"ಇದು ವಿಮರ್ಶೆಯಲ್ಲದ ಚಿಂತನ"

Sunday, February 19, 2012

ಆಶುಗಾನ ಯಕ್ಷಗಾನ


ಕರ್ಣಾವಸಾನ ಎಂಬ ಎರಡು ಧ್ವನಿಸುರುಳಿಗಳಿರುವ ಯಕ್ಷಗಾನವನ್ನು ಕೇಳದ ಯಕ್ಷಗಾನ ಅಭಿಮಾನಿಗಳು ಬಹಳ ಅಪರೂಪ. ಪದ್ಯಾಣ ಮತ್ತು ಹೊಳ್ಳರ ಮಾಸ್ಟರ್ ಪೀಸ್ ಎನ್ನಬಹುದಾದ ಭಾಗವತಿಕೆ ಮತ್ತು ಶೇಣಿಯವರ ಅದ್ಭುತ ಅರ್ಥಚಿತ್ರಣವನ್ನು ಒಳಗೊಂಡ ಯಕ್ಷಗಾನ ಕ್ಯಾಸೆಟ್ ಅದು. ಅದರಲ್ಲಿ ಕರ್ಣನ ಸಾರಥಿ ಬಿಟ್ಟು ಹೋಗಿ ರಥವು ವಸುಂಧರೆಯಲ್ಲಿ ಕುಸಿದ ಸಂದರ್ಭದಲ್ಲಿ ಶೇಣಿಯವರು ತಮ್ಮ ಎಂದಿನ ಶೈಲಿಯಲ್ಲಿ ಕರ್ಣನ ಮಾತುಗಳನ್ನು ಹೇಳುವುದನ್ನು ಹಲವು ಬಾರಿಕೇಳಿದ್ದೇನೆ. ಒಂದು ಅರ್ಥಗಾರಿಕೆಯ ಪಂಚಾಂಗವನ್ನು ಹಾಗಿ ಅದರಲ್ಲೇ ಅರ್ಥಗಾರಿಕೆಯ ಸುಂದರ ಮಹಲನ್ನು ಕಟ್ಟುತ್ತಾ ಪಾತ್ರ ಪೋಷಣೆಯೊಂದಿಗೆ ಆ ದೃಶ್ಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಕೇವಲ ಮಾತುಗಾರಿಕೆಯಲ್ಲೇ ತುಂಬಿಸುವ ಶೇಣಿಯವರ ಅರ್ಥಗಾರಿಕೆಯನ್ನು ಮರೆಯಲು ಸಾಧ್ಯವೇ? “ ಸಾರಧಿ ಬಿಟ್ಟು ಹೋದ .  ಯುದ್ದ ಮಾಡ್ತಾ ಇದ್ದಹಾಗೇನೇ ರಥದ ಗಾಲಿಗಳು ನೆಲದಲ್ಲಿ ಹೂತು ಹೋದ  ಅನುಭವಾಯಿತು” ಎಂದು ಸನ್ನಿವೇಶವನ್ನು ಮಾತುಗಾರಿಕೆಯನ್ನೂ ಅರ್ಧದಲ್ಲೇ ಆರಂಭಿಸಿ ಮತ್ತೆ ಸನ್ನಿವೇಶದ ಮತ್ತು ಮಾತುಗಾರಿಕೆಯ ಆರಂಭಕ್ಕೆ ಬರುವ ಶೇಣಿಯವರ ವಿಶಿಷ್ಟ ಶೈಲಿ ನಾವು ಯಕ್ಷಗಾನ ಅಭಿಮಾನ ಬೆಳೆಸಿಕೊಂಡದ್ದಕ್ಕೆ ಸಾರ್ಥಕವೆನಿಸುವಹಾಗೆ ಮಾಡುತ್ತದೆ.

 “ಶಿವನೇ ..ಸಾರಧಿ ಬಿಟ್ಟು ಹೋದ .  ಯುದ್ದ ಮಾಡ್ತಾ ಇದ್ದಹಾಗೇನೇ ರಥದ ಗಾಲಿ ನೆಲದಲ್ಲಿ ಹೂತು ಹೋದ  ಅನುಭವಾಯಿತು. ಕುದುರೆಗಳು ಎಷ್ಟು ಕಷ್ಟ ಪಟ್ಟು ಮೇಲಕ್ಕೆ ರಥವನ್ನು ಎಳೆದರೂ  ಕೂಡ ಅಲುಗಾಡುವುದಿಲ್ಲ ರಥ. ಕುದುರೆಗಳು ಆಯಾಸಗೊಂಡಿದ್ದಾವೆ. ಛೇ...ಹೂಂ.. ದೈವದ ಮುನಿಸು. ದೈವಾನುಗ್ರಹ ಇಲ್ಲ.  ಶಿವನೇ... ಅಂತ ನಾನು ಉದ್ಗರಿಸಬಹುದೇ ಹೊರತು ಪ್ರತ್ಯಕ್ಷವಾಗಿ ಆ ಕಡೆಗೇ ಅನುಗ್ರಹ ಮಾಡಿದ. ಪಾಶುಪತ ಶರ ಅರ್ಜುನನಿಗೆ ನೀಡಿ ಪ್ರಪಂಚದಲ್ಲಿ ಯಾವ ಯೋಧನೂ ಇದಿರಾಗುವುದಕ್ಕಿಲ್ಲ  ಅಂತ ಮಾಡಿ ತೋರಿಸಿದ ಮೇಲೆ  ಶಿವನು ಕೊಟ್ಟ ಪಾಶುಪತ ಶಕ್ತಿ  ಯಾವನ ಸ್ವಾಧೀನ ಇದೆಯೋ  ಅವನ ಮುಂದೆ ಶಿವಾನುಗ್ರಹ ನನಗುಂಟು  ಅಂತ ಅಂದರೆ ಮೂರ್ಖತನ. ಕೃಷ್ಣಸ್ತು  ಭಗವಾನ್ ಸ್ವಯಂ. ಕೃಷ್ಣ ಪ್ರತ್ಯಕ್ಷವಾಗಿ  ಅರ್ಜುನನ್ನು ರಕ್ಷಿಸ್ತಾನೆ ಅಂತ ಸರ್ಪಾಸ್ತ್ರ ತಪ್ಪಿ ಹೋದದ್ದೇ ಉಧಾಹರಣೆ. ರಕ್ಷಿಸ್ತಾನೆ., ಮತ್ತೇ ಯಾವ ದೇವರಪ್ಪಾ?  ನಮಗಿರುವುದು ನಾವು ನಂಬಿದಂತಹ  ಈ   ಸ್ಥಿರೆ. ಆದಂತಹ ಭೂಮಿ.  ಕ್ಶತ್ರಿಯರಿಗೆ ಇವಳು ಸ್ಥಿರೆಯೆ. ಈ ಯುದ್ದಕ್ಕೆ ವಿಷಯವೇ  ಈ ಭೂಮಂಡಲದ ಆಢಳಿತ. ರಣದ ಅಭಿಮಾನೀ ದೇವತೆಯೇ ಇವಳು.  ಅವಳೇ ಮುನಿದಳು. ನನ್ನ ದುಡಿಮೇ ಯಾವನಿಗಾಗಿಯೋ ಆ ಕೌರವನಿಗೆ ಈ ಮಣ್ಣು ಮುನಿಲಿಲ್ಲಾಂತ ಆದರೆ ಕೆಸರಿಲ್ಲದೇ ಇದ್ದಂತಹ ಈ ರಣ ಕ್ಷೇತ್ರದಲ್ಲಿ ನನ್ನ ರಥದ ಗಾಲಿಯನ್ನೇ ಭೂಮಿ ಕಚ್ಚಿ ಹಿಡಿದದ್ದು ಅಂತ ಅಂದ್ರೆ ಕೆಸರಿನಲ್ಲಿ ಹೂತು ಹೋದದ್ದಲ್ಲ. ಮಾತುಂಟು ಹಾವು ಕಚ್ಚಿದರೆ ಔಷಧಿ ಇದೆ ಮಣ್ಣು ಕಚ್ಚಿದರೆ? ಹಾ ದೈವ ವಿಹೀನ  ಕರ್ಣನಲ್ಲ.. ಕರ್ಣನಲ್ಲ. ದೈವವಿಹೀನಲ್ಲಾ ನೃಪತಿ. ಕೌರವೇಶ್ವರ..... ಏನು ಮಾಡಲಿ?  ಅದರೆ ಒಂದು ಆಶೆ ಇತ್ತು.  ಸರ್ವ ಶಕ್ತಿಯನ್ನು ಉಪಯೋಗಿಸಿ ಕೊನೆಯ ಉಸಿರಿನವರೆಗೂ ಹೋರಾಟ ಮಾಡಬೇಕು ಅರ್ಜುನನಲ್ಲಿ.  ಯುದ್ದದ ಜಯಾಪಜಯವಲ್ಲ  ಆದರೆ ಈ ಊನ ಬಂದದ್ದರಿಂದ  ಸಮ ಭಟನಾಗಿ ಯುದ್ದ ಮಾಡುವುದಕ್ಕೆ ಸಾಧ್ಯವಿಲ್ಲದೇ ಹೋಯಿತಲ್ಲ.  ಏನು ಮಾಡುವುದು. ಈಗ?   ಮಾಡುವುದೇನು..??  ?   ಮಾಡುವುದೇನು..??   ಈ ರಥದಿಂದ ಕೆಳಕ್ಕೆ ಧುಮುಕುತ್ತೇನೆ”.

ಈ ಸ್ವಗತವಾದ  ಮಾತುಗಾರಿಕೆ ಕೇಳುವಾಗ ಯಾವುದೇ ಕಾವ್ಯದ ಸುಂದರ ಕಲ್ಪನೆಗೆ ಮಿಗಿಲಾಗಿ ತೋರುವುದಿಲ್ಲವೇ? ಒಂದು ಕಾವ್ಯವೋ ಕಥೆಯೋ ಸಾಹಿತಿಯಿಂದ ರಚಿಸಲ್ಪಡುವಾಗ ಕೆಲವೊಮ್ಮೆ ಹಲವು ಬಾರಿ ಅದು ತಿದ್ದು ಪಡಿಗೆ ಒಳಗಾಗಿ ಅಂತಿಮವಾಗಿ ಕಾವ್ಯ ರೂಪದಲ್ಲಿ ಬಹಿರಂಗ ಪ್ರಕಟವಾಗುತ್ತದೆ. ಆದರೆ ಇಲ್ಲಿ ಪೂರ್ವ ಯೋಜನೆಯ ಯಾವುದೇ ತಿದ್ದುಪಡಿಗೆ ಅವಕಾಶವಿಲ್ಲದಂತೆ ಏಕಾ ಏಕಿಯಾಗಿ ಪ್ರಕಟಗೊಳ್ಳುವುದು ಅದೇನು ಸಾಮಾನ್ಯ ಪ್ರತಿಭೆಯೆ? ಕೌರವನಿಗೆ ಮುನಿದ ಭೂಮಿ, ಆ ಭೂಮಿಗಾಗಿ ಹೋರಾಟ,  ಪರೋಕ್ಷವಾಗಿ ಅದರ ಪ್ರಭಾವ ಕರ್ಣನಲ್ಲಿ ಕಾಣಿಸಿಕೊಳ್ಳುವುದು.ಹಂದರ ಹಂದರವಾಗಿ ಆ ಚಿತ್ರಣವನ್ನು ಮನ ಮುಟ್ಟುವಂತೆ ಕ್ಷಣ ಮಾತ್ರದಲ್ಲೇ ಅನಾವರಣಗೊಳಿಸುವುದು, ನಿಜಕ್ಕಾದರೆ ಯಕ್ಷಗಾನದ ಅರಿವಿರುವರು ಮಹಾ ಪುಣ್ಯವಂತರು ಅಂತ ಅನಿಸುತ್ತದೆ. ಬಹುಷಃ ಬೇರೆಯಾವುದೇ ಕ್ಷೇತ್ರದಲ್ಲಿ ಈ ಬಗೆಯ ಒಂದು ನಿರ್ಮಾಣವಿರುತ್ತಿದ್ದರೆ ಅದನ್ನೆ ಹಾಡಿ ಹೊಗಳಿ ಅದಕ್ಕೆ ವಿಶ್ವವ್ಯಾಪಿ ಮನ್ನಣೆ ಸಿಗುತ್ತಿತ್ತು. ಇಂದು ಹಲವು ಕಾವ್ಯ ಕೃತಿಗಳು ಸಾಹಿತಿಗಳು ಜ್ಞಾನ ಪೀಠದಂತಹ ಮನ್ನಣೆಗೆ ಪಾತ್ರವಾಗುವಾಗ ಇದರ ಮುಂದೆ ಅವೆಲ್ಲ ಸಾಮಾನ್ಯ ಎಂದೆನಿಸುತ್ತದೆ.  ನಿಜಕ್ಕೂ ಯಕ್ಷಗಾನದಲ್ಲಿ ಸಿಗಬೇಕಾದ ಮನ್ನಣೆ ಸಿಗಬೇಕಾದ ಕ್ಷೇತ್ರಗಳಿಗೆ ವಿಭಾಗಗಳಿಗೆ ದಕ್ಕಲಿಲ್ಲವಲ್ಲ ಎಂದು ಖೇದವಾಗುತ್ತದೆ.

ಅಶು ಕವಿತ್ವ ಎಂಬುದು ಒಂದು ಅದ್ಭುತ ಪ್ರತಿಭೆ. ಎಲ್ಲೆಂದರಲ್ಲಿ ಯಾವುದರ ಪರಿಮಿತಿಯಿಲ್ಲದೆ ಕವಿತೆ ಹುಟ್ಟಿದರೆ ಅದು ಅಶು ಕವಿತ್ವವಾಗುತ್ತದೆ. ನಿಂತ ನಿಲುಮೆಯಲ್ಲೆ ಬಗೆ ಬಗೆಯ ಸ್ವಕಲ್ಪನೆಗೆ ರೂಪಕೊಟ್ಟು ಅದನ್ನು ಪ್ರಕಾಶಿಸುವಂತೆ ಮಾಡುವ ಕಲೆ ಅದು ಕವಿಯ ಕವಿತಾ ರಚನೆಗೆ  ಮಾತ್ರ ಸೀಮಿತವಾಗಿಲ್ಲ. ಅಶು ಭಾಷಣ ಇತ್ಯಾದಿ ಹಲವು ರೂಪಗಳಲ್ಲಿ ಇದ್ದರೂ ಈ ಅಶು ಕಲೆ ಅತಿ ಹೆಚ್ಚು  ಪ್ರಯೋಗಕ್ಕೆ ಬರುವುದು ಯಕ್ಷಗಾನದಲ್ಲಿ. ಅರ್ಥಗಾರಿಕೆಯ ಕ್ಷೇತ್ರಕ್ಕೆ ಬರುವಾಗ ತೆಂಕುತಿಟ್ಟು ಇದನ್ನು ಅತ್ಯಂತ ಅಧಿಕವಾಗಿ ಬಳಸಿಕೊಂಡಿದೆ ಎನ್ನಬಹುದು.

ಯಕ್ಷಗಾನದಲ್ಲಿ ಬರವಣಿಗೆ ಅಥವಾ ಲಿಪಿರೂಪದಲ್ಲಿ ಇರುವುದು ಪ್ರಸಂಗ ಪುಸ್ತಕ ಮಾತ್ರ. ಅದರಲ್ಲಿ ಛಂದೋಬದ್ದವಾಗಿ ಹಲವು ಪದಗಳು ಕಾವ್ಯ ರೂಪದಲ್ಲಿದ್ದು ಪ್ರಸಂಗದ ಚೌಕಟ್ಟು ಮಾತ್ರವೇ ಇಲ್ಲಿಂದ ರೂಪಿತವಾಗುತ್ತದೆ.ಉಳಿದ ಎಲ್ಲಾ ಅಂಗವೂ ಅಶುಕವಿತ್ವದ ರೂಪದಲ್ಲಿ ರಂಗದ ಮೇಲೆ ಸೃಷ್ಟಿಯಾಗುವುದು ಅತ್ಯಂತ ಸೋಜಿಗ. ಪ್ರಸಂಗದ ಪುಸ್ತಕದ ಪದಗಳು ಹಿಮ್ಮೇಳ ಕಲಾವಿದರಿಗೆ ಮುಖ್ಯವಾಗಿ ಭಾಗವತರಿಗೆ ಹೊಂದಿಕೊಂಡು ಒಂದು ಬಗೆಯ ಅಶುಕಾವ್ಯದ ರೂಪದಲ್ಲಿ ಪ್ರಸ್ತುತಗೊಳ್ಳುವುದರಿಂದ ಯಕ್ಷಗಾನ  ಬಹಳವಾಗಿ ಅಶು ಕಾವ್ಯದ ಸಾಮಾರ್ಥ್ಯವನ್ನು ಅವಲಂಬಿಸಿದೆ. ಪಾತ್ರಧಾರಿಯಿಂದ ಅರ್ಥಗಾರಿಕೆಯಿಂದ  ಮೊದಲ್ಗೊಂಡು ಸಮಗ್ರವಾಗಿ ಇಷ್ಟು ಬೃಹತ್ ರೂಪದಲ್ಲಿ ರಂಗದ ಮೇಲೆ ಪ್ರಕಟಗೊಳ್ಳುವ ಪ್ರಾಕಾರ ಬೇರೆ ಯಾವುದೂ ಇಲ್ಲ. ಸಿನಿಮಾ ನಾಟಕ ಅಥವಾ ಇನ್ಯಾವುದೇ ಕಲಾಪ್ರಕಾರಗಳಲ್ಲಿ ಅದರ ಸೃಷ್ಟಿಗೆ ಹಿನ್ನೆಲೆಯಲ್ಲಿ ಬೇರೆ ಯಾವುದೋ ಪ್ರತಿಭೆ ಕೆಲಸ ಮಾಡಿರುತ್ತದೆ. ಯಾರೋ ಬರೆದ ಸಂಭಾಷಣೆಯನ್ನು ಒಪ್ಪಿಸಿ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಗಿಟ್ಟಿಸುವುದು ಯಕ್ಷಗಾನದ ಅರ್ಥಗಾರಿಕೆಯ ಮುಂದೇ ಎನೂ ಅಲ್ಲ ಅಂತ ಅನ್ನಿಸಿಬಿಡುತ್ತದೆ. ಯಾರೋ ಬರೆದ ಸಂಭಾಷಣೆಯನ್ನು ಕೇಳಿ ರಂಗದ ಮೇಲಿನ ಕಲಾವಿದನೇ  ಹೇಳಿದನೆಂದು ಆರಾಧಿಸುವ ಅಭಿಮಾನಿಸುವುದನ್ನು ನೋಡಿದಾಗ ಅವೆಲ್ಲ ಯಕ್ಷಗಾನ ಅಭಿಮಾನಿಗೆ ಹುಂಬತನದ್ದು ಅಂತ ಅನ್ನಿಸಿಬಿಡುತ್ತದೆ.

ಹಲವಾರು ಪ್ರಸಂಗಗಳು ಅದು ರಾವಣ ವಧೆಯಾಗಲೀ , ವಾಲಿ ಮೋಕ್ಷವಾಗಲೀ ಯಾವುದೇ ಆದರೂ ಇಂದು ರಂಗದ ಮೇಲೆ ಕಂಡ ಹಾಗೆ ಇನ್ನೊಂದು ಬಾರಿ ಕಾಣಿಸುವುದಿಲ್ಲ. ಇಲ್ಲಿ ಪ್ರಸಂಗ ಪುಸ್ತಕದ ಪದಗಳು ಅದೇ ಆಗಿರುತ್ತದೆ. ಮಾತ್ರವಲ್ಲ ರಂಗದ ಮೇಲೆ ಬರುವ ಕಲಾವಿದರು ಅದೇ ಆಗಿದ್ದರು ಇಂದಿನ ಹಾಗೆ ನಾಳೆ ಇರುವುದಿಲ್ಲ. ಇಂದು ಕಂಡ ರಾಮ ರಾವಣ ನಾಳೆ ಇರುವುದಿಲ್ಲ. ಎಲ್ಲ ವಿಭಿನ್ನವಾಗಿ ಗೋಚರವಾಗುತ್ತದೆ. ಶೇಣಿಯವರ ರಾವಣ,  ಗೋವಿಂದ ಭಟ್ಟರ ಕೌರವ ಒಂದೇ ಸ್ಥಳದಲ್ಲಿ ಹತ್ತು ಬಾರಿ ಪ್ರದರ್ಶಿತವಾದರೂ ಮತ್ತೂ ಮತ್ತೂ ಇನ್ನೂ ಇನ್ನೂ ಪ್ರೇಕ್ಷಕ ಹಾಜರಾಗುತ್ತಿದ್ದುದು ನಿನ್ನೆಯ ರಾವಣ ಅಥವಾ ಕೌರವನ ಇಂದಿನ ರೂಪ ಹೇಗಿರಬಹುದು ಎಂಬ ಕುತೂಹಲದಿಂದ. ಒಂದೇ ಪ್ರಸಂಗವಾದರೂ ವೈವಿಧ್ಯಮಯ ಪಾತ್ರ ಮಾತ್ರವಲ್ಲ ಹಿಮ್ಮೇಳದ ಕಲಾವಿದರು ವೈವಿಧ್ಯಮಯವಾಗಿ ರಂಗದ ಮೇಲೆ ಪ್ರತಿಭೆಯನ್ನು ಮೆರೆಯುತ್ತಾರೆ. ಇದು ಕೇವಲ ಒಂದಿಬ್ಬರು ಕಲಾವಿದರ ಸಾಮಾರ್ಥ್ಯವೂ ಅಲ್ಲ ಸಮಗ್ರ ಯಕ್ಷಗಾನವೇ ಇಂತಹ ಅದ್ಭುತ ಕಲಾ ರತ್ನಗಳಿಂದ ಕಂಗೊಳಿಸುತ್ತದೆ.  ಇದಕ್ಕೆ ಪೂರ್ವ ಯೋಜನೆ ಎನೂ ಇರುವುದಿಲ್ಲ. ರಂಗದ ಮೇಲೆ ಏನು ಸಾಕಾರಗೊಂಡಿತೋ ಅದು ಆ ದಿನದ ಮಾತ್ರವಲ್ಲ ಆ ಕ್ಷಣದ ಸೃಷ್ಟಿಯಾಗಿರುತ್ತದೆ. ಯೋಚಿಸಿದಂತೆ ಇವೆಲ್ಲ ಅದ್ಭುತ ಎಂದೆನಿಸುವುದಿಲ್ಲವೆ? ನಮ್ಮ ಕಲೆಯ ಬಗ್ಗೆ ಅಭಿಮಾನ ಇರಿಸಿಕೊಳ್ಳುವುದೇ ಒಂದು ಹೆಮ್ಮೆ ಎಂದೆನಿಸುತ್ತದೆ.  

ಸಿನಿಮಾ ನಾಟಕಗಳಂತೆ ಬಿಟ್ಟ ರೀಲನ್ನು ಪುನಹ ಬಿಟ್ಟುಬಿಡುವ ಎಕತಾನತೆ ಯಕ್ಷಗಾನದಲ್ಲಿ ಅಪರೂಪ. ಇಂದಿನ ಪಾತ್ರಗಳು ನಾಳೆ ಬೇರೆಯೇ ಆಗಿ ರಂಗದ ಮೇಲೆ ವಿಜ್ರಂಭಿಸುತ್ತವೇ. ಯಾವುದು ಉತ್ತಮ ಎಂಬ ಲೆಕ್ಕಾಚಾರದಲ್ಲೇ ತಲ್ಲೀನವಾಗುವ ಪರಿಸ್ಥಿತಿ. ಪೌರಾಣಿಕ ಪ್ರಸಂಗಗಳಿಗೆ ಮಾತ್ರ  ಈ ವೈವಿಧ್ಯತೆ  ಇರುವುದು ಮತ್ತೊಂದು ವೈಶಿಷ್ಟ್ಯ. ಒಂದು ಯಕ್ಷಗಾನ ಅದು ಯಾವುದೇ ಪ್ರಸಂಗ ಆಗಿರಲಿ ಅದಕ್ಕೆ ಪರಂಪರೆಯಿಂದ ಬಂದ ಒಂದು ಸಂಪ್ರದಾಯ ಇರುತ್ತದೆ ಅದು ಚೌಕಟ್ಟು ಮಾತ್ರ. ಭಾಗವತರ ಚಿಂತನೆಗೆ ಪೂರಕವಾಗಿ ಒಳಗಿನ ಹೂರಣ ತುಂಬಿಸಲ್ಪಡುತ್ತದೆ. ಇದಕ್ಕೆ ಪೂರ್ವ ತಯಾರಿ ಏನೂ ಇರದೆ.. ಯಕ್ಷಗಾನ ನಡೆಯುವ ಮೊದಲು ಕೆಲವೊಮ್ಮೆ ಭಾಗವತರಲ್ಲಿ ಬಂದು ವೇಷಧಾರಿ ಪ್ರಸಂಗ ನಡೆಯನ್ನು ಕೇಳುವ ಪರಿಪಾಠ ಮಾತ್ರ ಇರುತ್ತದೆ. ಭಾಗವತರನ್ನು ಹೊಂದಿಕೊಂಡು ಕೆಲವೊಮ್ಮೆ ಪ್ರಸಂಗ ನಡೆ ಬದಲಾಗುವುದೂ ಇದೆ. ಅದರೆ ಅದೆಲ್ಲ ಬಹಳ ಅತ್ಯಲ್ಪ ಪೂರ್ವ ತಯಾರಿ. ಯಾವ ಪದ ಯಾವ ರಾಗದಲ್ಲಿ ಹೇಗೆ ಹಾಡಬೇಕೆನ್ನುವ ಪೂರ್ವ ತಯಾರಿ ಇಲ್ಲದೆ ರಂಗದ ಮೇಲೆಯೆ ಅದನ್ನು ಆಗ ತೋಚಿದಂತೆ ಹಾಡುತ್ತಾರೆ. ವೇಶಧಾರಿಗಳೂ ಹಾಗೆ ಯಾವುದೇ ಪೂರ್ವ ತಯಾರಿ ಇಲ್ಲದೆ ವ್ಯವಹರಿಸುತ್ತಾರೆ. ಪೂರ್ಣ ರಾತ್ರಿಯ ಅವಧಿಗೆ ಬೃಹತ್ ಮಟ್ಟದಲ್ಲಿ ಆಶು ಕವಿತ್ವ ರಂಗದಲ್ಲಿ ಸಾಕಾರಗೊಳ್ಳುವುದು ಅದು ಅಷ್ಟು ಸುಂದರವಾಗಿ ಯಕ್ಷಗಾನದಲ್ಲಿ ಮಾತ್ರ.

ಆದರೂ ವ್ಯವಸಾಯೀ ಮೇಳಗಳ ನವ್ಯ ಪ್ರಸಂಗಗಳು ಇದಕ್ಕೆ ಅಪವಾದ. ಪೌರಾಣಿಕ ಆಧಾರಿತ ಪ್ರಸಂಗಗಳಾದರೂ ಕೆಲವೊಂದು ಸಲ ಬಿಟ್ಟ ರೀಲು ಸುಂದಿಟ್ಟು ಅದನ್ನೆ ಪುನಃ ಬಿಡಿಸುವ ಪರಿಪಾಠ ಇನ್ನೂ ಇದೆ. ಬಗೆ ಬಗೆಯ ಪ್ರಯೋಗಗಳಿಗೆ ಒಳಗಾದ ಪೌರಾಣಿಕ ಕಥಾನಕಗಳ ಮೂಲಕ  ಅದೇ ಸವಕಲುತನವನ್ನೇ ತೆರೆದಿಡುತ್ತ  ವ್ಯವಸಾಯಿ ಮೇಳಗಳು ಯಶಸ್ವೀ(!!!)  ತಿರುಗಾಟವನ್ನು ಮುಗಿಸುತ್ತವೆ. ಕಾರಣಗಳು ಯಾವುದೇ ಇರಲಿ ಆದರೆ ನಿಜವಾದ ಅಪ್ಪಟ ಯಕ್ಷಗಾನದ ಅಭಿಮಾನಿ ಈ ಏಕತಾನತೆಯ ಬಗ್ಗೆ ಮಡಿವಂತನೇ ಅಗಿರುತ್ತಾನೆ. ಅದುದರಿಂದಲೇ ಇರಬೇಕು ಹೆಚ್ಚಿನ ಎಲ್ಲ ತೆಂಕು ತಿಟ್ಟಿನ ವ್ಯವಸಾಯಿ ಮೇಳಗಳು ತಮ್ಮ ತಿರುಗಾಟವನ್ನು ನಿಲ್ಲಿಸಿವೆ. ಬಹುಶಃ ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಉಂಟಾಗಲೂ ಇದೂ ಒಂದು ಕಾರಣವಾಗಿರಲೂ ಬಹುದು. ಈಗಲೂ ಅಲ್ಲಲ್ಲಿ ಆಗುವ ಉತ್ತಮ ಪೌರಾಣಿಕ ಯಕ್ಷಗಾನಗಳಿಗೆ ಸಹೃದಯ ಪ್ರೇಕ್ಷಕರ ಕೊರತೆ ಅಷ್ಟಾಗಿ ಇಲ್ಲ ಅಂತ ಅನ್ನಿಸುತ್ತದೆ.

Friday, January 27, 2012

ಮಿತ್ತನಡ್ಕದ ಯಕ್ಷೋತ್ಸವದ ವೈಭವ ಮುಂದುವರೆದುದು


          ಒಂದು ಸಲ ಕೆಲವು ಮಿತ್ರರೆಲ್ಲ ಸೇರಿ ವಾಹನವೊಂದರಲ್ಲಿ ದೇಶ ಸಂಚರಿಸುತ್ತಾ  ಕಾಡುಹಾದಿಯಲ್ಲಿ ಹೋಗುತ್ತಿದ್ದರು. ಎಲ್ಲೋ ಒಂದು ಕಡೆ ಹಾದಿ ತಪ್ಪಿ ಎತ್ತೆತ್ತಲೋ ಹೋಗುತ್ತಿದ್ದಂತೆ ವಾಹನವೂ ಕೆಟ್ಟು ನಿಂತು ತಾವೆಲ್ಲೆದ್ದೇವೆ ಎಂಬ ಪರಿವೆಯೇ ಇಲ್ಲವಾಗಿಬಿಟ್ಟಿತು. ಗೊಂದಲ ಗಾಬರಿಯಿಂದ  ಎಲ್ಲರೂ ವಾಹನದಿಂದ ಇಳಿದು ಆಕಡೆ ಈ ಕಡೆ ಸುತ್ತಾಡಿದರೂ ಎನೂ ತೋಚದಾಯಿತು. ಬಹಳ ಹೊತ್ತಿನವರೆಗೂ ಯಾವುದೇ ವಾಹನವಾಗಲೀ ಮನುಷ್ಯರಾಗಲಿ ಅತ್ತ ಸುಳಿಯಲಿಲ್ಲ. ತುಂಬಾ ಹೊತ್ತಿನ ನಂತರ ಯಾವುದೋ ಮನುಷ್ಯ ಪ್ರಾಣಿಯಂತಿದ್ದ ವ್ಯಕ್ತಿಯೊಂದು ದೂರದ ಕಾಡ ಹಾದಿಯಲ್ಲಿ ಸೌದೆಯ ಹೊರೆಯನ್ನು ಹೊತ್ತುಕೊಂಡು ಹೋಗುವುದನ್ನು ಕಂಡು ಪರಮಾತ್ಮನ ದರ್ಶನವಾದಂತೆ ಎಲ್ಲರು ಅತ್ತ ದೌಡಾಯಿಸಿದರು. ಹತ್ತಿರ ಊರುಕೇರಿ ಇದ್ದು ಗ್ಯಾರೆಜ್ ಎನಾದರೂ ಸಿಗುವುದೇ ಎಂಬುದನ್ನು ವಿಚಾರಿಸ ಹತ್ತಿದರು. ಅಲ್ಲಿ ಕಂಡ ವ್ಯಕ್ತಿ ಯಾವುದೋ ಅದಿವಾಸಿ. ದೇಶದ ಯಾವುದೋ ಒಂದು ಪ್ರದೇಶವಾದ ಅಲ್ಲಿನ ಆ ಆದಿವಾಸಿ ಮನುಷ್ಯ ಏನು ಮಾತನಾಡುತ್ತಾನೆ ಎಂದು ಯಾರಿಗೂ ತಿಳಿಯದೇ ಹೋಯಿತು. ಪ್ರಯಾಣಿಕರಲ್ಲಿ ಹಲವಾರು ಭಾಷೆ ಬಲ್ಲ ಪ್ರತೀಯೊಬ್ಬರೂ ತಿಳಿದ ಎಲ್ಲಾ ಭಾಷೆ ಪ್ರಯೋಗಿಸಿ ನೋಡಿದರೂ ಪ್ರಯೋಜನವಾಗಲಿಲ್ಲ.ಆತ ಏನು ಹೇಳುತ್ತಿದ್ದ ಅಥವ ಇವರು ಹೇಳುವುದು ಅವನಿಗೆ ಮನವರಿಕೆಯಾಗುತ್ತಿದೆಯೇ?  ಇಲ್ಲವೇ? ಒಂದೂ ತಿಳಿಯದೆ ಆಯೋಮಯವಾದಂತಹ ಪರಿಸ್ಥಿತಿ. ಕೊನೆಯಲ್ಲಿ ಬಂದ ಪ್ರಯಾಣಿಕರಲ್ಲಿ ಒಬ್ಬಾತ ಮೌನವಾಗಿಯೇ ಇದ್ದ. ಆತ ಸುಮ್ಮನಿರುವುದಕ್ಕೆ ಕಾರಣವೆಂದರೆ ಆತ ಬಾಯಿಬಾರದ ಮೂಕನಾಗಿದ್ದ. ಹಾಗಾಗಿ ಅಷ್ಟೂ ಹೊತ್ತು ಉಳಿದವರ ಪ್ರಯತ್ನವನ್ನು ನೋಡುತ್ತಿದ್ದವನು, ತನಗೆ ಆಡಲು ತಿಳಿದ ಒಂದೇ ಭಾಷೆಯಾದ ಆಂಗಿಕ ಭಾಷೆಯ ಮೂಲಕ  ತನ್ನ ಪ್ರಯತ್ನವನ್ನು ಆರಂಭಿಸಿದ. ಯಾವುದೇ ಭಾಷೆ ಮತ್ತು ಅದರ ವ್ಯಾಕರಣಕ್ಕೆ ಅತೀತವಾದ ಭಾಷೆಯಾದ ಈ ಆಂಗಿಕ ಭಾಷೆ ಸ್ವಲ್ಪ ಮಟ್ಟಿಗೆ ಆದಿವಾಸಿಯೊಂದಿಗೆ ಸಂಹವನ ಸಾಧಿಸುವಲ್ಲಿ ಯಶಸ್ವಿಯಾಯಿತು. ಮನುಷ್ಯ ಮನುಷ್ಯ ನಡುವಿನ ಭಾವನೆಗಳನ್ನು ಅರ್ಥ ಮಾಡುವಲ್ಲಿ ಈ ಭಾಷೆ ಅಥವ ಅದರ ಪರಿಶುದ್ದತೆ ಎಲ್ಲ ಗೌಣವಾಗಿಬಿಡುತ್ತದೆ. ಇದು ಪರಿಪೂರ್ಣ ಮಾರ್ಗವಲ್ಲದೇ ಇದ್ದರೂ ಸಂದರ್ಭೋಚಿತವಾಗಿ ಭಾವನೆಗಳು ಅರ್ಥವಾದರೆ ಸಾಕು. ಭಾಷೆ ವ್ಯಾಕರಣ ಶಬ್ದಾರ್ಥಗಳು ಮನುಷ್ಯ ನಿರ್ಮಿತವಾಗಿ ಈ ಭಾವನೆಗಳಿಗೆ ಒಂದು ಶಿಸ್ತು ಮತ್ತು ಚೌಕಟ್ಟನ್ನು ನಿರ್ಮಿಸುತ್ತವೆಯಾದರೂ ಭಾವನೆಗಳು ಪರಿಶುದ್ದವಾಗಿದ್ದಾಗ ಮಾತ್ರವೇ ಅದಕ್ಕೆಬೆಲೆ ಬರುವುದು. ಆದೇ  ಭಾವನೆಗಳು ಮನುಷ್ಯನ ಸೃಷ್ಟಿ ಯಾಗುವುದಿಲ್ಲ. .

              ಮಿತ್ರರೊಬ್ಬರು ಕರೆ ಮಾಡಿ ನನ್ನ ಬ್ಲಾಗ್ ಪುಟಗಳ ಬಗ್ಗೆ ಅಭಿಪ್ರಾಯವನ್ನು ಹೇಳುತ್ತ.. “ಸ್ವಲ್ಪ ವ್ಯಾಕರಣ ಮತ್ತು ಶಬ್ದಾರ್ಥ ಪ್ರಯೋಗಗಳ ಲೋಪದೋಷಗಳನ್ನು ಸರಿಪಡಿಸಿಕೊಂಡರೆ ನಿಮ್ಮ ಲೇಖನ ಅತ್ಯುತ್ತಮ” ಅವರ ಮಾತಿನ ಮೊದಲಾರ್ಧ ಅತ್ಯಂತ ಸತ್ಯವಾದರೂ ಉತ್ತರಾರ್ಧದಲ್ಲಿ ಅತ್ಯುತ್ತಮ ಎಂಬುದನ್ನು ಸತ್ಯವೆಂದು ನಾನು ಹೇಳಿಕೊಂಡರೆ ಅದು ಆತ್ಮ ಪ್ರಶಂಸೆಯಾಗುತ್ತದೆ.  ನಾನು ಕೆಲವೊಂದು ಲೋಪದೋಷಗಳ ಬಗ್ಗೆ ಗಂಭೀರನಾಗಿಲ್ಲ. ಒಟ್ಟು ಭಾವನೆಗಳು ವ್ಯಕ್ತವಾಗಬೇಕು. ಅರ್ಥೈಸುವ ಮನಸ್ಸು ವಿಶ್ವಾಸದಿಂದ ಅದನ್ನು ಯಥಾರೀತಿ ಅರ್ಥೈಸಿಕೊಳ್ಳುತ್ತದೆ. ಇದಕ್ಕೆ ವಿಮರ್ಶೆ ಎಂಬ ಅರ್ಹತೆ ಉಂಟು ಎಂದು ಯಾವತ್ತೂ ಅನಿಸುವುದಿಲ್ಲ. ಯಾವುದೇ ವಿಷಯದ  ಅರ್ಹತೆ ಮತ್ತು ಮೌಲ್ಯವು  ಅದು ಹೇಗೆ ಗ್ರಾಹ್ಯವಾಗುತ್ತದೆ ಎಂಬುದನ್ನು ಅವಲಂಬಿಸಿದೆ. ಹಾಗಾಗಿ ಇದನ್ನು ಕೇವಲ ಪ್ರತಿಕ್ರಿಯೆ ಎಂದು ಪರಿಗಣಿಸಿದಾಗ ಸರಿಯೋ ತಪ್ಪೂ ನಿರ್ಣಯಿಸುವ ಅಗತ್ಯವಿಲ್ಲ ಎಂದನಿಸುತ್ತದೆ. ಪ್ರತಿಕ್ರಿಯೆ ಎಂಬುದು ಬಹಳ ಖಾಸಗೀ ಮತ್ತು ವೈಯಕ್ತಿವಾಗಿರುತ್ತದೆ. ಹಾಗಾಗಿ ಅದಕ್ಕೆ ಪರಿಮಿತಿಗಳಿರುವುದಿಲ್ಲ. ಹಾಗಾಗಿ ಈ ಚೌಕಟ್ಟಿನೊಳಗ ನಿಂತುಕೊಂಡು ಎಲ್ಲದರಂತೆ ಇದೂ ಒಂದು ಪ್ರತಿಕ್ರಿಯೆ. 
           






            


ಮಿತ್ತನಡ್ಕದ ಆರಂಭದ ಭಸ್ಮಾಸುರನ ಅಬ್ಭರದ 

ಯಕ್ಷಗಾನ ಯಾವುದೋ ಲೋಕದಲ್ಲಿ ವಿಹರಿಸುವಂತೆ ಮಾಡಿ ನಂತರ ವಾಸ್ತವತೆಗೆ ಮರಳಿದರೂ ಆ ಗುಂಗಿನ ಪ್ರಭಾವ ಅತ್ಯಂತ ಗಾಢವಾಗಿತ್ತು.  ಈಬಾರಿ  ಅತ್ಯಂತ ಭಾವನಾತ್ಮಕ ಸನ್ನಿವೇಶಗಳೇ ಕಾರ್ಯಕ್ರಮದಲ್ಲಿ ನಿರ್ಣಯಾತ್ಮಕವೆನಿಸಿತು.  ಕೊನೆಯ ಪ್ರಸಂಗದ ಕೊನೆಯ ಚರಣದ ಕರ್ಣ ಭಾವನಾಲೋಕಕ್ಕೆ ಕೊಂಡೊಯ್ದರೆ ಮನ ಕಲಕುವ ಭಾವಾಭಿನಯದಿಂದ ಸುಭದ್ರೆಯಾಗಿ ಶಶಿಕಾಂತ ಶೆಟ್ಟಿ ಕೃಷ್ಣಾರ್ಜುನ ಕಾಳಗದ ಪ್ರಸಂಗದಲ್ಲಿ ಮತ್ತೊಮ್ಮೆ ಮಿಂಚಿದರು. ಈ ಪ್ರಸಂಗದಲ್ಲಿ ತಮ್ಮ ಎಂದಿನ ಶೈಲಿಯಂತೆ ಪುತ್ತಿಗೆ ರಘುರಾಮ ಹೊಳ್ಳರು ನಿಧಾನವಾಗಿ ಸ್ವರ ಏರಿಸುತ್ತ ಸಾಗಿದರು ಕೆಲವೊಂದು ಪದಗಳು ಸ್ಮರಣೀಯವನ್ನಾಗಿ ಹಾಡಿದರು.  ಇವರಿಗೆ ಹಿಮ್ಮೇಳದಲ್ಲಿ ಮದ್ದಲೆಯಲ್ಲಿ ಆಡೂರು ಗಣೇಶ್ ಹಾಗೂ ಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ದೇಲಂತ ಮಜಲು  ಸಹಕರಿಸಿದ್ದರು. ಇದರಲ್ಲಿ “ಕೆಟ್ಟು ನೆಂಟರ ಸೇರುವುದು ಕಷ್ಟ ......”  "ಕಂದಿದಾದನ ಕಾಂತಿಯಿಂದ...”  “ಹೋಯಿತು ಹೊತ್ತು ನೋಡು ಭಾವಯ್ಯ....”  ಮುಂತಾದ ಪದಗಳು ಉತ್ತಮವಾಗಿ ಮೂಡಿ ಬಂತು. 

ಮಹಾಭಾರತದ ಆಹವಕ್ಕೆ ಪ್ರಾಯೋಗಿಕವಾಗಿ ಪಾಂಡವರನ್ನು ಸಿದ್ದಪಡಿಸಿ ಪರೀಕ್ಷಿಸುವ ಶ್ರೀ ಕೃಷ್ಣನಾಗಿ ಪ್ರತಿಭಾವಂತ ದೀಪಕ್ ಪೇಜಾವರ ಮತ್ತು ಅರ್ಜುನನಾಗಿ ಪ್ರತಿಭಾವಂತ ಯುವ ಕಲಾವಿದರಾದ  ಜಯಪ್ರಕಾಶ್ ಪೆರ್ಮುದೆ ಸ್ಪರ್ಧಾತ್ಮಕ ನಿರ್ವಹಣೆಯನ್ನು ತೋರಿದರು. ವೇಷಗಾರಿಕೆ ನಾಟ್ಯ ಅರ್ಥಗಾರಿಗೆ ಹೀಗೆ ಪ್ರತಿಯೊಂದರಲ್ಲು ಹೊಂದಾಣಿಕೆಯ ನಿರ್ವಣೆ ತೋರಿದ್ದು ಒಟ್ಟಿನಲ್ಲಿ ಪ್ರಸಂಗ ಅದ್ಭುತವಾಗಿ ಮೂಡಿಬರುವುದಕ್ಕೆ ಸಹಕರಿಸಿತು. ಒಂದು ಯಕ್ಷಗಾನದ ಮಾದರೀ ಶ್ರೀಕೃಷ್ಣನ ವೇಷವನ್ನು ರಂಗದಲ್ಲಿ ದೀಪಕ್ ರವರು ತಂದರು. ಇದೇ ಪ್ರಸಂಗದ ಭಾವನಾತ್ಮಕ ಸನ್ನಿವೇಶವೊಂದರಲ್ಲಿ ರುಕ್ಮಿಣಿಯ ಚುಚ್ಚು ನುಡಿಗಳಿಗೆ ನೊಂದ ಸುಭದ್ರೆಯಾಗಿ ಶಶಿಕಾಂತ್ ರ ತನ್ಮಯತೆ ಕಣ್ಣೀರ ರೂಪದಲ್ಲಿ ದರ್ಶನವಾಯಿತು. ಅತ್ಯಂತ ಗಂಭೀರ ಸನ್ನಿವೇಶವನ್ನು ಅಷ್ಟೇ ಉತ್ತಮವಾಗಿ ಸಾದರ ಪಡಿಸಿದ್ದ ಯುವಕಲಾವಿದರ ಪ್ರತಿಭೆ ಶ್ಲಾಘನೀಯ. “ಕೆಟ್ಟು ನೆಂಟರ ಸೇರುವುದು ಕಷ್ಟ ......”   ಎಂಬ ಪದ ಸನ್ನಿವೇಶ ಆಟ ಮುಗಿದ ಮೇಲೂ ಮನ ಕಲುಕುವಂತೆ ಇದ್ದರೆ ಅಚ್ಚರಿ ಪಡಬೇಕಿಲ್ಲ.  ಒಟ್ಟಿನಲ್ಲಿ ಸಮಷ್ಟಿಯಲ್ಲಿ ಎಲ್ಲವನ್ನು ಪರಿಗಣಿಸಿದರೆ ಕೃಷ್ಣಾರ್ಜುನ ಕಾಳಗ ಕೂಟದ ಅತ್ಯುತ್ತಮ ಪ್ರಸಂಗ ಎನ್ನಬಹುದು.

ಕೆಲವು ಪದಗಳು ಇಲ್ಲಿವೆ...

ಕಾರ್ತವೀರ್ಯಾರ್ಜುನ ಪ್ರಸಂಗ ಪದಗಳು ಭಾಗವತರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ


ಕೃಷ್ಣಾರ್ಜುನ ಕಾಳಗ ಪ್ರಸಂಗ ಪದಗಳು ಭಾಗವತರು ಪುತ್ತಿಗೆ ರಘುರಾಮ ಹೊಳ್ಳ


ಕರ್ಣಾರ್ಜುನ ಪ್ರಸಂಗ ಪದಗಳು ಭಾಗವತರು ಪದ್ಯಾಣ ಗಣಪತಿ ಭಟ್




            ಮೊದಲ ಪ್ರಸಂಗದ ಪ್ರವಾಹದಲ್ಲಿ ಮಿಂದು ಈಜಾಡಿದ ನಂತರ ದಣಿವಾರಿಸಿದ ಅನುಭವ.  ಆಮೇಲಿನ ಕಾರ್ತವೀರ್ಯ ಹಾಗೂ  ಭಾರ್ಗವ ಪ್ರಸಂಗಗಳು ಬಿಡುವಿನ ಪ್ರಸಂಗವೆಂಬಂತೆ ಭಾಸವಾಗಿದ್ದು ನೋವಿನ ಸಂಗತಿಯಾಯಿತು. ಪ್ರಸಿದ್ದ ಕಲಾವಿದರ ವೈಯಕ್ತಿಕವಾದ ಉತ್ತಮ ನಿರ್ವಹಣೆಯ ದೇಣೀಗೆಯ ಹೊರತಾಗಿಯೂ  ಪ್ರಸಂಗ ತಣ್ಣನೆಯಲ್ಲೇ ಮುಗಿಯಿತು.ಇದರಲ್ಲೀ ಯಾವುದೂ ಕಳಪೆಯೆಂದು ಗುರುತಿಸುವ ಹಾಗಿಲ್ಲ ಎಲ್ಲವೂ ತಕ್ಕ ಮಟ್ಟಿಗೆ ಪ್ರಸಂಗಕ್ಕೆ ಅನುವಾಗಿಯೇ ಇತ್ತು. ಆದರೂ  ನಿರೀಕ್ಷೆಯ ಕಾರ್ತವೀರ್ಯಾರ್ಜುನ ನೆನಪಿನ ಬುತ್ತಿಗೆ ಆಹಾರವಾಗಲೇ ಇಲ್ಲ. ತಮ್ಮ ದಢೂತಿ ದೇಹದ  ಲೆಕ್ಕವೇ ಇಲ್ಲವೆಂಬಂತೆ ರಂಗಸ್ಥಳ  ಕಂಪಿಸುವಂತೆ ಮಾಡಿದ ನಿಡ್ಲೆ ಗೋವಿಂದ ಭಟ್ ರ ಜಮದಗ್ನಿ ಮಹರ್ಷಿ ಅತ್ಯುತ್ತಮವಾಗಿತ್ತು. ಮೊದಲ ಕಾರ್ತವೀರ್ಯಾರ್ಜುನದಲ್ಲಿ ಹಿಮ್ಮೇಳಕ್ಕೆ ಹಳೆಯ ಹುಲಿಗಳು ಮತ್ತೊಮ್ಮೆ ರಂಗಸ್ಥಳವನ್ನೇರಿದ್ದರು. ತೆಂಕಬೈಲು ತಿರುಮಲೇಶ್ವರ  ಶಾಸ್ತ್ರಿಗಳ ಜತೆಗೆ ಮದ್ದಲೆಯಲ್ಲಿ ಉಪಾಧ್ಯಾಯರು ಮತ್ತು  ಮಾಂಬಾಡಿ ಗುರುಗಳು ಹಲವು ಸಮಯದಿಂದ ನಂತರ ಚೆಂಡೆ ಹೆಗಲಿಗೇರಿಸಿಕೊಂಡರು. ಶಾಸ್ತ್ರಿಗಳ ಕೆಲವು ಪದಗಳು ಸುಶ್ರಾವ್ಯವಾಗಿ ಮೂಡಿಬಂದಿತ್ತು.  ಸೂರಿಕುಮೇರಿ ಗೋವಿಂದಣ್ಣನ ಕಾರ್ತವೀರ್ಯ ಕೊನೆಯ ಸನ್ನಿವೇಶದಲ್ಲಿ ಚುರುಕಾದದ್ದು ಬಿಟ್ಟರೆ ಮತ್ತೆ ವಿಶೇಷವೇನು ಗುರುತಿಸಲಾಗಲಿಲ್ಲ.  ಭಾರ್ಗವನಾಗಿ ಪುಂಡುವೇಶಧಾರಿ ಶಶಿಧರ್ ಕುಲಾಲ್ ಕನ್ಯಾನ ಉತ್ತಮ ಎನ್ನಬಹುದಾದ ನಿರ್ವಹಣೆ ತೋರಿದರು. ಎರಡನೇ ಕಾರ್ತವೀರ್ಯನಾಗಿ ಸುಬ್ರಾಯ ಹೊಳ್ಳ ಸ್ವತಹ ಉತ್ತಮ ನಿರ್ವಹಣೆ ತೋರಿದರೂ ಒಟ್ಟು ಪ್ರಸಂಗ ವೇಗವನ್ನು ಪಡೆದುಕೊಳ್ಳಲಿಲ್ಲ. ರವಿಶಂಕರ ವಳಕುಂಜರ ಜತೆಗಿನ ಇವರ ಹಾಸ್ಯ ಸನ್ನಿವೇಶ ಕೂಟದ ಹಾಸ್ಯ ಸನ್ನಿವೇಶವಾಗಿ ಹೊರಹೊಮ್ಮಿತು. ವಳಕುಂಜರ ಪ್ರತಿಭೆಯು  ಬಹಳ ಆಕರ್ಷಣೀಯ. ಯಾವುದೇ ಭಾವ ವಿಕಾರವಿಲ್ಲದೆ ತಮ್ಮ ಮಿಂಚಿನ ಸಂಭಾಷಣೆಯಿಂದ  ಮತ್ತು ಅಭಿನಯದಿಂದ ಪ್ರೇಕ್ಷಕರ ಮನಗೆದ್ದರು. ಮತ್ತೋರ್ವ ಭಾಗವತರಾದ ಪಟ್ಲ ಸತೀಶ ಶೆಟ್ಟಿ ಕೆಲವು ಸೌಮ್ಯ ಪದಗಳನ್ನು ಮಧುರವಾಗಿ ಹರಿಯಬಿಟ್ಟರೂ ಏರಿ ಪದಗಳಲ್ಲಿ ದುರ್ಬಲವಾಗಿ ಕಂಡುಬಂದು,  ಕೊನೆಯ ಕ್ಷಣಗಳಲ್ಲಿ  ಹೊಳ್ಳರ ಕಾರ್ತವೀರ್ಯ ಕಳೆಗಟ್ಟಲಿಲ್ಲ.
.

            ನೆರೆದವರ ಬಹಳ ನಿರೀಕ್ಷೆಯ ಪ್ರಸಂಗ ಕರ್ಣಾಜುನ ಆರಂಭವಾಗುವಾಗ ಬೆಳಗಾಗಿ ಸೂರ್ಯನ ಬಿಸಿಲು ಬಿದ್ದಿತ್ತು. ಇತ್ತಲು ಕರ್ಣಾರ್ಜುನರಿಗೆ ಹತ್ತಿತು ಕಾಳಗ....ಎಂಬ ಪದ,  ಆರಂಭದಲ್ಲೇ ಹಚ್ಚಿದ ಕಿಚ್ಹಿಗೆ ದಹ್ಯವನ್ನು ಒದಗಿಸಿದಂತೆ ಭಾಸವಾಯಿತು. ಶ್ರೀಕೃಷ್ಣನಾಗಿ ತಾರಾನಾಥ ಬಲ್ಯಾಯ .... ಮೊದಲ ಪ್ರಸಂಗದ ಕೃಷ್ಣ ವೇಶದ ತದ್ರೂಪು ವೇಶವನ್ನೇ ತೋರಿಸಿದರು. ಪಕ್ಕನೆ ನೊಡಿದರೆ ಇಬ್ಬರಲ್ಲೂ ವೆತ್ಯಾಸವನ್ನೇ ಗುರುತಿಸುವುದು ಕಷ್ಟ. ಅಷ್ಟೊಂದು ಸಾಮ್ಯತೆ ಇಬ್ಬರ ವೇಷದಲ್ಲೂ ಇದ್ದುದು ವಿಶೇಷ. ಉಬರಡ್ಕ ಉಮೇಶ್ ಶೆಟ್ಟಿ ಅರ್ಜುನನಾಗಿ ಹಾಗು ಸುಣ್ಣಂಬಳ ವಿಶ್ವೇಶ್ವರ ಭಟ್ ರವರ ಕರ್ಣ ಮುಮ್ಮೇಳದಲ್ಲಿದ್ದರೆ,  ಹಿಮ್ಮೇಳದಲ್ಲಿ ಪದ್ಯಾಣ ಗಣಪತಿ ಭಟ್ ತಮ್ಮದೇ ವಿಶೇಷ ಪ್ರಸಂಗಕ್ಕೆ ಭಾಗವತರಾದರೆ,  ಮದ್ದಲೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಹಾಗು ಚೆಂಡೆಯಲ್ಲಿ ಅಡೂರು ಮತ್ತು ದೇಲಂತಮಜಲು ಇದ್ದರು. ಕೆಲವು ಪದಗಳಲ್ಲಿ ಹಳೆಯ ಪದ್ಯಾಣವನ್ನು ಕಂಡಂತಾಗಿ ನೆರೆದ ಪ್ರೇಕ್ಷಕರು ಪುಳಕಗೊಂಡರು.  ಅಗರಿ ಶೈಲಿಯಲ್ಲಿ ಹಾಡಿದ    "ಎಲೆಭಾನು ಜಾತ ಕೇಳ್ ಅಸ್ತ್ರದ ನೆಲೆಯನು..”  ... “ಶಿವ ಶಿವ ಸಮರದೊಳು ಕೈಸೋತೆನಲ್ಲ.....” ಹೀಗೆ ಹಲವು ಪದಗಳು ಸುಶ್ರಾವ್ಯವಾಗಿ ಮೂಡಿಬಂತು.  ಈ ಪ್ರಸಂಗದಲ್ಲಿ ಮಾತ್ರವಲ್ಲ ಮಿತ್ತನಡ್ಕದ ಈ ವರ್ಷದ ಯಕ್ಷೋತ್ಸವದಲ್ಲಿ ಅತ್ಯಂತ ಶ್ರೇಷ್ಠ ವೇಷ ಸುಣ್ಣಂಬಳರ ಕರ್ಣನ ವೇಷ . ಇವರು ವೇಷಗಾರಿಕೆಯಲ್ಲಿ  ಹಾಗೂ ನಾಟ್ಯದಲ್ಲಿ ಮಾತ್ರವಲ್ಲ ಅರ್ಥಗಾರಿಕೆಯಲ್ಲೂ ಅತ್ಯಂತ ಪ್ರೌಢಿಮೆಯನ್ನು ಮೆರೆದರು.  ಒಟ್ಟು ಸಮಷ್ಟಿಯಲ್ಲಿ ಅಗ್ರಪಂಕ್ತಿಯ ಕಲಾವಿದಾರದ ಇವರು ಅರ್ಹತೆಗೆ ತಕ್ಕಂತೆ ರಂಗಸ್ಥಳದಲ್ಲಿ ಕರ್ಣನಾಗಿ ಮಿಂಚಿದರು.  ಈ ಪ್ರಸಂಗ ಹಲವಾರು ಬಾರಿ ನೋಡಿದ ಪರಿಣಾಮವೋ ಏನೋ ಮತ್ತೇ ಬೇರೆ ವಿಶೇಷವೇನು ಗುರುತಿಸುವುದಾಗಲಿಲ್ಲ. ಸೂರ್ಯ ಬೆಳಕಿನ ಪ್ರಖರತೆ ಅಧಿಕವಾದಂತೆ ಅಷ್ಟು ಅಬ್ಭರದ ವೇಷವಾಗಿದ್ದ ಕರ್ಣಾರ್ಜುನರ ವೇಶ  ಮತ್ತೆ ಮತ್ತೆ ಮೊದಲಿನ ಪ್ರಭಾವವನ್ನು ಉಳಿಸಲು ಕಷ್ಟ ಪಡಬೇಕಾಯಿತು. ಸೂರ್ಯನ ಬೆಳಕಿಗೆ ಯಕ್ಷಗಾನದ ವೇಷಗಳು ಬರುವುದು ಅಷ್ಟು ಸೂಕ್ತವಲ್ಲ ಎಂಬುದನ್ನು ಇದು ತೋರಿಸುತ್ತದೆ. ಸೂರ್ಯೋದಯದ ನಂತರ ಕರ್ಣಾವಸಾನದಲ್ಲಿನ ಕರುಣಾಜನಕ  ಸನ್ನಿವೇಶಗಳು ಕಳೆಗಟ್ಟವುದು ಬಹಳ ಕಷ್ಟ
.   
            ಯಕ್ಷಗಾನ ಸಂಘಟಕರಿಗೆ ಔಪಚಾರಿಕವೆಂಬಂತೆ ಧನ್ಯವಾದ ಸೂಚಿಸುವುದು ಸೌಜನ್ಯತೆಯ ಸಂಕೇತ. ಆದರೆ ನಮ್ಮ ಮನಸ್ಸನ್ನು ಅರಿತಿರುವ ತೆಂಕಬೈಲು ಪ್ರಸನ್ನ ಬಳಗಕ್ಕೆ ಈ ಔಪಚಾರಿಕತೆಯ ಅಗತ್ಯವಿಲ್ಲ.  ಮುಂದೆಯೂ ಇಂತಹ ಕೂಟಗಳು ನಡೆದು ಅದನ್ನು ಹೋಗಿ ನೋಡುವ ಅವಕಾಶ ಪ್ರಾಪ್ತಿಸಲಿ ಎಂಬ ಹೆಬ್ಬಯಕೆಯೊಂದನ್ನು ಹುಟ್ಟು ಹಾಕಿದೆ ಎನ್ನಬಹುದು. ಇಲ್ಲಿನ ಯಕ್ಷೋತ್ಸವ  ಕಲಾಭಿಮಾನಿಗಳಲ್ಲಿ ಬಹುವಾದ ನಿರೀಕ್ಷೆಯನ್ನು ತುಂಬಿಸುವಂತೆ ತೊಡಗಿ ಯಶಸ್ವಿಯಾಗಿ ನಡೆಯಿತು.ಸೂಕ್ತ ಪ್ರಸಂಗ ನಿರ್ಣಯ ಪಾತ್ರ ಹಂಚಿಕೆ ಉತ್ತಮ ಆಯೋಜನೆ ಎಲ್ಲವೂ ಯಶಸ್ಸಿನ ಕಾರಣಗಳು. ಒಂದು ಕಾರ್ಯಕ್ರಮ ಯಶಸ್ಸನ್ನು ಗಳಿಸಿದರೆ ಮುಂದೆ ಅದು ಹಲವುನಿರೀಕ್ಷೆಗಳನ್ನು ಹುಟ್ಟುಹಾಕುವುದರೊಂದಿಗೆ ಹಲವು   ಜವಾಬ್ದಾರಿಗಳನ್ನು ಹೊರಿಸುತ್ತದೆ. ಮಿತ್ತನಡ್ಕ ಆಟ ಎಂದರೆ ಮುಂದೆ ಹಲವು ನಿರೀಕ್ಷೆಗಳನ್ನು ಈಡೇರಿಸುವಂತಹ ಒಂದು ಜವಾಬ್ದಾರಿಯನ್ನು ಹುಟ್ಟುಹಾಕಿದೆ. ಇದನ್ನು ಒಂದು ಪಂಥಾಹ್ವನವಾಗಿ ಪಡೆದುಕೊಂಡಾರೆಂದು ಮಿತ್ರರೆಲ್ಲರ  ಬಯಕೆ.


           
           


                       


Thursday, January 12, 2012

ಮಿತ್ತನಡ್ಕದ ಯಕ್ಷೋತ್ಸವದ ವೈಭವ



ಚಿತ್ರ ಕೃಪೆ ತೆಂಕಬೈಲು ಪ್ರಸನ್ನ

ಯಕ್ಷಗಾನ ಅಭಿಮಾನ ಬೆಳೆಸಿಕೊಂಡು ಅದನ್ನು ಹವ್ಯಾಸವಾಗಿಸಿಕೊಂಡವರನ್ನು ನಾವುಗಳು ಅದೇ ಅಭಿಮಾನದಿಂದ ಹೇಳುವುದುಂಟು ಮರುಳರು ಅಥವಾ ಹುಚ್ಚರು ಎಂದು. ಬೇರೆ ಯಾವುದೇ ಕಲಾಭಿಮಾನಕ್ಕಿಂತ ಈ ಯಕ್ಷಗಾನಕ್ಕೆ ಸಂಭಂಧಿಸಿ ಈ ಅಭಿಮಾನ ಎಂಬುದು ಮರುಳು ಎಂದು ಕರೆಯುವುದು ಉತ್ಪ್ರೇಕ್ಷೆ ಎಂದು ನನಗನಿಸುವುದಿಲ್ಲ. ಯಕ್ಷಗಾನದಲ್ಲಿ ಹಲವು ವಿಧದ ಹವ್ಯಾಸಗಳನ್ನು ಬೆಳೆಸಿಕೊಂಡ ಅಭಿಮಾನಿಗಳು ಇದ್ದಾರೆ.  ನಿಯಮಿತವಾಗಿ ಯಕ್ಷಗಾನವನ್ನು ನೋಡುವ ಹವ್ಯಾಸ. ಇದರಲ್ಲೇ ಹಲವು ವಿಚಿತ್ರಗಳನ್ನು ಕಾಣಬಹುದು. ಅದೆಷ್ಟು ಗಾಢವಾದ ಅಭಿಮಾನವೆಂದರೆ ಅದರ ಎದುರು ಮಿಕ್ಕೆಲ್ಲ ಕಲೆಯೂ ಗೌಣವಾಗಿಬಿಡುತ್ತದೆ. ಬಹುದೂರದ ಕಟೀಲಿಗೆ ಹೋಗಿ ಆಟ ನೋಡುವ ಪರಿ ಒಬ್ಬರದು. ಅದು ಹೇಗೆ ನಿತ್ಯ ರಾತ್ರಿ ಎಂಟುವರೆ ಗಂಟೆಗೆ ರಂಗಸ್ಥಳದ ಎದುರು ಹಾಜರಾಗಿ ಬೆಳಗ್ಗಿನ ಮಂಗಳದ ತನಕ, ಬಿಡದೆ ಒಂದು ವಾರಗಳ ಆಟ ನೋಡುವ ಅಭಿಮಾನ ಅದು ಯಾವ ಬಗೆಯದು? ತಿಂಗಳಿಗೊಂದು ಸಾರಿಯಾದರೂ ಊರ ಕಡೆಗೆ ಹೋಗಿ ಅಲ್ಲಿ ಒಂದೆರಡಾದರು ಆಟ ನೋಡುವ ಹಲವರು. ಆಟಕ್ಕೆಂದೆ ಹಲವು ದಿನ ಕೆಲಸಕ್ಕೆ ರಜೆ ಬರೆದು ಒಂದೆರಡಾದರೂ  ಪೂರ್ಣ ರಾತ್ರಿಯ ಆಟನೋಡುವ ಹಲವರು.  ಇದು ಒಂದು ರೀತಿಯ ಹವ್ಯಾಸವಾದರೆ. ಇದರಲ್ಲಿ ಇನ್ನು ಹಲವರಿಗೆ ವೇಷ ತೊಡುವುದೋ ಅಥವಾ ಹಿಮ್ಮೇಳದಲ್ಲಿ ಕೈಯಾಡಿಸಿಬಿಡುವ ಬಯಕೆ ಹೀಗ ವೈವಿಧ್ಯಮಯ ಹುಚ್ಚರ ಮುಖದರ್ಶನವನ್ನು ಇಲ್ಲಿ ಕಾಣಬಹುದು ಈ ಕಲೆಯ ಹೆಗ್ಗಳಿಕೆಯೇ ಅದು. ಅನಾರೋಗ್ಯದಿಂದಲೋ ವೃಧ್ಧಾಪ್ಯದಿಂದಲೋ ದೇಹ ಸಹಕರಿಸದೇ ಇದ್ದರೂ ರಂಗಸ್ಥಳಕ್ಕೇರಿದ ಮೇಲೆ ಎಲ್ಲವನ್ನು ಮರೆತು ಕಲೆಯಲ್ಲಿ ವಿಲೀನವಾಗಿಬಿಡುವ ಹಲವರು. ಯಕ್ಷಗಾನದ  ಹಿರಿಯ ಕಲಾವಿದರನ್ನು ಅನುಕರಿಸಿ, ಗೋವಿಂದಣ್ಣನ ವೇಶವನ್ನೋ ಅಥವ ಹೊಳ್ಳರ ಪದವನ್ನೋ ಅನುಕರಿಸಿ ಯಕ್ಷಗಾನವನ್ನು ಮಿಮಿಕ್ರಿಯಾಗಿ ಬದಲಾಯಿಸುವ ಒಂದು ವರ್ಗ, ಇದೂ ಒಂದು ಹವ್ಯಾಸ.!!! ಇರಲಿ
ಚಿತ್ರ ಕೃಪೆ ತೆಂಕಬೈಲು ಪ್ರಸನ್ನ
ಒಟ್ಟಿನಲ್ಲಿ ವೈವಿಧ್ಯಮಯ ಕಲಾಭಿಮಾನಕ್ಕೆ ಸಾಕ್ಷಿಯಾಗುವ ಈ ಕಲೆಯಲ್ಲಿ ಇನ್ನೋಂದು ಹವ್ಯಾಸ, ಅತ್ಯಂತ ಶ್ರೀಮಂತ ಹವ್ಯಾಸ ಎಂದು ಕರೆಯಬಹುದಾದ ಹವ್ಯಾಸವೆಂದರೆ ಈ ಆಟ ಆಡಿಸುವ ಹವ್ಯಾಸ.. ಕೆಲವೊಮ್ಮೆ ಇದು ಅತಿರೇಕದ ಹುಚ್ಚು ಅಂತ ಸಾಮಾನ್ಯವಾಗಿ ಅನ್ನಿಸಿದರೂ  ಅದೊಂದು ಹೆಗ್ಗಳಿಕೆಯ ಹುಚ್ಚು ಎಂದೇ ಪರಿಗಣಿಸಲ್ಪಡಬೇಕು. ಒಂದು ಕಾಲದಲ್ಲಿ ಆಟ ಅಡಿಸುವಲ್ಲಿ ವ್ಯಾಪಾರಿ ಮನೋಭಾವವೂ ಇದ್ದಿತ್ತು. ಹವ್ಯಾಸಿ ಮೇಳಗಲ ಕಾಲ. ಈಗ ವ್ಯವಸಾಯೀ ಮೇಳಗಳು ಇಲ್ಲವೇ ಇಲ್ಲ ಹಾಗಾಗಿ,  ತೆಂಕು ತಿಟ್ಟಿನ ಆಟ ಆಡಿಸುವುದೆಂದರೆ ಅದು ಹವ್ಯಾಸವೆಂದೇ ತಿಳಿಯಬೇಕು. ಹಲವು ಸಾವಿರ ಅಥವಾ ಲಕ್ಷಗಳನ್ನು ಕೇವಲ ಇರುಳು ಹಗಲಾಗುವುದರೊಳಗೆ ಮುಗಿಸಿ ಬಿಡುವ ಇದೊಂದು ಶ್ರೀಮಂತ ಹವ್ಯಾಸವೇ ಸರಿ.  ಇಂತಹ ಯಕ್ಷಗಾನ ಕೂಟಗಳು ಅಲ್ಲಲ್ಲಿ ಆಗುತ್ತಾ ಅದು ಯಕ್ಷಗಾನದ ಒಂದು ಜಾತ್ರೆಯಂತೆ ನಡೆದುಬಿಡುತ್ತದೆ. ಹೀಗೆ ನಡೆದ ಒಂದು ಬರೀ ಯಕ್ಷಗಾನ ಪ್ರವಾಹವಾಗಿ ಹರಿದ  ಮಿತ್ತನಡ್ಕದ ಬಯಲಾಟ. ಬ್ಯಾನರ್ ಕಟೌಟ್ ಗಳ ಸ್ವಯಂ ಪ್ರಶಂಸೆಯ ಫಲಕಗಳಿಲ್ಲದ ಭಾಷಣಗಳ ಅನಪೇಕ್ಷಿತ ಕೊರೆತಗಳಿಲ್ಲದ, ಸರೀ ದಿನದರ್ಧ ಭಾಗವನ್ನು ಅಂದರೆ ಹೆನ್ನೆರಡು ಘಂಟೆಯ ಅವಧಿಯನ್ನು ಸಂಪೂರ್ಣ ಯಕ್ಷಗಾನ ಮಯವನ್ನಾಗಿ ಮಾಡಿಬಿಟ್ಟಿತು. ಗ್ರಾಮದ ಶುದ್ದ ನೀರವ ಮೌನದಲ್ಲಿ ಒಂದು ಯಕ್ಷರಾತ್ರೆ ಜಾತ್ರೆಯಾಗಿ ಮಾರ್ಪಟ್ಟರೆ ಅದಕ್ಕೆ ಕಾರಣ ತೆಂಕಬೈಲು ಕುಟುಂಬದವರ ಶ್ರೀಮಂತ ಹವ್ಯಾಸ.



ಚಿತ್ರ ಕೃಪೆ ತೆಂಕಬೈಲು ಪ್ರಸನ್ನ
ಯಕ್ಷಗಾನದ ಸಮಕಾಲೀನ ಹೆಸರಾಂತ ಕಲಾವಿದರ ಗಡಣವೇ ನೆರೆದಿತ್ತು. ಅದಕ್ಕೆ ಸರಿಯಾಗಿ ಹೊಂದಿಕೆಯಾಗುವಂತೆ, ಭಸ್ಮಾಸುರ ಮೋಹಿನಿ, ಭಾರ್ಗವ ಕಾರ್ತವೀರ್ಯಾರ್ಜುನ, ಕೃಷ್ಣಾರ್ಜುನ ಮತ್ತು ಕರ್ಣಾರ್ಜುನ ಪ್ರಸಂಗಳು ಒಂದರ ಮೇಲೆ ಒಂದರಂತೆ  ಯಶಸ್ವಿಯಾಗಿ ರಂಗಸ್ಥಳ ತುಂಬ ವೈಭವೀಕರಿಸಲ್ಪಟ್ಟಿತು. ಈ ಬಯಲಾಟದ ವೀಡಿಯೊದಲ್ಲಿ  ನೋಡಿದರೂ ಆದ ಅನುಭವದ ಅವಲೋಕನವೇ ಈ ಚಿಂತನ.

ಕಾರ್ಯಕ್ರಮದ ಆರಂಭದ ಪೀಠಿಕೆಯಲ್ಲಿ. ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಅಡೂರು ಗಣೇಶ್ ರವರ ಚೆಂಡೆಯ ಜುಗಲ್ಬಂದಿ ಸಾಮಾನ್ಯ ಮಟ್ಟದಲ್ಲಿತ್ತು. ಬದಲಿಗೆ ನನ್ನ ಅನಿಸಿಕೆಯಂತೆ ಗುರು ಮಾಂಬಾಡಿ ಮತ್ತು ದೇಲಂತ ಮಜಲು ಇವರ ಪೀಠಿಕೆ ಇರುತ್ತಿದ್ದರೆ ಅದು ಒಂದು ದಾಖಲೀಕರಣಕ್ಕೆ ಯೋಗ್ಯವಾಗಿರುತ್ತಿತ್ತು.

ನಂತರ ಪ್ರಸಿದ್ಧ ಭಾಗವತರಾದ ದಿನೇಶ ಅಮ್ಮಣ್ಣಾಯರ ಭಾಗವತಿಕೆಯಲ್ಲಿ  ಭಸ್ಮಾಸುರ ಮೋಹಿನಿ ಪ್ರಸಂಗ ಆರಂಭದಲ್ಲಿ ರಂಗದಲ್ಲಿ ಕಳೆಗಟ್ಟತೊಡಗಿ ಒಂದು ಉತ್ತಮ ಪ್ರದರ್ಶನಕ್ಕೆಸಾಕ್ಷಿಯಾಯಿತು. ಹಿಮ್ಮೇಳದಲ್ಲಿ ಅಮ್ಮಣ್ಣಾಯರೊಂಡಿಗೆ ಪದ್ಮನಾಭ ಉಪಾಧ್ಯಾಯ ಮದ್ದಲೆಯಲ್ಲಿ ಮತ್ತು ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಸಹಕರಿಸಿ.. ಮುಮ್ಮೇಳದಲ್ಲಿ ಒಡೋಲಗದ ಪರಮೇಶ್ವರನಾಗಿ  ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಹಿತಮಿತವಾಗಿ ಪಾತ್ರವನ್ನು ಬೆಳೆಸಿದರು. ಮಧೂರು ರಾಧಾಕೃಷ್ಣ ನಾವಡರ ಪ್ರಸಿದ್ದ ಪಾತ್ರಗಳಲ್ಲಿ ಒಂದಾದ ಭಸ್ಮಾಸುರ ಈ ಪ್ರಸಂಗದ ವಿಶೇಷತೆಯಾಗಿದ್ದರೂ ಶಶಿಕಾಂತ ಶೆಟ್ಟಿಯವರ ಪಾದರಸದ ಚಲನೆಯಲ್ಲಿ ಮೋಹಿನಿಯ ಪಾತ್ರ ಮಿಂಚಿನ ಸಂಚಾರವನ್ನುಂಟು ಮಾಡಿತು. ಅತ್ಯಂತ ಸುಂದರವಾಗಿ ಲಾಸ್ಯ ಭರಿತ ಮೋಹಿನಿ ಮೋಹದ ಬಲೆಯನ್ನೇ ಬೀಸಿದಂತಾಯಿತು. ಶುದ್ದ ಯಕ್ಷಗಾನ ಶೈಲಿಯ ಯಾವುದೇ ಗಿಮಿಕ್ ಸರ್ಕಸ್ ಇಲ್ಲದ ಮೋಹೀನಿ ಮೋಡಿ ಮಾಡಿದರೆ ಅದು ಅತಿಶಯವೆಂದೆನಿಸದು. ಈ ಯಕ್ಷಗಾನ ಶೈಲಿಗೆ ಒಪ್ಪುವಂತಹ ನಾಟ್ಯಶೈಲಿ ಅದೇ ಮಟ್ಟಕ್ಕೆ ಏರುವ ಅರ್ಥಗಾರಿಕೆ  ಹೀಗೆ ಅಪ್ಪಟ ಪ್ರತಿಭೆ  ಹೊರಹೊಮ್ಮಿ ಈ ಪ್ರಸಂಗದ ಮೋಹಿನಿ ಅದ್ಭುತವಾಗಿತ್ತು. ಇನ್ನು ನಾವಡರ ಭಸ್ಮಾಸುರದ ಪಾತ್ರ ಶಿಸ್ತುಬದ್ದ ಹಾಗು ಯೋಜನಾಬಧ್ಹವಾಗಿ ಪ್ರಸ್ತುತಗೊಂಡಿತ್ತು. ಕೊನೆಯ ಹಂತದಲ್ಲಿ ಅತಿರೇಕದ ಮಾತುಗಳೋ ಎಂದು ಅನ್ನಿಸುವಂತೆ ಇದ್ದರೂ ಅಷ್ಟರಲ್ಲಾಗಲೇ ನಾವಡಣ್ಣನ ಈ ಅಸುರನ ಪಾತ್ರ ಸಂಪೂರ್ಣ ಅವರಿಸಿ ಬಿಟ್ಟಿತ್ತು. ಪತ್ರಿಕೆಯೊಂದರಲ್ಲಿ ಬಂದ ವಿಮರ್ಶೆಯಂತೆ ಭಸ್ಮಾಸರನ ನಾಟ್ಯ ಸಾಲದು ಎಂಬುದು ಮೇಲ್ನೋಟಕ್ಕೆ ನಿಜವೆಂದು ಕಂಡರು. ನಾವಡರ ಭಸ್ಮಾಸುರನ ಪಾತ್ರ ಚಿತ್ರಣವೇ ಹಾಗೆ. ಅದು ವಿಶಿಷ್ಟ ಹಾಗೂ ವೈವಿಧ್ಯಮಯ.ರಂಗದ ಮೇಲೆ ಸಂಪೂರ್ಣವಾಗಿ ನಿರ್ವಹಿಸುವ  ಪಾತ್ರದಲ್ಲಿ ಲೀನವಾಗುವ ಇವರ ಸಹಜತೆ, ಆ ಪಾತ್ರದ ಮನೋಭಾವಕ್ಕೆ ಹೊಂದಿಕೊಂಡು ಇರುತ್ತದೆ. ಭಸ್ಮಾಸುರನ ಪಾತ್ರ ಒಂದು ಬಗೆಯ ವಿಕ್ಷಿಪ್ತ ಮನಸ್ಸಿನ ಅಸುರ ಪಾತ್ರ.ಜಗನ್ಮಾತೆಯನ್ನೇ ಮೋಹಿಸಿ ಬಯಸುವ  ಒಂದು ವಿಕೃತ ವ್ಯಕ್ತಿತ್ವದ  ಕಾಮಾಂಧನ ಪಾತ್ರ. ಕಾಮಾಂಧನಾದವ ಸಹಜವಾಗಿ ಬೌಧಿಕವಾಗಿ ಅಂಧನಾಗಿ ನಲಜ್ಜಾಂ ... ನಭಯಂ ಎಂಬಂತೆ ಎಲ್ಲದಕ್ಕೂ ಸಿದ್ದವಾಗುವ ವ್ಯಕ್ತಿತ್ವದ ಪಾತ್ರ. ಆತ ಮೋಹಿನಿಯಂತೆ ಕುಣಿಯದಿದ್ದರೂ ಪಾತ್ರದ ಮಟ್ಟಿಗೆ ಅದು ಔಚಿತ್ಯ ಪೂರ್ಣವೇ ಆಗಿರುತ್ತದೆ ಎಂದು ನನಗನಿಸಿತು. ಹಾಗಾಗಿ ಮನಸ್ಸಿನ ನಿಯಂತ್ರಣವನ್ನು ಕಳೆದುಕೊಂಡ ಪಾತ್ರ ಸಹಜ ರೀತಿಯಲ್ಲಿ ರಂಗದ ಮೇಲೆ ಅಭಿವ್ಯಕ್ತೀಕರಿಸಲ್ಪಟ್ಟಿತ್ತು.
ಈ ಪ್ರಸಂಗದ ಎರಡು   ಪದಗಳು ಇಲ್ಲಿವೆ: ಕೃಪೆ ತೆಂಕಬೈಲು.

ಈ ಎಲ್ಲ ಪಾತ್ರಗಳೂ ಸನ್ನಿವೇಶಗಳು ಸಹಜವಾಗಿ ಕಳೆಗಟ್ಟಲು ಅತಿಮುಖ್ಯ ಕಾರಣ ಸಮರ್ಥ ಹಿಮ್ಮೇಳ. ಮದ್ದಲೆಗೆ ಮೈಕ್ ನ ಕೊರತೆಯೊಂದು ಬಿಟ್ಟರೆ ಹಿಮ್ಮೇಳ ಅತ್ಯದ್ಭುತವಾಗಿತ್ತು. ಪ್ರಸಂಗದ ಆದಿಯಿಂದ ಅಂತ್ಯದ ವರೆಗೆ ಒಂದು ಪದವನ್ನು ಕಳೆದುಕೊಳ್ಳುವ ಹಾಗಿಲ್ಲ. ಅಮ್ಮಣ್ಣಾಯರ ಸುಶ್ರಾವ್ಯ ಕಂಠ ಒಂದು ಸಲ ಯೋಚಿಸಿದರೆ ಸಾಕು, ಮಿತ್ತನಡ್ಕದಂತಹ ನಿಶಬ್ಧ ನೀರವ ವಾತಾವರಣದ ಗ್ರಾಮೀಣ ಪ್ರದೇಶದಲ್ಲಿ ನಡುವಿರುಳು ಇವರ ಗಾಂಧರ್ವ ಕಂಠ ಮೊಳಗಿದರೆ ಆ ಅನುಭವ ಹೇಗಿರಬಹುದು. ನೆನಸಿದರೇ ರೋಮಾಂಚನವಾಗುವ ಅನುಭವ. ಸುಮಾರು ಮೂರು ಘಂಟೆಗಳ ಕಾಲ ಅಮ್ಮಣ್ಣಾಯರು ಹಾಕಿದ ಮೋಡಿಯಿಂದ ಪ್ರೇಕ್ಷಕ ಬಹು ಹೊತ್ತಿನವರೆಗೂ ಹೊರಬಂದಿರಲಾರ. ಅದರಲ್ಲಿಯೂ  “ ಯಾರು ಈಕೆ ಸುಂದರಾಂಗಿಯೂ....”  ಮತ್ತು “ ಯಾರಯ್ಯ ಧನುಜೇಶ...” ಎಂಬ ಪದಗಳು ಅಮೋಘವಾದ ಸ್ವರ ವೈಭವದ ದರ್ಶನವನ್ನು ಮಾಡಿದ್ದು ಸತ್ಯ. ಇದರ ಜತೆಯಾಗಿ ವಿದ್ಯುತ್ವೇಗದಿಂದ ಚೆಂಡೆಯ ಲಯ ಮೊಳಗಿಸಿದ ದೇಲಂತ ಮಜಲು ಕೈಚಳಕ ಪ್ರಶಂಸನೀಯ. ಗಾಯನ ವಾದನಗಳೆರಡೂ ಹಿಮ್ಮೇಳವನ್ನ ಅಧ್ಬುತವಾಗಿ ತೆರೆದಿಟ್ಟವು.  

ನೋಡಲು ಇನ್ನೂ ಮೂರುನಾಲ್ಕು ಪ್ರಸಂಗಗಳು ಬಾಕಿಇದೆ...ಆದಷ್ಟು ಬೇಗ ನೋಡುವ ಹಾಗು ಅನುಭವಗಳನ್ನು ಹಂಚಿಕೊಳ್ಳುವ ತವಕ.. ಮುಂದಿನ ಕೆಲವುದಿನ ಅದಕ್ಕೇ ಮೀಸಲು....

Wednesday, January 4, 2012

ಹಿಂದೆಯೇ ಉಳಿದ ಹಿಮ್ಮೇಳ



ಕೆಲವೊಮ್ಮೆ ನಮ್ಮ ವಿಚಾರಗಳೇ ಗೊಂದಲಮಯವೆಂಬ ಸಂಶಯ ಮೂಡುವುದುಂಟು. ನಮ್ಮ ವಿಚಾರ ಚಿಂತನೆಗಳು ಹೀಗೆ ನಿರ್ಧಿಷ್ಟವಾಗಿ ರೂಪಿಸಿರುವಾಗ ಅವುಗಳಿಂದ ವಿಚಲಿತರಾಗುವಂತೆ ಸಂದರ್ಭಗಳು ಎದುರಾಗುತ್ತದೆ. ಹಾಗಲ್ಲ ಹೀಗೆ ಎಂದು ಅಂದುಕೊಳ್ಳುವಂತಹ ದ್ವಂದ್ವಗಳು ಮನಸ್ಸನ್ನು ಕಾಡತೊಡಗುತ್ತವೆ. ತಾತ್ವಿಕ ಸಂಘರ್ಷಗಳು ಹೊಲಬನ್ನು ಅರಿಯದ ಬಗೆಯಲ್ಲಿ ಸಾಗಿಬಿಡುತ್ತದೆ. ಆವಾಗ ಯಾವುದು ಸರಿ ಎಂಬ ಜಿಜ್ಞಾಸೆ ಹಾಗೆ ಉಳಿದು ಬಿಡುತ್ತದೆ.

ಕಳೆದ  ಭಾನುವಾರ ಹೊಸವರ್ಷದ ಮೊದಲ ದಿನ. ಹಿಂದಿನ ಒಂದೆರಡು ದಿನಗಳು ಹವಾಮಾನ ವೈಪರಿತ್ಯದಿಂದಾಗಿ ಮನೆಯೊಳಗಿಂದ ಹೊರಬರಲಾಗದಂತಹ ಮೈಕೊರೆಯುವ ಚಳಿಯಿಂದ ಬೇಸತ್ತು ಅಂದು ಬಿದ್ದ ಸೂರ್ಯಕಿರಣಕ್ಕೆ ಮೈಕೊಡವಿಕೊಂಡು, ನಮ್ಮದೇ ಯಕ್ಷಗಾನದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆಯಿರುವುದು ಸಾಮಾನ್ಯ. ಇದು ತಾಳಮದ್ದಲೆ ಬೇರೆ, ಕೇವಲ ಒಂದು ಕೈಯ ಬೆರಳುಗಳಿಂದಲೇ ಎಣಿಸಬಹುದಾದಷ್ಟು ಜನ. ನನ್ನ ಮಟ್ಟಿಗೆ ಇದೇನು ಹೊಸತಲ್ಲ. ಆದರು ಭೀಕೊ ಎನ್ನುವಂತಿದ್ದ ಸಭಾಂಗಣ ಹಿಂದಿನ ನೆನಪನ್ನು ಪುನಹ ಪುನಹ ನೆನಪಿಗೆ ಬರುವಂತೆ ಮಾಡುತ್ತಿತ್ತು. ಹೌದು, ಆ ಸಭಾಂಗಣದ ನೆನಪು ಬಂದಾಗಲೇ ಮನಸ್ಸು ಭಾವನಾತ್ಮಕವಾದ ಸ್ಪಂದನೆಗೆ ಒಳಗಾಗಿಬಿಡುತ್ತದೆ.   ಸರಿಯಾಗಿ ಒಂದು ವರ್ಷಮೊದಲು ನಮ್ಮ ಅಭಿಮಾನದ ಸಂಕೇತವೆಂಬಂತೆ  ಅತಿಯಶಸ್ವಿಯಾಗಿ ನಡೆದ ಕಾರ್ಯಕ್ರಮಕ್ಕೆ ಸಾಕ್ಷಿಯಾದ  ಚಾಮರಾಜಪೇಟೆಯ ಹತ್ವಾರ್ ಸಭಾಂಗಣ. ಇಂದು ನಿರ್ವಾತ ಜಾಗದಂತೆ ಸ್ತಭ್ಧವಾಗಿ ನಿಂತಂತೆ ಅನಿಸಿತು. ಹತ್ವಾರ್ ಸಭಾಂಗಣ ಎಂದರೆ ನಮ್ಮ ಮಿತ್ರ ಬಳಗ ಇನ್ನೂ ರೋಮಾಂಚನ ಗೊಳ್ಳುವುದುಂಟು. ಅಷ್ಟು ಪ್ರಭಾವ ಬೀರಿವೆ ಆ ಮಧುರ ನೆನಪುಗಳು.

ಯಾವುದೇ ಕಾರ್ಯಕ್ರಮ ಯಶಸ್ವೀ ಎನಿಸುವುದು ಸೇರಿದ ಪ್ರೇಕ್ಷಕರ ಸಂಖ್ಯೆಯನ್ನು ಹೊಂದಿಕೊಂಡು ಎಂಬುದಕ್ಕೆ ನನ್ನ ಪೂರ್ಣ ಸಹಮತವಿಲ್ಲ. ಆದರೂ ನಿರೀಕ್ಷೆಯಂತೆ ಪ್ರೇಕ್ಷಕರ ಕೊರತೆ ಬಹಳವಾಗಿತ್ತು. ಸೀಮಿತ ಪರಿಧಿಯೊಳಗಿನವರಿಗೆ ಮಾತ್ರ ಕಾರ್ಯಕ್ರಮದ ಅರಿವಿದ್ದುದು ಅದರಲ್ಲೂ ಕಾರಣಾಂತರದಿಂದ ಸ್ವಲ್ಪ ಕಡಿಮೆಯಾದಾಗ ಇದೆಲ್ಲ ಸಹಜವೇ. ಕಾರ್ಯಕ್ರಮದಲ್ಲಿ ಮೊದಲೇ ಹೇಳಿಕೊಳ್ಳುವಂತಹ ವಿಶೇಷ ಆಕರ್ಷಣೆಯಿಲ್ಲದೆ ಸಾಮಾನ್ಯ ಒಂದು ಯಕ್ಷಗಾನ ಕಾರ್ಯಕ್ರಮವಾಗಿ ಎಂಬಂತೆ ವ್ಯವಸ್ಷೆಯಾಗಿತ್ತು. ಇನ್ನುಳಿದಂತೆ ಚೆಂಡೆ ಪೆಟ್ಟು ಕೇಳಿದಾಗ ಅಥವಾ ಅದರ ಕಲ್ಪನೆಯ ಭ್ರಮೆಗೆ ಸಿಕ್ಕಿ ಜನರು ಬರುವಂತಹ ಕಾಲ ಈಗ ಇಲ್ಲ. ನಗರದ ಪರಿಸರವು ಹಾಗಿಲ್ಲ. ಹಾಗಾಗಿ ಕಾರ್ಯಕ್ರಮಕ್ಕೆ ಬಾರದೆ ಇರುವುದಕ್ಕ  ಹಲವು ಕಾರಣಗಳಿದ್ದಂತೆ ಬಂದು ಕುಳಿತುಕೊಳ್ಳುವುದಕ್ಕೂ ಹಲವು ಕಾರಣಗಳಿರುತ್ತವೆ. ಬಾರದೆ ಇರುವುದಕ್ಕೆ ಹಲವು ಕಾರಣಗಳನ್ನು ಸುಲಭದಲ್ಲಿ ಕೊಡಬಹುದು. ಪ್ರಚಾರದ ಕೊರತೆ, ಕಾರ್ಯಕ್ರಮದ ನಿರೀಕ್ಷೆ, ಬರುವವರ ಹಾಗು ಇರುವವರ ಆಸಕ್ತಿ ಇದೆಲ್ಲವೂ ಗಣನೆಗೆ ಬರುತ್ತದೆ. ಅದರ ಬಗ್ಗೆ ಯೋಚಿಸುವಂತಾಗುತ್ತದೆ. ಆದರೆ ಬಂದವರಲ್ಲಿ ಬಂದ ಕಾರಣವನ್ನು  ಯಾರೂ ಕೇಳುವುದಿಲ್ಲ ಆದಕಾರಣ ಅದು ಅಂತರಂಗದಲ್ಲೇ ಇದ್ದುಬಿಡುತ್ತದೆ.

          ಕಾರ್ಯಕ್ರಮದ ನಿರೀಕ್ಷೆಗಳ ಬಗ್ಗೆ ಸ್ವಲ್ಪ ಔದಾಸಿನ್ಯವೇ ಇತ್ತು. ಹಾಗೆ ಹೇಳುವುದಕ್ಕಿಂತ ಆ ಭಾವವನ್ನೇ ತಳೆದಿದ್ದೆ. ಆದನ್ನು ಪುಷ್ಟೀಕರಿಸುವಂತೆ  ಅಂದಿನ ಪ್ರಸಂಗ “ವಾಲಿ ಮೋಕ್ಷ” ಬಹುಶಃ ನಮ್ಮಲ್ಲಿ ಅತ್ಯಂತ ಔದಾಸಿನ್ಯವನ್ನು ಬಿಂಬಿಸುವ ಪ್ರಸಂಗ ಇದು. ವಾಲಿಗೆ ಮೋಕ್ಷ ಕರುಣಿಸಿ ಕರುಣಿಸಿ ಆ ಪ್ರಸಂಗದಿಂದ ಮಾತ್ರ ಮೋಕ್ಷ ಸಿಕ್ಕಿಲ್ಲ. ಹಾಗೆಂದು ಪಾರ್ತಿಸುಬ್ಬನ ಪ್ರಸಂಗ ಕಳಪೆಯೆಂದೇನು ಅಲ್ಲ.ವಿಚಾರ ಮಂಥನಗಳಿಂದ ಕೂಡಿದ ಉತ್ಕೃಷ್ಟ ಪ್ರಸಂಗ. ಆದರೂ ಸಾವಿರಕ್ಕೂ ಮಿಕ್ಕಿ ಪ್ರಸಂಗಗಳು ಇರುವಾಗ ಇನ್ನೂ ಅದನ್ನೇ ಅವಲಂಬಿಸುವುದರಲ್ಲಿ ಅರ್ಥವೇನಿದೆ. ಇದು ಮನವರಿಕೆಯಾದರೂ ಅದರ ಬಗ್ಗೆ ಒಂದು ಔದಾಸಿನ್ಯ ಅದರ ಪರಿಣಾಮ ಆಗುವುದು ಮಾತ್ರ ಇನ್ನೊಂದು ರೀತಿಯಲ್ಲಿ. ಬಹುಶಃ ಅಲ್ಲಿ ನೆರದವರಲ್ಲಿ ಹಲವರಿಗಾದರು ವಾಲಿಮೋಕ್ಷದ ಪದಗಳು ಕಂಠಪಾಠ ಇರಬಹುದು.

          ತಾಳ ಮದ್ದಲೆಯೆಂದರೆ ಒಂದು ಗ್ರಹಿಕೆಯಿದೆ. ಇಲ್ಲಿ ಮಾತು ಚರ್ಚೆ ವಾದ ವಾಗ್ವಾದವೇ ಪ್ರಧಾನ. ಅರ್ಥಗಾರಿಕೆ ಪ್ರಾಮುಖ್ಯತೆ. ಮಾತಿನ ಜಟಾಪಟಿ ಇದ್ದರೆ ತಾಳಮದ್ದಲೆ ರೈಸಿದೆ ಎಂದು ಅರ್ಥ.    ಮಾತಿನಲ್ಲೆ ಪಾತ್ರ ಸನ್ನಿವೇಶ ಚಿತ್ರಣ ಹೀಗೆ. ಆದನ್ನು ನಿಶೇಧಿಸುವುದಲ್ಲವಾದರೂ ಇದೆಲ್ಲಕ್ಕಿಂತಲೂ ಪ್ರಧಾನವೊಂದಿದೆ,  ಅದು ಹಿಮ್ಮೇಳ.ಯಕ್ಷಗಾನದಲ್ಲಿ ಇದೇ ಪ್ರಧಾನ. ಅದಕ್ಕೆ ಪ್ರಾಮುಖ್ಯತೆ ನೀಡಿದಲ್ಲಿ ಮಿಕ್ಕರಂಗದಲ್ಲಿ ಕೊರತೆಯಾದರೂ ಅದು ಗಮನಾರ್ಹವೆನಿಸುವುದು ನಿಧಾನ. ಹಾಗಾಗಿ ಹಿಮ್ಮೇಳದಲ್ಲಿ ಭಾಗವತನದ್ ನಾಯಕತ್ವ. ಪೂರ್ಣವಾಗಿ ತಾಳಮದ್ದಲೆಯಲ್ಲೂ ಭಾಗವತನೇ ಪ್ರಧಾನ. ಆದರೆ ಇದರ ಬಗ್ಗೆ ಗಮನ ಹರಿಸದೆ ಇದ್ದದ್ದು.. ಕೇವಲ ಹರಿಕೆ ಸಂದಾಯದಂತೆ ಭಾಸವಾಯಿತು. ಚೆಂಡೆ ಮದ್ದಲೆ ತಕ್ಕ ಮಟ್ಟಿಗೆ ಹವ್ಯಾಸಿಗಳ ನೆಲೆಯಿಂದ ಕಂಡುಕೊಂಡರೆ ಪರವಾಗಿಲ್ಲ ಎನಿಸಿದರೂ ಭಾಗವತಿಕೆ ಮಾತ್ರ ಹೊಲಬು ಅರಿಯದ ನೀರಿನಂತ ಎತ್ತೆತ್ತಲೊ ಹರಿದು ಅದು ಉಳಿದ ಹಿಮ್ಮೇಳದ ಅಂಗದಲ್ಲೂ ಪರಿಣಾಮ ಬೀರಿತು. ಆಗ ಆನಿಸಿತು ಹಿಮ್ಮೇಳದ ಮಟ್ಟಿಗೆ, ಇನ್ನು ಅಭ್ಯಾಸಕ್ಕಾಗಿಯಾದರೂ ಈ ಪ್ರಸಂಗ ಸೂಕ್ತ ಆಯ್ಕೆ..!!! ಇಷ್ಟು ಪ್ರಚಲಿತವಿರುವ ಪ್ರಸಂಗ !!!!.

ಅರ್ಥಗಾರಿಕೆ ಮತ್ತು ಪಾತ್ರ ಚಿತ್ರಣ ತಕ್ಕ ಮಟ್ಟಿಗೆ ಉತ್ತಮವಾಗಿಯೇ ಇತ್ತು. ಕೆಲವು ಆಸಾಂದರ್ಭಿಕ ಸಂಭಾಷಣೆ, ಕೆಲವು ಸತ್ವರಹಿತ ಮಾತುಗಾರಿಕೆ ಪದಕ್ಕು ಅರ್ಥಕ್ಕು ಹೊಂದಿಕೆಯಾಗದ ಮಾತುಗಳು ಕೆಲವೊಂದು ಸಲ ಹೇಳಿದ ಅರ್ಥದ ಪದ ಮತ್ತೆ ಪುನಹ ಮರುಕಳಿಕೆಯಾದದ್ದು ಮುಂತಾದ ಹೊಂದಾಣಿಕೆ ಯನ್ನು ಹೊರತು ಪಡಿಸಿದರೆ ಅರ್ಥಗಾರಿಕೆ ಉತ್ತಮವಾಗಿತ್ತು.ಇದರಲ್ಲಿ ಬೇಗಾರ್ ರವರ ತಾರಾ ಪಾತ್ರ ವಿಶೇಷವಾಗಿ ಉಲ್ಲೇಖಿಸಲ್ಪಡುವ ಹಾಗೆ ಇತ್ತು. ವಾಲಿ ತಾರ ಸಂಭಾಷಣೆಯ ಸಂದರ್ಭದಲ್ಲಿ ಪದಕ್ಕು ಅರ್ಥಕ್ಕು ಒಟ್ಟು ಗೊಂದಲವಿದ್ದಂತೆ ಒಂದೆರಡು ಸಲ ಅನಿಸಿದರೂ ಅದು ದೊಡ್ಡದಲ್ಲ.  ಕೊನೆಯ ಹಂತದಲ್ಲಿ ರಾಮ ವಾಲಿಯ ಪಾತ್ರಗಳು ತೃಪ್ತಿಕರವಾಗಿತ್ತು. ಎಲ್ಲ ಸರಿಯಿದ್ದರು ಮೊದಲಾಗಿ ಅತಿ ಅವಶ್ಯವೆನಿಸುವ ಹೊಂದಾಣಿಕೆ ಅಲ್ಲಲ್ಲೆ ಲೋಪವಾಗುತ್ತಿತ್ತು. ಇದಕ್ಕೆಪೂರ್ವ ತಯಾರಿಯ ಅವಶ್ಯಕತೆ ಇದೆ. ಪೂರ್ವತಯಾರಿಯ ಮಟ್ಟಿಗೆ ವೃತ್ತಿಪರ ಕಲಾವಿದರಂತೆ ವ್ಯವಹರಿಸುವುದು ಸರಿಯಲ್ಲ. ಒಡ್ಡೋಲಗದ ಸುಗ್ರೀವ ಸಹಜವಾಗಿ ಮಂದ್ರ ಸ್ವರದಲ್ಲಿದ್ದು ನಿಧಾನವಾಗಿ ಶ್ರುತಿಯನ್ನು ಸ್ವರವನ್ನು ಏರಿಸುತ್ತ ಸಾಗಬೇಕು. ಮತ್ತೆ ಸನ್ನಿವೆಶದಲ್ಲಿ ಸುಗ್ರೀವನ ಪಾತ್ರ ಚಿತ್ರಣವೂ ಅದೇರೀತಿ ದಯನೀಯವಾಗಿರುತ್ತದೆ. ಆದರೆ ಅದನ್ನು ಗಮನಿಸದೇ  ಏಕಾಏಕಿ ಏರುತ್ತ ಮೈಮೇಲೆ ಹಾರಿಹೋದಂತೆ ಚಿತ್ರಿಸುವುದು ಸರಿಕಾಣವುದಿಲ್ಲ. ಹಾಗಿದ್ದರು ಅರ್ಥಗಾರಿಕೆಯಲ್ಲಿ ವಿಚಾರ ಮಂಡನೆಯ ಪ್ರಾಮಾಣಿಕ ಪ್ರಯತ್ನ ಕಂಡರೂ ಶರೀರ ಭಾಷೆ ಸ್ವಲ್ಪ ಪಳಗಬೇಕು.

ಒಟ್ಟಿನಲ್ಲಿ ಹವ್ಯಾಸಿಗಳ ಮಟ್ಟಿಗೆ ಮುಮ್ಮೇಳ ಧಾರಳ. ಆದರೆ ಹಿಮ್ಮೇಳದ ಅಸಡ್ಡೆ ಸರಿಯಲ್ಲ. ಭಾಗವತ ಮತ್ತು ಹಿಮ್ಮೇಳ ಆರಂಭದಿಂದ ಅಂತ್ಯದವರೆಗೂ ವೇದಿಕೆಯಲ್ಲಿರಬೇಕು. ಆದರೆ ಹಲವು ಸಲ ಹಿಮ್ಮೇಳ ಪೂರ್ಣ ವಾಗಿ ಖಾಲಿಯದದ್ದು ಅಶಿಸ್ತನ್ನು ಅಶ್ರದ್ದೆಯನ್ನು ತೋರಿಸುತ್ತದೆ. ಭಾಗವತ ಚೆಂಡೆ ಮದ್ದಲೆಗಾರರು ಒಟ್ಟಾಗಿ ಎದ್ದು ಹೋಗುವುದು, ಅದೂ ಅರ್ಥಧಾರಿ ಸ್ವಗತದಿಂದ ಕೂಡಿದ ಅರ್ಥ ಹೇಳುವಾಗ, ಅದು ಅತ್ಯಂತ ಆಭಾಸಕರವಲ್ಲವೇ? ಭಾಗವತನ ನಿಯಂತ್ರಣದಲ್ಲಿರಬೇಕಾದ ರಂಗದ ಕಲ್ಪನೆಯೇ ಇಲ್ಲದೇ ಇರುವುದು ವಿಚಿತ್ರ ಎನಿಸುತ್ತದೆ. ಇಲ್ಲಿ ಹಿಮ್ಮೇಳ ಬಹಳ ಹಿಂದೆಯೇ ಉಳಿದುಬಿಟ್ಟಿತು.

ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಕ್ಷರು ಬಾರದಿರುವರ ಬಗ್ಗೆ ಮರುಗಿ ಹೇಳಿದ್ದರು.. ಬಾರದಿರುವವರು ಒಂದು ಉತ್ತಮ ಅವಕಾಶವನ್ನು ಕಳಕೊಂಡಿದ್ದಾರೆ ಎಂದು. ಅವರ ಚಿಂತನೆ ತಪ್ಪು ಎಂದು ಹೇಳುವ ಹಾಗಿಲ್ಲ. ಇತ್ತೀಚಿನ ಯಕ್ಷಗಾನ ತಾಳ ಮದ್ದಲೆ ಅಥವಾ ಯಕ್ಷಗಾನದ ಬಗ್ಗೆ ಅವರಿಗೆ ಅರಿವಿಲ್ಲದೆ ಹೇಳಿರಬಹುದು.  ಆದರೆ ಬಾರದಿರುವವರು ಇದಕ್ಕಿಂತ ಉತ್ತಮವಾದುದನ್ನು ನೋಡಿಲ್ಲ ಎಂದು ತೀರ್ಮಾನಿಸುವುದು ಸರಿಯಲ್ಲ. ಹಾಗಾಗಿ ಅವಕಾಶ ವಂಚಿತರಾಗುವ ಪ್ರಶ್ನೇಯೇ ಉದ್ಭವಿಸುವುದಿಲ್ಲ. ಒಟ್ಟಿನಲ್ಲಿ ಹತ್ತರ ಜತೆ ಹನ್ನೊಂದು ಎಂದು ಸುಮ್ಮನಿರುವುದು.


ಈ ಕಾರ್ಯಕ್ರಮದ ಮಟ್ಟಿಗೆ ಹೇಳುವುದಾದರೆ ಒಬ್ಬ ಉತ್ತಮ ಭಾಗವತ ಇರುತ್ತಿದ್ದರೆ ಕಾರ್ಯಕ್ರಮದ ಚಿತ್ರಣವೇ ಬದಲಾಗಿಬಿಡುತ್ತಿತ್ತು. ಆದರೆ ಒಟ್ಟಿನಲ್ಲಿ ಒಂದು ಕಾರ್ಯಕ್ರಮವಾಗಿ ಚೆಂಡೆ ಮದ್ದಲೆ ಮೊಳಗುವುದೇ ಯಕ್ಷಗಾನ ಎಂದು ಭಾವನೆ ಇದ್ದರೆ ಹೇಗೆ? ಬೆಂಗಳೂರಿನಂತಹ ನಗರದಲ್ಲಿ ಇಷ್ಟಾದರೂ ಇದೆಯಲ್ಲ ಎಂದು ತೃಪ್ತಿಪಟ್ಟುಕೊಳ್ಳಬೇಕೆ?ಏನು ಇಲ್ಲದೆ ನಿಷ್ಕ್ರಿಯವಾಗಿರುವುದಕ್ಕಿಂತ ಇದು ಲೇಸು ಎಂದು ತಿಳಿದುಕೊಳ್ಳುವ ಅನಿವಾರ್ಯತೆ ಇದೆ.

ಪಿತೃಗಳ ಶ್ರಾದ್ಢ ಮಾಡುವುದಕ್ಕಾಗಿ ಪುರೋಹಿತರನ್ನು ಕರೆದು, ಮನೆಯಲ್ಲಿ  ಎಲ್ಲ ವ್ಯವಸ್ಥೆಯನ್ನು  ಶ್ರಧ್ದೆಯಿಂದ ಮಾಡಿಯಾಯಿತು. ನಗರದಲ್ಲಿ ಪುರೋಹಿತರಿಂದ ತೊಡಗಿ ಎಲ್ಲವನ್ನು ವ್ಯವಸ್ಥೆ ಮಾಡುವುದು ಶ್ರಮದಾಯಕವೆ. ಹಳ್ಳಿಯ ಹಾಗೆ ಅಲ್ಲ. ಪುರೋಹಿತರು ಬಂದನಂತರ ಮುಳುಗು ಹಾಕೊಣವೆಂದರೆ ಗಂಗೆ ಗೋದಾವರಿಯ ಅಥವ ಹರಿವ ತೋಡಿನ ಮಾತು ಬಿಡಿ  ಮನೆಯ ನಳ್ಳಿಗೆ  ತಲೆಕೊಡೋಣವೆಂದರೆ ವಠಾರಕ್ಕೆ ನೀರು ಬಾರದೆ ಎರಡು ದಿನವಾಗಿರುತ್ತದೆ. ಯಾವತ್ತೋ ತುಂಬಿಸಿಟ್ಟ ನೀರು ಬೇರೆಯೂ ಕೆಲ ಅನಿವಾರ್ಯ ಕೆಲಸಗಳಿಗೆ ಆವಶ್ಯವಿದೆ. ಮತ್ತೆ ಹೇಗೆ? ಬಂದ ಭಟ್ಟರು ಹೇಳುತ್ತಾರೆ...ಕೈಕಾಲು ತೊಳೆದು ಬನ್ನಿ ಸಾಕು.. ಆಯ್ತು ಎಲ್ಲ ಆಗಿ ಗೋಗ್ರಾಸ ದನಕ್ಕಿಡುವುದಕ್ಕಾಗಲಿ ಪಿಂಡ ವಿಸರ್ಜನೆಗಾಗಲಿ ಅವಕಾಶವೇ ಇರುವುದಿಲ್ಲ. ಗೋಗ್ರಾಸವನ್ನು ಬಕೆಟ್ ಗೆ ಸುರುವಿ ಇನ್ನಾವುದೋ ಮನೆಯ ದನಕ್ಕೆ ತಿನ್ನಿಸ ಹೊದರೆ ಆ ಮನೆಯವನು ಗುರು ಗುಟ್ಟುವ ಪರಿಸ್ಥಿತಿ. ಇನ್ನು ಪಿಂಡ ಅದನ್ನು ಕಲ್ಪಿಸುವ ಹಾಗೆ ಇಲ್ಲ. ಭಟ್ಟರೆ ಅನುಕೂಲ ಶಾಸ್ತ್ರ ಉಪದೇಶ ಮಾಡುತ್ತಾರೆ. ನಗರದಲ್ಲಿ ಆದರೆ ಮಾಡುವ ಕರ್ಮದಲ್ಲಿ ಕಾಲುವಾಸಿಯಾದರು ಬದ್ದತೆ ಇದ್ದರೆ ಸಾಕು ಎಂದು ಶಾಸ್ತ್ರ ಹೇಳುತ್ತದೆ.ಇಲ್ಲಿ ಕರ್ಮದಲ್ಲಿ ತೋರುವ ಶ್ರದ್ದೆ ಮಾತ್ರ ಪ್ರಾಧಾನ್ಯ. ಸಮಯುದಲ್ಲಿ ಪಿತೃಗಳ ಸ್ಮರಣೆ ಮಾತ್ರ ಸಾಧ್ಯ.

ಇದು ಕೆಲವೊಂದು ಸಲ ಇಲ್ಲಿ ಮಾಡುವ ಕಾರ್ಯಕ್ರಮಕ್ಕು ಅನ್ವಯ ಮಾಡುವ ಅನಿವಾರ್ಯತೆ ಬಂದುಬಿಡುತ್ತದೆ. ಹಾಗಾಗಿ ನಮ್ಮ ವಿಚಾರಗಳನ್ನು ಮರು ಅವಲೋಕನೆ ಮಾಡುವ ಅನಿಸಿಕೆ ಬರುತ್ತಿದೆ. ಮಾಡಿದ್ದು ತಪ್ಪು ಅಥವ ಹೀಗೆ ಆಗಬಾರದಿತ್ತು ಇದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸುವ ಹಾಗೆಯೇ ಇಲ್ಲ. ಎಲ್ಲದಕ್ಕೂ ಒಂದು ಸಮಾಧಾನ ಕಾರಣಗಳ ಸೃಷ್ಟೀಕರಣ ಇದ್ದೇ ಇರುತ್ತದೆ. ಇಲ್ಲಿ ಇಷ್ಟು ಮಾಡುವುದೇ ಜಾಸ್ತಿ ಎಂಬ ಭಾವ ಸುಳಿದರೆ ಇಷ್ಟು ಸಾಕು ಎಂದು ದಾಕ್ಷಿಣ್ಯ ಭಾವ ತಾಳಬೇಕಾಗುತ್ತದೆ.  ಹಾಗಾಗಿ ವೈಚಾರಿಕ ದ್ವಂದ್ವಗಳು ಕಾಡುತ್ತಿರುತ್ತವೆ. ಮಾಡುವ ಕ್ರಿಯಯಲ್ಲಿ ಶ್ರದ್ದೆ ಮಾತ್ರ ಇದ್ದರೆ ಸಾಲದು.  ಯಕ್ಷಗಾನ ಕೇವಲ ಒಂದು ಸ್ಮರಣೆಯಲ್ಲ   ಇಲ್ಲಿಗೆ ಇಷ್ಟು ಸಾಕು  ಎಂಬ ಭಾವ ಇದ್ದರೆ ಸಾಕೇ ? ಹೇಗೆ ಅನಿಸುತ್ತದೆ.

Wednesday, November 30, 2011

ಪ್ರಚಲಿತ ಯಕ್ಷಗಾನ ವಿಚಾರಗಳು


ಬಹಳ ವರ್ಷ ಮೊದಲು ನಮ್ಮ ಬಾಯಾರಲ್ಲಿ ಸುರತ್ಕಲ್ ಮೇಳದ ಆಟದ ಸಂದರ್ಭ. ಪ್ರಸಿದ್ದ ಹಿರಿಯ ಕಲಾವಿದರಾದ ಶೇಣಿ-ಸಾಮಗ-ಪದ್ಯಾಣ ರನ್ನು ಸನ್ಮಾನಿಸುವ ಕಾರ್ಯಕ್ರಮ. ಕಥಾಭಾಗ ಆರಂಭಿಸುವ ಮೊದಲೇ ಮೂವರೂ ಕಲಾವಿದರನ್ನು ಸನ್ಮಾನಿಸಿದ ನಂತರ ಸಹಜವಾಗಿ ಜೋಷಿಯವರ ಅಭಿನಂದನಾ ಭಾಷಣ. ಅಭಿನಂದಿಸುತ್ತಾ ಹೇಳಿದ ಮಾತಿನ ಭಾವಾರ್ಥ ಹೀಗಿತ್ತು.  ಅತೀ ಮುಖ್ಯ ಸನ್ನಿವೇಶ,  ಆಟಕ್ಕಾಗಿ ಎಲ್ಲರು ಕಾದು ಕುಳಿತಿದ್ದಾರೆ. ತಡವಾಗುತ್ತಿದೆ.ಹಾಗೆ ನೋಡಿದರೆ ಈ ಅತಿಮುಖ್ಯ ಸನ್ನಿವೇಶದಿಂದ ಆಟ ಸ್ವಲ್ಮ ತಡವಾದರೆ ಏನು? ಸ್ವಲ್ಪ ಕಡಿತಗೊಂಡರೂ ಅಡ್ದಿ ಇಲ್ಲ. ಅಷ್ಟು ಪ್ರಾಮುಖ್ಯವಾದ ಕಾರ್ಯಕ್ರಮ. ಮೂರು ಜನರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸುವ ಬಹು ಮುಖ್ಯ ಕಾರ್ಯಕ್ರಮ. ಪ್ರೇಕ್ಷಕರು ಆಟದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದರೂ ಆ ಕಾಲದಲ್ಲಿ ಈ ಮಾತು ಅತ್ಯಂತ ಸಮಯೋಚಿತ ಮಾತ್ರವಲ್ಲ ಸಹ್ಯವೂ ಆಗಿತ್ತು.ಸನ್ಮಾನ ಸಭಾಕಾರ್ಯಕ್ರಮ ದೀರ್ಘವಾಗಿ ಸಾಗಿದರೂ ಮತ್ತಿನ ಆಟ ಪೂರ್ಣರಾತ್ರಿಯ ಅವಧಿಗೆ ಇದ್ದುದರಿಂದ ಈ ಮಾತಿನಲ್ಲಿ ಉತ್ರೇಕ್ಷೆ ಎನೂ ಕಾಣುವುದಿಲ್ಲ. ಅಷ್ಟೊಂದು ಅಸಮಂಜಸವೂ ಅನ್ನಿಸುವುದಿಲ್ಲ. ಪೂರ್ಣಾವಧಿಯ ಆಟ ಬಹುಪಾಲು ಅಂಶದ ಭರವಸೆಯಿಂದ ಕಾಯುವುದು ಅಸಹನೀಯವೆನ್ನಿಸುವುದೂ ಇಲ್ಲ.

ಆ ಕಾಲದಿಂದಲೂ ಯಕ್ಷಗಾನ ಸಮಗ್ರವಾಗಿ ಹಲವು ಬದಲಾವಣೆಗೆ ಒಳಗಾಗಿದೆ. ಪೂರ್ವರಂಗ ಕುಂಠಿತಗೊಂಡು ಮಾಯವಾಗುವ ಹಂತದಲ್ಲಿದೆ. ಹಲವು ಸನ್ನಿವೇಶಗಳು ಸಣ್ನದಾಗಿವೆ ಅಥವ ಇಲ್ಲವಾಗಿದೆ. ಪ್ರಸಂಗದ ರೂಪು ರೇಶೆಯೇ ಬದಲಾವಣೆಗೆ ಒಳಗಾಗಿದೆ. ಕಾಲಮಿತಿಯ ಒಳಗಿದ್ದರೂ ಬದಲಾವಣೆ ಮಾತ್ರ ಕಾಲವನ್ನು ಮೀರಿ ಹೋಗಿದೆ. ನಡು ಮಧ್ಯಾಹ್ನ ಮಾಡುವ ಭೋಜನವನ್ನು ಊಟದ ರೂಪದಲ್ಲಿ ಮಾತ್ರವಲ್ಲ ಯಾವೋದೋ ರೂಪದಲ್ಲಿ ಇನ್ನಾವುದೋ ಸಮಯದಲ್ಲಿ ಮಾಡುತ್ತಿದ್ದೇವೆ. ಯಕ್ಷಗಾನದ ಮೊದಲ ಜಾವ ಎರಡನೇ ಜಾವ ಎಂದರೆ ಏನು ಎಂದು ಕೇಳುವ ಸಂಭವ ಎದುರಾಗಿದೆ. ಹೀಗಿದ್ದರು ಕೆಲವೊಂದು ಮಾತ್ರ ಯಾವುದೇ ಬದಲಾವಣೆಯಾಗದೆ ಹಾಗೆ ಉಳಿದಿರುವುದು ಅಚ್ಹರಿಯ ವಿಷಯವಾಗಿದೆ.

ಯಾವುದೆಂದು ಅಚ್ಚರಿಯಲ್ಲಿ ತಲೆಕೆರೆದುಕೊಳ್ಳುವ ಅಗತ್ಯವಿಲ್ಲ. ಅದು ಸಭಾಕಾರ್ಯಕ್ರಮ.!!!

ಒಂದು ಯಕ್ಷಗಾನ ಕಾರ್ಯಕ್ರಮ ಸಂಭ್ರಮದಲ್ಲಿ ಮಾಡುವಾಗ ಗುರುತರ ಜವಾಬ್ದಾರಿಗಳು ಹಲವು ಹೆಗಲಮೇಲೇರಿ ಬಿಡುತ್ತದೆ. ಕಾರ್ಯಕ್ರಮ ನೆರವೇರಿಸುವಾಗ ಹಲವರ ಸಹಾಯದಿಂದಲೋ ಅನುಗ್ರಹದಿಂದಲೋ ನಮ್ಮ ಅಭಿಮಾನದ ಹುಚ್ಚನ್ನು ಇಡೇರಿಸಿಕೊಳ್ಳುತ್ತಾ ಆ ಮೂಲಕ ಕಲಾಸೇವೆ ಗೈದು ಕೃತ ಕೃತ್ಯರಾಗುತ್ತೇವೆ.  ಅದು ಎಲ್ಲಾ ಕಾಲದಲ್ಲೂ ಅನಿವಾರ್ಯವೂ ಆಗಿದೆ. ಈ ಅನಿವಾರ್ಯತೆಗಳ ಮಧ್ಯೆ ತಮ್ಮದಾದ ಅಭಿಮಾನವನ್ನು ಸಂಭ್ರಮದಿಂದ ಹಂಚಿಕೊಳ್ಳುವುದು, ನೆರವಾದವರನ್ನು ಸ್ಮರಿಸುವುದು ಅದಕ್ಕಾಗಿ ಸಭಾಕಾರ್ಯಕ್ರಮ ಅನಿವಾರ್ಯವೂ ಹೌದು. ಆದರೆ ಯಕ್ಷಗಾನದಂತಹ ಕಾರ್ಯಕ್ರಮದಲ್ಲಿ ಇದು ದೀರ್ಘಿಸಿದಷ್ಟೂ ಕಾರ್ಯಕ್ರಮದ ಒಟ್ಟು ಸ್ವರೂಪ ಅರ್ಥವನ್ನು ಕಳೆದುಕೊಳ್ಳುತ್ತದೆ ಎಂದು ನನ್ನ ಭಾವನೆ.

ಒಂದು ವಾರಾಂತ್ಯದ ಶನಿವಾರ ಭಾನುವಾರಗಳಲ್ಲಿ ಒಂದು ಯಕ್ಷಗಾನ ಕಾರ್ಯಕ್ರಮ ಆಯೋಜಿಸಲ್ಪಟ್ಟರೆ ಸಾಮಾನ್ಯವಾಗಿ ಯಕ್ಷಗಾನವನ್ನು ನೋಡಿ ಆನಂದಿಸುವ ಹುರುಪಿನಲ್ಲಿ ಬಹುಪಾಲು ಜನರು ಹಲವು ನಿರೀಕ್ಷೆಯಿಂದಲೇ ಬರುತ್ತಾರೆ. ಯಕ್ಷಗಾನದ ಮೇಲಿನ ಅಭಿಮಾನ ಒಂದು ಕಡೆ, ಮಿತ್ರರೆಲ್ಲ ಸೇರಿ ಮಾಡುವ ಕಾರ್ಯಕ್ರಮವೆಂಬ ಒಂದು ಕಾರಣ ಇನ್ನೋಂದೆಡೇ. ಆ ಕಾರಣದಿಂದ ಬಂದು ಸೇರುವ ಊರ ಮಿತ್ರರನ್ನು ಕಾಣುವ ಅವಕಾಶ ಒಂದು ಕಡೆ.. ಹೀಗೆ ಅದಕ್ಕೆ ಸಂಬಂಧಿಸಿ ಸಂಬಂಧಿಸದೇ ಹಲವು ಕಾರಣಗಳಿರುತ್ತವೆ. ಸಾಮಾನ್ಯವಾಗಿ ಸಾಯಂಕಾಲ 5 - 6 ಘಂಟೆಗೆ ಆರಂಭಿಸುವ ಕಾರ್ಯಕ್ರಮ. ಭಾನುವಾರದ ರಜದ  ಜಡತ್ವವನ್ನು ಕೊಡವಿಕೊಂಡು ಉತ್ಸುಕತೆಯಲ್ಲಿ ಬಂದಾಗ ಅರ್ಥ ಘಂಟೆಗಿಂತಲೂ ಮೀರಿ ತಡವಾಗಿ ಆರಂಭವಾಗಿಬಿಡುತ್ತದೆ. ಸಂಸಾರ ಸಹಿತ ಬಂದಲ್ಲಿ ಆವಾಗಲೇ ತಳಮಳ ಶುರುವಾಗುವ ಸಂದರ್ಭವೂ ಇಲ್ಲದಿಲ್ಲ. ತಡವಾಗಿ ಆರಂಭವಾದ ಕಾರ್ಯಕ್ರಮದ ಆರಂಭದ ಹುರುಪಿನ ಘಳಿಗೆಯನ್ನು ಸಭಾಕಾರ್ಯಕ್ರಮವೇ ನುಂಗಿ ಹಾಕಿ ಬಿಡುತ್ತದೆ. ಕಾರ್ಯಕ್ರಮಕ್ಕೆ ನೆರವಾದ ಹಲವು ಮಹನೀಯರನ್ನು ಸಹಜವಾಗಿ ಅಭಿನಂದಿಸಿ ಉಪಕಾರಸ್ಮರಣೆಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸುವ ಅನಿವಾರ್ಯತೆ ಸಂಘಟರಿಕೆ ಇರುತ್ತದೆ ಮಾತ್ರವಲ್ಲ ಇರಬೇಕಾದುದೇ. ಇಲ್ಲವಾದರೆ ಅದು ಶಿಷ್ಟಾಚಾರ ಎಂದೆನಿಸಲ್ಪಡುವುದಿಲ್ಲ. ಆದರೆ ಯಕ್ಷಗಾನದಂತಹ ಕಾರ್ಯಕ್ರಮದಲ್ಲಿ ಈ ಶಿಷ್ಟಾಚಾರವೇ ಕೆಲವೊಂದು ಸಲ ಉರುಳಾಗುತ್ತಿರುವುದು ಅತ್ಯಂತ ಸಂದಿಗ್ದತೆಯನ್ನು ತರುವ ವಿಚಾರ.

ಒಂದು ಮಾದರೀ ಕಾರ್ಯಕ್ರಮದ ಪ್ರಕಾರ 5  ಘಂಟೆಗೆ ಆರಂಬವಾಗುವ ಕಾರ್ಯಕ್ರಮ ಮಧ್ಯದಲ್ಲಿ ಒಂದಷ್ಟು ಸಮಯವೆಂದು ಬಿಡುವನ್ನು ತಂದುಕೊಳ್ಳುತ್ತ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನೆರವಾದ ಮಹನೀಯರನ್ನು ಸ್ಮರಿಸಿ ಸನ್ಮಾನಿಸಿ ಕಾರ್ಯಕ್ರಮದ ಉದ್ದೇಶ ಅಥವಾ ಕರ್ತೃ  ಸೇವಾ ಪರಿಚಯವನ್ನು ಮಾಡುವುದಕ್ಕೆ ಹೀಗೆ ಕನಿಷ್ಠವೆಂದರೂ ಒಂದು ಗಂಟೆಯ ಅವಧಿಯನ್ನು ಏನಿಲ್ಲವೆಂದರು ನುಂಗಿ ಹಾಕಿಬಿಡುತ್ತದೆ. ಮಾತ್ರವಲ್ಲ ಅತ್ಯಮೌಲ್ಯವಾದ ಪ್ರೇಕ್ಷಕರದ್ದಾದ ಈ ಅವಧಿಯ ಪ್ರಾಮುಖ್ಯತೆ ಆಷ್ಟಕ್ಕೇ ಸೀಮಿತವಾಗಿಲ್ಲ. ಯಕ್ಷಗಾನವನ್ನು ಸವಿಯಲು ಬಂದ ಪ್ರೇಕ್ಷಕರು ಅದಕ್ಕಾಗಿಯೇ ಮೀಸಲಾಗಿರಿಸಿದ ಅತ್ಯಂತ ಮುಖ್ಯ ಅವಧಿ ಇದು. (peak hours)  ಇದನ್ನೇ ನುಂಗಿ ಹಾಕುವಾಗ ಬೇಡವೆಂದರೂ ಹಲವರಲ್ಲಿ ಅಸಹನೆ ಮೂಡಿ ಬರುತ್ತದೆ. ಶಿಷ್ಟಾಚಾರದ ಪರಿಧಿಯೊಳಗ ಬಹಿರಂಗ ಪ್ರಕಟವಾಗದಿದ್ದರೂ, ಹೇಳಲಾಗದ ಕಸಿವಿಸಿಯನ್ನು ಅನುಭವಿಸುತ್ತದೆ. ಈಗಿನ ಕಾಲಮಾನಕ್ಕೆ ಅನುಸಾರವಾಗಿ ಭಾನುವಾರದ ಸಾಯಂಕಾಲದ ಅರರಿಂದ ಒಂಭತ್ತು ಘಂಟೆಯ ಸಮಯ ಬೆಂಗಳೂರಿನಂತಹ ನಗರದಲ್ಲಿದ್ದವರಿಗೆ ಅತ್ಯಂತ peak hours  ಆಗಿರುತ್ತದೆ. ಆ ಒಂದು ಕಾರ್ಯಕ್ರಮಕ್ಕೆ ಹಲವಾರು ಕಿ.ಮೀ ದೂರದಿಂದ ಅದಕ್ಕಾಗಿ ಬೆಳಗ್ಗಿನಿಂದಲೇ ರಜಾಸಮಯವನ್ನು ಹೊಂದಿಸಿ ಬಿಡುವು ಮಾಡಿಕೊಂಡು ಬರಬೇಕಾಗುತ್ತದೆ. ಕೆಲವೊಂದು ಸಲ ಕಾರ್ಯಕ್ರಮ ನಡೆಯುವ ಸ್ಥಳದ ಅರಿವಿಲ್ಲದೆ ಅಲ್ಲಿ ಇಲ್ಲಿ ಸುತ್ತಾಡಿ ಕೊನೆಗೆ ಕಷ್ಟ ಪಟ್ಟು ಸ್ಥಳಕ್ಕೆ ಆಗಮಿಸಿದಾಗ ತಡವಾಗಿರುತ್ತದೆ. ಅಂತು ಸಿಗುವ ಒಂದೆರಡು ಘಂಟೆಯ ಅವಧಿ. ಅತ್ಯಂತ ಅತ್ಯಮೂಲ್ಯ ಅವಧಿ. ಊರಿನಿಂದ  ಪ್ರಸಿದ್ದ ಕಲಾವಿದರು ವಿಶೇಷವಾಗಿ ಬಂದಿರುತ್ತ, ಅವರನ್ನು ರಂಗದ ಮೇಲೇ ಆದಷ್ಟು ಹೊತ್ತು ನೋಡಿ ಸವಿಯುವ ಕಾತರತೆ ಎಲ್ಲವೂ ಇರುತ್ತದೆ. ಆಗ ಯಕ್ಷಗಾನವಲ್ಲದ ವಿಷಯಗಳಿಗೆ ಸಮಯ ವ್ಯಯವಾಗುವಾಗ ಕಸಿವಿಸಿಯಾಗದೇ ಇರಲು ಸಾಧ್ಯವೇ?

ಇನ್ನೇನು ಕಾರ್ಯಕ್ರಮ ಆರಂಭವಾಗುತ್ತದೆ ಎಂಬ ನಿರೀಕ್ಷೆಯಲ್ಲೇ ಕೆಲವು ಸಮಯ ಕಳೆಯುತ್ತದೆ. ಸಹಜವಾಗಿ ಸಭಾಕಾರ್ಯಕ್ರಮ ಅದು ಶಿಷ್ಟಾಚಾರದಂತೆ ಊಹೀಸಿದಕ್ಕಿಂತ ಯಶಸ್ವಿಯಾಗಿ ಮತ್ತು ಅತೀ ದೀರ್ಘವಾಗಿ ಸಾಗುತ್ತಿರುತ್ತದೆ. ಆದಿನ ಬಂದ ಯಕ್ಷಗಾನ ಕಲಾವಿದರಿಗಿಂತ ಅಧಿಕ ಸಂಖ್ಯೆಯಲ್ಲಿ ವೇದಿಕೆಯಲ್ಲಿ ಗಣ್ಯರು ಉಪಸ್ಥಿತರಿರುತ್ತಾರೆ.  ಅಂಗಡಿಗಿಂತ ಅಂಗಡಿಯ ನಾಮ ಫಲಕ ದೊಡ್ಡದು ಎಂದು ಮನದ ಮೂಲೆಯಲ್ಲಿ ಕೆಲವೊಮ್ಮೆ ಅನ್ನಿಸಲೂಬಹುದು. ಸಭಾಕಾರ್ಯಕ್ರಮ ಮುಗಿದು ಕೆಲವು ಕಾರಣಗಳಿಂದ ಮತ್ತೂ ತಡವಾಗುತ್ತದೆ. ಅಷ್ಟರಲ್ಲಾಗಲೇ ಪ್ರಸಂಗಕ್ಕೆ ಕತ್ತರಿ ಪ್ರಯೋಗದ ಯೋಜನೆ ಶುರುವಾಗಿರುತ್ತದೆ. ನಾಲ್ಕು ಘಂಟೆಯ ಆ ಪ್ರಸಂಗ ಕೆಲವೊಂದು ಸಲ ಒಂದೂವರೆ ಘಂಟೆಯಷ್ಟು ಸಮಯವನ್ನು ಮೊಟಕುಗೊಳಿಸುತ್ತದೆ.

ಒಂದೂವರೆ ಘಂಟೆಯೆಂದರೆ ಯಕ್ಷಗಾನದಲ್ಲಿ ಸರಿ ಸುಮಾರು ಹತ್ತರಿಂದ ಹದಿನೈದು ಪದಗಳನ್ನು ತೆಗೆದು ಹಾಕುವ ಅನಿವಾರ್ಯತೆ ಬರುತ್ತದೆ. ಕಾರ್ಯಕ್ರಮಕ್ಕಾಗಿ ವಿಶೇಶವಾಗಿ ಊರಿನಿಂದ ಅಥವಾ ದೂರದಿಂದ ಅತ್ಯಂತ ಪ್ರಸಿದ್ದ ಭಾಗವತರನ್ನು, ಚೆಂಡೆ, ಮದ್ದಲೆಗಾರರನ್ನು ಅಗತ್ಯದಂತೆ ತುಸು ಹೆಚ್ಚಿನ ವೆಚ್ಚಮಾಡಿ ಈ ಕಾರ್ಯಕ್ರಮಕ್ಕಾಗಿ ಕರೆಸುತ್ತೇವೆ. ವಿಚಿತ್ರವೆಂದರೆ ಇಲ್ಲಿ ಯಕ್ಷಗಾನದ ಪೂರ್ವ ರಂಗದ ಮರೆಯಾದ ವಿಷಯ ಹಾಗಿರಲಿ, ತೆಂಕು ತಿಟ್ಟು ಯುಕ್ಷಗಾನದ ವೈಶಿಷ್ಟ್ಯವಾದ ಪೀಠಿಕೆಯ ಭಾಗವೂ ಮರೆಯಾಗಿಬಿಡುತ್ತದೆ..!! ಅದು ಇದ್ದರೂ ಒಂದೆರಡು ಘಳಿಗೆಗೆ ಮುಗಿದು ಬಿಡುತ್ತದೆ. ಇದರಿಂದ ಹೆಸರಾಂತ ಚೆಂಡೆಯವಾದಕರ ಪೀಠಿಕೆ ಕೇಳುವ ಅವಕಾಶದಿಂದಲೂ ವಂಚಿತರಾಗುವುದಲ್ಲದೆ ಹೆಸರಾಂತ ಕಲಾವಿದರ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗದಂತಾಗಿ ಮಾಡಿದ ಅಷ್ಟೂ ವೆಚ್ಚವೂ ವೃಥಾ ಎನ್ನಿಸಿಬಿಡುವುದು. ಮಾತ್ರವಲ್ಲ ಕಲಾವಿದರ ಬಹು ಅಮೂಲ್ಯವಾದ ಸಮಯವನ್ನೂ ಹಾಳುಮಾಡಿಂದಂತಲ್ಲವೆ? ಹೀಗೆ ಯೋಚಿಸುತ್ತ ಹೋದರೆ ಯಕ್ಷಗಾನಕ್ಕೆ ಸಂಬಂಧಿಸಿ  ಈ ಪರಿಣಾಮಗಳು ಅತ್ಯಂತ ಗಂಭೀರ ಎಂದೆನಿಸುವುದಿಲ್ಲವೆ?

ನಗರ ಮಾತ್ರವಲ್ಲ ಗ್ರಾಮಾಂತರ ಪ್ರದೇಶದಲ್ಲೂ ಯಕ್ಷಗಾನದಲ್ಲಿ ಪ್ರೇಕ್ಷಕರ ಕೊರತೆ ಅನುಭವಕ್ಕೆ ಬರುವಾಗ ಯಕ್ಷಗಾನವೇ ಮುಖ್ಯ ಕಾರ್ಯಕ್ರಮವಾಗಿರುವಂತಹ ಸಂದರ್ಭದಲ್ಲಾದರೂ ಕೇವಲ ಯಕ್ಷಗಾನಕ್ಕೆ ಸೀಮಿತವಾಗುವಂತೆ ಆಗಬೇಕು. ಯಕ್ಷಗಾನಕ್ಕೆ ಅನಗತ್ಯವೆನಿಸಲ್ಪಡುವ ಈ ಸಭಾಕಾರ್ಯಕ್ರಮ ಎಂಬ ಶಿಷ್ಟಾಚಾರವನ್ನು ನಾವೆಲ್ಲ ವಿಶಾಲ ಮನಸ್ಸಿನಿಂದ ದೂರಮಾಡುವಂತಾಗಬೇಕು. ಸನ್ಮಾನ ಸ್ಮರಣೆಗಳು ಹೃದಯದಲ್ಲಿ ತುಂಬಿಕೊಂಡು ಹೃದಯದಿಂದ ಹರಿದು ಬಂದು ಅವುಗಳು ಶಿಷ್ಟಾಚಾರಕ್ಕೆ ಅನುಗುಣವಾಗಿ ಕೇವಲ ಸಾಂಕೇತಿಕವಾಗಬೇಕು. ಇಂದು ಹದಿನೈದು ನಿಮಿಷಗಳ ಪೀಠಿಕೆ ( ಇದು ಕಡಿಮೆಯಾಗಿರಬಹುದು) ಮೊಟಕುಗೊಳಿಸಿ ಕೇವಲ ಎರಡು ಮೂರು ನಿಮಿಷಕ್ಕೆ ಸೀಮಿತ ಗೊಳಿಸುವಾಗ ಈ ಸಭಾಕಾರ್ಯಕ್ರಮವನ್ನು ಸೀಮಿತಗೊಳಿಸಿ, ಮೊದಲೇ ಕಾಲಮಿತಿಯೊಳಗೆ ಬಂದಿಯಾದ ಯಕ್ಷಗಾನಕ್ಕೆ ಸ್ವಲ್ಪವಾದರೂ ಉಸಿರಾಟ ಸಿಗುವಹಾಗೆ ಮಾಡಬಹುದಲ್ಲವೆ?  ಕಲಾಪೋಷಕರು, ಸಂಘಟಕರೂ ಮತ್ತು ಎಲ್ಲರೂ ಈ ಬಗೆಯಲ್ಲಿ ಚಿಂತಿಸುವುದು ಅತ್ಯವಶ್ಯವಾಗಿದೆ.

ಯಶಸ್ವೀ ಕಾರ್ಯಕ್ರಮವನ್ನು ಗುರಿಯಾಗಿಸಿ ದೂರದಿಂದ ಕಲಾವಿದರನ್ನು ಅದಕ್ಕೆಂದೇ ವಿಶೇಷವಾಗಿ ಕರೆಸುವಾಗ  ಅವರ ಸಮಯದಿಂದ ತೊಡಗಿ ಎಲ್ಲವನ್ನೂ ಸದ್ವಿನಿಯೋಗವಾಗುವ ಹಾಗೆ ಮಾಡುವುದು ಉಚಿತವಲ್ಲವೆ? ಪರ್ಯಾಯವಾಗಿ ಅವರ ಪ್ರತಿಬೇಗೂ ಸೂಕ್ತ ಅವಕಾಶ ಮತ್ತು ಮನ್ನಣೆಯನ್ನು ಕೊಟ್ಟಂತಾಗುವುದು ಮಾತ್ರವಲ್ಲ ಪರೋಕ್ಷವಾಗಿ ಸೀಮಿತ ಅವಧಿಯಲ್ಲಿ ಯಕ್ಷಗಾನವನ್ನು ಅತೀ ಹೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರು ಸವಿದಂತಾಗುವುದಿಲ್ಲವೆ? ಕಾಲದ ಪ್ರಭಾವಕ್ಕೆ ಸಿಲುಕಿ ಯಕ್ಷಗಾನ ಮಾತ್ರ ಕಡಿತಗೊಂಡು ಕೆಲವು ಘಳಿಗೆಯಷ್ಟಕ್ಕೆ ಇಳಿದಿರುವ ಸನ್ನಿವೇಶದಲ್ಲಿ ಈ ಸಭಾಕಾರ್ಯಕ್ರಮ ಮಾತ್ರ ಪ್ರೇಕ್ಷಕರ ಸಹನೆಯನ್ನು ಪರೀಕ್ಷಿಸುತ್ತಾ  ಅದೇ ಮಟ್ಟದಲ್ಲಿ ಉಳಿದುಕೊಂಡು ಬಂದಿರುವುದು ಒಂದು ವಿಪರ್ಯಾಸ ಎನ್ನಲೇಬೇಕು.

Saturday, November 19, 2011

ಒಂದು ಮಾತು




ಒಂದು ಸಲ ಒಬ್ಬಾತನಿಗೆ ಅಪರೂಪದ ಮಿತ್ರನೊಬ್ಬ ಒಂದು ದಿನ ಬೆಳಗಿನ ಸಮಯ ಬಂದಾಗ  ಅತೀವ ಸಂತೋಷವಾಯಿತು. ಸಂತೋಷದಿಂದ ಬರ ಮಾಡಿ ಪ್ರೀತಿಯಿಂದ ತುಂಬಿದ ಮನಸ್ಸಿನಿಂದ ಸತ್ಕರಿಸುತ್ತಾನೆ. ಬಂದ ಸ್ವಲ್ಪ ಹೊತ್ತಿನಲ್ಲೇ ಹೊರಟು ನಿಂತ ಮಿತ್ರನನ್ನು  ಪ್ರೀತಿಯಿಂದ ಒತ್ತಾಯ ಪೂರ್ವಕ ಬೇಡಿಕೊಂಡು ಅಂದು ಉಳಿಸಿಕೊಳ್ಳುತ್ತಾನೆ. ಮಧ್ಯಾಹ್ನ ಊಟಕ್ಕೆ ಮಿತ್ರನ ಬಯಕೆ ಏನೆಂದು ಅರಿತು ಬಹಳ ಕಷ್ಟ ಪಟ್ಟು ಎಲ್ಲವನ್ನೂ ಸಿದ್ಧ ಪಡಿಸುತ್ತಾನೆ. ಒಂದು ಕ್ಷಣವೂ ಅವನನ್ನು ಬಿಟ್ಟಿರದೆ ಹೃಧಯ ತುಂಬಿ ಮಾತನಾಡುತ್ತಾನೆ. ಎಲ್ಲ ಬಗೆಯಲ್ಲೂ ಉಪಚರಿಸುತ್ತಾನೆ. ಮಿತ್ರನ ಉಪಚಾರ ಪ್ರೀತಿ ಕಂಡ ಅತಿಥೇಯ ಮಿತ್ರ ಮೂಕ ವಿಸ್ಮಿತನಾಗಿಬಿಡುತ್ತಾನೆ.
ಆದಿನ ಉಳಿದು ಕೊಂಡ ಮಿತ್ರನಿಗೊಸ್ಕರ ರಾತ್ರಿ ಮಲಗಲು ಒಂದು ಹಾಸಿಗೆ ಸಿದ್ದ ಪಡಿಸುತ್ತಾನೆ. ಅದನ್ನು ಮನೆಯ ಹಿಂದಿನ ಹಿತ್ತಲ ಬಂಡೆಯ ಮೇಲೆ  ಬಿಸಿಲಿಗೆ ಹಾಕಿ  ಚೆನ್ನಾಗಿ ಒಣಗುವಂತೆ ಮಾಡುತ್ತಾನೆ. ಗರಿ ಗರಿಯಾದ ಹಾಸಿಗೆಯನ್ನು ಅದರ ಮೇಲು ಹಾಸು ದಿಂಬು ಅಲ್ಲದೆ  ರಾತ್ರಿ ಮಿತ್ರನಿಗಾಗಿ ಪ್ರತ್ತ್ಯೇಕ ಕೊಠಡಿಯನ್ನೂ ಸಜ್ಜುಗೊಳಿಸಿ ಹೀಗೆ ಎಲ್ಲವನ್ನೂ ಸಿದ್ದ ಪಡಿಸಿ ಸತ್ಕರಿಸಿ ಮಲಗಿಸಿ ಬಿಡುತ್ತಾನೆ. ರಾತ್ರಿ ಮಲಗಿದ ಮಿತ್ರನಿಗೆ ಮಧ್ಯೆ ಎಚ್ಚರವಾಗಿಬಿಡುತ್ತದೆ. ಹಾಸಿಗೆಯಲ್ಲಿ ಏನೋ ಚುಚ್ಚಿದ ಅನುಭವವಾಗಿಬಿಡುತ್ತದೆ. ಬಿಸಿಲಲ್ಲಿ ಹಾಸಿಗೆ ಒಣ ಹಾಕಿದ್ದಾಗ ಯಾವುದೋ ಹುಲ್ಲು ಅಥವಾ ಮುಳ್ಳು ಹಾಸಿಗೆ ಯಲ್ಲಿ ಉಳಿದುಕೊಂಡಿರುತ್ತದೆ. ಅದು ಚುಚ್ಚುತ್ತಿರುತ್ತು.  ಕತ್ತಲಲ್ಲೇ ತಡಕಾಡಿದರೂ ಏನೂ ಸಿಗದೆ ಕೊನೆಗೆ ಹಾಗೆ ಮಲಗಿ ನಿದ್ದೆ ಮಾಡಿಬಿಡುತ್ತಾನೆ. ಮರುದಿನ ಬೆಳಗ್ಗೆ ಮಿತ್ರ ಕುಶಲ ವಿಚಾರಿಸಿ ನಿದ್ದೆ ಬಂತೆ ಎಂದು ವಿಚಾರಿಸುತ್ತಾನೆ. ಆಷ್ಟೊಂದು ಆಸಕ್ತಿಯಿಂದ ಹಾಸಿಗೆಯನ್ನು ಸಿದ್ದಪಡಿಸಿದ ಮಿತ್ರನಲ್ಲಿ ಏನನ್ನು ಹೇಳುವುದು. ಮೆತ್ತಗಿನ ಬೆಚ್ಚಗಿನ ಹಾಸಿಗೆಯಾದರೂ ಸಣ್ಣದೊಂದು ಮುಳ್ಳು ಬಹಳ ಕಿರಿ ಕಿರಿಯಾಗುವಂತೆ ಮಾಡಿತ್ತು.
ಭಾಗವತ ಮಹಾರಥಿ


 ವಾರಗಳ ಹಿಂದೆ ಪತ್ರಿಕೆಯೊಂದರಲ್ಲಿ ಬಂದ ಲೇಖನ ಓದಿದಾಗ ಈ ಕಥೆಯ ಅತಿಥಿಯ ಅನುಭವವೇ ಅಯಿತು. ಇತ್ತೀಚೆಗೆ ಇನ್ನಿಲ್ಲವಾದ ಹಿರಿಯ ಕಲಾವಿದ  ಕಡತೋಕರ ಬಗ್ಗೆ ಆ ಲೇಖನ ಬಂದಿತ್ತು ಕಡತೋಕರ ಬಗ್ಗೆ ಉತ್ತಮ ಮಾಹಿತಿಗಳಿಂದ  ಮತ್ತು ಅಷ್ಟೇ ಭಾವಪೂರ್ಣ ಮಾತುಗಳಿಂದ ಆ ಲೇಖನ ಮೂಡಿಬಂದಿತ್ತು. ಹೃದ್ಯವಾದ ಲೇಖನ ಓದುತ್ತಿದ್ದ ಹಾಗೆ ಮಹಾನ್ ಕಲಾವಿದರ ಮಧುರ ಸ್ಮರಣೆಯಾಗುತ್ತಿತ್ತು. ಅನನ್ಯ ಸಾಧಕ ಕಡತೋಕರ ಹಲವು ಸಾಧನೆಗಳನ್ನು ಅಷ್ಟೇ ಸುಂದರವಾಗಿ ಸರಳವಾಗಿ ಮನ ಮುಟ್ಟುವಂತೆ ಚಿತ್ರಿಸಲ್ಪಟ್ಟಿತ್ತು. ಕಡತೋಕರು ತೆಂಕು ಬಡಗು ಭೇದವಿಲ್ಲದ ಸಮನ್ವಯ ಸಾಧಾಕರಾದವರು. ಆವರ ಸಾಮಾರ್ಥ್ಯವಿಶೇಷಗಳು ನಮ್ಮಂತಹವರ ತಿಳುವಳಿಕೆಗೆ ನಿಲುಕುವಂತಹುದಲ್ಲ. ಮಹಾನ್ ಕಲಾವಿದರ ಲೇಖನ ಓದುತ್ತಿದ್ದಂತೆ ಹೃದಯ ಭಾವಪರವಶವಾಗಿಬಿಟ್ಟಿತು. ಬಡಗಿನಲ್ಲಿ ಪರಿಫೂರ್ಣ ಸಾಮಾರ್ಥ್ಯದ ಭಾಗವತರಾಗಿದ್ದುಕೊಂಡೇ ತೆಂಕಿನ ಮಾಂಬಾಡಿಯವರಲ್ಲಿ ಶಿಷ್ಯತ್ವವನ್ನು ಅಂಗೀಕರಿಸಿ  ತಮ್ಮ ಹೃದಯವೈಶಾಲ್ಯವನ್ನು ಮೆರೆದವರು. ಕಲಾವಿದ ಪ್ರತಿಘಳಿಗೆ ಯೂ ವಿದ್ಯಾರ್ಥಿಯಾಗಿ ಅನ್ವೇಷಕನಾಗಿ ಇರಬೇಕೆಂದು ಸ್ವಂತ ನಡೆಗಳಿಂದ ತೋರಿಸಿಕೊಟ್ಟವರು. ಕಡತೋಕರ ಜೀವನವನ್ನೂ ಸಾಧನೆಯನ್ನು ಅತ್ಯಂತ ಮಾರ್ಮಿಕವಾಗಿ ಮತ್ತು ಸಂಕ್ಷೇಪವಾಗಿ ಬಿಂಬಿಸಿದ ಲೇಖನ ಬಹಳ ಮೆಚ್ಚಿಗೆಗಳಿಸಿತು.  ಆದರೂ ನಡುವೆ ಬರುವ  “35 ವರ್ಷ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದುದು ತೆಂಕಿಗೆ ಅವರ ಅಗತ್ಯವೆಷ್ಟಿತ್ತು ಎಂಬುದನ್ನು ಸಾರುತ್ತದೆ” ಈ ಒಂದು ವಾಕ್ಯ ವನ್ನು ಓದುವಾಗ ಮಾತ್ರ ಸಣ್ಣದಾಗಿ ಚುಚ್ಚಿದ ಅನುಭವಾಯಿತು.  ಇಲ್ಲಿ ಯಾವುದಕ್ಕೆ ಯಾವುದು ಅಗತ್ಯ ಎಂಬ ಜಿಜ್ಞಾನೆಯಲ್ಲ. ಆಗಿನ ಕಾಲದಲ್ಲಿ ಮಂಡೆಚ್ಚ ಅಗರಿ ಬಲಿಪ್ಪರಂತಹ ಭಾಗವತರು ಕೂಡ ಯಕ್ಷಗಾನದಲ್ಲಿ ಅದ್ವಿತೀಯರಾಗಿ ಮೆರೆದು ಒಟ್ಟಿನಲ್ಲಿ ತೆಂಕುತಿಟ್ಟಿನ ಯಕ್ಷಗಾನ ಕಲೆಯ ಸುವರ್ಣ ಯುಗಕ್ಕೆ ಪೂರಕವಾಗಿ ಮೆರೆದವರು. ಇಲ್ಲಿ ಪ್ರತಿಯೊಬ್ಬರ ಕೊಡುಗೆಯಾಗಲಿ ಸಾಧನೆಯಾಗಲಿ ಪ್ರಶ್ನಾತೀತ. ಸಮಷ್ಟಿಯಾಗಿ ಕಲೆ ವಿಜ್ರಂಭಿಸಿದ್ದು ಮಾತ್ರ ಸತ್ಯ. ಅದರಲ್ಲೂ ಕಡತೋಕರು ಮೆರೆದ ಪರಿ ಮಾತ್ರ ಪ್ರಶ್ನಾತೀತ.  ಹಾಗಾಗಿ ಇಲ್ಲಿ ಅಗತ್ಯತೆಯ ಮಾತು ಅಗತ್ಯ ಎಂದು ಅನಿಸುವುದಿಲ್ಲ.  ಯಾವುದಕ್ಕೆ  ಯಾವುದು ಅಗತ್ಯ ಎಂದು ತುಲನೆ ಮಾಡುವುದಕ್ಕಿಂತ  ವಸ್ತುಸ್ಥಿತಿಯನ್ನು ಗಮನಿಸಬೇಕು. ಹಾಗಾಗಿ ಇದರ ಹಿನ್ನೆಲೆಯ ಭಾವನೆ  ಹೇಗೆ ವಿಶ್ಲೇಷಿಸಿದರೂ ಸೂಕ್ಷ್ಮವಾಗಿ ಅದರಲ್ಲಿ ಪೂರ್ವಾಗ್ರಹ ನುಸುಳಿದ್ದುದು ಮಾತ್ರಾ ಸ್ಪಷ್ಟವಾಗುತ್ತದೆ. ಮೆತ್ತಗಿನ ಪಲ್ಲಂಗದಲ್ಲಿ ಅನಪೇಕ್ಷಿತವಾದ ಮುಳ್ಳು ಚುಚ್ಚಿದಂತಹ ಅನುಭವ. ಯಾವುದನ್ನೂ ಪ್ರಶ್ನಿಸುವ ಪ್ರಮೇಯವಲ್ಲ ಇದು ಹಾಗಲ್ಲವೇ ? ಎಂಬ  ಅನಿಸಿಕೆ ಮಾತ್ರ.

Saturday, November 12, 2011

ನಮ್ಮಶಂಕರ ಅಪ್ಪಚ್ಹಿ………




ಯಕ್ಷಗಾನದಲ್ಲಿ ಅಬ್ಬರಿಸುವ ಚೆಂಡೆಯ ಸದ್ದಿನ ಅದ್ಭುತ  ವಾದನಕ್ಕೆ  ಹೆಸರಾದವರು ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟರು. ಯಕ್ಷಗಾನವೆಂದರೆ ಮೊದಲು ನಮ್ಮ ಮನಃ ಪಟಲದಲ್ಲಿ ಮೊಳಗುವ ಸದ್ದು ಎಂದರೆ ಅದು ಚೆಂಡೆವಾದನದ ಸದ್ದು. ಅದರಲ್ಲೂ ತೆಂಕುತಿಟ್ಟಿನ ವೇಶಗಳು ವಿಜ್ರಂಭಿಸಬೇಕಾದರೆ ಸಮರ್ಥ ಚೆಂಡೆವಾದಕನ ಕೈಚಳಕ ಅದಕ್ಕೆ ಬೆನ್ನೆಲುಬಾಗಿ ಇರಲೇಬೇಕು. ಯಕ್ಷಗಾನ ಬಯಲಾಟಗಳಲ್ಲಿ ಮಧ್ಯರಾತ್ರಿ ಕಳೆದು ಬೆಳಗಿನ ಜಾವದಲ್ಲಿ ಪುಂಡುವೇಶಗಳು ರಂಗಸ್ಥಳದ ನೆಲವನ್ನು ಧೂಳೀಪಟಗೊಳಿಸುತ್ತಿರಬೇಕಾದರೆ ಆ ಪಾತ್ರಗಳಲ್ಲಿ ಆವೇಶವನ್ನು ತುಂಬಬಲ್ಲವರು ಚೆಂಡೆವಾದಕರು. ಮುಮ್ಮೇಳದ ವೇಶಗಳು ಹೇಗೆ ವಿಜ್ರಂಭಿಸುತ್ತವೆಯೋ ಅದೆ ರೀತಿ ಅದಕ್ಕೆ ಸರಿಮಿಗಿಲೆನಿಸಿ ತನ್ನ ಕೈಚಳಕದಿಂದ ಹಿಮ್ಮೇಳದಲ್ಲಿ ಚೆಂಡೆವಾದಕರು ವಿಜ್ರಂಭಿಸತೊಡಗುತ್ತಾರೆ. ಇಂತಹ ಆವೇಶ ಭರಿತ ಚೆಂಡೆವಾದನಕ್ಕೆ ಇಂದು ಹೆಸರಾದವರು ಶಂಕರಣ್ಣ. ನಮ್ಮ ಮಿತ್ರಬಳಗದಲ್ಲಿ ಅಪ್ಪಚ್ಚಿ ಎಂದು ಕರೆಸಲ್ಪಡುವ ಇವರು ಯಕ್ಷಗಾನ ಹಿಮ್ಮೇಳ ಕಂಡ ಸರ್ವಾಂಗೀಣ ಕಲಾವಿದರಲ್ಲಿ ಒಬ್ಬರು. ಪ್ರಮುಖ ಯಕ್ಷಗಾನ ಬಯಲಾಟ ಕೂಟಗಳಲ್ಲಿ ಬೆಳಗಿನ ಜಾವ ಚೆಂಡೆ, ಶಂಕರಣ್ಣನ ಹೆಗಲೇರಿ ಸಿದ್ದವಾದರೆ ರಂಗದ ಮೇಲಿನ ವೇಶಧಾರಿಗಳು ಬೆವರಿಳಿಸಲು ಸಿದ್ದರಾಗಿರಬೇಕು. ಇದು ಅವರ ವಾದನದ ವೈಶಿಷ್ಟ್ಯ.

ಯಕ್ಷಗಾನ ಅಭಿಮಾನಿಗಳಿಗೆ ಅದರಲ್ಲೂ ತೆಂಕುತಿಟ್ಟಿನ ಕಲಾರಸಿಕರಿಗೆ ಶಂಕರಣ್ಣ ತನ್ನ ಚೆಂಡೆ ಮದ್ದಲೆವಾದನದಿಂದಲೂ ವ್ಯಕ್ತಿಪರವಾಗಿಯು ಚಿರಪರಿಚಿತ ವ್ಯಕ್ತಿ.  ಕನ್ನಡಕಧಾರಿಯಾಗಿ ಉದ್ದನೆಯ ತೊಳಿನ ಅಂಗಿಧರಿಸಿ ರಂಗಸ್ಥಳದ ವಾಮ ಭಾಗದಲ್ಲಿ ಚೆಂಡೆ ಹಿಡಿದು ನಿಲ್ಲುವ ಶಂಕರಣ್ಣ ಅಭಿಮಾನಿಗಳ  ಮತ್ತು ಕಲಾವಿದರ ಹೃದಯದ ಮಿಡಿತವನ್ನು ಅನುಸರಿಸಿ ಚೆಂಡೆ ನುಡಿಸಬಲ್ಲರು. ತೆಂಕು ತಿಟ್ಟಿನಲ್ಲಿ ಚೆಂಡೆ ವಾದನವು ಅದರದ್ದೇ ಆದ ಪ್ರಧಾನ್ಯತೆಯನ್ನು ಪಡೆದಿದೆ. ಯಕ್ಷಗಾನದ ಸ್ಪರ್ಧಾತ್ಮಕ ಪ್ರಪಂಚ ತೆರೆದುಕೊಳ್ಳುವುದೇ ಚೆಂಡೆಯ ಸ್ವರದೊಂದಿಗೆ. ಅದಕ್ಕೆ ನಿದರ್ಶನ ಯಕ್ಷಗಾನ ಜೋಡಾಟದ ಪ್ರದರ್ಶನಗಳು. ಇದರಲ್ಲಿ  ಮುಂದಿನ ಸ್ಪರ್ಧಾತ್ಮಕ ಪ್ರದರ್ಶನಕ್ಕೆ ಕಿಚ್ಚು ಹತ್ತಿಸುವುದೇ ದಂದ್ವ ಚೆಂಡೆವಾದನದ ಪೀಠಿಕೆಯೊಂದಿಗೆ. ಯಕ್ಷಗಾನದ ಜುಗಲ್ಬಂದಿ ಸ್ಪರ್ಧೆ ತೊಡಗುವುದೇ ಚೆಂಡೆವಾದನದಿಂದ ಎನ್ನಬಹುದು. ಹಾಗಾಗಿ ಯಕ್ಷಗಾನವೆಂದರೆ ಚೆಂಡೆವಾದನ ಎಂಬಂತೆ ಭಾಸವಾಗುತ್ತದೆ. ತೆಂಕು ತಿಟ್ಟಿನ ಯಕ್ಷಗಾನಕ್ಕೆ ಇದು ಹೆಚ್ಚು ಸೂಕ್ತ ಎನ್ನಬಹುದು. ಇಂತಹ ಸನ್ನಿವೇಶದಲ್ಲಿ ಅತ್ಯಂತ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರು ಶ್ರೀ ಪದ್ಯಾಣ ಶಂಕರಣ್ಣ.

ಯಕ್ಷಗಾನದಲ್ಲಿ ಹಾಡುಗಾರಿಕೆಯಾಗಲೀ, ಮಾತುಗಾರಿಕೆಯಾಗಲಿ ಏರು ಸ್ಥಾಯಿಯ ಸ್ವರವನ್ನು ಅನುಸರಿಸುವುದು ಸಹಜ. ಅರ್ಥಗಾರಿಕೆಯಲ್ಲಿಯೂ ಮಾತಿನ ಸ್ವಾರಸ್ಯ ಪ್ರೇಕ್ಷಕನ ಮನಸ್ಸು ತಟ್ಟಬೇಕಿದ್ದರೆ ಉಚ್ಚ ಸ್ಥಾಯಿಯ ಸ್ವರ ಅತ್ಯಾವಶ್ಯ. ಇಲ್ಲವಾದಲ್ಲಿ ಅರ್ಥಗಾರಿಕೆಯಲ್ಲಿ ವಿಚಾರಧಾರೆ ಹರಿದರೂ ಅದು ಅಕರ್ಷಣೆಯನ್ನು ಪಡೆಯುವುದಿಲ್ಲ. ಹೀಗೆ ಚೆಂಡೆವಾದನವೂ ಅಬ್ಬರಿಸುವುದನ್ನೇ ಬಯಸುತ್ತಾರೆ. ಇದರಲ್ಲಿ ಲಾಲಿತ್ಯ ಮತ್ತು ವೈವಿಧ್ಯತೆಯನ್ನು ತುಂಬುವುದೇ ಚೆಂಡೆ ಕಲಾವಿದನ ನಿಜವಾದ ನೈಪುಣ್ಯ. ಇಂತಹ ಸಂದರ್ಭದಲ್ಲಿ ಶಂಕರಣ್ಣ ಬಹಳವಾಗಿ ಸ್ವ ಪ್ರತಿಭೆಯಿಂದ ವಿಜ್ರಂಭಿಸುತ್ತಾರೆ. ಅವರು ಚೆಂಡೆನುಡಿಸುವುದನ್ನು ದೂರ ನಿಂತು ಆಲಿಸಿದರೆ ಅವರ ತೋಳಿನ ಶಕ್ತಿಯುತ ಪ್ರಹಾರಕ್ಕೆ ಚೆಂಡೆ ಅಬ್ಬರಿಸುವಾಗ ಪ್ರೇಕ್ಷಕನ ಎದೆಯೇ ಚಕ್ರತಾಳವಾಗುತ್ತದೆ. ಅಂತಹ ಶಕ್ತಿಯುತ ಮತ್ತು ಅಷ್ಟೇ ಕೌಶಲಭರಿತ ಚೆಂಡೆವಾದನ ಶಂಕರಣ್ಣನದು. ಚೆಂಡೆ ಇರುವುದೇ ಬಡಿಯುವುದಕ್ಕಾಗಿ ಎಂಬ ಮನೋಭಾವ ಗೋಚರಿಸುತ್ತದೆ. ಕೇವಲ ಅಬ್ಬರ ಮಾತ್ರವಲ್ಲ ಅವರದೇ ಆದ ಹಲವು ಶೈಲಿಯ ಬಡಿತಗಳು  ಇದಕ್ಕೆ ಸೂಕ್ತವಾಗಿ ಹೊಂದಿಕೊಂಡು, ಇಂದು ಅವರನ್ನು ಜನಪ್ರಿಯ ಕಲಾವಿದನ ಸ್ಥಾನದಲ್ಲಿ ಕುಳ್ಳಿರಿಸಿದೆ ಎನ್ನಬಹುದು.
ಇವರ ಯೌವ್ವನಾವಧಿಯ ದಿನಗಳಿರಬಹುದು. ಆಗ ಚೇವಾರು ರಾಮಕೃಷ್ಣ ಕಮ್ತಿ ಎಂಬ ಚೆಂಡೆವಾದಕರು ಅಬ್ಬರಿಸುವ ಚೆಂಡೆ ವಾದನಕ್ಕೆ ಹೆಸರಾಗಿದ್ದರು. ದೂರದಲ್ಲಿ ನಿಂತು  ಅವರು ಚೆಂಡೆ ನುಡಿಸುವುದನ್ನು ಕೇಳಿದಾಗ  ಚೆಂಡೆಯ ಸಹಜ ಕೋಲಿನಿಂದ ನುಡಿಸುತ್ತಾರೋ ಇಲ್ಲವೋ ಎಂಬ ಅನುಮಾನ ನಮ್ಮಲ್ಲಿ ಮೂಡುತ್ತಿತ್ತು. ಇಂದು ಶಂಕರಣ್ಣನ ಚೆಂಡೆವಾದನದಲ್ಲೂ  ಹಲವು ಸಲ ಈ ಅನುಭವ ನನಗಾಗಿತ್ತು. ಬಹುಶಃ ಅವರ ಪ್ರಭಾವ ಇವರಲ್ಲಿ ಇದೆಯೋ ಎನೋ ಇದು ನನ್ನ ಅನಿಸಿಕೆ.
ಶಂಕರಣ್ಣ ಸುರತ್ಕಲ್ ಮೇಳದ ಚೆಂಡೆ ಮದ್ದಲೆ ವಾದಕಾರಾಗಿದ್ದುದು ಇನ್ನೂ ನೆನಪಿದೆ. ನಮ್ಮೂರ ಆಸುಪಾಸು ಎಲ್ಲಿ  ಆಟವಾದರೂ  ತನ್ನ  ಎಜ್ಡಿ ಬೈಕಿನಲ್ಲಿ ಬುಡು ಬುಡು ಸದ್ದು ಮಾಡುತ್ತ ಬರುತ್ತಿದ್ದಾಗಿನ ದಿನದಿಂದ,  ಈಗಿನವರೆಗೂ ಚೆಂಡೆ ಮದ್ದಲೆ ವಾದನದಲ್ಲಿ ಏಕಪ್ರಕಾರವಾದ ಕ್ಷಮತೆಯನ್ನು ಬಿಂಬಿಸುತ್ತ ಬಂದವರು. ದಿವಂಗತ ಚಿಪ್ಪಾರು ಬಲ್ಲಾಳರ ಶಿಷ್ಯರಾಗಿ ಬಲ್ಲಾಳರ ಹಲವು ವೈಶಿಶ್ಟ್ಯವನ್ನು ತನ್ನದೇ ರೀತಿಯಲ್ಲಿ ಆಳವಡಿಸಿಕೊಂಡ ಅಪ್ರತಿಮ ಕಲಾವಿದರು. ಚಿಪ್ಪಾರು ಬಲ್ಲಾಳರು ಯಾವುದೇ ಪೌರಾಣಿಕ ಪ್ರಸಂಗವಾಗಲಿ, ಆ ಪ್ರಸಂಗದ ನಡೆಯನ್ನು ಖಚಿತವಾಗಿ ಹೇಳಬಲ್ಲ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಈ ಜ್ಞಾನ ಸಿದ್ಧಿ ಪದ್ಯಾಣರಲ್ಲಿ ಧಾರಾಳವಾಗಿ ಕಾಣಬಹುದು. ಕೇವಲ ಪೌರಾಣಿಕ ಪ್ರಸಂಗವಲ್ಲದೆ, ತುಳು ಪ್ರಸಂಗಗಳಲ್ಲಿಯು ಇವರು ಯಶಸ್ಸನ್ನು ಕಂಡಿದ್ದಾರೆ. ಇಂದು ಅಧುನಿಕತೆಯಲ್ಲಿ ಬದಲಾದ ಹಿಮ್ಮೇಳ ಶೈಲಿಗೂ ಪರಂಪರೆಯ ಶೈಲಿಗೂ ಶಂಕರಣ್ಣನ ಹಾಗೆ ಹೊಂದಿಕೊಳ್ಳುವ ಹಿಮ್ಮೇಳ ಕಲಾವಿದರು ಯಾರೂ ಇಲ್ಲ. ಯಾವುದೇ ಭಾಗವತನೂ ಬಯಸುವ ಹಿಮ್ಮೇಳವಾದಕರು ಇವರು.ಹಾಗಾಗಿ ಇಂದು ಯಾವುದೇ ಯಕ್ಷಗಾನ ಕೂಟಗಳಲ್ಲಿ ಶಂಕರಣ್ಣ ಹೆಚ್ಚು ಪ್ರಸ್ತುತವೆನಿಸುತ್ತಾರೆ.
ಹಲವು ಕಡೆಗಳಲ್ಲಿ ಸಪ್ಪೆಯಾಗಿ ಸಾಗುವ ಯಕ್ಷಗಾನ ಪ್ರಸಂಗಗಳು ಶಂಕರಣ್ಣ ಬಂದಾಗ ಕಳೆಯೇರುವುದು ಸಾಮಾನ್ಯ. ವಿಭಿನ್ನ ನಾದಶೈಲಿಯಿಂದ ಚೆಂಡೆಯಲ್ಲಿ ವೈವಿಧ್ಯಮಯ ಸ್ವರವನ್ನು ಹೊರಡಿಸುತ್ತ ವೈಶಿಷ್ಟ್ಯಮಯ ಚೆಂಡೆವಾದನಕ್ಕೆ ಹೆಸರುವಾಸಿ ಇವರು. ಒಂದು ಕೈಯಿಂದ ಚೆಂಡೇ ಹಿಡಿದು ಇನ್ನೋಂದು ಕೈಯಿಂದ ಬಲವಾಗಿ ಬಾರಿಸುವ ಇವರ ಶೈಲಿ, ಅಂತೇ ಆವೇಶಭರಿತರಾಗಿ ಒಂದು ಕಾಲಿನಿಂದ ಚೆಂಡೆಯನ್ನು ಎತ್ತಿ ಹಿಡಿದು ಬಾರಿಸುವ ಇವರ ಇನ್ನೊಂದು ಭಂಗಿ ಇವರ ಅಭಿಮಾನಿಗಳಿಗೆ ಬಹಳ ಖುಶಿಯನ್ನು ತರುತ್ತದೆ. ಇಂದಿಗೂ ಹಲವು ಕಡೆಗಳಲ್ಲಿ ಬೆಳಗಿನ ಜಾವಕ್ಕೆ ಚೆಂಡೆ ಶಂಕರಣ್ಣನ ಹೆಗಲೇರುವುದು ಸರ್ವೇಸಾಮಾನ್ಯ. ಸಂಪಾಜೆ ಯಕ್ಷಗಾನದಲ್ಲಿ ಬೆಳಗಿನ ಹೊತ್ತಿನ ಚೆಂಡೆ ಶಂಕರಣ್ಣನಿಗೆ ಮೀಸಲು. ಇದು ಅವರ ಚೆಂಡೆವಾದನ ತಾಕತ್ತು ಕೂಡ.
ಶಂಕರಣ್ಣ ಎಂದರೆ ಗುರುತಿಸಲ್ಪಡುವುದು ಚೆಂಡೆವಾದನದಿಂದ ಆದರೂ ಅವರ ಮದ್ದಲೆವಾದನದ ಲಾಲಿತ್ಯದ ಸೊಗಸು ಬೇರೆಯೆ. ನಿಜಕ್ಕಾದರೂ ನಾನು ಅವರ ಮದ್ದಲೆವಾದನವನ್ನೇ ಇಷ್ಟಪಡುವುದು. ಆ ನುಡಿತದ ವೈವಿಧ್ಯ, ಭಾಗವತನನ್ನು ಹಿಂಬಾಲಿಸುವ ಆ ಶೈಲಿ ಅತ್ಯಮೋಘವಾಗಿರುತ್ತದೆ. ಮದ್ದಲೆಯನ್ನು ಬಡಿವಾಗ ಇವರದೇ ಶೈಲಿಯಲ್ಲಿ ಪೂರ್ಣ ಅಂಗೈಯನ್ನು ಉಪಯೋಗಿಸಿಬಿಡುತ್ತಾರೆ.  ಹಲವರು ಕೈಬೆರಳನ್ನು ಮಾತ್ರ ಉಪಯೋಗಿಸಿಕೊಂಡರೆ ಇವರ ಈ ಭಿನ್ನ ಶೈಲಿ ಇವರನ್ನು ಬೇರೆಯೇ ಅಗಿ ಗುರಿತಿಸುವಂತಾಗುತ್ತದೆ. ಯಾವುದೇ ಬಾಗವತರ ಶೈಲಿಗೂ  ಅದು ಪರಂಪರೆಯಾಗಲೀ ಅಧುನಿಕವಾಗಲೀ ಇವರು ಮದ್ದಲೆ ವಾದನದಲ್ಲಿ ಹೆಚ್ಚು ಸೂಕ್ತ ಅನ್ನಿಸುತ್ತದೆ. ಬಾಯಿತಾಳಕ್ಕೆ ಹೊಂದಿಕೊಂಡು ಇಕ್ಕೆಲಗಳಿಂದ ಮುಲುಗುಟ್ಟುವ ಇವರ ಮದ್ದಲೆ ವಾದನ ಇಷ್ಟವಾಗುವುದು ಅದರ ಮಿತಿಯೊಳಗಿನ ಪೆಟ್ಟಿಗಾಗಿ. ಇದು ನಾನು ಕಂಡುಕೊಂಡ ವೈಶಿಷ್ಟ್ಯ. ಇವರ ಗುರುಗಳಂತೆ ಮದ್ದಲೆ ವಾದನವನ್ನು ಇವರು ಯಾವುದೇ ಶ್ರಮವಲ್ಲದೆ ಬಾರಿಸಿದಂತೆ ಭಾಸವಾಗುತ್ತದೆ. ಯಕ್ಷಗಾನದಲ್ಲಿ ಚೆಂಡೆ ಮದ್ದಲೆಗಳು ತಂದೆ ತಾಯಿ ಇದ್ದಂತೆ. ಸಂದರ್ಭಕ್ಕೆ ತಕ್ಕಂತೆ ಚೆಂಡೆ ಮೊಳಗಿದರೆ ಮದ್ದಲೆ ಪ್ರತೀ ಹಾಡಿಗೂ ತಾಯಿಯಂತೆ ಜತೆಯಾಗುತ್ತದೆ. ಅದು ಕಂದ ವಾಗಲಿ ವಾರ್ಧಿಕ್ಯ ವಾಗಲಿ. ಕೇವಲ ಛಾಪಿನಿಂದಲೂ ಹಿಂಬಾಲಿಸುತ್ತದೆ. ಶಂಕರಣ್ಣ ಇವೆರಡರಲ್ಲೂ ಸಿದ್ಧಹಸ್ತರು. ಎರಡನ್ನೂ ತನ್ನ ಅದ್ಭುತ ಕೈಚಳಕದಿಂದ ನುಡಿಸಬಲ್ಲ ಮಾಂತ್ರಿಕ ಹಸ್ತರು.
ಪ್ರತಿಷ್ಠಿತ ಪದ್ಯಾಣ ಮನೆತನದ ಹಿನ್ನೆಲೆ, ಈ ಮನೆತನಕ್ಕೆ ಯಕ್ಷಗಾನದಲ್ಲಿ ತನ್ನದೇ ಆದ ಘನತೆಯಿದೆ. ಅದರ ಉತ್ತರ ದಾಯಿತ್ವವನ್ನು ಸಮರ್ಥವಾಗಿ ಇವರು ನಿರ್ವಹಿಸಿಕೊಂಡು ಬಂದಿದ್ದಾರೆ . ಇಂದು ಯಕ್ಷಗಾನ ರಂಗ ಮಾತ್ರವಲ್ಲ ಇವರ ಮನೆತನವೂ ಇವರಿಂದ ಬಹುವಾಗಿ ನಿರೀಕ್ಷೆ ಇಟ್ಟಿರಬಹುದು. ಇವರ ದೈತ್ಯ ಪ್ರತಿಭೆಯ ಅಂತಃಸತ್ವದ ವಿದ್ವತ್ತನ್ನು ಸೂಕ್ತ ಕಲಾವಿದರಿಗೆ ಧಾರೆಯೆರೆದು ಹೊಸ ಪೀಳಿಗೆಯ ಕಲಾವಿದರನ್ನೂ ಶಿಷ್ಯವರ್ಗವನ್ನೂ  ಯಕ್ಷಗಾನ ರಂಗ ಇಂದು ಬಹುವಾಗಿ ನಿರೀಕ್ಷಿಸುತ್ತದೆ. ಮಾತ್ರವಲ್ಲ ಈ ನಿರೀಕ್ಷೆಯು ಗರಿಗೆದರಿ ಹಾರುವಂತಹ ಚೈತನ್ಯ ಭಗವಂತನ ಕಾರುಣ್ಯದಿಂದ ಹೊರ ಹೊಮ್ಮಲಿ.
  ಯಕ್ಷಗಾನಂ ಗೆಲ್ಗೆ.



              ಇಂದಿಗೆ ಯಕ್ಷಚಿಂತನ ಆರಂಭಿಸಿ ಸರಿಯಾಗಿ ಮೂರು ವರ್ಷಗಳು ಸಂದುವು. ಈ ಮೂರು ವರ್ಷದಲ್ಲಿ ಹಲವು ಚಿಂತನಗಳನ್ನು ನಿಮ್ಮೊಂದಿಗೆ ಹಂಚಿಕೊಂಡು ಆನಂದಿಸುವ ಭಾಗ್ತ್ಯ ನನ್ನದಾಗಿದೆ. ಎಲ್ಲ ಮಿತ್ರರಿಗೂ ಸ್ನೇಹ ಪುರ್ವಕ ಶುಭಾಷಯಗಳು. ನನ್ನ ಅರಂಭದ ಲೇಖನ ಇದು

 http://yakshachintana.blogspot.com/2008/11/blog-post_12.html