ಚಾರ್ ಗಂಭೀರ ಅರ್ಥಗಾರಿಕೆ ಮೆರೆದರು. ಎಲ್ಲರೂ ಬಲಿಪ್ಪರ ಉಪಸ್ಥಿತಿಯಿಂದ ಆವೇಶಭರಿತರಾದರು. ಇಷ್ಟೊಂದು ಅದ್ಭುತ ಚೈತನ್ಯವನ್ನು ತುಂಬಿಸಿತ್ತು ಬಲಿಪ್ಪರ ಕಂಠಶ್ರೀ. ಇನ್ನುಳಿದ ಪಾತ್ರಗಳಲ್ಲಿ.. ಅರ್ಜುನನಾಗಿ ಮಿತ್ರಬಳಗದಿಂದ ಸುಬ್ರಹ್ಮಣ್ಯ ಭಟ್ ಔಚಿತ್ಯ ಪೂರ್ಣವಾಗಿ ನಿರ್ವಹಣೆ ಮಾಡಿದರು. ನಾವು ಇರಿಸಿದ ವಿಶ್ವಾಸವನ್ನು ಹುಸಿಯಾಗದಂತೆ ನಮ್ಮ ಆಯ್ಕೆ ಅರ್ಥ ಪೂರ್ಣವಾಗುವಂತೆ ನಕುಲಧ್ವಜ ನಮ್ಮ ಮಿತ್ರ ಮುಳಿಯ ರಘುರಾಮ ಮತ್ತು ಕುಮುದ್ವತಿ ಪಾತ್ರದಲ್ಲಿ ಶ್ರೀರಾಮ ಶಿರಂಕಲ್ಲು ಸೂಕ್ತವಾದ, ಶ್ರುತಿಬದ್ಧವಾದ ಅರ್ಥಗಾರಿಕೆಯನ್ನು ಮಾಡಿದರು. ಇಬ್ಬರೂ ತಮಗೊದಗಿದ ಅವಕಾಶದಿಂದ ಭಾವತುಂಬಿ ಅರ್ಥ ಹೇಳಿ ಧನ್ಯರಾದರು. ಹಿಮ್ಮೇಳದ ಮದ್ದಲೆ ವಾದನದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯರು ನಿಜವಾಗಿಯು ಅದ್ಭುತ ಸಾಹಿತ್ಯ ಮತ್ತು ಜಾಣ್ಮೆಯನ್ನು ಪ್ರದರ್ಶಿಸಿದರು.ಬಲಿಪ್ಪರು ತಮ್ಮ ಭಾಗವತಿಕೆಯೊಂದಿಗೆ ಪದವನ್ನು ಹೇಳುತ್ತ ಭಾವಭಿನಯದೊಂದಿಗೆ ವಿವರಿಸುವ ಶೈಲಯಿಂದ ಇವರಿಬ್ಬರು ಬಹಳ ಪ್ರಭಾವಿತರಾದರು. ಬಲಿಪ್ಪರ ಭಾಗವತಿಕೆಗೆ ಇವರ ಆಯ್ಕೆ ಅತ್ಯಂತ ಸೂಕ್ತವಾಗಿತ್ತು. ಸೂಕ್ತ ಪ್ರೋತ್ಸಾಹ ದೊರೆತಲ್ಲಿ ಇವರು ಉತ್ತಮ ಭವಿಷ್ಯವನ್ನು ರೂಪಿಸಬಲ್ಲರು. ಚೆಂಡೆಯಲ್ಲಿ ರವಿಶಂಕರ ಬಡೆಕ್ಕಿಲ ಬಲಿಪ್ಪರ ಸಾನಿಧ್ಯವನ್ನು ಸಾರ್ಥಕ ಪಡಿಸಿಕೊಂಡರು.
ನಮ್ಮ ಯೋಜನೆಯಂತೆ ಸುಮಾರು ೭ ಗಂಟೆಗೆ ಅದ್ಭುತ ಕಾರ್ಯಕ್ರಮ ಸಂಪನ್ನಗೊಂಡಿತು.ಬಲಿಪ್ಪರ ಮಂಗಳ ಪದದ ವರೆಗೂ ಮೌನವಾಗಿ ತನ್ಮಯರಾಗಿ ಕುಳಿತ ಪ್ರೇಕ್ಷಕ ವರ್ಗ ಮುಗಿಯುತ್ತಿದ್ದಂತೆ ಅದ್ಭುತ ಕರತಾಡನದೊಂದಿಗೆ ಅದ್ಭುತ ಭಾಗವತ ಶ್ರೇಷ್ಠರಿಗೆ ಮತ್ತುಳಿದ ಕಲಾವಿದರಿಗೆ ಹೃದಯದುಂಬಿ ಕೃತಜ್ಞತೆಯನ್ನು ಸಲ್ಲಿಸಿತು.
ಈ ಮಹತ್ಕಾರ್ಯದಲ್ಲಿ ನಾವು ಹಲವರ ಸಹಕಾರವನ್ನು ಮರೆಯಲು ಸಾಧ್ಯವೇ ಇಲ್ಲ. ಮೊದಲಾಗಿ ರಶೀತಿ ಪುಸ್ತಕದ ಅಗತ್ಯವಿಲ್ಲದೆ ನನ್ನ ಮತ್ತು ನಮ್ಮ ಮಿತ್ರರ ಮೇಲಿನ ವಿಶ್ವಾಸದಲ್ಲಿ ಧನ ಸಹಾಯ ಒದಗಿಸಿದ ಮಿತ್ರರು ಮತ್ತು ಕಲಾಭಿಮಾನಿಗಳ ಸಹಾಯ ಮತ್ತು ಸಹಕಾರ ಇವರಲ್ಲಿ ಎಲ್ಲರ ಹೆಸರನ್ನು ಉದ್ದರಿಸುವುದು ಕಷ್ಟ ಸಾಧ್ಯ... ನಿರೀಕ್ಷಯಂತೆ.. ಹಿರಿಯ ಯಕ್ಷಗಾನ ಅಭಿಮಾನಿ ಕಲಾವಿದರ ಆಪದ್ಭಾಂದವ ಆಯುಕ್ತರಾದ ಶ್ರೀ ಟಿ. ಶ್ಯಾಂ ಭಟ್, ಅರಬ್ ರಾಷ್ಟ್ರದಲ್ಲೇ ಇದ್ದರೂ ನನ್ನ ಹಾಗು ನಮ್ಮ ಪ್ರತೀ ಚಟುವಟಿಕೆಯನ್ನು ಹತ್ತಿರದಲ್ಲೇ ಗಮನಿಸಿ ಪ್ರೋತ್ಸಾಹಿಸುವ ಅತ್ಯಂತ ಆತ್ಮೀಯ ಮಿತ್ರ ಶ್ರೀ ಪ್ರಸನ್ನ ತೆಂಕಬೈಲು ಅಲ್ಲದೆ ಅದ್ಭುತ ಭಾಗವತ ಅಭಿಮಾನವನ್ನು ಕಾರ್ಯಕ್ರಮದ ಸಿದ್ದತೆಯ ಅಂತಿಮ ಘಳಿಗೆಯಲ್ಲಿ ತೋರಿಸಿಕೊಟ್ಟ ಶ್ರೀ ಮುರಳೀಧರ ಕಾಟಿಪಳ್ಳ ಹೀಗೆ ಇನ್ನು ಹಲವರ ಅದ್ಭುತ ಸಹಕಾರ ಸಹಾಯಕ್ಕೆ ನಾವು ಕೃತಜ್ಞರಾಗಲೇ ಬೇಕು. ಇನ್ನು ಕಾರ್ಯಕ್ರಮದಂದು ನನ್ನ ಬೆನ್ನೆಲುಬಾಗಿ ನಿಂತ ನಿತ್ಯಬಳಗದ ಮಿತ್ರರು , ಕಲಾವಿದರಿಗೆ ರಾತ್ರಿಯ ಊಟದ ವ್ಯವಸ್ಥೆಯನ್ನು ಮತ್ತು ಇನ್ನಿತರ ಹಲವು ಸಹಾಯಗಳನ್ನು ಶ್ರಮವಹಿಸಿ ಸೂಕ್ತ ಸಮಯಕ್ಕೆ ಒದಗಿಸಿದ ಅತ್ಮೀಯ ಬಂಧು ಶ್ರೀ ಆಟಿಕುಕ್ಕೆ ವೆಂಕಟೇಶ್ ಭಟ್ ಇವರೆಲ್ಲರ ಸಹಾಯವನ್ನು ಮರೆಯಲಾರೆ. ಪ್ರತೀ ಹಂತದಲ್ಲು ಎಲ್ಲಾ ಸಹಾಯ ಒದಗಿಸಿದ ಹತ್ವಾರ್ ಸಭಾಂಗಣದ ಆಡಳಿತ ಮತ್ತು ಸಿಬ್ಬಂದಿ ವರ್ಗದ ವರಿಗೆ ಮನಸಾ ಕೃತಜ್ಞತೆಗಳು.
ಎಲ್ಲಕ್ಕಿಂತ ಮಿಗಿಲಾಗಿ ಯಶಸ್ಸಿನ ಸಿಂಹಪಾಲು ಅಂದು ಆಗಮಿಸಿದ ಯಕ್ಷಗಾನ ಹಾಗು ಬಲಿಪ್ಪ ಅಭಿಮಾನಿಗಳು. ಕೊನೆಯವರೆಗೂ ಸುಸಂಸ್ಕೃತ ಪ್ರೇಕ್ಷಕರು ಇಡೀ ಕಾರ್ಯಕ್ರಮದ ಘನತೆಯನ್ನು ಮೌಲ್ಯವನ್ನು ಹೆಚ್ಚಿಸಿದರು. ಮಿತವಾಗಿದ್ದ ಚಪ್ಪಾಳೆ ಕೇಕೆ ಶಿಳ್ಳೆ ರಹಿತ ಪ್ರೇಕ್ಷಕ ವರ್ಗ ನಮ್ಮ ಮನೋಭಾವಕ್ಕನುಗುಣವಾಗಿ ಪ್ರೋತ್ಸಾಹಿಸಿತು. ಒಂದು ಕ್ಷಣ ಎದ್ದು ಹೋದರೆ ಎಲ್ಲಿ ಬಲಿಪ್ಪರ ಪದ ತಪ್ಪುವುದೋ ಎಂದು ಅದರಲ್ಲೇ ತಲ್ಲೀನರಾದ ಪ್ರೇಕ್ಷಕರನ್ನು ಮರೆಯುವುದೆಂತು ಸಾಧ್ಯ.?
ಬಲಿಪ್ಪರನ್ನು ಕರೆದು ಇತಿಹಾಸ ಸೃಷ್ಟಿಸಿದ ಈ ಕಾರ್ಯಕ್ರಮ ಇನ್ನು ಹಲವು ಚರಿತ್ರಾರ್ಹ ಘ್ಹಟನೆಗೆ ನಾವು ಕಾರಣರಾದದ್ದು ನಮ್ಮ ಭಾಗ್ಯ. ನಭೂತೋ ನಭವಿಷ್ಯತಿ ಎಂಬಂತಹ ಕಾರ್ಯಕ್ರಮ..(ನಭವಿಷ್ಯತಿ ಆಗಬಾರದೆಂಬ ಆಶಯ.)ದಲ್ಲಿ. ಹಲವು ಸಂಘ ಸಂಸ್ಥೆಗಳು ಅವಗಣಿಸಿದ ಬಲಿಪ್ಪರ ಸನ್ಮಾನ ಕಾರ್ಯಕ್ರಮ ನಮ್ಮಿಂದ ಆದದ್ದು. ಯಕ್ಷಗಾನಕ್ಕೆ ಹೊಸಪ್ರೇಕ್ಷಕರು ಬರುವುದಿಲ್ಲ ಎಂಬುದು ಹುಸಿಯಾಗುವಂತೆ ಅಂದು ಹಲವು ಸುತ್ತ ಮುತ್ತಲ ಪ್ರೇಕ್ಷಕರು ಬಂದು ಕೊನೇಯವರೆಗೂ ನೋಡಿ ನಮ್ಮ ಕೈ ಕುಲುಕಿ ಹೋದದ್ದು, ಅತ್ಯಂತ ಸಭ್ಯ ರೀತಿಯ ಶಿಸ್ತು ಬದ್ದ ಮತ್ತು ಯಾವುದೇ ಸ್ವಾರ್ಥದ ಲೇಪವೂ ಇಲ್ಲದಂತಹ ಕಾರ್ಯಕ್ರಮ ಸಂಘಟಿಸಿದ್ದು. ಅನಾವಶ್ಯಕ ಆಡಂಬರವನ್ನು ತೋರದೇ ಅತ್ಯಂತ ಸರಳ ರೀತಿಯಲ್ಲಿ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿಸಿದ್ದು. ಒಂದು ಯಕ್ಷಗಾನ ಕಾರ್ಯಕ್ರಮಕ್ಕೆ “ಸಮಯ ಟಿ.ವಿ”. ಮಾಧ್ಯಮದವರು ಆಹ್ವಾನಿಸದೇ ಬಂದು ಬಲಿಪ್ಪರ , ಕಲಾವಿದರ ಮತ್ತು ನಮ್ಮ ಸಂದರ್ಶನವನ್ನು ಮಾಡಿ ಅದನ್ನು ಅಂದೇ ರಾತ್ರಿ ಮುಖ್ಯ ವಾರ್ತೆಯಲ್ಲಿ ಪ್ರಸಾರ ಮಾಡಿದ್ದು. ಇದೆಲ್ಲ ಕಡಿಮೆ ಸಾಧನೆ ಮತ್ತು ಇದು ದುರಹಂಕಾರದ ಮಾತು ಎಂದು ನನಗನಿಸುವುದಿಲ್ಲ. ಉತ್ತಮ ಕಾರ್ಯಕ್ಕೆ ಸಿಕ್ಕ ದೇವರು ನೀಡಿದ ಫಲ.ಸದುದ್ದೇಶ ಮತ್ತು ನಿಸ್ವಾರ್ಥ ಮನೋಭಾವ ಇದ್ದಲ್ಲಿ ಕಾರ್ಯಕ್ರಮ ಬಹುತೇಕ ಯಶಸ್ವಿಯಾದಂತೆ. ಪರರ ಕಾಲೆಳೆಯುವ ತಂತ್ರವಿಲ್ಲದೇ , ಪರರನ್ನು ದೂಶಿಸದೆ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಈ ಯಶಸ್ಸು ಸಿಗುವುದೆಂಬುದಕ್ಕೆ ನಿದರ್ಶನವಾಯಿತು ನಮ್ಮ ಕಾರ್ಯಕ್ರಮ. .
ಕೊನೆಯಲ್ಲಿ ಕೆಲವು ಮಾತು ಆದಿನ ಬಲಿಪ್ಪರು ಎಲ್ಲವನ್ನು ಮರೆತು ಹೃದಯ ತುಂಬಿ ಹಾಡಿದರು. ಜಬ್ಬಾರ್ ಅವರಂತು ಮುಕ್ತ ಕಂಠದಿಂದ ಶ್ಲಾಘಿಸಿದರು “ಇತ್ತೀಚಿನ ೪-೫ ವರ್ಷಗಳಲ್ಲಿ ಬಲಿಪ್ಪರು ಹೀಗೆ ಪದ ಹೇಳಿದ್ದನ್ನು ನಾನು ಕೇಳಲಿಲ್ಲ.” ಅದು ಪ್ರಾಮಾಣಿಕವಾಗಿ ಒಪ್ಪಬೇಕಾದ ಮಾತು. ಕೊನೆಯ ನಾಲ್ಕು ಪದಗಳಿವೆ ಎಂಬಾಗ ಬಲಿಪ್ಪರು ಹೇಳಿದರು
“ ಕೂಡುವುದಿಲ್ಲ.... ಖ್ಹೆಮ್ಮು ಬರ್ತಾ ಇದೆ” ಏನು ಹೇಳಲಿ. ಅವಿಶ್ರಾಂತ ನಾಲ್ಕು ಗಂಟೆಗಳ ಕಾಲ ಪದ ಹೇಳಿ ನಮ್ಮ ಅದ್ಭುತ ಕಂಠಸಿರಿಯಿಂದ ಗಾನಸುಧೆಯನ್ನು ಉಣಿಸಿದ ಬಲಿಪ್ಪರನ್ನು ತೇವ ಭರಿತ ಕಣ್ಣಲ್ಲಿ ಕಂಡೆ ಆಗ ನನಗನಿಸಿದ್ದು. “ ತಾನು ನೋವನುಭವಿಸಿ ಎದೆ ಹಾಲನ್ನು ಜನನಿ ಮಗುವಿಗೆ ನೀಡುತ್ತಾಳೆ. ಆ ಮಗು ತೃಪ್ತಿಯಿಂದ ಆ ಮಧುರಾಮೃತವನ್ನು ಸವಿಯುತ್ತದೆ.” ಇಲ್ಲೂ ಹಾಗೆ ಆ ಮಧುರಾಮೃತವನ್ನು ನಮಗೆ ಉಣಬಡಿಸಿದ ಬಲಿಪ್ಪರು ಮಹಾತಾಯಿಯಾಗಿ ಮಹಾನ್ ವ್ಯಕ್ತಿಯಾಗಿ ಶಕ್ತಿಯಾಗಿ ಕಾಣುವುದಿಲ್ಲವೇ?